ಇಗರ್ಜಿ ಸುತ್ತಲಿನ ಹತ್ತು ಮನೆಗಳು – ೫

ಶಿವಸಾಗರದ ಕ್ರೀಸ್ತುವರ ಪಾಲಿಗೆ ಸಂತಸ ತಂದ ವಿಷಯವೆಂದರೆ ಈ ಪಾದರಿ ಹಣದ ಬಗ್ಗೆ ಪದೇ ಪದೇ ಹೇಳುತ್ತಿರಲಿಲ್ಲ. ಇವರು ಶ್ರೀಮಂತ ಕುಟುಂಬದಿಂದ ಬಂದವರು ಎಂಬ ಮಾತು ಹಿಂದೆಯೇ ಎಲ್ಲರ ಕಿವಿಗೂ ಬಿದ್ದಿತು. ಇವರ ತಂದೆ ಚಿಕ್ಕಮಗಳೂರಿನ ಹತ್ತಿರವಿರುವ ಒಂದು ಕಾಫ಼ಿ ತೋಟದ ಮಾಲೀಕರೆಂದು, ಪಾದರಿ ಸಿಕ್ವೇರಾ ಅವರ ಕಿರಿಯ ಮಗನೆಂದೂ ಇವರ ಅಕ್ಕ ಭಾವಂದಿರು ಅಮೇರಿಕದಲ್ಲಿ ಇರುವುದರಿಂದಲೂ ಇವರಿಗೆ ಹಣದ ಕೊರತೆ ಇಲ್ಲವೆಂದೂ ಜನ ಮಾತನಾಡಿಕೊಂಡರು. ಪಾದರಿ ಸಿಕ್ವೇರಾ ಅವರ ಕರಿಯ ಕಾರು, ಕ್ಯಾಮರಾ, ರೇಡಿಯೋ ಇವರ ಕುತ್ತಿಗೆಯಲ್ಲಿಯ ಕಿರು ಬೆರಳ ಗಾತ್ರದ ಚಿನ್ನದ ಚೈನು, ಬೆರಳಲ್ಲಿಯ ಉಂಗುರಗಳು ಈ ಮಾತನ್ನು ಧೃಡಪಡಿಸಿದವು.
ಪಾದರಿ ಸಿಕ್ವೇರಾ ಇಗರ್ಜಿಗೆ ಬನ್ನಿ ಎಂದು ಹೇಳುತ್ತಿರಲಿಲ್ಲ. ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ, ಸತ್ತವರ ಆತ್ಮಗಳಿಗಾಗಿ ಪೂಜೆ ನೀಡುವುದು, ಇಗರ್ಜಿಗೆ ಕೊಡುವ ಅನ್ವಾಲ ಕಾಯಿದೆ ಈ ಯಾವ ಚಿಂತೆಯೂ ಅವರಿಗಿರಲಿಲ್ಲ. ಊರಿಗೆ ಬರುವಾಗ ಜೊತೆಯಲಿ ಓರ್ವ ಹುಡುಗನನ್ನು ಅವರು ಕರೆತಂದಿದ್ದರು. ಅವನು ಅವರ ಅಡಿಗೆಯ ಕೆಲಸವನ್ನು ನೋಡಿಕೊಳ್ಳುತ್ತಿದ್ದ. ಅವರು ಊರಿಗೆ ಬಂದ ಎಂಟು ದಿನಗಳ ನಂತರ ಒಂದು ಲಾರಿ ಬಂದು ಇಗರ್ಜಿಯ ಮುಂದೆ ನಿಂತು ಕುರ್ಚಿ, ಮೇಜು, ಮಂಚ, ಟೀಪಾಯಿ ಎಂದೆಲ್ಲ ಸಾಮಾನು ಇಳಿಸಿತು. ಜತೆಗೆ ಒಂದು ಮೋಟಾರು ಬೈಕ್ ಕೂಡ ಕೆಳಗಿಳಿಯಿತು. ಫೋಟೋ ಮುದ್ರಿಸುವ ಸಾಧನೆ ಸಲಕರಣೆಗಳೂ ಬಂದವು.
ಕೈಯಲ್ಲಿ ಕ್ಯಾಮರಾ ಹಿಡಿದು ತಿರುಗುವ ಪಾದರಿಯನ್ನು ಜನ ಕಂಡರು. ಅವರು ಇಗರ್ಜಿಯಲ್ಲಿ ಫೋಟೋ ತೆಗೆದರು. ಸಂತ ಜೋಸೆಫ಼ರ ಮಂಟಪದ ಫೋಟೋ ತೆಗೆದರು. ಇನಾಸನ ಮನೆ ಮುಂದಿನ ಶಿಲುಬೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದರು. ಎಳೆ ಮಕ್ಕಳು, ಮುದುಕಿಯರು, ಮುದುಕರು ಇಗರ್ಜಿಗೆ ಬಂದ ಯುವತಿಯರು, ಹುಡುಗಿಯರು ಎಲ್ಲರೂ ಅವರ ಕ್ಯಾಮರಾ ಎದುರು ನಿಂತು ನಕ್ಕರು, ನಾಚಿದರು, ಕೇಕೆ ಹಾಕಿದರು.
“ಬೋರೋ ಪದ್ರಾಬ” (ಪಾದರಿಗಳು ಒಳ್ಳೆಯವರು) ಎಂದರು ಕೆಲವರು.
“ದೇವೊ ಸ್ಪೊಣ ನಾ” (ದೈವ ಭಕ್ತಿ ಇಲ್ಲ) ಎಂಬ ಅಭಿಪ್ರಾಯವೂ ಬಂದಿತು.
“ಅವರೆಲ್ಲಿ ಇವರೆಲ್ಲಿ” ಎಂದು ಹಿಂದಿನ ಪಾದರಿಗಳ ಜತೆ ಹೋಲಿಸಿ ನೋಡಿದರು.
ಸಿಮೋನ, ಪಾಸ್ಕೋಲ, ಕೈತಾನ, ಬಳ್ಕೂರಕಾರ, ಪೆದ್ರು, ಸಂತು, ಇಂತ್ರು, ಹಸಿಮಡ್ಲು ಪಾತ್ರೋಲ ಮೊದಲಾದವರಿಗೆಲ್ಲ ವಯಸ್ಸಾಗಿತ್ತು. ಊಟದ ಮನೆ ಸಾಂತಾಮೋರಿ ತನ್ನ ವೃತ್ತಿಯನ್ನು ತ್ಯಜಿಸಿದ್ದಳು. ಎಮ್ಮೆ ಮರಿಯ ಕೂಡ ಹಾಲಿನ ಮಾರಾಟ ನಿಲ್ಲಿಸಿದ್ದಳು. ಇವರಲ್ಲಿ ಯಾರಿಗೂ ಪಾದರಿ ಸಿಕ್ವೇರಾ ಮನಸ್ಸಿಗೆ ಬಂದಿರಲಿಲ್ಲ. ಅವರು ಪೂಜೆ ಮಾಡುವ ವಿಧಾನ, ಜಪಹೇಳಿ ಕೊಡುವುದೂ ಹಿಡಿಸುತ್ತಿರಲಿಲ್ಲ. ಭಕ್ತಿಯ ಅಂಶವೂ ಇಲ್ಲದ ಈ ಪೂಜೆ. ಅದು ಹೇಗೆ ಇರಲಿ ಈ ಜನ ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದನ್ನು ರೂಢಿಸಿಕೊಂಡರು. ಕ್ರಿಸ್ತ ಪ್ರಭುವಿನ ಬದುಕಿನ ಪರಿಚಯ ಇವರಿಗಂತೂ ಇತ್ತಲ್ಲ. ಆತ ಲೋಕದ ಪಾಪಿಗಳನ್ನು ಉದ್ಧರಿಸಲು ಬಂದವ ಜನರಲ್ಲಿ ಒಂದು ಧಾರ್ಮಿಕ ಪ್ರಜ್ಞೆಯನ್ನಂತೂ ಬಿತ್ತಿದ್ದ. ಕೆಲ ವರುಷಗಳ ಹಿಂದೆ ಬತ್ತಿ ಹೋದ ಅದನ್ನು ಪಾದರಿ ಗೋನಸ್ವಾಲಿಸ್ ರು, ಪಾದರಿ ಮಸ್ಕರಿನಾಸರು ಮತ್ತೆ ಚಿಗುರುವಂತೆ, ಬೆಳೆಯುವಂತೆ ಮಾಡಿದರು. ಅದರ ಯತ್ನದಿಂದಾಗಿ ಶಿವಸಾಗರದ ಜನ ಈಗಲೂ ಅದೇ ಮನೋಪ್ರವೃತ್ತಿಯವರಾಗಿದ್ದರು. ಹಿರಿಯರು, ಹಳಬರಂತೂ ಈ ಪ್ರವೃತ್ತಿಯಿಂದ ಹೊರಬರಲಿಲ್ಲ.
ಇಷ್ಟಾದರೂ ಫ಼ಾತಿಮಾ ನಗರದ ಜನ ಪಾದರಿ ಸಿಕ್ವೇರಾ ಅವರನ್ನು ತುಂಬಾ ಮೆಚ್ಚಿಕೊಂಡರು. ಪೂಜೆ ಮುಗಿದಾಕ್ಷಣ ಇವರೆಲ್ಲ ಹೋಗಿ ಅವರನ್ನು ಕಂಡು ಮಾತನಾಡಿ ಬರುತ್ತಿದ್ದರು. ವಾರಕ್ಕೊಮ್ಮೆ ಇಲ್ಲ ಎರಡು ಬಾರಿ ಪಾದರಿ ಸಿಕ್ವೇರಾ ಅವರ ಮೋಟಾರ ಸೈಕಲ್ಲು ಫ಼ಾತಿಮಾ ನಗರದತ್ತ ಗುಡುಗುಡು ಸದ್ದು ಮಾಡುತ್ತ ಬರುತ್ತಿತ್ತು. ಅಲ್ಲಿ ಕೆಲ ಮನೆಗಳ ಅಂಗಳಕ್ಕೆ ಹೋಗಿ. ಕೆಲ ಮನೆಗಳ ಒಳಗೆ ಪ್ರವೇಶಿಸಿ-
“ಕಿತೆಂ…ಕಸಿ ಭಲಾಯ್ಕಿ?” (ಹೇಗೆ? ಆರೋಗ್ಯವಾಗಿದ್ದೀರಾ?) ಎಂದು ಕೇಳಿ ಬರುತ್ತಿದ್ದರು ಅವರು.
ರೈಲ್ವೆ ಇಲಾಖೆಗೆ ಕೆಲ ಹೊಸ ನೌಕರರು ಅಧಿಕಾರಿಗಳು ಬಂದಿದ್ದರು. ಅವರಲ್ಲಿ ಕೆಲವರು ಕ್ರೀಸ್ತುವರೂ ಇದ್ದರು. ಎಲ್ಲರಿಗೂ ಸರಕಾರಿ ಮನೆಗಳು ಸಿಗದ್ದರಿಂದ ಕೆಲವರು ಫ಼ಾತಿಮಾ ನಗರದಲ್ಲಿ ಮನೆ ಮಾಡಿದರು. ಇವರಿಗೂ ಪಾದರಿ ಸಿಕ್ವೇರಾ ಅವರಿಗೂ ಒಳ್ಳೆಯ ಸ್ನೇಹವಿತ್ತು. ಅವರು ಇವರ ಮನೆಗಳಿಗೂ ಬಂದು ಮಾತನಾಡಿಕೊಂಡು ಹೋಗುತ್ತಿದ್ದರು. ತಮ್ಮ ಮಾತಿನಲ್ಲಿ ವರ್ತನೆಯಲ್ಲಿ ಫ಼ಾತಿಮಾ ನಗರದ ಕ್ರೀಸ್ತುವರ ಬಗ್ಗೆ ಮೃದುವಾದ ಭಾವನೆಯನ್ನು ಇರಿಸಿಕೊಂಡಿದ್ದರು ಪಾದರಿ. ಇದಕ್ಕೆ ಕಾರಣ ಇವರೆಲ್ಲ ವಿದ್ಯಾವಂತರಾಗಿದ್ದರು. ಒಳ್ಳೆಯ ಉದ್ಯೋಗಗಳಲ್ಲಿದ್ದರು. ಉಡಿಗೆ ತೊಡಿಗೆಯಲ್ಲಿ ಮನೆಯ ರೀತಿ ರಿವಾಜುಗಳಲ್ಲಿ ನಾಜೂಕುತನ ಇರಿಸಿಕೊಂಡಿದ್ದರು. ರೈಲು ಇಲಾಖೆಯ ಕ್ರೈಸ್ತ ನೌಕರರು ತಮಿಳರಾಗಿದ್ದರಿಂದ ಇವರಿಗೆ ಕರಿಕಾಲಿನವರು ಎಂಬ ಅಡ್ಡಹೆಸರೂ ಬಿದ್ದಿತ್ತು.
ಹೀಗೆಯೇ ಪಾದರಿ ಸಿಕ್ವೇರಾ ಅವರ ಆಗಮನ ಸಂತ ತೆರೇಜಾ ಕಾನ್ವೆಂಟಿನ ಕನ್ಯಾ ಸ್ತ್ರೀಯರಿಗೂ ಸಂತಸವನ್ನು ತಂದಿತು. ಶಿವಸಾಗರದ ಕ್ರೀಸ್ತುವರಿಗೆ ಶಿಕ್ಷಣದ ಜೊತೆಗೆ ಧಾರ್ಮಿಕ ತರಬೇತಿಯನ್ನೂ ನೀಡುವುದು ಅವರ ಉದ್ದೇಶವಾಗಿತ್ತು. ಈ ಕೆಲಸವನ್ನು ಪಾದರಿ ಮಾಡುತ್ತಾರಾದರೂ ಶಿಕ್ಷಣದ ಜತೆ ಜತೆಗೆ ನೀಡುವ ಈ ತರಬೇತಿ ಹೆಚ್ಚು ಪರಿಣಾಮ ಉಂಟು ಮಾಡುತ್ತದೆ. ಕೊನೆಯವರೆಗೂ ಇರುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು.
ಬಹಳ ಹುರುಪಿನಿಂದ ಬಂದ ಅವರಿಗೆ ಇಲ್ಲಿ ನಿರಾಶೆಯಾಗತೊಡಗಿತು. ಸರಕಾರಿ ಶಾಲೆಗಳಿಗೆ ಹೋಗುತ್ತಿದ್ದ ಕ್ರೀಸ್ತುವರ ಮಕ್ಕಳನ್ನು ಕಾನ್ವೆಂಟಿಗೆ ತಂದು ಸೇರಿಸಿಕೊಳ್ಳುವುದು ಮೊದಲು ಕಷ್ಟವಾಯಿತು. ಮನೆಗೆ ಶಾಲೆ ಹತ್ತಿರವಾಗಿದ್ದರೂ ಇದೊಂದು ವರ್ಷ ಕಳೆಯಲಿ ಎಂದರು. ನಂತರ ಮಕ್ಕಳು ಶಾಲೆಗೆ ಬಂದವು. ಹೆಸರು ಬರೆಸಿ ಹೋದವರು ನಿತ್ಯ ಹಾಜರಿ ಕೊಡಲು ಮರೆತರು. ಶುಚಿಯಾಗಿ ಬರುತ್ತಿರಲಿಲ್ಲ. ಪುಸ್ತಕ, ಪೆನ್ಸಿಲ್ಲು ತರುತ್ತಿರಲಿಲ್ಲ. ಬೆಳಿಗ್ಗೆ ಬಂದವರು ಸಂಜೆಗೆ ತಪ್ಪಿಸಿಕೊಂಡರು. ಕೆಲವರಿಗೆ ಆಸಕ್ತಿ ಇರಲಿಲ್ಲ. ಶಾಲೆಗೆ ಸೇರಿದ ಮೂರು ಆರು ತಿಂಗಳಲ್ಲಿ ಮಕ್ಕಳು ಬರುವುದನ್ನೇ ನಿಲ್ಲಿಸಿದರು.
ಸಿಸ್ಟರ್ ಲೀನಾ ದುಮಿಂಗನ ಮನೆಗೆ ಹೋಗಿ ಅವನ ಹೆಂಡತಿಗೆ-
“ನಿಮ್ಮ ಹುಡುಗ ಸರಿಯಾಗಿ ಶಾಲೆಗೆ ಬರುವುದಿಲ್ಲ” ಎಂದಾಗ ಆಕೆ-
“ಹೋಗು ಅಂತೀವಿ..ಅವನು ಹೋಗಿ ಗೇರು ಮರದ ಮೇಲೆ ಕೂತರೆ ನಾನು ಏನು ಮಾಡಲಿ?” ಎಂದು ಕೇಳಿದಳು.
ಜೋಸೆಫ಼ನ ಹೆಂಡತಿ ಕ್ರಿಸ್ತೀನಾ-
“ನೀವು ನಮ್ಮ ಹುಡುಗನಿಂದ ಕಸ ಗುಡಿಸೋದು ನೆಲ ತೊಳಿಯೋದು ಮಾಡಸ್ತೀರಂತೆ..ಆ ಕೆಲಸಾನ ಅವನು ಮನೇಲೇ ಮಾಡತಾನೆ ಬಿಡಿ..” ಎಂದಳು.
ಕಾನ್ವೆಂಟಿನ ಕನ್ಯಾಸ್ತ್ರಿಗಳು ಪ್ರತಿದಿನ ಒಂದೊಂದು ಮನೆಗೆ ಹೋಗಿ ಜಪಸರ ಪ್ರಾರ್ಥನೆ ಮಾಡುವ ಕಾರ್ಯಕ್ರಮವನ್ನು ಹಾಕಿಕೊಂಡರು. ಮನೆಯವರೂ ಸೇರಿಕೊಂಡಿದ್ದರೆ ಈ ಕಾರ್ಯಕ್ರಮ ಯಶಸ್ವಿಯಾಗುತ್ತಿತ್ತು. ಆದರೆ ಮನೆಗಳಲ್ಲಿ ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ಇನಾಸನ ಮನೆಯಲ್ಲಿ ಅವನ ಮಕ್ಕಳು ಜಗಳವಾಡುತ್ತಿದ್ದರು. ಸಿಮೋನನ ಮನೆಯಲ್ಲಿ ಅತ್ತೆ ಸೊಸೆಯ ನಡುವೆ ಮಾತು. ಕೈತಾನ ಕುಡಿದು ಬಂದಿರುತ್ತಿದ್ದ.
“ಅಯ್ಯೋ ನಮ್ಮ ಕೆಲಸಾನೇ ಮುಗಿಲಿಲ್ವೇ” ಎಂದು ಹೆಂಗಸರು ಗೊಣಗಿದರು.
ಹೀಗಾಗಿ ಈ ಜಪಸರ ಪ್ರಾರ್ಥನೆ ಫ಼ಾತಿಮಾ ನಗರದ ಮನೆಗಳಿಗೆ ಮಾತ್ರ ಸೀಮಿತವಾಯಿತು.
ಪಾದರಿ ಮಸ್ಕರಿನಾಸ ಕೂಡ ಸಿಸ್ಟರುಗಳ ವಿಷಯದಲ್ಲಿ ಅಷ್ಟೊಂದು ಮೃದು ಹೃದಯಿಯಾಗಿರಲಿಲ್ಲ. ಊರಿಗೆ ಶಾಲೆ ಬೇಕು ಬನ್ನಿ ಎಂದು ಅವರೇ ತಮ್ಮನ್ನು ಕರೆದಿದ್ದರೂ ತಾವು ಬಂದ ನಂತರ ಅವರು ಬದಲಾಗಿದ್ದರು.
“ನಿಮ್ಮದೆಲ್ಲ ಸರಿ..ನೀವು ಎಲ್ಲ ಜನ ಬಂದ ಮೇಲೆ ಇಗರ್ಜಿಗೆ ಬರೋದು..ದಿವ್ಯ ಪ್ರಸಾದ ಸ್ವೀಕಾರಕ್ಕೆ ಪ್ರತ್ಯೇಕವಾಗಿ ಮೋಣಕಾಲೂರೋದು..ಕುಳಿತು ಕೊಳ್ಳಲಿಕ್ಕೆ ಬೇರೇನೆ ಜಾಗ ಬೇಕು ಅನ್ನೋದು ನನಗೆ ಹಿಡಿಸೋದಿಲ್ಲ..” ಅನ್ನುತ್ತಿದ್ದರು ಅವರು.
ಶಿವಸಾಗರಕ್ಕೆ ಹೊಸದಾಗಿ ಬಂದ ತಾವು ಹೀಗೊಂದು ಪದ್ಧತಿ ಆರಂಭಿಸಿದ್ದು ನಿಜವೆ. ಇನ್ನೇನು ಪಾದರಿ ಪೂಜೆ ಆರಂಭಿಸುತ್ತಾರೆ ಅನ್ನುವಾಗ ತಾವು ಕಾನ್ವೆಂಟಿನಿಂದ ಸಾಲಾಗಿ ಇಗರ್ಜಿಗೆ ಬರುತ್ತಿದ್ದೆವು. ಎಲ್ಲರೂ ಒಟ್ಟಿಗೇನೆ ಹೋಗಿ ದಿವ್ಯ ಪ್ರಸಾದ ಸ್ವೀಕರಿಸುವಲ್ಲಿ ಮೊಣಕಾಲೂರುತ್ತಿದ್ದೇವು. ಊರಿಗೆ ಬಂದ ತಕ್ಷಣ ತಮಗಾಗಿ ಬೇರೆಯೇ ಆಸನಗಳನ್ನು ವ್ಯವಸ್ಥೆ ಮಾಡಿಕೊಡಿ ಎಂದು ಪಾದರಿಗಳಿಗೆ ಕೇಳಿದ್ದೆವು. ಬೇರೆಲ್ಲ ಕಡೆಯೂ ಈ ಗೌರವ ತಮಗಿರುವಾಗ ಇಲ್ಲಿ ಏಕೆ ಬೇಡ? ಆದರೆ ಇದು ಮಸ್ಕರಿನಾಸರ ಕೋಪಕ್ಕೆ ಕಾರಣವಾಯಿತು. ಪೂಜೆ ಮುಗಿಸಿ ಅವರು ಪೂಜಾ ಪಾತ್ರೆ ಹಿಡಿದು ಒಳಕ್ಕೆ ತಿರುಗುವ ಮುನ್ನವೇ ತಾವು ಇಗರ್ಜಿಯಿಂದ ಹೊರಡುವುದನ್ನು ಸಹಿಸಲು ಅವರಿಂದ ಆಗುತ್ತಿರಲಿಲ್ಲ. ಆಗ ಅವರು ತಮ್ಮನ್ನು ದುರು ದುರು ನೋಡುತ್ತಿದ್ದರು.
ಪಾದರಿ ಸಿಕ್ವೇರಾ ಅವರಲ್ಲಿ ಈ ವರ್ತನೆಯಿಲ್ಲ.
“ಸಿಸ್ಟರ್ ಲೀನಾ…ಈವತ್ತು ನೀವು ಬೇರೆಯೇ ಕಾಣುತ್ತೀರಿ..”
“ಸಿಸ್ಟರ್ ಜ್ಯೋತಿ ನಿಮ್ಮದೊಂದು ಫೋಟೋ ತೆಗೆಯೋಣವೆ?”
“ಸಿಸ್ಟರ್ ಕ್ಲಾರಿಸ್..ನಿಮ್ಮ ಧ್ವನಿ ಚೆನ್ನಾಗಿದೆ.” ಎಂದೆಲ್ಲ ಹೇಳುತ್ತಾರೆ. ಕಾನ್ವೆಂಟಿಗೆ ಬರುತ್ತಾರೆ. ಇಗರ್ಜಿಗೆ ಹೂ ಕುಂಡ ಮಾಡಿಕೊಡಿ. ಅಲ್ತಾರ ಬಟ್ಟೆ ಹೆಣೆದು ಕೊಡಿ ಎಂದು ಕೇಳುತ್ತಾರೆ.
ಹಾಗೆಯೇ ಊರಿನ ಜನಕ್ಕೆ ಕಾನ್ವೆಂಟ್ ಬೇಕಾಗಿದೆ. ಊರಿನ ಶ್ರೀಮಂತರು, ವೈದ್ಯರು, ವಕೀಲರು, ಬ್ಯಾಂಕ್ ಅಧಿಕಾರಿಗಳು, ಸರಕಾರಿ ಅಧಿಕಾರಿಗಳು, ತಮ್ಮ ಮಕ್ಕಳನ್ನು ತಂದು ತಂದು ಕಾನ್ವೆಂಟಿಗೆ ಸೇರಿಸುತ್ತಾರೆ. ಯೂನಿಫ಼ಾರಂ ಹೊಲಿಸಿ ಮಕ್ಕಳಿಗೆ ತೊಡಿಸಿ ಕಳುಹಿಸುತ್ತಾರೆ. ಫ಼ೀಸು ಡೋನೇಷನ್ ಎಷ್ಟು ಕೇಳಿದರೂ ಕೊಡುತ್ತಾರೆ. ಮದರ್ಸ್ ಡೇ, ಮಕ್ಕಳ ದಿನಾಚರಣೆ, ಫ಼್ಲ್ಯಾಗಡೇ ಎಂದೆಲ್ಲ ಹಣ ತನ್ನಿ ಎಂದಾಗ ಮಕ್ಕಳು ಉತ್ಸಾಹದಿಂದ ಹಣ ತರುತ್ತಾರೆ.
“ಏನಾದರೂ ಆಗಬೇಕಿದ್ದರೆ ಹೇಳಿ ಸಿಸ್ಟರ್” ಎಂದು ಕಂಟ್ರ್ಯಾಕ್ಟರ್ ಶೆಣೈ, ಹೋಟೆಲ್ ಮಾಲೀಕ ಅಪ್ಪಣ್ಣ, ಅಂಗಡಿ ಸಾಹುಕಾರ ವಿಶ್ವನಾಥ ಶೆಟ್ಟಿ, ಡಾಕ್ಟರ್ ಕೊದಂಡರಾವ್, ಎಸ್.ಪಿ ಷಡಕ್ಷರಿ ಬಂದು ಕೇಳುತ್ತಾರೆ. ತಟ್ಟನೆ ಏನಾದರೂ ಕೆಲಸವಾಗಬೇಕು ಅಂದರೆ ಮಾಡಿಕೊಡುತ್ತಾರೆ. ಈ ಸೌಜನ್ಯ ಸೇವಾ ಮನೋಭಾವ ಕ್ರೀಸ್ತುವರಲ್ಲಿ ಇಲ್ಲ.
“ಮದರ್ಸ್ ಡೇಗೆ ಎಂಟೆಂಟಾಣೆ ತನ್ನಿ ” ಎಂದರೆ ಕ್ರೀಸ್ತುವರ ಮಕ್ಕಳು ತರುವುದಿಲ್ಲ.
“ತೆಗೆದುಕೊಂಡು ಬಾ ಹೋಗು” ಎಂದು ಸಿಸ್ಟರ್ ಜ್ಯೋತಿ ಮಿಂಗೇಲಿಯ ಮಗನನ್ನು ಕಳುಹಿಸಿದ್ದಕ್ಕೆ ಅವನ ಹೆಂಡತಿ ಕಲ್ಲಿ ಕಾನ್ವೆಂಟಿಗೆ ಬಂದು-
“ನಿಮಗೇನು ಕಡಿಮೆಯಾಗಿರೋದು..ನಿಮಗೇನು ಮನೇ ಉಂಟು..ಮಕ್ಕಳಿದ್ದಾರೆಯೇ..” ಎಂದು ಕೂಗಾಡಿ ಹೋಗಿದ್ದಾಳೆ.
ಊರ ಜನರಿಗೆ, ಅಧಿಕಾರಿ ಶ್ರೀಮಂತರ ಮಕ್ಕಳಿಗೆ ಕಾನ್ವೆಂಟ್ ಬೇಕಾಗಿದೆ. ಹೀಗೆಂದೇ ಊರಿನಲ್ಲಿ ಕಾನ್ವೆಂಟ್ ನಡೆಯುತ್ತಿದೆ. ಈ ನಡುವೆ ಪಾದರಿ ಸಿಕ್ವೇರಾ ತಮ್ಮನ್ನು ಚೆನ್ನಾಗಿ ನಡೆಸಿಕೊಂಡು ಬರುತ್ತಿರುವುದು ಕೂಡ ನೆಮ್ಮದಿಯ ವಿಷಯ, ಎಂಬ ಅಭಿಪ್ರಾಯವನ್ನು ಸಂತ ತೆರೇಜಾ ಕಾನ್ವೆಂಟಿನ ಸಿಸ್ಟರುಗಳು ತಾಳಿದರು.
ಈ ಎಲ್ಲ ಹಿನ್ನೆಲೆಯಲ್ಲಿ ಶಿವಸಾಗರದ ಕ್ರಿಸ್ತುವರ ಬದುಕು ಸಾಗುತ್ತಿರಲು ಫ಼ಾತಿಮಾ ನಗರ ಹಾಗೂ ಜೋಸೆಫ಼್ ನಗರದ ಒಂದೊಂದು ಮನೆಯ ಬದುಕು ಒಂದೊಂದು ದಾರಿ ಹಿಡಿದಿತ್ತು.
*
*
*
ಸಿಮೋನ ಈಗ ಗುರ್ಕಾರ ಅಷ್ಟೆ. ಅವನು ಈಗ ಮೇಸ್ತ್ರಿಯಲ್ಲ.. ಕೆಲಸ ಮಾಡುವುದನ್ನು ಆತ ನಿಲ್ಲಿಸಿ ಬಹಳ ವರ್ಷಗಳಾಗಿವೆ. ಕೆಲಸ ಮಾಡಿಸುವುದನ್ನು ಕೂಡ. ಅವನ ಪ್ರಕಾರ ಕಲ್ಲು ಕೆಲಸ ಮಾಡುವುದರಲ್ಲಿ ಕ್ರೀಸ್ತುವರಿಗೆ ಇದ್ದ ಹೆಸರು. ನೈಪುಣ್ಯತೆ ಈಗ ಉಳಿದಿಲ್ಲ.
ಶಿವಸಾಗರದ ಯಾವುದೇ ಹಳೆ ಇಮಾರತ ತೆಗೆದುಕೊಳ್ಳಿ ಅದನ್ನು ಕಟ್ಟಿದವ ಇಲ್ಲ ಕಟ್ಟಿಸಿದವ ತಾನು ಅನ್ನುತ್ತಾನೆ ಸಿಮೋನ.
“ಅವತ್ತು ರಾಯರೆ, ಏನೂ ಇರಲಿಲ್ಲ..ಬಸ್ಸು, ರೈಲು ಕೇಳಬೇಡಿ..ಆದರೂ ಜನರನ್ನ ಕರೆತರತಿದ್ದೆ ಕೆಲಸ ಮಾಡತಿದ್ದೆ…ಎಂಥಾ ಕೆಲಸ! ಸೊರಬದ ಸೇತುವೆ ಕಟ್ಟಿದ್ದಕ್ಕೆ ಜಿಲ್ಲಾಧಿಕಾರಿಗಳೇ ನನಗೆ ಹಾರ ಹಾಕಿದ್ರು, ದೇವಪ್ಪನ ಛತ್ರ ಕಟ್ಟಿದ್ದಕ್ಕೆ ಬೆಳ್ಳಿ ಬಳೆ, ಮತ್ತೊಂದು ಕಟ್ಟಿದ್ದಕ್ಕೆ ಬಂಗಾರದ ಉಂಗುರ. ದಿನ ಬೆಳಗಾದ್ರೆ ಜನ ಮನೆಬಾಗಿಲಲ್ಲಿ ಸಿಮೋನ ಆ ಕೆಲಸ ಆಗಬೇಕು, ಈ ಕೆಲಸ ಆಗಬೇಕು..ಅಂತ ಬಂದು ನಿಂತಿರೋರು..”
ಕೇಳುವವರು ಸಿಕ್ಕರೆ ಆತ ಮಾತನಾಡುತ್ತ ಹೋಗುತ್ತಾನೆ. ಈಗೀಗ ಅವನು ಮಾತನಾಡುವುದನ್ನು ಹೆಚ್ಚು ಮಾಡಿದ್ದಾನೆ.
“ಈವತ್ತು ಈ ಹೆಸರು ಉಳಿದಿಲ್ಲ..ಊರಿನ ಯಾರಾದ್ರು ಒಬ್ರು ಕೇರಿಗೆ ಬರತಾರ ನೋಡಿ” ಎಂದು ಮುಖ ಬಾಡಿಸಿಕೊಂಡು ಕೇಳುತ್ತಾನೆ.
“ಯಾಕೆ? ಗೊತ್ತ ನಿಮಗೆ?”
ಅವನೇ ಉತ್ತರ ಕೊಡುತ್ತಾನೆ.
“ಬೇರೆ ಜನ ನಮಗಿಂತ ಚೆನ್ನಾಗಿ ಈ ಕೆಲಸ ಮಾಡತಾರೆ..ಮಲೆಯಾಳಿಗಳು, ತಮಿಳರು ಈ ಕೆಲಸ ಕಲಿತು ಭೇಷ ಅನ್ನಿಸಿಕೊಂಡಿದಾರೆ. ಹೊರಗಿನ ಜನ ಬೇಕಿಲ್ಲ. ಊರಲ್ಲಿ ಇರೋರೇ ಸಾಕು. ನಮ್ಮವರೂ ಇದ್ದಾರೆ..ಆದರೆ ರಾಯರೇ ನಮ್ಮ ಜನರನ್ನು ಹೆಂಡ ಕೆಡಿಸಿದೆ…ಕುಡಿದು ಕುಡಿದು ಎಲ್ಲ ದೋಟಿಗಳಾಗಿದಾರೆ..ಜನರ ಹತ್ರ ಅಡ್ವಾನ್ಸು ಅಂತ ಹಣ ತೊಕೊಳ್ಳೊದು..ಕೆಲಸಕ್ಕೆ ಹೋಗದೆ ಸತಾಯ್ಸೋದು..ಯಾರು ಕೆಲಸ ಕೊಡತಾರೆ ಹೇಳಿ ಹೀಗೆ ಮಾಡಿದ್ರೆ?” ಎಂದು ಕೇಳುತ್ತಾನೆ.
“ನಾನು ಹೇಳೋದು ಸುಳ್ಳಲ್ಲ, ಅಲ್ಲಿ ನೋಡಿ” ಸಿಮೋನ ತೋರಿಸುತ್ತಾನೆ. ಫ಼ಾತಿಮಾ ನಗರದಲ್ಲಿ ಎರಡು ಸಾರಾಯಿ ಅಂಗಡಿ , ಜೋಸೆಫ಼ ನಗರದಲ್ಲಿ ಎರಡು. ಈ ಎರಡೂ ನಗರಗಳಲ್ಲಿ ಎಂಟು ಬಾರುಗಳು.
“ಬ್ರಾಹ್ಮಣರ ಕೇರಿಲಿ ಲಿಂಗಾಯತರ ಕೇರೀಲಿ ಹೀಗೆ ಅಂಗಡಿ ಇಡೋಲ್ಲ…ಸರಕಾರ ಬಿಡಲ್ಲ..ಆದರೆ ಇಲ್ಲಿ..ಜನರಿಗೆ ಬೇಕು ಇಡತಾರೆ..ನಮ ಜನ ಈಗೀಗ ಕುಡಿದೇ ಸತ್ರು..” ಅನ್ನುತ್ತಾನೆ ಆತ.
ತಟ್ಟನೆ ಅವನಿಗೆ ತನ್ನ ಈರ್ವರು ಮಕ್ಕಳ ನೆನಪಾಗುತ್ತದೆ. ಕೇರಿಯ ಇತರೆ ತರುಣರ ನೆನಪಾಗುತ್ತದೆ. ಎಲ್ಲರೂ ಕುಡಿಯುವವರೆ, ಕುಡಿಯುವುದು ಅಂದರೇನು? ಬೆಳಿಗ್ಗೆ ಎದ್ದ ಕ್ಷಣದಿಂದ ಕುಡಿ ಕುಡಿ ಕುಡಿ. ಮದುವೆ ಮನೆಯಲ್ಲಿ ಕುಡಿ, ತೊಟ್ಟಿಲಿಗೆ ಹಾಕುವಲ್ಲಿ ಕುಡಿ, ಹಬ್ಬದ ದಿನ ಕುಡಿ, ಸತ್ತವರ ಮನೆಯಲ್ಲಿ ಕುಡಿ. ಹಿಂದೆ ಹೀಗೆ ಇರಲಿಲ್ಲ. ಕೆಲಸ ಮುಗಿಸಿ ಸಾಯಂಕಾಲ ಬಂದ ಏನೋ ಒಂದಿಷ್ಟು ಕುಡಿದು ಮಲಗಿದ. ಈಗ ? ಕುಡಿದವ ರಸ್ತೆಗೇನೆ ಹೋಗಬೇಕು.
ಊರ ಜನರಿಗೆ ಏನಾಗಿದೆ. ಕ್ರಿಶ್ಚಿಯನ್ ಅಂದ ಕೂಡಲೇ ಈ ಕುಡುಕುತನ ನೆನಪಿಗೆ ಬರುತ್ತದೆ.
“ಹೌದೋ ಅಲ್ಲವೋ ಹೇಳಿ?” ಮತ್ತೆ ಪ್ರಶ್ನೆ ಮಾಡುತ್ತಾನೆ ಸಿಮೋನ.
ಪಾದರಿ ಗೋನಸ್ವಾಲಿಸ್ ಹೇಳಿದರೆಂದು ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಿದ. ಅವರು ಒಂದು ಎರಡು ತರಗತಿ ಓದಿಬಿಟ್ಟರು. ಹೆಣ್ಣು ಮಕ್ಕಳು ಮದುವೆಯಾಗಿ ಹೋದರು. ಗಂಡು? ಅವರ ಮದುವೆಯೂ ಆಯಿತು. ಹಿರಿಯ ಮಗ ವಿಕ್ಟರ್ ಒಂದು ದಿನ ತನ್ನ ಬಳಿ ಬಂದ-
“..ಅಪ್ಪ ನಾನು ಬೇರೆ ಆಗುತ್ತೇನೆ” ಎಂದು.
ಅವನ ಮಾತೇ ವಿಚಿತ್ರವೆನಿಸಿತು. ತುಂಬಿಕೊಂಡ ಮನೆ ತನ್ನದು..ಆರು ಗಂಡು ಮೂರು ಹೆಣ್ಣು. ಹುಡುಗಿಯರು ಮದುವೆಯಾಗಿ ಹೋಗುವ ಮುನ್ನ ತನ್ನ ಮನೆಯಲ್ಲಿ ಸಂಜೆಯ ಪ್ರಾರ್ಥನೆ ಮಾಡುತ್ತಿದ್ದರೆ ಕೇರಿಗೆಲ್ಲ ಕೇಳುತ್ತಿತ್ತು. ತಾಯಿ ಬೇರೆ. ಎಲ್ಲರೂ ಅಲ್ತಾರಿನ ಮುಂದೆ ಮೊಣಕಾಲೂರಿ ಪರಲೋಕ ಮಂತ್ರ ಹೇಳುತ್ತಿದ್ದರೆ ಬಾಗಿಲ ಬಳಿ ನಿಂತ ತಾನು ಸಂತಸ ಪಡುತ್ತಿದ್ದೆ. ಈ ಮನೆ ಹೀಗೆಯೇ ತುಂಬಿಕೊಂಡಿರಲಿ ಎಂದು ಕೂಡ ಬಯಸುತ್ತಿದ್ದೆ.
“ನಮ್ಮ ಕುಟುಂಬದ ಏಕತೆಗಾಗಿ ಒಂದು ಪರಲೋಕ ಮಂತ್ರ ಎರಡು ನಮೋರಾಣೆ ಮಂತ್ರ ಸಮರ್ಪಿಸೋಣ” ಎಂದು ತಾನೇ ಹೇಳುತ್ತಿದ್ದ.
ಹೆಣ್ಣು ಮಕ್ಕಳ ಮದುವೆಯಾಯಿತು. ಮೂವರೂ ಮೂರು ದಿಕ್ಕಿಗೆ ಹೋದರು. ಅಮ್ಮ ತೀರಿಕೊಂಡಳು. ಆಗ ತನ್ನ ಮನೆಯ ಪ್ರಾರ್ಥನೆ ಸೊರಗಿತು. ಗಂಡು ಹುಡುಗರು ಹೆಣ್ಣು ಮಕ್ಕಳ ಹಾಗೆ ದನಿ ಎತ್ತಿ ಹಾಡುತ್ತಿರಲಿಲ್ಲ. ಹೆಂಡತಿಯೊಬ್ಬಳೆ ಹಾಡಬೇಕು. ಮನೆಯೂ ಬರಿದಾಗಿ ಹೋದಂತೆ. ಆದರೆ ಆಗಾಗ್ಗೆ ಇಗರ್ಜಿ ಹಬ್ಬಕ್ಕೊ ಕ್ರಿಸ್ಮಸ್ ಗೋ ಅಳಿಯಂದಿರು, ಹೆಣ್ಣು ಮಕ್ಕಳು, ಮೊಮ್ಮಕ್ಕಳು ಬಂದಾಗ ಮತ್ತೆ ಮನೆ ತುಂಬಿಕೊಳ್ಳುತ್ತಿತ್ತು.
“ತೇರ್ಸ ಮಾಡಲಿಕ್ಕೆ ನಾವು ಇಗರ್ಜಿಗೇನೆ ಹೋಗಬೇಕು” ಅನ್ನುತ್ತಿದ್ದ ಕೊನೆಯ ಮಗ, ಅಷ್ಟು ಜನ ಮನೆಯಲ್ಲಿ ಆದರೂ ಅದೆಂತಹ ಸಂತಸ, ಸಂಭ್ರಮ. ಇದು ನಾಲ್ಕು ದಿನ ಎಂಟು ದಿನ. ನಂತರ ಮತ್ತೆ ಮನೆ ಬರಿದು. ಕ್ರಮೇಣ ಅಳಿಯಂದಿರು, ಹೆಣ್ಣು ಮಕ್ಕಳು ಬರುವುದನ್ನು ಕಡಿಮೆ ಮಾಡಿದರು. ಅವರಿಗೆ ಅವರದ್ದೇ ತಾಪತ್ರಯಗಳು ಕೆಲಸಗಳು.
ಹೀಗೆಂದೇ ಹಿರಿಯ ಮಗನಿಗೆ ಮದುವೆ ಮಾಡಿದೆ. ಎರಡನೆಯವನಿಗೂ ಇಬ್ಬರು ಸೊಸೆಯಂದಿರು ಬಂದರು.
ಮೇಣದ ಬತ್ತಿ ಹಚ್ಚಲು, ದೇವರಿಗೆ ಅಬ್ಬಲಿಗೆ ಹೂವಿನ ಹಾರ ಹಾಕಲು, ಪ್ರಾರ್ಥನೆ ಕಲಿಸಲು, ಕೀರ್ತನೆ ಹಾಡಲು ಹುಡುಗಿಯರು ಬಂದರು. ಮತ್ತೆ ಮನೆಗೆ ಕಳೆ ಬಂದಿತು. ದೇವರ ಕೋಣೆ ತುಂಬಿತು.
ಆದರೆ ಹೊರಗಿನಿಂದ ಬಂದ ಹುಡುಗಿಯರಿಂದ ಏಕೋ ಮನೆಯಲ್ಲಿ ಹೊಂದಾಣಿಕೆ ಕಾಣಲಿಲ್ಲ. ಮುಖ ಊದಿಸಿಕೊಳ್ಳುವುದು, ಅತ್ತೆಯ ಜತೆ ಜಗಳ, ಪ್ರಾರ್ಥನೆಗೆ ಬಾರದಿರುವುದು, ಊಟ ಮಾಡುವಾಗ ಬೇರೆ. ತನ್ನಿಂದ ಇದನ್ನು ಸಹಿಸಲಾಗಲಿಲ್ಲ.
“ಅಪ್ಪಿ..” ಎಂದು ಹೆಂಡತಿಯನ್ನು ಕರೆದೆ.
“ನೀನೆ ಸುಧಾರಿಸಿಕೊಂಡು ಹೋಗಬೇಕು. ಮೂರು ಜನ ಹೆಣ್ಣುಮಕ್ಕಳನ್ನು ಹೆತ್ತು ಬೆಳೆಸಿದವಳು ನೀನು. ಅವರು ಪರಸ್ಪರ ಕಾದಾಡುವಾಗ ಅವರಿಗೆ ಗದರಿಸಿ ಸುಮ್ಮನಿರಿಸಿದವಳು..ಈಗ ನಿನಗೆ ಇಬ್ಬರು ಸೊಸೆಯಂದಿರಿದ್ದಾರೆ..ನೋಡು..ಈ ಮನೆ ಮಾತ್ರ ಹೀಗೇ ಇರಬೇಕು ..” ಎಂದೆ.
ಅಪ್ಪಿ ಮಾತನಾಡಲಿಲ್ಲ, ಆದರೂ ಅವಳ ಮೇಲೆ ನನಗೆ ಭರವಸೆ, ನಂಬಿಕೆ, ತಾನು ಇಲ್ಲಿ ಬಂದು ಇದ್ದಾಗಲೂ ಮನೆ ನಡೆಸಿಕೊಂಡು ಹೋಗಿದ್ದಳು. ನಂತರವೂ ಮನೆ ನೋಡಿಕೊಂಡಿದ್ದಳು.
ಆದರೆ ಹಿರಿಯ ಮಗ-ಅಪ್ಪ ನಾನು ಬೇರೆಯಾಗುತ್ತೇನೆ ಎಂದು ಹೇಳಿದ ಹಿಂದಿನ ರಾತ್ರಿ ಅಪ್ಪಿ-
“..ನಾನೊಂದು ಮಾತು ಹೇಳತೇನೆ ನೀವು ಬೇಸರ ಮಾಡಿಕೋಬಾರದು..” ಎಂದು ಪೀಠಿಕೆ ಹಾಕಿದಳು.
“ಹಿರೇ ಸೊಸೆ ಹಠ ಹಿಡಿದುಕೂತಿದಾಳೆ..ಅವರು ಗಂಡ ಹೆಂಡತಿ ಬೇರೆ ಹೋಗಬೇಕಂತೆ…ಇಲ್ಲ ಅಂದ್ರೆ ನಾನು ಮನೇಲಿ ಇರೋದಿಲ್ಲ ಅಂತಿದಾಳೆ..”
“ಏನಂತೆ ಅವಳ ತೊಂದರೆ..”
“ನಿಜ ಏನೂಂತ ನನಗೆ ಗೊತ್ತಿಲ್ಲ-ಆದರೂ ನನಗೊಂದು ಅನುಮಾನ ಇದೆ..ಅವಳ ತಾಯಿ ಅವಳಿಗೆ ಇದನ್ನೆಲ್ಲ ಹೇಳಿಕೊಟ್ಟಿರಬಹುದು..”
“ನೋಡೋಣ” ಎಂದಿದ್ದೆ ತಾನು. ಆದರೆ ಈ ಮಾತು ನಡೆದ ಮಾರನೇ ದಿನವೇ ಮಗ ತಾನು ಬೇರೆಯಾಗುವುದಾಗಿ ಹೇಳಿದ್ದ.
“ಯೋಚಿಸು ವಿಕ್ಟರ್..ನಾವು ಒಡೆದು ಹೋಗುವುದರಲ್ಲಿ ದೊಡ್ಡಸ್ತಿಕೆ ಇಲ್ಲ..ಒಂದಾಗುವುದರಲ್ಲಿ ನಮ್ಮ ಸಮೋಡ್ತಿಯ ಪ್ರಭಾವ ಇದೆ..” ಎಂದೆ.
ಭಾಗ್ಯವಂತ ಕುಟುಂಬ ಅನ್ನುವಂತಹ ಒಂದು ಕಲ್ಪನೆ ನಮ್ಮಲ್ಲಿತ್ತು. ತಂದೆ ತಾಯಿ ಮಕ್ಕಳೆಲ್ಲ ಒಟ್ಟಿಗೇನೆ ಇರಬೇಕು. ಸುಖ ಸಂತೋಷ ಸ್ನೇಹದಿಂದ ಬದುಕಬೇಕು ಅನ್ನುವ ಆದರ್ಶವನ್ನು ಕ್ರಿಸ್ತಪ್ರಭು ನಮ್ಮ ಮುಂದೆ ಇಟ್ಟಿದ್ದ. ಈ ಕಲ್ಪನೆಗೆ ತನ್ನ ಕುಟುಂಬ ಈವರೆಗೆ ಒಂದು ನಿದರ್ಶನವಾಗಿತ್ತು. ನಾಳೆ ಈ ನಿದರ್ಶನ ಸುಳ್ಳಾಗಬಾರದಲ್ಲವೆ?
“ಇಲ್ಲ ಪಪ್ಪ..ನಾಳೆ ಜಗಳ ದೊಂಬಿ ಆಗುವುದಕ್ಕಿಂತ ಹೀಗೆ ಬೇರೆಯಾಗೋದೇ ಒಳ್ಳೇದೇನೋ ಅನ್ಸುತ್ತೆ..” ಎಂದ ಆತ ಎಲ್ಲವನ್ನೂ ನಿರ್ಧರಿಸಿರುವ ಹಾಗೆ.
“ಆಯಿತು..ನಿನ್ನ ತಾಯಿಗೂ ಒಂದು ಮಾತು ಹೇಳು..ನಿನ್ನ ತಮ್ಮಂದಿರಿಗೂ ಹೇಳು..” ಎಂದೆ.
ಅವನು ಯಾರಿಗೆ ಹೇಳಿದನೋ ಬಿಟ್ಟನೋ ಬೇರೆಯಾದ. ಇಗರ್ಜಿಯ ಹಿಂದೆಯೇ ವೈಜೀಣ ಕತ್ರಿನಳ ಮನೆ ಪಕ್ಕದಲ್ಲಿ ಬೇರೊಂದು ಮನೆ ಮಾಡಿದ.
“ಗುರ್ಕಾರ ಮಾಮ..ಏನು ಮಗ ಬೇರೆ ಹೋದನಂತೆ?” ಎಂದು ಹಲವರು ಕೇಳಿದರು. ಈ ಪ್ರಶ್ನೆಯ ಹಿಂದೆ ಏನೋ ವ್ಯಂಗ್ಯವಿತ್ತು. ಕುಹಕವಿತ್ತು. ನಿಮ್ಮ ಮನೆಯಲ್ಲಿಯೂ ಹೀಗೆ ಆಯಿತೆ” ಎಂಬ ತಿವಿತವಿತ್ತು.
ಹಲವಾರು ದಿನ ಇದೇ ಒಂದು ವ್ಯಥೆಯಾಯಿತು. ತನ್ನ ಪಾಲಿಗೆ ಈ ವ್ಯಥೆಯ ನಡುವೆಯೂ ಒಂದು ಸಂತಸವಿತ್ತು. ಊಟದ ಮನೆ ಸಾಂತಾಮೋರಿ ಮಕ್ಕಳು ಮಾಡಿಕೊಂಡ ಹಾಗೆ ತನ್ನ ಮಗ ಮಾಡಲಿಲ್ಲವಲ್ಲ ಎಂಬ ಸಮಾಧಾನ.
“ಅಪ್ಪಿ..ಹೋಗಲಿ ಬಿಡು..ದೇವದಿತ್ತ: ಸೈತಾನ ನಾಡ್ತ- ದೇವರು ಕೊಡುತ್ತಾನೆ ಸೈತಾನ ಆಟವಾಡಿಸುತ್ತಾನೆ ಅಂತ ಗಾದೆ ಇದೆಯಲ್ಲ. ಬೆರೆಯವರಾದರೂ ನಮ್ಮ ಜತೆ ಇರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡೋಣ ಎಂದ ಗುರ್ಕಾರ ಸಿಮೋನ ಹೆಂಡತಿ. ಅವನಿಗೀಗ ವಯಸ್ಸಾಗಿತ್ತು.
ಜೋಸೆಫ಼ ನಗರದ ಜನರ ಕ್ಷೇಮ ಸಮಾಚಾರ, ಅವರ ಸಮಸ್ಯೆಗಳ ಪರಿಹಾರ ಎಂದು ಕೊಂಚ ತಿರುಗಾಟ ಮಾಡುವುದಿತ್ತು. ಗುರ್ಕಾರ ಎಂಬ ಗೌರವವಂತೂ ಇತ್ತು.
ಕ್ರೀಸ್ತುವರ ಸ್ಥಿತಿಗತಿಗಳು ಅಷ್ಟೊಂದು ಚೆನ್ನಾಗಿರಲಿಲ್ಲ. ಬೇರೆಯವರು ಇವರ ವೃತ್ತಿಗಳನ್ನು ಕೈಕೊಂಡಿದ್ದು ಯುವಕರು ಬೇರೆ ವೃತ್ತಿಗಳ ಹುಡುಕಾಟದಲ್ಲಿರುವುದು. ಮಿತಿಮೀರಿದ ಕುಡಿತಗಳು ಇವರ ಬದುಕನ್ನು ಅತಂತ್ರಗೊಳಿಸಿದ್ದವು.
ಮುಂದೆ ಇಂದಿನ ತರುಣರು ಬೇರೆ ಬೇರೆ ಕ್ಷೇತ್ರಗಳನ್ನು ಪ್ರವೇಶಿಸಿದರೆ ಅನುಕೂಲವಾಗುತ್ತಿತ್ತು. ಅಲ್ಲಲ್ಲಿ ಇರುವ ಕಾನ್ವೆಂಟುಗಳು, ಪಾದರಿಗಳ್ ಶಾಲೆ ಕಾಲೇಜುಗಳು ಈ ಕೆಲಸ ಮಾಡಬಹುದು. ಅವರು ಕೂಡ ಬೇರೆ ಜನರತ್ತ ತೋರುವ ಆಸಕ್ತಿಯನ್ನು ನಮ್ಮವರತ್ತ ತೋರುತ್ತಿಲ್ಲ. ಇದೂ ಒಂದು ಬೇಸರವೆ.
ಹೀಗೆ ಹಲವು ವಿಚಾರಗಳ ಸುಳಿಗೆ ಸಿಲುಕಿ ಬಿದ್ದು ತಾಳ್ಮೆ ಕಳೆದುಕೊಳ್ಳುತ್ತಿದ್ದ. ಯಾರಾದರೂ ಮಾತಿಗೆ ಸಿಕ್ಕರಂತೂ ಅವನ ತಾಳ್ಮೆಯ ಕಟ್ಟೆ ಒಡೆದು ಹೋಗುತ್ತಿತ್ತು. ಇತ್ತೀಚೆಗೆ ಸಾಂತಾಮೋರಿ ಮನೆಯಲ್ಲಿ ನಡೆದ ಪಂಚಾಯ್ತಿಯ ಸಂದರ್ಭದಲ್ಲಿ ಗುರ್ಕಾರ ಸಿಮೋನನಿಗೆ ಬಂದ ಸಿಟ್ಟು, ಕ್ರೋಧವನ್ನು ಈ ಹಿಂದೆ ಯಾರೂ ನೋಡಿರಲಿಲ್ಲ.
*
*
*
ಶಿವಸಾಗರದಲ್ಲಿ ಮಲೆಯಾಳಿಗಳು, ಬೇರೆ ಜನ ಕಲ್ಲಿನ ಕೆಲಸ ಆರಂಭಿಸಿದ ನಂತರ ಘಟ್ಟದ ಕೆಳಗಿನಿಂದ ಬರುವವರ ಸಂಖ್ಯೆ ಕಡಿಮೆಯಾಯಿತು. ಬಂದ ಕೆಲವರು ದೊಡ್ಡಪ್ಪನ ಮನೆ, ಚಿಕ್ಕಪ್ಪನ ಮನೆ ಎಂದು ಅವರಿವರಲ್ಲಿ ಉಳಿದು, ಮಳೆಗಾಲದ ನಂತರ ತಾವೇ ಹೊಸದಾಗಿ ಮನೆ ಮಾಡಿದರು. ಊರ ತುಂಬಾ ಹೋಟೆಲುಗಳು ಆದವು. ಅಂಟುವಾಳದ ಮನೆ ಸಾಂತಾಮೋರಿ ತನ್ನ ವೃತ್ತಿಯನ್ನು ನಿಲ್ಲಿಸಿದಳು. ಅವಳ ಮಕ್ಕಳು ಬಸ್ತು ಮತ್ತು ಜಾನಿ ಈರ್ವರೂ ಗಾರೆ ಕೆಲಸಕ್ಕೆ ಹೋಗಲಾರಂಭಿಸಿದ್ದರು. ಸಾಂತಾಮೋರಿ ಮಗಳ ಪ್ರಕರಣ ಬೇರೆ ಹಾಗೆ ಆದ ನಂತರ ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡಿದ್ದಳು. ಅನಂತರ ಅವಳು ಮಾಡಿದ ಒಂದು ಕೆಲಸವೆಂದರೆ ಇಬ್ಬರು ಮಕ್ಕಳ ಮದುವೆ ಮಾಡಿದ್ದು. ಮುರುಡೇಶ್ವರದಿಂದಲೇ ಇಬ್ಬರು ಹುಡುಗಿಯರನ್ನು ತಂದು ಮದುವೆ ಮಾಡಿ ಸೊಸೆಯಂದಿರನ್ನು ಮನೆ ತುಂಬಿಸಿಕೊಂಡಿದ್ದಳು. ಓಮ್ದು ವರ್ಷಕ್ಕೆಲ್ಲ ಸೊಸೆಯಮ್ದಿರು ಬಸಿರಾಗಿ, ಸೀಮಂತ ಮಾಡಿ ಅವರನ್ನು ಅವರವರ ತಾಯಂದಿರ ಮನೆಗೆ ಹೆರಿಗೆಗಾಗಿ ಕಳುಹಿಸಿದ್ದಳು. ಆರು ತಿಂಗಳ ನಂತರ ಸೊಸೆಯಂದಿರು ಮೊಮ್ಮಕ್ಕಳ ಜತೆ ಬಂದಿದ್ದರು. ಈರ್ವರು ಮೊಮ್ಮಕ್ಕಳನ್ನು ನೋಡಿಕೊಂಡು ಅವರ ಸ್ನಾನ ಮಾಡಿಸುತ್ತ, ಮಣ್ಣಿ ಮಾಡಿ ಅವುಗಳಿಗೆ ತಿನ್ನಿಸುತ್ತ-
“ಕುರುಕುರು ಕನ್ನ್ ಮ್ಹ್ಸಿಯೋ ಗೆಲೇರನ್ನ” ಎಂದು ತೊಟ್ಟಿಲಲ್ಲಿ ಮಲಗಿಸಿ ಜೋಗುಳ ಹಾಡುತ್ತ ಕಾಲ ಕಳೆದಳು.
ಸೊಸೆಯಂದಿರು ಗಂಡು ಮಕ್ಕಳ ನಂತರ ಮತ್ತೆ ಈರ್ವರು ಗಂಡನ್ನು ಒಂದು ಹೆಣ್ಣನ್ನು ಪಡೆದು ಅಂಟವಾಳದ ಮನೆ ಮಕ್ಕಳಿಂದ ತುಂಬಿಕೊಂಡಿರುವಾಗ , ಹಿರಿಯ ಮೊಮ್ಮಕ್ಕಳು ಹದಿನಾಲ್ಕು ಹದಿನೈದನೆ ವಯಸ್ಸು ಕಂಡಿರುವಾಗ ಈರ್ವರೂ ಮಕ್ಕಳು ಬೇರೆ ಮನೆ ಮಾಡಲು ಯೋಚಿಸಿರುವುದು ಅವಳ ಗಮನಕ್ಕೆ ಬಂದಿದೆ.
ಏನೆಂದರೂ ಅವಳದ್ದು ಊಟದ ಮನೆ. ಮೇಸ್ತ್ರಿಗಳು ಕೆಲಸಗಾರರು-
“ಮೋರಿ ಮಾಯ..ಘೇ” ಎಂದು ತಿಂಗಳಿಗಷ್ಟು ಊಟದ ಹಣವನ್ನು ಬಟವಾಡೆಯಾದ ದಿನ ನೀಡುತ್ತಿದ್ದರು. ಯಾರೂ ಹಣ ನಿಲ್ಲಿಸಿಕೊಂಡಿದ್ದಿಲ್ಲ. ಅಡಿಗೆ ಮಾಡುವಲ್ಲಿ, ಊಟ ಬಡಿಸುವಲ್ಲಿ, ಮೀನು ಮಾಂಸ ಮಾಡಿದ ದಿನ ಹೋಳೂ ಹಾಕುವಾಗ ಕೊಂಚ ಹೆಚ್ಚು ಕಡಿಮೆ ಆಗಿದ್ದಿರಬಹುದು. ಎಲ್ಲರಿಗೂ ಸಮಾನವಾಗಿ ನೀಡಬೇಕು ಎಂದು ಇದ್ದರೂ ಯಾರಿಗೋ ಹೆಚ್ಚು ಯಾರಿಗೋ ಕಡಿಮೆ ಆದದ್ದಿದೆ. ಹೀಗೆಂದು ಯಾರೂ ತಕರಾರೂ ಎತ್ತಲಿಲ್ಲ. ಸುಮಾರು ಮೂವತ್ತು ವರ್ಷ ತನ್ನ ಅನ್ನ ಸೇವೆ ನಡೆಯಿತು. ನಂತರ ತಾನೇ ನಿಲ್ಲಿಸಿದೆ. ಮಗಳು ಹಾಗೆ ಆಗಲೂ ತನ್ನ ಮನೆಯಲ್ಲಿ ಸದಾ ತುಂಬಿಕೊಂಡಿರುವ ಗಂಡಸರೇ ಕಾರಣ ಎಂಬ ಮಾತೂ ಕೇಳಿ ಬಂದಿತು. ಆದರೆ ಮನೆಗೆ ಊಟಕ್ಕೆ ಬರುವ ಜನ ಮಗಳ ವಿಷಯದಲ್ಲಿ ಸಲಿಗೆಯಿಂದ ಇರಲಿಲ್ಲ. ಮನೆಯಲ್ಲಿ ಇಂಥದಕ್ಕೆಲ್ಲ ಅವಕಾಶವಿರಲಿಲ್ಲ. ಮಕ್ಕಳ ಮದುವೆಯಾಗಿ ಸೊಸೆಯಂದಿರು ಬಂದ ನಂತರವೂ ಕೆಲ ವರುಷ ಊಟದ ಮನೆ ಮುಂದುವರಿದಿತ್ತು. ನಂತರ ಅದನ್ನು ನಿಲ್ಲಿಸಿದೆ. ಹೀಗೆಂದು ಅಡಿಗೆ ಮಾಡುವುದು ನಿಲ್ಲುವಂತಿಲ್ಲವಲ್ಲ. ಇಬ್ಬರು ಮಕ್ಕಳು, ಸೊಸೆ ಮೊಮ್ಮಕ್ಕಳು ಎಂದು ಈಗಲೂ ಹಿಂದಿನ ಪಾತ್ರೆಗಳಲ್ಲಿಯೇ ಅಡಿಗೆ ಮಾಡುತ್ತಿದ್ದೇನೆ. ಹಿಂದಿನ ಅವೇ ಕಂಚಿನ ತಟ್ಟೆಗಳು, ಕಂಚಿನ ಲೋಟಗಳು ಬಳಕೆಯಲ್ಲಿವೆ. ಸೊಸೆಯಂದಿರು ಮಾತ್ರ ಬರುವಾಗ ಸ್ಟೀಲಿನ ತಟ್ಟೆ ಲೋಟ ತಂದಿದ್ದಾರೆ. ಅವುಗಳನ್ನು ಅವರು ಹೊರಗೆ ತೆಗೆದಿಲ್ಲ. ತೌರು ಮನೆಯವರು ಕೊಟ್ಟ ಮರದ ಪೆಟ್ಟಿಗೆಯಲ್ಲಿ ಭದ್ರವಾಗಿ ಇರಿಸಿದ್ದಾರೆ.
“..ಇಡಿ..ಇಡಿ..ಈ ಕಂಚಿನ ತಟ್ಟೆ ಲೋಟಗಳು ಸದ್ಯಕ್ಕೇನೂ ಸವೆಯೋದಿಲ್ಲ..” ಎಂದು ತಾನು ಹೇಳಿದ್ದೇನೆ.
ಮಕ್ಕಳ ನಡುವೆ ಏನೂ ಮನಸ್ತಾಪ ಬಂದಿಲ್ಲ. ಅವರನ್ನು ಸೊಸೆ ಮೊಮ್ಮಕ್ಕಳನ್ನು ತಾನು ಚೆನ್ನಾಗಿಯೇ ನೋಡಿಕೊಂಡಿದ್ದೇನೆ. ಆದರೂ ಬಸ್ತು ಒಮ್ಮೊಮ್ಮೆ ಕುಡಿದು ಬಂದು ಜಗಲಿಯ ಮೇಲೆ ಕುಳಿತು ಕೂಗಾಡುತ್ತಾನೆ. ಈ ಬದಿಯಲ್ಲಿ ಜಾನಿ ಕೂಳಿತು ಕೂಗಾಡುತ್ತಾನೆ. ಇದು ತನಗೆ ಚೆನ್ನಾಗಿ ಕಾಣಿಸುವುದಿಲ್ಲ.
ಊಟಕ್ಕೆ ಅಷ್ಟೊಂದು ಜನ ಬರುತ್ತಿದ್ದರಲ್ಲ ಯಾರೂ ಇಲ್ಲಿ ಕುಡಿಯಬಾರದು ಎಂದು ತಾನು ಹೇಳುತ್ತಿದ್ದೆ. ಊಟ ಮುಗಿಸಿ ಹೊರಡಿ ಅನ್ನುತ್ತಿದ್ದೆ. ಊಟಕ್ಕೆ ಮುನ್ನ ಎಲ್ಲರೂ ಸಾಯಂಕಾಲದ ಸ್ನಾನ ಮಾಡಬೇಕು. ದೇವರ ಮುಂದೆ ಮೇಣದ ಬತ್ತಿ ಹಚ್ಚುತ್ತಿದ್ದೆ. ಅಲ್ಲಿ ನಿಂತು ಜಪ ಮಾಡಬೇಕು. ನಂತರ ಬಂದ ಹಾಗೆ ಅವರೆಲ್ಲರಿಗೂ ಕುಚಲಕ್ಕಿ ಗಂಜಿ ಇಲ್ಲವೇ ಅನ್ನ, ಮೀನಿನ ಸಾರು ಇಲ್ಲವೆ ಸಾರು, ಹುರಿದ ಮೀನು. ಭಾನುವಾರದ ಮಾಂಸ. ಊಟ ಮುಗಿಸಿ ನಿಮ್ಮ ನಿಮ್ಮ ಬಿಡಾರಗಳಿಗೆ ಹೊರಡಿ. ಕುಡಿಯುವುದಿದ್ದರೆ ಅಲ್ಲಿ. ಮೊದ ಮೊದಲು ಈ ಜಪ ಮುಂದುವರಿದು ನಡುವೆ ನಿಂತು ಹೋಗಿತ್ತು. ಪಾದರಿ ಗೋನಸ್ವಾಲಿಸ್, ಪಾದರಿ ಮಸ್ಕರಿನಾಸ ಬಂದ ನಂತರ ಮತ್ತೆ ಮುಂದುವರೆಯಿತು.
ಈಗ ಮೊಮ್ಮಕ್ಕಳು ಸೊಸೆಯಂದಿರು ತಪ್ಪದೆ ಆಮೋರಿ ಹೇಳುತ್ತಾರೆ. ಜಪಸರ ಪ್ರಾರ್ಥನೆ ಮಾಡುತ್ತಾರೆ. ಹಾಗೆಯೇ ಈ ಕೂಡುಕರ ಗದ್ದಲ. ಹಾಗೆಯೇ ಜಗಳ. ಬೇರೆ ಬೇರೆ ಬಿಡಾರ ಮಾಡುವ ಮಾತು.
“ಮಾಯ…ಹಾಂವುಂ. ಇಂಗಡ ರಾವ್ತಂ” (ಅಮ್ಮಾ ನಾನು ಬೇರೆ ಇರುತ್ತೇನೆ..) ಎಂದು ತೊದಲುತ್ತಾನೆ ಬಸ್ತು.
“ನಾನೂ ಅಷ್ಟೇ ” ಅನ್ನುತ್ತಾನೆ ಜಾನಿ.
ಅವರ ಮಾತು ಇವಳಿಗೆ ಅರ್ಥವಾಗುತ್ತದೆ. ದೊಡ್ಡ ಮನೆಯಲ್ಲಿ ಎರಡು ಅಡಿಗೆ ಮನೆ ಮಾಡುವ ಇರಾದೆ ಅವರದ್ದು. ಈಗ ಅವರು ದುಡಿದು ತಂದದ್ದರಲ್ಲಿ ಏನು ಕೊಡಲಿ ಕೊಡದಿರಲಿ ಇವಳು ಎಲ್ಲರಿಗೂ ಊಟ ಹಾಕುತ್ತಾಳೆ. ಕೆಲಬಾರಿ..”
“ಬಸ್ತು ಒಂದಿಷ್ಟು ಹಣ ಕೊಡು”
“ಜಾನಿ ನೀನು ದುಡ್ಡು ಕೊಟ್ಟಿಲ್ಲ” ಅನ್ನುವುದುಂಟು. ಬಟವಾಡೆಯ ದಿನ ಅವರಿಂದ ಹಣ ಕಿತ್ತುಕೊಳ್ಳುವುದುಂಟು.
“ಕೊಡಿ ಇಲ್ಲಿ..ನೂರು ರೂಪಾಯಿ..ಮನೆ ಹಿಂದೆ ಹಣದ ಗಿಡ ಇದೆ ಅಂತ ತಿಳಕೊಂಡಿದ್ದೀರ..ನಿಮಗೂ ಹಾಕಬೇಕು…ನಿಮ್ಮ ಹೆಂಡಿರಿಗೂ ಹಾಕಬೇಕು ಅಂದ್ರೆ ಎಲ್ಲಿಂದ ತರಲಿ” ಎಂದು ಕೇಳುತ್ತಾಳೆ.
ಬಸ್ತು, ಜಾನಿ ಇಬ್ಬರೂ ತಾಯಿಯ ಬಾಯಿಗೆ ಹೆದರಿ ಹಣ ಕೊಡುತ್ತಾರೆ. ಆದರೂ ತಾಯಿಯ ಹತ್ತಿರ ತುಂಬಾ ಹಣವಿದೆ ಅನ್ನುವುದು ಅವರ ವಾದ.
ಮನೆಯಲ್ಲಿ ಒಂದು ಕೊಠಡಿ ಇದೆ. ಕಾಳ್ಕಾ ಕೂಡ (ಕತ್ತಲೆ ಕೋಣೆ) ಎಂದು ಅದನ್ನು ಕರೆಯುತ್ತಾರೆ. ಈ ಕೋಣೆಗೆ ಕಿಟಕಿ ಇಲ್ಲ. ಮುಂಬದಿಯಲ್ಲಿ ಒಂದು ಬಾಗಿಲಿದೆ. ಒಳಗೆ ಮನೆಗೆ ಬೇಕಾದ ಅಷ್ಟು ಸಾಮಾನು ತುಂಬಿ ಇರಿಸಿದ್ದಾಳೆ. ಸಾಂತಾ ಮೊರಿ, ಪಾತ್ರೆ, ಪಡಗ, ಚೆಂಬು ಕೊಡಪಾನ, ತಟ್ಟೆ ಕರಟಗಳಿಂದ ಮಾಡಿದ ಸಾರು ಬಡಿಸುವ ಅನ್ನ ಬಡಿಸುವ ಕೈ ತಟ್ಟೆ ಲೋಟಗಳು, ಹಾಗೆಯೇ ಅಕ್ಕಿ, ಮೆಣಸಿನಕಾಯಿ, ನೀರುಳ್ಳಿ ಇತ್ಯಾದಿ ಸಾಮಾನು, ಒಂದು ಹಾಸಿಗೆ ಇದೆ. ಈ ಹಾಸಿಗೆಯ ಕೆಳಗೆ ಆಕೆ ಹಣವಿರಿಸಿದ್ದಾಳೆ ಎಂಬ ಅನುಮಾನ. ಈ ಹಾಸಿಗೆಯ ಕೆಳಗೆ ಆಕೆ ಹಣವಿರಿಸಿದ್ದಾಳೆ ಎಂಬ ಅನುಮಾನ. ಈ ಹಾಸಿಗೆಯ ಮೇಲೆ ಬಸ್ತು, ಜಾನಿ, ನಾತೇಲ ಮಲಗಿದ್ದಾರೆ. ಈಗ ಮೊಮ್ಮಕ್ಕಳೂ ಮಲಗುತ್ತಾರೆ. ಆದರೆ ಬೇರೊಬ್ಬರು ಅಲ್ಲಿ ಪ್ರವೇಶಿಸುವಂತಿಲ್ಲ. ಒಳಹೋಗಿ ಬಾಗಿಲು ಹಾಕಿಕೊಳ್ಳುತ್ತಾಳೆ. ಸಾಂತಾಮೋರಿ ಹೊರ ಬಂದರೆ ಬಾಗಿಲಿಗೆ ಬೀಗ ಜಡಿಯುತ್ತಾಳೆ. ಕುತ್ತಿಗೆಯಲ್ಲಿಯ ಜಪಸರ, ಬಂಗಾರದ ಮಣಿ, ಸರದ ಜತೆಗೆ ಒಂದು ಕರಿ ಹಗ್ಗವಿದೆ. ಅದಕ್ಕೊಂದು ಬೀಗದ ಕೈಗೊಂಚಲು. ಪ್ರತಿ ಸಾರಿ ಹೊರಬಂದು ಬಾಗಿಲು ಹಾಕಿ ಬೀಗ ಸಿಕ್ಕಿಸಿ ಬೀಗ ಹಾಕುತ್ತಾಳೆ ಅವಳು. ಒಳಗೆ ಸಣ್ಣದೊಂದು ಪೆಟ್ಟಿಗೆಯೂ ಇದೆ. ಈ ಪೆಟ್ಟಿಗೆಯ ನೋಟುಗಳು, ನಾಣ್ಯಗಳು ಬಂಗಾರದ ಆಭರಣ ಇದೆ ಎಂಬುದು ಈ ಮಕ್ಕಳ ವಾದ.
ಮಗಳಿಗಾಗಿ ಅವಳು ತುಂಬಾ ಆಭರಣ ಮಾಡಿಸಿದ್ದರು. ಬಳೆ, ಕಿವಿ, ಬೆಂಡೋಲೆ, ಕೆನ್ನೆ ಸರಪಳಿ, ಪವನಿನ ಸರ, ಕಾಸಿನ ಸರ, ಜಡೆ ಬಿಲ್ಲೆ, ಮುಡಿಗೆ ಮುಳ್ಳು ಎಲ್ಲ ಮಾಡಿಸಿದ್ದಳು. ಮಗಳು ಓಡಿ ಹೋಗುವಾಗ ಎಲ್ಲ ಬಿಟ್ಟು ಹೋದಳು. ಅದನ್ನೆಲ್ಲ ಹಾಗೆಯೇ ಇರಿಸಿಕೊಂಡಿದ್ದಾಳೆ. ಸೊಸೆಯಂದಿರಿಗೂ ಕೊಟ್ಟಿಲ್ಲ. ಮೊಮ್ಮಕ್ಕಳಿಗೂ ಕೊಟ್ಟಿಲ್ಲ. ಹಣವಂತೂ ತುಂಬಾ ಇದೆ. ಇದೆಲ್ಲವನ್ನೂ ತಮಗೆ ಕೊಡಲಿ ಎಂಬುದು ಈ ಮಕ್ಕಳ, ಸೊಸೆಯಂದಿರ ಅಭಿಪ್ರಾಯ.
ಸಾಂತಾಮೊರಿಗೆ ಎಪ್ಪತ್ತೈದೋ, ಎಂಬತ್ತೋ ಆಯಿತು. ಇನ್ನೆಷ್ಟು ವರ್ಷ ಬದುಕುತ್ತಾಳೆ ಅವಳು ಎಂದು ಸಿಮೋನ, ಪಾಸ್ಕೊಲ, ಕತ್ರೀನ ಕೇಳುತ್ತಾಳೆ. ಮಕ್ಕಳಿಗೂ ಇದು ಹೌದು ಎನಿಸುತ್ತದೆ.
ದುಡಿದುದನ್ನು ಹೆಂಡಕ್ಕೆ ಹಾಕಿ, ಒಂದಿಷ್ಟನ್ನು ತಾಯಿಯ ಕೈಗೆ ಹಾಕಿ, ಮತ್ತೂ ಒಂದಿಷ್ಟನ್ನು ಹೆಂಡಿರ ಕೈಗೆ ಹಾಕಿ ಈ ಮಕ್ಕಳು ಕೂಗಾಡುತ್ತಾರೆ ನಾವು ಬೇರೆ‌ಆಗುತ್ತೇವೆ ಅನ್ನುತ್ತಾರೆ.
“ಏನು..ಈ ಮನೇಲಿ ಎರಡು ಒಲೇನ?” ಸಾಂತಾಮೋರಿ ಕೇಳುತ್ತಾಳೆ. ಇದು ತುಂಬಾ ವಿಚಿತ್ರವೆನಿಸುತ್ತದೆ ಅವಳಿಗೆ. ದಿನನಿತ್ಯ ಇಪ್ಪತ್ತು ಮೂವತ್ತು ಜನ ಒಂದೆಡೆಯಲ್ಲಿ ಕುಳಿತು ಊಟ ಮಾಡುತ್ತಿದ್ದುದು ನೆನಪಿಗೆ ಬರುತ್ತದೆ. ಅನುಕೂಲಕ್ಕೆಂದು ಈ ಎರಡು ಒಲೆಗಳು ಒಂದು ಕೂಡೊಲೆ, ಪಾತ್ರೆ ಸಣ್ಣದೆಂದು ಎರಡು ಮೂರು ಬಾರಿ ಅನ್ನ ಮಾಡುವುದು, ಗಂಜಿ ಬೇಯಿಸುವುದು ನಡೆಯುತ್ತಿತ್ತು. ಸಾಕಷ್ಟು ದೊಡ್ಡ ಅಡಿಗೆ ಮನೆ. ಊಟದ ಮನೆ ಕೂಡ ದೊಡ್ಡದೆ. ಆದರೆ ಮನೆಯನ್ನೇ ಎರಡು ಭಾಗವನ್ನಾಗಿ ವಿಭಜಿಸಿದ ಘಟನೆ ಈವರೆಗೆ ನಡೆದಿರಲಿಲ್ಲ.
ಒಟ್ಟಿಗೇ ಅಡಿಗೆ ಮಾಡಿ ಒಟ್ಟಿಗೇನೆ ಕುಳಿತು ಊಟ ಮಾಡುವ ಸಂಪ್ರದಾಯ ನಡೆದು ಬಂದ ಈ ಮನೆಯಲ್ಲಿ ಎರಡು ಒಲೆಗಳನ್ನು ಹೂಡಿದ ನಂತರ ಏನಾದೀತು? ಮೊಮ್ಮಕ್ಕಳು ಬೇರೆ ಬೇರೆ ಕುಳಿತು ಬೇರೆ ಬೇರೆ ಊಟ ಮಾಡುತ್ತಾರೆ. ಸೊಸೆಯಂದಿರು ಅವರವರ ಗಂಡಂದಿರಿಗೆ ಮಕ್ಕಳಿಗೆ ಬಡಿಸುತ್ತಾರೆ. ತಾನು ಊಟ ಮಾಡುವುದು ಎಲ್ಲಿ? ಇಲ್ಲ ತಾನೂ ಮೂರನೇ ಒಲೆ ಹೂಡಬೇಕೆ?
ಸಾಂತಾಮೊರಿ ಜಗಲಿಯ ಆ ತುದಿಗೊಬ್ಬ ಈ ತುದಿಗೊಬ್ಬರಂತೆ ಕುಳಿತ ಮಕ್ಕಳನ್ನು ನೋಡಿದಳು. ಅವಳ ತೊಡೆಯ ಮೇಲೆ ಈ ಇಬ್ಬರೂ ಮಕ್ಕಳು ಹೆತ್ತ ಕರುಳು ತುಂಡುಗಳು ತೊಡೆಗೆ ತಲೆಯೂರಿ ಮಲಗಿದ್ದವು. ಮೊಮ್ಮಕ್ಕಳ ತಲೆ ನೇವರಿಸಿ ಅವಳೆಂದಳು.
“…ಈ ಮನೇಲಿ ಎರಡು ಒಲೆ ಹೂಡಲಿಕ್ಕೆ ನಾನು ಬಿಡೋದಿಲ್ಲ..”
“..ಮತ್ತೆ?”
“ನೀವು ಬೇರೆ ಮನೆ ಮಾಡಿ” ಬಿಗಿ ಮಾತಿನಲ್ಲಿಯೇ ಅವಳು ಉತ್ತರಿಸಿದಳು.
ಬಸ್ತು, ಜಾನರು ಇದನ್ನು ನಿರೀಕ್ಷಿಸಿರಲಿಲ್ಲ. ಅವರಿಬ್ಬರೂ ಬೇರೆ ಬೇರೆ ಮನೆ ಮಾಡಲು ನಿರ್ಧರಿಸಿದ್ದರು. ಯಾವುದಾದರೂ ರೀತಿಯಲ್ಲಿ ತಾಯಿಯನ್ನು ತನ್ನ ಮನೆಯಲ್ಲಿರಿಸಿಕೊಂಡರೆ ಕತ್ತಲೆ ಕೋಣೆಯಲ್ಲಿ ಅವಳು ಗುಪ್ತವಾಗಿ ಇರಿಸಿರುವ
ಹಣ ಬಂಗಾರ ತನ್ನದಾಗುತ್ತದೆ ಎಂದು ಬಸ್ತು ತಿಳಿದ ಹಾಗೆಯೇ ಜಾನಿಕೂಡ ಯೋಚಿಸಿದ್ದ. ಮನೆಯಲ್ಲಿ ಎರಡು ಒಲೆ ಮಾಡಿದ ಕೂಡಲೆ ಅವಳು ಒಂದಲ್ಲ ಒಂದು ಕಡೆ ಸೇರಿಕೊಳ್ಳಬೇಕಲ್ಲ. ಅವಳು ಮೊದಲಿನಿಂದಲೂ ತನ್ನನ್ನೇ ಹೆಚ್ಚು ಪ್ರೀತಿಸುವುದರಿಂದ ತನ್ನ ಬಳಿಯೇ ಇರುತ್ತಾಳೆ ಎಂದು ಬಸ್ತು ನಿರೀಕ್ಷಿಸಿದ್ದ.
ಆದರೆ ನೀವು ಬೇರೆ ಮನೆ ಮಾಡಿ ಎಂದಾಗ ಇಬ್ಬರಿಗೂ ನಿರಾಶೆಯಾಯಿತು. ಬೇರೆ ಮನೆ ಎಂದರೆ ಅವಳು ಈ ಮನೆ ಬಿಡುವುದಿಲ್ಲ. ಕತ್ತಲೆ ಕೋಣೆ ಖಾಲಿಯಾಗುವುದಿಲ್ಲ.
“ಆಯ್ತು..ಮನೆ ಬೇರೆ ಮಾಡತೇವೆ..ನಮ್ಮದನ್ನ ನಮಗೆ ಕೊಡು..” ಎಂದ ಬಸ್ತು ಹೀಗಾದರೂ ಒಂದು ತೀರ್ಮಾನವಾಗಲಿ ಎಂದು.
“ಏನದು ನಿನ್ನ ಪಾಲಿನದು? ಏನು ನಿಮ್ಮಪ್ಪ ಮಾಡಿದ ಆಸ್ತಿ ಇದೆಯೆ ಇಲ್ಲಿ..ಇಲ್ಲ ನಿಮ್ಮಜ್ಜ ಮಾಡಿದ್ದು ಇದೆಯೆ?” ಎಂದು ಕೆಣಕಿದಳು ಸಾಂತಾಮೋರಿ.
ಘಟ್ಟದ ಕೆಳಗಿನಿಂದ ಅವಳು ಬರುವಾಗ ತಂದದ್ದು ಸಣ್ಣದೊಂದು ಬಟ್ಟೆಯ ಗಂಟು, ಪೊಟ್ಲಿ. ಈಗ ಮನೆಯಲ್ಲಿ ಏನೇನಿದೆ ಅದೆಲ್ಲವನ್ನೂ ಮಾಡಿದವಳು ತಾನು. ಈ ಮಕ್ಕಳು ದುಡಿಯುತ್ತಾರೆಂದು ಒಂದು ಸೂಜಿ ಕೂಡ ಈವರೆಗೆ ಮನೆಗೆ ಅಂತ ತಂದುದಿಲ್ಲ. ಇನ್ನು ಇವರದ್ದು ಏನಿದೆ ಇಲ್ಲಿ.
“ಕತ್ತಲೆ ಕೋಣೆಯಲ್ಲಿ ಮುಚ್ಚಿ ಇಟ್ಟೀದಿಯಲ್ಲ..ಅದೆಲ್ಲ ಯಾರಿಗೆ? ಬೇರೆ ಮನೆ ಮಾಡಬೇಕು ಅಂದ್ರೆ ಹಣ ಬೇಡ್ವ..” ಎಂದ ಜಾನಿ.
ಕತ್ತಲೆ ಕೋಣೆಯ ವಿಷಯ ಬಂದ ಕೂಡಲೆ ಸಾಂತಾಮೋರಿಗೆ ಚೇಳು ಕುಟುಕಿದಂತಾಯಿತು. ಅವಳು ಅಲ್ಲಿ ಹಣ ಇರಿಸಿದ್ದಳು. ಬಂಗಾರ ಇರಿಸಿದ್ದಳು. ಸತ್ತ ಮೇಲೆ ಕೊಂಡೊಯ್ಯಲೆಂದು ಇರಿಸಿದ್ದು ಅಲ್ಲ ಅದು. ಮಕ್ಕಳಿಗೆ ಮೊಮ್ಮಕ್ಕಳಿಗೆ ಕಷ್ಟ ಕಾಲದಲ್ಲಿ ಆದೀತೆಂದು ಇರಿಸಿದ್ದು. ಈಗ ತಾನು ಈ ಮನೆಯನ್ನು ನೋಡಿಕೊಳ್ಳುತ್ತಿರುವುದೇ ಆ ಹಣದಿಂದ. ಆ ಹಣವನ್ನು ಈಗ ಈ ಇಬ್ಬರಿಗೆ ಹಂಚಿ ಬಿಟ್ಟರೆ ನಾಳೆ ಮೊಮ್ಮಕ್ಕಳ ಗತಿ?
“ಜಾನಿ..ಅದೆಲ್ಲ ನೀನು ನನಗೆ ಕೇಳಬೇಡ..ನಿನಗೆ ಈ ಮನೇಲಿ ಇರಲಿಕ್ಕೆ ಮನಸ್ಸಿಲ್ಲ ಈಗಿಂದೀಗಲೇ ಹೊರಡು..ಹ್ಯಾಗೂ ದುಡೀತೀರಲ್ಲ..ನಿಮ ನಿಮ ಹೆಂಡಿರು ಮಕ್ಕಳನ್ನು ನೀವು ಸಾಕಿ..ನಿಮ್ಮ ಹೊಟ್ಟೆಗೆ ತಂದು ಹಾಕಿ ಹಾಕಿ ನನಗೆ ಸಾಕಾಗಿ ಹೋಗಿದೆ..” ಎಂದಳು ಸಾಂತಾ ಮೋರಿ.
ಈ ಮಾತು ಬೆಳೆಯುತ್ತಿರುವಾಗಲೇ ಸಿಮೋನ ಮನೆಗೆ ಬರುತ್ತಿದ್ದವ ಇವರ ಮನೆ ಬಳಿ ನಿಂತ.
“ಏನದು ಗಲಾಟೆ?” ಎಂದು ಸಾಂತಾ ಮೋರಿ ಮನೆ ಅಂಗಳಕ್ಕೆ ಕಾಲಿಟ್ಟ.
“ನೋಡು ಸಿಮೋನ..” ಎಂದು ಸಾಂತಾ ಮೋರಿ ಮುಖ ಬಡಿಸಿಕೊಂಡಳು.
“ಯಾಕ್ರೋ..ಕಷ್ಟಾನೋ ಸುಖಾನೋ ಒಂದಾಗಿ ಇರಬೇಕು..ಒಂದೇ ಮನೇಲಿ ಎರಡು ಒಲೆ ಹೂಡೋದು..ಅಣ್ಣ ತಮ್ಮಂದಿರು ಬೇರೆಯಾಗೋದು..ಆಸ್ತೀಲಿ ಪಾಲು ಕೇಳೋದು..ಏನದು?” ಎಂದ ಸಿಮೋನ ಗುರ್ಕಾರನ ಗತ್ತಿನಲ್ಲಿ.
“ಗುರ್ಕಾರ ಮಾಮ..ನಿಮ ಮನೆ ಕತೇನೆ ಹಳಸಿಕೊಂಡು ಕೂತಿದೆ..ನೀವು ಇಲ್ಲಿ ಯಾಕೆ ಬಂದ್ರಿ?” ಎಂದು ವ್ಯಂಗ್ಯವಾಗಿ ಕೇಳಿದ ಬಸ್ತು.
ಸಿಮೋನನ ಮಗ ವಿಕ್ಟರ್ ಆಗಲೇ ಬೇರೊಂದು ಮನೆ ಹುಡುಕುತ್ತಿರುವುದು ಕೇರಿಗೆಲ್ಲ ಗೊತ್ತಾಗಿತ್ತು.
“ಹಲ್ಲು ಉದುರಿಸಿ ಬಿಟ್ಟೇನು” ಎಂದು ಎರಡು ಹೆಜ್ಜೆ ಮುಂದಿಟ್ಟ ಸಿಮೋನ. ನಿನ್ನೆ ಮೊನ್ನೆಯವರೆಗೆ ಊಟ ಮಾಡಿದವರ ತಟ್ಟೆ ತೊಳೆದಿಡುತ್ತಿದ್ದ ಹುಡುಗ ನಾಲಿಗೆಯನ್ನು ಇಷ್ಟ ಉದ್ದ ಮಾಡುವುದೇ? ಬಸ್ತು ಕೂಡ ಹಿಂದೆ ಸರಿಯಲಿಲ್ಲ. ಮಾತು ಮಾತಿಗೆ ಸೇರಿ ಸಿಮೋನ ಬಸ್ತುವಿನ ಕೆನ್ನೆಗೆ ಹೊಡೆದ. ಬಸ್ತು ಕೂಡ ಕೈ ಉದ್ದ ಮಾಡಲಿದ್ದಾಗ ಸಾಂತಾಮೋರಿ ಅವನನ್ನು ತಡೆದಳು. ಇದೇ ಮೂಲ ಕಾರಣವಾಗಿ ಬಸ್ತು ಜಾನರು ಆ ಮನೆ ಬಿಟ್ಟು ಬೇರೆ ಮನೆ ಮಾಡಿದರು. ಊಟದ ಮನೆಯಲ್ಲಿ ಈಗ ಸಾಂತ ಮೋರಿಯೊಬ್ಬಳೆ. ಅವಳು ಕತ್ತಲೆ ಕೋಣೆ ಸೇರಿದರೆ ಹೊರಬೀಳುವುದೇ ಕಡಿಮೆಯಾಯಿತು.

