ಗೃಹಭಂಗ – ೭

– ೬ –

ಮದುವೆ ನಿಶ್ಚಯವಾಯಿತು. ಲಗ್ನ ಗೊತ್ತು ಮಾಡಿ ಮದುವೆ ಮಾಡಿಸಲು ಪುರೋಹಿತರ ಸಹಾಯ ಬೇಕು. ಸ್ಥಳಪುರೋಹಿತರಿಬ್ಬರೂ ಸೇರಿ ತನ್ನ ಮೆಲೆ ಬಹಿಷ್ಕಾರ ಹಾಕಿದ್ದಾರೆ. ತನ್ನ ತಂದೆಯ ಸಹಾಯ ಕೇಳಲು ಅವರು ಕೋಪಿಸಿಕೊಂಡು ಹೋಗಿದ್ದಾರೆ. ಕೈಲಿ ಇಟ್ಟುಕೊಳ್ಳದಿದ್ದರೆ ಈ ಸ್ಥಳಪುರೋಹಿತರು ಒಂದಲ್ಲ ಒಂದು ವಿಧದಲ್ಲಿ ತೊಂದರೆ ಮಾಡಬಹುದು. ಹುಡುಗಿಗೂ ಅವಳ ತಾಯಿಗೂ ಬಹಿಷ್ಕಾರ ಹಾಕಿದೆ ಎಂದು ಗಂಡಿಗೆ ತಿಳಿಸಬಹುದು. ಮತ್ತೆ ಏನಾದ್ರೂ ಚಾಡಿ ಛಿದ್ರ ಹುಟ್ಟಿಸಬಹುದು. ಗಂಡು ಸ್ವಭಾವದಲ್ಲಿ ಒಳ್ಳೆಯವರೇ ಆಗಿ ವ್ಯವಹಾರದಲ್ಲಿ ತಿಳಿವಳಿಕೆ ಇದ್ದರೂ, ಇಂತಹ ವಿಚಾರದಲ್ಲಿ ಯಾರ ಮನಸ್ಸು ಹೇಗೆ ತಿರುಗುತ್ತದೋ ಹೇಳುವಂತಿಲ್ಲ.

ಈ ಇಬ್ಬರು ಪುರೋಹಿತರನ್ನು ದಾರಿಗೆ ತಂದುಕೊಳ್ಳುವುದು ಈಗ ಅವಳಿಗೆ ಕಷ್ಟವಾಗಿರಲಿಲ್ಲ. ದಿನಸಿ ಲೆಕ್ಕ ಬಂದ ಮೇಲೆ ತಮ್ಮ ಜಮೀನಿನ ಫಸಲು ಅಂದಾಜು ಕಡಿಮೆ ಹಾಕಲಿ ಎಂದು ಊರಿನ ಎಷ್ಟೋ ಜನರು ಇವಳ ಮನೆಗೆ ಬಂದು ವಿನಯ ತೋರಿಸಿ ಹೋಗುತ್ತಿದ್ದರು. ಇದುವರೆಗೆ ಜೋಯಿಸರು ಸ್ವತಃ ಬರದಿದ್ದರೂ ಜಮೀನು ಗೇಯುವ ರೈತರ ಮೂಲಕ ಸುತ್ತುಬಳಸಿ ಹೇಳಿಕಳಿಸಿದ್ದರು. ಲೆಕ್ಕ ಪತ್ರಗಳನ್ನೆಲ್ಲ ಬರೆಯುವ ಊರಿನ ವಾಸ್ತವವಾದ ಶ್ಯಾನುಭೋಗಿಣಿ ನಂಜಮ್ಮನೆಂಬುದು ಅವರಿಗೆ ಗೊತ್ತಿಲ್ಲದ ಸಂಗತಿಯಲ್ಲ. ಈಗ ಅವರ ಮನೆಗೆ ತಾನೇ ಹೋಗಲೋ ಹೇಗೆ ಎಂದು ಮಧ್ಯಾಹ್ನವೆಲ್ಲ ಯೋಚಿಸಿದ ಅವಳು, ಸಂಜೆಯ ಹೊತ್ತಿಗೆ ಕುಳುವಾಡಿಯನ್ನು ಕರೆಸಿ ಹೇಳಿದಳು: ‘ಹೋಗಿ ಅಣ್ಣಾಜೋಯಿಸರನ್ನೂ ಅಯ್ಯಾಶಾಸ್ತ್ರಿಗಳನ್ನೂ ನಾನು ಹೇಳಿಕಳಿಸಿದೆ ಅಂತ ಕರಕೊಂಡು ಬಾ.’

ಅವಳು ಹೀಗೆ ಮಾಡಿದುದು ತುಂಬ ದಾಷ್ಟೀಕದ ಕೆಲಸವೇ. ಶೃಂಗೇರಿ ಜಗದ್ಗುರು ಮಠದ ಪ್ರತಿನಿಧಿಗಳೆನಿಸಿದ ಅವರ ಮನೆಗೆ ಇಂತಹ ಬಡವರು ಹೋಗಿ ಬಾಗಿಲಲ್ಲಿ ನಿಲ್ಲುವುದು, ನೆಲ ಮುಟ್ಟಿ ನಮಸ್ಕಾರ ಮಾಡುವುದು ಪದ್ಧತಿ. ಅವರು ಕುಳುವಾಡಿಯ ಜೊತೆ ಬರುತ್ತಾರೋ ಇಲ್ಲವೋ ಎಂಬ ಬಗೆಗೆ ಅವಳಿಗೇ ಅನುಮಾನ. ಅಕಸ್ಮಾತ್ ಬರದೆ ಇದ್ದರೆ ಮುಂದೆ ಹೇಗೆ ಮಾಡುವುದು ಎಂಬ ಒಂದು ಯೋಚನೆಯೂ ಮನಸ್ಸಿನಲ್ಲಿತ್ತು. ಆದರೆ ಹಾಗೆ ಆಗಲಿಲ್ಲ. ಹತ್ತು ನಿಮಿಷದಲ್ಲಿ ಅಯ್ಯಾಶಾಸ್ತ್ರಿಗಳೂ, ಮತ್ತೆ ಐದು ನಿಮಿಷದಲ್ಲಿ ಅಣ್ಣಾಜೋಯಿಸರೂ ಕುಳುವಾಡಿಯ ಸಂಗಡ ಬಂದರು.

‘ಮಾಯಿಗಾ, ನೀನು ಜಗುಲಿ ಮ್ಯಾಲೆ ಕೂತಿರು’-ಎಂದು ಅಧಿಕಾರ ತೋರಿಸುವ ಸ್ವರದಲ್ಲಿ ಹೇಳಿದ ನಂಜಮ್ಮ, ಇವರಿಬ್ಬರಿಗೂ ಮಂದಲಿಗೆ ಹಾಕಿಕೊಟ್ಟಳು. ಅವರೇ ಉಭಯ ಕುಶಲೋಪರಿ ಮಾತನಾಡಿ, ‘ಮಗಳ ಮದುವೆ ಗೊತ್ತಾಯ್ತಂತೆ. ತುಂಬ ಸಂತೋಷ’ ಎಂದರು.
‘ನೋಡಿ, ಅದಕ್ಕೇ ಕರೆಸಿದೆ. ಜಾತಕ ನೋಡಬೇಕು, ಲಗ್ನ ನಿಶ್ಚಯವಾಗಬೇಕು. ಇನ್ನು ಮದುವೆ ಮಾಡಿಸೋ ಕೆಲಸ. ಈಗ ನಮ್ಮ ತಂದೆ ಕಾಶಿಯಿಂದ ಊರಿಗೆ ಬಂದಿದಾರೆ ಅಂತ ನಿಮಗೂ ಗೊತ್ತಿದೆಯಲ್ಲ. ಮದುವೆಯಾಗೂತನಕ ಬಂದು ಇಲ್ಲಿಯೇ ಇದ್ದು ಎಲ್ಲಾ ಕೆಲ್ಸಾನೂ ಮಾಡಿಕೊಡಿ ಅಂದ್ರೆ ಕುದುರೆ ಮೇಲೆ ಬಂದುಬಿಡ್ತಾರೆ. ಆದರೆ ಸ್ಥಳಪುರೋಹಿತರು ನೀವಿರುವಾಗ ಅವರನ್ನ ಕರಸೋದು ಬ್ಯಾಡ ಅಂತ ನಿಮಗೆ ಹೇಳಿ ಕಳಿಸಿದೆ. ನೀವು ಹ್ಯಾಗೆ ಹೇಳಿದ್ರೆ ನಾನು ಹಾಗೆ ಮಾಡ್ತೀನಿ.’
‘ಛೇ ಛೇ ಛೇ, ಉಂಟೇ? ನಾವಿರುವಾಗ ಅವರ್ಯಾಕೆ ಬರಬೇಕು? ನಮ್ಮ ಗ್ರಾಮದಲ್ಲಿ ಆಗೋ ಮದುವೆ ಮಾಡಿಸೋದು ನಮ್ಮ ಕರ್ತವ್ಯ. ಹುಡುಗನ ಜಾತಕ ಕೊಡಿಲ್ಲಿ’-ಅಯ್ಯಾಶಾಸ್ತ್ರಿಗಳೆಂದರು. ಈಗ ದಿನಸಿ ಲೆಕ್ಕ ಕೈಯಲ್ಲಿರುವುದೊಂದೇ ಕಾರಣವಲ್ಲ. ಅವಳ ತಂದೆ ಕಂಠೀಜೋಯಿಸರೇ ಊರಿಗೆ ಬಂದು ಕೂರುವುದು ಇವರಿಬ್ಬರಿಗೂ ಕಷ್ಟದ ಪರಿಸ್ಥಿತಿ. ಆ ಮನುಷ್ಯ ಪೌರೋಹಿತ್ಯದಲ್ಲಿ ಗಟ್ಟಿಗ ಮಾತ್ರವಲ್ಲ, ಕೋಪ ಬಂದರೆ ಯಾರನ್ನಾದರೂ ಹಿಡಿದು ಬಡಿಯುವಂತಹ ಧಾಂಡಿಗನೆಂಬುದು ಅವರಿಬ್ಬರಿಗೂ ಗೊತ್ತಾಗಿತ್ತು. ಹನ್ನೆರಡು ವರ್ಷದಿಂದ ಇಲ್ಲವಾಗಿದ್ದ ಅವರು ಈಗ ಬಂದಿರುವುದು ಅವರಿಗೂ ತಿಳಿದಿದ್ದ ಸಂಗತಿ. ಮನೆಯಲ್ಲಿಯೇ ಇದ್ದ ಪಂಚಾಂಗ ಇಸಿದುಕೊಂಡು ಗುಣಿಸಿದ ಇಬ್ಬರೂ ಜಾತಕ ಹೊಂದುತ್ತದೆಂದರು. ಆ ಹೊತ್ತಿಗೆ ಇಪ್ಪತ್ತಾರನೆಯ ದಿನ ಲಗ್ನ ಪ್ರಶಸ್ತವಾಗಿದೆಯೆಂದು ಹೇಳಿ, ‘ಮದುವೆಗೆ ಯಾವ ಯೋಚನೆಯೂ ಬ್ಯಾಡ. ಕೊನೆಗೆ ಗಂಡಿನ ಕಡೆ ಜೋಯಿಸರು ಬರದೆ ಇದ್ರೂ ನಾವಿಬ್ಬರೂ ಕೂಡಿ ಕೆಲಸ ಮುಗಿಸಿಕೊಡ್ತೀವಿ’ ಎಂದು ಆಶ್ವಾಸನವಿತ್ತರು.
‘ನೋಡಿ, ಇದೇ ಕೈಲಿ ನಮ್ಮ ರಾಮಣ್ಣಂಗೆ ಒಂದೆಳೆ ಜನಿವಾರಾನೂ ಹಾಕಿಬಿಡಬೇಕು ಅಂತಿದೀನಿ. ಅದನ್ನ ಧಾರೆ ದಿನವೇ ಇಟ್ಟುಕೋಭೌದೆ?’
ಮತ್ತೆ ಗುಣಿಸಿ ಅವರು ಎಂದರು: ‘ಧಾರೆಯ ಹಿಂದಿನ ದಿನ ಇಟ್ಟುಕೊ.’
ಈ ಕೆಲಸ ಇಷ್ಟು ಸುಲಭದಲ್ಲಿ ಬಗೆಹರಿಯುತ್ತದೆಂದು ನಂಜಮ್ಮ ಎಣಿಸಿರಲಿಲ್ಲ. ಇನ್ನು ಹಣ ಹೊಂಚಿ, ಸಾಮಾನು ಸರಂಜಾಮು ಮಾಡುವ ಕೆಲಸ ಸಾಕಾದಷ್ಟಿದೆ. ಮರುದಿನ ಅವಳು ಕುರುಬರಹಳ್ಳಿಗೆ ಹೋದಳು. ಗುಂಡೇಗೌಡರು ಊರ ಎಲ್ಲ ಮನೆಗಳವರನ್ನೂ ಕರೆಸಿ ಚಂದಾ ಕೇಳಿದರು. ನಂಜಮ್ಮನೇ ಬರೆದ ಪಟ್ಟಿಯಲ್ಲಿ ಒಟ್ಟು ಇನ್ನೂರ ಎಪ್ಪತ್ತು ರೂಪಾಯಿಯ ಲೆಕ್ಕವಾಯಿತು. ಮೇಲಿನ ಮೂವತ್ತನ್ನು ತಾವು ಹಾಕುವುದಾಗಿ ಹೇಳಿದ ಗೌಡರು-‘ಅವ್ವಾ, ನಿನ್ನ ಕಂದಾಯದ ರಶೀತಿ ಬಾಬ್ತು ಇನ್ನೂರು ರೂಪಾಯಿ ಇವತ್ತೇ ಕೊಂಡೊಯ್ಯಿ. ಈ ಮುನ್ನೂರು ಇನ್ನು ಎಂಟು ದಿನದಲ್ಲಿ ಎತ್ತಿ ನಾನೇ ತಂದುಕೊಡ್ತೀನಿ. ತ್ವಾಟವಿರೋರೆಲ್ಲ ಐದು ಹತ್ತು ತೆಂಗಿನಕಾಯಿ ಕೊಡೊ ಹಂಗೆ ಏಳ್ತೀನಿ. ಒಂದು ನೂರೈವತ್ತು ಕಾಯಾದ್ರೆ ಸಾಲ್ದಾ?’
‘ಸಾಕಾಗುತ್ತೆ ಗೌಡ್ರೆ.’
‘ಸಾಮಾನ್ ಗೀಮಾನ್ ತರಾಕ್ ತಿಪಟೂರಿಗೆ ಹ್ವಾಗ್‌ಬೇಕು. ನಿಂಗ್ ಬೇಕಾದ ದಿನ ಏಳಿಕಳ್ಸು. ಎತ್ತಿನ ಗಾಡಿ ಕಳುಸ್ತೀನಿ. ಬೆಲ್ಲ ವಸಿ ಜಾಸ್ತಿ ತರ್ಸು.’

ನಂಜಮ್ಮ ಊರಿಗೆ ಬಂದಳು. ಇನ್ನು ಸಾಮಾನಿನ ಪಟ್ಟಿ ಹಾಕಬೇಕು. ಗಂಡಿನ ಕಡೆ ಎಷ್ಟು ಜನ ಬರುತ್ತಾರೋ ಗೊತ್ತಿಲ್ಲ. ಆತನಿಗೆ ಯಾರೂ ಹತ್ತಿರದ ನೆಂಟರೇ ಇಲ್ಲವಂತೆ. ಅಲ್ಲದೆ ಎರಡನೆಯ ಮದುವೆ. ಹತ್ತು ಹದಿನೈದಕ್ಕಿಂತ ಹೆಚ್ಚು ಜನ ಬರಲಾರರು. ಇನ್ನು ತನ್ನ ಕಡೆ ಸಹ ನಾಗಲಾಪುರದವರನ್ನು ಬಿಟ್ಟರೆ ಮತ್ತೆ ಜನವಿಲ್ಲ. ಈ ಊರಿನ ಏಳು ಮನೆ ಬ್ರಾಹ್ಮಣರು. ಧಾರೆಯ ರಾತ್ರಿ ಕುರುಬರಹಳ್ಳಿಯಿಂದ ಮನೆಗೆ ಒಂದಾಳಿನಂತೆಯಾದರೂ ಕರೆಯಬೇಕು. ಸ್ವಲ್ಪ ಹೆಚ್ಚಾಗಿಯೇ ಸಾಮಾನಿನ ಪಟ್ಟಿ ಹಾಕಿ ಅಂದಾಜು ತೆಗೆದ ಮೆಲೆ ಜವಳಿ ಚಿನ್ನ ಬೆಳ್ಳಿಯ ಲೆಕ್ಕ ಹಾಕಿದಳು. ಮೇಷ್ಟರು ವೆಂಕಟೇಶಯ್ಯನವರ ಜೊತೆ ಗಾಡಿ ಹೂಡಿಸಿ, ಜೊತೆಗೆ ರಾಮಣ್ಣನನ್ನೂ ಕರೆದುಕೊಂಡು ತಾನೇ ತಿಪಟೂರಿಗೆ ಹೋದಳು. ಗಂಡಿಗೆ ಕಲಾಪತ್ತಿನ ಪಂಚೆ, ಸಿಲ್ಕಿನ ಶರಟು, ಹತ್ತಿಯ ಕೋಟು ಮತ್ತು ಜರಿ ಪೇಟಗಳ ಜೊತೆಗೆ ಒಂದು ಬೆಳ್ಳಿಯ ಲೋಟ ಉದ್ದರಣೆಗಳನ್ನೂ ತೆಗೆದಳು. ಹುಡುಗಿಗೆ ಮೂವತ್ತು ರೂಪಾಯಿನದೊಂದು ಇಪ್ಪತ್ತೈದು ರೂಪಾಯಿನ ಮತ್ತೊಂದು ಸೀರೆ ತೆಗೆದಳು. ರಾಮಣ್ಣ ವಿಶ್ವರಿಗೆ ಒಳ್ಳೆಯ ಬಟ್ಟೆಗಳಿರಲಿಲ್ಲ. ಅವರಿಗೆ ಎರಡೆರಡು ಶರಟು, ವಿಶ್ವನಿಗೆ ಚಡ್ಡಿ, ರಾಮಣ್ಣನಿಗೆ ಎರಡು ಲುಂಗಿಗಳಾದವು. ಮುಂಜಿಯಲ್ಲಿ ಭಿಕ್ಷಾಪಾತ್ರೆಗೆ ಒಂದು ಪುಟ್ಟ ಬೆಳ್ಳಿಯ ಬಟ್ಟಲು ತೆಗೆದಳು. ಯಜಮಾನರಿಗೆ ಎಂಟು ರೂಪಾಯಿಗೆ ಒಂದು ಜೊತೆ ಬಿಳಿ ಪಂಚೆ ಶರಟು ಆದವು. ತನ್ನ ಮದುವೆಯ ಸೀರೆಯೇ ತನಗಿದೆ. ಇನ್ನು ಈಗ ಯಾವುದೂ ಬೇಡವೆಂದು ನಿರ್ಧರಿಸಿದಳು. ‘ನಂಜಮ್ನೋರೆ, ಎಲ್ಲ ಸಾಮಾನು ತಂದಿದ್ರೂ, ಮೇಲೆ ಏನಿಲ್ಲ ಅಂದ್ರೂ ನೂರೈವತ್ತು ರೂಪಾಯಿ ಇಟ್ಕಂಡಿರಿ. ದುಡ್ಡು ತುಂಬ ಬಿಗಿಯಾಗಿ ಖರ್ಚು ಮಾಡಬೇಕು’-ಮೇಷ್ಟರು ಹೇಳಿದರು.
ಚೀಟಿ ಬರೆದು ಕುಳುವಾಡಿಯ ಕೈಲಿ ನಾಗಲಾಪುರಕ್ಕೆ ಕಳಿಸಿದಳು. ಬೆಳಿಗ್ಗೆ ಕೋಳಿ ಕೂಗುವ ಹೊತ್ತಿಗೇ ಎದ್ದು ಹೋದ ಕುಳವಾಡಿ ರಾತ್ರಿಗೇ ವಾಪಸು ಬಂದು ಹೇಳಿದ: ‘ಅವ್ರು ಯಾರೂ ಬರಾಕುಲ್ವಂತೆ.’
‘ಹಂಗಂತ ಯಾರಂದೋರು?’
‘ನಿಮ್ಮಯ್ಯಾರೇ ಅಂದ್ರು.’
‘ಇನ್ನೇನಂದ್ರು?’
‘ನಾನು ಕೇಳಿದ್ದುಕ್ಕೆ ಎಣ್ಣು ಕೊಡಾಕಿಲ್ಲ ಅಂದ್ಲು. ಅವ್ಳು ಬ್ಯಾರೆ ಕಡೆ ಕೊಟ್ರೂ ಉದ್ಧಾರಾಗಾಕಿಲ್ಲ ಅಂದ್ರು.’
ಅಪ್ಪನ ಸ್ವಭಾವ ಅವಳಿಗೆ ಗೊತ್ತು. ತನ್ನ ಕೋಪ, ಹಟವೇ ನಡೆಯಬೇಕು. ಅದರ ಮುಂದೆ ತಾಯಿ, ಮಗಳು, ಪ್ರೀತಿ, ಕರುಣೆ, ಯಾವುದೂ ಇಲ್ಲ.
‘ಅಜ್ಜಿ ಏನಂದ್ರು?’
‘ಅವ್ರು ನನ್ ಕುಟ್ಟೆ ಮಾತಾಡ್ನೇ ಇಲ್ಲ.’

ನಂಜಮ್ಮನಿಗೆ ತುಂಬ ದುಃಖವಾಯಿತು. ಅಪ್ಪನ ಸ್ವಭಾವ ಹೊಸತಲ್ಲ. ಆದರೆ ತನ್ನನ್ನು ಹುಟ್ಟಿದಾಗಿನಿಂದ ಸಾಕಿ, ಬೆಳೆಸಿ, ಮದುವೆ ಬಾಣಂತಿತನಗಳನ್ನು ಮಾಡಿದ ಅಜ್ಜಿ ಬರದಿದ್ದರೆ ಹೇಗೆ? ಅವಳ ಕರುಳು ತಡೆಯಲಿಲ್ಲ. ತಾನೇ ಒಂದು ದಿನದ ಮಟ್ಟಿಗೆ ಹೋಗಿ ಕರೆದು ಬರಲೇ?-ಎಂಬ ಆಲೋಚನೆ ಬಂತು. ಆದರೆ ಗಾಡಿಯಲ್ಲಿ ಹೋಗುವುದಕ್ಕೆ ಒಂದು ದಿನ, ಬರುವುದಕ್ಕೆ ಇನ್ನೊಂದು ದಿನ, ಒಟ್ಟಿನಲ್ಲಿ ಎರಡು ದಿನ ಬೇಕು. ಇನ್ನು ಮದುವೆ ಹದಿಮೂರು ದಿನ ಉಳಿಯಿತು. ಕೆಲಸ ಏನೇನೂ ಆಗಿಲ್ಲ. ಸೌದೆ ಸೊಪ್ಪಿನ ವ್ಯವಸ್ಥೆಯಾಗಿಲ್ಲ. ಚಕ್ಕುಲಿ ತೇಂಗೊಳಲು ಮೊದಲಾಗಿ ಯಾವ ಹಿಟ್ಟೂ ಆಗಿಲ್ಲ. ಅವಲಕ್ಕಿ, ಅರಳು ಹುರಿಯಬೇಕು. ಮೆಣಸಿನಪುಡಿಯಾಗಬೇಕು. ವಾಲಗದವರನ್ನು ಗೊತ್ತುಮಾಡಬೇಕು.

ಇನ್ನೊಂದು ಚೀಟಿ ಬರೆದು ನಾಳೆ ನಾಡಿದ್ದರಲ್ಲಿ ಮತ್ತೊಮ್ಮೆ ಕುಳುವಾಡಿಯನ್ನು ಕಳಿಸುವುದೇ ಸರಿ ಎಂದು ನಿರ್ಧರಿಸಿ ಅವಳು ಎಂದಳು: ‘ಇನ್ನು ಎರಡು ಮೂರು ದಿನದ ಮ್ಯಾಲೆ ಇನ್ನೊಂದು ಸಲ ನೀನು ಹೋಗಿಬರಬೇಕು. ಆದರೆ ನೋಡು, ಈಗ ನೀನು ಅಲ್ಲಿಗೆ ಹೋಗಿದ್ದು ಅವರು ಬರುಲ್ಲ ಅಂದದ್ದು ಯಾರ ಕುಟ್ಟೂ ಬಾಯಿ ಬಿಡ್‌ಕೂಡದು.’

ಕುಳುವಾಡಿ ಎರಡನೇ ಸಲ ಹೋದರೂ ಅವರು ಬರಲಿಲ್ಲ. ಮತ್ತೆ ಬಂದುದಕ್ಕೆ ಕಂಠೀಜೋಯಿಸರು ಅವನನ್ನೇ ಬೈದು ಕಳಿಸಿದರು. ಈ ವಿಷಯವನ್ನು ಯಾರಿಗೂ ಹೇಳಕೂಡದೆಂದು ನಂಜಮ್ಮ ಅವನಿಗೆ ಇನ್ನೊಮ್ಮೆ ಎಚ್ಚರ ಹೇಳಿ ಕಳಿಸಿದಳು. ಅವಳ ತಂದೆಗೂ ಅವಳಿಗೂ ಹೀಗೆ ಮನಸ್ತಾಪ ಬಂದಿದೆ ಎಂಬ ಸುಳಿವು ಸಿಕ್ಕಿದರೆ ಊರ ಜೋಯಿಸರುಗಳು ಮಧ್ಯದಲ್ಲಿ ಬಾಲ ಬಿಚ್ಚಬಹುದೆಂಬ ಒಳಹೆದರಿಕೆ ಇದ್ದೇ ಇತ್ತು.
ಅವಳ ಕಡೆ ನೆಂಟರೇ ಇಲ್ಲ. ಅದುವರೆಗೂ ಅವಳೇ ಹೋಗಿ ಅತ್ತೆಯನ್ನು ಕರೆದಿರಲಿಲ್ಲ. ಅವರಾಗಿಯೇ ಬಂದಿರಲೂ ಇಲ್ಲ. ಆದರೆ ಏನೇನು ಸಾಮಾನು ತಂದಳು, ಏನೇನು ಬಿಟ್ಟಳು ಎಂಬ ಎಲ್ಲ ವಿವರಗಳನ್ನು ಮಗ ಚಿನ್ನಯ್ಯನಿಂದ ಗಂಗಮ್ಮ ತಿಳಿದುಕೊಳ್ಳುತ್ತಿದ್ದಳು. ಮದುವಣಿಗ ಶಾಸ್ತ್ರ ನಾಡದ್ದು ಎನ್ನುವಾಗ ನಂಜಮ್ಮ ತಾನೇ ಅತ್ತೆಯ ಮನೆಗೆ ಹೋಗಿ ಹೇಳಿದಳು: ‘ಅಮ್ಮ, ನೀವೂ ಅಪ್ಪಣ್ಣಯ್ಯ ಅಲ್ಲಿಗೇ ಬನ್ನಿ. ಎಲ್ಲ ಮುಂದೆ ನಿಂತು ಮಾಡಿಸಿಕೊಡಬೇಕಾದೋರು ನೀವು.’
‘ಉಮ್ಮೆಮರಳಿ ತಾಟಗಿತ್ತಿ. ಇಷ್ಟು ದಿನದ ತಂಕ ಸಾಮಾನು ತರುಕ್ಕೆ ಗಂಡು ಗೊತ್ತು ಮಾಡುಕ್ಕೆ ನನ್ನ ಕರೆದೆ ಏನೆ? ಪ್ರಪಂಚದಲ್ಲಿ ಗಂಡೇ ಇಲ್ಲ ಅಂತ, ಆ ಹೆಂಡತಿ ಸತ್ತ ಎರಡನೇ ಗಂಡಿಗೆ ಕೊಡೂಕೆ ಒಪ್ಕಂಡೆಯಾ?’
‘ಅಮ್ಮ, ಪ್ರಪಂಚದಲ್ಲಿ ಸಾವಿರಗಟ್ಟಲೆ ಗಂಡುಗಳಿರ್‌ಭೌದು. ಅವುಕ್ಕೆ ಕೊಟ್ಟು ಬಿಟ್ಟು ಮಾಡೂ ಸಕ್ತಿ ನನಗಿಲ್ಲ. ನೀವೂ ಅಪ್ಪಣ್ಣಯ್ಯ ಬನ್ನಿ’-ಎಂದು ಹೇಳಿ, ವಾಗ್ವಾದಕ್ಕೆ ಸಿಕ್ಕದೆ ಸುಮ್ಮನೆ ಹೊರಟುಬಂದಳು.

ಚೆನ್ನಿಗರಾಯರಿಗೂ ಹೆಂಡತಿಯ ಮೇಲೆ ಕೋಪವಿತ್ತು. ಕಲ್ಲೇಶನಿಗೆ ಹೆಣ್ಣು ಕೊಡುವುದಿಲ್ಲವೆಂದು ಹೇಳಿ ಹಟ ಮಾಡಿ, ಮಾವನವರು ಮಾಡುತ್ತಿದ್ದ ಸಹಾಯವನ್ನೆಲ್ಲ ಇವಳು ಹಾಳು ಮಾಡಿದ್ದಳು. ಈಗ ಮದುವೆ ನಿಶ್ಚಯವಾದ ಮೇಲೆ ಅವರನ್ನು ಯಾವುದಕ್ಕೂ ಕೇಳಿರಲಿಲ್ಲ. ಕೇಳಿದ್ದರೆ ಅವರಿಂದ ವಿಘ್ನಗಳೇ ಉಂಟಾಗುತ್ತದೆಂದು ಅವಳ ಅನುಭವ ಪಾಠ ಕಲಿಸಿತ್ತು. ತಮ್ಮನ್ನು ಅಲಕ್ಷಿಸುದುದಕ್ಕೆ ಸೇಡು ತೀರಿಸಿಕೊಳ್ಳಲು ಅವರು ದಾರಿ ಯೋಚಿಸುತ್ತಿದ್ದರು.

ಅಪ್ಪಣ್ಣಯ್ಯ ಅದೇ ದಿನ ಇವರ ಮನೆಗೆ ಬಂದ. ಅತ್ತಿಗೆ ಹೇಳಿದಂತೆ ಅಡಿಗೆಯ ಮನೆಯಲ್ಲಿ ಒಲೆ ತೋಡುವುದರಿಂದ ಹಿಡಿದು, ಸೌದೆ ಜೋಡಿಸಿಟ್ಟು ಕುಳುವಾಡಿಗಳಿಗೆ ಹೇಳಿ ಚಪ್ಪರ ಹಾಕಿಸಿದ. ಎರಡು ಸಲ ಕುರುಬರಹಳ್ಳಿಗೆ ಹೋಗಿ, ಅವರು ಗುಡ್ಡೆ ಹಾಕಿದ್ದ ಕಾಯಿ ಕಸಿಗಳನ್ನು ಗಾಡಿಯಲ್ಲಿ ಹೇರಿಸಿಕೊಂಡು ಬಂದ. ಗಂಗಮ್ಮ ಮುಂಜಿಯ ದಿನ ಬಂದಳು. ಯಾವ ಕೆಲಸ ಕಾರ್ಯಗಳನ್ನು ಮಾಡುವುದಕ್ಕೂ ತೋಚಲಿಲ್ಲವೋ, ಅಥವಾ ಬಿಗುಮಾನದಿಂದಲೋ ಸುಮ್ಮನೆ ಅಡಿಗೆಮನೆಯಲ್ಲಿ ಕೂತಳು.

ಗಂಡಿನವರು ಹೆಚ್ಚು ಜನ ಬರಲಿಲ್ಲ. ತಿಮ್ಲಾಪುರದ ದ್ಯಾವರಸಯ್ಯನವರು ಅವರ ಹೆಂಡತಿ ಧಾರೆ ಎರೆಸಿಕೊಳ್ಳುವುದಕ್ಕೆ, ಅವರ ಮಗ, ಸೊಸೆ, ಮೂರು ಜನ ಮೊಮ್ಮಕ್ಕಳು, ಗಂಡಿನ ಇಬ್ಬರು ಸಹೋದ್ಯೋಗಿಗಳು, ಒಬ್ಬ ಪುರೋಹಿತರು, ಒಟ್ಟು ಇಷ್ಟೇ ಜನ. ಮದುವೆಗೆ ಯಾವ ವಿಘ್ನವೂ ಆಗಲಿಲ್ಲ. ಎಲ್ಲವೂ ಸುಲಲಿತವಾಗಿ ಸಾಗುತ್ತಿತ್ತು. ಧಾರೆಗೆ ಹೆಣ್ಣು ಗಂಡುಗಳನ್ನು ಕರೆತರುವ ಮೊದಲು ಧಾರೆ ಮಂಟಪದಲ್ಲಿ ಕನ್ಯೆಯ ತಂದೆ ತಾಯಿಗಳಿಂದ ಮೊದಲು ಶಾಸ್ತ್ರವಾಗಬೇಕಾಗಿತ್ತು. ‘ಚೆನ್ನಿಗರಾಯ, ನೀನು ಬೇಗ ಹಸೆ ಮೇಲುಕ್ಕೆ ಬಾ’-ಎಂದು ಜೋಯಿಸರು ಕರೆದರು. ಇವರು ಒಳಗೆ ಮುರಿತು ಕೂತುಬಿಟ್ಟಿದ್ದರು. ‘ಹೊತ್ತಾಯ್ತು, ಬೇಗ ಏಳಿ’-ಎಂದು ನಂಜಮ್ಮನೇ ಹೋಗಿ ಎಬ್ಬಿಸಿದರೆ, ‘ನಿನ್ನ ಮಗಳ ಮದುವೆ ಬೇಕಾದ್ರೆ ನೀನೇ ಮಾಡ್ಕ, ನಾನು ಮೇಲುಕ್ಕೆ ಬರುಲ್ಲ’ ಎಂದುಬಿಟ್ಟರು. ಅವಳಿಗೆ ಏನೂ ತಿಳಿಯಲಿಲ್ಲ. ಅಲ್ಲಿಯೇ ಇದ್ದ ಮೇಷ್ಟರು ಕೇಳಿದರು: ‘ಯಾಕೆ ಶ್ಯಾನುಭೋಗ್ರೆ, ಏನಾಯ್ತು ಹೇಳಿ.’
‘ಇವ್ಳೇ ಯಜಮಾಂತಿ. ಸಾಮಾನು ಗೀಮಾನು ತರುಕ್ಕೆ ಇವ್ಳು ನನ್ನೇನಾದ್ರೂ ಕೇಳಿದ್ಲೇನ್ರೀ?’
‘ನೀವೇ ಯಜಮಾನ್ರು. ನಿಮ್ಮ ಹೆಸರಲ್ಲೇ ಅಲ್ವೇ ಎಲ್ಲಾ ನಡೀತಿರೂದು? ಹೊತ್ತಾಯ್ತು ಏಳಿ.’
‘ಇಲ್ಲಿ ನೋಡ್ರೀ, ನಂಗೆ ಇವ್ಳು ಯಂಥಾ ಪಂಚೆ ತಂದಿದಾಳೆ. ಒಂದು ಜೊತೆ ಕಲಾಪತ್ತಿನ ಪಂಚೇನಾದ್ರೂ ತರಬಾರದಾಗಿತ್ತೇ? ಇದುನ್ನ ಉಟ್ಕಂಡು ನಾನು ಧಾರೆಮಂಟಪಕ್ಕೆ ಬರುಲ್ಲ’-ಎಂದು ಹಟಹಿಡಿದರು. ಜೊತೆಗೆ ಇನ್ನೊಂದು ಪಾಯಿಂಟು. ಮದುವೆಗೆ ಮಾಡಿದ್ದ ಉಂಡೆ, ಚಕ್ಕುಲಿ, ತೇಂಗೊಳಲು ಮೊದಲಾದ ತಿಂಡಿಗಳನ್ನೆಲ್ಲ ಕತ್ತಲೆಯ ಕೋಣೆಯಲ್ಲಿಟ್ಟಿತ್ತು. ಅದರ ಮೇಲ್ವಿಚಾರಣೆ ಒಬ್ಬ ಜವಾಬ್ದಾರಿಯುತ ಹೆಂಗಸಿನ ಕೈಲಿ ಕೊಡುವುದು ಯಾವ ಮದುವೆ ಮನೆಯಲ್ಲಾದರೂ ಪದ್ಧತಿ. ತಿಂಡಿಯ ಕೋಣೆಯ ಬೀಗದ ಕೈಯ್ಯನ್ನು ನಂಜಮ್ಮ, ಮೇಷ್ಟ್ರ ಕೈಲಿ ಕೊಟ್ಟಿದ್ದಳು. ಮಾಡಿದ್ದುದೇ ಇದ್ದದ್ದರಲ್ಲಿ ಸ್ವಲ್ಪ. ಬೀಗರು ಹೋಗುವಾಗ ಅವರಿಗೆ ಬೇರೆ ಕೊಟ್ಟು ಕಳಿಸಬೇಕು. ಊರಿನ ಮುತ್ತೈದೆಯರಿಗೆ ಕೊಡುವುದಲ್ಲದೆ ಮದುವೆಗೆ ಓಡಾಡಿದ ಮತ್ತು ಸಹಾಯ ಮಾಡಿದವರಿಗೆಲ್ಲ ಅಲ್ಪಸ್ವಲ್ಪವಾದರೂ ಸಿಕ್ಕಬೇಕು. ಉಂಡೆ ಚಕ್ಕುಲಿಗಳನ್ನು ವಿತರಣೆಯಾಗಿ ಕೊಡುವ ಜವಾಬ್ದಾರಿಯನ್ನು ನಂಜಮ್ಮ ಆಕೆಯ ಮೇಲೆ ಹಾಕಿದ್ದಳು. ಈಗ ಚೆನ್ನಿಗರಾಯರು ಕೇಳಿದರು: ‘ತಿಂಡಿ ಮನೆಯ ಬೀಗದ ಕೈನ ಅವ್ಳು ನನ್ನ ಕೈಲಿ ಯಾಕೆ ಕೊಟ್ಟಿಲ್ಲ?’

