ಅವಸ್ಥೆ – ೩

ಪೂರ್ಣ ಸೆರಗು ಹೊದ್ದು, ದೊಡ್ಡ ಕುಂಕುಮವಿಟ್ಟು ಮೂಗುಬೊಟ್ಟನ್ನಿಟ್ಟ ಮೂಗನ್ನು ಚೂರು ತಗ್ಗಿಸಿ ಕಾಫ಼ಿ ಹಿಡಿದ ನಿಂತ ಉಮೆಯನ್ನು ನೋಡಿ ಕೃಷ್ಣಪ್ಪನಿಗೆ ಇನ್ಣೂ ಹೆಚ್ಚಿನ ಆಶ್ಚರ್ಯವಾಯಿತು. ಪಾಪಪ್ರಜ್ಞೆಯಿಂದ ನರಳದೆ ಸಾಮಾಜಿಕ ಕಟ್ಟುಗಳನ್ನು ಹೆಣ್ಣು ಮೀರಬಲ್ಲಳು -ಹಾಗಾದರೆ. ಅಣ್ಣಾಜಿ ತುಂಬ ಸ್ನೇಹದ ಧ್ವನಿಯಲ್ಲಿ,

“ಕೂತುಕೋ ಉಮ. ಒಂದು ಸೀರಿಯಸ್ಸಾದ ವಿಷಯ ನಿಮ್ಮಿಬ್ಬರಿಗೂ ಹೇಳೋದಿದೆ” ಎಂದು ಅವಳನ್ನು ಎದುರು ಕೂರಿಸಿಕೊಂಡು ತನಗೆ ವಿಶಿಷ್ಟವಾದ ರೀತಿಯಲ್ಲಿ ಕ್ಲಾಸ್ ತೊಗೊಂಡ.

“ಈವರೆಗೆ ಸಮಾಜ ಸೃಷ್ಟಿಸಿದ ಎಲ್ಲ ಉತ್ಪಾದನಾ ಸಂಬಂಧಗಳೂ ಮನುಷ್ಯನ ಸ್ವಾತಂತ್ರ್ಯವನ್ನು ಮಿತಗೊಳಿಸುವಂಥವು. ಉದಾಹರಣೆಗೆ ಗಂಡು ಹೆಣ್ಣಿನ ಸಂಬಂಧ ನೋಡುವ. ಉಳಿದ ಪದಾರ್ಥಗಳಂತೆಯೇ ಹೆಣ್ಣು ಕೂಡ ಒಂದು ಸ್ವತ್ತಾಗಿದೆ. ಆದ್ದರಿಂದಲೇ ಇದು ಸ್ವಂತದ ಹೆಣ್ಣು ಇದು ಪರ ಹೆಣ್ಣು ಎಂಬ ವಿಂಗಡಣೆಗಳ ಮುಖಾಂತರ ತನ್ನ ಸ್ವತ್ತನ್ನು ಕಾಯ್ದುಕೊಳ್ಳುವ ವ್ಯವಸ್ಥೆಯನ್ನು ಮನುಷ್ಯ ಫ಼್ಯೂಡಲ್ ಪದ್ಧತಿಯಲ್ಲೂ ಕ್ಯಾಪಿಟಲಿಸ್ಟ್ ಪದ್ಧತಿಯಲ್ಲೂ ಮಾಡಿಕೊಂಡಿದ್ದಾನೆ. ಈ ಎಲ್ಲ ಪದ್ಧತಿಗಳೂ ಮನುಷ್ಯನ ಸಹಜ ವಿಕಾಸವನ್ನು ತಡೆಗಟ್ಟುತ್ತವೆ. ಹಾಗೆಯೇ ನಮ್ಮ ಈ ಲಿಬಿಡೊ -ಈ ನಮ್ಮ ಕಾಮಜೀವನ -ಅನೈಸರ್ಗಿಕವಾದ ಕಟ್ಟುಪಾಡುಗಳಿಗೆ ಒಳಗಾಗುತ್ತದೆ. ಕೊರತೆಯ ಆಧಾರದ ಮೇಲೆ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ನಿಂತಿದೆ -ಕೃತಕವಾದ ಕೊರತೆ ಮತ್ತು ಶೋಷಣೆ. ಇದು ಕಾಮಜೀವನಕ್ಕೂ ಅನ್ವಯಿಸುತ್ತದೆ. ಈಗ ನೋಡಿ ಸಮೃದ್ಧಿಯಲ್ಲಿ ಮನುಷ್ಯನ ಹೊಟ್ಟೆ ಬಟ್ಟೆ ವಸತಿ ವಿರಾಮಗಳ ಅಗತ್ಯಗಳು, ಸಾಂಸ್ಕೃತಿಕ ಅಗತ್ಯಗಳು, ಪೂರೈಕೆಯಾಗುತ್ತ ಹೋದಂತೆ ಮನುಷ್ಯನ ಅಂತಿಮವಾದ ಬಿಡುಗಡೆಗೆ ಅವನು ಸಿದ್ಧನಾಗುತ್ತಾನೆ. ತಮ್ಮನ್ನು ತೀವ್ರವಾದ ನೋವು ಸಂಕಟಗಳಿಗೆ ಗುರಿ ಮಾಡುವ ಕಾಮಜೀವನಕ್ಕೆ ಸಂಬಂಧಪಟ್ಟ ನಿಷೇಧವನ್ನು ಹರಿದು ಗಂಡು ಹೆಣ್ಣು ಬಿಡುಗಡೆ ಪಡೆಯುತ್ತಾರೆ. ಮದುವೆಯಾದವಳಲ್ಲಿ ಮಾತ್ರ, ಅದೂ ನಿಯಮಕ್ಕನುಸಾರವಾಗಿ ಈ ದೇಹ ಕೆಲವೇ ಬಗೆಯ ಸುಖಗಳನ್ನು ಪಡೆಯಬಹುದೆಂಬ ಅಡಚಣೆಗಳು ಮಾಯವಾಗುತ್ತವೆ -ಆಸ್ತಿಯ ಅಗತ್ಯ ವರ್ಗರಹಿತ ಸಮಾಜದಲ್ಲಿ ಮಾಯವಾದಂತೆ. ಆಗ ಇಡೀ ದೇಹವೂ ಬಿಡುಗಡೆ ಹೊಂದಿ ಸುಖದ ಬುಗ್ಗೆಯಾಗುತ್ತದೆ. ಈ ಸುಖದ ಸಾಧನೆಯೇ ಮನುಷ್ಯನಿಗೆ ನೈತಿಕತೆಯನ್ನೂ ತರುತ್ತದೆ. ತಾನು ಭೋಗಿಸುವುದು ಅತ್ಯಂತ ಅಮೂಲ್ಯವಾದದ್ದು, ಸ್ವತಂತ್ರವಾದದ್ದು ಎನ್ನುವ ಧೋರಣೆಗಿಂತ ದೊಡ್ಡ ನೈತಿಕತೆ ಎಲ್ಲಿದೆ?”

“ನಿನ್ನ ಜೀವನಕ್ರಮವನ್ನು ಜಸ್ಟಿಫ಼ೈ ಮಾಡಿಕೊಳ್ಳೋಕೆ ನೀನು ಹೀಗೆ ವಾದಿಸುತ್ತಿ ಎಂದು ಹೇಳಬಹುದಲ್ಲ?”

ಕೃಷ್ಣಪ್ಪ ಉಮೆ ಅಲ್ಲಿರುವುದನ್ನು ಮರೆತು ಕಟುವಾಗಿ ಹೇಳಿದ್ದ.

“ನನ್ನ ವಿಷಯ ಬಿಟ್ಟು ಯೋಚಿಸು. ನೋಡು ಕೃಷ್ಣಪ್ಪ -ನೀನು ರೈತ ಜನಾಂಗದವನು. ನಿನ್ನ ಪೂರ್ವಿಕರು ಭೂಮಾಲೀಕರು. ಆದ್ದರಿಂದ ಹೆಣ್ಣಿನ ಬಗ್ಗೆ ಮೂಲತಃ ನೀನು ಫ಼್ಯೂಡಲ್” -ಅಣ್ಣಾಜಿ ಅರ್ಧ ಹಾಸ್ಯದಲ್ಲಿ ಹೇಳಿದ್ದ.

“ಸ್ವಚ್ಛಂದ ಜೀವನ ನಡೆಸಬಾರದು ಅಂತ ನಂಬೋದು, ಹೆಣ್ಣನ್ನ ಪವಿತ್ರ ಅಂತ ತಿಳಿಯೋದು ಫ಼್ಯೂಡಲ್ ಆದರೆ ಯಾಕಾಗಬಾರದು?”

“ಹೆಣ್ಣು ಯಾಕೆ ಪವಿತ್ರ ಹೇಳು? ಅವಳು ಸೊತ್ತಾದ್ದರಿಂದ. ಹೀಗೆ ಹೇಳೋವರೆ ಹೆಂಗಸರನ್ನ ಹೊಡೆಯೋವರು. ಅಡಿಗೆ, ಅಲಂಕಾರ, ಸಂಗೀತಕ್ಕೆ ಮಾತ್ರ ಹೆಂಗಸರು ಲಾಯಕ್ಕು ಅಂತ ತಿಳಿಯೋವರು. ತನ್ನ ಜೊತೆ ಸಂಭೋಗಕ್ಕೆ ಒಪ್ಪೊ ಹೆಣ್ಣು ಕಳಪೆಯವಳು ಅಂತ ಭಾವಿಸೋವರು….”

ಕೃಷ್ಣಪ್ಪನಿಗೆ ಅಣ್ಣಾಜಿಯ ಕೊನೆಯ ಮಾತಿನಿಂದ ಮರ್ಮಸ್ಥಳಕ್ಕೆ ಏಟು ಬಿದ್ದಂತೆ ನೋವಾಗಿತ್ತು. ಅಣ್ಣಾಜಿಯ ಎದುರು ಉಮೆ ಯಾವ ಕಲ್ಮಷವೂ ಇಲ್ಲದ ಹೆಣ್ಣಿನಂತೆ ಕೂತಿದ್ದಳು -ನಿಜ. ಆದರೆ ರಾತ್ರೆ ಅವಳು ತನ್ನ ಗಂಡನಿಗೂ ಮೈಯನ್ನು ತೆರಬೇಕಲ್ಲವೆ? ಚಿನ್ನದ ಹಲ್ಲಿನ ಚನ್ನವೀರಯ್ಯನಿಂದಲೂ ಅವಳ ದೇಹ, ಸುಖದ ಬುಗ್ಗೆಯಾಗುವುದೇ? ಅಣ್ಣಾಜಿಯಿಂದ ಆದಷ್ಟೆ? ಇಲ್ಲದಿದ್ದಲ್ಲಿ ಹೇಗೆ ಅವಳು ಗಂಡನಿಗೆ ಮೈ ಒಡ್ಡುತ್ತಾಳೆ? ಕೃಷ್ಣಪ್ಪನ ಇಡೀ ವ್ಯಕ್ತಿತ್ವ ಇಬ್ಬರಲ್ಲಿ ಒಂದು ಹೆಣ್ಣು ಒಡೆದುಕೊಳ್ಳಲಾರದು ಎಂದು ಪ್ರತಿಭಟಿಸಿತ್ತು. ಆದರೆ ಹೇಳಲಿಲ್ಲ. ಪ್ರಾಯಶಃ ಉಮೆ ಗಂಡನ ಜೊತೆ ಯಾಂತ್ರಿಕವಾಗಿದ್ದು, ಅಣ್ಣಾಜಿ ಜೊತೆ ಮಾತ್ರ ನಿಜವಾಗಿ ಅರಳಬಹುದು. ಹಾಗಿದ್ದಲ್ಲಿ ಅವಳು ಗಂಡನನ್ನು ಬಿಡಬೇಕು. ಉಮೆಯಿಲ್ಲದಿದ್ದಲ್ಲಿ ಅಣ್ಣಾಜಿಯ ಜೊತೆ ಹೀಗೆ ವಾದಿಸಬಹುದಿತ್ತು ಎಂದುಕೊಂಡು ಸುಮ್ಮನೇ ಕೂತ.

ಅವತ್ತು ಸಂಜೆ ಗೌರಿ ಮನೆಗೆ ಹೋದವನು ಇದನ್ನೇ ಚಿಂತಿಸುತ್ತಿದ್ದ. ತನಗೆ ಗೌರಿ ಬೇಕು -ಆದರೆ ಅವಳು ತನ್ನೊಡನೆ ಹಳ್ಳಿಗೆ ಬರುವವಳಲ್ಲ. ಮದುವೆಯಾಗದೆ ನನ್ನ ಜೊತೆ ಮಲಗೆಂದು ಕೇಳುವುದು ಅವಳನ್ನು ಒಂದು ಭೋಗದ ವಸ್ತುವಾಗಿ ಕಂಡಂತೆ. ಅದಕ್ಕವನು ಒಪ್ಪಿದರೂ ನಂತರ ಆಕೆ ಕೀಳೆಂದು ತಾನು ಯೋಚಿಸುವುದು ಖಂಡಿತ. ಈ ಬಗೆಯಲ್ಲಿ ಒದ್ದಾಡುತ್ತ ಕೃಷ್ಣಪ್ಪ ಗೌರಿಯ ಪ್ರಶ್ನೆಗಳಿಗೆ ಹಾ ಹೂ ಎಂದಷ್ಟೆ ಉತ್ತರಿಸಿ ಹಿಂದಕ್ಕೆ ಬಂದಿದ್ದ. ಮಾರನೇ ದಿನ ಬೆಟ್ಟಕ್ಕೆ ಹೋಗಿ ಬೈರಾಗಿಯ ಜೊತೆ ಕೂತ. ಅವನು ಅದೇ ಪುಸ್ತಕ ಓದುತ್ತಿದ್ದ. ಅವನನ್ನೇನು ಕೇಳುವುದು ಎಂದು ಬೇಸರವಾಯಿತು. ಅವನು ಅಡಿಗೆ ಮಾಡಲು ಪ್ರಾರಂಭಿಸಿದಾಗ ಎದ್ದು ನಿಂತ. ತನ್ನನ್ನು ಕೂತಿರುವಂತೆ ಕೇಳಲು ಬೈರಾಗಿಗೆ ಆಸೆಯಾಗಿರಬಹುದು. ಆದರೆ ಅವನ ನಿಯಮದ ಪ್ರಕಾರ ಕೇಳಲಾರದೆ ಸುಮ್ಮನಿದ್ದಾನೆ ಎಂದು ಅವನ ಮುಖದ ಮೇಲಿನ ಭಾವದಿಂದ ಅನುಮಾನವಾಯಿತು. ಹೀಗೆ ಪ್ರಯತ್ನಪೂರ್ವಕವಾಗಿ ಒಣಗುವ ಮಾರ್ಗ ತನ್ನದಲ್ಲವೆಂದು ಬೆಟ್ಟವನ್ನಿಳಿದ.

ಆದರೆ ವೀಲ್ ಚೇರಿನ ಮೇಲೆ ಅವನನ್ನು ಕೂರಿಸಿ ಅವನ ಹೆಂಡತಿ ನೂಕುವಾಗ ಕೃಷ್ಣಪ್ಪ ಯೋಚಿಸುತ್ತಾನೆ: ನಾನು ಹೆಂಡತಿಯನ್ನು ಹೊಡೆಯಲು ಹೋಗಿದ್ದೇನೆ. ಒಂದೇ ಉದ್ದೇಶಕ್ಕಾಗಿ ಬದುಕಿ ಅದರಲ್ಲೂ ಸಫಲನಾಗದೆ ಒಣಗುತ್ತಿದ್ದೇನೆ. ನಿಧಾನವಾಗಿ ಸಾಯುತ್ತಿದ್ದೇನೆ. ಯಾರೂ ನನ್ನ ಹತ್ತಿರ ಬಂದು ತಮ್ಮ ಪ್ರೇಮದ ಕಥೆಯನ್ನು ಹೇಳಿಕೊಳ್ಳುವುದಿಲ್ಲ; ಪಕ್ಷಾಂತರ ಮಾಡಿದವರ, ಮಾಡಲಿರುವವರ ಸುದ್ದಿಯನ್ನು ಮಾತ್ರ ತರುತ್ತಾರೆ. ಯಾಕೆ ನನಗೆ ಹೀಗಾಯಿತು?

ಮೈ ದುರ್ಬಲವಾದ್ದರಿಂದ ಇಂಥ ಯೋಚನೆಗಳು ಕಾಡುತ್ತವೆ ಎಂದು ರೇಗುತ್ತದೆ.

“ಏ ನಾಗೇಶ” ಎಂದು ಕರೆಯುತ್ತಾನೆ. ಯುವಜನಸಭಾದ ಕಾರ್ಯದರ್ಶಿ ನಾಗೇಶ ಎದುರು ನಿಂತು, “ಏನು ಗೌಡರೇ?” ಅನ್ನುತ್ತಾನೆ. “ಯಾವುದಾರೂ ಹುಡುಗೀನ್ನ ಪ್ರೀತಿ ಗ್ರೀತಿ ಮಾಡಿಲ್ವೇನೊ ನೀನು?” ಅಂದು ನಗುತ್ತಾನೆ. “ನಾನಾ ಗೌಡರೆ? ಅದಕ್ಕೆಲ್ಲಿ ಬಿಡುವಿದೆ ಹೇಳಿ. ಇಷ್ಟೂಂದು ದೇಶದ ಸಮಸ್ಯೆಗಳ ಮಧ್ಯೆ…” ನಾಗೇಶ ಹಾಸ್ಯದ ಸೋಂಕಿಲ್ಲದಂತೆ ಗಂಭೀರವಾಗಿ ಮಾತಾಡಲು ತೊಡಗಿದಾಗ “ಹೋಗಲಿ ಬಿಡು ಈ ಸ್ಟೇಟ್‌ಮಂಟ್ ಬರ್ಕೋ” ಎಂದ್ದು ಅವತ್ತಿಗೆ ಅಗತ್ಯವಾದ ಬೇರೆ ರಾಜಕಾರಣಿಗಳು ಗಮನಿಸುವುದಕ್ಕೆ ಹೆದರುವ ಮಾತುಗಳನ್ನು ಹೇಳುತ್ತಾನೆ. ನಾಗೇಶ ಪುಳಕಿತನಾಗಿ ಬರೆದುಕೊಳ್ಳುತ್ತಾನೆ. ಚಿಗುರು ಮೀಸೆ, ಚಿಗುರು ಗಡ್ಡಗಳ ನಾಗೇಶನ ಮಾಟವಾದ ಮುಖ, ಅವನು ಬೆನ್ನಿನ ತನಕ ಬೆಳೆಸಿದ ಕೂದಲುಗಳನ್ನು ಕೃಷ್ಣಪ್ಪ ಅರ್ಧ ಪ್ರೀತಿ ಅರ್ಧ ಹಾಸ್ಯಗಳಲ್ಲಿ ನೋಡುತ್ತಾನೆ. ಅವನ ವಯಸ್ಸಿನಲ್ಲಿ ತಾನೊಬ್ಬ ಮನುಷ್ಯ, ಇಂಥವ ಎಂದು ಅನ್ನಿಸಿಕೊಳ್ಳಲು ಪ್ರಾಯಶಃ ತಾನೂ ರಾಜಕೀಯಕ್ಕೆ ಇಳಿದಿದ್ದವನಲ್ಲವೆ? ಕಾಲನ್ನು ಮಡಿಸಲು ಪ್ರಯತ್ನ ಪಡುತ್ತ, ಗೌರಿ ದೇಶಪಾಂಡೆಗೆ ಬರುವಂತೆ ನಾಳೆ ಬರೆಸುವುದು ಎಂದುಕೊಳ್ಳುತ್ತಾನೆ. ಅವಳಿಗೆ ತನ್ನ ಮೇಲೆ ಇನ್ನೂ ಇಷ್ಟವಿದ್ದಿದ್ದಲ್ಲಿ ಅವಳೇ ಬರದೆ ಇರುತ್ತಿದ್ದಳೆ? ಡೆಲ್ಲಿಯಲ್ಲಿ ಈಗ ತಾಯಿ ಜೊತೆ ಇರುವಳಂತೆ. ಪ್ರತಿದಿನ ಕಾಗದ ಬರೆಸಬೇಕೆಂದುಕೊಂಡರೂ ತನ್ನ ಈ ಅವಸ್ಥೆಯನ್ನವಳು ನೋಡಕೂಡದೆಂದು ಮುಂದೂಡುತ್ತಾನೆ.

ಈಗ, ಪ್ರಾಯಶಃ ಸಾಯಬಹುದಾದ ಈಗ, ತಾನು ಇಡಿಯಾಗಿ ಉಳಿದಿದ್ದೇನೆಯೆ? ಎಂಬ ಪ್ರಶ್ನೆ ಅವನನ್ನು ಕಾಡುತ್ತಲೇ ಇರುತ್ತದೆ.

..
..
..

ವೀಲ್ ಚೇರಿನ ಮೇಲೆ ಕೂತು ಹೀಗೆ ಯೋಚಿಸುತ್ತಿರುವ ಕೃಷ್ಣಪ್ಪನ ಕಣ್ಣೆದುರು ಅವನು ತೀವ್ರವಾಗಿ ದ್ವೇಷಿಸಿದ ಮಠದ ಪಾರುಪತ್ತೇದಾರನಾಗಿದ್ದ ನರಸಿಂಹಭಟ್ಟ, ದೊಡ್ಡ ಅಡಿಕೆ ತೋಟದ ಮಾಲೀಕ ಶಿವನಂಜಗೌಡ, ಪಿ. ಡಬ್ಲ್ಯೂ. ಡಿ. ಇಲಾಖೆಯಲ್ಲಿ ಲಕ್ಷಗಟ್ಟಲೆ ತಿಂದು ದೇಶದ ಮುಖ್ಯಮಂತ್ರಿಯಾದ ವೀರಭದ್ರಪ್ಪ, ದಪ್ಪ ಮುಖದ ವಾರಂಗಲ್ ಪೋಲೀಸ್ ಅಧಿಕಾರಿ ನಿಲ್ಲುತ್ತಾರೆ. ಕೃಶವಾದ ಕೈಕಾಲುಗಳ ಮಕ್ಕಳನ್ನು ಬಗಲಲ್ಲಿ ಹೊತ್ತ ಕೆದರಿದ ತಲೆಯ ಹೆಂಗಸರು, ಮಂಡಿತನಕ ಮಾಸಲು ಪಂಚೆಯುಟ್ಟ ರೈತರು ಇವರ ಮೇಲೆ ಆವೇಶದಿಂದ ನುಗ್ಗುತ್ತಾರೆ. ಚೂರುಚೂರೇ ಅವರನ್ನು ಹಿಂಸಿಸುತ್ತ ನಿಧಾನವಾಗಿ ಕೊಲ್ಲುತ್ತಾರೆ. ಅವರ ರಕ್ತ ತಂದು ತನ್ನ ಪಾರ್ಶ್ವವಾಯು ಬಡಿದ ಕಾಲಿಗೂ ಪಕ್ಕಕ್ಕೂ ತಿಕ್ಕುತ್ತಾರೆ. ಈ ರಕ್ತವಲ್ಲ ಕಣ್ರೋ -ಪಾರಿವಾಳದ ರಕ್ತ, ಬಿಸಿಯಾಗಿರಬೇಕು ಎಂದು ಯಾರೋ ಅನ್ನುತ್ತಾರೆ. ಕೃಷ್ಣಪ್ಪ ನಗುತ್ತಾನೆ.

ಹೀಗೆ ಕನಸು ಕಾಣುತ್ತ ಕೃಷ್ಣಪ್ಪನ ಕಣ್ಣುಗಳು ಕ್ರೂರವಾಗಿ ದುರುಗುಟ್ಟುವುದನ್ನು ಅಪ್ಪನಿಗೆ ಏನೋ ಹೇಳಲು ಬಂದ ಅವನ ಮಗಳು ಗೌರಿ ಕಂಡು ಹೆದರುತ್ತಾಳೆ. ಕೃಷ್ಣಪ್ಪ ತನ್ನ ಕಾಲನ್ನು ಈಗ ಎತ್ತಬಲ್ಲೆ ಎಂದು ತಿಳಿಯುತ್ತ ಇಡೀ ಮನಸ್ಸನ್ನು ತನ್ನ ಪಾದವಾಗಿ ಏಕಾಗ್ರಗೊಳಿಸುತ್ತಾನೆ. ಎತ್ತಲು ನೋಡುತ್ತಾನೆ. ಸೊಂಟದಿಂದ ಮೇಲಕ್ಕೆ ಈಗ ಎತ್ತಿಬಿಡುತ್ತೇನೆ ಎಂದು ತಿಳಿದ ಕಾಲು ಸ್ವಲ್ಪ ಪಾದದ ಉಂಗುಷ್ಠದಲ್ಲಿ ಮೇಲಕ್ಕೇರುತ್ತದೆ. ಕೃಷ್ಣಪ್ಪ ನಿಟ್ಟುಸಿರಿಟ್ಟು ಮತ್ತೆ ಇನ್ನೊಂದು ಹಗಲುಗನಸಿಗೆ ಮರಳುತ್ತಾನೆ. ಈಗ ರೈತರು ಕೊಲ್ಲುತ್ತಿಲ್ಲ. ಗಂಭೀರವಾಗಿ ಹೊಟ್ಟೆಡುಬ್ಬರಾದ ವೈರಿಗಳನ್ನು ಎದುರು ನಿಲ್ಲಿಸಿ ಶಿಸ್ತಿನಿಂದ ಅವರ ವಿಚಾರಣೆ ನಡೆಸುತ್ತಿದ್ದಾರೆ.

ಭಾಗ – ಎರಡು

ಒಂದು ಘಟನೆ ಮುಖ್ಯವಾಗಿ ಕೃಷ್ಣಪ್ಪನನ್ನು ಹಳ್ಳಿಗೆ ಹೋಗಿ ನೆಲೆಸುವಂತೆಯೂ ರೈತ ಸಂಘಟನೆಯಲ್ಲಿ ತೊಡಗುವಂತೆಯೂ ಮಾಡಿತು. ಅದು ಅಣ್ಣಾಜಿಯ ದಸ್ತಗಿರಿ ಮತ್ತು ಕೊಲೆ.

ಅಣ್ಣಾಜಿ ಮೈಕೈ ತುಂಬಿಕೊಂಡು ಅವನೇ ತಮಾಷೆ ಮಾಡುತ್ತಿದ್ದಂತೆ ಪೊಗದಸ್ತಾದ ಬೂರ್ಜ್ವಾನಂತೆ ಕಾಣಲು ಪ್ರಾರಂಭಿಸಿದ್ದ. ತನ್ನ ಎಲ್ಲ ಕಥೆಯನ್ನೂ ಉಮೆಗೆ ಹೇಳಿದ್ದ. ಅವನ ಜೊತೆ ತಾನೂ ಎಲ್ಲೆಂದರಲ್ಲಿಗೆ ಓಡಿಹೋಗುವುದಾಗಿ ಅವಳು ಹೇಳಿದ್ದಳು. ಇದನ್ನು ಅಣ್ಣಾಜಿ ಅವಳ ರೊಮಾಂಟಿಸಂ ಎಂದು ಕೃಷ್ಣಪ್ಪನ ಹತ್ತಿರ ತಮಾಷೆ ಮಾಡಿದ್ದರೂ ಈಕೆ ಗುಪ್ತವಾಗಿ ತನಗೆಂದು ತಿಜೋರಿಯಿಂದ ತೆಗೆದಿದ್ದ ಹಣ, ಅವಳ ಜೊತೆಗಿನ ತನ್ನ ವ್ಯವಹಾರಗಳು ಇಂಗ್ಲಿಷ್ ಕಲಿಯುವ ಅಮಲು ಇಳಿಯುತ್ತಿದ್ದಂತೆ ಚನ್ನವೀರಯ್ಯನಿಗೆ ತಿಳಿಯುವುದೆಂದೂ, ಆಮೇಲೆ ತಾವಿಬ್ಬರೂ ಒಟ್ಟಾಗಿ ತೀರ್ಮಾನ ತೆಗೆದುಕೊಳ್ಳಲೇ ಬೇಕಾಗುವುದೆಂದೂ ಅಣ್ಣಾಜಿಗೆ ಚಿಂತೆಯಾಗಿತ್ತು. ತನ್ನ ಪ್ರತಿಕ್ರಿಯೆ ಸೂಚಿಸದೆ ಕೃಷ್ಣಪ್ಪ ಅಣ್ಣಾಜಿಯ ಈ ಉಪದ್ವ್ಯಾಪಗಳನ್ನು ಕೇಳಿಸಿಕೊಳ್ಳುತ್ತಿದ್ದ. ಕೃಷ್ಣಪ್ಪನೂ ಆಪ್ತನೆಂದು ಗಟ್ಟಿಯಾದ ಮೇಲೆ ಈಚೆಗೆ ಉಮೆ ನಿಸ್ಸಂಕೋಚವಾಗಿ ಅವನಿದ್ದಾಗಲೇ ಅಣ್ಣಾಜಿಯ ಜೊತೆ ವ್ಯಹರಿಸುವುದು ನೋಡಿದರೆ ತನಗೆ ಪ್ರಿಯವಾದವನ ಜೊತೆ ಓಡಿಹೋಗುವವಳಂತೆ ತೋರುತ್ತಿದ್ದಳೇ ವಿನಾ, ತಾನು ಗಂಡನಿಗೆ ಮೋಸ ಮಾಡುತ್ತಿದ್ದೇನೆಂಬ ಯಾವ ಪಶ್ಚಾತ್ತಾಪವೂ ಅವಳಲ್ಲಿ ಕಾಣಿಸುತ್ತಿರಲಿಲ್ಲ. ಆದರೆ ಅವಳು ತನ್ನನ್ನು ಹಚ್ಚಿಕೊಂಡ ತೀವ್ರತೆಯಿಂದ ಅಣ್ಣಾಜಿಯ ಭಾವನೆಗಳೆಲ್ಲ ಗೊಂದಲಕ್ಕೊಳಗಾಗಿದ್ದಾವೆಂಬುದನ್ನು ಕೃಷ್ಣಪ್ಪ ಗಮನಿಸಿದ್ದ. ಅವಳು ಎದುರಿಗಿಲ್ಲದೆ ತನಗೆ ಪ್ರಿಯವಾದ ವಿಚಾರಗಳನ್ನೂ ಅಣ್ಣಾಜಿ ಮಾತಾಡಲಾರ. ರಾಜಕೀಯದ ಒಣ ವಿಚಾರಗಳೂ – ಉಮೆಗೆ ತಿಳಿಯಲಿ ಬಿಡಲಿ -ಅಣ್ಣಾಜಿ ಅವಳೆದುರು ಮಂಡಿಸುವ ರೀತಿ ಪ್ರಣಯದ ಕಾವಿನಿಂದ ತುಂಬಿರುವುದನ್ನು ಕಂಡು ಕೃಷ್ಣಪ್ಪ ಚಕಿತನಾಗಿದ್ದ. ಅಣ್ಣಾಜಿ ಜೊತೆ ಯಾವುದಾದರೂ ಹಳ್ಳಿಯಲ್ಲಿ ತಾನೂ ದುಡಿಯುವೆನೆಂದು ಉಮೆ ತಿಳಿದಿದ್ದಳು. ಅಣ್ಣಾಜಿ ಕೇರಳಕ್ಕೆ ಹೋಗುವುದೆಂದು ನಿರ್ಧರಿಸಿದ್ದ -ಟ್ಯುಟೋರಿಯಲ್ ಪ್ರಾರಂಭಿಸಲು. ಮನೆಯಲ್ಲಿ ಮರಗೆಲಸಕ್ಕೆ ಬರುತ್ತಿದ್ದ ಕೇರಳದ ಬಡಗಿಯೊಬ್ಬನಿಂದ ಆಗಲೇ ಉಮೆ ಅಷ್ಟಿಷ್ಟು ಮಲೆಯಾಳಂ ಕಲಿಯಲು ಸಹ ಪ್ರಾರಂಭಿಸಿದ್ದಳು -ಮಾರ್ಕೆಟ್ಟು ಅಂಗಡಿಗಳಲ್ಲಿ ಬೇಕಾಗುವಷ್ಟು. ಇನ್ನು ಹದಿನೈದು ದಿನಗಳಲ್ಲಿ ಅವರು ಓಡಿಹೋಗುವುದೆಂದು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳತೊಡಗಿದ್ದರು -ಉಮೆ ಅತ್ಯಂತ ಅಗತ್ಯವಾದ ತನ್ನ ಬಟ್ಟೆಗಳನ್ನು ಸಣ್ಣ ಟ್ರಂಕಲ್ಲಿ ತುಂಬಿ ಅಣ್ಣಾಜಿ ರೂಮಿನಲ್ಲಿ ಇಟ್ಟಿದ್ದಳು ಕೂಡ. ಪ್ರತಿನಿತ್ಯ ಕ್ಲಬ್ಬಿನಲ್ಲಿ ಇಸ್ಪೀಟ್ ಆಡಿ ಕುಡಿದು ಮಧ್ಯರಾತ್ರೆ ಕಳೆದ ಮೇಲೆ ಮನೆಗೆ ಬರುತ್ತಿದ್ದ ಚನ್ನವೀರಯ್ಯನಿಗೆ ತನ್ನ ಹೆಂಡತಿ ಬೇರೆ ಸ್ನೇಹಿತರ ಹೆಂಡಂದಿರಂತೆ ಗಲಾಟೆ ಮಾಡುವುದಿಲ್ಲವೆಂದು ಖುಷಿ; ತನ್ನ ಅಂಕೆಯಲ್ಲಿ ಇದ್ದಾಳೆಂದು ಹೆಮ್ಮೆ.

