ನೂರು ವರ್ಷದ ಏಕಾಂತ – ಮುನ್ನುಡಿ

ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್
ಕನ್ನಡಕ್ಕೆ: ಎ. ಎನ್. ಪ್ರಸನ್ನ

ನೇರವಾಗಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾದಗೊಂಡಿರುವ ಕೃತಿಯ ಬಗ್ಗೆ ಮಾತನಾಡುವುದೇ ಕಷ್ಟದ ಸಂಗತಿ. ಹೀಗಿರುವಾಗ ಅನುವಾದದ ಅನುವಾದವನ್ನು ಕುರಿತು ಮಾತನಾಡುವುದು ಇನ್ನೂ ಕಠಿಣ ಸಮಸ್ಯೆಗಳನ್ನು ಉಂಟುಮಾಡುವುದನ್ನು ಎಲ್ಲರೂ ಒಪ್ಪುತ್ತಾರೆ. ಮೂಲ ಕೃತಿಗೆ ಅನುವಾದವು ಎಷ್ಟು ಹತ್ತಿರ, ಎಷ್ಟು ನಿಷ್ಠೆಯಿಂದ ಇದೆ ಎಂಬ ಪ್ರಶ್ನೆಗಳನ್ನು ಎತ್ತಿ, ಉತ್ತರಗಳನ್ನು ಹುಡುಕುತ್ತ, ಮರು ಪ್ರಶ್ನೆಗಳನ್ನು ಎತ್ತುತ್ತ ವಾದವನ್ನು ನಿರಂತರವಾಗಿ ಮುಂದುವರಿಸಬಹುದು. ಅನುವಾದವೆಂಬ ಕ್ರಿಯೆಯ ಬಗ್ಗೆ ಇರುವ ಮೀಮಾಂಸೆಗಳು ನಾನಾ ರೀತಿಯ ಅಭಿಪ್ರಾಯಗಳನ್ನು ಮೂಡಿಸುತ್ತ, ಅಳಿಸುತ್ತ ಬಂದಿವೆ. ಒಂದು ರೀತಿಯಲ್ಲಿ ಇದು ಮುಗಿಯದ, ಒಣ ಚರ್ಚೆಯೇ ಸರಿ. ಈ ಚರ್ಚೆ ಅನುವಾದವಾಗಿರುವ “ಪಠ್ಯ”ದ ಕಾಣ್ಕೆಗಳನ್ನೂ, ನಾವು ಸ್ಪಂದಿಸಬೇಕಾದ ಅದರ ಅನುಭವಗಳನ್ನು ನಮ್ಮಿಂದ ದೂರವ ಮಾಡುತ್ತಲೂ ಇರುತ್ತದೆ. ಆದ್ದರಿಂದ ಅನುವಾದದ ಯಶಸ್ಸಿನ ಅಥವಾ ಸೋಲಿನ ಕಡೆ ಹೆಚ್ಚು ಗಮನ ಹರಿಸದೆ, [ಅದು ಬೇರೊಂದು ಸಂದರ್ಭದಲ್ಲಿ ಆಗಲಿ ಎಂದು ಆಶಿಸುತ್ತ] ಪ್ರಸನ್ನರು ಅನುವಾದಿಸಿರುವ ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ ಕೃತಿ ‘ಒನ್ ಹಂಡ್ರೆಡ್ ಇಯರ್‍ಸ್ ಆಫ್ ಸಾಲಿಟ್ಯೂಡ್’ನ ಸ್ವರೂಪದ ಬಗ್ಗೆ, ವ್ಯಾಪ್ತಿಯ ಕಡೆ ನನ್ನ ದೃಷ್ಟಿ ಈ ಮುನ್ನುಡಿಯಲ್ಲಿ ಕೇಂದ್ರೀಕೃತವಾಗಿರುತ್ತದೆ ಎಂದು ಮೊದಲೇ ಸೂಚಿಸಬಯಸುತ್ತೇನೆ.

ಕೆಲವು ಮೂಲಭೂತ ಅಂಶಗಳನ್ನು ಈ ಘಟ್ಟದಲ್ಲಿಯೇ ಇತ್ಯರ್ಥಮಾಡಿಕೊಳ್ಳುವುದು ಅಗತ್ಯ. ಮಾಂತ್ರಿಕ ವಾಸ್ತವತೆಯನ್ನು ಕೇವಲ ಸಾಹಿತ್ಯದ ಪ್ರಕಾರವಾಗಿ ನೋಡದೆ ಅದರ ಅನೇಕ ಐತಿಹಾಸಿಕ, ರಾಜಕೀಯ, ಸಾಂಸ್ಕೃತಿಕ ನೆಲೆಗಳ ಮೂಲಕ ಗ್ರಹಿಸುವ ಅಗತ್ಯವಿದೆ. ಇದನ್ನು ಕೇವಲ ಸಾಹಿತ್ಯದ ಪ್ರಕಾರವಾಗಿ ಪರಿಗಣಿಸಿದರೆ ಇಲ್ಲಿ ಬರುವ ಅನೇಕ ಅತಾರ್ಕಿಕ, ಅತೀಂದ್ರಿಯ ಅಂಶಗಳನ್ನು ಸ್ವೀಕರಿಸುವ ನೆಲೆ ಯಾವುದಾಗಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಈ ಅಂಶಗಳನ್ನು ಒಪ್ಪದೆ ಇರುವ, ನಂಬದೆ ಇರುವ ವಿಚಾರವಾದಿಗಳು ಈ ಕಥನವನ್ನು ಹೇಗೆ ಸ್ವೀಕರಿಸಬೇಕು? ಆದ್ದರಿಂದ ಈ ಪ್ರಕಾರವನ್ನು ಬೇರೆ ರೀತಿಯಲ್ಲಿ ಅರಿಯಬೇಕು.

ಇಲ್ಲಿ ಬರುವ ‘ಮಾಯಾ’ ಪ್ರಪಂಚವನ್ನು ನಂಬಿಕೆಯ ನೆಲೆಯಿಂದ ಒಪ್ಪಿಕೊಳ್ಳಬೇಕೆ ಅಥವಾ ಕಾಲೆರಿಜ್ ಹೇಳುವ ಹಾಗೆ ವಿಲಿಂಗ್ ಸಸ್ಪೆನ್ಷನ್ ಆಫ್ ಡಿಸ್‌ಬಿಲೀಫ್ ಎಂಬ ಸೂತ್ರದ ಮೂಲಕ ನೋಡಬೇಕೆ? ಓದುಗನಾಗಿ ಈ ಕಥನಕ್ಕೆ ಸ್ಪಂದಿಸುವ ನೆಲೆ ಯಾವುದು? ಎಲ್ಲವನ್ನೂ ನಂಬಿ ಒಪ್ಪುವ ಓದುಗನಿಗೆ ಯಾವ ಸಮಸ್ಯೆಯೂ ಬರುವುದಿಲ್ಲ. ಆದರೆ ಎಲ್ಲವನ್ನೂ ನಂಬಿ ಬಿಟ್ಟರೆ ಇದು ಮಾಂತ್ರಿಕ ವಾಸ್ತವತೆ ಆಗುವುದಿಲ್ಲ. ಅದು ಸಾಮಾನ್ಯ ವಾಸ್ತವತೆಯೇ ಆಗಿಬಿಡುತ್ತದೆ.

ನಂಬಿಕೆಯ ಅಥವಾ ಅಪನಂಬಿಕೆಯ ಪ್ರಶ್ನೆಗಳನ್ನು ಬಿಟ್ಟುಕೊಟ್ಟು ಸಾಹಿತ್ಯ ಪ್ರಕಾರವೆಂದು ಈ ರೀತಿಯ ಕಥನಗಳನ್ನು ಅರ್ಥೈಸಿಕೊಳ್ಳುವವರು ಇದನ್ನು ಸಾಂಕೇತಿಕ ನೆಲೆಯಿಂದ ನೋಡಬಹುದು. ಈ ಕಥನವನ್ನು ರೂಪಕವಾಗಿ ಸ್ವೀಕರಿಸಬಹುದು. ಆಗ ಮಾಂತ್ರಿಕ ವಾಸ್ತವತೆಯ ಕಥನಗಳು ಸಂಕೇತಗಳ ಮೂಲಕ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಅರ್ಥಗಳನ್ನು ಕಟ್ಟಿಕೊಡುವ ಪಠ್ಯಗಳಾಗುತ್ತವೆ. ಓದುಗನ ನೆಲೆಯನ್ನು ನಿರ್ಧರಿಸುತ್ತಲೇ ಮಾಂತ್ರಿಕ ವಾಸ್ತವತೆ ತನ್ನ ಅರ್ಥವನ್ನು ಅನಾವರಣ ಮಾಡುತ್ತದೆ ಎಂದು ಹೇಳುವ ಅಗತ್ಯವಿರುವುದರಿಂದ ಇವೆಲ್ಲವನ್ನು ಇಲ್ಲಿ ನಾನು ಚರ್ಚಿಸಿರುವುದು.

ಒಂದು ಸಂದರ್ಶನದಲ್ಲಿ ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, “ನಂಬಿಕೆ ಇಲ್ಲದೆ ಹೋಗಿದ್ದರೆ ಈ ಮಾಂತ್ರಿಕ ವಾಸ್ತವತೆಯ ಕಥೆಯನ್ನು ನಾನು ಬರೆಯುತ್ತಿರಲಿಲ್ಲ. ನಂಬಿಕೆ ಇರುವುದರಿಂದಲೇ ನಾನು ಇದನ್ನು ಬರೆದಿರುವುದು” ಎನ್ನುತ್ತಾನೆ. ಅಂದರೆ ಮಾರ್ಕೆಜ್ ನಂಬುವ ವಾಸ್ತವತೆ ನಮ್ಮ ವಾಸ್ತವತೆಯೂ ಆಗುವ ಸಾಧ್ಯತೆ ಇರಬೇಕಾಗುತ್ತದೆ. ಹಾಗಾಗದಿದ್ದರೆ ಅವನ ಕಥನದ ಅನುಭವ ನಮಗೆ ದಕ್ಕುವುದಾದರೂ ಹೇಗೆ? ಅವನು ಬಳಸುವ ‘ನಂಬಿಕೆ’ ಎಂಬ ಮಾತಿನಲ್ಲಿ ಈ ರೀತಿಯ ಬರವಣಿಗೆಯ ಮಾರ್ಗವೂ ಸೇರಿಕೊಳ್ಳುತ್ತದೆ. ಮಾಂತ್ರಿಕ ವಾಸ್ತವತೆಯ ಅರ್ಥವನ್ನು ನಿರ್ಧರಿಸುವುದಕ್ಕೆ, ವ್ಯಾಖ್ಯಾನಿಸುವುದಕ್ಕೆ ಓದುಗನ ನೆಲೆಯ ಪ್ರಶ್ನೆ ಇತ್ಯರ್ಥವಾಗುವುದು ತೀರ ಅಗತ್ಯ. ಬಹುಶ: ಪ್ರಪಂಚದೆಲ್ಲ ಕಡೆ ಇದರ ಪೂರೈಕೆ ಸಕಾರಾತ್ಮಕವಾಗಿರುವುದಕ್ಕೆ ಮಾರ್ಕೆಜ್ ಗಳಿಸಿದ ಮನ್ನಣೆಯೇ ಸಾಕ್ಷಿ.
* * *
‘ಒನ್ ಹಂಡ್ರೆಡ್ ಇಯರ್‍ಸ್ ಆಫ್ ಸಾಲಿಟ್ಯೂಡ್’ನ ಕಥನದ ಅನೇಕ ಆಯಾಮಗಳನ್ನು ಪರಿಚಯಿಸುವ ಪ್ರಯತ್ನವನ್ನು ಇಲ್ಲಿ ಮಾಡಬಯಸುತ್ತೇನೆ. ಮಾರ್ಕೆಜ್‌ನ ಕಾದಂಬರಿಯನ್ನು ಸೂಕ್ಷ್ಮವಾಗಿ ಓದಿದಾಗ ಅನೇಕ ಐತಿಹಾಸಿಕ, ಸಾಂಸ್ಕೃತಿಕ, ರಾಜಕೀಯ ಹೊಳಹುಗಳು ಗೋಚರಿಸತೊಡಗುತ್ತವೆ. ಇಲ್ಲಿ ಚಿತ್ರಿತವಾಗಿರುವ ಅಧಿಕಾರಶಾಹಿ, ಯುದ್ಧ, ಮನುಷ್ಯ ಸಂಬಂಧಗಳ ಸಂಕೀರ್ಣ ನೆಲೆಗಳು ಸಾಮಾನ್ಯ ಮಟ್ಟದಲ್ಲಿ ಗ್ರಹಿಕೆಗೆ ಬರದಿದ್ದರೂ ನಮ್ಮ ಅನುಭವ ಅಥವಾ ಕಲ್ಪನೆಯನ್ನು ಮೀರಿದ ಸ್ತರದಲ್ಲೇನೂ ನೆಲೆಸಿರುವುದಿಲ್ಲ. ಅಂದರೆ ಮಾಂತ್ರಿಕ ವಾಸ್ತವತೆಯ ಜಗತ್ತು ಬೇರೊಂದು ಕ್ರಮದ ಓದನ್ನು, ಗ್ರಹಿಕೆಯನ್ನು ನಮ್ಮಿಂದ ಅಪೇಕ್ಷಿಸುತ್ತದೆ. ತನ್ಮೂಲಕ ಸಾಮಾನ್ಯ ವಾಸ್ತವದಂತೆ ಅರಳುತ್ತದೆ. ಹೀಗೆ ಬಾಹ್ಯ ಪ್ರಪಂಚವನ್ನು ಬಿಚ್ಚಿಡುತ್ತಲೇ ಮಾಂತ್ರಿಕ ವಾಸ್ತವತೆ ವ್ಯಕ್ತಿಗಳ ಒಳಪ್ರಪಂಚದ, ಅಂತರಂಗದ, ಬಯಕೆ, ಆಸೆ, ಹತಾಶೆ, ಕಲ್ಪನೆಗಳನ್ನೂ ನಮ್ಮ ಮುಂದೆ ತಂದು ನಿಲ್ಲಿಸುತ್ತದೆ. ಯಾವುದೇ ವ್ಯಕ್ತಿಯ ಬದುಕು, ಅದರ ಅನೇಕ ಒಳಸಂಗತಿಗಳು, ರಹಸ್ಯ ವಿಚಾರಗಳು, ಸಮಷ್ಟಿಯ ಬದುಕಿಗೆ ಪೂರಕವಾದ ವಿಷಯಗಳೇ ಹೊರತು ವಿರೋಧಿ ವಿಷಯಗಳಲ್ಲ ಎಂಬುದನ್ನು ಸಮರ್ಥವಾಗಿ ಮನವರಿಕೆ ಮಾಡಿಕೊಡುವುದರಲ್ಲಿ ಮಾಂತ್ರಿಕ ವಾಸ್ತವತೆಯ ಯಶಸ್ಸನ್ನು ನಾವು ಕಾಣಬಹುದು.