ಈಗ ನಂಜಮ್ಮ ಮಾತನಾಡಿದಳು: ‘ಅದೆಲ್ಲ ನೋಡಿ ಕೊಡೂದು ಹೆಂಗಸರ ಕೆಲಸ. ಬೀಗದ ಕೈ ಇಟ್ಕಂಡು ನೀವೇನು ಮಾಡ್ತೀರಾ?’
‘ಯಜಮಾನ ನಾನು .ಅದು ನನ್ನ ಕೈಲಿರಬೇಕು.’
ನಂಜಮ್ಮ ಬೇಡವೆಂದರೂ ಮೇಷ್ಟರು ಹೋಗಿ ತಮ್ಮ ಹೆಂಡತಿಯ ಕೊರಳಿನಲ್ಲಿದ್ದ ಬೀಗದ ಕೈ ತಂದು ಶ್ಯಾನುಭೋಗರಿಗೆ ಕೊಟ್ಟರು. ಅವರು ಹೋಗಿ ಕೋಣೆಯ ಬಾಗಿಲು ತೆಗೆದು, ಅಲ್ಲಿಯೇ ಇದ್ದ ಒಂದು ಹುಲಿಕಡ್ಡಿಯ ಹಿಂಡೂ ಕುಕ್ಕೆಯ ಭರ್ತಿ ಉಂಡೆ, ಚಕ್ಕುಲಿ, ಮೊದಲಾಗಿ ತುಂಬಿಕೊಂಡು ಅದನ್ನು ಎಲ್ಲರೆದುರಿಗೇ ಹೊತ್ತು ತಂದು ಶ್ಯಾನುಭೋಗಿಕೆಯ ದೊಡ್ಡ ಪೆಟಾರಿಯಲ್ಲಿಟ್ಟು ಅದಕ್ಕೆ ಬೀಗ ಹಾಕಿಕೊಂಡರು. ‘ಇದ್ಯಾಕೋ ಚಿನ್ನಯ್ಯಾ?’-ಅಯ್ಯಾಶಾಸ್ತ್ರಿಗಳು ಕೇಳಿದುದಕ್ಕೆ, ‘ಮದುವೆಯಾದಮ್ಯಾಲೆ ನಂಗೆ ತಿನ್ನಕ್ಕೆ ಬೇಕು ಕಣ್ರಿ’ ಎಂದು ಹೇಳಿ, ಮತ್ತೆ ಒಳಗೆ ಹೋಗಿ ತಮ್ಮ ಮೊದಲನೆಯ ಪಾಯಿಂಟನ್ನು ಹಿಡಿದು ಕುಳಿತರು: ‘ನಂಗೆ ಕಲಾಪತ್ತಿನ ಪಂಚೆ ಯಾಕೆ ತರಲಿಲ್ಲ?’
‘ನೋಡಿ, ಒಟ್ಟಿನಲ್ಲಿ ಇಷ್ಟು ದುಡ್ಡು ಖರ್ಚಾಗಿದೆ. ನಾನೇನೂ ಹೊಸ ಸೀರೆ ತಗಂಡಿಲ್ಲ. ನಿಮಗೆ ಅಷ್ಟು ದೊಡ್ಡ ಪಂಚೆ ಎಲ್ಲಿ ತರಲಿ?’
‘ಹಾಗಾದ್ರೆ ನಾನು ಹಸೆ ಮೇಲುಕ್ಕೆ ಬರುಲ್ಲ.’

ಇಟ್ಟ ಲಗ್ನ ಸಾಧಿಸಬೇಕಾದುದರಿಂದ ಗಂಡು ಕರೆಯಲು ಇನ್ನೂ ಯಾಕೆ ಬಂದಿಲ್ಲವೆಂದು ಗಂಡಿನ ಕಡೆಯ ಪುರೋಹಿತರು ಹೇಳಿಕಳಿಸಿದರು. ಗಂಡಿನವರನ್ನೆಲ್ಲ ಮೇಷ್ಟರ ಮನೆಯಲ್ಲಿ ಇಳಿಸಿದ್ದರು. ಇಲ್ಲಿ ಕನ್ಯೆಯ ಯಜಮಾನರೇ ಹೀಗೆ ಮುರಿತು ಕೂತಿದ್ದಾರೆ. ಇಲ್ಲಿಯ ಶಾಸ್ತ್ರ ಮುಗಿಯದೆ ಗಂಡು ಕರೆಯಲು ಹೋಗುವುದು ಹೇಗೆ? ಮೇಷ್ಟರ ಸಮಾಧಾನ ನಡೆಯಲಿಲ್ಲ. ಮಾದೇವಯ್ಯನವರು ಬಂದರು. ಅವರ ಕೈಲೂ ಆಗಲಿಲ್ಲ. ಪುರೋಹಿತರು ಒಂದು ಬಾಯಿಮಾತು ಆಡಿದರೂ, ಈ ತಮಾಷೆ ಅವರಿಗೂ ಮೋಜಿನದಾಗಿತ್ತು. ವಿಷಯ ತಿಳಿದ ದ್ಯಾವರಸಯ್ಯನವರು ಬಂದರೂ ಪ್ರಯೋಜನವಾಗಲಿಲ್ಲ. ಬಾಗಿಲು ಹತ್ತಿರ ಕುಳಿತಿದ್ದ ಗುಂಡೇಗೌಡರು ತಮ್ಮ ಕೈದೊಣ್ಣೆ ಎತ್ತಿಕೊಳ್ಳುತ್ತಿದ್ದರು. ಆದುದರಿಂದ ಇವರು ಇನ್ನೂ ಮುರಿತುಕೊಂಡಾರೆಂಬ ಭಯದಿಂದ ನಂಜಮ್ಮ ಗೌಡರನ್ನು ಸುಮ್ಮನಾಗಿಸಿದಳು. ಅದುವರೆಗೂ ಸುಮ್ಮನಿದ್ದ ಅಪ್ಪಣ್ಣಯ್ಯ, ‘ಲೋ, ಚಿನ್ನಯ್ಯಾ, ಸುಮ್ನೆ ಎದ್ದು ಹಸೆ ಮ್ಯಾಲುಕ್ಕೆ ನಡೀತೀಯೋ ನಿಂಗೆ ಹಿಡ್ಕಂಡು ಎರಡು ಮಡಗಬೇಕೋ?’ ಎಂದು ಕೇಳಿಬಿಟ್ಟ.

ಈ ಬೋಳೀಮಗ ನನ್ನ ಹೀಗನ್‌ಭೌದೆ? ಹಿರಿಯಣ್ಣ ಅಂದ್ರೆ ತಂದೆ ಸಮಾನ. ಅವ್ನು ನನ್ನ ಕಾಲು ಹಿಡ್ಕಂಡು ತಪ್ಪಾಯ್ತು ಅನ್‌ಬೇಕು’-ಚೆನ್ನಿಗರಾಯರು ಇನ್ನೊಂದು ಕರಾರು ಸೇರಿಸಿದರು.
‘ಅಪ್ಪಣ್ಣಯ್ಯ, ನೀವು ಸುಮ್ನಿರಿ’-ನಂಜಮ್ಮ ಸಮಾಧಾನ ಹೇಳಿ ಅವನನ್ನು ಸುಮ್ಮನೆ ಮಾಡಿದಳು. ಆದರೆ ಗಂಗಮ್ಮ ಬಾಯಿ ಹಾಕಿ, ‘ಮನೆ ಯಜಮಾನ, ಅವ್ನಿಗೆ ಕಲಾಪತ್ತಿನ ಪಂಚೆ ಇಲ್ದೆ ಅದು ಹ್ಯಾಗೆ ಧಾರೆ ಎರೀತಾನೆಯೇ? ನಿಂಗೆ ಅಷ್ಟು ಗೊತ್ತಾಗ್‌ಬ್ಯಾಡ್ವೆ? ಈಗಲೂ ಒಂದು ಜೊತೆ ಬ್ಯಾಗ ತರ್ಸಿಕೊಡು’ ಎಂದಳು.
ತಮ್ಮನ್ನು ಅನುಮೋದಿಸುವ ಒಬ್ಬರು ಸಿಕ್ಕಿದುದೇ ತಡ, ಚೆನ್ನಿಗರಾಯರು ಗಟ್ಟಿಯಾದರು: ‘ಹೂಂ, ಈಗಲೂ ತಿಪಟೂರಿಗೆ ಯಾರನಾದ್ರೂ ಕಳ್ಸಿ ತರಿಸಿಕೊಡು. ಅಲ್ಲೀತಂಕ ನಾನು ಇಲ್ಲೇ ಕೂತಿರ್ತೀನಿ.’
‘ಬಿಚ್ಚೇ ದುಡ್ಡ, ಪೆಟ್ಟಿಗೇಲಿಟ್ಕಂಡು ಬೀಗದ ಕೈನ ಸೊಂಟಕ್ಕೆ ಸಿಗಹಾಕ್ಕಂಡಿದೀಯಲ್ಲಾ’-ಅತ್ತೆ ಗಂಗಮ್ಮ ಸವಾಲು ಹಾಕಿದಳು. ಅದು ತಮ್ಮ ಪರವೇ ಆಡಿದ ಮಾತು ಎಂಬುದು ಚೆನ್ನಿಗರಾಯರಿಗೆ ತಿಳಿಯದೆ ಇರಲಿಲ್ಲ.

ರೇಗಿದರೆ ಕೆಲಸ ಕೆಡುತ್ತದೆ. ಆದರೆ ಯಾವ ಉಪಾಯವೂ ನಡೆಯುತ್ತಿಲ್ಲ. ‘ಮದುವೆಯಾದ ತಕ್ಷಣ ತಿಪಟೂರಿಗೆ ಹೋಗಿ ಖಂಡಿತ ಪಂಚೆ ತಂದುಕೊಡ್ತೀನಿ’-ಎಂದು ನಂಜಮ್ಮ ದೇವರ ಮೇಲೆ ಆಣೆ ಹಾಕಿದರೂ ಯಜಮಾನರು ಒಪ್ಪಲಿಲ್ಲ. ಪಂಚೆ ತಮಗೆ ಈಗಲೇ ಬೇಕು. ಅವರದು ಒಂದೇ ಹಟ. ನಂಜಮ್ಮನಿಗೆ ಏನೂ ತಿಳಿಯಲಿಲ್ಲ. ಸುಮ್ಮನೆ ಒಂದು ಮೂಲೆಗೆ ಹೋಗಿ ಕಣ್ಣೀರು ಒರೆಸಿಕೊಳ್ಳುತ್ತಾ ನಿಂತುಬಿಟ್ಟಳು. ಹೊರಗೆ ಧಾರೆ ಮಂಟಪದ ಅಂಗಳದಲ್ಲಿ ಕೂತಿದ್ದ ಮಾದೇವಯ್ಯನವರಿಗೆ ವಿಷಯ ತಿಳಿದಿತ್ತು. ಅವರು ಎದ್ದು ತಮ್ಮ ಗುಡಿಗೆ ಹೋಗಿ ಬಂದು ಇವರನ್ನು ಹೊರಕ್ಕೆ ಕೂಗಿ ಹೇಳಿದರು: ‘ಚಿನ್ನಯ್ಯಾ, ಇಪ್ಪತ್ತು ರೂಪಾಯಿ ಐತೆ. ಇದ ತಗಂಡು ಮಡೀಕಳಿ. ಪಂಚೆ ಆಮ್ಯಾಲೆ ತರೂರಂತೆ.’
ಹೊರಗೆ ಬಂದ ಶ್ಯಾನುಭೋಗರು ಎಂದರು: ‘ನಂಗೆ ದುಡ್ಡು ಬ್ಯಾಡಕಣ್ರಿ, ಪಂಚೇನೇ ಬೇಕು’
ದ್ಯಾವರಸಯ್ಯನವರು ನಂಜಮ್ಮನನ್ನು ಬೇರೆಯಾಗಿ ಕರೆದು ಹೇಳಿದರು: ‘ಅಮ್ಮಾ, ಒಂದು ಕೆಲ್ಸ ಮಾಡು. ಗಂಡಿಗೆ ಅಂತ ತಂದಿರೂ ಪಂಚೇನ ಇವ್ರಿಗೆ ಕೊಟ್ಟುಬಿಡು. ನಾವು ಗಂಡಿಗೆ ಓದಿಸುಕ್ಕೆ ಒಂದು ಜೊತೆ ರಾಜಾಮಿಲ್ ಮಲ್ಲುಪಂಚೆ ತಂದಿದೀವಿ. ಅದನ್ನ ಕೊಡ್ತೀನಿ. ಅದುನ್ನೇ ಗಂಡಿಗೆ ಕೊಡು. ನೀವು ಇಂಥದು ಯಾಕೆ ತಂದ್ರಿ ಯಾಕೆ ಕೊಟ್ರಿ ಅಂತ ಅವನು ಕೇಳೂ ಹುಡುಗನಲ್ಲ.’
“ಆದ್ರೆ ಇವರ ಬುದ್ಧಿ ನೋಡಿ ಮಾವಯ್ಯ. ಹಾಗೆಯೇ ಮಾಡ್‌ಭೌದು. ನಮಗಾದರೂ ಮರ್ಯಾದೆ ಬ್ಯಾಡವೇ. ಮುಂದೆ ಒಂದಲ್ಲ ಒಂದು ದಿನ ಅವರು ನಮ್ಮ ಹುಡುಗೀನ, ‘ಬಿಳೀಪಂಚೇಲಿ ಧಾರೆ ಎರೆದು ಕೊಟ್ರು ನಿಮ್ಮನೇಲಿ’ ಅಂದ್ರೆ ಅವ್ಳಿಗಾದ್ರೂ ಪೆಚ್ಚಾಗಬಾರ್ದು.”
‘ಅಮ್ಮಾ, ಅವ್ನು ಹಾಗನ್ನೋ ಸ್ವಭಾವದೋನಲ್ಲ. ಅಕಸ್ಮಾತ್ ಅಂದ್ರೂ ಏನು ಮಾಡುಕ್ಕಾಗುತ್ತೆ? ಸಹಿಸ್ಕಾಬೇಕು. ನಿನ್ನ ಗಂಡನ ವಿಷಯ ಎಲ್ಲ ನಾನು ಅವ್ನಿಗೆ ಹೇಳಿದೀನಿ. ಪ್ರಪಂಚದಲ್ಲಿ ಎಂಥೆಂಥೋರೋ ಇರ್ತಾರೆ. ಈಗ ಇದೊಂದೇ ದಾರಿ. ನಾನು ಹೇಳ್ದಾಗೆ ಮಾಡು.’
ನಂಜಮ್ಮ ಹೋಗಿ, ಗಂಡಿಗೆಂದು ಇಟ್ಟಿದ್ದ ಪಂಚೆಯನ್ನು ತಂದು ಯಜಮಾನರ ಮುಂದೆ ಇಟ್ಟು-‘ಏಳಿ ಇದ ಉಟ್ಕಳಿ’ ಎಂದಳು.
‘ಒಂಟಿ ಇದೆಯೋ ಜೊತೆ ಇದೆಯೋ?’-ಅವರು ಕೇಳಿದರು.
‘ಜೊತೆ ಇದೆ, ಹೆದರ್ಕೋಬ್ಯಾಡಿ.’

ಚೆನ್ನಿಗರಾಯರಿಗೆ ತೃಪ್ತಿಯಾಯಿತು. ಎದ್ದು ಒಂದನ್ನು ಉಟ್ಟು ಇನ್ನೊಂದನ್ನು ಲಕ್ಷಣವಾಗಿ ಹೊದೆದುಕೊಂಡರು. ಈಗ ಈ ಮೂರು ಕೆಲಸಗಳು ಒಂದೇ ಪೆಟ್ಟಿಗೆ ಆದುವು. ಹೆಂಡತಿಯ ಮೇಲಿನ ಸೇಡು ತೀರಿತು; ಉಡಲು ಕಲಾಪತ್ತಿನ ಪಂಚೆ ಬಂತು; ಮದುವೆ ಮುಗಿಯುವ ಹೊತ್ತಿಗೆ ಇವಳು ತಮಗೆಂದು ಉಂಡೆ ಚಕ್ಕುಲಿಗಳನ್ನು ಉಳಿಸುತ್ತಿದ್ದಳೋ ಇಲ್ಲವೋ, ಒಂದು ಹಿಂಡುವ ಕುಕ್ಕೆ ತುಂಬ ಅವೂ ಸಿಕ್ಕಿದವು. ವಿಜೇತಭಾವದಿಂದ ಅವರು ಹಸೆಮಣೆಯ ಮೇಲಕ್ಕೆ ಬಂದರು.

ಹೆಣ್ಣಿನ ತಂದೆ ಹೊಸ ಕಲಾಪತ್ತಿನ ಪಂಚೆ, ಗಂಡು ಸಾದಾ ಬಿಳಿಯ ಪಂಚೆ ಉಟ್ಟ ಧಾರೆಯು ಮತ್ತೆ ಯಾವ ವಿಘ್ನವೂ ಇಲ್ಲದಂತೆ ನೆರೆವೇರಿತು. ಧಾರೆಯ ಸಮಯಕ್ಕೆ ಸರಿಯಾಗಿ ಸೈಕಲ್ ಮೇಲೆ ಬಂದ ಶೇಕ್‌ದಾರರು ವರ ಮತ್ತು ವರನ ಮಾವನ ಪಂಚೆಗಳನ್ನು ನೋಡಿ, ನಂತರ ದ್ಯಾವರಸಯ್ಯನವರನ್ನು ಕರೆದು ವಿಚಾರಿಸಿದರು ಒಳವಿಷಯ ಹೇಳದೆ ಅವರು, ‘ಅದು ಚೆನ್ನಿಗರಾಯರ ಮದುವೆಯ ಹಳೆಯ ಪಂಚೆ’ ಎಂದು ಹೇಳಿ ಮುಚ್ಚಿ ಹಾಕಿದರು.

ಧಾರೆಯ ಸಮಯಕ್ಕೆ ಸರಿಯಾಗಿ ಮನೆಯ ಮುಂದೆ ಒಂದು ಕಮಾನುಗಾಡಿ ಬಂದು ನಿಂತಿತು. ಅದರಿಂದ ಇಳಿದ ಅಕ್ಕಮ್ಮನನ್ನು ಕಂಡ ರಾಮಣ್ಣ ಓಡಿ ಹೋಗಿ ತನ್ನ ಅಮ್ಮನಿಗೆ ಹೇಳಿದ. ಅದುವರೆಗೂ ಒಂದು ವಿಧವಾದ ಮೂಕವೇದನೆ ಅನುಭವಿಸುತ್ತಿದ್ದ ನಂಜುವಿಗೆ ಎಷ್ಟೋ ಸಮಾಧಾನ. ನೇರವಾಗಿ ಒಳಗೆ ಬಂದ ಅಕ್ಕಮ್ಮ, ‘ನೀನು ಬಿಲ್‌ಕುಲ್ ಹೋಗಕೂಡದು ಅಂತ ಕಂಟಿಯೂ ಕಲ್ಲೇಶನೂ ಅಂದ್ರು. ನನ್ನ ಮರಿಮಗಳ ಮದುವೆ, ನಾನು ಹೋಗೇಹೋಗ್ತೀನಿ ಅಂತ ಹಟ ಮಾಡಿ ಬಂದುಬಿಟ್ಟೆ. ಆಗಲೇ ಧಾರೆಯಾಗ್ತಿದೆ. ಕ್ವಾ, ಇದುನ್ನ ಪಾರ್ವತಿಗೆ ಓದ್ಸು’ ತನ್ನ ಬಾಳೆಯಕಾಯಿಯಿಂದ ತೆಗೆದ ಒಂದು ಚಿನ್ನದ ಶೇವಂತಿಗೆ ಹೂವನ್ನು ಕೊಟ್ಟಳು. ಅದು ಅಕ್ಕಮ್ಮ ಮುತ್ತೈದೆಯಾಗಿದ್ದಾಗ ಇಟ್ಟುಕೊಳ್ಳುತ್ತಿದ್ದ ಒಡವೆ. ಇದುವರೆಗೂ ಕಳೆಯದೆ ಹೇಗೋ ಇಟ್ಟುಕೊಂಡಿದ್ದಳು. ಒಳಗೆ ಹೋಗಿ ನಾರಿನ ಕೆಂಪು ಸೀರೆ ಉಟ್ಟು ಕೂತುಕೊಂಡಳು. ಅವಳಂತೆಯೇ ಮಡಿಸೀರೆ ಉಟ್ಟಿದ್ದ ಬೀಗಿತ್ತಿ ಗಂಗಮ್ಮ ಅವಳನ್ನು ಮಾತನಾಡಿಸಲಿಲ್ಲ. ಅಕ್ಕಮ್ಮನೂ ಸುಮ್ಮನೆ ಇದ್ದಳು. ಬಾಗಿಲ ಹತ್ತಿರದಿಂದಲೇ ಧಾರೆಯನ್ನು ನೋಡಿದ ಅವಳು, ನಂಜು ಯಾಕೋ ಒಳಗೆ ಬಂದಾಗ ಅವಳೊಬ್ಬಳೇ ಕೇಳುವಂತೆ ಹೇಳಿದಳು: ‘ನೀನು ಒಳ್ಳೇ ಕೆಲ್ಸಾನೇ ಮಾಡಿದೆ. ಈ ಹುಡುಗ ರಾಜಕುಮಾರ ಇದ್ದಹಾಗಿದಾನೆ. ಇಂಕ್ಲೀಷ್ ಇಸ್ಕೂಲ್ ಮೇಷ್ಟ್ರು ಅಂದ್ರೇನು ಕಮ್ಮಿ ಕೆಲ್ಸವೇ? ಇನ್ನೂ ಚಿಕ್ಕ ವಯಸ್ಸು. ಒಂದು ಬಲಮಗು ಇದ್ರೇನಂತೆ?’

ಧಾರೆಯಾಯಿತು. ಸೂರ್ಯನಾರಾಯಣನ ಮಗು ರತ್ನ ವಿಶ್ವನ ಜೊತೆ ಆಡುತ್ತಿತ್ತು. ರತ್ನ ಈಗ ಹೇಗೂ ವಿಶ್ವನಿಗೆ ಅಕ್ಕನ ಮಗಳೇ ಆಗುತ್ತಾಳೆ. ‘ಅವರಿಬ್ರಿಗೂ ಈಗಲೇ ಮದುವೆ ಮಾಡಿಬಿಡಾಣಾ’-ಎಂದು ಮೇಷ್ಟರು ವೆಂಕಟೇಶಯ್ಯನವರು ಹೇಳಿದಾಗ ವಿಶ್ವ ನಾಚಿಕೊಂಡು ಮಗುವಿನ ಜೊತೆಯನ್ನೇ ಬಿಟ್ಟುಬಿಟ್ಟ. ‘ಇವತ್ತೇ ಮಾಡಿಬಿಡಿ. ಅವಳನ್ನ ಇಲ್ಲಿಯೇ ಬಿಟ್ಟುಹೋಗ್ತೀನಿ’-ಸೂರ್ಯನಾರಾಯಣ ಎಂದ.

ನಾಗೋಲಿ ನಾಳೆಯ ದಿನವಿತ್ತು. ಧಾರೆಯ ಸಂಜೆ ಮೇಷ್ಟರು, ಅವರ ಹೆಂಡತಿ, ಇಬ್ಬರೂ ನಂಜಮ್ಮ ಒಬ್ಬಳನ್ನೇ ಪ್ರತ್ಯೇಕವಾಗಿ ಕರೆದು ಕೇಳಿದರು: ‘ನಂಜಮ್ನೋರೆ, ನೀವು ಅನ್ಯಥಾ ತಿಳ್ಕೋಬ್ಯಾಡಿ. ಹುಡುಗಿ ದೊಡ್ಡೋಳಾಗಿದಾಳೆ ಅನ್ನೋದು ಗಂಡಿನೋರಿಗೆ ಹ್ಯಾಗೋ ಗೊತ್ತಾಗಿದೆ.’

ನಂಜಮ್ಮ ಇದನ್ನು ಕೇಳಿ ಗಾಬರಿಯಾದಳು. ಮೇಷ್ಟರು ಅಂದರು: ‘ಗಾಬರಿಯಾಗೂ ಕಾರಣವಿಲ್ಲ. ಸೂರ್ಯನಾರಾಯಣ ತಿಪಟೂರು ತುಮಕೂರುಗಳಂಥ ದೊಡ್ಡ ಊರು ಕಂಡೋರು. ಟ್ರೈನಿಂಗಿಗೆ ಅಂತ ಮೈಸೂರಿಗೆ ಕೂಡ ಒಂದು ವರ್ಷ ಹೋಗಿದ್ದರು. ದೊಡ್ಡ ಊರಿನಲ್ಲೆಲ್ಲ ಹದಿನಾರು ಹದಿನೇಳು ಆದ ಮೇಲೆಯೇ ಮದುವೆ ಮಾಡೂದು. ನಾಗೋಲಿಯಾದ ಮಾರನೆಯ ದಿನ ಪ್ರಸ್ತಾನೂ ಮಾಡಿ ಕಳುಸ್ತಾರೆ. ಬೆಂಗಳೂರಲ್ಲಂತೂ ಚಪ್ಪರ, ಧಾರೆ, ನಾಗೋಲಿ, ಪ್ರಸ್ತ, ಎಲ್ಲಾನೂ ಒಂದೇ ದಿನ ಮಾಡ್ತಾರಂತೆ. ನಂಗೆ ಸೂರ್ಯನಾರಾಯಣನೇ ಹೇಳಿದ್ರು. ನಾಳೆ ನಾಗೋಲಿಯಾಗುತ್ತೆ. ನಾಳೆ ರಾತ್ರಿಗೇ ಪ್ರಸ್ತಾನೂ ಮಾಡಿ ಜೊತೇಲಿ ಹುಡುಗೀನೂ ಕಳಿಸಿಕೊಟ್ರೆ ಕರ್‍ಕೊಂಡು ಹೋಗ್ತಾರೆ. ಮತ್ತೆ ನೀವು ಅದುಕ್ಕೆ ಅಂತ ದುಡ್ದು ಹೊಂಚಬೇಕು. ಅನ್ನದ ಖರ್ಚೂ ಆಗುತ್ತೆ. ಈಗ ಇದರ ಜೊತೇಲೇ ಅತ್ಲಗೆ ಮುಗಿಸಿದರೆ ಒಳ್ಳೇದು. ಬೇಕಾದ್ರೆ ಕಂಬನಕೆರೆಗೆ ಹೋಗಿ ನಾಳೆ ನಾನು ಒಂದು ಜೊತೆ ಹಾಸಿಗೆ ಹೊದಿಕೆ ತರ್ತೀನಿ.’

ಎಂದರೆ ಮಗಳನ್ನು ತಕ್ಷಣವೇ ತನ್ನಿಂದ ಕಳಿಸಿಕೊಡಬೇಕೆಂದು ನಂಜಮ್ಮನಿಗೆ ಕರುಳು ಕೊರೆಯಿತು. ಅದಕ್ಕಿಂತ ಹೆಚ್ಚಾಗಿ ಮನಸ್ಸಿನಲ್ಲಿ ಬೇರೊಂದು ಕಾರಣದ ಭಯವೂ ಉಂಟಾಯಿತು. ಹುಡುಗಿ ದೊಡ್ಡವಳಾಗಿರುವಳೆಂದು ಅವಳು ಯಾರಲ್ಲಿಯೂ ಹೇಳಿರಲಿಲ್ಲ. ಈ ಜೋಯಿಸರೋ ಅಥವಾ ಮತ್ತೆ ಯಾರೋ ಗಂಡಿನ ಕಡೆಯವರಿಗೆ ತಿಳಿಸಿರಬಹುದು. ಅದೃಷ್ಟಕ್ಕೆ ಆತ ಇದನ್ನು ತಪ್ಪೆಂದು ಭಾವಿಸಿ ಜಗಳವಾಡಲಿಲ್ಲ. ಈಗ ತಾನು ಪ್ರಸ್ತ ಮಾಡಿಕೊಡಲು ಒಪ್ಪಿಕೊಂಡರೆ ಹುಡುಗಿ ನೆರೆದಿದ್ದಳೆಂದು ಒಪ್ಪಿದಂತೆ. ಅದನ್ನು ಇಷ್ಟು ದಿನ ಮುಚ್ಚಿಟ್ಟಿದ್ದಳೆಂದು ಎಲ್ಲರಿಗೂ ತಿಳಿಯುತ್ತದೆ. ಹಾಗೆ ತಿಳಿದರೆ ಏನು?-ಎಂಬುದಕ್ಕಿಂತ, ತಿಳಿಯಬಾರದು ಎಂಬ ಹಳೆಯ ಭಯಪೂರಿತ ನಿಶ್ಚಯವೇ ಅವಳ ಪ್ರಜ್ಞೆಯಲ್ಲಿ ಈಗಲೂ ನಿಂತುಬಿಟ್ಟಿತು. ಈಗ ಇದ್ದಕ್ಕಿದ್ದಹಾಗೆಯೇ ಅದನ್ನು ಬದಲಾಯಿಸುವುದು ಸಾಧ್ಯವಾಗಲಿಲ್ಲ. ಮದುವೆಯಾದ ಎರಡು ಮೂರು ತಿಂಗಳ ನಂತರ ಒಂದು ಸಲ ಪಾರ್ವತಿ ಮುಟ್ಟಾದಾಗ, ಮೈನೆರೆದಳೆಂದು ಅವಳನ್ನು ಹೊರಗೆ ಕೂರಿಸಿ ವಾಡಿಕೆಯಂತೆ ನಾಲ್ಕು ಮುತ್ತೈದೆಯರೆದುರು ಆರತಿ ಮಾಡಿ, ಹದಿನಾರನೆಯ ದಿನ ಪ್ರಸ್ತ ಮಾಡಿ ಕಳಿಸಬೇಕೆಂಬುದು ಅವಳ ವ್ಯಾವಹಾರಿಕ ವಿವೇಕವಾಗಿತ್ತು. ಈಗ ಇದ್ದಕ್ಕಿದ್ದಹಾಗೆಯೇ ಅದನ್ನು ಬದಲಾಯಿಸಲಾರದೆ ಎಂದಳು: ‘ನೋಡಿ, ಹುಡುಗಿ ದೊಡ್ಡೋಳಾಗಿರೋದು ನಿಜ. ದೊಡ್ಡದೊಡ್ಡ ಊರ್ನಲ್ಲಿ ಹಾಗೆ ಮಾಡ್ತಾರೆ ಅಂತ ನಾವೂ ಮಾಡಿದ್ರೆ ಕಷ್ಟ. ಈ ಊರಿನ ಜೋಯಿಸರುಗಳ ವಿಚಾರ ನಿಮಗೇ ಗೊತ್ತಿದೆ. ನಮ್ಮ ಮನೆಯೋರ ಬುದ್ಧಿಯೂ ನಿಮಗೆ ಗೊತ್ತು. ಅವರೂ ಹುಚ್ಚುಹುಚ್ಚಾಗಿ ಆಡ್‌ಭೌದು. ನಾನು ಅವರಿಗೂ ಹೇಳಿಲ್ಲ. ಇನ್ನು ಮೂರು ತಿಂಗಳ ಮೇಲೇ ಮಾಡಿಕೊಡಾಣ.’
‘ಹಾಗೇ ಮಾಡಿ. ಸೂರ್ಯನಾರಾಯಣ ಬಲವಂತ ಏನೂ ಮಾಡ್ಲಿಲ್ಲ. ಸುಮ್ಮನೆ ನಿಮಗೆ ತಾನೆ ಯಾಕೆ ಡಬ್ಬಲ್ ಖರ್ಚು ಅಂತ ಹೇಳಿದ್ರು. ಅಲ್ದೆ ಅವರಿಗೂ ಮಗು ನೋಡ್ಕಂಡು ಇನ್ನೂ ಮೂರು ತಿಂಗಳು ಅನ್ನ ಬೇಯಿಸ್ಕಂಡು ಸ್ಕೂಲಿಗೂ ಹೋಗೂದು ಅಂದ್ರೆ ಕಷ್ಟ.’
‘ಮಗೂನ ನಮ್ಮನೇಲೇ ಬಿಟ್ಟು ಹೋಗಿ ಅಂತ ಹೇಳಿ.’
ಇಲ್ಲಿಯ ಸನ್ನಿವೇಶವನ್ನು ವಿವರಿಸಿದಾಗ ಸೂರ್ಯನಾರಾಯಣ ಒಪ್ಪಿದ. ಅವನಿಗೆ ಹಳ್ಳಿಯ ಸ್ಥಿತಿ ಚೆನ್ನಾಗಿ ಗೊತ್ತು. ಮದುವೆಯಾದ ತಕ್ಷಣ ಮಗುವನ್ನು ಇಲ್ಲಿ ಬಿಟ್ಟು ಹೋಗಲು ಮನಸ್ಸೂ ಬರಲಿಲ್ಲ. ಅದು ವ್ಯಾವಹಾರಿಕವಾಗಿ ಚನ್ನಲ್ಲವೆಂದು ನಿರ್ಧರಿಸಿದ.
ಮರುದಿನ ನಾಗೋಲಿಯಾಗಿ ಹೆಣ್ಣು ಒಪ್ಪಿಸಿಕೊಡುವಾಗ ನಂಜಮ್ಮ ಅಕ್ಕಮ್ಮರ ಸಂಗಡ ರಾಮಣ್ಣನೂ ಅಳುತ್ತಿದ್ದ. ಅವರಿಬ್ಬರೂ ಜೊತೆಯಲ್ಲಿ ಬೆಳೆದವರು. ಒಬ್ಬರಿಗೊಬ್ಬರಿಗೆ ತುಂಬ ಅಂತಃಕರಣ ಬೆಳೆದಿತ್ತು. ಎಲ್ಲ ವಿಷಯವೂ ಗೊತ್ತಿದ್ದರೂ ಅವನು ತಾಯಿಯ ಹತ್ತಿರ ಹೋಗಿ-‘ಅಮ್ಮ, ಪಾರ್ವತಿ ನಮ್ಮನೆಯಿಂದ ಹೋಗಿಬಿಡ್ತಾಳಾ? ಎಂದ.
‘ಹೆಣ್ಣುಮಕ್ಕಳಲ್ವೆ ಮಗು?’-ಅಮ್ಮ ಸಮಾಧಾನ ಹೇಳಿದಳು.

