ಅವಧೇಶ್ವರಿ – ೧

||ಶ್ರೀ||
ಭಾಗ ಒಂದು : ಪುರುಕುತ್ಸ

-೧-
ಶ್ರೀ ರಾಮಚಂದ್ರನ ಹೆಸರಿನಿಂದ ಪುನೀತವಾದ ಅಯೋಧ್ಯೆ ಈಗ ಕುಗ್ರಾಮವಾಗಿದೆ. ಶ್ರೀರಾಮನು ಬರುವ ಮೊದಲು ಇದು ಅಂಥ ಕುಗ್ರಾಮವೇನೂ ಅಲ್ಲ. ಆದರೆ ಸಾಮ್ರಾಜ್ಯವೂ ಅಲ್ಲ. ೩೦-೪೦ ಗ್ರಾಮಗಳಿಗೆ ಅಧಿಪತಿಯಾಗಿ ರಜ್ಯಭಾರ ಮಾಡುತ್ತಿದ್ದ ಶ್ರೀಪುರುಕುತ್ಸ ಮಹಾರಜನ ರಾಜಧಾನಿಯಗಿತ್ತು.ಪುರುಕುತ್ಸನು ಸುಖ ಲೋಲುಪನು. ಇವನ ರಾಣಿ ನರ್ಮದಾ ಪುರುಕುತ್ಸಾನಿ. ಆದರೆ ಹೆಂಡತಿ ಜೊತೆಗೆ ಅವನಿಗೆ ಎನೂ ಸಂಬಂಧವಿರಲಿಲ್ಲ. ಏಕೆಂದರೆ ಪುರುಕುತ್ಸಾನಿ ಪುರುಕುತ್ಸ ಮಹಾರಾಜನ ತಂಗಿಯೂ ಹೌದು.ಸೂರ್ಯವಂಶದ ಪದ್ಧತಿಯಂತೆ ಚಿಕ್ಕಂದಿನಲ್ಲೇ ಅವರ ವಿವಾಹವು ಜರುಗಿಹೋಗಿತ್ತು.ರಾಜಮನೆತನದಲ್ಲಿ ಹೊರಗಿನವರು ಬಾರದಂತೆ ಮಾಡುವ ವ್ಯವಸ್ತೆ ಇದು.ಇಜಿಪ್ಶಿಯನ್ ರಾಜಮನೆತನಗಳಲ್ಲಿ ನಡೆದುಬಂದ ರೀತಿ ಇದು.ಪುರುಕುತ್ಸ ಮಹಾರಾಜನು ಪುರುಕುತ್ಸಾನಿ ತನ್ನ ತಂಗಿಯೆಂಬುವುದನ್ನು ಕೊನೆಯವರೆಗೂ ಮರೆಯಲು ಸಾಧ್ಯವಾಗಲಿಲ್ಲ. ಅವರಿಗೆ ಮಕ್ಕಳೂ ಆಗಲಿಲ್ಲ.ರಾಜಮನೆತನದ ಸಮಾನ ಅಧಿಕಾರಿಣಿಯಾಗಿದ್ದ ಪುರುಕುತ್ಸಾನಿ ತನ್ನ ವರ್ಚಸ್ಸಿನಿಂದ ಅಣ್ಣ-ಗಂಡನ ರಾಜ್ಯ ಸೂತ್ರಗಳನ್ನು ಭದ್ರವಾಗಿ ಕೈಯಲ್ಲಿ ಇರಿಸಿಕೊಂಡು ನಿಜವಾದ ರಾಜ್ನಿಯಂತೆ ಆಳುತ್ತಿದ್ದಳು.ಆದರೆ ಸಂಸಾರಸುಖವೊಂದು ಅವಳಿಗೆ ನಿಲುಕದ ವಿಷಯವಾಗಿತ್ತು.ರಾಜಮನೆತನದ ಈ ವಿಶಿಷ್ಟವಿವಾಹ ಪದ್ದತಿ ಹೇಗೆ ಮಾಯವಾಯಿತೆಂಬುದೇ ನಮ್ಮ ಕಾದಂಬರಿಯ ವಿಷಯ.

-೨-
“ಕಾಲಿಯಾ!” ಪುರುಕುತ್ಸ ಮಹಾರಾಜನು ಕೂಗಿದನು.
“ಮಹಾರಾಜ!” ಕಾಲಿಯ ಓಡಿಬಂದು ಮುಜುರೆ ಮಾಡಿ ನಿಂತನು.
“ತಾರ್ಕ್ಷ ಬಂದನೇ ?” ಪುರುಕುತ್ಸ ಮತ್ತೊಂದು ಗುಟುಕು ಮಧುಪಾನ ಮಾಡುತ್ತ ಕೇಳಿದನು, ಉತ್ಕಟೆಯಿಂದ.
“ಇನ್ನೂ ಬರಲಿಲ್ಲ ಸ್ವಾಮಿ !” ಎಂದ ಕಾಲಿಯಾ.
“ಬಂದಕೂಡಲೆ ಒಳಗೆ ಬರಹೇಳು!” ಎಂದನು ಮಹಾರಾಜ.
ಮಹಾರಾಜ ಅಂದು ಕೇಳಿದ್ದು ನಾಲ್ಕನೇ ಬಾರಿ.
ಕಾಲಿಯಾ ಹೇಳಿದ್ದೂ ನಾಲ್ಕನೇ ಬಾರಿ.
“ಆಗಲಿ ಮಹಾಪ್ರಭು!”
ಎರಡು ವರ್ಷ ಈ ಮಾತು ಕಾಲಿಯಾ ಕೇಳಿದ್ದ. ಅನೇಕಬಾರಿ ಇದೇ ಉತ್ತರ ಕೊಟ್ಟಿದ್ದ.ಅವರ ಸಂಭಾಷಣೆ ಇಲ್ಲಿಗೇ ಮುಕ್ತಾಯ.
ಹದಿನೇಳು ವರ್ಷದ ಕಾಲಿಯಾಗೆ ಇದೇ ಮಾತು ಕೇಳಿಕೇಳಿ ಬೇಸರವಾಗುತ್ತಿತ್ತು.
ಆಂರವನದಲ್ಲಿ ಒಂದು ಭವ್ಯ ಗುಡಿಸಲು. ಸುತ್ತಲೂ ಬೇಲಿ. ಬೇಲಿಯಹೊರಗೆ ಆತು ಪಹರೆಯವರು. ಒಳಗೇ ಓಮ್ತೀ ಮಹಾರಾಜ, ಅವನ ಆಪ್ತ ಆಳುಮಗ ಕಾಲಿಯಾ. ಹದಿನೈದು ವರ್ಷಕ್ಕೆ ಕೆಲಸಕ್ಕೆ ಸೇರಿಕೊಂಡ ಕಾಲಿಯಾನಿಗೆ ಪುರುಕುತ್ಸ ರಾಜನ ಸಿಬ್ಬಂದಿಯಲ್ಲಿ ವಿಶೇಷ ಸ್ಥಾನವಿತ್ತು. ಅವನು ಹೊಸಬ. ಯಾರದೂ ಪರಿಚಯವಿಲ್ಲ,ಮಾತುಕಮ್ಮಿ,ಆಸ್ಥಾನದ ಸುಶಿಕ್ಷಿತ ಭಾಷೆಯ ಪರಿಚಯ ಅವನಿಗಿರಲಿಲ್ಲ. ನಾಗಜಾತಿಯ ಹುಡುಗನಾಗಿದ್ದ ಅವನು, ಆಡುವ ಭಾಶೆಯ ಉಚ್ಚಾರವೂ ಕೇಳುವವರಿಗೆ ತಿಳಿಯಲು ಕಷ್ಟವಾಗುತ್ತಿತ್ತು. ಅಲ್ಲದೇ ಸುರಧ್ರೂಪಿ. ಏನೂ ಅರಿಯದವನು. ಈಗೀಗ ರಾಜನ ನಿತ್ಯಕರ್ಮದ ಪರಿಚಯ ತುಸು ಆಗಿತ್ತು. ತಾರ್ಕ್ಷ ಕುದುರೆಯಮೇಲೋ ರಥದಲ್ಲೋ ಕರೆದು ಕೊಂಡುಬಂದ ಗಣಿಕೆಯರು, ವಾರಾಂಗನೆಯರು, ರಾಜನ ಸಹವಾಸವಾದ ಮೇಲೆ ತಾವೂ ಕುಡಿದು ಮಲಗುತ್ತಿದ್ದರು. ಅವರನ್ನು ಎತ್ತಿಹೊರಗೆ ತಂದು ಹಾಕಿ, ಬೇಗ ಎಬ್ಬಿಸಿ,ಹೊರಗೆ ಅಟ್ಟುವುದು, ಪಹರೆಯವರಿಗೆ ಒಪ್ಪಿಸುವುದು- ಇದಷ್ಟು ಅವನು ಮಾಡುವ ನಿತ್ಯಕರ್ಮ. ಎಲ್ಲಿಂದ ಬಂದರೋ ಅವನಿಗೆ ತಿಳಿಯದು. ಅವರ ಮಾತು ಇವನಿಗೆ ಅರ್ಥವಾಗದು, ಇವನ ಮಾತು ಅವರಿಗೆ ಅರ್ಥವಾಗದು. ಮಹಾರಾಜರಿಗಷ್ಟೇ ಇವನ ಮಾತು ಅರ್ಥವಾಗುವುದು. ಏಕೆಂದರೆ ಅವರು ಈ ಭಾಷೆಯನ್ನು ಬಲ್ಲವರು . ಚಿಕ್ಕಂದಿನಿಂದಲೇ ಕಲಿತವರು. ತಾಯಿಯಿಂದಲೇ ಕಲಿತವರು. ತಾಯಿ ಬಿಂದುಮತಿದೇವಿ ನಾಗಕ್ಷತ್ರೀಯ ವಂಶದವಳು. ಆಕೆಯಕಾಲದಲ್ಲೇ ಆಕೆಯ ನಾಗಪೋಜೆಗಾಗಿ ಹಲವಾರು ನಾಗಬ್ರಾಹ್ಮಣರು ಅಯೋಧ್ಯೆಗೆ ವಲಸೆ ಬಂದು ನೆಲೆಸಿದ್ದರು. ಹಲವಾರು ನಾಗಸೇವಕರೂ ರಾಜನ ಸಿಬ್ಬಂದಿಯಲ್ಲಿ ಸೇರಿಕೊಂಡು ತುಸು ಸುಭದ್ರವಾಗಿ ಮೇಲ್ಪಂಕ್ತಿಗೆ ಏರಿದ್ದರು. ಪುರುಕುತ್ಸಾನಿ ಮಹಾರಾಣಿಯು ಕಾಲಿಯಾನನ್ನು ನೇಮಿಸಿಕೊಂಡು ಅರಸನ ಆಪ್ತಸೇವಕನನ್ನಾಗಿ ಮಾಡಿದುದೂ ಇದೇ ಕಾರಣದಿಂದ. ನಾಗಭಾಷೆಯೂ ಆರ್ಯಭಾಷೆಯೂ ತೀರ ಭಿನ್ನವೇನಲ್ಲ. ಆದರೆ ಉಚ್ಚಾರಣೆಯಲ್ಲಿ ತುಸು ಬೇರೆ. ಅಕಾರವು ಒಕಾರವಾಗುತ್ತಿತ್ತು. ಪ್ರತಿಮಾತಿಗೂ ಒಂದುಸಿರು ಮುಗಿದು ಮತ್ತೊಂದು ಉಸಿರು ಶುರುವಾಗಬೇಕಾದರೆ, ’ಆ’ ಎಂಬ ನಿದರ್ಶಕ ಲಘುಸ್ವರ ಬಂದು, ಕೇಳುವರಿಗೆ ಅರ್ಥವಾಗುವುದು ಕಠಿಣವಾಗುತ್ತಿತ್ತು.

ಐಗುಪ್ತದೇಶದ ಫೆರೋ ದೊರೆಗಳ ದೂರದ ಸಂಬಂಧಿಕನಾದ ಮಾಂಧಾತ ಮಹಾರಾಜನು ಅವರಿಗೆ ಪತ್ರ ಬರೆದು ಪುರುಕುತ್ಸ ಯುವರಾಜನ ಲಗ್ನದ ವಿಷಯಕ್ಕೆ ಸಲಹೆ ಕೇಳಿದ್ದನು. ಎರಡು ತಿಂಗಳಲ್ಲಿ ಅವರಿಂದ ಉತ್ತರ ಬಂದಿತ್ತು.–’ತಮ್ಮ ಪದ್ಧತಿಯಂತೆ ರಾಜವಂಶದ ರಕ್ತ ಶುದ್ಧ ಉಳಿಯಬೇಕು, ತೀರ ಸಮೀಪದ ಸಂಬಂಧಿಯನ್ನೇ ಮದುವೆ ಮಾಡಿಕೊಳ್ಳಬೇಕು. ವಂಶೋದ್ಧಾರವಾಗುತ್ತದೆ’ ಎಂದು. ಇಜಿಪ್ತ ರಕ್ತದವರಾರೂ ಇಲ್ಲ. ತಂಗಿ ಪುರುಕುತ್ಸಾನಿಯೊಬ್ಬಳೇ. ಅಯೋಧ್ಯೆಯ ವಶಿಷ್ಟಗೋತ್ರದ ಬ್ರಾಹ್ಮಣರು ಜನನರಹಸ್ಯದ ತತ್ವದ ಅನುಸಾರವಾಗಿ ಇದು ಬೇಡವೆಂದರು. ನಾಗಬ್ರಾಹ್ಮಣರು ತಮ್ಮ ಪದ್ದತಿಯಂತೆ ಇದು ಅಸಂಗತವೆಂದರು. ಬಿಂದುಮತೀದೇವಿಗೂ ಇದು ಧರ್ಮವಿರುದ್ಧವೆಂದು ತೋರಿತು. ಆದರೆ ರಾಜವಂಶದ ರಕ್ತಶುದ್ಧಿಯ ವಿಚಾರವನ್ನು ಒಪ್ಪಿದ ಕ್ಷತ್ರಿಯರು ಇದಕ್ಕೆ ಬೆಂಬಲ ಕೊಟ್ಟರು. ಹನ್ನೆರಡು ವರ್ಷದ ಪುರುಕುತ್ಸನಿಗೂ ಎಂಟು ವರ್ಷದ ನರ್ಮದಾ ಪುರುಕುತ್ಸಾನಿಗೂ ವಿವಾಹಮಂಗಲವಾಗಿಹೋಯಿತು.

ಪುರುಕುತ್ಸ ಹದಿನಾಲ್ಕು ವರ್ಷದವನಿದ್ದಾಗ ತಾಯಿ ಬಿಂದುಮತೀದೇವಿ ಕೊರಗಿ ನಿಧನ ಹೊಂದಿದಳು. ಅವನು ಹದಿನಾರು ವರ್ಷದವನಿದ್ದಾಗ ಮಾಂಧಾತ ಮಹಾರಾಜನು ರಾಜಯಕ್ಷ್ಮದಿಂದ ನಿಧನ ಹೊಂದಿದನು. ಮನೆಯವರೆಲ್ಲ ಕೂಡಿ ನಾಗಬ್ರಾಹ್ಮಣರ ಸಹಾಯದಿಂದ ಪುರುಕುತ್ಸನನ್ನು ಸಿಂಹಾಸನಕ್ಕೆ ಏರಿಸಿದರು. ಪುರುಕುತ್ಸನಿಗೆ ಆಗಿನ್ನೂ ಹನ್ನೆರಡು ವರ್ಷ.

ರಾಜಪುತ್ರಿಯರಂತೆ ಪುರುಕುತ್ಸಾನಿ ತುಸು ಗಂಡುಬೀರಿ. ಗಂಡನಜೊತೆಗೆ ಸಖಾಭಾವದಿಂದ ಆಟವಾಡುತ್ತಿದ್ದಳು. ಕುದುರೆ ಏರುತ್ತಿದ್ದಳು. ಮರ ಹತ್ತುತ್ತಿದ್ದಳು. ವ್ರಕ್ಷವಾನರ(ಮರಕೋತಿ) ಆಟದಲ್ಲಿ ಅವನನ್ನು ಸೋಲಿಸಿ ಅಳುವಂತೆ ಮಾಡುತ್ತಿದ್ದಳು. ಕುಸ್ತಿ ಆಟದಲ್ಲಿ ಅವನನ್ನು ಕೆಳಕ್ಕೆ ಹಾಕಿ ಎದೆಯಮೇಲೆ ಕೂಡುತ್ತಿದ್ದಳು. ಬೆತ್ತದಾಟದಲ್ಲಿ ಅವನ ಡುಬ್ಬಕ್ಕೆ ನಾಲ್ಕು ಸೆಳೆದು ಕಣ್ಣೀರು ಕಪಾಳಕ್ಕೆ ಬರುವಂತೆ ಮಾಡುತ್ತಿದ್ದಳು. ಮಗಳ ಭವಿಷ್ಯಕ್ಕೆ ಚಿಂತಿತಳಾದ ಬಿಂದುಮತೀದೇವಿ ಮಗಳಿಗೇ ಎರಡು ಪೆಟ್ಟು ಕೊಟ್ಟು ಆಟ ಸಮನಾಗುವಂತೆ ಮಾಡುತ್ತಿದ್ದಳು. ಪುರುಕುತ್ಸಾನಿ ಅಳುತ್ತಹೋಗಿ ತಂದೆ ಮಾಂಧಾತನ ಎದುರು ದೂರು ಕೊಡುತ್ತಿದ್ದಳು. ಮಾಂಧಾತ ಬಿಂದುಮತೀಯ ಮೇಲೆ ಸಿಟ್ಟು ಮಾಡುತ್ತಿದ್ದನು. ಒಂದೆರಡು ಬಾರಿ ಹೀಗೆ ಸಿಟ್ಟು ಮಾಡಿದ್ದಕ್ಕಾಗಿ ಬಿಂದುಮತೀದೇವಿ ಮಗಳ ಅಸಮ್ಮತ ಲಗ್ನದ ಮಾತೆತ್ತಿ ಅವನು ಮೌನಿಯಾಗುವಂತೆ ಮಾಡಿದ್ದಳು. ಅನಂತರ ಪುರುಕುತ್ಸಾನಿಗೇ ಸಮಾಧಾನ ಹೇಳಿ, ರಾಜ ಬಿಂದುಮತೀದೇವಿಯನ್ನು ಎದುರಿಸುವುದನ್ನು ಬಿಟ್ಟೂಕೊಟ್ಟನು. ಒಮ್ಮೆ ಜಗಳ ತೀರ ವಿಕೋಪಕ್ಕೆ ಹೋಗಿ ರಾಜ ದೇವಿಗೆ ’ಗಾದ್ಧಾವಿ’(’ಗಾರ್ಧಭಿ’) ಎಂದು ಅವಧೀ ಗ್ರಾಂಯಭಾಷೆಯಲ್ಲಿ ಕರೆದನು. “ಹೌದು ನಿಮ್ಮ ಮನೆತನವೇ ’ಗದ್ಧಾವಿ’ ಮನೆತನ” ಎಂದು ರಾಣಿ ಉತ್ತರ ಕೊಟ್ಟಳು. ಅಂದಿನಿಂದ ಸೊರಗುತ್ತ ಸೊರಗುತ್ತ ಆರು ತಿಂಗಳಲ್ಲಿ ಪ್ರಾಣ ಬಿಟ್ಟಳು.

ಪುರುಕುತ್ಸ ತನ್ನ ತಂಗಿಯೇ ತಾಯಿಯ ಮರಣಕ್ಕೆ ಕಾರಣವೆಂದು ನಂಬಿಬಿಟ್ಟ. ಸಾಮಾನ್ಯವಾಗಿ ಎಲ್ಲ ರಾಜಕುವರಿಯರಂತೆ ಪುರುಕುತ್ಸಾನಿಯು ತಡವಾಗಿ ಯೌವನವನ್ನು ತಲುಪಿದಳು. ಹದಿನಾಲ್ಕನೆಯ ವಯಸ್ಸಿನಲ್ಲಿ ಆಕೆ ಪ್ರಾಪ್ತವಯಸ್ಕಳಾದಳು-ತಾಯಿಯ ಮರಣದ ಎರಡು ತಿಂಗಳ ಮೇಲೆ. ಮೈಲಿಗೆಯ ದಿವಸಗಳಾದ್ದರಿಂದ ನಿಷೇಕಪ್ರಸ್ತವನ್ನು ಒಂದು ವರ್ಷ ಮುಂದೂಡಲಾಯಿತು.

