ಮಣ್ಣಿನ ಮಕ್ಕಳು

“ಹಿಡಿ ಸಿವುಡೋ ಕುಡಗೋಲೋ
ಮಕ ಬಾಡ್ಯೊ ಮೈ ಬಾಡ್ಯೋ
ಜಡನಾದ್ಯೊ ಮೈಯೊ
ಹಾರಿ ಜಡದಂಗೊ………… ಹೋ!”

ಮಲ್ಲಪ್ಪನ ಹಂತಿಯ ಹಾಡು ಸುತ್ತು ಮುತ್ತಲಿನ ಹೊಲದಲ್ಲಿದ್ದವರಿಗೂ ಕೇಳಿಬರುತಿತ್ತು. ಮೇಟಿಯ ಸುತ್ತಲೂ ದನಗಳು ತಿರುಗಾಡಿದಂತೆ ಅವುಗಳ ಕಾಲ್ತುಳಿತಕ್ಕೆ ತೆನೆಗಳು ಕಂಕಿಯಾಗುತಿದ್ದುವು.

“ಅವ್ವ ಬುತ್ತಿ ತಂದಾಳ ; ಉಣ್ಣೂನು ಬಾ ಅಪ್ಪಾ”
-ಎಂದು, ಕಣದ ಬಳಿಯಲ್ಲಿಯೇ ಇದ್ದ ಗುಡಿಸಲ ಮುಂದೆ ಉರಿ ಕಾಸುತ್ತ ಕುಳಿತ ಶಿವು ತಂದೆಯನ್ನು ಊಟಕ್ಕೆ ಕರೆದ.

“ನಾನಷ್ಟು ಹಂತಿ ತಿರುವತೀನಿ; ನೀವು ಉಣ ಬರ್ರಿ”
-ಎಂದು ಮಲ್ಲಪ್ಪನ ಹೆಂಡತಿ ಪಾರ್ವತಿ ದನಿಗೂಡಿಸಿದಳು.

ತಲೆಯ ಮೇಲಿನ ರುಮಾಲನ್ನು ಜಾಡಿಸಿ, ಬಿಂದಿಗೆಯಲ್ಲಿದ್ದ ನೀರಿನಿಂದ ಕೈ ತೊಳೆದು ಬಾಯಿ ಮುಕ್ಕಳಿಸಿ ಮಲ್ಲಪ್ಪ ಊಟಕ್ಕನುವಾದ. ರೊಟ್ಟಿ, ಖಾರ, ಮೊಸರು, ಉಳ್ಳೇ ಗಡ್ಡಿ- ಇಷ್ಟೇ ಊಟದ ಸಾಮಗ್ರಿಯಾಗಿತ್ತು.

ಚಳಿಗಾಳಿ ಬೀಸುತಿತ್ತು. ಗಾಳಿಗೆ ಹೊಲದಲ್ಲಿಯ ರವದೆ ಸಪ್ಪಳ ಮಾಡಿತು. ಆ ಸರಬರ ಸದ್ದು ಕೇಳಿ ಕಣದಲ್ಲಿಯೇ ಮಲಗಿದ್ದ “ಚಂಪಿ” ಸದ್ದಾದ ದಿಕ್ಕಿನ ಕಡೆಗೆ ತೂರಿ ಹೋಗಿ ಬೊಗಳ ಹತ್ತಿತು…….

* * *

ಆಗ ನಡುರಾತ್ರಿಯಾಗಿರಬೇಕು. ಎಲ್ಲೆಡೆಗೂ ಶಾಂತ ವಾತಾವರಣ. ಹಾಲು ಚೆಲ್ಲಿದಂತೆ ಬೆಳದಿಂಗಳು. ಆಕಾಶ ಶುಭ್ರವಾಗಿತ್ತು. ಸುಗ್ಗಿಯ ಕಾಲದ ರಮಣೀಯತೆಗೆ ಬೆಳದಿಂಗಳು ಒಪ್ಪ ಹಾಕಿತ್ತು. ದನಕರುಗಳ ಕೊರಳೊಳಗಿನ ಗಂಟೆಗಳ ಟಂಟಣಿ ನಾದ ಸುಗ್ಗಿಯ “ಸಂಭ್ರಮವನ್ನು ಸಾರಿ ಹೇಳುತಿತ್ತು. ರೈತರಿಗೆ ವರ್ಷಕ್ಕೊಮ್ಮೆ ಬರುವ ಪರ್ವಕಾಲ ಇದು. ಅವರ ದುಡಿತವೆಲ್ಲ ಹಣ್ಣಾಗಿ ನಿಂತಿರುವ ಕಾಲ!

