ಪರಾವಲಂಬಿ – ೧

ಪತ್ತೇದಾರೀ ಕಿರುಕಾದಂಬರಿ

-ಒಂದು-

ನಿನ್ನೆ ಸಂಜೆ ತಮಿಳುನಾಡಿನ ಉತ್ತರ ತೀರಕ್ಕೆ ಅಪ್ಪಳಿಸಿದ ಭೀಷಣ ಚಂಡಮಾರುತ ಪಶ್ಚಿಮದಲ್ಲಿ ಒಳನಾಡಿನತ್ತ ಸಾಗಿದಂತೆ ತನ್ನ ತೀವ್ರತೆಯನ್ನು ಕಳೆದುಕೊಳ್ಳತೊಡಗಿತ್ತು. ಅದರ ಪ್ರಭಾವದಿಂದಾಗಿ ಕಪ್ಪು ಮೋಡಗಳು ಇಡೀ ಮೈಸೂರು ನಗರವನ್ನು ಬೆಳಗಿನಿಂದಲೂ ಸೂತಕದಂತೆ ಮುಸುಕಿಕೊಂಡಿದ್ದವು. ಮಧ್ಯಾಹ್ನ ಆರಂಭವಾದ ಮಳೆ ಒಂದು ಒಂದೂವರೆ ಗಂಟೆಯವರೆಗೆ “ಧೋ” ಎಂದು ಸುರಿದು ನಂತರ ಕ್ಷೀಣಗೊಂಡು ಸಣ್ಣಗೆ ರಾಗ ಎಳೆಯತೊಡಗಿ ಮುಂದಿನ ಅರ್ಧ ಗಂಟೆಯಲ್ಲಿ ಅದೂ ನಿಂತುಹೋಗಿತ್ತು. ಇನ್ನು ಮಳೆ ಬರುವುದಿಲ್ಲ ಅಂದುಕೊಳ್ಳುತ್ತಿದ್ದಂತೇ ರಾತ್ರಿಯ ಊಟದ ಹೊತ್ತಿಗೆ ಸಣ್ಣಗೆ ಆರಂಭವಾದ ಅದು ಸಮಯ ರಾತ್ರಿ ಹನ್ನೊಂದಾದರೂ ನಿಂತಿರಲಿಲ್ಲ. ಮಳೆಯ ಜತೆ ಕೊರೆವ ಚಳಿ. ಅಲ್ಲದೇ ಮಳೆ ಆರಂಭವಾದ ಎರಡು ನಿಮಿಷಗಳಲ್ಲಿ ಮಾಯವಾದ ಕರೆಂಟ್ ಇಡೀ ನಗರವನ್ನು ಕತ್ತಲೆಯ ಕೂಪಕ್ಕೆ ತಳ್ಳಿತ್ತು.
ಪುಸ್ತಕದಿಂದ ತಲೆಯೆತ್ತಿ ಒಮ್ಮೆ ಧೀರ್ಘವಾಗಿ ಆಕಳಿಸಿ ಕಣ್ಣು ಮುಚ್ಚಿದಳು ಮಾನ್ಸಿ. ಬೆಳಗಿನಿಂದ ಸತತವಾಗಿ ಓದಿದ್ದಲ್ಲದೇ ರಾತ್ರಿ ಎಮರ್ಜೆನ್ಸಿ ಲ್ಯಾಂಪ್‌ನ ಬೆಳಕಿನಲ್ಲಿ ಮೂರು ಗಂಟೆಗಳಷ್ಟು ಕಾಲ ಓದಿದ್ದಳು. ನಾಳಿನ ಪರೀಕ್ಷೆಗೆ ಅಂತಹ ಓದಿನ ಅಗತ್ಯವಿತ್ತು. ಸೈಕಾಲಜಿಯ ಮೂರನೆಯ ಪೇಪರ್ ಅದು. ಅದು ಮುಗಿದರೆ ಬಿ ಎ ಮುಗಿದಂತೆ.
ಕಣ್ಣು ತೆರೆದು ಪುಸ್ತಕದ ತೆರೆದ ಪುಟದತ್ತ ನೋಟ ಹರಿಸಿದಳು. ಬೆರಳುಗಳು ನಿಧಾನವಾಗಿ ಆಡಿ ಇನ್ನೂ ಓದಲು ಉಳಿದಿದ್ದ ಪುಟಗಳ ಎಣಿಕೆ ನಡೆಸಿದವು. ತುಟಿಗಳು ಬಿಗಿದುಕೊಂಡವು.
ಇನ್ನೂ ಧೀರ್ಘವಾಗಿ ಉಳಿದ ಮೂವತ್ತು ಪುಟಗಳು…
ಕಣ್ಣುರೆಪ್ಪೆಗಳನ್ನು ಬಲವಂತದಿಂದ ತೆರೆದು ಅಕ್ಷರಗಳ ಮೇಲೆ ಕೀಲಿಸಿದಳು. ಎರಡು ಸಾಲು ಓದುವಷ್ಟರಲ್ಲಿ ರೆಪ್ಪೆಗಳು ತಾವಾಗಿಯೇ ಮುಚ್ಚಿಕೊಂಡವು. ತೆರೆದ ಪುಸ್ತಕದ ಮೇಲೇ ತಲೆಯಿಟ್ಟಳು…
ಇನ್ನು ಓದು ಸಾಕು. ಬೆಳಿಗ್ಗೆ ಬೇಗನೆ ಎದ್ದು ಉಳಿದ ಪುಟಗಳತ್ತ ಒಮ್ಮೆ ಕಣ್ಣಾಡಿಸಿದರಾಯಿತು.
ಮೇಜಿನ ಮೂಲೆಯಲ್ಲಿದ್ದ ಪುಟ್ಟ ಗಡಿಯಾರದತ್ತ ನೋಟ ಹಾಯಿಸಿದಳು. ಸಮಯ ಹನ್ನೊಂದೂಮುಕ್ಕಾಲಾಗಿತ್ತು. ಪುಸ್ತಕವನ್ನು ತೆರೆದಂತೆಯ ಇಟ್ಟು ಮೇಲೆದ್ದಳು.
ಎಡಗೈಯನ್ನು ಮೇಜಿನ ಅಂಚಿಗೆ ಬಿಗಿಯಾಗಿ ಊರಿ ಶರೀರವನ್ನು ಬಲಕ್ಕೆ ತುಸುವೇ ಬಾಗಿಸಿ ಬಲಗೈಯನ್ನು ಪಕ್ಕಕ್ಕೆ ಚಾಚಿ ಗೋಡೆಗೆ ಆತು ನಿಂತಿದ್ದ ಊರುಗೋಲನ್ನು ಹತ್ತಿರಕ್ಕೆ ಎಳೆದುಕೊಂಡು ಬಲ ಕಂಕುಳಿಗೆ ಸೇರಿಸಿದಳು. ಎಡ ತೊಡೆಯಿಂದ ಕುರ್ಚಿಯನ್ನು ಹಿಂದೆ ನೂಕಿ ನಿಧಾನವಾಗಿ ಹೆಜ್ಜೆ ಮುಂದಿಟ್ಟಳು. ಪೋಲಿಯೋ ಮಾರಿಗೆ ತುತ್ತಾಗಿ ಶಕ್ತಿಹೀನವಾಗಿದ್ದ ಬಲಗಾಲನ್ನು ಮೆಲ್ಲಗೆ ಎಳೆದು ಹಾಕುತ್ತಾ ಊರುಗೋಲಿನ ಆಸರೆಯಲ್ಲಿ ಬಾತ್‌ರೂಮಿನತ್ತ ಸಾಗಿದಳು…
ಗೋಡೆಗೆ ಒರಗಿನಿಂತು ತುಂಡು ಟವಲ್‌ನಿಂದ ಮುಖ ಒರೆಸಿ ಒಂದು ಲೋಟ ಬೆಚ್ಚನೆಯ ನೀರನ್ನು ಗಂಟಳಿಗಿಳಿಸಿದಳು. ಹಾಸಿಗೆಯತ್ತ ಸಾಗಿದವಳಿಗೆ ಏಕಾ‌ಏಕಿ ನೆನಪಿಗೆ ಬಂತು.
’ಸಂಜೆಯ ವೇಳೆಗೆ ಮೈಸೂರಿಗೆ ಹಿಂತಿರುಗುವುದಾಗಿ ಗೋಕುಲ್ ಬೆಳಿಗ್ಗೆಯಷ್ಟೇ ಫೋನ್‌ನಲ್ಲಿ ಹೇಳಿದ್ದ.’
ಹೊರಗೆಲ್ಲಾದರೂ ಹೋಗಿ ಹಿಂತಿರುಗಿದ ಅರ್ಧಗಂಟೆಯೊಳಗೆ ನನ್ನನ್ನು ನೋಡಲು ಬರುವುದು ಅವನ ಅಭ್ಯಾಸ. ನನ್ನನ್ನು ಬಿಟ್ಟಿರುವುದು ಅವನಿಗೆ ಅಸಾಧ್ಯ. ಹತ್ತಾರು ಬಾರಿ ಅವನೇ ಹೇಳಿದ್ದ ಮಾತು ಅದು.
ಇಂದು ಅವನ ಸುಳಿವಿಲ್ಲ!
ಮಧ್ಯರಾತ್ರಿಯಾದರೂ ಅವನಿಂದ ಒಂದು ಫೋನ್ ಕರೆ ಸಹ ಇಲ್ಲ! ಇಂದು ಇಡೀ ದಿನ ನಾನು ಮನೆಯಲ್ಲಿ ಒಂಟಿ ಎಂದು ಅವನಿಗೆ ಚೆನ್ನಾಗಿ ಗೊತ್ತು. ಯಾವುದೇ ಕಾರಣದಿಂದ ನನ್ನ ಬಳಿಗೆ ಬರಲಾಗದಿದ್ದರೆ ಕೊನೇಪಕ್ಷ ಫೋನ್ ಮಾಡಬಹುದಾಗಿತ್ತಲ್ಲ?
ಅವನನ್ನು ಸಂಪರ್ಕಿಸಲು ಅವಳು ನಡೆಸಿದ ಪ್ರಯತ್ನ ವಿಫಲವಾಗಿತ್ತು. ನಾಲ್ಕೈದು ಸಲ ಪ್ರಯತ್ನಿಸಿದರೂ ಆ ಕಡೆಯಿಂದ ಕೇಳಿಬಂದದ್ದು “ದ ನಂಬರ್ ಯು ಆರ್ ಡಯಲಿಂಗ್ ಈಸ್ ಕರೆಂಟ್ಲೀ ಸ್ವಿಚ್ಡ್ ಆಫ್. ಪ್ಲೀಸ್ ಟ್ರೈ ಲೇಟರ್” ಎಂಬ ಕಿರಿಕಿರಿ ಏಕತಾನ. ಮನಸ್ಸಿಗೆ ಬೇಸರವಾದರೂ ಅದರ ಬಗ್ಗೇ ಯೋಚಿಸುತ್ತಾ ಕುಳಿತುಕೊಳ್ಳಲು ನಾಳಿನ ಪರೀಕ್ಷೆ ಅವಕಾಶ ಕೊಟ್ಟಿರಲಿಲ್ಲ. ಓದಿನತ್ತ ಗಮನ ಹರಿಸಿದ್ದಳು.

ಎಮರ್ಜೆನ್ಸಿ ಲ್ಯಾಂಪ್ ಆರಿಸಿ ಹಾಸಿಗೆಯಲ್ಲುರುಳಿದಳು. ಅವಳು ಯಾರಿಗೂ ಕಾಯಬೇಕಾದ ಅಗತ್ಯವಿರಲಿಲ್ಲ. ಅತ್ತಿಗೆ ರಜನಿಯ ತಂಗಿಯ ಮದುವೆಗೆಂದು ಅಂದು ಬೆಳಿಗ್ಗೆ ಬೆಳಗಾವಿಗೆ ಹೋದ ಅಣ್ಣ ಮತ್ತು ಅತ್ತಿಗೆ ಹಿಂತಿರುಗುವುದು ಇನ್ನು ನಾಲ್ಕು ದಿನಗಳಿಗೆ. ಅಲ್ಲಿಯವರೆಗೆ ಅವಳು ಮನೆಯಲ್ಲಿ ಏಕಾಂಗಿ. ಆ ದೊಡ್ಡ ಮನೆಯಲ್ಲಿ ಕೆಲದಿನಗಳು ಒಂಟಿಯಾಗಿ ಕಳೆಯುವುದು ಅವಳಿಗೆ ಹೊಸದೇನಲ್ಲ. ವ್ಯವಹಾರನಿರತ ಅಣ್ಣ, ಕಾಲಿಗೆ ಚಕ್ರ ಕಟ್ಟಿಕೊಂಡ ಸಂಚಾರಪ್ರಿಯೆ ಅತ್ತಿಗೆಯಿಂದಾಗಿ ತಿಂಗಳಿಗೆ ಒಂದೆರಡು ಸಲ ಒಂಟಿಯಾಗಿ ದಿನಗಳೆಯುವುದು ಇತ್ತೀಚೆಗೆ ಅವಳಿಗೆ ಸಾಮಾನ್ಯವಾಗಿಬಿಟ್ಟಿದೆ.
ಹೊರಗೆ ಮಳೆಯ ಏಕತಾನ ನಿರಂತರವಾಗಿ ಸಾಗಿತ್ತು. ಅವಳ ಮನದಲ್ಲಿ ಮತ್ತೆ ಗೋಕುಲ್‌ನ ನೆನಪಿನ ಪ್ರವಾಹ…
ಮೂರನೆಯ ವಯಸ್ಸಿನಲ್ಲಿ ಫೋಲಿಯೋದಿಂದಾಗಿ ಬಲಗಾಲು ಕಳೆದುಕೊಂಡು ಹೆಳವಿಯಾದ ನನ್ನ ಬಗ್ಗೆ ಎಲ್ಲರ ಅಭಿಪ್ರಾಯ…?
ಪರಾವಲಂಬಿ!
ಹೌದು. ನೆಟ್ಟಗೆ ನಡೆಯಲೂ ಆಗದ ನಾನೊಬ್ಬಳು ಪರಾವಲಂಬಿ.
ಊನಗೊಂಡ ಕಾಲಿನ ಜತೆಗೆ ಹುಸಿ ಪರಿತಾಪದ ನುಡಿಗಳಿಂದಾಗಿ ಘಾಸಿಗೊಂಡ ಮನಸ್ಸು, ಕಮರಿದ ಜೀವನೋತ್ಸಾಹ…
…ಇಪ್ಪತ್ತು ವರ್ಷಗಳು ಕಳೆದುಹೋಗಿದ್ದವು.
ಆರು ತಿಂಗಳ ಹಿಂದೆ ತಂದೆ ತಾಯಿಯರಿಬ್ಬರೂ ಅಫಘಾತದಲ್ಲಿ ದುರಂತಮರಣವನ್ನಪ್ಪಿದ್ದು ನನ್ನ ಅದೃಷ್ಠದ ಮೇಲೆ ವಿಧಿ ಎಳೆದ ಮತ್ತೊಂದು ಬರೆ… ಅಣ್ಣ ಅತ್ತಿಗೆಯ ಆಶ್ರಯ ಎಲ್ಲಿಯವರೆಗೆ?
ನಾನು ಜೀವನಪರ್ಯಂತ ಪರಾವಲಂಬಿಯಾಗಿಯೇ ಉಳಿಯಬೇಕೆ? ಅದು ನನ್ನ ಹಣೆಬರಹವೇ?
ಪ್ರಶ್ನೆ ಏಕಾ‌ಏಕಿ ಬಗೆಹರಿದಿತ್ತು.
ನಾಲ್ಕು ತಿಂಗಳ ಹಿಂದೆ ಎಲ್ಲಿಂದಲೋ ಅವತರಿಸಿ ಬಂದ ಚಿಗುರು ಮೀಸೆಯ, ಚಂದದ ನಗುವಿನ ಗೋಕುಲ್.
“ಇವನು ನನ್ನ ತಮ್ಮ. ಓದೋದಕ್ಕೆ ಅಂತ ದೆಹಲಿ ಅಹಮದಾಬಾದ್‌ಗಳಲ್ಲಿದ್ದ. ಓದು ಮುಗಿಸಿ ಈಗ ಮೈಸೂರಿಗೆ ಬಂದಿದ್ದಾನೆ. ಇಲ್ಲೇ ಇರೋ ಇಚ್ಚೆ ಅವನಿಗೆ.”
ಹಾಗೆಂದು ಪಕ್ಕದ ಮನೆಯ ದೇವಕಿ, ಅವಳ ಪ್ರೀತಿಯ ದೇವಕಿ ಆಂಟಿ, ಪರಿಚಯಿಸಿದಾಗಿನಿಂದ ಮಾನ್ಸಿ ವಶೀಕರಣಕ್ಕೊಳಗಾದವಳಂತಾಗಿಬಿಟ್ಟಿದ್ದಳು. ದಿನವೂ ಎದುರಿಗೆ ಬಂದು ಅವಳೊಡನೆ ನಗುತ್ತಾ ಹರಟಿ, ಜೋಕು ಹೇಳಿ ನಗಿಸಿದ ಅವನು ಒಂದು ವಾರದಲ್ಲಿ ಅವಳ ಹೃದಯದ ಆಳಕ್ಕಿಳಿದುಬಿಟ್ಟಿದ್ದ.
ಅಂದು…
ತನ್ನ ಮನೆಯಲ್ಲಿ ಅಣ್ಣ ಅತ್ತಿಗೆ, ಪಕ್ಕದ ಮನೆಯಲ್ಲಿ ದೇವಕಿ ಆಂಟಿ ಯಾರೂ ಇಲ್ಲದೇ ಅವಳು ಒಂಟಿಯಾಗಿದ್ದಾಗ…
ಮೆಟ್ಟಲ ಅಂಚಿಗೆ ಊರುಗೋಲು ತಾಗಿ ಆಯತಪ್ಪಿ ಅವಳು ಕೆಳಗೆ ಉರುಳಲಿದ್ದಾಗ ಅವನು ಇದ್ದಕ್ಕಿದ್ದಂತೆ ಅದೆಲ್ಲಿಂದಲೋ ಅವತರಿಸಿಬಂದಿದ್ದ. ಅವಳನ್ನು ತಬ್ಬಿ ಹಿಡಿದು ಆಸರೆ ನೀಡಿದ್ದ… ಅವಳ ಕಣ್ಣುಗಳಲ್ಲಿ ಉಕ್ಕಿದ ಕಣ್ಣೀರನ್ನು ಮೃದುವಾಗಿ ಒರೆಸಿದ್ದ… ಅವಳ ಕಿವಿಯಲ್ಲಿ ತುಟಿಯಿಟ್ಟು ಪಿಸುಗುಟ್ಟಿದ್ದ: “ನಾನು ನಿನಗೆ ಹೀಗೇ ಬದುಕುಪೂರ್ತಿ ಆಸರೆಯಾಗಿರ್ತೀನಿ ಮಾನ್ಸಿ.”
‘ನನಗೂ ಒಬ್ಬ ಪ್ರೇಮಿ!’
ಅಂತಹ ಕನಸನ್ನು ಅವಳೂ ಕಂಡಿದ್ದಳು. ಅದೆಂದೂ ನಿಜವಾಗಲಾರದೆಂದು ಕೊರಗಿದ್ದಳು.
ಅಂಗವಿಕಲಳಾದ ತನಗೊಬ್ಬ ಪ್ರೇಮಿ! ಪರಾವಲಂಬಿಯಾದ ತನಗೊಬ್ಬ ಪತಿ!
ಅವಳ ಕನಸು ನನಸಾಗತೊಡಗಿತ್ತು. ಅವಳೆದೆಯಲ್ಲಿ ಜೀವನೋತ್ಸಾಹ ಚಿಮ್ಮಿತ್ತು.
ಕಳೆದ ಮೂರು ತಿಂಗಳಲ್ಲಿ ತನ್ನ ನೂರು ಕನಸುಗಳನ್ನು ಅವನೊಡನೆ ಹಂಚಿಕೊಂಡಿದ್ದಳು ಮಾನ್ಸಿ.
“ಪರಾವಲಂಬಿಯ ಬದುಕು ನನಗೆ ಸಾಕಾಗಿಹೋಗಿದೆ.” ಅವನೆದೆಯಲ್ಲಿ ಮುಖ ಹುದುಗಿಸಿ ಬಿಕ್ಕಿದ್ದಳು.
ಅದಕ್ಕೆ ಅವನ ಪ್ರತಿಕ್ರಿಯೆ…?
ಅವಳನ್ನು ತನ್ನೆದೆಗೆ ಗಾಢವಾಗಿ ಒತ್ತಿಕೊಂಡು ಕಿವಿಯಲ್ಲಿ ಉಸುರಿದ್ದ: “ನೀನು ಪರಾವಲಂಬಿ ಅಲ್ಲ. ಬದಲಾಗಿ ನೂರು ಜನ ನಿನ್ನನ್ನ ಅವಲಂಬಿಸಿರ್ತಾರೆ. ನಾನು ಇನ್ನಾರು ತಿಂಗಳಲ್ಲಿ ಪ್ರಾರಂಭಿಸೋ ಬಿಸಿನೆಸ್ ಕನ್ಸಲ್ಟೆನ್ಸಿ ಮತ್ತು ಔಟ್‌ಸೋರ್ಸಿಂಗ್ ಸೆಂಟರ್‌ನ ಛೀಫ್ ಮ್ಯಾನೇಜಿಂಗ್ ಡೈರೆಕ್ಟರ್ ನೀನು.”
ಮಾನ್ಸಿ ಅಗಾಧ ಹರ್ಷದಿಂದ ಕಣ್ಣರಳಿಸಿದ್ದಳು. ಸ್ವರ್ಗದ ಕೀಲಿಕೈ ಅವಳ ಅಂಗೈ ಮೇಲಿತ್ತು…
ನರಹರಿ!
ಮಾನ್ಸಿಯ ಬದುಕಿನಲ್ಲಿ ಎರಡು ವಾರಗಳ ಹಿಂದೆ ಏಕಾ‌ಏಕಿ ಕಾಣಿಸಿಕೊಂಡ ಧೂಮಕೇತು!
ಅವಳ ಯೋಚನಾ ಚಕ್ರ ಫಕ್ಕನೆ ತುಂಡಾಯಿತು.
ಮಳೆಯ ರವವನ್ನು ಮೀರಿ ಕೇಳಿಬಂದ ಏರುದನಿಯ ಮಾತುಗಳು!
ಒಮ್ಮೆಲೆ ಹೆಚ್ಚಿದ ಮಳೆಯ ಆರ್ಭಟ. ದನಿಗಳು ಕರಗಿಹೋದವು.
ಎರಡು ಕ್ಷಣಗಳಲ್ಲಿ ಹತ್ತಿರದಲ್ಲೇ ಎಲ್ಲೋ ಒಂದು ಕಡೆ ಏನೋ ಭಾರವಾಗಿ ಉರುಳಿದ ಸದ್ದು! ಮಳೆಯ ಆರ್ಭಟವನ್ನು ಮೀರಿ ಕೇಳಿಬಂದ ಹೂಂಕಾರ!
ಥಟ್ಟನೆ ಎದ್ದು ಕುಳಿತಳು ಮಾನ್ಸಿ. ಕಿವಿ ನಿಮಿರಿಸಿ ಶಬ್ಧಗಳಿಗಾಗಿ ಕಾದಳು…
ಮಳೆಯ ಏಕತಾನದ ಹೊರತಾಗಿ ಬೇರಾವ ಸದ್ದೂ ಅವಳ ಕಿವಿಗೆ ಬೀಳಲಿಲ್ಲ.
ಶಬ್ಧಗಳು ಕೇಳಿಬಂದದ್ದು ಎಲ್ಲಿಂದ? ಹೂಂಕಾರ ಯಾರದು?
ಅವಳು ಸೋಜಿಗಗೊಂಡಳು.
ಮುಂದಿನ ಐದು ನಿಮಿಷಗಳಲ್ಲಿ ಮಳೆಯ ಹುಯ್ಲಿನ ಹೊರತಾಗಿ ಬೇರಾವ ಶಬ್ಧವೂ ಅವಳ ಕಿವಿಗಳಿಗೆ ಬೀಳಲಿಲ್ಲ.
ಶಬ್ಧ ಕೇಳಿದ್ದು ತನ್ನ ಭ್ರಮೆಯಿರಬೇಕು.
ಹಾಸಿಗೆಯಲ್ಲುರುಳಿ ಕಣ್ಣು ಮುಚ್ಚಿದಳು. ಬೆಳಿಗ್ಗೆ ಬೇಗನೆ ಏಳಬೇಕು. ಓದಲು ಇನ್ನೂ ಮೂವತ್ತು ಪುಟಗಳು ಬಾಕಿ ಉಳಿದಿವೆ… ನಿಧಾನವಾಗಿ ನಿದ್ರೆಯ ಮಡಿಲಿಗೆ ಜಾರಿದಳು…
ಅವಳಿಗೆ ಫಕ್ಕನೆ ಎಚ್ಚರವಾಯಿತು. ಕಣ್ಣು ತೆರೆದಳು.
ಕೋಣೆಯಲ್ಲಿ ಎಕಾ‌ಏಕಿ ಹೆಚ್ಚಿದ ಬೆಳಕು! ಕಿಟಕಿಯಾಚೆ ಕತ್ತಲೆ ಬೆಳಕಿನ ನರ್ತನ!
ಅವಳಿಗೆ ಏನೊಂದೂ ಅರ್ಥವಾಗಲಿಲ್ಲ.
ನಿಧಾನವಾಗಿ ಮೇಲೆದ್ದಳು. ಕೈಯಾಡಿಸಿ ಊರುಗೋಲನ್ನು ಹತ್ತಿರಕ್ಕೆಳೆದುಕೊಂಡಳು.
ಕಿಟಕಿ ಸಮೀಪಿಸಿದ ಮಾನ್ಸಿ ಕಂಡ ದೃಶ್ಯದಿಂದ ಬೆಚ್ಚಿದಳು. ಅವಳ ನಿದ್ದೆ ಹಾರಿಹೋಯಿತು.
ಅವಳ ಕಿಟಕಿಗೆ ನೇರವಾಗಿ ಹತ್ತು ಅಡಿಗಳ ದೂರದಲ್ಲಿದ್ದ ದೇವಕಿಯ ಮನೆಯ ಕಿಟಕಿಯಲ್ಲಿ ಬೆಂಕಿಯ ಜ್ವಾಲೆ!
ಅವಳು ಗಾಬರಿಗೊಂಡಳು. ಬಲಗೈನಿಂದ ಊರುಗೋಲನ್ನು ಆತುರಾತುರವಾಗಿ ಎತ್ತಿಹಾಕುತ್ತಾ ಹಿಂಬಾಗಿಲಿನತ್ತ ಸಾಗಿ ಬೋಲ್ಟ್ ಸರಿಸಿದಳು. ತುಂತುರಾಗಿ ಹನಿಯುತ್ತಿದ್ದ ಮಳೆಯ ತಣ್ಣನೆಯ ಸೂಜಿಯ ಇರಿತಗಳನ್ನು ಲೆಕ್ಕಿಸದೇ ಅರ್ಧ ನಿಮಿಷದಲ್ಲಿ ಅವಳು ದೇವಕಿಯ ಮನೆಯ ಕಿಟಕಿಯ ಬಳಿಯಿದ್ದಳು.
ಏದುಸಿರು ಹಾಕುತ್ತಾ ಕಿಟಕಿಗೆ ಮುಖವೊಡ್ಡಿದಳು.
ಕಿಟಕಿಗೆ ಹತ್ತಿರದ ಮಂಚದ ಮೇಲಿನ ಹಾಸಿಗೆಗೆ ಬೆಂಕಿ ಹತ್ತಿತ್ತು. ಹಾಸಿಗೆಯ ಮಧ್ಯದಲ್ಲಿ ಗುಪ್ಪೆಯಾಗಿ ಮುದುರಿಬಿದ್ದಿದ್ದ ವಸ್ತು! ಬೆಂಕಿ ಅದರ ಅಂಚನ್ನು ನುಂಗತೊಡಗಿತ್ತು.
ಮನೆಯಲ್ಲಿ ಯಾರೂ ಇಲ್ಲವೇ?
ನನಗೆ ತಿಳಿದಂತೆ ದೇವಕಿ ಆಂಟಿ ಬೆಳಿಗ್ಗೆ ಬೃಂದಾವನ್ ಎಕ್ಸ್‌ಟೆನ್ಷನ್‌ನಲ್ಲಿದ್ದ ತಾಯಿಯ ಮನೆಗೆ ಹೋಗಿದ್ದಳು. ಅವಳು ಇಂದು ಹಿಂತಿರುಗುವ ಸಾಧ್ಯತೆ ಇಲ್ಲ. ಬದುಕಿನ ಕೊನೆಯ ಹಂತದಲ್ಲಿರುವ ಕ್ಯಾನ್ಸರ್ ರೋಗಿ ತಂದೆಯ ಆರೈಕೆಗೆ ಅವಳ ಅಗತ್ಯವಿದೆ. ಅವಳ ಗಂಡ ದಯಾನಂದ ಮನೆಗೆ ಹಿಂತಿರುಗುವುದು ಸಾಮಾನ್ಯವಾಗಿ ಮಧ್ಯರಾತ್ರಿಯ ನಂತರವೇ. ಮನೆಯಲ್ಲಿರಬಹುದಾದ ಒಂದೇ‌ಒಂದು ವ್ಯಕ್ತಿ…? ಆ ಧೂಮಕೇತು….
ಮಾನ್ಸಿ ಚೀರಿದಳು.
ಬೆಂಕಿ ನುಂಗತೊಡಗಿದ್ದ ಮಂದದ ರಗ್‌ನ ಅಡಿಯಲ್ಲಿ ಕಂಡ ಎರಡು ಕಾಲುಗಳು! ಬೆಂಕಿಗೆ ಆಹುತಿಯಾಗುತ್ತಿರುವುದು ಮನುಷ್ಯದೇಹ!
ಅದು ನರಹರಿಯೇ? ಅವನಿಗೇನಾಗಿದೆ?
ಕಿಟಕಿಯ ಗಾಜಿಗೆ ಬಲವಾಗಿ ಮುಖವೊತ್ತಿದಳು. ಕಣ್ಣುಗಳು ಕಿರಿದುಗೊಂಡವು.
ಬೆಂಕಿಯಲ್ಲಿ ಬೇಯುತ್ತಿದ್ದ ಕಾಲೊಂದರಲ್ಲಿ ಕಂಡ ಹೊಳೆಯುವ ವಸ್ತು!
ಅವಳ ಚುರುಕು ಕಣ್ಣುಗಳು ಆ ಹೊಳಪಿನ ವಸ್ತುವನ್ನು ಫಕ್ಕನೆ ಗುರುತಿಸಿದವು.
ಗೆಜ್ಜೆಗಳಿಂದ ಕೂಡಿದ ಕಾಲಂದಿಗೆ!
ಅದು… ಅದು… ದೇವಕಿ ಆಂಟಿಯ ಕಾಲಂದಿಗೆ!
ಮೈಗಾಡ್! ಇದೇನಾಗುತ್ತಿದೆ?
ಮಾನ್ಸಿ ಬೆವತುಹೋದಳು.
ನಾನೀಗ ಯಾರನ್ನಾದರೂ ಕರೆಯಬೇಕು. ನಾಲಿಗೆಗೆ ಬಂದದ್ದು ದಯಾನಂದನ ಹೆಸರೇ.
“ದಯಾ ಅಂಕಲ್.” ಕೂಗಿದಳು.
ಪ್ರತಿಕ್ರಿಯಿಸಿದ್ದು ಒಮ್ಮೆಲೆ ಉದ್ರೇಕಗೊಂಡ ಮಳೆ.
ದಯಾನಂದ ಮನೆಯಲ್ಲಿರುವ ಸಾಧ್ಯತೆ ಇಲ್ಲ. ಬಹುಷಃ ಮನೆಯಲ್ಲಿ ಯಾರೂ ಇಲ್ಲ.
ಎಡಬಲ ತಿರುಗಿದಳು. ರಸ್ತೆಯಾಚೆಗಿನ ಮನೆಯ ಮಹಡಿಯ ಕಿಟಕಿಯಲ್ಲಿ ಮೇಣದಬತ್ತಿಯ ಮಾಸಲು ಬೆಳಕು ದೃಷ್ಟಿಗೆ ನಿಲುಕಿತು.
“ಮಾಧವ್ ಅಂಕಲ್.” ಆ ದಿಕ್ಕಿಗೆ ಮೊಗವೊಡ್ಡಿ ಕೂಗು ಹಾಕಿದಳು.
ಮಾಧವ ರಾವ್‌ನ ಪ್ರತ್ಯುತ್ತರ ಕೇಳಿಬರಲಿಲ್ಲ.
“ಮೀನಾಕ್ಷಿ ಆಂಟೀ.” ಶರೀರದ ಶಕ್ತಿಯನ್ನೆಲ್ಲಾ ಗಂಟಲಿಗೆ ಹೂಡಿ ಕೂಗಿದಳು.
ಅರವತ್ತು ಅಡಿಗಳ ಆಚೆ ಎತ್ತರದಲ್ಲಿದ್ದ ಆ ಮನೆಗೆ ಮಳೆಯ ಆರ್ಭಟವನ್ನು ಮೀರಿ ಅವಳ ಕೂಗು ತಲುಪುವ ಸಾಧ್ಯತೆ ಇರಲಿಲ್ಲ.
ಕಿಟಕಿಯತ್ತ ತಿರುಗಿದಳು.
ನಗ್ನ ಕಾಲುಗಳು ಬೆಂಕಿಯ ಜ್ವಾಲೆಯಲ್ಲಿ ಬೇಯುತ್ತಿದ್ದವು.
‘ನಾನೀಗ ಏನಾದರೂ ಮಾಡಬೇಕು.’
ಪರಾವಲಂಬಿಯ ಎದೆಯಲ್ಲಿ ಪರೋಪಕಾರದ ಸೆಲೆ.
ಹತಾಷೆಯಿಂದ ಎಡಬಲ ಕಣ್ಣಾಡಿಸಿದಳು ಮಾನ್ಸಿ. ಹುಚ್ಚುಹಿಡಿದಂತೆ ಅತ್ತಿತ್ತ ಹರಿದಾಡಿದ ಕಣ್ಣುಗಳು ಒಂದು ಕಡೆ ಸ್ಥಿರಗೊಂಡವು.
ಕೈತೋಟಕ್ಕೆ ನೀರು ಹಾಯಿಸಲೆಂದು ನಲ್ಲಿಗೆ ಜೋಡಿಸಿದ್ದ ನೀಳವಾದ ಪ್ಲಾಸ್ಟಿಕ್ ಪೈಪ್!
ಅವಳ ತಲೆಯಲ್ಲಿ ಮಿಂಚು ಹೊಳೆಯಿತು.
ಗೋಡೆಯ ಆಸರೆಯಲ್ಲಿ ನಿಂತು ಊರುಗೋಲನ್ನು ಎರಡೂ ಕೈಗಳಲ್ಲಿ ಎತ್ತಿ ಹಿಡಿದಳು. ಮರುಕ್ಷಣ ಊರುಗೋಲಿನ ಮೇಲುಭಾಗದ ದಿಂಡು ಕಿಟಕಿಯ ಗಾಜಿಗೆ ಅಪ್ಪಳಿಸಿತು. ಹೊಡೆತದ ರಭಸಕ್ಕೆ ಗಾಜು ಠಳ್ಳನೆ ಸೀಳಿತು. ಉಸಿರೆಳೆದುಕೊಂಡು ಮತ್ತೆರಡು ಏಟು ಹಾಕಿದಳು. ಗಾಜು ಶತಚೂರುಗಳಾಗಿ ಸಿಡಿದುಬಿತ್ತು. ಹಿಂದೆಯೇ ಬಿಸಿಗಾಳಿ ಅವಳ ಮುಖಕ್ಕೆ ಗಪ್ಪನೆ ರಾಚಿತು. ಜತೆಗೇ ಸುಟ್ಟ ಬಟ್ಟೆ ಹಾಗೂ ಮಾಂಸದ ಕಟು ವಾಸನೆ.
ಊರುಗೋಲನ್ನು ಕಂಕುಳಿಗೆ ಸೇರಿಸಿ ಮುಂದೆ ಹೆಜ್ಜೆಯಿಟ್ಟಳು. ನಲ್ಲಿಯನ್ನು ಪೂರ್ಣಮಟ್ಟಕ್ಕೆ ತಿರುಗಿಸಿ ಪೈಪಿನ ಮತ್ತೊಂದು ತುದಿಯನ್ನು ಎತ್ತಿ ಕೈಯಲ್ಲಿ ಹಿಡಿದು ಕಿಟಕಿಯತ್ತ ತಿರುಗಿದಳು.
ಪೈಪ್ ಹಿಡಿದಿದ್ದ ಬೆರಳುಗಳಿಗೆ ತಣ್ಣನೆಯ ನೀರಿನ ಅನುಭವವಾಗುತ್ತಿದ್ದಂತೇ ಅದನ್ನು ಮೇಲೆತ್ತಿ ಹಿಡಿದಳು. ಪೈಪಿನ ತುದಿಯನ್ನು ಎರಡು ಬೆರಳುಗಳಿಂದ ಚಪ್ಪಟೆಯಾಗಿ ಒತ್ತಿದಳು. ನೀರು ಒಮ್ಮೆಲೆ ಛಿಲ್ಲನೆ ಹತ್ತು ಅಡಿಗಳ ದೂರಕ್ಕೆ ಹಾರಿತು.
ಪೈಪನ್ನು ಕ್ಷಣಕ್ಶಣಕ್ಕೂ ಅತ್ತಿತ್ತ ತಿರುಗಿಸುತ್ತಾ ಮಂಚದ ಉದ್ದಗಲಕ್ಕೂ ನೀರು ಚಿಮ್ಮಿಸಿದಳು…

