ಸಂಪರ್ಕ

ಅರೇ ಅರೇ ಅನ್ನುತ್ತ ಇಬ್ಬರೂ ಪರಸ್ಪರ ಗುರುತು ಹಿಡಿದರು. ರಾಧಿಕಾಳನ್ನು ಈವತ್ತು….ಹೀಗೆ….ಇಷ್ಟೊಂದು ಆಕಸ್ಮಿಕವಾಗಿ ನೋಡುತ್ತೇನೆಂದು ಅಶೋಕ ಎಂದೂ ಅಂದುಕೊಂಡಿರಲಿಲ್ಲ. ಏನೂ ಮಾತಾಡಲು ತೋಚದೆ ತನ್ನ ಕೈಚಾಚಿ ಅವಳ ಅಂಗೈ ಹಿಡಿದು ಮೆಲ್ಲಗೆ ಅಮುಕಿದ. ತಾನು ಹಾಗೆ ಮಾಡಿರದೆ ಇದ್ದರೆ ಎಷ್ಟು ಹೊತ್ತಿನವರೆಗೆ ಇಬ್ಬರೂ ಶಬ್ದಗಳಿಗಾಗಿ ಪರದಾಡುತ್ತಿದ್ದೆವೊ ಎಂದೆನ್ನಿಸಿತು. “ಎಷ್ಟೊಂದು ಬದಲಾಗಿದ್ದೀಯೋ. ಆದರೂ ನನಗೆ ಗುರುತು ಹತ್ತಿತು ನೋಡು” ಅಂದಳು.

ಇಂದು ಸತೀಶ ಬಂದು ಕರೆಯದೇ ಹೋಗಿದ್ದರೆ, ಇಂದು ಶನಿವಾರವಾಗದೇ ಬೇರೆ ದಿನವಾಗಿದ್ದರೆ, ಬರೇ ಐದು ನಿಮಿಷ ತಡವಾಗಿದ್ದರೆ ಅಶೋಕ ರಾಧಿಕಾಳನ್ನು ನೋಡುತ್ತಿರಲಿಲ್ಲ. ಅಶೋಕ ಕೆಲಸ ಮಾಡುತ್ತಿದ್ದ ಬ್ಯಾಂಕಿಗೆ ಬಂದು ಸತೀಶ ಅವನನ್ನು ಒತ್ತಾಯಿಸಿ, ತನ್ನ ಕಸಿನ್ ಬಂದಿದ್ದಾಳೆ ಪೋಸ್ಟಲ್ ಟ್ರೇನಿಂಗ್ ಸೆಂಟರಿನಲ್ಲಿ, ಅವಳನ್ನು ನೋಡಿ ಬರೋಣ ಎಂದು ಕರಕೊಂಡು ಬಂದ. ಅಶೋಕನನ್ನು ಹೊರಗೆ ನಿಲ್ಲಿಸಿ ಒಂದು ನಿಮಿಷದಲ್ಲಿ ಬಂದೆ ಎಂದು ಸತೀಶ ಒಳಹೋದ. ಆಗಲೇ ರಾಧಿಕಾಳನ್ನು ನೋಡಿದ್ದು. ಅವಳು ಮೆಟ್ಟಿಲಿಳಿದು ಹೊರಬರುತ್ತಿದ್ದಳು. ಮೊಂಡ ಮೂಗು ನೋಡುತ್ತ ದೊಡ್ಡ ಕಣ್ಣುಗಳನ್ನು ನೋಡುತ್ತ ಗುಂಗುರು ಕೂದಲು ನೋಡುತ್ತ ಗುರುತು ಹತ್ತಿತು. “ನಾವು ಭೆಟ್ಟಿಯಾಗದೆ ಎಷ್ಟು ವರ್ಷವಾಯಿತು ಗೊತ್ತಾ?” ಅಂದಳು. “ಹತ್ತು” ಅಂದ. “ನೆನಪಿಟ್ಟಿದ್ದೀಯಲ್ಲ” ಎಂದು ನಕ್ಕಳು. ಅಶೋಕನಿಗೆ ಒಮ್ಮೆಲೇ ಅವಳ ಬಗ್ಗೆ ಅಕ್ಕರೆಯಾಯಿತು. ಅವಳ ಕೆನ್ನೆಗುಳಿಗಳಲ್ಲಿ ಬೆರಳಿಟ್ಟು ಬಾಲ್ಯದಲ್ಲಿ ಮಾಡುತ್ತಿದ್ದ ಹಾಗೆ ಕಚಗುಳಿಯಿಟ್ಟು ನಗಿಸಬೇಕೆನಿಸಿತು. “ನೀನು ಮೈಸೂರಿನಲ್ಲಿ ಪ್ರತ್ಯಕ್ಷವಾದದ್ದು ಹೇಗೆ?” ಅಂದ. “ಅಲ್ಲಿ ಹುಲ್ಲಿನ ಮೇಲೆ ಕೂತು ಮಾತಾಡುವ, ಎಲ್ಲ ಹೇಳುತ್ತೇನೆ” ಅನ್ನುತ್ತ ನಡೆದಳು.

ಅಪ್ಪನ ಸಾವಿನ ನಂತರ ಅಶೋಕ ಅಮ್ಮನ ಜೊತೆ ಅಂಕೋಲೆ ಬಿಟ್ಟು ಶಿರಸಿಗೆ ಹೋಗುವಾಗ ಮೆಟ್ರಿಕ್ ಪಾಸಾಗಿದ್ದ. ರಾಧಿಕಾ ಅವನ ವಯಸ್ಸಿನವಳೇ. ಇಬ್ಬರೂ ಒಂದೇ ಸಾಲೆಯಲ್ಲಿ ಕಲಿಯುತ್ತಿದ್ದರು. ತನಗೆ ಮೆಟ್ರಿಕ್ ಪರೀಕ್ಷೆಯ ವೇಳೆಗೆ ಜ್ವರ ಬಂದಿದ್ದರಿಂದ ಆರಂಭಿಸಿ ರಾಧಿಕಾ, ಮೆಟ್ರಿಕ್ ನಂತರ ಒಂದು ವರ್ಷ ಮನೆಯಲ್ಲೇ ಕೂತಿದ್ದು, ನಂತರ ಕುಮಟೆಯ ಸೋದರಮಾವ ತನ್ನ ಮನೆಯಲ್ಲಿರಿಸಿಕೊಂಡು ಬಿ.ಎ. ಮಾಡಿಸಿದ್ದು, ಈ ನಡುವೆ ತಾವು ವಾಸವಾಗಿದ್ದ ಅಂಕೋಲೆಯ ಮನೆ ಮಾರಿದ್ದು, ಈ ವ್ಯವಹಾರದಲ್ಲಿ ಸೋದರಮಾವ ದುಡ್ಡು ಎತ್ತಿಹಾಕಿದ್ದು, ಅವನಿಗೂ ಅಮ್ಮನಿಗೂ ಮನಸ್ತಾಪವಾಗಿದ್ದು, ತನಗೆ ಪೋಸ್ಟಿನಲ್ಲಿ ನೌಕರಿ ಸಿಕ್ಕಿ ಎರಡು ವರ್ಷಗಳಾಗಿದ್ದು, ಹಾಗೂ ಈಗ ಆರು ತಿಂಗಳೀಚೆಗೆ ಮೈಸೂರಿಗೆ ಟ್ರಾನ್ಸ್‌ಫರ್ ಆಗಿದ್ದು ಎಲ್ಲವನ್ನೂ ಸವಿಸ್ತಾರ ಹೇಳಿದಳು. ಅಶೋಕನಿಗೆ ಅವಳ ಮಾತು ಕೇಳುತ್ತ ನಮ್ಮ ಈ ಅವಸ್ಥೆಗೆ ನೀವೇ ಕಾರಣ ಅಂದಂತೆ ಅನಿಸಿ ಅಸ್ವಸ್ಥನಾದ. ಅಷ್ಟರಲ್ಲಿ ಸತೀಶ ಬಂದದ್ದರಿಂದ ಮಾತು ಅಲ್ಲೇ ನಿಂತಿತು. “ನಮ್ಮ ಮನೆ ನಜರ್‌ಬಾದ್‌ನಲ್ಲಿ, ನಾಳೆ ಹ್ಯಾಗೂ ರವಿವಾರ, ತಪ್ಪದೇ ಬಾ” ಎಂದು ವಿಳಾಸ ಕೊಟ್ಟಳು. “ಮನೆಯಲ್ಲಿ ಮತ್ತೆ ಯಾರಿದ್ದಾರೆ?” ಎಂದು ಅಧಿಕಪ್ರಸಂಗಿಯಂತೆ ಕೇಳಿದ. “ಮತ್ತ್ಯಾರು….ನಮ್ಮಮ್ಮ ಒಬ್ಬಳೇ” ಅನ್ನುತ್ತ ಹೊರಡಲು ಎದ್ದಳು. ‘ಹೋಗಬೇಡ ಇರು’ ಅನ್ನಬೇಕೆನಿಸಿತು. ಆದರೆ ಯಾಕೆ? ಅವಳನ್ನು ಅಕ್ಕರೆಗೈಯಬೇಕೆನಿಸಿತು. ಆದರೆ ಹೇಗೆ? ಅಂತ ತಿಳಿಯದೇ ಹೃದಯ ತುಂಬಿ ಬಂದಂತಾಯಿತು. ಎದ್ದು ನಿಂತ. ಗಾಳಿಮರಗಳ ಎಡೆಯಿಂದ ಸುಂಯ್ ಶಬ್ದದೊಡನೆ ತಣ್ಣನೆ ಗಾಳಿ ಬೀಸಿತು. ಅವಳ ಕಣ್ಣುಗಳನ್ನು ನಿರುಕಿಸುತ್ತ ಬಗೆಯುತ್ತ ಹುಡುಕುತ್ತ ಒಪ್ಪಿಸಿಕೊಳ್ಳುತ್ತ ಅರೆಗಳಿಗೆ ನಿಂತ. ದಾರಿ ತಪ್ಪಿದಂತೆ ಮರುಭೂಮಿಯಲ್ಲಿ ದಿಕ್ಕು ತಪ್ಪಿದಂತೆ ಸಮುದ್ರದಲ್ಲಿ ವಿಹ್ವಲನಾದ. “ಬಾ ನಾಳೆ” ಎಂದು ಮತ್ತೊಮ್ಮೆ ಹೇಳಿ ಅವಳು ಪುಟು ಪುಟು ನಡೆದು ಹೋದಳು. ಆ ಸಂತರ ಸತೀಶನ ಜೊತೆ ಒಂದಷ್ಟು ಅಲೆದಾಡಿ ಅಶೋಕ ರೂಮಿಗೆ ಬರುವಷ್ಟರಲ್ಲಿ ಜಿಟಿ ಜಿಟಿ ಮಳೆ ಸುರುವಾಯಿತು. ತಲೆತುಂಬ ರಾಧಿಕೆ.

