ಗಾಂಧೀ ಮಗಳು

ಮಕ್ಕಳಿಗೆ ಕೂಗಿ ಕೂಗಿ ಪಾಠ ಹೇಳಿ ಗಂಟಲು ನೋಯುತ್ತಿತ್ತು. ಹೊಟ್ಟೆ ರಕ ರಕ ಎನ್ನುತ್ತಿತ್ತು. ರೂಮಿಗೆ ಬಂದು ಡಬ್ಬಿ ತೆಗೆದ ದೇವಕಿ ಗಬ ಗಬ ತಿನ್ನತೊಡಗಿದಳು. ಉಳಿದ ಸಹೋದ್ಯೋಗಿಗಳೂ ಆಗಲೇ ಊಟ ಮಾಡುತ್ತಿದ್ದರು. ಊಟಕ್ಕೆ ಕುಳಿತಾಗ ಮೊದಲೆಲ್ಲ ತಂದದ್ದನ್ನು ಹಂಚಿಕೊಳ್ಳುವಷ್ಟು ಪ್ರೇಮವಿತ್ತು ಅವರಲ್ಲಿ. ಅವಳು ಬಂದಮೇಲೆ ಎಲ್ಲಿ ತನ್ನ ಊಟದಲ್ಲಿಯೂ ಪಾಲು ಕೊಡುತ್ತಾಳೋ ಎನ್ನುವ ಭಯದಿಂದ ಆ ಪ್ರೀತಿ ತನ್ನಷ್ಟಕ್ಕೆ ತಾನೇ ಮಾಯವಾಗಿತ್ತು. ಒಂದಿಷ್ಟೂ ಸುಳಿವು ಕೊಡದೆ. ಇದು ದೇವಕಿಗೇನೋ ದುಃಖದ ಸಂಗತಿ. ಆದರೆ ಅವಳಾದರೂ ತಾನೆ ಏನು ಮಾಡಬಲ್ಲಳು? ಆ ಜಾತಿಯಲ್ಲಿ ಹುಟ್ಟಿದ್ದು ತನ್ನ ತಪ್ಪೇನಲ್ಲ, ಆ ಜಾತಿಯನ್ನು ಹುಟ್ಟಿಸಿದವರದ್ದೇ ತಪ್ಪು ಎನ್ನುವ ವಾದ ಅವಳದು. ಹಾಗೆಂದು ವಾದ ಬೆಳೆಸುವವಳೂ ಅವಳಲ್ಲ. ಅಷ್ಟೇ ಅಲ್ಲ, ಕೀಳರಿಮೆಯಿಂದ ಅವರ ಮುಂದೆ ಕುಗ್ಗಿ ನಡೆಯುವದು ದೌರ್ಬಲ್ಯವೆಂದುಕೊಂಡಿದ್ದಳು. ಅವರಾದರೂ ಊಟ ಅಡುಗೆಯ ವಿಷಯದಲ್ಲಿ ಅಷ್ಟು ಕಟ್ಟುನಿಟ್ಟಾದರೂ ಉಳಿದುದರಲ್ಲಿ ಸ್ನೇಹಿತರೇ.

“ದೇವಕೀ, ನಿಮ್ಮ ಸೀರಿ ಎಷ್ಟ ಛಂದ ಅದ, ಎಲ್ಲಿ ಕೊಂಡಿರಿ?” ಎಂದು ಶ್ಯಾಮಲಾ ಕೇಳಿದರೆ-
“ದೇವಕೀ. ನಿಮಗ ಕರ್ರಗ ಮೊಣಕಾಲತನಾ ಉದ್ದ ಕೂದಲು ಅದಾವ, ಯಾವ ಎಣ್ಣೀ ಹಚ್ತೀರಿ?” ಮಂದಾಕಿನಿ ವಿಚಾರಿಸುವಳು.
“ಶುದ್ಧ ನಾರಿಯಲ್ ತೇಲ್” ಎಂದು ಟಿ.ವಿ. ಜಾಹಿರಾತಿನಂತೆ ಕಣ್ಣು ತಿರುಗಿಸುತ್ತ ದೇವಕಿ ಹೇಳುವಾಗ ಎಲ್ಲರೂ ನಕ್ಕುಬಿಡುವರು.
“ನಿಮ್ಮ ದನಿ ಕೋಗಿಲೆ ಹಾಂಗ ಎಷ್ಟ ಮಧುರ ಅದ ದೇವಕಿ, ಈ ಸಾರೆ ವಾರ್ಷಿಕೋತ್ಸವಕ ಮಕ್ಕಳಿಗೆ ಗ್ರುಪ್‌ಸಾಂಗ್ ನೀವ ಕಲಸರಿ” ಎಂದು ಸರಿತಾ ಉಪಾಯವಾಗಿ ಹೊಣೆ ಹೊರಿಸುವಳು.
“ನಮ್ಮ ಶಾಲೆಯ ಲತಾ ಮಂಗೇಶಕರ ನಾನೇ” ಎಂದು ಅವರ ಪ್ರಶಂಸೆಯನ್ನು ನಗೆಯಲ್ಲಿ ತೇಲಿಸಿಬಿಡುವಳು ದೇವಕಿ-

ಆ ದಿನ ಶ್ಯಾಮಲಾಳ ಮುಖ ಬಾಡಿತ್ತು, ಕಣ್ಣು ಕೆಂಪಾಗಿತ್ತು. “ಯಾಕ್ರೀ ಶ್ಯಾಮಲಾ, ಏನಾಗೆದ? ಆರಾಮ ಅದೀರಿಲ್ಲೊ?” ದೇವಕಿಯ ಮೆತ್ತಗಿನ ದನಿಯಲ್ಲಿಯ ಪ್ರೀತಿ ಶ್ಯಾಮಲಾಳ ದುಃಖಕ್ಕೆ ಚಾಲನೆ ಕೊಟ್ಟಿತು.

ಏನೂ ಇಲ್ಲ ಎನ್ನುತ್ತಲೇ ಅಳುತ್ತ ಎಲ್ಲ ಹೇಳಿದಳು ಶ್ಯಾಮಲಾ. ಅವಳ ತಾಯಿಗೆ ಜಡ್ಡಾಗಿದೆ. ತಮ್ಮ, ಹಣಕ್ಕಾಗಿ ಪತ್ರ ಬರೆದಿದ್ದಾನೆ. ತಿಂಗಳಿಗೆ ಸಾವಿರಾರು ರೂಪಾಯಿ ಸಂಪಾದಿಸುವ ಗಂಡ ಹಣ ಕೊಡಲು ತಯಾರಿಲ್ಲ. ತವರಿನವರ ಕಷ್ಟಕ್ಕೆ ಸಹಾಯ ಮಾಡಬೇಕೆಂಬ ಮನಸ್ಸಿಗೆ ನೋವಾಗುತ್ತಿದೆ. ಗಂಡ ಇವಳ ಪೂರ್ತಿ ಸಂಬಳ ಬ್ಯಾಂಕಿಗೆ ಹಾಕುತ್ತಾನೆ. ತನ್ನ ಖರ್ಚಿಗೆ ಬೇಕಾದರೂ ಜಗಳ ಮಾಡಿ ಪಡೆಯಬೇಕು. ದೇವಕಿಗೆ ಆಶ್ಚರ್ಯ, ಸಿಟ್ಟು. ಅವಳು ದುಡಿದ ಹಣದ ಮೇಲೆ ಅವಳಿಗೆ ಹಕ್ಕಿಲ್ಲವೇ? ಶ್ಯಾಮಲಾಳ ಗಂಡ ಜಿಪುಣ, ಮಂದಾಕಿನಿ ಗಂಡ ತವರುಮನೆಯಿಂದ ತಾ ಎಂದು ಬರೆ ಹಾಕ್ತಾನೆ. ಸರಿತಾನ ಅತ್ತೆ ಅವಳು ಬಂಜೆ ಎಂದು ಎಲ್ಲರೆದುರು ಹೀಯಾಳಿಸಿ, ಹಿಂಸೆ ಮಾಡ್ತಾಳೆ. ಎಂಥ ಹೆಂಗಸರಿವರು, ಎಷ್ಟೊಂದು ನೋವು ನುಂಗ್ತಾರೆ, ಮತ್ತೆ ತಮ್ಮ ಸಮಾನರು ಯಾರಿಲ್ಲ ಅಂತ ಸೊಕ್ಕು ಮಾಡ್ತಾರೆ. ಕಣ್ಣೀರಿನಲ್ಲಿ ಕೈ ತೊಳೀತಾರೆ. ಸಹಿಸಲಿಕ್ಕೆ ಆಗದಿದ್ದಾಗ ಜೀವಾ ಕೊಡ್ತಾರೆ. ಎದುರಿಸಿ ನಿಲ್ಲೋ ಅಷ್ಟು ಛಾತೀನೇ ಇಲ್ಲ ಇವರಲ್ಲಿ. ಕಲಿತವರೂ ಅಷ್ಟೇ, ಮೇಲ್ಜಾತಿಯವರಾದರೇನು, ನಮ್ಮವರಾದರೇನು ಒಬ್ಬೊಬ್ಬರದು ಒಂದೊಂದು ತರದ ದೌರ್ಬಲ್ಯ, ಮೂರ್ಖತನ, ಹೇಡಿಗಳು-ದೇವಕಿ ವಿಚಾರ ಮಾಡುತ್ತ ಕೈ ತೊಳೆಯಲು ಎದ್ದಾಗ ಕೋಣೆ ಖಾಲಿಯಾಗಿತ್ತು. ಮರುದಿನ ದೇವಕಿ ಶ್ಯಾಮಲಾಳಿಗೆ ನೂರು ರೂಪಾಯಿ ಕೊಟ್ಟಿದ್ದಳು. ಅವಳು ತಿರುಗಿ ಕೊಡ್ತಾಳೆ ಎನ್ನುವ ಭರವಸೆಯೂ ಇಲ್ಲದೆ.