ಇದ್ದಕ್ಕಿದ್ದಹಾಗೆಯೇ ಅಪ್ಪಣ್ಣಯ್ಯನಿಗೂ ಅಳು ಬಂದುಬಿಟ್ಟಿತು. ಅವನು ಇವರ ಮನೆಗೆ ಹೆಚ್ಚಾಗಿ ಬಂದೇ ಇರಲಿಲ್ಲ. ಪಾರ್ವತಿಯೊಡನೆ ಹೆಚ್ಚಾಗಿ ಮಾತೂ ಆಡಿಲ್ಲ. ಅವಳು ಸೊಪ್ಪಿನ ಮಡಿಗೆ ನೀರು ಹುಯ್ಯುತ್ತಿದ್ದಾಗ, ‘ನಂಗೊಂದಿಷ್ಟು ದಂಟಿನ ಸೊಪ್ಪು ಕೊಡ್ತೀ ಏನೇ?’ ಎಂದು ಒಂದೊಂದು ದಿನ ಕೇಳುತ್ತಿದ್ದ. ‘ನಿಮಗೆಷ್ಟು ಬೇಕೋ ಕಿತ್ಕಳಿ ಚಿಕ್ಕಪ್ಪ’-ಅವಳು ಹೇಳುತ್ತಿದ್ದಳು. ಇದಕ್ಕಿಂತ ಹೆಚ್ಚಾಗಿ ಈ ಚಿಕ್ಕಪ್ಪ ಮಗಳ ನಡುವೆ ಮಾತುಕತೆ ಇರಲಿಲ್ಲ. ಈಗ ಅದೇನೋ, ತಾನಾಗಿಯೇ ಬಂದು ಮದುವೆಯ ಮನೆಯಲ್ಲಿ ಅವನು ಕೆಲಸ ಮಾಡುತ್ತಿದ್ದಾನೆ. ನಂಜಮ್ಮನನ್ನು ಬಿಟ್ಟರೆ ಕಳೆದ ನಾಲ್ಕು ದಿನದಿಂದ ಇಲ್ಲಿ ಹಗಲು ರಾತ್ರಿ ನಿದ್ರೆ ಇಲ್ಲದೆ ದುಡಿಯುತ್ತಿರುವವನು ಅವನೊಬ್ಬನೇ. ಏನೇನು ಮಾಡಬೇಕೆಂಬುದನ್ನು ಅತ್ತಿಗೆ, ಮೇಷ್ಟರ ಹೆಂಡತಿ, ಅಕ್ಕಮ್ಮ, ಒಂದೊಂದು ಸಲ ಜೋಯಿಸರು ಹೇಳುತ್ತಿದ್ದರು. ಅಡಿಗೆಯ ತಪ್ಪಲೆ ಎತ್ತಿ ಬಸಿಯುವುದರಿಂದ ಹಿಡಿದು ಎಲೆ ತೆಗೆದು ಗೋಮಯ ಹಾಕಿ ಗಂಡಿನ ಮನೆಯ ಹಂಡೆಗೆ ನೀರು ತುಂಬುವ ತನಕ, ದುಡ್ದು ತಿನ್ನುವ ಪರಿಚಾರಕನಿಗಿಂತ ಹೆಚ್ಚಾಗಿ ಮಾಡುತ್ತಿದ್ದ. ಹೆಣ್ಣು ಒಪ್ಪಿಸಿಕೊಟ್ಟ ಮೇಲೆ ಪಾರ್ವತಿ ಬಂದು ನಮಸ್ಕಾರ ಮಾಡಿದಾಗ ಅವನ ಕಣ್ಣಿನಿಂದ ನೀರು ತೊಟತೊಟನೆ ಅವಳ ತಲೆಯ ಮೇಲೆ ಬಿತ್ತು.

ಮರುದಿನ ಗಂಡಿನವರನ್ನು ಕಳಿಸುವಾಗ ಊರ ಹೊರಗೆ ಅಮ್ಮನ ಗುಡಿಯ ತನಕ ವಧೂವರರನ್ನು ಪರಸ್ಪರ ಕೈಹಿಡಿಸಿ ನಡೆಸಿಕೊಂಡು ಹೋದರು. ಮುಂದೆ ವಾಲಗದವರು. ಹಿಂದುಗಡೆ ಉಳಿದ ಎಲ್ಲರ ಜೊತೆಯಲ್ಲಿ ನಂಜಮ್ಮ ಮಗು ರತ್ನನನ್ನು ಎತ್ತಿಕೊಂಡು ಬರುತ್ತಿದ್ದಳು. ಗ್ರಾಮದೇವತೆಗೆ ಪೂಜೆಯಾಗಿ ನಮಸ್ಕಾರ ಮಾಡಿ ಗಾಡಿಯ ಹತ್ತಿರಕ್ಕೆ ಬಂದಮೇಲೆ ಹೆಂಡತಿಯ ಕೈಬಿಡುವ ಮುನ್ನ ಮೃದುವಾಗಿ ಹಿಸುಕಿ ಸೂರ್ಯನಾರಾಯಣ ಅವಳೊಬ್ಬಳಿಗೆ ಮಾತ್ರ ಕೇಳುವ ಹಾಗೆ-‘ಇನ್ನು ಮೂರು ತಿಂಗಳಿಗೆ ಬಂದು ಕರ್ಕಂಡು ಹೋಗ್ತೀನಿ’ ಎಂದ. ಕಂಪಿಸುವಂತೆ ಉಸಿರಾಡುತ್ತಾ ತಲೆ ತಗ್ಗಿಸಿ ನಿಂತಿದ್ದ ಪಾರ್ವತಿ ಏನೂ ಮಾತನಾಡಲಿಲ್ಲ. ಅವಳು ಏನಾದರೂ ಆಡುತ್ತಾಳೆಂದು ಅವನು ನಿರೀಕ್ಷಿಸಿಯೂ ಇರಲಿಲ್ಲ.
ಅವನು ಅತ್ತೆ, ಮಾವ, ಚಿಕ್ಕ ಮಾವ, ಪುರೋಹಿತರು, ವೆಂಕಟೇಶಯ್ಯ ಮೇಷ್ಟರು, ಮಾದೇವಯ್ಯನವರು ಮೊದಲಾಗಿ ಎಲ್ಲರಿಗೂ ನಮಸ್ಕಾರ ಮಾಡಿದ. ಅವನಿಗೂ ಮಾದೇವಯ್ಯನವರಿಗೂ ಇಷ್ಟರಲ್ಲಿಯೇ ಸ್ವಲ್ಪಮಟ್ಟಿನ ಪರಿಚಯ, ಅಲ್ಪಮಟ್ಟಿನ ಆತ್ಮೀಯತೆ ಬೆಳೆದಿತ್ತು. ಪಾರ್ವತಿ ಗಂಡಿನ ಕಡೆಯವರೂ ತಮ್ಮವರೂ ಆದ ದ್ಯಾವರಸಯ್ಯನವರಿಗೆ ಅವರ ಮನೆಯವರಿಗೆ ನಮಸ್ಕರಿಸಿದಮೇಲೆ ಅವರೆಲ್ಲ ಗಾಡಿ ಹತ್ತಿದರು. ತಿಮ್ಲಾಪುರಕ್ಕೆ ಹೋಗಿ ಅಲ್ಲಿ ಚಪ್ಪರ ಅಲುಗಿಸುವ ಶಾಸ್ತ್ರ ಮುಗಿಸಿಕೊಂಡು ಸೂರ್ಯನಾರಾಯಣ ಬಾಳೆಕೆರೆಗೆ ಹೋಗಬೇಕಾಗಿತ್ತು.

ಅಧ್ಯಾಯ ೧೩
– ೧ –

ಮದುವೆ ಸಾಂಗವಾಗಿ ನೆರವೇರಿದುದಕ್ಕೆ ನಂಜಮ್ಮನಿಗೆ ಹೇಳತೀರದ ಸಂತೋಷ. ಅದಕ್ಕೆ ಸಹಾಯ ಮಾಡಿದವರನ್ನೆಲ್ಲ ಅವಳು ಒಂದೇಸಮನಾಗಿ ನೆನಸಿಕೊಂಡಳು. ಗಂಡಿನ ಕಡೆ ಹೆಚ್ಚು ಜನ ಬರದಿದ್ದುದರಿಂದ ಅಕ್ಕಿ ಬೇಳೆ ಮೆಣಸಿನಪುಡಿ ಮೊದಲಾಗಿ ಸಾಕಷ್ಟು ಸಾಮಾನುಗಳು ಉಳಿದವು. ಅದನ್ನು ಕಾಣುವಂತೆ ಇಟ್ಟು ಗಂಡನ ಕಣ್ಣಿಗೆ ಬಿದ್ದರೆ ದಿನಾ ಅನ್ನ ಸಾರುಗಳನ್ನೇ ಮಾಡೆಂದು ಪೀಡಿಸಿಯಾರು. ಹೇಗೂ ಮೂರು ತಿಂಗಳಿನಲ್ಲಿ ಪ್ರಸ್ತವಾಗಬೇಕು. ಅದಕ್ಕಿರಲಿ ಎಂದು ಎಲ್ಲವನ್ನೂ ಮುಚ್ಚಿಟ್ಟಳು. ಉಳಿದಿದ್ದ ಅರ್ಧ ಡಬ್ಬ ಎಣ್ಣೆಯನ್ನೂ ಮುಚ್ಚಳ ಹಾಕಿ, ಒಂದು ಕಡೆ ಕಾಣದಂತೆ ಇಟ್ಟಳು. ಪ್ರಸ್ತಕ್ಕೆ ಇನ್ನೆಲ್ಲ ಕೊಂಡರೆ ಒಟ್ಟು ಇಪ್ಪತ್ತು ರೂಪಾಯಿಯ ಸಾಮಾನು ಬೇಕು. ಹಾಸಿಗೆ ಹೊದಿಕೆ ಅಂತ ಒಂದು ಐವತ್ತು ಆದೀತು. ಮಗಳಿಗೆ ಕೊಟ್ಟು ಕಳಿಸಲು ಪಾತ್ರೆಗಳಿಗೆ ಏನು ಮಾಡುವುದು? ತನ್ನ ಅತ್ತೆ ಗಂಗಮ್ಮನ ಮನೆಯಲ್ಲಿ ತನ್ನ ಪಾಲಿನದೂ ಬೇಕಾದಷ್ಟು ಪಾತ್ರೆಗಳಿವೆ. ಆದರೆ ಅವರು ಏನೂ ಕೊಡುವವರಲ್ಲ. ಈಗ ಹೊಸದಾಗಿ ಕೊಳ್ಳಲು ದುಡ್ಡಿಲ್ಲ. ತನ್ನ ಮನೆಯಲ್ಲಿರುವುದರಲ್ಲೇ ಅಲ್ಪ ಸ್ವಲ್ಪ ಕೊಟ್ಟು ಕಳಿಸುವುದು. ಆಮೇಲೆ ಸಾಧ್ಯವಾದಾಗ ಒಂದಿಷ್ಟಿಷ್ಟು ಕೊಡುವುದು. ಪಾತ್ರೆ ಪರಟಿ ಕೊಡಲಿಲ್ಲವೆಂದು ಕುಕ್ಕು ಮಾತಾಡುವ ಗಂಡಲ್ಲ ಸೂರ್ಯನಾರಾಯಣ.

ಪಾರ್ವತಿ ಈಗ ಕೈತುಂಬ ಕರಿ ಬಳೆ ತೊಡುತ್ತಾಳೆ. ಕೊರಳಿಗೆ ಕರಿಮಣಿ. ಕಿವಿಗೆ ದೊಡ್ಡದಾದ ಬಿಳೀ ಕಲ್ಲಿನ ಓಲೆಗಳು. ನಾಗೋಲಿಯ ದಿನ ಚುಚ್ಚಿಸಿದ ಮೂಗಿಗೆ ಅವಳ ಗಂಡ ತಂದಿದ್ದ ಬಿಳೀಕಲ್ಲಿನ ಬೇಸರಿ. ಇನ್ನೂ ಹೊಸ ಮೂಗಾದುದರಿಂದ ಬೇಸರಿ ತೂಕವಾಗಿ ಕಾಣುತ್ತಿದೆ. ಅವಳ ಮುಖ ಇಷ್ಟು ಅಗಲವಾಗಿತ್ತೆಂದು ಓಲೆ ಬೇಸರಿಗಳನ್ನಿಡುವ ತನಕ ತಾಯಿ ನಂಜಮ್ಮನಿಗೇ ತಿಳಿದಿರಲಿಲ್ಲ. ಕಾಲಿಗೆ ಕಾಲುಂಗುರ ಸಹ.
‘ಪಾರ್ವತಮ್ಮ ಎಷ್ಟು ಚನ್ನಾಗಿ ಕಾಣುತ್ತೆ’- ಒಂದು ದಿನ ಇವರ ಮನೆಗೆ ಬಂದ ಸರ್ವಕ್ಕ ಹೇಳಿ, ‘ಹಸೀ ಮೈಯಿ, ಒಂದನ್ನೇ ಕೆರೆ ಗಿರೆ ತಾವಕ್ಕೆ ಕಳುಸ್‌ಬ್ಯಾಡಿ ನಂಜಮ್ಮಾರೆ’ ಎಂದು ಎಚ್ಚರ ಹೇಳಿದ್ದಳು.
‘ವಾಲೆ ಬೇಸರಿ ಇಟ್ಕಂಡ್‌ಮ್ಯಾಲೆ ಅಕ್ಕಯ್ಯ ತುಂಬ ಚನ್ನಾಗಿ ಕಾಣ್ತಾಳೆ. ಶೇಕ್‌ದಾರರ ಹೆಂಡ್ತಿ ಹಾಗೆ ಕೈಗೆ ಚಿನ್ನದ ಬಳೆ ಹಾಕ್ಕಂಡ್ರೆ ಇನ್ನೂ ಚನ್ನಾಗಿರುತ್ತೆ ಅಲ್ವೇನಮ್ಮ?’-ರಾಮಣ್ಣ ಎಂದುದಕ್ಕೆ ಅಮ್ಮ, ನೀನು ಶೇಕ್‌ದಾರ್ ಆದಾಗ ಅದನ್ನೂ ಮಾಡಿಸ್ಕೊಡಾಣ ಮಗು’ ಎಂದಳು.
ಪಾರ್ವತಿಗೂ ಅಷ್ಟೆ, ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡರೆ ಏನೋ ಹೊಸತನ ಕಾಣಿಸುವುದು. ಇನ್ನು ಎರಡು ಮೂರು ತಿಂಗಳಿಗೆ ತಾಯಿಯ ಮನೆ ಬಿಟ್ಟು ಹೋಗಬೇಕೆಂಬ ಅರಿವು ಬಂದು ತಕ್ಷಣ ಮ್ಲಾನಳಾಗುವಳು. ಒಂದು ದಿನ ಅಮ್ಮ ಹೇಳಿದಳು: ‘ಮಗು, ನಿನ್ನ ಗಂಡ ತುಂಬ ಒಳ್ಳೆಯೋರು. ಇಷ್ಟೊಂದು ಅನುಸರಿಸಿಕೊಂಡು ಯಾರು ತಾನೆ ಮದುವೆ ಮಾಡ್ಕತ್ತಿದ್ರು? ನಿಂಗೇನು ಅಡಿಗೆ ಊಟ ಮನೆಕೆಲ್ಸ ಯಲ್ಲಾ ಚನ್ನಾಗಿ ಬರುತ್ತೆ. ಆ ಮಗೂನ ಮಾತ್ರ ಭೇದಮಾಡದೆ ಚನ್ನಾಗಿ ನೋಡ್ಕ. ನಿನ್ನ ಗಂಡಂಗೂ ಸಂತೋಷವಾಗುತ್ತೆ. ತಾಯಿ ಸತ್ತ ತಬ್ಬಲಿ ಮಗು ಕಣ್ಣೀರು ಹಾಕಿದ್ರೆ ಪಾಪ ನಮಗೆಲ್ಲ ತಟ್ಟುತ್ತೆ.’
‘ನಾನು ಹಾಗೆ ಮಾಡ್ತೀನೇನಮ್ಮ?’-ಮಗಳು ಕೇಳಿದಳು.
‘ಹೆಣ್ಣು ಮಗು ವಳ್ಳೇ ಚನ್ನಾಗಿದೆ. ಆಮ್ಯಾಲೆ ನಮ್ಮ ವಿಶ್ವಂಗೇ ಮದುವೆ ಮಾಡ್ಕಂಡ್‌ಬಿಡ್‌ಭೌದು ಅಲ್ವೇನಮ್ಮ?’-ರಾಮಣ್ಣ ಕೇಳಿದ.
ಅಮ್ಮ ಎಂದಳು: ‘ಇವ್ನು ಇಷ್ಟು ತುಂಟ. ನೆಟ್ಟಗೆ ಓದಿ ಹೈಸ್ಕೂಲಾದ್ರೂ ಮಾಡದೆ ಇದ್ರೆ ಪಾರ್ವತಿಯ ಯಜಮಾನ್ರು ಹೆಣ್ಣು ಕೊಡ್ತಾರೆಯೇ?’
‘ಇಲ್ಲ ಕಣಮ್ಮ. ತುಂಟ ಹುಡುಗರಿಗೇ ಬುದ್ಧಿ ಜಾಸ್ತಿ ಅಂತ ನಮ್ಮ ಹೆಡ್ಮಾಸ್ಟರೇ ಹೇಳ್ತಿರ್ತಾರೆ.’
‘ಹಾಗಾದ್ರೆ ನೀನು ಮೆದುಗಲನಾಗಿದ್ರೂ ಅದ್ ಹ್ಯಾಗೆ ನಿನ್ನ ಸ್ಕೂಲಿಗೇ ಪಸ್ಟ್ ಬತ್ತಿದೀಯಾ?-ಅಕ್ಕಯ್ಯ ಕೇಳಿದಳು.
‘ತುಂಟನಾಗಿದ್ರೆ ಇನ್ನೂ ತುಂಬ ನಂಬರ್ ಬತ್ತಿತ್ತೇನೋ!’-ತಮ್ಮ ಉತ್ತರಕೊಟ್ಟ.
ಇವರು ಈ ಮಾತನಾಡುವಾಗ ವಿಶ್ವ ಮಾದೇವಯ್ಯನವರ ಗುಡಿಯಲ್ಲಿ ಅವರ ಬೆಲ್ಲದ ಮಡಕೆ ತಡಕುತ್ತಿದ್ದ.
ಮದುವೆಯಾಗಿ ಆಗಲೇ ಒಂದು ತಿಂಗಳಾಗಿತ್ತು. ಸೂರ್ಯನಾರಾಯಣ ತನ್ನ ಕ್ಷೇಮಸಮಾಚಾರಕ್ಕೆ ತೀ|| ಮಾವನವರ ಹೆಸರಿಗೆ ಒಂದು ಕಾಗದ ಸಹ ಬರೆದಿದ್ದ. ನಂಜಮ್ಮನಿಗೆ ಒಂದು ವಿಷಯ ನೆನಪಾಯಿತು: ಪಾರ್ವತಿಯ ಮದುವೆ ಸುಸೂತ್ರವಾಗಿ ನಡೆದರೆ ಗ್ರಾಮದೇವತೆಯ ಗುಡಿಗೆ ಬೆಲ್ಲನ್ನ ಮೊಸರನ್ನ ಮಾಡಿಕೊಂಡು ಬರುವುದಾಗಿ ಹರಕೆ ಕಟ್ಟಿಕೊಂಡಿದ್ದಳು. ಗ್ರಾಮದೇವತೆ ಕಾಳಮ್ಮನ ಹರಕೆ ಹೆಚ್ಚು ದಿನ ನಿಲ್ಲಿಸಿಕೊಳ್ಳಬಾರದು ಎಂಬ ಅರಿವಾಗಿ, ಅದನ್ನು ಬೇಗ ತೀರಿಸಬೇಕೆಂದು ನಿಶ್ಚಯಿಸಿದಳು. ಇಷ್ಟಕ್ಕೂ ಅದಕ್ಕೆ ಬೇಕಾದ ಹೆಚ್ಚು ಖರ್ಚೂ ಇಲ್ಲ. ಮನೆಯಲ್ಲಿ ಅಕ್ಕಿಯಿದೆ, ಬೆಲ್ಲವಿದೆ, ತೆಂಗಿನಕಾಯಿ ಮೊಸರು, ಎಲ್ಲ ಇದೆ. ಅಮ್ಮನಿಗೆ ಒಪ್ಪಿಸಲು ಒಂದು ರವಿಕೆ ಕಣ. ಅದೂ ಮನೆಯಲ್ಲಿದೆ. ಹೇಗೂ ನಾಡಿದ್ದೇ ಶುಕ್ರವಾರ. ಸ್ಕೂಲಿಗೆ ರಜ ತೆಗೆದುಕೊಳ್ಳುವಂತೆ ರಾಮಣ್ಣನಿಗೆ ಹೇಳಿದಳು. ‘ಅಮ್ಮನ ಗುಡಿಗೆ ಹೋಗಬೇಕು, ಮನೇಲೇ ಇರಿ’-ಎಂದುದಕ್ಕೆ ಚೆನ್ನಿಗರಾಯರು ಸಿದ್ಧವಾಗಿ ಒಪ್ಪಿದರು.

ಗಂಗಮ್ಮ ಅಪ್ಪಣ್ಣಯ್ಯರು ಈಗ ಎಂಟು ದಿನದಿಂದ ಊರಿನಲ್ಲಿರಲಿಲ್ಲ; ಗಂಡಸಿ ದುದ್ದದ ಕಡೆಯ ಹಳ್ಳಿಗಳಿಗೆ ಹೋಗಿದ್ದರು. ಶುಕ್ರವಾರ ಗುಡಿಗೆ ಬರುವುದಾಗಿ ಅಮ್ಮನ ಪೂಜಾರಿ ಕಾಳನಿಗೆ ಹೇಳಿಕಳುಹಿಸಿದ್ದ ನಂಜಮ್ಮ, ಆ ದಿನ ಹೊತ್ತಿಗೆ ಮುಂಚೆ ಎದ್ದು ನೀರು ಕಾಯಿಸಿದಳು. ಸ್ನಾನ ಮಾಡಿ ಅವಳು ಅಡಿಗೆಮನೆ ಹೊಕ್ಕಮೇಲೆ ಪಾರ್ವತಿ ವಿಶ್ವನಿಗೆ ಮಡಿ ಉಡಿಸಿ ತಾನೂ ಉಟ್ಟುಕೊಂಡಳು. ರಾಮಣ್ಣನದೂ ಸ್ನಾನವಾದ ಮೇಲೆ ಚೆನ್ನಿಗರಾಯರು ಬಚ್ಚಲು ಮನೆ ಹೊಕ್ಕರು. ಮೂರು ಸೇರು ಅಕ್ಕಿ ಬಸಿದು ನಂಜಮ್ಮ ಬೆಲ್ಲದ ಪಾಕಕ್ಕೆ ಅರ್ಧ ಭಾಗ ಅನ್ನ ಹಾಕಿ, ಹದವಾಗುವತನಕ ಒಲೆಯ ಮೇಲೆ ಇಟ್ಟು, ಏಲಕ್ಕಿ ಕೊಬ್ಬರಿ ನೆಲಗಡಲೆ ಬೀಜ ಬೆರಸಿ, ಉಳಿದುದಕ್ಕೆ ಒಗ್ಗರಣೆ, ಕಾಯಿತುರಿ, ಕರಿಬೇವಿನಸೊಪ್ಪು ಹಾಕಿ ಮೊಸರನ್ನ ಕಲಸಿ, ಎರಡು ಕೊಳದಪ್ಪಲೆಗಳಲ್ಲಿ ತುಂಬಿ ಚೌಕ ಬಿಗಿದು ಇಟ್ಟಳು. ಅರಿಶಿನ ಕುಂಕುಮ ಕಣಿಗಲೆ ಹೂವುಗಳ ತಟ್ಟೆಗಳನ್ನು ಅಣಿಮಾಡಿ, ಪಾರ್ವತಿಗೆ ಮದುವೆಯಲ್ಲಿ ಅವಳ ಗಂಡ ತಂದಿದ್ದ ಎಂಬತ್ತು ರೂಪಾಯಿಯ ದೊಡ್ಡ ಸೀರೆ ಉಟ್ಟುಕೊಳ್ಳುವಂತೆ ಹೇಳಿದಳು. ಅರಿಶಿನ ತೊಡೆದ ಕೆನ್ನೆ. ಅಡ್ಡ ಕುಂಕುಮ, ಅಳ್ಳಕವಾಗಿ ಬಾಚಿದ್ದ ತಲೆಗೂದಲು, ಮುಡಿದಿದ್ದ ಹೂವು, ಓಲೆ, ಬೇಸರಿ, ಕಾಲುಂಗುರ, ಇಂತಹ ದೊಡ್ಡ ಸೀರೆಗಳನ್ನುಟ್ಟು ಪಾರ್ವತಿ ಅರಿಶಿನ ಕುಂಕುಮದ ತಟ್ಟೆಯನ್ನು ಎಡಗೈಲಿ ಇಟ್ಟು ಬೀದಿಯಲ್ಲಿ ನಡೆಯುತ್ತಿದ್ದರೆ ಎಲ್ಲರೂ ಅವಳನ್ನೇ ನೋಡುವವರೇ. ಜೊತೆಯಲ್ಲಿ ಹೋಗುತ್ತಿದ್ದ ನಂಜಮ್ಮ ಮಗಳಿಗೆ ದೃಷ್ಟಿಯಾದೀತೆಂದು ಚಿಂತಿಸುತ್ತಿದ್ದಳು. ಹಣೆಗೆ ಗೋಪೀಚಂದನವನ್ನಿಟ್ಟು, ಮಡಿಯಲ್ಲಿ ಬರುತ್ತಿದ್ದ ರಾಮಣ್ಣ ಎರಡು ಅನ್ನದ ಕೊಳದಪ್ಪಲೆಗಳನ್ನೂ ಹಿಡಿದುಕೊಂಡಿದ್ದ. ವಿಶ್ವನ ಕೈಲಿ ತೆಂಗಿನಕಾಯಿಯಿತ್ತು. ಚೆನ್ನಿಗರಾಯರು ಹಿಂದೆ ಬರುತ್ತಿದ್ದರು.

ಪೂಜಾರಿ ಕಾಳ ಇವರಿಗಾಗಿ ಕಾಯುತ್ತಿದ್ದ. ನಂಜಮ್ಮ ಮಗಳನ್ನು ಗರ್ಭಗುಡಿಯ ಒಳಗೆ ಕರೆದುಕೊಂಡು ಹೋಗಿ ಮಗಳಿಂದಲೇ ಅಮ್ಮನ ಪಾದಕ್ಕೆ ಪೂಜೆ ಮಾಡಿಸಿದಳು. ಅರಿಶಿನ ಕುಂಕುಮ, ಕಣಿಗಲೆ ಹೂವುಗಳ ಜೊತೆಗೆ ರಾಮಣ್ಣ ಗುಡಿಯ ಮುಂದಿನ ಕತ್ತಿಯ ಗಿಡ ಹತ್ತಿ ಕಿತ್ತು ತಂದ ಕೆಂಪು ಹೂಗಳನ್ನೂ ಪೂಜೆ ಮಾಡಿದಾಗ, ಒಂದು ಅಂಕಣದಗಲ ಆವರಿಸಿ ಕೂತಿದ್ದ ಅಮ್ಮ ಎಂಥವರನ್ನಾದರೂ ನುಂಗುವ ಚಂಡಿಯಂತೆ ಕಾಣುತ್ತಿದ್ದಳು. ಇವರು ಅವಳ ತೊಡೆಯ ಮೇಲೆ ಹೊಸ ರವಿಕೆಯ ಕಣವನ್ನು ಹೊದ್ದಿಸಿದ ಮೇಲೆ ಪೂಜಾರಿ ಕಾಳ ದೊಡ್ಡದಾಗಿ ಬತ್ತಿ ಹೊತ್ತಿಸಿ ಮಂಗಳಾರತಿ ಮಾಡಿದ. ಮಂಗಳಾರತಿ ತೆಗೆದುಕೊಂಡು ಎಲ್ಲರೂ ಅಡ್ಡಬಿದ್ದರು. ಕಾಳನಿಗೆ ದಕ್ಷಿಣೆ ಕೊಟ್ಟಮೇಲೆ, ತಂದ ತಳಿಗೆಯಲ್ಲಿ ಒಂದೊಂದು ಬಾಳೇಸೀಳಿನ ತುಂಬ ಭಾಗ ಕೊಟ್ಟು ಇವರು ಗುಡಿಯ ಹೊರಗೆ ಬಂದರು. ಅಷ್ಟರಲ್ಲಿ ಪ್ರಸಾದಕ್ಕೆಂದು ಸೇರಿದ್ದವರಿಗೆ ಒಂದೊಂದು ತೆರಳೆಯಂತೆ ನೀಡಿ ಇವರೆಲ್ಲರೂ ಗುಡಿಯ ಹಿಂದಿನ ಕೊಳಕ್ಕೆ ಹೋದರು. ನೀರಿನ ದಡದಲ್ಲಿ ಕೂತು ಎಲ್ಲರಿಗೂ ನಂಜಮ್ಮ ಬಾಳೆ ಎಲೆಯ ಮೇಲೆ ಪ್ರಸಾದ ನೀಡಿದಳು. ಚೆನ್ನಿಗರಾಯರಾದಿಯಾಗಿ ಎಲ್ಲರಿಗೂ ಸಾಕಾಯಿತು. ನಂಜಮ್ಮನೂ ತಿಂದು ಮನೆಗೆ ಸಹ ಸ್ವಲ್ಪ ಉಳಿಯಿತು. ಚೆನ್ನಿಗರಾಯರು ಹಾಗೆಯೇ ಕೆರೆ ಏರಿಯ ಹಿಂದಕ್ಕೆ ಹೋದರು. ತಾಯಿ ಮಕ್ಕಳು ಮತ್ತೆ ದೇವಸ್ಥಾನಕ್ಕೆ ಬಂದು ಜಗುಲಿಯ ಮೇಲೆ ಸ್ವಲ್ಪ ಹೊತ್ತು ಕೂತಿದ್ದು, ಇನ್ನೊಮ್ಮೆ ಬಾಗಿಲಿನ ಕಿಂಡಿಯಿಂದ ಅಮ್ಮನ ದರ್ಶನ ಮಾಡಿ ಹೊಸಲಿಗೆ ಹಣೆಯಿಟ್ಟು ನಮಸ್ಕರಿಸಿ ಮನೆಗೆ ಹೊರಟರು. ಹಿಂತಿರುಗುವಾಗಲೂ ದಾರಿಯಲ್ಲಿ ಸಿಕ್ಕಿದ ಹೆಂಗಸರು ಮಕ್ಕಳಾದಿಯಾಗಿ ಪಾರ್ವತಿಯನ್ನು ಕಣ್ಣು ತುಂಬ ನೋಡುತ್ತಿದ್ದರು. ಕೆಲವು ಹೆಂಗಸರಂತೂ-‘ಅವ್ವಾ, ಮದುವೆಯಾದ ಅಸೀ ಮೈಯಿ, ದ್ವಡ್ಡ ಸೀರೆ ಬ್ಯಾರೆ ಉಡಿಸ್ಕಂಡು ಯಾಕೆ ಕರ್ಕಂಡ್ ಬಂದ್ರಿ? ಕಣ್ಣೆಸರಾಗಾಕಿಲ್ವಾ?’ ಎಂದರು. ಅದೂ ನಿಜವಿರಬಹುದು ಎಂದು ನಂಜಮ್ಮನಿಗೆ ಎನಿಸದಿರಲಿಲ್ಲ.

ಆ ದಿನ ಮಧ್ಯಾಹ್ನ ಮನೆಯಲ್ಲಿ ಅಡಿಗೆ ಮಾಡಲಿಲ್ಲ. ಗುಡಿಯಿಂದ ಉಳಿದು ತಂದಿದ್ದ ತಳಿಗೆಯನ್ನೇ ಮೂರು ಗಂಟೆಯ ಹೊತ್ತಿಗೆ ಸ್ವಲ್ಪ ಸ್ವಲ್ಪ ತಿಂದರು. ಮನೆಗೆ ಬಂದ ತಕ್ಷಣ ಪಾರ್ವತಿ ತನ್ನ ಮದುವೆಯ ದೊಡ್ಡ ಸೀರೆ ಬಿಚ್ಚಿ ಸಾಮಾನ್ಯವಾದ ಅಂಚಿನ ಸೀರೆ ಉಟ್ಟುಕೊಂಡಳು. ಹಣೆಯ ಕುಂಕುಮ, ಕಿವಿಯ ಓಲೆ, ತಲೆಯ ಹೂವುಗಳೆಲ್ಲ ಹಾಗೆಯೇ ಇದ್ದುವು. ಅವಳಿಗೆ ಯಾಕೋ ತೂಕಡಿಕೆ ಬಂದು, ಚಾಪೆ ಹಾಕಿಕೊಂಡು ಮಲಗಿದಳು.ರಾಮಣ್ಣ ಮನೆಯಲ್ಲಿ ಕೂತೇ ಇಂಗ್ಲಿಷ್ ಪಾಠ ಬರೆದುಕೊಳ್ಳುತ್ತಿದ್ದ. ವಿಶ್ವ ಸ್ಕೂಲಿಗೆ ಹೋದ. ಚೆನ್ನಿಗರಾಯರು ಹೋಗಿ ಮಾದೇವಯ್ಯನವರ ಗುಡಿಯ ಜಗುಲಿಯ ಮೆಲೆ ಮಲಗಿದ್ದರು. ನಂಜಮ್ಮನೊಡನೆ ಮಾತನಾಡಲು ಸರ್ವಕ್ಕ ಬಂದಿದ್ದಳು. ಚಾಪೆಯ ಮೇಲೆ ಪಾರ್ವತಿಯನ್ನು ನೋಡಿದ ಅವಳಿಗೆ ತನ್ನ ಮಗಳು ರುದ್ರಾಣಿಯ ನೆನಪಾಯಿತು. ತನ್ನ ಗಂಡನೇ ಹಾಗೆ ಮಾಡಿಸದಿದ್ದರೆ ಅವಳಿಗೆ ಮದುವೆಯಾಗಿ ಇಷ್ಟರಲ್ಲಿ ಒಂದಾದರೂ ಮಗುವಿರುತ್ತಿತ್ತು-ಎಂದು ಅವಳು ಮನಸ್ಸಿನಲ್ಲೇ ಕೊರಗಿದಳು.