-೭-

ಎಮ್ಮೆ ಮರಿಯಳ ಕೊಟ್ಟಿಗೆ ಈಗ ಬರಿದಾಗಿದೆ. ಹಿಂದಿನಂತೆ ಕೆಲಸ ಮಾಡಲು ಆಗುವುದಿಲ್ಲ ಎಂಬುದನ್ನು ಅರಿತ ಅವಳು ನಿಧಾನವಾಗಿ ವರ್ತನೆ ಮನೆಗಳಿಗೆ ಹಾಲು ಕೊಡುವುದನ್ನು ನಿಲ್ಲಿಸಿದಳು. ಹಿಂದೆಲ್ಲ ಎಮ್ಮೆಗಳು ಹಾಲು ಬತ್ತಿಸಿಕೊಂಡಾಗ ಹೊಸ ಎಮ್ಮೆ ತರುತ್ತಿದ್ದವಳು. ಹೊಸ ಎಮ್ಮೆ ಕೊಳ್ಳುವುದನ್ನು ಬಿಟ್ಟಳು. ಎರಡು ಎಮ್ಮೆಗಳು ಕೊಟ್ಟಿಗೆಯಲ್ಲಿಯೇ ಸತ್ತವು. ಒಂದು ಸೊರಬದ ಸೇತುವೆಯ ಮೇಲೆ ಶೇಂದಿ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಸತ್ತಿತು. ಉಳಿದ ಎಮ್ಮೆಗಳನ್ನು ಹಳ್ಳಿಗೆ ಹೊಡೆದಳು. ಅಲ್ಲಿ ಯಾರೋ ಅವುಗಳನ್ನು ಕೊಂಡರು. ಈಗ ಕೊಟ್ಟಿಗೆಯಲ್ಲಿ ಒಂದು ಹಸುವಿದೆ. ತುಂಬಿಕೊಂಡ ಕೊಟ್ಟಿಗೆಯನ್ನು ಬರಿದಾಗಿಸಬಾರದೆಂದು ಈ ಹಸು ಕಟ್ಟಿದ್ದಾಳೆ. ಜತೆಗೆ ಮನೆಯಲ್ಲಿ ಮೊಮ್ಮಕ್ಕಳಿಗೆ ಹಾಲು ಬೆಕಲ್ಲ.
ಗಾಡಿ ಮಂಜನ ತಾಯಿ ರುದ್ರಮ್ಮ ಪ್ರೀತಿಯಿಂದ ನೋಡಿಕೊಂಡ ಮಗಳು ಫ಼ಿಲೋಮೆನಾ ಗಂಡನ ಮನೆ ಸೇರಿದ್ದಳು. ಮದುವೆಯಾಗಿ ಹೋದವಳನ್ನು ಗಂಡ ಮತ್ತೆ ತಾಯಿಯ ಮನೆಗೆ ಕಳುಹಿಸಿರಲಿಲ್ಲ. ಮದುವೆಗೆ ಬಂದಾಗ ತನ್ನ ಕಡೆಯವರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಎಮ್ಮೆ ಕೊಟ್ಟಿಗೆಯ ಮಗ್ಗುಲಲ್ಲಿಯ ಕೋಣೆಯಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದರು. ಊಟ ಉಪಚಾರ ಸರಿ ಹೋಗಲಿಲ್ಲ ಎಂಬ ಕಾರಣವನ್ನೇ ದೊಡ್ಡದು ಮಾಡಿ ಆತ ಫ಼ಿಲೋಮೆನಾಳನ್ನು “ನೀನು ಮತ್ತೆ ತಾಯಿ ಮನೆ ಅಂದ್ರೆ ಬರೆ ಹಾಕತೀನಿ..” ಎಂದು ಬೆದರಿಸಿ ಇಟ್ಟಿದ್ದ. ಮಂಜನ ತಾಯಿ ರುದ್ರಮ್ಮ ಹಾಸಿಗೆ ಹಿಡಿದವಳು.
“ಪಿಲ್ಲಮ್ಮ..ಪಿಲ್ಲಮ್ಮ” ಎಂದು ಕನವರಿಸಿ ಮರಿಯಳ ಮಗ ಗುಸ್ತೀನ ಹೀಗೆ ಫ಼ಿಲೋಮೆನಾಳನ್ನು ಕಳುಹಿಸಿ ಎಂದು ಜನರ ಮೂಲಕ ಹೇಳಿ ಕಳುಹಿಸಿದ್ದರೂ ಫ಼ಿಲೋಮೇನಾ ಬಂದಿರಲಿಲ್ಲ. ಇಲ್ಲಿ ರುದ್ರಮ್ಮ ಇದೊಂದು ಕೊರಗು ಇರಿಸಿಕೊಂಡು ಸತ್ತಿದ್ದಳು. ಹಲವಾರು ವರ್ಷಗಳಿಂದ ಮಗಳನ್ನು ಕಾಣದ ಮರಿಯ-
“ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅಂತ ಗಾದೆ ಉಂಟಲ್ಲ” ಎಂದು ಕೊರಗನ್ನು ಕಡಿಮೆ ಮಾಡಿದ್ದಳು.
ಈಗ ಇವಳಿಗೆ ನೆಮ್ಮದಿ ಎಂದರೆ ಮೂವರು ಮಕ್ಕಳೂ ಮದುವೆಯಾಗಿದ್ದರು. ಹಿರಿಯ ಮಗ ಗುಸ್ತೀನ ಬ್ಯಾಂಕಿನಲ್ಲಿ ಅಟೆಂಡರ್ ಆಗಿದ್ದ. ಎರಡನೆಯವ ದುಮಿಂಗ ವೆಟರನರಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದ. ಮೂರನೆಯವ ಸರಕಾರಿ ಆಸ್ಪತ್ರೆಯಲ್ಲಿ ವಾರ್ಡಬಾಯ್..ದೇವರ ದಯೆಯಿಂದ ಮೂವರೂ ಒಟ್ಟಿಗೇನೆ ಇದ್ದರು. ಸೊಸೆಯಂದಿರಾಗಿ ಮನೆಗೆ ಬಂದವರು ಕೂಡ ಒಳ್ಳೆಯ ಹುಡುಗಿಯರೆ. ಮಂಕಿ, ಹಡಿನಬಾಳ, ಕೂಡ್ಲದಿಂದ ಬಂದ ಈ ಹುಡುಗಿಯರು ಮನೆಯ ವಾತಾವರಣಕ್ಕೆ ಹೊಂದಿಕೊಂಡರು. ಕೊಟ್ಟಿಗೆಯಲ್ಲಿ ಎಮ್ಮೆ ಶಗಣೆ ಬಾಚಿದರು. ಎಮ್ಮೆಗಳ ಮೈ ತೊಳೆದು ಹಾಲು ಕರೆದರು.
ನಿತ್ಯ ಒಟ್ಟಿಗೇನೆ ಪ್ರಾರ್ಥನೆ ಮಾಡುತ್ತಾರೆ.
“ಮಾಯಂ ಬೆಸಾಂವಂದೀ” ಎಂದು ಸೊಸೆಯಂದಿರು, ಮಕ್ಕ್ಳು, ಮೊಮ್ಮಕ್ಕಳು ಬಂದು ಎದುರು ನಿಂತು ಕೈ ಮುಗಿಯುವಾಗ ಮರಿಯಾಗೆ ಕಣ್ಣುಗಳು ತುಂಬಿ ಬರುತ್ತವೆ.
ಎಲ್ಲರನ್ನೂ ದೇವರ ಹೆಸರಿನಲ್ಲಿ ಆಶೀರ್ವದಿಸುತ್ತಾಳೆ. ಪ್ರತಿ ಮೊಮ್ಮಗನ, ಮೊಮ್ಮಗಳ ಕೈಹಿಡಿದು “ಹೋಡಜಾ” “ಹೋಡಜಾ” (ದೊಡ್ಡವನಾಗು ದೊಡ್ಡವನಾಗು) ಎಂದು ಹೇಳುವಾಗ ಹೃದಯ ಹೂವಿನಂತೆ ಅರಳುತ್ತದೆ.
ಏಕೋ ಅವಳಿಗೆ ತಟ್ಟನೆ ಹಿಂದಿನದೆಲ್ಲ ನೆನಪಿಗೆ ಬರುತ್ತದೆ. ಇಲ್ಲಿ ಬಂದು ಕೆಲಸ ಮಾಡಿದರೆ ಒಂದಿಷ್ಟು ಹಣ ಮಾಡಬಹುದೆಂದು ಕಾಯ್ಕಿಣಿಯರ ಒಡೆಯರ ತೋಟ ಬಿಟ್ಟು ಇಲ್ಲಿಗೆ ಬಂದದ್ದು. ಗಂಡನ ಹಿಂದೆಯೇ ತಾನೂ ಬಂದೆ. ಗಂಡ ಸಂತಿಯಾಗ ಶೆಟ್ಟಿಹಳ್ಳಿ ಶ್ರೀಮಂತರ ಮನೆ ಕಟ್ಟುವಾಗ ಮನೆಯ ಮೇಲಿನಿಂದ ಬಿದ್ದು ಸತ್ತ. ಅಂದು ಕ್ರಿಶ್ಚಿಯನ್ನರು ಸತ್ತರೆ ಹುಗಿಯಲು ಊರಿನಲ್ಲಿ ಸಿಮಿತ್ರಿ ಇರಲಿಲ್ಲ. ಜತೆಗೆ ನೆಂಟರು ಇಷ್ಟರು ಇಲ್ಲದ ಕಡೆ ಗಂಡನನ್ನು ಮಣ್ಣು ಮಾಡಿ ತಿರುಗಿ ಬಂದೆ. ಎಮ್ಮೆ ಕಟ್ಟಿದೆ. ಪಾದರಿ ಗೋನಸ್ವಾಲಿಸ್ ಊರಿಗೆ ಬಂದ ನಂತರ ತನ್ನ ಮಕ್ಕಳ ಬದುಕಿಗೆ ಒಂದು ಕ್ರಮ ವಿಧಾನ ಬಂದಿತು. ಮಕ್ಕಳನ್ನು ಪಾದರಿಗಳ ಮಾತಿಗೆ ಬೆಲೆ ಕೊಟ್ಟು ಸರಕಾರಿ ಶಾಲೆಗೆ ಕಳುಹಿಸಿದೆ. ಮನೆ ಮನೆಗೆ ಹಾಲು ಕೊಡುತ್ತ ಮನೆಗೆ ಬಾರದ ಎಮ್ಮೆಗಳನ್ನು ಹುಡುಕಿ ತರುತ್ತ, ಇಗರ್ಜಿ ಪೂಜೆ, ಪ್ರಾರ್ಥನೆ ಎಂದು ಆ ಕೆಲಸ ಮಾಡುತ್ತ ಹುಡೂಗರು ಐದು ಆರನೆ ತರಗತಿಯವರೆಗೆ ಓದಿದರು.
ಮಕ್ಕಳಿಗೆ ಒಂದೊಂದು ಕೆಲಸ ಬೇಕಲ್ಲ. ಕ್ರೀಸ್ತುವರಿಗೊಂದು ಕೆಲಸ ಇತ್ತಾದರೂ ತನ್ನ ಗಂಡನ ತಲೆಗೇನೆ ಈ ಕೆಲಸ ಅಂತ್ಯ ಕಂಡಿತು. ಆ ಕೆಲಸ ಕೂಡ ಮಕ್ಕಳಿಗೆ ಬೇಡ ಎನಿಸಿತು. ತಾನೇ ಅವರಿವರನ್ನು ಕಂಡೆ. ಬ್ಯಾಂಕಿನ ಅಧ್ಯಕ್ಷರನ್ನು ಕಂಡೆ, ದನದ ಆಸ್ಪತ್ರೆ ವೈದ್ಯರನ್ನು ಕಂಡೆ. ಸರಕಾರಿ ಆಸ್ಪತ್ರೆ ವೈದ್ಯರು ಬಲ್ಲವರಾಗಿದ್ದರು.
“ರಾಯರೆ..ನಮ ಹುಡುಗನಿಗೆ ಒಂದು ಕೆಲಸ ಕೊಡಿಸಿ” ಎಂದೆ.
ಈ ಎಲ್ಲರ ಮನೆಗಳಿಗೂ ಹಾಲು ಕೊಡುತ್ತಿದ್ದವಳು ತಾನು. ದೊಡ್ಡವರ ಮನೆಗಳಿಗೆ ನೀರು ಬೆರೆಸದೆ ಹಾಲು ಸರಬರಾಜು ಮಾಡುತ್ತಿದ್ದೆ.
“ಕಳಿಸು..ಮಗ ಓದಿದಾನ?” ಎಂದು ಕೇಳಿದರು. ಗುಸ್ತೀನ, ದುಮಿಂಗ, ಬಸ್ತು ಈ ಮೂವರಿಗೂ ಕೆಲಸವಾಯಿತು. ತುಂಬಾ ಗೌರವದ ಕೆಲಸ. ಬೇರೆ ಕ್ರೀಸ್ತುವರ ಮಕ್ಕಳು ಬಾಚಿ ಹೆಗಲಿಗೇರಿಸಿಕೊಂಡು ಹೋಗುತ್ತಿದ್ದರೆ ತನ್ನ ಮಕ್ಕಳು ಶುಚಿಯಾದ ಬಟ್ಟೆ ಧರಿಸಿ, ಆಫ಼ೀಸರುಗಳ ಹಾಗೆ ಕೆಲಸಕ್ಕೆ ಹೋಗುವುದನ್ನು ಕಂಡಾಗ ಸಂತಸವಾಗುತ್ತಿತ್ತು.
ಮಕ್ಕಳು ಮುಂದೆಯೂ ಈ ಗೌರವವನ್ನು ಉಳಿಸಿಕೊಂಡರು. ಒಂದು ಕುಡಿಯುವುದಿಲ್ಲ, ಇಸ್ಪೀಟ ಆಡುವುದಿಲ್ಲ. ಬೀಡಿ ಸಿಗರೇಟು ಮುಟ್ಟಲಿಲ್ಲ. ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸುತ್ತಿದ್ದಾರೆ. ಇದೇ ಸಂತಸ ಮರಿಯಳಿಗೆ.
ಆದರೂ ಒಂದು ಕೊರತೆ.
ಮೂವರು ಮಕ್ಕಳ ಸಂಸಾರ ಬೆಳೆಯುತ್ತಿದೆ. ಈ ಮೂವರಿಗೂ ಒಂದೊಂದು ಮನೆ ಮಾಡಿಕೊಟ್ಟರೆ ಆಗುತ್ತಿತ್ತೇನೋ ಎನಿಸುತ್ತದೆ. ತನ್ನ ಹಳೆಯ ಮನೆಯಲ್ಲಿ ಇವರು ಎಷ್ಟು ದಿನ ಇದ್ದಾರು. ಈ ವಿಚಾರ ಅವಳ ತಲೆಯಲ್ಲಿ ಬಂದ ಕೆಲವೇ ದಿನಗಳಲ್ಲಿ ಮೂರನೇ ಮಗ ಬಸ್ತು ಅವಳ ಬಳಿ ಬಂದ. ಅವನಿಗೆ ಆಸ್ಪತ್ರೆ ಬಸ್ತು ಎಂಬ ಹೆಸರು ಬಿದ್ದಿತ್ತು. ಊರಿನಲ್ಲಿ ಬಸ್ತು ಎಂದು ಹೆಸರಿರುವವರು ಬೇರೆಯವರೂ ಇದ್ದುದರಿಂದ ಇವನಿಗೆ ಈ ಹೆಸರು-
“ಮಾಯ್..” ಎಂದ ಆತ
“ಏನು ಬಸ್ತು?”
“ಮುನಿಸಿಪಾಲಿಟಿಯವರು ಜಾಗ ಇಲ್ಲದವರಿಗೆ ಜಾಗ ಮಂಜೂರು ಮಾಡತಿದಾರೆ..”
“ಹೌದು”
“ಹೌದು ನಾನೊಂದು ಅರ್ಜಿ ಹಾಕಿಕೊಂಡಿದೀನಿ..ದುಮಿಂಗನಿಗೂ ಹೇಳಿದೀನಿ..ನಮಗೆ ಜಾಗ ಸಿಕ್ಕರೆ ಸರಕಾರದಿಂದ ಮನೆಕಟ್ಟಲಿಕ್ಕೆ ಹಣಾನೂ ಸಿಗುತ್ತೆ..”
“ಒಳ್ಳೆ ಕೆಲಸ ಮಾಡಿದ್ರ..”
ಅಂದು ಮರಿಯ ಮಕ್ಕಳು ತಂದು ಕೊಟ್ಟ ಹಣದಲ್ಲಿ ಐವತ್ತು ರೂಪಾಯಿಗಳನ್ನು ದೇವರ ಪೀಠದಲ್ಲಿ ದೇವರ ಇಮಾಜಿನ ಪದತಳದಲ್ಲಿ ಇರಿಸಿದಳು. ದೋರನಳ್ಳಿಯ ಸಂತ ಅಂತೋನಿಯ ಹೆಸರಿನಲ್ಲಿ ಒಂದು ಮೇಣದ ಬತ್ತಿ ಹಚ್ಚಿ ಶಿಲುಬೆಯ ವಂದನೆ ಮಾಡಿದಳು..ದೋರ್ನಹಳ್ಳಿಗೆ ಹೋಗುವವರು ಸಿಕ್ಕಾಗ ಈ ಹಣವನ್ನು ದೇವರಿಗೆ ತಲುಪಿಸಬೇಕು ಅಂದುಕೊಂಡಳು.
ಅವಳ ಹರಕೆ ದೇವರಿಗೆ ತಲುಪಿತೇನೋ ಅನ್ನುವ ಹಾಗೆ ಆಸ್ಪತ್ರೆ ಬಸ್ತು ಹಾಗೂ ದುಮಿಂಗನಿಗೆ ಮುನಸಿಪಾಲಿಟಿಯಿಂದ ಜಾಗ ಮಂಜೂರಾಯಿತು. ಕೂಡಲೇ ಅವರು ಮನೆ ಕಟ್ಟಲು ಮುಂಗಡ ಹಣ ನೀಡುವಂತೆ ಸರಕಾರಕ್ಕೆ ಅರ್ಜಿ ಕೂಡ ಹಾಕಿದರು. ಶಿವಸಾಗರ ಜಯಪ್ರಕಾಶನಗರದಲ್ಲಿ ಹೊಸ ಮನೆಗಳನ್ನು ಕಟ್ಟುವ ಸಿದ್ಧತೆಗೂ ಅವರು ತೊಡಗಿದರು.
*
*
*
ಜಯಪ್ರಕಾಶ ನಗರದಲ್ಲಿ ಮೂರನೇ ತಿರುವಿನ ಮೊದಲ ಎರಡು ಮನೆಗಳು ಕಂಟ್ರ್ಯಾಕ್ಟರ್ ಕುಂಜುಮನ್ ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವಾಗಲೇ ಜೋಸೆಫ಼ ನಗರದ ಸುತಾರಿ ಇನಾಸನ ಮನೆ ನೆಲಸಮವಾಯಿತು. ಸುಮಾರು ಐವತ್ತು ವರ್ಷಗಳ ಹಿಂದೆ ಸುಣ್ಣದ ರುದ್ರ ಕಟ್ಟಿದ ಮನೆಯನ್ನು ಬೀಳಿಸುವುದು ಏನೂ ಕಷ್ಟವಾಗಲಿಲ್ಲ. ಮಣ್ಣಿನ ಗೋಡೆಗಳು ಆಗಲೇ ಜೀರ್ಣಗೊಂಡಿದ್ದವು. ಬೊಂಬು ಹೊದಿಸಿದ ಮಾಡು ಸುರುಬು ಹತ್ತಿತ್ತು. ಮರದ ಬಾಗಿಲುಗಳು ಹುಳ ಹಿಡಿದು ಟೊಳ್ಳಾಗಿದ್ದವು. ಬಹಳ ಮುಖ್ಯವಾಗಿ ಸುತಾರಿ ಇನಾಸ ಒಂದು ಶುಕ್ರವಾರ ಶಿಲುಬೆಯ ಎದುರು ನಿಂತು ಕೈ ಮುಗಿದು-ದೇವಾ_ಎಂದು ದೇವರನ್ನು ಕರೆಯುತ್ತ ಹೋಗಿ ಮನೆ ಜಗಲಿಯ ಮೇಲೆ ಕುಳಿತವ ಅಲ್ಲೇ ಕುಸಿದು ಬಿದ್ದಿದ್ದ.
ಅದು ಶಿಲುಬೆಯ ಪ್ರಾರ್ಥನೆಗೆ ಜನ ಸೇರುವ ಸಮಯ. ಬಂದವರು ಯಾರೋ ಪಾದರಿ ಸಿಕ್ವೇರಾ ಅವರನ್ನು ಕರೆಯಲು ಓಡಿದರು. ಅವರು ಮೋಟಾರ ಬೈಕ್ ಹತ್ತಿ ಬಂದವರು ಕೊಂಚ ಬಿಸಿಯಾಗಿದ್ದ ಇನಾಸನಿಗೆ ಅಂತ್ಯ ಅಭ್ಯಂಜನ ನೀಡಿ, ದೇವರಿಗೆ ಪ್ರಾರ್ಥನೆ ಸಲ್ಲಿಸಿ ಹೋದರು.
ಈ ಕಡೆ ಜನರ ಪ್ರಾರ್ಥನೆ ಮುಂದುವರಿದಿರಲು ಅತ್ತ ಕೆಲವರು ಇನಾಸನ ದೇಹಕ್ಕೆ ಮಜ್ಜನ ಮಾಡಿಸಿದರು. ಕೂಡಲೇ ಬಿಳಿ ಉಡುಗೆ ಸಿದ್ಧವಾಯಿತು. ಪೆಟ್ಟಿಗೆ ಮಾಡಲು ಸುತಾರಿ ಬಂದು ಅಂದಾಜಿನ ಅಳತೆ ತೆಗೆದುಕೊಂಡು ಹೋದ. ಚಮಾದೋರ ಇಂತ್ರು ಸಿಮಿತ್ರಿಯಲ್ಲಿ ಹೊಂಡ ತೋಡಲು ಹಾರೆ, ಪಿಕಾಸಿ ಹಿಡಿದು ನಡೆದ.
ಇನಾಸನ ಹೆಣ್ಣು ಮಕ್ಕಳಿಗೆ ಟೆಲಿಗ್ರಾಂ ಗಳನ್ನು ಕಳುಹಿಸಲಾಯಿತು. ಗಂಡು ಮಕ್ಕಳು ಜಗಲಿಯ ಮೇಲೆ ಕುಳಿತರು. ಮೊನ್ನೆ ಒಳ ಬಾಗಿಲಿಗೆ ಒರಗಿ ಕುಳಿತಳು.
ದೇವರ ಅಲ್ತಾರಿನ ಮುಂದೆ ಮೇಣದ ಬತ್ತಿಗಳು ಉರಿಯುತ್ತಿರಲು ಹೊರಗೆ ಸೇರಿದ ಜನ ನಿಧಾನವಾಗಿ ಒಳ ಬಂದು ಕುಳಿತು ಪ್ರಾರ್ಥನೆ, ಕೀರ್ತನೆಗಳನ್ನು ಮುಂದುವರೆಸಿದರು.
ಮಾರನೇ ದಿನ ಹನ್ನೆರಡು ಗಂಟೆಗೆಲ್ಲ ಇನಾಸನ ಹೆಣ್ಣುಮಕ್ಕಳು ಧಾವಿಸಿ ಬಂದರು.
“ಬಾಬಾ..ಬಾಬಾ” ಎಂದು ತಂದೆಯ ಶವದ ಮೇಲೆ ಬಿದ್ದು ಅವರು ಅತ್ತರು. ಇಂತ್ರು ಮೂರು ಗಂಟೆಗೆ ಮರಣ ಎಂದು ಮನೆ ಮನೆಗೆ ಹೋಗಿ ಹೇಳಿ ಬಂದ.
ರೈಮಂಡನ ಸಹಾಯಕರು ಮರಣ ಸೂಚಕವಾದ ರಾಗವನ್ನು ಬಾರಿಸುತ್ತಿರಲು ಇನಾಸನ ಶವಯಾತ್ರೆ ಮನೆಯಿಂದ ಹೊರಟಿತು. ಶವ ಪೆಟ್ಟಿಗೆಯನ್ನು ಶಿಲುಬೆಯ ಮೂಂದೆ ಇರಿಸಿ ಅಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಇಗರ್ಜಿ. ಅಲ್ಲಿಂದ ಸಿಮಿತ್ರಿ. ಪಾದರಿಗಳ ಪ್ರಾರ್ಥನೆ ಇತರೆ ಸಂಸ್ಕಾರಗಳು ಮುಗಿದ ನಂತರ ಇಂತ್ರು ಹೊಂಡಕ್ಕೆ ಇಳಿದು ಪೆಟ್ಟಿಗೆಯನ್ನು ಒಳಗೆ ಇಳಿಸಿಕೊಂಡ. ಅದನ್ನು ಸರಿಯಾಗಿ ಇರಿಸಿ ಹೊಂಡದ ಎರಡೂ ದಂಡೆಯ ಮೇಲೆ ಕೈ ಇರಿಸಿ ಆತ ಮೇಲೆ ಬಂದ ನಂತರ ಪಾದರಿ ಮೊದಲನೆಯವರಾಗಿ ಮೂರು ಹಿಡಿ ಮಣ್ಣನ್ನು ಹಾಕಿದರು. ನಂತರ ಜನ ನುಗ್ಗಿ ದಬದಬನೆ ಹಿಡಿ ಹಿಡಿ ಮಣ್ಣನ್ನು ಹೊಂಡಕ್ಕೆ ತೂರಿದರು.
ಗುರ್ಕಾರ ಸಿಮೋನ ಇಗರ್ಜಿ ಮುಂದೆ ನಿಂತು ಸಿಮಿತ್ರಿಯಿಂದ ತಿರುಗಿ ಹೋಗುತ್ತಿರುವ ಜನರಿಗೆ-
“…ಎಲ್ಲ ಮರಣದ ಮನೆಗೆ ಬಂದು ದೇವರ ಪ್ರಾರ್ಥನೆ ಮಾಡಿ ಗಂಜಿ ನೀರು ಕುಡಿದು ಹೋಗಬೇಕು” ಎಂದು ವಿನಂತಿ ಮಾಡಿಕೊಳ್ಳುತ್ತಿದ್ದ. ಇನಾಸನ ಕಿರಿಯ ಮಗ ಪಾಸ್ಕು ಆಗಲೇ ಪ್ರಾರ್ಥನೆಯ ಸಮಯದಲ್ಲಿ ನೀಡಲು ಶರಾಬನ್ನು ತರಲು ಹಣ ಕೊಟ್ಟು ಕಳುಹಿಸಿದ್ದ.
*
*
*
ಇನಾಸ ಸತ್ತ ತಿಂಗಳಿಗೆಲ್ಲ ಅವನ ಮನೆಯ ಗೋಡೆಗಳು ಬಿರುಕು ಬಿಟ್ಟವು.
ಒಂದು ಬೆಳಿಗ್ಗೆ ರೈಮಂಡ್ ಸಿಮೋನನ ಬಳಿ ಬಂದ.
“ಮಾಮ..” ಎಂದು ಮಾತಿಗೆ ತೊಡಗಿದ.
“ಅಪ್ಪ ಹೋದರು” ಎಂದು ಮುಖ ಸಣ್ಣದು ಮಾಡಿಕೊಂಡ.
“ಇನ್ನು ನಾನು ಪಾಸ್ಕು ಒಂದೇ ಮನೇಲಿ ಇರಲಿಕ್ಕೆ ಆಗೋಲ್ಲ ಮಾಮ..ನಾವು ಇರತೀವಿ ಎಂದ್ರು ಈ ಹೆಂಗಸರು ಬಿಡೋಲ್ಲ.” ಅಂದ.
“ಈಗ ಏನು ಆಗಬೇಕು?”
“ನೀವು ಹಿರಿಯರು ಬಂದು ಒಂದು ಪಂಚಾಯ್ತಿ ಮಾಡಬೇಕು.”
“ಏನು ಪಂಚಾಯ್ತಿ ರೈಮಂಡ್..ನೀನು ನಿನ್ನ ತಮ್ಮ ಕೂತು ಬಗೆಹರಿಸಿಕೊಳ್ಳಿ..” ಎಂದ ಸಿಮೋನ.
“ಹಾಗಲ್ಲ ಮಾಮ..ಮೂರನೆಯವರು ಒಬ್ಬರು ಇದ್ದರೆ ಒಳ್ಳೇದು..ನಾವು ನಾವು ಅಂದರೆ ಜಗಳ ಆಗುತ್ತೆ..ಕಿತ್ತಾಟ ಆಗುತ್ತೆ.”
“ಸರಿಯಪ್ಪ ಬರತೇನೆ…” ಎಂದು ಸಿಮೋನ ಒಪ್ಪಿಕೊಂಡ.
ಮನೆಯಲ್ಲಿ ಜೀವ ಇರಲಿಲ್ಲ. ಮನೆ ಇರುವ ಜಾಗವನ್ನು ಸರಿಯಾಗಿ ಅರ್ಧ ಮಾಡಲಾಯಿತು. ಒಂದು ಅರ್ಧ ರೈಮಂಡನಿಗೆ ಉಳಿದದ್ದು ಪಾಸ್ಕುಗೆ. ಮನೆಯಲ್ಲಿ ಹಂಡೆ, ತಪ್ಪಲೆ, ಕೊಡಪಾನ, ಚೆಂಬು, ತಟ್ಟೆ ಎಂದೆಲ್ಲ ತುಂಬಾ ಪಾತ್ರೆಗಳಿದ್ದವು. ಇವುಗಳ ಪಾಲೂ ಆಯಿತು.
ರೈಮಂಡನ ಹೆಂಡತಿ ಅವನ ಬಳಿ ನಿಂತು ಅವನ ಕಿವಿ ಕಚ್ಚುತ್ತಿದ್ದಳು. ಪಾಸ್ಕು ಹೆಂಡತಿ ತನ್ನ ಗಂಡನ ಕಿವಿ.
“ಇನ್ನೇನು?” ಎಂದು ಕೇಳಿದ ಸಿಮೋನ.
“ಅಲ್ಲ ಅಮ್ಮನ ಮೈ ಮೇಲೆ” ರೈಮಂಡ ನೆಲ ನೋಡುತ್ತ ನುಡಿದ.
ಸಿಮೋನನ ದೇಹದಲ್ಲಿಯ ರಕ್ತವೆಲ್ಲ ಮುಖಕ್ಕೆ ನುಗ್ಗಿ ಆತ ಕೆಂಪಗಾದ.
“..ಏಯ್ ರೈಮಂಡ..ನಿನಗೊಂದು ಧರ್ಮ ಇದೆ..ರೀತಿ ಇದೆ. ದೇವರ ಹತ್ತು ಕಟ್ಟಲೆಗಳನ್ನು ನಾವು ಯಾವತ್ತೂ ಮರೀಬಾರದು. ತಾಯಿ ಬದುಕಿರಬೇಕಾದರೇನೆ ಅವಳ ಮೈ ಮೇಲೆ ಇರೋ ಬಂಗಾರದ ಮೇಲೆ ಕಣ್ಣು ಹಾಕತೀಯಲ್ಲ ನೀನೇನು ಕ್ರೀಸ್ತುವನಾ? ಇಂತಹಾ ಪಂಚಾಯ್ತಿ ಮಾಡಲಿಕ್ಕೆ ನಾನಿಲ್ಲಿ ಬಂದಿಲ್ಲ..”
ಆತ ಕೂತಲ್ಲಿಂದ ಎದ್ದು ತನ್ನ ಹೆಗಲಿಗೆ ಟವಲು ಎಸೆದುಕೊಂಡು ಹೊರಟ.
“ನಿಲ್ಲಿ ಮಾಮ..ನಿಲ್ಲ..ನೀವು ಹೇಳಿದ ಹಾಗೆ ನಾವು ಕೇಳತೀವಿ” ಎಂದು ಪೇಚಾಡಿಕೊಂಡ ರೈಮಂಡ.
“..ಇಲ್ಲಿ ಕೇಳಿ..ಈಕೆ ಬದುಕಿರೋವರೆಗೆ ನೀವಿಬ್ರು ಇವಳನ್ನ ನೋಡಿಕೋ ಬೇಕು..ಅವಳ ಮೈಮೇಲಿನ ಬಂಗಾರಕ್ಕೆ ನೀವ್ಯಾರೂ ಕೈ ಹಾಕಬಾರದು..ಅವಳು ಇರೋ ತನಕ ಅದು ಅವಳದ್ದು..ಅವಳು ಅದನ್ನು ಏನೂ ಮಾಡಬಹುದು..ಕೇಳುವ ಹಕ್ಕು ನಿಮಗಿಲ್ಲ”
ಬಾಗಿಲ ಮರೆಯಲ್ಲಿ ನಿಸ್ತೇಜ ಮುಖ ಹೊತ್ತು ಕುಳಿತ ಮೊನ್ನೆಯನ್ನೇ ನೋಡುತ್ತ ಸಿಮೋನ ನುಡಿದ. ಅವಳು ಮೂಕಿಯಾಗಿದ್ದುದು ಒಳ್ಳೆದಾಯಿತೇನೋ ಅನಿಸಿತು. ಅವಳಂತೂ ಇವರೆಗೆ ಏನೂ ಮಾತನಾಡಿರಲಿಲ್ಲ.
“..ಹಾಗೇನೇ..ಮತ್ತೊಂದು ವಿಷಯ”
ಸಿಮೋನ ಮಾತನ್ನು ಮುಂದುವರೆಸಿದ.
“ನಿಮ್ಮ ಮನೆ ಅಂಗಳದಲ್ಲಿ ದೇವರ ಶಿಲುಬೆ ಇದು ಈ ಇಡೀ ಮನೆಗೆ, ಊರಿಗೆ ಸೇರಿದ್ದು. ನೀವಿಬ್ರು ಇದನ್ನು ನೋಡಿಕೊಳ್ಳತಕ್ಕದ್ದು.” ಎಂದ.
ರೈಮಂಡ ಪಾಸ್ಕು ಅವರ ಹೆಂಡಿರು ಒಪ್ಪಿಕೊಂಡರು.
ಈ ಪಂಚಾಯ್ತಿ ಮುಗಿಯುತ್ತಿದ್ದಂತೆಯೇ ಇನಾಸನ ಮನೆ ಕುಸಿಯಿತು. ತಾತ್ಕಾಲಿಕವಾಗಿ ತಮ್ಮ ತಮ್ಮ ಮಾವಂದಿರ ಮನೆ ಸೇರಿಕೊಂಡ ರೈಮಂಡ್ ಪಾಸ್ಕು ಇಲ್ಲಿ ಎರಡು ಮನೆಗಳನ್ನು ಕಟ್ಟಿಸಲು ಪ್ರಾರಂಭಿಸಿದರು ಕೂಡ. ಇನಾಸನ ಹೆಂಡತಿ ಮೊನ್ನೆ ಕೂಡ ಮಗ ಪಾಸ್ಕುವಿನ ಮಾವನ ಮನೆಯಲ್ಲಿ ಕೆಲದಿನಗಳ ಮಟ್ಟಿಗೆ ಉಳಿದುಕೊಂಡಳು.
*
*
*
ಈ ಜಾಗದಲ್ಲಿ ಪ್ರತ್ಯೇಕವಾದ ಮನೆಯೊಂದನ್ನು ಕಟ್ಟಬೇಕೆಂಬುದು ಪಾಸ್ಕು ಹೆಂಡತಿ ಜೋಸೆಫ಼ಿನಾಳ ಬಹುದಿನಗಳ ಆಸೆಯಾಗಿತ್ತು. ಗುತ್ತಿಗೆದಾರ ಪಾಸ್ಕೋಲ ಕೂಡ ತನ್ನ ಹಳೆ ಮನೆ ಮುರಿದು ಹೊಸ ಮನೆ ಕಟ್ಟಿದ್ದ. ಕೇರಿಯಲ್ಲಿ ಇನ್ನೂ ಕೆಲ ಹೊಸ ಮನೆಗಳು ಕಾಣಿಸಿಕೋಂಡಿದ್ದವು. ಹೀಗಿರುವಾಗ ತಾವು ಮಣ್ಣಿನ ಗೋಡೆ, ಬೊಂಬಿನಿಂದ ಮಾಡಿರುವ ಮನೆಯಲ್ಲಿ ವಾಸಿಸುವುದು ಅವಳಿಗೆ ಬೇಕಿರಲಿಲ್ಲ.
ಬೇರೆ ಎಲ್ಲಿಯಾದರೂ ಜಾಗ ನೋಡಿ..ಅಲ್ಲಿ ಹೊಸ ಮನೆ ಕಟ್ಟೋಣ” ಎಂಬ ಅವಳ ಮಾತಿಗೆ ಪಾಸ್ಕು ಅಷ್ಟು ಮಹತ್ವ ಕೊಟ್ಟಿರಲಿಲ್ಲ. ಮನೆ ತಾನೆ? ಕಟ್ಟೋಣ ಅನ್ನುತ್ತಿದ್ದ. ಅವನ ಮನಸ್ಸಿಗೆ ತಾವಿರುವಲ್ಲಿಯೇ ಮನೆ ಕಟ್ಟಬೇಕು ಅನಿಸುತ್ತಿತ್ತು. ಜೈಪ್ರಕಾಶನಗರದಲ್ಲೊ, ಅಶೋಕನಗರದಲ್ಲೋ ನಿವೇಶನಗಳು ದೊರೆತರೂ ಕೇರಿ ಬಿಟ್ಟು ಇಗರ್ಜಿ ಬಿಟ್ಟು ದೂರ ಹೋಗಲು ಆತ ಸಿದ್ಧನಿರಲಿಲ್ಲ.
ತಂದೆಗೆ ಹೇಳಿ ಇಲ್ಲಿಯೇ ಮನೆ ಕಟ್ಟಬಹುದು. ಆದರೆ ಈಗ ರೈಮಂಡಗೂ ಅದರಲ್ಲಿ ಜಾಗ ಕೊಡಬೇಕು. ತಾನು ಕಟ್ಟಿದ ಮನೆಯಲ್ಲಿ ಅವನೂ ಬಂದು ಸೇರಿಕೊಳ್ಳುತ್ತಾನೆ. ಏನು ಉಪಯೋಗ? ತಮ್ಮದೇ ಆದ ಒಂದು ಮನೆ ಇರಬೇಕು ಎಂಬ ಆಸೆ ನೆರವೇರುವುದಿಲ್ಲವೇ? ಎಂದು ಆತ ಯೋಚಿಸುತ್ತಿರಬೇಕಾದರೇನೆ ಇನಾಸ ತನ್ನ ಪ್ರಯಾಣ ಮುಗಿಸಿದ್ದ.
ಪಾದರಿಗಳನ್ನು ಕರೆದೊಯ್ದು ಮಂತ್ರಿಸಿ ಆತ ಕೆಲಸ ಪ್ರಾರಂಭಿಸಿದ. ಈತ ಮನೆಗೆ ನೆಲಪಾಯ ತೋಡುತ್ತಿರಲು ಅತ್ತ ಜಾನಿ ಕೂಡ ಕೆಲಸ ಪ್ರಾರಂಭಿಸಿದ.
ಕಲ್ಲು ಮರಳು ಮಣ್ಣು ಎಂದೆಲ್ಲ ಮನೆ ಅಂಗಳ ತುಂಬಿ ಹೋಗಲು ಶುಕ್ರವಾರದ ಪ್ರಾರ್ಥನೆಗೆ ಜನ ಬರುವುದು ನಿಂತು ಹೋಯಿತು. ಆದರೂ ಮೊನ್ನೆ ಮಾತ್ರ ಪ್ರತಿನಿತ್ಯ ಹೋಗಿ ಶಿಲುಬೆ ದೇವರ ಮುಂದೆ ಮೇಣದ ಬತ್ತಿ ಹಚ್ಚಿ ಶಿಲುಬೆಯ ವಂದನೆ ಮಾಡಿ ಬರುತ್ತಲಿದ್ದಳು.
*
*
*
ಅಳಿಯ ಮನೆ ಕಟ್ಟಿಸುತ್ತಿದ್ದಾನೆ ಎಂದರೆ ಪಾಸ್ಕೋಲ ಮೇಸ್ತ್ರಿಗೆ ಸುಮ್ಮನೆ ಮನೆಯಲ್ಲಿ ಕುಳಿತಿರಲು ಆಗಲಿಲ್ಲ. ಶಿವಸಾಗರದಲ್ಲಿ ಎಷ್ಟೋ ಮನೆಗಳನ್ನು ಕಟ್ಟಡಗಳನ್ನು ಅವನೂ ಕಟ್ಟಿಸಿದ್ದನಲ್ಲವೇ? ಸಿಮೋನನ ಸಹಾಯಕನಾಗಿ ಊರಿಗೆ ಬಂದ ತಾನು ಕೆಲವೇ ವರ್ಷಗಳಲ್ಲಿ ಕಂಟ್ರಾಟುದಾರನಾದೆ. ಸಿಮೋನ ಕಾಯಿಲೆಯಿಂದ ಮಲಗಿದ್ದುದರ ಲಾಭ ಪಡೆದು ತಾನು ಸ್ವತಂತ್ರವಾಗಿ ಕೆಲಸ ಹಿಡಿದೆ. ಸಿಮೋನ ತಿರುಗಿ ಬಂದವ-
“ಪಾಸ್ಕೋಲ..ನೀನು ಹೀಗೆ ಮಾಡೋದ? ಎಂದು ಕೇಳಿದ.
“ಅರ್ಧ ಆಗಿರೋ ಕೆಲಸ ನೀನಾದರೂ ಮುಗಿಸಿ ಕೊಡು ಅಂದರು..ಇದರಲ್ಲಿ ನನ್ನ ತಪ್ಪಿಲ್ಲ..” ಎಂದಿದ್ದೆ ತಾನು. ಸಿಮೋನ ಈ ಮಾತನ್ನು ನಂಬಲಿಲ್ಲ. ಅವನು ನಂಬಬೇಕು ಎಂದು ತಾನೂ ಬಯಸಲಿಲ್ಲ.
ಊರಿನಲ್ಲಿ ಕಾಮಗಾರಿಯಂತೂ ಭರ್ಜರಿಯಾಗಿತ್ತು. ಒಂದಲ್ಲಾ ಒಂದು ಕೆಲಸ ಸಿಕ್ಕಿತು. ಬೇಗನೆ ತಾನು ಸಿಮೋನನ ಹಾಗೆಯೇ ಕಂಟ್ರಾಟುದಾರನಾದೆ. ಕ್ರೀಸ್ತುವರ ನಡುವೆ ಸಿಮೋನನಿಗೆ ಮೊದಲ ಸ್ಥಾನವಾದರೆ ತನಗೆ ಎರಡನೆಯ ಸ್ಥಾನ. ಆತ ಗುರ್ಕಾರ ಆದರೆ ತಾನು ಫ಼ಿರ್ಜಂತ. ಮೊದಲ ನಾಲ್ಕು ವರ್ಷ ಈ ಫ಼ಿರ್ಜಂತ ಗೌರವದಿಂದ ತಾನು ಮುಕ್ತನಾಗಲಿಲ್ಲ. ಏಕೆಂದರೆ ತನ್ನನ್ನು ಬಿಟ್ಟರೆ ಬೇರೆ ಜನ ಕೇರಿಯಲ್ಲಿ ಇರಲಿಲ್ಲ. ಬಾಲ್ತಿದಾರ ಬೇಡ ಎಂದ. ಕೈತಾನ, ಬಳ್ಕೂರ ಕಾರ, ಸಾನಬಾವಿ, ಪೆದ್ರು ಎಲ್ಲರೂ-
“..ಅದನ್ನು ನಮ್ಮಿಂದ ಸುಧಾರಿಸಿಕೊಂಡು ಹೋಗಲಿಕ್ಕೆ ಆಗಲ್ಲಪ್ಪ..ನೀನೇ ಇರು..” ಎಂದರು.
ನಾಲ್ಕು ವರ್ಷ ತನ್ನ ಅಧ್ಯಕ್ಷತೆಯಲ್ಲಿಯ ಊರ ಇಗರ್ಜಿ ಹಬ್ಬ ನಡೆಯಿತು. ಒಂದಿಷ್ಟು ಖರ್ಚು ಬರುತ್ತಿತ್ತು. ಇಗರ್ಜಿಯ ಸಿಂಗಾರ. ಊರಿನಲ್ಲಿ ತೋರಣ ಕಟ್ಟುವುದು, ಕೇರಿಯಲ್ಲಿ ಅಲ್ಲಲ್ಲಿ ಕಮಾನು ನಿರ್ಮಾಣ. ಬ್ರೇಸ್ಪುರ ದಿನದ ಧ್ವಜಾ ರೋಹಣ, ಪಟಾಕಿ, ಬ್ಯಾಂಡು ಎಂದೆಲ್ಲ ತಾನೇ ಖರ್ಚು ಮಾಡುತಿದ್ದೆ. ನಂತರ ಬೇಡ ಬೇಡವೆಂದರೂ ಫ಼ಿರ್ಜಂತ ಆಗಲೇಬೇಕಾಯಿತು. ಅವರೆಲ್ಲ ನೆಪಮಾತ್ರದ ಫ಼ಿರ್ಜಂತಗಳು. ಯಾರೂ ತನ್ನ ಹಾಗೆ ಹಬ್ಬ ಮಾಡಲಿಲ್ಲ. ಈಗ ಹಬ್ಬದ ಮೊದಲ ದಿನ ಮೇಡಿ ನೆಟ್ಟು ಬಾವುಟ ಹಾರಿಸುವುದಿಲ್ಲ. ಫ಼ಿರ್ಜಂತ ಇಲ್ಲ. ಆ ವೈಭವವಿಲ್ಲ.
ಆ ವೈಭವ ತನ್ನ ಬದುಕಿನಿಂದಲೂ ಈಗ ದೂರ. ಮಗಳು ಜೋಸೆಫ಼ಿನಾ ಪಾಸ್ಕುವನ್ನು ಮದುವೆಯಾಗುತ್ತೇನೆ ಎಂದಾಗ ಬೇಡವೆಂದೆ. ಸುತಾರಿ ಇನಾಸನ ಅಂತಸ್ತಿಗೂ ತನ್ನ ಅಂತಸ್ತಿಗೂ ತುಂಬಾ ಅಂತರವಿದೆ ಎಂದೆ. ಪಾಸ್ಕುವಿಗೆ ಬಡಗಿಯ ಕೆಲಸವಲ್ಲದೆ ಬೇರೆ ಕೆಲಸ ಗೊತ್ತಿಲ್ಲ. ಅದೂ ಇವನು ಮಾಡುವ ಕೆಲಸಕ್ಕೊಂದು ಗೌರವವಿದೆಯೇ? ಎಂದು ಕೇಳಿದೆ. ಈ ಸಂಬಂಧ ಬೇಡವೆಂದರೂ ಆಕೆ ಕೇಳಲಿಲ್ಲ.
“ಸರಿ ನಿನ್ನ ಹಣೆಬರಹ” ಎಂದೆ.
ಮಗಳ ಮದುವೆಯನ್ನಂತೂ ಚೆನ್ನಾಗಿಯೇ ಮಾಡಿದೆ. ಒಬ್ಬಳೇ ಮಗಳ ಮದುವೆಯಲ್ಲವೆ? ಆದರೆ ಇದೇ ತನಗೆ ಭಾರವಾಯಿತು. ಜವಳಿ ಅಂಗಡಿಯಲ್ಲಿ ಸಾಲ, ದಿನಸಿ ಅಂಗಡಿಯಲ್ಲಿ ಸಾಲ, ಭಗವಾನಜಿ ಹತ್ತಿರ ಹೆಂಡತಿ ರೀತಾಳ ಭೋರಿ ಮಣೆ ಸರ, ಕಾಸಿನ ಸರ, ಉಂಗುರ ಒಯ್ದಿಟ್ಟು ಸಾಲ ತಂದದ್ದೂ ಆಯಿತು. ಅಂಗಡಿ ಸಾಲ, ಜವಳಿ ಅಂಗಡಿ ಸಾಲವನ್ನೂ ತೀರಿಸಲು ಎರಡು ಮೂರು ವರ್ಷಗಳು ಬೇಕಾದವು. ನಡುವೆ ಜೊಸೆಫ಼ಿನಾ ಹೆರಿಗೆಗೆ ಬಂದಳು. ಮಗುವಿನ ಅಂಗಡಿಯಿಂದ ರೀತಳ ಒಡವೆ ಬಿಡಿಸಿಕೊಂಡು ಬರಲಾಗಲಿಲ್ಲ.
“ರೀತಾ..ಏನು ಹೀಗಾಯ್ತು ನಮ್ಮ ಪರಿಸ್ಥಿತಿ” ಎಂದು ಕಣ್ಣಲ್ಲಿ ನೀರು ತಂದು ಕೊಂಡಾಗ ಅವಳು-
“ಅವೆಲ್ಲ ಮಾಡಿಸಿದ್ದೇ ಕಷ್ಟ ಕಾಲಕ್ಕೆ ಇರಲಿ ಅಂತ ಅಲ್ವೆ?” ಎಂದು ತನಗೇನೆ ಸಮಾಧಾನ ಹೇಳಿದಳು.
ಮೆಜಾರಿಟಿಗೆ ಬಂದ ಮಗ ತನ್ನದೇ ಕೆಲಸವನ್ನು ಮುಂದುವರೆಸಿದ. ಸರಕಾರಿ ಶಾಲೆಗೆ ಸೇರಿಸಿದರೂ ಈತ ಓದಲಿಲ್ಲ. ಮಿಡಲ ಸ್ಕೂಲ್ ತನಕ ಹೋಗಿ ಬಿಟ್ಟ. ಈಗ ನಾಲ್ಕನೆ ದರ್ಜೆ ಗುತ್ತಿಗೆದಾರನಾಗಿ ಲೋಕೋಪಯೋಗಿ, ನೀರಾವರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಾನೆ. ರಸ್ತೆ ರಿಪೇರಿ, ಸರಕಾರಿ ಮನೆಗಳಿಗೆ ಸುಣ್ಣ ಬಣ್ಣ, ಕಾಲು ಸೇತುವೆ ನಿರ್ಮಾಣ. ಮೋರಿ ಕಟ್ಟುವುದು, ಕೆರೆ ರಿಪೇರಿ ಎಂದು ಸಣ್ಣ ಪುಟ್ಟ ಕೆಲಸ ಮಾಡುತ್ತಾನೆ. ಸರಕಾರ ಕೊಡುವುದು ಅಲ್ಲಲ್ಲಿಗೆ ಸರಿ ಹೋಗುತ್ತದೆ. ಇದರಲ್ಲಿ ಕಛೇರಿ ಖರ್ಚು ಬೇರೆ. ಗುರ್ಕಾರ ಸಿಮೋನ ಈಗಲೂ ಊರ ಕ್ರೀಸ್ತುವರ ನಡುವೆ ತನ್ನ ಮೊದಲ ಸ್ಥಾನಮಾನಗಳನ್ನು ಉಳಿಸಿಕೊಂಡಿದ್ದಾನೆ. ಆದರೆ ತಾನು ಎಂದೋ ಒಂಭತ್ತನೆಯ ಸ್ಥಾನಕ್ಕೋ ಬಂದು ತಲುಪಿದ್ದೇನೆ. ಈ ಬೇಸರದಲ್ಲೇ ಮನೆಯಲ್ಲಿ ಕೂತಿರುತ್ತೇನೆ. ಪೇಟೆ ಕಡೆ ಹೋದರೆ ಬೋನನ ಅಂಗಡಿಗೆ ಹೋಗಿ ಬರುತ್ತೇನೆ.
ಅಳಿಯ ಮನೆ ಕಟ್ಟಿಸಲು ಆರಂಭಿಸಿದ ಮೇಲೆ ಕಾಲ ಕಳೆಯುವುದು ಕಷ್ಟವೆನಿಸುತ್ತಿಲ್ಲ. ಅಲ್ಲಿ ಹೋಗಿ ನಿಲ್ಲುತ್ತೇನೆ. ಒಂದು ಕಾಲದಲ್ಲಿ ತಾನು ಮಾಡಿದ ಕೆಲಸವೆ. ಆದರೆ ಈಗ ಎಲ್ಲ ಬದಲಾಗಿದೆ. ಒಂಬತ್ತು ಗಂಟೆಗೆ ಕೆಲಸದವರು ಬರುತ್ತಾರೆ. ಅವರು ಉಟ್ಟ ಪಂಚೆ ಬಿಚ್ಚಿ ಬೇರೆ ಉಡುಪು ಧರಿಸಿ ಕೆಲಸ ಆರಂಭಿಸುವುದು ಒಂಬತ್ತುವರೆಗೆ, ನಡುನಡುವೆ ಬೀಡಿ ಸೇದು, ಮಾತನಾಡು, ಹತ್ತೂವರೆಗೆ ಟೀ ಕುಡಿಯಲು ಹೋಗುತ್ತಾರೆ. ಒಂದು ಗಂಟೆಗೆ ಊಟ, ಮೂರು ಗಂಟೆಗೆ ಟೀ, ನಾಲ್ಕುವರೆಗೆಲ್ಲ ಕೆಲಸ ನಿಲ್ಲಿಸಿ ಹೊರಟರೆ. ಪಡಪೋಸಿ ಕೆಲಸ ಬೇರೆ. ಸಿಮೆಂಟು ಮಾರಿ ತಿಂದರು, ಮರಳು ಬೇರೆ ಕಡೆ ಸಾಗಿಸಿದರು. ವಾರದಲ್ಲಿ ಎರಡು ದಿನ ಬಾರದಿರುವುದೂ ಉಂಟು. ಹೀಗಾಗಿ ಜನ ಕ್ರೀಸ್ತುವರನ್ನು ಬಿಟ್ಟು ಬೇರೆಯವರನ್ನು ಕರೆಯುತ್ತಾರೆ. ಹಿಂದೆ ತಾನು, ಸಿಮೋನ, ಕೈತಾನ ಬೆಳಿಗ್ಗೆ ಏಳರಿಂದ ಸಂಜೆ ಆರರವರೆಗೆ ಎಷ್ಟೊಂದು ಶೃದ್ಧೆ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದೆವಲ್ಲ. ಈಗ ಆ ಮನೋಭಾವವಿಲ್ಲ. ಕ್ರೀಸ್ತುವರಿಗೆ ಕೆಲಸ ಸಿಗದಿರಲು ಇದೂ ಒಂದು ಕಾರಣ.
ಸದ್ಯ ಅಳಿಯ ಯಾವ ಕ್ರೀಸ್ತುವರನ್ನೂ ಕೆಲಸಕ್ಕೆ ತೆಗೆದುಕೊಂಡಿಲ್ಲ. ಈರ್ವರು ಮಲೆಯಾಳಿಗಳು, ಓರ್ವ ಊರಿನವನೇ. ತಾನು ಹೋಗಿ ಅಲ್ಲಿ ನಿಂತಿರುತ್ತೇನೆ.
ಅಳಿಯ ಬುದ್ದಿವಂತ ಆ ಸಣ್ಣ ಜಾಗದಲ್ಲಿಯೇ ಒಂದು ಮನೆ. ಅದರ ಮಗ್ಗುಲಲ್ಲಿ ಒಂದು ಮಳಿಗೆ ಕಟ್ಟಿಸುತ್ತಿದ್ದಾನೆ. ಉದ್ದೋ ಉದ್ದವಾಗಿರುವ ಈ ಮಳಿಗೆ ಏಕೆ ಅಂದರೆ-
“…ನನ್ನ ವಿಚಾರ ಏನೋ ಇದೆ ನೋಡೋಣ” ಅನ್ನುತ್ತಾನೆ.
ಮನೆ ಕೂಡ ಮಜಬೂತಾಗಿದೆ. ವ್ಹರಾಂಡ, ಹಾಲ್, ಮಲಗುವ ಕೋಣೆ, ಊಟದ ಕೋಣೆ, ಅಡಿಗೆ ಕೋಣೆ, ಹಿಂದೆ ಬಚ್ಚಲು, ಕಕ್ಕಸು ಎಂದು ಎಲ್ಲ ಅನುಕೂಲವಿರುವ ಮನೆ ಅಳಿಯನದು. ಹಿಂದೆ ತಾವೆಲ್ಲ ತಮಗಾಗಿ ಕಟ್ಟಿಕೊಳ್ಳುತ್ತಿದ್ದುದು ಬೇರೆಯದೇ ಆದ ರೀತಿಯ ಮನೆಗಳನ್ನು, ಜಗಲಿ ಅದು ದಾಟಿದರೆ ದೇವರ ಕೋಣೆ, ನಂತರ ಅಡಿಗೆ ಮನೆ, ಹಿತ್ತಲ ಅಂಚಿನಲ್ಲಿ ಕಕ್ಕಸು. ಕೆಲ ಮನೆಗಳಲ್ಲಿ ಎಮ್ಮೆ ಬಂದು ಬಾಯಿ ಹಾಕುವಂತಹ ಕಕ್ಕಸಿನ ಕಿಂಡಿ. ಕೆಲವು ಕಡೆಗಳಲ್ಲಿ ಆಳವಾದ ಹೊಂಡದ ಮೇಲೆ ಹಾಸಿದ ಚಪ್ಪಡಿ. ನಡುವೆ ದೊಡ್ದದೊಂದು ಕಿಂಡಿ. ಕೆಳಗೆ ಮಿಚುಗುಡುವ ಹುಳಗಳು. ಈಗ ಎಲ್ಲ ಬೇರೆ ಥರ. ಬೊಂಬಾಯಿ ಕಕ್ಕಸು ಬಂದ ನಂತರವಂತೂ ಮನೆಗಳು ಮತ್ತೂ ನಾಜೂಕು. ಪಾಸ್ಕು ಕಟ್ಟಿಸುತ್ತಿರುವ ಮನೆ ಕೂಡ ಇಂತಹದ್ದೆ, ಬೆಳಿಗ್ಗೆ ಸಂಜೆ ತಾನು ಅಲ್ಲಿಗೆ ಹೋಗುತ್ತೇನೆ.
“ನೀವು ಇಲ್ಲಿ ಇರತೀರಲ್ಲ” ಎಂದು ಹೇಳಿ ಅಳಿಯ ಹೊರಟು ಹೋಗುತ್ತಾನೆ.
ಪಾಸ್ಕೋಲ ಹೀಗೆ ಅಳಿಯನ ಮನೆಯ ಬಳಿ ನಿಂತಿರುವಾಗಲೇ ರಸ್ತೆಯ ಮೇಲೆ ಕೈತಾನ ಕಂಡು ಬಂದ.
“ಪಾಸ್ಕೋಲ ಮಾಮ ಹ್ಯಾಗೆ ಆರೋಗ್ಯ?” ಎಂದು ಕೇಳುತ್ತ ಕೈತಾನ ಪಾಸ್ಕೋಲನ ಬಳಿ ಬಂದ.
ಕೈತಾನನಿಗೆ ವಯಸ್ಸಾಗಿತ್ತು. ಈಗಂತೂ ಅವನು ಕೆಲಸಕ್ಕೂ ಹೋಗುತ್ತಿರಲಿಲ್ಲ. ನಾಲ್ಕು ಜನ ಹೆಣ್ಣು ಮಕ್ಕಳ ಮದುವೆ ನಂತರದ ಹೆರಿಗೆಗಳನ್ನು ಮಾಡಿ ಮಾಡಿ ಆತ ನಿತ್ರಾಣನಾಗಿ ಹೋಗಿದ್ದ. ಅವನ ಹೆಂಡತಿ ಕಾಸಿಲ್ಡ ಈಗ ದುಡಿದು ತಂದು ಗಂಡನನ್ನು ಮನೆಯಲ್ಲಿ ಉಳಿದ ಕೊನೆಯ ಮಗಳು ಪ್ರೆಸಿಲ್ಲಾಳನ್ನು ಸಾಕಬೇಕಿತ್ತು.

ಕಾಸಿಲ್ಡ ಮೂರು ನಾಲ್ಕು ಮನೆಯ ಕೆಲಸ ಮಾಡುತ್ತಿದ್ದಳು. ಫ಼ಾತಿಮಾ ನಗರದ ಅಲೆಕ್ಸ ಪಿಂಟೋ, ಜಾನ ಡಯಾಸ್, ರೈಲ್ವೆ ಇಲಾಖೆಯ ಇರುದನಾದನ ಮನೆಗಳಲ್ಲಿ ಎರಡು ಮೂರು ಗಂಟೆ ಅವಳು ಕೆಲಸ ಮಾಡುತ್ತಿದ್ದಳು. ಜಾನ ಡಯಾಸನ ಹೆಂಡತಿ ಸಿಲ್ವಿಯ ತೊಳೆದ ಪಾತ್ರೆಗಳನ್ನೇ ಎರಡೆರಡು ಬಾರಿ ತೊಳೆಯಲು ಹೇಳುತ್ತಿದ್ದಳು. ಮನೆಯನ್ನು ಎರಡು ಸಲ ಗುಡಿಸಿ ಒರೆಸಬೇಕು. ಪಿಂಟೋ ಹೆಂಡತಿ ಮಗ್ಗಿಬಾಯಿ ಕೂಡ ಹೀಗೆಯೇ.
“ಶಿಶಿಶಿ..ಏನಿದು ಪಾತ್ರೆ ತೊಳೆಯೋ ರೀತಿ? ನೀವು ನಿಮ್ಮ ಮನೇಲೂ ಹೀಗೇನೆ ಕೆಲಸ ಮಾಡುವುದ?” ಎಂದು ಮಾತು ಮಾತಿಗೆ ತಿವಿಯುತ್ತಿದ್ದಳು ಅವಳು. ಇರುದನಾದನ ಹೆಂಡತಿ ಪಾಪಮ್ಮ ಪಾಪದ ಹೆಂಗಸು-
“ಅಲ್ಲಿಷ್ಟು ಗುಡಿಸಿ ಬಿಡು ಕಾಶಿಲ್ಡ..ಬಟ್ಟೆ ನಾನು ಹಾಕತೇನೆ” ಅನ್ನುತ್ತಿದ್ದಳು.
ಪಿಂಟೋ, ಡಯಾಸ್ ಮನೆಯಲ್ಲಿ ಒಂದು ಲೋಟ ಕಾಫ಼ಿ ಕೂಡ ಇವಳಿಗೆ ಸಿಗುತ್ತಿರಲಿಲ್ಲ. ಪಾಪಮ್ಮ ಕಾಫ಼ಿ ತಿಂಡಿಕೊಟ್ಟು ಉಪಚರಿಸುತ್ತಿದ್ದಳು. ಈ ಮೂರು ಮನೆಗಳಲ್ಲಿ ಕೆಲಸ ಮಾಡಿ ಮನೆಗೆ ಬಂದು ಕಾಸಿಲ್ಡ ಅಡಿಗೆ ಮಾಡಬೇಕಿತ್ತು.
ಮನೆಗೊಬ್ಬ ಮಗಬೇಕು ಎಂದು ಎಲ್ಲ ದೇವರುಗಳಿಗೂ ಹರಕೆ ಹೊತ್ತು ಹುಟ್ಟಿದ ಮಗ ಅವರ ಕೈಬಿಟ್ಟಿದ್ದ. ಊರಿನಲ್ಲಿ ಜನರ ಬಾಯಲ್ಲಿ ಚೌಡಪ್ಪ ಎಂದೇ ಜನಪ್ರಿಯ ನಾಗಿದ್ದ ದುಮಿಂಗ ಮದುವೆಯಾಗಿದ್ದೇ ಹೊರ ಹೋದ. ಅವನಿಗೆ ತಂದೆ ತಾಯಿಯ ನೆನಪು ಕೂಡ ಆಗುವುದಿಲ್ಲ. ಹೀಗಾಗಿ ಕಾಸಿಲ್ಡ ತನ್ನ ಗಂಡ, ಕೊನೆಯ ಮಗಳು ಪ್ರೆಸಿಲ್ಲಳ ಬದುಕಿಗೊಂದು ಆಧಾರವಾಗಿ ಕೆಲಸ ಹುಡುಕಿಕೊಂಡಳು.
ಸಂಜೆ ಅವಳಿಗೆ ಮಹಿಳಾ ಸಮಾಜದ ಕೆಲಸ. ಅಲ್ಲಿ ಕಸ ಹೊಡೆಯುವುದು, ಬರುವ ಸದಸ್ಯೆಯರ ಸಣ್ಣ ಪುಟ್ಟ ಕೆಲಸ ಮಾಡಿಕೊಡುವುದು. ಆಕೆ ಕೊಂಚ ನಯ ನಾಜೂಕು ಕಲಿತಳು. ತಿದ್ದಿ ತೀಡಿ ಸೀರೆ ಉಡ ತೊಡಗಿದಳು.
ಗಂಡ ಅಂಕೋಲ ಬಿಟ್ಟು ಇಲ್ಲಿಗೆ ಬಂದದ್ದು ಹಣ ಮಾಡಲೆಂಬುದು ಅವಳಿಗೆ ಗೊತ್ತಿತ್ತು. ಅವನಿಂದ ಹಣ ಮಾಡಲಂತೂ ಆಗಲಿಲ್ಲ. ಆದರೂ ತಾವು ಸುಖವಾಗಿದ್ದೆವು. ಈಗಲೂ ಮರ್ಯಾದೆಯಿಂದ ಇದ್ದೇವೆ. ಜಪ, ಪೂಜೆ, ಪ್ರಾರ್ಥನೆ, ಪಾಪ ನಿವೇದನೆ. ದಿವ್ಯ ಪ್ರಸಾದ ಸ್ವೀಕಾರ ತಪ್ಪಿಸುವುದಿಲ್ಲ. ಆದರೂ ಏನೋ ಆತಂಕ. ಮಗಳೊಬ್ಬಳಿದ್ದಾಳೆ. ಅವಳ ಮದುವೆ ಆದರೆ ಸಾಕು ಎಂಬ ಹಾರೈಕೆ.
ಪ್ರೆಸಿಲ್ಲಾ ಬುದ್ಧಿವಂತ ಹುಡುಗಿ. ಎಲ್ಲ ವಿಷಯಗಳಲ್ಲೂ ಚುರುಕು. ಸರಕಾರಿ ಪ್ರೌಢಶಾಲೆಗೇನೆ ಹೆಸರು ತರುವಂತೆ ಓದಿ ಮುಂದೆ ಬಂದಳು. ಶಿವಸಾಗರದ ಕ್ರೀಸ್ತುವರಲ್ಲಿ ಹೀಗೆ ಓದಿ ಬೇರೆಯವರ ಗಮನ ಸೆಳೆದವಳು ಪ್ರೆಸಿಲ್ಲ ಒಬ್ಬಳೆ. ಇದೀಗ ಕಾನ್ವೆಂಟ್ ಶಾಲೆಯಲ್ಲಿ, ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಕ್ರೀಸ್ತುವರ ಮಕ್ಕಳು ಇದ್ದಾರಾದರೂ ತುಂಬಾ ಬುದ್ಧಿವಂತೆ ಎನಿಸಿಕೊಂಡವಳು ಪ್ರೆಸಿಲ್ಲಾ.
ಇದೇ ಕಾರಣದಿಂದಲೋ ಏನೋ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಪ್ರೆಸಿಲ್ಲಾಳನ್ನು ಕರೆದು-
“..ಮುಂದೆ ಕೆಲಸ ಮಾಡುವ ಆಸೆ ಇದೆಯೇನಮ್ಮ ನಿನಗೆ” ಎಂದು ಕೇಳಿದರು.
ಯಾವ ಹುಡುಗಿಯೂ ಕೆಲಸಕ್ಕೆ ಹೋಗದ ಕಾಲ ಅದು. ಹೋದರೂ ಆಸ್ಪತ್ರೆಯಲ್ಲಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ದೊರಕುತ್ತಿತ್ತು. ಪ್ರೆಸಿಲ್ಲ ಈ ದಿಕ್ಕಿನಲ್ಲಿ ವಿಚಾರ ಮಾಡಿರಲಿಲ್ಲ. ಅಕ್ಕಂದಿರ ಹಾಗೆಯೇ ಮದುವೆಯಾಗಿ ಹೋಗುವುದು ಎಂದವಳು ವಿಚಾರ ಮಾಡಿದ್ದಳು. ಆದರೆ ತನ್ನ ಮದುವೆಯ ನಂತರ ಅಪ್ಪ, ಅಮ್ಮನ ಗತಿ ಏನು ಎಂಬ ಪ್ರಶ್ನೆ ಅವಳನ್ನು ಕಾಡುತ್ತಿತ್ತು. ತಮ್ಮನಂತೂ ಅವರನ್ನು ನೋಡಿಕೊಳ್ಳುವುದಿಲ್ಲ. ಮುಂದೆ ಅವರ ಗತಿ?
“ಹೋಗತೀನ ಸಾರ” ಎಂದಳವಳು.
ಅವಳ ಅರ್ಜಿ ಶಿವಮೊಗ್ಗೆಯ ವಿದ್ಯಾ ಇಲಾಖೆಗೆ ಹೋಯಿತು. ಅಲ್ಲಿಂದ ಮಾರುತ್ತರಕ್ಕಾಗಿ ಕಾದಾಗ ಉತ್ತರ ಕೂಡ ಬಂದಿತು.
ಪ್ರೆಸಿಲ್ಲಾಳನ್ನು ಶಿವಮೊಗ್ಗೆಯ ಒಂದು ಕಡೆ ಸಂತಸ ಇನ್ನೊಂದು ಕಡೆ ಆತಂಕ. ಶಿವಮೊಗ್ಗೆಗೆ ಹೋಗಬೇಕು. ಅಲ್ಲಿ ವಾಸಿಸಬೇಕು. ದೊಡ್ಡ ಊರು. ಕೆಲಸ ಹೇಗೋ. ಹೀಗೆಂದು ಸಿಕ್ಕ ಕೆಲಸ ಬಿಡಲುಂಟೆ? ತಂದೆ ಕೆಲಸ ಮಾಡಲಾಗದೆ ಮನೆಯಲ್ಲಿ ಕೂತಿರುವಾಗ, ತಾಯಿ ಅವರಿವರ ಮನೆಗಳಲ್ಲಿ ದುಡಿಯುವಾಗ ತಾನು ಮನೆಬಾಗಿಲಿಗೆ ಬಂದ ಕೆಲಸವನ್ನು ತಿರಸ್ಕರಿಸುವುದೆ?
“ಬಾಬಾ…ನಾನು ಏನು ಮಾಡಲಿ?” ಎಂದು ತಂದೆಯನ್ನೇ ಕೇಳಿದಳು ಪ್ರೆಸಿಲ್ಲ.
“ಪದ್ರಾಬಾ ಅವರನ್ನ ಕೇಳಿ ಬರತೀನಿ” ಎಂದ ಕೈತಾನ ಮನೆ ಬಿಟ್ಟ.
ದಾರಿಯಲ್ಲಿ ಎದುರಾದ ಪಾಸ್ಕೋಲನ ಹತ್ತಿರವೂ ಈ ವಿಷಯ ಪ್ರಸ್ತಾಪ ಮಾಡಿದ.
“ಹೌದು? ಒಳ್ಳೆಯದಾಯ್ತು..ಪದ್ರಾಬ ಏನು ಹೇಳತಾರೋ ನೋಡು..ಕೊನೆಗಾಲದಲ್ಲಿ ನಿಮಗಂತೂ ಒಂದು ಆಧಾರ ಬೇಕಲ್ಲ” ಎಂದ ಪಾಸ್ಕೊಲ.
ಅವನಿಗೂ ಸಂತೋಷವಾಗಿತ್ತು. ಕೈತಾನನದು ಒಳ್ಳೆಯ ಕುಟುಂಬ. ಆದರೆ ಒಳ್ಳೆಯವರಿಗೇನೆ ಕಷ್ಟಗಳು ಹೆಚ್ಚಲ್ಲವೆ?
“ಹೋಗಿ ಬಾ..” ಎಂದು ಕೈತಾನನನ್ನು ಬೀಳ್ಕೋಟ್ಟ ಪಾಸ್ಕೊಲ.
*
*
*
ಇಗರ್ಜಿಯ ಗಂಟೆ ಮಧ್ಯಾಹ್ನದ ಪ್ರಾರ್ಥನಾ ಸಮಯವಾಯಿತು ಎಂಬುದನ್ನು ನೆನಪು ಮಾಡಿಕೊಟ್ಟಿತು. ಪಾಸ್ಕೊಲ ನಿಂತಲ್ಲಿಯೇ ಶಿಲುಬೆಯ ವಂದನೆ ಮಾಡಿದ.
ಒಂದೆರಡು ನಿಮಿಷಗಳಲ್ಲಿ ಮತ್ತೆ ಕೈತಾನ ಕಂಡ. ಉಟ್ಟ ಪಂಚೆಯ ಒಂದು ಚುಂಗನ್ನು ಕೈಯಲ್ಲಿ ಹಿಡಿದು ನಡೆದು ಬರುತ್ತಿದ್ದ. ನಡಿಗೆಯಲ್ಲಿ ಚುರುಕುತನವಿತ್ತು. ಲವಲವಿಕೆಯಿತ್ತು. ಮುಖದ ಮೇಲೆ ಬಹಳ ದಿನಗಳ ನಂತರ ಮೂಡಿ ಬಂದ ಮಂದಹಾಸ.
“ಕೈತಾನ ಮಾಮ ಕೆಲಸ ಹಣ್ಣೋ ಕಾಯೋ?”
“ಹಣ್ಣು ಪಾಸ್ಕೋಲ..ಹಣ್ಣು”
ಕೈತಾನ ನೇರವಾಗಿ ಪಾಸ್ಕೊಲನ ಬಳಿ ಬಂದ.
ಪಾದರಿ ಸಿಕ್ವೇರಾ ಅವನಿಗೆ ಭರವಸೆ ನೀಡಿದ್ದರು. ಸಿಸ್ಟರುಗಳು ನಡೆಸುವ ಹಾಸ್ಟೆಲಿನಲ್ಲಿ ಇರಲು ಪ್ರೆಸಿಲ್ಲಾಗೆ ಅವಕಾಶ ಮಾಡಿ ಕೊಡುವುದಾಗಿ ಹೇಳಿದ್ದರು.
“ಪ್ರೆಸಿಲ್ಲಾ ಹೋಗಲಿ..ಸಿಕ್ಕ ಕೆಲಸವನ್ನು ಬಿಡೋದು ಬೇಡ..” ಎಂದಿದ್ದರು.
“ಮುಂದಿನ ವ್ಯವಸ್ಥೆ ಮಾಡಬೇಕಲ್ಲ..ಬರತೀನಿ” ಎಂದು ಕೈತಾನ ರಸ್ತೆಗೆ ಇಳಿದ.
“ಪಾಯಸ ಮಾಡಲಿಕ್ಕೆ ಹೇಳು ಕಾಸಿಲ್ಡ ಬಾಯಿಗೆ ..ನಾನು ಸಾಯಂಕಾಲ ಬರತೀನಿ” ಎಂದ ಪಾಸ್ಕೊಲ.
ದೇವರು ಒಂದು ಕುಟುಂಬವನ್ನು ಕಾಪಾಡಿದ. ಅವನಿಗೆ ಕೃತಜ್ಞತೆಗಳಿರಲಿ ಎಂದು ಮನಸ್ಸಿನಲ್ಲಿಯೇ ಅಂದುಕೊಂಡ.
ಕೆಲಸಗಾರರು ಊಟದ ಸಮಯವಾಯಿತೆಂದು ಕೆಲಸ ನಿಲ್ಲಿಸಿದಾಗ ಪಾಸ್ಕೊಲನಿಗೆ ಚುರುಗುಟ್ಟುತ್ತಿರುವ ತನ್ನ ಹೊಟ್ಟೆಯ ನೆನಪಾಯಿತು.

