ಧಣಿಗಳ ಬೆಳ್ಳಿಲೋಟ

ಆ ಮಾನಗೇಡಿ ಹೊಳೆಗೆ ಒಂದಷ್ಟು ಉಗುರೆಡೆಯಲ್ಲಾದರೂ ನಾಚಿಕೆಯೆಂಬುದು ಇದ್ದಿದ್ದರೆ, ಒಂದಾ ಆ ಪರಿಯ ಬೈಗಳಿಗೆ ಅದು ತಟ್ಟನೆ ಇಂಗಿಹೋಗುತ್ತಿತ್ತು ಅಥವಾ ಸರ್ರೆಂದು ನುಗ್ಗಿ ಬಂದು ಆಕೆಯನ್ನು ನುಂಗಿ ಬಿಡುತ್ತಿತ್ತು. ಅದೆಂತದ್ದೂ ಇಲ್ಲದೆ ಅದು “ ಊದು ದಾಸಯ್ಯ ನನ್ನ ಬಾಲಕ್ಕೆ ಇನ್ನಷ್ಟು ಶಂಖ ” ಎಂಬಂತೆ ಕಸಕಡ್ಡಿಗಳನ್ನು ಹರಿಯುತ್ತಲೆ ಇತ್ತು-ಅತ್ತ ಕಡಲತ್ತ.

ಮುಂಜಾನೆ ಚಿನ್ನಮ್ಮ ಎಂದಿನಂತೆ ಹೊಳೆಯ ಸೆರಗಲ್ಲಿ ಮುಸುರೆ ಪಾತ್ರೆಗಳನ್ನು ರಾಶಿ ಹಾಕಿ ಕೂತು, ಪಕ್ಕದಲ್ಲಿ ಬೂದಿಯ ಗೆರಟೆಯನ್ನಿರಿಸಿಕೊಂಡು ಹೊಳೆಯ ‘ಗುಣವಾಚನ’ಕ್ಕೆ ತೊಡಗಿದ್ದಳು. ಹೊಳೆಯುವ ಹೊಳೆಯ ಮೈಗೆ ಆ ಪರಿಯ ಬೈಗಳ ಪೆಟ್ಟು ತಗಲುತ್ತಿದ್ದಂತೆ, ಅದರ ದಡದಲ್ಲಿ ನಿಂತು ಮರಿಮೀನುಗಳ ತಪಾಸಣೆಯಲ್ಲಿದ್ದ ಅಸಂಖ್ಯ ಕೊಕ್ಕರೆ-ಕೊಂಗ್ರು-ಮಿಂಚುಳ್ಳಿಗಳೆಲ್ಲ ಆಕೆಯ ಬೈಗಳ ಪಾಲು ತಮಗೆಂದೂ ಬೆಡವೆಂಬಂತೆ ಸರ್ರನೆ ಆಚೆ ದಡಕ್ಕೆ ತಟ್ಟನೆ ಹಾರಿ ಹೋದವು.

ಆ ಹೊಳೆಯೇನು ಬೇಕು ಬೇಕೆಂದೇ ಚಿನ್ನಮ್ಮನ ಕುಟುಂಬಕ್ಕೆ ಅಂತಹ ಅಪವಾದಜನ್ನು ಎಳೆದು ತಂದುಹಾಕಿದೆಯೆ? ಅದಕ್ಕೂ ಚಿನ್ನಮ್ಮನ ಪುಟ್ಟ ಸಂಸಾರದ ಬಗ್ಗೆ ಅದೆಷ್ಟು ಪ್ರೀತಿ-ವಾತ್ಸಲ್ಯ, ಕಾಳಜಿ, ಅನುಕಂಪವಿಲ್ಲ! ಇಲ್ಲದಿದ್ದಲ್ಲಿ ಆ ಹೊಳೆ ಯಾಕಾಗಿ ಚಿನ್ನಮ್ಮನ ಗಂಡ ಕುದುಪನ ಗಾಳದ ಬಾಯಿಗೆ ಅಂತಹ ಹೊಡೆಯುವ ಮಳೆಗಾಲದಲ್ಲೂ ದಿನವೂ ಒಂದಷ್ಟು ತರುಮೀನುಗಳನ್ನು ಸಿಲುಕಿಸಬೇಕು! ಹಾಗೇ… ತಾನು ಹರಿದು ಬರುವಾಗಲೆಲ್ಲಾ ತನ್ನ ಸೆರಗಂಚಿನಲ್ಲಿರುವ ತೋಟಗಳಿಂದ ಆಗಾಗ್ಗೆ ಅಷ್ಟಿಷ್ಟು ತೆಂಗಿನಕಾಯಿ-ಸೌದೆ ಕಟ್ಟಿಗೆಗಳನ್ನು ತಂದು ಕುದುಪನ ದಿಟ್ಟಿಗೆ ಅವನ್ನೆಲ್ಲ ಬೀಳಿಸುತ್ತಿಲ್ಲವೆ! ಆಟಿ-ಸೋಣ ಕಾಲದ ಮಳೆಗಾಲದಲ್ಲಂತೂ ಕೇಳುವುದೇ ಬೇಡ. ಅಲ್ಲಿ ಇಲ್ಲಿಂದ ಪಾತ್ರೆ-ಪಗಡಿ, ಸೌದೆ-ಕಟ್ಟಿಗೆ, ಕೋಳಿ-ಕುರಿ, ಏಣಿ-ದೋಣಿ, ರೀಪು-ಪಕ್ಕಾಸುಗಳನ್ನು ಹೊತ್ತು ತಂದು ಚಿನ್ನಮ್ಮ-ಕುದುಪರ ಮಡಿಲಿಗೆ ಸುರಿಯುವುದು ಮಾಮೂಲು. ಚಿನ್ನಮ್ಮನ ಜೊತೆ ಆ ಹೊಳೆಗೆ ಇಷ್ಟೊಂದು ಒಡನಾಟವಿದ್ದರೂ, ಮೊನ್ನೆಯ ಶ್ರಾವಣ ಮಾಸದ ನಾಕರಂದು ಇದೇ ಹೊಳೆ ಆಕೆಯ ಕುಟುಂಬದ ಮೇಲೆ ದೊಡ್ಡ ಅಪವಾದವೊಂದನ್ನು ಹೊರಿಸಿ ಇಡೀಯ ಕುಟುಂಬದ ಉಗ್ರಕೋಪ-ಅಸಹನೆಗೆ ಬಲಿಯಾಗಬೇಕಾಯಿತು.

