ಅಶ್ವತ್ಥಾಮ

ರಾತ್ರಿ ತಾನು ಎಷ್ಟು ಗಂಟೆಯವರೆಗೆ ಬರೆದೆನೆನ್ನುವುದು ರಾಮಚಂದ್ರನಿಗೆ ಗೊತ್ತಾಗಲಿಲ್ಲ. ಬೆಳಿಗ್ಗೆ ಎಚ್ಚರವಾದದ್ದು ಅಡಿಗೆಯ ಹುಡುಗ ದಿನದ ಪದ್ದತಿಯಂತೆ ಚಹದ ಕಪ್ಪನ್ನು ಹಿಡಿದು ಕೋಣೆಯ ಕದ ತಟ್ಟಿದಾಗ. ಕನ್ಣು ತೆರೆದರೆ ಫಕ್ಕನೆ ಎಲ್ಲಿದ್ದೇನೆ ಎನ್ನುವುದೇ ಕೆಲಹೊತ್ತು ತಿಳಿಯಲಿಲ್ಲ. ಮೈಯೆಲ್ಲ ಬಿಗಿದು ಕತ್ಟಿದ ಹಾಗೆ, ಅಲುಗಾಡಿಸಲೂ ಆಗುತ್ತಿರಲಿಲ್ಲ. ಅಗಳಿ ಹಾಕಿಲ್ಲ. ಹಾಗೇ ಕದ ದೂಡಿ ಬಾ ಎನ್ನೋಣವೆಂದರೆ ನಾಲಗೆ ಏಳದಾಯಿತು. ವಾಸು ತಾನೇ ಕದ ದೂಡಿ ಒಳಗೆ ಬಂದವನು ಇವನನ್ನು ನೋಡಿ ಥಕ್ಕಾಗಿ ನಿಂತುಬಿಟ್ಟ. “ಇದೆ! ರಾತ್ರಿಯೆಲ್ಲ ಕುರ್ಚಿಯಲ್ಲೇ ನಿದ್ದೆ ಮಾಡಿದಿರೋ ನೋಡುತ್ತೇನೆ” ಎಂದಾಗ, ಮೆಲ್ಲಗೆ ದೃಷ್ಟಿಗೆ ಬಿದ್ದಿದ್ದುವು: ರಾತ್ರಿಯಿಡೀ ಉರಿದ ದೀಪದ ಬೆಳಕಿನಲ್ಲಿ ಬೆಳಗಿನಿಂತ ಮಲಗುವ ಕೋಣೆ ; ನಿರಿ ಮುರಿಯದೇ ಇದ್ದ ಹಾಸಿಗೆ ; ಪ್ರಿಯವಾದ ಪುಸ್ತಕಗಳ ಕಪಾಟು. ವಿರಾಮ ಕುರ್ಚಿಯಲ್ಲಿ ಕುಳಿತು ಕಾಲುಗಳ ಮೇಲಿರಿಸಿ ಬರೆದ ವಹಿ ಅವನಿಂದ ದೂರ ಸಿಡಿದು ನೆಲದ ಮೇಲೆ ಬಿದ್ದಿತ್ತು. ಅವನನ್ನೇ ಮಿಕಿಮಿಕಿ ನೋಡುತ್ತಿದ್ದ ವಾಸು ಚಕಿತನಾಗಿ, “ರಾತ್ರಿಯೆಲ್ಲ ಕೂತು ಮಾಡಿದ ಬರೆಯುವ ಕೆಲಸ ಇದೇ ಏನೋ ಅನ್ನುತೇನೆ. ಅದು ಯಾಕೆ ಹಾಗೆ ರಾಯರ ಬನೀನು ಮಸಿಯಲ್ಲಿ ಅದ್ದುಬಿಟ್ಟಿದೆ?” ಎಂದಾಗ ನೋಡಿಕೊಂಡ : ಹೌದು. ತೆರೆದೇ ಇದ್ದ ಪೆನ್ನಿನ ನಿಬ್ಬು ಬನಿಯನ್ನಿನ ಎದೆಯ ಭಾಗದಲ್ಲಿ ಊರಿಕೊಂಡಲ್ಲೇ ಇಷ್ಟು ದೊಡ್ಡ ಚಕ್ರಾಕಾರದ ಮಸಿಯ ಕಲೆಯನ್ನು ಮೂಡಿಸಿತ್ತು : ವಾಸೂನ ವಿನೋದ ಬುದ್ಧಿಗೆ ನಗು ಬಂತು. ಕುರ್ಚಿಯಿಂದ ಏಳುವ ಪ್ರಯತ್ನ ಮಾಡದೇ ಕುಳಿತಲ್ಲಿಂದ ಪೆನ್ನಿಗಾಗಿ ತಡಕಾಡಿದ. ವಹಿ ಬಿದ್ದ ಜಾಗದ ಸಮೀಪವೇ ಬಿದ್ದಿತ್ತು. ವಾಸೂನೇ ವಹಿ ಮತ್ತು ಪೆನ್ನುಗಳೆರಡನ್ನೂ ಎತ್ತಿ ಹತ್ತಿರದ ತೇಬಲ್ಲಿನ ಮೇಲಿಟ್ಟು ಚಹದ ಕಪ್ಪನ್ನು ಕೈಗೆ ಕೊಟ್ಟು ಎಂದಿನ ಹಾಗೆ ರೂಮಿನಿಂದ ಹೊರಟುಹೋಗದೇ ಗೋಡೆಗೆ ಒರಗಿ ಕೈಕಟ್ಟಿ ಕುಕ್ಕರುಗಾಲಲ್ಲಿ ಕುಳಿತುಕೊಂಡ. ತನ್ನ ರಾಯರಲ್ಲಿ ಕಂಡ ಎಂತಹುದೋ ವಿಶೇಷ ಬದಲು ಹಿಂದೆಂದೂ ತೋರದೇ ಇದ್ದ ಸಲುಗೆಗೆ ಎಡೆಮಾಡಿಕೊಟ್ಟಂತಿತ್ತು. ಓದುವ ಕೋಣೆ, ಮಲಗುವ ಕೋಣೆ ಎರಡೂ ಒಂದೇ ಆಗಿದ್ದ ಆ ದೊಡ್ಡ ಕೋಣೆಯನ್ನು ಮೊದಲ ಬಾರಿಯೇ ನೋಡುತ್ತಿದ್ದೇನೆ ಎನ್ನುವವನ ಹಾಗೆ ಬೆರಗುಗಣ್ಣುಗಳಿಂದ ನೋಡುತ್ತ, “ರಾಯರೇ”, ಎಂದ. “ನೀವು ಇಷ್ಟೆಲ್ಲ ಪುಸ್ತಕಗಳನ್ನು ಓದಿದ್ದೀರಾ?” ಎಂದು ಕೇಳಿದ. “ಇಲ್ಲ ವಾಸೂ, ಎಲ್ಲ ಪುಸ್ತಕಗಳನ್ನೂ ಪೂರ ಓದಿಲ್ಲ. ಓದುವುದು ಇನ್ನೂ ಬಹಳ ಇದೆ,” ಎಂದು ರಾಮಚಂದ್ರ ಹೇಳಿದಾಗ, ವಾಸು ಪುಸ್ತಕಗಳನ್ನು ನೋಡುತ್ತ ಕುಳಿತುಬಿಟ್ಟ.