-೮-

ಸಾನಬಾವಿ ಪೆದ್ರು ಹೆಂಡತಿ ರಂಗಿ ಫ಼್ಲೋರಿನಾ ಆದನಂತರ ಸಂಪೂರ್ಣ ಬದಲಾಗಿ ಹೋದಳು. ಆವರೆಗೆ ಪೆದ್ರುವಿನ ಮನೆಯಲ್ಲಿದ್ದು ಅವನ ಹೆಂಡತಿ ಅನ್ನಿಸಿಕೊಳ್ಳದೇ, ಇಟ್ಟುಕೊಂಡವಳು ಎಂಬ ಹೆಸರಿನಲ್ಲಿಯೇ ಕರೆಸಿಕೊಳ್ಳುತ್ತಿದ್ದ ಆಕೆ ಪಾದರಿ ಗೋನಸ್ವಾಲಿಸರ ಕೃಪೆಯಿಂದ ’ಹೆಂಡತಿ’ ಎಂಬ ಗೌರವಕ್ಕೆ ಪಾತ್ರಳಾಗಿಬಿಟ್ಟಳು. ಕೇರಿಯವರು ಅವಳನ್ನು ನೋಡುವ ರೀತಿ ಬೇರೆಯಾಯಿತು. ಮಾತನಾಡಿಸುವ ಧಾಟಿ ಬೇರೆಯಾಯಿತು. ಸಿಮೋನಿನ ತಾಯಿ ಅವಳನ್ನು ಧುವೇ(ಮಗಳೆ) ಎಂದು ಕರೆಯತೊಡಗಿದಳು. ಅವಳು ಕೇರಿಯ ಇತರರ ಪಾಲಿಗೆ ಬಾಯಿ (ಅಕ್ಕ) ಹುನ್ನಿ (ಅತ್ತಿಗೆ) ಮೌಸಿ (ಚಿಕ್ಕಮ್ಮ) ಎಲ್ಲ ಆದಳು. ಕೆಲ ಮಕ್ಕಳಿಗೆ ದೇವಮಾತೆಯೂ ಆಗಿ ಅವರಿಂದ ಮೊದೋನ ಎಂದು ಕರೆಸಿಕೊಳ್ಳತೊಡಗಿದಳು. ತಟ್ಟನೆ ತನ್ನ ಸ್ಥಾನಮಾನಗಳು ಬದಲಾದದ್ದು ಅವಳಿಗೆ ಸಂತೋಷವನ್ನು ತಂದಿತು. ಹೀಗೆಯೇ ಸಿಮೋನನ ಮಗಳು ಕಲಿಸಿದ ಜಪ ಮಂತ್ರಗಳು ಅವಳ ವ್ಯಕ್ತಿತ್ವಕ್ಕೆ ಹೆಚ್ಚಿನ ಮೆರುಗನ್ನು ತಂದುಕೊಟ್ಟವು. ಭಾನುವಾರ ಬಂತೆಂದರೆ ಎಲ್ಲ ಹೆಂಗಸರ ಹಾಗೆ ಅಚ್ಚುಕಟ್ಟಾಗಿ ಸೀರೆಯುಟ್ಟು, ತಲೆಯ ಮೇಲೆ ಸೆರಗು ಹೊದ್ದು ಎಲ್ಲರಿಗೂ ಮೊದಲು ಇಗರ್ಜಿಗೆ ಹೋಗತೊಡಗಿದಳು. ಅಲ್ಲಿ ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ತಪ್ಪಿಸುತ್ತಿರಲಿಲ್ಲ. ಅವಳ ಈ ಶೃದ್ಧೆ ಆಸಕ್ತಿ ಉಳಿದವರನ್ನು ಬೆರಗುಗೊಳಿಸುತ್ತಿತ್ತು.
“ನೋಡೇ..ಮೊನ್ನೆ ಮೊನ್ನೆ ನಮ್ಮ ಸಮೋಡ್ತಿನೊಳಗೆ ಬಂದವಳ..ಭಕ್ತಿ ನೋಡು” ಎಂದು ಹೆಂಗಸರು ಮಾತನಾಡಿಕೊಳ್ಳುತ್ತಿದ್ದರು.
ಸಾನಬಾವಿ ಪೆದ್ರು ಕೂಡ ಪ್ರತಿ ಭಾನುವಾರ ಇಗರ್ಜಿಗೆ ಹೋಗಲೇ ಬೇಕಾಯಿತು. ಮನೆಯಲ್ಲಿ ನಿತ್ಯ ಪ್ರಾರ್ಥನೆ ತಪ್ಪಲಿಲ್ಲ. ದೇವರ ಮುಂದೆ ಮೇಣದ ಬತ್ತಿ ಹಚ್ಚುವುದನ್ನು ರಂಗಿ ಯಾವತ್ತೂ ಮರೆಯುತ್ತಿರಲಿಲ್ಲ.
ಅವರಿಗೆ ಮತ್ತೂ ಅಚ್ಚರಿಯಾದುದೆಂದರೆ ಇಗರ್ಜಿಯಲ್ಲಿ ಮದುವೆಯಾಗುವುದಕ್ಕೂ ಮೊದಲು ಅವರು ಒಟ್ಟಿಗೇನೆ ಇದ್ದರು. ಗಂಡ ಹನುಮಂತನ ಹತ್ತಿರದ ಸಂಬಂಧಿ ವೀರಭದ್ರ ತನ್ನನ್ನು ಒಳಗೆ ಹಾಕಿಕೊಳ್ಳುವ ಯತ್ನ ಮಾಡಿದಾಗ ರಂಗಿ ಪೆದ್ರುವಿನಲ್ಲಿಗೆ ಓಡಿ ಬಂದು ಅವನ ಮನೆ ಸೇರಿಕೊಂಡಿದ್ದಳು. ಒಂದು ಗಂಡು ಒಂದು ಹೆಣ್ಣು ಅದೆಷ್ಟು ದಿನ ದೂರ ದೂರ ಇರಲು ಸಾಧ್ಯ. ಅದೊಂದು ರಾತ್ರಿ ತನಗೆ ಅರಿವಿಲ್ಲದೇನೆ ರಂಗಿ ಪೆದ್ರುವಿನ ತೋಳುಗಳಲ್ಲಿ ಸಿಲುಕಿ ಮೈ ಹಿಂಡಿದಂತಾಗಿ ದೇಹದ ನರನರಗಳಲ್ಲಿ ಬೆಂಕಿ ಪ್ರಜ್ವಲಿಸಿ, ಹೀಗೆ ಹೊತ್ತಿಕೊಂಡ ಬೆಂಕಿ ಪೆದ್ರುವಿನಿಂದ ನಂದಿಹೋಗಿ ಹಿತಕರವಾಗಿ ಆಕೆ ನರಳಿದ್ದಳು. ಆನಂತರ ಈ ಪ್ರಕರಣ ಮತ್ತೆ ಮತ್ತೆ ಮುಂದುವರೆದಿತ್ತು. ಇಷ್ಟಾದರೂ ಅವಳು ಗರ್ಭಿಣಿಯಾಗಿರಲಿಲ್ಲ. ಎಲ್ಲಿ ಏನಾಗುತ್ತದೋ ಎಂಬ ದಿಗಿಲು. ಅನೈತಿಕವಾಗಿ ಬದುಕುತ್ತಿರುವ ತನಗೆ ಮಗುವಾದರೆ ಅದೊಂದು ಆಪಾದನೆ ಹೊರಬೇಕಾದೀತೆ ಎಂಬ ಆತಂಕದಲ್ಲಿ ದಿನಗಳು ಉರುಳಿ ಹೋಗಿದ್ದವು.
ನಂತರ ಪಾದರಿ ಗೋನಸ್ವಾಲಿಸರು ಅವರನ್ನು ಗಂಡ ಹೆಂಡತಿ ಎಂದು ದೇವರ ಎದುರು ನಿಲ್ಲಿಸಿ ಆಶೀರ್ವದಿಸಿದ್ದರು. ಇದರ ನಂತರ ಪೆದ್ರು-
“..ಫ಼್ಲೊರಿನಾ..” ಎಂದು ಬೇರೆಯೆ ಆದ ರೀತಿಯಲ್ಲಿ ಅಪ್ಪಿ ಮುದ್ದಾಡಿದ್ದ. ಆನಂತರ ಅವಳು ಕೂಡ ಯಾವುದೇ ಭೀತಿ ಭಿಡೆ ಇಲ್ಲದೆ ಪೆದ್ರುವಿಗೆ ತನ್ನ ಮೈ ನೀಡಿದ್ದಳು. ಇದಾದ ಕೆಲವೇ ತಿಂಗಳುಗಳಲ್ಲಿ ಸುತಾರಿ ಇನಾಸನ ಹೆಂಡತಿ ಮೊನ್ನೆ ಫ಼್ಲೊರಿನಾ ಮನೆ ಹಿಂದಿನ ಮಂಟಪದ ಬಳಿ ವಾಂತಿ ಮಾಡುತ್ತ ಕುಳಿತಿರುವುದನ್ನು ಕಂಡು ಸಾಂತಾ ಮೊರಿಯನ್ನು ಕರೆತಂದಳು.
ಸಾಂತಾಮೋರಿ-
“ರಂಗೀ..ರಂಗೀ..ಏನಾಯ್ತು..ಏನಾಯ್ತು?” ಎಂದು ಕೇಳುತ್ತ ಓಡಿ ಬಂದಳು.
ಪೆದ್ರು ಇದು ದೇವರ ಕೃಪೆಯೇ ಹೌದು ಅಂದುಕೊಂಡ. ಫ಼್ಲೋರಿನಾಗೂ ಇದರಲ್ಲಿ ಅನುಮಾನ ಉಳಿಯಲಿಲ್ಲ. ಅಂದು ಗಂಡ ಹೆಂಡತಿ ಅಲ್ತಾರಿನ ಮುಂದೆ ನಿಂತು ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಆರು ತಿಂಗಳ ನಂತರ ಪೆದ್ರುವಿನ ಹಾಗೆಯೇ ಗಟ್ಟಿ ಮುಟ್ಟಾಗಿದ್ದ. ಆದರೆ ರಂಗಿಯ ಬಣ್ಣ ಕಸಿದುಕೊಂಡ ಮಗ ಮನೆಯಲ್ಲಿ ಹುಟ್ಟಿದ.
ಹೆರಿಗೆ ಮಾಡಿಸಲೆಂದು ಬಂದ ವೈಜೀಣ್ ಕತ್ರೀಣ್ ಮಗುವಿನ ಹೊಕ್ಕಳು ಬಳ್ಳಿ ಕತ್ತರಿಸುತ್ತ-
“..ಆಂಜ್ ಬೊಡ್ವೊ (ದೇವದೂತ) ಬಂದಿದ್ದಾನೆ ನಿಮ್ಮ ಮನೆಗೆ..ತುಂಬಾ ಮುದ್ದಾಗಿದ್ದಾನೆ..” ಎಂದು ಕೂಗಿ ಹೇಳಿದ್ದು ನೋವಿನಲ್ಲೂ ಕಿವಿಗೆ ಬಿದ್ದು ರಂಗಿಯ ಮುಖ ಅರಳಿತ್ತು. ಟೋಲ್ ನಾಕಾದ ಆ ಮನೆಯನ್ನು ಬಿಟ್ಟು ಬಂದ ತನ್ನ ಬದುಕು ಈ ಪರಿಯಲ್ಲಿ ಹಿಗ್ಗಿದ್ದನ್ನು ಕಲ್ಪಿಸಿಕೊಂಡು ಅವಳು ಸಂತಸಪಟ್ಟಳು. ಏಸು ಮರಿ ಜೋಸೆಫ಼ರ ಮೇಲಿನ ಅವಳ ಭಕ್ತಿ ಮತ್ತೂ ಅಧಿಕವಾಯಿತು.
ಮಗನಿಗೆ ನಲವತ್ತನೇ ದಿನ ನಾಮಕರಣಕ್ಕೆಂದು ಕೊಂಡೊಯ್ದಾಗ ಪಾದರಿ ಮಗು ಹುಟ್ಟಿದ ತಾರೀಕು ಕೇಳಿದರು. ಕ್ರಿಶ್ಚಿಯನ್ ಕ್ಯಾಲೆಂಡರ್ ನೋಡಿ ಮಗು ಹುಟ್ಟಿದ ದಿನವೆ ಸಂತ ಗ್ರೆಗೋರಿ ಕೂಡ ಹುಟ್ಟಿದ್ದರಿಂದ ಮಗುವಿನ ಹುಟ್ಟಿದ ದಿನದ ಹೆಸರು ಗ್ರೆಗೋರಿ ಎಂದರು. ಪೆದ್ರುವಿಗೆ ತನ್ನ ಅಜ್ಜನ ಹೆಸರನ್ನು ಮಗುವಿಗೆ ಇಡಬೇಕೆಂದಿತ್ತು. ಅದನ್ನೂ ಆತ ಗೋನಸ್ವಾಲಿಸರಿಗೆ ಹೇಳಿದಾಗ ಅವರು ಇಡೋಣ ಎಂದರು. ಮಗುವಿನ ದೇವ ಪಿತ ದೇವ ಮಾತೆಯಾಗಲು ಅಂಕೋಲಾದ ಕೈತಾನ ಅವನ ಹೆಂಡತಿ ಕಾಸಿಲ್ಡ ಮುಂದೆ ಬಂದರು. ಇಗರ್ಜಿಯಲ್ಲಿ ಸಾನಬಾವಿ ಪೆದ್ರುವಿನ ಮಗನಿಗೆ ಗ್ರೆಗೋರಿ ಫ಼್ರಾನ್ಸಿಸ್ ಎಂದು ನಾಮಕರಣ ಮಾಡಲಾಯಿತು. ಬೋನ ಇಗರ್ಜಿಯ ಗಂಟೆ ಬಾರಿಸಿ ಊರಿಗೆಲ್ಲ ಸುದ್ದಿ ತಿಳಿಸಿದ. ಅಂದು ಸಣ್ಣ ಪ್ರಮಾಣದ ಒಂದು ಊಟ ಕೂಡ ಪೆದ್ರುವಿನ ಮನೆಯಲ್ಲಿ ಇತ್ತು. ಸಾನಬಾವಿ ಪೆದ್ರುವಿನ ಮನೆತನದ ಹೆಸರು ಡಿಸೋಜ ಆಗಿದ್ದರಿಂದ ಅವನ ಮಗ ಗ್ರೆಗೋರಿ ಫ಼್ರಾನ್ಸಿಸ್ ಡಿಸೋಜಾ ಎಂದೇ ಸರಕಾರಿ ಶಾಲೆಯಲ್ಲಿ ದಾಖಲಾದ.
ಸಾನಬಾವಿ ಪೆದ್ರು ಶಿವಸಾಗರಕ್ಕೆ ಬಂದ ಸಿಮೋನ, ಪಾಸ್ಕೊಲ ಇನಾಸ ಇವರೆಲ್ಲರಿಗಿಂತ ಏಳೆಂಟು ವರ್ಷ ಕಿರಿಯನಾಗಿದ್ದ. ಅವನು ಮದುವೆಯಾದದ್ದೂ ತಡವಾಗಿ, ಮಗು ಹುಟ್ಟಿದ್ದು ಮತ್ತು ತಡವಾಗಿ. ಹೀಗಾಗಿ ಅವನ ಮಗ ಗ್ರೆಗೋರಿ ಪ್ರೌಢಶಾಲೆಗೆ ಬಂದಾಗ ಪಾದರಿ ಗೋನಸ್ವಾಲಿಸ್ ಹೊರಟು ಹೋಗಿ ಪಾದರಿ ಮಸ್ಕರಿನಾಸ ಊರಿಗೆ ಬಂದು ಎರಡು ಮೂರು ವರ್ಷಗಳಾಗಿದ್ದವು. ಮಕ್ಕಳನ್ನು ಓದಿಸಿ ಓದಿಸಿ ಎಂಬ ಮಾತನ್ನು ಇವರೂ ಹೇಳುತ್ತಿದ್ದರು.
ಪೆದ್ರುಗೆ ಮಗನ ಓದಿನ ಬಗ್ಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ.
“ಈ ಇಜಾರ ಪಜಾರ ಹಾಕಿಕೊಂಡವರು ಏನು ದುಡೀತಾರೆ ಮಾರಾಯ..ನಮ್ಮಷ್ಟು ದುಡೀತಾರ ಅವರು?” ಎಂದು ವಿದ್ಯಾವಂತರನ್ನು ತಿರಸ್ಕಾರದಿಂದ ನೋಡುತ್ತಿದ್ದ.
ಆದರೆ ಫ಼್ಲೋರಿನಾಗೆ ಮಗ ಓದಿ ಆಫ಼ೀಸರ ಆಗಬೇಕು ಎಂಬ ಆಸೆ. ಹೀಗೆಂದೇ ಅವಳು ಮಗನ ಬಗ್ಗೆ ತುಂಬಾ ಮುತುವರ್ಜಿ ವಹಿಸಿದ್ದಳು. ಆತ ಶಾಲೆಗೆ ತಪ್ಪಿಸಿಕೊಳ್ಳಬಾರದು, ಮನೆಯಲ್ಲಿ ಚೆನ್ನಾಗಿ ಓದಬೇಕು. ಸಂಜೆ ಪ್ರಾರ್ಥನೆಯ ಗಂಟೆ ಆಗುತ್ತಿದೆ ಅನ್ನುವಾಗ ಎಲ್ಲೇ ಇರಲಿ ಮನೆಗೆ ಬರಬೇಕು. ಕೈಕಾಲು ಮುಖ ತೊಳೆದು ಅಮೋರಿ ಮಾಡಿ ಓದಲು ಕೊಡಬೇಕು. ಒಂಬತ್ತು ಗಂಟೆಯ ತನಕ ಸೀಮೆ ಎಣ್ಣೆ ದೀಪ ಎದುರು ಇರಿಸಿಕೊಂಡು ಓದು. ಮತ್ತೆ ಬೆಳಗಿನ ಪ್ರಾರ್ಥನೆಯ ಗಂಟೆ ಆದಾಗ ಏಳಬೇಕು. ಮತ್ತೆ ಓದು. ವಯಸ್ಸಿಗೆ ಅನುಗುಣವಾಗಿ ಜ್ಞಾನೋಪದೇಶ ಕಲಿಸಿದಳು. ಪ್ರಥಮ ದಿವ್ಯ ಪ್ರಸಾದ ಸ್ವೀಕಾರ ಸಮಾರಂಭವನ್ನು ಚೆನ್ನಾಗಿಯೇ ಮಾಡಿದಳು. ಮಗನಿಗೆ ಬಿಳಿ ಉಡುಗೆ ತೊಡಿಸಿ ತಲೆಗೊಂದು ಹೂ ಕಿರೀಟವಿರಿಸಿ, ಕೈಗೆ ಮೇಣದ ಬತ್ತಿ ಕೊಟ್ಟು ದಿವ್ಯ ಪ್ರಸಾದ ಸ್ವೀಕಾರ ಸಮಾರಂಭ ಮುಗಿಸಿ, ತಾನೇ ಮಗನನ್ನು ಮನೆ ಮನೆಗೆ ಕರೆದೊಯ್ದು ಹಿರಿಯರಿಂದ ಆಶೀರ್ವಾದ ಮಾಡಿಸಿದಳು.
ಅವಳಿಗೊಂದು ಆಸೆ. ಟೋಲನಾಕಾದ ಬಳಿಯ ಅವರ ಹತ್ತಿರದ ಬಂಧು ಬಳಗದವರು ಅವಳನ್ನು ಅವಳ ಮಗ ಗಂಡನನ್ನು ಗಮನಿಸುತ್ತಿದ್ದರು. ಅವರ ಸ್ಥಿತಿಗತಿಯಲ್ಲಿ ಅಂತಹ ಬದಲಾವಣೆಗಳಾಗಿರಲಿಲ್ಲ. ಹಿಂದಿನಂತೆಯೇ ಬಡತನದಲ್ಲಿ ಕಲ್ಲು ಮಣ್ಣಿನ ಕೆಲಸ ಮಾಡುತ್ತ ಅವರಿದ್ದರು. ಅವರ ಮುಂದೆ ತನ್ನ ಮಗ ಮೆರೆಯಬೇಕು. ಊರಿನಲ್ಲಿ ಒಂದು ಒಳ್ಳೆಯ ನೌಕರಿ ಪಡೆದು ಭಲೆ ಅನಿಸಿಕೊಳ್ಳಬೇಕು ಎಂದೆಲ್ಲ ಅವಳು ಬಯಸಿದಳು. ಅವಳ ಬಯಕೆಯಂತೆಯೇ ಮಗ ಗ್ರೆಗೋರಿ ಓದುತ್ತಿದ್ದ ಕೂಡ.
ಸಾನಬಾವಿ ಪೆದ್ರುವಿನಲ್ಲಿ ಈಗಲೂ ಕೆಲಸ ಮಾಡುವ ಶಕ್ತಿ ಇತ್ತು. ಸಿಮೋನ, ಇನಾಸ ಮುದುಕರಾಗಿದ್ದರೂ ಈತ ಅಲ್ಲಿ ಇಲ್ಲಿ ಕೆಲಸ ಹಿಡಿದು ಮಾಡಿಸುತ್ತ, ತಾನೂ ಮಾಡುತ್ತ ಪೆದ್ರು ಮೇಸ್ತ್ರಿ ಅನ್ನುವ ಹೆಸರು ಉಳಿಸಿಕೊಂಡಿದ್ದ. ಫ಼್ಲೊರಿನಾ ಕೂಡ ಕೆಲಸ ಮಾಡಿಕೊಂಡಿದ್ದವಳೆ. ಪೆದ್ರು ಮನೆ ಸೇರಿದ ನಂತರವೂ ಅವಳು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಲಿಲ್ಲ. ಹಿಂದೆಲ್ಲ ಕಟ್ಟಡ ಕೆಲಸಕ್ಕೇ, ಸುಣ್ಣ ತೆಗೆಯಲು ಹೋಗುತ್ತಿದ್ದವಳು ಈಗ ಮೀನು ತೆಗೆದುಕೊಂಡು ಹಳ್ಳಿಗಳಿಗೆ ಹೋಗುತ್ತಾಳೆ. ಅವಳ ಜತೆ ಕೇರಿಯ ಮತ್ತೂ ಐದಾರೂ ಹೆಂಗಸರು ಬರುತ್ತಾರೆ. ಮೀನು ಮಾರ್ಕೆಟ್ಟಿನಿಂದ ಒಣ ಮೀನು ತರುವುದು ಅದನ್ನು ಬುಟ್ಟಿಗೆ ತುಂಬಿಕೊಂಡು ಐದಾರೂ ಹೆಂಗಸರು ಬರುತ್ತಾರೆ. ಮೀನು ಮಾರ್ಕೆಟ್ಟಿನಿಂದ ಒಣ ಮೀನು ತರುವುದು ಅದನ್ನು ಬುಟ್ಟಿಗೆ ತುಂಬಿಕೊಂಡು ಹತ್ತಿರದ ಐದಾರು ಹಳ್ಳಿಗಳಿಗೆ ಹೋಗುವುದು. ಹಳ್ಳಿ ಹೆಂಗಸರು ತಮಗೆ ಬೇಕಾದ ಒಣ ಬಂಗಡೆ, ಸೊರಲು, ಮೋರಿ ಮೀನು ಕೊಂಡು ಭತ್ತ ಕೊಡುತ್ತಾರೆ. ಹೋಗುವಾಗ ಮೀನು ಕೊಂಡೊಯ್ದರೆ ಬರುವಾಗ ಭತ್ತ ತುಂಬಿಕೊಂಡು ಬರುತ್ತಾರೆ. ಕೆಲಬಾರಿ ಮೀನು ಕೊಟ್ಟು ಸುಗ್ಗಿಯಲ್ಲಿ ಭತ್ತ ತರುತ್ತಾರೆ. ಹತ್ತು ಹದಿನೈದು ಮೈಲಿ ಫ಼ಾಸಲೆಯಲ್ಲಿರುವ ಹಳ್ಳಿಗಳಿಗೆ ಹೋಗಿ ಬರುವುದಕ್ಕೆ ಒಂದು ಎರಡು ಗಂಟೆಯಾಗುತ್ತದೆ.
ಮನೆಗೆ ತಂದ ಭತ್ತವನ್ನು ಕುದಿಸಬೇಕು, ಬೇಯಿಸಿದ ಭತ್ತವನ್ನು ಒಣಹಾಕ ಬೇಕು. ನಂತರ ಮಿಲ್ಲಿಗೆ ಕೊಂಡೊಯ್ದು ಅಕ್ಕಿ ಮಾಡಿಸಬೇಕು. ಇಷ್ಟು ಮಾಡಿದ ನಂತರ ಪರಿಮಳ ಬೀರುವ ಕುಸುಬಲು ಅಕ್ಕಿ ದೊರೆಯುತ್ತದೆ. ಮಳೆಗಾಲಕ್ಕೆ ಅಕ್ಕಿಯ ಸಮಸ್ಯೆ ಬಗೆಹರಿಯುತ್ತದೆ.
ಹಳ್ಳಿಗಳಿಗೆ ಹೊರಡುವಾಗ ಹೆಂಗಸರೆಲ್ಲ ಒಟ್ತಿಗೇನೆ ಹೋಗುತ್ತಾರೆ. ಊರ ಟೋಲಗೇಟಿನ ಬಳಿ ಮುಖ್ಯ ರಸ್ತೆ ಕಾಲು ದಾರಿಗಳಾಗಿ ಒಡೆದುಕೊಳ್ಳುತ್ತದೆ. ಒಂದೊಂದು ಹಳ್ಳಿ ಒಂದೊಂದು ದಿಕ್ಕಿಗೆ ಇದ್ದುದರಿಂದ-
“ಬರತೀನಿ ಕತ್ರೀನ”
“ಬರತೀನಿ ಮೇರಿ”
” ಬರತೀನಿ ರಂಗಿ” ಎಂದು ಕೂಗಿ ಹೇಳಿ ಎಲ್ಲ ಚದುರುತ್ತಾರೆ. ಆದರೆ ಮೀನು ಹೊತ್ತು ಅಷ್ಟು ದೂರ ಹೋದ ರಂಗಿ ಗಕ್ಕನೆ ತಿರುಗಿ ನಿಲ್ಲುತ್ತಾಳೆ.
“ಮೇರಿ..ನಿನಗೆ ಹೇಳಿದ್ದಲ್ವ?”
“ಏನು..ನೀನು ಹೇಳಿದ್ದು..”
“ನನ್ನ ರಂಗಿ ಅಂತ ಕರೀಬೇಡ ಅಂತ..”
“ಓ! ಮರೆತು ಹೋಯ್ತು ಕಣೆ ರಂಗಿ..”
ಮತ್ತೆ ಈರ್ವರೂ ನಗುತ್ತಾರೆ.
“ನಿನ್ನ ನಾಲಿಗೆಗೆ ಬರೆ ಹಾಕಬೇಕು ನೋಡು” ಅನ್ನುತ್ತಾಳೆ ಫ಼್ಲೊರಿನಾ ಮುಂಡಿಗೆ ಪೊದೆಗಳ ಆಚೆಗೆ ಮರೆಯಾಗುತ್ತ.
ಬಿದ್ರಳ್ಳಿಗೆ ಹೋಗುವ ಕಾಲುದಾರಿ ಹಿಡಿದಾಗ ಶಾಲೆಗೆ ಹೊರಟ್ಯ ಮಕ್ಕಳು ಎದುರಾಗುತ್ತಾರೆ.
“ಶಾಲೆಗಾ?” ಎಂದು ಕೇಳುತ್ತಾಳೆ ಫ಼್ಲೊರಿನಾ. ಮಕ್ಕಳು ಗುರುತಿದ್ದುದರಿಂದ ಹೌದು ಎಂದು ಹೇಳಿ ಮುಂದಾಗುತ್ತಾರೆ.
ಇವಳಿಗೆ ಮಗನ ನೆನಪಾಗುತ್ತದೆ.
ಮಗ ಸದಾ ಓದುತ್ತಿರುತ್ತಾನೆ. ಶಾಲೆಯ ಪುಸ್ತಕಗಳನ್ನು ಮಾತ್ರವಲ್ಲ ಬೇರೆ ಬೇರೆ ಪುಸ್ತಕಗಳನ್ನು ತಂದು ಓದುತ್ತಾನೆ.
ಮೊನ್ನೆ ಮನೆ ಮಂತ್ರಿಸಲು ಬಂದ ಪಾದರಿ ಸಿಕ್ವೇರಾ ಮಗ ಮೇಜಿನ ಮೇಲೆ ರಾಶಿ ಹಾಕಿರುವ ಪುಸ್ತಕಗಳನ್ನು ತಿರುವಿ ಹಾಕಿ-
“ಏನು ಗ್ರೆಗೋರಿ ಇವುಗಳನ್ನೆಲ್ಲ ಓದುತ್ತಾನ? ” ಎಂದು ಕೇಳಿದರು.
“ಹೌದು ಪದ್ರಾಬ..ಅವನಿಗೆ ಓದುವ ಹುಚ್ಚು. ಊಟ, ನಿದ್ದೆ ಕೂಡ ಬಿಟ್ಟು ಓದುತ್ತಾನೆ..” ಎಂದೆ.
“ಪ್ರಾರ್ಥನೆ ಜಪ ಎಲ್ಲ ಮಾಡತಾನೆ ಅಲ್ವೆ?” ಎಂದವರು ಕೇಳಿದರು.
“ಅದನ್ನ ಮರೆಯೋದಿಲ್ಲ..ಮನೇಲಿ ಪ್ರಾರ್ಥನೆ ಹೇಳಿ ಕೊಡುವವನೇ ಅವನು” ಎಂದೆ.
“ಓದಲಿ..ಓದಲಿ..ಏನು ಬೇಕಾದರೂ ಓದಲಿ. ಆದರೆ ಜಪ ಪ್ರಾರ್ಥನೆ ಇಗರ್ಜಿಗೆ ಬರೋದು ಬಿಡಬಾರದು. ದೈವ ಭಕ್ತಿ, ದೈವ ಭೀತಿ ಇರಬೇಕು.”
“ನಮ ಹುಡುಗ ಹಾಗಲ್ಲ ಪದ್ರಾಬಾ” ಎಂದಿದ್ದೆ ತಾನು.
ಆ ಭರವಸೆ ತನಗಿದೆ. ಮಗ ಗ್ರೆಗೋರಿ ದೇವರ ಮೇಲೆ ನಂಬಿಕೆ ಭಕ್ತಿ ಇರಿಸಿಕೊಂಡೇ ದೊಡ್ಡ ಮನುಷ್ಯನಾಗುತ್ತಾನೆ. ನಮಗೆ ಒಳ್ಳೆಯದಾಗಬೇಕು ಅಂದರೆ ದೇವರ ಕೃಪೆ ಬೇಕಲ್ಲವೇ?
ಬಿದ್ರಳ್ಳಿಯ ಹನುಮಂತ ದೇವರ ಗುಡಿಯ ಮುಂದೆ ಇವಳು ಊರನ್ನು ಪ್ರವೇಶಿಸುತ್ತಾಳೆ. ಅವಳನ್ನು ನೋಡಿದ್ದೆ ಹಳ್ಳಿ ಹೆಂಗಸರು-
“ಬಾ ಫ಼್ಲೋರಿ ನಮ್ಮ..ಹೋದವಾರ ನೀ ಬರ್ಲೇ ಇಲ್ಲ” ಎಂದು ಕೇಳುತ್ತಾರೆ.
*
*
*
ಬೋನ ರೆಮೇಂದಿಯರ ಮಗ ಫ಼ಿಲಿಪ್ಪ ಮಾತ್ರ ಸಾನಬಾವಿ ಪೆದ್ರುವಿನ ಮಗನಿಗಿಂತ ಚಿಕ್ಕವ. ಪ್ರೌಢಶಾಲೆ ಮುಗಿಸಿದ ಮಗ ಆಗಾಗ್ಗೆ ಬಂದು ಅಂಗಡಿಯಲ್ಲಿ ಕೂಡುವುದು ತುಸು ಅನುಕೂಲಕರವೆನಿಸಿತು ಬೋನನಿಗೆ. ಅವನಿಗೂ ಈಗ ವಯಸ್ಸಾಗುತ್ತ ಬಂದಿತ್ತಲ್ಲವೆ?
ಹೆಂಡತಿ ರೆಮೇಂದಿ ಮನೆಯನ್ನು ತೂಗಿಸಿಕೊಂಡು ಹೋಗುತ್ತಿದ್ದಳು. ಬೋನನಿಗೆ ಅವಳ ಮೇಲಿನ ಆಸಕ್ತಿ ಒಂದಿಷ್ಟು ಕಡಿಮೆಯಾಗಿರಲಿಲ್ಲ. ಮದುವೆಯಾಗಿ ಈಗ ಹಲವು ವರ್ಷಗಳಾಗಿದ್ದರೂ ರೆಮೇಂದಿ ಹಿಂದಿನಂತೆಯೇ ಉತ್ಸಾಹದ ಬುಗ್ಗೆಯಾಗಿದ್ದಳು. ಫ಼ಿಲಿಪ್ಪ ಹುಟ್ಟುವುದಕ್ಕೂ ಮೊದಲು ಒಂದು ಬಾರಿ ಮೈ ಇಳಿದು ಕತ್ರೀನ ಬಂದು ಅವಳನ್ನು ನೋಡಿಕೊಂಡಿದ್ದಳು. ಫ಼ಿಲಿಪ್ಪ ಹುಟ್ಟಿದಾಗ ಬಾಣಂತನ ಮಾಡಿದವಳು ಕೂಡ ಅವಳೇನೆ. ಆದರೆ ಮತ್ತೆ ಕೆಲ ವರ್ಷಗಳ ಹಿಂದೆ ಎರಡನೇ ಬಾರಿ ಮೈ ಇಳಿದಾಗ ಕತ್ರೀನಬಾಯಿ ಇರಲಿಲ್ಲ. ಊರ ತುಂಬ ನರ್ಸಿಂಗ ಹೋಂಗಳು ಆದದ್ದು ಒಂದು ಕಾರಣವಾದರೆ ಕತ್ರೀನಬಾಯಿ ಮನೆ ಜಗಲಿಯ ಮೇಲೆ ಕುಳಿತು ಜಪಸರದ ಮಣೆ ಎಣಿಸುತ್ತಲೇ ಪ್ರಾಣ ಬಿಟ್ಟದ್ದು ಮತ್ತೊಂದು ಕಾರಣವಾಗಿತ್ತು.
ಇಷ್ಟಾದರೂ ರೆಮೇಂದಿ ಸೊರಗಿಲ್ಲ.
ಪಾದರಿ ಗೋನಸ್ವಾಲಿಸ್ ಇದ್ದಾಗ ಅಡಿಗೆ ಮನೆ ಬಾಗಿಲಿಗೆ ಬಂದು ನಿಲ್ಲುತ್ತಿದ್ದ ರೆಮೇಂದಿ ಅಂದು ಹೇಗಿದ್ದಳೋ ಇಂದೂ ಹಾಗೆಯೇ ಇದ್ದಾಳೆ. ಆದರೆ ಅವಳಲ್ಲಿ ಏನೋ ಗಾಂಭೀರ್ಯ ಬಂದಿದೆ. ನಡೆಯುವಾಗ ಆ ಚೆಲ್ಲುತನವಿಲ್ಲ. ನಿಧಾನವಾಗಿ ತೂಗಿ ನೋಡಿ ಹೆಜ್ಜೆ ಹಾಕುತ್ತಾಳೆ. ತಂದೆ ಸತ್ತ ಕೆಲವೇ ತಿಂಗಳುಗಳಲ್ಲಿ ತಾಯಿಯನ್ನೂ ಕಳೆದುಕೊಂಡ ಆಕೆಯ ಮೇಲೆ ಮನೆಯನ್ನು ನೋಡಿಕೊಂಡು ಹೋಗುವ ಜವಾಬ್ದಾರಿಯೂ ಬಿದ್ದು ಈ ಗಾಂಭೀರ್ಯ ಬಂದು ಅವಳಲ್ಲಿ ಸೇರಿಕೊಂಡಿದೆ.
ಆದರೆ ಕೆಲವೊಂದು ವಿಚಾರಗಳ ಬಗ್ಗೆ ಅವಳಲ್ಲಿ ಬೇಸರವಿದೆ.
ಬಟ್ಲರ ಫ಼ರಾಸ್ಕನ ಆಗಮನದ ನಂತರದ ಕಾಣಿಕೆ ಡಬ್ಬಿಯ ಪ್ರಕರಣ. ನಂತರ ವಲೇರಿಯನ ಡಯಾಸ ಮಿರೋಣ್ ಆದದ್ದು ಅವಳ ಮನಸ್ಸಿಗೆ ಬಂದಿಲ್ಲ. ಇದು ತನ್ನ ಗಂಡನಿಗೆ ಮಾಡಿದ ಅವಮಾನವೆಂದೇ ಅವಳು ತಿಳಿದುಕೊಂಡಿದ್ದಾಳೆ.
” ಇದನ್ನೆಲ್ಲ ನೀವು ಸುಮ್ನೆ ಸಹಿಸಿಕೊಂಡು ಹೋಗಬಾರದು” ಎಂದು ಹಲವು ಬಾರಿ ಹೇಳಿದ್ದಾಳೆ.
ಹಿಂದೆ ಬಟ್ಲರ ಹೆಂಡತಿ ಎಂದು ಕರೆಸಿಕೊಳ್ಳಲು ಕೊಂಚ ಹಿಂಜರಿಯುತ್ತಿದ್ದ ಆಕೆ ಈಗ ಜವಳಿ ಅಂಗಡಿ ಸಾಹುಕಾರನ ಹೆಂಡತಿ ಎಂದು ಕರೆಸಿಕೊಳ್ಳಲು ಹೆಮ್ಮೆ ಪಡುತ್ತಾಳೆ.
ಗಂಡ ಮನೆಗೆ ಬಂದು ಊಟ ಮುಗಿಸಿ ಮತ್ತೆ ಅಂಗಡಿಗೆ ಹೊರಟಾಗ ರೇಮೇಂದಿ-
“ಏನು ಬಿಸಿಲಲ್ಲಿ ಹೊರಟು ಬಿಟ್ರಿ” ಎಂದು ತುಸು ಧ್ವನಿ ಏರಿಸುತ್ತಿದ್ದಳು.
“ಬಾಳಾ..ಮಧ್ಯಾಹ್ನದ ನಂತರ ನೀನು ಸ್ವಲ್ಪ ಅಂಗಡಿ ನೋಡಿಕೋ” ಎಂದು ಮಗನಿಗೆ ಹೇಳುತ್ತಿದ್ದಳು.
ಆತ ಕೂಡ ವ್ಯಾಪಾರದಲ್ಲಿ ಪಳಗಿದ್ದ.
ಜವಳಿ ಅಂಗಡಿ ಈಗ ವಿಸ್ತಾರಗೊಂಡಿತ್ತು. ಅಂಗಡಿಯಲ್ಲಿ ಮೂರು ನಾಲ್ಕು ಜನ ಹುಡುಗರೂ ಇದ್ದರು. ತನ್ನ ನಂತರ ಯಾರಾದರೂ ಅಂಗಡಿ ನೋಡಿಕೊಳ್ಳಲು ಬೇಕಲ್ಲ ಎಂದು ಬೋನ ಮಗನನ್ನು ಕಾಲೇಜಿಗೆ ಕಳುಹಿಸಲಿಲ್ಲ. ಅದು ಈಗ ಅನುಕೂಲವೇ ಆಯಿತು.
ಊಟ ಮಾಡಿ ಮಲಗಿಕೊಂಡ ಬೋನ ನಾಲ್ಕು ಗಂಟೆಗೆ ಏಳುತ್ತಾನೆ. ರೆಮೇಂದಿ ಬಿಸಿಬಿಸಿ ಕಾಫ಼ಿ ಮಾಡಿ ತಂದು ಗಂಡನ ಕೈಗೆ ಕೊಡುತ್ತಾಳೆ.
ಆತ ಹೊರ ಹೋಗಲು ಸಿದ್ಧನಾಗುತ್ತಿರಲು ರೇಮೇಂದಿ ಒಂದೆರಡು ಸಾಮಾನಿನ ಹೆಸರು ಹೇಳಿ-
“ಬಾಳು ಕೈಲಿ ಈ ಸಾಮಾನು ಕಳಿಸಿಕೊಡಿ” ಅನ್ನುತ್ತಾಳೆ.
“ಮತ್ತೆ?” ಎಂದು ಅವಳ ಮುಖ ನೋಡುತ್ತಾನೆ ಬೋನ.
“ಏನದು?” ಹೊಸದಾಗಿ ನೋಡತಿದೀರೋ ಹೇಗೆ ನನ್ನನ್ನು ? ಅವಳು ಕೆಣಕುತ್ತಾಳೆ.
“ನೀನು ನನಗೆ ಯಾವತ್ತೂ ಹೊಸಬಳೆ” ಎಂದು ನಗುತ್ತಾನೆ ಬೋನ.
ರಸ್ತೆಯುದ್ದಕ್ಕೂ ಹಲವರನ್ನು ಮಾತನಾಡಿಸುತ್ತ ಬೋನ ಅಂಗಡಿಗೆ ಬರುತ್ತಾನೆ.
ಮಗನ ಎದುರು ಕುಳಿತು ನಗುತ್ತಿದ್ದ ಹುಡುಗಿಯೊಬ್ಬಳು ಧಡಬಡಿಸಿ ಎದ್ದು-
“ನಾನು ಬರತೀನಿ” ಎಂದು ಫ಼ಿಲಿಪ್ಪನಿಗೆ ಹೇಳಿ ಹೊರಡುತ್ತಾಳೆ.
ಫ಼ಿಲಿಪ್ಪ ತಾನು ಕುಳಿತಲ್ಲಿಂದ ಎದ್ದು ತಂದೆಗೆ ಜಾಗ ಮಾಡಿಕೊಡುತ್ತ-
“ಅಲೆಕ್ಸ ಪಿಂಟೋ ಮಗಳು ಪಪ್ಪ..” ಎಂದು ಹುಡುಗಿಯ ಪರಿಚಯ ಮಾಡಿಕೊಡುತ್ತಾನೆ.
“ಹೌದು..ಅಲ್ವೆ?”
ಬೋನ ಮಗನ ಮುಖದ ಮೇಲಿನ ಸಂಭ್ರಮವನ್ನು ಗಮನಿಸುತ್ತಾನೆ.
ಪಿಂಟೋ ಮಗಳು ಇವನ ಜವಳಿ ಅಂಗಡಿಯಿಂದ ಇಳಿದು ನಾಗಪ್ಪನ ಸೈಕಲ್ ಶಾಪ್ ಪಕ್ಕದ ಪಿಂಟೋ ಆಟೋ ಸ್ಪೇರ್‍ಸ ಅಂಗಡಿ ಮೆಟ್ಟಲು ಹತ್ತುತ್ತಾಳೆ.

