ಅವಧೇಶ್ವರಿ – ೩

ಭಾಗ ಎರಡು: ಭದ್ರಾಯು


ಒಂದು ವರ್ಷದ ನಂತರ ದಶಾರ್ಣ ರಾಜ್ಯದಲ್ಲಿ ಬಿರುಗಾಳಿ ಎದ್ದಿತು.
ದಶಾರ್ಣದ ಅರಸ ವಜ್ರಬಾಹುವಿಗೆ ಇಬ್ಬರು ಹೆಂಡಂದಿರು. ಕೇಶಿನಿ ಪಾಂಚಾಲ ರಾಜ್ಯದ ರಾಜಪುತ್ರಿ. ಆಕೆಗೆ ಮಕ್ಕಳಾಗಲಿಲ್ಲವೆಂದು ತನ್ನದೇ ರಾಜ್ಯದ ಪತ್ತಾರ ಜಾತಿಯ, ತಂದೆ ತಾಯಿಯರನ್ನು ಕಳಕೊಂಡ. ಅನಾಥ ಬಾಲಿಕೆ ಯಾದವಿಯನ್ನು ಮದುವೆಯಾದನು. ಹಿರಿಯ ರಾಣಿಯ ಗರ್ವಿಷ್ಟ ಕೋಪಾವಿಷ್ಠ ಅಸೂಯಪರ ಸ್ವಭಾವವನ್ನು ಚೆನ್ನಾಗಿ ಅರಿತ ರಾಜನು ಊರ ಹೊರಗೆ ಇದ್ದ ಅರಮನೆಯಲ್ಲಿ ಯಾದವಿಯನ್ನು ಸ್ವತಂತ್ರವಾಗಿ ಇರಿಸುವ ವ್ಯವಸ್ಥೆ ಮಾಡಿದನು. ಮೊದಲೇ ಹಿರಿಯ ರಾಣಿ ಕ್ರೂರಿ; ಸಾಲದ್ದಕ್ಕೆ ಆಕೆಯ ಅಣ್ಣ ತಮ್ಮಂದಿರು ಆಕೆಯ ಕಿವಿಯೂದತೊಡಗಿದರು. ಆಕೆಯ ಪರವಾಗಿ ಕಿರಿಯ ರಾಣಿ ಯಾದವಿಯ ಮೇಲೆ ಕಣ್ಣು ಇಟ್ಟಿದ್ದರು. ಆಕೆ ಗರ್ಭವತಿಯಾದ ಮೇಲೆ ಹಿರಿಯವಳಿಗೆ ಹೊಟ್ಟೆಯುರಿ ಹೆಚ್ಚಾಯಿತು. ಆದರೂ ಅನಸೂಯೆಯ ಸೋಗು ಹಾಕಿ, ಶ್ರೀಮಂತ ಮಾಡಿ ಕುಪ್ಪುಸ ತೊಡಿಸುವ ನೆಪದಿಂದ ಕಿರಿಯ ರಾಣಿಗೆ ವಿಷಮಿಶ್ರಿತ ಆಹಾರವನ್ನು ಕೊಟ್ಟು ಬಿಟ್ಟಳು, ಗರ್ಭಪಾತವಾಗುವ ಉದ್ದೇಶದಿಂದ.
ಆರು ತಿಂಗಳಾಗುವಷ್ಟೊತ್ತಿಗೆ ಕಿರಿಯ ರಾಣಿಗೆ ಸ್ರಾವ ಶುರುವಾಯಿತು.

ರಾಜ ವೈದ್ಯರು ಶಿಷ್ಯನೊಂದಿಗೆ ಬಂದು ಔಷಧ ಕೊಟ್ಟು ಹೊರಟು ಹೋದರು. “ಏನೂ ಅಪಾಯವಿಲ್ಲ” ಎಂದು. ಹೋಗುವಾಗ ಶಿಷ್ಯನಿಗೆ ಅಲ್ಲೇ ಇರುವಂತೆ ಸನ್ನೆ ಮಾಡಿದರು. ಅರಮನೆಯ ಎದುರಿಗೆ ಒಬ್ಬ ಶ್ಯಾಲಕ ಮಹಾಶಯ ನಿಂತಿದ್ದನು. “ಏನು ವೈದ್ಯ ಗುರುಗಳೇ, ಇತ್ತ ಬಂದಿದ್ದಿರಿ? ಅರಸರು ಸೌಖ್ಯ ತಾನೆ?” ಎಂದು ಕೇಳಿದ ವ್ಯಂಗ್ಯವಾಗಿ.
“ಅರಸರು ಮೃಗಯೆಗೆ ಹೋಗಿದ್ದಾರೆ.”
“ಹಾಗಾದರೆ..?”
“ರಾಣಿಗೆ ಗರ್ಭಸ್ರಾವವಾಗುತ್ತಿದೆ, ಔಷಧ ಕೊಟ್ಟಿದ್ದೇನೆ. ಆದರೆ ಗರ್ಭ ನಿಲ್ಲುವ ಆಶೆ ಕಡಿಮೆ, ದೇವರೇ ಕಾಯಬೇಕು. ರಾಣಿಗೆ ಬಯಕೆಯ ದಿನಗಳಲ್ಲಿ ಮಣ್ಣು ತಿನ್ನುವ ಆಸೆಯಾಗಿತ್ತೆ?”
“ನನಗೇನು ಗೊತ್ತು? ಮಣ್ಣು ಮುಕ್ಕಲಿ ಬಿಡಿ!” ಎನ್ನುತ್ತ ಕುದುರೆ ಏರಿ ಶ್ಯಾಲಕ ಮಹಾಶಯ ಓಟಕಿತ್ತ, ತನ್ನ ಅಕ್ಕನಿಗೆ ಸಂತೋಷದ ವಾರ್ತೆ ತಿಳಿಸಲಿಕ್ಕೆ,
ವೈದ್ಯರು ಚಿಂತಾತುರರಾಗಿ ಕಾಲ್ನಡೆಯಿಂದ ಮನೆಗೆ ತೆರಳಿದರು. ಚಿಂತೆ ಬೇರೆ ರಿತಿಯದು….

ಅವರ ಚತುರ ಶಿಷ್ಯ ಋಷಭದೇವರ ಭಕ್ತ. ಅಲ್ಲಿಯೇ ಕುರುಜಾಂಗುಲದಲ್ಲಿ ಎಂಟು ಹರದಾರಿ ದೂರ ಅವರ ಆಶ್ರಮವಿತ್ತು. ರಾಜವೈದ್ಯರು ಅವರ ಖಾಸಾ ಶಿಷ್ಯರಲ್ಲದಿದ್ದರೂ ಆಗೊಮ್ಮೆ ಈಗೊಮ್ಮೆ ಅವರಲ್ಲಿ ಹೋಗಿ ವೈದ್ಯಕದ ವಿಶೇಷ ಉಪಾಯಗಳನ್ನು ಕಲಿತು ಬರುತಿದ್ದರು. ಆದರೆ ಈ ವಿಷಯ ಯಾರಿಗೂ ಹೇಳುತ್ತಿರಲಿಲ್ಲ. ತಮ್ಮದೇ ಸಂಶೋಧನೆಯೆಂದು ಕೊಚ್ಚಿಕೊಳ್ಳುತ್ತಿದ್ದರು.

ರಾಣಿಯನ್ನು ಅನೇಕ ಬಾರಿ ಪರೀಕ್ಷಿಸಿ ನೋಡಿದ್ದರು. ವಿಷಪ್ರಾಷನವಾಗಿದೆಯೆಂದು ಸಂಶಯಗೊಂಡಿದ್ದರು. ಯಾವ ಬಗೆಯ ವಿಷವೆಂಬುದರ ಪತ್ತೆ ಹತ್ತಿದ್ದಿಲ್ಲ, ಅಷ್ಟೆ. ರಾಣಿಯ ಸ್ರಾವವು ಹಸಿರು-ನೀಲಿ ಬಣ್ಣದ್ದು ಎಂದ ಕೂಡಲೆ ಶಿಷ್ಯನಿಗೆ ಸನ್ನೆ ಮಾಡಿದರು. ಆದರೆ ಊರಲ್ಲಿ ಯಾರಿಗೂ ತಿಳಿಯದಂತೆ ನೋಡಿಕೊಂಡರು.
ಶಿಷ್ಯನು ಬೇನೆ ತಿನ್ನುತ್ತ ನರಳುವ ರಾಣಿಗೆ ಎಚ್ಚರತಪ್ಪುವ ಔಷಧವನ್ನು ಕುಡಿಸಿದನು. ಆರು ಜನ ಬೋವಿಗಳನ್ನು ಗುಪ್ತವಾಗಿ ಗೊತ್ತು ಮಾಡಿಟ್ಟಿದ್ದನು. ರಾತ್ರಿ ನಾಲ್ಕು ಪ್ರಹರದ ಹೊತ್ತಿಗೆ ಎಲ್ಲರಿಗೂ ನಿದ್ದೆ ಹತ್ತಿದಾಗ ಅರಮನೆಯ ಹಿತ್ತಲಿನ ಬಾಗಿಲಿನಿಂದ ಮೇಣೆಯೊಂದು ಹೊರಬಿತ್ತು. ಪ್ರಹರಕ್ಕೆ ಒಂದು ಹರಿದಾರಿಯಂತೆ ಮೌನವಾಗಿ ಕುರುಜಾಂಗುಲದೆಡೆ ಸೀಳುದಾರಿಯಿಂದ ಪ್ರಯಾಣ ಮಾಡುತ್ತ ಋಷಭದೇವರ ಆಶ್ರಮಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಬಂದು ತಲುಪಿತು.