ಒಂದು ದಿನ ಮಧ್ಯಾಹ್ನ ಪೋಲೀಸ್ ಜೀಪು ಸೀದ ಬಂದು ನಿಂತಿತು. ಉಮೆಯ ಹತ್ತಿರ ಆಗ ಅಣ್ಣಾಜಿ ಮಾತಾಡುತ್ತ ಕೂತಿದ್ದ. ಬಾಗಿಲು ತಟ್ಟಿದ ಶಬ್ದವಾದಾಗ ಕೃಷ್ಣಪ್ಪನೆಂದು ತಿಳಿದು ಅಣ್ಣಾಜಿ ಬಾಗಿಲು ತೆರೆದ. ಎದುರು ದೈತ್ಯನಂತೆ ಡಿ.ಎಸ್.ಪಿ ಯೇ ಖುದ್ದು ನಿಂತಿದ್ದ. ಠಾಣೆಗೆ ಬರಬೇಕು ಎಂದ. ಉಮೆ ಗಾಬರಿಯಿಂದ ಎದ್ದು ನಿಂತಳು. “ಉಮ -ಹೆದರಬೇಡ. ಇವರೇನೋ ತಪ್ಪು ತಿಳಿದಂತಿದೆ. ಕೃಷ್ಣಪ್ಪನನ್ನು ಠಾಣೆಗೆ ಕಳಿಸು. ನನಗೆ ಜಾಮೀನು ಬೇಕಾಗಬಹುದು” ಎಂದು ಪೋಲೀಸರಿಗೆ ಇಂಪ್ರೆಸ್ ಆಗುವಂತೆ ಶುದ್ಧ ಇಂಗ್ಲಿಷಲ್ಲಿ ಮಾತಾಡಿ ಅಣ್ಣಾಜಿ ಹೊರಟ.

ಸ್ವಲ್ಪ ಹೊತ್ತಿನ ಮೇಲೆ ಬಂದ ಕೃಷ್ಣಪ್ಪನ ಹತ್ತಿರ ಉಮ ಅಳಲು ಪ್ರಾರಂಭಿಸಿದಳು. ಕೃಷ್ಣಪ್ಪ ಹೆಣ್ಣು ಅಳುವುದನ್ನು ಸಹಿಸಲಾರ. ಏನು ಹೇಳುವುದೆಂದು ತಿಳಿಯದ ಗೊಂದಲದಲ್ಲಿದ್ದ ಅವನಿಗೆ ಉಮ ಒಂದು ಸಾವಿರ ರೂಪಾಯನ್ನು ಕೊಟ್ಟು ಏನಾದರೂ ಮಾಡಿ ಅಣ್ಣಾಜಿಯನ್ನು ಬಿಡಿಸಿಕೊಂಡು ಬರುವಂತೆ ಹೇಳಿದಳು. ಕೃಷ್ಣಪ್ಪ ಠಾಣೆಗೆ ಹೋದಾಗ ಅಣ್ಣಾಜಿಯನ್ನು ವಾರಂಗಲ್‌ಗೆ ನೇರವಾಗಿ ಜೀಪಿನಲ್ಲಿ ಸಾಗಿಸುತ್ತಿರುವುದಾಗಿ ತಿಳಿಯಿತು. ಅಲ್ಲಿ ಕೋರ್ಟಿನಲ್ಲಿ ಅವನನ್ನು ಹಾಜರುಪಡಿಸುತ್ತಾರೆಂದು ಪೋಲೀಸ್ ಇನ್ಸ್‌ಪೆಕ್ಟರ್ ಹೇಳುತ್ತ, “ಆತನ ಮೇಲೆ ಕೊಲೆ ಪ್ರಯತ್ನದ ಆಪಾದನೆ ಇದೆ ಮಿಸ್ಟರ್ -ಜೋಕೆಯಾಗಿರಿ” ಎಂದ.

ಕೃಷ್ಣಪ್ಪ ಉಮೆಯನ್ನು ನೋಡಲು ಹಿಂದಕ್ಕೆ ಬಂದ. ಅಷ್ಟರಲ್ಲಾಗಲೇ ಅಣ್ಣಾಜಿಯ ಅರೆಸ್ಟ್ ವರ್ತಮಾನ ತಿಳಿದ ಚನ್ನವೀರಯ್ಯ ಮನೆಗೆ ಧಾವಿಸಿ ಹೆಂಡತಿಯನ್ನು ಸಂತೈಸುತ್ತಿದ್ದ. “ನೋಡಿ ಮಿಸ್ಟರ್ ಕೃಷ್ಣಪ್ಪ -ಆತ ರೆವಲೂಶನ್ ಮಾಡ್ತೀನಿ ಅಂತ ಏನೋ ಕೊಲೆ ಗಿಲೆಗೂ ಕೈ ಹಾಕಿದ್ದನಂತೆ. ಇಲ್ಲಿ ಅಂಡರ್‍ಗ್ರೌಂಡ್ ಇದ್ದನಂತೆ; ಥ್ಯಾಂಕ್ ಗಾಡ್ ಅಷ್ಟಕ್ಕೆ ಮುಗಿಯಿತಲ್ಲ ಹೇಳಿ. ಆದರೆ ನನ್ನ ವೈಫ಼್‌ಗೆ ಅವರ ಮೇಲೆ ತುಂಬ ರಿಗಾರ್ಡ್ಸ್ ನೋಡಿ -ಅವರ ನಾಲೆಜ್ ಕಂಡು. ನಿಮ್ಮ ಫ಼್ರೆಂಡ್‌ಗೇನಾದರೂ ಸಹಾಯ ಮಾಡಬೇಕೆನ್ನಿಸಿದರೆ ದಯಮಾಡಿ ವಾರಂಗಲ್‌ಗೆ ಹೋಗಿ ಬನ್ನಿ. ಖರ್ಚಿಗೆ ಈ ಐನೂರು ತಕೊಳ್ಳಿ. ಅಣ್ಣಾಜಿಗೆ ಒಂದು ತಿಂಗಳ ಸಂಬಳಾನೂ ಬಾಕಿ ಇತ್ತು. ಆದರೆ ದಯವಿಟ್ಟು ನನ್ನನ್ನು ಇನ್ವಾಲ್ವ್ ಮಾಡಬೇಡಿ. ನಾನು ಮಾಡೋದು ಬಿಸಿನೆಸ್ ನೋಡಿ -ತುಂಬ ಡೆಲಿಕೇಟು” ಎಂದ. ಕೃಷ್ಣಪ್ಪ ಆ ಹಣವನ್ನೂ ಪಡೆದು ರೈಲಿನಲ್ಲಿ ವಾರಂಗಲ್‌ಗೆಂದು ಹೊರಟಾದ ಮಹೇಶ್ವರಯ್ಯ ಪ್ರತ್ಯಕ್ಷರಾಗಿ ಬಿಡುವುದೆ? “ಹಾ ನಾನೂ ಬರುವೆನಯ್ಯ -ನಿನ್ನ ಜೊತೆ. ನನಗಷ್ಟು ತೆಲಗೂ ಬರತ್ತೆ” ಎಂದರು.

ಮಹೇಶ್ವರಯ್ಯನ ಕೂದಲು ಹಿಂದಿಗಿಂತ ಹೆಚ್ಚು ಉದ್ದವಾಗಿದ್ದು ಬೆಳ್ಳಗಾಗಿದ್ದವು. ಹಣೆಯ ಮೇಲಿನ ದೊಡ್ಡ ಕುಂಕುಮ ನೋಡಿದರೆ ಅವರು ತಮ್ಮ ದೇವೀ ಪೂಜೆಯ ಯಾವುದೋ ಮಂಡಳ ಪೂರೈಸಿ ಬಂದವರಂತೆ ಕಂಡರು. ಎರಡು ಫ಼ಸ್ಟ್ ಕ್ಲಾಸ್ ಟಿಕೆಟ್ಟುಗಳನ್ನು ಕೊಂಡರು. ಕೃಷ್ಣಪ್ಪ ಅಲ್ಲಿ ಇಲ್ಲಿ ಅಣ್ಣಾಜಿಗೆಂದು ಮಾಡಿದ್ದ ಸಾಲ -ಇನ್ನೂ ತೀರಿಸಲಾರದೆ ಉಳಿದದ್ದು -ತೀರಿಸಿದರು. ಕೃಷ್ಣಪ್ಪನನ್ನು ಖಾದಿ ಅಂಗಡಿಗೆ ಕರೆದೊಯ್ದು ಆರು ತೆಳುವಾದ ಪಂಚೆ ಕೊಂಡರು. ಜೊತೆಗೇ ಜುಬ್ಬಗಳಿಗೆ ಬಟ್ಟೆ, ಒಂದು ಉಣ್ಣೆಯ ಕೋಟಿಗೆ ಬಟ್ಟೆ ಕೊಂಡು ಹೊಲಿಸಲು ಹಾಕಿದರು. ತೋಳು ಎಷ್ಟು ಸಡಿಲವಿರಬೇಕು, ಕತ್ತಿನ ಪಟ್ಟಿ ಹೇಗಿರಬೇಕು, ಜುಬ್ಬ ಕೆಳಬರುತ್ತ ಹೇಗೆ ಅಗಲವಾಗಬೇಕು ಇತ್ಯಾದಿಗಳನ್ನು ಟೇಲರಿಗೆ ಸ್ಪಷ್ಟವಾಗಿ ವಿವರಿಸಿ ಕೃಷ್ಣಪ್ಪನಿಗೆ “ನೀನಿನ್ನು ಕಚ್ಚೆಪಂಚೆ ಉಡಬೇಕಯ್ಯ” ಎಂದರು. ಸಂಜೆ ರೈಲಲ್ಲಿ ಇಬ್ಬರೂ ವಾರಂಗಲ್ ಮಾರ್ಗವಾಗಿ ಪ್ರಯಾಣ ಮಾಡಿದರು.

ಎರಡು ದಿನಗಳ ಮೇಲೆ ವಾರಂಗಲ್ ತಲ್ಪಿ ಪೋಲೀಸ್ ಠಾಣೆಗೆ ಟ್ಯಾಕ್ಸಿಯಲ್ಲಿ ಅವಸರವಾಗಿ ಹೋಗಿ ಆರ್. ಎಲ್. ನಾಯಕರನ್ನು ಎಲ್ಲಿಟ್ಟಿದ್ದೀರಿ? – ಎಂದು ಕೇಳಿದಾಗ ಕೃಷ್ಣಪ್ಪ ಮತ್ತು ಮಹೇಶ್ವರಯ್ಯನನ್ನು ಕೂರಲು ಸಹ ಹೇಳದೆ ಪೋಲೀಸ್ ಅಧಿಕಾರಿಯೊಬ್ಬ –

“ನಿಮಗೇನು ಆಗಬೇಕು ಅವರು?” ಎಂದ.

“ನನ್ನ ಸ್ನೇಹಿತ” ಎಂದ ಕೃಷ್ಣಪ್ಪ.

“ಎಚ್ಚರಿಕೆಯಿಂದ ಉತ್ತರ ಕೊಡಿ. ಯಾವ ಹೆಸರಲ್ಲಿ ನಿಮಗೆ ಸ್ನೇಹಿತರಾದರು? ಅವರ ವಿಷಯ ನಿಮಗೆ ಏನೇನು ಗೊತ್ತು?”

“ಕೋರ್ಟಲ್ಲಿ ವಿಚಾರಣೆಯಾಗುತ್ತಲ್ಲ. ಈಗ ಯಾಕೆ?”

“ಆರ್. ಎಲ್. ನಾಯಕ್ ಎಂಬ ಹೆಸರಲ್ಲೇ ನಿಮಗೆ ಪರಿಚಿತರೋ ಅವರು?”

ಲೋಕಜ್ಞಾನ ಗೊತ್ತಿದ್ದ ಮಹೇಶ್ವರಯ್ಯ ಕೃಷ್ಣಪ್ಪನಿಗೆ ಮಾತಾಡಲು ಅವಕಾಶ ಕೊಡದೆ ಹೇಳಿದರು:

“ಆ ಹೆಸರಲ್ಲಿ ನೀವು ಅರೆಸ್ಟ್ ಮಾಡಿದ್ದರಿಂದ ಊಹಿಸಿ ಕೇಳಿದ್ದು ಅಷ್ಟೆ. ನಮ್ಮಲ್ಲಿ ಅವರು ಅಣ್ಣಾಜಿ ಎಂಬ ಹೆಸರಲ್ಲಿ ಇಂಗ್ಲಿಷ್ ಟ್ಯೂಟರ್ ಆಗಿ ಇವರಿಗೆ ಪಾಠ ಹೇಳುತ್ತಿದ್ದರು.”

“ಓಹೋ ಆತ ಯಾರು ಗೊತ್ತೇ ನಿಮಗೆ ಯಂಗ್ ಮ್ಯಾನ್? ತೆಲಂಗಾಣ ರೀಜನ್ನಿನಲ್ಲಿ ಜಮೀಂದಾರನನ್ನು ಕೊಲೆ ಮಾಡಲು ಕೆಲವು ಕಲ್ಪ್ರಿಟ್ಸನ್ನು ತಯಾರು ಮಾಡುತ್ತಿದ್ದ ಒಬ್ಬ ಸೋ ಕಾಲ್ಡ್ ಕಮ್ಯುನಿಸ್ಟ್ ಫಟಿಂಗ. ನೀನು ಖದ್ದರ್ ಹಾಕಿದ್ದರಿಂದ ವಾರ್ನ್ ಮಾಡ್ತಿದೇನೆ. ನಿನಗೆ ಅವನ ಗುರ್ತು ಅಂತಲೂ ಹೇಳಿಕೋಬೇಡ. ಅವನನ್ನು ಫ಼ಿನಿಶ್ ಮಾಡಿಯಾಯ್ತು. ನೋಡಿಲ್ಲವೆ?” ಎಂದು ಅವತ್ತಿನ ಇಂಗ್ಲಿಷ್ ಸುದ್ದಿಪತ್ರಿಕೆಯೊಂದನ್ನು ಕೃಷ್ಣಪ್ಪನಿಗೆ ಕೊಟ್ಟ.

ಪತ್ರಿಕೆಯಲ್ಲಿ ಅಣ್ಣಾಜಿ ಕಾವಿ ಬಟ್ಟೆ ತೊಟ್ಟ ಫ಼ೋಟೋದ ಕೆಳಗೆ ಕಾವಿಯಲ್ಲಿದ್ದ ಆಪಾದಿತನ ಸಾವು ಎಂದು ಶೀರ್ಷಿಕೆಯಿತ್ತು. ಕರ್ನಾಟಕದಲ್ಲಿ ಅಡಗಿದ್ದ ಈ ಆಪಾದಿತನನ್ನು ಪೋಲೀಸರು ಜೀಪಲ್ಲಿ ತರುವಾಗ ಒಂದು ಅರಣ್ಯದ ಮಧ್ಯೆ ಅವನ ಕೆಲವು ಹಿಂಬಾಲಕರು ಜೀಪನ್ನು ಅಟ್ಯಾಕ್ ಮಾಡಿದುದಾಗಿಯೂ, ಈ ಎನ್‌ಕೌಂಟರ್‍ನಲ್ಲಿ ಇಬ್ಬರು ಪೋಲಿಸರಿಗೆ ಗಾಯವಾದುದಾಗಿಯೂ, ಆರ್. ಎಲ್. ಸ್ವಾಮಿ ಅಲಿಯಾಸ್ ಅಣ್ಣಾಜಿ ಈ ಗುಂಡೇಟುಗಳ ಮಳೆಯಲ್ಲಿ ಸಿಕ್ಕಿಬಿದ್ದು ಸತ್ತುದಾಗಿಯೂ ಪೋಲೀಸ್ ಹೇಳಿಕೆ ಪ್ರಕಟವಾಗಿತ್ತು. ಈ ಸ್ವಾಮಿಯ ಅನುಯಾಯಿಗಳಲ್ಲಿ ಕೆಲವರು ಕರ್ನಾಟಕದಲ್ಲಿ ಇನ್ನೂ ಅಡಗಿರಬಹುದೆಂದೂ, ಕರ್ನಾಟಕ ಪೋಲೀಸರು ಅವರಿಗಾಗಿ ಅರಣ್ಯಪ್ರದೇಶದಲ್ಲಿ ಹುಡುಕಾಡುತ್ತಿರುವುದಾಗಿಯೂ ಅಚ್ಚಾಗಿತ್ತು.

ಕೃಷ್ಣಪ್ಪನ ಮುಖ ವಿವರ್ಣವಾಯಿತು. ಎದುರಿಗೆ ಕಾಕಿಬಟ್ಟೆ ತೊಟ್ಟು ಕೈಯಲ್ಲಿ ದೊಣ್ಣೆ ಹಿಡಿದಿದ್ದ ದಪ್ಪ ಮುಖದ ಅಧಿಕಾರಿಯನ್ನು ಕೆಕ್ಕರಿಸಿ ನೋಡುತ್ತ ನಿಂತ.

“ಕೊನೆ ಮಾತು ಓದಿದೆಯ? ಜೋಕೇಂದ ಇರು. ಅ ಸೂಳೇಮಗನ ಪರಿಚಯದವ ಅಂದ್ರೆ ನಿನ್ನನ್ನೂ ಅರೆಸ್ಟ್ ಮಾಡಬೇಕಾಗುತ್ತೆ” ದಪ್ಪ ಮುಖದ ಅಧಿಕಾರಿ ಹೇಳಿದ.

“ಕೊಲೆಗಡುಕ ಹಂದಿ ಸೂಳೇಮಗನೆ -”

ತಾನೇನು ಮಾಡುತ್ತಿದ್ದೇನೆಂದು ತಿಳಿಯದೆ ಕೃಷ್ಣಪ್ಪ ನುಗ್ಗಿ ಪೋಲೀಸ್ ಅಧಿಕಾರಿಯ ಕತ್ತನ್ನು ಹಿಡಿದ. ಇಬ್ಬರು ಕಾನ್‌ಸ್ಟೆಬಲ್‌ಗಳು ಓಡಿ ಬಂದು ಅವನನ್ನು ಎಳೆದರು. ಮಹೇಶ್ವರಯ್ಯ ಕೈ ಮುಗಿದು “ತುಂಬ ಕೋಪದ ಯುವಕ ಸ್ವಾಮಿ ಬಿಟ್ಟುಬಿಡಿ” ಎಂದು ತೆಲುಗಿನಲ್ಲಿ ಅಂಗಲಾಚಿದರು. ಚೇತರಿಸಿಕೊಂಡಿದ್ದ ಕೃಷ್ಣಪ್ಪ “ಈ ಕೊಳಕನ ಹತ್ತಿರ ಬೇಡ ಬಿಡಿ” ಎಂದ. ಪೋಲೀಸ್ ಅಧಿಕಾರಿ “ನಿನಗಿಷ್ಟು ಧಿಮಾಕೋ -ನೋಡುತ್ತೇನೆ. ಅಸಾಲ್ಟ್‌ಗೆ ಕೇಸು ಹಾಕುತ್ತೇನೆ. ಮ್ಯಾಜಿಸ್ಟ್ರೇಟ್ ಹತ್ತಿರ ನಿನ್ನ ಪ್ರೆಸೆಂಟ್ ಮಾಡಿ ವಿಚಾರಣೆಗೆ ಇಲ್ಲಿ ಇಳಿಸಿಕೋತೇನೆ” ಎಂದು ಎದ್ದುನಿಂತ. “ಈ ಕುಂಕುಮದ ಪೂಜಾರೀನ ಇಲ್ಲಿಂದ ಕರೆದುಕೊಂಡು ಹೋಗಿ. ಅವನು ಓಡಿಹೋಗದಂತೆ ಕಣ್ಣಿಟ್ಟಿರಿ. ಎಲ್ಲ ಛದ್ಮವೇಷದಲ್ಲಿರೋ ಕೊಲೆಗಡುಕರು” ಎಂದು ತನ್ನ ಪ್ಯಾಂಟನ್ನು ಮೇಲಕ್ಕೆತ್ತಿ ಜಗ್ಗಿ ಮೀಸೆ ಹುರಿಮಾಡಿಕೊಂಡ.

ಕಾನ್‌ಸ್ಟೆಬಲ್ ಒಬ್ಬ ಬಂದು ಮಹೇಶ್ವರಯ್ಯನನ್ನು ಹೊರಗೆ ತಳ್ಳಲು ಶುರುಮಾಡಿದ. ಮಹೇಶ್ವರಯ್ಯ “ನಾನೊಬ್ಬ ಲಾಯರನ್ನು ನೋಡ್ತೇನೊ. ಹೆದರಬೇಡ -ದೇವಿಯ ಸ್ತೋತ್ರ ಮಾಡುತ್ತಿರು” ಎಂದು ಹೇಳಿ ಹೊರಗೆ ಹೋದರು.

ಒಬ್ಬ ಇಲಿಯ ಮುಖದ ಕುಳ್ಳನೆಯ ಮ್ಯಾಜಿಸ್ಟ್ರೇಟ್ ಎದುರು ಕೃಷ್ಣಪ್ಪನನ್ನು ಪೋಲೀಸ್ ಅಧಿಕಾರಿ ನಿಲ್ಲಿಸಿದ. ತನ್ನ ಮೇಲೆ ಈತ ಅಸಾಲ್ಟ್ ಮಾಡಲು ಪ್ರಯತ್ನಿಸಿದ್ದನ್ನೂ ಸ್ವಾಮಿಯ ಸಂಗಡಿಗನಾಗಿದ್ದುದನ್ನೂ ಹೇಳಿ ವಿಚಾರಣೆಗೆ ಸ್ಟೇಶನ್ನಿಗೆ ಬಿಡಬೇಕೆಂದು ಕೋರಿದ. ಕೃಷ್ಣಪ್ಪ ಕಣ್ಣು ಕೆಕ್ಕರಿಸಿ ನೋಡುತ್ತ ಸುಮ್ಮನೇ ನಿಂತ. ಮ್ಯಾಜಿಸ್ಟ್ರೇಟಿನ ಒಪ್ಪಿಗೆ ಪಡೆದು ಅಧಿಕಾರಿ ಕೃಷ್ಣಪ್ಪನನ್ನು ಊರಿನ ಇನ್ನೊಂದು ಠಾಣೆಗೆ ಒಯ್ದು, ಠಾಣೆಯ ಹಿತ್ತಲಲ್ಲಿ ಇದ್ದ ಒಂದು ಕೋಣೆಯ ಎದುರು ನಿಲ್ಲಿಸಿ, ಅದರ ಬಾಗಿಲು ತೆರೆಯುವಂತೆ ಪಕ್ಕದಲ್ಲಿ ಇದ್ದ ಪೋಲೀಸನಿಗೆ ಹೇಳಿದ. ಬಾಗಿಲು ಕಿಂಯ್‌ಗುಡುತ್ತ ತೆರೆದುಕೊಂಡಿತು.

..
..
..

ಆ ಕೋಣೆಯಲ್ಲಿ ಒಂದಾದರೂ ಕಿಟಕಿಯಿರಲಿಲ್ಲ. ಗಾಳಿಯಾಡಲು ಅವಕಾಶವಿಲ್ಲದ್ದರಿಂದ ಬೂಸಲು ನಾತ ಗಮ್ಮೆಂದು ಮೂಗಿಗೆ ಬಡಿಯಿತು. ಪೋಲೀಸ್ ಕಾನ್‌ಸ್ಟೆಬಲ್ ಕೃಷ್ಣಪ್ಪನನ್ನು ಒಳಗೆ ತಳ್ಳಿ, ಅವನ ಕಾಲಿನ ಬುಡಕ್ಕೆ ಒಂದು ಕಂಬಳಿಯನ್ನು ಎಸೆದ. ಬಾಗಿಲಿಂದ ಒಳಗೆ ಬಂದ ಬೆಳಕಲ್ಲಿ ಉಚ್ಚೆ ಕಕ್ಕಸಗಳಿಗೆಂದು ಇಟ್ಟಿದ್ದ ಒಂದು ತುಕ್ಕು ಹಿಡಿದ ಬೋಗಣಿಯನ್ನು ತೋರಿಸಿದ. ಅಂಥದೇ ಇನ್ನೊಂದು ತುಕ್ಕು ಹಿಡಿದ ಪಾತ್ರೆ ತೋರಿಸಿ ಅದರಲ್ಲಿ ಕುಡಿಯಲು ನೀರಿರುತ್ತದೆ ಎಂದ -ಉರ್ದುವಿನಲ್ಲಿ. “ಎರಡು ಪಾತ್ರೆಗಳೂ ಬೇರೆಬೇರೆ ಕೆಲಸಕ್ಕೆ -ನೆನಪಿಟ್ಟಿರು” ಎಂದು ಅಧಿಕಾರಿ ನಕ್ಕ. ಕಾನ್‌ಸ್ಟೆಬಲ್ ಕೃಷ್ಣಪ್ಪನ ಜೇಬುಗಳನ್ನು ಹುಡುಕಿ ಅದರಿಂದ ಸಾವಿರದ ಐನೂರು ರೂಪಾಯಿ, ಸಿಗರೇಟು, ಬೆಂಕಿಪೊಟ್ಟಣ, ಪೆನ್ನುಗಳನ್ನು ತೆಗೆದು ಅಧಿಕಾರಿಗೆ ಕೊಟ್ಟ.

ವಾರಂಗಲ್ ಸೆಖೆ ಅಸಹನೀಯವಾಗಿತ್ತು. ರೂಮೊಳಗೆ ಹೋಗುತ್ತಿದ್ದಂತೆ ಕೃಷ್ಣಪ್ಪನಿಗೆ ಅಲ್ಲಿನ ಧೂಳಿನಿಂದಾಗಿ ಉಸಿರು ಕಟ್ಟಿತು. ಒಳಗಿನ ಕ್ಷೀಣ ಬೆಳಕಿನಲ್ಲಿ ಜೇಡರ ಬಲೆ ಕಟ್ಟಿದ, ಒಲೆಯಂತೆ ಬೇಯುತ್ತಿದ್ದ ರೂಮನ್ನು ಸುತ್ತಲೂ ನೋಡುತ್ತಿದ್ದಂತೆ ಬಾಗಿಲು ಹಾಕಿಕೊಂಡಿತು. ಕಗ್ಗತ್ತಲು ಕವಿಯಿತು.

ಧೂಳಿನ ನೆಲದ ಮೇಲೆ ಕಂಬಳಿಯನ್ನು ಹಾಸಿ ಕೃಷ್ಣಪ್ಪ ಕೂರಲು ನೋಡಿದ. ಆದರೆ ಸೆಖೆಯಿಂದಾಗಿ ಕಂಬಳಿಯ ಮೇಲೆ ಕೂರುವುದು ಅಸಹನೀಯವೆನ್ನಿಸಿತು. ಆದರೆ ಕಾಲು ಬತ್ತಿ ಬಂದದ್ದರಿಂದ ಕಂಬಳಿ ಮೇಲೇ ಕೂತು, ಶರಟನ್ನು ಬಿಚ್ಚಿ ಮುಖ ಮೈಗಳನ್ನು ಒರೆಸಿಕೊಂಡ. ಸಿಗರೇಟ್ ಸೇದಬೇಕೆನ್ನಿಸಿತು. ಜೇಬಿನಿಂದ ಎಲ್ಲವನ್ನೂ ಪೋಲೀಸನು ತೆಗೆದಿದ್ದರೂ ಏನಾದರೂ ಇರಬಹುದೆಂಬ ಭರವಸೆಯಿಂದ ಪ್ರತಿ ಜೇಬನ್ನೂ ಮತ್ತೆ ಮತ್ತೆ ಹುಡುಕಿದ.

