ಅವಸ್ಥೆ – ೧

ಅರ್ಪಣೆ

ಪ್ರಿಯ ಮಿತ್ರರಾದ
ಜೆ. ಹೆಚ್. ಪಟೇಲ್ ಮತ್ತು ಎಸ್. ವೆಂಕಟರಾಮ್-ರಿಗೆ

ಅವಸ್ಥಾ: ೧. ಕಾಲದಿಂದ ಉಂಟಾದ ಶರೀರದ ವಿಶೇಷ ಧರ್ಮ; ಬಾಲ್ಯ, ಕೌಮಾರ್ಯ, ಯೌವನ ಮೊದಲಾದ ದೇಹದ ವಿಶೇಷ ಧರ್ಮ. ೨. ಸ್ಥಿತಿ, ಇರುವಿಕೆ. ೩. ಕಾಲಕೃತವಾದ ಪರಿಣಾಮ; ಈ ಅವಸ್ಥೆಯು (ಭಾವ ವಿಕಾರವು) ’ಜಾಯತೇ, ಅಸ್ತಿ, ವರ್ಧತೇ, ವಿಪರಿಣಮತೇ, ಅಪಕ್ಷೀಯತೇ, ನಶ್ಯತಿ’ ಎಂದು ಆರು ವಿಧವೆಂಬ ಯಾಸ್ಕರ ಅಭಿಪ್ರಾಯ. “ಅವಿದ್ಯಾಸ್ಮಿತಾ ರಾಗದ್ವೇಷಾಭಿನಿವೇಶಾಃ” ಎಂದು ಐದು ವಿಧವೆಂದು ಯೋಗಶಾಸ್ತ್ರದಲ್ಲಿ ಉಕ್ತವಾಗಿರುವುದು. ’ಅನಾಗತಾವಸ್ಥಾ, ಅಭಿವ್ಯಕ್ತಾವಸ್ಥಾ, ಅತಿರೋಹಿತಾವಸ್ಥಾ’ ಹೀಗೆ ಮೂರು ವಿಧವೆಂದು ಸಾಂಖ್ಯರ ಅಭಿಪ್ರಾಯ.
*
*
*
ಅವಸ್ಥೆ

ಇನ್ನೂ ಐವತ್ತು ತುಂಬುವುದಕ್ಕೆ ಮುಂಚೆಯೇ ಅವನು ಸಾಯುತ್ತಾ ಮಲಗಿದ್ದಾನೆ. ಸಾವಿನ ಜೊತೆ ಹೋರಾಡುತ್ತಾ ಅವನು ನೆನಪು ಮಾಡಿಕೊಂಡು ಹೇಳುವ ಕೆಲವು ಘಟನೆಗಳಿಂದ ಅವನ ಮನಸ್ಥಿತಿ ಊಹಿಸಬಹುದು. ಹುಡುಗಾಟಿಕೇಲಿ ಕೃಷ್ಣಪ್ಪಗೌಡ ಬಹಳ ಒಳ್ಳೆ ಈಜುಗಾರ. ನದಿ ತುಂಬಿ ಹರೀತಿದ್ದಾಗ ಒಂದು ದಂಡೆಯಿಂದ ಧುಮುಕಿ ಇನ್ನೊಂದು ದಡ ಸೇರತ ಇದ್ದ. ಅವನು ಒಮ್ಮೆ ಹೀಗೆ ಈಜು ಬಿದ್ದಾಗ – ಇನ್ನೇನು ಅರ್ಧ ಹೊಳೆ ದಾಟಿಯಾಗಿದೆ, ಅವನ ಜೊತೆ ಈಜು ಬಿದ್ದ ಗೆಳೆಯ ಒಂದು ಮಾರು ಹಿಂದಿದಾನೆ – ಕೃಷ್ಣಪ್ಪಗೌಡನ ಕೈ ಬತ್ತಿ ಬಂತಂತೆ. ಮುಂದು ಹೋಗಲಿಕ್ಕೆ ಆಗ್ಲಿಲ್ಲಂತೆ. “ಮಾರಾಯ ನಾನು ಮುಳುಗ್ತಿದೀನಿ. ನೀನು ಹೋಗಯ್ಯ” ಅಂತ ಅವಸರ ಅವಸರವಾಗಿ ಕೂಗಿಕೊಂಡು ಮುಳುಗೇ ಬಿಟ್ಟನಂತೆ. ಅವನ ಗೆಳೆಯ -ಹನುಮನಾಯ್ಕನೆಂದು ಅವನ ಹೆಸರು- ಸಾಹಸ ಮಾಡಿ ಉಳಿಸಿದನಂತೆ. ಆದರೆ ಒಂದು ಕ್ಷಣ ತಾನು ಸತ್ತೇ ಸಾಯ್ತೀನಿ ಅನ್ನಿಸಿದಾಗ ತನ್ನ ಮನಸ್ಸು ನಿರ್ವಿಕಾರವಾಗಿತ್ತಲ್ಲ ಅದನ್ನು ಕೃಷ್ಣಪ್ಪ ನೆನೆಸಿಕೊಳ್ಳುವಾಗ ಪಾರ್ಶ್ವವಾಯು ಬಡಿದು ಮಲಗಿದವನ ಎರಡು ದೊಡ್ಡ ಕಣ್ಣುಗಳಲ್ಲೂ ನೀರು ತುಂಬುವುದುಂಟು.

ಕೃಷ್ಣಪ್ಪ ಕಡುಕೋಪಿ ಬೇರೆ. ಹೈಸ್ಕೂಲು ಓದುತ್ತ ಇದ್ದಾಗ ತನ್ನ ಸ್ನೇಹಿತನೊಬ್ಬನ ರಿಪೇರಿಗೆ ಕೊಟ್ಟ ವಾಚು ತರೋಕ್ಕೆ ಅಂತ ಅಂಗಡಿಗೆ ಹೋದ. ಅಂಗಡಿಯವನಿಗೂ ಈತ ಗೊತ್ತು. ಚೆನ್ನಾಗಿಯೇ ಗೊತ್ತು. ಆದರೆ ಬಡವನಾಗಿದ್ದ ಈ ಕೃಷ್ಣಪ್ಪನ ಒಡಾಟದ ಗತ್ತು ಕಂಡರೆ ಈ ಅಂಗಡಿಯವನಿಗೆ ಅಸೂಯೆ. “ನಿಮ್ಮನ್ನು ನಂಬಿ ಹೇಗೆ ಕೊಡೋಕೆ ಸಾಧ್ಯರೀ ವಾಚನ್ನು?” ಎಂದನಂತೆ ಒಂದು ಕಣ್ಣಿಗೆ ಭೂತ ಕನ್ನಡಿಯ ಗಾಜನ್ನು ಸಿಕ್ಕಿಸಿಕೊಂಡು – ವಕ್ರವಾಗಿ ನೋಡುತ್ತ. “ರೀ ನಿಮ್ಮ ಈ ಗಾಜಿನ ಗೂಡನ್ನು ಪುಡಿಪುಡಿ ಮಾಡಿಬಿಡ್ತೇನೆ ಇನ್ನೊಂದು ಸಾರಿ ನೀವು ಹಾಗೆ ಅಂದರೆ” ಅಂದನಂತೆ ಕೃಷ್ಣಪ್ಪ. “ಬಡವನ ಸಿಟ್ಟು ದವಡೆಗೆ ಮೂಲ” ಅಂದನಂತೆ ಅಂಗಡಿಯವನು – ಚಿಮಟದಿಂದ ಏನೋ ಕೆದಕುತ್ತ. ಹಾಗಂದಿದ್ದೇ ರಿಪೇರಿ ಸಲಕರಣೆಗಳನ್ನೂ ಬಿಚ್ಚಿದ ವಾಚುಗಳನ್ನೂ ಇಟ್ಟಿದ್ದ ಗಾಜಿನ ಗೂಡನ್ನು ಎತ್ತಿ ಕೃಷ್ಣಪ್ಪ ಫಳ್ ಅಂತ ನೆಲಕ್ಕೆ ಒಗೆದು ನಡೆದುಬಿಟ್ಟನಂತೆ. ಅವನ ಕೋಪ ಕಂಡಾಗ ಎಂಥವರಾದರೂ ನಡುಗಿಬಿಡ್ತ ಇದ್ದರು.

ಇಂಥ ದೂರ್ವಾಸ ಮುನಿ ಕೈಕಾಲು ಎತ್ತಲಿಕ್ಕೆ ಆಗದೆ ಮಲಗಿರೋದನ್ನು ನೋಡೋಕೆ ಕಷ್ಟ ಆಗಿತ್ತು. ಈಗ ಕೋಪ ಬಂದರೆ ಅವನ ತುಟಿಗಳು ನಡುಗಿ, ಮೂಗಿನ ಸೊಳ್ಳೆ ಹಿಗ್ಗಿ, ಕಣ್ಣುಗಳಲ್ಲಿ ನೀರು ತುಂಬುವುದು -ಅಷ್ಟೆ.

ಅಥವಾ ಮಲಗಿದಲ್ಲಿಂದಲೇ ಕೋಲನ್ನೆತ್ತಿ ಹೆಂಡತಿಯನ್ನು ಜಪ್ಪಲು ಪ್ರಯತ್ನಿಸುತ್ತಾನೆ. ಖಾಹಿಲೆ ಹಿಡಿದ ಗಂಡನ ಶುಶ್ರೂಷೆ ಇತ್ತ. ಅತ್ತ ಬ್ಯಾಂಕಿನಲ್ಲಿ ಗುಮಾಸ್ತೆ ಕೆಲಸ, ಈ ನಡುವೆ ವರಾತ ಹಿಡಿದು ಮೂಲೆಯಲ್ಲಿ ಸಿಂಬಳ ಸುರಿಸುತ್ತ ಕೂತ ಐದು ವರ್ಷದ ಮಗಳು -ಇವೆಲ್ಲ ಕೂಡಿಕೊಂಡು ಹೆಂಡತಿ ಹುಚ್ಚಾಗುವಳು. ಅವಳ ಕೂದಲು ಯಾವಾಗಲೂ ಕೆದರಿರುವುದು. “ನಿಮ್ಮ ಒಣಗರ್ವಕ್ಕಷ್ಟು ಬೆಂಕಿ ಹಾಕ” ಎಂದು ಗಂಡನ ಮೇಲೆ ಗೊಣಗುತ್ತ ಅವಳು ಒಮ್ಮೆ ತನ್ನ ಮಗಳ ತುಟಿ ಹರಿದು ರಕ್ತ ಸೋರುವಷ್ಟು ಬಿರುಸಾಗಿ ಅವಳ ಮೂತಿಯನ್ನು ಹಿಂಡಿದ್ದುಂಟು.

ಇಷ್ಟೊಂದು ರಂಪದಲ್ಲೂ ಕೃಷ್ಣಪ್ಪನ ಮನಸ್ಸು ನಿರ್ವಿಕಾರವಾಗಿ ಬಿಡುವುದೂ ಇಲ್ಲವೆಂದಲ್ಲ. ಅವನ ಜೀವನಚರಿತ್ರೆ ಬರೆಯಲೆಂದು ನಿತ್ಯ ಬರುತ್ತಿದ್ದ ಭೋಳೆ ಸ್ವಭಾವದ ನಾಗೇಶನಿಗೆ ಕೃಷ್ಣಪ್ಪ ತನ್ನ ಹಿಂದಿನ ಕಥೆ ಹೇಳಲು ಶುರು ಮಾಡುವ. ತನ್ನ ಸದ್ಯದ ಸ್ಥಿತಿಯನ್ನು ಅರಿಯುವುದಕ್ಕಾಗಿ ಅವನು ಹೇಳಿಕೊಳ್ಳುತ್ತಿದ್ದುದರ ಆಳ ಅಗಲ ಎಳೆಯನಾದ ನಾಗೇಶನಿಗೆ ತಿಳಿಯುತ್ತಿತ್ತೋ ಇಲ್ಲವೋ ಎಂಬುದು ಕೃಷ್ಣಪ್ಪನನ್ನೇನೂ ಬಾಧಿಸಿದಂತೆ ಕಾಣುವುದಿಲ್ಲ.

ಬಾಲಕನಾಗಿದ್ದಾಗ ಕೃಷ್ಣಪ್ಪನಿಗೆ ದನ ಕಾಯುವ ಕೆಲಸ. ಕಂಬಳಿಕೊಪ್ಪೆ ಹಾಕಿಕೊಂಡು ಕೈಯಲ್ಲೊಂದು ಕತ್ತಿ ಕೊಳಲು ಹಿಡಿದು ತನ್ನ ಹಳ್ಳಿಯ ದನಗಳನ್ನೆಲ್ಲಾ ಮೇಯಿಸಿಕೊಂಡು ಬರುತ್ತಿದ್ದ ಕತೆಯನ್ನವನು ಅದರಲ್ಲೇನೋ ತನಗೆ ಮಾತ್ರ ತಿಳಿಯುವ ಅರ್ಥಗಳು ತುಂಬಿವೆ ಎನ್ನುವಂತೆ ಹೇಳುವುದು. ಸಾಯುತ್ತಿರುವ ಅವನಿಗೆ ತನ್ನ ಹಿಂದಿನ ಬದುಕಿನಲ್ಲಿ ಆಗೀಗ ದಿವ್ಯವಾದದ್ದು ಪ್ರವೇಶಿಸಿದ್ದಿದೆ ಎಂದು ಈಗ ಅನ್ನಿಸುವುದು ವಸ್ತುನಿಷ್ಠಸತ್ಯವೋ, ಅಥವಾ ಅಂಥ ನಂಬಿಕೆ ಸದ್ಯದ ಕ್ಷುದ್ರದೆಸೆಯನ್ನು ಗೆಲ್ಲಲು ಅಗತ್ಯವೋ ಹೇಗೆ ಹೇಳುವುದು? ವೈಚಾರಿಕವಾಗಿ ಕೃಷ್ಣಪ್ಪ ನಿರೀಶ್ವರವಾದಿ; ಜೊತೆಗೇ, ಕಬೀರ, ಅಲ್ಲಮ, ನಾನಕ, ಮೀರ, ಪರಮಹಂಸ ಇತ್ಯಾದಿ ದೈವಿಕ ತಲೆತಿರುಕರನ್ನು ಮೆಚ್ಚುಗೆ ಹಾಸ್ಯ ಅನುಮಾನಗಳಿಂದ ಅವರೆಲ್ಲ ತನಗೆ ಪರಮ ಆಪ್ತರೆಂಬಂತೆ ಕಿಚಾಯಿಸುವವನು -ಆದ್ದರಿಂದ ಅವನ ಒಟ್ಟು ನಿಲುವೇನು ಎಂದು ಹೇಳುವುದು ಕಷ್ಟದ ವಿಷಯವೇ. ಹುಡುಗಾಟಿಕೆಯಲ್ಲಿ ಬೆಳಗಿನ ಜಾವ ಮನೆಮನೆಯ ಎದುರು ನಿಂತು ದನಕರುಗಳನ್ನು ಬಿಡಿಸಿಕೊಂಡು, ಗುಡ್ಡ ಹೊಳೆ ಬಯಲುಗಳಲ್ಲಿ ಅವುಗಳನ್ನು ಮೇಯಿಸುತ್ತ ಓಡಾಡಿಸಿಕೊಂಡಿದ್ದು, ಸಂಜೆ ಹಿಂದಕ್ಕೆ ಹೊಡೆದುಕೊಂಡು ಬರುವುದು. ಮರದ ಕೆಳಗೆ ಕೂತು ಆಲಸ್ಯದ ಕಣ್ಣುಗಳಲ್ಲಿ ಮೇಯುವ ದನಗಳನ್ನು ಗಮನಿಸುತ್ತ, ಕೊಳಲಿನಲ್ಲಿ ತನ್ನ ಮನಸ್ಸಿನ ಲಹರಿಯನ್ನು ನುಡಿಸುತ್ತ ತಾನೇನು ಯೋಚಿಸುತ್ತಿದ್ದೆ ಆಗ ಎಂಬುದನ್ನವನು ನೆನಪು ಮಾಡಿಕೊಳ್ಳಲು ಪ್ರಯತ್ನಿಸುವಾಗ ಒಂದು ಮುಖ್ಯ ಘಟನೆ ಅವನ ಕಣ್ಣೆದುರು ನಿಲ್ಲುತ್ತದೆ. ಅದನ್ನು ಹೇಳುವ ಮುಂಚೆ ಇದ್ದಕ್ಕಿದ್ದಂತೆ ಅವನು “ಮಾರಾಯರೆ -ಆಗ ನಾನೇನೊ ಸುಖವಾಗಿದ್ದೇಂತ ತಿಳೀಬೇಡಿ -ಗದ್ದೇಲಿ ಹಸಿರು ಕಾಣಿಸ್ತು ಅಂದರೆ ನನ್ನ ಕಥೆ ಮುಗೀತು ಅಂತ ತಿಳಿಕೊಳ್ಳಿ. ದನಕರುಗಳು ಹುಚ್ಚೆದ್ದು, ಬೇಲಿ ಗೀಲಿ ಕಿತ್ತು ನುಗ್ಗಿ ಬಿಡ್ತಿದ್ದುವು ಗದ್ದೆಗೆ. ನಾನೊಬ್ಬನೆ ತಲೆ ಕೆಟ್ಟವನ ಹಾಗೆ ಅವುಗಳನ್ನು ಅಟ್ಟುತ್ತ ಕೊನೆಗೆ ಕೈಸಾಗದೆ ಕೂತುಬಿಡ್ತಿದ್ದೆ -’ಧೋ’ ಎಂಬ ಮಳೆಯಲ್ಲಿ – ಮಂಕು ಬಡಿದವನ ಹಾಗೆ. ಬೀಳ್ತಿತ್ತು ನೋಡಿ ಆಗ ಬೆನ್ನ ಮೇಲೆ” -ಹೇಳುತ್ತ ಕೃಷ್ಣಪ್ಪ ನಗುತ್ತಾನೆ ಈಗ. ಕಣ್ಣುಗಳಲ್ಲಿ ಆಗಿನ ದಿಗಿಲನ್ನೂ ಬೀಳುತ್ತಿದ್ದ ಪೆಟ್ಟುಗಳ ನೋವನ್ನೂ ನಟಿಸಿ ತೋರಿಸುತ್ತಾನೆ. ಇದನ್ನು ನೆನೆಸುತ್ತಿದ್ದಂತೆ ದನ ಕಾಯುವುದರಿಂದ ತನ್ನನ್ನು ಪಾರುಮಾಡಿದ ಮಹೇಶ್ವರಯ್ಯ ಅವನಿಗೆ ನೆನಪಾಗುತ್ತಾರೆ.

ಮಹೇಶ್ವರಯ್ಯ ಯಾರೋ ಎತ್ತ ಕಡೆಯವರೋ ತಿಳಿಯದು. ಯಾವುದೋ ಊರಿಗೆ ಬರುತ್ತಾರೆ ಅನ್ನಿ. ಮನೆ ಗಿನೆ ಓರಣ ಮಾಡಿಕೋತಾರೆ. ಇರುವುದು ಒಬ್ಬರೇ ಆದರೂ ಅಡಿಗೆಯವನನ್ನು ಇಟ್ಟುಕೊಳ್ಳುತ್ತಾರೆ. ತನ್ನ ಬಟ್ಟೆ ಮಾತ್ರ ತಾನೇ ಒಗೆದು ಕೊಳ್ಳುತ್ತಾರೆ. ಅವರ ಬಾಯಿಂದ ಕಾಳಿದಾಸನ ಸಂಸ್ಕೃತ ಕೇಳಬೇಕು. ಹಿಂದುಸ್ತಾನಿ ಗಾಯನ ಕೇಳಬೇಕು -ದೊಡ್ಡ ರಸಿಕ. ತಾಂಬೂಲದಿಂದ ಕೆಂಪಾದ ಅವರ ತುಟಿಗಳ ಮೇಲಿನ ಗಿರಿಜಾ ಮೀಸೆ, ಅವರ ಕಿವಿಯಲ್ಲಿನ ಹೊಳೆಯುವ ವಜ್ರದ ಒಂಟಿಗಳು, ಅವರ ಮುಚ್ಚುಕೋಟು, ಶುಭ್ರವಾದ ಕಚ್ಚೆ ಹಾಕಿದ ಪಂಚೆ, ಅವರು ಹಿಡಿದ ಬೆಳ್ಳಿ ಕಟ್ಟಿದ ಬೆತ್ತ, ಅವರ ಕಣ್ಣಿನ ಪ್ರಶಾಂತ ಭಾವ -ಇತ್ಯಾದಿಗಳನ್ನು ವಿವರಿಸುತ್ತಿದ್ದಂತೆಯೇ ಅವರು ದೊಡ್ಡ ವಿರಾಗಿಗಳು ಎಂದೂ ಕೃಷ್ಣಪ್ಪ ಹೇಳುತ್ತಾನೆ. ಅವರು ಸ್ಪಷ್ಟ ಹೇಳಿಕೊಂಡಿರದಿದ್ದರೂ ಕೃಷ್ಣಪ್ಪನ ಊಹೆ ಅವರ ಹೆಂಡತಿ ಯಾರನ್ನೋ ಇಟ್ಟುಕೊಂಡಿದ್ದು ತಿಳಿದು ಮಹೇಶ್ವರಯ್ಯ ಮನೆ ಬಿಟ್ಟದ್ದು ಎಂದು. ಲಕ್ಷಾಧೀಶ ಮನುಷ್ಯ -ಹೆಂಡತಿಗಷ್ಟು ಆಸ್ತಿ ಬಿಟ್ಟು ಉಳಿದ ಹಣ ಬ್ಯಾಂಕಲ್ಲಿಟ್ಟು ಹೀಗೆ ನಿವೃತ್ತರಾಗಿ ಊರೂರು ಅಲೆಯುತ್ತಿದ್ದರು. ಯಾವಾಗಲೂ ಓದುತ್ತಿರುತ್ತಿದ್ದರು. ಆತ ತ್ರಿಕಾಲಜ್ಞಾನಿಯೆಂದು ಕೃಷ್ಣಪ್ಪನ ನಂಬಿಕೆ. ಮಹೇಶ್ವರಯ್ಯ ಎಲ್ಲಾದರೂ ಬಂದರು ಎನ್ನಿ. ಬಂದು ಕೂತವರು ಇದಕ್ಕಿದ್ದಂತೆ “ಭೋ” ಎನ್ನುವುದುಂಟು. ಆಗ ಅವರ ಮುಖದಲ್ಲಿ ಕಳವಳ ಕಾಣಿಸಿಕೊಳ್ಳುತ್ತದೆ. ಅವರನ್ನು ಕರೆದವರು ಎಷ್ಟು ಒತ್ತಾಯ ಮಾಡಿದರೂ ಹೇಳುವುದಿಲ್ಲ. ಮುಂದಾಗಿರುವ ಅನಿಷ್ಟ ಅವರಿಗೆ ಗೊತ್ತಾಗಿರುತ್ತದೆ. ಅದನ್ನು ಆಮೇಲೆ ಕಿವಿಯಲ್ಲಿ ಕೃಷ್ಣಪ್ಪನಿಗೆ ಹೇಳುತ್ತಿದ್ದರು. ಅವರನ್ನು ಕಂಡರೆ ಎಲ್ಲಿ ಅವರು “ಭೋ” ಎಂದುಬಿಡುವರೋ ಎಂದು ಜನ ಹೆದರುತ್ತಿದ್ದರು. ಹಾಗೆ ಅನ್ನದೆ ಕೂಡ ಅವರು ಇರಲಾರರು. ಆದ್ದರಿಂದಲೇ ಬನ್ನಿ ಎಂದರೆ ಮಹೇಶ್ವರಯ್ಯ “ಆ ಗೃಹಸ್ಥನಿಗೆ ಏನು ಅನಿಷ್ಟ ಕಾದಿದೆಯೋ ಗೊತ್ತಿಲ್ಲಯ್ಯ -ಆದ್ದರಿಂದ ನಾನು ಅವನ ಮನೆಗೆ ಬರಲ್ಲ” ಎಂದು ಬಿಡುತ್ತಿದ್ದರು.

ಮುಂದಿನ ಅನಿಷ್ಟ ಕಂಡು ’ಭೋ’ ಅನ್ನುತ್ತಿದ್ದ ಮಹೇಶ್ವರಯ್ಯನ ದುರಂತವೆಂದರೆ ಅವರಿಗೆ ಭವಿಷ್ಯದಲ್ಲಿ ಒಳ್ಳೆಯದು ಕಾಣಿಸುತ್ತಿದ್ದುದೇ ತೀರ ಅಪರೂಪ. ಕೃಷ್ಣಪ್ಪನ ಬಗ್ಗೆ ಮಾತ್ರ ಅವರು ಒಮ್ಮೆ ಒಳ್ಳೆಯದನ್ನು ಕಂಡದ್ದುಂಟು. ಅದು ನಡೆದದ್ದು ಹೀಗೆ:

ಕೊಳಕು ಚೆಡ್ಡಿ ಬನೀನು ಹಾಕಿಕೊಂಡು ಹೊಳೆದಂಡೆಯ ಅಶ್ವತ್ಥಮರದ ಕೆಳಗೆ ಕೃಷ್ಣಪ್ಪ ಕೂತಿದ್ದ. ಕೊಯಿಲು ಮುಗಿದಿದ್ದರಿಂದ ಅವನಿಗೆ ದನಗಳು ಗದ್ದೆಗೆ ನುಗ್ಗುವ ಭಯವಿರಲಿಲ್ಲ. ನದಿಯ ಝಳಝಳ ಶಬ್ದ, ದನಗಳ ಕೊರಳಿನ ಗಂಟೆ ಇವುಗಳು ಕಿವಿಯ ಮೇಲೆ ಬೀಳುತ್ತಲಿದ್ದಾಗ ಕೃಷ್ಣಪ್ಪನಿಗೆ ಖುಷಿಯಾಗಿರಬೇಕು. ಎಂದಿಗಿಂತ ಹೆಚ್ಚು ಖುಷಿಯಾಗಿರಬೇಕು. ಕೊಳಲನ್ನೂದುವ ಬದಲು ಕುಮಾರವ್ಯಾಸ ಭಾರತ ಹಾಡಬೇಕೆನ್ನಿಸಿತು. ನಾಲ್ಕು ವರ್ಷ ಸ್ಕೂಲಿಗೆ ಹೋಗಿದ್ದ ಕೃಷ್ಣಪ್ಪ ಭಾರತವನ್ನು ಓದಿ ಕಲಿತದ್ದಲ್ಲ; ಅವನ ಮಾಸ್ತರರಾಗಿದ್ದ ಜೋಯಿಸರು ಓದುವುದನ್ನು ಆಗೀಗ ಕೇಳಿ ಕಲಿತದ್ದು. ಭಾವವಶವಾಗಿ ಹಾಡಿಕೊಳ್ಳಲು ಪ್ರಾರಂಭಿಸಿದ. ಅವನ ಹಳ್ಳಿಯ ಹತ್ತಿರದ ಪೇಟೆಯೊಂದರಲ್ಲಿ ಆಗ ಬೀಡು ಬಿಟ್ಟಿದ್ದ ಮಹೇಶ್ವರಯ್ಯ ತಮ್ಮ ಕೋಟನ್ನು ಒಗೆಯುತ್ತ ನದಿಯಲ್ಲಿದ್ದರು. ಅವರು ಅಲ್ಲಿಗೇ ಯಾಕೆ ಒಗೆಯಲು ಬಂದಿದ್ದರೆಂಬುದೂ ಆಶ್ಚರ್ಯ. ಅವತ್ತು ಬೆಳಿಗ್ಗೆ ಅವರು ಪೇಟೆಯಲ್ಲಿ ನಡೆಯುತ್ತಿದ್ದಾಗ ಅರೆಹುಚ್ಚನಾಗಿದ್ದ ನಿವೃತ್ತ ಶಾಲಾ ಮಾಸ್ತರನೊಬ್ಬ ಅವರನ್ನು ನಿಲ್ಲಿಸಿದನಂತೆ. ಕೋಟನ್ನು ಬೇಡಿದನಂತೆ. “ಕೊಡ್ತೀನಿ ಮಾರಾಯರೆ. ಆದರೆ ತೊಟ್ಟಿದ್ದಲ್ಲವೆ? ಒಗೀಬೇಕು” ಎಂದು ಸೋಪುಕೊಂಡು ಹಾಗೇ ನಡೆಯುತ್ತ ಈ ಹೊಳೆಯ ಈ ದಂಡೆಗೆ ಬಂದಿದ್ದರಂತೆ. ಎರಡು ಮೈಲಿಯಾದರೂ ಆಗತ್ತೆ ಪೇಟೆಗೂ, ಈ ನದಿಗೂ.

