ನನ್ನ ಗೆಳತಿಯ ಮಗ

ಇಲ್ಲಿ ಒಮ್ಮೆಮ್ಮೆ ಬ್ಯಾಸರ್ ಆದರ ಅಂಗಡಿ ಅಂಗಡಿ ತಿರುಗೂದ ಒಂದು ಕೆಲಸ. ಹೊಸ ಅರಿವಿ, ಶೂಸ್ ಅದೂ ಇದೂ, ಅಲ್ಲಿ ಬರು ಹುಡಗೀರು ಇದೆಲ್ಲಾ ನೊಡಕೊಂತ ನಿಂತರ ಟೈಂ ಹೊಗಿದ್ದ ಗೊತ್ತಾಗೂದಿಲ್ಲ. ಮೊನ್ನೆ ಹಿಂಗ- ಅರಿವಿ ಅಂಗಡಿ ಯೊಳಗಿನ ಗೊಂಬಿ ನೊಡ್ಕೊಂಡ್ ನಿಂತಾಗ ಹಿಂದಿನಿಂದ ಯಾರೊ ಬಂದು ‘ಲುಕ್ ಹೂ ಈಸ್ ಹಿಯರ್’ ಅಂದಾಗ- ಎಚ್ಚರ. !! ತಿರಿಗಿ ನೊಡಿದ್ರ ಅರೇ! ನಮ್ ಪೆಟ್ರುಶಿಯಾ!! ಅದ- ತೀಡಿದ್ ಹುಬ್ಬು, ದಪ್ಪಗ ಮೇಕಪ್ ಮಾಡಿದ ನೀರಿಗಿ ಗಟ್ಟಿದ ಮುಖಾ, ನೀಟಾಗಿ ಇಸ್ತ್ರಿ ಮಾಡಿದ ಮೊಣಕಾಲುದ್ದ ಸ್ಕರ್ಟ್, ಅದಕ ಒಪ್ಪುನಂತ ಶರ್ಟ್, ಹೆಗಲ ಮ್ಯಾಲೆ ರೇಶಿಮಿ ಸ್ಕಾರ್ಫ್, ಕಿವಿಗೆ ದೊಡ್ಡ ಮುತ್ತಿನ‌ಓಲಿ, ಅದರ ಜೋಡಿ ಸರಾ. . ಇರುವಿಕಿ ಆಗ್ಲೀ, ಮುಖಾ ಆಗ್ಲೀ, ಆರು ತಿಂಗಳಿನ್ಯಾಗ ಒಂದಿಷ್ಟೊ ಬದಲಾಗಿಲ್ಲಾ!

ಅಂದಹಂಗ-, ಪೆಟ್ರುಶಿಯ ನನ್ ಗೆಳತಿ ನಾವು ಇಬ್ರೂ ಆಜೂ ಬಾಜೂ ಮನಿಯೊಳಗ ಇದ್ದವ್ರು. ಆ ಮನಿ ಬಿಟ್ಟು ಆರ್ ತಿಂಗಳದಾಗ ಇದ- ಮೊದಲ ಭೆಟ್ಟಿ!

೯-೧೧ ಆದ್ಮೇಲೆ, ಎಷ್ಟೋ ಜನ ಇಂಡಿಯನ್ಸಗೆ, ತೊಂದರೆ ಆಗಿದ್ದು ಕೇಳಿ ಭಯ ಆಗಿತ್ತು. ಸಧ್ಯ! ನಿನಗೇನೂ ಆಗ್ಲಿಲ್ವಲ್ಲಾ! ಅಂತ ಧಾಟಿ ಶುರು ಮಾಡಿ, ಉಭಯ ಕುಶಲೊಪರಿ ಮಾಡಕೋತ, ಕಾಫೀ ಅಂಗಡಿಗೆ ಬಂದು ಕುಂತ್ಕೊಂಡ್ ಮ್ಯಾಲೆ ಫೀನಿಶ್ ಬಗ್ಗೆ ಮಾತ್ ಹೊಂಟ್ತು.
ಫೀನಿಶ್ ಬಗ್ಗೆ ಕೇಳಿದ್ದ- ತಡ, ’ಯು ನೋ ನೊ ವಾಟ್ ಹ್ಯಾಪನ್ಡ್??’ ಅಂತ ಶುರು ಮಾಡಿ ಅವನಿಗೆ ಕಿವಿ ಆಪರೇಷನ್ ಆಗಿ ೩ ದಿನಾ ‘ಇಂಟೆನ್‌ಸಿವ್ ಕೇರ್’ ನ್ಯಾಗ್ ಇಟ್ಟಿದ್ದು, ಗಾಯ ಮುಟ್ಕೊಬಾರ್ದು ಅಂತ ಕೈ ಕಾಲ್ ಕಟ್ಟಿ ಹಾಕಿ ಟ್ಯೂಬಿನಿಂದ ಊಟಾ ಹಾಕಿದ್ದು ಹೇಳಿ, “ಆ ನೊವು ನನ್ನಿಂದ ನೊಡಾಕ್ ಆಗ್ಲಿಲ್ಲ” ಅಂತ ಮುಗುಸುವಷ್ಟು ಹೊತ್ತಿಗೆ ಆಕಿ ಕಣ್ಣಾಗ ನೀರು ಬಂದಿದ್ವು.

ಈ ಪೆಟ್ರುಶಿಯಾನ- ಹಿಂಗ- ಫೀನಿಶ್ ವಿಷಯದಾಗ ಸ್ವಲ್ಪ ಜಾಸ್ತೀನೇ (ಕೆಲವೊಮ್ಮೆ ಕೇಳವರಿಗೆ ಬ್ಯಾಸರ ಆಗುವಷ್ಟು!! ) ಭಾವುಕ ಆಗ್ಬಿಡ್ತಾಳ. ಪಾಪ ಅಕಿ ಆದ್ರೂ ಎನ್ ಮಾಡ್ತಳ ಈ ಊರಾಗ ಹತ್ರದ- ಜೀವ ಅಂದ್ರ ಅಂವ ಒಬ್ಬನ- . ಅಂವ ೩ ತಿಂಗಳಿನವ ಇದ್ದಾಗ ಈಕಿ ಕರಕೊಂಡು ಬಂದು ಸಾಕಿದಳಂತ, ನನಗ ಪೆಟ್ರುಶಿಯಾನ ಪರಿಚಯ ಆಗಿದ್ದ- ಫೀನಿಶನಿಂದ!!