ಮಾರ್ಕೆಜ್‌ಗಿಂತ ಬಹಳ ಹಿಂದೆಯೇ ಫ್ರಾನ್ಜ್ ಕಾಫ್ಕಾ ಇದನ್ನು ತನ್ನ ಕೃತಿಗಳಲ್ಲಿ ಮಾಡಿ ತೋರಿಸಿದ್ದ. ನನ್ನ ಪ್ರಕಾರ ಕಾಫ್ಕಾನ ಮಾದರಿಯೇ ಮಾರ್ಕೆಜ್‌ಗೆ ದಾರಿದೀಪ. ಇದನ್ನು ಮುಂದುವರೆಸಿ ಹೇಳುವುದಾದರೆ ಕಾಫ್ಕಾನಲ್ಲಿ ಯಾವ ರೀತಿಯ ಸಂಕಟ, ನೋವು, ಯಾತನೆ ಇದೆ ಎಂದರೆ, ಆ ಅನುಭವಗಳ ಮೂಲಕವೇ ಅವನ ಜಗತ್ತು ಒಂದು ‘ಧಾರ್ಮಿಕ’ ನೆಲೆಯನ್ನು ಕಂಡುಕೊಳ್ಳುತ್ತದೆ. ಅಂದರೆ ಕಾಫ್ಕಾನ ಹೊರಜಗತ್ತು ಕೂಡ ಆ ವ್ಯಕ್ತಿಗಳ ಅಂತರಂಗದ ಶುದ್ಧತೆಯನ್ನು, ಸಾಚಾತನವನ್ನು, ಶ್ರದ್ಧೆಯನ್ನು ಪರೀಕ್ಷಿಸುವ, ಬಹಿರಂಗಪಡಿಸುವ ಸಂಕೇತಗಳು. ಆ ಹೊರಜಗತ್ತಿನ ಜೊತೆ ಬಲವಂತವಾಗಿ ಮುಖಾಮುಖಿ ಮಾಡಬೇಕಾದ ವ್ಯಕ್ತಿ ತನ್ನ ಒಳಗಿನಿಂದಲೇ ತನ್ನ ಸತ್ಯವನ್ನು ನಿತ್ಯದ ಅನುಭವದ ಮೂಲಕ ಕಂಡುಕೊಳ್ಳುತ್ತಾನೆ. ಇದು ಸಾವಿನ ಮೂಲಕ ಆಗಬಹುದು ಅಥವಾ ರೂಪಾಂತರದ ಮೂಲಕ ಆಗಬಹುದು. ಆದರೆ ‘ಮನಸ್ಸಿನ ಧಾರ್ಮಿಕತೆ’ಯನ್ನು ಕಂಡುಕೊಳ್ಳುವುದು ಈ ಬಲವಂತದ ಮುಖಾಮುಖಿಯ ಮೂಲಕವೇ. ಕಾಫ್ಕಾನ ಜಗತ್ತಿನಲ್ಲಿ ಮೋಸ, ತಟವಟ, ಹಿಂಸೆ, ಕ್ರೌರ್ಯ, ಅಮಾನವೀಯತೆ, ಲೋಕದ ಇತಿಹಾಸದ, ನಾಗರಿಕತೆಯ ದಾರಿಯನ್ನು ಸೂಚಿಸುವ ಅಂಶಗಳು. ಇದಕ್ಕೆ ವಿರುದ್ಧವಾಗಿ ವ್ಯಕ್ತಿಯ ಸೆಣೆಸಾಟ, ಆಕ್ರೋಶ, ಸಂಕಟ, ಯಾತನೆ, ಸತ್ಯವನ್ನು ಅರಿಯುವ ‘ಧಾರ್ಮಿಕ’ ಕ್ರಿಯೆಯಾಗುತ್ತದೆ. ಕಾಫ್ಕಾನ ‘ಧಾರ್ಮಿಕ’ ನೆಲೆಯೇ ಮಾರ್ಕೆಜ್‌ನ ಮಾರ್ಗಕ್ಕೆ ಬುನಾದಿ. ಇದನ್ನು ನಾವು ಗಮನಿಸಬೇಕು.

ಆದರೆ ಮಾರ್ಕೆಜ್ ಕಾಫ್ಕಾನ ಉಗ್ರಲೋಕವನ್ನು, ಭೀಕರ ಪ್ರಪಂಚವನ್ನು ದಾಟಿ ಬರುತ್ತಾನೆ. ಸಂತೋಷ, ಉಲ್ಲಾಸ, ಸಂಭ್ರಮ, ಮಾರ್ಕೆಜ್‌ನ ಜಗತ್ತಿನ ಲಕ್ಷಣಗಳು. ಪ್ರೇಮ, ಪ್ರೀತಿ, ಬಯಕೆ, ಸಂಸಾರ ಈ ಜಗತ್ತಿನ ದ್ರವ್ಯಗಳು. ಇಲ್ಲಿ ಬರುವ ವ್ಯಕ್ತಿಗಳು, ಅವರ ವ್ಯವಹಾರಗಳು ಸಾಧಾರಣ ಬದುಕಿನ ಲಕ್ಷಣಗಳೇ. ಇಲ್ಲಿ ಯಾವುದೂ ಅಸಾಧಾರಣವಲ್ಲ, ಅಪರೂಪವಾದದ್ದಲ್ಲ. ಆದರೆ ಈ ವ್ಯಕ್ತಿಗಳ ವ್ಯಾಪಾರದ ಮೂಲಕ ಮಾರ್ಕೆಜ್ ಇನ್ನೂ ಅನೇಕ ಜಗತ್ತುಗಳನ್ನು, ಲೋಕಗಳನ್ನು ಕಟ್ಟುತ್ತಾನೆ. ಇವುಗಳ ವ್ಯಾಖ್ಯಾನದ ಅಗತ್ಯವಿದೆ.

ಒಂದು, ಮಾರ್ಕೆಜ್ ಆಧುನಿಕ ಕಾಲದಲ್ಲಿ ಒಂದು ಪುರಾಣವನ್ನು, ಐತಿಹ್ಯವನ್ನು ಕಟ್ಟುತ್ತಾನೆ. ಸಾಧಾರಣ ಜಗತ್ತಿನ ವ್ಯವಹಾರಗಳ ಮೂಲಕ, ದಿನನಿತ್ಯದ ಬದುಕಿನ ಕ್ರಿಯೆಗಳ ಮೂಲಕ, ಮಾರ್ಕೆಜ್ ಬೇರೊಂದು ಪ್ರಪಂಚವನ್ನು ನಮ್ಮ ಪ್ರಙಗೆ ತಂದೊಡ್ಡುತ್ತಾನೆ. ಅಂದರೆ ವಾಸ್ತವತೆಗೆ ಪೂರಕವಾಗಿ ‘ಅವಾಸ್ತವಿಕ’ ಬದುಕಿನ ಕ್ರಮವನ್ನು ಮಾರ್ಕೆಜ್ ನಮ್ಮ ಮುಂದಿಡುತ್ತಾನೆ. ಮಾರ್ಕೆಜ್‌ನ ಪಠ್ಯದಲ್ಲಿ ಆಗುವ ಈ ಸಮ್ಮಿಲನವೇ ಬಹಳ ಮುಖ್ಯವಾದದ್ದು – ಸಾಧಾರಣ ಮತ್ತು ಅಸಾಧಾರಣ, ಗೋಚರ ಮತ್ತು ಅಗೋಚರಗಳ ನಡುವಿನ ಸಂಬಂಧದ ಶೋಧನೆ. ಇದನ್ನು ಬೇರೊಂದು ರೀತಿಯಲ್ಲಿ ಹೇಳುವ ಅಗತ್ಯವಿದೆ.

ಆಧುನಿಕ ಯುಗದಲ್ಲಿ ಮಾರ್ಕೆಜ್ ಕಟ್ಟುತ್ತಿರುವುದು ಪೂರ್ವಸೂರಿಗಳ ಬದುಕಿನ ಕ್ರಮವನ್ನು. ಈ ಬದುಕಿನ ಮಾರ್ಗ ಈಗ ಇಲ್ಲದಿದ್ದರೂ ಇದು ಸ್ಮೃತಿಯಿಂದ ಮಾಸುವುದಿಲ್ಲ. ಒಂದಲ್ಲ ಒಂದು ನೆಲೆಯಲ್ಲಿ ಈ ಗತಕಾಲದ ಬದುಕು ನಮ್ಮೊಡನೆ ಇಂದಿಗೂ ಇರುತ್ತದೆ – ಅವಶೇಷಗಳ ಮೂಲಕ, ಅಲ್ಲಿ-ಇಲ್ಲಿ ಉಳಿದಿರುವ ವ್ಯಕ್ತಿಗಳ ಮೂಲಕ ಅಥವಾ ಖಂಡಿತವಾಗಿಯೂ ನಮ್ಮ ಸ್ಮೃತಿಯಲ್ಲೇ ಜೀವಂತವಾಗಿರುವ ಸಂಬಂಧಗಳಿಂದ. ಎಷ್ಟೇ ನವಾಧುನಿಕ ಜಗತ್ತು ಬಂದರೂ ಎಲ್ಲೋ ಒಂದು ಮೂಲೆಯಲ್ಲಿ ಭೂತಸ್ಮರಣೆ, ನೆನಪು ಮತ್ತು ಅನುಭವ ಮನುಷ್ಯಪ್ರಙಯಿಂದ ಸಂಪೂರ್ಣವಾಗಿ ಅಳಿಸಿಹೋಗುವುದಿಲ್ಲ. ಎಲ್ಲ ಕಾಲದಲ್ಲೂ ಭೂತ-ಭವಿಷ್ಯಗಳ ಕಲ್ಪನೆಯನ್ನು, ಚಿಂತನೆಯನ್ನು, ಅನುಭವವನ್ನು ವರ್ತಮಾನದಲ್ಲಿ ಮನುಷ್ಯನ ಪ್ರಙ ಹಿಡಿಯುತ್ತಲೇ ಇರುತ್ತದೆ. ಭೂತಕಾಲದ ಐತಿಹ್ಯಗಳು ನಮಗೆ ವಿವಿಧ ಅರ್ಥಗಳನ್ನು ವಿವಿಧ ನೆಲೆಗಳಲ್ಲಿ ಕೊಡುತ್ತಲೇ ಇರುತ್ತವೆ. ಇದನ್ನು ಮಾರ್ಕೆಜ್ ಸೃಜನಶೀಲ ನೆಲೆಯಲ್ಲಿ ಶೋಧಿಸುತ್ತಾನೆ. ಇದನ್ನೇ ಯುಂಗ್ ಆರ್ಕಿಟೈಪ್ಸ್‌ನ ಪರಿಕಲ್ಪನೆಯ ಮೂಲಕ ಹಿಡಿಯಲು ಹೊರಟಿದ್ದು. ಯುಂಗ್ ಅದನ್ನು ಕಲೆಟ್ಕೀವ್ ಅನ್‌ಕಾನ್ಷಸ್ ಎಂದು ವರ್ಣಿಸಿದ. ಹಾಗೆ ನೋಡಿದರೆ ನಮ್ಮಲ್ಲೇ ಎಡಪಂಥೀಯ ಶಾಸ್ತ್ರದ ನೆಲೆಯಿಂದ ಕೊಸಾಂಬಿಯವರು ‘ಮಿಥ್ ಅಂಡ್ ರಿಯಾಲಿಟಿ’ ಎಂಬ ಕೃತಿಯಲ್ಲಿ ಇದನ್ನು ವಿವರಿಸುವ ಪ್ರಯತ್ನವನ್ನು ಮಾಡಿದರು. ಕ್ಯಾಸಿರೆರ್ ಇದನ್ನು ‘ಮೈಥೋಪೋಯಿಕ್ ಇಮ್ಯಾಜಿನೇಷನ್’ ಎಂದು ಬಣ್ಣಿಸುತ್ತಾನೆ.

ಎರಡನೆಯದಾಗಿ, ಮಾಂತ್ರಿಕ ವಾಸ್ತವತೆಯನ್ನು ಮ್ಯಾಜಿಕ್ ಮತ್ತು ರಿಯಲಿಸಮ್‌ಗಳನ್ನು ವಿರೋಧಾತ್ಮಕ ಚೌಕಟ್ಟಿನಲ್ಲಿ ಅರಿಯುವ ಕ್ರಮಕ್ಕೆ ವಿರುದ್ಧವಾದ ದೃಷ್ಟಿಕೋನದ ಕಲ್ಪನಾಶಕ್ತಿ ಎಂದು ತಿಳಿಯಬೇಕು. ಅಂದರೆ ವಾಸ್ತವದಲ್ಲೇ ಅಡಗಿರುವ ಮಾಂತ್ರಿಕತೆಯನ್ನು ಮತ್ತು ಮಾಂತ್ರಿಕ ಎಂದು ವರ್ಣಿಸಲ್ಪಡುವ ತಾಣದಲ್ಲಿರುವ ವಾಸ್ತವತೆಯನ್ನು ಗ್ರಾಹ್ಯಮಾಡಿಕೊಳ್ಳುವ ಹಾದಿ. ಕಣ್ಣಿಗೆ ಕಾಣುವ ವಾಸ್ತವ, ಭೌತಿಕ ಜಗತ್ತು ಮತ್ತು ಪದಾರ್ಥಗಳ ‘ಕಣ್ಣಿಗೆ ಗೋಚರಿಸದ’ ಅಂಶಗಳನ್ನು ಪ್ರಙಗೆ ಆವಿಷ್ಕಾರ ಮಾಡಿಕೊಡುವ ವಿಧಾನವಿದು. ಇದು ‘ಅವಾಸ್ತವ’ದ ಜಗತ್ತಲ್ಲ. ಆದರೆ ಭೌತಿಕ ಜಗತ್ತಿನ ಅನೇಕ ‘ಮಾಂತ್ರಿಕ’ ಅಂಶಗಳನ್ನು ಗುರುತಿಸುವ, ಅವುಗಳಿಗೆ ಸಂವೇದನಾಶೀಲರಾಗಿ ಸ್ಪಂದಿಸುವ ಸೂಕ್ಷ್ಮಪ್ರಙಯನ್ನು ಎಚ್ಚರಗೊಳಿಸುವ ಪರಿ ಇದು. ಇದು ಸಾಮಾನ್ಯ ಅರ್ಥದ ‘ಮ್ಯಾಜಿಕ್’ ಅಲ್ಲ, ನಾವು ಅರ್ಥಮಾಡಿಕೊಳ್ಳುವಂಥ ‘ಯಕ್ಷಿಣಿ’ ವಿದ್ಯೆ ಅಲ. ಙ್ಞನಕ್ಕೆ, ಪ್ರಙಗೆ ಮತ್ತೊಂದು ಹಂತವನ್ನು ಒದಗಿಸಿಕೊಡುವ ಅಪರೂಪದ ವಿಸ್ಮಯಕಾರಿ ಅರಿವಿದು. ಇಲ್ಲಿ ಯಾವುದೂ ಕಲ್ಪಿತವಾದದ್ದಲ್ಲ. ಎಲ್ಲವೂ ನಿಜ. ಏಕೆಂದರೆ ಎಲ್ಲವೂ ಭೌತಿಕ ಜಗತ್ತಿನ ಪರಿಮಿತಿಯೊಳಗೆ ಇದೆ. ಈ ದಿನನಿತ್ಯದ, ರೂಢಿಯಿಂದ ಅರ್ಥವಾಗುವ ಲೋಕವನ್ನು, ವ್ಯಕ್ತಿಯನ್ನು, ಅಂತರಂಗದಿಂದ ಕಾಣತೊಡಗಿದರೆ ದಕ್ಕುವ ‘ಮಾಂತ್ರಿಕ’ ಸತ್ಯ ಎಲ್ಲರಿಗೂ ಲಭ್ಯವಾಗುವ ಸಾಮಾನ್ಯ ವಿಷಯವೇ ಆಗಿಬಿಡುತ್ತದೆ. ಎಲ್ಲರೂ ನಂಬಬಹುದಾದ ಸತ್ಯ ಇದು. ಆದ್ದರಿಂದಲೇ ಮಾರ್ಕೆಜ್ ತನ್ನ ಪ್ರಪಂಚದ ಬಗ್ಗೆ ‘ನಂಬಿಕೆ’ಯ ಮಾತನಾಡುವುದು.

