ಮತ್ತೆ ಬರೆದ ಕವನಗಳು

ದಿನಾಂಕ ೧, ಜೂನ್ ೧೯೮೯

ಏರ್‌ಬ್ಯಾಗ್ ಹೆಗಲಿಗೇರಿಸಿ ರೈಲಿನಿಂದ ಕೆಳಗಿಳಿದೆ. ಬೆಳಗಿನ ಏಳುಗಂಟೆಯ ಸಡಗರದಲ್ಲಿ ಜಮ್ಮು ತವಿ ನಿಧಾನವಾಗಿ ಕಣ್ಣು ಬಿಡುತ್ತಿತ್ತು. ಚಾಯ್‌ವಾಲಾಗಳು ಗಂಟಲು ಹರಿಯುವಂತೆ ‘ಚಾಯಾ…ಚಾಯಾ…’ ಕೂಗುತ್ತ ಫ್ಲಾಟ್‌ಫಾರಂ ತುಂಬಾ ಓಡಾಡುತ್ತಿದ್ದರು. ಇಲ್ಲಿಂದ ಶ್ರೀನಗರಕ್ಕೆ ಹೋಗಲು ಎಲ್ಲಿ ವಿಚಾರಿಸಲಿ…ಯೋಚಿಸುತ್ತಲೇ ಸುತ್ತಲೂ ನೋಡಿದೆ. ಎದುರಿಗೆ ಕಂಡ ನಲ್ಲಿಯ ಬಳಿಗೆ ಹೋದೆ, ದಿಲ್ಲಿಯಿಂದ ಹೊರಟದ್ದು- ಇಡೀ ರಾತ್ರಿಯ ಪ್ರಯಾಣ ಕಣ್ಣು ತುಂಬಾ ಆಯಾಸವಾಗಿ ಕುಳಿತಿತ್ತು. ತಣ್ಣನೆಯ ನೀರು ಪದೇ ಪದೇ ಮುಖಕ್ಕೆ ಎರಚಿಕೊಂಡೆ. ಸ್ವಲ್ಪ ‘ಫ್ರೆಶ್’ ಆದಂತೆನ್ನಿಸಿ ಟವೆಲ್‌ನಿಂದ ಮುಖ ಒರೆಸುತ್ತಲೇ ಸ್ಟೇಶನ್‌ನಿಂದ ಹೊರಬಿದ್ದೆ. ‘ಇಲ್ಲಿ ಶ್ರೀನಗರಕ್ಕೆ ಹೋಗೊ ಬಸ್ಸುಗಳು ಎಲ್ಲಿ ಸಿಗುತ್ತೆ?’ ಯಾರೊ ಹಾದವನ್ನು ಹಿಡಿದು ಹಿಂದಿಯಲ್ಲಿ ಕೇಳಿದೆ. ‘ ಇಲ್ಲೇ ಸ್ಟೇಶನ್ ಪಕ್ಕ…’ ಅಂದವನು ಲಗುಬಗೆಯಿಂದ ಜೊತೆಗೇ ಬಂದು ಟಿಕೆಟ್ ಕೊಡೋ ಕೌಂಟರ್ ತೋರಿಸಿ ಹೋದ. ಕೌಂಟರ್ ಎದುರೇ ಒಂದಿಷ್ಟು ಬಸ್ಸುಗಳು ‘ಶ್ರೀನಗರ’ದ ಫಲಕ ಅಂಟಿಸಿಕೊಂಡು ನಿಂತಿದ್ದವು. ಟಿಕೆಟ್ ಕೊಡಲು ಇನ್ನೂ ಅರ್ಧ ಗಂಟೆ ಇತ್ತು. ಹೊಟ್ಟೆ ಚುರುಗುಟ್ಟಿತು. ಎದುರಿಗೆ ಕಂಡ ಧಾಬಾಗೆ ನುಗ್ಗಿದೆ. ಬಿಸಿಬಿಸಿ ಚೋಲೆ-ಬಠೂರದ ತಟ್ಟೆ ಹಿಡಿದುಕೊಂಡು ಹೊರಗೆ ಹಾಕಿದ್ದ ತುಕ್ಕು ಬಡಿದ ಕುರ್ಚಿಯ ಮೇಲೆ ಏರ್‌ಬ್ಯಾಗ್ ಒಗೆದು, ಇನ್ನೇನು ತಿನ್ನಬೇಕು….. ಅಷ್ಟರಲ್ಲಿ ‘ಹಲೋ ಮೇಡಂ, ಏನು ನೀವಿಲ್ಲಿ?’ ಅಚ್ಚ ಕನ್ನಡದ ದನಿ!
ಬಾಯಿಗೆ ಹೊರಟ ತುತ್ತು ಹಾಗೆಯೇ ನಿಂತು ಬಿಟ್ಟಿತು. ಸರಕ್ಕನೆ ಹಾಗೆ ತಿರುಗಿದೆ. ಅಜಯ್ ನಿಂತಿದ್ದ. ನಾ ಕೈಯಲ್ಲಿ ಹಿಡಿದ ತುತ್ತನ್ನೂ ಮರೆತು ವಿಚಿತ್ರವಾಗಿ ಅವನನ್ನೇ ನೋಡಿದೆ. ಪ್ರತಿಯಾಗಿ ‘ಹಲೋ’ ಕೂಡಾ ಹೇಳಲಾಗಲಿಲ್ಲ.
‘ನನ್ನನ್ನಿಲ್ಲಿ ನೋಡಿ ಆಶ್ಚರ್ಯ ಆಗ್ತಾ ಇದೆಯಾ? ನಾವು ಕರ್ನಾಟಕದ ಹೊರಗೆ ಭೇಟಿಯಾಗುವ ಪ್ರತಿಜ್ಞೆ ಮಾಡಿದಂತಿದೆ’ ನಕ್ಕ ಮುಖದ ತುಂಬಾ…..ಮನದ ತುಂಬ ಹರಡಿ ಹಬ್ಬುವಂತಹ ಎಳೆಬಿಸಿಲ ನಗೆ.
ನಾ ತಡವರಿಸುತ್ತಾ-
‘ಹಲೋ, ನಿಮ್ಮನ್ನಿಲ್ಲಿ ನೋಡಿ ನಿಜಕ್ಕೂ ಅಚ್ಚರಿ ಆಗ್ತಾ ಇದೆ. ಬನ್ನಿ ಛೋಲೆ ತಗೊಳ್ತೀರಾ?’ ಮತ್ತೊಂದು ಪ್ಲೇಟಿಗೆ ಹೇಳಿದೆ.
‘ಖಂಡಿತಾ…..’ ಎಂದವನು ಆ ಪ್ಲೇಟ್ ಬರುವುದಕ್ಕೂ ತಡೆಯದೆ ಸಲೀಸಾಗಿ ನನ್ನ ತಟ್ಟೆಗೆ ಕೈ ಹಾಕಿ, ಅರ್ಧ ಬಠೂರ ಹರಿದುಕೊಂಡು ಛೋಲೆಗದ್ದಿ ಬಾಯುಗಿಟ್ಟ ! ಅಜಯ್…ಕ್ಷಣದಲ್ಲಿ ಆತ್ಮೀಯನಾಗುವ, ನಿಮಿಷದಲ್ಲಿ ಸ್ನೇಹದ ಸಲಿಗೆ ವಹಿಸುವ, ಹಿಡಿಹಿಡಿ ಮಾತನಾಡುವ, ಅರೆಗಳಿಗೆಯಲ್ಲಿ ಹೊಸಿಲು ದಾಟಿ ಒಳಗೆ ನುಗ್ಗೇ ಬಿಡುವ, ಮನದ ಅಂಗಳದ ತುಂಬಾ ಬೆಳದಿಂಗಳ ಚೆಲ್ಲಿಬಿಡುವ…. ತುಂಬು ಪ್ರೀತಿಯ ಹುಡುಗ.

ಅಜಯನ ತಟ್ಟೆ ಬಂತು. ಏರ್‌ಬ್ಯಾಗ್ ಎತ್ತಿ ಕೆಳಗಿಟ್ಟು ನಾ ಕುಳಿತೆ. ಅವನೂ ಒಂದು ಕುರ್ಚಿ ಎಳೇದುಕೊಂಡು ಕುಳಿತ.
‘ಅಂದಹಾಗೆ ನೀವಿಲ್ಲಿ ಬಂದಕಾರಣ?’ ಕೇಳಿದ. ಕಣ್ಣಲ್ಲೇಕೋ ಕೀಟಲೆಯ ನಗೆ ಇತ್ತು.
‘ಶ್ರೀನಗರದಲ್ಲಿ ಎರಡು ದಿನ ಕಾನ್‌ಫರೆನ್ಸ್ ಇದೆ. ‘ರೀಸೆಂಟ್ ಡೆವೆಲಪ್‌ಮೆಂಟ್ ಇನ್ ಹೈಡ್ರಾಲಿಕ್ಸ್ ಎಂಡ್ ಇರಿಗೇಶನ್’ ಬಗ್ಗೆ ನಾ ಒಂದು ಪ್ರಬಂಧ ಮಂಡಿಸ್ತಾ ಇದ್ದೇನೆ…ನೀವು?’ ಕೇಳಿದೆ.
‘ಅದೇ ಜೆ ಎಂಡ್ ಕೆ ಇನ್‌ಸ್ಟಿಟ್ಯೂಟ್‌ದು ತಾನೆ?’ ನಕ್ಕ. ‘ಕೊಡೀ ಕೈ ನಾನೂ ಅಲ್ಲಗೆ ಡೆಲಿಗೇಟ್ ಆಗಿ ಬರ್ತಾ ಇರೋದು.’ ಅಂದ.
ಢಾಬಾದ ಸರ್ದಾರ್ಜಿಗೆ ದುಡ್ಡು ಕೊಟ್ಟು, ಬಲಗೈಲಿ ತನ್ನ ಸೂಟ್‌ಕೇಸ್ ಎತ್ತಿಕೊಂಡವನು, ಎಡಗೈಗೆ ನನ್ನ
ಏರ್‌ಬ್ಯಾಗ್ ಏರಿಸಿದ.

‘ಇರಲಿ ಕೊಡಿ. ನಾನೇ ತರ್ತೇನೆ…’ ಹೇಳಿದೆ.
‘ಬನ್ನಿ ನೀವು ಬಸ್ಸಲ್ಲಿ ಕುಳಿತುಬಿಡಿ. ನಾ ಟಿಕೆಟ್ ಕೊಂಡು ಬರ್ತೀನಿ.’
ನನ್ನ ಖಾಲಿ ನಿಂತ ಬಸ್ಸಿಗೆ ಹತ್ತಿಸಿ, ಏರ್‌ಬ್ಯಾಗ್ ಮೇಲೆತ್ತಿಟ್ಟು ಕೆಳಗಿಳಿದು ಹೋದ.
ಒಮ್ಮೆಗೆ, ನಿನ್ನೆ ರಾತ್ರಿಯ ಪ್ರಯಾಣದ ಆಯಾಸ, ಮುಂದೆ ಮಲಗಿರುವ ಹದಿಮೂರು ಗಂಟೆಗಳ ಶ್ರೀನಗರದ ಹಾದಿ ಎಲ್ಲ ಮರೆಯಾಗಿ, ಸ್ವಪ್ನಲೋಕಕ್ಕೆ ಹೊರಟು ನಿಂತ ಪುಷ್ಪಕ ವಿಮಾನವಾಯಿತು ನಾ ಕುಳಿತ ಬಸ್ಸು. ಕೈಚೀಲದಿಂದ ಪುಟ್ಟ ಕನ್ನಡಿ ಹೊರಗೆಳೆದೆ. ಕೆದರಿದ ತಲೆ ಕಂಡು ಕೆಡುಕೆನಿಸಿತು. ಮೆಲ್ಲನೆ ಸಿಕ್ಕಿ ಬಿಡಿಸಿ, ಎರಡೂ ಬದಿಗೆ ಪಿನ್ ಏರಿಸಿ, ಬೆನ್ನ ತುಂಬಾ ಹರವಿ ಬಿಟ್ಟೆ.

ಏಕೆ ಈ ಸಿಂಗಾರ…? ತಟ್ಟನೆ ಅರ್ಥವಾಗಲಿಲ್ಲ.. ಇಲ್ಲ ಅರ್ಥವಾಯಿತು.

ದೇವರೆ, ನಮ್ಮೊಳಗೆ ನಾವು ಪ್ರಾಮಾಣಿಕರಾಗಿರುವುದು ಇಷ್ಟು ಕಷ್ಟವೆ? ಎಂತಹ ಪುಳಕ ಇದು…ಪ್ರಥಮ ಆಕರ್ಷಣೆಯ ಪುಳಕ…ಪ್ರೀತಿ ಪ್ರೇಮವೆಂಬ ಅಮೂರ್ತ ಪದಗಳು ಈಗಲೇ ಬೇಡ…ಪ್ರಥಮ ಪುಳಕ…ನನ್ನ ಇಪ್ಪತ್ತೆಂಟನೆ ವಯಸ್ಸಿನಲ್ಲಿ! ಐದು ವರ್ಷದ ವಿವಾಹ, ಮೂರು ವರ್ಷದ ಮಗುವಿನ ಚರಿತ್ರೆ ಬಿಟ್ಟು ಬಂದಿದ್ದೇನೆ, ಮೂರು ಸಾವಿರ ಮೈಲಿಗಳಾಚೆ ಬೆಂಗಳೂರಿನಲ್ಲಿ!

ಕನ್ನಡಿಯನ್ನು ಚೀಲದೊಳಗೆ ತೂರಿಸಿ, ಸೀಟಿಗೆ ತಲೆಯಾನಿಸಿ ಕಣ್ಣು ಮುಚ್ಚಿದೆ. ಗೋವಾದ ಬೆಳ್ಳಿ ಮರಳ ಸಮುದ್ರ ದಂಡೆ ಕಣ್ ಮುಂದೆ ಹಾದು ಹೋಯಿತು. ಅಜಯನನ್ನು ಮೊದಲಿಗೆ ನೋಡಿದ್ದು ಗೋವಾದಲ್ಲೇ, ಆರು ತಿಂಗಳ ಹಿಂದೆ. ಅಲ್ಲೂ ಯಾವುದೋ ಕಾನ್‌ಫರೆನ್ಸ್, ಮೂರು-ಮೂರು ದಿನ ಪಂಜಿಮ್‌ನಲ್ಲಿ ಉಳಿದಿದ್ದೆ. ಎರಡನೆ ದಿನ ಅಜಯ್ ಬಂದಿದ್ದ. ಯಾವುದೋ ಪೇಪರ್ ನಡುವೆ, ನಾ ಏಕೋ ಎಡಕ್ಕೆ ತಿರುಗಿದಾಗ ಆತ ನನ್ನನ್ನೇ ನೋಡುತ್ತಿದ್ದ, ನನಗೆಲ್ಲೋ ನೋಡಿದ ಮುಖ…ಹೆಸರಿಸಲಾರದೆ, ನೆನಪೆಲ್ಲ ಅಗೆದಗೆದು ಹುಡುಕಿದೆ.

ಊಟದ ಹೊತ್ತಿಗೆ ಹೊರಗೆ ಬಂದಾಗ ಆತ ನೇರ ನನ್ನ ಬಳಿ ಬಂದ…
‘ನೀವು ಡಾ|| ಅನು ಅಲ್ವ?’ ಕೇಳಿಯೇ ಬಿಟ್ಟ.
‘ಹೌದು, ನಿಮ್ಮನ್ನೆಲ್ಲೋ ನೋಡಿದ ನೆನಪು’ ತಡವರಿಸಿದೆ.
‘ನೋಡಬಹುದಿತ್ತೇನೋ, ನೀವು ಅವಕಾಶವೇ ಕೊಡಲಿಲ್ಲ.’ ಎಂದು ನಕ್ಕ. ನಾ ಮತ್ತೂ ಅರ್ಥವಾಗದೆ ಅವನ ಮುಖದಲ್ಲಿ ಪರಿಚಯದ ಕಳೆಗಾಗಿ ತಡಕಾಡಿದೆ.
‘ಬಿಡಿ, ಅದೆಲ್ಲ ಐದು ವರ್ಷದ ಕತೆ…ಜೀವನ ಪೂರಾ ನನ್ನ ನೋಡಬಹುದಾದಂಥ ಅಮೋಘ ಅವಕಾಶ ಕಳೆದುಕೊಂಡಿರಿ. ನನ್ನ ಪತ್ರ ಸೀದಾ ಕಸದ ಬುಟ್ಟಿಗೆ ಹೋಗಿರಬೇಕಿಲ್ಲ…?’

ತಟ್ಟನೆ ನೆನಪಾಯಿತು, ಮಿಂಚು ಹೊಳೆದಂತೆ ಬೆಳಕಾಯಿತು. ಐದು ವರ್ಷಗಳ ಹಿಂದೆ- ಆಗ ನಾ ಕವನ ಬರೆಯುತ್ತಿದ್ದೆ. ಅವು ಕವನಗಳೆ ಇರಬೇಕು. ತುಂಡು ತುಂಡು ಸಾಲಿನಲ್ಲಿ ಪ್ರೀತಿಸದೇ ಬಿಟ್ಟ ನನ್ನ ಕನಸುಗಳ ಲೆಕ್ಕ ಸಿಗುತ್ತಿತ್ತು. ನನ್ನ ಮದುವೆ ಕಿರಣ್ ಜೊತೆ ನಿಶ್ಚಯವಾಗಿತ್ತು. ಪತ್ರಿಕೆಯೊಂದರ ವಿಳಾಸಕ್ಕೆ ಬಂದ ನನ್ನ ಲಕೋಟೆಯೊಂದು ರಿಡೈರೆಕ್ಟ ಆಗಿ ನನ್ನ ಕೈ ಸೇರಿತ್ತು.

ಪ್ರಿಯ ಅನು ಅವರೆ,

ಬಹಳ ದಿನದಿಂದ ನಿಮ್ಮ ಕವನಗಳೆ ಇಲ್ಲ.ಏಕೆ, ಕನಸುಗಳು ಖಾಲಿಯಾದವೇನು? ನನ್ನದೊಂದಿಷ್ಟು ಕನಸುಗಳಿವೆ. ನಿಮ್ಮೊಡನೆ ಉಳಿದಷ್ಟು ಬದುಕನ್ನು ಕಳೆದು ಬಿಡುವ ಕನಸು. ನೀವು ಮೂಲತಃ ವಿಜ್ಞಾನಿ ಎಂದು ಗೊತ್ತು. ಮೈಸೂರಿನಲ್ಲಿ ಓದಿದ್ದು, ಬಾಂಬೆಯಲ್ಲಿ ಪಿ‌ಎಚ್.ಡಿ ತಗೊಂಡಿದ್ದು….ನಿಮ್ಮ ಪೂರಾ ಬಯೋ-ಡಾಟ ನನ್ನ ಬಳಿ ಇದೆ. ಸ್ವತಃ ನನ್ನನ್ನು ಏನು ಅಂತ ವರ್ಣಿಸಿಕೊಳ್ಳಲಿ? ಕವಿತೆಗಳನ್ನು, ಕವಿತೆ ಬರೆದವರನ್ನು ಗಾಢವಾಗಿ ಪ್ರೀತಿಸಬಲ್ಲೆ. ಕೊಳಳುವಿರಾ ಹೇಳಿ. ನನ್ನ ಚಿತ್ತಾರದ ಕನಸುಗಳ ಬದುಕು ಪೂರಾ…’ ಇಷ್ಟೆ, ಕೇವಲ ಅರ್ಧ ಪೇಜಿನ ಪತ್ರ. ಜೊತೆಗೊಂದು ಫೋಟೊ ಇತ್ತು. ಪತ್ರ ಎರಡು ಮೂರು ಬಾರಿ ಓದಿದೆ. ಅಪರಿಚಿತ ಅಪರಿಚಿತ ವ್ಯಕ್ತಿಗೆ ಬರೆದ ಮೊಟ್ಟಮೊದಲ ಪ್ತರದಂತೆ ಇರಲೇ ಇಲ್ಲ. ವರ್ಷಗಟ್ಟಲೆಯ ಸ್ನೇಹದಲ್ಲಿ, ಮಧ್ಯೇ ಎಲ್ಲೋ ಕೆಲವು ದಿನದ ಮೌನವಾಗಿ , ಸ್ನೇಹದ ಹಕ್ಕಿನಲ್ಲಿ ಬರೆದಂಥಾ ಆತ್ಮೀಯ ಪತ್ರ.ಎರಡೆರಡು ಬಾರಿ ಓದಿದ್ದೆ. ನನ್ನ ಕವನದಲ್ಲಷ್ಟ ಜನಿಸಿ-ಮರಣಿಸಿದ ಪ್ರೀತಿಯ ಝರಿಯೊಂದು ಜುಳುಜುಳು ಸದ್ದು ಮಾಡಿತು.

ಏಕೋ ನಾ ಸಿದ್ಧವಿರಲಿಲ್ಲ. ಈ ಪ್ರೀತಿಯ ಹುಡುಗನ ಪತ್ರದ ಬೆನ್ನೇರಲು. ಕಿರಣ್ ಕಾದಿದ್ದ. ಅಪ್ಪ ಹುಡುಕಿದ ಗಂಡು, ಅಪ್ಪನ ಮುಷ್ಟಿಯಲ್ಲಿ ನಾನೀಗ ಇರಲಿಲ್ಲ ನಿಜ. ರೆಕ್ಕೆ ಕಟ್ಟಿ ಹಿಡಿದ ಹಕ್ಕಿಗೆ ಬಂಧನ ಬಿಟ್ಟಿತ್ತು. ಆದರೆ ಹಾರುವುದು ಬೇಕಿರಲಿಲ್ಲ.

ನಾನಂದು ಹೆಚ್ಚೇನೂ ಮಾಡಿರಲಿಲ್ಲ. ಪತ್ರ ಹರಿಯಲೆಂದು ಹೊರಟವಳು ಏಕೋ ತಡೆದೆ. ನನ್ನ ಡೈರಿಯೊಳಗೆ ತೂರಿಸಿದೆ. ಅಲ್ಲಿಗೆ ಈ ಪೂರಾ ಐದು ವರ್ಷಗಳಲ್ಲಿ ಮರೆತುಬಿಟ್ಟೆ.