ಆ ವರ್ಷ ತಿಂಗಳಲ್ಲಿ ಮೂರು ದಿನ ಬಿಟ್ಟು ಉಳಿದೆಲ್ಲ ದಿನಗಳಲ್ಲಿ ಹೆಂಡತಿ ಗಂಡನ ಜೊತೆಗೆ ಆಟವಾಡುವದನ್ನು ಬಿಡಲಿಲ್ಲ. ಎಲ್ಲ ಆಟಗಳಲ್ಲೂ ಆಕೆಯದೇ ಮೇಲುಗೈ. ಹುಡುಗ ಪುರುಕುತ್ಸನಿಗೆ ಆಟಕ್ಕೆ ಬೇರೆ ಯಾರನ್ನೂ ತರುವುದು ರಜಾಜ್ಞೆಯಂತೆ ನಿಷಿದ್ಧವಾಗಿತ್ತು.

ಮಾಂಧಾತ ಮಹಾರಾಜನ ರಾಜಯಕ್ಷ್ಮ ಉಲ್ಬಣಿಸಿದಂತೆ, ಮಗನ ನಿಷೇಕ ಪ್ರಸ್ತಕ್ಕೆ ಅವನು ಉತ್ಸುಕನಾದನು. ಸೂತಕದ ಒಂದು ವರ್ಷ ಕಳೆದಾದಮೇಲೆ ಶುಭದಿನ ನೋಡಿ ನಿಷೇಕಪ್ರಸ್ತವನ್ನು ಗೊತ್ತುಮಾಡಲಾಯಿತು. ವಿಧಿವಿಧಾನಗಳಿಂದ ಆರತಿ ಮಾಡಿ, ಹಸೆಗೆ ಕರೆದ ಹಾಡುಗಳನ್ನು ಹಾಡಿ, ಇಬ್ಬರನ್ನೂ ಒಂದು ಕೊಣೆಯಲ್ಲಿ ದೂಡಲಾಯಿತು. ತಾಯಿಯ ಗುಪ್ತ ಸಲಹೆಯಿಲ್ಲದೆ, ಮತ್ತಾರೂ ಗುಪ್ತವಿಷಯಗಳನ್ನು ಹೇಳಲಿಕ್ಕೆ ಧೈರ್ಯವಾಗದೆ, ಪುರುಕುತ್ಸಾನಿ ತನ್ನ ಆಟವನ್ನೇ ಒಳಗೆ ಮುಂದುವರೆಸಿದ್ದಳು. ಪುರುಕುತ್ಸ ಒಂದು ಮೂಲೆಯಲ್ಲಿದ್ದನು. ಅವನ ಬೆನ್ನ ಮೇಲಿನ ಬಾಸುಂಡೆ, ಕೈಯ ಮೇಲೆ ಮೂಡಿದ್ದ ಪುರುಕುತ್ಸಾನಿಯ ದಂತ ಪಂಕ್ತಿ, ತಂದೆಗೆ ತೋರಿಸಿದನು. ತಂದೆ ನಕ್ಕುಬಿಟ್ಟರು,’ಇನ್ನೂ ಎಳೆಯ ವಯಸ್ಸು! ಕಾಲವೇ ಸಂದರ್ಭವನ್ನು ಅರಿಕೆ ಮಾಡುತ್ತದೆ !’ ಎಂದು ಮನಸ್ಸಿನಲ್ಲೇ ಗುಣಿತಹಾಕಿ,
ಆದರೆ ಕಾಲ ಏನನ್ನೂ ಬದಲಾಯಿಸಲಿಲ್ಲ.
ಮಾಂಧಾತ ಮಹಾರಾಜನು ಇನ್ನೊಂದು ವರ್ಷಕ್ಕೆ ಮರಣ ಹೊಂದಿದನು.
ರಾಜನಾದ ಮರುದಿನವೇ ಪುರುಕುತ್ಸನು ಪುರುಕುತ್ಸಾನಿಯ ಜೊತೆಗೆ ಒಡನಾಟವನ್ನು ಬಿಟ್ಟುಕೊಟ್ಟನು. ಬೇರೆಕೋಣೆಯಲ್ಲಿ ಮಲಗತೊಡಗಿದನು. ಅವನ ಸುತ್ತಲೂ ಕೆಲವು ಆರ್ಯಕ್ಷತ್ರಿಯರೂ ಕೆಲವು ನಾಗಕ್ಷತ್ರಿಯರೂ ಕೆಲವು ವಣಿಕ ಪುತ್ರರೂ ಸೇರಿಕೊಂಡರು. ಮೊದಮೊದಲು ತಿನಿಸಿನ ಆಸೆಮೂಡಿಬಂದು ಜಿವ್ಹಲೌಲ್ಯಕ್ಕಾಗಿ ಹಲವಾರು ಜನರನ್ನು ಸಾಕಿದನು. ಮನೆಯವರು ಅವನಿಗೆ ಸ್ತ್ರೀಸೌಖ್ಯವನ್ನು ಕಲ್ಪಿಸಿದರು, ಗಣಿಕೆಯರು, ವಾರವನಿತೆಯರು ಅವನ ಸುಖಕ್ಕಾಗಿ ಬರತೊಡಗಿದರು. ಪುರುಕುತ್ಸನೇ ರಾಜನಾದದ್ದರಿಂದ ಜೊತೆಗಾರರ ನಿರ್ಬಂಧನೆ ಹೊರಟುಹೋಯಿತು.
ಆಟಕ್ಕೇ ಎಂದು ಭಾವಿಸಿದ ಪುರುಕುತ್ಸಾನಿ ಜೊತೆಗಾರ ಕೈಬಿಟ್ಟುದಕ್ಕಾಗಿ ತುಸುಮಿಡುಕಿದರೂ ತನ್ನ ಆಟಕ್ಕಾಗಿ ಸುಂದರಿ ಎಂಬ ಸರದಾರನ ಮಗಳನ್ನೂ, ವಜ್ರನೆಂಬ ಅವನ ಹನ್ನೆರಡು ವರ್ಷದ ತಮ್ಮನನ್ನೂ ಜೊತೆಗಾರರನ್ನಾಗಿ ಮಾಡಿಕೊಂಡಳು. ಸುಂದರಿಗೆ ಆಗ ಹದಿನಾರು ವಯಸ್ಸು. ಅವರ ಸ್ನೇಹ ಅನ್ಯೂನ್ಯವಾಗಿತ್ತು. ದುರ್ದೈವದಿಂದ ಆರು ತಿಂಗಳಲ್ಲಿಯೇ ಸುಂದರಿಯ ಲಗ್ನ ಗೊತ್ತಾಯಿತು. ಅದೇನಗರದ ಇನ್ನೊಬ್ಬ ಸರದಾರನ ಮಗನ ಜೊತೆಗೆ. ವತ್ಸರಾಜನೆಂದು ಅವನ ಹೆಸರು. ಇಪ್ಪತ್ತೆರಡು ವರ್ಷದ ಸುರಧ್ರೂಪಿ ಅನುಭವಿ ಯುವಕನು. ಚಿಕ್ಕವಳಾದ ಸುಂದರಿಗೆ ಯೋಗ್ಯ ಉಪಚಾರ ಮಾಡಿ ಸುಖಭೋಗಕ್ಕೆ ಓಲೈಸಿದ್ದನು.
ಲಗ್ನವಾದ ಎರಡು ಮೂರುವಾರಗಳಲ್ಲಿ ಸುಂದರಿ ತನ್ನ ಗೆಳತಿಯನ್ನು ಭೇಟಿಮಾಡಲು ಬಂದಳು.
ಮೊದಲಿನಂತೆ ಪುರುಕುತ್ಸಾನಿ ತನ್ನ ಗುದುಮುರುಗೆಗೆ ಮೊದಲು ಮಾಡಿದಳು. ಆದರೆ ಸುಂದರಿ ಅದಕ್ಕೆ ಒಪ್ಪಲಿಲ್ಲ. ’ನಾನೀಗ ಮದುವೆಯಗಿದ್ದೇನೆ. ಹಾಗೆಲ್ಲ ಹುಡುಗಾಟ ಸಲ್ಲ!’ ಎಂದು ಹೇಳಿಬಿಟ್ಟಳು.
’ನನ್ನದೂ ಮದುವೆಯಾಗಿದೆ!’ ಎಂದಳು ಪುರುಕುತ್ಸಾನಿ. ಸುಂದರಿಯ ಮದುವೆಯ ವಿವರಗಳನ್ನೆಲ್ಲ ವಿಚಾರಿಸಿದಳು. ಸ್ನೇಹದ ಗೆಳತಿ ಯಾದ್ದರಿಂದ ಸುಂದರಿ ಮುಚ್ಚುಮರೆಯಿಲ್ಲದೆ ಎಲ್ಲ ಹೇಳಿಬಿಟ್ಟಳು.
ಪುರುಕುತ್ಸಾನಿ ತನ್ನ ತೊಡೆಗಳನ್ನು ಮುಟ್ಟಿ ನೋಡಿಕೊಂಡಳು. ತನ್ನ ಕೌಮಾಯಣ ಇನ್ನೂಹಾಗೆ ಇದೆ ಎಂದು ಅರಿತಳು.
ಸುಂದರಿ ಹೇಳಿದ್ದ , “ಒಂದೆರಡು ದಿನ ಕುಂಟುತ್ತ ಅಡ್ಡಾಡಬೇಕಾಯಿತು. ಈಗ ಮನಸ್ಸು ಅದನ್ನೇ ಬಯಸುತ್ತದೆ” ಎಂಬ ಆ ಮಾತು ಪುರುಕುತ್ಸಾನಿಯ ಮನಸ್ಸಿನ ಮೇಲೆ ಅಚ್ಚೊತ್ತಿದಂತಾಯಿತು.
ಈಗ ಅವಳಲ್ಲಿ ಕಾಮೋದಯವಾಯಿತು.!
ಜೊತೆಗೆ ಸುಂದರಿ ಹೇಳಿದ ಇನ್ನೊಂದು ಮಾತು -“ನನಗೆ ಹಗಲಿರುಳು ಗಂಡನದೇ ಚಿಂತೆ ಎನ್ನ್ಯವುದರಲ್ಲೂ ಸೊಗಸಿಲ್ಲ. ಮೊದಲಿನಂತೆ ಆಟಪಾಟದಲ್ಲಿ ಮನಸ್ಸು ಹೋಗದು. ಅವರೇ ನನ್ನ ಯಜಮಾನರು.”
ಮುಂದೆ ಮೂರು ನಾಲ್ಕು ತಿಂಗಳಲ್ಲೇ ಸುಂದರಿ ಗರ್ಭಿಣಿಯಾದಳು.
ತನಗೆ ಎಂದು ಗರ್ಭ ನಿಲ್ಲುವುದು?- ಪುರುಕುತ್ಸಾನಿಯ ತವಕ.
ತನ್ನ ಇಬ್ಬರು ಚೇಟಿಯರನ್ನು ಗಂಡ ಪುರುಕುತ್ಸನ ಮೇಲೇ ಪಾಳತಿ ಇಡಲು ಕಳಿಸಿಕೊಟ್ಟಳು. ಅವರಿಗೆ ಅರಿಯದ ವಿಷಯವಿಲ್ಲ. ಒಡತಿಯ ಆಣತಿಯ ಮೇರೆಗೆ ರಾಜನಮೇಲೆ ಕಣ್ಣು ಇಟ್ಟರು.
ರಾಜನ ಕೋಣೆಗೆಬರುವ ವಾರಾಂಗನೆಯರೆಲ್ಲವತ್ಸರಾಜ ಸುಂದರಿಯರ ಅನುಭವ ಪಡೆದು ಕಾಣಿಕೆ ಪಡೆದು ಮರಳುತ್ತಿರುವ ವಿಷಯ ಗೊತ್ತಾಗಿ ಪುರುಕುತ್ಸಾನಿ ಇನ್ನಷ್ಟು ಸಂಕಟಕ್ಕೆ ಒಳಗಾದಳು.
ಚೇಟಿಯನ್ನು ಕರೆದು ಸಲಹೆ ಕೇಳಿದಳು.
ಅವರೆಲ್ಲ ಒಮ್ಮತದಿಂದ ಹೇಳಿದರು:”ನೀನು ಮಹಾರಾಜ್ನಿ,ವಾರಾಂಗನೆಯರು ರಾಜಮಂದಿರಕ್ಕೆ ಬರುವುದು ನಿನ್ನ ಘನತೆಗೆ ಕುಂದು. ಅದಕ್ಕೆ ಪ್ರತಿಬಂಧ ಮಾಡಬೇಕು. ಅರಸರಿಗೆ ಹೆಂಗೆಳೆಯರನ್ನು ತಂದು ಒಪ್ಪಿಸುವ ಸರದಾರರನ್ನು ಕರೆದು ಅವರಿಗೆ ನಿರ್ಭಂದ ಹಾಕಬೇಕು. ಅವರು ನಿನ್ನ ಮಾತುಕೇಳುವಂತೆ ಮಾಡಬೇಕು!”
ಒಬ್ಬ ಸಣ್ಣಾಕೆ ಚೇಟಿ “ನಾನೆಲ್ಲ ವ್ಯವಸ್ಥೆ ಮಾಡುತ್ತೇನೆ!” ಎಂದು ಗುಟ್ಟಾಗಿ ತಿಳಿಸಿದಳು.
ಸಂಜೆ ತಾನೇ ಬಂದು ಪುರುಕುತ್ಸಾನಿಯ ಗಂಡುಬೀರಿ ಮುಖಕ್ಕೆ ಕಮಲದ ಹುಡಿಯನ್ನು ಸಿಂಪಡಿಸಿ, ಒಳ್ಳೆಯ ದುಕೂಲ ಉಡಿಸಿ, ಕೇಶಾಲಂಕಾರಗೈದು ,ಎದುರಿಗೆ ಕನ್ನಡಿ ಹಿಡಿದಳು. ತನ್ನ ರೂಪಲಾವಣ್ಯಗಳು ಇಮ್ಮಡಿಗೊಂಡುದನ್ನು ರಾಣಿ ಕಣ್ತುಂಬ ನೋಡಿದಳು. ಚೇಟಿ ಹೇಳಿದ ಇನ್ನೊಂದು ಮಾತು ಅವಳ ಹೃ‌ಅದಯಕ್ಕೆ ನಾಟಿತು. “ಅರಸನ ಹಾಸಿಗೆಯ ಮೇಲೆ ನಿನ್ನದು ಮೊದಲ ಅಧಿಕಾರ. ಅದನ್ನು ಸ್ಥಾಪಿಸುವುದು ನಿನ್ನನ್ನೇ ಕೂಡಿದೆ. ಹೊತ್ತು ಮೂಡಿದ ಮೇಲೆ ನೀನು ರಾಜರನ್ನು ಶಯನಾಗಾರದಲ್ಲಿ ಸಂಧಿಸಬೇಕು. ಓಲೈಸಬೇಕು, ಮನಸ್ಸು ಒಲಿಸಬೇಕು. ನಿನ್ನ ರೂಪ ಲಾವಣ್ಯಗಳನ್ನು ನೋಡಿ ಅರಸು ಕುಣಿಯುತ್ತ ನಿನ್ನ ಅಪ್ಪಿಕೊಳ್ಳುತ್ತಾನೆ” ಎಂದು ಉತ್ತೇಜನವಿತ್ತು ಕಳಿಸಿಕೊಟ್ಟಳು.
ಪಾಟಲೀ ಪುತ್ರದಿಂದ ತಾರ್ಕ್ಷ್ಯನು ಕರೆದುಕೊಂಡು ಬಂದಿದ್ದ ಪಕ್ಷ್ಮಾ ಎಂಬ ನ್ರತ್ಯವಿಶಾರದೆಯು ನ್ರತ್ಯಕ್ಕೆ ತಕ್ಕ ಉಡುಪುತೊಟ್ಟು ಅರಸನ ಶಯ್ಯಾಗ್ರಹದ ಹೊರಗಿನ ಕೋಣೆಯಲ್ಲಿ ದಾರಿ ಕಾಯುತ್ತ ಕುಳಿತಿದ್ದಳು. ಅಂದು ಅರಸನಿಗೆ ನಿಕಟವರ್ತಿಗಳಾದ ಕೆಲವು ಮನ್ನೆ ಮಾನ್ನ್ಯರು, ಶ್ರೇಷ್ತಿಗಳು ಎರ್ಪಡಿಸಿದ್ದ ಚಿಕ್ಕಸಭೆಯೆದುರು ಪಕ್ಷ್ಮಾ ರಾಣಿಯ ನ್ರ್ತ್ಯಪದರ್ಶನ ಆಗಬೇಕಿತ್ತು. ಎಲ್ಲರೂ ಸಮೀಪವರ್ತಿಗಳು. ಯಾರಿಗೋ ನ್ರತ್ಯದಲ್ಲಿ ಆಸಕ್ತಿಯಿಲ್ಲ. ಅರಸನಿಗಂತೂ ಮೊದಲೇ ಇಲ್ಲ. ಇಂಥ ಸಂದರ್ಭಗಳಿಗೆ ಅರಸನ ಇಛ್ಛಾನುಸಾರ ಆಯಾ ನ್ರ್ತ್ಯಗಾತಿಯನ್ನು ಸೀದಾ ಅರಸನ ಶಯ್ಯಾಗ್ರಹಕ್ಕೆ ಕರೆದೊಯ್ದು, ’ಇಂದಿನ ಕರ್ಯಕ್ರಮ ನಾಳೆಗೆ ಮೊಂದೂಡಲಾಗಿದೆ!’ ಎಂದು ಸಾರಿ ಹೇಳಿ, ಬಂದವರನ್ನು ಮನೆಗೆ ಅಟ್ಟುವ ಕೆಲಸವೂ ತಾರ್ಕ್ಷನಿಗೇ ಕೂಡಿದ್ದು. ಏಗಾಗಲೆ ನಾಲ್ಕಾರು ಅತಿಥಿಗಳುಸಭಾಂಗಣಕ್ಕೆ ಬಂದು ಆಸೀನರಾಗಿದ್ದರು, ಅರಸನ ಭೋಜನ ಸಾಗಿತ್ತು ಶಯ್ಯಗ್ರಹದಲ್ಲಿ. ಇಂದೇನು ಆಗುವುದೋ ಎಂಬ ಉತ್ಕಠೆಯಿಂದ ತಾರ್‍ಕ್ಷ ಪಕ್ಷ್ಮಾ ರಾಣಿಯ ಜೊತೆಗೆ ಕುಳಿತಿದ್ದ .ಪಕ್ಷ್ಮಾ ರಾಣಿಯ ಕೀರ್ತಿಯನ್ನು ಕೇಳಿದವರು ಅವಳ ನ್ರತ್ಯವನ್ನು ನೋಡುವ ಆಸೆಯಿಂದ ಬೇಗ ಬಂದು ಕುಳಿತಿದ್ದರು.
ಇದೇ ವೇಳೆ ಪುರುಕುತ್ಸಾನಿ ಬಿರಬಿರನೆ ನಡೆಯುತ್ತ ಅರಸನ ಶಯ್ಯಾಗ್ರಹದತ್ತ ನಡೆದಳು.
ಪಕ್ಷ್ಮಾರಾಣಿಯ ವೇಷಭೂಷಣಗಳನ್ನು ಕಂಡೊಡನೆ ಅರಸನ ಕೋಣೆಯನ್ನು ಬಿಟ್ಟು ಹೊರಗಿನ ಕೋಣೆಯನ್ನು ಪ್ರವೇಶಿಸಿದಳು.
“ಯಾರು ನೀನು ?” ಎಂದು ಬಿರುಸಾಗಿ ಕೇಳಿದಳು.
ಅವಳನ್ನು ಕಾಣುತ್ತಲೇ ತಾರ್ಕ್ಷ್ಯ ಬಾಗಿಲ ಹೊರಗೆ ನುಸುಳಿಕೊಂಡನು. ಅವನತ್ತ ಪುರುಕುತ್ಸಾನಿ ನೋಡಲಿಲ್ಲ.
ಬಾಗಿಲ ಹೊರಗಿನಿಂದ ತಾರ್ಕ್ಷ್ಯ ’ಬೇಗ ಹೊರಗೆ ಬಾ’ ಎಂದು ಸನ್ನೆ ಮಾಡಿದನು. ಈ ಅನುಭವ ಅವನಿಗೆ ಹೊಸತು. ಏನು ಮಾಡಬೇಕೆಂದು ಅವನು ವಿಚಾರ ಮಾಡಿರಲಿಲ್ಲ.