* * *
‘ಒನ್ ಹಂಡ್ರೆಡ್ ಇಯರ್‍ಸ್ ಆಫ್ ಸಾಲಿಟ್ಯೂಡ್’ನ ಐತಿಹಾಸಿಕ, ರಾಜಕೀಯ, ಸಾಂಸ್ಕೃತಿಕ ವ್ಯಾಪ್ತಿಯ ಬಗ್ಗೆ ಇಲ್ಲಿ ಮಾತನಾಡುವುದು ಅತ್ಯವಶ್ಯಕ. ‘ಇತಿಹಾಸ’ ಸಾಮಾನ್ಯವಾಗಿ ಪ್ರಬಲವಾಗಿರುವ, ಶ್ರೀಮಂತವಾಗಿರುವ ದೇಶಗ, ನಾಗರಿಕತೆಗಳ, ವ್ಯಕ್ತಿಗಳ ಕಥನವೇ ಆಗಿರುತ್ತದೆ. ಅಧಿಕಾರ, ಸಾರ್ವಭೌಮಿತ್ವ ‘ಇತಿಹಾಸ’ದ ಸೃಷ್ಟಿಯನ್ನು ನಿಯಂತ್ರಿಸುವುದು ಸಾಮಾನ್ಯ ಸಂಗತಿ. ಆಧುನಿಕ ಜಗತ್ತಿನಲ್ಲಿ ಇವೆಲ್ಲವನ್ನೂ ಅಮಾನವೀಯವಾಗಿ ಪ್ರದರ್ಶಿಸಿ ಮೆರೆದಿರುವ ದೇಶ ಅಮೆರಿಕ. ಯಾವುದನ್ನೂ ಪರಿಗಣಿಸದೆ ಕೇವಲ ತನ್ನ ಹಿತವನ್ನು ಮಾತ್ರ ಕಾಪಾಡಿಕೊಂಡು ಬಂದಿರುವ ದೇಶ ಅಮೆರಿಕ, ಜಗತ್ತಿನ ನಾಯಕ ದೇಶ. ಲ್ಯಾಟಿನ್ ಅಮೆರಿಕದ ದೇಶಗಳು ಈ ಅಮೆರಿಕದ ಪೈಶಾಚಿಕ ಭೂಮಿಕೆಯಿಂದ ಎಲ್ಲ ರೀತಿಯಲ್ಲಿ ತತ್ತರಿಸಿ ಹೋಗಿವೆ – ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ. ಇಂದಿನ ಲ್ಯಾಟಿನ್ ಅಮೆರಿಕ ದೇಶಗಳ ಬವಣೆಗೆ ಅಮೆರಿಕವೇ ಕಾರಣ ಎನ್ನುವುದನ್ನು ಪ್ರಾಥಮಿಕ ಙ್ಞನ ಇರುವ ಎಲ್ಲರೂ ಒಪ್ಪುತ್ತಾರೆ. ಇಲ್ಲಿ ಅಮೆರಿಕವನ್ನು ದೂರಿಬಿಟ್ಟರೆ ಸಾಲದು. ಆಧುನಿಕ ಕಾಲದಲ್ಲಿ ಯೂರೋಪಿನ ಕಥೆ ಹೇಳುವುದೆಂದರೆ ಇದನ್ನೇ ಹೇಳಿದಂತೆ. ಪಾಶ್ಚಿಮಾತ್ಯ ಜಗತ್ತು ಬೇರೆ ದೇಶಗಳ, ಸಂಸ್ಕೃತಿಗಳ, ನಾಗರಿಕತೆ ಮೇಲೆ ನಡೆಸಿರುವ ದಬ್ಬಾಳಿಕೆಯ ಕಥನವೇ ಆಧುನಿಕ ಜಗತ್ತಿನ ‘ಇತಿಹಾಸ’. ಆದ್ದರಿಂದಲೇ ಆಫ್ರಿಕಾದ, ಲ್ಯಾಟಿನ್ ಅಮೆರಿಕದ ಬರಹಗಾರರು ಸಾಮಾನ್ಯವಾಗಿ ಜಗತ್ತು ಅರಿಯದ, ಎಲ್ಲೋ ಮುಳುಗಿಹೋಗಿರುವ, ಕಣ್ಣಿಗೆ ಕಾಣದ ತಮ್ಮ ಲೋಕಗಳ, ನಾಗರಿಕತೆಗಳ ಕಥನಗಳನ್ನು ಸೃಸ್ಟಿಸಿರುವುದು.

ಪಾಶ್ಚಿಮಾತ್ಯ ನಾಗರಿಕತೆ [ವಿಶೇಷವಾಗಿ ಬಂಡವಾಳಶಾಹಿ ನಾಗರಿಕತೆ] ವಿಙ್ಜನ, ಸಂಸ್ಕೃತಿ, ವಿಚಾರ, ಕಲೆ ತನ್ನ ಕೊಡುಗೆಗಳು ಎಂದು ಸ್ಥಾಪಿಸಿ ಅವುಗಳನ್ನು ಎಲ್ಲರ ಮೇಲೆ ಹೇರಿದೆ. ಆಂದರೆ ಇವೆಲ್ಲ ಪಶ್ಚಿಮದಿಂದ ಬಂದರೆ ಮಾತ್ರ ನಾಗರಿಕ ಸಂಕೇತಗಳು. ಇವುಗಳಿಗೆ ಪರ್ಯಾಯವಿಲ್ಲ. ಅಷ್ಟೇ ಅಲ್ಲ, ಬೇರೆ ದೇಶಗಳ ಕಲೆ, ವಿಙ್ಞನ ಇತ್ಯಾದಿಗಳು ‘ಅನಾಗರಿಕ’ ಆದಿವಾಸಿಗಳ ಬಾಲಿಶ ಸಂಗತಿಗಳು. ಆಧುನಿಕ ಪಾಶ್ಚಿಮಾತ್ಯ ಜಗತ್ತಿನ ಕೊಡುಗೆಗಳು ಮಾತ್ರ ಅಧಿಕೃತವಾದ, ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಸತ್ಯಗಳು ಎಂದು ತಮ್ಮ ಯಜಮಾನಿಕೆಯನ್ನು ಮೆರೆದಿವೆ. ಇದಲ್ಲದೆ ದುರದೃಷ್ಟದಿಂದ ಪಾಶ್ಚಿಮಾತ್ಯ ನಾಗರಿಕತೆಯಿಂದ ಹೊರಗಿರುವ ಎಲ್ಲ ಪ್ರದೇಶಗಳ ಕಥನಗಳನ್ನು ಸೃಷ್ಟಿಸುವ ಅಧಿಕಾರವಿರುವುದು ಬಲಿಷ್ಠ ನಾಗರಿಕತೆಗೆ ಮಾತ್ರ. ಆದ್ದರಿಂದಲೇ ಅವು ಪಾಶ್ಚಿಮಾತ್ಯ ಸಮಾಜಗಳನ್ನು ಹೊರತುಪಡಿಸಿ ಇತರೆ ಸಮಾಜಗಳಬಗ್ಗೆ ‘ಅಧಿಕೃತ’ ಚತ್ರಣವನ್ನು ಸೃಷ್ಟಿಸಲು ಪ್ರಯತ್ನಿಸಿದ್ದು.

ಆಧುನಿಕ ನಾಗರಿಕತೆ ಕಾಣದ, ಅರ್ಥಮಾಡಿಕೊಳ್ಳದ ಅನೇಕ ದೇಶಗಳು, ಸಂಸ್ಕೃತಿಗಳು, ನಾಗರಿಕತೆಗಳು ತಮ್ಮ ಇತಿಹಾಸವನ್ನು ಸಮಗ್ರವಾಗಿ ಕಟ್ಟಿಕೊಂಡಿವೆ, ತಮ್ಮ ಬದುಕನ್ನು ಕಾಪಾಡಿಕೊಂಡಿವೆ; ತಮ್ಮ ಕಾಲದ ಕಲ್ಪನೆಯನ್ನು ಉಳಿಸಿಕೊಂಡಿವೆ. ಆ ಸಮುದಾಯಗಳ ಪ್ರಙಯ ರೂಪುರೇಷೆಗಳೇ ಬೇರೆ; ತಮ್ಮನ್ನು ಕಂಡುಕೊಳ್ಳುವ ಕ್ರಮವೇ ಬೇರೆ. ಈ ಜಗತ್ತುಗಳು, ಸಮುದಾಯಗಳು ಆಕ್ರಮಣಕ್ಕೆ ಒಳಗಾಗಿ ಎಲ್ಲ ರೀತಿಯಲ್ಲೂ ನಾಶವಾಗುತ್ತಿವೆ. ಇತಿಹಾಸವೆಂದರೆ ಈ ಸಮುದಾಯಗಳ ಕಥನವೂ ಹೌದು. ಇವುಗಳನ್ನು ಪ್ರವೇಶಿಸಿ, ಒಳಸ್ವರೂಪವನ್ನು ಅರಿಯಬೇಕೆಂದರೆ ಬೇರೊಂದು ಮಾರ್ಗದ ಅಗತ್ಯವಿದೆ. ಪಾಶ್ಚಿಮಾತ್ಯ ದೇಶಗಳು ನಿರ್ಮಿಸಿರುವ ಪ್ರಙಯಿಂದ, ತಂತ್ರಙ್ಞನದಿಂದ ಇದು ಸಾಧ್ಯವಿಲ್ಲ. ಈ ಜಗತ್ತುಗಳ ‘ಮಾಂತ್ರಿಕತೆ’ಯನ್ನು ಹಿಡಿಯಲು ಬೇರೊಂದು ‘ವಾಸ್ತವ’ ಸಂವೇದನೆ, ಪ್ರಙ ಇರಬೇಕು. ಈಗ ಸಿದ್ಧಗೊಳಿಸಲ್ಪಟ್ಟಿರುವ ‘ವಾಸ್ತವತೆ’ಯ ಙ್ಞನ ಈ ‘ವಾಸ್ತವ’ವನ್ನು ಗ್ರಹಿಸಲಾರದು. ಇದಕ್ಕಾಗಿಯೇ ಮಾರ್ಕೆಜ್ ಈ ರೀತಿಯ ‘ಮಾಂತ್ರಿಕ ವಾಸ್ತವತೆ’ಯನ್ನು ಸೃಷ್ಟಿಸಿರುವುದು.

ಈ ಜಗತ್ತಿನ ಅಂತರಂಗದಲ್ಲೇನಿದೆ? ಈ ಸಮುದಾಯದ ಗರ್ಭದೊಳಗೆ ಅಡಗಿರುವ ಚೈತನ್ಯಗಳು ಯಾವ ರೀತಿಯವು? ಈ ಪ್ರಶ್ನೆಗಳಿಗೆ ಉತ್ತರ ಈ ಸಮುದಾಯಗಳ ದಿನನಿತ್ಯದ ಬದುಕಿನ ಕ್ರಮದೊಳಗಿನಿಂದಲೇ ಬರುತ್ತವೆ. ಈ ಅಙ್ಞತ ಜಗತ್ತಿನ ಲಕ್ಷಣಗಳನ್ನು ಮಾರ್ಕೆಜ್ ಚಿತ್ರಸಿರುವ ರೀತಿಯನ್ನು ಕೆಲವು ನಿದರ್ಶನಗಳ ಮೂಲಕ ಅರ್ಥಮಾಡಿಕೊಳ್ಳುವುದು ಒಳ್ಳೆಯದು. ಮಾರ್ಕೆಜ್‌ನ ಕಾದಂಬರಿಯ ಲೋಕದ ಒಳ ಮತ್ತು ಹೊರಗಿನ ಆವರಣಗಳು, ಅಲ್ಲಿನ ವ್ಯಕ್ತಿಗಳು ಬಹುಶ: ನಾವು ಎಂದೂ ನೇರವಾಗಿ ಕಂಡಿರದ, ಅನುಭವಿಸದ ಭಾವನೆಗಳನ್ನು, ಯೋಚನೆಯ ಲಹರಿಗಳನ್ನು ನಮ್ಮ ಮುಂದೆ ಸದ್ಯೋಜಾತವಾಗಿ ಪ್ರತ್ಯಕ್ಷಪಡಿಸುತ್ತವೆ. ನಮ್ಮಿಂದ ಬಹಳ ದೂರದಲ್ಲಿದ್ದರೂ, ನಮ್ಮ ಅನುಭವಗಳಿಗೆ ಭಿನ್ನವಾಗಿದ್ದರೂ, ಇವುಗಳು ನಾವು ಸ್ಪಂದಿಸಲಾಗದ ವಿಷಯಗಳಲ್ಲ. ಈ ಪ್ರಪಂಚವನ್ನು ಪರಿಚಯಮಾಡಿಕೊಳ್ಳುತ್ತ, ಈ ಪ್ರಪಂಚದ ಜನರನ್ನ ಹತ್ತಿರದಿಂದ ಕಾಣುತ್ತ, ನಾವು ಇವೆಲ್ಲದರ ಜೊತೆ ಸಂಭಾಷಣೆಯಲ್ಲಿ ತೊಡಗಬಹುದು; ನಂಟು ಬೆಳೆಸಬಹುದು. ಈ ಅಙ್ಞನ ಜಗತ್ತಿಗೆ ಪ್ರವೇಶ ಕಷ್ಟಸಾಧ್ಯ.