ತನ್ನ ಹಿಂದೆ ತನ್ನ ಬಗ್ಗೆ ಏನು ಮಾತಾಡ್ಕೊಳ್ತಾರೆ ಎನ್ನುವ ಬಗ್ಗೆ ದೇವಕಿ ಎಂದೂತಲೆ ಕೆಡಿಸಿಕೊಂಡವಳಲ್ಲ. ಕ್ಲಾಸು ಮುಗಿಸಿ ಡಬ್ಬಿ ಹಿಡಿದು ಬರುವುದು ಒಂದು ದಿನ ತಡವಾದಾಗ ಶ್ಯಾಮಲಾ ಮಂದಾಕಿನಿಗೆ ಹೇಳುತ್ತಿದ್ದ ಮಾತು ಕಿವಿಗೆ ಬಿತ್ತು.
“ಗಂಡನ್ನ ಬಿಟ್ಟು ಬಂದು ಆರಾಮ ಚೈನೀ ಅದಾಳ ತಾನೊಬ್ಬಳ, ಇಂಥವರಿಗೆಲ್ಲಾ ಏನ ನೀತಿ-ನಡಾವಳಿ ಇರ್ತದ, ಮನಸ್ಸಿಗಿ ಬಂದದ್ದ ಮಾಡತಾರ.”

ಅವರ ಮಾತು ಕಿವಿಗೆ ಬಿದ್ದೇ ಇಲ್ಲವೆನ್ನುವಂತೆ ಒಳಗೆ ಬಂದು ಎಲ್ಲರನ್ನೂ ನೋಡಿ ನಗು ತೂರಿ ಡಬ್ಬಿ ಬಿಚ್ಚಿದಳು. ಶ್ಯಾಮಲಾ ಮಾತ್ರ ತಗ್ಗಿಸಿದ ತಲೆ ಎತ್ತಿರಲಿಲ್ಲ.

ತನ್ನ ಬಗ್ಗೆ, ತನ್ನ ಹಿಂದಿನ ಜೀವನದ ಬಗ್ಗೆ ಇವರಿಗೆಲ್ಲ ಏನು ಗೊತ್ತಿದೆ? ತನ್ನ ಮನೆ ಎಲ್ಲಿದೆ. ಮನೆಯಲ್ಲಿ ಯಾರಾರಿದ್ದಾರೆ ಎನ್ನೋದು ಗೊತ್ತಿಲ್ಲ. ತನ್ನ ಗಂಡ ಯಾರು ಅನ್ನೋದು ಇವರಿಗೆ ಗೊತ್ತಿಲ್ಲ. ಈ ದಿನ ತನ್ನ ಮನೆಯಲ್ಲಿ ಏನಾಗಿದೆ? ತನಗೆ ಏನು ಕಷ್ಟ ಇದೆ, ಹ್ಯಾಗೆ ಜೀವನ ಮಾಡ್ತೀನಿ-ಉಹು ತಿಳಕೊಳ್ಳೋದರಲ್ಲಿ ಯಾರಿಗೂ ಆಸಕ್ತಿ ಇಲ್ಲ. ಇಂಥವರ ಮುಂದೆ ನಾನು ನನ್ನ ಸುಖ-ದುಃಖ ತೋಡಿಕೊಳ್ಳಲೇ? ಉಹುಂ, ನನ್ನ ಅಭಿಮಾನ ಒಪ್ಪೋದಿಲ್ಲ-ಢಣ್‌ಢಣ್ ಶಾಲೆಯ ಗಂಟೆ ದೇವಕಿಯನ್ನು ಎಚ್ಚರಿಸಿ ಮನೆಗೆ ಓಡುವಂತೆ ಮಾಡಿತು.

ದೇವಕಿಯ ಕೈ ಮಗಳನ್ನು ತಟ್ಟುತ್ತಿದ್ದರೂ ಬಾಗಮ್ಮನ ಮುಖವೇ ಕಣ್ಣಮುಂದೆ ಕಟ್ಟಿತ್ತು. ಜ್ವರ ಬಂದ ಕಿರಣಳನ್ನು ಸಂಜೆಯವರೆಗೆ ನೋಡಿಕೊಂಡಿದ್ದಳು. ಆದರೆ ಇವತ್ತು ಅವಳಿಗೆ ಅವಸರದಲ್ಲಿ ಏನೂ ತಂದಿರಲಿಲ್ಲ. ಎಲೆ ಅಡಿಕೆ, ನಾಶೀಪುಡಿ ಏನಾದರೂ ತರಬೇಕಿತ್ತು. ತನ್ನ ಖಾಲಿ ಕೈ ನೋಡಿ ಬಾಗಮ್ಮನವರ ಮುಖ ಗಂಟಾಗಿತ್ತು. ನಿರಾಶೆಯಿಂದ ಮುಖ ತಿರುವಿದ್ದಳು. ಆದರೆ ಹೀಗೆ ತಂದುಕೊಡುವ ಆಸೆಯನ್ನು ಹಚ್ಚಿದವಳು ತಾನೆ. ಮೊದಮೊದಲು ಮುದುಕಿ ಏನೂ ಬೇಡ ಬೇಡ ಎನ್ನುತ್ತಿದ್ದಳು. ಈಗೀಗ ಏನಾದರೂ ತರದಿದ್ದರೆ ಸಿಟ್ಟು ಬರುತ್ತದೆ ಬಾಗಮ್ಮನಿಗೆ…

