ದ್ವೀಪ – ೨

“ಹೆಣ್ಣೆ, ನಾನು ನೋಡ್ಕೊಂಡುಬರ್ತೇನೆ ಅಂತ ಹೇಳಿದ್ದಲ್ವ. ನೀ ಯಾಕೆ ಬಸವನ ಹಿಂದೆ ಬಾಲ….”

“ಬಸವನೋ ಗೂಳಿಯೋ, ನಿಮಗೆ ಮಾತು ನಾನು ಹೇಳಿಕೊಡಬೇಕ, ಬಾಳ ದಿವ್ಸ ಆತು ಮೇಲೆ ಹೋಗಿ, ಅದಕ್ಕೆ ಹೊರಟೆ….”
“ಹ್ಞೂಂ ಬಾ, ಹುಲಿಗಿಲಿ ಬಂತು ಅಂದ್ರೆ ಸಹಾಯಕ್ಕೆ ನಾ ಬರೋವ್ನಲ್ಲ…. ತಿಳಿತಾ?”
“ಹುಲಿಯಾ? ನೀವೇ ದೊಡ್ ಹುಲಿ…. ಬೇರೊಂದು ಬರೋದುಂಟಾ?”
ಅವಳು ಕಿಲಕಿಲನೆ ನಕ್ಕಾಗ ಗಣಪಯ್ಯ ಕೈಚಾಚಿದ. ಅವಳು ವಾಲಿಕೊಂಡಳು, ಸಂಜೆಗತ್ತಲಲ್ಲಿ ಅವರು ವೇಗವಾಗಿಯೇ ಹೆಜ್ಜೆ ಹಾಕಿದರು.

ಸೀತಾಪರ್ವತದ ಮೇಲೆ ನಿಂತು ನೋಡಿದರೆ ಸುತ್ತಮುತ್ತಲಿನ ಮೂರು – ನಾಲ್ಕು ಮೈಲಿಯ ಪ್ರದೇಶವೆಲ್ಲ ಕಾಣುತ್ತಿತ್ತು. ಒಂದು ಬದಿಯಲ್ಲಿ ಈಗ ಶರಾವತಿ ನದಿಯು ಬಹಳಷ್ಟು ಜಾಗವನ್ನು ಆಕ್ರಮಿಸಿಕೊಂಡಿತ್ತು. ಮೂರು ನಾಲ್ಕು ಗುಡ್ಡಗಳನ್ನು ತೆಕ್ಕೆಯಲ್ಲಿ ಹಿಡಿದುಕೊಂಡಂತೆ ಲಿಂಗನಮಕ್ಕಿ ಅಣೆಕಟ್ಟು ಎದ್ದುನಿಂತಿತ್ತು. ಈ ಅಣೇಕಟ್ಟಿಗೆ ಆತುಕೊಂಡೇ ಭಾರಿ ಜಲರಾಶಿಯೊಂದು ಕಾಡು – ಕಣಿವೆಯಲ್ಲಿ ಸಾಗರೋದೋಪಾದಿಯಲ್ಲಿ ಮಲಗಿತ್ತು. ಈ ಜಲರಾಶಿಯ ಒಂದು ಅಂಚು ತಾವು ನಿಂತ ಗುಡ್ಡದ ಪಾದದವರೆಗೂ ಮೈ ಚಾಚಿತ್ತು. ಇನ್ನೊಂದೆಡೆಯಲ್ಲಿ ಕಾಡು, ಗುಡ್ಡಗಳು, ದೂರದ ಯಾವುದೋ ಮಿಣುಕು ದೀಪ. ಇನ್ನೆಲ್ಲೋ ಹತ್ತಿಕೊಂಡ ಬೆಂಕಿ, ಹೊಗೆ. ಅತ್ತ ಮರೆಯಾದ ಸೂರ್ಯನ ಅಳಿದುಳಿದ ಕೆಂಬಣ್ಣ ಬೆಳ್ಳೀ ಎಂದು ಕೂಗುತ್ತ ನಾಗವೇಣಿ ಸೀತಾರಾಮರ ಮಂಚದ ಮೇಲೆ ಮೈ ಚಾಚಿದಾಗ ಗಣಪಯ್ಯ ಅವಳ ಜೊತೆಗೇನೆ ಮೈಯೊರಗಿಸಿ ಅವಳ ತುಟಿಗಳಿಗೆ ತನ್ನ ತುಟಿಗಳನ್ನೊತ್ತಿದ. ನಾಗವೇಣಿ ಬೆಳ್ಳೀ ಎಂದು ಕೂಗಿದ್ದು ಗುಹೆಯ ಹಿಂಬದಿಯಲ್ಲಿದ್ದ ಹಸುವಿನ ಕಿವಿಗೆ ಬಿದ್ದಿತೇನೋ ಅದು ಒಡತಿಯ ದನಿಯನ್ನು ಗುರುತಿಸಿ, ಬಂಡೆಗಳ ಮರೆಯಲ್ಲಿ ದಾರಿ ಹುಡುಕಿಕೊಂಡು ಬಂದು ಗುಹೆಯ ಎದುರು ನಿಂತು ಎರಡನೆ ಬಾರಿ ಅಂಬಾ ಎಂದಾಗ, ನಾಗವೇಣಿಯ ಬಿಗಿ ಅಪ್ಪುಗೆಯಲ್ಲಿದ್ದ ಗಣಪಯ್ಯ ಥಟ್ಟನೆ ಎದ್ದು, ಬಗ್ಗಿ ಕಲ್ಲೆತ್ತಿಕೊಂಡು ಹಸುವಿನತ್ತ ಅದನ್ನು ರಾಚಿ-
“…ಥು! ಹಡಬೆ ದನವೆ… ನಡೀ ಮನೆಗೆ” ಎಂದಾಗ ಬೆಳ್ಳಿ ಮನೆಯತ್ತ ಹೊರಟಿತು.
ನಾಗವೇಣಿ ಸೆಟೆದುಕೊಂಡಂತಾಗಿದ್ದ ಮೈಯನ್ನು ಸಡಿಲಮಾಡಿಕೊಂಡು, ಸೆರಗನ್ನು ಹೆಗಲಿಗೇರಿಸಿ, ಎದ್ದೆದ್ದು ಬೀಳುತ್ತಿದ್ದ ಎದೆಯನ್ನೊತ್ತಿಕೊಂಡು, ನಿಧಾನವಾಗಿ ಎದ್ದು ಕುಳಿತಳು. ದೂರದಲ್ಲಿ ಹತ್ತಿಕೊಂಡ ಬೆಂಕಿ ಆರಿಹೋಗಿ ನೀಲಿ ಹೊಗೆ ಅಲ್ಲೆಲ್ಲಾ ಕವಿದಿತ್ತು. ಬರಿದಾದ ಗುಹೆಯ ತೆರೆದ ಬಾಯಿ ವಿಕಾರವಾಗಿ ಕಾಣುತ್ತಿತ್ತು. ಸೀತಾರಾಮರಮಂಚದ ಬಿಸಿ ಆರಿರಲಿಲ್ಲ. ನಾಗವೇಣಿ ಎದ್ದು ಅಷ್ಟು ದೂರ ಹೋಗಿ ಬೆನ್ನು ಹಾಕಿನಿಂತ ಗಂಡನ ಹಿಂದೆ ನಡೆದಳು. ಗಣಪಯ್ಯ ಏನೊಂದು ಮಾತನಾಡದೆ ಮುಂದೆ ನಡೆದಾಗ ಹತ್ತಿರದಲ್ಲಿಯೇ ಕಾಡುಕೋಳಿಯೊಂದು ಒಂದೇ ಸಮನೆ ಕೂಗಿಕೊಳ್ಳುತ್ತಿತ್ತು.

*
*
*
ಮುದುಕ ಚಪ್ಪರದ ಹೊರಗೇನೇ ಕೂತಿದ್ದ. ತೋಟದಿಂದ ಮೇಲೆಬಂದ ಆಳುಗಳು – ಒಡೆಯಾ ನಾವು ಬರೂದ – ಎಂದು ಕೇಳಿ ಅರಲಗೋಡಿಗೆ ಹೊರಟು ಹೋದರು. ಸೊಸೆ ಬೆಳ್ಳಿ ಹಸು ಬರಲಿಲ್ಲವೆಂದು ಗೊಣಗುತ್ತ ತೋಟದತ್ತ ಹೋದಳು. ಆ ನಂತರ ಯಾರ ಸುಳಿವೂ ಇಲ್ಲ. ಮಗ – ಸೊಸೆ ಹಸುವನ್ನು ಹುಡುಕಿಕೊಂಡು ಹೋದರೋ ಏನೋ! ಹೋದವರು ಬೇಗ ಬರಬಾರದೇ? ಕತ್ತಲಾಯಿತಲ್ಲ, ಎಲ್ಲಿಗೆ ಹೋದರು?
ಮುದುಕ ಎದ್ದು ಕೋಲೂರಿಕೊಂಡು ಅಷ್ಟು ದೂರ ಹೋದ. ಕಾಲುಗಳು ಕಂಪಿಸಲಾರಂಭಿಸಿದವು. ಹೆಜ್ಜೆ ಎತ್ತಿ ಇಡುವುದು ಪ್ರಯಾಸದ ಕೆಲಸವೆನಿಸಿತು. ಮತ್ತೆ ತಿರುಗಿ ಬಂದು ಚಪ್ಪರದ ಬಾಗಿಲಲ್ಲಿ ಕುಳಿತ.

ಒಂದು ಕಾಲದಲ್ಲಿ ಹೊಸಮನೆಹಳ್ಳಿಯನ್ನೆಲ್ಲ ಒಂದಲ್ಲ ಸಾವಿರ ಸಲ ಸುತ್ತಿದವ ತಾನು. ತನ್ನ ತಂದೆ ಈ ತೋಟ ಮಾಡಲಾರಂಭಿಸಿದಾಗ ತಾನಿನ್ನು ಹುಡುಗ. ಆದರೂ ತನ್ನ ತಂದೆ – ತಾಯಿಯ ಜೊತೆಗೆ ಕೆಲಸ ಮಾಡಿದ್ದೆ ಅಡಕೆಸಸಿ ನೆಟ್ಟು, ಬಾಳೆ ಸಸಿ ಹಾಕಿ, ಹಾಳೆ ಕಡಿದು, ಕಳೆ ಕಿತ್ತು, ಅಡಕೆಗೊನೆಗೆ ಹಾಳೆ ಕಟ್ಟಿ, ಕೊನೆಗೆ ಮರ ಹತ್ತಿ ಅಡಕೆ ಕಿತ್ತು, ಸುಲಿದು ರಾಶಿಹಾಕುವವರೆಗೂ ಕೆಲಸಮಾಡಿದ್ದೆ. ತನ್ನ ತಂದೆ ತನ್ನ ಮೇಲೆ ಕೈ ಹಾಕಿ-
“ಈ ಮಾಣಿ ಇದ್ರೆ ನೂರು ಜನ ಇದ್ದ ಹಾಗೆ”
ಎನ್ನುತ್ತಿದ್ದ. ಈಗಲೂ ಹೊಸಮನೆಯಲ್ಲಿ ಅಷ್ಟೊಂದು ಜನ ಇರಲಿಲ್ಲ. ಹೇರಂಬಹೆಗಡೆಯ ಮನೆಯೊಂದು, ಹಸಲರ ಬೈರನ ಮನೆಯೊಂದು, ಪ್ರಮೇಶ್ವರಪ್ಪನ ಮನೆಯೊಂದು, ತನ್ನದೊಂದು ನಾಲ್ಕೆ, ಪರಮೇಶ್ವರಪ್ಪ ಆಗಿನ್ನೂ ಆಳನ್ನು ಇಟ್ಟುಕೊಳ್ಳುವಂತಹ ಶ್ರೀಮಂತನಾಗಿರಲಿಲ್ಲ. ಇವರೆಲ್ಲ ಆಗಿನ್ನೂ ಚಿಕ್ಕವರು. ಗಣಪಯ್ಯನಿಗಿಂತ ಎಂಟು ಹತ್ತು ವರ್ಷ ದೊಡ್ಡವರಿರಬಹುದಷ್ಟೆ. ಹೇರಂಬನ ಅಪ್ಪ ಸುಬ್ರಾಯ ಹಾಗೂ ತನ್ನ ತಂದೆ ಇಬ್ಬರೇ ಹಳಬರು.