* * *

-ಎರಡು-

ಎಮರ್ಜೆನ್ಸಿ ಲ್ಯಾಂಪ್ ಹಿಡಿದು ನಿಧಾನವಾಗಿ ಕೋಣೆಯೊಳಗೆ ಹೆಜ್ಜೆಯಿಟ್ಟ ಸಬ್‌ಇನ್ಸ್‌ಪೆಕ್ಟರ್ ಟೈಟಸ್. ಕೋಣೆ ಬೆಚ್ಚಗಿತ್ತು.
ವಿಶಾಲ ಕೋಣೆಯ ಒಂದು ಪಕ್ಕ ಕಿಟಕಿಗೆ ಹೊಂದಿಕೊಂಡಂತಿತ್ತು ಮಂಚ. ಮಂಚದ ತಲೆಭಾಗದ ಬಳಿ ಒಂದು ಬೆತ್ತದ ಕುರ್ಚಿ, ಗೋಡೆಯ ಪಕ್ಕ ಅಂತದೇ ಮತ್ತೊಂದು ಕುರ್ಚಿ, ಮೇಲೆ ಗಾಜಿನ ಹಲಗೆ ಹೊಂದಿಸಿದ್ದ ಬೆತ್ತದ್ದೇ ವೃತ್ತಾಕಾರದ ಟೀಪಾಯ್, ಮುಚ್ಚಿದ ಕಬೋರ್ಡ್, ವಾರ್ಡ್‌ರೋಬ್, ಡ್ರೆಸ್ಸಿಂಗ್ ಟೇಬಲ್, ಪುಸ್ತಕಗಳಿಂದ ತುಂಬಿದ್ದ ಗಾಜಿನ ಬಾಗಿಲಿನ ಕಪಾಟು, ಪುಟ್ಟ ಟೇಬಲ್ ಮೇಲೆ ಒಂದೆರಡು ಪುಸ್ತಕಗಳು, ಒಂದು ಪೆನ್ನು… ಆಕರ್ಷಕ ವಿನ್ಯಾಸದ ಟೈಮ್ ಪೀಸ್… ಮೂಲೆಯಲ್ಲಿ ಎತ್ತರದ ಕಬ್ಬಿಣದ ಟೇಬಲ್ ಮೇಲಿದ್ದ ಪುಟ್ಟ ಅಕ್ವೇರಿಯಂ, ನಿಧಾನವಾಗಿ ಮೈಹೊರಳಿಸುತ್ತಾ ಈಜುತ್ತಿದ್ದ ಎರಡು ಗೋಲ್ಡ್ ಫಿಶ್‌ಗಳು… ಎಲ್ಲವೂ ಸಹಜವಾಗಿತ್ತು. ಯಾವ ವಸ್ತುವಿಗೂ ಯಾವ ಹಾನಿಯೂ ತಟ್ಟಿರಲಿಲ್ಲ. ಯಾವುದೇ ಘರ್ಷಣೆ ನಡೆದ ಕುರುಹೂ ಅಲ್ಲಿರಲಿಲ್ಲ.
ನಿಧಾನವಾಗಿ ಹಾಸಿಗೆಯತ್ತ ನಡೆದ. ಎರಡು ಅಡಿಗಳ ದೂರದಲ್ಲಿ ನಿಂತು ಅರೆಸುಟ್ಟ ಹಾಸಿಗೆಯನ್ನೂ, ಶವವನ್ನೂ ನೋಡಿದ.
ಆರಾಮವಾಗಿ ಮಲಗಿದ ಭಂಗಿಯಲ್ಲಿತ್ತು ದೇವಕಿಯ ಶವ. ಎರಡೂ ಕೈಗಳು ಹೊಟ್ಟೆಯ ಮೇಲೆ ಒರಗಿದ್ದವು. ನಡುವಿನಿಂದ ಕಾಲಿನವರೆಗೆ ಹೊದೆಸಿದ್ದ ರಗ್ ಮುಕ್ಕಾಲು ಪಾಲು ಸುಟ್ಟುಹೋಗಿತ್ತು. ಮಂಡಿಯವರೆಗೆ ಕಾಲುಗಳೂ ಬೆಂದುಹೋಗಿದ್ದವು. ಶವದ ಮೈ ಮೇಲಿದ್ದದ್ದು ಮೆರೂನ್ ರಂಗಿನ ಸೀರೆ, ಬಿಳುಪು ರವಿಕೆ. ಕೊರಳು, ಕಿವಿ, ಮೂಗುಗಳಲ್ಲಿದ್ದ ಆಭರಣಗಳು ಹಾಗೇ ಇದ್ದವು.
ಹತ್ತಿರ ಸರಿದು ದೀಪವನ್ನು ಮುಖದತ್ತ ತಿರುಗಿಸಿದ. ಸುಂದರ ಮುಖದಲ್ಲಿ ಅಗಾಧ ನೋವಿನ ಛಾಯೆ…
ಏನೋ ಕಂಡಂತಾಗಿ ಸೆರಗನ್ನು ತುಸುವೇ ಸರಿಸಿ ಕೊರಳ ಮೇಲೆ ಸೂಕ್ಷ್ಮ ನೋಟ ಹೂಡಿದ. ಕಣ್ಣುಗಳು ನಿಮಿಷದವರೆಗೆ ಅಲ್ಲೇ ಕೀಲಿಸಿದವು.
ಕೊರಳ ಸುತ್ತಲೂ ಗಾಢ ಕೆಂಪಿನ ಗೆರೆ! ಒಂದೆರಡು ಕಡೆ ರಕ್ತ ಜಿನುಗಿ ಹೆಪ್ಪುಗಟ್ಟಿತ್ತು.
ಏಕಾ‌ಏಕಿ ಮೂಗು ಅರಳಿಸಿದ. ಏನೋ ಪರಿಚಿತ ವಾಸನೆ!
ಮುಖದತ್ತ ಮತ್ತೂ ಬಾಗಿದ. ಹೊಳೆಯುತ್ತಿದ್ದ ಹಣೆಯತ್ತ ಮೂಗು ಸರಿಸಿದ. ವಾಸನೆ ಗುರುತಿಗೆ ಹತ್ತಿತು.
ಅಮೃತಾಂಜನ್!
ಹಾಗೆಯೇ ಬಾಗಿದಂತೇ ಮೂಗನ್ನು ಮುಖದ ಬೇರೆಬೇರೆ ಭಾಗಗಳತ್ತ ಸರಿಸಿದ. ಕೊರಳ ಬಳಿ ಬಂದಾಗ ಕ್ಷಣಗಳ ಕಾಲ ಹಾಗೆಯೇ ನಿಂತ. ಅಲ್ಲಿಯೂ ಅಮೃತಾಂಜನ್‌ನ ದಟ್ಟ ಪರಿಮಳ!
ನೆಟ್ಟಗೆ ನಿಂತು ಛಾವಣಿಗೆ ಮೊಗವೆತ್ತಿ ಕಣ್ಣು ಮುಚ್ಚಿದ…

* * *

ಹಣೆಗೆ ಕೈ ಒತ್ತಿ ಬಿಕ್ಕಿದಳು ಮಾನ್ಸಿ. ಸಬ್ ಇನ್ಸ್‌ಪೆಕ್ಟರ್ ಟೈಟಸ್ ನೋಟುಬುಕ್ಕಿನಿಂದ ತಲೆಯೆತ್ತಿದ.
“ದೇವಕಿ ಆಂಟಿ ಮನೇಗೆ ಯಾವಾಗ ಬಂದ್ರು ಅಂತಾನೇ ನಂಗೆ ಗೊತ್ತಾಗ್ಲಿಲ್ಲ. ನಂಗೆ ನೆನಪಿರೋ ಹಾಗೆ ಒಂಬತ್ತು ಗಂಟೆಗೆ ದಯಾ ಅಂಕಲ್ ಮಾಮೂಲಿನಂತೆ ಮನೆಗೆ ಬಂದು ಊಟ ಮಾಡಿ ಹೋದರು. ಆಗ ಆಂಟಿ ಮನೇಲಿರ್ಲಿಲ್ಲ. ‘ಅವಳು ಈ ರಾತ್ರಿ ಮನೆಗೆ ಬರೋದಿಲ್ಲ, ಇನ್ನೂ ಎರಡು ಮೂರು ದಿನ ಬೃಂದಾವನ್ ಎಕ್ಸ್‌ಟೆನ್ಷನ್‌ನಲ್ಲೇ ಉಳೀತಾಳೆ’ ಅಂತ ಅಂಕಲ್ ಹೇಳಿದ್ರು. ಹಾಗಿರೋವಾಗ ಆಂಟಿ ಯಾವಾಗ ಬಂದ್ರೋ ಗೊತ್ತಾಗ್ಲಿಲ್ಲ…” ಕಳೆದ ಇಪ್ಪತ್ತು ನಿಮಿಷಗಳಲ್ಲಿ ಅವಳು ಆ ಮಾತುಗಳನ್ನು ಹೇಳಿದ್ದು ಇದು ನಾಲ್ಕನೆಯ ಬಾರಿ.
“ನಿಮಗಾಗಿರೋ ಆಘಾತ ನಂಗರ್ಥ ಆಗತ್ತೆ.” ಕ್ಷಣ ತಡೆದು ಮುಂದುವರೆಸಿದ ಟೈಟಸ್. “ಈಗ ನಿಮಗೆ ವಿಶ್ರಾಂತಿಯ ಅಗತ್ಯ ಇದೆ ಅಂತ ತಿಳೀತೀನಿ. ನಿಮ್ಮ ಮನೇಗೆ ಹೋಗಿ ರೆಸ್ಟ್ ತಗೋಳ್ಳಿ. ನಾಳೆ ನಿಮ್ಮನ್ನ ಮತ್ತೆ ಕಾಣ್ತೀನಿ.”
ಮಾನ್ಸಿಯ ಬಿಕ್ಕುವಿಕೆ ನಿಲ್ಲಲಿಲ್ಲ. ಮಾತುಗಳು ತಡೆತಡೆದು ಬಂದವು.
“ಆಂಟೀನ್ನ ಹೀಗೆ ಮಾ… ಮಾಡಿದೋರು… ಅವ್ರು… ಅವ್ರು… ಯಾರೇ ಆಗಿರ್ಲಿ ಇನ್ಸ್‌ಪೆಕ್ಟರ್, ನೀವು… ನೀವು ಅರೆಸ್ಟ್ ಮಾಡ್ಬೇಕು… ಮಾ…ಡ್ಲೇ…ಬೇಕೂ.”
“ಹೌದಮ್ಮ ಹಾಗೇ ಮಾಡ್ತೀನಿ. ನನ್ನ ಕರ್ತವ್ಯ ಅದು. ಇನ್ನು ನೀವು ಮನೆಗೆ ಹೊರಡಿ. ಈ ದುರಂತಾನ ಮರೆತು ನೆಮ್ಮದಿಯಾಗಿ ನಿದ್ದೆ ಮಾಡಿ. ನಾಳೆ ಪರೀಕ್ಷೇನ ಚೆನ್ನಾಗಿ ಮಾಡ್ಬೇಕು ನೀವು.’ ಅಧಿಕಾರಿಯ ದನಿಯಲ್ಲಿ ಉತ್ತೇಜನವಿತ್ತು.
ಮಾನ್ಸಿ ಮೌನವಾಗಿ ಮೇಲೆದ್ದಳು.

ಕೋಲಿನ ಆಸರೆಯಲ್ಲಿ ನಿಧಾನವಾಗಿ ಕಾಲೆಳೆಯುತ್ತಾ ಬಾಗಿಲು ದಾಟಿದ ಯುವತಿಯತ್ತ ಮರುಕದ ನೋಟ ಬೀರಿದ ಎಸ್ ಐ ಟೈಟಸ್. ಒಮ್ಮೆ ಲೊಚಗುಟ್ಟಿ ಎದುರಿಗೆ ನಿಂತಿದ್ದ ಮಧ್ಯವಯಸ್ಸಿನ ಗಂಡಸಿನತ್ತ ತಿರುಗಿದ.
“ನಿಮ್ಮ ಹೆಸರು ಶಿವಶಂಕರಪ್ಪ ಅಂತ ಹೇಳಿದ್ರಿ.”
ಪಂಚೆ ಬನಿಯನ್‌ನಲ್ಲಿದ್ದ ಶಿವಶಂಕರಪ್ಪ ಎರಡು ಹೆಜ್ಜೆ ಮುಂದೆ ಬಂದು ಹಲ್ಲು ಕಿರಿದ.
“ಹೌದು ಸಾರ್. ನಿಮಗೆ ಫೋನ್ ಮಾಡಿದ್ದು ನಾನೇ.”
“ಸರಿ, ನಿಮ್ಜೊತೆ ಎರಡು ಮಾತಾಡಬೇಕು ನಾನು. ನೀವು ಕಂಡದ್ದು ಏನು ಅಂತ ನಂಗೆ ವಿವರವಾಗಿ ಹೇಳಿಕೆ ಕೊಡಿ.”
ಅದಕ್ಕೇ ಕಾದಿದ್ದವನಂತೆ ಶಿವಶಂಕರಪ್ಪ ಬಾಯಿ ತೆರೆದ.
“ನಂಗಿನ್ನೂ ನಿದ್ದೆ ಬಂದಿರ್ಲಿಲ್ಲ. ಹಾಳು ಸೊಳ್ಳೆ ಕಾಟ ನೋಡಿ. ಈ ಹುಡ್ಗಿ ಕೂಗಿದ್ದು, ಗಾಜು ಒಡೆದ ಸದ್ದು ಕೇಳಿ ಎದ್ದು ಕಿಟಕೀಲಿ ನೋಡ್ದೆ. ಕತ್ಲಲ್ಲಿ ಏನೂ ಕಾಣ್ಲಿಲ್ಲ. ಸಪೋಟಮರ ಬೇರೆ ಅಡ್ಡ ಇತ್ತಲ್ಲ? ಬಾಗಿಲು ತೆರೆದು ಹೊರಗೆ ಬಂದೆ. ಈ ಹುಡ್ಗಿ ನೀರಿನ ಪೈಪ್ ಹಿಡ್ಕೊಂಡು ಕಿಟಕೀ ಹತ್ರ ನಿಂತಿರೋದನ್ನ ನೋಡಿ ಆಶ್ಚರ್ಯ ಆಯ್ತು. ಅವಳ ಹಿಂದೆ ಮತ್ತೊಬ್ಬ ವ್ಯಕ್ತಿ ನಿಂತಿತ್ತು. ಅದು ಗಂಡ್ಸು ಅಂತನ್ಸುತ್ತೆ…”
ಅಧಿಕಾರಿಯ ಹುಬ್ಬುಗಳು ಚಕ್ಕನೆ ಮೇಲೇರಿ ಇಳಿದವು. ಅವನು ಅಚ್ಚರಿಗೊಂಡದ್ದು ಸ್ಪಷ್ಟವಾಗಿತ್ತು.
“ಅಂ! ಏನಂದ್ರಿ? ಆ ಹುಡ್ಗಿ ಹಿಂದೆ ಒಬ್ಬ ಗಂಡಸು ನಿಂತಿದ್ನಾ?”
“ಹೌದು ಸಾರ್. ನಾನು ಚೆನ್ನಾಗೇ ನೋಡ್ದೆ. ಇವಳ ಬೆನ್ನ ಹಿಂದೇನೇ ಅವ್ನು ನಿಂತಿದ್ದದ್ದು.”
“ಅದು ಯಾರು? ಅವನ ಬಗ್ಗೆ ಮಾನ್ಸಿ ಏನೂ ಹೇಳ್ಲೇ ಇಲ್ವಲ್ಲ? ಎಲ್ಲಾನೂ ತಾನೇ ಮಾಡಿದ್ದು, ಕಿಟಕಿ ಗಾಜು ಒಡೆದು ಒಳಕ್ಕೆ ನೀರು ಹಾಯಿಸಿದ್ದು ಎಲ್ಲಾನೂ ತಾನೊಬ್ಳೇ ಮಾಡಿದ್ದು, ಸಹಾಯಕ್ಕೆ ಯಾರೂ ಇರ್‍ಲಿಲ್ಲ ಅಂದಳಲ್ಲ ಅವಳು?”
“ಅವ್ಳು ಹಾಗಂದದ್ದನ್ನ ನಾನೂ ಕೇಳಿಸ್ಕೊಂಡೆ. ನಂಗೆ ಈಗ ಅನ್ಸುತ್ತೆ ಆ ಮನುಷ್ಯ ಹಿಂದೆ ನಿಂತಿದ್ದದ್ದು ಆ ಹುಡ್ಗೀಗೆ ಗೊತ್ತೇ ಇರ್‍ಲಿಲ್ಲ ಅಂತ.”
“ಅವನ ಬಗ್ಗೆ ಆ ಹುಡುಗಿ ಇಲ್ಲಿದ್ದಾಗಲೇ ಯಾಕೆ ಹೇಳ್ಲಿಲ್ಲ ನೀವು? ಅವಳನ್ನ ವಿಚಾರಿಸಬೋದಾಗಿತ್ತು. ಭಾಳಾ ಇಂಪಾರ್ಟೆಂಟ್ ಇದು.”
ಶಿವಶಂಕರಪ್ಪ ಕೈ ಹೊಸಕಿದ.
“ನಾನದನ್ನ ನಿಮ್ಗೆ ಹೇಳೋದಿಕ್ಕೆ ಎರಡ್ಸಲ ಪ್ರಯತ್ನ ಪಟ್ಟೆ. ನೀವು ಕೈ ಅಡ್ಡ ಮಾಡಿ ತಡೆದುಬಿಟ್ರಿ.”
ಅಧಿಕಾರಿಯ ಮುಖ ಇಳಿಯಿತು.
“ಇರ್‍ಲಿ, ಅವಳನ್ನ ಆಮೇಲೆ ವಿಚಾರಿಸ್ಕೋತೀನಿ. ನೀವು ಹೇಳಿ?”
“ಅದೇ… ಇಬ್ರನ್ನೂ ನೋಡಿದ ನಾನು ಇಲ್ಲೇನೋ ನಡೀತಾ ಇದೆ ಅಂತ ಕಾಂಪೌಂಡ್ ಹತ್ರ ಬಂದು ‘ಮಾನ್ಸೀ ಏನಮ್ಮ ಅದೂ’ ಅಂತ ಕೇಳ್ದೆ. ಅದು ಅವಳಿಗೆ ಕೇಳೀಸ್ಲಿಲ್ಲ. ಆದ್ರೆ ಅವಳ ಹಿಂದಿದ್ದ ಆ ಮನುಷ್ಯ ನನ್ನ ಕಡೆ ತಿರುಗಿದ. ನನ್ನನ್ನ ನೋಡಿದೋನೇ ಹಿಂಭಾಗದ ಕಾಂಪೌಂಡ್ ಕಡೆ ಓಡಿದ.”
“ಆಮೇಲೆ?” ಅಧಿಕಾರಿಯ ಹೆಚ್ಚುಕಡಿಮೆ ಚೀರಿದ.
“ನಾನು ಮತ್ತೆ ಮಾನ್ಸೀನ ಕರೆದೆ. ಅದು ಅವಳಿಗೆ ಕೇಳಿಸ್ತು. ‘ಅಂಕಲ್ ಬೇಗ ಇಲ್ಬನ್ನೀ’ ಅಂತ ಕೂಗಿದ್ಲು. ಏನೋ ಅನಾಹುತ ನಡೀತೀದೆ ಅಂತ ನಂಗೆ ಅರ್ಥ ಆಯ್ತು. ಕಾಂಪೌಂಡ್ ಹತ್ತಿ ಒಳಗೆ ಹೋದೆ. ದಯಾನಂದರ ಮನೆ ಒಳಗೆ ಬೆಂಕಿ ಹತ್ಕೊಂಡಿದೆ ಅಂತ ಮಾನ್ಸಿ ಹೇಳಿದ್ಮೇಲೆ ಗೊತ್ತಾಯ್ತು. ಕಿಟಕೀಲಿ ನೋಡ್ದೆ. ಬೆಂಕಿ ಏನೂ ಕಾಣ್ಲಿಲ್ಲ. ಸುಟ್ಟ ವಾಸ್ನೆ ಮಾತ್ರ ಇತ್ತು. ಅಂದ್ರೆ ನಾನು ಅಲ್ಲಿಗೆ ತಲುಪೋದಕ್ಕೆ ಮುಂಚೇನೇ ಮಾನ್ಸಿ ಬೆಂಕೀನ ಆರಿಸ್ಬಿಟ್ಟಿದ್ಲು.”
“ನೀವು ಆಮೇಲೇನ್ಮಾಡಿದ್ರಿ?”
ಮನೇಗೆ ಬಂದು ನಿಮ್ಗೆ ಫೋನ್ ಮಾಡ್ದೆ. ಸೀಟಿ ಬಾರಿಸ್ಕೊಂಡು ಬರ್ತಾ ಇದ್ದ ಘೂರ್ಖಾ ಗುಲಾಬ್ ಸಿಂಗ್‌ಗೆ ವಿಷಯ ತಿಳಿಸ್ದೆ.”
“ಜತೆಗೆ ಅಕ್ಕಪಕ್ಕದ ಜನಾನ್ನೆಲ್ಲಾ ಎಬ್ಬಿಸಿ ಅವರೆಲ್ಲ ಇಲ್ಲಿ ಸೇರೋ ಹಾಗೆ ಮಾಡಿದ್ರಿ.”
ಶಿವಶಂಕರಪ್ಪ ತಲೆ ತಗ್ಗಿಸಿದ. ತಲೆಯೆತ್ತದೇ ಮೆಲ್ಲಗೆ ದನಿ ಹೊರಡಿಸಿದ.
“ನಾಕು ಜನ ಹತ್ರ ಇದ್ರೆ ಮಾನ್ಸಿಗೆ ಒಳ್ಳೇದು ಅಂತ ತಿಳಿದೆ.”
ನೋಟುಬುಕ್ಕಿನ ಮೇಲೆ ಕೈಹೂಡಿದ ಟೈಟಸ್ ಎರಡು ನಿಮಿಷಗಳಲ್ಲಿ ತಲೆಯೆತ್ತಿ ಪ್ರಶ್ನಿಸಿದ.
“ಮಾನ್ಸಿ ಹೇಳಿದ ಪ್ರಕಾರ ದೇವಕಿ ಈ ರಾತ್ರಿ ಮನೆಗೆ ಹಿಂತಿರುಗೋ ಸಾಧ್ಯತೆ ಇರಲಿಲ್ಲವಂತೆ. ಅವರು ಬಂದದ್ದು ಯಾವಾಗ ಅಂತ ನಿಮಗೇನಾದ್ರೂ ಗೊತ್ತೇ?”
ಶಿವಶಂಕರಪ್ಪ ತಲೆ ತುರಿಸಿಕೊಂಡ.
“ರಾತ್ರಿ ಒಂದು ಸಲ ಯಾವುದೋ ವೆಹಿಕಲ್ ಬಂದ ಶಬ್ಧ ಕೇಳಿದ ಹಾಗೆ ನೆನಪು… ಅದು ಸ್ಕೂಟರ್ರೋ, ಇಲ್ಲಾ ಆಟೋನೋ ಗೊತ್ತಾಗ್ಲಿಲ್ಲ.”
“ಆಗ ಎಷ್ಟೊತ್ತಾಗಿತ್ತು?”
ಅವನು ಮತ್ತೆ ತಲೆ ಕೆರೆದ.
“ಇಲ್ಲ ನಂಗೊತ್ತಿಲ್ಲ.” ಕ್ಷಣ ತಡೆದು ಸೇರಿಸಿದ. “ಹತ್ತೂವರೆ ಹತ್ತೂಮುಕ್ಕಾಲರ ಸುಮಾರಿಗೆ ಅಂತ ಕಾಣುತ್ತೆ.”
* * *

ಎಮರ್ಜೆನ್ಸಿ ಲ್ಯಾಂಪ್‌ನ ಬೆಳಕಿನಲ್ಲಿ ಆದಷ್ಟು ಪರಿಶೋಧನೆ ನಡೆಸಿ; ಅಗತ್ಯವಿರುವ ಫೋಟೋಗಳನ್ನು ತೆಗೆಸಿ; ಶವವನ್ನು ಪೋಸ್ಟ್‌ಮಾರ್ಟಂಗೆ ಕಳಿಸಿ; ಅರೆಸುಟ್ಟ ವಸ್ತುಗಳು, ಮಂಚದ ಕೆಳಗೆ ಸಿಕ್ಕಿದ ಮೀಟರ್ ಉದ್ದದ ಕೆಂಪು ನೈಲಾನ್ ದಾರ, ಅಮೃತಾಂಜನ್‌ನ ಪುಟ್ಟ ಬಾಟಲಿ, ಶವದ ತಲೆಯ ಪಕ್ಕ ಸಿಕ್ಕಿದ ಒದ್ದೆಯಾಗಿದ್ದ ಬಿಳುಪು ಕರವಸ್ತ್ರ- ಇಷ್ಟನ್ನೂ ಫೊರೆನ್ಸಿಕ್ ಟೆಸ್ಟ್‌ಗೆ ಕಳಿಸಿ ಸಬ್ ಇನ್ಸ್‌ಪೆಕ್ಟರ್ ಟೈಟಸ್ ಬೆಳಗಿನ ನಾಲ್ಕು ಗಂಟೆಗೆ ಸ್ಟೇಷನ್‌ಗೆ ಹೊರಟ. ಸೀಲ್ ಮಾಡಿದ ಕೋಣೆಯನ್ನು ಕಾಯುವ ಜವಾಬ್ದಾರಿ ಪಿ ಸಿ ಮಾಲಿಂಗನ ತಲೆಯ ಮೇಲೆ ಬಿದ್ದಿತ್ತು.