ಮೆಟ್ರಿಕ್‌ವರೆಗೂ ಅಶೋಕ ಅಂಕೋಲೆಯಲ್ಲೇ ಕಲಿತದ್ದು. ಅವನ ಅಪ್ಪ ಶ್ರೀಧರ ನಾಯಕರದು ಚಿಕ್ಕ ಕಿರಾಣಿ ಅಂಗಡಿಯಿತ್ತು. ನಾಯಕರು ನೋಡಲಿಕ್ಕೆ ಕಟ್ಟುಮಸ್ತಾಗಿ ಪಠಾಯನ ಹಾಗಿದ್ದರು. ಹಾಗೇನೂ ಅವರಿಗೆ ಹೆಣ್ಣಿನ ಚಪಲವಿರಲಿಲ್ಲ. ಆದರೂ ರಾಧಿಕೆಯ ಅಮ್ಮ ಗುಲಾಬಿ ಅದು ಹೇಗೆ ಗಂಟುಬಿದ್ದಳೊ! ಅವಳು ಕಲಾವಂತರವಳು. ಹೆಸರಿಗೊಬ್ಬ ಗಂಡನೂ ಇದ್ದ-ನರಪೇತಲ. ರಾಧಿಕೆ ಹುಟ್ಟಿದ ವರ್ಷವೇ ತೀರಿಕೊಂಡ. ಗಂಡನೆದುರಿಗೇ ರಾಜಾರೋಷ ನಡೆಸುತ್ತಿದ್ದವಳಿಗೆ ಈಗ ಇನ್ನೂ ಅನುಕೂಲವಾಯಿತು. ಹಾಗಂತ ಅಷ್ಟು ಹಗುರ ಹೆಣ್ಣಲ್ಲ ಗುಲಾಬಿ. ಮೊದಲು ಅವರ್ಸೆಯ ಕೊಂಕಣಿಯೊಬ್ಬ ಖಾಯಂ ಬರುತ್ತಿದ್ದ. ಆತ ಮಚವೆಯಲ್ಲಿ ಮುಂಬೈಗೆ ಹೋಗುತ್ತಿದ್ದಾಗ ತೂಫಾನು ಬಂದು ನೀರುಪಾಲಾದ. ನಂತರ ಅವಳು ಶ್ರೀಧರ ನಾಯಕರಿಗೇ ನಿಷ್ಠೆಯಿಂದಿದ್ದಳು. ಮೊದಮೊದಲು ಒಳಗಿಂದೊಳಗೇ ನಡೆಯಿತು. ಬಹಿರಂಗ ಪಡಿಸಲು ಗುಲಾಬಿಯೇನೂ ಬಯಸಿರಲಿಲ್ಲ. ಆದರೆ ಅವಳು ಬಸಿರಾಗಿದ್ದಾಗ “ಒಂದೇ ಒಂದು ಸಲ ನಿಮ್ಮ ಜೊತೆ ಮುತ್ತೈದೆಯ ಹಾಗೆ ಹನುಮಟ್ಟೆಯ ದೇವಸ್ಥಾನಕ್ಕೆ ಹೋಗಬೇಕಂತ ಆಸೆ” ಎಂದು ತನ್ನ ಬಯಕೆಯನ್ನು ಶ್ರೀಧರ ನಾಯಕರಿಗೆ ತಿಳಿಸಿದಳಂತೆ. ನಾಯಕರು ಯಾರಿಗೂ ಹೆದರುವ ಪೈಕಿಯಲ್ಲ ಹೂಂ ಅಂದು ಆಸೆ ಈಡೇರಿಸಿದರು. ಅವಳು ಅಗಲ ಕುಂಕುಮವಿಟ್ಟು ಕೈಗೆ ಹಸಿರು ಬಳೆ ತೊಟ್ಟು, ಜರಿಯ ಹಸಿರ ಸೀರೆಯುಟ್ಟು ದೇವಿಯ ಹಾಗೆ ಕಂಗೊಳಿಸುತ್ತ ಬಂದಳಂತೆ. ಯಾರನ್ನೂ ಲೆಕ್ಕಿಸದೆ ನಾಯಕರು ಗಂಭೀರವಾಗಿ ಅವಳ ಜೊತೆ ನಡೆದರಂತೆ. ಮರುದಿನವೇ ಸುದ್ದಿ ಹರಡಿತು. ಪಿಸು ಉಸಿರಾಗಿ ಹಬ್ಬಿದ ಸುದ್ದಿ ಬಿರುಗಾಳಿಯಾಗಿ ನಾಯಕರ ಮನೆ ತಲುಪಿತ್ತು. ಯುಗಾದಿ ಬಂತೆಂದರೆ ಉಮ್ಮಳಿಸುವ ಆ ನೆನಪಿನಿಂದ ತಪ್ಪಿಸಿಕೊಳ್ಳುವುದು ಅಶೋಕನಿಗೆ ಕಷ್ಟವಾಗುತ್ತದೆ:
ಅವತ್ತು ಯುಗಾದಿ. ಹಬ್ಬದ ದಿನ ಬೇಗ ಅಂಗಡಿ ಮುಚ್ಚಿ ಮಧ್ಯಾಹ್ನ ಊಟಕ್ಕೆ ಬರಬೇಕಾಗಿದ್ದ ಅಪ್ಪ ಬರಲೇ ಇಲ್ಲ. ಅವರು ಹಿಂದಿನ ದಿವಸ ಗುಲಾಬಿಯನ್ನು ದೇವಸ್ಥಾನಕ್ಕೆ ಕರಕೊಂಡು ಹೋದ ಸುದ್ದಿ ಅಮ್ಮನನ್ನು ತಲುಪಿತ್ತು. ಅಪ್ಪನಿಗಾಗಿ ಊಟ ಮಾಡದೇ ಕಾಯುತ್ತ ಕೂತವನಿಗೆ ‘ನಿನ್ನದಾಗಲಿ ಮೊದಲು’ ಎಂದು ಬಡಿಸಿ ತಾನು ಊಟ ಮಾಡದೆ ದಾರಿನೋಡುತ್ತ ಕೂತಳು. ಮನೆ ತುಂಬ ತುಂಬಿದ ವಿಶೇಷ ಹಬ್ಬದ ಅಡಿಗೆಯ ಘಮಘಮ ಆರುತ್ತ ಬಂತು. ಅಪ್ಪ ಬಂದದ್ದು ಸಂಜೆಗೆ. “ಊಟ ಮುಗಿಸಿಯೇ ಬಂದೆ” ಅಂದರು. ಆ ಮಾತಿಗೆ ಅಮ್ಮ ಚಂಡಿಯಾದದ್ದು ನೋಡಿದರೆ….ಅದೆಂಥ ಸಿಟ್ಟು ಬಂತವಳಿಗೆ! “ಯಾರಲ್ಲಿ ಹೋಗಿದ್ದಿರಿ? ಆ ರಂಡೆಯ ಮನೆಗಲ್ಲವೆ? ಮನೆಯಲ್ಲಿ ಹೆಂಡತಿ ಇದ್ದೂ ಅವಳ ಜೊತೆ ದೇವಸ್ಥಾನಕ್ಕೆ ಹೋಗುವಷ್ಟು ನಾಚಿಕೆ ಬಿಟ್ಟಿರಲ್ಲ….ಹಬ್ಬ ಅಂತ ನಾನಿಲ್ಲಿ ಊಟ ಮಾಡದೇ ಕಾಯುತ್ತಿದ್ದರೆ ಅವಳ ಎಂಜಲು ತಿನ್ನಲು ಹೋಗಿದ್ದಿರಲ್ಲ….ನನ್ನ ತಲೆಯ ಮೇಲೆ ಕಲ್ಲು ಹಾಕಿ ಕೊಂದುಬಿಡಿ….” ಅಪ್ಪ ಯಾವುದಕ್ಕೂ ಜಗ್ಗಲಿಲ್ಲ. ಎಲ್ಲವೂ ಸಹಜವೆಂಬಂತೆ “ಹೌದೇ ಅಲ್ಲೇ ಹೋಗಿದ್ದು….ಮತ್ತೆ ಈ ನಿನ್ನ ಸುಟ್ಟ ಮೋರೆ ನೋಡಲಿಕ್ಕೆ ಬಂದದ್ದೇ ತಪ್ಪಾಯಿತು ನೋಡು….” ಅಂದರು. “ಹೌದು ಹೌದು ನನ್ನದು ಸುಟ್ಟಮೋರೆ….ಅವಳೆಂಥ ರಂಭೆಯೆಂದು ನಾನು ನೋಡಿದ್ದೇನೆ. ಆ ಆವಾರ್ಸೆಯ ಕೊಂಕಣಿ ಮಲಗಿದ ಹಾಸಿಗೆಯೇ ಅದು….” ಅಂದಳು. ಅಪ್ಪ ಸಿಡಿದ. ಅಮ್ಮನ ಬೆನ್ನಮೇಲೆ ದಬದಬ ಗುದ್ದಿದ. ಅಳು ರಂಪ-ಗದ್ದಲ. ಅಪ್ಪ ಸಟಸಟನೇ ನಡೆದು ಎಲ್ಲೋ ಹೋದ. ಬಹಳ ಹೊತ್ತಿನವರೆಗೆ ಅಮ್ಮ ಅಳುತ್ತ ಕೂತಿದ್ದಳು. ಯುಗಾದಿಯ ದಿನ ಸಂಜೆ ದೇವಸ್ಥಾನದಲ್ಲಿ ನಡೆಯುವ ಪಾನಕ ಪೂಜೆಗೆ ನಂತರದ ಪಂಚಾಂಗ ಪಠನಕ್ಕೆ ಹೋಗುವ ಪರಿಪಾಠವಿತ್ತು. ಆದರೆ ಅವತ್ತು ರಾತ್ರಿ ಅಪ್ಪ ಮನೆಗೆ ಬರಲೇ ಇಲ್ಲ. ಅಮ್ಮ ರಾತ್ರಿಯೂ ಊಟ ಮಾಡಲಿಲ್ಲ.