ನನ್ನ ತಂದೆ ಬೇಗನೆ ಸತ್ತ. ಸುಬ್ರಾಯ ಬಹಳ ವರ್ಷ ಬದುಕಿದ್ದ. ಈ ಮುದುಕನಿಗೆ ಸಾವೇ ಇಲ್ಲವೆಂದು ಎಲ್ಲ ಜನ ಮಾತಿನಾಡಿಕೊಳ್ಳುವವರೆಗೂ ಬದುಕಿದ್ದ ಸುಬ್ರಾಯ. ಸತ್ತದ್ದು ಇತ್ತೀಚೆಗೆ. ಅವನು ಸತ್ತಾಗ ನೂರು ವರ್ಷ ಆಗಿರಬಹುದು ಅವನಿಗೆ.
ತನಗೀಗ ಎಷ್ಟೋ…. ಅರವತ್ತರ ಗಡಿ ದಾಟಿರಬಹುದು. ಆದರೆ ತಾನೀಗ ಮುದುಕ. ಖಾಯಿಲೆಯಿಂದ ಜೀರ್ಣನಾಗಿರುವವ. ತಾನು ಈಗೀಗ ಮಗ ಸಾಗರದಿಂದ ಅದೇನೋ ಮಾತ್ರೆ ತಂದುಕೊಡುತ್ತಾನೆಂದು ದಮ್ಮು, ಕೆಮ್ಮು ಕಡಮೆಯಾಗಿದೆ. ಮಳೆಗಾಲ ಬಂತೆಂದರೆ ತಾನು ಮತ್ತೆ ಹಾಸಿಗೆಯ ಪಾಲು. ಈ ಖಾಯಿಲೆ ಪ್ರಾರಂಭವಾಗಿ ಹತ್ತು – ಹದಿನೈದು ವರ್ಷಗಳೇ ಆದವು. ಏನೇನೋ ಮದ್ದು ಮಾಡಿಯಾಯಿತು. ಖಾಯಿಲೆ ಜಗ್ಗಲಿಲ್ಲ.

ಮುದುಕ ಒಂದು ಕ್ಷಣ ನೀರವವಾಗಿ ಕುಳಿತ. ತೋಟದತ್ತನಿಂದ ತಂಗಾಳಿ ಬೀಸುತ್ತಿತ್ತು. ಹಿಂಬದಿಯ ಗುಡ್ಡ ಮನೆ – ತೋಟದ ಮೇಲೆ ಕಪ್ಪು ಕಾರುತ್ತ ನಿಂತಿತ್ತು. ಹಕ್ಕಿಗಳ ಸದ್ದು ಅಡಗಿತ್ತು. ಕತ್ತಲು ಆವರಿಸುತ್ತಿದ್ದ ಆಕಾಶದಲ್ಲಿ ತುಂಡು ಮೋಡಗಳು ತೇಲುತ್ತಿದ್ದವು. ತೋಟದ ಹಳ್ಳದಲ್ಲಿ ನೀರು ಹರಿಯುತ್ತಿತ್ತು. ಮುದುಕ ಸುತ್ತಲೂ ನೋಡಿದ. ಹೇರಂಬನ ತೋಟ ಕಂಡಿತು. ಮನೆಯ ಗೋಡೆಗಳು ಕಂಡವು. ಅಲ್ಲೆಲ್ಲ ಕವಿದ ಮೌನದಿಂದಾಗಿ ಜೀವ ಬೆದರಿತು.

ಹಳ್ಳಿಗೆ ಎಂತಹಾ ಗತಿ ಬಂದಿತು ಎಂದು ಮುದುಕ ವಿಡುಕಾಡಿದ. ನಾಲ್ಕೈದು ಕುಟುಂಬಗಳು, ಒಂದಿಷ್ಟು ಜನ. ಅವರೆಲ್ಲರ ನೋವು ನಲಿವುಗಳು, ಎಲ್ಲವೂ ಇತ್ತು ಇಲ್ಲಿ. ಈಗ ಮಾತ್ರ ಎಲ್ಲವೂ ಬರಿದು. ತಾಳಗುಪ್ಪದ ಪೇಟೆಬೀದಿಯ ಹಾಗೇನು ಇಲ್ಲಿ ಜನ ಗದ್ದಲ ಮಾಡುತ್ತ ಓಡಿಯಾಡುತ್ತಿರಲಿಲ್ಲ. ಯಾವಾಗಲು ಹಳ್ಳಿ ಹೀಗೆಯೇ, ಈಗಿನಂತೆಯೇ ಜನರ ಓಡಾಟ ಗದ್ದಲವಿಲ್ಲದೆ ಶಾಂತವಾಗಿರುತ್ತಿತ್ತು. ಆದರೆ ಮನಸ್ಸಿನಲ್ಲಿ ಅಕ್ಕಪಕ್ಕದಲ್ಲಿ ಜನರಿದ್ದಾರೆ ಅನ್ನುವ ಒಂದು ಧೈರ್ಯವಿರುತ್ತಿತ್ತು. ಕೂಗಿದರೆ ಹೇರಂಬ ಬರುತ್ತಾನೆ. ಇಲ್ಲವೇ ಪರಮೇಶ್ವರಪ್ಪ ಬರುತ್ತಾನೆ ಎನ್ನುವ ನಂಬಿಕೆ. ಹಸಲರ ಹಾಲ. ಬೈರ ಇಲ್ಲಿಯೇ ಇದ್ದಾರೆ ಎನ್ನುವ ದೈರ್ಯ. ಈಗ ಯಾರನ್ನು ಕೂಗುವುದು? ಯಾರನ್ನು ಕರೆಯುವುದು? ಇಲ್ಲಿ ಕೂ ಎಂದು ಕೂಗಿದರೆ ಈ ಕೂ ಕೂಗು ಅರಲಗೂಡಿಗೋ ಭೀಮೇಶ್ವರಕ್ಕೋ ಕೇಳಿಸಿ ಅಲ್ಲಿಂದ ಜನ ಬರುವುದುಂಟೆ?

ಈಗಲೇ ಈ ಪರಿಸ್ಥಿತಿ. ಮುಂದೆ? ಮಳೆಗಾಲ ಆರಂಭವಾಗಿ, ಇಲ್ಲೆಲ್ಲ ನೀರು ತುಂಬಿಕೊಂಡಾಗ? ತೋಟ-ಹೊಲದ ಕೆಲಸಕ್ಕೆ ಹೊರಗಿನ ಜನರೂ ಸಿಗಲಾರರು.ಮನೆಯ ಜನ ಎಷ್ಟೊಂದು ಮಾಡಿಯಾರು? ಮಳೆಗಾಲ ಪ್ರಾರಂಭವಾಗುವ ಮುನ್ನ ಯಾರಾದರೂ ಜನ ಸಿಗುತ್ತಾರೋ ನೋಡೆಂದು ಮಗನಿಗೆ ಹೇಳಬೇಕು. ಈ ವರ್ಷ ಇಲ್ಲಿಯೇ ಇರುವುದೆಂದು ನಿರ್ಧರಿಸಿ ಆಗಿದೆ. ಸುಖವೋ- ಕಷ್ಟವೋ, ಸರಿಯೋ-ತಪ್ಪೋ ಈ ವರ್ಷ ಇಲ್ಲೇ ಕಳೆಯುವುದು. ಆದರೆ ಮುಂದೆ ಹೇಗೋ ಏನೋ ಎಂಬ ದಿಗಿಲು ಇದ್ದೇ ಇದೆ.
ಬೆಳ್ಳಿ ಗುಡ್ಡದ ಮೇಲಿನಿಂದ ಇಳಿದು ಮನೆಯ ಹಿಂಬದಿಯ ದಾರಿ ಹಿಡಿಯಿತು.
“ದನ ಬಂತು….ಇವೆರೆಲ್ಲಿಗೆ ಹೋದರು?”
ಎಂದು ಮುದುಕ ಕಣ್ಣು ಚುರುಕುಗೊಳಿಸಿ ನೋಡುತ್ತಿರಲು ಮಗ ಬಂದ. ಅವನ ಹಿಂದೆ ಸೊಸೆ.
ಮುದುಕ ಸೊಸೆಯತ್ತ ತಿರುಗಿ-
“ಕೂಸೆ, ಬೆಳ್ಳಿ ಬಂತು ನೋಡು” ಎಂದ. ಸೊಸೆ ಹಾಂ ಹೂಂ ಎನ್ನಲಿಲ್ಲ. ದಪ ದಪ ಕಾಲು ಹಾಕುತ್ತ ಅವಳು ಒಳಗೆ ಹೋದಳು.
ಗಣಪಯ್ಯ ತಂದೆಯತ್ತ ಬರುತ್ತ ಬೆಳ್ಲಿಗುಡ್ಡದ ಮೇಲೆ ಹೋದುದನ್ನೂ ತಾನು ನಾಗವೇಣಿ ಹೋಗಿ ಹುಡುಕಿಕೊಂಡು ಬಂದುದನ್ನೂ ಹೇಳತೊಡಗಿದಾಗ ಕತ್ತಲೆ ದಟ್ತವಾಯಿತು. ನಾಗವೇಣಿ ಚಿಮುಣಿ ದೀಪ ಹೊತ್ತಿಸಿ ತಂದು ಜಗುಲಿಯ ಮೇಲಿಟ್ಟು ಹೋದಳು.

