ಅಡ್ಡಮಳೆ

ಅಡ್ಡಮಳೆ ಹೊಡೆದು ಹೋಯಿತು-
ಗುಡ್ಡದಾಚೆಗೆ, ಹೊಲಗದ್ದೆಗಳ ದಾಟಿ, ಬೇರೂರಿಗೆ.
ಅಲ್ಲಿಯೂ ನಮ್ಮಂತೆ ಚಡಪಡಿಸಿ, ಉಸಿರು
ಕಟ್ಟಿ ಕುಳಿತಿರಬಹುದು ಜನರು : ಹೊಚ್ಚ ಹೊಸ ಮಳೆಗೆ.

ಉತ್ತರದ ಕಡೆಯಿಂದ ಬೀಸಿಬಂದಿರು ಗಾಳಿ
ದಕ್ಷಿಣಕ್ಕೆ, ಮೋಡದೊಳಗೊಂದು ಮೋಡ
ಉದ್ಭವಿಸಿ ಆಕಾಶವನ್ನೆಲ್ಲ ವ್ಯಾಪಿಸಿತು.
ನೋಡ ನೋಡುತ್ತ ನೆಲವ ಗದಗಮಿಸಿತು.

ಕೋಲ್ಮಿಂಚು ಕೊರೆದು ಕೋರೈಸಿ, ಗುಡುಗು ಹುಟ್ಟಿಸಿ ನಡುಗು
ಎಲ್ಲೊ ಬಡಿಯಿತು ಸಿಡಿಲು : ಬಟಾ ಬಯಲು.
ನಡುವೆ ತಣ್ಣಗೆ ತಂಪು, ನೀರೆಲ್ಲ ಕೆಂಪು ಹೊನಲು.
ಬಿರುವಿಸಿಲಿನಾಳಿಕೆ ಬಗ್ಗು ಬಡಿದು ಹೊರಬಿದ್ದ ಬಿರುಗಾಳಿ-
ಆಂದೋಲನದ ಅಮಾಯಕ ತಿರುವು ; ಹೊಲಸೆಲ್ಲ
ತೊಳೆದು ಹೊಳೆದಿಹುದು ಹೊಸ ಜೀವನದ ಕಾಂತಿ
ವಾತಾವರಣದಲ್ಲಿ ನಿರ್ಭೀತಿ, ನಿರಂಕುಶಮತಿ
*****
೧೯೮೦