-೯-

ಊರಿನ ಪುರಸಭೆಯ ಚುನಾವಣೆ ಬರುತ್ತದೆ. ಈ ಬಾರಿ ಕೆಲ ರಾಜಕೀಯ ಪಕ್ಷಗಳು ನೇರವಾಗಿ ಚುನಾವಣೆಗೆ ಧುಮುಕುತ್ತಿವೆ. ಫ಼ಾತಿಮಾ ನಗರ, ಜೋಸೆಫ಼ ನಗರ ಎರಡೂ ಸೇರಿ ಆದ ಮೂರನೇ ಡಿವಿಜನ್ನಿನಿಂದ ಯಾರನ್ನು ನಿಲ್ಲಿಸುವುದು ಎಂದು ಕಾಂಗ್ರೆಸ್ಸಿನವರು ಅಭ್ಯರ್ಥಿಯನ್ನು ಹುಡುಕ ಹೊರಟಾಗ ಅವರ ಕಣ್ಣಿಗೆ ಅಂತೋನಿ ಬೀಳುತ್ತಾನೆ. ಪಾಸ್ಕೋಲ ಮೇಸ್ತ್ರಿಯ ಮಗ. ಲೋಕೋಪಯೋಗಿ ಇಲಾಖೆ ನೀರಾವರಿ ಇಲಾಖೆಯಲ್ಲಿ ಗುತ್ತಿಗೆದಾರ ಅನಿಸಿಕೊಂಡು ಹೆಸರು ಮಾಡಿರುವಾತ. ಇವನಿಗೆ ಜಾತಿ ಬೆಂಬಲವೂ ಸಿಗುತ್ತದೆ. ಇವನನ್ನು ಏಕೆ ನಿಲ್ಲಿಸಬಾರದು ಎಂದು ಕಾಂಗ್ರೆಸ ಖಾಸಿಂ ಸಾಹೇಬರು ಪಾಸ್ಕೋಲನ ಮನೆಗೆ ಬಂದದ್ದೂ ಆಯಿತು. ಅವರ ಜತೆ ಇನ್ನೂ ಕೆಲವರು ಇದ್ದರು.
“ಅಂತೋನಿಯವರೆ..ನಾವು ಒಂದು ಇಚಾರಕ್ಕೆ ಬಂದಿದ್ದೇವೆ..ನೀವು ಆಗಲ್ಲ ಅನ್ನಬಾರದು..” ಎಂದು ಪೀಠಿಕೆ ಹಾಕಿ ವಿಷಯಕ್ಕೆ ಬಂದರು ಖಾಸಿಂ ಸಾಹೇಬರು.
ಚುನಾವಣೆ ಅಂದ ಕೂಡಲೆ ಅಂತೋನಿ ಬೆಚ್ಚಿ ಬಿದ್ದ. ಕಾಲಬಳಿ ಹಾವು ಸುಳಿದ ಹಾಗೆ ಪರದಾಡಿದ.
“ಅಲ್ಲ ಯೋಚಿಸಿ..ಎಲ್ಲ ಜಾತಿಯವರೂ ನಿಲ್ಲತಾರೆ ಅಂದ ಮೇಲೆ ನಿಮ್ಮವರೂ ನಿಲ್ಲಬೇಕು..ನಿಮ್ಮವರ ಓಟುಗಳಂತೂ ಗ್ಯಾರಂಟಿ..ಬೇರೆಯವರೂ ನಿಮ್ಮ ಕೈ ಬಿಡೋಲ್ಲ..ಹುಂ ಅನ್ನಿ” ಎಂದು ಉಳಿದವರೂ ಒತ್ತಾಯ ಮಾಡಿದ್ದರಿಂದ ಅಂತೋನಿ-
“ನೋಡೋಣ..ಒಂದೆರಡು ದಿನ ಕೊಡಿ” ಎಂದ.
“ಆಯ್ತು..ನಾಡಿದ್ದು ನಾವು ಬರತೇವೆ” ಎಂದು ಹೇಳಿ ಖಾಸಿಂ ಸಾಹೇಬರು ತಮ್ಮ ಸಂಗಡಿಗರ ಜತೆ ಹೋದರು.
ಆಂತೋನಿಯ ಮನಸ್ಸಿನಲ್ಲಿ ನಿಧಾನವಾಗಿ ಒಂದು ಬೀಜ ಮೊಳಕೆಯೊಡೆಯತೊಡಗಿತು. ಪುರಸಭೆ ಸದಸ್ಯನಾಗುವುದು ಸಣ್ಣ ವಿಷಯವಲ್ಲ. ಆದರೆ ಸ್ವಲ್ಪ ಪ್ರಯತ್ನಪಟ್ಟರೆ, ಜಾತಿಯವರೆಲ್ಲ ಕೈಹಿಡಿದರೆ ಇದು ಸುಲಭ. ಈ ಬಗ್ಗೆ ಒಂದಿಬ್ಬರಲ್ಲಿ ಮಾತನಾಡಿ ಒಂದು ನಿರ್ಧಾರಕ್ಕೆ ಬರಬಹುದಲ್ಲವೆ?
ಅಂತೋನಿ ಮೊದಲು ತನ್ನ ತಂದೆಯ ಹತ್ತಿರ ಈ ವಿಷಯ ಪ್ರಸ್ತಾಪಿಸಿದ.
“ನಿಲ್ಲು” ಎಂದು ಪಾಸ್ಕೋಲ ತಾನೇ ಹುರುಪುಗೊಂಡ. ಅವನದೊಂದು ಆಸೆ ಹಾಗೆಯೇ ಬತ್ತಿ ಹೋಗಿತ್ತು. ಶಿವಸಾಗರದ ಕ್ರೀಸ್ತುವರ ನಡುವೆ ತಾನು ಪ್ರಮುಖನಾಗಬೇಕೆಂದು ಅವನು ಏನೆಲ್ಲ ಮಾಡಿದ್ದ. ಸಿಮೋನನನ್ನು ಹಿಂದೆ ಹಾಕಬೇಕೆಂಬ ಅವನ ಯತ್ನ ಫ಼ಲಕಾರಿಯಾಗಲಿಲ್ಲ. ಕೊನೆಗೆ ಸಿಮೋನ ಗುರ್ಕಾರ ಆದ. ಈಗ ಅವನ ಹಿರಿಯ ಮಗ ತಂದೆಯ ಸ್ಥಾನಕ್ಕೆ ಬರುವ ಯತ್ನದಲ್ಲಿದ್ದಾನೆ. ಅಲ್ಲದೆ ಈಗೀಗ ಗುರ್ಕಾರನಿಗೆ ಹಿಂದಿನ ಗೌರವವಿಲ್ಲ. ಅವನ ಮಾತನ್ನು ಯಾರೂ ಕೇಳುವುದಿಲ್ಲ. ಅವನಿಗೆ ಗೊತ್ತಿಲ್ಲದೇನೆ ಇಗರ್ಜಿಯಲ್ಲಿ ಏನೇನೋ ನಡೆದುಹೋಗುತ್ತದೆ. ಈಗ ಗೌರವ ಇರುವುದು ಇಂತಹ ಸ್ಥಾನಗಳಿಗೆ. ಮಗ ನಾಳೆ ಗೆದ್ದು ಬಂದರೆ ತನಗೆ ತುಂಬಾ ಗೌರವ ಸಿಗುತ್ತದಲ್ಲವೇ?
“..ನಿಲ್ಲು..ಹಾಗೇ ಗುರ್ಕಾರ ಮಾಮನನ್ನು ಬೋನ ಸಾಹುಕಾರರನ್ನು ಪಾದರಿಗಳನ್ನು ಕಂಡು ಬಾ..” ಎಂದ ಪಾಸ್ಕೋಲ.
ಅಂತೋನಿ ಸಿಮೋನನ ಮನೆಗೆ ಹೋದ.
ಎಲೆ ಅಡಿಕೆಯನ್ನು ಕೊಟ್ಟಣಕ್ಕೆ ಹಾಕಿ ಕುಟ್ಟುತ್ತಿದ್ದ ಸಿಮೋನ..
“ಬಾ..” ಎಂದ.
“ಚೆನ್ನಾಗಿದೀಯ? ಇಷ್ಟು ದೂರ?” ಎಂದು ಕೇಳಿದ.
“ಹೌದು, ನಮ್ಮವರಿಗೆ ಮನೆ ಕಟ್ಟಲಿಕ್ಕೆ ಜಾಗಬೇಕು. ಮುನಿಸಿಪಾಲಿಟಿಗೆ ಹೋದರೆ ನಮ್ಮವರ ಕೆಲಸ ಕೂಡಲೇ ಆಗಬೇಕು ಅಂದರೆ ನಮ್ಮವರು ಯಾರಾದ್ರು ಅಲ್ಲಿ ಇರಬೇಕು. ಕಾನ್ವೆಂಟಿನವರು ಬಿದರಳ್ಳಿಗೆ ಹೋಗುವ ದಾರೀಲಿ ಜಾಗ ಕೇಳಿದಾರೆ ಅದು ಮಂಜೂರಾಗಬೇಕು..ನೀನು ನಿಲ್ಲು ..ನಾವು ಇದೀವಿ..” ಎಂದು ಆತ ತನ್ನ ಅಭಿಪ್ರಾಯ ಹೇಳಿದ.
ಈ ಹಿಂದೆ ಈರ್ವರು ಈ ಡಿವಿಜನ್ನಿನಿಂದ ನಿಂತು ಗೆದ್ದುಬಂದಿದ್ದರು. ಇವರಿಂದ ಹೇಳಿಕೊಳ್ಳುವ ಕೆಲಸವೇನೂ ಆಗಿರಲಿಲ್ಲ. ಇವರು ಬೇರೆ ಕೋಮಿನವರು ಆಗಿದ್ದರಿಂದ ಕ್ರೀಸ್ತುವರಿಗೆ ಅನುಕೂಲವಾಗಿರಲಿಲ್ಲ.
ಅಂತೋನಿ ಹಾಗೆಯೇ ಬೋನನನ್ನು ಕಂಡ.
ಅವನೂ ಸಂತೋಷ ವ್ಯಕ್ತಪಡಿಸಿದ.
“ನನ್ನ ಬೆಂಬಲ ನಿನಗಿದೆ..ನೀನೂ ಸ್ವಲ್ಪ ಹಣ ಖರ್ಚು ಮಾಡಬೇಕಾಗಿ ಬರಬಹುದು..ಆದರೆ ಧೈರ್ಯಗೆಡಬೇಡ..ನಿಲ್ಲು..” ಎಂದು ಆತ ಅಂತೋನಿಯವರನ್ನು ಹುರಿದುಂಬಿಸಿದ.
*
*
*
ಕ್ರಿಸ್ಮಸ್ ಗೆ ಕೆಲವೇ ದಿನಗಳಿದ್ದುದರಿಂದ ಪಾದರಿ ಸಿಕ್ವೇರಾ ಇಗರ್ಜಿಗೆ ಸುಣ್ಣ ಬಣ್ಣ ತೆಗೆಸುವಲ್ಲಿ ತೊಡಗಿದ್ದರು. ಗುರ್ಕಾರ ಅಲೆಕ್ಸ ಪಿಂಟೋ ಬಣ್ಣ ತೆಗೆಯುವವರಿಗೆ ಸಲಹೆ ನೀಡುತ್ತ ಇಗರ್ಜಿಯ ಹೊರಗೆ ಒಳಗೆ ತಿರುಗಾಡುತ್ತಿದ್ದ. ಪಾದರಿ ಸಿಕ್ವೇರಾ ಬಂದ ನಂತರ ಕ್ರಿಸ್ಮಸ್ ಹಬ್ಬಕ್ಕೆ ಒಂದು ಜಾತ್ರೆಯ ರೂಪ ಬಂದಿತು. ಇಗರ್ಜಿಯ ಬಲ ಭಾಗದಲ್ಲಿ ದೊಡ್ಡ ಪ್ರಮಾಣದ ಕ್ರಿಬ್ ತಯಾರಿಸಿ ಅಲ್ಲಿ ಜೋಸೆಫ಼ ಮೇರಿಯರ ಮೂರು ನಾಲ್ಕು ಅಡಿ ಎತ್ತರದ ಪ್ರತಿಮೆ ಇರಿಸಿ, ಇವರ ನಡುವೆ ಬಾಲ ಏಸುವನ್ನು ಮಲಗಿಸಿ ಕ್ರಿಸ್ಮಸ್ ಹಬ್ಬದ ಮಹತ್ವದ ಘಟನೆಯನ್ನು ಅತಿ ವರ್ಣರಂಜಿತವಾಗಿ ಸೃಷ್ಟಿ ಮಾಡಲಾಗುತ್ತಿತ್ತು. ಕ್ರಿಬ್ಬಿನಲ್ಲಿ ದನಕರು, ಕುರಿಗಳು, ದನಗಾಹಿಗಳು, ಸೇತುವೆ, ಕಾಡು ಹೊಲ ಗದ್ದೆಗಳು, ಹಳ್ಳಿ ಗುಡಿಸಲುಗಳು ರೂಪ ತಳೆಯುತ್ತಿದ್ದವು. ವಿದ್ಯುತ್ ದೀಪಗಳಿಂದ ಇದನ್ನು ಸಜ್ಜುಗೊಳಿಸಿ ಊರಿನ ಜನರನ್ನೇ ಇಲ್ಲಿಗೆ ಸೆಳೆದು ತರುತ್ತಿದ್ದರು ಪಾದರಿ ಸಿಕ್ವೇರಾ. ಈ ಬಾರಿ ಮತ್ತೆ ಏನು ಹೊಸದಾಗಿ ಮಾಡಬೇಕು ಎಂಬ ಬಗ್ಗೆ ವಿಚಾರ ಮಾಡುತ್ತ ನಿಂತಿದ್ದ ಪಾದರಿ ಸಿಕ್ವೇರಾ ಅವರ ಬಳಿ ಸಾರಿ ಅಂತೋನಿ ಕೈ ಮುಗಿದ.
“ಬೆಸಾಂವಂದಿಯಾ ಫ಼ಾದರ್..” ಅವರು ಕೊಂಚವೇ ತಿರುಗಿ ನೋಡಿ.
“ಹುಂ..ಏನು?” ಎಂದು ಕೇಳಿದರು.
ಕೈ ಎತ್ತಿ ಶಿಲುಬೆ ಗುರುತು ಮಾಡಿ ಆಶೀರ್ವದಿಸುವ ಪದ್ಧತಿಯನ್ನು ಇವರು ರೂಢಿಸಿಕೊಂಡಿರಲಿಲ್ಲ.
ಅಂತೋನಿ ತುಸು ಹೊತ್ತು ಅವರ ಮಗ್ಗುಲಲ್ಲಿ ನಿಂತಿದ್ದ. ತಾನು ಚುನಾವಣೆಗೆ ನಿಲ್ಲಲಿರುವ ವಿಷಯ ಹೇಳಿ ಅವರ ಅಭಿಪ್ರಾಯ ಬೆಂಬಲ ತಿಳಿದುಕೊಳ್ಳಲು ಆತ ಬಂದಿದ್ದ. ಪಾದರಿಗಳು ಹುಂ ಎಂದರೆ ಅವರ ಸಹಕಾರ ಸಿಕ್ಕರೆ ತನ್ನ ಗೆಲುವು ಸುಲಭ ಎಂಬುದು ಅವನ ಅಭಿಪ್ರಾಯವಾಗಿತ್ತು. ಆದರೆ ಈ ವಿಷಯವನ್ನು ಇಲ್ಲಿ ಹೊರಗೆ ಹೇಗೆ ಹೇಳುವುದು? ಅವರು ಬಂಗಲೆಯಲ್ಲಿ ಇದ್ದಿದ್ದರೆ ಹೇಳಲು ಅನುಕೂಲವಾಗುತ್ತಿತ್ತು.
“ಒಂದು ವಿಷಯ ಮಾತನಾಡಬೇಕಿತ್ತು ಫ಼ಾದರ್” ಎಂದ ಅಂತೋನಿ.
ಈಗ ಅವರು ಮುಖ ತಿರುಗಿಸಿ ಅವನನ್ನು ನೋಡಿದರು.
“ಏನದು?”
ಅಂತೋನಿ ಮತ್ತೂ ಕಾದ. ಅವರು ಹತ್ತು ನಿಮಿಷದ ಮಟ್ಟಿಗೆ ಬಂಗಲೆಗೆ ಬಂದಿದ್ದರೆ ಆಗುತ್ತಿತ್ತಲ್ಲ.
“ಏನು ಹೇಳು..”
ಅಂತೋನಿ ಹೇಳುವುದೇ, ಸೈ ಎಂದು ನಿರ್ಧರಿಸಿದ.
“ಫ಼ಾದರ್ ನಾನು ಚುನಾವಣೆಗೆ ನಿಲ್ಲಬೇಕು ಅಂತ ಯೋಚನೆ ಮಾಡತಿದೀನ..ನಿಮ್ಮ ಆಶೀರ್ವಾದ ಬೆಂಬಲ ಬೇಕು..”
ಅವರು ನಿಂತಲ್ಲಿಂದ ನಾಲ್ಕು ಹೆಜ್ಜೆ ಮುಂದೆ ಹೋದರು. ಗಂಟೆ ಗೋಪುರದವರೆಗೂ ಹೋಗಿ ಅಲ್ಲಿ ನಿಂತು ಇಗರ್ಜಿಯ ಬಲ ಮೂಲೆಯನ್ನು ನೋಡಿ ತಿರುಗಿ ಬಂದರು. ಅಂತೋನಿ ಅವರ ಹಿಂದೆಯೇ ಹೆಜ್ಜೆ ಹಾಕಿದ.
“ಯೋಚನೆ ಮಾಡೀದೀಯ? ಅಲ್ಲಿ ಹೋಗಿ ಏನೇನು ಮಾಡಬೇಕು ಗೊತ್ತಲ್ಲ? ಪುರಸಭೆ ಸದಸ್ಯತ್ವ ಅಂದರೆ ಸುಮ್ಮನೆ ಆಗೋದಿಲ್ಲ..ಅದು ಯಾರೂ ಮಾಡಬಹುದಾದ ಕೆಲಸ ಅಲ್ಲ..”
ಅಂತೋನಿಯ ಮುಖ ಬಿಳಿಚಿಕೊಳ್ಳತೊಡಗಿತು. ಗಂಟೆಗೋಪುರದ ನೆರಳಿನಲ್ಲಿ ನಿಂತಿರುವ ತನ್ನನ್ನು ಆ ನೆರಳು ನುಂಗುತ್ತಿದೆಯೇನೋ ಎಂದು ಆತ ಗಾಬರಿಗೊಂಡ. ಪಾದರಿ ಸಿಕ್ವೇರಾ ಅವರ ಮಾತಿನ ಧಾಟಿ, ಬಳಸಿದ ಶಬ್ದಗಳ ಧ್ವನಿ ಹಿತಕರವಾಗಿರಲಿಲ್ಲ. ಇದು ನಿನಗೆ ಹೆಳಿದ್ದಲ್ಲ ಎಂಬುದನ್ನು ಈ ರೀತಿಯಲ್ಲಿ ಅವರು ಹೇಳುತ್ತಿದ್ದಾರೆ ಎಂಬುದು ಅವನಿಗೆ ಖಚಿತವಾಯಿತು. ಆದರೂ ಅವನೆಂದ-
“ಫ಼ಾದರ್..ದೇವರ ಆಶೀರ್ವಾದ ಇದ್ದರೆ ಯಾವ ಕೆಲಸಾನೂ ದೊಡ್ಡದಲ್ಲ ಅಲ್ಲವೆ? ನೀವು ದೇವರ ಆಶೀರ್ವಾದಾನ ನನಗೆ ದೊರಕಿಸಿಕೊಡಬೇಕು..”
“ನೀನು ಪ್ರಯತ್ನಪಡು..ನಾವು ಪಾದರಿ ಮಾದರಿಗಳು ಈ ರಾಜಕೀಯದಲ್ಲಿ ಪ್ರವೇಶ ಮಾಡಬಾರದು..ನಿನಗೆ ಒಳ್ಳೆಯದಾಗಲಿ..” ಎಂದರವರು ಪ್ಯಾಂಟಿನ ಕಿಸೆಯಿಂದ ಬೀಗದ ಕೈ ಗೊಂಚಲು ತೆಗೆದು ಬಂಗಲೆಯತ್ತ ತಿರುಗುತ್ತ.
ಅಂತೋನಿ ಅಲ್ಲಿ ನಿಲ್ಲಲಿಲ್ಲ.
ಅವನಂತೂ ಒಂದು ನಿರ್ಧಾರ ಮಾಡಿದ್ದ. ಪುರಸಭೆಯ ಬರಲಿರುವ ಚುನಾವಣೆಗೆ ನಿಲ್ಲುವುದೇ ಸರಿ ಎಂಬ ತೀರ್ಮಾನಕ್ಕೂ ಬಂದಿದ್ದ. ಮತ್ತೆ ಮನೆಗೆ ಬಂದ ಖಾಸಿಂ ಸಾಹೇಬರಿಗೆ ತನ್ನ ನಿರ್ಧಾರ ಹೇಳಿದ. ಕೇರಿಯ ಎಲ್ಲರಿಗೂ ವಿಷಯ ತಿಳಿಯಿತು. ಎಲ್ಲರೂ ಅಂತೋನಿಯನ್ನು ಮುಂಚಿತವಾಗಿಯೇ ಅಭಿನಂದಿಸಿದರು ಕೂಡ.
ಆದರೆ ಅಂತೋನಿ ಚುನಾವಣಾ ಅಧಿಕಾರಿಗೆ ಅರ್ಜಿ ನೀಡಿದ ಒಂದೇ ದಿನದಲ್ಲಿ ಮೂರನೇ ಡಿವಿಜನ್ನಿನಿಂದ ಸೋಷಲಿಸ್ಟ
ಪಕ್ಷದಿಂದ ಜಾನ ಡಯಾಸ ಕೂಡ ಅರ್ಜಿ ಕೊಂಡದ್ದು ತಿಳಿದು ಬಂದು ಕಾಂಗ್ರೆಸ್ ಪಕ್ಷದವರು ಗೊಂದಲಗೊಂಡರು.
“ಬೇರೆ ಯಾರೇ ಆಗಿದ್ರು ನಾವು ಯೋಚನೆ ಮಾಡುತಿರಲಿಲ್ಲ..ಆದರೆ ನಿಮ್ಮ ಜಾತಿಯವರೇ ಬೇರೊಬ್ಬರು ನಿಂತರಲ್ಲ..ಓಟು ಒಡೆದು ಹೋಗಲ್ವೇ” ಎಂದವರು ಮೈ ಪರಚಿಕೊಂಡರು.
“ಡಯಾಸರಿಗೆ ಉಮೇದುವಾರಿಕೇನ ಹಿಂದಕ್ಕೆ ತೆಗೆದುಕೊಳ್ಳಲು ಹೇಳಿ..ನಿಮ್ಮ ನಿಮ್ಮಲ್ಲಿ ಈ ಪೈಪೋಟಿ ಬೇಡ.”
– ಎಂಬ ಮಾತುಗಳೂ ಕೇಳಿ ಬಂದವು.
ಡಯಾಸ ನಿರ್ಧಾರ ನಂತರದ್ದು ಎಂಬ ವಿಷಯ ಎಲ್ಲರಿಗೂ ಗೊತ್ತಿತ್ತು. ಆದರೂ ಆತ ಹಿಂದೆ ಸರಿಯಲಿಲ್ಲ. ಬೋನ, ಸಿಮೋನ, ಪಾಸ್ಕೋಲ ಇನ್ನೂ ಕೆಲವರು ಈ ಬಗ್ಗೆ ಯತ್ನಿಸಿದರು. ಈ ಬಗ್ಗೆ ಇನ್ನೂ ವಿವರವಾಗಿ ಪರಿಶೀಲಿಸಿದಾಗ ಪಾದರಿ ಸಿಕ್ವೇರಾ ಡಯಾಸಗೆ ಬೆಂಬಲ ಕೊಡುತ್ತಿರುವುದೂ ತಿಳಿದುಬಂದಿತು.
“ನೀವು ಹಿಂದೆ ಸರಿಬೇಡಿ..ನಾವು ಫ಼ೈಟ್ ಕೊಡೋಣ” ಎಂದರು ಅಂತೋನಿಯ ಪರವಾಗಿದ್ದ ಕೇರಿಯ ಯುವಕರು.
ಚುನಾವಣೆ ಬರುತ್ತಿದೆ ಅನ್ನುವಾಗ ಮೂರನೆ ಡಿವಿಜನ ರಣರಂಗವಾಯಿತು.
“ಇದೇನ್ರಿ ಹೇಗೆ ನೀವು ನೀವೇ ಜಗಳ ಮಾಡೋದು” ಎಂದು ಇತರೆ ಕೋಮಿನವರು ಅಂತೋನಿ ಹಾಗೂ ಡಯಾಸರ ಮುಖ ನೋಡಿದರು.
ಭಾನುವಾರ ಪಾದರಿ ಸಿಕ್ವೇರಾ ಶರಮಾಂವಂಗೆ ನಿಂತವರು-
“ಚುನಾವಣೆ ಬಂದಿದೆ..ಬುದ್ಧಿವಂತರನ್ನ ಅನುಭವ ಇರುವವರನ್ನ ಆರಿಸಿ” ಎಂದಷ್ಟೇ ಹೇಳಿ ಬೇರೆ ವಿಷಯಕ್ಕೆ ಬಂದರೂ ಅವರು ಭೇಟಿಯಾದ ಎಲ್ಲರಿಗೂ ಡಯಾಸಗೇನೆ ಓಟು ಹಾಕಲು ಹೇಳಿದರು ಎಂಬುದು ಎಲ್ಲರ ಕಿವಿಗೂ ಬಿದ್ದಿತು.
ಸಾಲದ್ದಕ್ಕೆ ಕಾನ್ವೆಂಟಿನ ಸಿಸ್ಟರುಗಳು ಬೇರೆ ಮನೆಮನೆಗೆ ಹೋದವರು ಅಂತೋನಿಗೆ ಏನು ಗೊತ್ತು? ಕಂಟ್ರ್ಯಾಕ್ಟರ್ ಆದ ಕೂಡಲೆ ಎಲ್ಲ ಬರುತ್ತದೆಯೇ ಎಂದೇನೋ ಮಾತನಾಡಿಕೊಂಡದ್ದು ಕೇಳಿ ಬಂದಿತು.
ಅಂತೋನಿ, ಅವನ ಹೆಂಡತಿ, ಅವನ ಗೆಳೆಯರು ಕಾಂಗ್ರೆಸ್ ಸಂಸ್ಥೆ ಪ್ರಚಾರಕ್ಕೇನೂ ಕಡಿಮೆ ಮಾಡಲಿಲ್ಲ. ಆದರೆ ಚುನಾವಣೆ ನಡೆದು ಫ಼ಲಿತಾಂಶ ಹೊರಬಿದ್ದಾಗ ಜಾನಡಯಾಸ ಗೆದ್ದಿದ್ದ. ಅಂತೋನಿ ಸೋತಿದ್ದ.
ಅಂತೋನಿಯನ್ನು ಕಟ್ಟಿಕೊಂಡು ತಿರುಗಾಡಿದ ಕ್ರೀಸ್ತುವ ಯುವಕರು-
“..ಇದು ಯಾಕೆ ಹೀಗಾಯ್ತು ನಮಗೆ ಗೊತ್ತಿದೆ..” ಎಂದು ಹಲ್ಲುಕಡಿದರು. ಮಾಡಿದರು. ಮುಷ್ಟಿ ಬಿಗಿದುಕೊಂಡು, ತುಟಿ ಕಚ್ಚಿಕೊಂಡು ತೋಳಿನ ಸ್ನಾಯುಗಳನ್ನು ಹೊರಳಿಸುತ್ತ, ಅವರು ಮಾತನಾಡಿಕೊಳ್ಳುತ್ತಿದ್ದುದು ಗುರ್ಕಾರ ಸಿಮೋನನ ಕಿವಿಗೆ ಬಿದ್ದಿತು. ಬೋನ ಕೇಳಿಸಿಕೊಂಡ. ಇವರಿಬ್ಬರೂ ಆತಂಕದಿಂದ ಆ ಯುವಕರ ಬಳಿ ಹೋದರು.
“ನೋಡಿ ಹಾಗೆಲ್ಲ ಮಾತನಾಡಬಾರದು..ಡಯಾಸ ಕೂಡ ನಮ್ಮವನೇ ಅಲ್ವೆ..ಅವನೂ ನಮ್ಮ ಕೇರಿಗೆ ನಮ್ಮ ಜನರಿಗೆ ಒಳ್ಳೆಯದು ಮಾಡತಾನೆ..” ಎಂದು ಸಮಾಧಾನ ಹೇಳಿದರು.
ಈ ಚುನಾವಣಾ ಫಲಿತಾಂಶದ ಹಿಂದೆಯೇ ಕ್ರಿಸ್ಮಸ್ ಹಬ್ಬ ಬಂದಿತು. ಮನೆ ಮನೆಯ ಮುಂದೆ ನಕ್ಷತ್ರಗಳು ತೂಗಿ ಬಿದ್ದವು. ಶುಭಾಶಯ ಪತ್ರಗಳು ದೂರದ ನೆಂಟರಿಂದ ಗೆಳೆಯರಿಂದ ಬಂದವು. ಇವರೂ ಆರಿಸಿ ಜನರಿಗೆ ಕಳುಹಿಸಿದರು. ರಾತ್ರಿ ಎರಡು ಗಂಟೆಯವರೆಗೆ ಮನೆ ಮಂದಿ ಕುಳಿತು ಚಕ್ಕುಲಿ, ಶಂಕರ ಪೊಳೆ, ಉಂಡೆ, ಚೌಡೆ ಕಿಡಿಯೆ, ಸುಕ್ರುಂಡೆ, ನೆವ್ರೆ ಎಂದೆಲ್ಲ ತಿಂಡಿಗಳನ್ನು ಮಾಡಿದರು. ಹೊಸಬಟ್ಟೆ ಹೊಲಿಸುವ ಓಡಾಟ, ಮನೆಗೆ ಸುಣ್ಣ ಬಣ್ಣ ಮಾಡಿಸುವುದು. ಹೀಗೆ ಜನ ಕ್ರಿಸ್ಮಸ್ ಸಂಭ್ರಮದಲ್ಲಿ ಮುಳುಗಿದರು.
ಡಿಸೆಂಬರ ಇಪ್ಪತ್ನಾಲ್ಕರ ರಾತ್ರಿ ಹತ್ತು ಗಂಟೆಗೇನೆ ಇಗರ್ಜಿಯ ಗಂಟೆ ಬಾರಿಸಿತು. ಜಗತ್ತಿನಲ್ಲಿ ಶಾಂತಿ, ಪ್ರೀತಿ, ಕರುಣೆ, ಕ್ಷಮೆ, ದಯೆಯನ್ನು ಬಿತ್ತಲೆಂದು ಬಂದ ದೇವಕುಮಾರನ ಜನ್ಮ ಸಂದರ್ಭವನ್ನು ಆಚರಿಸಲು ಜೋಸೇಫ಼ ನಗರ, ಫ಼ಾತಿಮಾ ನಗರದ ಕ್ರೀಸ್ತುವರು ಸಂತಸ ಸಂಭ್ರಮದಲ್ಲಿ ಇಗರ್ಜಿಗೆ ಧಾವಿಸಿದರು. ರೈಲು ನಿಲ್ದಾಣದ ಹಿಂಬದಿಯ ಮನೆಗಳಿಂದ, ಜಯಪ್ರಕಾಶ ನಗರದಿಂದ, ಊರಿನ ಇನ್ನೂ ಕೆಲವು ಬಡಾವಣೆಗಳಿಂದ ಕ್ರೀಸ್ತುವರು ಬಂದರು.
ಇಗರ್ಜಿ ಬಾಗಿಲಲ್ಲಿ ಕೈ ಕುಲುಕುವ, ಹ್ಯಾಪಿ ಕ್ರಿಸ್ಮಸ್ ಎಂದು ಹೇಳುವ ಅಪ್ಪಿಕೊಳ್ಳುವ ಸಂಭ್ರಮ ಕಂಡಿತು. ವಿವಿಧ ಬಗೆಯ ಸೆಂಟುಗಳಿಂದ, ಸೀರೆಯೊಳಗೆ ಹಾಕಿ ಇರಿಸಿದ ಡಾಂಬರಿನ ಗುಳಿಗೆಯ ಪರಿಮಳದಿಂದ, ಜತೆಗೆ ವಿಸ್ಕಿ ಬ್ರಾಂಡಿ ಶರಾಬಿನ ವಾಸನೆಯಿಂದ ಇಗರ್ಜಿ ಸುತ್ತಲಿನ ಗಾಳಿ ಭಾರವಾಗಿ ಬೀಸಿತು.
ಮಧ್ಯರಾತ್ರಿಯ ಹೆಪ್ಪುಗಟ್ಟಿಸುವ ಛಳಿಯಲ್ಲಿ ಪಾದರಿ ಕ್ರಿಬ್ಬಿನಲ್ಲಿ ಏಸು ಬಾಲನ ಪ್ರತಿಮೆ ಇರಿಸಿದಾಗ ಗಡಿಯಾರ ಹನ್ನೆರಡು ಬಾರಿಸಿತು. ಇಗರ್ಜಿಯ ಗಂಟೆ ಮೋಹಕವಾಗಿ ಟಿಂಟಣಿಸಿತು. ಮಿರೋಣ್ ಜಾನಡಯಾಸ್ ಪೀಟಿಲಿನ ಮೇಲೆ ಕಮಾನು ಏರಿಸಿ, ಇಳಿಸಿ-
“ಆದೇಸ್ತೆ ಫ಼ಿದೇಲೆಸ ಲೇತು ತೂಯಿ ಪ್ರಾಂತಿಸ ಹೋಸಾನ್ನ ಹೋಸಾನ್ನ..” ಎಂದು ಏಸು ಹುಟ್ಟಿದ ಸಂತಸವನ್ನು ಸಾರುವ ಲ್ಯಾಟಿನ್ ಗೀತೆಯೊಂದನ್ನು ಹಾಡಿದ. ಛಳಿಗೆ ಸಣ್ಣಗೆ ನಡಗುತ್ತ ಜನ ಈ ಹಾಡಿಗೆ ತಮ್ಮ ದನಿ ಸೇರಿಸಿದರು. ಜನ ಎತ್ತರದ ದನಿಯಲ್ಲಿ ಹಾಡುತ್ತಿದ್ದರೆ ಪ್ರತ್ಯೇಕವಾಗಿ ಕುಳಿತ ಸಿಸ್ಟರುಗಳು ಕೆಳಗಿನ ದನಿಯಲ್ಲಿ ತಮ್ಮ ಧ್ವನಿ ಸೇರಿಸಿದರು.
*
*
*
ಬಳ್ಕೂರಕಾರ್ ಕೈತಾನನಿಗೆ ಯಾವುದೇ ತೊಂದರೆ ತಾಪತ್ರಯಗಳು ಇರಲಿಲ್ಲ. ಕೈ ತುಂಬ ಕೆಲಸವಿತ್ತು. ಅವನು ಎಲ್ಲರಿಗಿಂತಲೂ ಹಿರಿಯನಾಗಿದ್ದರಿಂದ ಊರಿನಲ್ಲಿ ಕ್ರೀಸ್ತುವರ ನಡುವೆ ಗೌರವವಿತ್ತು. ಮಜಬೂತಾದ ಮನೆ ಕಟ್ಟಿದ್ದ. ಕುರ್ಚಿ, ಮಂಚ, ಮೇಜು ಎಂದು ಅವರಿವರು ನೋಡಿ ಹೊಟ್ಟೆಗಿಚ್ಚು ಪಡುವಂತೆ ಮಾಡಿಸಿದ್ದ. ಗುಂಡಬಾಳೆಯಿಂದ ಇನಾಸಜ್ಜಿ ಬಂದು ಇವನ ಮನೆಯಲ್ಲಿ ನಿಂತ ನಂತರವಂತೂ ಇವನ ಅದೃಷ್ಟ ಬದಲಾಗಿತ್ತು.
ಮುದುಕಿ ಒಂದಿಷ್ಟು ಹಣ ತಂದು ಅಳಿಯನಿಗೆ ಕೊಟ್ಟಿದ್ದಾಳೆ..ಎಂದು ಜನ ಮಾತನಾಡಿಕೊಳ್ಳುತ್ತಿದ್ದರಾದರೂ ಇದೆಷ್ಟು ನಿಜ ಎಂಬುದು ಯಾರಿಗೂ ತಿಳಿದಿರಲಿಲ್ಲ.
ಇವನ ಹಿರಿಯ ಮಗ ಸ್ಯಾಮ್ಸನ್ ಮಾತ್ರ ವಿದ್ಯಾವಂತನಾಗಿರಲಿಲ್ಲ. ಉಳಿದವರೆಲ್ಲ ಪ್ರೌಢಶಾಲೆಯ ಒಂದು ಎರಡನೆ ತರಗತಿಯವರೆಗೆ ಓದಿ ಮುಂದೆ ಓದಲಾಗದೆ ಹಳ್ಳಿಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ಕೈತಾನನ ಹಿರಿಯ ಮಗ ಸ್ಯಾಮ್ಸನ್ನನ ಮದುವೆ ಹಿಂದೇ ಆಗಿದ್ದರಿಂದ ಅವನ ಸಂಸಾರ ಕೂಡ ಕೈತಾನನ ಮೇಲೆಯೇ ಅವಲಂಬಿಸಿಕೊಂಡಿತ್ತು. ಓರ್ವ ಮಗಳ ಮದುವೆ ಮಾಡಿ ಕೈತಾನ ಒಂದು ಭಾರ ಕಡಿಮೆ ಮಾಡಿಕೊಂಡಿದ್ದ.
ಇನಾಸಜ್ಜಿ ಸತ್ತ ನಂತರ ಅವಳ ಹನ್ನೊಂದನೇ ದಿನ, ನಲವತ್ತನೇ ದಿನ ಎಂದೆಲ್ಲ ಮಾಡಿ ವರ್ಷದ ಪೂಜೆಯನ್ನೂ ಇರಿಸಿಕೊಂಡ. ಪ್ರತಿ ವರುಷ ಇಗರ್ಜಿಯಲ್ಲಿ ಪೂಜೆ ಮಾಡಿಸಿ ಮನೆಯಲ್ಲಿ ಊಟ ಹಾಕುವುದನ್ನು ಮುಂದುವರೆಸಿದ. ಹೀಗೆ ಒಂದೆರಡು ವರ್ಷ ಸತ್ತವರಿಗೆ ಪೂಜೆ ಕೊಡಿಸಿ ಒಂದಿಷ್ಟು ನಷ್ಟ ಮಾಡಿಕೊಂಡ. ಆದರೆ ಮೂರನೇ ವರ್ಷ ಅತ್ತೆ ಹೆಸರಿನಲ್ಲಿ ಪೂಜೆ ಕೊಡಿಸಲು ಇವನೇ ಇರಲಿಲ್ಲ.
ಭಟ್ಕಳದ ಇಗರ್ಜಿಯ ಹಬ್ಬಕ್ಕೆ ಹೋದವ ಅಲ್ಲಿ ನೆಂಟರ ಮನೆಯಲ್ಲಿ ಉಳಿದುಕೊಂಡಿದ್ದ. ಸಂಜೆ ತೆಂಗಿನಮರದ ಶೇಂದಿ ತಾಜಾ ತಾಜಾ ಸಿಗುತ್ತದೆಂದು ಕುಡಿಯಲು ಹೋದವ ಎಷ್ಟು ಕುಡಿದರೂ ತೃಪ್ತಿಯಾಗದೆ ಅದರಲ್ಲಿಯೇ ಮುಳುಗಿ ಹೋದ. ಕತ್ತಲಾದ ಮೇಲೆ ನೆಂಟರ ಮನೆಗೆ ಹಾಳು ಬಿದ್ದ ಒಂದು ಹಿತ್ತಲ ಮೂಲಕ ಬರುತ್ತಿದ್ದವ ಅಲ್ಲಿದ್ದ ನೆಲಬಾವಿಗೆ ಬಿದ್ದ.
ಯಾರೋ ನೆಂಟರ ಮನೆಗೆ ಹೋಗಿರಬೇಕೆಂದು ಇವನು ಉಳಿದುಕೊಂಡಿದ್ದ ಮನೆಯವರು ತಿಳಿದರು. ಶಿವಸಾಗರದಲ್ಲಿ ಇವನ ಹೆಂಡತಿ ನಮಾ ಮೊರಿಯಾ ಹೀಗೆ ತಿಳಿದಳು. ಆದರೆ ಮೂರು ದಿನಗಳ ನಂತರ ಕೆಟ್ಟ ವಾಸನೆಯಿಂದ ವಿಷಯ ತಿಳಿಯಿತು. ಕೆಂಪು ರುಮಾಲು, ಜರಕಿ ಚಪ್ಪಲಿ, ಎಲೆ ಅಡಿಕೆ ಚೀಲದಿಂದ ವಿಷಯ ಸ್ಪಷ್ಟವಾಯಿತು. ಹೆಣವನ್ನು ಭಟ್ಕಳದಲ್ಲಿಯೇ ಮಣ್ಣು ಮಾಡಲಾಯಿತು. ಇವನ ಹೆಂಡತಿ ಮಕ್ಕಳು ಸಿಮೋನ, ಪಾಸ್ಕೋಲ ಶಿವಸಾಗರದಿಂದ ಇಲ್ಲಿಗೆ ಬಂದರು.
ನಂತರ ಇಲ್ಲಿಯ ಪರಿಸ್ಥಿತಿ ಕೆಡತೊಡಗಿತು. ಮನೆಯಲ್ಲಿದ್ದ ಮರದ ಸಾಮಾನುಗಳನ್ನೆಲ್ಲ ಮಾರಿ ತಿನ್ನುವ ಪರಿಸ್ಥಿತಿ ಬಂದಿತು. ಸ್ಯಾಮ್ಸನ್ನನ ತಮ್ಮಂದಿರು ಶಿವಸಾಗರದ ಆಸುಪಾಸಿನ ಹಳ್ಳಿಗಳಲ್ಲಿ ಹಾಲುಮಡ್ಡಿ ವ್ಯಾಪಾರ, ಅಡಿಕೆ ವ್ಯಾಪಾರ ಎಂದು ಬೇರೆ ಬೇರೆ ಉದ್ಯೋಗ ಹಿಡಿದು ಅಲ್ಲಿಯೇ ಮನೆ ಮಾಡಿದರು. ಸ್ಯಾಮ್ಸನ ಹೆಂಡತಿ, ಮಗಳು ಗ್ಲೋರಿಯಾ ತಾಯಿಯನ್ನು ಸಾಕಿಕೊಂಡು ಹಳೆಯ ಮನೆಯಲ್ಲಿದ್ದಾನೆ. ಇವನ ಮಗಳು ಗ್ಲೋರಿಯಾ ವಿದ್ಯಾವಂತಳಾಗಿದ್ದಾಳೆ. ಅವಳಿಗೆ ಒಂದು ಕೆಲಸವನ್ನು ಹುಡುಕುವ ಯತ್ನದಲ್ಲೂ ಇದ್ದಾನೆ ಸ್ಯಾಮ್ಸನ.
ಈ ನಡುವೆ ಉಳಿದ ತಮ್ಮಂದಿರು ಮನೆಯಲ್ಲಿ ಪಾಲು ಕೇಳುತ್ತಿದ್ದಾರೆ. ಸ್ಯಾಮ್ಸನ ತಮ್ಮಂದಿರಿಗೆ ಎಲ್ಲಿ ಪಾಲುಕೊಡಬೇಕಾಗುತ್ತದೋ ಎಂದು ಮುನಿಸಿಪಾಲಿಟಿಯಲ್ಲಿ ಏನೋ ಭಾನಗಡಿ ಮಾಡಿದ್ದಾನೆಂದೂ ಸುದ್ದಿಯಿದೆ.
ಇಗರ್ಜಿ ಹಬ್ಬಕ್ಕೆ ವರ್ಷಕ್ಕೊಮ್ಮೆ ಬರುವ ಅವನ ತಮ್ಮಂದಿರು-
“ಸ್ಯಾಮ್ಸನ್, ಎಲ್ಲ ಸರಿ. ನೀನು ಈ ಮನೇನ ಒಳಗೆ ಹಾಕಿಕೊಂಡಿದ್ದು ನ್ಯಾಯಾನ? ಇದು ದೇವರ ಹತ್ತು ಕಟ್ಟಲೆಗಳಿಗೆ ವಿರೋಧ ಅಲ್ವ?” ಎಂದು ಜಗಳ ತೆಗೆಯುತ್ತಾರೆ.
ಬೆಳಿಗ್ಗೆ ಎದ್ದ ಕೂಡಲೇ ಕೈಯಲ್ಲಿ ಗ್ಲಾಸ್ ಹಿಡಿದ ಇವರು ಇಗರ್ಜಿಗೆ ಹೋದವರು ಅಲ್ಲಿಯೇ ಹತ್ತಿರದಲ್ಲಿರುವ ಶರಾಬು ಬಿಳಿಯಪ್ಪನ ಅಂಗಡಿಗೆ ಹೋಗಿ ಸ್ವಲ್ಪ ಕುಡಿದಿರುತ್ತಾರೆ. ಪೂಜೆ ಮುಗಿದದ್ದೆ ಸ್ನೇಹಿತರ ಮನೆ ಗುರುತಿನವರ ಮನೆ ಎಂದು ಒಂದೊಂದು ಗ್ಲಾಸು ಏರಿಸಿ ಊಟದ ಹೊತ್ತಿಗೆ ನಾಲಿಗೆ ಮೇಲಿನ ಹಿಡಿತ ಕಳೆದುಕೊಂಡಿರುತ್ತಾರೆ. ಅಣ್ಣ ಸ್ಯಾಮ್ಸನ ತಂದೆಯ ಮನೆಯನ್ನು ಮುರಿದು ಹೊಸದಾಗಿ ಕಟ್ಟಿರುವುದನ್ನು ನೋಡಿದಾಗ ಇವರಿಗೆ ತಾಳ್ಮೆ ಕಳೆದು ಹೋಗಿ ಇವರು ಮಾತನಾಡತೊಡಗುತ್ತಾರೆ. ಮಾತಿಗೆ ಮಾತು ಸೇರಿ ಅದು ಜಗಳವಾಗಿ ಪರಿವರ್ತನೆ ಹೊಂದಿ ಕೊನೆಗೆ ಹೊಡೆದಾಟಕ್ಕೆ ಹೋಗಿ ಸಿಮೋನನೋ ಪಾಸ್ಕೋಲನೋ ಬಂದು ಬಿಡಿಸ ಬೇಕಾಗುತ್ತದೆ. ಪ್ರತಿಬಾರಿ ಊರಿಗೆ ಹಬ್ಬ ಬಂತೆಂದರೆ ಸ್ಯಾಮ್ಸನ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಇದ್ದುದೆ. ಪ್ರತಿಬಾರಿ ಊರಿಗೆ ಹಬ್ಬ ಬಂತೆಂದರೆ ಸ್ಯಾಮ್ಸನ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಇದ್ದುದೆ.
ಗುರ್ಕಾರ ಸಿಮೋನ ಒಂದು ದಾರಿ ತೋರಿಸಿದ.
“ಮನೆ ಹೇಗೂ ನಿನ್ನದಾಗಿದೆ..ನಿನ್ನ ತಮ್ಮಂದಿರಿಗೆ ಅವರವರ ಪಾಲಿನ ಹಣ ಕೊಡು..ಒಂದು ಪತ್ರ ಬರೆಸಿಕೋ..ಅಲ್ಲಿಗೆ ಈ ಜಗಳ ನಿಲ್ಲುತ್ತೆ..ಹಬ್ಬಕ್ಕೆ ಬಂದವರು ಹೊಡೆದಾಡಿದರು ಅನ್ನುವ ಮಾತು ಸುಳ್ಳಾಗುತ್ತದೆ..” ಎಂಬ ಗುರ್ಕಾರನ ಮಾತಿಗೆ ಸ್ಯಾಮ್ಸನ್ ಅವನ ತಮ್ಮಂದಿರು ಒಪ್ಪಿಕೊಂಡಿದ್ದಾರೆ. ಆದರೆ ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ. ಈ ನಡುವೆ ಸ್ಯಾಮ್ಸನ್ ಮಗಳು ಗ್ಲೋರಿಯಾ ಹೈಸ್ಕೂಲು ಮುಗಿಸಿದ್ದಾಳೆ. ಶಿಕ್ಷಕಿಯ ಕೆಲಸಕ್ಕೆ ಅರ್ಜಿ ಹಾಕಿದ್ದಾಳೆ. ಕೈತಾನನ ಮಗಳು ಪ್ರೆಸಲ್ಲಾಗೆ ಕೆಲಸ ಸಿಕ್ಕಿದೆ. ಇವಳಿಗೆ ಸಿಕ್ಕಿಲ್ಲ. ಮಗಳಿಗೊಂದು ಕೆಲಸ ಕೊಡಿಸಬೇಕು ಎಂಬ ಯತ್ನವನ್ನು ಸ್ಯಾಮ್ಸನ್ ಬಿಟ್ಟಿಲ್ಲ.
ಕಾನ್ವೆಂಟಿನಲ್ಲಿ ಈರ್ವರು ಶಿಕ್ಷಣ ತೆಗೆದುಕೊಳ್ಳುತ್ತಾರೆ ಎಂದರು. ಇದನ್ನು ಸ್ಯಾಮ್ಸನಗೆ ಹೇಳಿದವರು ಡಾಕ್ಟರ್ ಕೊದಂಡರಾವ್. ಮಳೆಗಾಲದಲ್ಲಿ ಅವರ ಬಾವಿ ಕುಸಿದಿತ್ತು. ಮಳೆಗಾಲ ಮುಗಿದ ನಂತರ ಬಾವಿಯಿಂದ ನೀರು ಹೊರ ಹಾಕಿ ಕೆಳಗಿನಿಂದ ಕಲ್ಲುಕಟ್ಟಿಕೊಂಡು ಬರುವ ಕೆಲಸ ವಹಿಸಿಕೊಂಡ ಸ್ಯಾಮ್ಸನ್ ಮೇಲಿನಿಂದ ಗಡಗಡೆಯ ಮೂಲಕ ಕಲ್ಲುಗಳನ್ನು ಕೆಳಕ್ಕೆ ಇಳಿಸುತ್ತಿರುವಾಗ ಡಾಕ್ಟರ್ ಕೊದಂಡರಾವ್ ಅಲ್ಲಿಗೆ ಬಂದು ನಿಲ್ಲುತ್ತಿದ್ದರು. ಅದು ಇದು ಮಾತಿನ ನಡುವೆ ಸ್ಯಾಮ್ಸನ್ ಮಗಳು ಪ್ರೌಢಶಾಲೆ ಮುಗಿಸಿ ಮನೆಯಲ್ಲಿ ಕುಳಿತಿರುವ ವಿಷಯ ಬಂದಿತು.
“ಅಲ್ಲಿ ಕಾನ್ವೆಂಟಿನಲ್ಲಿ ಎರಡು ಕೆಲಸ ಖಾಲಿ ಇದೆ ನೋಡು..” ಎಂದರು. ಅವರಿಗೂ ಕಾನ್ವೆಂಟಿಗೂ ಹತ್ತಿರದ ಸಂಪರ್ಕವಿತ್ತು. ಕೊದಂಡರಾಯರ ಮಕ್ಕಳೆಲ್ಲ ಕಾನ್ವೆಂಟಿನಲ್ಲಿಯೇ ಓದುತ್ತಿದ್ದರು. ಸಿಸ್ಟರುಗಳಿಗೆ ಏನೇ ಕಾಯಿಲೆಯಾದರೂ ಅವರು ಇವರ ಬಳಿಗೇನೆ ಬರುತ್ತಿದ್ದರು. ಹೀಗಾಗಿ ಕಾನ್ವೆಂಟಿನ ಹಲವು ವಿಷಯಗಳು ಇವರಿಗೆ ತಿಳಿದಿರುತ್ತಿದ್ದವು.
“ಹೌದಾ..ರಾಯರೆ?” ಎಂದು ಉತ್ಸಾಹದಿಂದ ಕೇಳಿದ ಸಾಮ್ಸನ್.
“ಹೌದು..ಅದು ನಿಮ್ಮದೇ ಅಲ್ವ..ಅರ್ಜಿ ಹಾಕಿಸು ಕೆಲಸ ಸಿಗುತ್ತೆ..” ಎಂದರವರು ಖಚಿತವಾಗಿ-
ಸ್ಯಾಮ್ಸನ್‌ಗೆ ಇಷ್ಟಕ್ಕೇನೆ ಸಂತೋಷವಾಯಿತು. ಮನೆಗೆ ಬಂದವನೇ ಮಗಳಿಗೆ ಹೇಳಿ ಒಂದು ಅರ್ಜಿ ಬರೆಸಿಕೊಂಡು ಸ್ನಾನ ಮಾಡಿ ಬೇರೆ ಉಡುಪು ಧರಿಸಿ ಮಗಳನ್ನು ಕರೆದುಕೊಂಡು ಕಾನ್ವೆಂಟಿಗೆ ಧಾವಿಸಿದ. ಸಿಸ್ಟರುಗಳೆಲ್ಲ ಕಾನ್ವೆಂಟಿನ ಒಳಗಿನ ಅವರ ಕೊಪೆಲಿನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದರು. ಪ್ರಾರ್ಥನೆ ಆಗುವ ತನಕ ಇವರು ಹೊರಗೇನೆ ನಿಂತಿರುತ್ತಿದ್ದರು. ನಂತರ ತೂಗು ಬಿದ್ದ ಕಿರು ಗಂಟೆಯ ದಾರ ಎಳೆದರು. ಹೆಡ್‌ಸಿಸ್ಟರ್ ಬಂದು ಬೀಗ ತೆಗೆದು ಬಾಗಿಲು ತೆಗೆದು-
“..ಕೋಣ್ ಜಾಯ?” (ಯಾರು ಬೇಕು?) ಎಂದು ಕೇಳಿದಾಗ ಸ್ಯಾಮ್ಸನ್ ಅವರ ಕೈಗೆ ಅರ್ಜಿ ನೀಡಿದ. ಅವರು ಅರ್ಜಿ ಓದಿದರು. ಸಾಮ್ಸನ್ ಹಾಗೂ ಗ್ಲೋರಿಯಾರನ್ನು ಎರಡು ಮೂರು ಸಾರಿ ನೋಡಿದರು. ನಂತರ-
“..ನೋಡೋಣ…” ಎಂದರು ತೀರಾ ಸಪ್ಪೆಯಾಗಿ.
“..ಸಿಸ್ಟರ್ ಇದೊಂದು ಉಪಕಾರ ಮಾಡಬೇಕು ನೀವು..” ಎಂದು ಸ್ಯಾಮ್ಸನ್ ಕೈ ಮುಗಿದ.
“ಆಯ್ತು…ಆಯ್ತು..” ಎಂದು ಹೆಡ್‌ಸಿಸ್ಟರ್ ಒಳಹೋಗಿ ಬೀಗ ಹಾಕಿಕೊಂಡರು.
ಕೊದಂಡರಾಯರ ಮಾತು ಕೇಳಿ ಉತ್ಸಾಹದಿಂದ ಬಂದವ ಏಕೋ ಸಿಸ್ಟರರ ದನಿ ಕೇಳಿ ನಿರುತ್ಸಾಹಗೊಂಡ.
ಗ್ಲೋರಿಯಾ ಹಿಂದೆಯೇ ವಿಷಯ ತಿಳಿದ ಹಸಿಮಡ್ಲು ಪಾತ್ರೋಲನ ಮಗಳೂ ಒಂದು ಅರ್ಜಿ ಕೊಟ್ಟಳು.
ತಿಂಗಳುಗಳು ಉರುಳಿದವು. ಅರ್ಜಿಕೊಟ್ಟವರಿಗೆ ತಾವು ಕೊಟ್ಟ ಅರ್ಜಿಯ ಕತೆ ಏನಾಯಿತು ಎಂಬುದು ತಿಳಿಯಲಿಲ್ಲ. ಆದರೂ ಅವರಿಗೊಂದು ಆಸೆ. ಕೆಲಸ ಸಿಗಬಹುದು. ದೇವರು ಕೈಬಿಡಲಾರ ಎಂಬ ಭರವಸೆ.
ಜನವರಿ ತಿಂಗಳು, ಮೂರು ರಾಯರ ಹಬ್ಬ ಆಚರಿಸುವ ಸಂದರ್ಭ. ಬಾಲ ಏಸುವನ್ನು ನೋಡಲು ಮೂರು ಜನ ಪಂಡಿತರು ಬಂದು ಮಗುವಿಗೆ ಕಾಣಿಕೆಗಳನ್ನು ನೀಡಿ ಹೋಗುತ್ತಾರೆ. ಕ್ರಿಬ್ಬಿನಲ್ಲಿ ಮೂವರು ರಾಯರ ಪ್ರತಿಮೆಗಳನ್ನು ಇರಿಸಿ ಅದೊಂದು ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ಆಸುಪಾಸಿನಲ್ಲಿ ಒಂದು ಸುದ್ದಿ ಕೇಳಿ ಬಂದಿತು.
ಕಾನ್ವೆಂಟಿಗೆ ಈರ್ವರು ಹೊಸ ಶಿಕ್ಷಕಿಯರು ಬಂದಿದ್ದಾರೆ. ಒಬ್ಬರು ಮಂಗಳೂರಿನವರು. ಈಗ ಹಾಲಿ ಕಾನ್ವೆಂಟಿನಲ್ಲಿರುವ ಸಿಸ್ಟರ್ ಲೀನಾರ ಅಕ್ಕನ ಮಗಳು. ಇನ್ನೊಬ್ಬಳು ಮಿರೋಣ್ ಜಾನ್ ಡಯಾಸನ ಮಗಳು. ಈವರೆಗೆ ಮಂಗಳೂರಿನಲ್ಲಿ ಇದ್ದವಳನ್ನು ಈಗ ಡಯಾಸ ಇಲ್ಲಿಗೆ ಕರೆಸಿಕೊಂಡು ಕೆಲಸ ಕೊಡಿಸಿದ್ದಾನೆ.
ಸ್ಯಾಮ್ಸನ ಮನೆ ಜಗಲಿಯ ಮೇಲೆ ಕವಳ ಜಗಿಯುತ್ತ ಕುಳಿತವ ಮಗಳಿಂದ ಒಂದು ಚಂಬು ನೀರು ತರಿಸಿಕೊಂಡು ಬಾಯಿ ಮುಕ್ಕಳಿಸಿ, ಹಲ್ಲಿನ ಸಂದಿ ಗೊಂದಿಯಲ್ಲಿ ಸೇರಿಕೊಂಡ ಅಡಿಕೆ ಚೂರನ್ನು ನಾಲಿಗೆ ತುದಿಯಿಂದ ಹೊರಗೆಳೆದು ಅಂಗಳಕ್ಕೆ ತೂಸಿ, ಶರಟೊಂದನ್ನು ತಗುಲಿಸಿಕೊಂಡು ಮನೆಯಿಂದ ಹೊರಬಿದ್ದ.
ರೋಗ ಬಂದ ಕೋಳಿಯ ಮೂಗಿಗೆ ಅದರ ಒಂದು ಪುಕ್ಕ ಚುಚ್ಚಿ ಅದು ತೂರಾಡುತ್ತ ಅಂಗಳದ ತುಂಬ ಓಡಿಯಾಡುವ ಹಾಗೆ ಸ್ಯಾಮ್ಸನ್ನನ ಪರಿಸ್ಥಿತಿಯಾಗಿತ್ತು. ಮಗಳಿಗೆ ಕಾನ್ವೆಂಟಿನಲ್ಲಿ ಕೆಲಸ ಸಿಗಬಹುದು ಅನ್ನುವ ಆಸೆ ಇತ್ತು. ಇದು ನಿರಾಶೆಯಾಗಿ ಪರಿವರ್ತನೆ ಹೊಂದುವುದರ ಜತೆಗೆ ಮೀರೋಣ್ ಜಾನಡಯಾಸನ ಮಗಳಿಗೆ ಅಲ್ಲಿ ಕೆಲಸ ಸಿಕ್ಕಿತು.
ಜಾನಡಯಾಸನಿಗೇನೂ ಕಡಿಮೆಯಾಗಿರಲಿಲ್ಲ. ಅವನ ಮಗ ಕೆಲಸದಲ್ಲಿದ್ದ. ಹೆಣ್ಣು ಮಕ್ಕಳಲ್ಲಿ ಈರ್ವರು ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಅಕ್ಕಂದಿರ ಜತೆಯಲ್ಲಿದ್ದ ಕೊನೆಯವಳಿಗೂ ಈಗ ಕೆಲಸ ದೊರಕಿದೆ.
ಇಷ್ಟೇ ಅಲ್ಲ ಈ ಬಾಮಣ ಊರಿನಲ್ಲಿ ಇಲ್ಲದ ಮನಸ್ತಾಪಗಳನ್ನು ಉಂಟುಮಾಡುತ್ತ ಅವರಿವರ ಮನೆಗೆ ಬೆಂಕಿ ಇಡುತ್ತ ಇಗರ್ಜಿಯಲ್ಲಿ ದೈವ ಭಕ್ತನಾಗಿ, ಪಾದರಿಯ ಆಪ್ತನಾಗಿ ಮೆರೆಯುತ್ತಿದ್ದಾನೆ.
ಪಾದರಿ ಸಿಕ್ವೇರಾ ಬಂದ ನಂತರ ಇಗರ್ಜಿಯ ಹಣಕಾಸಿನ ವ್ಯವಹಾರವನ್ನು ಈತ ನೋಡಿಕೊಳ್ಳುತ್ತಾನೆ. ಇಗರ್ಜಿಯ ನಡುವೆ ಇಟ್ಟ ಕಾಣಿಕೆ ತಟ್ಟೆಯನ್ನು ಒಳಗೆ ತೆಗೆದುಕೊಂಡು ಹೋಗುವುದು. ಉಳಿದ ಸಂತರ ಬಳಿ ಇರಿಸಿರುವ ಕಾಣಿಕೆ ಡಬ್ಬಗಳ ಬೀಗ ತೆಗೆದು ಹಣ ಎಣಿಸಿಕೊಳ್ಳುವುದು, ಈ ಬಗೆಯ ಕೆಲಸ ಮಾಡುತ್ತ ಒಂದಿಷ್ಟು ಹಣವನ್ನು ತನ್ನ ಜೇಬಿಗೂ ಇಳಿಸುತ್ತಾನೆಂದು ಇಗರ್ಜಿಗೆ ಹೋಗುವ ಸಣ್ಣ ಹುಡುಗರೂ ಹೇಳುತ್ತಾರೆ.
ಕರಿಕಾಲಿನ ಇರುದನಾದದ ಮಗಳು ರೈಲ್ವೆ ಗಾರ್ಡ್ ಓರ್ವನ ಜತೆ ಓಡಿ ಹೋಗಿ ಆರು ತಿಂಗಳಾಗಿತ್ತು. ಅವಳು ಭದ್ರಾವತಿಗೆ ಹೋಗಿ ಸೇರಿಕೊಂಡು ಅಲ್ಲಿ ಆ ಗಾರ್ಡ ಜತೆ ಸಂಸಾರ ಕೂಡ ಹೂಡಿದ್ದಳು. ಇಲ್ಲಿ ಗುಲ್ಲು ಗಲಾಟೆಯಾಯಿತು. ಈ ಡಯಾಸ ಹಾಗೂ ಗುರ್ಕಾರ ಪಿಂಟೋ ಭದ್ರಾವತಿಗೆ ಹೋಗಿ ಆ ಹುಡುಗಿಯನ್ನು ಕರೆ ತಂದರು. ಆರು ತಿಂಗಳು ಯಾರ ಜತೆಗೋ ಇದ್ದು ಬಂದವಳು ಅನ್ನುವ ಕಾರಣಕ್ಕೆ ಕ್ರೀಸ್ತುವರು ಅವಳ ವಿಚಾರಣೆ ಆಗಬೇಕು ಎಂದರು. ಜೂಂತ ಇರಿಸಿ ಎಂದು ಕೂಗಾಡಿದರು. ಈ ಡಯಾಸ ಅವಳ ಆರೋಗ್ಯ ಸರಿಯಿಲ್ಲ ಎಂದು ಅವಳನ್ನು ಶಿವಮೊಗ್ಗೆಗೆ ಕರೆದೊಯ್ದು ಹದಿನೈದು ದಿನ ಆಸ್ಪತ್ರೆಯಲ್ಲಿರಿಸಿ ಅವಳನ್ನು ಸರಿ ಮಾಡಿ ಕರೆತಂದ. ಇದು ಸಾಲದೆಂದು ಓಡಿ ಹೋದವಳನ್ನು ಪಾದರಿ ಕೋಲಾರದ ಓರ್ವ ಹುಡುಗನಿಗೆ ಮದುವೆ ಮಾಡಿದರು.
ಗುರ್ಕಾರನ ಪಿಂಟೋನ ಮೊಮ್ಮಗಳು ಅವನ ಹೆಂಡತಿ ತಂಗಿಯ ಮಗಳು ಚಿಕ್ಕಮಗಳೂರಿನಲ್ಲಿ ಎರಡು ವರ್ಷದಿಂದ ಪ್ರೌಢಶಾಲೆಯಲ್ಲಿ ಫ಼ೇಲಾಗುತ್ತಿದ್ದವಳನ್ನು ಇಲ್ಲಿಗೆ ಕರೆತಂದು ಕಾನ್ವೆಂಟಿಗೆ ಸೇರಿಸಿ ಪಾಸು ಮಾಡಿಸಿದ. ಆ ಹುಡುಗಿಯನ್ನು ಚೆನ್ನಾಗಿ ಓದಿ ಬರೆಯಬಲ್ಲ ಬೇರೊಂದು ಹುಡುಗಿಯ ಪಕ್ಕದಲ್ಲಿ ಕೂರಿಸಿ ಅವಳದನ್ನು ನೋಡಿ ಬರೆಯುವಂತೆ ಇವಳಿಗೆ ಹೇಳಿ ಇವಳು ಪರೀಕ್ಷೆಯಲ್ಲಿ ಪಾಸಾಗುವಂತೆ ಮಾಡಿದವ ಈ ಡಯಾಸ. ಇದಕ್ಕೆ ಸಿಸ್ಟರುಗಳ ಬೆಂಬಲ.
ಇವನ ಮನೆಯಿಂದ ಹಂದಿ ಮಾಂಸ, ಹೊಳೆ ಮೀನು ನಿರಂತರವಾಗಿ ಕಾನ್ವೆಂಟಿಗೆ ಸರಬರಾಜು ಆಗುತ್ತದೆ. ಸಿಸ್ಟರುಗಳು ಇವನ ಮನೆಗೆ ವಾರಕ್ಕೆ ಎರಡು ದಿನ ಬಂದು ಹೋಗುತ್ತಾರೆ. ಡಯಾಸ ತನ್ನ ಜನರ ಬಗ್ಗೆ ಅವರ ಮಕ್ಕಳ ಬಗ್ಗೆ ತುಂಬಾ ಮುತುವರ್ಜಿವಹಿಸುತ್ತಾನೆ.
ಬೇರೆ ಊರುಗಳಲ್ಲಿ ಮನೆ ಮಾಡಿಕೊಂಡಿರುವ ತನ್ನ ತಮ್ಮಂದಿರು ಆಸ್ತಿಯಲ್ಲಿ ಪಾಲು ಕೇಳಲು ಕೂಡ ಈ ಡಯಾಸ ಕಾರಣ ಎಂಬ ಮಾತಿದೆ. ಅವರು ಹಬ್ಬಕ್ಕೆ ಬಂದಾಗಲೆಲ್ಲ ಈತ ಅವರನ್ನು ನಿಲ್ಲಿಸಿಕೊಂಡು-
“ಫ಼್ಲೋರಾ..ಏನು ನಿನ್ನ ತಂದೆ ಕಟ್ಟಿದ ಮನೇನ ಪೂರ್ತಿಯಾಗಿ ನಿನ್ನ ಅಣ್ಣನಿಗೇಕೇ ಬಿಟ್ಟು ಬಿಟ್ತಿರಾ?” ಎಂದು ಓರ್ವ ತಮ್ಮನಿಗೆ ಕೇಳಿದರೆ ಇನ್ನೋರ್ವನ ಹತ್ತಿರ-
“ಹಬ್ಬಕ್ಕೆ ಬಂದೆಯಾ ಸೈಮನ್..ಬರಬೇಕು ..ಇಲ್ಲಿ ತಂದೇದು ಅಂತ ಒಂದು ಮನೆ ಇದೆಯಲ್ಲ..ಅದನ್ನು ಸಾಮ್ಸನ್ ನೋಡಿಕೊಂಡರೂ ಅದು ನಿಮ್ಮದೇ ಮನೆ ಅಲ್ವೆ?” ಎಂದು ಕೇಳುತ್ತಾನೆ.
ಮೂರನೆಯವನಿಗೂ ಹೀಗೆಯೇ ಕೇಳಿ ಅವರೆಲ್ಲರ ತಲೆ ಕೆಡಿಸುತ್ತಾನೆ.
ಇಂತಹ ಡಯಾಸ ಈಗ ತನ್ನ ಮಗಳಿಗೆ ಸಿಗಬಹುದಾಗಿದ್ದ ಕೆಲಸವನ್ನು ಕಿತ್ತುಕೊಂಡಿದ್ದಾನೆ. ಈ ಬಾಮಣ ಬಾಮಣರೂ ಒಂದೇ. ಅವರು ಬೇರೆಯವರನ್ನು ಹತ್ತಿರ ಸೇರಿಸಿಕೊಳ್ಳುವುದಿಲ್ಲ. ಇಲ್ಲವೆಂದರೆ ಸಿಸ್ಟರ್ ಲೀನಾ ಅಕ್ಕನ ಮಗಳನ್ನು ಕರೆತಂದು ಇಲ್ಲಿ ಕೆಲಸ ಕೊಡಿಸಬೇಕಿತ್ತೆ? ಗ್ಲೋರಿಯಾಗೆ ಕೆಲಸ ಕೊಡುವುದು ಬೇಡ. ತೀರಾ ಬಡವನಾಗಿರುವ ಹಸಿಮಡ್ಲು ಪತ್ರೋಲನ ಮಗಳಿಗಾದರೂ ಕೊಡಬಹುದಿತ್ತಲ್ಲ.
ಈ ಎಲ್ಲ ವಿಷಯಗಳು ತಲೆಯಲ್ಲಿ ಮುಳ್ಳು ಹಂದಿಯ ಗಣೆಗಳ ಹಾಗೆ ನಿಮಿರಿ ನಿಂತಿರಲು ಆತ ರಸ್ತೆಗೆ ಇಳಿದ.
ಎದುರು ಬಂದ ಎಲ್ಲರನ್ನೂ ನಿಲ್ಲಿಸಿಕೊಂಡು-
“ಅಲ್ಲ..ಇವರು ಹೀಗೆ ಮಾಡಬಹುದ? ಅವರು ದೇವರ ಸೇವಕರಲ್ವ? ಹಗಲೂ ರಾತ್ರಿ ಪ್ರಾರ್ಥನೆ ಜಪ ಅಂತ ಕಾಲ ಕಳೆಯೋ ಜನ ಅಲ್ವ..ಅವರು ಹೀಗೆ ಮಾಡಬಹುದ?” ಎಂದು ಕೇಳಿದ.
ಗುರ್ಕಾರ ಸಿಮೋನನ ಮನೆಗೆ ಹೋಗಿ-
“ಅವರಿಗೆ ನಮ್ಮ ಊರಿನ ಜಮೀನಿರಬೇಕು..ಅಲ್ಲಿ ಅವರು ಕಾನ್ವೆಂಟ್ ಕಟ್ಟಬೇಕು..ಕೆಲಸ ಮಾಡಲಿಕ್ಕೆ ಮಂಗಳೂರಿನವರೇಬೇಕಾ? ನಮ್ಮ ಹೆಣ್ಣು ಮಕ್ಕಳಿಗೆ ಕೆಲಸ ಮಾಡಲಿಕ್ಕೆ ಬರೋದಿಲ್ವ..ನೀವು ಗುರ್ಕಾರ ಅಂತ ಇದೀರಲ್ಲ ಇದನ್ನ ಕೇಳಬೇಕು..” ಎಂದು ಕೂಗಾಡಿದ.
ಪಾಸ್ಕೋಲನನ್ನು ನಿಲ್ಲಿಸಿಕೊಂಡು-
“ಹ್ಯಾಗಿದೆ ನ್ಯಾಯ? ಆವತ್ತು ನಿನ ಮಗ ಸೋತ..ಯಾರಿಂದ? ಈ ಬಾಮಣರಿಂದ. ಈಗ ನನ ಮಗಳಿಗೆ ಕೆಲಸ ಸಿಗಲಿಲ್ಲ ಯಾರಿಂದ? ಈ ಬಾಮಣರಿಂದ. ನಾವು ಚಾರಡಿಗಳು ಗೌಡಿಗಳು ನೇಂದರಗಳು ಊರು ಬಿಡೋಣ..ಈ ಬಾಮಣರೇ ಇಲ್ಲಿ ಇದ್ದು ಬಿಡಲಿ..” ಎಂದ.
ಬೋನನ ಅಂಗಡಿಗೂ ಹೋದ.
ಅಲ್ಲಿ ಕೂಗಾಡಿ ಪಿಂಟೋನ ಅಂಗಡಿಯತ್ತ ಒಮ್ಮೆ ನೋಡಿ ರಸ್ತೆಯತ್ತ ಉಗುಳಿ ಮುಂದೆ ಹೋದ.
*
*
*
ಸ್ಯಾಮ್ಸನಗೆ ಆದ ನಿರಾಶೆ, ಹಸಿಮಡ್ಲು ಪತ್ರೋಲನಿಗಾದ ಅನ್ಯಾಯ ಊರ ಕ್ರಿಸ್ತುವರ ಗಮನಕ್ಕೆ ಬಾರದಿರಲಿಲ್ಲ. ಹಿರಿಯರು ಮುದುಕರು ಛೆ! ಪಾಪ!! ಎಂದೆಲ್ಲ ಮರುಕ ಪಟ್ಟರು. ಸಿಸ್ಟರುಗಳು ಏಕೆ ಹೀಗೆ ಮಾಡಿದರು ಎಂದು ಇಳಿದನಿಯಲ್ಲಿ ಮಾತನಾಡಿಕೊಂಡರು. ಆದರೆ ಇದೀಗ ಮೀಸೆ ಚಿಗುರುತ್ತಿದ್ದ ಎದೆ ಬಿರುಸಾಗುತ್ತಿದ್ದ ತರುಣರು ಇದನ್ನು ಸಹಿಸಿಕೊಳ್ಳಲಿಲ್ಲ.
ಈ ಸಿಸ್ಟರುಗಳ ಬಗ್ಗೆ ಡಯಾಸ, ಪಿಂಟೋನ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ.
ಬೋನನ ಮಗ ಫ಼ಿಲಿಪ್ಪನಿಗೆ ಕೆಟ್ಟ ಅನುಭವಗಳು ಆಗಿದ್ದವು. ಕಾನ್ವೆಂಟ್ ಶಾಲೆಯಲ್ಲಿ ಓದುವಾಗ ಶಾಲೆಯನ್ನು ಗುಡಿಸಲು ತನ್ನನ್ನು, ಗ್ರೆಗೋರಿಯನ್ನು, ರಾಬರ್ಟಿಯನ್ನು ಅವರು ಕರೆಯುತ್ತಿದ್ದರು.
ಡಾಕ್ಟರ್ ಕೋದಂಡರಾಯರ ಮಗ ಶಾಲೆಯಲ್ಲಿ ವಾಂತಿಮಾಡಿಕೊಂಡಾಗ ಅದನ್ನು ತೆಗೆಯಲು ಸಿಸ್ಟರ್ ಲೀನಾ ಕರೆದದ್ದು ಇಂತ್ರು ಮಗ ಸಿರೀಲನನ್ನು. ನಿತ್ಯ ಶಾಲೆಯ ಬೀಗ ತಂದು ಬಾಗಿಲು ತೆಗೆದು, ಸಂಜೆ ಬೀಗ ಹಾಕುವ ಕೆಲಸ ಸುತಾರಿ ಇನಾಸನ ಮಗ ಪಾಸ್ಕು ಮಾಡಬೇಕಾಗುತ್ತಿತ್ತು.
ಊರಿನ ಬಡ ಕ್ರೈಸ್ತುವರ ಮಕ್ಕಳು. ಕಲ್ಲು ಕೆತ್ತುವ, ಕಲ್ಲು ತೆಗೆಯುವ, ಗಿಲಾಯಿ ಮಾಡುವ ಎಲ್ಲರ ಮಕ್ಕಳಿಗೂ ಶಾಲೆಯಲ್ಲಿ ಒಂದಲ್ಲಾ ಒಂದು ಕೆಲಸ.
“..ದೇವಾಚೆಂ ಕಾಮ ಕೆಲೇರ್..ದೇವ ಬೊರೆಂ ಕರ್ತಾ…”(ದೇವರ ಕೆಲಸ ಮಾಡಿದರೆ ದೇವರು ಒಳ್ಳೆಯದನ್ನು ಮಾಡುತ್ತಾನೆ) ಎಂಬ ಮಾತು ಬೇರೆ.
ಎಲ್ಲಿಂದಲೋ ಬರುವ ಗೋದಿ, ಎಣ್ಣೆ, ಹಾಲಿನ ಪುಡಿ ಬಟ್ಟೆ ಎಲ್ಲ ಡಯಾಸ, ಪಿಂಟೋ ಮನೆಗೆ. ಉಳಿದವರಿಗೆ ದೇವರ ಆಶೀರ್ವಾದ.
ಇದು ಫ಼ಿಲಿಪ್ಪನ ಅನುಭವ. ಉಳಿದವರ ಅನುಭವ ಕೂಡ ಬೇರೆಯಾಗಿರಲಿಲ್ಲ.
ಇಗರ್ಜಿಯಲ್ಲಿ ಸಾಲು ಸಾಲಾಗಿ ಬೆಂಚುಗಳನ್ನು ಹಾಕಲಾಗಿತ್ತು. ಈ ಬೆಂಚುಗಳ ಮೇಲೆ ಹೆಸರುಗಳು. ಅಲ್ಲಿ ಕುಳಿತುಕೊಳ್ಳಬೇಕಾದ ಜನರೇ ಬೇರೆ. ಪಾಸ್ಕು, ಬಸ್ತು, ಪೆದ್ರು, ಸಾಂತ ಕೈತಾನ, ಇಂತ್ರು, ಸಂತ, ಬಡ್ತೋಲ, ಫ಼ರಾಸ್ಕ ಯಾರೂ ಅಲ್ಲಿ ಕೂರುವಂತಿಲ್ಲ. ಒಂದು ವೇಳೆ ಕೂತರೂ ಅವರನ್ನು ಎಬ್ಬಿಸುತ್ತಾನೆ ಡಯಾಸ ಪಿಂಟೋ.
“ಏನು..ನೀನೇನು ದೊಡ್ಡ ಆಫ಼ೀಸರ್ರ..ಬೆಂಚಿನ ಮೇಲೆ ಕೂರಲಿಕ್ಕೆ?” ಎಂದು ಕೇಳುತ್ತಾನೆ.
ಆವತ್ತು ಅಂತೋನಿಗೆ ಹಾಗೆ ಆಯಿತು.
ಈಗ ಗ್ಲೋರಿಯಾಗೆ ಹೀಗೆ.
ಹಸಿಮಡ್ಲು ಮಗಳಿಗೆ ಹೀಗೆ.
“ಇದು ಯಾಕೆ ಹೀಗೆ ಆಗತಿದೆ..ನಮಗೆ ಗೊತ್ತು” ಎಂದು ಯುವಕರು ಗುರುಗುಟ್ಟಿದರು.
ಇಗರ್ಜಿ ಮುಂದೆ, ಸಂತ ಜೋಸೆಫ಼ರ ಮಂಟಪದ ಮುಂದೆ, ಕೇರಿಯ ಸರಕಾರಿ ಬಾವಿಯ ಬಳಿ ಜೋಸೆಫ಼ ನಗರದ ಕಾಮತಿ ಅಂಗಡಿ ಬಳಿ, ನಿಂತು ಯುವಕರು ಕಿಡಿಕಾರಿದರು. ಗುರ್ಕಾರ ಸಿಮೋನನ ಕಿವಿಗೂ ಇದು ಬಿದ್ದಿತು. ಬೋನನೂ ಕೇಳಿಸಿಕೊಂಡ.
ಈ ಬಾರಿ ಅವರು ಏನನ್ನೂ ಹೇಳಲು ಹೋಗಲಿಲ್ಲ.
ಸಂಜೆಯ ಆಮೋರಿಗೆ ಕುಳಿತಾಗ ಮಾತ್ರ
“ದೇವಾ” ಎಂದು ದೇವರೆದುರು ಮೊರೆ ಇಟ್ಟರು.
“ಈ ತಳಮಳ ಸಿಟ್ಟು ಕೋಪ ದೂರ ಮಾಡು..” ಎಂದು ಕೈ ಮುಗಿದರು.
*
*
*
ಇತ್ತೀಚಿನ ದಿನಗಳಲ್ಲಿ ಹೀಗೆ ಒಂದಲ್ಲಾ ಒಂದು ಘಟನೆ ನಡೆದು ಸಿಮೋನ ವಿಚಲಿತನಾಗುತ್ತಿದ್ದ. ಮೊನ್ನೆ ಮೊನ್ನೆ ವೈಜೀಣ್ ಕತ್ರೀನ ತೀರಿಕೊಂಡಾಗ ನಡೆದುದನ್ನು ಏನು ಮಾಡಿದರೂ ಮರೆಯಲು ಅವನಿಂದ ಆಗಿರಲಿಲ್ಲ.
ಹಿಂದೆ ಸಂತು ಮೇಸ್ತ ಎಂದು ಒಬ್ಬಾತ ಕೆಲ ವರುಷ ಶಿವಸಾಗರದಲ್ಲಿ ಮನೆ ಮಾಡಿಕೊಂಡಿದ್ದ. ಈತ ಹೊನ್ನಾವರದ ಹತ್ತಿರವಿದ್ದ ಜೋಗಮಠದವ. ಇವನ ಹೆಂಡತಿ ಹೊನ್ನಾವರದವಳು. ಇವಳ ತಂದೆ ಮೂರು ನಾಲ್ಕು ಮಚವೆ ಇರಿಸಿಕೊಂಡು ತುಸು ಅನುಕೂಲವಾಗಿಯೇ ಇದ್ದವನು. ಇವನು ಮಗಳಿಗೆ ಹೆರಿಗೆಯಾಗಿ ಮಗಳು ಗಂಡನ ಮನೆಗೆ ಹೊರಟಾಗ, ದೂರದ ಊರಿನಲ್ಲಿ ನೆಂಟರು ಇಷ್ಟರು ಇಲ್ಲದ ಕಡೆ ಮಗಳನ್ನು ಮಗುವನ್ನು ನೋಡಿಕೊಂಡು ಇರಲಿ ಎಂದು ಕತ್ರೀನಳನ್ನು ಅವಳ ಜತೆ ಕಳುಹಿಸಿದ. ಕತ್ರೀನಳ ತಾಯಿ ಅನ್ನಾಬಾಯಿ ಕೂಡ ಹೊನ್ನಾವರದಲ್ಲಿ ಹೆರಿಗೆ ಮಾಡಿಸುವುದು ಬಾಣಂತಿಯರಿಗೆ ಸ್ನಾನ ಮಾಡಿಸು ಎಂದು ಕೆಲಸ ಮಾಡಿಕೊಂಡಿದ್ದವಳೆ. ಇಷ್ಟು ಬಿಟ್ಟರೆ ಹೆಚ್ಚು ವಿವರ ಅವಳ ಬಗ್ಗೆಯೂ ಇಲ್ಲ. ಕತ್ರೀನಳ ಬಗ್ಗೆಯೂ ಇರಲಿಲ್ಲ.
ಕತ್ರಿನ ಶಿವಸಾಗರಕ್ಕೆ ಬಂದವಳು ಎರಡು ವರ್ಷ ಸಂತು ಮೇಸ್ತನ ಮನೆಯಲ್ಲಿದ್ದಳು. ಅವನ ಸಣ್ಣ ಸಣ್ಣ ಮಕ್ಕಳನ್ನು ನೋಡಿಕೊಂಡು, ಸಂತು ಹೆಂಡತಿಯನ್ನು ನೋಡಿಕೊಂಡು ಇವಳಿದ್ದಳು.
ಸಂತು ಮೇಸ್ತ ಮಾತ್ರ ಒಳ್ಳೆಯವನಾಗಿರಲಿಲ್ಲ. ಮೇಲಿನ ಮನೆ, ಹೆಗ್ಗೋಡು, ಸೂರಗುಪ್ಪೆ ಎಂದೆಲ್ಲ ಅಲ್ಲಲ್ಲಿ ಕೆಲಸ ಹಿಡಿದು ಮನೆ ಕಟ್ಟಿಸುತ್ತಿದ್ದ ಈತ ಹೋದಲ್ಲೆಲ್ಲ ಏನೇನೋ ಭಾನಗಡಿ ಮಾಡಿಕೊಳ್ಳುತ್ತಿದ್ದ ವಿಷಯ ತನ್ನ ಕಿವಿಗೂ ಬೀಳುತ್ತಿತ್ತು. ಒಂದೆರಡು ಸಾರಿ ತಾನೂ ಇವನಿಗೆ ಹೇಳಿದೆ-
“ನೋಡು ಸಂತು…ನಾವು ಬೇರೆ ಊರಿನವರು..ನಮ್ಮ ಧರ್ಮ ಕೂಡ ಬೇರೆ..ನಾವು ಇಲ್ಲಿ ಗೌರವದಿಂದ ಇರಬೇಕು..ಹೆಂಡತಿ ಮಕ್ಕಳು ಅಂತ ಇರಬೇಕಾದರೆ ನಮ್ಮ ಜವಾಬ್ದಾರಿ ಕೂಡ ಹೆಚ್ಚು..ಅವರಿವರು ಸದರದಿಂದ ಮಾತನಾಡಲಿಕ್ಕೆ ನಾವು ಅವಕಾಶ ಮಾಡಿಕೊಡಬಾರದು..” ಎಂದೆಲ್ಲ ಹೇಳಿಯೂ ನೋಡಿದೆ.
ಅವನು ಸರಿಹೋಗಲಿಲ್ಲ.
ಈ ನಡುವೆ ಅವನು ಮನೆಯಲ್ಲಿದ್ದ ಕತ್ರೀನಳನ್ನು ಕೆಣಕಿದ ಎಂದು ಕಾಣುತ್ತದೆ. ಅವಳೂ ಅವನ ಮನೆ ಬಿಟ್ಟು ಬೇರೆ ಮನೆ ಮಾಡಿದಳು. ಈ ಸಂತು ಮೇಸ್ತನ ಖ್ಯಾತಿ ಅವನ ಮಾವನ ಕಿವಿಗೂ ಬಿದ್ದು ಅವನು ಬಂದದ್ದೇ-
“..ನೀವೆಲ್ಲ ಇಲ್ಲಿಂದ ಹೊರಡಿ..” ಎಂದು ಹೇಳಿ ಸಂತುವಿನ ಇಡೀ ಕುಟುಂಬವನ್ನು ಹೊರಡಿಸಿಕೊಂಡು ಘಟ್ಟ ಇಳಿದ. ಆದರೆ ಈ ಕುಟುಂಬದ ಜತೆ ಬಂದ ಕತ್ರೀನ ಇಲ್ಲೇ ಉಳಿದಳು.
ಮನೆ ಮನೆಗೆ ಹೋಗಿ ಹೆರಿಗೆ ಮಾಡಿಸುವ ಕೆಲಸವನ್ನು ಕತ್ರೀನ ತನ್ನ ಕೈಗೆತ್ತಿಕೊಂಡಳು. ಶಿವಸಾಗರಕ್ಕೆ ಈ ಕೆಲಸ ಮಾಡುವವರ ಅವಶ್ಯಕತೆ ಇತ್ತು. ಈ ಅವಶ್ಯಕತೆಯನ್ನು ಕತ್ರೀನ ಪೂರೈಸತೊಡಗಿದಳು. ಸಂತು ಮೇಸ್ತು ಊರು ಬಿಡುವಾಗ ಅದೇ ಊರಿಗೆ ಬಂದ ಇಂತ್ರು ಈ ಮನೆಯಲ್ಲಿ ಸೇರಿಕೊಂಡ. ವೈಜೀಣ ಕತ್ರೀನ ಅಲ್ಲಿಯೇ ಬೇರೊಂದು ಮನೆ ಕಟ್ಟಿಕೊಂಡಳು. ಸಿಮೋನ ಅವಳ ನೆರವಿಗೆ ನಿಂತ.
ಒಂಟಿ ಹೆಂಗಸು ಉದ್ದಕ್ಕೂ ಒಂದೇ ಕೆಲಸ ಮಾಡಿಕೊಂಡು ಬಂದಳು. ರಾತ್ರಿ ಎಂದು ನೋಡಲಿಲ್ಲ. ಮಳೆಗಾಲ ಚಳಿಗಾಲ ಎಂದು ನೋಡಲಿಲ್ಲ. ಯಾರೇ ಮನೆ ಬಾಗಿಲಿಗೆ ಹೋಗಿ ಕರೆದರೂ ಸೀರೆಯ ಸೆರಗನ್ನು ಸೊಂಟಕ್ಕೆ ಕಟ್ಟಿಕೊಂಡು ಹೊರಡುತ್ತಿದ್ದಳು. ನೋವು ಎಂದು ನರಳುತ್ತಿದ್ದವರಿಗೆ ಧೈರ್ಯ ಹೇಳುತ್ತಿದ್ದಳು.
ಮನೆ ಬಾಗಿಲಿಗೆ ಕತ್ರೀನಮ್ಮ ಬಂದಿದ್ದಾಳೆ ಎಂದರೆ ಎಲ್ಲರಿಗೂ ಧೈರ್ಯ.
ಊರಿಗೆ ಬಂದಾಗ ಮೂವತ್ತು ಮೂವತ್ತೈದರ ಪ್ರಾಯ ಹೊಂದಿದ್ದ ಕತ್ರೀನ ಪುರುಷರ ದಬ್ಬಾಳಿಕೆಗೂ ಒಳಗಾದಳು. ಅವಳ ಮನೆಯ ಮೇಲೆ ಕಲ್ಲುಗಳು ಬೀಳುತ್ತಿದ್ದವು. ಯಾರೋ ಮನೆ ಬಾಗಿಲು ಬಡಿದು ಓಡಿ ಹೋಗುತ್ತಿದ್ದರು. ಸಾವಿರ ಕಣ್ಣುಗಳು ಆಸೆಯಿಂದ ಚಪಲದಿಂದ ಅವಳನ್ನು ನೋಡಿ ಉರಿಯುತ್ತಿದ್ದವು. ಆದರೂ ತನ್ನ ಕೆಲಸ ಮಾಡಿಕೊಂಡು ಉಳಿದಳು ಕತ್ರೀನ.
ಊರಿನಲ್ಲಿ ಪಾದರಿ ಇರಲಿ ಇಲ್ಲದಿರಲಿ ಮನೆಯಲ್ಲಿ ಜಪ ಪ್ರಾರ್ಥನೆ ನಿಲ್ಲಿಸಲಿಲ್ಲ. ನಿತ್ಯ ಅಮೋರಿಯ ಸದ್ದು ಕೇಳಿ ಬರುತ್ತಿದ್ದುದು ತಮ್ಮ ಮನೆಯಿಂದ ಹಾಗೂ ಅವಳ ಮನೆಯಿಂದ ಮಾತ್ರ. ಊರಿಗೆ ಪಾದರಿ ಬಂದದ್ದು ಅವಳಿಗೆ ತುಂಬಾ ಸಂತೋಷದ ವಿಷಯವಾಯಿತು. ಪ್ರತಿದಿನ ಬೆಳಿಗ್ಗೆ ಅವಳು ಇಗರ್ಜಿಗೆ ಬಂದು ಪೂಜೆ ಕೇಳಬೇಕು. ಭಾನುವಾರಗಳಂದು ದಿವ್ಯಪ್ರಸಾದ ಸ್ವೀಕಾರ.
“ಈ ಕತ್ರೀನಬಾಯಿ ಪ್ರತಿವಾರ ದಿವ್ಯಪ್ರಸಾದ ತೊಕೊಳ್ತಾಳಲ್ಲ ಅವಳೇನು ಪಾಪ ಮಾಡಿರತಾಳೆ?” ಎಂದು ಯಾರೋ ಮಾತಾಡಿಕೊಂಡಿದ್ದು ಇವಳ ಕಿವಿಗೆ ಬಿದ್ದು ಇವಳು-
“..ಪಾಪ ಮಾಡಿದೀನಿ ಅಂತ ಅಲ್ಲ..ನನಗೆ ಶಕ್ತಿ ಬರಲಿ ಅಂತ ನಾನು ಕ್ರಿಸ್ತ ಪ್ರಭುವಿನ ರಕ್ತ ಮಾಂಸವನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸೋದು” ಎಂದು ಹೆಳುತ್ತಿದ್ದಳು.
ತಪಸ್ಸಿನ ಕಾಲದ ಉಪವಾಸ, ಮುಂತಿ ಮಾತೆಯ ಹಬ್ಬದ ನವೇನ ಹೀಗೆ ಯಾವುದನ್ನೂ ಬಿಡಲಿಲ್ಲ.
ಊರಿಗೇನೆ ಬೇಕಾದವಳಾಗಿದ್ದವಳು ಕತ್ರೀನ. ಎಲ್ಲ ಜನರಿಗೂ ಅವಳ ಬಗ್ಗೆ ಗೌರವ ಪ್ರೀತಿ.
ಇತ್ತೀಚೆಗೆ ವಯಸ್ಸಾಗಿತ್ತು ಅವಳಿಗೆ. ಊರ ತುಂಬಾ ನರ್ಸಿಂಗ ಹೋಂಗಳು ಆಗಿದ್ದವು. ಆದರೂ ಹೆರಿಗೆ ಕಷ್ಟಕರವಾದಾಗ ನರ್ಸಿಂಗ ಹೋಂನವರು ಕೂಡ ಆಟೋ ಕಳುಹಿಸಿ ಕತ್ರೀನಳ ಮೇಲೆ ತುಂಬಾ ಭರವಸೆ ಇರಿಸಿಕೊಂಡ ಕೆಲವರು-
“..ನೀನು ಬಂದು ನಮ್ಮ ಜತೇಲಿ ಇರು..ಕತ್ರೀನಬಾಯಿ..ನಮಗಷ್ಟೇ ಸಾಕು” ಎಂದು ಹೇಳುತ್ತಿದ್ದರು.
ಕತ್ರೀನಬಾಯಿ ಹಣ ಮಾಡಬಹುದಿತ್ತು. ಕಳ್ಳ ಬಸಿರನ್ನು ತೆಗೆಸಲೆಂದು ಬಹಳ ಜನ ಅವಳಲ್ಲಿಗೆ ಬರುತ್ತಿದ್ದರು.
“ನಾನು ಇದೊಂದು ಕೆಲಸ ಮಾಡಲ್ಲ..ಇದು ಧರ್ಮ ದ್ರೋಹ…ದೇವರ ಸೃಷ್ಟಿನ ಹೊಸಕಿ ಹಾಕಿ ನಾನು ದೇವದ್ರೋಹಿ ಆಗಲಾರೆ..” ಎಂದು ಹೇಳುತ್ತಿದ್ದಳು.
ಹೆರಿಗೆ ಮಾಡಿಸಲೆಂದು ಹೋದ ಈಕೆಗೆ ದೊರಕುತ್ತಿದ್ದ ಪ್ರತಿಫ಼ಲ ಒಂದು ಸೀರೆ. ಒಂದು ಮೊರದ ತುಂಬ ಅಕ್ಕಿ, ಎಲೆ, ಅಡಿಕೆ, ಕೆಲ ರೂಪಾಯಿಗಳು ಇಷ್ಟರಿಂದಲೇ ಬದುಕಿದ್ದಳು ಕತ್ರೀನ.
ಇಳಿ ವಯಸ್ಸಿನಲ್ಲಿ ಕೈಯಲ್ಲಿ ಜಪಸರ ಹಿಡಿದು ಮಣಿ ಎಣಿಸುತ್ತ ಕೂತಿರುತ್ತಿದ್ದಳು. ಸಿಮೋನನ ಮನೆಯಿಂದ ಕೈತಾನ ಬಾಲ್ತಿದಾರನ ಮನೆಯಿಂದ ಕೈತಾನ ಬಾಲ್ತಿದಾರನ ಮನೆಯಿಂದ ಅವಳಿಗಾಗಿ ಊಟ ಮತ್ತೊಂದು ಹೋಗುತ್ತಿತ್ತು.
“ಬೇಡ ಕಣೆ ಅಪ್ಪಿ…ನಾಲಿಗೆಗೆ ರುಚಿಯಿಲ್ಲ” ಎಂದು ಹೇಳುತ್ತಿದ್ದಳು.
ಒಂದು ತುತ್ತು ಉಂಡು ಉಳಿದುದನ್ನು ಮನೆ ಬಾಗಿಲಿಗೆ ಬರುವ ಕೊರಗರ ಮಕ್ಕಳಿಗೆ ಇಕ್ಕುತ್ತಿದ್ದಳು.
ಈ ಕತ್ರೀನ ಕೈಯಲ್ಲಿ ಜಪಸರ ಹಿಡಿದೇ ಕೊನೆಯ ಉಸಿರು ಎಳೆದಳು. ರಾತ್ರಿಗೆ ಅವಳಿಗೆ ಊಟ ಕೊಡಲೆಂದು ಹೋಗಿದ್ದ ಸಿಮೋನನ ಹೆಂಡತಿ ಅಪ್ಪಿಬಾಯಿ-
“..ದೇವಾ..” (ದೇವರೇ) ಎಂದು ಕೂಗಿ ಓಡಿ ಬಂದಳು.
ಹೆಂಗಸರು ಹೋಗಿ ಸ್ನಾನ ಮಾಡಿಸಿ, ಬಿಳಿ ಸೀರೆ ಉಡಿಸಿ, ಶವವನ್ನು ತಂದು ಮನೆಯ ಹೊರಗೆ ಮಲಗಿಸಿದರು. ಸುತಾರಿ ಮರದ ಶವ ಪೆಟ್ಟಿಗೆ ಸಿದ್ಧಪಡಿಸಿದ. ಜನ, ಹೂವು, ಮೇಣದ ಬತ್ತಿಯನ್ನು ಹಿಡಿದು ಅವಳ ಮನೆಗೆ ಧಾವಿಸಿದರು. ಹಿಂದುಗಳು, ಮುಸ್ಲೀಮರು ದಂಡಿಯಾಗಿ ಬಂದರು. ಆದರೆ ಪಾದರಿ ಸಿಕ್ವೇರಾ ಕತ್ರೀನಬಾಯಿಯ ಶವ ಸಂಸಾರಕ್ಕೆ ಸಿಗಲಿಲ್ಲ.
ಬೆಳಿಗ್ಗೆ ಊರಲ್ಲಿದ್ದ ಅವರು-
“ನಾನು ಹತ್ತು ಗಂಟೆಗೆ ಹೊರಗೆ ಹೋಗಬೇಕು. ಅಷ್ಟರಲ್ಲಿ ಎಲ್ಲ ಮುಗಿಸಿ” ಎಂದರು.
ಕತ್ರೀನಳ ತಾಯಿಯ ಕಡೆಯ ಸಂಬಂಧಿಗಳು ಹೊನ್ನಾವರದಿಂದ ಬರಬೇಕಿತ್ತು. ಸಿಮೋನ-
“…ಅವರು ಬರಲಿ ಪದ್ರಾಬಾ..ಹನ್ನೆರಡು ಗಂಟೆವರೆಗೆ ನೀವು ಇರಿ..” ಎಂದು ಕೇಳಿಕೊಂಡ.
“ಇಲ್ಲ..ಇಲ್ಲ..ಎಲ್ಲ ನೀವೇ ಮಾಡಿ ಮುಗಿಸಿ” ಎಂದು ಸಿಕ್ವೇರಾ ಕಾರನ್ನು ಏರಿದರು.
ಹನ್ನೆರಡು ಗಂಟೆಗೆ ಕತ್ರೀನಳ ಸಂಬಂಧಿಕರು ಬಂದರು. ಶವಯಾತ್ರೆಗೆ ಸಾಕಷ್ಟು ಜನ ಸೇರಿದ್ದರು. ಶವವನ್ನು ಇಗರ್ಜಿಗೆ ಕೊಂಡೊಯ್ದು ಅಲ್ಲಿ ಒಂದು ತೇರ್ಸ ಮಾಡಲಾಯಿತು. ನಂತರ ಮಿರೋಣ, ಡಯಾಸ, ಗುರ್ಕಾರರ ನೇತೃತ್ವದಲ್ಲಿ ಶವ ಸಂಸ್ಕಾರ ಆಯಿತು.
“ಛೇ! ಎಂತಹ ಸಾವು ಬಂತು ನೋಡಿ. ಒಂದು ಪೂಜೆ ಸಿಗಲಿಲ್ಲ. ಪಾದರಿಗಳ ಆಶೀರ್ವಾದ ಸಿಗಲಿಲ್ಲ ಎಂದು ಜನ ಪೇಚಾಡಿಕೊಂಡರು.
ಪಾದರಿ ಸಿಕ್ವೇರಾ ಅಷ್ಟು ಅವಸರ ಮಾಡಿಕೊಂಡು ಹೋದದ್ದು ಎಲ್ಲಿಗೆ ಎಂಬುದು ಅನಂತರ ಸಿಮೋನನಿಗೆ ತಿಳಿದುಬಂದಿತು. ಮೈಸೂರಿನಿಂದ ಬಂದ ನಾಲ್ವರು ಹೆಂಗಸರನ್ನು ಕಾರಿನಲ್ಲಿ ಕೂಡಿಸಿಕೊಂಡು ಅವರಿಗೆ ಜಲಪಾತ ತೋರಿಸಲು ಪಾದರಿ ಸಿಕ್ವೇರಾ ಕರೆದುಕೊಂಡು ಹೋಗಿದ್ದರು.
ಸಿಮೋನ ಅಂತರಂಗದಲ್ಲಿಯೇ ಕೊರಗಿದ.
“ಏನು ಪದ್ರಾಬಾ..ನೀವು ಹೀಗೆ ಮಾಡುವುದಾ?” ಎಂದು ನೇರವಾಗಿ ಪಾದರಿ ಸಿಕ್ವೇರಾ ಅವರಿಗೆ ಕೇಳಿ ಬಿಡಬೇಕು ಅಂದುಕೊಂಡ. ಏನೋ ಅಳುಕು, ಅಂಜಿಕೆ ಅಡ್ಡ ಬಂದಿತು. ಪಾದರಿ ಹೀಗೆ ಮಾಡಬಾರದಿತ್ತು ಎಂದು ಮನಸ್ಸಿನಲ್ಲಿಯೇ ಮಿಡುಕಾಡಿದ.