“ಅಪ್ಪಾ, ನಾ ಸಾಲಿಗೆ ಹೋಗೂದಿಲ್ಲ; ಮಾಸ್ತರು ಹೊಡೀತಾರೆ”
– ಎಂದು ಗುಡಿಸಲಿನ ಮೂಲೆಯೊಂದರಲ್ಲಿ ಕಂಬಳಿ ಹೊದೆದು ಮಲಗಿದ್ದ ಶಿವು ಕನವರಿಸುತಿದ್ದ. ಚಿಲುಮೆ ಸೇದುತಿದ್ದ ಮಲ್ಲಪ್ಪ ಪಾರ್ವತಿಯ ಕಡೆಗೆ ಹೊರಳಿ ನೋಡಿದ. ಅವಳೇ ಮಾತಿಗೆ ಮೊದಲು ಮಾಡಿದಳು.

“ಅಲ್ರೀ ನಾಳೆ ರಾಶಿ ಆದ ಮ್ಯಾಲೆ ಸರಕಾರದೋರು ಕಾಳು ಒಯ್ಯಾಕ ಬರತಾರಂತ. ಮೊನ್ನೆ ನೋಡಿದ್ರಿಲ್ಲೊ? ಬಸಪ್ಪ, ರಾಶಿ ಮನೆಗೆ ಒಯ್ಯು ಮುಂದ ಪೋಲೀಸರು ದಾರ್ಯಾಗ ಚಕ್ಕಡಿ ತುರುಬಿ ಜ್ವಾಳಾ ಓದರು” ಎಂದು ವಿಸ್ಮಿತವದನದಿಂದ ಹೇಳಿದಳು ಪಾರ್ವತಿ.

“ಹೌದು, ನಾನೂ ಅದನ್ನ ವಿಚಾರ ಮಾಡಾಕ ಹತ್ತಿದ್ದೆ. ಈ ವರ್ಷ ಮಳೀನೂ ಕಾಲಕ್ಕ ಸರಿಯಾಗಿ ಆಗೇತಿ. ಬೆಳೀನೂ ಹುಲುಸಾಗಿ ಆಗೇತಿ. ಏನಿಲ್ಲಂದರೂ ಮೂರು ಹೇರು ಜ್ವಾಳಾ ಆದಾವು. ಮುಂದಿನ ಸುಗ್ಗಿ ತನಕ ನಮ್ಮ ಹೊಟ್ಟಿಗೇನೂ ಬಾಧಾ ಇಲ್ಲ. ಆದರ ಈ ಕೆಂಪು ಮೋತಿಯವರದಾರಲ್ಲ. ದಿನಾ ಒಂದು ಕಾಯಿದೆ ಮಾಡತಾರ. ಬೆಳೆದ ಕಾಳು ಅವರು ದೋಚಿಕೊಂಡು ಹೋದರ ನಾವೇನು ಹೊಟ್ಟಿಗೆ ಕೇರು ಹಾಕ್ಯೊಬೇಕ?” ಎಂದು ಸ್ಪಲ್ಪ ಗಡುಸಾಗಿಯೇ ಮಲ್ಲಪ್ಪ ನುಡಿದ.

“ಕೈಗೆ ಬಂದ ತುತ್ತ. ಬಾಯಿಗೆ ಬರಲಿಲ್ಲಾಂತ ವರ್ಷಾನಗಟ್ಲೆ ಮೈಮುರೇ ದುಡದ್ರು ನಮ್ಮ ಕಾಳು ನಮಗೆ ದಕ್ಕದಿರೋದು ಎಲ್ಲಿ ನ್ಯಾಯ? ರೈತರಿಗೆ ವರ್ಷಾ ನಿಸಾರ ಒಂದು ಕಾಟ ಇದ್ದೇ ಇರತೈತಿ. ಎಲ್ಲಾ ಶಿವನ್ನೇ ಕೊಡೇತಿ,” ಎಂದು ಪಾರ್ವತಿ ನಿಟ್ಟುಸಿರಿಟ್ಟಳು.

