ಲೋಲಾ

ನೀವು ಇತ್ತೀಚೆಗೆ ಬಂದ ಜರ್ಮನ್ ಸಿನೆಮಾ . `ರನ್ ಲೋಲಾ ರನ್’ನೋಡಿದ್ದೀರಾ?
ಇಲ್ಲವೆ?
ಅದೆಂಥವರು ನೀವು?
ಲೇಟೆಸ್ಟ್ ಆಗಿರುವುದನ್ನು `ಕ್ಯಾಚ್’ ಮಾಡುವ ಹವ್ಯಾಸ ನಿಮಗಿಲ್ಲವೆ?ಮತ್ತೇನು ಮಾಡುತ್ತಿದ್ದೀರಿ?
ನೀವು ನೋಡಬೇಕು, ನೋಡಲೇಬೇಕು. ನೋಡಿ. ಬಿಡಬೇಡಿ. ತಪ್ಪದೇ ನೊಡಿ. ಖಂಡಿತವಾಗಿಯೂ ನೋಡಿ.
ನಾನು ನೋಡಿದ್ದೇನೆ. ಓಡುತ್ತಿದ್ದೇನೆ. ನೋಡಿ, ನೀವೂ ನೋಡಿ, ನೀವೂ ಓಡಿ. ಇಲ್ಲ ಬೇಕಿಲ್ಲ. ನನಗೆ ಗೊತ್ತು, ನೀವೂ ಓಡುತ್ತಿದ್ದೀರಿ, ನೋಡದೇ ಓಡುತ್ತಿದ್ದೀರಿ, ಐ ಮೀನ್ ಸಿನೇಮಾ ನೋಡದೇ ಓಡುತ್ತಿದ್ದೀರಿ. ನನ್ನ ಜೊತೆ, ಕೆಂಪು ಕೂದಲಿನ ಹುಡುಗಿ ಲೋಲಾಳ ಜೊತೆ. ಯಾರು ಈ ಲೋಲಾ?

ಮೊನ್ನೆ ಮೊನ್ನೆಯ ಮಾತು:ನಾನಿರುವ ಅಮೇರಿಕೆಯ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಅಂಡ್ ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದ ಸಿಸ್ಟೆಮ್ಸ್ ರಿಸರ್ಚ್ ಎನ್ನುವ ಲ್ಯಾಬೋರೆಟರಿ. ನನಗಾಗಿಯೇ ಮೀಸಲಾದ ಡೆಸ್ಕಿನೆದುರು ಕುಳಿತು, ಅಂತರ್ಜಾಲದಲ್ಲಿ ನನ್ನ ಪ್ರೀತಿಯ ಲೇಖಕನ `ಭವ’ ಕಾದಂಬರಿ ಒದುವುದರಲ್ಲಿ ಮಗ್ನನಾಗಿದ್ದೇನೆ. ಕಾದಂಬರಿಯ ಪಾತ್ರಗಳಾದ `ವಿಶ್ವನಾಥ ಶಾಸ್ತಿ’,`ದಿವಾಕರ’,`ನಾರಯಣ ತಂತ್ರಿ’ ಇವರೆಲ್ಲರ ಜೊತೆ ಅವರ `ಭವ’ದ ಸುಳಿಯಲ್ಲಿ ನಾನೂ ಇಳಿದುಹೋಗಿದ್ದೇನೆ. ಜಾವ ಬೀನ್ಸ್ ಕೆಫೆಯ ಜಾಪನೀಸ್ ಹುಡುಗಿಯಿಂದ ಪರಿಚಯದ ನಗೆ ನಕ್ಕು ತಂದ ಕಾಫೀ ಯಾವಾಗಲೋ ತಣ್ಣಗಾಗಿದೆ. `ಭವ’ದ ಸುಳಿಯನ್ನು ಮೀರಿದ ಸೀತಮ್ಮನ ಅಂತಃಕರಣ ಇನ್ನೇನು ನನ್ನ ಮನಸ್ಸು ಕಟ್ಟುವುದರಲ್ಲಿ ಇದೆ. ಅಷ್ಟರಲ್ಲೇ ನನಗೆ ಅತ್ಮೀಯನಾಗಿರುವ, ಸದಾ ಉತ್ಸಾಹದ ಚಿಲುಮೆಯಾಗಿರುವ ಪೆರು ಮೂಲದ ಸ್ನೇಹಿತ ತನ್ನ ಎಂಪಿ ತ್ರಿ ಪ್ಲೇಯರ್‌ನ ವಾಲ್ಯೂಮ್ ಏರಿಸಿ ನನ್ನನ್ನು ಎಚ್ಚರಗೊಳಿಸುತ್ತಾನೆ. ತಟ್ಟನೆ ಹೊರಳಿ ಅವನತ್ತ ನೋಡುತ್ತೇನೆ. ಬ್ರೆಝಿಲ್‌ನ ರಾಕ್‌ಬ್ಯಾಂಡ್ ಆದರೂ ಅಮೇರಿಕನ್, ಆಫ್ರಿಕನ್, ಏಶಿಯನ್ ಎಲ್ಲ ಸೌಂಡ್ಸ್ ಬಳಸುತ್ತಾರೆ, `ಇಟ್ಸ್ ಟೂ ಗುಡ್’ ಅನ್ನುತ್ತಾನೆ. ನಾನು ಅರ್ಧ ಆಸಕ್ತಿಯಲ್ಲಿ ಕೇಳುತ್ತೇನೆ.
ಇಪ್ಪೊತ್ತಂದನೇಯ ಶತಮಾನ, ಉರಿಯುವ ಬಾಣಲೆಯಲ್ಲಿ ಸಂಸ್ಕೃತಿಗಳ ಕಲಸುಮೇಲೋಗರ. ಜೆಟ್‌ಯುಗ. ಮಾಹಿತಿ ಸ್ಫೋಟ.
ಮತ್ತು ಓಡುತ್ತಿದ್ದಾಳೆ ಕೆಂಪು ಕೂದಲಿನ ಸಪೂರ ಹುಡುಗಿ ಲೋಲಾ!

ಸುಮಾರು ಹದಿನೇಳು-ಹದಿನೆಂಟು ವರ್ಷದ ಹಿಂದಿನ ಮಾತು. ಯಾರಿಗೂ ಲೋಲಾ-ಗೀಲಾ, ಯಾರೂ ಗೊತ್ತಿರಲಿಲ್ಲ ಅನ್ನಿ. (ದೆಹಲಿಯಲ್ಲಿ ಇಂದಿರಾ ಇದ್ದರು ಅಂತ ಕಾಣುತ್ತದೆ.) ಅದು ಧಾರವಾಡದ ತಕ್ಕಮಟ್ಟಿಗೆ ಸ್ಥಿತಿವಂತರಾದ, ಬಹುತೇಕ ಬ್ರಾಹ್ಮಣರೇ ವಾಸವಾಗಿರುವ ಮಾಳಮಡ್ಡಿಯ `ಕೋಳಿವಾಡ ಕೃಷ್ಟಕ್ಕನ’ ಮನೆ. ನಮ್ಮ ಮನೆ.