ಗೌತಮ ಬುದ್ಧ ಹೇಳಿದ್ದು ಸತ್ಯ. ‘ಅಸೆಯೇ ದುಃಖಕ್ಕೆ ಮೂಲ’ ಎಂದು ಹೇಳಿದ ಬುದ್ದ ಆಸೆಯನ್ನು ಗೆದ್ದು ಮಹಾಪುರುಷನಾದ. ಆದರೆ ತನ್ನ ಗುರು, ಮಾರ್ಗದರ್ಶಿ, ಕೇರಿಯ ಯುವಕರ ನಾಯಕ ತನ್ನ ಶ್ರೀಧರಣ್ಣ ಏನಾದ? ಬುದ್ಧನ ತತ್ತ್ವಗಳಿಗೆ ಮರುಳಾಗಿ ಬೌದ್ದನಾಗಿ ನಮ್ಮ ಕೇರಿಯನ್ನು ಬಿಟ್ಟು ಒಳ್ಳೆಯ ಬೀದಿಗೆ, ಅಂತಸ್ತಿಗೆ, ಮಹಡಿ ಮನೆಗೆ, ಬದಲಾಗುತ್ತ ಹೋದ ಶ್ರೀಧರಣ್ಣ ಎತ್ತರಕ್ಕೆ ಏರಲು ಹೋಗಿ ಕೆಳಗೆ ಬಿದ್ದುಬಿಟ್ಟಿದ್ದ. ನಾವಿದ್ದ ಜಾಗದಿಂದಲೇ ಮೇಲೆ ಹೋಗೋದಕ್ಕೆ ಸಾಧ್ಯವಿಲ್ಲವೇ? ಯಾಕಿಲ್ಲ? ಮನುಷ್ಯ ಬದಲಾಗಬೇಕೆ ಹೊರತು ಒಂದಂಗಿ ಬಿಟ್ಟು ಇನ್ನೊಂದನ್ನು ತೊಡುವ ಹಾಗೆ ಆಗಬಾರದು. ಧರ್ಮ ಬದಲಾದರೆ ಒಳಗಿನ ಆಸೆ, ರೋಷ, ದುಷ್ಟತನ ಎಲ್ಲ ಹೋಗಿಬಿಡುತ್ತವೆಯೆ ಎಂದು ಅವನೊಡನೆ ತುಂಬಾ ಜಗಳಾಡಿದೆ. ‘ನೀನೂ ಸದಾಶಿವನ ಹಾಂಗ ಮಾತಾಡಬ್ಯಾಡಾ’ ಅಂದ. ‘ಯಾರು ಸದಾಶಿವ’ ಅಂದೆ, ತನ್ನ ಗೆಳೆಯನ ಪರಿಚಯ ಮಾಡಿ ಕೊಟ್ಟ….
‘ನಿನ್ನ ಸೀದ್ರಣ್ಣ ಬೌದ್ಧ ಆಗಿ ಆನಂದ ಆಗಲಿಕ್ಕೆ ಹೊಂಟಾನ, ನೀ ಏನ ಆಗ್ತೀ” ಸದಾಶಿವ ಮೊದಲನೇ ಪ್ರಶ್ನೆ ಎಸೆದಿದ್ದ.
“ಈ ಮಾತಿನಿಂದ ಅಣ್ಣನ ಕೂಡ ಮನ್ಯಾಗ ದಿನಾ ಜಗಳಾಡತೀನಿ. ಅಂವಾ ಕೇಳವೊಲ್ಲ, ಅಂವನ ತಲ್ಯಾಗ ದೆವ್ವ ಹೊಕ್ಕೈತಿ”.
“ಹೌದು, ನೀ ಅನ್ನೋದು ಖರೆ ಐತಿ, ಅಂವನ ತಲ್ಯಾಗ ದೆವ್ವ ಹೊಕ್ಕೈತಿ. ನಾನು, ಸಂಘದ ಗೆಳೆಯರು ಎಲ್ಲಾರೂ ಕೂಡಿ ಭಾಳ ಪ್ರಯತ್ನ ಮಾಡಿದಿವಿ. ಏನೂ ಉಪಯೋಗ ಆಗಲಿಲ್ಲ. ಅಂವಾ ಅಂತೂ ನಮ್ಮ ಕೈ ಬಿಟ್ಟ ಹೊಂಟಾನ, ನೀ ಏನ ಮಾಡೂವಾಕಿ ಹೇಳ. ಇಲ್ಲೇ ಅಪ್ಪ-ಅವ್ವನ ಕೂಡ ಇರ್ತೀಯೋ, ನೀನೂ ಹೋಗ್ತಿಯೊ?”
“ನಮ್ಮಪ್ಪ-ಅವ್ವ, ತಮ್ಮಂದಿರು ಎಲ್ಲಾರೂ ಅಣ್ಣನ ಕೂಡ ಹೋಗಲಿಕ್ಕೆ ಒಂಟಿಗಾಲ ಮ್ಯಾಲ ನಿಂತಾರ. ನಾ ಮಾತ್ರ ಗಟ್ಟಿ ಮನಸ ಮಾಡೇನಿ. ನಾ ಒಬ್ಬಾಕಿ ಆದರೂ ಅಡ್ಡಿಯಿಲ್ಲಾ, ಇಲ್ಲೇ ಕೇರಿಯೊಳಗ ಇದ ಗುಡಿಸಲದಾಗ ನಾ ಇರಾಕಿ.”
“ಹೊಟ್ಟಿಗೆ ಏನ್ಮಾಡ್ತಿ?”
“ಪಿ.ಯು.ಸಿ. ಪಾಸಾಗೇನಿ.ಎಲ್ಲೆರ ಕೆಲಸಾ ಹುಡಕತೇನಿ, ಯೋಗೀಶ ಪ್ರಿಂಟಿಂಗ ಪ್ರೆಸ್ಸಿನ್ಯಾಗ ಕೆಲಸಾ ಕೊಡಸ್ತೀನಿ ಅಂದಾನ ನಮ್ಮ ಸಂಘದ ಕೆಲಸಾ ಮಾಡತೇನಿ. ನಮ್ಮ ಜನರಿಗೆ ತಿಳವಳಿಕಿ ಹೇಳ್ತೀನಿ. ಅವರಿಗೆ ಆಗೂ ಅನ್ಯಾಯ, ಅತ್ಯಾಚಾರಾ ಎದುರಿಸತೀನಿ” ಆವೇಶದಿಂದ ಹೇಳಿದೆ. ಅವನ ಕಣ್ಣುಗಳಲ್ಲಿ ಮೆಚ್ಚುಗೆ ಮೂಡಿತ್ತು.
“ವಾಹ್‌ರೇ ಹುಡುಗೀ. ಇನ್ನೂತನಾ ನಿನ್ನಂಥಾ ಹುಡೂಗೀನ ನನಗ ಸಿಕ್ಕಿದ್ದಿಲ್ಲಾ.” ಅವನ ಹೊಗಳಿಕೆ ತನ್ನ ಕಪ್ಪು ಕೆನ್ನೆಗಳನ್ನು ಕೆಂಪಾಗಿಸಿದ್ದು ಅವನಿಗೆ ಕಾಣುವುದು ಹೇಗೆ ಸಾಧ್ಯ? ಹಾಗೇ ಮಾತು ಮುಂದುವರಿಸಿದ್ದ. “ನಿನ್ನ ಛಲ, ದಿಟ್ಟಿತನದ ಮಾತು, ಗಟ್ಟಿ ಮನಸ್ಸು ನೋಡಿದರ ನಮ್ಮ ಅವ್ವನ ನೆನಪ ಆಗತೈತಿ.” ಸದಾಶಿವನ ಅವ್ವನನ್ನು ಎಂದಾದರೂ ನೋಡಬೇಕೆಂದು ತನಗೆ ಆಗಲೇ ಅನ್ನಿಸಿತ್ತು.
ಸಂಘ, ಸಮ್ಮೇಳನ, ಹೋರಾಟ, ಮೆರವಣಿಗೆಯ ಕೆಲಸಗಳಲ್ಲಿ ನನ್ನ, ಸದಾಶಿವನ ಓಡಾಟ, ಒಡನಾಟ ಹೆಚ್ಚಾಗತೊಡಗಿತು. ಕೇರಿಯ ಜನರ ಬಾಯಿ ಸುಮ್ಮನಿದ್ದೀತೆ? ನನ್ನ ಬಳಿ ಅರಿವೆ ಮಾತು, ಓದು, ಬುದ್ಧಿ ಅವರಿಂದ ನನ್ನನ್ನು ದೂರ ಒಯ್ದಿರಬೇಕು. ನನಗೆ ತಂಗಿಯೇ ಇಲ್ಲ, ಸತ್ತು ಹೋಗಿದ್ದಾಳೆಂದು ಒದರಿ ಜಗಳಾಡಿ ಹೋಗಿದ್ದ ಸೀದ್ರಣ್ಣನ ಮನೆಯ ಹೊಸಲು ನಾನು ಮತ್ತೆ ಮೆಟ್ಟಿರಲಿಲ್ಲ. ತನ್ನ ಸುತ್ತಮುತ್ತೆಲ್ಲ ಹುಡುಗರೇ ಇದ್ದರೂ ತನಗೆ ಸರಿಯಾಗುವಂಥ ಒಬ್ಬ ಯುವಕನೂ ಕಣ್ಣಿಗೆ ಬಿದ್ದಿರಲಿಲ್ಲ. ಅಣ್ಣನ ವೈರಿಗಳು, ನನ್ನ ಬಗ್ಗೆ ಹೊಟ್ಟೆಕಿಚ್ಚು ಪಡುವವರೂ ಅಲ್ಲಿದ್ದರು. ಅಂಥವರ ಮಾತುಗಳಿಂದ ತಳಮಳಗೊಳ್ಳುತ್ತಿದ್ದೆ. ಅಂಥ ದಿನಗಳಲ್ಲೇ-
“ದೇವಕೀ, ನೀ ನನ್ನ ಮದುವೀ ಆಗ್ತೀಯಾ” ಸದಾಶಿವನ ಮಾತಿಗೆ ಬೆಚ್ಚಿಬಿದ್ದಿದ್ದೆ. ನನ್ನ ಮನಸ್ಸಿನ ಮಾತುಗಳನ್ನೇ ಕಿವಿ ಕೇಳುತ್ತಿರುವ ಭ್ರಮೆ ಎಂದುಕೊಂಡೆ.
“ದೇವೂ ನನಗೆ ನಿನ್ನ ಸ್ವಭಾವ, ಗುಣಾ ಭಾಳ ಸೇರ್ತದ. ನಾವಿಬ್ಬರೂ ಮದುವೀ ಮಾಡಿಕೊಂಡರ ಸುಖದಿಂದ ಇರ್ತೀವಿ ಅನಸ್ತದ.”
“ನನ್ನ ರೂಪ, ಬಣ್ಣಾ…?”
“ಅಮಾವಾಸ್ಯಿ ದಿನ ನಕ್ಷತ್ರ ಹೊಳದಾಂಗ ಥಳಾಥಳಾ ಹೊಳೀತಾವಲ್ಲ ಈ ಜೋಡಿ ಕಣ್ಣು. ಇದರ ಮುಂದ ನಾ ಜಗತ್ತ ಮರೀತೇನಿ. ಈ ನಿನ್ನ ಉದ್ದನ್ನ ಕೂದಲ ನನಗೆ ಎಷ್ಟ ಹುಚ್ಚ ಹಿಡಿಸೈತಿ ಅಂದರ ಸಾಯೂವಾಗ ಈ ನಿನ್ನ ಜಡೀಲೆ ಉರ್ಲ ಹಾಕ್ಯೋಬೇಕು ಅನಸತೈತಿ.” ತಳಮಳ, ಉದ್ವೇಗ ಎಲ್ಲ ಶಾಂತವಾಗಿ ಶುದ್ಧ ಪ್ರೇಮ ಒಂದೇ ಉಳಿದಿತ್ತು ನನ್ನ ಮನಸ್ಸಿನಲ್ಲಿ.