-೧೦-
ಸಾಂತಾಮೋರಿ ಈಗ ಪೂರ್ಣ ದೈವಭಕ್ತೆ. ದೊಡ್ಡ ಮನೆಯಲ್ಲಿ ಅವಳೊಬ್ಬಳೆ. ಆಗಾಗ್ಗೆ ಮೊಮ್ಮಕ್ಕಳು ’ಅಜ್ಜಿ ಅಜ್ಜಿ’ ಎಂದು ಬಂದು ಹೋಗುವುದನ್ನು ಬಿಟ್ಟರೆ, ಕೇರಿಯ ಜನ ಮಾತನಾಡಿಸುವುದನ್ನು ಬಿಟ್ಟರೆ ಅವಳಿಗೆ ಬೇರೆ ಕೆಲಸವಿಲ್ಲ. ಇಳಿ ವಯಸ್ಸಿನಲ್ಲಿ ಗಂಡು ಮಕ್ಕಳು ದೂರವಾದರೆಂದು ಸಂಕಟಪಡುತ್ತಾಳೆ. ಆಗಾಗೆ ನಾತೇಲಳ ನೆನಪಾಗುತ್ತದೆ. ಅವಳು ಅಲ್ಲಿದ್ದಾಳೆ ಇಲ್ಲಿದ್ದಾಳೆ ಎಂಬ ಗಾಳಿ ಮಾತುಗಳು ಕೇಳಿ ಬರುತ್ತವೆಯಾದರೂ ನಾತೇಲ ಈವರೆಗೆ ತನ್ನನ್ನು ಸಂಪರ್ಕಿಸಿಲ್ಲ. ಅವಳಿಂದ ತನಗಾದ ಅವಮಾನದಿಂದಾಗಿ ಸಾಂತಾಮೊರಿ ಮಗಳನ್ನು ಮರೆಯುವ ಯತ್ನ ಕೂಡ ಮಾಡಿದ್ದಾಳೆ.
ಬೆಳಿಗ್ಗೆ ಎದ್ದ ತಕ್ಷಣ ಪ್ರಾಥಃಕಾಲದ ಪ್ರಾರ್ಥನೆ ಮುಗಿಸಿ ಇಗರ್ಜಿಗೆ ಹೋಗಿ ಪೂಜೆ ಆಲಿಸಿ ಬರುವುದು, ಮಧ್ಯಾಹ್ನ ರಾತ್ರಿಯ ಪ್ರಾರ್ಥನೆ, ಊಟಕ್ಕೆ ಕುಳಿತಾಗ, ಮಲಗುವ ಮುನ್ನ ಎದ್ದ ತಕ್ಷಣ ದೇವರ ಸ್ಮರಣೆ, ಕುತ್ತಿಗೆಯಲ್ಲಿರುವ ಜಪಸರ ಆಗಾಗ್ಗೆ ಕೈಗೂ ಬರುತ್ತದೆ. ಮಣಿಗಳನ್ನು ಎಣಿಸುತ್ತ ಅವಳು ಜಪ ಸರ ಪ್ರಾರ್ಥನೆಯನ್ನು ಮಾಡುತ್ತಾಳೆ. ಆದರೆ ಅವಳದೊಂದು ಕೊರಗೆಂದರೆ ಸುತಾರಿ ಇನಾಸನ ಮನೆ ಮುಂದಿನ ಶಿಲುಬೆ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಅವಳು ಹೋಗುವಂತಿಲ್ಲ. ಅವಳು ಮಾತ್ರವಲ್ಲ ಕೇರಿಯ ಯಾರೂ ಈಗ ಅಲ್ಲಿಗೆ ಹೋಗುವುದಿಲ್ಲ.
ಶಿಲುಬೆ ಸುಣ್ಣ ಬಣ್ಣ ಕಾಣದೆ ನಿಂತಿದೆ. ವೇದಿಕೆಯ ಮೇಲಿನಗಾರೆ, ಸುಣ್ಣ ಹಪ್ಪಳದಂತೆ ಎದ್ದು ಬಿದ್ದು ಹೋಗಿದೆ. ಕಜ್ಜಿ ಹತ್ತಿದ ಹಾಗೆ ಬತ್ತಿ ಹಚ್ಚದೆ ತಿಂಗಳುಗಳಾಗಿವೆ. ಶಿಲುಬೆಗೆ ಹೂವಿನ ಅಲಂಕಾರವಿಲ್ಲ.
ಇನಾಸನ ಮನೆ ರೈಮಂಡ ಹಾಗು ಪಾಸ್ಕು ನಡುವೆ ಹಂಚಿ ಹೋದ ನಂತರ ಈ ಶಿಲುಬೆ ಯಾರಿಗೆ ಸೇರಿದ್ದು ಎಂಬ ಪ್ರಶ್ನೆ ಬಂದಿತು. ಕೆಲದಿನ ಇನಾಸನ ಹೆಂಡತಿ ಅಲ್ಲಿದ್ದಳು. ಬಾಯಿ ಇಲ್ಲದ ಅವಳು ಎರಡು ದಿನ ಹಿರಿಯ ಮಗನ ಮನೆ ಎರಡು ದಿನ ಕಿರಿಯ ಮಗನ ಮನೆ ಎರಡು ದಿನ ಎಂದು ಉಳಿದಳು. ಅದು ಏಕೋ ಅವಳಿಗೆ ಹಿಂಸೆ ಎನಿಸಿತು. ತನ್ನ ಬೇಕು ಬೇಡಗಳನ್ನು ಪೂರೈಸುತ್ತ ಅಕ್ಕರೆಯಿಂದ ನೋಡಿಕೊಳ್ಳುವ ಗಂಡ ಇರಲಿಲ್ಲ. ಮನೆ ಮಕ್ಕಳ ಪಾಲಾಗಿತ್ತು. ಒಂದು ಹೊತ್ತಿನ ಊಟಕ್ಕಾಗಿ ಒಂದು ಲೋಟ ಕಾಫ಼ಿಗಾಗಿ ಸೊಸೆಯಂದಿರ ಮರ್ಜಿಕಾಯುವ ಪರಿಸ್ಥಿತಿ ಬಂದಿತ್ತು. ಇದನ್ನು ಬಹಳ ದಿನ ಸಹಿಸಲಾಗದೆ‌ಅವಳು ತನ್ನ ತೌರಿನತ್ತ ನೋಡತೊಡಗಿದಳು. ಮೂಡ್ಕಣಿಯಲ್ಲಿ ಅವಳ ಅಣ್ಣನ ಮನೆಯಿತ್ತು. ಇಬ್ಬರು ಹೆಣ್ಣು ಮಕ್ಕಳನ್ನು ಇವಳು ಅಲ್ಲಿಗೆ ಹತ್ತಿರದ ಮಲ್ಕೊಡು=”ಹಡಿನಬಾಳಗಳಿಗೆ” ಕೊಟ್ಟಿದ್ದಳು. ಹೆಣ್ಣು ಮಕ್ಕಳಾದರು ಹತ್ತಿರವಿರುತ್ತಾರೆ ಎಂದೆನಿಸಿ ಮೊನ್ನೆ ಒಂದು ದಿನ ರೈಮಂಡ ಬಸ್ತುವಿಗೆ ಸನ್ನೆಯಲ್ಲಿಯೇ ತಾನು ಘಟ್ಟ ಇಳಿಯುವುದಾಗಿ ಹೇಳಿದಳು.
“ಬೇಡ ನಮ್ಮ ಜತೆ ಇರು” ಎಂದು ಇಬ್ಬರೂ ಬೇಡಿಕೊಂಡರು. ತಾಯಿಯ ಮೈ ಮೇಲಿನ ಆಭರಣ ಇಬ್ಬರ ಕಣ್ಣನ್ನೂ ಕುಕ್ಕಿತು.
“ನಿನಗೇನೂ ಕಡಿಮೆ ಮಾಡಲ್ಲ ನಾವು..ನೀನು ಬೇಕಾದರೆ ಆ ಮನೆಯಲ್ಲಿರು ಈ ಮನೆಯಲ್ಲಿರು. ಬೇಡ ಒಂದು ವಾರ ಅಲ್ಲಿ ಒಂದು ವಾರ ಇಲ್ಲಿ ಇರು..” ಎಂದು ಸನ್ನೆ ಮಾಡಿ ತಿಳಿಸಿದಳು.
ಮೊನ್ನೆ ಒಪ್ಪಲಿಲ್ಲ. ಗಂಟು ಕಟ್ಟಿಕೊಂಡು ಹೊರಡುತ್ತೇನೆಂದು ಹಠ ಮಾಡಿದಳು. ರೈಮಂಡ ಅವಳನ್ನು ಊರಿಗೆ ಕರೆದೊಯ್ದು ಬಿಟ್ಟು ಬಂದ.
ಹೋಗುವಾಗ ಅವಳು-
ಶಿಲುಬೆ ದೇವರಿಗೆ ಮೇಣದಬತ್ತಿ ಹಚ್ಚಿ, ಅದರ ಮುಂದೆ ಪ್ರಾರ್ಥನೆ ಮಾಡಿ ಎಂದು ಹೇಳಿದಳು.
“ಆಯ್ತು..ಆಯ್ತು ನಾವು ಮಾಡತೇವೆ” ಎಂದು ಈರ್ವರೂ ತಲೆ ತೂಗಿದರು.
ಮೊನ್ನೆ ಊರು ಸೇರಿದ ಮೇಲೆ ಇಲ್ಲಿ ದೇವರು ಅನಾಥನಾದ. ರೈಮಂಡ ಮನೆಗೆ ಬಂದು ಕುಡಿಯುತ್ತಿದ್ದ. ಬಸ್ತು ಬರುವಾಗಲೇ ಕುಡಿದು ಬರುತ್ತಿದ್ದ. ಅಂಗಳದಲ್ಲಿ ಚಾಪೆ ಹಾಸುವ ಪದ್ಧತಿ ನಿಂತು ಹೋಯಿತು. ಶಿಲುಬೆಗೆ ಹೂವಿನ ಅಲಂಕಾರ ಮಾಡುವವರು ಇಲ್ಲವಾದರೂ, ರೈಮಂಡ, ಬಸ್ತುವಿನ ಹೆಂಡತಿಯರು ಈ ಬಗ್ಗೆ ಆಸಕ್ತಿ ತೋರಲಿಲ್ಲ. ಒಂದು ದಿನ ಶಿಲುಬೆ ದೇವರ ಪದತಲದಲ್ಲಿಯ ಕಾಣಿಕೆ ಡಬ್ಬಿ ಕಾಣೆಯಾಯಿತು. ಈ ಕಾರಣಕ್ಕಾಗಿ ಬಸ್ತು ರೈಮಂಡರ ನಡುವೆ ಜಗಳವಾಯಿತು.
ತೇರ್ಸ ಮಾಡಲು ಅಂಗಳಕ್ಕೆ ಬಂದವರನ್ನು ಬಸ್ತು ಕುಡಿದು ಬಂದವನು-
“ಹೋಗಿ ಹೋಗಿ..ಇಗರ್ಜಿಗೆ ಹೋಗಿ” ಎಂದು ಕೂಗಾಡಿ ಅಟ್ಟಿದ.
ನಿತ್ಯದ ಜಪ ನಿಂತು ಹೋಯಿತು. ಶುಕ್ರವಾರದ ಪ್ರಾರ್ಥನೆ ಇಲ್ಲವಾಯಿತು. ಕೇರಿಯ ಜನ ತಿಂಗಳಿಗೊಂದು ಮನೆಯವರ ಹಾಗೆ ಇಲ್ಲಿ ಬಂದು ನಡೆಸುತ್ತಿದ್ದ ವಿಶೇಷ ತೇರ್ಸ ಕೂಡ ಕ್ರಮೇಣ ಯಾರಿಗೂ ಬೇಡವಾಯಿತು. ಯಾರದ್ದೋ ಮನೆ ಬಾಗಿಲಿಗೆ ಹೋಗಿ ಛಿ! ಥು! ಅನಿಸಿಕೊಳ್ಳುವುದೇಕೆಂದು ಜನ ಇತ್ತ ಬರುವುದನ್ನು ನಿಲ್ಲಿಸಿದರು. ಹೇಗೊ ಇಗರ್ಜಿ ಬಾಗಿಲಲ್ಲಿ ಸಂತನಿದ್ದ. ಇಗರ್ಜಿಯಲ್ಲಿ ಏಸು ಪ್ರಭುವಿದ್ದ. ಮನೆ ಮನೆಯಲ್ಲಿ ಕುಲ ದೇವರ ಪ್ರತಿಮೆ ಇತ್ತು. ಜನ ಸುತಾರಿ ಇನಾಸನ ಮನೆಯ ಶಿಲುಬೆ ದೇವರನ್ನು ಮರೆತರು. ಪಾದರಿ ಸಿಕ್ವೇರಾ ಕೂಡ ಈ ಬಗ್ಗೆ ಆಸಕ್ತಿ ತೋರಲಿಲ್ಲ.
“..ಹೀಗೆ ಆಗಬಾರದಿತ್ತು..” ಎಂದು ಮರುಗಿದಳು ಸಾಂತಾಮೊರಿ.
ಅಲ್ಲಿ ದೀಪದ ಬೆಳಕಿಲ್ಲದೆ, ಪ್ರಾರ್ಥನೆ ಕೀರ್ತನೆಗಳ ದನಿ ಇಲ್ಲದೆ ಆ ರಸ್ತೆಯೇ ಬಣಗುಡುತ್ತಿರುವಂತೆ ಅವಳಿಗೆ ಅನಿಸಿತು.
“..ಅಯ್ಯೋ ಇನ್ನೂ ಏನೇನು ಆಗಬೇಕಾಗಿದೆಯೊ” ಎಂದವಳು ನಿಟ್ಟುಸಿರು ಬಿಟ್ಟಳು.
“ಜೇಸು ಮರಿ ಜೋಸೆಫ಼ರೇ ನನ್ನನ್ನು ಕಾಪಾಡಿ” ಎಂದು ಹೇಳಿ ಕುತ್ತಿಗೆಯಲ್ಲಿಯ ಜಪಸರದ ತುದಿಯ ಪದಕಕ್ಕೆ ಮುತ್ತಿಟ್ಟಳು.
*
*
*
“ಢಣ್..ಢಣ್..ಢಣ್..”
ಮಧ್ಯಾಹ್ನ ೧೨ ಗಂಟೆ. ಇಗರ್ಜಿಯ ಗಂಟೆ ಗೋಪುರದಿಂದ ಮಧ್ಯಾಹ್ನದ ಪ್ರಾರ್ಥನೆಯ ಗಂಟೆ ಕೇಳಿಸತೊಡಗಿತು. ಮೊದಲು ಮೂರು ಬಾರಿ ಢಣ್ ಢಣ್ ಢಣ್ ನಂತರ ನಿಲ್ಲದೆ ಗಂಟೆ ಸದ್ದು ಕೇಳಿಸಿತು. ಸಾಂತಾಮೋರಿ ಕತ್ತಲೆ ಕೋಣೆಗೆ ಬೀಗ ಹಾಕಿ ದೇವರ ಪೀಠಕ್ಕೆ ಬಂದಳು. ಮೇಣದ ಬತ್ತಿ ಹಚ್ಚಿ ಶಿಲುಬೆಯ ಗುರುತು ಮಾಡಿ ಚಾಪೆಯ ಮೇಲೆ ಕುಳಿತು ಪ್ರಾರ್ಥನೆಗೆ ತೊಡಗಿದಳು.
ಹಿಂದೆ ಮಧ್ಯಾಹ್ನದ ಪ್ರಾರ್ಥನಾ ಗಂಟೆಯಾಯೆತೆಂದರೆ ಕ್ರೀಸ್ತುವರ ಮನೆಗಳಲ್ಲಿ ಗಡಿಬಿಡಿ. ದೇವರ ಎದುರು ದೀಪ ಬೆಳಗುವುದು, ಮೊಣಕಾಲೂರುವುದು, ಮಕ್ಕಳನ್ನು ಕರೆಯುವುದು ಪ್ರಾರ್ಥನೆ ಹೇಳಿಕೊಡುವುದು ಮುಗಿದ ನಂತರ ಆಶೀರ್ವಾದ ಕೇಳುವ ಸಂಭ್ರಮ. ಈಗ ಅದೆಲ್ಲ ಕಡಿಮೆ. ಮಕ್ಕಳು ಶಾಲೆಯಲ್ಲಿ, ಗಂಡಸರು ಪೇಟೆ ಕೆಲಸದ ಮೇಲೆ, ಹೆಂಗಸರಿಗೂ ಬಿಡುವಿರುವುದಿಲ್ಲ. ಹನ್ನೆರಡು ಗಂಟೆಯ ಪ್ರಾರ್ಥನಾ ಗಂಟೆ ಕೇಳಿದ ಕೂಡಲೆ ಈಗ ಎಲ್ಲ ಹಣೆ, ಎದೆ, ಭುಜ ಮುಟ್ಟಿಕೊಂಡು ಶಿಲುಬೆಯ ವಂದನೆ ಮಾಡಿ ಮುಗಿಸುತ್ತಾರೆ. ಆದರೆ ಸಾಂತಾಮೊರಿಯಂಥವರು ಮಾತ್ರ ಗಂಟೆ ಸದ್ದು ಕೇಳಿ ಪ್ರಾರ್ಥನೆಗೆ ತೊಡಗಿಕೊಳ್ಳುತ್ತಾರೆ.
ಸಾಂತಾಮೊರಿ ಸಾಕಷ್ಟು ಹೊತ್ತು ಪ್ರಾರ್ಥನೆ ಮಾಡಿದಳು. ಕುಟುಂಬದ ಎಲ್ಲರಿಗೂ ಒಳಿತನ್ನು ಕೋರಿದಳು. ಎಂದೋ ತೀರಿಕೊಂಡ ತನ್ನ ಗಂಡನ ಆತ್ಮಕ್ಕೆ ಸದ್ಗತಿ ನೀಡುವಂತೆ ಬೇಡಿಕೊಂಡಳು. ಸಂಪ್ರದಾಯದಂತೆ ಊರ ಪಾದರಿಗಳಿಗೆ, ಬಿಶಪ್ ಗುರುಗಳಿಗೆ, ರೋಮಿನ ಪೋಪ ಜಗದ್ಗುರುಗಳಿಗೆ ಒಳಿತನ್ನು ಕೇಳಿಕೊಂಡಳು. ಶಿಲುಬೆಯ ಗುರುತಿನೊಂದಿಗೆ ಪ್ರಾರ್ಥನೆ ಮುಗಿಸಿ ಎದ್ದಳು. ಅಲ್ತಾರ ಮೇಲಿನ ಇಮಾಜಿಗೆ ಕೈ ಬೆರಳ ಮೂಲಕ ಮುತ್ತಿಟ್ಟು, ಉಳಿದ ಪೈನಲಗಳಿಗೂ ಮುತ್ತಿಟ್ಟು ಉರಿಯುತ್ತಿದ್ದ ಬತ್ತಿ ಆರಿಸಿ ತಿರುಗಿದಾಗ ಹೊರಗೆ ಆಟೋ ಬಂದು ನಿಂತ ಸದ್ದಾಯಿತು.
“ಇಷ್ಟು ಹೊತ್ತಿಗೆ ಯಾರು ಬಂದರು?” ಎಂದು ಹೊರಗೆ ಬಗ್ಗಿ ನೋಡಿದಳು. ಮತ್ತೂ ಅಚ್ಚರಿ ಎನಿಸಿತು.
ಮೊದಲು ಯುವಕನೋರ್ವ ಇಳಿದ. ನಂತರ ಓರ್ವ ಹೆಂಗಸು. ಅವರ ಸೂಟಕೇಸು, ಬ್ಯಾಗುಗಳು. ಆಟೋ ಹೊರಡುತ್ತಿರಲು ಅವರು ಮನೆಯತ್ತ ತಿರುಗಿದರು.
ಕಣ್ಣು ತುಸು ಮಂದ ಎನಿಸಿತು.
ಎರಡು ಹೆಜ್ಜೆ ಮುಂದಿಟ್ಟು ಜಗಲಿಗೆ ಬಂದವಳು. “ನಾತೇಲ..” ಎಂದು ಚೀರಿದಳು.
ಸಂತೋಷದಿಂದ ಅವಳ ಕಣ್ಣುಗಳು ತುಂಬಿ ಬಂದವು.
*
*
*
ಮಗಳು ತಿರುಗಿ ಬಂದಳೆಂಬ ಸಂತಸದ ಹಿಂದೆಯೇ ಮಗಳು ಈ ವರೆಗೆ ಅನುಭವಿಸಿದ ನೋವು ಕಷ್ಟಗಳ ಅರಿವಾಗಿ ಮನಸ್ಸು ಮುದುಡಿಕೊಂಡಿತು.
ತಾನು ಊರಲ್ಲಿಯೇ ಇದ್ದರೆ ಜಾತಿ ಕಟ್ ಮಾಡುವುದು ಖಚಿತ ಎಂಬುದನ್ನು ತಿಳಿದ ನಾತೇಲ ಊರು ಬಿಟ್ಟಳು. ತನ್ನ ತಾಯಿ ಅಣ್ಣಂದಿರು ಈ ಜಾತಿಕಟ್ ನ ಕಿರುಕುಳಕ್ಕೆ ಒಳಗಾಗುವುದು ಬೇಡ ಎಂದು ಅವಳು ನಿರ್ಧರಿಸಿದಳು. ವಿವಾಹ ಬಾಹಿರವಾದ ಸಂಬಂಧ ಮಾಡಿರುವ ತನಗೆ ಶಿಕ್ಷೆಯಾಗಲಿ, ಆದರೆ ಈ ಶಿಕ್ಷೆಗೆ ತನ್ನ ತಾಯಿ ಅಣ್ಣಂದಿರು ಏಕೆ ಬಲಿಯಾಗಬೇಕು?
ಊರಿಗೆ ಬಂದ ಯಾವುದೋ ಎತ್ತಿನ ಗಾಡಿಯನ್ನೇರಿ ಅವಳು ಶಿರಸಿಗೆ ಬಂದಳು. ಅಲ್ಲಿಂದ ಹುಬ್ಬಳ್ಳಿ. ಅಲ್ಲಿ ಇಲ್ಲಿ ಭಿಕ್ಷೆ ಬೇಡಿ, ಕೈಚಾಚಿ ತುತ್ತು ರೊಟ್ಟಿಗಾಗಿ ಅವರಿವವರನ್ನು ಕಾಡಿ ಅವಳು ಬೆಳಗಾಂವಗೆ ಬಂದು ತಲುಪಿದಳು. ಶಿವಸಾಗರದಿಂದ ಬಹಳ ದೂರ ಹೋಗಬೇಕು ಎಂಬ ಅವಳ ಯತ್ನ ಫ಼ಲಿಸಿತು. ಬೆಳಗಾಂವನ ಟಿಳಕವಾಡದ ಬಂದು ಅಬಲಾಶ್ರಮ ಅವಳಿಗೆ ತಾವು ನೀಡಿತು.. ತನ್ನ ನೋವನ್ನು ಅಲ್ಲಿಯ ರುಕ್ಮಿಣಿ ತಾಯಿಯವರಲ್ಲಿ ಅವಳು ತೋಡಿಕೊಂಡಳು. ಜಾತಿ ಪದ್ಧತಿ ಪರಂಪರೆಯ ಮುಂದೆ ಕೆಲಬಾರಿ ಮಾನವೀಯತೆ ಗೆಲ್ಲುತ್ತದೆ. ಇಲ್ಲಿ ಹಾಗೆಯೇ ಆಯಿತು. ಅಬಲಾಶ್ರಮ ನಡೆಸುತ್ತಿದ್ದ ರುಕ್ಮಿಣಿ ತಾಯಿ ಏನೂ ಕೇಳದೆ ನಾತೇಲಾಗೆ ಆಶ್ರಯ ನೀಡಿದಳು.
ಅವಳ ಹೆರಿಗೆಯೂ ಅಲ್ಲಿಯೇ ಆಯಿತು. ಐದಾರು ತಿಂಗಳ ನಂತರ ಕುರುಡೇಕರ ಎನ್ನುವವರ ಮನೆಯಲ್ಲಿ ಆಕೆಗೆ ಕೆಲಸ ಕೂಡ ಸಿಕ್ಕಿತು.
ಮನೆಯಲ್ಲಿ ಹತ್ತು ಹದಿನೈದು ಜನರ ಊಟ ಉಪಚಾರ ನೋಡಿಕೊಳ್ಳುತ್ತಿದ್ದ ಅವಳಿಗೆ ಕುರುಡೇಕರ ಮನೆಗೆಲಸ ಕಷ್ಟವಾಗಲಿಲ್ಲ. ಮಗನನ್ನು ನೋಡಿಕೊಳ್ಳುವ ಅವನನ್ನು ಬೆಳೆಸಿ ದೊಡ್ಡವನನ್ನಾಗಿ ಮಾಡುವ ಹೊಣೆಗಾರಿಕೆ ಬೇರೆ ಇತ್ತು.
ವಯಸ್ಸಿಗೆ ಸಹಜವಾದ ಬದಲಾವಣೆಗಳಿಗೆ ಅವಳ ಮೈಮನಸ್ಸು ಅರಳುತ್ತಿದ್ದಾಗ ಬೀದಿಗೆ ಬರುತ್ತಿದ್ದ ಓರ್ವ ಕಲಾಯಿಗಾರ ಯುವಕನ ಮೋಹಪಾಶಕ್ಕೆ ಬಿದ್ದಿದ್ದಳು. ಮನೆಯಲ್ಲಿಯ ಪಾತ್ರೆಗಳನ್ನು ಕೊಂಡೊಯ್ದು ಕಲಾಯಿ ಮಾಡಿ ರಿಪೇರಿ ಮಾಡಿ ಹಿಂತಿರುಗಿಸಲು ಆತ ಬರುತ್ತಿದ್ದ. ಊರ ಮಾರಿಗುಂಡಿಯ ಹಿಂಬದಿಯಲ್ಲಿ ಅವನ ಅಂಗಡಿಯಿತ್ತು. ಆಗಾಗ್ಗೆ ಆತ ತನ್ನ ಮನೆಗೂ ಬರುತ್ತಿದ್ದ. ಬೀದಿಗೂ ಬರುತ್ತಿದ್ದ. ಕೊಂಡೊಯ್ಯುವಾಗ ಹಳೆಯದಾಗಿ ಬಣ್ಣ ಕಳೆದುಕೊಂಡಿರುತ್ತಿದ್ದ ಪಾತ್ರೆಗಳನ್ನು ಆತ ತಿರುಗಿ ತಂದಾಗ ಅವು ಲಕಲಕ ಹೊಳೆಯುತ್ತಿದ್ದವು. ಹೊಸದಾಗಿ ಕಂಗೊಳಿಸುತ್ತಿದ್ದವು.
ಹೀಗೆ ಅಂದವಾದ ಪಾತ್ರೆಗಳನ್ನು ತೆಗೆದುಕೊಂಡು ಮನೆಗೆ ಬಂದ ಆ ಯುವಕ ಅಂಗಳದಲ್ಲಿ ನಿಂತು-
“ಬಾಯೀ..” ಎಂದು ಕರೆದ. ಅಂದು ಸಾಂತಾಮೋರಿ ಪಾಪ ನಿವೇದನೆಗೆಂದು ಇಗರ್ಜಿಗೆ ಹೋಗಿದ್ದಳು. ಮನೆಯಲ್ಲಿ ಯಾರೂ ಇರಲಿಲ್ಲ. ನಾತೇಲ ಅದೇ ಸ್ನಾನ ಮುಗಿಸಿ ಉದ್ದ ತಲೆಗೂದಲ ನೀರು ಹೀರಿಕೊಳ್ಳಲೆಂದು ತಲೆಗೊಂದು ಬಟ್ಟೆ ಕಟ್ಟಿಕೊಂಡು ಹೊರಬಂದಾಗ ಆತ ಅಲ್ಲಿ ನಿಂತಿದ್ದ.
“..ಬಾಯಿ..ಪಾತ್ರೆ ತಂದಿದೀನಿ..ಒಳಗೆ ಇಡಲಾ..” ಎಂದು ದೊಡ್ಡ ಪಾತ್ರೆಯಲ್ಲಿರುವ ಸಣ್ಣ ಸಣ್ಣ ಪಾತ್ರೆಗಳನ್ನು ಹೊರಗೆ ತೆಗೆದಿರಿಸಿದ.
“ಒಂದು ದಿನ ಶಗಣೆ ನೀರು ಹಾಕಿ ಇಡು ಬಾಯಿ..ನಾಳೆಯಿಂದ ಬಳಸಬಹುದು” ಎಂದ ಆತ ಒಂದೊಂದೇ ಪಾತ್ರೆ ತಂದು ಒಳಗಿರಿಸಿ. ನಾತೇಲ ಅವನ ಜತೆಗೇನೆ ಒಳಬಂದಳು. ಬಹಳ ದಿನಗಳಿಂದ ಅವರಲ್ಲಿದ್ದ ಸ್ನೇಹ, ಸಲಿಗೆ ಅವರನ್ನು ಮತ್ತೆಲ್ಲಿಗೋ ಕರೆದೊಯ್ದು ಆಗಾಗ್ಗೆ ಆಟವಾಡಿಸುತ್ತಿದ್ದ ಸೈತಾನ ತನ್ನ ಆಟ ತೋರಿಸಿಯೇ ಬಿಟ್ಟ. ಕಲಾಯಿಕಾರನ ಬಲಿಷ್ಠ ತೋಳುಗಳಿಗೆ ತನ್ನನ್ನು ತಾನು ಒಪ್ಪಿಸಿ ಕೊಟ್ಟ ನಾತೇಲ ಮೈ ಹಗುರವಾದಂತಾಗಿ ನರನಾಡಿಗಳಲ್ಲಿ ಸುಖದ ತಂತಿ ಇಂಪಾಗಿ ಮಿಡಿಯಲು ಅಷ್ಟೆ ಭೀತಿಯಿಂದ ಆತಂಕದಿಂದ ಕಳವಳಗೊಂಡಳು.
ಮತ್ತೆ ಮತ್ತೆ ಆ ಯುವಕನ ಸಾಮೀಪ್ಯ ಅವಳಿಗೆ ಬೇಕೆನಿಸಿತು. ಆದರೆ ನಂತರದ ಪರಿಣಾಮ ಬೇರೆಯಾಯಿತು. ಸಂಸಾರಿಗನಾಗಿ ಓರ್ವ ಮಗನ ತಂದೆಯಾಗಿದ್ದ ಆ ಯುವಕನ ಮೇಲೆ ಅತಿಯಾದ ಮಮತೆ ಇರಿಸಿಕೊಂಡ ನಾತೇಲ ತನ್ನ ಶಿಲುಬೆಯನ್ನು ತಾನೇ ಹೋರಲು ನಿರ್ಧರಿಸಿದಳು. ಅಂತೆಯೇ ಅವಳು ಊರುಬಿಟ್ಟಳು.
ಕುರುಡೇಕರ ಮನೆ ಸೇರಿಕೊಂಡ ಅವಳು ಆಗಾಗ್ಗೆ ಹುಬ್ಬಳ್ಳಿ, ಶಿರಸಿಯವರೆಗೂ ಬರುವುದಿತ್ತು. ಕುರುಡೇಕರ ಅವರ ನೆಂಟರು ಅಲ್ಲೆಲ್ಲ ಇದ್ದುದರಿಂದ ಕುರುಡೇಕರ ಕುಟುಂಬದ ಜತೆ ಅವಳು ಇಲ್ಲಿಗೆಲ್ಲ ಬರಬೇಕಾಗುತ್ತಿತ್ತು. ಬಂದಾಗಲೆಲ್ಲ ತನ್ನ ಮನೆಯ ಬಗ್ಗೆ ತಿಳಿದುಕೊಳ್ಳಲು ಅವಳು ಯತ್ನಿಸಿದಳು.
ಕುರುಡೇಕರ ಕುಟುಂಬ ಈಕೆಯನ್ನು ಬಹಳ ವರ್ಷ ಸಲಹೆ ಕಾಪಾಡಿತು. ಅವರ ಬಂಗಲೆ ಹಿಂದಿನ ಮನೆ ತಾಯಿ ಮಗನಿಗೆ ಸಾಕಾಯಿತು. ಮಗ ಓದಿ ಮುಂದೆ ಬಂದ. ಕುರುಡೇಕರ ಮನೆಯಲ್ಲಿ ಕೂಡ ಕೆಲ ಬದಲಾವಣೆಗಳು ಆದವು. ಮನೆಯ ಯಜಮಾನಿಯ ನಂತರ ಸೊಸೆಯಂದಿರು ಅಧಿಕಾರವಹಿಸಿಕೊಂಡರು. ಈ ಹಂತದಲ್ಲಿ ಏಕೋ ನಾತೇಲಾಗೆ ಊರಿನ ನೆನಪಾಯಿತು. ತಾಯಿಯ ಹಂಬಲವಾಯಿತು. ಮಗನಿಗೆ ಊರು ತೋರಿಸಬೇಕು ಎನಿಸಿತು. ಸಾಧ್ಯವಾದರೆ ಅಲ್ಲಿಯೇ ಇರಬೇಕು ಎಂದು ಕೂಡ ಅವಳು ಬಯಸಿದಳು. ಆದರೆ ಜಾತಿಕಟ್ ನ ಹೆದರಿಕೆ ಇನ್ನೂ ಇತ್ತು. ಜನ ತನ್ನನ್ನು ಸ್ವೀಕರಿಸದಿದ್ದರೆ?
ಆದರೂ ಅವಳು ಬಂದಳು.
“ಮಾಯಿ ಇಷ್ಟೆಲ್ಲ ಆಗಿ ಹೋಯಿತು” ಎಂದು ತಾಯಿಯ ಮಡಿಲಲ್ಲಿ ಮುಖವಿರಿಸಿ ಅತ್ತಳು.
“..ಹೋಗಲಿ ಬಿಡು..ಅದೆಲ್ಲ ಆಗಬೇಕಿತ್ತೇನೋ..” ಎಂದಳು ಸಾಂತಾಮೋರಿ ಮಗಳ ಮೈ ಸವರಿ ಅವಳ ಕೆನ್ನೆ ಒರೆಸಿ. ಮೊಮ್ಮಗನನ್ನು ಬಳಿ ಕರೆದು ಅವನನ್ನು ಅಪ್ಪಿಕೊಂಡಳು ಸಾಂತಾಮೊರಿ.
ಸಾಂತಾಮೊರಿ ಮಗಳು ಊರಿಗೆ ತಿರುಗಿ ಬಂದಿದ್ದಾಳೆ ಎಂಬುದು ಕೇರಿಯ ಹಳಬರಿಗೆಲ್ಲ ತಿಳಿಯಿತು. ಇವಳ ಹೆಸರು ಕೇಳದಿದ್ದವರು ಕೂಡ ಕುತೂಹಲಗೊಂಡರು. ಕೆಲವರು ಏನೋ ನೆಪ ಮಾಡಿಕೊಂಡು ಸಾಂತಾಮೊರಿ ಮನೆಗೆ ಬಂದು-
“..ಅರೆ..ಯಾರು? ನಾತೇಲ ಅಲ್ವ? ಎಲ್ಲಿದೀಯ? ಇವನ ಮಗನಾ?” ಎಂದು ವಿಚಾರಿಸಿಕೊಂಡು ಹೋದರು.
ಸಾಂತಾಮೊರಿ ನಿತ್ಯದಂತೆ ಇಗರ್ಜಿಗೆ ಹೋಗುವಾಗಲೂ ಕೆಲವರು.
“ಹೌದೇನೆ, ಸಾಂತಾಮೊರಿ ಮಗಳು ಬಂದಿದಾಳಂತೆ ಹೌದೇನೆ?” ಎಂದು ಕೇಳಿದರು. ಜನ ಈ ಬಗ್ಗೆ ಮತ್ತು ಹೆಚ್ಚಿನ ಆಸಕ್ತಿ ತೋರಲಿಲ್ಲ.
ನಾತೇಲ ಮಗನ ಜತೆ ಹೊರಗೆ ಹೋಗಿ ಬಂದಳು. ಊರು ಬದಲಾಗಿತ್ತು. ದೊಡ್ಡದಾಗಿತ್ತು. ಹೊಸ ಕಟ್ಟಡಗಳು ಎದ್ದು ನಿಂತಿದ್ದವು. ಒಂದು ಪೇಟೆ ಇದ್ದುದು ಈಗ ಊರ ತುಂಬಾ ಪೇಟೆಗಳಾಗಿದ್ದವು. ಮನೆ ಮನೆ ಗೋಡೆಗಳನ್ನು ಒಡೆದು ಅಂಗಡಿಗಳನ್ನಾಗಿ ಮಾಡಲಾಗಿತ್ತು. ಪೇಟೆ ಬೀದಿಯಲ್ಲಿ ಹೋಗುವಾಗ ಬೋನನ ಅಂಗಡಿ ಸಾಲಿನಲ್ಲಿ ಆರನೆ ಅಂಗಡಿ ಗುಡಲಕ್ ಸ್ಟೀಲ್ ವೆಸಲ್ಸ್ ಎಂಬ ಸ್ಟೀಲ್ ಪಾತ್ರೆಗಳೇ ತುಂಬಿರುವ ಅಂಗಡಿಯೊಂದರ ಮುಂದೆ ಬಂದಾಗ ಅವಳ ಕಾಲು ಕಂಪಿಸಿದವು. ಮೈ ಪುಳಕಿತವಾಯಿತು. ಅಂಗಡಿಯೊಳಗಿದ್ದ ಮಾಲಿಕ ಪಾತ್ರೆಗಳ ಮೇಲೆ ಹೆಸರು ಕೆತ್ತುವ ಗಡಿಬಿಡಿಯಲ್ಲಿದ್ದವ ನಾತೇಲಳನ್ನು ನೋಡಲಿಲ್ಲ. ನಾತೇಲ ಕೂಡ ಅತ್ತ ಹೆಚ್ಚು ಗಮನ ಹರಿಸಲಿಲ್ಲ.
ನಾತೇಲ ಊರಿಗೆ ಬಂದ ವಿಷಯ ಅವಳ ಅಣ್ಣಂದಿರಿಗೂ ತಿಳಿಯಿತು.
ಬಸ್ತು ಮನೆಗೆ ಬಂದವನು ಜಗಲಿಯ ಮೇಲೆಯೆ ಕುಳಿತು-
“ಹೋದವಳು ತಿರುಗಿ ಯಾಕೆ ಬಂದೆ..ಮತ್ತೆ ನಮ್ಮ ಮರ್ಯಾದೆ ತೆಗೀಲಿಕ್ಕ?” ಎಂದು ಕೇಳಿದ.
ಜಾನಿ ಕೂಡ ರಸ್ತೆಯ ಮೇಲೆ ನಿಂತು ತಾಯಿಗೆ-
“..ಧಾಜಣರ ಮಾತು ಮೀರಿ ಹೋದವಳಲ್ವ ಅವಳು..ಅವಳನ್ನು ಮನೆಗೆ ಯಾಕೆ ಸೇರಿಸ್ಕೊಂಡಿ..” ಎಂದೆಲ್ಲ ಕೂಗಾಡಿದ.
ನಾತೇಲಳಿಗೂ ಒಂದು ಹಂತದಲ್ಲಿ ತಾನು ಬರಬಾರದಿತ್ತು ಎನಿಸಿತು. ತಾನಲ್ಲಿ ಸುಖವಾಗಿಯೇ ಇದ್ದೇನೆ. ಮತ್ತೆ ಇಲ್ಲಿ ಬಂದು ಏಕೆ ಹಳೆಯ ವೃಣವನ್ನು ಕೆದಕಬೇಕು ಎಂದು ಅವಳು ಯೋಚಿಸಿದಳು. ತಾಯಿಯ ಎದುರು-
“..ಮಾಯಿ..ನನಗೆ ಇಲ್ಲಿ ಇರಲೇ ಬೇಕು ಅಂತಿಲ್ಲ. ಕುರುಡೇಕರ ಮನೆ ನನಗೆ ಇದೆ..ನಾನು ನಾಳೆ ಹೋಗತೀನಿ”.
ಅಂದಾಗ ಸಾಂತಾಮೋರಿ ಅವಳ ಕೈ ಹಿಡಿದುಕೊಂಡಳು.
“..ನೀನು ಬರದೆ ಇದ್ದಿದ್ರೆ..ನಿಶ್ಚಿಂತೆಯಿಂದ ನಾನು ಇರತಿದ್ದೆ..ನೀನು ಬಂದಿದೀಯ..ಮತ್ತೆ ಹೋಗುವ ಮಾತಾಡಬೇಡ..ಜಾಂತು ಜಾತಿಕಟ್ಟು ಎಲ್ಲ ಆ ಕಾಲಕ್ಕೇನೆ ಮುಗಿದು ಹೋಗಿದೆ..ಈವತ್ತು ನೀನು ಮಾಡಿದ ತಪ್ಪನ್ನು ಮಾಡತಿರೋರು ಸುಖವಾಗಿ ಮರ್ಯಾದೆಯಿಂದ ಇದಾರೆ..ಯಾವನಾದರೂ ಒಂದು ವೇಳೆ ಈ ವಿಷಯ ಕೆದಕಲಿಕ್ಕೆ ಬಂದರೆ..ನಾನು ಸುಮ್ನೆ ಇರೋದಿಲ್ಲ..ಇನ್ನು ನೀನು ಹೋಗುವ ಮಾತನ್ನ ಹೇಳಬೇಡ..” ಎಂದಳು.
“ಆಯಿತು” ಎಂದು ನಾತೇಲ ಹೇಳಲಿಲ್ಲ. ಆದರೆ ಮಗನ ಮೂಲಕ ಕುರುಡೇಕರ ಅವರ ಮನೆಗೆ ಬರೆದ ಪತ್ರದಲ್ಲಿ ಹೀಗೊಂದು ಆಶಯವನ್ನು ಅವಳು ಪ್ರಕಟಿಸಿದಳು.
ಸಾಂತಾಮೊರಿ ಕತ್ತಲೆ ಕೋಣೆಯ ಬೀಗದ ಕೈಯನ್ನು ಮಗಳ ಕೈಗೆ ಕೊಟ್ಟಳು. ಮಗಳಿಗೆಂದು ಮಾಡಿಸಿದ ಚಿನ್ನದ ಆಭರಣಗಳನ್ನು ತಂದು ಅವಳ ಮುಂದಿಟ್ಟಳು. ಸಾಂತಾಮೊರಿಗೆ ಈಗ ಮತ್ತೆ ಹುರುಪು ಉತ್ಸಾಹ ಬಂದಿತ್ತು. ಈವರೆಗೆ ತುಸು ಸೊರಗಿದ ಹಾಗೆ ಸೋತ ಹಾಗೆ ಕಾಣುತ್ತಿದ್ದವಳು ಚಿಗುರಿನಿಂತ ಅಂಟವಾಳದ ಮರವಾದಳು. ಹಸಿರು ಎಲೆಗಳು ಚಿಗುರಿ ಎಳೆಗಾಳಿಗೆ ಮಿಂಚಿದವು. ಮೊಮ್ಮಗನಿಗೆ ಊರಿನಲ್ಲಿ ಒಂದು ಕೆಲಸವನ್ನು ಇಲ್ಲ ಒಂದು ಉದ್ಯಮವನ್ನೋ ಮಾಡಿಕೊಡಬೇಕೆಂಬ ವಿಚಾರವೂ ಅವಳ ಮನಸ್ಸಿಗೆ ಬಂದಿತು. ಈ ಬಗ್ಗೆ ಅವಳು ಸಿಮೋನ ಬೋನರನ್ನು ಕಂಡಳು.
ಬೋನನನ್ನು ಕಂಡು ಬಂದಾಗ ಆತ-
ನೋಡಾಣ ಅವನು ಕೆಲಸಕ್ಕೆ ಸೇರುವುದಾದರೆ ನಾನು ಅವನಿಗೆ ಸಹಾಯ ಮಾಡತೇನೆ..” ಎಂದಿದ್ದ. ಸಿಮೋನ ಮೊಮ್ಮಗನ ಮುಖ ನೋಡಿ ನಕ್ಕಿದ್ದ.
ಮೊಮ್ಮಗನನ್ನು ಎದುರು ಕೂರಿಸಿಕೊಂಡು ಇದೆ ವಿಷಯವನ್ನು ಹೇಳುತ್ತಿದ್ದ ಸಾಂತಾಮೊರಿ ಯಾರೋ ಅಂಗಳಕ್ಕೆ ಬಂದರೆಂದು ತಲೆ ಎತ್ತಿ ನೋಡಿದಳು. ಕಣ್ಣು ನದರು ಕಡಿಮೆಯಾದರೂ ಒಳ ಬಂದವರನ್ನು ಗುರುತಿಸುವುದು ಕಷ್ಟವಾಗಲಿಲ್ಲ.
“..ಯಾರು ? ಕೈತಾನ ? ಓ ಕಾಸಿಲ್ಡ ನೀನೂ ಬಂದಿದೀಯ? ಬನ್ನಿ ಬನ್ನಿ..”
ಗಡಿಬಿಡಿಸಿದಳು ಸಾಂತಾಮೊರಿ. ಒಳ ಹೋಗಿ ಈಚಲ ಚಾಪೆ ತಂದು ಜಗಲಿಯ ಮೇಲೆ ಮಡಿಕೆ ಬಿಚ್ಚಿದಳು.
“ಕುತ್ಕೊಳ್ಳಿ..ಕುತ್ಕೊಳ್ಳಿ” ಎಂದಳು.
“ಯಾರು? ಮೊಮ್ಮಗನ?” ಎಂದು ಕೇಳಿದ ಕೈತಾನ.
ಕಾಸಿಲ್ಡ ಬಂದು ಸಾಂತಾಮೊರಿ ಪಕ್ಕದಲ್ಲಿ ಕುಳಿತಳು.
“ಅಲ್ಲಿ ಕುತ್ಕೊ” ಎಂದು ಚಾಪೆ ತೋರಿಸಿದರೂ ಕಾಸಿಲ್ಡ ಅಲ್ಲಿ ಕುಳಿತುಕೊಳ್ಳಲಿಲ್ಲ. ಅವರು ಬಂದುದೇಕೆ ಎಂಬುದು ತಿಳಿದು ಸಾಂತಾಮೊರಿಗೆ ಕರುಳು ಚುರುಗುಟ್ಟಿತು.
ಕೆಲ ದಿನಗಳ ಹಿಂದೆ ಸುತಾರಿ ಇನಾಸನ ಹೆಂಡತಿ ಮೊನ್ನೆ ಹೀಗೆಯೇ ಬಂದಿದ್ದಳು. ಎಳೆ ಹುಡುಗಿಯಾಗಿ ಮುಡಿ ತುಂಬಾ ಮಲ್ಲಿಗೆ ಮುಡಿದು, ಕಿವಿಗೆ ಮೂರು ನಾಲ್ಕು ತೂತ ಮಾಡಿಕೊಂಡು ಆಭರಣ ಧರಿಸಿ ಬಂದಿದ್ದಳು. ಮೊನ್ನೆ ಇನಾಸನ ಹೆಂಡತಿಯಾಗಿ. ಅವಳ ನಿಜವಾದ ಹೆಸರು ಊರಿನಲ್ಲಿ ಯಾರಿಗೂ ಗೊತ್ತಾಗಲಿಲ್ಲ. ಕೊನೆಯವರೆಗೂ ಮೊನ್ನೆ ಮೊನ್ನೆ ಎಂದೇ ಕರೆಸಿಕೊಂಡಳು. ಯಾರೊಡನೆಯೂ ಅವಳು ಬಾಯಿ ಬಿಟ್ಟು ಮಾತನಾಡಿದ್ದಿಲ್ಲ. ಮಾತನಾಡಲು ಬಂದರಲ್ಲವೆ? ಆದರೆ ಕೈ ಸನ್ನೆಯಿಂದ, ವಿಚಿತ್ರ ಧ್ವನಿಯಲ್ಲಿ ಎಲ್ಲವನ್ನು ಹೇಳುತ್ತಿದ್ದಳು.
ಮಕ್ಕಳಿಬ್ಬರೂ ಬೇರೆಯಾಗಿ ಇವಳು ಎಲ್ಲಿ ರಸ್ತೆ ಪಾಲಾಗುತ್ತಾಳೋ ಎಂದು ಹೆದರಿಕೊಂಡಾಗ ತನ್ನ ತೌರಿಗೆ ಹಿಂತಿರುಗುವ ಮನಸ್ಸು ಮಾಡಿದ್ದಳು. ಯಾವ ಹೆಂಗಸು ಇಳಿವಯಸ್ಸಿನಲ್ಲಿ ತೌರು ಮನೆಗೆ ಹೋಗುತ್ತಾಳೆ? ಆದರೂ ಇವಳು ಹೋದಳು. ಹೋಗುವ ಮುನ್ನ ಕೇರಿಯ ಎಲ್ಲ ಮನೆಗಳಿಗೂ ಬಂದಳು.
“ಹಾಂ ಹಾಂ” ಎಂದು ತನ್ನನ್ನು ತಾನು ಮುಟ್ಟಿಕೊಂಡು ದೂರ ದೂರ ಎಂದು ಕೈ ಸನ್ನೆ ಮಾಡಿ ಕಣ್ಣಲ್ಲಿ ನೀರು ತಂದುಕೊಂಡಳು.
“ನನ್ನ ಮರೀಬೇಡಿ” ಎಂಬಂತೆ ಎದುರು ಕುಳಿತವರ ಗದ್ದ ಹಿಡಿದೆತ್ತಿ ಕಣ್ಣಲ್ಲಿ ಇಣುಕಿದಳು.
“ಇಗರ್ಜಿ ಹಬ್ಬಕ್ಕೆ ಬಾ..” ಎಂದಾಗ –
“ಬರತೇನೆ ಬರತೇನೆ..” ಎಂಬಂತೆ ತಲೆದೂಗಿದಳು.
ಅವಳು ಅಂಗಳ ದಾಟುವಾಗ ತನಗೂ ಅಳು ಬಂದಿತ್ತು. ಮೊನ್ನೆ ಕೇರಿಯಲ್ಲಿ ಎಲ್ಲರ ಜತೆ ಒಂದಾಗಿದ್ದಳು. ಅವಳ ನಗು, ಕೇಕೆ, ಮಾತಿನ ರೀತಿ ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ. ಆದರೆ ಅವಳಿಲ್ಲ, ಈಗ ಕೈತಾನ ಕಾಸಿಲ್ಡ ಬಂದಿದ್ದಾರೆ.
ಮಗಳು ಪ್ರೆಸಿಲ್ಲಾಗೆ ಕೆಲಸ ಸಿಕ್ಕಿದೆ. ಕೆಲಸ ಖಾಯಂ ಕೂಡ ಆಗಿದೆ. ಅವಳು ಬೇರೊಂದು ಮನೆ ಮಾಡಿದ್ದಾಳೆ.
“ನೀವು ಇಬ್ಬರೇ ಅಲ್ಲಿ ಯಾಕೆ ಇರಬೇಕು..ಇಲ್ಲಿಗೆ ಬಂದು ಬಿಡಿ..” ಎಂದು ತಂದೆಗೆ ಹೇಳಿದ್ದಾಳೆ.
ಇಲ್ಲಿ ಏಕೆ ಇರಬೇಕು ಎಂದೆನ್ನಿಸಿದೆ ಕೈತಾನನಿಗೆ ಅವನ ಹೆಂಡತಿ ಕಾಸಿಲ್ಡಾಗೆ. ಇಲ್ಲೇನು ಜಮೀನೆ? ತೋಟವೆ? ದುಡಿದು ತಂದು ಹಾಕುವ ಮಗನೇ? ಮೊಮ್ಮಕ್ಕಳೆ? ನಾಲ್ವರು ಹೆಣ್ಣು ಮಕ್ಕಳು ದೂರದೂರವಿದ್ದಾರೆ. ನಾಳೆ ಪ್ರೆಸಿಲ್ಲಾಳ ಮದುವೆ ಮಾಡಬೇಕು ನಿಜ. ಅನಂತರ ಅವಳು ಅವಳ ಗಂಡನ ಜತೆ ಹೋಗುವವಳು. ತಾವು ಗಂಡ ಹೆಂಡತಿ ಇಲ್ಲಿ ಇದ್ದರಾಯಿತು ಎಂಬ ವಿಚಾರ ಬರುತ್ತದೆ. ಹೀಗೆಂದು ಕೈತಾನ ಮಗಳಿಗೆ ಹೇಳುತ್ತಾನೆ.
“ಆ ಕಾಲ ಬಂದಾಗ ನೋಡೋಣ..ಈಗ ನನ್ನ ಜತೆ ಇರಿ..” ಎಂದು ಹೇಳುತ್ತಾಳೆ ಹುಡುಗಿ.
ಎಲ್ಲ ಹುಡುಗಿಯರು ಎಂದು ಸಿಡಿಮಿಡಿಗೊಳ್ಳುತ್ತಿದ್ದೆ ತಾನು ಎಂಬುದು ಅವನಿಗೆ ನೆನಪಾಗುತ್ತದೆ. ಗಂಡಾಗಲಿ ಎಂದು ಹರಕೆ ಹೊತ್ತದ್ದು ಕೊನೆಗೂ ಗಂಡಾಯಿತು, ಆದರೆ ಏನು ಪ್ರಯೋಜನವಾಯಿತು? ತೀರಾ ಮುದ್ದು ಮಾಡಿ ಬೆಳೆಸಿದ ಮಗ ತಮ್ಮನ್ನು ದೂರ ಮಾಡಿದ ಎಂದೂ ತಮ್ಮ ಪ್ರೀತಿ ಕಾಣದ ಪ್ರೆಸಿಲ್ಲಾ ತಮ್ಮನ್ನು ಸಾಕಿ ಸಲಹಳು ಮುಂದಾದಳು.
ಸುತಾರಿ ಇನಾಸನ ಮನೆಯಲ್ಲಿ ಹಾಗಾಯಿತು. ಸಾಂತಾಮೊರಿ ಮನೆಯಲ್ಲಿ ಹೀಗಾಯಿತು. ಸಿಮೋನನ ಮಗ ಮನೆ ಬಿಟ್ಟ. ಆದರೆ ತನ್ನ ಮಗಳು ಪ್ರೆಸಿಲ್ಲಾ..
“ಬಾಬ..ನೀನು ಮಾಯಿ ನನ್ನ ಜತೆ ಬನ್ನಿ..ಇಲ್ಲ ಅಂತ ಹೇಳಬೇಡಿ” ಅನ್ನುತ್ತಾಳೆ.
ಕೊನೆಗೂ ಇರುವ ಮನೆಯನ್ನು ಆನಂದ ಮಾಸ್ತರರು ಎಂದು ಸರಕಾರಿ ಶಾಲೆಯ ಉಪಾಧ್ಯಾಯರೊಬ್ಬರಿಗೆ ಬಾಡಿಗೆಗೆ ಕೊಟ್ಟು ಇವರು ಶಿವಮೊಗ್ಗೆಗೆ ಹೊರಟರು. ಹೋಗುವ ಮುನ್ನ ಎಲ್ಲ ಮನೆಗಳಿಗೂ ಹೋಗಿ ಒಂದು ಮಾತು ಹೇಳೀ ಬರಬೇಕಲ್ಲ.
“ಸಿಮೋನ ಮಾಮ..ನಾವು ಬರತೀವಿ”
“ಬೋನ..ನಾವು ಬರತೀವಿ..”
“ಪೆದ್ರು..ನಾವು ಬರತೀವಿ..” ಈಗ ಸಾಂತಾಮೊರಿ ಮನೆ.
“ನೀವೂ ಹೊರಟ್ರ?” ಎಂದು ಕೇಳುತ್ತಾಳೆ ಸಾಂತಾಮೊರಿ. ಒಂದು ಬಗೆಯ ಸಂಕಟದಿಂದ. ಇಗರ್ಜಿ ಹಿಂಬದಿಯ ಸಾಲಿನಲ್ಲಿ ಆರು ಏಳು ಮನೆಗಳಲ್ಲಿ ಕೈತಾನನದ್ದೂ ಒಂದು. ಇವನ ತಂದೆಗೆ ಅಂಕೋಲದಲ್ಲಿ ದೊಡ್ಡ ತೆಂಗಿನ ತೋಟವಿತ್ತು. ಸುಮಾರು ಐನೂರು ತೆಂಗಿನ ಮರಗಳು. ಅವನದೇ ಆದ ತಪ್ಪಿನಿಂದ ಈ ತೋಟ ಯಾರದೋ ಪಾಲಾಗಿ ಪಾಪ ಕೈತಾನ ಬಾಚಿ ಹಿಡಿದು ಕಲ್ಲು ಕೆತ್ತುವ ಕೆಲಸಕ್ಕೆ ಇಳಿದ. ಇಲ್ಲಿಗೆ ಬಂದ ನಂತರ ಮನೆ ತುಂಬಾ ಹೆಣ್ಣು ಮಕ್ಕಳಾದವು. ಅದೂ ಕೂಡ ಇವನ ಮನಸ್ಸಿಗೆ ಇರುಸು ಮುರುಸು ತಂದಿತು. ಮೊದಲಿನಿಂದ ದೈವ ಭಕ್ತನಾಗಿದ್ದ ಕೈತಾನ ಕೊನೆ ಕೊನೆಗೆ ಶಾಂತಿ ಸಮಾಧಾನದಿಂದ ಇರತೊಡಗಿದ. ಈಗ ಪ್ರೆಸಿಲ್ಲಾ ಶಿವಮೊಗ್ಗದಲ್ಲಿ ಮನೆ ಮಾಡಿದ್ದಾಳೆ. ತಂದೆ ತಾಯಿ ಜತೆ ಅಲ್ಲಿಗೆ ಹೊರಟಿದ್ದಾಳೆ. ಅಂದು ಮೊನ್ನೆ ಇಂದು ಕೈತಾನ, ಕಾಸಿಲ್ಡ.
ಮಗಳು ಕಪ್ಪು ಬಸಿಯಲ್ಲಿ ಟೀ ಮಾಡಿ ತಂದಳು. ಜತೆಗೆ ಕೇಕು, ಹಲ್ವ..
“ಚೆನ್ನಾಗಿದೀಯ ನಾತೇಲ..” ಊರಿಗೆ ಬಂದಾಗಲೇ ಬಂದು ಮಾತನಾಡಿಸಿದ್ದಳು. ಕಾಸಿಲ್ಡ ಅವಳನ್ನು ಈಗ ಮತ್ತೊಮ್ಮೆ.
“ಚೆನ್ನಾಗಿದೀಯಾ ಆಂಟಿ..” ಟೀ ಕೇಕು ಮುಗಿಸಿ ಕೈತಾನ ಎದ್ದ.
“ಬರತೀವಿ ಸಾಂತಾ..ಶಿವಮೊಗ್ಗದ ಹಬ್ಬಕ್ಕೆ ಬನ್ನಿ. ಮನೆ ಬಾರಲೈನ್ ಹತ್ತಿರವಂತೆ..”
ಕಾಸಿಲ್ಡ ಕಣ್ಣೊರೆಸಿಕೊಂಡಳು.
ಸಾಂತಾ ಮೊರಿಗೂ ತಡೆಯಲಾಗಲಿಲ್ಲ.
“ಬರ್ತಾ ಇರಿ..” ಎಂದು ಮತ್ತೆ ಮತ್ತೆ ಹೇಳದೆ ಇರಲು ಅವಳಿಂದ ಆಗಲಿಲ್ಲ.
*
*
*
ಸುತಾರಿ ಇನಾಸನ ಮನೆ ಇದ್ದ ಜಾಗದಲ್ಲಿ ಎರಡು ಮನೆಗಳು ಎದ್ದು ನಿಂತವು. ಈ ಎರಡೂ ಮನೆಗಳು ಅಣ್ಣ ತಮ್ಮಂದಿರಿಗೆ ಸೇರಿದ ಮನೆಗಳು ಅನ್ನುವುದನ್ನು ಬಿಟ್ಟರೆ ಈ ಎರಡೂ ಮನೆಗಳಲ್ಲಿ ಯಾವುದೇ ಹೊಂದಾಣಿಕೆ ಇರಲಿಲ್ಲ. ಆಕಾರದಲ್ಲಿ, ಗಾತ್ರದಲ್ಲಿ ಈ ಎರಡೂ ಮನೆಗಳು ಬೇರೆ ಬೇರೆಯಾಗಿದ್ದವು. ಇನಾಸನ ಎರಡನೆ ಮಗ ಪಾಸ್ಕು ಇದೇ ಕಟ್ಟಡದಲ್ಲಿ ಒಂದು ಮರಗೆಲಸ ಅಂಗಡಿಯನ್ನು ಕೂಡ ತೆರೆದ. ಮೊದಲ ಮಗನಿಗಂತೂ ಅವನ ಪೀತಳಿ ಬ್ಯಾಂಡಿನ ಉದ್ಯಮ ಚೆನ್ನಾಗಿಯೇ ಇತ್ತು.
ಆದರೆ ಇದೇ ಸಮಯದಲ್ಲಿ ಮರಿಯಳ ಹಳೆಯ ಮನೆ ಕಾಣೆಯಾಗಿ ಅಷ್ಟೂ ಜಾಗದಲ್ಲಿ ದೊಡ್ಡದೊಂದು ಟಾರಸಿ ಮನೆಯ ಕೆಲಸ ಆರಂಭವಾಗಿ ಬಿಟ್ಟಿತು. ಜಯಪ್ರಕಾಶ ನಗರದಲ್ಲಿ ಎಮ್ಮೆ ಮರಿಯಳ ಕೊನೆಯ ಈರ್ವರು ಮಕ್ಕಳು ದುಮಿಂಗ, ಬಸ್ತುರ ಮನೆಗಳ ಕೆಲಸ ಮುಗಿದು ಪಾದರಿ ಸಿಕ್ವೇರಾ ಎರಡೂ ಮನೆಗಳನ್ನು ಮಂತ್ರಿಸಿ, ಕೇರಿಯ ಆಪ್ತರಿಗೆ ತಮ್ಮ ತಮ್ಮ ಮಿತ್ರರಿಗೆ ಒಂದು ಊಟ ಹಾಕಿಸುತ್ತಿದ್ದಂತೆಯೇ ಮರಿಯಳ ಹಿರಿಯ ಮಗ ಗುಸ್ತೀನನಿಗೆ ಒಂದು ಮನೆ ಕಟ್ಟುವ ವಿಚಾರಕ್ಕೆ ಕೂಡ ಜೀವ ಬಂದಿತು.
ಎರಡೂ ಮನೆಗಳ ಘರ ಭರೋಣೆ ಮುಗಿದು, ಬಂದ ಜನ ಊಟ ಮಾಡಿ ಹೋದನಂತರ ಮರಿಯ ಎರಡೂ ಮನೆಗಳ ನಡುವಣ ಅಂಗಳದಲ್ಲಿ ಕುಳಿತು ಮೊಮ್ಮಕ್ಕಳ ಜತೆ ಮಾತನಾಡುತ್ತಿದ್ದಳು. ಅವಳಿಗೆ ಸಂತೋಷವಾಗಿತ್ತು. ಮಕ್ಕಳ ಅಭಿವೃದ್ಧಿ ಕಂಡು ಹೃದಯ ತುಂಬಿ ನಿಂತಿತ್ತು. ಈರ್ವರು ಮಕ್ಕಳು ಸ್ವಂತ ಮನೆ ಮಾಡಿಕೊಂಡರು. ಕೊನೆಯ ಮಗಳು ಮನೆಗೆ ಬರುತ್ತಿಲ್ಲ ಎಂಬ ಚಿಂತೆ ಬಿಟ್ಟರೆ ಬೇರೆ ಚಿಂತೆ ಇರಲಿಲ್ಲ. ಆದರೆ ಈರ್ವರು ಮಕ್ಕಳು ಮನೆ ಕಟ್ಟಿದ ಮೇಲೆ ಹಿರಿಯ ಮಗ ಅದೇ ಹಳೆ ಮನೆಯಲ್ಲಿರುವುದು ಏಕೋ ಅವಳಿಗೆ ಕಸಿವಿಸಿಯನ್ನುಂಟು ಮಾಡುತ್ತಲಿತ್ತು.
ಊರಿನ ಖಾಸಗಿ ಬ್ಯಾಂಕ ಒಂದರಲ್ಲಿ ಕೆಲಸ ಮಾಡುತ್ತಿದ್ದ ಗುಸ್ತೀನ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದ. ತಾಯಿ ಹಾಲಿನ ವ್ಯಾಪಾರ ಮಾಡುವಾಗ ಕೂಡ ಈ ಬಗ್ಗೆ ತುಂಬಾ ಶ್ರಮಿಸುತ್ತಿದ್ದವನು ಇವನೇನೆ ಒಮ್ಮೊಮ್ಮೆ ಮನೆಗೆ ಬಾರದ ಎಮ್ಮೆಗಳನ್ನು ಹುಡುಕಿಕೊಂಡು ಆ ಬ್ಯಾಣ ಈ ಬಯಲು ಎಂದು ತಿರುಗಿ ರಾತ್ರಿ ಹತ್ತು ಗಂಟೆಗೆ ಮನೆಗೆ ಬರುವುದಿತ್ತು. ಕೆಲ ಮನೆಗಳಿಗೆ ಇವನೇನೆ, ಹಾಲು ತೆಗೆದುಕೊಂಡು ಹೋಗಿ ಕೊಟ್ಟು ಬರುತ್ತಿದ್ದ. ತಾನು ಒಂದು ಕೆಲಸ ಹುಡುಕಿಕೊಂಡು ತಮ್ಮಂದಿರಿಗೂ ಕೆಲಸ ಕೊಡಿಸಿದ. ಅವರನ್ನು ಹೆದರಿಸಿ ಬೆದರಿಸಿ ಶಾಲೆಗೆ ಕಳುಹಿಸುತ್ತಿದ್ದ.
ಈತ ಈಗ ಇರುವ ಮನೆ ಸಿಮೋನ ಕಟ್ಟಿದ್ದು. ಬಿದಿರ ತಟ್ಟಿಗೆ ಮಣ್ಣು ಮೆತ್ತಿ ಕಟ್ಟಿದ ಗೋಡೆಗಳು. ಕಾಡು ಮರದ ಪಕಾಶಿ, ರೀಪುಗಳು. ಮೊದಲು ಇದ್ದ ಹುಲ್ಲು ತೆಗೆದು ಅನಂತರ ಹೊದಿಸಿದ ಹಂಚುಗಳು. ಮಳೆಗಾಲದಲ್ಲಿ ಉಬ್ಬಿ ಬೇಸಿಗೆಯಲ್ಲಿ ಬೆಂಡು ಬರುವ ಬಾಗಿಲುಗಳು. ಹಾಲು ಮಾರಿ ಈ ಮನೆಯನ್ನು ಪುನರ್ ನಿರ್ಮಿಸಲು ಆಗಲಿಲ್ಲ. ಹಿಂದಿನ ಹಾಗೆಯೇ ಚಕ್ಕಳವೆದ್ದ ಈ ನೆಲ, ಒಳಗೆ ಉಬ್ಬಿಕೊಂಡ ಗೋಡೆಗಳಿಂದ ಮನೆ ಅಸಹ್ಯವಾಗಿದೆ. ದುಮಿಂಗ, ಬಸ್ತು ಈರ್ವರಿಗೂ ಅವರ ವೃತ್ತಿ ಅಂತಸ್ತಿಗೆ ತಕ್ಕ ಮನೆಯಾಗಿದೆ. ಆದರೆ ಗುಸ್ತೀನನಿಗೆ?
ಈಗಲೂ ಅವಳಲ್ಲಿ ಈ ಕೊರಗು ಇತ್ತು.
ಇಬ್ಬರೂ ಮಕ್ಕಳ ಮನೆ ಅಕ್ಕಪಕ್ಕದಲ್ಲಿ ನಿಂತಿರುವುದನ್ನು ನೋಡಿದಾಗ ಮೂರನೆ ಮಗ ಕೂಡ ಇಂತಹಾ ಮನೆಯನ್ನು ಕಟ್ಟಿಸಬಹುದಿತ್ತಲ್ಲ ಅಂದುಕೊಂಡಳು. ಅದೇ ಸಮಯದಲ್ಲಿ ಹಿರಿಯ ಮಗ ಬಂದು ತಾಯಿಯ ಎದುರಲ್ಲಿ ಕುಳಿತು ಎಲೆ ಅಡಿಕೆ ತಾಬಾಣಕ್ಕೆ ಕೈ ಹಾಕಿದ. ಕೊಂಚ ಹೊತ್ತಿನಲ್ಲಿ ತಂದ ಕುರ್ಚಿ, ಜಮಖಾನ, ಪಾತ್ರೆ ಇತ್ಯಾದಿಗಳನ್ನು ಅವರವರಿಗೆ ಮುಟ್ಟಿಸಿ ದುಮಿಂಗ,ಬಸ್ತು ಈರ್ವರೂ ಬಂದು ತಾಯಿಯ ಬಳಿ ಕುಳಿತರು. ಇವರ ಹೆಂಡಿರೂ ಅಷ್ಟು ದೂರ ಕುಳಿತು ಎಲೆಯ ಬೆನ್ನ ಮೇಲಿನ ನಾರು ತೆಗೆದು ಸುಣ್ಣ ಹಚ್ಚತೊಡಗಿದರು.
“ಮಾಯ್..ಈಗ ನಮ್ಮ ಮನೆ ಆಯ್ತು..ಇನ್ನೊಂದು ಮನೆ ಆಗಬೇಕು..” ಎಂದ ಕಿರಿಯ ಮಗ ಆಸ್ಪತ್ರೆ ಬಸ್ತು.
“..ಮತ್ತೆ ಯಾರದಪ್ಪ ಮನೆ”
“ಅಣ್ಣನಿಗೊಂದು ಹೊಸ ಮನೆ ಆಗಬೇಕು..”
“ಹೌದು ಈಗ ಇರೋ ಸೈಟಿಗೆ ತಕ್ಕ ಹಾಗೆ ದೊಡ್ಡ ಮನೆ ಕಟ್ಟಿಸಬೇಕು” ಎಂದ ದುಮಿಂಗ.
“ನಿಮಗೇನಪ್ಪ..ಸರಕಾರ ಗಟ್ಟಿಯಾಗಿದೆ. ಸಾಲ ಕೊಡುತ್ತೆ..ನಮ್ಮದು ಬಡ ಬ್ಯಾಂಕು..ನಮ್ಮಲ್ಲಿ ತೆಗೆದುಕೊಂಡ ಸಾಲಾನ ನುಂಗಿ ಹಾಕುವವರೇ ಜಾಸ್ತಿ..ನೌಕರರಿಗೆ ಸಾಲ ಕೊಡಲಿಕ್ಕೆ ಹಣಬೇಕಲ್ಲ..”
“ಅಣ್ಣ..ಹೊಸದಾಗಿ ಗೃಹ ನಿರ್ಮಾಣ ಬ್ಯಾಂಕು ಅಂತ ಒಂದು ತೆರೆದಿದ್ದಾರೆ..ಐದು ವರ್ಷ ಆಯ್ತು..ಅಲ್ಲಿಂದ ಸಾಲ ತೊಗೊ..” ಎಂದ ಬಸ್ತು.
ಇದು ಗುಸ್ತೀನನಿಗೆ ಗೊತ್ತಿತ್ತು. ಹಲವರು ಈ ಬ್ಯಾಂಕಿನಿಂದ ಹಣ ಪಡೆದು ಮನೆ ಕಟ್ಟ ತೊಡಗಿದ್ದರು. ಆದರೆ ಈ ಬ್ಯಾಂಕಿನ ನಿಯಮವೆಂದರೆ ಸಾಲ ಕೊಡುವುದಾದರೆ ಮನೆಯ ನಿವೇಶನ ಸ್ವಂತ ಹೆಸರಿನಲ್ಲಿ ಇರಬೇಕಿತ್ತು. ಗುಸ್ತೀನ ತಾನೂ ಒಂದು ನಿವೇಶನ ಪಡೆಯಲು ಪ್ರಯತ್ನಿಸಿದ್ದ. ಆದರೆ ಏಕೋ ಅವನಿಗೆ ನಿವೇಶನ ಮಂಜೂರಾಗಿರಲಿಲ್ಲ. ಒಂದು ವೇಳೆ ಮಂಜೂರಾದರೂ ಒಂ
ದೇ ಗಂಟಿನಲ್ಲಿ ಕಟ್ಟುವಷ್ಟು ಹಣ ಅವನಲ್ಲಿ ಇರಲಿಲ್ಲ. ಹೀಗೆಂದೇ ಆತ ಸಾಲ ಮಾಡುವ ಮನೆ ಕಟ್ಟುವ ವಿಚಾರವನ್ನೇ ಕೈ ಬಿಟ್ಟಿದ್ದ. ಈ ವಿಷಯ ಬಂದಾಗ ಆತ ಸಹಜವಾಗಿ-
“ಅದಕ್ಕೆ ನಮ್ಮದೇ ಜಾಗಬೇಕಲ್ಲಪ್ಪ” ಎಂದ.
“ಇದೂ ತುಂಬಾ ಸುಲಭ” ಎಂದ ಬಸ್ತು ತಾಯಿಯ ಮುಖ ನೋಡಿ.
“ಏನೋ ಅದು?”
ಮರಿಯ ಇನ್ನೋರ್ವ ಮಗನ ಮುಖ ನೋಡಿದಳು. ಈಗ ಹಳೇ ಮನೆ ನಿನ್ನ ಹೆಸರಿನಲ್ಲಿ ಇದೆ ಅಲ್ವ ಅಮ್ಮ? ಅದನ್ನು ಅಣ್ಣನಿಗೆ ಮಾಡಿಕೊಡು..ಅದು ಯಾರು ಸಾಲ ಕೊಡಲ್ವೋ ನೋಡೋಣ..” ಎಂದ ದುಮಿಂಗ.
ಮರಿಯಳ ಮುಖ ಅರಳಿತು.
ಕೆಲವೇ ದಿನಗಳಲ್ಲಿ ಮರಿಯಳ ಹಳೆಯ ಮನೆ, ದನದ ಕೊಟ್ಟಿಗೆ ಹುಲ್ಲಿನ ಶೆಡ್ಡು, ಕಟ್ಟಿಗೆ ತುಂಬಿಡುವ ಮಾಡು ಎಲ್ಲವೂ ಮಾಯವಾಗಿ ಕಂಟ್ರಾಕ್ಟರ್ ಕುಂಜುಮನ್ ತನ್ನ ಕೆಲಸಗಾರರೊಡನೆ ಅಲ್ಲಿಗೆ ಬಂದಿಳಿದ.
“ಈ ಹಬ್ಬದ ಹೊತ್ತಿಗೆ ಮನೆ ಆಗಬೇಕು” ಎಂದ ಗುಸ್ತೀನ.
ಅವನು ತನ್ನ ಹೆಂಡತಿ ಮಕ್ಕಳ ಜತೆ ಬಂದು ತಮ್ಮ ಬಸ್ತುವಿನ ಮನೆ ಸೇರಿಕೊಂಡ.
ಅಲ್ಲಿ ಪಾದರಿಗಳು ಬಂದು ಮಂತ್ರಿಸಿದ ನಂತರ ತಳಪಾಯ ತೋಡುವ ಕೆಲಸ ಆರಂಭವಾಯಿತು.
*
*
*
ಚಮಾದೋರ ಇಂತ್ರೂಗೆ ಒಂದು ಹವ್ಯಾಸವಿತ್ತು. ಪ್ರತಿ ಶನಿವಾರ ಆತ ಬಲೆ, ಹಗ್ಗ, ಮರದ ಸೋಟೆ ಒಂದು ಗೋಣಿ ಚೀಲ ಹಿಡಿದುಕೊಂಡು ಬೇಟೆಗೆ ಹೋಗುತ್ತಿದ್ದ. ಹೇರಳವಾಗಿ ಬಾವಲಕ್ಕಿಗಳು ತಲೆ ಕೆಳಗೆ ಮಾಡಿ ತೂಗುಬಿದ್ದ ಮರಗಳನ್ನು ಈತ ಕಂಡುಕೊಂಡಿದ್ದ. ಈ ಮರಗಳ ಬಳಿ ಬಾವಲಕ್ಕಿಗಳು ತಲೆ ಕೆಳಗೆ ಮಾಡಿ ತೂಗುಬಿದ್ದ ಮರಗಳನ್ನು ಈತ ಕಂಡುಕೊಂಡಿದ್ದ. ಈ ಮರಗಳ ಬಳಿ ಬಾವಲಕ್ಕಿಗಳು ತಿರುಗಾಡುವ ಜಾಡು ನೋಡಿ ಈತ ಬಲೆ ಕಟ್ಟುತ್ತಿದ್ದ. ಎರಡೂ ಮರಗಳನ್ನು ಸೇರಿಸಿ ಅಡ್ಡಲಾಗಿ ಬಲೆಕಟ್ಟಿ ಮರದಿಂದ ಕೆಳಗೆ ಇಳಿಯುತ್ತಿದ್ದ. ರಾತ್ರಿ ಆದ ಹಾಗೆ ಬಾವಲಕ್ಕಿಗಳ ಚಟುವಟಿಕೆ, ಹಾರಾಟ ಪ್ರಾರಂಭವಾಗುತ್ತಿತ್ತು. ಹೀಗೆ ಹಾರಾಡತೊಡಗಿದ ಹಕ್ಕಿಗಳು ಬಲೆಯ ಕಣ್ಣಿನೊಳಗೆ ಸಿಕ್ಕಿ ಬೀಳುತ್ತಿದ್ದವು. ಕೂಡಲೇ ಇಂತ್ರು ಬಲೆಯನ್ನು ಕಟ್ಟಿದ ಹಗ್ಗವನ್ನು ಸಡಿಲ ಮಾಡಿ ಕೆಳಗೆ ಇಳಿಸಿಕೊಂಡು ಮರದ ಸೋಟೆಯಿಂದ ಹಕ್ಕಿಯನ್ನು ಹೊಡೆದು ಅದನ್ನು ಗೋಣಿ ಚೀಲಕ್ಕೆ ಹಾಕಿ ಮತ್ತೆ ಬಲೆಯನ್ನು ಮೇಲೆ ಏರಿಸುತ್ತಿದ್ದ.
ರಾತ್ರಿ ಎಲ್ಲ ಮರದ ಕೆಳಗೆ ಅರ್ಧನಿದ್ದೆ ಅರ್ಧ ಎಚ್ಚರದಲ್ಲಿ ಕೂತಿದ್ದು ಬೆಳಿಗ್ಗೆ ಹತ್ತಿಪ್ಪತ್ತು ಬಾವಲಕ್ಕಿಗಳ ಜತೆ ಆತ ಊರಿಗೆ ಬರುತ್ತಿದ್ದ. ಅವನಿಗೆ ಕೆಲ ಖಾಯಂ ಗಿರಾಕಿಗಳೂ ಇದ್ದರು. ಬಾವಲಕ್ಕಿ ಮಾಂಸಕ್ಕೆ ಒಳ್ಳೆ ಬೇಡಿಕೆಯೂ ಇತ್ತು.
ಅಂದು ಹೀಗೆ ಬಾವಲಕ್ಕಿ ಬೇಟೆಗೆ ಹೋದ ಇಂತ್ರು ಬೆಳಗಾದರೂ ತಿರುಗಿ ಬರಲಿಲ್ಲ. ಜನ ಇಗರ್ಜಿಯ ಪೂಜೆ ಮುಗಿಸಿಕೊಂಡು ಬರುವಾಗ ಇಂತ್ರು ಮಗ ಸಿರೀಲ ಸಿಮೋನನ ಮನೆಯ ಮುಂದೆ ನಿಂತಿದ್ದ.
“ಮಾಮ..ಅಪ್ಪ ರಾತ್ರಿ ಹೋದವನು ಇಷ್ಟು ಹೊತ್ತಾದರೂ ಬರಲಿಲ್ಲ…” ಎಂದ ಹುಡುಗ ಅಳು ದನಿಯಲ್ಲಿ.
“ಎಲ್ಲಿ ಹೋದ ಮಾರಾಯ ಅವನು?” ಎಂದು ಸಿಮೋನ ಗಡಿಬಿಡಿಸಿದ.
ಮಗ ರಾಬರ್ಟನನ್ನು ಸೈಕಲ್ ತೆಗೆದುಕೊಂಡು ಹೋಗಿ ಒಂದೆರಡು ಕಡೆ ನೋಡಿಬರಲು ಹೇಳಿದ. ರಾಬರ್ಟ ಹೋದವನು ಕೂಡಲೇ ತಿರುಗಿ ಬಂದ. ಕಂಬಳಿ ಕೊಪ್ಪದ ಕಾಡಿನಲ್ಲಿ ಇಂತ್ರು ಮರದ ಕೆಳಗೆ ಜಡವಾಗಿ ಬಿದ್ದಿದ್ದ. ಗೋಣಿಚೀಲ ಬರಿದಾಗಿತ್ತು. ಮೇಲೆ ಕಟ್ಟಿದ ಬಲೆಗೆ ಒಂದೇ ಒಂದು ಹಕ್ಕಿ ಸಿಕ್ಕಿ ಬಿದ್ದು ಚೀರಾಡುತ್ತಿತ್ತು.
ಸಿಮೋನನೇ ಮುಂದೆ ನಿಂತು ಇಂತ್ರುವನ್ನು ಮಣ್ಣು ಮಾಡಬೇಕಾಯಿತು. ಇವನ ಮರಣದ ಸುದ್ದಿಯನ್ನು ಜನರಿಗೆ ಮುಟ್ಟಿಸಲು ಮಾತ್ರ ಯಾರೂ ಇರಲಿಲ್ಲ. ಇಂತ್ರುವಿನ ನಂತರ ಅವನ ಮಗ ಸಿರೀಲ ಚಮಾದೋರ ಆಗಿ ಮುಂದುವರಿದನು.
“ಈ ಕೆಲಸ ಏನಾದ್ರು ಸ್ವಲ್ಪ ಮರ್ಯಾದೆ ತರುವಂತಹದ್ದು ಆಗಿದ್ದಿದ್ರೆ..ಇದನ್ನು ಆ ಬಾಮಣರಲ್ಲಿ ಯಾರಿಗಾದರೂ ಕೊಡತಿದ್ರು ಪಾದರಿ..ಇದು ಹೊಂಡ ತೋಡೋದು..ಮನೆ ಮನೆಗೆ ಹೇಳೋದು..ಆಗಿದ್ದರಿಂದ ನಮ್ಮವರಿಗೇನೆ ಉಳೀತು..” ಎಂದು ಕೇರಿ ಹುಡುಗರು ಆದಿಕೊಂಡಿದ್ದು ಸಿಮೋನನ ಕಿವಿಗೆ ಬೀಳದೆ ಇರಲಿಲ್ಲ.
ಈಸ್ಟರ್ ಹಬ್ಬಕ್ಕೆ ಕೆಲವೇ ದಿನಗಳಿವೆ ಅನ್ನುವಾಗ ಮರಿಯಳ ಹಳೆಮನೆ ಇದ್ದ ಜಾಗದಲ್ಲಿ ಭವ್ಯವಾದ ಒಂದು ಹೊಸಮನೆ ಎದ್ದು ನಿಂತಿತ್ತು.
ದುಮಿಂಗ, ಬಸ್ತು ಈರ್ವರೂ ’ಘರ ಭರೋಣೆ’ ವಿಷಯವನ್ನು ಊರಲ್ಲಿ ಎಲ್ಲರಿಗೂ ಹೇಳಿ ಬಂದರು. ಕ್ರೀಸ್ತುವರು ಮಾತ್ರವಲ್ಲದೆ ಗುಸ್ತೀನ, ದುಮಿಂಗ, ಬಸ್ತು ಈ ಮೂವರ ಸ್ನೇಹಿತರು, ಅಭಿಮಾನಿಗಳು ಅಧಿಕವಾಗಿ ಈ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಬಂದರು. ಪಾದರಿ ಸಿಕ್ವೇರಾ ಮನೆ ಮಂತ್ರಿಸುವಾಗ ಹೊರಗೆ ಗರ್ನಾಲುಗಳು ಸಿಡಿದವು. ಎಮ್ಮೆ ಮರಿಯ ಮಕ್ಕಳು ತಂದ ಹೊಸ ಸೀರೆಯುಟ್ಟು ಸಂಭ್ರಮದಿಂದ ತಿರುಗಾಡಿದಳು. ಜೋಸೆಫ಼ ನಗರ, ಫ಼ಾತಿಮಾ ನಗರ ಹಾಗೂ ಉಳಿದ ಬಡಾವಣೆಗಳಿಂದ ಜನ ಬಂದು ಉಂಡು ಹೋದರು. ಜನರಿಗೆ ತುಂಬಾ ಸಂತೋಷವಾದುದೆಂದರೆ ಮನೆಗೆ ’ಮರಿಯಾ ಕೃಪಾ’ ಎಂದು ಹೆಸರು ಇರಿಸಿದ್ದು. ತಾಯಿಯ ಹೆಸರನ್ನೇ ಮನೆಗೆ ಇರಿಸಿದ ಈ ಪರಿ ಶಿವಸಾಗರದ ಕ್ರೀಸ್ತುವರ ಪಾಲಿಗೆ ಹೊಸ ವಿಷಯವಾಗಿತ್ತು.