ವಾಸು ಈ ಮನೆಗೆ ಹೊಸಬ. ಬಂದು ಒಂದು ತಿಂಗಳಷ್ಟೇ ಆಗಿರಬೇಕು. ರಾಮಚಂದ್ರನ ಊರಿನ ಕಡೆಯವನೇ. ಮುಂಬಯಿಯ ಉಡುಪಿ ಹಾಟೆಲ್ ಒಂದರಲ್ಲಿ ಮಾಣಿಯ ಕೆಲಸ ಮಾಡುತ್ತಿದ್ದವನನ್ನು ಈ ಮೊದಲಿನ ಅಡಿಗೆಯವನೇ ತಾನು ರಜೆಯ ಮೇಲೆ ಹೋಗುವಾಗ ತಂದುಕೊಟ್ಟಿದ್ದ. ವಾಸು ಈ ವರೆಗೂ ತನ್ನ ಹತ್ತಿರ ಹೀಗೆ ಮಾತನಾಡಿದ್ದು ರಾಮಚಂದ್ರನಿಗೆ ನೆನಪಿಲ್ಲ. ತನ್ನ ಮೋರೆಯ ಅದೆಂತಹ ಬದಲು ಕಂಡು ಈ ಬಗೆಯ ಸಲುಗೆಗೆ ಧೈರ್ಯ ಮಾಡಿದನೋ ಎಂದು ಕುತೂಹಲವೆನಿಸಿತು. ನಾಲ್ಕು ಮಲಗುವ ಕೋಣೆಗಳು ; ಹಿರಿದಾದ ದಿವಾಣಖಾನೆ ; ಮೂರು ಬಾಲ್ಕನಿಗಳು, ನಾಲ್ಕು ಬಚ್ಚಲುಮನೆಗಳು. ಇಷ್ಟು ದೊಡ್ಡ ಮನೆಯಲ್ಲಿ ಇರುತ್ತಿದ್ದವರು ತಾವಿಬ್ಬರೇ. ತಾನು ಪ್ರಿಂಟಿಂಗ್ ಪ್ರೆಸ್ಸಿಗೆ ಹೊರಟುಹೋದಮೇಲಂತೂ ‘ಚೀಂ’ ಎನ್ನುತ್ತಿದ್ದ ಮನೆಯಲ್ಲಿ ವಾಸು ಒಬ್ಬಂಟಿ. ಪಾಪ! ಬೇಸರ ಬರಲಾರದೇ? ಮೇಲಾಗಿ, ಕಳೆದ ಕೆಲವು ದಿನಗಳಿಂದ ಪ್ರೆಸ್ಸಿಗೆ ಮೊದಲಿನ ಹಾಗೆ ದಿನವೂ ತಪ್ಪದೇ ಹೋಗದೇ ಆಗೊಮ್ಮೆ ಈಗೊಮ್ಮೆ ಗರಜು ಬಿದ್ದಾಗಷ್ಟೇ ಹೋಗುತ್ತಿದ್ದರೂ ಮನೆಯಲ್ಲಿರುತ್ತಿದ್ದುದು ಕಡಿಮೆಯೇ. ಈ ಎರಡು ದಿನ ಮಾತ್ರ ಮನೆಯಲ್ಲೇ ಇದ್ದೆ. ಆದರೆ ಇಡೀ ದಿನವೆಂಬಂತೆ ಪುಸ್ತಕಗಳಲ್ಲಿ ತಲೆ ಮರೆಸಿ ಕೂತವನು ಇದೀಗ ಮಾತನಾಡಲು ಸಿಕ್ಕನೆಂದನ್ನಿಸಿರಬೇಕು : ರಾಮಚಂದ್ರ ತಾನೂ ವಾಸುವಿನೊಂದಿಗೆ ಹರಟೆ ಹೊಡೆಯಲು ಸಿದ್ಧನಾದ :
“ನಿನ್ನೆ ರಾತ್ರಿ ಏನೋ ಬರೆಯುತ್ತೇನೆ ಎಂದು ಕೂತಿರಲ್ಲ. ಏನು ಬರೆದಿರಿ?”
“ಒಂದು ಕತೆ ಬರೆದೆ ವಾಸೂ.”
“ಯಾರ ಬಗ್ಗೆ? ಆ ಕತೆಯಲ್ಲಿ ನಾನೂ ಬಂದಿದ್ದೇನೋ ಏನೋ….”
“ಕೆಲವು ದಿನಗಳ ಹಿಂದೆ ಇಲ್ಲೊಬ್ಬ ಹೆಂಗಸು ಬಂದಿದ್ದಳಲ್ಲ. ಅವಳ ಬಗ್ಗೆ.”
“ಓ ! ಕಾಶಿಗೆ ಹೋದ ಮುದುಕಮ್ಮನಾ? ಅವಳ ಬಗ್ಗೆ ಏನಪ್ಪ ಬರೆಯೋ ಹಾಗೆ ಇದೆ? ಅವಳು ಸತ್ತಾಗ ಯಾಕೆ ಅಷ್ಟೊಂದು ಅತ್ತಿರಿ? ಮೊನ್ನೆ ಬಂದಿದ್ದರಲ್ಲ ಅವರು?”
“ಯಾರು ಬಂದಿದ್ದರೋ ವಾಸು?”
“ಅವರೇ ಬೆಳ್ಳಗೆ ಚೆಂದವಾಗಿದ್ದಾರಲ್ಲ…?” ವಾಸೂನ ಮೋರೆ ಕೆಂಪಾಯಿತು. ವಾಸೂ ಹೇಳುತ್ತಿದ್ದುದು ಗೆಣೆಗಾತಿ ವೀಣಾಳ ಬಗ್ಗೆ ಇರಬೇಕು ಎಂಬುದು ಗೊತ್ತಾಗಿ,
“ಅವರೇ? ಏನೆಂದರು?” ಎಂದು ಕೇಳಿದ ರಾಮಚಂದ್ರ, ಮೋರೆಯ ಮೇಲೆ ತಾವ ಭಾವನೆಯನ್ನೂ ವ್ಯಕ್ತಪಡಿಸದೇ.
“ಅವರೂ ಹೇಳುತ್ತಿದ್ದರು : ಆಮುದುಕಿ ಸತ್ತದ್ದನ್ನು ನೀವು ಅಷ್ಟೊಂದು ಮನಸ್ಸಿಗೆ ಹಚ್ಚಿಕೊಂಡಿರೋ ಎಂದು. ಅವರು ಹೇಳಿದ್ದೂ ಸುಳ್ಳಲ್ಲ. ಆ ಮುದುಕಮ್ಮ ಸತ್ತಾಗಲಾಯ್ತು ನೀವು ಒಂದು ನಮೂನೆ ಆಗಿಬಿಟ್ಟಿದ್ದೀರಿ…” ಎಂದ. ರಾಮಚಂದ್ರ ಕೂಡಲೇ ಏನೂ ಮಾತನಾಡಲಿಲ್ಲ. ತುಸು ಹೊತ್ತಿನ ಮೇಲೆ, ಕತೆಯಲ್ಲಿ ತನ್ನ ಬಗ್ಗೆ ಏನು ಬಂದಿದೆ ಎಂದು ವಾಸು ಕೇಳಿದ ಪ್ರಶ್ನೆ ಈಗ ಲಕ್ಷ್ಯಕ್ಕೆ ಬಂದವನ ಹಾಗೆ,
“ನೋಡು, ವಾಸೂ ನೀನೂ ನನ್ನ ಕತೆಯಲ್ಲಿ ಬಂದಿದ್ದೀ. ಆ ಮುದುಕಮ್ಮನ ತಂಗಿಯ ಮಗ ನಾಗಪ್ಪನೋ ಇನ್ನಾರೋ ಆಗಿರಬೇಕು-ಸರಿಯಾಗಿ ನೆನಪಿಲ್ಲ,” ಎಂದ, ಮುಗುಳುನಗುತ್ತ. ಈ ಪರಕಾಯಪ್ರವೇಶ ವಿದ್ಯೆಯ ತುದಿ ಬುಡ ಗೊತ್ತಾಗದೇ ಆಶ್ಚರ್ಯಚಕಿತನಾಗಿ ಬಾಯಿ ತೆರೆದು ಕುಳಿತುಬಿಟ್ಟ ವಾಸು. ಆಮೇಲೆ ಕ್ರಮೇಣ ಅವನ ಪ್ರಶ್ನೆಗಳು ವೀಣಾಳ ಕಡೆಗೆ, ಅವಳ ತಾಯಿ ಕಡೆಗೆ ತಿರುಗಿದ್ದರಿಂದ ಸಲುಗೆಯನ್ನು ಅತಿಗೆ ಹೋಗಕೊಡಲು ಮನಸ್ಸಿಲ್ಲದವನ ಹಾಗೆ, “ವಾಸೂ ಆಮೇಲೆ ನಿನಗೆ ಕತೆಯನ್ನು ಓದಿ ತೋರಿಸುತ್ತೇನೆ. ಆಗದೇ? ಬ್ರೇಕ್‌ಫಾಸ್ಟಿಗೆ ಏನಾದರೂ ಸ್ಪೆಶಲ್ ಮಾಡು ನೋಡೋಣ,” ಎಂದ, ಅವನನ್ನು ಅಲ್ಲಿಂದ ಓಡಿಸಲೆಂದೇ. ಹಾಗೆ ಹೇಳಿದ್ದೇ, ತನಗೆ ಬಹಳ ಹಸಿವೆಯಾಗಿದೆ ಎಂದೂ ಅನ್ನಿಸಿತು. ವಾಸೂಗೆ ಏಳುವ ಮನಸ್ಸಾದಂತೆ ತೋರಲಿಲ್ಲ. ಆದರೂ ಕತೆ ಓದಿ ತೋರಿಸುತ್ತೇನೆ ಎಂದುದಕ್ಕೇ ಜೋತುಬಿದ್ದು, ಖಾಲಿಯಾದ ಕಪ್ಪು ಬಸಿಗಳನ್ನೆತ್ತಿಕೊಂಡು ಅಡುಗೆಯ ಮನೆಗೆ ನಡೆದ.