ಮಾನವ ಕುಲವೇ ನಮ್ಮ ಕುಟುಂಬ ಎಂದುಕೊಂಡ. ನಾವಿಬ್ಬರೂ ಒಂದು ಸಭೆಯಲ್ಲಿ ನೂರಾರು ಜನರ ಎದುರು ಹಾರ ಬದಲಾಯಿಸಿ ಸತಿ-ಪತಿಗಳಾದೆವು. ನನಗೆ ಅಷ್ಟೇ ಸಾಕಿತ್ತು. ಸದಾಶಿವ ಸುಮ್ಮನಿರದೆ ರಜಿಸ್ಟ್ರಾರ ಕಛೇರಿಯಲ್ಲಿಯೂ ಮದುವೆ ನೊಂದಾಯಿಸಿದ. ಮನುಷ್ಯನಿಗೆ ಕಾಣುವಂಥ ಮುಖವೊಂದೇ ಅಲ್ಲದೆ ಇನ್ನೂ ಬೇರೆ ಬೇರೆ ಮುಖಗಳಿರುತ್ತವೆಂದು ತಿಳಿಯದಷ್ಟು ನಾನು ಮುಗ್ಧಳಾಗಿದ್ದೆ. ಅಲ್ಲದೇ ನನಗೆ ಇದ್ದಿದ್ದೊಂದೇ ಮುಖ. ಅಲ್ಲದೆ ನನ್ನ ಬದುಕಿನ ಹೀರೋ ನಾಲ್ಕಾರು ವರ್ಷಗಳಲ್ಲಿ ಸಂಪೂರ್ಣ ಬದಲಾಗಿದ್ದ. ಮನಸ್ಸಿನ ಆಸೆಗೆ ಮಿತಿಯಿಲ್ಲ ಎನ್ನುವ ಮಾತಿಗೆ ಸದಾಶಿವನೂ ಹೊರತಾಗಿರಲಿಲ್ಲ. ಆದರ್ಶ ಪ್ರೇಮವನ್ನು ಎಲ್ಲೋ ಒಗೆದುಬಿಟ್ಟು ಅಂತರ್ಜಾತಿ ವಿವಾಹಕ್ಕೆ ಸರಕಾರ ಕೊಡುವ ಎಲ್ಲ ಸವಲತ್ತುಗಳನ್ನೂ ಪಡೆದ. ಹಣ, ನೌಕರಿ, ಸೈಟು ಎಲ್ಲ ಬಾಚಿಕೊಂಡ. ಮದುವೆಯಾದೊಡನೆ ನಾನು ಕೇರಿಯ ಗುಡಿಸಲನ್ನು ಬಿಡಬೇಕಾಗಿತ್ತು. ಅದೇ ನನ್ನ ತಪ್ಪು. ಸದಾಶಿವ ನನ್ನ ಜೊತೆಗೆ ನನ್ನ ಗುಡಿಸಲಲ್ಲಿ ಇರಲು ಸಾಧ್ಯವೇಕಿಲ್ಲ ಎನ್ನುವ ಪ್ರಶ್ನೆ ನನ್ನ ಮನದಲ್ಲಿ ಹುಟ್ಟದಷ್ಟು ಅವನ ಪ್ರೇಮನಾಟಕದ ನಾಯಕಿಯ ಪಾತ್ರದಲ್ಲಿ ಕಳೆದುಹೋಗಿದ್ದೆ. ಸರಕಾರೀ ಕಾಲೇಜಿನ ರೀಡರು, ಒಳ್ಳೇ ಮನೆ, ಸೀರೆಗಳು, ಪಾತ್ರೆ-ಸಾಮಾನು, ಓಡಾಡಲು ಸ್ಕೂಟರು, ಕಂಕುಳಲ್ಲೊಂದು ಮಗು, ಕೆಲಸ ಬಿಟ್ಟು ಹಾಯಾಗಿದ್ದೆ, ಎಲ್ಲ ಇತ್ತು, ಇನ್ನೇನು ಬೇಕಿತ್ತು ನನಗೆ. ಇಷ್ಟೆ ಸಾಕೆ? ಸಾಕಾಗಿಲ್ಲ ಇನ್ನೂ ಏನೋ ಬೇಕು ಎನ್ನುವ ಅತೃಪ್ತಿ ಒಳಗೇ ಹೊಗೆಯಾಡುತ್ತಿತ್ತು. ಸದಾಶಿವ ಕ್ಲಾಸು, ಪರೀಕ್ಷೆ ಕಾಲೇಜು ಎಂದು ಸಂಘದ ಕೆಲಸಕ್ಕೆ ತಪ್ಪಿಸಿಕೊಳ್ಳುತ್ತಿದ್ದ ವಿಷಯ ನನ್ನ ಗಮನಕ್ಕೆ ಬರುತ್ತಿತ್ತು. ಬರಬರುತ್ತ ನಾನು ಹೋದರೂ ಗೊಣಗುತ್ತಿದ್ದ. ಕೊನೆಗೆ ನಿರ್ಬಂಧ ಹಾಕಿದ. ಅದೇ ಅಸಮಧಾನ ಬೆಳೆದು ತನ್ನಲ್ಲಿ ಬಿಸಿಯಾಗಿ ಜಗಳಗಳಾಗುತ್ತಿದ್ದವು. ಪ್ರೇಮದ ಕಾವು ಇಳಿಯುತ್ತ ಹೋದಂತೆ ಈ ಎಲ್ಲ ಕೊರತೆಗಳು ಸ್ಪಷ್ಟವಾಗಿ ಇಬ್ಬರ ನಡುವಿನ ಬಿರುಕು ಹೆಚ್ಚುತ್ತಾ ಹೋಯಿತು. ಅಂದು ತಾನು ಹಟ ತೊಟ್ಟು. ಕಿರಣಗಳನ್ನು ಎತ್ತಿಕೊಂಡೇ ಮೆರವಣಿಗೆಯಲ್ಲಿ ಹೋದೆ. ಸದಾಶಿವ ಸಿಟ್ಟಾಗಿ ತನ್ನನ್ನು ಹೊಡೆದು ಮರ್ಯಾದೆ ಹಾಳಾಗುತ್ತಿದೆಯೆಂದು ಕೂಗಾಡಿದ. ಇತ್ತಿತ್ತಲಾಗಿ ಅವನು ತನ್ನನ್ನು ತೀವ್ರವಾಗಿ ಪ್ರೇಮಿಸಲೂ ಹಿಂಜರಿಯುತ್ತಿದ್ದ. ನಮ್ಮ ದಾರಿ ಕವಲೊಡೆದಿದ್ದುವು. ಈ ಬದಲಾವಣೆ ಹೇಗೆ ಕೊನೆಗೊಳ್ಳುತ್ತದೆ ಎಂದು ತಾನು ಭಯಪಡುತ್ತಿದ್ದ ದಿನಗಳಲ್ಲೇ –
“ದೇವಕಿ, ನಾ ಹಳ್ಳೀಗೆ ಹೋಗಿ ಬರತೀನಿ. ಕೆಲಸ ಅದ. ತಿರುಗಿ ಬರೂದು ತಡಾ ಆಗ್ತದ, ನನ್ನ ದಾರೀ ನೋಡಬ್ಯಾಡಾ.”
“ನಿಮ್ಮ ಅವ್ವನ್ನ, ಹಳ್ಳೀನ ನಾನೂ ನೋಡಬೇಕು. ಈ ಸಲಾ ಆದ್ರೂ ನನ್ನೂ ಕರಕೊಂಡು ಹೋಗ್ರಿ.”
“ಇಲ್ಲಾ ನನ್ನ ಮದುವೀ ಅಗೇದ. ಅದೂ ಹರಿಜನ ಹುಡುಗೀ ಮಾಡಿಕೊಂಡೀನಿ ಅಂತ ನಾ ಯಾರಿಗೂ ಹೇಳಿಲ್ಲ. ಗೊತ್ತಾದರ ಅವ್ವ ಎದಿ ಒಡಕೊಂಡ ಸಾಯ್ತಾಳ. ನೀ ಬರೂದು ಬ್ಯಾಡಾ.”
ಸದಾಶಿವ ಹೊರಟುಹೋಗಿದ್ದ. ನಮ್ಮ ಮದುವೆಯಾಗಿ ಮೂರು ವರ್ಷ ಕಳೆದಿದ್ದರೂ ಈ ಸುದ್ದಿ ಮನೆಯಲ್ಲಿ ಹೇಳಿಲ್ಲ ಎಂದಿದ್ದ ಸದಾಶಿವನ ಇನ್ನೊಂದು ಮುಖದ ಪರಿಚಯ ಆದಾಗ ನಾನು ಕುಸಿದುಬಿದ್ದೆ. ಅದೇ ಕೊನೆಯ ಭೆಟ್ಟಿ. ತಿಂಗಳೂ ಕಳೆದರೂ ಸದಾಶಿವ ಬರಲಿಲ್ಲ. ಮನೆಯ ದಿನಸಿ ತೀರಿದಾಗ ಒಂದೆರಡು ಪಾತ್ರೆ ಮಾರಿದೆ. ಸದಾಶಿವನೇ ಬಿಟ್ಟು ಹೋದಮೇಲೆ ಆ ಮನೆಯಲ್ಲಿ ಇರುವ ಅಧಿಕಾರ ತನಗಿಲ್ಲ ಎನ್ನಿಸಿದಾಗ ಎರಡು ದಿನ ಉಪವಾಸವಿದ್ದೆ. ಪೈಸೆ ಖರ್ಚಿಲ್ಲದೆ ಮಗಳ ಜೊತೆ ಕೆರೆಗೆ ಬಿದ್ದು ಸಾಯಬೇಕೆನ್ನುವ ಯೋಚನೆಯೂ ಬಂದಿತ್ತು ಮನೆಯವರು, ಕೇರಿಯವರು, ಸಮಾಜ, ವ್ಯವಸ್ಥೆ ಎಲ್ಲದರ ವಿರುದ್ಧ ಹೋರಾಡುವ ದಿಟ್ಟೆಯಾಗಿದ್ದ ನಾನು ಈ ಭಂಡ ಗಂಡನ ಜೊತೆಗಿದ್ದು ಹೇಡಿಯಾಗಿಬಿಟ್ಟೆನೇ? ಉಹುಂ-ಸೋತು ಸಾಯಬಾರದು. ಕಷ್ಟ ನನಗೇನೂ ಹೊಸದಲ್ಲ. ಮಗಳೊದನೆ ಸ್ವತಂತ್ರವಾಗಿ ಬದುಕಬೇಕು. ಆದರೆ ಅದಕ್ಕೂ ಮೊದಲು ಸದಾಶಿವನ ಬಣ್ಣ ಬಯಲು ಮಾಡಬೇಕು. ಅವನ ಅವ್ವನಿಗೆ ತಾನ್ಯಾರೆಂದು ತಿಳಿಯಬೇಕು.
ವಿಚಾರ ಮಾಡುತ್ತ ಮಲಗಿದ ದೇವಕಿಗೆ ಒಮ್ಮೆಲೆ ಎಚ್ಚರಾಯಿತು. ಕಿರಣಳ ಜ್ವರ ಇಳಿದು ಬೆವರು ಸುರಿದಿತ್ತು. ಕಿಡಿಕಿಯ ಕೆಳಗೆ ಪತ್ರವೊಂದು ಬಿದ್ದಿತ್ತು-ತನಗೆ ಬರೆಯುವವರಾದರೂ ಯಾರು-ಅಪರಿಚಿತ ಕೈಬರಹ. ಕುತೂಹಲದಿಂದ ಓದಿದಳು.
ಪ್ರೀತಿಯ ದೇವೂ,
ನಾನು ನಿನಗೆ ಬರೆಯುತ್ತಿರುವುದು ಇದೇ ಮೊದಲು. ಕೊನೆಯದೂ ಇದೇ ಪತ್ರ. ಕೆಲವು ತಿಂಗಳುಗಳಿಂದ ನನ್ನ ಅರೋಗ್ಯ ಸರಿ ಇರಲಿಲ್ಲ. ಡಾಕ್ಟರರಿಗೆ ತೋರಿಸಲು ಹೋದೆ. ನಾನಾ ತರದ ಪರೀಕ್ಷೆಗಳಾದ ಮೇಲೆ ಡಾಕ್ಟರ ಕ್ಯಾನ್ಸರ ಆಗಿದೆ, ಬೇಗ ಆಪರೇಷನ್ ಮಾಡಬೇಕೆಂದರು. ಈ ರೋಗದ ಬಗ್ಗೆ ನಾನೂ ಅಷ್ಟಿಷ್ಟು ಓದಿಕೊಂಡಿದ್ದೇನೆ. ಇದು ಸಾವನ್ನು ಮುಂದೆ ಹಾಕುವ ರೋಗವೇ ಹೊರತು ಗುಣವಾಗುವದಲ್ಲ. ಮಕ್ಕಳಿಬ್ಬರ ಬೇಜವಾಬ್ದಾರಿಯಿಂದ ಆಸ್ತಿ ಹಾಳಾಗುತ್ತಿದೆ. ಅಂಥವರ ಮೇಲೆ ನನ್ನ ಆಪರೇಷನ್ ಖರ್ಚೂ ಹಾಕಲು ಮನಸ್ಸು ಒಪ್ಪುವುದಿಲ್ಲ. ನನ್ನ ಕೆಲಸ ಮುಗಿದಿದೆ. ಇನ್ನೂ ಬದುಕಬೇಕೆನ್ನುವ ಆಸೆಯೂ ನನಗಿಲ್ಲ. ನಿನಗೆ, ಕಿರಣಳಿಗೆ ಆಶೀರ್ವಾದಗಳು. ನನ್ನ ಬದುಕನ್ನು ಮುಗಿಸುವ ನಿರ್ಧಾರ ಕೈಗೊಂಡಿದ್ದೇನೆ. ಬದುಕೇ ಒಂದು ಹೋರಾಟ, ನಿನ್ನ ಹೋರಾಟದಲ್ಲಿ ಯಶಸ್ಸು ಸಿಗಲಿ.
ನಿನ್ನ
ಗೌರತ್ತೆ