ಜೀಪ್ ಏರಿದ ಟೈಟಸ್‌ನ ತಲೆಯಲ್ಲಿ ಚಕ್ರ ಸುತ್ತಿತು.
ಕೊಲೆ ಹೇಗೆ ನಡೆದಿರಬಹುದು ಎನ್ನುವ ಬಗ್ಗೆ ನಾನು ಈಗಾಗಲೇ ಒಂದು ತೀರ್ಮಾನಕ್ಕೆ ಬಂದಾಗಿದೆ. ಕೊಲೆಗಾರ ದೇವಕಿಗೆ ತೀರಾ ಹತ್ತಿರದವನೇ ಆಗಿರಬೇಕು. ಎಷ್ಟು ಹತ್ತಿರದವನು ಅಂದರೆ ಹಾಸಿಗೆಯ ಮೇಲೆ ಮಲಗಿದ ಅವಳ ತಲೆಯ ಕಡೆ ಕುರ್ಚಿಯಲ್ಲಿ ಕೂತು ಶೀತದಿಂದ ನರಳುತ್ತಿರಬಹುದಾದ ಅವಳ ಹಣೆ ಮತ್ತು ಕುತ್ತಿಗೆಗೆ ಅಮೃತಾಂಜನ್ ಹಚ್ಚುವಷ್ಟು! ಹಾಗೇ ಹಚ್ಚುತ್ತಾ ಅವಳ ಕಣ್ಣು ತಪ್ಪಿಸಿ ಕೆಂಪು ನೈಲಾನ್ ದಾರವನ್ನು ಏಕಾ‌ಏಕಿ ಅವಳ ಕುತ್ತಿಗೆಗೆ ಸುತ್ತಿ ಬಲವಾಗಿ ಎಳೆದಿದ್ದಾನೆ. ದೇವಕಿಗೆ ಅದು ತೀರಾ ಅನಿರೀಕ್ಷಿತವಾಗಿರಬೇಕು. ಬಹುಷಃ ಹೋರಾಟ ನಡೆಸಲು ಅವಳಿಗೆ ಅವಕಾಶವೇ ಸಿಕ್ಕಿರಲಾರದು…
ಕೊಲೆ ಮಾಡಿದ ನಂತರ ದೇವಕಿಯ ಶವವನ್ನು ಸರಿಯಾಗಿ ಮಲಗಿಸಿ, ಸೊಂಟದವರೆಗೆ ರಗ್ ಹೊದಿಸಿ ಬೆಂಕಿ ಹಚ್ಚಿದ್ದಾನೆ.
ಆತ ಯಾರಿರಬಹುದು?
ಶಿವಶಂಕರಪ್ಪ ಕಂಡ ವ್ಯಕ್ತಿ, ಮಾನ್ಸಿಯ ಹಿಂದೆ ನಿಂತಿದ್ದವನು ಅವನೇ ಇರಬೇಕು. ಮಾನ್ಸಿ ನೀರು ಹಾಯಿಸಿ ಬೆಂಕಿ ಆರಿಸಿದ್ದು ತನ್ನ ಕೆಲಸಕ್ಕೆ ಅವಳು ಮಾಡುತ್ತಿರುವ ಅಡ್ಡಿ ಎಂದವನು ತಿಳಿದನೇ? ಅವಳಿಗರಿವಿಲ್ಲದಂತೇ ಹಿಂದಿನಿಂದ ಅವಳ ಮೇಲೆ ಆಕ್ರಮಣವೆಸಗಿ ಅವಳನ್ನೂ ಕೊಲ್ಲುವ ಉದ್ದೇಶ ಅವನಿಗಿತ್ತೇ? ಶಿವಶಂಕರಪ್ಪನ ಆಗಮನದಿಂದಾಗಿ ಮಾನ್ಸಿಯ ಪ್ರಾಣ ಉಳಿಯಿತೇ?
ಅಂದಹಾಗೆ ದೇವಕಿಯ ಗಂಡ ದಯಾನಂದ ಎಲ್ಲಿ ಹೋದ? ಅವನ ಟೆಕ್ಸ್‌ಟೈಲ್ಸ್ ಫ್ಯಾಕ್ಟರಿಯ ಮ್ಯಾನೇಜರ್ ಹೇಳುವ ಪ್ರಕಾರ ಅವನು ಹತ್ತೂಮುಕ್ಕಾಲಿಗೇ ಫ್ಯಾಕ್ಟರಿಯಿಂದ ಹೊರಟನಂತೆ. ಮನೆಗೆ ಬರದೇ ಎಲ್ಲಿ ಹೋದ? ಮಾನ್ಸಿಯ ಹೇಳಿಕೆಯ ಪ್ರಕಾರ ದೇವಕಿಯ ಮನೆಯಲ್ಲಿ ಅವಳು ಅಸಹಜ ಶಬ್ಧಗಳನ್ನು ಕೇಳಿದ್ದು ಹನ್ನೆರಡು ಗಂಟೆಯ ಸುಮಾರಿಗೆ. ದೇವಕಿಯ ಕೊಲೆಗಾರ ಅವಳ ಗಂಡನೇ ಇರಬಹುದೇ? ಫ್ಯಾಕ್ಟರಿಯಿಂದ ಮನೆಗೆ ಬಂದು ಹೆಂಡತಿಯನ್ನು ಕೊಲೆ ಮಾಡಿ, ನಂತರ ಮಾನ್ಸಿಯನ್ನು ಕೊಲ್ಲಲು ಯತ್ನಿಸಿ ಸೋತು ಓಡಿಹೋಗಿರಬಹುದೇ?…
ಅವನ ಸೆಲ್ ಫೋನ್ ನಂಬರನ್ನು ಮಾನ್ಸಿಯಿಂದ ಪಡೆದು ಹತ್ತು ಹನ್ನೆರಡು ಸಲ ಪ್ರಯತ್ನಿಸಿದರೂ ಪ್ರಯೋಜವಾಗಿರಲಿಲ್ಲ. ರಿಂಗ್ ಹೋಗುತ್ತದೆ. ಆದರೆ ಅವನು ಉತ್ತರಿಸುತ್ತಿಲ್ಲ! ಇದರರ್ಥ ಏನು?”
ಕಣ್ಣ ಮುಂದೆ ತೇಲಿತು ಆಕರ್ಷಕ ಯುವಕನ ಮುಖ.
ಗೋಕುಲ್!
ಚಂದದ ಹೆಸರಿನ ಆಕರ್ಷಕ ತರುಣ. ಕೊಲೆಯಾದ ದೇವಕಿಯ ತಮ್ಮ. ಮಾನ್ಸಿ ಫೋನ್‌ನಲ್ಲಿ ವಿಷಯ ತಿಳಿಸಿದೊಡನೇ ಓಡೋಡಿ ಬಂದಿದ್ದ. ಅಕ್ಕನ ದುರಂತ ಮರಣ ಕಂಡು ಅವನ ದುಃಖದ ಕಟ್ಟೆಯೊಡೆದಿತ್ತು. ಅವನನ್ನು ಸಮಾಧಾನಿಸಲು ನನ್ನಿಂದಲೂ ಸಾಧ್ಯವಾಗಿರಲಿಲ್ಲ…

ಸ್ಟೇಷನ್ ಸೇರಿ ಟಾಯ್ಲೆಟ್‌ಗೆ ಹೋಗಿಬಂದು ಮುಖಕ್ಕೆ ನೀರು ಚಿಮುಕಿಸಿ ಪೇದೆಯೊಬ್ಬ ತಂದಿಟ್ಟ ಹೊಗೆಯಾಡುತ್ತಿದ್ದ ಕಾಫಿಯ ಲೋಟಕ್ಕೆ ಕೈ ಹಾಕುವಷ್ಟರಲ್ಲಿ ಫೋನ್ ರಿಂಗಾಯಿತು. ರಿಸೀವರ್ ಎತ್ತಿ “ಹಲೋ” ಎಂದ. ಅತ್ತಲಿಂದ ಕೇಳಿಬಂದದ್ದು ದೇವಕಿಯ ಮನೆಯಲ್ಲಿ ಕಾವಲಿರಿಸಿದ್ದ ಪೇದೆ ಮಾಲಿಂಗನ ದನಿ.
“ಸರ್, ಒಂದು ವಿಷ್ಯ.”
“ಏನಯ್ಯ ಅದೂ?”
“ಪಕ್ಕದ ಔಟ್ ಹೌಸ್‌ನಲ್ಲಿ ಒಬ್ಬ ಮನುಷ್ಯ ಮಲಗಿದ್ದಾನೆ. ಅವನು ದಯಾನಂದ ಅವರ ತಮ್ಮ ಅಂತ ಈ ಹುಡ್ಗಿ ಮಾನ್ಸಿ ಹೇಳ್ತಿದಾಳೆ.”
ಅಧಿಕಾರಿಯ ಕಣ್ಣುಗಳು ಕಿರಿದುಗೊಂಡವು. ಅವನು ಅಚ್ಚರಿಗೆ ಸಿಕ್ಕಿದ್ದ.
ದಯಾನಂದನ ತಮ್ಮ!
ಇದ್ದಕ್ಕಿದ್ದಂತೆ ಎಲ್ಲಿಂದ ಅವತರಿಸಿಬಂದ ಅವನು?
“ಮಾನ್ಸಿಗೆ ಫೋನ್ ಕೊಡು.” ಪೇದೆಗೆ ಸೂಚಿಸಿ ರಿಸೀವರನ್ನು ಕಿವಿಗೆ ಮತ್ತಷ್ಟು ಬಲವಾಗಿ ಒತ್ತಿದ.
ರಿಸೀವರ್ ಕೈ ಬದಲಾಯಿಸಿದ ಸದ್ದು. ಹಿಂದೆಯೇ ಮಾನ್ಸಿಯ ಆತುರದ ಮಾತುಗಳು.
“ಸರ್, ದಯಾ ಅಂಕಲ್‌ದು ತಮ್ಮನ್ನ ಪ್ರಶ್ನೆ ಮಾಡ್ಲಿಲ್ಲ ನೀವು.”
“ದಯಾನಂದ ಅವರ ತಮ್ಮ! ಅವರಿಗೊಬ್ಬ ತಮ್ಮ ಇದಾರೆ ಅಂತಾನೇ ನೀವು ಹೇಳಲೇ ಇಲ್ಲವಲ್ಲ?” ತನಗಾಗಿದ್ದ ಅಚ್ಚರಿಯನ್ನು ಹೊರಹಾಕಿದ ಸಬ್ ಇನ್ಸ್‌ಪೆಕ್ಟರ್ ಟೈಟಸ್.
“ಶಾಕ್‌ನಲ್ಲಿ ನಾನು ಆಗ ಹೇಳೋದನ್ನ ಮರೆತೆ. ದಯಾ ಅಂಕಲ್‌ದು ತಮ್ಮ ನರಹರಿ. ಗೋಕುಲ್ ಅವನ ಬಗ್ಗೆ ನಿಮ್ಗೆ ಹೇಳ್ತಾರೆ.” ರಿಸೀವರ್ ಮತ್ತೆ ಕೈ ಬದಲಾಯಿಸಿದ ಶಬ್ಧ.
ಎರಡು ಕ್ಷಣಗಳಲ್ಲಿ ಗೋಕುಲ್‌ನ ದನಿ ಕೇಳಿಬಂತು.
“ನಮ್ಮಕ್ಕನ ಮೈದುನ ನರಹರಿ. ಇಲ್ಲಿ ಅವನನ್ನ ನೋಡಿದೋರು ಬಹಳ ಕಡಿಮೆ.” ಸ್ವಲ್ಪ ತಡೆದು ಮುಂದುವರೆಸಿದ. “ಸಿನಿಮಾ ಗೀಳು ಹತ್ತಿಸಿಕೊಂಡು ಮದ್ರಾಸ್ ಬಾಂಬೆ ಅಂತ ಹತ್ತು ವರ್ಷಗಳಿಂದ ಅಲೀತಿದ್ದ. ಈಗ ಬುದ್ಧಿ ಬಂದು ಹದಿನೈದು ದಿನಗಳ ಹಿಂದೆ ವಾಪಸ್ ಬಂದಿದ್ದಾನೆ.”
“ಐ ಸೀ! ಈಗೆಲ್ಲಿದ್ದಾರೆ ಆತ?”
“ಇಲ್ಲೇ ಈ ಮನೇಲೇ. ರಾತ್ರಿಯೆಲ್ಲಾ ಅವನು ಇಲ್ಲೇ ಔಟ್ ಹೌಸ್‌ನಲ್ಲೇ ಇದ್ದ.”
ರಾತ್ರಿಯೆಲ್ಲಾ ಮನೆಯಲ್ಲೇ ಇದ್ದ ವ್ಯಕ್ತಿ! ನನಗೆ ಅವನ ಸುಳಿವೇ ಸಿಗಲಿಲ್ಲ! ಅಧಿಕಾರಿ ಮತ್ತೊಮ್ಮೆ ಅಚ್ಚರಿಗೆ ಸಿಕ್ಕಿದ್ದ.
“ರಾತ್ರಿಯೆಲ್ಲಾ ಅಲ್ಲೇ ಇದ್ದರೇ? ನೀವು ನನಗೆ ಹೇಳಲೇ ಇಲ್ಲ.”
ಎರಡು ಕ್ಷಣಗಳ ಮೌನದ ನಂತರ ಅತ್ತಲಿಂದ ಮಾತು ಬಂತು.
“ಗಾಬರಿಯಲ್ಲಿ ಹೇಳೋದು ಮರೆತೆ.” ದನಿ ಕುಗ್ಗಿತ್ತು.
“ಅವರೇ ನನ್ನ ಮುಂದೆ ಬರಬೋದಾಗಿತ್ತಲ್ಲ? ನನ್ನ ಕಣ್ಣಿಂದ ಯಾಕೆ ಮರೆಯಾಗಿದ್ರು ಅವರು?” ಅಧಿಕಾರಿಯ ದನಿಯಲ್ಲಿ ನಸು ಗಡಸುತನ ಇಣುಕಿತ್ತು.
“ಅವನು ಕೋಣೆಯ ಬಾಗಿಲು ಮುಚ್ಚಿ ಮಲಗಿಬಿಟ್ಟಿದ್ದ. ರಾತ್ರಿ ನಡೆದ ಯಾವ ಘಟನೆಯೂ ಅವನ ಅರಿವಿಗೆ ಬಂದಿಲ್ಲ.”
ಅಧಿಕಾರಿಯ ಹಣೆಯಲ್ಲಿ ಸುಕ್ಕುಗಳು ಮೂಡಿದವು.
ಮನೆಯಲ್ಲಿ ಅಷ್ಟೋಂದು ಅವಾಂತರಗಳು ನಡೆಯುತ್ತಿದ್ದರೂ ಎಚ್ಚರವಿಲ್ಲದಷ್ಟು ನಿದ್ದೆ ಆ ವ್ಯಕ್ತಿಗೆ!
ಏನೋ ಪ್ರಶ್ನಿಸಲು ಹೊರಟವನು ಕೊನೇ ಗಳಿಗೆಯಲ್ಲಿ ತಡೆದು ಕ್ಷಣ ಮೌನ ಧರಿಸಿದ. “ಅಲ್ಲೇ ಇರೋದಿಕ್ಕೆ ಹೇಳಿ ಅವರಿಗೆ. ನಾನೀಗಲೇ ಬರ್ತೀದೀನಿ.” ಹೇಳಿ ರಿಸೀವರ್ ಕೆಳಗಿಟ್ಟ.

ಮಾಸಲು ನೀಲಿ ರಂಗಿನ ದೊಗಳೆ ಜೀನ್ಸ್ ಪ್ಯಾಂಟ್, ದುಂಡನೆಯ ಕುತ್ತಿಗೆಯ ಬಿಳುಪು ಟೀ ಶರ್ಟ್ ತೊಟ್ಟು ಎದುರಿಗೆ ಕುಳಿತ ಸುಮಾರು ಇಪ್ಪತ್ತೇಳು ಇಪ್ಪತ್ತೆಂಟರ ತರುಣನನ್ನು ಆಸಕ್ತಿಯಿಂದ ನಿರುಕಿಸಿದ ಎಸ್ ಐ ಟೈಟಸ್. ಅಷ್ಟೇನೂ ಪುಷ್ಟವಲ್ಲದ ನೀಳಕಾಯದ ಆಕರ್ಷಕ ತರುಣ ನರಹರಿ. ಗುಂಗುರು ಕೂದಲು, ದಟ್ಟ ಹುಬ್ಬು, ಮುಖದಲ್ಲಿ ಮೂರುನಾಲ್ಕು ದಿನಗಳ ಹುಲುಸು ಬೆಳೆ, ಕಣ್ಣುಗಳಲ್ಲಿ ನಿದ್ದೆ…
“ರಾತ್ರಿ ಇಲ್ಲಿ ಅಷ್ಟೆಲ್ಲಾ ಅವಾಂತರ ನಡೀತಾ ಇದ್ರೂ ನೀವು ನಿದ್ದೆ ಮಾಡೋದಿಕ್ಕೆ ಹ್ಯಾಗೆ ಸಾಧ್ಯ ಆಯ್ತು?” ಟೈಟಸ್ ಅಸಹನೆಯಿಂದ ಪ್ರಶ್ನಿಸಿದ.
“ಇಲ್ಲಿಗೆ ಬಂದಾಗಿನಿಂದ್ಲೂ ನಂಗೆ ಸೊಗಸಾದ ನಿದ್ದೆ ಬರತ್ತೆ. ರಾತ್ರಿ ಹತ್ತು ಗಂಟೆಗೆ ಮಲಗಿದ್ರೆ ಬೆಳಗಿನವರೆಗೆ ಭೂಕಂಪ ಆದ್ರೂ ಎಚ್ಚರ ಆಗಲ್ಲ ನಂಗೆ.” ನಿಧಾನವಾಗಿ ಮಾತು ಹರಿಸಿದ ನರಹರಿ. ಚಂದದ ಮುಖದಷ್ಟೇ ಆಕರ್ಷಕ ಅವನ ದನಿ.
“ಇಲ್ಲಿಗೆ ಬಂದಾಗಿನಿಂದ ಅಂದ್ರೆ! ಅದಕ್ಕೆ ಮೊದ್ಲು ನಿದ್ದೆ ಸರಿಯಾಗಿ ಬರ್ತಾ ಇರಲಿಲ್ಲ ಅಂತ ಅರ್ಥವೇ?”
“ಒಂದು ವಿಧದಲ್ಲಿ ಹಾಗೇನೇ. ನಾನು ನೆಮ್ಮದಿಯಾಗಿ ನಿದ್ರಿಸಿ ವರ್ಷಗಳೇ ಕಳೆದುಹೋಗಿದ್ವು. ಇಲ್ಲಿಗೆ ಬಂದ ಒಂದೆರಡು ದಿನ ಅದೇ ತಾಪತ್ರಯ ಇತ್ತು. ಆಮೇಲೆ ಏನು ಮಾಯೆಯೋ ಗೊತ್ತಿಲ್ಲ, ಹತ್ತು ಗಂಟೆಗೆ ಮಲಗಿದ ತಕ್ಶಣ ಸೊಗಸಾದ ನಿದ್ದೆ ಹತ್ತಿಬಿಡತ್ತೆ. ಬೆಳಗಿನವರೆಗೆ ಕೊರಡಿನ ಹಾಗೆ ಬಿದ್ದುಹೋಗಿರ್ತೀನಿ.”
“ಐ ಸೀ!” ಅಧಿಕಾರಿ ಗಲ್ಲ ತುರಿಸಿಕೊಂಡ.
“ನಿನ್ನೆ ರಾತ್ರಿ ನೀವು ಮಲಗಿದ್ದು ಯಾವಾಗ?”
“ಒಂಬತ್ತೂವರೆಗೆ ಊಟ ಮುಗಿಸ್ದೆ. ಹತ್ತು ಗಂಟೆಗೆ ಹಾಸಿಗೆ ಸೇರಿದ ನೆನಪು.”
“ಮನೇಲಿ ನಿಮ್ಮತ್ತಿಗೆ ಇರ್‍ಲಿಲ್ಲ. ರಾತ್ರಿ ಊಟ ಯಾರು ಬಡಿಸಿದ್ರು?”
ನರಹರಿ ತಲೆಯೆತ್ತಿ ಸೂರು ನೋಡಿದ. ತನಗಷ್ಟಕ್ಕೇ ಎಂಬಂತೆ ಗೊಣಗಿಕೊಂಡ.
“ಅವಳು ಇದ್ದಿದ್ರೂ ಅವಳ ಕೈನ ಊಟ ಮಾಡ್ತಾ ಇರ್‍ಲಿಲ್ಲ ನಾನು.”
“ಏನಂದ್ರಿ?” ಅಧಿಕಾರಿ ಬೆರಗಿಗೆ ಸಿಕ್ಕಿದ್ದ. ನರಹರಿಗೆ ತನ್ನ ಅತ್ತಿಗೆಯ ಮೇಲೆ ಅಸಹನೆ!
“ನಿಮ್ಮ ಮಾತಿನ ಅರ್ಥ?” ಟೈಟಸ್ ಮುಖ ಮುಂದೆ ತಂದ.
ನರಹರಿ ತಲೆ ತಗ್ಗಿಸಿದ. ಗೋಕುಲ್ ಅವನ ನೆರವಿಗೆ ಬಂದ.
“ನರಹರಿಗೂ ಅಕ್ಕನಿಗೂ ಸ್ವಲ್ಪ ಇರುಸುಮುರುಸು. ಇವನಿಲ್ಲಿಗೆ ಬಂದ ಎರಡನೇ ದಿನವೇ ಇಬ್ಬರಿಗೂ ಸ್ವಲ್ಪ ಮಾತು ನಡೀತು.”
“ಅಂದರೆ ನರಹರಿ ಹಿಂತಿರುಗಿದ್ದು ನಿಮ್ಮಕ್ಕನಿಗೆ ಇಷ್ಟ ಆಗಿಲ್ಲ ಅಂತ ಅರ್ಥವೇ?” ನೇರವಾಗಿ ನೋಡುತ್ತಾ ಪ್ರಶ್ನಿಸಿದ ಅಧಿಕಾರಿ.
“ಒಂದು ರೀತೀಲಿ… ಅದು ಹಾಗೇನೇ.” ಗೋಕುಲ್‌ನ ದನಿ ಕುಗ್ಗಿತ್ತು.
“ಅದು ಯಾಕೆ ಅಂತ ಹೇಳ್ತೀರಾ?” ಟೈಟಸ್ ಮುಖ ಮುಂದೆ ತಂದ.
ಗೋಕುಲ್‌ನ ಉತ್ತರ ತಡೆದು ಬಂತು.
“ಇಲ್ಲ ನಂಗೊತ್ತಿಲ್ಲ. ಅವಳು ನಂಗೆ ಏನೂ ಹೇಳ್ಲಿಲ್ಲ.”
“ನೀವು ಕೇಳಬೇಕಾಗಿತ್ತು.” ಅಧಿಕಾರಿ ಪಟ್ಟು ಬಿಡಲಿಲ್ಲ.
“ಇವನು ಅಕ್ಕನ ಮದುವೆಗೂ ಬಂದಿರ್ಲಿಲ್ಲ. ಹೀಗಾಗಿ ಇವನೂ, ಅಕ್ಕನೂ ಸಂಪೂರ್ಣ ಅಪರಿಚಿತರು. ಸ್ವಲ್ಪ ದಿನಗಳ ನಂತರ ಎಲ್ಲವೂ ಸರಿಹೋಗುತ್ತೆ ಅಂತ ತಿಳಿದು ನಾನು ಸುಮ್ಮನಾಗಿಬಿಟ್ಟೆ. ಭಾವ ಸಹಾ ಹಾಗೇ ಅಂದುಕೊಂಡ್ರು” ಗೋಕುಲ್‌ನ ದನಿಯಲ್ಲಿ ಏಕಾ‌ಏಕಿ ಧೃಢತೆ ಕಂಡಿತ್ತು.
ನೋಟುಬುಕ್ಕಿನ ಮೇಲೆ ನಿಮಿಷಗಳ ಕಾಲ ಪೆನ್ನು ಓಡಿಸಿದ ಟೈಟಸ್ ತಲೆಯೆತ್ತಿ ನರಹರಿಯತ್ತ ತಿರುಗಿದ.
“ಮಿ. ನರಹರಿ, ನಿಮಗೂ ನಿಮ್ಮ ಅತ್ತಿಗೆಗೂ ಆಗಾಗ ಘರ್ಷಣೆ ನಡೀತಾ ಇತ್ತು. ನಿಮ್ಮ ಬರವನ್ನ ಆಕೆ ಇಷ್ಟ ಪಡ್ಲಿಲ್ಲ. ಅವರ ಕೈನ ಊಟ ಮಾಡೋದಕ್ಕೂ ಆಗದಷ್ಟು ಕೋಪ ನಿಮಗೆ ಅವರ ಮೇಲೆ.” ನರಹರಿಯ ಮುಖದಲ್ಲಿ ಬದಲಾಗುತ್ತಿದ್ದ ಬಣ್ಣಗಳನ್ನು ಗಮನಿಸುತ್ತಾ ಮುಂದುವರೆಸಿದ. “ನಿನ್ನೆ ರಾತ್ರಿ ನೀವು ಇದೇ ಮನೇಲಿ ಮಲಗಿದ್ರಿ. ಆ ಸಮಯದಲ್ಲಿ ಅವರ ಕೊಲೆ ಆಗಿದೆ. ನಿಮಗೆ ಅದ್ಯಾವುದೂ ಗೊತ್ತಿಲ್ಲ! ನಿಮ್ಮ ಹೇಳಿಕೆಯನ್ನ ನಾನು ನಂಬೋದಿಲ್ಲ.” ಕೊನೆಯ ವಾಕ್ಯ ಇರಿಯುವಂತಿತ್ತು.
ನರಹರಿ ಸರಕ್ಕನೆ ತಲೆಯೆತ್ತಿದ.
“ನಂಬೋದು ಬಿಡೋದು ನಿಮಗೆ ಸೇರಿದ್ದು. ನಾನು ನಿದ್ದೆ ಮಾಡಿದ್ದಂತೂ ನಿಜ.” ಅವನ ದನಿಯಲ್ಲಿ ಏಕಾ‌ಏಕಿ ಒರಟುತನ ಕಂಡಿತ್ತು. ಕೈ ಝಾಡಿಸಿ ಮೇಲೆದ್ದು ನಿಂತ.
ಟೈಟಸ್‌ಗೆ ಇದು ಅನಿರೀಕ್ಷಿತ. ಥಟ್ಟನೆ ಮೇಲೆದ್ದು ಒಂದು ಹೆಜ್ಜೆ ಮುಂದಿಟ್ಟು ಗಡಸು ದನಿಯಲ್ಲಿ ಹೇಳಿದ.
“ಮಿ. ನರಹರಿ! ಯಾರ ಜತೆ ಮಾತಾಡ್ತಾ ಇದೀರಿ ಅನ್ನೋ ಅರಿವಿದೆಯೇ ನಿಮಗೆ?”
ನರಹರಿಯ ಉತ್ತರ ಬಾಣದಂತೆ ಬಂತು.
“ನಿಮ್ಮಿಂದ ಸೌಜನ್ಯ ಕಲೀಬೇಕಾಗಿಲ್ಲ ನಾನು. ನಾನು ಸಂಯಮದಿಂದ ಎರಡು ಸಲ ಹೇಳಿದ ಮಾತನ್ನ ನೀವು ನಂಬದೇಹೋದಾಗ ದನಿ ಎತ್ತರಿಸಿ ಮಾತಾಡೋ ಅಗತ್ಯ ನನಗಿತ್ತು. ಆಯಮ್ಮ ತನ್ನ ಕರ್ಮಕ್ಕೆ ತಾನು ಕೊಲೆಯಾಗಿಹೋದ್ಲು. ಅದಕ್ಕೂ ನಂಗೂ ಯಾವ ಸಂಬಂಧವೂ ಇಲ್ಲ. ನೀವು ನೂರು ಸಲ ಪ್ರಶ್ನೆ ಮಾಡಿದ್ರೂ ನಾನು ಹೇಳೋದು ಇದನ್ನೇ.”
ಅಧಿಕಾರಿ ಮತ್ತೊಮ್ಮೆ ಸೋಜಿಗಕ್ಕೊಳಗಾದ. ನರಹರಿಗೆ ಏನೋ ಹೇಳಹೊರಟ ಗೋಕುಲ್‌ನನ್ನು ಕೈ ಅಡ್ಡತಂದು ತಡೆದ. ನರಹರಿಯ ಕಣ್ಣುಗಳ ಮೇಲೆ ನೋಟ ನೆಟ್ಟು ಗಂಭೀರ ದನಿಯಲ್ಲಿ ಹೇಳಿದ.
“ಈ ಕೊಲೆಗೂ ನಿಮಗೂ ಸಂಬಂಧ ಇದೆ ಅನ್ನೋ ಮಾತನ್ನ ನಾನು ಇದುವರೆಗೆ ಎತ್ತಿಲ್ಲ.”
“ನೇರವಾಗಿ ಹೇಳಿಲ್ಲ. ಆದ್ರೆ ನಿಮ್ಮ ಮಾತಿನ ಅರ್ಥ ಅದೇ ತಾನೇ? ಬೆಳಿಗ್ಗೆ ಬೆಳಿಗ್ಗೆನೇ ಎದ್ದು ನಿಮ್ಮ ಜತೆ ವಾದ ಮಾಡೋಕೆ ತಯಾರಿಲ್ಲ ನಾನು.” ಪಕ್ಕಕ್ಕೆ ತಿರುಗಿ ಎರಡು ಹೆಜ್ಜೆ ಮುಂದಿಟ್ಟ. ಅವನತ್ತ ಸರ್ರನೆ ನುಗ್ಗಿದ ಅಧಿಕಾರಿಯನ್ನು ಗೋಕುಲ್ ತಡೆದ.
“ಮಿ. ಟೈಟಸ್, ಸಮಾಧಾನ ತಂದ್ಕೊಳ್ಳಿ. ಅವನೀಗ ಉದ್ರೇಕದಲ್ಲಿದ್ದಾನೆ. ಇನ್ನೂ ಒಂದೆರದು ಗಂಟೆ ನಿದ್ದೆ ಮಾಡ್ಲಿ. ಆ ನಂತರ ಸ್ನಾನ ಮಾಡ್ಸಿ ನಾನೇ ಸ್ತೇಷನ್‌ಗೆ ಕರಕೊಂಡು ಬರ್ತೀನಿ. ಈಗ ಅವನನ್ನು ಅವನ ಪಾಡಿಗೆ ಬಿಟ್ಟುಬಿಡಿ ಪ್ಲೀಸ್.”