ಕಗ್ಗತ್ತಲ ಡಿಸೆಂಬರಿನ ರಾತ್ರಿ ಸುರೀತಿದ್ದ ಹಿಮದ ನಡುವ ಗೊತ್ತೂ ಪರಿಚಯ ಇಲ್ಲದ ಈ ಊರಿಗೆ ಬಂದು ಇಳದಾಗ ಆ ಕೊರಿಯುವ ಥಂಡಿ, ಗೊತ್ತಿಲ್ಲದ ಮಂದಿ, ಎಲ್ಲಾದರ ನಡುವೆನೂ ಕೆಲಸ ಸಿಕ್ಕಿದ್ದ- ಖುಶಿ ಇತ್ತು. ೨೦೦೦ ಇಸವೀನ- ಹಂಗ ಇತ್ತು. ವೈ ಟು ಕೆ ಗದ್ಲ ತಣ್ಣಗಾಗಿತ್ತು, ಡಾಟ್ ಕಾಂ ಕಂಪನಿಗಳೂ ಒಂದೊಂದಾಗಿ ಮುಳುಗಾಕತ್ತಿದ್ವು.

ಎಂತಾ ಹಳ್ಳಿಯೊಳಗ ಕೆಲಸ ಸಿಕ್ರೂ ಖುಶಿ ಆಗುದ್ರಾಗ ಏನೂ ಈ ಕೊರೆಯುವ ಥಂಡಿ ಬಗಿಗಿ ವಿಪರೀತ ಅನಿಸ್ತಿರಲಿಲ್ಲ.

ಸ್ಟೇಷನ್ನಿಗೆ ಬಂದ ಗೆಳೆಯಾನ್ ನೋಡಿ ಸಮಾಧಾನ ಆತು. ಅವನ ಕಾರಿನ್ಯಾಗ್ ಮನಿ ಮುಟ್ಟುವತನಕ, ಯಾರ್ ಯಾರ್ ಕೆಲಸ ಹೋತು, ಯಾರ್ ಯಾವ್ ಊರಿಗೆ ಹೊದ್ರು ಬರೀ ಇದ ಸುದ್ದಿ!

ಹೊದ ವರ್ಷ ನಮ್ಮವರು ಯಾರ್ ಭೆಟ್ಟಿಯಾದ್ರೂ, ಯಾರು ಹೊಸ ಕಾರ್ ತೊಗೊಂಡ್ರು, ಯಾರು ಮನಿ ತೊಗೊಂಡ್ರು ಅಂತ ಮಾತಾಡ್ತಿದ್ ನೆನಪು.

ಇದ- ಊರಾಗ ನನ್ನ ಗೆಳೆಯಾನ ಪರಿಚಯದ ಹುಡುಗ್ರು ಇದ್ರು ಅವರ ಮನಿ ಯಳಗ್ ಇಬ್ಬರ ಜೊತಿ ಮೂರನೆದವ ಅಂತ ಸೇರ್ಕೊಂಡೆ. ಮನ್ಯಾಗ ಪರಿಚಯ ಇಲ್ಲದ ಹುಡ್ರು, ಆಫಿಸಿನ್ಯಾಗ ಮನಸಿಗೆ ಬಾರದ್ದ ಕೆಲಸಾ, ಎಲ್ಲಾ ಸೇರಿ ಭಾಳ ಬ್ಯಾಸರ ಅಕ್ಕಿತ್ತು. ಮನ್ಯಾಗ್ ಇರಾಕೂ ಬ್ಯಾಸರ ಆಫಿಸಿಗೆ ಹೊಗಾಕೂ ಬ್ಯಾಸರ ಆದರ ಯವ್ದೂ ಬಿಡುವಂಗಿಲ್ಲ.
ಅವಾಗ ನನಗ ಪೆಟ್ರುಶಿಯಾನ ಪರಿಚಯ ಆಗಿದ್ದು.

ನಾ ದಿನಾ ಆಫಿಸಿಗೆ ಬರೂಹೊತ್ನ್ಯಾಗ ಫೀನಿಶ್ ಮನಿ ಮುಂದಿನ ವರಂಡಾದಾಗ ಅಲ್ಲಿಂದ ಇಲ್ಲಿಗೆ ಇಲ್ಲಿಂದ್ ಅಲ್ಲಿಗೆ ಓಡಾಡಿಕೊತ, ಅಲ್ಲಿ ಬಿದ್ದಿರು ಎಲಿ ಜೊತೀನೊ, ಪ್ಲಾಸ್ಟಿಕ್ ಹಾಳಿ ಜೊತೀನೊ ಆಟಾ ಆಡ್ಕೊಂಡು ಇರ್ತಿದ್ದ,

ನಾ ಅಲ್ಲಿ ಹೊದರ ಆಟ ಎಲ್ಲ ಬಿಟ್ಟು ಸುಮ್ಮನ್- ನನ್ನ ನೋಡತ ನಿಂತ ಬಿಡ್ತಿದ್ದ! ನಾ ಅವನ ಕೂಡ ಒಂದೆರಡ ಸಾರಿ ಆಟಾ ಆಡಾಕ್ ನೊಡಿದೆ ಆದ್ರ ಈ ಫೀನಿಶ್ ಗ ಹೊಸಬ್ರು ಅಂದ್ರ ಆಗಂಗಿಲ್ಲ!! ಒಮ್ಮೆ ಅವನ ಜೊತಿ ಹಿಂಗ ಆಟಾ ಆಡಾಕ ಪ್ರಯತ್ನ್ ಪಡುವಾಗ, ಬಾಜು ಮನಿಯಾಗಿಂದ -ಅಂವ ಹೊಸಬರ್ ಜೊತಿ ಮಾತಡುದಿಲ್ಲ, ಸ್ವಲ್ಪ ರೂಢಿ ಆಗ್ಬೇಕು, ಅಂತ ಈ ಮುದುಕಿ ಹೊರಗ ಬಂದ್ಲು. ಹಿಂಗ ಪರಿಚಯ ಆಗಿದ್ದು, ಆಮೇಲೆ, ಅವಾಗ ಇವಾಗ ಫೀನಿಶ್ ಕೂಡ ಮುದುಕಿ ದರ್ಶನಾನೂ ಆಕ್ಕಿತ್ತು. ಫೀನಿಶ್ ಈಗ ನನಗ ಸ್ವಲ್ಪ ರೂಡಿಯಾಗಿದ್ದ.