ಮನೆಯ ಛಾವಣಿಯೇ ತನ್ನ ಮೇಮೆ ಕಡಿದುಕೊಂಡು ಬೀಳುತ್ತಿದೆಯೆ. ತಲೆ ಗಟ್ಟಿಯಾಗಿ ಹಿಡಿದುಕೊಂಡು ದೇವಕಿ ಚೀರಿದಳು. ಅತ್ತು ದುಃಖ ಹಗುರ ಮಾಡಿಕೊಳ್ಳಲು ತನಗೆ ಅತ್ತೆಯ ತೊಡೆಯೊಂದು ಇತ್ತು. ಈಗ…ಈಗ ತಾನು ನಿಜವಾಗಿಯೂ ಅನಾಥೆ, ಸಂಜೆಯ ಕತ್ತಲು ಆವರಿಸಿಕೊಳ್ಳುತ್ತಿದ್ದಂತೆ ಅಳುವು ನಿಂತು ಮನಸ್ಸಿನಲ್ಲಿ ಶೂನ್ಯ ತುಂಬಿಕೊಳ್ಳತೊಡಗಿತ್ತು. ಕಿರಣ ‘ಅವ್ವಾಹಸಿವಿ’ ಎಂದಾಗ ಎಚ್ಚೆತ್ತು ಅವಳಿಗೆ ಹಾಲು ಕುಡಿಸಿ ಬಗಲಲ್ಲಿಟ್ಟುಕೊಂಡು ಬಸ್‌ಸ್ಟ್ಯಾಂಡ್ ದಾರೀ ಹಿಡಿದಳು. ಏನಾದರಾಗಲಿ-ಅತ್ತೆಯನ್ನೊಮ್ಮೆ ನೋಡಲೇಬೇಕು-ಅವಳನ್ನು ಮೊದಲು ನೋಡಿದ ದಿನ-
“ನೀನು ದೇವಕಿ ಏನು? ನಾನು ಸದಾಶಿವನ ಅವ್ವ ಗೌರವ್ವ. ಸರವೂರಿಂದ ಬಂದೀನಿ. ಇಂವಾ ನಮ್ಮ ಆಳುಮಗಾ ಫಕೀರ, ಪಕೀರಾ ನೀ ಹೊರಗ ಕಟ್ಟೀಮ್ಯಾಲೆ ಕೂಡ್ರು.”