* * *

-ಮೂರು-

ಸರ್ಕಲ್ ಇನ್ಸ್‌ಪೆಕ್ಟರ್‌ರ ಬೈಗಳು, ನಿನ್ನೆ ರಾತ್ರಿಯ ಪ್ರಕರಣದ ತಲೆ ತಿರುಗಿಸುವ ಗೊಂದಲ- ಎರಡೂ ಒಟ್ಟಿಗೆ ಸೇರಿ ಸಬ್ ಇನ್ಸ್‌ಪೆಕ್ಟರ್ ಟೈಟಸ್‌ನ ನೆಮ್ಮದಿಯನ್ನು ಸಂಪೂರ್ಣವಾಗಿ ಹಾಳು ಮಾಡಿಬಿಟ್ಟಿದ್ದವು. ರಾತ್ರಿ ಬೇರೆ ನಿದ್ದೆ ಇಲ್ಲ.
ಬೆಳಿಗಿನ ಹೊತ್ತಿಗೆ ತಲೆ “ಧಿಂ” ಎನ್ನುತ್ತಿತ್ತು. ಆತುರಾತುರವಾಗಿ ಮೈಮೇಲೆ ನೀರು ಸುರಿದುಕೊಂಡು ಯೂನಿಫಾರ್ಮ್ ಧರಿಸಿದ. ಡೈನಿಂಗ್ ಟೇಬಲ್‌ಗೆ ಬಂದು ಹೆಂಡತಿ ಇಟ್ಟಿದ್ದ ದೋಸೆಗೆ ಕೈಹಾಕಿದ. ಮನದ ತುಂಬಾ ನಿಲ್ಲದ ಗೊಂದಲಗಳ ಸಂತೆ. ಆತುರದಲ್ಲಿ ಚಟ್ನಿಯಲ್ಲಿ ಹಾಗೆಯೇ ಉಳಿದಿದ್ದ ಮೆಣಸಿನಕಾಯಿಯನ್ನು ಕಚಕ್ಕನೆ ಅಗಿದ. ನಾಲಿಗೆಯಲ್ಲಿ ಭಯಂಕರ ಖಾರ ಜ್ವಾಲೆಯಂತೆ ಭುಗಿಲೆದ್ದಿತು. ಕೆಮ್ಮು ಒತ್ತರಿಸಿಕೊಂಡು ಬಂತು. ಕಣ್ಣುಗಳಲ್ಲಿ ಚಿಮ್ಮಿದ ನೀರು. ನೀರಿನ ಲೋಟಕ್ಕಾಗಿ ಅತ್ತಿತ್ತ ಕಣ್ಣಾಡಿಸಿದ. ಅದು ಕಾಣಲಿಲ್ಲ.
“ನೀರೂ.” ಕೂಗಿದ.
ದೋಸೆ ಹುಯ್ಯುತ್ತಿದ್ದ ರೋಸಮ್ಮನಿಗೆ ಗಂಡನ ಅರ್ತನಾದ ಸರಿಯಾಗಿ ಕೇಳಿಸಲಿಲ್ಲ.
“ಕರೆದ್ರಾ?” ಅಡಿಗೆಮನೆಯಿಂದಲೇ ಕೂಗಿದಳು.
ಎರಡು ಸಲ ಕೆಮ್ಮಿದ ಟೈಟಸ್. “ಹ್ಞೂಂ. ನೀರ್ ತಗೋಂಡ್ ಬಾ.” ದನಿ ಎತ್ತರಿಸಿದ.
“ನೀರಾ?” ಹೆಂಡತಿಯಿಂದ ನೀರಿನ ಬದಲು ಮತ್ತೆ ಪ್ರಶ್ನೆ ಬಂತು. ರೋಸಮ್ಮನ ತಲೆಯಲ್ಲಿದ್ದುದು ಮಧ್ಯಾಹ್ನ ಚಂದ್ರಿಕಾಳ ಮನೆಯಲ್ಲಿನ ಕಿಟಿ ಪಾರ್ಟಿಗೆ ಯಾವ ಸೀರೆ ಉಟ್ಟರೆ ಚಂದ ಎಂಬ ಮಹತ್ತರ ಪ್ರಶ್ನೆ.
“ಹ್ಞೂಂ ಅದೇ. ಬೇಗ ತಗೋಂಡ್ ಬಾ” ಮತ್ತೆರಡು ಸಲ ಕೆಮ್ಮಿದ.
“ಕುಡಿಯೋದಕ್ಕಾ?” ರೋಸಮ್ಮನಿಂದ ಮತ್ತೊಂದು ಪ್ರಶ್ನೆ.
ಅಲ್ಲಿಗೆ ಟೈಟಸ್‌ನ ಸಹನೆಯ ಕಟ್ಟೆಯೊಡೆಯಿತು.
“ಮತ್ತೇನು ತಿಕ ತೊಳೆಯೋದಕ್ಕೆ ಅಂದ್ಕೊಂಡ್ಯಾ?” ಅರಚಿದ.
ರೋಸಮ್ಮನಿಗೆ ಇದು ಸರಿಯಾಗಿ ಕೇಳಿಸಿತು.
“ತಗೋಳ್ರಿ, ಅದನ್ನೇ ತೊಳಕೊಳ್ರೀ.” ಹೇಳುತ್ತಾ ನೀರಿನ ಚೊಂಬನ್ನು ತಂದು ಟೇಬಲ್ ಮೇಲೆ ಕುಕ್ಕಿ ಅಡಿಗೆಮನೆಯೊಳಗೆ ಹೋಗಿಬಿಟ್ಟಳು.
ಟೈಟಸ್‌ನ ಮೈಯೆಲ್ಲಾ ಉರಿದುಹೋಯಿತು. “ಎಲಾ ನಿನ್ನ” ಎಂದು ಅಬ್ಬರಿಸಿ ಧಡಕ್ಕನೆ ಮೇಲೆದ್ದವನು ತಲೆಯ ಮೇಲೇ ಮೊಳಗಿದ ಕರೆಗಂಟೆಯ ಸದ್ದಿಗೆ ಬೆಚ್ಚಿ ನಿಂತಿದ್ದಂತೇ ಮತ್ತೆರಡು ಸಲ ಭಯಂಕರವಾಗಿ ಕೆಮ್ಮಿದ.
ರೋಸಮ್ಮ ಬಾಗಿಲತ್ತ ನಡೆದಳು.
“ಕೆಮ್ತಾ ಇರೋರು ಸಾಹೇಬ್ರೋ ಅಥವಾ ಮನೇನೇ ಕೆಮ್ಕೋತಾ ಇದೆಯೋ? ಈಪಾಟೀ ಸದ್ದು!” ಕೇಳುತ್ತಾ ಒಳಬಂದ ಹೆಡ್ ಕಾನ್ಸ್‌ಟೇಬಲ್ ಕೋದಂಡಯ್ಯ.
ಮಾತುಮಾತಿಗೂ “ಈಪಾಟೀ…” ಎಂದು ಸೇರಿಸುತ್ತಿದ್ದ ಅವನನ್ನು ಸ್ಟೇಷನ್‌ನಲ್ಲಿ ಎಲ್ಲರೂ “ಈಪಾಟೀ ಕೋದಂಡಯ್ಯ” ಅಂತಲೇ ಕರೆಯುತ್ತಿದ್ದರು.
ಈಪಾಟೀ ಕೋದಂಡಯ್ಯ ಒಳಬಂದವನೇ ಟೈಟಸ್‌ನತ್ತ ಒಮ್ಮೆ ನೋಡಿ ಮುಖದ ತುಂಬಾ ಕಿರುನಗೆ ತಂದುಕೊಂಡ.
“ಇದೇನ್ ದೇವ್ರೂ ಇದೂ? ಕಣ್ನಲ್ಲಿ ಈಪಾಟೀ ನೀರು!” ಅಂದವನೇ ಗೋಡೆಯ ಮೇಲಿದ್ದ ಕ್ರಿಸ್ತನ ಫೋಟೋದತ್ತ ತಿರುಗಿ ಹೇಳಿದ. “ಅಪ್ಪಾ ಯೇಸುಸ್ವಾಮಿ, ಈವತ್ತು ನನ್ನ ಕಣ್ಣಿಗೆ ಏನೇನು ಬೀಳೋ ಹಾಗೆ ಮಾಡ್ತಾ ಇದೀಯಪ್ಪಾ! ಅಲ್ಲಿ ನೋಡಿದ್ರೆ ದೊಡ್ಡ ಸಾಹೇಬರ ಮೇಲೆ ಅಮ್ಮಾವ್ರ ಸವಾರಿ. ಇಲ್ಲಿ ನೋಡಿದ್ರೆ ಚಿಕ್ಕ ಸಾಹೇಬ್ರ ಕಣ್ನಲ್ಲಿ ತಲಕಾವೇರಿ.” ರೋಸಮ್ಮನತ್ತ ತಿರುಗಿ ನಕ್ಕ.
ಚೊಂಬಿನಲ್ಲಿದ್ದ ನೀರನ್ನೆಲ್ಲಾ ಗಂಟಲಿಗೆ ಸುರಿದುಕೊಂಡ ಟೈಟಸ್ ನ್ಯಾಪ್‌ಕಿನ್‌ನಿಂದ ಕಣ್ಣು ಮೂಗು ಒರೆಸುತ್ತಾ ಪ್ರಶ್ನೆ ಹಾಕಿದ.
“ಸಾಹೇಬರ ಮನೇಗೆ ಹೋಗಿದ್ದೆಯೇನು?”
“ಹ್ಞೂಂ ಅಲ್ಲಿಂದಾನೇ ಬರ್ತಾ ಇದೀನಿ.” ಕುರ್ಚಿ ಎಳೆದು ಕೂತ ಕೋದಂಡಯ್ಯ.
“ಬೆಳಿಗ್ಗೆಬೆಳಿಗ್ಗೇನೇ ಅಲ್ಲಿಗೆ ಪಾದ ಬೆಳೆಸಿದ್ದೀಯ! ಏನು ವಿಷ್ಯ?” ಮುಖ ಮುಂದೆ ತಂದ ಟೈಟಸ್. ಅವನ ತಲೆಗೆ ಮತ್ತೊಂದು ಜೇನುಹುಳು ನುಗ್ಗಿತ್ತು.
“ವಿಷಯ ಭಾರೀದೇ. ಅದನ್ನ ಹೇಳೋದಕ್ಕೆ ಮೊದ್ಲು ನಂಗೆ ಒಂದು ಕಪ್ಪು ಮಸಾಲೆ ಟೀ ಬೇಕು. ಅಮ್ಮಾವ್ರ ಕೈನ ಮಸಾಲೆ ಟೀ ನಾಲಿಗೆಗೆ ಬಿದ್ರೇನೇ ಹೇಳಬೇಕಾದ್ದನ್ನ ಹೇಳಬೇಕಾದ ರೀತೀಲಿ ಹೇಳೋದಿಕ್ಕೆ ನನ್ ತಲೇಗೆ ಹೊಳೆಯೋದು.”
ಅವನನ್ನೊಮ್ಮೆ ಗಂಡನನ್ನೊಮ್ಮೆ ನೋಡುತ್ತಾ ಅಲ್ಲೇ ನಿಂತಿದ್ದ ರೋಸಮ್ಮ ನಗುತ್ತಾ ಅಡಿಗೆಮನೆಯತ್ತ ನಡೆದಳು.
‘ಇನ್ನು ಇವನು ಬಾಯಿ ಬಿಡುವುದು ಟೀ ಗಂಟಲಿಗೆ ಇಳಿದ ಮೇಲೇ.’ ಮನಸ್ಸಿನಲ್ಲೇ ಗೊಣಗಿಕೊಂಡ ಟೈಟಸ್. ತಲೆಯಲ್ಲಿ ಜೇನುಹುಳು ಗುಂಯ್‌ಗುಟ್ಟಿತು.
‘ಇಷ್ಟು ಬೆಳಿಗ್ಗೆಯೇ ಇವನು ಸಾಹೇಬರ ಮನೆಗೆ ಯಾಕೆ ಹೋಗಿದ್ದ? ವಿಷಯ ಭಾರಿಯದೇ ಅನ್ನುತ್ತಿದ್ದಾನೆ! ಅವರು ಇವನಿಗೆ ಏನೂ ಹೇಳಿರಬಹುದು? ನಿನ್ನೆ ಬೇರೆ ನನ್ನ ಮೇಲೆ ಹುಚ್ಚುನಾಯಿಯ ಹಾಗೆ ಎಗರಾಡಿದ್ದರು.’
ಅವರ ಬೈಗಳುಗಳು ನೆನಪಿಗೆ ಬಂದವು. ಒಮ್ಮೆ ಲೊಚಗುಟ್ಟಿ ಬಾಯಿ ತೆರೆದ.
“ಅಲ್ಲಾ ಕೋದಂಡಯ್ಯ. ನಾನು ಏನೂ ಮಾಡಿಯೇ ಇಲ್ಲ ಅನ್ನೋ ಹಾಗೆ ಮಾತಾಡಿಬಿಟ್ರಲ್ಲ ಅವರು! ನಂಗಂತೂ ಈ ಚಾಕರಿಯೇ ಬೇಜಾರು ಹುಟ್ಟಿಸಿಬಿಟ್ಟಿದೆ. ಯಾವನಿಗೆ ಬೇಕು ಇದು? ರಾಜೀನಾಮೆ ಬರೆದು ಎಸೆದುಬಿಡ್ತೀನಿ. ಮರ್ಯಾದೆಯಾಗಿ ಬದುಕೋದಿಕ್ಕೆ ನೂರು ದಾರಿ ಇವೆ. ಹುಟ್ಟಿಸಿದ ದೇವರು ಹುಲ್ಲು ಮೇಯಿಸೋದಿಲ್ವಾ?” ಬೇಸರ ತೋಡಿಕೊಂಡ. ತಲೆ ಭಾರವಾಗಿ ಕೆಳಗೆ ಬಾಗಿತು.
ಕೋದಂಡಯ್ಯನ ಮುಖದಲ್ಲಿ ಕಿರುನಗೆ ಕಾಣಿಸಿಕೊಂಡಿತು.
“ಹುಲ್ಲು ಮಾತ್ರ ಯಾಕೆ? ದೋಸೆ ಚಟ್ನೀನೂ ಮೇಯೀಸ್ತಾನೆ.” ನಗುತ್ತಾ ಟೈಟಸ್ ತಿನ್ನದೇ ಬಿಟ್ಟಿದ್ದ ತಿಂಡಿಯ ತಟ್ಟೆಯತ್ತ ಕೈಮಾಡಿದ ಕೋದಂಡಯ್ಯ.
ಅಧಿಕಾರಿ ಸರಕ್ಕನೆ ತಲೆಯೆತ್ತಿದ.
“ನಿಂಗೆ ಇದೂ ತಮಾಷೆ. ಸೀರಿಯಸ್‌ನೆಸ್ಸೇ ಇಲ್ಲ.” ಸಿಡುಕಿದ.
ಕೋದಂಡಯ್ಯನ ನಗೆ ದೊಡ್ಡದಾಯಿತು.
“ನಾನು ಭಾಳಾ ಸೀರಿಯಸ್ಸಾಗೇ ಹೇಳ್ತಾ ಇದೀನಿ ಗುರುವೇ. ಈಗ ಈ ದೋಸೆ ಚಟ್ನಿ ತಿನ್ನಿ. ಅದೇ ದೇವರು ಮಧ್ಯಾಹ್ನ ಬಿರಿಯಾನಿ ಮೇಯಿಸ್ತಾನೆ.”
‘ಇವನದು ಯಾವಾಗಲೂ ಇದೇ. ಬರೀ ತರಲೆ ಮಾತು.’ ಮನದಲ್ಲೇ ಗೊಣಗಿಕೊಂಡ ಟೈಟಸ್. ‘ಆದರೂ ಇವನ ಮೇಲೆ ರೇಗಲಾಗದು. ಇವನ ಸಹಕಾರವಿಲ್ಲದೇ ಯಾವ ಕೇಸನ್ನಾದರೂ ಮುಕ್ತಾಯಗೊಳಿಸಲು ನನಗೆ ಇದುವರೆಗೆ ಸಾಧ್ಯವಾಗಿಲ್ಲ. ಮಾತಿನ ಮೋಡಿ ಹಾಕುತ್ತಾ ಎಲ್ಲ ಕಡೆಗೂ ನುಗ್ಗಿ ವಿಷಯ ಹೊರತೆಗೆಯಬಲ್ಲ ಚಾಣಾಕ್ಷ ಇವನು. ಇವನನ್ನು ದೂರ ಮಾಡಿಕೊಳ್ಳಲಾಗದು.’
“ರಾತ್ರಿ ವಿವೇಕಾನಂದ ನಗರದ ಮನೇಲಿ ಏನೋ ನಡೀತಂತೆ. ತಾವು ಅರ್ಧರಾತ್ರಿಯಿಂದ ಬೆಳಿಗ್ಗೆ ಕೋಳಿ ಕೂಗೂವರ್‍ಗೂ ಅಲ್ಲಿ ಠಿಕಾಣಿ ಹೂಡಿದ್ರಂತೆ?” ಕೋದಂಡಯ್ಯ ಮಾತು ತೆಗೆದ.
“ಹ್ಞೂಂ ಕೋದಂಡಯ್ಯ. ಅದೊಂದು ತಲೆ ತಿರುಗಿಸೋ ಪ್ರಕರಣ. ನಂಗಂತೂ ತಲೆ ಕೆಟ್ಟು ಗೊಬ್ರ ಆಗ್ಬಿಟ್ಟಿದೆ ಕಣಯ್ಯಾ.” ಹಣೆಗೆ ಕೈ ಒತ್ತಿದ ಟೈಟಸ್.
“ಅದು ಯಾವಾಗ್ಲೂ ಗೊಬ್ಬರವೇ ತಾನೆ…” ಚಹದ ಕಪ್ಪನ್ನು ಹಿಡಿದು ಬಂದ ರೋಸಮ್ಮನನ್ನು ಕಂಡು ಕೋದಂಡಯ್ಯನ ಮಾತು ಅಷ್ಟಕ್ಕೇ ನಿಂತಿತು. ಅಷ್ಟರಲ್ಲಾಗಲೇ ಅವನ ಮಾತನ್ನು ಕೇಳಿಸಿಕೊಂಡಿದ್ದ ರೋಸಮ್ಮನ ಮುಖದಲ್ಲಿ ಕಿರುನಗೆ ಮಿಂಚಿತು. ಟೈಟಸ್ ಅವಡುಗಚ್ಚಿದ.
ಅವನತ್ತ ಯಾವ ಗಮನವನ್ನೂ ಕೊಡದೇ ಕೋದಂಡಯ್ಯ ರೋಸಮ್ಮನ ಕೈನಿಂದ ಚಹದ ಕಪ್ಪನ್ನು ಕೈಗೆ ತೆಗೆದುಕೊಂಡ. ಕಪ್ಪಿಗೆ ತುಟಿಯೊತ್ತಿದವನು ಸರಕ್ಕನೆ ತುಟಿ ಹಿಂದೆ ತೆಗೆದ.
“ಏನ್ ತಾಯೀ, ನೀವು ರೋಸಮ್ಮನೋ ಇಲ್ಲಾ ಮೋಸಮ್ಮನೋ? ಟೀ ಈಪಾಟೀ ಒಗರು. ಸಕ್ರೇನೇ ಹಾಕಿಲ್ವಲ್ಲ ನೀವು?” ಮುಖ ಕಿವಿಚಿದ.
“ಅಯ್ಯಯ್ಯೋ ಸಾರೀ ಕೋದಂಡಯ್ಯ. ನಾನು ಗಮನಿಸ್ಲೇ ಇಲ್ಲ. ನನ್ ತಲೆನೂ ಗೊಬ್ರ ಆಗ್ಬಿಟ್ಟಿದೆ ನೋಡು.” ರೋಸಮ್ಮ ಸಕ್ಕರೆಯ ಕುಪ್ಪಿಯನ್ನು ಅವನ ಮುಂದೆ ಸರಿಸಿದಳು. ಗಂಡನತ್ತ ತಿರುಗಿ ಮುಸುಮುಸು ನಗೆ ಹರಿಸಿದಳು.
ಟೈಟಸ್ ಉರಿದುಹೋದ. ‘ಇಬ್ಬರೂ ಸೇರಿ ನನ್ನನ್ನು ತಮಾಷೆ ಮಾಡುತ್ತಿದ್ದಾರಲ್ಲ.’ ಹಲ್ಲು ಕಡಿದ. ಹೆಂಡತಿಯತ್ತ ಉರಿನೋಟ ಬೀರಿದ. ಅವಳ ನಗೆ ದೊಡ್ಡದಾಯಿತು. ಬಾಯಿಗೆ ಸೆರಗು ಒತ್ತಿ ಅಡಿಗೆಮನೆಯತ್ತ ಓಡಿದಳು.
ಟೀಯನ್ನು ಸೊರಸೊರ ಹೀರಿದ ಕೋದಂಡಯ್ಯ ಟೈಟಸ್‌ನ ಗಮನ ಸೆಳೆದ.
“ರಾತ್ರಿ ಏನು ನಡೀತು ಸ್ವಲ್ಪ ಹೇಳ್ತೀರಾ ಸ್ವಾಮೀ?”
ಟೈಟಸ್‌ನ ಮುಖ ಅವನತ್ತ ತಿರುಗಿತು.
“ಅದೊಂದು ರಗಳೆ ಕಣಯ್ಯ. ಮಧ್ಯರಾತ್ರಿ ಹೊತ್ನಲ್ಲಿ ವಿವೇಕಾನಂದ ನಗರದ ಆ ಮನೇಲಿ ಬೆಂಕಿ ಬಿದ್ದಿದೆ, ಬೆಂಕೀನಲ್ಲಿ ಯಾವುದೋ ಮನುಷ್ಯ ದೇಹ ಉರಿದುಹೋಗಿದೆ ಅಂತ ಸ್ಟೇಷನ್‌ಗೆ ಫೋನ್ ಬಂತಂತೆ. ಫಕ್ರುದ್ದೀನ್ ಅದನ್ನ ಮನೇಲಿದ್ದ ನನಗೆ ತಲುಪಿಸ್ದ. ತಕ್ಷಣ ಅಲ್ಲಿಗೆ ಓಡ್ದೆ. ಮನೇ ಬಾಗಿಲು ಲಾಕ್ ಆಗಿತ್ತು. ಬೆಡ್‌ರೂಂನ ಹಾಸಿಗೆ ಬೆಂಕೀಲಿ ಅರ್ಧಕ್ಕರ್ಧ ಸುಟ್ಟುಹೋಗಿತ್ತು. ಹಾಸಿಗೆ ಮೇಲೆ ಒಂದು ಹೆಂಗಸಿನ ಶವ. ಅದೂ ಸಾಕಷ್ಟು ಸುಟ್ಟು ಹೋಗಿತ್ತು ಕಣಯ್ಯ. ಯಾರೋ ಆಯಮ್ಮನ್ನ ಕೊಲೇ ಮಾಡೀ ಹಾಸಿಗೆ ಮೇಲೆ ಮಲಗ್ಸಿ ಬೆಂಕಿ ಹಾಕಿ ಓಡ್ಹೋಗಿದ್ದಾರೆ ಅಂತ ನೋಡಿದ ಕೂಡ್ಲೇ ತಿಳಿದುಹೋಯ್ತು.”
“ಸತ್ತ ಮೇಲೆ ಬೆಂಕಿ ಹಾಕ್ಬೇಕು ತಾನೆ? ಕೊಲೆಗಾರ ಮಾಡಬೇಕಾದದ್ದನ್ನೇ ಮಾಡಿದ್ದಾನಲ್ಲ?” ಚಹದ ಕಪ್ಪನ್ನು ಮೇಜಿನ ಮೇಲಿಡುತ್ತಾ ಹೇಳಿದ ಕೋದಂಡಯ್ಯ. ಮುಖದ ತುಂಬ ತುಂಟನಗೆ.
“ಅದೇನು ಅವನ ಪರ ಮಾತಾಡ್ತಿದೀಯಲ್ಲ? ಅವನೇನು ನಿನ್ನ ಚಿಕ್ಕಪ್ಪನ ಮಗನೋ ಹೇಗೆ?” ಟೈಟಸ್ ಕೆಣಕಿದ.
ಕೋದಂಡಯ್ಯ ಹಣೆ ಬಡಿದುಕೊಂಡ.
“ಬಿಡ್ತು ಅನ್ನಿ. ಕೊಲೆಗಾರ ನನ್ನ ಚಿಕ್ಕಪ್ಪನ ಮಗ! ಶಿವಶಿವಾ. ನಂಗೆ ಚಿಕ್ಕಪ್ಪನೇ ಇಲ್ಲ. ಇರೋರೆಲ್ಲ ದೊಡ್ಡಪ್ಪಂದೀರು ಮಾತ್ರ.”
“ಮತ್ತೆ…! ಹೇಳೋದನ್ನ ತೆಪ್ಪಗೆ ಕೇಳು ಮೊದ್ಲು. ನಿನ್ನ ಹರಕುಬಾಯನ್ನ ಆಮೇಲೆ ತೆಗೆಯೋವಂತೆ.”
ಕೋದಂಡಯ್ಯ ನಾಟಕೀಯವಾಗಿ ಬಾಯಿಯ ಮೇಲೆ ಬೆರಳಿಟ್ಟುಕೊಂಡ.
“ನೋಡು ಕೋದಂಡಯ್ಯ, ಕೊಲೆಗಾರನ ಸುಳಿವು ಒಂಚೂರೂ ಇಲ್ಲ. ಅವನು ಭಾಳಾ ಚಾಲಾಕಿ ಅಂತ ಕಾಣುತ್ತೆ.”
“ಕೊಲೆ ನಡೆದ ಮೊದಲ ದಿನ ಎಲ್ಲ ಕೊಲೆಗಾರ್ರೂ ಭಾಳಾ ಚಾಲಾಕಿಯಾಗೇ ಕಾಣ್ತಾರೆ. ನಾಕು ದಿನದಲ್ಲಿ ಅವರ ಬಂಡವಾಳ ಬಯಲಾಗಿಬಿಡುತ್ತೆ. ಹ್ಞೂಂ ಮುಂದೆ ಹೇಳಿ.”
“ಮುಂದೆ ಏನ್ ಹೇಳ್ಲಿ? ಪೋಸ್ಟ್‌ಮಾರ್ಟಂ ರಿಪೋರ್ಟ್ ಬಂದ ಮೇಲೆ ಕೇಳು. ಆಗ ಹೇಳೋದಕ್ಕೆ ಏನಾದ್ರೂ ಇರತ್ತೆ.”
“ಪೋಸ್ಟ್‌ಮಾರ್ಟಂ ರಿಪೋರ್ಟ್ ಈವತ್ತು ಬರಲ್ಲ. ಸರ್ಕಾರೀ ಆಸ್ಪತ್ರೆ ಡಾಕ್ಟಟ್‌ಗಳು ಈವತ್ತು ಸ್ಟ್ರೈಕ್ ಮಾಡ್ತಾ ಇದಾರೆ ಅನ್ನೋದನ್ನ ನೀವು ಮರೆತ ಹಾಗಿದೆ. ಅದರ ಬಗ್ಗೆ ಈಗ ತಲೆ ಕೆಡಿಸಿಕೊಳ್ಳೋದು ಬೇಡ. ರಾತ್ರಿ ನೀವು ಮಾಡಿದ ಸಾಧನೆ ಬಗ್ಗೆ ಒಂದು ನಾಲ್ಕು ಮಾತು ಹೇಳಿ. ಹೋದೋರು ಬರೀ ಸುಟ್ಟಮೂತಿಯ ಹೆಣಾ ನೋಡ್ಕೊಂಡು ಹಿಂದಕ್ಕೆ ಬಂದ್ಬಿಟ್ರಾ? ಬದುಕಿರೋರ್‍ಯಾರೂ ಸಿಕ್ಕಿ ಏನೂ ಹೇಳ್ಲಿಲ್ವಾ? ಅಥವಾ ನೀವೇ ಕೇಳ್ಲಿಲ್ವಾ?” ನಕ್ಕ ಕೋದಂಡಯ್ಯ.
“ಸಿಕ್ಕಿದ್ರು ಕಣಯ್ಯ. ಪಕ್ಕದ ಮನೇ ಹುಡ್ಗಿ, ಪಾಪ ಒಂದು ಕಾಲು ಕುಂಟು. ಪಕ್ಕದ ಮನೆಗೆ ಬೆಂಕಿ ಬಿದ್ದಿರೋದನ್ನ ನೋಡಿ ಕೋಲೂರಿಕೊಂಡು ಓಡಿಹೋಗಿ ಕಿಟಕಿ ಗಾಜು ಒಡೆದುಹಾಕಿ ಒಳಕ್ಕೆ ಪೈಪ್‌ನಿಂದ ನೀರು ಹಾಯ್ಸಿ ಬೆಂಕಿ ಆರ್‍ಸಿದಾಳೆ ಕಣಯ್ಯ. ಒಂದ್ಸಲ ಶಾಭಾಸ್ ಅನ್ನಬೇಕು ಅವಳ ಸಾಹಸಕ್ಕೆ.”
“ಅನ್ನೋಣ ಬಿಡಿ, ಅದಕ್ಕೇನಂತೆ? ಒಂದಲ್ಲದಿದ್ರೆ ಎರಡ್ಸಲ ಅನ್ನೋಣ. ಮುಂದೆ ಹೇಳಿ. ಸತ್ತವಳು ಯಾರಂತೆ?”