ಇಷ್ಟೆಲ್ಲ ಹಗರಣಕ್ಕೆ ಕಾರಣವಾದ ಗುಲಾಬಿಯ ಗರ್ಭ ನಿಲ್ಲಲಿಲ್ಲ. ಅಶೋಕನ ಅಮ್ಮ ಸಾವಿತ್ರಿಯ ಮನದ ಉರಿ ತಗುಲಿ ಹಾಗಾಯಿತೆಂದು ಅವರಿವರು ಆಡಿಕೊಂಡರು. ನಂತರ ಅವಳು ಮತ್ತೊಮ್ಮೆ ಗರ್ಭಣಿಯಾದರೂ ಆ ಸಲವೂ ಹಾಗೆಯೇ ಆಯಿತು. ಶ್ರೀಧರ ನಾಯಕರಂತು ಅವಳ ಮತ್ತಿನಲ್ಲಿ ಹುಚ್ಚರಾಗಿದ್ದರು. ಮನೆಯಲ್ಲಿ ಸದಾ ಜಗಳ-ಗಲಾಟೆ. ನಾಯಕರು ಮನೆಗೆ ಬಂದರೆ ಬಂದರು ಇಲ್ಲವಾದರೆ ಇಲ್ಲ. ಅಶೋಕನ ಅಮ್ಮ ಪೂರ್ತಿ ಬದಲಾಗಿ ಹೋಗಿದ್ದಳು. ಮನೆಗೆ ಆದಾಯ ಸರಿಯಾಗಿರಲಿಲ್ಲ. ಇದ್ದ ಕಿರಾಣಿಯೊಂದು ಸೊರಗುತ್ತ ಬಂತು. ಐದು ವರ್ಷಗಳವರೆಗೆ ಹುಚ್ಚು ಇಳಿಯಲಿಲ್ಲ. ಸಾಲ ಬೆಳೆಯಿತು. ಕೊನೆಕೊನೆಗೆ ಬೀಡಿ ಸೇದುವುದು, ಕೆಮ್ಮುವುದು ಇಷ್ಟು ಮಾತ್ರವೇ ಕೆಲಸವಾಯಿತು. ಒಂದು ದಿವಸ ಕಟ್ಟಿಗೆ ಡಿಪೋದ ಪುಂಡರೀನಾಥ ಪ್ರಭು ಅವಳ ಮನೆಗೆ ಪದೇ ಪದೇ ದೋಗುತ್ತಾನೆಂಬ ಸುದ್ದಿ ಕೇಳಿ ಖಿನ್ನರಾದರು. ಗುಲಾಬಿಯಲ್ಲಿ ವಿಚಾರಿಸಿದಾಗ ಮೊದಮೊದಲು ಮುಚ್ಚಿಟ್ಟಳು. ನಂತರ ಮೌನತಾಳಿದಳು. ಆನಂತರ “ಖರ್ಚಿಗೆ ಏನಾದರೂ ಸ್ವಲ್ಪ ಬೇಡವೇ? ನಿಮಗೆ ಏನೂ ವ್ಯತ್ಯಾಸವಾಗದ ಹಾಗೆ ನೋಡಿಕೊಳ್ಳುತ್ತೇನೆ….ನನ್ನನ್ನು ನಂಬಿ….” ಅಂದಳು. ಅದೇ ಕೊನೆ. ನಾಯಕರು ಅಲ್ಲಿ ಹೋಗುವುದನ್ನೇ ಬಿಟ್ಟರು. ಆಮೇಲಿನ ನಾಯಕರೇ ಬೇರೆ. ಸೊರಗಿ ಸೊರಗಿ ಬರೀ ಎಲುಬು ಗೂಡು ಮಾತ್ರ ಉಳಿಯಿತು. ಕಫದಲ್ಲಿ ರಕ್ತ ಬರುತ್ತಿತ್ತು. ಹುಬ್ಬಳ್ಳಿಯ ಡಾಕ್ಟರರಿಗೆ ತೋರಿಸುವುದು ಅದೂ ಇದೂ ಅಂತ ಇದ್ದಬದ್ದ ಹಣವೆಲ್ಲ ಖರ್ಚಾಯಿತು. ಅಂಗಡಿ ಮಾರಿಯಾಯಿತು. ಮನೆಯೊಂದು ಉಳಿದಿತ್ತು. ಗುಲಾಬಿ ಅವರನ್ನು ಮತ್ತೆ ಬಳಿ ಸೇರಿಸಿಕೊಳ್ಳಲು ಪ್ರಯತ್ನಿಸಿದಳು. ಅವರು ಹೋಗಲಿಲ್ಲ. ಅವರ ಕೊನೆಗಾಲದಲ್ಲಿ ಕೈಸಾಗದೇ ಇದ್ದಾಗ ತನ್ನಲ್ಲಿ ಬಂದು ಉಳಿಯುವಂತೆ ಕೇಳಿಕೊಂಡಳು. ನಾಯಕರು ಮಾತ್ರ ಮತ್ತೆ ಅಲ್ಲಿ ಕಾಲಿಡಲಿಲ್ಲ. ಅಶೋಕನ ಮೆಟ್ರಿಕ್ ಪರೀಕ್ಷೆ ಮುಗಿದ ಎಂಟೇ ದಿನಗಳಲ್ಲಿ ಒಮ್ಮೆಲೇ ಕಾಯಿಲೆ ಉಲ್ಬಣಿಸಿ ತೀರಿಕೊಂಡರು. ಅವರ ಸಾವಿಗೆ ಗುಲಾಬಿಯೇ ಮೂಲ ಕಾರಣವೆಂಬುದು ಅಶೋಕನ ಅಮ್ಮನ ನಂಬಿಕೆಯಾಗಿತ್ತು. ಅಂಕೋಲೆ ಬಿಟ್ಟು ಹೋಗುವಾಗ ಅಶೋಕ ರಾಧಿಕೆಗೆ ಹೇಳದೆ ಹೊರಟಿದ್ದಕ್ಕೆ ಅಮ್ಮ ಸಿಟ್ಟಿಗೇಳಬಹುದೆಂಬುದೂ ಒಂದು ಕಾರಣವಾಗಿತ್ತು. ಮೊದಲಿನಿಂದಲೂ ರಾಧಿಕೆಯ ಸ್ನೇಹ ಅಶೋಕನಿಗೆ ಅಪ್ಯಾಯಮಾನವಾಗಿತ್ತು. ಇಬ್ಬರೂ ಒಂದೇ ಕ್ಲಾಸಿನಲ್ಲಿದ್ದವರು. ಅವಳು ತೊಡುತ್ತಿದ್ದ ನಿರಿಗೆ ನಿರಿಗೆಯ ನೀಲಿ ಫ್ರಾಕು ಅಶೋಕನಿಗೆ ತುಂಬ ಸೇರುತ್ತಿತ್ತು. ನಕ್ಕರೆ ಅವಳ ಕೆನ್ನೆಗಳಲ್ಲಿ ಬೀಳುತ್ತಿದ್ದ ಗುಳಿಗಳೆಂದರೆ ಮಹಾ ಖುಷಿ ಅವನಿಗೆ. ಮಣ್ಣಲ್ಲಿ ಪುಟ್ಟ ಗುಳಿ ತೋಡಿ, ಹುದುಗಿ ಕೂರುತ್ತಿದ್ದ ಹುಳುಗಳನ್ನು ಹುಡುಕಲು ಬೆರಳಿನಿಂದ ಆ ಗುಳಿಗಳನ್ನು ಕೆದರುತ್ತ ದಾರಿ ತೋರ್ಸೋ ಮಹರಾಯ ಎಂದು ಗೊಣಗುವಂತೆ, ಅವಳ ಕೆನ್ನೆಗುಳಿಗಳಲ್ಲಿ ಬೆರೆಳಿಟ್ಟು ದಾರಿ ತೋರ್ಸೋ ಮಹರಾಯ ಅನ್ನುತ್ತಿದ್ದ. ಕಚಗುಳಿಯಾದಂತಾಗಿ ರಾಧಿಕೆ ನಗುತ್ತಿದ್ದಳು. ಬೆಳೆಬೆಳೆಯುತ್ತ ಇಬ್ಬರ ಒಡನಾಟ ಕಡಿಮೆಯಾಗುತ್ತ ಹೋಯಿತು. ಶಾಲೆಯಲ್ಲಿ ಸರಸ್ವತೀ ಪೂಜೆಯ ದಿವಸ ಪ್ರಸಾದ ಹಂಚುವಾಗ; ಗ್ಯಾದರಿಂಗ್ ದಿನ ಡ್ಯಾನ್ಸ್ ಮಾಡಲು ಅವಳು ಬಣ್ಣ ಬಳಿದು ತೀರ ಬೇರೆಯಾಗಿ ಕಾಣುತ್ತ ತನ್ನ ಸರದಿಗಾಗಿ ಕಾಯುತ್ತ ವಿಂಗಿನಲ್ಲಿ ನಿಂತಾಗ ಅವಕಾಶ ಕಾದು ಅವಳನ್ನು ಮಾತಾಡಿಸಿ ಅಷ್ಟರಿಂದಲೇ ಪುಲಕಿತನಾಗುತ್ತಿದ್ದ. ಅವನ ಅಮ್ಮನಿಗೆ ಮಾತ್ರ ಆತ ಅವಳ ಜೊತೆ ಒಡನಾಡುವುದು ಎಳ್ಳಷ್ಟೂ ಸೇರುತ್ತಿರಲಿಲ್ಲ. ಒಮ್ಮೆ ಅಶೋಕ ಅವಳಿಗೆ ತನ್ನ ಬಣ್ಣದ ಪೆನ್ಸಿಲ್‌ನ್ನು ಕೊಟ್ಟುಬಿಟ್ಟನೆಂದು ಅವನನ್ನು ಚೆನ್ನಾಗಿ ಥಳಿಸಿದ್ದಳು. “ಮನೆಯಲ್ಲಿ ಮತ್ತೆ ಉಂಟಲ್ಲ, ಒಂದು ಕೊಟ್ಟರೇನಾಯಿತು?” ಎಂದು ಅಶೋಕ ಪ್ರತಿ ಹೇಳಿದ್ದಕ್ಕೆ “ಅಪ್ಪ ಅವಳ ಅಮ್ಮನ ಪಾದಕ್ಕೆ ಎಲ್ಲ ಸುರಿಯುತ್ತಾರೆ. ನೀನು ಮಗಳಿಗೆ ಪೂಜೆ ಮಾಡು…. ಎಲ್ಲ ನನ್ನ ಕರ್ಮ….” ಎಂದು ಅಳಲಿಕ್ಕೇ ಆರಂಭಿಸಿದಳು. ಅಶೋಕನಿಗೆ ಏನು ಎತ್ತ ತಿಳಿಯದೇ ಕಕ್ಕಾಬಿಕ್ಕಿಯಾದ. ಅವತ್ತಿನಿಂದ ರಾಧಿಕೆಯ ಜೊತೆ ಸೇರಲು ಏನೋ ಭಯವಾಗುತ್ತಿತ್ತು.
ಇದೆಲ್ಲ ಮೆಟ್ರಿಕ್‌ವರೆಗೆ ಮಾತ್ರ. ಬೀಳ್ಕೊಡುಗೆ ಸಮಾರಂಭದ ದಿನ ಎಲ್ಲ ಮಾಸ್ತರರ ಜೊತೆ ನಿಂತು ಫೋಟೋ ತೆಗೆಸಿ ಮೂರು