ಇವೆಲ್ಲವನ್ನೂ ಚಲನ ಚಿತ್ರ ಸಂಸ್ಕೃತಿ ಬೇರೊಂದು ವಿಶಿಷ್ಟ ರೀತಿಯಲ್ಲಿ ಅದ್ಭುತ ಪ್ರತಿಮೆಗಳ ಮೂಲಕ ನಮ್ಮ ಅನುಭವಕ್ಕೆ ತಂದುಕೊಟ್ಟಿದೆ. ವಾಸ್ತವ-ಅವಾಸ್ತವ, ತಾರ್ಕಿಕ-ಅತಾರ್ಕಿಕ, ಸಾಮಾನ್ಯ-ಅಸಾಮಾನ್ಯಗಳ ಅವಿನಾಭಾವ ಸಂಬಂಧವನ್ನು ಅನೇಕ ಚಲನಚಿತ್ರ ನಿರ್ದೇಶಕರು ತಮ್ಮ ಕೃತಿಗಳಲ್ಲಿ ಶೋಧಿಸಿದ್ದಾರೆ. ಉದಾಹರಣೆಗೆ ಫೆಲಿನಿ ತನ್ನ ‘೮ ೧/೨’ನಲ್ಲಿ, ಟಾರ್ಕೋವಸ್ಕಿ ‘ಸ್ಟಾಕರ್’, ‘ಸ್ಯಾಕ್ರಿಫೈಸ್’ ಚಿತ್ರಗಳಲ್ಲಿ, ಬರ್ಗ್‌ಮನ್ ‘ವೈಲ್ಡ್ ಸ್ಟ್ರಾಬೆರೀಸ್’ ಮತ್ತು ‘ಸೆವೆಂತ್ ಸೀಲ್’ಗಳಲ್ಲಿ ಈ ಶೋಧನೆಯನ್ನು ಅತ್ಯದ್ಭುತವಾಗಿ ಮಾಡಿದ್ದಾರೆ. ಕೇವಲ ‘ತಂತ್ರ’ವಾಗಿ ಇದನ್ನು ನಾವು ಗ್ರಹಿಸಬಾರದು. ಸಿನಿಮಾದ ‘ತಂತ್ರ’ ಬಳಕೆಯಾದರೂ, ಇದನ್ನು ಮೀರಿದ ತಾತ್ವ್ವಿಕ ನೆಲೆಯನ್ನು ನಾವು ಅರಿಯಬೇಕಾದದ್ದು ಅತ್ಯಗತ್ಯ. ಸಾಹಿತ್ಯ ಸೃಷ್ಟಿಯಲ್ಲೂ ನಾವು ‘ತಂತ್ರ’ವನ್ನು ಮೀರಿದ ತಾತ್ವಿಕತೆಯನ್ನು ಅರಿಯುವುದೇ ಮುಖ್ಯ. ಬರ್ಗ್‌ಮನ್ ಮುಳ್ಳುಗಳೇ ಇಲ್ಲದ ಗಡಿಯಾರವನ್ನು ತೋರಿಸುವಾಗ ಅಥವಾ ವ್ಯಕ್ತಿಯೊಬ್ಬ ತನ್ನ ಹೆಣವನ್ನು ತಾನೇ ಶವಪೆಟ್ಟಿಗೆಯಲ್ಲಿ ಕಂಡಾಗ ಕೇವಲ ‘ತಂತ್ರ’ವನ್ನು ಮಾತ್ರ ಬಳಸುತ್ತಿರುವುದಿಲ್ಲ. ಬದಲಾಗಿ ವ್ಯಕ್ತಿಯ ಆತ್ಮಾವಲೋಕವನ್ನು ನಮ್ಮೆಲ್ಲರ ಗ್ರಹಿಕೆಗೆ, ಅನುಭವಕ್ಕೆ ಬಂದ ತಾತ್ವಿಕ ನೆಲೆಗಟ್ಟಿನ ಮೂಲಕ ಹತ್ತಿರ ತರುತ್ತಾನೆ. ಟಾರ್ಕೋವಸ್ಕಿ ‘ಸ್ಟಾಕರ್’ ಮತ್ತು ‘ಸ್ಯಾಕ್ರಿಫೈಸ್’ನಲ್ಲಿ ಚಿತ್ರಿಸುವ ಅತೀಂದ್ರಿಯ ಜಗತ್ತು ನಮ್ಮ ಅಂತರಂಗದ ಕಲ್ಪನಾಲೋಕವೇ ಆಗಿರುತ್ತದೆ. ಆದ್ದರಿಂದ ‘ತಂತ್ರ’ ಮತ್ತು ‘ತಾತ್ವಿಕತೆ’ ಮೇಳೈಸುವ ರೀತಿಯನ್ನು ನಾವು ಏಕಾಗ್ರತೆಯಿಂದ ಸ್ವೀಕಾರ ಮಾಡಬೇಕು.

ಈ ಜಗತ್ತನ್ನು ಕಥಾನಕದ ಮೂಲಕ ಆಧುನಿಕ ಪ್ರಪಂಚಕ್ಕೆ ತಿಳಿಸಿಕೊಡಬೇಕಾದವರು ಅದರ ‘ಒಳಗಿನವ’ರಾಗಿರಬೇಕು. ಹೊಗಿನಿಂದ ಬಂದ ಸಮಾಜಶಾಸ್ತ್ರ ಅಥವಾ ಮಾನವಶಾಸ್ತ್ರ ಪರಿಣತರಿಗೆ ಇದು ಅಸಾಧ್ಯ. ಅವರಿಗೆ ದಕ್ಕುವುದು ಅವರ ಮೂಗಿನ ನೇರದ ‘ಮಾಹಿತಿ’ಗಳು ಮಾತ್ರ. ಅವುಗಳನ್ನು ಬೇಕೆನಿಸಿದ ರೀತಿಯಲ್ಲಿ ತಿರುಚಿ ಒಂದು ಜೀವಂತ ಸಮುದಾಯವನ್ನು ಪುರಾತತ್ವ ಮ್ಯೂಸಿಯಮ್‌ನಲ್ಲಿ ಇರಬೇಕಾದ ವಸ್ತುಗಳ ಹಾಗೆ ಮಾಡಿಬಿಡುತ್ತಾರೆ. ಇದು ಅವರ ವಿಚಿತ್ರ ಶಿಸ್ತಿನ ಅಧ್ಯಯನದ ಫಲ. ತಮಗೆ ಹೊತಾದ ಎಲ್ಲ ಙ್ಞನಶಾಖೆಗಳನ್ನು, ಅನುಭವದ ಕ್ಷೇತ್ರಗಳನ್ನು, ಬದುಕಿನ ಪದರುಗಳನ್ನು ತಮ್ಮ ಸೈದ್ಧಾಂತಿಕ ಚೌಕಟ್ಟಿಗೆ ಸೇರಿಸಿಕೊಳ್ಳುವುದು ಪಶ್ಚಿಮದ ‘ತಙ್ಞ’ರ ಪರಿಪಾಠವಾಗಿದೆ.

ಮಾರ್ಕೆಜ್‌ನ ಕಾದಂಬರಿ ಈ ಎಲ್ಲ ಪೂರ್ವಾಗ್ರಹಗಳಿಗೆ ಒಂದು ಬಲವಾದ ಪ್ರತಿರೋಧ. ಆದ್ದರಿಂದಲೇ ಈ ಸಾಹಿತ್ಯ ಕೃತಿ ತನಗಿರುವ ಗಟ್ಟಿಯಾದ ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಅಡಿಪಾಯದ ಬೆಂಬಲವನ್ನು ದಕ್ಕಿಸಿಕೊಂಡಿದೆ. ಆಧುನಿಕ ಪಶ್ಚಿಮಕ್ಕೆ ವಿಭಿನ್ನವಾದ ಬೇರುಗಳನ್ನು ಹೊಂದಿರುವ ಈ ಸಮುದಾಯ ಬೇರೊಂದು ಕಾಲಪ್ರಙಯನ್ನು ತನ್ನ ಮಡಿಲಲ್ಲೇ ಇಟ್ಟುಕೊಂಡು ಚಲನಶೀಲವಾಗಿರುವುದನ್ನು ನಾವು ಗ್ರಹಿಸಬಹುದು. ಜೊತೆಗೆ ಈ ಸಮುದಾಯ ತನ್ನದೇ ಆದ ಕ್ರಿಯಾಶೀಲತೆಯಲ್ಲಿ ತೊಡಗಿರುವುದನ್ನು ನಾವು ಮನಗಾಣಬಹುದು. ಇವೆಲ್ಲವೂ ಮಾರ್ಕೆಜ್‌ನ ಕೃತಿಯ ಮುನ್ನೊಲವುಗಳು. ಆಧುನಿಕತೆ ಸಾಮಾನ್ಯವಾಗಿ ತಿರಸ್ಕರಿಸುವ ಜೀವಂತ ಲಕ್ಷಣಗಳನ್ನು ಮಾರ್ಕೆಜ್ ತನ್ನ ಕಾದಂಬರಿಯ ಮೂಲಕ ನಮ್ಮ ಅರಿವಿಗೆ ತರುತ್ತಾನೆ. ಅಷ್ಟೇ ಅಲ್ಲದೆ ಇಂಥ ಸಮುದಾಯಗಳ ಮೇಲೆ ಆಗಿರುವ ಆಕ್ರಮಣ, ಕ್ರೌರ್ಯ, ದಬ್ಬಾಳಿಕೆಯನ್ನೂ ನಮಗೆ ಗೋಚರಿಸುವಂತೆ ಮಾಡುತ್ತಾನೆ. ಕಾದಂಬರಿಯಲ್ಲಿ ಬರುವ ಕೆಲವು ನಿದರ್ಶನಗಳನ್ನು ಉಲ್ಲೇಖಿಸಿ ನನ್ನ ಮಾತುಗಳನ್ನು ಸ್ಪಸ್ಟಪಡಿಸುತ್ತೇನೆ.

” . . . . ಆಗಿನ ಕಾಲದಲ್ಲಿ ಮಕೋಂದೋ ಇಪ್ಪತ್ತು ಮನೆಗಳಿದ್ದ ಒಂದು ಸಣ್ಣ ಹಳ್ಳಿಯಾಗಿತ್ತು. ಅದು ಇದ್ದದ್ದು ಭಾರಿ ಗಾತ್ರದ ಇತಿಹಾಸಪೂರ್ವ ಮೊಟ್ಟೆಗಳಂತೆ ಬಿಳುಪಾದ ನುಣ್ಣನೆಯ ಕಲ್ಲುಗಳಿದ್ದ ತಿಳಿನೀರು ಹರಿಯುವ ನದಿಯ ದಡದಲ್ಲಿ. ಪ್ರಪಂಚ ಹುಟ್ಟು ಇತ್ತೀಚೆಗಷ್ಟೆ ಆಗಿದ್ದು, ಎಷ್ಟೋ ವಸ್ತುಗಳಿಗೆ ಹೆಸರಿರಲಿಲ್ಲ ಮತ್ತು ಅವುಗಳನ್ನು ಗುರುತು ಹಿಡಿಯಲು ಕೈಮಾಡಿ ತೋರಿಸಬೇಕಾಗಿತ್ತು. . . . ”

ಇಲ್ಲಿ ಮಾರ್ಕೆಜ್ ಕಟ್ಟುತ್ತಿರುವ ಪ್ರಪಂಚ ಇಡೀ ವಿಶ್ವಕ್ಕೆ ಅನ್ವಯವಾಗುವಂಥದ್ದು. ಇತಿಹಾಸಪೂರ್ವ ನಾಗರಿಕತೆ ಎಲ್ಲ ಕಡೆಯೂ ಒಂದೇ. ಈಗಿನ ಕಾಲದ ವಿಚಾರ, ಗ್ರಹಿಕೆ, ಙ್ಞನ, ತಂತ್ರಙ್ಞನ ಇಲ್ಲದ ಕಾಲ. ಇದರರ್ಥ ಸ್ಪಷ್ಟ. ಮೂಲದಲ್ಲಿ ಯಾವ ನಾಗರಿಕತೆಯಾಗಲಿ, ಸಮಾಜವಾಗಲಿ ಒಂದೇ. ಇಲ್ಲಿ ಇಂದು ನಾವು ಕಾಣುವ ವ್ಯತಾಸಗಳಾಗಲಿ, ಬದಲಾವಣೆಗಳಾಗಲಿ ಇರುವುದಿಲ್ಲ. ಹೀಗಾಗಿ ಯಾವ ನಾಗರಿಕತೆಯೂ ಇನ್ನೊಂದಕ್ಕಿಂತ ಮೇಲಲ್ಲ, ಶ್ರೇಷ್ಠವಲ್ಲ. ವಿಶ್ವದ ಬಗ್ಗೆ ಅರಿವೇ ಇಲ್ಲದ ಕಾಲವಿದು. ಇತಿಹಾಸಪೂರ್ವ ಸ್ಥಿತಿಯಲ್ಲಿ ಜಗತ್ತಿನ ಯಾವ ಭಾಗಕ್ಕೂ ಹೆಚ್ಚಿನದೇನೂ ದಕ್ಕಿರಲಿಲ್ಲ. ಇಲ್ಲಿಂದ ಮಾರ್ಕೆಜ್ ತನ್ನ ಕಥನವನ್ನು ಪ್ರಾರಂಭಿಸುತ್ತಾನೆ. ಈ ಕಥನ ಕೊನೆಗೆ ನಮ್ಮ ಕಾಲದವರೆಗೂ ಬಂದು ನಿಲ್ಲುತ್ತದೆ. ಈ ಎರಡು ಕಾಲಘಟ್ಟಗಳ ನಡುವೆ ಸಂಭವಿಸಿರುವ ಬದಲಾವಣೆಗಳು ಮಾನವನ ನಾಗರಿಕತೆಯ ಅನೇಕ ಘಟ್ಟಗಳನ್ನು ಸೂಚಿಸುವ ಸಂಗತಿಗಳು. ಆದರೆ ಮಾರ್ಕೆಜ್‌ನ ಗಮನವಿರುವುದು ನಾವು ಅರಿಯದ ಸಮಾಜದ ಚಲನಶೀಲತೆಯ ಕಡೆಗೆ.
ಕಾದಂಬರಿಯ ಮತ್ತೊಂದು ವಿವರಣೆ ಹೀಗಿದೆ :