ಆಗೆಲ್ಲಾ ನಮ್ಮ ಮನೆ ತುಂಬಾ ಜನವಿರುತ್ತಿತ್ತು. ಮದುವೆ, ಮುಂಜಿ, ವಧು ಪರೀಕ್ಷೆ, ವರಪರೀಕ್ಷೆ, ಶ್ರಾವಣಿ(ಜನಿವಾರ ಹಾಕಿಕೊಳ್ಳುವದು), ನವರಾತ್ರಿ, ಶಿವರಾತ್ರಿಯಂಥ ಶುಭಕಾರ್ಯಗಳು, ಶ್ರಾದ್ಧ, ಪಕ್ಷ, ಅವರು ಇವರು ಹೋದರೆಂದು ನೀರು ಹಾಕಿಕೋಳ್ಳುವುದು, ಮತ್ತಿತರ ಅಪರಕರ್ಮಗಳು ಸದೋದಿತ ನಡೆದೇ ಇರುತ್ತಿದ್ದವು. (ಈಗಲೂ ನಡೆದಿವೆ, ಬೇರೆ ಗಾತ್ರ, ರೂಪಗಳಲ್ಲಿ.) `ಅಜ್ಜಿ’ಯ ಹಿರಿತನದಲ್ಲಿ ಎಲ್ಲವೂ ಆಗಬೇಕು. ತುಂಬಿದ ಮನೆಯನ್ನು ಏಕಸೂತ್ರದಲ್ಲಿ ಹಿಡಿದು ನಡೆಸಲು ಬೇಕಾದ ಆ ಗಟ್ಟಿತನ ಅವಳಲ್ಲಿತ್ತು. ಎಷ್ಟು ಸುಲಲಿತವಾಗಿ ದೇವರನಾಮ, ಹಸೆಗೆ ಕರೆಯುವ ಹಾಡು, ಉಡಿ ತುಂಬುವ ಹಾಡು, ಆರತಿ ಹಾಡು, ಶೋಭಾನದ ಹಾಡು, ಒಂದಾದ ಮೇಲೊಂದರಂತೆ ಹಾಡುತ್ತಿದ್ದಳೋ ಅಷ್ಟೇ ನಿರಾಯಾಸದಿಂದ ತನ್ನ ಹಳ್ಳಿಗಾಡಿನ ಹಿನ್ನೆಲೆಯಲ್ಲಿ ಬಂದ ವಿಶಿಷ್ಟ ಜನಪದ ಬೈಗುಳಗಳನ್ನೂ ಬಳಸುವುದಿತ್ತು. ದೊಡ್ಡ ಮನಸ್ಸಿನ ಅಪರೂಪದ ವ್ಯಕ್ತಿತ್ವ ಅವಳದು. ಕಡುಬಡತನದಲ್ಲಿ ಇದ್ದ ಮನೆಯನ್ನು ಒಂದು ಸ್ಥಿತಿಗೆ ತಂದದ್ದು ಅವಳೇ ಅಂತ ಎಲ್ಲರೂ ಹೇಳುತ್ತಿದ್ದರು.
`ಶಿಶುವಿನಳ್ಳಿ’ ದ್ಯಾವಪ್ಪ ಅನ್ನೊರು ನಮ್ಮ ಮನೆಯ ಶುಭಕಾರ್ಯಗಳಿಗೆಲ್ಲ ಬರುತ್ತಿದ್ದರು. ಕೋಳಿವಾಡದಲ್ಲೇ ವಾಸವಾಗಿದ್ದವರು. ಆ `ಶಿಶುವಿನಳ್ಳಿ’ ಎಲ್ಲಿಂದ ಬಂತೋ ಗೊತ್ತಿಲ್ಲ. `ನಮ್ಮ ಕಾಕಾ'(ನಮ್ಮ ತಂದೆಯನ್ನು, ನಾವು ಹಾಗೆ ಸಂಬೋಧಿಸುವುದು)ರನ್ನು ಕೇಳಬೇಕು.
ಬೆಳ್ಳಗೆ, ಸ್ವಲ್ಪ ಮಟ್ಟಿಗೆ ಗರುಡ ಮೂಗು, ದೊಡ್ಡ ಹಣೆಯ ದ್ಯಾವಪ್ಪರದು ದೊಡ್ಡ ಧ್ವನಿ. ಅದೇ ಧ್ವನಿಯಲ್ಲಿ ಹಾರ್ಮೊನಿಯುಂ ನುಡಿಸುತ್ತ, ಮೊದಲು `ಯೋಗಿ ಮನೆಗೆ ಬಂದ’ ಎಂಬೋ ದತ್ತಾತ್ರೇಯನ ಹಾಡು ಕಣ್ಣು ಮುಚ್ಚಿ, ಮನಸ್ಸು ತುಂಬಿಕೊಂಡು ಹಾಡಬೇಕು. ನಂತರ ಹುಡುಗರ ಬೇಡಿಕೆಯಂತೆ ಗದುಗಿನ ಭಾರತದ `ವಿರಾಟ ಪರ್ವ’ ಆಗಬೇಕು. ಸಾಹಿತ್ಯಿಕವಾಗಿ ಆಳವಾಗಿ ತಿಳಿದುಕೊಡವರೇನೂ ಅಲ್ಲ, ಮನೆಮಂದಿಗೆಲ್ಲ ರಂಜನೀಯವಾಗುವಂತೆ ಹೇಳುವಷ್ಟು ಗೊತ್ತಿತ್ತು. ಉತ್ತರನ ಪ್ರಲಾಪ ಹೇಳುವುದನ್ನು ನೀವು, ಕೇಳಬೇಕು. ನಮಗೆಲ್ಲ ಖುಶಿಯೋ ಖುಶಿ. ಚಪ್ಪಾಳೆ ತಟ್ಟಿ ನಾವು ನಕ್ಕದ್ದೇ ನಕ್ಕದ್ದು. ವಿಸ್ಮಯ ತರಿಸುವ ಬೃಹನ್ನಳೆಯ ಶೌರ್ಯ, ಕೀಚಕನ ಕಾಟ ತಾಳದ ಸೈರಂಧ್ರಿಯ ನೋವು, ಕಂಕನ ಸಂಧಿಗ್ಧತೆ ಎಲ್ಲವನ್ನೂ ಕಣ್ಣಿಗೆ ಕಟ್ಟಿ, ಮನಸ್ಸಿಗೆ ಮುಟ್ಟಿಸಿ, ನಗಿಸಿ, ಕಣ್ಣೀರು ತರಿಸಿ ಕೈಬಿಡುತ್ತಿದ್ದರು. ಆಗಲೇ ಯಾವಾಗಲೋ `ಬೇಂದ್ರೆ’ ಹೋದರು ಅಂತಾ ದೊಡ್ಡವರು ಮಾತಾಡಿಕೊಂಡರು. ಆಗೆಲ್ಲ ಧಾರವಾಡದಲ್ಲಿ ಎಲ್ಲ ಶಿಕ್ಷಿತರ ಮನೆಯ ಮಾಡಿನಲ್ಲಿ ಟೊಪ್ಪಿಗೆ ಸಂದಿಯಿಂದ ಕೂದಲು ಹಾರುವ, ಕೆಂಪು ಶಾಲು ಧರಿಸಿದ, ಕೆಳಗೆ `ಅಂಬಿಕಾತನಯದತ್ತ’ ಎಂದು ಸಹಿ ಮಾಡಿದ ಫೋಟೊ ಇರುತ್ತಿತ್ತು. ಅವರನ್ನು ನಾನು ನೋಡಿದ್ದಿಲ್ಲ, ಶಾಲೆಯಲ್ಲಿ ಕಲಿತ ಪದ್ಯಗಳು ಪಾಠವಾಗಿದ್ದವು.

ಬರೀ ಹದಿನೈದು ವರ್ಷದ ಹಿಂದಿನ ಮಾತು, (ದೆಹಲಿಯಲ್ಲಿ, ಆಗತಾನೆ ಇಂದಿರಾ ತೀರಿ ಹೋಗಿ ರಾಜೀವ್ ಬಂದಿದ್ದರು ಅನ್ನಿ). `ಶ್ರಾವಣದ ಶುಕ್ರವಾರ’ದ ದಿವಸ. ನಡುಮನೆ ಹಿರಿಯ ಹೆಂಗಸರಿಂದ ತುಂಬಿ ಹೋಗಿದೆ. `ಅಣ್ಣಿಗೇರಿ’ ಗಂಗೂತಾಯಿ, ಶಂಕರ ಗೌಡರ ಮನೆಯ ಚಿತ್ರಕ್ಕ, ದೇವಕ್ಕ, `ತಾಡಮರಿ’ ಅಜ್ಜಿ, ಲೀಲಕ್ಕ ಇವರೆಲ್ಲರೂ, ಅವರೆಲ್ಲರಿಗಿಂತ ದೊಡ್ಡದನಿಯ ನನ್ನ ಕೃಷ್ಟಕ್ಕಜ್ಜಿಯ ಜೊತೆ ಒಕ್ಕೊರಲಿನಿಂದ ಭಕ್ತಿಭಾವದಿಂದ ಹಾಡುವ ಗೌರಿಯ ಹಾಡು ಪಕ್ಕದ ಪಡಸಾಲೆಯಲ್ಲಿದ್ದ ನನ್ನ `ಕರಣ ಗಣ’ದೀ ರಿಂಗಣಿಸುತ್ತಿದೆ. ಜೊತೆ ಜೊತೆಗೆ ನಾನು ಓದುತ್ತಿದ್ದ `ಬೇಂದ್ರೆ’ಯವರ `ನಿರಾಭರಣ ಸುಂದರಿ’ಯಲ್ಲಿನ `ಪಾಲಾ ಫೂ’ ಕತೆ ನನ್ನದೇ ಕತೆ ಎಂಬಂತೆ ಜೀವ ಹಿಂಡುತ್ತಿದೆ. ಕತೆಯ ತಿರುಳಿನಂತೆ ನಾನೂ ಜೀವದ ಗೆಳೆಯೊರಡನೆ ಜಗಳವಾಡಿದ್ದೆ. `ಸಕ್ರೀ ಗಿಣಿ’ಗಾಗಿ ಅಲ್ಲದಿದ್ದರೂ ಅಂತಹದೇ ಕ್ಷುಲ್ಲಕಕ್ಕಾಗಿ.