ಆದದ್ದಿಷ್ಟೆ, ಕಳೆದ ಶ್ರಾವಣ ಮಾಸದ ನಾಕನೇ ದಿನ ಚಿನ್ನಮ್ಮನ ಏಕೈಕ ಮಗ ಗುಡ್ಡ, ಆ ಪರಿಯಲ್ಲಿ ತುಂಬಿ ಹರಿಯುತ್ತಿದ್ದ ಶಾಂಭವಿ ಹೊಳೆಯ ದಡದಲ್ಲಿ ಕೂತು, ಧಣಿ ಮನೆಯ ಮುಸುರೆ ಪಾತ್ರೆಗಳನ್ನು ತಿಕ್ಕುತ್ತಿದ್ದ. ಆಷಾಡ-ಶ್ರಾವಣ-ಭಾದ್ರಪದ ಮಾಸದಲ್ಲಿ ನದಿಯ ಒಡಲೆಂದರೆ ಎಂಥದ್ದು!ಕಾವಿಗೆ ಕೂತ ಹೇಂಟೆಯಂತೆ-ಒಡಲು ಯಾವತ್ತೂ ವ್ಯಗ್ರ-ಪ್ರಕ್ಷುಬ್ದ. ಹತ್ತಿರ ಬಂದವರನ್ನು ಕುಕ್ಕಿ ಮುಕ್ಕುವ ಸಿಡುಕು. ಹುಟ್ಟುವ ಘಟ್ಟದಲ್ಲಿ ಆ ಹೊಳೆಯ ದೇಹ-ಒಡಲು ಮನಸ್ಸು ಪ್ರಫುಲ್ಲ, ಶಾಂತ, ನಿರ್ಮಲವಾಗಿದ್ದರೂ ಅದು ಸಾಗಿ ಬರುವ ದಾರಿಯದ್ದೇನು ಸುಲಭದ್ದೇ.ಕಡಲ ಸಂಗಮಕ್ಕಾಗಿ ರಭಸದಿಂದ ಹಾತೊರೆದು ಬರುವಾಗ ದಾರಿಯಲ್ಲಿ ತುಂಬಿ ಹರಿವ ಅನೇಕ ಕೆರೆ ತೋಡು ಹಳ್ಳ ಕೊಳ್ಳಗಳ್ಳನ್ನು ತನ್ನೊಡಲೊಳಗೆ ಬಾಚಿಕೊಂಡು ಸಾಗಿ ಬರಬೇಕಲ್ಲವೆ! ಇಂತಹ ವಿಕ್ಷಿಪ್ತ ಮನಸ್ಥಿತಿ, ಪರಿಸ್ಥಿತಿಯಲ್ಲಿ ಆ ಶಾಂಭವಿ ಹೊಳೆ ಇರಬೇಕಾದರೆ, ಚಿನ್ನಮ್ಮನ ಮಗ ಎಂಟು ವರ್ಷದ ಗುಡ್ಡ, ಧಣಿಗಳ ಮುಸರೆ ಪಾತ್ರೆಯಲ್ಲಿ ಮರಿಮೀನುಗಳನ್ನು ಹಿಡಿಯುವ ಆಟವನ್ನಾಡುತ್ತ… ತನ್ನದೆ ಲೋಕದಲ್ಲಿ ವಿಹರಿಸುತ್ತಾ ಪಾತ್ರೆ ಉಜ್ಜುತ್ತಿದ್ದ.

ನಿಜಕ್ಕೂ ಧಣಿ ವೆಂಕಪ್ಪಯ್ಯನವರ ಮಾತಿನಂತೆ ಹೇಳುವುದಾದರೆ ಗುಡ್ಡ ಪಾತ್ರೆ ಉಜ್ಜುತ್ತಿದ್ದುದು ಹೊಳೆಯ ಸೆರಗಲ್ಲಿ ಅಲ್ಲವೇ ಅಲ್ಲ, ಆತ ಉಜ್ಜುತ್ತಿದ್ದುದು ವೆಂಕಪ್ಪಯ್ಯನವರ ತೆಂಗಿನ ತೋಟದ ಅಂಚಿನಲ್ಲಿ. ಮಳೆಗಾಲದಲ್ಲಿ ಆ ಹೊಳೆ ಆಡಿದ್ದೇ ಆಟ, ಹೂಡಿದ್ದೇ ಹೂಟ. ‘ ಮಳೆಗಾಲ ಬಂದರೆ ಸಾಕು ಈ ಬಿಕನಾಸಿ ಹೊಳೆ ಊರಿಡೀ ತನ್ನ ಸೆರಗನ್ನೇ ಹಾಸಿಬಿಡುತ್ತದೆ…, ಎಷ್ಟಗಲ ಸೆರಗು ಹಾಸಿಯಾದರೂ ಇನ್ನಷ್ಟು ದೂರಕ್ಕೆ ಹಾಸಬೇಕೆಂಬ ಚಟ ಇದಕ್ಕೆ…’ ಎಂದು ಧಣಿಗಳು ಯಾವತ್ತೂ ಹೊಳೆಯನ್ನು ಮೂದಲಿಸುವುದು ಇದ್ದೇ ಇದೆ. ಹೊಳೆಗೂ ಬಾಯೇನಾದರೂ ಬರುತ್ತಿದ್ದರೆ ‘ಎಲವೋ ಹುಲು ಮಾನವ ವೆಂಕಪ್ಪಯ್ಯ, ಸುತ್ತಲ ನಾಕೂರಲ್ಲಿರುವ ಯಾವನೇ ಶ್ಯಾನುಭೋಗ-ಉಗ್ರಾಣಿಯನ್ನಾದರೂ ಕರೆತಂದು ನನ್ನೆದುರು ಸರಪಳಿ ಎಳೆಸು. ಅವೆಲ್ಲವೂ ನನ್ನದಲ್ಲದಿದ್ದರೆ ಕೇಳು ಮತ್ತೆ…’ ಎಂದು ಮರುತ್ತರ ಕೊಡುತ್ತಿತ್ತೇನೋ! ಬಾಯಿ ಇಲ್ಲದಿದ್ದರೇನಂತೆ… ಮಳೆಗಾಲ ಬಂದೊಡನೆ ಬರಿ ಕ್ರಿಯೆಯಲ್ಲಿಯೇ ತನ್ನ ವ್ಯಾಪ್ತಿ, ತನ್ನ ಪರಿವಾರ, ತನ್ನ ಬಲ ಎಷ್ಟೆಂಬುದ್ದನ್ನು ಧಣಿಗಳಿಗೆ ಮನವರಿಕೆ ಮಾಡಿ ಅವರಿಗೆ ಕಿರಿಕಿರಿ ಎಬ್ಬಿಸುವುದರಲ್ಲಿ ಹೊಳೆಯೇನು ಹಿಂದೆ ಬಿದ್ದಿಲ್ಲ. ಹೊಳೆಯ ಈ ಉಪಟಳ ತಾಳಲಾರದೆ ಧಣಿಯವರು ಪ್ರತಿ ವರ್ಷವೂ ಹೊಳೆ ಸೊರಗುವ ಕಾಲಕ್ಕೆ ತನ್ನ ಮೇಲುಸ್ತುವಾರಿಯಲ್ಲಿ ನದಿ ಸೆರಗನ್ನು ಒಂದಷ್ಟು ಅತ್ಲಾಗೆ ದೂಡುವಂತೆ ಪಾದೆಕಲ್ಲು-ಮುರುಕಲ್ಲಿನ ಗಟ್ಟಿ, ಅಡಿಪಂಚಾಂಗ ಹಾಕಿಸಿ ನದಿಯ ಸೆರಗಿಗೂ ತೋಟಕ್ಕೂ ನಡುವೆ ದರೆ ಎಬ್ಬಿಸಿ ಎತ್ತರಿಸುವುದಿದೆ. ಈ ವರ್ಷ ಹೊಳೆಯ ಮೈಯಿಂದ ತೋತವನ್ನು ನಾಕಡಿ ಎತ್ತರಿಸಿದ್ದರೆ, ಮುಂದಿನ ವರ್ಷ ಐದಡಿ ಎತ್ತರಿಕೆ. ಆದರೆ ಈ ಬಿರಿಬೇಸಿಗೆಯಲ್ಲಿ ನಿತ್ರಾಣ ಸ್ಥಿತಿಯಲ್ಲಿರುವ ಹೊಳೆಯಂತೂ ತನ್ನ ನಿಶ್ಯಕ್ತ ಸ್ಥಿತಿಯಲ್ಲಿ ಧಣಿಗಳ ಆ ಕೃತ್ಯವನ್ನು ಕಂಡೂ ಕಾಣದಂತಿದ್ದು ‘ಗದ್ದೆಯಲ್ಲಿ ಬಿತ್ತುವುದನ್ನು ಮರಳದಿನ್ನೆ ಮೇಲೆ ಬಿತ್ತಿದೆಯಲ್ಲವ ಮಾರಾಯ….?’ ಎಂದು ಧಣಿಯವರ ಪೆದ್ದುತನದ ಬಗ್ಗೆ ಮನಸ್ಸಲ್ಲೇ ನಗುತ್ತಾ ಆ ದರೆಯನ್ನು ಕೆಡವಲು ಹೊಂಚುಹಾಕುತ್ತಿರುತ್ತದೆ. ಅನಾದಿ ಕಾಲದಿಂದಲೂ ಅಲ್ಲೇ ಇರುವ ಹೊಳೆಗೇನು ತಿಳಿದಿಲ್ಲವೆ. ಇವ ಧನಿಕ ಮಹಾಶಯ ತನ್ನ ಸೆರಗನ್ನೇ ಒತ್ತರಿಸಿಕೊಂಡು ತೋಟಮಾಡಿದ್ದಾನೆ ಎನ್ನುವ ಸತ್ಯ. ಅಂತು ಮಳೆಗಾಲ ಕಾಲಿಟ್ಟು, ಅಟಿ ತಿಂಗಳ ನಾಲ್ಕು ಜಡಿಮಳೆ ಹೊಡೆದರೆ ಸಾಕು ದಣಿಗಳು ಕಟ್ಟಿದ ದರೆ ಬುಡದಿಂದಲೇ ಲಯ. ಹೊಳೆ ತಟ್ಟನೆ ಧಣಿಯವರ ತೋಟದೊಳಗೆ ನುಗ್ಗಿ ಅದನ್ನಿಡೀ ಕಡಲು ಮಾಡಿ ಸೇಡು ತೀರಿಸಿಕೊಳ್ಳುತ್ತದೆ.