ನಾವು ಇರೂ ಅಪಾರ್ಟಮೆಂಟ್ಸು, ಸುತ್ತ ಒಂದಿಷ್ಟು ಮನಿ, ಒಂದು ದೊಡ್ಡ ’ಮಾಲ್’, ಪೊಸ್ಟ್ ಆಫಿಸು, ಬ್ಯಾಂಕು, ನಂ ಆಫಿಸು, ಇದಿಷ್ಟ- ಈ ಊರು. ಹತ್ರದ ಬ್ಯಾರೆ ಊರಿಗೆ ಹೊಗಾಕ ಕಾರೂ ಇರ್ಲಿಲ್ಲ ಹಿಂಗಾಗಿ ಆಫಿಸು ಮುಗದ ಮ್ಯಾಗ, ಮನೀನ- ಗತಿ. ಕೆಲ್ವೊಮ್ಮೆ ಮನಿಗೆ ಹೊಗುವಾಗ ಅದ- ಹಳೆ ಜೊಕು, ರೂಂ ಮೇಟ್ ಜೊರಾಗಿ ಹಾಕು ತಮಿಳ್ ಹಾಡು, ರುಚಿ ಇಲ್ಲದ ಅಡಿಗಿ, ಎಲ್ಲ ನೆನಸಿಕೊಂಡು, ಛೆ!! ಈ ಮನಿ ಬಿಟ್ಟು ಬ್ಯಾರೆ ಎಲ್ಲರ ಹೊಗಿ, ಯಾರರ ಕೂಡ್- ಮಾತಾಡು ಹಂಗಿದ್ರ, ಎಷ್ಟು ಚೊಲೊ!!” ಅನ್ನಿಸ್ತಿತ್ತು. ಇಂತಾ ಹೊತ್ನ್ಯಾಗ ಪೆಟ್ರುಶಿಯ ಭೆಟ್ಟಿ ಆಕ್ಕಿದ್ಲು, ಅಕಿ ಊರು ಯಾವದು, ನನ್ ಊರು ಯವದು, ಅದೂ ಇದೂ ಮಾತಾಡಕೊಂತ ನಿಂತಬಿಡ್ತಿದ್ವಿ. ಕೆಲ್ವೊಮ್ಮೆ ನಾ ಅಫೀಸಿನಿಂದ ಬ್ಯಾಸರ್ ಆಗಿ, ಮನೀಗೆ ಹೊಗಿ ಎನಾರ ತಿಂದು ಮೊಕ್ಕೊಂಡ್ರ ಸಾಕು ಅಂತ ಬರೂವಾಗ ಈ ಪೆಟ್ರುಶಿಯ ಫೀನಿಶ್ ಕಾಲಿಗೆ ಗಾಯ ಮಾಡ್ಕೊಂಡಿದ್ದನ್ನ ಕತಿ ಮಾಡಿ ಹೆಳೂದ – ? ಬ್ಯಾಸರ ಮಡ್ಕೊಂಡ್ರೂ ಇಲ್ಲಿಯವರಂಗ “ಐ ಯಾಂ ರಿಯಲ್ಲಿ ಟೈರ್ಡ್ ” ಅಂತ ಕೊಸರಿಕೊಳ್ಳಾಕ ಆಗ್ದ – ಅಕಿಗೆ ಮನಸ್ಸನ್ಯಾಗ “ಇಕಿ ಓಳ್ಳೆ ಗಂಟು ಬಿದ್ಲು ” ಅಂದ್ಕೊತಿದ್ದೆ.

ಪೆಟ್ರುಶಿಯನಿಂದ ಅಕಿ ಗೆಳತಿರು, ಗೆಳಯಾರು ಪರಿಚಯ ಆದ್ರು. ಎಲ್ಲಾ ೫೦ ಅಥವಾ ಹೆಚ್ಚು ವರ್ಷದ ಮುದುಕ್ರು, ಮುದುಕ್ಯಾರು. ಮುದುಕ್ರು ಅಂದ್ರ ನಂ ಓಣ್ಯಾಗ ಬತ್ತೀ ಹೊಸಗೊಂತ ಕುಂದ್ರು ಅಜ್ಜಿ, ಅಂತವ್ರು ಅಲ್ರೀ!! ನನ್ ವಯಸ್ಸಿನ ಹುಡುಗೂರು ನಾಚೂವಂಗ ಇರ್ತಿದ್ರು! ಈ ಮುದುಕೀರು ಅಪಾರ್ಟಮೆಂಟಿನ ಹತ್ತನೇ ಮಾಡಿಯಿಂದ- ಕೆಳಗಡೆ ಇರೂ ಕ್ಲಬ್ ರೂಮಿಗೆ ಬ್ರಿಜ್ ಆಡಾಕೊ, ಬಿಂಗೊ ಆಡಾಕೊ ಬಂದ್ರ, ಮದ್ವಿಗೆ ಹೊಂತಂಗ ಉದ್ದುದ್ದನ ಗೌನು, ಛಂದನ ಸ್ಕರ್ಟ್, ಹಾಕ್ಕೊಂಡು, ಮಾಡ್ಕೊಂಡು ಜೋರಾಗಿ ನಕ್ಕೊಂತ ಕಾಲ್ ಎಳ್ಕೋಂತ ಹುರುಪೀಲೆ ಬರ್ತಿದ್ರು! ಅವ್ರನ್ನ ನೋಡಿದ್ರ, ಒಂದ ತರಹ ಖುಶಿ ಆಕ್ಕಿತ್ತು. ಕೆಲ್ವೊಮ್ಮೆ ನಗು ಬರ್ತಿತ್ತು. ಅವ್ರ‌ಒಳಗ ಮರಿಯಾ ಅನ್ನುವಾಕಿ ಹೆಚ್ಚುಕಡಿಮಿ ನಮ್ಮ ಅಜ್ಜಿ ಅಷ್ಟ ಎತ್ತರ, ದಪ್ಪ, ಅಕಿನ್ನ ನೊಡಿ, ಅಜ್ಜಿಗೆ ಸ್ಕರ್ಟ್ ಹಾಕ್ಸಿದ್ರ ಹಿಂಗ – ಕಾಣ್ತಾಳ ಅನ್ನಿಸಿ ಒಳಗೊಳಗ- ನಗ್ತಿದ್ದೆ.

ಅಲ್ಲಿ ಕ್ಲಬ್ ರೂಂ ನ್ಯಾಗ್ ಇ‌ಅವ್ರೆಲ್ಲ ಬುಕ್ ಒದ್ಕೊಂಡೊ, ಬ್ರಿಡ್ಜ್ ಆದ್ಕೊಂಡೊ, ಊರಿನ ಸುದ್ದಿ, ಮೊಮ್ಮಕ್ಕಳ ಸುದ್ದಿ ಮಾತಡ್ಕೊಂಡು ಟೈಂ ಪಾಸ್ ಮಾಡ್ತಿದ್ರು.

ಯಾವ್ ವಿಶ್ಯಾ ಮಾತಾಡಿದ್ರು ಅದ್ರಾಗ ಈ ಪೆಟ್ರುಶಿಯ ಫೀನಿಶ್ ಬಗ್ಗೆ ಒಂದರ- ಮಾತ ಹೇಳಾಕ ಬೇಕು!!