ಅವನಿಗೆ ಬಂದ ಮೊದಲನೇ ಯೋಚನೆ: ನಾನೀಗ ನನ್ನ ಬುದ್ಧಿಯ ಸ್ತಿಮಿತವನ್ನು ಕಳೆದುಕೊಳ್ಳಕೂಡದು. ತನ್ನನ್ನು ಗಕ್ಕನೆ ಕಬಳಿಸಿದ್ದ ಈ ಕ್ಷುದ್ರತೆಗೆ ಜಗ್ಗಕೂಡದು. ಸಾಧ್ಯವಾದಷ್ಟು ವಿಶ್ರಾಂತಿ ತೆಗೆದುಕೊಂಡು ತನ್ನ ಶಕ್ತಿಯನ್ನೆಲ್ಲ ಮುಂದಿನದನ್ನು ಎದುರಿಸಲು ಕಾಯ್ದುಕೊಳ್ಳಬೇಕು. ಚುಚ್ಚುವ ಕಂಬಳಿಯನ್ನೆ ಹಾಸಿಕೊಂಡು ಕಾಲು ಚಾಚಿ ಮಲಗಿದ. ಮೈ ಬೆವರುತ್ತಿದ್ದುದರಿಂದ ಬಾಯಾರಿಕೆಯಾಯಿತು. ನೀರಿದ್ದ ಪಾತ್ರೆ ಕಣ್ಣಿಗೆ ಕಾಣಲಿಲ್ಲ. ಅದರಲ್ಲಿದ್ದ ನೀರನ್ನು ಕುಡಿಯುವುದನ್ನು ನೆನೆಸಿಕೊಂಡರೇ ಹೇಸಿಗೆಯಾಯಿತು.

ಕಣ್ಣು ಮುಚ್ಚಲು ನೋಡಿದ. ಚೂರು ಹಂದಿದರೂ ಧೂಳೆದ್ದು ಮೂಗು ಕಟ್ಟುವಂತಾಗುತ್ತಿತ್ತು. ಬಾಗಿಲ ಸಂದಿಯಿಂದಾದರೂ ಒಂದು ಬೆಳಕಿನ ರೇಖೆ ಕಂಡೀತೋ ಎಂದು ಆಶಿಸಿದರೆ ಅದು ಒಂದೇ ಹಲಗೆಯ, ಭದ್ರವಾಗಿ ಮುಚ್ಚುವ ಚಿಕ್ಕ ಬಾಗಿಲಾಗಿತ್ತು. ಇಲ್ಲಿ ಇದ್ದರೆ ಹಗಲೋ ರಾತ್ರೆಯೋ ತಿಳಿಯುವುದು ಕೂಡ ಸಾಧ್ಯವಿರಲಿಲ್ಲ. ಕೃಷ್ಣಪ್ಪ ಜೈಲು ನೋಡುತ್ತಿರುವುದು ಇದೇ ಮೊದಲಲ್ಲ. ನಲವತ್ತೆರಡರಲ್ಲಿ, ಮತ್ತೆ ಮೈಸೂರಿನ ಬಿಡುಗಡೆಗೆ ನಲವತ್ತೇಳರಲ್ಲಿ ಅವನು ಜೈಲಿಗೆ ಹೋಗಿದ್ದ. ಆಗ ಜೈಲೆಂದರೆ ಗೆಳೆಯರೆಲ್ಲ ಒಟ್ಟು ಕೂಡಿ ಹಾಡುವ, ಅಡಿಗೆ ಮಾಡಿ ಊಟ ಮಾಡುವ ಜಾಗವಾಗಿತ್ತು. ಸಿಸ್ಟಮ್ಮನ್ನೆ ವಿರೋಧಿಸಿದಾಗ ಸರ್ಕಾರದ ವರ್ಗಲಕ್ಷಣ ಪತ್ತೆಯಾಗುತ್ತೆ ಎಂದು ಅಣ್ಣಾಜಿ ಹೇಳಿದ್ದು ಈ ಕತ್ತಲಲ್ಲಿ ಕೃಷ್ಣಪ್ಪನಿಗೆ ನೆನಪಾಯಿತು. ಒಂದು ಪ್ರಾಣಿಯನ್ನು ಕೊಲ್ಲುವಂತೆ ಅಣ್ಣಾಜಿಯನ್ನು ಕೊಂದಿದ್ದರು. ಒಂದು ಹೆಣ್ಣಿನ ಜೊತೆ ಸಂಸಾರ ಹೂಡಿ ಪ್ರಾಯಶಃ ಶಾಂತವಾಗಿ ಸಂಸಾರ ಹೂಡುವ ಕನಸು ಕಂಡಿದ್ದ ಅಣ್ಣಾಜಿ. ಕೃಷ್ಣಪ್ಪ ಇದನ್ನು ಯೋಚಿಸುತ್ತಿದ್ದಂತೆ ಅವನ ಮೈ ಕೋಪದಿಂದ ಬಿಸಿಯಾಯಿತು. ಕಂಬಳಿಯ ಮೇಲೆ ಮಲಗಿದ ತನ್ನ ಕಪ್ಪು ದೇಹ ಒಂದು ಭೀಕರ ಘಟಸರ್ಪವಾಗಿ ಅಣ್ಣಾಜಿಯನ್ನು ಕೊಂದವರನ್ನು ತನ್ನ ವಿಷದಲ್ಲಿ ಕಡಿದು ಸಾಯಿಸುವಂತಾಗಿದ್ದರೆ ಎಂದು ಕನಸನ್ನು ಕಾಣುತ್ತ ಮಲಗಿದ್ದಾಗ, ತನ್ನ ಮೈಯನ್ನೆಲ್ಲ ನೂರಾರು ಕಡೆಗಳಲ್ಲಿ ಕಡಿದಂತಾಗಿ ಎದ್ದು ಕೂತ. ಸೂಜಿಯಂತೆ ಮೈಯನ್ನೆಲ್ಲ ಚುಚ್ಚುತ್ತಿದ್ದವು ತಗಣಿಗಳೆಂದು ಅವನು ರಪ್ಪೆಂದು ಕೈಗಳನ್ನು ಉಜ್ಜಿಕೊಳ್ಳುವಾಗ ಸಿಕ್ಕಿಬಿದ್ದು ಪಿಚಕ್ಕಾದದ್ದರ ದುರ್ನಾತದಿಂದ ತಿಳಿಯಿತು. ಎದ್ದು ನಿಂತು ಮೈಯನ್ನೆಲ್ಲ ಉಜ್ಜಿಕೊಂಡ. ಕತ್ತಿನ ಮೇಲೆಲ್ಲೊ, ಕೈಗೆ ನಿಲುಕದ ಬೆನ್ನಿನ ಮೇಲೆಲ್ಲೊ ತಗಣಿಗಳು ಓಡಾಡುತ್ತಿದ್ದವು. ಬಿಚ್ಚಿದ ಶರಟಿನಿಂದ ಮೈಯನ್ನೆಲ್ಲ ಉಜ್ಜಿಕೊಳ್ಳುತ್ತ ನಿಂತ.

ಹೀಗೇ ಎಷ್ಟು ಹೊತ್ತಾಯಿತೊ. ಮೂಲೆಯಿಂದ ಚರಚರ ಶಬ್ದ ಕೇಳಿದಂತಾಯ್ತು. ತಟ್ಟೆಯ ಶಬ್ದವಿರಬೇಕು. ಅದನ್ನು ಪ್ರಾಯಶಃ ಒಂದೆರಡು ಇಲಿಗಳು ತಮ್ಮ ಮುಂಗಾಲುಗಳಿಂದ ಒತ್ತಿ ಕೆರೆಯುತ್ತಿವೆ. ಹೌದು ಚಿಲಿಚಿಲಿ ಶಬ್ದ ಬೇರೆ ಬರುತ್ತಿದೆ. ಹಿಂದೆ ಇಲ್ಲಿದ್ದ ಖೈದಿ ಬಿಟ್ಟ ಆಹಾರವಿರಬೇಕು -ಅದನ್ನು ತಿಂದು ಮುಗಿಸಿ ತಟ್ಟೆಯ ತಳವನ್ನು ಕಡಿಯುತ್ತಿವೆ -ಅಂಟಿಕೊಂಡ ಅಗಳುಗಳಿಗಾಗಿ. ಶಬ್ದ ಬರುತ್ತಿದ್ದ ದಿಕ್ಕನ್ನೆ ಏಕಾಗ್ರವಾಗಿ ನೋಡುತ್ತ ನಿಂತ. ಮೈಮೇಲಿನ ತಗಣಿಗಳೆಲ್ಲ ಉದುರಿಬಿದ್ದುವು. ಕಾಲಿನಿಂದ ಅವು ಮೇಲಕ್ಕೆ ಹತ್ತದಂತೆ ಉಜ್ಜಿಕೊಳ್ಳುತ್ತ ಕೃಷ್ಣಪ್ಪ ನಿಂತಿದ್ದ. ಚೂರು ಬೆಳಕಿದ್ದರೂ ಇಲಿಯ ಕಣ್ಣುಗಳು ಹೊಳೆಯಬಹುದಿತ್ತು. ಈ ಕೋಣೆಯಲ್ಲಿ ಈ ಇಲಿಗಳ ದೋರಿರಬಹುದು. ಕೃಷ್ಣಪ್ಪ ತಾನು ಓದಿದ್ದ ಕಥೆಗಳನ್ನೆಲ್ಲ ಹುಡುಕತೊಡಗಿದ -ಯಾವುದರಲ್ಲಿ ಹೀಗೊಬ್ಬ ಕೋಣೆಯಲ್ಲಿ ಹಗಲುರಾತ್ರೆಗಳನ್ನು ಕಳೆಯಬೇಕಾಗಿ ಬಂದ ಕಥೆಯಿದೆ ಎಂದು. ಕೌಂಟ್ ಅಫ಼್ ಮಾಂಟೆ ಕ್ರಿಸ್ಟೋ ಕಥೆಯಲ್ಲಿ ನಾಯಕ ತನ್ನ ಕೋಣೆಯಲ್ಲೊಂದು ತೂತು ಕೊರೆದು ಅದನ್ನು ಕ್ರಮೇಣ ದೊಡ್ಡ ಮಾಡುತ್ತ ತಪ್ಪಿಸಿಕೊಂಡದ್ದು ನೆನಪಾಯಿತು. ಅವನು ಯಾವುದರಲ್ಲಿ ತೂತು ಮಾಡಿದ, ಹೇಗದನ್ನು ಕಾವಲುಗಾರರಿಂದ ಮುಚ್ಚಿಟ್ಟ ಇತ್ಯಾದಿ ನೆನಪು ಮಾಡಿಕೊಳ್ಳುತ್ತ ನಿಂತ. ಇಲಿಯ ದೋರು ಇದ್ದಲ್ಲಿ ಅದನ್ನೆ ಅಗಲ ಮಾಡುತ್ತ ಹೋಗುವುದು. ಅದಕ್ಕೆ ಬೇಕಾದ ಆಯುಧ? ತಟ್ಟೆ ಸ್ಟೀಲಿನದು ಇರಬಹುದೆ? ಇರಲಾರದು. ಇದ್ದಲ್ಲಿ ಅದನ್ನು ಜಜ್ಜಿ ತೆಗೆಯುವ ಸಾಧನ ಮಾಡಬಹುದು.

ಕೃಷ್ಣಪ್ಪ ಸದ್ದಾಗುತ್ತಿದ್ದ ಮೂಲೆಗೆ ನಿಧಾನವಾಗಿ ನಡೆದ. ಕಾಲಿಗೆ ಮೆತ್ತಗಿದ್ದುದ್ದು ಸಿಕ್ಕಿ ನುಣುಚಿಕೊಂಡಂತಾಯ್ತು. ಮೈಯೆಲ್ಲ ಜುಮ್ಮೆಂದಿತು. ಇಲಿ ಎಂದು ಹೇಸಿಗೆಯಿಂದ ನಡುಗುತ್ತ ಗಾಬರಿಯಲ್ಲಿ ತಟ್ಟೆಯ ಮೇಲೆ ಕಾಲಿಟ್ಟದ್ದರಿಂದ ಅದು ಮಗುಚಿಕೊಂಡಿತು. ತಟ್ಟೆಯನ್ನು ಹುಡುಕಿ ಎತ್ತಿದ. ಅದು ನೂರು ಕಡೆ ನೆಗ್ಗಾಗಿ ಅಂಚುಗಳಲ್ಲಿ ಹರಿದುಕೊಂಡಿದ್ದ ಅಲ್ಯೂಮಿನಿಯಂ ತಟ್ಟೆಯಾಗಿತ್ತು. ಅದರಿಂದ ಹಳಸಿದ ನಾತ ಮೂಗಿಗೆ ಹೊಡೆದದ್ದರಿಂದ ಕೈಬಿಟ್ಟ. ಧೂಳಿನ ಮೇಲೆ ಅದು ತೊಪ್ಪೆಂದು ಬಿದ್ದಿತು.

ಹಿಂದೊಮ್ಮೆ ಆದಂತೆ ಬುದ್ಧಿಭ್ರಮಣೆಯಾಗದಂತೆ ಗಟ್ಟಿಯಾಗಿ ಉಳಿಯಬೇಕು ಎಂದುಕೊಂಡು ತಾನು ಇಲ್ಲಿಂದ ತಪ್ಪಿಸಿಕೊಳ್ಳಬಹುದಾದ ಉಪಾಯಗಳನ್ನು ಮತ್ತೆ ಯೋಚಿಸಲು ಪ್ರಾರಂಭಿಸಿದ. ನೂರಾರು ಉಪಾಯಗಳನ್ನು ಹುಡುಕುತ್ತ ಅವುಗಳ ಇತಿಮಿತಿಗಳನ್ನು ಅರಿತು ಚಿಂತಿಸಲು ಶುರು ಮಾಡಿದ.

ಬಾಗಿಲು ಕಿರ್ರೆಂದು ತೆಗೆಯುವ ಶಬ್ದ ಕೇಳಿದಂತಾಗಿ ಬಾಗಿಲ ಕಡೆ ತಿರುಗಿದ. ಅರ್ಧ ತೆಗೆದ ಬಾಗಿಲಿಂದ ಬೆಳಕು ಬರಲಿಲ್ಲ -ಅಂದರೆ ಕತ್ತಲಾಗಿದೆ ಎಂದು ಅರ್ಥ. ರಾತ್ರೆಯಾದ್ದರಿಂದ ಧಗೆ ಕಡಿಮೆಯಾಗಿರಬಹುದು. ಬಾಗಿಲಿಂದ ಸ್ವಲ್ಪವಾದರೂ ಒಳಬಂದ ಗಾಳಿಯನ್ನು ಆಸೆಯಿಂದ ಕೃಷ್ಣಪ್ಪ ನಿರೀಕ್ಷಿಸಿದ.

ಬಾಗಿಲ ಹೊರನಿಂತವನು ಉರ್ದುವಿನಲ್ಲಿ ಏನೋ ಹೇಳಿದ. ಕೃಷ್ಣಪ್ಪನಿಗೆ ಅದು ಅರ್ಥವಾಗಲಿಲ್ಲ. ಸುವರ್ ಎಂದು ಅವನು ಬಯ್ದದ್ದು ಮಾತ್ರ ಅರ್ಥವಾಯಿತು. ದಪ್ಪ ಮೋರೆಯ ಅಧಿಕಾರಿಯಲ್ಲ. ಯಾರೋ ಕೀರಲು ಧ್ವನಿಯ ಪೋಲೀಸ್ ಪೇದೆ. ಬೆಂಕಿ ಕಡ್ಡಿ ಗೀರಿ ಅವನು ರೂಮಿನಲ್ಲಿ ಏನೋ ಹುಡುಕುತ್ತ ಬೈಯುತ್ತಲೇ ನಿಂತ. ಸರಸರನೆ ಹೋಗಿ ತಟ್ಟೆಯನ್ನು ಎತ್ತಿ ಅದನ್ನು ಕೃಷ್ಣಪ್ಪನ ಮುಖಕ್ಕೆ ತಿವಿಯುತ್ತ ಮತ್ತಷ್ಟು ಬೈದ. ಪ್ರಾಯಶಃ ತಟ್ಟೆಯನ್ನು ಎತ್ತಿಕೊಳ್ಳಲು ಅವನು ಕೇಳಿರಬೇಕು. ಈ ಪೇದೆ ತೆಳ್ಳಗಿದ್ದ. ಒಣಗಿದ ಚೂಪುಮುಖದಲ್ಲಿ ದೊಡ್ಡ ಮೀಸೆಗಳನ್ನು ಬಿಟ್ಟಿದ್ದು ಅವನು ಗೀರಿದ ಬೆಳಕಿನಲ್ಲೂ ಕಂಡಿತು.

ಅವನು ಬಾಗಿಲು ಹಾಕಿ ಹೊರಟು ಹೋದ. ಸ್ವಲ್ಪ ಹೊತ್ತಿನ ಮೇಲೆ ಬಾಗಿಲು ತೆಗೆದು “ಏಯ್” ಎಂದ. ಕೃಷ್ಣಪ್ಪ ಬಾಗಿಲಿನ ಕಡೆ ಹೋದ. ಅವನು ತಟ್ಟೆಯನ್ನೊಡ್ಡಿ ನಿಂತಿದ್ದ. ಅದೇ ತಟ್ಟೆ. “ನನಗೆ ಊಟ ಬೇಡ”ವೆಂದು ಕೃಷ್ಣಪ್ಪ ಇಂಗ್ಲಿಷಲ್ಲಿ ಹೇಳಿದ. ಪೇದೆ ತಟ್ಟೆಯನ್ನು ರೂಮಿನೊಳಗೆ ಇಟ್ಟು ಬಾಗಿಲು ಹಾಕಿಕೊಂಡ. ಉರ್ದುವಿನಲ್ಲಿ ಏನೋ ಹೇಳುತ್ತ ಹೊರಟು ಹೋದ.

ತಟ್ಟೆಯನ್ನು ಹೊರಗೆಸೆಯುವಂತೆಯೂ ಇಲ್ಲ. ಅದರಲ್ಲಿ ಸುರಿದ ಅನ್ನ ಸಾಂಬಾರಿನ ವಾಸನೆಯಿಂದ ಕೃಷ್ಣಪ್ಪನಿಗೆ ವಾಂತಿ ಬರುವಂತಾಯಿತು. ಬಾಯಿ ಮೂಗುಗಳನ್ನು ಮುಚ್ಚಿಕೊಂಡು ಏನು ಮಾಡುವುದು ತಿಳಿಯದೆ ನಿಂತ. ಈ ಆಹಾರಕ್ಕೆ ಇಲಿಗಳು ನುಗ್ಗಿ ಗಲಾಟೆ ಮಾಡುತ್ತವೆ. ಹೇಸಿಗೆಯಿಂದ ಅದನ್ನು ಎತ್ತಿ ಹಿಂದಿನಂತೆಯೇ ಮೂಲೆಯಲ್ಲಿ ಇಟ್ಟು ಮತ್ತೆ ಕೋಣೆಯ ನಡುವೆ ನಿಂತ. ಹೆಜ್ಜೆಯ ಮೇಲೆ ಇನ್ನೊಂದು ಹೆಜ್ಜೆಯನ್ನು ಜಾಗರೂಕನಾಗಿ ಇಡುತ್ತ ರೂಮಿನ ಗೋಡೆಯನ್ನು ಮುಟ್ಟಿ ಬಳಚುತ್ತ ನಿಧಾನವಾಗಿ ನಡೆದ.

ಪ್ಲಾಸ್ಟರ್ ಅಲ್ಲಿ ಇಲ್ಲಿ ಬಿದ್ದು ತರಿ ತರಿಯಾದ ಗೋಡೆ. ತಗಣಿಗಳೆಲ್ಲ ಈ ಸಂದಿಯಲ್ಲಿ ಬೀಡು ಬಿಟ್ಟಿರಬಹುದು. ಬಳಚುತ್ತ ಹೋದಾಗ ನೀರು ಮತ್ತು ಕಕ್ಕಸಿನ ಬೋಗಣಿಗಳು ಸಿಕ್ಕವು. ನೀರಿನಿಂದ ಮುಖವನ್ನು ತೊಳೆದು ಮುಂದೆ ಹೋದ. ರೂಮಿನ ಇನ್ನೊಂದು ಕೊನೆಯಲ್ಲಿ ಸಿಮೆಂಟ್ ಕಟ್ಟಿದ ಒಂದು ದಿಣ್ಣೆಯಿತ್ತು. ಪ್ರಾಯಶಃ ಮಲಗಲೆಂದು ಈ ದಿಣ್ಣೆ. ಕಂಬಳಿಯಿಂದ ಅದನ್ನು ಒರೆಸಿದ. ಪಾತ್ರೆಯಲ್ಲಿ ಉಳಿದಿದ್ದ ನೀರಿನಿಂದ ಅದರ ಮೇಲ್ಭಾಗವನ್ನು ತೊಳೆದು ಅದರ ಮೇಲೆ ಕೂತ. ಮಲಗಲು ತಗಣಿಯ ಭಯ. ಮೂಲೆಯಲ್ಲಿ ಹಲವು ಇಲಿಗಳು ತಟ್ಟೆಗೆ ಮುತ್ತಿದ್ದವು.

ಹೀಗೆ ಕಾಲನ್ನು ಇಳಿಬಿಟ್ಟು ಕೂಡಲು ಇರುವುದರಲ್ಲಿ ಸ್ವಚ್ಛವಾದೊಂದು ಜಾಗ ಸಿಕ್ಕಿತೆಂದೇ ತನಗೆ ಸಮಾಧಾನವಾದ್ದನ್ನು ಗಮನಿಸಿ ಅವನಿಗೆ ಆಶ್ಚರ್ಯವಾಯಿತು. ಹೇಗೆ ಈ ದೇಹ ಒಗ್ಗಿಕೊಳ್ಳುತ್ತದೆ! ಹಾಗೇ ಜೊಂಪು ಹತ್ತುತ್ತಿದ್ದಾಗ ಹೊರಗೆ ಗದ್ದಲವಾದಂತೆ ಕೇಳಿಸಿತು.

ಬಳೆಯ ಶಬ್ದ, ಜೊತೆಗೆ ಬೂಟಿನ ಶಬ್ದ. ಗಂಡಸು ನಗುತ್ತ ಏನೋ ಉರ್ದುವಿನಲ್ಲಿ ಹಾಸ್ಯ ಮಾಡುತ್ತಾನೆ. ಸಿನಿಮಾ ಅನ್ನುವ ಶಬ್ದ ಕೇಳಿಸುತ್ತದೆ. ಮೋಜಿನಿಂದ ಗಂಡಸು ಮಾತಾಡುತ್ತಿದ್ದಾನೆ. ದಪ್ಪ ಮುಖದ ಅಧಿಕಾರಿಯ ಮಾತಿನಂತೆ ಕೇಳಿಸುತ್ತದೆ. ಅವನಾದರೆ, ಅವನಿಗೆ ಇಂಗ್ಲಿಷ್ ಬರುವುದರಿಂದ ತನ್ನ ಸಿಗರೇಟ್ ಪ್ಯಾಕನ್ನು ಕೊಡುವಂತೆ ಕೇಳಬಹುದು. ಕೃಷ್ಣಪ್ಪ ಆಲಿಸಿದ. ಯಾರೋ ತಪ್ಪಿಸಿಕೊಂಡು ಓಡಾಡುವ ಸದ್ದು. ಗಂಡಸು ಏನೋ ಕೂಗಿ ಹೇಳುತ್ತಾನೆ. ಹೆಂಗಸು ಅಳುತ್ತಿದ್ದಾಳೆ. ಈಗವಳು ತೆಲುಗಿನಲ್ಲಿ ಮಾತಾಡುತ್ತಿರುವುದರಿಂದ ಕೃಷ್ಣಪ್ಪನಿಗೆ ಅಲ್ಪಸ್ವಲ್ಪ ಅರ್ಥವಾಗುತ್ತದೆ. ತಾನು ನಿಜವಾಗಿಯೂ ಸಿನಿಮಾಕ್ಕೆ ಹೋಗಿದ್ದುದಾಗಿಯೂ ಜೊತೆಗೆ ಇದ್ದವನು ತನ್ನನ್ನು ನಿಜವಾಗಿಯೂ ಮುಂದಿನ ತಿಂಗಳು ಮದುವೆಯಾಗುವವನೆಂದೂ, ಅವನನ್ನು ಇನ್ನೊಬ್ಬ ಪೋಲೀಸ್ ಎಲ್ಲಿಗೆ ಕರೆದುಕೊಂಡು ಹೋದನೆಂದೂ, ಅವನನ್ನು ಇಲ್ಲಿಗೆ ಕರೆದು ತನ್ನಿ ಕರೆದು ತನ್ನಿ ಎಂದೂ ಅವಳು ಅಳುತ್ತ ಅಂಗಲಾಚುತ್ತಿದ್ದಳು. ಗಂಡಸು ನಗುತ್ತ ಏನೋ ಹೇಳಿದ ಉರ್ದುವಿನಲ್ಲಿ. ಕ್ಷಣ ಮೌನದ ನಂತರ ಹೆಂಗಸು ತೆಲುಗಿನಲ್ಲಿ ಬಿಡಿ ಬಿಡಿ ಬಿಡಿ ನನ್ನ ಬಿಡಿ ಎಂದು ಕಿರುಚತೊಡಗಿದಳು. ಕೃಷ್ಣಪ್ಪ ದಿನ್ನೆಯಿಂದೆದ್ದು ಬಾಗಿಲ ಬಳಿ ನಿಂತು ದಪದಪನೆ ಬಾಗಿಲು ಬಡಿಯುತ್ತ,

“ನೀವೇನು ರಾಕ್ಷಸರ? ಮನುಷ್ಯರಲ್ಲವಾ? -ಬಿಡಿ ಅವಳನ್ನು” ಎಂದು ಇಂಗ್ಲಿಷಿನಲ್ಲಿ ಕೂಗತೊಡಗಿದ. ಹೆಣ್ಣಿನ ರೋದನ ನಿಂತು ಗಂಡು ಗಟ್ಟಿಯಾಗಿ ಉಸಿರಾಡುವುದು ಕೇಳುತ್ತಿದ್ದಂತೆ ಕೃಷ್ಣಪ್ಪ ಜೋರಾಗಿ ಬಾಗಿಲನ್ನು ಒದೆಯುತ್ತ “ಬಾಗಿಲು ತೆಗೆಯಿರಿ -ತೆಗೆಯಿರಿ” ಎಂದು ಕಿರುಚಿದ. ಕಿರುಚುವಿಕೆ ತೀವ್ರವಾಗುತ್ತ ಹೋದಂತೆ ತನ್ನ ಅಬ್ಬರ ತನ್ನ ಕಿವಿಯನ್ನೆ ಅಡರಿ ಕಾಲುಗಳು ನಿರ್ಬಲವಾಗಿ ಕುಸಿದು ಕೂತ. ಕ್ರೋಧ ತಿರಸ್ಕಾರಗಳು ಕೂಡ ಮನುಷ್ಯನೆದುರು ಫಲಪ್ರದವಾಗುತ್ತವೇ ಹೊರತು ಇಂಥ ಕಡೆಯಲ್ಲವೆಂದು ತಿಳಿದು ಚಕಿತನಾದ. ಇದು ಅವನಿಗೆ ಹೊಸ ಅನುಭವ. ಇಂಥದನ್ನು ಆ ಬೈರಾಗಿಯಾಗಲೀ, ಪ್ರತಿ ಹಿಂಸೆಗೆ ಹಿಂಜರಿಯಬಾರದೆಂಬ ಅಣ್ಣಾಜಿಯಾಗಲೀ, ಗುಪ್ತ ಸಾಧನೆಯಿಂದ ಮುಕ್ತಿಗೆ ಸನ್ನಾಹ ಮಾಡುತ್ತಲೇ ಇರುವ ಮಹೇಶ್ವರಯ್ಯನಾಗಲೀ ಪ್ರಾಯಶಃ ಕಂಡಿರಲಾರರು. ಇನ್ನು ಹಗಲಾಗುವುದೇ ಇಲ್ಲ ಎನ್ನಿಸಿತು. ಅಥವಾ ಆದರೂ ತನಗೆ ತಿಳಿಯುವುದಿಲ್ಲ. ಇಲಿಗಳು ಖಾಲಿ ತಟ್ಟೆಯನ್ನು ಕೆರೆಯುತ್ತ ಸದ್ದು ಮಾಡತೊಡಗಿದ್ದವು. ಹೊತ್ತಿನ ಪರಿವೆ ಹೊರಟುಹೋಯಿತು.

ಪೇದೆಯೊಬ್ಬ ಬಾಗಿಲು ತೆಗೆದ. ಬೆಳಕಿಗೆ ಕೃಷ್ಣಪ್ಪನ ಕಣ್ಣುಗಳು ಒಗ್ಗಲು ಪ್ರಯತ್ನಿಸುತ್ತಿದ್ದಂತೆಯೇ ಇಬ್ಬರು ಪೇದೆಯರು ನುಗ್ಗಿ, ಅವನ ಕಣ್ಣಿಗೆ ಬಟ್ಟೆ ಕಟ್ಟಿ, ಅವನ ಕೈಯನ್ನು ಎಳೆಯುತ್ತ “ನಡಿ” ಎಂದರು ಉರ್ದುವಿನಲ್ಲಿ. ಕೃಷ್ಣಪ್ಪ ಅವರು ಎಳೆಯುತ್ತಿದ್ದ ದಿಕ್ಕಿನಲ್ಲಿ ನಡೆದ. ಒಂದು ಕುರ್ಚಿಯ ಮೇಲೆ ಅವನನ್ನು ಕೂರಿಸಲಾಯಿತು. ಬೆತ್ತ ಹೆಣೆದ ಕಬ್ಬಿಣದ ಕುರ್ಚಿ -ಕೈಗಳಿದ್ದ ಕುರ್ಚಿ. ಇದರಿಂದ ಭರವಸೆ ಹುಟ್ಟುತ್ತಿರಲಾಗಿ ಅವನ ಕಣ್ಣಿಗೆ ಕಟ್ಟಿದ್ದ ಪಟ್ಟಿಯನ್ನು ಬಿಚ್ಚಲಾಯಿತು.