ಋಷಭದೇವ ಮಹಾಮುನಿಗಳ ಚರಿತ್ರೆ ಅದ್ಭುತವಾದದ್ದು, ಮಹಿಮೆ ಅಪಾರವಾದದ್ದು, ಚಿಕ್ಕಂದಿನಲ್ಲಿ ನಾಲ್ಕು ವೇದಗಳನ್ನೂ ಕಲಿತು ಹಿಮಾಲಯಕ್ಕೆ ತಪಸ್ಸಿಗೆ ಹೋದರು. ಮರಳಿ ಬರುವಾಗ ದಾರಿ ತಪ್ಪಿ ಕಾಶ್ಮೀರಕ್ಕೆ ಬಂದರು. ಅಲ್ಲಿ ಲಕುಲೀಶ ಕುಲದ ಯಾತ್ರಿಕರು ಭೆಟ್ಟಿಯಾದೊಡನೆ ’ಹೇಗೂ ದಾರಿ ತಪ್ಪಿದೆ’ ಎಂದು ಅವರೊಡನೆ ಕ್ರಿವಿ-ಬಾಹ್ಲೀಕಗಳನ್ನು ಸಂಚರಿಸಿ ಹಿಂಗ್ಲಜಾ ದೇವಿಯ ಆರಾಧನೆ ಮಾಡಿದರು. ನಂತರ ಒಬ್ಬರೇ ಗಾಂಧಾರದೇಶಕ್ಕೆ ಹೋಗಿ. ಅಲ್ಲಿಂದ ಆರ್ಮೇನಿ ದೇಶಕ್ಕೆ ಬಂದರು. ಅಲ್ಲಿ ಹೆಚ್ಚಿನ ಯವನೀ(ಯುನಾನೀ) ವೈದ್ಯಕೀಯ ಅಭ್ಯಾಸ ಮಾಡಿದರು. ಅವರಿಗೆ ಗುರುವು ಹರ್ಮೇಶ ದೇವರ ದಂಡವನ್ನು ದಯಪಾಲಿಸಿದನು. ಹೀಗೆ ಅವರ ಬಳಿ ಮೂರು ಪವಿತ್ರ ದಂಡಗಳು ಕೂಡಿದವು-ಲಕುಲೀಶ ಗುರುವಿನ ಕೃಪಾದಂಡ, ಹಿಂಗ್ಲಜಾ ದೇವಿಯ ಆರಾಧನಾದಂಡ, ಹರ್ಮೇಶ ದೇವತೆಯ ದ್ವಿಸರ್ಪದ ಮುರಿಗೆಯ ದಂಡ. ಮರಳಿ ಬಂದು ಕುರುಜಾಂಗುಲದಲ್ಲಿ ಅಥರ್ವಣ ವೇದದ ಅಭ್ಯಾಸ ಮಾಡಿ ನಾಗಜನರ ಸರ್ಪವಿದ್ಯೆಯನ್ನೂ ಕಲಿತರು. ವಿಷ ನಿವಾರಣೆಯಲ್ಲಿ ಆಳ ಪರಿಣತಿ ಪಡೆದರು.
ಋಷಭ ಮಹರ್ಷಿಗಳು ರಾಣಿಯ ಪರೀಕ್ಷೆ ಮಾಡಿ ಗೋಣು ಅಲ್ಲಾಡಿಸಿದರು-“ಗರ್ಭಸ್ರಾವ ನಿಲ್ಲಿಸುವುದು ಬೇಡ. ಕಡಿಮೆ ಮಾಡುವುದಕ್ಕೆ ಔಷಧ ಕೊಡುತ್ತೇನೆ!”
“ಏಕೆ ಮಹರ್ಷಿಗಳೇ?”
“ಗರ್ಭ ಮೂರು ತಿಂಗಳಿದ್ದಾಗ ವಿಷಪ್ರಾಷನವಾಗಿದೆ. ದೃಢ ಗರ್ಭವಾದ್ದರಿಂದ ಮಗು ಬದುಕಿ ಉಳಿದಿದೆ. ಈಗ ಶ್ವಾಸೋಛ್ವಾಸಶುರುವಾಗಿದೆ. ಸ್ರಾವವನ್ನು ಪೂರ್ಣ ನಿಲ್ಲಿಸಿದರೆ ಹೊಟ್ಟೆಯ ತಳಭಾಗದಲ್ಲಿ ಅದು ಸಂಚಯವಾಗಿ ಮಗುವಿನ ಶ್ವಾಸೋಛ್ವಾಸಕ್ಕೆ ಆತಂಕವಾಗುತ್ತದೆ. ಹಾಗೆಯೇ ಬಿಟ್ಟರೆ ತಾಯಿ ತೀರಾ ದುರ್ಬಲಳಾಗಿ ಹೆರುವ ಕಾಲಕ್ಕೆ ಆಕೆಯ ಜೀವಕ್ಕೆ ಅಪಾಯವಾಗುತ್ತದೆ. ಈಗ ನಮ್ಮ ಪ್ರಯತ್ನ ಎರಡು ಪ್ರಾಣಗಳನ್ನೂ ಉಳಿಸಿಕೊಳ್ಳುವುದಕ್ಕಾಗಿ. ಮೊದಲೇ ಏಕೆ ಬರಲಿಲ್ಲ?”
“ಏನು ಹೇಳಲಿ, ದೇವ? ಹೇಳಿದರೆ ಗುರುನಿಂದೆಯ ಪಾಪ ತಟ್ಟುತ್ತದೆ.”
“ಘಟನೆಗಳನ್ನು ಪೂರ್ಣ ತಿಳಿಯದೆ ಔಷಧ ಕೊಡಬಾರದೆಂದು ಹರ್ಮೇಷನ ಆಜ್ಞೆ.”
“ವಿಷಪ್ರಾಶನವಾದ ಬಗ್ಗೆ ಗುರುಗಳಿಗೆ ತಿಳಿದಿತ್ತು. ಅದನ್ನು ಬಹಿರಂಗವಾಗಿ ಹೇಳಿದರೆ ಹಿರಿಯ ರಾಣಿಯ ಕೋಪ, ಜೊತೆಗೆ ತಮ್ಮ ವೈದ್ಯಕೀಯ ಜ್ಞಾನದ ಅಭಿಮಾನ. ಕೈ ಮೀರಿದ ಮೇಲೆ ರಾಣಿಯನ್ನು ತಮ್ಮ ಕಡೆಗೆ ಒಯ್ಯಬೇಕೆಂದು ವಿಧಿಸಿದರು. ಕಳ್ಳತನದಲ್ಲಿ ಇಲ್ಲಿ ಬಂದಿದ್ದೇವೆ. ಯಾರಿಗಾದರೂ ತಿಳಿದರೆ ನಾನು ಶಿಕ್ಷಾರ್ಹ. ರಾಜರು ಮೃಗಯೆಗೆ ಹೋದ ಸಂಧಿಯಲ್ಲಿ ನಾನು ರಾಣಿಯಲ್ಲಿ ಮೇಣೆಯಲ್ಲಿ ಹಾಕಿ ತಂದೆ!”
“ಒಳ್ಳೆಯ ಕೆಲಸ ಮಾಡಿದಿ. ಆದರೆ ಈಗಾಗಲೇ ಮಗು ಊನವಾಗಿದೆ. ಕೆಲವು ಅಂಗಾಂಗಗಳು ಬೆಳೆದಿಲ್ಲ.”
“ಮುಂದೆ ಕೂಸನ್ನು ಸಾಕುವುದು ತಾಯಿಗೆ ಕಷ್ಟವಾಗುವುದಿಲ್ಲವೇ?”
“ಕೂಸು ಭಾಗ್ಯವಂತನಾಗುತ್ತಾನೆ. ತನ್ನ ಜೀವನವನ್ನು ತಾನೇ ರೂಪಿಸುತ್ತಾನೆ, ಊನಾಂಗಗಳು ಅವನ ವಿಕಾಸಕ್ಕೆ ಬಾಧೆ ತರುವುದಿಲ್ಲ. ಅವನಿಗೆ ರಾಜಯೋಗವಿದೆ.”


ಈ ಘಟನೆಗಳು ನಡೆದು ಇಪ್ಪತ್ತು ವರ್ಷಗಳಾಗಿ ಹೋಗಿದ್ದವು. ರಾಣಿ ಗಂಡು ಮಗು ಹೆತ್ತಳು, ಮಗುವಿಗೆ ಕೈಗಳೂ ಇಲ್ಲ, ಪಾದಗಳೂ ಇಲ್ಲ. ಕೈ ಇರುವ ಜಾಗೆಯಲ್ಲಿ ಒಂದೇ ಗಣಲಿನ ಭುಜಗಳು. ಅವುಗಳಿಗೆ ಪುಟ್ಟ ಹಸ್ತಗಳು. ಕಾಲುಗಳೂ ಒಂದೇ ಗಣಿಲು; ಪಾದಗಳಿಗೆ ಮೀನದಂತೆ ಅಖಂಡ ಒಂದೇ ಬೆಟ್ಟು ಐದು ಬೆಟ್ಟುಗಳ ಸ್ಥಾನವನ್ನು ಆಕ್ರಮಿಸಿತ್ತು. ಮುಖ ಮಾತ್ರ ತಿದ್ದಿ ತೀಡಿದಂತಿತ್ತು. ಮುಖವನ್ನು ನೋಡಿ ರಾಣಿಗೆ ಸಂತೋಷವಾದರೂ ರಾಕ್ಷಸಜನನದಿಂದ ನಾಚಿ ಅಳತೊಡಗಿದಳು. ಅವನಿಗೆ ಕುತ್ತಿಗೆಯೇ ಇರಲಿಲ್ಲ. ಧಡಕ್ಕೆ ನೇರವಾಗಿ ರುಂಡ ಹತ್ತಿಕೊಂಡಿತ್ತು.