ಪಕ್ಷ್ಮಾ ಏಳಲು ನೋಡಿದಳು. ಪುರುಕುತ್ಸಾನಿ ಬಲವಾಗಿ ಅವಳ ಹೆಡಕು ಹಿಡಿದು ಕೂರಿಸಿದಳು.
“ನಾನು ಪಕ್ಷ್ಮಾ. ಸಭೆಯಲ್ಲಿ ನ್ರತ್ಯ ಮಾಡುವುದಕ್ಕೆಬಂದಿದ್ದೇನೆ, ಪಾಟಲೀಪುತ್ರದಿಂದ.”
“ಯಾರು ನಿನ್ನನ್ನು ಕರೆತಂದರು?”
“ನಿಮ್ಮ ಸೇವಕರು”
“ಯಾರು ಅದು?”
ಅನುಮಾನಿಸುತ್ತ ಪಕ್ಷ್ಮಾ ಹೇಳಿದಳು: “ತಾರ್ಕ್ಷ್ಯ!”
ತಾರ್ಕ್ಷ್ಯ ಪುರುಕುತ್ಸಾನಿಗೆ ಅಪರಿಚಿತರಲ್ಲೆ ಒಂದು ರೀತಿ ಅವಳ ಕಡೆಯವನು. ನಾಗಕ್ಷತ್ರಿಯ. ತಾಯಿ ಬಿಂದುಮತೀದೇವಿಯ ಊಳಿಗದವನು.
“ನಾನು ಅವನಿಗೆ ಹೇಳುತ್ತೇನೆ. ನೀನು ಇಲ್ಲಿಂದ ಹೊರಟುಹೋಗು.”
ಪಕ್ಷ್ಮಾ ಅವಮಾನಿಸಿದಳು. ನ್ರತ್ಯ? — ಆದರೆ ಪುರುಕುತ್ಸಾನಿಯ ಬಲವಾದ ಮುಷ್ಟಿ ಇನ್ನೂ ಅವಳ ಹೆಗಲಮೇಲೆ ಚುರುಗುಟ್ಟುತ್ತಿತ್ತು.ಎದುರು ಮಾತಾಡದೇ ನೇರವಾಗಿ ಹೊರಗೆ ನಡೆದಳು. ಸಭಾಂಗಣಕ್ಕೆ ಹೋಗದೆ, ಸುತ್ತುವರಿದು ಹೊರಬಾಗಿಲನ್ನು ಕಂಡಳು.
ಇತ್ತ ಪುರುಕುತ್ಸಾನಿ ಹಲವು ಕ್ಷಣಗಳವರೆಗೆ ನಿಂತಲ್ಲೇ ನಿಂತು ತನ್ನ ಕೋಪವನ್ನು ಸಾವರಿಸಿಕೊಂಡಳು. ಕನ್ನಡಿಯಲ್ಲಿ ಮುಖ ನೋಡಿಕೊಂಡು, ಮುಂಗುರುಳು ತೀಡಿಕೊಂಡಳು. ಕ್ರತಕ ಮುಗುಳ್ನಗೆಯನ್ನು ಮುಖಕ್ಕೆ ತಂದು ಕೊಂಡಳು.
ಒಮ್ಮೆಲೆ ಶಯ್ಯಗ್ರಹವನ್ನು ಪ್ರವೇಶ ಮಾಡಿದಳು.
ಹಾಸಿಗೆಯಲ್ಲೇ ಅರಸನು ಓಟ ಮಾಡುತ್ತಿದ್ದನು. ಉಂಡು ಚೌರಂಗಿಯ ಮೇಲೆ ತಾಟು ಬಡಿಸಲಾಗಿತ್ತು. ಒಬ್ಬ ಚೇಟಿ ಬಡಿಸಲಿಕ್ಕೆ ಸಾಮಗ್ರಿಯೊಂದಿಗೆ ನಿಂತಿದ್ದಳು.
ದುರದುರನೆ ಹೋಗಿ ಚೇಟಿಯ ಕೈಯಲ್ಲಿನ ಸವಟು, ಪಾತ್ರೆಗಳನ್ನು ಕಸಿದು ಹೊರಗೆಹೋಗಲಿಕ್ಕೆ ಮಹಾರಾಣಿ ಹೇಳಿದಳು.
ಅರಸನು ಅಪ್ರತಿಭನಾಗಿ ನೋಡತೊಡಗಿದನು.
“ನಿಮಗೆ ಬಡಿಸುವುದು ನಮ್ಮ ಕೆಲಸ, ಊಟ ಮಾಡಿ, ಹೊಟ್ಟೆತುಂಬ, ಇನ್ನಷ್ಟು ತೊವ್ವೆ ಬೇಕೆ? ಅಥವಾ ಶ್ರೀಖಂಡ?” ಎಂದು ದುಮದುಮನೆ ಊಟ ಸಾಮಗ್ರಿಗಳನ್ನು ಪೀಠದಮೇಲೆ ಇಟ್ಟು, ಸವುಟಿನೊಂದಿಗೆ ಅವನ ಹಾಸಿಗೆಯ ಮೇಲೆಯೇ ಸಮೀಪ ಕುಳಿತು, ಬಡಿಸಲು ಅಣಿಯಾದಳು.
“ಇಂದು ನೆನಪಾಯಿತೇ?”- ಅರಸ ವ್ಯಂಗವಾಗಿ ನುಡಿದ.
“ನಿಮಗೆ ಬಡಿಸಲು ಪಾಟಲೀಪುತ್ರದ ನ್ರತ್ಯಂಗನೆಯರೇ ಬೇಕೆ?” ನಾನು ಬಡಿಸಿದರೆ ಸವಿಯಾಗದೆ?”
“ಆಕೆ ಬಂದುದು ನ್ರತ್ಯಕ್ಕಾಗಿ, ಊಟ ಬಡಿಸುವದಕ್ಕಾಗಿ ಅಲ್ಲ.”
“ಆಕೆ ಬಂದು ನನ್ನ ಸ್ಥಾನ ಆಕ್ರಮಿಸಿಕೊಳ್ಳೂತ್ತಾಳೆ, ನಿಮ್ಮ ಹಾಸಿಗೆಯ ಮೇಲೆ”
“ನಿನಗಾಗದ ಕೆಲಸ ಆಕೆ ಮಾಡಿದರೆ ನಿನಗೆ ಸಂತೋಷವಿಲ್ಲವೆ?”
“ಇಲ್ಲ ಇನ್ನು ಮೇಲೆ ನನ್ನ ಹೊರತು ಈ ಹಾಸಿಗೆಯನ್ನು ಯಾರೂ ಆಕ್ರಮಿಸುವಂತಿಲ್ಲ.”

ಮುಂದೆ ಏನಾಯಿತೆಂಬುದರ ಬಗ್ಗೆ ವಿವರಗಳು ಬೇಡ. ಒಂದೇ ಮಾತು ಸಾಕು.
ಅವನು ಅರ್ಧಕ್ಕೇ ಊಟ ನಿಲ್ಲಿಸಿ, ತಾಟು ಬದಿಗೆ ಸರಿಸಿ, ಹೊದ್ದುಕೊಂಡು ನಿದ್ದೆಹೋದ.
ಪುರುಕುತ್ಸಾನಿ ಅವನ ಬದಿಗೇ ಪವಡಿಸಿದಳು. ಅಷ್ಟೇ.
ಆದರೂ ಘಟನೆ ಊರ ತುಂಬ ಗಾಳಿಸುದ್ದಿಯಾಗಿ ಹರಡಿತು.
“ಇಂದು ನ್ರತ್ಯವಿಲ್ಲ. ಕ್ಷಮಿಸಿ” ಎಂದು ತಾರ್ಕ್ಷ್ಯ ಸಭಿಕರಿಗೆ ಹೇಳಿದ್ದೇನೋ ನಿಜ. ನ್ರತ್ಯರಸಿಕರಷ್ಟೇ ನಿರಾಶಗೊಂಡರು. ಇಲ್ಲಿಗೇ ಮಾತು ನಿಲ್ಲುವುದೆಂದು ತಿಳಿದಿದ್ದ ತಾರ್ಕ್ಷ್ಯನಿಗೆ ನಿರಾಸೆಯಾಯಿತು. ಹೀಗೆ ಸಭೆಯ ಕಾರ್ಯಕ್ರಮ ನಿಂತದ್ದು ಮೊದಲನೇ ಸಲವಲ್ಲ. ಆದರೆ-
ಬಾಗಿಲ ಬಳಿ ಕಾವಲುಗಾರರ ಮಧ್ಯ ಕುಳಿತ ನ್ರತ್ಯಾಂಗನೆ ಪಕ್ಷ್ಮಾದೇವಿಯನ್ನು ಹಲವರು ರಸಿಕರು ನೋಡಿದರು. ಆಕೆ ಅರಸನ ಶಯ್ಯಾಗಾರವನ್ನು ಪ್ರವೇಶಿಸಿದುದಕ್ಕಾಗಿ ನ್ರತ್ಯಕಾರ್ಯಕ್ರಮ ರದ್ದಾಯಿತೆಂದು ಅಪೇಕ್ಷಿಸಿದವರೂ ನ್ರತ್ಯ ರಸಿಕರೂ ಸೋಜಿಗಪಟ್ಟು ಅವಳನ್ನು ಸುತ್ತುವರೆದರಿದು ನಿಂತರು. ಆಕೆಗೆ ಪ್ರಶ್ನೆ ಕೇಳ ತೊಡಗಿದರು. ಪುರುಕುತ್ಸಾನಿ ತನ್ನನ್ನು ನಿಷೇಧಿಸಿದ ವಿಷಯವನ್ನು ಆಕೆ ವಿಸ್ತಾರವಾಗಿ ಹೇಳಿಬಿಟ್ಟಳು.
ಅಷ್ಟೊತ್ತಿಗೆ ತಾರ್ಕ್ಷ್ಯ ಅವಳನ್ನು ಹುಡುಕುತ್ತ ಅಲ್ಲಿಗೆ ಬಂದನು. ಆಕೆ ಮೌನವಿರುವಂತೆ ಬಾಯಮೇಲೆ ಬೆರಳಿಟ್ಟು ಸೋಚಿಸಿದನು, ಆಕೆ ಅರ್ಧಕ್ಕೆ ನಿಲ್ಲಿಸಿದಳಾದರೂ ಪುರುಕುತ್ಸಾನಿ ಆಕೆಯನ್ನೂ ತಾರ್ಕ್ಷ್ಯನನ್ನೂ ಓಡಿಸಿದ ವಿಷಯ ಎಲ್ಲ ಮನ್ನೆಯರಿಗೋ ಶ್ರೇಷ್ಟಿಗಳಿಗೂ ತಿಳಿದೇಹೋಗಿತ್ತು. ಅವರಲ್ಲಿ ರಸಿಕರಾದವರು ಇನ್ನೊಂದು ಕಡೆಗೆ ನ್ರತ್ಯವನ್ನು ಎರ್ಪಡಿಸಲು ಯತ್ನಿಸಿದರು.’ ಬೇಡ’ವೆಂದು ತಾರ್ಕ್ಷ್ಯನ ಮನಸ್ಸು, ಆದರೆ ಈ ಘಟನೆಯಮೂಲಕ ಮುಖಭಂಗವಾದ ಅವನಿಗೆ ಬೇಡವೆನ್ನಲಿಕ್ಕೆ ಆಗಲಿಲ್ಲ. ಆದರೂ ಪಕ್ಷ್ಮಾರಾಣಿಗೆ ಬೇರೆ ಒಯ್ದು “ಏನೂ ಹೇಳಬಾರದೆಂದು” ಗುಟ್ಟಾಗಿ ಹೇಳಿದ. ತಾನು ಮನೆಗೆ ಹೊರಟು ಹೋದ. ಅಂದಿನ ನ್ರತ್ಯಕ್ಕೆ ಮನ್ನೆಯರು, ಶ್ರೇಷ್ಟಿಯವರು ಕೋಡಿಸಿದ ೩೦ ವರಹಗಳಿಂದಷ್ಟೇ ನ್ರತ್ಯಾಂಗನೆ ಸಂತುಷ್ಟವಾಗಬೇಕಾಯಿತು. ಕರಾರು ನೂರುವರಹದ್ದು.
ಮರುದಿನ ಮಹಾರಾಜರು ಕೊಡಮಾಡಿದ್ದ ಒದು ನೂರು ವರಹದ ಬಹುಮಾನಕ್ಕಾಗಿ ತಾರ್ಕ್ಷ್ಯನಿಗೆ ಎನೂ ಕೊಡಬಾರದೆಂದು ಮಹಾರಾಣಿ ಹೇಳಿಕಳಿಸಿದ್ದಾರೆಂದು ಉತ್ತರ ಬಂದಿತು.
ಪಕ್ಷ್ಮಾರಾಣಿಯನ್ನು ಇಳಿಸಿದ ತಾಣಕ್ಕೆಬಂದ ತಾರ್ಕ್ಷ್ಯ, “ಎನೂ ಚಿಂತೆ ಇಲ್ಲೆ,ಇಲ್ಲಿಯೇ ನಾಲ್ಕೈದು ದಿನ ಇರು. ರಾಜರಿಂದ ಕರೆ ಬರುತ್ತದೆ” ಎಂದು ಭರವಸೆ ನೀಡಿ ಮನೆಗೆ ಹೋದ.
ಭಂಡಾರಿಗೆ ಹಾಗೆ ಹೇಳಿಕಳಿಸಿದುದರ ತಂತ್ರ ನಂತರ ತಾರ್ಕ್ಷ್ಯನಿಗೆ ಗೊತ್ತಾಯಿತು. ತಾಯಿಯ ಕಾಲದಿಂದ ನಾಗಪಕ್ಷದ ಅಭಿಮಾನಿಯಾದ ತಾರ್ಕ್ಷ್ಯನನ್ನು ತನ್ನೆಡೆ ಬರುವಂತೆ ಮಾಡಿ ತನ್ನ ಪಕ್ಷಕ್ಕೆ ಒಲಿಸಿಕೊಳ್ಳುವುದೇ ಪುರುಕುತ್ಸಾನಿಯ ಉದ್ದೇಶ, ನೂರು ವರಹ ಕೊಡಿಸುವ ಹವ್ಯಾಸದಲ್ಲಿಬೇರೆ ಉಪಾಯ ಕಾಣದೆ ತಾರ್ಕ್ಷ್ಯ ಪುರುಕುತ್ಸಾನಿಯನ್ನು ಕಂಡ.
ಪುರುಕುತ್ಸಾನಿ ನೂರುವರಹಕ್ಕೆ ಸರ್ವಥಾ ಒಪ್ಪಲಿಲ್ಲ. ಒಂದು ವರಹ ಕೊಡಬೇಕೆಂದು ಭಂಡಾರಿಗೆ ಅವನೆದುರೇ ಹೇಳಿ ಚೀಟಿಯನ್ನಿ ಕಳಿಸಿದಳು.
ಊರಿಗೇ ಊರೇ ಸುದ್ದಿ ತಿಳಿದುಕೊಂಡು ಪುರುಕುತ್ಸಾನಿಯ ಕೆಲಸಕ್ಕೆ ’ಸೈ’ಅಂದಿತು.
ಮಹಾರಾಜನ ಸಡಿಲು ನಡತೆಯಿಂದ ಭಂಡಾರ ಬರಿದಾಗುತ್ತಿದ್ದುದನ್ನು ನೋಡಿ ಬೇಸತ್ತ ಭಂಡಾರಿಯೂ ’ಸೈ’ ಎಂದನು.
ಅಯೋಧ್ಯೆ ಬಡ ದೇಶವಲ್ಲ. ಆದರೂ ಅರಸನ ಅಸಡ್ಡಾಳ ನಡತೆಯನ್ನು ನೋಡುತ್ತ ಉಪಾಯವಿಲ್ಲದೇ ಕೈ ಚೆಲ್ಲಿ ಕೂತಿದ್ದ ಪುರಜನಪ್ರಮುಖರು ’ವಾಹವ್ಹಾ!’ ಹಾಕಿ, ಸಣ್ಣ ಸಮಿತಿಯೊಂದಿಗೆ ಮಹಾರಾಣಿಯನ್ನು ಕಂಡು,’ಬಿಗಿ ಧೋರಣೆಗೆ ತಮ್ಮ ಸಮ್ಮತಿ ಹೇಳಿ,ಹೊಗಳಿ,ಹಾಡಿ ಹಿಂತಿರುಗಿದರು.
ನಾಲ್ಕು ದಿನಗಳವರೆಗೆ ನಿಂತ ಪಕ್ಷ್ಮಾರಾಣಿಗೆ ತನ್ನ ನೂರುವರಹ ದೊರಕಲಿಲ್ಲ. ಇನ್ನೆರಡು ಖಾಸಗೀ ಕಾರ್ಯಕ್ರಮ ಮಾಡಿ ಇನ್ನು ಮೂವತ್ತು ವರಹಗಳನ್ನು ಗಳಿಸಿದಳು. ಆಕೆಯ ಸೊಬಗಿಗೆ ಮನಸೋತ ನಡುವಯಸ್ಸಿನ ವತ್ಸರಾಜನ ತಂದೆ ವಿಧುರ ದೇವರಾಜ ಆಕೆಯ ಜೊತೆಗೆ ಎರಡು ರಾತ್ರಿ ಕಳೆದು, ಹತ್ತುವರಹ ದಾನಮಾಡಿ, ಸಂತುಷ್ಟನಾಗಿ ಮರಳಿದನು. ತಾರ್ಕ್ಷ್ಯನು ಮೋರೆ ತಪ್ಪಿಸತೊಡಗಿದನು. ಜೊತೆಗೆ…
ಪುರುಕುತ್ಸಾನಿಯ ಪ್ರೇರಣೆಯೋ..
ತಾರ್ಕ್ಷ್ಯನ ಮೇಲಿನ ದ್ವೇಷವೋ…
ಪೌರರ ತಿರಸ್ಕಾರವೋ…
ಮೂವತ್ತು-ನಾಲ್ವತ್ತು ಪೋಕರಿಗಳು ಕೋಡಿಕೊಂಡು, ಕತ್ತಲಲ್ಲಿ ಪಕ್ಷ್ಮಾರಾಣಿ ವಾಸಿಸುತ್ತಿದ್ದ ಮನೆಯ ಮುಂದೆ ನಿಂತಿದ್ದ ದೇವರಾಜನ (ವತ್ಸರಾಜನ ತಂದೆ) ರಥದ ಕುದುರೆಯನ್ನು ಬಿಚ್ಚಿ ಮೇವು ತೋರಿಸಿ, ಆಸೆಗಾಗಿ ಅದನ್ನು‌ಊರ ಇನ್ನೊಂದು ಮೂಲೆಗೆ ಕರೆದೊಯ್ದು, ಮರಕ್ಕೆ ಕಟ್ಟಿದರು .ಗುಪ್ತ ಬೇಟಿಯಾದ್ದರಿಂದ ದೇವರಾಜ ತನ್ನ ಜೊತೆಗೆ ಸಾರಥಿಯನ್ನು ಒಯ್ದಿರಲಿಲ್ಲ. ಮರುದಿನ ಚುಮುಚುಮು ನಸುಕಿನಲ್ಲಿ ದೇವರಾಜ ಹೊರಗೆಬಂದು ನೋಡುತ್ತಾನೆ,ಕುದುರೆ ಮಂಗಮಾಯ! ರಥದ ಸಮೀಪ ಹೋಗಿ ನೋಡಿದರೆ, ಅಚ್ಚಿನ ಕೀಲಗಳೇ ಕಣ್ಮರೆಯಾಗಿವೆ.