ಹೀಗೆ ಧಣಿ ಹಾಗೂ ಹೊಳೆಯ ನಡುವೆ ಇನ್ನೂ ಸಮರ ನಡೆಯುತ್ತಿದ್ದ ಆ ಶ್ರಾವಣಮಾಸದ ಮುಂಜಾನೆ, ಬಾಲಕ ಗುಡ್ಡ ತೋಟದ ಅಂಚಲ್ಲಿ ಕೂತು ಬೂದಿಯಿಂದ ತಿಕ್ಕಿದ ಪಾತ್ರೆಗಳನ್ನು ಹೊಳೆಯ ನೀರಲ್ಲಿ ಜಾಲಾಡಿಸುತ್ತಿದ್ದ. ಹೊಳೆಯ ನೀರು ವಾರಗಟ್ಟಲೆ ಅಲ್ಲೇ ನಿಂತು ಧಣಿಗಳ ತೋಟದ ಅಂಚು ತುಳುವ ಹಲಸಿನಂತೆ ಮೆತ್ತಗಾಗಿದೆ ಎಂಬುದು ಆ ಪುಟ್ತ ಬಾಲಕನಿಗೆ ಅದೇಗೆ ತಿಳಿದೀತು? ಹಿಂದಿನ ದಿನ ರಾತ್ರಿ ಊರ ವಿಷ್ಣುಮೂರ್ತಿ ದೇವಳದಲ್ಲಿ ನಡೆದ ಹರಿಕಥಾ ಕಾಲಕ್ಷೇಪದಲ್ಲಿ ಹರಿದಾಸರು ಹೇಳಿರುವ ಉಪಕತೆಗಳನ್ನು ನೆನೆಸಿಕೊಂಡೇ ನಗುತ್ತಾ ಪಾತ್ರೆ ಬೆಳಗುತ್ತಿದ್ದ ಆ ಬಾಲನಿಗೆ ಕಾಲಡಿಯ ಮನ್ಣು ಕುಸಿಯಬಹುದೆನ್ನುವ ಅಂದಾಜು ಇಲ್ಲ….ಪರಿಜ್ಞಾನವೂ ಇಲ್ಲ. ಕಾಲಡಿಯ ಮಣ್ಣು ಮೆಲುವಾಗಿ ಕುಸಿದು ಹೊಳೆಗೆ ಜಾರಿತು! ಕ್ಷಣಮಾತ್ರದಲ್ಲಿ ಗುಡ್ಡನ ಜತೆ ಧಣಿಗಳ ಮನೆಯ ಪಾತ್ರೆ, ಸೌಟು, ಕೊಳಗ, ತಪ್ಪಲೆಗಳೆಲ್ಲವೂ ನೀರು ಪಾಲಾದವು! ಗುಡ್ಡನೇನು ಸಾಮಾನ್ಯ ಪೋರನೆ? ಆತನ ಈಜಿಗೆ ಮೀನುಗಳೇ ನಾಚಬೇಕು. ಈಜಿ ಮೇಲೆ ಬಂದವ ನೇರ ಧಾವಿಸಿದ್ದು ಅಪ್ಪ ಕುದುಪನತ್ತ. ಧಣಿಗಳ ತೋಟದಲ್ಲಿ ತೆಂಗಿನಬುಡ ಬಿಡಿಸುವ ಕಾಯಕದಲ್ಲಿ ಮಗ್ನನಾಗಿದ್ದ ಕುದುಪನಿಗೆ ಮಗನ ಮಾತು ಕೇಳಿ ಎದೆ ಬಡಿತ ಸ್ತಬ್ಧಗೊಂಡಂತಾಯಿತು. ಬಂದು ನೋಡುತ್ತಾನೇನು! ಮುಸುರೆ ಪಾತ್ರೆಗಳೆಲ್ಲವೂ ಹೊಳೆಯ ಪಾಲಾಗಿವೆ. ಧಣಿಗಳಿಗೇನಾದರೂ ಈ ಸುದ್ದಿ ತಲುಪಿದರೆ, ಅವರ ಸಿಟ್ಟಿನ ಭರಕ್ಕೆ ತಾವೆಲ್ಲರೂ ಹೊಳೆಪಾಲಾಗುವುದು ಖಂಡಿತ ಎಂದು ಆಲೋಚಿಸಿದವನೆ ತಟ್ಟನೆ ಮೈಯ ಬಟ್ಟೆ ಬರೆಗಳನ್ನೆಲ್ಲ ಜಾರಿಸಿ ಅತ್ತೆಸೆದು ಕೋಮಣಾಲಂಕೃತನಾಗಿ ಹೊಳೆಯಲ್ಲಿ ಮುಳುಗಿ ನೆಲಕಚ್ಚಿರುವ ಪಾತ್ರೆಗಳಿಗಾಗಿ ಜಾಲಾಡತೊಡಗಿದ್ದ. ಕುಸಿದ ಮಣ್ಣಡಿಯಲ್ಲಿ ಸಿಗುವಷ್ಟು ಪಾತ್ರೆಗಳು ಸಿಕ್ಕವು. ಇನ್ನೆಷ್ಟು ಪಾತ್ರೆಗಳು ಸಿಗಬೇಕು? ಕುದುಪನಿಗೆ ಅಂದಾಜಿಲ್ಲ. ಮುಸುರೆ ಪಾತ್ರೆಗಳ ‘ಒಡೆಯ’ ಮಗನನ್ನು ಕೇಳಿದರೆ ಆತ ತೋರುಬೆರಳುಗಳನ್ನು ಬಾಯೊಳಗಿರಿಸಿಕೊಂಡು ಮೌನಮುದ್ರೆಯಲ್ಲಿದ್ದಾನೆ. ಹೇಗೋಚಡ್ಡಿ ಒದ್ದೆ ನೀರಾಗಿದೆ. ಮತ್ತೊಮ್ಮೆ ತಾನು ಈ ತುಂಬಿದ ಹೊಳೆಯಲ್ಲಿ ಯಾಕೆ ಈಜಬಾರದು? ಅಪ್ಪನಲ್ಲಿ ಕೇಳುವುದೋ….ಬಿಡುವುದೋ ಎಂಬ ಯೋಚನೆಯಲ್ಲಿದ್ದ ಗುಡ್ಡನಲ್ಲಿ-
‘ಏಯ್ ಮೂರ್‍ಕಾಸಿನ ಹಡಬೆ…..ಇಷ್ಟೆನಾ ಪಾತ್ರೆ…..ಇನ್ನ್ಯಾವುದಾದರೂ ಮುಳುಗಿದ್ಯನಾ….?’
ಅಪ್ಪನ ಪ್ರಶ್ನೆಗೆ ಮಗ ಯೋಚನೆಯ ಕೋಟೆಯಿಂದ ಹೊರಬಂದ.
ಊಹುಂ…. ಮಗ ಗುಡ್ಡನಿಗೆ ಇನ್ಯಾವ ಪಾತ್ರೆಗಳೂ ನೆನಪಿಗೆ ಬರುತ್ತಿಲ್ಲ. ಮಾಮೂಲಾಗಿ ದಿನವೂ ಇರುವಂತಹ ಎರಡು ಕಂಚಿನ ಕೊಳಗ, ಎರಡು ಹಿತ್ತಾಳೆ ಗಿಂಡೆ, ಹತ್ತು ಹಿತ್ತಾಳೆ ಲೋಟ, ಎರಡು ಚೊಂಬು, ಆರು ಮರದ ಸೌಟು, ಎರಡು ಹಿತ್ತಾಳೆ ಸೌಟು, ಹತ್ತು ಕಂಚಿನ ಬಟ್ಟಲು, ಎಂಟು ಹಿತ್ತಾಳೆ ತಟ್ಟೆ, ಒಂದು ಬಾಣಲೆ….ಇವೆಲ್ಲವೂ ಇವೆ. ಮತ್ತ್ಯಾವುದು ಕಾಣಿಸುತ್ತಿಲ್ಲ? ಮಗ ಗುಡ್ಡನಿಗೂ ತಿಳಿಯುತ್ತಿಲ್ಲ, ಅಪ್ಪನಿಗೂ ಅಷ್ಟೆ. ಅಪ್ಪ ಮಗನನ್ನು ಅದೆಷ್ಟು ಕಾಡಿದರೂ, ಬೇಡಿದರೂ ಬಾಲಕ ಗುಡ್ಡನಿಗೆ ಉತ್ತರಿಸಲು ಕಿವಿ ಬಾಯಿ ಏನೂ ತೋಚುತ್ತಿಲ್ಲ. ಧಣಿಯವರ ಒಡತಿ ದಿನವೂ ಹೊರಗೆ ಸುರಿಯುವ ಮುಸುರೆ ಪಾತ್ರೆಗಳನ್ನು ಹೊತ್ತು ತಂದು ಅದನ್ನು ಉಜ್ಜುದಷ್ಟೆ ಆತನ ಕೆಲಸ. ಎಷ್ಟು ಪಾತ್ರೆ…ಯಾವುದು ಏನು ಎತ್ತ ಯಾಕಿಷ್ಟು ಎಂದು ವಿಚಾರಿಸಿದರೆ, ಧಣಿಪತ್ನಿ ಮಜ್ಜಿಗೆ ಕಡೆಯುವ ಕಡಗೋಲಲ್ಲೆ ತಲೆ ಸೀಳಿಬಿಟ್ಟಾರು?