ಮಹೇಶ್ವರಯ್ಯ ಹಾಡುತ್ತಿದ್ದ ಹುಡುಗನ ಎದುರು ನಿಂತು ’ಭೋ’ ಎಂದರು. ಕೃಷ್ಣಪ್ಪ ನಾಚಿಕೆಯಿಂದ ಹಾಡು ನಿಲ್ಲಿಸಿದ. ಎತ್ತಲೋ ದೂರ ನೋಡುತ್ತ, ಕೈಯಲ್ಲಿ ನೀರು ಸೋರುತ್ತಿದ್ದ ಕೋಟು ಹಿಡಿದ ಮಹೇಶ್ವರಯ್ಯ “ಏ ಹುಡುಗ ದನಗಳನ್ನು ಕಟ್ಟಿ ಹಾಕಿದ ಮೇಲೆ ಸಾಯಂಕಾಲ ಇಲ್ಲಿ ಬಂದು ನನಗೆ ಕಾದಿರು” ಎಂದು ಕೋಟನ್ನು ಹಿಂಡಿ ಅಲ್ಲಿಂದ ಹೊರಟುಹೋದರು. ತಾನು ಕೂತಿದ್ದು ಅಶ್ವತ್ಥಮರದ ಬುಡದಲ್ಲಿ; ಎದುರಿಗಿದ್ದ ಪೇರಳೆ ಮರದಲ್ಲಿ ಎರಡು ಪಂಚವರ್ಣದ ಗಿಳಿಗಳಿದ್ದವು ಎಂದು ಕೃಷ್ಣಪ್ಪ ನೆನಪು ಮಾಡಿಕೊಳ್ಳುತ್ತಾನೆ. ಆ ಮರದ ಮೇಲೆ ಅಪರೂಪದ ಬಣ್ಣದ ಹಕ್ಕಿಯೊಂದನ್ನು ತಾನು ಕಂಡದ್ದುಂಟು ಎಂದು ಹೇಳುತ್ತಾನೆ.

ಸಾಯಂಕಾಲ ಕೃಷ್ಣಪ್ಪ ಕಾದ. ಕೋಲು ಬೀಸಿಕೊಂಡು ಬಂದ ಮಹೇಶ್ವರಯ್ಯ “ಅಯ್ಯೋ ಪೆದ್ದು ಹುಡುಗ, ನೀನು ಯಾರೆಂದು ನಿನಗೆ ಇಷ್ಟು ದಿನವೂ ತಿಳಿಯದೆ ಹೋಯಿತೆ? ಬಾ ನನ್ನ ಹಿಂದೆ” ಎಂದು ಸೀದ ಕೃಷ್ಣಪ್ಪನ ಮನೆಗೆ ಹೋದರು. ಕೃಷ್ಣಪ್ಪನಿಗೆ ತಂದೆಯಿಲ್ಲ, ತಾಯಿ ಅವಳ ಅಣ್ಣನ ಮನೆಯಲ್ಲಿ ಅಣ್ಣನ ಹೆಂಡತಿಯಿಂದ ಮೂದಲಿಸಿಕೊಳ್ಳುತ್ತ ಪ್ರತಿನಿತ್ಯ ಕಡುಬಿಗೆ ತಿರುವುತ್ತ, ದನಕರುವಿಗೆ ಮುರ ಬೇಯಿಸುತ್ತ, ಗೊಬ್ಬರಕ್ಕೆ ಸೊಪ್ಪು ತಂದು ಹಾಕುತ್ತ ಬದುಕುವುದು. ಕೈಯಲ್ಲಿ ಉಂಗುರ, ಹರಳಿನ ಒಂಟಿ, ಬೆಳ್ಳಿ ಕಟ್ಟಿದ ಬೆತ್ತ -ಇವುಗಳನ್ನು ಕಂಡೇ ಕೃಷ್ಣಪ್ಪನ ಮಾವ ದಂಗು ಬಡಿದು ನಿಂತ. ಮಹೇಶ್ವರಯ್ಯ ಬೈದರು. “ಎಂಥ ಮುಟ್ಠಾಳ ಜನ ನೀವು. ಮನೆಯಲ್ಲಿರುವ ಮಾಣಿಕ್ಯ ನಿಮ್ಮ ಕಣ್ಣಿಗೆ ಬೀಳದೆ ಹೋಯಿತಲ್ಲ” ಎಂದು ಅವರಿಗೆ ದುಡ್ಡು ಕೊಟ್ಟು, ಗದರಿಸಿ, ಕೃಷ್ಣಪ್ಪನನ್ನು ಹತ್ತು ಮೈಲಿಯಾಚೆಯ ಊರಲ್ಲಿದ್ದ ಹಾಸ್ಟೆಲಲ್ಲಿ ಬಿಟ್ಟು ಸ್ಕೂಲು ಸೇರಿಸಿದರು. ಹಣದ ವ್ಯವಸ್ಥೆ ಮಾಡಿ ಕಣ್ಮರೆಯಾದರು. ವರ್ಷಕ್ಕೊಮ್ಮೆ ಬಂದು ನೋಡುತ್ತಿದ್ದರು. ಕೃಷ್ಣಪ್ಪ ಹೀಗೆ ಬಿ‌ಎ ತನಕ ಓದಿದ್ದು. ತನಗೆ ಸಲಿಗೆ ಬೆಳೆದ ಮೇಲೂ ಮಹೇಶ್ವರಯ್ಯ ಆಶ್ಚರ್ಯಕರ ವ್ಯಕ್ತಿಯಾಗಿ ಉಳಿದಿದ್ದರು ಎಂದು ಹಿಂದಿನದನ್ನು ನೆನಪಿಸಿಕೊಳ್ಳುತ್ತಿದ್ದ ಕೃಷ್ಣಪ್ಪ. “ನನಗೆ ಕಷ್ಟ ಬಂದಾಗಲೆಲ್ಲ ಅವರು ಪ್ರತ್ಯಕ್ಷವಾಗಿಬಿಡುತ್ತಾರೆ. ನಾನು ಜೈಲಿಗೆ ಹೋದಾಗ ಅವರು ಹಾಜರು. ಹಾಗೆಯೇ ಜ್ವರ ಗಿರ ಬಂದು ಮಲಗಿದಾಗ. ಮೊದಲನೇ ಚುನಾವಣೆಗೆ ನಿಂತಾಗ ಖರ್ಚಿಗೆಂದು ಸಾವಿರ ರೂಪಾಯಿ ಕೊಟ್ಟು ಹೋದರು. ಅವರು ಹೇಗೆ ಬಂದು ಯಾವುದಾದರೂ ಊರಲ್ಲಿ ನೆಲೆಸುತ್ತಿದ್ದರೋ ಹಾಗೇ ಊರನ್ನು ಬಿಟ್ಟೂ ಹೋಗುತ್ತಿದ್ದರು -ಮನೆಯಲ್ಲಿದ್ದ ಪಾತ್ರೆ, ಪರಟೆ, ಫ಼ರ್ನೀಚರು ಎಲ್ಲವನ್ನೂ ಕಂಡಕಂಡವರಿಗೆ ಕೊಟ್ಟು. ವಿಚಿತ್ರ ಮನುಷ್ಯ. ಅವರು ಯಾವ ಜಾತಿ, ಯಾವ ಪಂಗಡ ನನಗೆ ಈಗಲೂ ತಿಳಿಯದು. ಬ್ರಾಹ್ಮಣರೋ ಲಿಂಗಾಯತರೋ ಇದ್ದಿರಬಹುದು -ನಾನು ಮಾಂಸ ತಿನ್ನುವುದನ್ನು ಬಿಟ್ಟಿದ್ದರಿಂದ ಅವರಿಗೆ ಸಂತೋಷವಾಯಿತೆಂದು ಈ ನನ್ನ ಊಹೆ. ಅವರಿಗೆ ಕುಲೀನ ಹೆಣ್ಣುಗಳೆಂದರೆ ಕಣ್ಣೆತ್ತಿ ನೋಡಲಾರದ ಮರ್ಯಾದೆ. ಆದರೆ ಸೂಳೆಯರೆಂದರೆ ಬಲು ಚಪಲ, ಸಂಸ್ಕೃತದಲ್ಲಿ ಅವರಿಗೆ ಗೊತ್ತಿಲ್ಲದ ಪೋಲಿ ಪದ್ಯವೇ ಇರಲಿಲ್ಲ. ಮಹಾನುಭಾವ. ಅವರಿಗೆ ರಾಜಕೀಯ ಅಂದರೆ ಚೂರೂ ಆಸಕ್ತಿಯಿರಲಿಲ್ಲ.

“ನೀನು ಎಲ್ಲ ಕಷ್ಟ ಎಲ್ಲ ಬವಣೆ ಪಟ್ಟು ನಿನ್ನ ಊರಲ್ಲೇ ಬೆಳೆಯಬೇಕು” ಎಂದು ಅವರು ಹೇಳಿದ್ದರಂತೆ. ಕೃಷ್ಣಪ್ಪ ತನ್ನ ಹಳ್ಳಿಯ ಹತ್ತಿರದ ನಗರದಲ್ಲೆ ಬೆಳೆದ. ಅವನಿಗಾಗುತ್ತಿದ್ದ ಅವಮಾನಗಳೇನೂ ಮಹೇಶ್ವರಯ್ಯ ಕಳಿಸುತ್ತಿದ್ದ ಹಣದಿಂದ ನಿಲ್ಲಲಿಲ್ಲ. ಬಡವರ ಮನೆ ಹುಡುಗನಲ್ಲವೆ? ಅವನು ಹೈಸ್ಕೂಲು ಓದುವಾಗ ಹಾಸ್ಟೆಲಿನ ವಾರ್ಡನ್ ಒಬ್ಬ -ತುಂಬ ಶ್ರೀಮಂತ ಜಮೀಂದಾರ -ಕೃಷ್ಣಪ್ಪನನ್ನು ಅತ್ಯಂತ ತಾತ್ಸಾರದಿಂದ ಕಾಣುತ್ತಿದ್ದ. ಕೃಷ್ಣಪ್ಪನ ಠೀವಿ ಎಲ್ಲರಿಗೂ ಕಣ್ಣು ಕುಕ್ಕುವಂಥದ್ದು. ನಾವು ಇರುವ ಸ್ಥಿತಿಗೂ ಆಗಬೇಕೆಂದು ಹಂಬಲಿಸುವ ಸ್ಥಿತಿಗೂ ಅಂತರವಿದ್ದಾಗ, ಮುಖವಾಡ ನಿಜವಾದ ಮುಖ ಆಗುವ ಮುನ್ನ ಏನೇನು ಸಂಕಟಪಡಬೇಕಾಗುತ್ತದೆ ಎಂಬುದನ್ನು ಕೃಷ್ಣಪ್ಪ ಹಲವು ಘಟನೆಗಳಿಂದ ವಿವರಿಸುತ್ತಿದ್ದ. ಈಗ ಸಾಯುತ್ತಿರುವಾಗಲೂ ಅಂಥ ಸಂಕಟದಿಂದ ಅವನಿಗೆ ಬಿಡುಗಡೆಯಿರಲಿಲ್ಲ. ಅವನ ಬಡಪಾಯಿ ಹೆಂಡತಿ ಅವನಿಂದ ಪೆಟ್ಟು ತಿಂದು ಅಡಿಗೆ ಮನೆಯಲ್ಲಿ ತಲೆಕೆದರಿ ನಿಂತು, “ಇವರೊಬ್ಬ ಮಹಾನಾಯಕರಂತೆ. ಕ್ರಾಂತಿ ಮಾಡ್ತಾರಂತೆ. ಹೆಂಡತೀನ್ನ ಹೊಡೆಯೋದು ಮೊದಲು ನಿಲ್ಲಿಸಲಿ ನೋಡುವ” ಎಂದು ಗೊಣಗುವಾಗ ಕೃಷ್ಣಪ್ಪ ಖಿನ್ನನಾಗುತ್ತಾನೆ. ತನ್ನ ದುರಹಂಕಾರವನ್ನು ಹದ್ದಿನಲ್ಲಿಡಲು ಮಹೇಶ್ವರಯ್ಯ ಕಲಿಸಿದ್ದ ಹಾಸ್ಯಪ್ರವೃತ್ತಿ, ಈ ತನ್ನ ತೇಜಸ್ಸು ಕಳೆದುಕೊಂಡ ದೇಹದಿಂದ ಬಿಟ್ಟೇ ಹೋಯಿತೇ ಎಂದು ತಬ್ಬಿಬ್ಬಾಗುತ್ತಾನೆ.

ಯಾವುದೋ ಸಣ್ಣ ತಪ್ಪಿಗಾಗಿ ಹಾಸ್ಟೆಲ್ ವಾರ್ಡನ್ ಒಮ್ಮೆ ಕೃಷ್ಣಪ್ಪನಿಗೆ ಹೊಡೆಯುವ ಧೈರ್ಯ ಮಾಡಿದನಂತೆ. ಕೊಂದುಬಿಡುವಂತೆ ಅವಡುಗಚ್ಚಿ ಬೆತ್ತ ತೆಗೆದುಕೊಂಡು ಉಳಿದ ಎಲ್ಲ ಹುಡುಗರ ಎದುರು ಅವನು ರೌದ್ರಾವತಾರ ತಾಳಿ ನಿಂತ. ಚಾಚಿದ ಗಲ್ಲ, ಗುಳಿ ಬಿದ್ದ ಕಣ್ಣುಗಳು, ಮೈಲೆ ಕಜ್ಜಿಯಿಂದ ತೂತಾದ ಮುಖದ ಈ ಕುಳ್ಳ ವಾರ್ಡನ್ ಸ್ವಭಾವತಃ ಪುಕ್ಕ. ಅವನ ಕೀರಲು ದನಿಯ ಆರ್ಭಟ ಕೇಳಿ ಕೃಷ್ಣಪ್ಪನಿಗೆ ಹೇಸಿಗೆ ಉಂಟಾಯಿತು. ತನ್ನ ನಾಯಕತ್ವ ಒಪ್ಪಿಕೊಂಡಿದ್ದ ಹುಡುಗರೆಲ್ಲ ಬೆರಗಾಗಿ ಮುಂದೇನು ತಿಳಿಯದೆ ನಿಂತಿದ್ದರು. ಕೃಷ್ಣಪ್ಪ ವಾರ್ಡನ್‌ಗೆ ಬೆನ್ನು ತಿರುಗಿಸಿದ. ಚಡ್ಡಿಯನ್ನು ಬಿಚ್ಚಿದ. ಅಂಡಿನ ಮೇಲೆ ಹಣ್ಣಾಗಿ ಕೆಂಪಗೆ ಗುಂಡಗೆ ಇದ್ದ ಕುರ ಒಂದನ್ನು ಬೆರಳಿನಿಂದ ತೋರಿಸುತ್ತ, ಕತ್ತು ತಿರುಗಿಸಿ, “ಸ್ವಾಮಿ ಈ ಕುರ ಇರೋ ಜಾಗ ಬಿಟ್ಟು ಇನ್ನೆಲ್ಲಾದರೂ ಹೊಡೀರಿ” ಎಂದು ಪೃಷ್ಠವನ್ನೊಡ್ಡಿ ಬಾಗಿದ. ಹುಡುಗರೆಲ್ಲ ಗೊಳ್ ಎಂದು ನಕ್ಕರು. ವಾರ್ಡನ್ ಅವಮಾನ ಸಿಟ್ಟುಗಳಲ್ಲಿ ನಡುಗುತ್ತ ತನ್ನನ್ನು ಸುತ್ತುವರಿದ ತಿರಸ್ಕಾರ ಕಂಡು ಹೆದರಿ ಹೊರಟು ಹೋದ. ಸ್ಥಾನ ಶ್ರೀಮಂತಿಕೆಗಳ ದವಲತ್ತನ್ನು ಹೀಗೇ ಕೃಷ್ಣಪ್ಪ ಬಹಳ ಸಾರಿ ಗೆದ್ದಿದ್ದಾನೆ.

“ನಿನ್ನೊಳಗೊಂದು ಹುಲಿಯಿದೆಯೊ” ಎಂದು ಮಹೇಶ್ವರಯ್ಯ ಹೇಳುತ್ತಿದ್ದರಂತೆ. ಮಹೇಶ್ವರಯ್ಯ ದುರ್ಗಿಯ ಗುಪ್ತಭಕ್ತರು. ಯಾವಾಗಾದರೊಮ್ಮೆ ಇದ್ದಕ್ಕಿದ್ದಂತೆ ಯಾರೂ ತನ್ನನ್ನು ತಿಳಿಯದ ಜಾಗ ಹುಡುಕಿ ದುರ್ಗಿಯ ಆರಾಧನೆಗೆ ತೊಡಗಿಬಿಡುವರು. ಹಗಲು ರಾತ್ರೆ ನಡೆಯುವ ಈ ಆರಾಧನೆ ತಿಂಗಳುಗಟ್ಟಲೆ ಅವರನ್ನು ಒಂದೇ ಜಾಗಕ್ಕೆ ಕಟ್ಟಿಹಾಕಿದ್ದುಂಟು. ಇಂಥ ಒಂದು ಆರಾಧನೆ ಕೃಷ್ಣಪ್ಪನ ಸಮ್ಮುಖದಲ್ಲಿ ನಡೆದಿದೆ. “ಹುಲಿಯನ್ನು ಸವಾರಿ ಮಾಡಬೇಕೊ” -ಎಂದು ಮಹೇಶ್ವರಯ್ಯ ಕೃಷ್ಣಪ್ಪನಿಗೆ ಆಪ್ತವಾಗಿ ಹೇಳಿದ್ದಾರೆ. ಕೆಂಪು ಪಟ್ಟೆ ಮಡಿಯುಟ್ಟು, ಹಣೆಯ ಮೇಲೆ ದೊಡ್ಡ ಕುಂಕುಮವಿಟ್ಟು, ಒದ್ದೆಯಾದ ಬೆಳೆಸಿದ ತಲೆಗೂದಲನ್ನು ಭುಜದ ಮೇಲೆ ಚೆಲ್ಲಿದ ಈ ದೇವಿಯ ಆರಾಧಕನ ಹೊಳೆಯುವ ಕಣ್ಣುಗಳನ್ನು ಕೃಷ್ಣಪ್ಪ ಸಂಶಯದಿಂದ ನೋಡಲು ಪ್ರಯತ್ನಪಟ್ಟಿದ್ದ. ಅವನಿಗೆ ಯಾವ ದೇವರ ಪೂಜೆಯೂ ಸಾಧ್ಯವಿರಲಿಲ್ಲ. ತನ್ನ ಮುಖವಾಡವನ್ನು ಮುಖವೇ ಮಾಡಬಲ್ಲ ಮಹೇಶ್ವರಯ್ಯನ ನೆಚ್ಚುಗೆಯೂ ಕೃಷ್ಣಪ್ಪನಿಗೆ ಬೇಕಿತ್ತಲ್ಲವೆ? ಆದ್ದರಿಂದ ದಿವ್ಯವಾದದ್ದೊಂದು ತನ್ನನ್ನು ಹೊಗುವುದಕ್ಕಾಗಿ ಸಂಶಯವನ್ನೂ ಮೀರಿ ಏಕಾಗ್ರನಾಗಿ ಕೂತು ಅವರ ಮಾತು ಕೇಳಿಸಿಕೊಳ್ಳುತ್ತಿದ್ದ. ಕೃಷ್ಣಪ್ಪನನ್ನು ಬದಲಿಸುತ್ತ ಬೆಳೆಸಲು ಮಹೇಶ್ವರಯ್ಯ ಅವನನ್ನು ಹೀಯಾಳಿಸಿದ್ದೂ ಇಲ್ಲವೆಂದಲ್ಲ. ಸದಾ ಕನ್ನಡಿಯ ಎದುರು ನಿಂತು ತಲೆಬಾಚುತ್ತಲೋ ಮುಖ ಹಿಂಡಿಕೊಳ್ಳುತ್ತಲೋ ಇದ್ದ ಕೃಷ್ಣಪ್ಪನ ಆತ್ಮರತಿಯನ್ನು ಹೀಗೇ ಜರಿದು ಅವರು ಬಿಡಿಸಿದ್ದು.

ನಗುತ್ತಲೋ, ಘರ್ಜಿಸುತ್ತಲೋ ಕೃಷ್ಣಪ್ಪನ ಒಳಹುಲಿ ನೆಗೆಯುತ್ತಿತ್ತು. ದುಷ್ಕರ್ಮಿಗಳಿಗೆ ತಾವು ಹುಳ ಎನ್ನಿಸುವ ಹಾಗೆ ಮಾಡಬಲ್ಲ ಶಕ್ತಿಯನ್ನು ಕೃಷ್ಣಪ್ಪ ಗಳಿಸಿಕೊಂಡಿದ್ದ. ಅವನು ರಾಜ್ಯದಲ್ಲಿ ದೊಡ್ಡ ಹೆಸರು ಮಾಡಿದ ವಿರೋಧ ಪಕ್ಷದ ನಾಯಕನಲ್ಲವೆ? ಆದ್ದರಿಂದ ಆತನ ಬಾಯಿ ಕಟ್ಟಿಸಲು ಕೊಳಕರು, ಖದೀಮರು ಏನೇನೋ ಪ್ರಯತ್ನ ಮಾಡುವರು. ಇದರಿಂದ ಕೃಷ್ಣಪ್ಪನಿಗೆ ಸದಾ ಅವಡುಕಚ್ಚಿಕೊಂಡೇ ಬದುಕಬೇಕಾಗಿ ಬಂದುದು.

ಆದ್ದರಿಂದಲೇ ಏನೋ ಸಮಾಜಕ್ಕೆ ತನ್ನನ್ನು ಒಡ್ಡಿಕೊಳ್ಳದಂಥ ಮಹೇಶ್ವರಯ್ಯನಂಥ ಆತ್ಮಾರಾಮರು, ಕೃಷ್ಣಪ್ಪನಿಗೆ ಅಚ್ಚುಮೆಚ್ಚಾಗಿ ಉಳಿದದ್ದು. ಕೊಳೆಯುವುದೇ ಜಾಯಮಾನವಾದ ನಿತ್ಯಜೀವನದ ಕ್ಷೇತ್ರದಲ್ಲಿ ಪೂರ್ಣ ಶುದ್ಧಿ ಹುಡುಕೋದೇ ಅಸಂಬದ್ಧವಿರಬಹುದೇ ಎಂಬ ಪ್ರಶ್ನೆ ಅವನನ್ನು ಬಾಧಿಸಿದ್ದಿದೆ. ಬಜೆಟ್ಟು, ಕಾಮಗಾರಿ, ಲಂಚ, ಭಡ್ತಿ, ವರ್ಗ, ನೌಕರಿ ಇತ್ಯಾದಿಗಳಿಂದ ಮುಳುಗಿಸುವ ರಾಜಕೀಯದಿಂದ ಮೇಲೇಳಲು ಕೃಷ್ಣಪ್ಪ ಸದಾ ಪ್ರಯತ್ನಿಸುತ್ತಾನೆ. ಕ್ರಾಂತಿಯ ಕನಸು ಕಾಣುತ್ತಾನೆ. ಆದರೆ ತನ್ನ ಕ್ರಾಂತಿಕಾರತೆ ಕ್ರಮೇಣ ತೇಪೆ ಕೆಲಸವಾಗಿಬಿಟ್ಟಿದೆ. ತನ್ನನ್ನು ತೇಲಿಸುವ ಮಹೇಶ್ವರಯ್ಯನೂ ಈಚೆಗೆ ಬರುವುದಿಲ್ಲ. ಒಂದೋ ಭಯಂಕರ ಜಗಳಗಂಟನೂ ಅಹಂಕಾರಿಯೂ ಆಗಬೇಕು; ಅಥವಾ ಸಮಾಜದಿಂದ ಮುಖ ತಿರುಗಿಸಿದ ಆತ್ಮಾರಾಮನಾಗಬೇಕು. ಲೋಭಿಗಳನ್ನು ಕಸವಾಗಿ ಕಾಣುವಂಥ ಮಾತಾಡಿ ಕೃಷ್ಣಪ್ಪ ಹಿಗ್ಗುತ್ತಾನೆ. ಹೀಗೆ ಹಿಗ್ಗುವುದೇ ತನಗೆ ಚಾಳಿಯಾಗಿಬಿಟ್ಟಿತಲ್ಲ ಎಂದು ಹೆದರುತ್ತಾನೆ. ತನ್ನ ಕೋಪದಿಂದ ಸುತ್ತಲಿನ ವಾತಾವರಣದಲ್ಲಿ ಚೂರೂ ಬದಲಾವಣೆಯಾಗದಿದ್ದಾಗ ಕೋಪ ತೀಟೆಯಾಗದೆ ಬೇರೆ ಮಾರ್ಗವಿದೆಯೆ ಎಂದು ಸಮಾಧಾನಪಡುತ್ತಾನೆ. ಇಂಥ ಕೋಪ ತಾಪ ಪ್ರೇಮಗಳ ತೀವ್ರತೆಗೆ ಕಬೀರ ಅಲ್ಲಮರಂಥ ಅರೆಹುಚ್ಚರ ಕವಿತೆಯೇ ರಾಜಕೀಯಕ್ಕಿಂತ ಉತ್ತಮ ಮಾಧ್ಯಮ ಎಂದುಕೊಳ್ಳುತ್ತಾನೆ.