ಋಷಭ ಮಹರ್ಷಿಗಳು ಅವನ ಜಾತಕ ಬರೆದು ಅವನು ಚಕ್ರವರ್ತಿ ಎಂದು ಹೇಳಿದರೂ ರಾಣಿಗೆ ಸಮಾಧಾನವಾಗಲಿಲ್ಲ.
ಹತ್ತು ದಿವಸ ಮಗು ನಿಶ್ಚೇಷ್ಟಿತ ಮಲಗಿಕೊಂಡಿತ್ತು. ಉಸಿರಾಟದಿಂದಷ್ಟೇ ಅದು ಜೀವದಿಂದ ಇದೆಯೆಂದು ಗೊತ್ತಾಗಬೇಕು.
ಹತ್ತು ದಿನಗಳ ನಂತರ ಮಗು ಗಂಭೀರಧ್ವನಿಯಲ್ಲಿ ಚೀರತೊಡಗಿತು. ರಾಣಿ ಎದೆಗವಚಿ ಮೊಲೆಯುಡಿಸಿದಳು. ಹತ್ತು ದಿನ ರಾಣಿಗೆ ತುಳುಕುವ ಎದೆ ಹಾಲಿನಿಂದ ತೊಂದರೆಯಾಗಿತ್ತು. ಮಗು ಚೀರಿದನಂತರ ಮೊಲೆಯುಡಿಸಿದ ಮೇಲೆ ಅವಳ ಎದೆನೋವು ಕಡಿಮೆಯಾಯಿತು, ಜೊತೆಗೆ ಪ್ರೀತಿಯೂ ಉಕ್ಕಿತು.
ಮಹರ್ಷಿಗಳಿಗೆ ರಾಣಿ ವಿನಂತಿ ಮಾಡಿಕೊಂಡಳು: “ಮಹಾಗುರು ಇಂಥ ಸೂಲವನ್ನು ಕಟ್ಟಿಕೊಂಡು ನಾನು ನಗರದಲ್ಲಿ ಇರಲಾರೆ. ಹಾಸ್ಯಾಸ್ಪದಳಾಗುತ್ತೇನೆ. ಇಂಥ ಮಗುವನ್ನು ಹೆತ್ತದ್ದಕ್ಕಾಗಿ ಮಹಾರಾಜರು ಕೋಪಿಸಿಕೊಂಡು ನನ್ನನ್ನು ಕೊಂದುಹಾಕುತ್ತಾರೆ. ನನ್ನ ಸವತಿ ನನ್ನನ್ನು ದ್ವೇಷಿಸುತ್ತಾಳೆ. ನಾನು ಅನಾಥೆ. ನಾನು ಮಾಯವಾದುದಕ್ಕಾಗಿ ನನ್ನ ಬಗ್ಗೆ ಅಳುವವರು ಯಾರೂ ಇಲ್ಲ. ಅಲ್ಲಿ ಇರುವವರೆಗೆ ರಾಜರು ನನ್ನನ್ನು ಸುಖವಾಗಿ ನೋಡಿಕೊಂಡರು. ಮಗುವನ್ನು ನೋಡಿದ ಮೇಲೆ ಅವರೂ ನನ್ನನ್ನು ತೊರೆಯುತ್ತಾರೆ. ಮಗುವನ್ನೂ ಕೊಲ್ಲಬಹುದು, ಅವರು ಮತ್ತೆ ನನ್ನನ್ನು ಮನೆಗೆ ಕರಕೊಂಡರೂ ಇಂದಿಲ್ಲ ನಾಳೆ ಸವತಿ ನನ್ನನ್ನು ವಿಷ ಹಾಕಿ ಕೊಲ್ಲುತ್ತಾಳೆ. ನಾನು ಆಶ್ರಮದಲ್ಲಿ ಈ ಮಗುವಿನ ಜೊತೆಗೆ ಇರುತ್ತೇನೆ. ಕೃಪೆ ಮಾಡಬೇಕು. ”
“ಇರು, ಮಗಳೇ ನಿಶ್ಚಿಂತಳಾಗಿ ಇರು. ನಾನು ನಿನ್ನನ್ನು ಕಾಯುತ್ತೇನೆ. ನಿನ್ನ ಮಗ ಮಾತ್ರ ಭಾಗ್ಯಶಾಲಿಯಾಗುತ್ತೇನೆ. ನಾಳಿನ ಅವನ ಭವಿಷ್ಯಕ್ಕಾಗಿ ಅವನನ್ನು ಚೆನ್ನಾಗಿ ನೋಡಿಕೋ. ಅವನಿಗೆ ಏನೂ ಕಡಿಮೆ ಮಾಡಬೇಡ.”

ರಾಣಿಯ ಶೋಧಕ್ಕಾಗಿ ಅರಸು ಸುತ್ತಲೂ ಗುಪ್ತಚರರನ್ನು ಕಳಿಸಿದನು. ಇಬ್ಬರು ದೂತರು ಆಶ್ರಮಕ್ಕೂ ಬಂದರು. ಸುದೈವದಿಂದ ಅವರಿಗೆ ರಾಣಿಯ ಗುರುತು ಇರಲಿಲ್ಲ. ಊರ ಹೊರಗೆ ಆಕೆಯ ವಾಸುವಿದ್ದುದರಿಂದ. ಆಕೆಗೆ ಯಾವ ರಾಜಮರ್ಯಾದೆ ಇಲ್ಲದ್ದರಿಂದ; ಗರ್ಭಿಣಿಯಾದ ತೊಟ್ಟು ಅವಳ ಮೇಲೆ ರಾಜಸಖ್ತ ಪಹರೆ ನಿಲ್ಲಿಸಿದ್ದ ಮೂಲಕ ; ಆಕೆ ಬಾಣಂತಿಯಾಗಿ ಮುಖ ಬಿಳಿಚಿಟ್ಟ ಮೂಲಕ ; ಅನೇಕ ಕಾರಣಗಳಿಂದ ಅವರು ಲಕ್ಷವೀಯಲಿಲ್ಲ. ಆಕೆಯನ್ನು ನಾಗಕುಲದ ಅನಾಥೆಯೆಂದು ಭಾವಿಸಿದರು. ಆಕೆಯ ಮಗುವನ್ನು ನೋಡಿ ಭೀತಿಯಿಂದ ಓಟಕಿತ್ತರು. “ಇಂಥ ಮಗುವನ್ನು ನನ್ನ ಹೆಂಡತಿ ಹೆರುವುದಾದರೆ, ನಾನು ರಾಜನಾಗಲಿಕ್ಕೂ ಒಲ್ಲೆ!” ಎಂದ ಒಬ್ಬ ; “ಇಲ್ಲಿಯಂತೂ ನೀವು ರಾಜರಾಗುವುದು ಅಸಂಭವ. ಈ ಮಗುವನ್ನು ಎತ್ತಿಕೊಂಡು ಮತ್ಸ್ಯರಾಜ್ಯಕ್ಕೆ ಹೋಗೋಣ. ಅಲ್ಲಿ ನಾವು ರಾಜರಾಗಬಹುದು” ಎಂದು ನಕ್ಕ ಇನ್ನೊಬ್ಬ. ನಗುತ್ತ ಇಬ್ಬರೂ ಮರಳಿದರು.

ಹಿರಿಯ ರಾಣಿ ತನ್ನ ತಮ್ಮಂದಿರ ಮುಖಾಂತರ ಸುದ್ದಿ ಹಬ್ಬಿಸಿದ್ದಳು. “ಆಕೆ ಕಳ್ಳಬಸಿರು, ರಾಜರೇ ಮನೆಯಿಂದ ಹೊರದೂಡಿದ್ದಾರೆ.” ರಾಜ ಮೃಗಯೆಯಿಂದ ಬಂದ ಬಳಿಕ “ಅಯ್ಯೋ, ಓಡಿಹೋದಳಲ್ಲಾ! ಮನೆಯ ದೀಪ ನಂದಿತಲ್ಲಾ! ಆಕಾಶಪಾತಾಳ ಹುಡುಕಿಸಿರಿ. ಈ ರಾಜ್ಯದ ಉಸಿರನ್ನೇ ಆಕೆ ಕದ್ದು ಒಯ್ದಿದ್ದಾಳೆ” ಎಂದು ಕಣ್ಣೀರು ಸುರಿಸಿದಳು. ಹುಡುಕಲು ಹೋದ ದೂತರಿಗೆ “ಆಕೆ ಸಿಕ್ಕಲ್ಲಿ ರುಂಡವನ್ಹಾರಿಸಿ, ನಿಮಗೆ ಸಾವಿರ ಹೊನ್ನು ಕೊಡುತ್ತೇನೆ” ಎಂದು ಹೇಳಿದಳು. ಆ ಪ್ರಸಂಗ ಬರಲೇ ಇಲ್ಲ. ರಾಜರು ತಮ್ಮ ಗುಪ್ತಚರರಿಂದ ಊರಲ್ಲಿ ಹರಡಿದ ಸುದ್ದಿಯಷ್ಟನ್ನೇ ಅರಿತರು. ಅವರು ’ರಾಣಿ ಸಿಕ್ಕಲಿಲ್ಲ’ ಎಂದು ಮೊದಲು ಖೇದಪಟ್ಟರೂ ನಂತರ “ಒಳ್ಳೆಯದೇ ಆಯಿತು!” ಎಂಬ ಭಾವದಲ್ಲಿ ಮೌನದಿಂದ ಇದ್ದರು!

ಇತ್ತ ಚಿಕ್ಕರಾಣಿಯು ತನ್ನ ಕಂದನಿಗೆ ’ಭದ್ರಾಯು’ ’ಶಕ್ರ’ನೆಂದು ಹೆಸರು ಇಟ್ಟಳು. ಗುರುಗಳು ಹೇಳಿದಂತೆ ಚಕ್ರವಾರ್ತಿಯಾಗಲೆಂಬ ಆಸೆಯಿಂದ. ’ಶಕ್ರ’ ಎಂದರೆ ’ಇಂದ್ರ’, ದೇವತೆಗಳ ದೊರೆ.

ಆಶ್ರಮದ ಸುತ್ತ ನೆಲೆಸಿದ ನಾಗ-ಶಬರ ಹೆಣ್ಣು ಮಕ್ಕಳಿಗೆ ಇಂಥ ವಿಚಿತ್ರ ಹೆಸರನ್ನು ಉಚ್ಚರಿಸಲು ಕಷ್ಟವೆನಿಸಿತು. ಅವರೆಲ್ಲ ಅವನಿಗೆ ’ಸಗರ’ನೆಂದು ಕರೆಯತೊಡಗಿದರು, ಹೆಸರನ್ನು ಪ್ರಾಕೃತಿಕರಿಸಿ-ಅದೇ ಹೆಸರೇ ಅವನಿಗೆ ಖಾಯಂ ಆಯಿತು. (ಈ ಸಗರನು ಇಕ್ಶ್ವಾಕು)


ಮುಂದೆ ೫-೬ ವರ್ಷಗಳ ನಂತರ ಅರಸನಿಗೆ ಅರ್ಧಾಂಗವಾಯುವಿನ ಮೊದಲ ಆಘಾತ ತಟ್ಟಿತು. ಆರು ತಿಂಗಳು ಹಾಸಿಗೆ ಹಿಡಿದು ರಾಜ ಗುಣಮುಖನಾದನು.
ಹಿರಿಯ ರಾಣಿ ಕೇಶಿನಿ ಕೆಲವು ಪ್ರಧಾನಿ-ಸೇನಾಪತಿಗಳನ್ನು ತನ್ನೆಡೆಗೆ ಎಳೆದುಕೊಂಡು, ತಮ್ಮ ದುರ್ಗಸಿಂಹನಿಗೆ ಆರು ತಿಂಗಳ ಆಡಳಿತ ಸೂತ್ರ ಒಪ್ಪಿಸಿದಳು. ಹಾಗೂ ಹೀಗೂ ರಾಜ್ಯದ ರಥ ಮುಂದುವರೆಯಿತು. ರಾಜ ಗುಣಮುಖನಾಗಿ ತಾನೇ ರಾಜ್ಯ ನಡೆಸಿದನು. ಮೂರು ವರ್ಷಗಳಲ್ಲಿ ಎರಡನೆಯ ಆಘಾತ ತಟ್ಟಿ ರಾಜನ ಎಡಭಾಗವೆಲ್ಲ ಮೇಲಿನಿಂದ ಕೆಳಗಿನವರೆಗೆ ನಿಷ್ಕ್ರಿಯಗೊಂಡಿತು. ಮತ್ತೆ ಹಿರಿಯ ತಮ್ಮ ಆಡಳಿತ ವಹಿಸಿಕೊಂಡನು. ಈ ಬಾರಿ ರಾಣಿಯ ಮಾತು ಕೇಳದಾದನು. ಮೆಲ್ಲಗೆ ತಾನೇ ರಾಜನಂತೆ ವರ್ತಿಸತೊಡಗಿದನು. ಮುಂದೆ ಎರಡು ವರ್ಷಕ್ಕೆ ಮತ್ತೊಂದು ಆಘಾತ ತಟ್ಟಿ ಅರಸನು ಮೃತವತ್ ಹಾಸಿಗೆ ಹಿಡಿದು ಕಾಯಿಪಲ್ಯೆಗಳಂತೆ ಜೀವಂತ ಉಳಿದನು ಮಾತ್ರ.

