ಪಂಜರಬಿಟ್ಟು ಹಾರಿದ ಹಕ್ಕಿಗಳೆ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ಪಂಜರ ಬಿಟ್ಟು ಹಾರಿದ ಹಕ್ಕಿಗಳೆ
ಬಂದು ಒಂದು ಕ್ಷಣ ಮುಖದೋರಿರೆ

ಚೂರಾಗಿದೆ ಈ ಕಡಲಲ್ಲಿ ನಿಮ್ಮ ಹಡಗು
ಮೀನುಗಳಂತೆ ಅದು ಮತ್ತೆ ತೇಲಿದ ಬೆಡಗು

ಮಾಡು ಮುರಿದು ಮತ್ತೆ ಮೂಲ ಸಖನಿಗೆ ವಾಪಸೆ?
ಬಲೆ ಜಾರಿತೆ ಕೈಯಿಂದ ಮತ್ತೆ ಮಿಕ ಮಾಯವೆ?

ನಿಮ್ಮಾತ್ಮದ ಬೆಂಕಿಗೆ ನೀವೆ ತರಗೆಲೆಯೇ?
ಒಳಬೆಂಕಿ ಆರಿತೆ? ನೀವೆ ಭಗ್ಗೆಂದು ಉರಿದ ಬೆಳಕೆ?

ಆ ಗಾಳಿಯೆ ಪೀಡೆಯಾಗಿ ಕಾಡಿತೆ, ಹೋದ ಹೋದಲ್ಲಿ
ಜಿಪ್ಸಿರ್ ಗಾಳಿಯಾಗಿ ಕಾಡಿತೆ? ಅದು ಬಂದ ಬಂದಲ್ಲಿ

ಅಂತಕನ ದೂತರು ಬಂದಾಗ ಹುಟ್ಟಿದವರೆ
ನಿಮಗೀಗ ಮರುಜನ್ಮ, ಹುಟ್ಟಿರೆ, ಮತ್ತೆ ಹುಟ್ಟಿರೆ

ನೀವು ಭವಿಗಳೊ ಭಕ್ತರೊ ಎಂಬುದೀಗ ಮನಕ್ಕೆ ನಿರ್ಣಯವಾಗಲಿದೆ
ಮುಖದ ತೆರೆ ಸರಿಸಿರ

ತಬ್ರೀಜಿನ ಶಂಸ್‌ನ ಕೃಪೆಗೆ ನೀವು ಪಾತ್ರರೆ?
ಶೂನ್ಯ ಸಿಂಹಾಸನದ ಸರದಾರರು ನೀವು, ಅವನ ಅನಂತ ಕರುಣೆ
*****