ಯಾವುದೋ ಲೋಕದಿಂದ ಇನ್ನೆಲ್ಲಿಗೋ ಬಂದವನಂತೆ ಕೃಷ್ಣಪ್ಪ ತನ್ನೆದುರಿಗಿದ್ದವರನ್ನು ಆಶ್ಚರ್ಯಪಡುತ್ತ ನೋಡಿದ. ಸಾಲಾಗಿ ಮೇಜಿನ ಮೇಲೆ ಮೂವರು ಕೂತಿದ್ದರು. ನುಣ್ಣನೆಯ ಕ್ಷೌರ ಮಾಡಿದ ಮುಖಗಳು. ತಲೆಯ ಮೇಲೆ ಪೀಕ್ಯಾಪ್, ಗರಿಗರಿ ಇಸ್ತ್ರಿ ಮಾಡಿದ ಸಮವಸ್ತ್ರ. ಮೂವರೂ ಹೂಗಳ ಚಿತ್ರವಿದ್ದ ಕಪ್ ಸಾಸರುಗಳಲ್ಲಿ ಟೀ ಕುಡಿಯುತ್ತಿದ್ದರು. ಮೇಜಿನ ಮೇಲೆ ನೀಲಿ ಉಣ್ಣೆಯ ಬಟ್ಟೆ ಹೊದಿಸಿ ಅದರ ಮೇಲೆ ಗಾಜನ್ನಿಡಲಾಗಿತ್ತು. ಮೂವರಲ್ಲಿ ಮಧ್ಯ ಕೂತವನು ಸುಸಂಸ್ಕೃತನಾದ ವಿದ್ಯಾವಂತನಂತೆ ಕಾಣುತ್ತಿದ್ದ -ಅವನು ಹಾಕಿದ ಕನ್ನಡಕದಿಂದಾಗಿ. ಎಡಕ್ಕೆ ಕೂತವನು ಒಳ್ಳೆಯ ಆಟಗಾರನಂತಿದ್ದ. ಬಲಕ್ಕಿದ್ದವನ ಮೀಸೆ ಬೆಳ್ಳಗಾಗಿತ್ತು; ಹಣೆಯ ಮಧ್ಯೆ ಸಣ್ಣ ಕುಂಕುಮವಿತ್ತು.

ಮಧ್ಯ ಕೂತವನು ಇಂಗ್ಲಿಷಿನಲ್ಲಿ ತುಂಬ ಸೌಜನ್ಯದಿಂದ

“ನಿಮಗೆ ಟೀ ತರಿಸಲೆ?” ಎಂದ.

ಕೃಷ್ಣಪ್ಪ ಈ ಮೂವರ ಬೆನ್ನ ಹಿಂದೆ ತೂಗುಹಾಕಿದ್ದ ನೆಹರೂ ಮತ್ತು ರಾಜೇಂದ್ರ ಪ್ರಸಾದ ಫ಼ೋಟೋಗಳನ್ನು ಗಮನಿಸುತ್ತ,

“ಬೇಡ. ನೀವು ನನ್ನನ್ನು ಇಲ್ಲಿ ಅನ್ಯಾಯವಾಗಿ ಸೆರೆ ಇಟ್ಟಿದ್ದೀರಿ. ಇದನ್ನು ಪ್ರತಿಭಟಿಸಿ ನಾನು ಉಪವಾಸ ಮಾಡುತ್ತಿದ್ದೇನೆ” ಎಂದ. ಇವರು ಮನುಷ್ಯರೆಂಬ ಆಸೆ ಹುಟ್ಟಿ ಪ್ರತಿಭಟನೆ ಮತ್ತೆ ಅವನಲ್ಲಿ ಅಂಕುರಿಸಿತು.

“ನೀವು ನಿರಪರಾಧಿ ಎಂದು ಸಾಬೀತಾದರೆ ಒಂದೇ ಒಂದು ನಿಮಿಷ ನಿಮ್ಮನ್ನಿಲ್ಲಿ ನಾವು ಇಟ್ಟುಕೊಳ್ಳುವುದಿಲ್ಲ. ದಯಮಾಡಿ ನಿಮಗೆ ಪರಿಚಯದವನಾಗಿದ್ದ ಅಣ್ಣಾಜಿ ಅಸ್ತ್ರಗಳನ್ನೆಲ್ಲ ಎಲ್ಲಿ ಬಚ್ಚಿಟ್ಟಿದ್ದಾನೆ ಹೇಳಿ.”

“ನನಗದೇನೂ ಗೊತ್ತಿಲ್ಲ.”

“ನೀವು ಮುಗ್ಧರಂತೆ ಕಾಣುತ್ತೀರಿ. ನಿಮ್ಮಂಥ ಆದರ್ಶವಾದಿಗಳನ್ನೆ ಹಿಡಿದು ಅಣ್ಣಾಜಿ ದೇಶಕ್ಕೆ ಘಾತಕವಾದ ಕೆಲಸ ಮಾಡುವುದು. ಈಗ ನೀವು ನಿಜ ಹೇಳಿದರೆ ನಾವು ನಿಮ್ಮನ್ನು ಬಿಟ್ಟುಬಿಡುತ್ತೇವೆ. ನೀವು ಓದಿ ಬೆಳೆದು ಮುಂದೆ ಬರಬೇಕೆಂಬುದೇ ನಮ್ಮ ಆಸೆ. ಈಗ ನಾನು ನೋಡಿ ಪೊಲಿಟಿಕಲ್ ಸೈನ್ಸ್ ಎಮ್.ಎ ಮುಗಿಸಿ ಈ ಕೆಲಸಕ್ಕೆ ಬಂದದ್ದು. ನನ್ನ ಎಡಕ್ಕಿರುವ ಈ ಜಂಟಲ್‌ಮನ್ ಕನ್ನಡಿಗರು. ವಾರಂಗಲ್ ಕನ್ನಡಿಗರಿಗೆ ಹಿಸ್ಟಾರಿಕಲಿ ಇಂಪಾರ್ಟೆಂಟ್ -ಗೊತ್ತಿದೆಯೆ -ರಾಮಪ್ಪ ಟೆಂಪಲ್ ವಿಷಯ? ಈ ಇನ್ನೊಬ್ಬರು ಫ಼ೇಮಸ್ ಕ್ರಿಕೆಟೀಯರ್ ಅಫ಼್ ದಿಸ್ ರೀಜನ್.”

ಈ ಮಾತುಗಳು ಕೃಷ್ಣಪ್ಪನಿಗೆ ಅತ್ಯಂತ ಹಿತಕರವಾಗಿದ್ದವು. ಅವನು ರಾಮಪ್ಪ ದೇವಸ್ಥಾನದ ವಿಷಯವನ್ನು ಮಧ್ಯೆ ನುಗಿಸಿದ ರೀತಿಯಂತೂ ನಾನೂ ನಿನ್ನಂತೆ ಮನುಷ್ಯನೆಂದು ಗುಪ್ತ ಸನ್ನೆಯಲ್ಲಿ ಹೇಳಿದಂತಿತ್ತು. ಕೃಷ್ಣಪ್ಪ ಹೇಳಿದ:

“ಅಣ್ಣಾಜಿಯನ್ನು ನಾನು ಪ್ರೀತಿಸುತ್ತಿದ್ದೆ. ಅವನನ್ನು ನಿಮ್ಮವರು ಕೊಂದಿದ್ದಾರೆ. ಅಣ್ಣಾಜಿ ಈ ನಾಗರೀಕತೆಯನ್ನು ಇನ್ನಷ್ಟು ಉಜ್ವಲಗೊಳಿಸುವ ಉದ್ದೇಶ ಇದ್ದವ……..” ಆಡಿದ ಮೇಲೆ ಇವರ ಸೌಜನ್ಯಕ್ಕೆ ಮರುಳಾಗಿ ತಾನು ಯಾಕೆ ಅಂತರಂಗದ ಮಾತನ್ನಾಡಿದೆನೆಂದು ಅವನಿಗೆ ಕಸಿವಿಸಿಯಾಯ್ತು.

“ಅದು ನಿಮ್ಮ ಅಭಿಪ್ರಾಯವಾಯ್ತು ಮಿಸ್ಟರ್ ಗೌಡ” ಕ್ರಿಕೆಟಿಯರ್ ಹೇಳಿದ.

ಕುಂಕುಮ ಹಚ್ಚಿದವನು ಆಕಳಿಸಿತ್ತ ಇದೆಲ್ಲ ಅಂಥ ಮಹತ್ವದ ವಿಷಯವಲ್ಲ ರೂಟೀನ್ ಅನ್ನುವಂತೆ ಆಪ್ತವಾಗಿ ಕನ್ನಡದಲ್ಲಿ ಹೇಳಿದ:

“ನಾನು ಗುಲ್ಬರ್ಗ ಕಡೆಯವನು. ನೀವು? ಶಿಮೊಗ್ಗ ಕಡೆಯವರ? ಈ ನನ್ನ ಕಲೀಗರು ತುಂಬ ಒಳ್ಳೆಯವರು. ಅಣ್ಣಾಜಿಯ ಕಾಂಟ್ಯಾಕ್ಟ್ಸ್ ಯಾರ್ಯಾರು ಇದ್ದರು, ಯಾರಿಗವರು ಕಾಗದ ಗೀಗದ ಬರೀತಿದ್ರು ಹೇಳಿಬಿಡಿ -ನಿಮ್ಮನ್ನ ಬಿಟ್ಟುಬಿಡ್ತಾರ್ರೀ.”

ಅವನು ರಾಗವಾಗಿ ಕೊನೆಮಾಡಿದ್ದ. ಕೃಷ್ಣಪ್ಪ ಮಾತಾಡದೆ ಸುಮ್ಮನಿರುವುದನ್ನು ಕಂಡು ಮಧ್ಯದವನು ಅಂದ -ತನ್ನ ಸುಶಿಕ್ಷಿತ ಇಂಗ್ಲಿಷಲ್ಲಿ:

“ಯಂಗ್ ಮ್ಯಾನ್ ನಿಮ್ಮ ಹಿತಕ್ಕಾಗಿಯೇ ಹೇಳ್ತಿರೋದು. ಅವನು ಯಾರ್ಯಾರಿಗೆ ಕಾಗದ ಬರೀತ ಇದ್ದ ತಿಳಿಸಿಬಿಡಿ. ಅವನಿಗೆ ವಿಮೆನ್ ಕಾಂಟ್ಯಾಕ್ಟ್ಸ್ ಇದ್ದರೂಂತ ನಮಗೆ ಗೊತ್ತು……”

“ಇಲ್ಲ -ನನಗೆ ಗೊತ್ತಿಲ್ಲ.”

“ಸುಮ್ಮನೇ ನೀವು ನಿಮ್ಮ ಸಫ಼ರಿಂಗನ್ನ ಪ್ರೋಲಾಂಗ್ ಮಾಡಿಕೋತೀರಿ. ಇಲ್ಲಿ ಬಾಯಿ ಬಿಡದೇ ಬಚಾವಾಗಿ ಹೋದವರು ಇಲ್ಲ. ನಮ್ಮ ಸ್ವಾರ್ಥಕ್ಕಾಗಿಯಲ್ಲ ನಾವು ನಿಮ್ಮನ್ನು ಕೇಳ್ತಿರೋದು. ಈ ದೇಶದ ಸುಭದ್ರತೇನ್ನ ಕಾಯೋ ಕೆಲಸ. ನೆಹರು ಏನು ಹೇಳಿದಾರೆ?”

ಮಧ್ಯದವನು ಭಾಷಣದ ಘನವಾದ ಧಾಟಿಯಲ್ಲಿ ಮಾತಾಡುವುದು ಕೇಳಿ ಕೃಷ್ಣಪ್ಪನಿಗೆ ಭರವಸೆ ಇನ್ನಷ್ಟು ಬೆಳೆಯಿತು. ಅವನನ್ನು ಕೋಪದಲ್ಲಿ ನೋಡುತ್ತ ವ್ಯಂಗ್ಯವಾಗಿ ಹೇಳಿದ:

“ನಿಮ್ಮ ಪೋಲೀಸರು ನಿನ್ನೆ ರಾತ್ರೆ ನನ್ನ ರೂಮಿನ ಹೊರಗೆ ಏನು ಮಾಡಿದರು ಗೊತ್ತ? ಗೊತ್ತ?”

ಕೃಷ್ಣಪ್ಪನ ಗಂಟಲು ಬಿಗಿದು ಬಂತು. ಎದುರಿಗಿದ್ದ ಮೂವರಿಗೆ ಮನುಷ್ಯಭಾವನೆಗಳಿರಬಹುದು ಎಂಬ ನಂಬಿಕೆ ಹುಟ್ಟಿಸುವಂತೆ ಇತ್ತು -ಅವರು ಮುಜುಗರದಿಂದ ಮುಖ ಚಿಕ್ಕದಾಗಿ ಮಾಡಿಕೊಂಡ ರೀತಿ. ಇದರಿಂದ ಆವೇಶಿತನಾಗಿ ಕೃಷ್ಣಪ್ಪ ಬಿಕ್ಕುತ್ತ ಹೇಳಿದ:

“ಒಂದು ಹೆಂಗಸನ್ನ, ಬಡಪಾಯಿಯನ್ನ ನಿಮ್ಮ ಈ ರಾಕ್ಷಸರು ರಾತ್ರೆ ಎಳೆದು ತಂದು….”

ಕೃಷ್ಣಪ್ಪ ಮುಂದೆ ಮಾತಾಡಲಾರದೆ ತಲೆ ತಗ್ಗಿಸಿದ. ಮಧ್ಯದವ ಹುಳಿಯಾಗಿ ನಕ್ಕು ಹೇಳಿದ:

“ಡೋಂಟ್ ಗೆಟ್ ಟೂ ಎಕ್ಸೈಟೆಡ್ ಯಂಗ್ ಮ್ಯಾನ್, ಬ್ರೂಟ್ಸ್ ಎಲ್ಲಾ ಕಡೆ ಇರ್ತಾರೆ. ಬ್ರೂಟ್ ಜನರನ್ನ ಹದ್ದಿನಲ್ಲಿಡೋಕೆ ನಮ್ಮ ಜನವೂ ಬ್ರೂಟ್ ಆಗಬೇಕಾಗುತ್ತೆ. ಈಗ ನೀವು ಹೇಳ್ತೀರೋ ಇಲ್ವೊ? ಛಾನ್ಸ್ ಕಳ್ಕೋತಿದೀರಿ. ಉಳಿದವರು ನಮ್ಮ ಹಾಗಲ್ಲ. ಬಾಯಿ ಬಿಡ್ಸೋಕೆ ಥರ್ಡ್‌ಡಿಗ್ರಿಗಳನ್ನೆಲ್ಲ ಬಳಸ್ತಾರೆ. ನಾವೀಗ ಒಂದು ಕಾನ್ಫರೆನ್ಸಿಗೆ ಹೋಗಬೇಕು. ಆಲ್‌ರೈಟ್” ಎಂದು ಕಣ್ಸನ್ನೆ ಮಾಡಿದ. ಪೇದೆ ಬಂದು ಕೃಷ್ಣಪ್ಪನನ್ನು ರೂಮಿನ ಹೊರಗೆ ಕರೆದುಕೊಂಡು ಬಂದು ಮತ್ತೆ ಕಣ್ಣಿಗೆ ಬಟ್ಟೆ ಕಟ್ಟಿದ.

ಹತ್ತು ಹನ್ನೆರಡು ಅಡಿ ಎತ್ತರದ ಗೋಡೆಯಿಂದ ಆವೃತವಾದ ಒಂದು ಅಂಗಳದಲ್ಲಿ ಕೃಷ್ಣಪ್ಪನನ್ನು ನಿಲ್ಲಿಸಿ ಕಣ್ಣಿನ ಬಟ್ಟೆ ಬಿಚ್ಚಲಾಯಿತು. ಎದುರಿಗೆ ದಪ್ಪ ಮುಖದವನಿದ್ದ. ಅವನು ತನಗಾಗಿ ಕಾಯುತ್ತಿದ್ದಂತೆ ಇತ್ತು.

“ಅದೇನು ನಿನ್ನೆ ರಾತ್ರೆ ಬಾಗಿಲು ಬಡೀತ ಇದ್ದಿ?”

ಕೃಷ್ಣಪ್ಪ ಸುಮ್ಮನಿದ್ದ.

“ನಿನ್ನ ಹತ್ತಿರ ಬಾಯಿ ಬಿಡಿಸೋದು ಹೇಗೆ ನನಗೆ ಗೊತ್ತು -ಏರೋಪ್ಲೇನ್ ಗೊತ್ತ? ಕಟ್ಟಿರೋ ಇವನ್ನ” ಎಂದು ಸಿಗರೇಟ್ ಹಚ್ಚಿ ಒಳಗೆ ಹೋದ.

ವರಾಂಡದಲ್ಲಿ ನಿಲ್ಲಿಸಿದ ಎರಡು ಗೂಟಗಳ ಮಧ್ಯೆ ಬಾವಿಗಿರುವಂತೆ ಒಂದು ದುಂಡನೆಯ ಕಬ್ಬಿಣದ ರಾಟೆಯಿತ್ತು. ಅದರಿಂದ ಇಳಿ ಬಿಟ್ಟ ಹಗ್ಗದ ಒಂದು ತುದಿಯಿಂದ ಕೃಷ್ಣಪ್ಪನ ಕೈಗಳನ್ನು ಬೆನ್ನಿನ ಹಿಂದೆ ತಂದು ಬಿಗಿಯಲಾಯಿತು. ಇನ್ನೊಂದು ತುದಿಯನ್ನು ಕೀರಲು ಧ್ವನಿಯ ಪೋಲೀಸ್ ಪೇದೆ ಹಿಡಿದುಕೊಂಡು, “ಸಾರ್” ಎಂದು ಕೂಗಿದ.

ದಪ್ಪ ಮೋರೆಯವ ಸಿಗರೇಟ್ ಸೇದುತ್ತ ಹೊರಗೆ ಬಂದ. ದಫ಼ೇದಾರ ಹಿಡಿದಿದ್ದ ಲೆಜರ್ ಗೆ ಸಹಿ ಹಾಕುತ್ತ – “ಎಸ್ -ಗೋ ಆನ್” ಎಂದ. ಕೀರಲು ಧ್ವನಿಯವ ಹಗ್ಗವನ್ನೆಳೆಯತೊಡಗಿದ. ಕೃಷ್ಣಪ್ಪನ ಹಿಂದಕ್ಕೆ ಕಟ್ಟಿದ ಕೈಗಳನ್ನು ಹಗ್ಗ ಮೇಲಕ್ಕೆ ಜಗ್ಗುತ್ತಿದ್ದಂತೆಯೇ ನಿಲ್ಲಿಸುವ ಸನ್ನೆ ಮಾಡಿ ದಪ್ಪ ಮುಖದವ –

“ಈಗಲೇ ಇಷ್ಟು ನೋವಾಗುತ್ತೆ. ಇನ್ನೂ ಎಳೆದರೆ ನಿನ್ನ ಕಣ್ಣುಗಳು ಮಿಂಚು ಕಾಣುತ್ತವೆ” ಎಂದು ನಗುತ್ತ “ಹೇಳಿ ಬಿಡು -ಪಾಪ ನೀನು ಊಟಾನೂ ಮಾಡಿಲ್ಲ” ಎಂದ.

ಕೃಷ್ಣಪ್ಪ ಮಾತಾಡಲಿಲ್ಲ.

ಅಧಿಕಾರಿಗೆ ಥಟ್ಟನೇ ಕಡುಕೋಪ ಬಂದಂತೆ ಕಂಡಿತು. “ಎಳಿ” ಎಂದ ಉರ್ದುವಿನಲ್ಲಿ. ಕೈಗಳನ್ನು ಮೇಲಕ್ಕೆ ಮೇಲಕ್ಕೆ ಎಳೆದಂತೆ ಅವು ಮುರಿದು ಹೋಗುತ್ತಾವೆನ್ನಿಸಿತು. ಕಣ್ಣುಗಳು ಕತ್ತಲೆ ಕಟ್ಟಿ ಬಂದವು. ತಾನು ಕುಸಿಯುತ್ತಿದ್ದಂತೆ ಕೃಷ್ಣಪ್ಪನಿಗೆ ಅನ್ನಿಸಿತು.

ಎಳೆಯುತ್ತಿದ್ದ ಹಗ್ಗ ಸಡಿಲವಾಯಿತು. ಹಾಯೆನಿಸಿತು. ಕೃಷ್ಣಪ್ಪ ಕಣ್ಣು ಮುಚ್ಚಿ ಮುಂದೆ ಮತ್ತೆ ಎಳೆಯುವುದನ್ನು ನಿರೀಕ್ಷಿಸುತ್ತಿದ್ದಂತೆ ಭಯ ಮರುಕಳಿಸಿತು.

ನಿರೀಕ್ಷೆಯಲ್ಲಿ ಅತ್ಯಂತ ಅಸಹನೀಯವೆನ್ನಿಸುವ ನೋವು ವರ್ತಮಾನದಲ್ಲಿ ಅನುಭವಿಸುವಾಗ ಅಷ್ಟು ಅಸಹನೀಯವಲ್ಲವೆನ್ನುವುದು ನಿಧಾನವಾಗಿ ಕೃಷ್ಣಪ್ಪನಿಗೆ ಮನದಟ್ಟಾಗುತ್ತ ಹೋಯಿತು. ಮುಂದೆ ಬರುವ ನೋವುಗಳನ್ನು ನಿರೀಕ್ಷಿಸದೆ ಸದ್ಯದಲ್ಲೆ ಮನಸ್ಸನ್ನು ತೊಡಗಿಸಿಟ್ಟುಕೊಳ್ಳುವುದು ಹೇಗೆ? ಮನಸ್ಸನ್ನು ತನ್ನ ಬಾಲ್ಯದ ದಿನಗಳಲ್ಲಿ ಹರಿಯಲು ಬಿಟ್ಟ. ತನಗೆ ಪ್ರಿಯವಾಗಿದ್ದ ಕೆಲವು ಮುಹೂರ್ತಗಳಲ್ಲಿ ಅದನ್ನು ನಿಲ್ಲಿಸಲು ನೋಡಿದ……

ದನ ಕರುಗಳು ಕೊರಳಿನ ಗಂಟೆ ಶಬ್ದ ಮಾಡುತ್ತ ಎದುರಿಗೆ ಮೇಯುತ್ತಿವೆ. ತಾನು ಒಂದು ದೊಡ್ಡ ಹಲಸಿನ ಮರದ ಬುಡದಲ್ಲಿ ಕೂತಿದ್ದೇನೆ -ಕಂಬಳಿಯ ಮೇಲೆ. ಪೊದೆಯಿಂದ ಒಂದು ಕೆಂಬೂತ ಪಕ್ಷಿ ಹೊರಬಂದು ಕುಪ್ಪಳಿಸಿ ಕಣ್ಮರೆಯಾಗುತ್ತದೆ. ಇದು ಕಂಡರೆ ಸಿಹಿ ತಿನ್ನುತ್ತೇವೆಂದು ಅರ್ಥ. ಕೊಳಲನ್ನೆತ್ತಿಕೊಳ್ಳುತ್ತಾನೆ. ಹಸಿವಾಗುತ್ತಿರುವ ಅನುಭವವಾಗುತ್ತದೆ. ಕೈಯಲ್ಲಿ ಕತ್ತಿ ಹಿಡಿದು ಗೊರಬು ಹಾಕಿಕೊಂಡ ತನ್ನ ತಾಯಿ ದೂರದಿಂದ ಬರುವುದು ಕಾಣುತ್ತದೆ. ಅಮ್ಮನನ್ನು ನೋಡುತ್ತಿದ್ದಂತೆ ಅವಳಿಗೆ ತನ್ನ ಹಸಿವನ್ನು ಹೇಳಿಕೊಳ್ಳಬೇಕೆಂದು ಆತುರವಾಗುತ್ತದೆ.

ಎದುರು ನಿಂತ ಅಮ್ಮ ಮುಗುಳ್ನಗುತ್ತ “ಅದೆಂಥ ಹಸಿವೋ -ಬೆಳಗಿನ ಝಾವ ಗಂಜಿ ಊಟ ಮಾಡಿದ್ದಿಲ್ಲವ?” ಎಂದು ಸುಳ್ಳು ಕೋಪದಿಂದ ಬೈಯುತ್ತಾಳೆ. ಕೃಷ್ಣಪ್ಪ ಗೊಣಗುತ್ತಾನೆ. “ಅದೆಂಥ ಗಂಜಿ ಅದರಲ್ಲಿ ಮಣ್ಣಿತ್ತು” ತಾಯಿ ಎದುರಲ್ಲದೆ ಇನ್ನು ಯಾರ ಹತ್ತಿರ ಮಾವಯ್ಯನ ಹೆಂಡತಿ ಅತ್ತೆಯನ್ನು ಬಯ್ಯಲು ಸಾಧ್ಯ? ಅವಳು ತನಗೊಂದು, ಸ್ವಂತ ಮಕ್ಕಳಿಗೆ ಇನ್ನೊಂದು ಮಾಡುತ್ತಿದ್ದಳು.

ತಾಯಿ ಕೊಟ್ಟಿಗೆಗೆ ಸೊಪ್ಪು ತರಲೆಂದು ಹೊರಟವಳು ಮಗನ ಹತ್ತಿರ ಆದಷ್ಟು ಕಾಲ ನಿಂತಿರಬೇಕೆಂಬ ಆಸೆಯಿಂದ ಬೇಕೆಂದೇ ಏನೇನೋ ಹೇಳುತ್ತ, ಮಗನ ಹಸಿವನ್ನು ಕಿಚಾಯಿಸುತ್ತ ನಿಲ್ಲುತ್ತಾಳೆ. ಕೃಷ್ಣಪ್ಪನೂ ಕೋಪದಲ್ಲಿ ಗೊಣಗುತ್ತಿದ್ದಂತೆ ತಾಯಿ ತನ್ನ ಮಡಿಲನ್ನು ಬಿಚ್ಚುತ್ತಾಳೆ. ಬಾಳೆಯ ಕೊಟ್ಟೆಯಲ್ಲಿ ಕಟ್ಟಿದ ಹಲಸಿನ ಹಣ್ಣಿನ ಕಡುಬಿನ ಚೂರೊಂದನ್ನು ತೆಗೆದು ಇಕೊ ಎಂದು ಕೊಡುತ್ತಾಳೆ. ಕಡುಬಿಗೆ ಧಾರಾಳವಾಗಿ ಎಮ್ಮೆಯ ಕಾಯಿಸಿದ ತುಪ್ಪ ಹಚ್ಚಿದೆ. ನಿನ್ನೆ ಮಾಡಿದ್ದ ಕಡುಬು. ಇವತ್ತು ಅದು ಇನ್ನೆಷ್ಟು ರುಚಿ. ಅವಳ ಪಾಲಿನಲ್ಲಿ ಒಂದಷ್ಟನ್ನು ಬಚ್ಚಿಟ್ಟು ತಾಯಿ ಏಕಾಂತದಲ್ಲಿ ಮಗನಿಗೆ ಅದನ್ನು ಮಾರನೇ ದಿನ ತಂದುಕೊಡುತ್ತಿದ್ದಾಳೆ. ಅತ್ತೆಯ ಕಣ್ಣಿಗೆ ಬೀಳದಂತೆ ಬಚ್ಚಿಟ್ಟು ತಂದ ಕಡುಬನ್ನು ಇಸಕೊಳ್ಳುವಾಗ ತನಗಾದ ಸಂತೋಷವನ್ನು ಕೃಷ್ಣಪ್ಪ ತೋರಿಸಿಕೊಳ್ಳುವುದಿಲ್ಲ. ಪಕ್ಕದಲ್ಲಿಟ್ಟು, “ಹೂ, ಈ ಕಡುಬು ಸಮಾ ಬೆಂದಿಲ್ಲ” ಅನ್ನುತ್ತಾನೆ. ತಾಯಿಗೆ ಮಗನ ಬಡಿವಾರ ತಿಳಿಯುತ್ತದೆ. “ಧಿಮಾಕು ಮಾಡಬೇಡ ತಿನ್ನು” ಎಂದು ಮಗನ ಕಣ್ಣುಗಳು ಕಡುಬು ತಿನ್ನುವಾಗ ಹೊಳೆಯುವುದನ್ನು ನೋಡುತ್ತ ಅಲ್ಲಿ ನಿಲ್ಲುತ್ತಾಳೆ.

ಕಡುಬನ್ನು ಮುಕ್ಕುತ್ತಲೇ “ಹೋಯ್ ಹೋಯ್” ಎಂದು ಕೂಗುತ್ತ ಕೃಷ್ಣಪ್ಪ ಆ ಹಾಳು ಜೋಯಿಸರ ಮನೆಯ ದನದ ಬೆನ್ನಿನ ಹಿಂದೆ ಓಡುತ್ತಾನೆ. ತುಡುಗು ದನ, ಕಂಡವರ ಹೊಲ ನುಗ್ಗುತ್ತದೆ.

ಜೋಯಿಸರು ಪ್ರೈಮರಿ ಸ್ಕೂಲಿನಲ್ಲಿ ಉಪಾಧ್ಯಾಯರು. ಕೃಷ್ಣಪ್ಪ ದನಕಾಯಲು ಶುರುಮಾಡುವುದಕ್ಕಿಂತ ಮುಂಚೆ ಹತ್ತೊ ಹನ್ನೊಂದೊ ವರ್ಷಗಳಾಗುವ ತನಕ ಅವರ ಸ್ಕೂಲಿಗೆ ಹೋಗುತ್ತಿದ್ದ. ಮಕ್ಕಳಿಲ್ಲದ ಜೋಯಿಸರ ಹೆಂಡತಿ ರುಕ್ಮಿಣಿಯಮ್ಮನಿಗೆ ಕೃಷ್ಣಪ್ಪನೆಂದರೆ ಅಕ್ಕರೆ. ಏನೊ ನೆವ ಹೂಡಿ ಸುಮ್ಮನೆ ಅವನನ್ನು ನಿಲ್ಲಿಸಿಕೊಂಡು ಅದೂ ಇದೂ ಮಾತಾಡುತ್ತ ಕಣ್ತುಂಬ ನೋಡುತ್ತ ನಿಲ್ಲುವರು. ಚಕ್ಕುಲಿ ಕೋಡುಬಳೆ ಕೊಡುವರು. ಕೃಷ್ಣಪ್ಪನ ತಾಯಿ ಅವರ ಹತ್ತಿರ ತನ್ನೆಲ್ಲ ಸುಖ ದುಃಖ ತೋಡಿಕೊಳ್ಳುವುದು -ಎಲೆಯಡಿಕೆ ಜಗಿಯುತ್ತ. ಸಾಯಂಕಾಲ ಜೋಯಿಸರು ರಾಗವಾಗಿ ಭಾರತ ಓದುವುದನ್ನು ಕೇಳಿಸಿಕೊಳ್ಳಲು ಯಾರಿಲ್ಲದಿದ್ದರೂ ಕೃಷ್ಣಪ್ಪ ಚಾವಡಿಯಲ್ಲಿ ಹಾಜರು. “ನಿನ್ನ ಮಗನಿಗೆ ರಾಜಕಳೆಯಿದೆ” ಎನ್ನುವರು ಅವರು ಕೃಷ್ಣಪ್ಪನ ತಾಯಿಗೆ. ಕರ್ಣನ ವೃತ್ತಾಂತ ಕೇಳಿಸಿಕೊಳ್ಳುತ್ತ ಕೃಷ್ಣಪ್ಪನ ಕಣ್ಣುಗಳು ಒದ್ದೆಯಾಗುವುದನ್ನು ಜೋಯಿಸರು ಗಮನಿಸುವರು. “ಏಕಲವ್ಯನ ಕಥೆ ಹೇಳಲೇನೊ” ಎಂದು ಕೇಳುವರು.