ಅಪ್ಪನ ಕಾಡುವಿಕೆಗೆ ಕೊನೆಗೂ ಯೋಚಿಸಿ ಯೋಚಿಸಿ ಹಣ್ಣಾದ ಗುಡ್ಡನಿಗೆ ತಟ್ಟನೆ ನೆನಪಿಗೆ ಬಂದದ್ದು ಆ ಬೆಳ್ಳಿಲೋಟ. ಮುಂಜಾನೆ ರೇಜಿಗೆ ಹಿಡಿಸುವಷ್ಟು ಬಾರಿ ಧಣಿಪತ್ನಿಯವರು ‘ಈ ಬೆಳ್ಳಿಲೋಟ ಜಾಗ್ರತೆ ಮಾರಾಯ, ನನ್ನ ಮದುವೆಯಲ್ಲಿ ನನ್ನಪ್ಪ ಕೊಟ್ಟಿದ್ದು….ಅಪ್ಪಯ್ಯ ಕುಡ್ಲದ ರಥಬೀದಿಯಲ್ಲಿರುವ ನರಸಿಂಹಾಚಾರಿಯಲ್ಲಿ ಮಾಡಿಸಿದ್ದು. ಅದರ ಮೈಮೇಲಿನ ಹೂಬಳ್ಳಿಯನ್ನು ಈ ಕಾಲದಲ್ಲಿ ಯಾವ ಆಚಾರಿ ತಾನೆ ಮಾಡಿಯಾನು…’ ಎಂದು ಹೇಳಿಯೇ ಮುಸುರೆ ಪಾತ್ರೆಯ ಜೊತೆಗೆ ಅದನ್ನೂ ಸೇರಿಸಿ ಇಟ್ಟಿದ್ದನ್ನು ಗುಡ್ಡ ಇದೀಗ ನೆನಪಿಸಿಕೊಂಡ. ಆದರೇನು ಆತ ನೆನಪಿಸಿಕೊಂಡದ್ದೇ ಬಂತು. ಕುದುಪ ಅದೆಷ್ಟು ಬಾರಿ ಹೊಳೆಯೊಳಗೆ ಮುಳುಗಿ ಮೇಲೆದ್ದರೂ ಬೆಳ್ಳಿಲೋಟವನ್ನು ಹೊಳೆ ಬಿಟ್ಟುಕೊಡುತ್ತಿಲ್ಲ. ಅಂತೂ ಬೆಳ್ಳಿಲೋಟ ಹೊಳೆಯ ಒಡಲಿಂದ ಹೊರಬರಲಿಲ್ಲ. ಅಪ್ಪ ಮಗ ಇಬ್ಬರೂ, ಆಗ ತಾನೆ ಅಲ್ಲಿಗೆ ಬಂದ ಚಿನ್ನಮ್ಮನ ಜತೆ ಸೇರಿ ಸಾಕಷ್ಟು ಕಣ್ಣೀರನ್ನು ಹೊಳೆಯ ನೀರಿಗೆ ಸೇರಿಸಿದರೂ ಹೊಳೆಯಿಂದ ಬಂದ ಉತ್ತರ ಒಂದೆ-ಬೆಳ್ಳಿಲೋಟ ಇಲ್ಲ ಎಂಬುದೇ. ಭೂಮಿ ಆಕಾಶ ಒಂದಾಗುವಂತೆ ಮತ್ತೆ ಮಳೆ ಜಡಿಯತೊಡಗಿದಾಗ ಕುದುಪ ಅಸಹಾಯಕನಾಗಿ ಧಣಿಗಳ ಅಂಗಳಕ್ಕೆ ಬಂದು ಬೆಳ್ಳಿಲೋಟದ ವಿಷಯ ತಲಪಿಸಿದ್ದ. ಮಳೆಯ ಆರ್ಭಟದ ಜತೆ ಧಣಿಯರ ಆರ್ಭಟವೂ ಏರಿತು. ಆ ಆರ್ಭಟದ ಜತೆಗೆ ಕುದುಪನ ಕುಟುಂಬವೆ ಬೆಳ್ಲಿಲೋಟವನ್ನು ಲಪಟಾಯಿಸಿದ್ದು ಎಂಬ ಅಪವಾದವೂ ಬೀಸಿಬಂತು. ಕುದುಪ ಧಣಿಗಳ ಕಾಲು ಹಿಡಿದು ನಡೆದ ನಿಜಸ್ಥಿತಿ ವಿವರಿಸಿದರೂ ಅವರು ಒಪ್ಪಲೊಲ್ಲರು. ಧಣಿಯವರು ಎಂದಾದರೂ ಒಕ್ಕಲ ಮಕ್ಕಳನ್ನು ನಂಬಿದ್ದುಂಟೆ?

