ಬಂತು ಭಾರತ ಹುಣ್ಣಿವೆ!

ಬಂತು ಭಾರತ ಹುಣ್ಣಿವೆ!
ತೆರೆದು ಲೋಕದ ಕಣ್ಣೆವೆ!!

ಕನಸು ಮನಸೂ ಹೊಂದಿವೆ
ಜೇನು ಬಟ್ಟಲು ತಂದಿವೆ
ಇಂಥ ಸಮಯದಿ ಬಂಧವೆ?
ಏನು ಗೈದರು ಚೆಂದವೆ!
ಬಾನಿನುದ್ದಕು ಭೂಮಿಯಗಲಕು
ಎಲ್ಲಿಯೂ ಸ್ವಚ್ಛಂದವೆ!
…..ಬಂತು!

ಗಾಳಿ ತಣ್ಣನೆ ತೀಡಿದೆ
ಮರಕೆ ಕಿವಿ ಮಾತಾಡಿದೆ;
ತುಂಡು ಮೋಡವು ತೇಲಿದೆ
ದುಂಡು ಮಲ್ಲಿಗೆ ಹೋಲಿದೆ;
ಹಿಂಡನಗಲಿದ ಕರುವಿನಂದದಿ
ಬಾನ ಬಟ್ಟೆಯೊಳೋಡಿದೆ
…..ಬಂತು!

ಗೋದಿ ಹೊಲವೂ ಮಾಗಿದೆ
ಕಣದಿ ಹಂತಿಯು ಸಾಗಿದೆ;
ಹತ್ತಿ ತೊಳೆ ತೊಳೆ ತೊಳಗಿದೆ
ರೈತನೆದೆ ಮಾರ್‍ಪೊಳೆದಿದೆ
ಕುಸುಬೆ ಹೂವಿನ ಕುಸುರಿನೊಂದಿಗೆ
ಜೀವನವೆ ಹಾಡಾಗಿದೆ!
…..ಬಂತು!

ನಿರ್‍ಭಯತೆ ನಿರಪೇಕ್ಷತೆ
ಶುಭ್ರಗುಣ ಸಂಪನ್ನತೆ
ಬಾಳ ಬೆಳಗಿಪ ನವ್ಯತೆ
ನಿರ್‍ಮಲತೆ ಸವಿ ನಮ್ರತೆ
ಅಳವಡಿಸುತಿವನೆಲ್ಲ ಕರಗಿಸಿ
ಇಂದಿನೀ ಬೆಳಕಾಯಿತೆ?
…..ಬಂತು!

ಜೀವ ಹಂಸವು ನಲಿದಿದೆ
ಶಾಂತಿ ಸಾಗರಕಿಳಿದಿದೆ;
ನೋವು ಚಿಂತನ ತೊಲಗಿದೆ
ಇಂದ್ರಲೋಕವು ಮಲಗಿದೆ
ಚಂದ್ರ ಸಾಕಿದ ಚಿಗುರೆ ಭೂಮಿಗೆ
ಜಿಗಿವ ಹಂಬಲದಲ್ಲಿದೆ!
…..ಬಂತು!

ಜಗದ ಪಾತ್ರೆಯು ತುಂಬಿದೆ
ಎಲ್ಲರಾಸೆಗು ಇಂಬಿದೆ;
ಜೈತ್ರಯಾತ್ರೆಗೆ ಕರೆದಿದೆ
ಸಕಲ ಸಿದ್ಧತೆಯಾಗಿದೆ
ಆವುದೋ ದಿವ್ಯಾನುಭಾವಕೆ
ತಾ ‘ಉಧೋ’ ಎಂದೆದ್ದಿದೆ!
…..ಬಂತು!
*****