ಆಗ ಮುಖ್ಯ ಪ್ರಧಾನರ ಸೂಚನೆಯ ಮೇರೆಗೆ ಒಬ್ಬ ಹಿರಿಯ ಪೌರ ಪ್ರತಿನಿಧಿ ರಾಣಿಯನ್ನು ಗುಪ್ತವಾಗಿ ಭೇಟಿಯಾಗಿ, “ಹೀಗೆ ತೇಪೆ ಥಿಗಳಿಗಳ ಆಡಳಿತ ಸರಿಯಾಗದು. ರಾಜರು ಇನ್ನು ಮೇಲೆ ರಾಜಕಾರಣವನ್ನು ನಡೆಸಲಾರರು. ಈಗ ಆಡಳಿತ ಹದೆಗಟ್ಟಿದೆ. ರಾಣಿಯವರೇ ಸ್ವತಃ ರಾಜ್ಯ ನಡೆಸಬೇಕು. ಅಥವಾ ರಾಜರ ತಮ್ಮನ ಮಗನಿಗೆ ಪಟ್ಟಾಭಿಷೇಕ ಮಾಡಿಸಬೇಕು. ಅವನು ಹದಿನೆಂಟನೆಯ ವಯಸ್ಸಿಗೆ ಬರುವವರಿಗೆ ರಾಣಿಯವರೇ ಆಡಳಿತ ನಡೆಸಬೇಕು. ಇವು ಮೂರು ಸೂಚನೆಗಳು. ನಾಲ್ಕನೆಯದಿಲ್ಲ,” ಎಂದು ಹೇಳಿದನು.
“ಈಗಿನ ಆಡಳಿತ ಜನರಿಗೆ ಪ್ರಿಯವಾಗಿಲ್ಲವೇ?”
“ತಮಗಾದರೂ ಆಗಿದೆಯೇ, ಮಹಾರಾಣಿ?”
ಈಗಾಗಲೆ ತನ್ನ ಮತ್ತು ಹಿರಿಯ ತಮ್ಮನ ಘರ್ಷಣೆ ಬಯಲಾಗಿದೆಯೆಂದು ರಾಣಿಗೆ ಅನಿಸಿತು.
“ನನಗೇನೂ ತಕರಾರು ಬಂದಿಲ್ಲ.”
“ತಮ್ಮವರೆಗೆ ತಕರಾರು ತರಲಿಕ್ಕೆ ಕಾರಭಾರಿಯ ಆತಂಕವಿದೆ.”
ಆಗ ರಾಣಿಗೆ ಅರ್ಥವಾಯಿತು. ರಾಜರ ತಮ್ಮನ ಮಗನಿಗೆ ಪಟ್ಟಾಭಿಷೇಕ ಮಾಡಿದರೆ ತನ್ನ ಅಧಿಕಾರ ನಡೆಯಲಿಕ್ಕಿಲ್ಲವೆಂದು ರಾಣಿಗೆ ಭಾವನೆಯಾಯಿತು. ತನ್ನ ಕಿರಿಯ ತಮ್ಮನಿಗೆ ಪಟ್ಟಾಭಿಷೇಕ ಮಾಡುವುದೇ ಒಳಿತೆಂದು ಅನ್ನಿಸಿತು.

ಹಿರಿಯ ತಮ್ಮನು ಈ ವರೆಗೆ ಅಧಿಕಾರದ ರುಚಿ ನೋಡಿದವನು. ತಾನೇ ಹೇಳಲಿಕ್ಕೆ ಕೇಶಿನಿ ರಾಣಿಗೆ ಸಂಕೋಚವಾಯಿತು. “ನಿಮ್ಮ ಮೂರನೆಯ ಸೂಚನೆ ನನಗೆ ಮಾನ್ಯ. ಆದರೆ ದುರ್ಗಸಿಂಹನಿಗೆ ವಿವರಿಸಿ ಹೇಳಿರಿ. ನಿರ್ಣಯಕ್ಕಾಗಿ ನನ್ನ ಬಳಿಗೆ ಕರಕೊಂಡು ಬನ್ನಿರಿ” ಎಂದು ರಾಣಿ ಕೈಯೊಗೆದಳು.
ಪೌರನು ಪ್ರಧಾನಿಗೆ ರಾಣಿ ನಿರ್ಣಯದ ವಾರ್ತೆ ತಲುಪಿಸಿದನು. ಎರಡೇ ದಿನಗಳಲ್ಲಿ ಪ್ರಧಾನರು ಕೈಚಳಕ ತೋರಿಸಿದರು.

ಮಂಗಳವಾರದ ದಿನ ಸಂತೆಯ ದಿವಸ. ಸುತ್ತಲಿನ ಹಳ್ಳಿಯ ನಾಗರು-ಶಬರರು-ಮಲ್ಲರು ತಮ್ಮ ಮಾಲನ್ನು ಹೊತ್ತು ತಂದು ಮಾರುವ ದಿನ. ಅಂದಿನ ದಿನ ಊರು ಬಹಳ ಹೊಲಸಾಗುತ್ತಿತ್ತು. ಆಡಳಿತಾಧಿಕಾರಿಯಾದ ರಾಣಿಯ ಹಿರಿಯ ತಮ್ಮ ಊರ ಜಂಗುಳಿಯನ್ನು ತಪ್ಪಿಸುವುದಕ್ಕಾಗಿ ಅಂದು ಗೆಳೆಕಾರರೊಂದಿಗೆ ಬೇಟೆಗೆ ಹೋಗುತ್ತಿದ್ದ. ಸೋಮವಾರ ರಾತ್ರಿ ಅವನ ಕೈಯಿಂದ ಅಕಾರ್ಯವೊಂದು ಜರುಗಿತ್ತು. ಅರಮನೆಯ ಶಬರ ಜಾತಿಯ ಸೇವಕಿಯ ಜೊತೆಗೆ ಅವಿನಯ ಮಾಡಿ, ಮದ್ಯದ ಅಮಲಿನಲ್ಲಿ ಆಕೆಯನ್ನು ಕಿಟಕಿಯ ಹೊರಗೆ ದೂಡಿದ್ದ. ಕಾಲಿಗೆ ಗಾಯವಾಗಿ ನರಳುತ್ತ ಆಕೆ ಅಲ್ಲಿಯೇ ಬಿದ್ದುಕೊಂಡಿದ್ದಳು. ಮರುದಿನ ಬೆಳಿಗ್ಗೆ ಅವಳ ತಂದೆತಾಯಿಗಳು ತಮ್ಮ ಸರಂಜಾಮಿನೊಡನೆ ರಾಜಧಾನಿಗೆ ಬಂದು, ತಮ್ಮ ಮಗಳ ಯೋಗಕ್ಷೇಮ ಕೇಳುವುದಕ್ಕಾಗಿ ಅರಮನೆಗೆ ಬಂದರು. ಮಗಳ ಅವಸ್ಥೆಯನ್ನು ನೋಡಿ ಅವಳನ್ನು ಚಕ್ಕಡಿಯಲ್ಲಿ ಹೇರಿಕೊಂಡು ತಮ್ಮ ನಾಯಕನನ್ನು ಕರೆದುಕೊಂಡು ಬಂದರು. ಅವನು ಕೊತವಾಲನಿಗೆ ತಕರಾರು ಸಲ್ಲಿಸಿದ. ಕೊತವಾಲನು ಪ್ರಧಾನರ ಮನೆಗೆ ಎಲ್ಲರನ್ನೂ ಕರೆದುಕೊಂಡು ಬಂದು ಅವರ ದೂರನ್ನು ವರದಿ ಮಾಡಿದ.

“ಒಂದು ಪ್ರಹರ ಇಲ್ಲಿಯೇ ಇರಿ. ವೈದ್ಯರನ್ನು ಕರೆಸುತ್ತೇನೆ” ಎಂದ, ಪ್ರಧಾನಿ. ಅವರು ಜೋರಾಗಿ ಬಾಯಿ ಮಾಡತೊಡಗಿದರು. ಅವರಿಗೆ ಬಾಯಿ ಮೇಲೆ ಬೆರಳಿಟ್ಟು ಮೌನವಾಗಿರಲು ಪ್ರಧಾನರು ಸೂಚಿಸಿ, ಕಣ್ಣು ಮಿಟುಕಿಸಿದರು.

ಆಡಳಿತಾಧಿಕಾರಿ ದುರ್ಗಸಿಂಹ ಬೇಟೆಗೆ ಹೋದ ಸುದ್ದಿ ಬಂದ ಮೇಲೆ, ಪ್ರಧಾನರು ರಾಣಿಯ ಕಡೆಗೆ ಅವರೆಲ್ಲರನ್ನೂ ಕರೆದುಕೊಂಡು ಹೋದರು. ಒಬ್ಬರೇ ಒಳಗೆ ಹೋಗಿ, ಎಲ್ಲವನ್ನೂ ವಿವರಿಸಿ, ಆಡಳಿತಾಧಿಕಾರಿ ಬೇಟೆಗೆ ಹೋಗಿರುವರೆಂದು, ಅವರು ಬಂದರೂ ಅವರ ಮೇಲೆಯೇ ತಕರಾರು ವ್ಯಾಜ್ಯ ಇರುವದರಿಂದ ಅವರು ನಿರ್ಣಯ ಕೊಡಲಿಕ್ಕೆ ಅನಧಿಕಾರಿಯೆಂದು, ರಾಣಿಯವರೇ ನಿರ್ಣಯ ಕೊಡಬೇಕೆಂದು ಸಲಹೆ ನೀಡಿದರು.