ಸ್ವಲ್ಪ ಹೊತ್ತಿನಲ್ಲಿ ಪಾರ್ವತಿಗೆ ಎಚ್ಚರವಾಯಿತು. ಅವಳ ಕಣ್ಣು ಸ್ವಲ್ಪ ಕೆಂಪಗಾಗಿತ್ತು. ‘ಅಮ್ಮ, ಮೈ ಚಳಿ ಚಳಿಯಾಗುತ್ತೆ. ಬೆಂಕಿ ಕಾಸಾಣೇ ಅನ್ಸುತ್ತೆ’-ಎಂದು ಎದ್ದು ಕೂತಳು. ಅದು ಬೇಸಿಗೆ ಹತ್ತಿರವಾಗುವ ಕಾಲ. ಈಗ ಎಂತಹ ಚಳಿ? ನಂಜಮ್ಮ ಹತ್ತಿರ ಬಂದು ಹಣೆ ಮುಟ್ಟಿ ನೋಡಿದಳು. ಜ್ವರ ಬಂದಿತ್ತು. ಚಳಿಜ್ವರ ಬಂದಿದೆ. ಸರ್ವಕ್ಕ ತಕ್ಷಣ ಹೇಳಿದಳು: ‘ನಂಜಮ್ಮಾರೇ, ಇವತ್ತು ಬೆಳಿಗ್ಗೆ ಹಸೀ ಮೈಲಿ ಅದುನ್ನ ಯಾಕೆ ಕರ್ಕಂಡು ಓದ್ರಿ? ದೊಡ್ಡ ಸೀರೆ ಬ್ಯಾರೆ ಉಟ್ಕಂಡಿತ್ತು. ಜನರ ಕಣ್ಣು ಒಂದೇ ಸಮುಕ್ಕಿರಾಕಿಲ್ಲ. ಕಡ್ಡಿ ಕಚ್ಚಿ ಹಾಕಿ.’

ನಂಜಮ್ಮ ಅರ್ಧ ಕಸುಡಿಗೆ ಹಂಚಿಕಡ್ಡಿ ಹೊತ್ತಿಸಿ ಮಗಳಿಗೆ ನಿವಾಳಿಸಿ ಮೂಲೆಗೆ ಹಾಕಿದಾಗ ಅದು ಚಿಟಿಚಿಟಿ ಎಂದು ಗಟ್ಟಿಯಾಗಿ ಶಬ್ದ ಮಾಡುತ್ತಾ ಉರಿದು ಬೆಳಗಿ ಬೂದಿಯಾಯಿತು. ‘ಕಣ್ಣೆಸರೇ ಕಣ್ರೀ. ನೋಡಿದ್ರಾ, ಹ್ಯಂಗೆ ಚಿಟಿಚಿಟಿ ಅಂತು?’-ಸರ್ವಕ್ಕ ತನ್ನ ಕಾರಣವನ್ನು ಸಮರ್ಥಿಸಿದಳು. ಪಾರ್ವತಿ ಕೂತೇ ಇದ್ದಳು. ಸಂಜೆಯ ಹೊತ್ತಿಗೆ ಸರ್ವಕ್ಕ ಮನೆಗೆ ಹೋದಮೇಲೆ ನಂಜಮ್ಮ ಅಡಿಗೆಗೆಂದು ಒಳಗೆ ಹೋದಳು. ಕೂತಿರಲಾರದೆ ಪಾರ್ವತಿ ಕಂಬಳಿ ತೆಗೆದು ಉರುಟಿಕೊಂಡಳು. ರಾಮಣ್ಣ ತಲೆದಿಂಬಿನ ಹತ್ತಿರ ಕೂತು ಅವಳ ಬೇಸರ ಕಳೆಸುತ್ತಿದ್ದ. ರಾತ್ರಿಯ ಹೊತ್ತಿಗೆ ಅವಳ ಚಳಿಜ್ವರ ಸ್ವಲ್ಪ ಹೆಚ್ಚೇ ಆಯಿತು. ಅಡಿಗೆಯಾದ ಒಲೆಯ ಮೇಲೆಯೇ ನಂಜಮ್ಮ ಜೀರಿಗೆ, ಮೆಣಸು, ಲವಂಗ, ತುಳಸಿಯ ಕಷಾಯ ಹಾಕಿ ಮಗಳಿಗೆ ಕುಡಿಸಿ ಬೆಚ್ಚಗೆ ಮಾಡಿ ಮಲಗಿಸಿದಳು. ಜನರ ಕಣ್ಣು ಒಂದೇ ಸಮ ಇರುಲ್ಲ. ದೊಡ್ಡ ಸೀರೆ ಉಟ್ಕ ಅಂತ ಹೇಳಿದ್ದೇ ತಪ್ಪಾಯ್ತು-ಎಂದು ಅವಳ ಮನಸ್ಸು ಯೋಚಿಸುತ್ತಿತ್ತು.

ರಾತ್ರಿ ಎಲ್ಲ ಪಾರ್ವತಿಗೆ ಜ್ವರ ಕಾಯುತ್ತಿತ್ತು. ನಡುನಡುವೆ ಮೈ ಕತ್ತರಿಸುತ್ತಿದೆ ಎನ್ನುತ್ತಿದ್ದಳು. ಮುಖ ಬಿಗಿದುಕೊಂಡಂತೆ ಆಗಿ ಕಣ್ಣು ಕೆಂಪಗಾಗಿತ್ತು. ನಂಜಮ್ಮ ಇನ್ನೊಂದು ಸಲ ಕಷಾಯ ಕುಡಿಸಿದಳು. ಬೆಳಗಿನಜಾವದ ಹೊತ್ತಿಗೆ ಪಾರ್ವತಿ ಮಂಪರು ಬಂದು ಮಲಗಿದಳು. ಅಮ್ಮನಿಗೂ ಸ್ವಲ್ಪ ನಿದ್ರೆ ಹೊತ್ತಿತು. ಬೆಳಿಗ್ಗೆ ಅವಳಿಗೆ ಎಚ್ಚರವಾದಾಗ ಹೊತ್ತು ಹುಟ್ಟಿತ್ತು. ಪಾರ್ವತಿಯ ಜ್ವರ ಸ್ವಲ್ಪ ಇಳಿದಂತೆ ಆಗಿದ್ದರೂ ಪೂರ್ತಿ ಬಿಟ್ಟಿರಲಿಲ್ಲ. ‘ಮೈ ಕೈ ಕತ್ತರಿಸಿದ ಹಾಗೆ ಆಗುತ್ತೆ. ತುಂಬ ನೋವು’- ಎಂದು ಹೊರಳುತ್ತಿದ್ದಳು. ‘ಜ್ವರದ ತಾಪಕ್ಕೆ ಹಾಗಾಗಿದೆ ಮಗು. ಈಗ ಜ್ವರ ಇಳೀತಿದೆ. ಬೆಚ್ಚಗೆ ಮಲಕ್ಕೊ. ಬಿಸಿನೀರು ಕಾಯುಸ್ತೀನಿ. ಆಮೇಲೆ ಎದ್ದು ಮುಖ ತೊಳ್ಕೊಳೂವಂತೆ’-ಎಂದು ಹೇಳಿ ಅವಳು ಎಡ ಪಕ್ಕಕ್ಕೆ ತಿರುಗಿ ನೋಡಿದರೆ ರಾಮಣ್ಣ ಇನ್ನೂ ಮಲಗಿದ್ದ. ಯಾವತ್ತೂ ಕೋಳಿ ಕೂಗುವ ಹೊತ್ತಿಗೆ ಎದ್ದು ಸೀಮೆ ಎಣ್ಣೆ ಲ್ಯಾಂಪು ಹೊತ್ತಿಸಿಕೊಂಡು ಕೂತು ಓದುತ್ತಿದ್ದ ಅವನು ಇನ್ನೂ ಮಲಗಿದ್ದಾನೆ. ‘ಮರೀ, ಇನ್ನೂ ಎದ್ದಿಲ್ವೇನೋ?’-ಎಂದು ಕೇಳಿದುದಕ್ಕೆ ಮುಸುಕಿನೊಳಗಿನಿಂದಲೇ, ‘ಚಳಿ ಜ್ವರ ಬಂದಿದೆ ಕಣಮ್ಮ’ ಎಂದ. ಗಾಬರಿಯಾಗಿ ಮುಸುಕು ಎತ್ತಿ ನೋಡುತ್ತಾಳೆ: ಪಾರ್ವತಿಯ ಮುಖದಂತೆಯೇ ಅವನದೂ ಆಗಿದೆ. ಮುಖ ಗಡುಸಾಗಿ ಕಣ್ಣು ಕೆಂಡದಂತೆ ಉರಿಯುತ್ತಿದೆ. ಇಬ್ಬರಿಗೂ ಒಂದೇ ದಿನ ಚಳಿಜ್ವರ ಬಂದಿದೆ. ಯಾಕೆ ಹೀಗಾಯ್ತು?-ಎಂದು ಯೋಚಿಸುತ್ತಾ ಅವಳು ಎದ್ದು ನೀರೊಲೆ ಹೊತ್ತಿಸಿದಳು. ಬಿಸಿನೀರಿನಲ್ಲಿ ಇಬ್ಬರಿಗೂ ತಾನೇ ಮುಖ ತೊಳೆದು, ಪಕ್ಕಪಕ್ಕದಲ್ಲಿ ಹಾಸಿ ಮಲಗಿಸಿದಳು. ಮತ್ತೆ ಶುಂಠಿ ಮೆಣಸಿನ ಕಷಾಯ ಕುದಿಸಿ, ಅದಕ್ಕಿಂತ ಮೊದಲು ಅಕ್ಕಿ ತರಿಯ ಸಪ್ಪೆ ಗಂಜಿ ಮಾಡಿ, ಅವರು ಬೇಡವೆಂದರೂ ಕುಡಿಸಿದಳು. ಚಳಿ, ಜ್ವರ, ಬರುತ್ತೆ ಹೋಗುತ್ತೆ. ಆದರೆ ರಾಮಣ್ಣನಿಗೆ ಪರೀಕ್ಷೆ ಹತ್ತಿರವಾಗುತ್ತಿದ್ದ ಕಾಲ. ಪಾರ್ವತಿಗೆ ದೃಷ್ಟಿಯಾಯಿತು ಅನ್ನಬಹುದು. ರಾಮಣ್ಣನಿಗೆ ಯಾಕೆ ಬಂತು? ಅವನು ಮಡಿಯ ಲುಂಗಿ ಸುತ್ತಿ ಚೌಕ ಹೊದೆದು ಗುಡಿಗೆ ಬಂದಿದ್ದ. ಅವನೂ ಹೊಸದಾಗಿ ಮುಂಜಿಯಾಗಿದ್ದ ಹುಡುಗ. ಆದರೆ ಗಂಡು ಹುಡುಗರಿಗೆಂಥ ಹಸೀ ಮೈಯಿ? ಮದುವೆಯ ಕಾಲದಲ್ಲಿ ಅಷ್ಟೊಂದು ದುಡಿದಿದ್ದ. ಆಮೇಲೆ ಮೊದಲಿನಂತೆ ದಿನಾ ಬಿಸಿಲಿನಲ್ಲಿ ನಡೆದು ಸ್ಕೂಲಿಗೆ ಹೋಗಿ ಬರುತ್ತಾನೆ. ಇನ್ನೇನು ಒಂದು ತಿಂಗಳಿಗೆ ಪರೀಕ್ಷೆ ಮುಗಿದುಬಿಟ್ಟರೆ ಆಮೇಲೆ ಬೇಸಿಗೆ ರಜ ಬರುತ್ತೆ. ಒಂದೂವರೆ ತಿಂಗಳು ಹಾಯಾಗಿರಬಹುದು.

ಸಂಜೆಯ ಹೊತ್ತಿಗೆ ಪಾರ್ವತಿಯ ಜ್ವರ ಮತ್ತೆ ಏರಿತು. ಕಣ್ಣುಗಳಂತೂ ಗ್ರಾಮದೇವತೆ ಕಾಳಮ್ಮನ ಉರಿಗಣ್ಣಿನಂತೆ ಆಗಿದ್ದವು. ಎರಡು ಕಿವಿಗಳಲ್ಲಿಯೂ ಥಳಥಳ ಹೊಳೆಯುತ್ತಿದ್ದ ಓಲೆ, ಮೂಗಿನಲ್ಲಿ ಪ್ರಕಾಶಿಸುತ್ತಿದ್ದ ಬೇಸರಿಗಳು, ಅವಳ ಮುಖ ನೋಡಿದರೆ ಭಯ ಹುಟ್ಟುವಂತೆ ಮಾಡುತ್ತಿದ್ದುವು. ನಂಜಮ್ಮ ಓಲೆ ಬೇಸರಿಗಳನ್ನು ಬಿಚ್ಚಿ ತೆಗೆದು ಪೆಟ್ಟಿಗೆಯಲ್ಲಿಟ್ಟುಬಿಟ್ಟಳು. ರಾತ್ರಿಯ ಹೊತ್ತಿಗೆ ಪಾರ್ವತಿ ಎಂದಳು: ‘ಅಮ್ಮ, ನನ್ನ ಬಲ ತೊಡೇಲಿ ಅಡಗಳಲು ಕಟ್ಟಿದ ಹಾಗಿದೆ.’

ಮದುವೆಯಾದ ಮೇಲೆ ಅವಳು ಹೆಚ್ಚು ಕೆಲಸ ಮಾಡಿಲ್ಲ. ಎಲ್ಲಿಯೂ ನಡೆದಿಲ್ಲ. ನೆನ್ನೆ ದೇವಸ್ಥಾನಕ್ಕೆ ನಡೆದು ಬಂದದ್ದಕ್ಕೆ ಕಾಲು ನೋವು ಬಂದು ಹೀಗಾಗಿದೆಯೋ ಎಂಬ ಯೋಚನೆ ನಂಜಮ್ಮನಿಗೆ ಬಂತು. ಆದರೆ ದೇವಸ್ಥಾನ ಊರ ಮುಂದೆಯೇ ಇದೆ. ಹತ್ತು ಮೈಲಿ ನಡೆದರೂ ಸುಸ್ತಾಗುವಂತಹ ಮಗಳಲ್ಲ ಪಾರ್ವತಿ. ಆದರೆ ಇಷ್ಟಕ್ಕೇ ಯಾಕೆ ಅಡಗಳಲು ಕಟ್ಟುತ್ತೆ? ಹ್ಯಾಗಾದರೂ ಹಾಗಾಗಲಿ ಎಂದು ಅವಳೇ ಉಪ್ಪು ಕಾಯಿಸಿ ತೊಡೆ ಸಂದಿಗೆ ಶಾಖ ಕೊಟ್ಟು, ಇನ್ನೊಮ್ಮೆ ಗಂಜಿ ಕಷಾಯಗಳನ್ನು ಕುಡಿಸಿ ಬೆಚ್ಚಗೆ ಮಲಗಿಸಿದಳು. ರಾಮಣ್ಣನ ಜ್ವರವೂ ಹಾಗೆಯೇ ಇತ್ತು. ಸ್ವಲ್ಪವೂ ನರಳದೆ ಸದ್ದು ಮಾಡದೆ ಅವನು ಮಲಗಿದ್ದ. ಮಾದೇವಯ್ಯನವರ ಗುಡಿಗೆ ಹೋಗಿ ಭಜನೆ ಕೇಳಿಕೊಂಡು ಚೆನ್ನಿಗರಾಯರು ರಾತ್ರಿ ಎಂಟು ಗಂಟೆಯ ಹೊತ್ತಿಗೆ ಮನೆಗೆ ಬಂದರು. ವಿಶ್ವ ಸ್ವಲ್ಪ ಮುಂಚೆ ಬಂದಿದ್ದ. ಅವರಿಬ್ಬರಿಗೂ ಮಧ್ಯಾಹ್ನದ ಅಡಿಗೆಯನ್ನೇ ಬಡಿಸಿದ ನಂಜಮ್ಮನಿಗೆ ಊಟ ಬೇಕಾಗಲಿಲ್ಲ. ಅಲ್ಲದೆ ನೆನ್ನೆ ರಾತ್ರಿಯೂ ನಿದ್ರೆ ಇಲ್ಲದ್ದರಿಂದ ಅವಳಿಗೂ ಕಣ್ಣು ಎಳೆಯುತ್ತಿತ್ತು. ಇನ್ನೊಂದು ಸಲ ಇಬ್ಬರು ಹುಡುಗರ ಹಣೆಯನ್ನೂ ಮುಟ್ಟಿ ಪರೀಕ್ಷಿಸಿ ಸರಿಯಾಗಿ ಹೊದೆಸಿ ಅವಳು ಅವರಿಬ್ಬರ ತಲೆಯ ಹತ್ತಿರವೇ ಮಲಗಿಕೊಂಡಳು. ಸ್ವಲ್ಪ ಹೊತ್ತು ನಿದ್ದೆ ಬರಲಿಲ್ಲ. ಅನಂತರ ಆಳವಾಗಿ ಬಂತು.

ಯಾವಾಗಲೋ ಒಂದು ಹೊತ್ತಿನಲ್ಲಿ ಅವಳಿಗೊಂದು ಕನಸು ಬಿತ್ತು. ಮೊನ್ನೆಯ ದಿನ ಅವರು ಗ್ರಾಮದೇವತೆಯ ಗುಡಿಗೆ ಹೋಗಿದ್ದುದೇ ಕಾಣಿಸುತ್ತಿತ್ತು. ಅಮ್ಮನ ಮುಖ ಜ್ವರ ಬಂದ ಪಾರ್ವತಿಯ ಮುಖದಂತೆ ಗಡುಸಾಗಿ ದಪ್ಪವಾಗಿದೆ. ಅವಳ ಎರಡೂ ಕಿವಿಗಳ ಓಲೆಗಳೂ ಉರಿಯುತ್ತಿವೆ. ಕಣ್ಣೂಗಳಂತೂ ಬೆಂಕಿಯಾಗಿವೆ. ಚಕ್ಕಮಕ್ಕಲವಾಗಿ ಒಂದು ಅಂಕಣದ ಅಗಲಕ್ಕೂ ಕೂತಿದ್ದ ಅವಳ ಎರಡೂ ತೊಡೆಗಳ ಮೇಲೂ ಪಾರ್ವತಿ ರಾಮಣ್ಣ ಇಬ್ಬರೂ, ಆಗ ತಾನೇ ಹುಟ್ಟಿದ ಅವಳಿ ಮಕ್ಕಳಂತೆ ಬರೀ ಮೈಲಿ ಮಲಗಿದ್ದಾರೆ. ಹತ್ತಿರ ಹೋಗಿ ಅವರಿಬ್ಬರ ಮೈಮೇಲೂ ಒಂದು ಕಂಬಳಿ ಹೊದೆಸಲು ಇವಳು ಪ್ರಯತ್ನಿಸುತ್ತಿದ್ದಾಳೆ. ಗರ್ಭಗುಡಿಯ ಹೊಸಲಿನ ಒಳಕ್ಕೆ ಹೋಗುವುದಕ್ಕೆ ಆಗುವುದಿಲ್ಲ. ಬಾಗಿಲಂತೂ ಮುಚ್ಚಿಲ್ಲ. ಎದುರಿಗೆ ಯಾವ ತಡೆಯೂ ಕಾಣುತ್ತಿಲ್ಲ. ಆದರೆ ಇವಳು ಒಳಗೆ ಬರದಂತೆ ಅದೆಂಥದೋ ತಡೆಯುತ್ತಿದೆ. ಇವಳು ಪ್ರಯತ್ನ ಮಾಡುತ್ತಲೇ ಇದ್ದಾಳೆ. ‘ಅಯ್ಯೋ!’- ಎಂದು ಯಾರೋ ನರಳಿದ ಸದ್ದಾಯಿತು. ಕನಸು ಅಲ್ಲಿಗೆ ಕತ್ತರಿಸಿ ಎಚ್ಚರವಾಯಿತು. ನರಳುತ್ತಿದ್ದವನು ರಾಮಣ್ಣ. ಸಣ್ಣಗೆ ಉರಿಯುತ್ತಿದ್ದ ಲ್ಯಾಂಪನ್ನು ದೊಡ್ಡದು ಮಾಡಿ ಅವನ ಹಣೆಯ ಮೇಲೆ ಕೈಯಿಟ್ಟು ಹೇಳಿದಳು: ‘ಯಾಕೆ ಮಗು?’
‘ಎರಡು ಕಡೆ ತೊಡೆಸಂದೀಲಿ ಅಡಗಳಲೆ ಕಟ್ಟಿದೆ ಕಣಮ್ಮ, ತುಂಬಾ ನೋಯುತ್ತೆ.’

ಅವಳ ಎದೆ ತಕ್ಷಣ ಜಲ್ಲೆಂದಿತು. ಹಾಗಾದರೆ ಪಾರ್ವತಿಗೆ ಆಗಿರುವುದು ಸಾಮಾನ್ಯ ಅಡಗಳಲೆಯಲ್ಲ. ಇದೇನು ಪ್ಲೇಗಿನ ಗಡ್ಡೆಯೆ? ಆದರೆ ಸುತ್ತಮುತ್ತ ಎಲ್ಲೂ ಅದರ ಸುದ್ದಿ ಇಲ್ಲ. ಊರಿನಲ್ಲಿ ಇಲಿಯೂ ಬಿದ್ದಿಲ್ಲ. ಹೊದಿಕೆ ಸರಿಸಿ ರಾಮಣ್ಣನ ತೊಡೆಗೆ ಕೈ ಹಾಕಿ ನೋಡಿದಳು. ಅವನು ಸಂಕೋಚಪಟ್ಟನಾದರೂ ಜ್ವರದ ಮಂಪರಿನಲ್ಲಿ ಸುಮ್ಮನೆ ಮಲಗಿದ್ದ. ಎರಡು ತೊಡೆ ಸಂದಿಯಲ್ಲೂ ಒಂದೊಂದು ಹಲಸಿನ ಬೀಜದ ಗಾತ್ರಕ್ಕೆ ಊದಿಕೊಂಡಿತ್ತು. ಅವಳ ಕೈ ತಗಲುತ್ತಲೂ ‘ಹ್ಞಾ’ ಎಂದ. ದಿಕ್ಕು ತೋಚದಂತೆ ಆಗಿ ಅವಳು ಐದು ನಿಮಿಷ ಸುಮ್ಮನೆ ಕೂತುಬಿಟ್ಟಳು. ಅನಂತರ ಗಂಡನ ಹತ್ತಿರ ಬಂದು ಅವರ ಭುಜ ಅಲುಗಿಸಿ-‘ಇಲ್ನೋಡಿ, ಪಾರ್ವತಿ, ರಾಮಣ್ಣ, ಇಬ್ಬರಿಗೂ ಅಡಗಳಲೆ ಹಾಗಾಗಿದೆ. ಪ್ಲೇಗು ಗೀಗು ಇರ್‌ಭೌದು. ಸ್ವಲ್ಪ ಎದ್ದು ನೋಡಿ.’ ಇವಳು ಮೂರು ಸಲ ಅಲುಗಾಡಿಸಿ ಕೂಗಿದ ಮೇಲೆ-‘ನಾಳೆ ಬೆಳಿಗ್ಗೆ ನೋಡಿದ್ರಾತು. ನಂಗೆ ನಿದ್ದೆ ಬತ್ತಿದೆ’ ಎಂದು ಅವರು ಮುಸುಕು ಎಳೆದುಕೊಂಡರು. ಹೋಗಿ ಮಾದೇವಯ್ಯನವರನ್ನಾದರೂ ಕರೆದುಕೊಂಡು ಬರಬೇಕೆಂದು ಅವಳಿಗೆ ಎನಿಸಿತು. ಒಬ್ಬಳೇ ಹೋಗಲು ಏಕೋ ಭಯವಾಯಿತು. ಕತ್ತಲೆಂದರೆ ಅವಳು ಭಯಪಟ್ಟವಳಲ್ಲ. ಆದರೆ ಈಗ ಹೆದರಿಕೆಯಾಗುತ್ತಿದೆ. ಮಲಗಿದ್ದ ವಿಶ್ವನನ್ನು ಎಬ್ಬಿಸಿ, ‘ಮಗೂ, ಅಯ್ನೋರನ್ನ ಕರ್ಕಂಡ್ ಬರಬೇಕು. ಬಾ, ಹೋಗಾಣ’ ಎಂದಳು. ನಿದ್ದೆಗಣ್ಣಿನಿಂದಲೇ ಛಂಗನೆ ಎದ್ದು ನಿಂತು ಅವನು- ‘ನಾನೇ ಕರ್ಕಂಡ್ ಬತ್ತೀನಿ’ ಎಂದು ಬಾಗಿಲ ಹತ್ತಿರಕ್ಕೆ ಓಡಿ ಚಿಲಕ ತೆಗೆದು, ‘ಹೊರಗೆ ಕತ್ತಲೆ ಗೌಂ ಅನ್ನುತ್ತೆ. ತಡಿ ನಾನೂ ಬತ್ತೀನಿ’ ಎಂದು ಅವಳು ಹೇಳುವ ಮೊದಲೇ ಬಾಗಿಲು ತೆಗೆದುಕೊಂಡು ಹೊರಗೆ ಓಡಿದ. ನಡು ರಾತ್ರಿ ಕಳೆದು ಊರೆಲ್ಲ ಸದ್ದು ಮಾಡದೆ ಸತ್ತಂತೆ ಮಲಗಿತ್ತು.

ಸ್ವಲ್ಪ ಹೊತ್ತಿನಲ್ಲಿ ಅಯ್ಯನವರು ವಿಶ್ವನ ಕೈ ಹಿಡಿದುಕೊಂಡು ಬಂದರು. ಇಬ್ಬರು ಮಕ್ಕಳ ರೋಗವನ್ನೂ ವಿವರಿಸಿದ ನಂಜಮ್ಮ-‘ಇದೇನು ಪ್ಲೇಗೋ ಗೀಗೋ ನಂಗೆ ತಿಳಿಯಲಿಲ್ಲ. ಹೆದರಿಕೆಯಾಗುತ್ತೆ. ನೀವೇ ನೋಡಿ’ ಎಂದಳು.

ಅಯ್ಯನವರು ಇಬ್ಬರ ಕೈಗಳನ್ನೂ ಮುಟ್ಟಿ ನೋಡಿದರು. ರಾಮಣ್ಣನ ಗೆಡ್ಡೆಗಳ ಮೇಲೆ ಕೈ ಇಟ್ಟು ನೋಡಿದ ಮೇಲೆ-‘ಸಂಜೆನಾಗ ಶ್ಯಾನುಬಾಗ್ರು ಬಂದಿದ್ದಾಗ ಹುಡುಗರ ಕಾಯಿಲೆ ಏನೂ ಏಳ್ಳೇ ಇಲ್ಲ’ ಎಂದರು.
‘ಅದೆಲ್ಲ ಕಟ್ಕಂಡು ಅವರಿಗೇನು ಬೇಕು? ಈಗ ಇವ್ರಿಗೆ ಆಗಿರೋದೇನು?’
‘ನೆನ್ನೆ ಸಂಜೆನಾಗಲೇ ಗುಡೀಲಿ ಹ್ವರಕೆರೆ ಗುರುವಣ್ಣ ಕುರುಬರಹಟ್ಟಿ ಪುಟ್ಟಯ್ಯ ಮಾತಾಡ್ತಿದ್ರು. ಅವರ ಕೇರೀಲಿ ಇಲಿ ಬಿದ್ದಾವಂತೆ. ಎಲ್ಡು ದಿನವಾಯ್ತಂತೆ.’
ಜೀವ ಹಾರಿ ಹೋದಂತಾಗಿ ನಂಜಮ್ಮನ ಎದೆಯ ಬಡಿತ ಸ್ತಬ್ಧವಾಯಿತು. ಎರಡು ನಿಮಿಷ ಭ್ರಮೆ ಹಿಡಿದವಳಂತೆ ಕುಳಿತ ಅವಳು ಇದ್ದಕ್ಕಿದ್ದಹಾಗೆಯೇ ಬಿಕ್ಕಿಬಿಕ್ಕಿ ಅಳಲು ಪ್ರಾರಂಭಿಸಿದಳು. ‘ಅವ್ವಾ, ಸಮಾಧಾನ ತಂದ್ಕ. ನೀನೇ ಹಿಂಗ್ ಅತ್‌ಬುಟ್ರೆ ನೋಡ್ಕಳಾರ್ಯಾರು?’-ಅಯ್ಯನವರು ಸಮಾಧಾನ ಹೇಳಿದುದರಿಂದ ಅವಳ ಅಳು ನಿಲ್ಲಲಿಲ್ಲ. ‘ಅಯ್ನೋರೇ, ಹಾಳುಮುಂಡೆ ಪ್ಲೇಗು ಬಂದಮೇಲೆ ಯಾರು ಉಳೀತಾರೆ?’-ಎನ್ನುತ್ತಾ ಗಟ್ಟಿಯಾಗಿ ಅತ್ತುಬಿಟ್ಟಳು. ಅದು ರಾಮಣ್ಣನಿಗೆ ಕೇಳಿ, ಅವನೇ-‘ಅಮ್ಮಾ. ಔಸ್ತಿ ತಗಂಡ್ರೆ ಹುಷಾರಾಗುಲ್ವೆ? ಯಾಕೆ ಅಳ್ತೀಯಾ ಸುಮ್ನಿರು’ ಎಂದ ಅವಳಿಗೆ ಧೈರ್ಯ ಬಂದಂತೆ ಆಯಿತು. ಪಾರ್ವತಿಗೆ ಅಷ್ಟು ಸಹ ಮಾತನಾಡುವ ಶಕ್ತಿ ಇರಲಿಲ್ಲ.
ಅಯ್ಯನವರು ಎಂದರು: ‘ಪ್ಲೇಗು ಆಗಿದ್ರೂ ಏಟೋ ಜನ ಉಳಿದವ್ರೆ. ಒಂದ್ ಪಟಿಗ್ ಆಗಿ ಉಳುದ್ರೆ ಮತ್ತೆ ಆಗಾಕುಲ್ವಂತೆ.’

ಅವಳಿಗೆ ಸ್ವಲ್ಪ ಸಮಾಧಾನವೆನಿಸಿತು. ಹೌದು. ಅವಳ ಅಣ್ಣ ಕಲ್ಲೇಶನಿಗೆ ಪ್ಲೇಗು ಆಗಿತ್ತು. ಅವನು ಉಳಿದುಕೊಳ್ಳಲಿಲ್ಲವೆ?’ಎಂಬ ನೆನೆಪಾಗಿ ಆತಂಕವು ಇನ್ನೂ ಕಡಿಮೆಯಾಯಿತು. ಚೆನ್ನಿಗರಾಯರ ಗೊರಕೆಯನ್ನು ಬಿಟ್ಟರೆ ಎಲ್ಲವೂ ನಿಶ್ಯಬ್ಧವಾಗಿತ್ತು. ವಿಶ್ವ ಸುಮ್ಮನೆ ತನ್ನ ಹಾಸಿಗೆಯ ಮೇಳೆ ಕುಳಿತಿದ್ದ. ‘ನೀನ್ಯಾಕೆ ಕುಂತಿದೀಯಾ, ಮನಿಕ ಮಗ’- ಅಯ್ಯನವರೇ ಹೇಳಿ ಅವನನ್ನು ಮಲಗಿಸಿದರು. ಸ್ವಲ್ಪ ಹೊತ್ತಿನಲ್ಲಿ ರಾಮಣ್ಣನಿಗೂ ಮಂಪರು ಹೊತ್ತಿತು. ಈ ಸಮಯದಲ್ಲಿ ಅಯ್ಯನವರು ಎದ್ದು ತಮ್ಮ ಗುಡಿಗೆ ಹೋಗಲಾರರು. ಇಲ್ಲಿ ಕುಳಿತು ಏನು ಮಾತನಾಡುವುದಕ್ಕೂ ಯಾರಿಗೂ ತಿಳಿಯದು. ಆದರೆ ತಾವು ಸುಮ್ಮನೆ ಕೂತಿದ್ದರೂ ಸಾಕು., ಈ ಹೆಣ್ಣುಮಕ್ಕಳಿಗೆ ಒಂದು ಧೈರ್ಯ, ಸಮಾಧಾನವಿರುತ್ತದೆಂದು ಬಲ್ಲ ಅವರು ಇಲ್ಲಿಯೇ ಕುಳಿತರು. ಸ್ವಲ್ಪ ಹೊತ್ತಿನ ಮೇಲೆ ನಂಜಮ್ಮ ಹೇಳಿದಳು: ‘ಅಯ್ನೋರೇ, ರಾತ್ರೀಲಿ ಒಂದು ಕನಸು ಬಿತ್ತು. ಅದರಲ್ಲಿ ಅಮ್ಮನ ಗುಡೀಲಿ, ಅಮ್ಮನ ತೊಡೆ ಮೇಲೆ ಪಾರ್ವತಿ, ರಾಮಣ್ಣ, ಇಬ್ಬರೂ ಬರೀ ಮೈಲಿ ಮಲಗಿದ್ರು. ಅವರಿಗೆ ಒಂದು ಕಂಬಳೀನಾದ್ರೂ ಹೊದಿಸಾಣ ಅಂತ ನಾನು ಹೋದ್ರೆ ಹೊಸಲು ಒಳಗೆ ಹೋಗೂಕೇ ಆಗ್ಲಿಲ್ಲ. ಎದುರಿಗೆ ಗೋಡೆ ಇಲ್ಲ, ಕಲ್ಲಿಲ್ಲ. ಎಂಥದೋ ತಡದ ಹಾಗಾಯ್ತು. ಇದರ ಅರ್ಥವೇನು?’

‘ಹುಡುಗರಿಬ್ರೂ ಅಮ್ಮನ ತೊಡೆಮ್ಯಾಲೆ ಮನೀಕಂಡಿದ್ರು ಅಂದ್ರೆ ಅವಳ ದಯೆ ಚಂದಾಗೈತೆ ಅಂತ ಅಲ್ವ? ಈಗ ಆಗಿರಾದು ಅಮ್ಮುಂದೇ ಖಾಯ್ಲ. ಆದ್ರೂ ಅವ್ಳು ಕಾಪಾಡ್ತಾಳೆ ಅಂತ ಅರ್ಥ.’
ನಂಜಮ್ಮನ ಮನಸ್ಸು ಸಮಾಧಾನಗೊಂಡಿತು. ‘ಆದರೆ ನನ್ನ ಯಾಕೆ ಒಳಕ್ಕೆ ಬಿಡಲಿಲ್ಲ?’
ಅಯ್ಯನವರಿಗೆ ಉತ್ತರ ತಿಳಿಯಲಿಲ್ಲ. ದೇವರು ಕಾಪಾಡೋ ಮಕ್ಕಳ ತಾವ ಹೋಗೂಕ್ಕೆ ಮನುಷ್ಯರಿಗೆ ಏನು ಅಧಿಕಾರ ಅಂತಲಾ?-ಎಂಬ ಉತ್ತರ ಅವರ ಮನಸ್ಸಿನಲ್ಲಿ ಬಂದರೂ ಅವರು ಅದನ್ನು ಬಾಯಿಬಿಟ್ಟು ಹೇಳಲಿಲ್ಲ. ಅದರ ಬಗೆಗೆ ನಂಜಮ್ಮನೂ ಯೋಚಿಸತೊಡಗಿದಳು. ಏನೋ ಅಶುಭದ ಸೂಚನೆ ಮನಸ್ಸಿಗೆ ಕಾಣುತ್ತಿದ್ದರೂ ಅದನ್ನು ಸ್ವೀಕರಿಸಲು ಅಂತಃಕರಣವು ಒಪ್ಪದೆ, ಅವಳು ಅದನ್ನು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದಳು. ‘ನನ್ನ ತೊಡೇಮೇಲಿರೂ ಮಕ್ಕಳ ಮುಟ್ಟೂಕೆ ನಿನಗೇನು ಅಧಿಕಾರ? ನನ್ನ ಹತ್ತಿರ ಇರೂತನಕ ಅವು ಕ್ಷೇಮವಾಗಿಯೇ ಇರ್ತೂವೆ ಅಂತ ಅಲ್ವೆ ಅದರ ಅರ್ಥ?’
‘ಹೌದೌದು ಕಣವ್ವ.’
‘ಅಯ್ನೋರೆ, ಹಾಗಾದ್ರೆ ನಾವು ಇವ್ರಿಗೆ ಏನಾದ್ರೂ ಔಷಧ ತಂದು ಕುಡಿಸ್‌ಬ್ಯಾಡವೆ?’
‘ಕುಡಿಸ್ದೇ ಆಯ್ತದಾ?’
‘ನನ್ನ ತೊಡೇಮೇಲಿರೋ ಮಗೂಗೆ ನೀನ್ಯಾಕೆ ಔಷಧ ಕುಡುಸ್ದೆ ಅಂತ ಅಮ್ಮ ಸಿಟ್ಕಂಡ್ರೆ?’
ಅದೂ ಒಂದು ಸಮಸ್ಯೆಯೇ. ಔಷಧಿ ಕುಡಿಸಬೇಕೋ ಬೇಡವೋ ಎಂಬ ಪ್ರಶ್ನೆ ಸ್ವಲ್ಪ ಹೊತ್ತು ಅವರಿಬ್ಬರನ್ನೂ ಕಾಡಿತು. ಕೊನೆಗೆ ಅಯ್ಯನವರೇ ಹೇಳಿದರು: ‘ಅವ್ವ, ಕಜ್ಜಿ ಎದ್ದಾಗ ನಾಗಪ್ಪನ್ನ ಮಾಡಿದ್ರೆ ವಾಸಿ ಆಯ್ತಾ? ನೀನು ಹೋಗಿ ಸೂಜಿ ಚುಚ್ಚಿಸ್ಕಂಡು ಬರ್‍ಲಿಲ್ವಾ? ಈಗ್ಲೂ ಹಂಗೇ ಮಾಡು. ನಾಳೆ ದಿನವೇ ಡಾಕ್ಟರು ಕರೀಬೇಕು. ಇಲ್ದೆ ಇದ್ರೆ ಗಾಡಿ ಕಟ್ಕಂಡು ಕಂಬನಕೆರೆಗೆ ಹೋಗಬೇಕು.’