ಇಲ್ಲ, ಆಗ ಯಾವ ಲೋಲಾಳೂ ಗೊತ್ತಿರಲಿಲ್ಲ. ಓಡಬೇಕಿರಲಿಲ್ಲ.

ಪಶ್ಚಿಮದ ರೋಗ ನನ್ನ ಹಿರಿಯರಿಗೆ ಹೇಗೆ ಅಂಟುತ್ತಿತ್ತು ಗೊತ್ತಿಲ್ಲ. ನನ್ನ ಬಾಲಿಶತನದಲ್ಲಿ `ಶೇಕ್ಸ್‌ಪೀಯರ್’,`ಮಿಲ್ಟನ್’,`ರಸ್ಸೆಲ್’,`ನ್ಯೂಟನ್’ ಇಂಥಾ ಪ್ರಚಂಡ ಕೆಂಪು ರಂಡೇ ಮಕ್ಕಳಿಂದ (ಥ್ಯಾಂಕ್ಸ್! ಅಜ್ಜೀ.) ಎಂದು ಅಂದುಕೊಂಡಿದ್ದೇನೆ. ನಮ್ಮ ಪಾಲಿಗೋ ಅದು ಬಂದದ್ದು ಅಗಾಗ ನೊಡುತ್ತಿದ್ದ ಹಾಲಿವುಡ್ ಚಿತ್ರಗಳಿಂದ, ಪಾಪ್‌ಸ್ಟಾರ್ ಚಿತ್ರಗಳಿಂದ . ಆಗ ತಾನೆ ಬಂದಿದ್ದ ಟೆಲಿವಿಜನ್‌ನಿಂದ. ನೀವು ಒಂದು ಬುದ್ಧಿವಂತ ಹುಡುಗರ ಸರ್ಕಲ್‌ನಲ್ಲಿರಬೇಕೆಂದರೆ ಅದನ್ನೆಲ್ಲ ತಿಳಿದುಕೊಳ್ಳುವುದು ಆಗ ಅವಶ್ಯಕವಾಗಿತ್ತು. ಈಗಲೂ ಇದೆ ಅನ್ನಿ. (ಅದೋ, ಅಲ್ಲಿ ಯಾರೋ ಓಡುತ್ತಿರುವಂತೆ ಕಾಣುತ್ತದೆ, ಅಷ್ಟು ಸ್ಪಷ್ಟವಾಗಿ ಕಾಣುತ್ತಿಲ್ಲ, ಲೋಲಾ ಇರಬೇಕು.) ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹುಡುಗಿಯರು ಹಾಡುತ್ತಿದ್ದ ಪುರಂದರದಾಸರ ಹಾಡುಗಳು ಎದೆ ತುಂಬುತ್ತಿದ್ದಂತೆಯೆ, ಕೆಲವು ಸಾಹಸಿ ಹುಡುಗರು ಮಾಡಲು ತೊಡಗಿದ್ದ `ಬ್ರೇಕ್‌ಡ್ಯಾನ್ಸ್’- `ನಾಗರ ಪಂಚಮಿ’, `ಸರಸ್ವತಿ ಪೂಜೆ’, `ಗಣೇಶ ಚತುರ್ಥೀ’ ಗಳನ್ನೆಲ್ಲ ಆಚರಿಸುತ್ತಿದ್ದ, ಬಹುಮಟ್ಟಿಗೆ, ಬ್ರಾಹ್ಮಣರೇ ಓದುತ್ತಿದ್ದ, ನಮ್ಮ ಶಾಲೆಯಲ್ಲಿ, ನನ್ನನ್ನೂ ಸೇರಿದಂತೆ, ಹುಡುಗ-ಹುಡುಗಿಯರಿಗೆಲ್ಲ ಬೇರೆ ಜಗತ್ತನ್ನು ಮೂಡಿಸ ತೊಡಗಿತ್ತು. ಇತ್ತ ಮನೆಯಲ್ಲಿ ಮನೋಹರ ಗ್ರಂಥಮಾಲೆ ಪುಸ್ತಕ ತಪ್ಪದೇ ಬರುವುದಿತ್ತು. ಹೀಗಾಗಿ ಕುರ್ತಕೊಟಿ, ಜಿ.ಬಿ.ಜೊಶಿ, ಕಾರ್ನಾಡರ ನಾಟಕಗಳು, ಕೃಷ್ಣಾನಂದ ಕಾಮತ್‌ರ ಪ್ರವಾಸ ಕಥನಗಳು ಇವನ್ನೆಲ್ಲ ಓದುವುದು ನಡೆದೇ ಇತ್ತು. ಕೆಲವು ಅರ್ಥವಾದರೆ ಕೆಲವು ಇಲ್ಲ. ಕೆಲವು ರುಚಿಯೆನಿಸಿದರೆ, ಕೆಲವು ಸಪ್ಪೆ ಅನಿಸುವವು. ಹೀಗೆ ಒಂದು ದಿನ `ಮಾಲೆ’ಯಿಂದ ಚಿತ್ತಾಲರ `ಶಿಕಾರಿ’ ಬಂತು. ಏಕೋ ಸ್ವಲ್ಪ `ಖಾರ’ ಎನಿಸಿತು.