ರಾಣಿ ತನ್ನ ಅಧಿಕಾರ ಚಲಾಯಿಸಿದಳು. ’ಆಡಳಿತಾಧಿಕಾರಿ ದಾಸಿಯ ಕ್ಷಮೆ ಕೇಳಿಕೊಳ್ಳಬೇಕು. ವೈದ್ಯಕೀಯ ಉಪಚಾರಕ್ಕಾಗಿ ನೂರು ವರಹ ಆಕೆಗೆ ಸಲ್ಲಿಸಬೇಕು. ಅದನ್ನು ಬೊಕ್ಕಸದಿಂದ ಕೊಡಬಾರದೆಂದೂ, ಸ್ವಂತದ ಪ್ರಾಪ್ತಿಯಿಂದಲೇ ಕೊಡಬೇಕೆಂದೂ, ಆರು ತಿಂಗಳು ಆ ದಾಸಿಗೆ ಸಲ್ಲತಕ್ಕ ವರಮಾನವನ್ನು ಈಗಲೇ ಕೊಟ್ಟು ರಜೆ ನೀಡಲಾಗಿದೆ’ಯೆಂದೂ ವಿಧಿಸಿದಳು. ತಾನು ಸ್ವತಃ ಹೊರಗೆ ಬಂದು, ಶಬರರನ್ನು ಸಂಧಿಸಿ, ತನ್ನ ನಿರ್ಣಯವನು ಹೇಳಿದಳು.
ಇಷ್ಟಕ್ಕೆ ಆ ಪ್ರಕರಣವನ್ನು ನಿಲ್ಲಿಸಬಹುದಾಗಿತ್ತು. ಆದರೆ ಪ್ರಧಾನರು ಬೇರೆಯೇ ಯೋಚಿಸಿದ್ದರು. ಶಬರರ ನಾಯಕನನ್ನು ಬೇರೆ ಕರೆದು, “ನಿಮ್ಮ ಜನರ ಮೆರವಣಿಗೆ ಹೊರಡಿಸಿ ರಾಣಿಗೆ ಜಯಜಯಕಾರವನ್ನು, ಆಡಳಿತಾಧಿಕಾರಿಗೆ ಧಿಕ್ಕಾರವನ್ನು ಕೂಗಬೇಕು.” ಎಂದು ಪುಸಲಾಯಿಸಿದರು. ’ಪೌರ ಪ್ರಮುಖರ ಕಿವಿ ಮುಟ್ಟಲಿ’, ಇಷ್ಟೆ ಅವರ ವಿವರಣೆ.

ಮಧ್ಯಾಹ್ನ ಶಬರರ ಐನೂರು ಜನರು ಘೋಷಣೆಗಳನ್ನು ಕೂಗುತ್ತ ಊರ ತುಂಬಾ ಅಡ್ಡಾಡಿ, ಅರಮನೆಗೆ ಬಂದು, ಅಲ್ಲಿಯೂ ಘೋಷಣೆ ಕೂಗಿ , ರಾಣಿಯನ್ನು ಹೊರಬರುವಂತೆ ಮಾಡಿ, ಆಕೆಯನ್ನು ಶ್ಲಾಘಿಸಿದರು.