ಅದೇ ಸರಿ ಎಂದು ಅವಳು ನಿರ್ಧರಿಸಿದಳು. ತಕ್ಷಣವೇ ಕುಳುವಾಡಿಯನ್ನು ಕರೆದು ಒಂದು ಗಾಡಿಗೆ ಹೇಳಿಕಳಿಸಲೇ ಎಂದು ಕೇಳಿದುದಕೆ ಅಯ್ಯನವರು-‘ಈಟೊಂದ್ ತರ ಜ್ವರ ಬಂದಿರೋರನ್ನ ಗಾಡಿಮ್ಯಾಲೆ ಹೇರ್ಕಂಡು ಓಗಾದು ಅಂದ್ರೆ ನ್ಯಟ್ಟಗಲ್ಲ. ಡಾಕ್ಟ್ರುನ್ನೇ ಇಲ್ಲಿಗೆ ಕರ್ಸಬೇಕು. ಗಾಡಿ ಕಟ್ಟಿ ಕಳ್ಸಿ. ಬೇಕಾದ್ರೆ ನಾನು ಗಾಡಿ ಕಟ್ಟಿ ಓಗ್‌ಬತ್ತೀನಿ.’
ಕೋಳಿ ಕೂಗುವ ತನಕ ಸುಮ್ಮನೆ ಕೂತಿದ್ದು ನಂತರ ಅಯ್ಯನವರು ಹೋಗಿ ಕುಳವಾಡಿಯನ್ನು ಕರೆದು ತಂದರು. ಅವನು ಹೋಗಿ ಒಂದೂವರೆ ರೂಪಾಯಿ ಬಾಡಿಗೆಗೆ ಒಂದು ಗಾಡಿ ಗೊತ್ತುಮಾಡಿಕೊಂಡು ಬಂದ. ಹೊತ್ತು ಹುಟ್ಟುವ ಮೊದಲೇ ಅದರಲ್ಲಿ ಕೂತು ಅಯ್ಯನವರು ಕಂಬನಕೆರೆಗೆ ಹೋದರು.

ಬೆಳಗ್ಗೆ ಹೊತ್ತಿಗೆ ಇಬ್ಬರಿಗೂ ಜ್ವರ ಇನ್ನೂ ಏರಿತ್ತು. ಪಾರ್ವತಿಯ ಬಲತೊಡೆಯಲ್ಲಿ ಮಾತ್ರ ಆಗಿದ್ದ ಗೆಡ್ಡೆಯ ಜೊತೆಗೆ ಈಗ ಎರಡು ಕಂಕುಳುಗಳೂ ನೋಯಲು ಶುರುವಾಗಿದ್ದವು. ಮುಖವೆಲ್ಲ ಕೆದರಿ, ನೋಡಿದರೆ ಭಯವಾಗುವಂತಹ ಮಾರಿಯ ಮುಖದಂತೆ ಆಗಿತ್ತು. ಅರ್ಧ ಎಚ್ಚರ, ಅರ್ಧ ನಿದ್ರೆಯ ಸ್ಥಿತಿಯಲ್ಲಿದ್ದಂತೆ ಬುದ್ಧಿ ಮಂಕಾಗಿತ್ತು. ಬಿಸಿಯಾಗಿ ಗಂಜಿ ಕುಡಿಸಲೆಂದು ಹತ್ತಿರ ಬಂದು ಅಲುಗಿಸಿದಾಗ ಜ್ಞಾನ ತಂದುಕೊಂಡು ಪಾರ್ವತಿ ಹೇಳಿದಳು: ‘ಕೈ ಕಾಲಿನಲ್ಲಿ ಸುಸ್ತಾಗುತ್ತೆ.’
‘ಜ್ವರಕ್ಕೆ ಹಾಗಾಗುತ್ತೆ ಮಗು. ಒಂದಿಷ್ಟು ಗಂಜಿ ಕುಡಿ, ಸರಿಯಾಗುತ್ತೆ.’
‘ಬ್ಯಾಡಾ…..’
‘ಇಲ್ದಿದ್ರೆ ಶರೀರದಲ್ಲಿ ಶಕ್ತಿ ಇರುಲ್ಲ. ಕುಡಿ, ನನ್ನಮ್ಮ.’
ತಾಯಿಯ ಮಾತಿಗೆ ಎದುರು ಹೇಳದೆ ಅವಳು, ಬಾಯಿಗೆ ಬಿದ್ದದ್ದನ್ನು ನುಂಗಿ ಮಲಗಿ ಕಣ್ಣು ಮುಚ್ಚಿದಳು. ರಾಮಣ್ಣನನ್ನು ಎಬ್ಬಿಸಿದಾಗ ಅವನಿಗೆ ಪೂರ್ತಿ ಪ್ರಜ್ಞೆ ಇತ್ತು. ಆವನೇ ‘ಅಮ್ಮ, ಡಾಕ್ಟರು ಎಷ್ಟು ಹೊತ್ತಿಗೆ ಬತ್ತಾರೆ?’ ಎಂದು ಕೇಳಿದ.
‘ಒಂಬತ್ತು ಹತ್ತು ಗಂಟೆ ಹೊತ್ತಿಗೆ ಬರಬೌದು ಮಗು.’
‘ಬತ್ತಾರೋ ಇಲ್ವೊ! ಪ್ಲೇಗು ಆದ ಊರಿಗೆ ಬರುಕ್ಕೆ ಡಾಕ್ಟರು ಹೆದರ್‍ಕತ್ತಾರೆ. ಈಗ ಇರೋರು ಮೊದಲಿದ್ದೋರಲ್ಲ.’
‘ನೋಡಾಣ ತಡಿ.’

ಅಮ್ಮ ಹೇಳಿದಂತೆ ಅವನು ಗಂಜಿ ಕುಡಿದು ಮಲಗಿಕೊಂಡ. ಅವನ ಎರಡು ಗೆಡ್ಡೆಗಳೂ ಈಗ ಇನ್ನೂ ಹೆಚ್ಚಾಗಿ ನೋಯುತ್ತಿದ್ದವು. ನಡುನಡುವೆ ಅದನ್ನು ತಡೆಯಲಾರದೆ ‘ಆ ಆ, ಅಮ್ಮ’ ಎನ್ನುತ್ತಿದ್ದ. ಬೆಳಿಗ್ಗೆ ಎದ್ದು ಏರಿಯ ಕಡೆ ಹೋದ ಚೆನ್ನಿಗರಾಯರು ಇನ್ನೂ ಮನೆಗೆ ಬಂದಿರಲಿಲ್ಲ. ವಿಶ್ವನಿಗೆ ಏನು ಮಾಡುವುದಕ್ಕೂ ತೋಚದು . ಸುಮ್ಮನೆ ಅಮ್ಮನ ಹಿಂದೆ ಹಿಂದೆ ಅಡಿಗೆಮನೆಯಿಂದ ನಡುಮನೆಗೆ ಓಡಾಡುತ್ತಿದ್ದ. ಅಷ್ಟರಲ್ಲಿ, ಸಾರುವ ಬೇಲೂರು ತಮ್ಮಟೆ ಬಡಿದುಕೊಂಡು ಅದೇನೋ ಸಾರುವ ಸದ್ದಾಯಿತು. ನಂಜಮ್ಮ ಜಗುಲಿಯ ಹತ್ತಿರ ಹೋಗಿ ನಿಂತಳು. ದೂರದಿಂದ ಡಮ್ಮ ಡಕ್ಕ ಡಮ್ಮ ಡಕ್ಕ ತಮ್ಮಟೆ ಬಡಿಯುತ್ತಾ ಬಂದ ಬೇಲೂರು ಇವರ ಮನೆಯ ಮೂಲೆಯಲ್ಲಿ ನಿಂತು ತಮ್ಮಟೆ ನಿಲ್ಲಿಸಿ ಗಟ್ಟಿಯಾಗಿ – ‘ಊರಿಗೆ ಪಿಳೇಗಿನಮ್ಮ ಬಂದೈತೆ. ಯಲ್ಲಾ ಊರು ಬಿಟ್ಟು ಶೆಡ್ಡು ಆಕ್ಯಂಡ್ ವಲ್ಡಬೇಕು ಅಂತ ಪಂಚಾಯ್ತಿ ಮಾಡ್ಯವ್ರೆ. ಬರಾ ಸುಕ್ರಾರದೊಳಗೆ ಯಲ್ಲಾ ಊರ್ ಬುಡಬೇಕಂತೋ, ಊರ ಬುಡಬೇಕಂತೋ ಸುಕ್ರಾರದೊಳಗೇ…..’ಎಂದು ಕೂಗಿ, ಡಮ್ಮ ಡಕ್ಕ ಡಮ್ಮ ಡಕ್ಕ ಬಡಿದುಕೊಂಡು ಮುಂದೆ ಹೋದ.

ಊರಿಗೆ ಪ್ಲೇಗು ಬಂದಿರುವ ವಿಷಯ ನಂಜಮ್ಮನಿಗೆ ನಡುರಾತ್ರಿಯ ತನಕ ಗೊತ್ತಿಲ್ಲ. ಬಹುಶಃ ತನ್ನ ಮನೆಗೇ ಅದು ಮೊದಲು ಬಂದಿರುವುದು. ಗ್ರಾಮದೇವತೆ ಹರಕೆ ಪೂರೈಸುಕ್ಕೆ ಅಂತ ಪಾರ್ವತೀನ ಕರ್ಕಂಡು ಹೋದೆ. ಹೊಸದಾಗಿ ಮದುವೆಯಾದ ಹೆಣ್ಣು ಹುಡುಗಿ ಅಷ್ಟು ಚೆನ್ನಾಗಿತ್ತು. ಅಮ್ಮನಿಗೆ ಅವಳ ಮೇಲೇ ಮೊದಲ ಕಣ್ಣು ಬಿತ್ತೋ ಏನೋ! ಆದರೆ ಗ್ರಾಮದೇವತೆ ಕಾಳಮ್ಮ, ಪ್ಲೇಗಿನ ಸುಂಕ್ಲಮ್ಮ ಬ್ಯಾರೆ ಬ್ಯಾರೆ ಅಲ್ವೆ? ಊರಿಗೆ ಸುಂಕ್ಲಮ್ಮ ಮಾರಿ ಬರದ ಹಾಗೆ ತಡಿಯುಕ್ಕೆ ತಾನೇ ಗ್ರಾಮದೇವತೆ ಇರೂದು? ಊರಲ್ಲಿ ಎಲ್ಲರಿಗಿಂತ ಮೊದಲು ಪಾರ್ವತಿಗೆ ಯಾಕೆ ಬಂತು? ಅವಳ ಹಿಂದೆಯೇ, ಅವಳ ಬೆನ್ನಲ್ಲಿ ಬಿದ್ದ ತಮ್ಮ ರಾಮಣ್ಣನಿಗೆ ಬಂತು. ಇದೆಲ್ಲ ಏನು ನಿಜವೋ ಸುಳ್ಳೋ? ಹಾಳು ಪ್ಲೇಗು ಎರಡು ವರ್ಷಕ್ಕೆ ಮೂರು ವರ್ಷಕ್ಕೆ ಒಂದೊಂದು ಸಲ ಯಾಕೆ ಬರ್ತಿರುತ್ತೆ? ಇದನ್ನ ವಾಸಿ ಮಾಡುಕ್ಕೆ ಔಸ್ತಿಯೇ ಇಲ್ವೆ?-ಈ ಕೊನೆಯ ಪ್ರಶ್ನೆಯ ಸಂಗಡವೇ?, ‘ಔಸ್ತಿ ಖಂಡಿತ ಇದೆ. ಡಾಕ್ಟ್ರು ಬಂದ್ರೆ ತಕ್ಷಣ ವಾಸಿ ಮಾಡ್ತಾರೆ. ನಾವು ಬೇಗ ಶೆಡ್ಡು ಹಾಕ್ಕಂಡು ಊರು ಬಿಟ್ಟು ಹೋಗಿಬಿಡಾಣ; ಎಂಬ ತೀರ್ಮಾನ ಮಾಡಿಕೊಂಡು ಧೈರ್ಯ ತಂದುಕೊಳ್ಳುತ್ತಿದ್ದಳು.

ಹನ್ನೊಂದು ಗಂಟೆಯ ಹೊತ್ತಿಗೆ ಅಯ್ಯನವರ ಗಾಡಿ ಹಿಂತಿರುಗಿತು. ಡಾಕ್ಟರು ಸಂಗಡ ಬರಲಿಲ್ಲ. ‘ಕಂಬನಕೆರೆ ಈ ಕಡೇಲೂ ಇಲಿ ಬೀಳ್ತಾವಂತೆ. ಅಲ್ಲೆಲ್ಲ ಇನಾಕ್ಲೇಶಿನ್ ಮಾಡ್ತಾ ಅವ್ರಂತೆ ಡಾಕ್ಟ್ರು. ಈಗ ಬರಕ್ ಆಗಾಕುಲ್ಲ, ಖಾಯ್ಲಾದೋರ್ನೆ ಕರ್ಕಂಡ್‌ಬಲ್ಲಿ ಅಂದ್ರು.’
‘ಈ ಜ್ವರದಲ್ಲಿರೋರ್ನ ಹ್ಯಾಗೆ ಕರ್ಕಂಡು ಹೋಗಾದು ಅಯ್ನೋರೆ?’
‘ಗಾಡಿಗೆ ಹ್ಯಂಗೂ ಕಮಾನೈತೆ. ಮೆತ್ತಗೆ ನೆಲ್ಲುಹುಲ್ಲು ಆಕಿ, ಮ್ಯಾಲೆ ಹಾಸಿಗೆ ಹಾಕಿ ಮನಗಿಸ್ಕಂಡು ಓಗಾನ. ಇನ್ನೇನ್ ಮಾಡಾಕಾಗ್ತೈತೆ?’

ನಂಜಮ್ಮ ತಡ ಮಾಡಲಿಲ್ಲ. ಗಾಡಿಯವನು ಹುಲ್ಲು ತಂದು ಹರವಿದ. ಅವಳು ಅದರ ಮೇಲೆ ಹಾಸಿಗೆ ಹಾಕಿದಳು. ಇನ್ನೊಂದು ಸಲ ಗಂಜಿ ಕಾಯಿಸಿ ಇಬ್ಬರಿಗೂ ಕುಡಿಸಿದಳು. ಗಾಡಿಯವನು, ಅಯ್ಯನವರು, ಇಬ್ಬರೂ ಕೂಡಿ ಒಬ್ಬೊಬ್ಬರನ್ನಾಗಿ ಕರೆದುಕೊಂಡು ಹೋಗಿ ಗಾಡಿಯಲ್ಲಿ ಮಲಗಿಸಿ ಕಂಬಳಿ ಹೊದೆಸಿದರು. ತಾವೂ ಜೊತೆಯಲ್ಲಿ ಬರುವುದೋ ಬ್ಯಾಡವೋ ಎಂದು ಸ್ವಲ್ಪ ಹೊತ್ತು ಅನುಮಾನಿಸುತ್ತಿದ್ದ ಚೆನ್ನಿಗರಾಯರು ಕೊನೆಗೆ ಹೊರಟರು. ನಂಜಮ್ಮ ವಿಶ್ವನನ್ನು ಮೇಷ್ಟರ ಮನೆಯಲ್ಲಿ ಇರುವಂತೆ ಹೇಳಿ ಗಾಡಿಯ ಮುಂದುಗಡೆ ಇಬ್ಬರು ರೋಗಿ ಮಕ್ಕಳ ತಲೆಯ ಹತ್ತಿರ ಕುಳಿತಳು. ಅಯ್ಯನವರು, ಚೆನ್ನಿಗರಾಯರು ಗಾಡಿಯ ಹಿಂದೆ ನಡೆದು ಹೊರಟರು.

ಜೋಲಾಟವಾಡುತ್ತಾ ಕುತುಕುಲು ದಾರಿಯಲ್ಲಿ ಎದ್ದು ಇಳಿಯುತ್ತಾ ಕಬ್ಬಳ್ಳಿಬುಗವನ್ನು ಏರಿ ಇಳಿದು, ಗೌಡನ ಕೊಪ್ಪಲನ್ನು ಬಳಸಿ ಪಾಪಾಸುಕಳ್ಳಿ ಈಣಿಯಲ್ಲಿ ಸಾಗಿ ಗಾಡಿ ಕಂಬನಕೆರೆ ತಲುಪುವ ಹೊತ್ತಿಗೆ ಮಧ್ಯಾಹ್ನ ಒಂದು ಗಂಟೆ ಆಗಿತ್ತು. ಡಾಕ್ಟರು ಅಷ್ಟರಲ್ಲಿ ಮನೆಗೆ ಹೋಗಿದ್ದರು. ಗಾಡಿಯನ್ನು ಆಸ್ಪತ್ರೆಯ ಮುಂದೆ ನಿಲ್ಲಿಸಿ, ಮಕ್ಕಳನ್ನು ನೋಡಿಕೊಳ್ಳುವಂತೆ ಚೆನ್ನಿಗರಾಯರಿಗೆ ಹೇಳಿ ಅಯ್ಯನವರೊಡನೆ ನಂಜಮ್ಮ ಡಾಕ್ಟರ ಮನೆಗೇ ಹೋದಳು. ಊಟ ಮಾಡಿ ವಿಶ್ರಮಿಸಿಕೊಳ್ಳುತ್ತಿದ್ದ ಅವರು ಮೊದಲು ಸ್ವಲ್ಪ ಅಸಮಧಾನಪಟ್ಟುಕೊಂಡರೂ, ಅನಂತರ ಬೀಗದ ಕೈ ತೆಗೆದುಕೊಂಡು ಆಸ್ಪತ್ರೆಗೆ ಬಂದರು. ರೋಗಿಗಳನ್ನು ಗಾಡಿಯ ಮೇಲೆಯೇ ಪರೀಕ್ಷಿಸಿ ಕೇಳಿದರು: ‘ರೋಗ ಇಷ್ಟೊಂದು ಬಲಿಯೂತನಕ ಯಾಕೆ ಸುಮ್ನಿದ್ರಿ?’
‘ನಮಗೆ ಗೊತ್ತಾಗ್ಲೇ ಇಲ್ಲ ಸ್ವಾಮಿ. ಗೆಡ್ಡೆ ಕಾಣಿಸ್ಕಂಡುದ್ದೇ ನೆನ್ನೆ ರಾತ್ರಿ. ಬರೀ ಚಳಿಜ್ವರ ಅಂತಲೇ ತಿಳ್ಕಂಡಿದ್ವು.’
‘ಈಗ ಇನಾಕ್ಯುಲೇಶನ್ ಮಾಡಬಾರದು . ಔಷಧಿ ಕೊಡ್ತೀನಿ. ತಗಂಡು ಊರಿಗೆ ಹೋಗಿ ಶೀಶಿ ತಂದಿದೀರಾ?’
‘ಇಲ್ಲ ಸ್ವಾಮಿ. ನಮ್ಗೆ ಏನೂ ಗೊತ್ತಿರಲಿಲ್ಲ.’

‘ಆಸ್ಪತ್ರೆ ಅಂದ ಮೇಲೆ ಶೀಶಿ ಇಲ್ದೆ ಬಂದ್ರೆ ಏನು ಮಾಡಬೇಕು?’-ಎಂದು ಕೇಳಿದ ಅವರು ಆಸ್ಪತ್ರೆಯ ಬಾಗಿಲು ತೆಗೆದು ಒಂದು ಖಾಲಿ ಶೀಶೆಯ ತುಂಬ ಔಷಧಿ ತುಂಬಿ ಕೊಟ್ಟು, ‘ಇಬ್ಬರಿಗೂ ದಿನಕ್ಕೆ ಮೂರು ಸಲದಂತೆ ಕುಡಿಸಿ. ಇವತ್ತು ನಾಳೆಗೆ ಆಗುತ್ತೆ ನಾಡಿದ್ದು ಮತ್ತೆ ಬನ್ನಿ’ ಎಂದರು.
ಅವರು ಮತ್ತೆ ಏನೂ ಹೇಳಲಿಲ್ಲ. ಇವರಿಗೆ ಏನಾದರೂ ಕೇಳಬೇಕೆಂದು ತಿಳಿಯಲೂ ಇಲ್ಲ. ಸರಿ, ಗಾಡಿಯ ಕೊರಳೆತ್ತಿ ಊರ ಕಡೆಗೆ ಹೊರಟರು. ಮತ್ತೆ ಕುತುಕಲಾಡುತ್ತಾ ಊರು ಸೇರುವ ಹೊತ್ತಿಗೆ ಸಂಜೆ ನಾಲ್ಕೂವರೆಯ ಸಮಯ. ಮನೆಗೆ ಬಂದು ನೋಡಿದರೆ ವಿಶ್ವ ಮೇಷ್ಟರ ಮನೆಗೆ ಹೋಗಿರಲಿಲ್ಲ. ಬರಿಯ ಬಾಗಿಲು ತೆಗೆದುಕೊಂಡು ಮನೆಯಲ್ಲಿ ಒಂದು ಚಾಪೆಯ ಮೇಲೆ ಮಲಗಿದ್ದ. ಬೆಳಿಗ್ಗೆ ಅಮ್ಮ ಮಾಡಿಕೊಟ್ಟಿದ್ದ ಕೆಂಡ್-ರೊಟ್ಟಿ ಬಿಟ್ಟರೆ ಅವನ ಹೊಟ್ಟೆಗೆ ಏನೂ ಇರಲಿಲ್ಲ. ಅಲ್ಲದೆ ಅವನ ಮೈ ಕೈ ಸಹ ಕತ್ತರಿಸಿದಂತೆ ಆಗುತ್ತಿತ್ತು. ಸ್ವಲ್ಪ ಮಟ್ಟಿಗೆ ಜ್ವರ ತುಂಬಿಕೊಳ್ಳುತ್ತಿತ್ತು. ಕಣ್ಣು ಮುಖಗಳನ್ನು ನೋಡಿಯೇ ನಂಜಮ್ಮ ಓಡಿ ಬಂದು ಹಣೆ ಮುಟ್ಟಿ ಪರೀಕ್ಷಿಸಿದಳು. ಅವನಿಗೂ ರೋಗ ತಗುಲಿದೆ. ಕೂತಂತೆಯೇ ಅವನ ಮುಖವನ್ನು ತನ್ನ ಎದೆಯಲ್ಲಿ ಹುದುಗಿಸಿ ತಬ್ಬಿಕೊಂಡು ಗಟ್ಟಿಯಾಗಿ ಅಳಲು ತೊಡಗಿದಳು: ‘ಅಯ್ನೋರೇ, ಈ ಹಾಳು ಮಾರಿ ನನ್ನ ಎಲ್ಲ ಮಕ್ಳುನ್ನೂ ಕಿತ್ಕಬೇಕು ಅಂತ ಬಂದಿದಾಳೆ. ಇಲ್ಲಿ ನೋಡಿ, ವಿಶ್ವನಿಗೂ ಜ್ವರ ಬಂದಿದೆ.’

ಪಾರ್ವತಿ, ರಾಮಣ್ಣ, ಇಬ್ಬರೂ ಗಾಡಿಯ ಮೇಲೆಯೇ ಇದ್ದರು. ಹೋಗುತ್ತಾ ಬರುತ್ತಾ ಒಟ್ಟು ಹತ್ತು ಮೈಲಿ ಕಂತ್ರಿರಸ್ತೆಯ ಗಾಡಿ ಪ್ರಯಾಣಕ್ಕೆ ಸುಸ್ತಾಗಿ, ಇಬ್ಬರೂ ಅರ್ಧಕ್ಕಿಂತ ಹೆಚ್ಚಾಗಿ ಪ್ರಜ್ಞೆ ಕಳೆದುಕೊಂಡಿದ್ದರು. ಇಬ್ಬರೂ ಸೇರಿ ಅವರನ್ನು ತಂದು ಒಳಗೆ ಮಲಗಿಸಿದ ಮೇಲೆ ಅಯ್ಯನವರು ಎಂದರು: ‘ಅವ್ವಾ, ನೀನು ಇವ್ರಿಬ್ರುನ್ನೂ ನೋಡ್ಕ. ಈ ಎತ್ತು ಸೋತು ಹೋಗಿವೆ. ನಾನು ಬ್ಯಾರೆ ಗಾಡಿ ಹೂಡಿಸ್ಕಂಡಿ ವಿಶ್ವಣ್ಣನ್ನ ಕರ್ಕಂಡ್, ಮತ್ತೆ ಕಂಬನಕೆರೆಗೆ ಹೋಯ್ತೀನಿ. ಇವ್ನಿಗಿನ್ನೂ ಕಾಯ್ಲ ಬಲಿತಿಲ್ಲ. ಈಗಲೇ ಹೋಗ್‌ಬೇಕು.’
ಅದಕ್ಕೆ ಬೇರೆ ಸಲಹೆ ಹೇಳಲು ಅವಳಿಗೆ ತಿಳಿಯಲಿಲ್ಲ. ಅಯ್ಯನವರು ಗುಡಿಗೆ ಹೋಗಿ, ತಮ್ಮ ಪೆಟ್ಟಿಗೆಯಲ್ಲಿದ್ದ ದುಡ್ಡೆಲ್ಲವನ್ನೂ ತೆಗೆದುಕೊಂಡರು. ಇಲ್ಲಿಗೆ ಬಂದು, ನಂಜಮ್ಮನಿಗೆ ಬೇಕಾದರೆ ಇರಲೆಂದು ಹತ್ತು ರೂಪಾಯಿ ಕೊಟ್ಟು, ಉಳಿದ ಇಪ್ಪತ್ತು ರೂಪಾಯಿಯಷ್ಟನ್ನು ತಮ್ಮ ಅಂಗಿಯ ಜೇಬಿಗೆ ಹಾಕಿಕೊಂಡರು. ಅಷ್ಟರಲ್ಲಿ ಮನೆಗೆ ಹೋಗಿ ಮುದ್ದೆ ಉಂಡು ಗಾಡಿಯವನು ಬೇರೊಬ್ಬನಿಂದ ಬೇರೆ ಜೊತೆ ಎತ್ತುಗಳನ್ನು ತಂದ. ಅದೇ ಗಾಡಿಗೆ ಬೇರೆ ಹಾಸಿಗೆ ಹಾಕಿ ಅದರ ಮೇಲೆ ವಿಶ್ವನನ್ನು ಮಲಗಿಸಿಕೊಂಡು ಜೊತೆಗೆ ತಾವೂ ಕುಳಿತು ಅಯ್ಯನವರು ಹೊರಟರು.
ಅವರು ಕಂಬನಕೆರೆ ಮುಟ್ಟುವ ಹೊತ್ತಿಗೆ ರಾತ್ರಿ ಕತ್ತಲಾಗಿತ್ತು. ಡಾಕ್ಟರ ಮನೆಯ ಹತ್ತಿರಕ್ಕೆ ಗಾಡಿ ಹೊಡೆಸಿದ ಅವರು ಒಳಗೆ ಹೋಗಿ ಕೇಳಿದುದಕ್ಕೆ ಹೊರಗೆ ಬಂದ ಡಾಕ್ಟರು ಎಂದರು: ‘ಹೀಗೆ ಪ್ಲೇಗಾದ ರೋಗಿಗಳನ್ನು ಯಾಕೆ ಊರೊಳಕ್ಕೆ ಕರ್ಕಂಡ್ ಬಂದ್ರಿ?’
‘ಆಸ್ಪತ್ರೆ ತಾವ ನೀವಿರ್ಲಿಲ್ಲ ಬುದ್ದಿ .’
‘ಹಗಲು ರಾತ್ರಿ ನಾನು ಅಲ್ಲೇ ಇರಬೇಕೇನು? ಲೋ, ಕರಿಯಾ, ನೋಡು, ಆಸ್ಪತ್ರೆಗೆ ಹೋಗಿ ಬಾಗಿಲು ತೆಗೆದು, ಮೇಜಿನ ಮೇಲಿರೋ ದೊಡ್ಡ ಶೀಶೇಲಿ ಬಲಗಡೆಯಿಂದ ಎರಡನೇದರಲ್ಲಿ ಇವರಿಗೆ ಮೂರು ಔನ್ಸ್ ಕೊಡು’-ಎಂದು ಜವಾನನಿಗೆ ಹೇಳಿ ಒಳಗೆ ಹೋಗಿ ಬಿಟ್ಟರು.
ಇವರ ಜೊತೆ ಆಸ್ಪತ್ರೆಯ ತನಕ ಬಂದ ಕರಿಯನಿಗೆ ಅಯ್ಯನವರ ಕಾವಿ ಬಟ್ಟೆ ಕಂಡು ಭಕ್ತಿ ಹುಟ್ಟಿರಬೇಕು: ‘ಅಯ್ಯಾರೇ, ಈ ಔಸ್ತೀಲಿ ಏನೂ ವಾಸಿಯಾಗಾಕಿಲ್ಲ. ತಿಪಟೂರಿನಾಗೆ ಹೇಮಾದಿ ಪಾನಕ ಅಂತ ಸಿಕ್ತೈತೆ. ಮೂರು ರೂಪಾಯಿಗೆ ಒಂದು ಬಾಟ್ಲಿ. ಯಂಗ್‌ಟಾಚಲಶೆಟ್ರ ಅಂಗ್ಡೀಲಿ ಸಿಕ್ತೈತೆ. ಪ್ಯಾಟೆ ಬೀದೀಲಿ ವಾಸದ ಮನೆ ಮುಂದ್ಗಡೆಯೇ ಅಂಗ್ಡಿ. ಈ ಉಡುಗುಂಗೆ ಕುಡ್ಸಿ. ಕಾಯ್ಲಾ ಇನ್ನೂ ರೇಗಿಲ್ಲ ವಾಸಿಯಾಗ್ತೈತೆ.’
‘ಡಾಕ್ಟ್ರು ಹಂಗೆ ಏಳಿದ್ರಲ್ಲಣ್ಣ.’
‘ಅವ್ರು ಏಳ್ತಾರೆ. ನೀವು ನಾನ್ ಏಳ್ದಾಂಗ್ ಮಾಡಿ. ಬೇಕಾದ್ರೆ ಈ ನೀರ್ನೂ ಕೊಡ್ತೀನಿ. ಇದ್ರಿಂದ ಗುಣವಿಲ್ಲ.’

ತಕ್ಷಣ ತಿಪಟೂರಿಗೆ ಹೋಗಬೇಕೆಂದು ಅಯ್ಯನವರು ನಿರ್ಧರಿಸಿದರು. ಗಾಡಿಯವನು ಹಿಂದು ಮುಂದು ನೋಡಿದ. ‘ಲೇ, ಮನುಸ್ರ ಜೀವ ಹೋಗೂವಾಗ ಹಿಂದ್ಲೇಟು ಹ್ವಡೀಬ್ಯಾಡ್ದು. ನಿಂಗೂ ಮನ್ಲಿ ಮಕ್ಳು ಮರಿ ಅವೆ. ನೆಪ್ನಾಗ್ ಮಡಿಕ;-ಎಂದು ಅಯ್ಯನವರು ಹೇಳಿದಮೇಲೆ, ಭಯ, ದಾಕ್ಷಿಣ್ಯ, ಮತ್ತು ಒಳ್ಳೆಯತನಗಳಿಂದ ಕೂಡಿ ಅವನು ಒಪ್ಪಿದ. ಕಂಬನಕೆರೆಯಿಂದ ತಿಪಟೂರಿಗೆ ನೇರವಾದ ರಸ್ತೆ. ಮೋಟಾರು ಸಹ ಹೋಗುತ್ತೆ. ಹತ್ತು ಹನ್ನೊಂದು ಮೈಲಿಯ ದೂರ. ಹುಡುಗನಿಗೆ ಹಸಿವಾಗುತ್ತದೆಂದು ಅಯ್ಯನವರು ಒಂದು ಪೊಟ್ಟಣ ಬಿಸ್ಕತ್ತು ಕೊಂಡು ಜೊತೆಯಲ್ಲಿ ಇಟ್ಟುಕೊಂಡರು. ಗಾಡಿ ಕಟ್ಟಿಸಿ ತಕ್ಷಣ ಹೊರಟರು.

ನಡುರಾತ್ರಿ ಕಳೆಯುವ ಹೊತ್ತಿಗೆ ಗಾಡಿ ತಿಪಟೂರು ಮುಟ್ಟಿತು. ವೆಂಕಟಾಚಲಶೆಟ್ಟರ ಅಂಗಡಿ ಅಯ್ಯನವರಿಗೂ ಗೊತ್ತು. ಈ ಹೊತ್ತಿನಲ್ಲಿ ಬಾಗಿಲು ಹಾಕಿರುತ್ತೆ ನಿಜ. ಆದರೆ ಶೆಟ್ಟರ ವಾಸ, ಅಂಗಡಿ, ಎರಡೂ ಒಂದೇ ಮನೆ ಎಂಬ ನೆನಪಾಗಿ ಅವರು ಹೋಗಿ ಗಾಡಿಯ ಕೊರಳು ಇಳುಕಿ ಬಾಗಿಲು ಬಡಿದರು. ಎಚ್ಚೆತ್ತು ತಾವೇ ಹೊರಗೆ ಬಂದ ಶೆಟ್ಟರು, ಇವರು ಹೇಳಿದುದನ್ನು ಕೇಳಿ ಹೇಳಿದರು: ‘ಹೇಮಾದಿ ಪಾನಕ ಒಂದೇ ಆಯುರ್ವೇದದಲ್ಲಿರೋ ಔಷಧ. ನಮ್ಮದು ಸೀದಾ ಮದರಾಸು ವೆಂಕಟಾಚಾರ್ಲು ಕಂಪನಿಯಿಂದ ತರಿಸೂ ಔಷಧ. ಖಾಯ್ಲ ರೇಗುವ ಮೊದಲೇ ಕೊಟ್ರೆ ಗುಣ. ರೇಗಿದ ಮ್ಯಾಲೆ ಕೆಂದಬೌದು. ಕಳಚಬೌದು. ನಿಮಗೆಷ್ಟು ಬಾಟ್ಲು ಬೇಕು?’
‘ಒಂದು ಸಲ ಕಾಯಿಲೆಯಾದೋರಿಗೆ ಎಷ್ಟು ಸಲ ಕುಡಿಸ್ಬೇಕು?’
‘ಸಲಕ್ಕೆ ನಾಕು ಚಮ್ಚದ ಹಾಗೆ ದಿನಕ್ಕೆ ನಾಕು ಸಲ. ಒಂದು ಬಾಟ್ಲಿ ಮೂರು ದಿನಕ್ಕೆ ಆಗುತ್ತೆ. ಮೂರು ರೂಪಾಯಿಗೆ ಬಾಟ್ಲು.’