“ಮಾರ್ಚ್‌ನಲ್ಲಿ ಜಿಪ್ಸಿಗಳು ತಿರುಗಿ ಬಂದರು. ಈ ಸಲ ಅವರು ದೂರದರ್ಶಕ ಮತ್ತು ಒಂದು ಡ್ರಮ್ಮಿನ ಗಾತ್ರದ ಭೂತಗನ್ನಡಿಯನ್ನು ತಂದು, ಅವು ಆಮ್‌ಸ್ಟರ್‌ಡ್ಯಾಂನ ಯಹೂದಿಗಳು ಇತ್ತೀಚೆಗೆ ಕಂಡು ಹಿಡಿದಿದ್ದೆಂದು ಪ್ರದರ್ಶಿಸಿದರು. ಅವರು ಜಿಪ್ಸಿ ಹುಡುಗಿಯೊಬ್ಬಳನ್ನು ಹಳ್ಳಿ ಅಂಚಿನಲ್ಲಿ ನಿಲ್ಲಿಸಿದರು. ದೂರದರ್ಶಕವನ್ನು ಟೆಂಟ್ ಮುಂಭಾಗದಲ್ಲಿಟ್ಟರು. ಐದು ರಿಯಲ್ಸ್ ದುಡ್ಡಿಗೆ ದೂರದರ್ಶಕದಲ್ಲಿ ನೋಡಿ ಜಿಪ್ಸಿ ಹುಡುಗಿಯನ್ನು ಕೈಯಳತೆಯ ಅಂತರದಲ್ಲಿ ಇರುವ ಹಾಗೆ ನೋಡಬಹುದಾಗಿತ್ತು. ‘ವಿಜ್ಞಾನ ದೂರವನ್ನು ಅಳಿಸಿ ಹಾಕಿದೆ’ ಎಂದು ಮೆಲ್‌ಕಿಯಾದೆಸ್ ಘೋಷಿಸಿದ. ಇನ್ನು ಸ್ವಲ್ಪ ಕಾಲದಲ್ಲೇ ಮನೆಯಿಂದ ಆಚೆ ಹೋಗದೆಯೇ ಜಗತ್ತಿನಲ್ಲಿ ಎಲ್ಲಾದರೂ ಸರಿಯೆ, ಏನಾಗುತ್ತಿದೆಯೆಂದು ನೋಡಬಹುದು ಎಂದ. ಮಟಮಟ ಮಧ್ಯಾಹ್ನ ಉರಿ ಬಿಸಿಲಿನ ಸೂರ್ಯನಿರುವಾಗ ಅಗಾಧ ಭೂತಗನ್ನಡಿಯ ಪ್ರಯೋಗವನ್ನು ನಿಬ್ಬೆರಗಾಗಿಸುವ ರೀತಿಯಲ್ಲಿ ತೋರಿಸಿದ. ರಸ್ತೆಯ ಮಧ್ಯದಲ್ಲಿ ಅವರು ತಂದಿಟ್ಟ ಒಣಗಿದ ಹುಲ್ಲಿನ ಗುಪ್ಪೆಯ ಮೇಲೆ ಸೂರ್ಯನ ಕಿರಣಗಳನ್ನು ಕೇಂದ್ರೀಕರಿಸಿ ಅದನ್ನು ಉರಿಸಿದ. ಆಯಸ್ಕಾಂತದ ಪ್ರಕರಣದಿಂದ ಇನ್ನೂ ಸಮಾಧಾನಗೊಳ್ಳದ ಕೊಸೆ ಅರ್ಕಾದಿಯೋ ಬ್ಯುಂದಿಯಾ ಈ ಹೊಸ ಆವಿಷ್ಕಾರವನ್ನು ಯುದ್ಧದ ಉಪಕರಣವನ್ನಾಗಿ ಉಪಯೋಗಿಸುವುದಾಗಿ ಕಲ್ಪಿಸಿದ. ಅದನ್ನು ಒಪ್ಪದ ಮೆಲ್‌ಕಿಯಾದೆಸ್ ಅವನಿಗೆ ತಿಳಿಸಿ ಹೇಳಲು ಪ್ರಯತ್ನಿಸಿದ. ಆದರೆ ಕೊನೆಗೆ ಆ ಆಯಸ್ಕಾಂತದ ಇಟ್ಟಿಗೆಗಳು ಮತ್ತು ಮೂರು ವಸಾಹತು ಕಾಲದ ನಾಣ್ಯಗಳಿಗೆ ಬದಲಾಗಿ ಭೂತಗನ್ನಡಿಯನ್ನು ಕೊಟ್ಟ. ಉರ್ಸುಲಾ ಭಯಗೊಂಡು ಅತ್ತಳು. ಸಣ್ಣ ಪೆಟ್ಟಿಗೆಯಲ್ಲಿದ್ದ ಆ ನಾಣ್ಯಗಳನ್ನು ಅವಳ ತಂದೆ ಇಡೀ ಜೀವನದಲ್ಲಿ ದುಂದು ಮಾಡದೆ ಉಳಿಸಿದ್ದು ಮತ್ತು ಅವಳು ಅದನ್ನು ತನ್ನ ಹಾಸಿಗೆಯ ಕೆಳಗೆ ಹೂತಿಟ್ಟು, ಉಪಯೋಗಿಸಲು ಸರಿಯಾದ ಸಮಯಕ್ಕಾಗಿ ಕಾದಿದ್ದಳು. ತನ್ನ ಜೀವನವನ್ನೇ ಪಣಕ್ಕಿಟ್ಟು ಅದರೊಂದಿಗೆ ನಡೆಸುವ ವಿವಿಧ ರೀತಿಯ ಪ್ರಯೋಗಳ ಆಲೋಚನೆಯಲ್ಲೇ ಮುಳುಗಿದ್ದ ಕೊಸೆ ಅರ್ಕಾದಿಯೋ ಬ್ಯುಂದಿಯಾ ಅವಳನ್ನು ಸಮಾಧಾನಗೊಳಿಸುವ ಗೊಡವೆಗೆ ಹೋಗಲಿಲ್ಲ. ಶತ್ರುಗಳ ಮೇಲೆ ಗಾಜಿನ ಪರಿಣಾಮವನ್ನು ತೋರಿಸುವ ಪ್ರಯತ್ನದಲ್ಲಿದ್ದಾಗ ಅವನು ಸೂರ್ಯಕಿರಣಗಳು ಒಗ್ಗೂಡುವ ಸ್ಥಳದಲ್ಲಿ ನಿಂತಿದ್ದರಿಂದ ಮೈಯೆಲ್ಲ ಸುಟ್ಟು ಹೋಗಿ ಅದು ಗುಣವಾಗುವುದಕ್ಕೆ ಸಾಕಷ್ಟು ಸಮಯ ಹಿಡಿಯಿತು. ಅವಳು ಇಂತಹ ಅಪಾಯಕಾರಿ ಆವಿಷ್ಕಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೂ ಒಮ್ಮೆ ಅವನು ತಮ್ಮ ಮನೆಗೇ ಬೆಂಕಿಯಿಡಲು ಸಿದ್ಧನಾಗಿದ್ದ. ಅವನು ತನ್ನ ರೂಮಿನಲ್ಲಿ ಕುಳಿತು ಆ ಅವಿಷ್ಕಾರದ ಸಾಧ್ಯತೆಗಳನ್ನು ಲೆಕ್ಕ ಹಾಕುತ್ತಿದ್ದ. ಕೊನೆಗೆ ಅದನ್ನು ಉಪಯೋಸುವುದರ ಬಗ್ಗೆ ಸ್ಪಷ್ಟ ತಿಳಿವಳಿಕೆ ಮತ್ತು ಅದರ ಬಗ್ಗೆ ತನಗಿರುವ ನಂಬಿಕೆಯನ್ನು ಕುರಿತಂತೆ ಒಂದು ಕಿರು ಹೊತ್ತಿಗೆಯನ್ನು ಹೊರತಂದ. ತಾನು ಅನೇಕ ಪ್ರಯೋಗಗಳನ್ನು ಕುರಿತು ಮತ್ತು ಅದರ ಬಗ್ಗೆ ಪುಟಗಟ್ಟಲೆ ವಿವರಣಾತ್ಮಕ ಚಿತ್ರಗಳನ್ನು ಬರೆದು ಒಬ್ಬ ವ್ಯಕ್ತಿಯ ಸಂಗಡ ಅದನ್ನು ಸರ್ಕಾರಕ್ಕೆ ಕಳಿಸಿಕೊಟ್ಟ. ಆ ವ್ಯಕ್ತಿ ಪರ್ವತಗಳನ್ನು ದಾಟಿ, ಕಂದರಗಳಲ್ಲಿ ದಾರಿ ತಪ್ಪಿ, ನದಿಗಳನ್ನು ದಾಟಿ ಕೊನೆಗೆ ನಿರಾಶನಾಗುವ ಮತ್ತು ಪ್ಲೇಗ್ ರೋಗಕ್ಕೆ ತುತ್ತಾಗುವ ಹಾಗೂ ಕಾಡು ಪ್ರಾಣಿಗಳಿಗೆ ಬಲಿಯಾಗುವ ಹಂತದಲ್ಲಿದ್ದಾಗ ಹೇಸರಗತ್ತೆಗಳ ಮೇಲೆ ಟಪಾಲು ಒಯ್ಯುವ ದಾರಿ ಕಂಡುಕೊಂಡ. ರಾಜಧಾನಿಯನ್ನು ತಲುಪುವುದೇ ದುಸ್ಸಾಧ್ಯವಾದ ಸಂಗತಿಯಾಗಿದ್ದರೂ, ಸರ್ಕಾರ ಆದೇಶ ಕೊಟ್ಟ ಕೂಡಲೇ ಆ ಹೊಸ ಆವಿಷ್ಕಾರದ ಪ್ರಯೋಗಗಳನ್ನು ಮಿಲಿಟರಿಯವರಿಗೆ ತೋರಿಸುವುದಲ್ಲದೆ ಸೌರಯುದ್ಧದ ಬಗ್ಗೆ ತರಬೇತಿ ಕೊಡುವುದಾಗಿ ಹೇಳಿದ ಕೊಸೆ ಅರ್ಕಾದಿಯೋ ಬ್ಯುಂದಿಯಾ ಉತ್ತರಕ್ಕಾಗಿ ಕೆಲವು ವರ್ಷ ಕಾದ. ಕೊನೆಗೆ ಕಾಯುವುದರಿಂದ ಸುಸ್ತಾಗಿ ಮೆಲ್‌ಕಿಯಾದೆಸ್‌ಗೆ ತನ್ನ ಯೋಜನೆ ವ್ಯರ್ಥವಾದದ್ದನ್ನು ಹೇಳಿದ. ಆಗ ಜಿಪ್ಸಿತನ್ನ ಪ್ರಾಮಾಣಿಕತೆಯನ್ನು ಕುರಿತು ಸರಿಯಾದ ಪುರಾವೆ ಒದಗಿಸಿದ. ಭೂತಗನ್ನಡಿಯನ್ನು ಹಿಂದಕ್ಕೆ ತೆಗೆದುಕೊಂಡು, ಬದಲಿಗೆ ಚಿನ್ನದ ನಾಣ್ಯಗಳನ್ನು ಹಾಗೂ ಕೆಲವು ಪೋರ್ಚುಗೀಸ್ ನಕ್ಷೆಗಳನ್ನು ಅಲ್ಲದೆ ನೌಕಾಯಾನದಲ್ಲಿ ಉಪಯೋಗಿಸುವ ಕೆಲವು ಉಪಕರಣಗಳನ್ನೂ ಕೂಡ ಕೊಟ್ಟ. ಕೊಸೆ ಅರ್ಕಾದಿಯೋ ಬ್ಯುಂದಿಯಾ ಕಾಂಪಾಸ್ ಮತ್ತು ಸೆಕ್ಸ್‌ಟೆಂಟ್‌ಗಳನ್ನು ಉಪಯೋಗಿಸಲು ಸಾಧ್ಯವಾಗುವಂತೆ ತನ್ನ ಕೈಯಿಂದಲೇ ಸನ್ಯಾಸಿ ಹೆರ್‌ಮನ್ ಸಿದ್ಧಪಡಿಸಿದ್ದನ್ನು ಬರೆದು ಕೊಟ್ಟ. ಕೊಸೆ ಅರ್ಕಾದಿಯೋ ತನ್ನ ಪ್ರಯೋಗಗಳಿಗೆ ಯಾರೂ ಅಡ್ಡಿಪಡಿಸಬಾರದು ಎಂಬ ಕಾರಣದಿಂದ ಮನೆಯ ಹಿಂದೆ ಇದ್ದ ಒಂದು ರೂಮಿನಲ್ಲಿ ಇಡೀ ಮಳೆಗಾಲವನ್ನು ಒಬ್ಬನೇ ಕಳೆದ. . . . ”

ಮಾರ್ಕೆಜ್ ಈ ಸಮುದಾಯಗಳಲ್ಲಿ ಆದ ವೈಙ್ಞನಿಕ ಬದಲಾವಣೆಗಳ ಬಗ್ಗೆ ಗಮನಹರಿಸುತ್ತಿದ್ದಾನೆ. ಹಾಗೆಯೇ ವಿಙ್ಞನಕ್ಕೂ, ಪ್ರಭುತ್ವಕ್ಕೂ; ಸೈನ್ಯಕ್ಕೂ, ಯುದ್ಧಕ್ಕೂ ಇರುವ ಸಂಬಂಧವನ್ನು ತೋರಿಸುತ್ತಿದ್ದಾನೆ. ನಾವು ಯಾವ ಬದಲಾವಣೆಗಳನ್ನು ಆಧುನಿಕ ಕಾಲಕ್ಕೆ ಸಂಬಂಧಪಟ್ಟಂತೆ ಮಾತ್ರ ಗುರುತಿಸುತ್ತೇವೆಯೋ ಅದನ್ನು ಮಾರ್ಕೆಜ್ ಪುರಾತನ ಸಮಾಜಗಳಲ್ಲೆ ಗುರುತಿಸಿತ್ತಾನೆ. ವಿಙ್ಞನ, ತಂತ್ರಙ್ಞನ, ಆಧುನಿಕ ಕಾಲದ ಸೊತ್ತಲ್ಲ. ಆಯಾ ಸಮಾಜಗಳು ತಮ್ಮ ತಮ್ಮ ಸ್ಥಳದಲ್ಲೆ ಹೊಸ ಅರಿವನ್ನು ಙ್ಞನವನ್ನು ಪಡೆದುಕೊಂಡವು ಎನ್ನುವ ಸಂಗತಿ ಮಹತ್ತರವಾದದ್ದು. ಈ ಪ್ರಪಂಚದಿಂದಲೇ ಬರುವ ಮಾತು ಇದು :
“ಭೂಮಿ ಗುಂಡಗಿದೆ. ಕಿತ್ತಲೆಯ ಹಾಗೆ.”

ಸಾಮಾನ್ಯವಾಗಿ ಭೌತಿಕ ಜಗತ್ತಿನ ಬಗ್ಗೆ ಇರುವ ಙ್ಞನವನ್ನು ನಾವು ಪಶ್ಚಿಮದ ಕೊಡುಗೆ ಎಂದುಕೊಳ್ಳುತ್ತೇವೆ. ಆದರೆ ಆಧುನಿಕ ಜಗತ್ತು ಮನ್ನಣೆ ಕೊಡದ ಅನೇಕ ಸಂಸ್ಕೃತಿಗಳು ಙ್ಞನ ಇರುವ ಕೇಂದ್ರಗಳೇ ಆಗಿದ್ದವು ಎನ್ನುವುದನ್ನು ಸೂಚಿಸುವುದು ಕಡಿಮೆಯ ವಿಷಯವೇನಲ್ಲ. ಈ ರೀತಿ ಇಡೀ ಕಾದಂಬರಿಯಲ್ಲಿ ಮಾರ್ಕೆಜ್ ಪಶ್ಚಿಮದ ಅನೇಕ ಪೂರ್ವಗ್ರಹಗಳನ್ನು ಒಡೆಯುತ್ತ ಹೋಗುತ್ತಾನೆ. ಇದು ವಾಸ್ತವತೆಯೇ ಹೊರತು ನಂಬಲಾಗದ “ಮಾಯಾ” ಜಗತ್ತಲ್ಲ, ಯಕ್ಷಿಣಿ ಪ್ರಪಂಚವಲ್ಲ. ನಾವು ಗುರುತಿಸದ, ಸ್ವೀಕರಿಸದ ಇತಿಹಾಸವಿದು. ಮೇಲಿನ ವಾದವನ್ನು ಪುಷ್ಟೀಕರಿಸಲು ಕಾದಂಬರಿಯಿಂದ ಮತ್ತೊಂದು ಉದಾಹರಣೆ :