“ಅದೇ ಮನೆ ಹೆಂಗ್ಸು ಕಣಯ್ಯ. ದೇವಕಿ ಅಂತ ಹೆಸ್ರು.”
“ಐ ಸೀ. ಮನೇಲಿ ಬೇರೆ ಯಾರೂ ಇರ್ಲಿಲ್ವಾ? ಅವಳಿಗೆ ಗಂಡ ಗಿಂಡ ಅಂತ ಯಾರೂ ಇಲ್ವಾ?’
“ಇದ್ದಾನಂತೆ ಕಣಯ್ಯ. ಆದ್ರೆ ಆ ಮನುಷ್ಯ ಎಲ್ಲೋ ಕಾಣ್ತಾ ಇಲ್ಲ.”
“ಅದೆಲ್ಲಿ ಹಾಳಾಗಿಹೋಗಿದ್ದಾನಂತೆ?”
“ಭಾರೀ ಬಿಸಿನೆಸ್‌ಮ್ಯಾನ್ ಕಣಯ್ಯ ಅವ್ನು. ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ದೊಡ್ಡ ಟೆಕ್ಸ್‌ಟೈಲ್ ಫ್ಯಾಕ್ಟರಿ ಇದೆ ಅವಂಗೆ. ದಿನಪೂರ್ತಿ ಅಲ್ಲೆ ಬಿದ್ದಿರ್ತಾನೆ. ರಾತ್ರಿ ಮನೇಗೆ ಬರೋದು ಹನ್ನೊಂದು, ಹನ್ನೆರಡಾದ ಮೇಲೇ ಅಂತೆ. ನಿನ್ನೆ ರಾತ್ರಿ ಮಾತ್ರ ಅವ್ನು ಮನೆಗೆ ಬರ್‍ಲೇ ಇಲ್ಲ. ಬೆಳಗಿನ ಜಾವದವರೆಗೂ ಅವನ ಸುಳಿವೇ ಇಲ್ಲ.”
“ಬರ್‍ಲೇ ಇಲ್ಲ ಅಂದ್ರೆ! ಅದೆಲ್ಲಿ ನೆಗೆದುಬಿದ್ದಿದ್ದಾನೆ ಅವ್ನು?”
“ಅದು ನಂಗೊತ್ತಿಲ್ಲ ಕಣಯ್ಯ. ಬೆಳಿಗ್ಗೆಬೆಳಿಗ್ಗೇನೇ ನೀನು ಬೇರೆ ವಕ್ಕರಿಸಿ ನನ್ನ ತಲೆ ತಿನ್ಬೇಡ.”
“ಹ್ಞೂ ಸರಿ. ಉದ್ದಾರವಾಯ್ತು.” ಕೋದಂಡಯ್ಯ ಲೊಚಗುಟ್ಟಿದ.
“ಯಾಕಯ್ಯ ಹಲ್ಲೀ ಹಂಗೆ ಲೊಚಗುಟ್ತೀಯ? ಶಕುನ ಗಿಕುನ ಹೇಳ್ತಿದೀಯೋ ಹ್ಯಾಗೆ?”
“ಶಕುನ! ಇನ್ನು ಅದು ಬೇರೆ ಕೇಡು. ಹೆಂಡ್ತಿ ಕೊಲೆ ಆದ್ರೆ ಮೊದ್ಲು ಹಿಡೀಬೇಕಾದದ್ದು ಗಂಡನ್ನ ಅನ್ನೋ ಮೂಲಮಂತ್ರಾನ್ನೇ ಮರೆತು ಅವನೆಲ್ಲಿದ್ದಾನೋ ಗೊತ್ತೇ ಇಲ್ಲ ಅಂತ ಕೈ‌ಆಡಿಸಿಬಿಡ್ತಾ ಇದೀರಲ್ಲ? ಏನ್ ಹೇಳ್ಲಿ ನಿಮ್ಮ ಬುದ್ದಿವಂತಿಕೆಗೆ?”
ಟೈಟಸ್ ಅವನನ್ನೇ ದುರುಗುಟ್ಟಿಕೊಂಡು ನೋಡಿದ.
“ನಾನೇನು ಸುಮ್ನೆ ಕೂತಿದ್ದೀನಿ ಅಂದ್ಕೊಂಡ್ಯಾ? ಅವನ ಫ್ಯಾಕ್ಟರಿ, ಅವನಿರಬೋದಾದ ಕಡೆಗೆಲ್ಲಾ ಫೋನ್ ಮಾಡ್ದೆ. ಅವನ ಸುಳಿವು ಸಿಕ್ತಾ ಇಲ್ಲ. ಫಾಕ್ಟರಿ ಮ್ಯಾನೇಜರ್ ಹೇಳೋ ಪ್ರಕಾರ ಆತ ರಾತ್ರಿ ಹತ್ತೂವರೆಗೇ ಮನೆಗೆ ಹೊರಟ್ನಂತೆ. ಮನೆಗಂತೂ ತಲುಪಿಲ್ಲ. ಎಲ್ಲಿ ಹಾಳಾದನೋ ಗೊತ್ತಿಲ್ಲ.”
“ಅಲ್ಲಾ ಗುರೂ, ಭಾರೀ ಬಿಸಿನೆಸ್‌ಮ್ಯಾನ್ ಅಂತೀರಿ. ಅವನತ್ರ ಸೆಲ್‌ಫೋನ್ ಇದ್ದೇ ಇರುತ್ತೆ. ಅದರ ನಂಬರ್‌ಗೆ ಫೋನ್ ಮಾಡಬಾರ್‍ದಾ? ಅದನ್ನೂ ನಾನೇ ಹೇಳಿಕೊಡಬೇಕಾ?” ಕೋದಂಡಯ್ಯ ನಕ್ಕ.
“ನೀ ಬಂದು ಹೇಳೋ ತನಕ ಕಾಯ್ಕೊಂಡು ಕೂತಿದ್ದೀನಿ ಅಂದ್ಕೊಂಡ್ಯಾ? ಆ ನಂಬರ್‌ಗೆ ರಾತ್ರಿ ಒಂದು ಹತ್ತು ಸಲ ಡಯಲ್ ಮಾಡ್ದೆ. ಅದು ರಿಂಗ್ ಆಗುತ್ತೆ. ಆದ್ರೆ ಆ ಮನುಷ್ಯ ಮಾತಾಡ್ತಾ ಇಲ್ಲ.”
“ನಿದ್ದೆ ಗಿದ್ದೆ ಮಾಡಿಬಿಟ್ಟಿದ್ದಾನೋ ಏನೋ.” ಕೋದಂಡಯ್ಯ ಮೆಲ್ಲಗೆ ದನಿ ಎಳೆದ.
ಟೈಟಸ್ ಕೈ ಆಡಿಸಿಬಿಟ್ಟ.
“ನಿಂಗೆಲ್ಲೋ ತಲೆಕೆಟ್ಟಿದೆ. ಮನೆಗೇ ಬರದೇ ಹೋದೋನು ಅದೆಲ್ಲಯ್ಯ ನಿದ್ದೆ ಮಾಡ್ತಾನೆ?”
“ಹ್ಞುಂ! ನೀವಿನ್ನೂ ಎಳಸು ಅನ್ನೋದನ್ನ ಮರೆತುಬಿಟ್ಟಿದ್ದೆ. ಈ ಮನೆಗೆ ಬರದೇಹೋದ್ರೆ ಅವ್ನು ಇನ್ನೊಂದು ಮನೇಗೆ ಹೋಗಿರ್ತಾನೆ. ಈ ಬಿಸಿನೆಸ್‌ಮ್ಯಾನ್‌ಗಳಿಗೆ ಒಂದಕ್ಕಿಂತಾ ಹೆಚ್ಚು ಮನೆಗಳಿರ್‍ತವೆ. ಅಲ್ಲದೇ…” ನಿಲ್ಲಿಸಿದ.
“ಏನು, ಅಲ್ಲದೇ?” ಟೈಟಸ್ ಹುಬ್ಬೇರಿಸಿದ.
“ಒಂದೊಂದು ಮನೇಲೂ ಒಬ್ಬೊಬ್ಬಳು ಮನೆಯಾಕೆ ಇರ್‍ತಾಳೆ.” ಸಣ್ಣಗೆ ನಕ್ಕ ಕೋದಂಡಯ್ಯ.
“ನೀನು ಹೇಳೋದೂ ಸರಿ ಅನ್ನು.” ಟೈಟಸ್‌ನ ಮುಖದಲ್ಲೂ ನಗೆ ಮಿನುಗಿತು. “ಸರಿ, ಈಗೇನು ಮಾಡು ಅಂತೀಯ ನನ್ನನ್ನ?” ವಿಧೇಯ ವಿದ್ಯಾರ್ಥಿಯಂತೆ ಪ್ರಶ್ನಿಸಿದ.
“ಈಗ ಮತ್ತೊಂದ್ಸಲ ಟ್ರೈ ಮಾಡಿ. ಅವನೇನಾದ್ರೂ ಈಗ ಎದ್ದಿರಬೋದೇನೋ.” ಹೇಳುತ್ತಾ ಟೇಬಲ್‌ನ ಮೂಲೆಯಲ್ಲಿದ್ದ ಫೋನನ್ನು ಟೈಟಸ್‌ನತ್ತ ಸರಿಸಿದ ಕೋದಂಡಯ್ಯ.
ರಿಸೀವರ್‌ಗೆ ಕೈ ಹಚ್ಚಿದ ಟೈಟಸ್ ಛಕ್ಕನೆ ತಲೆಯೆತ್ತಿದ.
“ಅಷ್ಟೊತ್ನಿಂದ ಬರೀ ನನ್ನಿಂದ್ಲೇ ಮಾತು ಹೊರಡಿಸ್ತಾ ಇದೀಯಲ್ಲ, ನೀನು ಬೆಳಿಗ್ಗೆ ಬೆಳಿಗ್ಗೇನೇ ಸಾಹೇಬರ ಮನೆಗೆ ಯಾಕೆ ಹೋದದ್ದು ಅನ್ನೋದನ್ನ ಬಾಯಿ ಬಿಡ್ತಾನೇ ಇಲ್ಲ? ಸ್ವಲ್ಪ ಅದು ಹೇಳು ಮೊದ್ಲು. ಫೋನು ಗೀನು ಆಮೇಲೆ ಮಾಡೋಣವಂತೆ.” ಕೋದಂಡಯ್ಯ ಬೆಳಿಗ್ಗೆ ಬೆಳಿಗ್ಗೆಯೇ ಸರ್ಕಲ್ ಇನ್ಸ್‌ಪೆಕ್ಟರ ಮನೆಗೆ ಹೋಗಿದ್ದದ್ದು ಯಾಕೆ ಎಂಬ ಮಹತ್ತರ ಪ್ರಶ್ನೆ ಅವನ ಮನಸ್ಸಿನಲ್ಲಿ ಧುತ್ತನೆ ಎದ್ದು ನಿಂತಿತ್ತು.
ಕೋದಂಡಯ್ಯ ಪಕಪಕನೆ ನಕ್ಕುಬಿಟ್ಟ.
“ಅಯ್ ಬಿಡಿ ದೇವ್ರೂ, ಅದೊಂದ್ ಕತೆ.”
“ಅದೇನದು ಹೇಳಬಾರದಾ?” ಟೈಟಸ್ ಸಿಡಿಮಿಡಿಗುಟ್ಟಿದ.
ಕೋದಂಡಯ್ಯನ ನಗೆ ದೊಡ್ಡದಾಯಿತು.
“ಅವರ ಶ್ರೀಮತಿಯೋರು ಬುಲಾವ್ ಕಳಿಸಿದ್ರು.”
“ಯಾತಕ್ಕೆ?” ಟೈಟಸ್‌ನ ಹುಬ್ಬುಗಳು ಮೇಲೇರಿದವು.
“ಅಂಥಾ ಘನಂದಾರಿ ಕೆಲ್ಸ ಏನೂ ಅಲ್ಲ ಅದು. ಬೋಟಿ ಬಜಾರ್‌ಗೆ ಹೋಗಿ ಮಟನ್ ತರಬೇಕಾಗಿತ್ತಂತೆ.”
“ಅಷ್ಟೇನಾ?” ಟೈಟಸ್‌ನ ಹುಬ್ಬುಗಳು ಛಕ್ಕನೆ ಕೆಳಗಿಳಿದವು. ಕಣ್ಣುಗಳಲ್ಲಿ ಹೊಳಪು. ‘ಸಧ್ಯ, ಸಾಹೇಬರು ಇವನನ್ನು ಕರೆಸಿದ್ದು ನನ್ನ ವಿಷಯದಲ್ಲಲ್ಲ.’ ಸಮಾಧಾನಗೊಂಡ.
“ಹ್ಞೂಂ ಅಷ್ಟೇನೇ. ತರಿಸೋದು ಕಾಲು ಕೇಜಿ ಮಾಂಸ. ಅದಕ್ಕೆ ಎಷ್ಟು ಧಿಮಾಕು ಅಂತೀನಿ ಆಯಮ್ಮಂಗೆ. ಇನ್ನೂರೈವತ್ತು ಗ್ರಾಂ ಮಾಂಸ ತರೋದಿಕ್ಕೆ ಸ್ಟೇಷನ್‌ನಿಂದ ಹೆಡ್ ಕಾನ್ಸ್‌ಟೇಬಲ್ ಹೋಗಬೇಕಾಯ್ತು. ಇನ್ನು ಕೇಜಿಗಟ್ಟಲೆ ತರಬೇಕಾಗಿದ್ದಿದ್ರೆ ಬೆಂಗ್ಳೂರ್‍ನಿಂದ ಐ ಜಿ ಪಿ ಸಾಹೇಬ್ರನ್ನೇ ಕರೆಸ್ತಿದ್ರೋ ಏನೋ.” ಹೇಳುತ್ತಾ ಟೆಲೆಫೋನ್ ಮೇಲೆ ಬೆರಳಿನಿಂದ ಬಡಿದ. “ಅದು ಬಿಡಿ, ಮಾಡಬೇಕಾಗಿರೋ ಕೆಲಸದ ಕಡೆ ಗಮನ ಕೊಡಿ. ಹೊಡೀರಿ ಒಂದು ಫೋನು ಆವಯ್ಯಂಗೆ.”
ಟೈಟಸ್ ಮಾತಿಲ್ಲದೇ ರಿಸೀವರ್ ಕೈಗೆತ್ತಿಕೊಂಡ. ಬಾಯಿಪಾಠವಾಗಿದ್ದ ದಯಾನಂದನ ನಂಬರಿನ ಅಂಕೆಗಳನ್ನು ನಿಧಾನವಾಗಿ ಒಂದೊಂದಾಗಿ ಒತ್ತಿದ.
ಕೊನೇ ಅಂಕೆಯ ಗುಂಡಿಯಿಂದ ಬೆರಳು ತೆಗೆದನೋ ಇಲ್ಲವೋ ಹತ್ತಿರದಲ್ಲೇ ಮೊಳಗಿತು ಮೊಬೈಲ್ ಫೋನ್‌ನ ಇಂಪು ಸಂಗೀತ: “ಸಾರೆ ಜಹಾಂಸೆ ಅಚ್ಛಾ…”
ಬೆಚ್ಚಿ ತಲೆಯೆತ್ತಿದ ಟೈಟಸ್.
ಸಂಗೀತ ಹೊರಡುತ್ತಿರುವುದು ಕೋದಂಡಯ್ಯನ ಶರಟಿನ ಜೇಬಿನಿಂದ!
ಕೋದಂಡಯ್ಯನ ಮುಖದಲ್ಲಿ ಕುಹಕ ನಗೆ.
ಅಧಿಕಾರಿಯ ಗೊಂದಲಗ್ರಸ್ತ ಮುಖದತ್ತ ನೋಡುತ್ತಲೇ ನಿಧಾನವಾಗಿ ಜೇಬಿನಿಂದ ಸೆಲ್‌ಫೋನನ್ನು ಹೊರತೆಗೆದು ಟೇಬಲ್ ಮೇಲಿಟ್ಟ. ಮುಖದಲ್ಲಿ ಅದೇ ಕುಹಕ ನಗೆ.
ಮುಂದಿದ್ದ ಸೆಲ್‌ಫೋನಿನತ್ತ ಅಪನಂಬಿಕೆಯ ನೋಟ ಹೂಡಿದ ಟೈಟಸ್.
ತಿಳಿನೀಲೀ ಬೆಳಕಿನ ಹಿನ್ನೆಲೆಯಲ್ಲಿ ಕಂಡ ಕಪ್ಪು ಅಂಕೆಗಳು. ಅವು ಈಗ ತನ್ನ ಕೈಯಲ್ಲಿರುವ ತನ್ನದೇ ಫೋನ್‌ನ ನಂಬರ್!
ಮುಖದ ಗೊಂದಲ ಮತ್ತೂ ಅಧಿಕವಾಯಿತು.
ಕೋದಂಡಯ್ಯನ ಮುಖದ ನಗೆ ದೊಡ್ಡದಾಯಿತು.
“ಇದೇ ಗುರೂ ಆವಯ್ಯ ದಯಾನಂದನ ಸೆಲ್ ಫೋನು.”
“ಇ… ಇದೆಲ್ಲಿ ಸಿಕ್ತು ಕೋದಂಡಯ್ಯ ನಿಂಗೆ?”
“ಕುವೆಂಪುನಗರ ಬಸ್ ಡಿಪೋದ ಪಕ್ಕದ ಪೊದೆಯಲ್ಲಿ. ಸಿಕ್ಕಿದ್ದು ನಂಗಲ್ಲ. ಮೈತೂಕ ಇಳಿಸೋದಿಕ್ಕೆ ಅಂತ ಬೆಳಗಿನ ವಾಕಿಂಗ್ ಹೊರಟಿದ್ದ ಒಬ್ಬಳು ಗುಂಡಮ್ಮನಿಗೆ. ನಡೀತಾ ಇದ್ದೋಳಿಗೆ ಪೊದೆ ಒಳಗೆ ಇದ್ದಕ್ಕಿದ್ದಂತೆ ಸೆಲ್‌ಫೋನ್ ಸಂಗೀತ ಕೇಳಿಬಂತಂತೆ. ಒಂದು ಗಳಿಗೆ ಗಾಬರಿಯಾಗೋದ್ಲಂತೆ. ಧೈರ್ಯ ತಂದ್ಕೊಂಡು ಬಗ್ಗಿ ನೋಡ್ದಾಗ ಇದು ಕಾಣಿಸ್ತಂತೆ. ಎತ್ಕೊಂಡು ಬಂದು ಅಲ್ಲೇ ಬೂತ್‌ನಲ್ಲಿದ್ದ ನಮ್ಮ ಸಣ್ಣಯ್ಯನ ಕೈಗೆ ಹಾಕಿ ಹೋದ್ಲು. ಅವ್ನು ಅದನ್ನ ನಿಮಗೆ ಕೊಡೋದಕ್ಕೆ ಅಂತ ಬಂದ. ನೀವಿರ್‍ಲಿಲ್ಲ. ನಾ ತಗೋಂಡೆ. ನಿಮ್ಮ ಶ್ರಮಾನ ಸ್ವಲ್ಪ ಕಡಿಮೆ ಮಾಡೋಣ ಅಂತ ಒಂಚೂರು ಪತ್ತೇದಾರಿ ನಡೆಸ್ದೆ.” ಕಣ್ಣು ಮಿಟುಕಿಸಿದ.
“ಏನು ಪತ್ತೇದಾರೀ ನಡೆಸ್ದೆ?”
“ಆ ಮೊಬೈಲ್ ಫೋನ್ ಕಂಪನೀನ ಸಂಪರ್ಕಿಸ್ದೆ. ಆಗ ಅದು ದಯಾನಂದನ ಫೋನ್ ಅಂತ ತಿಳೀತು. ಫೋನ್ ಸಿಕ್ಕಿದ ಜಾಗಕ್ಕೆ ಹೋಗಿ ಕಾಲಾಡಿಸ್ದೆ. ಅಲ್ಲಿ ದ್ವಿಚಕ್ರ ವಾಹನವೊಂದು ಒದ್ದೇ ರಸ್ತೇನಲ್ಲಿ ಸ್ಕಿಡ್ ಆಗಿ ಉರುಳಿದ್ದರ ಗುರುತುಗಳು ಕಂಡುಬಂದ್ವು. ಅಂದ್ರೆ ಈ ದಯಾನಂದ ಅನ್ನೋ ವ್ಯಕ್ತಿಗೆ ಅಕ್ಸಿಡೆಂಟ್ ಆಗಿದೆ, ಆ ಸಮಯದಲ್ಲಿ ಅವನ ಜೇಬಿನಲ್ಲಿದ್ದಿರಬಹುದಾದ ಸೆಲ್‌ಫೋನ್ ಎಗರಿ ರಸ್ತೆಪಕ್ಕದ ಪೊದೆಗೆ ಬಿದ್ದಿದೆ ಅಂತ ಊಹಿಸ್ದೆ. ಅವನಿಗೆ ಗಾಯ ಗೀಯ ಆಗಿ ಆಸ್ಪತ್ರೆನಲ್ಲಿರಬೋದೇನೋ ಅನ್ನಿಸ್ತು. ಪಕ್ಕದಲ್ಲೇ ಇದ್ದ ಒಂದೆರಡು ಆಸ್ಪತ್ರೆಗಳಿಗೆ ಭೇಟಿಕೊಟ್ಟೆ. ಮೂರನೆಯ ಪ್ರಯತ್ನ ಯಶಸ್ವಿ ಆಯ್ತು. ಆ ಮನುಷ್ಯ ಕಾವೇರಿ ನರ್ಸಿಂಗ್ ಹೋಂನಲ್ಲಿ ಪತ್ತೆಯಾಗಿಹೋದ. ರಸ್ತೆ ಪಕ್ಕದಲ್ಲಿ ನರಳ್ತಾ ಬಿದ್ದಿದ್ದ ಅವನನ್ನ ಯಾರೋ ನಿಮ್ಮಂಥಾ ಪುಣ್ಯಾತ್ಮರು ನರ್ಸಿಂಗ್ ಹೋಂಗೆ ಸೇರ್‍ಸಿ ಹೋಗಿದ್ದರಂತೆ.” ವಿವರಣೆ ಮುಗಿಸಿ ತುಟಿಯರಳಿಸಿದ.
ಬಿಟ್ಟಕಣ್ಣು ಬಿಟ್ಟಂತೇ ಕೇಳುತ್ತಿದ್ದ ಟೈಟಸ್ ಬಾಯಿ ತೆರೆದ.
“ಆ ಮನುಷ್ಯನೇ ಈ ದೇವಕಿ ಅನ್ನೋಳ ಗಂಡ ಅಂತ ನಿಂಗೆ ಗೊತ್ತಿತ್ತಾ?”
“ಯಾವಾಗ್ಲೋ ಗೊತ್ತಾಯ್ತು. ಕೃಷ್ಣಮೂರ್ತಿ ಎಲ್ಲಾನೂ ಹೇಳ್ದ. ಅದು ತಿಳಿದ ಮೇಲೇ ಅವನನ್ನ ಹುಡುಕೋದಕ್ಕೆ ನಾನು ಅಷ್ಟು ಮುತುವರ್ಜಿ ವಹಿಸಿದ್ದು.”
“ಅವನ ಜತೆ ಮಾತಾಡಿದ್ಯಾ?”
“ಇಲ್ಲ. ನಾನು ಹೋದಾಗ ಅವ್ನು ನಿದ್ದೆ ಮಾಡ್ತಿದ್ದ. ಅವನನ್ನ ಡಿಸ್ಟರ್ಬ್ ಮಾಡೋದು ಬೇಡ ಅಂತ ನರ್ಸಮ್ಮ ಖಡಾಖಂಡಿತವಾಗಿ ಹೇಳಿಬಿಟ್ಲು. ಆವಯ್ಯಂಗೆ ಮೊಣಕಾಲು ಮುರಿದಿದೆಯಂತೆ. ಈ ಸಮಯದಲ್ಲಿ ಅವನಿಗೆ ಹೆಂಡತಿಯ ಕೊಲೆ ವಿಷಯ ಹೇಳೋದು ಸರಿ ಅಲ್ಲ ಅನ್ನಿಸ್ತು. ಹಿಂದಕ್ಕೆ ಬಂದ್ಬಿಟ್ಟೆ. ಆವಯ್ಯ ಕೊನೇಪಕ್ಷ ಎರಡು ವಾರಗಳವರೆಗೆ ಅಲ್ಲಿಂದ ಅಲುಗಾಡೋ ಹಾಗಿಲ್ಲ. ಅವನ ಜತೆ ಆರಾಮವಾಗಿ ಮಾತಾಡೋದಿಕ್ಕೆ ಬೇಕಾದಷ್ಟು ಸಮಯ ಇದೆ.”
“ಇದನ್ನೆಲ್ಲಾ ನೀನು ನಂಗ್ಯಾಕೆ ತಿಳಿಸ್ಲಿಲ್ಲ?”
“ಮನ್ನಿಸಬೇಕೂ. ಇದರಲ್ಲಿ ಯಾವ ಸಂಚೂ ಇಲ್ಲಾ. ನೀವು ರಾತ್ರಿಯಿಡೀ ಸಖತ್ ಬಿಜ಼ಿಯಾಗಿದ್ರಿ. ಬೆಳಿಗ್ಗೆ ಸ್ಟೇಷನ್‌ಗೆ ಬಂದ ಎರಡು ಕ್ಷಣದಲ್ಲಿ ಮತ್ತೆ ವಿವೇಕಾನಂದನಗರಕ್ಕೆ ಓಡಿದ್ರಿ ಅಂತ ತಿಳೀತು. ಅಲ್ಲಿಂದ ನೇರವಾಗಿ ಮನೇಗೆ ಹೋದ್ರಿ ಅಂತಾನೂ ಗೊತ್ತಾಯ್ತು. ಆರಾಮವಾಗಿ ಮನೇಗೇ ಬಂದು ಅಮ್ಮಾವ್ರ ಕೈನ ಮಸಾಲೆ ಟೀ ಕುಡೀತಾ ವಿಷಯ ಹೇಳೋಣ ಅಂತ ಮಾಡ್ದೆ. ಅಪರಾಧ ಆಗಿದ್ರೆ ಕ್ಷಮಿಸಬೇಕೂ. ಬಡವ ನಾನು, ಮಕ್ಕಳೊಂದಿಗ.” ನಾಟಕೀಯವಾಗಿ ಕೈ ಜೋಡಿಸಿದ. ತಲೆಯೂ ಬಾಗಿತು.
ಟೈಟಸ್ ದಂಗಾಗಿ ಹೋಗಿದ್ದ.
‘ಈ ಕೋದಂಡಯ್ಯ ಎಷ್ಟೊಂದು ಕೆಲಸ ಮಾಡಿದ್ದಾನೆ!’
“ಇಲ್ಲಿಗೆ ಬಂದ ಕೂಡ್ಲೇ ಇದನ್ನೆಲ್ಲಾ ಯಾಕೆ ಹೇಳ್ಲಿಲ್ಲ ನೀನು? ವಿಷಯ ಗೊತ್ತೇ ಇಲ್ಲ ಅನ್ನೋವ್ನ ಹಾಗೆ ನಾಟಕ ಆಡ್ದೆ? ಏನೂ ಅರೀದ ಮಳ್ಳನ ಹಾಗೆ ನನ್ ಕೈಲಿ ಫೋನ್ ಮಾಡ್ಸಿ ತಮಾಷೆ ನೋಡ್ದೆ.” ಆಕ್ಷೇಪಿಸಿದ.
ಕೋದಂಡಯ್ಯನ ಮುಖದಲ್ಲಿ ಮತ್ತೆ ನಗೆ ಮಿಂಚಿತು.
“ನಾನು ಎಲ್ಲಾನೂ ಹೇಳಬೇಕು ಅಂತಾನೆ ಇಲ್ಲಿಗೆ ಬಂದೆ ದೇವ್ರೂ. ಆದ್ರೆ…” ನಿಲ್ಲಿಸಿದ.
ಟೈಟಸ್‌ನ ಹುಬ್ಬುಗಳು ಮೇಲೇರಿದವು.
“ಏನು ಆದ್ರೆ…?”
ಕೋದಂಡಯ್ಯ ಅಧಿಕಾರಿಯ ಮುಖವನ್ನೇ ನೇರವಾಗಿ ನೋಡುತ್ತಾ ದನಿ ತಗ್ಗಿಸಿ ತಣ್ಣಗೆ ಹೇಳಿದ.
“ನಾನು ಬಂದ ಗಳಿಗೇಲಿ ನೀವು ಆದೇನನ್ನೋ ತೊಳಕೋಬೇಕು ಅಂತ ಅಮ್ಮಾವ್ರನ್ನ ನೀರು ಕೇಳ್ತಾ ಇದ್ರಿ. ಎಲ್ಲಾನೂ ತೊಳಕೊಂಡು ಆರಾಮವಾಗಿ ಕೂತುಕೊಳ್ಲಿ. ಆಮೇಲೆ ಮಾತಾಡೋಣ ಅಂತ ಸುಮ್ನಾದೆ.” ಅವನ ನಗೆ ದೊಡ್ಡದಾಯಿತು. ಟೈಟಸ್ ಅವಡುಗಚ್ಚಿದ.
“ನಿನ್ನ… ನಿನ್ನಾ…” ಅವನ ಮುಂದಿನ ಮಾತುಗಳು ಅಡಿಗೆಮನೆಯಲ್ಲಿ ಎದ್ದ ಕುಲುಕುಲು ನಗೆಯಲ್ಲಿ ಕರಗಿಹೋದವು.