ಪ್ರಾತರ್ವಿಧಿಗಳನ್ನು ಮುಗಿಸಲು ಹೊರಡೋಣವೆಂದು ವಿರಾಮ ಕುರ್ಚಿಯಿಂದ ಏಳುವಾಗ ತಿರುಗಿ ಬನಿಯನ್ನಿನ ಮೇಲಿನ ನಾಲ್ಕು ಇಂಚು ವ್ಯಾಸದಷ್ಟು ದೊಡ್ಡದಾದ ಕಲೆಯನ್ನು ನೋಡಿ ‘ರಾತ್ರಿಯೆಲ್ಲ ಕೂತು ಮಾಡಿದ ಬರೆಯುವ ಕೆಲಸ ಇದೇ ಏನೋ ಅನ್ನುತ್ತೇನೆ,’ ಎಂದು ಆಗ ವಾಸು ಹೇಳಿದ್ದು ನೆನಪಾಗಿ, ರಾಮಚಂದ್ರ ತನ್ನಷ್ತಕ್ಕೇ ನಕ್ಕ. ವಹಿ ತೆರೆದು ನೋಡುವ ಕುತೂಹಲವಾಗಿ ಅದನ್ನು ಕೈಗೆತಿಕೊಳ್ಳೋಣವೆಂದರೆ ಹತ್ತಿರ ಹೋಗುವಷ್ಟರಲ್ಲಿ-ಈಗ ಬೇಡ ಬ್ರೇಕ್‌ಫಾಸ್ಟ್ ಮುಗಿಸಿದ ಮೇಲೇ-ಎಂದುಕೊಂಡು, ಬರೆದದ್ದನ್ನು ಓದಿ ನೋಡುವ ತವಕವನ್ನು ಹತ್ತಿಕ್ಕಿಯೇ ಬಚ್ಚಲು ಮನೆಗೆ ಹೋದ….ಎಂದಿನ ಹಾಗೆ, ಒಂದು ಇನ್ನೊಂದಕ್ಕೆ, ಇನ್ನೊಂದು ಮತ್ತೊಂದಕ್ಕೆ, ಮತ್ತೊಂದು ಮಗದೊಂದಕ್ಕೆ ಪ್ರತೀಕವಾಗುತ್ತ ಒಗಟು ಒಗಟಾದ ಹಳವಂಡದ ಹಾಗೆ, ಕನಸಿನ ಹಾಗೆ ಆಗದೇ ಈ ಸಾರೆ ಎಲ್ಲವನ್ನೂ ಸ್ಪಸ್ಟವಾಗಿ ಮುಚ್ಚುಮರೆಯಿಲ್ಲದೇನೇ ಹೇಳಿಕೊಂಡಿದ್ದೇನೆ ಎನ್ನುವ ಹರವಾದ ಭಾವನೆಯಿಂದ ಮನಸ್ಸು ತುಂಬ ಹಗುರವಾಗಿ, ಒಂದು ತರದ ಹುಡುಗುತನದಿಂದ ಗೆಲುವಾಗಿತ್ತು.

ವೀಣಾಳನ್ನು ಕಾಣದೇ ಎಷ್ಟು ದಿನಗಳಾದವು, ಅನ್ನಿಸಿತು. ತುಂಬ ಮನಸ್ಸಿಗೆ ಹಚ್ಚಿಕೊಂಡಿರಬೇಕು ಹುಡುಗಿ. ಅವಳ ತಾಯಿ ಕೂಡ. ನಾಳೆ ಹೋದರಾಯಿತು ಎಂದುಕೊಂಡ. ಏಕೋ ಈಗ ಮೊದಲಿನ ಜೋಮೂ ಉಳಿದಿಲ್ಲ. ಅದಕ್ಕಿಂತ ಹೆಚ್ಚಾಗಿ ವೀಣಾ ತನ್ನನ್ನು ಹಚ್ಚಿಕೊಂಡ ರೀತಿಗೆ ಒಂದು ಬಗೆಯ ಹೆದರಿಕೆಯಾಗುತ್ತದೆ. ಯಾವ ಬಂಧನವೂ ಬೇಡ ಎಂದುಕೊಂಡವನ ಕಾಲಿಗೆ ಇವಳ ಪ್ರೀತಿಯ ಕರುಳುಬಲ್ಳಿ ತೊಡಕಾಗದಿರಲಿ ದೇವರೇ! ತನ್ನ ಮನೆ, ಭರಭರಾಟೆಯಿಂದ ನಡೆದ ಪ್ರೆಸ್ಸು, ಬ್ಯಾಂಕಿನಲ್ಲಿದ್ದ ಹಣದ ಮೋಹಕ್ಕಾಗಿ ತನ್ನನ್ನು ಪ್ರೀತಿಸಿದ್ದಾಳೆಂದು ಬಗೆದು ತಳೆದ ಧೈರ್ಯ ಇತ್ತಿತ್ತ ಕುಗ್ಗುತ್ತಿದೆ. ವೀಣಾಳಿಗಿಂತ ಮೊದಲಿನ ಹುಡುಗಿಯರನ್ನು ಮನೆಗೆಂದೂ ಕರೆಸಿದವನಲ್ಲ. ಬೇಕೆನ್ನಿಸಿದಾಗ ತಾನೇ ಅವರಲ್ಲಿ ಹೋಗುತ್ತಿದ್ದ. ಆದರೆ ವೀಣಾ ಮಾತ್ರ ಗೆಳೆತನವಾದ ಐದಾರು ವರುಷಗಳಲ್ಲಿ ಆಗೊಮ್ಮೆ ಈಗೊಮ್ಮೆ ಬಂದಿದ್ದಾಳೆ. ಅದೂ ಹಗಲು ಹೊತ್ತಿಗೆ ಮಾತ್ರ. ರಾತ್ರಿಯಲ್ಲಿ ಎಂದೂ ಇಲ್ಲಿ ಕಳೆದವಳಲ್ಲ. ಆದರೆ ಸಾತಕ್ಕ ಸತ್ತಾಗ ಇಡೀ ಮನೆಯೇ ತಿನ್ನಲು ಎದ್ದು ಬಂದ ರೀತಿ ಬಿಕೋ ಎನ್ನಿಸಿದಾಗ ನಾಲ್ಕು ದಿನ ಇಲ್ಲೇ ಇದ್ದಳು. ಒಂದೇ ಹಾಸಿಗೆಯಲ್ಲಿ ಮಲಗಿಯೂ ಅವಳನ್ನು ಮುಟ್ಟಿರಲಿಲ್ಲ. ಕಾರಣ ಗೊತ್ತಿದ್ದೂ ರಾತ್ರಿಯಿಡೀ ಅತ್ತವಳಂತೆ ಕಣ್ಣುಗಳನ್ನು ಕೆಂಪಗೆ ಊದಿಸಿಕೊಂಡೇ ಏಳುತ್ತಿದ್ದಳು. ಅವಳನ್ನು ಮೈದಡವಿ ಸಂತೈಯಿಸುವ ಹಾಗೆ ಏನಾದರೂ ಮಾತನಾಡಬೇಕೆನ್ನಿಸಿದರೂ ಏನೊಂದೂ ಸೂಚಿಸದೇ ಮನಸ್ಸು ಸುನ್ನವಾಗುತ್ತಿತ್ತು. ಸಾತಕ್ಕ ಆಸ್ಪತ್ರೆಯಲ್ಲಿದ್ದಾಗ ಕೂಡ ತನ್ನೊಡನೆ ಓಡಾಡುತ್ತಿದ್ದಾಗ ಹೆಚ್ಚಾಗಿ ಮಾತನಾಡಿಸಿದ್ದು ನೆನಪಿಲ್ಲ. ಒಂದು ದಿನವಂತೂ “ಅವಳು ಕುರೂಪಿಯಾದ ಮುದುಕಿಯಾಗಿರದಿದ್ದರೆ ಅವಳು ನಿಮ್ಮ ಚಿಕ್ಕಂದಿನ ಪ್ರೇಯಸಿಯೆಂದು ಸಂಶಯಪಡುತ್ತಿದ್ದೆ,” ಎಂದು ಸಿಟ್ಟು ವ್ಯಕ್ತಪಡಿಸಿದಳು….ಸಾತಕ್ಕನ ಬಗ್ಗೆ ವೀಣಾಗೆ ಅನ್ನಿಸಿದ ಅಸೂಯೆಯ ನೆನಪಾದಾಗ ರಾಮಚಂದ್ರನಿಗೆ ನಗು ಬಂತು. ಬಚ್ಚಲುಮನೆಯಿಂದ ಹೊರಗೆ ಬರುವಾಗ ಫಕ್ಕನೆ ಎಂಬಂತೆ ಹೊಳೆದುಬಿಟ್ಟಿತು : ವಾಸು ತನ್ನೊಡನೆ ವರ್ತಿಸುವಾಗ ಪ್ರಕಟಿಸುತ್ತಿದ್ದ ಸಲಿಗೆಯ ಕಾರಣ ಬಹುಶಃ ತನಗೂ ವೀಣಾಗೂ ಇದ್ದ ಸಂಬಂಧ ಗೊತ್ತಾದದ್ದು ಎಂದು. ಸೂಳೇಮಗನೇ ಎಂದುಕೊಂಡ.