ಎತ್ತರವಾದ, ಕೆಂಪುಬಣ್ಣದ ಬೆಳ್ಳಿಗೂದಲಿನ ಹೆಂಗಸೊಬ್ಬಳು ಹೊಸ್ತಿಲ ದಾಟಿ ಒಳಬರುತ್ತ ಹೇಳಿದಾಗ ದೇವಕಿಯ ಎದೆ ಡವಡವ ಎಂದಿತ್ತು. ಯಾವ ಉಪಚಾರಕ್ಕೂ ಕಾಯದೆ ಒಳಗೆ ಬಂದು ಕುಳಿತ ಅತ್ತೆಯನ್ನು ನೋಡಿ ಸಿಟ್ಟಿನ ಮಾತುಗಳಲ್ಲ ಒಳಗೇ ಇಂಗಿ ಹೋಗಿದ್ದವು. ನಿಧಾನವಾಗಿ ಮಾತನಾಡಿದ್ದಳು ಗೌರತ್ತೆ.

“ನಿನ್ನ ಪತ್ರಾ ಮುಟ್ಟಿತು ದೇವೂ, ಆದರ ಭಾಳ ತಡಾ ಆತು. ನಿನ್ನ ಮದುವೀ ಆಗೀನಿ ಅಂತ ಸದಾಶಿವ ನಮಗ ತಿಳಿಸೇ ಇಲ್ಲ- ಅವಂಗ ನನ ಮಗಾ ಅನಲಿಕ್ಕೂ ನಾಚಿಕೆ ಬರ್ತದ- ಈಗ ಹದಿನೈದು ದಿನಾ ಆತು ನಮ್ಮ ಜಾತೀದ ಇನ್ನೊಂದ ಹುಡುಗಿ ಮದುವೀ ಮಾಡಿಕೊಂಡು ಹನಿಮೂನ ಹೋಗ್ಯಾನ. ಈ ಸುದ್ದಿ ಕೇಳಿದರ ನಿನಗ ಕೆಟ್ಟ ಅನಸ್ತದ ಅನ್ನೋದು ಗೊತ್ತಾಗೇ ನಾನ ಬಂದೆ. ನಿನ್ನ ನೋಡಿ ಮಾತಾಡಬೇಕು ಅನ್ನಿಸ್ತು ಬಂದೆ.” ಅವಳ ದನಿಯಲ್ಲಿಯ ನಿಷ್ಕಪಟತೆ ನನ್ನ ಮನಸ್ಸನ್ನು ಮುಟ್ಟಿ ನಂಬುವಂತೆ ಮಾಡಿತು. ತಾನು ಮೋಸಕ್ಕೆ ಬಲಿಯಾದೆ ಅನ್ನೋದು ನೆನಪಾಗಿ ದುಃಖ ಉಕ್ಕಿ ಬಂತು. ಅದನ್ನು ತಿಳಿದವಳಂತೆ ಗೌರತ್ತೆ ತನ್ನನ್ನು ಹತ್ತಿರ ಎಳೆದುಕೊಂಡಳು. ಆಕೀ ಉಡಿಯೊಳಗ ನಾ ಮನಸಾ ಅತ್ತುಬಿಟ್ಟೆ.

“ನನ್ನ ಮಗಾ ಒಂದ ಹೆಣ್ಣಿನ ಕುತಿಗೀ ಕೊಯ್ದಾ ಅಂದರ ಆಂವಾ ನನ್ನ ಪಾಲಿಗೆ ಸತ್ತಾಂಗ. ಆದರ ನಾ ಈಗ ಏನ ಮಾಡಿದರೂ, ಏನ ಆಡಿದರೂ ಆಗಿಹೋದ ತಪ್ಪು ತಿದ್ದಾಕ ಆಗೂದಿಲ್ಲ. ನಿನಗ ಏನ ಸಹಾಯ ಬೇಕಾದರೂ ಕೇಳು, ಮಾಡ್ತೀನಿ.” ಮಗಳ್ನ ಕರಕೊಂಡು ಒಬ್ಬರ ಮನೀ ಬಾಗಿಲಿಗೆ ಹೋಗಬಾರದು. ಯಾರಿಗೂ ಭಾರ ಆಗಬಾರದು. ನನ್ನ ಕಾಲ ಮ್ಯಾಲ ನಾ ನಿಂತು ಜೀವನಾ ಮಾಡಬೇಕಂತೀನಿ.” ಅನ್ನೂ ನನ್ನ ಮಾತು ಕೇಳಿ ಮತ್ತೊಮ್ಮೆ ಅಪ್ಪಿಕೊಂಡಳು.

“ಮಗಳ ನಿನ ಬಣ್ಣ ಕಪ್ಪ ಅದರೂ ಮನಸ್ಸು ಬೆಳ್ಳಗೈತಿ. ನಿನ್ನಂತಾ ಹೆಣ್ತಿ ಕೂಡ ಬಾಳೇ ಮಾಡೂ ದೈವ ಆ ಎಡವಟ್ಟಗಿಲ್ಲ ಮತ್ತೇನ ಬೇಕಾದರೂ ಕೇಳು. ನಿನಗ ಅಧಿಕಾರ ಐತಿ. ಬರಬೇಕು ಅನ್ನಿಸಿದಾಗ ಹಳ್ಳೀ ಮನೀಗಿ ಬಾ. ನನಗೂ ಹೆಣ್ಣುಮಕ್ಕಳಿಲ್ಲ. ಎರಡೂ ಗಂಡು. ಸಾಲೀ ಕಲಿತು ಶಾಣ್ಯಾ ಆಗಿ ನಾಕ ಮಂದಿಗೆ ಉಪಕಾರ ಮಾಡಲಿ ಅಂತ ಕಲಿಸಿದರ ಇಂವಾ ಹಿಂಗ ಮಾಡಿದಾ. ಇವನ ತಮ್ಮ ಮಲ್ಲೇಶಿ ವಿದ್ಯಾ ತಲೀಗೆ ಹತ್ತಲಾರದ ಹೊಲಾ ಮಾಡ್ತೀನಿ ಅಂತ ಊರಾಗ ಬಿಳೇ ಅರಿವಿ ಹಾಕ್ಕೊಂಡ ತಿರಗತಾನ. ಮನ್ಯಾಗ ಹೆಣ್ತೀ ಮಕ್ಕಳು ಇದ್ರೂ ರಾತ್ರಿ ಯಾವಾಕಿನ್ನರೆ ಹುಡುಕ್ಕೊಂಡು ಹೊಲಗೇರಿಗೆ ಹೋಕ್ಕಾನ. ಹಿಂತಾ ಮಕ್ಕಳು ಹುಟ್ಟದಿದ್ದರ ಛೊಲೋ ಇತ್ತು. ಮುಪ್ಪಿನ ಕಾಲಕ್ಕ ಮನಸೀಗಿ ಶಾಂತಿ ಇರಬೇಕು. ಇದನೆಲ್ಲಾ ನೋಡಿದರ ಲಗೂನ ಕಣ್ಣು ಮುಚ್ಚಲಿ ಅಂತೀನಿ.” ರಾತ್ರಿ ಪಕ್ಕದಲ್ಲಿ ಮಲಗಿದ ಗೌರತ್ತೆ ಕಣ್ಣಿರು ತಂದು ಹೇಳಿದ್ದಳು.

“ಯವ್ವಾ ನೀನ ನನ್ನವ್ವ. ಹಂಗ ಸಾಯೂ ಮಾತ ಆಡಬ್ಯಾಡ” ಅಂದಿದ್ದೆ. ಎಂದೂ ಕಾಣದ ಆ ಹೆಂಗಸಿನೊಡನೆ ತನ್ನ ಸಂಬಂಧ ಏನಿತ್ತು? ಅವಳು ತನ್ನನ್ನು ಬಿಟ್ಟು ಹೋದ ಗಂಡನ ಅವ್ವ. ಆದರೆ ಬದುಕಿನಲ್ಲಿ ಸುಖಕ್ಕಿಂತ ಕಷ್ಟವನ್ನೇ ಹೆಚ್ಚು ಉಂಡ ಹೆಣ್ಣು ಎಂದು ಕೇಳಿದ್ದೆ. ಬಹುಶಃ ಅದೇ ತಮ್ಮಿಬ್ಬರನ್ನು ತಳಕು ಹಾಕಿರಬೇಕು.
“ಯವ್ವ, ನೀ ಎಲ್ಲಾರ ಹಾಂಗ ಅಲ್ಲ. ಜಗತ್ತಿನ್ಯಾಗಿನ ಎಲ್ಲಾ ಹೆಂಗಸರೂ ಒಂದ ಅಂದರ, ನೀ ಒಬ್ಬಾಕೀನೇ ಒಂದು ಅನಿಸೇದ ನನಗ.”
“ಹುಚ್ಚವ್ವ, ನಾ ಏನ ಹೆಚ್ಚಿನಾಕಿ ಕಂಡೆ ನಿನಗ.”
“ನಿನ್ನ ಕುಲಾ ಹೆಂತಾದ್ದು ಏನ ಕತಿ. ಆದರೂ ನೀ ನನ್ನ ಒಪ್ಪಿಕೊಂಡು ಅಪ್ಪಿಕೊಂಡಿ, ಇದು ಭಾಳ ದೊಡ್ಡ ಮಾತು, ಸಭಾದಾಗ ದೊಡ್ಡ ಮನುಷ್ಯರು ದೊಡ್ಡ ದೊಡ್ಡ ಮಾತ ಹೇಳತಾರ. ಆದರ ಮನೀ ಬಾಗಿಲಿಗಿ ಹೋದರ ಒಳಗ ಬಾ ಅನ್ನಾಂಗಿಲ್ಲ, ನೀ ಒಬ್ಬಾಕಿ ಅಪವಾದ ಅದೀ.”