ಊಟಕ್ಕೆ ಕುಳಿತಾಗ ಮಾತಿನ ಮಧ್ಯೆ ಯಾರಾದರೂ ಕೆಲಸದಾಳುಗಳು ಸಿಕ್ಕರಾಗುತ್ತಿತ್ತು ಎಂಬ ಮಾತೂ ಬಂತು. ಹೇರಂಬಹೆಗಡೆ ದೀವ್ರನಾಯ್ಕರು ಸಿಕ್ಕರೆ ಇಟ್ಟುಕೋ ಎಂದು ಹೇಳಿಹೋಗಿದ್ದ. ಎಂದಿನಂತೆ ದಿನಗೂಲಿಯ ಮೆಲೆ ಬರುವ ಅರಲಗೋಡಿನ ಜನ ಯಾರೂ ಖಾಯಂ ಆಗಿ ಹೊಸಮನೆಯಲ್ಲೇ ಉಳಿಯಲು ಒಪ್ಪಲಿಲ್ಲ. ಹೀಗೆ ಉಳಿದರೆ ಬಹಳಷ್ಟು ಕೆಲಸ ಬೀಳುತ್ತದೆ ಅನ್ನುವುದು ಒಂದು ಕಾರಣವಾದರೆ ಮಳೆಗಾಲದಲ್ಲಿ ಈ ಹಳ್ಳಿಯ ಗತಿ ಏನಾಗುತ್ತದೋ ಅನ್ನುವ ಅಂಜಿಕೆ ಬೇರೆ. ಈಗ ಗಣಪಯ್ಯನ ಹೊಲ-ತೋಟದ ಜೊತೆಗೆ ಹೇರಂಬನ ಹೊಲ-ತೋತಗಳೂ ಸೇರಿಕೊಂಡಿವೆ. ಗುಡ್ಡದ ಸುತ್ತ ನೀರು ನಿಂತರೆ ಬೇರೆ ಕೂಲಿಯಾಳುಗಳೂ ಯಾರೂ ಸಿಗಲಾರರು. ಗಣಪಯ್ಯ ಒಬ್ಬರನ್ನೋ ಇಬ್ಬರನ್ನೋ ಕೆಲಸಕ್ಕೆ ಇತ್ತುಕೊಂಡಾನು ಹೊಲದಲ್ಲಿ ಸಸಿನೆಡಲು, ಅಡಿಕೆಗೆ ಖೊಟ್ಟೆ ಕಟ್ಟಲು ಜನ ಸಾಕೇ? ಗಣಪಯ್ಯ ಅವನ ಹೆಂಡತಿ ಕೆಲಸಕ್ಕೆ ಇಳಿದರೂ ಇದು ಮೂರು -ನಾಲ್ಕು ಜನರ ಕೈಯಲ್ಲಿ ಆಗದ ಕೆಲ್ಲಸ ಎಂದೆಲ್ಲ ಯೋಚಿಸಿದ ಕೂಲಿಯಾಳುಗಳು ನಕಾರದ ಉತ್ತರ ನೀಡಿದ್ದರು. ತಂದೆ ಊಟ ಮಾಡುತ್ತ ಸದ್ಯಕ್ಕೆ ಒಂದು ಹೆಣ್ಣಾಳು ಸಿಕ್ಕರೆ ಸಾಕು, ಮುಂದೆ ಜನ ಸಿಗುತ್ತಾರೆ ಎಂದಾಗ ಗಣಪಯ್ಯ ಒಂದು ಹಸಲರ ಇಲ್ಲವೆ ದೀವ್ರ ಕುಟುಂಬವನ್ನೇ ಏಕೆ ಕರೆತರಬಾರದು ಎಂದು ಯೋಚಿಸಿದ. ಊಟ ವಸತಿ ಬಟ್ಟೆಯ ಅನುಕೂಲ ಮಾಡಿಕೂಟ್ಟರೆ ಇನ್ನೊದು ಐದು ತಿಂಗಳು ಇಲ್ಲಿರಲಾರರೆ ಅವರು? ತಾವು ಬಿಡಾರಕಿತ್ತು ಹೊರಟಾಗ ಅವರೂ ತಮ್ಮ ದಾರಿ ಹಿಡಿಯಲಿ. ತಂದೆಯತ್ತ ತಿರುಗಿ ಅವನಂದ-
“ನಾನು ನಾಳೆ ತಾಳಗುಪ್ಪಕ್ಕೆ ಹೋಗಿಬರ್ತೇನೆ, ನೋಡುವ….”
ಮುದುಕ ಊಟ ಮುಗಿಸಿ ಎದ್ದು ಹೋದಮೇಲೆ ನಾಗವೇಣಿ ಗಂಡನಿಗೆ ಆಸೆ ಬಡಿಸುತ್ತ-
“ಹೌದಾ. ನಾಳೆ ತಾಳಗುಪ್ಪಕ್ಕೆ ಹೋಗೋವ್ರ ನೀವು?” ಎಂದು ಕೇಳಿದಳು.
“ಹೌದು, ಯಾಕೆ?”
“ಅಲ್ಲ..ಅಮ್ಮನ್ನ ನೋಡಿ ತುಂಬಾ ದಿನ ಆತಲ್ಲ… ಮಳೆ ಹಿಡಿದ್ರೆ ಮತ್ತೆ ಯಾವಾಗ್ಲೋ ಹೋಗೋದು…?
ನಾಗವೇಣಿಯ ತಾಯಿಯ ಮನೆ ತಾಳಗುಪ್ಪದ ಹತ್ತಿರ. ಬೆಳ್ಳಾಣೆಯ ಜಾತ್ರೇ ಸಮಯದಲ್ಲಿ ಹೋಗಿದ್ದಳವಳು. ಅನಂತರ ಅತ್ತ ಹೋಗಿರಲಿಲ್ಲ. ಅಲ್ಲಿಂದ ಮೂರು ನಾಲ್ಕು ಬಾರಿ ಆದರೆ ಬಂದು ಹೋಗುವಂತೆ ಹೇಳಿಕಳುಹಿಸಿದ್ದರು. ಗಂಡ ಹೋಗು ಅಂದರಲ್ಲವೇ ಹೊರಡುವುದು.
“ಅಪ್ಪಯ್ಯ ಒಬ್ರೇ ಇರ್ತಾರಲ್ಲ ಮನೆಯಲ್ಲಿ”
ಇದೊಂದು ಸಮಸ್ಯೆ. ಕಾಯಿಲೆ ಮುದುಕನನ್ನು ಬಿಟ್ಟು ಹೋಗುವುದುಂಟೆ. ಏನುಮಾಡುವುದು ಎಂದು ಗಂಡನ ಮುಖ ನೋಡಿದಾಗ ಅವನೆಂದ-
“ಹತ್ ಗಂಟೆ ಗಜಾನನಕ್ಕೆ ಹೋಗಿ ಬೇಗ ಬಂದುಬಿಡುವ…. ಅಪ್ಪಯ್ಯ ಹ್ಞು ಅಂದಾನು”
ನಾಗವೇಣಿ ತಲೆಯಾಡಿಸಿದಳು ಸಂತಸದಿಂದ.
ಹೊಸಮನೆಯಿಂದ ತಾಳಗುಪ್ಪಕ್ಕೆ ಹಿಂದೆ ಆರೇ ಮೈಲಿ. ಹೊಸಮನೆ ಅಲ್ಲಿಂದ ಹಿರೇಮನೆ.ಅನಂತರ ತಾಳಗುಪ್ಪ. ಶರಾವತಿ ದಾತಿದರಾಯಿತು. ಆದರೆ ಈಗ ಇಪ್ಪತ್ತು ಮೈಲಿ. ಹಿಂದಿನ ರಸ್ತೆ ಮುಳುಗಿ ಹೋಗಿದ್ದರಿಂದ ಈಗ ಅರಲಗೋಡಿಗೆ ಬಂದು ಅಲ್ಲಿಂದ ಕಾರ್ಗಲ್ಲಿಗೆ ಬಂದು ತಾಳಗುಪ್ಪಕ್ಕೆ ಹೋಗಬೇಕು. ಹಿಂದೆ ಎಂಟಾಣೆ ಕೊಡುವಲ್ಲಿ ಈಗ ಒಂದೂವರೆ. ಅರ್ಧಗಂಟೆಯ ದಾರಿಯ ಬದಲು ಈಗಿನ ಒಂದೂವರೆ ಗಂಟೆಯ ದಾರಿ.
ಮಗ ಸೊಸೆ ಹೊರಡುವ ವಿಷಯ ಹೇಳಿದಾಗ ಮುದುಕ ಹೋಗಿಬನ್ನಿ ಎಂದ. ಬಂದ ಕೆಲಸದಾಳುಗಳಿಗೆ ಅಡಕೆಮರಕ್ಕೆ ಕೊಟ್ಟೇ ಕಟ್ಟುವ ಕೆಲಸ ವಹಿಸಿಕೊಟ್ಟ. ಊಟ ಮುಗಿಸಿ ಗಣಪಯ್ಯ ಹೊರಟಾಗ ತಂದೆ ಮಳೆಗಾಲ ಬಂತಲ್ಲ ಮೆಣಸಿನಕಾಯಿ, ಬೇಳೆ ಇತ್ಯಾದಿ ತಂದುಬಿಡು ಎಂದು ಹೇಳಲು, ತರುತ್ತೇನೆ ಎಂದು ಉತ್ತರಿಸಿ ನಾಗವೇಣಿಯನ್ನು ಕರೆದುಕೊಂಡು ಹೊರಟ.
ಸೀತಾಪರ್ವತದತ್ತ ಬೆನ್ನುಹಾಕಿ ಹೊರಟಾಗ ನಾಗವೇಣಿ-
“ನೀರು ಇಲ್ಲಿಗೂ ಬರಬಹುದಾ?”
ಎಂದು ಕೇಳಿದಳು.
ಅದು ಹೊಸಮನೆಯಿಂದ ಅರಲಗೋಡಿಗೆ ಹೋಗುವ ಕಾಲುಹಾದಿ. ಗಾಡಿರಸ್ತೆಯೂ ಅದೇ. ಅದು ಎತ್ತರವಾದ ಪ್ರದೇಶದಲ್ಲಿಯೇ ಇತ್ತಾದರೂ ನೀರು ಅಲ್ಲಿಗೂ ಬರುತ್ತದೆಂದು ಕೆಂಪು ಕಲ್ಲುಗಳನ್ನು ಅಲ್ಲೂ ನೆಟ್ಟಿದ್ದರು.
“ಈ ವರ್ಷ ಬರಲಾರದು,”
ಎಂದು ಗಣಪಯ್ಯ. ಬಾರದಿದ್ದರೆ ನಮಗೆ ಯಾವ ತೊಂದರೆಯೂ ಇಲ್ಲ ಎಂದು ಹೇಳಿದ. ಹೂರಗಿನ ಜನ ಹೊಸಮನೆಗೆ ಬರಬಹುದು. ಇಲ್ಲಿಯವರು ಹೊರ ಹೋಗಬಹುದು ಬೇರೇನೂ ತೊಂದರೆ ಇರುವುದಿಲ್ಲ. ಆದರೆ ನೀರು ಬರುವುದೇ‌ಇಲ್ಲ‌ಎಂದು ಖಚಿತವಾಗಿ ಹೇಳುವುದು ಹೇಗೆ, ಸರಕಾರದ ಮಾತು ಯಾವ ಖಾತರಿ. ನೀರು ಬಂದರೆ ಮಾತ್ರ ಕೊಂಚ ತೊಂದರೆ, ನೀರು ಇಳಿಯುವ ತನಕ ನಾವು ಅಲ್ಲೇ – ಎಂದ.
ತಾಯಿಯ ಮನೆಗೆ ಹೋಗುತ್ತೇನೆಂಬ ಸಂತಸದಲ್ಲಿ ನಾಗವೇಣಿ ಸಂತಸದಿಂದ ಇದ್ದಳು. ಉತ್ಸಾಹ ಹುರುಪಿನಿಂದ ನಡಿಗೆ. ಗೆಲುವಾದ ಮಾತು. ಮುಖದ ಮೇಲೆ ನಗೆ. ಗಣಪಯ್ಯ ಹುಡುಗಿ ಪಸಂದಾಗಿದ್ದಾಳೆಂದು ಅವಳನ್ನು ನೋಡಿ ನೋಡಿ ಖುಷಿ ಪಟ್ಟ.
ಸಂಪ ದಾಟಿ ಐತುಮನೆ ದಾಟಿ ಅರಲಗೋಡಿಗೆ ಬರುವುದಕ್ಕೂ ಸರಿಹೋಯಿತು. ಮೊದಲೇ ಹಳೆಯ ಬಸ್ಸು. ಚಿಕ್ಕದು ಬೇರೆ. ಒಳಗೆ ಉಪ್ಪಿನಕಾಯಿ ಹಾಕಿದಂತೆ ತುಂಬಿದ ಜನ. ಎಷ್ಟೇ ಜನ ಬರಲಿ, ಯಾರನ್ನೂ ಬಿಟ್ಟು ಹೋಗಬಾರದೆಂದು ಪಣತೊಟ್ಟ ಕಂಡೆಕ್ಟರು. ಗಣಪಯ್ಯ ನಾಗವೇಣಿಯರೂ ಹತ್ತಿದರು.
ಬಸ್ಸು ಹೊರಟಿತು. ಕಾರ್ಗಲ್ಲು, ಇಡವಾಣಿ, ಬಚಗಾರು, ತಲವಾಟ, ಹಿರೇಮನೆ, ಎಂದು ಬೋರ್ಡುಗಲ್ಲುಗಳ ಹತ್ತಿರವೆಲ್ಲ ನಿಂತು, ಇಳಿಯುವವರನ್ನು ಇಳಿಸಿ, ಹತ್ತುವವರನ್ನು ಹತ್ತಿಸಿಕೊಂಡು, ಬಸ್ಸು ತಾಳಗುಪ್ಪಕ್ಕೆ ಬಂದಾಗ ಮೋಡ ಕವಿದು ಗಾಳಿಬೀಸುತ್ತಿತ್ತು. ನಾಗವೇಣಿಯನ್ನು ಯಾರ ಜೊತೆಗೆ ಅವಳ ತಾಯಿಯ ಮನೆಗೆ ಸಾಗಹಾಕುವುದೆಂದು ಬಸ್ಸಿಳಿದು ಗಣಪಯ್ಯ ಸುತ್ತಲೂ ದೃಷ್ಟಿ ಹಾಯಿಸುತ್ತಿರುವಾಗ ನಾಗವೇಣಿ ಕೂಗಿಕೊಂಡಳು.
“ಹೌದಾ…. ಅದು ಕೃಷ್ಣಯ್ಯ ಅಲ್ಲ?” ಕೃಷ್ಣಯ್ಯ ಅಲ್ಲಿಂದ ಓಡಿಬಂದ.
“ಬಾವ. ಈಗ ಬಂದ್ರಾ…. ನಾಗು ಏನು ಚೆನ್ನಾಗಿದಿಯಲ್ಲ?”
ಎಂದು ಕೇಳಿದ.
“ನಾಗು, ನೀನು ಐದ್ ಗಂಟೆಗೆ ಬಂದ್‌ಬಿಡು. ನಾನು ಇಲ್ಲೇ ಕಾಯ್ತಿರ್ತೀನಿ. ಆತ….”
ಎಂದ ಗಣಪಯ್ಯ ನಾಗವೇಣಿಯತ್ತ ತಿರುಗಿ. ನಾಗವೇಣಿ ತಲೆಯಾಡಿಸಿದಳು. ಕೃಷ್ಣಯ್ಯ ಗಣಪಯ್ಯನನ್ನೂ ಬರುವಂತೆ ಕರೆದಾಗ ಆತ ಕೆಲಸವಿದೆ ಎಂದು ಹೇಳಿ ಭಟ್ಟರ ಅಂಗಡಿಯತ್ತ ನಡೆದ.
ನಾಗವೇಣಿ, ಕೃಷ್ಣಯ್ಯ ರೈಲು ಹಾದಿ ದಾಟಿಕೊಂಡು ಊರಿನತ್ತ ತಿರುಗಿದಾಗ ಗಾಳಿ ಬೀಸತೊಡಗಿತು. ಮೋಡದ ಮರೆಯಲ್ಲಿದ್ದ ಮಿಂಚಿ ಝಳಪಿಸಿತು. ರಪರಪನೆ ಮಳೆ ಬೀಲಲಾರಂಭಿಸಿತು. ಕೃಷ್ಣಯ್ಯ ಕೊಡೆ ಸೂಡಿ ನಾಗವೇಣಿಯತ್ತ ಹಿಡಿದಾಗ, ಅವನ ಬಳಿ ಸಾರಲು ಅವಳು ಎರಡು ಕ್ಷಣ ಯೋಚಿಸಿದಳು. ಅನಂತರ ಅವನ ಮಗ್ಗುಲಿಗೆ ಬಂದು ಮೈ ಮುದುಡಿಕೊಂಡಳು. ಮಳೆ ನಿಲ್ಲಲಿಲ್ಲ.