ನಾನು ಕೆಲ್ವೊಮ್ಮೆ, “ಎನ್ ಈಮುದುಕಿಗೆ ತೆಲಿ ತಿನ್ನಾಕ ಫೀನಿಶ್ ಬಿಟ್ರ ಬ್ಯಾರೆ ಎನೂ ಸುದ್ದಿ ಸಿಗಂಗಿಲ್ಲ??” ಅನ್ಕೊತಿದ್ದೆ. ಆದ್ರಾ ಒಳಗೊಳಗ- ಮನೀಗೆ ಹೂಗಿ ಮತ್ತ- ಗಂಟ್ಲ ಹರಿಯೂಹಂಗ ಹಾಡು ಹಾಡು, ಸಿಂಕ್ ತುಂಬ – ಬಿದ್ದಿರು ಮುಸುರಿ ಭಾಂಡೆ, ಉಪಯೊಗಕ್ಕ ಬಾರದ “ಗಾಂಧಿಜಿ ದೇಶಕ್ಕ ಎನೇನ ಕೆಟ್ಟಾ ಮಾಡ್ಯಾರ”, ಅನ್ನು ವಾದ ಇವೆಲ್ಲಾದಕ್ಕಿಂತ, ಈ ಮುದ್ಕ್ಯಾರ ಸುದ್ದಿನ- ಚೊಲೊ ಅಂತ ಯವ್ದೊ ಪುಸ್ತಕ ಹಿಡ್ಕೊಂಡು ಕ್ಲಬ್ ರೊಂ ನ್ಯಾಗ ಇವರ ಹರಟಿ ಕೇಳ್ಕೊಂಡ್ ಕುಂತಿರ್ತಿದ್ದೆ.

ಪರಿಚಯ ಆದಂಗೆಲ್ಲ, ಪೆಟ್ರುಶಿಯ, ಫೀನಿಶ್ ಇಬ್ರು ಹತ್ತರದವ್ರು ಆನ್ನಸ್ತಿದ್ರು. ನಾ ನನ್ ಬ್ಯಾಸರ ಹೇಳ್ಕೊಳ್ಳೂದು, ಅಕಿ ’ಡೊಂಟ್ ವರ್ರಿ ಥಿಂಗ್ಸ್ ವಿಲ್ ಬಿ ಒ ಕ್ಕೆ ’ ಅಂತ ಸಮಾಧಾನ ಹೇಳೂದು, ಅಕಿ ಬ್ಯಾಸರ್ ಮಾಡ್ಕೊಂಡಿದ್ರ, ನಾ “ಹೊಗ್ಲಿ ಬಿಡು” ಅನ್ನೋದು, ಎಲ್ಲ ಮನಸ್ಸಿಗೆ ಹಿತ ಅನ್ನಿಸ್ತಿತ್ತು.

ಈ ಪೆಟ್ರುಶಿಯ ಇಷ್ಟು ಜೂರಾಗಿ ಕಂಡ್ರೂ ಪಾಪ ಭಾಳ ಒಂಟಿ, ಅಕಿ ದೊಡ್ಡ ಲಾಯರ್ ಆಗಿದ್ದಾಕಿ, ಆಕಿ ಮನಿ ಓಳಗಿನ ದುಬಾರಿ ಗಾಜಿನ ಸಾಮಾನ, ಗೋಡಿ ಮ್ಯಾಲಿನ ಪೇಂಟಿಂಗ್ ನೊಡಿದ್ರ ಸ್ರೀಮಂತ ಮುದುಕಿ ಅಂತ ಅನ್ನಸೂದು ಸಹಜ. ಅಕೀನ ಹೆಳೂವಂಗ – , ಅಕಿಗೆ, ರೊಕ್ಕಾ, ಕೆಲ್ಸದ ಬೆನ್ನ ಹತ್ತಿ, ಹುಡುಗರ ಕಡೆ ಲಕ್ಷ್ಯಾನ ಹೊಗ್ಲಿಲ್ಲ ಅಂತ!!

ಅಕಿ ಜೊತೀ ಭಾಳ ಒಡಾಡಿದ್ದ ಒಂದಿಬ್ರು ಗೆಳೆಯಾರು, ಇನ್ನೆನು ಕೇಳಿ ಬಿಡ್ಬೇಕು ಅನ್ನುವದರೊಳಗ ಕೈ ತಪ್ಪಿ ಹೊದ್ರಂತ! ಈ ಸುದ್ದಿ ಹೇಳತಾ ಹೇಳತಾ, ಕೆಲ್ವೊಮ್ಮೆ “ದೇವ್ರು ನನಗ ಎಲ್ಲಾ ಕೊಟ್ಟಾನ ಆದ್ರ ನನಗ ಸರೀ ಹೋಗು ಒಂದು ಹುಡುಗನ್ನ ಕೊಡ್ಲಿಲ್ಲ” ಅಂತ- ಭಾಳ ಬ್ಯಾಸರ ಮಾಡ್ಕೊತಿದ್ಲು, ಪಾಪ, ನಂ ಊರಾಗಾದ್ರೂ ಹುಟ್ಟಿದ್ರ- ಅಪ್ಪಾ ಅವ್ವ, ಕಡೀಕ ಎಂತಾವನೊ ಒಬ್ಬ ಮನಿ ಅಳಿಯಾನ್ನಾದ್ರೂ ತರ್ತಿದ್ರು. ಸರಿ!! ಈಕಿ ಕಾಲೆಜ್ ಗೆ ಅಂತ ಮನಿ ಬಿಟ್ಟ್ ಅಂಯಾಲೆ ಅಪ್ಪ ಅವ್ವನ್ನ ನೋಡಿದ್ದು, ’ತ್ಯಾಂಕ್ಸಗಿವಿಂಗ್, ಕ್ರಿಸ್ಮಸ್’ ಅಂತ ವರ್ಷಕ್ಕ ಒಂದೊ ಎರಡ ಸರಿ. ಅವರು ಹೊದ್ಮ್ಯಾಲೆ ಅದೂ ಇಲ್ಲ. ಇರೂ ಒಬ್ಬ- ಅಣ್ಣ ಫ್ಲೊರಿಡಾದಾಗ ಎಲ್ಲೊ ಅದಾನಂತ!! ಇಕಿ ತಾನಾಗ್ಲೆ ಫೋನ್ ಮಾಡಿದ್ರ ಅವನಿಂದ ಸುದ್ದಿ! ಅವಾಗ ಇವಾಗ ಅಕಿನ್ನ ನೊಡಾಕ್ ಬರೂ ಒಬ್ಬಕೆ ಗೆಳತೀನ್ ಬಿಟ್ರ, ಫೀನಿಶ್ ಒಬ್ಬವ್ನ್- ಅಕಿಗೆ ಎಲ್ಲಾ!! ಅಂವ ಅಕಿ ವರಾಸದರನೂ ಹೌದು! ಅಂತ ಕೇಳಿ ನನಗ ಅರಿವಿಲ್ಲದ- ಎಲಾ ಇವ್ನ್!!! ಅಂದಿದ್ದೆ!