ಉಪಾಹಾರಕ್ಕೆ ಕೂತಾಗ ವಾಸೂನೊಡನೆ ಸಲುಗೆಯಿಂದಲೇ ಮಾತನಾದಬೇಕೆಂದು ಬಯಸಿದರೆ ವಾಸು ಒಮ್ಮಿಂದೊಮ್ಮೆಲೇ ತನ್ನ ಮೊದಲಿನ ನಡವಳಿಕೆಯ ರೀತಿ ಹಿಂತಿರುಗಿದಂತಿತ್ತು. ಇವನಿಗೇನಾಯಿತಪ್ಪ ಎಂದುಕೊಂಡ. ವೀಣಾಳ ಬಗ್ಗೆ ಮಾತು ತೆಗೆದಾಗ ಅರ್ಧಕ್ಕೇ ತಡೆದದ್ದಕ್ಕೆ ಕೆಡುಕೆನಿಸಿರಬೇಕು. ಇಲ್ಲ, ತನ್ನ ನಡತೆಯ ಬಗ್ಗೆ ತನಗೇ ಹೆದರಿಕೆಯಾಗಿರಬೇಕು….ರಾಮಚಂದ್ರ ಕೂಡಲೇ ಮಾತನಾಡಿಸುವ ಗೋಜಿಗೆ ಹೋಗದೇ ನಾಸ್ತಾ ಮುಗಿಸಿ ಓದುವ ಕೋಣೆಗೆ ಹೋಗಬೇಕು ಎನ್ನುವಷ್ಟರಲ್ಲಿ ವಾಸು ಬಾಗಿಲಲ್ಲಿ ಪ್ರಕಟವಾಗಿ, “ರಾಯರೇ,” ಎಂದ, ದುಗುಡ ತುಂಬಿದ ದನಿಯಲ್ಲಿ. “ನಿಮ್ಮ ಊರಿನ ಆ ನಾಗಪ್ಪ ಎಂತಹ ಹುಡುಗ?” ಯಾವ ನಾಗಪ್ಪ ಎಂದು ಗೊತ್ತಾಗದೇ ರಾಮಚಂದ್ರ ತಬ್ಬಿಬ್ಬಾದದ್ದನ್ನು ನೋಡಿ ತಾನು ಕೇಳಿದ ಪ್ರಶ್ನೆಯನ್ನು ಸ್ಪಷ್ಟಪಡಿಸುತ್ತ, “ಈಗ ನಿಮ್ಮ ಕತೆಯಲ್ಲಿ ನನ್ನನ್ನು ನಾಗಪ್ಪನನ್ನಾಗಿ ಮಾಡಿದ್ದೆನೆ ಎಂದಿದ್ದಿರಲ್ಲ-ಆ ನಾಗಪ್ಪ. ನಿಮಗೆ ನನ್ನ ಬಗ್ಗೆ ಏನೂ ಗೊತ್ತಿಲ್ಲ ರಾಯರೇ,” ಎಂದು ತಡೆದ. ಕೆಲ ಹೊತ್ತಿನ ಮೇಲೆ ಅದೇ ಗಾಂಭೀರ್ಯದಿಂದ “ನನ್ನ ಅಕ್ಕ ತುಂಬ ಒಳ್ಳೆಯವಳು. ಅವಳೊಬ್ಬಳೇ ನನ್ನನ್ನು ಅಕ್ಕರೆ ಮಾಡುತ್ತಿದ್ದುದು ನಮ್ಮ ಮನೆಯಲ್ಲಿ. ಅವಳ ಬಗ್ಗೆ…ಇಲ್ಲಿ ಬಂದಿದ್ದರಲ್ಲ ಅವರಿಗೆಲ್ಲ ಹೇಳಿದ್ದೇನೆ ಆ ಹೊತ್ತು. ಅಕ್ಕನನ್ನೇ ನಿಮ್ಮ ಕತೆಯಲ್ಲಿ ಹಾಕಿ” ಎಂದ. ಚೋಟುದ್ದದ ಈ ವಾಸುವಿನಲ್ಲೂ ಮಾತಿನಲ್ಲಿ ಪ್ರಕಟವಾಗಲು ಹಾತೊರೆಯುವ ವಿಶ್ವವೊಂದು ಅಡಗಿದ್ದು ಲಕ್ಷ್ಯಕ್ಕೆ ಬಂದು ಅಪ್ರತಿಭನಾದ. ಹಾಗೂ “ಆಗಲಪ್ಪಾ, ಒಂದು ದಿನ ನೀನೇ ಎಲ್ಲ ಹೇಳು : ಬರೆಯುತ್ತೇನೆ ಆಗದೇ?” ಎಂದು ಭರವಸೆಯಿತ್ತ. ವಾಸು ಖುಷಿಯಿಂದ ಹಲ್ಲು ತೋರಿಸಿ ನಕ್ಕ.

ಹೆಬ್ಬಾಗಿಲ ಮೇಲೆ ಯಾರೋ ಬಡಿದ ಸದ್ದು ಕೇಳಿಸಿ, ಬಾಗಿಲ ಗಂಟೆಯಿದ್ದಾಗಲೂ ಹೀಗೆ ಕದ ಬಡಿಯುವವ ಮಗ್ಗಲು ಮನೆಯ ಪಾರಸಿ ಗೃಹಸ್ಥ ನೊಶೀರ್ ಖಂಬಾಟಾ ಅಲ್ಲದೇ ಬೇರೆ ಯಾರೂ ಅಲ್ಲ ಎಂಬ ಭರವಸೆಯಿಂದ ಲಗುಬಗೆಯಿಂದ ಕದ ತೆರೆದು. “ಬಾ ಬಾ ನೊಶೀರ್-ಬಾ” ಎಂದು ತನಗೇ ಅರ್ಥವಾಗಿರದ ಖುಷಿಯಿಂದ ನೋಶೀರನನ್ನು ಬರಮಾಡಿಕೊಂಡು ಡ್ರಾಯಿಂಗ್ ರೂಮಿಗೆ ಕರೆದೊಯ್ಯುತ್ತ ವಾಸೂವಿಗೆ ಇನ್ನೆರಡು ಕಪ್ಪು ಚಹ ತರಲಿಕ್ಕೆ ಹೇಳಿದ. “ಇಲ್ಲೇ ಬಾಲ್ಕನಿಯಲ್ಲಿ ಕೂಡ್ರೋಣ. ಇವತ್ತು ಸಮುದ್ರದ ನೀರು ಎಳೆಬಿಸಿಲಲ್ಲಿ ಎಷ್ಟೊಂದು ಭವ್ಯವಾಗಿದೆ ನೋಡು,” ಎನ್ನುತ್ತ ನೋಶೀರನಿಗೆ ಒಂದು ಡೆಕ್‌ಚೇರ್ ಕೊಡುತ್ತ ತಾನೂ ಒಂದರಲ್ಲಿ ಕುಳಿತುಕೊಂಡ. ರಾಮಚಂದ್ರನ ಈ ಉತ್ಸಾಹ, ಗೆಲುವು ನೋಶೀರನನ್ನು ಬಲವಾಗಿ ತಟ್ಟಿದುವು : “ನಿನ್ನೆ ಇಡೀ ರಾತ್ರಿ ನಿನ್ನೆ ಕೋಣೆಯಲ್ಲಿ ದೀಪ ಉರಿದಂತಿತ್ತು. ನಾನು ರಾತ್ರಿ ಎಚ್ಚರವಾಗಿ ಬಾತ್‌ರೂಮಿಗೆ ಹೋದ ಎರಡು ಸಲವೂ ಕಂಡೆ. ಅಂತೂ ಬಹಳ ದಿನಗಳ ನಂತರ ದೊಡ್ಡ ಕೃತಿಯೊಂದು ಹುಟ್ಟಿರಬೇಕು,” ಎಂದ ನೋಶೋರ್ ಸಂತೋಷ ವ್ಯಕ್ತಪಡಿಸಿದ.