‘ಇದೆಲ್ಲ ಸಾಕು ಮಾರಾಯ, ಯಾವತ್ತೂ ನಮ್ಮ ಮುಸುರೆ ಪಾತ್ರೆಗಳನ್ನು ನುಂಗದ ಹೊಳೆ ಇವತ್ತು ನನ್ನಪ್ಪ ಮದುವೆಯಲ್ಲಿ ಕೊಟ್ಟ ಬೆಳ್ಳಿಲೋಟವನ್ನು ನುಂಗಿತನಾ…’ ಎಂದು ಒಳಮನೆಯ ದಾರಂದಕ್ಕೆ ಆತು ನಿಂತು ಧಣಿಪತ್ನಿಯವರು ಚೀರಿದಾಗ ಕುದಪನ ಬಾಯಿ ಕಟ್ಟಿ ಹೋಗಿತ್ತು.

ಧಣಿಗಳು ಗುಡ್ಡನ ಬಾಯಿ ಬಿಡಿಸಲು ಆತನ ಮೈಮೇಲಿನ ಚರ್ಮ ಸುಲಿಯುವುದೊಂದೇ ಬಾಕಿ. ಅಂಗಳದ ಹೊಂಗಾರೆ ಮರಕ್ಕೆ ಆತನನ್ನು ಬಿಗಿದು ಆ ಮಳೆಯಲ್ಲೇ ತೆಂಗಿನ ಕೊತ್ತಳಿಗೆಯಲ್ಲಿ ಬಡಿದೇ ಬಡಿದರು. ಚಿನ್ನಮ್ಮನಿಗೆ ತನ್ನ ಕರುಳ ಕುಡಿಯ ಚೀರಾಟ ನರಳಾಟ ನೋಡಲಾಗಲಿಲ್ಲ. ತಟ್ಟನೆ ‘ನಮ್ಮ ಊರ ಕೋಡ್ದಬ್ಬು ದೈವದ ಮೇಲೆ ಆಣೆಯಿದೆ….ಇನ್ನು ನನ್ನ ಮಗನ ಮೇಲೆ ಕೈಮಾಡಿದ್ದಲ್ಲಿ…’ ಎಂದು ಅಸಹಾಯಕತನದಿಂದ ಕಿರಿಚುತ್ತ ಧಣಿಗಳ ಕಾಲಿಗಡ್ಡ ಬಿದ್ದು, ತಾನು ಆ ಬೆಳ್ಳೊಲೋಟದ ಹಣವನ್ನು ವರ್ಷಾನುಗಟ್ಟಲೆ ಪಡಿಯಿಲ್ಲದೆ ನಿಮ್ಮಲ್ಲಿ ದುಡಿದು ತೀರಿಸುವೆನೆಂದು ಅಳುತ್ತಾ ಬೇಡಿಕೊಂಡಳು. ಧಣಿಗಳ ಕೈಯಿಂದ ಕೊತ್ತಳಿಗೆ ಕೆಳಗುರುಳಿತು. ಮುಂದಿನ ಮೂರು ಬೇಸಿಗೆ ರಜದವರೆಗೆ ಚಿನ್ನಮ್ಮನ ದುಡಿತಕ್ಕೆ ಪಡಿಯಿಲ್ಲ-ಎಂಬ ಕರಾರಿನನ್ವಯ ಗುಡ್ಡ ಬಂಧಮುಕ್ತನಾದ.

ಧಣಿಗಳ ಬೆಳ್ಳಿಲೋಟವನ್ನು ಎಂದು ಆ ಹೊಳೆ ನುಂಗಿತ್ತೋ ಅಂದಿನಿಂದ ಚಿನ್ನಮ್ಮ ಒಂಥರಾ ಹುಚ್ಚಳಾಗಿದ್ದಾಳೆ. ಆ ಘಟನೆ ನಡೆದು ಇಂದಿಗೆ ನವಮಾಸಗಳು ಉರುಳಿವೆ. ಬೆಂಕಿಯುಗುಳುವ ವೈಶಾಖ ಮಾಸ ಕಾಲಿಟ್ಟಿದೆ.

ಇಂದು ವೈಶಾಖಮಾಸದ ಮೂರನೇ ದಿನ. ಮುಂಜಾನೆ ಚಿನ್ನಮ್ಮ ಎಂದಿನಂತೆ ಹೊಳೆಯ ಅಂಚಿನಲ್ಲಿ ಕೂತು ಪಾತ್ರೆ ತಿಕ್ಕುತ್ತಾ ಹೊಳೆಯ ಮನೆಹಾಳು ಬುದ್ಧಿಯನ್ನು ನಿಂದಿಸುತ್ತಿದ್ದಾಳೆ. ಅಷ್ಟರಲ್ಲಿ ಧಣಿಗಳು ಕುದುಪನ ಜತೆಗೂಡಿ ಬಂದು ಆ ದಿನದ ಕೆಲಸ ಕಾರ್‍ಯಗಳ ಬಗ್ಗೆ ಮಾತೆತ್ತಿದ್ದಾರೆ. ಕುದುಪ ಸೊಂಟದಲ್ಲಿನ ಕರಿದಾರಕ್ಕೆ ಕೋಮಣದ ತುಂಡೊಂದನ್ನು ಸಿಲುಕಿಸಿ, ತಲೆಗೊಂದು ಎಲೆವಸ್ತ್ರ ಬಿಗಿಯುತ್ತಾ ಧಸ್ಣಿಗಳಿಂದ ಉದುರುವ ಮಾತುಗಳನ್ನು ಹೆಕ್ಕಿಕೊಳ್ಳುವ ಭಂಗಿಯಲ್ಲಿ ನಿಂತಿದ್ದಾನೆ. ಕಾದು ಬತ್ತಿರುವ ಹೊಳೆಯಿಂದ ಹೂಳೆತ್ತಿ ತಂದು ತೆಂಗಿನ ತೋಟಕ್ಕೆ ಹಾಕಬೇಕೆಂದು ಧಣಿಗಳು ಕುದುಪನಿಗೆ ಸೂಚನೆ ನೀಡುತ್ತಿದ್ದರು. ಧಣಿಗಳ ಮಾತು ಚಿನ್ನಮ್ಮನ ಕಿವಿಗೂ ತಲುಪುತ್ತಿದೆ. ಆದರೆ ಅದು ತನಗಲ್ಲ ತನ್ನ ಕಿವಿ ಬೀಳಿನ ಬುಗುಡಿಗೆ ಎಂಬಂತೆ ತಾನು ಧಣಿಗಳ ಮನೆಯ ಮುಸುರೆ ಪಾತ್ರೆ ತಿಕ್ಕುತ್ತಾ ಹೊಳೆಯ ಬಗ್ಗೆಯೇ ತಲೆ ಕೆಡಿಸಿಕೊಳ್ಳುತ್ತಿದ್ದಳು.