-೧೧-

ಗಾಡಿ ಸಿಮೋನನ ಮೂರನೇ ಮಗ ರಾಬರ್ಟ ಜನವರಿ ತಿಂಗಳಲ್ಲಿ ಹಬ್ಬಕ್ಕೆಂದು ಮುರುಡೇಶ್ವರಕ್ಕೆ ಹೊರಟಾಗ ಬಸ್ಸಿನಲ್ಲಿ ಹಿಂದುಗಳು, ನವಾಯ್ತಿಗಳು ತುಂಬಿಕೊಂಡಿದ್ದರಲ್ಲದೆ ಕ್ರೀಸ್ತುವರು ಯಾರೂ ಇರಲಿಲ್ಲ. ಒಂದು ಕಾಲದಲ್ಲಿ ಊರಿನಲ್ಲಿ ಹಬ್ಬವೆಂದರೆ ಇಲ್ಲಿಂದ ತುಂಬಾ ಜನ ಹೋಗುತ್ತಿದ್ದರು. ಸಂಸಾರ ಸಮೇತ ಹೋಗುತ್ತಿದ್ದರು. ಮೂರು ನಾಲ್ಕು ದಿನಗಳವರೆಗೆ ಬಸ್ಸಿನವರಿಗೆ ಒಳ್ಳೆಯ ಕಲೆಕ್ಷನ್ ಕೂಡ ಇರುತ್ತಿತ್ತು. ಆದರೆ ಈಗ ಹಬ್ಬಕ್ಕೆ ಹೋಗುವ ಕ್ರೀಸ್ತುವರು ಕಡಿಮೆಯಾಗಿದ್ದರು.
“ಅಯ್ಯೋ ಬೇಸರ..ಅಲ್ಲಿ ಏನಿದೆ..ತೆಂಗಿನ ತೋಟ ಬಿಟ್ರೆ ಸಮುದ್ರ..ಪೇಟೆ ಕೂಡ ದೊಡ್ಡದಲ್ಲ.” ಎಂದು ಗೊಣಗುತ್ತಿದ್ದರು.
ಅಲ್ಲದೆ ತಮ್ಮ ಹಿರಿಯರ ಊರು, ತಮ್ಮ ಮೂಲಸ್ಥಳ ಎಂಬ ನಂಬಿಕೆಯೂ ಹೊರಟು ಹೋಗಿತ್ತು.
ಆದರೆ ರಾಬರ್ಟಗೆ ಈ ಊರಿನ ಬಗ್ಗೆ ಏನೋ ಆಕರ್ಷಣೆ. ಊರ ತುಂಬ ಇರುವ ತೆಂಗಿನ ಮರಗಳು. ಅಲ್ಲಲ್ಲಿ ಗೇರು, ಹಲಸು, ಮಾವಿನ ಮರಗಳು, ತೋಟದೊಳಗಿನ ಸಣ್ಣ ಮನೆಗಳು. ಸದಾ ಮಡಲು ಹೆಣೆಯುತ್ತ ಹಗ್ಗ ನೂಲುತ್ತ, ಗಾಣ ಆಡಿಸುತ್ತ ಇರುವ ಜನ. ಈ ಹಸಿರು ತೋಟಗಳ ನಡುವೆ ತ್ರಿಕೋಣಾಕರದಲ್ಲಿ ನಿಂತ ತುಂಬಾ ಹಳೆಯದಾದ ಇಗರ್ಜಿ. ಇದರಾಚೆಗೆ ನಿರಂತರವಾಗಿ ಗದ್ದಲ ಮಾಡುತ್ತಲೇ ಇರುವ ಕಡಲು. ಕಡಲ ತಡಿಯಲ್ಲಿ ಜನರ ಗದ್ದಲವಿಲ್ಲ. ಏಡಿಗಳು ನಿರಾತಂಕವಾಗಿ ಓಡಿಯಾಡುತ್ತಿರುತ್ತವೆ. ಕಡಲ ಕಾಗೆಗಳು ಹಾರುತ್ತಿರುತ್ತವೆ. ಕಡಲ ದಂಡೆಗೆ ತೀರಾ ಸನಿಹದಲ್ಲಿ ಹಂದಿ ಮೀನು ಮೇಲೆ ಬಂದು ಮತ್ತೆ ನೀರಿಗೆ ಬಿದ್ದು ಮಾಯವಾಗುತ್ತಿರುತ್ತದೆ. ದೂರದಲ್ಲಿ ಹಡಗುಗಳು, ಬರೆದ ಚಿತ್ರಗಳ ಹಾಗೆ ದಿಗಂತಕ್ಕೆ ಅಂಟಿ ನಿಂತಿದ್ದರೆ ಮೀನು ದೋಣಿಗಳು ಅಲೆಗಳ ಮೇಲೆ ತೇಲುತ್ತ ಬೀಳುತ್ತ ಆಟವಾಡುತ್ತಿರುತ್ತವೆ. ಈ ಕಡಲ ಅಂಚಿಗೆ ಅಂಟಿಕೊಂಡೇ ಮರಿಯಾಣ ದೊಡ್ಡಪ್ಪನ ತೆಂಗಿನ ತೋಟ.
ಅಪ್ಪ ಹುಟ್ಟಿ ಬೆಳೆದ ಮನೆ. ಅಕ್ಕ ಅಣ್ಣಂದಿರು ಕೂಡ ಅವರ ಬಾಲ್ಯವನ್ನು ಕಳೆದದ್ದು ಇಲ್ಲಿಯೇ. ಆದರೆ ತಾನು ಮಾತ್ರ ಹುಟ್ಟಿದ್ದು ಶಿವಸಾಗರದಲ್ಲಿ. ಹೀಗಾಗಿ ತನಗೆ ಈ ತೋಟ, ಈ ಮನೆ, ಈ ಕಡಲು ಎಲ್ಲ ಅಪರಿಚಿತ. ಇದನ್ನೆಲ್ಲ ತಾನು ನೋಡಿದ್ದು ಇತ್ತೀಚೆಗೆ. ಇದೇ ಕಾರಣದಿಂದಲೋ ಏನೋ ತಾನು ಇದೆಲ್ಲವನ್ನೂ ಅತಿಯಾಗಿ ಪ್ರೀತಿಸುತ್ತೇನೆ. ಇದನ್ನು ನೋಡಲೆಂದು ಆಗಾಗ್ಗೆ ಇಲ್ಲಿಗೆ ಬರುತ್ತೇನೆ. ಇಗರ್ಜಿ ಹಬ್ಬಬಂದರಂತೂ ತಾನು ತಪ್ಪದೆ ಊರಿಗೆ ಬರುತ್ತೇನೆ.
ಹಾಗೆ ನೋದಲು ಹೋದರೆ ಊರಿನಲ್ಲಿ ಇರುವವನು ಮರಿಯಾಣ ದೊಡ್ಡಪ್ಪ ಒಬ್ಬನೇ. ಅವನ ಇಬ್ಬರು ಮಕ್ಕಳೂ ಮುಂಬಯಿ ಸೇರಿ ಅಲ್ಲಿ ತಳವೂರಿದ್ದಾರೆ. ಹಿಂದೆಲ್ಲ ವರ್ಷಕ್ಕೆ ಒಮ್ಮೆಯಾದರೂ ಬರುತ್ತಿದ್ದವರು ಈಗೀಗ ಎರಡು ಮೂರು ವರ್ಷಗಳಿಗೊಮ್ಮೆ ಒಂದೆರಡು ದಿನದ ಮಟ್ಟಿಗೆ ಬಂದು ಹೋಗತೊಡಗಿದ್ದಾರೆ. ಅವರ ವಹಿವಾಟು ದೊಡ್ಡದಾಗಿ, ಅಲ್ಲಿಯೇ ಈರ್ವರು ಗೋವಾನಿ ಹುಡುಗಿಯರನ್ನು ಮದುವೆಯಾಗಿ ಸಂಸಾರ ಬೆಳೆದು ಅವರನ್ನು ಮುಂಬಯಿ ಬಿಡುತ್ತಿಲ್ಲ. ಮರಿಯಾಣ ದೊಡ್ದಪ್ಪನ ಹೆಂಡತಿ ಕೂಡ ತೀರಿ ಹೋಗಿ ವರ್ಷಗಳಾಗಿವೆ. ಈಗ ದೊಡ್ಡಪ್ಪ ಒಬ್ಬನೇ. ತೋಟ ನೋಡಿಕೊಳ್ಳಲು ಜನ ಇದ್ದಾರೆ. ತಾನು ಅಲ್ಲಿಗೆ ಹೋದೆನೆಂದರೆ ಅವನಿಗೆ ಸಂತೋಷವಾಗುತ್ತದೆ. ಊರು, ಕಡಲು, ದೊಡ್ಡಪ್ಪನ, ಪ್ರೀತಿ, ಮಮತೆ ತನ್ನನ್ನು ಊರಿನತ್ತ ಸೆಳೆಯುತ್ತದೆ.
ಇಲ್ಲಿ ಶಿವಸಾಗರದಲ್ಲಿ ತನಗೆ ಹೇಳಿಕೊಳ್ಳುವಂತಹ ಕೆಲಸವಿಲ್ಲ ಎಂಬುದೊಂದು ಕೊರಗು. ಇಬ್ಬರು ಅಣ್ಣಂದಿರಿಗಿಂತ ತಾನು ಹೆಚ್ಚು ಓದಿದ್ದು ಹೌದು. ಆದರೆ ಈ ಓದಿನಿಂದ ಪ್ರಯೋಜನವೇನು ಆಗಲಿಲ್ಲ. ಹಿರಿಯ ಅಣ್ಣ ಶಾಲೆಗೆ ಹೋದದ್ದು ಇಲ್ಲವೇ ಇಲ್ಲ. ಅಂದು ಮುರುಡೇಶ್ವರದಲ್ಲಿ ಶಾಲೆಗಳು ಇರಲಿಲ್ಲವೋ ಅಥವಾ ಕ್ರೀಸ್ತುವರ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲವೋ ಅಂತು ಕಡಲಕಿನಾರೆಯಲ್ಲಿ ಏಡಿ, ಮಳಿ ಹೆಕ್ಕುತ್ತಿದ್ದ ಅಣ್ಣಂದಿರು ನೇರವಾಗಿ ಅಪ್ಪನ ಜತೆ ಕೆಲಸಕ್ಕೆ ಇಳಿದು, ತುಸು ದೊಡ್ಡವರಾದ ತಕ್ಷಣ ತಾವೂ ಕೆಲಸಗಾರರು ಎಂದೆನಿಸಿಕೊಂಡರು. ಆದರೆ ಶಿವಸಾಗರದಲ್ಲಿ ಹುಟ್ಟಿದ ತಾನು ಶಾಲೆಗೆ ಹೋಗತೊಡಗಿದೆ. ಕಲಿತೆ. ಪ್ರೌಢಶಾಲೆಯ ಕೊನೆಯ ಪರೀಕ್ಷೆಯನ್ನು ಮಾತ್ರ ತನ್ನಿಂದ ಪಾಸು ಮಾಡಲಾಗಲಿಲ್ಲ. ಹೀಗಾಗಿ ತಿಮ್ಮಪ್ಪ ಹೆಗಡೆಯವರ ಅಡಿಕೆ ವಕಾರಿಯಲ್ಲಿ ತನಗೊಂದು ಕೆಲಸ ಸಿಕ್ಕಿತು. ಬೇಡವೆಂದರೂ ಅಪ್ಪ ಅಮ್ಮ ಸೇರಿ ಮದುವೆ ಮಾಡಿದರು. ಹಿಂದೆಯೇ ಮಕ್ಕಳೂ ಆದರು. ಆದರೂ ಏನೋ ಕೊರಗು. ಎಲ್ಲ ಬರಿದಾಗಿರುವ ಅನುಭವ. ಕೆಲಸದಲ್ಲಿ ಆಸಕ್ತಿ ಇಲ್ಲ. ವಕಾರಿಯಲ್ಲಿ ಅಡಿಕೆ ಆರಿಸುವ, ವಿಂಗಡಿಸಿ ಮೂಟೆ ಕಟ್ಟುವ ಕೆಲಸವನ್ನು ಮಾಡಲು ಜನ ಇದ್ದಾರೆ. ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಸಬೇಕು. ಹೊರಗಿನಿಂದ ಬಂದ ಅಡಿಕೆಯ ಲೆಕ್ಕ ಮಾರಾಟವಾದ ಅಡಿಕೆ ಲೆಕ್ಕ ಬರೆದಿಡಬೇಕು. ಕೆಲಸ ಅಚ್ಚು ಕಟ್ಟಾಗಿ ಮಾಡುತ್ತೇನೆ. ಆದರೆ ಕೊಡುವ ಸಂಬಳ ಸಾಲದು.
ಈಗ ಅಪ್ಪ ಕೆಲಸಕ್ಕೆ ಹೋಗುತ್ತಿಲ್ಲ. ಅಣ್ಣ ವಿಕ್ಟರ ಬೆರೆಯಾಗಿದ್ದಾನೆ. ಫ಼ೆಡ್ಡಿ ಮನೆಯಲ್ಲಿಯೇ ಇದ್ದಾನೆ. ವಿಶೇಷವಾಗಿ ಬಾವಿ ಕೆಲಸದಲ್ಲಿ ಈತ ಪಳಗಿರುವುದರಿಂದ ಇವನಿಗೆ ಹೆಚ್ಚಿನ ಬೇಡಿಕೆ ಇದೆ. ಮನೆ ನಡೆಯುತ್ತಿರುವುದೇ ಇವನಿಂದ. ಇದೂ ಒಂದು ತನ್ನನ್ನು ಕಿತ್ತು ತಿನ್ನುತ್ತಿದೆ. ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ಎಷ್ಟು ದಿನ ಫ಼ೆಡ್ಡಿಯ ಋಣದಲ್ಲಿ ಬಿದ್ದಿರುವುದು? ಎಂದೋ ಒಂದು ದಿನ ಇವನೂ ತನ್ನ ಹೆಂಡತಿ ಮಕ್ಕಳ ಜತೆ ಬೇರೆಯಾದರೆ?
ಈ ಚಿಂತೆಯ ನಡುವೆಯೂ ಮುರುಡೇಶ್ವರದ ಇಗರ್ಜಿ ಹಬ್ಬ ನೆನಪಿಗೆ ಬರುತ್ತದೆ. ಭಟ್ಕಳದವರೆಗೆ ಒಂದು ಬಸ್ಸು ನಂತರ ಬೇರೊಂದು. ಮುರುಡೇಶ್ವರದಲ್ಲಿ ಸಂತೆ ಹೊಂಡದ ಬಳಿ ಬಸ್ಸಿನಿಂದ ಇಳಿದು. ಕಡಲಕಿನಾರೆಯಲ್ಲಿ ನಡೆದು ಮರಿಯಾಣ ದೊಡ್ಡಪ್ಪನ ತೋಟಕ್ಕೆ ಬಂದ. ದಣಪೆ ದಾಟುವಾಗ ಜಗಲಿಯ ಮೇಲೆ ಕುಳಿತ ದೊಡ್ಡಪ್ಪ-
“ತಮ್ಮಾ..ಯಾರದು?” ಎಂದು ಕೇಳಿದ.
ಮೀನು ತಿನ್ನುವವರ ಕಣ್ಣು ಸೂಕ್ಷ್ಮವಂತೆ. ಎಂಬತ್ತಾದರೂ ದೊಡ್ಡಪ್ಪ ಚುರುಕಾಗಿದ್ದಾನೆ. ಕಣ್ಣು ಕಿವಿ ಗಂಟಲು ಸಶಕ್ತವಾಗಿದೆ.
“..ನಾನು..” ಅಂದ ಕೂಡಲೆ.
“ಯಾರು ರಬ್ಬಿಯಾ?” ಎಂದು ಆತ ಎದ್ದು ಬಂದ.
“..ನಾಳೆ ಹಬ್ಬ..ಈವತ್ತು ಬರಬೇಕಿತ್ತಲ್ಲ..ಯಾಕೆ ಬರಲಿಲ್ಲ ಅಂತ ಯೋಚನೆ ಮಾಡತಿದ್ದೆ. ಏನು ಒಬ್ಬನೇ ಬಂದದ್ದು? ಹೆಂಡತಿ ಮಕ್ಕಳು ಬರಲಿಲ್ವ?” ಎಂದು ಕೇಳಿದ ದೊಡ್ಡಪ್ಪ.
ಹಿಂದಿನಂತೆಯೇ ಅವನ ಮೈಬರಿದು. ಉಡುದಾರಕ್ಕೆ ತೂಗು ಬಿದ್ದ ಒಂದು ಕಷ್ಟಿ. ಕೆಲಸ ಮಾಡಿ ದಷ್ಟಪುಷ್ಟವಾಗಿದ್ದ ಮೈ ಈಗ ಅಲ್ಲಲ್ಲಿ ಜೋಲು ಬಿದ್ದಿತ್ತು.
“ನೀನೊಬ್ಬ ಆದರೂ ಹಬ್ಬ ಅಂದ ಕೂಡಲೇ ಬರತೀಯಲ್ಲ..ನಮ್ಮವರಿಗಂತೂ ಈ ಊರು ಇದೆ ಅನ್ನೋದೇ ಮರೆತು ಹೋಗಿದೆ..” ಎಂದು ಒಂದು ಕಡೆ ಸಂತಸವನ್ನು ಬೇರೊಂದು ಕಡೆ ನೋವನ್ನು ವ್ಯಕ್ತಪಡಿಸಿದ ಮರಿಯಾಣ.
ರಾಬರ್ಟ ನೆಲ ಬಾವಿಗೆ ದೊಟ್ಟೆ ಇಳಿಸಿ ನೀರು ಮೊಗೆದು ತಲೆಯ ಮೇಲೆ ಸುರಿದುಕೊಂಡ. ಮನೆಗೆ ದೊಡ್ಡಪ್ಪನ ಹೆಂಡತಿ ಕಡೆಯವರು ನೆಂಟರಾಗಿ ಬಂದಿದ್ದರು. ಊಟ ಅಡಿಗೆ ವ್ಯವಸ್ಥೆ ಅವರದಾಗಿತ್ತು. ಹೀಗಾಗಿ ರಾಬರ್ಟ್ ದೊಡ್ಡಪ್ಪನ ಜತೆ ಕುಳಿತು ಮಾತನಾಡಿದ. ಅವನ ಸಂಗಡ ತೋಟದಲ್ಲಿ ತಿರುಗಾಡಿದ. ತೋಟದಲ್ಲಿ ನಿಂತರೆ ಕಡಲು ಕಾಣುತ್ತಿತ್ತು. ಮನೆ ಬಾಗಿಲಿಗೆ ಹರಿಕಂತಾರರ ದುಗ್ಗ ಹಸಿ ಮೀನು ತಂದ.
“ನಾಳೆ ಮೀನುಬೇಡ..ನಮಗೆ ಹಬ್ಬ..ಮನೆಯಾಗೆ ಕೋಳಿ ಐತಲ್ಲ..” ಎಂದು ಮರಿಯಾಣ ದುಗ್ಗನಿಗೆ ಹೇಳಿದ.
ತೋಟದಲ್ಲಿ ಇದ್ದ ಹೆಡೆ ಆರಿಸುತ್ತ ಮರಿಯಾಣ ದೊಡ್ಡಪ್ಪ-
“ನನಕೈಲಿ ಇದನ್ನು ನೋಡಿಕೊಳ್ಳಲಿಕ್ಕೆ ಆಗೋದಿಲ್ಲ. ನಿನ್ನಪ್ಪ ಊರು ಬಿಟ್ಟಾಗ ಅವನಿಗೆ ಇಪ್ಪತ್ತೋ ಇಪ್ಪತೈದೋ..ಹಣ ಮಾಡಬೇಕು ಅಂತ ಘಟ್ಟದ ಮೇಲೆ ಹೋದ. ಅವನೊಬ್ಬನೇ ಅಲ್ಲ ಭಾಳ ಜನ ಹೋದ್ರು ಇಲ್ಲಿಂದ..ಏನು ಹಣ ಮಾಡಿದ್ರೋ..ಇಲ್ಲಿ ತೋಟ ಅವರಿವರ ಪಾಲಾಯ್ತು. ನಾನು ಮಾತ್ರ ಇದನ್ನು ಉಳಿಸಿಕೊಂಡೆ…ಒಡೇರು ಕೊನೆಗೆ ಇದ್ನ ನನಗೇ ಮಾಡಿದ್ರು..ನಿನ್ನಪ್ಪ ಇದ್ದಿದ್ರೆ ಇದರಾಗೆ ಅರ್ಧ ಅವನಿಗೂ ಸಿಗತಿತ್ತು…ಇರು ಅಂದ್ರೆ ಕೇಳದೆ ಹೋದ. ಈಗ..ನಮ ಹುಡುಗ್ರು ಮುಂಬಯಿ ಬಿಟ್ಟು ಬರೋದಿಲ್ಲ ಅಂತಿದಾರೆ..ಅವರಿಗೆ ಇದೆಲ್ಲ ಬೇಡವೂ ಬೇಡ..ನನಗೂ ಅಲ್ಲಿಗೆ ಬರಲಿಕ್ಕೆ ಹೇಳತಿದಾರೆ..ನಾ ಅಲ್ಲಿಗೆ ಹೋಗಲಾರೆ.”
ಮರಿಯಾಣ ದೊಡ್ಡಪ್ಪ ಮರಗಳ ಪಾತಿ ಸರಿ ಮಾಡುತ್ತ ನುಡಿಯುತ್ತಿದ್ದ. ರಾಬರ್ಟ ಬಾವಿಯಿಂದ ನೀರು ಎತ್ತಿ ಎತ್ತಿ ಪಾತಿಗಳಿಗೆ ಮೊಗೆಯುತ್ತಿದ್ದ. ಅವನಿಲ್ಲಿಗೆ ಬಂದರೆ ಅವನಿಗೆ ಸಂತಸಕೊಡುತ್ತಿದ್ದ ಇನ್ನೊಂದು ಕೆಲಸವೆಂದರೆ ತೆಂಗಿನಮರಗಳಿಗೆ ನೀರು ಹಾಯಿಸುವುದು. ಮರದ ಸುತ್ತು ಮಣ್ಣಿನ ಕಟ್ಟೆ. ಮರದಿಂದ ಮರಕ್ಕೆ ನೀರು ಹರಿಯಲು ಮಾಡಿದ ಪಾತಿ. ಬಾವಿಯಿಂದ ದೊಟ್ಟೆಯಲ್ಲಿ ನೀರನ್ನು ಎತ್ತಿ ಸುರಿದರೆ ನೀರು ಭರಗುಡುತ್ತ ಈ ಪಾತಿಯಲ್ಲಿ ಹರಿದು ಮರಗಳ ಬಳಿ ಹೋಗುತ್ತಿತ್ತು. ಒಂದು ಮರದ ಸುತ್ತ ನೀರು ನಿಂತ ನಂತರ ಮಣ್ಣಿನ ಅಡ್ಡಗುಪ್ಪೆ ನಿರ್ಮಿಸಿ ನೀರನ್ನು ಬೇರೊಂದು ಮರಕ್ಕೆ ಹರಿಯಬಿಟ್ಟರಾಯಿತು. ರಾಬರ್ಟ್ ನೀರು ಮೊಗೆದ. ಮರಿಯಾಣ ದೊಡ್ಡಪ್ಪ ನೀರು ನಿಲ್ಲಿಸುತ್ತ ಹೋದ. ನಡುವೆ ಎತ್ತರದ ದನಿಯಲ್ಲಿ ಮಾತು.
ರಾಬರ್ಟ ಊರಿಗೆ ಹೋದ ದಿನವೇ ಸಂಜೆ ಊರ ಇಗರ್ಜಿಯಲ್ಲಿ ಬೇಸ್ಪುರ. ಸಂತನ ಹೆಸರಿನ ಧ್ವಜ ಹಾರಿಸುವುದು. ಪೂಜೆ ಮಾರನೇ ದಿನ ಹಬ್ಬ. ಹತ್ತು ಜನ ಪಾದರಿಗಳಿಂದ ವಿಶೇಷ ಗಾಯನ ಪೂಜೆ. ಇಗರ್ಜಿ ಮುಂದಿನ ಚಪ್ಪರದಲ್ಲಿ ಜನ ಜಾತ್ರೆ. ಎಷ್ಟೋ ಜನ ರಾಬರ್ಟನನ್ನು ಗುರುತಿಸಿದರು.
“ಯಾರು? ಸಿಮೋನನ ಮಗನ? ಚೆನ್ನಾಗಿದಾನ ಸಿಮೋನ? ಅವನಿಗೇನು ಊರಿನ ನೆನಪುಂಟಾ? ಅವನಿಗೇನು ಯಾರಿಗೂ ಇಲ್ಲ. ಇಲ್ಲಿಂದ ಹೋದವರೆಲ್ಲ ಊರನ್ನ ಮರೆತುಬಿಡತಾರೆ..” ಎಂದರು ಹಲವರು.
ಇಗರ್ಜಿ ಮುಂಬದಿಯಲ್ಲಿ ಮಿಂಜಿತ್. ಬೆಂತಿಣಗಳನ್ನು ಅರ್ಲೂಕ ಇಮಾಜ ಪೈನೆಲಗಳನ್ನು ಮಾರುವ ಅಂಗಡಿಗಳು. ದೇವರ ಪೀಠದ ಮುಂದೆ ಎಣ್ಣೆಯ ತೂಗುದೀಪ. ದೀಪದ ಕೆಳಗೆ ಎಣ್ಣೆ ತುಂಬಿದ ಪಾತ್ರೆ. ಜನ ಹೋಗಿ ಉದ್ಧರಣೆಯಿಂದ ದೀಪಕ್ಕೆ ಎಣ್ಣೆ ಎರೆದು ದೇವರಿಗೆ ಕೈ ಮುಗಿದು ಬರುತ್ತಿದ್ದರು. ಇಗರ್ಜಿಯ ಬಲ ಪಾರ್ಶ್ವದ ಗೋಡೆಯಲ್ಲಿ ಮೂರು ನಾಲ್ಕು ಅಡಿ ಎತ್ತರದಲ್ಲಿ ಗೋಡೆಯಲ್ಲಿ ಕೊರೆದ ಒಂದು ಪೀಠ. ಅದನ್ನು ಪುಲಪತ್ರಿ ಎಂದು ಕರೆಯುತ್ತಿದ್ದರು. ಇಲ್ಲಿ ನಿಂತು ಪಾದರಿಯ ಶೆರಮಾಂವಂ
ಸಂಜೆ ಇಗರ್ಜಿಯ ಮುಂದಿನ ವೇದಿಕೆಯಲ್ಲಿ ತಿಯಾತ್ರ, ನಾಟಕ..ಹಾಡು, ನೃತ್ಯ. ಇದನ್ನು ನೋಡಲು ಜನವೋ ಜನ.
ನಾಲ್ಕನೇ ದಿನ ಬೆಳಿಗ್ಗೆ ಮರಿಯಾಣ ದೊಡ್ಡಪ್ಪ ತೆಂಗಿನ ಗರಿ, ಹಾಳೆ ಎಲ್ಲ ರಾಶಿ ಹಾಕಿ ತೋಟದಲ್ಲಿ ಬೆಂಕಿ ಮಾಡಿದ್ದ. ಮರಿಯಾಣ ದೊಡ್ಡಪ್ಪನ ಜತೆ ರಾಬರ್ಟ್ ಹೋಗಿ ಹಿತಕರವಾಗಿದ್ದ ಬೆಂಕಿಗೆ ಮೈ ಕೈ ಕಾಯಿಸಿಕೊಳ್ಳುತ್ತ ಕುಳಿತಿದ್ದ. ನೆಂಟರು ಅಂಗಳದಲ್ಲಿ ಚಾಪೆಯ ಮೇಲೆ ಇನ್ನೂ ಹೊರಳಾಡುತ್ತಿದ್ದರು. ಮೇಲೆ ಆಕಾಶ ಬರದಾಗಿತ್ತು. ತೆಂಗಿನ ಮರಗಳ ಗರಿಗಳು ಸದ್ದು ಮಾಡುತಲಿದ್ದವು. ಕಡಲಲ್ಲಿ ಇಳಿತವಿದ್ದುದರಿಂದ ಕಡಲು ಶಾಂತವಾಗಿತ್ತು.
“ದೊಡ್ಡಪ್ಪ..ಒಂದು ಗಂಟೆ ಹನುಮಾನಿಗೆ ನಾನು ಹೊರಟೆ..” ಎಂದ ರಾಬರ್ಟ್.
“..ಇರು..ನಾಲ್ಕು ದಿನ”
“ಇಲ್ಲ ದೊಡ್ಡಪ್ಪ..ಅಲ್ಲಿ ನನಗೊಂದು ಕೆಲಸ ಇದೆ. ಕೈ ತುಂಬಾ ಸಂಬಳ ಬರಲ್ಲ..ಆದರೂ ಕೆಲಸ ಅಂತ ಒಂದು ಮಾಡಬೇಕಲ್ಲ.”
“ಅಲ್ಲ ನಿನಗೊಂದು ಮಾತು ಹೇಳುವ ಅಂತ..ಆದರೆ ಧೈರ್ಯ ಆಗೋದಿಲ್ಲ..ಯಾಕೆ ಅಂದ್ರೆ..ನಿನ್ನಪ್ಪ ಈ ಊರು ಬೇಡ ಅಂತ ಬಿಟ್ಟು ಹೋದವನು..”
“ಹೇಳಿ ದೊಡ್ಡಪ್ಪ..ಏನು?”
“ನೀನು ಇಲ್ಲಿಗೇ ಬಂದು ಬಿಡು..ಈ ತೋಟ ನೋಡಿಕೋ..ನಾನಿರೋ ತನಕ ಇದು ನಂದು..ನಂತರ ನಿನ್ನದು..ಏನಂತಿ?”
ರಾಬರ್ಟ್ ನಕ್ಕ.
“ನಗೋ ಮಾತಲ್ಲ..ನಿಜವಾಗಿಯೂ ನಾನು ಹೇಳತಿದೀನಿ..ಯೋಚನೆ ಮಾಡು..ನಿನ್ನಪ್ಪನಿಗೆ ಹೇಳಬೇಡ ಅವನು ಒಪ್ಪೋದಿಲ್ಲ..”
“ಹೋಗು ದೊಡ್ಡಪ್ಪ..”
ರಾಬರ್ಟ್ ನಗುತ್ತಲೇ ತೆಂಗಿನ ಗರಿಯೊಂದನ್ನು ಬೆಂಕಿಗೆ ಹಾಕಿದ.
ಒಂದಿಷ್ಟು ತೆಂಗಿನಕಾಯಿ, ಎಳನೀರು, ವಾಲಿಬೆಲ್ಲ, ಗೆಣಸು, ಹಗ್ಗದ ಪಿಂಡಿ ಎಂದು ದೊಡ್ಡ ಚೀಲ ಹೊತ್ತು ರಾಬರ್ಟ್ ಬಸ್ ನಿಲ್ದಾಣಕ್ಕೆ ಬಂದ. ಹನುಮಾನ ಹತ್ತಿ ಶಿರಾಲಿ ದಾಟಿ ಭಟ್ಕಳದಲ್ಲಿ ಇಳಿದು, ಕಾದು ನಿಂತ ಶಿವಸಾಗರದ ಬಸ್ಸು ಹತ್ತಿದಾಗ ದೊಡ್ಡಪ್ಪ ಹೇಳಿದ ಮಾತು ಕಿವಿಯಲ್ಲಿತ್ತು.
*
*
*
ಜವಳಿ ಅಂಗಡಿ ಸಾಹುಕಾರ ಬೋನ ತನ್ನ ಮಗನ ಮದುವೆಯ ಬಗ್ಗೆ ವಿಚಾರ ಮಾಡಿದಾಗೆಲ್ಲ ಅವನ ನೆನಪಿಗೆ ಬರುತ್ತಿದ್ದವಳು ಫ಼ಾತಿಮಾ ನಗರದ ಗುರ್ಕಾರ ಅಲೆಕ್ಸ ಪಿಂಟೋ ಮಗಳು ಸಿಲ್ವಿಯಾ. ಮುದ್ದು ಮುದ್ದಾಗಿ ದಂತದ ಗೊಂಬೆಯ ಹಾಗೆ ಇದ್ದಳು ಹುಡುಗಿ. ಅವಳ ನಮ್ರತೆ, ವಿಧೇಯತೆ, ದೈವ ಭಕ್ತಿ, ಊರವರ ಪ್ರಶಂಸೆಗೆ ಗುರಿಯಾಗಿತ್ತು. ಪಿಂಟೋನ ಹೆಂಡತಿ ಮಗ್ಗಿಬಾಯಿ ಕೊಂಚ ದೊಡ್ಡಸ್ತಿಕೆಯನ್ನು ತೋರಿಸುತ್ತಿದ್ದ ಹೆಂಗಸು. ಪಿಂಟೋ ಕೂಡ. ಆದರೆ ಇವರ ಮಗಳು ಸ್ನೇಹ ಜೀವಿ. ಸರಳೆ. ಅಂದು ತಾನು ಅಂಗಡಿಗೆ ಹೋದಾಗ ಅಂಗಡಿಯಿಂದ ಇಳಿದುಹೋದ ಈ ಹುಡುಗಿ ವಿಶೇಷವಾಗಿ ಬೋನನ ಗಮನ ಸೆಳೆದಿದ್ದಳು. ಪಾದರಿಯ ಹಿಂದೆ ತಿರುಗಾಡಿಕೊಂಡಿದ್ದ ತಾನು ಮದುವೆಯಾದದ್ದು ತಡವಾಗಿ. ಮಗನ ಮದುವೆಯಾದರೂ ಬೇಗನೇ ಆಗಲೆಂದು ಅವನು ಹೆಂಡತಿ ರೆಮೇಂದಿಯ ಬಳಿ ಮಾತನಾಡಿದ.
“ರೆಮೇಂದಿ..ಅಲ್ಲ, ಫ಼ಿಲಿಪ್ಪನ ಬಗ್ಗೆ ಏನಾದರೂ ಯೋಚನೆ ಮಾಡಿದೀಯಾ?” ಎಂದು ಕೇಳಿದ.
“ಏನು ಯೋಚನೆ ಮಾಡೋದು? ಅಂಗಡಿಯಂತೂ ಇದೆ ವ್ಯಾಪಾರ ಕೂಡ ಚೆನ್ನಾಗಿದೆ. ಮತ್ತೇನು?”
“ಅರೆ ನೀನು ಅಜ್ಜಿಯಾಗೋದು ಬೇಡವೇನೆ?”
“ಅಂದರೆ ನಿಮಗೂ ಅಜ್ಜೀ ಆಗಬೇಕು ಅನ್ನೋ ಆಸೆ ಏನೀಗ?”
“ಅವನಿಗೊಂದು ಹೆಣ್ಣು ನೋಡಬೇಕಲ್ಲ”
“ಹುಡುಗೀರು ತುಂಬಾ ಇದಾರೆ..ನೋಡಿ”
“ಹಾಗಲ್ಲ..ಫ಼ಿಲಿಪ್ಪನ ಮನಸ್ಸಿನಲ್ಲಿ ಯಾರಾದರೂ ಇದಾರೆಯೇ ಅಂತ..”
ಬೋನನಿಗೆ ಅಂದು ಆ ಹುಡೂಗಿಯನ್ನು ತನ್ನ ಅಂಗಡಿಯಲ್ಲಿ ನೋಡಿದಾಗಿನಿಂದ ಏನೋ ಅನುಮಾನ. ಆ ಹುಡೂಗಿಯ ನಗುಮುಖ, ಮಗನ ಮುಖದಲ್ಲಿ ಆಗ ಕಂಡ ಗೊಂದಲ ಅವನಿಗೆ ಎನೋ ಇದೆ ಎಂಬುದನ್ನು ಹೇಳಿತ್ತು. ಹೀಗೆಂದೇ ಆತ ಹೆಂಡತಿಗೆ ಕೇಳಿದ.
ಆವರೆಗೆ ಹಗುರವಾಗಿ ಮಾತನಾಡುತ್ತಿದ್ದ ರೆಮೇಂದಿ.
“ಅದೂ..” ಎಂದು ರಾಗ ಎಳೆದಳು.
“..ಹೇಳು..”
“ಹೇಳು ಹೇಳು..ಈ ಪ್ರಸಂಗದಲ್ಲಿ ನೀನೂ ಇದ್ದಿ..ನೆನಪಿರಲಿ..” ಎಂದ ಬೋನ ರೆಮೆಂದಿಯ ನಾಚಿದ ಮುಖ ನೋಡಿ-
“ಅಲೆಕ್ಸ ಪಿಂಟೋ ಮಗಳನ್ನು ನೀವು ನೋಡಿದೀರಾ..ಅಲ್ವ?”
“ನೋಡಿದೀನಿ..ಹುಡುಗಿ ಚೆನ್ನಾಗಿದಾಳೆ” ಎಂದ ಬೋನ. ತನ್ನ ಮನಸ್ಸಿನಲ್ಲಿ ಇರುವುದನ್ನು ಹೆಂಡತಿಯೂ ಹೇಳಿದಳಲ್ಲ ಎಂಬ ಸಂತಸದಲ್ಲಿ.
ಮುಂಬಯಿಯಿಂದ ಪಿಂಟೋ, ಅವನ ಹೆಂಡತಿ ಮಗ್ಗಿಬಾಯಿ ಶಿವಸಾಗರಕ್ಕೆ ಬಂದ ಎಷ್ಟೋ ದಿನಗಳ ನಂತರ ಅವನ ಕಿರಿಯ ಮಗಳು ಸಿಲ್ವಿಯೂ ಊರಿಗೆ ಬಂದಳು. ಅವಳ ಅಕ್ಕಂದಿರು ಮುಂಬಯಿಯಲ್ಲಿಯೇ ತಮ್ಮ ವಿದ್ಯಾಭ್ಯಾಸ ಮುಂದುವರೆಸಿದ್ದರು. ಅದೇಕೋ ಮುಂಬಯಿಯ ಜೀವನ ಹಿಡಿಸದೆ ತಂದೆ ತಾಯಿಯ ಜತೆ ಇರಲು ಬಂದಳು ಸಿಲ್ವಿಯ. ಮುಂಬಯಿಯಂತಹ ಮುಂದುವರೆದ ಶಹರಿನಲ್ಲಿ ಅಲೆಕ್ಸ ಪಿಂಟೋಗೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. ಸಿಲ್ವಿಯಾ ತಾನು ಊರಿಗೆ ಬರುತ್ತೇನೆ ಎಂದಾಗ ಮುಂದೆ ಓದುವುದಿಲ್ಲವಾದರೆ ಬಂದು ಬಿಡು ಎಂದಿದ್ದ ಪಿಂಟೋ. ಹೀಗಾಗಿ ಅವಳು ಇಲ್ಲಿಗೆ ಬಂದಳು.
ಶಿವಸಾಗರಕ್ಕೆ ಬಂದ ನಂತರ ಇಲ್ಲಿಯ ಶಾಂತ ಗೊಂದಲವಿಲ್ಲದ ಬದುಕು ಅವಳಿಗೆ ಹಿಡಿಸಿತು. ಮುಂಬಯಿಯಲ್ಲಿ ಯಾವುದಕ್ಕೂ ಸಮಯ ಸಿಗುತ್ತಿರಲಿಲ್ಲವಾದರೆ ಇಲ್ಲಿ ಕಾಲವೇ ಉರುಳುತ್ತಿರಲಿಲ್ಲ. ಮನೆಯಿಂದ ಐದು ನಿಮಿಷದ ದಾರಿ ಇಗರ್ಜಿಗೆ. ಪೇಟೆಗೆ ಹತ್ತು ನಿಮಿಷ. ತರಕಾರಿ ಮಾರ್ಕೆಟ್ಟಿಗೆ ಮೀನು ಮಾಂಸದ ಮಾರ್ಕೆಟ್ಟಿಗೆ ಮತ್ತೆ ಹತ್ತು ನಿಮಿಷ. ನೀರಿಗೆ ತೊಂದರೆ ಇಲ್ಲ. ಚಾರ್ಕೋಲು ಸೀಮೆ ಎಣ್ಣೆ ಎಂದು ಪರದಾಡಬೇಕಾಗಿಲ್ಲ.
“ಮಮ್ಮಿ..ಇಲ್ಲಿ ಎಲ್ಲ ಅನುಕೂಲ ಇದೆ ಅಲ್ವ?” ಎಂದು ತಾಯಿಯೊಂದಿಗೆ ತನ್ನ ಸಂತಸ ಹಂಚಿಕೊಂಡಳು. ಈ ವಿರಾಮ ಅವಳಿಗೆ ಓದಲು ಇಗರ್ಜಿಗೆ ಹೋಗಲು ಗೆಳತಿಯರ ಜತೆ ಸೇರಲು ಅವಕಾಶ ಕಲ್ಪಿಸಿಕೊಟ್ಟಿತು. ಆದರೂ ಅವಳಿಗೊಂದು ನಿರಾಶೆ ಇದೆ. ಈ ಊರು ಮುಂಬಯಿಯಷ್ಟು ಅತ್ಯಾಧುನಿಕವಾದುದಲ್ಲ. ಇಲ್ಲಿಯ ಜನರ ಉಡಿಗೆ, ತೊಡಿಗೆ, ಭಾಷೆ, ರೀತಿ, ನೀತಿ ಎಲ್ಲವೂ ಸುಮಾರು ಹದಿನೈದು ಇಪ್ಪತ್ತು ವರ್ಷಗಳಷ್ಟು ಹಳೆಯದು. ಹೊಸತನವನ್ನು ಕಂಡುಕೊಳ್ಳದೆ, ಹೊಸದಕ್ಕೆ ಕೂಡಲೇ ಸ್ಪಂದಿಸದ ಬದುಕು ಇಲ್ಲಿಯ ಜನರದ್ದು. ಹೀಗೆಂದೇ ಆಕೆ ಬಂದ ಹೊಸದರಲ್ಲಿ ಕೊರಗಿದ್ದೂ ಉಂಟು. ಆದರೆ ಕ್ರಮೇಣ ಅವಳು ಹೊಂದಿಕೊಂಡಳು. ನಿತ್ಯ ಪೂಜೆಗೆ ಇಗರ್ಜಿಗೆ ಹೋಗುವುದು ಅವಳ ದಿನಚರಿಯ ಮುಖ್ಯ ಅಂಗವಾಯಿತು. ಭಾನುವಾರಗಳಂದು ಜ್ಞಾನೋಪದೇಶ. ಮಿರೋಣ ಜಾನ್ ಡಯಾಸ್ ನಡೆಸುವ ಕ್ವಾಯರ್ ಇವುಗಳಲ್ಲಿ ಭಾಗವಹಿಸುವುದು ಕೂಡ ಅವಳಿಗೆ ಆಸಕ್ತಿಯ ವಿಷಯವಾಯಿತು.
ಹೀಗೆ ಜ್ಞಾನೋಪದೇಶಕ್ಕೆ ಬಂದಾಗಲೇ ಅವಳು ಊರಿನ ಯುವಕ ಯುವತಿಯರನ್ನು ಕಂಡಳು. ಮುಂಬಯಿಯ ತರುಣ, ತರುಣಿಯರ ಹಾಗೆ ಇವರ್ಯಾರೂ ಅತ್ಯಾಧುನಿಕರಾಗಿರಲಿಲ್ಲ. ಏನೋ ಹಿಂಜರಿಕೆ, ಬಳಿ ಹೋದರೆ ಹಿಂದೆ ಸರಿಯುವ ಸ್ವಭಾವ, ತಾವಾಗಿ ಯಾರನ್ನೂ ಮಾತನಾಡಿಸದ ಗುಣ ಇವರಲ್ಲಿತ್ತು. ಯುವಕರೇ ಒಂದು ಗುಂಪಾಗಿ ಯುವತಿಯರೇ ಒಂದು ಗುಂಪಾಗಿ ಪ್ರತ್ಯೇಕವಾಗಿ ನಿಲ್ಲುತ್ತಿದ್ದರು. ಇವರೆಲ್ಲರ ನಡುವೆ ಯಾರ ಬಗ್ಗೆಯೂ ಆಕರ್ಷಿತಳಾಗದ ಸಿಲ್ವಿಯಾ ಮೊದಲ ಬಾರಿಗೆ ಬೋನನ ಮಗ ಫ಼ಿಲಿಪ್ಪನನ್ನು ಕಂಡು ಕುತೂಹಲಗೊಂಡಳು. ಹತ್ತು ಜನರ ನಡೂವೆಯೂ ಎದ್ದು ಕಾಣುವ ನಡೆ, ನುಡಿ, ನಗು, ಮಾತು ಅವನಲ್ಲಿತ್ತು. ಇಗರ್ಜಿಯಲ್ಲಿ ಭಯ, ಭಕ್ತಿಯಿಂದ ವರ್ತಿಸುತ್ತಿದ್ದ. ಜ್ಞಾನೋಪದೇಶವನ್ನು ಶೃದ್ಧೆಯಿಂದ ಕಲಿತು ಒಪ್ಪಿಸುತ್ತಿದ್ದ. ಸ್ನೇಹಿತರ ಜತೆ ಗಂಭೀರವಾಗಿ ವರ್ತಿಸುತ್ತಿದ್ದ.
ಫ಼ಿಲಿಪ್ಪನಿಗೆ ಕೂಡ ಪ್ರತಿಯಾಗಿ ಸಿಲ್ವಿಯಾ ವಿಶೇಷವಾಗಿ ಕಂಡಳು. ಮುಂಬಯಿಯಿಂದ ಬಂದ ಹುಡುಗಿ ಎಂದು ಮೊದಲೇ ಪ್ರಚಲಿತವಾಗಿತ್ತು. ಅವಳ ಉಡಿಗೆ ತೊಡಿಗೆಗಳಲ್ಲಿ ಆಕರ್ಷಣೆ ಇತ್ತು. ಅವಳ ನಿಧಾನ ಪ್ರವೃತ್ತಿ ಅವಳ ಇಡೀ ವ್ಯಕ್ತಿತ್ವಕ್ಕೆ ಶೋಭೆ ತಂದಿತ್ತು. ಸಿಲ್ವಿಯಾ ಸಿಲ್ವಿಯಾ ಎಂದು ಎಲ್ಲ ಹುಡುಗಿಯರು ಇವಳ ಸುತ್ತ ನೆರೆಯುತ್ತಿದ್ದರು. ಇಗರ್ಜಿಯ ಸಮಸ್ತ ಕೆಲಸಗಳಿಗೂ ಸಿಲ್ವಿಯಾ ಬೇಕಾಗುತ್ತಿದ್ದಳು.
ಇವರೀರ್ವರ ಈ ಸ್ವಭಾವ ಅವರನ್ನು ಹತ್ತಿರ ಹತ್ತಿರ ತಂದಿತು. ಮೊದ ಮೊದಲು ನೋಡಿ ನಗುತ್ತಿದ್ದವರು ಮಾತುಕತೆಯಲ್ಲಿ ಮೈ ಮರೆತರು. ಪರಸ್ಪರ ನೋಡಲು ಮಾತನಾಡಲು ಹಾತೊರೆಯತೊಡಗಿದರು. ಮುಂಬಯಿಯ ಈ ಹುಡುಗಿ ಒಂದು ಹೆಜ್ಜೆ ಮುಂದೆ ಹೋಗಿ, ಪೇಟೆಗೆ ಬಂದಾಗಲೆಲ್ಲ ತನ್ನ ತಂದೆಯ ಅಂಗಡಿಗೆ ಹೋಗಿ ಸ್ವಲ್ಪ ಹೊತ್ತು ಕಳೆಯುವಂತೆಯೇ ಬೋನನ ಅಂಗಡಿಗೂ ಬರತೊಡಗಿದಳು. ಅಂಗಡಿಯಲ್ಲಿ ಫ಼ಿಲಿಪ್ಪ ಇರುವ ಸಮಯ ನೋಡಿ ಇಲ್ಲಿ ಬಂದು ಕುಳಿತು ಹೋಗತೊಡಗಿದಳು.
ಇಷ್ಟು ಹೊತ್ತಿಗೆ ಅವರಿಬ್ಬರೂ ಪರಸ್ಪರ ಬಯಸತೊಡಗಿದ್ದರು. ಫ಼ಿಲಿಪ್ಪ ತಾಯಿಯ ಎದುರು ತನ್ನ ಮನದಾಸೆಯನ್ನು ತೋಡಿಕೊಂಡ ಕೂಡ.
“ನೋಡೋಣ” ಎಂದಳು ರೇಮೇಂದಿ. ಅವಳಿಗೂ ಮಗನ ಆಯ್ಕೆ ಸೂಕ್ತವೆನಿಸಿತು. ಹುಡುಗಿ ಲಕ್ಷಣವಾಗಿದ್ದಾಳಲ್ಲ.
ಗಂಡ ಮಗನ ಮದುವೆಯ ವಿಷಯ ಎತ್ತಿದಾಗ ರೆಮೇಂದಿಗೆ ಸಂತಸವಾಯಿತು. ಕೂಡಲೇ ಅವಳು ಮಗನ ಆಯ್ಕೆಯ ಬಗ್ಗೆ ಹೇಳಿದಳು.
“ಅಂತು ನಮ್ಮ ದಾರೀನ ಅವರೂ ಹಿಡಿದರು” ಎಂದು ನಕ್ಕ ಬೋನ.
“..ಆಯ್ತಲ್ಲ..ಈಗ ಮುಂದಿನ ಮಾತಾಡಿ..ಬೇಗನೆ ಮದುವೆ ಮಾಡಿ ಬಿಡೋಣ” ಎಂದು ಒಂದು ರೀತಿಯಲ್ಲಿ ಅವಸರಿಸಿದಳು ರೆಮೇಂದಿ.
“ನಿಲ್ಲು ನಿಲ್ಲು..ಅವಸರ ಮಾಡಬೇಡ” ಎಂದ ಬೋನ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಅಲ್ಲವೇ?
*
*
*
ಆ ಕಾಲ ಕೂಡಿ ಬಂದಿತು.
ಅಂಗಡಿಗೆ ಬಂದ ಗುರ್ಕಾರ ಸಿಮೋನನ ಹತ್ತಿರ ಬೋನ ಈ ವಿಷಯ ಪ್ರಸ್ತಾಪಿಸಿದ.
“ಹೌದ? ಒಳ್ಳೆಯ ಯೋಚನೆ. ಗಂಡಿನ ಕಡೆಯವರೇ ಹೆಣ್ಣಿನ ಮನೆಗೆ ಹೋಗೋದು ನಮ್ಮಲ್ಲಿ ಪದ್ದತಿ ಅಲ್ಲವೇ? ನಾನು ನೀನು ಹೋಗಿ ಬರೋಣ..” ಎಂದ ಸಿಮೋನ.
ಆದರೆ ಸಿಮೋನನ ಮನಸ್ಸಿನಲ್ಲಿ ಒಂದು ವಿಚಾರವಿತ್ತು. ಈ ಜನ ಪಿಂಟೋ, ಡಯಾಸ್ ಮೊದಲಾದವರು ಏನೋ ಒಂದು ರೀತಿಯಲ್ಲಿ ವರ್ತಿಸುತ್ತಾರೆ. ಬೀಗಿ ನಿಲ್ಲುತ್ತಾರೆ. ಅವರು ಬೋನನ ಮನೆಗೆ ಹೆಣ್ಣು ಕೊಟ್ಟಾರೆಯೇ? ಹಾಗೆಂದು ಬೋನನ ಮಗ ಫ಼ಿಲಿಪ್ಪನಿಗೆ ಊರ ತುಂಬಾ ಗೌರವವಿದೆ. ಅವನ ಜವಳಿ ಅಂಗಡಿ ಕೂಡ ಊರಿನ ಜವಳಿ ಅಂಗಡಿಗಳಲ್ಲಿ ಶ್ರೀಮಂತವಾದದ್ದು. ಇಲ್ಲಿ ಹುಡುಗಿಗೂ ಮನಸ್ಸಿರುವುದರಿಂದ ಅವರು ಒಪ್ಪಬಹುದು. ನೋಡೋಣ ಅಂದುಕೊಂಡ ಸಿಮೋನ. ಮೊದಲೇ ಅಪಸ್ವರದ ಮಾತನಾಡಿ ಬೋನನ ಮನಸ್ಸಿಗೆ ನೋವು ಮಾಡುವುದೇಕೆ ಎಂದು ಸುಮ್ಮನಾದ.
ಭಾನುವಾರ ಗುರ್ಕಾರ ಅಲೆಕ್ಸ ಪಿಂಟೋಗೆ ಸಿಮೋನ-
“..ಪಿಂಟೋ ಮಾಮ..ಒಂದು ಕೆಲಸಕ್ಕೆ ನಿಮ್ಮಲ್ಲಿಗೆ ಬರಬೇಕೂಂತ ಇದೆ…ಸಾಯಂಕಾಲ ಮನೇಲಿ ಇರತೀರಾ?” ಎಂದು ಕೇಳಿದ.
“ಬನ್ನಿ..ನಿಮಗೆ ಗೊತ್ತಲ್ಲ..ಸಾಯಂಕಾಲ ಆರು ಗಂಟೆಗೆ ಇಗರ್ಜಿಯಲ್ಲಿ ದಿವ್ಯ ಪ್ರಸಾದದ ಆಶೀರ್ವಾದ..”
“ನಮ್ಮದೇನಿದ್ದರೂ ಅರ್ಧ ಗಂಟೆಯ ಮಾತು..ನಾನು ಜವಳಿ ಅಂಗಡಿ ಸಾಹುಕಾರರು ಬರತೇವೆ..” ಎಂದ ಸಿಮೋನ.
ಜವಳಿ ಅಂಗಡಿಯ ಸಾಹುಕಾರರು ಅಂದ ಕೂಡಲೆ ಪಿಂಟೋನ ಹಣೆಯ ಮೇಲೆ ಗೆರೆಗಳು ಮೂಡಿದವು. ಏಕೆ? ಏನು? ಎಂದಾತ ಯೋಚಿಸಿದ, ಆದರೂ-
“..ಬನ್ನಿ..ಬನ್ನಿ..” ಎಂದ ತನ್ನ ಮಂಗಳೂರಿನ ಶೈಲಿಯಲ್ಲಿ.
*
*
*
ನಾಲ್ಕು ಗಂಟೆಗೆ ಬೋನ ಸಿಮೋನನ ಜತೆ ಸೇರಿ ಫ಼ಾತಿಮಾ ನಗರದ ಅಲೆಕ್ಸ ಪಿಂಟೋ ಮನೆಗೆ ಬಂದ. ಹಿಂದೆ ಬಾಡಿಗೆಗೆ ಹಿಡಿದ ಮನೆಯನ್ನೇ ಕೊಂಡು ಹೊಸದಾಗಿ ಕಟ್ಟಿಸಿ ಅದಕ್ಕೆ ’ಹೋಲಿಕ್ರಾಸ್’ ಎಂಬ ಹೆಸರನ್ನು ಇಟ್ಟಿದ್ದ ಪಿಂಟೋ. ಮನೆಯ ಮುಂದೆ ಕಂಪೌಂಡು ಒಳಗೆಲ್ಲ ಕುಂಡದ ಗಿಡಗಳು. ನಾಯಿ ಇದೆ ಎಚ್ಚರಿಕೆ ಎಂಬ ಇಂಗ್ಲೀಷ ಬೋರ್ಡಿನೊಂದಿಗೆ ಸದಾ ಮಗ್ಗಿ ಬಾಯಿಯ ಹಿಂದೆಯೇ ತಿರುಗಾಡುವ ಒಂದು ಪೊಮೆರಿನ. ಬಾಗಿಲ ಮೇಲ ಬದಿಯಲ್ಲಿ ಶಿಲುಬೆಗೇರಿದ ಕ್ರಿಸ್ತನ ಪೈನಲ. ಒಳಗೆ ವಿಶೇಷವಾಗಿ ಅಲಂಕರಿಸಿದ ಅಲ್ತಾರ. ಅಲ್ಲಲ್ಲಿ “ದೇವರೇ ಈ ಮನೆಯನ್ನು ನಿನ್ನ ಕೃಪಾದೃಷ್ಟಿಯಿಂದ ಹರಿಸು”, “ಪ್ರಾರ್ಥನೆ ಈ ಮನೆಯ ಶಕ್ತಿ”, ಬೇಡಿಕೊಳ್ಳಿರಿ ನಿಮಗೆ ದೊರೆಯುವುದು, ಹುಡುಕಿರಿ ನಿಮಗೆ ಸಿಕ್ಕುವುದು. ತಟ್ಟಿರಿ ನಿಮಗೆ ತೆರ್ಯುವುದು” “ದೇವರು ನಿಮ್ಮನ್ನು ಪ್ರೀತಿಸುವಂತೆ ನೀವು ಪರರನ್ನು ಪ್ರೀತಿಸಿರಿ” ಎಂಬ ವಾಕ್ಯಗಳಿರುವ ಫ಼ಲಕಗಳು. ಅತಿ ಸುಂದರವಾದ ಮರದ ಪೀಠೋಪಕರಣಗಳು ಒಂದು ರೇಡಿಯೋ, ಒಂದು ಗ್ರಾಮಫ಼ೋನ ಪೆಟ್ಟಿಗೆ. ಮರದ ಬೀರುಗಳು.
“ಕುಳಿತುಕೊಳ್ಳಿ” ಎಂದ ಪಿಂಟೋ ಒಳಬಂದ ಸಿಮೋನ, ಬೋನರಿಗೆ. ಮಗ್ಗಿಬಾಯಿ ಬಾಗಿಲಲ್ಲಿ ಕಾಣಿಸಿಕೊಂಡು
“ಚೆನ್ನಾಗಿದ್ದೀರಾ..?” ಎಂದು ಕೇಳಿ ಮರೆಯಾದಳು.
ಮನೆ ಕೆಲಸದ ಹುಡುಗಿ, ಹಂದಿ ಗುಸ್ತೀನನ ಮಗಳು ಕೊಳೆ ಲಂಗವನ್ನು ಮೇಲೆತ್ತಿ ಸಿಕ್ಕಿಸಿಕೊಂಡು ಒಂದು ತಟ್ಟೆಯಲ್ಲಿ ಎರಡು ಕಪ್ಪುಗಳನ್ನು ಇರಿಸಿಕೊಂಡು ಬಂದು ಎದುರು ಇಟ್ಟು ಹೋದಳು.
“..ಮತ್ತೇ?” ಎಂಬಂತೆ ಪಿಂಟೋ-
“ಕಿತೆಂ” ಎಂದು ಕೇಳಿ ಸಿಮೋನನ ಮುಖ ನೋಡಿದ.
“ನೇರವಾಗಿ ನಾನು ವಿಷಯಕ್ಕೆ ಬರತೇನೆ..ಮಗಳು ಸಿಲ್ವಿಯಾ ಮದುವೆ ಮಾಡುವ ವಿಚಾರ ಇದೆ ಅಂತ ಕೇಳಿದೆ” ಎಂದು ಸಿಮೋನ ಪೀಠಿಕೆ ಹಾಕಿದ.
ಮಿರೋಣ ಡಯಾಸ್ ಸಿಮೋನನ ಜತೆ ಮಾತನಾಡುತ್ತ ಕೆಲ ದಿನಗಳ ಹಿಂದೆ ಈ ಮಾತನ್ನು ಹೇಳಿದ್ದ. ಮಗಳು ಮುಂಬಯಿಯಿಂದ ಬಂದಿದ್ದಳು. ಮದುವೆಯ ವಯಸ್ಸು. ಇವಳ ಹಿಂದೆ ಇನ್ನೂ ಇಬ್ಬರಿದ್ದಾರೆ. ಸೂಕ್ತ ಹುಡುಗರು ಕಣ್ಣಿಗೆ ಕಾಣುತ್ತಿಲ್ಲ. ಇಲ್ಲಿರುವವರೆಂದರೆ ಕಲ್ಲು ಗಾರೆ ಕೆಲಸಗಾರರು, ದರ್ಜಿಗಳು, ಅಟೆಂಡರು, ಪ್ಯೂನುಗಳು ಹೀಗೆಂದೇ ಆತ ಡಯಾಸ್ ಹತ್ತಿರ ಮಾತನಾಡಿದ್ದ. ಡಯಾಸನ ಮಗ ಜಾಕೋಬ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದುದು ಬಹಳ ದಿನಗಳಿಂದ ಪಿಂಟೋನ ಗಮನದಲ್ಲಿತ್ತು. ಹಾಗೆಯೇ ಡಯಾಸ ತನ್ನ ಮಗನಿಗೆ ಮಂಗಳೂರಿನಲ್ಲಿ ಒಂದೂವರೆ ಲಕ್ಷ ರೂಪಾಯಿ ಕೊಡುವ ಒಂದು ಹೆಣ್ಣನ್ನು ನೋಡಿದ್ದಾನೆ ಎಂಬ ವಿಷಯ ಕೂಡ ತಿಳಿದಿತ್ತು. ಆದರೂ ಇರಲಿ ಎಂದು ಒಂದು ಮಾತು ಹೇಳಿದ್ದ. ಈ ಮಾತನ್ನು ಡಯಾಸ್ ಸಿಮೋನನ ಮುಂದೆ ಆಡಿದ್ದ. ಅದು ಈಗ ಉಪಯೋಗಕ್ಕೆ ಬಂದಿತು.
“ಹೌದು..ಒಳ್ಳೇ ಕಡೆ ಸಂಬಂಧ ಸಿಕ್ಕರೆ ಮಾಡೋದೇ” ಎಂದ ಪಿಂಟೋ.
ಸಿಮೋನ ತಾನು ಬೋನನ ಜತೆ ಬರುವುದಾಗಿ ಹೇಳಿದಾಗಲೇ ಏನೋ ಪರಿಮಳ ಅವನ ಮೂಗಿಗೆ ಅಡರಿತ್ತು. ಬೋನನ ಜವಳಿ ಅಂಗಡಿ ಶಿವಸಾಗರದಲ್ಲಿಯೇ ಹೆಸರುವಾಸಿಯಾಗಿತ್ತು. ಅದನ್ನೀಗ ಬೋನನ ಮಗ ಫ಼ಿಲಿಪ್ಪ ನೋಡಿಕೊಳ್ಳುತಲಿದ್ದ. ಒಳ್ಳೆಯ ಹುಡುಗ. ಊರಿನ ಇತರೆ ಕ್ರೈಸ್ತ ಯುವಕರ ಹಾಗೆ ಕುಡಿತ ಇತ್ಯಾದಿ ಇಲ್ಲ. ಸಿಲ್ವಿಯಾಗೆ ತಕ್ಕ ವರ ಆದಾನು ಎಂದು ಕೂಡ ಅನಿಸಿತ್ತು. ಆದರೆ ಇದೆಲ್ಲ ಇತ್ತೀಚಿನ ಬೆಳವಣಿಗೆ, ನಿನ್ನೆ ಮೊನ್ನೆ ಆದ ಬೆಳವಣಿಗೆ. ನೋಡೋಣ ಮಾತು ಬಂದರೆ ವಿಚಾರ ಮಾಡೋಣ ಎಂದು ಕೂಡ ಯೋಚಿಸಿದ್ದ. ಹೀಗಾಗಿ ಮನೆ ಬಾಗಿಲಿಗೆ ಬಂದ ಸಿಮೋನ, ಬೋನರನ್ನು ಸ್ವಾಗತಿಸಿದ್ದ.
“ನಾನು ಬೋನ ಸಾಹುಕಾರರು ಬಂದಿರೋದು ಅದಕ್ಕೇನೆ. ನಮ್ಮ ಸಂಪ್ರದಾಯದ ಪ್ರಕಾರ ಗಂಡಿನವರೇ ಹೆಣ್ಣನ್ನು ಕೇಳಿಕೊಂಡು ಬರಬೇಕಲ್ಲ..ನೀವೂ ಹುಡುಗನ್ನ ನೋಡಿದೀರಾ..ನಾವೂ ಹುಡುಗೀನ ನೋಡಿದ್ದೀವಿ..ಹುಡುಗ ಹುಡುಗಿ ಇಬ್ಬರೂ ಪರಸ್ಪರ ಪರಿಚಯ ಇರುವವರೆ..ಬೋನ ಸಾಹುಕಾರರ ಮಗ ಫ಼ಿಲಿಪ್ಪನ ಬಗ್ಗೆ ನೀವು ವಿಚಾರ ಮಾಡಬಹುದು..ಯೋಚಿಸಿ ನಿಧಾನ ಹೇಳಿ..” ಎಂದು ಸಿಮೋನ ಸವಿಸ್ತಾರವಾಗಿಯೇ ಹೇಳಿ ಇನ್ನು ಕೆಲಸವಾಯಿತು ಎಂಬಂತೆ ಎದ್ದ. ಅವನ ಹಿಂದೆ ಬೋನ ಕೂಡ.
“ಆಯ್ತು ನಾವೂ ಕೇಳಬೇಕು..ನಮ್ಮ ನೆಂಟರು ಇಷ್ಟರು ಅಂತ ಇದಾರೆ ಅವರಿಗೆ ತಿಳಿಸಬೇಕು..” ಎಂದು ಪಿಂಟೋ ನುಡಿದು ಕೊನೆಗೆ
“..ನಮ್ಮಿಬ್ಬರದ್ದು ಒಂದೇ ಡಯಾಸಿಸ್ ಅಲ್ವೆ..ದಿನ ಬೆಳಗಾದರೆ ನಿಮ್ಮ ಮುಖ ನಾವು ನಮ್ಮ ಮುಖ ನೀವು ನೋಡತಿರತೀವಿ..ಹೇಳತೀನಿ..” ಎಂದ. ಬಾಗಿಲವರೆಗೂ ಬಂದು ಇವರನ್ನು ಬೀಳ್ಕೊಡುವಾಗ ಪಾಮೊರಿನ ಕಾಣಿಸಿಕೊಂಡಿತು. ಹಿಂದೆಯೇ ಮಗ್ಗಿಬಾಯಿ.
*
*
*
ಇಗರ್ಜಿಯಲ್ಲಿ ದಿವ್ಯಪ್ರಸಾದದ ಆಶೀರ್ವಾದ ಮುಗಿಸಿಕೊಂಡು ಮನೆಗೆ ಬರುವಾಗ ಹಿಂದೆಯೇ ಜಾನ್ ಡಯಾಸ್ ನ ಹೆಂಡತಿ ಸಿಸಿಲ ತನ್ನ ಹೆಂಡತಿ ಮಗ್ಗಿಬಾಯಿಯ ಜತೆ ಬರುತ್ತಿರುವುದನ್ನು ಪಿಂಟೋ ಕಂಡ. ಅಷ್ಟು ದೂರ ಒಬ್ಬರ ಕಿವಿ ಒಬ್ಬರು ಕಚ್ಚುತ್ತ, ಮಗ್ಗಿಬಾಯಿಯ ಮುಖದ ಮೇಲೆ ಹತ್ತು ಗಂಟುಗಳು ಬಿದ್ದಿರಲು, ಸಿಸಿಲ ಉತ್ಸುಕತೆಯಿಂದ ಏನನ್ನೋ ಹೇಳುತ್ತಿರಲು, ಪಿಂಟೋ ತನ್ನ ಪಾಡಿಗೆ ನಡೆದುಕೊಂಡು ಮನೆಗೆ ಬಂದ. ಹಿಂದಿನಿಂದ ಬಂದ ಮಗ್ಗಿಬಾಯಿ ಕಾಲಿಗೆ ತೊಡರಿಕೊಳ್ಳುತ್ತಿದ್ದ ಪಾಮೊರಿನ್ ಅನ್ನು ಅತ್ತ ತಳ್ಳಿ ತನ್ನ ಕೋಣೆಗೆ ಹೋಗಿ ಬಾಗಿಲ ಹಾಕಿಕೊಂಡಾಗ ಪಿಂಟೋ ತೀರ್ಥದ ಬಟ್ಟಲಿಗೆ ಕೈ ಹಾಕಿದಾಗ ಬಟ್ಟಲು ಗೂಡಿನಲ್ಲಿದ್ದ ಚೇಳು ಕೈಗೆ ಕಟುಕಿದಂತಾಗಿ ಗಾಬರಿಗೊಂಡು ಹೆಂಡತಿಯ ಕೋಣೆ ಹೊಕ್ಕ.
“..ಮಗ್ಗಿ, ಸಿಸಿಲ ಏನಂತೆ?” ಎಂದು ಆತಂಕದಿಂದಲೇ ಕೇಳಿದ.
“ನೀವು ಸಿಮೋನನಿಗೆ ಒಪ್ಪಿಗೆ ಕೊಡಬಾರದಿತ್ತು.”
“ಅಲ್ಲ ನಾನೆಲ್ಲಿ ಒಪ್ಪಿಗೆ ಕೊಟ್ಟಿದ್ದೀನಿ ನೊಡೋಣ ಅಂದೆ. ನಿನ್ನ ಅಣ್ಣ ತಮ್ಮಂದಿರಿಗೆ ಹೇಳದೆ ಕೇಳದೆ ನಾನು ಒಪ್ಪಿಗೆ ಕೊಡೋದುಂಟ.”
“ಆದರೂ ನೀವು ಅವರನ್ನ ಇಲ್ಲಿಗೆ ಕರೀಬಾರದಿತ್ತು..ಇಗರ್ಜಿ ಹತ್ತಿರಾನೆ ಏನಾದರೂ ಹೇಳಿ ಕಳುಹಿಸಬೇಕಿತ್ತು.”
“ಅರೇ ಜೀಸಸ್ ! ಏನಾಯಿತು ಈಗ?” ಪಿಂಟೋ ಮತ್ತೂ ಗಾಬರಿಗೊಂಡ.
“ಹುಡುಗ ಹೆಚ್ಚು ಓದಿಲ್ಲ”
“ಹೌದು..ಮೆಟ್ರಿಕ್ ಆಗಿದೆ”
“ಮನೆ ಕಡೆ ಅನುಕೂಲವಾಗಿಲ್ಲ”
“ಆದರೂ ಒಂದು ಮನೆ ಇದೆ..ಜವಳಿ ಅಂಗಡಿ ಇದೆ..ಐವತ್ತು ಅರವತ್ತು ಲಕ್ಷದ ಆಸ್ತಿ..ನನ್ನ ಅಂಗಡಿಗಿಂತ ದೊಡ್ಡದು..”
“ಆದರೂ ನಾವು ಈ ಊರಿಗೆ ಹೊಸಬರು..ಹೆಚ್ಚು ವಿಚಾರ ಮಾಡಬೇಕು..”
“ಅದು ನಿಜ. ಏನಂತೆ ಈಗ?”
“ಹುಡುಗನ ತಂದೆ ಕನವರ್ಟ್ ಆದವನಂತೆ..”
“ಅರೇ! ಜೀಸಸ್. ನಾವೆಲ್ಲ ಕನವರ್ಟ್ ಆದವರೇ ಅಲ್ವ..ಜೀಸಸ್ ಕ್ರೈಸ್ತ ಕೂಡ ಯಹೂದಿ.”
“ಅದಲ್ಲ ನಾನು ಹೇಳಿದ್ದು..ಹುಡುಗನ ತಂದೆ ನೇಂದರ್..ತಾಯಿ ಚಾರ್‍ಡಿ”
“ಓ!”
ಈ ಬಾರಿ ಗಂಟೆ ಹೊಡೆಯುತ್ತಿರುವಾಗ ಗಂಟೆಯ ನಾಲಿಗೆ ಒಂದು ನೆತ್ತಿಗೆ ಅಪ್ಪಳಿಸಿದಂತಾಗಿ ಪಿಂಟೋ ಕುಸಿದ. ಸುಧಾರಿಸಿಕೊಳ್ಳಲು ಅವನಿಗೆ ಐದಾರು ನಿಮಿಷಗಳು ಬೇಕಾದವು.
ಬೋನ ಬಾಮಣ ಮೂಲದವನಲ್ಲ ಎಂಬುದು ಗೊತ್ತಿತ್ತು. ಆತ ಚಾರಡಿ, ಗೌಡಿ ಆಗಿರಬಹುದು ಎಂದು ಆತ ತಿಳಿದುಕೊಂಡಿದ್ದ. ಆದರೆ ಆತ ನೇಂದರ ಮೂಲದವನು ಎಂಬುದು ತಿಳಿದಾಗ ಮನಸ್ಸಿಗೆ ಕಸಿವಿಸಿಯಾಯಿತು. ಸದ್ಯ ಇದು ಬೇಗನೆ ತಿಳಿಯಿತಲ್ಲ ಎಂದು ಆತ ಬಿಡುಗಡೆಯ ಉಸಿರು ಬಿಟ್ಟ.
*
*
*
ಸಾಂತಾ ಮೊರಿಯ ಮಗಳು ನಾತೇಲ ಊರು ಊರು ತಿರುಗಿ ಬೆಳಗಾಂನ ರುಕ್ಮಿಣಿ ತಾಯಿಯ ಅಬಲಾಶ್ರಮ ಸೇರಿದರೂ ಅವಳಿಂದ ಮಾತೆ ಮೇರಿಯನ್ನು ಏಸು ಪ್ರಭುವನ್ನು ಮರೆಯಲಾಗಲಿಲ್ಲ. ಟಿಳಕವಾಡಿಯ ಇಗರ್ಜಿಯ ಗಂಟೆ ಅವಳನ್ನು ಪ್ರಾರ್ಥನೆಗೆ ಪೂಜೆಗೆ ಕರೆಯಿತು. ತಾನು ಮೋಹ ಪಾಪಕ್ಕೆ ಗುರಿಯಾಗಿ ಮಾಡಬಾರದ ಅಪರಾಧವನ್ನು ಮಾಡಿದ್ದೇನೆ ಎಂಬ ಕೊರಗು ಅವಳನ್ನು ಕಾಡುತ್ತಲೇ ಇತ್ತು. ಧಾಜಣ ನೀಡೂವ ಶಿಕ್ಷೆಯಿಂದ ತಾನು ತಪ್ಪಿಸಿಕೊಂಡು ಬಂದಿದ್ದರೂ, ತಪ್ಪು ತಪ್ಪೇ ಅಲ್ಲವೇ ಎಂದವಳು ವಿಚಾರ ಮಾಡಿದಳು. ಈ ಕಾರಣದಿಂದಲೇ ಅವಳು ಟಿಳಕವಾಡಿಯ ಇಗರ್ಜಿಗೆ ಹೋಗಿ ಪಾಪ ನಿವೇದನೆ ಮಾಡಿಕೊಂಡಿದ್ದಳು. ತಾನು ಮಾಡಿದ ತಪ್ಪಿಗಾಗಿ ತಾನು ಪಶ್ಚಾತ್ತಾಪ ಪಡುತ್ತೇನೆ ಎಂದಳು. ತನ್ನ ಬಸಿರಲ್ಲಿ ಬೆಳೆಯುತ್ತಿರುವ ಮಗುವನ್ನು ಸಾಯಿಸಲು ತಾನು ತನ್ನ ತಾಯಿ ಪ್ರಯತ್ನಿಸಿದ್ದನ್ನು ಹೇಳಿದಳು. ವೈಜಿಣ್ ಕತ್ರೀನ ಇಂತಹ ಪಾಪಕಾರ್ಯವನ್ನು ತಾನು ಮಾಡುವುದಿಲ್ಲ ಎಂದಾಗ ನಾತೇಲ ಈ ಬಗ್ಗೆ ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದಳು. ಯಾರದ್ದೋ ಮಗುವನ್ನು ಕೊಲ್ಲುವುದು ಅವಳಿಗೆ ಪಾಪ ಎಂದೆನಿಸಿದರೆ ತನ್ನದೇ ಮಗುವನ್ನು ಕೊಲ್ಲಲು ತಾನೇಕೇ ಮುಂದಾಗಬೇಕು ಎಂಬ ವಿಚಾರ ಮನಸ್ಸಿನಲ್ಲಿ ಬಂದು ಈ ಮಗುವಿಗಾಗಿ ತಾನು ಬದುಕಬೇಕು ಎಂದು ಧಾಜಣರ ಶಿಕ್ಷೆಯಿಂದ ತಪ್ಪಿಸಿಕೊಂಡು ಬಂದೆ ಎಂದು ಪಾದರಿಗಳ ಬಳಿ ವಿವರವಾಗಿ ಹೇಳಿಕೊಂಡಳು.
“ನಿನಗೆ ನಿನ್ನ ತಪ್ಪುಗಳ ಬಗ್ಗೆ ನಿಜವಾಗಿಯೂ ಪಶ್ಚಾತ್ತಾಪವಾಗಿದ್ದರೆ ನಾನು ದೇವರ ಹೆಸರಿನಲ್ಲಿ ನಿನ್ನನ್ನು ಕ್ಷಮಿಸುತ್ತೇನೆ. ನಿನ್ನ ಮಗುವನ್ನು ನೀನು ಕಾಪಾಡಿಕೊಂಡು ಆ ಮಗುವಿಗೆ ಕ್ರೈಸ್ತ ಶಿಕ್ಷಣ ನೀಡು, ನೀನು ಮತ್ತೆ ದಾರಿ ತಪ್ಪಬೇಡ..” ಎಂದರು ಟಿಳಕವಾಡದ ಪಾದರಿ.
ನಾತೇಲ ಅಂತೆಯೇ ನಡೆದುಕೊಂಡಳು ಕೂಡ. ಹೆರಿಗೆಯಾದ ಮೇಲೆ ಮಗುವಿಗೆ ಡೇನಿಯಲ್ ಎಂದು ಹೆಸರಿಟ್ಟಳು. ಆಶ್ರಮದಲ್ಲಿ ಜಪ ಪ್ರಾರ್ಥನೆ ಸಲ್ಲಿಸಲು ಅವಕಾಶವಿತ್ತು. ಇಗರ್ಜಿಗೆ ಹೋಗಿ ಬರಲು ಅನುಮತಿ ಇತ್ತು. ನಾತೇಲ ಊರು ಬಿಟ್ಟರೂ ದೇವರನ್ನು ಬಿಡಲಿಲ್ಲ.
ನಂತರ ಕುರ್ಡೇಕರ ಮನೆಯನ್ನು ಸೇರಿದ ಮೇಲೂ ಅವಳು ದೇವರನ್ನು ದೂರಮಾಡಲಿಲ್ಲ. ಮಾಡಬೇಕು ಎಂದು ಅವಳಿಗೆ ಅನಿಸಲಿಲ್ಲ.
ಮಗನಿಗೆ ಎಲ್ಲವನ್ನೂ ಹೇಳಿಕೊಟ್ಟಳು.
ಶಿಲುಬೆಯ ಗುರುತು, ಪರಲೋಕ ಮಂತ್ರ, ನಮೋ ರಾಣೆ ಮಂತ್ರ, ದೇವರ ದಶ ಕಟ್ಟಲೆಗಳು, ಸಂಸ್ಕಾರಗಳು, ಇಗರ್ಜಿ ಮಾತೆಯ ಕಟ್ಟಲೆಗಳು ಹೀಗೆ ಶುದ್ಧ ಕ್ರಿಸ್ತುವನಾಗಿಯೇ ಮಗ ಬೆಳೆದ. ಹತ್ತು ಹನ್ನೆರಡನೇ ವಯಸ್ಸಿಗೆ ದಿವ್ಯ ಪ್ರಸಾದ ಕೊಡಿಸಿದಳು. ನಿತ್ಯಮನೆಯಲ್ಲಿ ಪ್ರಾರ್ಥನೆ ತೇರ್ಸ ತಪ್ಪಿಸಲಿಲ್ಲ. ಭಾನುವಾರದಂದು ಪೂಜೆಗೆ ತಾಯಿ ಮಗ ಹೋಗಿ ಬರುತ್ತಿದ್ದರು.
ಕುರ್ಡೇಕರ ಮನೆಯವರು ಇವಳ ಧಾರ್ಮಿಕ ಚಟುವಟಿಕೆಗಳಿಗೆ ಏನೂ ತೊಂದರೆ ಮಾಡಲಿಲ್ಲ.
ತನ್ನ ಊರು ಮನೆಯಿಂದ ದೂರವಿದ್ದರೂ ದೇವರು ದೇವಮಾತೆ ತನ್ನ ಬಳಿ ಇದ್ದಾರೆ ಎಂಬ ನಂಬಿಕೆ ಅವಳಿಗಿತ್ತು. ಜನ ಅವಳ ಕುಟುಂಬದ ಬಗ್ಗೆ ಕೇಳುತ್ತಿದ್ದರು. ಡೇನಿಯಲ್ ತಂದೆ ಎಲ್ಲಿದ್ದಾನೆ? ಬೇರೆ ಸಂಬಂದಿಕರು, ತಂದೆ ತಾಯಿ ಇತರೆ ಆಪ್ತರು ನಿನಗಿಲ್ಲವೆ ಎಂದು ವಿಚಾರಿಸುತ್ತಿದ್ದರು.
“ಎಲ್ಲ ಇದ್ದಾರೆ..ಕೊಂಚ ದೂರ” ಎಂದು ಉತ್ತರಿಸುತ್ತಿದ್ದಳು ನಾತೇಲ.
ಆ ದೊಡ್ಡ ನಗರದ ಜನ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಅಷ್ಟೊಂದು ಬಿಡುವು ಕೂಡ ಇರುತ್ತಿರಲಿಲ್ಲ.
ನಾತೇಲಳಿಗೆ ಒಂದು ಆಸೆ ಇತ್ತು. ತಾನು ತನ್ನ ಮಗ ಊರಿಗೆ ಹೋಗಬೇಕು. ತಾಯಿ ಅಣ್ಣಂದಿರನ್ನು ನೋಡಬೇಕು. ಸಾಧ್ಯವಾದರೆ ಊರಲ್ಲಿಯೇ ಇರಬೇಕು ಎಂಬ ಆಸೆ. ಹಾಗೆಯೇ ಒಂದು ಅಳುಕು. ಜನ ತನ್ನನ್ನು ಸ್ವೀಕರಿಸಿಯಾರೆ? ಜೂಂತನ ತೀರ್ಮಾನವನ್ನು ಧಿಕ್ಕರಿಸಿ ಓಡಿ ಬಂದವಳು ತಾನು. ತನ್ನ ಬಗ್ಗೆ ಜನರ ಅಭಿಪ್ರಾಯ ಈಗ ಹೇಗಿರಬಹುದು?
ಅದನ್ನು ತಿಳಿಯಲೆಂದೆ ಅವಳು ಶಿವಸಾಗರಕ್ಕೆ ಬಂದಳು. ಅಣ್ಣಂದಿರು ಬಂದು ಕೂಗಾಡಿ ಹೋದರು. ತಾಯಿ ತನ್ನ ಪರವಾಗಿ ನಿಂತಳು. ಊರಿನಲ್ಲಿ ಇನ್ನೂ ಕೆಲವರು ವಿಚಿತ್ರವಾಗಿ ತನ್ನನ್ನು ನೋಡಿದರು. ತಾನು ನೇರವಾಗಿ ಇಗರ್ಜಿಗೂ ಹೋದೆ. ಪಾದರಿ ಸಿಕ್ವೇರಾ ಅವರನ್ನು ಕಂಡೆ. ಮಗನ ಪರಿಚಯ ಮಾಡಿಕೊಟ್ಟೆ.
“ಪದ್ರಾಬಾ..ನಾನು ಆವತ್ತು ಒಂದೇ ಒಂದು ತಪ್ಪು ಮಾಡಿದೆ…ಮತ್ತೆ ನಾನು ಯಾವುದೇ ಪಾಪ ಮಾಡಲಿಲ್ಲ..ನನಗೆ ಕ್ಷಮೆ ಇಲ್ಲವೇ?” ಎಂದು ನಾತೇಲ ಸಿಕ್ವೇರಾ ಅವರ ಎದುರು ಹೇಳಿದಾಗ ಅವರು ಕೂಡ ಇವಳ ಮಾತಿಗೆ ತಲೆ ದೂಗಿದಂತಿತ್ತು.
“ನಾತೇಲ..ಏಸು ಪ್ರಭು ಈ ಲೋಕಕ್ಕೆ ಬಂದದ್ದೇ ಪಾಪಿಗಳನ್ನು ಉದ್ಧರಿಸಲು..ನಿನ್ನ ಬಗ್ಗೆ ತೀರ್ಪು ನೀಡುವ ಅಧಿಕಾರ ಯಾರಿಗೂ ಇಲ್ಲ..” ಎಂದರು.
ಸಿಮೋನ ಬೋನ, ಮತ್ತಿತರ ಹಿರಿಯರು ಕೂಡ ಇವಳ ನಿರ್ಧಾರದ ಬಗ್ಗೆ ಬೇರೆ ಮಾತುಗಳನ್ನು ಹೇಳಲಿಲ್ಲ. ಆರಂಭದಲ್ಲ್ಲಿ ಅಲ್ಲಿ ಇಲ್ಲಿ ಕೇಳಿ ಬಂದ ಮಾತುಗಳು, ವ್ಯಂಗ್ಯ ನುಡಿಗಳು ಕ್ರಮೇಣ ಅಲ್ಲಿಯೇ ಸತ್ತು ಹೋದವು. ಸಾಂತಾಮೊರಿಯ ಬಾಯಿಗೆ ಹೆದರಿ ಕೆಲವರು ತೆಪ್ಪಗಾದರು.
ಬೋನ ಡೇನಿಯಲ ಗೆ ಒಂದು ಕೆಲಸವನ್ನೂ ಕೊಡಿಸಿದ. ಶಿವಸಾಗರದ ಪುರಸಭೆಯಲ್ಲಿ ಗುಮಾಸ್ತನ ಕೆಲಸ.
“ಸದ್ಯಕ್ಕೆ ಇದು ತಾತ್ಕಾಲಿಕ ಹುದ್ದೆ..ನಾಳೆ ಖಾಯಂ ಆಗುತ್ತದೆ..ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗು” ಎಂದ.
ಡೇನಿಯಲ್ ಒಳ್ಳೆಯ ಹುಡುಗ. ಬುದ್ದಿವಂತ ಅವನು ಕೂಡ ಬಹಳ ಬೇಗನೆ ಪುರಸಭೆಯ ಕೆಲಸ ಕಾರ್ಯಗಳನ್ನು ಕಲಿತ.
ಸಾಂತಾ ಮೊರಿ ಮಗಳು ಮೊಮ್ಮಗನನ್ನು ಕರೆದುಕೊಂಡು ರೈಲಿನಲ್ಲಿ ದೋರ್ನಳ್ಳಿಗೆ ಹೋಗಿ ಬಂದಳು. ದೋರ್ನಳ್ಳಿಯ ಸಂತ ಅಂತೋನಿಯಲ್ಲಿ ಅವಳು ಬಹಳ ಬೇಗನೆ ಪುರಸಭೆಯ ಕೆಲಸ ಕಾರ್ಯಗಳನ್ನು ಕಲಿತ.
ಸಾಂತಾ ಮೊರಿ ಮಗಳು ಮೊಮ್ಮಗನನ್ನು ಕರೆದುಕೊಂಡು ರೈಲಿನಲ್ಲಿ ದೋರ್ನಳ್ಳಿಗೆ ಹೋಗಿ ಬಂದಳು. ದೋರ್ನಳ್ಳಿಯ ಸಂತ ಅಂತೋನಿಯಲ್ಲಿ ಅವಳು ಬಹಳ ಹಿಂದೆ ಹೇಳಿಕೊಂಡ ಒಂದು ಹರಕೆ ಈಗ ಈಡೇರಿತ್ತು. ಮಗಳು ಸುರಕ್ಷಿತವಾಗಿ ತಿರುಗಿ ಬಂದರೆ ನಿನ್ನ ಪಾದಕ್ಕೆ ಬಂದು ಬೆಳ್ಳಿಯ ಕಿರೀಟವನ್ನು ನಿನಗೆ ತೊಡಿಸುತ್ತೇನೆ ಎಂದು ಅವಳು ಹೇಳಿಕೊಂಡಿದ್ದಳು. ಅವಳ ಬೇಡಿಕೆಯನ್ನು ಸಂತ ಅಂತೋನಿ ಈಡೇರಿಸಿ ಕೊಟ್ಟಿದ್ದ. ಮಗಳ ಸಂಗಡ ಮೊಮ್ಮಗನೂ ಬಂದಿದ್ದ.
ಇಗರ್ಜಿ ಪಕ್ಕದ ಸಾಲು ಮನೆಗಳಲ್ಲಿ ಐದನೆಯದಾದ ಸಾಂತಾ ಮೊರಿ ಮನೆಯಲ್ಲಿ ಮತ್ತೆ ಎಂದಿನಂತೆ ತೇರ್ಸ ಕೀರ್ತನೆಗಳು ಕೇಳಿ ಬರತೊಡಗಿದವು. ಅಲ್ಲಿ ಸಂತಸ ಕಂಡು ಬಂದಿತು.

-೧೨-
ಬೆಳಿಗ್ಗೆ ಎದ್ದ ಕೂಡಲೆ ನೊರೆ ನೊರೆ ಸೋಪು ಹಚ್ಚಿಕೊಂಡು ಮೂರು ನಾಲ್ಕು ಬಾರಿ ಕೆನ್ನೆ ಗದ್ದದ ಮೇಲೆ ಕೈಯಾಡಿಸಿಕೊಂಡು ನುಣ್ಣಗೆ ಮುಖ ಕ್ಷೌರ ಮಾಡಿಕೊಳ್ಳುತ್ತಿದ್ದ ಪಾದರಿ ಸಿಕ್ವೇರಾ ಅವರ ಮುಖದ ಮೇಲೆ ನಾಲ್ಕೈದು ದಿನಗಳ ಕಳೆ ಎದ್ದು ಕಂಡಿತು. ಕೈಯಲ್ಲಿ ಕ್ಯಾಮರಾ ಹಿಡಿದು ಯಾರ ಮನೆಯಲ್ಲಿ ಬೇಲಿಯಲ್ಲಿ ಹೂವು ಅರಳಿದೆ, ಎಲ್ಲಿ ಬಣ್ಣದ ಹಕ್ಕಿ ಕೂತಿದೆ. ಯಾರ ಮಗು ಮುದ್ದಾಗಿದೆ ಎಂಬುದನ್ನು ಹುಡುಕಿಕೊಂಡು ಹೋಗುತ್ತಿದ್ದ ಸಿಕ್ವೇರಾ ಕ್ಯಾಮೆರಾವನ್ನು ತೆಗೆದು ಒಳಗೆ ಇರಿಸಿದರು. ಊರ ಕ್ರೈಸ್ತ ಹುಡುಗಿಯರನ್ನು ಕೂಡಿಸಿಕೊಂಡು ಕಣಿವೆ, ಕಾಡು, ಜಲಪಾತ ಎಂದು ಸುತ್ತುತ್ತಿದ್ದ ಅವರ ಚಟುವಟಿಕೆ ನಿಂತು ಹೋಗಿ ಅವರ ಕಾರು, ಬಂಗಲೆ ಹಿಂಬದಿಯ ಕಟ್ಟಿಗೆ ಶೆಡ್ಡಿನೊಳಗೆ ಮುಸುಕು ಧರಿಸಿ ನಿಂತು ಬಿಟ್ಟಿತು. ಸದಾ ಸಂಜೆ ಫ಼ಾತಿಮಾ ನಗರಕ್ಕೆ ಧಾವಿಸಿ ಅಲ್ಲಿ ಮನೆ ಮನೆಗಳ ಎದುರು ನಿಂತು-
“ಆಂಟಿ..ಕಸಿ ಭಲಾಯ್ಕಿ?”