ಅಯ್ಯನವರ ಹತ್ತಿರ ಇಪ್ಪತ್ತು ರೂಪಾಯಿ ಇತ್ತು. ಹದಿನೆಂಟು ರೂಪಾಯಿ ತೆಗೆದುಕೊಂಡು ಒಟ್ಟು ಆರು ಶೀಶೆ ಔಷಧಿ ಕೊಟ್ಟಮೇಲೆ ಶೆಟ್ಟರು ಹೇಳಿದರು: ‘ಹುಡುಗನಿಗೆ ಈಗಲೇ ನಾಕು ಚಮ್ಚ ಕುಡಿಸಿ. ಅದೇನು ಜೇನುತುಪ್ಪದ ಹಾಗೆ ಸೀಯಾಗಿರುತ್ತೆ. ಪ್ಲೇಗಿರೂ ಊರಿನೊಳಕ್ಕೆ ಮಾತ್ರ ಕರ್ಕಂಡು ಹೋಗ್‌ಬಾರ್‍ದು. ರೋಗ ಇರೂ ಮನೆಗೂ ಹೋಗ್‌ಕೂಡ್ದು. ಎಲ್ಲಾದ್ರೂ ಊರ ಹೊರಗೇ ಇಡ್‌ಬೇಕು.’

ಇಷ್ಟು ಹೇಳಿ ಶೆಟ್ಟರು ಒಳಗೆ ಹೋಗಿ ಬಾಗಿಲು ಹಾಕಿಕೊಂಡು ಮಲಗಿದರು. ತಕ್ಷಣ ಗಾಡಿ ಕಟ್ಟಲು ಎತ್ತುಗಳು ಸೋತಿದ್ದವು. ಅಲ್ಲದೆ ಅಯ್ಯನವರು ಮತ್ತು ಗಾಡಿಯಾಳಿಗೂ ಸುಸ್ತಾಗಿತ್ತು. ಈ ಹೊತ್ತಿನಲ್ಲಿ ಹೊಟ್ಟೆಗೆ ಏನಾದರೂ ಸಿಕ್ಕಬೇಕಾದರೆ ರೈಲ್ವೆಸ್ಟೇಷನ್ ಹೋಟೆಲಿನಲ್ಲಿ ಮಾತ್ರವೇ. ಗಾಡಿಯನ್ನು ಅಲ್ಲಿಗೆ ಹೊಡೆದು ಒಂದು ಬಟ್ಟಲು ಇಸಿದುಕೊಂಡು ಮೊದಲು ವಿಶ್ವನಿಗೆ ಔಷಧಿ, ಮೇಲೆ ಒಂದು ಬಟ್ಟಲು ಕಾಫಿ ಕುಡಿಸಿದರು. ಒಡೆ ಪಕೋಡಗಳನ್ನು ಬಿಟ್ಟರೆ ಇನ್ನೇನೂ ತಿಂಡಿ ಇರಲಿಲ್ಲ. ಎಂಟಾಣೆಗೆ ಕಟ್ಟಿಸಿಕೊಂಡು ಅವರು, ಗಾಡಿಯಾಳು, ಇಬ್ಬರೂ ತಿಂದಮೇಲೆ ಆಳು ಏನೋ ಜ್ಞಾಪಕ ಬಂದವನಂತೆ ಹೇಳಿದ: ‘ಅಯ್ಯಾರೇ, ನಾವೂ ಊರು ಬಿಟ್ಟು ಶೆಡ್ಡು ಆಕ್ಬೇಕು. ಎತ್ತು ತಾರಾಗ್ಯವೆ. ಆದ್ರೂ ಸಟಿಲ್ಲ, ನಿಧಾನವಾಗಿ ಹ್ವಡ್ದೇ ಬಿಡಾನ.’
‘ಅದೇ ವೈನ.’

ಕೊರಳೆತ್ತಿದರು. ವಿಶ್ವನಿಗೆ ಜ್ವರ ಕಾಯುತ್ತಿದ್ದರೂ ಪ್ರಜ್ಞೆ ತಪ್ಪುತ್ತಿರಲಿಲ್ಲ. ಅಯ್ಯನವರು ಅವನ ತೊಡೆ ಸಂದು, ಕಂಕುಳಗಳ ಹತ್ತಿರ ಮುಟ್ಟಿ ಮುಟ್ಟಿ, ‘ನೋಯ್ತದಾ ಮರಿ?’ ಎಂದು ಕೇಳಿದರೆ ಇಲ್ಲವೆನ್ನುತ್ತಿದ್ದ. ಅವರಿಗೆ ಅದೊಂದೇ ಧೈರ್ಯ. ಗೆಡ್ಡೆ ಕಾಣಿಸಿಕೊಳ್ಳುವ ಮೊದಲೇ ಔಷಧಿ ಬಿದ್ದಿರುವುದರಿಂದ ರೋಗ ಮೊಳಕೆಯಲ್ಲೇ ಕಡಿಯಬಹುದು ಎಂಬ ಭರವಸೆಯಿಂದ ಅವರೂ ಗಾಡಿಯ ತಡಿಕೆಗೆ ಒರಗಿ ಕಣ್ಣು ಮುಚ್ಚಿ ತೂಕಡಿಸಲು ಮೊದಲು ಮಾಡಿದರು. ಸೋತ ಎತ್ತುಗಳು ನಿಧಾನವಾಗಿ ಕಾಲು ಹಾಕುತ್ತಿದ್ದವು. ಕಂಬನಕೆರೆ ದಾಟುವ ತನಕ ಮೋಟಾರು ರಸ್ತೆಯ ದಾರಿಯಿದ್ದುದರಿಂದ ಗಾಡಿಯವನೂ ಒಳಭಾಗದ ತಡಿಕೆಗೆ ಬೆನ್ನುಕೊಟ್ಟು ಕಣ್ಣು ಮುಚ್ಚಿಕೊಂಡೇ ನಡುನಡುವೆ ಲೊಚ್ಚೆ ಹಾಕುತ್ತಿದ್ದ.

ಬೆಳಿಗ್ಗೆ ಹೊತ್ತು ಹುಟ್ಟುವ ಹೊತ್ತಿಗೆ ಅವರು ಆಗಲೇ ಅರ್ಧ ದಾರಿ ಬಂದಿದ್ದರು. ರಸ್ತೆಯ ಪಕ್ಕದಲ್ಲಿ ಇದ್ದ ಒಂದು ಕಟ್ಟೆಯ ಹತ್ತಿರ ಗಾಡಿ ನಿಲ್ಲಿಸಿ ಅಯ್ಯನವರು ವಿಶ್ವನಿಗೆ ಬಾಯಿ ಮುಕ್ಕುಳಿಸಿಸಿ ಬಾಟ್ಲಿಯನ್ನೇ ಎತ್ತಿ ಇನ್ನೊಂದು ಸಲ ಔಷಧಿ ಕುಡಿಸಿದರು. ಜ್ವರವೇನೋ ಇತ್ತು. ಆದರೆ ಎಲ್ಲಿಯೂ ಗೆಡ್ಡೆ ಕಾಣಿಸಿಕೊಂಡಿರಲಿಲ್ಲ. ಅವರ ಧೈರ್ಯ ಇನ್ನೂ ಹೆಚ್ಚಿತು. ಹುಡುಗನಿಗೆ ತಿನ್ನಲು ಇನ್ನೆರಡು ಬಿಸ್ಕತ್ತು ಕೊಟ್ಟು, ಅವರಿಬ್ಬರೂ ಕಟ್ಟೆಯ ಏರಿಯವರೆಗೆ ಹೋಗಿ ಬಂದು ಮತ್ತೆ ಗಾಡಿ ಕಟ್ಟಿದರು. ದಾರಿಯಲ್ಲಿ ಬರುತ್ತಾ ಅವರಿಗೆ ಒಂದು ಯೋಚನೆ ಹೊಳೆಯಿತು: ಹ್ಯಂಗೂ ಎಲ್ಲಾ ಊರು ಬಿಡ್ತಾರೆ. ವಿಶ್ವನ್ನ ಊರೊಳಕ್ಕೆ ಕರ್ಕಂಡ್ ಓಗ್ಲೇಬ್ಯಾಡ್ದು. ಊರು ಬಿಟ್ಟಾಗ ಏರಿಮ್ಯಾಲಿನ ಗುಡಿಯೇ ನಂದು. ಗಾಡಿ ಅಲ್ಲಿಗೆ ಹೊಡಸಿ ಇವ್ನುನ್ನ ಅಲ್ಲೇ ಮನಗಿಸ್ಬಿಡಾದು. ಊರೊಳಿಕ್ ಹ್ವಾಗಿ ನಂದೇ ಕಂಬ್ಳಿ ಚಾಪೆ, ದಿಂಬು, ತಂದ್ರೆ ಸಾಕು.
ಅವರು ಹಾಗೆಯೇ ಮಾಡಿದರು. ಹನ್ನೊಂದು ಗಂಟೆಯ ಹೊತ್ತಿಗೆ ಗಾಡಿ ಕೆರೆಯ ಏರಿ ಮೇಲಿನ ಗುಡಿಯನ್ನು ಮುಟ್ಟಿತು. ವಿಶ್ವನನ್ನು ಅಲ್ಲಿ ಇಳಿಸಿ ಮತ್ತೊಮ್ಮೆ ಔಷಧಿಯ ಶೀಶೆಯನ್ನೇ ಅವನ ಬಾಯಿಗೆ ಎತ್ತಿ ಕುಡಿಸಿ ತಾವು ಬರುವ ತನಕ ಅಲ್ಲಿಯೇ ಇರುವಂತೆ ಗಾಡಿಯವನಿಗೆ ಹೇಳಿ ಒಟ್ಟು ನಾಲ್ಕು ಶೀಶೆ ಔಷಧಿಯೊಡನೆ ಊರು ಹೊಕ್ಕರು.

– ೨ –

ಊರೊಳಗೆ ಪ್ರತಿಯೊಂದು ಮನೆಯವರೂ ಬಿದಿರು, ಅಡಿಕೆ ದಬ್ಬೆಗಳನ್ನು ಹೇರಿಕೊಂಡು ಶೆಡ್ಡು ಹಾಕಲು ಊರು ಬಿಟ್ಟು ಹೋಗುತ್ತಿದ್ದರು. ಶೆಡ್ಡು ಇನ್ನೂ ಪೂರ್ತಿಯಾಗುವ ಮೊದಲೇ ಎಷ್ಟೋ ಜನರು ಮನೆಯ ಪಾತ್ರೆ ದಿನಸಿಗಳನ್ನು ಹೊತ್ತು ಊರು ಬಿಟ್ಟು ನಡೆಯುತ್ತಿದ್ದರು. ಅಯ್ಯನವರು ಬರುವ ಹೊತ್ತಿಗೆ ಪಾರ್ವತಿ ರಾಮಣ್ಣರಿಗೆ ಮುಕ್ಕಾಲು ಭಾಗ ಜ್ಞಾನ ತಪ್ಪಿತ್ತು. ಆದರೆ ಗೆಡ್ಡೆಯ ನೋವಿನ ಪ್ರಜ್ಞೆಯಿಂದ ಪಾರ್ವತಿ ಆಗಾಗ್ಗೆ ‘ಅಯ್ಯಯ್ಯಮ್ಮ’ ಎಂದು ಕ್ಷೀಣವಾದ ದನಿಯಲ್ಲಿ ಕೂಗುತ್ತಿದ್ದಳು. ಅಯ್ಯನವರು ಒಬ್ಬರೇ ಬಂದದ್ದನ್ನು ಕಂಡ ನಂಜಮ್ಮನಿಗೆ ಗಾಬರಿಯಾಯಿತು. ಅದನ್ನು ಗಮನಿಸಿದ ಅವರೇ, ‘ಹ್ಯದರ್‌ಬ್ಯಾಡವ್ವ. ತಿಪಟೂರಿಗೆ ಗಾಡಿ ಹ್ವಡುಸ್ದೆ. ವಿಶ್ವನಿಗೆ ಜ್ವರ ಅದಾವೆ. ಗೆಡ್ಡೆ ಬಂದಿಲ್ಲ. ವಳ್ಳೇ ಔಸ್ತಿ ತಂದಿದೀನಿ. ಏರಿಮ್ಯಾಲಿನ ಗುಡೀಲಿ ಅವ್ನುನ್ನ ಮನಿಗಿಸಿವ್ನಿ. ಪ್ಲೇಗಿನ ಊರಿನೊಳಗೆ ಕರ್ಕಂಡು ಹೋಗ್‌ಬ್ಯಾಡಿ ಅಂತ ಏಳಿದ್ರು. ಈ ಔಸ್ತಿ ತಗಂಡು ಇವ್ರಿಬ್ರಿಗೂ ದಿನಕ್ಕೆ ನಾಕು ಸಲ ಕುಡ್ಸು.’
ಶೀಶೆಯ ಬಿರಟಿ ತೆಗೆದು, ಅವರು ಹೇಳಿದಷ್ಟನ್ನು ಒಳಲೆಗೆ ಹಾಕಿ ಅವಳು ಇಬ್ಬರಿಗೂ ಹುಯ್ದಳು. ಬಟ್ಟಲಿನಲ್ಲಿ ಕುಡಿಯುವ ಶಕ್ತಿಯಾಗಲಿ ಜ್ಞಾನವಾಗಲಿ ಅವರಿಗೆ ಇರಲಿಲ್ಲ ‘ಇದೊಂದೇ ಔಸ್ತಿ. ಶಿವ ಉಳಿಸಿದ್ರೆ ಇದರಿಂದ್ಲೇ ಉಳಿಸ್ಕಬೇಕು’-ಎಂದು ಅಯ್ಯನವರು ಕೇಳಿದರು: ‘ಬ್ಯಾಗ ಊರು ಬಿಡ್‌ಬೇಕು. ನೀವೇನೂ ಮಾಡ್ಲಿಲ್ವಾ?’
‘ನಾನು ಮನ್ಲೇ ಇದೀನಿ. ನಮ್ಮುನ್ನ ನೋಡುಕ್ಕೆ ಈ ಗಲಾಟೇಲಿ ಯಾರು ತಾನೆ ಬರ್ತಾರೆ?’
‘ಚಿನ್ನಯ್ಯ ಎಲ್ಲಿ?’
‘ಗೊತ್ತಿಲ್ಲ. ಬೆಳಿಗ್ಗೆ ಎಂಟು ಗಂಟೆಗೆ ಹೋದೋರು ಬಂದಿಲ್ಲ.’
‘ನನ್ನ ಗುಡಿಗೆ ಓಗಿ ಕಂಬ್ಳಿಗಿಂಬ್ಳಿ ಒಯ್ದು ಏರಿಮ್ಯಾಲಿನ ಗುಡೀಲಿ ಮಡ್ಗ್ತೀನಿ. ನೀನು ವಿಶ್ವನ ಯೇಚ್ನೆ ಮಾಡ್‌ಬ್ಯಾಡವ್ವ. ಈ ಹುಡ್ಗುನ್ನ ನೋಡ್ಕ. ಅವ್ನು ಊರೊಳಕ್ಕೆ ಬರೂದೇ ಬ್ಯಾಡ. ಕುಳವಾಡಿ ಗಿಳವಾಡಿ ಕರದು ನಿಮ್ಗೆ ಗುಡ್ಳು ಹಾಕಕೆ ಏಳ್ತೀನಿ’-ಎಂದು ಹೇಳಿದ ಅವರು ತಮ್ಮೊಡನಿದ್ದ ಔಷಧಿಯ ಶೀಶೆಗಳನ್ನು ಅವಳಿಗೆ ಕೊಟ್ಟು, ವಿಶ್ವನಿಗೆ ಗಂಜಿ ಮಾಡಲು ಅಚ್ಚೇರಿನಷ್ಟು ಅಕ್ಕಿ ತರಿ ತೆಗೆದುಕೊಂಡು ಹೋದರು. ಪಾರ್ವತಿ ರಾಮಣ್ಣರ ಜೀವದ ಬಗೆಗೆ ನಂಜಮ್ಮನಿಗೆ ಖಾತ್ರಿ ತಪ್ಪಿಹೋಗಿತ್ತು. ಉಳಿದರೆ ದೇವರ ದಯ. ಇಬ್ಬರಿಗೂ ಎರಡೂ ತೊಡೆ, ತೋಳಿನ ಸಂದಿಯಲ್ಲಿ ಗೆಡ್ಡೆ ಉಬ್ಬಿ ಬಲಿತಿದೆ. ಜ್ವರವಂತೂ ಬಿಟ್ಟು ಬಿಟ್ಟು ಏರುತ್ತಲೇ ಇದೆ. ಪಾರ್ವತಿ ಆಗಾಗ್ಗೆ ಕಣ್ಣು ಬಿಟ್ಟು ನೋಡುತ್ತಿದ್ದಳಾದರೂ ಅವಳ ದೃಷ್ಟಿ ಈ ಲೋಕದಲ್ಲೇ ಇರಲಿಲ್ಲ. ಕೆದರಿ ಬಿರುಸುಗೊಂಡ ಮುಖ ನೋಡಿದರೆ ಹೆದರಿಕೆಯಾಗುವಂತಿತ್ತು. ರಾಮಣ್ಣ ಹೆಚ್ಚು ನರಳದೆ ಸುಮ್ಮನೆ ಮಲಗಿದ್ದಾನೆ. ಅವನ ಗೆಡ್ಡೆಗಳೂ ಒಂದೊಂದು ಗೆಣಸಿನ ಹಾಗೆ ಬೆಳೆದಿವೆ. ಇಬ್ಬರಲ್ಲಿ ಯಾರೂ ಬೆಳಗಿನಿಂದ ಒಂದು ಮಾತೂ ಆಡುತ್ತಿಲ್ಲ. ಅಯ್ಯನವರು ತಂದುಕೊಟ್ಟಿರುವ ಔಷಧಿ ತುಂಬ ಒಳ್ಳೆಯದೇ ಇರಬಹುದು. ತಿಪಟೂರಿನಿಂದ ತಂದದ್ದು. ಕಂಬನಕೆರೆಯ ಡಾಕ್ಟರು ಏನೆಂದರೋ! ವಿಶ್ವನ ವಿಷಯದಲ್ಲಿ ಯೋಚನೆ ಮಾಡಬೇಡ ಅಂತ ಅವರೇ ಹೇಳಿದಾರೆ. ನಾನು ಹೋಗಿ ಒಂದು ಸಲವಾದರೂ ನೋಡ್ಕಂಡು ಬರಬೇಕು. ನಾನು ಹೋದರೆ ಇಲ್ಲಿ ಮನೇಲಿ ಈ ಹುಡುಗರ ಹತ್ತಿರ ಯಾರು?’

ಅದೇ ಹೊತ್ತಿಗೆ ಮೇಷ್ಟರ ಹೆಂಡತಿ ಬಂದರು. ಅವರ ಕೈಲಿ ಒಂದು ಪಾತ್ರೆ ಇತ್ತು. ಮೇಷ್ಟರು ಬೆಳಗ್ಗೆ ಬಂದು ಇವರನ್ನ ನೋಡಿಕೊಂಡು ಹೋಗಿದ್ದರು. ಆಕೆ ಎಂದರು: ‘ನೋಡ್ರೀ, ಮನೆಗೆ ಮಾಡಿದ ಅಡಿಗೆ ಬೇರೆ ಬೇರೆ ತಂದಿಡಬಾರ್‍ದು ಅಂತ ಶಾಸ್ತ್ರವಂತೆ. ಅದುಕ್ಕೆ ಬರೀ ಅನ್ನ ಹುಳಿ ಕಲಸ್ಕಂಡು ಬಂದೆ. ಇದುನ್ನ ಒಳಗೆ ಇಟ್ಟು ಹೋಗ್ತೀನಿ. ನಮ್ಮನೆಯೋರು ಸಾಮಾನು ಕಟ್ತಾ ಇದಾರೆ. ಈಗ ಹ್ಯಾಗಿದಾರೆ ಹುಡುಗರು?’
‘ಏನೂ ವ್ಯತ್ಯಾಸವಿಲ್ಲ. ಬೆಳಗಿನಿಂದ ಮಾತಾಡಿಲ್ಲ.’
‘ನಿಮ್ಮ ಕುಳುವಾಡಿನೋ ಯಾರಾದ್ರೂ ನಾಕು ಜನ ಕಳ್ಸಿ. ನಮ್ಮನೆಯೋರು ನಿಮಗೂ ಒಂದು ಸಣ್ಣ ಶೆಡ್ಡು ಹಾಕುಸ್ತಾರೆ. ನೀವು ಹುಡುಗರ ಜೊತೆ ಬನ್ನಿ. ಸಾಮಾನು ನಾವು ಕಟ್ಟಿ ತಂದು ಹಾಕ್ತೀವಿ. ಶ್ಯಾನುಭೋಗರೆಲ್ಲಿ?’
‘ಎಲ್ಲಿಗೆ ಹೋದ್ರೋ ಯಾರಿಗೆ ಗೊತ್ತಮ್ಮ!’

ಆಕೆ ಗಡಿಬಿಡಿಯಲ್ಲಿ ಹೊರಟುಹೋದರು. ಶೆಡ್ಡು ಹಾಕುವ ಬಿದಿರು ಮತ್ತು ದಬ್ಬೆಗಳು ನಂಜಮ್ಮನ ಮನೆಯ ಅಟ್ಟದಲ್ಲಿ ಇದ್ದುವು. ಸೋಗೆಯೊಂದೇ ಬೇಕಾಗಿದ್ದುದು. ಈಗ ಅದು ಊರಿನವರಿಗೆಲ್ಲ ಬೇಕಾಗಿದ್ದುದರಿಂದ ಸ್ವಲ್ಪ ತಾಪತ್ರಯ ಆಗಿತ್ತು. ಒಂದು ಗಾಡಿ ಹೊಡೆಸಿ ಕಳಿಸಿದರೆ ಕುರುಬರಹಳ್ಳಿಯಿಂದ ಬೇಕಾದಷ್ಟು ಹೇರಿಸಿ ತರಬಹುದು. ಆ ಊರನ್ನೂ ಬಿಡುತ್ತಿದ್ದಾರೋ ಹೇಗೋ ಗೊತ್ತಿಲ್ಲ. ಯಾವುದಕ್ಕೂ ಮುಂದೆ ನಿಂತು ಮಾಡುವವರು ಯಾರು? ನಂಜಮ್ಮ ಎದ್ದು ಇನ್ನೊಂದು ಸಲ ಇಬ್ಬರಿಗೂ ಒಳಲೆಯಲ್ಲಿ ಹೇಮಾದಿ ಪಾನಕ ಕುಡಿಸಿದಳು. ‘ಗಂಜಿ ಬೇಕೆ?’-ಎಂದು ಕೇಳಿದುದು ಯಾರಿಗೂ ಅರ್ಥವಾಗಲಿಲ್ಲ. ಈಗತಾನೇ ಔಷಧಿ ಹೊಟ್ಟೆಗೆ ಹೋಗಿದೆ. ಒಂದರ್ಧ ಗಂಟೆ ಕಳೀಲಿ-ಎಂದು ಅವಳು ಸುಮ್ಮನಾದಳು. ಅಷ್ಟರಲ್ಲಿ ಚೆನ್ನಿಗರಾಯರು ಮನೆಗೆ ಬಂದರು. ಅವರ ತಲೆಯ ಮೇಲೆ ಒಗೆದ ಎರಡು ಪಂಚೆ ಒಂದು ಅಂಗಿ ಇದ್ದುವು. ಉಟ್ಟಿದ್ದ ಒಂದು ಚೌಕ ಅರೆ ಒದ್ದೆಯಾಗಿತ್ತು. ಹಣೆಯ ಮೇಲಿದ್ದ ವಿಭೂತಿಯನ್ನೂ ಕಂಡ ತಕ್ಷಣ ಅವರು ತೋಟದ ಬಾವಿಯಲ್ಲೋ ಅಥವಾ ಕೆರೆಕೋಡಿಯಲ್ಲೋ ಬಟ್ಟೆ ಒಗೆದು ಸ್ನಾನ ಮಾಡಲು ಹೋಗಿದ್ದರೆಂಬುದು ತಿಳಿಯುತ್ತಿತ್ತು. ಹಣೆಯ ಮೇಲಿದ್ದ ವಿಭೂತಿಯು, ಅವರು ಸಂಧ್ಯಾವಂದನೆ ಮಾಡಿದ್ದಾರೆಂಬುದನ್ನು ಹೇಳುತ್ತಿತ್ತು. ಸಂಧ್ಯಾವಂದನೆಗೆ ಕೂತರೆ, ‘ಓಂ ತತ್ಸತತತತತ ಓಂ ತತ್ಸವಿತತತತತ’ ಎಂದು ನುಂಗಿ ನುಡಿಯುವಂತೆ ನೂರ ಎಂಟೋ ಸಾವಿರದೆಂಟೋ ಗಾಯಿತ್ರಿ ಮಾಡದೆ ಮೇಲೆ ಏಳುವುದಿಲ್ಲ. ಈವತ್ತು ಅವರು ಹೊರಗೆ ಹೋಗಿದ್ದ ಸಮಯ ನೋಡಿದರೆ ಸಾವಿರದೆಂಟು ಗಾಯಿತ್ರಿ ಮಾಡಿಯೇ ಬಂದಿದ್ದಾರೆಂದು ಖಚಿತವಾಗುತ್ತಿತ್ತು.
‘ಮನೇಲಿ ಹುಡುಗರು ಸಾಯ್ತಾ ಬಿದ್ದಿದ್ದಾರೆ. ಊರೆಲ್ಲ ಬಿಡ್ತಾ ಇದಾರೆ. ಇವತ್ತೇ ಬಟ್ಟೆ ಒಗಿಯುಕ್ಕೆ ಏನಾಗಿತ್ತು ನಿಮಗೆ?’
‘ಕೊಳೆಪಂಚೇನ ಎಷ್ಟು ದಿನ ಅಂತ ಹಾಕ್ಕಂಡಿರ್ಲಿ? ನಾಕು ದಿನ ಆಯ್ತು ನೀನು ಒಗ್ದುಕೊಟ್ಟು. ನೀನು ಅದೇ ಸೀರೆ ಸುತ್ಕಂಡಿದಿಯಾ. ನೀನೇನು ಬ್ರಾಂಬ್ರ ಜಾತೀಲಿ ಹುಟ್ಟಿಲ್ವೆ?’

ಅವರ ಸಂಗಡ ವಾದ ಮಾಡಿ ಪ್ರಯೋಜನವಿಲ್ಲವೆಂದು ಅವಳು ಸುಮ್ಮನಾದಳು. ಯಜಮಾನರು ಅಡಿಗೆಮನೆಯ ಒಳಹೊಕ್ಕೊಡನೆಯೇ ಮೇಷ್ಟರ ಮನೆಯ ಕೊಳದಪ್ಪಲೆ ಕಣ್ಣಿಗೆ ಬಿತ್ತು. ಮುಚ್ಚಳ ತೆಗೆದು, ಹತ್ತಿರವೇ ಇದ್ದ ಒಂದು ಅಲ್ಯೂಮಿನಿಯಂ ತಟ್ಟೆಗೆ ಬಡಿಸಿಕೊಂಡು ಪಂಚಪಾತ್ರೆಗೆ ನೀರು ಬಗ್ಗಿಸಿ ಬಲಗೈಗೆ ಉದಕ ಹಾಕಿ ಪರಿಷೇಂಚನೆ ಮಾಡಿ, ಚಿತ್ರಾಯ ನಮಃ, ಯಮಾಯ ನಮಃ, ಯಮಧರ್ಮಾಯ ನಮಃ, ಸರ್ಮಭೂತೇಬ್ಯೋ ನಮಃ ಎಂದು ಐದು ಸಲ ಚಿತ್ರಾವತಿ ಇಟ್ಟು ವಿಧಿಪೂರ್ವಕ ಪ್ರಾರಂಭಿಸಿ ಭೋಜನ ಮುಗಿಸಿದರು. ಚೆನ್ನಿಗರಾಯರ ಹಸಿವು ಮೇಷ್ಟರ ಹೆಂಡತಿಗೇನು ಗೊತ್ತು? ಆಕೆ ತಂದುಕೊಟ್ಟಿದ್ದ ಅನ್ನ ಇವರಿಗೆ ಸಾಲಲಿಲ್ಲ. ಭೋಜನವನ್ನು ಪರಿಸಮಾಪ್ತಿ ಮಾಡಿ ಆಪೋಶನ ತೆಗೆದುಕೊಂಡು ಇವರು ಹೊರಬರುವ ಹೊತ್ತಿಗೆ ಮಾದೇವಯ್ಯನವರು ಮತ್ತೆ ಬಂದರು. ಅಷ್ಟರಲ್ಲಿ ಪಾರ್ವತಿ ಸ್ವಲ್ಪ ಮೇಲೆ ಕೆಳಗೆ ಉಸಿರಾಡುತ್ತಿದ್ದಳು. ಮತ್ತೇನು ಮಾಡುವುದಕ್ಕೂ ತಿಳಿಯದೆ ನಂಜಮ್ಮ ಅವಳ ಭುಜದ ಮೇಲೆ ಕೈ ಇಟ್ಟು ಕುಳಿತಿದ್ದಳು. ಅಯ್ಯನವರೆಂದರು: ‘ಚಿನ್ನಯ್ಯ, ನೀವು ಸೀದಾ ಹೋಗಿ ಏರಿ ಮ್ಯಾಲಿನ ಗುಡೀಲಿ ಇರಿ. ಅಧ್ಯದ ಅಂಕಣದಾಗೆ ವಿಶ್ವ ಮನಗ್ಯವ್ನೆ. ಹೊರಕೇರಿ ನಂಜನ ಉಡುಗ ಆಡು ಕಾಯ್ತಿದ್ದ. ಅವ್ನುನ್ನ ಅಲ್ಲೇ ಇರು ಅಂತ ಬಿಟ್ಟು ಬಂದಿವ್ನಿ. ನೀವು ಹೋಗಿ ಸುಮ್ಕೆ ಅಲ್ಲಿ ಕುಂತಿರ್ರಿ. ಇನ್ನೇನೂ ಮಾಡ್‌ಬ್ಯಾಡಿ.’
‘ನಾನೊಬ್ನೆ ಇರುಕ್ಕೆ ಬೇಜಾರಾಗುಲ್ವೇನ್ರೀ?’
ಅಯ್ಯನವರಿಗೆ ರೇಗಿತು. ‘ನೀನೇನು ಮನುಷ್ಯನೋ ದನವಯ್ಯ? ಏಳ್ದೋಟು ಕೇಳಾದುಬಿಟ್ಟು’-ಎಂದುಬಿಟ್ಟರು. ಅಯ್ಯನವರು ಯಾವತ್ತೂ ಯಾರ ಮೇಲೆಯೂ ರೇಗಿದವರಲ್ಲ. ಅವರ ಮಾತು ಕೇಳಿದ ಶ್ಯಾನುಭೋಗರು ಸ್ತಬ್ಧರಾದರು: ‘ಹ್ಞೂ ಹೋಗ್ತೀನಿ. ಒಂದಿಷ್ಟು ಹೊಗೆಸೊಪ್ಪಿದ್ರೆ ಕೊಡಿ. ಊಟವಾದ ಮೇಲೆ ಹಾಕ್ಕಳ್ದೆ ಇದ್ರೆ ಹ್ಯಾಗ್ ಹ್ಯಾಗೋ ಆಗುತ್ತೆ.’
‘ಈಗ ಊಟವೂ ಆಯ್ತಾ? ಬೋನ ಯಾರು ಬಸ್ದಿದ್ರು?’
‘ಇವ್ಳೇ ಮಾಡಿದ್ಲೇನೋ.’
‘ಮೇಷ್ಟ್ರ ಹೆಂಡ್ತಿ ಒಂದಿಷ್ಟು ತಂದಿಟ್ಟು ಹೋಗಿದ್ರು’-ನಂಜಮ್ಮ ಹೇಳಿದಳು.
‘ಅಲ್ಲೇ ನನ್ನ ಸಾಮಾನೆಲ್ಲ ಒಯ್ದು ಮಡಿಗಿವ್ನಿ. ನನ್ನ ಎಲಡಿಕೆ ಚೀಲವೂ ಅಲ್ಲೇ ಐತೆ. ತಗಂಡು ಏಟು ಬೇಕಾದ್ರೂ ಅಗ್ದು ಉಗುಳಿ’-ಎಂದು ಅಯ್ಯನವರು ಹೇಳಿದ ಮೇಲೆ ಒಣಗುಹಾಕಿದ್ದ ತಮ್ಮ ಪಂಚೆಯನ್ನು ತೆಗೆದು ಒಣಗುವಂತೆ ತಲೆಯ ಮೇಲೆ ಹಾಕಿಕೊಂಡು ಹೋದರು.
‘ಅವ್ವಾ, ನಿನ್ನ ಶೆಡ್ಡಿಗೆ ಏನು ಮಾಡ್ದೆ?’
‘ಶೆಡ್ಡಿನ ಮನೆ ಕಾಯ್ವಾಗ. ಇವಳು ಹೀಗೆ ಉಸಿರಾಡ್ತಾ ಇದಾಳೆ ನೋಡಿ ಬನ್ನಿ.’
ಅಯ್ಯನವರು ಹತ್ತಿರ ಹೋಗಿ ಪಾರ್ವತಿಯ ಮೂಗಿನ ಹತ್ತಿರ ಕೈಯಿಟ್ಟು ನೋಡಿದರು. ಉಸಿರು ಕ್ರಮವಾದ ಗತಿಯಲ್ಲಿರಲಿಲ್ಲ. ‘ಗಂಜಿ ಯಾವಾಗ ಕೊಟ್ರಿ?’
‘ಕುಡಿಯೂದೇ ಇಲ್ಲ.’
‘ಹ್ವಟ್ಟೆಗಿಲ್ಲದ ಸಂಕಟಕ್ಕೆ ಹಿಂಗಾಗೈತೆ. ಮದ್ಲು ಎದ್ದು ಗಂಜಿ ಮಾಡಿ ಕುಡ್ಸಿ. ಓಷ್ಟ್ರಲ್ಲಿ ನಾನು ನಿಮ್ಮ ಸ್ವಾಗೆಗೆ ಕುರುಬ್ರಳ್ಳೀಗೆ ಏಳಿಕಳುಸ್ತೀನಿ’-ಎಂದು ಹೇಳಿದ ಅವರು ಹೊರಗೆ ಹೋದರು. ಮೇಷ್ಟರಿಗೆ ಒಬ್ಬ ಹುಡುಗನಿದ್ದ. ವಿಶ್ವನಿಗಿಂತ ಎರಡು ವರ್ಷಕ್ಕೆ ದೊಡ್ಡವನಾದ ಅವನು ತುಂಬ ಚೂಟಿಗಾರ. ಅಯ್ಯನವರು ಮೇಷ್ಟರ ಮನೆಗೆ ಹೋಗಿ ಅವನಿಗೆ ಹೇಳಿದರು: ‘ಕುರುಬರ ಅಳ್ಳಿಗೆ ಒಬ್ನೇ ಓಗಿ ಬತ್ತೀಯಾ ಮಗ?’
‘ಓ. ಓಡಿ ಹೋಗಿ ಬತ್ತೀನಿ.’
‘ಗುಂಡೇಗೌಡ್ರ ಮನೆಗೆ ಓಗಿ ಏಳು. ಶ್ಯಾನುಭೋಗ್ರ ಮನ್ಲಿ ಮೂರು ಹುಡ್ರಿಗೂ ಪ್ಲೇಗು ಬಡಿದೈತಿ. ಗುಡ್ಳು ಹಾಕಾಕೆ ಸ್ವಾಗೆ ಇಲ್ಲ. ಗಳಪಳ ಯಲ್ಲಾ ಅವೆ. ಒಂದು ಗಾಡಿ ಸ್ವಾಗೆ ತುಂಬಿ ಈಗ್ಲೇ ಕಳ್ಸಾನಂತೆ. ಹಿಂದೆಲ್ಡು ಆಳುಗಳೂ ಬೇಕಂತೆ. ನಂಜಮ್ಮಾರು ಅಳ್ತಾ ಕುಂತವ್ರಂತೆ ಅಂತ ಏಳ್ತೀಯಾ?’
‘ಓ ಯಲ್ಲಾ ಗ್ಯಾಪಿಸ್ಕಂಡ್ ಹೇಳ್ತೀನಿ.’