’ರಥವನ್ನು ಕದ್ದು ಕುದುರೆಯನ್ನು ಇಲ್ಲೇ ಬಿಟ್ಟಿದ್ದರೆ..ಹತ್ತಿ ಮನೆ ಸೇರುತ್ತಿದ್ದೆನಲ್ಲ..’ಎಂದು ವಿಚಾರ ಮಾಡುತ್ತ ನಿಂತ ದೇವರಾಜನಿಗೆ ಗೋಡೆಯ ಮರೆಯಿಂದ ’ಖಿಕ್’ ಎಂದು ನಕ್ಕ ಶಬ್ದ ಕೇಳಿಸಿತು.ಸಂಶಯದಿಂದ ಅತ್ತಿತ್ತ ನೋಡುವಾಗ ಪಕ್ಷ್ಮಾ ರಾಣಿಯ ಮನೆಯ ಮೇಲೆಯೇ ಏನೋ ಬರೆದದ್ದು ಕಾಣಿಸಿತು.”ವ್ರದ್ಧ ದೇವರಾಜ-ಪಕ್ಷ್ಮಾರಾಣಿ ಕಲ್ಯಾಣಮಂಟಪ” ಎಂದು ಬರಹ. ಬರೆದದ್ದು ಕೇಲಗಳಿಂದಲೇ;ಅರಿಶಿನ-ಕುಂಕುಮವದ್ದಿದ ಕೇಲ ಎಣ್ಣೆಯಿಂದ. ಕೇಲದೆಣ್ಣೆಯ ಭಾಂಡವೂ, ಕೀಲಗಳೂ ಅಲ್ಲೇ ಬಿದ್ದಿದ್ದವು. ಮುದುಕ ತನ್ನ ಅಂಗವಸ್ತ್ರದಿಂದ ಬರೆದದ್ದನ್ನು ಒರೆಸತೊಡಗಿದ. ಗೋಡೆಯ ಮರೆಯಿಂದ ಯಾರೋ ಅದೇ ಒಕ್ಕಣಿಕೆಯನ್ನು ಕೂಗಿ ಹೇಳಿ ಓಡಿದರು, ಅವರ ಹಿಂದೆಯೇ “ಯಲಾಣಮಂಟಪ” ಎಂದು ಹತ್ತಾರು ಪೋಕರಿಗಳ ಧ್ವನಿ, ಓಡಿಹೋದ ಸದ್ದು.
ದೇವರಾಜ ಒರೆಸುವ ಕಾರ್ಯವನ್ನು ಪೂರ್ತಿಗೊಳಿಸಿದ. ಅಷ್ಟರಲ್ಲಿ ಕುದುರೆಯ ಖರಪುಟ ಧ್ವನಿ . ತನ್ನದೇ ಕುದುರೆಯಿರಬಹುದೆಂಬ ಆಸೆಯಿಂದ ಬೀದಿಯ ಮಧದಲ್ಲೇ ನಿಂತ. ಬಂದವನು ಪಹರೆಯ ರಾವುತ , ವೇರಸೇನ. ತನ್ನ ಸೆಲ್ಲೆಯನ್ನು ಧ್ವಜದ ಹಾಗೆ ಬೀಸಿ, ರಾವಿತನನ್ನು ನಿಲ್ಲಿಸಿ, ಹತ್ತು ವರಹ ಅವನಿಗೆ ಸಲ್ಲಿಸಿ, “ರಥದೊಡನೆಮನೆಗೆ ಬಂದು ಕುದುರೆ ಒಯ್ಯಿ! ಇನ್ನು ಹತ್ತು ವರಹ ಕೊಡುತ್ತೇನೆ” ಎಂದು ಅವನನ್ನು ಒಪ್ಪಿಸಿ, ಕುದುರೆಯನ್ನು ಕೈಗಡ ಪಡೆದು, ಮುದುಕ ಅಲ್ಲಿಂದ ನುಸುಳಿದ. ಎಲ್ಲವನ್ನೂ ತರ್ಕಿಸಿದ ರಾವುತ ಬೆಳಗು ಮುಂಜಾನೆ ಪ್ರಾಪ್ತಿಯ ಮುಹೂರ್ತವಾಯಿತು”, ಎಂಬ ಹಿಗ್ಗಿನಿಂದ ಕೀಲಗಳನ್ನು ಕೂಡಿಸಿ ರಥವನ್ನು ಎಳೆದುಕೊಂಡು ಹೋದ, “ಕುದುರೆ ಹುಡುಕಿಕೊಂಡು ಬಾ, ಅದು ಪಹರೆಯವರ ಕರ್ತವ್ಯ. ಆಮೇಲೆ ಹತ್ತು ವರಹ ಕೊಡುತ್ತೇನೆ” ಎಂಬ ಸರದಾರೀ ಧಾಟಿಯ ಗತ್ತು ದೇವರಾಜ ಸಾಧಿಸಿದ .ಪಹರೆಯವನಿಗೆ ತನ್ನ ಕುದುರೆ ಮರಳಿ ಸಿಕ್ಕರೆ ಸಾಕಾಗಿತ್ತು. “ನನ್ನ ಕುದುರೆ ಕೊಡಿರಿ ಓಡಾಡಿ ನೋಡುತ್ತೇನೆ, ಸ್ವಾಮಿ” ಎಂದು ಪಹರೆಯವ ಹೇಳಿದ. ಕುದುರೆ ಮರಳಿ ಕೊಟ್ಟರೆ ಅವ ಆಚು ಕಡಿಮೆಯಾಗುತ್ತದೆ ಎಂದು ದೇವರಾಜನ ಚಿಂತೆ.”ಮೊದಲು ನನ್ನ ಕುದುರೆ ತಂದು ಕೊಡು..” ಎಂದು ದೇವರಾಜ ಹೇಳುತ್ತಿರುವಾಗ, ಅಟ್ಟ ಇಳಿದು ವತ್ಸರಾಜ ಬರುತ್ತಿರುವುದು ಕಾಣಿಸಿತು. ಈ ಸುದ್ದಿ ಮಗವರೆಗೆ ಮುಟ್ಟಬಾರದೆಂಬ ಚಿಂತೆಯಲ್ಲಿ ಲಗುಬಗೆಯಿಂದ, “ಲಾಯದಲ್ಲಿ ಕುದುರೆ ಕಟ್ಟಿದೆ. ಒಯ್ಯಿ. ಸಂಜೆಯವರೆಗೆ ಕುದುರೆ ಬಾರದಿದ್ದರೆ ನಿನ್ನ ಕೆಲಸಕ್ಕೆ ಅಪಾಯ!” ಎಂದು ಅವನನ್ನು ಅಲ್ಲಿಂದ ಅಟ್ಟಿದ.
ಕುದುರೆಯೇನೋ ಸಿಕ್ಕಿತು.ಅಪಪ್ರಚಾರ ನಿಲ್ಲಲಿಲ್ಲ.ಸಂಜೆ ಇನ್ನಷ್ಟು ಪೋಕರಿಗಳು ಪಕ್ಷ್ಮಾದೇವಿಯ ಮನೆಯೆದುರು ವ್ರದ್ಧಪ್ರೇಮಿಯ ಹೆಸರಿನಿಂದ ಬೊಬ್ಬೆ ಹಾಕಿದರು. ಇನ್ನು ನಾಲ್ಕು ದಿವಸ ನಿಂತು ಹೋಗಬೇಕೆನ್ನುವ ಪಕ್ಷ್ಮಾದೇವಿಯ ಆಸೆ ನೆರವೇರಲಿಲ್ಲ. ಅಪಪ್ರಚಾರದಿಂದ ಇತರ ಸರದಾರರು,ಮನ್ನೆಯರು , ಪ್ರತಿಷ್ಟಿತರು, ಶ್ರೇಷ್ಟಿಗಳು ಬರುವುದು ನಿಂತು ಹೋಯಿತು. ತಾರ್ಕ್ಷ್ಯನ ಸುದ್ದಿಯೇ ಇಲ್ಲ.
ಇತ್ತ, ಊರ ಆಗುಹೋಗುಗಳನ್ನು ತಾರ್ಕ್ಷ್ಯನಿಂದಲೇ ಅರಿತುಕೊಂಡು ಪುರುಕುತ್ಸಾನಿ ತನ್ನ ವೈಭವದ ರಥವೇರಿ, ಎರಡು ಚೀಟಿಗಳೊಂದಿಗೆ ಪಕ್ಷ್ಮಾರಾಣಿಯು ಇಳಿದುಕೊಂಡ ಮನೆಗೆ ಬಂದಳು. ಚೀಟಿಯಜೊತೆಗೆ ಹೇಳಿಕಳುಹಿಸಿದಳು: “ನೀನು ಈ ರಾಜ್ಯದಲ್ಲಿ ಎಪ್ಪತ್ತು ವರಹ ಗಳಿಸಿರುವಿ. ಇನ್ನು ಮೂವತ್ತು ವರಹ ಮಹಾರಾಣಿ ಕೊಡುತ್ತಾರೆ. ನಿನ್ನನ್ನು ರಾಜ್ಯದ ಗಡಿಯವರೆಗೆ ಒಯ್ಯಲು ರಥವನ್ನು ಕೊಡುತ್ತಾರೆ. ಮತ್ತೆ ಈ ರಾಜ್ಯದಲ್ಲಿ ಕಾಲು ಇರಿಸಕೂಡದು. ಬಂದದ್ದು ಗೊತ್ತಾದರೆ ನಿನ್ನನ್ನು ಶೂಲಕ್ಕೆ ಏರಿಸಲಾಗುವುದು. ಈಗಲೇ ನೀನು ಹೊರಡಬೇಕು.”
ಪಕ್ಷ್ಮಾದೇವಿ ಕಣ್ಣುಕಣ್ಣು ಪಿಳುಕಿಸಿ, ಹಿಗ್ಗಿ ಹಾಗಲಕಾಯಾಗಿ ಮಹಾರಾಣಿಯವರಿಗೆ ನಮಿಸಲು ಬಂದಳು. “ನಿಮ್ಮ ಮನಸ್ಸಿಗೆ ನೋವು ಮಾಡಿದೆ;ಕ್ಷಮಾಭಿಕ್ಷೆ ಬೇಡುತ್ತೇನೆ’ ಎಂದು ಕಾಲು ಬಿದ್ದಳು .ಏನೂ ಮಾತಾಡದೆ,ತನ್ನ ಹಮ್ಮಿಣಿಯಿಂದ ೩೦ ವರಹಗಳನ್ನು ಅವಳ ಮುಂದೆ ಎಣಿಸಿ, ಹಿಂದೆ ನಿಂತಿದ್ದ ಒಂದು ಕ್ಷುದ್ರ ರಥದತ್ತ ಬೆರಳು ತೋರಿಸಿ, ಅಲ್ಲಿಂದ ಹೊರಟು ಹೋದಳು.
ಇದೆಲ್ಲವನ್ನೂ ಹಾಡುಹಗಲೇ ನೋಡುತ್ತ ನಿಂತ ಜನಜಂಗುಳಿ ’ಉಘೇ!’ ಎಂದು ಮಹಾರಾಣಿಯ ಔದಾರ್ಯವನ್ನು ಹಾಡಿ ಹರಸಿದರು.
ರಾಜನಾಗಿಯೂ ಇದ್ದು ಇರದಂತಿದ್ದ ಪುರುಕುತ್ಸ ಮಹಾರಾಜನಿಗಿಂತ ಮಹಾರಾಣಿ ಪುರುಕುತ್ಸಾನಿಯ ಹೆಸರು ಮೂರೇದಿನಗಳಲ್ಲಿ‌ಎಲ್ಲೆಡೆ ಹರಡಿತು. ಎಲ್ಲ ಅಧಿಕಾರಿಗಳು,ಮನ್ನೆಯರು,ಶ್ರೇಷ್ಟಿಗಳು ಕೊಂಡಾಡತೊಡಗಿದರು. ರಾಜ್ಯ ಸೋತ್ರಗಳೆಲ್ಲ ಪುರುಕುತ್ಸಾನಿಯ ವಶಕ್ಕೆ ಬಂದವು. ತಾರ್ಕ್ಷ್ಯನೂ ತೋರಿಕೆಗೆ ರಾಜನ ಆಪ್ತಸೇವಕನೇ ಹೊರತು, ಅಲ್ಲಿನ ಯಚ್ಚಯಾವತ್ ಘಟನೆಗಳನ್ನು ಕಳ್ಳ ರೀತಿಯಿಂದ ಮಹಾರಾಣಿಗೆ ತಿಳಿಸತೊಡಗಿದನು.
ಎಲ್ಲ ರೀತಿಯಿಂದ ಗೆದ್ದ ಪುರುಕುತ್ಸಾನಿ ಒಂದು ವಿಷಯದಲ್ಲಿ ಮಾತ್ರ ನಿರಾಶಳಾದಳು. ಎರಡು ವಾರ ಸತತಯತ್ನ ಮಾಡಿದರೂ ಅವಳ ಕೌಮಾರ್ಯ ಅಳಿಯಲಿಲ್ಲ.
ಇನ್ನೊಬ್ಬ ಹೆಣ್ಣಿಗೆ ಅರಸನ ಶಯ್ಯಾಗ್ರಹಕ್ಕೆ ಪ್ರವೇಶಕೊಡಲಿಲ್ಲ‌ಎಂಬುದೇ ಆಕೆಯ ಯಶಸ್ಸು. ಅರಸನಿಗೆ ಹದಿನೈದು ದಿನ ಉಣಬಡಿಸಿದ್ದೊಂದೇ ಆಕೆಗೆ ಹೆಗ್ಗಳೀಕೆ.
ಒಮ್ಮೆಯಂತೂ ಪುರುಕುತ್ಸ ಸ್ಪಷ್ಟ ಹೇಳಿಬಿಟ್ಟ:
“ಒಮ್ಮೆ ನಿನಗೆ ಲಭ್ಯವಾಗುವ ಸಂಧಿ ಇತ್ತು. ಅಂದು ನೀನೆ ನನ್ನನ್ನು ಹೊಡೆದು ಬಡೆದು ಮೂಲೆಯಲ್ಲಿ ಮಲಗಹಚ್ಚಿದೆ. ಈಗ ಅನುಭವಿಸು. ನನ್ನಿಂದ ಇದು ಆಗದ ಕೆಲಸ!”
ಇಷ್ಟು ಸ್ಪಷ್ಟ ಮಾತಾದ ಮೇಲೆ ಹತಾಶಳಾದ ಪುರುಕುತ್ಸಾನಿ ಅತ್ತ ಇನ್ನೊಂದು ವಿಚಾರ ಮಾಡಲಿಲ್ಲ. ರಾಜನನ್ನು ತಾರ್ಕ್ಷ್ಯನಿಗೆ ಒಪ್ಪಿಸಿಬಿಟ್ಟಳು. ನಾಗಬಾಲಕ ಕಾಲಿಯನನ್ನು ಅವನ ಸೇವೆಗೆ ಇಟ್ಟಳು. ತಾರ್ಕ್ಷ್ಯನು ಎರಡು ದಿನಕ್ಕೊಮ್ಮೆ ರಹಸ್ಯವರದಿ ಒಪ್ಪಿಸುತ್ತಿದ್ದ. ಅರಸನ ಶಯ್ಯಾಗ್ರಹಕ್ಕೆ‌ಇನ್ನೊಮ್ಮೆ ಪುರುಕುತ್ಸಾನಿ ಕಾಲು ಹಾಕಲಿಲ್ಲ.
ಪೌರಜನರು ತಾರ್ಕ್ಷ್ಯನ ಬಗ್ಗೆ ತಕರಾರು ತೆಗೆದುಕೊಂಡು ಬಂದರು,ಊರ ಗಣಿಕೆಯರನ್ನೆಲ್ಲ ರಾಜಗ್ರಹಕ್ಕೆಕರೆದೊಯ್ಯುತ್ತಾನೆಂದು. ತಾರ್ಕ್ಷ್ಯನ ಎರಡೂ ಮುಖಗಳನ್ನು ಅರಿತ ಪುರುಕುತ್ಸಾನಿ ಏನೂ ಹೇಳಲಿಲ್ಲ. ಪೌರರನ್ನೇ ಸಲಹೆ ಕೇಳಿದಳು.
“ಲೀಲಾವಿಲಾಸಕ್ಕಾಗಿಯೇ ಅಯೋಧ್ಯೆಯ ಹಿಂದಿನ ಮಹಾರಾಜರೆಲ್ಲರೂ ಆಮರವನದಲ್ಲಿಯ ಕುಟೀರದಲ್ಲಿ ಇರುತ್ತಿದ್ದರು. ಅವರ ವಿಲಾಸಗಳು ಪೌರರಿಂದ ಮರೆಯಾಗುತ್ತಿದ್ದವು. ರಾಜಗ್ರಹದಲ್ಲೇ ಇಂತ ಕ್ಷುದ್ರ ವಿಲಾಸಗಳು ನಡೆಯುವದು ಲೋಕನಿಂದೆಗೆ ಕಾರಣವಾಗುತ್ತದೆ. ಗಣಿಕೆಯರು ರಾಜಗ್ರಹ ಸೇರುವುದು ಎಲ್ಲರಿಗೂ ಅಪಮಾನಾಸ್ಪದ. ಇದರಮೇಲೆ ಮಹಾರಾಣಿಯವರ ಚಿತ್ತ!”
ಪರಿಸ್ತಿಥಿ ಕೈ ಮೀರಿದೆಯೆಂದು ಮಹಾರಾಣಿಗೆ ಮನದಟ್ಟಾಯಿತು. ತಮ್ಮ ಖಾಸಗೀ ಪತಿ-ಪತ್ನಿ ಸಂಬಧದ ವೈಫ಼ಲ್ಯವು ಎಲ್ಲ ಪ್ರಜಾಜನರಿಗೆ ಗೊತ್ತಾಗಿದೆಯೆಂಬುದು ಅಂಗೈ ಮೇಲಿನ ನೆಲ್ಲಿಕಾಯಿಯಷ್ಟು ಸ್ಪಷ್ಟ. ಮಹಾರಾಣಿಗೆ ಸಿಟ್ಟೂ ಬರಲಿಲ್ಲ. ಮನಸ್ಸುತೀರ ಕಹಿಗೊಂಡಿತು. ತಾಯಿ ಬಿಂದುಮತೀದೇವಿ ಈ ವಿವಾಹವನ್ನು ವಿರೋಧಿಸಿದ್ದಳೆಂದು ಅವಳಿಗೆ ತಿಳಿದಿತ್ತು. ಆದರೇನು ಮಾಡುವುದು? ಈಗ ಹಿಂಜರಿದರೆ ಸಲ್ಲದು. ತಾನೂ ಒಂದು ಹೆಜ್ಜೆ ಮುನ್ದೆಯೇಹಾಕಬೇಕು…
ಮಹಾರಾಜರು ಆಂರವನದಲ್ಲಿ‌ಇರತೊಡಗಿದರೆ, ಪ್ರಜೆಗಳನ್ನು ಸಂರಕ್ಷಿಸುವವರು ಯಾರು?”
ಒಬ್ಬಮಧ್ಯವಯಸ್ಕ ತೆಲೆತಿರುಕನು ಹೇಳಿಯೇಬಿಟ್ಟನು :”ಮಹಾರಾಣಿಯವರು ಸಮಾನ ಅಧಿಕಾರಿಗಳು,ಸಮರ್ಥರು,ವರ್ಚಸ್ವಿಗಳು…”
– ಹೀಗೆ ಸ್ಪಷ್ಟ ಮಾತು ಮಹಾರಾಣಿಗೆ ಬೇಕಿರಲಿಲ್ಲ. ಮನಸಾ ಒಪ್ಪಿಗೆಯಾಗುವ ಮಾತೇ ಸರಿ! ಆದರೆ ಈ ವಾಚ್ಚಾರ್ಥಕ್ಕೆ ಮಾತು ಇಳಿಯಬಾರದು. ರಾಣಿ ತೆಲೆ ಅಲ್ಲಾಡಿಸಿದಳು. ಅವಳ ಮನೋಧರ್ಮದ ಸೂಕ್ಷ್ಮವನ್ನು ಅರಿತ ಒಬ್ಬ ಅನುಭವಿ ಶ್ರೇಷ್ಟಿಯು ಈ ಮಾತಿನ ಮೊನಚನ್ನು ಮೊಂಡಗೊಳಿಸಲಿಕ್ಕೆಂದೇ ಹೇಳಿದ:
“ಸಾಮ್ರಾಜ್ಞಿ,ನಮ್ಮಲ್ಲಿ ಕೆಲವು ಧ್ರಷ್ಟರ ಮಾತನ್ನು ಕ್ಷಮಿಸಬೇಕು. ಮಹಾರಾಜ ಮಹಾರಾಜ್ಞಿಯವರನ್ನು ಅಗಲಿಸುವ ಉದ್ದೇಶ ನಮ್ಮದಲ್ಲ. ಆಯೋಧ್ಯೆಯ ಅನೇಕ ಪ್ರಭುಗಳು ವಿಲಾಸಿಗಳು. ಅದು ರಾಜಧರ್ಮದ ಒಂದು ಅಂಶ. ಗಣಿಕೆಯರಿಗೆ ರಾಜ್ಯಮಾನ್ಯತೆ ಸಿಕ್ಕುವ ಬಹಿರಂಗ ಪ್ರಘಾತದಿಂದಷ್ಟೇ ನಮಗೆ ಚಿಂತೆಯಾಗಿದೆ. ಮಹಾರಾಜ್ಞಿಯವರು ಏನಾದರೂ ಉಪಾಯ ಮಾಡಬೇಕು. ಗಣಿಕೆಯರು ರಾಜರಿಂದ ಮನ್ನಣೆ ಪಡೆದು ರಾಜರ ಸ್ಥಾನವನ್ನೇ ಆಕ್ರಮಿಸಿದ ಕೆಲವು ಉದಾಹಾರಣೆಗಳು ಇತ್ತೀಚೆಗೆ ಹೆಚ್ಚುತ್ತಿವೆ. ಆ ದೌರ್ಭಾಗ್ಯ ಅಯೋಧ್ಯೆಗೆ ಒದಗದಿರಲಿ, ಇಷ್ಟೇ ನಮ್ಮ ಆಶಯ. ಪ್ರಸಂಗಕ್ಕೆ ತಕ್ಕಂತೆ, ಮಹಾರಾಜರು ಒಂದು ಪಕ್ಷ ಒಂದು ಮಾಸ,ಇಚ್ಚಾನುಸಾರವಾಗಿ ಆಮ್ರವನಕ್ಕೆ ಹೋಗಿ ವಿಶ್ರಾಂತಿ ಪಡೆಯಬೇಕು. ಬೇಕಾದ ಗಣಿಕೆಯರನ್ನು ಅಲ್ಲಿಯೇ ಕರೆಸಿಕೊಳ್ಳಬಹುದು. ಮರಳಿ ಪ್ರಜಾಪಾಲನಕ್ಕಾಗಿ ಅರಮನೆಗೆ ಬರಬೇಕು. ಆಂರವನವೇನೂ ಅಯೊಧ್ಯೆಗೆ ದೂರವಲ್ಲ. ಒಂದೂವರೆ ಗಾವುದ ಅಷ್ಟೆ. ಅಂಥ ಅಗಥ್ಯ ಸಂದರ್ಭಗಳಲ್ಲಿ ಒಂದು ಎರಡು ಪ್ರಹರಗಳಲ್ಲಿ ಇಲ್ಲಿಬಂದು ನಿಲ್ಲಬಹುದು. ಆವರೆಗೆ ಮಹಾರಾಣಿಯವರ ನೇತ್ರತ್ವದಲ್ಲಿ ನಾವು ಹೋರಾಡುವ ಕಾಪಿನವರಾಗಿ ರಾಜ್ಯವನ್ನು ರಕ್ಶಿಸುತ್ತೇವೆ!”