“ನನ್ನ ಮಸ್ತೆರ್ಪಿ‌ಎಚೆ ನೋಶೀರ್, ನನ್ನ ಮಸ್ತೆರ್ಪಿ‌ಎಚೆ ! ನಿನಗೆ ಕನ್ನಡ ಅರ್ಥವಾಗುತ್ತಿದ್ದರೆ ಇಡೀ ಕಥೆಯನ್ನು ಓದಿ ತೋರಿಸುತ್ತಿದ್ದೆ. ರಾತ್ರಿಯ ಊಟ ಮುಗಿಸಿದ್ದೇ ಬರೆಯಲು ಕೂತವನು ಬೆಳಿಗ್ಗೆ ಎಷ್ಟು ಗಂಟೆಗೆ ಮಲಗಿದೆನೋ ನೆನಪಿಲ್ಲ ನೋಡು. ಹಿಂದೆಂದೂ ಇಡೀ ಕತೆಯನ್ನು ಹೀಗೆ ಒಂದೇ ಪಟ್ಟಿಗೆ ಕೂತು ಬರೆದು ಮುಗಿಸಿರಲಿಲ್ಲ. ಇದೊಂದು ತೀರ ಹೊಸ ಅನುಭವ. ನಿನ್ನೆ ಸಂಜೆ ಹೀಗೆ ಈ ಸಮುದ್ರವನ್ನು ನೋಡುತ್ತ ಕೂತಿದ್ದೆ. ನೀನಿದನ್ನು ನಂಬಬೇಕು ನೋಶೀರ್. ನೋಡುತ್ತ ಕೂತಿರುವಾಗ ತೆರೆಗಳು ಎದ್ದೆದ್ದು ಬೀಳುತ್ತಿದ್ದ ರೀತಿಗೆ ಮನಸ್ಸಿಗೆ ಒಂದು ಬಗೆಯ ಗುಂಗು ಹಿಡಿದ ಹಾಗೆ : ನಾನೇ ಸಮುದ್ರ ಆದ ಹಾಗೆ. ಆಳದಲ್ಲಿದ್ದದ್ದು ತಾನೇ ಎದ್ದು ಬಂದ ಹಾಗೆ…”
ವಾಸು ಚಹದ ಕಪ್ಪುಗಲನ್ನು ಕೈಗಿತ್ತಾಗ ರಾಮಚಂದ್ರನ ಮನಸ್ಸು ವಾಸ್ತವಕ್ಕೆ ಇಳಿದಿತ್ತು. ಇವನು ಎಂದಿನ ರಾಮಚಂದ್ರನಲ್ಲ ಎಂದನ್ನಿಸಿತು ನೋಶೀರನಿಗೆ, ಕೌತುಕ, ಕುತೂಹಲ ತುಂಬಿದ ದೃಷ್ಟಿಯಿಂದ ಅವನನ್ನು ನೋಡುತ್ತ, “ಕತೆ ಯಾತರ ಬಗ್ಗೆ ಇದೆ?” ಎಂದು ಕೇಳಿದ.

ಬಿಸಿಬಿಸಿ ಚಹದ ಗುಟುಕೊಂದನ್ನು ಸೀಪುತ್ತ, “ಉತ್ತರ ಕೊಡುವುದು ಕಷ್ಟ…ಮೊನ್ನೆ ನಮ್ಮ ಮನೆಗೆ ಬಂದ ಒಬ್ಬ ಮುದುಕಿ ಸತ್ತಳಲ್ಲ…ಅವಳ ಸಾವು, ಈ ಸಮುದ್ರ ಕೂಡಿ ಏನೋ ವಿಚಿತ್ರ ಪರಿಣಾಮ ಮಾಡಿರಬೇಕು ಕತೆ ಅವಳ ಬಗ್ಗೆಯೇ ಇದೆ. ಈ ಸಮುದ್ರದ ಬಗ್ಗೆಯೂ ಇದೆ. ಹಾಗೆ ನೋಡಿದರೆ ಅದು ನಾನು ಬರೆದದ್ದೇ ಅಲ್ಲವೆನಿಸುತ್ತದೆ….ವಿಚಿತ್ರ ನೋಡು : ನೀನು ಇಲ್ಲಿ ಬಂದಾಗ ಇಡೀ ಕತೆ ನಿಚ್ಚಳವಾಗಿ ನೆನಪಿದ್ದ ಭಾವನೆ. ನಿನಗದನ್ನು ಹೇಳಬೇಕೆಂದು ಆತುರನಾಗಿದ್ದೆ ಕೂಡ. ಆದರೆ ಈಗ ಅದೆಲ್ಲ ಮರೆತೇಹೋದಂತಿದೆ. ಆಶ್ಚರ್ಯ. ಈಗ ನೆನಪಿನಲ್ಲಿದ್ದುವು-ಎರಡೇ: ತೀರ ಸದ್ಯದ ಸಾತಕ್ಕನ ಸಾವು ಹಾಗೂ ಅನಾದಿಯಾದ ಈ ಸಮುದ್ರದ ನೀರು…”

ನೋಶೀರನಿಗೆ ಇದಾವುದೂ ಅರ್ಥವಾಗಲಿಲ್ಲ. ಎಲ್ಲ ಲೇಖಕರೇ ಹೀಗಿರಬೇಕೆಂದುಕೊಂಡು ಚಹ ಕುಡಿಯುತ್ತ ಮುಗುಳುನಕ್ಕ. ರಾಮಚಂದ್ರ ಅರಿವಿಲ್ಲದೇನೇ ತಾನೂ ಮುಗುಳುನಕ್ಕ. ಬಾಗಿಲ ಗಂಟೆ ಬಾರಿಸಿದ್ದು ಕೇಳಿ ವಾಸು ಹೋಗಿ ಕದ ತೆರೆದ. ನೋಶೀರನ ಮಗಳು ಟೆಲಿಫೋನ್ ಕರೆ ಬಂದಿದೆಯೆಂದು ತಿಳಿಸಲು ಬಂದಿದ್ದಳು. ನೋಶೀರ್ ಈ ಕರೆಯ ಹಾದಿಯನ್ನೇ ಕಾಯುತ್ತಿದ್ದವನ ಹಾಗೆ, “ಆಮೇಲೆ ಮತ್ತೆ ಬರುತ್ತೇನೆ. ಬರೆದದ್ದನ್ನು ಇನ್ನೊಮ್ಮೆ ಓದಿ ನೋಡು. ಎಂದಿನ ಹಾಗೇ ನಿನ್ನ ಕತೆಯನ್ನು ಕೇಳಲು ಉತ್ಸುಕನಾಗಿದ್ದೇನೆ” ಎಂದು ಅವನಿಂದ ಬೀಳ್ಕೊಂಡು ಮನೆಗೆ ನಡೆದ.