ರೂಪಾಯಿ ಕೊಟ್ಟು ಒಂದೊಂದು ಕಾಪಿ ಪಡೆದು ಟ್ರಂಕಿನಲ್ಲಿ ಡಾಂಬರು ಗುಳಿಗೆಗಳ ಜೊತೆ ಇಟ್ಟ ದಿನವೇ ಎಲ್ಲ ಮುಗಿಯಿತು. ಆಮೇಲಂತೂ ಪರೀಕ್ಷೆಯ ಅಭ್ಯಾಸ. ಪರೀಕ್ಷೆ ಮುಗಿದ ಎಂಟೇ ದಿನಕ್ಕೆ ಅಪ್ಪನ ಸಾವು. ನಂತರ ಅಂಕೋಲೆಯ ಮನೆಯನ್ನು ಬಾಡಿಗೆಗೆ ಕೊಟ್ಟು ಶಿರಸಿಯ ಚಿಕ್ಕಪ್ಪನ ಮನೆ ಸೇರಿದ. ಅಲ್ಲಿ ಕಾಲೇಜು ಮುಗಿದು ಈ ಬ್ಯಾಂಕಿನದೊಂದು ನೌಕರಿ ಸಿಗುವವರೆಗೂ ಹೋರಾಟ-ನೋವು-ಅವಮಾನ. ನೌಕರಿ ಸಿಕ್ಕ ನಂತರ ಹಠಹಿಡಿದು ಅಮ್ಮ ಅಂಕೋಲೆಯ ಮನೆಗೆ ವಾಪಸು ಹೋದಳು. ಮಗ ನೌಕರಿಯಲ್ಲಿದ್ದಾನೆ. ತಿಂಗಳೂ ತಪ್ಪದೆ ದುಡ್ಡು ಕಳಿಸುತ್ತಾನೆ. ಗಂಡನ ಕಾಲದಲ್ಲಿ ಕಷ್ಟವಾದರೇನಾಯಿತು, ಈಗ ಮಗ ಯಾವುದಕ್ಕೂ ಕಡಿಮೆ ಮಾಡಲಿಲ್ಲ ಎಂದು ಬೀಗಿದಳು. ಅಲ್ಲಿಂದೀಚೆಗೆ ವರ್ಗವಾಗುತ್ತ ಈಗ ಅಶೋಕ ಮೈಸೂರಿಗೆ ಬಂದು ಮೂರು ವರ್ಷಗಳೇ ಸಂದವು….
*
*
*
ಮರುದಿನ ಅಶೋಕ ಹತ್ತು ಗಂಟೆಗೇ ರಾಧಿಕೆಯ ಮನೆಗೆ ಹೊರಟ. ವಿಳಾಸವಿದ್ದರೂ ಮನೆ ಹುಡುಕುವುದು ಕಷ್ಟವಾಯಿತು. ಅವಳ ಮನೆ ನಂಬರು ಕೇಳುತ್ತ ಕೇಳುತ್ತ ಒಂದು ಮಾಂಸದಂಗಡಿಯ ಮುಂದೆ ಬಂದು ನಿಂತ. ಆ ಅಂಗಡಿಯದೂ ಅವಳ ಮನೆಯದೂ ಒಂದೇ ನಂಬರಾಗಿತ್ತು. ಅಂಗಡಿಯವನೇ ಮನೆ ತೋರಿಸಿದ. ಅಂಗಡಿಕೆ ಅಂಟಿಕೊಂಡಂತೆ ಹಿಂಭಾಗಕ್ಕೆ ಇತ್ತು. ಮನೆಯ ಎದುರೇ ಕೊಳೆ ನೀರು ಹರಿಯಲು ಬಿಟ್ಟ ಚರಂಡಿ. ಅದನ್ನು ದಾಟಲೊಂದು ಕಲ್ಲುಚಪ್ಪಡಿ. ಬಾಗಿಲು ಬಡಿದು ತೆರೆಯುವ ನಿರೀಕ್ಷೆಯಲ್ಲಿ ನಿಂತಾಗ ಯಾಕೋ ಮನಸ್ಸು ಮಂಕಾಯಿತು. ಬಾಗಿಲು ತೆರೆದವಳು ರಾಧಿಕೆ. ತಲೆಸ್ನಾನ ಮಾಡಿ ಒದ್ದೆ ಕೂದಲು ಹಿಂದಕ್ಕೆ ಹರವಿಕೊಂಡಿದ್ದಳು. ಒಳಗೆ ಎರಡು ಖುರ್ಚಿ ಒಂದು ಟೇಬಲನ್ನು ಓರಣವಾಗಿ ಜೋಡಿಸಿದ್ದರು. ಒಳಕೋಣೆಗ ಹೋಗುವ ಒಂದು ಚೌಕಟ್ಟಿನ ಮೇಲ್ಗಡೆ ಕಸೂತಿಯ ಮೊಲ…. ದೇವರ ಫೋಟೋಗಳು ಒಂದು ನಯೆಪೈಸೆಯ ವೆಲ್‌ಕಂ ಮಾಸುತ್ತಿದ್ದವು. “ಬಂದನೇನೇ” ಅನ್ನುತ್ತ ಗುಲಾಬಿ ಹೊರಬಂದಳು. ತುಂಬ ವಯಸ್ಸಾದವಳ ಹಾಗೆ ತೋರುತ್ತಿದ್ದಳು. ಗಂಡ ಸತ್ತಾಗಲೂ ಹಣೆಯ ಕುಂಕುಮ ಅಳಿಸದ, ಹೂ ಮುಡಿಯುವುದನ್ನು ನಿಲ್ಲಿಸಿದವಳು ಈಗ ಕುಂಕುಮ ಅಳಿಸಿ ವಿಧವೆಯಾಗಿದ್ದಳು. ಕಟ್ಟಿಗೆ ಡಿಪೋದ ಪಂಡರೀನಾಥ ಪ್ರಭು ಇವಳನ್ನು ಇಟ್ಟುಕೊಂಡ ಎರಡು ವರ್ಷಕ್ಕೇ ತೀರಿಕೊಂಡನೆಂದು ಅಶೋಕ ಸುದ್ದಿ ಕೇಳಿದ್ದ. “ಇಟ್ಟುಕೊಂಡವರ ಜೀವ ತಿನ್ನುತ್ತಾಳೆ ಮಾರಿ. ಮೂರು ಜನವಾಯಿತು….” ಎಂದು ಊರಲ್ಲಿ ಸುದ್ದಿ ಹಬ್ಬಿ ಯಾರೂ ಮೂಸಿ ನೋಡಲಿಲ್ಲವಂತೆ. ಅದರ ನಂತರ ಅವಳ ಕಷ್ಟದ ದಿನಗಳು ಆರಂಭವಾಗಿರಬೇಕು. ಜೊತೆಗೆ ವಯಸ್ಸೂ ಹಲ್ಲು ಮಸೆದಿರಬಹುದು. ಕೂದಲನ್ನೂ ಹಿಂದಕ್ಕೆ ಬಿಗಿದು ತುರುಬು ಕಟ್ಟುವ, ತುರುಬು ತುಂಬ ಹೂ ತುಂಬುವ, ಕಾಲಿಗೆ ಬೆಳ್ಳಿ ಗೆಜ್ಜೆ ಬಿಗಿದು ಝಲ್ಲು ಝಲ್ಲೆನುತ ನಡೆಯುವ, ಥಳಥಳ ಹೊಳೆಯುವ ನತ್ತು ಮೂಗಿಗೆ ಇಟ್ಟು ಹುಂ ಎಂದು ಮೂಗು ಮುರಿಯುವ ಯಕ್ಷಿ ಗುಲಾಬಿಯನ್ನು ಹೀಗೆ ನೋಡುವುದು ತ್ರಾಸಾಯಿತು. ಅವಳ ಆಡಂಬರದ ದಿನಗಳಲ್ಲಿ ಅವಳನ್ನು ಊರಲ್ಲಿ ನೋಡುವುದೇ ಅಪರೂಪ. ಯಾವಾಗಲಾದರೊಮ್ಮೆ ಹನುಮಟ್ಟೆಯ ಪಂಚಮೀ ದೇವಕಾರ್ಯದ ದಿವಸ ಅಥವಾ ಬಂಡೀಹಬ್ಬದ ದಿವಸ ಅಲಂಕರಿಸಿಕೊಂಡು ಪ್ರಸಾದ ಪಡೆಯಲು ಬಂದರೆ ಹುಡುಗರಿಗೆಲ್ಲ ಅವಳು ಚಂದಮಾಮ ಕತೆಗಳಲ್ಲಿ ಬರುವ ಖೇಚರ ಹೆಣ್ಣಿನಂತೆ ತೋರುತ್ತಿದ್ದಳು. ಅಶೋಕ ಅವಳನ್ನು ಇಷ್ಟು ನಿರಾಡಂಬರವಾಗಿ ನೋಡೇ ಇರಲಿಲ್ಲ. ಗುಲಾಬಿ ಮೆಲ್ಲನೆ ಮಾತು ಸುರುಮಾಡಿದಳು. ಏನು, ಹೇಗಿದ್ದೀ ಎಂದು ವಿಚಾರಿಸಿದಳು. ನೌಕರಿಯ ಬಗ್ಗೆ ಕೇಳುತ್ತ ಸಂಬಳ ಕೇಳಿ ಮುಜುಗರಕ್ಕೆ ತಳ್ಳಿದಳು. “ಅಮ್ಮ ಆರಾಮಾಗಿದ್ದಾರೆಯೇ?” ಎಂದಳು. ಅಪ್ಪನನ್ನು ಹೊಗಳಿದಳು. ಜನರದು ಯಾವಾಗಲೂ ಸಂಶಯ ಸ್ವಭಾವ ಅಂದಳು. ನೀನು ಅಪ್ಪನಿಗೆ ತಕ್ಕ ಮಗ…. ದಿಟ್ಟ ಹುಡುಗ ಅಂದಳು; ಈಗಿನ ಕಾಲದ ಹುಡುಗರು ಮಾಯೆ ಮಮತೆ ಇಟ್ಟುಕೊಳ್ಳುವುದು ಕಡಿಮೆ; ನೀನು ಹಾಗಲ್ಲ, ಇಷ್ಟು ದೂರ ಹುಡುಕಿಕೊಂಡು ಬಂದಿದ್ದೀ ಅಂದಳು. ನಮ್ಮ ರಾಧಾ ಎಷ್ಟು ಚೆನ್ನಾಗಿ ಹೊಲಿಗೆ ಕಸೂತಿ ಮಾಡುತ್ತಾಳಂತೀ ಎಂದು ರಾಗ ತೆಗೆದಳು. ಅವಳ ಅಡಿಗೆಯ ಕೈಚಳಕ ಹೊಗಳಿದಳು. ರಾಧಿಕಾ ಒಳಗಿನಿಂದ ಕರೆಯದೇ ಹೋಗಿದ್ದರೆ ಇನ್ನೂ ಏನೇನು ಆಡುತ್ತಿದ್ದಳೋ! ಅವಳು ಎಲ್ಲಿಯೋ ಗುರಿಯಿಟ್ಟು ಮಾಡುತ್ತಿದ್ದಾಳೆಂದು ಅಶೋಕನಿಗೆ ಅನುಮಾನವಾಯಿತು. ಸ್ವಲ್ಪ ಹೊತ್ತು ಕೂತಿದ್ದು ರಾಧಿಕೆ ಕೊಟ್ಟ ಚಹಾ ಕುಡಿದು ಹೊರಡಲು ಎದ್ದ. ಊಟ ಮಾಡಿಕೊಂಡೇ ಹೋಗಬೇಕೆಂದು ಗುಲಾಬಿ ಒತಾಯಿಸಿದಳು. ಒಲ್ಲೆನೆಂದ. ಆದರೆ ರಾಧಿಕೆಯ ಒತ್ತಾಯವನ್ನು ಮೀರುವದಾಗಲಿಲ್ಲ.

ಊಟ ಮುಗಿಸಿ ಹೊರಟಾಗ ರಾಧಿಕೆ ಬಸ್‌ಸ್ಟಾಪ್‌ವರೆಗೂ ಬಂದಳು. ತುಂಬ ಹೊತ್ತಿನವರೆಗೆ ಬಸ್ ಬರಲಿಲ್ಲ. ಬಂದ ಬಸ್ಸೂ ಯದ್ವಾ ತದ್ವಾ ತುಂಬಿಕೊಂಡಿತ್ತು. ಇಬ್ಬರೂ ಬಸ್‌ಸ್ಟಾಪಿನ ಕಲ್ಲುಬೆಂಚಿನ ಮೇಲೆ ಕೂತು ಮಾತಾಡಿದರು. ನಡುವೆ ಹತ್ತು ವರ್ಷಗಳ ಇರಲೇ ಇಲ್ಲವೇನೋ ಎಂಬಂತೆ ರಾಧಿಕೆ ಮನಸ್ಸು ಬಿಚ್ಚಿದಳು. ಅಮ್ಮ ಹಲವು ಸಲ ತೋರಿಸುವ ಸಣ್ಣತನ ತನಗೆ ಏನೇನೂ ಇಷ್ಟವಿಲ್ಲ, ಹಣ ಅವಳಿಗೆ ಮುಖ್ಯವಾಗಿ ಕಾಣುತ್ತದೆ ಅಂದಳು. ತನ್ನನ್ನು ಅವಳ ಅಣ್ಣನ ಮಗನಿಗೆ ಕಟ್ಟುವ ಅಮ್ಮನ ಪ್ಲಾನು ಹೇಳಿದಳು. ಆ ಹುಡುಗ ಅಷ್ಟು ಚುರುಕಲ್ಲ, ಒಬ್ಬನೇ ಪುತ್ರರತ್ನ. ಮತ್ತೆ ಯಾರು ರಾಧಿಕೆಯನ್ನು ಮಾಡಿಕೊಳ್ಳುತ್ತಾರೆ ಎಂದು ಅವಳ ಯೋಚನೆಯಂತೆ. ರಾಧಿಕೆಯ ವಿರೋಧವನ್ನೂ ಲೆಕ್ಕಿಸದೇ ಆ ಬಗ್ಗೆ ಅಣ್ಣನಿಗೆ ಹೇಳಿದ್ದಾಳಂತೆ. ಮಾತಾಡುತ್ತ ರಾಧಿಕೆ ಮಹತ್ವದ ವಿಚಾರವೊಂದನ್ನು ಅಶೋಕನಿಗೆ ಹೇಳಿದಳು. ಅದು ನಾಗರಾಜನ ಕುರಿತು. ನಾಗರಾಜ ಅವಳ ಆಫೀಸಿನಲ್ಲೇ ಕೆಲಸ ಮಾಡುತ್ತಾನೆ. ಇಬ್ಬರೂ ಒಟ್ಟಿಗೆ ಟ್ರೇನಿಂಗ್ ಬಂದವರು. ಒಂದೇ ಕಡೆ ಪೋಸ್ಟಿಂಗ್ ಆಯಿತು. ಟ್ರೇನಿಂಗ್‌ನಲ್ಲಿ ಸುರುವಾದ ಪ್ರೀತಿ ಈಗ ಬಲಿತಿತ್ತು. ಎರಡು ವರ್ಷದಿಂದ ಅವರ ಸಂಬಂಧ ಹಾಗೇ ಇದೆಯಂತೆ. “ಅದನ್ನೊಂದು ಸೆಟಲ್ ಮಾಡುವಾ ಅಂತಂದರೆ ಆಗುತ್ತಿಲ್ಲ” ಅಂದಳು. ಅಶೋಕ ನಕ್ಕು “ಸಂಬಂಧಗಳನ್ನು ಸೆಟಲ್ ಮಾಡುವುದು ಫೈನಲೈಸ್ ಮಾಡುವುದು ಸಾಧ್ಯವೇ?” ಅಂದ. “ಹಾಗಲ್ಲ, ಅಮ್ಮನಿಗೆ ಹೇಳುವಾ ಅಂದರೆ ಭಯ. ಅವಳು ದೊಡ್ಡ ರಂಪ ಎಬ್ಬಿಸಿಬಿಡುತ್ತಾಳೆ. ಮತ್ತೆ ಅಣ್ಣನ ಮಗನ ಬಗ್ಗೆ ಸುರುಮಾಡುತ್ತಾಳೆ. ಅವಳಿಗೆ ನಾನಲ್ಲದೇ ಮತ್ತ್ಯಾರಿದ್ದಾರೆ?” ಎಂದು ಸ್ವಲ್ಪ ಹೊತ್ತು ಮೌನವಾಗಿ ಕೂತಳು. “ಇದನ್ನೆಲ್ಲ ಹೇಳಿಕೊಳ್ಳುವಾ ಅಂತಂದರೆ ಹತ್ತಿರದವರು ಯಾರಿದ್ದಾರೆ ನನಗೆ? ನಾಗರಾಜನಿಗೆ ಇವೆಲ್ಲ ಅರ್ಥವಾಗುವುದಿಲ್ಲ. ಅದೇನು ಮಹಾ ಅನ್ನುತ್ತಾನೆ….” ಬಿಸಿಲಿಗೆ ಉದ್ದುದ್ದವಾಗುತ್ತ ಹೋದ ನೆರಳು ನೋಡುತ್ತ ಹೇಳಿದಳು. ಅಶೋಕ ರಾಧಿಕೆಯ ಕಣ್ಣುಗಳಿಗಾಗಿ ಹುಡುಕಿದ. ಅವು ತನ್ನನ್ನು ನಿಟ್ಟಿಸಿದಾಗ ಆ ಮಾರ್ದವತೆಗೆ ಕರಗಿದ. ಒಳಗೆಲ್ಲೋ ಸಣ್ಣ ನೋವಾದರೂ ಅವಳು ತನ್ನಲ್ಲಿಟ್ಟಿರುವ ವಿಶ್ವಾಸದಿಂದ ಪುಲಕಿತನಾದ. “ನಾನು ನಿನ್ನ ಜೊತೆಗಿದ್ದೇನೆ” ಅಂದ. ಬಸ್ಸು ಬರುವವರೆಗೂ ನೂರೆಂಟು ಸುದ್ದಿ ಬಿಚ್ಚಿದರು.