ಈ ಶಬ್ಧರೂಪದಲ್ಲಿ ಮಹಾರಾಣಿ ಗೋಣುಹಾಕುವಂತಾಯಿತು.
ಆದರೂ ಯಾವ ನಿರ್ಣಯಕ್ಕೂ ಬರದೆ,”ನಾನು ವಿಚಾರ ಮಾಡಬೇಕು. ಅವಕಾಶ ಕೊಡಿರಿ!” ಇಷ್ಟೇ ಹೇಳಿ ಅವರನ್ನು ಕಳಿಸಿಕೊಟ್ಟಳು. ಅಪಕ್ವ ಜನರಿಗೆ ತಮ್ಮ ಸಂಧಾನ ವ್ಯರ್ಥವಾಯಿತೆಂದು ಅನಿಸಿತು. ಅನುಭವಿ ನಾಮಶ್ರೇಷ್ಟಿಯೂ, ಕೂದಲೆಳೆಯ ಅಗಲದಿಂದ ಮರ್ಯಾದೆ ಉಳಿಸಿಕೊಂಡ ಅನುಭವಿ ಲೋಲುಪ ದೇವರಾಜನಿಗೂ, ರಾಣಿಯ ಮೌನ ಗೋಣಲ್ಲಾಟವೇ ಸಾಕಾಯಿತು. ತಮ್ಮ ಸಂಧಾನ ಯಶಸ್ವಿಯಾಯಿತೆಂದೇ ಅವರು ನಿಶ್ಚಯಿಸಿದರು. ರಾಣಿ ಎಷ್ಟು ನಿಷ್ಟುರ ಕರ್ತವ್ಯಶಾಲಿಯೆಂಬುದನ್ನು ಹದಿನೈದೇ ದಿವಸಗಳಲ್ಲಿ ಅವರು ಅರಿತಿದ್ದರು.
ಮಹಾರಾಣಿ ತಕ್ಷಣ ಕರೆಸಿದ್ದು ತಾರ್ಕ್ಷ್ಯನನ್ನೇ. ತನ್ನಬಗ್ಗೆ ದೂರು ಕೊಡಲಿಕ್ಕೆಂದು ಪೌರರ ಸಮಿತಿಯೊಂದು ಮಹಾರಾಣಿಯವರ ಬಳಿಗೆ ಬಂದದ್ದನ್ನ್ನು ತಿಳಿಯುತ್ತಲೇ ಗರ್ಭಗಲಿತನಾದ ತಾರ್ಕ್ಷ್ಯನು ಗಡಗಡ ನಡುಗುತ್ತಲೇ ಮಹಾರಾಣಿಯ ಬಳಿಗೆ ಬಂದು, “ನನ್ನನ್ನು ರಕ್ಷಿಸಿರಿ” ಎಂದು ಸಾಷ್ಟಾಂಗ ಬಿದ್ದನು.
“ಹುಚ್ಚಾ ಏಳು ನಿನಗೆ ಸಂತೈಸಲು ನನಗೆ ಸಮಯವಿಲ್ಲ. ನಿನ್ನಿಂದ ಎರಡು ಕೆಲಸಗಳಾಗಬೇಕಿವೆ-ಒಂದು ,ನೀನು ಮಹಾರಾಜರ ಬಳಿ ಹೋಗಿ ಪಕ್ಷ್ಮಾದೇವಿಯ ಗುಣಗಾನ ಮಾಡು .ಶಯನದಲ್ಲಿ ಅವಳು ಬಹಳ ಸುಖವೆಂದು ಬಣ್ಣಿಸು. ನಿನಗೆ ಹೇಗೆ ಗೊತ್ತು, ಎಂದು ಮಹಾರಾಜರು ಕೇಳಬಹುದು. ಅಂಥ ಪ್ರಸಂಗ ಬಂದರೆ,ದೇವರಾಜ ಮನ್ನೆಯವರು ಹೇಳಿದರೆಂದು ಹೇಳು. ರಾಜರಿಗೆ ಆಗಣಿಕೆಯ ಲಾಲಸೆ ಇನ್ನೂ ಅಳಿದಿಲ್ಲ. ತಮಗೆಸಲ್ಲಬೇಕಾದುದು ದಕ್ಕಲಿಲ್ಲವೆಂಬ ಬಗ್ಗೆ ಅವರು ಖಿನ್ನರಾಗಿದ್ದಾರೆ. ನನ್ನ ಮೇಲೆ ಹರಿಹಾಯುತ್ತಾರೆ. ಎರಡನೇ ಕೆಲಸ,ನೀನು ಅವರ ಹಾಸಿಗೆಗೆ ಬೇಗನೇ ಪಕ್ಷ್ಮಾದೇವಿಯನ್ನು ಕರೆತರಬೇಕು!”
ತಾರ್ಕ್ಷ್ಯ ಬಾಯಿಬಿಟ್ಟು ನೋಡುತ್ತಲೇ ನಿಂತನು, ಚಕಿತನಾಗಿ. ಇದೇನು ಮಹಾರಾಣಿ ಆಟ ಆಡಿಸುತ್ತಿದ್ದಾರೆ. ಅವರ ಗುರಿ ಏನಿರಬಹುದು?
“ಮಹಾರಾಜ್ಞಿಯವರು ಪಕ್ಷ್ಮಾ ತಿರುಗಿ ಅಯೋಧ್ಯೆಗೆ ಬಂದರೆ ಶೂಲಕ್ಕೇರಿಸುವುದಾಗಿ ಅಪ್ಪಣೆ ಕೊಡಿಸಿರುವಿರಿ. ಆಕೆ ಬರಲು ಭಯಪಟ್ಟರೆ..”
“ಅಯೋಧ್ಯೆಗೆ ಕರೆತರಲು ಯಾರು ಹೇಳಿದರು?- ಆಮ್ರವನಕ್ಕೆ ಕರೆತರಬೇಕು. ಒಂದು ಗುಡಿಸಲಿನಲ್ಲಿ ಕೂಡಿಸಿ ಮಹಾರಜರನ್ನು ಕರೆದೊಯ್ಯಬೇಕು. ತೃಪ್ತಿಪಡಿಸಿ ಕರಕೊಂಡು ಬರಬೇಕು…”
“ಮಹಾರಾಣಿಯ ಕಣ್ಣಲ್ಲಿ ನೀರು ಊರಿತು,ತನ್ನ ಗಂಡನ ಸೂಳೆಗಾಗಿ ತಾನೇ ಕೊಂಟಲಗಿತ್ತಿಯಾಗಬೇಕಾಯಿತಲ್ಲಾ- ಎಂಬ ಕಲ್ಪನೆಯಿಂದ.
ತಾರ್ಕ್ಷ್ಯ ನೆಲ ನೋಡತೊಡಗಿದ. ಅವನಿಗೆ ಕಸಿವಿಸಿಯಾಯಿತು. ಎಷ್ಟಾದರೂ ಅವನು ರಾಣಿಯ ಗೋತ್ರದವನೇ.
“ಮಹಾರಾಜರು ಬರಲೊಪ್ಪದಿದ್ದರೆ…?”
ರಾಣಿಯಕೋಪ ಉದ್ರೇಕಿಸಿತು. “ನಿನಗೆ ಈ ಕೆಲಸ ಒಪ್ಪಿಸಿದೆ .ಅದನ್ನುಹೇಗೆ ಪೂರೈಸುವುದು ಅದು ನಿನ್ನ ಚಿಂತೆ. ಇಲ್ಲಿಂದ ಹೊರಡು. ನಿನಗೆ ಎಂಟು ದಿನ ಅವಧಿ ಕೊಟ್ಟಿದೆ. ” ರಾಣಿ ಬಿರಬಿರನೆ ಅಲ್ಲಿಂದ ಒಳಗೆ ನಡೆದಳು. ಬೆರಳು ತನ್ನ ಮುದ್ರಿಕೆಯ ಉಂಗುರವನ್ನುಕೊಡಲು ಮರೆಯಲಿಲ್ಲ. ಪಕ್ಷ್ಮಾಳಿಗೆ ಸಲ್ಲಬೇಕಾದ ನೂರುವರಹಗಳಿದ್ದ ಹಮ್ಮಿಣಿಯನ್ನು ಕೊಡಲು ಮರೆಯಲಿಲ್ಲ. ತಾರ್ಕ್ಷ್ಯ ನಿಟ್ಟುಸಿರುಬಿಟ್ಟು ಅಲ್ಲಿಯೇ ತುಸು ಸಮಯ ಕಂಭಕ್ಕೆ ಒರಗಿಕೊಂಡ.
ಪಕ್ಷ್ಮಾಳನ್ನು ನಂದಿಗ್ರಾಮದವರೆಗೆ ರಥ ಒಯ್ದಿತ್ತು. ಅಲ್ಲಿಂದ ಎರಡು ಸೀಳು ದಾರಿಗಳು. ಒಂದು ದಂಡಕಾರಣ್ಯಕ್ಕೆ. ಅತ್ತ ನಗರೋಪಜೀವಿ ಪಕ್ಷ್ಮಾ ಹೋಗಿರಲು ಸಾಧ್ಯವಿಲ್ಲ. ಇನ್ನೊಂದು ದಾರಿ ಹಿಡಿದು ಒಂದೆರಡು ಹಳ್ಳಿ ದಾಟಿ ಶ್ರಾವಸ್ತಿ ಸೇರಿರಬಹುದು. ಅದು ತಕ್ಕಮಟ್ಟಿಗೆ ದೊಡ್ಡ ಊರು. ಬಾಡಿಗೆಯ ರಥ ಮಾಡಿಕೊಂಡು ಮುಂದೆ ಕಾಶಿಗಾಗಲಿ ಪಾಟಲೀಪುತ್ರಕ್ಕಾಗಲಿ ಹೋಗಬಹುದು. ಕರೆತರುವಾಗ ಶ್ರಾವಸ್ತಿಯಲ್ಲಿ ಒಂದುದಿನ ಒಬ್ಬ ಅಡಗೂಲಜ್ಜಿಯ ಮನೆಯಲ್ಲಿ ಇಳಿದಿದ್ದರು. ಮೊದಲು ಆಕೆಯನ್ನುಸಂಧಿಸಿದರೆ ಸುದ್ದಿ ತಿಳಿಯಬಹುದು. ಬೇಗನೇ ಹೋಗಬೇಕು. ಆದರೆ ಕರೆತರುವಾಗ ಮಾತ್ರ ಸಂಶಯಬರದಂತೆ ರಥದ ಮೇಲೆ ಯವನಿಗೆ ಹಾಕಿ ತರಬೇಕು. ಪಹರೆಯವರಿಗೆ “ಮಹಾರಾಣಿಯಸ್ನೇಹಿತೆ” ಎಂದು ಹೇಳಿ ಉಂಗುರ ತೋರಿಸಬೇಕು.
ಹೊರಡುವ ಮೊದಲು ಮಹಾರಾಜನ್ನು ಕಂಡು ನ್ರತ್ಯಾಂಗನೆ ಪಕ್ಷ್ಮಾಳನ್ನು ಆಂರವನಕ್ಕೆ ತಂದರೆ ಹೇಗೆ? ಎಂದು ಕೇಳಬೇಕು.
ಎರಡನೆಯ ಕೆಲಸ ಸುಲಭವಾಗಿ ಕೈಗೂಡಿತು.
ತಾರ್ಕ್ಷ್ಯ ಮಹಾರಾಜರ ಶಯನಗ್ರಹದೆದುರು ತನ್ನ ಕುದುರೆಯನ್ನು ನಿಲ್ಲಿಸುತ್ತಲೆ ಕಾಲಿಯ ಓಡುತ್ತ ಬಂದು, “ಬೆಳಗಿನಿಂದ ಮಹಾರಾಜರು ನಿನ್ನನ್ನು ನೆನಸುತ್ತಿದ್ದಾರೆ. ಎಲ್ಲಿ ಹೋಗಿದ್ದಿ?” ಎಂದುಕೇಳಿ, ಕೈಹಿಡಿದು ಒಳಗೆ ಕರೆದುಕೊಂಡುಹೋದನು.
ಮಹರಾಣಿ ಕೋಣೆಗೆ ಬರುವುದನ್ನು ನಿಲ್ಲಿಸಿ ಐದೇ ದಿನವಾದರೂ, ಸ್ತ್ರೀ ಸಂಗವಿಲ್ಲದೇ ಮಹಾರಾಜರು ಇಪ್ಪತ್ತು ದಿನ ಕಳೆದಿದ್ದರು. ಪೌರಜನರ ಮನವಿಯ ಸುದ್ದಿ ತಿಳಿದ ಧೂರ್ತ ತಾರ್ಕ್ಷ್ಯನು ಗೆಳೆಯನಮನೆಸೇರಿ ಕಣ್ಮರೆಯಾಗಿದ್ದನು. ಅವನು ಅಲ್ಲಿ ಅಡಗಿ ಕುಳಿತದ್ದು ಮಹಾರಾಣಿಯವರಿಗಷ್ಟೇ ಗೊತ್ತು. ತಾರ್ಕ್ಷ್ಯ ಒಳಗೆ ಹೋಗುತ್ತಲೇ, ಮಹಾರಜರು ಸಿಡಿಮಿಡಿಮಾಡುತ್ತ “ಕತ್ತೇ, ಎಲ್ಲಿ ತೊಲಗಿದ್ದೆ?” ಎಂದು ಗರ್ಜಿಸಿದರು.
“ಪ್ರಭೂ, ಸೇವಕನನ್ನು ರಕ್ಷಿಸಬೇಕು” ಎಂದು ತಾರ್ಕ್ಷ್ಯ ಅವರ ಕಾಲಿಗೆ ಅಡ್ಡಬಿದ್ದು ಪ್ರಭುಗಳ ಕಾಲನ್ನು ಬಲವಾಗಿಹಿಡಿದುಕೊಂಡನು.
“ಏನಾಯಿತು?”
“ಮಹಾಪೌರರು ನನ್ನನ್ನು ಬಲವಂತವಾಗಿ ಹಿಡಿದು ಮಹಾರಾಣಿಯವರ ಎದುರು ನಿಲ್ಲಿಸುವ ಸಂಚು ಹೂಡಿದರು ಮರೆಯಾಗಿ ಅಡಗಿ ಕುಳಿತಿದ್ದೆ. ನಾನು ಕಲಾವಂತೆಯರನ್ನು ರಾಜಗ್ರಹಕ್ಕೇ ಕರೆದುಕೊಂಡು ಬರುವುದು ಪೌರರಿಗೆ ಅಪಮನವಂತೆ!”
“ಯಾರು ಹಾಗೆ ಹೇಳಿದವರು?” -ಆಗಲೇ ಅರಸನಿಗೆ ಅರ್ಧ ಮನವರಿಕೆಯಾದಂತೆ ಅವನ ಧ್ವನಿ ತತ್ತರಿಸಿತ್ತು. ಅವನ ಧ್ವನಿಯಲ್ಲಿ ಅರ್ಧ ಉಗ್ರತೆ ಇತ್ತಾದರೂ ಅನಿರ್ಧಾರವೂ ಇತ್ತು.
ತಾರ್ಕ್ಷ್ಯಾ ಚತುರ. ಈ ಪ್ರಶ್ನೆಗೆ ಉತ್ತರ ಕೊಡಲು ಹೋಗಲಿಲ್ಲ. ಬದಲಾಗಿ ತನ್ನ ಪೂರ್ವಯೋಜನೆಯನ್ನೇ ಮುಂದಿಟ್ಟ;
“ಪ್ರಭೂ, ತಮ್ಮ ಮೂರು ತೆಲೆಮಾರಿನ ಹಿರಿಯರು ವಿಲಾಸಕ್ಕಾಗಿಯೇ ಆಮ್ರವನದಲ್ಲಿ ಒಂದುಭೋಗಮಂದಿರ ಕಟ್ಟಿಸಿದ್ದಾರೆ. ಅಲ್ಲಿ ಬರುವ ಗಣಿಕೆಯರೂ ಬಾಯಿಹರಕರು. ಮಹಾರಾಜರ ಬೇಟಿಯನ್ನು ಬಣ್ಣಿಸಿ ಹೇಳಿ ತಮ್ಮ ತೆರವನ್ನು ಹೆಚ್ಚುಗೊಳಿಸುತ್ತಾರೆ. ಈಗ ಮ್ರಗನಯನೆಯ ತೆರ ಇಪ್ಪತ್ತು ವರಹಕ್ಕೆ ಏರಿದೆ. ಹೊಟ್ಟೆ ತುಂಬಿಸಿಕೊಳ್ಳಲ್ಲಿ. ಆದರೆ ಮಹಾರಾಜರಬಗ್ಗೆ ಲಘುಮಾತುಗಳು ನಡೆಯುವುದು ನನಗೆ ಬೇಸರವಾಗುತ್ತದೆ.”
ಅಷ್ಟರಲ್ಲಿಯೇ ತಾರ್ಕ್ಷ್ಯ ತನ್ನ ದ್ವೇಷ ಸಾಧಿಸಿಕೊಂಡಿದ್ದ. ಮ್ರಗನಯನೆ ಅವನಿಗೆ ಸಲ್ಲಬೇಕಾದಲಂಚವನ್ನುಕೊಟ್ಟಿರಲಿಲ್ಲ.
’ನೀನೂ ಆಪೌರರ ಹಾಗೇ ಮಾತಾಡುತ್ತಿದ್ದೀಯಲ್ಲ!”
“ಇಲ್ಲ ಮಹಾಪ್ರಭು! ದೂರದಿಂದಕರೆದುಕೊಂಡು ಬಂದ ಪಕ್ಷ್ಮಾರಾಣಿಯ ಬೇಟಿ ಮೊಟಕಾದದ್ದಕ್ಕೆ ನಾನಿನ್ನೂ ಮಿಡುಕುತ್ತಿದ್ದೇನೆ. ಮಹಾರಾಜರು ಆಮ್ರವನದಲ್ಲಿ ಆಕೆಯನ್ನು ಬಯಸಿದರೆ, ಮತ್ತೆ ಕರೆತರಲು ಯತ್ನಿಸುತ್ತೇನೆ.”