“ಅದಕ್ಕ ಬ್ಯಾರೇನೇ ಕಾರಣ ಐತಿ ದೇವೂ. ಹುಟ್ಟಿದ ಮನ್ಯಾಗ ನಾ ಬೆಳದದ್ದ ಹಾಂಗ. ನಮ್ಮಪ್ಪ ವೀರಪ್ಪ ದೇಶಕ್ಕ ಸ್ವತಂತ್ರ ತರಾಕ ಹೋರಾಡಿ ಪೋಲೀಸರ ಹೊಡೆತಾ ತಿಂದು ಜೇಲಿಗೆ ಹೋಗಿದ್ದ. ಗಾಂಧೀ ಅಜ್ಜನ ಕಟ್ಟಾ ಭಕ್ತಾ ಅಂವಾ. ಮಕ್ಕಳಿಗೆಲ್ಲಾ ಓದು-ಬರಹ ಕಲಿಸಿದಾ, ಖಾದಿ ತೊಡಾಕ ಹಚ್ಚಿದ್ದಾ, ನೂಲಾಕ ರಾಟೀ ತಂದುಕೊಟ್ಟಿದ್ದಾ, ರಟ್ಟೀ ಮುರುದು ದುಡದ ತಿನ್ರಿ ಅಂತಿದ್ದಾ. ಈ ಜಾತಿ ಪಾತಿ ಎಲ್ಲಾ ಮನಿಶೇರ ಮಾಡಿ ಕೊಂಡಿದ್ದೋ ಮಕ್ಕಳ್ರಾ, ಎಲ್ಲಾರ ಮೈಯಾನ ರಕ್ತ ಕೆಂಪ ಐತಿ, ಹುಟ್ಟಿಸಿದ ದೇವರು ಒಬ್ಬನ ಅದಾನ ತಿಳಕೊಳ್ರಿ ಅಂತ ಬುದ್ಧಿ ಹೇಳತಿದ್ದಾ.”

“ಹಂತಾ ದೊಡ್ಡ ಮನಶ್ಯಾನ ಮಗಳಾಗಿ ನೀ ಹಿಂತಾಕಿ ಆಗೀ ಯವ್ವಾ. ಮತ್ತ ನಿನ್ನ ಮಗ್ಗ ಅಟ ಹಿಂತಾ ಬುದ್ಧಿ ಯಾಕ ಬರಲಿಲ್ಲಾ, ನಿನ ಟಂಕ ಸಾಲ್ಯಾಗ ಖೊಟ್ಟಿ ರೂಪಾಯಿ ಅದ ಅಲ್ಲ ಅಂವಾ?”

ಗೌರತ್ತೆ ಉಸಿರು ಬಿಟ್ಟು ಎಷ್ಟೋ ಹೊತ್ತು ಸುಮ್ಮನಿದ್ದು ಹೇಳಿದ್ದಳು “ಸದಾಶಿವ ತಮ್ಮ ಅಪ್ಪನ್ನ ಹೋತಾನ ದೇವೂ” ಎಂದು, ಕುತೂಹಲ ತಡೆಯದೆ ಮತ್ತಷ್ಟು ಕೆದಕಿದ್ದಳು.

“ಹದಿನಾರು ವರ್ಷಕ್ಕ ಸರವೂರ ಸಾವಕಾರನ ಎರಡನೇ ಹೇಣ್ತಿ ಆಗಿ ಬಂದೆ ದೇವೂ. ಆಗಿಂದ ನಾ ಬರೇ ಕಷ್ಟಾನ ಸೋಸೀನಿ. ಬೇಕಾದಷ್ಟ ಶ್ರೀಮಂತಿಕಿ ಇದ್ರೂ ಗೌಡಗ ಗುಣ ಇದ್ದಿದ್ದಿಲ್ಲ. ಲಂಗು ಲಗಾಮು ಇಲ್ಲದ ಗೂಳಿ ಹಾಂಗ ಮೆರದಾ. ಮೊದಲನೆಯಾಕಿ ಇವನ ಹೊಡತಕ್ಕ ಸತ್ತಿದ್ದಳಂತ. ಪೊಲೀಸರ ಬಾಯಿಗೆ ರೊಕ್ಕಾ ತುಂಬಿ ಉಳಕೊಂಡಿದ್ದಾ. ಹೇಣ್ತಿ ಅಂದರ ಕಾಲಾನ ಚಪ್ಪಲಿ ಆಗಿತ್ತು ಅವಂಗ. ಹಾಂಗ ಗುದ್ದಾಡಿಕೊಂತ ಸದಾಶಿವ, ಮಲ್ಲೇಶಿ ಹುಟ್ಟಿದ್ದರು. ಗೌಡ ಊರಾಗ ರಂಡೀ ಇಟ್ಟಿದ್ದು ಗೊತ್ತಾತು. ನನ್ನ ರಕ್ತಾ ಕುದೀತು. ಇಂವನ ಕೂಡ ಬಾಳೇ ಸಾಕಾಗಿ ಹೋಗಿತ್ತು. ತಿರಿಗಿ ಬಿದ್ದೆ ನೋಡು, ನನ್ನ ಸನೇಕ ಬರಗೊಡಲಿಲ್ಲಾ. ನೀ ನನ್ನ ಮುಟ್ಟಿದೀ ಅಂದರ ನೋಡು ಅಂತ ಕುಡಗೋಲು ತೋರಿಸಿದ್ನಿ. ಖೋಲಿ ಬಾಗಲಾ ಹಾಕ್ಕೊಂಡು ಮಕ್ಕಳ್ನ ಕರಕೊಂಡು ಕುಡಗೋಲ ತಲೆದಿಂಬಿಗೆ ಇಟಕೊಂಡ ಮಲಗತಿದ್ದೆ. ಸಾಯೂತನಾ ಹಿಂಗ ಇದ್ದಿವಿ. ಸೆರೆ, ಕೆಟ್ಟ ಚಾಳಿ ಎಲ್ಲಾ ಕೂಡಿ ಅವನ್ನಾ ಜೀವಾ ತೊಗೊಂಡ್ವು. ಮನೀ ಭಾರಾ ಎಲ್ಲಾ ನಾ ಹೊತ್ಕೊಂಡೆ.
“ಸತ್ಯಕ್ಕ ನ್ಯಾಯಕ್ಕ ಹೊಡದಾಡೂವಾಕಿಯವ್ವಾ ನೀನು. ಅದಕ ನಿನ ಮಾರೀ ಮ್ಯಾಲೆ ಕಳೇ ಹ್ಯಾಂಗ ಐತಿ ನೋಡು.”
“ಸುಮ್ಮನ ಹೊಗಳಬ್ಯಾಡ ಹುಡುಗೀ ನೀನು. ಈ ಹೊಡೆದಾಟದಾಗ ನಮ ಜೀವ ಸಣ್ಣಾಗತೈತಿ ಅನ್ನೂದ ಮರೀಬ್ಯಾಡಾ, ಸರ್ಪದ ಜೋಡಿ ಸರಸಾ ಆಡಿದಾಂಗ ಆಕ್ಕೈತಿ ನಮ ಬಾಳೆ. ನೀ ಮನಸಿಗೆ, ದೇಹಕ್ಕೆ ಮುಗುದಾಣಾ ಹಾಕಿ ಕೈಯಾಗ ಇಟಕೊಂಡು ತಪ್ಪ ಹೆಜ್ಜಿ ಇಡದಂಗ ನಡದೀ ಅಂದರ ಈ ಮಂದಿ ಡೊಗ್ಗಿ ಸಲಾಮು ಹಾಕತಾರ. ನೀ ಹಾದೀ ಬಿಟ್ಟೀ ಅಂದರ ಅದ ಮಂದಿ ಆಳಿಗೊಂದು ಕಲ್ಲು ಹೊಡೆದು ಸಾಯಿಸ್ತಾರ. ನಾಕ ಮಂದಿ ಬೆರಳ ಎತ್ತೂಹಾಂಗ ನಾ ಬಾಳೇ ಮಾಡಲಿಲ್ಲ. ನನಗ ಅದ ಬಲಾ. ನಿನಗೂ ಒಂದ ಮಾತ ಹೇಳ್ತೇನಿ. ನೆಪ್ಪ ಇಟಕೊ. ನಿನ್ನ ಕಾಲಮ್ಯಾಲ ನಿಂತು ಅನ್ನಾ ಸಂಪಾದಿಸಿಕೋ. ಆದರೂ ನೀ ಇನ್ನೂ ಸಣ್ಣಾಕಿ. ಜೋಡಿ ಬೇಕು ಅನಿಸಿದರ ಸದಾನ ಕಡೆ ಸೋಡಚೀಟಿ ತೊಗೊಂಡು ಬ್ಯಾರೆ ಮದುವೀ ಮಾಡಿಕೋ. ಅಂವನ ಕಿವಿ ಹಿಡಿದು ತಂದು ನಿಮ್ಮನ್ನ ಕೂಡಸಾಕ ನನಗ ಬರತೈತಿ. ಆದರ ಒಮ್ಮೆ ಮನಸ ಮುರದ ಮ್ಯಾಲೆ ಬಾಳೆ ಮಾಡಿದರ ಏನ ಸಂವಿ ಇರತೈತಿ. ಆ ಹುಡುಗೀಗೂ ಮೋಸ ಆಗೇದ. ಸಾಯೂತನಕ ಈ ಚಿಂತಿ ನನ್ನ ಕಾಡತೈತಿ.” ಆ ರಾತ್ರಿ ಅತ್ತೆ-ಸೊಸೆ ಕಣ್ಣು ಮುಚ್ಚಿರಲಿಲ್ಲ-
‘ಸರವೂರು ಬಂತು, ಯಾರು ಇಳೀರಿ’ ಕಂಡಕ್ಟರ ಕೂಗುತ್ತಿದ್ದ. ದಿಗ್ಗನೆ ಎದ್ದಳು ದೇವಕಿ. ಒಂದು ಕಾಲದ ಗಂಡನ ಮನೆ ಹುಡುಕಿಕೊಂಡು ಬಾಗಿಲಿಗೆ ಬಂದ ದೇವಕಿಯ ಕಾಲಿನ ಶಕ್ತಿ ಸೋರಿಹೋಯಿತು. ರಣಹಲಗೆ ಆಳು…. ಜನರ ನೂಕು ನುಗ್ಗಲು ದಾಟಿದಳು-
“ನನ್ನವ್ವ ಏನು ಛಂದ ಕಾಣತಾಳ ನೋಡ್ರೇ ಕರೀ ಸೀರಿ ಉಟಗೊಂಡು, ಈಬೂತಿ ಪಟ್ಟಾ ಬಡಕೊಂಡು, ರುದ್ರಾಕ್ಷಿ ಸರಾ ಹಾಕ್ಕೊಂಡು ಶಿವಪೂಜೆ ಮಾಡಾಕ ಹ್ವಾದಳೇನ್ರೇ ನನ್ನವ್ವ” – ಕೂಡಿದ ಹೆಂಗಸರೆಲ್ಲ ಹಾಡಿ ಹಾಡಿಕೊಂಡು ಅಳುತ್ತಿದ್ದಾಗ-
“ಸರ್ರಿ ಸರ್ರಿ ಸ್ವಾಮೇರ ಬಂದ್ರು ಜಾಗಾ ಬಿಡ್ರಿ. ಪಾದಪೂಜೆ ಮಾಡಸರಿ, ಕಾಯಿ ಒಡೀರಿ, ಕಪ್ಪಾರ ಹಚ್ಚರಿ, ಪತ್ರೀ ಹಂಚಿರಿ, ಬಾರೋ ಮಲ್ಲೇಶ, ಸದಾಶಿವ ನೀ ಇತ್ಲಾಗ ನಿಲ್ಲು. ಶೇಕವ್ವ, ವಿಜಯವ್ವ ಮುಂದಕ ಬರ್ರಿ. ಕಡೀ ಪೂಜಾ ಇದು, ಎತ್ತಬೇಕಿನ್ನ, ಮನೀ ಮಂದಿ ಎಲ್ಲಾರೂ ಬರ್ರಿ”- ಆ ಜನ ಜಾತ್ರೆಯಲ್ಲಿ ದೇವಕಿ ಯಾರೆಂದು ಯಾರೂ ಕೇಳಿರಲಿಲ್ಲ. ಸದಾಶಿವ ಮಾತ್ರ ಕೆಕ್ಕರಿಸಿ ನೋಡಿದ್ದ. ಅವನತ್ತ ಕಣ್ಣೆತ್ತಿಯೂ ನೋಡದೆ ಕಿರಣಳನ್ನೆತ್ತಿಕೊಂಡು ಗೋಡೆಗೆ ಒರಗಿ ನಿಂತಿದ್ದಳು ದೇವಕಿ.
ಗೌರತ್ತೆಯ ಮುಖ ಮಣ್ಣಿನಲ್ಲಿ ಮರೆಯಾದಂತೆ ದೇವಕಿಯೂ ಅಲ್ಲಿಂದ ಮರೆಯಾಗುತ್ತಿದ್ದಳು. ಸದಾಶಿವ ಸುಮ್ಮನಿರಲಿಲ್ಲ. ಶತಮೂರ್ಖ! ದೇವಕಿಯ ರಟ್ಟೆ ಹಿಡಿದೆಳೆದು ಹೊರಗಿನ ಕಟ್ಟೆಗೆ ಎಳೆದೊಯ್ದು, “ನೀ ಯಾಕ ಬಂದಿ ಇಲ್ಲೆ? ಏನ ಸಂಬಂಧ? ಯಾರ ಹೇಳಿ ಕಳಿಸಿದ್ರು ನಿನಗ?” ಪೌರುಷ ತೋರಿಸಲು ದಬಾಯಿಸಿದ.
ಅಲ್ಲಿಯವರೆಗೆ ಅವಳ ಕಡೆಗೆ ಲಕ್ಷ್ಯ ಕೊಡದ ಮನೆಯ ಜನರೆಲ್ಲ ತಮಾಷೆ ನೋಡುವವರಂತೆ ಬಂದು ಗುಂಪಾದರು. ದೇವಕಿಯ ರಕ್ತ ಕುದಿಯಿತು. ಕಣ್ಣು ಕೆಂಪೇರಿದವು. ಹೊಟ್ಟೆಯ ಸಂಕಟ, ದುಃಖವೆಲ್ಲ ನುಗ್ಗಿ ಬಾಯಿಗೆ ಬಲ ಕೊಟ್ಟಿತು.