“ಲ್ಯಾಬೊರೇಟರಿಯ ಸಾಮಾನುಗಳನ್ನು ಬಿಚ್ಚಿಡಲು ಮಕ್ಕಳನ್ನು ಕರೆದ. ಮಧ್ಯಾಹ್ನದಿಂದ ಅವರ ಜೊತೆ ತನ್ನ ವೇಳೆಯನ್ನು ಕಳೆದ. ಪ್ರತ್ಯೇಕವಾಗಿದ್ದ ಆ ಚಿಕ್ಕ ರೂಮಿನ ಗೋಡೆಗಳ ಮೇಲೆ ವಿಚಿತ್ರವಾದ ನಕ್ಷೆಗಳು ಮತ್ತು ಡ್ರಾಯಿಂಗ್‌ಗಳು ಹರಡಿಕೊಳ್ಳುತ್ತಿದ್ದ ಹಾಗೆ ಅವನು ಅವರಿಗೆ ಓದುವುದನ್ನು, ಬರೆಯುವುದನ್ನು, ಲೆಕ್ಕ ಮಾಡುವುದನ್ನು ಕಲಿಸಿದ ಮತ್ತು ಪ್ರಪಂಚದ ಅದ್ಭುತಗಳ ಬಗ್ಗೆ ತನ್ನ ಕಲ್ಪನೆಯ ಮಿತಿಯನ್ನು ಅತಿಯಾಗಿ ವಿಸ್ತರಿಸಿ ತಿಳಿಸಿದ. ಇದರಿಂದ ಮಕ್ಕಳು ಆಫ್ರಿಕಾದ ದಕ್ಷಿಣದ ತುದಿಯ ಭಾಗದ ಜನರು ಅದೆಷ್ಟು ಬುದ್ಧಿವಂತರೆಂದರೆ ಅವರಿಗೆ ಕುಳಿತುಕೊಂಡು ಯೊಚಿಸುವುದೊಂದೇ ಕೆಲಸ ಮತ್ತು ಬರಿಗಾಲಲ್ಲಿ ಏಜಿಯನ್ ಸಮುದ್ರವನ್ನು ದಾಟಲು ದ್ವೀಪದಿಂದ ದ್ವೀಪಕ್ಕೆ ಹಾರುತ್ತ ಸಲೋನಿಕ್ ಬಂದರಿನ ತನಕ ಹೋಗಬಹುದು ಎನ್ನುವುದನ್ನು ಕಲಿತರು. ಹಾಗೆ ಕಳೆದ ಕಲಿಕೆಯ ವಿಭ್ರಮೆಯಂಥ ಸಮಯದ ನೆನಪುಗಳು ಹುಡುಗರ ಮನಸ್ಸಿನಲ್ಲಿ ನೆಲೆಗೊಂಡದ್ದು ಎಷ್ಟೆಂದg, ಅನೇಕ ವರ್ಷಗಳ ನಂತರ ತನ್ನನ್ನು ಗುಂಡಿಕ್ಕಿ ಕೊಲ್ಲಲು ಸಾಲು ನಿಂತ ತಂಡಕ್ಕೆ ಸೈನ್ಯದ ಅಧಿಕಾರಿ ಅಪ್ಪಣೆ ಕೊಡುವ ಒಂದು ಸೆಕೆಂಡಿನ ಮುಂಚೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, ಆ ದಿನ ಮಾರ್ಚ್ ತಿಂಗಳ ಒಂದು ಮಧ್ಯಾಹ್ನ ತನ್ನ ತಂದೆ ಹೇಳುತ್ತಿದ್ದ ಭೌತಶಾಸ್ತದ ಪಾಠವೊಂದನ್ನು ನಿಲ್ಲಿಸಿ, ಬಿಟ್ಟಕಣ್ಣು ಬಿಟ್ಟುಕೊಂಡು ಗಾಳಿಯಲ್ಲಿ ಕೈಯನ್ನು ಎತ್ತಿ ಹಿಡಿದು ದೂರದಿಂದ ಕೇಳಿಬರುತ್ತಿದ್ದ ಜಿಪ್ಸಿಗಳ ಹಾಡುಗಳು, ಪೀಪಿ-ತಮಟೆಗಳ ದನಿಯನ್ನು ಕೇಳಿಸಿಕೊಳ್ಳುತ್ತ ನಿಂತಿದ್ದನ್ನು ಮತ್ತೊಮ್ಮೆ ಪರಿಭಾವಿಸಿದ. ಅವರು ಹಳ್ಳಿಗೆ ಮತ್ತೆ ಮತ್ತೆ ಬರುತ್ತಿದ್ದರು. ಮೆಂಫಿಲ್ ಯೋಗಿಗಳು ಕಂಡು ಹಿಡಿದ ಇತ್ತೀಚಿನ ಹಾಗೂ ಚಕಿತಗೊಳಿಸುವಂಥದನ್ನು ಕುರಿತು ಅವರು ಪ್ರಚಾರ ಮಾಡುತ್ತಿದ್ದರು.”

ಮಾರ್ಕೆಜ್‌ನ ಕಾದಂಬರಿಯುದ್ದಕ್ಕೂ ಮತ್ತೊಂದು ಎಳೆ ಇದೆ. ಇದು ನೀತಿ ಸಂಹಿತೆಗೆ ಸಂಬಂಧಪಟ್ಟಿದ್ದು. ಇದನ್ನು ಒತ್ತಿ ಹೇಳುವ ಅಗತ್ಯವೇನೆಂದರೆ ನಾವು ಧರ್ಮ, ನೀತಿ, ಮಾನವೀಯ ಮೌಲ್ಯಗಳ ಬಗೆಗಿನ ವ್ಯಾಖ್ಯಾನಗಳಲ್ಲಿ ಆಧುನಿಕೋತ್ತರ ಸಮಾಜಗಳು, ಆದಿವಾಸಿಗಳ ಸಮಾಜಗಳು ಶಾಂತಿ, ಮಾನವೀಯತೆಗಳಿಲ್ಲದ ಬರ್ಬರ ಸಮಾಜಗಳೆಂದೇ ಪರಿಗಣಿಸಿ ಈ ಮೌಲ್ಯಗಳು ಆಧುನಿಕ ಕೂಸುಗಳೆಂದು ಪ್ರಚಾರ ಮಾಡುತ್ತಿರುತ್ತೇವೆ. ಆದರೆ ಎಷ್ಟೇ ಕ್ರೌರ್ಯ, ಹಿಂಸೆಗಳಿದ್ದರೂ ಇಂಥ ಸಮಾಜಗಳಲ್ಲಿ ಒಂದು ದೊಡ್ಡ ನೀತಿ ಸಂಹಿತೆ ಕೆಲಸ ಮಾಡುತ್ತಲೇ ಇತ್ತು ಎಂಬ ಸತ್ಯವನ್ನು ಮಾರ್ಕೆಜ್ ನಮಗೆ ದರ್ಶನ ಮಾಡಿಕೊಡುತ್ತಾನೆ. ಸಾವೆಂಬ ವಾಸ್ತವದ ಇದಿರು ಮತ್ತು ಈ ಜಗತ್ತಿನ ಹೊರಗೆ ಇರುವ ಲೋಕಗಳ ಬಗೆಗಿನ ಕಲ್ಪನೆಗಳಿಂದಾಗಿ ಈ ನಾಗರಿಕತೆಗಳು ಮಾನವೀಯ ಮೌಲ್ಯಗಳನ್ನು ದುಡಿಸಿಕೊಳ್ಳುತ್ತಿದ್ದವೆಂದು ತೋರಿಸುವುದೂ ಕಥನದ ದೊಡ್ಡ ಆಶಯ. ಈ ಭಾಗವನ್ನು ಗಮನಿಸೋಣ :

“ಹತ್ತು ನಿಮಿಷಗಳ ನಂತರ ತನ್ನಜ್ಜನಿಗೆ ಸೇರಿದ ಭರ್ಜಿ ಹಿಡಿದುಕೊಂಡು ಬಂದ. ಊರಿನ ಅಧ ಜನ ಹುಂಜದ ಕಾಳಗದ ಅಖಾಡಾದ ಬಳಿ ನೆರೆದಿದ್ದರು. ಅದರ ಬಾಗಿಲ ಹತ್ತಿರ ಪ್ರುಡೆನ್ಸಿಯೋ ಅವನಿಗಾಗಿ ಕಾದು ನಿಂತಿದ್ದ. ಅವನಿಗೆ ತನ್ನನ್ನು ರಕ್ಷಿಸಿಕೊಳ್ಳಲು ಏನೂ ಸಮಯವಿರಲಿಲ್ಲ. ಮೊದಲನೆ ಅವ್ರೇಲಿಯಾನೋ ಬ್ಯುಂದಿಯಾ ಹೋರಿಯಷ್ಟು ಬಲದಿಂದ ಆ ಪ್ರದೇಶದ ಚಿರತೆಗಳಿಗೆ ಗುರಿಯಿಟ್ಟು ಮುಗಿಸಿದ ಹಾಗೆ ಕೊಸೆ ಅರ್ಕಾದಿಯೋ ಬ್ಯುಂದಿಯಾ ಎಸೆದ ಭರ್ಜಿ ಅವನ ಎದೆಯನ್ನು ಸೀಳಿತ್ತು. . . . ಅದೊಂದು ರಾತ್ರಿ ಅವಳು ನಿದ್ದೆ ಬಾರದೆ ನೀರು ಕುಡಿಯುವುದಕ್ಕೆ ಎದ್ದು ಅಂಗಳಕ್ಕೆ ಹೋದಾಗ ಅಲ್ಲಿ ಮಡಕೆಯ ಪಕ್ಕದಲ್ಲಿ ಪ್ರುಡೆನ್ಸಿಯೋ ಅಗಿಲರ್‌ನನ್ನು ಕಂಡಳು. ಸಪ್ಪಗಿದ್ದ ಅವನು ಹುಲ್ಲಿನ ಕಟ್ಟಿನಿಂದ ಎದೆಯಲ್ಲಿ ಆದ ತೂತನ್ನು ಮುಚ್ಚಲು ಪ್ರಯತ್ನಿಸುತ್ತಿದ್ದ. ಅವಳಿಗೆ ಹೆದರಿಕೆಯಾಗಲಿಲ್ಲ. ಅನುಕಂಪ ಮೂಡಿತು. ವಾಪಸು ಹೋಗಿ ಅವಳು ಕಂಡದ್ದನ್ನು ಗಂಡನಿಗೆ ಹೇಳಿದಳು. ಆದರೆ ಅವನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. “ಇದರರ್ಥ ಏನು ಅಂದ್ರೆ, ನಮ್ಗೆ ಮನಸ್ಸಿನ ಭಾರನ ತಡೆದುಕೊಳ್ಳಕ್ಕೆ ಆಗ್ತಾ ಇಲ್ಲ ಅಂತ” ಎಂದ. ಎರಡು ದಿನಗಳ ನಂತರ ಉರ್ಸುಲಾ ಬಾತ್ ರೂಮಿನಲ್ಲಿ ಹುಲ್ಲಿನ ಕಟ್ಟಿನಿಂದ ಎದೆಯ ಮೇಲೆ ಉಂಟಾಗಿದ್ದ ರಕ್ತದ ಕಲೆಗಳನ್ನು ಉಜ್ಜಿ ತೊಳೆಯುತ್ತಿದ್ದ ಪ್ರುಡೆನ್ಸಿಯೋನನ್ನು ಕಂಡಳು. ಇನ್ನೊಂದು ರಾತ್ರಿ ಅವನು ಮಳೆಯಲ್ಲಿ ಓಡಾಡುತ್ತಿದ್ದದ್ದನ್ನು ನೋಡಿದಳು. ಹೆಂಡತಿಯ ಭ್ರಮೆಗಳಿಂದ ಕಿರಿಕಿರಿಗೊಂಡ ಕೊಸೆ ಅರ್ಕಾದಿಯೋ ಬ್ಯುಂದಿಯಾ ಭರ್ಜಿ ತೆಗೆದುಕೊಂಡು ಅಂಗಳಕ್ಕೆ ಹೋದ. ಅಲ್ಲಿ ಸೆಪ್ಪೆ ಮುಖದ ಸತ್ತವನಿದ್ದ.
“ನೀನು ನರಕಕ್ಕೆ ಹೋಗು. ಮತ್ತೆ ಮತ್ತೆ ನೀನು ವಾಪಸು ಬಂದರೆ ಅಷ್ಟು ಸಲವೂ ನಾನು ನಿನ್ನ ಕೊಂದು ಹಾಕ್ತಿನಿ.”
ಪ್ರುಡೆನ್ಸಿಯೋ ಹೋಗಲಿಲ್ಲ. ಅಲ್ಲದೆ ಕೊಸೆ ಅರ್ಕಾಡಿಯೋ ಬ್ಯುಂಡಿಯಾಗೆ ಭರ್ಜಿ ಬೀಸುವ ಧೈರ್ಯವಾಗಲಿಲ್ಲ. ಅನಂತರ ಅವನೆಂದೂ ನೆಮ್ಮದಿಯಿಂದ ನಿದ್ದೆ ಮಾಡಲಿಲ್ಲ. ಅವನು ಮಳೆಯಲ್ಲಿ ನಿಂತು ತೀರ ದೀನನಾಗಿ ತನ್ನ ಕಡೆ ಬೀರುತ್ತಿದ್ದ ನೋಟ, ಬದುಕಿರುವ ತನ್ನವರ ಬಗ್ಗೆ ಅತೀವ ಕಾಳಜಿ ಮತ್ತು ಹುಲ್ಲಿನ ಕಟ್ಟನ್ನು ನೀರಲ್ಲಿ ನೆನೆಸಲು ಆತಂಕದಿಂದ ಮನೆಯಲ್ಲಿ ಸುತ್ತಾಡುವ ರೀತಿ ಅವನನ್ನು ಹಿಂಸೆಗೆ ಗುರಿಪಡಿಸಿತ್ತು. “ಅವನು ತುಂಬ ಸಂಕಟ ಪಡ್ತಿರಬೇಕು. ಅವನೀಗ ತೀರ ಒಂಟಿಯಾಗಿದಾನೆ” ಎಂದು ಉರ್ಸುಲಾಗೆ ಹೇಳಿದ. ಅವಳಿಗೆ ಸತ್ತವನು ಮಡಿಕೆಯ ಮುಚ್ಚಳಗಳನ್ನು ತೆಗೆಯುತ್ತಿದ್ದಾಗ ಅವನೇನು ಹುಡುಕುತ್ತಿದ್ದಾನೆಂದು ಅರಿವಾದ ಮೇಲೆ ಮನೆಯಲ್ಲಿ ಎಲ್ಲಂದರಲ್ಲಿ ನೀರು ತುಂಬಿದ ಮಡಕೆಗಳನ್ನು ಇಟ್ಟಳು. ಒಂದು ದಿನ ತನ್ನ ರೂಮಿನಲ್ಲಿಯೇ ಅವನು ಗಾಯವನ್ನು ತೊಳೆದುಕೊಳ್ಳುತ್ತಿದ್ದಾಗ ಕೊಸೆ ಅರ್ಕಾಡಿಯೋ ಬ್ಯುಂಡಿಯಾಗೆ ತಡೆದುಕೊಳ್ಳಲಾಗಲಿಲ್ಲ.”