ಆದರೆ ಕೃಷ್ಣಪ್ಪ ಸಾಹಿತಿಯಾಗಲು ಪ್ರಯತ್ನಿಸಿ ಸೋತವ. ಒಮ್ಮೆ ಬಿಳಿ ಕಾಗದದ ಮೇಲೆ ದುಂಡನೆಯ ಅಕ್ಷರದಲ್ಲಿ ಅರ್ಧವಾಕ್ಯವೊಂದನ್ನು ಬರೆದು ಅದನ್ನು ಮುಗಿಸಲಾರದೇ ಹೋಗಿದ್ದ. ’ಸುಗ್ಗಿಯ ಕಾಲದಲ್ಲಿ ಬೆಳಗಿನ ಹೊತ್ತು ಕರಿಯ ಎನ್ನುವ ಹೊಲೆಯನೊಬ್ಬ ತನ್ನ ತಲೆಯ ಮೇಲೆ ಹೇಲಿನ ಕುಕ್ಕೆ ಇಟ್ಟುಕೊಂಡು ಹೋಗುತ್ತಿದಾಗ’ ಎಂದು ವಾಕ್ಯ ಕೊನೆಯಾಗದೆ ನಿಂತಿತ್ತು. ಹೀಗೆ ಹೋಗುತ್ತಿದ್ದಾಗ ಅವನಲ್ಲಿ ಲೋಕದ ಕೊಳಕನ್ನು ಸುಡಬಲ್ಲ ಬೆಂಕಿಯಂಥ ಸಿಟ್ಟು ಹುಟ್ಟಿತೆಂದು ಬರೆಯಲು ಸಾಧ್ಯವೆ? ಸಾಧ್ಯವಾಗಲು ಒಂದೋ ನಿಜಜೀವನದಲ್ಲಿ ಅಂಥ ಸಿಟ್ಟು ಹುಟ್ಟಿದ್ದರ ದಾಖಲೆಯಿರಬೇಕು. ಅಥವಾ ಅಂಥದ್ದು ಹುಟ್ಟುವುದು ನಿಜವೆಂದು ಅನ್ನಿಸುವಂತೆ ಮಾಡಬಲ್ಲ ವಾಕ್ಸಿದ್ಧಿ ತನಗೆ ಬೇಕು. ಕೈಸಾಗದೆ ಇರೋವರು ಮಾತಲ್ಲಿ ತೀಟೆ ತೀರಿಸ್ಕೋತಾರೆ ಎಂದು ಕವಿಗಳನ್ನು ಅವನು ಜರೆಯುತ್ತಿದ್ದ. ಇದರಲ್ಲಿ ಅಸೂಯೆ ಕಂಡ ಮಹೇಶ್ವರಯ್ಯ, “ಸುಡುವ ತಾಕತ್ತಿದ್ದರೆ ಸುಡಯ್ಯ, ವಾಗ್ದೇವಿಯನ್ನು ಜರೆಯಬೇಡ” ಎಂದಿದ್ದರು. ಎಲ್ಲೆಲ್ಲೋ ಕೋಪವನ್ನು ಚೆಲ್ಲುವುದರ ಬದಲು ಅದನ್ನು ಮಾತಿನಲ್ಲೆ ಒಳಚಾಚಿದ ಬೆಂಕಿಯ ನಾಲಗೆ ಮಾಡಿ ಉರಿಸುವುದೇ ಶ್ರೇಷ್ಠವೆಂದು ಮಹೇಶ್ವರಯ್ಯನ ಅಭಿಪ್ರಾಯ. ಆದರೆ ಕೃಷ್ಣಪ್ಪನಿಗೆ ಗೊತ್ತು: ತನ್ನ ಮಾತುಗಳು ತನ್ನ ಗರ್ವಕ್ಕೇ ಅಂಟಿಕೊಂಡು ಬಿಡುತ್ತಿದ್ದವು; ಮೈ ತುಂಬ ಏಳುವ ಪಿತ್ಥಗಂಧೆಯಂತೆ ತನ್ನಿಂದ ಹೊರಬೀಳುತ್ತಿದ್ದವು.

*
*
*

ಪೊರೆ ಬಿಡುವಾಗಿನ ಸಂಕಟಗಳಿಂದ ಕೃಷ್ಣಪ್ಪನಿಗೊಮ್ಮೆ ಹುಚ್ಚು ಹಿಡಿದದ್ದೂ ಇದೆ. ಇಂಟರ್‍ಮೀಡಿಯೆಟ್ ಕಾಲೇಜಿನಲ್ಲಿ ಆಗ ಕೃಷ್ಣಪ್ಪ ಓದುತ್ತಿದ್ದ. ಅವನ ಜಾತಿಯ ಹಾಸ್ಟೆಲಲ್ಲಿ ಆಗ ಅವನಿಗೆ ಬಿಟ್ಟಿ ಊಟ, ವಸತಿ. ವಯಸ್ಸು ಇಪ್ಪತ್ತೈದು ಇದ್ದರೂ ಇರಬಹುದು. ಅವನು ಹುಟ್ಟಿದ ತಾರೀಖು ಯಾರಿಗೆ ಸರಿಯಾಗಿ ಗೊತ್ತು? ಅನಕ್ಷರಸ್ಥಳಾದ ತಾಯಿಯನ್ನು ಕೇಳಿದರೆ ನೆರೆ ಬಂದ ವರ್ಷ ಎನ್ನುತ್ತಾಳೆ. ಕೃಷ್ಣಪ್ಪ ಫ಼್ರೀ ಬೋರ್ಡರಾಗಿದ್ದರೂ ಆ ಹಾಸ್ಟೆಲಿನಲ್ಲಿ ಇದ್ದ ಶ್ರೀಮಂತ ಹುಡುಗರಿಗೆಲ್ಲ ನಾಯಕ. ಯಾರಿಗಿಲ್ಲದಿದ್ದರೂ ಅವನಿಗೆ ಮಾತ್ರ ಸ್ವತಂತ್ರವಾದ ರೂಮು -ಹುಡುಗರೆಲ್ಲ ಕೂಡಿ ಬಿಟ್ಟುಕೊಟ್ಟದ್ದು. ಒಮ್ಮೆ ಕೃಷ್ಣಪ್ಪನಿಗೆ ತುಂಬ ಜ್ವರ ಬಂತು. ಅವನಿಗೆ ಗುರಪ್ಪ ಎಂಬ ಶ್ರೀಮಂತ ಅನುಯಾಯಿ ಇದ್ದ. ಅವನು ಕೃಷ್ಣಪ್ಪನ ಶುಷ್ರೂಷೆ ಮಾಡುತ್ತಿದ್ದಾಗ, ತುಂಬ ಜ್ವರದಲ್ಲಿದ್ದ ಕೃಷ್ಣಪ್ಪ: “ನನಗೊಂದು ಹೊಸ ಹಾಸಿಗೆ ಮಾಡಿಸಿಕೊಡು” ಎಂದ. ಗುರಪ್ಪ ಸ್ವಲ್ಪ ಜುಗ್ಗು ಸ್ವಭಾವದವನೆಂದು ಕೃಷ್ಣಪ್ಪನಿಗೆ ಗೊತ್ತು. ಹಾಸಿಗೆ ಹೇಗಿರಬೇಕೆಂದು ವಿವರಿಸಿದ: “ಏಯ್ ಗುರಪ್ಪ -ಜುಗ್ಗುತನ ಮಾಡಬೇಡ. ಹಾಸಿಗೆ ಸುತ್ತ ಬೇರೆ ಬಟ್ಟೇನೇ ಉಪಯೋಗಿಸಿ ಅಂಚು ಕಟ್ಟಿಸಬೇಕು. ಹಾಸಿಗೆ ಬಾಕ್ಸ್ ಥರ ಇರಬೇಕು. ಗೊತ್ತಾಯ್ತೇನೋ?” ಅಂದ. ಗುರಪ್ಪ ’ಹೂ’ ಎಂದು ಹಾಸಿಗೆ ಹೊಲಿಸಿ ತಂದ. ಕೃಷ್ಣಪ್ಪನಿಗೆ ಜ್ವರ ಏರಿತ್ತು. ಏನೇನೋ ಬಡಬಡಿಸುತ್ತಿದ್ದವ ಹಾಸಿಗೆಯ ಅಂಚುಗಳನ್ನು ಮುಟ್ಟಿ ನೋಡಿದ. “ಹಾವಿನ ಥರ ಮೂತಿ ಚೂಪಾಗಿದೆಯಲ್ಲೋ? ಬಾಕ್ಸ್ ಹಾಗೆ ಇರಬೇಕು – ಬಾಕ್ಸ್ ಹಾಗೆ” ಎಂದು ಕಣ್ಣುಗಳನ್ನು ತೆರೆಯಲಾಗದಿದ್ದರೂ ಗುರಪ್ಪನ ಮುಖ ಹುಡುಕುತ್ತಾ ಏಳಲು ಪ್ರಯತ್ನಿಸಿದ. ಅವನು ಹೇಳಿದಂಥ ಹಾಸಿಗೆಯನ್ನೇ ಹೊಲಿಸಿದ್ದೇನೆ ಎಂಬ ಗುರಪ್ಪನ ವಿವರಣೆಯಿಂದ ಅವನಿಗೆ ಸಿಟ್ಟು ಬಂತು. ಹಾಸಿಗೆಯೇ ಬೇಡವೆಂದು ನೆಲದ ಮೇಲೆ ಮಲಗಿದ. ಥಂಡಿಯಾಗುತ್ತದೆಂದು ಗುರಪ್ಪ ಬೇಡಿಕೊಂಡರೂ ಏಳಲಿಲ್ಲ. ಕೆಲವು ತಿಂಗಳುಗಳ ಹಿಂದೆ ಹೀಗೇ ಗುರಪ್ಪನಿಗೆ ಜ್ವರ ಬಂದಿತ್ತು. ಆಗ ಕೃಷ್ಣಪ್ಪ ಅವನ ಪಕ್ಕದಲ್ಲಿ ಸದಾ ಕೂತಿದ್ದು ಹಣೆಗೆ ಒದ್ದೆ ಬಟ್ಟೆ ಹಾಕಿದ್ದ; ಅವನು ಮಾಡಿಕೊಂಡ ವಾಂತಿಯನ್ನು ಬಾಚಿದ್ದ. ಇದರಿಂದ ಗುರಪ್ಪನಿಗೆ ಕೃಷ್ಣಪ್ಪನನ್ನು ಪೂಜಿಸುವಂಥ ಭಕ್ತಿ ಹುಟ್ಟಿತ್ತು. ಆದರೂ ಜಿಪುಣನಾದ ಗುರಪ್ಪನಿಗೆ ಒಳ್ಳೆಯ ಹಾಸಿಗೆ ಹೊಲಿಸುವುದು ಅನಗತ್ಯ ದುಂದು ಎನ್ನಿಸಿರಬಹುದು. ಸನ್ನಿಯಲ್ಲಿದ್ದವನ ಮಾತಿಗೇಕೆ ಬೆಲೆ ಕೊಡಬೇಕು ಎಂದು ವಂಚನೆ ಮಾಡುವ ಧೈರ್ಯವೂ ಇದ್ದಿರಬಹುದು. ಈ ಸಣ್ಣತನ ಕೃಷ್ಣಪ್ಪನನ್ನು ಅತೀವವಾಗಿ ಬಾಧಿಸಿರಬೇಕು. ಗುರಪ್ಪ ಅನಂತರ ಅತ್ಯಂತ ದೈನ್ಯದಿಂದ ಬೇರೆ ಹಾಸಿಗೆ ಹೊಲಿಸಿಕೊಂಡು ಬಂದು ಬೇಡಿಕೊಂಡರೂ ಕೃಷ್ಣಪ್ಪ ಅದರ ಮೇಲೆ ಮಲಗಲಿಲ್ಲ. ತನ್ನ ಹಳೆಯ ಹಾಸಿಗೆ ಮೇಲೂ ಮಲಗಲಿಲ್ಲ. ಈಚಲು ಚಾಪೆಯ ಮೇಲೆ ಮಲಗಿದ. ಗುರಪ್ಪ ಜೋಲು ಮೋರೆ ಹಾಕಿಕೊಂಡು ಪಕ್ಕದಲ್ಲಿ ಸದಾ ಕೂತಿರುತ್ತಿದ್ದರೂ ಅವನನ್ನು ಮಾತಾಡಿಸುತ್ತಿರಲಿಲ್ಲ.

ಜ್ವರ ಸ್ವಲ್ಪ ಇಳಿದ ಮೇಲೆ ತನ್ನ ಮಾವನ ಹಿರಿಯ ಮಗನಿದ್ದ ಊರಲ್ಲಿ ಶುಶ್ರೂಷೆ ಪಡೆಯಲೆಂದು ಹೊರಟ. ಆ ಊರಿಗೆ ಹೋಗಲು ಟ್ರೈನ್ ಹಿಡಿಯಬೇಕು. ಮುವ್ವತ್ತು ಮೈಲಿಯ ನಂತರ ಟ್ರೈನ್ ಇಳಿದು ಬಸ್ ಹಿಡಿಯಬೇಕು. ಇರುವ ಒಂದೇ ಬಸ್ಸಿಗೆ ನಿಗದಿಯಾದ ಕಾಲವಿಲ್ಲ. ಸ್ಟೇಶನ್ನಿನಲ್ಲಿ ಇಳಿದ ಕೃಷ್ಣಪ್ಪ ಬಸ್ಸಿಗೆ ಕಾಯುತ್ತ ಒಂದು ಹೋಟೆಲಿನ ಬೆಂಚಿನ ಮೇಲೆ ಮಲಗಿದ.

ಇನ್ನೂ ಸಣ್ಣಗೆ ಜ್ವರವಿತ್ತು. ಬೆಂಚಿನ ಮೇಲೆ ಮಲಗಿದ ಕೃಷ್ಣಪ್ಪನನ್ನು ಹೋಟೆಲು ಯಜಮಾನ ನೋಡಿ, ಹೊಗೆಸೊಪ್ಪಿನ ರಸ ತುಂಬಿದ ತನ್ನ ಬಾಯನ್ನು ಮೇಲಕ್ಕೆತ್ತಿ, ಗಡ್ಡ ಕೆರೆದುಕೊಳ್ಳುತ್ತ ಏಳುವಂತೆ ಸನ್ನೆ ಮಾಡಿದ. ಕೃಷ್ಣಪ್ಪ ದುರುಗುಟ್ಟಿ ನೋಡಿದ. ಯಜಮಾನನಿಗೆ ಕೋಪ ಬಂತು. ಹೊಗೆಸೊಪ್ಪು ಉಗುಳಿ ಬಂದು “ಏಳಯ್ಯ, ಇಲ್ದಿದ್ರೆ ಎಳೆಸಿಹಾಕ್ತೀನಿ” ಎಂದ. ಕೃಷ್ಣಪ್ಪ ಹಿಂದಿನಂತೆ ದುರುಗುಟ್ಟಿ ನೋಡುತ್ತಲೇ ಪ್ರಶಾಂತವಾದ ಧ್ವನಿಯಲ್ಲಿ ಹೇಳಿದ: “ನನಗೆ ಜ್ವರ. ಹೊರಗೆ ಬಿಸಿಲಲ್ಲಿ ಮಲಗಲಾರೆ. ಬಸ್ಸು ಬರುವ ತನಕ ಇಲ್ಲಿ ಮಲಗಿರಲು ತಾವು ಅನುಮತಿ ಕೊಡಬೇಕು”. ಮಾತಿನಲ್ಲಿದ್ದ ಸೌಜನ್ಯ ಅವನ ಕಣ್ಣುಗಳಲ್ಲಿರಲಿಲ್ಲ. “ಇವನನ್ನು ಎಳೆದು ಹಾಕ್ರೋ. ದಿಕ್ಕಿಲ್ಲದ ಸೂಳೇಮಕ್ಕಳಿಗೆ ಮಲಗಕ್ಕಲ್ಲ ಈ ಹೋಟೆಲಿರೋದು” ಎಂದ. ಮಾಣಿಯೊಬ್ಬ ಬಂದು ಕೃಷ್ಣಪ್ಪನ ತಲೆಯಿಂದ ಟ್ರಂಕನ್ನೆಳೆದ. ಯಜಮಾನ ಅದನ್ನು ಇಸುಕೊಂಡು ಹೊರಗೆಸೆದಾಗ ಟ್ರಂಕಿನಲ್ಲಿದ್ದದ್ದೆಲ್ಲ ಮಧ್ಯಾಹ್ನದ ಬಿಸಿಲಲ್ಲಿ ಚೆಲ್ಲಿತು. ಕೃಷ್ಣಪ್ಪನನ್ನು ಎಳೆಯಲು ಹೋದಾಗ “ನನ್ನ ಮೈ ಮುಟ್ಟೀರಿ -ಜೋಕೆ” ಎಂದು ತೂರಾಡುತ್ತ ಹೊರಗೆ ಹೋದ. ಗಂಭೀರವಾಗಿ ತನ್ನ ಜುಬ್ಬದ ತೋಳನ್ನು ಸರಿಸಿಕೊಂಡು ಟ್ರಂಕಿಗೆ ಚೆಲ್ಲಾಪಿಲ್ಲಿಯಾದ್ದನ್ನು ತುಂಬಿದ. ಉರಿಯುವ ಬಿಸಿಲಲ್ಲಿ ಟ್ರಂಕಿನ ಮೇಲೆ ಕೂತು, ಪೂರ್ವಕಾಲದ ಉಗ್ರಮುನಿಕುಮಾರನಂತೆ ಹೋಟೆಲಿನ ಕಟ್ಟಡವನ್ನು ದಿಟ್ಟಿಸುತ್ತ “ಇದಕ್ಕೆ ಬೆಂಕಿ ಬಿದ್ದು ಎಲ್ಲ ಸುಟ್ಟು ಹೋಗುತ್ತೆ -ತಿಂಗಳ ಒಳಗೆ” ಎಂದ ಪ್ರಶಾಂತವಾಗಿ. ಯಜಮಾನ ಥೂ ಎಂದು ಉಗುಳಿದಾಗ ಕೃಷ್ಣಪ್ಪ ಕರುಣೆಯಿಂದ ನಕ್ಕ………….

ಇಂಥ ಮಾತನ್ನಾಡಬಲ್ಲ ಶಕ್ತಿ ಈಗಲೂ ಅವನಿಗೆ ಇದೆ. ಓಡಾಡಲಾಗದಿದ್ದರೂ, ಕುರ್ಚಿಯಲ್ಲಿ ಎತ್ತಿಸಿಕೊಂಡು ಹೋಗಿ ಅಸೆಂಬ್ಲಿಯಲ್ಲಿ ಹೇಳಿದ್ದಾನೆ: ಯಾರ ಕಡೆಗೂ ನೋಡದೆ, ಕಣ್ಣೆತ್ತಿ: “ನಾನೀಗ ಪ್ರವಾದಿಯಂತೆ ಹೇಳುತ್ತಿರುವೆ -ಕೇಳಿ -ಬಿಡಿ -ನನಗದು ಅಲ್ಪ ವಿಷಯ. ಬಡವರು ಸಿಟ್ಟಿಗೇಳುತ್ತಾರೆ. ನಿಮ್ಮ ಮನೆಗಳಿಗೆ ಬೆಂಕಿ ಹಚ್ಚುತ್ತಾರೆ.” ದೈನಿಕ ಪತ್ರಿಕೆಗಳಲ್ಲಿ ಇದನ್ನು ಹಾಸ್ಯಪ್ರಿಯ ಸಂಪಾದಕರು ಬಾಕ್ಸ್ ಮಾಡಿ ಆಶ್ಚರ್ಯಸೂಚಕ ಚಿಹ್ನೆಯಿಂದ ಕೊನೆ ಮಾಡಿ ಪ್ರಕಟಿಸಿದರು. ಅಚಲ ಮುಖ, ಅವನ ಧ್ವನಿ, ಅವನ ಗಂಭೀರ ಧಾಟಿಗಳ ಜೊತೆ ಈ ಮಾತುಗಳನ್ನು ಖುದ್ದು ಕೇಳಿದವರಿಗೆ ಅದೇನೂ ಹಾಸ್ಯವೆನ್ನಿಸಿವುದಿಲ್ಲ. ಆದರೆ ನಿತ್ಯಜೀವನದ ತರಲೆ ತಾಪತ್ರಯಗಳ ಸುದ್ದಿಗಳ ಆಶಾದಾಯಕವೆನ್ನಿಸುವ ಯಥಾಸ್ಥಿತಿಯ ಆವರಣದಲ್ಲಿ ಮಾತ್ರ ಕೃಷ್ಣಪ್ಪನ ಮಾತುಗಳನ್ನು ಅಚ್ಚಿನಲ್ಲಿ ಕಂಡಾಗ ಆಭಾಸವೆನ್ನಿಸುತ್ತದೆ. ಅಹಂಕಾರಿಯೊಬ್ಬನ ಗೊಣಗಾಟವೆನ್ನಿಸುತ್ತದೆ. ಅದು ಕೃಷ್ಣಪ್ಪನಿಗೆ ಗೊತ್ತಿರುವುದರಿಂದ ಬಡವರು ಸಿಟ್ಟಿಗೇಳುವ ತನಕ ತನ್ನ ತಿರಸ್ಕಾರ ದ್ವೇಷಗಳನ್ನು ಮೊನಚಾಗಿ ಉಳಿಸಿಕೊಳ್ಳಬೇಕೆಂದು ಸೊರಗುತ್ತಿರುವ ದೇಹದಲ್ಲಿ ಹೆಣಗುತ್ತಾನೆ…….

ಕೃಷ್ಣಪ್ಪನ ಮಾವನ ಮಗ ರಂಗಪ್ಪ ಸಣ್ಣಪುಟ್ಟ ಲಂಚಗಳಿಗೆ ಕೈಯೊಡ್ಡಿ ಬದುಕುತ್ತಿದ್ದ ಒಬ್ಬ ಬಡಪಾಯಿ ಗುಮಾಸ್ತ. ಮನೆಯಲ್ಲಿ ಎಂಟು ಸಣ್ಣ ಪುಟ್ಟ ಮಕ್ಕಳು. ಕೇವಲ ಎರಡು ರೂಮುಗಳಿದ್ದ ನಾಡಹೆಂಚಿನ ಸೋರುವ ಈ ಮನೆಯ ಒಡತಿ ಸಾವಿತ್ರಮ್ಮ. ತನ್ನ ಸೀತಬುರುಕ ಮೂಗನ್ನು ಕೈಯಿಂದ ಸೀನಿ ಗೋಡೆಗೆ ಒರಸುತ್ತ ಯಾವಾಗಲೂ ಗೊಣಗುವ, ತನ್ನ ಗಂಡನಿಗೂ ಕೃಷ್ಣಪ್ಪನಿಗೂ ಊಟ ಬಡಿಸುವಾಗ ಗಂಡನಿಗೆ ಗಟ್ಟಿ ಮಜ್ಜಿಗೆಯನ್ನೂ ಕೃಷ್ಣಪ್ಪನಿಗೆ ನೀರು ಮಜ್ಜಿಗೆಯನ್ನೂ ಯಾವ ನಾಚಿಕೆಯಿಲ್ಲದೆ ಸುರಿಯುವ ಹೆಂಗಸು -ಅವಳು. ಈ ಹೆಂಗಸನ್ನು ತನ್ನ ದುರುಗುಟ್ಟುವ ಕೋಪದ ಕಣ್ಣುಗಳಿಂದ ಕೃಷ್ಣಪ್ಪ ಗೆಲ್ಲಲಾರದೆ ಹೋದ. ಈ ಪೇಟೆಗೆ ಅವನು ಚಿಕಿತ್ಸೆಗೆಂದು ಬಂದದ್ದು. ಇಲ್ಲವಾದಲ್ಲಿ ತಾಯಿಯ ಊರಿಗೆ ಹೋಗಬಹುದಿತ್ತು. ಮಕ್ಕಳು ಮಲಗುವ ರೂಮಿನಲ್ಲಿ ಸದಾ ತನ್ನ ಕಣ್ಣಿಗೆ ಕಾಣುವ ಹಾಗೆ ಮಲಗಿರುತ್ತಿದ್ದ ಕೃಷ್ಣಪ್ಪನ ನಿರುಪಯೋಗತನವನ್ನೂ, ಎಲ್ಲರಂತೆ ಹಿಟ್ಟು ತಿನ್ನದೆ ಅನ್ನ ಬಯಸುತ್ತಿದ್ದ ಅವನ ರೋಗವನ್ನೂ ತಮ್ಮ ಬಡತನವನ್ನೂ ರಾಗವಾಗಿ ತನ್ನ ಪಾಡಿಗೆ ತಾನು ಆಡಿಕೊಳ್ಳುತ್ತ ಅಡಿಗೆ ಮನೆಯ ಹಿತ್ತಾಳೆ ಪಾತ್ರೆಗಳನ್ನು ಕುಕ್ಕುತ್ತ ಕೃಷ್ಣಪ್ಪನ ಗರ್ವ ಇನ್ನೂ ಹೆಚ್ಚು ಬೆಳೆಯುವಂತೆ ಮಾಡಿದಳು.

ತನ್ನ ಸುತ್ತಲಿನ ಕ್ಷುದ್ರತೆ ಗೆಲ್ಲಲು ಅನ್ಯ ಮಾರ್ಗವಿರದೆ ಕೃಷ್ಣಪ್ಪ ಗಾಢವಾದ ಮೌನ ತಾಳಿದ. ಮಕ್ಕಳ ಉಚ್ಚೆ, ಹೇಲು, ಗಂಡನ ಹೊಟ್ಟೆಬಾಕತನ, ಸದಾ ಬೀಳುವ ಕಸ ಇವುಗಳ ಜೊತೆ ದಿನನಿತ್ಯ ಹೋರಾಡುವ ಎಲ್ಲ ಸಾಮಾನ್ಯ ಕ್ಷುದ್ರ ಹೆಣ್ಣುಗಳಂತೆ ಇವಳು ಒಬ್ಬಳು ಎಂದು ಆಕೆಯನ್ನು ಮೊದಲಿನಂತೆ ದುರುಗುಟ್ಟಿ ನೋಡುವುದನ್ನೂ, ಅವಳಿಗೆ ಪ್ರತ್ಯುತ್ತರ ಕೊಡುವುದನ್ನೂ ನಿಲ್ಲಿಸಿದ. ಅವಳ ಕ್ಷುದ್ರತೆ ತನ್ನ ಶಕ್ತಿಹೀನ ದೇಹವನ್ನೂ ಮನಸ್ಸನ್ನೂ ಆಕ್ರಮಿಸದಿರಲೆಂದು ದಯಾವಂತನಾದ. ಹೀಗಿರುವಾಗ ಎರಡು ಘಟನೆಗಳು ಒಂದೇ ದಿನ ನಡೆದು ಕೃಷ್ಣಪ್ಪನಲ್ಲಿ ಒಂದು ವಿಸ್ಮಯಕಾರಿಯಾದ ಪರಿವರ್ತನೆಯಾಯಿತು.