ರುಕ್ಮಿಣಿಯಮ್ಮನವರು ಅಸಾಧ್ಯ ಮಡಿ. ಅವನ ಒಡ್ಡಿದ ಕೈಮೇಲೆ ಅಷ್ಟೆತ್ತರದಿಂದ ಅವರು ಕೋಡುಬಳೆ ಹಾಕುವುದು. ಬೇಲಿಯ ಮೇಲೆ ಸೀರೆ ಒಣಗಿ ಹಾಕಿದ್ದರೆ, ದೂರದಿಂದಲೇ ಕೃಷ್ಣಪ್ಪನನ್ನು ನೋಡಿ “ಏ ಕಿಟ್ಟ ಮಡಿ ಹರವಿದ್ದೇನೋ, ತೆಗೀತೀನಿ -ಬೇಲಿ ಮುಟ್ಟಬೇಡ”ವೆಂದು ಕೂಗುತ್ತ ಬಂದು ಸೀರೆಯನ್ನು ಎತ್ತಿಕೊಳ್ಳುವರು. ಒಮ್ಮೆ ಮುಟ್ಟಿದರೇನಾಗುತ್ತದೆಂದು ಕೃಷ್ಣಪ್ಪ ಅದನ್ನು ಮುಟ್ಟಿಕೊಂಡೆ ಒಳಬಂದುದನ್ನು ಕಂಡ ರುಕ್ಮಿಣಿಯಮ್ಮ ಅವನನ್ನು ಹೊಡೆಯಲೆಂದು ಓಡಿಬಂದು, ಮುಟ್ಟಿದರೆ ತಾನು ಸಂಪೂರ್ಣ ಮೈಲಿಗೆಯಾಗಿಬಿಡುತ್ತೇನೆಂದು ಅರಿತು, “ಫಟಿಂಗ” ಎಂದು ಎತ್ತಿದ ಕೈಯನ್ನು ಹಾಗೇ ಎತ್ತಿ ನಿಂತಿದ್ದನ್ನು ನೋಡಿ ಕೃಷ್ಣಪ್ಪ ನಗಲು ಪ್ರಾರಂಭಿಸಿದ್ದ. ರುಕ್ಮಿಣಿಯಮ್ಮ ತನ್ನ ನಗುವನ್ನು ತಡೆದುಕೊಂಡು ಹುಸಿ ಮುನಿಸಿನಿಂದ “ಸಮಾ ಮಾಡಿಸ್ತೀನಿ ಇರು ನಿನ್ನ ಅವ್ವನಿಗೆ ಹೇಳಿ, ಮನೆಗೆ ಹೋಗುವಾಗ ಬೆನ್ನಿಗೆ ಹಾಳೆ ಕಟ್ಕೋಬೇಕಾಗುತ್ತೆ” ಎಂದು ಕೃಷ್ಣಪ್ಪನ ಕೈಯಲ್ಲಿ ಆ ಸೀರೆ ಎತ್ತಿಸಿ ಬಾವಿಕಟ್ಟೆ ಬುಡದಲ್ಲಿರಿಸಿ, ನೀರು ಸೇದಿ ಹೊಯ್ದು, ಹಿಂಡಿ ಮತ್ತೆ ಹರವಿದ್ದರು………

ಕೃಷ್ಣಪ್ಪ ಅಯ್ಯೋ ಎಂದು ಕೂಗಿ, ಇನ್ನೂ ಕೂಗಬೇಕೆನ್ನಿಸಿದ್ದನ್ನು ತಡೆದುಕೊಂದ. ಕೈಗಳನ್ನು ಮತ್ತೆ ಹಗ್ಗ ಎಳೆದು ಮುರಿಯತೊಡಗಿತ್ತು. ಈ ನೋವು ಎಷ್ಟೋ ಕಾಲ ಮುಂದುವರಿಯುತ್ತಲೇ ಇರುತ್ತದೆ ಅನ್ನಿಸುತ್ತಿದ್ದಾಗ ಸರಕ್ಕನೆ ಹಗ್ಗ ಸಡಿಲವಾಯಿತು. ಕಣ್ಣುಕತ್ತಲೆ ಕಟ್ಟಿಬಂದು ಕುಸಿದ. ಕೀರಲು ಧ್ವನಿಯ ಪೇದೆ ಬಾಯಿ ತೆರೆಸಿ ನೀರು ಹೊಯ್ಯುತ್ತಿದ್ದ.

ಅವನು ಚೇತರಿಸಿಕೊಳ್ಳಲು ತೊಡಗಿದಾಗ ಸಿನಿಮಾ ಸಂಗೀತದ ಅಲೆಯೊಂದು ಕಿವಿಯ ಮೇಲೆ ಬಿದ್ದು ಕೃಷ್ಣಪ್ಪ ಚಕಿತನಾದ. ಕಾಂಪೌಂಡು ಗೋಡೆಯಾಚೆಯೊಂದು ಹೋಟೇಲಿರಬೇಕು. ಅಲ್ಲಿಂದ ಈ ಸಿನಿಮಾ ಹಾಡು ಅಬ್ಬರಿಸಿ ಕೇಳಿಸುತ್ತಿದೆ. ಆವಾರಾ ಹೂ, ಹೂ….ಆವಾರಾ ಹೂ…ಎತ್ತಿನ ಬಂಡಿ ಚಲಿಸುವ ಶಬ್ದ. ಚಾವಟಿಯ ಏಟಿನ ಶಬ್ದ. ಹೊರಗೊಂದು ಜಗತ್ತು ಯಥಾಪ್ರಕಾರ ತನ್ನ ಚಲನೆಯಲ್ಲಿ ಮಗ್ನವಾಗಿದೆ. ಹೋಟೆಲಲ್ಲಿ ಕೂತು ಆರಾಮಾಗಿ ಕಾಫ಼ಿಗೆ ಆರ್ಡರ್ ಮಾಡಬಹುದು ಅಲ್ಲಿ. ಅಂಗಡಿಯಿಂದ ಬರ್ಕ್ಲೀ ಸಿಗರೇಟು ತರಿಸಿ ಹಚ್ಚಿ ಹೊಗೆ ಬಿಡಬಹುದು. ಎತ್ತಿನ ಬಂಡಿಯ ಶಬ್ದ ದೂರವಾಗುತ್ತಿದೆ. ಸಿಲೋನ್‌ನಿಂದ ಬರುವ ಹಾಡು ನಿಂತು ಆಸ್ಪ್ರೋ ಜಾಹೀರಾತು ಕೇಳುತ್ತಿದೆ.

ದಪ್ಪ ಮೋರೆಯವನು ಕಾಲುಗಳನ್ನು ಅಗಲಿಸಿ ನಿಂತು ಗಾಜಿನ ಲೋಟದಲ್ಲಿ ಕಾಫ಼ಿ ಕುಡಿಯುತ್ತಿದ್ದ. ಅದು ಮುಗಿಯುವುದನ್ನೇ ನೋಡುತ್ತಿದ್ದ ಪೇದೆಯೊಬ್ಬ ಕೈಗಳನ್ನು ಚಾಚಿ ತಯಾರಾಗಿದ್ದ. ಮುಗಿದ ಬಟ್ಟಲನ್ನು ಅನ್ಯಮನಸ್ಕನಾಗಿ ದಪ್ಪಮೋರೆಯವ ಎಡಗೈಯಲ್ಲಿ ಹಿಡಿದಾಗ ಬಲಭಾಗದಲ್ಲಿ ನಿಂತ ಪೇದೆ ಎಡಗಡೆ ಹೋಗಿ ಅದನ್ನು ಇಸಕೊಂಡು ಒಳಗೆ ಹೋದ. ತನ್ನ ಜೀವನವನ್ನು ಆಳುವ ಸರ್ವಶಕ್ತನಂತೆ ನಿಂತ ಅಧಿಕಾರಿಯನ್ನು ಕುಸಿದು ಕೂತ ಕೃಷ್ಣಪ್ಪ ಆಶ್ಚರ್ಯಪಡುತ್ತ ನೋಡಿದ. ಇವನಿಗೆ ತಾಯಿಯಿದ್ದಾಳ? ಇವನೂ ಒಮ್ಮೆ ಹುಡುಗನಾಗಿದ್ದನ? ಅನ್ಯಮನಸ್ಕನಾಗಿ ನಿಂತಿದ್ದ ಅಧಿಕಾರಿ ಸೊಂಟವನ್ನು ತುಸು ತಗ್ಗಿಸುತ್ತ ಹೂಸು ಬಿಟ್ಟ. ಉರ್ದುವಿನಲ್ಲಿ ಏನೋ ಹೇಳಿ ಕೃಷ್ಣಪ್ಪನ ಕಡೆ ನೋಡದೆ ಹೊರಟುಹೋದ. ಕೃಷ್ಣಪ್ಪನನ್ನು ಪೇದೆಯೊಬ್ಬ ಎಬ್ಬಿಸಿಕೊಂಡು ಹೋಗಿ ಎರಡು ಕುರ್ಚಿಗಳಿದ್ದ ಬರಿದಾದ ಒಂದು ರೂಮಿನಲ್ಲಿ ಒಂದು ಕುರ್ಚಿ ಮೇಲೆ ಕೂರಿಸಿದ. ಅಲ್ಯೂಮಿನಿಯಂ ತಟ್ಟೆಯಲ್ಲಿ ಉಪ್ಪಿಟ್ಟನ್ನೂ ಒಂದು ಲೋಟ ಕಾಫ಼ಿಯನ್ನೂ ಎದುರಿಗಿಟ್ಟು ಕಾಯುತ್ತ ನಿಂತ.

ಕೃಷ್ಣಪ್ಪನಿಗೆ ಅದನ್ನು ಕಂಡು ಹಸಿವು ಉಲ್ಬಣವಾಯಿತು. ಆದರೆ ತಾನು ಉಪವಾಸ ಮಾಡುತ್ತಿದ್ದೇನೆಂದು ಸುಸಂಸ್ಕೃತರಂತೆ ಕಂಡ ಅಧಿಕಾರಿಗಳ ಎದುರು ಹೇಳಿದ್ದರಿಂದ ಅದನ್ನು ತಿನ್ನುವಂತಿರಲಿಲ್ಲ. ಆಸೆಯನ್ನು ತಡೆದುಕೊಂಡು, ಅದು ಸಾಧ್ಯವಾದ್ದಕ್ಕೆ ಸಂತೋಷಪಡುತ್ತ ಕುರ್ಚಿಯ ಮೇಲೆ ಒರಗಿ ಕಣ್ಣುಮುಚ್ಚಿದ. ಇನ್ನೇನು ಜೊಂಪು ಹತ್ತಬೇಕು ಆಗ ಪೇದೆ ದಢದಢನೆ ತನ್ನ ಬೂಟ್ಸಿಗೆ ಹಾಕಿದ ಲಾಲದಿಂದ ಸಿಮೆಂಟ್ ನೆಲವನ್ನು ಕುಟ್ಟಿದ. ಕೃಷ್ಣಪ್ಪ ಗಾಬರಿಯಿಂದ ಎಚ್ಚರಾದ. ಈ ಗಾಬರಿ ಅವನಿಗೆ ತಿಳಿಯಿತಲ್ಲ ಎಂದು ಅವಮಾನವಾಗಿ ತಾನು ನಿದ್ದೆ ಹೋಗಕೂಡದೆಂದು ಕಷ್ಟವಾಗಿ ಕಣ್ಣು ಬಿಟ್ಟುಕೊಂಡು ಕೂತ.

ಗೌರಿ ದೇಶಪಾಂಡೆಯನ್ನು ನೆನಪು ಮಾಡಿಕೊಂಡ. ಅವಳು ಸಡಿಲವಾಗಿ ಜಡೆ ಹಾಕಿದ್ದಾಳೆ. ಕಿವಿಗಳ ಮೇಲಿನಿಂದ ಅವಳ ಕಪ್ಪು ತಲೆಕೂದಲು ಇಳಿದು ಎದೆಯ ಮೇಲೆ ಚೆಲ್ಲಿದೆ. ಅವಳು ತಂಬೂರಿ ಹಿಡಿದು ಹಾಡುತ್ತಿದ್ದಾಳೆ -’ಕಬೀರ ಹಾಡುತ್ತಾನೆ ಸಾಧುಗಳೆಲ್ಲ ಕೇಳಿರಿ’ ಎಂಬ ಕೊನೆಯ ಸಾಲನ್ನು ಏರಿಕೆಯಲ್ಲಿ ಹೇಳುತ್ತಿದ್ದಾಳೆ. ಈಗ ಕೃಷ್ಣಪ್ಪನಿಗೆ ತನ್ನ ಆಸೆಯಿಂದ ನಾಚಿಕೆಯಾಗುವುದಿಲ್ಲ. ಎದ್ದು ಬಂದು ತನ್ನ ಪಕ್ಕ ಕೂತವಳನ್ನು ಮೃದುವಾಗಿ ತಡವುತ್ತಿದ್ದಾನೆ. ಆಮೇಲೆ ಅದನ್ನು ಅಣ್ಣಾಜಿಗೆ ಹೇಳುತ್ತಾನೆ. ಅವನಿಗೆ ಖುಷಿಯಾಗುತ್ತದೆ. ಈ ಸಿಸ್ಟಮ್ಮನ್ನು ಬದಲು ಮಾಡುವ ಥಿಯರಿ ಬಗ್ಗೆ ಮಾತಾಡುತ್ತಾನೆ. ಸಮಾಜ ಹಿಂಸೆಯ ಮೇಲೇ ನಿಂತಿದೆ. ಇವೆಲ್ಲ ಕೇಂದ್ರೀಕೃತವಾಗಿ ಪೋಲೀಸ್ ಸಂಸ್ಥೆಯಾಗಿದೆ. ವೈಯಕ್ತಿಕವಾಗಿ ಈ ಪೋಲೀಸರನ್ನು ದ್ವೇಷಿಸಿ ಏನು ಪ್ರಯೋಜನ? ಸಿಸ್ಟಮ್ ಹೇಗೆ ಕೆಲಸ ಮಾಡುತ್ತದೆಂದು ತಿಳಿದು ಅದನ್ನು ಬದಲು ಮಾಡಬೇಕು. ಹೀಗೆ ಬದಲು ಮಾಡುವವರು ರೈತರು -ಕೂಲಿಗಾರರು. ದಪ್ಪ ಮುಖದ ಅಧಿಕಾರಿ ಕೂಡ ಬರಿಯ ಒಂದು ಸಾಧನ. ಆದರೆ ಅವನು ರಾತ್ರೆ ಯಾವಳೋ ಹೆಣ್ಣನ್ನು ಬಲಾತ್ಕಾರವಾಗಿ ಸಂಭೋಗಿಸುವಾಗ ಕೇಳಿಸಿಕೊಂಡ ಭೀಕರ ಶಬ್ದಗಳು ನೆನಪಾಗುತ್ತವೆ. ಕೃಷ್ಣಪ್ಪನ ನಿದ್ದೆ ಹಾರಿ ಕ್ರೂರವಾಗುತ್ತದೆ.

ಮಹೇಶ್ವರಯ್ಯ ಎಲ್ಲೋ ಹೊರಗೆ ತನ್ನನ್ನು ಇಲ್ಲಿಂದ ಪಾರು ಮಾಡುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅವರಿಗೆ ಗೊತ್ತು ಏನು ಮಾಡಬೇಕೆಂದು.

ದೇಶದಲ್ಲಿ ಕ್ರಾಂತಿಯಾಗುತ್ತದೆ. ಈ ದಪ್ಪ ಮುಖದ ಅಧಿಕಾರಿಯನ್ನು ಶಿಕ್ಷಿಸುವ ಕ್ರಮಗಳನ್ನು ಯೋಚಿಸುತ್ತ ಕೃಷ್ಣಪ್ಪ ಸಂಕೀರ್ಣವಾದ ಒಂದು ಯಂತ್ರವನ್ನು ಸೃಷ್ಟಿಸುತ್ತ ಹೋಗುತ್ತಾನೆ. ಅದರಲ್ಲಿ ಒಂದರೊಳಗೊಂದು ಕಚ್ಚಿಕೊಂಡ ನೂರಾರು ಚಕ್ರಗಳು. ಬಗೆಬಗೆಯ ರೀತಿಯಲ್ಲಿ ಆ ಯಂತ್ರ ಈ ಅಧಿಕಾರಿಯನ್ನು ಹಿಡಿದು ಹಿಂಡುತ್ತದೆ. ಸಾಯಲು ಬಿಡದಂತೆ ಹಿಂಸಿಸುತ್ತದೆ. ಅದು ಗಾಣದಂತಿರುತ್ತದೆ. ಆಲೆಮನೆ ಜ್ಞಾಪಕವಾಯಿತು. ಧಾರಾಕಾರವಾಗಿ ಸುರಿಯುವ ಹಾಲು, ಅಡಿಕೆಯ ಸಿಪ್ಪೆಯಿಂದ ಬಣ್ಣಬಣ್ಣದ ಬೆಂಕಿ ಎದ್ದು ಕುದಿಸುತ್ತಿರುವ ಹಂಡೆ, ಈ ಹಂಡೆಯಿಂದ ಎತ್ತಿ ತಿನ್ನುವ ನೊರೆ. ಬೆಲ್ಲ……..

ಮತ್ತೆ ಶಬ್ದವಾಗುತ್ತದೆ. ಉಪ್ಪಿಟ್ಟನ್ನು ಪೇದೆಯೇ ತಿಂದು ಅಲ್ಯೂಮಿನಿಯಂ ತಟ್ಟೆಯನ್ನು ಎತ್ತಿ ಕೆಳಗೆ ಹಾಕಿದ್ದ. ಕೃಷ್ಣಪ್ಪನನ್ನು ನೋಡಿ ಈಡಿಯಟ್ಟಿನಂತೆ ನಗುತ್ತ ನಿಂತಿದ್ದ. ಅವನ ಹಲ್ಲುಗಳು ಹುಳುಕಾಗಿ ಕರ್ರಗಾಗಿದ್ದವು. ಕೃಷ್ಣಪ್ಪನೇ ಉಪ್ಪಿಟ್ಟನ್ನು ತಿಂದವನೆಂದು ಮೇಲಿನವರು ಭಾವಿಸುವಂತೆ ಅವನು ಮಾಡಿದ್ದ.

ಏರೋಪ್ಲೇನ್ ಹತ್ತಿಸಲು ಮತ್ತೆ ಕರೆದುಕೊಂಡು ಹೋಗಬಹುದು ಎನ್ನಿಸಿತು. ಕೈಗಳನ್ನು ಹಿಂದಕ್ಕೆ ಕಟ್ಟಿ ಎಳೆಯುವಾಗ ಸಹನೆಗೂ ಒಂದು ತುದಿಯಿದೆ, ಆ ತುದಿ ದಾಟುತ್ತಿದ್ದಂತೆ ಒಂದೊಂದು ಅಂಗುಲವೂ ನೋವನ್ನು ಏರಿಸುತ್ತ ಹೋಗುತ್ತದೆ. ಕೃಷ್ಣಪ್ಪ ಭಯದಿಂದ ನಡುಗುತ್ತ ಕೂತ. ಈ ಸಾರಿ ತಾನದನ್ನು ತಾಳಲಾರದೆ ಅಣ್ಣಾಜಿ ಹಣ ಕಳಿಸುತ್ತಿದ್ದವರ ಹೆಸರನ್ನೆಲ್ಲ ಹೇಳಿ ಬಿಡಬಹುದು.

ಬೂಟ್ಸಿನ ಸಪ್ಪಳ ಕೇಳಿಸಿತು.

ಹಣೆಯ ಮಧ್ಯ ಕುಂಕುಮವಿಟ್ಟಿದ್ದ ಮೀಸೆಯ ಅಧಿಕಾರಿ ಒಳಗೆ ಬಂದು ಇನ್ನೊಂದು ಕುರ್ಚಿಯ ಮೇಲೆ ಕೂತ. ತನ್ನ ಪೀಕ್ ಕ್ಯಾಪನ್ನು ತೆಗೆದು ಬೆವರುತ್ತಿದ್ದ ಹಣೆಯನ್ನು ಒರೆಸಿಕೊಂಡ. ಕುಂಕುಮವೂ ಒದ್ದೆಯಾಗಿ ಮೂಗಿನ ಕೆಳಗೆ ಇಳಿಯುತ್ತಿತ್ತು. ಆ ಕುಂಕುಮವನ್ನು ಅಳಿಸದಂತೆ ಮೂಗನ್ನೂ ಕೆನ್ನೆಯನ್ನೂ ಕತ್ತನ್ನೂ ಒರೆಸಿಕೊಂಡ.

“ಈ ಹಾಳು ವಾರಂಗಲ್ ಸುತ್ತ ಕಲ್ಲಿನ ಬೆಟ್ಟಗಳಿವೆ ನೋಡಿ. ಆದ್ರಿಂದ ಭಯಂಕರ ಸೆಕೇರಿ. ಕಾಫ಼ಿ ತರಿಸಲ?” ಎಂದು ಕೇಳಿದ.

ಕೃಷ್ಣಪ್ಪ ಬೇಡವೆಂದು ತಲೆಯಾಡಿಸಿದ.

“ಶರಬತ್”

ಕೃಷ್ಣಪ್ಪ ಬೇಡವೆಂದ.

“ನೋಡ್ರಿ ನಾನಿಲ್ಲಿ ಬರಬಾರದು. ಇವೆಲ್ಲ ಲೋಯರ್ ಕೇಡರಿನ ಅಧಿಕಾರಿಗಳ ಕೆಲಸ. ಅವರ ಅಪ್ರೋಚ್ ಬ್ರೂಟಲ್ ಆಗಿರತ್ತೆ…..”

ಕೃಷ್ಣಪ್ಪನ ಗಮನ ತನ್ನ ಮಾತಿನ ಮೇಲಿಲ್ಲವೆಂಬುದನ್ನು ಗಮನಿಸಿ ಆತ,

“ನನ್ನ ಹೆಸರು ಗಜಾನನ ಜೋಷೀಂತಾರಿ” ಎಂದ.

ಕೃಷ್ಣಪ್ಪ ತುಟಿ ಬಿಗಿದು ಕೂತೇ ಇದ್ದದ್ದು ನೋಡಿ,

“ನಿಮ್ಮ ಹಿತೈಷಿಗಳಂತೆ -ಮಹೇಶ್ವರಯ್ಯ ಅಂತ ಮನೆಗೆ ಬಂದಿದ್ದರು. ಬೆಳಿಗ್ಗೆ ನಮ್ಮನೇಲೇ ಟಿಫ಼ನ್ ತಗೊಂಡರು. ಅದಕ್ಕೆ ನಾನೇ ಬಂದೆ ನಿಮ್ಮನ್ನು ನೋಡುವ ಅಂತ.”

ಮಹೇಶ್ವರಯ್ಯನ ಹೆಸರು ಕೇಳಿ ಅಪ್ರಯತ್ನವಾಗಿ ಕೃಷ್ಣಪ್ಪ ನಿಟ್ಟುಸಿರಿಟ್ಟು ಆತುರದಿಂದ ಮುಂದಿನಕ್ಕಾಗಿ ಕಾದ. ಜೋಷಿ ಅದನ್ನು ಗಮನಿಸಿ ತುಂಬ ಮೆದುವಾಗಿ ಹೇಳಿದ:

“ನಮ್ಮ ಡಿಪಾರ್ಟ್‌ಮೆಂಟೇ ಹೀಗೆ. ಯಾವಾಗ ರಿಟೈರ್ಡ್ ಆಗ್ತೀನಿ ಅಂತ ಕಾದಿದೀನಿ. ಆದ್ರೆ ನೋಡ್ರಿ ಇವತ್ತಿಗೂ ಪೂಜೆ ಮಾಡದೆ ನಾನು ಮನೆ ಬಿಡಲ್ಲ”

ಎಂದು ಮತ್ತೊಮ್ಮೆ ಕತ್ತನ್ನು ಒರೆಸಿಕೊಂಡು ಅಲ್ಲಿ ನಿಂತಿದ್ದ ಪೇದೆಗೆ ಹೋಗುವಂತೆ ಹೇಳಿ ಮುಂದುವರೆಸಿದ:

“ಕ್ರಿಮಿನಲ್ಸ್ ಜೊತೆ ಡೀಲ್ ಮಾಡಿ ಮಾಡಿ ನಾವೂನೂ ಅದೇ ಟೆಂಪರಮೆಂಟ್ಸ್‌ರವರಾಗಿಬಿಡ್ತೀವೀಂತ ಕಾಣುತ್ತೆ. ನೋಡ್ರಿ ನಿಮ್ಮಂಥ ಒಬ್ಬ ಐಡಿಯಲಿಸ್ಟ್ ಯಂಗ್ ಮ್ಯಾನ್ ಹತ್ರ ಡೀಲ್ ಮಾಡೋದು ಹೇಗೇಂತ ನಮಗೆ ತಿಳಿಯೋದೇ ಇಲ್ಲರಿ. ದೇಶದಲ್ಲಿ ಭಾರೀ ಅನ್ಯಾಯ ನಡೀತ ಇಲ್ವ ಅಂತ ನೀವು ಕೇಳ್ತೀರಿ. ಎಸ್. ನಾನು ಒಪ್ಪಿಕೋತೀನಿ. ಇಲ್ಲಿ ಕ್ರಾಂತಿಯಾಗಬೇಕೂಂತ ನಿಮಗೆ ಅನ್ನಿಸಿದ್ರೆ ತಪ್ಪೆ? ಒಂದು ಸೇಯಿಂಗೇ ಇದೆಯಲ್ಲ -ಇಪ್ಪತ್ತೈದು ವರ್ಷದೊಳಗೆ ಒಬ್ಬ ಕಮ್ಯುನಿಸ್ಟ್ ಆಗಿಲ್ಲದೇ ಇದ್ರೆ ಅವನು ಹಾರ್ಟ್‌ಲೆಸ್ ಇರಬೇಕು ಅಂತ. ಹಾಗೇನೇ ಇಪ್ಪತ್ತೈದು ವರ್ಷದ ಮೇಲೇನೂ ಅವನು ಕಮ್ಯುನಿಸ್ಟ್ ಆಗಿ ಉಳಿದ್ರೆ ಅವನು ಈಡಿಯಟ್ ಇರಬೇಕೂಂತ”

ಜೋಷಿ ಗಹಗಹಿಸಿ ನಗುತ್ತ ಕೃಷ್ಣಪ್ಪನೂ ತನ್ನ ಜೊತೆ ನಗುತ್ತಿದ್ದಾನೆಂದೇ ಭಾವಿಸಿದವನ ಹಾಗೆ ತೊಡೆಗಳನ್ನು ತಟ್ಟಿಕೊಳ್ಳುತ್ತ ಕೂತ. ಕೃಷ್ಣಪ್ಪ ಅವನನ್ನು ದಿಟ್ಟಿಸಿ ನೋಡುತ್ತಲೇ ಇದ್ದ.

“ನಿಮಗೆ ಈ ಸೇಯಿಂಗ್ ಹೊಸದಿರಲಾರದು -ಅಲ್ವೆ? ವೆರಿ ಫ಼ನ್ನಿ, ವೆರಿ ವೆರಿ ಫ಼ನ್ನಿ.”

ಜೋಷಿ ನಗು ನಿಲ್ಲಿಸಿ ಕಣ್ಣಲ್ಲಿ ಉಕ್ಕಿದ ನೀರನ್ನು ಒರೆಸಿಕೊಂಡು ಹೇಳಿದ:

“ಗೌಡ್ -ನಿಮ್ಮ ಸರ್ನೇಮ್ ಅಲ್ವೇನ್ರಿ? ಧಾರವಾಡದ ಕಡೆ ಬ್ರಾಹ್ಮಣ ಗೌಡರೂ ಇದಾರ್ರೀ. ನೀವು ಹಿಂದೊಂದು ಕಾಲದಲ್ಲಿ ಜೈನರಾಗಿದ್ದವರಂತೆ. ನಾಮಧಾರಿಗಳಂತೆ -ಮಹೇಶ್ವರಯ್ಯ ಎಲ್ಲ ಹೇಳಿದರು. ವೆರಿ ಇಂಟರೆಸ್ಟಿಂಗ್, ವೆರಿ ವೆರಿ ಇಂಟರೆಸ್ಟಿಂಗ್. ಈ ಪ್ರದೇಶ ನೋಡ್ರಿ ನೈಜಾಮ್ ಆಳ್ವಿಕೇಲಿ ಇತ್ತಲ್ಲ ಹಾಗಾಗಿ ಇಲ್ಲಿನ ಪೋಲೀಸ್ ಜನರೆಲ್ಲ ಶುದ್ಧ ಬ್ರೂಟ್‌ಗಳು. ಅದಕ್ಕಾಗಿ ನಾನೇ ಬಂದೇರಿ. ಮಹೇಶ್ವರಯ್ಯನಿಗೆ ಹೇಳಿದೆ: ಡೋಂಟ್ ವರಿ, ಆ ಅಣ್ಣಾಜಿ ಇದ್ದನಲ್ಲ ಅವನಿಗೊಂದೆರಡು ಹೆಂಗಸರು ಕಾಂಟ್ಯಾಕ್ಟ್ಸ್ ಇದ್ದರಂತೆ ಮಹಾರಾಷ್ಟ್ರದಲ್ಲಿ. ಅವರ ಅಡ್ರೆಸ್‌ಗಳು ಸಿಕ್ಕರೆ ಸಾಕು ನಮಗೆ ಅಂತ.”

ಜೋಷಿ ಅಷ್ಟು ಮಾತಾಡಿ ಸುಮ್ಮನಾದ. ತೆಲುಗಿನಲ್ಲಿ ನೀರು ತರುವಂತೆ ಪೇದೆಯನ್ನು ಕೂಗಿದ. ಕೃಷ್ಣಪ್ಪನಿಗೆ “ನೀರಿಗೇನಂತೆ” ಎಂದು ಒಂದು ಗ್ಲಾಸು ಹೂಜಿಯ ತಣ್ಣನೆಯ ನೀರು ಕೊಟ್ಟು ತಾನೂ ಕುಡಿದ.

“ಈ ಇನ್ವೆಸ್ಟಿಗೇಶನ್‌ಗೆ ನಾನೇ ಮುಖ್ಯ ನೋಡ್ರಿ. ನಿಮ್ಮಿಂದ ಅಷ್ಟು ತಿಳಿದರೆ ಸಾಕು ಬಿಟ್ಟುಬಿಡ್ತೀವೀಂತ ಮಹೇಶ್ವರಯ್ಯನಿಗೆ ಹೇಳಿದೆ. ತುಂಬ ಇಂಟರೆಸ್ಟಿಂಗ್ ಮನುಷ್ಯ. ಅಂಥವರು ಸಿಕ್ಕಿದ್ದರಿಂದ ಯೂ ಆರ್ ಲಕ್ಕಿ. ಪಾಪ -ಅದ್‌ಹೇಗೆ ಆ ಅಣ್ಣಾಜೀಂತಿರಲ್ಲ ಅವನು ನಿಮಗೆ ಗಂಟುಬಿದ್ದನೋ. ನಾನು ನನ್ನ ಮಗನಿಗೆ ಹೇಳ್ತೀನಿ. ಅಯ್ಯ ಏನೇ ಮಾಡು. ಪೋಲೀಸರ ಕೈಗೆ ಮಾತ್ರ ಸಿಕ್ಕಿಹಾಕಿಕೊಬೇಡ ಅಂತ.”