* * *

-ನಾಲ್ಕು-

“ಸಮಾಧಾನ ತಂದ್ಕೊಳ್ಳೀ ಗೋಕುಲ್.” ಪ್ರಿಯಕರನ ಭುಜ ಸವರಿದಳು ಮಾನ್ಸಿ.
ಅಕ್ಕನ ದುರಂತ ಮರಣದಿಂದಾಗಿ ಅವನ ಹೃದಯಕ್ಕೆ ತಟ್ಟಿರಬಹುದಾದ ಆಘಾತದ ಆಳವನ್ನು ಅವಳು ಊಹಿಸಬಲ್ಲಳು. ಅವನಿಗದು ದೊಡ್ಡ ದುರಂತ. ಆ ಗಾಯ ಎಂದೂ ಮಾಯಲಾರದು. ಅವನ ದುಃಖದಲ್ಲಿ ಅವಳು ಸಹಭಾಗಿ. ಅವಳ ಪ್ರೀತಿಯ ದೇವಕಿ ಆಂಟಿ ಇಲ್ಲವಾಗಿದ್ದಳು.
ಗೋಕುಲ್ ಮತ್ತೆ ಬಿಕ್ಕಿದ.
“ಯಾರು ಮಾಡಿರಬೋದು ಇದನ್ನ? ಅವಳು ಯಾರಿಗೂ ಅನ್ಯಾಯ ಮಾಡಿದೋಳಲ್ಲ. ಅವಳು ದೇವತೆಯಂಥೋಳು. ಅವಳಿಗೆ ಹೀಗಾಯ್ತಲ್ಲ. ಆ ದೇವರು ಎಷ್ಟು ಕಟುಕ.” ಮತ್ತೊಮ್ಮೆ ಬಿಕ್ಕಿದ. ಕೆನ್ನೆಗಳ ಮೇಲೆ ಕಣ್ಣೀರು ಇಳಿಯಿತು.
ಅದು ಮಾನ್ಸಿಗೆ ಹೃದಯ ಹಿಂಡುವಂತಹ ನೋಟ. ಅವಳ ಕಣ್ಣುಗಳಲ್ಲೂ ನೀರು ಜಿನುಗಿತು.
ನಿಮಿಷಗಳ ನಂತರ ತಲೆಯೆತ್ತಿ ಹೇಳಿದ ಗೋಕುಲ್.
“ಮಾನ್ಸಿ, ಈ ದುರಂತ ನಿನ್ನ ಓದಿಗೆ ಅಡ್ಡಿ ಆಗಬಾರ್ದು. ಈಗ ನೀನು ತಯಾರಾಗು ಹೋಗು. ನಿನ್ನ ಎಕ್ಸಾಂನ ಕೊನೆ ಪೇಪರ್ ಇಂದು. ಹೋಗಿ ಅದನ್ನ ಬರೆದು ಬಂದುಬಿಡು.” ಅವಳ ಕೈ ಹಿಡಿದ. ತನ್ನ ಬದುಕಿನಲ್ಲಾದ ದುರಂತ ಪ್ರೇಯಸಿಯ ಪ್ರಗತಿಗೆ ಅಡ್ಡಿಯಾಗಬಾರದೆಂಬ ಸಹಜ ಕಾಳಜಿ ಅವನಿಗೆ.
ಮಾನ್ಸಿಯ ಹೃದಯ ತುಂಬಿಬಂತು.
ಆದರೆ ಪರೀಕ್ಷೆ ಬರೆಯುವ ಮಾನಸಿಕ ಚೈತನ್ಯ ಅವಳಲ್ಲಿರಲಿಲ್ಲ. ಅವಳು ದೈಹಿಕವಾಗಿ ಸೋತುಹೋಗಿದ್ದಳು. ಅವಳ ಮನಸ್ಸು ಜರ್ಝರಿತವಾಗಿಹೋಗಿತ್ತು. ಪ್ರತಿಕ್ರಿಯಿಸದೇ ಅವನ ಮುಖವನ್ನೇ ದಿಟ್ಟಿಸಿದಳು.
ಹೊರಗೆ ಜೀಪ್ ನಿಂತ ಸದ್ದಾಯಿತು. ಗೋಕುಲ್ ಛಕ್ಕನೆ ಮೇಲೆದ್ದ. ಮಾನ್ಸಿ ಬದಿಯಲ್ಲಿದ್ದ ಊರುಗೋಲನ್ನು ಕೈಗೆತ್ತಿಕೊಂಡಳು.
ರಾತ್ರಿ ಕಂಡ ಸಬ್ ಇನ್ಸ್‌ಪೆಕ್ಟರ್ ಒಳಬಂದ. ಹಿಂದೆ ಮತ್ತೊಂದು ಅಪರಿಚಿತ ಪೋಲೀಸ್ ಮುಖ.
ಗೋಕುಲ್‌ನತ್ತ ನಗೆಬೀರಿ ಮಾನ್ಸಿಯತ್ತ ತಿರುಗಿದ ಟೈಟಸ್.
“ರಾತ್ರಿ ನೀವು ಕೋಣೆಯೊಳಕ್ಕೆ ನೀರು ಹಾಯಿಸ್ತಾ ಇದ್ದಾಗ ನಿಮ್ಮ ಹಿಂದೆ ಒಬ್ಬ ಗಂಡಸು ನಿಂತಿದ್ದ ಅಂತ ಶಿವಶಂಕರಪ್ಪ ಹೇಳ್ತಾರೆ.”
ಮಾನ್ಸಿಯ ಕಣ್ಣುಗಳು ಸಂಕುಚಿತಗೊಂಡವು. “ಇಲ್ಲ ನನಗದು ಗೊತ್ತಿರಲಿಲ್ಲ.” ಗಾಬರಿಯ ದನಿ ಹೊರಡಿಸಿದಳು. “ನೀವು ಹೋದ ಮೇಲೆ ಶಿವ ಅಂಕಲ್ ಅದನ್ನ ಹೇಳಿದ್ರು.” ಮೆಲ್ಲಗೆ ಸೇರಿಸಿದಳು.
“ಆ ವ್ಯಕ್ತೀನೇ ದೇವಕಿಯವರ ಕೊಲೆಗಾರ ಅಂತ ಊಹೆ ಮಾಡಬೋದು. ಬಹುಷಃ ನಿಮ್ಮ ಮೇಲೆ ಧಾಳಿ ಮಾಡೋ ಉದ್ದೇಶವೂ ಅವನಿಗಿದ್ದಿರಬಹುದು ಅಂತ ನಂಗನ್ಸುತ್ತೆ.” ಮಾತು ಮುಗಿಸಿ ಬೆದರಿದ ಹೆಣ್ಣಿನ ಮುಖದಲ್ಲಿ ಬದಲಾಗುತ್ತಿದ್ದ ಬಣ್ಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ.
ಮಾನ್ಸಿ ಪ್ರತಿಕ್ರಿಯಿಸಲಿಲ್ಲ. ಅಧಿಕಾರಿಯ ಮುಖವನ್ನೇ ದಿಟ್ಟಿಸಿದಳು.
ಒಮ್ಮೆ ಗೋಕುಲ್‌ನತ್ತ ನೋಟ ಹೊರಳಿಸಿ ಮತ್ತೆ ಮಾನ್ಸಿಯತ್ತ ತಿರುಗಿದ ಟೈಟಸ್.
“ಆ ವ್ಯಕ್ತಿ ಯಾರಿರಬಹುದು?”
ಮಾನ್ಸಿಯ ಮುಖದಲ್ಲಿ ಗೊಂದಲ. ಗೋಕುಲ್‌ನತ್ತ ತಿರುಗಿದಳು. ಗೋಕುಲ್ ಅವಳ ನೆರವಿಗೆ ಬಂದ.
“ಅದರ ಬಗ್ಗೆ ನಾವಿಬ್ರೂ ಮಾತಾಡಿದ್ದೀವಿ ಇನ್ಸ್‌ಪೆಕ್ಟರ್. ತನ್ನ ಹಿಂದೆ ಆತ ನಿಂತಿದ್ದದರ ಅರಿವೇ ಅವಳಿಗಿಲ್ಲ. ಅದು ಯಾರಿರಬಹುದು ಅಂತ ಊಹೆ ಮಾಡೋದಿಕ್ಕೆ ನಾವು ಪ್ರಯತ್ನಪಟ್ಟು ಸೋತಿದ್ದೀವಿ. ಅಕ್ಕನಿಗೆ ಇದ್ದ ವೈರಿ ಯಾರು ಅಂತ ನಮಗೆ ತಿಳೀತಾ ಇಲ್ಲ. ನಮ್ಮ ಭಾವನಿಗೆ ಗೊತ್ತಿರಬಹುದೇನೋ. ಆದ್ರೆ ನಿನ್ನೆ ರಾತ್ರಿಯಿಂದ ಅವರ ಪತ್ತೆ ಇಲ್ಲ.”
ಅಧಿಕಾರಿ ಏಕಾ‌ಏಕಿ ವಿಷಯಾಂತರಿಸಿದ.
“ಎಲ್ಲಿ ಆ ಕುಂಭಕರ್ಣ? ಇನ್ನೂ ಎದ್ದಿಲ್ಲವೇ?”
ಮಾನ್ಸಿಯ ಮುಖದಲ್ಲಿ ಮತ್ತೆ ಗೊಂದಲ. ಗೋಕುಲ್ ಅವಳ ಕೈ ತಟ್ಟಿದ.
“ಇನ್ಸ್‌ಪೆಕ್ಟರ್ ಕೇಳ್ತಾ ಇರೋದು ನರಹರಿ ಬಗ್ಗೆ.”
ಅವಳ ಮುಖದಲ್ಲಿ ಏಕಾ‌ಏಕಿ ಮೂಡಿ ಮರೆಯಾದ ಭಯದ ಎಳೆಯನ್ನು ಟೈಟಸ್‌ನ ಸೂಕ್ಷ್ಮ ಕಣ್ಣುಗಳು ಗಮನಿದವು.
“ಹತ್ತು ನಿಮಿಷದ ಹಿಂದೆ ಎದ್ದ. ಈಗ ಸ್ನಾನ ಮಾಡ್ತಾ ಇರಬೋದು. ಇನ್ನರ್ಧ ಗಂಟೇನಲ್ಲಿ ಅವನನ್ನೇ ಸ್ಟೇಷನ್‌ಗೆ ಕರಕೊಂಡು ಬರೋಣ ಅಂತಿದ್ದೆ.” ಗೋಕುಲ್ ಆತುರಾತುರವಾಗಿ ಹೇಳಿದ.
“ಸ್ಟೇಷನ್‌ಗೆ ಕರಕೊಂಡು ಬರೋ ಅಗತ್ಯ ಇಲ್ಲ. ನಾವು ಅವರ ಜತೆ ಇಲ್ಲೇ ಮಾತಾಡ್ತೀವಿ. ಅವರ ಸ್ನಾನ ಮುಗಿಯೋವರೆಗೆ ಕಾಯ್ತೀವಿ.” ಗೋಕುಲ್‌ಗೆ ಹೇಳಿ ಮಾನ್ಸಿಯತ್ತ ತಿರುಗಿದ ಟೈಟಸ್. “ಎರಡು ನಿಮಿಷ ಹೊರಗೆ ಬನ್ನಿ ಮ್ಯಾಡಂ. ನಿಮ್ಮ ಜತೆ ಸ್ವಲ್ಪ ಮಾತಾಡೋದಿದೆ.” ಬಾಗಿಲತ್ತ ಹೆಜ್ಜೆ ಹಾಕಿದ. ಗೋಕುಲ್‌ನತ್ತ ಒಮ್ಮೆ ಆತಂಕದ ನೋಟ ಬೀರಿ ಮಾನ್ಸಿ ನಿಧಾನವಾಗಿ ಹೆಜ್ಜೆ ಸರಿಸಿದಳು. ಅವಳನ್ನು ಹಿಂಬಾಲಿಸಿದ ಗೋಕುಲ್‌ನ ಭುಜ ತಟ್ಟಿದ ಟೈಟಸ್‌ನ ಜತೆ ಬಂದಿದ್ದ ಖಾಕಿಧಾರಿ.
“ಅಲ್ಲಿ ನಿಮ್ಮ ಅಗತ್ಯ ಇಲ್ಲ. ಅವರ ವ್ಯವಹಾರ ಮುಗಿಯೋವರೆಗೆ ನಾವಿಬ್ರೂ ಮಾತಾಡಬೋದಲ್ಲ?” ನಗೆ ಬೀರಿದ.
ಗೋಕುಲ್ ತಟ್ಟನೆ ನಿಂತ. ಕಣ್ಣುಗಳಲ್ಲಿ ಗಲಿಬಿಲಿ.
ಖಾಕಿಧಾರಿ ಅವನ ಕೈ ಒತ್ತಿದ.
“ನಾನು ಹೆಡ್ ಕಾನ್ಸ್‌ಟೇಬಲ್ ಕೋದಂಡಯ್ಯ. ದೇವಕಿಯವರ ಕೊಲೆ ತನಿಖೆಯಲ್ಲಿ ಎಸ್ ಐ ಟೈಟಸ್‌ರ ಬಲಗೈ ಬಂಟ.”
“ಕೊಲೆಯಾದ ದೇವಕಿ ನಮ್ಮಕ್ಕ.” ಗೋಕುಲ್ ಮೆಲ್ಲಗೆ ದನಿ ಹೊರಡಿಸಿದ.
“ಅದು ನಂಗೆ ಗೊತ್ತು. ಆಗಿರೋ ದುರಂತಕ್ಕೆ ನಾನು ವಿಷಾದ ಪಡ್ತೀನಿ.” ಗೋಕುಲ್‌ನ ತೋಳನ್ನು ಮೆಲ್ಲಗೆ ಒತ್ತಿದ ಕೋದಂಡಯ್ಯ. ಗೋಕುಲ್ ತಲೆ ತಗ್ಗಿಸಿದ.
“ಈ ದುರಂತದ ಬಗ್ಗೆ ನಿಮಗೆ ತಿಳಿದದ್ದು ಯಾವಾಗ?” ದನಿ ತಗ್ಗಿಸಿ ಪ್ರಶ್ನಿಸಿದ ಕೋದಂಡಯ್ಯ.
“ರಾತ್ರಿ ಮೂರುಗಂಟೆಯ ಹೊತ್ನಲ್ಲಿ. ಮಾನ್ಸಿ ಫೋನ್ ಮಾಡಿ ತಿಳಿಸಿದ್ಲು.”
“ಆಗ ನೀವೆಲ್ಲಿದ್ರಿ?”
“ಬಸ್ ಸ್ಟ್ಯಾಂಡ್‌ನಲ್ಲಿ. ಆಗಷ್ಟೇ ಹೈದ್ರಾಬಾದ್‌ನ ಬಸ್‌ನಿಂದ ಇಳಿದು ಮೊಬೈಲ್ ಆನ್ ಮಾಡಿದ ಅರ್ಧ ನಿಮಿಷದಲ್ಲಿ ಅವಳ ಕಾಲ್ ಬಂತು. ರಾತ್ರಿ ಹನ್ನೆರಡು ಗಂಟೆಯಿಂದ್ಲೂ ಅವಳು ನನಗೆ ಫೋನ್ ಮಾಡೋದಿಕ್ಕೆ ಟ್ರೈ ಮಾಡ್ಥಾನೇ ಇದ್ಲಂತೆ. ಜರ್ನೀನಲ್ಲಿ ನಾನು ಮೊಬೈಲ್‌ನ ಸ್ವಿಚ್ ಆಫ್ ಮಾಡಿ ನಿದ್ದೆ ಮಾಡಿಬಿಟ್ಟಿದ್ದೆ. ಅವಳಿಂದ ವಿಷಯ ತಿಳಿದದ್ದೇ ಇಲ್ಲಿಗೆ ಓಡಿಬಂದೆ.”
“ನೀವು ಏನು ಉದ್ಯೋಗ ಮಾಡ್ತಿದೀರಿ ಗೋಕುಲ್?”
ಏಕಾ‌ಏಕಿ ಬದಲಾದ ಮಾತಿಗೆ ಗೋಕುಲ್ ಅಚ್ಚರಿಗೊಂಡ. ಕ್ಷಣದಲ್ಲಿ ಸುಧಾರಿಸಿಕೊಂಡ.
“ಈಗಷ್ಟೇ ಸ್ಟಡೀಸ್ ಮುಗಿಸಿದ್ದೀನಿ. ಸ್ವಂತದ್ದೇನಾದ್ರೂ ಮಾಡೋ ಯೋಚ್ನೆ ಇದೆ.”
“ಹೌದೇ? ಏನು ಓದಿದ್ದೀರಿ?”
“ಎಂ ಬಿ ಏ… ರ್‍ಯಾಂಕ್ ಹೋಲ್ಡರ್.” ದನಿಯಲ್ಲಿ ಹೆಮ್ಮೆಯಿತ್ತು.
ಕೋದಂಡಯ್ಯನ ಕಣ್ಣುಗಳು ಮಿನುಗಿದವು.
“ವೆರಿ ಗುಡ್. ಎಲ್ಲಿ ಮಾಡಿದ್ದು ಎಂ ಬಿ ಏನ?”
“ಐ ಐ ಎಂ, ಅಹ್ಮದಾಬಾದ್‌ನಲ್ಲಿ.”
“ಐ ಐ ಎಂ, ಅಹ್ಮದಾಬಾದ್! ಜತೆಗೆ ರ್‍ಯಾಂಕ್ ಹೋಲ್ಡರ್! ಅಂದ ಮೇಲೆ ಯಾವ್ದಾದ್ರೂ ಮಲ್ಟಿನ್ಯಾಷನಲ್ ಕಂಪನೀಲಿ ಕರೆದು ಕೆಲ್ಸ ಕೊಡ್ತಾರೆ. ಅರವತ್ತು ಎಪ್ಪತ್ತು ಸಾವಿರ ಸಂಬಳಕ್ಕೆ ಮೋಸ ಇಲ್ಲ.” ಕೋದಂಡಯ್ಯನ ಮಾತಿನಲ್ಲಿ ಮೆಚ್ಚುಗೆ ಇತ್ತು.
ಗೋಕುಲ್ ನಕಾರದಲ್ಲಿ ತಲೆ ಅಲುಗಿಸಿದ.
“ಎರಡು ಮೂರು ಅಫರ್ ಬಂದಿವೆ. ಆದ್ರೆ ನಂಗೆ ಆಸಕ್ತಿಯಿಲ್ಲ.”
“ಯಾಕೆ?” ಕೋದಂಡಯ್ಯನ ದನಿಯಲ್ಲಿ ಅಚ್ಚರಿ ಇತ್ತು.
ತೆರದ ಬಾಗಿಲತ್ತ ಒಮ್ಮೆ ನೋಡಿ ಹೇಳಿದ ಗೋಕುಲ್.
“ಸ್ವಂತವಾಗಿ ಏನಾದ್ರೂ ಮಾಡೋ ಆಸೆ ನಂಗೆ. ಇಲ್ಲೇ ಮೈಸೂರ್‍ನಲ್ಲಿ ಬಿಸಿನೆಸ್ ಕನ್ಸಲ್ಟೆನ್ಸಿ ಶುರು ಮಾಡೋಣ ಅಂತ. ಅದಕ್ಕಾಗಿ ತಯಾರಿ ನಡೆಸ್ತಾ ಇದೀನಿ…” ಕ್ಷಣ ತಡೆದು ಸೇರಿಸಿದ. “ಅದರಲ್ಲಿ ಯಶಸ್ವಿ ಆಗ್ತೀನಿ ಅನ್ನೋ ನಂಬಿಕೆ ಇದೆ ನಂಗೆ.”
“ಭೇಷ್! ನಿಮ್ಮ ಐಡಿಯಾನ ನಾನು ಮೆಚ್ತೀನಿ. ದೈರ್ಯವಾಗಿ ಮುನ್ನುಗ್ಗಿ. ದೇವರು ನಿಮ್ಮ ಜತೆ ಇರ್ತಾನೆ.” ಕೋದಂಡಯ್ಯ ಹಾರ್ದಿಕವಾಗಿ ಗೋಕುಲ್‌ನ ಬೆನ್ನು ತಟ್ಟಿದ. ಗೋಕುಲ್‌ನ ನೋಟವನ್ನನುಸರಿಸಿ ಬಾಗಿಲತ್ತ ನೋಡುತ್ತಾ ಪ್ರಶ್ನೆ ಹಾಕಿದ.
“ಈ ಹುಡುಗಿ ಮಾನ್ಸಿ ಎಷ್ಟು ದಿನದಿಂದ ಪರಿಚಯ ನಿಮಗೆ?”
“ನಾಲ್ಕೈದು ತಿಂಗಳಿರಬೋದು.” ಗೋಕುಲ್‌ನ ಚುಟುಕು ಉತ್ತರ.
“ಇದು ಅವಳ ಅಣ್ಣನ ಮನೆ ಅಂತ ಕೇಳ್ದೆ.”
“ಹೌದು. ಅವರಣ್ಣ ವಸಂತರಾವ್ ದೇಶಪಾಂಡೆಯವರ ಮನೆ. ಈ ಮನೇಲಿ ಮಾನ್ಸಿಗೆ ಸಮಪಾಲಿದೆ.” ಮಾತು ಮುಗಿಸಿ ತುಟಿ ಕಚ್ಚಿಕೊಂಡ ಗೋಕುಲ್. ಹೇಳಬಾರದ್ದನ್ನು ಹೇಳಿಬಿಟ್ಟಂತಹ ಹುಳಿಭಾವನೆ ಮುಖದಲ್ಲಿ.
“ಹ್ಯಾಗೆ?” ಕೋದಂಡಯ್ಯನ ಕಣ್ಣುಗಳಲ್ಲಿ ಅಚ್ಚರಿ ಕುಣಿಯಿತು. ಒಂದು ಹೆಜ್ಜೆ ಮುಂದೆ ಬಂದ.
ಗೋಕುಲ್ ಉತ್ತರಿಸಲು ನಿಧಾನಿಸಿದ. “ಈಗ ಅದೆಲ್ಲ ಯಾಕೆ ಬಿಡಿ.” ತಲೆ ತಗ್ಗಿಸಿದ.
ಕೋದಂಡಯ್ಯ ಬಿಡಲಿಲ್ಲ.
“ಇರಲಿ ಹೇಳಿ. ಆ ಹುಡ್ಗಿ ಎಸ್ ಐ ಜತೆ ಮಾತಾಡಿ ಬರೋವರೆಗೆ ನಾವು ಟೈಂ ಪಾಸ್ ಮಾಡಬೇಕಲ್ಲ? ಸಮಯಾನ ಕೊಲ್ಲೋದಿಕ್ಕೆ ಇನ್ನೊಬ್ಬರ ಬಗ್ಗೆ ಅದರಲ್ಲೂ ಅವರ ಆಸ್ತಿಪಾಸ್ತಿಯ ಬಗ್ಗೆ ಮಾತಾಡೋದಕ್ಕಿಂಥ ಒಳ್ಳೇ ವಿಧಾನ ಯಾವುದಿದೆ.” ಪುಸಲಾಯಿಸಿದ.
ಗೋಕುಲ್ ಬಾಯಿ ತೆರೆದ.
“ಮಾನ್ಸಿಯ ತಂದೆ ತಾಯಿ ಕಳೆದ ವರ್ಷ ಅಕ್ಸಿಡೆಂಟ್‌ನಲ್ಲಿ ತೀರಿಕೊಂಡ್ರು. ಅವರು ಬಿಟ್ಟುಹೋಗಿರೋ ಆಸ್ತಿಯ ಒಟ್ಟುಮೊತ್ತ ಎರಡೂವರೆ ಕೋಟಿಗೂ ಹತ್ತಿರ…”
ಅವನ ಮುಂದಿನ ಮಾತುಗಳನ್ನು ಅಷ್ಟಕ್ಕೇ ತಡೆದ ಕೋದಂಡಯ್ಯ.
“ಅರ್ಥವಾಯ್ತು ಬಿಡಿ. ಹುಡುಗಿ ಕುಂಟಿ ಆದ್ರೇನಂತೆ? ಇವಳನ್ನ ಮದುವೆಯಾಗೋನು ಕೋಟ್ಯಾಧೀಶ ಆಗ್ತಾನೆ! ಗೋಕುಲ್ ಛಕ್ಕನೆ ತಲೆ ಎತ್ತಿದ.
ಕೋದಂಡಯ್ಯ ಸರ್ರನೆ ಅವನ ಪಕ್ಕ ಸರಿದು ಅವನ ಕೈ ಹಿಡಿದ.
“ತಪ್ಪಾಯ್ತು ತಪ್ಪಾಯ್ತು. ಈ ಫೋಲೀಸ್ ಇಲಾಖೆ ಸೇರಿದ್ಮೇಲೆ ಇಂಥಾ ಮಾತು, ಇಂಥಾ ಭಾಷೆ ಅಭ್ಯಾಸ ಆಗೋಯ್ತು. ಇನ್ನೊಂದ್ಸಲ ಹಂಗನ್ನಲ್ಲ. ಅವರಿವರ ಸುದ್ದಿ ನಂಗ್ಯಾಕೆ ಅಂತ ತೆಪ್ಪಗಿದ್ದುಬಿಡ್ತೀನಿ.” ಕೆನ್ನೆ ಬಡಿದುಕೊಂಡ.
ಗೋಕುಲ್ ಪ್ರತಿಕ್ರಿಯಿಸುವ ಮೊದಲೇ ಬಾಗಿಲಲ್ಲಿ “ಟಕ್ ಟಕ್” ಶಬ್ಧ ಕೇಳಿಸಿತು. ಇಬ್ಬರೂ ಒಟ್ಟಿಗೆ ಅತ್ತ ತಿರುಗಿದರು. ಊರುಗೋಲಿನ ಆಸರೆಯಲ್ಲಿ ನಿಧಾನವಾಗಿ ನಡೆದುಬರುತ್ತಿದ್ದ ಮಾನ್ಸಿ ಕಾಣಿಸಿದಳು.
ಮಾನ್ಸಿ ಗೋಕುಲ್‌ನತ್ತ ನೋಡಿ ಏರು ಕಂಠದಲ್ಲಿ ಹೇಳಿದಳು.
“ಗೋಕುಲ್ ಗೊತ್ತಾಯ್ತೇನು ವಿಷಯ? ದಯಾ ಅಂಕಲ್‌ಗೆ ಅಕ್ಸಿಡೆಂಟ್ ಆಗಿದೆಯಂತೆ. ಹಾಗಂತ ಇನ್ಸ್‌ಪೆಕ್ಟರ್ ಹೇಳ್ತಾರೆ.”
“ಹ್ಞಾ! ಹೌದಾ? ಎಲ್ಲಿ?” ಗೋಕುಲ್ ಚೀರಿದ. ಅವನು ಆಘಾತಕ್ಕೊಳಗಾಗಿದ್ದುದು ಸ್ಪಷ್ಟವಾಗಿತ್ತು.
“ರಾತ್ರಿ ಫ್ಯಾಕ್ಟರಿಯಿಂದ ಮನೇಗೆ ಬರೋವಾಗ ಕುವೆಂಪು ನಗರದ ಬಸ್ ಡಿಪೋದ ಬಳಿ ಬೈಕ್‌ನಿಂದ ಕೆಳಗೆ ಉರುಳಿದ್ರಂತೆ. ನೋಡಿದ ಯಾರೋ ಅವರನ್ನ ಕರಕೊಂದು ಹೋಗಿ ಕಾವೇರಿ ನರ್ಸಿಂಗ್ ಹೋಂಗೆ ಸೇರ್‍ಸಿದಾರಂತೆ.”
ಎರಡುಕ್ಷಣ ಅಚಲನಾಗಿ ನಿಂತ ಗೋಕುಲ್. “ನಮಗ್ಯಾರಿಗೂ ಗೊತ್ತೇ ಆಗ್ಲಿಲ್ವಲ್ಲ!” ತನ್ನಷ್ಟಕ್ಕೇ ಹೇಳಿಕೊಂಡ. ಮರುಕ್ಷಣ ದನಿ ಎತ್ತರಿಸಿ ಹೇಳಿದ. “ಇರು ನಾನು ಎಸ್ ಐ ಜತೆ ಮಾತಾಡಿ ಡೀಟೈಲ್ಸ್ ತಗೋತೀನಿ.” ಹೆಜ್ಜೆ ಮುಂದಿಟ್ಟ.
ಕೋದಂಡಯ್ಯ ಅವನ ಕೈ ಹಿಡಿದ.
“ಡೀಟೇಲ್ಸ್ ನಾನು ಕೊಡ್ತೀನಿ.” ಗಕ್ಕನೆ ನಿಂತವನ ಭುಜ ತಟ್ಟುತ್ತಾ ನಿಧಾನವಾಗಿ ಹೇಳಿದ. “ನಾನೂ ಎಸ್ ಐ ಸಾಹೇಬರೂ ಈಗ ನರ್ಸಿಂಗ್ ಹೋಂನಿಂದ್ಲೇ ಬರ್ತಾ ಇದೀವಿ. ದಯಾನಂದ ಅವರ ಜತೆ ವಿವರವಾಗಿ ಮಾತಾಡಿದ್ದೀವಿ. ಅಕ್ಸಿಡೆಂಟ್ ಆದದ್ದು ರಾತ್ರಿ ಹನ್ನೊಂದು ಗಂಟೇನಲ್ಲಿ ಅಂತ ದಯಾನಂದ ಹೇಳ್ತಾರೆ. ಮಳೆ ನೀರಿನಿಂದಾಗಿ ಬೈಕ್ ಸ್ಕಿಡ್ ಆಯ್ತು ಅಂತಾರೆ.”
“ಹೆಚ್ಚು ಗಾಯ ಗೀಯ ಆಗಿಲ್ಲ ತಾನೆ?” ಗೋಕುಲ್‌ನ ದನಿಯಲ್ಲಿ ಆತಂಕವಿತ್ತು.
ಕೋದಂಡಯ್ಯ ಅವನ ಕೈ ಒತ್ತಿದ.
“ಸ್ವಲ್ಪ ಗಾಯ ಆಗಿದೆ.” ತುಸು ನಿಧಾನಿಸಿ ಮೆಲ್ಲಗೆ ಸೇರಿಸಿದ. “ಎಡ ಮೊಣಕಾಲಿನಲ್ಲಿ ಫ್ರಾಕ್ಚರ್ ಆಗಿದೆ ಅಂತ ಡಾಕ್ಟರ್ ಹೇಳ್ತಾರೆ.”
“ಮೈಗಾಡ್!” ಗೋಕುಲ್ ಹಣೆಗೆ ಕೈ‌ಒತ್ತಿದ. “ನಾನೀಗ್ಲೇ ನೋಡ್ಬೇಕು ಅವರನ್ನ.” ಒಂದು ಹೆಜ್ಜೆ ಮುಂದಿಟ್ಟವನನ್ನು ಕೋದಂಡಯ್ಯ ಮತ್ತೆ ತಡೆದ.
“ನೀವು ಅವರನ್ನ ನೋಡೋ ಅಗತ್ಯ ಖಂಡಿತಾ ಇದೆ. ಅಲ್ಲಿಗೆ ಹೊರಡೋದಿಕ್ಕೆ ಮೊದ್ಲು ನನಗೊಂದು ಸಣ್ಣ ವಿವರ ಕೊಡಿ.”
ಅವನನ್ನೇ ವಿಚಿತ್ರವಾಗಿ ನೋಡಿದ ಗೋಕುಲ್. ಪ್ರತೀಸಲ ಹೊರಟಾಗಲೂ ತಡೆ ಒಡ್ಡುತ್ತಿದ್ದ ಕೋದಂಡಯ್ಯ ಅಧಿಕಪ್ರಸಂಗಿಯಂತೆ ಕಂಡಿರಬೇಕು ಅವನಿಗೆ.
“ನಿಮ್ಮಕ್ಕ ಬೃಂದಾವನ್ ಎಕ್ಸ್‌ಟೆನ್ಷನ್‌ನಲ್ಲಿರೋ ನಿಮ್ಮ ತಂದೇ ಮನೇಗೆ ಹೋಗಿದ್ರು. ನಿನ್ನೆ ರಾತ್ರಿ ಇಲ್ಲಿಗೆ ಹಿಂತಿರುಗೋ ಉದ್ದೇಶ ಅವರಿಗೆ ಇರ್‍ಲಿಲ್ಲ ಅಂತ ದಯಾನಂದ ಹೇಳ್ತಾರೆ. ರಾತ್ರಿ ಹತ್ತೂವರೆಯ ನಂತರ ಆಕೆ ಇಲ್ಲಿಗೆ ಬಂದದ್ದು ಯಾಕೆ ಅಂತ ನಂಗರ್ಥ ಆಗ್ತಾ ಇಲ್ಲ ಅಂತಾರೆ ಅವರು. ಇದರ ಬಗ್ಗೆ ನಿಮಗೇನಾದ್ರೂ ಗೊತ್ತೇ?”
“ಇಲ್ಲ ನಂಗೊತ್ತಿಲ್ಲ. ನಾನು ಹೈದ್ರಾಬಾದಿಗೆ ಹೋಗಿದ್ದೆ. ಅಕ್ಕ ಬೃಂದಾವನ್ ಎಕ್ಸ್‌ಟೆನ್ಷನ್‌ಗೆ ಹೋಗಿದ್ದು, ಇಲ್ಲಿಗೆ ಹಿಂತಿರುಗಿದ್ದು ಯಾವುದೂ ನಂಗೆ ಗೊತ್ತಿಲ್ಲ.” ಗೋಕುಲ್ ಸ್ಪಷ್ಟವಾಗಿ ಹೇಳಿದ. ಮಾತು ಮುಗಿಸಿ ಕೋದಂಡಯ್ಯನ ಕಡೆ ತಿರುಗಿಯೂ ನೋಡದೇ ಗೇಟ್‌ನತ್ತ ವೇಗವಾಗಿ ನಡೆದವನು ಯಾರದೋ ಕರೆ ಕೇಳಿ ಗಕ್ಕನೆ ನಿಂತ.
ಅವನ ನೋಟವನ್ನನುಸರಿಸಿ ಕಣ್ಣು ಹೊರಳಿಸಿದ ಕೋದಂಡಯ್ಯನಿಗೆ ಕಂಡದ್ದು ಕಂದು ಜೀನ್ಸ್, ಬಿಳೀ ಟೀಶರ್ಟ್ ತೊಟ್ಟ ಎತ್ತರದ ವ್ಯಕ್ತಿ. ಕೆದರಿದ ತಲೆಗೂದಲು, ಚೆಲುವು ಮುಖದಲ್ಲಿ ನಿದ್ದೆಯ ದಟ್ಟಛಾಯೆ.
ಕೋದಂಡಯ್ಯ ಮಾನ್ಸಿಯತ್ತ ಪ್ರಶ್ನಾರ್ಥಕವಾಗಿ ನೋಡಿದ. ಅವಳ ಮುಖದಲ್ಲಿ ಏಕಾ‌ಏಕಿ ಮೂಡಿದ ಆತಂಕವನ್ನು ಕಂಡು ಸೋಜಿಗಗೊಂಡ.
“ಯಾರಮ್ಮ ಅದೂ?” ಹತ್ತಿರ ಸರಿದು ಮೃದುವಾಗಿ ಪ್ರಶ್ನಿಸಿದ.
“ಅವ್ನು… ಅವ್ನು ನರಹರಿ… ದಯಾ ಅಂಕಲ್‌ದು ತಮ್ಮ.” ದನಿಯಲ್ಲಿ ನಸುಕಂಪನ!
ಕೋದಂಡಯ್ಯ ನೋಡುತ್ತಿದ್ದಂತೇ ನರಹರಿ ವೇಗವಾಗಿ ಹೆಜ್ಜೆ ಹಾಕಿ ಗೋಕುಲ್‌ನನ್ನು ಕೂಡಿಕೊಂಡ.
“ಗೇಟ್ ಮುಂದಿನ ಮಣ್ಣುನೆಲದ ಮೇಲೆ ಕಾಲಿಡಬೇಡಿ.” ಕೋದಂಡಯ್ಯ ಅವರತ್ತಲೇ ನೋಟ ನೆಟ್ಟು ಕೂಗಿ ಹೇಳಿದ.
ಗೋಕುಲ್‌ನ ಬೈಕ್ ಶಬ್ಧ ಕ್ಷೀಣವಾದ ನಂತರ ಮಾನ್ಸಿಯತ್ತ ತಿರುಗಿದ ಕೋದಂಡಯ್ಯ. ಅವನೇನೋ ಕೇಳಲು ಬಾಯಿ ತೆರೆಯುವ ಮೊದಲೇ ಅವಳಿಂದ ಮಾತು ಬಂತು.
“ದೇವಕಿ ಆಂಟಿ ರಾತ್ರಿ ಇಲ್ಲಿಗೆ ಬಂದದ್ದರ ಬಗ್ಗೆ ಅವರ ಅಪ್ಪ ಅಮ್ಮಂಗೆ ಗೊತ್ತಿರಬೋದು. ಅವರನ್ನ ಒಮ್ಮೆ ವಿಚಾರಿಸಬೇಕು ನೀವು.” ಅವಳ ದನಿಯ ಕಂಪನ ಮಾಯವಾಗಿತ್ತು. ಮತ್ತೆ ಸೌಮ್ಯಗೊಂಡ ಮುಖಭಾವ.
ಕೋದಂಡಯ್ಯ ಅವಳತ್ತ ಎರಡು ಕ್ಷಣ ಮೌನವಾಗಿ ನೋಡಿದ. ಅವಳೇನೋ ಹೇಳಲು ಮತ್ತೆ ಬಾಯಿ ತೆರೆಯುವ ಮೊದಲೇ ಹೇಳಿದ.
“ನಾವೀಗ ಅಲ್ಲಿಂದಾನೇ ಬರ್ತಾ ಇದೀವಿ ಕಣಮ್ಮ. ಅವರಿಗೂ ಏನೂ ಗೊತ್ತಿಲ್ಲ.” ಕ್ಷಣ ತಡೆದು ನಿಧಾನವಾಗಿ ಮುಂದುವರೆಸಿದ. “ಆದ್ರೆ ಅವರಿಂದ ಒಂದು ವಿಷಯ ತಿಳೀತು. ತನ್ನ ಇ ಮೇಲ್ ಚೆಕ್ ಮಾಡ್ಬೇಕು ಅಂತ ಹೇಳಿ ದೇವಕಿ ಏಳೂವರೆಯ ಹೊತ್ತಿಗೆ ಮನೆಗೆ ಸ್ವಲ್ಪ ದೂರದಲ್ಲಿರೋ ಕಂಪ್ಯೂಟರ್ ಸೆಂಟರಿಗೆ ಹೋದ್ರಂತೆ. ಅವ್ರು ಮನೇಗೆ ಹಿಂತಿರುಗಿದಾಗ ಸಮಯ ಒಂಬತ್ತು ಗಂಟೆ ಸಮೀಪಿಸ್ತಾ ಇತ್ತಂತೆ. ಬಂದೋರು ಯಾರ ಜತೇನೂ ಮಾತಾಡ್ದೇ ಕೂತುಬಿಟ್ರಂತೆ. ‘ಏನು ವಿಷಯ?’ ಅಂತ ಕೇಳ್ದಾಗ ‘ಸ್ವಲ್ಪ ತಲೇ ನೋಯ್ತಾ ಇದೆ’ ಅಂದ್ರಂತೆ. ಒಂದು ಹತ್ತು ನಿಮಿಷದ ನಂತರ ಎಲ್ಲರ ಜತೆ ಚೆನ್ನಾಗೇ ಮಾತಾಡಿದ್ರಂತೆ. ನಗ್ತಾ ನಗ್ತಾ ಊಟಾನೂ ಮಾಡಿದ್ರಂತೆ. ಹತ್ತು ಗಂಟೆ ಹೊತ್ತಿಗೆ ‘ನಂಗೆ ಮನೇಲಿ ಸ್ವಲ್ಪ ಕೆಲ್ಸ ಇದೆ, ನಾಳೆ ಬೆಳಿಗ್ಗೆ ಬಂದ್ಬಿಡ್ತೀನಿ’ ಅಂದ್ರಂತೆ. ‘ಈ ಮಳೇ ರಾತ್ರೀಲಿ ಅದೆಂಥಾ ಅರ್ಜೆಂಟ್ ಕೆಲ್ಸ? ನಾಳೆ ಬೆಳಿಗ್ಗೆ ಹೋದರಾಗದೇ?’ ಅಂತ ಅವರಮ್ಮ ಕೇಳ್ದಾಗ ‘ಇಲ್ಲ ನಾನೀಗ್ಲೇ ಹೋಗ್ಬೇಕು. ಬೆಳಿಗ್ಗೆ ಬಂದ್ಬಿಡ್ತೀನಿ ಅಂದೆನಲ್ಲ’ ಅಂತ ಹೇಳಿ ಕಾರ್ ತಗೋಂಡು ಹೊರಟುಬಿಟ್ರಂತೆ.”
ಮಾನ್ಸಿಯ ಮುಖದಲ್ಲಿ ಸುಕ್ಕುಗಳು ಮೂಡಿದವು.
‘ಅಷ್ಟು ಅವಸರವಸರವಾಗಿ ದೇವಕಿ ಆಂಟಿ ಇಲ್ಲಿಗೆ ಬಂದದ್ದರ ಕಾರಣ ಏನು? ಇಲ್ಲಿಗೆ ಬರುವಂತೆ ಕೊಲೆಗಾರನಿಂದ ಅವಳಿಗೆ ಕರೆ ಬಂದಿತ್ತೇ? ಆ ಕರೆ ಬಂದದ್ದು ಇ ಮೇಲ್ ಮೂಲಕವೇ? ಆ ಕರೆಯನ್ನು ನಿರಾಕರಿಸಲಾಗದಷ್ಟು ಅಸಹಾಯಕಳಾಗಿದ್ದಳೇ ದೇವಕಿ ಆಂಟಿ? ಕರೆ ನೀಡಿದ್ದು ಯಾರಿರಬಹುದು?’ ಅವಳೆದೆಯಲ್ಲಿ ಪ್ರಶ್ನೆಗಳ ನರ್ತನ.
ಕೋದಂಡಯ್ಯ ಮೆಲ್ಲಗೆ ಅವಳ ಭುಜ ತಟ್ಟಿದ.
“ದೇವಕಿಯಮ್ಮನ ಇ ಮೇಲ್ ಚೆಕ್ ಮಾಡಿದ್ರೆ ನಮ್ಮ ಪ್ರಶ್ನೆಗಳಿಗೆ ಉತ್ತರ ಸಿಗಬೋದು.”
ಮಾನ್ಸಿಯ ಕಣ್ಣುಗಳು ವಿಶಾಲಗೊಂಡವು.
‘ಅಧಿಕಾರಿಯ ಆಲೋಚನೆಯ ಗತಿ ನನ್ನದರಂತೇ ಇದೆ!’
“ಹೌದು ಸರ್. ನೀವು ಹೇಳೋದು ಸರಿ” ಸಕಾರದಲ್ಲಿ ತಲೆ ಅಲುಗಿಸಿದಳು.
ಅವಳ ಭುಜದ ಮೇಲಿದ್ದ ಕೋದಂಡಯ್ಯನ ಬೆರಳುಗಳ ಒತ್ತಡ ಅಧಿಕವಾಯಿತು.
“ಆಯಮ್ಮನ ಪಾಸ್‌ವರ್ಡ್ ನಿನಗೆ ಗೊತ್ತೇ ಹುಡುಗೀ?”
ಮಾನ್ಸಿಯ ಹುಬ್ಬುಗಳು ಚಕ್ಕನೆ ಕೆಳಗಿಳಿದವು. ತಲೆ ಬಾಗಿತು. ನಿರಾಶೆಯ ಪಿಸುಗು ಉದ್ಗಾರ ಹೊರಬಂತು.
“ಅಯ್ ಆಮ್ ಸಾರೀ. ನಂಗೆ ಗೊತ್ತಿಲ್ಲ.”