ಕೃಷ್ಣಯ್ಯ ಮನೆಯಲ್ಲೇ ಬೆಳೆದವ. ನಾಗವೇಣಿಗಿಂತ ಹತ್ತು ವರ್ಷ ದೊಡ್ಡವನು. ನಾಗವೇಣಿಯ ತಂದೆ ಮನೆಗೆಲಸಕ್ಕೆಂದು ಇಟ್ಟುಕೊಂಡ ಹುಡುಗ ಅಲ್ಲಿಯೇ ಬೆಳೆದ ಮನೆಯ ಒಬ್ಬನಾಗಿದ್ದ. ನಾಗವೇಣಿಗೆ ಆದ ಕೃಷ್ಣಯ್ಯ. ನಾಗವೇಣಿಯ ಗಂಡ ಕೃಷ್ಣಯ್ಯನಿಗೆ ಭಾವ.
ಕೃಷ್ಣಯ್ಯ ಕೆಂಪಗೆ ಎತ್ತರಕ್ಕೆ ಬಿರುಸು ಬಿರುಸಾಗಿ ಬೆಳೆದಿದ್ದ. ಅವನ ಅಗಲ ಮುಖದ ಮೇಲೆ ಸುರುಳಿ ಸುತ್ತಿದಂತಿದ್ದ ಕಡು ಕಪ್ಪು ಮೀಸೆ ಬೇರೆ. ತೋಳು – ತೊಡೆಗಳ ಸ್ನಾಯುಗಳಲ್ಲಿ ರಕ್ತದ ಕೋಡಿ. ಮಾತಿನಲ್ಲೂ ಕೃಷ್ಣಯ್ಯ ಚೂಟಿ. ಅವನ ನಗೆ ಮನೆಗೆಲ್ಲಾ ಪರಿಚಿತ. ಕೆಲಸದಲ್ಲೂ ಅಷ್ಟೆ. ಹತ್ತು ಜನರ ಕೆಲಸ ಒಬ್ಬನೇ ಮಾಡಿ ಮುಗಿಸಿಬಿಡುವ ಹುಮ್ಮಸ್ಸು.
ನಾಗವೇಣಿಗೆ ಹಿಂದಿನಿಂದಲೂ ಕೃಷ್ಣಯ್ಯನೆಂದರೆ ಅಕ್ಕರೆ – ಆಕರ್ಷಣೆ. ಅವನು ಎದುರೆ ಇದ್ದರೆ, ಅವನ ಮಾತು ಕೇಳುತ್ತಿದ್ದರೆ, ಅವನನ್ನು ನೋಡುತ್ತಿದ್ದರೆ ಅದೇನೋ ಸಂತಸ ತೃಪ್ತಿ. ಅವನಿಗೂ ಅಷ್ಟೆ. ನಾಗವೇಣಿಯ ಮೇಲೆ ಹೆಚ್ಚಿನ ಪ್ರೀತಿ ವಿಶ್ವಾಸ.
ನಾಗವೇಣಿ ಮದುವೆಯಾಗಿ ಗಂಡನೊಡನೆ ಹೊರಟಾಗ ತುಂಬಾ ಅತ್ತವನೆಂದರೆ ಕೃಷ್ಣಯ್ಯ. ಮೂರು ದಿನ ಊಟ ಬಿಟ್ಟು ಕುಳಿತಿದ್ದನಂತೆ ಕೃಷ್ಣಯ್ಯ. ನಾಗವೇಣಿಗೂ ಆದ ನೋವು ಕಡಿಮೆಯದಲ್ಲ. ಗಂಡನ ಹಿಂದೆ ಹೊರಟಾಗ ತಾಳಗುಪ್ಪದವರೆಗೂ ಬಂದಿದ್ದ ಕೃಷ್ಣಯ್ಯ-
“ನಾಗು, ನಾನು ನಿಲ್ತೀನಿ. ಹೋಗಿ ಬಾ….”
ಎಂದಾಗ ಆ ವರೆಗೂ ತಡೆಹಿಡಿದ ಅಳು ನುಗ್ಗಿ ಬಂದಿತ್ತು. ಇನ್ನು ಅತ್ತುದೆಲ್ಲ ಅವನಿಗಾಗಿ ಎಂಬುದು ಗೊತ್ತಿದ್ದುದು ಅವನಿಗೆ ಮಾತ್ರ, ಉಳಿದವರೆಲ್ಲ ಹುಡುಗಿ ತಾಯಿಯ ಮನೆಯನ್ನು ತೊರೆಯಲಾರದೇ ಹೀಗೆ ಅಳುತ್ತಿದ್ದಾಳೆಂದು ಅಂದುಕೊಂಡಿರಬಹುದು ತಾನು ಈ ಕಾರಣಕ್ಕಾಗಿಯೂ ಅತ್ತನೆಂಬುದು ನಿಜ. ಆದರೆ ತನ್ನೆದೆಯ ನೋವು ಹೋಗಬೇಕಲ್ಲ ಎಂಬ ಕಾರಣಕ್ಕಾಗಿ.
ಮಳೆ ಇನ್ನೂ ಜೋರಾಗಿ ಬೀಳಲಾರಂಭಿಸಿತು. ನಾಗವೇಣಿ ಒಂದು ಕಡೆಯಿಂದ ನೆನೆದರೆ ಕೃಷ್ಣಯ್ಯ ಇನ್ನೊಂದು ಬದಿಯಲ್ಲಿ ಒದ್ದೆಮುದ್ದೆಯಾದ, ಒಂದು ಕೊಡೆಯಲ್ಲಿ ಅದು ಹೇಗೋ ಅವರು ಮನೆಗೆ ಬಂದು ತಲುಪಿದರು.
ನಾಗವೇಣಿ, ತಂಗಿ ತಾಯಿ, ತಂದೆ ತಮ್ಮಂದಿರನ್ನು ಮಾತನಾಡಿಸಿ, ಹೊರಡುವೆನೆಂದಾಗ ತಾಯಿ-
“ಇದ್ದು ಹೋಗೇ”
ಎಂದಳು, ನಾಗವೇಣಿ-
“ಇಲ್ಲಮ್ಮ ಅವ್ರು ಸಾಯಂಕಾಲಾನೆ ತಿರುಗಿ ಹೋಗಬೇಕು ಅಂದಿದಾರೆ….”
ಎಂದು ಹೊರಟೇಬಿಟ್ಟಳು. ಕೃಷ್ಣಯ್ಯ ಮತ್ತೆ ಅವಳ ಹಿಂದೆ ಹೊರಟ.
ಇದೀಗ ಇಳಿ ಬಿಸಿಲು. ಗಿಡಗಳಲ್ಲಿ ಹೊಸ ಚೇತನ. ತೊಳೆದ ನೀಲಿ ಆಕಾಶ. ಒದ್ದೆ ನೆಲದಲ್ಲಿ ನಿಂತ ನೀರು, ಹೊಲಗಳಲ್ಲಿ ಎದ್ದುನಿಂತ ಭತ್ತದ ಸಸಿಗಳ ಎಳೆಹಸಿರು.
“ದೂರ ಹೋಗ್ತೀಯ ನಾಗು….”
“ಈಗಲ್ಲ, ಮಳೆಗಾಲ ಮುಗಿದ ಮೇಲೆ. ನಮ್ಮ ಹಳ್ಳೀಲಿದ್ದ ಎಲ್ರಿಗೂ ಜಮೀನು ಹಣ ಕೊಟ್ರು, ನಂಗೆ ಮಾತ್ರ ಕೊಟ್ಟಿಲ್ಲ, ಈಗ ಹೊಸ ಮನೇಲಿ ನಾವು ಮಾತ್ರ ಇರೋದು….”
ಕೃಷ್ಣಯ್ಯ ಹೌದೆ ಎಂದ.
“ಹೌದು, ಯಾರಾದ್ರು ಆಳುಗಳು ಸಿಗ್ತಾರೋ ನೋಡ್ತೀನಿ ಅಂತಿದ್ರು ಇವ್ರು. ಹೊಲ, ತೋಟದ ಕೆಲಸ ಮಾಡೋಕೆ ಬೇಕಲ್ಲ”
“ನಾನು ಬರಲೇನೂ?”
“ಬಾ”
“ಈಗ್ಲೆ ಹೊರಟೆ, ಎರಡು ಊಟ ಹಾಕಿ ಸಾಕು, ಹತ್ ಜನ ಮಾಡೋ ಕೆಲಸ ಮಾಡಿ ಹಾಕ್ತೀನಿ”
ನಾಗವೇಣಿ ಕೃಷ್ಣಯ್ಯನ ಮುಖ ನೋಡಿ ನಕ್ಕಳು.
ಗಣಪಯ್ಯ ಕಾಯುತ್ತಿದ್ದ ಬಸ್ಸು ಬಂದ ಮೇಲೆ ಕೃಷ್ಣಯ್ಯನೇ ಮೆಣಸಿನಕಾಯಿ ಇತ್ಯಾದಿ ತಂದು – ಚೀಲವನ್ನು ಬಸ್ಸಿನ ಮೇಲೆ ಹಾಕಿದ. ಬಸ್ಸು ಹೊರಟಾಗ ನಾಗವೇಣಿಯ ಮುಖ ಚಿಕ್ಕದಾಯಿತು. ಕೃಷ್ಣಯ್ಯ ಹಿಂದೆ ಸರಿದು ಕೈ ಬೀಸಿದ.
ಅರಲಗೋಡಿನಲ್ಲಿ, ಚೀಲ ಹೊರಿಸಿಕೊಂಡು ಹಳ್ಳಿಯತ್ತ ತಿರುಗಿದಾಗ ನಾಗವೇಣಿ ಕೇಳಿದಳು.
“ಆಳುಗಳು ಸಿಕ್ರ ಯಾರಾದ್ರು”
“ಯಾರೂ ಸಿಗೋ ಹಾಗೆ ಕಾಣೆ, ತಾಳಗುಪ್ಪ, ಮನಮನೆ ಮರ್ತೂರಿನಲ್ಲೆಲ್ಲ ಕೇಳಿಬಂದೆ. ಎಲ್ರು ಇಲ್ಲ ಅಂತಾರೆ…. ಏನು ಮಾಡೋದು…. ಮಳೆಗಾಲದಲ್ಲಿ ಬೇರೆ ಯಾರಾದ್ರು ಇದ್ರೆ ಆಗ್ತಿತ್ತು. ನಾವು ನಾವೇ ಇರೋದು ಹ್ಯಾಗೇ?”
ನಾಗವೇಣಿ ಅಷ್ಟು ದೂರ ನಡೆದು ಗಂಡನತ್ತ ತಿರುಗಿದಳು.
“ನಮ್ ಕೃಷ್ಣಯ್ಯನ ಬಾ ಅಂದ್ರೆ ಬರ್ತಿದ್ನೋ ಏನೋ….”
“ಕೃಷ್ಣಯ್ಯ….? ಬಂದ್ರೆ ಆಗ್ತಿತ್ತು. ಆದ್ರೆ ಅಲ್ಲಿ ಯಾರಿದಾರೆ ಕೆಲಸಕ್ಕೆ?”
“ಅಲ್ಲಿ ಯಾರಾದ್ರು ಸಿಗ್ತಾರೆ, ದೀವ್ರ ಆಳುಗಳಿದಾರಲ್ಲ. ಕೃಷ್ಣಯ್ಯನಿಗೆ ನಾಳೆ ನಾಡಿದ್ದು ಯಾರ ಕೈಲಾದ್ರು ಹೇಳಿ ಕಳಿಸಿ, ಬರಲಿ ಆತ.”
“ಹಾಗೇ ಮಾಡೋಣ”
ಐತುಮನೆ, ಸಂಪ ಹಿಂದಾಯಿತು. ಮಸಕು ಮಸಕಾಗಿ ಕತ್ತಲೆ ಕವಿದಿತ್ತು. ಮಳೆ ಇಲ್ಲೆಲ್ಲಾ ಸುರಿದಿತ್ತು. ಎಲ್ಲೆಲ್ಲೂ ನೀರು. ಇನ್ನು ಮಳೆಗಾಲ ಆರಂಭವಾದ ಹಾಗೆ, ರೋಹಿಣಿ ಈ ನಾಲ್ಕು ದಿನಗಳಿಂದ ಆಗಾಗ್ಗೆ ಬೀಳುತ್ತಿದೆ. ಒಂದು ಹದ ಬಿದ್ದು ಹೊಲದಲ್ಲಿ ಬೀಜ ಬಿತ್ತು ಸಸಿಗಳು ಎದ್ದು ನಿಂತಿವೆ. ಬಿಸಿಲಿಗೆ ಒಣಗಿದ ಹೊಲ ಹಸಿಯಾಗಿದೆ. ಇದೀಗ ಹಲವರು ಉತ್ತಲು – ಬಿತ್ತಲು ಆರಂಭಿಸಿದ್ದಾರೆ. ಗಾಳಿ, ಸಿಡಿಲು, ಗುಡುಗು, ಮಳೆಗಾಲದ ಮುನ್ಸೂಚನೆ. ಈಗ ಬಿಟ್ಟು ಬಿಟ್ಟು ಹೊಡೆಯುವ ಮಳೆ ಆರಂಭವಾದರೆ ಮಾತ್ರ ನಿಲ್ಲುವುದು ನಾಲ್ಕು ತಿಂಗಳ ನಂತರವೆ. ಮಳೆ ಆರಂಭವಾಗುವಷ್ಟರಲ್ಲಿ ಮನೆಗೆ ಸಾಮಾನು ತಂದು ಹಾಕಬೇಕು. ಇನ್ನೂ ಒಂದಿಷ್ಟು ಸೌದೆ ಮಾಡಬೇಕು. ತೋಟದ ಮನೆ ರಿಪೇರಿ ಮಾಡಬೇಕು. ಕೆಲಸ ಬಹಳಷ್ಟಿದೆ. ನಾಳೆಯೇ ಕೃಷ್ಣಯ್ಯನಿಗೆ ಹೇಳಿ ಕಳುಹಿಸಬೇಕು.
ಮನೆಯ ಜಗುಲಿಯಮೇಲೆ ಬೆಳಕು ಕಂಡಿತು. ಮುದುಕ ಎದ್ದು ದೀಪ ಹತ್ತಿಸಿದ್ದಾನೆ, ಪಾಪ ಎಂದುಕೊಂಡ ಗಣಪಯ್ಯ. ಮನೆ ಹತ್ತಿರ ಬಂದಾಗ ಮಾಣೀ ಎಂದು ತಂದೆ ಕರೆದುದು ಕೇಳಿಸಿತು. ಬಂದ್ವಿ ಎಂದು ಉತ್ತರಿಸಿ ಚಪ್ಪರದಲ್ಲಿ ಕಾಲಿರಿಸಿದರು.