ನನ್ನ ರೂಂ ಮೇಟ್ ಒಬ್ಬ ಇಂಡಿಯಾಗೆ ಹೋದವ ವಾಪಾಸ್ ಬರಕ ಒಂದು ವಾರ ಇರುವಾಗ್ ಫೋನ್ ಮಾಡಿ

ನನಗ ಬ್ಯಾರೆ ಒಂದು ಅಪಾರ್ಟ್ಮೆಂಟ್ ನೋಡ್ರಿ ಅಂದು ಬಿಡೊದ. ! ಎನಾತು ಅಂತ ಕೇಳಿದಾಗ ನಮ್ಮ ಮನಸ್ಸಿನ್ಯಾಗ ಇದ್ದ ಸಂಶಯ ಖರೇ ಆತು. ನಮ್ಮ ಹುಡುಗ ಅಪ್ಪಾ ಅವ್ವನ ವತ್ತಾಯಕ್ಕ ಯಾವ್ದೊ ಹುಡುಗೀನ ನೋಡಿದನಂತ, ನೋಡಿದ್ದ ತಡಾ ಈವರ್ಷ ಮದುವಿ ಆಗಂಗಿಲ್ಲ ಅಂತಿದ್ದವಗ ಅದು ಏನ್ ಅನ್ನಿಸ್ತೋ ಎನೋ, ಹುಡುಗಿನ ಒಪ್ಪಿಕೊಂಡಿದ್ದಲ್ದ – ’ನಾ ಹೆಚ್ಚಿನ ಸೂಟಿ ತೊಗೊತೀನಿ, ಈಗ್ಲೆ ಲಗ್ನಾನೂ ಆಗಿಬಿಡ್ಲಿ’ ಅಂದ್ನನಂತ! ಆಯ್ತು ಅಂತ ಓಡಾಡಿ ನಮ್ಮ ಕಾಂಪ್ಲೆಕ್ಸನ್ಯಾಗ ಒಂದು ಅಪಾರ್ಟ್ಮೆಂಟ್ ನೋಡಿದ್ದಾತು. ಆದ್ರ ಈ ಪರಿ ಮೋಡಿ ಮಾಡಿರ್ಬೇಕಾದ್ರ ಎಂತಾ ಹುಡುಗಿ ಇರ್ಬೇಕು ಅಂತ – ಎಲ್ಲಾರೂ ಅವನ ಹೆಂಡ್ತಿನ ನೋಡಾಕ ಕಾಯಕತ್ತಿದ್ರು. ಪೆಟ್ರುಶಿಯಾ ಇದನ್ನ ಕೇಳಿ, ತನ್ನ ಜೊತೆ ಮತೂ ಆಡಾಕ ನಾಚಕೊಳ್ಳೊ ಹುಡುಗ
ಇಷ್ಟು ಲಗೂ ಹುಡುಗಿ ಹುಡುಕಿಕೊಂಡ್ನಾ? ಅಂತ ಆಶ್ಚರ್ಯ, ಓಹೊ !”ಹಿ ಮಸ್ಟ ಹ್ಯಾವ್ ಕ್ನೋನ್ ಹರ್’ ಅಂದ್ಲು, ಅಲ್ಲಾ ಅಂದೆ, “ಮೇ ಬ್ಬೀ ಹಿ ಹ್ಯಾಡ್ ಅ ಸೀಕ್ರೆಟ್ ಗರ್ಲ್ ಫ್ರೆಂಡ್ ಉ ಡಿಂಟ್ ಕ್ನೋ ಅಬೌಟ್” ಅಂದ್ಲು, ಇಲ್ಲಾ, ಅಂವ ಯಾವತ್ತು ಹುಡುಗೀರಜೊತೆ ಒಡಾಡಿದ್ದೇ ಇಲ್ಲ ಅಂದೆ, ಅವರ ಅಪ್ಪ ಅಮ್ಮ ಹುಡುಕಿದ್ರು ಅಂವ ಹೂಂ ಅಂದ ಅಂತ ಕೇಳಿ, ಅಕಿಗೆ ಗಾಬರಿ, ದಿಗಿಲು ಎಲ್ಲಾ ಒಟ್ಟೀಗೇ ಆಗಿತ್ತು. ಅಕೀನೂ ನಂ ಕೂಡ ಕೂಡಿ ಆ ಹುಡುಗೀಗ್ನ ನೊಡಾಕ ಕಾಯಾಕತ್ತಿದ್ಲು.

ಈ ಹುಡೂಗೀ ಬಂದಮ್ಯಾಲೆ, ಬೆಟ್ಟಿ ಯಾದವ್ರು ಎಲ್ಲಾ ಯಾವ್ ಹುಡುಗಾ ಆದ್ರೂ ಒಪ್ಕೊಂತಿದ್ದಾ ಅಂತ ಅನ್ನವರ – . ಭಾಳ ಓದಿದಾಕಿ, ಎಲ್ಲಾರ್ ಕೂಡ ನಕ್ಕೊಂತ ಮಾತಾಡಾಕಿ, ಎಲ್ಲಕಿಂತ ಹೆಚ್ಚಾಗಿ ನಂ ಇನ್ನೊಬ್ಬ ರೂಂ ಮೇಟಗ ಖುಶಿ ಆಗಿದ್ದು ಅಕಿ ಇಂದಿಯಾದಿಂದ ಬಂದಾಗ್ಲೆ, ವೆಸ್ಟರ್ನ್ ಅರಿವಿ ಎಲ್ಲಾ ಹಕ್ಕೊಂತಿದ್ಲು, ಮತ್ತ ಸ್ವಲ ಇಲ್ಲಿಯವರಹಂಗ ಮಾತಾಡ್ತಿದ್ಲು ಅನ್ನೂದು!!

ನನ್ನ ಈ ರೂಮ ಮೇಟ ಯಾವಾಗ್ಲೂ ಹಿಂಗ, ನನ್ನ ಅವನ್ ಅಭಿಪ್ರಾಯ ಸ್ವಲ್ಪ ಬ್ಯಾರೇನ – . ರೂಮ ಮೇಟ್ ಅಂದಮ್ಯಾಲೆ ಅಷ್ಟೂ ಭಿನ್ನಾಭಿಪ್ರಾಯ ಇರಲಿಕ್ಕರ ಹ್ಯಾಂಗ?