ಕೃಷ್ಣಪ್ಪ ತನ್ನ ದಿನಚರಿ ಬರೆದಿಡುತ್ತಿದ್ದ ಒಂದು ಕಡತವಿತ್ತು. ತಾನು ಗೊಣಗುವಾಗಲೆಲ್ಲ ಈ ಪುಸ್ತಕ ಹಿಡಿದು ಗುಂಡನೆಯ ಅಕ್ಷರದಲ್ಲಿ ಏನೇನೋ ಬರೆಯುತ್ತ ಪ್ರಸನ್ನ ಮುಖದಿಂದ ಇರುತ್ತಿದ್ದ ಕೃಷ್ಣಪ್ಪನನ್ನು ಅವಳು ಸಿಡಿಮಿಡಿಗೊಳ್ಳುತ್ತ, ದುರುಗುಟ್ಟಿ ನೋಡುತ್ತ ನಿಂತುಬಿಡುವಳು. ಅನಕ್ಷರಸ್ಥೆಯಾದ ಸಾವಿತ್ರಮ್ಮನಿಗೆ ಕೃಷ್ಣಪ್ಪನನ್ನು ಮಗ್ನಗೊಳಿಸುವ ಈ ಕಸುಬು ಯಾವುದೋ ಮಾಟ ಮಾಡುವ ವಿಧಿಯಂತೆ ಕಾಣುತ್ತಿತ್ತು. ಒಂದು ಬೆಳಿಗ್ಗೆ ಅವನಿನ್ನೂ ನಿದ್ದೆಯಲ್ಲಿದ್ದಾಗ ಆ ಪುಸ್ತಕವನ್ನು ತೆಗೆದುಕೊಂಡು ಹೋಗಿ ನೀರಿನ ಒಲೆ ಹತ್ತಿಸಿದಳು. ಕೇಳಿದರೆ ಅವತ್ತು ಬೆಂಕಿ ಹೊತ್ತಿಸಲು ಕುರುಳು ಇರಲಿಲ್ಲವೆಂದು ಹೇಳುವುದೆಂದುಕೊಂಡಳು.

ಕೃಷ್ಣಪ್ಪ ಎಚ್ಚರವಾದವನು ಮಾವಿನ ಎಲೆಯಿಂದ ಹಲ್ಲು ಉಜ್ಜಿ, ನಡುಮನೆಗೆ ಬಂದು “ಎಲ್ಲಿ ನನ್ನ ಪುಸ್ತಕ?” ಎಂದ. ಅನುಮಾನವಾಗಿ ಬಚ್ಚಲಿಗೆ ಮತ್ತೆ ಹೋಗಿ ನೋಡಿದ. ಪುಸ್ತಕದ ರಟ್ಟಿನ ಚೂರೊಂದು ಕರಕಲಾಗಿದ್ದುದು ಕಂಡು ಸಾವಿತ್ರಮ್ಮನ ಎದುರು ನಿಂತು ಮಾತಾಡದೆ ದುರುಗುಟ್ಟಿ ನೋಡಿದ. ಸಾವಿತ್ರಮ್ಮ ನಿಷ್ಕಳಂಕ ಭಾವದಿಂದ “ಕುರುಳು ಇರಲಿಲ್ಲ” ಎಂದಳು. ಕೃಷ್ಣಪ್ಪ ಅಚಲನಾಗಿ ನಿಂತ. ಈ ಹೆಂಗಸನ್ನು ಕೊಲ್ಲಬಹುದು ಎನ್ನಿಸಿತು. ಜೊತೆಗೇ ಕಣ್ಣುಗಳಲ್ಲಿ ನೀರು ತುಂಬಿಬಂದವು. ಈ ನೀರನ್ನು ನೋಡಿ ಸಾವಿತ್ರಮ್ಮ ತನ್ನ ಬಗ್ಗೆ ಪಶ್ಚಾತಾಪ ಪಟ್ಟಾಳೆಂದು ಹಾಸಿಗೆ ಮೇಲೆ ಹೋಗಿ ಮಲಗಿದ. ಕಣ್ಣುಮುಚ್ಚಿದ. ಅವನಿಗೆ ಅರ್ಥವಾಗದಂಥ ಭಾವನೆಗಳು ಮನಸ್ಸಲ್ಲಿ ಏಳತೊಡಗಿದವು. ತನ್ನ ಸುತ್ತಲಿನ ಕ್ಷುದ್ರತೆ ತನ್ನನ್ನು ನಾಶ ಮಾಡದೆ ಬಿಡದು ಎಂಬ ಭಾವನೆ ಬಲವಾಗುತ್ತ ತಾನು ತೀರ ದುರ್ಬಲ ಎಂದು ಅನ್ನಿಸತೊಡಗಿತು. ತನ್ನ ಬೆರಳನ್ನು ಕತ್ತರಿಸಿ ಹಾಕೆಬೇಕೆನ್ನಿಸಿ ಪೆಟ್ಟಿಗೆಯಿಂದ ಬ್ಲೇಡ್ ತೆಗೆದ. ಈಗ ಅಂಜದೆ ಬೆರಳು ಕತ್ತರಿಸಿಕೊಳ್ಳಬಲ್ಲೆನಾದರೆ ನಾನು ಎಲ್ಲಕ್ಕಿಂತ ಗಟ್ಟಿ ಎಂದರ್ಥ ಎಂದು ಬೆರಳು ಕೊಯ್ಯಲು ಸಿದ್ಧನಾಗುತ್ತಿದ್ದಂತೆಯೇ ಪಕ್ಕದ ಮನೆಯ ಹೆಂಗಸೊಬ್ಬಳು “ಕೇಳಿದಿರಾ ಸಾವಿತ್ರಮ್ಮ” ಎಂದು ಒಳಗೆ ನುಗ್ಗಿ “ಅರಸಾಳಲ್ಲಿ ಹೋಟೆಲಿಟ್ಟುಕೊಂಡಿದ್ದರಲ್ಲ ಉಡುಪರು -ಅವರ ಹೋಟೆಲಿಗೆ ಬೆಂಕಿ ಬಿತ್ತಂತೆ. ಅವರ ಮೈ ಕೈಯೆಲ್ಲ ಸುಟ್ಟು ಆಸ್ಪತ್ರೆಗೆ ಸೇರಿಸಿದ್ದಾರಂತೆ” ಎಂದಳು.

ಕೃಷ್ಣಪ್ಪನಿಗೆ ಇದನ್ನು ಕೇಳುತ್ತಿದ್ದಂತೆಯೆ ತನ್ನ ಶಾಪ ನೆನಪಾಗಿ ತಾನು ದೈವಾಂಶಸಂಭೂತ ಎನ್ನಿಸಿತು. ಶಾಪದ ಪ್ರಕಾರ ಒಂದು ತಿಂಗಳಾಗಬೇಕಿತ್ತು. ಈಗ ತಿಂಗಳ ಮೇಲೆ ಹತ್ತು ದಿನಗಳಾಗಿದ್ದವು. ಕೃಷ್ಣಪ್ಪನ ಉದ್ವೇಗದಲ್ಲಿ ಇದು ಅವನನ್ನು ಬಾಧಿಸಲಿಲ್ಲ. ತಾನು ದೇವಾಂಶಸಂಭೂತ, ಈ ಅಂಶ ಬೆಳೆದು ತಾನು ದೇವರೇ ಆಗಿಬಿಡಬೇಕು ಎಂದು ಗಹಗಹಿಸಿ ನಕ್ಕ. ಪಕ್ಕದ ಮನೆ ಹೆಂಗಸು, ಸಾವಿತ್ರಮ್ಮ ನೋಡುತ್ತಿದ್ದಂತೆಯೇ ಪೆನ್ಸಿಲ್ ಕೆತ್ತುವಂತೆ ಕಾಲಿನ ಕಿರುಬೆರಳನ್ನು ಕೆತ್ತಿದ. ಅದರಿಂದ ರಕ್ತ ಚಿಮ್ಮುವಾಗ ನಗುತ್ತಲೇ ಇದ್ದ.

ಅಲ್ಲಿಂದ ಶುರುವಾಯಿತು, ಕೃಷ್ಣಪ್ಪನ ಹುಚ್ಚು. ಮಹೇಶ್ವರಯ್ಯನಂತೆ ನಡುಮನೆಯಲ್ಲಿ ಕೂತು ರಂಗೋಲೆಯಿಂದ ದೊಡ್ಡದೊಂದು ಮಂಗಳ ಬರೆದು ಅದನ್ನು ಅರಿಸಿನ ಕುಂಕುಮದಿಂದ ತುಂಬಿದ. ನಡುವೆ ಒಂದು ಬೆಳಗಿದ ಗಿಂಡಿಯಿಟ್ಟು ದೇವಿಯನ್ನು ಪ್ರತಿಷ್ಠಾಪಿಸಿದ. ಬರೀ ಕೌಪೀನ ಧರಿಸಿ ಕೂತು ಮಹೇಶ್ವರಯ್ಯ ಕೊಟ್ಟಿದ್ದ ಸೌಂದರ್ಯಲಹರಿಯನ್ನು ಓದಲು ಪ್ರಾರಂಭಿಸಿದ. ಶೂದ್ರರು ಮಂತ್ರ ಹೇಳುವುದೇ ಎಂದು ಸಾವಿತ್ರಮ್ಮ ರೇಗಿದಳು. ಹೆದರಿದಳು. ಸ್ಪಷ್ಟವಾಗಿ ಮಂತ್ರೋಚ್ಚಾರ ಮಾಡುತ್ತಿದ್ದ ಅವನ ಹತ್ತಿರ ಹೋಗಲಾರದೆ ಕಂಗಾಲಾಗಿ ನಿಂತಳು. ಸ್ಕೂಲಿನಿಂದ ಬಂದ ಮಕ್ಕಳನ್ನು ಹಿತ್ತಲಿಂದಲೇ ಅಡಿಗೆ ಮನೆಗೆ ಕರೆದು ಕೃಷ್ಣಪ್ಪನ ಹತ್ತಿರ ಹೋಗಬೇಡೆಂದಳು. ಗಣಮಗನಂತೆ ಕೂತ ಕೃಷ್ಣಪ್ಪನನ್ನು ಕಂಡು ಅವಳ ಗಂಡ ರಂಗಪ್ಪನೂ ತಬ್ಬಿಬ್ಬಾದ. ತೋರಣ ಕಟ್ಟಿ ಎಂದು ಕೃಷ್ಣಪ್ಪ ನಡುವೆ ಕೂಗಿ ಹೇಳಿದಾಗ ರಂಗಪ್ಪನೇ ಸ್ವತಃ ಹೋಗಿ ಮಾವಿನ ಎಲೆ ತಂದು ತೋರಣ ಕಟ್ಟಿದ.

ಯಾರೂ ನಡುಮನೆಯಲ್ಲಿ ಸುಳಿಯಲಿಲ್ಲ. ಹೀಗೆ ಮೂರು ದಿನ ಪೂಜೆಗೆ ಸಾವಿತ್ರಮ್ಮ ತುಟಿಪಿಟಕ್ಕೆನ್ನದೆ ಮಡಿಯಾಗಿ ಪಾಯಸ ಕೋಸಂಬರಿಗಳ ನೈವೇದ್ಯ ತಯಾರಿಸಿದಳು. ಈ ಅನಿರೀಕ್ಷಿತವಾದ ಸಂದರ್ಭವನ್ನು ಹೇಗೆ ಎದುರಿಸಬೇಕೆಂಬುದು ಅಕ್ಕಪಕ್ಕದ ಯಾರಿಗೂ ತಿಳಿಯಲಿಲ್ಲ. ಕಛೇರಿಯಲ್ಲಿದ್ದ ಉಳಿದ ಬ್ರಾಹ್ಮಣ ಗುಮಾಸ್ತರು ಇದರಿಂದ ನಿನಗೆ ಕೆಡುಕಾಗುತ್ತೆ ಎಂದು ರಂಗಪ್ಪನನ್ನು ಹೆದರಿಸಿದರು. ಇನ್ನು ಕೆಲವರು ದ್ವಿಜನಲ್ಲದವನು ದೇವಿಯನ್ನು ಆವಾಹಿಸುವಿದೇ ಶಕ್ಯವಲ್ಲೆಂದರು. ಈ ದೀಕ್ಷೆಯನ್ನು ಕೃಷ್ಣಪ್ಪನಿಗೆ ಕೊಟ್ಟಿರಬಹುದಾದ ಮಹೇಶ್ವರಯ್ಯ ಯಾವ ಜನ ಎಂಬ ಊಹಾಪೋಹಗಳಿಗೆ ಸಮಂಜಸ ಉತ್ತರವಿರಲಿಲ್ಲ. ಬಂಗಾಳದ ಶಕ್ತಿಪಂಥದ ಉಪಾಸನೆ ಇದಾದಲ್ಲಿ ಕೃಷ್ಣಪ್ಪನಿಗೂ ಉಳಿದವರಿಗೂ ಕೆಡುಕು ಕಟ್ಟಿಟ್ಟದ್ದೆ ಎಂದ -ಮಂತ್ರಗಳ ಅಲ್ಪಸ್ವಲ್ಪ ಪರಿಚಯವಿದ್ದ ಗುಮಾಸ್ತನೊಬ್ಬ. ರಂಗಪ್ಪನ ಜೊತೆ ಬಂದು, ಹೊರಗೆ ನಿಂತು ಮಂತ್ರ ಕೇಳಿಸಿಕೊಂಡು ಅರ್ಥಗರ್ಭಿತವಾಗಿ ಇದು ತಾಂತ್ರಿಕ ಉಪಾಸನೆ ಎಂದು ತಲೆಯಾಡಿಸಿದ. ರಂಗಪ್ಪ ಇದರ ನಿವಾರಣೆಗೆ ಉಪಾಯವೇನೆಂದು ಕೈಮುಗಿದು ಬೇಡಿದ. “ಇದೆ -ನೋಡಿ ಹೇಳ್ತೀನಿ. ಆವಾಹನೆ ಮಾಡಿದ ಮೇಲೆ ಸರಿಯಾದ ವಿಸರ್ಜನೆಯೂ ಆಗಬೇಕು. ಈ ಮಾಟಮಂತ್ರಗಳು ನೋಡಿ ಅದಕ್ಕೆ ಕೈ ಹಾಕಿದವರನ್ನೆ ನುಂಗಿಬಿಡುತ್ತವೆ” ಎಂದ. ಆತ ನಿಜವಾಗಿ ಹೆದರಿದಂತೆ ಕಂಡು ರಂಗಪ್ಪ ಕಂಗಾಲಾದ.

ಕೃಷ್ಣಪ್ಪ ನಿದ್ದೆಯನ್ನೂ ಮಾಡುತ್ತಿರಲಿಲ್ಲ. ದಿನಕ್ಕೆ ಮೂರು ಸಾರಿ ಬಾವಿಯಿಂದ ನೀರು ಸೇದಿ ತಲೆ ಮೇಲೆ ಸುರಿದುಕೊಂಡು ಕೂತುಬಿಡುತ್ತಿದ್ದ. ಗಟ್ಟಿಯಾಗಿ ಮಂತ್ರಗಳನ್ನು ಹಗಲು ರಾತ್ರೆ ಓದುತ್ತಲೇ ಇರುತ್ತಿದ್ದ. ನಿದ್ದೆ ಮಾಡುತ್ತಿರಲಿಲ್ಲ. ದೇವಿಗೆ ನೈವೇದ್ಯ ಮಾಡಿದ ಪಾಯಸವನ್ನು ಚೂರು ತಿನ್ನುತ್ತಿದ್ದ -ಅಷ್ಟೆ. ರಂಗಪ್ಪ ಪ್ರತಿದಿನ ಬೆಳಿಗ್ಗೆ ಹೋಗಿ ಒಂದು ಬುಟ್ಟಿ ತುಂಬ ಹೂವು ತರುತ್ತಿದ್ದ -ದೇವಿಗೆ ಪ್ರಿಯವಾದ ದಾಸವಾಳ ಹೂವಿಗಾಗಿ ನಾಲ್ಕು ಮೈಲಿ ಹೋಗಿ ಬರುತ್ತಿದ್ದ. ಇಡೀ ಮನೆ ಕೃಷ್ಣಪ್ಪ ಹೇಳಿದಂತೆ ಮೂರು ದಿನ ನಡೆದುಕೊಂಡಿತು.

ದೈವಾರಾಧನೆಯನ್ನು ಬುದ್ಧಿಪೂರ್ವಕವಾಗಿ ನಿರಾಕರಿಸುವ ಕೃಷ್ಣಪ್ಪನಿಗೆ ಈಗಲೂ ಆಗ ತಾನು ಪಡೆದ ಸ್ವಚ್ಛಂದ ಸ್ಥಿತಿ ರಹಸ್ಯಮಯವಾಗಿ ಕಾಣುತ್ತದೆ. ಮೂರು ದಿನ ಹೀಗೆ ದೇವಿಪೂಜೆ ಮಾಡಿದ ಮೇಲೆ ತನ್ನ ಮರ್ತ್ಯ ಶರೀರಕ್ಕಿಂತ ತಾನು ಬೇರೆ ಎನ್ನಿಸಿತಂತೆ. ಅನ್ನಿಸಿದ್ದೇ ಪೂಜೆಯನ್ನು ಬಿಟ್ಟು ಎದ್ದು, ತೊಟ್ಟ ಕೌಪೀನವನ್ನು ಬಿಚ್ಚಿ ಹಾಕಿ ಹೊರಬಂದನಂತೆ. ಬೆತ್ತಲೆಯಾಗಿ ಬೀದಿಯಲ್ಲಿ ನಡೆದನಂತೆ. ಆಗ ಅರ್ಧ ಭಯ, ಅರ್ಧ ಗೌರವಗಳಲ್ಲಿ ಜನ ತನ್ನನ್ನು ನೋಡುವಾಗ ಅವನ ಉನ್ಮಾದ ಹೆಚ್ಚಾಗಿ ಊರಿನ ತುದಿಯಲ್ಲಿದ್ದ ಗಣಪತಿ ಕಟ್ಟೆಯ ಮೇಲೆ ಹೋಗಿ ಕೂತು ಬಿಟ್ಟನಂತೆ.

ಮುಂದಿನದು ಕೃಷ್ಣಪ್ಪನಿಗೆ ನೆನಪಿಲ್ಲ. ಮಹೇಶ್ವರಯ್ಯ ಎಲ್ಲಿಂದ ಬಂದರೋ, ತನ್ನನ್ನು ಒಯ್ದು ಏನು ಚಿಕಿತ್ಸೆ ಮಾಡಿಸಿದರೋ -ಕೃಷ್ಣಪ್ಪ ಅಂತೂ ಕೊನೆಗೆ ಸರಿಹೋದ.

*
*
*

ಇದು ಹುಚ್ಚಾದರೆ ಕೊನೆಯನ್ನು ಎದುರು ನೋಡುತ್ತ ಮಲಗಿರುವ ಕೃಷ್ಣಪ್ಪನಿಗೆ ಇಂಥ ಉನ್ಮಾದ ಈಗಲೂ ಶಕ್ಯವಾಗಿದೆಯೆಂದೇ ಹೇಳಬೇಕು. ಅವನನ್ನು ತಿರಸ್ಕಾರದಿಂದ ನೋಡುವುದು ಯಾರಿಗೂ ಸಾಧ್ಯವಿಲ್ಲ. ಅವನ ಹೆಸರು ಕೂಡ ಅವನ ಮಿತಿಯನ್ನು ಸಾರುವಂತಿತ್ತಲ್ಲವೆ? ರಿಜಿಸ್ಟರಿನಲ್ಲಿ ಅವನ ಹೆಸರು ಕೃಷ್ಣಪ್ಪಗೌಡ. “ಕೃಷ್ಣಪ್ಪಗೌಡ” ಎಂದರೆ ಸಲಿಗೆಯನ್ನೂ, ಅವನು ಶೂದ್ರ ಎಂಬುದನ್ನೂ ಸೂಚಿಸುವಂತಿತ್ತಾದ್ದರಿಂದ ಅವನನ್ನು ಹೇಗೆ ಕರೆಯಬೇಕೆಂಬುದೇ ಅವನ ಉಪಾಧ್ಯಾಯರಿಗೆ ಸಮಸ್ಯೆಯಾಗುತ್ತಿತ್ತು. ಕೃಷ್ಣಪ್ಪ ಎಂದರೆ ತೀರ ಸಲಿಗೆಯಾಗುತ್ತಿತ್ತು. ಹಾಗಾಗಿ ಎಲ್ಲರೂ ಆತನಿಗೊಂದು ಹೆಸರೇ ಇಲ್ಲವೆನ್ನುವಂತೆ “ಗೌಡರೇ” ಎಂದು ಕರೆಯುವುದು.

ಅವನು ತನ್ನ ಕ್ಷುದ್ರತೆಯನ್ನು ಹೀಗೆ ಹಠಾತ್ತನೆ ಮೀರಿ ಎಲ್ಲರಿಗೂ ದಂಗುಬಡಿಸಿಬಿಡುತ್ತಿದ್ದು, ಒಮ್ಮೆ ರಾಜ್ಯಪಾಲರ ಭಾಷಣದಲ್ಲಿ ದೇಶದ ಕ್ಷಾಮ ಪರಿಸ್ಥಿತಿ ಬಗ್ಗೆ ಯಾವ ಕಾಳಜಿಯೂ ವ್ಯಕ್ತವಾಗಿಲ್ಲವೆಂದು ಕೋಪೋದ್ರಿಕ್ತನಾಗಿ, ಭಾಷಣದ ಪ್ರತಿಯನ್ನು ನೆಲದ ಮೇಲೆ ಹಾಕಿ, ಕಾಲಿನಿಂದ ಮೆಟ್ಟಿ ನಿಂತ ಅವನ ಉಗ್ರಮೂರ್ತಿಯನ್ನು ಉಳಿದ ಪ್ರಜಾಪ್ರತಿನಿಧಿಗಳು ಒಂದು ನಿಮಿಷ ಏನು ಮಾಡುವುದು ತಿಳಿಯದೆ ಎವೆಯಿಕ್ಕದೆ ನೋಡಿದ್ದರು. ನಂತರ ಸಭೆಗೆ ಅವಮಾನ ಇತ್ಯಾದಿ ಕೂಗಾಡಿ ಅವನನ್ನು ಹೊರಗೆ ಹಾಕಿದ್ದರು. ಖದೀಮರಿಗೆ ಮಾತ್ರ ಸೌಜನ್ಯ ಅಗತ್ಯ ಎಂದು ಕೃಷ್ಣಪ್ಪನ ನಿಲುವು. ಆದರೆ ತನಗೆ ಪರಿಚಿತನೊಬ್ಬ ವೈರಿಯಾಗಿರಲಿ, ಅವನು ಖಾಹಿಲೆಯಿಂದ ಮಲಗಿದ್ದಾನೆಂದು ಗೊತ್ತಾದರೆ ಹಣ್ಣು ಕಟ್ಟಿಸಿಕೊಂಡು ಹೋಗಿ ಅವನನ್ನು ನೋಡುತ್ತಿದ್ದ -ಹೀಗೆ ಕೃಷ್ಣಪ್ಪ ಬಂದು ನೋಡಿದರೆ ರೋಗಿಗಳು ಅತ್ಯಂತ ಹರ್ಷಿತರಾಗಿಬಿಡುತ್ತಿದ್ದರು.

ಒಂದು ಬೆಳಿಗ್ಗೆ ಕೃಷ್ಣಪ್ಪನಿಗೆ ಉಚ್ಚೆಗೆ ಅವಸರವಾಯಿತು. ಆದರೆ ಏಳಲಾರ. ’ಸೀತ, ಸೀತಾ’ ಎಂದು ಹೆಂಡತಿಯನ್ನು ಪ್ಯಾನ್ ಕೊಡಲು ಕೂಗಿದ. ಅವಳು ಸ್ನಾನ ಮಾಡುತ್ತಿದ್ದಿರಬೇಕು. ದುರ್ಬಲವಾದ ದೇಹವಲ್ಲವೆ, ತಡೆಯಲಾರದೆ ಮಲಗಿದಲ್ಲೆ ಉಚ್ಚೆ ಮಾಡಿಕೊಂಡ. ಅವಳು ಸ್ನಾನ ಮುಗಿಸಿಕೊಂಡು ಬಂದು ಖಿನ್ನವಾಗಿದ್ದ ಅವನ ಮುಖ ಕಂಡು ’ಏನು?’ ಅಂದಳು. ಕೃಷ್ಣಪ್ಪ ಹೇಳಿಕೊಳ್ಳದಿದ್ದರೂ ವಾಸನೆಯಿಂಅದ್ ಆಕೆಗೆ ತಿಳಿಯಿತು. ಇದರಿಂದ ಆಕೆಗೆ ಸಂತೋಷವಾಗಿರಬೇಕೆಂದು ಊಹಿಸಿ ಕೃಷ್ಣಪ್ಪನಿಗೆ ಕೋಪ ಬಂತು. ಹೆಂಡತಿ ಲಗುಬಗೆಯಿಂದ ಬೇರೆ ಹಾಸಿಗೆಗೆ ಅವನನ್ನು ಎತ್ತಿ ವರ್ಗಾಯಿಸುತ್ತ “ನನ್ನನ್ನು ಕಂಡರೆ ಸಿಡಿಸಿಡಿ ಅಂತೀರಲ್ಲ -ಬೇರೆ ಯಾರು ನಿಮ್ಮ ಉಚ್ಚೆ ಹೇಲು ಬಳೀತಿದರು ಹೇಳಿ? ನಿಮಗಾಗಿ ಕಾದುಕೊಂಡಿದ್ದಳು ಅಂತೀರಲ್ಲ, ಆ ಆಕಿ ಈ ಕೆಲಸ ಮಾಡುತ್ತಿದ್ದಳ? ಅಥವಾ ಆ ಲೂಸಿಯೊ ಪೂಸಿಯೊ ಇದ್ದಳಂತಲ್ಲ ಅವಳು ಮಾಡ್ತಿದ್ದಳ?” ಹೆಂಡತಿ ರಮಿಸಲು ಆಡಿದ ಮಾತೆಂದು ತಿಳಿದಿ ಕೃಷ್ಣಪ್ಪ ಒಳಗಿಂದೊಳಗೆ ಇನ್ನಷ್ಟು ಉರಿದ. ಈ ಹೆಂಗಸು ತನ್ನ ಸೇವೆಯಲ್ಲಿ ಕೊನೆಗೂ ತನ್ನನ್ನು ಗೆಲ್ಲುತ್ತಿದೆ ಎನ್ನಿಸಿತು. ಗೌರಿ ದೇಶಪಾಂಡೆ ಮತ್ತು ಲೂಸಿನಾರ ವಿಷಯವನ್ನು ಹೆಂಡತಿಗೆ ಹೇಳಿದವನೂ ಕೃಷ್ಣಪ್ಪನೆ. ಅಂಥ ಸಂಗತಿಗಳನ್ನು ಹೇಳಿ ಅವಳ ಸಣ್ಣತನವನ್ನು ಗೆಲ್ಲಲು ಅವನು ಪ್ರಯತ್ನಿಸಿದ್ದ. ಅವನು ಮಾತಾಡುವಾಗ ಅವಳು ಹಾ ಹೂ ಅನ್ನುವವಳಲ್ಲ. “ಏನೊ ನಂಗದೆಲ್ಲ ತಿಳೀದು. ನಿಮ್ಮ ಮಧ್ಯಾಹ್ನದ ಔಸ್ತಿ ತಗೊಂಡ್ರ” ಎನ್ನುತ್ತಾಳೆ. ಅಥವಾ ಪಕ್ಕದ ಮನೆ ಹೆಂಗಸು ಮ್ಯಾಟಿನಿಗೆ ಕರೆದಿದಾರೆ ಹೋಗಿ ಬರ್ತೇನೆ ಅನ್ನುತ್ತಾಳೆ. ಗೃಹಕೃತ್ಯದ ನಿತ್ಯದ ಉಪಾದ್ವ್ಯಾಪಗಳು, ಹೆಚ್ಚೆಂದರೆ ಬ್ಯಾಂಕಿನ ಉಳಿದ ಕೆಲಸಗಾರರ ಮದುವೆ, ಮುಂಜಿ, ಮಕ್ಕಳು, ಬಾಣಂತನ ಇತ್ಯಾದಿ ಸಂಗತಿಗಳು -ಇಷ್ಟೇ ಅವಳ ಪ್ರಪಂಚ. ಇವಳ ಜೊತೆ ಕೃಷ್ಣಪ್ಪ ಮದುವೆಯಾದ ಒಬ್ಬ ಮಗಳನ್ನು ಪಡೆದಿದ್ದ -ಅಷ್ಟೇ ಆಮೇಲೆ ದೇಹಸಂಬಂಧವನ್ನೂ ಇಟ್ಟುಕೊಳ್ಳಲಾರದೆ ಹೋಗಿದ್ದ. ಆದರೆ ಈಗ ಅವನ ಮೈ ತೊಳೆಯುವುದರಿಂದ ಹಿಡಿದು , ಉಚ್ಚೆ ಹೇಲು ಎತ್ತುವವಳೂ ಅವಳೆ. ಅವಳು ಗೆಲ್ಲುತ್ತಿದ್ದಾಳೆ ಎಂದು ಕೃಷ್ಣಪ್ಪನಿಗೆ ಗೊತ್ತಾಗಿತ್ತು. ತಾನು ಕ್ರೂರವಾಗಿ ನಡೆದುಕೊಂಡಾಗ ಈಚೆಗೆ ಅವಳು ಶಾಂತವಾಗಿ ಸಹಿಸಿಕೊಂಡಿರುವುದನ್ನು ಕಂಡಾಗಲಂತೂ ಕೃಷ್ಣಪ್ಪನಿಗೆ ತನ್ನ ವ್ಯಕ್ತಿತವೇ ಪೊಳ್ಳಾಗಿಬಿಡುತ್ತಿದೆ ಎಂದು ಭಯವಾಗುತ್ತಿತ್ತು.