ಸಂಜೆ ಆಡಳಿತಾಧಿಕಾರಿ ಬೇಟೆ ಮುಗಿಸಿ ಬಂದೊಡನೆ, ಅವನ ದೂತರು ಸಾದ್ಯಂತ ವರ್ತಮಾನ ಹೇಳಿದರು. ಅವನಿಗೆ ದ್ವಿದಾಭಾವವುಂಟಾಯಿತು. ರಾಣಿಯವರೆಗೆ ಹೋಗಿ ಹೇಳಲಿಕ್ಕೆ ಸಂಕೋಚ; ಅಲ್ಲದೆ ಅನೇಕ ಬಾರಿ ಆಕೆಯ ಆಜ್ಞೆ ಉಲ್ಲಂಘಿಸಿ ಆಕೆಯ ಕ್ರೋಧಕ್ಕೆ ಕಾರಣನಾದವನು. ಆಕೆಯ ಮುಂದೆ ಅಪರಾಧಿಯಂತೆ ನಿಲ್ಲುವುದು, ತನ್ನ ಅಧಿಕಾರಕ್ಕೆ ಪೆಟ್ಟು ತಗುಲಿದಂತೆಯೇ ಸರಿ. ಇನ್ನು ಪ್ರಧಾನರ ಬಳಿ ಹೋದರೆ, ಅವರು ಏನು ಹೇಳುತ್ತಾರೆ, ಗೊತ್ತು. ತಾನೇ ದೂರಿನ ವಿಷಯವಾದಾಗ ತನ್ನ ಹತ್ತಿರವೇ ನ್ಯಾಯನಿರ್ಣಯ ಕೇಳುವುದೆಂತು, ಎಂದು ಹೇಳಿಯೇ ಹೇಳುತ್ತಾರೆ. ದಾಸಿಗೆ ಕ್ಷಮೆ ಕೇಳುವುದೇ? ಅವಳ ತಂದೆ-ತಾಯಿಗಳಿಗೆ ನೂರು ವರಹದ ಬದಲು ಇನ್ನೂರು ವರಹವನ್ನಾದರೂ ಕೊಟ್ಟು ಈ ಪ್ರಸಂಗ ಅಲ್ಲಿಯೇ ಮುಗಿಸಬಹುದು. ಆದರೆ ಮೆರವಣಿಗೆ? ಘೋಷಣೆ? ಧಿಕ್ಕಾರ?-ಇದರಲ್ಲಿ ಏನೋ ಗುಪಿತವಡಗಿದೆ. ಬಯಲು ಮಾಡಬೇಕು.-ಎಂದು ಯೋಚಿಸಿ, ಪ್ರಧಾನಿಯವರಿಗೆ ಬರಹೇಳಿದ.
ದೂತನು ಮರಳಿ ಬಂದು, ಪ್ರಧಾನಿಗಳು ಸಂಧ್ಯಾವಂದನೆಗೆ ಕುಳಿತಿರುವರೆಂದೂ, ನಮ್ತರ ದೇವಿಪಾರಾಯಣವಾಗಬೇಕೆಂದೂ, ಬೇಕಾದರೆ ನಾಳೆ ಮುಂಜಾನೆ ಬಂದು ಭೇಟಿಯಾಗುವೆನೆಂದೂ ಹೇಳಿದರೆಂದೂ ತಿಳಿಸಿದ. ’ಕಾರ್ಯವಾವುದು?’ ಎಂದೂ ಕೇಳಿದರೆಂದೂ ಹೇಳಿದ.
ಹಿಂದೆ ಎಂದೂ ಇಂಥ ಒರಟು ಉತ್ತರ ಪಡೆಯದ ಆಡಳಿತಾಧಿಕಾರಿಗೆ ನೆಲವೇ ಕುಸಿದಂತಾಯಿತು “ರಾಣಿಯ ಹೆಸರಿನಲ್ಲಿ ತಾನೇ ಆಡಳಿತ ವಹಿಸಿಕೊಳ್ಳಬೇಕೆಂದು ತಂತ್ರ ಮಾಡಿದ್ದಾನೆ ನೀಚ. ಇವನನ್ನು ಈಗಲೇ ಮುರಿಯಬೇಕು!” ಎಂದುಕೊಂಡು ತಾನೇ ಕುದುರೆ ಏರಿ ಅವರ ಮನೆಗೆ ಹೋದ.
ಪ್ರಧಾನರು ನಿಜವಾಗಿ ಸಂಧ್ಯಾವಂದನೆಗೆ ಕುಳಿತಿದ್ದರು-ಅಂದರೆ, ದೂತ ಬಂದು ಹೋದಮೇಲೆ, ತಮ್ಮ ಮಾತು ಸಾಚಾ ಎಂದು ತೋರಿಸಲಿಕ್ಕೆಂದೇ ಕುಳಿತಾರೆಂಬುದು ಇದರ ಅರ್ಥ. ಪ್ರಧಾನರು ಅಷ್ಟು ನೈಷ್ಠಿಕರಲ್ಲವೆಂಬುದು ಜನಜನಿತ.
ಒಂದು ಪ್ರಹರಕಾಲ ಅವರ ಹಾದಿ ಕಾಯುತ್ತ ಹೊರಗೆಯೇ ಸುಖಾಸೀನನಾಗಿದ್ದ, ’ಇಂದು ಇವನನ್ನು ಬಿಡುವುದಿಲ್ಲ!’ ಎಂಬ ಈರ್ಷೆಯಿಂದ.
ಪ್ರಧಾನರು ಭಸ್ಮಾಂಕಿತರಾಗಿ ಲಗುಬಗೆಯಿಂದ ಹೊರಗೆ ಬಂದು ತಾವೇ ಮಾತಿಗೆ ಪ್ರಾರಂಭಿಸಿದರು.
“ಮಹಾರಾಜರ ಆರೋಗ್ಯಕ್ಕಾಗಿ ಇಂದು ಮನೆಯಲ್ಲಿ ದೇವೀ ಪಾರಾಯಣ ಇಟ್ಟುಕೊಂಡಿದ್ದೇವೆ. ತಾವು ಬಂದದ್ದು ಒಳ್ಳೆಯದೇ ಆಯಿತು. ಪಾರಾಯಣವನ್ನು ಕೇಳಿ, ಪ್ರಸಾದ ಸ್ವೀಕರಿಸಿ, ಮರಳಬೇಕು. ಈಗ ಉಪಾಧ್ಯಾಯರು ಬರುತ್ತಾರೆ.”
“ನನ್ನನ್ನು ಆಮಂತ್ರಿಸಿದ್ದೀರಾ?”
“ಹೌದು, ಬೆಳಿಗ್ಗೆ ನಮ್ಮ ಆಳುಮಗ ಹೇಳಲು ಹೋಗಿದ್ದ, ತಾವು ಬೇಟೆಗೆ ಹೋಗಿದ್ದೀರಿ” ಎಂದು ಹೇಳಿದ.
“ಅದಿರಲಿ. ಇಂದು ನನಗೆ ಶಬರರು ಧಿಃಕಾರ ಹಾಕಿದ್ದು ನಿಮ್ಮ ಪ್ರೇರಣೆಯೆಂದು ವಾರ್ತೆ ಬಂದಿದೆ. ಹೌದೆ?”
“ಪ್ರೇರಣೆ ಮಾಡುವುದು ದೇವರ ಕೆಲಸ. ಮನುಷ್ಯನು ಮನುಷ್ಯನನ್ನು ಪ್ರೇರೆಪಿಸುವುದು ಹ್ಯಾಗೆ ಶಕ್ಯ?”
“ನೀವು ಪುಸಲಾಯಿಸಿದ್ದು ನಿಜವೆ? ಅಷ್ಟೆ ಹೇಳಿರಿ.”
“ಯಾರು ಹೇಳುತ್ತಾರೆ? ಅವರನ್ನು ನನ್ನ ಎದುರು ನಿಲ್ಲಿಸಿರಿ.”
“ನೇರವಾಗಿ ಉತ್ತರ ಕೊಡಿರಿ. ನಿಜವೋ ಅಲ್ಲವೊ?”
“ಇದರಲ್ಲಿ ನಿಮ್ಮ ಪಾತ್ರವೇನು?”
“ನನ್ನ ಪಾತ್ರ ಆದ ಘಟನೆಯನ್ನು ಸೂಕ್ತ ಅಧಿಕಾರಿಗೆ ತಿಳಿಸುವುದು. ನಿರ್ಣಯವನ್ನು ಸೂಕ್ತ ಅಧಿಕಾರಿಗೆ ಬಿಟ್ಟುಕೊಡುವುದು.”
“ನಾನೇ ಸೂಕ್ತ ಅಧಿಕಾರಿ”
“ಈ ವಿಷಯದಲ್ಲಿ ನೀವು ನ್ಯಾಯಾಧೀಶರಾಗಲಾರಿರಿ.”
“ಹಾಗಾದರೆ ನಾನು ಆರೋಪಿಯೇ?”
“ಹೌದು. ಕ್ಷಮೆ ಇರಲಿ.”
“ದೂರು ಎರಡು ಪ್ರಹರಕ್ಕೆ ಬಂದಿತು. ಇನ್ನೊಂದು ಪ್ರಹರ ನೀವು ಕಾಯ್ದದ್ದೇಕೆ? ನಾನು ಬೇಟೆಗೆ ಹೋಗಿ, ನಿಮ್ಮ ಸಂಚಿಗೆ ಮುಕ್ತದ್ವಾರ ಮಾಡಿಕೊಳ್ಳಲಿಕ್ಕಷ್ಟೆ?”
“ವೈದ್ಯಚಿಕಿತ್ಸೆ ಇಲ್ಲದೆ ದಾಸಿಯನ್ನು ಮಹಾರಾಣಿಯವರ ಎದುರಿಗೆ ತಂದು ನಿಲ್ಲಿಸಿದ್ದರೆ, ಕ್ಷಮಿಸಿ..ಶಿಕ್ಷೆ ಇನ್ನೂ ಹೆಚ್ಚಾಗುತ್ತಿತ್ತು. ವೈದ್ಯರು ಗಾಯ ತೊಳೆದು, ಪಟ್ಟಿಕಟ್ಟಿ, ಗಾಯದ ಭಯಾನಕತೆಯನ್ನು ಕಡಿಮೆ ಮಾಡಿದರು.”
“ಗಾಯ ಎಷ್ಟಾಗಿದೆ?”
“ಬಲಗಾಲು ಮುರಿದಿದೆ.”
ಆಡಳಿತಾಧಿಕಾರಿ ಮೆತ್ತಗಾದ. ಬೇರೆ ದಿಶೆಯಿಂದ ವಾದಿಸತೊಡಗಿದ.
“ಮಹಾರಾಣಿಯ ನಿರ್ಣಯ ಏಕಪಕ್ಷೀಯವಾದುದಲ್ಲವೆ? ನನ್ನನ್ನು ಏಕೆ ಕರೆಸಲಿಲ್ಲ?”
“ಅದು ಮಹಾರಾಣಿಯವರಿಗೆ ಕೂಡಿದ ವಿಷಯ.”
“ಮಹಾರಾಣಿಯವರಿಗೆ ಇಂಥಹ ದೂರುಗಳನ್ನು ನೇರವಾಗಿ ಸಲ್ಲಿಸಬೇಡಿರೆಂದು ನಿಮಗೆ ನಾನು ಕಟ್ಟಪ್ಪಣೆ ಮಾಡಿದ್ದಿಲ್ಲವೆ?”
“ನಿಮ್ಮ ಕಟ್ಟಪ್ಪಣೆಯನ್ನು ಈ ವಿಷಯದಲ್ಲಿ ನಾನು ಪಾಲಿಸುವುದು ಅಧರ್ಮ. ಬೇರಾವ ವಿಷಯವಾದರೂ ನಾನು ಪಾಲಿಸುತ್ತಿದ್ದೆ. ಮುಂದೂ ಪಾಲಿಸುತ್ತೇನೆ, ನೀವು ಮೇಲಧಿಕಾರಿಗಳು.”
“ಒಂದು ದಿನ ನಿಂತಿದ್ದರೆ ನಿಮ್ಮಪ್ಪನ ಗಂಟೇನು ಹೋಗುತ್ತಿತ್ತು?”
“ನೀವು ಇಲ್ಲಿಯೇ ಇದ್ದರೂ ನಾನು ಮಹಾರಾಣಿಯವರಿಗೇ ತಿಳಿಸುತ್ತಿದ್ದೆ.”
“ಹಾಗಲ್ಲ. ನಾನು ಇಲ್ಲಿದ್ದರೆ, ನನ್ನ ಪಕ್ಷದಿಂದ ಹೇಳುವುದನ್ನು ಹೇಳುತ್ತಿದ್ದೆ.”
“ನ್ಯಾಯದ ವಿಷಯದಲ್ಲಿ ನಾನು ತಡಮಾಡಿದ್ದರೆ ಜನರು ನನಗೆ ಧಿಕ್ಕಾರ ಹಾಕುತ್ತಿದ್ದರು!”
“ಈಗೇನು ಮಾಡಲಿ, ಹೇಳಿರಿ.”
“ಮಹಾರಾಣಿಯವರನ್ನು ಕಂಡು, ನಿಮ್ಮ ಪಕ್ಷದ ಸಮರ್ಥನೆಯನ್ನು ಹೇಳಿ, ಶಿಕ್ಷೆ ಕಡಿಮೆ ಮಾದಿಸಿಕೊಳ್ಳಿರಿ.”
“ಇಷ್ಟೇ ನಿಮ್ಮ ಸಲಹೆಯೇ?-ಒಳ್ಳೇ ಪ್ರಧಾನರು ನೀವು!”
“ನನ್ನಲ್ಲಿ ತಪ್ಪು ಇದ್ದರೆ ನನಗೆ ಹೇಳಿರಿ.”
“ನಾನು ನಿಮಗೆ ಬೆಸರವಾದೆನೆ?”
“ರಾಜಕಾರ್ಯದಲ್ಲಿ ಆ ಪ್ರಶ್ನೆ ಉದ್ಭೂತವಾಗುವುದೇ ಇಲ್ಲ.
ಅಷ್ಟರಲ್ಲಿ ಉಪಾಧ್ಯಾಯರು ಬಂದರು. “ದೇವೀಪಾರಾಯಣದ ಮುಹೂರ್ತ ಬಂದಿತು. ಘಳಿಗೆ ಬಟ್ಟಲು ಬೀಳುವಷ್ಟರಲ್ಲಿ ಪ್ರಾರಂಭವಾಗಬೇಕು. ಪ್ರಭುಗಳು..”
“ನಿಮ್ಮ ಆಮಂತ್ರಣ ಏನಾಯಿತು?”
“ಅದು ಇದ್ದೇ ಇದೆ. ಒಳಗೆ ಬರಬೇಕು.”
“ನಾಳೆ ತೀರ್ಥಪ್ರಸಾದ ಕಳಿಸಿಕೊಡಿರಿ. ನಾನೂ ಹೊರಡುತ್ತೇನೆ. ಪ್ರಧಾನರ ಇನ್ನೊಂದು ಮುಖ ಕಂಡಂತಾಯಿತು.”
“ನನಗೆ ಇರುವುದು ಒಂದೇ ಮುಖ. ಕೃಪೆ ಇರಲಿ.”
ಮುಖ ಸಿಂಡರಿಸಿಕೊಂಡು “ಆಗಲಿ, ನೋಡುತ್ತೇನೆ” ಎಂದು ಆಡಳಿತಾಧಿಕಾರಿ ಹೊರಟುಹೋದ.
ಅರಮನೆಗೆ ಹೋಗಿ ವೇಷ ಬದಲು ಮಾಡಿಕೊಂಡ. ಇನ್ನೂರು ವರಹಗಳನ್ನು ತನ್ನ ವೈಯಕ್ತಿಕ ತಿಜೋರಿಯಿಂದ ತೆಗೆದುಕೊಂಡ. ಕುದುರೆಯನ್ನು ಸಂತೆಪೇಟೆಯ ದೂರದಲ್ಲಿ ನಿಲ್ಲಿಸಿ, ಪೇಟೆಯನ್ನು ಪ್ರವೇಶಿಸಿದ. ಸದ್ದುಗದ್ದಲವಿಲ್ಲದೆ ದಾಸಿಯ ತಂದೆತಾಯಂದಿರನ್ನು ಭೇಟಿಮಾಡಿ, ದಂಡ ಸಲ್ಲಿಸಿ, ಕ್ಷಮೆ ಕೇಳಬೇಕೆಂದು ಅವನ ಆಸೆ.
ಆದರೆ ಎರಡು ಘಂಟೆ ಧಿಕ್ಕಾರ ಹಾಕಿದ ಶಬರರಲ್ಲಿ ಓರ್ವ ಮುದುಕ ಮತ್ತೆ ’ಧಿಕ್ಕಾರ!’ ಹುಯಿಲು ಎಬ್ಬಿಸಿದ ಹತ್ತು ಹನ್ನೆರಡು ಬಾಲಕರು ಮೋಜಿಗಾಗಿ ಅವನನ್ನು ಸುತ್ತುವರಿದು ಧಿಕ್ಕಾರವೆಂದು ಕೂಗತೊಡಗಿದರು. ಯುವಕರೂ ಅವರನ್ನು ಸೇರಿಕೊಂಡರು. ದಾಸಿಯ ತಂದೆ-ತಾಯಿಯರನ್ನು ಶೋಧಿಸುವುದು ಕಷ್ಟವಾಯಿತು ಆ ಸಂತೆಯಲ್ಲಿ. ಆ ದಾಸಿಯ ಊರಿನ ಹೆಸರೂ ಗೊತ್ತಿರಲಿಲ್ಲ.
“ಶಬರರ ನಾಯಕನಾರು?”
ಒಬ್ಬನನ್ನು ತೋರಿಸಿದರು. ಅವನು ಇನ್ನೊಬ್ಬನನ್ನು ತೋರಿಸಿದ. ಅವನು ಮಗುದೊಬ್ಬನನ್ನು ತೋರಿಸಿದ. ಕೊನೆಗೊಮ್ಮ ಊರ ನಾಯಕ ಮುಂದೆ ಬಂದ. “ನಾವು ಪಂಚಾಯಿತಿ ಕೂಡಿಸುತ್ತೇವೆ; ಅವರ ಎದುರಿಗೆ ನೀವು ಕ್ಷಮೆ ಕೇಳಿರಿ” ಎಂದ, ಆ ಶಬರನಾಯಕ.
“ಆಗಲಿ” ಎಂದ ಕಾರಭಾರಿ.
ಮುಂದೆ ಎರಡು ಪ್ರಹರ ಕಳೆದಮೇಲೆ ಸಾಕ್ಷೀಸಹಿತ ಕ್ಷಮೆ ಕೇಳಿ, ಇನ್ನೂರು ವರಹ ಅರ್ಪಿಸಿ, ಕುದುರೆಕಟ್ಟಿದ ಗಿಡಕ್ಕೆ ಮುಟ್ಟಬೇಕಾದರೆ ಇನ್ನೂ ಎರಡು ಪ್ರಹರಗಳು ಬೇಕಾದವು. ಅಂದು ರಾತ್ರಿ ರಾಣಿಯರ ಭೇಟಿ ಶಕ್ಯವಿದ್ದಿಲ್ಲ.