ಗಾಳಿ ಬೀಸಿತು. ಗುಡಿಸಲಿನ ಕಿಂಡಿಗಳಿಂದ ಗಾಳಿ ಒಳನುಗ್ಗಿತು. ಆ ಚಳಿಗಾಳಿಗೆ ಶಿವು ಅತ್ತ ಇತ್ತ ಹೊರಳುತ್ತ ಕುಸಗುಡ ಹತ್ತಿದ. ಪಾರ್ವತಿ ಅವನ ಮಗ್ಗುಲಲ್ಲಿಯೇ ಮಲಗಿ ಚವ್ವಿ ಒಡೆಯಹತ್ತಿದಳು.

ಮಲ್ಲಪ್ಪನಿಗೆ ಬೇಗ ನಿದ್ದೆ ಬರಲಿಲ್ಲ. ಅವನ ತಲೆ ತುಂಬ ಯೋಚನೆ. ತಾನೂ ಹೆಂಡತಿಯೂ ಇಡೀ ವರ್ಷ ಚಳಿ ಮಳೆ ಎನ್ನದೆ ಹೊಲದಲ್ಲಿ ದುಡಿದುದಾಯಿತು. ಅದರೆ ಫಲವಾಗಿ ಕಣದಲ್ಲಿ ಮೂರು ಹೇರಿನ ಜೋಳದ ರಾಶಿ ಬಿದ್ದಿತ್ತು. ಈ ವರ್ಷ ಒಂದು ಹೊಸ ಎತ್ತು ಕೊಳ್ಳಬೇಕು. ಆರು ಎಕರೆ ಹೊಲ, ಗುಬ್ಬಿಯ ಗೂಡಿನಂಥ ಮನೆ, ಆ ಎತ್ತು,-ಇಷ್ಟೇ ಅವನ ಸಂಪತ್ತು. ಮಗು ಶಿವನನ್ನು ಶಾಲೆಗೆ ಹಾಕಬೇಕು. ಪಾಟಿ (ಸ್ಲೇಟು)-ಪುಸ್ತಕ ಕೊಡಿಸಬೇಕು. ಹೊಸ ಅಂಗಿ ಹೊಲಿಸಬೇಕು. ಪಾರ್ವತಿಗೂ ಸೀರೆ ಕೊಳ್ಳ ಬೇಕು. ಶಿರಹಟ್ಟಿ ಜಾತ್ರೆಗೆ ಹೋಗದೆ ಐದಾರು ವರ್ಷಗಳಾದುವು. ಈ ವರ್ಷ ಹೋಗಿ ತೇರಿಗೆ ಹಣ್ಣು ಕಾಯಿ ಒಗೆದು ಬರಬೇಕು……..

“ಬೊವ್‌ ಬೊವ್‌”

ಬದಿಯ ಹೊಲದಲ್ಲಿಯ ನಾಯಿಯ ಬೊಗಳುವಿಕೆಗೆ ಚಂಪಿಯೂ ಉತ್ತರ ಕೊಟ್ಟಿತು.

ಮಲ್ಲಪ್ಪನ ಕಣ್ಣುಗಳು ತಾವಾಗಿಯೇ ಮುಚ್ಚಿಕೊಂಡುವು. ಹಣ್ಣು ಹಣ್ಣಾದ ದೇಹಕ್ಕೆ ನಿದ್ರೆಯ ಆಸರೆ ಇರದಿದ್ದರೆ ಮನುಷ್ಯನ ಬಳಲಿಕೆಗೆ ಮಿತಿ ಇರುತ್ತಿರಲಿಲ್ಲ… ಬಾಳಿನ ಅನಂತ ಬವಣೆಗಳಿಗೆಲ್ಲ ಒಂದು ಕ್ಷಣ ನಿದ್ರೆ ಮುಸುಕು ಹಾಕಿತು.

* * *

ಆಗುವುದೆಲ್ಲ ಆಗಿಹೋಗಿತ್ತು.