ಮೃಗಶಿರಾ

ವಿರುಗಿ ಮಳ ಹಬ್ಬವೆಂದು ಆಳುಗಳು ಯಾರೂ ಬರಲಿಲ್ಲ. ತೋಟದಲ್ಲಿಯ ಕೆಲಸವೆಲ್ಲ ಮುಗಿದಿತ್ತು. ತೋಟದಮನೆಗೆ ಅಲ್ಲಲ್ಲಿ ಒಂದಿಷ್ಟು ಹುಲ್ಲು ಹೊದಿಸಿದರೆ ಎಲ್ಲ ಮುಗಿದಹಾಗೆ. ಈ ಕೆಲಸ ಮುಗಿಸೋಣವೆಂದರೆ ಆಳುಗಳು ಯಾರೂ ಬರಲಿಲ್ಲ ಹಿಡಿದ ಮಳೆ ಎಂಟುದಿನಗಳಿಂದ ಬಿಟ್ಟಿರಲಿಲ್ಲ. ಕವಿದ ಮೋಡ ಕದಲಿರಲಿಲ್ಲ. ರಪರಪ ಎಂದು ಬೀಳುತ್ತಿದ್ದ ಮಳೆಯಲ್ಲದೆ ಬೇರೇನೂ ಕಾಣುತ್ತಿರಲಿಲ್ಲ ಒಂದು ಕ್ಷಣದ ಬಿಡುವುಕೊಡದೆ ಹೊಯುತ್ತಿತ್ತು ಮಳೆ. ಈ ಮಳೆಯ ರಭಸಕ್ಕೆ ತೋಟದ ಮನೆಯ ಮಾಡು ತೂರಿಕೊಂಡು ಹೋಗಿತ್ತು. ಆಳುಗಳು ಅದು ಹೇಗೆ ಹುಲ್ಲುಹೊದೆಸಿದ್ದರೋ ನೀರು ಮನೆಯೊಳಗೆಲ್ಲ ನುಗ್ಗಿತ್ತು.

ಮಳೆಯ ರಭಸ ಹಿಂದಿನ ರಾತ್ರಿ ಕೊಂಚ ಕಡಿಮೆಯಾಗಿ ಬೆಳಗ್ಗೆಯಿಂದ ಮಳೆ ನಿಂತಿತ್ತು. ಮೋಡ ತಲೆಯಮೇಲೆ ತೂಗುತ್ತಿದ್ದರೂ ಹನಿ ಇರಲಿಲ್ಲ. ಈ ಸಮಯದಲ್ಲೇ ತೋಟದ ಮನೆಯ ಮಾಡಿಗೆ ಹುಲ್ಲು ಹೊದೆಸೋಣವೆಂದರೆ ಆಳುಗಳಿಲ್ಲ. ಅವರಿಗೆ ಮಿರಗಿ ಹಬ್ಬ. ಡೋಳಿನಸದ್ದು ಹಿಂದಿನ ರಾತ್ರಿಯಿಂದ ಕೇಳಿಬರುತ್ತಿದೆ. ಒಬ್ಬನೇ ತೋಟದತ್ತ ಹೋಗೋಣ ಎಂದು ಹೊರಟ. ತೋಟದತ್ತ ಇಳಿಯುವಾಗ ಶರಾವತಿ ಕಂಡಿತು. ಈವರೆಗೂ ನದಿ ಹರಿದು ಮುಂದೆ ಹೋಗುತ್ತಿತ್ತು. ಡ್ಯಾಮು ಕಟ್ಟುವ ಮುನ್ನ ಜಲಪಾತದತ್ತ ಹೋಗುತ್ತಿತ್ತು ನದಿ. ಈಗ ಡ್ಯಾಮು ಕಟ್ಟಿದ ಮೇಲೆ ನದಿ ನಿಂತುಬಿಟ್ಟಿದೆ. ನೀರು ಕಾಣಿಸುತ್ತದೆಯೇ ಹೊರತು ಮುಂದೆ ಹರಿಯುವುದಿಲ್ಲ. ಹಿಂದೆ ಹಿಂದೆ ನೂರಾರು ಅಲೆಗಳನ್ನುರುಳಿಸುತ್ತ ಬಳುಕಾಡುತ್ತದೆ. ಎಂಟು ದಿನಗಳಹಿಂದೆ ಕಲ್ಲುಬಂಡೆಗಳೆಲ್ಲ ಕಾಣುತ್ತಿದ್ದವು. ನದಿ ಪಾತ್ರ ಬಿಟ್ಟು ಮೇಲೇರಿರಲಿಲ್ಲ. ಈಗ ನೀರು ದಡದಿಂದ ಮೇಲುಕ್ಕಿ ಹರಿಯುತ್ತಿದೆ. ನದಿಯ ಪಾತ್ರ ವಿಸ್ತಾರವಾಗಿದೆ. ಗರ್ಭಿಣಿ ಸ್ತ್ರೀಯಂತೆ ಶರಾವತಿ ಬೀಗಿ ನಿಂತಿದ್ದಾಳೆ.