* * *

-ಐದು-

ಕೊಲೆ ನಡೆದ ಕೋಣೆಯ ನಡುವೆ ನಿಂತ ಟೈಟಸ್. ಒಮ್ಮೆ ಕಣ್ಣು ಮುಚ್ಚಿದ. ಚಿತ್ರಗಳು ತೇಲಿದವು. ಮನೆಯೊಡತಿ ಕೊಲೆಯಾಗಿದ್ದಾಳೆ. ಮನೆಯ ಯಜಮಾನ ಅಫಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾನೆ…
ಅವರಿಬ್ಬರ ಹೊರತಾಗಿ ಮನೆಯಲ್ಲಿ ಬೇರಾರೂ ಇಲ್ಲ.
ಕೋಣೆಯಲ್ಲಿ ಮತ್ತೊಮ್ಮೆ ಸೂಕ್ಷ್ಮವಾಗಿ ಕಣ್ಣಾಡಿಸಿದ ಟೈಟಸ್. ರಾತ್ರಿ ಎಮರ್ಜೆನ್ಸಿ ಲ್ಯಾಂಪ್‌ನ ಬೆಳಕಿನಲ್ಲಿ ನಡೆಸಿದ್ದ ಶೋಧನೆ ಅವನಿಗೆ ತೃಪ್ತಿ ನೀಡಿರಲಿಲ್ಲ.
ಅರ್ಧ ಸುಟ್ಟಿದ್ದ ಹಾಸಿಗೆಯ ಮೇಲೆ ಒಂದೆರಡು ಕ್ಷಣ ಕಣ್ಣಾಡಿಸಿದ. ರಾತ್ರಿ ನೋಡಿದ್ದಕ್ಕಿಂತ ಹೆಚ್ಚಿನದೇನೂ ಅಲ್ಲಿ ಕಂಡುಬರಲಿಲ್ಲ.
ಕಬೋರ್ಡ್ ತೆರೆದ. ಮೇಲುಭಾಗದಲ್ಲಿ ನೀಟಾಗಿ ಜೋಡಿಸಿದ್ದ ಹಲವಾರು ಪ್ಲಾಸ್ಟಿಕ್ ಡಬ್ಬಗಳು, ಉಳಿದೆಡೆ ರಾಶಿರಾಶಿಯಾಗಿ ತುಂಬಿದ್ದ ಪುಸ್ತಕಗಳು. ಕೊಲೆಯಾದವಳು ಪುಸ್ತಕಪ್ರಿಯೆ!
ಅರ್ಧಗಂಟೆ ಅಲ್ಲಿ ಕಳೆದು ಹೊರಬಂದ.
ದಯಾನಂದನ ಕೋಣೆಯಲ್ಲಿ ಹತ್ತು ನಿಮಿ‌ಇಷ ಕಾಲಾಡಿಸಿದ. ಹೊರಬಂದಾಗ ಕೋದಂಡಯ್ಯ ಕಾಣಿಸಿಕೊಂಡ.
“ಏನಾದ್ರೂ ಸಿಕ್ತಾ ಗುರೂ?” ನಗೆ ಸೂಸಿ ಪ್ರಶ್ನೆ ಹಾಕಿದ ಈಪಾಟೀ ಕೋದಂಡಯ್ಯ.
“ಎಂಥದೂ ಇಲ್ಲ ಕಣಯ್ಯ.” ನಿರಾಶೆಯ ದನಿ ಎಳೆದ ಟೈಟಸ್. “ನೀನೇನಾದ್ರೂ ಪತ್ತೇದಾರೀ ನಡೆಸಿದೆಯಾ?” ಪ್ರಶ್ನಿಸಿದ.
“ನಾನಾ! ನಾನೆಂಥ ಪತ್ತೇದಾರೀ ನಡೆಸ್ಲೀ ಗುರೂ? ನಾನೊಬ್ಬ ಹಳ್ಳೀಮುಕ್ಕ. ನಂಗ್ಯಾವ ಪತ್ತೇದಾರಿ ಬರುತ್ತೆ? ಅದಕ್ಕೆಲ್ಲಾ ನೀವೇ ಸರಿ.” ಕೋದಂಡಯ್ಯ ಹಲ್ಲು ಕಿರಿದ.
“ಹಂಗಾದ್ರೆ ಅಷ್ಟೊತ್ನಿಂದ ಇಲ್ಲೇನು ಮಾಡ್ತಾ ಇದ್ದೆ? ಮೊಟ್ಟೆ ಇಡ್ತಾ ಇದ್ಯಾ?” ಛೇಡಿಸಿದ ಟೈಟಸ್.
“ಮೊಟ್ಟೆ ಇಡೋದಾ? ಅದು ನನ್ನ ಕೆಲಸ ಅಲ್ಲ ದೇವ್ರೂ. ನಾನು ಹುಂಜ.” ಮೀಸೆ ಮೇಲೆ ಕೈಯಾಡಿಸಿಕೊಂಡ ಕೋದಂಡಯ್ಯ.
“ಘನಂದಾರೀ ಹುಂಜ! ಇಲ್ಲೇನು ಹೇಂಟೆ ಬೇಟೆ ನಡೆಸಿದ್ದೀಯೇನು?” ಟೈಟಸ್ ಕಣ್ಣು ಮಿಟುಕಿಸಿದ.
ಕೋದಂಡಯ್ಯ ಗಲ್ಲ ಬಡಿದುಕೊಂಡ.
“ಅಯ್ ಬಿಡಿ ದೇವ್ರೂ. ಇಲ್ಲಿ ಕಣ್ಣಿಗೆ ಬೀಳ್ತಾ ಇರೋವೆಲ್ಲಾ ಬರೀ ಬಾತುಕೋಳಿ, ಮಾಂಗೋಳಿಗಳೇ. ನಂಗೆ ಲಗತ್ತಲ್ಲ ಬಿಡಿ.” ನಗೆ ಸೂಸಿ ಮಾತು ಹರಿಸಿದವನು ಅಧಿಕಾರಿಗೆ ಮತ್ತೊಂದು ಕೀಟಲೆಯ ಮಾತಿಗೆ ಅವಕಾಶವಿಲ್ಲದಂತೆ ಕರ್ತವ್ಯದ ಪ್ರಸ್ತಾಪವೆತ್ತಿದ.
“ಕೋಳಿ ಕುರಿ ವಿಷಯ ಆಮೇಲೆ ನೋಡ್ಕೊಳ್ಳೋಣ ದೇವ್ರೂ, ಈಗ ಸ್ವಲ್ಪ ನನ್ನ ಜತೆ ಬನ್ನಿ. ಈಪಾಟೀ ಕೆಲ್ಸ ಬಿದ್ದಿದೆ. ಅದರ ಕಡೆ ಮೊದ್ಲು ಗಮನ ಹರಿಸ್ಬೇಕು ಸಾಹೇಬರು.” ಒಂದು ಪಕ್ಕ ಹೆಜ್ಜೆ ಹಾಕಿದ.
‘ಇವನಿಗೇನೋ ಕಂಡಿದೆ!’ ಮನದಲ್ಲಿ ಮೂಡಿದ ಕುತೂಹಲವನ್ನು ಅದುಮಿಕೊಂಡು ಮೌನವಾಗಿ ಕೋದಂಡಯ್ಯನ ಹಿಂದೆ ಹೆಜ್ಜೆ ಸರಿಸಿದ ಟೈಟಸ್.
ಗೇಟ್ ತೆರೆದು ಹೊರಗೆ ರಸ್ತೆಯಲ್ಲಿ ನಿಂತ ಕೋದಂಡಯ್ಯ. ಸುತ್ತಲೂ ಒಮ್ಮೆ ಕೊರಳು ಹೊರಳಿಸಿ ನಂತರ ನೆಲದತ್ತ ಬೆರಳು ಮಾಡಿದ.
“ಇಲ್ಲಿ ನೋಡಿ ದೇವ್ರೂ” ಅಧಿಕಾರಿಯ ಗಮನ ಸೆಳೆದ. ಟೈಟಸ್ ವಿಧೇಯ ವಿದ್ಯಾರ್ಥಿಯಂತೆ ನೆಲದತ್ತ ಕಣ್ಣು ಹೊರಳಿಸಿದ.
ಟಾರ್ ರಸ್ತೆ ಮತ್ತು ಗೇಟ್‌ನ ನಡುವೆ ಮೂರು ಅಡಿಗಳ ಮಣ್ಣು ನೆಲ. ನಿನ್ನೆಯಡೀ ಸುರಿದ ಮಳೆಯಲ್ಲಿ ಕೊಚ್ಚೆಯಾಗಿಹೋಗಿದ್ದ ಮರಳುಮಿಶ್ರಿತ ಕೆಂಪುಮಣ್ಣು. ಅರ್ಧ ವೃತ್ತಾಕಾರದಲ್ಲಿ ಮೂಡಿದ್ದ ಯಾವುದೋ ವಾಹನದ ಚಕ್ರದ ಆಳವಾದ ಗುರುತು. ಅದರ ತಳದಲ್ಲಿ ನಿಂತ ಮಳೆನೀರು.
ಟೈಟಸ್ ತಲೆಯೆತ್ತಿ ಪ್ರಶ್ನಾರ್ಥಕವಾಗಿ ನೋಡಿದ. ಕೋದಂಡಯ್ಯ ನೆಲದ ಮೇಲೆ ಕುಕ್ಕರಗಾಲಿನಲ್ಲಿ ಕುಳಿತ. ಬಲಗೈನ ತೋರುಬೆರಳನ್ನು ಚಕ್ರದ ಗುರುತಿನತ್ತ ತಿರುಗಿಸಿದ. ತಲೆಯೆತ್ತದೇ ಹೇಳತೊಡಗಿದ.
“ಇದು ಆಟೋರಿಕ್ಷಾದ ಚಕ್ರದ ಗುರುತು ಗುರೂ. ಹಿಂಭಾಗದ ಚಕ್ರ ಅಂತ ಊಹೆ ಮಾಡಬೋದು. ಮೆಯಿನ್ ರೋಡ್‌ನಿಂದ ಬಂದ ಆಟೋ ಮನೆ ಮುಂದೆ ನಿಂತಿದೆ. ಅದರಲ್ಲಿದ್ದವರು ಇಳಿದ ನಂತರ ಅದು ಎಡಕ್ಕೆ ತಿರುಗಿ ಮತ್ತೆ ಮೆಯಿನ್ ರೋಡ್ ಕಡೆ ಹೊರಟುಹೋಗಿದೆ. ಅದು ಹಾಗೆ ತಿರುಗೋವಾಗ ಹಿಂಭಾಗದ ಬಲಗಡೆಯ ಚಕ್ರ ಟಾರ್ ರಸ್ತೆ ಬಿಟ್ಟು ಮಣ್ಣು ನೆಲಕ್ಕೆ ಇಳಿದಿದೆ. ಚಕ್ರದ ಗುರುತು ಸ್ಪಷ್ಟವಾಗಿ ಮೂಡಿದೆ. ಈ ಮನೆಯಲ್ಲಿ ಕೊಲೆ ನಡೆದಿದೆ ಅಂತ ತಿಳಿದ ತಕ್ಷಣ ಘೂರ್ಖಾ ಗುಲಾಬ್ ಸಿಂಗ್ ಇಲ್ಲಿ ಮಣ್ಣಿನ ಮೇಲೆ ಯಾರ ಹೆಜ್ಜೆಯ ಗುರುತೂ ಬೀಳದ ಹಾಗೆ ನೋಡ್ಕೊಂಡಿದ್ದಾನೆ. ಅವನಿಗೆ ನೂರು ಥ್ಯಾಂಕ್ಸ್ ಹೇಳ್ಬೇಕು ನಮ್ಮ ಇಲಾಖೆ. ಅವನ ಸಮಯಸ್ಪೂರ್ತಿಯ ಕೃತ್ಯದಿಂದಾಗಿ ಇಲ್ಲಿ ಆಟೋ ಚಕ್ರದ ಗುರುತು ಮಾತ್ರ ಉಳಿದುಹೋಯ್ತು…” ಹೇಳುತ್ತಾ ಎದ್ದು ನಿಂತ. ಚಕ್ರದ ಗುರುತಿನತ್ತಲೇ ನೋಟ ಹೂಡಿದ್ದ ಅಧಿಕಾರಿಯ ಪಕ್ಕ ಸರಿದು ಗಂಭೀರ ದನಿಯಲ್ಲಿ ಪ್ರಶ್ನೆ ಹಾಕಿದ.
“ಇದನ್ನ ನೋಡಿದ್ರೆ ನಿಮಗೇನನ್ಸುತ್ತೆ?”
ನೆಲದಿಂದ ನೋಟ ಕೀಳದೇ ಸಣ್ಣಗೆ ದನಿ ಹೊರಡಿಸಿದ ಟೈಟಸ್.
“ಈ ಆಟೋರಿಕ್ಷಾದ ಚಕ್ರದ ಹೊರತಾಗಿ ಇಲ್ಲಿ ಬೇರೆ ಯಾವ ಗುರುತೂ ಇಲ್ಲ. ಮನುಷ್ಯರ ಹೆಜ್ಜೆಗಳ ಗುರುತೂ ಇಲ್ಲ. ಅಂದರೆ ಆಟೋದಿಂದ ಇಳಿದವರು ಮನೆಯೊಳಗೆ ಹೋದದ್ದು ಹೇಗೆ ಅನ್ನೋದು ಪ್ರಶ್ನೆ ಅಲ್ಲವಾ ಕೋದಂಡಯ್ಯ?”
ಒಮ್ಮೆ ನಿಟ್ಟುಸಿರಿಟ್ಟ ಕೋದಂಡಯ್ಯ.
“ಮೊದ್ಲು ಕಾಫಿ ಕುಡಿದು ನಂತರ ಉಪ್ಪಿಟ್ಟಿಗೆ ಕೈಹಾಕೋ ಜಾಯಮಾನದೋರು ನೀವು ಅನ್ನೋದನ್ನ ನಾನು ಮರೆತಿದ್ದೆ.”
ಟೈಟಸ್ ಸರ್ರನೆ ತಲೆಯೆತ್ತಿದ. ಕಣ್ಣುಗಳು ಕೆಂಡ ಕಾರಿದವು.
ಕೋದಂಡಯ್ಯ ಅವನ ಹತ್ತಿರ ಸರಿದ.
“ನೀವು ಕೇಳೋದು ಭಾಳಾ ಮುಖ್ಯವಾದ ಪ್ರಶ್ನೆ ಗುರೂ. ಆದ್ರೆ ಅದು ಎರಡನೇ ಪ್ರಶ್ನೆ. ಮೊದಲ್ನೇ ಪ್ರಶ್ನೆ ಕಡೆ ಮೊದ್ಲು ಗಮನ ಕೊಡೋಣ.”
“ಏನದು ನಿನ್ನ ಮೊದಲ್ನೇ ಪ್ರಶ್ನೆ? ನಿನ್ನಜ್ಜಿ ಪಿಂಡ!”
ಅವನ ಕೋಪದ ಕಡೆ ಯಾವ ಗಮನವನ್ನೂ ಕೊಡದೇ ಕೋದಂಡಯ್ಯ ಮಾತು ತೆಗೆದ.
“ಆಟೋದಲ್ಲಿ ಬಂದೋರು ದೇವಕಿನೇ ಅಂತ ಊಹೆ ಮಾಡಬೋದು. ಪ್ರಶ್ನೆ ಏನೂ ಅಂದ್ರೆ ಬೃಂದಾವನ್ ಎಕ್ಸ್‌ಟೆನ್ಷನ್‌ನಿಂದ ತನ್ನ ಕಾರಿನಲ್ಲಿ ಹೊರಟ ಆಯಮ್ಮ ಇಲ್ಲಿಗೆ ಆಟೋದಲ್ಲಿ ಹೇಗೆ ಬಂದ್ರು ಅನ್ನೋದು.”
“ಆಯಮ್ಮ ಆಟೋದಲ್ಲಿ ಬಂದ್ರು ಅಂತ ಹ್ಯಾಗಯ್ಯ ಹೇಳ್ತೀಯ?” ಟೈಟಸ್‌ನ ಕೋಪ ಇನ್ನೂ ಶಮನವಾಗಿರಲಿಲ್ಲ.
ಕೋದಂಡಯ್ಯನ ಮುಖದಲ್ಲಿ ಸಣ್ಣಗೆ ನಗೆ ಮಿನುಗಿತು.
“ಆಕೆ ಕಾರ್‌ನಲ್ಲೇ ಇಲ್ಲಿಗೆ ಬಂದಿದ್ರೆ ಇಲ್ಲಿ ಅದರ ಚಕ್ರದ ಗುರುತು ಇರಬೇಕಾಗಿತ್ತು. ಆದ್ರೆ ಅದು ಇಲ್ಲ. ಒಂದುವೇಳೆ ಆಯಮ್ಮ ಸರ್ಕಸ್‌ನಲ್ಲಿ ಮಾಡೋ ಹಂಗೆ ಕಾರನ್ನ ಕಾಂಪೌಂಡ್ ಮೇಲೆ ಹಾರಿಸಿಕೊಂಡು ಒಳಕ್ಕೆ ತಗೋಂಡು ಹೋಗಿದ್ದಾರೆ ಅನ್ನೋದಾದ್ರೆ ಕಾರು ಒಳಗೆ ಇರಬೇಕಾಗಿತ್ತು. ಆದ್ರೆ ಅದು ಎಲ್ಲೂ ಇಲ್ಲ. ನನ್ನ ಮಾತ್ನಲ್ಲಿ ನಂಬಿಕೆ ಇಲ್ಲ ಅಂದ್ರೆ ನೀವೇ ಒಂದ್ಸಲ ಹುಡುಕಿನೋಡಿ, ಗ್ಯಾರೇಜಿನಲ್ಲಾಗಲೀ, ಅಡಿಗೆಮನೆಯಲ್ಲಾಗಲೀ, ಬಾತ್‌ರೂಮಿನಲ್ಲಾಗಲೀ ಅಥವಾ ಬೆಡ್‌ರೂಂನ ಮಂಚದ ಕೆಳಗಾಗಲೀ ಎಲ್ಲಾದರೂ ಹುಡುಕಿ. ಆ ಕಾರ್ ನಿಮಗೆ ಸಿಗೋದಿಲ್ಲ.” ಅವನ ನಗೆ ದೊಡ್ಡದಾಯಿತು.
ಟೈಟಸ್ ಎರಡು ಕ್ಷಣ ಮಾತು ಹೊರಡದೇ ನಿಂತ. ಒಮ್ಮೆ ಆಕಾಶದತ್ತ ಮೊಗವೆತ್ತಿ ಇಳಿಸಿದ. ಸಣ್ಣಗೆ ದನಿ ತೆಗೆದ.
“ಹೌದು ಕೋದಂಡಯ್ಯ! ನೀನ್ಹೇಳೋದು ಸರಿ.” ಅಗಲವಾಗಿ ಬಾಯಿ ತೆರೆದ. “ಆ ಕಾರ್ ಎಲ್ಲಿದೆ ಅಂತ ಪತ್ತೆ ಮಾಡ್ಬೇಕು ಕಣಯ್ಯ.” ದನಿಯೆತ್ತರಿಸಿದ.
“ಅಗತ್ಯವಾಗಿ ಮಾಡಬೇಕಾದ ಕೆಲಸ ಅದು. ಅದಕ್ಕೆ ಮೊದ್ಲು ನೀವು ಎತ್ತಿದ ಪ್ರಶ್ನೆ- ಆಟೋದಲ್ಲಿ ಬಂದೋರು ಮನೆಯೊಳಗೆ ಹೋದದ್ದು ಯಾವ ದಾರೀಲಿ ಅನ್ನೋದನ್ನ ಪತ್ತೆ ಮಾಡ್ಬೇಕು. ಬನ್ನಿ ಆ ಕೆಲ್ಸಾನ್ನ ಈಗ ಮಾಡಿಬಿಡೋಣ.” ಹೇಳುತ್ತಾ ಕಾಂಪೌಂಡ್ ಪಕ್ಕದ ಹಸಿರು ಹುಲ್ಲುಹಾಸಿನ ಮೇಲೆ ಹೆಜ್ಜೆ ಸರಿಸಿದ. ಬಲಕ್ಕೆ ತಿರುಗಿ ನಾಲ್ಕು ಹೆಜ್ಜೆ ನಡೆದು ಪುಟ್ಟ ಕಬ್ಬಿಣದ ಗೇಟ್ ಮುಂದೆ ನಿಂತ.
ಮನೆಯ ಬಲಬದಿ ಅದು. ಹತ್ತಡಿ ಅಗಲದ ಅಡ್ಡರಸ್ತೆ. ಟಾರ್ ಕಾಣದ, ಬರೀ ಜಲ್ಲಿ ಕಲ್ಲುಗಳು ಹಾಗೂ ಮಣ್ಣು ತುಂಬಿದ ಮೈ. ಅದರಾಚೆ ಹಸಿರು ರಂಗು ಬಳಿದ ಕಬ್ಬಿಣದ ತೆಳು ಕಂಬಗಳ ಸಾಲಿನಿಂದ ಆವೃತವಾಗಿದ್ದ ವಿಶಾಲವಾದ ಮಕ್ಕಳ ಆಟದ ಬಯಲು. ಪ್ರಪಂಚದ ಗೋಜು ಮರೆತು ಕ್ರಿಕೆಟ್ ಆಟದಲ್ಲಿ ಮುಳುಗಿಹೋಗಿದ್ದ ಪಡ್ಡೆಹುಡುಗರ ಗುಂಪು.
ಗೇಟ್‌ನ ಕೆಳಗಿನ ಸಿಮೆಂಟ್ ನೆಲಕ್ಕೂ ಕಲ್ಲುಮಣ್ಣಿನ ರಸ್ತೆಗೂ ನಡುವಿನ ಎರಡಡಿ ನೆಲ ಅರ್ಧ ಅಡಿಗೂ ಎತ್ತರದ ಹಚ್ಚಹಸಿರು ಹುಲ್ಲಿನಿಂದ ಮುಚ್ಚಿಹೋಗಿತ್ತು. ಹೆಚ್ಚು ಉಪಯೋಗಿಸದ ಗೇಟ್ ಇರಬೇಕು ಅದು. ಹುಲ್ಲನ್ನು ತೆಗೆಸುವ ಅಗತ್ಯ ದೇವಕಿಗಾಗಲೀ, ದಯಾನಂದನಿಗಾಗಲೀ ಕಂಡಂತಿರಲಿಲ್ಲ.
ಅದರತ್ತ ಕೈ ಮಾಡಿದ ಕೋದಂಡಯ್ಯ.
“ಆಟೋದಲ್ಲಿ ಬಂದ ದೇವಕಿ ಮನೆಯ ಮೆಯಿನ್ ಗೇಟ್ ಬಳಿ ಇಳಿದು ಟಾರ್ ರಸ್ತೆ ಮೇಲೆ ನಡೆದು ಈ ಅಡ್ಡರಸ್ತೆಗೆ ಬಂದಿದ್ದಾರೆ. ಈ ಹುಲ್ಲನ್ನ ದಾಟಿ ಗೇಟ್ ತೆರೆದು ಒಳಗೆ ಹೋಗಿದ್ದಾರೆ. ಅಡ್ಡರಸ್ತೆಯ ಜಲ್ಲಿಕಲ್ಲುಗಳ ಮೇಲೆ ಅವರ ಹೆಜ್ಜೆ ಗುರುತು ಬಿದ್ದಿಲ್ಲ. ಹುಲ್ಲಿನ ಮೇಲೂ ಅದು ಮೂಡೋದಿಲ್ಲ ಅನ್ನೋದನ್ನ ನಾನು ನಿಮಗೆ ಪ್ರತ್ಯೇಕವಾಗಿ ಹೇಳೋ ಅಗತ್ಯ ಇಲ್ಲ. ಗೇಟ್ ಕೆಳಗಿನ ಸಿಮೆಂಟ್ ನೆಲದ ಮೇಲೆ ಬಿದ್ದ ಹೆಜ್ಜೆ ಗುರುತುಗಳು ಮಳೆಯ ನೀರಿನಲ್ಲಿ ತೊಳೆದುಹೋಗಿವೆ. ಆದರೆ ಆಯಮ್ಮ ಇಲ್ಲೇ ನಡೆದು ಹೋಗಿದ್ದಾರೆ ಅನ್ನೋದಕ್ಕೆ ಸಾಕ್ಷಿ ಇದೆ.”
ಟೈಟಸ್‌ನ ಹುಬ್ಬುಗಳು ಮೇಲೇರಿದವು.
“ಬನ್ನಿ ತೋರಿಸ್ತೀನಿ.” ಹೇಳುತ್ತಾ ಕೋದಂಡಯ್ಯ ಬಂದ ದಾರಿಯಲ್ಲೇ ಹಿಂದೆ ನಡೆದ. ಆಟೋ ಚಕ್ರದ ಗುರುತು ಹೊತ್ತಿದ್ದ ಮಣ್ಣುನೆಲವನ್ನು ತಪ್ಪಿಸಿ ಹುಲ್ಲಿನ ಮೇಲೆ ನಡೆದು ಮೆಯಿನ್ ಗೇಟ್ ದಾಟಿದ. ಬಾಗಿಲು ಸಮೀಪಿಸಿ ಕೆಳಗೆ ಬಾಗಿದ. ಗೋಡೆಯ ಪಕ್ಕ ನೀಟಾಗಿ ಇರಿಸಿದ್ದ ಎತ್ತರದ ಹಿಮ್ಮಡಿಯ ಪಾದರಕ್ಷೆಗಳಲ್ಲಿ ಒಂದನ್ನು ಎತ್ತಿ ತಿರುಗಿಸಿದ.
ಟೈಟಸ್‌ನ ಕಣ್ಣುಗಳು ಮೊನಚಾದವು.
ಪಾದರಕ್ಷೆಯ ತಳದಲ್ಲಿ ಅಂಟಿದ್ದ ಎರಡು ಹುಲ್ಲಿನ ಎಸಳುಗಳು!
“ಇದು ದೇವಕಿಯಮ್ಮನ ಬಲಗಾಲಿನ ಚಪ್ಪಲಿ. ಇಲ್ಲಿ ಅಂಟಿರೋ ಹುಲ್ಲು ಆ ಗೇಟ್ ಆಚೆ ಇರೋ ಹುಲ್ಲುಗಳಿಗೆ ಸರಿಯಾಗಿ ಹೊಂದಿಕೆಯಾಗುತ್ತೆ.”
ಹೆಡ್ ಕಾನ್ಸ್‌ಟೇಬಲ್‌ನ ಮಾತನ್ನು ಅಲ್ಲಗಳೆಯುವ ಸ್ಥಿತಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಇರಲಿಲ್ಲ.
“ಮೆಯಿನ್ ಗೇಟ್ ಮುಂದೆ ಆಟೋದಿಂದ ಇಳಿದೋರು ಇಲ್ಲೀವರೆಗೆ ನಡೆದುಬಂದು ಉಪಯೋಗಿಸದೇ ಇದ್ದ ಈ ಗೇಟ್ ಮೂಲಕ ಒಳಗೆ ಬರೋ ಅಗತ್ಯ ಏನಿತ್ತು?” ಮೆಲ್ಲಗೆ ಗೊಣಗಿದ ಟೈಟಸ್.
“ಆಯಮ್ಮ ತಾನಾಗಿ ಈ ದಾರಿ ಹಿಡಿದಿಲ್ಲ ಗುರೂ. ಅವಳನ್ನ ಕರೆತಂದ ಕೊಲೆಗಾರ ಈ ದಾರೀಲಿ ನಡೆಸಿದ್ದಾನೆ.”
“ಕೊಲೆಗಾರ ಆಯಮ್ಮನ ಜತೇನೇ ಬಂದ ಅಂತ ನೀನು ಹೇಳ್ತೀಯೇನು?”
“ಘಂಟೆ ಹೊಡೆದ ಹಾಗೆ ಹೇಳ್ತೀನಿ. ಆಯಮ್ಮ ಒಬ್ಳೇ ಬಂದಿದ್ರೆ ಇಲ್ಲಿಗೆ ನೇರವಾಗಿ ತನ್ನ ಕಾರ್‌ನಲ್ಲಿ ಬರ್ತಾ ಇದ್ಲು. ಬಂದೋಳು ರಾಜಾರೋಷವಾಗಿ ಮೆಯಿನ್ ಗೇಟ್ ಮೂಲಕ ಕಾರನ್ನ ಒಳಗೆ ತಗೋಂಡು ಹೋಗ್ತಾ ಇದ್ಲು. ನಡೆದಿರೋದು ಏನಪ್ಪಾ ಅಂದ್ರೆ ಕೊಲೆಗಾರ ಇ ಮೇಲ್ ಮೂಲಕ ಮೆಸೇಜ್ ಕೊಟ್ಟು ದೇವಕಿಯಮ್ಮ ಮಳೇರಾತ್ರೀಲಿ ಮನೆಯಿಂದ ಹೊರಡೋ ಹಾಗೆ ಮಾಡಿದ್ದಾನೆ. ತನ್ನನ್ನ ಸಂಧಿಸೋದಿಕ್ಕೆ ಯಾವುದೋ ಸ್ಥಳಾನ್ನ ಸೂಚಿಸಿದ್ದಾನೆ. ಈಯಮ್ಮ ಅಲ್ಲಿಗೆ ತಲುಪಿದಾಗ ಯಾವುದೋ ನೆಪ ಹೇಳಿ ಕಾರನ್ನ ಬಿಟ್ಟು ಆಟೋದಲ್ಲಿ ಇಲ್ಲಿಗೆ ಬರೋ ಹಾಗೆ ಮಾಡಿದ್ದಾನೆ. ಇಲ್ಲಿಗೆ ತಲುಪಿದ ಮೇಲೆ ಮೆಯಿನ್ ಗೇಟನ್ನ ಬಿಟ್ಟು ಸಣ್ಣ ಗೇಟ್ ಮೂಲಕ ಒಳಕ್ಕೆ ನಡೆಸಿದ್ದಾನೆ. ಇದನ್ನೆಲ್ಲಾ ಅವನು ಉದ್ದೇಶಪೂರ್ವಕವಾಗೇ ಮಾಡಿದ್ದಾನೆ. ಕೊಬ್ಬಿದ ಕುರಿಯನ್ನ ಕಟುಕ ಕಸಾಯಿಖಾನೆಗೆ ಕರೆದೊಯ್ಯುವಷ್ಟೇ ಜೋಪಾನವಾಗಿ ಕೊಲೆಗಾರ ದೇವಕಿಯಮ್ಮನ್ನ ಇಲ್ಲಿಗೆ ಕರೆತಂದಿದ್ದಾನೆ.”
ಟೈಟಸ್ ಮೌನವಾದ. ಕ್ಷಣ ತಡೆದು ದನಿಯೆತ್ತರಿಸಿದ. “ಆಯಮ್ಮ ಕೊಲೆಗಾರನ ಜತೆ ಆಟೋದಲ್ಲಿ ಬಂದದ್ದನ್ನ, ಇಲ್ಲಿ ಇಳಿದದ್ದನ್ನ, ಆ ಗೇಟ್ ಮೂಲಕ ಒಳಗೆ ಹೋದದ್ದನ್ನ ಯಾರಾದ್ರೂ ನೋಡಿರಲೇಬೇಕು ಕೋದಂಡಯ್ಯ. ಅಕ್ಕಪಕ್ಕದಲ್ಲಿ ಸ್ವಲ್ಪ ವಿಚಾರಿಸಬೇಕು.”
ಕೋದಂಡಯ್ಯ ಲೊಚಗುಟ್ಟಿದ.
“ಆ ಕೆಲಸ ಮಾಡಿಯಾಯ್ತು. ಏನೂ ಪ್ರಯೋಜನ ಇಲ್ಲ.”
“ಹಂಗಂದ್ರೆ?”
“ಹಂಗಂದ್ರೆ ಹೀಂಗೆ ಗುರೂ. ಕಟುಕನ ಜತೆ ಕುರಿ ಇಲ್ಲಿಗೆ ಬಂದದ್ದನ್ನ ಯಾರೂ ಗಮನಿಸಿಲ್ಲ. ಜನಾನೇ ಹೀಗೆ. ಏನೂ ಇಲ್ಲದಿದ್ದಾಗ ಎಲ್ಲರೂ ಅತ್ತಲೇ ನೋಡ್ತಾ ಇರ್ತಾರೆ. ನಡೀಬಾರದ್ದು ನಡೀತಾ ಇರೋವಾಗ ಆ ಕಡೆ ತಿರುಗಿಯೂ ನೋಡೋದಿಲ್ಲ…” ಮತ್ತೊಮ್ಮೆ ಲೊಚಗುಟ್ಟಿ ಮುಂದುವರೆಸಿದ. “ಸುತ್ತುಮುತ್ತಲಿನ ಜನ ನೋಡಿ ನಮಗೆ ಸುದ್ದಿ ಕೊಡೋದಾಗಿದ್ರೆ ನಾವು ಕಷ್ಟಪಡೋ ಅಗತ್ಯವಾದ್ರೂ ಎಲ್ಲಿರ್‍ತಿತ್ತು? ಆ ಪುಣ್ಯ ನಮಗೆಲ್ಲಿ ಬಂತು? ಆ ಮಾತು ಬಿಡಿ. ನಮ್ಮ ಕೆಲಸ ನಾವೇ ಮಾಡ್ಬೇಕು. ಸಧ್ಯಕ್ಕೆ ಇಲ್ಲಿ ಇಷ್ಟು ಮಾಡಿದ್ದು ಸಾಕು. ಬೃಂದಾವನ್ ಎಕ್ಸ್‌ಟೆನ್ಷನ್‌ಗೆ, ಕಾವೇರಿ ನರ್ಸಿಂಗ್ ಹೋಂಗೆ ಒಂದೊಂದ್ಸಲ ಭೇಟಿ ಕೊಟ್ಟುಬಿಡೋಣ. ಉಳಿದ ಕೆಲಸ ಏನಿದ್ರೂ ಪೋಸ್ಟ್‌ಮಾರ್ಟಂ ಮತ್ತು ಫೊರೆನ್ಸಿಕ್ ರಿಪೋರ್ಟ್ ಬಂದಮೇಲೆ.”
ಜೀಪ್ ಹೊರಡುತ್ತಿದ್ದಂತೇ ಟೈಟಸ್ ಗಾಬರಿಯ ದನಿ ತೆಗೆದ.
“ಅಯ್ಯಯ್ಯೋ! ಒಂದ್ ಕೆಲ್ಸಾ ಮರೆತು ಹೋಯ್ತಲ್ಲಾ ಕೋದಂಡಯ್ಯ!”
ಕೋದಂಡಯ್ಯ ಕಣ್ಣರಳಿಸಿದ.
“ಆ ನರಹರಿಯನ್ನ, ಅಂದ್ರೆ ದೇವಕಿಯಮ್ಮನ ಮೈದುನನ ಜತೆ ಮಾತಾಡಬೇಕಾಗಿತ್ತು ಕಣಯ್ಯ.”
ಕೋದಂಡಯ್ಯ ಮತ್ತೊಮ್ಮೆ ಲೊಚಗುಟ್ಟಿದ.
“ಆವಯ್ಯ ಹೊರಕ್ಕೆ ಹೋಗಿ ಯಾವ್ದೋ ಕಾಲ ಆಯ್ತು. ಅವನನ್ನ ಆಮೇಲೆ ನಿಧಾನವಾಗಿ ನೋಡಬೋದು. ಈಗ ಅದಕ್ಕಿಂತ್ಲೂ ಮುಖ್ಯವಾದ ಕೆಲಸ ಇದೆ.”
“ಏನದು?”
ಅವನ ಕಡೆ ತಿರುಗದೇ ಡ್ರೈವರ್‌ಗೆ ಆದೇಶಿಸಿದ ಕೋದಂಡಯ್ಯ.
“ಸ್ವಲ್ಪ ಆ ಎದುರಿಗೆ ಕಾಣ್ತಾ ಇರೋ ಮಿಲ್ಟ್ರಿ ಹೋಟೆಲ್ ಮುಂದೆ ಗಾಡಿ ನಿಲ್ಸಪ್ಪ.”
ಅಧಿಕಾರಿಯ ಗೊಂದಲಗ್ರಸ್ತ ಮುಖದತ್ತ ನೋಡಿ ಕಿರುನಗೆ ನಕ್ಕ.
“ತಮಗೆ ಬೆಳಿಗ್ಗೆ ದೋಸೆ ಚಟ್ನಿ ಮೇಯಿಸಿದ ದೇವರು ಮಧ್ಯಾಹ್ನ ಬಿರಿಯಾನಿ ಮೇಯಿಸ್ತಾನೆ ಅಂತ ನಾನು ಹೇಳಿದ್ದನ್ನ ಮರೆತುಬಿಟ್ರಾ? ಈಗ ಬಿಸಿಬಿಸಿ ಬಿರಿಯಾನಿ ತಯಾರಾಗಿರತ್ತೆ. ನಿಮಗೆ ಬಡಿಸೋದಿಕ್ಕೆ ದೇವರು ಕಾದು ನಿಂತಿದ್ದಾನೆ ಅಲ್ಲಿ. ನಡೀರೀ, ಹೋಗಿ ಹೊಡೆದುಬಿಡೋಣ.”