ಪ್ರಾರಂಭದಿಂದಲೇ ಅವಳು ಗೆದ್ದಿದ್ದಳು. ಇಲ್ಲದಿದ್ದಲ್ಲಿ ಲೂಸಿನಾ ಮತ್ತು ಗೌರಿಯರ ಕತೆಯನ್ನು ಹೆಂಡತಿಗೆ ಅವನು ಹೇಳಿ ಅವಳ ಗೌರವ ಸಂಪಾದಿಸಲು ಪ್ರಯತ್ನ ಪಡಬೇಕಾಗಿರಲಿಲ್ಲ. ಹೆಂಡತಿಯನ್ನ ಸಂಭೋಗಿಸುವ ಮುಂಚೆ ಈ ತನ್ನ ಮೈ ಈ ತನ್ನ ಮನಸ್ಸು ಸಾಮಾನ್ಯದ್ದಲ್ಲ ಎಂದು ಅವಳಿಗೆ ಅನ್ನಿಸುವಂತೆ ಮಾಡುವ ಕೃಷ್ಣಪ್ಪನ ಉಪಾಯಗಳು ಸೀತೆಯ ದಡ್ಡತನದಿಂದಾಗಿ ಅವನಿಗೇ ಹಾಸ್ಯಾಸ್ಪದವಾಗಿ ಕಂಡುಬಿಡುತ್ತಿದ್ದವು. ಸಾವಿತ್ರಮ್ಮ ತಾನು ಬರೆಯುತ್ತಿದ್ದ ದಿನಚರಿ ಸುಟ್ಟಿದ್ದನ್ನು ಹೇಳಿದಾಗ ’ದಿನಚರಿಯಲ್ಲೇನು ಮಹಾ ಇರೋಕೆ ಸಾಧ್ಯ’ ಎಂದು ಅವಳು ಆಶ್ಚರ್ಯಪಟ್ಟಿದ್ದಳು. ನಿಧಾನವಾಗಿ ಕಚ್ಚೆ ಕಟ್ಟಿದ ಪಂಚೆ ಅಂಗಿಗಳನ್ನು ಬಿಚ್ಚುತ್ತ ಅವನು ಆಡುತ್ತಿದ್ದ ಮಾತುಗಳಿಂದ ಬೋರಾದ ಸೀತೆ, “ಬೇಗ ಬನ್ನಿ. ಹೆಚ್ಚು ಹೊತ್ತು ಸತಾಯಿಸಬೇಡಿ ನನ್ನ. ಬೆಳಿಗ್ಗೆ ಒಂಬತ್ತು ಗಂಟೆಗೇ ಬ್ಯಾಂಕಿಗೆ ಹೋಗಬೇಕಲ್ಲ” ಎಂದು ರಮಿಸುವಂತೆ ನಕ್ಕಾಗ ಕೃಷ್ಣಪ್ಪನಿಗೆ ಅವಳ ಮೇಲಿನ ಆಸೆಯೇ ಬತ್ತಿಬಿಡುತ್ತಿತ್ತು. ಮೂಲದಲ್ಲಿ ಇವಳ ಮಟ್ಟದವನೇ ನಾನು ಇರಬೇಕು. ಇಲ್ಲದಿದ್ದಲ್ಲಿ ಇವಳನ್ನು ಮದುವೆಯಾಗುತ್ತಿದ್ದೆನೆ? ನನ್ನ ನಿಜವಾದ ಮಟ್ಟ ನಾನು ಮುಟ್ಟಿದೆ ಎಂದು ಖಿನ್ನನಾಗಿ ಮಲಗುತ್ತಿದ್ದ. ಅಥವಾ ಅವಳ ಸಂಗ ಮಾಡಬೇಕೆನ್ನಿಸಿದಾಗ ಅದಕ್ಕೆ ಮುಂಚೆ ಚೆನ್ನಾಗಿ ಕುಡಿದುಬಿಡುತ್ತಿದ್ದ.

*
*
*

ಕೃಷ್ಣಪ್ಪ ಬಿ‌ಎ ಓದುವಾಗ ಕಾಲೇಜಿನ ಕೊನೆ ವರ್ಷದಲ್ಲಿ ಅವನ ಸಹಪಾಠಿಯಾಗಿದ್ದ ಗೌರಿ ದೇಶಪಾಂಡೆ ಜೊತೆ ಅವನ ಸಖ್ಯ ಶುರುವಾಯಿತು. ಸ್ಕೂಲಿಗೆ ಲೇಟಾಗಿ ಸೇರಿದ್ದರಿಂದ ಕೃಷ್ಣಪ್ಪ ಅವಳಿಗಿಂತ ಏಳೆಂಟು ವರ್ಷಗಳಾದರೂ ಹಿರಿಯ. ನಲವತ್ತೆರಡು, ನಲವತ್ತೇಳರ ಚಳುವಳಿಗಳಲ್ಲಿ ಕೃಷ್ಣಪ್ಪ ವಿದ್ಯಾರ್ಥಿ ನಾಯಕನಾಗಿದ್ದವನಾದ್ದರಿಂದ ಹುಡುಗಿಯರಿಗೆಲ್ಲ ಅವನೊಂದು ಲೆಜೆಂಡು. ಅವನ ಸಿಟ್ಟು, ಗರ್ವ, ಅವನಿಗೆ ಹುಚ್ಚು ಹಿಡಿದ ಕ್ರಮ ಇತ್ಯಾದಿಗಳನ್ನು ತಿಳಿದಿದ್ದ ಹುಡುಗಿಯರಲ್ಲಿ ಸೂಕ್ಷ್ಮ ಮನಸ್ಸಿನವರು ಅವನನ್ನು ತಮ್ಮ ಅಧ್ಯಾಪಕರಿಗಿಂತಲೂ ಹೆಚ್ಚಾಗಿ ಗೌರವಿಸುತ್ತಿದ್ದರು. ಅವನು ಕ್ಲಾಸಿಗೆ ಬರುವುದೇ ಕಡಿಮೆ. ಬಂದಾಗ ಅಧ್ಯಾಪಕರೂ ತಮ್ಮ ಚಿಲ್ಲರೆ ಹಾಸ್ಯಗಳನ್ನು ಮಾಡದೆ ಗಂಭೀರವಾಗಿ ಪಾಠ ಮಾಡುತ್ತಿದ್ದರು. ಪರೀಕ್ಷೆ ಗಿರೀಕ್ಷೆಗಳೆಂದು ತಲೆ ಕೆಡಿಸಿಕೊಳ್ಳದ ಕೃಷ್ಣಪ್ಪ ಅಸಾಮಾನ್ಯ ಬುದ್ಧಿಶಾಲಿ. ಸ್ವತಂತ್ರವಾಗಿ ಯೋಚಿಸುತ್ತಾನೆ, ವಯಸ್ಸಾದವ ಇತ್ಯಾದಿ ಕಾರಣಗಳಿಂದ ಅಧ್ಯಾಪಕರು ಅವನ ಬಗ್ಗೆ ಮುಜುಗರ ಪಡುತ್ತಿದ್ದರು.

ಕೃಷ್ಣಪ್ಪ ಕರ್ರನೆಯ ಗಟ್ಟಿಮುಟ್ಟಾದ ಆಳು. ಶುಭ್ರವಾದ ಖಾದಿ ಪಂಚೆಯನ್ನುಟ್ಟು ಜುಬ್ಬ ತೊಟ್ಟು ಕಾಲೇಜಿಗೆ ಬರುತ್ತಿದ್ದ. ಈ ಬಿಳಿಯ ಬಟ್ಟೆಯಲ್ಲಿ ಅವನು ಮಾಟವಾಗಿ ಕಡೆದು ನಿಲ್ಲಿಸಿದ ಕಪ್ಪು ವಿಗ್ರಹದಂತೆ ಕಾಣುತ್ತಿದ್ದ. ಅವನ ಪ್ರಶಾಂತ ಮುಖ ದುರುಗುಟ್ಟಿ ನೋಡುವಾಗ ಮಾತ್ರ ಕ್ರೂರವಾಗಿ ಭಯ ಹುಟ್ಟಿಸುವಂತೆ ಇರುತ್ತಿತ್ತು. ಮಾತು ಮೃದು -ದಪ್ಪವಾದ ಹಾಡುಗಾರನ ಗಂಟಲು ಅವನದು. ಆಫ಼್ರಿಕಾದ ಪ್ರಿನ್ಸ್ ಎಂದು ಹುಡುಗಿಯರು ಅವನನ್ನು ಕರೆಯೋದು. ’ಪ್ರಿನ್ಸ್ ಬಂದಿದಾನೆ ಕಣೆ ಇವತ್ತು’ ಎಂದು ಅವನನ್ನು ಅಪರೂಪವಾಗಿ ಕಂಡಾಗ ಹುಡುಗಿಯರು ಗೆಲುವಾಗುತ್ತಿದ್ದರು.

ಗೌರಿ ದೇಶಪಾಂಡೆ ಕಾಲೇಜಿನಲ್ಲಿ ಹೆಸರಾದ ನರ್ತಕಿ. ಸಂಗೀತಗಾರ್ತಿ. ಕ್ಲಾಸಿನಲ್ಲಿ ಮೊದಲನೆಯವಳು. ಅವಳಿಗೆ ಕೃಷ್ಣಪ್ಪನೆಂದರೆ ಇಷ್ಟವೆಂದು ಊಹಿಸಿದ್ದ ಜಾಣೆಯರು ಅವಳನ್ನು ರಾಧೆಯೆಂದು ಕಿಚಾಯಿಸುತ್ತಿದ್ದರು. ಎದುರಿಗಲ್ಲ -ಹಿಂದೆ. ಇದಕ್ಕೆ ಕಾರಣ ಗೌರಿ ಯಾರ ಜೊತೆಯೂ ಹೆಚ್ಚು ಬಳಸದೆ ಒಂಟಿಯಾಗಿರುತ್ತಿದ್ದುದು.

ಇದರಿಂದ ಉಳಿದ ಹುಡುಗಿಯರಿಗೆ ಆಶ್ಚರ್ಯವಾಗಲು ಕಾರಣವಿತ್ತು. ಗೌರಿಯ ತಾಯಿ ಗಂಡನನ್ನು ಬಿಟ್ಟು ಓಡಿ ಬಂದು ಒಂದು ಅಡಿಕೆ ಮಂಡಿ ಸಾಹುಕಾರನಾದ ನಂಜಪ್ಪನ ಸೂಳೆಯಾಗಿ ಬದುಕುತ್ತಿದ್ದಾಳೆಂದು ಗೊತ್ತಿದ್ದೂ ಗೌರಿಯನ್ನು ನಿಕೃಷ್ಟವಾಗಿ ಕಾಣುವುದು ಸಾಧ್ಯವಿರಲಿಲ್ಲ -ಗೌರಿ ಅಷ್ಟು ಗಂಭೀರವಾಗಿರುವಳು. ಸಾಹುಕಾರ ನಂಜಪ್ಪ ಗೌರಿಯ ತಾಯಿ ಅನಸೂಯಾ ಬಾಯಿಯನ್ನು ಬಂಗಲೆ ಕಟ್ಟಿ ಇರಿಸಿದ್ದ. ಅವಳ ಓಡಾಟಕ್ಕೆಂದು ಪ್ರತ್ಯೇಕವಾಗಿ ಒಂದು ಕಾರ್ ಮತ್ತು ಡ್ರೈವರನ್ನೂ ಇಟ್ಟಿದ್ದ. ಊಟಿಯ ಗುಲಾಬಿಗಳನ್ನು ಬೆಳೆಸಿದ್ದ ವಿಶಾಲವಾದ ಕಾಂಪೌಂಡಿನ ಆಕೆಯ ಮನೆ ಊರಲ್ಲಿ ಪ್ರಸಿದ್ಧವಾದದ್ದು. ಅನಸೂಯಾ ಬಾಯಿಯನ್ನು ಹೊರಗೆ ನೋಡಿದವರೇ ಕಡಿಮೆ. ಅವಳನ್ನು ನೋಡದವರೂ ಅವಳ ಸೌಂದರ್ಯವನ್ನು ಹೊಗಳುತ್ತಿದ್ದರು. ಗೌರಿಯೇ ಇಷ್ಟು ಸುಂದರಿಯಾಗಿರಬೇಕಾದರೆ ಅವಳ ತಾಯಿಯೆಷ್ಟು ಇರಬೇಕೆಂದು ಊಹಿಸುತ್ತಿದ್ದರು.

ಅನಸೂಯಾಬಾಯಿ ಕಾರಿನಲ್ಲಿ ಊರಿನ ಒಳಗೆ ಬರುತ್ತಿರಲಿಲ್ಲ. ಊರ ಹೊರಗಿದ್ದ ಬಂಗಲೆಯಿಂದ ಕೆಮ್ಮಣ್ಣುಗುಂಡಿಗೋ, ಮಂಗಳೂರಿಗೋ ಹೋಗಲು ಮಾತ್ರ ಅವಳು ಕಾರನ್ನು ಬಳಸುವುದು. ಗೌರಿ ದೇಶಪಾಂಡೆ ಈ ಕಾರಲ್ಲೇ ನಿತ್ಯ ಕಾಲೇಜಿಗೆ ಬಂದು ಹೋಗುವುದು. ಇದರಿಂದ ಉಳಿದ ಹುಡುಗಿಯರಿಗೆ ಅವಳ ಬಗ್ಗೆ ಇನ್ನಷ್ಟು ಅಸೂಯೆ. ದೇಶಪಾಂಡೆ ಎಂಬ ಅವಳ ಕೊನೆ ಹೆಸರಿಂದಾಗಿ ಅವಳಿಗೊಬ್ಬ ಆ ಹೆಸರಿನ ತಂದೆಯಿರಬೇಕೆಂದೂ, ಅಪ್ಪನ ಜೊತೆಗೆ ಬದುಕದೆ ಯಾವನೋ ತಾಯಿಯ ಮಿಂಡನ ಜೊತೆ ಬದುಕುವ ಗೌರಿ ಎಂಥ ನತದೃಷ್ಟೆಯೆಂದೂ, ಇಷ್ಟಿದ್ದೂ ಸಭೆಯಲ್ಲಿ ಕುಣಿಯುವ ಹಾಡುವ ಹುಡುಗಿ ನಾಚಿಕೆಗೆಟ್ಟವಳೆಂದೂ ಹುಡುಗಿಯರೆಲ್ಲ ಆಡಿಕೊಳ್ಳುವರು. ಜೊತೆಗೇ ಗೌರಿಯ ವರ್ತನೆಯಿಂದ ತಬ್ಬಿಬ್ಬಾಗುವರು.

ಈ ಹುಡುಗಿಯರ ಜಗತ್ತಿಗೂ ತನಗೂ ಸಂಬಂಧವೇ ಇಲ್ಲವೆನ್ನುವಂತೆ ಗೌರಿ ಇರುವಳು. ಮೈಮೇಲೆ ಯಾವ ಒಡವೆಯನ್ನೂ ಧರಿಸದೆ ಬಿಳಿಯ ಸೀರೆಯುಟ್ಟು, ಬಿಳಿ ಕುಪ್ಪಸ ತೊಟ್ಟು, ತನ್ನ ಉದ್ದನೆಯ ಕಪ್ಪು ಜಡೆಗೆ ಬಿಳಿ ಗುಲಾಬಿ ಸಿಕ್ಕಿಸಿಕೊಂಡು ಅವಳು ಗಂಭೀರವಾಗಿ ಕ್ಲಾಸಲ್ಲಿ ಕೂರುವಳು. ಲೇಡೀಸ್ ರೂಮಿನಲ್ಲಿದ್ದಾಗ ಏನಾದರೊಂದು ಪುಸ್ತಕ ಹಿಡಿದು ಓದುತ್ತಿರುವಳು. ಸಾಮಾನ್ಯವಾಗಿ ಹುಡುಗಿಯರು ಪರಸ್ಪರ ಏಕವಚನದಲ್ಲಿ ಮಾತಾಡಿಕೊಂಡರೂ ತನ್ನನ್ನು ಏಕವಚನದಲ್ಲಿ ಮಾತಾಡಿಸಬಂದವರನ್ನೂ ಮೃದುವಾಗಿ ಬಹುವಚನದಲ್ಲಿ ಸಂಬೋಧಿಸಿ ತನ್ನ ದೂರವನ್ನು ಕಾಯ್ದುಕೊಳ್ಳುವಳು. ಕೃಷ್ಣಪ್ಪ ಇವಳನ್ನು ಎಂದೂ ಮಾತಾಡಿಸದಿದ್ದರೂ ತನ್ನ ಸರೀಕಳು ಎಂಬಂತೆ ಅವಳನ್ನು ನೋಡುವನು.

ಒಂದು ಸಂಜೆ ಕೃಷ್ಣಪ್ಪ ಒಂಟಿಯಾಗಿ ಕಾಲೇಜಿನ ಕಡೆ ವಾಕಿಂಗ್ ಬಂದ. ಫ಼ುಟ್‌ಬಾಲ್ ಟೀಮೊಂದು ಆಟ ಮುಗಿಸಿ ಮನೆ ಕಡೆ ಹೊರಟಿತ್ತು. ಈ ಟೀಮಿನ ಕ್ಯಾಪ್ಟನ್ ಆಗಿದ್ದ ಧಾಂಡಿಗನೊಬ್ಬ ತನ್ನ ತಂಡವನ್ನು ಬೆನ್ನ ಹಿಂದೆ ನಿಲ್ಲಿಸಿಕೊಂಡು ಗೋಡೆಯ ಮೇಲೇನೊ ಬರೆಯುತ್ತಿದ್ದ. ಎಲ್ಲರೂ ನಗುತ್ತಿದ್ದುದು ಕಂಡು ಕೃಷ್ಣಪ್ಪನ ಗಮನ ಆ ಕಡೆ ಹೋಯಿತು. ಧಾಂಡಿಗನ ಹೆಸರು ರಾಮು -ಕಾಲೇಜಿನ ಪುಂಡನೆಂದು ಪ್ರಸಿದ್ಧ. ಅವನಿಗೂ ಹೆಚ್ಚು ಕಡಿಮೆ ಕೃಷ್ಣಪ್ಪನಷ್ಟೇ ವಯಸ್ಸಾದ್ದರಿಂದ, ಅವನ ತಂದೆ ಊರಿನ ದೊಡ್ಡ ರೈಸ್ ಮಿಲ್ ಮಾಲೀಕನಾದ್ದರಿಂದ ಕೃಷ್ಣಪ್ಪನಿಗೆ ಸಿಗುತ್ತಿದ್ದ ಗೌರವ ಕಂಡರೆ ಅವನಿಗೆ ಅಸೂಯೆ. ಕೃಷ್ಣಪ್ಪ ಇಂಥ ವಿದ್ಯಾರ್ಥಿ ಪುಂಡರ ಜೊತೆ ಬೆರೆಯುತ್ತಿರಲಿಲ್ಲ -ಅವರನ್ನು ಮುಖವೆತ್ತಿ ನೋಡುತ್ತಲೂ ಇರಲಿಲ್ಲ. ತನಗಿಲ್ಲಿ ಸರೀಕರು ಯಾರೂ ಇಲ್ಲವೆನ್ನುವಂತೆಯೇ ಅವನು ಕಾಲೇಜಿನಲ್ಲಿ ನಡೆದುಕೊಳ್ಳುತ್ತಿದ್ದುದು. ಯಾರ ಜೊತೆಯೂ ಪೈಪೋಟಿ ಮಾಡದ ಕೃಷ್ಣಪ್ಪನ ಜೊತೆಗೆ ಹೇಗೆ ನಡೆದುಕೊಳ್ಳಬೇಕೆಂಬುದು ಇಂಥ ವಿದ್ಯಾರ್ಥಿಗಳಿಗೆ ತಿಳಿಯದು.

ಅವನು ದೊಡ್ಡ ಅಕ್ಷರಗಳಲ್ಲಿ ಬರೆಯುತ್ತಿದ್ದುದನ್ನು ಓದಿದ ಕೃಷ್ಣಪ್ಪನಿಗೆ ಕೋಪದಿಂದ ಮೈ ಬಿಸಿಯಾಯಿತು. “ಗೌರಿ ಸೂಳೇ ಮಗಳು. ಏ ಗೌರಿ ನಿನ್ನ ಮುತ್ತಿಗೆಷ್ಟು ಬೆಲೆ?” ಎಂಬ ತನ್ನ ವಾಕ್ಯಗಳನ್ನು ಸವಿಯುತ್ತ ನಿಂತಿದ್ದ ರಾಮುವಿನ ಬಳಿ ಹೋಗಿ ಕೃಷ್ಣಪ್ಪ, “ನೀವು ಬರೆದದ್ದನ್ನು ಅಳಿಸಿ” ಎಂದ -ಅವನ ಗಂಭೀರ ದಪ್ಪ ಸ್ವರದಲ್ಲಿ.

ರಾಮುಗೆ ಒಂದು ಕ್ಷಣ ಏನು ಹೇಳಬೇಕೆಂದು ತಿಳಿಯಲಿಲ್ಲ. -“ಯಾರು ಬರೆದದ್ದು ಅಂತ ನಿಮಗೇನು ಗೊತ್ತರಿ?” ಎಂದ ಕ್ಷೀಣವಾಗಿ. ತಾನು ಬುದ್ಧಿವಂತಿಕೆಯ ಮಾತನ್ನಾಡಿಬಿಟ್ಟೆನೆಂದು ಅನುಯಾಯಿಗಳು ತಿಳಿಯಲಿ ಎಂದು ಹೀಯಾಳಿಸುವಂತೆ ನಕ್ಕ.

“ನೀನೇ ಬರೀತ ಇದ್ದದ್ದನ್ನ ನಾನು ನೋಡಿದೆ.”

ಕೃಷ್ಣಪ್ಪ ತನ್ನ ಸಿಟ್ಟನ್ನು ಅದುಮಿ ಗಂಭೀರವಾಗಿ ಹೇಳಿದ.

ರಾಮು ಪೈಲ್ವಾನ್. ದೊಡ್ಡ ಮೀಸೆ ಬಿಟ್ಟಿದ್ದ. ಒಳಗಿಂದೊಳಗೆ ತಾನು ಕೃಷ್ಣಪ್ಪನಿಗೆ ಹತ್ತಿರದವನಾಗಬೇಕೆಂಬ ಅಸೂಯೆ ಇದ್ದಿರಬಹುದು. ಇನ್ನೊಬ್ಬ ಗಟ್ಟಿ ಕುಳದ ಜೊತೆ ಜಗಳವಾಡಿದ ಮೇಲೆ ಸಮಸಮದ ಗೆಳೆತನ ಪ್ರಾಪ್ತಿಯಾಗುತ್ತದೆಂಬುದನ್ನು ಅರಿತ ಅನುಭವಿ ಅವನು. ಆದರೆ ಕೃಷ್ಣಪ್ಪ ತನ್ನನ್ನು ನಿಕೃಷ್ಟವಾಗಿ ಕಾಣುತ್ತಿದ್ದನೇ ಹೊರತು ಒಂದು ಹೊಡೆದು ತಿರುಗಿ ಹೊಡೆತ ತಿಂದು ಆಪ್ತನಾಗುವುದಕ್ಕೆ ತಯ್ಯಾರಿದ್ದಂತೆ ಕಾಣಲಿಲ್ಲ. ರಾಮು ಕೆಣಕುವ ಧೈರ್ಯ ಮಾಡಿದ.

“ಅವಳೇನು ನಿಮ್ಮ ರಾಧೆಯೇನ್ರಿ?”

ಈಗಲಾದರೂ ತನ್ನನ್ನು ಕೃಷ್ಣಪ್ಪ ಹೊಡೆಯಬಹುದು. ಆಗ ಅವನ ಮೇಲೆ ಬಿದ್ದು ತನ್ನ ಮರ್ಯಾದೆ ಉಳಿಸಿಕೊಳ್ಳಬಹುದು ಎಂದು ರಾಮು ಬಗೆದಿದ್ದು ವ್ಯರ್ಥವಾಯಿತು. ಕೃಷ್ಣಪ್ಪ ಅಲ್ಲೇ ಇದ್ದ ನಲ್ಲಿಯಲ್ಲಿ ತನ್ನ ಕರ್ಚೀಫ಼ನ್ನು ಒದ್ದೆ ಮಾಡಿಕೊಂಡು ಬಂದು ಗೋಡೆಯ ಮೇಲೆ ಬರೆದದ್ದನ್ನು ಒರೆಸಲು ಪ್ರಾರಂಭಿಸಿದ. ರಾಮು ಕಾದುನಿಂತ -ಇನ್ನಷ್ಟು ಕೆಣಕಲು.