ಗೋವಾದಲ್ಲಿ ಉಳಿದೆರಡು ದಿನ. ಗುಂಪಿನೊಡನೆಯೇ ಬೀಚು, ಚರ್ಚ್, ಕತೀಡ್ರಲ್ ಎಂದೆಲ್ಲ ಓಡಾಡಿದೆ. ಆ ಗುಂಪಿನ ನಡುವೆಯೂ ಅಜಯ್ ಬೇರೆಯೇ ನಿಂತಿದ್ದ. ಕೆಲ ವ್ಯಕ್ತಿಗಳು ತಟ್ಟನೆ ಉದ್ಭವಿಸಿ, ಕ್ಷಣದಲ್ಲಿ ನಮ್ಮ ಗೆದ್ದು ದಿಗ್ವಿಜಯ ಪತಾಕೆ ಹಾರಿಸಿಬಿಡುವುದೇಕೆ? ನನ್ನಿಷ್ಟು ದಿನದ ಸ್ತಿಮಿತತೆಯನ್ನು ಇಪ್ಪತ್ತೆಂಟು ವರ್ಷಗಳ ಅಘಟಿತ ಜೀವನದ ಸಮತೋಲನವನ್ನು ಪಲ್ಲಟಗೊಳಿಸಿದ್ದು ಹೇಗೆ? ಅವ ನನ್ನ ಬದುಕನ್ನು ಹಂಚಿಕೊಳ್ಳಲು ಬಂದಾಗ ನಾ ಇಂಥಾ ನಿತ್ಯ ಸಂತಸದ ನಿತ್ಯ ವಸಂತವನ್ನು ನಿರಾಕರಿಸಿದೆ ಎಂದು ತಿಳಿದಿತ್ತೆ? ಕಾಲದ ಮುಳ್ಳು ಜಗ್ಗಿ ಹಿಡಿದು ಐದು ವರ್ಷ ಹಿಂದಕ್ಕೆ ಹೋಗುವ ತೀವ್ರ ಆಸೆ. ನಾ ಗೋವಾದಿಂದ ಹಿಂತಿರುಗಿದ ಮೇಲೂ ಅವ ಕಾಡತೊಡಗಿದ. ಬದುಕಿನ ಆ ಒಂದು ತಿರುವಿನಲ್ಲಿ ನಾ ತಿರುಗಿಬಿಟ್ಟಿದ್ದರೆ ರೆ…? ಮತ್ತೆ ಮತ್ತೆ ನೆನಪಿನಲ್ಲಿ ಹಿಂದ್ಹಿಂದೆ ಹಾಯ್ದು – ಅಲ್ಲಿ ಅವನ ಪತ್ರ ಹಿಡಿದು ಮತ್ತೆ ಮತ್ತೆ ಉತ್ತರಿಸಿದೆ. ಬೆಳಗ್ಗೆ ಏಳುವಾಗ ಮಾತ್ರ ನಾ ಕಿರಣನ ಹೆಂಡತಿಯಾಗಿರುತ್ತಿದ್ದೆ? ಪುಟ್ಟಿಯ ತಾಯಿಯಾಗಿದ್ದೆ.

ಬೀಚಿನಲ್ಲಿ ಗುಂಪಿನಿಂದ ಒಂದಿಷ್ಟು ಬಿಡುವು ಕಂಡಾಗ ಅಜಯ್ ಕೇಳಿದ್ದ–
‘ಏಕೆ ನೀವು ಮತ್ತೆ ಕವನ ಬರೆಯಲೇ ಇಲ್ಲ…’
‘ಓಹ್, ತುಂಬಾ ವರ್ಷಗಳಾಯ್ತು…’ ಗಾಳಿಗೆ ಕೈ ಚೆಲ್ಲಿ ಹೇಳಿದೆ.
‘ಹೌದು ಐದು ವರ್ಷಗಳಾದವು…’ ಅವ ಲೆಕ್ಕ ಇಟ್ಟಿದ್ದ. ಐದು ವರ್ಷಗಳು…ನನ್ನ ಇಪ್ಪತ್ಮೂರನೆ ವಯಸ್ಸಿಗೆ ನಿಲ್ಲಿಸಿದ್ದೆ. ನನ್ನ ವಿವಾಗವಾದ ವರ್ಷ. ಕಾವ್ಯನಾಮದಡಿ ಅಡಗಿದ್ದ ಕಿಶೋರದ ಕನಸುಗಳೆಲ್ಲ ತಣ್ಣನೆ ಅನುಭವದ ಅಡುಯಲ್ಲಿ ನಿಸ್ಸಾರವಾದ ವರ್ಷ.

ಈ ಗೋವಾದಿಂದ ಹಿಂತಿರುಗಿ ವಂದೆ. ಮತ್ತೆ ಕವನ ಬರೆದೆ, ಐದು ವರ್ಷಗಳ ನಂತರ!
ಒಮ್ಮೆ ಕಾಲದ ಕೈ ಹಿಡಿದು ಜಗ್ಗುವ ಬಯಕೆ.
ಉತ್ತರಿಸದ ಪತ್ರಗಳಿಗೆಲ್ಲ ಪಾರಿವಾಳವ ಹಾರಿಬಿಡುವ ಬಯಕೆ.

ಆಯ್ದ ಬದುಕು ಸುಗಮವಿತ್ತು. ಆದರೂ ಬೇರೊಂದು ಆಯಾಮದಲ್ಲಿ ಉಳಿದುಬಿಟ್ಟ ಸಾಧ್ಯತೆಗಳು ಕಾಡತೊಡಗಿದವು. ಮತ್ತೆ ಕನಸುಗಳು ರೆಕ್ಕೆ ಪುಕ್ಕ ಮೊಳೆತು ಕವನಗಳಾದವು. ಬಯಕೆಗಳು, ಸಾಧ್ಯತೆಗಳು, ಅವನೊಡನೆ ಹಂಚಿಕೊಳ್ಳಲಾರದ, ಹಂಚಿಕೊಳ್ಳಲೇಬೇಕಾದ ನನ್ನ ಅನಿಸಿಕೆಗಳು ಕವನವಾದವು. ಐದು ವರ್ಷಗಳ ನಂತರ ನಾ ಮತ್ತೆ ಹೊತ್ತಿದ್ದೆ – ಕವನದ ಕೂಸನ್ನು- ಮನದ ಒಳಗೆಲ್ಲ ಹಿತವಾಗಿ ಮಿಸುಕಾಡಿ ಬಹಾವನೆಯ ಬಸಿರೊಡೆದು ಹೊರಬಿದ್ದವು. ರಾಶಿ ರಾಶಿಯಾಗಿ.

ಈ ಆರು ತಿಂಗಳು ನಾ ಸತತ ಬರೆದೆ. ಹೊಸದೇನೋ ಹೇಳುವುದಿತ್ತು. ‘ನನ್ನ ಯೌವನಕ್ಕೊಂದಿಷ್ಟು ಕನಸುಗಳ ಕೊಟ್ಟ ಗೆಳೆಯನೆ, ಧನ್ಯವಾದ..’ ಬರೆದಿದ್ದೆ. ‘ಉತ್ತರಿಸದೆ ಬಿಟ್ಟ ಪತ್ರಗಳ’ ಬಗ್ಗೆ ಬರೆದೆ. ‘ಬಿಟ್ಟು ಬಂದ ಮರಳಿನಲ್ಲಿ, ಬಿತ್ತಿ ಬಂದ ಬಯಕೆಗಳ’ ಬಗ್ಗೆ ಬರೆದೆ. ನನ್ನ ಕವನಗಳಿಗೆ ಅವ ಗುರಿಯಾಗಿದ್ದನೋ, ಅವನಿಗೆ ನನ್ನ ಕವನಗಳು ಗುರಿಯಾಗಿದ್ದವೋ ಗೊತ್ತಿಲ್ಲ. ಸಾಧ್ಯತೆಗಳ ಬಗ್ಗೆ ಕವನಗಳು ಹೆಣದುಕೊಂಡವು. ದಟ್ಟವಾಗಿ, ನನ್ನೊಳಗಿನ ಸಂಭಾಷಣೆಗಳಿಗೆ ಅಜಯ್ ದಿಕ್ಕಾದ. ನನ್ನೆಲ್ಲವನ್ನೂ ನಾ ಅವನ ಅದೃಶ್ಯ ಇರುವಿನೊಡನೆ ಹಂಚಿಕೊಳ್ಳತೊಡಗಿದೆ. ಬಹಾರವಾದ ಬಾಲ್ಯ ಯೌವನಗಳ ಬಿಚ್ಚಿಕೊಳ್ಳ ತೊಡಗಿದೆ- ಮೊಡ್ಡ ಮೊದಲಿಗೆ.

*
*
*

‘ಉತ್ತರಿಸಿದ ಪತ್ರಗಳೆಲ್ಲ ಕವನಗಳಾದುವಾ?’ ನೇರ ನನ್ನ ಕಣ್ಣು ಹಿಡಿದಿಟ್ಟು ಕೇಳಿದ, ಮುಖದ ತುಂಬ ತುಂಟತನವಿತ್ತು.
‘ಇಲ್ಲ, ದಿಕ್ಕುಗಾಣದ ಪಥಭ್ರಷ್ಟ ಪ್ರೀತಿ, ಬದುಕದೇ ಬಿಟ್ಟ ಬಾಲ್ಯ, ಕಿಶೋರ, ಬದುಕಬಹುದಿದ್ದ ಸಾಧ್ಯತೆಗಳು, ಸಂಭವಗಳು….’ ವಾಚ್ಯವಾದ ನನ್ನ ಭಾವನೆಗಳಿಗೆ ನಾನೇ ಬೆರಗಾದೆ. ನಾ ಮಾತು ಕಲಿತದ್ದೆಂದು…ಐದು ವರ್ಷದ ದಾಂಪತ್ಯದಲ್ಲಿ ಅಭಿವ್ಯಕ್ತಿಸಲಾರದೆ ನನ್ನ ಪ್ರೀತಿ ಪ್ರಯಾಸಪಡುವಾಗ, ಇದಕ್ಕಿದ್ದಂತೆ ಈ ಬೇರೊಂದು ಆಯಾಮದಲ್ಲಿ ಮಡಿವಂತಿಕೆ ಕಳಕೊಂಡ ನಾ ನಗ್ನವಾಗುತ್ತಿರುವುದ್ಹೇಗೆ? ನಾ ತಟ್ಟನೆ ಅಗೋಚರವಾಗಿದ್ದೆ ಮತ್ತುಳಿದ ಆ ಜಗತ್ತಿಗೆ… ಸಮಯದಲ್ಲೊಂದು ಬಿಂದುವಾಗಿ ಘನವಾಗತೊಡಗಿದ್ದೆ.
‘ಏಕೆ, ಅಷ್ಟು ಸೀರಿಯಸ್ ಆಗ್ತೀರಾ….’ ಅಜಯ್ ಮೆಲ್ಲನೆ ಕೈ ಒತ್ತಿದ. ಕಣ್ಣಲ್ಲಿನ್ನೂ ನಗು ಇತ್ತು.
ಬಸ್ಸು ಹೊರಟಿತು, ಕಣಿವೆಯತ್ತ. ನನ್ನ ಕೈ ಇನ್ನೂ ಅವನ ಬೆಚ್ಚನೆಯ ಹಿಡಿತದಲ್ಲಿತ್ತು….

(‘ರಾಜೂ… ರಾಜೂ… ನಂಗೆ ಭಯವಾಗುತ್ತೆ ಕಣೋ, ಕೈ ಹಿಡಕೊಳ್ಳೋ.’ ಬಿಗಿಯಾಗಿ ಹಿಡಿದೆಳೆದೆ ರಾಜುವಿನ ಕೈಯ.
‘ಒಳ್ಳೆ ಹೆದರುಪುಕ್ಕಲೀನೆ ನೀನು… ಮತ್ಯಾಕೆ ಭೂತ ನೋಡೋಕೆ ನಾನೂ ಬರ್ತೀನಿ ಅಂತ ಕುಣಿದೆ.’
‘ನಿಜವಾಗ್ಲೂ ಅಲ್ಲಿ ಭೂತ ಇದೆಯಾ…?’ ಕಣ್ಣರಳಿಸಿದೆ. ಪಾಳುಬಿದ್ದ, ಬಿದಿರುಮೆಳೆ ಬೆಳೆದು ನಿಂತ ಆ ಮುರುಕು ಬಂಗಲೆಯ ಕಾಂಪೌಂಡ್ ಹಾರಿ ಒಂದೊಂದೇ ಹೆಜ್ಜೆ ಇಡುತ್ತಾ.
‘ಹುಂ ಮತ್ತೆ…ಆದ್ರೆ ನೀನೇನೂ ಹೆದರಬೇಡ’ ಹತ್ತಿರ ಬಂದ. ಹತ್ತು ವರ್ಷದ ಭಾರೀ ಎದೆಗಾರ… ನನ್ನ ಕೈ ಭದ್ರವಾಗಿ ಹಿಡಿದ.
‘ಬಲಗೈಲಿ ಚಪ್ಪಲಿ ಇಟ್ಟುಕೋ ಭೂತ ಇದ್ರೆ ಹೆದರಿ ಓಡಿ ಹೋಗುತ್ತೆ. ಬಾಯಲ್ಲಿ ಓಂ ಗಣೇಶ ಹೇಳ್ತಾ ಇರು…’ ಅವನ ಆದೇಶದಂತೆ ಒಂದು ಕೈಲಿ ಚಪ್ಪಲಿ, ಮತ್ತೊಂದರಲ್ಲಿ ರಾಜುವಿನ ಕೈ ಹಿಡಿದು, ಬಾಯಲ್ಲಿ ಪಿಟಿಪಿಟಿ ಅನ್ನುತ್ತಾ, ಅವನ ಹಿಂಬಾಲಿಸಿದೆ…
ಒಂದೊಂದೇ ಕೋಣೆ ಇಣುಕುವಾಗ ಅದೆಂಥ ಎದೆಬಡಿತ, ಕಿವಿಯಲ್ಲಿ ತಮಟೆಯ ಸದ್ದು, ಭಯ…ಆದರೂ ವಿಚಿತ್ರ ಕುತೂಹಲ. ಖುಶಿ… ಆದರೂ ಎಂಥದ್ದೋ ಆತಂಕ.
‘ಕೊನೇ ಕೋಣೆಯಲ್ಲಿ ದೊಡ್ಡ ನಿಧಿ ಇದೆಯಂತೆ. ಅದನ್ನ ಕಾಯೋಕೆ ದೊಡ್ಡ ಸರ್ಪ ಇದೆಯಂತೆ…’ ಎಲ್ಲ ಬಲ್ಲವನ ಗತ್ತಿನಲ್ಲಿ ರಾಜು ಹೇಳಿದ.
ಒಂದೊಂದೇ ಕೋಣೆ… ಅದೆಷ್ಟು ಕೋಣೆಗಳು ಆ ಬಂಗಲೆಗೆ-ತಪ್ಪನೆ ಮೇಲಿಂದ ಬಿದ್ದು, ಭರ ಭರನೆ ಎರಡು ಬಾವಲಿಗಳು ಕುರುಡಾಗಿ ಹಾರಿ ಮುಖಕ್ಕೆ ಬಡಿದವು.
ಚಪ್ಪಲಿಯನ್ನು ಅಲ್ಲೇ ಎಸೆದು ಗಾಬರಿಯಿಂದ ‘ಅಯ್ಯಮ್ಮೋ…’ ಕಿರುಚುತ್ತಾ ಓದಿದ ರಾಜುವಿನ ಕೈ ಬಿಡದೇ ನಾನೂ ಒಂದೇ ಉಸಿರಿಗೆ ಓಡಿದೆ. ಏದುಸಿರು ಬಿಡುತ್ತ ಓಡಿ ಬಂದವಳು ಇನ್ನೂ ರಾಜುವಿನ ಕೈ ಹಿಡಿದೇ ಇದ್ದೆ. ಮೈಯೆಲ್ಲ ನಡುಗಿತ್ತು. ಅಂಗಳದಲ್ಲಿ ಬಿಸಿಲು ಕಾಯಿಸುತ್ತಾ ಪೇಪರ್ ಓದುತ್ತಿದ್ದ ಅಪ್ಪ ಕನ್ನಡಕ ತೆಗೆದು ನನ್ನತ್ತ ಒಮ್ಮೆ ನೋಡಿದರು-
‘ಅಪ್ಪ…ಅಪ್ಪ.. ಅಲ್ಲಿ ಆ ಬಂಗಲೇನಲ್ಲಿ…’ ಅಪ್ಪ ನನ್ನ ಏದುಸಿರು ಸ್ವರವನ್ನು ಅರ್ಧಕ್ಕೆ ತುಂಡರಿಸಿ-
‘ಬಿಡು ಅವನ ಕೈನ…ಎಷ್ಟು ಸಾರಿ ಹೇಳ್ಬೇಕು, ಗಂಡು ಹುಡುಗರ ಜೊತೆ ತಿರುಗಬೇಡ ಅಂತ…’ ಅಪ್ಪನ ಗುದುಗಿನ ಗಡಸು ಸ್ವರ ಪ್ರತಿಧ್ವನಿಸಿತು.)

ಸರಕ್ಕನೆ ಕೈ ಎಳೆದುಕೊಂಡೆ, ಅಜಯನ ಬೆಚ್ಚನೆಯ ಮುಷ್ಟಿಯಿಂದ. ನನಗಾಗ ಎಂಟು ವರ್ಷ.

ಈಗ..ಇಪ್ಪತ್ತೆಂಟು.

*
*
*

ಮತ್ತೆ ಕಿಟಕಿಯಾಚೆ ನೋಡುತ್ತಾ ಕುಳಿತೆ. ಸುತ್ತಲಿನ ನಿಸರ್ಗ ನನ್ನ ಬೇರೊಂದೇ ಲೋಕದ ಭ್ರಮೆಗೆ ಒಡ್ಡಿತ್ತು. ಆಳದ ಕಣಿವೆ, ಹಾದಿಯ ನಡುವೆ ಜುಳು ಜುಳನೆ ಹರಿದು ಹಾಯ್ದ ನೂರಾರು ಸಣ್ಣ ಝರಿಗಳು. ಬಿಸಿಲಿನ ಪ್ರಥಮ ಸ್ಪರ್ಶಕ್ಕೆ ಅರಳಿ ನಿಂತ ಬಣ್ಣ ಬಣ್ಣದ ಹೂಗಳು. ನಾ ಬಿಟ್ಟು ಬಂದ ಪ್ರಯೋಗಾಲಯ, ಹ್ಯಾಂಗರ್‌ಗೆ ಜೋತು ಬಿದ್ದ ಬಸ್ಸುಗಳು, ಮುಗಿಲೆತ್ತರದಿಂದ ಫ್ಲಾಟ್‌ಗಳ ನಡುವೆ ತುಂಡು ತುಂಡಾದ ಆಕಾಶ…ಎಲ್ಲ ಅಸತ್ಯವೆನಿಸಿತು. ಕಡೆಗೆ ಕಿರಣ್, ಪುಟ್ಟಿ ಕೂಡ ಬೇರೊಂದೇ ಜನುಮದ ಸಂಬಂಧಗಳಂತೆ ಮಬ್ಬಾದರು.

ಸಂಜೆ ಕತ್ತಲು ಕಣಿವೆಗೆ ತಡೆದು ಬಂದಿತ್ತು. ಯಾವಾಗ ನನಗೆ ಮಂಪರು ಕವಿದು ನಿದ್ದೆ ಆವರಿಸಿತೋ ಗೊತ್ತಿಲ್ಲ. ಉಹುಂ… ಪೂರ್ಣ ನಿದ್ರೆಯಿಲ್ಲ… ಎಚ್ಚರವೂ ಇಲ್ಲ… ಹೊರಗಿನೆಲ್ಲ ಆಗುಹೋಗುಗಳ ಅರಿವಿದ್ದಂತೇ, ಒಂದು ಬೆರಳನ್ನೂ ಎತ್ತಲಾರದ ಅಲಸ್ಯದ ಮಂಪರು. ಕಣಿವೆಗಳಷ್ಟೆ ಭಾರವಾಗಿ ಮುಚ್ಚಿದ್ದವು. ಪಕ್ಕದಲ್ಲಿ ಅಜಯನ ಭದ್ರ ಇರುವು ಆಪ್ಯಾಯಮಾನವಾಗಿ ಅಮಲಿನಂತೆ. ಅಲ್ಲಿ ಜಮ್ಮುವಿನಲ್ಲಿ ಬಿಟ್ಟು ಬಂದ ಬಿಸಿಲಿನ ಧಗೆಯ ನೆನಪು ಇನ್ನೂ ಆರುವ ಮೊದಲೇ, ಕತ್ತಲೆಯ ರಾತ್ರಿಯೊಳಕ್ಕೆ ಬಸ್ಸು ನುಗ್ಗುತ್ತಿದ್ದಂತೆ, ಈ ಜೂನ್ ತಿಂಗಳ ಬೆಸಿಗೆಯಲ್ಲೂ ಕಣಿವೆಯ ಚಳಿ ಮೆಲ್ಲನೆ ಮೈ ಮುದುರಿತು. ಅಜಯ್ ಸೂಟ್‌ಕೇಸ್ ತೆರೆದ ಸದ್ದು. ಮರುಕ್ಷಣ ಅವನ ಎರಡೂ ಬಾಹುಗಳು ನನ್ನ ಸುತ್ತಿ ಬಳಸಿ ಶಾಲು ಹೊದಿಸಿದವು. ನಾ ಶಾಲಿನೊಳಗೆ ಬೆಚ್ಚನೆಯ ಕನಸಿಗಳಲ್ಲಿ ಮೈ ಮರೆತೆ. ಮೆಲ್ಲನೆ ತೂಕಡಿಸಿದೆ. ನನ್ನ ಬಳಸಿದ ಕೈಗಳು ತನ್ನ ಹೆಗಲಿಗೆ ನನ್ನ ತಲೆ ಅನಿಸಿತು. ಬೆಚ್ಚನೆಯ ಹಿಡಿತದಲ್ಲಿ ಮತ್ತೆಲ್ಲ ಮರೆತಿತ್ತು. ಈ ಕಣಿವೆಯ ಹಾದಿಯಲ್ಲಿ ಎಂಥಹದೋ ಮಾಂತ್ರಿಕ ಶಕ್ತಿ ಇತ್ತು. ಅಜಯ್‌ನಲ್ಲೂ ಕೂಡಾ, ಅವನ ಅಗಲ ಹಸ್ತ ಬಿಗಿಯಾಗಿ ಆದರೆ ಸಭ್ಯವಾಗಿ ನನ್ನ ಭುಜ ಹಿಡಿದಿತ್ತು. ನಾ ಮತ್ತೆ ಏಳ ಬಯಸಲಿಲ್ಲ. ಮಧ್ಯೆ ಹಾದಿಗೆ ಜೊತೆಯಾಯಿತು ಝೇಲಮ್ ನದಿ. ಕೆಳಗೆ ಆಳದಲ್ಲಿ ಹಾದಿಗೆ ಜೊತೆ ಜೊತೆಯಾಗಿ ಹರಿದಿತ್ತು. ರಾತ್ರಿಯ ನೀರವತೆಯಲ್ಲಿ ಎಂಥಾ ಸಶಬ್ದ ಸಡಗರದ ಸ್ವಾಗತ.