ನಾನು ಎಸ್‌ಎಸ್‌ಎಲ್‌ಸಿ ಮುಗಿಸಿ ಪಿಯುಸಿ ಸೈನ್ಸ್ ಸೇರಿದ್ದಾಯಿತು. ಆಗಲೇ ಗೊಕಾಕರಿಗೆ ಜ್ಞಾನಪೀಠ ಬಂತು, ಅವರನ್ನು ಸನ್ಮಾನಿಸಲಿಕ್ಕೆ ಅಂತ ಕಾರಂತರು ಬಂದಿದ್ದರು. ಹೀಗೆ ಒಂದು ದಿನ ತೀರ ಸೂಕ್ಶ್ಮ, ಭಾವುಕ ಮನಸ್ಸಿನ, ಸಾಹಿತ್ಯಪ್ರೇಮಿಯಾದ ನನ್ನ ಮಾವುಶಿ ನನ್ನನ್ನು ಸಾಧನಕೇರಿಯ `ಬೇಂದ್ರೆ’ಯವರ ಮನೆಯೋಳಗೆ ಕರೆದೊಯ್ದಳು. ಅದೇ ಕಾಲಕ್ಕೆ ವಯಸ್ಸು ಕೆಡುತ್ತಿತ್ತು. `ಕಲ್ಪನೆ ಹೆಂಡಹೊಂಡದ ಸೆಲೆಯ ಹುಡುಕುತ್ತಿತ್ತು’. ನನ್ನಂತಃ ಪುಕ್ಕಲು ಹುಡುಗರ ಪಾಲಿಗೆ, ಮಾಳಮಡ್ಡಿಯ ಬೀದಿಗಳಲ್ಲಿ, ಪ್ರೇಮವೆಂದರೆ ಇನ್ನೂ `ಮಂದ ನಗಿ ಹಾಂಗ ಬೀರಿ, ಮುಂದ ಮುಂದ ಹೋಗುವುದಕ್ಕೇ’ ಸೀಮಿತವಾಗಿತ್ತು. ಬಿಚ್ಚಿ ಹಾರಬೇಕಾಗಿದ್ದ ಯೌವನ ತೆಂಗುಗರಿಯಲ್ಲಿ ಸಿಕ್ಕಿ ಸುಕ್ಕಾಗುತ್ತಿತ್ತದ್ದ ಗಾಳೀಪಟದಂತಿತ್ತು. ಎಲ್ಲಿಂದಲೋ ಸಿನೆಮಾದ ಗೀಳು ಬೇರೆ ಅಂಟಿತ್ತು. ಅಜ್ಜಿಗೆ ಅದೇಕೆ ಹೀಗೆ? ಹಾಗೆ? ಅಂತ ಅಡ್ಡ ಪ್ರಶ್ನೆಗಳನ್ನು ಕೇಳುವುದು ನಡೆದಿತ್ತು. ಅವಳೋ ನಿತ್ರಾಣಳಾದರೂ ಕುಳಿತಲ್ಲೇ ಬಂದು ಹೋಗುವವರ ಸುಖದುಃಖ ಕೇಳುವುದರಲ್ಲೇ ಇರುತ್ತಿದ್ದಳು. ಅಸಾಧ್ಯ ಮಡಿಯವಳಾದರೂ ಜಾತಿ-ಪಾತಿ ಅನ್ನದೇ, ಕಾಮಾಲೆಯವರಿಗೆ ತನಗೆ ಗೊತ್ತಿದ್ದ, ಹಿತ್ತಲಿಂದ ಕಿತ್ತು ತಂದ, ಔಷಧದೆಲೆಯನ್ನು ಕುಟ್ಟಿ ಕೊಡುತ್ತಿದ್ದಳು (ಉಚಿತ ಅಂತಾ ಪ್ರತ್ಯೇಕವಾಗಿ ಬೇರೆ ಹೇಳಬೇಕಿಲ್ಲ). ಮಂಗಳವಾರ ಮತ್ತು ಗುರುವಾರ ಮಾತ್ರ ಕೊಡಬಹುದಾಗಿದ್ದ ಅದಕ್ಕೊಂದು ಕಠಿಣ ಪಥ್ಯವೂ ಇತ್ತು. ಸರಿಯಾಗಿ ಪಾಲಿಸದವರಿಗೆ ಮತ್ತೇ ಪ್ರೀತಿಯಿಂದ ಬೈಗುಳಗಳ ಪೂಜೆಯಾಗುತ್ತಿತ್ತು. ಔಷಧಿ ಕುಡಿದು ಅವರು ತೊಳೆದಿಟ್ಟ ಲೋಟವನ್ನು ಮತ್ತೆ ನೀರು ಚಿಮುಕಿಸಿ ಒಳಗೆ ಒಯ್ಯಬೇಕು. ಬಾಯಿಮಾತಲ್ಲಿ `ಹೇಲು ತಿಂದು ಇರೋದಕ್ಕಿಂತ, ಹಾಲು ಕುಡಿದು ಸಾಯೊದು ಛೊಲೊ’ ಅಂತಿದ್ದರೂ ಜೀವನದ ಸಿಹಿ-ಕಹಿಯ ರಸವುಣ್ಣುವ ಹುಕಿ ಮಾತ್ರ ಕಡಿಮೆಯಾಗಿರಲಿಲ್ಲ. ಅಂಥಾ ದಿನಗಳಲ್ಲಿ, ರಾಜಕೀಯ ಬೀದಿಗೆ ಬಂತು. `ಮಂಡಲ್’ ಬಂತು. ಕಾಲೇಜಿನೆದುರು ಬಸ್ಸಿಗೆ ಬೆಂಕಿ ಇಟ್ಟರು. ನಾನೂ ಬೀದಿದೀಪಕ್ಕೆ ಕಲ್ಲೆಸಿದಿದ್ದೆ. ಅದು ಸುಕ್ಕಾದ ಪಟಕ್ಕೆ ತಗುಲಿ ಅಲ್ಲೊಂದು ಚಿಕ್ಕ ತೂತು ಬಿತ್ತು.
ಪಟ ಸುಕ್ಕಾಗಿತ್ತೆಂದೋ, ತೂತು ಬಿದ್ದಿತ್ತೆಂದೋ, ಓದಿನಲ್ಲಿರುಚಿಯಿರಲಿಲ್ಲವೆಂದೋ, ಬೇಜವಾಬುದಾರಿತನದಿಂದಲೋ, ಪಿಯುಸಿಯಲ್ಲಿ ನನಗೆ ಕಡಿಮೆ ಅಂಕ ಬಂದಿದ್ದವು. ಅಲ್ಲಿಯವರೆಗೆ ಬಹುತೇಕ ಶಿಸ್ತು, ಪ್ರಾಮಾಣಿಕತೆಯ ಜೀವನ ನಡೆಸಿದ್ದ `ನಮ್ಮ ಕಾಕಾ’ ನನಗಾಗಿ ಕ್ಯಾಪಿಟೇಶನ್ ಕೊಡಲು ಸಿದ್ಧರಾಗಿದ್ದರು. ಹುಡುಗರನ್ನು ಧಾರವಾಡದಲ್ಲಿ ಕಲಿಯಲು ಬಿಟ್ಟು, ಅಲ್ಲಿಯವರೆಗೆ ಸರ್ಕಾರಿ ನೌಕರಿಯೆಂದು ಒಂದುಕಡೆ ಸ್ಥಿರವಾಗಿ ನಿಲ್ಲದೇ ಅಲೆಯುತ್ತಿದ್ದವರು, ನಿವೃತ್ತರಾಗಿ ಧಾರವಾಡದಲ್ಲೇ ಇರಲು ಬಂದಿದ್ದರು. ಮಗನ ಭವಿಷ್ಯಕ್ಕಾಗಿ ಪ್ರಾವಿಡೆಂಟ್ ಫಂಡ್‌ನ ಹಣವಿತ್ತು. ಆದರೆ ಅಂದು ಅವರ ಒಳಗುದಿ ನಾನು ಕಂಡಿದ್ದೆ. ದುಡ್ಡು ಕೊಟ್ಟು ಇಂಜಿನೀರಿಂಗ್ ಸೇರುವುದಿಲ್ಲವೆಂದು ಮನೆಯಲ್ಲಿ ರಂಪ ಮಾಡಿದೆ. ಪುಳಚಾರು ಹುಡುಗನಾದ ನನಗೆ ಒಂಟಿ ಕಾಲಲ್ಲಿ ನಿಂತು, ಮನೆಮಂದಿಯ ಪ್ರೀತಿಯನ್ನೆಲ್ಲ ಒದ್ದು, ಏನನ್ನಾದರೂ ಮಾಡುವ ಧೈರ್ಯವಿರಲಿಲ್ಲ. ಎಲ್ಲರೂ ಲೋಲಾಳಿಗಾಗಿ ಓಡುವುದು ಕಾಣುತ್ತಿತ್ತು. ಶಾಲೆಯಲ್ಲಿ ಕಲಿತ ಮೌಲ್ಯಗಳನ್ನು ಪಾಲಿಸುವುದರ ಕಷ್ಟ ಗೊತ್ತಾಗತೊಡಗಿತು. ಕೊನೆಗೆ ಸೋಲೊಪ್ಪಿದೆ. ಈ ಸಲ ಗಾಳೀಪಟದಲ್ಲೊಂದು ದೊಡ್ಡ ತೂತು ಬಿತ್ತು.