“ಏನೋ ಭಾಡ್ಯಾ. ನೀ ಯಾರು ಅಂತೀಯಲ್ಲ. ನಿನ್ನ ಹೇಣ್ತಿ ದೇವಕಿ ನಾನು. ಈ ಹುಡುಗಿ ನಿನ್ನ ಮಗಳು. ಈ ಮನೀ ಸೊಸಿ ನಾನು. ನಮ್ಮತ್ತೀ ಮಣ್ಣಿಗೆ ಬಂದೇನಿ. ಯಾರ ಯಾಕ ಕರಸಬೇಕೋ ನನ್ನ?”

ಸದಾಶಿವನ ಸಿಟ್ಟು ಏರುತ್ತಿದ್ದರೂ ಕಾಲಿನ ಬಲ ಸೋರಿಹೋಗಿ ಥರಥರ ನಡುಗತೊಡಗಿದ. ಆಧಾರಕ್ಕೆ ಹೆಬ್ಬಾಗಿಲ ಚೌಕಟ್ಟಿಗೆ ಆನಿಸಿ ನಿಂತು ಚೀರಿದ. “ಹೆಣ್ತೀ ಇದ್ದಿ. ಆದರ ಈಗಲ್ಲ. ಮಾನಾ ಮರ್ಯಾದಿ ಇದ್ದವರು ಮನ್ಯಾಗ ಇರತಾರ. ಕಂಡ ಕಂಡ ಗಂಡಸರ ಹಿಂದ ಬೀದಿ ಬೀದಿ ಅಡ್ಡ್ಯಾಡಾಕ ಓಡಿಹೋಗೂದಿಲ್ಲ.”
“ಓಡಿ ಹೋದಾಕೀ ನಾ ಅಲ್ಲೋ ನೀನು. ಹೇಳದ ಕೇಳದ ಹೋಗಿ ಈ ಗೊಂಬೀನ್ನ ಲಗ್ನಾ ಮಾಡಿಕೊಂಡ ಬಂದೀ, ಪ್ರೇಮ, ಪ್ರೀತಿ ಅಂತ ನನ್ನ ಹೊಂದ ಓಡ್ಯಾಡಿ ಲಗ್ನಾ ಮಾಡಿಕೊಂಡದ್ದಕ್ಕ ರಜಿಸ್ಟ್ರಾರ ಕಚೇರ್ಯಾಗ ದಾಖಲೆ ಐತಿ. ನಾ ಮನಸ ಮಾಡಿದ್ದರ ನಿನ್ನ ಜೇಲಿಗೆ ಕಳಸತಿದ್ದೆ. ಪುಣ್ಯವಂತಿ, ನಮ್ಮ ಗೌರತ್ತಿ ಮಾರೀ ನೋಡಿ ಸುಮ್ಮನಾಗೀನಿ. ಯಾಕ ಬಂದೀ ಅಂದೆಲ್ಲಾ. ಒಂಬತ್ತ ತಿಂಗಳ ಹೊತ್ತ ಹಡದ ತಾಯೀನ ಬಾವಿಪಾಲು ಮಾಡಿದವರು ನೀವು. ಗಂಡಸರ? ನನಗ ಗೊತ್ತಾಗಿದ್ದರ ನಾ ಜ್ವಾಪಾನ ಮಾಡುತ್ತಿದ್ದೆ ಅತ್ತೀನ. ಇಕಾ ನೋಡಿಲ್ಲೆ, ಅತೀ ಪತ್ರಾ” ಎಂದು ಗೌರವ್ವನ ಪತ್ರವನ್ನು ಅವನತ್ತ ಬೀಸಿ ಒಗೆದವಳೇ ಮಗಳನ್ನು ಎತ್ತಿಕೊಂಡು ಭರಭರ ನಡೆದುಬಿಟ್ಟಳು. ಕೂಡಿದ ಮಂದಿ ಉಸಿರಾಡುವದನ್ನೂ ಮರೆತು ಕಲ್ಲಿನಂತೆ ನಿಂತಿದ್ದರು. ಆ ನಿಶ್ಯಬ್ದವನ್ನು ತೂರಿಕೊಂಡು ಒಂದು ಹೆಣ್ಣಿನ ಬಿಕ್ಕಳಿಕೆ ಮಾತ್ರ ದೇವಕಿಯ ಬೆನ್ನು ಹತ್ತಿತ್ತು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.