(‘ರಾಜೂ… ರಾಜೂ…’ ನನ್ನ ಎಂಟು ವರ್ಷದ ಪುಟಾಣಿ ಹೆಜ್ಜೆಗಳು ಆ ವಿಶಾಲವಾದ ಅಂಗಳದ ತುಂಬಾ ರಾಜುವನ್ನು ಹುಡುಕಿದವು. ರಾಜೂ ವಠಾರದಲ್ಲೆಲ್ಲೂ ಕಾಣಲಿಲ್ಲ.
‘ರಾಜೂ… ರಾಜೂ…’ ಬುಡಬುಡನೆ ಮೆಟ್ಟಿಲೇರಿದೆ. ಸುರುಳಿ ಸುರುಳಿ ಸುತ್ತಿದ ಮೆಟ್ಟಲುಗಳ ಹಾರಿ ತಾರಸಿಗೆ ಬಂದೆ. ರಾಜು ತಾರಸಿಯ ಮೂಲೆಯಲ್ಲಿ ಕುಳಿತು, ಜೇಬಿನಿಂದ ಒಂದೊಂದೇ ಗೋಲಿ ತೆಗೆದು ಎಣಿಸುತ್ತಿದ್ದ. ಬನ್ಣಬಣ್ಣದ ಗೋಲಿಗಳು…. ಕೆಂಪು… ಹಳದಿ… ಹಸಿರು… ನೀಲಿ…
ಮೆಲ್ಲನೆ ಬಳಿ ಸರುದು ಕುಳಿತೆ-
‘ನಂಗೆ ಕೊಡೋ…’ ಗೋಗರೆದೆ.
‘ಹೋಗೇ ನೀನ್ಯಾಕೆ ಬಂದೆ? ನಂಜೊತೆ ಆಡಿದ್ರೆ ನಿಮ್ಮಪ್ಪ ಹೊಡೀತಾರೆ…’
ಅದು ಮರೆತೇ ಹೋಗಿತ್ತು, ನಿನ್ನೆ ತಾನೆ ಏಟು ತಿಂದ ಬಿಸಿ. ಬಾಲ್ಯಕ್ಕೆ ನೆನಪೆಷ್ಟು ಪುಟ್ಟದು.
‘ಅನೂ… ಏಯ್ ಅನು…’ ಅಪ್ಪನ ದನಿ.
‘ಬಂದೇ… ಬಂದೇ…’ ತಡಬಡಿಸಿ ಎದ್ದು ದುಡದುಡನೆ ಮೆಟ್ಟಿಲು ಇಳಿದೆ.
‘ಮತ್ತೆ ರಾಜೂ ಜೊತೆ ಹೋಗಿದ್ದೆಯಾ… ಹುಡುಗರೊಡನೆ ಮತ್ತೆ ಆಡಿದ್ರೆ ನೋಡು…’
ಅಪ್ಪನ ಕೈ ಮೇಲೆದ್ದೇ ಬಿಟ್ಟಿತು… ಅಗಲಿಸಿ ಬಿಟ್ಟ ಕೆಂಡದುಂಡೆಯ ಕಣ್ಣುಗಳು…)

ತಟ್ಟನೆ-ಎದ್ದು ನೇರ ಕುಳಿತೆ.
ಅಜಯ್ ತಡವರಿಸಿದ.
‘ಮಲಕ್ಕೊಳ್ಳಿ… ಇನ್ನೂ ತುಂಬಾ ದೂರ ಇದೆ…’ ಮೃದುವಾಗಿ ಹೇಳಿದ. ನಾ ಮೆಲ್ಲನೆ ಅವನ ಮಡಿಲಲ್ಲಿ ತಲೆ ಊರಿದೆ. ಅಪ್ಪನ ಮುಖವನ್ನು ಸರಿಸಲೆತ್ನಿಸಿದೆ. ರಾಜೂ… ಅವನ ಬಣ್ಣದ ಗೋಲಿಗಳ ಎಣಿಸತೊಡಗಿದೆ. ಭೂತ ಬಂಗಲೆಯಲ್ಲಿ ನೋಡದೆ ಬಿಟ್ಟ ಕೋಣೆಗಳ ಲೆಕ್ಕ ಇಡಲು ಪ್ರಯತ್ನಿಸಿದೆ. ಅವನ ಮಡಿಲ ಬಿಸಿಯಲ್ಲಿ ನನ್ನ ಬಾಲ್ಯ ನಚ್ಚಗೆ ಬಿಚ್ಚಿಕೊಳ್ಳತೊಡಗಿತು-ಹುಸಿ ಸತ್ಯವೆಂಬಂತೆ.

(ಅಪ್ಪನ ಪುತ್ರಕಾಮೇಷ್ಟಿ ಯಾಗದ ಫಲವಾಗಿ ನನ್ನ ಮೇಲೆ ಆರು ಜನ ಅಕ್ಕಂದಿರು. ವರ್ಷ ವರ್ಷ ಒಂದಲ್ಲ ಒಂದು ಅಕ್ಕನ ಬಸಿರು, ಬಾಣಂತಿತನ. ನಿವೃತ್ತರಾದಾಗಲಿಂದ ಅಪ್ಪ ವೆರಾಂಡಾದಲ್ಲೋ, ಇಲ್ಲ ಹೊರಗೆ ಕಲ್ಲು ಬೆಂಚಿನ ಮೇಲೋ ಕುಳಿತು ವೇದಾಂತ ಹೇಳುತ್ತಲೋ, ಕಂಠಪಾಠವಾದ ಶ್ಲೋಕಗಳ ಉದಾಹರಿಸುತ್ತಲೋ, ಮಹಾತ್ಮರ ನುಡಿಕಟ್ಟುಗಳ ಒಪ್ಪಿಸುತ್ತಲೋ, ಪುರಾಣದ ಪುಣ್ಯ ಕಥೆಗಳ ಅಂತರಾರ್ಥ ಬಣ್ಣಿಸುತ್ತಾ, ಆದರ್ಶ ಜೀವನ, ನಿಷ್ಕಾಮ ಜೀವನಗಳ ಬಗ್ಗೆ ಕೊರೆಯುವಾಗೆಲ್ಲ, ಈ ಅಪ್ಪ ನಾವು ಏಳು ಜನರ ಹುಟ್ಟಿಸಿದ್ಹೇಗೆ ಅನಿಸಿಬಿಡುತ್ತಿತ್ತು. ನಾವು ಹೈಸ್ಕೂಲಿನಲ್ಲಿದ್ದ ಸಮಯ. ಮೊಟ್ಟಮೊದಲಿಗೆ ಕನ್ನಡ ಪತ್ರಿಕೆಯೊಂದು ಅರೆ ಎದೆ ತೆರೆದ ಹೆಣ್ಣಿನ ಮುಖಪುಟ ಹಾಕಿದ್ದು ನೋಡಿದಾಗ, ಅಪ್ಪ ಪೂರಾ ಐದು ನಿಮಿಷ ಮುಖಪುಟವನ್ನೇ ದುರುಗುಟ್ಟಿ ನೋಡಿ, ಕಂಡಾಬಟ್ಟೆ ಕೆಂಡ ಕಾರಿ ‘ನಮ್ಮ ಸಂಸ್ಕೃತಿ ಯಾವ ಮಟ್ಟಕ್ಕಿಳೀತು…’ ಎಂದು ಉಗಿದು ದೂರ ಉಗಿದದ್ದೂ, ಅದೇ ಪತ್ರಿಕೆ ‘ಗುಪ್ತ ಸಮಾಲೋಚನೆ’ಗಳನ್ನು ಆರಂಭಿಸಿದ್ದೇ ತಡ ಆ ಪತ್ರಿಕೆಗೆ ನಮ್ಮನೆಯಲ್ಲಿ ಬಹಿಷ್ಕಾರ ಬಿದ್ದದ್ದೂ, ಏಕೋ, ನಿನ್ನೆ ಮೊನ್ನೆ ನಡೆದಂತೆ ನೆನಪಾಗುತ್ತದೆ. ಅಪ್ಪಿತಪ್ಪಿ ನನ್ನ ಕಿಶೋರದ ಕುತೂಹಲಕ್ಕೆ ಲಲ್ಲಿ ಮನೆಯಿಂದ ಪುಸ್ತಕ ಕದ್ದು ತಂದು ಓದುವಾಗ ಅಕ್ಕಂದಿರು ತರಾಟೆಗೆ ತೆಗೆದುಕೊಂಡು ‘ಅಪ್ಪಂಗೆ ಹೇಳ್ತೀನಿ’ ಹೆದರಿಸಿದ್ದು ನೆನಪಾದಾಗಲೆಲ್ಲ, ಈ ಅಕ್ಕಂದಿರಿಗೆ ವರ್ಷಾ ವರ್ಷಾ ಮಕ್ಕಳು ವರಪ್ರಸಾದದಿಂದಲೇ ಹುಟ್ಟುತ್ತವೇನೋ ಅನಿಸಿಬಿಡುತ್ತಿತ್ತು.
ಕಡೆಗೆ ನಾ ಬದುಕಿನ ಬಗ್ಗೆ ಕಲಿತದ್ದಾದರೂ ಹೇಗೆ-
ಏಳು ಹೆತ್ತ ಅಮ್ಮನಿಂದಲ್ಲ. ಎಡಬಿಡದೆ ಬಾಣಂತಿ ಕೋಣೆ ತುಂಬಿದ ಅಕ್ಕಂದಿರಿಂದಲ್ಲ. ಅಲ್ಲೆಲ್ಲ ಮುಟ್ಟದೇ ಹುಟ್ಟಿದ್ದ ದಿವ್ಯ ಮಡಿವಂತಿಕೆ ಇತ್ತು. ನಾ ಬದುಕಿನ ಬಗ್ಗೆ ಕಲಿತದ್ದೇ, ಇಂಥಾ ಪತ್ರಿಕೆಗಳಿಂದ- ವಿಷಮ ಸಂಬಂಧಗಳಿಗೆ ಉತ್ತರ ಬಯಸಿದ ಪ್ರಶ್ನೆಗಳ ಅಂಕಣದಿಂದ. ಸತ್ಯವೋ ಕಲ್ಪಿತವೋ ಆದ ಪತ್ರಿಕೆಗಳ ಪ್ರೇಮ-ಕಾಮದ ವಿಕೃತ ಚಿತ್ರದಿಂದಲೇ ನನ್ನ ಯೌವ್ವನದ ಕ್ಯಾನ್‌ವಾಸ್ ತುಂಬಿತು. ಯಾರೊಂದಿಗೂ ಹೇಳಬಾರದ, ಹಂಚಲಾರದ ಒಳಗೊಳಗೇ ಅನುಮಾನವಾಗಿ, ಆತಂಕವಾಗಿ, ಅಸಹ್ಯವಾಗಿ ಘನವಾದ ಗಂಡು-ಹೆಣ್ಣಿನ ಸಂಬಂಧಗಳು.
ಇಂಥಾ ಅಪ್ಪ… ಎಂಟು ವರ್ಷದ ರಾಜುವಿನೊಡನೆ ಆಡಗೊಡದ ಅಪ್ಪ, ಗೆಳತಿಯರ ಅಣ್ಣಂದಿರೊಡನೆ ಬಸ್ ಸ್ಟಾಪಿನಲ್ಲಿ ಮಾತನಾಡಿದ್ದನ್ನೇ ದೊಡ್ಡ ರಾದ್ಧಾಂತ ಮಾಡಿದ ಅಪ್ಪ, ರಾಮಾಯಣ, ಮಹಾಭಾರತ, ಭಗವದ್ಗೀತೆಗಳನ್ನೆಲ್ಲ ಕಪಾಟಿನ ತುಂಬಾ ತುಂಬಿ ಧೂಳು ಹಿಡಿಸಿದ ಅಪ್ಪ, ಗಂಡಿನ ನೆರಳು ಕೂಡ ಸುಳಿಯದಂತೆ ಏಳು ಜನ ಪುತ್ರಿಯರನ್ನು ಸರ್ಪಕಾವಲಾಗಿ ಕಾದ ಅಪ್ಪ-ಶುದ್ಧ ಅಪರಿಚಿತ ಗಂಡಿನೊಡನೆ ನನ್ನ ತಳ್ಳಿ ಅಗಳಿ ಇಟ್ಟರು-ಆತನೊಡನೆ ನನ್ನ ವಿವಾಹ ಆಯಿತು, ಎಂಬುದೊಂದೇ ಕ್ಷುಲ್ಲಕ ಕಾರಣಕ್ಕೆ. ಆ ಗಂಡಸಿನೊಡನೆ ನಾ ಹೇಗೆ ವರ್ತಿಸಬೇಕು ಎಂದು ಊಹಿಸಿದ್ದರೋ ದೇವರಿಗೇ ಗೊತ್ತು.)

ಶ್ರೀನಗರ ತಲುಪಿದಾಗ ರಾತ್ರಿ ಮೂರು ಗಂಟೆ. ಕಣಿವೆಯ ಚಳಿ ಜೂನ್ ತಿಂಗಳಲ್ಲೂ ಮೈ ನಡುಗಿಸಿತು. ಬಸ್ಸಿಂದ ಇಳಿದು, ನಡು ಹಾದಿಯಲ್ಲಿ ನಿಂತೆವು. ಸುತ್ತಲೂ ಗಿಡಗಂಟಿಗಳು, ಎದುರು ‘ಟೂರಿಸ್ಟ್ ಸೆಂಟರ್’. ಇಳಿದದ್ದೇ ತಡ ‘ಆ ಜಾವೋ ಸಾಬ್, ಹಮಾರಾ ಯಹಾ ಡಬಲ್ ಬೆಡ್ ಕಮರಾ ಹೈ…’ ಅಂತ ನಮ್ಮ ಹಿಂದೆ ಮುಂದೆ ಸುಳಿದಾಡಿದ ವಿಲಕ್ಷಣ ವ್ಯಕ್ತಿಗಳನ್ನು ತಡೆಯುತ್ತಾ, ನೇರ ಟೂರಿಸ್ಟ್ ಸೆಂಟರ್ ಅತ್ತ ನಡೆದೆ. ಎಲ್ಲ ಮುಚ್ಚಿ ರಾತ್ರಿಯ ಕೊರೆವ ಚಳಿಯಲ್ಲಿ ತಣ್ಣಗೆ ಮಲಗಿದ್ದವು. ‘ಬನ್ನಿ ಸಾಬ್ ಸೊಗಸಾದ ಹೌಸ್ ಬೋಟ್ ಇದೆ. ಬಿಸಿನೀರು, ಕಾಫಿ, ಟೀ, ನಾಷ್ಟಾ ಎಲ್ಲಾ ಸಿಗುತ್ತೆ…’ಬಡಬಡಿಸುತ್ತಲೇ ಇದ್ದ ಆ ಎತ್ತರದ ಕಾಶ್ಮೀರಿ ತರುಣ. ಅಜಯ್ ನನ್ನತ್ತ ಒಮ್ಮೆ ನೋಡಿ, ಮತ್ತೆ ಗತ್ಯಂತರವೇ ಇಲ್ಲದೆ, ಆ ವ್ಯಕ್ತಿಯ ಹಿಂಬಾಲಿಸಿ ರಿಕ್ಷಾ ಏರಿದ. ರಿಕ್ಷಾ ಹೊರಟಿತು, ವಿಶಾಲ ರಸ್ತೆಗಳನ್ನು ದಾಟಿ ಗಲ್ಲಿಗಳಿಗೆ ನುಗ್ಗಿತು. ಎಡಬದಿಗೆ ಮುಗಿಲೆತ್ತರಕ್ಕೆ ಬೆಳೆದು ನಿಂತ ಗಿಡಗೆಂಟೆ, ಪೊದೆ…ಬಲಕ್ಕೆ ಅಂಥಹುದೇ ಗಿಡ, ಮರ ಸಂದಿಗಳ ನಡುವೆ ಮೆಲ್ಲ ಮೆಲ್ಲನೆ ಮಿರುಗಿದ ಝೇಲಂನ ನಿಶ್ಯಬ್ದ ನೀರು. ಇಲ್ಲಿ ಮನುಷ್ಯರ ಸುಳಿವೇ ಇಲ್ಲವೆಂಬಂಥಾ ಕಾನನ ಮೌನ. ರಾತ್ರಿಯ ಸೆರಗಿನಲ್ಲಿ ಅಪರಿಚಿತ ನಗರಗಳು ಎಷ್ಟು ಭಯಂಕರವಾಗಿ ಕಾಣುತ್ತವೆ. ಈ ತಿರುವಿನಲ್ಲಿ. ಆ ತಿರುವಿನಲ್ಲಿ ಭಯದ ಭೂತಗಳು ಉದ್ದುದ್ದದ ನೆರಳಾಗಿ ಓಲಾಡುತ್ತವೆ, ನನ್ನ ಬಾಲ್ಯದ ಭೂತಗಳಂತೆ. ಅಂಥದ್ದೇ ಗಲ್ಲಿಯೊಂದರ ನಡುವೆ ಆಟೋ ನಿಂತಿತು. ಸುತ್ತ ಮುತ್ತಲೂ ಜನ ಸಂಚಾರವಗಲೀ, ಬೀದಿ ದೀಪಗಳಾಗಲೀ ಇಲ್ಲದ ಕತ್ತಲ ಹಾದಿ. ಕೆಳಗಿಳಿದು ನೋಡಿದೆ. ಒಂದಿಷ್ಟು ಅರೆಬರೆ ಮೆಟ್ಟಿಲುಗಳು. ತೀರದಿಂದೊಂದಿಷ್ಟು ದೂರದಲ್ಲಿ ನೀರಿನ ಮೇಲೆ ನವಿರಾಗಿ ಹೊಯ್ದಡುತ್ತಿದ್ದ ಹೌಸ್‌ಬೋಟ್. ಅದರೊಳಗಿಂದ ಮೆಲ್ಲನೆ ಮಿಣುಕಿದ ಸಣ್ಣ ದೀಪಗಳು. ಈ ವಿಲಕ್ಷಣ ರಾತ್ರಿಯಲ್ಲಿ, ಕಪ್ಪು ನೀರಿನ ನಡುವೆ ಒಂಟಿ ತೇಲಿದ ಆ ಹೌಸ್‌ಬೋಟ್ ನಾ ಪುಸ್ತಕದಲ್ಲಿ ಓದಿದ ಕಾಶ್ಮೀರಿ ಶಿಕಾರಿಗಳ ರಮ್ಯ ಚಿತ್ರವಂತೂ ಖಂಡಿತಾ ಆಗಿರಲಿಲ್ಲ. ವಿಧಿ ಇಲ್ಲದೆ, ಈ ರಾತ್ರಿ ಹೇಹಾದರೂ ಮುಗಿದರೆ ಸಾಕೆಂದು ಅಜಯನ ಹಿಂಬಾಲಿಸಿದೆ. ದಡದಿಂದ ದೋಣಿಗೆ ಒಂದು ಕಿರಿದಾದ ಹಲಗೆ ಹಾಕಲ್ಪಟ್ಟಿತ್ತು. ಅಜಯ್ ತಟ್ಟನೆ ನನ್ನ ಕೈ ಹಿಡಿದು ಲಡಾಬಡಾಗುಟ್ಟಿದ ಹಲಗೆಯನ್ನು ದಾಟಿಸಿದ. ಒಳಗೆ ವೆರಾಂಡಾ, ಒಂದಿಷ್ಟು ಓಣಿ, ನಂತರ ಡಬಲ್ ಬೆಡ್‌ಗಳ ಕೊಠಡಿ.
‘ಗರಮ್ ಪಾನಿ ಮಿಲೇಗ ಸಾಬ್, ಬಾತ್‌ರೂಮ್ ಅಟ್ಯಾಚ್‌ಡ್ ಹೈ ಸಾಬ್…’ ಅವ ಮತೊಮ್ಮೆ ಒಪ್ಪಿಸಿ ‘ಗುಡ್‌ನೈಟ್ ಸಾಬ್’ ಎಂದು ಹೊರನಡೆದ. ಕೋಣೆ ನನ್ನ ಊಹೆಗೂ ಮೀರಿ ವಿಶಾಲವಾಗಿಯೇ ಇತ್ತು. ಮರದ ಗೋಡೆಗಳ ಹಳೆಯ ಹಲಗೆಗಳ ಮಂಕುಬಣ್ಣ ಕಣದಂತೆ ಕಾಶ್ಮೀರದ ವಿವಿಧ ಪೋಸ್ಟರ್‌ಗಳನ್ನು ಬಲವಾಗಿ ಮೆತ್ತಲಾಗಿತ್ತು. ಒಂದು ಮೂಲೆಗೆ ದೊಡ್ಡ ಕನ್ನಡಿ. ಮಧ್ಯೆ ಎರಡು ಹಾಸಿಗೆಗಳು, ಕಾಶ್ಮೀರಿ ಕಡಾಯಿ ಹಾಕಲಾಗಿದ್ದ ಬಣ್ಣ ಬಣ್ಣದ ದಪ್ಪ ಹೊದಿಕೆ. ಸ್ವಲ್ಪ ದೂರಕ್ಕೆ ಒಂದು ಸೋಫಾ, ಸಣ್ಣ ಮೇಜು. ತಟ್ಟನೆ ಎಲ್ಲಿಯೋ ಕೈದಿಯಾದಂತೆ ಹಾಸಿಗೆಯ ಮೇಲೆ ಕುಳಿತೆ. ಸಣ್ಣ ಕಿಟಿಕಿಗಳಾಚೆ ಬರೀ ಕತ್ತಲು. ಕೆಳಗೆ ಝೇಲಮ್‌ನ ಜುಳುಜುಳು ಸದ್ದು ಮಾತ್ರ ಅತಿ ನವಿರಾಗಿ ತೇಲುತ್ತಿದ್ದ ನಮ್ಮ ರಾತ್ರಿಯನ್ನು ನೆನಪಿಸುತ್ತಿತ್ತು. ನನ್ನ ಆತಂಕ ಇಳಿದೇ ಇರಲಿಲ್ಲ… ಈ ನಡು ರಾತ್ರಿಯಲ್ಲಿ ವಿಲಕ್ಷಣ ಗಲ್ಲಿಯಲ್ಲಿ, ತೇಲುತ್ತಿರುವ ನಾಜೂಕು ಕೋಣೆಯಲ್ಲಿ ಅಜಯನೊಡನೆ…