ರಾಜಕೀಯ ವಾತಾವರಣಕ್ಕೆ ಬಿಸಿ ಏರಿ, ಎಲ್ಲ ಗೊಂದಲಮಯವಾಗಿತ್ತು. ಆದ್ವಾನಿಯವರು ಹೇಳುವುದೇ ಸರಿ, ಅದೇನು ಅವರ ವ್ಯಕ್ತಿತ್ವ, ಖಿ ನವರು ಎಂಥಾ ಶಿಸ್ತಿನವರು. ಮುಸ್ಲಿಂರು ಅದೇಕೆ ಪಾಕಿಸ್ತಾನದ ಪರವಾಗಿ `ಪಟಾಕಿ’ ಸಿಡಿಸುವುದು? ಅಂತೆಲ್ಲಾ ಹುಡುಗರಲ್ಲಿ ವಿಶ್ಲೇಷಣೆ ಶುರುವಾಗಿತ್ತು. `ಬುದ್ಧಿಜೀವಿ’ಗಳೆನಿಸಿಕೊಂಡವರೂ ಪತ್ರಿಕೆಗಳಲ್ಲಿ ಇದೇ ಧಾಟಿಯ ಮಾತನ್ನು ಹೇಳುತ್ತಿದ್ದರಿಂದ, ಅದು `ಸರಿ’ಯೇ ಅನ್ನಿಸತೊಡಗಿತ್ತು. ಧಾರವಾಡದಂಥ ಊರಲ್ಲೇ ವಾತಾವರಣ ಕೆಟ್ಟಿತ್ತು. ಮನೆಯ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಿದ್ದ ಹುಡುಗ ನಜೀರ್‌ನಿಂದಾಗಿ ನಮ್ಮ ಮನೆಯ ಹಬ್ಬಹರಿದಿನಗಳು ಮಾತ್ರ ಸಾಂಗವಾಗಿ ನಡೆದಿದ್ದವು. ನೇಮ, ನಿಷ್ಠೆ, ಪೂಜೆ, ಪುನಸ್ಕಾರಗಳಲ್ಲಿ ಅಪಾರ ಶ್ರದ್ಧೆಯಿಟ್ಟುಕೊಂಡವರಾದರೂ, ಗಾಂಧೀ, ನೆಹರೂರ ಅನುನಾಯಿಯಾಗಿರುವ `ನಮ್ಮ ಕಾಕಾ’ ಈ ಬಿಜೆಪಿಯವರು ದೇಶವನ್ನು ಹಾಳುಮಾಡ್ತಾರೆ ಅನ್ನುತ್ತಲೇ ಇದ್ದರು. ನಾನೋ ಗೆಳೆಯರೊಡನೆ ಚುನಾವಣೆಯ ದಿನ, `ಕಮಲ’ಕ್ಕೆ ಬೇನಾಮಿ ಮತ ಹಾಕಿದ್ದೆ. ನನ್ನೊಳಗೆ ಕೋಲಾಹಲ ನಡೆದಿತ್ತು. ಪಟದ ತೂತುಗಳು ಮತ್ತಷ್ಟು ದೊಡ್ಡದಾದವು.
ದೆಹಲಿಯಲ್ಲಿ ರಾಜೀವ್ ತೀರಿದ್ದರಿಂದ ರಾವ್ ಬಂದರು. ಕೊನೆಗೆ ಒಂದು ದಿನ ಬಾಬರಿ ಮಸೀದಿ ಕಳಚಿಬಿತ್ತು. ಅಂದೇ `ಕೋಳಿವಾಡದ ಕೃಷ್ಟಕ್ಕಜ್ಜಿ ತೀರಿದರು’ ಅಂತಾ ಮಾಳಮಡ್ಡಿಯಲ್ಲೆಲ್ಲ ಸುದ್ದಿಯಾಯಿತು. ಮತ್ತೊಂದು ತೂತು. ಇಂಜಿನೀರಿಂಗ್ ಆಸಕ್ತಿ ಕೆರಳಿಸತೊಡಗಿತ್ತು. ದೇಶದ ರಾಜಕಾರಣ ದಿನೇ ದಿನೇ ರಾಡಿಯಾಗಿ ಮತ್ತೆ ಬ್ರಾಕೆಟ್ ಸೇರುವುದರಲ್ಲಿತ್ತು. ಎಲ್ಲಾ ಅವಿಭಕ್ತ ಕುಟುಂಬಗಳಿಗೆ ಆಗಲೇ ಹತ್ತಿದ್ದ ಬಿಸಿ, ನಮ್ಮ ಮನೆಗೂ ತಡವಾಗಿಯಾದರೂ, ಕೊನೆಗೂ ತಟ್ಟಿಬಿಟ್ಟಿತು. ಮನೆಯಲ್ಲೂ ಒಂದು ಬಗೆಯ `ಸ್ಥಿತ್ಯಂತರ’ವಾಯಿತು. ಇಂದಿಗೂ ಸಂಬಂಧಗಳು ಬಿಟ್ಟಿಲ್ಲ. ಪರಸ್ಪರ ಬರುವುದು, ಹೋಗುವುದು, ಎಲ್ಲರೂ ಕೂಡಿ, ಸಂಭ್ರಮದಿಂದ ಕಾರ್ಯಕಟ್ಟಳೆಗಳನ್ನು ಮಾಡುವುದು, ಒಂದು ಸಮತೋಲನದಲ್ಲಿ ನಡೆದೇ ಇದೆ. ಮುಖ್ಯವಾಗಿ ಮನೆಯಲ್ಲಿ ಅವ್ವ-ಕಾಕಾರೊಡನೆ ನಾನೊಬ್ಬನೆ ಇರುವುದಾಯಿತು. ಪುಸ್ತಕವನ್ನು ಓದುವುದು ನಡೆದೇ ಇತ್ತು. ಮನೆಯಲ್ಲಿ ಹಿರಿಯಣ್ಣ ಯಾವುದೋ ಇನ್‌ಫೋಸಿಸ್ ಅನ್ನುವ ಕಂಪನಿ ಸೇರಿದ್ದ.
ಲೋಲಾ ಈಗ ಪೂರ್ಣವಾಗಿ, ಸ್ಪಷ್ಟವಾಗಿ ಕಾಣತೊಡಗಿದ್ದಳು, ಓಡುತ್ತಾ, ನಿತಂಬಗಳನ್ನು ಕುಣಿಸುತ್ತಾ, ನಮ್ಮನ್ನು ಹೆಚ್ಚೆಚ್ಚು ಆಕ್ರಮಿಸತೊಡಗಿದ್ದ ಕ್ರಿಕೆಟ್ ಆಟಗಾರರ ಪಕ್ಕದಲ್ಲಿ, ಥಳುಕು-ಬಳುಕಿನ ಸಿನೆಮಾ ನಟಿಯರಲ್ಲಿ, ಬುರುಗು ಉಕ್ಕುವ ಕೋಲಾಗಳಲ್ಲಿ. ಹೆಚ್ಚಾಗಿ ಟೊಳ್ಳು ಸಂಪ್ರದಾಯವೇ-ಆಧುನಿಕತೆಗಳ ಜಗ್ಗಾಟದಲ್ಲಿ ನಡೆಯುತ್ತಿದ್ದ ರಗಳೆ, ವಿಕೃತತೆಯಲ್ಲಿ ಕೊಳೆವ ಧಾರವಾಡದ ಮಾಳಮಡ್ಡಿಯ ಜೀವನದ ಜೊತೆ ಅವ್ವ-ಕಾಕಾನ ಪ್ರೀತಿಯೂ ಅಪ್ಪ್ರೆಸ್ಸಿವ್ ಅನ್ನಿಸತೊಡಗಿತ್ತು. ಇಂಜಿನೀರಿಂಗ್ ಕಾಲೇಜಿನಲ್ಲಿ ಹತ್ತಿರದಿಂದ ಕಾಸ್ಮಾಪಾಲಿಟನ್ ಜಗತ್ತನ್ನೂ ಕಾಣುವಂತಾಯಿತು. ಈ ವರೆಗೆ ಕಂಡಿದ್ದಕ್ಕಿಂತ ಹೆಚ್ಚೆಚ್ಚು ದಿಟ್ಟ ಹುಡುಗಿಯರೂ ಕಾಣುತ್ತಿದ್ದರು. ಮನಸ್ಸು ಮುಜುಗರ, ಸಂಕೊಚ ಬಿಟ್ಟು ನಿಧಾನವಾಗಿ ಅಷ್ಟಿಷ್ಟು ಎಮ್ಜಾಯ್ ಮಾಡುವುದು ಕಲಿಯತೊಡಗಿತ್ತು. ಬಿ.ಇ. ಮುಗಿಯಿತು.
ಲೊಲಾ ಓಡುವುದು ಇನ್ನೂ ಜೋರಾಯಿತು.