ಒಟ್ಟ – ನಮ್ಮ ದೇಸಿ ಗುಂಪನಿಂದ ಹೊಸ ಹುಡುಗೀ ಬಗ್ಗೆ ಅಕಿ ಗಂಡ, ಅಂದ್ರ ನನ್ನ ಹಳೇ ರೂ ಮೇಟ, ಎದ್ರಿಗೆ, “ವೆರಿ ಕಲ್ಚರ್ಡ್’” “ಯು ಆರ್ ಲಕ್ಕಿ” ಅಂತ ಎಲ್ಲಾ ತೀರ್ಪು ಸಿಕ್ಕು ಹುಡುಗ ಹೆಮ್ಮೆ ಪಡುವಂಗ್ ಆತು. ಒಂದು ವಾರ ದಿಂದ ಪರಿಚಯ ಇರೊ ಅವರ ನಡುವ ಇರೂ ಅನ್ಯೊನ್ಯತೆ ನೋಡಿ ನನಗ ಏನಿದು! ಇದ್ದಕ್ಕಿದ್ದಂಗ ಹಿಂಗ ಯಾರನರಾ ಇಷ್ಟು ಹಚಕ್ಕೊಳ್ಳಾಕ ಹೆಂಗ ಸಾದ್ಯ, ಅಂತ ಸಂಶಯ, ಆಮೆಲೆ, ಇದು ಎಲ್ಲರಿಗೂ ಅಗೂದ – , ಇದ್ದಕ್ಕಿದ್ದಂಗ ಗಟ್ಟಿಯಾಗೂ, ಸಂಬಂಧ ರಕ್ತದ್ದ ಇರಬೇಕು ಅಂತ ಎನಿಲ್ಲಾ ಅಂತ ಅನ್ನಸ್ತು ಗಂಡಾ ಹೆಂಡ್ತಿ ಸಂಬಂದ ಬಿಡ್ರಿ, ನಮ್ಮ ಪೆಟ್ರುಶಿಯಾ ಫೀನಿಶ್ ಇದಾರಲ್ಲ, –

ನನಗ ಆಫೀಸು, ಮನಿ, ಊರಿಗೆ ವಾರಕ್ಕೊಮ್ಮೆ ಮಾಡು ಫೋನು, ಅಡಿಗಿ, ರೂಂ ಮೇಟ್ ಕೂಡ ಹೊಡಿಯು ಹರಟಿ, ಭಾಂಡೆ ತೊಳಿಯುದು, ಮಾಲ್ ನ್ಯಾಗ ತಿರುಗಾಡುದು, ಕೈಗೆ ಸಿಕ್ಕಿದ್ದು ಸ್ವಲ ಓದುದು, ಇವೆಲ್ಲ ಹೆಂಗ ದಿನ ದಿನದ ಜೀವನದ ಕೆಲಸಾನೊ ಹಂಗ ಈ ಮುದುಕೀಗೆ, ಫೀನಿಶನ ಹಜಾಮನ ಹತ್ರ ಕರಕೊಂಡು ಹೋಗುದು, ಡಾಕ್ಟರ ಹತ್ರ ಕರಕೊಂಡು ಹೋಗುದು, ಬ್ಯಾಸ ಆದ್ರ ಅವನ ಜೊತಿ, ತನ್ನ ಐಶಾರಂ ಲೆಕ್ಸಸ್ ಕಾರನ್ಯಾಗ ಸುತ್ತಾಡಿಕೊಂಡ ಬರೂದು, ಇಲ್ಲಾ ಉಳಿದ ಮುದುಕ್ಯಾರ್ ಕೂಡ ಹೋಗಿ ಜೂಜ ಆಡಿ ಬರೂದು, ಗೆಳತಿ ಕೂಡ ಫೋನ ನ್ಯಾಗ ಮಾತಾಡೂದು, ಇದ – ಒಂದಿಷ್ಟು ಕೆಲಸ. .

ಹಿಂಗ, ಫೀನಿಸನ ಕೆಲಸಾನ – ಈ ಮುದುಕಿ ಅರ್ಧಾ ದಿನಚರಿ.

ತಾಯಿ ಮಕ್ಕಳ ನಡುವ ಇರೂ ಸಲಿಗೆ, ಪ್ರೀತಿ, ಎಲ್ಲ ಇವ್ರಿಬ್ಬರ ನಡುವ ಐತಿ. ಹಿಂಗಾಗಿ ಫೀನಿಶ್ ಅಕೀ ಖರೇ ಮಗನ- ಅಂತ ಅನಸೂದ್ರಾಗ ಆಶ್ಚರ್ಯ ಎನೂ ಇಲ್ಲ ಅಲ್ಲಾ?.

ಹಿಂಗ ದಿನಾ ಕಳೀತಿರುವಾಗ ಒಂದು ದಿನ, ನಮ್ಮ ಫೀನಿಶ್ ಹುಟ್ಟಿದ ಹಬ್ಬ ಬಂತು . ಪೆಟ್ರುಶಿಯ ಏನೊ ಒಡಾಡಿ ತಯಾರಿ ಮಾಡಾಕತ್ತಿದ್ಲು, ಆಫೀಸ್ನ್ಯಾಗ ಭಾಳ ಕೆಲಸ ಇದ್ದಿದ್ರಿಂದ, ನನಗೇನೂ ಅಷ್ಟು ಹುರುಪ ಇರಲ್ಲಿಲ್ಲಾ ಆದರ ಅಕಿ ಒಡಾಡೂದು ನೋಡಿ, ಸಡಗರ ಪಡೂದು ನೋಡಿ ನಾನು ಅಕೀಗೆ ಅದೂ ಇದೂ ಕೆಲ್ಸಾ ಮಾಡಿ ಕೊಟ್ಟೆ.

ಈ ಪೆಟ್ರುಶಿಯ ಸುಮ್ಮನ ಇರೂ ಹೆಣ್ಮಗಳ ಅಲ್ಲಾ! ಪರಿಚಯ ಇದ್ದವರಿಗೆಲ್ಲಾ ಕರದ ಬಂದಿದ್ಲು. ಹೋದ ವಾರ ಪರಿಚಯ ಮಾಡ್ಕೊಂದಿದ್ದ ನನ್ನ ಗೆಳೆಯಾನ್ ಹೆಂಡ್ತಿ ಭೆಟ್ಟಿ ಅದಾಗ “ಪಾಪ ಅವನ ಹೆಂಡ್ತಿ ಹೊಸಬ್ಳು, ಎಲ್ಲರ ಪರಿಚಯ್ ಅಕ್ಕೆತಿ” ಅಂತ ಅಕಿಗೂ ಬರಾಕ ಹೇಳಿದ್ಲು.