ಬೇಗ ಹೋಗುವಂತೆ ಮೇಷ್ಟರೂ ಹೇಳಿದರು. ಮಾದೇವಯ್ಯನವರು ನಂಜಮ್ಮನ ಮನೆಗೆ ಬಂದರು. ಒಳಗೆ ಒಲೆಯ ಮೇಲೆ ಗಂಜಿ ಕುದಿಯುತ್ತಿತ್ತು. ಗುಂಡೇಗೌಡರು ತಕ್ಷಣ ಸೋಗೆ ಮತ್ತು ಆಳುಗಳನ್ನು ಕಳಿಸುವ ಬಗೆಗೆ ಅಯ್ಯನವರಿಗೆ ಪೂರ್ಣ ವಿಶ್ವಾಸವಿತ್ತು. ಅಷ್ಟರಲ್ಲಿ ಬಿದಿರನ್ನು ತೆಗೆದು ಹೊರಗೆ ಹಾಕಿರುವುದು ಒಳ್ಳೆಯದು. ಈ ರಾತ್ರಿಯೇ ಶೆಡ್ಡು ಮೇಲೆ ಎದ್ದರೆ ನಾಳೆ ಬೆಳಗಿನ ಒಳಗೆ ಈ ಮನೆ ಬಿಟ್ಟುಬಿಡಬಹುದು. ಊರು ಬಿಡದೆ ಹುಡುಗರ ಕಾಯಿಲೆ ಇಳಿಯುವುದಿಲ್ಲ-ಎಂದು ಯೋಚಿಸಿದ ಅವರು, ತಾವೇ ಅಟ್ಟಕ್ಕೆ ಹತ್ತಿದರು. ಬಿದಿರಿನಿಂದಲೇ ಮಾಡಿದ್ದ ಆ ಅಟ್ಟದ ಒಂದು ಮೂಲೆಯ ತುಂಬ ತುಂಬಿದ್ದ ಬಿದಿರು, ಉಪಯೋಗಿಸದೆ ಧೂಳಿನಿಂದ ಮುಚ್ಚಿಹೋಗಿತ್ತು. ಗಂಜಿ ತೆಗೆದುಕೊಂಡು ಬಂದ ನಂಜಮ್ಮನಿಗೆ-‘ಹುಡುಗ್ರ ತಲೆಮ್ಯಾಲೆ ಹೊದಿಸವ್ವ. ಧೂಳು ಬೀಳ್ತಾವೆ. ವಸಿ ಈ ಬಿದಿರ ಕೆಳಿಕ್ ಹಾಕ್ತೀನಿ’ ಎಂದು ಹೇಳಿ, ಹೆಚ್ಚು ಶಬ್ಧವಾಗದಂತೆ ಒಂದೊಂದಾಗಿ ಕೆಳಗೆ ಇಳಿಬಿಟ್ಟರು. ಮತ್ತೆ ಏಣಿಯಿಂದ ಇಳಿದು ಅವರು ಬೇಗ ಬೇಗ ಅವನ್ನು ತೆಗೆದು ಹೊರಗೆ ಹಾಕುವ ತನಕ ನಂಜಮ್ಮ ಧೂಳಾಗುತ್ತದೆಂದು ಗಂಜಿಯನ್ನು ಕೋಣೆಯಲ್ಲಿಯೇ ಆರಲು ಇಟ್ಟು ಬಂದಿದ್ದಳು. ಈಗ ಮತ್ತೆ ಒಳಗೆ ಹೋಗಿ, ಚರುಕಿನಲ್ಲಿದ್ದ ಗಂಜಿಯನ್ನು ಲೋಟೆಗೆ ಬಗ್ಗಿಸಿ ಒಳಲೆಯೊಡನೆ ಬಂದು ಪಾರ್ವತಿಯ ಮುಸುಕು ಸರಿಸಿ ನೋಡಿದರೆ ಉಸಿರು ಇನ್ನೂ ನಿಧಾನವಾಗಿ ಕಾಣುತ್ತಿತ್ತು. ಒಳಲೆಯ ಮೂತಿ ದವಡೆಯ ಭಾಗದ ತುಟಿಯೊಳಗೆ ಹೋದರೂ, ಕುಡಿಸಿದ ಗಂಜಿಯನ್ನು ಗುಟುಕಿಸಲಿಲ್ಲ. ‘ಅಯ್ನೋರೇ, ಬಿದಿರು ಅಲ್ಲಿರ್ಲಿ. ಬನ್ನಿ ಇಲ್ಲಿ’-ಎಂದು ಕೂಗಿದುದನ್ನು ಕೇಳಿ ಅವರೂ ಹತ್ತಿರ ಬಂದು ಕೂತು ಪಾರ್ವತಿಯ ಮುಖ ನೋಡಿದರು. ಅನುಮಾನ ಬಂತು. ‘ಗೆಡ್ಡೆಗಳು ಹ್ಯಂಗವೆ ವಸಿ ನೋಡಿ. ನಾನು ಕೈ ತೊಕ್ಕಂತೀನಿ’-ಎಂದು ಧೂಳು ತುಂಬಿದ ತಮ್ಮ ಕೈ ತೊಳೆಯಲು ಬಚ್ಚಲು ಮನೆಗೆ ಹೋದರು.

ನಂಜಮ್ಮ ಕೈಹಾಕಿ ನೋಡುತ್ತಾಳೆ: ಬಲತೊಡೆಯ ಸಂದಿನ ಗೆಡ್ಡೆ ಒಡೆದು ಅಲ್ಲೆಲ್ಲ ಕೀವು ಹರಿದಿದೆ. ‘ಅಯ್ನೋರೇ, ಬಲಗಡೆ ಗೆಡ್ಡೆ ಒಡೆದಿದೆ. ನೋಡಿ ಬನ್ನಿ.’
ಅವರೂ ಬಂದು ಹೊದಿಕೆ ಸರಿಸಿ ನೋಡುತ್ತಾರೆ: ಬಾವು ಬಂದಂತೆ ಆಗಿದ್ದ ಅದು ಒಡೆದು ಬಿಳೀ ಕೀವು ಸೋರುತ್ತಿದೆ. ಅದರ ಸುತ್ತಲೂ ರಕ್ತವರ್ಣದ ದ್ರವ ಸ್ರವಿಸುತ್ತಿದೆ. ಕುರು ಒಡೆದರೆ ಕೀವು ರಕ್ತಗಳು ಬೆರೆತು ಸುರಿಯುವಂತೆ ಇಲ್ಲಿಯೂ ಆಗಿದೆ. ಸೀರೆಯನ್ನು ಸರುಗಿಸಿ ಅವರು ಇನ್ನೊಂದು ಕಡೆಯ ಗೆಡ್ಡೆಯನ್ನು ನೋಡಿದರು. ಅದೂ ಒಡೆಯುವ ಲಕ್ಷಣ ಕಾಣುತ್ತಿದೆ. ಅವರಿಗೆ ಅರ್ಥವಾಯಿತು. ಅವರೇ ಸೀರೆಯನ್ನು ಸರಿಮಾಡಿ ಎದೆಯ ತನಕ ಹೊದಿಸಿದರು. ‘ಏನಯ್ನೋರೆ?’-ಮಂಕು ಹಿಡಿದಂತೆ ನಂಜಮ್ಮ ಕೇಳಿದಳು.
‘ಶಿವನ ಇಚ್ಚೆ ಹೆಂಗೈತೋ ನೋಡಬೇಕು ಕಣವ್ವ.’
ಅವಳಿಗೂ ಮಬ್ಬು ಅರ್ಥವಾಗಿಹೋಯಿತು. ಪಾರ್ವತಿಯ ಉಸಿರು ಸ್ವಲ್ಪ ಜೋರಾಗಿ ನಡೆಯಲು ಶುರುವಾಯಿತು. ನಂಜಮ್ಮ ಇದುವರೆಗೂ ಸಾವನ್ನು ಕಣ್ಣೆದುರಿಗೆ ಕಂಡವಳಲ್ಲ. ತುಂಬ ಕ್ಷೀಣವಾಗಿದ್ದ ಉಸಿರು ಈಗ ಶಕ್ತಿವಂತವಾದುದರ ಚಿಹ್ನೆಯನ್ನು ಅವಳು ಗ್ರಹಿಸಲಿಲ್ಲ. ಕಣ್ಣಿನ ಹೊಳಪು ಕಂದಿಹೋಗಿರುವುದರ ಕಡೆಗೆ ಅವಳ ಗಮನವಾಗಲಿ ಬುದ್ಧಿಯಾಗಲಿ ಹರಿಯಲಿಲ್ಲ. ಅಯ್ಯನವರಿಗೆ ಎಲ್ಲವೂ ಗೊತ್ತು. ಆದರೆ ಏನು ಹೇಳಬೇಕು, ಏನು ಬಿಡಬೇಕು ಎಂದು ತೋಚದೆ ಸುಮ್ಮನೆ ಕುಳಿತಿದ್ದರು. ಹೇಗೆ ಹೇಳಬೇಕೆಂಬುದೂ ತಿಳಿಯಲಿಲ್ಲ. ಕೊನೆಗೆ ಒಂದು ತೀರ್ಮಾನಕ್ಕೆ ಬಂದವರಂತೆ ಕೇಳಿದರು: ‘ನಿಮ್ಮಯ್ಯಾರು ಕಾಶಿಗೆ ಓಗಿ ಒಂದು ಗಂಗೆ ತಂದು ಕೊಟ್ರಂತಲ್ಲಾ, ಮನ್ಲಿ ಐತಾ?’
‘ಯಾಕೆ?’-ಈಗ ನಂಜಮ್ಮನಿಗೆ ಅದರ ಅರ್ಥ ಹೊಳೆಯಿತು.
‘ಈಗ ಗಾಬರಿಯಾಗ್‌ಬ್ಯಾಡ್ದು. ಉಳಿಸಿದರೆ ಗಂಗಮ್ಮ ತಾಯಿ ಉಳುಸ್ಬೇಕು. ವಳಗೆ ಓಗಿ ತಗಂಡ್ ಬಾರವ್ವಾ.’

ನಂಜಮ್ಮ ಓಡಿ ಹೋಗಿ ತಂದಳು. ಕುಡುಗೋಲಿನಿಂದ ಅದರ ಅರಗನ್ನು ಹೆರೆದು ಮುಚ್ಚಳದ ಒಂದು ಭಾಗಕ್ಕೆ ಕನ್ನ ಹಾಕಿ-‘ಮಗಳ ತಲೇನ ತೊಡೆಮೇಲೆ ಹಾಕ್ಕಳವ್ವ. ನೀನು ಸರಿಯಾಗಿ ಕೂತ್ಕ, ನಾನು ಮೆಲ್ಲಗೆ ಇಡ್ತೀನಿ’ ಎಂದು ಅವರೇ ಪಾರ್ವತಿಯ ತಲೆಯನ್ನು ಮೆಲ್ಲಗೆ ಎತ್ತಿ ಅವಳ ತೊಡೆಯ ಮೇಲೆ ಇಟ್ಟು, ಹತ್ತಿರವೇ ಇದ್ದ ಒಳಲೆಯಲ್ಲಿ ಗಂಜಿಯನ್ನು ಕೈಲಿ ಒರೆಸಿ ಹಾಕಿ, ಅದಕ್ಕೆ ಕಾಶೀಗಂಗೆ ಬಗ್ಗಿಸಿ ಅವಳ ಕೈಲಿ ಕೊಟ್ಟು, ‘ಮೆಲ್ಲಗೆ ಬಾಯಿಗೆ ಬಿಡವ್ವ. ತಡಿ, ನಾನು ತುಟಿ ಹಿಡಕಂಡು ಹಿಗ್ಗಲುಸ್ತೀನಿ’ ಎಂದರು.

ನಂಜಮ್ಮನಿಗೆ ಕೈ ನಡುಗುತ್ತಿತ್ತು. ಕೈಲಿದ್ದ ಒಳಲೆಯ ಗಂಗೆ ತುಳುಕಿ ಚೆಲ್ಲಿಹೋಗುತ್ತಿತ್ತು. ಅಯ್ಯನವರೇ ಅವಳ ಕೈ ಹಿಡಿದು ಒಳಲೆಯ ಮೂತಿಯನ್ನು ಉಪಾಯವಾಗಿ ಹಲ್ಲಿನ ಒಳಕ್ಕೆ ಸರಿಸಿ ನೀರು ಬಿಡಿಸಿದರು. ಜೋರಿನಿಂದ ಆಡುತ್ತಿದ್ದ ಪಾರ್ವತಿಯ ಉಸಿರು ಈಗ ಶಾಂತವಾಗುತ್ತಿತ್ತು. ಕಣ್ಣುಗಳು ಅರೆ ತೆರೆದಿದ್ದರೂ, ತನ್ನ ಮೇಲೆ ಬಾಗಿದ್ದ ತನ್ನ ಅಮ್ಮನ ಮುಖವು ಅದಕ್ಕೆ ಕಾಣುತ್ತಿರಲಿಲ್ಲ. ಅಮ್ಮನ ತೊಡೆಗಳ ಮೇಲೆಯೇ ತನ್ನ ತಲೆ ಇದೆ ಎಂಬ ಅರಿವು ಅವಳಿಂದ ಹಾರಿಹೋಗಿತ್ತು. ನಿಧಾನವಾಗುತ್ತಿದ್ದ ಉಸಿರು ಮತ್ತೂ ನಿಧಾನವಾಯಿತು. ತೀರ ವಿಲಂಬಗತಿಗೆ ಬಂದು ಒಂದು ಸಲ ಅಂತಿಮವಾಗಿ ಹೊರಗೆ ಬಂತು. ಮತ್ತೆ ಒಳಗೆ ಹೋಗಲಿಲ್ಲ. ಒಳಗಿದ್ದುದನ್ನೆಲ್ಲ ಒಂದೇ ಸಲಕ್ಕೆ ಹೊರಹಾಕಲೆಂದು ಅರೆತೆರೆದ ಬಾಯಿ ಮತ್ತೆ ಮುಚ್ಚಿಕೊಳ್ಳಲಿಲ್ಲ.

‘ಅ…..ಯ್ನೋ…..ರೇ’-ಎಂದು ತಡೆದ ಉಸಿರಿನಿಂದ ಬಿಕ್ಕಳಿಸುತ್ತಾ ನಂಜಮ್ಮ ಮಗಳ ಎದೆಯ ಮೇಲೆ ತಲೆ ಇಟ್ಟಳು. ಈಗ ಸಮಾಧಾನ ಹೇಳಿ ಸುಖವಿಲ್ಲವೆಂಬುದನ್ನು ಅಯ್ಯನವರು ಬಲ್ಲರು. ಮುಂದಿನ ಕೆಲಸದ ನೆನಪಾಗಿ ಸುಮ್ಮನೆ ಮೇಲೆ ಎದ್ದು ಅವರು ಮೇಷ್ಟರ ಮನೆಗೆ ಸರಸರನೆ ಓಡುವಂತೆ ನಡೆದರು. ತನ್ನ ಸಾಮಾನುಗಳ ಕೊನೆಯ ಕಂತನ್ನು ಗಾಡಿಗೆ ತುಂಬುತ್ತಿದ್ದ ಅವರಿಗೂ ಪಾರ್ವತಿ ಸತ್ತ ಸುದ್ದಿಯನ್ನು ಕೇಳಿ ಆಘಾತವಾಯಿತು.
‘ಈಗ ಸುಮ್ನೆ ನಿಂತ್ಕಣಾದಲ್ಲ. ಸಂಜೆಯಾಯ್ತು. ಸೌದೆ ಪೌದೆ ಜಮಾಯ್ಸ್‌ಬೇಕು. ನಡೀರಿ, ಜಾತಿಸ್ಥರು ನೀವು ಸೇರಿ ಮೊದ್ಲು ಹೆಣ ವಪ್ಪಾ ಮಾಡಿ.’
ಮೇಷ್ಟರು ಓಡಿಬಂದರು. ಹಿಂದೆಯೇ ಅವರ ಹೆಂಡತಿ ಬಂದರು. ನಂಜಮ್ಮ ಇನ್ನೂ ಮಗಳ ಎದೆಯ ಮೇಲೆ ತಲೆ ಇಟ್ಟುಕೊಂಡು ಬಿಕ್ಕಳಿಸುತ್ತಿದ್ದಳು. ಅಯ್ಯನವರು ಹತ್ತಿರ ಬಂದು ಎಂದರು: ‘ಅವ್ವಾ, ಇದು ಸತ್ತ ಹೆಣ. ಇದು ಬಿಟ್ಟುಬಿಡು. ಇನ್ನು ರಾಮಣ್ಣನ್ನ ನೋಡು. ಅವನಿಗೆ ಗಂಜಿ ಕುಡಿಸದೆ ಹಂಗೇ ಕುಂತಿದೀಯಲ್ಲ. ಏಳು. ಆ ಕಡೆ ತಿರುಕ್ಕ.’
‘ಅಯ್ನೋರೇ, ಪಾರ್ವತೀ…..’
‘ಪಾರ್ವತಮ್ಮ ಸಿವನ ತಾವುಕ್ಕೆ ಹ್ವಾದ್ಲು. ಈಗ ರಾಮಣ್ಣನ್ನ ನೋಡು’-ಎಂದು ಅವರೇ ಪಾರ್ವತಿಯ ತಲೆಯನ್ನು ಎತ್ತಿ ಕೆಳಗೆ ಇಟ್ಟರು. ಮೇಷ್ಟರು ಇನ್ನು ತಡವಾಗಕೂಡದೆಂದು ಹೆಣದ ಕೈ ಕಾಲು ಮಡಿಸಿದರು. ಇದ್ದಕ್ಕಿದ್ದ ಹಾಗೆಯೇ ನಂಜಮ್ಮ ಅಳು ನಿಲ್ಲಿಸಿಬಿಟ್ಟಳು. ಅವಳ ಬಾಯಿಂದ ಮಾತೂ ನಿಂತು ಹೋಯಿತು. ಮೇಲೆ ಎದ್ದು ಅಡಿಗೆ ಮನೆಗೆ ಹೋಗಿ ಗಂಜಿಯನ್ನು ಮತ್ತೆ ಬಿಸಿಮಾಡಿ ತಂದು ಒಳಲೆಗೆ ಹಾಕಿ ರಾಮಣ್ಣನ ತಲೆ ಎತ್ತಿ ತನ್ನ ತೊಡೆಯ ಮೇಲೆ ಇಟ್ಟುಕೊಂಡಳು. ಅವನಿಗೆ ಎಷ್ಟು ಭಾಗ ಪ್ರಜ್ಞೆ ತಪ್ಪಿತ್ತೋ ಅವಳಿಗೆ ಸರಿಯಾಗಿ ತಿಳಿಯಲಿಲ್ಲ. ಕುಡಿಸಿದ ತಿಳಿಗಂಜಿ ಒಳಗೆ ಹೋಯಿತು. ಅವಳ ಮನಸ್ಸಿಗೆ ಧೈರ್ಯವೆನಿಸಿತು. ಅದೇ ಒಳಲೆಗೆ ಹೇಮಾದಿ ಪಾನಕ ಹಾಕಿಕೊಂಡು ಕುಡಿಸಿ ಬೆಚ್ಚಗೆ ಹೊದಿಸಿದಳು. ಕಂಕುಳು, ತೊಡೆಯ ಸಂದುಗಳಿಗೆ ಕೈ ಇಟ್ಟು ನೋಡಿದರೆ ಯಾವುದೂ ಒಡೆದಿರಲಿಲ್ಲ. ಗೆಡ್ಡೆ ಒಡೆದರೆ ಏನಾಗುತ್ತದೆ, ಒಡೆಯದಿದ್ದರೆ ಏನಾಗುತ್ತದೆ, ಒಡೆದಾಗಲೆಲ್ಲ ರೋಗಿ ಸಾಯುತ್ತಾನೆಯೇ, ಒಡೆಯದಿದ್ದಾಗಲೆಲ್ಲ ಬದುಕುತ್ತಾನೆಯೇ ಎಂಬ ಸ್ಪಷ್ಟ ಜ್ಞಾನ ಅವಳಿಗೆ ಇಲ್ಲ. ಆ ಜ್ಞಾನ ಅಲ್ಲಿ ಯಾರಿಗೂ ಇರಲಿಲ್ಲ. ಆದರೆ ಗೆಡ್ಡೆ ಒಡೆದ ನಂತರ ಪಾರ್ವತಿ ಸತ್ತಿದ್ದಳು. ರಾಮಣ್ಣನದು ಒಡೆದಿಲ್ಲ. ಅವನ ಉಸಿರೂ ಕ್ರಮತಪ್ಪಿ ನಡೆಯುತ್ತಿಲ್ಲ. ಆದುದರಿಂದ ಅವಳಿಗೆ ಒಂದು ತೆರನಾದ ಧೈರ್ಯವಾಯಿತು. ಇನ್ನು ಸಿಕ್ಕುವುದು ಸಾಧ್ಯವೇ ಇಲ್ಲದಂತೆ ಜೀವ ಹೊರಟುಹೋದ ಮಗಳ ದೇಹವನ್ನು ಬಿಟ್ಟು, ಈಗ ಅವಳು ಇನ್ನೂ ಕೈಗೆ ಸಿಕ್ಕಿದ್ದ ಮಗನ ತಲೆಯನ್ನು ಹಿಡಿದು ಮೂಕಳಂತೆ ಕೂತುಬಿಟ್ಟಳು.

ಗುಡಿಸಲು ಕಟ್ಟಲು ಅಯ್ಯನವರು ಹೇಗೋ ಅಟ್ಟ ಹತ್ತಿ ಮನೆಯ ಮುಂದೆ ಬಿದಿರು ಗಳುಗಳನ್ನು ತೆಗೆದು ಹಾಕಿದ್ದರು. ಚಟ್ಟ ಕಟ್ಟಲು ಅವೇ ಆಗುತ್ತವೆ. ಮೇಷ್ಟರು ಹೋಗಿ ಇಬ್ಬರು ಜೋಯಿಸರಿಗೂ ಹೇಳಿದರು. ಊರಿನ ಉಳಿದ ಮೂರು ಜನ ಬ್ರಾಹ್ಮಣರಿಗೂ ಸುದ್ದಿ ಮುಟ್ಟಿತು. ಎಲ್ಲರೂ ಊರು ಬಿಡುವ ಗಡಿಬಿಡಿಯಲ್ಲಿದ್ದಾರೆ. ಆದರೆ ಸತ್ತ ಹೆಣವನ್ನು ಬೇಗ ದಹನ ಮಾಡದೆ ಬಿಟ್ಟರೆ ರಾತ್ರಿಯಾಗುತ್ತದೆ. ಇನ್ನು ಬೆಳಗಿನ ತನಕ ಕಾಯಬೇಕು. ಜಾತಿಸ್ಥರು ಓಡಿ ಬಂದರು. ಈಗ ಚೆನ್ನಿಗರಾಯರು ಬರಬೇಕು. ವಿಶ್ವ ದೇವಸ್ಥಾನದಲ್ಲಿ ಒಂದೇ ಉಳಿಯುತ್ತದೆ. ಅದರ ಜೊತೆಗೆ ಯಾರು? ತಾವು ಈಗ ಇಲ್ಲಿಯೇ ಇರಬೇಕು. ಎಂದು ಅಯ್ಯನವರು ನಿಶ್ಚಯಿಸಿದರು. ಯಾರು ಸಿಕ್ಕಿದರೂ ಸರಿ, ಅವರನ್ನು ವಿಶ್ವನ ನಿಗ ನೋಡಲು ಒಪ್ಪಿಸಬೇಕು ಎಂದು ಯೋಚಿಸಿಕೊಂಡು ದೇವಸ್ಥಾನದ ಕಡೆಗೆ ಹೊರಟ ಅವರ ಕಣ್ಣಿಗೆ ಯಾರೂ ತಕ್ಕವರು ಬೀಳಲಿಲ್ಲ. ಊರ ಹೊರಗಿನ ತನ್ನ ಅಂಗಡಿಯ ಬಾಗಿಲಿನಲ್ಲಿ ನರಸಿ ಕೂತಿದ್ದಳು. ಅವಳೇ ಅಯ್ಯನವರನ್ನು ಮಾತನಾಡಿಸಿ-‘ಸ್ಯಾನುಬಾಗ್ರ ಮನೆ ಪಾರ್ವತವ್ವ ಹ್ವಾಗಿಬಿಡ್ತಂತೆ ನಿಜವಾ?’ ಎಂದು ಕೇಳಿದಳು.
ಅಯ್ಯನವರು ಅವಳ ಸಹಾಯವನ್ನೇ ಕೋರಿದರು. ವಿಷಯವನ್ನು ಹೇಳಿ-‘ನೀನು ಹ್ಯಂಗೂ ಊರು ಬಿಡಾಕಿಲ್ಲ. ಅಂಗ್ಡಿ ಬಾಕ್ಲು ಆಕ್ಕಂಡು ಬಾ. ನಾನು ಮತ್ತೆ ಬರಾಗಂಟ ಮಗಾ ನೋಡ್ಕಾಬೇಕು.’
ನರಸಿ ಬಾಗಿಲಿಗೆ ಬೀಗ ಇಕ್ಕಿ ಹಿಂದೆಯೇ ಬಂದಳು. ಅಯ್ಯನವರ ಚೀಲದ ಸುಣ್ಣಕಾಯಿ ಡಬ್ಬಿ ತೆಗೆದು ಚೆನ್ನಿಗರಾಯರು ಆರನೆಯ ಬಾರಿ ಎಲೆಗೆ ಸುಣ್ಣ ಬಳಿಯುತ್ತಾ ಕೂತಿದ್ದರು. ಅಯ್ಯನವರು ಗರ್ಭಗುಡಿಗೆ ಹೋಗಿ ದೇವರ ಹಣತೆ ತಂದು ಹತ್ತಿರ ಇಟ್ಟು ನರಸಿಗೆ ಹೇಳಿದರು: ‘ಕತ್ಲಾದ್ರೆ ಈ ದೀಪ ಹಚ್ಕ. ಈ ಶೀಶೆ ಐತೆ ನೋಡು, ಇದ್ರಾಗೆ ಮೂರು ಮೂರು ಗಂಟೆಗೆ ಒಂದು ಸಲ ಔಸ್ತಿ ಈಟೀಟು ಕುಡ್ಸು. ಮಗ ಹ್ವಟ್ಟೆ ಹಸೀತೈತೆ ಅಂದ್ರೆ ಇದ್ರಲ್ಲಿ ಅಕ್ಕೀತರಿಯೈಯ್ತೆ, ಗಂಜಿ ಮಾಡಿ ಕುಡ್ಸು.’
‘ನಾನೆಲ್ಲ ಮಾಡ್ತೀನಿ. ನೀವು ಹ್ವಾಗಿ.’
ವಿಶ್ವ ಸದ್ದುಮಾಡದೆ ಮಲಗಿತ್ತು. ಅಯ್ಯನವರು ಚೆನ್ನಿಗರಾಯರಿಗೆ-‘ಪಾರ್ವತಮ್ಮ ಹ್ವಾಗಿಬಿಡ್ತು. ನೀವು ನಡೀರಿ. ಮುಂದಿನ ಕೆಲ್ಸ ಆಗ್ಬೇಕು’ ಎಂದರು.
‘ಅದ್ಯಾಕ್ ಹೋಗ್ಬಿಡ್ತ್ರೀ?’
‘ಅದುನ್ನೇ ಕೇಳೂರಂತೆ ಬಲ್ಲಿ’-ಎಂದು ಅವರ ಕೈ ಹಿಡಿದುಕೊಂಡು ಅಯ್ಯನವರು ಹೊರಟುಬಂದರು.
ಅವರು ಬರುವ ವೇಳೆಗೆ ಮನೆಯ ಮುಂದೆ ಚಟ್ಟ ಕಟ್ಟಿ ಸಿದ್ಧವಾಗಿತ್ತು. ಅಣ್ಣಾಜೋಯಿಸರೇ ಮುಂದೆ ನಿಂತು ಎಲ್ಲವನ್ನೂ ನಿರ್ದೇಶಿಸುತ್ತಿದ್ದರು. ಅಯ್ಯಾಶಾಸ್ತ್ರಿಗಳಿಗೆ ಹೆಣವೆಂದರೆ ಮೊದಲಿನಿಂದಲೂ ಸ್ವಲ್ಪ ಭಯ. ಅವರು ಬೀದಿಯ ಹೊರಗೇ ನಿಂತು ಮಾತನಾಡುತ್ತಿದ್ದರು. ನಂಜಮ್ಮ ತನ್ನ ಮಗಳು ಸತ್ತೇ ಇಲ್ಲ, ಅಥವಾ ಈ ಮನೆಯಲ್ಲಿ ನಡೆಯುತ್ತಿರುವ ಶವಸಂಸ್ಕಾರದ ಸಿದ್ಧತೆಗೂ ತನಗೂ ಯಾವ ಸಂಬಂಧವೂ ಇಲ್ಲ ಎಂಬಂತೆ ರಾಮಣ್ಣನ ಮುಖವನ್ನೇ ನೋಡುತ್ತಾ ಗರಬಡಿದವಳಂತೆ ಕುಳಿತಿದ್ದಳು.
‘ಇದರ ವಾರಸುದಾರರು ನಿಜವಾಗಿ ನೋಡಿದರೆ ಇವಳ ಗಂಡ. ಅವರಿಗೆ ತಿಳಿಸದೆ ಸಂಸ್ಕಾರವಾಗಬೌದೇ?’-ಅಣ್ಣಾಜೋಯಿಸರು ಕೇಳಿದರು.

‘ಈಗ ತಿಳಿಸೋದು ಹ್ಯಾಗೆ? ಅದೂ ಪ್ಲೇಗಿನಲ್ಲಿ ಸತ್ತ ಹೆಣ. ಮೈ ಕೈ ಎಲ್ಲ ಕಪ್ಪಗಾಗಿಬಿಡುತ್ತೆ. ಅದರ ಜವಾಬ್ದಾರಿ ನಂದು. ಮಧ್ಯ ನಿಂತು ನಾನೇ ಮದುವೆ ಮಾಡಿಸಿದ್ದೆ. ಅವರಿಗೆ ಆಮ್ಯಾಲೆ ಕಾಗದ ಬರೀತೀನಿ. ಈಗ ತಡ ಮಾಡ್‌ಬ್ಯಾಡಿ’-ಮೇಷ್ಟರು ಉತ್ತರ ಕೊಟ್ಟರು.

ಮೇಷ್ಟರ ಹೆಂಡತಿ ಪಾರ್ವತಿಗೆ ಅರಿಶಿನ ಕುಂಕುಮ ಇಟ್ಟರು. ಮನೆಯಲ್ಲಿದ್ದ ಒಂದು ರವಿಕೆಕಣ ಹೊದಿಸಿಯಾಯಿತು. ಅಯ್ಯನವರು ನೆನ್ನೆ ತನ್ನ ಕೈಲಿ ಕೊಟ್ಟಿದ್ದುದರಲ್ಲಿ ಉಳಿದಿದ್ದ ಐದು ರೂಪಾಯಿಯನ್ನು ನಂಜಮ್ಮ ಮೇಷ್ಟರ ಕೈಲಿ ಹಾಕಿದಳು. ಹೆಣವನ್ನು ಕಟ್ಟಿ ಹೊತ್ತುಕೊಂಡು ಹೋಗುವಾಗ ಮೇಷ್ಟರ ಹೆಂಡತಿ ಕಣ್ಣೀರು ಹಾಕುತ್ತಿದ್ದರು. ಆದರೆ ನಂಜಮ್ಮ ಅಳಲಿಲ್ಲ. ‘ಈ ಮುಂಡೇದು ಅದ್ಯಾಕ್ ಸತ್ಹೋತು?’ ಎಂದು ಚೆನ್ನಿಗರಾಯರು ಕಣ್ಣೊರೆಸಿಕೊಳ್ಳುತ್ತಿದ್ದರು.

ಇವರು ಹೋಗುವಷ್ಟರಲ್ಲಿ ಏರಿಯ ಹಿಂದಿನ ತೋಪಿನಲ್ಲಿ ಸೌದೆ ಜಮಾಯಿಸಿತ್ತು. ಪಾರ್ವತಿ ಮದುವೆಯಾದ ಹುಡುಗಿಯಾದುದರಿಂದ ಸಂಸ್ಕಾರಪೂರ್ವಕ ದಹನವಾಗಬೇಕಾಗಿತ್ತು. ಅಣ್ಣಾಜೋಯಿಸರು ಪರ ಅಪರ, ಎರಡು ಕರ್ಮಗಳನ್ನೂ ಬಲ್ಲವರು. ಅಯ್ಯಾಶಾಸ್ತ್ರಿಗಳು ಶವದ ಹಿಂದೆ ಹೋದರಾದರೂ ಏರಿ ಇಳಿಯುವ ಮೊದಲೇ ಹಿಂದೆ ನಿಂತುಬಿಟ್ಟರು. ಅಲ್ಲಿ ದಹನವಾಗಿ ಎರಡಾಳೆತ್ತರಕ್ಕೆ ಬೆಂಕಿ ಕಂಡಮೇಲೂ ಅಲ್ಲಿಯೇ ನಿಂತಿದ್ದು, ಹೆಣ ಹೊತ್ತವರು ಶ್ಮಶಾನದ ಬಾವಿಯಲ್ಲಿ ಸ್ನಾನಮಾಡಿ ಬರುವತನಕ ಕಾಯ್ದರು. ಕೊನೆಗೆ ಎಲ್ಲರೂ ಒಟ್ಟಿಗೆ ಹಿಂತಿರುಗಿದ ಮೇಲೆ ಅವರನ್ನು ನಿಲ್ಲಿಸಿ ಕೇಳಿದರು: ‘ತಲೆ ಬ್ಯಾಗ ಸಿಡೀತೋ?’
‘ಹೂಂ.’
‘ಚಿನ್ನಯ್ಯ, ಶವ ಹೊತ್ತೋರಿಗೆ ದಕ್ಷಿಣೆ ಎಷ್ಟು ಕೊಟ್ಟೆ?’
‘ಎಂಟೆಂಟಾಣೆ.’
‘ನೋಡು, ನಾನೂ ಜೊತೇಲೇ ಬರಬೇಕಾಗಿತ್ತು. ಇಷ್ಟು ದೂರ ಬಂದೆ. ಅಲ್ಲಿಗೆ ಬಂದ್ರೆ ಈ ಸಾಯಂಕಾಲದ ಹೊತ್ತು ತಣ್ಣೀರು ಮುಳುಗಬೇಕು. ಮೈಗಾಗುಲ್ಲ ಅಂತ ಬರ್‍ಲಿಲ್ಲ. ನನ್ನ ಪಾಲಿನ ದಕ್ಷಿಣೆ ತತಾ.’
ಇದನ್ನು ಕೇಳಿದ ಮೇಷ್ಟರಿಗೆ ಮೈ ಎಲ್ಲ ಉರಿಯುವಂತೆ ಆಯಿತು. ಆದರೆ ಅಣ್ಣಾಜೋಯಿಸರು, ‘ಕೊಡು ಕೊಡು’ ಎಂದು ತಕ್ಷಣ ಹೇಳಿದರು. ಚೆನ್ನಿಗರಾಯರು ತಮ್ಮ ಸೊಂಟಕ್ಕೆ ಸಿಕ್ಕಿಸಿದ್ದ ದುಡ್ಡಿನಲ್ಲಿ ಎಂಟಾಣೆಯ ಬಿಲ್ಲೆ ತೆಗೆದು ವೃದ್ಧ ಶಾಸ್ತ್ರಿಗಳಿಗೆ ಕೊಟ್ಟಾಗ ಅವರಿಗೆ ಎಷ್ಟೋ ಸಂತೋಷವಾಯಿತು.
‘ತಿತಿ ಗಿತಿ ಈ ಊರಲ್ಲೇ ಮಾಡ್ತೀಯೋ ಹ್ಯಾಗೆ?’-ಅವರು ಕೇಳಿದರು.
‘ತಿತಿ ಹುಡುಗಿಯ ಗಂಡನ ಮನೆ ಕೆಲ್ಸವಲ್ವೇನ್ರೀ, ಇವರು ಹ್ಯಾಗೆ ಮಾಡ್ತಾರೆ?’-ಮೇಷ್ಟರು ಉತ್ತರ ಕೊಟ್ಟಾಗ, ‘ಸರಿ ಸರಿ. ಮರೆತಿದ್ದೆ’ ಎಂದು, ಈ ಐದು ಜನರೊಡನೆ ತಾವೂ ಹಿಂತಿರುಗಿ ಹೊರಟರು.