ಹಿಂದಿನ ಸಂಜೆಯ ಪಂಚಾಯತಿ ಪ್ರಕರಣ ರಾಣಿಗೆ ದೂತರಿಂದ ವರದಿಯಾಗಿತ್ತು. ಇಂಥ ದುಃಸಾಹಸ ಮಾಡಬಹುದೆಂದು ಆಕೆಯ ಕನಸುಮನಸಿನಲ್ಲೂ ಇರಲಿಲ್ಲ. ಇಷ್ಟು ತನ್ನ ನಿರ್ಣಯದ ವಿಸ್ತಾರ ಪರಿಪಾಕವಾಗಬಹುದೆಂದೂ ಆಕೆ ಎಣಿಸಿರಲಿಲ್ಲ. ಆಕೆ ತಿಳಿದುಕೊಂಡಿದ್ದಕ್ಕಿಂತ ವಿಸ್ತಾರ ಪರಿಣಾಮವಾಯಿತು. ಅದು ಮುಂದಿನ ಕತೆ.

ಮರುದಿನ ಮುಂಜಾನೆ ರಾಣಿಯ ಭೇಟಿಯಾಗುವುದರ ಮೊದಲು, ಭಾಂಡಾರಿಯನ್ನು ಕಂಡು ಆಡಳಿತಾಧಿಕಾರಿ ಒಂದು ಸಾವಿರ ವರಹ ಬೇಡಿದನು. ಭಂಡಾರಿ “ರಾಣಿಯ ಅಪ್ಪಣೆಯಿಲ್ಲದೆ ಕೊಡಲಾಗದೆಂದು ನಿನ್ನೆ ಅಪ್ಪಣೆಯಾಗಿದೆ.” ಎಂದ.

ದಾಸಿಗೆ ಕೊಡಮಾಡುವ ದಂಡ ಖಜಾನೆಯಿಂದ ತೆಗೆಯಬಾರದೆಂಬ ಆಜ್ಞೆಯ ಚಲಾವಣೆಗಾಗಿ ರಾಣಿ ಒಟ್ಟು ಒಂದು ಆಜ್ಞೆ ಮಾಡಿದ್ದಳು.
ಆದರೆ ರಾಣಿ ತನ್ನ ಎಲ್ಲ ಅಧಿಕಾರಗಳನ್ನು ಕಸಿದುಕೊಂಡಿದ್ದಾಳೆ ಎಂಬ ಭಾವನೆ ತಮ್ಮನಿಗೆ ಬಂತು.

ರಾಣಿಗೆ ಭೇಟಿಮಾಡುವುದಕ್ಕೆ ಇನ್ನೂ ಅರ್ಧಗಂಟೆ ಸಮಯವಿತ್ತು. ದುರ್ಗಸಿಂಹ ತನ್ನ ಸ್ಥಾನಮಾನವನ್ನು ಗುರುತಿಸಿಕೊಳ್ಳಬಹುದಾಗಿತ್ತು. ಆದರೆ ದುಡುಕಿನ ಸ್ವಭಾವದವನು. ಈಗಂತೂ ಉದ್ವಿಗ್ನನಾಗಿದ್ದನು. ಅವನಿಗೆ ಎರಡೇ ದಾರಿ ತೋಚಿದವು. ಹಠಾತ್ ಹೋಗಿ ರಾಣಿಯನ್ನು ಭೇಟಿ ಮಾಡಿ, ಜೋರು ತೋರಿಸಿ. ಭಾಂಡಾರಿಗೆ ಏಕೆ ಹೀಗೆ ಆಜ್ಞೆ ಮಾಡಿದೆಯೆಂದು ಕೂಗಾಡಿ, ಆಕೆಗೆ ಏನೂ ಆಗದವರಂತೆ ತೋರುವುದು: ಕೇಳಿದರೆ ’ನೀನು ವಿಧಿಸಿದ ದಂಡದ ಇಮ್ಮಡಿ ನಿನ್ನೆಯೇ ಕೊಟ್ಟುಬಿಟ್ಟೆ’ ಎಂದು ಹೇಳುವದು, ಒಂದು ಉಪಾಯ. ಇನ್ನೊಂದು ಮಾರ್ಗವೆಂದರೆ ಸಾಷ್ಟಾಂಗವೆರಗಿ “ರಾಣಿಯ ಆಜ್ಞೆಯನ್ನು ಯಥಾವತ್ತಾಗಿ ನೆರವೇರಿಸಿದ್ದೇನೆ; ನೀನು ಕ್ಷಮಾದಾನ ಮಾಡು” ಎಂದು ಹೇಳುವುದು. ಎರಡನೆಯ ಪರ್ಯಾಯ ಅಸಹಜ.

ಆ ಉದ್ವಿಗ್ನಸ್ಥಿತಿಯಲ್ಲಿ ದುರ್ಗಸಿಂಹನಿಗೆ ಮೊದಲನೆಯ ಉಪಾಯವೇ ಸರಿ ಕಂಡಿತು. ಎಷ್ಟಾದರೂ ಅಕ್ಕ. ಆ ಅಧಿಕಾರ ಎಲ್ಲಿ ಹೋಗಬೇಕು?
ಹದಿನೈದು ನಿಮಿಷ ಮೊದಲೇ ಹೋಗಿ ರಾಣಿಯ ಬಾಗಿಲು ಜೋರನೆ ತಟ್ಟಿದನು. ಸೇವಕಿ ಎಂದು ತಿಳಿದು ’ಬಾ’ ಎಂದಳು. ಧಡಾರನೆ ಬಾಗಿಲು ದೂಡಿ ಒಳಬಂದನು ತಮ್ಮ. ರಾಣಿ ಮುಖ ಸಿಂಡರಿಸಿದಳು. ತಮ್ಮನ ರಭಸದ ಪ್ರಶ್ನೆಗಳನ್ನು ಲಕ್ಷಕ್ಕೆ ತಾರಲಿಲ್ಲ. ಒಂದು ಪೀಠದ ಮೇಲೆ ಕುಳ್ಳಲು ಆಜ್ಞಾಪಿಸಿದಳು. “ನಾನು ಕೂಡಲಿಕ್ಕೆ ಬಂದಿಲ್ಲ. ಕೆರೆ ಅಗಿಯುವ ಕೆಲಸಗಾರರಿಗೆ ಇಂದು ಸಂಬಳ ಕೊಡಬೇಕು. ಭಾಂಡಾರಿಗೆ ಕೇಳಲು ಹೋದರೆ ’ನಿನ್ನ ಅನುಮತಿ ಬೇಕು’ ಎಂದು ಹೇಳಿದ. ಹೀಗಾದರೆ ಕೆಲಸ ನಿಲ್ಲುವುದು” ಎಂದು ಎದ್ದುನಿಂತೇ ಹೇಳಿದ.
“ಕೂಡು!” ಎಂದು ರಾಣಿ ಚೀರಿದಳು.
ಆಕೆಯ ದನಿಯ ಬಿರುಸಿಗೆ ಬೆಕ್ಕಸಬೆರಗಾಗಿ ತಮ್ಮ ಅಕ್ಕಸದಿಂದ ಕುಳಿತುಕೊಂಡ. ರಾಣಿ ತನ್ನ ತಲೆ ಬಾಚಿಕೊಳ್ಳುವ ಕೆಲಸದಲ್ಲಿ ನಿರತಳಾದಳು. ತನ್ನ ಕ್ರೋಧವನ್ನು ಸಾವರಿಸಲು ಯತ್ನ ಮಾಡಿದಳು. ಹದಿನೈದು ನಿಮಿಷದ ನಂತರ ಅವನ ಸಮೀಪಕ್ಕೆ ಬಂದಳು. ಆದರೂ ಆಕೆಯ ದನಿ ಕಂಪಿಸುತ್ತಲೇ ಇತ್ತು.
“ನೀನು ಇನ್ನು ಮೇಲೆ ಆದಳಿತ ಅಧಿಕಾರಿಯಲ್ಲ. ಇಷ್ಟು ದಿನ ನೀನು ಮಾಡಿದ ಸೇವೆ ಸಾಕು. ಎಲ್ಲ ಆಡಳಿತ ನಾನೇ ವಹಿಸಿಕೊಂಡಿದ್ದೇನೆ. ನೀನು ಹೋಗಬಹುದು.”
ಎಲ್ಲಿಗೆ ಎಂಬುದನ್ನು ಹೇಳಲಿಲ್ಲ.
“ಆಗಲಿ; ನಾನಿಲ್ಲದೆ ನಿನ್ನ ಆಡಳಿತ ಹೇಗೆ ನಡೆಯುವುದೋ ನೋಡಿಯೇ ಬಿಡುತ್ತೇನೆ. ಆಡಳಿತವೆಂದರೆ ಕೂದಲಿನ ತೊಡಕು ಬಿಡಿಸಿದಂತಲ್ಲ!”
ರಾಣಿ ಕಾಲು ಅಪ್ಪಳಿಸಿ, “ಹೋಗು!” ಎಂದಳು.
ಅಲ್ಲಿಂದ ಹೊರಬಿದ್ದ ದುರ್ಗಸಿಂಹ ಎಲ್ಲಿಗೆ ಹೋಗುವುದು ತಿಳಿಯದೆ ಮರಳಿ ತನ್ನ ಮನೆಗೆ ಬಂದನು. ಖಾಸಗಿ ತಿಜೋರಿಯಲ್ಲಿ ಖಜಾನೆಯಿಂದ ಪಡೆದ ಹಣ, ವರ್ತಕರಿಂದ ಪಡೆದ ಲಂಚ, ದಬ್ಬಾಳಿಕೆಯಿಂದ ಕೂಡಿಸಿದ ದಂಡ, ಎಲ್ಲವೂ ಕೂಡಿಸಿ ಸುಮಾರು ೫೦೦೦ ವರಹಗಳಿದ್ದವು. ತಿಜೋರಿಯಿಂದ ಅದನ್ನು ಎಣಿಸದೆ ಒಂದು ಹಮ್ಮಿಣಿಯಲ್ಲಿ ಹಾಕಿಕೊಂಡನು. ನಾಲ್ಕು ಬಟ್ಟೆ ಬರೆಗಳನ್ನು ಎಳೆದುಕೊಂಡನು. ಕುದುರೆ ಏರಿದನು.
ಪಾಂಚಾಲದ ತಂದೆಯ ಮನೆಗೆ ಹೋಗಿ ರಾಣಿ ತನ್ನನ್ನು ಗಡಿಪಾರು ಮಾಡಿದಳೆಂದು ಹೇಳುವುದು ಒಂದುದಾರಿ. ಆದರೆ ತಾನು ಹೇಳಿಬಿಟ್ಟಿದ್ದೇನೆ ನಾನಿಲ್ಲದೆ ನಿನ್ನ ರಾಜ್ಯ ಹೇಗೆ ನಡೆಯುತ್ತದೆ ನೋಡಿಬಿಡುತ್ತೇನೆ-ಎಂದು. ತೀರ ಒಂದಿಷ್ಟೂ ವಿರೋಧ-ತಿಕ್ಕಾಟವಿಲ್ಲದೆ ಸೋಲು ಒಪ್ಪಿಕೊಳ್ಳುವುದು ನನ್ನಂತಹವನಿಗೆ ಹೇಗೆ ಸಾಧ್ಯ?