ಹಿಂದಿನದಿನ ಬಂದ ಆಳುಗಳು ನೀರು ಗುಡ್ಡದ ಮತ್ತೊಂದು ಪಾರ್ಶ್ವದತ್ತ ಹೊರಳಿನಿಂತಿದೆ ಎಂದು ಹೇಳಿದ್ದರು. ಹೀಗೆಯೇ ದಿನಗಳುರುಳಿದರೆ, ನೀರು ಏರಿದಹಾಗೆ ನೀರು ಗುಡ್ಡವನ್ನು ಬಳಸಿಕೊಳ್ಳುವುದು ಖಚಿತ. ಆನಂತರ ಇಲ್ಲಿಗೆ ಹೊರಗಿನಿಂದ ಯಾರೂ ಬರಲಾರರು. ಕೃಷ್ಣಯ್ಯ ಬರುವುದಾಗಿ ಹೇಳಿಕಳುಹಿಸಿ ಎಂಟು ದಿನಗಳಾದವು. ನಾಗವೇಣಿ ಪ್ರತಿದಿನ ಅವನ ದಾರಿ ಕಾಯುತ್ತಿದ್ದಾಳೆ. ಏಕೆ ಬರಲಿಲ್ಲ ಆತ? ಹೊಸ ಮನೆ ನಡುಗಡ್ಡೆಯಾಗುವ ಮುನ್ನ ಆತ ಬಂದಿದ್ದರಾಗುತ್ತಿತ್ತು. ನಿಂಬೆ ಗಿಡವೊಂದು ಬುಡಸಹಿತ ಕಿತ್ತು ಬಿದ್ದಿತ್ತು. ಒಂದೆರಡು ಬಾಳೇಗಿಡಗಳ ಪಾಡೂ ಇದೆ. ಹಳ್ಳದ ನೀರು ತೋಟದ ಒಂದು ಬದಿಯ ನೆಲವನ್ನು ತೆರೆದುಕೊಂಡು ಹೋಗಿದ್ದರಿಂದ ಒಂದು ಅಡಕೆಮರಕ್ಕೇ ಅಪಾಯ ಒದಗಿತ್ತು. ಸಂಕ ದಾಟಿ ತೋಟದಮನೆಯತ್ತ ತಿರುಗಿದಾಗ ಅದು ಯಾರೋ ದರೆಯ ಮೇಲಿನಿಂದ ಕೂಗಿದಂತಾಯಿತು. ತಿರುಗಿ ನೋಡಿದರೆ ಕೃಷ್ಣಯ್ಯ.
“ಬಾರಯ್ಯಾ….ಬಾ….”
ಕೃಷ್ಣಯ್ಯ ನೆಗೆನೆಗೆಯುತ್ತ ತೋಟಕ್ಕೆ ಇಳಿದ. ಅವನ ಭಾರಕ್ಕೆ ಸಂಕ ತುಳುಕಾಡಿತು. ಎದುರು ಬಂದು ನಿಂತ-
“ಬಾವಯ್ಯ ನಾನು ಬರೋದಿಲ್ಲ ಅಂತ ತಿಳ್ಕೊಂಡಿದ್ರೋ ಹೇಗೆ ನೀವು?”
ಎಂದು ಕೇಳಿದ. ನುಣ್ಣಗೆ ಬೋಳಿಸಿಕೊಂಡ, ಅವನ ಕೆಂಪು ಮುಖಕ್ಕೆ ಸೊಗಸಾಗಿ ಕಾಣುತ್ತಿದ್ದ ಮೀಸೆಯನ್ನು ನೋಡುತ್ತ ಅವನ ಬಗ್ಗೆ ಅಸೂಯೆ ಎನಿಸಿತು.
“ಹೌದಯ್ಯ ಬರ್ತೀನಿ ಅಂತ ನೀನು ಹೇಳಿಕಳಿಸಿದ್ದು ಯಾವಾಗ. ಈಗ ಬಂದಿದ್ದು ಯಾವಾಗ?”
ಏನ್ ಮಾಡ್ಲಿ ಬಾವ, ಎಂಟ್ ದಿನದ ಹಿಂದೇನೆ ಹೊರಟಿದ್ದೆ, ಆದ್ರೆ ಯಜಮಾನ್ರು ಸಾಗರಕ್ಕೆ ಹೋಗಿ ಬರೋ ಕೆಲಸ ಅಂಟಿಸಿದ್ರು. ಎರಡು ದಿನಗಳಲ್ಲಿ ಆದೀತು ಅಂತ ಹೋದ್ರೆ ಎಂಟು ದಿನ ಆಯ್ತು, ನಾನು ಈವತ್ತೇ ಬಂದಿದ್ದು ಒಳ್ಳೆದಾಯ್ತು ಅನ್ನಿ. ಇಲ್ಲಾ ಅಂದಿದ್ರೆ ನಿಮ್ಮಳ್ಳಿಗೆ ಸಂಪದಿಂದ ಈಜ್ಕೊಂಡು ಬರಬೇಕಾಗ್ತಿತ್ತು.”
“ಯಾಕೆ?”
“ನಿಮಗೆ ಗೊತ್ತಿಲ್ವ? ಶರಾವತಿ ನಿಮ್ ಹಳ್ಳೀನ ಎರಡೂ ಕಡೆಯಿಂದ ಸುತ್ತು ಹಾಕಿಕೊಂಡು ಬರ್ತಿದಾಳೆ. ಇನ್ನು ನಾಲ್ಕುದಿನ ಹೋದ್ರೆ ಹೊಸಮನೆಹಳ್ಳಿ ಒಂದು ದ್ವೀಪ.”
“ಹೌದೆ! ಗುಡ್ಡದ ಹಿಂಬದಿಗೆ ನೀರು ಬಂದಿದೆ ಏನು?”
“ಹೌದು ಬಾವ, ಎರಡೂ ಕಡೆಯಿಂದ ನೀರು ಏರಿದೆ. ಕಾಲುದಾರಿ ಸ್ವಲ್ಪ ದಿಣ್ಣೆ ಮೇಲಿರೋದ್ರಿಂದ ನೀರು ಅಲ್ಲೀತನಕ ಬಂದಿಲ್ಲ. ನೀರು ಹೀಗೇನೆ ಏರಿದ್ರೆ ಈ ದಾರೀನೇ ಮುಳುಗಿ ಹೋಗುತ್ತೆ,”
“ಹುಂ… ಅಂದುಕೊಂದ ಹಾಗೇ ಆಯ್ತು, ನೀನೀಗ ಮನೆಗೆ ಹೋಗಿ ಬಂದ್ಯ?”
“ಎಲ್ಲಿ ಮನೆ ಬಾವ, ದೂರದಿಂದ ನೀವು ತೋಟಕ್ಕೆ ಬಂದಿದ್ದು ನೋಡ್ದೆ, ಇಲ್ಲಿಗೆ ಓಡಿ ಬಂದೆ”
“ನಡಿ ಮನೆಗೆ ಹೋಗೋಣ, ಅವಳು ಎಂಟ್ ದಿನದಿಂದ ಕಾಯ್ತಿದಾಳೆ ನಿನ್ನ”
ಗಣಪಯ್ಯ ಕೃಷ್ಣಯ್ಯನೊಡನೆ ದರೆಯನ್ನೇರಿದ. ದಟ್ಟೈಯಿಸಿದ ಮೋಡಗಳ ಮರೆಯಿಂದ ಬಿಸಿಲು ಅಲ್ಲೆಲ್ಲ ಮೈಚಾಚಿತು.
“ಅಕ್ಕಿ ಆರಿಸುತ್ತ ಕುಳಿತ ನಾಗವೇಣಿ ಕಲ್ಲು-ಭತ್ತವನ್ನು ಹೆಕ್ಕಿ ಎಸೆಯುವುದರ ಬದಲಿಗೆ ಅಕ್ಕಿಯನ್ನೇ ಆರಿಸಿ ಎಸೆಯುತ್ತಿದ್ದಳು. ಈ ಕಾರ್ಯ ಐದು ನಿಮಿಷ ನಡೆದು, ಕರಿಯ ನೆಲದಮೇಲೆ ಬಿಳಿ ಅಕ್ಕಿಯ ಕಾಳು ಬಿದ್ದುದ್ದನ್ನು ಗಮನಿಸಿ, ‘ಹೌದಾ….ನನಗೇನು ಬಂತು ಕೇಡು’ ಎಂದು ತುಟಿ ಕಚ್ಚಿಕೊಂಡು, ಕೈಗೆಟುಕುವಷ್ಟು ದೂರ ಬಿದ್ದಿದ್ದ ಅಕ್ಕಿಯನ್ನು ಆರಿಸಿ ಮೊರಕ್ಕೆ ಆಕಿಕೊಂಡು ತನ್ನ ಕೆಲಸವನ್ನು ಮುಂದುವರಿಸಿದಳು.

ಈಗೀಗ ಹೊಸಮನೆ ಎಂದರೆ ಬೇಸರ. ಮನೆಯಲ್ಲಿ ಮಾವ ಇರುವುದರಿಂದ ಕಾಲ ಕಳೆದು ಹೋಗುತ್ತದೆ. ಇಲ್ಲದಿದ್ದರೆ ಮನೆಯೂ ಬೇಸರವಾಗುತ್ತಿತ್ತು. ತೋಟ-ಹೊಲದಲ್ಲಿ ಕೆಲಸ ಮಾಡುವುದೆಂದರೂ ಅಷ್ಟೆ. ಅಲ್ಲಿ ಒಂಟಿ ಗೂಬೆಯಾಗಿ ದುಡಿಯಬೇಕು. ಸಂಗಡ ಅವರಿರುತ್ತಾರೆ. ಆಗೊಂದು ಈಗೊಂದು ಮಾತನಾಡಬಹುದು. ಆದರೂ ಏಕಾಕಿತನ ಅನುಭವ. ಅವರದು ಖಯಾಲಿ ಸ್ವಭಾವ. ಮನಸ್ಸು ಬಂದರೆ ಮಾತನಾಡಿದರು, ಇಲ್ಲವೆಂದರೆ ಇಲ್ಲ, ಮಾತಿನಲ್ಲೂ ಆತ್ಮಿಯತೆ ಕಡಿಮೆ. ತನ್ನ ಬಗ್ಗೆ ಅದೇನು ಅನಾದರವೋ ಇಲ್ಲ ತಿರಸ್ಕಾರವೋ ಅರಿಯದು.