ಟೆಕ್ನಾಲಜಿಯ ಯಶಸ್ಸು ನನ್ನಂಥವರ ನೆತ್ತಿಗೇರತೊಡಗಿತ್ತು. ‘ ವರ್ಕ್ ಕಲ್ಚರ್’ ಎಂಬ ಹೊಸ ಪದ ಕಲಿತಾಗಿತ್ತು. ಸಾಫ್ಟ್‌ವೇರ್ ನೌಕರಿ ಪಡೆಯುವುದು ಎಲ್ಲರ ಜೀವನದ ಪರಮ ಉದ್ದೇಶವಾಗಿತ್ತು. ನೌಕರಿಗಾಗಿ ಬೆಂಗಳೂರಿನಲ್ಲಿ ಅಲೆದಾಡುವುದು ಶುರುವಾಗಿತ್ತು. ಗಾಳೀಪಟಕ್ಕೆ ಇನ್ನಷ್ಟು ತೂತುಗಳಗುವುದು, ಇದ್ದ ತೂತುಗಳು ದೊಡ್ಡದಾಗುವುದು ನಡೆದೇ ಇತ್ತು.
ಲೋಲಾ ಎಂ.ಜಿ.ರೋಡಿನಲ್ಲಿ ಕಣ್ಣುಕುಕ್ಕಿಸುತ್ತಿದ್ದಳು. ಸುತ್ತಮುತ್ತ ಎಲ್ಲರೂ ಅವಳ ಬಗ್ಗೆ ಮಾತಾಡುತ್ತಿದ್ದರು.

ಅಣ್ಣಂದಿರಿಂದಾಗಿ ಮನೆಯ ಆರ್ಥಿಕತೆ ಅಭ್ಯುದಯಗೊಂಡಿತ್ತು. ನಮಗೆ ಬೇಕಾದ ಇಂಗ್ಲೀಷು, ಕನ್ನಡ ಪುಸ್ತಕಗಳನ್ನು ಕೊಂಡುಕೋಳ್ಳುವ ಸ್ವಾತಂತ್ರ್ಯ ಬಂತು. ಧಾರವಾಡದ ಮಡಿವಂತ ಸಮಾಜದಿಂದ ಸ್ವಲ್ಪ ದೂರವೇ ಇರುವ `ನವ್ಯ’ರನ್ನು ಓದುವಂತಾಯಿತು. ಕೆಲವು ಶ್ರೇಷ್ಠ, ಕೆಲವು ಕಳಪೆ. ಕೆಲವು ಅತಿರೇಕ. ಸಾಂಸ್ಕೃತಿಕ, ಸಾಮಾಜಿಕ ವಿಶ್ಲೇಷಣೆ ಹೆಚ್ಚೆಚ್ಚು ಸಂಕೀರ್ಣವಾದವು. ಸಾಮಾಜಿಕ ಸಮಾನತೆ, ಸ್ತೀ ಸ್ವಾತಂತ್ರ್ಯ, ಪ್ರೇಮ, ಕಾಮಗಳ ಬಗ್ಗೆ ಮೊದಲಿದ್ದ ಸರಳೀಕೃತ ಐಡಿಯಾಗಳು ಹೆಚ್ಚೆಚ್ಚು ಕ್ಲಿಷ್ಟವೂ, ಜಟಿಲವೂ ಆದವು. ಇದುವರೆಗೆ ಬಿಡಿಬಿಡಿಯಾಗಿದ್ದ ಒಟ್ಟೂ ಸಮಾಜಿಕಪ್ರಜ್ಣೆಯ ಎಳೆಗಳನ್ನು ಹುರಿಮಾಡಲು ತೊಡಗಿದ್ದವು. ಜೊತೆಗೇ ನೀನು ಉಳ್ಳವ, ಬ್ರಾಹ್ಮಣ, ಇಂಗ್ಲೀಷು ಕಲಿತವ ಇತ್ಯಾದಿ ಅಪರಾಧಿ ಭಾವನೆಗಳನ್ನು ಬೆರಳೆತ್ತಿ ತೋರಿಸಿ, ಬೆಳೆಸಿದವು. ಮೊದಲಿನಿಂದಲೇ ಎಲ್ಲವನ್ನೂ ಆಳವಾಗಿ ಯೋಚಿಸುವ ಚಟ ಅಂಟಿಸಿಗೊಂಡಿದ್ದ ನನಗೆ, ಇನ್ನಷ್ಟು ಈ ತರಹದ ವಿಶ್ಲೇಷಣೆಯನ್ನೂ, `ನರಸತ್ತು ಕೊನೆಯಿರದ ಕೊನೆಯ ಬಟ್ಟೆ ಹುಡುಕುವುದನ್ನೂ’ ಕಲಿಸಿದವು. ಮನಸ್ಸು ಒಮ್ಮೊಮ್ಮೆ ಬಚ್ಚಲ ಮೋರಿಯಾಗುತ್ತಿತ್ತು. ಪಟ ಹರಿಯುತ್ತಿತ್ತು. (ಆದರೆ ಅತ್ತ ಲೋಲಾ…).
ಕತ್ತಿರಿಯುವ ಸ್ಪರ್ಧೆಯ ದಿನಗಳಲ್ಲಿ ಬೇಕಾದ ನೌಕರಿ ಸಿಗುವುದೂ ಕಷ್ಟವಾಗಿತ್ತು. ಲೋಲಾಳನ್ನು ಕೂಡುವ ಬಯಕೆ ದಿನೇದಿನೇ ಹೆಚ್ಚುತ್ತಿತ್ತು. ಅನಿವಾರ್ಯವೂ ಅನಿಸತೊಡಗಿತು. ಇಂಜಿನಿಯರ್‌ನಲ್ಲಿ ಪಡೆದ (ವಿ)ಜ್ಞಾನದ ಸುಳಿ ಇನ್ನಷ್ಟು ಒಳಗೆ ಸೆಳೆಯುತ್ತಿತ್ತು.ಹೀಗೆ ಒಂದು ದಿನ ತೂತುತೂತಾಗಿ ಅಮೇರಿಕೆಗೆ ಬಂದುಬಿಟ್ಟಿದ್ದೆ.

ಲೋಲಾಳ ಜೊತೆ ಜೊತೆಗೆ ಸರಿಗಟ್ಟಿ ಓಡತೊಡಗಿದ್ದೆ. ಆದರೆ ದೊಡ್ಡ ದುರಂತ ಮುಂದೆ ಕಾದಿತ್ತು. ಆರುತಿಂಗಳು ಕಳೆಯುವಷ್ಟರಲ್ಲಿ ಹೇಳದೇ-ಕೇಳದೇ ಇನ್ನೂ ವಯಸ್ಸಿರುತ್ತಲೇ, ಗಂಡ,ಮನೆ,ಮಕ್ಕಳು,ಮನೆತನಗಳ ಏಳಿಗೆಯೊಂದೆ ಜೀವನದ ಪರಮ ಗುರಿಯಾಗಿದ್ದ, ವೈಯಕ್ತಿಕವಾಗಿ ನನ್ನನ್ನು ತೀರ ಹಚ್ಚಿಗೊಂಡಿದ್ದ ಸರಳ ಮನಸ್ಸಿನ ಅವ್ವಾ ಕೈಬಿಟ್ಟಳು. ಇತ್ತ ಅಮೇರಿಕೆಯಲ್ಲಿ ಪ್ರೀತಿ ಕೊಡಬಹುದೆಂದುಕೊಡಿದ್ದ ಹೆಣ್ಣು ತೊಡೆ ಕೊಡವಿಕೊಂಡು ಹೋದಳು.