( ಇಂಥಹುದೇ ಒಂದು ರಾತ್ರಿ ಇತ್ತು. ಮಲಗಿದರೆ ಸಾಕೆಂಬ ರಾತ್ರಿ… ಕಿರಣನೊಡನೆ…
ಅದು ಕೂಡಾ, ಮದುವೆಯ ಮುಂದುವರೆದ ಸಂಪ್ರದಾಯ. ಕೋಣೆ ಹೊಕ್ಕಾಗ ಎರಡು ಮಂಚ, ಒಂದಿಷ್ಟು ಸಿಹಿ ತಿಂಡಿ, ಗಂಧದ ಕಡ್ಡಿ, ಹಾಲಿನ ಲೋಟ ಕರಾರುವಕ್ಕಾಗಿ, ನಿರ್ಲಿಪ್ತವಾಗಿ ಜೋಡಿಸಲ್ಪಟ್ಟಿದ್ದವು. ಇದ್ದದ್ದು ಇಷ್ಟೇ ಅಲ್ಲ. ಗೋಡೆಯ ಮೇಲೆ ಮಂಚದತ್ತಲೇ ದುರುಗುಟ್ಟಿ ನೋಡುತ್ತಿದ್ದ ತಾತ-ಅಜ್ಜಿಯರ ೧ ೧/೨ ಇಂಟು ೨ ಅಡಿಯ ಕಟ್ಟು ಹಾಕಿದ ಚಿತ್ರ. ಪಕ್ಕಕ್ಕೆ ಲಕ್ಷ್ಮಿ, ಸರಸ್ವತಿ ಗಣೇಶರ ಹೂ ಏರಿಸಿದ ದೊಡ್ಡ ಪಟ. ಬಾಗಿಲ ಹೊರಗೇ, ಮನೆ ತುಂಬಾ ತುಂಬಿ ನಿಂತಿದ್ದ ಅಕ್ಕಂದಿರು, ಭಾವಂದಿರು, ತಲಾ ಎರಡೆರಡು ಪಿಳ್ಳೆಗಳು, ನಿಲ್ಲದ ನಿರರ್ಗಳ ಗದ್ದಲ, ಗಲಾಟೆ. ವಾಹ್ ಎಂಥ ರೊಮಾಂಟಿಕ್ ರಾತ್ರಿ! ಕಿರಣ್ ನನ್ನ ಕೈ ಸ್ಪರ್ಷಿಸುವುದಕ್ಕಿಲ್ಲ ‘ಪ್ಲೀಸ್…’ ಎಂದು ಕೊಸರಿದೆ. ಏಕೆ ಎಂಬಂತೆ ನೋಡಿದ. ‘ತಾತ-ಅಜ್ಜಿ ನೋಡ್ತಾ ಇದ್ದಾರೆ’ ಫೋಟೋದತ್ತ ಕೈ ತೋರಿಸಿ ಹೇಳಿದೆ. ಕಿರಣ್ ಗಹಗಹಿಸಿ ನಕ್ಕ. ಹೊರಗೆ ಕೇಳಿಸೀತೆಂದು ನಾನು ಅವನ ಬಾಯಿ ಮುಚ್ಚಿದೆ. ಮೆಲುವಾಗಿ ನನ್ನ ಕೈ ಹಿಡಿದ. ‘ಹೆದರಬೇಡ, ನಮ್ಮ ಬೆಂಗಳೂರ ಫ್ಲಾಟಿನಲ್ಲಿ ತಾತ-ಅಜ್ಜಿ, ಲಕ್ಷ್ಮಿ, ಗಣಪತಿಯರ ಭಯ ಇಲ್ಲ’ ಅಂದ. ಮತ್ತೆ ‘ತುಂಬಾ ಸುಸ್ತಾಗಿದ್ದೀಯ, ಬೆಳಗ್ಗಿಂದಾ ಹೊಗೆ ಕುಡಿದು, ಮಲಗು’ ಎಂದು ದೀಪವಾರಿಸಿದ.
ಭಯವಿತ್ತು…ಬೆಂಗಳೂರಿನ ಫ್ಲಾಟಿನಲ್ಲಿಯೂ. ನಾ ಭಯವನ್ನು ಜೊತೆಗೇ ತಂದಿದ್ದೆ ಬಾಲ್ಯದಿಂದ. ಬಿದಿರು ಮೆಳೆಗಳ ಭೂತಬಂಗಲೆಯಿಂದ. ಅಪ್ಪನ ಕೆಂಡದುಂಡೆಯ ಕನ್ಣುಗಳು ಅಗಳಿ ಇಟ್ಟ ನಮ್ಮ ಬೆಡ್‌ರೂಮಿನ ಒಳಗೂ ನುಗ್ಗಿಬಿಡುತ್ತಿದ್ದವು.)

ಈ ಕಪ್ಪು ರಾತ್ರಿಯಲ್ಲಿ ಕೆಂಡದುಂಡೆಯ ಕಣ್ಣುಗಳೆರಡು ಅತ್ಯಂತ ನಿಷ್ಠುರವಾಗಿ ನಮ್ಮನ್ನು ಕಾಯುತ್ತಿದ್ದಂತೆ ಅನಿಸಿ, ಎದ್ದು ನೇರ ಕುಳಿತೆ.
‘ನೀವು ಮಲಗಿ ಅನು…’ ಅಜಯನ ದನಿ ಕೇಳಿ ಎಚ್ಚೆತ್ತೆ. ‘ನನಗಂತೂ ನಿದ್ದೆ ಹಾರಿ ಹೋಗಿದೆ. ಆಗಲೇ ಮೂರೂವರೆ ಗಂಟೆ, ಬೆಳಗಾಗಲಿ ಬೇರೆ ಕಡೆ ನೋಡೋಣ. ನಮ್ಮ ಕಾನ್‌ಫರೆನ್ಸ್ ವ್ಯವಸ್ಥಾಪಕರೇ ಸಿದ್ಧತೆ ಮಾಡಬಹುದು’ ಅಂದ.
‘ನೀವೂ ಮಲಗಿಬಿಡಿ, ಸುಸ್ತಾಗಿದ್ದೀರ…’ ಅವ ಸೋಫಾದ ಮೆಲೆ ಹಾಗೇ ಉರುಳಿದ. ನಾ ಬೆಡ್‌ಶೀಟ್ ತೆಗೆದುಕೊಟ್ಟೆ. ನಾನಿನ್ನೂ ಕುಳಿತೇ ಇರುವುದನ್ನು ನೋಡಿ-
‘ನೀವು ಬಟ್ಟೆ ಬದಲಿಸಬೇಕಾ… ನಾ ಬೇಕಾದರೆ ಹೊರಗೆ ಹೊಗುತ್ತೇನೆ…’ ಏಳಲು ಹೊರಟ.
‘ಇಲ್ಲ.. ಇಲ್ಲ.. ಹೀಗೆ ಇರಲಿ, ಇನ್ನೇನು ಎರಡು ಮೂರು ಗಂಟೆ ತಾನೆ…’ ನಾ ಸೀರೆ ಬದಲಿಸದೆ ಹಾಗೇ ಹಾಸಿಗೆಯ ಮೇಲೆ ಉರುಳಿದೆ. ದೀಪ ಉರಿಯುತ್ತಲೇ ಇತ್ತು. ಆಯಾಸದಿಂದ ಕಣ್ಣುಗಳು ಮುಚ್ಚಿದರೂ ವಿಚಿತ್ರ ಭಯ. ಯಾರೋ ನಾಲ್ವರು ಧಾಂಡಿಗರು ಬಾಗಿಲು ಒದ್ದುಕೊಂಡು ಬಂದಂತೆ… ಧಡಾ ಧಡಾ ಬಡಿದಂತೆ… ದುಃಸ್ವಪ್ನಗಳ ನಡುವೆಯೇ ನಿದ್ದೆ ಆವರಿಸಿತ್ತು.

*
*
*
ದಿನಾಂಕ ೨, ಜೂನ್, ೧೯೮೯

ಮರುದಿನ, ಸೂರ್ಯ ಕಿರಣ ಕೆನ್ನೆಯ ಮೇಲೆ ಚುರುಗುಟ್ಟಿದಾಗ ಕನ್ಣುಬಿಟ್ಟೆ. ಪಕ್ಕಕ್ಕೆ ತಿರುಗಿದೆ. ಸೋಫಾ ಖಾಲಿಯಾಗಿತ್ತು. ಒಳಗೆ ಬಚ್ಚಲಲ್ಲಿ ನಲ್ಲಿ ನೀರಿನ ಸದ್ದು. ಮೆಲ್ಲನೆ ಎದ್ದು ಕುಳಿತೆ. ಕಿಟಿಕಿಯ ಪರದೆ ಸರಿಸಿ ಹೊರಗಿಣುಕಿದೆ. ‘ಮೈ ಗಾಡ್…’ ನನಗರಿವಿಲ್ಲದೆ ಹೊರಟ ಉದ್ಗಾರ. ಬಾಗಿಲು ತೆರೆದು ಹೌಸ್‌ಬೋಟಿನ ಹೊರ ಆವರಣಕ್ಕೆ ಓಡಿ ಬಂದೆ. ರಾತ್ರಿಯ ಕತ್ತಲಲ್ಲಿ ದುಃಸ್ವಪ್ನವಾಗಿ ಕಾಡಿದ ಅಪರಿಚಿತ ನಗರಿ, ಮುಂಜಾನೆಯ ಹೊಗಿರಣದಲ್ಲಿ ಫಳ ಫಳ ಹೊಳೆದ ಝೇಲಮ್‌ನ ಬಂಗಾರದ ಬಣ್ಣದಲ್ಲಿ, ಹಸಿರ್ಹಸಿರಾಗಿ ತೂಗಾಡಿದ ಗಿಡಮರಗಳ ನಡುವೆ, ರಾಶಿ ರಾಶಿ ಬಳ್ಳಿ ಗುಲಾಬಿ, ಹೆಸರಿಸದ ಹೂ ಗೊಂಚಲ ಮಡಿಲಲ್ಲಿ. ಕಾಶ್ಮೀರದ ಸ್ವರ್ಗೀಯ ಬೆಳಗು ಕಣ್ಣು ಬಿಡುತ್ತಿತ್ತು. ಇರುಳ ನೆರಳುಗಳೆಲ್ಲ ಚೆದುರಿ ಚೆಲ್ಲಾಪಿಲ್ಲಿಯಾಗಿ, ಸುತ್ತಲೂ ಕಣ್ಣು ಹಾಯಿಸಿ ನಿಂತೆ. ದಡದಿಂದ ಕೊಂಚವೇ ದೂರದಲ್ಲಿ ತಗಡಿನ ಮನೆಯ ಒಳಗಿನಿಂದ ಮಕ್ಕಳ ಚಿಲಿಪಿಲಿ ಸದ್ದು, ಮುರುಕು ಕಿಟಿಕಿಯ ಕಸೂತಿ ಹಾಕಿದ ಹರಕು ಪರದೆ ಸರಿಸಿ, ಕೆಂಪು ಫೆರೆನ್ ಏರಿಸಿದ ಸುಂದರ ಹೆಂಗಸು ಹೊರಗಿಣಿಕಿ-
‘ಕಾಫಿ, ಚಾಯ್, ಕಾವಾ… ಏನು ಬೆಕು ಮೇಮ್‌ಸಾಬ್…’ ಕೂಗಿದಳು. ರಾತ್ರಿ ಕರೆತಂದ ಆತನ ಹೆಂಡತಿ ಇರಬೇಕು. ತಲೆ ಆಡಿಸಿದೆ. ಒಳಗಿಂದ ಮುಖ ತೊಳೆದು ಹೊರಬಂದ ಅಜ್ಯ್.
‘ಗುಡ್ ಮಾರ್ನಿಂಗ್…’ ಎಂದು ಮುಗುಳ್ನಕ್ಕ.
‘ಎಷ್ಟು ಸುಂದರವಾಗಿದೆ…’ ನಾ ಪೂರಾ ಮೈಮರೆತು ಹೇಳಿದೆ. ರಾತ್ರಿ ಇದೇ ಸ್ಥಳ ಎಷ್ಟು ಭಯಂಕರವಾಗಿ ಕಂಡಿತ್ತು. ಈಗ ಊಹಿಸುವುದೂ ಹಾಸ್ಯಾಸ್ಪದವಾಗಿತ್ತು.
‘ನಾನೂ ಮುಖ ತೊಳೆದು ಬರ್ತೇನೆ….’ ಬಾತ್‌ರೂಂ ಹೊಕ್ಕೆ. ನೇರ ನಿಂತ ನಲ್ಲಿ ತಿರುಗಿಸಿದೆ. ಧಾರಾಳ ನೀರು ಸುರಿಯಿತು. ಆಚೆಗೆ ಒಂದು ರಂದ್ರ-ನೇರ ತಳದ ಝೇಲಮ್‌ಗೆ… ಇಸ್ಸಿ ಎನಿಸಿ ಹೇಗೋ ಹಲ್ಲುಜ್ಜಿ ಮುಖ ತೊಳೆದು ಹೊರ ಬಂದೆ.
‘ಸ್ನಾನಕ್ಕೆ ಬಿಸಿ ನೀರು ತರಿಸಲೆ?’ ಅಜಯ್ ಕೇಳಿದ.
‘ಬೇಡ… ಇಲ್ಲಿ ಹಿಡಿಸೋಲ್ಲ. ಯಾವುದಾದರೂ ನೆಲದ ಮೇಲಿರೋ ಕೋಣೆ ಹಿಡಿಯೋಣ…’ ಅಂದೆ.
‘ಓ. ಕೆ. ಹಾಗಾದ್ರೆ ತಯಾರಾಗಿ…’
ಏಳೂವರೆಗೆಲ್ಲ ಸಿದ್ಧವಾಗಿ ಹೊರಟು ನಿಂತಾಗ, ಆತ ಓಡೋಡಿ ಬಂದ-‘ಏಕೆ ಸಾಬ್… ಇಲ್ಲಿ ಎಲ್ಲ ವ್ಯವಸ್ಥೆ ಇದೆ. ಗರಮ್ ಪಾನಿ…’ ಮತ್ತೊಮ್ಮೆ ಪ್ರಾರಂಭಿಸಿದ.
‘ಹಮೆ ಜಾನಾ ಹೈ…’ ಎಂದಶ್ಟೆ ಹೇಳಿದೆ. ೧೫೦ ರೂಪಾಯಿ ಹಾಕಿದ ಬಿಲ್ ಕೈಗಿಟ್ಟ. ಅಜಯ್ ಜೇಬಿಗೆ ಕೈ ಹಾಕಿದ. ನಾ ತಡೆದು, ಪರ್ಸ್‌ನಿಂದ ಎಣಿಸಿ ಕೊಟ್ಟೆ. ಅಜಯ್ ಅಭ್ಯಂತರ ಹೇಳಲಿಲ್ಲ. ಸುಮ್ಮನೆ ನಕ್ಕ. ಏರ್‌ಬ್ಯಾಗ್ ಹಿಡಿದು ನಡೆದೆ.
ತೆರೆದು ನಿಂತ ಕಾಶ್ಮೀರದ ಬಾಹುಗಳಲ್ಲಿ ಎಂಥವುದೋ ಮಾಂತ್ರಿಕ ಶಕ್ತಿ ತುಂಬಿತ್ತು. ಪುಟ್ಟ ಪುಟ್ಟ ಮನೆಗಳು, ನದಿಯ ಎರಡೂ ಬದಿಗೆ ಬಣ್ಣ ಬಣ್ಣದ ಹೌಸ್ ಬೋಟುಗಳು. ಪ್ರಕೃತಿಯ ಅಮಾಲಿನ್ಯ ಸಹಜತೆ. ಹಾದಿಬದಿಯ ಗುಲಾಬಿ ಕಿತ್ತು ಅಜಯ್ ನನ್ನ ಕೈಗಿಟ್ಟ. ಕಣ್ಣೆತ್ತಿ ನೋಡಿದೆ. ತೆರೆದ ನೀಲಿ ಆಗಸ. ಸುತ್ತ ಬೆಟ್ಟಗಳ ಸರಹದ್ದು. ಮುಗಿಲಿಗೆ ಮುತ್ತಿಟ್ಟು ನಿಂತ ಚಿನಾರ್ ವೃಕ್ಷಗಳು. ಬೆಂಗಳೂರಿನ ಫ್ಲಾಟ್‌ಗಳ ನಡುವೆ ಇಣುಕಿದ ಹರಕು ಮುರುಕು ಆಗಸವಲ್ಲ. ಫ್ಯಾಕ್ಟರಿ ಸೈರನ್ನಿಗೆ ಕೀಲಿ ಕೊಟ್ಟ ಜೀವಂತ ರೊಬಾಟ್‌ಗಳ ತಡಬಡಿಸಿದ ಓಡಾಟವಿಲ್ಲ. ಒಳಗೆಲ್ಲೋ ಉದ್ಭವಿಸಿ ಚಿಮ್ಮುವ ಪ್ರೇಮ-ಕಾಮಗಳಿಗೆ ಹೊದಿಸಿ ಮುದುರಿಡುವ ಪಟ್ತಣದ ಪ್ರಾಯಾಸವಿಲ್ಲ. ಅಜಯ್ ಕೈ ನೀಡಿದ. ಕ್ಷಣ ಕೂಡಾ ಅಳುಕದೆ, ಅವನ ಬಿಸಿ ಹಸ್ತದಲ್ಲಿ ಕೈ ಇಟ್ಟು ನಡೆದುಬಿಟ್ಟೆ.
ನಮ್ಮ ನಡುವೆಯೊಂದು ಕಿಡಿ ಇತ್ತು. ಹೊತ್ತಿ ಉರಿಯಲು ಭುಗಿಲೆದ್ದು ಆಸ್ಪೋಟಿಸಲು ಕಾದಿದ್ದ ಕಿಡಿ. ನನಗೆ ಆ ಆಸ್ಪೋಟ ಮುಖ್ಯವಿರಲಿಲ್ಲ. ಆ ಸಾಧ್ಯತೆಯ ಅರಿವಷ್ಟೇ ಸಾಕಿತ್ತು ಖುಶಿ ಕೊಡಲು. ತಣ್ಣಗೆ ಮಲಗಿದ್ದ ನನ್ನೊಳಗಿನ ಅಗ್ನಿಪರ್ವತದ ಮೊಟ್ಟ ಮೊದಲ ಅನುಭವವಾಗಿತ್ತು. ಅಪ್ಪ ಹಾಕಿದ ಬೇಲಿ ಅಲ್ಲೆಲ್ಲೊ ಬೆಂಗಳುರಲ್ಲೆ ಕೊನೆಯಾಗಿರಬೇಕು. ಈ ಕಣಿವೆ ಆ ಸರಹದ್ದಿನಾಚೆ ಮೈ ಚಾಚಿದೆ ಎಂದುಕೊಂಡೆ.
ಕೊಂಚ ದೂರವಿದ್ದ ಲಾಡ್ಜ್‌ನಲ್ಲಿ ಅಕ್ಕಪಕ್ಕದ ಕೋಣೆ ಹಿಡಿದೆವು.
‘ನೀವು ಸ್ನಾನ ಮಾಡಿ ತಯಾರಾಗಿ, ಒಂಬತ್ತಕ್ಕೆ ಹೊರಡೋಣ. ಹತ್ತಕ್ಕೆ ಕಾನ್‌ಫರೆನ್ಸ್ ಸುರು ಆಗುತ್ತೆ…’ ಅಂದ. ಏರ್‌ಬ್ಯಾಗ್ ಹಾಸಿಗೆಯ ಮೇಲೆಸೆದು ಕಿಟಿಕಿಯ ಪರದೆ ಸರಿಸಿದೆ. ಅಂಗಳದ ಚಿನಾರ್ ವೃಕ್ಷಗಳ ಸಂದಿನಲ್ಲಿ ಸೂರ್ಯ ಕಣ್ಣು ಮಿಟುಕಿಸಿದ.
ಒಂಬತ್ತಕ್ಕೆಲ್ಲ ತಿಂಡಿ ಮುಗಿಸಿ, ಇನ್‌ಸ್ಟಿಟ್ಯೂಟಿನ ವಿಳಾಸ ಹುಡುಕಿ ಹೊರಟೆವು. ಆಗಲೇ ವ್ಯವಸ್ಥಾಪಕರು ಗಡಿಬಿಡಿಯಿಂದ ನೊಂದಾಣಿಸಲು ತಯಾರಾಗಿ ನಿಂತಿದ್ದರು. ನನ್ನ ಅಫಿಶಿಯಲ್ ಪೇಪರ್ಸ್ ತೆಗೆಯುತ್ತಾ, ನೊಂದಾಣಿಸಿ, ಎದೆಗೊಂದು ಹೆಸರಿನ ಫಲಕ ತಗುಲಿಸಿಕೊಂಡು ಹೊರಬಂದೆ.
‘ಒಳಗೆ ಹೋಗೋಣ ನಡೀರಿ…’ ಅಜಯ್ ಹೇಳಿದ. ಉದ್ಘಾಟನೆಗೆನೋ ಮುಖ್ಯಮಂತ್ರಿಗಳು ಬರುವುದಿದ್ದ ಕಾರಣ ಎಲ್ಲಿಲ್ಲದ ಸಿದ್ಧತೆ ಇತ್ತು. ಒಬ್ಬೊಬ್ಬರ ಕೈಚೀಲಗಳನ್ನು ಪರಿಶೀಲಿಸಿ ಅಂಗುಷ್ಟದಿಂದ ನೆತ್ತಿಯವರೆಗೆ ಮೆಟಲ್ ಡಿಟೆಕ್ಟರ್ ಹಾಯಿಸಿ ಒಳಬಿಟ್ಟರು. ನನ್ನ ಪಕ್ಕಕ್ಕೇ ಕುಳಿತ ಅಜಯ್ ತುಸು ಬಾಗಿ-
‘ಅಂದ ಹಾಗೆ ಅನು, ನೀವು ಪ್ರೆಸೆಂಟ್ ಮಾಡ್ತಾ ಇರೋದೇನು?’ ನನಗೆ ಒಮ್ಮೆಗೇ ನಗು ಬಂತು. ಇಲ್ಲಿಯವರೆಗೂ ನಾ ಕಣಿವೆಗೆ ಬಂದ ಕಾರಣ ಕೂಡಾ ಮರೆತು ಹೋಗಿತ್ತು. ನನಗೇಕೋ ಈಗಲೂ ಅನುಮಾನವಿತ್ತು. ಜಮ್ಮುವಿನಲ್ಲಿ ಅಜಯ್ ಸಿಕ್ಕಾಗಲಿಂದ ನಾ ಕಣಿವೆಗಿಳಿದಿದ್ದು ಈ ಪೇಪರ್ ಓದಲು ಅಲ್ಲವೇ ಅಲ್ಲ ಅನಿಸಿತ್ತು. ಅನ್ವೇಷಿಸದೇ ಉಳಿದ ಬಾಲ್ಯ-ಯೌವನಗಳನ್ನು, ತೆರೆದುಕೊಳ್ಳದೆ ಅದುಮಿಟ್ಟ ಪ್ರೀತಿ-ಸ್ನೇಹಗಳನ್ನು, ಬೇರೊಂದು ಆಯಾಮದಲ್ಲಿ ಪರಿಶೋಧಿಸದೆ ಬಿಟ್ಟ ಸಂಬಂಧಗಳನ್ನು ಹುಡುಕಿ ಹೊರಟಂತಿತ್ತು. ನನ್ನ ಸುತ್ತಲ ವಿಜ್ಞಾನಿಗಳು, ವೇದಿಕೆ ಮೇಲಿನ ಮೇಧಾವಿಗಳು, ಮುಖ್ಯಮಂತ್ರಿಗಳ ಭಾಷಣ, ಈ ಕಣಿವೆಯ ಅಗಾಧ ಸೌಂದರ್ಯದ ನಡುವೆ, ಅಗೋಚರ ಪ್ರೀತಿಯ ನಡುವೆ, ಎಷ್ಟೊಂದು ಅಸಹಜವಾಗಿ ಅಸಂಬಧವಾಗಿ ಕಾಣಹತ್ತಿತ್ತು.
‘ವಾಟರ್ ಲಾಗಿಂಗ್ ಬಗ್ಗೆ…’ ಮೆಲ್ಲಗೆ ಅಜಯ್‌ಗೆ ಹೇಳಿದೆ.
‘ಫೀಲ್ಡ್ ವರ್ಕ್ ಮಾಡಿದ್ದೀರಾ…’ ಕೇಳಿದ.
‘ಹೂಂ…. ಪೂರಾ ಕರ್ನಾಟಕದ ಡಾಟಾ ಸಂಗ್ರಹಿಸಿದ್ದೆನೆ. ಒಂದು ರೀತಿ ನನ್ನ ಮಃತ್ವಾಕಾಂಕ್ಷೆಯ ಪ್ರಬಂಧ, ಎರಡು ವರ್ಷಗಳ ಪರಿಶ್ರಮ. ಹಾಗಾಗೇ ಇಷ್ಟು ದೂರವಾದರೂ ಬಂದು ಓದುವ ಉತ್ಸಾಹ ಇತ್ತು…’
‘ಏಕೆ, ಈಗ ಇಲ್ಲವಾ…?
‘ಗೊತ್ತಿಲ್ಲ. ನಾ ಬಂದ ಕಾರಣಗಳೇ ಕಲಸುಮೇಲೋಗರ ಆಗ್ತಾ ಇದೆ…’ ಅಜಯ್ ನಕ್ಕ. ಎಲ್ಲ ಬಲ್ಲ ನಗು ಅದು.
‘ನೀವು ಏನು ಮಾಡ್ತಾ ಇದ್ದೀರಾ ಅಜಯ್?’ ಕೇಳಿದೆ.
‘ಸಂಶೋಧನೆಯೇ ಉದ್ಯೋಗವಾದಾಗ ಏನಾದರೊಂದು ಇರಲೇ ಬೇಕಲ್ಲ. ಆದ್ರೆ ನಾ ಈ ಕಣಿವೆಗೆ ಬಂದದ್ದು ವಾಟರ್ ಲಾಗಿಂಗ್, ಜಲಶಾಸ್ತ್ರದ ಬಗ್ಗೆ ಹೆಚ್ಚಿನ ಮಾಹಿತಿಗಲ್ಲ…’
‘ಮತ್ತೆ ಕಾಶ್ಮೀರ ನೋಡಲು…’
‘ಅದೂ ಅಲ್ಲ….’ಎಂದವನು ಕೊಂಚ ತಡೆದು ನಂತರ ‘ಆಮಂತ್ರಣ ಪತ್ರದಲ್ಲಿ ನಿಮ್ಮ ಹೆಸರು- ಪ್ರಬಂಧ ನೋಡಿದೆ…’ ಅಂದ. ನಾ ಅರ್ಥವಾಗದೆ ಅವನನ್ನೇ ದಿಟ್ಟಿಸಿದೆ. ಅವ ಸುಮ್ಮನೆ ನಕ್ಕ, ಮತ್ತೇನೂ ಹೇಳಲಿಲ್ಲ್…. ಹೇಳಬೇಕಾಗಿರಲಿಲ್ಲ. ಪ್ರೀತಿಯನ್ನು ಇಷ್ಟೊಂದು ಸಹಜವಾಗಿ ತೆರೆದಿಡಲು ಅಜಯ್‌ಗೆ ಮಾತ್ರ ಸಾಧ್ಯವೇನೊ. ನನ್ನೊಳಗಿನ ಸಂಕೋಚಗಳನ್ನು ಹೊರಗಟ್ಟಿ ಭಾವನೆಗಳಿಗೆ ಬಾಯಿಕೊಡಲು ಇಲ್ಲಿ ಕಣಿವೆಯಲ್ಲಿ ಮಾತ್ರ ಸಾಧ್ಯ. ಈ ಏರಿ ನಿಂತ ಬೆಟ್ಟಗಳಾಚಿನ ಜಗತ್ತಿಗೆ ನಮ್ಮ ಈ ಸ್ವರಗಳು ಕೇಳದೆಂಬ ಧೈರ್ಯವೇ ನಮಗೆ? ಈ ಕಣಿವೆಯಾಚಿನ ಬದುಕು ಸದ್ಯಕ್ಕೆ ಅಗೋಚರವೆಂದೆ?
ಆ ದಿನ ಕಳೆದದ್ದು ತಿಳಿಯಲಿಲ್ಲ. ಏನೇನೋ ಪ್ರಬಂಧಗಳು, ಚರ್ಚೆಗಳು. ಈ ಮಧ್ಯೆ ಏರಿಳಿದ ನನ್ನ ಒಳತೋಟಿಯ ನಡುವೆಯೂ ವೃತ್ತಿಗೆ ಅಭ್ಯಾಸವಾದ ಆತ್ಮವಿಶ್ವಾಸದಲ್ಲಿ ನನ್ನ ಪ್ರಬಂಧ ಮಂಡಿಸಿದ್ದೆ. ಒಂದಿಷ್ಟು ಪ್ರಶ್ನೆ-ಉತ್ತರ. ಚರ್ಚೆ ಮುಗಿದಿತ್ತು. ನಾ ಪ್ರಯತ್ನಪೂರ್ವಕವಾಗಿ ಅಜಯನ ಕಣ್ಣುಗಳನ್ನು ತಪ್ಪಿಸಿ ಮಾತನಾಡಿದೆ.