– ೩ –

ಪಾರ್ವತಿಯ ಹೆಣವನ್ನು ತೆಗೆದುಕೊಂಡು ಹೋದಮೇಲೆ ಮನೆಯಲ್ಲಿ ನಂಜಮ್ಮನೊಡನೆ ಅಯ್ಯನವರೊಬ್ಬರೇ ಉಳಿದರು. ಮೇಷ್ಟರ ಮನೆಯ ಸಾಮಾನೆಲ್ಲ ಊರ ಹೊರಗಿನ ಶೆಡ್ಡಿನಲ್ಲಿತ್ತು. ಇನ್ನಷ್ಟು ಸಾಮಾನು ಮನೆಯಲ್ಲಿತ್ತು. ಅದನ್ನು ನೋಡಿಬರುವುದಾಗಿ ಹೇಳಿ ಮೇಷ್ಟರ ಹೆಂಡತಿ ಹೋದರು. ಕುರುಬರಹಳ್ಳಿಗೆ ಹೋಗಿದ್ದ ಅವರ ಮಗ, ಅವರು ಹೋದ ಐದು ನಿಮಿಷಕ್ಕೆ ಹಿಂತಿರುಗಿ ಬಂದು-‘ನಾಳೆ ಬೆಳಿಗ್ಗೆ ಎಲ್ಡಾಳುದ್ದ ಹೊತ್ತಿಗೆ ಎರಡು ಗಾಡಿ ಸ್ವಾಗೆ ತಗಂಡು ಇಬ್ರು ಬತ್ತಾರಂತೆ. ಅಮ್ಮನ ಗುಡಿ ಹತ್ರ ಕಾಯ್ಕಂಡಿದ್ದು, ಎಲ್ಲಿ ಗುಡ್ಳು ಹಾಕ್ಬೇಕು ಅಂತ ಅವ್ರಿಗೆ ತೋರಿಸ್ಬೇಕಂತೆ’ ಎಂದು ಹೇಳಿ ಹೊರಟುಹೋದ.

ರಾಮಣ್ಣನ ಶ್ವಾಸ ಕ್ಷೀಣಗತಿಯಲ್ಲಿ ನಡೆಯುತ್ತಿತ್ತು. ‘ಇನ್ನೊಂದ್ಸಲಿ ಔಸ್ತಿ ಆಕಿದ್ಯೇನವ್ವ?’-ಅಯ್ಯನವರು ಕೇಳಿದರು. ಪಾರ್ವತಿ ಸತ್ತ ಸ್ವಲ್ಪ ಹೊತ್ತಿಗೇ ಎರಡು ಒಳಲೆ ಕುಡಿಸಿದ್ದರೂ, ನಂಜಮ್ಮ ಮತ್ತೆ ಒಳಲೆಯನ್ನು ಕೈಗೆ ತೆಗೆದುಕೊಂಡು ಔಷಧಿ ಬಗ್ಗಿಸಿ ಕುಡಿಸಲು ಹೋದಳು. ಅವನು ಬಾಯಿ ಬಿಡಲಿಲ್ಲ. ಬಲವಂತಮಾಡಿ ಅವುಡು ಬಿಡಿಸಿ ಒಳಲೆಯ ಮೂತಿಯನ್ನು ಒಳಗೆ ನೂಕಿ ಔಷಧಿ ಬಗ್ಗಿಸಿದರೆ ಅದು ಒಳಗೆ ಹೋಗಲಿಲ್ಲ. ‘ಅಯ್ನೋರೇ, ಅವ್ನು ಔಸ್ತಿ ಕುಡಿಯುಲ್ಲ ಅಂತಾನೆ’-ಅವಳೆಂದಳು: ‘ಜ್ವರ ಇಳಿತಿರೂ ಹಾಗಿದೆ, ನೋಡಿ.’

ಅವರು ಹತ್ತಿರ ಬಂದು ಮೊದಲು ಹಣೆ ಮುಟ್ಟಿ ನೋಡಿದರು. ಜ್ವರ ಇಳಿಯುತ್ತಿತ್ತು. ಪ್ಲೇಗು ಆದವರಿಗೆ ಶಾಖ ಇಳಿಯುವುದು ಏರುವುದು ಸಾಮಾನ್ಯ ಸಂಗತಿ. ಆದರೆ ಈಗ ಅದು ಪೂರಾ ಇಳಿದಂತೆ ಕಾಣುತ್ತಿತ್ತು. ಜ್ವರ ಪೂರ್ತಿ ಬಿಟ್ಟುಹೋಗುವುದು ರೋಗ ವಾಸಿಯಾಗುವ ಚಿಹ್ನೆಯೇ ಇರಬಹುದು. ‘ಅವ್ವಾ, ಮನ್ಲಿ ಇಬ್ಬರಿಗೆ ಬಡಿದಿತ್ತು. ಒಂದು ಬಲಿಯಾಯ್ತು. ರಾಮಣ್ಣ ಉಳ್ಕಳೂ ಹಂಗೆ ಕಾಣ್ತದೆ. ಜ್ವರ ಇಳೀತೈತೆ’-ಎಂದು ಅವರು ಹೇಳಿದುದನ್ನು ಕೇಳಿದ ನಂಜಮ್ಮನಿಗೆ, ಸತ್ತ ಪಾರ್ವತಿ ಬದುಕಿ ಬಂದಷ್ಟು ಸಮಾಧಾನವಾಗಿ, ‘ಅಷ್ಟಾದ್ರೂ ಆದ್ರೆ ಕಾಳಮ್ಮನಿಗೆ ಹೊಸ ಸೀರೆ ಉಡಿಸಿ ಮೆರವಣಿಗೆ ಮಾಡುಸ್ತೀನಿ’ ಎಂದಳು. ರೋಗಿಯ ಮೈ ಶಾಖ ನಿಮಿಷ ನಿಮಿಷಕ್ಕೆ ಇಳಿಯುತ್ತಿತ್ತು. ಸುಮಾರು ಐದು ನಿಮಿಷ ಅಯ್ಯನವರಿಗೆ ಸಹ ಇದು ಒಳ್ಳೆಯ ಸೂಚನೆ ಎಂದೇ ತೋರುತ್ತಿತ್ತು. ನಂತರ ಅನುಮಾನ ಬಂದ ಅವರು ಹೊದಿಕೆಯೊಳಕ್ಕೆ ಕೈಹಾಕಿ ಅವನ ಕಾಲುಗಳನ್ನು ಮುಟ್ಟಿ ನೋಡಿದರೆ ತಣ್ಣಗಾಗುತ್ತಿದ್ದುವು. ‘ಒಂದೀಟ್ ಬೂದಿ ಬೇಕು. ಎಲ್ಲೈತೆ?’-ಅವರು ಕೇಳಿದರು.

ಅವರೇ ಎದ್ದು ಓಡಿಹೋಗಿ ಒಂದು ಹಿಡಿ ಬೂದಿ ತಂದು ರಾಮಣ್ಣನ ಎರಡು ಕಾಲಿಗೂ ಹಾಕಿ ತಿಕ್ಕಲು ಶುರುಮಾಡಿದರು. ಐದು ನಿಮಿಷ ತಿಕ್ಕಿದರೂ ಮತ್ತೆ ಶಾಖ ಏರಲಿಲ್ಲ. ಕಾರಣವನ್ನು ಅವರು ಬಾಯಿಬಿಟ್ಟು ಹೇಳಲಿಲ್ಲ. ಹೊದಿಕೆ ಸರಿಸಿ ನೋಡಿದರೆ ತೊಡೆ, ಕಂಕುಳುಗಳ ಗೆಡ್ಡೆಗಳೆಲ್ಲ ಬಾತುಕೊಂಡೇ ಇದ್ದವು. ಯಾವುದೂ ಒಡೆದಿರಲಿಲ್ಲ. ಮತ್ತೆ ಹೊದಿಕೆ ಹೊದಿಸಿ ಬಲಗೈ ನಾಡಿ ಹಿಡಿದು ನೋಡಿದರು. ತುಂಬ ಕ್ಷೀಣವಾಗಿ, ಸಿಕ್ಕಿಯೂ ಸಿಕ್ಕದಂತೆ ನಡೆಯುತ್ತಿತ್ತು. ಅವನಿಗೂ ಕಾಶಿ ಗಂಗೆ ಕುಡಿಸಬೇಕು. ಅದನ್ನು ಬಾಯಿ ಬಿಟ್ಟು ಈ ತಾಯಿಗೆ ಹೇಳುವ ಗಟ್ಟಿತನ ಅವರಿಗಿರಲಿಲ್ಲ. ಆದರೆ ತಿಳಿದೂ ತಿಳಿದೂ ಹಾಗೆಯೇ ಬಿಟ್ಟರೆ ಹುಡುಗ ಬಾಯಿಗೆ ನೀರಿಲ್ಲದೆ ಸಾಯುತ್ತಾನೆ. ಪ್ರಾಣವೇ ಹೋಗುವಾಗ ಬಾಯಿಗೆ ನೀರು ಬಿಟ್ಟರೆ ಏನು, ಬಿಡದಿದ್ದರೆ ಏನು? ಅದೆಲ್ಲ ನಮ್ಮ ಭ್ರಮೆಯಲ್ಲವೆ?- ಎಂಬ ಪ್ರಶ್ನೆ ಮನಸ್ಸಿನಲ್ಲಿ ಹುಟ್ಟಿದರೂ, ‘ನನ್ನ ಮಗೂನ ಬಾಯಿಗೆ ನಾನು ನೀರೂ ಬಿಡಲಿಲ್ಲ’ ಎಂದು ಅನಂತರ ತಾಯಿಯೇ ಗೋಳಿಡುವ ಪ್ರಸಂಗ ಬೇಡವೆಂದು ಯೋಚಿಸಿದ ಅವರು, ಹತ್ತಿರದಲ್ಲಿಯೇ ಇದ್ದ ಕಾಶಿಯ ಥಾಲಿ ಕೈಗೆ ತೆಗೆದುಕೊಂಡು ಒಳಲೆಯ ಔಷಧಿ ಚೆಲ್ಲಿ ಒರೆಸಿ ಗಂಗೆಯನ್ನು ತುಂಬಿದರು. ಅದನ್ನು ಅವಳ ಕೈಗೆ ಕೊಟ್ಟು ತಾವು ಹುಡುಗನ ತುಟಿ ಬಿಡಿಸಿ, ‘ಅವ್ವ, ಇದ ಒಳಗೆ ಬಿಡು’ ಎಂದಾಗ ಅವಳಿಗೆ ಅರ್ಥವಾಯಿತು.

‘ರಾಮಣ್ಣನೂ ಹೋಗ್ತಾನೆಯೇ ಅಯ್ನೋರೇ?’-ಅವಳು ಕೇಳುತ್ತಿರುವಾಗಲೇ, ‘ಈಗ ಅಳಬ್ಯಾಡ್ದು. ನಾನು ಹೇಳ್ದಂಗೆ ಕೇಳು’ ಎಂದು, ಹೆಸರಿಗೆ ಒಳಲೆಯನ್ನು ಅವಳ ಕೈಯಿಂದ ಮುಟ್ಟಿಸಿ ತಾವೇ ಗಂಗೆಯನ್ನು ಬಿಟ್ಟರು. ಅದರಲ್ಲಿ ಎಷ್ಟು ಭಾಗ ಒಳಗೆ ಹೋಯಿತೋ ಎಷ್ಟು ಹೊರಗೆ ಬಂದಿತೋ ತಿಳಿಯಲಿಲ್ಲ. ಎಡಗೈಯನ್ನು ಮೂಗಿನ ಹತ್ತಿರ ಹಿಡಿದು ಬಲಗೈಯಿಂದ ನಾಡಿ ಹಿಡಿದು ರೋಗಿಯ ಮುಖವನ್ನೇ ನೋಡುತ್ತಾ ಕುಳಿತರು. ನಂಜಮ್ಮ ದೆವ್ವ ಬಡಿದವಳಂತೆ ತನ್ನ ಎರಡನೆಯ ಕಂದನ ಮುಖದಮೇಲೆ ದೃಷ್ಟಿಯನ್ನು ನಾಟಿಸಿ ಕುಳಿತಿದ್ದಳು. ಇಬ್ಬರೂ ಎಷ್ಟೇ ಎಚ್ಚರದಿಂದ ನೋಡುತ್ತಿದ್ದರೂ ಪ್ರಾಣವಾಯು ಯಾವಾಗ ಕೊನೆಯ ಸಲ ಹೊರಬಂದಿತೆಂಬುದು ಯಾರಿಗೂ ತಿಳಿಯಲಿಲ್ಲ. ಅಯ್ಯನವರ ಬೆರಳ ಸ್ಪರ್ಶದಿಂದ ಆಳ, ಆಳ, ಆಳಕ್ಕೆ ಇಳಿದು ಮರೆಯಾಗುತ್ತಿದ್ದ ನಾಡಿಯು ಸಹ ಮತ್ತೆ ಮೇಲೆ ಬಾರದ ಪಾತಾಳಕ್ಕೆ ಇಳಿದುಹೋಯಿತು.

ಈಗ ಅಯ್ಯನವರು ಮಾತನಾಡಲೇಬೇಕು. ಇದ್ದ ಸಂಗತಿಯನ್ನು ಹೇಳಿ ಹೆಣದ ಕೈ ಕಾಲು ಮಡಿಸಬೇಕು. ಹೆಚ್ಚು ಹೊತ್ತಾದರೆ ಕೈಕಾಲು ಕೊರಡಾಗಿ ಮಡಿಸಲು ಆಗುವುದಿಲ್ಲ. ಆದರೆ ಹೇಗೆ ಮಾತನಾಡುವುದು? ಅವಳಿಗೆ ವಿಷಯ ಅರ್ಥವಾಗದೆ ಇಲ್ಲ. ಆದರೆ ಪ್ರಜ್ಞೆಗೆ ತಿಳಿದ ಅರ್ಥವು ಇನ್ನೂ ಆಳಕ್ಕೆ ಇಳಿಯುವುದು ಆಗುತ್ತಿರಲಿಲ್ಲ. ಪಾರ್ವತಿ ಸತ್ತಾಗ ಮಾಡಿದಂತೆ ಈಗ ಅವಳು ಅಳುತ್ತಿರಲಿಲ್ಲ. ರಾಮಣ್ಣನ ಎದೆಯ ಮೇಲೆ ತನ್ನ ಮುಖವಿಡಲಿಲ್ಲ. ಅವನ ಕೈಯನ್ನೂ ಹಿಡಿದುಕೊಳ್ಳಲಿಲ್ಲ. ತಲೆ ಮಾತ್ರ ಅವಳ ತೊಡೆಯ ಮೇಲೆಯೇ ಇತ್ತು.

ಇಷ್ಟು ಹೊತ್ತಿಗೆ ಪಾರ್ವತಿಯ ದಹನಸಂಸ್ಕಾರ ನಡೆದು ಅವರು ಹಿಂದಕ್ಕೆ ಹೊರಟಿರಬಹುದು. ಈಗಲೇ ಅವರಿಗೆ ಸಮಾಚಾರ ತಿಳಿಸಬೇಕು. ಮತ್ತೆ ಸೌದೆ ಹೊಂದಿಸಿ ಕಳಿಸಬೇಕು. ಆಗಲೇ ರಾತ್ರಿಯಾಗಿದೆ. ಈ ಹೊತ್ತಿನಲ್ಲಿ ಹೆಣ ಹೊತ್ತು ಒಯ್ದು ಸುಡುತ್ತಾರೆಯೋ ಅಥವಾ ಬೆಳಗಿನ ತನಕ ಕಾಯುತ್ತಾರೆಯೋ. ಹೇಗಾದರೂ ಸರಿ, ಕೈ ಕಾಲನ್ನಂತೂ ಮಡಿಸಲೇಬೇಕು. ಅವರೆಂದರು: ‘ಅವ್ವಾ, ಪ್ರಾಣ ಸಿವನ ಪಾದ ಸೇರಿದ ಮ್ಯಾಲೆ ಗೂಡಿನಲ್ಲೇನೈತೆ? ಕೈ ಕಾಲು ಮಡುಸ್ತೀನಿ.’
‘ನಿಮ್ಮ ಕೆಲ್ಸ ನೀವು ಮಾಡಿ ಅಯ್ನೋರೇ’-ಎಂದು ಹೇಳಿದ ತಾಯಿ, ಮಗನ ತಲೆಯನ್ನು ಮೆಲ್ಲಗೆ ಕೆಳಗೆ ಸರಿಸಿ, ತಾನೇ ದೂರ ಸರಿದಳು. ಅಯ್ಯನವರು ಮುಂದಿನ ಕೆಲಸ ಮಾಡಿ ಹೊದಿಕೆ ಮುಚ್ಚಿಬಿಟ್ಟರು. ಅಷ್ಟರಲ್ಲಿ ಹೊರಗಿನಿಂದ ಮೇಷ್ಟರು, ಚೆನ್ನಿಗರಾಯರು ಬಂದರು.
‘ಮೇಷ್ಟ್ರೆ, ರಾಮಣ್ಣಂದೂ ಉಸುರು ಮುಗೀತು, ಮುಂದಿನ ಕೆಲಸ ನೋಡಿ’-ಅಯ್ಯನವರೆಂದರು.
‘ಅಯ್ಯೋ ದೇವ್ರೇ.’
‘ದೇವ್ರು ತಾವುಕ್ಕೇ ಹ್ವಾದುದ್ದು. ಈಗ ಇನ್ನೇನು ಮಾತಾಡ್ಯೂ ಸುಕ್ವಿಲ್ಲ. ದೋಸ್ರನ್ನ ಕರೀರಿ.’
ಮೇಷ್ಟರು ಅಣ್ಣಾಜೋಯಿಸರ ಶೆಡ್ಡಿಗೆ ಓಡಿದರು. ಅಷ್ಟರಲ್ಲಿ ಜೋಯಿಸರ ಮನೆಯವರೆಲ್ಲ ಊರ ಮನೆ ಖಾಲಿಮಾಡಿ ಶೆಡ್ಡಿಗೆ ಸಾಮಾನು ಸಾಗಿಸಿದ್ದರು. ಚೆನ್ನಿಗರಾಯರಿಗೆ ಏನೂ ತಿಳಿಯಲಿಲ್ಲ. ಅವರ ಕಣ್ಣಿನಲ್ಲಿ ನೀರು ತುಂಬಿಕೊಂಡಿತು. ರಾಮಣ್ಣನ ಶವದ ಮುಂದೆ ಬಂದು ಕಣ್ಣಿನಲ್ಲಿ ನೀರು ಸುರಿಸುತ್ತಾ ಕುಕ್ಕುರುಗಾಲಿನಲ್ಲಿ ಕೂತುಬಿಟ್ಟರು.
ಮೇಷ್ಟರು ಅಣ್ಣಾಜೋಯಿಸರೊಡನೆ ಹಿಂತಿರುಗಿದರು. ಅಯ್ಯನವರು ಜೋಯಿಸರನ್ನು ಕೇಳಿದರು: ‘ಸ್ವಾಮೀ, ರಾತ್ರಿಯಾಗೇ ಮುಂದಿನ ಕೆಲ್ಸ ಆಯ್ತದಾ? ಬೆಳಿಗ್ಗೆಗಂಟಾ ಹೆಣಾ ಮಡಗ್‌ಬೇಕಾ?’
‘ರಾತ್ರಿ ಹೊತ್ನಲ್ಲಿ ಹ್ಯಾಗೆ ಆಗುತ್ತೆ?’

ಮೇಷ್ಟರು ನಡುವೆ ಎಂದರು: ‘ದೊಡ್ಡ ರೋಗ ಬಂದಿತ್ತಲ್ಲಾ, ಬೆಂಕಿಜ್ವರ, ಆಗ ಹಗಲೂ ಇಲ್ಲ ರಾತ್ರಿಯೂ ಇಲ್ಲ. ಹೆಣ ಬಿದ್ದ ಬಿದ್ದ ಹಾಗೆಲ್ಲ ತಗಂಡು ಹೋಗಿ ಹೋಗಿ ಸುಡ್ತಿದ್ರು. ಎಲ್ರಿಗೂ ಬ್ಯಾರೆ ಬ್ಯಾರೆ ಸೌದೆ ಒದಗಿಸುಕ್ಕೆ ಆಗ್ದೆ ಎರಡು ಮೂರು ಹೆಣಗಳನ್ನ ಒಟ್ಟೊಟ್ಟಿಗೆ ಹಾಕಿ ಬೆಂಕಿ ಹತ್ತುಸ್ತಿದ್ರು. ಊರಿಗೆ ಮಾರಿ ಹೊಕ್ಕಿರೂವಾಗ ಶಾಸ್ತ್ರ ಸಂಬಂಧ ಒಂದೇ ಥರಾ ನೋಡುಕ್ಕಾಗುಲ್ಲ. ಈಗ್ಲೇ ಮಾಡಾಣ.’

ಈ ಮಾತಿಗೆ ಜೋಯಿಸರು ಒಪ್ಪಿದರು. ಮೊದಲು ಬಂದ ವಾಹಕರನ್ನೇ ಕರೆಯಲು ಜೋಯಿಸರು ಹೋದರು. ಮನೆಯ ಮುಂದೆ ಹೇಗೂ ಬಿದಿರುಗಳು ರಾಶಿ ಬಿದ್ದಿದ್ದವು. ಮೇಷ್ಟರು ವಾಹನ ತಯಾರಿಸಲು ನಿಂತರು. ಸೌದೆ ಜಮಾಯಿಸಿ ಕಳಿಸಲು ಅಯ್ಯನವರು ಹೊರಟರು.
ರಾಮಣ್ಣ ಮುಂಜಿಯಾದ ಹುಡುಗ. ಮದುವೆಯಾದ ಅಕ್ಕನಿಗೆ ಆದಂತೆ ಅವನಿಗೂ ಈ ದಿನ ಸಂಸ್ಕಾರಪೂರ್ವಕ ದಹನವಾಗಬೇಕು. ಶವವಾಹಕರು ಬಂದರು. ಸ್ವಲ್ಪ ಹೊತ್ತಿನಲ್ಲಿ ಹಿಂತಿರುಗಿದ ಅಯ್ಯನವರು-“ಸೂರೇಗೌಡನ ಕೊಪ್ಪಲಲ್ಲಿ ಕೊರಡು, ಚಿಪ್ಪು, ಮಟ್ಟೆ ಬೇಕಾದಷ್ಟಿವೆ.‘ತುಂಬ್ಕಂಡು ಹ್ವಾಗಿ; ನಾವು ಹ್ಯಂಗೂ ಊರು ಬಿಡ್ತೀವಿ’ ಅಂದ. ಅವ್ನುದ್ದೇ ಗಾಡೀನೂ ಕೊಟ್ಟ. ಅವ್ನ ಮಗ, ಅವ್ನೂ, ಇನ್ನೂ ಒಂದೆಲ್ಡು ಜನ ಸೇರಿ ಗಾಡಿಗೆ ತುಂಬ್ತಾ ಅವ್ರೆ. ಅವ್ರು ಸೀದಾ ಮಶಾಣುಕ್ಕೇ ಗಾಡಿ ಹ್ವಡೀತಾರೆ. ನೀವು ನಡೀರಿ.’
ಎಲ್ಲವೂ ಆಯಿತು. ಇನ್ನು ಹೆಣ ಎತ್ತಿ ಹೊರಗೆ ತಂದು ಚಟ್ಟದಮೇಲೆ ಮಲಗಿಸಿ ಬಿಗಿದು ಬಾಯಿಗೆ ಅಕ್ಕಿ ಕಾಳು ಹಾಕಿ ಹೊತ್ತುಕೊಂಡು ಹೋಗುವುದೊಂದೇ ಬಾಕಿ. ಆದರೆ ಅಯ್ಯನವರ ಕಣ್ಣಿಗೆ ನಂಜಮ್ಮ ಬೀಳಲಿಲ್ಲ. ‘ನಂಜವ್ವ ಎಲ್ಲಿ?’-ಎಂದು ಅವರು ಕೇಳಿದರೆ ಯಾರಿಗೂ ಗೊತ್ತಿಲ್ಲ. ಗಡಿಬಿಡಿಯಲ್ಲಿ ಯಾರೂ ಅವಳನ್ನು ಗಮನಿಸಿರಲಿಲ್ಲ.
‘ಎಲ್ಲಾದ್ರೂ ಕೆರೆಯೋ ಬಾವಿಯೋ ಅದೇನು ಕತೆಯೋ ನೋಡಿ’-ಜೋಯಿಸರು ತಕ್ಷಣ ಎಚ್ಚರಿಸಿದರು.
‘ಇಲ್ಲೇ ಎಲ್ಲಾದ್ರೂ ನೀರು ಗೀರು ಕಡೆಗೆ ಹೋಗಿರ್ಬೌದು’-ಮೇಷ್ಟರು ಊಹಿಸಿದರು.

ಅಯ್ಯನವರಿಗೆ ಬೇರೆಯ ರೀತಿಯಲ್ಲಿ ಹೊಳೆಯಿತು. ‘ನೀವು ಅಲ್ಲೆಲ್ಲಿ ಬೇಕಾದ್ರೂ ನೋಡಿ. ನಾನು ಏರಿಮ್ಯಾಲಿನ ನನ್ನ ಗುಡಿಗೆ ಹೋಗಿ ನೋಡ್ತೀನಿ. ಕೊನೆ ಮಗ ಮನಗೈತಿ. ನಂಜವ್ವ ಅಲ್ಲಿಗೇ ಓಗಿರ್‌ಬೈದು’-ಎಂದವರೇ ಬೇಗ ಬೇಗ ಹೆಜ್ಜೆ ಹಾಕಿ, ನಡುನಡುವೆ ಓಡುಗಾಲು ಹಾಕುತ್ತಾ ಊರ ಮುಂದಿನಿಂದ ಸಾಗಿ ಏರಿಯ ಮೇಲೆ ನಡೆದು ನಡು ಏರಿಯ ಮೇಲಿದ್ದ ತಮ್ಮ ಗುಡಿಗೆ ಬಂದರು. ಬಾಗಿಲನ್ನು ಹೊಕ್ಕಾಗ ಅವರ ಊಹೆ ನಿಜವಾಗಿದ್ದುದು ಕಾಣಿಸಿತು. ವಿಶ್ವ ಕಂಬಳಿಯ ಮೇಲೆ ಮಲಗಿದೆ. ಅದರ ತಲೆ ನರಸಿಯ ತೊಡೆಯ ಮೇಲಿದೆ. ನಂಜಮ್ಮ ಮೂರು ಮಾರು ದೂರದಲ್ಲಿ ಕಂಬದ ಹತ್ತಿರ ಕೂತು ಮಗುವನ್ನೇ ನೋಡುತ್ತಿದ್ದಾಳೆ. ಅವಳ ಕಣ್ಣಿನಲ್ಲಿ ನೀರಿಲ್ಲ; ದೃಷ್ಟಿ ದೆವ್ವ ಬಡಿದಂತಿದೆ.

ನರಸಿ ಅಯ್ಯನವರಿಗೆ ಹೇಳಿದಳು: “ನಂಜವ್ವಾರು ಕತ್ಲಲ್ಲಿ ಓಡ್ಯಲೇ ಬಂದ್ರು. ನಾನು ಮಗೀಗೆ ಗಂಜಿ ಕುಡುಸ್ತಾ ಕುಂತಿದ್ದೆ. ಬಂದು ಮಗನ ತಲೇನ ತ್ವಡೇಮ್ಯಾಲೆ ಆಕ್ಯಂಡ್ರು. ಆಮ್ಯಾಲೆ ಅದೇನು ಗ್ಯಾನ ಬಂತೋ ಏನೋ, ನನ್ನ ಹತ್ರುಕ್ ಕರ್ದು, ‘ನರಸಮ್ಮಾ, ಈ ಮಗ ನಂದಲ್ಲ. ನಂದು ಅಂದ್ರೆ ಪಾಪಿಸೂಳೇಮಗ ದೇವ್ರು ಕುಂಡೊಯ್ತಾನೆ. ನಿಂಗೆ ಕೊಟ್ ಬಿಡ್ತೀನಿ. ನಿಂಗೆ ಹ್ಯಂಗೂ ಮಕ್ಳಿಲ್ಲ. ನೀನೇ ಸಾಕ್ಯಂಡ್‌ಬುಡು. ಇಲ್ಲಿ ಅತ್ರ ಕುಂತ್ಕ ಬಾ. ನಿನ್ನ ತ್ವಡೆಮ್ಯಾಲೆ ಆಕಿ, ನಂಗೂ ಇದ್ಕೂ ಏನೂ ಸಂಬಂಧವಿಲ್ಲ. ಇದು ನನ್ನ ಮಗ ಅಲ್ಲ, ನಾನು ಇದ್ರ ಅವ್ವ ಅಲ್ಲ ಅಂತ ಏಳ್ತೀನಿ’ ಅಂದ್ರು. ಮಗಾನ ನನ್ನ ತ್ವಡೆಮ್ಯಾಲೆ ಆಕಿ ಈಗ ದೂರ ಹ್ವಾಗಿ ಅಲ್ಲಿ ಕುಂತವ್ರೆ ನೋಡಿ.”
‘ಹಂಗೆ ಮಾಡು ನರಸವ್ವ. ರಾಮಣ್ಣನೂ ಸತ್ಹೋಯ್ತು. ನಾವು ಮುಂದ್ಲ ಕೆಲ್ಸುಕ್ಕೆ ಓಯ್ತೀವಿ. ನೀನು ಇಬ್ರುನ್ನೂ ನೋಡ್ಕಂತಿರು. ಯಾರಾದ್ರೂ ಗಂಡುಸ್ರನ್ನ ಕಳುಸ್ಲಾ?’
‘ನಾನಿರುವಾಗ ಏನು ಹ್ಯದ್ರಿಕೆ? ಯಾವ್ನೂ ಬ್ಯಾಡ.’
‘ಜ್ವರ ಹೆಂಗೈತಿ?’-ಮಗುವಿನ ಹಣೆಮುಟ್ಟಿ ನೋಡಿ ಅಯ್ಯನವರು ಕೇಳಿದರು: ‘ತೊಡೆ ಸಂದೀಲಿ ನೋವು ಗೀವು ಅಂತದಾ?’
‘ಈಗೊಂದು ವಸಿ ಹೊತ್ನಲ್ಲಿ ಮಾತಾಡ್ತು. ನಾನೇ ತ್ವಡೆಸಂದಿ ಇಸುಗಿ ನೋಡಿ ಕೇಳ್ದೆ. ಏನೂ ಇಲ್ವಂತೆ. ಜ್ವರ ಮಾತ್ರ ತಕ್‌ತಕ ಅಂತ ಕುದೀತೈತೆ.’
‘ಹ್ಯಂಗಾದ್ರೂ ಸರಿ. ಎಲ್ಡೆಲ್ಡು ಗಂಟೆ ಮೂರು ಮೂರು ಗಂಟೆಗೆ ಔಸ್ತಿ ಕುಡ್ಸು’- ಅವಳಿಗೆ ಹೇಳಿ, ‘ನಂಜವ್ವಾ, ಹೆದರ್‌ಬ್ಯಾಡ. ಇನ್ನೂ ಗ್ಯಡ್ಡೆ ಕಂಡಿಲ್ಲ. ಔಸ್ತಿ ಕಚ್ಚಿಯೈಯ್ತೆ’ ಎಂದು ಸಮಾಧಾನ ಹೇಳಿ ಅಯ್ಯನವರು ಊರೊಳಕ್ಕೆ ಓಡಿ ನಡೆದರು.

ಮೇಷ್ಟರು ಮಾತ್ರ ಊರಮುಂದೆ ಹೆಂಗಸರು ಬಹಿರ್ಭೂಮಿಗೆ ಹೋಗುವ ಗಿಡಗುಚ್ಚಿಗಳ ಕಡೆ ಹೋಗಿ-‘ನಂಜಮ್ನೋರೇ’ ಎಂದು ಕೂಗಿ ಹಿಂತಿರುಗಿದ್ದರು. ಉಳಿದವರು ಅಲ್ಲಿಯೇ ಕೂತು ಈ ಮನೆಗೆ ಬಂದ ಗ್ರಹಚಾರವನ್ನು ಮಾತನಾಡಿಕೊಳ್ಳುತ್ತಿದ್ದರು. ಅಯ್ಯನವರು ಬಂದವರೇ-‘ನಂಜವ್ವ ಗುಡೀಲೈತಿ. ನೀವು ಮುಂದಿನ ಕೆಲ್ಸ ಮಾಡ್ರಿ’ ಎಂದರು. ನಾಲ್ವರು ಚಟ್ಟ ಎತ್ತಿದರು. ಜೊತೆಯಲ್ಲಿ ಚೆನ್ನಿಗರಾಯರು ಹೊರಟರು. ಅಲ್ಲಿ ಇನ್ನೂ ಉಳಿದಿದ್ದ ಹೇಮಾದಿ ಪಾನಕದ ಶೀಶೆ, ಕೈಗೆ ಸಿಕ್ಕಿದ ಒಂದು ಹಾಸಿಗೆ, ಎರಡು ಕಂಬಳಿಗಳನ್ನು ಜೋಡಿಸಿಕೊಂಡು ಮನೆಯ ಬಾಗಿಲಿಗೆ ಬೀಗ ಹಾಕಿ ಅಯ್ಯನವರು ಊರ ಮುಂದಿನಿಂದ ಏರಿಯ ಮೇಲಿನ ಗುಡಿಯ ಕಡೆಗೆ ಹೊರಟರು. ಅಷ್ಟರಲ್ಲಿ ಹೊಸ ಹೆಣವನ್ನು ಶ್ಮಶಾಣಕ್ಕೆ ಹೊತ್ತು ಇಳಿಸಿಯೂ ಇರುತ್ತಾರೆ. ಹಳೆಯ ಹೆಣದ ಉರಿ, ತೋಟದ ತೆಂಗಿನ ಮರಗಳ ಸಂದಿನಿಂದ ಕಾಣುತ್ತಿತ್ತು. ಏರಿಯ ಕೆಳಗೆ ಇಳಿಯುವ ಜಾಗದಲ್ಲಿ ವೃದ್ಧ ಪುರೋಹಿತ ಅಯ್ಯಾಶಾಸ್ತ್ರಿಗಳು ಒಬ್ಬರೇ ಸೊಂಟ ಬಗ್ಗಿಸಿಕೊಂಡು ನಿಂತಿದ್ದುದು ಕತ್ತಲೆಯಲ್ಲೂ ಕಾಣಿಸಿತು.
*****
ಮುಂದುವರೆಯುವುದು

ಕೀಲಿಕರಣ: ಸೀತಾಶೇಖರ್
ಕೀಲಿಕರಣ ದೋಷ ತಿದ್ದುಪಡಿ: ರೋಹಿತ್ ಆರ್