“ಆಕೆಯನ್ನು ಮಹಾರಾಣಿ ಊರು ಬಿಡಿಸಿದಳೆಂದು ನೀನೇ ಹೇಳಿದೆಯಲ್ಲ.”
“ಹೌದು, ಆದರೆ ದೂರ ಹೋಗಿರಲಾರಳು. ಅವಳನ್ನು ಕರೆತರುತ್ತೇನೆ, ಮಹಾರಾಣಿಯವರಿಗೂ ತಿಳಿಯದಷ್ಟು ಗುಪ್ತವಾಗಿ.”
“ಹಾಗಾದರೆ ಇಂದೇ ಆಮ್ರವನಕ್ಕೆ ಹೋಗುತ್ತೇನೆ”
“ಇಂದೇ ಬೇಡ ಪ್ರಭೂ. ನಾನು ಶೋಧಿಸಿ ತರುತ್ತೇನೆ.”
ರಾಜರೇ ಆಮ್ರವನಕ್ಕೆ ತೆರಳಲು ಉತ್ಸುಕರಾಗಿದ್ದು ಸುಸ್ಪಷ್ಟವಾಯಿತು. ಪಕ್ಷ್ಮಾಳನ್ನು ಹುಡುಕಲುಕನಿಷ್ಟ ೩-೪ದಿನಗಳು ಬೇಕು. ಆವರೆಗೆ ಅವರ ನಿಲಾಸಕ್ಕೆ ಬೇರೆ ಏನು ವ್ಯವಸ್ಥೆ ಮಾಡಬೇಕೆಂಬ ಚಿಂತೆಯನ್ನು ತಾರ್ಕ್ಷ್ಯ ಹೇಳಿದ್ದಕ್ಕೆ ಮಹಾರಾಜರು ಹೇಳಿದರು:
“ಇಲ್ಲ ಇಂದೇ ಆಮ್ರವನಕ್ಕೆಹೋಗುತ್ತೇನೆ. ನನ್ನ ಉಪ್ಪುಂಡು ದ್ರೋಹ ಮಾಡಿದ ಮ್ರಗನಯನೆಯಸುದ್ದಿ ಬೇಡ. ಶಶಾಂಕಿಯನ್ನು ಕಳಿಸಿಕೊಡು. ನೀನು ಬಹಳ ದಿನ ಮಾಯವಾಗಬೇಡ . ತಿಳಿಯಿತೇ?”
ತನ್ನ ಎರಡೂ ಕೆಲಸ ಸಲೀಸಾಗಿ ನೆರವೇರಿದ್ದನ್ನು ಕಂಡು ತಾರ್ಕ್ಷ್ಯ ಹಿಗ್ಗಿದ.
ಹಿಗ್ಗುತ್ತ-ಹಿಗ್ಗುತ್ತ ಮಹಾರಾಣಿಯವರಿಗೆ ವರದಿ ಒಪ್ಪಿಸಿ, ಶಶಾಂಕಿಯನ್ನು ಕಂಡು, ಅವಳನ್ನು ಕರೆದೊಯ್ಯಲಿಕ್ಕೆ ರಾವುತನನ್ನು ನೇಮಿಸಿ ಅಂದೇ ರಾತ್ರಿ ಕುದುರೆ ಹತ್ತಿ ಪಕ್ಷ್ಮಾಳ ಶೋಧನೆಗಾಗಿ ಮಧುವನಗ್ರಾಮಕ್ಕೆ ತೆರಳಿದ.
ತಾರ್ಕ್ಷ್ಯನ ತರ್ಕದಂತೆ ಪಕ್ಷ್ಮಾ ಶ್ರಾವಸ್ತಿ ರಾಜ್ಯದ ಗಡಿಯಮೇಲೆ ಮಧುವನ ಗ್ರಾಮದಲ್ಲಿ ಮನೆಹೋಡಿದ್ದಳು. ಅಡಗೂಲಜ್ಜಿಯೇ ಅಡುಗೆ ಮಾಡಿ ಎರಡೂ ಹೊತ್ತು ಬಡಿಸುತ್ತಿದ್ದಳು. ಮಾದ್ರಕನೆಂಬ ದೊಡ್ಡ ಸುಸಂಸ್ಕ್ರತ ಕೃಷಿವಲನೊಬ್ಬ ಅವಳ ಯಜಮಾನನಾಗಿದ್ದ. ಮನೆಗೆ ಒಂದು ತಿಂಗಳಿಗೆ ಬೇಕಾಗುವಷ್ಟು ಧನಧಾನ್ಯಗಳನ್ನು ಒದಗಿಸಿದ್ದ. ಒಂದುತಿಂಗಳಿನ ಕರಾರಿನ ಮೇಲೆ ಅವನ ಓಣಿಯಲ್ಲೇ ಬಸ್ತಾನ ಹೂಡಿದ್ದಳು.
ತಾರ್ಕ್ಷ್ಯ ನೇರವಾಗಿ ಆಕೆಯ ಮನೆಗೆ ಹೋಗಲಿಲ್ಲ. ಅಡಗೂಲಜ್ಜಿಯ ಮನಸ್ತೃಪ್ತಿಯಾಗುವಂತೆ ಐದು ವರಹ ನೀಡಿ, ಗಿರಾಕಿ ಬಂದಿದೆಯೆಂದು ಪಕ್ಷ್ಮಾಳನ್ನು ಕರೆತರಲು ಕಳುಹಿಸಿಕೊಟ್ಟ.
ಪಕ್ಷ್ಮಾ ಬಂದಳು, ತಾರ್ಕ್ಷ್ಯನನ್ನು ಕಂಡು ತತ್ತರಿಸಿ ಓಡಿಹೋಗಲು ಯತ್ನಿಸಿದಳು. ಅಡಗೂಲಜ್ಜಿ ಹೊರಗಿನ ಬಾಗಿಲನ್ನು ಹಾಕಿಕೊಂಡಳು.
ತಾರ್ಕ್ಷ್ಯನ ಮಾತನ್ನು ಆಕೆ ಕೇಳಲೇ ಬೇಕಾಯಿತು.
ತಾರ್ಕ್ಷ್ಯ ಎಷ್ಟು ಹೇಳಬೇಕೋ ಅಷ್ಟನ್ನೇ ಆಯ್ಕೆ ಮಾಡಿ ಹೇಳಿದ. ಪಕ್ಷ್ಮಾಳನ್ನು ಅವಗುಂಠನ ಸಹಿತವಾದ ರಥದಲ್ಲಿ ಕರೆದುಕೊಂಡೊಯ್ಯುವೆನೆಂದೂ, ಇದಕ್ಕೆ ರಾಣಿಯೇ ಸಮ್ಮತಿಸಿರುವಳೆಂದೂ, ಆಮ್ರವನ ಅಯೋಧ್ಯೆಯಲ್ಲವೆಂದೂ, ಅವಳ ಶರೀರಕ್ಕೆ ಯಾವ ಹಿಂಸೆಯೂ ಆಗಲಾರದೆಂದೂ, ಪುರುಕುತ್ಸ ಮಹಾರಾಜ ಆಕೆಯನ್ನು ಕಾಣಲು ಲವಲವಿಸುತ್ತಿರುವರೆಂದೂ ವಿವರಿಸಿ ಹೇಳಿದ.
“ಈಗ ನಾನು ಮದ್ರಕನ ದಾಸಿ. ಒಂದು ತಿಂಗಳು ಇಲ್ಲಿಂದ ಕದಲ ಲಾರೆ” ಎಂದಳು ಪಕ್ಷ್ಮಾ.
“ಮಹಾರಾಜರು ನಿನ್ನ ತೆರವನ್ನು ಕಳಿಸಿದ್ದಾರೆ” ಎಂದು ನೂರುವರಹಗಳ ಹಮ್ಮಿಣಿಯನ್ನೂ, ಕಾಯಿ ವೇಳ್ಯದೆಲೆ-ಅಡಿಕೆಗಳನ್ನೂ ಒಂದು ಬೆಳ್ಳಿಯ ಹರಿವಾಣದಲ್ಲಿ ಇರಿಸಿ, ಆಕೆಯ ಪದತಲದಲ್ಲಿ ಅರ್ಪಿಸಿದ. ” ನಾನು ಸುಳ್ಳುಗಾರನಲ್ಲವೆಂದು ಕಾಮದೇವನೇ ಸಾಕ್ಷಿಹೇಳಲಿ” ಹಮ್ಮಿಣಿಗೆ ನಮಸ್ಕಾರ ಮಾಡಿದ.
“ಅದೆಲ್ಲ ನಂತರ, ಮೊದಲುಮಾದ್ರಕನು ಒಪ್ಪಬೇಕು. ನಾನು ಪಾಟಲೀ ಪುತ್ರದ ಕೆಳ ಓಣಿಯ ಚಿಲ್ಲರೆ ವೇಶ್ಯೆಯಲ್ಲ. ನಾನು ಕಲಾವಂತಿ . ನಮಗೂ ನಮ್ಮ ಧರ್ಮವಿದೆ” ಎಂದು ಕೂಗಾಡಿದಳು ಪಾಕ್ಷ್ಮೆ.
“ಪಕ್ಷ್ಮಾ, ನಾನು ರಾಜದೂತ. ಅರಸರ ಕಾಮನೆಯನ್ನು ನಿನ್ನ ಮುಂದೆ ಇಟ್ಟಿದ್ದೇನೆ. ಆಗಿಹೋದದ್ದನ್ನು ಮರೆತುಬಿಡು, ಕರಾರುವಕ್ಕಿನಂತೆ ಹಣ ತಂದು ಒಪ್ಪಿಸಿದ್ದೇನೆ. ಬೇಕಾದರೆ ಮಾದ್ರಕನನ್ನು ಬೇಟಿಮಾಡುತ್ತೇನೆ. ಆದರೆ ಮಹಾರಾಜರ ಸೇವಕನಾಗಿ ಬಂದ ನಾನು ಮಹಾರಾಜರಿಗೆ ಅವಮಾನವಾಗುವಂಥ ಮಾತು ಆಡಲಾರೆ. ವಾತ್ಸ್ಯಾಯನ ಮುನಿಗಳು ಕಾಮಶಾಸ್ತ್ರದಲ್ಲಿ ಹೇಳಿದ್ದಾರೆ: ಕಾಮ ಸಾಧನೆಗಾಗಿ ಸುಳ್ಳನ್ನು ಹೇಳಬೇಕು. ಮಾದ್ರಕನಂಥ ಗ್ರಾಮಸ್ಥನ ಎದುರು ಅಯೋಧ್ಯೆಯ ಮಹಾರಾಜರ ಮಾತು ಎತ್ತುವುದು ಸಭ್ಯವೇ? ನೀನೇ ಹೇಳು.”
ತಾನು ಆಗಲೇ ಕಟ್ಟಿದ ಸುಳ್ಳು ನಾಟಕವನ್ನು ಪಕ್ಷ್ಮಾಳಿಗೆ ಹೇಳಿ, ಅದಕ್ಕೆ ಅವಳ ಅನುಮೋದನೆ ಪಡೆದ. ಆಕೆಗೆ ಹಮ್ಮಿಣಿ ಒಪ್ಪಿಸಿ ಕಳುಹಿಸಿಕೊಟ್ಟ.
ಪಕ್ಷ್ಮಾದೇವಿ ಸತ್ಯಧರ್ಮಪರಾಯಣೆ ಹೌದೋ ಅಲ್ಲವೋ, ಎರಡು ಮೂರು ದಿನಗಳ ಮಾದ್ರಕನ ಸಹವಾಸದಲ್ಲಿ ಆಕೆಗೆ ಹೊಸದೊಂದು ಚಿಂತೆ ಹುಟ್ಟಿಕೊಂಡಿತ್ತು. ಮಾದ್ರಕನಿಗೆ ಆಗ ಅರವತ್ತು ವಯಸ್ಸು. ಕಟ್ಟುಮಸ್ತು ಆಳು. ಅವನ ಎಳೆದಾಟಕ್ಕೆ ತನ್ನ ನ್ರತ್ಯಕಲೆಗೆ ಬೇಕಾಗುವ ಅಂಗಸೌಷ್ಟವ ಕೆಟ್ಟುಹೋಗುವ ಸಂಭವ ಹೆಚ್ಚು. ಮಾದ್ರಕನಿಗೆ ನ್ರತ್ಯದ ಗಂಧ ಕೂಡ ಇಲ್ಲ. ಅವನ ಹರೆಯದ ಮಕ್ಕಳು ಮ್ರದಂಗ, ವೀಣೆಗಳಲ್ಲಿನಿಷ್ಣಾತರಾಗಿದ್ದರು. ಒಮ್ಮೆಯೇ ಆದ ನೃತ್ಯದಲ್ಲಿ ಇಬ್ಬರೂ ಪ್ರಾವೀಣ್ಯದಿಂದ ಆಕೆಗೆ ಸಂಗತಿ ನೀಡಿದ್ದರು. ಆ ಕ್ರತಜ್ಞತೆ-ಆಕರ್ಷಣೆಗಾಗಿ, ತನಗಿ ಒದಗಿದ ದುರ್ದಶೆಯ ಪರಿಸ್ತಿತಿಯಲ್ಲಿ ಬೇರೆ ಉಪಾಯವಿಲ್ಲದೇ, ಮಾದ್ರಕನಿಗೆ ವಶವಾಗಿದ್ದಳು, ಸಂತೋಷದಿಂದ ಅಲ್ಲ. ಕೃಷಿವಲನ ಸಂಗಕ್ಕಿಂತ ಅರಸನ ಸಂಗ ಎಷ್ಟೋವಾಸಿ ಎಂದು ಅವಳ ಭಾವನೆ. ಅರಸರು ಹೀಗೆ ಹುಂಬ ಎಳೆದಾಟಕ್ಕೆ ಬೀಳರು, ಎಂದು ಅವಳ ನಂಬಿಕೆ. ಇಲ್ಲಿಯವರೆಗಿನ ಅನುಭವಗಳಲ್ಲಿ ಯಾವ ರಾಜನೂ ಮಾದ್ರಕನ ಹಾಗೆ ಆಕೆಯ ದೇಹಕ್ಕೆ ಮುಗಿಬಿದ್ದಿದ್ದಿಲ್ಲ.

ಸಂಜೆ ಮಾದ್ರಕ ಬರುವಮೊದಲೇ ತಾರ್ಕ್ಷ್ಯ ಪಕ್ಷ್ಮಾಳ ಮನೆಗೆ ಹೋಗಿ ಹೊರ ಅಂಗಳದಲ್ಲಿ ಕುಳಿತ. ಮೊದಲೇ ಗೊತ್ತಾಗದಂತೆ ಪಕ್ಷ್ಮಾ ಬಾಗಿಲಹಾಕಿ ಒಳ ಚಿಲಕ ಭದ್ರಪಡಿಸಿಕೊಂಡಿದ್ದಳು, ತನ್ನವ್ರತಭಂಗವಾಗಿಲ್ಲದ್ದಕ್ಕೆ ಸಾಕ್ಷಿಯಂತೆ.
ಮಾದ್ರಕಬಂದೊಡನೆ, ತಾರ್ಷ್ಯ ಗಂಭೀರವಾಗಿ ಎದ್ದು ನಿಂತು “ತ್ರಾಹಿ, ತ್ರಾಹಿ ” ಎಂದು ಕೈ ಮುಗಿದ.
“ಏನಪ್ಪ ನಿನ್ನ ಮೇಲೆ ಬಂದ ಸಂಕಟ ?” ಎಂದು ಮಾದ್ರಕ ಕೇಳಿದ.
“ಒಂದು ತಿಂಗಳು ಮಾದ್ರಕನ ಜೊತೆಗೆ ಇರಬೇಕೆಂದು ವಾಗ್ದಾನ ಕೊಟ್ಟಿದ್ದೇನೆ ” ಎಂದು ಪಕ್ಷ್ಮಾದೇವಿ ಹೇಳುತ್ತಿದ್ದಾಳೆ. ನನ್ನಧನಿ ದೇವರಾಜ ಭದ್ರಮುಖರು ’ನನಗೆ ಕೊಟ್ಟವಾಗ್ದಾನವೇನಾಯಿತು ?’ ಎಂದು ಕೇಳುತ್ತಿದ್ದಾರೆ.
ಅಯೋಧ್ಯೆಯಿಂದ ನನ್ನನ್ನು ಕಳಿಸಿದ್ದಾರೆ. ಏನು ಮಾಡಬೇಕೋ ತಿಳಿಯದಾಗಿದೆ. ನಾನುಬರಿಗೈಯಿಂದ ಹೋದರೆ ನನ್ನ ರುಂಡ ಹಾರುತ್ತದೆ. ನಿನ್ನಲ್ಲಿ ಜೀವಭಿಕ್ಷೆ ಬೇಡುವದಕ್ಕಾಗಿ ಬಂದಿದ್ದೇನೆ. ಕುಡುಗೋಲು ಕೊಂಬಳಕಾಯಿ! ಏನು ಬೇಕಾದರೂ ಮಾಡು!”
“ಯಾರು ದೇವರಾಜರೆಂದರೆ? ಧರ್ಮರಾಜರ ಹಿರಿಯಪುತ್ರರೆ ?”
“ಹೌದು, ಮಾದ್ರಕಾ!ನಿನಗೆ ಈ ಭೂಮಿಯನ್ನು ಉಳುವುದಕ್ಕಾಗಿ ಗೆದ್ದು ಕೊಟ್ಟ ಧರ್ಮರಾಜ ಭದ್ರಮುಖರ ಹಿರಿಯ ಚಿರಂಜೀವಿ ದೇವರಾಜರು! ರಾಜ್ಯಗಳು ಉರುಳುತ್ತವೆ, ಕೈ ಬಿಡುತ್ತವೆ. ಆದರೆ ಕೃಷಿ ಧರ್ಮ ಮಾತ್ರ ಉಳಿಯುತ್ತದೆ. ಏನಂತೀ ನೀನು ?”
“ನಾನು ಹದಿನೈದು ವರ್ಷದವನಿದ್ದಾಗ ದೇವರಾಜನಿಗೆ ಹದಿಮೂರು ವರ್ಷ ಮಾತ್ರ. ಗಂಗಾತಟಾಕದಲ್ಲಿ ಗುಬ್ಬಿಮನೆ ಕಟ್ಟಿ ಆಡುತ್ತಿದ್ದೆವು.”
“ಅದನ್ನು ದೇವರಾಜ ಇನ್ನೂ ನೆನೆಸುತ್ತಾರೆ.”
“ವಾಗ್ದಾನದ ಕತೆ ಏನು?”
“ಅಯೋಧ್ಯೆಯ ರಸಿಕರ ಹ್ರದಯಗಳನ್ನು ಸೂರೆಗೈದಳು ಪಕ್ಷ್ಮಾದೇವಿ. ಆಕೆಯ ರೂಪಲಾವಣ್ಯಕ್ಕೆ ಮನಸೋತು ಹದಿನೈದು ದಿವಸಗಳ ವಾಗ್ದಾನ ಪಡೆದು ತಮ್ಮ ಅರಮನೆಯ ವಿಶಾಲವಾದ ರಂಗಸಜ್ಜಿಕೆಯಲ್ಲಿ ತಂದಿಟ್ಟುಕೊಂಡರು. ಈಕೆ ಬಂದ ಎರಡು ದಿನಗಳಲ್ಲೇ ದೂರ್ವಾಸ ಮುನಿಗಳಾ ಮರಿಮಗ ಕವಾಸ ಮುನಿಗಳು ಶಿಷ್ಯ ಸಹವರ್ತಮಾನ ದೇವರಾಜ ಭದ್ರಮುಖರ ಮನೆಗೆ ಬಂದು ಮೂರುದಿನಗಳ ಮಟ್ಟಿಗೆ ಉಳಿದುಕೊಂಡರು. ಮುತ್ತಜ್ಜನ ತಪಸ್ಸು ಅಲ್ಲದಿದ್ದರೂ, ಅವನ ಕ್ರೋಧ ಕವಾಸರಲ್ಲಿ ಪೂರ್ಣವಾಗಿ ಇಳಿದಿದೆ. ಅನಪೇಕ್ಷಿತ ಆಗಮನದಿಂದ ಭಯಭೀತರಾದ ದೇವರಾಜರು ’ಮೂರುದಿನಗಳಮಟ್ಟಿಗೆ ನೀನು ಇಲ್ಲಿ ಬರಬೇಡ!’ ಎಂದು ಹೇಳಿದ್ದೇ ತಡ, ಸೆಡವಿನಿಂದ ಪಕ್ಷ್ಮಾರಾಣಿ ಅಯೋಧ್ಯೆಯನ್ನೇ ತೊರೆದು ಶ್ರಾವಸ್ತಿ ರಾಜ್ಯಕ್ಕೆ ಬಂದಿದ್ದಾಳೆ. ಕವಾಸ ಮುನಿಗಳು ಇಂದ್ರಿಯನಿಗ್ರಹಕ್ಕಾಗಿ ಅಷ್ಟುಪ್ರಸಿದ್ಧರಲ್ಲ. ಅವರು ಪಕ್ಷ್ಮಾಳನ್ನು ನೋಡಿ ಮನಸ್ಸುಚಂಚಲವಾದರೆ ಏನು ಗತಿ? –ಆಗದಿದ್ದರೂ ದುರ್ಗತಿ. ತಮ್ಮಗೋತ್ರದವನಾದ ಒಬ್ಬ ಸ್ತ್ರೀಯ ಲೋಲುಪನೆಂದು ಅವರು ಕ್ಷುದ್ಧರಾದರೆ ದೇವರೇ ಗತಿ!– ಉಭಯ ಸಂಕಟದಲ್ಲಿ…”
ಒಳಗೆ ಈ ಮಾತುಗಳನ್ನು ಕೇಳುತ್ತ ನಿಂತಿದ್ದ ಪಕ್ಷ್ಮಾರಾಣಿ ಈ ಮಾತಿಗೆ ಸರಿಯಾಗಿ ಧಡಾರನೆ ಬಾಗಿಲ ತೆರೆದು, “ಇದು ನ್ಯಾಯವೇ ? ಇದು ಧರ್ಮ ಸಮ್ಮತವೇ ?” ಎಂದು ಕೂಗುತ್ತ ಹೊರಗೆ ಬಂದಳು.