“ಅಂಕಲ..ಖೊಂಕ್ಲಿ ಉಣೆಂ ಜಾವೂಂನಾಗಿಂ?”
(ಆಂಟಿ ಆರೋಗ್ಯ ಹೇಗಿದೆ? ಅಂಕಲ ಕೆಮ್ಮು ಕಡಿಮೆಯಾಗಲೇ ಇಲ್ಲವೇ?) ಎಂದು ವಿಚಾರಿಸಿಕೊಳ್ಳಲು ಕಾರಣವಾಗಿದ್ದ ಮೋಟಾರಬೈಕ್ ಕೂಡ ಹೊರಬರಲಿಲ್ಲ.
ಏನೇನೋ ನೆಪ ಮಾಡಿಕೊಂಡು ಬಂದ ಹುಡುಗಿಯರೂ ಪಾದರಿ ಸಿಕ್ವೇರರ ಮೂಡ್ ನೋಡಿ ತಿರುಗಿ ಹೋದರು.
ಅಡಿಗೆ ಹುಡೂಗ ಬೇಯಿಸಿ ಇಟ್ಟುದನ್ನು ಯಾಂತ್ರಿಕವಾಗಿ ಉಂಡು ಎದ್ದರು. ಇಷ್ಟೇ ಯಾಂತ್ರಿಕವಾಗಿ ಪೂಜೆ ಮಾಡಿದರು. ಪ್ರಸಾದ ನೀಡಿದರು. ಇಗರ್ಜಿಯ ಗಂಟೆಯ ಸದ್ದು ಕೇಳಿದ್ದೆ ಕೈಗಳು ಶಿಲುಬೆಯ ಗುರುತು ಮಾಡಿದವು. ತುಟಿಗಳ ಮೇಲೆ ಜಪವೋ ಪ್ರಾರ್ಥನೆಯೋ ಬಂದು ಹೋಯಿತು.
ಪಾದರಿ ಸಿಕ್ವೇರಾ ಬದಲಾಗಿದ್ದರು. ಇತ್ತೀಚಿನ ಕೆಲ ದಿನಗಳಿಂದ ಬಲೆಯೊಳಗೆ ಸಿಕ್ಕಿ ಬಿದ್ದ ಮೊಲದ ಹಾಗೆ ಅವರ ಸ್ಥಿತಿಯಾಗಿತ್ತು. ಈ ಕಡೆಯಿಂದ ಬಿಡಿಸಿಕೊಂಡೆ ಅನ್ನುವಾಗ ಬಲೆ ಬೇರೊಂದು ಕಡೆಯಿಂದ ಸುತ್ತಿಕೊಳ್ಳುತ್ತಿತ್ತು. ಈ ಕಾಲನ್ನು ತೆಗೆದಾಗ ಬೇರೊಂದು ಕಾಲು ಕುಣಿಕೆಯಲ್ಲಿ ಸಿಕ್ಕಿ ಬೀಳುತ್ತಲಿತ್ತು.
ಶಿವಸಾಗರದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಇಗರ್ಜಿಗೆ ಬರುವ ಜನರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಭಾನುವಾರದ ವಿಶೇಷ ಪೂಜೆಗಂತೂ ಇಗರ್ಜಿ ಸಣ್ಣದಾಯಿತೇನೋ ಅನ್ನುವ ಹಾಗೆ ಜನ ಸೇರುತ್ತಿದ್ದರು. ದಿವ್ಯ ಪ್ರಸಾದ ನೀಡುವುದು ತಮ್ಮೊಬ್ಬರಿಂದ ಆಗದೆ ಕಾನ್ವೆಂಟಿನ ಸಿಸ್ಟರುಗಳು ಕೂಡ ಇದಕ್ಕೆ ನೆರವಾಗುತ್ತಿದ್ದರು. ಪೂಜೆಗೆ ಬಂದ ಪ್ರತಿಯೊಬ್ಬರೂ ದಿವ್ಯಪ್ರಸಾದವನ್ನು ಸ್ವೀಕರಿಸುವುದರಿಂದ ದಿವ್ಯಪ್ರಸಾದವಾಗಿ ಪರಿವರ್ತಿಸುವ “ವಸ್ತು” ವನ್ನು ಗೋಧಿ ಹಿಟ್ಟಿನಿಂದ ತಯಾರಿಸುವುದೇ ವಾರದಲ್ಲಿ ಎರಡು ಮೂರು ದಿನಗಳ ಕೆಲಸವಾಗುತ್ತಿತ್ತು. ಜನ ಇಗರ್ಜಿಗೆ ನೀಡಬೇಕಾದ ಅನ್ವಾಲ ಕಾಯಿದೆಯನ್ನು ತಪ್ಪದೆ ನೀಡುತ್ತಿದ್ದರು. ಹಬ್ಬದ ವಂತಿಗೆ ಇತರೆ ವಂತಿಗೆಗಳು ಸಂದಾಯವಾಗುತ್ತಿದ್ದವು. ಸತ್ತವರಿಗೆ ಕೊಡುವ ಪೂಜೆಗಳು, ಹರಕೆ ಹೇಳಿಕೊಂಡು ಮಾಡಿಸುವ ಪೂಜೆಗಳು. ಕಾಣಿಕೆ ಡಬ್ಬಿಗೆ ಬೀಳುವ ಹಣ, ಸಂತ ಜೋಸೆಫ಼ರ ಮಂಟಪಕ್ಕೆ ಅರ್ಪಿಸುವ ಮೇಣದಬತ್ತಿ ಯಾವುದಕ್ಕೂ ಕಡಿಮೆಯಾಗಿರಲಿಲ್ಲ. ಜನರಲ್ಲಿ ದೈವ ಭಕ್ತಿ, ದೈವಭೀತಿ ಅಧಿಕವಾಗಿದೆ. ಕ್ರಿಸ್ತುವರ ಯೆಲ್ಲ ಮನೆಗಳಲ್ಲಿ ತೇರ್ಸ, ಜಪ, ನಡಿಯುತ್ತದೆ. ಧಾರ್ಮಿಕ ವಿಧಿ ವಿಧಾನಗಳ ಅನುಷ್ಟಾನದಲ್ಲಿ ಜನ ಮುಂದಿದ್ದಾರೆ.
ಆದರೆ ಎಲ್ಲೋ ಒಂದು ಕಡೆ ಸೈತಾನ ತನ್ನ ಕೈಚಳಕವನ್ನು ತೋರಿಸುತ್ತಿದ್ದಾನೆ ಅನ್ನಿಸುತ್ತದೆ. ಇಗರ್ಜಿಯಲ್ಲಿ ಒಂದಾಗಿ ನೆರೆಯುವ ಜನ ಗಂಟೆ ಗೊಪುರದ ಕೆಳಗೆ, ಸಂತ ಜೋಸೆಫ಼ರ ಮಂಟಪದ ಬಳಿ ಇಗರ್ಜಿಯ ಮುಂದಿನ ವೆರಾಂಡದಲ್ಲಿ, ರಸ್ತೆಯ ಮೇಲೆ ಗುಂಪಾಗಿ ನಿಂತು ಏನೋ ಪಿಸುಗುಡುತ್ತಾರೆ. ದೂರದಿಂದ ಅವರ ಮುಖಗಳ ಮೇಲೆ ಸಿಟ್ಟು, ಕೋಪ, ಅನುಮಾನದ ಗೆರೆಗಳು ಮೂಡಿ ಮಾಯವಾಗುವುದು ಕಾಣುತ್ತದೆ.
ಬಹಳ ಮುಖ್ಯವಾಗಿ ತರುಣರ ವರ್ತನೆ ಸಹಜವಾಗಿಲ್ಲ. ಮುದುಕರು , ವಯಸ್ಸಾದವರು, ಹೆಂಗಸರು ಇಗರ್ಜಿಗೆ ಬರುತ್ತಾರೆ. ಪಾಪ ನಿವೇದನೆಯಲ್ಲಿ ತಮ್ಮ ಮನಸ್ಸಿನಲ್ಲಿದ್ದುದನ್ನು ಹೇಳುತ್ತಾರೆ. ಪೂಜೆ ಆಲಿಸಿ , ಪ್ರಸಾದ ಸ್ವೀಕರಿಸಿ ಹೋಗುತ್ತಾರೆ. ಆದರೆ ಯುವಕರು ತೆರೆದ ಮನಸ್ಸಿನೊಡನೆ ಬರುವುದಿಲ್ಲ. ” ಹೃದಯ ಬಿಚ್ಚಿ ಮಾತನಾಡಿ. ಮನಸ್ಸಿನಲ್ಲಿ ಯಾವುದೇ ಅಪರಾಧವನ್ನು ಇರಿಸಿಕೊಳ್ಳಬೇಡಿ ಎಂದು ಪಾಪ ನಿವೇದನೆಗೆ ಕುಳಿತು ತಾನು ಅವರ ಕಿವಿಯಲ್ಲಿ ಪಿಸುಗುಟ್ಟಿದರು- ಸಂಜೆ ಪ್ರಾರ್ಥನೆ ಮಾಡಲಿಲ್ಲ. ಶುಕ್ರವಾರ ಮಾಂಸ ತಿಂದೆ. ತಂದೆ ತಾಯಿಗೆ ಅವಮಾನ ಪಡಿಸಿದೆ, ಕಳ್ಳತನ ಮಾಡಿದೆ. ಸುಳ್ಳು ಹೇಳಿದೆ ಎಂದು – ಮಾಡಿರಬಹುದಾದ ಕೆಲವು ಅಪರಾಧಗಳನ್ನು ಹೇಳುತ್ತಾರಲ್ಲದೆ ಏನೋ ಮುಚ್ಚಿ ಇರಿಸಿಕೊಂಡೆ ಹೋಗುತ್ತಾರೆ. ಪಾಪಗಳನ್ನು ಮನಸ್ಸಿನಲ್ಲಿ ಇರಿಸಿಕೊಂಡು ಏಸುವಿನ ರಕ್ತ ಮಾಂಸವೇ ಆದ ದಿವ್ಯ ಪ್ರಸಾದವನ್ನು ಸ್ವೀಕರಿಸಬಾರದು. ಹೀಗೆ ಸ್ವೀಕರಿಸಿದರೆ ಇದು ಮಹಾಪಾಪ, ದಿವ್ಯಪ್ರಸಾದ ಕೂಡಲೇ ಕರಗಿ ಹೋಗುವುದಿಲ್ಲ ಎಂಬ ನಂಬಿಕೆಯಿದ್ದರೂ ಯುವಕರು ಯುವತಿಯರು ಹೀಗೆ ವರ್ತಿಸುತ್ತಾರೆ.
ಮತ್ತೂ ಹೇಳಬೇಕೆಂದರೆ ಶಿವಸಾಗರದ ಎಲ್ಲ ಜನ, ಹಿರಿಯರು, ತನ್ನ ಬಗ್ಗೆ, ಇಗರ್ಜಿ, ಧರ್ಮದ ವಿಷಯದಲ್ಲಿ ವಿಧೇಯರು, ತಗ್ಗಿ ಬಗ್ಗಿ ನಡಿಯುವವರು ಆಗಿರುವಾಗ ಶಿವಸಾಗರದ ಕೆಲ ಕ್ರೈಸ್ತ ತರುಣರು ವಿರೋಧಿಗಳಾಗಿ ನಿಂತಿರುವುದು ತನ್ನ ತಳಮಳಕ್ಕೆ ಅಶಾಂತಿಗೆ ಕಾರಣವಾಗಿದೆ. ತನ್ನ ಮಾತಿಗೆ ನೂರು ಜನ ತಲೆ ಬಾಗುವುದು ತನಗೆ ಸಹಜವಾಗಿ ಕಾಣುತ್ತದೆ ಆದರೆ ಈ ನೂರು ಜನರ ಎದುರು ಓರ್ವ ತನ್ನನ್ನು ಹಿಯಾಳಿಸಿದಾಗ, ಛೇಡಿಸಿದಾಗ, ತಾನು ಮಾಡುತ್ತಿರುವುದೆಲ್ಲ ತಪ್ಪು, ಬೂಟಾಟಿಕೆ ಎಂದಾಗ ಆ ನೂರು ಜನ ತನ್ನ ಕಡೆ ಇದ್ದು ಈ ಓರ್ವನ ವರ್ತನೆ ನೋವುಂಟುಮಾಡುತ್ತದೆ.
ಈಗ ಹೀಗೆ ಆಗುತ್ತದೆ..
ನಾತೇಲಳ ಮಗ ಡೆನಿಯಲ್..
ಸಾನಬಾವಿ ಪೆದ್ರು ಮಗ ಗ್ರೆಗೊರಿ..
ಬೋನ ಸಾಹುಕಾರರ ಮಗ ಫ಼ಿಲಿಪ್ಪ..
ಹಸಿಮಡ್ಲು ಪತ್ರೋಲನ ಮಗ ಜೂಜೆ…
ಜೂಜೆಯ ಸಂಗಡ ಸದಾ ಇರುವ ಸಾಲ್ಲು, ಅತ್ತ ಪೆದ್ರು ಸಿಂಜಾಂವ, ಲಾದ್ರು ಮೊದಲಾದ ಯುವಕರು ತನ್ನೆದುರು ಈಗ ದೊಡ್ಡ ಸವಾಲಾಗಿ ನಿಂತಿದ್ದಾರೆ.
ಈ ತರುಣರಿಗೆ ಹಿರಿಯರ ಹೆದರಿಕೆ ಇಲ್ಲ. ದೇವರ ಭೀತಿ ಇಲ್ಲ. ಇಗರ್ಜಿ ಮಾತೆಯ ಬಗ್ಗೆ ಅಭಿಮಾನವಿಲ್ಲ. ತನ್ನ ಬಗ್ಗೆ ಗೌರವವಿಲ್ಲ..
ಈ ಯುವಕರಿಗೆ ಕೆಣಕಲು ಏನಾದರೊಂದು ಸಮಸ್ಯೆ ಸಿಗುತ್ತದೆ. ಇದನ್ನೆ ಗುಡ್ಡ ಮಾಡಿಕೊಂಡು ಈ ಜನ ಬರುತ್ತಾರೆ.
ಇವರೆಲ್ಲ ವಿದ್ಯಾವಂತರು, ಹೈಸ್ಕೂಲಿನವರೆಗೆ ಓದಿದವರು. ಇದೊಂದು ಅಂಶ ಇವರನ್ನು ಹುರಿದುಂಬಿಸುತ್ತದೆ. ರಟ್ಟೆಯಲ್ಲಿ ಶಕ್ತಿಯಿದೆ. ಗಂಟಲಲ್ಲಿ ಅಬ್ಬರಿಸುವ ತ್ರಾಣವಿದೆ.
ಶಿವಸಾಗರದ ಬಹುತೇಕ ಕ್ರಿಸ್ತುವರನ್ನು ಎತ್ತಿ ಕಟ್ಟಲು ಇವರು ಹವಣಿಸುತ್ತಾರೆ.
ಗ್ರೆಗೊರಿಯ ಮೇಲೆ ತನಗೆ ಅನುಮಾನವಿತ್ತು. ಇವನ ತಂದೆ ಸಾನಬಾವಿ ಪೆದ್ರು ದೈವ ಭಕ್ತ. ಇವನ ತಾಯಿ ಕೂಡ. ಹಿಂದು ಜಾತಿಯಲ್ಲಿ ಹುಟ್ಟಿ ಕ್ರೈಸ್ತನನ್ನು ರಕ್ಷಕನೆಂದು ಆಯ್ಕೆ ಮಾಡಿಕೊಂಡಾಕೆ. ದೈವ ಭಕ್ತಿ ಎಂದರೇನು ಎಂಬುವುದನ್ನು ಇವಳಿಂದ ಕಲಿಯಬೇಕು. ಗಂಡ ಹೆಂಡತಿ ಒಂದು ಭಾನುವಾರ ಇಗರ್ಜಿಗೆ ಬಾರದೆ ಉಳಿದವರಲ್ಲ. ಪಾಪ ನಿವೇದನೆ, ಪ್ರಸಾದ ಸ್ವೀಕಾರದಲ್ಲಿ ಮುಂದು. ನಿತ್ಯ ಮನೆಯಲ್ಲಿ ದೇವರ ಅಲ್ತಾರಿನ ಮುಂದೆ ಮೇಣದ ಬತ್ತಿ ಉರಿಯಲೇಬೇಕು. ಇವರ ಮಗ ಗ್ರೆಗೊರಿ ಏನೋ ಆಗಿಬಿಟ್ಟ.
ಮೊದಲು ಇವನು ಸರಿಯಾಗಿದ್ದ. ಬಿಡುವಾದಾಗಲೆಲ್ಲ ಇಗರ್ಜಿಯಲ್ಲಿ ತನ್ನ ಬಂಗಲೆಯಲ್ಲಿ ಬಿದ್ದಿರುತ್ತಿದ್ದ.
” …..ಫ಼ಾದರ್…ಫ಼ಾದರ್….” ಎಂದು ತನ್ನ ಸುತ್ತ ತಿರುಗುತ್ತಿದ್ದ.
ಪೀಠ ಬಾಲಕನಾಗಿ ಸೇವೆ ಮಾಡುತ್ತಿದ್ದ. ಜ್ಞಾನೋಪದೇಶದಲ್ಲಿ ಸದಾ ಮುಂದೆ. ಮಿರೋಣ್ ಡಯಾಸ್ ಹೊಸದಾಗಿ ಮಾಡಿರುವ ಚರ್ಚೆ ಕ್ವಾಯರ್ ನಲ್ಲಿ ಗೀತೆ ಕೀರ್ತನೆ ಕಲಿತು ಅದೆಷ್ಟು ಚೆನ್ನಾಗಿ ಹಾಡುತ್ತಿದ್ದನಲ್ಲ. ಇವನಿಗೆ ಏನಾಯಿತು?
ಪ್ರೌಢ ಶಾಲೆ ಮುಗಿಸಿದ್ದೇ-
“ಬ್ಲೆಸ್ ಮಿ ಫ಼ಾದರ್..” ಎಂದು ಕೈಮುಗಿಯುವುದರ ಬದಲು-
“ಗುಡ್ ಮಾರ್ನಿಂಗ್ ಫ಼ಾದರ್” ಅನ್ನತೊಡಗಿದ.
ಒಮ್ಮೆ ಅವನ ಮನೆಗೆ ಹೋದ ತಾನು ಅವನ ಮೇಜಿನ ಮೇಲೆ ರಾಶಿ ಹಾಕಿಕೊಂಡ ಪುಸ್ತಕವನ್ನು ನೋಡಿದೆ. ಶಿ ಶಿ ಶಿ ಪ್ರೊಟೆಸ್ಟೆಂಟರು. ಬೈಬಲ್ ಸೊಸೈಟಿಯವರು ಮುದ್ರಿಸಿದ ಬೈಬಲ್ ಗಳು, ಕರಪತ್ರ, ಪುಸ್ತಿಕೆಗಳು. ಯಾವುದರ ಮೇಲೂ ರೋಮನ್ ಕ್ಯಾತೋಲಿಕರು ಓದಬಹುದೆಂಬ ನಮ್ಮ ಬಿಶಪ್ ರ ಅನುಮತಿ ಮುದ್ರೆ ಇಲ್ಲ. ಜೊತೆಗೆ ಬೇರೆ ಬೇರೆ ಧರ್ಮಗಳಿಗೆ ಸಂಭಂದಪಟ್ಟ ಗ್ರಂಥಗಳು.
“….ಅಯ್ಯೋ ದೇವರೆ…” ಎಂದು ತಾನು ಗಾಬರಿಯಾದೆ.
ಗ್ರೆಗೊರಿ ಮತ್ತೆ ಸಿಕ್ಕಾಗ ಈ ವಿಷಯವನ್ನೇ ಪ್ರಸ್ತಾಪಿಸಿದೆ. “ಏಕೆ ಫ಼ಾದರ್ ಇವುಗಳನ್ನು ಓದಬಾರದೇ?” ಎಂದು ಕೇಳಿದ.
ಅದೇನು ಜಂಬವೆ? ಅಹಂಕಾರವೇ? ಇಲ್ಲ ಧಾರ್ಷ್ಟ್ಯವೆ? ಯಾರನ್ನು ಇಡೀ ಕ್ರೈಸ್ತ ಸಮುದಾಯ ಅಧ್ಯಾತ್ಮಿಕ ಗುರು ಎಂದು, ಆತ್ಮದ ತಂದೆಯೆಂದು ಗೌರವಿಸುತ್ತದೋ ಅಂತಹವರ ಮುಂದೆ ನಿಂತು ಕೇಳುವ ಪ್ರಶ್ನೆಯೇ ಇದು.
” ನೀನು ಯಾಕೆ ಓದಬೇಕು? ನಿನಗೆ ಏನು ಅರ್ಥವಾಗುತ್ತದೆ. ನಾವಿರುವುದು ಏಕೆ ಹಾಗಾದರೆ?” ಎಂದು ತುಸು ಸಿಟ್ಟಿನಿಂದಲೆ ಕೇಳಿದೆ.
” ಪ್ರೊಟೆಸ್ಟೆಂಟ ಧರ್ಮ ಹುಟ್ಟಲು ಇದೇ ಕಾರಣವಲ್ಲವೇ ಫ಼ಾದರ್?” ಎಂದು ನೇರವಾಗಿ ಹಳೆಯ ಪ್ರಕರಣವನ್ನೇ ಕೆದಕಿದ. ತಾನು ತನ್ನ ದನಿ ತಗ್ಗಿಸದೆ
” ಹಾಗಲ್ಲ ಗ್ರೆಗೊರಿ….ಒಂದೆ ವಾಕ್ಯಕ್ಕೆ ಹತ್ತು ಅರ್ಥಗಳಿರುತ್ತವೆ…ನೀನು ಸರಿಯಾದ ಅರ್ಥ ಗ್ರಹಿಸುತ್ತೀಯ ಅಂತ ಏನು ಆಧಾರ? ನೀನು ಎಲ್ಲವನ್ನು ತಪ್ಪಾಗಿ ಗ್ರಹಿಸಿದರೆ..ಧರ್ಮಕ್ಕೆ ತಪ್ಪು ವ್ಯಾಖ್ಯಾನ ಕೊಟ್ಟಂತೆ ಆಗುವುದಿಲ್ಲವೇ?” ಎಂದು ಕೇಳಿದೆ.
ಈ ಮಾತಿಗೆ ಗ್ರೆಗೊರಿ ಬಹಳ ತಿಳಿದುಕೊಂಡಿರುವ ತತ್ವಜ್ಞಾನಿಯಂತೆ ನಕ್ಕ.
” ಈಗ ನೀವು ನೀಡತಿರೋ ವ್ಯಾಖ್ಯಾನ ಎಲ್ಲಿ ಸರಿಯಾಗಿದೆ ಫ಼ಾದರ್?” ಎಂದು ಛೇಡಿಸುವ ದನಿಯಲ್ಲಿ ಕೇಳಿದ.
“ಅಂದರೆ ಏನು ನಿನ್ನ ಮಾತಿನ ಅರ್ಥ?”
ತಾನು ತುಸು ತಾಳ್ಮೆ ಕಳೆದುಕೊಂಡೆ
“ಜನರನ್ನು ಇಗರ್ಜಿ ಸಂಪ್ರದಾಯ, ಆಚರಣೆ, ಪೂಜೆ, ಪಾಪ ನಿವೇದನೆ, ದಿವ್ಯಪ್ರಸಾದ ಸ್ವೀಕಾರ ಮೊದಲಾದ ಸೂತ್ರಗಳಿಂದ ಕಟ್ಟಿಹಾಕುವ ಕೆಲಸವನ್ನು ನೀವು ಮಾಡೋತಿರೊದನ್ನ ಬಿಟ್ಟರೆ ಬೇರೆ ಏನು ಮಾಡುತ್ತೀರ ಫ಼ಾದರ್? ನಮ್ಮವರಲ್ಲೂ ಕಳ್ಳರು, ಸುಳ್ಳರು, ತಂದೆ-ತಾಯಿಯನ್ನ ಅವಮಾನ ಮಾಡುವವರು, ಭ್ರಷ್ಟರು, ವ್ಯಭಿಚಾರಿಗಳು ನಿತ್ಯ ಇಗರ್ಜಿಗೆ ಬರುತ್ತ….ದಿವ್ಯ ಪ್ರಸಾದ ಸ್ವೀಕರಿಸುತ್ತ ಇದ್ದರೆ..ಅಂದರೆ ಧರ್ಮ ಅವರ ಮೇಲೆ ಪರಿಣಾಮ ಮಾಡಿದೆ ಎಂದು ಹೇಗೆ ನಂಬುವುದು? ನಮ್ಮಲ್ಲಿ ಧರ್ಮ ಎನ್ನುವುದು ಹೊರಗಿನ ಆಚರಣೆ. ಒಂದು ಬೂಟಾಟಿಕೆ ಆಗಿದೆ ಅನ್ನುವುದನ್ನ ನೀವು ಯಾಕೆ ಒಪ್ಪಿಕೊಳ್ಳುವುದಿಲ್ಲ?”
ಆತ ಮತ್ತೆ ಏನೇನು ಹೇಳುತ್ತಿದ್ದನೋ ತಾನು ಆತನನ್ನು ತಡೆದೆ…
“…ಸಾಕು ಸಾಕು ಗ್ರೆಗೊರಿ..ಈ ವಯಸ್ಸಿನಲ್ಲಿ ನೀನು ಇಷ್ಟೆಲ್ಲ ಮಾತನಾಡಬಾರದು..” ಎಂದೆ.
“ನಾನು ಮಾತಾಡೋದಿಲ್ಲ ಫ಼ಾದರ್…ನನ್ನ ಮಾತಿಗೆ ನೀವು ಬೆಲೆ ಕೊಡುತ್ತೀರಾ ಅನ್ನುವ ನಂಬಿಕೆ ನನಗಿಲ್ಲ. ಕೊಡಬೇಕು ಅನ್ನುವುದನ್ನು ನಾನು ಬಯಸುವುದಿಲ್ಲ..ಆದರೆ ಯಾವ ಧರ್ಮದಲ್ಲಿ ನಾನು ಹುಟ್ಟಿದ್ದೇನೋ ಆ ಧರ್ಮದಲ್ಲಿ ನನಗೆ ವಿಶ್ವಾಸ ಕಳೆದುಹೋಗಿರುವುದಂತು ನಿಜ…” ಎಂದ ಗ್ರೆಗೊರಿ. ಆಗ ಮಾತ್ರ ತನ್ನ ಸಹನೆಯ ಹಗ್ಗ ಹರಿಯಿತು.
” ಗ್ರೆಗೊರಿ..ಇಗರ್ಜಿ ಮಾತೆಯ ಬಗ್ಗೆ ನೀನು ಹೀಗೆಲ್ಲ ಹಗುರವಾಗಿ ಮಾತನಾಡಬಾರದು..ನಿನಗೆ ಗೊತ್ತಿರಲಿಕ್ಕಿಲ್ಲ…ದೇವರ ಪ್ರತಿನಿಧಿಗಳಾದ ಪಾದರಿಗಳು ಆಶೀರ್ವಾದವನ್ನು ಕೊಡಬಲ್ಲರು ಶಾಪವನ್ನೂ ನೀಡಬಲ್ಲರು ..” ಎಂದು ಹೇಳುತ್ತಿರುವಾಗಲೆ ಗ್ರೆಗೊರಿ ಮರದ ಟೊಂಗೆಯ ಮೇಲೆ ಕುಳಿತ ಹಕ್ಕಿಯಂತೆ ಹಗುರವಾಗಿ ರೆಕ್ಕೆ ಬಿಚ್ಚಿ ಹಾರಿದ. ಅವನ ಮುಖದ ತುಂಬಾ ನಗೆಯ ಅಲೆಗಳು ಉರುಳಾಡಿ ಆತ –
“ಇದು ಆಶೀರ್ವಾದಗಳಿಗೆ ತಲೆ ಬಾಗುವ, ಶಾಪಗಳಿಗೆ ಹೆದರುವ ಕಾಲ ಅಲ್ಲ..ಫ಼ಾದರ್..ನಾನು ಬರತೀನಿ..ನನ್ನ ದಾರಿ ನನಗಿದೆ..” ಎಂದವನೆ ಬಂಗಲೆಯಿಂದ ಹೊರಬಿದ್ದ.
ಅನಂತರ ಅವನು ಅವನದೇ ಒಂದು ದಾರಿಯನ್ನು ಕೂಡ ಕಂಡುಕೊಂಡ.
ಇಗರ್ಜಿಗೆ ಬರುವುದನ್ನು ನಿಲ್ಲಿಸಿದ. ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ಅವನಿಂದ ದೂರವಾಯಿತು. ಜ್ಞಾನೋಪದೇಶಕ್ಕೆ ಬರುವುದನ್ನು ಬಿಟ್ಟ.
ಮನೆಯಲ್ಲಿ ಕೂಡ ಪ್ರಾರ್ಥನೆ, ತೇರ್ಸ ಮಾಡುವುದಿಲ್ಲ ಎಂಬ ಸುದ್ದಿ ಬಂದಿತು. ಆವರೆಗೆ ಕುತ್ತಿಗೆಯಲ್ಲಿ ಕಟ್ಟಿಕೊಂಡಿದ್ದ ಅರ್ಲೂಕನ್ನು ಬಿಚ್ಚಿ ಇರಿಸಿದ್ದಾನೆ ಎಂದರು.
ಇಷ್ಟೆಲ್ಲ ಕೇಳಿಕೊಂಡು ತಾನು ಸುಮ್ಮನಿರುವುದು ಹೇಗೆ?..ಮಕ್ಕಳನ್ನು ಸರಿಯಾದ ಹದ್ದುಬಸ್ತಿನಲ್ಲಿಡಬೇಕಾದವರು ತಂದೆ ತಾಯಿಗಳು ತಾನೆ? ತಾನು ಸಾನಬಾವಿ ಪೆದ್ರುವಿನ ಮನೆಗೆ ಹೋದೆ. ಏನಿದು ನಿಮ್ಮ ಮಗ ಹಿಡಿದಿರುವ ದಾರಿ ಎಂದು ಗಡುಸಾಗಿಯೇ ಕೇಳಿದೆ.
ಫ಼್ಲೋರಿನ-
“….ಪದ್ರಾಬ..ನಮ್ಮ ಮಾತೇ ಕೇಳುತ್ತಿಲ್ಲ…ಅವನ ಹತ್ತಿರ ಮಾತನಾಡಲಿಕ್ಕೆ ನಮಗೆ ಆಗೋಲ್ಲ…” ಎಂದು ಕಣ್ಣಲ್ಲಿ ನೀರು ತಂದು ಕೊಂಡಳು.
ಸಾನಬಾವಿ ಪೆದ್ರು ಕೂಡ.
“ಪದ್ರಾಬ..ಯಾರು ಅವನ ತಲೇಲಿ ಏನು ಹಾಕಿದಾರೆ…ಇಷ್ಟು ವರ್ಷ ಸರಿಯಾಗಿದ್ದವನು ಈಗಲೇ ಹೀಗಾಗಿದ್ದಾನೆ” ಎಂದು ಗೋಳಾಡಿದನು.
ಗ್ರೆಗೊರಿ ಹೀಗೆ ಆಗಿರುವುದರಲ್ಲಿ ತಂದೆ ತಾಯಿಯ ಪಾತ್ರ ಏನೂ ಇಲ್ಲ..ಸೈತಾನ ಅವನನ್ನು ಆಟವಾಡಿಸುತ್ತಿದ್ದಾನೆ ಎನಿಸಿತು.
” ಪೆದ್ರು…ಫ಼್ಲೋರಿನಾ…ನೀವು ನಿತ್ಯ ನಿಮ್ಮ ಮಗನ ಮನಪರಿವರ್ತನೆಗಾಗಿ ದೇವರಲ್ಲಿ ಬೇಡಿಕೊಳ್ಳಿ..ನಾನೂ ಬೇಡಿಕೊಳ್ಳುತ್ತೇನೆ.” ಎಂದೆ.
ನಿತ್ಯ ಬೇಡಿ ಕೊಳ್ಳುತ್ತಿದ್ದೇನೆ ಕೂಡ. ಆದರೆ ಊರಿನ ಅಷ್ಟು ಜನ ಕ್ರೈಸ್ತವರು ಇಗರ್ಜಿಗೆ ಬರುತ್ತಾರೆ. ಈ ಯುವಕ ಇಗರ್ಜಿ ಎದುರಿನಿಂದ ತಿರುಗಾಡುವಾಗ ಕೂಡ ಅತ್ತ ತಿರುಗಿ ನೋಡುವುದಿಲ್ಲ!
ಈ ವಿಷಯ ತನ್ನನ್ನು ಘಾಸಿಗೊಳಿಸುತ್ತಿದೆ.
ಗ್ರೆಗೊರಿಯ ಜತೆಗೆ ಹಸಿಮಡ್ಲು ಪತ್ರೋಲನ ಮಗ ಜೂಜೆ ಬೇರೆ ಇತ್ತೀಚಿಗೆ ಸೇರಿಕೊಂಡಿದ್ದಾನೆ.
ತನ್ನ ತಂಗಿಗೆ ಊರಿನ ಕಾನ್ವೆಂಟಿನ ಸಿಸ್ಟರುಗಳು ಕೆಲಸಕೊಡಲಿಲ್ಲ ಎಂಬ ಕಾರಣವನ್ನೇ ಮುಂದೆ ಮಾಡಿಕೊಂಡು ಈತ ಸಿಸ್ಟರುಗಳನ್ನು ಬಯ್ಯಲು ಒಂದಲ್ಲ ಒಂದು ನೆಪ ಹುಡುಕುತ್ತಿರುತ್ತಾನೆ.
ಬಡವರಿಗೆ ಹಂಚಲೆಂದು ಸಿಸ್ಟರುಗಳು ವಿದೇಶದಿಂದ ತರಿಸಿಕೊಂಡ ಗೋದಿ, ರವೆ, ಎಣ್ಣೆಯನ್ನು ಸಿಸ್ಟರುಗಳು ಅಂಗಡಿಗೆ ಮಾರುತ್ತಾರೆ ಎಂದು ಗದ್ದಲ ಮಾಡಿದ. ಡಯಾಸ ಮನೆಗೆ, ಪಿಂಟೋ ಮನೆಗೆ ಮತ್ತೆ ಇನ್ಯಾರದ್ದೋ ಮನೆಗೆ ಕದ್ದು ಸಾಗಿಸುತ್ತಾರೆ ಎಂದು ಬಡವರಿಗೆ ಇದು ಸಿಗುವುದಿಲ್ಲವೆಂದ.
ಮೊನ್ನೆ ಊರ ಗೋಡೆಗಳ ಮೇಲೆ ಚರ್ಚ್ ಕಂಪೌಂಡಿನ ಮೇಲೆ , ಸರಕಾರಿ ಬಾವಿ, ಕಾನ್ವೆಂಟ್ ಗೋಡೆ, ಫ಼ಾತಿಮಾ ನಗರದ ಮನೆಗಳ ಮೇಲೆ, ಜೋಸೆಫ಼್ ನಗರದ ಮನೆಗಳ ಮೇಲೆ, ಕೆಂಪು ಬಣ್ಣದ ದಪ್ಪ ದಪ್ಪ ಅಕ್ಷರಗಳು ಕಾಣಿಸಿಕೊಂಡವು.
“ಕಾನ್ವೆಂಟ್ ಆಡಳಿತಕ್ಕೆ ಧಿಕ್ಕಾರ”
“ಇಲ್ಲಿಯ ಕಾನ್ವೆಂಟಿನಲ್ಲಿ ಇಲ್ಲಿಯವರಿಗೇ ಕೆಲಸ”
“ಧಿಕ್ಕಾರ..ಧಿಕ್ಕಾರ ಕೆಲಸ ಕೊಡದವರಿಗೆ ಧಿಕ್ಕಾರ”
“ಬಡವರ ಗೋಧಿ ಉಳ್ಳವರ ಬಸಿರಿಗೆ”
ಮದರ್ ಜನರಲ್ ಬಂಗಲೆಗೆ ಬಂದು-
“ಫ಼ಾದರ್…” ಎಂದು ತುಟಿ ಕಚ್ಚಿಕೊಂಡು ಮುಖ ಸಣ್ಣದು ಮಾಡಿಕೊಂಡಾಗ ಫ಼ಾದರಿ ಸಿಕ್ವೇರಾ ಗಡ್ಡ ಮೀಸೆಗಳಿಲ್ಲದ ಬೋಳು ಮುಖವನ್ನು ಉಜ್ಜಿಕೊಂಡರು. ಬಲಗೈ ಮುಷ್ಟಿ ಕಟ್ಟಿ ತಮ್ಮೆದೆಯನ್ನು ತಾವೇ ಗುದ್ದಿಕೊಂಡರು.
ಈ ಕಾನ್ವೆಂಯ್ಟ್ ಪ್ರಕರಣದ ಮೂಲ ಅವರಿಗೆ ಗೊತ್ತಿತ್ತು. ಬಳ್ಕೂರಕಾರನ ಮೊಮ್ಮಗಳು, ಸಾಮ್ಸನ್ನನ ಮಗಳು ಗ್ಲೋರಿಯಾ, ಹಸಿಮಡ್ಲು ಪತ್ರೋಲನ ಮಗಳು ವೆರೋನಿಕ ಖಾಲಿ ಇರುವ ಕೆಲಸ ತಮಗೆ ನೀಡಿ ಎಂದು ಕಾನ್ವೆಂಟಿಗೆ ಕೊಟ್ಟ ಅರ್ಜಿ ಕಸದ ಬುಟ್ಟಿ ಸೇರಿ ಸಿಸ್ಟರ್ ಲಿನಾರ ಅಕ್ಕನ ಮಗಳು ಮಿರೋಣ ಡಯಾಸಿನ ಮಗಳು ಕಾನ್ವೆಂಟಿನಲ್ಲಿ ಕೆಲಸ ಗಿಟ್ಟಿಸಿಕೊಂಡ ನಂತರ ಇದು ನಿಧಾನವಾಗಿ ಕೇರಿಯ ತುಂಬಾ , ಸುತ್ತ ಕೊಳೆತ ನಾಯಿಯ ವಾಸನೆಯಂತೆ ಹಬ್ಬತೊಡಗಿತು. ಗ್ಲೋರಿಯಾ ತಂದೆ ಸಾಮ್ಸನ್ ಮನೆಯ ಮೇಲೆ ಬಾಗಿಲು ತಟ್ಟಿ ನೋಡಿ ವಿಷಯ ಹೀಗಿದೆ ಎಂದು ಹೇಳಿದ. ಹಸಿಮಡ್ಲ ಪಾತ್ರೋಲ ಕೂಡ ಹಿಂದುಳಿಯಲಿಲ್ಲ. ಬ್ಯಾಂಡಾಕರ್ ಡೈಮಂಡ, ಪಾಸ್ಕು, ಮರಿಯಳ ಮಕ್ಕಳು, ಸಿಮೋನನ ಮಗ, ಸಾಂತಾಮೊರಿ ಮೊಮ್ಮಕ್ಕಳಾದ ರಾಬರ್ಟ್, ಗೈಗೊರಿಯರು, ಪೆದ್ರು ಮಗ ಗ್ರೆಗೊರಿ, ಪಾಸ್ಕೋಲ ಮೇಷ್ಟ್ರ ಮಗ ಅಂತೋನಿ, ಹೊಸದಾಗಿ ಊರಿಗೆ ಬಂದ ಇನ್ನು ಹಲವರು ಈ ಬಗ್ಗೆ ಚರ್ಚಿಸಿ, ಕೆಲವರು ಹೋಗಿ ಮೊದಲು ಫ಼ಾದರಿಗಳನ್ನು ಕಂಡರು.
ಯುವಕರ, ನಡು ವಯಸ್ಕರ ಒಂದು ಗುಂಪೇ ತಮ್ಮ ಬಳಿ ಬಂದಾಗ ಪಾದರಿ ಸಿಕ್ವೇರಾ ತುಸು ಬೆದರಿದರು.
“..ಏನು? ಏನು?” ಎಂದು ಕೇಳಿದರು. ಹೀಗೆ ದಂಡು ಗಟ್ಟಿ ಬಂದು ಪಾದರಿಗಳನ್ನು ಕಾಣುವ ಸಂಸ್ಕೃತಿಯನ್ನು ಸಿಕ್ವೇರಾ ಎಂದೂ ಒಪ್ಪಿಕೊಂಡವರಲ್ಲ. ಪಾದರಿಗಳ ಅಥವಾ ಸಿಸ್ಟರುಗಳ ತೀರ್ಮಾನವನ್ನು ಜನ ಸುಮ್ಮನೆ ಒಪ್ಪಿಕೊಳ್ಳಬೇಕಲ್ಲದೆ ಅದನ್ನೊಂದು ಸಮಸ್ಯೆ ಎಂದು ತೆಗೆದುಕೊಳ್ಳುವುದಾಗಲಿ, ಅದರಲ್ಲಿ ಸರಿ ತಪ್ಪನ್ನು ಹುಡುಕುವುದಾಗಲಿ ಎಂದೂ ಸರಿಯಲ್ಲ. ಈಗ ಈ ಯುವಕರು ದಂಡುಗಟ್ಟಿ ಬಂದಿರುವುದು ಸಿಸ್ಟರುಗಳ ತೀರ್ಮಾನ ಸರಿಯಲ್ಲ ಎಂದಲ್ಲವೆ? ಇದು ಸಿಸ್ಟರುಗಳ ವಿರೋಧದ ಮನೋಭಾವವಲ್ಲ ಇಗರ್ಜಿ ಮಾತೆಯನ್ನೇ ವಿರೋಧಿಸಿದ ಹಾಗೆ?
“ಏನು? ಏನು?” ಎಂದು ದನಿ ಏರಿಸಿಯೇ ಇವರು ಕೇಳಿದಾಗ ಆಗಲೇ ಸಾಕಷ್ಟು ಪ್ರಚಾರವಾಗಿದ್ದ ವಿಷಯವನ್ನೇ ಬಂದ ಯುವಕರು ಮತ್ತೊಮ್ಮೆ ಹೇಳಿದರು. ಅವರ ಮಾತಿನಲ್ಲಿ ಆಕ್ರೋಶವಿತ್ತು. ಉದ್ವೇಗವಿತ್ತು.
“ಸಿಸ್ಟರುಗಳು ಬೇರೆ ಯಾರನ್ನೋ ಕೆಲಸಕ್ಕೆ ಸೇರಿಸಿಕೊಂಡಿಲ್ಲ ಅಲ್ವೆ?” ಎಂದು ಕೇಳಿದರು ಸಿಕ್ವೇರಾ ತಾಳ್ಮೆ ತಂದುಕೊಂಡು.
“ಹೌದು, ಆದರೆ ಅವರು ಇಲ್ಲಿಯವರಲ್ಲ ಸಿಸ್ಟರಗೆ ಬೇಕಾದವರು ಒಬ್ಬರು..ಡಯಾಸ್ ಮಗಳು ಮಂಗಳೂರಿನಲ್ಲಿ ಕೆಲಸದ ಮೇಲಿದ್ದವಳು ಇನ್ನೊಬ್ಬಳು..ಇದು ಸರಿಯಲ್ಲ ಅಂತ ನಮ್ಮ ಅಭಿಪ್ರಾಯ…”
“ನೋಡಿ, ಒಂದು ಶಾಲೆ ಒಂದು ಸಂಸ್ಥೆಯನ್ನು ನಡೆಸುವವರಿಗೆ ಕೆಲ ಜವಾಬ್ದಾರಿಗಳು ಇರುತ್ತವೆ. ಕೆಲ ನಿಯಮಗಳೂ ಇರುತ್ತವೆ. ಈ ಪ್ರಕಾರ ಅವರು ನಡೆದುಕೊಳತಾರೆ. ಅದು ಸರಿ ಅಲ್ಲ ಅಂತ ಹೇಳುವ ಅಧಿಕಾರ ಹೊರಗಿನವರಾದ ನಮಗೆ ಇಲ್ಲ. ಈ ಊರಿನಲ್ಲೂ ವಿದ್ಯಾವಂತರಾದವರು ಇದಾರೆ ಅನ್ನೋದು ನನಗೂ ಗೊತ್ತು. ಅವರಿಗೂ ನಾಳೆ ಅವಕಾಶ ಮಾಡಿಕೊಡಿ ಅಂತ ಹೇಳೋಣ..ನೀವು ಈ ವಿಷಯಾನ ಎತ್ತಿಕೊಂಡು ಊರಿಗೆಲ್ಲ ತಿಳಿಯುವ ಹಾಗೆ ಗದ್ದಲ ಮಾಡಬೇಡಿ..ನಮ್ಮ ನಮ್ಮೊಳಗೆ ಹೀಗೆ ಸಮಸ್ಯೆ ಇದೆ ಅಂತ ಹೊರಗಿನವರಿಗೆ ತಿಳೀಬಾರದು..” ಎಂದೇನೋ ಪಾದರಿ ಹೇಳುತ್ತಿರಲು ಎದುರು ನಿಂತ ಯುವಕ ಅವರಿಗೆ ಮುಂದೆ ಮಾತನಾಡಲು ಕೊಡಲಿಲ್ಲ.
“ಫ಼ಾದರ್ ನೀವು ನಮ್ಮ ಕಡೆ ಇರಬೇಕು..ಕಾನ್ವೆಂಟಿಗೆ ಜಾಗ ಕೊಟ್ಟವರು ನಾವು. ಅವರು ಇಲ್ಲಿಗೆ ಬಂದದ್ದು ನಮ್ಮ ಮಕ್ಕಳಿಗಾಗಿ..ಆದರೆ ಈಗ ನಮ್ಮ ಮಕ್ಕಳಿಗೆ ಕಾನ್ವೆಂಟಿನಿಂದ ಉಪಯೋಗ ಆಗತಿಲ್ಲ..ನಮ್ಮ ಹೆಣ್ಣು ಮಕ್ಕಳಿಗೆ ಇಲ್ಲಿ ಕೆಲಸ ಸಿಗತಾ ಇಲ್ಲ. ನೀವು ನಮ್ಮ ಪರವಾಗಿ ನಿಂತು ಈ ಸಮಸ್ಯೆಗೆ ಪರಿಹಾರ ಕೊಂಡುಕೊಳ್ಳಲಿಕ್ಕೆ ಸಹಾಯ ಮಾಡೋದಿಲ್ಲ ಅನ್ನೋದಾದರೆ ನಾವೇ ಕಾನ್ವೆಂಟಿಗೆ ಹೋಗುತ್ತೇವೆ…ಹೇಳಿ ಫ಼ಾದರ್ ನೀವು ನಮ್ಮ ಪರವಾಗಿ ಇರತೀರೋ ಇಲ್ಲ..”
ಯುವಕರ ನಾಯಕತ್ವ ವಹಿಸಿಕೊಂಡಂತಿದ್ದ ಜೂಜ ಒಂದು ಸವಾಲನ್ನೇ ಪಾದರಿಗಳ ಮುಂದಿಟ್ಟ. ಈ ಸವಾಲಿಗೆ ಸಿಕ್ವೇರಾ ಉತ್ತರಕೊಡಲು ಹೋಗಲಿಲ್ಲ. ಆದರೂ –
“..ಇದು ಪೂರ್ತಿಯಾಗಿ ಕಾನ್ವೆಂಟಿಗೆ ಸೇರಿದ ವಿಷಯ..ಇಗರ್ಜಿಗೆ ಈ ಬಗ್ಗೆ ಏನೂ ಹೇಳಲಿಕ್ಕೆ ಸಾಧ್ಯವಿಲ್ಲ. ಆದರೂ ನೀವು ಅಲ್ಲಿಗೆ ಹೋಗೋದು ಸೂಕ್ತ ಅಲ್ಲ..ಸಿಸ್ಟರುಗಳು ಅಂದರೆ ಏಸು ಪ್ರಭುವಿನ ವಾಕ್ಯವನ್ನು ಕಾರ್ಯ ರೂಪಕ್ಕೆ ಇಳಿಸುವವರೇ ಹೊರತು ಬೆರೆ ಇಲ್ಲ..”
ಸಿಕ್ವೇರರ ಮಾತು ಮುಗಿದಿರಲಿಲ್ಲ.
“ನಡೀರಿ ಹೋಗೋಣ..ಇವರು ಪಾದರಿ ಅಲ್ಲ..ಆ ಸಿಸ್ಟರುಗಳ ತುತ್ತೂರಿ..” ಎಂದು ಕೂಗುತ್ತ ಆ ತರುಣರೆಲ್ಲ ಹೊರಟು ಹೋಗಿದ್ದರು.
ಇದಂತೂ ತಮಗಾದ ಬಹಳ ದೊಡ್ಡ ಅವಮಾನ ಎಂದೇ ತಿಳಿದುಕೊಂಡರು ಸಿಕ್ವೇರಾ.
ಊರ ಕಾನ್ವೆಂಟಿಗೂ ಪಾದರಿಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಆದರೆ ಊರ ಕ್ರೀಸ್ತುವರಿಗೂ ಪಾದರಿಗಳಿಗೂ ಸಂಬಂಧ ಇರುತ್ತದಲ್ಲ.
ಪಾದರಿಗಳು ಜನ ಈ ಹಂತಕ್ಕೆ ಹೋಗಲು ಏಕೆ ಬಿಟ್ಟರು?
ಜೂಜ ಬೇರೆ-
“..ಇವರು ಪಾದರಿ ಅಲ್ಲ..ಸಿಸ್ಟರುಗಳ ತುತ್ತೂರಿ” ಎಂದು ಹೇಳಿಹೋದನಲ್ಲ.
ಇದಕ್ಕಿಂತ ದೊಡ್ಡ ಅವಮಾನ ಬೇಕೆ?
ಊರ ಕ್ರೀಸ್ತುವ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಲು ತಾನು ಕಾರಣ ಎಂಬಂತೆ ಈ ಯುವಕರು ಕೂಗಾಡಿ ಹೋದರಲ್ಲ. ಇದರಲ್ಲಿ ತನ್ನ ಪಾತ್ರ ಏನೂ ಇಲ್ಲ ಅಲ್ಲವೆ?
ಸಿಸ್ಟರುಗಳು ಯಾರಿಗೋ ಕೆಲಸ ಕೊಟ್ಟಿರಬಹುದು. ಅವರೇನೂ ಬೇರೆಯವರಲ್ಲ. ಅಲ್ಲವೆ? ನಾಳೆ ಮತ್ತೆ ಕಾನ್ವೆಂಟಿನಲ್ಲಿ ಕೆಲಸ ಖಾಲಿ ಬಿದ್ದರೆ ಇತರೆಯವರಿಗೆ ಕೊಡಬಹುದಲ್ಲವೆ? ಅಂದ ಮೇಲೆ ಈ ಕೂಗಾಟ, ಗೋಡೆ ಬರಹ ಏಕೆ?
ಪಾದರಿ ಸಿಕ್ವೇರಾ ಈ ಎರಡೂ ವಿಷಯಗಳ ಬಗ್ಗೆ ಯೋಚನೆ ಮಾಡುತ್ತಿರಬೇಕಾದರೇನೆ ಬೋನನ ಮಗ ಫ಼ಿಲಿಪ್ಪನ ನೆನಪೂ ಅವರಿಗಾಯಿತು.
ಅವರ ಹಿಂದಿನ ಉತ್ಸಾಹ ಚಟುವಟಿಕೆ ಸಂತಸಗಳನ್ನು ಚಿವುಟಿ ಹಾಕುವುದರಲ್ಲಿ ಈ ಫ಼ಿಲಿಪ್ಪನ ಪ್ರಕರಣವೂ ಸೇರ್ಪಡೆಯಾಗಿತ್ತು.
ಅಲೆಕ್ಸ ಪಿಂಟೋ, ಒಂದು ದಿನ ಸಿಮೋನನನ್ನು ಹುಡುಕಿಕೊಂಡು ಬಂದ. ಎಂದಿನಂತೆ ಕ್ಷೇಮ ಸಮಾಚಾರ ಕೇಳಿ, ಮಕ್ಕಳು ಕೆಲಸ ಮಾಡುತ್ತಿರುವ ಬಗ್ಗೆ ಪ್ರಸ್ತಾಪಿಸಿ, ಊರು, ಇಗರ್ಜಿ, ಕ್ರಿಸ್ತುವರು, ಪಾದರಿ ಎಂದೆಲ್ಲ ಮಾತನಾಡಿ-
“ನಮ್ಮ ಬೋನ ಸಾಹುಕಾರರು ಕೂಡ ಒಳ್ಳೆಯವರೆ” ಎಂದು ಮುಖ್ಯ ವಿಷಯಕ್ಕೆ ಬಂದು-
ಬೋನ, ಅವನ ಹೆಂಡತಿ, ಮಗ, ಈಗ ಅವರ ಸ್ಥಾನಮಾನಗಳ ಬಗ್ಗೆ ಒಳ್ಳೆಯ ಮಾತುಗಳನ್ನೇ ಹೇಳಿದ. ಈ ವಿಷಯವನ್ನೇ ಕುರಿತು ಅವರು ಕೊಂಚ ಹೊತ್ತು ಮಾತನಾಡಿದರು ಕೂಡ. ಮಾತು ಮುಗಿಸಿ ಇನ್ನೇನು ಹೊರಡಬೇಕು ಅನ್ನುವಾಗ ಪಿಂಟೋ.
“ಸಿಮೋನ ಮಾಮ..” ಎಂದ ತನ್ನ ಮಾತಿನ ಧಾಟಿಯನ್ನು ಬದಲಾಯಿಸಿ ಒಂದೇ ರಾಗದಲ್ಲಿ ಕೇಳಿ ಬರುತ್ತಿದ್ದ ಗಾಯನದ ನಡುವೆ ಅಪಸ್ವರ ಬಂದಂತೆ ಭಾಸವಾಗಿ ಸಿಮೋನ ಪಿಂಟೋನ ಮುಖ ನೋಡಿದ.
“ಸಿಮೋನ ಮಾಮ..ಸಂದರ್ಭ ನೋಡಿ ಬೋನ ಸಾಹುಕಾರರ ಕಿವಿಗೆ ಒಂದು ವಿಷಯ ಹಾಕಿ ಬಿಡಿ” ಎಂದ.
“ಏನು ವಿಷಯ?”
“ಅದೇ ಮೊನ್ನೆ ನೀವು ಅವರು ನಮ್ಮಲ್ಲಿಗೆ ಬಂದಿದ್ರಿ..ನಾನು ನಮ್ಮ ನೆಂಟರಿಷ್ಟರಿಗೆ ಒಂದು ಮಾತು ಕೇಳಿದೆ…ಕೇಳಬೇಕಲ್ಲ..ಅವರು ಯಾರಿಗೂ ಮನಸ್ಸಿಲ್ಲ..ನನಗೆ ನನ್ನ ಹೆಂಡತಿಗೆ ಈ ಬಗ್ಗೆ ಯಾವುದೇ ತಕರಾರಿಲ್ಲ..ಆದರೆ ಹುಡುಗಿ ಸೋದರ ಮಾವಂದಿರು ಅವಳಿಗೆ ಬೇರೆ ಕಡೆ ಗಂಡು ನೋಡಿದಾರೆ. ಮಂಗಳೂರಿನ ಹುಡುಗ ಈಗ ಇಂಗ್ಲೆಂಡಿನಲ್ಲಿದ್ದಾನೆ..”
ಪಿಂಟೋ ತನ್ನ ಬಾಮಣ ಸ್ಪರ್ಶವನ್ನು ಮಾತಿಗೆ ನೀಡಿ ತುಂಬ ಮೃದುವಾಗಿ, ರಾಗವಾಗಿ, ಅಲ್ಲಲ್ಲಿ ನಿಲ್ಲಿಸಿ, ಕೆಲ ಬಾರಿ ಎಳೆದು ಇಷ್ಟೆಲ್ಲ ಹೇಳುವಾಗ, ಸಿಮೋನನಿಗೆ ಎಲ್ಲ ಅರ್ಥವಾಯಿತು. ತನ್ನ ತಾಯಿ ಈ ಬಾಮಣರು ತಮ್ಮನ್ನು ಶ್ರೇಷ್ಠರು ಎಂದು ಕರೆಸಿಕೊಳ್ಳುತ್ತಾರೆ ಎಂದು ಹೇಳುತ್ತಿದ್ದುದು ಕೂಡ ನೆನಪಿಗೆ ಬಂದು ಈತನ ಈ ಮಾತಿನ ಹಿಂದೆ ಬೇರೇನೋ ಇದೆ ಎಂಬುದು ಖಚಿತವಾಯಿತು. ಮೈ ಮೇಲೆ ಮುಳ್ಳು ಏಳುವಂತೆ ಮಾತನಾಡುತ್ತಿದ್ದ ಪಿಂಟೋನನ್ನು ತಡೆದು ಸಿಮೋನ-
“ಗೊತ್ತಾಯ್ತು ಬಿಡಿ…ನಾನು ಬೋನ ಸಾಹುಕಾರರಿಗೆ ಹೇಳತೀನಿ” ಎಂದ.
ಪಿಂಟೋ ಏನೋ ಕೆಲಸ ನೆನಪಿಗೆ ತಂದುಕೊಂಡು ಹೋದ. ಸಿಮೋನ ತನ್ನ ಮನೆಗೆ ಸೊಸೆಯನ್ನಾಗಿ ತಂದುಕೊಳ್ಳಲು ಉತ್ಸುಕನಾಗಿದ್ದ ಬೋನ. ತನ್ನ ಮಗ ಅವಳನ್ನು ಮೆಚ್ಚಿಕೊಂಡಿರುವುದು, ಆ ಹುಡುಗಿ ಕೂಡ ತನ್ನ ಮಗನನ್ನು ಒಪ್ಪಿರುವುದು ಈ ಉತ್ಸುಕತೆಗೆ ಕಾರಣವಾಗಿತ್ತು. ಪೇಟೆ ಬದಿಯಲ್ಲಿ ಪಿಂಟೋ ಒಂದು ಅಂಗಡಿ ಇರಿಸಿಕೊಂಡಿದ್ದ. ಅಲ್ಲಿಯೇ ಬೋನನ ಅಂಗಡಿಯೂ ಇತ್ತು. ಬೋನ ಹಾಗೆ ನೋಡಿದರೆ ಪಿಂಟೋಗಿಂತ ಶ್ರೀಮಂತನಾಗಿದ್ದ. ಇವನಿಗೆ ಒಳ್ಳೆಯ ಹೆಸರಿತ್ತು. ಇತ್ತ ಫ಼ಿಲಿಪ್ಪ ಕೂಡ ಒಳ್ಳೆಯವನೆ. ಆ ಹುಡುಗಿ ಕೂಡ. ಈ ಮದುವೆಗೆ ಯಾವುದೆ ಅಡ್ಡಿ ಇರಲಿಲ್ಲ. ಆದರೆ ಈ ಪಿಂಟೋ ಹೀಗೊಂದು ಮಾತು ಹೇಳಿದನಲ್ಲ ಇದನ್ನು ಬೋನನಿಗೆ ಹೇಳುವಂತಿಲ್ಲ. ಹೇಳದೇ ಇರುವಂತಿಲ್ಲ.
ನಾಲ್ಕು ದಿನ ಇದೇ ತೊಳಲಾಟವಾಯಿತು ಮತ್ತೆ ಐದಾರು ದಿನಗಳ ನಂತರ ಸಿಮೋನ ಬೋನನ ಮನೆಗೆ ಹೋದ.
“ಬನ್ನಿ ಅಂಕಲ್..” ಎಂದು ರೆಮೇಂದಿ ಸ್ವಾಗತಿಸಿದಳು.
“ಯಾರು?” ಎಂದು ಕೇಳುತ್ತಾ ಬೋನ ಹೊರಬಂದ.
“ಕುತ್ಕೊಳ್ಳಿ..” ಎಂದು ಸೋಫ಼ಾ ತೋರಿಸಿದ.
“ಪಿಂಟೋ ಸಿಕ್ಕಿರಬೇಕು ಅಲ್ವ?”
ನೇರವಾಗಿ ಆ ವಿಷಯಕ್ಕೇನೆ ಬಂದ ಬೋನ. ಸಿಮೋನ ತಲೆ ತಗ್ಗಿಸಿಕೊಂಡಿದ್ದವ ಏನನ್ನೋ ಹೇಳಲೆಂದು ಹೊರಟಾಗ ಬೋನ ಅವನನ್ನು ತಡೆದ-
“…ನನಗೆಲ್ಲ ಗೊತ್ತಾಗಿದೆ ಸಿಮೋನ ಮಾಮ..” ಎಂದ ಬೋನ. ಅವನ ದನಿ ಸಣ್ಣಗೆ ಕಂಪಿಸುತಿತ್ತು.
“ಪಾದರಿ ಗೋನಸ್ವಾಲಿಸ್ ನನ್ನನ್ನು ಕೆಳಮಟ್ಟದಿಂದ ಮೇಲೆ ಎತ್ತಿ ತಬ್ಬಿಕೊಂಡು ಬೆಳೆಸಿದ್ರು..ಆದರೆ ಈ ಜನ ನನ್ನನ್ನು ನನ್ನ ಮಗನನ್ನು ಮತ್ತೆ ಕೆಳಗೆ ತುಳೀಲಿಕ್ಕೆ ನೋಡ್ತಿದಾರೆ..ಫ಼ಿಲಿಪ್ಪ ಇದನ್ನು ಮನಸ್ಸಿಗೆ ತುಂಬಾ ಹಚ್ಚಿಕೊಂಡಿದ್ದಾನೆ..” ಎಂದ ಬೋನ. ಅವನ ಮಾತಿನಲ್ಲಿ ಕೂಡ ಅಪಾರವಾದ ವ್ಯಥೆ ಇತ್ತು.
*
*
*
ತನ್ನ ಮಗಳನ್ನು ಬೋನನ ಮಗ ಫ಼ಿಲಿಪ್ಪನಿಗೆ ಕೊಡಬಾರದು ಎಂದು ನಿರ್ಧರಿಸಿದ ಪಿಂಟೋ ತನ್ನ ಮಗಳು ಸಿಲ್ವಿಯಾಳನ್ನು ಎದುರು ಕೂರಿಸಿಕೊಂಡು-
“..ನಾವೆಲ್ಲ ಒಂದು ಕಾಲದಲ್ಲಿ ಬ್ರಾಹ್ಮಣರಾಗಿದ್ದವರು. ಈಗಲೂ ನಮ್ಮಲ್ಲಿ ಜಾಣ್ಮೆ, ಬುದ್ಧಿವಂತಿಕೆ, ನಯ, ನಾಜೂಕುತನ ಉಳಿದುಕೊಂಡಿದೆ. ನಮ್ಮವರ ಮನೆಗಳ ಸೊಗಸುಗಾರಿಕೆ, ಊಟ, ಉಡಿಗೆಯಲ್ಲಿಯ ಸೊಬಗು ಬೇರೆಯವರಲ್ಲಿ ಇಲ್ಲದಿರಲು ಇದೇ ಕಾರಣ. ನಿನ್ನ ಫ಼ಿಲಿಪ್ಪ ನೇಂದರನ ಮಗ. ಅವನ ತಾಯಿ ಚಾರಡಿ…ಅವರ ಸಂಸ್ಕಾರ ಸಂಸ್ಕೃತಿ ಬೇರೆ. ಮಾತು ಬೇರೆ. ಮನೆಯ ಅಡಿಗೆ ಉಡೀಗೆ ಬೇರೆ. ನಾವೆಲ್ಲ ಒಂದೇ ಜಾತಿ ಹೌದು..ಆದರೆ ಅವನ ರಕ್ತ ಬೇರೆ..ನಿನ್ನ ರಕ್ತ ಬೇರೆ..”
ಎಂದೇನೋ ಹೇಳ ಹೊರಟಾಗ ಸಿಲ್ವಿಯ ಕೆರಳಿ ನಿಂತಿದ್ದಳು. ಕ್ರೀಸ್ತುವರಲ್ಲಿ ಹೀಗೆಲ್ಲ ಒಳಪಂಗಡಗಳಿರುವುದು ಅವಳಿಗೆ ಗೊತ್ತಿತ್ತು. ಭಾಷೆಯಲ್ಲಿ ವ್ಯತ್ಯಾಸವೋ, ಮನೆಯ ಆಚಾರ-ವಿಚಾರಗಳಲ್ಲಿ ಭಿನ್ನತೆಯೋ ಇರಲು ಈ ಒಳಪಂಗಡಗಳು ಕಾರಣ ಎಂದವಳು ನಂಬಿರಲಿಲ್ಲ. ವಿದ್ಯಾಭ್ಯಾಸವೋ, ಶ್ರೀಮಂತಿಕೆಯೋ, ಜನ ಬೆಳೆದುಬಂದ ಪರಿಸರವೋ ಅವರಲ್ಲಿಯ ವ್ಯತ್ಯಾಸಕ್ಕೆ ಕಾರಣವಾಗಬಹುದು. ಬೋನ ಸಾಹುಕಾರರನ್ನು, ಅವರ ಮನೆಯನ್ನು, ಅವರ ಮಗ ಫ಼ಿಲಿಪ್ಪನನ್ನು ನಿಕೃಷ್ಟವಾಗಿ ಕೀಳಾಗಿ ಕಾಣಲು ಯಾವುದೇ ಕಾರಣವಿರಲಿಲ್ಲ. ಅವರು ಮಾತು, ಉಡಿಗೆ, ತೊಡಿಗೆ ಯಾವುದರಲ್ಲೂ ಕಡಿಮೆ ಇರಲಿಲ್ಲ. ಕ್ರೀಸ್ತುವರ ನಡುವೆಯೇ ಹೀಗೊಂದು ಭೇದ ಭಿನ್ನತೆ ಇರುತ್ತದೆಂದರೆ ನಾವೆಲ್ಲ ಕ್ರಿಸ್ತನ ಅನುಯಾಯಿಗಳು ಎಂಬ ಮಾತಿಗೇನೆ ಬೆಲೆ ಇಲ್ಲ ಅಲ್ಲವೆ?
“ಪಪ್ಪ..ನಾನು ಫ಼ಿಲಿಪ್ಪ ಒಂದು ನಿರ್ಧಾರ ಮಾಡಿದ್ದೇವೆ. ಯಾವ ಕಾರಣಕ್ಕೂ ನಾವು ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ..” ಎಂದು ಸಾರಿಬಿಟ್ಟಳು.
“ಇನ್ನು ನಿಮ್ಮ ಮಾತಿನ ಬಗ್ಗೆ ನನಗೆ ಆಸಕ್ತಿ ಇಲ್ಲ” ಎಂದು ಹೇಳಿ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಳು.
ಮಾರನೇ ದಿನ ಅವಳು ಮಾಡಿದ ಮೊದಲ ಕೆಲಸವೆಂದರೆ ನೇರವಾಗಿ ಬೋನನ ಅಂಗಡಿಗೆ ಬಂದು ಫ಼ಿಲಿಪ್ಪನಿಗೆ ಹೀಗೆ ಹೀಗೆ ನಡಿಯಿತು ಎಂದು ಹೇಳಿದ್ದು.
ಈ ಬಾಮಣ, ನೆಂದರ ಸಮಸ್ಯೆ ತಮ್ಮ ನಡುವೆಯೂ ಬಂತೆ ಎಂದು ಆತ ಚಿಂತಿತನಾದ. ತನ್ನ ತಂದೆಯ ಬಾಲ್ಯದ ದಿನಗಳ ಬಗ್ಗೆ ತಿಳಿದಿದ್ದ ಆತ ಈ ವಿಷಯದಲ್ಲಿ ಹೆಮ್ಮೆ ಪಡುವುದಿತ್ತು. ಪಾದರಿ ಗೋನಸ್ವಾಲಿಸರಿಗೆ ಸದಾ ತನ್ನ ಕೃತಜ್ಞತೆಗಳನ್ನು ಅರ್ಪಿಸುತ್ತ ಬಂದಿದ್ದ. ಕ್ರಿಸ್ತಪ್ರಭುವನ್ನು ನಂಬುವ ಪಾದರಿಗಳು ಮಾಡಿದ ಸಾಮಾಜಿಕ ಪರಿವರ್ತನೆಯ ಜೀವಂತ ಉದಾಹರಣೆ ತನ್ನ ಕುಟುಂಬ ಎಂಬ ಅರಿವು ಅವನಿಗಿತ್ತು. ತಾನು ನೇಂದರ ಸಬೇಲನ ಮೊಮ್ಮಗ. ಇಡೀ ಸಮಾಜ, ಒಂದು ಊರು ತನ್ನ ತಂದೆಯನ್ನು ಗೌರವ ಮರ್ಯಾದೆಯಿಂದ ಕಾಣುತ್ತಿದೆ ಎಂದು ಕಾಲಘಟ್ಟದಲ್ಲಿ ಆದ ಈ ಪರಿವರ್ತನೆಗೆ ಆತ ಹರ್ಷಪಡುತ್ತಿದ್ದ. ಆದರೆ ಈಗ ಇದೇನು ಆಯಿತು? ಕ್ರೈಸ್ತ ಸಮುದಾಯ ಯಾರನ್ನು ತನ್ನ ಮುಂದಾಳು, ಗುರ್ಕಾರ ಎಂದು ಪರಿಗಣಿಸಿತ್ತೋ ಅವನೇ ಈ ಹಳೆಯ ವೃಣವನ್ನು ಕೆದಕಿದನೆ? ತನ್ನ, ತನ್ನ ತಂದೆ ತಾಯಿಯರ ವರ್ತನೆಯಲ್ಲಿ ಕೀಳುತನವನ್ನ ಕಂಡನೆ ?
ಫ಼ಿಲಿಪ್ಪ ಈ ಬಗ್ಗೆ ಕೊಂಚ ವಿಚಲಿತನಾದ. ಈ ಕ್ಷಣದಲ್ಲಿ ಅವನಿಗೆ ಸಿಲ್ವಿಯಾಳ ಅಭಿಪ್ರಾಯ ಬೇಕಾಗಿತ್ತು.
“ಸಿಲ್ವಿಯಾ..ನಿನ್ನ ನಿರ್ಧಾರವೇನು?” ಎಂದು ಆತ ಸಿಲ್ವಿಯಾಳನ್ನು ಕೇಳಿದ.
“ಫ಼ಿಲಿಪ್ಪ..ನನಗೆ ಈ ಯಾವುದರಲ್ಲೂ ನಂಬಿಕೆ ಇಲ್ಲ..ನಾನು ಯಾವತ್ತೂ ನಿನ್ನವಳು..”
ಮೇಜಿನ ಮೇಲಿದ್ದ ಅವನ ಕೈಯನ್ನು ಬಾಚಿ ಹಿಡಿದುಕೊಂಡಳು ಸಿಲ್ವಿಯಾ. ಅವಳ ಬೆಚ್ಚನೆಯ ಕೋಮಲ ಕರಗಳಲ್ಲಿ ಯಾವುದೋ ದೃಢತೆ, ನಿರ್ಧಾರ, ನಿಷ್ಠುರತೆಯ ಸ್ಪರ್ಶವಾಗಿ ಫ಼ಿಲಿಪ್ಪ-
“…ಹಾಗಾದರೆ ಈ ಮೇಲು ಕೀಳು ಅನ್ನುವ ತಾರತಮ್ಯದ ವಿರುದ್ಧ ನಾವು ಹೋರಾಡೋಣ” ಎಂದ.
ಮಧ್ಯಾಹ್ನ ಮನೆಗೆ ಬಂದವನು ಮನೆಯಲ್ಲಿ ಅವನು ಈ ವಿಷಯವನ್ನೇ ಪ್ರಸ್ತಾಪಿಸಿದ.
“ಪಪ್ಪ, ಕ್ರಿಸ್ತಪ್ರಭುವನ್ನು ರಕ್ಷಕ ಅಂತ ಒಪ್ಪಿಕೊಂಡ ನಂತರವೂ ನೇಂದರ ನೇಂದರ ಆಗಿಯೇ ಬಾಮಣ ಬಾಮಣನಾಗಿಯೇ ಇರುತ್ತಾನೇನು?” ಎಂದು ಆತ ಕೇಳಿದ ಪ್ರಶ್ನೆಗೆ ಬೋನ ಉತ್ತರ ಕೊಡಲಿಲ್ಲ. ಅವನಲ್ಲಿ ಈ ಪ್ರಶ್ನೆಗೆ ಉತ್ತರವಿರಲಿಲ್ಲ. ಇದೇ ಕಾರಣಕ್ಕಾಗಿ ಪಿಂಟೋ ತನ್ನ ಮಗಳನ್ನು ಫ಼ಿಲಿಪ್ಪನಿಗೆ ಕೊಡಲು ನಿರಾಕರಿಸಿದ ಎಂಬುದಂತೂ ತುಂಬಾ ನೋವಿನ ವಿಷಯವಾಯಿತು ಅವನ ಪಾಲಿಗೆ.
“ಬೇಡ ಬಿಡು..ಅವರ ಹುಡುಗಿ ಅವರಲ್ಲಿರಲಿ” ಎಂದು ಬೋನ ಹೇಳಿದನಾದರೂ ಫ಼ಿಲಿಪ್ಪ ಈ ಮಾತಿಗೆ ತನ್ನ ಒಪ್ಪಿಗೆ ಕೊಡಲಿಲ್ಲ.
*
*
*
“ಸಿಮೋನ ಮಾಮ…ಫ಼ಿಲಿಪ್ಪ ಹಾಗೂ ಸಿಲ್ವಿಯಾ ಇಬ್ಬರೂ ಈ ವಿಷಯಾನ ತೀವ್ರವಾಗಿ ತೆಗೆದುಕೊಂಡಿದ್ದಾರೆ..ನಮ್ಮ ಧರ್ಮದ ಬಗ್ಗೆ ಇಗರ್ಜಿ ಪಾದರಿಗಳ ಬಗ್ಗೇನೆ ಅವರಲ್ಲಿ ಅಪನಂಬಿಕೆ, ಅನುಮಾನ ಪ್ರಾರಂಭವಾಗಿದೆ..ಈ ಸಮಸ್ಯೆ ಹೀಗೆ ಪರಿಹಾರ ಕಂಡುಕೊಳ್ಳುತ್ತೋ ನಾನು ಕಾಣೆ..” ಎಂದ ಬೋನ
ಸಿಮೋನನ ಮುಂದೆ ಕೂಡ ಇದೇ ಸಮಸ್ಯೆ ಇತ್ತು. ಈ ಪ್ರಕರಣದಿಂದಾಗಿ ಬೋನನಿಗೆ ನೋವಾಗಿತ್ತು. ಆದರೆ ಸಿಮೋನ ಈ ಪ್ರಕರಣದ ಆಚೆಗೆ ವಿಚಾರಮಾಡದವನಾಗಿದ್ದ. ಕ್ರೈಸ್ತ ಸಮುದಾಯದಲ್ಲಿ ಹೀಗೊಂದು ಭಿನ್ನತೆ ಇರುವುದನ್ನು ಆತ ಗಮನಿಸುತ್ತ ಬಂದಿದ್ದ. ಅದು ತಪ್ಪೆಂದಾಗಲಿ, ಅದು ಹೋಗಬೇಕೆಂದಾಗಲಿ ಅವನು ಬಯಸಿದವನಲ್ಲ.
ಆದರೆ ಈ ವಿಷಯ ಜೋಸೆಫ಼್ ನಗರದ ಮನೆ ಮನೆಗಳಿಗೆ ಬಹಳ ಬೇಗನೆ ಹಬ್ಬಿತು. ಯುವಕರು ಈ ಬಗ್ಗೆ ತೀವ್ರವಾಗಿ ಸ್ಪಂದಿಸಿದರು.
* * * *
ಗ್ರೆಗೋರಿ ಈಗಲೂ ಸರಿ ಹೋಗಿಲ್ಲ. ದಿನಗಳು ಉರುಳಿದ ಹಾಗೆ ಅವನು ಇಗರ್ಜಿಯಿಂದ, ದೇವರಿಂದ, ಧರ್ಮದಿಂದ ದೂರವಾಗುತ್ತಿದ್ದಾನೇನೋ ಅನ್ನಿಸುತ್ತಿದೆ.
ಜೂಜೆ ಹಾಗು ಅವನ ಗೆಳೆಯರು ತನ್ನನ್ನು ತುತ್ತೂರಿ ಎಂದು ಕರೆದು ಹೋದವರು ಮತ್ತೆ ಈ ವಿಷಯವನ್ನು ಎತ್ತಿಕೊಂಡು ತನ್ನ ಬಳಿ ಬಂದಿಲ್ಲ. ಅವರು ಸಿಸ್ಟರುಗಳ ಬಳಿಯೂ ಹೋಗಿಲ್ಲ. ಆದರೆ ಕೆಲವರು ಬೈಬಲ್ ಸೊಸೈಟಿಯ ಜನರೊಡನೆ ಹೆಚ್ಚಿನ ಸಂಪರ್ಕವಿರಿಸಿಕೊಂಡಿದ್ದಾರೆಂದು ಕೇಳಿದೆ.
ಫ಼ಿಲಿಪ್ಪ ಹಾಗೂ ಸಿಲ್ವಿಯಾರ ತೀರ್ಮಾನವೇನು ಎಂದು ಯೋಚಿಸುತ್ತಿರಬೇಕಾದರೇನೆ ಆ ವಿಷಯ ಕೂಡ ತಿಳಿದು ಬಂತು.
*
*
*
ಫ಼ಿಲಿಪ್ಪ ಸಿಲ್ವಿಯಾ ಈರ್ವರೂ ಪಾದರಿ ಪಿರೇರರ ಮುಂದೆ ಬಂದು ನಿಂತರು.
“ಫ಼ಾದರ್..ನಾವೆಲ್ಲ ಕ್ರಿಸ್ತುವರೆ ಅಲ್ವ..ಆದರೂ ಏನಿದು ಬಾಮಣ ನೇಂದರ ಚಾರ್ಡಿ?” ಎಂದು ಫ಼ಿಲಿಪ್ಪ ಅಸಹನೆಯಿಂದ ಕೇಳಿದ.
ಕ್ರೈಸ್ತನನ್ನು ರಕ್ಷಕ ಎಂದ ಕೂಡಲೇ ಎಲ್ಲರೂ ಒಂದೇ ಆಗುತ್ತಾರೆಂದು ಇಗರ್ಜಿ ಮಾತೆ ಹೇಳುತ್ತಾ ಬಂದಿದೆಯಲ್ಲ ಹಾಗಾದರೆ ಈ ಮೇಲು ಕೀಳು ಹೇಗೆ ಬಂತು?
ಪಾದರಿ ಸಿಕ್ವೇರಾ ಮತ್ತೊಮ್ಮೆ ಗಡ್ಡ ಮೀಸೆಗಳಿಲ್ಲದ ಬೋಳು ಕೆನ್ನೆಯನ್ನು ಕೆರೆದುಕೊಂಡರು.
ಅವರು ಸೆಮಿನರಿಯಲ್ಲಿದ್ದಾಗಲೂ ಈ ತಾರತಮ್ಯವಿತ್ತು. ಒಳಜಾತಿಗಳು, ಒಳಪಂಗಡಗಳು, ಕುಂದಾಪುರ, ಕಾರವಾರ, ಹೊನ್ನಾವರ, ಚಿಕ್ಕಮಗಳೂರಿನವರು ಅವರ ಭಾಷೆ ಹೀಗೆ ಇವರ ಭಾಷೆ ಹಾಗೆ ಎಂಬ ಮಾತು ಕೆಲವರನ್ನು ನಿಷ್ಪ್ರಯೋಜಕರು ಕೆಲವರನ್ನು ಬುದ್ಧಿವಂತರು ಎಂದು ಕರೆಯುವ ಪರಿಪಾಠ ಪಾದರಿಯಾಗಲು ಬಂದವರ ನಡುವೆಯೂ ಇತ್ತು. ತಾವೆಲ್ಲ ಬಾಮಣರೆಂದೇ ಮೆರೆಯುತ್ತಿದುದನ್ನು ಕೂಡ ಸಿಕ್ವೇರಾ ಮರೆತಿರಲಿಲ್ಲ. ಮಂಗಳೂರಿನ ಎಂಟು ಜನರ ಒಂದು ತಂಡ ಸೆಮಿನರಿಯ ಇತರೆ ವಿದ್ಯಾರ್ಥಿಗಳನ್ನು ಈ ಕಾರಣದಿಂದಲೇ ತಮ್ಮ ವಶದಲ್ಲಿ ಇರಿಸಿಕೊಂಡು ಆಟವಾಡಿಸುತ್ತಿತ್ತು. ತಾವು ಪಾದರಿಯಾದ ನಂತರವೂ ಈ ಮೇಲು ಕೀಳು ಅಲ್ಲೊಂದು ಸಾರಿ ಇಲ್ಲೊಂದು ಸಾರಿ ತಲೆ ಎತ್ತಿ ಸಮಸ್ಯೆಯನ್ನು ತಂದೊಡ್ಡುತ್ತಿತ್ತು. ಕೆಲ ಸಂದರ್ಭಗಳಲ್ಲಿ ’ಮೇಲು’ ಎನ್ನುವವರ ಕೈ ಮೇಲಾಗುತ್ತಿತ್ತು. ತಾವು ಕೀಳು ಎಂಬುದನ್ನು ಕೆಲವರು ಒಪ್ಪಿಕೊಂಡು ಸುಮ್ಮನಾಗುತ್ತಿದ್ದರು. ಹೊರಗಿನವರಿಗೆ ಕ್ರಿಸ್ತುವರೆಲ್ಲ ಒಂದೇ ಎಂಬ ಭಾವನೆ ಬರುವಂತೆ ಬಾಮಣರು, ಚಾರಡಿಗಳು ವರ್ತಿಸುತ್ತಿದ್ದರು. ಈ ಮೇಲು-ಕೀಳು ಕ್ರಿಸ್ತನ ಕಾಲದಲ್ಲೂ ಇತ್ತು. ಈಗಲೂ ಇದೆ. ಮುಂದೂ ಇದು ಇರುತ್ತದೆ. ಇದರ ಜತೆ ಹೊಂದಿಕೊಂಡು ಹೋಗಬೇಕಲ್ಲದೆ ಇದನ್ನೇ ಒಂದು ಸಮಸ್ಯೆ ಮಾಡಬಾರದು.ಎಂದೇ ಪಾದರಿ ಸಿಕ್ವೇರ ಫ಼ಿಲಿಪ್ಪ ಸಿಲ್ವಿಯಾರ ಸಮಸ್ಯೆಗೆ ಬೇರೆಯೇ ಒಂದು ಪರಿಹಾರ ಸೂಚಿಸಿದರು.
“ಇಲ್ಲಿ…ಒಳಜಾತಿ ಮುಖ್ಯ ಅಲ್ಲ ಫ಼ಿಲಿಪ್ಪ..ನಿಮ್ಮಿಬ್ಬರ ಮದುವೆಗೆ ನಿಮ್ಮ ನಿಮ್ಮ ಪೋಷಕರಿಗೆ ಮನಸ್ಸಿಲ್ಲ…ಅವರು ನಿಮ್ಮ ಒಳಿತನ್ನು ಗಮನದಲ್ಲಿ ಇಟ್ಟುಕೊಂಡು ಈ ತೀರ್ಮಾನಕ್ಕೆ ಬಂದಿದ್ದಾರೆ…ನೀವು ಅವರ ಮಾತಿನ ಹಾಗೆ ನಡೀರಿ..ಈ ಜಾತಿ ಪಂಗಡದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ..” ಎಂದರು.
ಫ಼ಿಲಿಪ್ಪನಿಗೆ ನಿರಾಶೆಯಾಯಿತು. ಇಲಿಯನ್ನು ಬಿಲದಲ್ಲಿಯೇ ಇರಿಸಿ ಮೇಲೆ ಮಣ್ಣು ಮೆತ್ತುವ ಈ ಕೆಲಸವನ್ನು ಪಾದರಿಗಳು ಮಾಡಹೊರಟಿರುವುದು ಅಸಹ್ಯವೆನಿಸಿ ಫ಼ಿಲಿಪ್ಪ ಪಾದರಿಯ ಸಮ್ಮುಖದಲ್ಲಿಯೇ ಸಿಲ್ವಿಯಾಳ ಕೈ ಹಿಡಿದು-
“ನೋಡಿ ಫ಼ಾದರ್…ನಮ್ಮ ಹಿರಿಯರು ಒಪ್ಪಲಿ ಒಪ್ಪದೆ ಇರಲಿ…ನಾವು ಮದುವೆಯಾಗೋದಂತೂ ಶತಸಿದ್ಧ…ಇಗರ್ಜಿನಲ್ಲಿ ನಮ್ಮ ಮದುವೆ ಆಗೋದಿಲ್ಲ ಅನ್ನುವುದಾದರೆ….ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ಆಗತೇವೆ…ನೀವು ಆವಾಗ ನಾವು ಧರ್ಮವನ್ನು ಬಿಟ್ಟು ಹೋದೆವು ಅಂತ ಮಾತ್ರ ಹೇಳಬಾರದು.” ಎಂದು ಹೇಳಿದವನೇ ಪಾದರಿ ಬಂಗಲೆಯಿಂದ ಹೊರಬಿದ್ದ. ಸಿಲ್ವಿಯಾ ಅವನನ್ನು ಹಿಂಬಾಲಿಸಿದಳು.
*
*
*
ಈ ನಡುವೆ ಮತ್ತೂ ಒಂದು ವಿಷಯ ಪಾದರಿ ಸಿಕ್ವೇರಾ ಎದುರು ಬಂದು ನಿಂತು ಅವರನ್ನು ಧೃತಿಗೆಡಿಸಿತು.
ಫ಼ಾತಿಮಾ ನಗರದ ಗುರ್ಕಾರ ಅಲೆಕ್ಸ ಪಿಂಟೋ ಇಗರ್ಜಿ ಎದುರು ನಿಂತು ಅವಸರದಲ್ಲಿ ಶಿಲುಬೆಯ ವಂದನೆ ಮಾಡಿ ತಮ್ಮ ಬಂಗಲೆಯತ್ತ ಬರುತ್ತಿರುವುದನ್ನು ಪಾದರಿ ಸಿಕ್ವೇರಾ ಅಂದು ಕಂಡರು. ಊರ ಇಗರ್ಜಿ ಹಬ್ಬಕ್ಕೆ ಬರುವಂತೆ ಯಾವ ಯಾವ ಪಾದರಿಗಳಿಗೆ ಪತ್ರ ಬರೆಯಬೇಕು ಎಂಬ ವಿಚಾರ ಮಾಡುತ್ತ ಅವರೆಲ್ಲರ ವಿಳಾಸ ಮುಂದಿರಿಸಿಕೊಂಡು ಕುಳಿತಾಗ ಈತ ಬಂದಿದ್ದ. ಇವನ ಅವಸರದ ನಡಿಗೆ ನೋಡಿ ಸಿಕ್ವೇರಾ ಏನೋ ಇದೆ ಅಂದುಕೊಂಡರು..
ಬಂದವನೇ ಅವಸರದಲ್ಲಿಯೇ-
“ಬ್ಲೇಸ್ ಮಿ ಫ಼ಾದರ್” ಎಂದು ಕೈ ಮುಗಿದ.
ಅವನಿಗೆ ಆಶೀರ್ವದಿಸಿ-
“ಬನ್ನಿ ಏನು ಸಮಾಚಾರ?” ಎಂದು ಮಂಗಳೂರಿನ ಕೊಂಕಣಿಯಲ್ಲಿ ಕೇಳಿದರು ಪಾದರಿ ಸಿಕ್ವೇರಾ.
“ಘಾತ ಜಾಲೋ ಫ಼ಾದರ್..ಘಾತ ಜಾಲೋ..” (ಘಾತವಾಗಿತು ಪಾದರಿಗಳೆ ಘಾತವಾಯಿತು) ಎಂದು ಮನೆಗೆ ಬೆಂಕಿ ಬಿದ್ದಿದೆ ಏನೋ ಅನ್ನುವ ಹಾಗೆ ಕೂಗಿಕೊಂಡ ಪಿಂಟೋ.
“ಏನು ಪಿಂಟೋ ..ಏನಾಯಿತು?” ಎಂದು ಸಿಕ್ವೇರಾ ಕೂಡ ಗಾಬರಿಗೊಂಡರು. ಅದು ಗಾಬರಿಗೊಳ್ಳುವ ವಿಷಯವೇ ಆಗಿತ್ತು.
ಈಗ ಕೆಲವು ವಾರಗಳ ಹಿಂದೆ ಓರ್ವ ಮಧ್ಯವಯಸ್ಕ ಶಿವಸಾಗರದ ಕ್ರೀಸ್ತುವರ ಕೇರಿಗೆ ಬಂದ. ಅವನ ಹೆಗಲಿಗೊಂದು ಚೀಲ. ಕೈಲೊಂದು ಪುಟ್ಟ ಬೈಬಲ್, ಮುಖದ ಮೇಲೆ ಯಾರನ್ನೂ ಮರಳು ಮಾಡಬಲ್ಲ ಮುಗುಳು ನಗೆ. ಈತ ಮೊದಲು ಮಾತನಾಡಿಸಿದ್ದೇ ಬೋನನ ಮಗ ಫ಼ಿಲಿಪ್ಪನನ್ನು. ಫ಼ಿಲಿಪ್ಪನ ಜತೆ ನಡೆದು ಈತ ಅವನ ಜವಳಿ ಅಂಗಡಿಗೆ ಬಂದ.
“ನಾನು ಕ್ರಿಸ್ಟೋಫ಼ರ್ ಅಂತ..ಕಾಸರಗೋದಿನವ..ಟ್ರೂ ಕ್ರಿಶ್ಚಿಯನ್ ಅನ್ನುವ ಸಂಸ್ಥೆಯ ಸದಸ್ಯ..ನಿಜದಲ್ಲಿ ನಾನು ಕ್ರಿಸ್ತನ ಸೇವಕ…” ಎಂದಾತ ತನ್ನ ಪರಿಚಯ ಹೇಳಿಕೊಂಡ.
ಇತ್ತೀಚೆಗೆ ಬೈಬಲ್ ಸೊಸೈಟಿ ಪೆಂಟೆಕೊಸ್ಟ್ ಸಿ.ಎಸ್.ಐ ಎವೆಂಜಲಿಸ್ಟ ಎಂದೆಲ್ಲ ಬೇರೆ ಬೇರೆ ಪಂಥದವರು ಶಿವಸಾಗರಕ್ಕೆ ಬಂದುಹೋಗುವುದು ಸಾಮಾನ್ಯವಾಗಿತ್ತು. ಇವರೆಲ್ಲ ಏಸುವಿನ ಬದುಕು, ಅವನ ಉಪದೇಶ, ಜೀವನ ಸಿದ್ಧಾಂತಗಳಿಗೆ ಹೆಚ್ಚು ಒತ್ತು ಕೊಟ್ಟು ಮಾತನಾಡುತ್ತಿದ್ದರು. ಈ ಪಂಥಗಳಲ್ಲಿ ಇದೂ ಒಂದು ಎಂದುಕೊಂಡ ಫ಼ಿಲಿಪ್ಪ. ಆದರೆ ಆ ಮನುಷ್ಯ ಫ಼ಿಲಿಪ್ಪನನ್ನು ಸುಲಭವಾಗಿ ಬಿಡಲಿಲ್ಲ.
“ಅಲ್ಲ, ನೀವು ಬೈಬಲನ್ನು ಎಷ್ಟು ಸಾರಿ ಓದಿದ್ದೀರಿ?” ಎಂದು ಆತ ಕೇಳಿದ.
“ನಾನು..ನಾನು..” ಫ಼ಿಲಿಪ್ಪ ತೊದಲಿದ. ಉತ್ತರಕೊಡಲು ಅವನಿಂದ ಆಗಲಿಲ್ಲ. ಏಕೆಂದರೆ ಬೈಬಲನ್ನು ಅವನು ಒಂದು ಬಾರಿಯೂ ಓದಿರಲಿಲ್ಲ.
“ನಾನು ಓದಿಲ್ಲ..”
“ತಪ್ಪಲ್ಲವೇ? ನೀವು ಕ್ರಿಷ್ಚಿಯನ್ ಆಗಿ ಬೈಬಲ್ ಓದಿಲ್ಲ ಅನ್ನುವುದು ತಪ್ಪಲ್ಲವೇ ಮುಖ್ಯವಾಗಿ ಬೈಬಲ್ ಓದಿ ಅಂತ ನಿಮ್ಮ ಪಾದರಿ ಯಾವತ್ತೂ ನಿಮಗೆ ಹೇಳಿಲ್ಲ…ದೇವಾಲಯದಲ್ಲಿ ಅವರು ಜನರ ಮೂಲಕ ಓದಿಸುವ ಕೆಲ ಸಾಲುಗಳನ್ನು ಬಿಟ್ಟರೆ ಬೇರೆ ಏನೂ ನಿಮಗೆ ಗೊತ್ತಿಲ್ಲ ಅಲ್ಲವೇ?”
ಫ಼ಿಲಿಪ್ಪ ತಲೆ ತೂಗಿದ. ಅಂಗಡಿಗೆ ಬಂದಾತನನ್ನು ಏನಾದರೂ ಹೇಳಿ ಕಳುಹಿಸಬೇಕು ಎಂದು ವಿಚಾರ ಮಾಡುತ್ತಿದ್ದವ ನಿಧಾನವಾಗಿ ಅವನತ್ತ ಫ಼್ಯಾನನ್ನು ತಿರುಗಿಸಿದ.
ಅವನಿಗೆ ಅಷ್ಟೇ ಸಾಕಾಯಿತು. ಅವನ ದನಿ ಮತ್ತೂ ಮೆದುವಾಯಿತು. ಆದರೆ ಹರಿತವಾಯಿತು ಸೂಕ್ಷ್ಮವಾಯಿತು.
“ನೀವು ಇಂದು ಆಚರಿಸುತ್ತಿರುವುದು ಕ್ರೈಸ್ತ ಧರ್ಮವನ್ನಲ್ಲ. …ಕ್ರೈಸ್ತ ಯಾವತ್ತೂ ದೇವಾಲಯ, ಆರಾಧನೆ, ದೇವರ ಪೀಠ, ಪೂಜೆ, ಪಾದರಿ, ಬಿಶಪ್, ಪೋಪ್, ಸಿಸ್ಟರುಗಳು, ಇವುಗಳಿಗೆ ಪ್ರಾಧಾನ್ಯತೆಯನ್ನು ಕೊಡಲೇ ಇಲ್ಲ. ಪುರೋಹಿತರನ್ನು ಕುರಿಯ ಚರ್ಮ ಧರಿಸಿದ ತೋಳಗಳೆಂದು ಆತ ಕರೆಯುತ್ತಿದ್ದ. ದೇವರನ್ನು ದೇವಾಲಯದಲ್ಲಿ ಪೀಠದ ಮೇಲೆ ವಿಗ್ರಹ ಪ್ರತಿಮೆಗಳಲ್ಲಿ ಹುಡೂಕುವುದನ್ನು ಆತ ವಿರೋಧಿಸುತ್ತಿದ್ದ. ಕ್ರೈಸ್ತನು ನಾವು ನಮ್ಮ ಹೃದಯದಲ್ಲಿ ಪ್ರತಿಷ್ಠೆ ಮಾಡಬೇಕೆ ಹೋರತು ಮತ್ತೆಲ್ಲೋ ಅಲ್ಲ….ಈ ಮೇಣದ ಬತ್ತಿ ಹೂ ಧೂಪಗಳಿಗೆಲ್ಲ ಅರ್ಥವಿಲ್ಲ… …”
ಆತ ಕೇವಲ ಮಾತನಾಡಲಿಲ್ಲ. ಪಟ ಪಟನೆ ಬೈಬಲ್ಲಿನ ಪುಟ ತೆರೆದ. ಅಲ್ಲೊಂದು ಸಾಲು ಇಲ್ಲೊಂದು ಕಂಡಿಕೆ ಓದಿದ.
“ನೋಡಿ ಕ್ರೈಸ್ತನ ಮಾತು ಹೀಗಿದೆ” ಎಂದ.
” ನೀವೇ ಓದಿ, ಪೂರ್ಣ ಬೈಬಲ್ಲನ್ನು ಓದಿ…ಏಸು ಕ್ರಿಸ್ತನ ವಾಕ್ಯಗಳನ್ನು ಕೇಳಿ….”
ಎಂದು ಚೀಲದಿಂದ ಬೇರೊಂದು ಬೈಬಲನ್ನು ತೆಗೆದುಕೊಟ್ಟ.
“ಕ್ರೈಸ್ತ ಧರ್ಮ ಇವತ್ತು ಸಂಪ್ರದಾಯ ಪದ್ಧತಿ ಆಚರಣೆಗಳಿಂದ ತುಂಬಿ ಹೋಗಿದೆ…ಪಾದರಿ ಬಿಶಪ್‌ಗಳು ತಮ್ಮ ಸ್ಥಾನಮಾನವನ್ನು ಭದ್ರಪಡಿಸಿಕೊಳ್ಳಲು ಇದನ್ನೆಲ್ಲ ಸೃಷ್ಟಿ ಮಾಡಿದ್ದಾರೆ…ಏಸು ಕ್ರೀಸ್ತ ಯಾವೆಲ್ಲ ಆಚರಣೆಗಳನ್ನು ಖಂಡಿಸಿದನೋ ಅವೆಲ್ಲ ಮತ್ತೆ ತಲೆ ಎತ್ತಿದೆ. ನಾನು ಏನೂ ಹೇಳುವುದಿಲ್ಲ…ನೀವು ಓದಿ” ಎಂದ.
ಫ಼ಿಲಿಪ್ಪ ಬೈಬಲ್ ಮನೆಗೆ ತಂದು ಓದತೊಡಗಿದ.
ಬೋನ ಓರೆಗಣ್ಣಿನಿಂದ ನೋಡಿದ. ಅವನ ತಾಯಿ –
“ಏನದು?” ಎಂದು ಕೇಳಿದಳು.
ಓದುತ್ತಾ ಹೋದ ಹಾಗೆ ಫ಼ಿಲಿಪ್ಪನ ಎದುರು ಬೇರೆಯೇ ಆದ ಪ್ರಪಂಚವೊಂದು ತೆರೆದುಕೊಂಡಿತು. ರೀತಿ ರಿವಾಜುಗಳಿಂದ ದೂರವಾದ, ಪದ್ಧತಿ ಸಂಪ್ರದಾಯಗಳಿಂದ ಮುಕ್ತವಾದ, ಪಾದರಿಯ ಹೆದರಿಕೆ, ಶಾಪದಿಂದ ಹೊರತಾದ, ಪ್ರೀತಿ, ದಯೆ, ಕರುಣೆ, ಶಾಂತಿ, ಸ್ನೇಹ, ಸೇವೆಗಳೇ ತುಂಬಿಕೊಂಡಿರುವಂತಹ ಒಂದು ಪ್ರಪಂಚ ಅವನಿಗೆ ಕಂಡಿತು. ಕ್ರಿಸ್ತನ ಉಪದೇಶಗಳನ್ನು ಓದುತ್ತ ಆತ ರೋಮಾಂಚನಗೊಂಡ. ಪುಳಕಿತನಾದ, ಇಗರ್ಜಿಗೆ ತಾನು ಎಷ್ಟು ಸಾರಿ ಹೋದೆ? ಪಾದರಿಯ ಪ್ರವಚನ ಕೇಳಿದೆ. ಪಾಪ ನಿವೇದನೆ ಮಾಡಿ ದಿವ್ಯ ಪ್ರಸಾದ ಸ್ವೀಕರಿಸಿದೆ. ಆದರೆ ಈವರೆಗೆ ಈ ಬಗೆಯ ದಿವ್ಯಾನುಭವ ತನಗೆ ಏಕೆ ಆಗಲಿಲ್ಲ ಎಂದು ಯೋಚಿಸಿದ. ಕ್ರಿಸ್ತನ ಒಂದೊಂದು ಮಾತು, ಅವನ ಬದುಕಿನ ಒಂದೊಂದು ಘಟನೆ, ಆತ ಹೇಳಿದ ಒಂದೊಂದು ಕತೆ ಅವನನ್ನು ಎತ್ತರ ಎತ್ತರಕ್ಕೆ ಕೊಂಡೊಯ್ದಿತು.
ಮಾರನೇ ದಿನ ಕ್ರಿಸ್ಟೋಪರ್ ಬಂದಾಗ ಫ಼ಿಲಿಪ್ ಬೇರೆಯೇ ಮನುಷ್ಯನಾಗಿದ್ದ. ಕ್ರಿಸ್ಟೋಪರ್ ಈ ಗುಟ್ಟನ್ನು ತಿಳಿದವನ ಹಾಗೆ ನುಡಿದ.
“ಫ಼ಿಲಿಪ್ಪ್…ಏಸುವನ್ನು ನಾವು ನಮ್ಮೊಳಗೆ ತಂದುಕೊಳ್ಳಬೇಕಲ್ಲದೇ ಗುಡಿಯ ಪೀಠದ ಮೇಳೆ ಕೂಡಿಸುವುದಲ್ಲ. ಏಸು ನಮ್ಮಲ್ಲಿ…ನಮ್ಮ ಅಂತರಂಗದಲ್ಲಿ ಬಂದು ನೆಲೆಸಿದನೆಂದರೆ ನಮಗೆ ಆಗುವ ಅನುಭವ ಸಿಗುವ ಲಾಭ ಬೇರೆ…..”
ಆತನ ಮಾತನ್ನು ಕೇಳುತ್ತ ಕುಳಿತ ಫ಼ಿಲಿಪ್ ಕ್ರಿಸ್ಟೋಪರ್ ಇಷ್ಟಕ್ಕೇನೆ ಸುಮ್ಮನುಳಿಯಲಿಲ್ಲ. ಆತ ಗ್ರೆಗೋರಿಯನ್ನು ಕಂಡ. ಜೂಜೆಯನ್ನು ಮಾತನಾಡಿಸಿದ. ನಾತೇಲಳ ಮಗ ಡೆನಿಯಲ್ ನನ್ನು ತನ್ನ ಕಡೆ ಸೆಳೆದುಕೊಂಡ. ಕೆಲ ಹಿರಿಯರು ಅವನತ್ತ ಸೆಳೆಯಲ್ಪಟ್ಟರು.
ಆತ ಒಂದು ದಿನ ಡೆನಿಯಲ್ ಜತೆ ಸಾಂತಾಮೊರಿ ಮನೆಗೂ ಬಂದ. ಅಲ್ಲಿ ಗೋಡೆಗೆ ಒರಗಿ ಕುಳಿತು ಒಂದು ಸಣ್ಣ ಪ್ರಾರ್ಥನೆ ಮಾಡಿದ. ನಾತೇಲ ದೇವರ ಮುಂದೆ ಮೇಣದ ಬತ್ತಿ ಹಚ್ಚಲು ಹೋದಾಗ ” …….ತಂಗಿ, ಅದರ ಅವಶ್ಯಕತೆ ಇಲ್ಲ…ನಾವು ಬೆಳೆಗಿಸಿಕೊಳ್ಳಬೇಕಾದುದು ನಮ್ಮ ಅಂತಃಕರಣವನ್ನು. ಏಸುವಿನ ಮಾತುಗಳೇ ಈ ಕೆಲಸವನ್ನು ಮಾಡುತ್ತವೆ…” ಎಂದ. ಆತ ಬೈಬಲ್‌ನಿಂದ ಕೆಲ ಸಾಲುಗಳನ್ನು ಓದಿದ. ಅವನ ಮುಂದೆ ಫ಼ಿಲಿಪ್, ಗ್ರೆಗೋರಿ, ಜೂಜ, ಡೆನಿಯಲ್, ನಾತೇಲ ಇನ್ನೂ ಒಂದಿಬ್ಬರು ಕುಳಿತಿದ್ದರು. ಸಾಂತಾಮೊರಿ ಕೂಡ ಬಂದು ಅವರನ್ನು ಸೇರಿಕೊಂಡಳು.
” ಬಂದುಗಳೆ..ನಮ್ಮ ಪಂಥದಲ್ಲಿ ಯಾರೂ ಪಾದರಿಗಳಿಲ್ಲ…ನಾವೆಲ್ಲ ಒಂದೇ…. ನಾವು ಯಾರಲ್ಲೂ ಪಾಪ ನಿವೇದನೆ ಮಾಡಿಕೊಳ್ಳಬೇಕಾಗಿಲ್ಲ….ನಾವು ನೇರವಾಗಿ ಕ್ರಿಸ್ತನೊಡನೆ ವ್ಯವಹರಿಸೋಣ….ನಮಗೆ ಅವನೊಬ್ಬನೇ ಮಾರ್ಗ….ಅವನೊಬ್ಬನೆ ಮುಕ್ತಿ…”.
ಕ್ರಿಸ್ಟೋಫ಼ರ ಮಾತನಾಡುತ್ತಿರುವಾಗ ಇನ್ನೂ ಕೆಲವರು ಅಲ್ಲಿಗೆ ಬಂದು ಸೇರಿಕೊಂಡರು.
*
*
*
ಪಿಂಟೋ ಈ ವಿಷಯವನ್ನು ಹೇಳುತ್ತ ಮೈ ಪರಚಿಕೊಂಡಾಗ
“ಹೌದೆ….ಹೌದೆ ?” ಎಂದು ಕೇಳಿದರು ಸಿಕ್ವೇರಾ.
“ಜೀಸಸ್ ಹೀಗೆ ಆಗಬಾರದಿತ್ತು…ಇಗರ್ಜಿ ಮಾತೆಯ ಭೋದನೆ ಆಚರಣೆಗಳಿಗೆ ವಿರೋಧವಾಗಿ ಹೀಗೊಂದು ಆಚರಣೆ ಬರುವುದೆಂದರೆ ಅದು ಅಪಾಯ…” ಎಂದು ಪಾದರಿ ಚಿಂತಿತರಾದರು.
ಸಿಕ್ವೇರಾ ಅವರಿಗೆ ತಮ್ಮ ಕಾಲಡಿಯಲ್ಲಿ ನೆಲ ಕುಸಿಯುತ್ತಿರುವ ಅನುಭವವಾಯಿತು. ಬೈಬಲ್ ಓದುವ, ಓದಿ ವ್ಯಾಖ್ಯಾನ ಮಾಡುವ ಅಧಿಕಾರ ತಮ್ಮ ಕೈಯಿಂದ ಕಳಚಿ ಹೋಗುತ್ತಿದೆಯೇ ಎಂದವರು ಗಾಬರಿಯಾದರು. ಮುಂದೆ ಮುಂದೆ ಮನೆ ಮನೆಗಳಲ್ಲಿ ತಮಗೆ ತಿಳಿಯದೇ ಈ ಬಗೆಯ ಬೈಬಲ್ ರೀಡಿಂಗ್‌ಗಳು ಆರಂಭವಾಗುತ್ತದೆ. ಜನ ಈ ಬಗೆಯ ಸಭೆ, ಕೂಟಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಊರ ಜನ ಪಾದರಿಯನ್ನು ಧಿಕ್ಕರಿಸಿ ಹೋಗುತ್ತಾರೆ…ಮುಂದೆ?
ಸಿಕ್ವೇರಾ ಕೂಡಲೇ ಮೈ ಕೊಡವಿಕೊಂಡು ಎದ್ದರು.
“ಪಿಂಟೋ ಈ ಬಗ್ಗೆ ಮತ್ತೂ ಮಾಹಿತಿ ಸಿಗಬಹುದೋ ನೋಡಿ..ನಾವು ಈ ಚಟುವಟಿಕೆ ಇಲ್ಲಿಗೇನೆ ನಿಲ್ಲಿಸಬೇಕು….ಕೂಡಲೇ ಮನೆಮನೆಗೆ ಫ಼ಾತಿಮಾ ಮಾತೆಯ ಪ್ರತಿಮೇನ ಕೊಂಡೊಯ್ದು ಅಲ್ಲಿ ಪ್ರಾರ್ಥನೆ ಇತ್ಯಾದಿ ಮಾಡುವುದರ ಮೂಲಕ ಜನರಲ್ಲಿ ದೈವಭಕ್ತಿ ಹೆಚ್ಚುವ ಹಾಗೆ ನೋಡಿಕೊಳ್ಳಬೇಕು..ನಾನು ನೀವು ಎಲ್ಲ ಕ್ರೀಸ್ತುವರ ಮನೆಗಳಿಗೆ ಹೋಗಿ ಬರೋಣ.” ಎಂದು ಅತೀ ಉತ್ಸಾಹದಿಂದ ಹೇಳ ಹೋದವರು ಏಕೋ ತಟ್ಟನೆ ಮಾತಿನ ಧಾಟಿ ಬದಲಾಯಿಸಿ.
“ಇಗರ್ಜಿ ಹಬ್ಬ ಒಂದು ಆಗಲಿ…ನಂತರ ಈ ಬಗ್ಗೆ ಕೆಲಸ ಮಾಡೋಣ..” ಎಂದರು.
“ಹೌದು ಫ಼ಾದರ್..ಇದು ನಮ್ಮ ಸಮೊಡ್ತಿಗೆ ಅಪಾಯ ತರುವಂತಹದು..ನಾವು ಏನನ್ನಾದರೂ ಮಾಡಬೇಕು” ಎಂದು ಅಲೆಕ್ಸ ಪಿಂಟೋ ಸಿಕ್ವೇರರ ದನಿಗೆ ತನ್ನ ದನಿ ಸೇರಿಸಿದ.
*
*
*
ಗುರ್ಕಾರ ಸಿಮೋನ ಏಕೋ ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡ. ವಯಸ್ಸಾದದ್ದು ಒಂದು ಕಾರಣವಾದರೆ ತನ್ನ ಸುತ್ತ ನಡೆಯುತ್ತಿರುವುದು ಏಕೋ ಮನಸ್ಸಿಗೆ ಹಿತವನ್ನುಂಟುಮಾಡುವುದಾಗಿರಲಿಲ್ಲ. ಹೀಗೆಂದೇ ಪಾದರಿ ಸಿಕ್ವೇರರಲ್ಲಿಗೆ ಹೋದ ಆತ-
“ಪದ್ರಾಬ..ನನಗೆ ವಯಸ್ಸಾಯಿತು…ಈ ಗುರ್ಕಾರ ಪಟ್ಟ ನನಗೆ ಭಾರವಾಗಿದೆ..ಬೇರೆ ಯಾರನ್ನಾದರೂ ನೇಮಿಸಿದರೆ ಆಗುತ್ತಿತ್ತು..” ಎಂದ.
ಸಿಕ್ವೇರಾ ಅವರಿಗೂ ಈ ಮಾತು ಸರಿ ಎನಿಸಿತು. ಸಾಮಾನ್ಯವಾಗಿ ತಂದೆಯಿಂದ ಮಗನಿಗೆ ಈ ಪದವಿ ಬರುವುದಾದ್ದರಿಂದ ಸಿಮೋನನ ಮಗ ವಿಕ್ಟರ್ ಜೋಸೆಫ಼್ ನಗರದ ಗುರ್ಕಾರನೆಂದು ನೇಮಕಗೊಂಡ. ಜನ ಕೂಡ ಇದನ್ನು ಒಪ್ಪಿಕೊಂಡರು.
ಇದೇ ಸಂದರ್ಭದಲ್ಲಿ ಸಿಮೋನನ ಕಿರಿಯ ಮಗ ರಾಬರ್ಟ್ ಎರಡು ಬಾರಿ ಮುರುಡೇಶ್ವರಕ್ಕೆ ಹೋಗಿ ಬಂದಿದ್ದ. ಅವನ ಮರಿಯಾಣ ದೊಡ್ಡಪ್ಪ ಹಾಸಿಗೆ ಹಿಡಿದಿದ್ದ. ಅವನಿಂದ ಏನೂ ಕೆಲಸ ಮಾಡಲು ಆಗುತ್ತಿರಲಿಲ್ಲ. ಆತ-
“ರಬ್ಬಿ ಬಂದು ಬಿಡು, ತೋಟಾನ ನಿನಗೆ ಒಪ್ಪಿಸಿ ನಾನು ಇಗರ್ಜಿ ಮುಂದೆ ಒಂದು ಜಾಗ ನೋಡಿ ಕೊಳತೀನಿ” ಎಂದು ಹೇಳಿದ್ದ.
ಈ ಮಾತು ರಾಬರ್ಟನ ಮನಸ್ಸಿನಲ್ಲಿ ಉಳಿಯಿತು.
*
*
*
ಬಹಳ ದಿನಗಳಿಂದ ಮನಸ್ಸಿನಲ್ಲಿ ಗಟ್ಟಿಯಾಗುತ್ತ ಬಂದ ಈ ವಿಷಯವನ್ನು ಕಾರ್ಯರೂಪಕ್ಕೆ ಇಳಿಸಲು ಒಂದು ದಿನ ರಾಬರ್ಟ ನಿರ್ಧರಿಸಿದ.
ಸಿಮೋನ ಬೆಳಿಗ್ಗೆ ಎದ್ದು ಇಗರ್ಜಿಗೆ ಹೋಗಿ ಬಂದ. ನಿತ್ಯ ಬೆಳಿಗ್ಗೆ ಇಗರ್ಜಿಗೆ ಹೋಗಿ ಪೂಜೆ ಆಲಿಸುವುದು ಅವನ ಅಭ್ಯಾಸ. ಹಿಂದೆ ಒಂದಲ್ಲಾ ಒಂದು ಕೆಲಸ ಹಚ್ಚಿಕೊಂಡು ತಿರುಗಾಡುವಾಗ ಇದು ಆಗುತ್ತಿರಲಿಲ್ಲ. ಕ್ರಮೇಣ ಮಕ್ಕಳಿಗೆ ತನ್ನ ಕೆಲಸ ವಹಿಸಿಕೊಟ್ಟನಂತರ ನಿತ್ಯ ಪೂಜೆ ಆಲಿಸುವುದು ಅಭ್ಯಾಸವಾಗಿತ್ತು. ಇಂದು ಏನೋ ಕಳವಳ ಮನಸ್ಸಿನಲ್ಲಿತ್ತು. ಏಕೆಂದು ತಿಳಿಯಲಿಲ್ಲ.
ಮನೆಗೆ ಬಂದಾಗ ಮಗ ರಾಬರ್ಟ್ ಊರಿಗೆ ಹೊರಟು ನಿಂತಿದ್ದ.
“ಅಪ್ಪ ನಾನು ಇಲ್ಲಿಯ ಕೆಲಸ ಬಿಟ್ಟಿದ್ದೇನೆ ಇನ್ನು ಊರಲ್ಲೇ ಇರುವ ಅಂತ ನಿರ್ಧಾರ ಮಾಡಿದ್ದೇನೆ” ಎಂದ.
ಅವನ ಜತೆ ಅವನ ಹೆಂಡತಿ ಮಕ್ಕಳು ಹೊರಟು ನಿಂತಿದ್ದರು. ಈ ಊರು ಬಿಟ್ಟು ಹೋಗುವ ವಿಷಯದಲ್ಲಿ ಅವರಿಗೆ ಅಪಾರವಾದ ಆಸಕ್ತಿ ಉತ್ಸಾಹ ಇದ್ದಂತಿತ್ತು.
ಸಿಮೋನ ಅವರೆಲ್ಲರ ಮುಖ ನೋಡಿದ.
ಒಂದೆರಡು ನಿಮಿಷ ಸುಮ್ಮನೆ ನಿಂತ ನಂತರ-
“ಅಪ್ಪೀ” ಎಂದು ಹೆಂಡತಿಯನ್ನು ಕೂಗಿ ಕರೆದ.
“ನಾನೂ ಘಟ್ಟ ಇಳಿದು ಹೋಗತಿದೀನಿ. ನಾನು ಹುಟ್ಟಿದ ಮನೇಲಿ ನನಗೆ ಒಂದಿಷ್ಟು ಗಂಜಿ ನೀರು ಸಿಗಬಹುದು ಅನ್ನುವ ಭರವಸೆ ಇದೆ. ಯಾರೂ ಇಲ್ಲ ಅಂದ್ರೆ ಅಲ್ಲಿಯ ದೇವರು ನನ್ನ ಪಾಲಿಗಿದಾನೆ…ಏನು ನೀನು ಬರತೀಯ..?” ಎಂದು ಕೇಳಿದ.
ತಟ್ಟನೆ ಈ ಮಾತು ಕೇಳಿ ಬಂದದ್ದರಿಂದ ಅವಳು ಗಲಿಬಿಲಿಗೊಂಡಳು. ಆದರೂ ಗಂಡನ ನಿರ್ಧಾರ ಅವಳಿಗೆ ಸೂಕ್ತವೆನಿಸಿತು. ಮುಂದಿನ ಸಿದ್ಧತೆ ಮಾಡಿಕೊಳ್ಳಲು ಒಳಹೋದಳು.
*
*
*
ಬಸ್ಸು ನಿಲ್ದಾಣವನ್ನು ಬಿಟ್ಟಾಗ ಬೆಳಗಿನ ಏಳು ಗಂಟೆಯಾಗಿತ್ತು. ಇನ್ನೇನು ಊರು ಮುಗಿಯಿತು ಅನ್ನುವಾಗ ಸಿಮೋನ ತಿರುಗಿ ನೋಡಿದ. ಹಸಿರು ಮರ ಗಿಡಗಳ ನಡುವೆ ಹಲವಾರು ಕಾಂಕ್ರೀಟ್ ಕಟ್ಟಡಗಳ ನಡುವೆ ಇಗರ್ಜಿಯ ಎತ್ತರದ ಗೋಪುರ. ಅದರ ಮೇಲಿನ ಶಿಲುಬೆ ಕಂಡಿತು. ಏಕೋ ಕಣ್ಣು ಮಸುಕಾಯಿತು. ತೆಳುವಾಗಿ ನೀರ ಪೊರೆ ಹರಡಿಕೊಂಡಿತು ಬಸ್ಸಿನಿಂದ ಇಳಿದು ಬಿಡಲೆ ಎಂದೂ ಯೋಚಿಸಿದ. ಆದರೂ ಮನಸ್ಸು ಗಟ್ಟಿಮಾಡಿಕೊಂಡು ಕುಳಿತ.
ಬಸ್ಸು ವೇಗವನ್ನು ಹೆಚ್ಚಿಸಿಕೊಂಡು ಊರಿನಿಂದ ಹೊರಬಿದ್ದಿತು.
*
*
*
ಮತ್ತೆ ಕೆಲ ವರುಷಗಳು ಉರುಳಿವೆ.
ಊರು ಬದಲಾಗಿದೆ.
ಸಣ್ಣವರು ದೊಡ್ಡವರಾಗಿ ಬೆಳೆದಿದ್ದಾರೆ.
ದೊಡ್ಡವರಿಗೆ ವಯಸ್ಸಾಗಿದೆ.
ಪಾದರಿ ಸಿಕ್ವೇರಾ ಹೋಗಿ ಪಾದರಿ ಡಿಸೋಜಾ ಶಿವಸಾಗರಕ್ಕೆ ಬಂದಿದ್ದಾರೆ.
ಈಗ…
ಪಾದರಿ ಡಿಸೋಜ ಊರಿನ ಇಗರ್ಜಿ ಕಟ್ಟಿ, ಉದ್ಘಾಟನೆಗೊಂಡು ಐವತ್ತು ವರ್ಷವಾಗಿದೆ ಎಂಬ ವಿಷಯವನ್ನು ಊರಜನರ ಗಮನಕ್ಕೆ ತಂದಿದ್ದಾರೆ.
ಈ ಬಾರಿ ಸಂತ ಜೋಸೆಫ಼ರ ಹಬ್ಬದ ದಿನವೇ ಈ ಐವತ್ತರ ಉತ್ಸವವನ್ನು ಆಚರಿಸಬೇಕೆಂಬ ವಿಚಾರ ಬಂದಿದೆ. ಈ ಸಂದರ್ಭದಲ್ಲಿಯೇ ಈ ಇಗರ್ಜಿ ನಿರ್ಮಾಣಕ್ಕೆ ಕಾರಣರಾದ ಪಾದರಿ ಗೋನಸ್ವಾಲಿಸ್‌ರನ್ನು ಸನ್ಮಾನಿಸುವ ಒಂದು ಕಾರ್ಯವನ್ನು ಕೂಡ ಜನ ಹಮ್ಮಿಕೊಂಡಿದ್ದಾರೆ.
ಬೋನ ನಿಧಾನವಾಗಿ ತನ್ನ ಮಾತು ಮುಗಿಸಿದ. ನೆನಪಿನ ಗುಹೆ ಹೊಕ್ಕ ಆತ ಅಲ್ಲಿಂದ ಹೊರಬಂದ.
*
*
*
ಪಾದರಿ ಗೋನಸ್ವಾಲಿಸ್-
“ಇಷ್ಟೆಲ್ಲ ಆಯಿತೇ ಹಾಗಾದರೆ” ಎಂದು ಇಳಿದನಿಯಲ್ಲಿ ನುಡಿದರು.
ಸಿಮೋನ ಕೂಡ ಊರುಬಿಟ್ಟು ಹೋದನೆ? ಈ ಊರಿನಲ್ಲಿ ಕ್ರೀಸ್ತುವರಿಗೊಂದು ನೆಲೆ ಒದಗಿಸಿದವನೇ ಅವನು, ಅವನೂ ಹೋದನೆ..” ಎಂದವರು ಮಿಡುಕಾಡಿದರು.
“ಫ಼ಾದರ್ ಏಳಿ ಬಹಳ ಹೊತ್ತಾಯಿತು” ಎಂದು ನಾನು ಅವರ ಕೈ ಹಿಡಿದು ಎಬ್ಬಿಸಿದೆ.
“ನಾನು ಬೆಳಿಗ್ಗೆ ಬರತೀನಿ ಫ಼ಾದರ್” ಎಂದು ಬೋನ ಎದ್ದ.
ಪಾದರಿ ಗೋನಸ್ವಾಲಿಸ್ ಎದ್ದರು. ಅವರಲ್ಲಿ ಎಂದಿನ ಉತ್ಸಾಹ ಹುಮ್ಮಸ್ಸು ಇರಲಿಲ್ಲ.
ನಾನು ಅವರ ಕೈ ಹಿಡಿದುಕೊಂಡು ಅವರಿಗಾಗಿ ಇರಿಸಿದ ಕೊಠಡಿಯತ್ತ ಕರೆದೊಯ್ದೆ.