ನೋಶೀರ್ ಹೊರಟುಹೋದಮೇಲೆ ಕುರ್ಚಿಯಲ್ಲಿ ಕುಳಿತಲ್ಲೇ ಇದೀಗ, ಒಂದು ಕ್ಷಣದ ಮೊದಲಷ್ಟೇ ಅನ್ನಿಸುತ್ತಿದ್ದ ಗೆಲುವು ಮಾಯವಾಗಹತ್ತಿ ಅದರ ಜಾಗದಲ್ಲಿ ಅರ್ಥವಾಗದ, ನಿರಾಕಾರವಾದ ಕಾತರ ನೆಲೆಸಹತ್ತಿದೆ ಎಂಬಂತಹ ಭಾವನೆಯಿಂದ ಎದೆಯ ಗುಂಡಿಯಲ್ಲಿ ಒದ್ದೆತನ ಅನುಭವವಾಗಿ ಅಸ್ವಸ್ಥಗೊಂಡ, ನಿನ್ನೆ ರಾತ್ರಿ ಬರೆದದ್ದನ್ನು ಓದಿ ನೋಡಬೇಕೆಂದು ಕೋಣೆಗೆ ಹೋಗಿ ವಹಿಯನ್ನು ತೆರೆಯಲು ಹೋದರೆ ತನಗನ್ನಿಸುತ್ತಿದ್ದ ಭಯದ ಮೂಲಸ್ಥಾನವೇ ಅಲ್ಲಿತ್ತೆಂಬಂತೆ ವಹಿಗೆ ಕೈಹಚ್ಚುವ ಧೈರ್ಯವಾಗಲೇ ಇಲ್ಲ. ಕುರ್ಚಿಯಿಂದ ಎದ್ದು ಹೋಗಿ ಅಡ್ಡ ಮಾಡಿದ ಕದ ತೆರೆದು ‘ವಾಸೂ ಬಾ ಕತೆ ಓದಿ ತೋರಿಸುತ್ತೇನೆಂ’ದು, ಅವನನ್ನು ಕರೆದು ಮುಂದೆ ಕೂಡ್ರಿಸಿ ವಹಿಯನ್ನು ತೆರೆದ. ತೆರೆದರೆ ತನ್ನ ಕಣ್ಣುಗಳನ್ನು ತಾನೇ ನಂಬದಾದ : ನೂರಕ್ಕೂ ಮಿಕ್ಕಿದ ಪುಟಗಳಲ್ಲಿ ತೋಡಿಕೊಂಡದ್ದೆಲ್ಲ ಬರಿಯ ಗೀಚು ಗೀಚಾಗಿತ್ತೇ ಹೊರತು ಓದಲು ಶಕ್ಯವಾದ ಅಕ್ಷರಗಳಾಗಿ ಮೂಡಿರಲೇ ಇಲ್ಲ! ಆದ ಆಘಾತದಿಂದ ತತ್ತರಿಸಿ ಬೆವರಹತ್ತಿದ. ಮೊದಮೊದಲು ಉತ್ಸುಕತೆಯಿಂದ, ಆಮೇಲೆ ಒಂದು ಬಗೆಯ ಅಸಹನೆಯಿಂದ ಕೊನೆಗೆ ಇವೆಲ್ಲವುಗಳನ್ನೂ ಮೀರಿ ನಿಂತ ಕಾತರತೆಯಿಂದ ಅವಲೋಕಿಸುತ್ತಿದ್ದ ವಾಸು ಇವನಲ್ಲಿ ಆಗ ನಡೆಯುತ್ತಿದ್ದ ಅತಿಮಾನುಷ ಎಂಬಂತಹ ಪ್ರಕ್ರಿಯೆಗೆ ಸಂಪೂರ್ಣವಾಗಿ ಪ್ರತಿಸ್ಪಂದಿಯಾಗಿದ್ದವನ ಹಾಗೆ ಹೆದರಿ ಭಡಕ್ಕನೆ ಎದ್ದವನೇ ಚಕಾರ ಶಬ್ದವನ್ನೂ ಕೂಡ ಆಡದೇನೇ ಹೊರಗೆ ನಡದೇ ಬಿಟ್ಟ. ಆದ ಆಘಾತದಿಂದ ಚೇತರಿಸಿಕೊಳ್ಳಲು ರಾಮಚಂದ್ರನಿಗೆ ತುಂಬ ಸಮಯ ಹಿಡಿಯಿತು. ಆಮೇಲೆ ಒಂದೊಂದೇ ಪುಟವನ್ನು ತಿರುವು ಹಾಕುತ್ತ ಹೋದ ಹಾಗೆ ಯಾವುದೋ ಶಿಲಾಯುಗದ, ನಮಗೆ ಅರ್ಥವಾಗದ್ಗುಪ್ತಲಿಪಿಯಲ್ಲಿ ಬರೆದಂತಿದ್ದ ಗೀಚುಗೀಚಾದ ಬರೆವಣಿಗೆಯಲ್ಲಿ ಕೂಡ ಅಲ್ಲಿ ಇಲ್ಲಿ ಓದಲು ಸಾಧ್ಯವಾಗುವಂತಹ ಅರ್ಥವಾಗಬಲ್ಲಂತಹ ಕೆಲವು ಅಕ್ಷರಗಳಿದ್ದದ್ದು ಲಕ್ಷ್ಯಕ್ಕೆ ಬಂದು, ಗಾಬರಿ ತುಂಬಿದ ಆತುರದಲ್ಲಿ ಓದಿಕೊಂಡಾಗ ಪ್ರಜ್ಞೆಗೆ ದಕ್ಕಿದಿಷ್ಟು :

ಪುಟ ೧ :
“…ಇಂದು ನನ್ನ ಪಾರ್ವತಿಯ ‘ಶ್ರಾದ್ಧ’ ದಿನ, ಅವಳು ಸತ್ತು ಇಂದಿಗೆ ಇಪ್ಪತ್ತೈದು ವರ್ಷಗಳು…ನಂಬುವುದು ಕಷ್ಟ…”
ಪುಟ ೩ :
“…ಪಾರ್ವತಿಗೆ ಮೆಚ್ಚಿಗೆಯಾದೀತೆಂದು ಬಗೆದು ಮುಂಬಾದೇವಿಗೆ ಹೋಗಿ ಅವಳ ಹೆಸರಿನಲ್ಲಿ ಒಂದು ಪೂಜೆ ಸಲ್ಲಿಸಿ ಬಂದೆ…”
ಪುಟ ೧೦ :
“…ಮರೆಯಲಾಗದ ಈ ದುರಂತದಲ್ಲಿ ಆರು ಪಾತ್ರಗಳಿವೆ : ಅಪ್ಪ, ಅಮ್ಮ, ಪಾರ್ವತಿ, ನಾನು ಮತ್ತು ಒಂದು ಬಾವಿ ಹಾಗೂ ನಾನು ಕೊನೆಗೂ ಬರೆಯದೆ ಉಳಿದ ಒಂದು ಪತ್ರ…”
ಪುಟ ೩೦ :
“…ಒಂದು ತಿಂಗಳ ಹಿಂದೆ ಊರಿನಿಂದ ಕಾಶಿಯಾತ್ರೆಗೆ ಹೊರಟು ಸಾತಕ್ಕ ನಮ್ಮಲ್ಲಿಗೆ ಬಂದಿದ್ದಳು… ಇಂತಹ ಮುದಿ ವಯಸ್ಸಿನಲ್ಲೂ ಅವಳನ್ನು ಇಂತಹ ದೂರದ ಪ್ರವಾಸಕ್ಕೆ ಕಳುಹಿಸುವ ಧೈರ್ಯವನ್ನು ಹೇಗೆ ಮಾಡಿದರೋ…ಕಾಶಿಯಿಂದ ಹಿಂತಿರುಗಿ ಬರುವಾಗ ದಾರಿಯಲ್ಲಿ ನ್ಯೂಮೋನಿಯ ಆಗಿ ಕೊನೆಗೆ ಇಲ್ಲಿಯದೇ ಆಸ್ಪತ್ರೆಯೊಂದರಲ್ಲಿ ಸತ್ತಳು… ಧಗಧಗ ಉರಿಯುವ ಅವಳ ಚಿತೆಯನ್ನು ನೋಡುತ್ತಿದ್ದಾಗ… ಏಕೋ ನನ್ನನ್ನು ಗಾಢವಾಗಿ ತಟ್ಟುತ್ತಿದ್ದ ಪ್ರತಿಯೊಂದು ಸಾವಿಗೆ ನಾನೇ ಕಾರಣವೇನೋ ಎನ್ನುವಂತಹ ಭ್ರಮೆಯಾಗುತ್ತದೆ ಇತ್ತಿತ್ತ…”