*
*
*

ಸಂಜೆ ಸೆಮಿನಾರ್ ಮುಗಿದೊಡನೆ ಹಾಗೇ ಶಾಲಿಮಾರ್ ಉದ್ಯಾನದತ್ತ ಆಟೋ ಹಿಡಿದೆವು. ಬಹಳ ಹೊತ್ತು ನಮ್ಮ ನಡುವೆ ವಿಚಿತ್ರ ಮೌನ. ನಂತರ ಒಮ್ಮೆಗೇ ಅಜಯ್ ಮತ್ತೆ ಮಾತಿಗೆ ಆರಂಭಿಸಿದ. ಅಲ್ಲಿಯವರೆಗೂ ಅವ ಹೇಳಿದ್ದೆಲ್ಲ ಕೀಟಲೆಯೇನೋ ಎಂಬಂಥ ಪುಂಡ ಹುಡುಗನ ನಗುವಿತ್ತು. ಈ ಹುಡುಗ ಬದುಕನ್ನು ಪೂರಾ ಪೂರಾ ಬದುಕಲು ಹೊರಟವನು. ಯಾರ ನಿರ್ಬಂಧನೆ, ನಿರಾಕರಣೆಯೂ ಇವನ ಜೀವನೋತ್ಸಾಹಕ್ಕೆ ಕಟ್ಟೆ ಹಾಕಲಾರವು.
ಉದ್ಯಾನದ ಎದುರು ಆಟೋ ನಿಂತಿತು. ಮೆಟ್ಟಿಲು ಏರಿ ಮೇಲೆ ಹೋದೆವು. ಬೆಟ್ಟದ ಹಿನ್ನೆಲೆಯಲ್ಲಿ ಹರಿದು ಬಂದ ನೀರು, ಸುತ್ತ ಹಸಿರು ಹಾಸು. ಚಳಿ ಕಳೆದ ಬೇಸಗೆಯ ಚಿತ್ತಾರದ ಹೂಗಳು. ಹರಿವ ನೀರಿನ ನಡುವೆ ಹಾಕಿದ ಕಲ್ಲು ಹಾಸಿನ ಮೇಲೆ ಕುಳಿತು ನೀರಿಗೆ ಕಾಲು ಇಳಿಬಿಟ್ಟೆವು. ಅಜಯ್ ಅದೂ ಇದೂ ಹರಟುತ್ತಿದ್ದ.
‘ನೀವೂ ಬರೀತೀರಾ ಅಜಯ್… ಕತೆ…ಕವನ…’ ಬೇರೇನು ಕೇಳಲು ತಿಳಿಯದೆ ಕ್ಲೀಷೆಯಾದ ಪ್ರಶ್ನೆ ಹಾಕಿದೆ.
‘ಇಲ್ಲ, ಕವಿತೆಯಾಗಿ ಗಂಟು ಕಟ್ಟಿ ಇಡೋಕೆ ಏನೂ ಉಳಿಸಿಕೊಂಡಿಲ್ಲ. ಎಲ್ಲ ವದರಿಕೊಂಡು ಬಿಡುವ ನನ್ನ ಸ್ವಭಾವಕ್ಕೆ ಸಾಹಿತ್ಯವೂ ಅಂಟೋಲ್ಲ. ನಿಮ್ಮ ಕವನ ನೋಡಿದ್ದೆ. ತಟ್ಟನೆ ಏಕೋ ಆಪ್ತವಾದುವು. ಬಹುಶಃ ಆ ಪದಗಳಲ್ಲಿ ಅಷ್ಟೆಲ್ಲ ಸಾಮರ್ಥ್ಯ ಇತ್ತೋ ಇಲ್ಲವೋ ಗೊತ್ತಿಲ್ಲ, ಅವಕ್ಕೆ ನಾ ಕೊಟ್ಟ ಅರ್ಥಗಳೇ ಸತ್ಯವಾದುವು. ಹೇಳಿ, ಹಾಯಾಗಿ ನಿಮ್ಮ ಹೈಡ್ರಾಲಿಕ್ಸ್ ಹಿಡಿದು ನೀರನ್ನು ಅಳೆದುಕೊಂಡಿರೋ ಬದಲು ಈ ಕವಿತೆಗಳ ಗೊಂದಲಕ್ಕೇಕೆ ಬಿದ್ದಿರಿ? ಸಾಹಿತ್ಯ ಸೇವೆ ಅಂತೆಲ್ಲ ಆರಂಭಿಸಬೇಡಿ ಪ್ಲೀಸ್, ಎಲ್ಲ ಕಾವ್ಯಕ್ಕೂ ಅತ್ಯಂತ ವೈಯಕ್ತಿಕ ಕಾರಣಗಳಿರುತ್ತೆ ಅಂತಲೇ ನನ್ನ ನಂಬುಗೆ, ನಿಜಾನಾ?’ ನನಗೆ ಉತ್ತರ ಹೊಳೆಯಲಿಲ್ಲ. ಹೊಳೆದ ಉತ್ತರ ಹೇಳುವುದೋ ಬೇಡವೋ ಹಿಂಜರಿದೆ.
‘ನೀವು ಹೇಗೇ ಬರೆದಿದ್ರೂ ಅಲ್ಲೊಂದಿಷ್ಟು ಪ್ರಾಮಾಣಿಕತೆ ಇದೆ ಅನು. ನೀವು ಇಷ್ಟ ಪಡುವುದಕ್ಕಿಂತ ಹೆಚ್ಚೇ ಅವು ಹೇಳಿಬಿಡುತ್ತವೆ ನಿಮ್ಮ ಬಗ್ಗೆ…’ ಅವನ ಮುಗುಳ್ನಗೆಯ ನೇರ ಕಣ್ಣುಗಳಿಗೆ ನಾ ಪಾರದರ್ಶಕವಾದಂತೆ ಅನಿಸತೊಡಗಿತು.

ಬದುಕಿನಲ್ಲಿ ಪ್ರಾಮಾಣಿಕಳಾಗದ ನಾನು ಕವಿತೆಗಳಲ್ಲಿ ಅಪ್ಪಟ ಸತ್ಯಗಳನ್ನು ಹೇಳಿದ್ದೆ. ರೊಮಾನ್ಸ್‌ಗಳನ್ನು ಓದದ, ಸಿನಿಮಾಗಳಿಗೆ ತಿರುಗದ, ಗಂಡು ಹುಡುಗರು-ಹುಚ್ಚು ಪ್ರೇಮಗಳು ತನಗೆ ಸಂಬಂಧವೇ ಇಲ್ಲವೆಂಬಂತೆ ನಟಿಸಿದ ಅನು ಎಂಬ ಈ ಹುಡುಗಿ, ಬಾಲ್ಯದಲ್ಲಿ ಅಪ್ಪ ಹೇರಿದ ಗಂಭೀರತೆಯ ಶಿಲುಬೆಯನ್ನು ಕಾಲೇಜಿಗೂ ಹೊತ್ತು ಹೊರಟಿದ್ದಳು. ಅದರಾಚಿನ ಸಂಶೋಧನೆ ಉದ್ಯೋಗಕ್ಕೂ, ಕಡೆಗೆ ಮದುವೆ-ಬೆಡ್‌ರೂಮಿಗೂ. ‘ಅನು ಬಹಳ ಗಂಭೀರ ಹುಡುಗಿ…’ ‘ಡಾ. ಅನು ತುಂಬಾ ರಿಸರ್‌ವ್ಡ್…’ ಈ ಬಿರುದುಗಳ ಬಿರುಕಿನಲ್ಲಿ ಬದುಕಿನ ಬಣ್ಣಗಳೆಲ್ಲ ಸೋರಿ ಹೋದದ್ದು, ಕ್ಯಾನ್‌ವಾಸ್ ಖಾಲಿಯಾದದ್ದು ತಿಳಿದಾಗ ತಡವಾಗಿತ್ತು, ಸಾಕಷ್ಟು ತಡವಾಗಿತ್ತು. ನಾ ಬದುಕಲಾರದ ಬದುಕನ್ನು ಬದುಕ ಹೊರಟೆ ಕವನಗಳಲ್ಲಿ. ನನಗಾದರೂ ಸಾಹಿತ್ಯದ ಗಂಧವೆಲ್ಲಿತ್ತು? ಕಾವ್ಯದ ನೀತಿ ನಿಯಮಗಳನ್ನು ಛಂದಸ್ಸು ಮಾತ್ರೆಗಳನ್ನು ಕಲಿತದ್ದೆಲ್ಲಿ ಬಂತು? ಬರೆಯಲೇ ಬೇಕಾದ ಒತ್ತಡಗಳನ್ನು, ಹಂಚಿಕೊಳ್ಳಲೇ ಬೇಕಾದ ಭಾವನೆಗಳನ್ನು ಹೊರಗಟ್ಟಲಿಕ್ಕೆ ನನಗಿದ್ದ ಒಂದೇ ರಂಧ್ರ-ಕವನ. ಕಾವ್ಯನಾಮದಡಿಯ ಸುರಕ್ಷಣೆಯಲ್ಲಿ ಬರೆದೆ, ಗೆಳತಿಯ ವಿಳಾಸ ಕೊಟ್ಟು. ನನ್ನ ಕವನಗಳೆಲ್ಲ ಆ ಕ್ಷಣದ ಗುರಿ ‘ಅವನಾಗಿದ್ದ’. ನನ್ನ ಅವನ ನಡುವೆ ನಿಂತ ಅಪ್ಪ-ಅಮ್ಮ-ಅಕ್ಕಂದಿರು ನಿರ್ಮಿಸಿದ ಕೊರಕು ಕಂದರಕ್ಕೆ ಹಾಕಿ ನಿಂತ ಹಲಗೆಯಾಗಿತ್ತು ನನ್ನ ಕವನ. ಅವ ಅವನ್ನು ಓದಬೇಕು, ಅವನಿಗಷ್ಟು ನನ್ನೊಳಗಿನ ಅನಿಸಿಕೆಗಳು ಮುಟ್ಟಬೇಕು. ಅವನಿಗವು ತಲುಪಬೇಕು ಎಂಬ ಒಂದೇ ಗುರಿಯಾಗಿ ಬರೆದೆ. ಕವನ ನನ್ನ ಅತ್ಯಂತ ವೈಯಕ್ತಿಕ ಅನಿಸಿಕೆಗಳ ಬಹಿರಂಗ ಪ್ರದರ್ಶನವಾಗಿತ್ತು. ಅವನೊಬ್ಬನಿಗೇ ಹೇಳಲಾರದ ಮಾತುಗಳು, ಜಗತ್ತಿಗೇ ಸಾರಿತ್ತಿದ್ದೆ- ಈ ಊರ ತಮಟೆಯಾದರೂ ಅವನ ಕಿವಿಗೆ ಬಿದ್ದೀತೆಂದು. ಇಲ್ಲಿ ಭಯವಿರಲಿಲ್ಲ-ಪ್ರೇಮಪತ್ರ ಬರೆದಂಥಾ ಕಳ್ಳ ಭಯ! ಕಾವ್ಯದ ಬಿಸಿಲುಮಚ್ಚು ಇತ್ತು, ಸಾಹಿತ್ಯದ ದೊಡ್ದ ದೊಡ್ಡ ಪದಗಳ ಸುರಕ್ಷಿತ ಛಾವಣಿ ಇತ್ತು. ಅಪ್ಪನ ಬಾಲ್ಯದ ಕಟ್ಟಪ್ಪಣೆಗಳು ಬಿಗಿ ಕಳೆದುಕೊಂಡಿದ್ದರೂ, ನಾ ಅದಕ್ಕೆ ಒಗ್ಗಿ ಹೋಗಿದ್ದೆ. ಅವನ್ನು ಸಮರ್ಥಿಸಲೂ ತೊಡಗಿದ್ದೆ. ತಲೆ ತಗ್ಗಿಸಿ, ಸೆರಗು ಹೊದ್ದು, ಕ್ಲಾಸಿಗೇ ಫಸ್ಟ್ ನಿಲ್ಲುವ ಗಂಭೀರ ಹುಡುಗಿಯ ಕಿರೀಟ ತಲೆಗೇರಿತ್ತು. ನನ್ನಂಥವರೇ ನಾಲ್ಕು ಜನ ಜೊತೆಯಾದರು. ಉಳಿದೆಲ್ಲ ಹುಡುಗಿಯರು, ಹುಡುಗರೊಡನೆ ಮಾತನಾಡಿದ್ದರಿಂದಲೇ ಅಸ್ಪೃಶ್ಯರಾದರು. ‘ನಮಗೆ ಹಾಗೆಲ್ಲ ಅನಿಸೋದೇ ಇಲ್ಲ’ ಎಂದೇ ಸಾಧಿಸಿದೆವು. ರಾತ್ರಿ ಮಾತ್ರ ದಿಂಬಿನಡಿಯ ಡೈರಿತೆಗೆದು ಕವನ ಬರೆದೆ-ಎದುರು ಮನೆಯ ಹುಡುಗನ ಬಗ್ಗೆ, ತರಗತಿಯಲ್ಲಿ ಜಾಗವಿಲ್ಲವೆಂದು ಪಕ್ಕ ಬಂದು ಕುಳಿತ ಸಹಪಾಠಿಯ ಬಗ್ಗೆ. ನನ್ನ ಅದೃಶ್ಯ ಬಂಧನದ ಉಪ್ಪರಿಗೆಯಿಂದ ನಾ ಕವನಗಳನ್ನು ಹಾರಬಿಟ್ಟೆ ಅವು ಅವನನ್ನು ಸ್ಪರ್ಶಿಸಲೆಂದು. ಭಯವಿರಲಿಲ್ಲ, ಯಾರಾದರೂ ಓದಿಯಾರೆಂದು. ನನ್ನ ಕವನಗಳ ಗುರಿ ಕೇವಲ ಪ್ರೀತಿಯಾಗಿತ್ತು. ಅದರ ಅಭಿವ್ಯಕ್ತಿಯಾಗಿತ್ತು. ಕಡೆಗೆ ಕುತ್ತಿಗೆಗೇ ಬಂದರೆ, ನನ್ನ ಕವನದ ‘ಆ ಅವನು’ ಅವನೇ ಆಗಬೇಕಿಲ್ಲ, ಯಾರಾರೂ ಆಗಿರಬಹುದಲ್ಲ ಎಂಬ ವಾದದ ಗುರಾಣಿ ಸಿದ್ಧವಿತ್ತು.

ನಿಜ, ಬರೆದದ್ದು ಬರೀ ಪ್ರೇಮ ಕವನಗಳನ್ನಲ್ಲ. ಅಮ್ಮನ ಏಳು ಬಸಿರುಗಳ ಬಗ್ಗೆ ಬರೆದೆ. ಅಕ್ಕಂದಿರ ಎರಡೆಳೆ ಸರ ನಾಲ್ಕು ಜರಿ ಸೀರೆಯ ತೃಪ್ತ ಬದುಕಿನ ಬಗ್ಗೆ ಬರೆದೆ. ದೆವ್ವದ ಬಂಗಲೆಯಲ್ಲಿ ಬೀಸಿ ಬಂದ ಬಾವಲಿಗಳ ಬಗ್ಗೆ ಬರೆದೆ. ರಾಜುವಿನ ಮುಷ್ಟಿಯಲ್ಲೇ ಉಳಿದು ಬಿಟ್ಟ ಕೆಂಪು-ಹಸಿರು-ಹಳದಿ ಗೋಲಿಗಳ ಬಗ್ಗೆ ಬರೆದೆ. ಆದರೆ ಅವೆಲ್ಲವನ್ನೂ ‘ಅವನೊಡನೆ’ ಹಂಚಿಕೊಳ್ಳಲು ಬರೆದಿದ್ದೆ. ಆ ‘ಅವನು’ ಕಾಲ ಕಾಲಕ್ಕೆ ನನ್ನ ಮನಸ್ಸು-ವಯಸ್ಸು-ಪ್ರಬುದ್ಧತೆಯೊಡನೆ ಬದಲಾದ, ಬೆಳೆದ. ಕಡೆಗೆ, ಎದುರು ಮನೆಯ ಹುಡುಗ, ಪಕ್ಕ ಕುಳಿತ ಸಹಪಾಠಿ. ‘ಅವನಾರೂ’ ಆಗಿರಲೇ ಇಲ್ಲ. ಅವನು ಅಲ್ಲೆಲ್ಲೋ ಹೊರಗಿನ ಜನ ಸಮೂಹದಲ್ಲಿ ನನಗಾಗಿಯೇ ಕಾಯುತ್ತಾ ನಿಂತವನಾಗಿದ್ದ.

ನನ್ನ ಇಂಥಾ ಕವನಗಳು ಓದುಗರಿಗೆ, ವಿಮರ್ಶಕರಿಗೆ ಹೇಗೆ ಮೆಚ್ಚುಗೆಯಾದವೋ ಭಗವಂತನೇ ಬಲ್ಲ. ನನಗೂ ಹೊಳೆಯದ ಅರ್ಥಗಳನ್ನು, ನನ್ನ ಪದಗಳ ಅಂತರಾರ್ಥಗಳನ್ನು ಬಿಡಿಸಿ ಹೇಳುವಾಗ, ಒಂದಿಷ್ಟು ನನ್ನ ಹೆಸರು ತುತ್ತೂರಿ ಊದಿದಾಗ, ನಂಬಲಾರದ ಅಚ್ಚರಿ ಆವರಿಸಿತ್ತು. ನನ್ನ ಕವನಗಳು ನಾ ಉದ್ದೆಶಿಸಿದ ಅವನೊಬ್ಬನನ್ನು ಬಿಟ್ಟು ಮತ್ತೆಲ್ಲರನ್ನೂ ತಲುಪಿದ್ದವು. ಆ ಮಟ್ಟಿಗೆ ನನ್ನ ಕವನಗಳ ಸೋಲನ್ನು ನಾ ಒಪ್ಪಲೇ ಬೇಕಿತ್ತು.