ಹಿಂದೆಲ್ಲಾ ಮನೆಗೆ ಒಬ್ಬರೆಂದರೆ ಒಬ್ಬರು ಬರುತ್ತಿದ್ದರು. ಹೇರಂಬನ ಹೆಂಡತಿ, ಇಲ್ಲವೆ ಪರಮೇಶ್ವರನ ಹೆಂಡತಿ ಬಂದು ಅದೂ‌ಇದೂ; ಹಸಲರ ಹೆಣ್ಣಾಳುಗಳು ಬಂದು ಹಿತ್ತಿಲಲ್ಲಿ ನಿಂತೋ, ಹೊರಗಿನ ಚಪ್ಪರದ ಬಳಿ ನಿಂತೋ, ಕ್ಷೇಮಸಮಾಚಾರ ಹೇಳಿ ಹೋಗುತ್ತಿದ್ದರು. ಈಗ ಅವರೆಲ್ಲ ದೂರ ಹೋಗಿದ್ದಾರೆ. ಅರಲಗೋಡಿನ ದೀವ್ರ ಹೆಂಗಸರೂ ಇತ್ತ ಸುಳಿಯುವುದಿಲ್ಲ. ಅವರಾದರೂ ಬಂದರೆ ಹತ್ತಿರ ಜನರಿದ್ದಾರೆ ಎಂದಾದರೂ ಮನಸ್ಸಿಗೆ ಸಮಾಧಾನವಾಗುತ್ತಿತ್ತು. ಆದರೆ ಈ ಒಂಟಿತನ ಸಹಿಸಲಸಾಧ್ಯವಾಗಿದೆ.

ಕೃಷ್ಣಯ್ಯ ಬರುವುದಾಗಿ ಹೇಳಿ ಕಳುಹಿಸಿ ಎಂಟು ದಿನಗಳಾಗಿದ್ದವು. ಆದರೆ ಅವನಿನ್ನೂ ಬಂದಿಲ್ಲ. ಇಂದು ಬಂದಾನು ಎಂದು ಕಾದೆ. ಅವನು ಬಂದರೆ ಮನೆಯ ಸುದ್ದಿ ತಿಳಿಯಬಹುದಲ್ಲ ಅನ್ನುವಕಾತರ. ಅವನು ಬಂದರೆ ತನ್ನ ಬೇಸರ ದೂರವಾದೀತೇ ಎನ್ನುವ ಹಂಬಲ. ಕೃಷ್ಣಯ್ಯ ಹತ್ತಿರದವನು. ಅವನ ಒಡನಾಟದಲ್ಲಿಯೇ ಬೆಳೆದವಳು ಅಲ್ಲವೆ ತಾನು? ಅವನು ಬಂದರೆ ಈ ಹುಚ್ಚು ಹಿಡಿಸುವಂತಹಾ ಬೇಸರ ಖಂಡಿತಕ್ಕೂ ದೂರವಾಗುತ್ತಿತ್ತು.
ಅಕ್ಕಿ ಆರಿಸಿ ಮುಗಿಯಿತು. ಎದ್ದು ಮೊರವನ್ನು ಒಳಗಿರಿಸಿ ಬಂದು ಬಚ್ಚಲತ್ತ ನಡೆದಳು. ಜುಳುಜುಳು ನಾದಮಾಡುತ್ತ ನೀರು ಅಡಿಕೆ ದಬ್ಬೆಯಿಂದ ಬಾನಿಗೆ ಬೀಳುತ್ತಿತ್ತು. ಚೆಂಬಿನಲ್ಲಿ ನೀರು ಮೊಗೆದುಕೊಂಡು ಸೀರೆ ಮೇಲೆತ್ತಿ ಕಾಲಮೇಲೆ ನೀರು ಸುರಿದುಕೊಂಡು ಒಳಬಂದಳು. ಹೊರಗಿನಿಂದ ಮಾವ ಕರೆದಂತೆನಿಸಿ, ಬಂದೇ ಎಂದು ಹೇಳುತ್ತ ಹೊರನಡೆದಾಗ ಜಗುಲಿಯ ಮೇಲೆ ಕುಳಿತು ಮಾವನವರು,
“ಕೂಸೇ….ಯಾರೆ ಅದು ಮಾತಾಡ್ತಿರೋದು?” ಎಂದು ಕೇಳಿದರು.
ಅವರ ಕಣ್ಣು, ಕಿವಿ ಚುರುಕು. ಹಿಂದಾದರೆ ಜನರ ದನಿ ಕೇಳಿ ಹೀಗೆಲ್ಲ ಪ್ರಶ್ನಿಸುವ ವಿಚಾರ ಬರುತ್ತಿರಲಿಲ್ಲ. ಹಳ್ಳಿಯೆಂದ ಮೇಲೆ ಜನ ಬರುತ್ತಾರೆ ಹೋಗುತ್ತಾರೆ. ಶರಾವತಿ ನದಿಯನ್ನು ದಾಟಿ ಹೋಗುವವರು ಈ ಮನೆ ಎದುರಿನಿಂದಲೇ ಹಾದು ಹೋಗುತ್ತಿದ್ದರು. ಅರಲಗೋಡಿನವರು ಕೂಡ ಹೀಗೇ ಓಡಿಯಾಡುವುದಿತ್ತು. ಈಗ ಮಾತ್ರ ಇತ್ತ ಯಾರಾದರೂ ಸುಳಿದರೆ ಹೆದರಿಕೆಯಾಗುತ್ತದೆ. ಯಾರು? ಏಕೆ ಎಂದೆಲ್ಲ ಪ್ರಶ್ನೆಗಳು ತಲೆ ಎತ್ತುತ್ತವೆ.
ಚಪ್ಪರದ ಬಾಗಿಲಿಗೆ ಬಂದು ನಿಂತು ತಾನೂ ಮಾತು ತೇಲಿ ಬರುತಿದ್ದ ದಿಕ್ಕಿನತ್ತ ಕಿವಿಕೊಟ್ಟಾಗ ತನ್ನವರ ದನಿಗಿಂತ ಮೊದಲು ತನ್ನ ಕಿವಿ ನಿಮಿರಿದ್ದು ಕೃಶ್ಣಯ್ಯನ ದೊಡ್ಡ ಗಂಟಲು ಕೇಳಿ.
“ಹೌದಾ…ಕೃಷ್ಣಯ್ಯ ಬಂದ ಅಂತ ಕಾಣುತ್ತೆ”
ಎಂದು ಕೂಗಿದ ತಾನು, ಬಂದುದು ಅವನೇ ಸೈ ಎಂದು ಖಚಿತಪಡಿಸಿಕೊಂಡು. ತೋಟದ ಸಂಕ ದಾಟಿ ದರೆಯ ಮೇಲೆ ಬರುವ ದಾರಿ ಚಪ್ಪರದಿಂದ ನಾಲ್ಕು ಹೆಜ್ಜೆ ಮುಂದಿಟ್ಟರೆ ಕಾಣುತ್ತಿದ್ದುದರಿಂದ, ತಾನು ಮುಂದೆಸರಿದು ನಿಂತೆ, ಕೃಷ್ಣಯ್ಯ ಅಲ್ಲಿಂದಲೇ ತನ್ನನ್ನು ಕಂಡು ಕೈಬೀಸಿದ. ಅಡಕೆಯ ಮರದಮೆಲೆ ಹಬ್ಬಿದ ಬಳ್ಳಿಯ ಚಿಗುರೆಲೆ ತಿಳಿಗಾಳಿಗೆ ವಯ್ಯಾರದಿಂದ ಲಾಸ್ಯವಾಡಿತು.
“ನೀ ಬರುದೆ ಇಲ್ಲ ಅಂತ ಮಾಡಿದ್ದೆ…ಊರಲ್ಲಿ ಎಲ್ರೂ ಚನ್ನಾಗಿದಾರ?”
“ಓ! ಎಲ್ರೂ ಚೆನ್ನಾಗಿದಾರೆ…ನನ್ನ ಗ್ರಹಗತಿ ಮಾತ್ರ ಕೆಟ್ಟಿದೆ.”
ದೊಡ್ಡ ದನಿಯಲ್ಲಿ ಮಾತನಾಡುತ್ತ, ನಗುತ್ತ, ಕೈಲಿದ್ದ ಚೀಲವನ್ನು ಜಗುಲಿಯ ಮೇಲಿರಿಸಿ, ಮುದುಕನತ್ತ ತಿರುಗಿ ಕೈಮುಗಿದ ಕೃಷ್ಣಯ್ಯ.
“ತಾತ, ಹ್ಯಾಗಿದೀರ? ಈಗ ಆರೋಗ್ಯ ಹೇಗೆ?” ಎಂದೂ ಕೇಳಿದ.
“ಇದೀನಿ, ಆರೋಗ್ಯ ಮಾತ್ರ ಸುಧಾರಣೆ ಇಲ್ಲ. ಮಳೆಗಾಲ ಬಂತು ಎಂದರೆ ಏನೋ ದಿಗಿಲು. ಊರಕಡೆ ಎಲ್ರೂ ಚೆನಾಗಿದಾರ?
“ಹೌದು…ಯಜಮಾನ್ರು ನಿಮ್ಮನ್ನ ವಿಚಾರಿಸಿದರೆ…ಸಾಗರಕ್ಕೊ ತಾಳ ಗುಪ್ಪಕ್ಕೋ ಕರಕೊಂಡು ಹೋಗಿ ಮದ್ದು ಮಾಡಿದರೆ ಆಗುತ್ತಿತ್ತು ಅಂತಾನೂ ಹೇಳಿದ್ರು…”
“ಮದ್ದೆ? ಭ್ರಮೆ. ಸುರುಬು ಹತ್ತಿರೋ ಮರಕ್ಕೆ ಎಣ್ಣೆ ಬಳಿದ ಹಾಗೆ ಇದು…ಹೋದ ಆಯಸ್ಸು ತಿರುಗಿ ಬರುತ್ಯೆ…ಹುಂ…ಕೂಸೇ ನೀರು ತಂದುಕೊಡು…ಮಾತಾಡ್ತಾ ನಿಂತುಬಿಟ್ಟೆಯಲ್ಲ”
ಎಂದ ಮುದುಕ ಮುಖ ಅಗಲ ಮಾಡಿಕೊಂಡು ಕೃಷ್ಣಯ್ಯನನ್ನೇ ನೋಡುತ್ತ ನಿಂತ ಸೊಸೆಯತ್ತ ತಿರುಗಿ.
ನಾಗವೇಣಿ ನೀರು ತಂದು ಕೊಟ್ಟಳು. ಗಣಪಯ್ಯ ಒಳಗಿನಿಂದ ಬಂದವ-
“ಕೃಷ್ಣಯ್ಯ ಸ್ನಾನ ಮಾಡಿ ಬಿಡು”
ಎಂದ. ಕೃಷ್ಣಯ್ಯ ಚೀಲದಿಂದ ಪಂಚೆ ತೆಗೆದುಕೊಂಡು ಒಳಗೆ ನಡೆದ. ಬಚ್ಚಲು ಮನೆಯತ್ತ ತಿರುಗಿ ಅವನನ್ನು ಅಡಿಗೆ ಮನೆ ಬಾಗಿಲಲ್ಲಿ ನಿಂತ ನಾಗವೇಣಿಯೇ ತಡೆದು ನಿಲ್ಲಿಸಿದಳು-
“ಕೃಷ್ಣಯ್ಯ ಅಮ್ಮನ ಸೊಂಟ ನೋವು ಹ್ಯಾಗಿದೆ?”
“ಈಗ ಕಡಿಮೆ ಅಂತಿದ್ಲು. ತಾಳಗುಪ್ಪೆ ಪಂಡಿತರು ಅದೇನೋ ಎಣ್ಣೆ ಕೊಟ್ಟಿದ್ರು. ಅದರಿಂದ ಕಡಿಮೆಯಾಗಿರೋ ಹಾಗಿದೆ.”
ಹಿಂದಿನ ಬಾರಿ ಹೋದಾಗ ತಾಯಿ ಸೊಂಟ ಹಿಡಿದು ಕೊಂಡಂತಾಗಿದೆ ಎಂದು ಹೇಳಿದ್ದುದು ನಾಗವೇಣಿ ಮರೆತಿರಲಿಲ್ಲ,
“ನಾಗರಾಜ ಊರಿಗೆ ಬಂದಿದ್ನಾ?”
ನಾಗರಾಜ ತಮ್ಮ. ಸಾಗರದಲ್ಲಿ ಹೈಸ್ಕೂಲು ಓದುತ್ತಿದ್ದಾನೆ. ಅವನು ಆಗಾಗ್ಗೆ ಊರಿಗೆ ಬಂದು ಹೋಗುತ್ತಿರುತ್ತಾನೆ. ಕೃಷ್ಣಯ್ಯ ಬಚ್ಚಲು ಒಳಗಿನಿಂದ ಕೂಗಿ ಹೇಳಿದ-
“ಇಲ್ಲ…ಮುಂದಿನ ವಾರ ಬರಬಹುದು…”
ಮೈಮೇಲೆ ನೀರು ಸುರಿದುಕೊಳ್ಳುತ್ತಿರುವ ಸದ್ದಾಗಲು ನಾಗವೇಣಿ ಹೊಗೆ ಏಳುತ್ತಿದ್ದ ಒಲೆಯತ್ತ ತಿರುಗಿದಳು. ಹಿಂದಿನಿಂದ ಗಣಪಯ್ಯ-
“ಆಯ್ತ ಅಡಿಗೆ?”
ಎನ್ನುತ್ತ ಒಳಬಂದ.
“ಆಸೆಯಾಗಿದೆ ಅನ್ನ ಮಾಡಬೇಕು. ತೋಟದಿಂದ ಬರುವಾಗ ನಾಲ್ಕು ಎಲೆ ತಂದ್ರೆ ಆಗ್ತಿರಲಿಲ್ವ ಊಟಕ್ಕೆ ಎಲೆ ಇಲ್ಲ ಈಗ.”
“ನೀ ಹೇಳಿದ್ಯ ಹಾಗಂತ….ಹಾಗಂತ ನನಗೇನು ಸ್ವಪ್ನ ಬೀಳಬೇಕು ಎಲೆ ಇಲ್ಲ ಅಂತ.”
“ಈಗ ಏನಾಯ್ತು ಹೋಗಿ ತರಬಹುದಲ್ಲ…”
“ಹೌದು…. ಹೋಗಿ ತರಬಹುದು….ಇವಳಪ್ಪನ ಮನೆ ಜವಾನ ಹೋಗಿ ತರೋದಕ್ಕೆ…”
ಒಲೆಯಲ್ಲಿ ಬೆಂಕಿ ಭಗ್ ಎಂದು ಹತ್ತಿಕೊಳ್ಳಲು ಹಿಂದೆ ಸರಿದು ಗಂಡನ ಮುಖ ನೋಡಿದಳು. ಆತ ತಮಾಷೆಗೆ ಹೇಳಿರಲಿಲ್ಲ. ಈ ಮಾತನ್ನು ಕೋಪದಿಂದಲೇ ಹೇಳಿದ್ದ.
“ಹುಂ…ಕೃಷ್ಣಯ್ಯ ತರ್ತಾನೆ ಬಿಡಿ.”
ಎಂದು ಎದ್ದಳು. ಹಸಿದು ಬಂದ ಗಣಪಯ್ಯ ಕ್ರೋಧದಿಂದಲೇ ಹೊರನಡೆದ.
ಬಿಸಿಲು ಮರೆಯಾಗಿ ಮೋಡ ಕವಿದರೂ ಮಳೆ ಬೀಳಲಿಲ್ಲ. ಗಾಳಿ ಬಲವಾಗಿತ್ತು. ದೂರದಲ್ಲೆಲ್ಲೋ ಗುಡುಗುತ್ತಿತ್ತು. ಮಳೆ ಇನ್ನೇನು ಆರಂಭವಾಗುತ್ತದೆನ್ನುವಂತೆ ಮೋಡಗಳು ಕೆಳಗೇನೇ ತೂಗಾಡುತ್ತಿದ್ದವು. ಊಟ ಮುಗಿಸಿ ಗಣಪಯ್ಯ ಕೃಷ್ಣಯ್ಯನನ್ನು ಕರೆದುಕೊಂಡು ಮನೆಯಿಂದ ಹೊರಬಿದ್ದ. ನೀರು ಹಳ್ಳಿಯ ಸುತ್ತ ತುಂಬಿಕೊಳ್ಳುತ್ತಿದೆ, ಎಂದು ಕೃಷ್ಣಯ್ಯ ಹೇಳಿದ ಮಾತನ್ನು ಆತ ಮರೆತಿರಲಿಲ್ಲ. ಅರಲಗೋಡಿಗೆ ಹೋಗುವ ಕಾಲು ದಾರಿಯವರೆಗೂ ನೀರು ಏರಲಾರದೆಂಬ ಭರವಸೆ ಇತ್ತು, ಈ ಕಾಲುದಾರಿಯೂ ಮುಳುಗಿ ಹೋದರೆ ಏನು ಗತಿ ಎಂದಾತ ಬೆದರಿದ. ಹೊಲದಲ್ಲಿ ಇನ್ನು ಮುಂದೆ ಕೆಲಸ ಆರಂಭವಾಗಬೇಕು. ತೋಟದ ಕೆಲಸವೂ ಅಷ್ಟೆ. ಹೊರಗಿನಿಂದ ಕೂಲಿಯಾಳುಗಳೇ ಬಾರದೇ ಹೋದರೆ ಮಾಡುವುದೇನನ್ನು?