ಚಿನ್ನಮ್ಮ ಕೊನೆಗೂ ಮುಸುರೆ ಕೆಲಸವನ್ನೆಲ್ಲ ಮುಗಿಸಿ ತನ್ನ ಗುಡಿಸಲಲ್ಲಿ ಒಣ ಮೀನಿನ ಚಟ್ನಿಯಲ್ಲಿ ತಂಗಳನ್ನ ಉಂಡು ಬಂದು ಹೂಳು ಹೊರುವ ಕೆಲಸದಲ್ಲಿ ತೊಡಗಿಕೊಂಡಳು. ಸುಡುವ ಸೂರ್‍ಯನಡಿ ಹೂಳೆತ್ತುತ್ತಾ ತಾನು ಕರಟುತ್ತಿರುವಾಗ ತೋಟದ ನೆರಳಲ್ಲಿ ಕುಳಿತು ಧಣಿಯವರು ಕೊಡುವ ಸೂಚನೆಗಳಿಂದ ಚಿನ್ನಮ್ಮನ ಸಿಟ್ಟಿನುರಿಗೆ ಮತ್ತಷ್ಟು ತುಪ್ಪ ಸುರಿದಂತಾಗುತ್ತಿತ್ತು. ಚಿನ್ನಮ್ಮ ಅಸಹನೆಯಿಂದ ಕನಲುತ್ತಾ, ನೆತ್ತಿ ಮೇಲೆ ಬೆಂಕಿಯುಗುಳುತ್ತಿದ್ದ ಸೂರ್‍ಯನನ್ನೂ ಧಣಿಯನ್ನೂ ಶಪಿಸುತ್ತಾ ಹೂಳು ಹೊರುತ್ತಿದ್ದಳು. ಕುದುಪ ಹೂಳು ತುಂಬಿ ಕೊಡುತ್ತಿದ್ದ, ಚಿನ್ನಮ್ಮ ಅದನ್ನು ಹೊತ್ತು ತಂದು ತೆಂಗಿನ ಬುಡಕ್ಕೆ ಎಸೆಯುತ್ತಿದ್ದಳು.

ಹೂಳೆತ್ತುವ ಕೆಲಸ ಹಾಗೆಯೇ ಮುಂದುವರೆದಿತ್ತು. ಮೂಳೆ ಮುರಿದು ಹೋಗುವಂಥಹ ಕೆಲಸವದು. ಕುದುಪ ಸುಸ್ತಾದ. ಒಂದರೆಕ್ಷಣ ಅಲ್ಲೇ ನೀರೊಳಗೆ ಕುಸಿದು ಕುಳಿತ. ನೆರಳಲಿದ್ದ ಧಣಿಗಳಿಗೆ ಸಿಟ್ಟಿನಿಂದ ಪಿತ್ತವೇರಿದಂತಾಯ್ತು. ‘ಎದ್ದೇಳೋ ಮೂರ್‍ಕಾಸಿನವ….ಪಡಿ ಅಳೆಯುವಾಗ ಪಾವಕ್ಕಿ ಕಮ್ಮಿ ಮಾಡಿದರೆ ಸುಮ್ಮನೆ ಇರ್‍ತೀಯೇನೋ ನೀನು?’ ಎಂದು ಸಿಡುಕಿದರು. ಚಿನ್ನಮ್ಮನಿಗಂತೂ ಪಡಿಯಿಲ್ಲದ ಈ ದುಡಿತದ ಬಗ್ಗೆ ಇನ್ನಿಲ್ಲದಂತಹ ಅಸಮಧಾನವಿದೆ. ಒಂದೆಡೆ ಕಳ್ಳತನದ ಅಪವಾದ, ಮತ್ತೊಂದೆಡೆ ಕಠಿಣ ಶ್ರಮದ ದುಡಿತಕ್ಕೂ ಬೆವರಿಗೂ ಪ್ರತಿಫಲವಿಲ್ಲ. ಚಿನ್ನಮ್ಮ ತನ್ನ ಭಾರದ ಒಡಲನ್ನು ಕಣ್ಣೀರು ಜಿನುಗಿಸಿಕೊಂಡು ಮೆದುಗೊಳಿಸಿಕೊಂಡಳು. ಕುದುಪ ಧಣಿಯವರ ಸಿಡುಕು ಬೈಗಳಿಗೆ ಬೆದರಿ ಎದ್ದುನಿಂತು ಮತ್ತೆ ಕೆಲಸದಲ್ಲಿ ಮಗ್ನನಾದ. ಗಂಡ ಹೆಂಡಿರಿಬ್ಬರೂ ಹೊಳೆಗೆ ಬೆವರಿನ ಮಳೆ ಸುರಿಸಿದರು. ಕುದುಪನಂತೂ ಆ ಬಿರುಬಿಸಿಲಿನ ಝಳಕ್ಕೆ ಕುಸಿಯುವಂತಾದ. ಆದರೂ ಧಣಿಗಳ ಭಯದಿಂದ ಕುಸಿಯದಾದ. ದೇಹದ ಮೂಲೆಮೂಲೆಗಳಿಂದ ಒಂದಷ್ಟು ತಾಕತ್ತನ್ನು ಸೋಸಿ ತಂದು ಮತ್ತೆ ಬುಟ್ಟಿಗೆ ಹೂಳು ತುಂಬತೊಡಗಿದ. ಬುಟ್ಟಿ ತುಂಬತೊಡಗಿತು…..ಇನ್ನೇನು ಹೂಳು ತುಂಬಿದ್ದ ಬುಟ್ಟಿಯನ್ನು ಚಿನ್ನಮ್ಮನ ತಲೆಗೇರಿಸಬೇಕೆನ್ನುವಷ್ಟರಲ್ಲಿ ನೋಡುತ್ತಾನೇನು! ಅವ ಮೂರ್ಛೆ ಬೀಳುವಂತಾದ.

ನವಮಾಸಗಳ ಕಾಲ ಹೊಳೆಯ ಉದರದಲ್ಲಿ ಅಡಗಿದ್ದ ಧಣಿಗಳ ಬೆಳ್ಳಿಲೋಟದ ಮಂಕುಮೂತಿ ಕಾಣಿಸುತ್ತಿದೆ! ತಾನೀ ದಂಪತಿಗಳನ್ನು ಅಪವಾದದ ಕುಣಿಕೆಯೊಳಗೆ ಸಿಲುಕಿಸಿ ನದಿಯ ಉದರದಲ್ಲಿ ಅಡಗಿಕೊಂಡೆನಲ್ಲಾ-ಎಂಬ ಪಶ್ಚಾತ್ತಪದಲ್ಲದು ಮುಖ ಮರೆಮಾಡಿಕೊಂಡಿದೆಯೇನೋ ಎಂಬಂತೆ ಕೆಸರೊಳಗೆ ದೇಹ ಹುದುಗಿಸಿಕೊಂಡಿದ್ದ ಬೆಳ್ಳಿಲೋಟವನ್ನು ಕುದುಪ ನಿಧಾನಕ್ಕೆ ಬುಟ್ಟಿಯಿಂದ ಹೊರಗೆಳೆದ. ಇನ್ನೂ ಸೂತಕ ಕಳೆಯ ಹಸಿ ಮಗುವನ್ನು ಮೀಯಿಸುವಂತೆ ನಿಧಾನಕ್ಕೆ ಹೊಳೆಯ ನೀರಲ್ಲಿ ಆ ಬೆಳ್ಳಿಲೋಟವನ್ನು ತೊಳೆಯತೊಡಗಿದ. ಈ ಲೋಟದಿಂದಾಗಿ ತಾನೆಷ್ಟು ಅಪಮಾನದ ಮಾತುಗಳನ್ನು ಆ ಧಣಿಪತ್ನಿಯವರ ಕೊಳಕು ಬಾಯಿಂದ ಕೇಳಿಬಿಟ್ಟೆ…ಎಂದು ಕುದುಪ ಹನಿಗಣ್ಣಾಗಿಯೇ ಆ ಲೋಟವನ್ನು ತೊಳೆದ. ಹೊಳೆಯ ಹೂಳೊಳಗೆ ಅವಿತು ತನ್ನ ಬಣ್ಣ-ಗಾಂಭೀರ್‍ಯ ಕಳೆದುಕೊಂಡಂತಿದ್ದ ಬೆಳ್ಳಿಲೋಟಕ್ಕೆ ಇದೀಗ ಕುದುಪನಿಂದಾಗಿ ಜೀವ ಬಂದಂತಾಯ್ತು.