ನನ್ನ ವಿವಾಹದ ದಿನ ತಟ್ಟನೆ ‘ಅವ’ ಮಾಯವಾದ. ಕಂಡ ಕನಸುಗಳಿಗೂ ವಿವಾಹದ ವಾಸ್ತವತೆಗೂ ನಂಟಿರಲಿಲ್ಲ. ನನಗೀಗ ಹೇಳಬೇಕಾದ್ದು ಏನೂ ಇರಲಿಲ್ಲ. ನನ್ನ ಕವಿತೆಗಳು ನಿಂತವು. ಆಗಾಗ ನನ್ನ ಹಿಂದಿನ ಇತಿಹಾಸ ಹಿಡಿದು ಸಂಪಾದಕರಿಂದ ಕವನ ಬರೆಯಲು ಆಹ್ವಾನ ಇರುತ್ತಿತ್ತು. ಒತ್ತಡಗಳು ಬರೆಸದ ಕವನ ಬರೆಯ ಹೊರಟೆ. ಹಿಂದಿನ ನಾಮಬಲದಿಂದಲೇ ಪ್ರಕಟವಾದವು ಮತ್ತೆ ಓದುವಾಗ ಅಸಹ್ಯವಾದುವು. ಪದಗಳೊಡನೆಯ ನನ್ನ ಸರ್ಕಸ್ ಹಾಗೇ ನಡೆಯುತ್ತಿತ್ತೇನೋ. ಕವನಗಳು ನಾ ಕರೆದಾಗ ನಿಲ್ಲದೆ, ಕಾದಾಗ ಬಾರದೆ, ಮುಸಿ ಮುಸಿ ನಕ್ಕು ನಡೆದೇ ಬಿಟ್ಟವು, ಹಿಂದೆ ಕೂಡಾ ನೋಡದೆ.
ಅಂತಹುದೇ ಯಾವುದೋ ಕವಿಗೋಷ್ಠಿಯಲ್ಲಿ ಕರೆದರೆಂದು ರಾತ್ರಿ ಕುಳಿತು ಹೊಸೆದ ಕವನ ಅಂಗೈಯಲ್ಲಿ ಹಿಡಿದು ಕುಳಿತಿದ್ದೆ. ಇದ್ದಕ್ಕಿದ್ದಂತೆ ಆ ವೇದಿಕೆ, ಮುಂದೆ ಕುಳಿತ ಪ್ರೇಕ್ಷಕರು, ರಾತ್ರಿ ಹೊಸೆದ ಪದಗಳು ಎಲ್ಲ ವಿಲಕ್ಷಣವಾಗಿ ಕಂಡು, ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ವಿಲೋಮವಾಗಿ ನಿಂತವು. ಏನೋ ನೆಪ ಹೇಳಿ ವೇದಿಕೆಯಿಂದ ಇಳಿದು ಬಂದೆ. ಹೊರಗೆ ಹೆಜ್ಜೆ ಹಾಕಿದ್ದೇ ತಡ ಹಾಳೆ ಹರಿದು ಹಾಕಿದೆ. ಅದೇ ಕಡೆ ನಾ ‘ಬರೆಯದ’ ಕವನಗಳ ಹೊಸೆಯ ಹೋದದ್ದು. ಸಾಹಿತ್ಯಜಗತ್ತು ಮರೆತುಬಿಟ್ಟಿತು-ಒಂದು ಸಂಕಲನದಲ್ಲಿ ಮಿಂಚಿ ಮಾಯವಾದ ಅಚ್ಚರಿ ಎಂಬಂತೆ. ಆಗಾಗ ‘ ಮಹಿಳಾ ಸಾಹಿತ್ಯ’ದ ಹಣೆಪಟ್ಟಿ ಬಂದಾಗ ಸ್ತ್ರೀವಾದ, ಸ್ತ್ರೀತ್ವಗಳಿಗೆ ನನ್ನ ಹೆಸರೂ ಒಂದಿಷ್ಟು ಎಳೆದಾದಲ್ಪಟ್ತಿತು. ಸ್ತ್ರೀತ್ವ ನನಗಿನ್ನೂ ಸ್ಪಷ್ಟವಾಗದ ಗೊಂದಲದ ಪದ. ಆದರೆ ಒಳಗೆಲ್ಲೋ ಅಪ್ಪನ ಅಂಕುಶದಡಿಯಲ್ಲಿ ಅದುಮಿಟ್ಟ ನನ್ನ ಹೆಣ್ಣೂತನ ಮುಲುಕುತ್ತಿತ್ತು. ಅಮ್ಮನ ಅರಿಶಿನ ತಿಂಬಿದ ಕೆನ್ನೆ ಗುಳಿಯಲ್ಲಿ ಕಾಣೆಯಾದ ಹೆಣ್ತನದ ಅವಶೇಷಗಳಿತ್ತು. ವರ್ಷ ವರ್ಷ ಬಾಣಂತನದ ನಡುವೆಯೂ ಹೆಣ್ಣಾಗದ ಅಕ್ಕಂದಿರ ಬದುಕಿನ ನೀಲಿ ನಕಾಶೆ ಹರಡಿತ್ತು. ನಾವು ಮಗಳಾದೆವು, ಹೆಂಡತಿಯಾದೆವು, ತಾಯಾದೆವು- ಹೆಣ್ಣಾಗದೇ! ಬಿಸಿಗೆ ಕರಗದೆಯೇ ಫಲಿಸಿದೆವು. ಬಯಕೆಗಳ ಅದುಮಿಟ್ಟು ಬದುಕಿದೆವು. ಬರೀ ಕನಸಿನಲ್ಲಷ್ಟೇ ಬಿಸಿಯೇರಿ, ಸ್ಪರ್ಷಕ್ಕೆ ತಣ್ಣಗಾದೆವು. ಕೇವಲ ಕವನಗಳಲ್ಲಿ ಸ್ಖಲಿಸಿದೆವು, ವಾಸ್ತವದಲ್ಲಿ ಹಿಮಗಟ್ಟಿದೆವು. ನಾವು ಭಾರತೀಯರು, ಅಪ್ಪಟ ಭಾರತೀಯರು… ಮನೆತುಂಬಾ ಮಕ್ಕಳನ್ನು ಹೆತ್ತರೂ, ಅಪ್ಪಟ ಕನ್ಯೆಯರೇ….ತನು-ಮನಗಳ ಸ್ಪರ್ಷಿಸದ ಗಂಡಂದಿರು. ಇಲ್ಲಿ ‘ಫ್ರಿಜಿಟಿಡಿ’ ರೋಗವಲ್ಲ, ಅಸಹಜವಲ್ಲ: ಹೆಣ್ಣಿನ ಸಹಜ ಸ್ಥಿತಿ ಎಂಬಂತೆ ಸಲೀಸಾಗಿ ಸ್ವೀಕರಿಸಿದ್ದು. ಅದಕ್ಕೆ ಚಿಕಿತ್ಸೆ ಬೇಕಿಲ್ಲ. ಅಭಿವ್ಯಕ್ತಿ ಬೇಕಿಲ್ಲ. ಮುಸುಕಿನಡಿಯಲ್ಲಿ, ಮೇಲೆ ಹೇರಿಕೊಂಡ ನಾಲ್ಕೆಳೆ ಸರ, ಜರತಾರಿ ಸೀರೆಗಳಲ್ಲಿ, ಮಡಿಲು ತುಂಬುವ ಕಂದಮ್ಮಗಳಲ್ಲಿ, ಅರೆಬದುಕು, ಹುಸಿ ಸಂತೋಷಗಳು ಮುಚ್ಚಿಹೋಗುತ್ತವೆ. ಅನುಭವಕ್ಕೇ ಬಾರದ ಅನಿಸಿಕೆಗಳನ್ನು ಕಳಕೊಳ್ಳುವುದೆಲ್ಲಿಂದ ಬಂತು? ಹೇಳಿಕೊಳ್ಳುವುದೆಲ್ಲಿಂದ?

*
*
*
ದಿನಾಂಕ ೩ ಜೂನ್ ೧೯೮೯

ಮರುದಿನವೂ ಕಾನ್ಫರೆನ್ಸ್ ಹಾಲ್‌ನಲ್ಲೇ ಮುಗಿಯಿತು. ಒಂದಿಷ್ಟು ಮನಸ್ಸು ಹತೋಟಿಗೆಳೆದು ಮಂಡಿಸಿದ ಪ್ರಬಂಧಗಳ ಆಲಿಸಿದೆ. ಗುರುತು ಹಾಕಿಕೊಂಡೆ. ಅದೇ ಕಡೆಯ ದಿನವಾದ ಕಾರಣ ಒಂದಿಷ್ಟು ಜನರ ಪರಿಚಯ, ವಿಳಾಸ ವಿನಿಮಯ ಆಗಿತ್ತು. ಎಲ್ಲಾ ಮುಗಿದು ಲಾಡ್ಜ್‌ಗೆ ಬಂದಾಗ ಸಂಜೆ ಆರೂವರೆ.

“ನಡೀರಿ ಒಂದಿಷ್ಟು ಅಡ್ಡಾಡಿ ಬರೋಣ…” ಅಜಯ್ ಹೇಳಿದ.
“ಒಂದ್ನಿಮಿಷ ಮುಖ ತೊಳೆದು ಬರ್ತೇನೆ…” ರೂಮಿನ ಬೀಗ ತೆರೆದು ಒಳಹೊಕ್ಕೆ.
ಬಚ್ಚಲಲ್ಲಿ ಮುಖ ತೊಳೆದು ಬಟ್ಟೆ ಬದಲಿಸಲು ಹೊರಬಂದೆ. ಕಾನ್ಫರೆನ್ಸ್ ಗೆ ಹಾಕಿದ ಸಣ್ಣ ಹೂಗಳ ಸೌಮ್ಯ ಸೀರೆ ಈ ಸಂಜೆಯ ಬಣ್ಣಗಳಲ್ಲಿ ತೀರ ‘ಡಲ್’ ಎನಿಸಿತು. ನಿನ್ನೆ ಯಾವುದೋ ಗುಂಗಿನಲ್ಲಿ ದಲ್ ಸರೋವರದ ದಡದಲ್ಲಿ ಅಡ್ಡಾಡುವಾಗ. ‘ಎಲ್ಲಾ’ ಕಸೂತಿಯ ಕಾಶ್ಮೀರಿ ಫೆರನ್‌ನಂಥಾ ಸಲವಾರ್‌ಕಮೀಜ್ ನೋಡಿ ಕೊಂಡು ಬಿಟ್ಟಿದ್ದೆ. ಸೀರೆಯ ಹೊರತು ಬೇರೇನೂ ಹಾಕದ ನಾನು, ಅದರ ಹೊಳಪು ಬಣ್ಣಗಳಿಗೇ ಮಾರು ಹೋಗಿದ್ದೆ. ಬಹಳ ಹೊತ್ತು ಕನ್ನಡಿಯೆದುರು ಹಾಕಲೋ ಬೇಡವೋ ಯೋಚಿಸುತ್ತಾ ಕಡೆಗೇಕೋ ಕಿಟಕಿಯಾಚೆ ಚೆಲ್ಲಿದ ಬೇಸಗೆಯ ಬಣ್ಣಗಳಿಗೆ ಈ ಗಾಢ ವರ್ಣಗಳು ಎಷ್ಟು ಹೊಂದುತ್ತವೆನಿಸಿ ತೊಟ್ಟು ನಿಂತೆ. ಇಲ್ಲಿ ಸ್ವಲ್ಪ ಸಡಿಲಾಯಿತೇನೋ, ಅಲ್ಲಿ ನನ್ನ ಹಿಂಭಾಗ ಹಿಗ್ಗಿ ಕಾಣುವುದೇನೋ, ಸೆರಗಿಲ್ಲದೆ ಎದೆ ಬೇರೆ! ಆತ್ಮವಿಶ್ವಾಸವಿಲ್ಲದೆ…ಅಳುಕುತ್ತಾ ಹೊರಬಂದೆ. ಅಜಯ್ ಆಗಲೇ ಪೋರ್ಟಿಕೋದಲ್ಲಿ ನಿಂತು ಕಾಯುತ್ತಿದ್ದ. ನನ್ನ ನೋಡಿದವನೇ ಹುಬ್ಬೇರಿಸಿ ‘ಹೇ ಯು ಲುಕ್ ಗ್ರೇಟ್…’ ಎಂದ. ನಾ ಗಲಿಬಿಲಿಗೊಂಡೆ, ಪ್ರಶಂಸೆಗೆ ಹೇಗೆ ಪ್ರತಿಕ್ರಿಯಿಸಬೇಕು, ಹೇಗೆ ಸ್ವೀಕರಿಸಬೇಕು ಎಂದು ತಿಳಿಯದೆ ಮುಜುಗರದಲ್ಲಿ.

(ಅಪ್ಪ ವೆರಾಂಡದ ಕಿಟಕಿಗೆ ಸಿಗಿಸಿದ್ದ ಸಣ್ಣ ಕನ್ನಡಿಯಲ್ಲಿ ಮುಖವಿಕ್ಕಿ ಕೆನ್ನೆಗೆ ಬ್ಲೇಡ್ ತೀಡುತ್ತಿದ್ದರು. ನಾ ಪುಟಿಯುತ್ತಾ ಮೆಟ್ಟಿಲು ಹಾರಿ ಒಳಗೆ ಬಂದಿದ್ದೆ. ಅಪ್ಪ ಬೋಳಿಸುವುದ ನಿಲ್ಲಿಸಿ, ನನ್ನ ಸ್ವಲ್ಪ ಹೊತ್ತು ಹೆಚ್ಚೇ ಕಣ್ಣಿಟ್ಟು ನೋಡಿದರು, ಹುಬ್ಬು ಬಿಗಿಯಾಗಿತ್ತು.

‘ಅನುಗೆ ಎಷ್ಟಾಯ್ತು ವಯಸ್ಸು…’ ಅಪ್ಪನ ಸ್ವರ.
‘ಈ ಶ್ರಾವಣಕ್ಕೆ ಹದಿನೈದು ತುಂಬುತ್ತಲ್ಲ…’ ಅಮ್ಮನ ಉತ್ತರ.
‘ಇನ್ನೂ ಲಂಗ ಹಾಕ್ಕೊಂಡು ಕುಣಿಯುತ್ತಾ ಹೋಗ್ತಾಳಲ್ಲ…’
ಅಂದೇ ಅಮ್ಮ ನನಗೆ ಸೀರೆ ಉಡಲು ಹೇಳಿದ್ದಳು.
‘ಹೋಗಮ್ಮಾ ಈ ಸೀರೆ ನೆರಿಗೆ ಯಾರು ಸಂಭಾಳಿಸೋರು…’ ಜಾರಿ ಜಾರಿ ಇಳಿಯುತ್ತಿದ್ದ ನೈಲೆಕ್ಸ್ ಸೀರೆಯ ಹಿಡಿದು ಕೇಳಿದ್ದೆ.
‘ಇಲ್ಲ ಹೀಗೇ ಎದೆ ಬಿಟ್ಟುಕೊಂಡು ನೆಗೀತಾ ಇರು…’ ಅಮ್ಮ ಅಸಹನೆಯಿಂದ ವದರಿ, ನೆರಿಗೆಗಳ ಹಿಡಿದು ಗುಪ್ಪೆ ಮಾಡಿ ಪಿನ್ ಸಿಕ್ಕಿಸಿದಳು.
ಅತ್ಯಂತ ಮುಜುಗರವಾಗಿತ್ತು. ಹಾಗಾದರೆ ಅಪ್ಪ ಗಮನಿಸಿದ್ದು…ಯೋಚಿಸಲೂ ನಾಚಿದೆ. ಆ ಕ್ಷಣದಿಂದಲೇ ನಾ ಸಂಕೋಚಿಸತೊಡಗಿದ್ದೆ – ಉಬ್ಬುತ್ತಿದ್ದ ಯೌವನದ ಬಗ್ಗೆ, ರೂಪುಗೊಳ್ಳುತ್ತಿದ್ದ ತಿರುವುಗಳ ಬಗ್ಗೆ, ಹರಡುತ್ತಿದ್ದ ಕೆನ್ನೆ ಕೆಂಪಿನ ಬಗ್ಗೆ, ಕಣ್ಣ ಹೊಳಪಿನ ಬಗ್ಗೆ.
ಅಪ್ಪ-ಭಾವಂದಿರ ಮುಂದೆ ಈಗ ಎಲ್ಲಿಲ್ಲದ ಮುಜುಗರ. ಸೆರಗು ಜಗ್ಗಿ ಜಗ್ಗಿ ಎಳೆದೆ. ಅವರೆಲ್ಲ ನನ್ನನ್ನೇ ಗಮನಿಸುತ್ತಿದ್ದಾರೆಂಬ ವಿಚಿತ್ರ ಅನಿಸಿಕೆ. ತಟ್ಟನೆ ಏಕಾ‌ಏಕಿ ಉದ್ಭವಿಸಿದ ಅಮೃತ ಕಳಶಗಳ ಮುಚ್ಚುವ ಪ್ರಯತ್ನದಂತೆ ತುಸು ಬೆನ್ನು ಬಾಗಿಸಿ, ಭುಜ ಜೋಲಿಸಿ ನಡೆಯ ಹತ್ತಿದೆ. ನನ್ನ ದೇಹದ ಮಾರ್ಪಾಟುಗಳ ಬಗ್ಗೆ ಎಂಥದ್ದೋ ಸಿಟ್ಟು.
‘ಸೆರಗು ಸರಿಯಾಗಿ ಹೊದಿ…’
‘ಇಷ್ಟು ತೆಳು ಸೀರೆ ಉಡಬೇಡ. ಮೈ ಎಲ್ಲ ಕಾಣುತ್ತೆ…’
‘ಅದೇನು ಕುತ್ತಿಗೆ ಅಷ್ಟು ಡೀಪ್ ಹೊಲೆಸಿದ್ದಿ…’
ನನ್ನ ಪ್ರತಿ ಅಂಗುಲವೂ ಅಂಗಡಿಯಲ್ಲಿ ಪ್ರದರ್ಶನಕ್ಕಿಟ್ಟಂತೆ ಎದ್ದು ಕಾಣುವಾಗ, ಬದಲಾಗುತ್ತಿದ್ದ ನನ್ನ ದೇಹವನ್ನೇ ದ್ವೇಷಿಸಿದ್ದೆ. ನಾನೆಂದೂ ನನ್ನ ದೇಹವನ್ನು ಮತ್ತೆ ಪ್ರೀತಿಸಲಿಲ್ಲ, ಪ್ರೀತಿಸಬೇಕಾದ ರೀತಿಯಲ್ಲಿ. ಅದರೊಳಗಿನ ಆಸೆ ಆಕಾಂಕ್ಷೆಗಳ ಸ್ವೀಕರಿಸಲು ಸಾಧ್ಯವಾಗಲೇ ಇಲ್ಲ.
ಅಂಥ ಮುಚ್ಚಿ ಮುದುರಿಟ್ಟ ದೇಹವನ್ನು ಮದುವೆಯ ಹಂದರದಲ್ಲಿ ತಕ್ಷಣ ತೆರೆದಿಡುವುದ್ಹೇಗೆ?
ಕಿರಣ್ ದೀಪ ಆರಿಸಿದ್ದ – ನಾ ಸಮಾಧಾನದ ನಿಟ್ಟುಸಿರು ಬಿಟ್ಟೆ.)

‘ಎಲ್ಲಿ ಕಳೆದು ಹೋದಿರಿ, ಐ ರಿಯಲಿ ಮೀನ್ ಇಟ್. ಈ ಡ್ರೆಸ್ ನಿಮಗೆ ಒಪ್ಪುತ್ತೆ…’ ಅಜಯ್ ಮತ್ತೊಮ್ಮೆ ಹೇಳಿದ. ನನ್ನಿಂದ ಥ್ಯಾಂಕ್ಸ್ ಕೂಡ ಬಾರದಾಗ, ’ನೀವು ಒಂದು ಪುಟ್ಟ ಪ್ರಶಂಸೆಗೂ ಏಕೆ ಗಲಿಬಿಲಿಗೊಳ್ತೀರಾ. ನಿಮಗಾವ ಹುಡುಗನೂ ಈ ಮೊದಲು ಹೇಳಿರಲಿಲ್ಲವೆ…’ ತುಂಟತನದಲ್ಲಿ ಕೇಳಿದ. ಈಗ ಜೋರಾಗಿ ನಕ್ಕು ಬಿಟ್ಟೆ. ಅಜಯ್ ಹೊರಗಿನವನೆನಿಸಲೇ ಇಲ್ಲ – ’ಹೇಳುವಂಥಾ ಸಂದರ್ಭಗಳ ಸೃಷ್ಟಿಸಲೇ ಇಲ್ಲ ಅಜಯ್. ಬಸ್ಸಲ್ಲಿ ಪಕ್ಕ ಹುಡುಗ ಕುಳಿತರೆ ನೆಗೆದೆದ್ದು ನಿಲ್ಲುತ್ತಿದ್ದೆವು. ಕಾಫಿಗೆ ಕರೆದವರ ಕೀಚಕನಂತೆ ಕಂಡೆವು, ಸ್ಕೂಟರ್ ನಿಲ್ಲಿಸಿ ’ಡ್ರಾಪ್ ಮಾಡಲಾ’ ಎಂದ ಸಹಪಾಠಿಯನ್ನು ಕೌಶಿಕ ಮುನಿಯಂತೆ ದುರುಗುಟ್ಟಿ ನೋಡಿದೆವು. ಅವನ ಪಿಲಿಯನ್ ಸ್ಪರ್ಶದಿಂದಲೇ ನಮ್ಮ ಪಾತಿವ್ರತ್ಯ ಕರಗಿ ಬಿಡುವುದೆಂಬಂತೆ. ‘ನಮಗೆಲ್ಲ ಅದು ಸೇರೋಲ್ಲ, ಹಾಗೆಲ್ಲ ಅನಿಸೋದೇ ಇಲ್ಲ…’ ಎಂಬ ಅಖಂಡ ನಟನೆಯ ಹಿಂದೆ, ನಮ್ಮೊಳಗಿನ ಕಳ್ಳ ಬಯಕೆಗಳಿಗೆಲ್ಲ ದಪ್ಪ ಪರದೆ ಜಗ್ಗಿ, ಕಾಲೇಜಿನ ಅತ್ಯಂತ ಸಭ್ಯ ಹುಡುಗಿಯರೆಂಬ ಬಿರುದನ್ನು ಪಾರಿತೋಷಕದಂತೆ ಗಿಟ್ಟಿಸಿದೆವು…’ ನಾ ಹೇಳಿದೆ. ಅಜಯ್ ನನ್ನನ್ನೇ ಕ್ಷಣ ವಿಚಿತ್ರವಾಗಿ ನೋಡಿ –
‘ಅನು ಬಾಲ್ಯದ ನೆರಳುಗಳ ಬೆಳೆದ ಮೇಲೂ ಬಗಲಲ್ಲಿಟ್ಟುಕೊಂಡು ತಿರುಗಾಡೋದೇಕೆ? ಬಿಟ್ಟು ಬಿಡಿ ಅವನ್ನು ಅಲ್ಲಿಯೇ ಭೂತದಲ್ಲಿ’ ಅಂದ. ಮತ್ತೆ ತುಸು ಬಾಗಿ ‘ಒಂದು ಗುಟ್ಟು ಹೇಳಲೇ?’ ಅವನ ಕಣ್ಣಿಗೆ ಕೀಟಲೆಯ ಬಣ್ಣ ಬಂದಿತ್ತು.
‘ಹೂಂ ಹೇಳಿ’ ಅಂದೆ.
‘ನಮ್ಮಪ್ಪನಿಗೆ ಈ ಬಾಬ್ಬಿ, ಜೂಲಿಯಂಥಾ ಪಿಚ್ಚರ್ ನೋಡಿದರೆ, ಓದೋ ಹುಡುಗರು ಕೆಟ್ಟು ಹೋಗ್ತಾರೆ ಅಂತ ಭದ್ರ ನಂಬುಗೆ ಇತ್ತು. ಅಪ್ಪ ತಾವೇ ಸ್ವತ: ಸಂಸಾರ ಸಮೇತರಾಗಿ ‘ಲವಕುಶ’ ‘ಸಂಪೂರ್ಣ ರಾಮಾಯಣ’ಗಳಿಗೆ ಕರೆದುಕೊಂಡು ಹೋಗ್ತಾ ಇದ್ದರು. ಏನಾಯ್ತು ಗೊತ್ತೆ…’ ಕಣ್ಣು ಕಿರಿದಾಗಿಸಿ ಮೋಜಿನಿಂದ ಹೇಳಿದ.
‘ಹೂ…ಏನಾಯ್ತು?’
‘ಡಿಂಪಲನ್ನೋ, ಜೂಲಿಯನ್ನೋ ಪ್ರೀತಿಸುವ ಬದಲು ನಾ ಪಂಡರೀಬಾಯಿಯನ್ನೇ ಗಟ್ಟಿಯಾಗಿ ಲವ್ ಮಾಡಿಬಿಟ್ಟೆ…’
ನಾ ಜೋರಾಗಿ ನಕ್ಕೆ, ಅಜಯ್ ಆ ದಿನಗಳ ಸವಿಸವಿದು ಭಾರೀ ಮೋಜಿನಿಂದ ಹೇಳತೊಡಗಿದ.
ಅರೆ, ನನಗೆ ನೋವಾಗಬಲ್ಲ ಬಾಲ್ಯ ಇವನಿಗಿಷ್ಟು ಹಾಸ್ಯವಾಗಬಲ್ಲುದಾದರೆ, ಬಹುಶಃ ನಾ ನನ್ನ ಬಾಲ್ಯದಾಚೆಗೆ ಜಿಗಿಯಲು ಪ್ರಯತ್ನಿಸಲೇ ಇಲ್ಲವೆ? ಮೊಟ್ಟ ಮೊದಲಿಗೆ ಪ್ರಶ್ನೆ ಕಾಡಿತು. ಸಂಜೆ ಬಹಳ ಹೊತ್ತು ಮಾತನಾಡಿದೆವು. ಹೊರಗೆ ಚಿನಾರ್ ಮರದ ಕೆಳಗಿದ್ದ ಕಲ್ಲು ಬೆಂಚಿನ ಮೇಲೆ ಅರ್ಧ ರಾತ್ರಿಯೇ ಕಳೆಯಿತು.