ಗಣಪಯ್ಯ ಅರಗೋಡಿನ ಕಾಲುದಾರಿಯತ್ತ ಹೊರಳಿದ. ಗುಡ್ಡದ ಒಂದು ಪಾರ್ಶ್ವವನ್ನು ಹತ್ತಿ ಇಳಿದು ಆ ಬದಿಯತ್ತ ಹೋಗಿ ನಿಂತಾಗ ನೀರಿನ ದರ್ಶನವಾಯಿತು. ಗುಡ್ಡದ ಈ ಬದಿಗೆ ನೀರು ಎಂದೂ ಬಂದಿರಲಿಲ್ಲ. ಶರಾವತಿ ಇಲ್ಲಿ ಗುಡ್ಡಕ್ಕೆ ತಗುಲಿಕೊಂಡಂತೆ ಹರಿಯುತ್ತಿದ್ದಳಾದರೂ, ಈವರೆಗೂ ಮುಂದೆ ಹರಿದು ಹೋಗುತ್ತಿದ್ದ ಆಕೆ ತನ್ನ ದಾರಿ ಬಿಟ್ಟು ಅಕ್ಕಪಕ್ಕಗಳಿಗೆ ಹೊರಳಿರಲಿಲ್ಲ. ಈಗ ಮುಂದೆ ಹರಿಯದೆ ನಿಂತ ಶರಾವತಿ ಕ್ರಮೇಣ ಅಕ್ಕಪಕ್ಕದ ಕಾಡು-ಕಣಿವೆಗಳನ್ನೆಲ್ಲ ಆಕ್ರಮಿಸಿಕೊಳ್ಳಲಾರಂಭಿಸಿದ್ದಳು. ಗುಡ್ಡದ ಈ ಬದಿಯಲ್ಲಿ ಕಾಡು, ಪೊದೆ, ಬಿದಿರ ಮಳೆಗಳೆಲ್ಲ ನೀರಿನಲ್ಲಿ ನಿಂತಿದ್ದವು. ಕೆಂಪು ನೀರು ಶಾಂತವಾಗಿ, ಸ್ತಬ್ಧವಾಗಿ ನಿಂತಿತ್ತು.

ಗಣಪಯ್ಯ ಕೃಷ್ಣಯ್ಯನ ಮುಖ ನೋಡಿದ. ಈ ಮೂರು ದಿನಗಳಲ್ಲಿ ನೀರು ಇಷ್ಟು ಮುಂದುವರಿದಿದೆ. ಇನ್ನೂ ಮೂರು ದಿನಗಳುರುಳಿದರೆ ನೀರು ಮತ್ತೂ ಏರಿ ಸೀತಾಪರ್ವತ ದ್ವೀಪವಾಗುವುದರಲ್ಲಿ ಸಂದೇಹವಿಲ್ಲ. ಅನಂತರ ತಮ್ಮ ಪಾಡು?
“ಬಾವಯ್ಯ ನೀವು ಹೆದರೋದು ಬೇಡ…ಈ ಹೊಲ-ತೋಟದ ಕೆಲಸ ನನಗಿರಲಿ…ನೀವು ಯಾವುದಕ್ಕೂ ಗಾಬ್ರಿಯಾಗೋದು ಬೇಡ…”
ಎಂದ ಕೃಷ್ಣಯ್ಯ.
“ಸರಕಾರ ನಮ್ಮನ್ನ ಈ ಸ್ಥಿತಿಗೆ ತಂದು ಹಾಕುತ್ತೆ ಅಂತ ಯಾರಯ್ಯ ಊಹಿಸಿದ್ದರು….ಈ ಹಳ್ಳಿಲಿರೋ ಎಲ್ರಿಗೂಪರಿಹಾರ ಕೊಟ್ಟು ಸರಕಾರದವರು ಬೇರೆಕಡೆ ಕಳುಹಿಸಿದರು. ನಮ್ಮ ವಿಷಯದಲ್ಲಿ ಮಾತ್ರ ಸರಕಾರ ಏನೂ ಮಾಡಲಿಲ್ಲ…ಈಗ ನಮ್ಮ ಕಷ್ಟಾನ ಯಾರ ಹತ್ತಿರ ಹೋಗಿ ಹೇಳಿಕೊಳ್ಳೋದು?”
ಗಣಪಯ್ಯ ಗೊಣಗಿಕೊಂಡ.
“ಬನ್ನಿ ಬಾವಯ್ಯ…ಮಳೆ ಬರುತ್ತೆ ಈಗ”
ಎಂದು ಕೃಷ್ಣಯ್ಯ ಗಣಪಯ್ಯನನ್ನು ಕರೆದುಕೊಂಡು ಮನೆಯತ್ತ ಹೊರಟ. ಇಬ್ಬರು ಚಪ್ಪರದ ಒಳಗೆ ಕಾಲಿಡುತ್ತಿರುವ ಹಾಗೆ ಹಿಂದಿನಿಂದ ಮಳೆ ಬಂದೇ ಬಂತು.
ರಾತ್ರಿ ಹಿಡಿದ ಮಳೆ ಎಂಟು ದಿನಗಳವರೆಗೂ ಸುರಿಯಿತು.
*****
ಮುಂದುವರೆಯುವುದು

ಕೀಲಿಕರಣ: ಸೀತಾಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.