ಪುಟ ೩೫ :
“…ಸತ್ತವಳು ಸಾತಕ್ಕನಲ್ಲವೆ? ಪಾರ್ನತಕ್ಕನೆಂದೇಕೆ ಹೇಳುತ್ತೀರಿ ಎಂದು ವೀಣಾ ಕೇಳಿದಾಗ ಎದೆ ಧಸ್ ಎಂದಿತು…”
ಪುಟ ೬೬ :
“…ನನ್ನ ಪ್ರೀತಿಯ ಪಾರ್ವತೀ… ನಿನ್ನನ್ನು ಪ್ರೀತಿಸಿ ಮದುವೆಯಾಗುತ್ತೇನೆಂದು ಭರವಸೆ ಕೊಟ್ಟ ಈ ಎಂಟೆದೆಯ ಬಂಟ ನಿನಗೆ ದಿನ ಹೋಗಿವೆ ಎಂದು ತಿಳಿದ ಕ್ಷಣವೇ…ಹೆದರಬೇಡ. ಹೆದರಬೇಡ… ಊರಿಗೆ ಹೋದದ್ದೇ ಅಪ್ಪ-ಅಮ್ಮಂದಿರನ್ನು ಒಪ್ಪಿಸಿ ನಿನಗೆ ಪತ್ರ ಬರೆಯುತ್ತೇನೆ ಇಲ್ಲ ಖುದ್ದು ನಾನೇ ಬಂದು ಕಾಣುತ್ತೇನೆ… ಕೈಮೇಲೆ ಕೈಯಿಟ್ಟು ಭಾಷೆ ಕೊಟ್ಟು ಊರಿಗೆ ಬಂದವನು…ಎಂಟೆಂಟು ದಿನಕ್ಕೆ ಒಂದಿಲ್ಲ ಒಂದು ನೆಪ ಮಾಡಿ ನಿನ್ನ ಊರಿಗೆ ಬರುತ್ತಿದ್ದವನು ಒಮ್ಮೊಂದೊಮ್ಮೆಲೇ ತನ್ನ ಪ್ರೇಮಸಂಚಾರವನ್ನು ನಿಲ್ಲಿಸಿ ಆಯತ ವೇಳೆಗೆ ಪುಸ್ತಕ ಓದುವ ಹುಚ್ಚು ಹಿಡಿಸಿಕೊಂಡು ಮೂಲೆಗುಂಪಾದೆನಲ್ಲವೇ…”
ಪುಟ ೮೦ :
“…ಮುದುಕನಾಗುತ್ತಿದ್ದೇನೆ ಪಾರ್ವತೀ…ತಲೆಯ ಕೂದಲು, ಉದ್ದವಾಗಿ ಬಿಟ್ಟ ಗಡ್ಡ ಮೀಸೆ ಎಲ್ಲ ಬೆಳ್ಳಗಾಗಹತ್ತಿವೆ…”
ಪುಟ ೮೨ :
“ಹಳ್ಳಿಯಲ್ಲೀಗ ಯಾರೂ ಇಲ್ಲ. ಅಪ್ಪ-ಅಮ್ಮ ಎಂದೋ ಸತ್ತಿದ್ದಾರೆ…ಹೊಲ ಮನೆ ಎಲ್ಲ ಮಾರಿ ಮುಂಬಯಿಯಲ್ಲಿಯ ಪ್ರಿಂಟಿಂಗ್ ಪ್ರೆಸ್ ಹಾಕಿದ್ದೇನೆ…ಹಣ ದಿನದಿನಕ್ಕೆ ಮರಿಹಾಕುತ್ತ ಬ್ಯಾಂಕಿನಲ್ಲಿ ಬೆಳೆಯಹತ್ತಿದೆ. ಹಣ ಹೇಗೆ ಖರ್ಚು ಮಾಡಬೇಕೆಂದು ಗೊತ್ತಾಗದೇ ಬಂಗಲೆಯಂತಹ ದೊಡ್ಡ ಮನೆ ಕಟ್ಟಿಸಿದ್ದೇನೆ…ಜಿಲ್ಲೆಯ ಕಾಲೇಜಿನಲ್ಲಿ ಪಾರ್ವತಿಯ ಹೆಸರಿನ ಹಾಲ್ ಕಟ್ಟಿಸಿದ್ದೇನೆ. ಇಲ್ಲಿಯ ಹಲವು ಮಹಿಳಾ ಸಂಸ್ಥೆಗಳಿಗೆ ಎಷ್ಟೆಲ್ಲ ಹಣ ದೇಣಿಗೆ ಕೊಟ್ಟಿದ್ದೇನೆ! ಪಾರ್ವತಿ ಯಾರೆಂಬುದು ಮಾತ್ರ ಯಾರಿಗೂ ಗೊತ್ತಿಲ್ಲ….”
ಪುಟ ೮೭ :
“…ಕತೆ ಬರೆಯುವುದನ್ನು ಎಂದೋ ನಿಲ್ಲಿಸಿದ್ದೇನೆ….ಬರೆದರೂ ಪ್ರಕಟಿಸುವುದನ್ನು….ಬರೆಯಲು ಕೂತರೆ ನನಗರಿವು ಇಲ್ಲದೇನೆ ಪಾರ್ವತಿಯ ಸಾವಿನ ನೆರಳೇ ಎದ್ದು ಬರುತ್ತದೆ…”
ಪುಟ ೮೯ :
“…ಬದುಕಿನ ಅರ್ಥ ಹುಡುಕುವುದೇ ತಪ್ಪೇನೋ, ಇದ್ದರೆ ತಾನೇ ಹುಡುಕುವುದು?….ಅದು ನಾವು ಕೊಟ್ಟದ್ದು ಹುಟ್ಟಿಸಿದ್ದು…ನೀನು ಬಂದದ್ದೇ ನನ್ನ ಬದುಕಿಗೆ ಅರ್ಥ ಬಂದಿತ್ತು…ನಿನ್ನೊಡನೆಯೇ ಹೋಗಿಬಿಟ್ಟಿದೆ…..ನಿನಗೆ ನನ್ನಿಂದಾದ ಘೋರ ಅನ್ಯಾಯವನ್ನು ಧೈರ್ಯದಿಂದ ಒಪ್ಪಿಕೊಳ್ಳುವ ಬದಲು ನ್ಯಾಯ-ಅನ್ಯಾಯ: ಒಳಿತು-ಕೆಡಕು: ಪಾಪ-ಪುಣ್ಯ ಇಂಥ ಬೇಧಗಳಿಗೆ ಅರ್ಥವೇ ಇಲ್ಲ ಎನ್ನುವಂತಿದೆ… ಅಂಥ ತಾರತಮ್ಯಗಳನ್ನು ನಿರಾಕರಿಸುವಂತಿದೆ ನಾನು ಇಂದು ಬದುಕುವ ರೀತಿ….ಇದೆಲ್ಲ ಅಪ್ಪ-ಅಮ್ಮರ ಗೊಡ್ಡು ಬ್ರಾಹ್ಮಣ ಮಡಿವಂತಿಕೆಯ ವಿರುದ್ಧ ನಾನೆಬ್ಬಿಸಿದ ಬಂಡಾಯವಾಗಿರಬಹುದೇ? ನನ್ನ ಸ್ವಭಾವಕ್ಕೆ ಮನೋಧರ್ಮಕ್ಕೆ ಒಗ್ಗುವಂತಹುದಲ್ಲವೆಂದು ಗೊತ್ತಿದ್ದೂ ಕ್ರಾಂತಿಕಾರಿ ರಾಜಕೀಯ ಪಕ್ಷವೊಂದನ್ನು ಸೇರಬೇಕೆಂದಿದ್ದೇನೆ…”
ಪುಟ ೯೫ :