ಕೃಷ್ಣಪ್ಪ ಮೆದುವಾದ ಧ್ವನಿಯಲ್ಲಿ ಹೇಳಿದ -ಇದೇ ತನ್ನ ಕೊನೆಯ ಮಾತು ಎನ್ನುವಂತೆ

“ನನಗೇನೂ ಗೊತ್ತಿಲ್ಲ.”

ಆಲ್‌ರೈಟ್ ಎಂದು ಜೋಷಿ ಎದ್ದುನಿಂತು ಅವನ ಪೀಕ್ ಕ್ಯಾಪ್ ಹಾಕಿಕೊಂಡು,

“ಹೇಳಬೇಕು ಅನ್ನಿಸಿದಾಗ ನನಗೆ ಹೇಳಿಕಳಿಸಿ. ಬಾಯಿ ಬಿಡದೆ ಇಲ್ಲಿಂದ ಹೊರಗೆ ಹೋದವರು ಇಲ್ಲಾರಿ. ನಾನು ಹೇಳ್ತಿರೋದು ಫ಼್ಯಾಕ್ಟ್. ನಿಮಗೆ ಹೆದರಿಸಲಿಕ್ಕಲ್ಲ.”

ಎಂದು ಅಂಗಿಯನ್ನು ಅಂಗಿಯನ್ನು ಜಗ್ಗಿ ಸರಿಮಾಡಿಕೊಂಡು ಹೋದ. ಪೇದೆ ಬಂದು ಅವನನ್ನು ಎಬ್ಬಿಸಿಕೊಂಡು ಮತ್ತೆ ಏರೋಪ್ಲೇನ್ ಏರಿಸುವ ಜಾಗಕ್ಕೆ ತಂದ. ಅಲ್ಲಿ ಒಬ್ಬನನ್ನು ಏರೋಪ್ಲೇನ್ ಏರಿಸುತ್ತ ದಪ್ಪ ಮುಖದ ಅಧಿಕಾರಿ ನಿಂತಿದ್ದ. ಹರಿದ ಅಂಗಿ ತೊಟ್ಟು ಪ್ಯಾಂಟ್ ಹಾಕಿದವನ ಕೈಗಳು ಏರುತ್ತಿದ್ದಂತೆ ಅವನು ಕಿರುಚಿಕೊಳ್ಳಲು ಶುರು ಮಾಡಿದ. ತೆಲುಗಿನಲ್ಲಿ ಅವನು ಬಡಬಡಿಸುತ್ತಿದ್ದಾಗ ಅಧಿಕಾರಿ ಅವನನ್ನು ಇಳಿಸಿ ಅವನು ಹೇಳಿದ್ದನ್ನು ಗುರುತು ಮಾಡಿಕೊಂಡು ದಫ಼ೇದಾರನೊಬ್ಬನ ಜೊತೆ ಅವನನ್ನು ಕಳಿಸಿದ. ಈ ದೃಶ್ಯವನ್ನು ನೋಡಲು ಕೃಷ್ಣಪ್ಪನನ್ನು ನಿಲ್ಲಿಸಿಕೊಂಡಿದ್ದವ ನಂತರ ಅವನನ್ನು ಎಲ್ಲೆಲ್ಲೊ ಬಳಸಿ, ಮೆಟ್ಟಲುಗಳನ್ನು ಹತ್ತಿಸಿ, ಇಳಿಸಿ ಹಲವು ರೂಮ್‌ಗಳ ಮೂಲಕ ಕರೆದುಕೊಂಡು ಹೋದ. ಕೊನೆಗೊಂದು ಹಾಲಿನ ಮುಖಾಂತರ ಅವನನ್ನು ಕರೆದುಕೊಂಡು ಹೋಗುವಾಗ ಅಲ್ಲಿ ಸಾದಾ ಬಟ್ಟೆಗಳನ್ನು ತೊಟ್ಟವರು ಮೇಜಿನ ಎದುರು ಕೂತು ಬರೆಯುತ್ತಿದ್ದುದನ್ನು ಕೃಷ್ಣಪ್ಪ ಕಂಡ. ಎಲ್ಲ ಸಾಮಾನ್ಯ ಕಛೇರಿಗಳಂತೆಯೇ ಇದೂ ಇತ್ತು. ಹಣೆಗೆ ವಿಭೂತಿ ತೊಟ್ಟು ಬೆಳ್ಳನೆಯ ಟೋಪಿ ಹಾಕಿಕೊಂಡವನೊಬ್ಬ ನಡುವಿನ ಮೇಜಿನ ಎದುರು ಕೂತು ಬರೆಯುತ್ತಿದ್ದ. ಶಾಯಿ ಹತ್ತಿದ ಟೇಬಲ್ ಕ್ಲಾತ್, ಒಂದು ಪಾತ್ರೆಯಲ್ಲಿ ಬೆಂದಿದ ಹಳಸಿದ ವಾಸನೆಯ ಹಿಟ್ಟಿನ ಗೋಂದು, ಅದರಲ್ಲಿ ಅದ್ದಿದ್ದ ದಪ್ಪನೆಯ ಕಡ್ಡಿ, ಗೋಡೆಯ ಮೇಲೆ ಬೋಸ್ ನೆಹರೂ ಪಟಗಳು, ಮೂಲೆಯಲ್ಲಿ ಬೀಡಿ ಸೇದುತ್ತ ನಿಂತ ಜವಾನರು, ಬೀಡಿ ಆರಿಸುವಾಗ ಗೋಡೆಗೆ ಹತ್ತಿದ ಕರಿಯ ಗುರುತುಗಳು, ಮೂಲೆಯಲ್ಲಿ ಒಟ್ಟಿದ ಮರಳಿನ ಮೇಲೆ ಬಾಯಿ ತೆರೆದುಕೊಂಡಿದ್ದ ನೀರಿನ ಹೂಜಿಗಳು, ಎಲ್ಲರೂ ಸಣ್ಣದನಿಯಲ್ಲಿ ಮಾಡುತ್ತಿದ್ದ ಗಿಜಿಗಿಜಿ ಶಬ್ದ, ತೆರೆದ ಕಪಾಟುಗಳಲ್ಲಿ ಪೇರಿಸಿಟ್ಟು ಹಳದಿ ಬಣ್ಣಕ್ಕೆ ತಿರುಗಿದ ಫ಼ೈಲುಗಳು -ಇವುಗಳನ್ನೆಲ್ಲ ನೋಡುತ್ತ ಕೃಷ್ಣಪ್ಪ ನಿಧಾನವಾಗಿ ಈ ಲಾಯದಂತೆ ಉದ್ದವಾಗಿದ್ದ ಹಾಲಿನಲ್ಲಿ ಮೇಜುಗಳ ನಡುವೆ ದಾರಿ ಮಾಡಿಕೊಳ್ಳುತ್ತ ಚಲಿಸಿದ. ಇದೇ ಡಿಸ್ಟ್ರಿಕ್ಟಿನ ಮುಖ್ಯ ಠಾಣೆಯಿರಬೇಕು. ಜೋಷಿಯೂ ಇಲ್ಲೇ ಎಲ್ಲೋ ಇದ್ದಾನೆ. ಮೇಲೆ ಎಷ್ಟೋ ರೂಮುಗಳಲ್ಲಿ ಅವನ ಮೇಲಿನವರೂ, ಮೇಲಿನ ಮೇಲಿನವರೂ ಇದ್ದಾರೆ. ಆ ರೂಮುಗಳಲ್ಲಿ ಫ಼್ಯಾನ್ ಇರುತ್ತವೆ. ಇದೇ ಕಟ್ಟಡದ ಒಂದು ರೂಮಲ್ಲಿ ತನ್ನ ವಿಚಾರಣೆಯನ್ನು ಮೂವರು ಅಧಿಕಾರಿಗಳು ಮಾಡಿದ್ದು. ಕ್ಷೌರ ಮಾಡಿದ ಮೂತಿಯನ್ನು ತಿರುವುತ್ತ, ಕನ್ನಡಕವನ್ನು ಮೂಗಿನ ಕೆಳಗೆ ಇಳಿಸಿಕೊಂಡು ಕಾಗದಗಳ ಮೇಲೆ ಲೇಖನಿಯಲ್ಲಿ ಏಕಾಗ್ರವಾಗಿ ಬರೆಯುತ್ತ ಕೂತ ಇವರೆಲ್ಲ ಬಡಗೃಹಸ್ಥರಂತೆ ಕಾಣುತ್ತಾರೆ. ಈ ಬಿಲ್ಡಿಂಗಿನಲ್ಲೇ ಎಲ್ಲೋ ಇನ್ನೊಂದು ಮೂಲೆಯಲ್ಲಿ ಆ ಅಂಗಳ ಇದೆ. ತನ್ನನ್ನು ಏರೋಪ್ಲೇನ್ ಹತ್ತಿಸಿದ ಜಾಗ. ಅಲ್ಲಿಯ ಕಿರುಚಾಟ ಈ ಸದ್ಗೃಹಸ್ಥರಂತೆ ತೋರುವ ಗುಮಾಸ್ತರ ಕಿವಿಗೆ ಬೀಳುವಂತೆ ಕಾಣುವುದಿಲ್ಲ. ಆದರೆ ಅಲ್ಲಿ ಹಿಂಸೆಯ ಮೂಲಕ ಪಡೆದ ವಿಷಯಗಳನ್ನು ಈ ಗುಮಾಸ್ತರೆಲ್ಲ ಸಾಲಾಗಿ ವಾಕ್ಯಗಳನ್ನಾಗಿ ಸಿದ್ಧಪಡಿಸುತ್ತಿರಬಹುದು -ನ್ಯಾಯಾಂಗದೆದುರು ಮಂಡಿಸಲು.

ಇಲ್ಲೆ ಎಲ್ಲೊ ಅಂಗಳವಿದೆ -ಆದರೆ ತನ್ನ ಕತ್ತಲಿನ ಕೋಣೆಯೆಲ್ಲಿದೆ? ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಮೊದಲಿನ ಹೆಜ್ಜೆ: ಈ ಬಿಲ್ಡಿಂಗಿನ ಮ್ಯಾಪೊಂದನ್ನು ಸಿದ್ಧಪಡಿಸುವುದು. ಮ್ಯಾಪನ್ನು ಸಿದ್ಧಪಡಿಸಿದರೆ ತಪ್ಪಿಸಿಕೊಂಡು ಹೋಗುವುದು ಸುಲಭವೆನ್ನುವ ಕಾರಣದಿಂದಲೇ ಮೊದಲ ಸಾರಿ ತನ್ನನ್ನು ಕರೆದುಕೊಂಡು ಹೋದಾಗ ಕಣ್ಣಿಗೆ ಬಟ್ಟೆ ಕಟ್ಟಿದ್ದು. ಇವತ್ತು ತಾನು ಜೋಷಿಯನ್ನು ನೋಡಿದ ರೂಮು, ನಂತರ ಬಂದ ಹಿಂಸೆಯ ಅಂಗಳ, ಅಲ್ಲಿಂದ ಹತ್ತಿ ಇಳಿದು ಹೊಕ್ಕ ರೂಮ್‌ಗಳು, ಆಮೇಲಿಂದ ಹೊಕ್ಕ ಈ ಲಾಯದಂಥ ಹಾಲು -ಕೃಷ್ಣಪ್ಪನಿಗೆ ಗಜಿಬಿಜಿಯಾಗಿಬಿಟ್ಟಿದ್ದವು. ಮುಂದಿನ ಸಾರಿ ಎಲ್ಲವನ್ನೂ ಸ್ಪಷ್ಟವಾಗಿ ನೆನಪಿಡುತ್ತ ಹೋಗಬೇಕೆಂದುಕೊಂಡ. ಲಾಯವನ್ನು ದಾಟುತ್ತಿದ್ದಂತೆ ಸ್ವಲ್ಪ ಆಕಾಶ ಕಂಡಿತು. ಈ ಆಕಾಶವನ್ನು ಒತ್ತಿಕೊಂಡು ಸುತ್ತಲೂ ನಿಂತ ಕಪ್ಪುಕಲ್ಲಿನ ಬೆಟ್ಟಗಳು ಕಂಡವು. ಈ ಕಲ್ಲುಗಳಿಂದ ಊರಿನ ಸೆಖೆ ಇಷ್ಟು ಅಸಹನೀಯವಾಗಿದೆ. ಪುರಾತನ ಕಾಲದ ದೇವಸ್ಥಾನವೆನ್ನುವ ರಾಮಪ್ಪ ದೇವಾಲಯಕ್ಕೆ ಈ ಬಂಡೆಗಳಿಂದಲೇ ಕಲ್ಲನ್ನು ಪಡೆದಿರಬಹುದು.

ಈ ಕಟ್ಟಡದ ಮುಂಭಾಗ ಚೂರು ಕಂಡಂತಾಗಿ ಕೃಷ್ಣಪ್ಪ ಚಕಿತನಾದ. ಇಷ್ಟೊಂದು ಕ್ಷುದ್ರವಾದ ಹಾಲುಗಳನ್ನೂ, ಚಿತ್ರಹಿಂಸೆಯ ಅಂಗಳವನ್ನೂ ಬದುಕಿನ ಜಂಜಾಟದಲ್ಲಿ ಸುಸ್ತಾದವರಂತೆ ಕಾಣುವ ಗುಳಿಬಿದ್ದ ಕಣ್ಣುಗಳ ಬಡಕಲು ಗುಮಾಸ್ತರನ್ನೂ ರಾಕ್ಷಸನಂತಿದ್ದ ದಪ್ಪ ಮುಖದ ಅಧಿಕಾರಿಯನ್ನೂ ಒಳಗೊಂಡ ಈ ಬೃಹತ್ ಕಟ್ಟಡದ ಮುಂಭಾಗ ಸುಂದರವಾಗಿತ್ತು. ಇಷ್ಟೊಂದು ಧಗೆಯಲ್ಲೂ ಹಸಿರಾದ ಹಸಿಯಾದ ಲಾನ್ ಇತ್ತು. ನೀರಿನ ಬುಗ್ಗೆಯಿತ್ತು. ಕೃತಕವಾಗಿ ಸೊಂಟವನ್ನು ಬಳುಕಿಸಿ ಕೊಡವೊಂದನ್ನು ಹಿಡಿದು ನಿಂತ ಹೆಣ್ಣಿನ ಶಿಲ್ಪವೊಂದರ ಮೇಲೆ ಈ ಬುಗ್ಗೆ ಚಿಮ್ಮುತ್ತಿತ್ತು. ಈ ಬಿಲ್ಡಿಂಗಿನ ಆಚೆ ಸೈಕಲ್ ರಿಕ್ಷಾಗಳು ಸಾಲಾಗಿ ಕಾಯುತ್ತಿದ್ದವು. ಯಾವ ಭಯವೂ ಇಲ್ಲದೆ ಎಲೆಯಡಿಕೆ ಜಗಿಯುತ್ತ ನಿಂತ ರೈತರು, ಕಚ್ಚೆಪಂಚೆಯನ್ನು ಎತ್ತಿ ಹಿಡಿದ ಪೇಟೆಯವರು ಓಡಾಡುತ್ತಿದ್ದರು. ಬಿಲ್ಡಿಂಗಿನ ಮುಂಭಾಗದ ದಿಕ್ಕನ್ನೂ ಈಗ ಮಧ್ಯಾಹ್ನವೆಂಬುದನ್ನೂ ಮನಸ್ಸಲ್ಲಿ ಗುರುತು ಹಾಕಿಕೊಂಡ. ಮೊದಲನೇ ಪಾಠ: ಸದ್ಯದ ನೋವು ನಿರೀಕ್ಷಿಸಿದ್ದಕ್ಕಿಂತ ಸಹ್ಯವಾಗಿರುತ್ತದೆ. ಎರಡನೇ ಪಾಠ: ಆ ಕತ್ತಲಿನ ಕೋಣೆಯಲ್ಲಿ ದೇಶಕಾಲಗಳು ಮರೆಯುತ್ತ ಹೋಗಬಹುದಾದ್ದರಿಂದ, ಕಾಲ ಮತ್ತು ಅವಕಾಶಗಳಲ್ಲಿ ತಾನು ಎಲ್ಲಿದ್ದೇನೆ ಎಂಬ ಪರಿವೆ ತನ್ನಿಂದ ಮಾಯವಾಗದಂತೆ ನೋಡಿಕೊಳ್ಳಬೇಕು.

ಹಸಿವಿನಿಂದಾಗಿ ಕಾಲುಗಳಲ್ಲಿ ಶಕ್ತಿಯಿರಲಿಲ್ಲ. ಅವನ ಜೊತೆಗಿದ್ದ ಮೈಲೆಕಜ್ಜಿ ತೂತುಗಳ ಮುಖದ ಪೇದೆ ಕ್ರೂರಿಯಂತೆ ಕಾಣದ್ದರಿಂದ ಅವನಿಗೆ ನೀರು ಬೇಕೆಂದು ಸನ್ನೆ ಮಾಡಿದ. ತಣ್ಣಗಿದ್ದ ನೀರನ್ನು ಅಲ್ಲೆ ಮೂಲೆಯಲ್ಲಿದ್ದ ಹೂಜಿಯಿಂದ ಪೇದೆ ಕೊಟ್ಟ. ಕಟ್ಟಡದ ಮುಂಭಾಗವನ್ನು ಇನ್ನಷ್ಟು ನೋಡಿ ತಣಿಯಲು ನೀರು ಕುಡಿಯುವ ನೆವದಿಂದ ಅಲ್ಲೆ ನಿಂತಿದ್ದ. ಪೇದೆ ಅವಸರ ಮಾಡಿ ಹೊರಡಿಸಿದ. ಅವನು ಈಗ ಹೊಕ್ಕು ಹೊರಟ ರೂಮುಗಳು ಖಾಲಿಯಾಗಿದ್ದವು. ಮತ್ತೆ ತಾನೆಲ್ಲಿದ್ದೇನೆಂದು ಗಲಿಬಿಲಿಯಾಯಿತು. ಎಲ್ಲೆಲ್ಲೊ ನಡೆದು ಕೊನೆಗೆ ನಿಂತಿದ್ದಾಗ ಅವನೆದುರಿಗಿದ್ದ ಬಾಗಿಲು ತನ್ನ ಕೋಣೆಯದೆಂದು ಗೊತ್ತಾಯಿತು. ಪೇದೆ ಅವನನ್ನು ಒಳಗೆ ಬಿಟ್ಟು ಬಾಗಿಲು ಹಾಕಿಕೊಂಡ.

..
..
..

ತಗಣಿಗಳು ಮೈಯ ಮೇಲೆ ಹರಿದು ಕಚ್ಚಿದಾಗ ಆಶ್ಚರ್ಯವಾಗಲಿಲ್ಲ. ಮೈಯನ್ನು ಉಜ್ಜಿಕೊಳ್ಳುತ್ತ ಸಿಮೆಂಟ್‌ನ ಮಂಚದ ಮೇಲೆ ಕೂತ ಈ ತಗಣಿಗಳಿಂದಾದರೂ ಮೈಯ ಎಚ್ಚರ ಉಳಿಯುತ್ತದಲ್ಲ. ಊರಿನ ಹವಾಕ್ಕೆ ಒಗ್ಗಿರುವುದರಿಂದಲೋ ಏನೋ ಮೈ ಅಷ್ಟೇನೂ ಬೆವರುತ್ತಿಲ್ಲ. ಹಾಗೇ ಕೂತಿದ್ದಂತೆ ಕಣ್ಣುಗಳು ಬಾಡಿದವು. ಯಾರಾದರು ಥಟ್ಟನೆ ಎಬ್ಬಿಸಿಬಿಡುತ್ತಾರೆಂದು ದಿಗಿಲು ಪಡುತ್ತ, ಅಷ್ಟರೊಳಗೆ ದೇಹಕ್ಕೆ ಬೇಕಾದ ನಿದ್ದೆಯನ್ನೆಲ್ಲ ಪಡೆದುಬಿಡಬೇಕೆಂದು ಏಕಾಗ್ರನಾಗುತ್ತ, ಕಣ್ಣುಗಳನ್ನು ಮುಚ್ಚಿ ಗೋಡೆಗೆ ಒರಗಿದ. ತಗಣಿಗಳು ಇವೆ, ಅವು ಕಚ್ಚುತ್ತಲೇ ಇರುತ್ತವೆ, ಇದು ಅನಿವಾರ್ಯ ಎಂದು ತಿಳಿಯಲು ಯತ್ನಿಸುತ್ತಿದ್ದಂತೆ ಕೃಷ್ಣಪ್ಪನಿಗೆ ಗಾಢವಾದ ನಿದ್ದೆ ಬಂತು.

ಎಚ್ಚರಾದಾಗ ಇದು ಅದೇ ದಿನವೋ, ಮಾರನೇ ದಿನವೋ, ಹಗಲೋ, ರಾತ್ರೆಯೋ ತಿಳಿಯದೆ ಕಸಿವಿಸಿಯಾಯಿತು. ಮೂಗಿನ ಎರಡು ಸೊಳ್ಳೆಗಳಿಗೂ ಮೂಗು ಬಟ್ಟಿಟ್ಟುಕೊಂಡು, ತಲೆಗೆ ಸಣ್ಣದೊಂದು ಗಂಟು ಹಾಕಿ ಅದರಲ್ಲಿ ಸಂಪಿಗೆ ಮುಡಿದುಕೊಂಡು “ಮಡಿ ದೂರವಿರು” ಎನ್ನುತ್ತ ತನಗೆ ದೂರದಿಂದ ಕೋಡುಬಳೆ ಎಸೆಯುತ್ತಿದ್ದ ರುಕ್ಮಿಣಿಯಮ್ಮನ ನೆನಪಾಗಿ ಅವರ ಜೊತೆ ನಡೆದ ನಗಬಲ್ಲಂಥ ಯಾವುದಾದರೊಂದು ಘಟನೆಗಾಗಿ ಹುಡುಕುತ್ತ ಕೂತ. ಅವನು ಯೋಚಿಸಲು ಇಷ್ಟಪಡದೆ ಇದ್ದುದೊಂದು ನೆನಪಾಗಿ ಅವನನ್ನು ಕಾಡಿತು.

ಕೃಷ್ಣಪ್ಪ ಹೊಟ್ಟೆಯಲ್ಲಿರುವಾಗಲೇ ಅವನ ಅಪ್ಪ ಸತ್ತಿದ್ದು, ಬಾಲಕನಾಗಿದ್ದಾಗ ಕೃಷ್ಣಪ್ಪ ತನ್ನ ಅಪ್ಪ ಎಲ್ಲರಂತೆಯೇ ಮುದುಕನಾಗಿ ಸತ್ತಿರಬೇಕೆಂದು ಭಾವಿಸಿದ್ದ. ಆದರೆ ಮಹೇಶ್ವರಯ್ಯ ತನ್ನನ್ನು ದನಕಾಯುವುದರಿಂದ ಬಿಡಿಸಿ ಸ್ಕೂಲಿಗೆ ಸೇರಿಸಲು ಪೇಟೆಗೆ ಕರೆದುಕೊಂಡು ಹೋಗುವ ದಿನ ತಾಯಿ ಅವನನ್ನು ಊರ ಹೊರಗಿದ್ದ ಆಲದ ಮರದ ಕೆಳಗೆ ಕೂರಿಸಿಕೊಂಡು ಅಪ್ಪ ಸತ್ತದ್ದು ಹೇಗೆ ಎಂಬುದನ್ನು ಅಳುತ್ತ ವಿವರಿಸಿದ್ದಳು. ಅಪ್ಪ ಹಠಮಾರಿ. ಅವನಿಗೂ ದಾಯಾದಿಗಳಿಗೂ ಪಾಲಾಗಿದ್ದರೂ ಎಷ್ಟೋ ದಿನಗಳ ತನಕ ಒಂದು ಅಡಿಕೆ ತೋಟದ ಬಗ್ಗೆ ಜಗಳ ನಡೆದೇ ಇತ್ತು -ಅವನ ದೊಡ್ಡಪ್ಪನ ಮಗನ ಜೊತೆಗೆ. ಈ ಪುಟ್ಟಣ್ಣ ಗೌಡನಿಗೆ ತುಂಬ ಅಸೂಯೆ. ಹುಲ್ಲಿನ ಮೆದೆಗೆ ಬೆಂಕಿ ಹತ್ತಿಸುವುದು ಇತ್ಯಾದಿ ಕಿರುಕುಳ ಕೊಡುತ್ತಲೇ ಇದ್ದ.

ಅಪ್ಪ ಹಠಮಾರಿಯಾದ್ದರಿಂದ ಇದಕ್ಕೆಲ್ಲ ಜಗ್ಗಲಿಲ್ಲ. ಒಂದು ಕೋರ್ಟಿನಿಂದ ಇನ್ನೊಂದು ಕೋರ್ಟಿಗೆ ಅಲೆದೂ ಅಲೆದೂ ಅಂತೂ ಕೊನೆಗೆ ತೋಟದ ಹಕ್ಕು ತನ್ನದೆಂದು ಸ್ಥಾಪಿಸಿಕೊಂಡ. ಅದಾದ ಮಾರನೇ ದಿನ ಅಪ್ಪ ಮನೆಗೆ ಬರಲಿಲ್ಲ. ದನಕಾಯುವ ಹುಡುಗನೊಬ್ಬ ಭಯಂಕರವಾದೊಂದು ಕಥೆಯನ್ನು ತಂದ. ಹೋಗಿ ನೋಡಿದರೆ ಬಿದಿರು ಮೆಳೆಯೊಂದರ ಬುಡದಲ್ಲಿ ಅಪ್ಪನನ್ನು ಕಡಿದು ಚೂರು ಚೂರು ಮಾಡಿ ಬಿಸಾಕಿದ್ದರು. ಪೋಲೀಸ್ ಕೇಸಾಯಿತು. ಪುಟ್ಟಣ್ಣಗೌಡನಿಗೆ ಫಾಸಿಯಾಯಿತು. ಅದಾದ ಮೇಲೆಯೇ ಅವನ ಅಮ್ಮ ತನ್ನ ಅಣ್ಣನ ಮನೆ ಸೇರಿದ್ದು.

ಈ ಕಥೆ ಕೇಳಿದ ಮೇಲೆಯೇ ಕೃಷ್ಣಪ್ಪನಿಗೆ ಯಾಕೆ ಅತ್ತೆ ಸಿಟ್ಟು ಬಂದಾಗಲೆಲ್ಲ “ಅಪ್ಪನನ್ನು ತಿಂದು ಹುಟ್ಟಿದ ಶನಿ” ಎಂದು ತನ್ನನ್ನು ಬಯ್ಯುತ್ತಿದ್ದರು ಎಂದು ತಿಳಿದದ್ದು.

ಈ ಘಟನೆ ತನ್ನನ್ನು ಬಾಧಿಸದಂತೆ ನೋಡಿಕೊಂಡಿದ್ದ. ಯಾರಿಗೂ ತನ್ನ ಅಪ್ಪ ಕೊಲೆಯಾದ್ದನ್ನ ಹೇಳಿಕೊಳ್ಳಬೇಕೆಂದು ಅವನಿಗೆ ಅನ್ನಿಸಿದ್ದಿಲ್ಲ. ಮಹೇಶ್ವರಯ್ಯ ಕೂಡ ಅದನ್ನು ಕೇಳಿದ್ದಿಲ್ಲ -ಆದರೆ ತನ್ನ ಜೀವನವನ್ನು ಹುಟ್ಟಿದಾರಭ್ಯ ತಮಸ್ಸು ಕವಿದು ನಾಶ ಮಾಡಲು ಪ್ರಯತ್ನಿಸುತ್ತಿರುವುದಾಗಿಯೂ, ಅದನ್ನು ತಾನು ಛಲದಿಂದ ಗೆಲ್ಲುತ್ತ ಹೋಗಬೇಕೆಂದೂ ಕೃಷ್ಣಪ್ಪನಿಗೆ ಅಸ್ಪಷ್ಟವಾಗಿ ಅನ್ನಿಸಿದೆ.

ತನ್ನ ಅಪ್ಪನನ್ನು ಕೊಲ್ಲಬೇಕೆನ್ನಿಸುವಷ್ಟು ದ್ವೇಷ ಯಾಕೆ ಅವನ ದಾಯಾದಿಗೆ ಹುಟ್ಟಿತು? ಇಂಥ ದ್ವೇಷವನ್ನು ಬೇರವರಲ್ಲಿ ತಾನೂ ಹುಟ್ಟುವಂತೆ ಮಾಡುತ್ತಿರಬಹುದು. ಕೆಲವರನ್ನು ನೋಡಿದಾಗ ತಾನು ಕ್ಷುಲ್ಲಕ, ಕ್ಷುದ್ರ, ತಮಸ್ ಎಂದು ತಿಳಿದದ್ದೆಲ್ಲ ಅವರಲ್ಲಿ ಕ್ರೋಢೀಕರಿಸಿದಂತೆ ಕಾಣುತ್ತದೆ. ಹೀಗೆ ತಾನು ಕಂಡದ್ದೆಲ್ಲ ಇಲ್ಲಿ -ಈ ನೆಲದ ಧೂಳಿನಲ್ಲಿ, ಈ ಸೆಖೆಯಲ್ಲಿ, ಈ ತಗಣಿಗಳಲ್ಲಿ, ಈ ಗಾಳಿಯಿಲ್ಲದ ಕತ್ತಲಲ್ಲಿ -ಕೇಂದ್ರೀಕರಿಸಿದಂತೆ ಅನ್ನಿಸುತ್ತದೆ. ಇದನ್ನು ನಾನು ಗೆಲ್ಲಬಲ್ಲೆನೊ ಎಂದು ಕೃಷ್ಣಪ್ಪ ಅವಡು ಕಚ್ಚಿ ಎದ್ದು ನಿಂತ.