ತೋಟದಂಚಿನ ನೆರೆಳಲ್ಲಿ ಕುಳಿತು ಒಕ್ಕಲ ಮಕ್ಕಳ ಬೆವರಧಾರೆಯನ್ನೇ ದಿಟ್ಟಿಸುತ್ತಿದ್ದ ಧಣಿಗಳನ್ನು ಬೆಳ್ಳಿಲೋಟವು ಗಮನಿಸಿತು. ಧಣಿಗಳ ಮಾತ್ರ ಆ ಲೋಟವನ್ನು ಗಮನಿಸುವಂತಿರಲಿಲ್ಲ. ಅವರು ಚಿನ್ನಮ್ಮನ ಹಣೆಯಿಂದ ಕುಂಕುಮದೊಂದಿಗೆ ಕೆಳಗಿಳಿಯುತ್ತಿದ್ದ ಬೆವರಿನ ದಾರಿಯನ್ನೆ ಗಮನಿಸುತ್ತಿದ್ದರು. ಕುದುಪ ಹೂಳು ತುಂಬಿದ ಬುಟ್ಟಿಯನ್ನೆತ್ತಿ ಚಿನ್ನಮ್ಮನ ತಲೆಗೇರಿಸದೆ ನೀರೊಳಗೇ ನಿಂತು….ಕೂತು ಕಾಲ ಕಳೆಯುವ ಇನ್ನೇನೋ ಮಸಲತ್ತು ನಡೆಸುತ್ತಿರುವುದನ್ನು ಕಂಡು ಧಣಿಗಳು ಮತ್ತೆ ಸಿಟ್ಟಾದರು. ಆದರೂ ಇದೇನೊ ಹೊಸ ಮಸಲತ್ತು ಇರಬೇಕೆಂದು ಕಣ್ಣು ಕಿರಿದುಗೊಳಿಸಿ ಆತನತ್ತಲೇ ದಿಟ್ಟ ನೆಟ್ಟರು.

ಕುದುಪ ಯಾವುದೋ ಒಂದು ಕುಲಗೆಟ್ಟ ಲೋಟವನ್ನು ನೀರೊಳಗೆ ಅದ್ದಿ ತೆಗೆದು ಮಣಗಟ್ಟಲೆ ಕೊಳೆಗತ್ಟಿದ್ದ ತನ್ನ ಎಲೆವಸ್ತ್ರದಲ್ಲಿ ಒರೆಸಿ ಚಿನ್ನಮ್ಮನ ಕೈಗೆ ಕೊಡುವುದನ್ನು ಧಣಿಗಳು ಮೌನವಾಗಿಯೇ ದಿಟ್ಟಿಸಿದರು. ಮಾನಗೆಟ್ಟ ಈ ಹುಚ್ಚು ಹೊಳೆ ಯಾವುದೋ ಮಳೆಗಾಲದಲ್ಲಿ ಯಾರದ್ದೋ ಮನೆ, ಮಠ ಮುಳುಗಿಸಿ ಹೊತ್ತು ತಂದಿರುವ ಲೋಟವಿರಬೇಕದು ಎಂದು ಯೋಚಿಸಿದ ಧಣಿಗಳು, ಆ ಹಾಳು ಲೋಟದ ಜಗತ್ತಲ್ಲೆ ಮುಳುಗಿಹೋದ ಗಂಡಹೆಂಡಿರ ಚಲನವಲನವನ್ನು ಕಿರಿದು ಕಣ್ಣಿಂದ ಮತ್ತಷ್ಟು ಗಮನಿಸತೊಡಗಿದರು. ನಿಧಾನಕ್ಕೆ ಕೂತಲಿಂದ ಎದ್ದುಬಂದರು.

ಹಾಗೇ ಸದ್ದಿಲ್ಲದೆ ಬಂದ ಧಣಿಗಳು ನೆರಳಲ್ಲೇ ನಿಂತು ತನ್ನೆದುರು ನಡೆಯುತ್ತಿದ್ದ ‘ವ್ಯಾಪಾರ’ವನ್ನು ಕಿರುಗಣ್ಣಿನಿಂದ ಗಮನಿಸುತ್ತಿದ್ದಂತೆ ಅವರ ಎದೆ ಬಡಿತದ ಲಯ ತಪ್ಪತೊಡಗಿತು. ಅವರ ಒಡಲ ಸಮಸ್ತ ವ್ಯವಹಾರಗಳು ಒಂದರೆ ಗಳಿಗೆ ಸ್ತಬ್ಧಗೊಂಡಂತಾಯ್ತು! ಚಿನ್ನಮ್ಮ ತನ್ನ ಕೈಯಲ್ಲಿದ್ದ ಲೋಟ ತಿರುಗಿಸುತ್ತಿದ್ದಂತೆ ಅವರನ್ನೇ ಆಕೆ ತಿರುಗಿಸಿದಂತಾಯ್ತು! ಕಂಠದಲ್ಲಿ ಬಳ್ಳಿ ಬಿಟ್ಟ ಆ ಬೆಳ್ಳಿಲೋಟ ಧಣಿಯವರಿಗೆ ನಿಧಾನಕ್ಕೆ ತನ್ನ ಪರಿಚಯ ಮಾಡಿಸತೊಡಗಿತ್ತು. ಹೌದು! ಅದೇ ಬೆಳ್ಳಿಲೋಟ. ಅದರ ಕಂಠ ಏಳು ಎಸಳುಗಳ ದೊಡ್ಡ ಹೂವಿನಂತಿದೆ. ಧಣಿಗಳಿಗೆ ಲೋಟದ ಪರಿಚಯ ಪೂರ್ಣವಾಯ್ತು. ಎಷ್ಟೆಂದರೂ ಕಳೆದ ನಲವತ್ತು ವಸಂತಗಳಿಂದ ಆ ಬೆಳ್ಳಿಲೋಟ ಧಣಿಗಳ ಒಡನಾಟದಲ್ಲಿರಲಿಲ್ಲವೆ! ಧಣಿಗಳ ದಾಂಪತ್ಯ ಜೀವನದ ಎಲ್ಲ ಪ್ರಮುಖ ಹಂತಗಳಲ್ಲೂ ಅದು ಮೂಕಸಾಕ್ಷಿಯಾಗಿರಲಿಲ್ಲವೆ?

ಧಣಿಗಳು ಆ ಬೆಳ್ಳಿಲೋಟವನ್ನೇ ದಿಟ್ಟಿಸಿದರು. ಚಿನ್ನಮ್ಮಳೂ ಲೋಟವನ್ನು ಹಾಗೇ ತಿರುಗಿಸಿ ನೋಡುತ್ತಲೇ ಅದರ ಪರಿಚಯ ಮಾಡಿಕೊಂಡಳು. ಆಕೆಯೂ ಆ ಬೆಳ್ಳಿಲೋಟವನ್ನು ಅದೆಷ್ಟು ಬಾರಿ ನೊರೆಕಾಯಿಯಿಂದ ಮೀಯಿಸಿಲ್ಲ. ಹಾಗೆ ಮೀಯಿಸುವಾಗಲೆಲ್ಲ ಅದರ ಮೈಮೇಲೆ ಬಿಟ್ಟಿರುವ ಬಳ್ಳಿಯ ಚಂದವನ್ನು ಅದೆಷ್ಟು ಬಾರಿ ಧಣಿಪತ್ನಿಯವರಲ್ಲಿ ಹೊಗಳಿಲ್ಲ. ಹೌದು, ಅದೇ….ಕಂಠದಲ್ಲೆಲ್ಲ ಬಳ್ಳಿ ಬಿಟ್ಟ ಚಂದದ ಲೋಟ! ಚಿನ್ನಮ್ಮನಿಗೆ ಆ ಲೋಟವನ್ನು ಅದೆಷ್ಟು ನೋಡಿದರೂ ಸಾಲದು. ಧಣಿಗಳಿಗೆ ಕಾಣುವಂತೇ ಎತ್ತರಿಸಿ ಹಿಡಿದು ನೋಡಿಯೇ ನೋಡಿದಳು.