ರಾಧಿಕೆಯ ಮನೆಯಿಂದ ಮರಳಿದ ನಂತರ ಅರ್ಥವಾಗದ ಕಳವಳ ಅಶೋಕನಲ್ಲಿ ಹೊಕ್ಕಿತು. ಮನಸ್ಸು ಅವ್ಯಕ್ತ ನೋವಿನಲ್ಲಿ ತುಯ್ಯತೊಡಗಿತ್ತು. ಹತ್ತು ವರ್ಷಗಳ ನಂತರ ಸಿಕ್ಕ ಈ ಹುಡುಗಿ ಒಂದೇ ಭೇಟಿಯಲ್ಲಿ ಇಷ್ಟೊಂದು ಕಲಕಿಬಿಟ್ಟಳಲ್ಲ ಅನಿಸತೊಡಗಿತು. ಒಂದೇ ಸಮನೆ ಬಾಲ್ಯದ ನೆನಪುಗಳು ಹಾರ – ತುರಾಯಿ ತೊಟ್ಟು ಮೆರವಣಿಗೆ ಬಂದವು. ಯಾಕೋ ಅಪ್ಪನ ನೆನಪಾಗುತ್ತಿತ್ತು. ಅವನ ಕೊನೆಗಾಲದ ನಿಸ್ಸಹಾಯತೆ. ಕಣ್ಣಿಗೆ ಕಟ್ಟುತ್ತಿತ್ತು. ಗುಲಾಬಿಯಿಂದ ದೂರವಾದ ನಂತರ ಆತ ಜರ್ಜರಿತನಾಗಿದ್ದ. ಸದಾ ಬೀಡಿ ಸೇದುತ್ತ ಕೂರುವುದು. ಕೆನ್ನೆಗಳೆರಡೂ ಗುಳಿ ಬಿದ್ದಿದ್ದವು. ಕಣ್ನುಗಳಂತೂ ಹೊಂಡದಲ್ಲಿ ಗೋಲಿ ಇಟ್ಟಂತೆ ತೋರುತ್ತಿದ್ದವು. ಊಟಕ್ಕೇ ತತ್ವಾರವಾದಾಗ ಅಮ್ಮನೇ ಮುಂದಾಗಿ ಅಂಗಡಿ ಮಾರಿ ಬಂದ ಹಣ ತಾನೇ ಇಟ್ಟುಕೊಂಡಳು. ಅಷ್ಟು ಜೋರು ಹೊಡಕೊಂಡು ಇದ್ದವನು ಹೀಗಾದದ್ದು ವಿಚಿತ್ರವಾಗಿತ್ತು. ಅವನ ಚೈತನ್ಯದ ಮೂಲ ಸೆಲೆ ಬರೀ ಗುಲಾಬಿಯೇ ಆಗಿದ್ದಳೇ? ಎಂದು ಎಷ್ಟೋ ಬಾರಿ ಅಶೋಕನಿಗೆ ಅನ್ನಿಸುತ್ತದೆ. ಅಮ್ಮನಂತೂ ಶುಶ್ರೂಷೆಯ ಜೊತೆಗೇ ಅವಕಾಶ ಸಿಕ್ಕಾಗಲೆಲ್ಲ ಅಪ್ಪನನ್ನು ನಿರ್ದಯವಾಗಿ ಹಂಗಿಸುತ್ತಿದ್ದಳು. “ನಿಮಗೆ ರೋಗ ಬಂದದ್ದೇ ಗುಲಾಬಿಯಿಂದ” ಎಂದು ಜರಿಯುವಳು. “ಪಂಢರೀನಾಥ ಪ್ರಭು ಗುಲಾಬಿಯ ಮನೆಗೆ ಹೋಗುವುದನ್ನು ನೋಡಿದೆ” ಎಂದು ಅವನನ್ನು ಕೆರಳಿಸುವಳು. “ಈಗ ಕೊನೆಗಾಲದಲ್ಲಿ ಆ ರಂಡೆ ಬಂದಳೆ? ನಾನೇ ಬೇಕಾಯಿತಲ್ಲವೆ? ಅನ್ನುವಳು. ಅಪ್ಪ ಬಯ್ಯಲು ಯತ್ನಿಸಿ ಕೆಮ್ಮುತ್ತಿದ್ದ-ಇಂಥ ನೆನಪುಗಳು ಒತ್ತಿ ಬಂದರೆ ಅಶೋಕನಿಗೆ ಗುಲಾಬಿಯ ಬಗ್ಗೆ ರಾಧಿಕೆಯ ಬಗ್ಗೆ ದಿಗಿಲಾಗುತ್ತಿತ್ತು. ತಾನು ಅರಿವಿದ್ದೂ ಯಾವುದೋ ತಳಕಾಣದ ಪ್ರಪಾತದಲ್ಲಿ ಧುಮುಕಿದಂತೆ ಅನಿಸುತ್ತಿತ್ತು. ಈ ಹೊಯ್ದಾಟದ ನಡುವೆಯೂ ರಾಧಿಕೆಯ ಸ್ನೇಹ ಅಪ್ಪಟವಾಗಿದೆಯೆಂಬ ಭಾಸ. ಅವಳನ್ನು ದೂರ ಮಾಡಿ ವೃಥಾ ನೋಯಿಸುವುದರಲ್ಲಿ ಅರ್ಥವಿಲ್ಲ ಅನಿಸುವುದು….
*
*
*
ಈ ಮೂರು ತಿಂಗಳಲ್ಲಿ ಅಶೋಕ ರಾಧಿಕೆಯ ಮನೆಗೆ ಅನೇಕ ಬಾರಿ ಹೋಗಿದ್ದ. ಪ್ರತೀ ಸಲ ಹೋಗುವಾಗಲೂ ಹಣ್ಣೋ ತಿಂಡಿಯೋ ಒಯ್ಯುತ್ತಿದ್ದ. ಗುಲಾಬಿಯಂತೂ ಅವನ ಮೇಲೆ ಪ್ರಸನ್ನಳಾಗಿದ್ದಳು. ಇಲ್ಲವಾದರೆ ಅವಳ ಅಣ್ಣನ ಮಗನಿಗೆ ಗುಲಾಬಿಯನ್ನು ಕೊಡಬೇಕೆಂಬ ವಿಚಾರವನ್ನು ಅವಳು ಅಶೋಕ ಹೇಳಿದನೆಂಬ ಮಾತ್ರಕ್ಕೆ ಕೈ ಬಿಡುತ್ತಿರಲಿಲ್ಲ. “ಬರೀ ದುಡ್ಡು ಮಾತ್ರ ಮುಖ್ಯವಲ್ಲ. ಅವಳ ಬದುಕಿಗೆ ಸ್ವಲ್ಪವಾದರೂ ಸುಖ ಬೇಡವೇ? ರಾಧಿಕೆಗೆ ಒಳ್ಳೆಯ ಗಂಡ ಸಿಕ್ಕೇ ಸಿಗುತ್ತಾನೆ” ಎಂದು ಅಶೋಕ ಪ್ರತೀ ಸಲ ಬಂದಾಗಲೂ ಹೇಳುತ್ತಿದ್ದ. ಅಂತೂ ಗುಲಾಬಿ ಒಪ್ಪಿದಳು. “ನಿನ್ನ ಭರವಸೆಯ ಮೇಲೆ ಹೂಂ ಅನ್ನುತ್ತೇನೆ” ಎಂಬ ಮಾತೂ ಆಡಿದಳು. ಗುಲಾಬಿ ಹೀಗೆ ಮನಸ್ಸು ಬದಲಾಯಿಸಿದ್ದರಿಂದ ರಾಧಿಕೆ ತುಂಬ ಖುಷಿಯಾಗಿದ್ದಳು. “ಅಮ್ಮ ಏನಾದರೂ ಅಂದರೆ ಮನಸ್ಸಿಗೆ ಹಚ್ಚಿಕೊಳ್ಳಬೇಡ” ಎಂದೂ ಹೇಳಿದಳು. ಒಂದು ದಿನ ಒತ್ತಾಯದಿಂದ ತನ್ನ ಆಫೀಸಿಗೆ ಕರಕೊಂಡು ಹೋಗಿ ನಾಗರಾಜನ ಪರಿಚಯ ಮಾಡಿಕೊಟ್ಟಳು. ಆತ ನಸುಗಪ್ಪು ಬಣ್ಣದವ. ಮಲೆಯಾಳಿಗಳ ಹಾಗೆ ಗುಂಗುರು ಗುಂಗುರು ಕೂದಲು. ಕುಸ್ತಿ ಪಟುವಿನಂತಹ ದೇಹಧಾರ್ಡ್ಯವಿತ್ತು. ಅಶೋಕ ನಿರೀಕ್ಷಿದಷ್ಟು ಆಪ್ತವಾಗಿ ಆತ ಮಾತಾಡಲಿಲ್ಲ. ರಾಧಿಕೆ ಅವನ ಬಗ್ಗೆ ಹೇಳುತ್ತಿದ್ದಾಗ ಸೂಕ್ಷ್ಮವಾಗಿ ಅವಳನ್ನೇ ಗಮನಿಸುತ್ತಿದ್ದಂತೆ ಅಶೋಕನಿಗೆ ಅನಿಸಿತು. “ನಿಮ್ಮ ರೂಮು ಎಲ್ಲಿ? ಊಟ ಎಲ್ಲಿ ಮಾಡುತ್ತೀರಿ?” ಇತ್ಯಾದಿಗಳು ಮುಗಿದ ಮೇಲೆ ಮಾತಾಡಲು ಏನೂ ಸಿಗದೇ “ಮತ್ತೇನು? ಮತ್ತೇನು ವಿಶೇಷ?” ಅನ್ನುತ್ತ ಮಾತುಕತೆ ಮುಗಿಯಿತು.

ಈ ಮಧ್ಯೆ ಗುಲಾಬಿ ರಾಧಿಕೆಗೆ ತಿಳಿಯದ ಹಾಗೆ ಅಶೋಕನಿಂದ ನೂರು ರೂಪಾಯಿ ಇಸಕೊಂಡಳು. ಆಮೇಲೆ ತಿಂಗಳ ನಂತರ ಅವಳು ಹಿಂತಿರುಗಿಸಲು ಬಂದಾಗ ಅಶೋಕ “ಅಪ್ಪನದೇ ಗುಣ ಬಂದಿದೆ. ಅವರೂ ಹಾಗೆಯೇ ಇದ್ದರು. ಬಹಳ ಉದಾರಿ. ದೇವರು ಹೀಗೇ ಇಟ್ಟಿರಲಿ….” ಎಂದು ಗುಲಾಬು ಬಡಬಡಿಸಿದಳು. ಅಶೋಕನಿಗೆ ತಕ್ಷಣ ತಪ್ಪಿನ ಅರಿವಾಯಿತು. ಯಾಕಾದರೂ ತನಗೆ ಹಾಗೆ ಹೇಳುವ ಬುದ್ಧಿ ಬಂತೆಂದು ಪರಿತಪಿಸಿದ.