ಅಣ್ಣಾಜಿ ಹೇಳಿದ್ದ : ಕ್ಷುದ್ರತೇನ್ನ ಗೆಲ್ಲಬೇಕಾದ್ದು ನಿನ್ನ ಮನಸ್ಸಲ್ಲಿ ಅಲ್ಲ, ಹೊರಗಿನ ಪ್ರಪಂಚದಲ್ಲಿ. ಅದರ ಮೂಲ ಇರೋದು ಅಲ್ಲಿ. ಅವನು ಹೇಳಿದ್ದು ನಿಜವಿರಬಹುದು. ಆದರೆ ತಾನು ಈ ಸದ್ಯದಲ್ಲಿ ತನ್ನ ಮನಸ್ಸು ಅದರಿಂದ ನಾಶವಾಗದಂತೆ ಮೀರಿ ನಿಲ್ಲುವ ಉಪಾಯಗಳನ್ನು ಹುಡುಕಲೇಬೇಕಾಗಿದೆ. ಇಲ್ಲೇ ತಾನು ಪ್ರಾಯಶಃ ಸಾಯಬೇಕಾಗಿ ಬಂದರೆ ಅವಡು ಕಚ್ಚಿಕೊಂಡೇ ಸಾಯಬೇಕು. ಕೊನೆ ಘಳಿಗೆ ತನಕ ತನ್ನ ಮನಸ್ಸನ್ನು ಈ ತಮಸ್ಸು ಆವರಿಸದಂತೆ ಕಾಯ್ದುಕೊಳ್ಳಬೇಕು.

ಮಹೇಶ್ವರಯ್ಯ ಹೇಳುವರು : ಅವಧಾನಿಯಾಗಬೇಕು. ಸಿಕ್ಕಿಬೀಳಬಾರದು. ಬಳುಕುವ ಶಕ್ತಿ ಕಳೆದುಕೊಳ್ಳಬಾರದು. ಒಳಗೂ ಇರಬೇಕು, ಹೊರಗೂ ಇರಬೇಕು. ಹಣ್ಣನ್ನು ತಿನ್ನಲೂ ಬೇಕು, ನೋಡುತ್ತಲೂ ಇರಬೇಕು. ಹಗುರಾದ ಮೈ, ಬಲವಾದ ರೆಕ್ಕೆ, ಹರಿತವಾದ ಉಗುರು, ಚೂಪಾದ ಆಕಾಶಕ್ಕೆತ್ತಿದ ಕೊಕ್ಕು, ಅಪಾಯ ಅಷ್ಟು ದೂರ ಇದ್ದಾಗಲೂ ಅದು ತಿಳಿಯುತ್ತೆ. ಒಡನಾಡಿಗೆ ಹಾತೊರೆಯುವುದಿಲ್ಲ, ತನ್ನಷ್ಟಕ್ಕೆ ಹಾಡಿಕೊಳ್ಳುತ್ತದೆ.

ಹೀಗೆ ಯೋಚಿಸುತ್ತ ಸ್ವಲ್ಪ ಹೊತ್ತು ಕಳೆದ ಮೇಲೆ ಕಾಲದ ಪರಿವೆಯನ್ನು ತಾನು ಕಳೆದುಕೊಂಡೇ ಬಿಟ್ಟೆ ಎನ್ನಿಸಿತು. ಈ ರೂಮಿನ ಗೋಡೆಯ ಆಚೆ ಇನ್ನೊಂದು ರೂಮಿರಬೇಕು -ಬೀದಿಯಲ್ಲ. ಆ ಅಂಗಳದ ಆಚೆಯಿಂದ ಕೇಳುವಂತೆ ಇಲ್ಲಿಂದ ಏನೂ ಕೇಳಿಸುವುದಿಲ್ಲ. ಆ ದಪ್ಪ ಮೋರೆಯ ಅಧಿಕಾರಿ ತನ್ನನ್ನು ಮರೆತುಬಿಟ್ಟಿರಬೇಕು. ಕಣ್ಣೆದುರಿಗೆ ಇದ್ದಾಗಲೇ ಇನ್ನೇನು ಅತ್ಯಂತ ಕ್ರೂರವಾಗಿ ಅವನು ಮೇಲೆರಗಬಹುದು ಅನ್ನಿಸುತ್ತಿದ್ದಂತೆಯೇ ಅವನು ತನ್ನನ್ನು ಅಲಕ್ಷಿಸಿ ಇನ್ನೆಲ್ಲೋ ಗಮನ ಹರಿಸಿದ್ದು ನೆನಪಿಗೆ ಬಂದು ದಿಗಿಲಾಯಿತು. ಅವನು, ಜೋಷಿ, ಮತ್ತೊಬ್ಬ ತನ್ನನ್ನು ಮರೆತುಬಿಟ್ಟು ಬೇರೆ ಯಾರನ್ನೋ ಹುಡುಕುತ್ತಲೋ ಶಿಕ್ಷಿಸುತ್ತಲೋ ಇರಬಹುದು. ತನ್ನಲ್ಲೇನು ಹುರುಳಿಲ್ಲದ್ದರಿಂದ ಬಿಡುಗಡೆ ಮಾಡಬೇಕೆಂದು ನಿಶ್ಚಯಿಸಿ, ಮಾಡಿದ್ದೇವೆಂದು ತಿಳಿದಿರಬಹುದು. ಇನ್ನೊಮ್ಮೆ ಶಿಕ್ಷಿಸಲು ಹೊರಗೆ ಒಯ್ದಾರೆ ಎಂದು ಆಸೆಯಾಯಿತು.

ಎಷ್ಟು ಉಜ್ಜಿಕೊಂಡರೂ ಯಾವುದೋ ಮೂಲೆಯಿಂದ ತಗಣಿಗಳು ಕತ್ತಿನ ಪಟ್ಟಿ, ಕಂಕುಳ ಸಂದು, ತೊಡೆಯ ಸಂದುಗಳಲ್ಲಿ ಕಚ್ಚಿದುವು. ಈ ಕತ್ತಲಿನ ಕೊಣೆಯೊಂದು ಉದರವಿದ್ದಂತೆ, ಈ ಉದರದಲ್ಲಿ ತಾನು ಕ್ರಮೇಣ ಜೀರ್ಣವಾಗುತ್ತ ಹೋಗುತ್ತಿದ್ದಂತೆ ಭಾಸವಾಯಿತು.

ಈ ಬಗೆಯ ಯೋಚನೆ ಲೋಲುಪತೆ ಎಂದು ನಾಚಿಕೆಯಾಯಿತು. ಚಿತ್ರಹಿಂಸೆಯನ್ನು ಅತ್ಯಂತ ಸಂದಿಗ್ಧವಾಗಿ ನೆರವೇರಿಸುವ ಯಂತ್ರವನ್ನು ಕಲ್ಪಿಸುತ್ತ ಕೂತ. ಇದರಿಂದಲೂ ಸುಸ್ತಾಯಿತು. ಉಪವಾಸ ಮಾಡುತ್ತ ಎಷ್ಟು ದಿನಗಳಾದವೊ? ಮೂರೊ? ನಾಲ್ಕೊ? ಬಾಯಾರಿಕೆ ಪ್ರಾರಂಭವಾಗಿತ್ತು. ಕತ್ತಲಿನಲ್ಲಿ ಪರದಾಡುತ್ತ ಹೋಗಿ ಬೋಗುಣಿಯಲ್ಲಿ ಉಳಿದಿದ್ದ ನೀರಿನಿಂದ ಬಾಯನ್ನು ಒದ್ದೆ ಮಾಡಿಕೊಂಡ.

ತಾನೇನು ಮಾಡುತ್ತಿದ್ದೇನೆಂಬುದು ಪತ್ತೆಯಾಗದಂತೆಯೇ ಕೈಯ ಬೆರಳಿಂದ ನೆಲದ ಮೇಲಿನ ಧೂಳಿನಲ್ಲಿ ಅವನು ಸಮಯ ಮತದ ಸೃಷ್ಟಿ ಕ್ರಮದಲ್ಲಿ ಚಕ್ರವನ್ನು ಬರೆಯತೊಡಗಿದ್ದ. ಮಹೇಶ್ವರಯ್ಯ ಎದುರೇ ಕೂತು ವಿವರಿಸುತ್ತಿದ್ದವರಂತೆ ಭಾಸವಾಗುತ್ತಿತ್ತು. ಪ್ರಾಯಃ ಹಿಂದೊಮ್ಮೆ ಆದಂತೆ ಬುದ್ಧಿಭ್ರಮಣೆ ಆಗುತ್ತಿದೆ; ತಾನು ದೇವರನ್ನು ನಂಬುವುದಿಲ್ಲ ಎಂದುಕೊಳ್ಳುತ್ತಲೇ ಚಕ್ರವನ್ನು ಸೃಷ್ಟಿ ಮಾಡುತ್ತ ತಗಣಿಗಳನ್ನು ಮೈಯಿಂದ ಉಜ್ಜಿ ಕೊಲ್ಲುತ್ತ ಕೂತ. ಮೂಡಲು ಮುಖದ ತ್ರಿಕೋಣ ಮೊದಲು. ಮಧ್ಯೆ ಬಿಂದು. ಅದರ ಮೇಲೆ ಮೊದಲಿನ ತ್ರಿಕೋಣದ ಮಧ್ಯವನ್ನು ಭೇದಿಸಿ ಮೂಡಲ ಮುಖದ ಇನ್ನೊಂದು ತ್ರಿಕೋಣ. ಮೊದಲ ತ್ರಿಕೋಣಾಗ್ರದಿಂದ ಪಡುವಲು ಮುಖವಾಗಿ ಮತ್ತೊಂದು ತ್ರಿಕೋಣವ ಬರೆದು…….. ಮಹೇಶ್ವರಯ್ಯನ ಕಣ್ಣುಗಳು ಏಕಾಗ್ರವಾಗಿ ಹೊಳೆಯುತ್ತಿದ್ದವು. ಹಣೆಯ ಮೇಲೆ ಅಗಲವಾದ ಕುಂಕುಮ, ಒದ್ದೆಯಾದ ಉದ್ದನೆಯ ಕೂದಲು ಬೆನ್ನಿನ ಮೇಲೆ. ಕೆಂಪು ಅಂಚಿನ ಪಂಚೆಯನ್ನು ಕಚ್ಚೆಹಾಕಿ ಉಟ್ಟು, ಬತ್ತಲಾದ ಎದೆಯ ಮೇಲೆ ರುದ್ರಾಕ್ಷಿ ತೊಟ್ಟಿರುತ್ತಿದ್ದರು.

ಸಮಯಿಗಳಿಗೆ ಹೃದಯಕಮಲದಲ್ಲಿಯೇ ಪೂಜೆ -ಎಂದು ಮಹೇಶ್ವರಯ್ಯ ಹೇಳಿದ್ದರು. ಅಂಥ ಪೂಜೆಗೆ ಕೃಷ್ಣಪ್ಪ ಅಣಿಯಾಗುತ್ತಲಿದ್ದಾಗ ಮಹೇಶ್ವರಯ್ಯ ಚಿಂತಾಮಣಿ ಗೃಹವನ್ನು ವರ್ಣಿಸಿದ್ದರು. ಇದಕ್ಕೆ ಎಂಟು ಧಾತುಮಯವಾದ ಪ್ರಾಕಾರ, ಹನ್ನೊಂದು ರತ್ನಮಯವಾದ ಪ್ರಾಕಾರ, ಆರು ತತ್ವಮಯವಾದ ಪ್ರಾಕಾರ, ಹೀಗೆ ಒಟ್ಟು ಇಪ್ಪತ್ತೈದು ಪ್ರಾಕಾರಗಳು. ಒಂದಕ್ಕಿಂತ ಇನ್ನೊಂದು ಎತ್ತರ. ಯಾವುದೇ ಪ್ರಾಕಾರದಲ್ಲಿ ಪ್ರವೇಶ ಕಷ್ಟ…….

ತಾನು ಅಂಥ ಒಂದು ವ್ಯೂಹದಲ್ಲಿದ್ದೇನೆಂದು ಕೃಷ್ಣಪ್ಪ ಅರ್ಧ ಮತ್ತಿನಿಂದ ಅರ್ಧ ಹಾಸ್ಯದಿಂದ ಅಂದುಕೊಂಡ. ನಗಲು ಪ್ರಾರಂಭಿಸಿದ. ಮೂಲಾಗಾರ ಕಂದ ಮಧ್ಯದಲ್ಲಿ ಮದನಾಗಾರ ರೂಪವಾದ ತ್ರಿಕೋಣವಿದೆ. ಅಲ್ಲಿ ಊರ್ಧ್ವ ಮುಖವಾಗಿ ಸ್ವಯಂಭೂ ಲಿಂಗವಿದೆ. ಅದನ್ನು ಸರ್ಪಾಕಾರವಾಗಿ ಮೂರೂವರೆ ಸುತ್ತಿಕೊಂಡು ಇಂಪಾಗಿಯೂ ಅಸ್ಫುಟವಾಗಿಯೂ ಕುಂಡಲಿನೀ ಶಕ್ತಿ ಶಬ್ದ ಮಾಡುತ್ತಿದೆ. ಅಂಥ ಶಬ್ದ ನಗುತ್ತ ಹೊಟ್ಟೆ ಕುಲುಕುವಾಗ ತನ್ನಿಂದ ಹೊರಡುತ್ತಿದೆ ಎನ್ನಿಸಿತು. ಪರಮಶಿವ ಕಾಮೇಶ್ವರ, ಪಾರ್ವತಿ ಕಾಮೇಶ್ವರಿ ಇವರನ್ನು ಸಮಭಾವದಲ್ಲಿ ಇನ್ನು ಪೂಜಿಸುವುದು ಎಂದು ಸಿದ್ಧನಾದ. ಹೇ ಭಗವತಿ, ನಿನ್ನೊಡನೆ ಕೂಡದಿದ್ದರೆ ಆ ಪರಮಶಿವನು ಚರಿಸುವುದಕ್ಕೂ ಸಮರ್ಥನಲ್ಲ ಎಂದು ಧ್ಯಾನಿಸಿದ. ಸಮಯೆ ಎಂದು ದೇವಿಯನ್ನು ಕಣ್ಣೆದುರು ಕಟ್ಟಿಸಿಕೊಳ್ಳುತ್ತ ಹೋದ. ಮಹೇಶ್ವರಯ್ಯ ಬಾಯಿಪಾಠ ಮಾಡಿಸಿದ್ದ ಶ್ಲೋಕಗಳನ್ನು ಕಿರೀಟದಿಂದ ಕೆಳಗಿಳಿಯುತ್ತ ಗಟ್ಟಿಯಾಗಿ ಹಾಡತೊಡಗಿದ. ಹೊಳೆಯುವ ಕಿರೀಟ; ಅವಳ ಪಾರಿಜಾತಪುಷ್ಪದ ವಾಸನೆಯ ಕೂದಲು; ಮುಖದ ಕಾಂತಿ ಉಕ್ಕಿ ಹರಿಯುವುದಕ್ಕಾಗಿ ಇರುವ ದಾರಿಯಂತೆ ಕಾಣುವ ಅವಳ ಬೈತಲೆ; ಮನ್ಮಥನನ್ನು ಸುಟ್ಟ ಕಣ್ಣುಗಳು ತುಂಬಿಗಳಂತೆ ಮತ್ತವಾಗಿರುವ ಅವಳ ಮುಖಕಮಲ; ಮನ್ಮಥನ ಬಿಲ್ಲಿನಂತೆ ಹುಬ್ಬು; ಶೃಂಗಾರ-ವಿಸ್ಮಯ-ಭೀತಿ-ಹಾಸ್ಯಗಳನ್ನು ಮಿಂಚಬಲ್ಲ ಕಣ್ಣುಗಳು; ಅವಳ ಮೂಗುತಿ; ಅವಳ ಅಧರ; ನಾಲಿಗೆ ತಂಬೂಲ; ಕಂಠನಾಳ; ಕಂಠನಾಳದ ಮೂರು ರೇಖೆಗಳು; ಅವಳ ನಾಲ್ಕು ಕೈಗಳು; ಹಸ್ತ; ಸ್ತನ; ರೋಮಾವಳಿ; ಗಂಗಾನದಿಯ ಸ್ಥಿರವಾದ ಸುಳಿಯಂತಹ, ಶಿವನ ಕಣ್ಣಿಗೆ ತಪಸ್ಸಿನ ಸಿದ್ಧಿಯ ಬಿಲದ್ವಾರದಂತಿದೆ ಅವಳ ನಾಭಿ; ಅವಳ ಸ್ತನಭಾರದಿಂದ ಬಳಲಿದ ಮೆಲ್ಲಗೆ ಮುರಿಯುತ್ತಿದೆಯೋ ಎನ್ನುವಂತಿದ್ದ ನಡು; ಅದನ್ನು ರಕ್ಷಿಸಲಂತಿದ್ದ ತ್ರಿವಳಿ; ಲಘುವಾಗಿಯೂ ಅಗಲವಾಗಿಯೂ ಇರುವ ನಿತಂಬ; ಅವಳ ಪಾದಗಳು -ಎಲ್ಲವನ್ನೂ ನೆನೆಯುತ್ತ ಶ್ಲೋಕಗಳನ್ನು ನೆನಪು ಮಾಡಿಕೊಂಡು ಹಾಡುತ್ತ ಉನ್ಮತ್ತನಾಗಿ ಕೂತ. ಈ ತಗಣಿಗಳು, ಈ ಕತ್ತಲ ಕೋಣೆ, ಈ ಧೂಳು, ಎಲ್ಲವನ್ನೂ ನಿಕೃಷ್ಟವಾಗಿ ಕಂಡು ತಾನು ಗೆಲ್ಲುತ್ತಿದ್ದೇನೆ ಎನ್ನಿಸಿತು. ತನ್ನಿಂದ ಹೊರಡುವ ನಾದ ಸರ್ಪಾಕಾರವಾದ ಕುಂಡಲಿನಿಯದು ಎಂದು ತಿಳಿಯಲು ಏಕಾಗ್ರನಾಗಿ ತನ್ನೊಳಗೆ ಚಿತ್ತವನ್ನು ನಿಲ್ಲಿಸಲು ನೋಡಿದ. ಇಲ್ಲ -ಇದು ಬುದ್ಧಿಭ್ರಮಣೆಯಲ್ಲ ಎಂದು ಮತ್ತೆ ಮತ್ತೆ ಅಂದುಕೊಳ್ಳುತ್ತ ರಗಳೆಯಾಗತೊಡಗಿದ್ದರಿಂದ ನಿಟ್ಟುಸಿರಿಟ್ಟು ಎದ್ದು ನಿಂತ.

ಶ್ರೀಚಕ್ರದಲ್ಲಿ ಮೂರು ರೇಖೆ ಕೂಡಿದ ಇಪ್ಪಲ್ಲನಾಲ್ಕು ಮರ್ಮಸ್ಥಾನಗಳಾದರೆ ಎರಡು ರೇಖೆ ಕೂಡಿದ ಇಪ್ಪತ್ತನಾಲ್ಕು ಸಂಧಿಸ್ಥಾನಗಳು. ಅಲ್ಲದೆ ಸೃಷ್ಟಿಕ್ರಮ ಮತ್ತು ಸಂಹಾರ ಕ್ರಮವೆಂದು ಎರಡು ಪ್ರಕಾರಗಳಿವೆ. ಸಂಹಾರಕ್ರಮದಲ್ಲಿ ಬರೆಯುವುದು ವಾಮಾಚಾರಿಗಳಾದ ಕೌಲಮತದವರದ್ದು.

ನನ್ನದು ಸಮಯಮತವಾದರೆ ದಪ್ಪ ಮುಖದ ಅಧಿಕಾರಿಯದು ಕೌಲಮತವಿರಬಹುದು. ಸಂಭೋಗ ಯಕ್ಷಿಣೀ ಸಿದ್ಧಿ, ಪರಸ್ತ್ರೀಗಮನ, ಮಕ್ಕಳ ನಾಲಿಗೆ ಕೊಯ್ಯುವ ಮಹಾ ಸಂಮೋಹನಾತಂತ್ರ ಇತ್ಯಾದಿ ವಾಮಮಾರ್ಗಗಳಿಂದ ದೇವಿಯನ್ನು ಪೂಜಿಸುತ್ತಿರುವ ಅವನು ಈ ತೆಲುಗುನಾಡಿನ ಪ್ರಸಿದ್ಧ ಕಾಪಾಲಿಕನಿರಬಹುದು. ಹೀಗೆ ಯೋಚಿಸುತ್ತ ಕೃಷ್ಣಪ್ಪನಿಗೆ ಮತ್ತೆ ನಗು ಉಕ್ಕಿ ಬಂತು. ಕತ್ತಲೆಯಲ್ಲಿ ಬಹುಬೇಗ ಸುಸ್ತಾಗಿ ಸಿಮೆಂಟ್ ಹಾಸಿಗೆ ಮೇಲೆ ಕೂತು ಕಣ್ಣುಮುಚ್ಚಿದ. ಬೆವರಿನಲ್ಲಿ ತೊಯ್ದು ತನ್ನ ಪಂಚೆ ಜುಬ್ಬಗಳು ಧೂಳಿನಲ್ಲಿ ಅಸಹ್ಯವಾದ್ದರಿಂದ ಅವುಗಳನ್ನು ಬಿಚ್ಚಿ ಎಸೆಯಬೇಕೆನ್ನಿಸಿತು. ಜುಬ್ಬವನ್ನು ಬಿಚ್ಚಿ ಅದನ್ನು ತಲೆಗಿಟ್ಟುಕೊಂಡು ಮಲಗಿದ. ತಳವಿಲ್ಲದ ಅಂತರಾಳದಲ್ಲಿ ತೇಲುತ್ತಿರುವಂತೆ ಅನ್ನಿಸಿತು.

..
..
..

ಮತ್ತೆ ಎಷ್ಟು ಹೊತ್ತಾಯಿತೊ. ಪೇದೆಯೊಬ್ಬ ಬಂದು ಕೈಯನ್ನೆಳೆಯುತ್ತಿದ್ದ. ಕೃಷ್ಣಪ್ಪ ಎದ್ದು ಕೂತು ತಾನೆಲ್ಲಿದ್ದೇನೆಂಬ ನೆನಪು ಮಾಡಿಕೊಂಡ. ಅವನು ಎಳೆಯುತ್ತಲೇ ಇದ್ದುದರಿಂದ ಅವನು ಎಳೆದ ದಿಕ್ಕಿನಲ್ಲಿ ಹೋದ. ಉರ್ದುವಿನಲ್ಲಿ ಏನೋ ಬಯ್ಯುತ್ತಿದ್ದ ಅವನು ಕೀರಲು ದನಿಯ ಪೇದೆಯೆಂಬುದನ್ನು ಗಮನಿಸಿದ.

ಕೋಣೆಯ ಹೊರಗೂ ಕತ್ತಲಿತ್ತು. ಆದರೆ ರಾತ್ರೆಯ ಗಾಳಿ ಹಿತವಾಗಿತ್ತು. ಯಥೇಚ್ಛ ಗಾಳಿಯನ್ನು ಹೀರುತ್ತ ಕೃಷ್ಣಪ್ಪ ನಡೆದ.

ದೀಪಗಳಿಂದ ಅಂಗಳ ಪ್ರಕಾಶಮಾನವಾಗಿತ್ತು. ಏರೋಪ್ಲೇನ್ ಹತ್ತಿಸುವ ರಾಟೆಯಿಂದ ಇಳಿದಿದ್ದ ಹಗ್ಗ ಅಲ್ಲಾಡುತ್ತಿತ್ತು. ಒಂದು ಕುರ್ಚಿಯ ಮೇಲೆ ದಪ್ಪ ಮೋರೆಯ ಅಧಿಕಾರಿ ಕೂತು ಬಾಟಲಿನಿಂದ ರಮ್ಮನ್ನು ಗ್ಲಾಸಿಗೆ ಸುರಿದುಕೊಳ್ಳುತ್ತಿದ್ದ. ಅವನ ಕಾಲಿನ ಕೆಳಗೆ ಇಬ್ಬರು ಹೂಮುಡಿದಿದ್ದ ಹೆಂಗಸರು ಕೂತಿದ್ದರು. ಅವರ ಕೈಯಲ್ಲೂ ಗ್ಲಾಸುಗಳಿದ್ದುವು. ಇಬ್ಬರು ಉಟ್ಟಿದ್ದ ಸೀರೆಗಳೂ ದೀಪದಲ್ಲಿ ಮಿರುಗುತ್ತಿದ್ದುವು. ಅವರ ತುಟಿಗಳು ಕೆಂಪಾಗಿದ್ದವು. ಕಿವಿಯಲ್ಲಿ ಮಿರುಗುವ ಬೆಂಡೋಲೆಗಳಿದ್ದವು. ಕೈಗಳ ತುಂಬ ಹೈದರಾಬಾದಿನ ಪ್ರಸಿದ್ಧ ಕಲ್ಲಿನ ಬಳೆಗಳಿದ್ದವು.

ಉರ್ದುವಿನಲ್ಲೇನೋ ಅವನು ಹೇಳಿ ಗಹಗಹಿಸಿ ನಕ್ಕ. ಇಬ್ಬರು ಹೆಂಗಸರೂ ಒಬ್ಬರನ್ನೊಬ್ಬರು ಚೂಟಿಕೊಂಡು ಮುಗುಳ್ನಕ್ಕರು. ತನ್ನನ್ನೂ ಒಂದು ಕುರ್ಚಿಯ ಮೇಲೆ ಪೇದೆ ಕೂರಿಸಿದನೆಂದು ಕೃಷ್ಣಪ್ಪನಿಗೆ ಆಶ್ಚರ್ಯವಾಯಿತು. ದಪ್ಪ ಮುಖದ ಅಧಿಕಾರಿ ಕಾಲುಗಳನ್ನು ಚಾಚಿ ಆರಾಮಾಗಿ ಕೂತಿದ್ದರಿಂದ ಮಾನವೀಯವಾಗಿ ಕೃಷ್ಣಪ್ಪನಿಗೆ ಕಂಡ.

ಪ್ರಾಯಶಃ ಹಾಗೆಂದು ಅನ್ನಿಸಲು ಇನ್ನೊಂದು ಮುಖ್ಯ ಕಾರಣ ಅವನು ಈಗ ಕ್ಯಾಪ್ ಧರಿಸದ್ದರಿಂದ ಸಣ್ಣದಾಗಿ ಕತ್ತರಿಸಿದ ಅವನ ತಲೆ ಗೋಟಾಗಿದೆ ಎಂದು ಕೃಷ್ಣಪ್ಪನಿಗೆ ಕಾಣಿಸಿದ್ದು. ಮಗುವಾಗಿದ್ದಾಗ ತಲೆದೆಸೆಯಲ್ಲಿ ಬಟ್ಟೆಯನ್ನು ಉರುಟಾಗಿ ಸುತ್ತಿ ಮಧ್ಯದಲ್ಲಿ ತೂತುಬಿಟ್ಟು ಮಲಗಿಸುತ್ತಾರೆ -ತಲೆ ಹೀಗೆ ಗೋಟಾಗದಿರಲೆಂದು. ತನ್ನ ತಲೆ ಚೆಂದಾಗಿರುವ ಬಗ್ಗೆ ಅಮ್ಮ ಕೊಟ್ಟಿದ್ದ ವ್ಯಾಖ್ಯಾನ ಇದು.

“ಕುಡೀತೀಯ?”

ಇವನು ಕಾಪಾಲಿಕನೇ. “ಕುಡೀತೀಯ” ಎಂದು ಕೇಳುತ್ತಿದ್ದಾನೆ ಎಂಬ ಯೋಚನೆ ಬಂದಿದ್ದರಿಂದ ತನ್ನ ಕಠಿಣವಾದ ಮುಖ ಮೃದುವಾದ್ದನ್ನು ಅವನೂ ಗಮನಿಸಿರಬೇಕು.

“ನೀನು ಅಡ್ರೆಸ್‌ಗಳನ್ನು ಕೊಡದೇ ಇದ್ದರೆ ನನಗೆ ಪೀಕಲಾಟ ಗೊತ್ತ? ಆ ಜೋಷಿ ಇದಾನಲ್ಲ, ನನ್ನ ಇನೆಫ಼ಿಶಿಯಂಟ್ ಅಂತ ಕಾನ್ಫಿಡೆನ್ಸಿಯಲ್ ರಿಪೋರ್ಟಲ್ಲಿ ಬರೆದು ಬಿಡ್ತಾನೆ.”

ತನ್ನ ಮಾತಿಂದ ಅಧಿಕಾರಿ ಈ ಖುಷಿಯಾಗಿದ್ದ ಸಂದರ್ಭದಲ್ಲಿ ತೃಪ್ತನಾಗಬಹುದೆಂದು, ಕೃಷ್ಣಪ್ಪ

“ನನಗೇನೂ ಗೊತ್ತಿಲ್ಲ -ನಿಜವಾಗಿ” ಎಂದ.

“ಹಾಗಾದರೆ ಅವನೇನು ನಿನ್ನ ಅಕ್ಕನ ಗಂಡನ, ಅಥವಾ ಮಿಂಡನ? ಇಷ್ಟು ದೂರ ಬಂದಿದಿ ಅವನಿಗಾಗಿ?”

ಅಧಿಕಾರಿ ತನ್ನ ಕಾಲಿನ ಬುಡ ಕೂತವಳನ್ನು ಒದ್ದು ನಗತೊಡಗಿದ.