“ಶ್…ಶ್.. ಸದ್ದು ಬೇಡ” ಎಂದು ಮಾದ್ರಕನೇ ಬಾಯಿ ಮೇಲೆ ಬೆರಳಿಟ್ಟ.
ಮಾದ್ರಕನಿಗೆ ಬೇರೊಂದು ತನ್ನದೇ ಚಿಂತೆ ಕಾಡುತ್ತಿತ್ತು. ಶ್ರಾವಸ್ತಿಯ ಯಾವನೊಬ್ಬ ರಾಜಭಟನಿಗೂ ಪಾಟಲೀಪುತ್ರದ ಪ್ರಸಿದ್ಧ ನ್ರತ್ಯಾಂಗನೆ ಮಾದ್ರಕನ ಆಸರೆಗೆಬಂದು ನಿಂತಿದ್ದಾಳೆಂದು ಗೊತ್ತಾದರೆ, ರಾಜನವರೆಗೆ ಈ ವಾರ್ತೆ ಮುಟ್ಟಿ, ಒಂದಿಲ್ಲೊಂದು ನೆಪದಿಂದ ತನಗೆ ದಂಡನೆಯಾಗಿ, ಪಕ್ಷ್ಮಾದೇವಿ ರಾಜನ ಊಳಿಗ ಸೇರುವದರಲ್ಲಿ ಸಂದೇಹವೇ ಇರಲಿಲ್ಲ. ತನ್ನ ಬಣಿವೆಗೆ ಮರೆಯಾಗಿದ್ದ ಈ ಮನೆಯಲಿ ಅದಕ್ಕೆಂದೇ ಪಕ್ಷ್ಮಾಲನ್ನು ತಂದು ಇರಿಸಿದ್ದು. ಇಂದಲ್ಲ ನಾಳೆ ಸುದ್ದಿ ಬಯಲಾಗಿ, ರಾಜಭಟರು ತನ್ನಮನೆ ಮುತ್ತಿದರೆ, ತಾನೇ ಪಕ್ಷ್ಮಾಳನ್ನು ಕರೆದೊಯ್ದು ರಾಜನಿಗೆ ಕಾಣಿಕೆಯಾಗಿ ಒಪ್ಪಿಸಬೇಕೆಂದು ಮೊದಲೇ ನಿರ್ಧರಿಸಿಕೊಂಡಿದ್ದ. ’ನನಗೇಕೆ ಈ ನರ್ತಕಿಯರ ಹವ್ಯಾಸ? ನನಗೆ ಹೊಲದಲ್ಲಿ ನೆಲ್ಲು ಕೀಳುವ ಆಳುಮಕ್ಕಳೇ ಸಾಕು!’ ಎಂದು ಮೊದಲಿನಿಂದ ನಂಬಿದ್ದ ಮಾದ್ರಕನಿಗೆ, ಪಕ್ಷ್ಮಳ ಏರು ಜವ್ವನದ ಸೊಗಸು ಎಲ್ಲಿಯವರೆಗೆ ದಕ್ಕುತ್ತದೋ ಅಲ್ಲಿಯವರೆಗೆ ಹೀರಿಬಿಡಬೇಕೆಂಬ ಆಸೆ.
ಅವನ ಸೂಚನೆಯಂತೆ ಮೂವರೂ ಮನೆಯ ಒಳಗೆ ಹೋದರು. ಅಲ್ಲಿಮಾದ್ರಕನೇ ಮುಂದಾಗಿ, “ಹುಡುಗೀ, ಕವಾಸ ಮಹಾಮುನಿಯ ಯೋಗ್ಯತೆ ನಿನಗೆ ಗೊತ್ತಿದೆಯೆ? ಸಿಟ್ಟಿಗೆದ್ದರೆಯೋಜನದುದ್ದ ಗೋದಿ ಬೆಳೆಯನ್ನುದ್ರಷ್ಟಿ ಮಾತ್ರದಿಂದ ದಗ್ದ ಮಾಡುತ್ತಾರೆ. ದೇವರಾಜರ ಹಿರಿಯರೇ ನನಗೆ ಭೂಮಿದಾನ ಮಾಡಿದವರು. ಅವರ ಉಪಕಾರವನ್ನು ನಾನು ಮರೆಯಲಾರೆ. ನಿನ್ನನ್ನು ತಂದು ಇಟ್ಟುಕೊಳ್ಳುವ ಸಾಮರ್ಥ್ಯ ಅವರಿಂದಲೇ ನನಗೆ ಬಂದದ್ದು ” ಎಂದು ಹೇಳತೊಡಗಿದನು.
“ನನ್ನ ಬಗ್ಗೆ ನಿಮಗೆ ವಿಚಾರವೇ ಇಲ್ಲ! ನನ್ನಂಥ ಪುಣ್ಯಜೀವಿಗಳು ಮೂರುದಿನ ಅಯೋಧ್ಯೆಯಂಥ ಪಟ್ಟಣದಲ್ಲಿ ಎಲ್ಲಿ ಕಳೆಯುವದು? ವಿಚಾರ ಮಾಡಿದಿರಾ? ವಗ್ದಾನ ಮಾಡಿಬಿಟ್ಟಿದ್ದೆ. ಬೇರೆಕಡೆ ಹೋಗುವುದು ನಮ್ಮಧರ್ಮದ ವಿರುದ್ಧ, ಬೇರೆ ಉಪಾಯ ಕಾಣದೆ, ಅಯೋಧ್ಯೆಯನ್ನೇ ತೊರೆದೆ! ಅಯೋಧ್ಯೆಯಭಾಗ್ಯ ನನ್ನ ಪಾಲಿಗಿಲ್ಲವೆಂದು ಅನಿಸಿತು !”
“ಈಗ ಅಯೋಧ್ಯೆಯ ಭಾಗ್ಯ ನಿನ್ನ ಪಾದತಲದಲ್ಲಿ ಇದೆಯಲ್ಲ!” ಎಂದನು ತಾರ್ಕ್ಷ್ಯ.
ಅಂತೂ ಪಕ್ಷ್ಮಾದೇವಿ ಒಂದು ಕರಾರಿನ ಮೇಲೆ ಅಯೊಧ್ಯೆಗೆ ಬರಲು ಒಪ್ಪಿದಳು : “ಮಾದ್ರಕ ಕೊಟ್ಟ ತಿಂಗಳ ಆಹಾರ ಸಾಮಗ್ರಿ ಇದೇ ಮನೆಯಲ್ಲಿ ಇರತಕ್ಕದ್ದು. ಇನ್ನಾವ ಹೆಣ್ಣೂ ಈ ಮನೆಯಲ್ಲಿ ತಿಂಗಳವರೆಗೆ ಬರಕೂಡದು. ಅಯೋಧ್ಯೆಯಲ್ಲಿ ಇನ್ನು ಹದಿಮೂರು ದಿನ ಇದ್ದು ತಾನು ಮರಳಿ ಇದೇ ಮನೆಗೆ ಬರುತ್ತೇನೆ!”
ಆಗ ಮಾದ್ರಕನಿಗೆ ತುಸು ಸಂಶಯ ಬಂದಿತು. ತನ್ನ ನೆರೆಗೂದಲನ್ನು ತೀಡುತ್ತ, “ನಿನ್ನಂಥವಳು ನನ್ನಂಥವನ ಬಳಿಗೆ ಬರುವ ಕಾರಣವೇನು ?” ಎಂದ. ಅದಕ್ಕೆ ತಾರ್ಕ್ಷ್ಯ ಸಮಾಧಾನ ಹೇಳಿದ:
“ಪಕ್ಷ್ಮಾದೇವಿ ಒಂದೇ ಮಾತಿನವಳು. ವಾಗ್ದಾನವಿತ್ತ ಮೇಲೆ ಅದರಂತೆ ನಡೆಯುವದು ಗಣಿಕಾ ಧರ್ಮ!”
ಆಗ ತನ್ನ ಮನಸ್ಸಿನ ಒಳ ಅಳುಕನ್ನು ಮಾದ್ರಕನು ತೋಡಿಕೊಂಡ. ರಾಜ ಭಟರಿಗೆ ಪಕ್ಷ್ಮಾ ಇಲ್ಲಿರುವ ಸುದ್ದಿ ತಿಳಿದರೆ, ಅನಿವಾರ್ಯವಾಗಿ ತಾನು ರಾಜನಿಗೆ ಪಕ್ಷ್ಮಳನ್ನು ಒಪ್ಪಿಸಬೇಕಾಗುತ್ತದೆ-ಎಂದು.
ಆಗ ಪಕ್ಷ್ಮಾ ಇನ್ನಷ್ಟು ಉತ್ಸಾಹಿತಳಾದಳು. ಬಚ್ಚಿಟ್ಟುಕೊಂಡು ಹೇಳಿದಳು :”ಈಗ ನೀವು ನನ್ನನ್ನು ದೇವರಾಜ ಭದ್ರಮುಖರಿಗೆ ಒಪ್ಪಿಸುತ್ತಿದ್ದೀರಿ. ಅನಂತರ ನೀವೇ ನನ್ನನ್ನು ಶ್ರಾವಸ್ತಿಯ ಮಹಾಪ್ರಭುಗಳಿಗೆ ಒಪ್ಪಿಸಬಹುದು. ಆದರೆ ವಾಗ್ದಾನದಂತೆ ಒಂದು ತಿಂಗಳು ನಾನು ವಶವರ್ತಿ. ಆಜ್ಞಾಧಾರಕಿ .ಅದು ನನ್ನ ಧರ್ಮ. ನನ್ನ ಧರ್ಮಪರಿಪಾಲನೆಯಿಂದಲೇ ನನಗೆ ಮೋಕ್ಷ. ನನ್ನ ತಾಯಿ ಹಾಕಿಕೊಟ್ಟ ಧರ್ಮದಂತೆ ನಾನು ನಡೆಯುತ್ತೇನೆ. ಧರ್ಮ ಕಾವಲಿದ್ದಾಗ ಕವಾಸ ಮಹಾಮುನಿಗಳು ನನಗೆ ಏನೂ ಮಾಡಲಾರರು!” ಎಂದಳು.
ಮುದುಕನಿಗೆ ಈ ಧರ್ಮಬುದ್ಧಿಯನ್ನು ನೋಡಿ ಅನುರಾಗ ಉಕ್ಕೇರಿತು. ತಾರ್ಕ್ಶ್ಯನ ಕಣ್ಣಮುಂದೆಯೇ ಪಕ್ಷ್ಮಾ ಹಿಂಡಿ ಹಿಪ್ಪೆಯಾಗುವಂತೆ ಅಪ್ಪಿಕೊಂಡ. ಪಕ್ಷ್ಮಾ ಅವನತೋಳಸೆರೆಯಿಂದ ಬಲುಕಷ್ಟದಿಂದ ಬಿಡಿಸಿಕೊಳ್ಳುತ್ತ, ಹೇಳಿದಳು:
“ಈರಾತ್ರಿಯೊಂದು ನಿಮ್ಮ ಸೇವೆ ಮಾಡುವ ಅವಕಾಶ ಕೊಡಿ!”
ಮಾದ್ರಕನಿಗೆ ಕೂಡಲೇ ತನ್ನ ಅವಿವೇಕದ ಅರಿವಾಯಿತು. ಒಮ್ಮೆಲೇದೂರಸರಿದು, “ನನ್ನ ಅನ್ನದಾತನ ಪತ್ನಿಯಾದ ನೀನು ನನಗೆ ತಾಯಿಯ ಸಮಾನ! ಮಗಳೇ, ನಿನಗಾಗಿ ದೇವರಾಜರು ಕಾಯುತ್ತಿದ್ದಾರೆ. ನಾನು ಕಾಯಿಸುವದು ಅಧರ್ಮ, ಈಗಲೇ ನಿನ್ನ ಬಟ್ಟೆಬರೆ ಕಟ್ಟಿಕೊಂಡು ಹೊರಟುಬಿಡು. ಇಲ್ಲಿಂದ ಸರಯೂತೀರದ ನಂದಿಗ್ರಾಮಕ್ಕೆ ಹೋಗಲು ಒಳದಾರಿ ಇದೆ, ಒಂದು ಹಂತದವರೆಗೆ ನಾನೇ ಕಳಿಸಲುಬರುತ್ತೇನೆ. ಶ್ರಾವಸ್ತಿಯ ಗಡಿ ದಾಟಿದಮೇಲೆ ನನ್ನ ಹೊಣೆ ಮುಗಿಯುತ್ತದೆ. ನಡೆ, ಸಿಧ್ಧತೆ ಮಾಡು!” ಎಂದು ಹೇಳಿ, ತಾರ್ಕ್ಷ್ಯನನ್ನು ಕರೆದುಕೊಂಡು ಮಾದ್ರಕ ಹೊರಗೆ ನಡೆದ.
ಎರಡೂ ಸಂಭ್ಯಾವತೆಗಳನ್ನು ಅನುಲಕ್ಷಿಸಿ ಪಕ್ಷ್ಮಾದೇವಿ ತನ್ನ ಅತ್ಯಗತ್ಯವಸ್ತುಗಳನ್ನು ಒಂದು ಗಂಟಿನಲ್ಲಿ ಈಗಾಗಲೇ ಕಟ್ಟಿಟ್ಟಿದ್ದಳು. ಉಳಿದ ದಿನಬಳಕೆಯ ಬಟ್ಟೆಬರೆಗಳನ್ನು ಇನ್ನೊಂದು ಗಂಟಿನಲ್ಲಿ ಕಟ್ಟಿದಳು. ಅನುಭವಿ ಪ್ರವಾಸಿಯಾದ ಅವಳು ಎರಡೂ ಗಂಟುಗಳನ್ನು ಕುದುರೆಯ ಮೇಲೆ ಹಾಕಿದರೆ ಸಮತೋಲನವಾಗುವಂತೆಯೇ ಹಸಿಬೆಯ ಡರ್ತಿಯಲ್ಲಿ ಕಟ್ಟಿದಳು.
ಹೊರಗೆ ತಾರ್ಕ್ಷ್ಯ ಶ್ರಾವಸ್ತಿಯ ಅರಸನ ನೀತಿನಿಯಮಗಳನ್ನೂ ಅಜ್ಞಾತ ಒಳಹಾದಿಯ ಮುಖ್ಯತಿರುವುಗಳನ್ನೂ ಚರ್ಚಿಸಿದ. ಅಷ್ಟು ಹೊತ್ತಿಗೆ ಅಡಗೂಲಜ್ಜಿ ರಾತ್ರಿಯ ಊಟವನ್ನು ಚಟಿಗೆಗಳಲ್ಲಿ ಗಂಟುಕಟ್ಟಿಕೊಂಡು ಬಂದಳು. ಪಕ್ಷ್ಮಾ ಆಕೆಗೆ ಒಂದು ವರಹ ಕೊಡಲಿಕ್ಕೆ ಹೋದಾಗ, ತಾರ್ಕ್ಷ್ಯ ಚಟ್ಟನೆದ್ದು, ಹತ್ತು ವರಹಗಳನ್ನು ಆಕೆಗೆ ಎಣಿಸಿ, “ಇದು ನಮ್ಮ ರಾಜರ ಕಾಣಿಕೆ..” ಎಂದ.
“ಯಾವ ರಾಜರು?” ಎಂದು ಸಾಶಂಕವಾಗಿ ಮಾದ್ರಕ ಕೇಳಿದ.
“ದೇವರಾಜರು… ಇನ್ನ್ಯಾರು?”ಎಂದು ಫಡಪೋಶಿತನದಿಂದ ಪಕ್ಶ್ಮಳ ಕೈಯಲ್ಲಿನ ಎರಡು ಗಂಟುಗಳನ್ನು ತನ್ನ ಕುದುರೆಯ ತಡಿಗೆ ಗಂಟುಹಾಕಿ ಎರಡೂಕಡೆಗೆ ಇಳಿಬಿಟ್ಟ. ಪಕ್ಷ್ಮಾ ಊಟದ ಗಂಟಿನೊಂದಿಗೆ ಕುದುರೆ ಏರಿದಳು.
“ಅಲ್ಲಪ್ಪಾ ಮರಿ, ನಿನಗೆ ಈ ಮನೆ ಸಿಕ್ಕಿದ್ದು ಹೇಗೆ?” ಎಂದು ಕೇಳಿದ ಮಾದ್ರಕ.
ತಾರ್ಕ್ಷ್ಯ ಆ ಅಡಗೂಲಜ್ಜಿಯ ಕಡೆಗೆ ಬೆಟ್ಟುಮಾಡಿ, “ಆಕೆ ಹೇಳುತ್ತಾಳೆ” ಎಂದು ಹೇಳಿದ.
“ನಾನು ದಾರಿ ತೋರಿಸಲಿಕ್ಕೆ ಕುದುರೆ ತೆಗೆದುಕೊಂಡುಬರುತ್ತೇನೆ, ನಿಲ್ಲು” ಎಂದು ಮಾದ್ರಕ ಮನೆಯವರೆಗೂ ಓಡಿದ.
ಅವನು ಓಡಿದ್ದನ್ನು ಕಂಡ ತಾರ್ಕ್ಷ್ಯಮೆಲ್ಲನೆ ಕುದುರೆ ಏರಿ, ಅದರ ಹೊಟ್ಟೆಗೆ ತನ್ನ ಮೆಟ್ಟಿನಿಂದ ಬಲವಾಗಿ ಒತ್ತಿದ.
ಕುದುರೆ ನಾಗಾಲೋಟದಿಂದ ಹೊಲದ ಪೈರಿನ ನಡುವೆ ನುಗ್ಗಿತು.
“ಮುದುಕ ಬರುವವರೆಗೂ ನಿಲ್ಲಬೇಕಾಗಿತ್ತು !” ಎಂದಳು ಪಕ್ಷ್ಮಾ.
“ಕಾಮದಲ್ಲಿ ಸುಳ್ಳೂ ಒಂದು ಧರ್ಮ!” ಎಂದ ತಾರ್ಕ್ಷ್ಯ.
ದಾರಿಯಲ್ಲಿ ಕುದುರೆಯ ಖುರಪುಟಕ್ಕೆ ಉದ್ರಿಕ್ತಳಾದ ಪಕ್ಷ್ಮಾರಾಣಿ ನಿಟ್ಟುಸಿರುಬಿಡುತ್ತ ತಾರ್ಕ್ಷ್ಯನ ಕೊರಳಲ್ಲಿ ಕೈ ಹಾಕಿ ಮುದ್ದಿಡಲು ಯತ್ನಿಸಿದಳು.