ಇದು ಇಷ್ಟಕ್ಕೇ ಮುಗಿಯಲಿಲ್ಲ. ಕೆಲವು ದಿನಗಳ ನಂತರ ಅಶೋಕನಿಗೆ ಅಮ್ಮನಿಂದ ಉದ್ದವಾದೊಂದು ಪತ್ರ ಬಂತು. ಅತ್ತ ಇತ್ತ ಕ್ಷೇಮಗಳ ತರುವಾಯ ಪತ್ರ ಕಿಡಿಕಾರತೊಡಗಿತ್ತು: ಗುಲಾಬಿ ತನ್ನ ಮಗಳು ರಾಧಿಕೆಯೊಡನೆ ಪದೇ ಪದೇ ನೀನು ಭೆಟ್ಟಿಯಾಗುತ್ತೀಯಂತೆ. ಅವರ ಮನೆಗೂ ಹೋಗುತ್ತೀಯಂತೆ. ಹಣವನ್ನೂ ಕೊಡುತ್ತೀಯಂತೆ. ಅಷ್ಟಲ್ಲದೆ ರಾಧಿಕೆಯನ್ನು ಮದುವೆಯಾಗುತ್ತೀಯೆಂದೂ ಹೇಳಿದ್ದೆಯಂತೆ. ಊರಿನವನೊಬ್ಬನ ಹತ್ತಿರ ಗುಲಾಬಿಯೇ ಸ್ವತಃ ಈ ರೀತಿ ಹೇಳಿದ್ದಾಳೆ. ಈ ವಿಷಯವೇನಾದರೂ ನಿಜವಾದರೆ ಅಮ್ಮ ಸತ್ತು ಹೋದಳೆಂದೇ ತಿಳಿದುಕೊ. ನನ್ನ ಸಂಸಾರಕ್ಕೆ ಹುಳಿ ಹಿಂಡಿದವಳ ಮನೆಯ ನೆರಳೂ ತಾಗಕೂಡದು ನಿನಗೆ. ಮುಂದಿನ ಶನಿವಾರ ಬೆಳಗಿನ ಬಸ್ಸಿಗೆ ನಾನು ಮೈಸೂರಿಗೆ ಬರುತ್ತೇನೆ, ನಿನ್ನ ಮ್ದುವೆ ಬಗ್ಗೆ ಮಾತಾಡಬೇಕು…. ಇನ್ನೂ ಎಷ್ಟು ದಿನ ಅಂತ ತಡಮಾಡುತ್ತೀ…. ಬಸ್ಸು ಸಂಜೆ ಎಂಟು ಗಂಟೆಗೆ ಅಲ್ಲಿ ತಲುಪುತ್ತದೆಯಂತೆ. ಬಸ್‌ಸ್ಟಾಂಡಿಗೆ ಕರೆಯಲು ಬಾ….

ಅಶೋಕನಿಗೆ ದಿಗಿಲಾಯಿತು. ಇನ್ನು ಈ ವಿಷಯದ ಬಗ್ಗೆ ತುಂಬ ಜಾಗರೂಕನಾಗಿರಬೇಕೆಂದುಕೊಂಡ. ರಾಧಿಕೆ ಭೆಟ್ಟಿಯಾದಾಗ ಅಮ್ಮ ಪತ್ರದ ಬಗ್ಗೆ ಹೇಳಿದ. “ಈವತ್ತು ನಾಗರಾಜನ ಬಗ್ಗೆ ಅಮ್ಮನಿಗೆ ಹೇಳುತ್ತೇನೆ. ನಾಳೆ ಬೆಳಿಗ್ಗೆ ನೀನು ನಮ್ಮ ಮನ್ಗೆ ಬಾ” ಅಂದಳು.

ಮರುದಿನ ಶೋಕ ಹೋದಾಗ ವಾತಾವರಣವೇ ಬದಲಾಗಿಹೋಗಿತ್ತು. ಇವನ ಬರವನ್ನೇ ಕಾಯುತ್ತ ಕೂತಿದ್ದ ಗುಲಾಬಿ ರಂಪವೆಬ್ಬಿಸಿದಳು. “ನಿನ್ನನ್ನು ನಂಬಿ ಅಣ್ಣನ ಮಗನ ಸಂಬಂಧ ಕೈಬಿಟ್ಟೆ. ಈಗ ಆ ನಾಗರಾಜನಂತೆ ಯಾವನೋ. ಅವನ ಕೊರಳಿಗೆ ಕಟ್ಟಲು ನೋಡುತ್ತೀಯಾ….” ಅಶೋಕನ ವಿವರಣೆ ಅವಳ ಕಿವಿ ತಲುಪಲೇ ಇಲ್ಲ. ಒಬ್ಬಳೇ ಒದರಾಡುತ್ತಿದ್ದಳು. ತಾಳ್ಮೆಯ ಕಟ್ಟೊಡೆದು, ಅಶೋಕ “ಬಾಯಿಗೆ ಬಂದಂತೆ ಮಾತಾಡಬೇಡಿ. ರಾಧಿಕೆಯನ್ನು ಸರಿಯಾಗಿ ಕೇಳಿ ತಿಳಕೊಳ್ಳಿ…. ನನ್ನ ಬಗ್ಗೆ ಹಾಗೆ ಅರ್ಥಮಾಡಿಕೊಂಡದ್ದು ನಿಮ್ಮ ತಪ್ಪು….” ಅನ್ನುವಷ್ಟರಲ್ಲಿ ರಾಧಿಕೆ ಮಧ್ಯೆ ಪ್ರವೇಶಿಸಿದ್ದು ಗುಲಾಬಿಯನ್ನು ಇನ್ನಷ್ಟು ಕೆರಳಿಸಿತು. “ನಿನಗೆ ಮನಸಿ‌ಇರಲಿಲ್ಲ ಅಂತ ಸುಳ್ಳು ಹೇಳಬೇಡ. ಇಲ್ಲವಾದರೇ ಪ್ರತೀ ಸಲ ಬರುವಾಗ ಹಣ್ಣು ಅದೂ ಇದೂ ಅಂತ ತರುತ್ತಿದ್ದದ್ದು ಯಾಕೆ? ನನ್ನ ಅಣ್ಣನ ಮಗನ ಸಂಬಂಧ ತಪ್ಪಿಸಲು ಅಷ್ಟು ಆಸ್ಥೆ ತಗೊಂಡದ್ದು ಯಾಕೆ? ಆ ದಿವಸ ನೂರು ರೂಪಾಯಿ ಇಸಕೊಳ್ಳಲಿಲ್ಲ ಯಾಕೆ….? ಅಷ್ಟಕ್ಕೇ ಬಿಡುವವಳಲ್ಲ ನಾನು….” ಇಡೀ ವಾತಾವರಣ ಅಶೋಕನಿಗೆ ಅಸಹ್ಯವಾಯಿತು. ತನಗೆ ಬೇಕಾದಂತೆ ಎಲ್ಲವನ್ನೂ ಇವಳು ಕಿರುಚಬಲ್ಲಳು ಅನಿಸಿತು. ತಾನಾಗಿಯೇ ಬಂದು ಈ ಅರಲಲ್ಲಿ ಬಿದ್ದೆ. ಇವರನ್ನೆಲ್ಲ ಅತೀ ಹಚ್ಚಿಕೊಂಡು ಹೀಗಾಯಿತು ಅಂದುಕೊಂಡ. ಆಮೇಲೆ ರಾಧಿಕೆ ಎಷ್ಟೇ ಸಮಾಧಾನ ಪಡಿಸಿದರೂ ಮನಸ್ಸು ತಿಳಿಯಾಗಲಿಲ್ಲ. “ನಿನ್ನ ಅಮ್ಮನಲ್ಲಿ ನನ್ನ ಬಗ್ಗೆ ಇಂಥ ಭಾವನೆ ಬೆಳೆಯಲು ಬಿಡಬಾರದಿತ್ತು ರಾಧಿಕಾ” ಅಂದ. ಅವಳು ಮಾತಾಡಲಿಲ್ಲ.

ಶನಿವಾರ. ಆ ರಂಪದ ನಂತರ ಮತ್ತೆ ರಾಧಿಕೆ ಭೆಟ್ಟಿಯಾಗಿರಲಿಲ್ಲ. ಅಶೋಕ ಎರಡೂವರೆಗೆ ಬ್ಯಾಂಕಿನ ಕೆಲಸ ಮುಗಿಸಿ ಈವತ್ತು ಅಮ್ಮ ಬರುತ್ತಾಳೆಂದು ನೆನಪಿಸಿಕೊಂಡು, ತರಕಾರಿ ಒಯ್ದು ಇಟ್ಟರೆ ರೂಮಿನಲ್ಲಿ ಅಡಿಗೆಯಾದರೂ ಮಾಡಿಕೊಳ್ಳಲಾದೀತು ಅಂದುಕೊಳ್ಳುತ್ತ ಹೊರಡುವಷ್ಟರಲ್ಲಿ ರಾಧಿಕೆ ಬಂದಳು. ಉದ್ವಿಗ್ನಳಾಗಿದ್ದಳು. “ನಿನ್ನ ಜೊತೆ ಮಾತಾಡಬೇಕು” ಅನ್ನುತ್ತನ್ನುತ್ತ ಗದ್ಗದಿತಳಾದಳು. ಎಲ್ಲರೆದುರಿಗೆ ಬೇಡವೆಂದು ಅವನನ್ನು ಹೊರಗೆ ಕರೆತಂದಳು. ಹೊರಬಂದದ್ದೇ ಹೇಳತೊಡಗಿದಳು; ನಾಗರಾಜನಿಗೆ ಎರಡು ತಿಂದಳ ಹಿಂದೆ ಟ್ರಾನ್ಸ್‌ಫರ್ ಆರ್ಡರ್ ಬಂತಂತೆ. ವಿಷಯ ತಿಳಿದು ರಾಧಿಕೆ “ಹಾಗಾದರೆ ನಮ್ಮ ಮದುವೆಯ ಬಗ್ಗೆ ಈಗಲೇ ಯೋಚಿಸಬೇಕು” ಅಂದದ್ದಕ್ಕೆ ಅತ, “ನೋಡುವಾ ನೋಡುವಾ, ಅವೆಲ್ಲ ಇಷ್ಟು ಬೇಗ ಮಾತಾಡುವುದೇಕೆ?” ಎಂದು ಮಾತು ಹಾರಿಸಲು ನೋಡಿದ. ರಾಧಿಕೆ ಅವನನ್ನು ಜಾರಿಕೊಳ್ಳಲು ಬಿಡದೇ ಸ್ಪಷ್ಟಪಡಿಸಿಕೊಳ್ಳಲು ಯತ್ನಿಸಿದ್ದಕ್ಕೆ ಕಣ್ಣು ಕೆಂಪಾಗಿಸಿ “ಪ್ರೀತಿಸುತ್ತಿಲ್ಲ ಅಂತ ಹೇಳಿದೆನೆ? ಈಗಲೂ ಅದನ್ನೇ ಹೇಳುತ್ತೇನೆ. ಆದರೆ ಮದುವೆಯ ಬಗ್ಗೆ ಇನ್ನೂ ನಿರ್ಧಾರಕ್ಕೆ ಬಂದಿಲ್ಲ. ನಿನ್ನ ಜೊತೆ ನಿನ್ನ ಅಮ್ಮನನ್ನೂ ಕಟ್ಟಿಕೊಳ್ಳಬೇಕಲ್ಲವೆ?” ಅಂದನಂತೆ. ಆತ ಹೇಳಿದ್ದು ನಿಜವಾಗಿತ್ತು. ಇದುವರೆಗೂ ರಾಧಿಕಾ ಅವನಲ್ಲಿ ಮದುವೆಯ ಬಗ್ಗೆ ನೇರವಾಗಿ ಮಾತಾಡಿರಲಿಲ್ಲ. ಆತ ತಮಾಷೆ ಮಾಡುತ್ತಿದ್ದಾನೇನೋ ಎಂದು ಮೊದಮೊದಲು ಅಂದುಕೊಂಡಳು. ಅವನು ಬಿಗಿದ ಮುಖ ಸಡಿಲವಾಗಲಿಲ್ಲ. ಇವಳು ಒಲಿಸಿಕೊಳ್ಳಲು ನೋಡಿದಳು. ಹತ್ತಿರ ಬಂದವಳನ್ನು ದುರುಗುಟ್ಟಿ ದೂರವಿರಿಸಿದ. ಜೋರು ಮಾಡಿ ನೋಡಿದಳು. ಆತ ಇನ್ನಷ್ಟು ಕಠಿಣವಾದ. ಈವತ್ತು ಬೆಳಿಗ್ಗೆ ಮತ್ತೆ ಸ್ಫೋಟವಾಯಿತು. ರಾಧಿಕೆ ಅವನ ರೂಮಿಗೆ ಹೋದಾಗ ಅವನ ರೂಮಿನ ಬಾಗಿಲು ತೆರೆಯದೇ ಹಿಂದೆ ಕಳಿಸಿದನಂತೆ. “ಎರಡು ದಿನಗಳಿಂದ ಹಿಂಸೆ ಅನುಭವಿಸುತ್ತಿದ್ದೇನೆ. ಈಗ ನಾನೂ ಕಲ್ಲಾಗಬೇಕು. ಈ ಸಂಬಂಧ ಮತ್ತೆ ಬಾಳುವುದಿಲ್ಲ ಅಶೋಕ…. ಅಮ್ಮನಿಗಿನ್ನೂ ಹೇಳಿಲ್ಲ….” ಅಂದಳು. ರಾಧಿಕೆ ಎಷ್ಟು ಬೇಡ ಬೇಡವೆಂದರೂ ಅಶೋಕ, ತಾನು ನಾಗರಾಜನ ಜೊತೆ ಮಾತನಾಡುತ್ತೇನೆಂದು ಅವಳನ್ನು ಕರಕೊಂಡು ಪೋಸ್ಟ್ ಆಫೀಸಿಗೆ ಹೊರಟ. ಆಫೀಸು ಸಮೀಪಿಸುತ್ತಿದ್ದಂತೆ, ನಾಗರಾಜನ ಜೊತೆ ತಾನು ಮಾತನಾಡುವುದಾದರೂ ಏನನ್ನು? ಅವನಿಗೆ ಹೇಳಲಿಕ್ಕೆ ತನಗೇನು ಅಧಿಕಾರ? ಅನಿಸಿತು. ರಾಧಿಕೆಗೆ ಅನುಕಂಪ ಸೂಚಿಸಿವ ಅವಕಾಶ ಒದಗಿಬಂದದ್ದಕ್ಕೆ ತನ್ನ ಮನಸ್ಸಿಗೆ ಎಲ್ಲೋ ತಂಪಾಗಿದೆ ಎಂಬ ಭಾವನೆ ಬಂದು ಕಿರಿಕಿರಿಯಾಯಿತು.