“ಅವನಿಗೆ ಭಾರಿ ಹೆಂಗಸರ ಹುಚ್ಚು ಅಂತ ಕೇಳಿದೇನೆ. ಇಲ್ಲಿಯಂತೆ ನಿಮ್ಮಲ್ಲೂ ಗುರುಗಳಿಗೆ ಸಪ್ಲೈ ಮಾಡಬೇಕ? ನೀನು ಅವನಿಗೆ ಪಿಂಪ್ ಕೆಲಸ ಮಾಡಿದೀಯ? ನನಗೇಂತ ತಂದಿದಾರೆ ನೋಡು ಈ ಇಬ್ರನ್ನ. ಫ಼ಸ್ಟ್ ಕ್ಲಾಸ್ ರಂಡೆಯರು ಇವರು. ಹೇಗೆ ಕಾಲೆತ್ತುತ್ತಾರೆ ಗೊತ್ತ? ನಿನ್ನ ಅಂಡು ಪಕಪಕ ಕುಣೀಬೇಕು -ಹಾಗೆ. ಇವರಲ್ಲಿ ಒಬ್ಬಳನ್ನು ತಗೊ -ನಂಗೆ ಅಡ್ರೆಸ್‌ಗಳನ್ನು ಕೊಡು. ಇಲ್ಲದಿದ್ರೆ ನನ್ನ ಪ್ರಮೋಶನ್‌ಗೆ ಸಂಚಕಾರವಾಗುತ್ತೆ. ನಿನಗೇನು ನನ್ನ ಕಷ್ಟ ಗೊತ್ತು? ನನಗೆ ಹತ್ತು ಮಕ್ಕಳು. ಟ್ವೆಂಟಿ ಫ಼ೋರ್ ಅವರ್ಸ್ ಡ್ಯೂಟಿ. ಆ ಜೋಷಿ ಕರೆದಾಗ ಇಲ್ಲಿ ಬಂದಿರಬೇಕು. ಜೋಷಿ ಮಂತ್ರಿಗಳಿಗೆ ಮಾತು ಕೊಟ್ಟಿದ್ದಾನೆ. ಆ ಮಂತ್ರಿ ದೊಡ್ಡ ದೈವಭಕ್ತ. ವಾರಕ್ಕೊಂದು ಸಾರಿ ತಿರುಪತಿಗೆ ಹೋಗ್ತಾನೆ. ಕಮ್ಯುನಿಸ್ಟರನ್ನ ನಿರ್ನಾಮ ಮಾಡ್ತೀನೀಂತ ಜೋಷಿ ಮಾತು ಕೊಟ್ಟುಬಿಟ್ಟು ನೋಡು ನನಗೂ ನಿನಗೂ ಹೀಗೆ ಪೀಕಲಾಟಕ್ಕೆ ಬಂದಿದೆ. ತಗೊ ಇವಳನ್ನು -ಹೂ”

ಅವನು ಬಾಗಿ ಹೆಂಗಸಿನ ಸೆರಗನ್ನು ಎಳೆದ. ರವುಕೆ ಬಿಚ್ಚಲು ಹೋದಾಗ ಅವಳು ಅವನನ್ನು ತಡೆದಳು. ಅವನು ತೂರಾಡುತ್ತ ಎದ್ದು ನಿಂತ. ಕೃಷ್ಣಪ್ಪ ಕೆಕ್ಕರಿಸಿ ನೋಡುತ್ತಿದ್ದುದನ್ನು ಕಂಡು ಅವನು :

“ನೋಡಿ ಈ ಬಡವ ಹೇಗೆ ರೋಫ಼್ ಹಾಕ್ತಿದಾನೆ -ಬಿಚ್ಚಿರೋ ಆ ಸುವರ್ ಬಟ್ಟೇನ್ನ” ಎಂದ ಇದ್ದಕ್ಕಿದ್ದಂತೆ. ಕೃಷ್ಣಪ್ಪ ಕೊಸರಿಕೊಂಡರೂ ಬಿಡದೆ ಇಬ್ಬರು ಪೇದೆಗಳು ಅವನನ್ನು ಹಿಡಿದುಕೊಂಡು ಬಟ್ಟೆಯನ್ನು ಬಿಚ್ಚಿ ನಗ್ನಗೊಳಿಸಿದರು.

“ಇವತ್ತು ನಿನ್ನಿಂದ ಹೇಗಾದರೂ ಪತ್ತೆ ಮಾಡು ಅಂದಿದಾನೆ ಜೋಷಿ. ನಾನು ನಿನಗೆ ಗೊತ್ತಿಲ್ಲ…..”

ಎಂದು ತೂರಾಡುತ್ತ ತನ್ನೆದುರು ಬಂದು ನಿಂತ. ಅವನು ಕೋಲಿನಿಂದ ಲಿಂಗವನ್ನು ಚುಚ್ಚುತ್ತ, ಹೆಂಗಸರ ಕಡೆ ನೋಡುತ್ತ

“ತರಡನ್ನ ಒಡೆದುಬಿಡ್ತೀನಿ ಹುಷಾರ್” ಎಂದು ಗಹಗಹಿಸಿ ನಕ್ಕ.

ಕೀರಲು ದನಿಯ ಪೇದೆ ಓಡಿಹೋಗಿ ಗ್ಲಾಸಿಗೆ ಇನ್ನಷ್ಟು ರಮ್ ಸುರಿದು ತಂದು ಅಧಿಕಾರಿಯನ್ನು ಮೆಲ್ಲನೆ ನಡೆಸಿಕೊಂಡು ಹೋಗಿ ಕುರ್ಚಿ ಮೇಲೆ ಕೂರಿಸಿದ. ತೇಗುತ್ತ ಕೂತ ಅಧಿಕಾರಿ ಗೆಲುವಿನ ಧ್ವನಿಯಲ್ಲಿ “ಏಯ್ ಅವನ ಬಾಯಿಗೆ ಉಚ್ಚೆ ಹೊಯ್ಯೊ” ಎಂದು ಇಂಗ್ಲಿಷಿನಲ್ಲಿ ಹೇಳಿದ. ಪೇದೆ ಸುಮ್ಮನೇ ನಿಂತದ್ದು ಕಂಡು ಉರ್ದುವಿನಲ್ಲಿ ಮತ್ತೆ ಕೂಗಿ ಹೇಳಿದ. ಒಬ್ಬ ಹೆಂಗಸು ಎದ್ದು ಬಂದು ಅವನ ತೊಡೆ ಮೇಲೆ ಕೂತು ಕೈಗಳಿಂದ ಅವನ ಕತ್ತುಬಳಸಿ ಏನೋ ಹೇಳಿದಳು.

“ಏಯ್ -” ಎಂದು ಅಧಿಕಾರಿ ಯಾರನ್ನೋ ಕರೆದ. ಮೈಕೈ ತುಂಬಿಕೊಂಡ ಹರೆಯದ ಒಬ್ಬ ಎದುರು ಬಂದು ನಿಂತ. ಅಧಿಕಾರಿ ನಗುತ್ತ ಏನೋ ಹೇಳಿದ. ಅವನು ಕೇಳದಿರಲು ತಾನೇ ಎದ್ದು ಹೋಗಿ ಮುದುಡಿ ಕೂತಿದ್ದ ಇನ್ನೊಬ್ಬಳನ್ನು ಎಬ್ಬಿಸಿ ಅವಳ ಬಟ್ಟೆಯನ್ನು ಬಿಚ್ಚಿದ. ಯುವಕನೂ ತನ್ನ ಬಟ್ಟೆಯನ್ನು ಬಿಚ್ಚಿದ. ಕೃಷ್ಣಪ್ಪ ಕಣ್ಣು ಮುಚ್ಚಿದ. ಓಡಲೆಂದು ಎದ್ದು ನಿಂತ. ಅಧಿಕಾರಿ ನುಗ್ಗಿ ಬಂದು ಕೃಷ್ಣಪ್ಪನನ್ನು ಹಿಡಿದುಕೊಂಡು ಅವನ ಕೈಕಾಲುಗಳನ್ನು ಕಟ್ಟಿಸಿ, ನೆಲದ ಮೇಲೆ ಮಲಗಿಸಿ, ತನ್ನ ಕೋಲಿನಿಂದ ಅವನ ಲಿಂಗವನ್ನು ಎತ್ತಿ ಹಿಡಿದು “ಫ಼್ಲಾಗ್ ಹಾಯಿಸ್ಟ್ ಮಾಡಿಸ್ತೀನಿ -ಸೆಲ್ಯೂಟ್” ಎಂದು ಅಬ್ಬರಿಸಿದ. ಎಲ್ಲರೂ ನಗಲು ಖುಷಿಯಾಗಿ, ಬೆತ್ತಲೆಯಾಗಿದ್ದ ಯುವಕನ ಅಂಡನ್ನು ಸವರುತ್ತ ತಟ್ಟುತ್ತ ನಿಂತ. ಕೃಷ್ಣಪ್ಪ ಬಿಟ್ಟ ಕಣ್ಣುಗಳನ್ನು ಮತ್ತೆ ಮುಚ್ಚಿ, ಅಧಿಕಾರಿ ನಗುವುದನ್ನೂ ಹುರಿದುಂಬಿಸುವುದನ್ನೂ ಕೇಳಿಸಿಕೊಂಡ. ಅಧಿಕಾರಿ ಮತ್ತೆ ಕೀರಲು ಧ್ವನಿಯ ಪೇದೆಯನ್ನು ಕೂಗಿ ಕರೆದು ಉಚ್ಚೆ ಹೊಯ್ಯುವಂತೆ ಹೇಳಿದ. ಕೃಷ್ಣಪ್ಪ ಗಾಬರಿಯಿಂದ ಕಣ್ಣು ಬಿಡಲು ಹೆಂಗಸಿನ ಮೇಲೆ ಬೆತ್ತಲೆ ಎಗರಿದ್ದ ತರುಣನೂ ಅವರನ್ನು ಬಗ್ಗಿ ನೋಡುತ್ತ ಕೇಕೆ ಹಾಕುತ್ತಿದ್ದ ಅಧಿಕಾರಿಯೂ ಕಂಡರು. ಅಧಿಕಾರಿ ಈ ದೃಶ್ಯ ನೋಡುತ್ತಲೇ ದೊಣ್ಣೆಯಿಂದ ಕೀರಲು ದನಿಯವನನ್ನು ನೂಕುತ್ತಿದ್ದ.

ಇಬ್ಬರು ಪೇದೆಗಳು ಬಂದು ಬಲಾತ್ಕಾರವಾಗಿ ಸಟ್ಟುಗ ಹಾಕಿ ತನ್ನ ಬಾಯಿ ಅಗಲಿಸಿದರು. ಅಧಿಕಾರಿಯ ಪ್ಯಾಂಟನ್ನು ಇನ್ನೊಬ್ಬಳು ಈಗ ಬಿಚ್ಚತೊಡಗಿದಳು. ಕೀರಲು ದನಿಯವ ತನ್ನ ಕಾಕಿ ಚಡ್ಡಿಯ ಗುಂಡಿ ಬಿಚ್ಚಿ ತನ್ನೆಡೆಗೆ ಏನೋ ಶಪಿಸುತ್ತ ಬಂದ. ತನ್ನ ಎದೆಯ ಮೇಲೆ ಕುಕ್ಕುರು ಕೂತ. ಒದ್ದಾಡದಿದ್ದಂತೆ ಇಬ್ಬರು ಪೇದೆಗಳು ಹಿಡಿದುಕೊಂಡದ್ದರಿಂದ ಕೃಷ್ಣಪ್ಪ ಸುಮ್ಮನಾದ. ಬಾಯಿಗೆ ಬೀಳಲಿರುವುದನ್ನು ನುಂಗದಂತೆ ಉಸಿರು ಕಟ್ಟಿದ.

ಅಧಿಕಾರಿ ಅಟ್ಟಹಾಸದಿಂದ ಕಿರುಚುತ್ತ, ಹುಡುಗನನ್ನು ಹುರಿದುಂಬಿಸುತ್ತ, ಬೆತ್ತಲಾಗಿ ನಿಂತ ಇನ್ನೊಬ್ಬ ಹೆಂಗಸನ್ನು ಹಿಸುಕುತ್ತಿದ್ದ. “ಆಯಿತಾ” ಎಂದು ಕೀರಲು ದನಿಯ ಪೇದೆಯನ್ನು ಕರೆದು ಕೇಳಿದ. ಪೇದೆ ಆಯಿತು ಎಂದು ಎದ್ದು ನಿಂತು ಗುಂಡಿ ಹಾಕಿಕೊಂಡ. ಅವನು ಉಚ್ಚೆಯನ್ನು ಹೊಯ್ಯಲಿಲ್ಲವೆಂಬುದು ಕೃಷ್ಣಪ್ಪನಿಗೆ ಆಶ್ಚರ್ಯವನ್ನುಂಟುಮಾಡಿತು. ಇದಾದ ನಂತರ ಅಧಿಕಾರಿ ತನ್ನನ್ನು ಮರೆತೇಬಿಟ್ಟು ಬೆತ್ತಲೆ ಹೆಂಗಸರನ್ನು ಪಕ್ಕದಲ್ಲಿ ಕೂರಿಸಿಕೊಂಡು ಕುಡಿಯುತ್ತ ಕೂತ. ಕೃಷ್ಣಪ್ಪನಿಗೆ ಎಲ್ಲವೂ ಅಸ್ಪಷ್ಟವಾಗುತ್ತ ಹೋಯಿತು.

ಕಣ್ಣು ತೆರೆದಾಗ ಇಡೀ ಅಂಗಳದಲ್ಲಿ ಏನೋ ಮೃದುವಾಗಿ ಬಿರಿದುಕೊಳ್ಳುವ ಸಿದ್ಧತೆ ನಡೆಯುತ್ತಿದೆ ಎನ್ನಿಸುವಂತಿತ್ತು. ಕುರ್ಚಿ ಅಲ್ಲೇ ಇತ್ತು; ತ್ರೀ ಎಕ್ಸ್ ರಮ್ಮಿನ ಬಾಟಲಿ ಗ್ಲಾಸುಗಳೂ ಇದ್ದವು. ದೀಪಗಳನ್ನೆಲ್ಲ ಆರಿಸಿದ್ದರೂ ಅವು ಅಸ್ಪಷ್ಟವಾಗಿ ಕನಸಿನಲ್ಲಿ ಎಂಬಂತೆ ಕಾಣುತ್ತಿದ್ದವು. ಆಕಾಶದಲ್ಲಿ ಸ್ಫುಟವಾದ ನಕ್ಷತ್ರಗಳು ಮಂದವಾಗುತ್ತ ಹೋದವು. ಚಿಲಿಪಿಲಿ ಶಬ್ದ; ಏನೋ ಫಲವತ್ತಾಗುತ್ತಿರುವುದರ ಸೂಚನೆ; ಕೃಷ್ಣಪ್ಪ ದೀರ್ಘವಾಗಿ ಉಸಿರೆಳೆದುಕೊಂಡ. ಒಂದು ದೊಡ್ಡ ಸುಖ ತನಗೀಗ ಸಿಗುತ್ತದೆ ಎಂಬ ಆಶ್ವಾಸನೆ ಕೊಡುವಂಥ ವಾಸನೆಯನ್ನು ಗಮನಿಸಿದ. ಈ ಅಂಗಳದಲ್ಲಿ ಬೆಳೆದಿದ್ದ ಒಂದು ಗುಂಪು ಚೆಂಡು ಹೂವಿನ ಗಿಡಗಳು ಕಂಡವು. ಅಂಗಳದಲ್ಲಿ ಬೆಳೆದುಕೊಂಡ ಒಂದೊಂದು ಕಾಡುಗಿಡವನ್ನೂ ಕೃತಜ್ಞತೆಯಿಂದ ನೋಡುತ್ತ ಬಿರಿಯುವ ಮುಹೂರ್ತಕ್ಕಾಗಿ ಕಾದ. ಆಕಾಶ ಕೆಂಪಾಯಿತು. ಸೂರ್ಯನ ಕಿರಣಗಳು ಅಂಗಳವನ್ನು ಹೊಗುವುದನ್ನು ನಿರೀಕ್ಷಿಸಿದ. ತನ್ನ ಮೈಮೇಲೆ ಪಂಚೆ ಹೊದಿಸಿದ್ದರು -ಯಾರೊ -ಕೀರಲು ದನಿಯ ಪೇದೆ ಇದ್ದರೂ ಇರಬಹುದು. ಬೆಳಕು ಆಕಾಶವನ್ನೆಲ್ಲ ತೊಳೆಯುತ್ತ ಅರಳುತ್ತಿತ್ತು.

ಈ ಕ್ಷಣ ಆದಿ ಅಂತ್ಯವಿಲ್ಲದ್ದು; ಪ್ರಾಯಶಃ ತಾನೀಗ ಸತ್ತಿರಬಹುದು ಎಂದು ಅನ್ನಿಸಿತು.

..
..
..

ಕತ್ತಕೆಯ ಕೋಣೆಗೆ ನೂಕಿದ ಮೇಲೆ, ಎಷ್ಟು ಹೊತ್ತಾಯಿತೆಂಬ ಪರಿವೆ ತನಗೆ ಮತ್ತೆ ಮರೆತು ಹೋಗಬಹುದೆಂದು ದಿಗಿಲಾಗಲು ಪ್ರಾರಂಭವಾದಾಗ, ಪೂರ್ವಸೂಚನೆಯಿಲ್ಲದೆ ಬಾಗಿಲು ತೆರೆಯಿತು. ಕೀರಲು ದನಿಯ ಪೇದೆ ಬಟ್ಟೆಗಳನ್ನು ಕೊಟ್ಟ. ಹೊರಗೆ ಕರೆದುಕೊಂಡು ಹೋದ. ಆಫ಼ೀಸಿನಲ್ಲಿ ಮಹೇಶ್ವರಯ್ಯ ಕಾದಿದ್ದರು. ಒಂದೂ ಮಾತಾದದೆ ಅವರು ಕಾರಿನಲ್ಲಿ ಕೂರಿಸಿಕೊಂಡು ಹೋದರು. ಹೋಟೆಲೊಂದರ ಎದುರು ಕಾರನ್ನು ನಿಲ್ಲಿಸಿ ರೂಮಿಗೆ ಅವನನ್ನು ಒಯ್ದರು. ಅಲ್ಲಿ ಅವರೇ ಅವನಿಗೆ ಸ್ನಾನ ಮಾಡಿಸಿ, ಹೊಸ ಅಂಗಿ ಪಂಚೆಗಳನ್ನು ಉಡಿಸಿ, ಕಿತ್ತಳೆ ರಸವನ್ನು ಕುಡಿಸಿದರು.

ನಿದ್ದೆ ಮಾಡಿ ಎದ್ದಾಗ ಸಂಜೆಯಾಗಿತ್ತು. ಮಹೇಶ್ವರಯ್ಯ ರೂಮಿಗೇ ಊಟ ತರಿಸಿದರು. ಗಾಜಿನ ಕಿಟಕಿಗಳ ಎದುರು ಕೂತು ಊರಿನ ಕ್ಷುದ್ರ ಬೀದಿಗಳನ್ನೂ, ಬಣ್ಣ ಕಳೆದುಕೊಂಡ ಕಟ್ಟಡಗಳನ್ನೂ ನೋಡುತ್ತ ಕೃಷ್ಣಪ್ಪ ಅನ್ನಕ್ಕಷ್ಟು ಮೊಸರು ಕಲಸಿಕೊಂಡು ತಿಂದ. ಮಹೇಶ್ವರಯ್ಯ ನಿಧಾನವಾಗಿ ತಮ್ಮ ಭಾವನೆಗಳನ್ನು ತೋರಗೊಡದಂತೆ ಕೃಷ್ಣಪ್ಪನ ಬಿಡುಗಡೆಯ ಕಥೆಯನ್ನು ಹೇಳಿದರು.

ಜೋಷಿಯಿಂದ ಪ್ರಯೋಜನವಿಲ್ಲೆಂದು ತಿಳಿದ ಮೇಲೆ ಮಹೇಶ್ವರಯ್ಯ ವಾರಂಗಲ್‌ನಲ್ಲಿ ನೆಲೆಸಿದ್ದ ಒಬ್ಬ ಪ್ರಸಿದ್ಧ ಕವಿಯ ಬಳಿ ಹೋದರು. ಮಹೇಶ್ವರ ಮತ್ತು ಪಾರ್ವತಿಯ ಲಗ್ನವನ್ನು ಕುರಿತು ಮಹಾಕಾವ್ಯ ಬರೆದಿದ್ದ ಈ ಕವಿ ತೆಲುಗು ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾದವನಾಗಿದ್ದ. ಕೀರ್ತಿವಂತ ವೈದಿಕ ಮನೆತನದಲ್ಲಿ ಹುಟ್ಟಿದವ. ಅಷ್ಟಾವಧಾನಿಗಳೆಂದರೆ ಇವರು ಹೆಸರಲ್ಲಿ ಮಾತ್ರವಲ್ಲ -ನಿಜದಲ್ಲೂ. ಈ ಕವಿಯೂ ದೈವಭಕ್ತ, ದೇವಿಯ ಉಪಾಸಕ, ರಸಿಕ ಎಂಬುದಷ್ಟೇ ಮಹೇಶ್ವರಯ್ಯನ ಆಸಕ್ತಿಗೆ ಕಾರಣವಾಗಿರಲಿಲ್ಲ. ಗೃಹಮಂತ್ರಿಗೆ ಈ ಕವಿ ಅಚ್ಚುಮೆಚ್ಚು. ಪಾರ್ವತಿ ಪರಿಣಯವನ್ನು ಅವಧಾನಿ ಗೃಹಮಂತ್ರಿಗೇ ಅರ್ಪಿಸಿದ್ದ. ಮಂತ್ರಿ ಆ ಮಹಾಕಾವ್ಯಕ್ಕೆ ಅತ್ಯುಚ್ಚ ಬಹುಮಾನಗಳನ್ನು ಕೊಡಿಸಿದ್ದ.

ಅವಧಾನಿ ರಾತ್ರೆಯಾದ ಮೇಲೆ ನಡೆಸುತ್ತಿದ್ದ ದರ್ಬಾರಿಗೆ ಮಹೇಶ್ವರಯ್ಯ ಒಂದು ದೊಡ್ಡ ಬಾಟಲು ವಿಸ್ಕಿ ತೆಗೆದುಕೊಂಡು ಹೋದರು. ಅವಧಾನಿ ಸುಶ್ರಾವ್ಯವಾಗಿ ತನ್ನ ಕವನಗಳನ್ನು ಪಠಿಸುತ್ತಿದ್ದ. ಸೇರಿದವರು ಮೆಚ್ಚುಗೆಯಿಂದ ತಲೆಹಾಕುತ್ತಿದ್ದರು. ತಾನು ಕರ್ನಾಟಕದಲ್ಲಿ ಅವಧಾನಿಯ ಅಭಿಮಾನಿಯೆಂದು ಹೇಳಿಕೊಂಡು ವಿಸ್ಕಿಯನ್ನು ಕೊಡಲಾಗಿ ಕವಿ ಹಸನ್ಮುಖಿಯಾಗಿ ಹೇಳಿದ:

“ನನ್ನ ಸುರಾಪಾನದ ಕೀರ್ತಿಯೂ ಕರ್ನಾಟಕದ ತನಕ ಹಬ್ಬಿದೆ ಎನ್ನಿ.”

ಮಹೇಶ್ವರಯ್ಯನೂ ಆತನೂ ಬಹಳ ಹೊತ್ತು ಸರ್ವಜ್ಞ ವೇಮನರ ಬಗ್ಗೆ ಮಾತನ್ನಾಡಿದರು. ಅವಧಾನಿ ರಾತ್ರೆ ಬೆಳೆದಂತೆ ಹುರುಪಾಗುತ್ತಾ ಹೋದ. ತನಗೆ ತಿಳಿದ ತೆಲುಗು ಸಾಲದೇ ಹೋದಾಗ ಮಹೇಶ್ವರಯ್ಯ ಸಂಸ್ಕೃತದಲ್ಲಿ ಮಾತಾಡಲು ತೊಡಗಿದರು. ಸಂಸ್ಕೃತ ತಿಳಿಯದ ಅವಧಾನಿಯ ಉಳಿದ ಅಭಿಮಾನಿಗಳ ಬಳಗ ಈ ಇಬ್ಬರ ಸಂಸ್ಕೃತ ಸಂಭಾಷಣೆಯಿಂದ ಪುಳಕಿತರಾಗಿ ವಿಸ್ಕಿಯನ್ನು ಹೀರಿದರು. ಬಾಟಲು ಮುಗಿಯುತ್ತಿದ್ದಂತೆ ಅವರಲ್ಲಿ ದೊಡ್ಡ ವ್ಯಾಪಾರಿಯೂ ವೈಶ್ಯ ಜನಾಂಗದವನೂ ಆಗಿದ್ದ ವೆಂಕಟರಮಣಯ್ಯ ಎಂಬಾತ ಕಾರಿನಲ್ಲಿ ಹೋಗಿ ಇನ್ನೊಂದು ಬಾಟ್ಲಿಯನ್ನು ತಂದ. ಅವರಿಗೆಲ್ಲ ಇದೊಂದು ಮಹತ್ವದ ರಾತ್ರೆ ಎನ್ನಿಸಿತ್ತು. ಬಹಳ ಹೊತ್ತಾದ ಮೇಲೆ ಅವಧಾನಿ ಮಹೇಶ್ವರಯ್ಯನನ್ನು ಬಂದ ಕಾರಣ ವಿಚಾರಿಸಿದ. ಮಹೇಶ್ವರಯ್ಯ ಮುಗ್ಧನಾದ ಕೃಷ್ಣಪ್ಪನ ಬಂಧನ ಹೇಳಲಾಗಿ ಅವಧಾನಿಯು ಈಗಿಂದೀಗಲೇ ಗೃಹಮಂತ್ರಿಗೆ ಫ಼ೋನ್ ಮಾಡುವ ನಿಶ್ಚಯ ಮಾಡಿ ಎದ್ದು ನಿಂತ. ವೆಂಕಟರಮಣಯ್ಯ ತನ್ನ ಕಾರಿನಲ್ಲಿ ಇಬ್ಬರನ್ನೂ ಮನೆಗೆ ಒಯ್ದು ಗೃಹಮಂತ್ರಿಗೆ ಲೈಟನಿಂಗ್ ಕಾಲ್ ಬುಕ್ ಮಾಡಿದ. ಅವಧಾನಿ ಫ಼ೋನೆತ್ತಿದಾಗ ಬಹಳ ವಿರಾಮವಾದ ಸಂಭಾಷಣೆ ಸುಮಾರು ಐದು ನಿಮಿಷ ನಡೆಯಿತು. ಗೃಹಮಂತ್ರಿ ಈಗೇನು ಬರೆಯುತ್ತಿದ್ದೀರೆಂದು ಅವಧಾನಿಗೆ ಕೇಳಿರಬೇಕು. ಅವಧಾನಿ ಸುಶ್ರಾವ್ಯವಾದ ಧ್ವನಿಯಲ್ಲಿ ತನ್ನ ಈಚೀಚಿನ ಪದ್ಯವನ್ನು ಹಾಡುತ್ತಿದ್ದಾಗ ವೆಂಕಟರಮಣಯ್ಯ ಹಿಗ್ಗುತ್ತ ತುದಿಗಾಲಿನ ಮೇಲೆ ನಿಂತಿದ್ದ.

ಮಹೇಶ್ವರಯ್ಯನಿಗೆ ಗಾಬರಿ. ಎಲ್ಲಿ ಅವಧಾನಿ ಕೃಷ್ಣಪ್ಪನ ಬಗ್ಗೆ ಮರೆಯುವನೋ ಎಂದು. ಪದ್ಯ ಮುಗಿಯುತ್ತಿದ್ದಂತೆ ಅವಧಾನಿಯನ್ನು ಹಗುರವಾಗಿ ಮುಟ್ಟಿ “ಹೆಸರು ಕೃಷ್ಣಪ್ಪ ಗೌಡ ಅಂತ” ಎಂದರು. ಅವಧಾನಿ ಇದೊಂದು ಸಾಮಾನ್ಯ ಸಂಗತಿ ಎನ್ನುವಂತೆ ಬಂಧನದ ವಿಷಯ ಹೇಳಿ ಏನನ್ನೋ ಕೇಳಿಸಿಕೊಳ್ಳುತ್ತ ತಾನು ಫ಼ೋನ್ ಮಾಡುವ ನಂಬರನ್ನೂ, ಅದು ಗೃಹಮಂತ್ರಿಗಳ ಪರಮ ಅಭಿಮಾನಿಗಳಾದ ವೆಂಕಟರಮಣಯ್ಯನದೆಂದೂ ತಿಳಿಸಿದ. ವೆಂಕಟರಮಣಯ್ಯ ಇದರಿಂದ ಹಿರಿಹಿರಿ ಹಿಗ್ಗಿದಂತೆ ಕಂಡಿತು. ಅವಧಾನಿ ಫ಼ೋನನ್ನು ಕೆಳಗಿಟ್ಟು ಇನ್ನು ಹತ್ತು ನಿಮಿಷಗಳ ಒಳಗಾಗಿ ನಿಮ್ಮ ಕೆಲಸವಾಗುತ್ತೆ ಎಂದು ಮಹೇಶ್ವರಯ್ಯನಿಗೆ ಹೇಳಿದ. ವೆಂಕಟರಮಣಯ್ಯ ಕಪಾಟಿನಿಂದ ಸ್ಕಾಚನ್ನು ತೆಗೆದು ಮೂವರಿಗೂ ಸುರಿದ. ಈಗಾಗಲೇ ಮಧ್ಯರಾತ್ರೆ ಕಳೆದಿತ್ತು. ಇವೆಲ್ಲ ತನ್ನ ಪಾಲಿಗೆ ಭೀಕರವಾಗಿದ್ದ ರಾತ್ರೆ ಹೊತ್ತಲ್ಲೇ ನಡೆದಿದ್ದೆಂದು ಕೃಷ್ಣಪ್ಪ ಆಶ್ಚರ್ಯಪಡುತ್ತ ಕೇಳಿಸಿಕೊಂಡ. ಹತ್ತು ನಿಮಿಷಗಳ ನಂತರ ಫ಼ೋನ್ ಬಂತು. ಜೋಷಿ ಫ಼ೋನಲ್ಲಿ ಸಿಗುತ್ತಿಲ್ಲವೆಂದು ಬೆಳಗಾದೊಡನೆ ಮಂತ್ರಿಗಳೇ ಖುದ್ದು ಅವನಿಗೆ ಫ಼ೋನ್ ಮಾಡುವುದಾಗಿಯೂ, ವೆಂಕಟರಮಣಯ್ಯನ ಮನೆಗೆ ಜೋಷಿಯಿಂದಲೇ ಫ಼ೋನ್ ಬರುವುದಾಗಿಯೂ ಮಂತ್ರಿಯ ಪಿ.ಎ ತಿಳಿಸಿದ. ಮಹೇಶ್ವರಯ್ಯ ವೆಂಕಟರಮಣಯ್ಯನ ಮನೆಯಲ್ಲೆ ರಾತ್ರೆ ಮಲಗಿದ್ದರು. ಬೆಳಗಾದ ಮೇಲೂ ಫ಼ೋನ್ ಬರಲಿಲ್ಲ. ವೆಂಕಟರಮಣಯ್ಯ ಸ್ನಾನ ಮಾಡಿ ಅಂಗಡಿಗೆ ಹೊರಟು ಹೋದ. ಅವಧಾನಿ ಏಳುವುದು ಮಧ್ಯಾಹ್ನದ ಮೇಲೆ. ಮಹೇಶ್ವರಯ್ಯ ದೇವಿಯನ್ನು ಮನಸ್ಸಿನಲ್ಲೆ ಸ್ಮರಿಸುತ್ತ ಕಾದರು.

“ಅಂತೂ ಕೊನೆಗೆ ಫ಼ೋನ್ ಬಂತು. ನಿನ್ನ ಬಿಡುಗಡೆಯಾಯ್ತು. ನೋಡು ಕೃಷ್ಣಪ್ಪ ಯಾವತ್ತೂ ರಾಜನ ಕಣ್ಣಿಗೆ ಬೀಳದಂತೆ ಬದುಕಬೇಕು …. ಆದರೆ ಅದು ನಿನ್ನ ಜಾಯಮಾನಕ್ಕೆ ಸಾಧ್ಯವಿಲ್ಲ. ನಿನ್ನ ಹಣೆಯಬರಹ …. ಬಿಡು – ಇನ್ನು ಆ ಮಾತೇ ಬೇಡ. ಸಂಜೆ ಹೋಗುವ” ಎಂದು ನಿಟ್ಟುಸಿರಿಟ್ಟರು.
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.