“ಸ್ವತಃ ಕಾಮುಕನೂ ದುಷ್ಟನೂ ಆಗಿದ್ದ ಅಪ್ಪ ನನ್ನ-ನಿನ್ನ ಸಂಬಂಧದ ಸುಳಿವು ಹತ್ತಿದ್ದೇ ನಿನ್ ನಿನ್ ನಿನ್… ಸಿಗಿದು ತೋರಣ ಕಟ್ಟುತ್ತೇನೆಂದು ಜಮದಗ್ನಿಯ ಅವತಾರನಾಗಿದ್ದನಲ್ಲ…ನಾನು ಹುಟ್ಟಿದ್ದೆ ಅಪ್ಪನಿಗೆ ವಿರಕ್ತಿ ಬಂದು ತೀರ್ಥಯಾತ್ರೆಗೆ ಹೋರಟುಹೋಗಿದ್ದರೆ ಅಥವಾ ಶೂದ್ರಳಾದ ನಿನ್ನೊಡನೆ ಮದುವೆಯಾದರೆ ಬಾವಿಯಲ್ಲಿ ಹಾರಿ ಜೀವ ತೆಗೆದುಕೊಳ್ಳುತ್ತೇನೆಂದು ಚಂಡಿಯ ಅವತಾರವಾದ ಅಮ್ಮ ನಾನು ಹುಟ್ಟುವಾಗಲೇ ಸತ್ತುಹೋಗಿದ್ದರೆ…ಅಥವಾ ಜಾನಪದ ಕತೆಗಳಲ್ಲಿ ಕುದುರೆ ಸವಾರನಾಗಿ ಬರುವ ಪೊತ್ತೆ ಮೀಸೆಯ ಸರದಾರನ ಹಾಗೆ ನಾನೇ ಎದೆ ಗಟ್ಟಿಮಾಡಿ ನಿನಗೆ ಇಂತಿಂಥಲ್ಲಿ ಬಂದು ನಿಲ್ಲು ಎಂದು ಗುಪ್ತ ಸಂದೇಶ ಕಳಿಸಿ… ನಿನ್ನೊಡನೆ ಓಡಿಹೋಗಿದ್ದರೆ…. ಅಥವಾ…ನಿನ್ನ ಬಸಿರಿಗೆ ಕಾರಣನಾದ ನಾನೇ ಷಂಡನಾಗಿದ್ದರೆ… ದೇವರೇ… ನನ್ನ ಪಾಪದ ಪಿಂಡವನ್ನು ಗರ್ಭದಲ್ಲೇ ಹೊತ್ತು ಬಾವಿಯಲ್ಲಿ ಹಾರಿ ಪಾರ್ವತಿ ಜೀವ ತೆಗೆದುಕೊಂಡ ಕರಾಳ ಸತ್ಯಕ್ಕೆ ಕಣ್ಣು ಮುಚ್ಚಲು ಎಷ್ಟೊಂದು ಒಳದಾರಿಗಳು…”
ಪುಟ ೯೬ :
“… ನನ್ನ ಕೈಯಿಂದ ನಡೆದ ಈ ಶೂದ್ರಹತ್ಯೆಗೆ ಈಗ ಎಷ್ಟು ಕಾಲವಾಯಿತು? ಸಾವಿರ ವರ್ಷಗಳೇ? ಇಲ್ಲ, ಸಾವಿರ ನಿಮಿಷಗಳೇ?….ಕಾಲಪ್ರಜ್ಞೆಯೇ ಮಸುಕಾಗುತ್ತಿದೆ…”
ಪುಟ: …
ಮುಂದಿನ ಹತ್ತು ಹದಿನೈದು ಪುಟಗಳ ಮೇಲೂ ಓದಲು ಶಕ್ಯವಾಗುವಂತಹ ಕೆಲವು ಅಕ್ಷರಗಳಿದ್ದವು. ಆದರೆ ರಾಮಚಂದ್ರನಿಗೆ ಅವುಗಳನ್ನು ಓದುವುದಾಗಲಿಲ್ಲ : ಕಣ್ಣುಗಳು ಆಗಲೇ ಹನಿಗೂಡಹತ್ತಿ ದೃಷ್ಟಿ ಮಂಜಾಗಿತ್ತು. ವಹಿಯನ್ನು ಮುಚ್ಚಿಟ್ಟು ಅತ್ತುಬಿಡಬೇಕು ಎನ್ನುವ ಬಲವಾದ ಬಯಕೆಯನ್ನು ಪ್ರಯತ್ನಪೂರ್ವಕವಾಗಿ ಹತ್ತಿಕ್ಕಿ ಕೈಗಳೆರಡನ್ನೂ ಗಟ್ಟಿಯಾಗಿ ಎದೆಗವಚಿ ಕುಳಿತುಬಿಟ್ಟ : ಇಲ್ಲ ಇಲ್ಲ ಇಲ್ಲ ಪಾರ್ವತೀ, ನನ್ನ-ನಿನ್ನ ನಿಜವಾದ ಸಂಬಂಧವನ್ನು, ನನ್ನ ಕೈಯಿಂದಾದ ಕ್ರೂರ ಅಪರಾಧವನ್ನು ನೇರವಾದ, ಸ್ಪಷ್ಟವಾದ ಮಾತುಗಳಲ್ಲಿ ಎಲ್ಲರಿಗೂ ಜಾಹೀರುಪಡಿಸುವ ಎದೆಗಾರಿಕೆ ಇನ್ನೂ ಹುಟ್ಟಿಲ್ಲ ಈ ಹೇಡಿಗೆ…ಅಂತಹ ಎದೆಗಾರಿಕೆ ಹುಟ್ಟುವವರೆಗೂ ಇಂತಹ ಹೊಸ ಹೊಸ ಆಟಗಳನ್ನು ಹೂಡುತ್ತೇನೆ. ಆಟ ಆಡುವವರೆಗೂ ಇದು ಆಟ ಎನ್ನುವುದು ನನಗೇ ಗೊತ್ತಾಗದ ಹಾಗೆ, ನನ್ನನ್ನು ನಾನೇ ವಂಚಿಸುವ ಹಾಗೆ ಹೊಸ ಹೊಸ ಉಪಾಯಗಳನ್ನು ಹುಡುಕುತ್ತೇನೆ. ಕಾಲಕಾಲಕ್ಕೆ ನಿನ್ನ ಸಾವಿನ ದುಃಖವನ್ನು ಮೊತ್ತಮೊದಲು ಅನುಭವಿಸಿದಾಗಿನ ಉತ್ಕಟತೆಯಿಂದಲೇ ತಿರುತಿರುಗಿ ಅನುಭವಿಸುವ ಹಾಗೆ ಇಂತಹ ಹೊಸ ಹೊಸ ತಂತ್ರಗಳನ್ನು ಯೋಜಿಸುತ್ತೇನೆ. ಬೆನ್ನ ಹುರಿಯಲ್ಲೆ ಬೇರು ಬಿಟ್ಟ ಈ ಪಾಪಪ್ರಜ್ಞೆಯಿಂದ ನವೆಯುತ್ತ-ಕೆಂಪು ಜ್ವಾಲೆಯ ನಾಲಗೆಗಳಿಂದ ಕಾಲ ದಿಕ್ಕುಗಳನ್ನು ನೆಕ್ಕುತ್ತ ಉರಿದ ನಿನ್ನ ಚಿತೆಯಿಂದಲೇ ಎತ್ತಿಕೊಂಡಂತಿದ್ದ ಈ ಸುಡುವ ಕೆಂಡಗಳನ್ನು ತಲೆಯಲ್ಲಿ ಹೊತ್ತು ಮೂಲೆಮೂಲೆಗಳಲ್ಲಿ ತಂಪನ್ನರಸುತ್ತ ಅಲೆಯುತ್ತಿರುತ್ತೇನೆ…
ಸಾವಿರ ವರ್ಷಗಳ ಬಿಗುಮಾನವನ್ನು ಅರೆನಿಮಿಷದಲ್ಲಿ ಕಳಕೊಂಡವನ ಹಾಗೆ ರಾಮಚಂದ್ರ, ಹೊರಗಿನಿಂದ ವಾಸು ಕೇಳಬಹುದೆಂಬುದರ ಪರಿವೆ ಕೂಡ ಮಾಡದೇನೇ ಅಳಹತ್ತಿದ. ಕಿವಿಗಳನ್ನು ಇತ್ತಲೇ ನೆಟ್ಟು ಅಡುಗೆ ಮನೆಯಲ್ಲಿ ಕೂತ ವಾಸು ತನ್ನ ರಾಯರ ಅಳಲು ಎಂದಾದರೂ ಮುಗಿದೀತೆ ಎಂಬ ಆತಂಕದಿಂದ ಕಂಗಾಲಾದ.
*****
೧೯೭೭

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.