 

ದಿನಾಂಕ ೪ ಜೂನ್ ೧೯೮೯

ಉಳಿದದ್ದೊಂದೇ ದಿನ!

ಬೆಳಗ್ಗೆ ಬೇಗನೇ ಎದ್ದಿದ್ದೆ. ನಿನ್ನೆಯೇ ನಿಶ್ಚಯಿಸಿದಂತೆ ಇಂದು ಪೆಹಲ್‌ಗಾವ್‌ಗೆ ಹೋಗಿ ಪೂರಾ ದಿನ ಅಲ್ಲಿ ಕಳೆದು ಬಿಡುವುದು. ನಾಳೆ ಬೆಳಿಗ್ಗೆ ಅಲ್ಲಿಂದ ಹೊರಟು, ಹಿಂತಿರುಗಿ, ದಿಲ್ಲಿಗೆ ಫ್ಲೈಟ್ ಹಿಡಿಯುವುದು. ದಿಲ್ಲಿಯಿಂದ ಬೆಂಗಳೂರಿಗೆ ರೈಲಿನಲ್ಲಿ ಸೀಟ್ ಬುಕ್ ಆಗಿಯೇ ಇದೆ.

ಏಳು ಗಂಟೆಗೆಲ್ಲ ಅಜಯ್ ಟ್ಯಾಕ್ಸಿ ತಂದಿದ್ದ. ಇದ್ದ ಮೂರು ದಿನಗಳಲ್ಲಿ ಇಡೀ ಕಣಿವೆಯನ್ನೇ ಕಣ್ಣಿವೆಗಳಲ್ಲಿ ಸೆರೆ ಹಿಡಿದು ಹೊರಡಲಿದ್ದೆ. ಟ್ಯಾಕ್ಸಿ ಪೆಹಲ್‌ಗಾವ್ ಕಡೆಗೆ ತಿರುಗಿತು. ದಾರಿಯಲ್ಲಿ ಕಂಡ ಅವಂತಿಪುರದ ಅವಶೇಷಗಳ ಬಳಿ ಒಂದಿಷ್ಟು ಹೊತ್ತು ಕರು ನಿಂತಿತು. ಒಂಭತ್ತನೇ ಶತಮಾನದ ಇತಿಹಾಸದ ಪುಟಗಳು, ಯುಗ ಯುಗದ ಗಾಳಿ ತೀಡಿ ಮುರಿದು ಬಿದ್ದ ವಿಷ್ಣು ದೇಗುಲ. ಮುಕ್ಕಾಗಿ, ಮಬ್ಬಾಗಿ ಕುಸಿದ ಶಿಲೆಯಲ್ಲೂ ಮುತ್ತಿಟ್ಟ ಮಿಥುನಗಳೆಷ್ಟು!

ದಾರಿಯುದ್ದಕ್ಕೂ ಕೈ ಬೀಸಿ ಸ್ವಾಗತಿಸಿದ ಪ್ರಕೃತಿ, ಬಿಸಿಲ ಹೊಸ ಉಡುಗೆ ಉಟ್ಟು ನಿಂತಿದ್ದಳು. ಹಾದಿಯ ಜೊತೆಗೇ ಹರಿದ ನದಿ, ಸುತ್ತ ವೃಕ್ಷಗಳ ಹಿನ್ನೆಲೆಯಲ್ಲಿ ಪರ್ವತಗಳ ಅಂಚು. ತುದಿಯಲ್ಲೊಂದಿಷ್ಟು ಹಿಮ ಹೊತ್ತು ಸೂರ್ಯ ಕಿರಣಕ್ಕೆ ಬೆಳ್ಳಿಯಾಗಿ ಹೊಳೆದಿದ್ದ ಪರ್ವತ ಶಿಖರಗಳು. ಬೆಳ್ಳಿ ಬೆಟ್ಟದ ಸಲು, ಹಸಿರು ಪೈನ್ ವೃಕ್ಷಗಳು, ಬಣ್ಣದ ಪೋಸ್ಟರುಗಳಿಂದ ಹೊರಗಿಳಿದ ಜೀವಂತ ಚಿತ್ರ.

ನನ್ನ ಮನಸ್ಸು ಹಗುರವಾಗಿತ್ತು. ಕತ್ತಲೆಯ ಕೋಣೆಯಲ್ಲಿ ಅವಿತು ಕುಳಿತ ಭೂತಗಳನ್ನೆಲ್ಲ ಉಚ್ಛಾಟಿಸಿದ್ದೆ. ನಮ್ಮ ಫ್ಲಾಟ್‌ನ ಒಂಭತ್ತು ಬೈ ಒಂಭತ್ತು ಅಡಿ ಕೋಣೆಗಳಲ್ಲಿ ನನ್ನ ಚಿಂತನೆಗಳೆಲ್ಲ ಕಿಟಕಿಯಾಚೆಗೆ ಹಾರಲಾರದೆ ಗೋಡೆಗೆ ಢಿಕ್ಕಿ ಹೊಡೆದು ಕಾಲು ಮುರಿದು ಬೀಳುತ್ತಿದ್ದವು. ಮತ್ತೇನೂ ಯೋಚಿಸಲಾರದ ಒಳಗೊಳಗೇ ಪರಿಭ್ರಮಿಸಿ ಹಾದಿ ತಪ್ಪಿದ ಚಿಂತನೆಗಳು. ಇಲ್ಲಿ ಕಣ್ಣನೋಟದಾಚೆಗೂ ಚಾಚಿ ನಿಂತ ಅನಂತತೆ, ನನ್ನ ಒಳಗಿನದೆಲ್ಲ ಹೊರ ಹಾಕಿ, ನನ್ನೊಳಗೆ ತುಂಬಿಕೊಳ್ಳುತ್ತಿತ್ತು. ಅಜಯನ ತುಂಬು ನಗು, ಮೋಜಿನಿಂದ ಹಂಚಿಕೊಳ್ಳುವ ಕಲೆ, ನನಗೆ ಸ್ನೇಹದ ಮತ್ತೊಂದು ಮುಖವನ್ನು ಪರಿಚಯಿಸಿತ್ತು. ಗಂಡು ಸ್ನೇಹದ ಪುಳಕವಷ್ಟೇ ಅಲ್ಲ, ಬಿಚ್ಚಿಕೊಳ್ಳಬಲ್ಲ ಸ್ನೇಹ, ನನ್ನೊಳಗಿನ ಭಾವನೆಗಳನಡು ಬೀದಿಯಲ್ಲಿ ಬೆತ್ತಲೆ ಓಡಿಸಬಲ್ಲ ಸಾಧ್ಯತೆಯೇ ಮುದ ಕೊಟ್ಟಿತು. ಜಗತ್ತಿನ ಅರ್ಧ ಜನರಿಂದ ನಾ ದೂರವಿದ್ದೆ. ಅವರು ಗಂಡಸರು ಎಂಬ ಕಾರಣಕ್ಕೆ. ಗಂಡು-ಹೆಣ್ಣಿನ ಸಂಬಂಧದ ನೂರು ಸಾಧ್ಯತೆಗಳಲ್ಲಿ ಅಪ್ಪ ನನಗೆ ಮನವರಿಕೆ ಮಾಡಿಕೊಟ್ಟಿದ್ದು ಒಂದನ್ನೇ. ಬಾಲ್ಯದಿಂದ ಒಂದೆರಡು ದಶಕಗಳಾಚೆ ನಿಂತರೂ ನನ್ನ ಕಾಡುವ ಈ ಪೂರ್ವಾಶ್ರಮ ಇವೆಂಥದ್ದು? ಅವರಿವರು ತುಂಬಿದ್ದ ಪೂರ್ವಾಗ್ರಹಗಳ ತೊಗಲ ಚೀಲವಾಗಿದ್ದೆ. ಅಪ್ಪ ನೆಟ್ಟ ಬೇಲಿ ಕಿತ್ತು ಹೋಗಿದ್ದರೂ ಕಲ್ಪಿತ ಸೀಮಾ ರೇಖೆಯೊಳಗೇ ಪರಿಭ್ರಮಿಸಿದ್ದೆ. ಕಡೆಗೆ ಅವೆಲ್ಲ ಅಮ್ಮ-ಅಪ್ಪ, ಸಮಾಜ ಹಾಕಿದ ನಿರ್ಬಂಧನಗಳೇ ಅಲ್ಲ, ನನಗೆ ನಾನೇ ಎಳೆದುಕೊಂಡ ಲಕ್ಷ್ಮಣ ರೇಖೆ ಎನಿಸಿತ್ತು. ಅವರೆಲ್ಲರ ನಿರೀಕ್ಷೆಗೆ ಹೊಂದಿ ನಿಂತು ಮಾದರಿಯಾಗುವ ಬಯಕೆ, ವಿಚಿತ್ರ ಕುಣಿಕೆಯಾಗಿತ್ತು.
*
*
*
ಪೆಹಲ್‌ಗಾವ್‌ಗೆ ಬಂದು ಇಳಿದಾಗ ಸೂರ್ಯ ಸಾಕಷ್ಟು ಮೇಲೆ ನಿಂತಿದ್ದ. ಪ್ರಕೃತಿಯ ಗರ್ಭದಲ್ಲೊಂದು ಕೈ ಕಾಲು ಚಾಚಿ ನಿಂತ ಪುಟ್ಟ ಊರು. ಊರಿಗಿಡೀ ಒಂದೇ ರಾಜ ಬೀದಿ. ಎರಡೂ ಬದಿಗೂ ಢಾಬಾಗಳು. ಕಸೂತಿ ಹಾಕಿದ ಉಡುಪಿನಂಗಡಿಗಳು.
‘ಏನಾದರೂ ಒಂದಿಷ್ಟು ತಿಂದು ತಿರುಗೋಕೆ ಹೋಗೋಣ….’ ಅಜಯ್ ಹೇಳಿದ್ದಕ್ಕೆ ತಲೆ ಆಡಿಸಿದೆ. ಸ್ವಲ್ಪ ಚಂದ ಕಂಡ ಹೋಟಲಿಗೆ ನುಗ್ಗಿ ಒಂದಿಷ್ಟು ಆಲೂ ಪರೋಠಾ, ಒಂದಿಷ್ಟು ದಾಲ್-ಚಾವಲ್ ತಿಂದಿದ್ದಾಯ್ತು.
‘ಕುಡಿಯೋಕೆ?’ ಅಜಯ್ ಕೇಳಿದ.
‘ಮಾಮೂಲು, ಚಾಯ್…’ ಎಂದೆ.
‘ಅನು, ನೀವು ಹೊಸದೇನನ್ನೂ ಸವಿಯೋಕೆ ಸಿದ್ಧವಿಲ್ಲ. ಇಷ್ಟು ದೂರ ಬಂದು ಕಶ್ಮೀರಿ ಕಾವಾ ಕುಡಿಯದೆ ಹೋಗೋದಾ?’ ಅಂದ.
‘ಚೆ, ಅದು ಬೇಡ ಹಾಲಿಲ್ಲದ ಕರಿ ಕಾವ…’ ಮುಖ ತಿರುವಿದೆ.
‘ಮೇಡಂ, ಕಾವಾ ಬಗ್ಗೆ ನಿಮ್ಮಪ್ಪ ಏನಾದರೂ ನಿರ್ಬಂಧನೆ ಹಾಕಿರಲಿಲ್ಲ ತಾನೆ?’ ಜೋರಾಗಿ ನಕ್ಕೆ. ಈ ಮೂರು ದಿನದಲ್ಲಿ ಅಜಯ್ ನನ್ನ ಇತಿಹಾಸವೆಲ್ಲ ಬಲ್ಲ ಬಾಲ್ಯ ಸ್ನೇಹಿತನಾಂತಾಗಿ ಬಿಟ್ಟಿದ್ದ. ನಕ್ಕುಬಿಟ್ಟೆ. ಏಕೋ ಇದೀಗ ಅಪ್ಪನ ಮೇಲೆ ಸಿಟ್ಟು ಬರಲಿಲ್ಲ. ಅಪ್ಪನ ಕೋಟೇಗಳೆಲ್ಲ ದಾಟಬಹುದಾದಷ್ಟು ಕುಬ್ಜವಾಗಿದ್ದವು. ಅವರನ್ನು ಅವರ ಪರಿಸರದ, ಅವರ ಹಿನ್ನೆಲೆಯ ಫಲಿತಾಂಶವಾಗಿ ಅರ್ಥೈಸಲೂ ಸಾಧ್ಯವಾಗಿತ್ತು.
‘ಸರಿ, ಕಾವಾನೇ ತರಿಸಿ…’ ಕೈ ಚೆಲ್ಲಿ ಕುಳಿತೆ.
ಹೊಳೆಯುತ್ತಿದ್ದ ಬೆಳ್ಳಿ ಬಣ್ಣದ ಸುಂದರ ಸಮಾವಾರ ಪಾತ್ರೆಯಲ್ಲಿ ಬಿಸಿ ಬಿಸಿ ಕಾವ ತಂದು ಲೋಟಗಳಿಗೆ ಬಗ್ಗಿಸಿದ. ಸಣ್ಣ ದಾಲ್ಚಿನ್ನಿ, ಏಲಕ್ಕಿ, ಗೋಡಂಬಿಯ ಚೂರುಗಳು ಮೇಲೆ ತೇಳುತ್ತಿದ್ದವು. ನವಿರಾದ ಸವಿಗಂಪು.
‘ಹೇಳಿ, ಈ ಕಂಪು, ಈ ಶ್ರೀಮಂತಿಕೆ ನಿಮ್ಮ ಬಡ ಚಾಯ್‌ಗುಂಟೆ?’ ಕಾವಾ ಹೀರುತ್ತಾ ಅಜಯ್ ಕೇಳಿದ.
ಒಂದು ಗುಟುಕು ಕುಡಿದೆ. ರುಚಿ ಇತ್ತು.ಬದುಕಿನಲ್ಲಿ ಎಷ್ಟೆಲ್ಲ ಸವಿಯದೆ ಬಿಟ್ಟಿದ್ದೆ. ಸ್ನೇಹವನ್ನು, ಪ್ರೀತಿಯನ್ನು, ಕಡೆಗೆ ಕಿರಣನ ಸ್ಪರ್ಶವನ್ನೂ, ಕರ್ತವ್ಯದಂತೆ ಸಹಿಸುತ್ತಾ, ಮನಸ್ಸಿಲ್ಲದ ಮೈ ಒಡ್ಡುತ್ತಾ, ನನಗಲ್ಲದೆ ಅವನಿಗೂ ಹಿಂಸೆಯಾಗಿದ್ದೆ. ನನ್ನ-ಕಿರಣನ ಐದು ವರ್ಷಗಳ ದಾಂಪತ್ಯದಲ್ಲೂ ಎಷ್ಟೊಂದು ಖಾಲಿತನ ಉಳಿದುಬಿಟ್ಟಿದೆ. ಕರ್ತವ್ಯವಾದ ಪ್ರೀತಿಗೆ ಒಂದಿಷ್ಟು ಬಯಕೆಯ ಬಿಸಿ ತಾಗಿಸಬೇಖು. ಕಣಿವೆಯ ಸಾಧ್ಯತೆಗಳ ಬೆಂಗಳೂರಿಗೂ ಕೊಂಡೊಯ್ಯಬೇಕು.
‘ಹೊರಡೋಣವಾ…?’ ಅಜಯ್ ಕೇಳಿದ.
ಹೊರಗೆ ಬಂದು ಒಂದಿಷ್ಟು ದೂರ ನಡೆದು, ಸುತ್ತಲೆಲ್ಲ ಸುತ್ತಿ ಬರಲು ಎರಡು ಕುದುರೆ ಹಿಡಿದು ಏರಿದೆವು. ನಾ ಅಜಯನತ್ತ ತಿರುಗಿ ಹಲ್ಲು ಕಿರಿದೆ, ಒಳ್ಳೆ ಹಿಂದಿ ಸಿನೆಮಾದ ನಾಯಕ-ನಾಯಕಿಯರಂತೆ ಭಾಸವಾಗಿತ್ತು. ಹರಿವ ಝೇಲಮ್‌ನ ಮೇಲೆ ಹಾದ ಕಟ್ಟಿಗೆಯಂತೆ ಸೇತುವೆ ದಾಟಿ, ಎತ್ತರದ ಪೈನ್ ವೃಕ್ಷಗಳ ನಡುವೆ ಕುದುರೆಗಳು ಪರಿಚಿತ ಹೆಜ್ಜೆ ಹಾಕಿದ್ದವು.
ಶಿವಲಿಂಗವಿದ್ದ ಸಣ್ಣ ದೇವಾಲಯದ ಮುಂದೆ ಕುದುರೆ ನಿಲ್ಲಿಸಿ ಇಳಿದೆವು. ಎದುರಿಗೇ ಸ್ವಚ್ಛ ಚಿಲುಮೆಯ ನೀರು. ಅತ್ತ ಪಕ್ಕದ ಹಸಿರು ಹರವಿನಲ್ಲಿ ಒಂದಿಬ್ಬರು ಕ್ಯಾಮರಮೆನ್‌ಗಳ ಗಲಾಟೆ. ಕಶ್ಮೀರಿ ಫೆರನ್, ಕಶ್ಮೀರಿ ಒಡವೆಗಳ ಅಲ್ಲೇ ಹುಲ್ಲಿನ ಮೇಲೆ ಹರಡಿಕೊಂಡು ‘ಬನ್ನಿ ಸಾಬ್, ಕಶ್ಮೀರಿ ಉಡುಪಲ್ಲಿ ನೀವೂ ಫೋಟೋ ಹಿಡಿಸಿ’ ಎಂದು ಅಲ್‌ಬಮ್ ತೋರಿಸುತ್ತಾ ದುಂಬಾಲು ಬಿದ್ದರು. ಅಜಯ್ ತಮಾಷೆಯಾಗಿ ನನ್ನತ್ತ ನೋಡುತ್ತಾ,
‘ಬನ್ನಿ ನೀವೂ ಒಂದು ಫೆರನ್ ಏರಿಸಿ’ ಅಂದ. ನಾ ಪೂರಾ ನಚಿ,
‘ಚೆ, ಬೇಡ…ಬೇಡ…’ಎಂದೆ.
‘ಅರೆ ಬನ್ನಿ, ಇಂಥ ಸಣ್ಣ ಖುಷಿಗಳನ್ನೆ ನಾವು ಬಾಚಿ ಹೆಕ್ಕಿಕೊಳ್ಳಬೇಕಾದ್ದು. ಮತ್ತೆ ನೀವು ಕಾಶ್ಮೀರಕ್ಕೆ ಬರೋದು ಯಾವಾಗ…’
ಮತ್ತೆ ನಾ ಬದುಕಿಗೆ ಬರುವುದು ಯಾವಾಗ?
ಅಜಯ್ ಹುಲ್ಲಿನ ಮೇಲೆ ಹರಡಿದ ಫೆರನ್ ಎತ್ತಿ, ತಲೆಗೆ ಕೆಂಪು ಬಣ್ಣದ ಚುನರಿ ಆರಿಸಿ, ಕೊರಳಿಗೆ ಬೆಳ್ಳಿ ತಗಡಿನ ಆಭರಣ ಎತ್ತಿ ಕೊಟ್ಟ. ಹಾಕಿದ ಉಡುಪಿನ ಮೇಲೇ ದೊಗಲೆ ಫೆರನ್ ಏರಿಸಿ ಒಂದೆರಡು ಫೋಟೋ ಹಿಡಿಸಿದೆ.
ಆ ದಿನವೆಲ್ಲ ಇಂಥಹುದೇ ಸಣ್ಣ ಸಣ್ಣ ಘಟನೆಗಳು. ಬಹಳಷ್ಟು ಸುತ್ತಾಡಿದೆವು. ಏರು ತಗ್ಗಿನ ಗುಡ್ಡಗಳ ಮೇಲೆ, ಗೋಲ್ಫ್ ಕೋರ್ಸಿನ ಹಸಿರು ಹಾಸಿನ ಮೇಲೆ, ತೂಗಿ ನಿಂತ ಸೇತುವೆಗಳ ಮೇಲೆ…ವರ್ಷ ವರ್ಷಗಳ ಸ್ನೇಹಿತರಾಗಿ.
*
*
*
ಸಂಜೆ ಆಗಿತ್ತು. ಈ ರಾತ್ರಿ ಉಳಿಯಲು ಗೆಸ್ಟ್ ರೂಂ ವ್ಯವಸ್ಥೆ ಇತ್ತು. ಝೇಲಮ್‌ನ ಬದಿಗೇ ಕಟ್ಟಿದ ಎರಡು ಕೋಣೆಗಳ ಅತಿಥಿ ಗೃಹ. ರಾತ್ರಿ ಊಟ ಮುಗಿಸಿ ಹೊರಬಂದೆವು. ಎಷ್ಟು ಹತ್ತಿರವಿದ್ದವು ಹಿಮವತ್ಪರ್ವತಗಳು, ಬೆಳ್ಳಿ ಶಿಖರಗಳು ಬೆನ್ನಿಗೇ ಆತು ನಿಂತಿದ್ದವು.