“ನಿಮಗೆ ಪುಕ್ಕಟೆ ಕೊಡ್ತಾಳೇಂತ ಕಾಣುತ್ತೆ” ಎಂದ. ಅವನ ಮಾತಿಗೆ ಸಂಗಡಿಗರು ಸಿಳ್ಳೆ ಹೊಡೆದರು. ಆದರೆ ಅವರು ಯಾರೂ ಇಲ್ಲವೇ ಇಲ್ಲ ಎಂಬಂತೆ ಕೃಷ್ಣಪ್ಪ ಅವರ ಕಡೆಗೆ ನೋಡದೆ ನಡೆದೇ ಬಿಟ್ಟ. ಇನ್ನೊಮ್ಮೆ ಬರೆಯಬಹುದೆಂದು ಅಷ್ಟು ದೂರ ಹೋದ ಮೇಲೆ ಅವನಿಗೆ ಅನುಮಾನವಾಯಿತು. ತಿರುಗಿ ನೋಡಬೇಕೆಂಬ ಆಸೆಯನ್ನು ಅದುಮಿಕೊಂಡ. ತನ್ನ ಸುತ್ತಲಿನ ಕ್ಷುದ್ರತೆಯನ್ನು ತಾನು ಗೆಲ್ಲುತ್ತಿಲ್ಲವೆ; ಹಾಗೆಯೇ ಗೌರಿಯೂ ಗೆಲ್ಲಲಿ ಎನ್ನಿಸಿತು.

ಮಾರನೇ ದಿನ ಗೋಡೆ ಬರಿದಾಗಿತ್ತಾದ್ದರಿಂದ ತಾನು ಗೆದ್ದಿದ್ದೇನೆ ಎಂದು ಕೃಷ್ಣಪ್ಪ ಅಂದುಕೊಂಡರೆ ಅದರ ಮಾರನೇ ದಿನ “ಗೌರಿ ಕೃಷ್ಣಪ್ಪನಿಗೆ ಪುಕ್ಕಟೆ ಕೊಡುತ್ತಾಳೆ. ಕೃಷ್ಣಪ್ಪ ಗೌರಿಯ ತಲೆಹಿಡುಕ” ಇತ್ಯಾದಿ ಟಾರಿನಲ್ಲಿ ಕಾಣಿಸಿಕೊಂಡವು. ಇಡೀ ಕಾಲೇಜಿನಲ್ಲಿ ಈ ಬಗ್ಗೆ ಗುಸುಗುಸು ಎದ್ದಿತ್ತು. ಕ್ಲಾಸುಗಳೆಲ್ಲ ಶುರುವಾದ ಮೇಲೆ ಟಾರಿನಿಂದ ಬರೆದದ್ದನ್ನು ಕೆತ್ತಿ ತೆಗೆದು ಜವಾನರು ಈ ಬರವಣಿಗೆಯನ್ನು ಗೋಡೆಯ ಮೇಲೆ ಇನ್ನಷ್ಟು ಆಳವಾಗಿ ಅಚ್ಚಿಸಿದ್ದರು. ಕೃಷ್ಣಪ್ಪ ತನಗಿದು ಸಂಬಂಧವಿಲ್ಲವೆನ್ನುವಂತೆ ಓಡಾಡುತ್ತ ಗೌರಿಯ ಮುಖ ನೋಡಿದ. ಅವಳಿಗೆ ಇದರಿಂದ ದುಃಖವಾಗಿದೆಯೆ ಎಂದು ಅನುಮಾನವಾಯಿತು. ಆದರೆ ಅವಳೂ ವಿಚಲಿತಳಾದಂತೆ ಕಾಣಲಿಲ್ಲ. ಅವತ್ತು ಸಂಜೆ ಅವನೇ ಅವಳ ಮನೆಗೆ ಹೋಗಿ ಬೆಲ್ ಒತ್ತಿದ.

ಹಾಡುತ್ತಿದ್ದ ಗೌರಿ ಹೊರಗೆ ಬಂದು ಕೃಷ್ಣಪ್ಪನನ್ನು ನೋಡಿ ಆದ ಸಂತೋಷ ತೋರಗೊಡದೆ ಒಳಗೆ ಕರೆದುಕೊಂಡು ಹೋಗಿ ಕೂರಿಸಿದಳು. ತೋರುಗಾಣಿಕೆಯಿಲ್ಲದೆ ಅವಳಲ್ಲಿ ಗುಪ್ತವಾಗಿ ಅರಳಿದ ಭಾವ ಗುರುತಿಸಿ ಉತ್ತೇಜಿತನಾದ ಕೃಷ್ಣಪ್ಪ ಕಾರ್ಪೆಟ್ಟನ್ನು ನೋಡುತ್ತ ನಿಧಾನವಾಗಿ ಹೇಳಿದ:

“ನನ್ನ ಸರೀಕರು ಈ ಕಾಲೇಜಿನಲ್ಲಿ ನೀವೊಬ್ಬರೆ ಅನ್ನೋದು ಇವತ್ತು ಖಾತ್ರಿಯಾಯ್ತು.”

ಕೃಷ್ಣಪ್ಪ ಗೌರಿಯ ಮುಖ ನೋಡದೆ ಗಾಜಿನ ಟೇಬಲ್, ಗೋಡೆಯ ಮೇಲಿನ ದೇವರ ಚಿತ್ರಗಳು, ತಂಬೂರಿ ಇತ್ಯಾದಿಗಳನ್ನು ಗಮನಿಸಲು ಪ್ರಯತ್ನಿಸಿದ. ದೊಡ್ಡ ಗಾಜಿನ ಕಿಟಕಿಯಾಚೆಗೆ ಅರಳಿದ ಗುಲಾಬಿ ಹೂಗಳು ಕಂಡವು. ತಾನು ಹೀಗೆ ಬಂದು ಹೀಗೆ ಮಾತಾಡಿ ಅಗ್ಗವಾಗಿ ಬಿಟ್ಟೆನೆಂದು ಅವನಿಗೆ ವಿಷಾದವಾಯಿತು.

“ನಾನು ಆಡಿದ್ದನ್ನು ಹಚ್ಚಿಕೋಬೇಡಿ. ಮಾತಾಡಿ ನಾನು ಚೀಪಾದೆ. ನಿಮ್ಮನ್ನೂ ಚೀಪು ಮಾಡಿದೆ” ಎಂದು ಎದ್ದ.

“ಇಲ್ಲ -ಕೂರಿ” ಎಂದು ಗೌರಿ ತಡವರಿಸುತ್ತ ಹೇಳಿದಳು. “ನಿಜ -ನನ್ನ ತಾಯಿ ನನ್ನ ತಂದೇನ್ನ ನಾನು ಮಗುವಾಗಿದ್ದಾಗ ಬಿಟ್ಟು ಬಂದರು. ನಂಜಪ್ಪನವರು ಅವರನ್ನು ಇಟ್ಟುಕೊಂಡಿದ್ದಾರೆ. ನೋಡಿ, ಇವರೆಲ್ಲಾ ಅವರದೇ ವಸ್ತುಗಳು” ಎಂದು ಎದ್ದು ನಿಂತಳು. “ಇಷ್ಟು ತಿಳಿದ ಮೇಲೆ ನಿಮಗೆ ಹೇಗೆ ಅನ್ನಿಸ್ತ ಇದೆಯೊ ನನಗೆ ಗೊತ್ತಿಲ್ಲ” ಗೌರಿಯ ಮುಖ ತನ್ನ ಉದ್ವೇಗವನ್ನು ಬಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಕಂಡಿತು.

“ನಿಮಗೆ ಸಮಾಧಾನ ಹೇಳಲಿಕ್ಕೆ ನಾನು ಬಂದದ್ದಲ್ಲ. ನೀವೊಂದು ವಿಶಿಷ್ಟ ವ್ಯಕ್ತೀಂತ ತಿಳಿದು ನಿಮ್ಮನ್ನು ಗೌರವಿಸ್ತೀನಿ” ಎಂದು ಕೃಷ್ಣಪ್ಪ ಎದ್ದು ಒಂದು ಹೆಜ್ಜೆಯಿಟ್ಟ.

“ನನಗೆ ತಂದೆಯಾಗಿದ್ದೋರು ದೇಶಪಾಂಡೆ ಅಂತ. ಅವರೂ ನನ್ನ ತಾಯೀನ್ನ ಇಟ್ಟುಕೊಂಡಿದ್ದರು. ಬ್ಯಾಂಕಿನಲ್ಲಿ ದುಡ್ಡು ಕದ್ದು ಜೈಲಿಗೆ ಹೋದರು. ಗಂಡನಿಲ್ಲದೆ ನನ್ನ ಅಮ್ಮ ಬದುಕಲಾರರು. ಆದ್ದರಿಂದ -”

ಈಗ ಗೌರಿಯನ್ನು ದುರುಗುಟ್ಟಿ ನೋಡುತ್ತ ಕೃಷ್ಣಪ್ಪ ಹೇಳಿದ:

“ನನ್ನ ನೀವು ಪರೀಕ್ಷೆ ಮಾಡ್ತಿದೀರಲ್ಲವೆ? ಹೀಗೆಲ್ಲ ಮಾಡೊದು ಚೀಪ್.”

ಗೌರಿ ಭಾರ ಕಳೆದಂತಾಗಿ ನಕ್ಕುಬಿಟ್ಟಳು. ಹೀಗೆ ನಕ್ಕಾಗ ಅವಳು ತುಂಟು ಹುಡುಗಿಯಂತೆ ಕಂಡು ಕೃಷ್ಣಪ್ಪನಿಗೆ ಕಸಿವಿಸಿಯಾಯಿತು. ಒಂದೋ ನೀನು ನಿನ್ನ ಸುತ್ತಲಿನ ದಿನನಿತ್ಯದ ಕ್ಷುದ್ರತೆ ಗೆಲ್ಲುತ್ತಿ; ಅಥವಾ ಈ ಕ್ಷುದ್ರತೆಗೆ ತುತ್ತಾಗುತ್ತಿ -ಇದು ಬದುಕಿನ ನಿಯಮ ಎನ್ನುವ ಮಾತನ್ನು ಈ ಹುಡುಗಿಗೆ ಹೇಳಿ ತನ್ನ ಒಳಗನ್ನು ತೆರಯಬೇಕೆಂದಿದ್ದ ಕೃಷ್ಣಪ್ಪನಿಗೆ ಅವಳ ಸ್ವಭಾವದಲ್ಲಿದ್ದ ತುಂಟತನ ತಡೆಯಾಗಿ ಕಂಡು ನಿರಾಸೆಯಾಯಿತು. ಕೃಷ್ಣಪ್ಪನ ಮುಖದ ಮೇಲಿನ ಭಾವ “ನಾನು ನಿನಗೆ ಅಗಮ್ಯ” ಎಂದು ಸೂಚಿಸಿದ್ದನ್ನು ಕಂಡು

“ನೀವು ತುಂಬ ಅಹಂಕಾರಿಗಳು ಅಲ್ವ?” ಎಂದಳು.

ಕೃಷ್ಣಪ್ಪ ಬೇಸರದಿಂದ ಮುಖ ತಿರುಗಿಸಿದ. ಹಣೆಯ ಮೇಲೆ ಕುಂಕುಮದ ಬದಲು ವಿಭೂತಿಯನ್ನಿಟ್ಟುಕೊಂಡು ತಾನು ಬರುವ ಮುಂಚೆ ಅವಳು ಹಾಡುತ್ತಿದ್ದಳು. ಈಗ ಸೊಂಟದ ಮೇಲೆ ಕೈಯನ್ನಿಟ್ಟು ತ್ರಿಭಂಗಿಯಲ್ಲಿ ನರ್ತಕಿಯಂತೆ ನಿಂತಿದ್ದಾಳೆ. ಅವಳು ತನ್ನನ್ನು ಗೆಲ್ಲಲು ಪ್ರಯತ್ನಿಸುತ್ತಿರಬಹುದು. ತನ್ನನ್ನು ರಮಿಸಲು ಸುಮ್ಮನೇ ಕೆಣಕುತ್ತಿದ್ದಾಳೊ ಅಥವಾ ಅದು ಗಂಭೀರವಾದ ಪ್ರಶ್ನೆಯೊ? ಅವಳು ತುಂಟಾಗಿ ಕೇಳಿದ್ದರೆ ತನ್ನ ಉತ್ತರ ಜಂಬಗಾರಿಕೆಯಾಗಿ ಬಿಡತ್ತೆ. ಕೃಷ್ಣಪ್ಪ ಎತ್ತಲೋ ದುರುಗುಡುತ್ತ ನಿಂತಿರುವುದು ಕಂಡು –

“ತಮಾಷೆಗಲ್ಲ ನಾನು ಹೇಳಿದ್ದು. ನನ್ನ ಅಮ್ಮ ಒಳ್ಳೆಯವಳು. ನಂಜಪ್ಪನವರೂ ಒಳ್ಳೆಯವರು, ಆದರೆ ಯಾರಿಗೂ ನಿಲುಕದ ಹಾಗೆ ನಾನು ಇದ್ದುಬಿಡತೀನಿ. ನಾನು ಅಳದೆ ಬಹಳ ವರ್ಷ ಆಯ್ತು. ಆದ್ದರಿಂದ ನಾನೂ ನಿಮ್ಮ ಹಾಗೇ ಅಹಂಕಾರಿ ಅನ್ನಿಸತ್ತೆ” ಎಂದಳು.

ಕೃಷ್ಣಪ್ಪನ ಮುಖ ಕಠಿಣವಾಗಿ ಅವನ ಕಣ್ಣುಗಳು ಕಿರಿದಾದವು.

“ನನ್ನ ಅಮ್ಮನ್ನ ನೋಡತೀರ? -ಮೇಲಿದಾರೆ ಕರೀತೀನಿ.”

ಗೌರಿ ಆತಿಥ್ಯ ಮಾಡುವವರ ಧಾಟಿಯಲ್ಲಿ ಕೇಳಿದಳು. ಜುಬ್ಬದ ಜೋಬುಗಳಲ್ಲಿ ಕೈಯಿಟ್ಟು, ನಿರ್ಭಾವದಿಂದ ಗೌರಿಯನ್ನು ನೋಡುತ್ತ

“ಬೇಡ ನನಗೇನು ಮಾತಾಡಬೇಕು ಗೊತ್ತಾಗಲ್ಲ. ಹಿಂಸೆಯಾಗಿ ಬಿಡ್ತದೆ” ಅಂದು ಕೃಷ್ಣಪ್ಪ ಹೊರಟುಹೋದ.

*
*
*

ಸೀದ ರೂಮಿಗೆ ಹೋಗಿ ಒಂದು ಕಾಗದ ಬರೆದ.

“ಪ್ರಿಯ ಶ್ರೀಮತಿ ಗೌರಿ ದೇಶಪಾಂಡೆ,

ನೀವು ನನ್ನ ಮೇಲೆ ಪರಿಣಾಮ ಮಾಡಲೆಂದು ಮಾತಾಡಿದಿರಿ ಎಂದು ಅನುಮಾನವಾಗಿ ನಾನು ಉತ್ತರ ಕೊಡಲಿಲ್ಲ. ನಾವು ಒಂಟಿಯಾಗಿದ್ದಾಗ ನಮಗೇ ಆಡಿಕೊಳ್ಳದ ಮಾತುಗಳನ್ನು ಬೇರೊಬ್ಬರಿಗೆ ಯಾಕೆ ಹೇಳಬೇಕು? ಎದುರೊಬ್ಬರು ಇದ್ದಾರೆ ಎಂಬ ಭಾವನೆಯಿಂದ ಹುಟ್ಟುವ ಮಾತುಗಳಲ್ಲೆ ಪಡಪೋಶಿ ಇದೆ. ಆದ್ದರಿಂದ ನಾನು ಸೌಜನ್ಯದ ವಿರೋಧಿ. ದುಡ್ಡು ಮಾಡುವವರಿಗೆ, ಜನಪ್ರಿಯತೆ ಬಯಸುವವರಿಗೆ ಸೌಜನ್ಯದ ಅಗತ್ಯವಿದೆ. ಆಳವಾದ ಸಂಬಂಧಗಳಿಗೆ ಸೌಜನ್ಯ ಅಡ್ಡವಾಗುತ್ತದೆ. ನಾನು ನಿಮ್ಮನ್ನು ಹುಡುಕಿಕೊಂಡು ಬಂದು ಹೇಳಿದ್ದರ ಉದ್ದೇಶ ಬರೀ ಒಬ್ಬರನ್ನೊಬ್ಬರು ಗುರುತಿಸಿಕೊಳ್ಳಬೇಕೆಂಬುದು. ಆದರೆ ನಿಮ್ಮ ಸಹಾನುಭೂತಿ ಬೇಡುವ ದೌರ್ಬಲ್ಯದ ಅಂಶ ನನ್ನ ಕ್ರಿಯೆಯಲ್ಲೂ ಇದ್ದಿರಬಹುದು.

ನಾನು ಅಹಂಕಾರಿಯಲ್ಲ. ನೀವೂ ಅಲ್ಲ. ಕ್ಷುದ್ರತೆಗೆ ತುತ್ತಾದವರಿಗೆ ನಾವು ಹಾಗೆ ಕಾಣಿಸಬಹುದು. ಒಂದು ಮರ, ಒಂದು ಪಕ್ಷಿ, ಒಂದು ಮೃಗ, ಒಬ್ಬ ತಿರುಕ -ಯಾರನ್ನೇ ನೋಡಿದಾಗಲೂ ನಾನು ಎಲ್ಲರಿಗಿಂತ ಅನ್ಯ ಎನ್ನಿಸುತ್ತದೆಯೇ ಹೊರತು ಅವುಗಳಿಗಿಂತ ದೊಡ್ಡವನು ಎಂದು ಅನ್ನಿಸುವುದಿಲ್ಲ. ಇತರರು ತನ್ನನ್ನು ಆಕ್ರಮಿಸಲು ಬಂದಾಗ ಮಾತ್ರ ಹಾವು ತನ್ನ ವಿಷವನ್ನು ಬಳಸುವಂತೆ ನಾನು ನನ್ನ ಗರ್ವವನ್ನು ವ್ಯಕ್ತಪಡಿಸುತ್ತೇನೆ. ನಾನು ಹುಟ್ಟಿ ಬಂದ ವಾತಾವರಣದಲ್ಲಿ ಕ್ಷುದ್ರತೆ ಗೆಲ್ಲಲು ಇದು ನನಗೆ ಅಗತ್ಯವಾದ್ದಕ್ಕೆ ನಾನು ಕಾರಣನಲ್ಲ. ನಿಮ್ಮ ಹಿನ್ನೆಲೆ ನೋಡಿದರೆ ನಿಮ್ಮ ಬಗ್ಗೆಯೂ ಇದು ನಿಜ ಎನ್ನಿಸುತ್ತದೆ. ಈ ಹೊರಗಿನ ಕ್ಷುದ್ರತೆ ಹೊರಗಿನದು ಮಾತ್ರವಲ್ಲ -ನಮ್ಮ ಒಳಗೂ ಇರುವಂಥಾದ್ದು. ನಮ್ಮ ತೀವ್ರತೆಯನ್ನು ಕೊಲ್ಲಲು ಇಂಥ ಸಂಚು ನಮ್ಮ ಒಳಗೂ ಹೊರಗೂ ನಡೆಯುತ್ತಲೇ ಇರುವುದರಿಂದ ಸದಾ ಎಚ್ಚರವಾಗಿರುವ ನಿಲುವು ಸಂಪನ್ನರಿಗೆ ಗರ್ವದಂತೆ ಕಾಣಬಹುದು. ಇದು ಅನಿವಾರ್ಯ, ಮೋಹಕ್ಕೆ ವಶವಾಗದ ನಿಷ್ಠುರತೆ, ನಮ್ಮ ಸುತ್ತ ಸಾಯುತ್ತ ಹುಟ್ಟುತ್ತ ಇರುವುದಕ್ಕೆಲ್ಲ ತೆರೆದುಕೊಂಡು ಎಚ್ಚರ -ಇದೇ ಯೋಗ. ಚೈತನ್ಯ ಮತ್ತು ಜಡತ್ವ ಜೋಡಿಗಳು ಎಂಬುದನ್ನು ಮರೆಯಬೇಡಿ.
-ಕೃಷ್ಣಪ್ಪ”

ಕಾಗದ ಬರೆದು ಅಂಚೆಗೆ ಹಾಕಿ ಕೃಷ್ಣಪ್ಪ ಕುಂಬಾರ ಕೊಪ್ಪಲಿಗೆ ಹೋದ. ಕಡಿದಾದ ಬೀದಿಯಲ್ಲಿ ನಡೆಯುತ್ತ ಧಾನ್ಯಗಳನ್ನು ಮಾರುವ ಅಂಗಡಿಯೊಂದರ ಮೇಲಿನ ಉಪ್ಪರಿಗೆಯಲ್ಲಿ ದೀಪವಿದ್ದುದನ್ನು ಕಂಡು ತೀರ ದುರವಸ್ಥೆಯಲ್ಲಿದ್ದ ಉಪ್ಪರಿಗೆ ಮೆಟ್ಟಿಲುಗಳನ್ನು ಕೊಳಚೆ ಗಲ್ಲಿಯೊಂದರಿಂದ ಹತ್ತಿ ಹೋದ. ಹತ್ತಿ ಹೋಗುವಾಗ ಉಚ್ಚೆಯ ನಾತ ಅಸಹನೀಯವಾಗಿತ್ತು. ಮಹಡಿ ಬಾಗಿಲು ತಟ್ಟಿದ.

ಕಚ್ಚೆಪಂಚೆಯುಟ್ಟು ಜುಬ್ಬ ತೊಟ್ಟ ಅಣ್ಣಾಜಿ ಯಾರು ಎಂದು ಕೇಳಿ ಕೃಷ್ಣಪ್ಪನೆಂದು ಗುರುತಿಸಿದ ಮೇಲೆ ಬಾಗಿಲು ತೆರೆದ. ಅಣ್ಣಾಜಿ ರೂಮಿನಲ್ಲಿ ಊದಿನ ಕಡ್ಡಿ ಉರಿಯುತ್ತಿದ್ದುದರಿಂದ ವಾಸನೆ ಹಿತವೆನ್ನಿಸಿತು. ಅಣ್ಣಾಜಿ ಇಂಗ್ಲಿಷಿನಲ್ಲಿ ’ಬಾ ಕೂತುಕೊ’ ಎಂದು ನೆಲದ ಮೇಲೆ ಹಾಸಿದ್ದ ಒಂದು ತುದಿಯನ್ನು ತೋರಿಸಿ ಇನ್ನೊಂದು ತುದಿಯಲ್ಲಿ ತಾನು ಕೂತ.

ನಡುವಯಸ್ಸಿನ ಅಣ್ಣಾಜಿ ಆಕರ್ಷಕ ವ್ಯಕ್ತಿ. ಎದ್ದು ಕಾಣುವ ಚೂಪಾದ ಗಲ್ಲ -ಪೊದೆ ಹುಬ್ಬುಗಳು -ತೆಳ್ಳಗೆ ಎತ್ತರವಾಗಿದ್ದ. ಕೂದಲನ್ನು ಉದ್ದವಾಗಿ ಬೆಳೆಸಿ ಹಿಂದಕ್ಕೆ ಬಾಚಿದ್ದ. ಅವನು ಗಡ್ಡ ಬೆಳೆಸುತ್ತಿದ್ದನೆಂಬುದು ಮುಖದ ಮೇಲೆ ಬೆಳೆದಿದ್ದ ಒಂದು ತಿಂಗಳಿನ ಕೂದಲಿನಿಂದ ತಿಳಿಯಬಹುದಿತ್ತು. ಚಾರ್ಮಿನಾರ್ ಸಿಗರೇಟನ್ನು ಹೊತ್ತಿಸಿ ಅಣ್ಣಾಜಿ ಕೃಷ್ಣಪ್ಪನ ಮಾತಿಗೆ ಕಾದ.

ಕೃಷ್ಣಪ್ಪ ಅಣ್ಣಾಜಿ ಓದುತ್ತಿದ್ದ ಟ್ರಾಟ್ಸ್ಕಿ ಪುಸ್ತಕವನ್ನು ಹಾಸಿಗೆ ಮೇಲೆ ಗಮನಿಸಿದ. ನಾಡ ಹೆಂಚಿನ ಇಳಿಜಾರಾದ ಸೂರಿನ ಸಣ್ಣ ರೂಮಿನಲ್ಲಿ ಹಾಸಿಗೆ, ಒಂದು ಟ್ರಂಕು, ಕೆಲವು ಪುಸ್ತಕಗಳು ಬಿಟ್ಟು ಬೇರೇನೂ ಇರಲಿಲ್ಲ.

ಕೃಷ್ಣಪ್ಪ ಜೇಬಿನಿಂದ ಇನ್ನೂರು ರೂಪಾಯಿಗಳನ್ನು ಎತ್ತಿ ಕೊಟ್ಟ. ಕೃಷ್ಣಪ್ಪನ ಸ್ವಭಾವ ತಿಳಿದ ಅಣ್ಣಾಜಿ ’ಥ್ಯಾಂಕ್ಸ್’ ಅನ್ನದೆ ಜೇಬಲ್ಲಿ ಹಾಕಿಕೊಂಡು ತನಗಾದ ಸಮಾಧಾನವನ್ನೂ ತೋರಿಸಿಕೊಳ್ಳದೆ ಇಂಗ್ಲಿಷಲ್ಲಿ ಹೇಳಿದ:

“ನಾನು ಈ ರೂಮನ್ನೂ ಬದಲಾಯಿಸಬೇಕಾಗಿ ಬಂದಿದೆ.”

ಅಣ್ಣಾಜಿ ಎದ್ದು ಬೀದಿಗೆ ತೆರೆಯುವ ಮರದ ಸಣ್ಣ ಕಿಟಕಿಯ ಕೊಳಕಾದ ಪರದೆ ಸರಿಸಿ ತೋರಿಸಿದ:

“ಮಫ಼್ತಿಯಲ್ಲಿರೋ ಪೋಲೀಸ್. ನಿನ್ನೆಯಿಂದ ಈ ರೂಮಿಗೆ ಯಾರು ಬರ್ತಾರೆ ಹೋಗ್ತಾರೆ ಗಮನಿಸ್ತ ಇದೆ ಹಂದಿ.”

“ನನ್ನ ಹಾಸ್ಟೆಲ್ ರೂಮಿಗೆ ಬಂದಿರು.”