ಇಲ್ಲಿ ಅನೇಕ ವಿವರಗಳು “ಮಾಯಾ” ಪ್ರಪಂಚಕ್ಕೆ ಸೇರಿದವು ಎಂದು ತೋರಿದರೂ ಅವುಗಳ ಮೂಲ ಉದೇಶವನ್ನು ಯಾರೂ ಗಮನಿಸದೆ ಇರುವುದಿಲ್ಲ. ಮಾಕೆಜ್ ತನ್ನ ಕೃತಿಯಲ್ಲಿ ವಾಸ್ತವ-ಅವಾಸ್ತವ,-ಮಾಂತ್ರಿಕ ನೆಲೆಗಳ ಅನುಸಂಧಾನವನ್ನು ಮೊದಲಿನಿಂದ ಕೊನೆಯವರೆಗೂ ಮಾಡುತ್ತಲೇ ಇರುವುದನ್ನು ಕಾಣಬಹುದು. ಈ ಅನುಸಂಧಾನ ನಿಯಂತ್ರಿತವಾದದ್ದರಿಂದ ಎಲ್ಲೂ ಇದು ಅಸಂಭವನೀಯ ನೆಲೆಗೆ ಹೋಗುವುದಿಲ್ಲ. ಸಾಧ್ಯತೆಯ ಚೌಕಟ್ಟಿನಲ್ಲಿಯೇ ಇದು ನಡೆಯುತ್ತದೆ.

ಮಾರ್ಕೆಜ್ ಕೇವಲ ವೈಯಕ್ತಿಕ ಬದುಕಿನ ಚಿತ್ರಣವನ್ನ ಕಟ್ಟುವುದಿಲ್ಲ. ವ್ಯಕ್ತಿಗಳ ಒಳ ಬದುಕಿನ ಚಿತ್ರಣ ಕೊಡುವಾಗಲೂ ಅವನು ವ್ಯಕ್ತಿ-ಸಮಷ್ಟಿಯ ಸಾವಯವ/ಜೈವಿಕ ಸಂಬಂಧವನ್ನು ನಮಗೆ ತೋರಿಸಿಕೊಡುತ್ತಾನೆ. ಅವನ ಸಮುದಾಯ ಎಷ್ಟು ಆರೋಗ್ಯಪೂರ್ಣವಾದ್ದು ಎಂದರೆ ವ್ಯಕ್ತಿ ಮತ್ತು ಸಮಾಜದ ನಡುವೆ ಸಾಮರಸ್ಯವೇ ಮುಖ್ಯ. ಇದು ಬದುಕಿನಲ್ಲಿ ಮಾತ್ರವಲ್ಲ, ಸಾವಿನ ಸಂದರ್ಭದಲ್ಲೂ ಸತ್ಯ. ಈ ಭಾಗ ನೋಡಿ :

“. . . ಅವನು ಕತಾವುರೆ, ವಿಸಿಟೋಸಿಯೋನ್‌ಯ ಸೋದರ. ನಿದ್ದೆ ಬಾರದ ರೋಗಕ್ಕೆ ಹೆದರಿ ಮನೆಯಿಂದ ಓಡಿ ಹೋಗಿದ್ದ ಮತ್ತು ಅವನ ಬಗ್ಗೆ ಯಾವ ಸುದ್ದಿಯೂ ಇರಲಿಲ್ಲ. ವಿಸಿಟಾಸಿಯೋನ್ ಅವನಿಗೆ, “ಮತ್ತೆ ಬಂದದ್ದು ಯಾತಕ್ಕೆ” ಎಂದು ಕೇಳಿದ್ದಕ್ಕೆ ಅವನು ಅವನದೇ ಆದ ಸಮಾಧಾನದ ಉತ್ತರ ಕೊಟ್ಟ.
“ನಾನು ರಾಜನ ಅಪರಕರ್ಮ ಮಾಡಕ್ಕೆ ಬಂದಿದೀನಿ.”
ಅನಂತರ ಅವರು ಕೊಸೆ ಅರ್ಕಾದಿಯೋ ಬ್ಯುಂದಿಯಾನ ರೂಮಿಗೆ ಹೋಗಿ ಅವರ ಕೈಲಾದಷ್ಟು ಅಲುಗಾಡಿಸಿದರು, ಕಿವಿಯಲ್ಲಿ ಕೂಗಿದರು, ಮೂಗಿನ ಹೊಳ್ಳೆಯ ಹತ್ತಿರ ಕನ್ನಡಿ ಇಟ್ಟರು. ಆದರೆ ಅವನನ್ನು ಎಚ್ಚರಗೊಳಿಸುವುದಕ್ಕೆ ಆಗಲಿಲ್ಲ. ಆ ಮೇಲೆ ಸ್ವಲ್ಪ ಸಮಯದ ನಂತರ ಮರಗೆಲಸದವನು ಶವಪಟ್ಟಿಗೆಗಾಗಿ ಅಳತೆ ತೆಗೆದುಕೊಳ್ಳುತ್ತಿದ್ದಾಗ ಕಿಟಕಿಯ ಮುಖಾಂತರ ಚಿಕ್ಕ ಹಳದಿ ಹೂಗಳ ಸಣ್ಣ ಮಳೆ ಬೀಳುತ್ತಿರುವುದನ್ನು ಕಂಡರು. ಇಡೀ ರಾತ್ರಿ ಮೌನವಾಗಿ ಊರಿನಲ್ಲಿ ಸುರಿಯಿತು ಮತ್ತು ಅವು ತಾರಸಿಗಳನ್ನು ಆವರಿಸಿದವು ಹಾಗೂ ಬಾಗಿಲುಗಳಿಗೆ ಮೆತ್ತಿಕೊಂಡವು ಮತ್ತು ಹೊರಗೆ ಮಲಗಿದ್ದ ಪ್ರಾಣಿಗಳಿಗೆ ಮೃದುಸ್ವರ್ಶ ಮಾಡಿದವು. ಆಕಾಶದಿಂದ ಅದೆಷ್ಟು ಹೂಗಳು ಬಿದ್ದಿದ್ದವೆಂದರೆ ಮಾರನೆ ದಿನ ಬೆಳಿಗ್ಗೆ ರಸ್ತೆಗಳಿಗೆಲ್ಲ ಮೆತ್ತನೆಯ ಕುಶನ್ ಹಾಸಿತ್ತು ಮತ್ತು ಸಲಿಕೆ ಮತ್ತು ಕುಂಟೆಗಳಿಂದ ಪಕ್ಕಕ್ಕೆ ತಳ್ಳಿ ಶವಯಾತ್ರೆಗೆ ಅನುಕೂಲ ಮಾಡಿಕೊಡಬೇಕಾಯಿತು.”

ಹಾಗೆಯೇ ಮಾರ್ಕೆಜ್ ವ್ಯಕ್ತಿಗಳ ಅನ್ಯೋನ್ಯ ಸಂಬಂಧವನ್ನು ಸೆರೆಹಿಡಿಯುವಾಗ ಪಾಕೃತಿಕ ಸಂಕೇತಗಳನ್ನೇ ಬಳಸುತ್ತಾನೆ. ಗಂಡು-ಹೆಣ್ಣಿನ ಗಾಢ ಸಂಬಂಧವನ್ನು ಸಂಭ್ರಮದ ರೂಪಕವಾಗಿಸಿಬಿಡುತ್ತಾನೆ. ಅವನ ವರ್ಣನೆ ನೋಡೋಣ :

“ಮೆಮೆಗೆ ಅವನು ಹಮ್ಮಿನಿಂದ ಬಿರಿದು ಹೋಗುತ್ತಿದ್ದಾನೆಂದು ಅರ್ಥವಾಯಿತು. ಅವಳ ಅವನಿಗೆ ಅಪಮಾನ ಮಾಡುವ ಬಗೆಯನ್ನು ಹತಾಶೆಯಿಂದ ಹುಡುಕಿದಳು. ಆದರೆ ಅವನು ಅವಳಿಗೆ ಕಾಲಾವಕಾಶವನ್ನೇ ಕೊಡಲಿಲ್ಲ. ಅವನು ಕೆಳದನಿಯಲ್ಲಿ, “ನೀವೇನೂ ತಲೆಕೆಡಿಸಿಕೊಳ್ಳಬೇಡಿ. ಹುಡುಗಿಯೊಬ್ಳು ಒಬ್ಬ ಹುಡುಗನ್ನು ತೀರ ಇಷ್ಟಪಟ್ಟಿರೋದು ಇದೇನು ಮೊದಲ್ನೇ ಸಲ ಅಲ್ಲ” ಎಂದ. ಅವಳಿಗೆ ಕುಸಿದಂತಾಗಿ ಹೊಸ ಮಾಡಲ್‌ಗಳನ್ನು ನೋಡದೆ ಗರಾಜ್‌ನಿಂದ ಹೊರಟು ಹೋದಳು ಮತ್ತು ಆ ದಿನ ರಾತ್ರಿಯೆಲ್ಲ ಕೋಪಗೊಂಡು ಅಳುತ್ತಿದ್ದಳು. ಅವಳ ಬಗ್ಗೆ ಆಸಕ್ತಿ ಹೊಂದಲು ಪ್ರಾರಂಭಿಸಿದ್ದ ಅಮೆರಿಕದ ಕೆಂಗೂದಲ ಮನುಷ್ಯ ಎಳೆ ಮಗುವಿನಂತೆ ಕಂಡ. ಆಗ ಅವಳಿಗೆ ಮಾರಿಷಿಯೋ ಕಾಣಿಸಿಕೊಳ್ಳುತ್ತಿದ್ದಕ್ಕಿಂತ ಮುಂಚೆ ಹಳದಿ ಚಿಟ್ಟೆಗಳು ಬರುತ್ತಿದ್ದದ್ದು ನೆನಪಾಯಿತು. ಅವಳು ಅವುಗಳನ್ನು ಮುಖ್ಯವಾಗಿ ಗರಾಜ್ ಬಳಿ ನೋಡಿದ್ದಳು. ಪೇಂಟ್‌ನ ವಾಸನೆಯಿಂದ ಅವು ಮುತ್ತುತ್ತವೆ ಎಂದು ಅವಳು ತಿಳಿದುಕೊಂಡಿದ್ದಳು. ಒಂದು ಸಲ ಅವಳು ಸಿನಿಮಾಕ್ಕೆ ಹೋಗುವ ಮುಂಚೆ ತನ್ನ ತಲೆಯ ಮೇಲೆ ಹಾರಾಡುತ್ತಿದ್ದದ್ದನ್ನು ಕಂಡಿದ್ದಳು. ಆದರೆ ಮಾರಿಷಿಯೋ ಬಾಬಿಲೋನಿಯಾ ಭೂತದ ಹಾಗೆ ತನ್ನ ಬೆನ್ನು ಹತ್ತಿದಾಗ, ಗುಂಪಿನಲ್ಲಿದ್ದರೂ ಅವನನ್ನು ಗುರುತಿಸಲು ತನಗೆ ಮಾತ್ರ ಸಾಧ್ಯವಾದ ಮೇಲೆ, ಚಿಟ್ಟೆಗಳಿಗೂ ಅವನಿಗೂ ವಿಚಿತ್ರವಾದ ಸಂಬಂಧವಿದೆ ಎಂದು ಅವಳಿಗೆ ಗೊತ್ತಾಯಿತು. ಮಾರಿಷಿಯೋ ಬಾಬಿಲೋನಿಯಾ ಸಂಗೀತ ಗೋಷ್ಠಿಗಳಲ್ಲಿ, ಸಿನಿಮಾದಲ್ಲಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಯಾವಾಗಲೂ ಇರುತ್ತಿದ್ದ. ಅವಳು ಅವನು ಎಲ್ಲಿದ್ದಾನೆ ಎಂದು ಹುಡುಕಬೇಕಾಗಿರಲಿಲ್ಲ. ಏಕೆಂದರೆ ಅವನಿದ್ದ ಕಡೆ ಚಿಟ್ಟೆಗಳು ಯಾವಾಗಲೂ ಇರುತ್ತಿದ್ದವು. ಒಂದು ಸಲ ಅವ್ರೇಲಿಯಾನೋ ಸೆಗುಂದೋ ಅವುಗಳ ಹಾರಾಟದಿಂದ ಎಷ್ಟು ಕಸಿವಿಸಿಗೊಂಡಿದ್ದನೆಂದರೆ ಅವಳಿಗೆ ತನಗೆ ತಿಳಿದಿರುವ ಗುಟ್ಟನ್ನು, ಅವಳೇ ಮಾತು ಕೊಟ್ಟಂತೆ ಹೇಳಿಬಿಡಬೇಕು ಎನ್ನಿಸಿತು. ಆದರೆ ಅವನು ಎಂದಿನ ಹಾಗೆ ನಕ್ಕು, “ನಿಮ್ಮಮ್ಮನಿಗೆ ಗೊತ್ತಾದರೆ ಏನು ಹೇಳ್ತಾಳೆ?” ಎನ್ನುತ್ತಾನೆ ಎಂದುಕೊಂಡಳು. ಒಂದು ದಿನ ಬೆಳಿಗ್ಗೆ ಅವಳು ಗುಲಾಬಿ ಹೂಗಳನ್ನು ಒಪ್ಪಮಾಡುತ್ತಿದ್ದಾಗ ಫೆರ್ನಾಂಡ ಕೂಗಿಕೊಂಡಳು ಮತ್ತು ಮೆಮೆ ತಾನಿದ್ದ ಸ್ಥಳದಿಂದ ಆಚೆ ಹೋದಳು. ಅದು ಸುಂದರಿ ರೆಮಿದಿಯೋಸ್ ಸ್ವರ್ಗಕ್ಕೆ ಹೋಗುವಾಗ ಕೈತೋಟದಲ್ಲಿ ನಿಂತ ಸ್ಥಳವಾಗಿತ್ತು. ಅವಳು ಮತ್ತೆ ಅದೇ ರೀತಿಯ ಮಾಂತ್ರಿಕ ಘಟನೆ ಜರುಗುವುದೆಂದು ಭಾವಿಸಿದಳು, ಏಕೆಂದರೆ ಒಮ್ಮೆಲೇ ಚಿಟ್ಟೆಗಳ ರೆಕ್ಕೆ ಬಡಿತದಿಂದ ಅವಳು ಕಳವಳಗೊಂಡಿದ್ದಳು. ಅವು ಇದ್ದಕ್ಕಿದ್ದ ಹಾಗೆ ಬೆಳಕಿನಿಂದ ಹುಟ್ಟು ಪಡೆದದ್ದಾಗಿ ಮೆಮೆಗೆ ತೋರಿತು ಮತ್ತು ಅವಳ ಹೃದಯ ಒಮ್ಮೆ ಪುಟಿಯಿತು. . . . ”

ಮಾರ್ಕೆಜ್ ಮತ್ತೊಂದು ಮುಖ್ಯವಾದ ವಿಷಯದ ಕಡೆ ನಮ್ಮ ಗಮನವನ್ನು ಸೆಳೆಯುತ್ತಾನೆ. ತಾನು ಬಣ್ಣಿಸುತ್ತಿರುವ ಸಮಾಜದಲ್ಲೇ ವೈಙ್ಞನಿಕ ಪ್ರಙ ಮತ್ತು ಆಧ್ಯಾತ್ಮಿಕ ಹುಡುಕಾಟ ಬೆಸೆದಿರುವುದನ್ನು ಅದ್ಭುತವಾಗಿ ವರ್ಣಿಸುತ್ತಾನೆ. ಇಂಥ ಸಮಾಜಗಳಲ್ಲಿ ದೇವರ ಬಗೆಗಿನ ಜಿಙ್ಞಸೆ ಮೂಢ ನಂಬಿಕೆಗಳಿಂದ ತುಂಬಿ ತುಳುಕುತ್ತಿರುತ್ತದೆ ಎಂದು ಭಾವಿಸಲು ಆಧುನಿಕ ಪ್ರಪಂಚದ ದುರಹಂಕಾರವೇ ಹೊರತು ಸತ್ಯದ ಸಂಗತಿಯಲ್ಲ ಎಂಬ ಎಚ್ಚರವನ್ನು ಮಾರ್ಕೆಜ್ ನಮಗೆ ಕೊಡುತ್ತಾನೆ. ಎಲ್ಲ ರೀತಿಯ ವೈಙ್ಞನಿಕ ಚಿಂತನೆಗೆ ನಾವೇ ವಾರಸುದಾರರು ಎಂಬ ಕ್ಷುದ್ರ ಅಹಂಕಾರವನ್ನು ಇದು ತೊಡೆದು ಹಾಕುತ್ತದೆ. ಕಾದಂಬರಿಯಲ್ಲಿ ಬರುವ ಒಂದು ಭಾಗ ಹೀಗಿದೆ :