ಕುದುಪನೂ ಆ ಬೆಳ್ಳೊಲೋಟವನ್ನೇ ಗಮನಿಸುತ್ತಿದ್ದ. ಆತನಿಗಂತೂ ಆ ಲೋಟದ ದರ್ಶನವಾದೊಡನೆ ಬಿಸಿಲಿನಿಂದ ಜೀವ ಕಳೆದುಕೊಂಡಂತಿದ್ದ ದೇಹಕ್ಕೆ ಮತ್ತಷ್ಟು ಹೊಸ ಚೈತನ್ಯ ಬಂದಂತಾಗಿತ್ತು. ನೆತ್ತಿ ಮೇಲೆ ಬಿಸಿಲು ಕಾರುತ್ತಿರುವ ಸೂರ್‍ಯ ಇನ್ನಷ್ಟು ಬೇಕಿದ್ದರೆ ಕಾರಲಿ….ಎಂಬ ಉಢಾಫೆಯೂ ಆತನಲ್ಲಿ ಮೈತಳೆದು ಬಂದಂತಿತ್ತು. ಆತ ಚಿನ್ನಮ್ಮನ ಕೈಲಿದ್ದ ಬೆಳ್ಳಿಲೋಟವನ್ನೊಮ್ಮೆ ಧಣಿಯವರ ಪರಿಧಿಗೆ ಒಪ್ಪಿಸಲು ಕಾತುರನಾಗಿ ಆ ಲೋಟ ಚಿನ್ನಮ್ಮನಿಂದ ತನ್ನ ಕೈಗೆ ಹಸ್ತಾಂತರಗೊಳ್ಳುವ ಕ್ಷಣಕ್ಕಾಗಿ ಕಾಯುತ್ತಿದ್ದ.

ಹಾಗೆ ಕಾಯುವ ಪ್ರತೀಕ್ಷಣವೂ ಆತನಿಗೆ ಅತೀ ದೀರ್ಘವಾಗಿ ಪರಿಣಮಿಸತೊಡಗಿತ್ತು. ಕ್ಷಣಕ್ಷಣಕ್ಕೂ ಆತನ ಚಡಪಡಿಕೆ ಏರುತ್ತಿದ್ದರೂ ಆ ಬಗ್ಗೆ ಚಿನ್ನಮ್ಮನಿಗೆ ಲಕ್ಷ್ಯವಿಲ್ಲ. ಲೋಟದ ಚಂದವನ್ನು‌ಉ‌ಉ ಆಕೆ ಮತ್ತೆ ಮತ್ತೆ ತಿರುಗಿಸಿ ನೋಡುತ್ತಿದ್ದಂತೆ….ಆಕೆಯ ಒಡಲಲ್ಲೂ ಅದೆಷ್ಟೊ ಭಾವನೆಗಳು ಗಿರಕಿ ಹೊಡೆಯತೊಡಗಿದ್ದವು. ಇದೇ ಲೋಟವಲ್ಲವೆ….ತನ್ನ ಬೆವರಿನ ಸೆಲೆ ಕಳೆದದ್ದು. ಕಳ್ಳತನದ ಕಿರೀಟವನ್ನು ತನ್ನ ಮುರುಕಲ ಗುಡಿಸಲ ಚಾವಣಿಗೆ ಜೋಡಿಸಿದ್ದು! ಥೂ! ಬೆಳ್ಳಿಯದ್ದಾದರೇನಂತೆ….ಬುದ್ಧಿ ಮಣ್ಣಿಗಿಂತಲೂ ಬುರ್ನಾಸು, ಮೂರ್‍ಕಾಸಿನದ್ದು! ಪಟ್ಟದ ಮೇಲಿನ ಕತ್ತಿಗೆ ಚಟ್ಟದಲ್ಲಿರುವವನ ಮೇಲೆ ದಿಟ್ಟಿ ಎಂದಿಗೂ ಸಲ್ಲ. ಜಾತಿಹಾವಿಗ್ಯಾಕೆ ಎರೆಹುಳದಂತೆ ಕೆಸರು ಕೆದಕುವ ಕೆಲಸ! ಈ ಬೆಳ್ಳಿಲೋಟದಿಂದಾಗಿ ತನ್ನ ಕುಟುಂಬ ಇದುವರೆಗೆ ಉಂಡ ನೋವು, ಅವಮಾನ, ಪಟ್ಟಪಾಡು ಪರಿತಾಪಗಳೆಲ್ಲ ಚಿನ್ನಮ್ಮನ ಚಿತ್ತದಿಂದ ದಿಗಿಣಿ ತೆಗೆದು ಮೇಲೆದ್ದು ಬಂದು ಆಕೆಯ ಯೋಚನಾಶಕ್ತಿ, ವಿವೇಚನಾ ಶಕ್ತಿಯನ್ನೆ ಕ್ಷಣಕಾಲ ಕಸಿದುಕೊಂಡವು. ಒಡಲಪಿತ್ತ ಒಂದರೆ ಕ್ಷಣ ಕೆರಳಿದಂತಾಯಿತು. ಆ ಸಂಕಟವುಂಡ ಜೀವಕ್ಕೆ ಏನನ್ನಿಸಿತೋ ಆ ಕ್ಷಣ! ಚಿನ್ನಮ್ಮ ತಟ್ಟನೆ ಪೂರ್ವಾಭಿಮುಖವಾಗಿ ನಡೆದಳು ಆ ಹೊಳೆಯಲ್ಲೆ. ಹತ್ತು ಹೆಜ್ಜೆ ಹಾಕಿ ಹನ್ನೊಂದನೇ ಹೆಜ್ಜೆಯಡಿ ನಿಂತವಳು….ಅತ್ತ ದೂರದಲ್ಲಿದ್ದ ಹೊಳೆಯ ಆಳ ಮಡುವತ್ತ ಬೆಳ್ಳಿಲೋಟವನ್ನು ಎಸೆದೆ ಬಿಟ್ಟಳು! ಕಂಠದಲ್ಲಿ ಬಳ್ಳಿ ಹೊತ್ತ ಆ ಬೆಳ್ಳಿಲೋಟ ತೋಟದಂಚಿನ ನೆರಳಲ್ಲಿ ನಿಂತು ತನ್ನನ್ನೇ ದಿಟ್ಟಿಸುತ್ತಿದ್ದ ಧಣಿಯವರ ಮೋರೆಯ ಅಸಂಖ್ಯ ಭಾವನೆಗಳನ್ನು ಓದುತ್ತಾ, ಆಳದ ಮಡುವಲ್ಲಿ ನಿಧಾನಕ್ಕೆ ಮುಳುಗಿ ಹೋಯ್ತು. ಚಿನ್ನಮ್ಮ ಹೊಳೆಯ ನೀರಲ್ಲೊಮ್ಮೆ ಸಂಪೂರ್ಣ ಮುಳುಗಿ ಮತ್ತೆ ಎದ್ದು ನಿಂತಳು. ನೆರಳಲ್ಲಿದ್ದ ಧಣಿಯವರು ತಾನು ಹೊದ್ದುಕೊಂಡಿದ್ದ ವಲ್ಲಿಯಿಂದ ಮುಖಕ್ಕೆ ಗಾಳಿ ಬೀಸಿಕೊಂಡರು.
*****
‘ಭಾವನಾ’ ೧೯೯೯

ಕೀಲಿಕರಣ: ಸೀತಾಶೇಖರ್ ಸಹಾಯ: ಸತ್ಯ, ವಾಸು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.