ಕೃಷ್ಣಪ್ಪನ ಮಾತಿಗೆ ಅಣ್ಣಾಜಿ ಅದೂ ಕ್ಷೇಮವಲ್ಲವೆಂಬಂತೆ ತಲೆಯಲ್ಲಾಡಿಸಿದ. ಅವನನ್ನು ಅಣ್ಣಾಜಿಯೆಂದು ಕೃಷ್ಣಪ್ಪ ಕರೆಯುವುದಿಲ್ಲ. ಯಾಕೆಂದರೆ ಅವನ ನಿಜವಾದ ಹೆಸರೇನೆಂಬುದು ಕೃಷ್ಣಪ್ಪ ಕೇಳಿಲ್ಲ. ಪೋಲಿಸರಿಂದ ತಲೆ ಮರೆಸಿಕೊಂಡು ತಿರುಗುತ್ತಿದ್ದ ಅಣ್ಣಾಜಿ ಪ್ರತಿ ಊರಲ್ಲೂ ಒಂದೊಂದು ಹೆಸರಿಟ್ಟುಕೊಂಡು ಇರುತ್ತಿದ್ದ. ಗೋವಾದ ಪೋರ್ಚುಗೀಸ್ ಜೈಲಿನಿಂದ ತಪ್ಪಿಸಿಕೊಂಡು ಬಂದ ಅಣ್ಣಾಜಿ ಮಹಾರಾಷ್ಟ್ರದವನು. ಗೋವಾದಿಂದ ತೆಲಂಗಾಣ ಪ್ರದೇಶಕ್ಕೆ ಹೋಗಿ ಅಲ್ಲಿ ಹಳ್ಳಿಯೊಂದರಲ್ಲಿ ರೈತ ಸಂಘಟನೆ ಮಾಡುತ್ತಿದ್ದಾಗ ಜಮೀಂದಾರನೊಬ್ಬನನ್ನು ಇವನ ಅನುಯಾಯಿಗಳು ಕೊಲ್ಲಲು ಪ್ರಯತ್ನಿಸಿದ್ದರು. ಜಮೀಂದಾರ ಕಾಲು ಮುರಿದುಕೊಂಡು ಬದುಕಿಕೊಂಡ. ಅಣ್ಣಾಜಿಯ ಯೋಜನೆಗೆ ಮೀರಿ ರೈತರಲ್ಲಿ ಕೆಲವರು ಮುಂದುವರೆದಿದ್ದರು. ಸಿಕ್ಕಿಬಿದ್ದ ರೈತರ ಮೇಲೆ ಕೊಲೆಯತ್ನದ ಆಪಾದನೆಯ ವಿಚಾರಣೆ ನಡೆಯುತ್ತಿತ್ತು. ಒಬ್ಬ ಆಪಾದಿತ ರೈತನನ್ನು ಅಪ್ರೂವರ್ ಮಾಡಿಕೊಂಡು ಅಣ್ಣಾಜಿಯ ಬಗ್ಗೆ ಪೋಲೀಸರು ವಿಷಯ ಸಂಗ್ರಹಿಸಿದ್ದರು. ಅಣ್ಣಾಜಿ ಊರಿಂದ ಊರಿಗೆ ತಪ್ಪಿಸಿಕೊಂಡು ತಿರುಗುತ್ತ ಈ ಊರಿಗೆ ಬಂದಿದ್ದ. ಇಂಗ್ಲಿಷ್ ಪಾಠ ಹೇಳಿಕೊಡುತ್ತೇನೆಂದು ನಾಲ್ಕೈದು ಮನೆಗಳಲ್ಲಿ ಟ್ಯೂಶನ್ ಇಟ್ಟುಕೊಂಡಿದ್ದ. ಆಂಧ್ರ ಪೋಲೀಸರು ಆರ್. ಎಲ್. ನಾಯಕ್ ಎಂಬ ಹೆಸರಲ್ಲಿ ಇವನನ್ನು ಹುಡುಕುತ್ತಿದ್ದರು. ಗೋವಾದ ಪೋಲೀಸರು ಪಿ. ಟಿ. ದೇಶಪಾಂಡೆ ಎಂಬ ಹೆಸರಿನ ಇವನನ್ನು ಗಲ್ಲಿಗೆ ಏರಿಸಲೂ ಸಿದ್ಧರಾಗಿ ಕಾಯುತ್ತಿದ್ದರು. ಅವನು ಹೇಳಿಕೊಂಡಿದ್ದಕ್ಕಿಂತ ಹೆಚ್ಚನ್ನು ಅಣ್ಣಾಜಿ ಬಗ್ಗೆ ಕೃಷ್ಣಪ್ಪ ಕೇಳುತ್ತಿರಲಿಲ್ಲ. ತನ್ನ ಜೀವನಕ್ಕೊಂದು ಉದ್ದೇಶ ಹುಡುಕುತ್ತಿದ್ದ ಕೃಷ್ಣಪ್ಪನಿಗೆ ನೂರಾರು ಕ್ರಾಂತಿಕಾರಕ ಪುಸ್ತಕಗಳನ್ನು ಓದಿದ್ದ ಅಣ್ಣಾಜಿ ಮಹೇಶ್ವರಯ್ಯನಂತೆಯೇ ಗುರುವಾಗಿ ಕಂಡಿದ್ದ ಎಂದು ಹೇಳಬಹುದು.

ಅಣ್ಣಾಜಿಗೆ ಅವನು ಬಿಟ್ಟುಬಂದ ಊರಲ್ಲೆಲ್ಲ ಒಬ್ಬೊಬ್ಬ ಪ್ರೇಯಸಿ. ಪ್ರತಿ ತಿಂಗಳೂ ಅವರಿಗೆಲ್ಲ ಅಷ್ಟಿಷ್ಟು ಹಣ ಅವನು ಕಳಿಸಬೇಕು. ಹೀಗಾಗಿ ಹುಲಿಯ ಹುಣ್ಣಿನಂತೆ ಅವನ ಸಾಲ. ಕೃಷ್ಣಪ್ಪನೇ ಮನಿಯಾರ್ಡರ್ ಮಾಡುವುದು -ಕೊಲ್ಹಾಪುರದಲ್ಲಿ ದರ್ಜಿಯ ಮಗಳೊಬ್ಬಳಿಗೆ ಅವಳ ಬಿ.ಟಿ. ವಿದ್ಯಾಭ್ಯಾಸಕ್ಕಾಗಿ ತಿಂಗಳಿಗೆ ಇಪ್ಪತ್ತೈದು, ಗೋವಾದಲ್ಲಿ ಇವನಿಂದ ಮಗುವನ್ನು ಪಡೆದ ಗುಮಾಸ್ತೆಯೊಬ್ಬಳಿಗೆ ಇಪ್ಪತ್ತೈದು, ಚಿಕ್ಕ ವಯಸ್ಸಲ್ಲೇ ಇವನನ್ನು ಮದುವೆಯಾಗಿ ಒಂದು ಗಂಡು ಮಗು ಹೆತ್ತು ತಾಯಿಯ ಮನೆ ಸೇರಿ ನಾಗಪುರದಲ್ಲಿದ್ದ ಖಾಸ ಹೆಂಡತಿಗೆ ಇಪ್ಪತ್ತೈದು, ಹದಿನೈದು ವರ್ಷಗಳಿಂದಾದರೂ ಇದಕ್ಕಾಗಿ ಇವನಿಗೆ ಸಾಲ ಕೊಟ್ಟ ಇವನ ಆ ಬಡ ಅನುಯಾಯಿಗಳಿಗೆ ಆಗೀಗ ತೀರಿಸಲು ಇನ್ನಷ್ಟು -ಹೀಗೆ ಮೈಯೆಲ್ಲ ಸಾಲ ಅಣ್ಣಾಜಿಗೆ. ಬರೀ ಚಹಾ ಸಿಗರೇಟಲ್ಲೆ ಬದುಕುತ್ತ, ಈಚಲು ಚಾಪೆ ಮೇಲೆ ಮಲಗಿ ನಿದ್ರಿಸಬಲ್ಲ ಅಣ್ಣಾಜಿಗೆ ಇನ್ನು ಯಾವ ದುಶ್ಚಟವೂ ಇರಲಿಲ್ಲ.

ಪ್ರತಿ ದಿನವೂ ಅಣ್ಣಾಜಿ ದುಡ್ಡಿಗೆ ಪರದಾಡುತ್ತ ಮುಂದಿನವಾರ ಕೊಟ್ಟುಬಿಡುವೆ ಇತ್ಯಾದಿ ಸುಳ್ಳುಗಳನ್ನು ಹೇಳುತ್ತ ಜನರನ್ನು ವಂಚಿಸಲು ತನ್ನೆಲ್ಲ ಆಕರ್ಷಣೆಗಳನ್ನೂ ಬಳಸುವುದನ್ನು ಕಂಡು ಕೃಷ್ಣಪ್ಪನಿಗೆ ಜಿಗುಪ್ಸೆಯಾಗುತ್ತಿತ್ತು. ಆದರೆ ತನ್ನ ಹೆಸರಿನ ವ್ಯಾಮೋಹವನ್ನೂ ಬಿಟ್ಟ ವ್ಯಕ್ತಿ ಈತ. ಪರಿಚಯವಾದ ಪ್ರಾರಂಭದಲ್ಲಿ ಅಣ್ಣಾಜಿ ಕೇಳುತ್ತಿದ್ದ ದುಡ್ಡನ್ನು ಅವರಿವರಿಂದ ಪಡೆದು ಕೊಡುವಾಗ ಅವನು ಹೇಳುವ ಸುಳ್ಳುಗಳಿಂದಾಗಿ ಕೃಷ್ಣಪ್ಪ ಕ್ಷುದ್ರನಾಗಿ “ನಿನ್ನ ಮೇಲೆ ನನಗೆ ಗೌರವವಿದೆ. ನನ ಹತ್ತಿರ ಸುಳ್ಳು ಹೇಳಬೇಡ” ಎಂದಿದ್ದ. ಕ್ಷಣ ಮಂಕಾಗಿ ಕೂತು ಅಣ್ಣಾಜಿ ತನ್ನ ಕಥೆ ಹೇಳಲು ತೊಡಗಿದಾಗ, “ಸಾಕು ಬಿಡು. ನಾನು ಪ್ರತಿ ತಿಂಗಳೂ ಆದಷ್ಟು ಹಣ ನಿನಗೆ ಒಟ್ಟು ಮಾಡಿ ಕೊಡುವೆ” ಎಂದಿದ್ದ. ಜೊತೆಗೇ ಇಂಗ್ಲಿಷ್ ಟ್ಯೂಷನ್ ಹೇಳುವುದರಿಂದಲೂ ಅಣ್ಣಾಜಿಗೆ ಸುಮಾರು ನೂರೈವತ್ತು ಸಿಗುತ್ತಿತ್ತು.

“ಯಾವುದೋ ತತ್ವಕ್ಕಾಗಿ ಮೈಮರೆತು ಇರುವ ನೀನು ಯಾಕೆ ಈ ಕ್ಷುದ್ರ ವಿಷಯಗಳಿಗೆ ಸಿಕ್ಕಿಹಾಕಿಕೊಂಡಿದ್ದು?” ಎಂದು ಉತ್ತರ ಬಯಸದೆ ತನಗೇ ಕೇಳಿಕೊಳ್ಳುವಂತೆ ಕೃಷ್ಣಪ್ಪ ಹೇಳಿದ.

ಅಣ್ಣಾಜಿ ಚಾರ್ಮಿನಾರ್ ಹೊತ್ತಿಸಿ

“ನಿನ್ನಲ್ಲೇ ನೀನು ಸಂಪೂರ್ಣ ಎನ್ನೋ ಗರ್ವ ನಿನಗೆ. ನೀನು ಮೂಲಭೂತವಾಗಿ ಫ಼್ಯಾಸಿಸ್ಟ್ ಮನೋಧರ್ಮದವ” ಎಂದ.

ಮುಸ್ಲಿಂ ಹೋಟೆಲಲ್ಲಿ ಬಾಂಬೆ ಟೀ ಕುಡಿಯುತ್ತ ಇಬ್ಬರೂ ಮಾತಾಡುತ್ತಿದ್ದರು. ರೇಡಿಯೋ ಗದ್ದಲದಲ್ಲಿ ಧ್ವನಿ ಎತ್ತರಿಸಿ ಮಾತಾಡಬೇಕಿತ್ತು. ಕೃಷ್ಣಪ್ಪನಿಗದು ಇಷ್ಟವಿಲ್ಲದಿದ್ದರೂ ಹೇಳಿದ:

“ಕ್ರಾಂತಿಗಾಗಿ ಬದುಕೋವನು ವ್ಯಾಮೋಹಿಯಾಗಿರಕೂಡದು. ದುಡ್ಡಿನ ವ್ಯವಹಾರ ಹಚ್ಚಿಕೊಂಡು ಬೂರ್ಶ್ವಾ ಆಗಬಾರದು.” ಈ ಹೊಸ ಶಬ್ದಗಳನ್ನು ಅಣ್ಣಾಜಿಯಿಂದಲೇ ಕೃಷ್ಣಪ್ಪ ಕಲಿತದ್ದು.

“ನಿಜ ನೀನು ಹೇಳೋದು. ನಾನು ಸುಮ್ಮನಿದ್ದರೂ ಹೆಂಗಸರು ನನ್ನ ಹಚ್ಚಿಕೋತಾರೆ.”

ತನಗೇ ಅದು ರಹಸ್ಯ ಎನ್ನುವಂತೆ ಅಣ್ಣಾಜಿ ಎದ್ದು ನಿಂತ. ನಡೆನುಡಿಯಲ್ಲಿ ಅಣ್ಣಾಜಿ ಚುರುಕು. ಕೃಷ್ಣಪ್ಪ ನಿಧಾನ.

ಇವು ಕೃಷ್ಣಪ್ಪನ ಜೀವನದಲ್ಲಿ ಬಹಳ ಮುಖ್ಯ ದಿನಗಳು ಎನ್ನಬೇಕು. ಪಾರ್ಕಿನಲ್ಲಿ ಕೂತು ನೆಲಗಡಲೆ ಸುಲಿದು ತಿನ್ನುತ್ತ ಕೃಷ್ಣಪ್ಪ ಅಣ್ಣಾಜಿ ಗಂಭೀರವಾಗಿ ಚರ್ಚಿಸುವರು. ಅಣ್ಣಾಜಿ ತನ್ನ ಪಾಠವನ್ನು ಮಾರ್ಕ್ಸ್‌ನ ಒಂದು ಮಾತಿನಿಂದ ಶುರು ಮಾಡಿದ್ದ: “ಈ ವರೆಗೆ ತಾತ್ವಿಕರು ಪ್ರಪಂಚದ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ; ಆದರೆ ನಮ್ಮ ಕೆಲಸ ಪ್ರಪಂಚವನ್ನು ಬದಲಿಸುವುದು.” ಇಂಥ ಅನೇಕ ಮಾತುಗಳು ಕೃಷ್ಣಪ್ಪನನ್ನು ಆಳವಾದ ವಿಚಾರಗಳಿಗೆ ಹಚ್ಚಿದ್ದುವು. ನಮ್ಮ ಪ್ರಜ್ಞೆ ಸ್ವತಂತ್ರ ವಸ್ತುವಲ್ಲ -ಉತ್ಪಾದನೆಗಾಗಿ ನಾವು ತೊಡಗುವ ಅನೇಕ ಸಂಬಂಧಗಳಿಂದ ಉಂಟಾದದ್ದು ಎಂದು ಅಣ್ಣಾಜಿ ಕೆಣಕಿದಾಗ ಜಡಪ್ರಪಂಚದಿಂದ, ದೈನಿಕಗಳಿಂದ ಸೋಲಬಾರದೆಂಬ ಹಠವಾದಿ ಕೃಷ್ಣಪ್ಪ ಒಪ್ಪಿರಲಿಲ್ಲ. ಪಾರ್ಶ್ವವಾಯುವುನಿಂದ ನರಳುತ್ತಿರುವಾಗಲೂ ಈ ಬಗ್ಗೆ ಅವನಿಗೆ ಅನುಮಾನ ಉಳಿದೇ ಇತ್ತು. ವಾದಿಸಿದ್ದ:

“ಮನುಷ್ಯ ತನ್ನ ಪರಿಸರಾನ್ನ ಮೀರತಾನೆ -ಇದನ್ನು ನಾನು ವಾದಿಸಲಾರೆ. ನನ್ನ ಅನುಭವದ ಮಾತು ಇದು. ಆ ವಿಷಯ ಬಿಡು. ಕೂಲಿಕಾರರನ್ನು ರೈತರನ್ನು ನೀನು ಒಟ್ಟು ಮಾಡಿ ಹೋರಾಟಕ್ಕೆ ಹಚ್ಚೋದು ಯಾವ ಪುರುಷಾರ್ಥಕ್ಕೆ? ಅವರ ಕೂಲಿ ಇನ್ನಷ್ಟು ಹೆಚ್ಚಿ, ಮನೆಗೊಂದು ರೇಡಿಯೋ, ಸ್ಟೈನ್‌ಲೆಸ್ಸ್ ಪಾತ್ರೆಗಳನ್ನು ಅವರು ಕೊಂಡುಬಿಡುವಂತಾದರೆ ಅವರ ಜೀವನ, ಈ ಪ್ರಪಂಚ ಬದಲಾದಂತೆಯೊ? ಪ್ರತಿ ನಿತ್ಯದ ಬದುಕಿನಲ್ಲಿ ಅದೇ ಕೆಲಸಗಳು, ಅದೇ ಜಂಜಾಟಗಳು, ಅದೇ ತರಲೆ ತಾಪತ್ರಯಗಳು ಹೋಗಿಬಿಡ್ತಾವ? ಅವರು ಇನ್ನಷ್ಟು ಆಸೆಬುರುಕರಾಗ್ತಾರೆ -ನಿನ್ನಂಥವರಿಂದ.”

“ಹಾಗಲ್ಲ, ನೀನು ವ್ಯಕ್ತಿವಾದಿಯ ಹಾಗೆ ಮಾತಾಡ್ತಿದ್ದಿ.”

’ವ್ಯಕ್ತಿವಾದಿ’ ಇತ್ಯಾದಿ ಶಬ್ದಗಳಲ್ಲಿ ತನ್ನ ಅನುಮಾನ ಬಗೆಹರಿಸಲು ಪ್ರಯತ್ನಿಸುವ ಅಣ್ಣಾಜಿಯ ವಾದಕ್ರಮದಿಂದ ಕೃಷ್ಣಪ್ಪನಿಗೆ ಬೇಸರ ಬರುತ್ತಿತ್ತು. ಅಣ್ಣಾಜಿ ಸಮಾಧಾನದಿಂದ ವಿವರಿಸುತ್ತಿದ್ದ:

“ತಮ್ಮ ಜೀವನದ ಸುಧಾರಣೆಗಾಗಿ ಬಡವರನ್ನು ಹೋರಾಡೋಕೆ ಸಿದ್ಧ ಮಾಡ್ತೀವಿ ಅನ್ನು -ಈ ಹೋರಾಟ ಅಷ್ಟಕ್ಕೆ ನಿಲ್ಲಲ್ಲ. ನಮ್ಮ ವರ್ಗದ ಜೀವನಮಟ್ಟ ಹೆಚ್ಚಿಸಿಕೊಳ್ಳೊ ಆಸೆಬುರುಕತನಕ್ಕೂ ಅವರ ಆಸೆಗೂ ಮೂಲಭೂತ ವ್ಯತ್ಯಾಸವಿದೆ. ಅವರ ಆಸೆ ಚಲನಶೀಲ. ಅವರ ಆಸೆ ಹೆಚ್ಚುತ್ತ ಹೋದಂತೆ ಈ ಪ್ರಪಂಚದ ಸ್ವರೂಪಾನೇ ಬದಲಾಗಬೇಕಾಗಿ ಬರುತ್ತೆ. ಅವರ ದುಡಿಮೆಯೇ ಈ ಸಮಾಜದ ಸ್ಥಿತಿಗೂ ಗತಿಗೂ ದ್ರವ್ಯ ಅನ್ನೋದನ್ನ ಒಪ್ಪಿಕೊಂಡಿದ್ದಿ ತಾನೆ? ನಮ್ಮ ಪುರುಷಾರ್ಥಗಳಿಗೆಲ್ಲ ಮೂಲ ಈ ದುಡಿಮೆ. ಆದರೆ ಈ ದುಡಿಮೆಯ ಲಾಭ ಹೋಗೋದು ಬಂಡವಾಳಶಾಹಿಗೆ. ಶೋಷಣೇನೇ ಈ ವ್ಯವಸ್ಥೆಗೆ ಆಧಾರ. ಬಡವರು ಶೋಷಣೆಗೂ ಒಳಗಾಗ್ತಾರೆ; ಬರ್ತಾ ಬರ್ತಾ ತಮ್ಮ ಕೈಯಿಂದ ಬೆಳೆದದ್ದಕ್ಕೂ ತಮಗೂ ಸಂಬಂಧಾನೇ ಇಲ್ಲವೆನ್ನೋದನ್ನ ಅರೀತಾರೆ. ಮನುಷ್ಯನಿಂದಲೇ ಮನುಷ್ಯನಿಗೆ ಇವೆಲ್ಲ ಆಗ್ತಿರೋದೂಂತ ಅರ್ಥವಾಗ್ತ ಹೋದ ಹಾಗೆ ತನ್ನ ನಿತ್ಯಜೀವನಾನ್ನ ಶುಷ್ಕವಾಗಿ ಮಾಡೋ ವ್ಯವಸ್ಥೇನೇ ಬದಲಾಗಬೇಕು. ಸುಧಾರಣೆಗಳಿಂದ ಇದು ಸಾಧ್ಯವಾಗದು ಅನ್ನೋದನ್ನ ಅರೀತಾರೆ. ಮೇಲಿನ ವರ್ಗದ ನಮ್ಮಂಥ ಕೆಲವರಿಗೆ ಅದು ಬುದ್ಧಿಪೂರ್ವಕವಾಗಿ ಅರ್ಥವಾದರೆ ರೈತರಿಂದ ಹುಟ್ಟಿ ಬಂದ ನಿನ್ನಂಥ ಸೂಕ್ಷ್ಮ ಮನಸ್ಸಿನವರಿಗೆ ಅದು ಅನುಭವದಿಂದ ಗೊತ್ತಾಗತ್ತೆ. ನಿನ್ನಂಥವರು ಅದನ್ನು ಉಳಿದವರಲ್ಲಿ ಬಿತ್ತುತ್ತೀರಿ. ಹಾಗೇ ಕ್ರಾಂತಿ ಆಗತ್ತೆ. ನಾವಾಗಬೇಕೂಂತ ಬಯಸೋದ್ರಿಂದ ಮಾತ್ರ ಕ್ರಾಂತಿಯಾಗತ್ತೆ ಅನ್ನೋದು ವ್ಯಕ್ತಿವಾದವಾಗಿಬಿಡತ್ತೆ. ತನ್ನ ಕೋಳಿ ಕೂಗಿದ್ರಿಂದ ಬೆಳಗಾಯ್ತು ಅಂತ ತಿಳಿಯೋ ಮುದುಕಿ ಕಥೆ ಹಾಗೆ ಅದು. ಕ್ರಾಂತಿಯಾಗತ್ತೆ ಅನ್ನೋದು ಸಮಾಜದ ಚಲನೆಯ ನಿಯಮ. ಅದನ್ನ ತ್ವರಿತಗೊಳಿಸೋ ವೇಗವರ್ಧಕಗಳು, ಅಥವಾ ಸೂಲಗಿತ್ತಿಯರು ನಾವು.”

ಅಣ್ಣಾಜಿಯ ಕಣ್ಣುಗಳು ಹೊಳೆಯುತ್ತಿದ್ದವು. ಪಾರ್ಕಲ್ಲಿ ಕಡಲೇಕಾಯಿ ಬೆಲ್ಲವನ್ನು ಕೊಳ್ಳಿರೆಂದು ಬೇಡುತ್ತ ಕಾಡುತ್ತ ನಿಂತ ಹುಡುಗನನ್ನು ನೋಡುತ್ತ ಕೃಷ್ಣಪ್ಪ:

“ಇಂಥ ದೈನ್ಯದ ಹುಡುಗರೂ ರೊಚ್ಚೆದ್ದು ಕ್ರಾಂತಿ ಮಾಡ್ತಾರೆ ಅನ್ನು”

ಎಂದು ಅರ್ಧ ಅನುಮಾನದಿಂದ ಕೇಳುತ್ತಿದ್ದ.

“ಖಂಡಿತವಾಗಿ. ಫ಼್ರಾನ್ಸಿನ ಜೈಲಿನ ಗೇಟು ಒಡೆದದ್ದು ಗೊತ್ತಲ್ಲ.”

“ಯಾವತ್ತೋ ಒಂದು ದಿನ ಆವೇಶದಿಂದ ಕುಣಿದು ಮತ್ತೆ ಪ್ರಪಂಚ ಅದೇ ಅರ್ಥಹೀನ ದೈನಿಕಗಳ ಜಾಡಿಗೆ ಸಿಕ್ಕಿಹಾಕಿಕೊಳ್ಳುತ್ತಲ್ಲ?”

“ಇಲ್ಲ -ಕ್ರಾಂತಿಯಿಂದ ನಮ್ಮ ದೈನಿಕವೂ ಸೃಷ್ಟಿಶೀಲವಾಗುತ್ತೆ.” ತನ್ನ ತರ್ಕ ಎಲ್ಲ ಅನುಮಾನಗಳಿಗೆ ಪ್ರೂಫ಼್ ಎಂಬ ಅಣ್ಣಾಜಿಯ ಯೋಚನಾಕ್ರಮದಿಂದ ಕೃಷ್ಣಪ್ಪನಿಗೆ ಕರೆಕರೆಯಾಗುತ್ತಿತ್ತು.

’ಹುಟ್ಟೋದು, ಸಾಯೋದು, ಉಣ್ಣೋದು, ಉಳೋದು, ಸಂಭೋಗ ಮಾಡೋದು ಎಲ್ಲವುದಕ್ಕೂ ಒಂದೊಂದು ಹಬ್ಬ ಮಾಡಿದೆಯಲ್ಲ -ನಮ್ಮ ಹಿಂದೂ ಧರ್ಮ; ನಮ್ಮ ಭೂಮಿ ಹುಣ್ಣಿಮೆ ಹಬ್ಬದ ಅರ್ಥ ಗೊತ್ತ ನಿನಗೆ?”

ಬೇಸರದಿಂದ ಕೃಷ್ಣಪ್ಪ ಹೇಳುತ್ತಿದ್ದ. ಅದನ್ನೂ ಗಂಭೀರವಾಗಿ ಅಣ್ಣಾಜಿ ವಿಶ್ಲೇಷಿಸುತ್ತಿದ್ದ:

“ಶುಷ್ಕವಾಗಿಬಿಡುವ ದೈನಿಕಗಳನ್ನು ಭ್ರಮೇಲಿ ಗೆಲ್ಲೋದಕ್ಕೂ ನಿಜವಾಗಿ ವಾಸ್ತವವಾಗಿ ಗೆಲ್ಲೋದಕ್ಕೂ ವ್ಯತ್ಯಾಸವಿದೆ. ಉತ್ಪಾದನೆಯ ಸಂಬಂಧಗಳು ಬದಲಾದಾಗ ದುಡಿಮೆ ಸೃಷ್ಟಿಶೀಲವಾಗತ್ತೆ. ಅಹಂಕಾರದಲ್ಲಿ ಸೆಟೆದು ದೊಣ್ಣೆನಾಯಕನಂತೆ ಓಡಾಡ್ತ ಕ್ಷುದ್ರತೆಯಿಂದ ಹೊರಗೆ ನಿಲ್ತೀನಿ ಅಂತ ನೀನು ತಿಳಿದಿರೋದು ಭ್ರಮೆ. ಹೋಗಿ ರೈತರ ನಡುವೆ ಕೆಲಸ ಮಾಡು. ಅವರನ್ನು ಹೋರಾಟಕ್ಕೆ ಸಂಘಟಿಸು. ನೀನೊಬ್ಬ ಸೂಲಗಿತ್ತೀಂತ ತಿಳಕೊ -ತಾವು ಉಳೋ ನೆಲಕ್ಕವರು ಒಡೆಯರಾಗೋದೇ ನಿಜವಾದ ಭೂಮಿ ಹುಣ್ಣಿಮೆ.”