ಅಂದಿನಿಂದ ಮುಗ್ಧತೆಯ ಪಟ ಹರಿದಿದೆ ಅಂದುಕೊಂಡಿದ್ದೇನೆ. ಲೋಲಾಳ ಜೊತೆ ಓಡುವುದು ಈಗ ಹೆಚ್ಚು ಪ್ರಿಯ ಅನಿಸತೊಡಗಿದೆ. ಹೆಚ್ಚೆಚ್ಚು ಬೌದ್ಧಿಕನಾಗುತ್ತಿದ್ದೇನೆ ಅನಿಸುತ್ತೆ. (ಭಾರತದ ರಾಜಕೀಯ ಈಗ ಬ್ರಾಕೆಟ್‌ನಲ್ಲೂ ಇಲ್ಲ.) ಸಾಕಷ್ಟು ಪ್ರಾಖ್ತಿಕಲ್ ಆಗಿದ್ದೇನೆ. ಅಂತರ್ಜಾಲದ ಬುಲ್ಲೆಟ್ಟಿನ್ ಬೋರ್ಡ್‌ಗಳಲ್ಲಿ ದೊಡ್ಡ, ದೊಡ್ಡ ಥಿಯರಿಯ ಬಗ್ಗೆ ನನಗಿಂತ `ಬುದ್ಧಿವಂತ’ರಾದವರೊಡನೆ ಚರ್ಚಿಸುತ್ತೇನೆ. ಆದಷ್ಟು ಬೌದ್ಧಿಕ ಪುಸ್ತಕಗಳನ್ನು ಮಾತ್ರ ಓಡುತ್ತೇನೆ. ಇಂಟೆಲಿಜೆಂಟ್ ಸಿನೆಮಾ ನೋಡುತ್ತೇನೆ. ನಿನಗೆ ತಿಳಿಯದ್ದು ನನಗೆ ತಿಳಿಯಿತು ಎಂದು ಪಡುವ ಅಹಂನಲ್ಲಿನ ಸಂತೋಷ ಅಷ್ಟಿಷ್ಟಲ್ಲ. ವ್ಯಕ್ತಿವಾದದ ಪಾಠ ಕಲಿತು, ಯಾವ ರಗಳೆ ಹಚ್ಚಿಕೊಳ್ಳದೆ ಹಗಲಿರುಳು, ಕಣ್ಣಲ್ಲಿ ಕಣ್ಣಿಟ್ಟು ಓದುವಾಗ ಗಣಿತ-ವಿಜ್ನ್ಯಾನಗಳ ಸುಳಿಯಲ್ಲಿ ಬೆಳಕು ಕಂಡಂತಾಗುತ್ತದೆ. ಅರಿತರೂ ಸರಿ, ಅರಿಯದಿದ್ದರೂ ಸೈ, ಯಾವ ನೋವೂ ಉಂಟುಮಾಡಲು ತಿಳಿಯದ ಗಣಿತದ ಪ್ರಮೇಯಗಳು, ವೈಜ್ನ್ಯಾನಿಕ ನಿಯಮಗಳು, ಅವುಗಳ ಅಂತಃಸಂಬಂಧ ಕೊಡುವ ಈ ಅನುಭವ ಓಡುವ ಸಂಕಟದಲ್ಲಿ ಸಿಗುವ ರನ್ನದ ಪದಕ.
ಒಟ್ಟಾರೆ ಲೋಲಾಳ ಜೊತೆ ಓಡುವ ಕಲೆ ಕಲಿತಿದ್ದೇನೆ. ಎಲ್ಲಾ ಕನ್ಸರ್‌ವೇಟಿವ್ ಹಿನ್ನೆಲೆಯವರು ಹೆಚ್ಚೆಚ್ಚು ಆಧುನಿಕರಾಗಲು ಸೆಣಸುವಾಗ ಎದುರಿಸಬಹುದಾದ ಕಾಂಟ್ರಡಿಕ್ಷನ್‌ಗಳನ್ನು ನಿಭಾಯಿಸುತ್ತಾ, ಎಲ್ಲದಕ್ಕೂ `ಬಿ ಕೂಲ್ ಡಸಂಟ್ ಮ್ಯಾಟರ್ ಯಾರ್’, `ದಿಲ್ ಪೆ ಮತ್ ಲೆ ಯಾರ್’, ಇತ್ಯಾದಿ ಆಧುನಿಕೋತ್ತರೋತ್ತರ ಧೋರಣೆ ತಳೆದು, ಪಾತ್ರಕ್ಕೆ ತಕ್ಕಂತೆ ಬಣ್ಣ ಬಳಿದುಕೊಂಡು, ಅಮೇರಿಕನ್ ಸುಖಕ್ಕೆ ಮೈ ಒಗ್ಗಿಸಿಕೊಂಡು, ತಣ್ಣಗೆ ಇದ್ದೇನೆ. ಗೆಳೆಯರು ಕುಡಿದು ಪಾರ್ಟಿ ಮಾಡುವಾಗ ಮಾತ್ರ ಸ್ವಲ್ಪ `ಬಿಗಿ’ಯಾಗಿಯೇ ಇರುತ್ತೇನೆ.
ಹ್ಙಾ! ಅಂದ ಹಾಗೆ ನನ್ನಂಥ ಬುದ್ಧಿವಂತರೆಲ್ಲಾ ಈಗ ವೈರುದ್ಧ್ಯ, ವಿಪರ್ಯಾಸಗಳಿಗೆ ಅವಕಾಶವಿರುವ ಫಿಲಾಸಫಿ ಓದುತ್ತಿದ್ದಾರೆ. ನಾನೂ ಓದಬೇಕಪ್ಪಾ. ಓಡಬೇಕು!

ಲೋಲಾ ಓಡುತ್ತಿದ್ದಾಳೆ. ನಿಜ, ಲೊಲಾ ಜೊತೆ ಓಡಿದ್ದರಿಂದಲೇ ಅಲ್ಲವೇ ನಮ್ಮ ದೇಶವೀಗ ಇಂಟರ್‌ನೆಟ್ ಪಡೆದದ್ದು, ಮೊನ್ನೆ ಜಿಎಸ್‌ಎಲ್‌ವಿ ಹಾರಿಸಿದ್ದು, ಫ್ಲೈ ಓವರ್ ಕಟ್ಟುತ್ತಿರುವುದು, `ಲಂಚ’ಕೊಡದೇ ನಾವೀಗ ಮೊಬೈಲ್ ಫೋನ್ ಇಟ್ಟುಕೊಳ್ಳುತ್ತಿರುವುದು. ಲೋಲಾಳನ್ನು ನೋಡಿಯೇ ಅಲ್ಲವೇ ಕನಿಷ್ಟ ರೀಟಾ, ಶೀಲಾರಂಥವರು ಓಡಲು ಕಲಿತದ್ದು. ಹಾಗೆಯೇ, ಒತ್ತು ಜಡೆಯಲ್ಲಿ ಗುಲಾಬಿ ಸಿಕ್ಕಿಸಿಕೊಂಡು, ತಲೆ ತಗ್ಗಿಸಿ ನಡೆಯುವ ನನ್ನೂರಿನ ರಮಾ, ಸುಮಾ, ದೀಪ, ಸವಿತ, ಮಲ್ಲಿ, ನಿಂಗಿ, ಪಾರಿ ಎಲ್ಲಾ ಓಡುವಂತಾಗಬೇಕು. ಓಡಬೇಕು! ಲೋಲಾಳ ಹಾಗೆ! ಜೀನ್ಸ್ ಧರಿಸಿ, ತೋಳಿಲ್ಲದ ಬನಿಯನ್ ಧರಿಸಿ, ಮತ್ತೆ ಶ್ಯೂ ಧರಿಸಿ, ಜಡೆ ಬಿಚ್ಚಿ, ರೊಚ್ಚಿನಿಂದ ಓಡಬೇಕು! ತಮ್ಮ ತಮ್ಮ ಪ್ರಿಯಕರರಿಗಾಗಿ, `ಮಾನ್ನಿ’ಗಾಗಿ. ರಮಾ,ಸುಮಾ ಈ ಕಲೆ ಕಲಿಯುತ್ತಿದ್ದಾರೆ. ಆದರೆ ಉಳಿದವರು? ಮಲ್ಲಿ, ನಿಂಗಿ, ಪಾರಿ?

ಕಳೆದ ತಿಂಗಳು, ಧಾರವಾಡ:
ಎರಡು ವರ್ಷದ ನಂತರ ಬಂದೆನೆಂದು ಮನೆ-ಮಂದಿಯೆಲ್ಲಾ ಸಂತೋಷಪಡುತ್ತಾರೆ. ನನ್ನಂತೇ ತುಣುಕಾಗಲು ನಿರಾಕರಿಸುವ, ಒಳಗೆ ಹೆಚ್ಚು ಗಟ್ಟಿ ಅನಿಸುವ ನನ್ನ ಕಿರಿಯ ಅಣ್ಣನ ಮದುವೆಯನ್ನು ಎಲ್ಲರೂ ಕಲೆತು, ಸಂಭ್ರಮದಿಂದ ಎಲ್ಲಾ ಕ್ಷುಲ್ಲಕಗಳನ್ನೂ ಮರೆತು, `ಪದ್ಧತಿ’ಯ ಪ್ರಕಾರ ನೆರವೇರಿಸುತ್ತಾರೆ. ಹೆಣ್ಣುಮಕ್ಕಳು ಅರತಿ ತಟ್ಟೆಯೊಳಗಿನ ದೀಪದಂತೆ ಶಾಂತವಾಗಿ ಉರಿಯುತ್ತ ಹಾಡುತ್ತಾರೆ. ಇಲ್ಲ, ಅವರಾರಿಗೂ ಲೋಲಾಳ ಸೊಂಕು ತಗುಲಿಲ್ಲ.