ಕುದುರೆ ಊರ ಹೊರಗೆ ಧಾವಿಸಿದಂತೆ ಅವನ ಮನಸ್ಸೂ ಧಾವಿಸತೊಡಗಿತು. ಹೇಗೂ ನನ್ನ ವಿರುದ್ಧ ವೇಕಾಗಲೀ, ಶಬರರು ಒಂದಾಗಿದ್ದಾರೆ. ದಾಸಿಯ ಊರಿಗೆ ಹೋಗಿ, ಆಕೆಯನ್ನು ಲಗ್ನವಾಗಬೇಕು. ರಾಜಪುತ್ರ ಲಗ್ನವಾಗುತ್ತೇನೆಂದರೆ ಯಾವ ದಾಸಿ ಒಪ್ಪಲಿಕ್ಕಿಲ್ಲ? ಅದರಿಂದ ತನ್ನ ಸತ್ಯಪ್ರೇಮವನ್ನು ತೋರಿಸಿದಂತಾಗುವುದು. ತನ್ನ ಪ್ರತಿಷ್ಥೆ ಬೆಳೆದಂತೆ ಶಬರರ ಸೇನೆ ಕಟ್ಟಿ, ದಶಾರ್ಣದ ಮೇಲೆ ದಾಳಿ ಮಾಡಿ, ರಾಣಿ ನೆಲಕ್ಕೆ ಮೂಗು ಹೊಸೆಯುವಂತೆ ಮಾಡಬೇಕು…ಒಳ್ಳೆಯ ಯೋಚನೆ..ಧನುರ್ವಿದ್ಯೆಯಲ್ಲಿ ಶಬರರಿಗೆ ಕಲಿಸುವಂತಹದೇನೊ ಅವನಲ್ಲಿ ಇರಲಿಲ್ಲ. ಖಡ್ಗವಿದ್ಯೆ ಕಲಿಸಬಹುದು. ಅಶ್ವವಿದ್ಯೆ ಕಲಿಸಬಹುದು. ದಶಾರ್ಣ ನಗರದಲ್ಲಿ ತನ್ನ ಬೇಟೆಯ ಸ್ನೇಹಿತರಿದ್ದಾರೆ. ಅವರ ಜೊತೆಗೆ ಸಂಧಾನ ನಡೆಸಬೇಕು. ತನ್ನ ದಾಳಿಯೊಡನೆ ಅವರು ಒಳಗಿನಿಂದ ಬಂಡು ಹೂಡಬೇಕು….

ದುರ್ಗಸಿಂಹನ ಹೊಟ್ಟೆ ಹಸಿಯಿತು. ಆಹಾರವನ್ನು ತರಲು ಮರೆತಿದ್ದನು. ಅಲ್ಲಿಯೇ ಗುಡ್ಡದ ಝರಿಯಲ್ಲಿ ನೀರು ಕುಡಿದು, ಕವಳೆ ಹಣ್ಣು ತಿಂದು, ಒಂದು ಗಿಡಕ್ಕೆ ಕುದುರೆ ಕಟ್ಟಿ ನಿದ್ರೆ ಹೋದನು.

ಸುಮಾರು ಎರಡು ಪ್ರಹರ ನಿದ್ದೆ ಮಾಡಿರಬಹುದು. ಜನರ ಮಾತು ಕೇಳಿಸಿ ತಟ್ಟನೆ ಸಮುದ್ರದ ಬುಡದಿಂದ ಗುಳ್ಳೆ ಏಳುವಂತೆ ಅವನ ಜಾಗ್ರತ ಮನಸ್ಸು ನಿದ್ರಾಸಾಗರದ ಬುಡದಿಂದ ಮೇಲಕ್ಕೆದ್ದು ತಟ್ಟನೆ ನಿಚ್ಚಳ ಎಚ್ಚರಕ್ಕೆ ಸ್ಪೋಟಗೊಂಡಿತು. ಯಾರೋ ಹೇಳುತ್ತಿದ್ದರು: “ಇವನೇ ಶ್ರವಣಾಳ ಮಾನಭಂಗ ಮಾಡಿದವನು. ನಿನ್ನೆ ನಮ್ಮಿಂದ ಧಿಕ್ಕಾರಗೊಂಡವನು! ಇವನೇ! ಇವನೇ!”

ಅವನ ಸುತ್ತಲೂ ಧನುರ್ಧಾರಿಗಳಾದ ಶಬರ ಯುವಕರು ಮತ್ತು ಒಬ್ಬ ಕೈಕಾಲಿಲ್ಲದ ಕುಳ್ಳ-ನಿಂತಿದ್ದರು. ಎದ್ದು ಕೂತು ತಟ್ಟನೆ ಮೇಲಕ್ಕೆ ಜಿಗಿದು ಕತ್ತಿಯನ್ನು ಸೆಳೆದುಕೊಂಡನು. ಮಾತಾಡಿದವನ ಮೇಲೆ ಕತ್ತಿ ಪ್ರಹಾರಮಾಡಲೆಂದು ಕತ್ತಿ ಎತ್ತಿದನು. ಆಗ ಏನೋ ಮಿಂಚಿದಂತಾಯಿತು. ಕೈಯಲ್ಲಿ ಒಮ್ಮೆಲೇ ನೋವೆದ್ದು ಬಲ ಉಡುಗಿದಂತಾಯ್ತು.

ರೆಪ್ಪೆ ಬಡಿಯುವಷ್ಟು ಬೇಗನೆ ಆ ಕುಳ್ಳನು ತನ್ನ ಪುಟ್ಟ ಬಿಲ್ಲಿನಿಂದ ಬಿಟ್ಟ ಬಾಣವು ದುರ್ಗಸಿಂಹನ ಮುಂಗೈಯ ಎರಡು ಎಲವುಗಳ ಮಧ್ಯದಲ್ಲಿ ನೀಟಾಗಿ ಸೇರಿತ್ತು. ಅವನು ಯಾವಾಗ ಬಿಲ್ಲು ಎತ್ತಿದನೋ, ಗುರಿ ಇಟ್ಟನೋ, ಹೆದೆಯೇರಿಸಿದನೋ ಯಾರಿಗೂ ತಿಳಿಯದು. ದುರ್ಗಸಿಂಹನ ಕತ್ತಿ ಸಡಲಿ ಟಣತ್ಕಾರದಿಂದ ನೆಲಕ್ಕೆ ಬಿತ್ತು. ಆದರೆ ಶಬರರು ಯಾರೂ ಅಚ್ಚರಿಪಡಲಿಲ್ಲ. ಬಾಣ ಎಷ್ಟು ನೀಟಾಗಿತ್ತೆಂದರೆ, ಅವನ ಎರಡೂ ಎಲವುಗಳಿಗೆ ಧಕ್ಕೆ ಮಾಡದೆ ಮಾಂಸವನ್ನು ಪ್ರವೇಶಿಸಿ ಒಂದು ತುದಿ ಆರುಪಾರು ನಿಂತಿತ್ತು. ದುರ್ಗಸಿಂಹನು ನೋವಾದರೂ ಆ ಕುಳ್ಳನ ಕೌಶಲ್ಯಕ್ಕೆ ಬೆಕ್ಕಸ ಬೆರಗಾದನು. ನೋಡುವಷ್ಟರಲ್ಲಿ ಅವನಿಗೆ ಬಾಹುಗಳೇ ಇದ್ದಿಲ್ಲವೆಂದು ಸ್ಪಷ್ಟವಾಯಿತು.ಮೀನದ ತುಪ್ಪಳದಂತೆ ಅವನ ಎರಡು ಹಸ್ತಗಳು ಭುಜಕ್ಕೆ ಅಂಟಿಕೊಂಡಿದ್ದವಷ್ಟೇ. ಅವನ ಬಿಲ್ಲುಬಾಣಗಳು ಮಕ್ಕಳ ಆಟಿಕೆಯಂತಿದ್ದವು. ದುರ್ಗಸಿಂಹನಿಗೆ ಬಾಣ ತಾಕಿದರೂ ರಕ್ತಸ್ರಾವವಾಗಲು ಕೆಲವು ಕ್ಷಣಗಳೇ ಹಿಡಿದವು. ಅಷ್ಟು ನಿಖರವಾದ ಗುರಿ.
ದುರ್ಗಸಿಂಹನು ಬಾಣ ತಾಕಿದ ಕೈಯಿಂದಲೇ ಚಪ್ಪಾಳೆ ಬಾರಿಸಿ “ಭಾಪು!” ಅಂದನು.

ಯಾರೂ ಅವನತ್ತ ಲಕ್ಷಕೊಡಲಿಲ್ಲ. ಕುಳ್ಳನ ಮುಖವೂ ನಿರ್ವಿಕಾರವಾಗಿತ್ತು. ಶಬರರು ತಮ್ಮತಮ್ಮೊಳಗೆ “ಇವನಿಗೆ ಏನು ಶಾಸ್ತಿ ಮಾಡಬೇಕು?” ಎಂಬ ವಿಚಾರವಾಗಿ ಚರ್ಚೆ ಮಾಡತೊಡಗಿದರು, ತಮ್ಮ ಭಾಷೆಯಲ್ಲಿ.
“ನಾನು ಈಗಾಗಲೇ ಶ್ರವಣಾಳಿಗೆ ದಂಡ ತೆತ್ತಿದ್ದೇನೆ”-ಕೂಗಿದ ದುರ್ಗಸಿಂಹ.
ಎರಡೂ ಭಾಷೆ ಬಲ್ಲ ಒಬ್ಬ ಶಬರನು ಹೇಳಿದನು; “ಅದು ನಿಮ್ಮ ಜಾತಿಯ ನ್ಯಾಯ, ಶಬರರ ಕಾನೂನು ಬೇರೆ ತರಹದ್ದು.”
“ಆಗಲಿ. ನಿಮ್ಮ ಕಾನೂನಿನಂತೆಯೇ ಶಾಸ್ತಿ ಮಾಡಿರಿ.”
*****
ಮುಂದುವರೆಯುವುದು

ಕೀಲಿಕರಣ ದೋಷ ತಿದ್ದುಪಡಿ: ಕಿರಣ್.ಎಂ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.