ರಾಧಿಕೆ ತಾನು ಒಳಬರುವುದಿಲ್ಲವೆಂದು ಹೊರಗೇ ನಿಂತಳು. ಅಶೋಕ ಹೋಗಿ ಅವನನ್ನು ಕರಕೊಂಡು ಬಂದ. ಅಶೋಕ ಬಾಯಿ ತೆರೆಯುವ ಮುನ್ನವೇ ಆತ “ನೀವು ಏನು ಹೇಳುತ್ತೀರಂತ ನನಗೆ ಗೊತ್ತಿದೆ. ಒಳಗೆ ಆಫೀಸಲ್ಲಿ ಹಗರಣ ಬೇಡಾಂತ ಹೊರಗೆ ಬಂದೆ. ಹೇಳಬೇಕಾದ್ದನ್ನೆಲ್ಲ ಅವಳಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ಅವಳನ್ನು ನನ್ನ ತಲೆಗೆ ಕಟ್ಟಲು ನೋಡಬೇಡಿ. ನೀವು ಬೇಕಾದರೆ ಕಟ್ಟಿಕೊಳ್ಳಿ….” ಅಂದ. ಸರ್ರನೆ ಸಿಟ್ಟು ನೆತ್ತಿಗೇರಿ ಭಾನವಿಲ್ಲದವನ ಹಾಗೆ “ಏ ಏನಂದೇ” ಅನ್ನುತ್ತ ಮುನ್ನುಗ್ಗಿದ. ಅಷ್ಟರಲ್ಲಿ ನಾಗರಾಜನ ಬಲಿಷ್ಠ ಕೈಗಳು ಅವನನ್ನು ತಡೆದವು. ಆತ ಎಡಗೈಯಿಂದ ಅಶೋಕನ ಕಾಲರು ಹಿಡಿದ. ರಾಕ್ಷಸನ ಕೈಯೊಳಗೆ ಸಿಕ್ಕ ಹಾಗಾಯಿತು ಅವಸ್ಥೆ. ಜರ್ರನೆ ಆವೇಶ ಇಳಿಯಿತು. ನಾಗರಾಜನ ಕಣ್ಣುಗಳು ಉರಿಯುತ್ತಿದ್ದವು. ಅವನ ರೋಮಭರಿತ ರಟ್ಟೆಯ ಸ್ನಾಯುಗಳು ಉಬ್ಬಿ ನಿಂತಿದ್ದವು. “ಆಫೀಸಂತ ಬಿಟ್ಟಿದ್ದೇನೆ” ಎಂದು ಆತ ಅಶೋಕನನ್ನು ಹಿಂದಕ್ಕೆ ದೂಡಿ ರಾಧಿಕೆಯತ್ತ ಕಣ್ಣೆತ್ತಿಯೂ ನೋಡದೇ ಒಳಗೆ ಹೋದ. ಆಗಲೇ ಕೆಲವು ಜನ ಈ ಜಗಳ ನೋಡುತ್ತ ನಿಂತಿದ್ದರು. ಅವಮಾನದಿಂದ ಸಾಯುವ ಹಾಗಾಯಿತು ಅಶೋಕನಿಗೆ. ಮೊಟ್ಟಮೊದಲು ಬಾರಿಗೆ ಈ ರೀತಿ ಕಾಲರು ಹಿಡಿಸಿಕೊಂಡಿದ್ದ. ಮೋರೆ, ಕಿವಿ ಕೆಂಪಾಯಿತು. ಕುತ್ತಿಗೆಯ ಬಳು, ಆತ ಹಿಡಿದಲ್ಲಿ ಸ್ವಲ್ಪ ಉರಿಯತೊಡಗಿತು. ಏನೂ ತೋರದೆ ರಾಧಿಕೆಯ ಜೊತೆ ಹೊರಟ. “ಎಲ್ಲಿ ಹೋಗುವುದು?” ಅಂದಳು. ಅವಳು ಒಲ್ಲೆನೆಂದರೂ ಬಿಡದೇ, ಒತ್ತಾಯಿಸಿ ಹೋಟೇಲಿಗೆ ಹೋಗಿ ಕಾಫಿ ಕುಡಿಸಿದ. ಅವಳನ್ನು ಸಮಾಧಾನಪಡಿಸಲು ತಾನು ಆಡುವ ಮಾತುಗಳೆಲ್ಲ ಅರ್ಥಹೀನವಾಗುತ್ತದೆನಿಸಿತು. ಅವಳ ಸ್ವಂತ ವಿಷಯದಲ್ಲಿ ತಾನು ತಲೆಹಾಕಿದ್ದು ಅತೀ ಆಯಿತು; ಅವಳಷ್ಟಕ್ಕೇ ಅವಳನ್ನು ಬಿಟ್ಟಿದ್ದರೆ ಹೇಗೋ ನಿಭಾಯಿಸುತ್ತಿದ್ದಳೋ ಏನೋ…. ತಾನು ಹೋಗಿ ರಾಡಿಯೆಬ್ಬಿಸಿಬಿಟ್ಟೆ ಅನಿಸಿತು. “ಇಲ್ಲೇ ಪಾರ್ಕಿನಲ್ಲಿ ಸ್ವಲ್ಪ ಹೊತ್ತು ಕೂರೋಣ. ಈಗಲೇ ಮನೆಗೆ ಹೋಗಲಿಕ್ಕೆ ನನಗೆ ಇಷ್ಟವಿಲ್ಲ” ಅಂದಳು. ಇಬ್ಬರೂ ಪಾರ್ಕಿನ ಹುಲ್ಲಿನ ಮೇಲೆ ಕೂತರು. ಬಿಸಿಲು ಇಳಿಮುಖವಾಗುತ್ತಿತ್ತು. ಸ್ವಲ್ಪ ಹೊತ್ತು ಸುಮ್ಮನೇ ಕೂತಿದ್ದ ರಾಧಿಕಾ ಒಮ್ಮೆಲೇ ಅಳಲಾರಂಭಿಸಿದಳು. ಅವಳನ್ನು ಹೇಗೆ ಸಂತೈಸುವುದು ತಿಳಿಯದೇ ಒದ್ದಾಡಿದ. ಅವಳ ಕೈಹಿಡಿದು ತಲೆನೇವರಿಸಬೇಕು ಅನಿಸಿತು. ರಾಧಿಕಾ ರಾಧಿಕಾ ಅನ್ನುತ್ತ ಅವಳ ಭುಜದ ಮೇಲೆ ಕೈಯಿಟ್ಟ. ಕೊಡವಿಕೊಂಡು ಅವಳು ಬಿಕ್ಕಳಿಕೆ ಮುಂದುವರಿಸಿದಳು. ಆಚೀಚೆ ಹೋಗಿ ಬರುವ ಜನ ಇವರನ್ನೇ ನೋಡತೊಡಗಿದರು. ಒಂದಿಬ್ಬರು ಹುಡುಗರಂತು ಎದುರುಗಡೆ ಬೆಂಚಿನ ಮೇಲೆ ಕೂತೇಬಿಟ್ಟರು. ಹಸಿರು ಹುಲ್ಲು ಹೊದ್ದ ನೆಲ; ಸುತ್ತಲೂ ಎತ್ತರದ ಮರಗಳು; ಮೆದುವಾಗುತ್ತಿರುವ ಬಿಸಿಲು; ನಡುವೆ ಕೂತ ತಾವಿಬ್ಬರೂ ಈ ಲೋಕಕ್ಕೆ ಸಂದವರಲ್ಲ ಅನಿಸಿ “ರಾಧಿಕಾ ಹೋಗೋಣ. ಜನ ಎಲ್ಲ ಒಂದು ನಮೂನೆ ನೋಡುತ್ತಿದ್ದಾರೆ”’ ಅಂದ. ಅವಲು ಏಳಲಿಲ್ಲ. ಅಮ್ಮ ಇಂದು ಊರಿನಿಂದ ಬರುತ್ತಾಳೆ. ಅವಳನ್ನು ಕರೆಯಲು ಸಂಜೆ ಬಸ್‌ಸ್ಟ್ಯಾಂಡಿಗೆ ಹೋಗಬೇಕು ಎಂದು ನೆನಪಾಗುತ್ತಿದ್ದಂತೆ ಅಸ್ವಸ್ಥನಾದ. ತಾನು ಹೀಗೆ ರಾಧಿಕೆಯ ಜೊತೆ ಕೂತಿದ್ದನ್ನು ಅಮ್ಮ ನೋಡಿದರೆ ಏನಾಗಬಹುದು ಎಂದು ಊಹಿಸಿದ. ಎಲ್ಲೋ ಅಂಕೋಲೆಯಲ್ಲಿ ಹುಟ್ಟಿ ಬೆಳೆದ ತಾನು ಈವತ್ತು ಈ ನಾಗರಾಜನ ಕೈಯಲ್ಲಿ ವಿಲವಿಲನೆ ಒದ್ದಾಡಿದ ಕ್ಷಣ ನಿಜವಾಗಿಯೂ ತನ್ನದೇ? ತಾನು ಚಿಕ್ಕಂದಿನಲ್ಲಿ ಅಪ್ಪನನ್ನು ಕಳಕೊಂಡಿದ್ದೇನೆ. ನನ್ನ ಬಾಲ್ಯ ಅಂಕೋಲೆಯಲ್ಲಿ ಕಳೆಯಿತು. ಶೆಟ್ಟಿ ಮಾಸ್ತರರು ನನ್ನನ್ನು ತುಂಬ ಪ್ರೀತಿಸುತ್ತಿದ್ದರು. ನನ್ನ ಕಣ್ಣು ಹೀಗಿದೆ. ನನ್ನ ಹೆಸರು ಅಶೋಕ, ನಾನು ಹೊಯ್ದುಕೊಳ್ಳುವುದು ಚೌಕಳಿಯ ಬೆಡ್‌ಶೀಟ್ – ಇತ್ಯಾದಿಗಳಿಗೂ, ನಾಗರಾಜ ತನ್ನನ್ನು ಅಮುಕಿ ಹಿಡಿದು ದೂಡಿದ ಕ್ಷಣಕ್ಕೂ ಏನು ಸಂಬಂಧ? ಆ ಕ್ಷಣಕ್ಕೆ ಎಲ್ಲವೂ ಅನ್ಯವೆನ್ನಿಸಿ ಹೇಗೋ ಬಿಡಿಸಿಕೊಂಡರೆ ಸಾಕಾಗಿಹೋಯಿತಲ್ಲ! ಪಾರ್ಕಿನಲ್ಲಿ ಕೂತಿರುವುದು ಅಶೋಕನಿಗೆ ಅಸಹನೀಯವಾಯಿತು. “ಇನ್ನು ಅಳುವುದರಲ್ಲಿ ಅರ್ಥವಿಲ್ಲ. ನೀನು ಧೈರ್ಯಗೆಡಬೇಡ” ಅಂದ. ಸ್ವಲ್ಪ ಹೊತ್ತಿನ ನಂತರ ಅವಳು ಚೇತರಿಸಿಕೊಂಡಳು. ಇಬ್ಬರೂ ಹೊರಟರು. “ಮನೆಗೆ ಹೋಗೋಣ” ಎಂದು ಅವಳ ಉತ್ತರಕ್ಕೂ ಕಾಯದೆ ಕೈ ಮಾಡಿ ಆಟೋ ನಿಲ್ಲಿಸಿದ, “ಏನು ಅವಸರ?” ಅಂದಳು. ತನ್ನ ಅಮ್ಮ ಈವತ್ತು ಬರುತ್ತಾಳೆಂಬ ವಿಷಯವನ್ನು ಅಶೋಕ ಹೇಳಲಿಲ್ಲ.