ತಣ್ಣಗೆ ಝೇಲಮ್ ಹರಿಯುತ್ತಿತ್ತು. ಸಶಬ್ದವಾಗಿ ಸಂಭಾಷಿಸುತ್ತಾ ಮೇಲೆ ಶಿವನ ನೆತ್ತಿಯಿಂದ ಕರಗಿ ಹರಿದ ಹಿಮದ ಧಾರೆ. ಮತ್ತೂ ಬಿಗಿಯಾಗಿ ಶಾಲು ಹೊದ್ದೆ. ಅರೆ ಚಂದ್ರನ ಬೆಳದಿಂಗಳಿತ್ತು. ತಿಳಿಯಾಗಿ, ತುಂತುರಾಗಿ ಹರಿದ ನೀರನ್ನೇ ನೋಡಿದೆ. ‘ವಾಟರ್ ಲಾಗಿಂಗ್…’ ನೆಲದಲ್ಲಿ ಹೀರಲಾರದೆ, ಹರಿಯಲಾರದೆ, ಮೇಲೇರಿ ಮಡುವಾಗುವ ಬಗ್ಗೆ ಎಷ್ಟು ವರ್ಷಗಳ ಸಂಶೋಧನೆ…ನನ್ನ ಪೆ.ಎಚ್.ಡಿ ಥೀಸೀಸ್ ಇದೇ ಆಗಿತ್ತು. ನೀರನ್ನು ನಿಯಂತ್ರಿತ ಪ್ರಯೋಗಾಲಯದಲ್ಲಿ ಹಿಡಿದು ಕಟ್ಟಿ ಅಧ್ಯಯಿಸುವುದಕ್ಕೂ, ಇಲ್ಲಿ ಶಿಖರಗಳಲ್ಲಿ ಕರಗಿ ರಭಸದಲ್ಲಿ ಹರಿದು ಭೋರ್ಗರೆವ ಈ ನೀರಿಗೂ ಎಷ್ಟು ಅಂತರ. ಹೈಡ್ರಾಲಿಕ್ ಲ್ಯಾಬ್‌ನಲ್ಲಿ ನೀರನ್ನು ಕಟ್ಟಿ, ಬಂಧಿಸಿ, ಲೆಕ್ಕ ಹಾಕಿ ಹರಿಯಬಿಡುತ್ತಾ, ಗುಲ್ಬರ್ಗ, ನಾರಾಯಣಪುರ ಎಂದೆಲ್ಲ ಅಲೆದು ನೆಲದ ನೀರ ಅಂಕಿ-ಸಂಖ್ಯೆ ಸಂಗ್ರಹಿಸುತ್ತಾ ಅಲೆದ ನನ್ನ ವಿಜ್ಞಾನಿ ಕಣ್ಣುಗಳಿಗೀಗ ಝೇಲಮ್‌ನ ಮುಕ್ತ ಭೋರ್ಗರೆತದಲ್ಲಿ, ಹುರುಪು, ಹುಮ್ಮಸ್ಸಿನಲ್ಲಿ ಬೇರೊಂದೇ ಸತ್ಯದ ಅರಿವಾಗಿತ್ತು. ನಾ ಈ ನೀರಿಗೆ ಕಟ್ಟೆ ಹಾಕಬೇಕಿಲ್ಲ, ಲೆಕ್ಕ ಹಾಕಬೇಕಿಲ್ಲ, ಹರಿಯಬಿಡುತ್ತೇನೆ…ಮೈ ಮನಗಳ-ಹಸಿಯಾಗಿಸಲು, ಹಸಿರಾಗಿಸಲು.
ಮತ್ತೂ ಬಿಗಿಯಾಗಿ ಶಾಲು ಹೊದ್ದೆ. ಮೇಲೆ ಶುಭ್ರ ಆಕಾಶ, ಸುತ್ತ ಕಪ್ಪಾಗಿ ಮುಗಿಲೆತ್ತರಕ್ಕೆ ನಿಂತ ಪೈನ್ ವೃಕ್ಷಗಳು. ಅಜಯ್ ಮೃದುವಾಗಿ ಕೈ ಒತ್ತಿದ. ಬೆಚ್ಚನೆಯ ಸ್ನೇಹದ ಒತ್ತು ಅಂಗೈಯ್ಯಲ್ಲಿ. ಎಲ್ಲ ಸರಹದ್ದುಗಳ ಮೀರಿ ಹಾರಿತ್ತು. ಕಪ್ಪು ಆಗಸದಲ್ಲಿ ಚುಕ್ಕಿ ಸಾವಿರವಿತ್ತು, ಬಿಗಿದ ಮುಷ್ಠಿಯ ಒಳಗೆ ಮಿಕ್ಕ ಪ್ರೀತಿಯು ಒಂದೇ. ಜಗತ್ತಿನೆಲ್ಲ ಪ್ರೀತಿಯ ಈ ಕ್ಷಣ ಬೊಗಸೆಯಲ್ಲಿ ಹಿಡಿದಿದ್ದೆ, ಸೋರಬಿಡದೆ. ಕಾಶ್ಮೀರದ ಈ ಕಣಿಯೆಯಲ್ಲಿ ‘ಸಮಯ’ ಸ್ತಬ್ಧವಾಯಿತು. ಭೂತ-ಭವಿಷ್ಯಗಳಿಗೆ ಮುಚ್ಚಿ ಬಾಗಿಲನ್ನು, ವರ್ತಮಾನವಷ್ಟೆ ಸತ್ಯವಾಗಿತ್ತು. ಅರಳದೆ, ಉಳಿದು ಬಿಟ್ಟ ದೇಹದ ಪಕಳೆ-ಪಕಳೆಗಳು ಬಿರಿದು ನಿಂತವು. ಮೆಲ್ಲಗೆ ಅವನ ಕೈ ಸರಿಸಿದೆ. ಈ ಕ್ಷಣ ಕರಗುವುದು ಬೇಕಿರಲಿಲ್ಲ.. ಈ ಕ್ಷಣ ಸ್ಖಲಿಸುವುದು ಬೇಕಿರಲಿಲ್ಲ. ಈ ಕ್ಷಣದ ಸಾಧ್ಯತೆಗಳಷ್ಟೆ ಮುಖ್ಯವಾಗಿತ್ತು. ಅಸಾಧ್ಯವಾಗಿ, ಅಸಂಭವವಾಗಿ ಮತ್ತೊಂದು ಆಯಾಮದಲ್ಲೇ ಉಳಿದುಬಿಡಲಿದ್ದ ಅನುಭವವೊಂದು ಮೈ ತುಂಬಿತ್ತು. ನನ್ನ ನಿತ್ಯ ಕನಸುಗಳಿಗೆ, ಮತ್ತೆ ಬರೆವ ಕವನಗಳಿಗೆ ವಸ್ತುವಾಗಲಿತ್ತು. ಇನ್ನು ಅವು ಕಪ್ಪು-ಬಿಳುಪು ಕವನಗಳಲ್ಲ, ಕಣಿವೆಯ ರಂಗಿನಲ್ಲಿ, ಈ ನಿಸರ್ಗದ ಬಣ್ಣಗಳಲ್ಲಿ ಅದ್ದಿ ಬರೆಯಬಲ್ಲೆ. ಈ ಬಣ್ಣಗಳನ್ನಿಷ್ಟು ಕೊಂಡೊಯ್ಯಬಲ್ಲೆ, ಬೆಂಗಳೂರಿನ ನೆಲಕ್ಕೂ.

ನಾಳಿನ ಫ್ಲೈಟ್ ಬುಕ್ ಆಗಿತ್ತು. ಈ ರಾತ್ರಿ ಹರಿದು ಹೋಗದಂತೆ ಅಣೆಕಟ್ಟು ಏರಿಸುವ ತವಕ ಕ್ಷಣ ಕಾಡಿತು. ಈ ಮೂರೇ ದಿನಗಳಲ್ಲಿ ನಾ ಎಷ್ಟು ಹಗುರಾಗಿದ್ದೆ. ಹೇಳಿಕೊಂಡೆ, ಹಂಚಿಕೊಂಡೆ. ನಡುಬೀದಿಯಲ್ಲಿ ನಗ್ನವಾದಂತೆ ದಿವ್ಯ ನಿರ್ಲಜ್ಜೆಯಲ್ಲಿ ನಿಂತಿದ್ದೆ. ಏಕೋ ಸಂಕೋಚವಾಗಲಿಲ್ಲ, ಮುಜುಗರವಾಗಲಿಲ್ಲ. ಒಳಗೊಳಗೇ ಮಸೆದು, ಹೊಗೆಯೆದ್ದು, ಆಸ್ಫೋಟಿಸಬಯಸಿದ ನೆನಪುಗಳನ್ನೆಲ್ಲ ಹೇಳುತ್ತಾ ಹೇಳುತ್ತಾ ಉಚ್ಛಾಟಿಸಿದೆ. ಥಿಯರಿಗಳ ಹುಡುಕಾಡಿದೆ. ಸಮೀಕರಣಗಳ ಜೋಡಿಸಿದೆ. ನನ್ನದಲ್ಲದ ಕತೆಯೆಂಬಂತೆ ದೂರ ನಿಂತು ಮೋಜಿನಿಂದ ವೀಕ್ಷಿಸಿದೆ.ಏಕೋ ಅಪ್ಪನ ಮೇಲೆ ಕೂಡ ಈಗ ಸಿಟ್ಟು ಬರುತ್ತಲೇ ಇಲ್ಲ.
ಮುಗುಯಲಿತ್ತು ಆ ರಾತ್ರಿ. ಅಜಯ್ ತಟ್ಟನೆ ಕೇಳಿದ.
‘ಅನು, ನೀವು ಖುಷಿ ಇದ್ದೀರಾ ನಿಮ್ಮ ವಿವಾಹದಲ್ಲಿ…’
ನಕ್ಕುಬಿಟ್ಟೆ, ಪೆಚ್ಚಾದ.
‘ಅಜಯ್, ಪ್ರೀತಿಗೆ ನೆಪಗಳ ಹುಡುಕುವುದು ಬೇಡ…’ಅಂದೆ. ಅವ ತಣ್ಣಗಾದ.
‘ಕಾರಣಗಳಲ್ಲಿ ಹುಟ್ಟುವುದಿಲ್ಲ ಈ ಆಕರ್ಷಣೆ. ಬದುಕಿನ ಈ ಬದಿಗಿದ್ದ ಸಾಧ್ಯತೆಗಳ ನಾ ಎಂದಾದರೂ ಅನ್ವೇಷಿಸಲೇ ಬೇಕಿತ್ತು. ಈ ಆಕಾಶದಡಿಯ ಯಾವೊಂದು ಅನುಭವ ಉಳಿಸಿ ಹೋಗುವುದು ನನಗೆ ಬೇಕಿರಲಿಲ್ಲ…’
ಮತ್ತೆ ಆತ ಏನೂ ಹೇಳಲಿಲ್ಲ. ನಮ್ಮ ನಡುವೆ ಮಾತುಗಳು ಉಳಿದಿರಲಿಲ್ಲ, ನಿರೀಕ್ಷೆಗಳಿರಲಿಲ್ಲ, ಭವಿಷ್ಯವಿರಲಿಲ್ಲ. ಈ ಕ್ಷಣ ಸೊಗಸಿತ್ತು. ಆದರೆ ನಮ್ಮದೇ ಬದುಕೊಂದು ಕಾದಿತ್ತು ದೂರದಲ್ಲಿ. ಭೂತ-ಭವಿಷ್ಯಗಳಿಗೆ ಕದ ಹಾಕಿ ವರ್ತಮಾನದ ಒಂದೆರಡು ಕ್ಷಣಗಳ ತುಂಬಿ ನಿಂತಿದ್ದೆವು. ಅವನ ಹೆಂಡತಿ, ಮಕ್ಕಳ ಬಗ್ಗೆ ಕೇಳಬೇಕು ಅಂದುಕೊಂಡೆ. ಏಕೋ ಕೇಳಲೇ ಇಲ್ಲ. ಈ ಕ್ಷಣಕ್ಕೆ ನಮ್ಮಿಬ್ಬರಾಚಿನ ದಿಕ್ಕುಗಳನ್ನೆಲ್ಲ ಎಳೆದು ತರುವುದು ಬೇಡ ಅನಿಸಿತು.
ಈ ಸಾಂಗತ್ಯದ ಒಂದಿಷ್ಟು ರಂಗನ್ನು, ರಂಯತೆಯನ್ನು ಕೊಂಡೊಯ್ಯುತ್ತಿದ್ದೆವು. ಒಂದು ಸ್ನೇಹದ ಸಿಹಿ ಸುಖವನ್ನು, ಪ್ರಖರ ಪ್ರಭೆಯನ್ನು.
ನಾ ನಕ್ಕೆ…ಬದುಕಿನತ್ತ ತುಂಟ ನಗೆ ಬೀರಿ, ಬದುಕು ನನ್ನನ್ನಲ್ಲೇ ನಿಲ್ಲಿಸಿ, ‘ಬೈಪಾಸ್’ ಮಾಡಲಿತ್ತು, ಗಕ್ಕನೆ ನಾ ವೇಗ ಹೆಚ್ಚಿಸಿದ್ದೆ. ಬದುಕನ್ನಿಷ್ಟು ಹಿಡಿದು ನಿಲ್ಲಿಸಿದ್ದೆ. ತುಂಬಿಕೊಂಡಿದ್ದೆ ಮಡಿಲ ತುಂಬಾ ಝೇಲಮ್‌ನ ಅನಿಯಂತ್ರಿತ ಹರಿವನ್ನು, ಬೆನ್ನು ಬಾಗಿಸದೆ ನಿಂತ ಪೈನ್ ವೃಕ್ಷಗಳ ನಿಲುವನ್ನು, ಕಣಿವೆಯಲ್ಲಿನ ಅಕೃತಕ ಪ್ರೀತಿಯನ್ನು!
*
*
*
ದಿನಾಂಕ ೫ ಜೂನ್ ೧೯೮೯

ಮರುದಿನ ಶ್ರೀನಗರದ ವಿಮಾನ ನಿಲ್ದಾಣ ತಲುಪಿದಾಗ ತುಸು ತಡವಾಗಿತ್ತು. ಸೂಟ್‌ಕೇಸ್‌ಗಳ ತಳ್ಳಿ, ವ್ಯಾನಿಟಿ ಬ್ಯಾಗಿಗೆ ಕ್ಯಾಬಿನ್ ಲಗ್ಗೇಜ್, ಫಲಕ ಸಿಗಿಸಿಕೊಂಡು ಹೊರಟೆ. ನನ್ನ-ಅಜಯನ ಸೀಟು ಈ ಬಾರಿ ಒಟ್ಟಿಗೇ ಸಿಕ್ಕಿರಲಿಲ್ಲ. ಅಜಯ್ ನನ್ನ ಕಿಟಕಿ ಪಕ್ಕಕ್ಕೆ ಕೂರಿಸಿ, ತಾ ಮುಂದಿನ ಸಾಲಿಗೆ ಹೋಗಿ ಕುಳಿತ.
ಏಕೋ ನೋವಾಗಲಿಲ್ಲ.
ವಿಮಾನ ಮೇಲೇರಿತು. ಕೆಳಗೆ ನೋಡಿದೆ. ಕಣಿವೆ ಏನೆಲ್ಲ ಕಲಿಸಿತ್ತು. ನಾ ಬಹಳಷ್ಟು ಪಡೆದಿದ್ದೆ. ಮತ್ತೆ ಬರೆವ ನನ್ನ ಕವನಗಳಿಗೆ ಬೀಜಾಣುಗಳು ದೊರೆತಿತ್ತು. ನಾ ಮೊಟ್ಟಮೊದಲಿಗೆ ಪ್ರೀತಿಸತೊಡಗಿದ್ದೆ ನನ್ನನ್ನೇ…ಅದರೆಲ್ಲ ಏರು-ತಗ್ಗುಗಳೊಡನೆ, ಅದರೆಲ್ಲ ಚಂಚಲತೆಯೊಡನೆ, ಅವನ್ನೆಲ್ಲ ಅತ್ಯಂತೆ ಸಹಜವಾಗಿ ಸ್ವೀಕರಿಸಲು ಸಾಧ್ಯವಾಗಿತ್ತು. ಸಂಬಂಧಗಳಲ್ಲಿ ಎಷ್ಟೊಂದು ಹೇಳದೇ ಉಳಿದು ಬಿಡಿತ್ತವೆ – ವೈವಾಹಿಕ ಸಂಬಂಧದಲ್ಲೂ. ಹತ್ತಿರವಾಗುತ್ತೇವೆ, ಕತ್ತಲಲ್ಲಿ. ಬೆಳಕಲ್ಲಿ ಶುದ್ಧ ಅಪರಿಚಿತರು. ಬೆಳಕಿಗೊಡ್ಡಬೇಕು ನಮ್ಮ ಪ್ರೀತಿಗಳ. ಹೇಳದೆ ಉಳಿದ ಮಾತುಗಳೆಲ್ಲ ಹಿಂಸೆಯಾಗುತ್ತವೆ. ಬರೆಯದೆ ಬಿಟ್ಟ ಕವನಗಳಂತೆ ಭಾರವಾಗುತ್ತವೆ. ತೆರೆದುಕೊಳ್ಳಬೇಕು, ಪಾರದರ್ಶಕವಾಗಬೇಕು, ಬರೀ ಪದಗಳಲ್ಲಲ್ಲ, ಬದುಕಿನಲ್ಲೂ. ಏಕೋ ಅಜಯ್ ಈ ಕ್ಷಣಕ್ಕೆ ದೂರಾದ-ಕೇವಲ ನೆಪವಾದ-ಮುಂದಿನ ಸಾಲಲ್ಲೇ ಕುಳಿತಿದ್ದೂ, ದೂರ ಕಣಿವೆಯ ನೆನಪು ಮಾತ್ರವಾದ. ಕಾಲದ ನಡುವೆ ಹಿಂದು-ಮುಂದಿಲ್ಲದೆ ಘನವಾದ. ಒಂದು ಅನುಭವದ ಬಿಂದುವಾದ.
ಹೊರಗೆ ನೋಡಿದೆ. ನೆಲಮುಗಿಲ ನಡುವೆ ತಟಸ್ಥ ನಿಂತ ಮೋಡಗಳು. ಮನಸ್ಸು ಮುದಗೊಂಡಿತು. ಎಂಥಹುದೋ ವಿಚಿತ್ರ ಉತ್ಸಾಹ. ಅಂತರಗಂಗೆಯಾಗಿ ಸುಳಿದಾಡಿದ ನನ್ನ ಪ್ರೇಮಕಾಮಗಳಿಗೆಲ್ಲ ಅಭಿವ್ಯಕ್ತಿ ದೊರೆತಿತ್ತು. ಗುಪ್ತಗಾಮಿನಿಯಾಗಿ ಹರಿದ ಬಯಕೆಗಳಷ್ಟು ಚಿಲುಮೆಯಾಗಿದ್ದವು. ನನ್ನ ಕವನಗಳು ಕಡೆಗೂ ತಲುಪಿದವು., ತಲುಪಬೇಕಿದ್ದ ಕನಸಿನಾಚೆಯ ದಡಕ್ಕೆ, ಶಿಖರದಿಂದಿಳಿದು ಕಾಡು, ಮೇಡು, ಬಯಲುಗಳಲ್ಲಿ ಹರಿದು, ಕಡೆಗೂ ತಲುಪಿದವು, ಕಣಿವೆಯಾಚಿನ ವಾಸ್ತವಕ್ಕೆ.
*
*
*
ಬೆಂಗಳೂರಿಗೆ ಹೊರಟ ಕರ್ನಾಟಕ ಎಕ್ಸ್‌ಪ್ರೆಸ್ ಹೊರಡಲು ಐದು ನಿಮಿಷ ಮಾತ್ರ ಉಳಿದಿತ್ತು. ಅಜಯ್ ಸ್ತೇಷನ್ವರೆಗೂ ಬಂದಿದ್ದ. ನಮ್ಮ ನಡುವೆ ಹೆಚ್ಚು ಮಾತಿರಲಿಲ್ಲ. ದಿಲ್ಲಿಯ ಜನ ಸಮೂಹ ನಡುವೆ ಗೋಡೆಯಾಗಿತ್ತು, ಗದ್ದಲವಾಗಿತ್ತು. ಇನ್ನೇನು ರೈಲು ಹೊರಡಲಿತ್ತು.
‘ಬರೀತಿರಿ…’ ಅಂದ. ಅವನು ಹೇಳಿದ್ದು ಪತ್ರವನ್ನೋ, ಕವನಗಳನ್ನೋ ಗೊತ್ತಾಗಲಿಲ್ಲ. ಬರೀ ’ಹೂಂ’ ಎಂದೆ. ಹಸಿರು ದೀಪ-ರೈಲು ಹೊರಟಿತು. ರವಿ ಬಾಗಿ ಕೈ ನೀಡಿದ. ಬೆಚ್ಚಗೆ ಕ್ಷಣ ಹಿಡಿದ. ಅವನ ಬಿಗಿ ಮುಷ್ಠಿಯಲ್ಲಿ ಸಿಕ್ಕ ನನ್ನ ಹಸ್ತವನ್ನು ಕಿತ್ತುಕೊಂಡು ರೈಲು ಹೊರಟಿತು – ಕನಸಿನಾಚೆಗಿನ ವಾಸ್ತವದತ್ತ – ಹೊಸತೇನೋ ಭರವಸೆಯ ಹೊತ್ತು.
*****

ಕೀಲಿಕರಣ: ಪ್ರೀತಿ ಬಿ ನಾಗರಾಜ್, ಸೀತಾಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.