ಒಂದು ತಿಂಗಳಿಗೂ ಆಗದಷ್ಟು ಕಾಳನ್ನು ಬಿಟ್ಟು ಉಳಿದಷ್ಟನ್ನೂ ಪೋಲೀಸರು ಒಯ್ದು ಬಿಟ್ಟಿದ್ದರು. ಮಲ್ಲಪ್ಪನೂ ಪಾರ್ವತಿಯೂ ಅಂಗಲಾಚಿ ಬೇಡಿಕೊಂಡರು. ಸಾಧ್ಯವಾಗಲಿಲ್ಲ. ಮಲ್ಲಪ್ಪನ ಮೈಯೆಲ್ಲ ಉರಿಯತೊಡಗಿತು. ಆದರೆ ಆಗ ಅವನು ಸರ್ಕಸಿನೊಳಗಿನ ಸಿಂಹೆವಾಗಿದ್ದ. ಅವನು ಬಯಸಿದ್ದೆಲ್ಲಾ ಮಣ್ಣುಗೂಡಿತು; ಹೊಟ್ಟೆಗೆ ಕಲ್ಲು ಬಿತ್ತು.

ಮಲ್ಲಪ್ಪ ತನ್ನ ರಟ್ಟೆ ಮುಟ್ಟಿ ನೋಡಿಕೊಂಡ. ಅವು ಇನ್ನೂ ಬಲಿಷ್ಟ ವಾಗಿದ್ದುವು. ಎದೆ ಉಕ್ಕಿನಂತೆ ಬಿರುಸಾಗಿತ್ತು. “ದೇಹ ಮಣ್ಣಿನಲ್ಲಿ ಅಡಗುವವರೆಗೂ ಗೆಯ್ಮೆ ತಪ್ಪಿದ್ದಲ್ಲ. ನಾನು ಅಷ್ಟು ದುಡಿಯಲಾರೆನೇ” ಎಂದುಕೊಂಡ ತನ್ನಷ್ಟಕ್ಕೆ. ಆದರೆ ಹೆಂಡತಿಯನ್ನು ನೋಡಿದೊಡನೆ ಇನ್ನಿಲ್ಲದ ಕನಿಕರ ಬಂದುಬಿಡುತಿತ್ತು. ತನ್ನ ಮನೆಯ ಭಾಗ್ಯದ ಲಕ್ಷ್ಮಿ ಬಡವಾಗಿದ್ದಾಳೆ. ಮರ್ಯಾದೆ ಮುಚ್ಚುವ ಸೀರೆ ಹರಕಾಪರಕು. ತೊಟ್ಟ ಕುಪ್ಪಸ ಛಿನ್ನಾಛಿದ್ರಿ! ಕೈಮೈಯ ಎಲುಬು ಹೊರಗೆ ಕಾಣುತ್ತಿದೆ. ಕಿವಿಯಲ್ಲಿ ಬರಿಯ `ಹೆಜ್ಜಿ’ಗಳಿವೆ. ಎಂದೋ ಒಮ್ಮೆ ಬೆಂಡೋಲೆಗಳು ಅವಳನ್ನು ಅಲಂಕರಿಸಿದ್ದುವು. ತೋಪಿನ ಸೆರಗಿನ ಸೀರೆಯುಟ್ಟು, ರಬಕವಿಯ ಕಣ ತೊಟ್ಟು, ತಲೆ ಬಾಚಿಕೊಂಡು, ಹಣೆಗೆ ಕುಂಕುಮವಿಟ್ಟು, ಕುಲು ಕುಲು ನಗುತಿದ್ದ ಪಾರ್ವತಿಯ ಹಿಂದಿನ ಚಿತ್ರ ಮಲ್ಲಪ್ಪನ ಕಣ್ಣ ಮುಂದೆ ಬಾರದಿರಲಿಲ್ಲ. ಇಂದಿನ ಅವಳ ರೂಪ ಅವನನನ್ನು ದಂಗುಬಡಿಸಿತು. ಎದೆ ದಡದಡಿಸಿತು. ಕಣ್ಣೀರು ತುಳುಕಿ ತುಳುಕಿ ಬಂದುವು.

ಹೊಸತಿಲ ಮೇಲೆ ಕುಳಿತ ಶಿವು ರೊಟ್ಟಿಯ ತುಂಡನ್ನು ಕಡಿಯತಿದ್ದ. ಚಂಪಿ ಬಾಲ ಅಲ್ಲಾಡಿಸುತ್ತ ಮಲಗಿಕೊಂಡು ಮಗುವಿನತ್ತ ಕೃತಜ್ಞತೆಯಿಂದ ನೋಡುತಿತ್ತು. ಹಟ್ಟಿಯಲ್ಲಿ ಎತ್ತು ರವದೆ ಇಲ್ಲದ ಒಣ ದಂಟನ್ನ ಮೆಲುಕಾಡಿಸುತಿತ್ತು. ಆ ಬಡಕಲಾದ ಮೈಯಿಂದಲೂ ರಕ್ತ ಹೀರಬೇಕೆಂದು ನೊಣಗಳು “ಜೊಮ್‌?” ಎಂದು ಮುತ್ತುತ್ತಿದ್ದುವು. ಬಾಲವೆತ್ತಿ ಜಾಡಿಸಿಕೊಳ್ಳದಷ್ಟು ಬೇಸರವಾಗಿತ್ತು ಎತ್ತಿಗೆ…….