ಪೆಟ್ರುಶಿಯ ಅವತ್ತ ಫೀನಿಶ ಕೂದ್ಲ ಕತ್ರಿಸಿಕೊಂಡು ಬಂದು, ಉಗುರು ತಗದು, ತೆಲಿ ಮ್ಯಾಲಿನ ಕೂದ್ಲ ಬಾಚಿ, ಚಂದಮಾಡಿದ್ಲು, ಇದ್ದವರು ನಾವ- ಹತ್ತು ಹನ್ನೆರಡು ಮಂದಿ, ಅಷ್ಟು ಗದ್ದಲಾ ನೋಡಿ ಫೀನಿಶ್ ಕುಂತಲ್ಲೆ ಕುಂದ್ರಲಾರದ – , ನಿಂತಲ್ಲೆ ನಿಂದ್ರಲಾರದ – , ಅಲ್ಲಿ-ಇಲ್ಲಿ ಓಡ್ಯಾಡಕತ್ತಿದ್ದ, ಕಷ್ಟಾ ಪಟ್ಟು ಕೇಕಿನ್ ಎದ್ರಿಗೆ ಎತ್ಕೊಂಡು ಬಂದು, ತಾನೂ ಅವನ ಕೂಡ್ ಕ್ಯಾಂಡಲ್ ಊದಿ, ಕೈ ಹಿಡದು ಕೇಕ್ ಕತ್ರಿಸಿದ್ಲು, ಅಲ್ಲಿರು ಮುದ್ಕ್ಯಾರು ಕೇಕ್ ತಿನ್ಕೊಂತ ಒಬ್ಬೊಬ್ಬರ‘ ಫೀನಿಶ್ಗ ವಿಶ್ ಮಾಡೂದು, ಮಾತಾಡುದು, ನಡೆದಿತ್ತು.
ಅಶ್ಟರೊಳಗ ನನ್ನ ಗೆಳೆಯಾನ್ ಹೊಸಾ ಹೆಂಡತಿ ಲೇಟ್ ಆದ್ರೂ ಲಿಪ್ ಸ್ಟಿಕ್, ಕಾಡಿಗಿ ಸಮೇತ ಪೂರ್ತಿ ರೆಡಿಯಾಗಿ, ದೊಡ್ಡ ಗಿಫ಼್ಟ ಹಿಡ್ಕೊಂಡು ಬಂದ್ಲು, ಬಂದಕೀನ‘ ಪೆಟ್ರುಶಿಯಾನ್ ನೋಡಿ,

’ವೇರ್ ಇಸ್ ದ ಬ’ಡೇ ಬಾಯ್ ’ ಅನ್ನೊದುಕ್ಕೂ, ಪೆಟ್ರುಶಿಯಾ ಹುರುಪೊನಿಂದ, ಅಲ್ಲೆ ಟೇಬಲ್ ಮೇಲೆ ಕುಂತಿದ್ದ ಫೀನಿಶನ್ ಎತ್ಕೊಂಡು, ’ಹಿಯರ್ ಹಿ ಇಸ್’ ಅನ್ನೊದಕ್ಕೂ ಸರೀ ಹೊತ್!!!

ಆಮೇಲೆ ೩-೪ ನಿಮಿಶ ನಡದ ಘಟನೆ ಬಗ್ಗೆ ನನಗ ಸಿಟ್ಟು ಬಂದು, ನನ ಗೆಳೆಯಾನ ಹೆಂಡ್ತಿಗೆ ನನಗ- ಭಾಳ ವಾದ ಆತು. ನಾ ಯಾವತ್ತೂ ಹೆಚ್ಚ ಪರಿಚಯ ಇಲ್ಲದವರ ಕೂಡ, ಅದೂ ಪರಿಚಯ ಇಲ್ಲದ ಹುಡಿಗ್ಯಾರ್ ಕೂಡ, ಜಾಸ್ತೀ ಮಾತಾಡೂದಿಲ್ಲ. ಆದ್ರ ಈ ಹುಡುಗಿ ಜೊತಿ, ಜಗಳಾ ಆಡುವಶ್ಟು ಸಿಟ್ಟು ಬಂದಿತ್ತು.

ಅಯ್ಯೊ, ಏನ್ ಆತು ಅಂತ ಹೇಳೂದ ಮರತೆ! ಎನಾತೂ ಅಂದ್ರ, ಈ ಹುಡುಗಿ ಫೀನಿಶನ ನೊಡಿದ್ದ- ತಡ, ಇನ್ನೆನು ಮೂರ್ಛೆ ಹೊಕ್ಕಾಳ ಅನ್ನುವಂಗ ಮುಖಾ ಮಾಡಿ, ತಟ್ಟನ- ಸುಧಾರಿಸ್ಕೊಂಡು, ” ಓಹ್ ಕ್ಯಾಟ್ಸ- – ಬರ್ತ್ಡೇ ಯಾ!” ಅಂತ ನಕ್ ಬಿಟ್ಲು. ಪಾಪ ಪೆಟ್ರಿಶಿಯಾ ಮುಖ ಸಣ್ಣಮಾಡಿ, ಸಿಟ್ಟಾಗಿನೂ ಸಿಟ್ಟು ತೊರಿಸದ್-, ನೊವ ಆದ್ರೂ ನಗು ಮಖ ಮಾಡ್ಕೊಂಡು

’ಹಿ ಇಸ್ ಮಯ್ ಬಾಯ್. ಹಿ ಇಸ್ ನೋ ಕ್ಯಾಟ್!’ ಅಂದು ಹೊರಟ್ ಹೋದ್ಲು. ಆಮೆಲೆ ಅಕಿ ನಾವು ನಿಂತಿರೊ ಕಡೆ ಬರಲೇ‌ಇಲ್ಲ. ಫೀನಿಶನ್ ರೂಮನ್ಯಾಗ್ ಬಿಟ್ಟು ತನ್ನ ಗೆಳತ್ಯಾರಿಗೆ ಕೇಕ್, ತಿಂಡಿ, ಕೊಡುವವರ ತರಃ ಓಡಾಡ್ಕೊಂಡಿದ್ಲು. ಆದ್ರ್ ಅಶ್ಟು ಹುರುಪಿನಿಂದ ಆ ಬರ್ತ್ಡೇ ಶುರು ಮಾಡಿದ್ದ ಪೆಟ್ರುಶಿಯ ಅಲ್ಲಿರಲಿಲ್ಲ. ಆದರ ಈ ಹುಡಿಗಿ ಎನೂ ಅಗದವರಹಂಗ, ಅಲ್ಲೆ ನನ್ನ್ ರೊಂ ಮೇಟ್ ಜೊತೆ, ನಕ್ಕೊಂತ ನಿಂತು ಕೇಕ್ ತಿನ್ನಾಕತ್ತಿದ್ಲು. ನನಗ ಅಕಿ ಮುಖಾನೂ ನೊಡಾಕ್ ಮನ್ಸ್ ಬರಲಿಲ್ಲ!