ಇದೇ ನಮಗೆಲ್ಲಾ ಓಡುವಾಗ ಕಾಲಲ್ಲಿ ಬರುವ ತೊಡಕು. ನಾನು ಅವರ ಸಂಭ್ರಮದಲ್ಲಿ ಪೂರ್ಣ `ಒಳ’ಗೊಳ್ಳದೆ ಹೊರಗೆ ಉಳಿಯುತ್ತೇನೆ.
ಸಾಹಿತ್ಯಸಂಜೆಯಲ್ಲಿ ಸಿಕ್ಕ ಹಿರಿಯ ಚಿಂತಕರಿಗೆ ಪರಿಚಯಿಸಿಕೊಂಡು ಎಲ್ಲಾ ಹೇಳಬೇಕು, ಇನ್ನೂ, ಏನೇನೊ ಹೇಳಬೇಕು ಅಂದುಕೋಳ್ಳುತ್ತೇನೆ. ಅವರು ಮಾತ್ರ ಪ್ರೀತಿಯಿಂದ ಹೆಗಲ ಮೇಲೆ ಕೈಹಾಕಿ, `ಬೇಂದ್ರೆ ಇನ್ನೂ ರೆಲೆವಂಟ್, ನಿನಗೆ ಬೇಂದ್ರೆ ಇನ್ನೂ ಇಷ್ಟವಾಗಿರೋದೇ ಇದಕ್ಕೆ ಎವಿಡೆನ್ಸ್ ಫ್ರುಗಾಲಿಟಿಯಿಂದ ಮಾತ್ರ ನಮ್ಮ ಫೋಕ್ ಟ್ರೆಡಿಷನ್ ಉಳಿಸಲು ಸಾಧ್ಯ. ಮತ್ತೆ ಗಾಂಧಿ ಹುಟ್ಟಿ ಬರಬೇಕು.’ ಎನ್ನುತ್ತಾರೆ. ನಾನು ಮತ್ತೆ ಹೊರಗುಳಿಯುತ್ತೇನೆ. ಕೊನೆಯಲ್ಲಿ ಮಿಸ್ಟಿಸಿಸಂ ಮತ್ತು ನ್ಯೂಮರಾಲಜಿಯನ್ನು ಏಕತ್ರಗೊಳಿಸುವ ಬೇಂದ್ರೆ ಕವಿತೆ ಉದ್ಧರಿಸಿ ಬೀಳ್ಕೊಡುತ್ತಾರೆ. ಕವಿತೆ ಬುದ್ಧಿಗೇರುತ್ತದೆ.ಆದರೆ ಲ್ಯಾಬಿನಲ್ಲಿ ಅದೇಕೋ `ಭವ’ದ ಅಂತಃಕರಣೀ ಸೀತಮ್ಮ ಮಾತ್ರ ಇನ್ನೇನು ಹೃದಯಕ್ಕೇರಿ ಕರುಳು ಕಟ್ಟಬೇಕು, ಕಟ್ಟಬೇಕು ಅನ್ನುತ್ತಾ ಹಾಗೆಯೇ ಉಳಿದುಬಿಡುತ್ತಾರೆ.

ರೀಸರ್ಚ್ ಮುಗಿಸಿ ಸಾಯಂಕಾಲ ಮನೆಗೆ ಬಂದರೆ ಹೈದರಬಾದೀ ಗೆಳೆಯ ಟಿವಿ ಯಲ್ಲಿ ಎನ್‌ಬಿಎ ನೋಡುವುದರಲ್ಲಿ ಮಗ್ನನಾಗಿದ್ದಾನೆ. ಟಿವಿ ಯಲ್ಲಿ ಝಗಮಗಿಸುವ ಬೆಳಕಿನಡಿಯಲ್ಲಿ ದೈತ್ಯಾಕಾರದ ಬಾಸ್ಕೆಟ್‌ಬಾಲ್ ಆಟಗಾರರು, ಕ್ರಮವಾಗಿ ಹೆಸರು ಕೂಗಿದಂತೆಲ್ಲ, ಎದೆ ಬಡಿಕೊಳ್ಳುತ್ತಾ `ಯೊ ಯೊ’ ಎಂದು ಪ್ರಾಣಿಗಳಂತೆ ಅರಚುತ್ತಾರೆ. ಕಣ್ಣಿನಲ್ಲಿ ಬೇಟೆಗೆ ಹೊರಟ ಏಕಾಗ್ರತೆ ಇದೆ. ಕಾಮೆಂಟ್ರಿ ಹೇಳುವಾತನೂ ತನಗೆ ದುಡ್ಡು ಬರುವ ಲಾಸ್‌ಏಂಜೆಲ್ಸ್‌ನ ಪರವಹಿಸಿ ಮೈಕಿನಲ್ಲಿ ಜೋರಾಗಿ ಅರಚುತ್ತಲೇ ಇದ್ದಾನೆ. `ಇದೆಲ್ಲಾ ಲೊಲಾಳ ಜೊತೆ ಬಹಳ ಹೊತ್ತು ಓಡಿದ್ದರ ಫಲ’ ಅಂತ ನಾನಂದರೆ, `ಸೋ ವಾಟ್’ , ಅವರು ಅದೇ ಬಗೆಯಲ್ಲಿ ಕಂಡಿಷನ್ ಆಗಿರುವುದು. ಮತ್ತು ನೀನು ನಿನ್ನ ದೇಸಿ ಬಗೆಯಲ್ಲಿ ಕಂಡೀಶನ್ ಆಗಿರುವುದರಿಂದ ಅವರು ನಿನಗೆ ಹಾಗೆ ಕಾಣುವುದು. ನೀನು ನೋಡುವಾಗ ಚಶ್ಮಾ ಬದಲಾಯಿಸಿ ನೋಡಬೇಕು’ ಅಂತ ಅವನು ಅಂದಾನೆಂದು ನಾನೇ ಏನೂ ಮಾತಾಡುವುದಿಲ್ಲ.

ಗಟ್ಟಿಯಾಗಿ ಮಾತಾಡುವ ದನಿ ಕಳೆದುಕೊಂಡಿದ್ದೇನೆ.ಆಗಾಗ ಅಜ್ಜಿಗೆ ಗೊಕುಲಾಷ್ಟಮಿಯ ದಿನ ಮನೆಯ ಹಿತ್ತಲಲ್ಲಿ, ಶುಭ್ರ ನಸುಕಿನಲ್ಲಿ, ತುಳಸಿ ತೆಗೆಯುವಾಗ ಕಂಡ, ತಿಳಿ ಗುಲಾಬಿ ಬಣ್ಣದ ಗೌರಿ ಹೂವಿಂದ ತೊಟ್ಟಿಕ್ಕುವ ಅಮೃತಬಿಂದುವಿನ ನೆನಪಾಗುತ್ತದೆ. `ಮೂಡಲ ಮನೆಯ’ ಪದ್ಯ ನೆನಪಾಗುತ್ತದೆ. ಕಣ್ಣ ಪಸೆಯಲ್ಲಿ ಹನಿಯೊಡೆಯಿತು ಅನಿಸುತ್ತದೆ. ಇರಲಿ, ಅನಿಸಲಿ. ಅದಕ್ಕೇನಂತೆ. ಹಾಗೆಲ್ಲಾ ಅನಿಸಿದರೂ ಓಡಬೇಕು. ಕಣ್ಣೊರೆಸಿಕೊಂಡು ಓಡಬೇಕು. ಸದ್ಯಕ್ಕೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.