…..ಇತ್ತಿತ್ತ್ತ ಪಾರ್ವತಿಗೆ ಮೈಯಲ್ಲಿ ನೆಟ್ಟಗಿರಲಿಲ್ಲ. ಪೋಲೀಸರು ಬಂದು ಬೆದರಿಸಿ ಆಡಬಾರದ್ದಾಡಿ ಕಾಳು ಒಯ್ದದ್ದೇ ನೆಪವಾಗಿ ಆಕೆ ನೆಲವನ್ನ ಹಿಡಿದಳು. ದಿನ ಬಿಟ್ಟು ದಿನ ಜ್ವರ ಬರತೊಡಗಿತು. ಔಷಧಿಯ ಮಾತನ್ನು ಯಾರೂ ಎತ್ತುತ್ತಿರಲಿಲ್ಲ. ಸಿಗುವ ಭರವಸೆಯೂ ಇರಲಿಲ್ಲ. ಜಡ್ಡು, ಬಂದಾಗ ಬಂದು ಹೋಗುವ ಕಾಲಕ್ಕೆ ಹೋಗಬೇಕು, ಅವಳ
ಪಾಲಿಗೆ.

ಶಿವು, ತಾಯಿಯ ಬತ್ತಿ ಹೋದ ಮೊಲೆಯನ್ನೆ ಗೀರಿ ಗೀರಿ ಕುಡಿಯುತಿದ್ದ. ಪಾರ್ವತಿಗೆ ನೋವಾಗುತ್ತಿರಬೇಕು. ಆದರೆ ಅವಳು ಆರು ವರ್ಷಗಳ ಹಂದಿನ ನೆನಪಿನ ಸುರಳಿಯನ್ನು ಬಿಚ್ಚತೊಡಗಿದ್ದಳು. ಸೋಮು ಇಲ್ಲಿಯವರೆಗೆ ಬದುಕಿದ್ದರೆ ಹದಿನಾರರ ಹರೆಯದ ಹುಡುಗನಾಗುತ್ತಿದ್ದ. ಮನೆಗೆ ದುಡಿದು ತಂದು ಹಾಕುತಿದ್ದ. ತಾಯಿ-ತಂದೆ-ತಮ್ಮಂದಿರ ಹೊಟ್ಟಿ ಬಟ್ಟೆ ನೋಡುತಿದ್ದ. ಎಷ್ಟು ಶಕ್ರಿವಂತನಾಗಿದ್ದನವ! ಗೌಡರ ಮನೆಯಲ್ಲಿ ಹದಿನಾರೆತ್ತಿನ ಗೋದಲಿ ಕಾಳಿನ ಕಣಜ,ತಿಜೋರಿಗಳನ್ನು ನೋಡಿ ಬಂದು ತಮ್ಮ ಮನೆಯಲ್ಲಿ ಅವು ಏಕೆ ಇಲ್ಲ? ಎಂದು ತಾಯಿಯನ್ನು ಕೇಳುತಿದ್ದ. ಅಡುಗೆ ಮನೆ. ನಡು ಮನೆ ಹಟ್ಟಿ-ಎಲ್ಲವೂ ನಾಲ್ಕು ಅಂಕಣದಲ್ಲಿಯೇ ಇದ್ದ ತಮ್ಮ ಮನೆಯಲ್ಲಿ, ತಾಯಿ ಪೆಟ್ಟಿಗೆಯಲ್ಲಿ ರೊಕ್ಕ ಇಡದೆ ಕಂಬದ ಬೋದಿನಲ್ಲಿ ಇಡುತಿದ್ದುದನ್ನು ಕಂಡಿದ್ದ. ಗೌಡರ ಮನೆ-ತಮ್ಮ ಮನೆಗಳಲ್ಲಿಯ ವ್ಯತ್ಯಾಸವನ್ನು ಕಂಡ ಸೋಮು ತಾಯಿಗೆ ಹೇಳುತಿದ್ದ:

“ಅವ್ವಾ ನಾನು ದೊಡ್ಡವನಾದ ಮೇಲೆ ಇವರಪ್ಪನಂಥ ಮನೆ ಕಟ್ಟತೇನಿ. ನೀನೂ ಅಪ್ಪ ಏನೂ ಕೆಲಸ ಮಾಡಬೇಡ್ರಿ. ನಾನೆಲ್ಲ ನಿಮಗ ದುಡಿದು ತಂದು ಹಾಕತೇನಿ. ನನ್ನ ಲಗು ಲಗು ದೊಡ್ಡವನನ್ನು ಮಾಡು……..”

…..ಪಾರ್ವತಿ ಬುದುಂಗನೆ ಎದ್ದು ಕುಳಿತಳು. “ಅಯ್ಯೊ, ನನ್ನ ಬಂಗಾರಾನ ಮಣ್ಣಾ ಗಿಟ್ಟು ನಾನ್ಯಾಕಿರಬೇಕು? ಸೋಮು!” ಎಂದು ಕೂಗಾಡಿದಳು. ಕೂತಿರಲು ಶಕ್ತಿ ಸಾಲಲಿಲ್ಲ. ಹಾಗೆಯೇ ಚಾಪೆಯ ಮೇಲೊರಗಿದಳು.

“ಹಿಂಗ್ಯಾಕ ಸನ್ನಿ ಬಡದ್ಹಾಂಗ ಮಾಡತೀ ಪಾರು?” ಎಂದು ಹೇಳಿ ಮಲ್ಲಪ್ಪ ಅವಳ ಬಳಿ ಕುಳಿತ.

“ಸೋಮು” ಎಂದು ನುಡಿದ ಅವಳ ನಾಲಿಗೆ ಮತ್ತೆ ಏಳಲಿಲ್ಲ. ಅಂಥ ಹೊತ್ತಿನಲ್ಲಿಯೂ ಅವಳ ಕಣ್ಣಿನಲ್ಲಿ ಯಾವದೋ ಕಾಂತಿಯನ್ನು ಕಂಡ ಮಲ್ಲಪ್ಪ.

ಪತಿಯನ್ನು ಬಿಟ್ಟು ಬಿಡದೆ ನೋಡುತಿದ್ದ ಅವಳ ಕಣ್ಣುಗಳು ಹಾಗೆಯೇ ಮುಚ್ಚಿ ಕೊಂಡುವು. ಮತ್ತೆ ತೆರೆಯಲಿಲ್ಲ.

“ಮಲ್ಲಪ್ಪ ಪಾರ್ವತಿಗೆ ಮಣ್ಣು ಕೊಟ್ಟು, ಮಗ ಶಿವನೊಡನೆ ಮರಳಬೇಕಾದರೆ, ಮಧ್ಯರಾತ್ರಿಯಾಯಿತು. ಆಗಸದಲ್ಲಿ ಚಕ ಚಕಿಸುತಿದ್ದ ಚುಕ್ಕೆಗಳು ಮೋಡಗಳ ಮರೆಯಲ್ಲಿ ಅಡಗಿದುವು. ಕತ್ತಲು ಕಗ್ಗತ್ತಲಾಯಿತು. ಮಲ್ಲಪ್ಪ ಮಸಣದ ಕಡೆಗೆ ಹೊರಳಿ ಹೊರಳಿ ನೋಡುತ್ತ, ಹೆಜ್ಜೆ ಇಟ್ಟೂ ಇಡಲಾರದೆ ನಡೆದಿದ್ದ. ಗಿಡಗಂಟಿಗಳಲ್ಲಿಯ ಕ್ರಿಮಿ ಕೀಟಗಳು ಜಿರ್‌-ಜಿರ್ರೆಂದು ಮೃತ್ಯು ಗೀತ ಹಾಡುತ್ತಿದ್ದುವು.

ಚಂಪಿ ಮಲ್ಲಸ್ಸನನ್ನು ಹಿಂಬಾಲಿಸಲಿಲ್ಲ. ಅದು ಪಾರ್ವತಿಯನ್ನು ಹುಗಿದ ಸ್ಥಳದಲ್ಲಿಯೇ ನಿಂತು ಗೋಗರೆಯುತಿತ್ತು.
*****
೧೩ ಜೂಲೈ ೧೯೪೭