ನಮ್ಮ ಮನಿ ಮುಂದ ಹೊಗಿ, ಈ ಕಡೆ ಬರ್ಲಿ ಅಂತ ಕಾಯ್ಕೊಂಡಿದ್ದೆ, ಅಕಿ ಅಲ್ಲಿ ಬಂದಿದ್ದ ತಡ, “ಎನ್ರೀ ಗೊತ್ತಿದ್ದು ಯಾಕ್ ಬರಬೇಕು, ನಿಮಗ ನಗು ಬಂದರ ಸುಮ್ಮನ ಇರಾಕ್ ಆಗುದಿಲ್ಲ. ” ಅಂತ ಕೈ ತೊಗೊಂಡೆ, ಆದ್ರ ಅಕಿಗೆ ಅದು ಅಷ್ಟು ಗಂಭೀರ ವಿಶಯ ಅನ್ನಸಲೇ ಇಲ್ಲೊ ಎನೊ, ಸುಮ್ಮನ-, ನಕ್ಕೊಂಡೊ. . “ಅಯ್ಯೊ ಎನ್ರೀ?? ’ಐ ಯಾಂ ಹ್ಯಾವಿಂಗ್ ಅ ಬ’ಡೆ ಟ್ರೀಟ್ ಫೊರ್ ಮೈ ಬಯ್, ವೈ ಡೊಂಟ್ ಯು ಕಂ ಒವರ್’” ಅಂದ್ರೆ ಅದು ಬೆಕ್ಕಿನ ಬರ್ತ್ಡೇ ಅಂತ ನನಗೇನ್ರೀ ಗೊತ್ತು ಅಂತಾ ಮತ್ತೆ ನಗಾಕ್ ಶುರು ಮಾಡಿದ್ಲು. ನನ್ನ ರೂಂ ಮೇಟ್ ಗೂ ನಗು. ಉಪಯೊಗ ಇಲ್ಲದ ಮಾತು ಅನಿಸಿ, ಇವರ ಜೊತಿ ಎನ್ ತೆಲಿ ಒಡಕೊಳ್ಳೂದು ಅಂತ ಹೊರಟು ಹೊದೆ.

ಅಂವ ಬೆಕ್ಕು ಖರೆ, ಬೆಕ್ಕಿಗೆ ಬರ್ತ್ಡೇ ಮಾಡುದು ಸ್ವಲ್ಪ ಅಪರೂಪಾನೂ ಖರೆ ಆದ್ರ ಅಕಿಗೆ ಅವ ಬೇಕಾದವ, ಅಕಿ ಮಗಾ ಇದ್ಧಂಗ-, ನಿಮಗ ಮಜ ಅನ್ಸಿದ್ರ ನಿಂ ಮನಿಗೆ ಬಂದ ನಗಬೇಕು ಪೆಟ್ರುಶಿಯ ಮಖ ಸಣ್ಣ ಮಾಡುವಂಗ ಅಕೀ ಎದ್ರಿಗೆ ನಗ್ಬೇಕ?? ಹೊಗ್ಲೀ, ವಾಪಸ್ ಹೊಗಿ, ತಪ್ಪಾತು, ನನಗ ಇದೆಲ್ಲ ಹೊಸತು ಅಂತ ಕ್ಷಮಾ ಆದ್ರೂ ಕೇಳಬಾರದ- ??? ಕಡೀ ಪಕ್ಷಾ “ಪಾಪ ಮುದುಕಿ ಬ್ಯಾಸರ ಮಾಡ್ಕೊಂತೊ ಎನೊ” ಅಂತ ಭಾವನೆ/ಪ್ರಾಯಶ್ಚಿತನೂ ಬ್ಯಾಡ??

ಇವರೆಲ್ಲಾ ನಾ ವಾದ ಮಾಡಿದ್ದು ಕೇಳಿ, “ನಿಂದೊಳ್ಳೆ, ಬೆಕ್ಕಿನ ಸಹವಾಸ ಮಾರಾಯ!! ಅಂದ್ರು.

ನನಗೇನೂ ಬೆಕ್ಕು ಅಂದ್ರ ಪಂಚಪ್ರಾಣ ಅಲ್ಲಾ!! ಆದ್ರ ಫೀನಿಶ್ ವಿಶಯಾನ- ಬ್ಯಾರೆ, ಅಂವ ಬೆಕ್ಕ ಅನೂದಕ್ಕಿಂತ, ನನ್ನ ಗೆಳತಿ ಮಗಾ ಅನ್ನೂದ ಸರಿ. ಆ ಮುದುಕಿ ಪ್ರೀತಿ ಕೂಸ ಇದ್ದಹಂಗ.

ಇಷ್ಟೂ ಗೊತ್ತಾಗುದಿಲ್ಲಾ ಅಂದ್ರ-, ಹೊಗ್ಲಿ ಬಿಡ್ರೀ. . ಇಲ್ಲಿ ಎಲ್ಲಾರು ’ಕಲ್ಚರ್ಡ’ ಮಂದಿ, ಸುಮ್ನ ಯಾಕ ಮಾತು ಬೆಳಸೂದು,
ನಿಮಗೂ ಇದನ್ನ ಓದಿ, ನಗು ಬಂತೊ ಎನೊ??

ಅಮೇರಿಕಾದ್ ಯಾವ್ದೋ ಮುದುಕಿ ಸುದ್ದಿ ನಿಮಗ್ಯಾಕ??

ನಿಮಗ ನಗು ಬಂದ್ರ “ಹುಚ್ಚು ಮುದುಕಿ” ಅಂದೊಂಡು ನಕ್ಕು ಬಿಡ್ರೀ,

ಆದ್ರ ನಾಳೆ ಯವ್ದಾದ್ರೂ (ನಿಮ್ಮ ಮನ್ಯಾಗೊ ನಿಮ್ ಗೆಳೆಯಾರ ಮನ್ಯಾಗೊ, ) ಬರ್ತ್ಡೇ ಇರುವಾಗ ಒಂದು ಕೆಟ್ಟಮುಸುಡಿಯ, ಮುಟ್ಟಿದರ ಉಗುರಿಂದಾ ಪರಚಿ, ಮಾತಾಡಿಸಿದ್ರ, ಚೀರಾಡೊ ಮಗೂಗ ನೀವ್ ಎನಾದ್ರೂ ’ಹಿ ಇಸ್ ಸೋ ಕ್ಯೂಟ್’ ಅಂತ ಅನ್ನೊದನ್ನ ನಾ ಕೇಳಿಸಿಕೊಂಡ ನಕ್ಕರ್- ಸಿಟ್ಟಾ‌ಅಗಬ್ಯಾಡ್ರಿ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.