ಮನೆಗೆ ಹೋದದ್ದೇ, ಗುಲಾಬಿ ರಾಧಿಕೆಯ ಮೇಲೆ ನೋಡಿ ಕಂಗಾಲಾಗಿ ಏನಾಯಿತು ಏನಾಯಿತು ಎನ್ನುತ್ತಾ ಹೇಳಿದ್ದನ್ನು ಕೇಳಿಸಿಕೊಳ್ಳುವ ಮೊದಲೇ ಅಳಲಾರಂಭಿಸಿದಳು. ಅಶೋಕನಿಗೆ ರೇಗಿ “ಹೇಳಿದ್ದನ್ನು ಮೊದಲು ಕೇಳಿಕೊಳ್ಳಿ” ಎಂದ. ರಾಧಿಕ ಬಿಕ್ಕುತ್ತ ಎಲ್ಲ ಹೇಳಿದಳು. ಇಷ್ಟೊಂದು ದುರ್ಬಲ, ಇಷ್ಟೂಂದು ಅಳುಬುರುಕಿ ರಾಧಿಕೆಯನ್ನು ಅಶೋಕ ನೋಡಿರಲಿಲ್ಲ. ದೊಡ್ಡದೊಂದು ಕೂದಲ ಸಿಕ್ಕಿನ ನಡುವೆ ಸಿಕ್ಕಿಹಾಕಿಕೊಂಡಂತೆನಿಸಿತು. ಗುಲಾಬಿ ನಾಗರಾಜನನ್ನು ಶಪಿಸತೊಡಗಿದಳು. “ನಾನು ಬೇಡ ಎಂದರೆ ಕೇಳಿದೆಯಾ? ನನಗೆ ಮೊದಲೇ ಗೊತ್ತಿತ್ತು….” ಎಂದು ಹಲಬುತ್ತ ‘ನೀನೂ ಕೈ ಬಿಡಬೇಡ’ ಎಂದು ಅಶೋಕನ ಕೈ ಹಿಡಿದು ಇನ್ನೂ ಜೋರಾಗಿ ಬುಳುಬುಳು ಮಾಡಿದಳು. ಇದನ್ನೆಲ್ಲ ನಿರೀಕ್ಷಿಸಿರದ ಅಶೋಕನಿಗೆ ರಾತ್ರಿ ನಿದ್ದೆಯಿಂದೆಬ್ಬಿಸಿ ಜಾತ್ರೆಯ ನಡುವೆ ಬಿಟ್ಟಂತಾಯಿತು. ಇದೆಲ್ಲ ಪೂರ್ವಯೋಜಿತ ಸಂಚಿನಂತೆ ತೋರಿ, ನಾಗರಾಜ ರಾಕ್ಷಸನ ಹಾಗೆ ಕಾಣುತ್ತಿದ್ದವನು ಈ ಸಂಚಿನ ಭಾಗವಾಗಿದ್ದಂತೆ ಅನಿಸಿತು. ರಾಧಿಕಾ ಆತನಿಗೆ ತನ್ನನ್ನು ಒಪ್ಪಿಸಿಕೊಂಡಿರಬಹುದೇ ಎಂದು ಸಂಶಯವಾಯಿತು. ರಾಧಿಕೆಯನ್ನು ನೋಡಿದ. ಅವಳ ಕಣ್ಣುಗಳು ಆರ್ಥವಾಗಿ ತನ್ನನ್ನು ನಿಟ್ಟಿಸುತ್ತಿವೆ ಎಂಬಂತೆ ಭಾಸವಾಗಿ ತಬ್ಬಿಬ್ಬಾದ. ಇಷ್ಟು ದಿನಗಳವರೆಗೂ ಬೆಳೆದುಬಂದ ವಿಶ್ವಾಸದ ಎಳೆ ಮೆಲ್ಲಗೆ ಬಲೆಯ ದಾರವಾಗಿತ್ತಿದೆ ಎಂದು ಅನುಮಾನವಾಯಿತು. ಎಲ್ಲವೂ ಹೇಗೋ ಮುಗಿದರೆ ಸಾಕಾಗಿಹೋಗಿತ್ತು. “ಯಾಕೆ ಹೀಗೆಲ್ಲಾ ಮಾತಾಡುತ್ತೀರಿ; ಸಮಾಧಾನ ಮಾಡಿಕೊಳ್ಳಿ…. ಅವನು ಎಂಥವನೆಂದು ಈಗಲೇ ಗೊತ್ತಾಗಿದ್ದು ಒಳ್ಳೆಯದಾಯಿತು…. ಧೈರ್ಯಗೆಡಬೇಡಿ….” ಎಂದೆಲ್ಲ ಬಾಯಿಗೆ ಬಂದಂತೆ ಆಡಿ ಹೊರಬಿದ್ದ. ತನ್ನ ಬೆನ್ನನ್ನು ನೀರು ತುಂಬಿದ ಕಣ್ಣುಗಳೆರಡು ಇರಿಯುತ್ತಿವೆ ಅನ್ನಿಸಿ ತಿರುಗಿ ನೋಡಿದ. ಹೌದು. ವಿಹ್ವಲನಾದ. ದೇವರೇ ಇದೇನಿದು, ಎಲ್ಲ ಕೈ ಮೀರಿ ಬೆಳೆಯುತ್ತಿದೆಯಲ್ಲ. ಎಲ್ಲ ಗೊತ್ತಿದೆ. ಆದರೂ ಏನೋ ಬೇಕು. ಏನಂತ ತಿಳಿಯುತ್ತಿಲ್ಲ. ಪ್ರಶ್ನೆ ಪತ್ರಿಕೆ ಬಿಡಿಸಾಗಿಬಿಟ್ಟಿದೆ. ಇನ್ನೂ ಎರಡು ತಾಸು ಬಾಕಿ ಇದೆ. ಪರೀಕ್ಷೆ ಹಾಲ್‌ನ ಹೊರಕ್ಕೆ ಬಿಡುತ್ತಿಲ್ಲ….

ನೆಟ್ಟಗೆ ಬಸ್ಟ್ಯಾಂಡಿಗೆ ಬಂದು ಕಾಯುತ್ತ ನಿಂತ. ಪುಣ್ಯಕ್ಕೆ ಸರಿಯಾದ ವೇಳೆಗೇ ಬಸ್ ಬಂತು. ಅಮ್ಮ ರೂಮನ್ನು ಮೆಚ್ಚಿಕೊಂಡಳು. ಊರಿನಿಂದ ತಂದ ತಿಂಡಿ ಕೊಟ್ಟಳು. ನಂತರ ನೇರ ವಿಷಯಕ್ಕೆ ಬಂದಳು. ಅಶೋಕ ಅಮ್ಮನ ಈ ರೀತಿಯ ಅವತಾರ ನೋಡದೆ ಬಹಳ ದಿನಗಳಾಗಿತ್ತು. “ಎಲ್ಲಿದ್ದಾಳೆ ಆ ರಂಡೆ? ನನ್ನ ಜೀವನಾ ಹಾಳು ಮಾಡಿದಳು…. ಈಗ ನಿನ್ನನ್ನೂ ಬುಟ್ಟಿಯಲ್ಲಿ ಹಾಕಿಕೊಳ್ಳಲು ನೋಡುತ್ತಿದ್ದಾಳೆ…. ನೀನಾದರೂ ಎಂಥವನು, ಗೊತ್ತಿದ್ದೂ ಗೊತ್ತಿದ್ದೂ ಅವಳ ಮನೆ ಬಾಗಿಲಿಗೆ ಹೋಗುತ್ತೀಯಲ್ಲ. ಎಷ್ಟು ಚಲೋ ಸಂಬಂಧ ಬಂದಿತ್ತು. ಕುಮಟೆಯ ನಾಗೇಶ ಕಾಮತರ ಮಗಳು…. ಬಂಗಾರದಂಥ ಹುಡುಗಿ…. ಕೇಳಿದಷ್ಟು ವರದಕ್ಷಿಣೆ ಕೊಡುವ ಜನ…. ಈಗ ಈ ಸುದ್ದಿ ಕಿವಿಗೆ ಬಿದ್ದು ಹಿಂದೆ ಮುಂದೆ ನೊಡುತ್ತಿದ್ದಾರೆ. ಆ ಗುಲಾಬಿಯೇ ಊರಲ್ಲಿ ಸುದ್ದಿ ಹಾಕಿಸಿದವಳು….” ಅಮ್ಮ ಗದ್ಗದಳಾದಳು. ಅಶೋಕ ಮಾತಾಡದೇ ನಿಂತ. ಬಿಕ್ಕಿದಳು. ಸೊರಗುಟ್ಟುತ್ತ ಅಂದಳು; “ಅವಳ ಮನೆಗೆ ಮತ್ತೆ ಹೋಗುವುದಿಲ್ಲ ಎಂದು ಆಣೆ ಹಾಕಿ ಹೇಳುವವರೆಗೂ ಇಲ್ಲಿಂದ ಹೊರಡುವವಳಲ್ಲ ನಾನು…. ತೋರಿಸು ಅವಳ ಮನೆ…. ಬೆಂಕಿಯಿಕ್ಕುತ್ತೇನೆ ಅವಳ ಮುಸುಡಿಗೆ….”
ಅಮ್ಮನ ಉದ್ವೇಗ ಕಮ್ಮಿಯಾಗಲಿ ಎಂದು ಅಶೋಕ ಕಾದ. ನಂತರ ಬಳಿ ಸಾರಿ, ಅವಳ ಅಂಗೈ ಹಿಡಿದು ಮೃದುವಾಗಿ ಅಮುಕಿದ. ವಿಶ್ವಾಸದ ಎಳೆಯೊಂದು ಸಿಕ್ಕಿದಂತಾಗಿ ಅವಳು ಬಿಕ್ಕುವುದನ್ನು ಮೆಲ್ಲಗೆ ನಿಲ್ಲಿಸಿದಳು.
*****
ಆಗಸ್ಟ್ ೧೯೮೪

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.