ಕೃಷ್ಣಪ್ಪನಿಗೆ ತನ್ನ ಅನುಭವದ ಸತ್ಯವೇ ಬೇರೆ ಎಂದು ಕಂಡರೂ ಅಣ್ಣಾಜಿಯ ವಾದವೂ ಸರಿಯಾಗಿ ಕಂಡು ತಬ್ಬಿಬ್ಬಾಗಿಬಿಡುತ್ತಿದ್ದ.

“ಹಾಗಾದರೆ ರಷ್ಯದಲ್ಲಿ ದುಡಿಮೆಯೆಲ್ಲ ಸೃಷ್ಟಿಶೀಲವಾಗಿಬಿಟ್ಟಿದೆಯೊ?”

ಕೃಷ್ಣಪ್ಪ ಅಣ್ಣಾಜಿಯನ್ನು ಹಂಗಿಸುವಂತೆ ಕೇಳುತ್ತಿದ್ದ.

“ನೋಡು ಕೃಷ್ಣಪ್ಪ, ಆಗಬೇಕಾದ್ದೆಲ್ಲ ರಷ್ಯಾದಲ್ಲೆ ಆಗಿಲ್ಲ ನಿಜ. ಕ್ರಾಂತಿಗೆ ಜನರನ್ನು ಸಿದ್ಧಮಾಡಿದ ಪಕ್ಷ ತಾನೇ ಒಡೆಯನಾಗಿಬಿಟ್ಟಿದೆ ಅಲ್ಲಿ. ಕ್ರಾಂತಿ ಒಂದು ದಿನದ ಕೆಲಸವಲ್ಲ. ಆದ ತಪ್ಪನ್ನು ಸದಾ ತಿದ್ದಿಕೊಳ್ತಾನೇ ಹೋಗಬೇಕು. ಈಗ ಚೈನಾದಲ್ಲಿ ನೋಡು….”

ಕಾಡುತ್ತಿದ್ದ ಕಡಲೇಕಾಯಿ ಮಾರುವ ಹುಡುಗನನ್ನು “ಗೆಟ್ ಅವೇ” ಎಂದು ಗದರಿಸಿ ಅಣ್ಣಾಜಿ ಸಿಗರೇಟು ಹತ್ತಿಸಿದ. ಬಾಯಲ್ಲಿ ಸಿಗರೇಟು ಹಚ್ಚಿಸಿ ತನ್ನ ಜುಬ್ಬದ ಸಡಿಲವಾದ ತೋಳುಗಳನ್ನು ಮಡಿಸಿಕೊಂಡು ಜೇಬಿನಿಂದ ಪೆನ್ಸಿಲ್ ಕಾಗದ ತೆಗೆದ. ಚೈನಾದ ಮ್ಯಾಪನ್ನು ಬರೆದು ಲಾಂಗ್ ಮಾರ್ಚನ್ನು ವಿವರಿಸುತ್ತಿದ್ದಂತೆಯೇ ಕೃಷ್ಣಪ್ಪ ರೇಗಿದ ಧ್ವನಿಯಲ್ಲಿ ಹೇಳಿದ:

“ನಮ್ಮ ದೇಶದ ಕಮ್ಯುನಿಸ್ಟರು ದೇಶದ್ರೋಹಿಗಳು. ನಲವತ್ತೆರಡರ ಚಳುವಳೀಲಿ ಯಾಕೆ ಬ್ರಿಟಿಷರ ಪರವಾಗಿ ಕೆಲಸ ಮಾಡಿದ್ರು ಹೇಳು? ನನಗಂತೂ ರಷ್ಯಾಕ್ಕೂ ಚೈನಾಕ್ಕೂ ತಲೆಹಿಡುಕನಾಗಿ ಕೆಲಸ ಮಾಡೋದು ಸಾಧ್ಯವಿಲ್ಲ.”

ಅಣ್ಣಾಜಿ ಸಮಾಧಾನ ಕಳೆದುಕೊಳ್ಳದೆ ಹೇಳಿದ:

“ನಮ್ಮ ದೇಶದ ಕಮ್ಯುನಿಸ್ಟರು ಬಂಜೆಯರು -ಒಪ್ಪಿದೆ. ಆದರೆ ಎರಡನೇ ಯುದ್ಧದ ಸಮಯದಲ್ಲಿ ಜರ್ಮನೀನ್ನ ಸೋಲಿಸೋದು ಮುಖ್ಯವಾಗಿತ್ತು ಅನ್ನೋದನ್ನೂ ನಾನು ಒಪ್ಪುತೀನಿ. ಆದರೂ ನಾನು ಆಗ ಪಾರ್ಟಿ ಬಿಟ್ಟು ಗಾಂಧಿ ಚಳುವಳೀಲಿ ಭಾಗವಹಿಸಿದ್ದೆ -ಇವೆಲ್ಲ ಕಾಂಟ್ರಡಿಕ್ಷನ್ನುಗಳು. ನೋಡು ಕೃಷ್ಣಪ್ಪ ನನ್ನ ಉದ್ದೇಶ ಇದು: ಆಸೆಬುರುಕರ ಬಗ್ಗೆ ಪ್ರಚಂಡ ತಿರಸ್ಕಾರ ಇರೋದನ್ನ ನಿನ್ನಲ್ಲಿ ನಾನು ಕಂಡಿದೇನೆ. ಈ ಗರ್ವ ದಲಿತರ ಕ್ರಾಂತಿಗೆ ಅತ್ಯಗತ್ಯವಾದ ಡ್ರೈವಿಂಗ್ ಫ಼ೋರ್ಸ್. ನನಗಿಂತ ನೀನೇ ಗಟ್ಟಿಯಾಗಿ ಉಳೀತಿ ಅಂತ ಅನ್ನಿಸೋದರಿಂದ ಈ ಕ್ರಾಂತಿಯ ಬೀಜಾನ್ನ ಬಿತ್ತಲಿಕ್ಕೇಂತ ನಿನಗಿದೆಲ್ಲ ನಾನು ಹೇಳ್ತಿದೇನೆ. ನನ್ನ ಜೀವನ ಈಗ ನೂರು ತರಲೆ ತಾಪತ್ರಯಗಳಲ್ಲಿ ಗಂಟುಗಂಟಾಗಿ ಬಿಟ್ಟಿದೆ. ನಾನಾಗಿ ಇದನ್ನೆಲ್ಲ ಹರಕೊಳ್ಳಲಾರೆ. ದೇಶದಲ್ಲಿ ಜನ ಕ್ರಾಂತಿಗೆ ಸಿದ್ಧರಾದಾಗ ನಾನೆಲ್ಲ ಹರಕೊಂಡು ಅವರ ಜೊತೆ ನಿಂತಿರ್ತೀನಿ ಅಂತ ನನಗೆ ಗೊತ್ತು. ಗೋವಾದಲ್ಲೆ ಪೋಲೀಸರು ಒಂದು ಹೆಜ್ಜೆ ಮುಂದಿಟ್ಟರೆ ಶೂಟ್ ಮಾಡ್ತೀವಿ ಅಂದಾಗ ನನ್ನ ಹಿಂದೆ ಸತ್ಯಾಗ್ರಹ ಮಾಡ್ಲಿಕ್ಕೆ ಅಂತ ಬಂದಿದ್ದವರು ಹಿಂಜರಿದರು. ಆಗ ನಾನು ನನ್ನ ಪುಕ್ಕತನಾನ್ನ ಮೀರಿ ಪೋಲೀಸರನ್ನ ಧಿಕ್ಕರಿಸಿ ಒಂದು ಹೆಜ್ಜೆ ಮುಂದಿಟ್ಟೆ. ಗುಂಡಿನ ಶಬ್ದಕ್ಕಾಗಿ ಕಾದೆ. ಆಗ ಹಿಮ್ಮೆಟ್ಟುತ್ತಿದ್ದ ನನ್ನ ಹಿಂದಿದ್ದ ಜನರೆಲ್ಲ ಇದ್ದಕಿದ್ದಂತೆ ನುಗ್ಗಿ ಬಂದರು. ಪೋಲೀಸರೂ ಶೂಟ್ ಮಾಡಲಾರದೆ ಸುಮ್ಮಗೆ ನಿಂತರು. ನನ್ನ ವರ್ಗದ ಮಿತೀನ್ನ ನಾನು ಇಂಥ ಸಂದರ್ಭಗಳಲ್ಲಿ ಮೀರಿದರೆ ನೀನು ಮಾತ್ರ ಪ್ರತಿಕ್ಷಣಾನೂ ಮೀರತ ಹೋಗಬಲ್ಲೆ: ರೈತನವನಾದ್ದರಿಂದ ನೂರಾರು ಜನರನ್ನು ನಿನ್ನ ಜತೇಲಿ ತಗೊಂಡು ಹೋಗಬಲ್ಲೆ ಅಂತ ತಿಳಿದಿದ್ದೀನಿ. ಹೋಗಬಲ್ಲೆ ಅಲ್ಲ -ಹೋಗಲೇ ಬೇಕಾಗುತ್ತೆ. ಇದು ಸೈಂಟಿಫ಼ಿಕ್ ಸತ್ಯ. ವ್ಯಕ್ತಿವಾದಿಯಾದರೆ ನಿನ್ನ ಸ್ವಭಾವ ಫ಼್ಯಾಸಿಸ್ಟ್ ಆಗ್ತಾ ಹೋಗತ್ತೆ. ಆದ್ರಿಂದ ನೀನು ಮಾಸ್ ಮ್ಯಾನ್ ಆಗಬೇಕು. ವರ್ಗಹೋರಾಟದ ಮುಂಚೂಣಿಯಲ್ಲಿ ನಿನ್ನಂಥವರು ನಿಲ್ಲಬೇಕು. ಕಮ್ಯುನಿಸ್ಟರನ್ನು ಮರೆತುಬಿಡು. ಈ ನೆಲದ ಸಾರವನ್ನು ಹೀರಿದ, ಈ ಕ್ಷುದ್ರ ಚರಿತ್ರೇನ್ನ, ಹಾಗೇ ವೈಭವವನ್ನು ಅರ್ಥಮಾಡಿಕೊಂಡ ಒಂದು ಹೊಸ ಕ್ರಾಂತಿಕಾರಿ ಪಕ್ಷಾನ್ನ ಈ ದೇಶದಲ್ಲಿ ನಾವು ಕಟ್ಟಬೇಕು….”

ಅಣ್ಣಾಜಿ ಸ್ಫೂರ್ತಿಯಿಂದ ಮಾತಾಡುತ್ತ ಪರವಶನಾಗಿದ್ದ. ಕೃಷ್ಣಪ್ಪನನ್ನು ಅದು ಆವರಿಸಿತ್ತಾದರೂ ತನ್ನ ಆಳವಾದ ಸಂಶಯವನ್ನು ಹೇಳದೇ ಅವನಿಗೆ ವಿಧಿಯಿರಲಿಲ್ಲ:

“ಜನ ಇನ್ನಷ್ಟು ಸರಾಗವಾಗಿ ಉಣ್ಣೋ ಮಲಗೋ ಸಾಯೋ ಕೆಲಸ ಮಾಡಿಕೋತ ಹೋಗಲಿಕ್ಕೆ ಈ ಉಪದ್ವ್ಯಾಪವೆಲ್ಲ ಯಾಕೆ ಹೇಳು.”

ಅಣ್ಣಾಜಿಗೆ ಕೋಪ ಬಂತು:

“ಮುಚ್ಚು ಬಾಯಿ. ಗರ್ವದ ಮಾತಾಡಬೇಡ. ಜೀವನಕ್ಕಿಂತ ನೀನು ಶ್ರೇಷ್ಠ ಅಂತ ತಿಳಿಯೋಕೆ ನೀನು ಯಾರು? ದೇವರ? ಕ್ಷುದ್ರವಾದ ದೈನಿಕ, ದೈನಿಕ, ಅಂತ ಗೋಳಿಡ್ತಿದೀಯಲ್ಲ, ಅದನ್ನು ಬಿಟ್ಟು ಉಳಿದದ್ದೇನಿದೆ? ಈ ದೈನಿಕ ಜೀವನಕ್ಕೇ ಪ್ರಭೇನ್ನ ತರೋದಕ್ಕಿಂತ ದೊಡ್ಡ ಕೆಲಸ ಏನಿದೆ? ಸಮಾಧಿಯಲ್ಲೋ, ಭಕ್ತಿಯ ಪರವಶತೇಲೊ ಎಲ್ಲಕ್ಕಿಂತ ಮೇಲೆ ಹೋಗ್ತೀನಿ ಅಂತ ತಿಳಿದಿರೋ ಹಿಂಜಿದ ಬುದ್ಧಿಯ ಈಡಿಯಟ್ಟರಂತೆ ಮಾತಾಡಬೇಡ.”

ಈವರೆಗೆ ಯಾರೂ ಕೃಷ್ಣಪ್ಪನನ್ನು ಹೀಗೆ ಜರೆದಿರಲಿಲ್ಲ. ಈ ಮಾತಾಡುವಾಗ ಅಣ್ಣಾಜಿ ಅವನ ಬದುಕಿನ ಮಿತಿಗಳನ್ನು ಮೀರಿದ್ದು ಕಂಡು ಕೃಷ್ಣಪ್ಪ ಗೌರವದಿಂದ ಹೇಳಿದ -ತಾನು ಹೇಳೋದು ಅಪ್ರಸ್ತುತ ಎನ್ನಿಸಿದರೂ.

ನೋಡು, ನನಗೆ ಇಬ್ಬರು ಹತ್ತಿರದವರು ಇದಾರೆ. ಬುದ್ಧ ಮತ್ತು ಕ್ರಿಸ್ತ. ತಾಯಿಗೆ ಕ್ರಿಸ್ತ ಹೇಳಿದನಲ್ಲ ’ಏ ಹೆಂಗಸೆ ನೀನು ಯಾರು?’ ಅಂತ -ಅದು ನನಗೆ ಇಷ್ಟವಾದ ನಿಲುವು. ಹಾಗೇನೇ ನಮ್ಮ ಅಲ್ಲಮ, ನಾನಕ, ಕಬೀರರಂಥ ಅರೆಹುಚ್ಚರೂ ಯಾವುದೋ ದೊಡ್ಡ ಸತ್ಯಾನ ತಮ್ಮ ಮಾತಿನಲ್ಲಿ ಆರದಂತೆ ಬಚ್ಚಿಟ್ಟಿದ್ದಾರೆ ಅಂತ ನನಗನ್ನಿಸುತ್ತೆ. ಆದ್ರಿಂದ ಜನರ ಹೊಟ್ಟೆ ಬಟ್ಟೆ ಉಪದ್ವ್ಯಾಪಗಳಲ್ಲಿ ಮುಳುಗೋದೂಂದ್ರೆ.”

ತಾನು ಮಾತನ್ನು ಪೂರ್ಣ ಮಾಡಿದರೆ ತನ್ನ ಮನಸ್ಸಲ್ಲಿ ನಿಜವಾಗಿ ಇರೋ ಗೊಂದಲಾನ್ನ ಸರಳಗೊಳಿಸಿದಂತೆ ಆದೀತೆಂದು ಕೃಷ್ಣಪ್ಪ ಅರ್ಧಕ್ಕೆ ನಿಲ್ಲಿಸಿದ.

ಅಣ್ಣಾಜಿ ಸುಮ್ಮನಿದ್ದ. ಕೃಷ್ಣಪ್ಪನೂ ಸುಮ್ಮನೆ ಕೂತ. ಪಾರ್ಕಿನಲ್ಲಿ ಗಾಳಿ ಹಿತವಾಗಿತ್ತು. ಹೊಸದಾಗಿ ಮದುವೆಯಾದ ದಂಪತಿಗಳು, ಚಿಕ್ಕ ಮಕ್ಕಳನ್ನು ಸಂತೈಸುತ್ತ ಕೂತ ಹೆಂಗಸರು, ಅವರ ಡೊಳ್ಳುಹೊಟ್ಟೆಯ ಗಂಡಂದಿರು, ನಿವೃತ್ತರಾದ ಮೇಲೆ ತಮ್ಮ ಬೆಳೆದ ಮಕ್ಕಳ ಜೊತೆ ಕಾದಾಡುವ ಮುದುಕರು, ಇಂಥ ಜೀವನ ಇನ್ನಷ್ಟೂ ಉಜ್ವಲವಾಗುತ್ತದೆ ಎಂದು ಅಣ್ಣಾಜಿ ಹೇಳುತ್ತಾನಲ್ಲ ಅದು ಹೇಗೆ ಎಂದು ಆಶ್ಚರ್ಯಪಡುತ್ತ ಕೃಷ್ಣಪ್ಪ ಕೂತ. ಅಣ್ಣಾಜಿ ಮೃದುವಾಗಿ ಹೇಳಿದ:

“ನೀನು ಹೇಳಿದ ಯಾರೂ ಸಮಾಜ ಬಿಟ್ಟು ನಿಲ್ಲಲಿಲ್ಲ ಕೃಷ್ಣಪ್ಪ. ಅವರಿಗೂ ನಮಗೂ ಇರೋ ವ್ಯತ್ಯಾಸ ಅಂದ್ರೆ ಅವರು ಭ್ರಮೇಲಿ ಗೆಲ್ಲಲಿಕ್ಕೆ ನೋಡಿದರು. ನಾವು ಕಾರ್ಖಾನೇಲಿ, ಹೊಲದಲ್ಲಿ ನಿಜವಾಗಿ ಗೆಲ್ಲಲಿಕೆ ಪ್ರಯತ್ನಪಡ್ತೇವೆ. ನೀನು ಹೀಗೇ ಪ್ರಾಮಾಣಿಕವಾಗಿ ಉಳಿದರೆ ನೀನೂ ನನ್ನ ಥರಾನೇ ಯೋಚನೆ ಮಾಡಲೇಬೇಕಾಗತ್ತೆ -ಇವತ್ತಲ್ಲ -ನಾಳೆ.”

*
*
*

ಅಣ್ಣಾಜಿ ತಾನು ಪಾಠ ಹೇಳಿಕೊಡುತ್ತಿದ್ದ ಚನ್ನವೀರಯ್ಯನ ಮನೇಲಿ ಹೋಗಿ ಸದ್ಯಕ್ಕೆ ಇರುವುದೆಂಬ ತನ್ನ ನಿರ್ಧಾರವನ್ನು ಕೃಷ್ಣಪ್ಪನಿಗೆ ಹೇಳಿದ. ಈ ಮಫ಼್ತಿಯಲ್ಲಿರೋನು ಸಿ‌ಐಡಿ ಅಲ್ಲದಿರಬಹುದೆಂದು ಕೃಷ್ಣಪ್ಪನಿಗೆ ಅನುಮಾನ. ತನ್ನ ಸುತ್ತ ರಹಸ್ಯದ ವಾತಾವರಣವನ್ನು ಬಯಸುವ ಅಣ್ಣಾಜಿಯ ಭ್ರಮೆಯಿರಬಹುದು -ಅದು. ಇಲ್ಲವಾದಲ್ಲಿ ತನ್ನ ದಿನನಿತ್ಯದ ವಿಧಿಗಳೆಲ್ಲ ಅಣ್ಣಾಜಿಗೆ ಸಪ್ಪೆಯಾಗಿಬಿಡುತ್ತವೆ. ಆದರೆ ನಿಜವಾಗಿ ಹೆದರಿದಂತೆಯೂ ಅವನು ಕಾಣುತ್ತಿದ್ದ.

“ನಾನು ದೀಪ ಆರಿಸಿ ಹೊರಗೆ ಹೊರಟು ಹೋಗ್ತೇನೆ. ಸ್ವಲ್ಪ ಹೊತ್ತು ಬಿಟ್ಟು ನೀನು ನನ್ನ ಬೆಡಿಂಗ್ ಮತ್ತು ಪುಸ್ತಕಗಳನ್ನು ಚನ್ನವೀರಯ್ಯನ ಮನೆಗೆ ಸಾಗಿಸು -ಆ ಹಂದಿಗದು ಗೊತ್ತಾಗದಂತೆ” ಎಂದು ಪಿಸುಗುಟ್ಟಿ ಅಣ್ಣಾಜಿ ದೀಪ ಆರಿಸಿ ಹೊರಟ. ಕೃಷ್ಣಪ್ಪ ಕಿಟಕಿಯ ಮೂಲಕ ಮಫ಼್ತಿಯವನ ಚಲನವಲನಗಳನ್ನು ಗಮನಿಸುತ್ತ ನಿಂತ. ಅಣ್ಣಾಜಿ ದೀಪ ಆರಿಸಿ ಇಳಿದದ್ದನ್ನು ಅವನು ಗಮನಿಸಿರಬಹುದೆಂದು ಅನುಮಾನವಾಯಿತು. ಆತನೂ ಅಲ್ಲಿಂದ ಕದಲಿದ. ಅಣ್ಣಾಜಿಯ ಬೆನ್ನು ಹತ್ತಿ ಅವನು ನಡೆದಿರಬಹುದು. ಅಣ್ಣಾಜಿ ಇದನ್ನು ಮೊದಲೇ ಊಹಿಸಿ, ತಾನು ಸೀದ ಚನ್ನವೀರಯ್ಯನ ಮನೆಗೆ ಹೋಗುವುದಿಲ್ಲವೆಂದೂ ಕಾಕ ಹೋಟೆಲಲ್ಲಿ ಏನಾದರೂ ತಿಂದು, ತಾನು ಟ್ಯೂಶನ್ ಹೇಳುವ ಒಂದೆರಡು ಮನೆಗಳಿಗೆ ಹಾಗೇ ಭೇಟಿ ಕೊಟ್ಟು, ಇನ್ನೊಂದು ತಿಂಗಳು ತಾನು ಬರುವುದಿಲ್ಲವೆಂದು ಹೇಳಿ, ಬಳಸುದಾರಿಯಲ್ಲಿ ಚನ್ನವೀರಯ್ಯನ ಮನೆಗೆ ಹೋಗುತ್ತೇನೆಂದೂ ಕೃಷ್ಣಪ್ಪನ ಜೊತೆ ತನ್ನ ಗೆರಿಲ್ಲಾ ಉಪಾಯಗಳನ್ನು ಸೂಚಿಸಿದ್ದ.

ಸ್ವಲ್ಪ ಹೊತ್ತಿನ ಮೇಲೆ ಮಫ಼್ತಿಯಲ್ಲಿದ್ದವನು ಇನ್ನೂ ಹತ್ತಿರ ಪ್ರತ್ಯಕ್ಷವಾದ. ಬೋಡುತಲೆ ದಪ್ಪಕತ್ತುಗಳ, ಕೋಟ್ ಹಾಕಿ ಪಂಚೆಯುಟ್ಟ ಅವನು ಸಿಗರೇಟು ಕೊಳ್ಳುತ್ತ ಕೋಣೆಯ ಎದುರಿನ ಬೀದಿಯ ಮಗ್ಗುಲಲ್ಲೆ ನಿಂತಿದ್ದ. ಕೃಷ್ಣಪ್ಪ ಅವನನ್ನು ಗುರುತಿಟ್ಟುಕೊಳ್ಳಲು ಸೂಕ್ಷ್ಮವಾಗಿ ಗಮನಿಸಿದ. ಅವನ ಪಂಚೆ ಶುಭ್ರವಾಗಿತ್ತು. ಅಡಿಕೆ ತೋಟದ ಸಾಹುಕಾರನಂತೆ ಕಾಣುತ್ತಿದ್ದ. ಹಳ್ಳಿಯಿಂದ ಅಡಿಕೆ ಮಾರಲು ಬಂದಿರಬಹುದು. ಈ ಬೀದಿಯ ಸುತ್ತಮುತ್ತ ಇರುವರೆಂದು ಹೇಳಲಾದ ಯಾವುದೋ ವೇಶ್ಯೆಯ ಮನೆಯೊಳಗೆ ಹೋಗಲು ಪ್ರಶಸ್ತವಾದ ಸಮಯಕ್ಕೆ ಕಾಯುತ್ತಿರಬಹುದು. ಇಂಥ ಕ್ಷುಲ್ಲಕ ಸಿ‌ಐಡಿ ಕೆಲಸಕ್ಕೆ ತಾನು ನಿಲ್ಲಬೇಕಾಯಿತೆಂದು ಕೃಷ್ಣಪ್ಪನಿಗೆ ರೇಗಿತು. ಈ ವರೆಗೆ ಭಾಗವಹಿಸಿದ ಎಲ್ಲ ಚಳುವಳಿಗಳಲ್ಲೂ ಗಾಂಧಿವಾದಿಯಾಗಿದ್ದ ಕೃಷ್ಣಪ್ಪನಿಗೆ ರಾಜಾರೋಷವಾಗಿ ಮಾಡಲಾಗದ ಅಣ್ಣಾಜಿಯ ರಾಜಕೀಯದಲ್ಲೇನೊ ತಪ್ಪಿದೆ ಎನ್ನಿಸಿತು. ತಾನು ಇದ್ದ ಪಾರ್ಟಿಗಳನ್ನೆಲ್ಲ ಒಡೆಯುತ್ತ ಕೃತ್ರಿಮಗಳಿಗೆ ಟ್ಯಾಕ್ಟಿಕ್ಸ್ ಎಂಬ ಹೆಸರು ಕೊಟ್ಟು ಅಣ್ಣಾಜಿ ಮಾಡುತ್ತಿದ್ದ ಕಾರಸ್ತಾನಗಳಲ್ಲೇ ಪಕ್ವವಾಗುತ್ತ ಹೋಗಬೇಕಾದ ರಾಜಕೀಯ ಕ್ರಾಂತಿ, ಕೃಷ್ಣಪ್ಪನ ಸ್ವಭಾವಕ್ಕೆ ಒಗ್ಗಿರಲಿಲ್ಲ. ಆದರೆ ಅಣ್ಣಾಜಿ ದಾರ್ಶನಿಕನಂತೆಯೂ ಕೃಷ್ಣಪ್ಪನಿಗೆ ಕಂಡಿದ್ದ -ತನ್ನ ಹತ್ತಿರ ಅವನು ಮುಚ್ಚುಮರೆ ಮಾಡುತ್ತಿರಲಿಲ್ಲ.

ಕೋಟು ಪಂಚೆಯ ವ್ಯಕ್ತಿ ತನ್ನ ಜೇಬಿನಿಂದ ಕಪ್ಪು ಟೊಪ್ಪಿ ತೆಗೆದು ತಲೆಗೆ ಹಾಕಿಕೊಂಡು ಒಂದು ಜಟಕ ಹತ್ತಿದ್ದನ್ನು ಕೃಷ್ಣಪ್ಪ ನೋಡಿದ. ಅವನು ಕಣ್ಮರೆಯಾದ ಮೇಲೆ ಹೋಗಿ ಒಂದು ಜಟಕಾ ತಂದು ಅಣ್ಣಾಜಿಯ ಸರ್ವಸ್ವವಾದ ಹೋಲ್ಡಾಲಿನಲ್ಲಿ ಎಲ್ಲವನ್ನೂ ತುಂಬಿಕೊಂಡು ಬಳಸುದಾರಿಯಲ್ಲಿ ಚನ್ನವೀರಯ್ಯನ ಮನೆಗೆ ಹೋದ.
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.