“ಕಾಲ ಅವನ ಹುಚ್ಚು ನಿರ್ಧಾರವನ್ನು ತಗ್ಗಿಸಿತ್ತಾದರೂ ಅವನ ಭಗ್ನಭಾವ ಹೆಚ್ಚಾಯಿತು. ಅದನ್ನು ಮರೆಯಲು ಅವನು ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಂಡ. ತನ್ನ ಅಪ್ರಯೋಜಕವಾದ ನಾಚಿಕೆಯನ್ನು ಮರೆಮಾಚುವುದಕ್ಕೆ ಇಡೀ ಜೀವನ ಹೆಂಗಸರ ಸಂಗವಿರದ ಮನುಷ್ಯನಾಗಿರಲು ಮನಸ್ಸು ಮಾಡಿದ. ಈ ಮಧ್ಯೆ ಮೆಲ್‌ಕಿಯಾದೆಸ್ ಮಕೋಂದೋದಲ್ಲಿ ಫಲಕಗಳ ಮೇಲೆ ಮುದ್ರಿಸಬಹುದಾದ ಎಲ್ಲವನ್ನೂ ಮುದ್ರಿಸಿದ ಮತ್ತು ಹಳೆಯ ಲ್ಯಾಬೊರೇಟರಿಯನ್ನು ಕೊಸೆ ಅರ್ಕಾದಿಯೋ ಬ್ಯುಂದಿಯಾನ ವಿಚಿತ್ರ ಆಲೋಚನೆಗಳಿಗೆ ಬಿಟ್ಟು ಕೊಟ್ಟ. ಅವನು ಅದನ್ನು ದೇವರು ಇರುವುದಕ್ಕೆ ವೈಜ್ಞಾನಿಕ ಪುರಾವೆ ಪಡೆಯಲು ಉಪಯೋಗಿಸಬೇಕೆಂದು ತೀರ್ಮಾನಿಸಿದ. ದೇವರು ಇದ್ದದ್ದೇ ಆದರೆ, ಒಂದು ಸಂಕೀರ್ಣ ಪ್ರಕ್ರಿಯೆಯಿಂದ ಮನೆಯ ವಿವಿಧ ಭಾಗಗಳಲ್ಲಿ ಒಂದರ ಮೇಲೊಂದು ಮೇಳೈಸಿದ ಚಿತ್ರಗಳನ್ನು ತೆಗೆಯುವುದರ ಮೂಲಕ, ಆದಷ್ಟು ಬೇಗ ದೇವರ ಛಾಯಾಚಿತ್ರ ತೆಗೆಯಬಹುದೆಂಬ ಭರವಸೆ ಹೊಂದಿದ್ದ. ಹಾಗಾಗದಿದ್ದರೆ ಅವನಿರುವ ನಂಬಿಕೆಗೆ ಇತಿಶ್ರೀ ಹೇಳಬೇಕೆಂದುಕೊಂಡ. ಮೆಲ್‌ಕಿಯಾದೆಸ್ ನಾಸ್ಟರ್‌ಡಾಮಸ್‌ನ ವ್ಯಾಖ್ಯಾನಗಳಲ್ಲಿ ಮತ್ತಷ್ಟು ಮುಳುಗಿದ. ರಾತ್ರಿ ಬಹಳ ಹೊತ್ತಿನ ತನಕ ಉಸಿರಾಡಲು ಕಷ್ಟಪಡುತ್ತ ಮೊದಲಿನ ಚುರುಕನ್ನು ಕಳೆದುಕೊಂಡು ಸೊರಗಿದ ಕೈಗಳಿಂದ ಬರೆಯುತ್ತಿದ್ದ. ಅದೊಂದು ದಿನ ಅವನಿಗೆ ಮಕಾಂದೋದ ಭವಿಷ್ಯ ಕಂಡಂತಾಯಿತು. ಗಾಜಿನ ಮನೆಗಳಲ್ಲಿದ್ದ ಅದರಲ್ಲಿ ಹೇಳಹೆಸರಿರಲಿಲ್ಲ. “ಅದೆಲ್ಲ ಶುದ್ಧ ತಪ್ಪು. ನಾನು ಕನಸು ಕಂಡ ಹಾಗೆ ಅದು ಗಾಜಿನ ಮನೆಗಳಲ್ಲ, ಐಸ್‌ನ ಮನೆಗಳು. ಅಲ್ಲದೆ ಯಾರಾದರೊಬ್ಬ ಬ್ಯುಂಡಿಯಾ ಯಾವಾಗಲೂ ಇದ್ದೇ ಇರುತ್ತಾನೆ” ಎಂದು ಅಬ್ಬರಿಸಿದ. . . . ”

ಹೀಗೆ ಅನೇಕ ಸ್ತರಗಳಲ್ಲಿ ಕಾದಂಬರಿಯ ಜಗತ್ತು ಅನಾವರಣಗೊಳ್ಳುತ್ತ ನಮ್ಮನ್ನು ತನ್ನ ಬಹುಮುಖಿ ನೆಲೆಗಳಿಗೆ ಕರೆದೊಯ್ಯುತ್ತದೆ. ಒಂದೊಂದು ನೆಲೆಯೂ ನಮಗೆ ಪ್ರತ್ಯಕ್ಷವಾಗತೊಡಗಿದಾಗ ನಾವು ಚಕಿತಗೊಳ್ಳುತ್ತೇವೆ. ಈ ಆಶ್ಚರ್ಯದ ನೆಲೆಗಳು ನಮಗೆ ಚನ್ನಾಗಿ ಪರಿಚಿತವಿರುವ ಆಧುನಿಕ ಜಗತ್ತಿನ ಹಿಂಸೆ, ಕ್ರೌರ್ಯ, ಶೋಷಣೆಗಳೊಡನೆ ಬೆಸೆದುಕೊಂಡುಬಿಡುತ್ತವೆ. ಅಂದರೆ ಪರಿಚಿತ ಮತ್ತು ಅಪರಿಚಿತ ನೆಲೆಗಳ ಸಮಾಗಮ ಕಥನದ ಉದ್ದಕ್ಕೂ ಆಗುತ್ತಲೇ ಹೋಗುತ್ತಿರುವುದನ್ನು ನಾವು ಕಾಣಬಹುದು. ಮಾರ್ಕೆಜ್ ನಮ್ಮ ಯುಗದ ಇತಿಹಾಸವನ್ನು ಎಷ್ಟು ನಿಕಟವಾಗಿ ಪರಿಚಯ ಮಾಡಿಕೊಡುತ್ತಾನೋ ಅಷ್ಟೇ ಆತ್ಮೀಯವಾಗಿ ನಾವು ಕಾಣದ ಲೋಕಗಳ ದರ್ಶನವನ್ನೂ ಮಾಡಿಸುತ್ತಾನೆ. ಆಧುನಿಕ ಪ್ರಪಂಚದ ರಕ್ತಪಾತ, ಸರ್ವಾಧಿಕಾರ, ಬಲಿಷ್ಠ ರಾಷ್ಟ್ರಗಳ ಅಟ್ಟಹಾಸ ನಮಗೆ ಎದಿರಾಗುತ್ತಲೇ ಇರುತ್ತವೆ. ಒಂದರ್ಥದಲ್ಲಿ ಆದಿಮ ರೂಪಕಗಳು ಹೊಸ ಸಂಕೇತಗಳೊಂದಿಗೆ ಬೆಸೆದುಕೊಳ್ಳುವುದೇ ಕಾದಂಬರಿಯ ಹಿರಿಮೆ. ಸಾಹಿತ್ಯದ ಸಂವೇದನೆ, ಐತಿಹಾಸಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ನೆಲೆಗಟ್ಟನ್ನು ಸಾಧಿಸಿಕೊಳ್ಳುವುದು ಒಂದು ಅಪ್ರತಿಮ ಸಾಧನೆ. ಇದೇ ಮಾರ್ಕೆಜ್‌ನ ಅದ್ಭುತ ಕೊಡುಗೆ ಕೂಡ.

ಸ್ಪ್ಯಾನಿಷ್‌ನಿಂದ ಇಂಗ್ಲಿಷ್‌ಗೆ ಬಂದ ಈ ಕಾದಂಬರಿ ಈಗ ಕನ್ನಡಕ್ಕೆ ಬಂದಿರುವುದು ಬಹಳ ದೊಡ್ಡ ಸಂಗತಿ. ನಮ್ಮಲ್ಲಿ ಈಗ ಸೃಜನಶೀಲ ಲೇಖಕರು ರೂಪಕಗಳ ಕಡೆಗೆ ವಾಲುತ್ತಿರುವುದು ಆಶ್ಚರ್ಯವೇನಲ್ಲ. ಆಧುನಿಕ ಪ್ರಪಂಚದ ಭೀಕರತೆಯನ್ನು ವ್ಯಕ್ತಪಡಿಸಲು ರೂಪಕಗಳ ಮಾರ್ಗ ಬಹಳ ಅಗತ್ಯ. ಈ ಕಾರಣಕ್ಕಾಗಿಯೇ ಅನೇಕ ದಲಿತ ಕೃತಿಗಳು ರೂಪಕಾತ್ಮಕವಾಗಿ ಹೊರಹೊಮ್ಮುತ್ತಿರುವುದು ಸ್ವಾಗತಾರ್ಹವಾದ ಸಂಗತಿ. ಇದನ್ನು ರಿವೈವಲಿಸಂ ಎಂದು ಟೀಕಿಸುವವರೂ ಇದ್ದಾರೆ. ಆದರೆ ಸೃಜನಶೀಲತೆ ವಾಸ್ತವತೆಯ ದಬ್ಬಾಳಿಕೆಯನ್ನು ಎಂದಿಗೂ ಸಂಕೇತಗಳ ಮೂಲಕವೇ ಎದುರಿಸುತ್ತಿದೆ ಎನ್ನುವುದನ್ನು ಎಲ್ಲ ಸೂಕ್ಷ್ಮಙ್ಞರೂ ಬಲ್ಲರು.

ಈ ರೀತಿಯ ರೂಪಕೋತ್ಸವವೇ ಮಾರ್ಕೆಜ್‌ನ ಕಾದಂಬರಿಯಲ್ಲಿದೆ. ಎ. ಎನ್. ಪ್ರಸನ್ನರು ಮೇಲಿನ ಎಲ್ಲ ಸಂಕೀರ್ಣ ಆಯಾಮಗಳನ್ನು ಅರ್ಥೈಸಿಕೊಂಡು ಮಾಂತ್ರಿಕ ವಾಸ್ತವತೆಯ ಅನುಭವವನ್ನು ನಮಗೆ ಮೇಲ್ಮಟ್ಟದ ಸಂವೇದನೆಯ ಮೂಲಕ ತಮ್ಮ ಅನುವಾದದಲ್ಲಿ ದಕ್ಕಿಸಿಕೊಟ್ಟಿರುವುದು ಮೆಚ್ಚುಗೆಯ ಸಂಗತಿ. ಬಹಳ ಕಠಿಣವಾದ ಆಂಗ್ಲಭಾಷಾನುವಾದದ ಕ್ರಮವನ್ನು ಪ್ರಸನ್ನರು ಕನ್ನಡದ ಜಾಯಮಾನಕ್ಕೆ ಒಗ್ಗಿಸಿಕೊಂಡಿರುವ ರೀತಿ ಅನನ್ಯವಾದದ್ದು.

ಇಂಗ್ಲಿಷ್‌ನಲ್ಲಿರುವ ಅವನ ಕೃತಿಯನ್ನು ನಾವು ಅನೇಕ ಕಡೆ ಪ್ರಯಾಸದಿಂದಲೇ ಓದಿಕೊಳ್ಳಬೇಕಾಗುತ್ತದೆ. ಕಾದಂಬರಿಯಲ್ಲಿ ಇಂಗ್ಲಿಷ್ ವಾಕ್ಯಗಳು ಬಹಳ ಕಠಿಣವಾಗಿವೆ. ಈ ಇಂಗ್ಲಿಷ್ ವಾಕ್ಯಗಳನ್ನು ಕನ್ನಡದ ಲಯಕ್ಕೆ ಅನುಗುಣವಾಗಿ ತರುವುದು ಸುಲಭವಲ್ಲ. ಹೀಗೆ ಮಾಡುವ ಪ್ರಕ್ರಿಯೆಯಲ್ಲಿ ಪ್ರಸನ್ನರು ಹಲಕೆಲವು ಸೃಷ್ಟ್ಯಾತ್ಮಕ ಸ್ವಾತಂತ್ರ್ಯವನ್ನು ವಹಿಸಿರುವುದು ಎಲ್ಲರ ಗಮನಕ್ಕೆ ಬರುವಂತಿದೆ. ಕೆಲವರಿಗೆ ಪ್ರಸನ್ನರ ಪ್ರಯೋಗಗಳು ಒಂದೆರಡು ಕಡೆ ಅಸಮಾಧಾನವನ್ನು ಉಂಟುಮಾಡಬಹುದೇನೋ. ಆದರೆ ವಿನ್ಯಾಸದಲ್ಲಿ, ಕಲ್ಪನೆಯಲ್ಲಿ, ಅನುಭವದಲ್ಲಿ, ಗಾತ್ರದಲ್ಲಿ ಅಗಾಧವಾಗಿರುವ ಮಾರ್ಕೆಜ್‌ನ ಕೃತಿಯನ್ನು ಕನ್ನಡಕ್ಕೆ ತಂದಿರುವುದು ಒಂದು ಮಹತ್ಸಾಧನೆ. ಮಾರ್ಕೆಜ್‌ನ ಲೋಕ ನಮಗೆ ಎಷ್ಟು ಮುಖ್ಯ, ಹತ್ತಿರ ಎನ್ನುವುದೇ ನಮ್ಮನ್ನು ಭಾಷಾಂತರದ ಸಮಸ್ಯೆಗಳನ್ನು ದಾಟಿ ಅದರ ಒಳಗೆ ಹೋಗುವಂತೆ ಮಾಡಬೇಕು. ಒಟ್ಟಿನಲ್ಲಿ ಭಾಷೆಯ ಸಮಸ್ಯೆಗಳು ಅನುಭವದ ಮಹತ್ವವನ್ನು ಗೌಣಗೊಳಿಸಬಾರದು. ಇಂಥ ಶ್ರೇಷ್ಠ ಅನುಭವವನ್ನು ಕನ್ನಡಕ್ಕೆ ದಕ್ಕಿಸಿಕೊಟ್ಟ ಪ್ರಸನ್ನರು ಅಭಿನಂದನಾರ್ಹರು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.