ಬಗಾರ ಬೈಂಗನ್ ಮತ್ತು ಬೆಳದಿಂಗಳೂಟ

ಒಂದು ಕೆಜಿ ಹೊಳೆವ ಗುಂಡು ಬದನೇಕಾಯಿ
ತೊಳೆದು ಅಂದವಾಗಿ ಕತ್ತರಿಸಬೇಕು,
ತಲೆಕೆಳಗು ತೊಟ್ಟು ಹಿಡಿದರೆ
ಕಮಲದ ಹೂ ಅರಳಿದಂತಿರಬೇಕು
ಉಪ್ಪು + ಹುಳಿ+ ಖಾರ…..
ನಾಲಿಗೆ ರುಚಿಗೆ ತಕ್ಕಂತೆ.

ಹುರಿದು ಕಡಲೇಕಾಯಿ,
ಮೇಲೊಂದಷ್ಟು ಎಳ್ಳಿನ ಪುಡಿ;
ನಾಲ್ಕು ಮನೆಯಾಚೆಗೂ ಘಂ! ಎನ್ನುವಂತೆ
ಕಾದೆಣ್ಣೆ ಒಗ್ಗರಣೆ
ಜೊತೆಗೆ ಜೋಳದ ರೊಟ್ಟಿ
ರೆಟ್ಟೆ ಬೀಳುವ ಹಾಗೆ ತೆಳ್ಳಗೆ ತಟ್ಟಿದರೆ
ಬೆಳದಿಂಗಳೂಟ.

ಅಂಕುಡೊಂಕಿಲ್ಲದ ಹುಣ್ಣಿಮೆ ಚಂದ್ರನ
ತಣ್ಣನೆ ಬೆಳಕಲ್ಲಿ ಉಸ್ಸೆಂದಿತ್ತು
ಅಡಿಗೆ ಮಾಡಿದ ಆಯಾಸ

ಗಾಳಿ ಬೀಸಿದ್ದೇ, ನಾಳೆಗೇನೆಂಬ ಚಿಂತೆ
ಚಂದ್ರನ ಮೇಲೊಂದು ತುಂಡು ಮೋಡ.

ಮತ್ತೆ ಹುಣ್ಣಿಮೆಗೆ ಇನ್ನೂ
ಒಂದು ತಿಂಗಳು ಕಾಯಬೇಕು.
*****