“ಪಕ್ಷ್ಮಾ ನಾನು ಕಾಮಶಾಸ್ತ್ರಿ, ಲೋಲುಪನಲ್ಲ. ಸ್ತ್ರೀ ಲೋಲುಪರು ಮೂರ್ಖರು. ನಿನ್ನ ಲೀಲೆಗಳೆಲ್ಲ ಮುಗಿದ ಮೇಲೆ ಒಮ್ಮೆ ಸ್ವತಂತ್ರರಾಗಿ ಕೂಡೋಣ. ಆಗ ನಿನಗೆ ಕಾಮದ ನಿಜವಾದ ಅನುಭವವಾಗುವುದು. ಈಗ ನೀನು ಮಹಾರಾಜರ ಸೊತ್ತು. ಅಕ್ರಮವಾಗಿ ನಾನು ನಿನ್ನಲ್ಲಿ ನಿರತನಾಗಲಾರೆ” ಎಂದು ಹೇಳಿದ.
ಅದು ನಿಜವಾದರೂ ಒಂದು ರೀತಿಯಲ್ಲಿ ಸುಳ್ಳು. ಪಕ್ಷ್ಮಳನ್ನು ಮಹಾರಾಣಿಯವರ ಅಪ್ಪಣೆಯಮೇರೆಗೆ ಕರೆದೊಯ್ಯುತ್ತಿದ್ದನೇ ಹೊರತು ಇದರಲ್ಲಿ ಮಹಾರಾಜರ ಕಾಮ ಅಪ್ರಸ್ತುತ.
ಇದರಲ್ಲಿ ರಾಣಿಯ ಉದ್ದೇಶವೇನು-ಎಂಬುದು ಇನ್ನೂ ಬಗೆಹರಿಯದ ಸಮಸ್ಯೆಯಾಗಿತ್ತು, ತಾರ್ಕ್ಷ್ಯನಿಗೆ.

ನಂದಿಗ್ರಾಮದಲ್ಲಿ ಕೊತವಾಲನಿಗೆ ರಾಣಿಯ ಮುದ್ರಿಕೆ ತೋರಿಸಿ, ಯವನಿಕೆಯಿಂದ ಮುಚ್ಚಿದ ಒಂದು ರಥದಲ್ಲಿ ಪಕ್ಷ್ಮಾರಾಣಿಯನ್ನು ಕೂರಿಸಿದ ತಾರ್ಕ್ಷ್ಯ ಜೊತೆಗೆ ಒಬ್ಬ ರಾವುತನನ್ನೂ ಕರೆದೊಯ್ದನು. ರಥವು ಸೀದಾ ಆಮ್ರವನದವರೆಗೂ ಹೋಯಿತು. ಎರಡೇ ದಿನಗಳು ಸಂದಿದ್ದವು. ಆದರೂ ಪಕ್ಷ್ಮಾಳನ್ನು ಒಂದು ಗುಡಿಸಲಿನಲ್ಲಿ ಹಾಕಿ ಇಡಲಾಯಿತು. ಮಹಾರಾಜರು ಅದೇ ಶಶಾಂಕಿಗೆ ವಿದಾಯ ಹೇಳಿದರು. ಹತ್ತು ದಿನಗಳ ವರೆಗೆ ಪಕ್ಷ್ಮಾದೇವಿ-ಪುರುಕುತ್ಸ ಮಹಾರಾಜರ ವಿಹಾರ ಅವ್ಯಾಹತವಾಗಿ ಸಾಗಿತು.
ಪಕ್ಷ್ಮಾಳನ್ನು ರಾಜರ ವಶಕ್ಕೆ ಒಪ್ಪಿಸಿದವನೇ ತಾರ್ಕ್ಷ್ಯ ವಿಶ್ರಾಂತಿಗಾಗಿ ಅಯೊಧ್ಯೆಗೆ ಮರಳಿದನು. ಮಹಾರಾಣಿಯವರಿಗೆ ಸಾದ್ಯಂತ ವರದಿ ಒಪ್ಪಿಸಿದನು.
ಮಹಾರಾಜರು ಸ್ವೇಚ್ಛೆಯಿಂದಲೇ ಆಮ್ರವನಕ್ಕೆ ತೆರಳಿದವರು. ಆದರೆ ಪೌರಜನರಲ್ಲಿ ಮಹಾರಾಣಿ ಪುರುಕುತ್ಸಾನಿ ರಾಜರಿಗೆ ಸಿಟ್ಟು ಮಾಡಿ ಆಮ್ರವನಕ್ಕೆ ಅಟ್ಟಿದ್ದಾಳೆಂಬ ವದಂತಿ ದಟ್ಟವಾಗಿ ಹಬ್ಬಿತು. ಈಗಾಗಲೇ ವಾಸ್ತವವಾಗಿ ಎಲ್ಲ ರಾಜ್ಯಸೂತ್ರವನ್ನೂ ತನ್ನ ಕೈಯಲ್ಲಿಯೇ ಇಟ್ಟೂಕೊಂಡ ಮಹಾರಾಣಿ, ಈಗಂತೂ ಪ್ರಜಾವತ್ಸಲೆಯೆಂದು ಕೀರ್ತಿ ಪಡೆದು ಅಧಿಕಾರದ ನ್ಯಾಯಿಕ ಸ್ಥಾನಮಾನವನ್ನೂ ಪಡೆದಳು. ಅವಳೇ ಸಾಮ್ರಾಜ್ಞಿಯಾದಂತೆ.
ಆದರೆ ಹೆಣ್ಣು ಹೃದಯದ ಅವಳನ್ನು ಪೂರ್ತಿ ಅರಿತವರಾರು?
ಬರೀ ಆಡಳಿತದ ಅಧಿಕಾರಿಗಳು ತನ್ನ ಆಜ್ಞೆಯಂತೆ ನಡೆಯುವಷ್ಟೇ ತನ್ನ ಮುಂದಾಳು ತನವಾಯಿತೇ? ರಾಜ್ಯದ ಪ್ರತಿಷ್ಟರ ಮೇಲೆ ತನ್ನ ಸತ್ತೆ ಸಾಧಿಸಿದಂತಾಯಿತೆ?
ಮಹಾರಾಜ-ಪಕ್ಷ್ಮಾರಾಣಿಯರ ವಿಲಾಸವು ಆಗಲೇ ಒಂದು ವಾರ ಹಳತಾಗಿತ್ತು. ನಿಪುಣೆಯಾದ ಪಕ್ಷ್ಮಾ ಮಹಾರಾಜನ ಅಂಗಾಂಗಗಳಿಗೂ ಸುಖ ಕೊಡುತ್ತಿರುವ ವರದಿ ಚೇಟಿಯರ ಮೂಖಾಂತರ ತಿಳಿಯಿತು. ತರುಣಿ ರಾಣಿಯಲ್ಲಿ ಅಸೂಯೆ ಭುಗಿಲನ್ನೇ ಎಬ್ಬಿಸಿದಳು. ಆದರೆ ರಾಣಿ ಹೊರಗೆ ಏನೂ ತೋರಗೊಡಲಿಲ್ಲ. ತನ್ನ ತೊಡೆಯನ್ನು ಮುಟ್ಟಿಕೊಂಡು ಕೌಮಾರ್ಯ ಹಾಗೇ ಉಳಿದುದನ್ನು ನೆನೆಸಿಕೊಂಡಳು, ಅಷ್ಟೇ.
ಚೇಟಿಯರ ಮುಖಾಂತರ ಪುರುಕುತ್ಸಾನಿ ದೇವರಾಜ ಭದ್ರಮುಖರನ್ನು ಮುಖಭಂಗದಿಂದ ಪಾರುಮಾಡಿದ ರಾಹುತ ವೀರಸೇನನಿಗೆ ಕರೆಕಳಿಸಿದಳು.
ಅವನು ಬಂದು ಮುಜುರೆ ಸಲ್ಲಿಸಿ ನಿಂತನು.
“ಅಂದು ನೀನು ಭದ್ರಮುಖ ದೇವರಾಜರನ್ನು ಅವಮಾನದಿಂದ ಉಳಿಸಿದೆ ಅದಕ್ಕಾಗಿ ನಿನಗೆ ಅವರು ಏನು ಬಹುಮಾನ ಸಲ್ಲಿಸಿದರು?”
ಪಹರೆಯ ಕುದುರೆಯನ್ನು ಅವರಿಗೆ ಕೊಟ್ಟಿದ್ದು ಆಡಳಿತದ ನಿಯಮದ ವಿರುದ್ಧ. ಅದನ್ನು ಬಚ್ಚಿಟ್ಟುಕೊಂಡೂ ರಾಹುತವೀರಸೇನ ಹೇಳಿದ :”ಹತ್ತು ವರಹ, ಒಡತಿ!”
“ಹತ್ತೇ ವರಹಗಳೇ ?” ತೀಕ್ಷ್ಣವಾಗಿ ಕೇಳೀದಳು ರಾಣಿ ನರ್ಮದೆ.
“ಕುದುರೆ ಬೇಡಿದರು ಕೊಟ್ಟೆ. ಹತ್ತು ವರಹ ಬಹುಮಾನ ಕೊಟ್ಟರು.”
“ಒಟ್ಟು ಇಪ್ಪತ್ತು ವರಹ ಅಲ್ಲವೇ ?”
ವೀರಸೇನ ತಬ್ಬಿಬ್ಬಾದ. ಇಷ್ಟೆಲ್ಲ ವಿವರ ಮಹಾರಾಣಿಯ ಕಿವಿಯವರೆಗೆ ಹೋದದ್ದು ಹೇಗೆ ?- “ಅವರು ಕುದುರೆ ಬೇಡಿದರು ಕೊಟ್ಟೆ. ತಪ್ಪಾಯಿತು, ಮಹಾರಾಜ್ನಿ.”
“ಒಬ್ಬ ರಾಜಪುರುಷನ ಮರ್ಯಾದೆ ಕಾಯುವುದಕ್ಕಾಗಿ ಎರಡು ಗಂಟೆ ಪಹರೆಯ ಕುದುರೆ ಕೊಡಮಾಡಿದ್ದೇನು ತಪ್ಪಲ್ಲ. ಇನ್ನೆಷ್ಟು ಬೇಕಾಗಿತ್ತು ?”
ನಾನು ಕುದುರೆ ಬೇಡಲಿಕ್ಕೆ ಹೋದೆ. ’ನನ್ನ ಕುದುರೆ ಶೋಧಿಸಿ ತಾ. ಆಮೇಲೆ ಹತ್ತು ವರಹ’ ಎಂದು ಹೇಳುವುದು ರಾಜಪುರುಷರ ಧರ್ಮವೇ, ಮಹಾರಾಣಿ ?”
“ಹಾಗನ್ನುವುದು ನಿನಗೆ ಅನ್ಯಾಯ. ಅಲ್ಲದೇ, ನಿನಗೆ ಇಪ್ಪತ್ತೇ ವರಹ ಕೊಟ್ಟಿದ್ದು ನನ್ನ ಮನಸ್ಸಿಗೆ ಬಾರದು. ಇನ್ನಷ್ಟು ಗಳಿಸುವದು ನಿನ್ನ ಮನಸ್ಸಿನಲ್ಲಿ ಇದೆಯೇ?
ಇಪ್ಪತ್ತು ವರಹ ಅನ್ಯಾಯವೆಂದು ಹೇಳಿದ್ದು ಏಕೆ, ಒಮ್ಮೆಲೇ ವೀರಸೇನನಿಗೆ ಹೊಳೆಯಲಿಲ್ಲ. ಏನು ಹೇಳಬೇಕೆಂದು ತಿಳಿಯದೆ “ದೇವರು ಕೊಟ್ಟಷ್ಟು ಬೇಕು ಮಹಾರಾಣಿ !” ಎಂದ ವೀರಸೇನ.
“ನೀನು ಈಗ ಗೈದದ್ದು ಅಪದ್ಧರ್ಮ ಮಾತ್ರ. ಒಂದು ರೀತಿಯಿಂದ ನಿನ್ನ ಕರ್ತವ್ಯವೂ ಹೌದು. ಆದರೆ ದೇವರಾಜ ಭದ್ರಮುಖರಿಗೆ ನಿನ್ನಿಂದ ಒಂದು ಸುಖದ ದೇಣಿಗೆಯಾಗಬೇಕು. ಆವಾಗ ಏನು ಕೊಡುತ್ತಾರೆ, ಅದನ್ನು ಬಂದು ನನಗೆ ತಿಳಿಸು.”
“ಭದ್ರಮುಖರು ಅಪೇಕ್ಷಿಸುವ ಯಾವ ಸುಖವನ್ನು ನಾನು ಮಾಡಬಲ್ಲೆ ?”
“ನೋಡು, ಎರಡೇ ದಿನ ಅವರು ಪಕ್ಶ್ಮಾದೇವಿಯ ಸಂಗವನ್ನು ಅನುಭವಿಸಿದರು. ಈಗ ಪಕ್ಶ್ಮಾರಾಣಿ ಇಲ್ಲಿಯೇ ಸಮೀಪದಲ್ಲಿ ಇದ್ದಾಳೆಂದು ವರದಿ ಬಂದಿದೆ . ದೇವರಾಜರು ವಿಧುರರು. ಈ ವಾರ್ತೆ ತಿಳಿದರೆ ಅವರು ಕುಣಿದಾಡುತ್ತಾರೆ. ತಿಳಿಸುವುದು ನಿನ್ನನ್ನು ಕೂಡಿದೆ..”ಎಂದು ಹೇಳಿ ವಿವರಗಳನ್ನು ಮಹಾರಾಣಿ ತಿಳಿಸಿದಳು. ಅದನ್ನು ಹೇಗೆ ಹೇಳುವುದೆಂದೂ ಸೂಚನೆ ನೀಡೀದಳು. ಪಕ್ಶ್ಮಾರಾಣಿ ಮಹಾರಾಜರ ಸಂಗದಲ್ಲಿ‌ಇದ್ದುದನ್ನು ಮಾತ್ರ ಬಚ್ಚಿಟ್ಟಳು.
ಹತ್ತಿಪ್ಪತ್ತು ವರಹ ಕೊಡಲು ಬಂದರೆ ಸ್ವೀಕರಿಸಬೇಡ. ಎಷ್ಟು ಕೊಡಮಾಡಿದರೆಂಬುದನ್ನು ನನಗೆ ಬಂದು ಗುಟ್ಟಾಗಿ ಹೇಳು. ನಿನಗೆ ಸಲ್ಲಬೇಕಾದ ಹಣ ನಾನು ಕೋಡುತ್ತೇನೆ. ರಾಜಪುರುಷರ ಔದಾರ್ಯದ ಪರೀಕ್ಷೆ ಆಗಲಿ !” ಎಂದಳು.
ದೇವರಾಜರ ನಡತೆಯನ್ನು ನೋಡಿ ಬೇಸರಗೊಂಡ ವೀರಸೇನ ಈ ಸುಸಂಧಿಯನ್ನು ಚೆನ್ನಾಗಿಯೇ ಬಳಸಿಕೊಂಡನು. ದೇವರಾಜರ ಮನೆಗೆ ಹೋಗಿ, “ಒಂದು ಗುಟ್ಟು ಹೇಳುವುದಿದೆ. ನಿಮಗೆ ಸಂತೋಷವಾದರೆ ತಕ್ಕ ಬಹುಮಾನ ಕೊಡುವ ನಿಮ್ಮ ಔದಾರ್ಯದ ಬಗ್ಗೆ ನನಗೆ ಭರವಸೆ ಇದೆ” ಎಂದು ಭದ್ರಮುಖರಿಗೆ ಹೇಳಿದನು.
ಅವನ ಕೈಸನ್ನೆ-ಬಾಯಿಸನ್ನೆಗಳನ್ನು, ಕಣ್ಣುಮಿಟಿಕೆಗಳನ್ನು ನೋಡಿ ದೇವರಾಜ ಅವನನ್ನು ಗುಪ್ತಕೊಠಡಿಯಲ್ಲಿ ನಿಲ್ಲಿಸಿ ಯಾರನ್ನೂ ಒಳಗೆ ಬಿಡಬಾರದೆಂದು ಪಹರೆಯವರಿಗೆ ಹೇಳಿದನು,
ಆಂರವನದಬಳಿಯ ಗುಡಿಸಿಲಿನಲ್ಲಿ ಪಕ್ಷ್ಮಾದೇವಿ ಹೂ ಕುಯ್ಯುತ್ತ ನಿಂತಿರುವುದನ್ನು ತಾನು ಪ್ರತ್ಯಕ್ಷ ನೋಡಿರುವುದಾಗಿಯೂ, ತನ್ನನ್ನು ಕಾಣುತ್ತಲೇ ಭಯಭೀತಳಾಗಿ ಒಳಗೆ ಓಡಿದುದಾಗಿಯೂ ವೀರಸೇನ ವಾರ್ತೆ ಹೇಳಿದನು.
ಭದ್ರಮುಖರು ಮೊದಲು ನಂಬಲಿಲ್ಲ. ಮಹಾರಾಣಿಯವರಿಂದ ನಿಷೇಧಕ್ಕೊಳಗಾದ ತಿರುಗಿ ರಾಜ್ಯದಲ್ಲಿ ಕಾಲಿಡುವ ಧೈರ್ಯ ಹೇಗೆ ಮಾಡಿದಳು ? ಮಹಾರಾಜರು ಆಮ್ರವನದಲ್ಲಿ ಇದ್ದುದು ದೇವರಾಜರಿಗೆ ಗೊತ್ತು. ಅವರೇ ತಮ್ಮ ಆಜ್ನೆ ಚಲಾಯಿಸಿ ಪಕ್ಷ್ಮೆಯನ್ನು ಕರೆತಂದಿರಬಹುದೆ?-ಹಾಗಾದರೆ ಮಹಾರಾಜರ ವರ್ಚಸ್ಸು ಮಹಾರಾಣಿಯವರಿಗಿಂತ ಮೇಲಾಗಿರಬಹುದೆ?- ಅಥವಾ ಇದೆಲ್ಲ ತಾರ್ಕ್ಷ್ಯನ ಕೈಚಳಕವಿರಬಹುದೇ? ಈ ವಾರ್ತೆಯ ಸಹಾಯದಿಂದ ತಾರ್ಕ್ಷ್ಯನನ್ನು ಮಹಾರಾಣಿಯವರ ಅವಕೃಪೆಯ ಜಾಲದಲ್ಲಿ ತೊಡಗಿಸಿತಾವು ಮಹಾರಾಣಿಯವರ ಕೃಪೆಯನ್ನು ಗಳಿಸಬಹುದೆ ? ಇಂಥ ವಿಚಾರಗಳ ತೊಳಲಾಟದಲ್ಲಿ ಸಿಲುಕಿಕೊಂಡು ಭದ್ರಮುಖರು ಮೌನದಿಂದ ಇದ್ದರು.
ಅವರ ಮುಖವನ್ನೇ ಮಿಕಿಮಿಕಿ ನೋಡುತ್ತ, “ಪ್ರಭು, ತಮಗೆ ಸಂತೋಷವಾಗಲಿಲ್ಲವೇ ?” ಎಂದು ಕೇಳಿದನು ವೀರಸೇನ.
ಆಯಿತು, ನೋಡೋಣ. ನಾಳೆ ನೀನು ಬಾ. ವಿಚಾರ ಮಾಡುತ್ತೇನೆ. ನೀನು ಹೋಗಬಹುದು” ಎಂದರು.
ವೀರಸೇನ ಕಾಲು ಕೀಳಲಿಲ್ಲ. ಭದ್ರಮುಖರು ತುಸು ಅಸಮಾಧಾನದಿಂದಲೇ ಅವನಿಗೆ ಒಂದು ವರಹ ಬಹುಮಾನವಿತ್ತು ಅಲ್ಲಿಂದ ಕಳಿಸಿಕೊಟ್ಟರು.
ಐದು ವರ್ಷದಿಂದ ವಿದುರರಾದ ದೇವರಾಜರಿಗೆ ಸಂಸಾರದಲ್ಲಿ ಸುಖವಿರಲಿಲ್ಲ. ವಿದುರರಾದ ಹೊಸತರಲ್ಲಿ ವೈರಾಗ್ಯಭವತಾಳಿ, ಕವಾಸಮುನಿಗಳ ಶಿಷ್ಯತ್ವವನ್ನು ಸ್ವೀಕಾರಮಾಡಿದ್ದರು. ಆದರೆ ಇತ್ತೀಚೆಗೆ ಇನ್ನೊಂದು ಮದುವೆಯಾಗುವ ವಿಚಾರದಲ್ಲಿ ತೊಡಗಿದ್ದರು. ಮಗ ವತ್ಸರಾಜನ ಹೆಂಡತಿ ಸುಂದರಿ ತುಂಬುಬಸಿರಿ.
*****
ಮುಂದುವರೆಯುವುದು

ಕೀಲಿಕರಣ ದೋಷ ತಿದ್ದುಪಡಿ: ಶ್ರೀಶ ಕಾರಾಂತ್