* * *

-ಆರು-

ಹಣೆಗೆ ಕೈ ಒತ್ತಿದಳು ಮಾನ್ಸಿ. ತಲೆಯಲ್ಲಿ ಗೊಂದಲಗಳ ಮೆರವಣಿಗೆ ಸಾಗಿತ್ತು.
ಬಿ ಎ ಪೂರ್ಣವಾಗಲಿಲ್ಲ!
ಕೊನೆಯ ಪರೀಕ್ಷೆಯ ಸಮಯ ಸರಿದುಹೋಗಿತ್ತು.
ಪರೀಕ್ಷೆ ಬರೆಯಲು ಹೋಗಲಾಗಲಿಲ್ಲ. ಸಪ್ಲಿಮೆಂಟರಿ ಪರೀಕ್ಷೆಗೆ ಇನ್ನಾರು ತಿಂಗಳು ಕಾಯಬೇಕು.
ನೆರೆಯಲ್ಲಿ ನಡೆದಿರುವ ದುರಂತ ಕಣ್ಣುಗಳಿಗೆ ಕತ್ತಲೆ ಕವಿಸಿದೆ. ಮನಸ್ಸಿನ ತುಂಬಾ ಸೂತಕದಂಥ ಮುಸುಕು.
ಬಿ ಎ ಮುಗಿಯದೇ ಗೋಕುಲ್‌ನೊಡನೆ ಮದುವೆಗೆ ಮನಸ್ಸು ಒಪ್ಪುತ್ತಿಲ್ಲ. ಅದರರ್ಥ ನಾನು ಇನ್ನೂ ಕೆಲವು ತಿಂಗಳುಗಳು ಅಣ್ಣ ಅತ್ತಿಗೆಯ ನೆರಳಿನಲ್ಲೇ ಬದುಕಬೇಕು. ಪರಾವಲಂಬಿಯ ಬದುಕು ಇನ್ನೂ ಮುಂದುವರೆಯುತ್ತದೆ!
ಇರಲಿ, ಈಗ ಅದು ಮುಖ್ಯ ಅಲ್ಲ. ನನಗಾದರೆ ಪರೀಕ್ಷೆ ಬರೆಯುವ ಅವಕಾಶ ಇನ್ನಾರು ತಿಂಗಳಲ್ಲಿ ಮತ್ತೊಮ್ಮೆ ಬರುತ್ತದೆ. ಆದರೆ ಗೋಕುಲ್‌ಗೆ…?
ಅವನ ಏಕೈಕ ಅಕ್ಕ ಇನ್ನೆಂದೂ ಹಿಂತಿರುಗುವುದಿಲ್ಲ.
‘ಪ್ರಿಯಕರನ ಬಾಳಿನಲ್ಲಿ ನಡೆದ ದುರಂತ ನನ್ನ ಬದುಕಿನ ದುರಂತವೂ ಹೌದು.’
ಇದು ಹೇಗಾಯಿತು?
ಸಿಡಿದುಹೋಗುತ್ತಿದ್ದಂತಹ ತಲೆಯನ್ನು ಅಂಗೈಗಳಿಂದ ಒತ್ತಿ ಹಿಡಿದಳು.
ದೇವಕಿ ಆಂಟಿಗಿದ್ದ ವೈರಿ ಯಾರು? ಅವಳನ್ನು ಕೊಂದು ಬೆಂಕಿಯಲ್ಲಿ ಸುಡುವಷ್ಟು ದ್ವೇಷ ಅವನಿಗೆ!
ಅವನು ನನ್ನ ಹಿಂದೆಯೂ ನಿಂತಿದ್ದ ಎಂದು ಶಿವ ಅಂಕಲ್ ಹೇಳುತ್ತಾರೆ.
ಅಂದರೆ ಬೆಂಕಿ ಆರಿಸುವ ನನ್ನ ಪ್ರಯತ್ನ ಅವನ ಯೋಜನೆಗೆ ಒಡ್ಡಿದ ತಡೆಯೇ? ಅದಕ್ಕಾಗಿ ನನ್ನನ್ನೂ ಕೊಲ್ಲಲು ಅವನು ಬಯಸಿದ್ದನೇ? ಶಿವ ಅಂಕಲ್ ಸಮಯಕ್ಕೆ ಸರಿಯಾಗಿ ಬಾರದಿದ್ದರೆ ನಾನೂ ದೇವಕಿ ಆಂಟಿಯ ದಾರಿ ಹಿಡಿಯುತ್ತಿದ್ದೆನೇ?
ಅವಳೆದೆಯಲ್ಲಿ ಭಯ ಝಿಲ್ಲನೆ ಪುಟಿಯಿತು.
ಅವನು ಯಾರು?
ದೇವಕಿ ಆಂಟಿಗೆ ಇ ಮೇಲ್ ಮೂಲಕ ಸೂಚನೆ ಕೊಟ್ಟ ಅವನು ಆಕೆ ಜಿನುಗುಮಳೆಯಲ್ಲಿ ಮನೆಯಿಂದ ಹೊರಡುವಂತೆ ಮಾಡಿದ್ದಾನೆ. ಬೃಂದಾವನ್ ಎಕ್ಸ್‌ಟೆನ್ಷನ್‌ನ ಮನೆಯಿಂದ ತನ್ನ ಕಾರಿನಲ್ಲಿ ಹೊರಟ ಅವಳು ಇಲ್ಲಿಗೆ ತಲುಪಿದ್ದು ಆಟೋರಿಕ್ಷಾದಲ್ಲಿ! ಅವಳ ಕಾರು ಕುವೆಂಪು ನಗರ ಮಾರ್ಕೆಟ್‌ನ ಹತ್ತಿರ ರಸ್ತೆಬದಿಯಲ್ಲಿ ನಿಂತಿದ್ದುದು ಈ ಮಧ್ಯಾಹ್ನ ಪೋಲೀಸರ ಗಮನಕ್ಕೆ ಬಂದಿದೆ. ಅವರು ಮೊದಲು ಸಂದೇಹಿಸಿದಂತೆ ಆಂಟಿಯ ಕಾರಿಗೆ ಯಾವ ತೊಂದರೆಯೂ ಆಗಿಲ್ಲ. ಎಂಜಿನ್ ಸರಿಯಾಗಿದೆ ಹಾಗೂ ಪೆಟ್ರೋಲ್ ಟ್ಯಾಂಕ್ ಭರ್ತಿಯಾಗಿದೆ.
ಆಂಟಿ ಅಲ್ಲೇಕೆ ತನ್ನ ಕಾರ್ ನಿಲ್ಲಿಸಿದಳು? ಕೊಲೆಗಾರ ಅವಳಿಗಾಗಿ ಅಲ್ಲಿ ಕಾದುನಿಂತಿದ್ದನೇ? ಅವಳನ್ನು ಕಾರಿನಿಂದಿಳಿಸಿ ಆಟೋರಿಕ್ಷಾದಲ್ಲಿ ಕೂರಿಸಿಕೊಂಡು ಇಲ್ಲಿಗೆ ಕರೆತಂದನೇ? ಅವನು ಆಂಟಿಯ ಜತೆ ಇಲ್ಲಿಗೆ ಬಂದದ್ದನ್ನು ಯಾರೂ ನೋಡಿಲ್ಲ…
ಮನೆಯ ಯಾವ ಭಾಗದಲ್ಲೂ ಕೊಲೆಗಾರನ ಬೆರಳ ಗುರುತುಗಳಾಗಲೀ, ಅವನ ಬಗ್ಗೆ ಯಾವುದೇ ಸುಳಿವಾಗಲೀ ಪೋಲೀಸರಿಗೆ ಸಿಕ್ಕಿಲ್ಲ! ಅವರಿಗೆ ಧಾರಾಳವಾಗಿ ಸಿಕ್ಕಿರುವುದು ದೇವಕಿ ಆಂಟಿಯ, ದಯಾ ಅಂಕಲ್‌ರ, ಅಡಿಗೆ ಹೆಂಗಸು ಅಂಬುಜಮ್ಮನ ಹಾಗೂ ಕೆಲಸದಾಕೆ ಸಾಕಮ್ಮನ ಬೆರಳ ಗುರುತುಗಳು ಮಾತ್ರ. ಅಲ್ಲಲ್ಲಿ ಮಸುಕಾಗಿ ಗೋಕುಲ್‌ನ ಬೆರಳ ಗುರುತುಗಳೂ ಸಿಕ್ಕಿವೆಯಂತೆ.
ದೇವಕಿ ಆಂಟಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ದಯಾ ಅಂಕಲ್ ಅವಳ ಕೊಲೆಗೆ ಕಾರಣ ಅಲ್ಲ. ಆಂಟಿ ಇಲ್ಲಿ ಕೊಲೆಯಾದಾಗ ಪಾಪ ದಯಾ ಅಂಕಲ್ ಅಕ್ಸಿಡೆಂಟ್‌ನಲ್ಲಿ ಕಾಲು ಮುರಿದುಕೊಂಡು ರಸ್ತೆಯಲ್ಲಿ ಬಿದ್ದಿದ್ದರು. ಗೋಕುಲ್ ಎರಡು ದಿನಗಳ ಹಿಂದೆ ಹೈದರಾಬಾದಿಗೆ ಹೋದವನು ಹಿಂತಿರುಗಿದ್ದು ಆಂಟಿಯ ಕೊಲೆಯಾದ ಅದೆಷ್ಟೋ ಗಂಟೆಗಳಾದ ಮೇಲೆ. ಮನೆಯಲ್ಲಿ ಸಿಕ್ಕಿರುವ ಅವನ ಬೆರಳ ಗುರುತುಗಳು ಎರಡು ದಿನಗಳಷ್ಟು ಹಳೆಯವು. ಅವನನ್ನು ಸಂದೇಹಿಸಲು ಪೋಲೀಸರಿಗೆ ಯಾವ ಕಾರಣವೂ ಇಲ್ಲ. ಅವರೇನಾದರೂ ಅವನನ್ನು ಸಂಶಯಿಸಿದರೆ ಅವರಿಗೆ ತಲೆ ಕೆಟ್ಟಿದೆ ಎಂದೇ ಅರ್ಥ. ಪಾಪದ ಹೆಂಗಸರಾದ ಅಂಬುಜಮ್ಮ ಮತ್ತು ಸಾಕಮ್ಮ ಆಂಟಿಯ ಕೊಲೆ ಮಾಡಲು ಸಾಧ್ಯವೇ ಇಲ್ಲ.
ತನ್ನ ಬೆರಳ ಗುರುತನ್ನು ಬಿಡದಷ್ಟು ಜಾಗರೂಕತೆ ಕೊಲೆಗಾರನಿಗೆ…
ಅವಳ ತಲೆಯಲ್ಲಿ ಮಿಂಚು ಹೊಳೆಯಿತು.
ನರಹರಿ!
ಅವನಿರುವುದು ಈ ಮನೆಯಲ್ಲೇ.
ಅವನ ಬೆರಳ ಗುರುತು ಮನೆಯ ಯಾವ ಭಾಗದಲ್ಲೂ ಸಿಕ್ಕಿಲ್ಲ!
ಇದು ಹೇಗೆ ಸಾಧ್ಯ?
ಆಂಟಿಗೆ ಅಪಾಯ ಇದ್ದುದಾದರೆ ಅದು ಅವನೊಬ್ಬನಿಂದ ಮಾತ್ರ.
ಎರಡು ವಾರಗಳ ಹಿಂದೆ ಅವನಿಲ್ಲಿಗೆ ಬಂದಾಗ ಆಂಟಿಯ ಬಗ್ಗೆ ಅವನ ವರ್ತನೆ…! ಅಂದು ಸಂಜೆ ದಯಾ ಅಂಕಲ್ ಮನೆಯಲ್ಲಿಲ್ಲದಾಗ ನಡೆದ ಆ ಘಟನೆ…!
ಓಹ್! ದೇವಕಿ ಆಂಟಿ ಅದೆಷ್ಟು ಹೆದರಿದ್ದಳು?
ಈ ನರಹರಿಯೇ ಕೊಲೆಗಾರ! ನನ್ನ ಪ್ರೀತಿಯ ದೇವಕಿ ಆಂಟಿಯನ್ನು ಅಮಾನುಷವಾಗಿ ಕೊಂದವನು ಅವನೇ?
ನಾನಿದನ್ನು ಈಗಲೇ ಪೋಲೀಸರಿಗೆ ತಿಳಿಸಬೇಕು.
ಏರಿದ ಉತ್ಸಾಹಕ್ಕೆ ವಿವೇಕದ ಕಡಿವಾಣ ಬಿತ್ತು.
ನರಹರಿಯ ಮೇಲೆ ಆಪಾದನೆ ಹೊರಿಸಲು ನನ್ನಲ್ಲಿ ಆಧಾರಗಳೇನಿವೆ? ಆಧಾರಗಳಿಲ್ಲದಿದ್ದರೆ ಪೋಲೀಸರ ಮುಂದೆ ನನ್ನ ಮಾತು ನಡೆಯುವುದಿಲ್ಲ.
ನಾನೀಗ ಅಗತ್ಯವಾಗಿ ಮಾಡಬೇಕಾದ ಕೆಲಸ ನನ್ನ ಸಂದೇಹಕ್ಕೆ ಆಧಾರಗಳನ್ನು ಸಂಗ್ರಹಿಸುವುದು.
ಆದರೆ ಹೇಗೆ?
ಮೆದುಳಿನಲ್ಲಿ ಛಳಕು ಹತ್ತಿತು.
ಆಂಟಿಗೆ ಬಂದಿರಬಹುದಾದ ಇ ಮೇಲ್!
ಅವರ ಮೇಲ್ ಬಾಕ್ಸನ್ನು ತೆರೆಯುವುದು ನನಗೆ ಸಾಧ್ಯವಾದರೆ…!
ಆಂಟಿಯ ಪಾಸ್‌ವರ್ಡ್ ನನ್ನಲ್ಲಿಲ್ಲ ನಿಜ.
ಅದನ್ನು ಕಂಡುಹಿಡಿಯುವ ಪ್ರಯತ್ನ ಮಾಡಬೇಕು.
ಸಾಧ್ಯವೇ?
ಯಾಕಿಲ್ಲ? ಎಂಥೆಂಥಾ ಭಾರಿಭಾರೀ ವೆಬ್‌ಸೈಟ್‌ಗಳನ್ನೇ ಒಡೆದು ಒಳನುಗ್ಗುವ ಹ್ಯಾಕರ್‌ಗಳಿರುವಾಗ ಸರಳ ಸ್ವಭಾವದ ಆಮಾಯಕ ದೇವಕಿ ಆಂಟಿ ಸೃಷ್ಟಿಸಿಕೊಂಡಿರಬಹುದಾದ ಒಂದು ಸರಳ ಪಾಸ್‌ವರ್ಡನ್ನು ಕಂಡುಹಿಡಿಯುವುದು ಕಷ್ಟವಾಗಲಾರದು…
ಊರುಗೋಲಿನ ಆಸರೆಯಲ್ಲಿ ತನ್ನ ಕಂಪ್ಯೂಟರಿನತ್ತ ವೇಗವಾಗಿ ನಡೆದಳು. ಹದಿನೈದಡಿ ದೂರ ಯಾಕೋ ಬಹಳವೆನಿಸಿತು…
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.