ಕೊನೆಯದಾಗಿ

ಬೆಳಿಗ್ಗೆ ಎದ್ದವರೇ ಗೋನಸ್ವಾಲಿಸ್ ಪೂಜಾ ಉಡುಪು ಧರಿಸಿ ತಾವೇ ಪೂಜೆ ನೆರವೆರಿಸಿದರು. ಪೀಠ ಬಾಲಕನಾಗಿ ನಾನೇ ಅವರಿಗೆ ನೆರವು ನೀಡಿದೆ, ವಯಸ್ಸಾಗಿದ್ದರಿಂದ ದೇವರ ಪೀಠದಲ್ಲಿ ತಿರುಗಾಡುವಾಗ ದಣಿದರು. ನಿಧಾನವಾಗಿ ಹೆಜ್ಜೆ ಹಾಕಿದರು. ಶ್ಲೋಕಗಳನ್ನು ಹೇಳಿದರು. ಬೈಬಲ ಪಠನ ಮಾಡಿದರು. ದಿವ್ಯಪ್ರಸಾದವನ್ನು ತಾವೂ ಸ್ವೀಕರಿಸಿ ನನಗೂ ನೀಡಿದರು. ಪೂಜೆ ಅಷ್ಟೇ ನಿಧಾನವಾದರೂ ಅದರಲ್ಲಿ ಭಕ್ತಿ ಇತ್ತು. ತನ್ಮಯತೆ ಇತ್ತು. ದೇವರನ್ನು ಕಾಣುವ ತವಕವಿತ್ತು.
ಪೂಜೆ ಮುಗಿಸಿ ಕೊಠಡಿಗೆ ಬಂದಾಗ ಅವರ ಉಪಹಾರ ಸಿದ್ದವಾಗಿತ್ತು. ನಾಲ್ಕು ಬ್ರೆಡ್ ಸ್ಲೈಸುಗಳನ್ನು ತಿಂದರು. ಟೀ ಕುಡಿದರು.
“ಸನ್..ನಾನು ಕೇರಿಯೊಳಗೆ ಒಂದು ಸುತ್ತು ಹೋಗಿ ಬರಬೇಕು..” ಎಂದು ನಿಲುವಂಗಿ ಧರಿಸಿದರು.
ಆಗ ಪಾದರಿ ಡಿಸೋಜ-
“ಬ್ಲೇಸ್ ಮಿ ಫ಼ಾದರ್” ಎಂದು ಹೇಳುತ್ತ ಒಳ ಬಂದರು.
“ನಿಮ್ಮನ್ನು ಇಲ್ಲಿಗೆ ಕರೆಸುವುದರಲ್ಲಿ ಇನ್ನೂ ಒಂದು ಉದ್ದೇಶವಿತ್ತು ಫ಼ಾದರ್” ಎಂದರು ಡಿಸೋಜ.
ಅವರು ಕುರ್ಚಿ ಎಳೆದುಕೊಂಡು ಕುಳಿತ ಭಂಗಿ ನೋಡಿದರೆ ಅದು ಒಂದೆರಡು ನಿಮಿಷಗಳಲ್ಲಿ ಹೇಳಿ ಮುಗಿಸುವ ವಿಷಯ ಅಲ್ಲ ಅನಿಸಿತು.
“ಹೇಳಿ” ಎಂದರು ಗೋನಸ್ವಾಲಿಸ್.
ಶಿವಸಾಗರದಲ್ಲಿ ಒಂದು ಹೊಸ ಸಮಸ್ಯೆ ಉದ್ಭವವಾಗಿತ್ತು. ಊರಿನ ಜನರಿಗೂ ಈ ಸಮಸ್ಯೆ ಬೇಕಾಗಿರಲಿಲ್ಲವಾದರೂ ಕೆಲವರು ಈ ಬಗ್ಗೆ ಉತ್ಸುಕರಾಗಿದ್ದರು.
ಇಗರ್ಜಿಯ ಸುತ್ತ ಕೆಲ ಕಟ್ಟಡಗಳು ಎದ್ದು ನಿಂತಿದ್ದವು. ಕಾನ್ವೆಂಟಿನವರು ಹಲವು ಶಾಲಾ ಕಟ್ಟಡಗಳನ್ನು ಕಟ್ಟಿದ್ದರು. ಇನ್ನೂ ಕೆಲವು ಆರಂಭದ ಹಂತದಲ್ಲಿದ್ದವು. ಒಂದು ದೊಡ್ಡ ಕಟ್ಟಡಕ್ಕೆ ಪುರಸಭೆಯವರು ಅನುಮತಿ ನೀಡಿರಲಿಲ್ಲ. ಇಕ್ಕೇರಿ ಅರಸರ ಕಾಲದಲ್ಲಿ ನಿರ್ಮಾಣವಾದ ಒಂದು ಚೌಡಿ ಬನ ಅಲ್ಲಿತ್ತು. ಈ ಚೌಡಿ ಬನವನ್ನು ಇಗರ್ಜಿಯವರು ನಾಶ ಮಾಡಿದ್ದಾರೆ ಎಂಬ ಆಪಾದನೆಯನ್ನು ಕೆಲವರು ಮಾಡಿದ್ದರು. ಈ ಮಾತಿಗೆ ಆಧಾರವಾಗಿ ಅವರು ಕೆಲ ದಾಖಲೆಗಳನ್ನು ಒದಗಿಸಿದ್ದರು. ಈ ಚೌಡಿ ಬನದ ಗುಡಿಯನ್ನು ಗುರುತಿಸಿದ ಹಾಗೆ ಅಲ್ಲಿ ನಾಲ್ಕು ಬದಿಗಳಲ್ಲಿ ನಾಲ್ಕು ಲಿಂಗ ಮುದ್ರೆ ಕಲ್ಲುಗಳು ದೊರೆತಿದ್ದವು.
ಈ ಚೌಡಿ ಬನದ ಪ್ರದೇಶವೇನಿದೆ ಅದನ್ನು ಯಥಾಸ್ಥಿತಿಯಲ್ಲಿ ಬಿಡಬೇಕು. ಅಲ್ಲಿ ಇಗರ್ಜಿಯವರು ಯಾವುದೇ ಕಟ್ಟಡ ಕಟ್ಟಬಾರದು. ಈ ಪ್ರದೇಶವನ್ನು ರಾಜ್ಯ ಪ್ರಾಚ್ಯ ಸಂಶೋಧನಾ ಕೂಡ ಕೇಳಿಬರತೊಡಗಿತ್ತು.
ಪಾದರಿ ಡಿಸೋಜ ಚೌಡಿಬನ ಎಂದು ಕರೆಯಲಾಗುವ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ನೆಲದೊಳಗೆ ಕೆಲಕಂಬಗಳ ಅವಶೇಷಗಳು, ಲಿಂಗ ಮುದ್ರೆ ಕಲ್ಲುಗಳು, ಮಂಟಪದ ಮೇಲಿನ ಕಲ್ಲು ಹಲಗೆ ಇತ್ಯಾದಿ ಅವರಿಗೆ ಸಿಕ್ಕರೂ ಮೇಲೆ ಏನೂ ಇರಲಿಲ್ಲ.
ಈ ಜಾಗ ಕ್ರೀಸ್ತುವರ ವಶಕ್ಕೆ ಬಂದಾಗ ಅಲ್ಲಿ ಏನೂ ಇರಲಿಲ್ಲ ಎಂಬುದನ್ನು ಹೇಳಲು ಬೇಕಾದ ಮಾಹಿತಿ ಅವರಲ್ಲಿ ಇರಲಿಲ್ಲ. ಹೀಗೆಂದೇ ಡಿಸೋಜ ಪಾದರಿ ಗೋನಸ್ವಾಲಿಸ್‌ರಲ್ಲಿ ವಿಷಯವನ್ನು ಪ್ರಸ್ತಾಪಿಸಿದರು.
ಗೋನಸ್ವಾಲಿಸ್‌ರು ಡಿಸೋಜರ ಮಾತುಗಳನ್ನೆಲ್ಲ ಕೇಳಿಸಿಕೊಂಡರು.
“ಅಲ್ಲಿ ಚೌಡಿಯದೊಂದು ವಿಗ್ರಹ, ಒಂದು ಮಂಟಪ ಇದ್ದುದು ನಿಜ. ನಾವು ಸುಳ್ಳು ಹೇಳಲಿಕ್ಕೆ ಆಗುವುದಿಲ್ಲ..” ಎಂದರು ತುಸು ಆತಂಕಕ್ಕೆ ಒಳಗಾಗಿ.
“ಹೀಗೆ ಅಂತ ಹೇಳಿ ಬ್ರಿಟಿಷ ಸರ್ಕಾರ ನಮಗೆ ನೀಡಿದ ಜಾಗಾನ ನಾವೀಗ ಬೇರೆಯವರಿಗೆ ಕೊಡಲಿಕ್ಕೆ ಆಗಲ್ಲ..ಈ ಪ್ರದೇಶ ಒಂದು ಕಾಲದಲ್ಲಿ ರಾಜ ಮಹಾರಾಜರು ಆಳಿದ ಪ್ರದೇಶ. ಅವರ ಕಾಲದ ಕೋಟೆ, ಬುರುಜು, ಗುಡಿ ಮತ್ತೊಂದು ಎಲ್ಲೆಂದರಲ್ಲಿ ಇರಬಹುದು. ಅದೆಲ್ಲ ಹಾಗೇ ಇರಬೇಕು ಅಂದರೆ ಈಗಿನವರು ಎಲ್ಲಿಗೆ ಹೋಗಬೇಕು? ಅಮೂಲ್ಯವಾದದ್ದನ್ನು, ಶ್ರೇಷ್ಠವಾದದ್ದನ್ನು ಸರ್ಕಾರ ರಕ್ಷಿಸಿಕೊಂಡು ಬರಲಿ. ಆದರೆ ಯಾವುದೋ ಮಂಟಪ ಯಾವುದೋ ಕೊಳ ಹಾಗೇ ಇರಬೇಕು ಅನ್ನುವುದರಲ್ಲಿ ಅರ್ಥವಿಲ್ಲ..”
ಗೋನಸ್ವಾಲಿಸ್‌ರ ದನಿ ನಡುಗುತಿತ್ತು.
ಔಡಲಮರದ ಚೌಡಮ್ಮನನ್ನು ಕ್ರೀಸ್ತುವರ ಮನಸ್ಸಿನಿಂದ ಹೊರಹಾಕಲು ಅವರು ದಿಟ್ಟತನದ ಕೆಲ ಕೆಲಸಗಳನ್ನು ಮಾಡಿದ್ದರು. ಆಕೆಯನ್ನು ಕ್ರೀಸ್ತುವರಂತೂ ಮರೆತರು. ಅವಳನ್ನು ಆರಾಧಿಸುತ್ತಿದ್ದ ಜನ ಕೂಡ ಅವಳಿಂದ ದೂರವಾದರು. ಆದರೆ ಈ ಘಟನೆ ನಡೆದ ೫೦ ವರ್ಷಗಳ ನಂತರೆ ಮತ್ತೆ ಈ ಚೌಡಮ್ಮ ಕಾಣಿಸಿಕೊಂಡಳೆ?
” ಆದರೆ ಫ಼ಾದರ್….ಒಂದು ಮಾರ್ಗದವರು ಈ ಬಗ್ಗೆ ತುಂಬಾ ಆಸಕ್ತರಾಗಿದ್ದಾರೆ..”
“ನೀವು ಅವರ ಬಗ್ಗೆ ಯೋಚನೆ ಮಾಡಬೇಡಿ…ಸರ್ಕಾರ, ನ್ಯಾಯಾಲಯಗಳಿರುವತನಕ ನಾವು ಯಾರಿಗೂ ಹೆದರಬೇಕಾಗಲಿಲ್ಲ”
” ಅದು ನಿಜ ಫ಼ಾದರ್..ಈ ಪ್ರಕರಣದಿಂದ ನಮ್ಮ ಜನ ಕೂಡ ವಿಚಲಿತರಾಗಿದ್ದಾರೆ. ಇದು ಒಟ್ಟಿಗೇನೆ ಇರೋ ಜನರ ನಡುವೆ ಭಿನ್ನಾಭಿಪ್ರಾಯಕ್ಕೆ, ಘರ್ಷಣೆಗೆ ಕಾರಣವಾಗಬಾರದು ಅಂತ ನನ್ನ ಆಸೆ.”
“ಹಾಗೆ ಏನು ಆಗಲ್ಲ ಬಿಡಿ…ನಾನು ನಿಮ್ಮ ಹಾಗೆ ಭಿನ್ನಾಭಿಪ್ರಾಯ, ಘರ್ಷಣೆ ಅಂತ ಕೂತಿದ್ರೆ ಇಲ್ಲಿ ಇಗರ್ಜಿ ಆಗತಿರಲಿಲ್ಲ…ಇಷ್ಟೊಂದು ವಿಶಾಲವಾದ ಜಾಗ ನಮಗೆ ಸಿಗುತ್ತಿರಲಿಲ್ಲ..” ಎಂದರು ಗೋನಸ್ವಾಲಿಸ್.
ಪಾದರಿ ಡಿಸೋಜರಿಗೆ ಅವರು ಸಮಾಧಾನ ಹೇಳಿದರಾದರೂ ಮನಸ್ಸಿನ ಒಳ ಪದರಿನಲ್ಲಿ ಏನೋ ಭೀತಿ, ಆತಂಕ ಸುಳಿದಾಡದೆ ಇರಲಿಲ್ಲ. ಈಗ ಏನೇ ಸಮಸ್ಯೆ ಬಂದರೂ ನಾವು ನಾವೇ ಪರಿಹರಿಸಿಕೊಳ್ಳಬೇಕು. ಹಿಂದಿನಂತೆ ಮೆಗ್ಗಾನ ಸಾಹೇಬರಾಗಲಿ, ರಿಪ್ಪಿನ ಸಾಹೇಬರಾಗಲಿ ಕ್ರೈಸ್ತವರನ್ನು ರಕ್ಷಿಸಲು ಇಲ್ಲ ಅಲ್ಲವೇ?
” ಏಕಮಾತ್ರ ನಿಜ ದೇವನ ಮೇಲೆ ಭಾರ ಹಾಕಿ ಎಲ್ಲವೂ ಸುಸೂತ್ರವಾಗಿ ಪರಿಹಾರವಾಗುತ್ತದೆ” ಎಂದು ಹೇಳಿ ಅವರು ಎದ್ದರು.
ಬೋನ ಬಾಗಿಲಲ್ಲಿ ಕಾಣಿಸಿಕೊಂಡ
“ಬೋನ ಹೋಗೋಣ ” ಎಂದರು ಗೋನಸ್ವಾಲಿಸ್.
ಇಗರ್ಜಿ ಪಕ್ಕದ ಕಾಲುದಾರಿ ಹಿಡಿದು ಸಿಮೋನನ ಮನೆಯತ್ತ ತಿರುಗಿದಾಗ ಅವರು ಒಂದೆಡೆ ನಿಂತರು. ಸಂತ ಜೋಸೆಫ಼ರ ಕಲ್ಯಾಣ ಮಂಟಪದ ಮುಂದಿನ ಜಾಗ ಬರಿದಾಗಿತ್ತು. ಅಲ್ಲಿಯ ಮರಗಳನ್ನು ಕಡಿಯಲಾಗಿತ್ತು. ಇದೇ ಜಾಗದಲ್ಲಿಯೇ ಅಲ್ಲವೇ ಔಡಲಮರದ ಚೌಡಮ್ಮ ಇದ್ದುದ್ದು ಎಂದವರು ನೆನಪು ಮಾಡಿಕೊಂಡರು. ಈ ದೇವತೆಯನ್ನು ತಾನು ಇಲ್ಲಿಂದ ಬುಡ ಸಹಿತ ಕಿತ್ತು ಹಾಕಿದೆ ಅಂದುಕೊಂಡನಲ್ಲ ಎಂದವರು ಪೇಚಾಡಿಕೊಂಡರು. ಕಾಂಪೌಂಡಿನ ನಡುವೆ ಇದ್ದ ಕಿರುದಾರಿಯ ಮೂಲಕ ರಸ್ತೆಗೆ ಇಳಿದರು.
” ಓ! ಊರು ಬದಲಾಗಿದೆ” ಎಂದು ಉದ್ಘರಿಸಿದರು. ಸಿಮೋನನ ಮನೆ ಇದ್ದ ಜಾಗದಲ್ಲಿ ಒಂದು ತಾರಸಿ ಕಟ್ಟಡ ನಿಂತಿತ್ತು. ಪಾದರಿಗಳನ್ನು ಕಂಡದ್ದೆ ಸಿಮೋನನ ಹಿರಿಯ ಮಗ ಈಗಿನ ಗುರ್ಕಾರ ರಸ್ತೆಗೆ ಓಡಿ ಬಂದ.
ಕೈ ಮುಗಿದು ಆತ-
” ಮನೆಗೆ ಬನ್ನಿ ಫ಼ಾದರ್..” ಎಂದ.
“ಇರಲಿ..ಎಲ್ಲ ಚೆನ್ನಾಗಿದ್ದಾರ?” ಎಂದು ಕೇಳಿದರು ಗೋನಸ್ವಾಲಿಸ್.
” ಅಪ್ಪ ಅಮ್ಮ ಊರಿಗೆ ಹೋದರು…ನಮ್ಮ ತಮ್ಮ ಕೂಡ ಅಲ್ಲೇ ಇದ್ದಾನೆ..ಇನ್ನೊಬ್ಬ ತಮ್ಮ ಅಪಘಾತಕ್ಕೆ ಸಿಕ್ಕಿ ಸತ್ತ.”
ಪಾದರಿ ಗೋನಸ್ವಾಲಿಸ್ ರಸ್ತೆಯ ಮೇಲೆ ನಿಂತೇ ಸಿಮೋನಿನ ಮನೆ ನೋಡಿದರು. ಹೊರಗಿನ ಅಂಗಳದ ತುಂಬಾ ಹೆಂಗಸರು, ಮಕ್ಕಳು.
“ನನ್ನ ಹೆಂಡತಿ ಮಕ್ಕಳು..ನನ್ನ ತಮ್ಮ ಎರಡನೆಯವ ಅಪಘಾತಕ್ಕೆ ಸಿಕ್ಕ ನಂತರ ಅವನ ಹೆಂಡತಿ ಮಕ್ಕಳು ಕೂಡ ನಮ್ಮ ಮನೆಯಲ್ಲಿದ್ದಾರೆ…ಬಂದು ಅವರನ್ನೆಲ್ಲ ಆಶೀರ್ವಾದಿಸಿ ಪಾದರ್.”
“ದೇವರ ಆಶೀರ್ವಾದ..”
ಅಲ್ಲಿಂದಲೇ ಪಾದರಿ ಗೋನಸ್ವಾಲಿಸ್ ಅಂಗಳದಲ್ಲಿ ನಿಂತ ಎಲ್ಲರಿಗೂ ಆಶೀರ್ವದಿಸಿದರು. ಅಲ್ಲಿ ನಿಂತವರು ಹಣೆ, ಎದೆ, ಭುಜಗಳನ್ನು ಮುಟ್ಟಿಕೊಂಡು ಶಿಲುಬೆಯ ವಂದನೆ ಮಾಡಿದರು.
ವಿಕ್ಟರ್ ಗುರ್ಕಾರನ ತಮ್ಮ ಒಂದು ಅಪಘಾತಕ್ಕೆ ಒಳಗಾಗಿ ಮರಣ ಹೊಂದಿದ್ದ. ಈ ಘಟನೆ ನಡೆದು ಈಗ ಎರಡು ವರ್ಷ. ಅವನ ಹೆಂಡತಿ ಮಕ್ಕಳು ಅನಾಥರಾದರು.
“ಬಂದು ನಮ್ಮಲ್ಲಿರಿ” ಎಂದ ವಿಕ್ಟರ್. ಅವರು ಹಾಗೇ ಮಾಡಿದರು. ಸಿಮೋನ ಊರು ಬಿಟ್ಟ ನಂತರ ಅವನ ಹಿರಿಯ ಮಗ ಬಂದು ಈ ಮನೆಯ ಒಳಗೆ ಸೇರಿಕೊಂಡಿದ್ದ ಉಳಿದ ಮಕ್ಕಳೂ ಈ ಮನೆಯಲ್ಲಿ ಪಾಲು ಕೇಳತೊಡಗಿದರು. ಅವರೆಲ್ಲರ ಬಾಯಿ ಬಡಿದು ವಿಕ್ಟರ್ ಆ ಮನೆಯನ್ನು ತನ್ನದಾಗಿ ಮಾಡಿಕೊಂಡಿದ್ದ. ಆದರೂ ತಮ್ಮನ ಕುಟುಂಬ ಬಂದು ಮನೆ ಸೇರಿಕೊಂಡಿತ್ತು. ಅವರೆಲ್ಲರಿಗೆ ಮಗ್ಗುಲಲ್ಲೈ ಒಂದು ಸಣ್ಣ ಮನೆ ಕಟ್ಟಿಸಿ ಕೊಟ್ಟ.
“ಈ ಮನೇಲಿ ನಿತ್ಯ ಪ್ರಾರ್ಥನೆ, ಜಪ ಕೇಳಿ ಬರೋದು ಹಿಂದೆ. ಈಗ ಹಾಗೇ ಇದೆ ಅಲ್ಲ ಬೋನ?”
ಪಾದರಿ ಗೋನಸ್ವಾಲಿಸ್ ಬೋನನತ್ತ ತಿರುಗಿದರು.
“ಇಲ್ಲ ಫ಼ಾದರ್..ಇಲ್ಲಿ ಈಗ ನಿತ್ಯ ಜಗಳ ವಿಕ್ಟರನಿಗೂ, ಅವನ ತಮ್ಮನ ಹೆಂಡತಿಗೂ ಏನೋ ಸಂಬಂಧ ಬೆಳೆದಿದೆ ಅಂತ ಸುದ್ದಿ. ಇದೇ ಮೂಲ ಕಾರಣವಾಗಿ ಈ ಮನೆ ಹೊಡೆದಾಟ, ಬಡಿದಾಟಗಳ ಕೇಂದ್ರವಾಗಿದೆ”
“ಛೇ!” ಎಂದರು ಪಾದರಿ ಗೋನಸ್ವಾಲಿಸ್.
*
*
*
ಎಮ್ಮೆ ಮರಿಯಾಳ ಹೊಸ ಮನೆ ನೋಡಿ ಅವರಿಗೆ ಅಚ್ಚರಿಯಾಯಿತು. ಬೋನ ಮನೆಯ ಹೆಸರನ್ನು ಓದಿ ಹೇಳಿದರು. ಮನೆ ಜಗಲಿಯ ಮೇಲೆ ಮರಿಯ ಕುಳಿತಿದ್ದಳು.
“ಮರಿಯಾಗೆ ನೂರು ದಾಟಿದೆ..ಯಾರ ಗುರುತು ಪರಿಚಯಾನು ಸಿಗೋದಿಲ್ಲ..ಸದಾ ಕಾಲ ಜಪದ ಮಣಿಗಳನ್ನು ಎಣಿಸೋದೊಂದೇ ಕೆಲಸ. ” ಎಂದ ಬೋನ.
“ಅವಳ ಮಕ್ಕಳು?”
ಮೂರೂ ಜನ ಒಳ್ಳೆ ಕೆಲಸದ ಮೇಲಿದಾರೆ…ಚೆನ್ನಾಗಿಯೂ ಇದ್ದಾರೆ..ದೇವರ ಕೃಪೆ ಅವರ ಮನೆ ಮೇಲಿದೆ..”
“ಹೌದೆ?”
ಗೋನಸ್ವಾಲಿಸ್ ಬೋನನ ಮುಖ ನೋಡಿದರು.
ಮರಿಯ ಎಮ್ಮೆ ಕಟ್ಟಿಕೊಂಡು ಹಾಲು ಮಾರುತ್ತಿದ್ದುದು, ಅವಳ ಮಕ್ಕಳು ಸದಾ ಎಮ್ಮೆ ಕಾಯುವುದು, ಹಾಲು ಕೊಡುವುದು ಎಂದು ತಿರುಗಾಡುತ್ತಿದ್ದುದು ಅವರ ನೆನಪಿಗೆ ಬಂದಿತು. ಆದರೂ ಅವರು ಒಂದು ಒಳ್ಳೆಯ ದಾರಿ ಹಿಡಿದರೆಂದರೆ ಇದು ದೇವರ ಕೃಪೆಯೇ ಅಲ್ಲವೆ?
* * *
ಸುತಾರಿ ಇನಾಸನ ಮನೆ ಎದುರು ತಾವು ಕಟ್ಟಿಸಿದ ಶಿಲುಬೆ ಕಂಬ ಕುಸಿದಿತ್ತು. ಶಿಲುಬೆ ಒಂದು ಕಡೆ ವಾಲಿಕೊಂಡಿತ್ತು. ಈ ದೃಶ್ಯ ಕಂಡು ಗೊನಸ್ವಾಲಿಸ್‌ರು ಕುಸಿದ ಶಿಲುಬೆ ಕಂಬದಂತೆಯೇ ತಾವೂ ಕುಸಿದರು. ತಮ್ಮ ಭಾರವನ್ನೆಲ್ಲ ಊರುಗೋಲಿನ ಮೇಲೆ ಹಾಕಿ ನಿಂತು ಅವರು ಕೇಳಿದರು.
“ಬೋನ ಇದೆಲ್ಲ ಏನು?”
ಬೋನ ಇನಾಸನ ಈರ್ವರು ಮಕ್ಕಳು ಈ ಮನೆಯನ್ನು ಮಾರಿದ್ದನ್ನು ಹೇಳಿದ. ಈರ್ವರೂ ಸಾಲ, ಕುಡಿತಕ್ಕೆ ಬಲಿಯಾಗಿ ಮನೆಗಳನ್ನು ಬ್ಯಾಂಕಿಗೆ ಅಡವಿಟ್ಟು ಸಾಲ ತೆಗೆದರು. ಸಾಲ ತೀರಿಸಲಾಗಲಿಲ್ಲ. ಬ್ಯಾಂಕಿನವರು ಮನೆಗಳನ್ನು ಹರಾಜ ಹಾಕಿದರು. ಹರಾಜಿನಲ್ಲಿ ಕುರುಬರ ಕರಿಯಣ್ಣ ಮನೆಗಳನ್ನು ಕೊಂಡಿದ್ದಾನೆ. ಅಲ್ಲಿ ಒಂದು ದೊಡ್ಡ ಮನೆ ಕಟ್ಟುವ ವಿಚಾರ ಕರಿಯಣ್ಣನಿಗಿದೆ.
ತುಸು ತಡೆದು ಬೋನ-
“ಫ಼ಾದರ್..” ಎಂದ.
ಅವನ ಧ್ವನಿಯಲ್ಲಿ ಏನೋ ಆತಂಕ ಗುರುತಿಸಿದ ಗೋನಸ್ವಾಲಿಸ್-
“ಏನು?” ಎಂದು ಕೇಳಿದರು.
“ಕರಿಯಣ್ಣ..ಅವನ ಮನೆತನದ ದೇವರಿಗೆ ಒಂದು ಸಣ್ಣ ಗುಡಿಯನ್ನು ಕೂಡ ಇಲ್ಲಿ ಕಟ್ಟಬೇಕೂಂತ ಇದಾನೆ.”
ಜೀಸಸ್ ಎಂದು ಉಸುರಿ ಹಣೆ, ಎದೆ, ಭುಜಗಳನ್ನು ಮುಟ್ಟಿಕೊಂಡರು ಗೋನಸ್ವಾಲಿಸ್. ಕಲ್ಲು ಕುಟಿಗನ ಜಾಗದಲ್ಲಿ ಶಿಲುಬೆ ಸ್ಥಾಪಿಸಿದ್ದು ಅವರ ನೆನಪಿಗೆ ಬಂದಿತು. ಹಾಗೆಯೇ ಆ ಹೆಂಗಸು ಗಾಡಿ ಮಂಜಣ್ಣನ ತಾಯಿ ರುದ್ರಮ್ಮ ಹೇಳಿದ ಮಾತು ಕೂಡ ಏಕೋ ನೆನಪಿಗೆ ಬಂದಿತು. ಹಾಗೆಯೇ ಆ ಹೆಂಗಸು ಗಾಡಿ ಮಂಜಣ್ಣನ ತಾಯಿ ರುದ್ರಮ್ಮ ಹೇಳಿದ ಮಾತು ಕೂಡ ಏಕೋ ನೆನಪಿಗೆ ಬಂದಿತು.
“ಎಲ್ಲಾ ದೇವ್ರು ಒಂದೇ ಅಲ್ವಾ”
ಅಂದವಳು ಕೇಳಿದ್ದು ಮತ್ತೆ ಕಿವಿಯಲ್ಲಿ ಪ್ರತಿಧ್ವನಿಸಿತು.
ಬಹು ಪ್ರಯಾಸದಲ್ಲಿಯೇ ಅವರು ಮುಂದೆ ಹೆಜ್ಜೆ ಇಟ್ಟರು.
ಸಾನ ಬಾವಿ ಪೆದ್ರು ಮನೆ ಕೂಡ ಬದಲಾಗಿತ್ತು. ಈ ಮನೆಯ ಮುಂದೆ ಒಂದು ಬೋರ್ಡು ತೂಗು ಬಿದ್ದಿತ್ತು. ಇಂಗ್ಲೀಷ ಹಾಗೂ ಕನ್ನಡದ ದಪ್ಪ ಅಕ್ಷರಗಳು ಅಲ್ಲಿದ್ದವು. “ಟ್ರೂ ಕ್ರಿಶ್ಚಿಯನ್ಸ್ ಪ್ರೇಯರ್ ಹಾಲ್” ಎಂಬ ವಾಕ್ಯವನ್ನು ಪಾದರಿ ಗೋನಸ್ವಾಲಿಸ್ ಓದಿದರು.
ಬೋನ ಅವರಿಗೆ ಮುಂದಿನ ವಿವರಗಳನ್ನು ನೀಡಿದ.
“ಶಿವಸಾಗರದಲ್ಲಿ ಇತ್ತೀಚಿನ ದಿನಗಳಲ್ಲಿ ಈ ಹೊಸ ಕ್ರೈಸ್ತ ಪಂಥ ತುಂಬಾ ಜನಪ್ರಿಯವಾಗಿದೆ. ಸಾನಬಾವಿ ಪೆದ್ರು ಮಗ ಗ್ರೆಗೋರಿ ಈ ಪಂಥದ ನಾಯಕತ್ವವನ್ನು ವಹಿಸಿಕೊಂಡಿದ್ದಾನೆ. ಎಷ್ಟೋ ಜನ ಯುವಕ ಯುವತಿಯರು ಈ ಪಂಥವನ್ನು ಒಪ್ಪಿಕೊಂಡಿದ್ದಾರೆ. ತನ್ನ ಮಗ ಫ಼ಿಲಿಪ್ಪ ಕೂಡ ಈಗ ಈ ಪಂಥಕ್ಕೆ ನಡೆದುಕೊಳ್ಳುತ್ತಿದ್ದಾನೆ. ಅವನ ಮದುವೆ ಕೂಡ ಇಲ್ಲಿಯೇ ಆಗಿ ಗಂಡ ಹೆಂಡತಿ ಸುಖವಾಗಿದ್ದಾರೆ.”
ಪಾದರಿ ಗೋನಸ್ವಾಲಿಸ್ ಸಾಕು ಎಂಬಂತೆ ಸಂಜ್ಞೆ ಮಾಡಿದರು. ಏಕೋ ಬೋನನ ಬಾಯಿಂದ ಹೊರ ಬೀಳಬಹುದಾದ ಮುಂದಿನ ಮಾತುಗಳನ್ನು ಕೇಳಲು ಅವರು ಸಿದ್ಧರಿರಲಿಲ್ಲ.
ಅವರು ಮತ್ತೂ ಒಂದೆರಡು ಮನೆಗಳವರೆಗೆ ನಡೆದುಕೊಂಡು ಹೋದರು.
ಮನೆಗಳ ಮುಂದೆ ದೇವರ ಪಟಗಳು ತೂಗು ಬಿದ್ದಿದ್ದವು. ಒಳಗೆ ದೇವರ ಪೀಠಗಳು ಕಾಣುತ್ತಿದ್ದವು. ಕೆಲವರು ಮುಂದೆ ಬಂದು ಗೋನಸ್ವಾಲಿಸರಿಗೆ ಕೈ ಮುಗಿದರು ಕೂಡ.
ಮನೆ ಮನೆಗಳಿಗೆ ಸುಣ್ಣ ಬಣ್ಣ ಬಳಿಯಲಾಗುತ್ತಿತ್ತು. ಹಬ್ಬಕ್ಕಾಗಿ ಕೇರಿ ಸಜ್ಜುಗೊಳ್ಳುತ್ತಲಿತ್ತು.
“ಆಯಿತು ಎಲ್ಲ ನೋಡಿ ಆಯಿತಲ್ಲ” ಎಂದವರು ತಿರುಗಿದರು.
ಅವರು ತಲೆ ಕೆಳಗೆ ಹಾಕಿದ್ದರು. ಅವರ ಕೈಲಿದ್ದ ಬೆತ್ತ ಕಂಪಿಸುತ್ತಲಿತ್ತು. ಕಾಲುಗಳು ನಡುಗುತ್ತಲಿದ್ದವು. ಅವರಲ್ಲಿದ್ದ ಉತ್ಸಾಹ, ಆಸಕ್ತಿ ಉಡುಗಿ ಹೋಗಿತ್ತು.
ನಾನು ಅವರ ತೋಳು ಹಿಡಿದುಕೊಂಡೆ.
ಬೋನ ನಮ್ಮನ್ನು ಹಿಂಬಾಲಿಸಿದ.
ಇಷ್ಟಾದರೂ ತಾವು ಹಲವಾರು ವರುಷ ಕೆಲಸ ಮಾಡಿದ ಊರಿನ ಬಗ್ಗೆ ತಿಳಿಯಬೇಕು ಎಂಬ ಅವರ ಉತ್ಸಾಹ ಆಸಕ್ತಿ ಮುರುಟಿಕೊಳ್ಳಲಿಲ್ಲವೇನೋ.
ಬಂಗಲೆಗೆ ಬಂದವರೇ ಅವರು ಕೊಂಚ ವಿಶ್ರಾಂತಿ ಪಡೆದರು. ವಿಶ್ರಾಂತಿಯ ನಡುವೆಯೇ ಅವರು ಏನನ್ನೋ ನೆನಪಿಗೆ ತಂದುಕೊಂಡವರಂತೆ ಎದ್ದು ಹೊರ ಬಂದರು.
ನಾನು ಬೋನ ಮಾತನಾಡುತ್ತ ಕುಳಿತಲ್ಲಿಗೆ ಬಂದು-
“ಬೋನಾ” ಎಂದರು.
“ಫ಼ಾದರ್..” ಎಂದ ಬೋನ.
“ಅಂಕೋಲದ ಒಬ್ಬ ಕೈತಾನ ಎನ್ನುವವ ಇಲ್ಲಿ ಇದ್ದ ನೆನಪು. ಮನೆ ತುಂಬಾ ಹೆಣ್ಣು ಮಕ್ಕಳಿದ್ದರು. ಕೊನೆಯ ಮಗ ದುಮಿಂಗ ಎಂದೇನೋ ಅವನ ಹೆಸರಿತ್ತು..”
“ಕೈತಾನ..ಅವನ ಹೆಂಡತಿ ಕಾಸಿಲ್ಡ, ಮಗಳ ಜತೆ ಶಿವಮೊಗ್ಗಕ್ಕೆ ಹೋದರು ಫ಼ಾದರ್..ಅವರ ಮಗಳಿಗೆ ಅಲ್ಲಿ ಕೆಲಸ ಸಿಕ್ಕಿತು. ಕೈತಾನ ತೀರಿಕೊಂಡು ಈಗ ಐದಾರು ವರ್ಷ ಆಗಿದೆ. ಅವನ ಹೆಂಡತಿ ಮಗಳು ಅಳಿಯನ ಜತೆ ಇದ್ದಾರೆ.” ಎಂದ ಬೋನ ಪ್ರೆಸಿಲ್ಲಾಳ ಕತೆ ಹೇಳಿದ.
ಪ್ರೆಸಿಲ್ಲಾ ಬೇರೆ ಮನೆ ಮಾಡಿದಳು. ತಂದೆ ತಾಯಿಯನ್ನು ಕರೆದೊಯ್ದು ಮನೆಯಲ್ಲಿ ಇರಿಸಿಕೊಂಡಳು. ಕೈತಾನ ಕಾಸಿಲ್ಡ ನೆಮ್ಮದಿಯಿಂದಲೇ ಇದ್ದರು.
ಮಗಳಿಗೊಂದು ಮದುವೆ ಮಾಡಬೇಕು ಎಂಬ ಚಿಂತೆ ಕೈತಾನನಿಗೆ ಪ್ರಾರಂಭವಾದಾಗ ಪ್ರಸಿಲ್ಲಾ-
“ಬಾಬಾ ನಾನೇ ವರನನ್ನು ಹುಡುಕಿಕೊಂಡಿದ್ದೇನೆ” ಎಂದಳು.
ಅವಳ ಸಂಗಡ ಕೆಲಸ ಮಾಡುತ್ತಿದ್ದ ರಾಮಚಂದ್ರ ಅವಳ ಕೈ ಹಿಡಿಯಲು ಮುಂದಾಗಿದ್ದ.
“ಬೇರೆ ಜಾತಿ..ಚಿಂತೆ ಇಲ್ಲ..ಪಾದರಿಗಳಿಗೆ ಹೇಳಿ ಅವನನ್ನ ನಮ್ಮ ಜಾತಿಗೆ ಸೇರಿಸಿಕೊಳ್ಳೋಣ” ಎಂದ ಕೈತಾನ.
“ಇಲ್ಲ ಬಾಬಾ…ಅವರು ಇದಕ್ಕೆ ವಿರೋಧ”
“ಮತ್ತೆ?”
“ನಾನೇ ಅವರ ಜತೆ ಹೊಂದಿಕೋಬೇಕು”
ಹಾಗೇ ಆಯಿತು. ಧರ್ಮಸ್ಥಳದಲ್ಲಿ ಇವರ ಮದುವೆಯಾಯಿತು. ಕುಂಕುಮ ಅರಿಶಿಣ ಹಚ್ಚಿಕೊಂಡು ಬಂದ ಮಗಳನ್ನು ನೋಡಿ ಕೈತಾನ ಕಾಸಿಲ್ಡ ಅಂತರಂಗದಲ್ಲಿಯೇ ಬೆಂದರು. ರಾಮಚಂದ್ರ ಇವರ ಜತೇಗೇನೆ ಉಳಿದ. ಆದರೆ ಸಿಲ್ವಿಯಾ ಇಗರ್ಜಿಗೆ ಹೋಗುವುದನ್ನು ಬಿಟ್ಟಳು. ಶುಕ್ರವಾರ ಗಂಡನ ಸಂಗಡ ಹೋಗಿ ದೇವರಿಗೆ ಹಣ್ಣು ಕಾಯಿ ಮಾಡಿಸಿಕೊಂಡು ಬರುತ್ತಿದ್ದಳು.
ರಾಮಚಂದ್ರ ಕೈತಾನ ಕಾಸಿಲ್ಡರ ಪ್ರಾರ್ಥನೆ ಜಪಕ್ಕೆ ತೊಂದರೆ ಮಾಡಲಿಲ್ಲ. ಆದರೆ ಪ್ರೆಸಿಲ್ಲಾ ಕ್ರಿಸ್ತುವಳಾಗಿ ಉಳಿಯಲಿಲ್ಲ.
ಇದೇ ವ್ಯಥೆಯಲ್ಲಿ ಕೈತಾನ ತೀರಿಕೊಂಡ.
ಕಾಸಿಲ್ಡ ಬದುಕಿದ್ದಾಳೆ. ಅವಳು ಇಗರ್ಜಿಗೆ ಹೋಗುತ್ತಾಳೆ. ಜನ ಆಡುವ ಮಾತಿಗೆ ತಲೆಯೊಡ್ಡುತ್ತಾಳೆ.
“ಈಗ ಪ್ರೆಸಿಲ್ಲಾಗೆ ಇಬ್ಬರು ಮಕ್ಕಳು..ವಿನಾಯಕ, ವಿಜಯೇಂದ್ರ..”
“ಸರಿ ಬಿಡು..” ಎಂದು ಪಾದರಿ ಎದ್ದು ಒಳ ಹೋದರು.
*
*
*
ಅಂದು ಸಂತ ಜೋಸೆಫ಼ರ ಹಬ್ಬ. ಏಳೆಂಟು ಊರುಗಳಿಂದ ಬೋಳು ಮುಖದ, ಬುಶ ಪ್ಯಾಂಟ್ ಧರಿಸಿದ ಹುಡೂಗರು ’ಪಾದರಿ’ ಎಂದು ಕರೆಸಿಕೊಂಡು ಡಿಸೋಜರ ಬಂಗಲೆಯಲ್ಲಿ ಸೇರಿಕೊಂಡರು. ಹಬ್ಬದ ಅಡಿಗೆ ಮಾಡಲು ಬಿಸ್ಮಿಲ್ಲಾ ಹೋಟೆಲಿನ ಪಕಾತಿಗಳು‌ಎರಡು ದಿನಗಳ ಮಟ್ಟಿಗೆ ಕೂಜ್ನ ಅನ್ನು ಆಕ್ರಮಿಸಿಕೊಂಡರು. ಬೆಳಿಗ್ಗೆ ಐದು ಗಂಟೇಗೆನೆ ಸಾದಾ ಪೂಜೆಗಳು ಆರಂಭವಾದವು. ಆರು ಜನ ಗುರುಗಳು ಒಂಬತ್ತು ಗಂಟೆಯ ಗಾಯನ ಪೂಜೆಯನ್ನು ನಡೆಸಿಕೊಟ್ಟರು. ಬೆಳಿಗ್ಗೆ ಬಂದು ಸಾದಾ ಪೂಜೆ ಮಾಡಿ ಪಾದರಿ ಗೋನಸ್ವಾಲಿಸ್ ಬಂಗಲೆಗೆ ಬಂದರು. ಸಂಜೆ ನಡೆಯಲಿರುವ ಮೆರವಣಿಗೆಯಲ್ಲಿ ಅವರು ಪಾಲುಗೊಳ್ಳಬೇಕಿತ್ತು. ಮೆರವಣಿಗೆ ನಂತರದ ಒಂದು ಸಮಾರಂಭದಲ್ಲಿ ಅವರ ಸನ್ಮಾನ ನಡೆಯಲಿತ್ತು.
ಗೋನಸ್ವಾಲಿಸ್‌ರನ್ನು ಅವರ ಕೊಠಡಿಯಲ್ಲಿ ಬಿಟ್ಟು ಇಗರ್ಜಿಯತ್ತ ಹೋದ ನನಗೆ ಇಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಖಚಿತವಾಯಿತು.
ಪ್ರತಿ ವರುಷ ಹಬ್ಬದ ದಿನ ದೇವರ ಪುರುಶಾಂವಂ ಒಂದು ನಿಶ್ಚಿತ ದಾರಿಯಲ್ಲಿ ಹೋಗುತ್ತಿತ್ತಂತೆ. ಇಗರ್ಜಿಯಿಂದ ಹೊರಬಿದ್ದ ದೇವರ, ಸಂತರ ಚರೇಲಗಳು ಸಿಮೋನನ ಮನೆ ಎದುರಿನಿಂದ ಹೊರಟು ಪಾಸ್ಕೊಲ ಮೇಸ್ತನ ಮನೆಯ ಬಳಿ ಬಲಕ್ಕೆ ತಿರುಗಿ ವೈಜೀಣ ಕತ್ರೀನಳ ಮನೆಯ ಬಳಿ ಮತ್ತೆ ತಿರುಗಿ ಇಗರ್ಜಿಗೆ ಒಂದು ಸುತ್ತು ಹಾಕಿ ಮರುಳುತ್ತಿದ್ದವು. ಫ಼ಾತಿಮಾ ನಗರದಲ್ಲೂ ಮನೆಗಳಾದ ಮೇಲೆ ಅಲ್ಲಿಗೂ ದೇವರ ಚರೇಲ ತರಬೇಕು ಎಂಬ ಬೇಡಿಕೆಯಿತ್ತು. ಆದರೆ ಈ ಬಗ್ಗೆ ಯಾರೂ ಪ್ರಯತ್ನಿಸಿರಲಿಲ್ಲ. ಊರಿನ ಬೇರೆಡೆಯಲ್ಲೂ ಕ್ರೀಸ್ತುವರ ಮನೆಗಳಿವೆ. ಅಲ್ಲಿಗೆಲ್ಲ ಹೋಗಲಾಗುವುದಿಲ್ಲ. ಸಾಂಕೇತಿಕವಾಗಿ ಇಗರ್ಜಿ ಸುತ್ತ ದೇವರ ಮೆರವಣಿಗೆ ಹೋದರೆ ಸಾಕು ಎಂದು ಧಾಜಣ್ ನಿರ್ಧರಿಸಿದ್ದರು.
ಆದರೆ ಈ ಬಾರಿ ದೇವರ ಮೆರವಣಿಗೆಯ ದಾರಿ ಬದಲಾಗಿದೆ ಎಂಬ ಮಾತು ಕೇಳಿ ಬಂತು. ಈ ಬಾರಿ ದೇವರು ಫ಼ಾತಿಮಾ ನಗರಕ್ಕೆ ಮೊದಲು ಹೋಗಬೇಕು ನಂತರ ಸರಕಾರಿ ಬಾವಿಯ ಬಳಿ ಹೊರಳಿ ಸಾಂತಾ ಮೊರಿ ಮನೆ ಎದುರಿನಿಂದ ಸಿಮೋನನ ಮನೆ ಬಳಿ ಹೊರಳಿ ಇಗರ್ಜಿಗೆ ಬರುವುದು ಎಂದಾಯಿತು.
“ಈ ದಾರಿ ಬದಲಾವಣೆ ಯಾರು ಮಾಡಿದ್ದು?” ಎಂದು ಕೆಲವರು ಗುರ್ಕಾರ ವಿಕ್ಟರನನ್ನು ಕೇಳಿದರು.
“ನನಗೆ ಗೊತ್ತಿಲ್ಲ, ಗುರ್ಕಾರ ಪಿಂಟೋನ ಕೇಳಿ” ಎಂದ ಆತ.
ಪಿಂಟೋ ಅವನ ಮಂಗಳೂರಿನ ಭಾಷೆಯಲ್ಲಿ-
“ಏನಾಯಿತು? ಅಲ್ಲೂ ನಮ್ಮವರ ಮನೆಗಳಿವೆಯಲ್ವ” ಎಂದ.
ಪಾಸ್ಕೋಲ ಬೋನ ಉಳಿದಹಿರಿಯರು ಹೀಗೆ ಆಗಬಾರದಿತ್ತು ಎಂದರು.
ತರುಣರು ಇದು ಹೇಗೆ ಆಗುತ್ತೋ ನೋಡೋಣ ಎಂದರು.
ಹಳೆಯ ರಸ್ತೆಯ ಉದ್ದಕ್ಕೂ ತೋರಣಗಳು ಎದ್ದವು.
ಫ಼ಾತಿಮಾ ನಗರದ ಕ್ರೀಸ್ತುವರ ಮನೆಗಳ ಮುಂದೆಯೂ ತೋರಣಗಳು ಕಂಡವು.
“ಸಂತ ಜೋಸೆಫ಼ರೇ ನಮಗಾಗಿ ಪ್ರಾರ್ಥಿಸಿರಿ”
“ದೇವ ಬೋರೆಂ ಕರುಂ” (ದೇವರು ಒಳಿತನ್ನು ಮಾಡಲಿ) ಎಂಬ ಬಟ್ಟೆ ಫ಼ಲಕಗಳು ಅಲ್ಲಲ್ಲಿ ಕಂಡವು.
ಮನೆ ಮನೆ ಮುಂದೆ ದೇವರು ಬಂದಾಗ ಹೂವು ನೀಡಲು, ಮೇಣದ ಬತ್ತಿ ಹಚ್ಚಲು ವ್ಯವಸ್ಥೆ ಮಾಡಲಾಯಿತು.
ಸಂತ ಜೋಸೆಫ಼ರ ಪ್ರತಿಮೆ ಇಡಲು ದೋಣಿಯಾಕಾರದ ಒಂದು ಚರೇಲನ್ನು ಸಿದ್ಧಪಡಿಸಲಾಯಿತು. ಇತರೆ ಸಂತರಿಗಾಗಿಯೂ ಬಗೆ ಬಗೆಯಲ್ಲಿ ಸಿಂಗಾರ ಮಾಡಿದ ಚರೇಲಗಳನ್ನು ಕೂಡ ಸಜ್ಜು ಮಾಡಲಾಯಿತು.
ಹಬ್ಬಕ್ಕೆಂದು ಬಂದಿರುವ ಎಲ್ಲ ಪಾದರಿಗಳೂ ನಡೆದುಕೊಂಡೇ ಮೆರವಣಿಗೆಯ ಜೊತೆ ಬರಬೇಕೆಂದು ತೀರ್ಮಾನವಾಯಿತು. ಆದರೆ ಪಾದರಿ ಗೋನಸ್ವಾಲಿಸ್‌ರು ಮಾತ್ರ ತಮ್ಮ ಕಾರಿನಲ್ಲಿ ಕೂತು ಚರೇಲುಗಳ ಹಿಂದೆ ಬರಬೇಕೆಂದು ಪಾದರಿ ಡಿಸೋಜ ನನಗೆ ತಿಳಿಸಿದರು.
ಸಂಜೆಯಾಯಿತು.
ಇಗರ್ಜಿಯ ಗಂಟೆಯಾಯಿತು.
ಮತ್ತೆ ಇಗರ್ಜಿಯ ತುಂಬ ಜನ.
ಪೌಡರು ಸೆಂಟಿನ ವಾಸನೆ. ಹೊಸ ಉಡುಪಿನ ಸರಬರ, ಸಡಗರ, ಮೊದಲು ಒಂದು ಕಿರು ಪ್ರಾರ್ಥನೆ. ಮೆರವಣಿಗೆಯಲ್ಲಿ ಶಿಸ್ತಿನಿಂದ ಭಕ್ತಿಯಿಂದ ವರ್ತಿಸಿ ಇತರೇ ಧರ್ಮೀಯರಿಗೆ ಆದರ್ಶಪ್ರಾಯರಾಗಿರಿ ಎಂಬ ವಿನಂತಿ. ಮಿರೋಣ ಡಯಾಸ್, ಗುರ್ಕಾರ ಪಿಂಟೋ ಫ಼ುಲ್ ಶೂಟಿನಲ್ಲಿದ್ದರು.
ಮೊದಲ ಅಡ್ಡಸಾಲಿನಲ್ಲಿ ನಡುವೆ ಶಿಲುಬೆ. ಎರಡೂ ಬದಿಗಳಲ್ಲಿ ಮೇಣದ ಬತ್ತಿ ಹಚ್ಚಿದ ದೀವಲಿಗಳು. ಇವರ ಹಿಂದೆ ಎರಡು ಉದ್ದ ಸಾಲು. ಒಂದು ಸಾಲಿನಲ್ಲಿ ಹುಡುಗರು, ಇನ್ನೊಂದು ಸಾಲಿನಲ್ಲಿ ಹುಡುಗಿಯರು. ಇವರ ಹಿಂದೆ ಗಂಡಸರು, ಹೆಂಗಸರು ಎಲ್ಲರ ಕೈಯಲ್ಲು ಮೇಣದ ಬತ್ತಿಗಳು. ಜಪಸರ, ಬಾಯಲ್ಲಿ ಜಪ, ಕೀರ್ತನೆ. ಬೇರೆ ಗದ್ದಲವಿಲ್ಲ, ಗಡಿಬಿಡಿಯಿಲ್ಲ. ಎಲ್ಲವೂ ವ್ಯವಸ್ಥಿತ ಭಕ್ತಿಯಿಂದ ದೈವಿಕತೆಯಿಂದ ಪ್ರಭಾವಿತ.
ಗುರ್ಕಾರಗಳು, ಹಿರಿಯರು ಇಗರ್ಜಿಯಿಂದ ಹೊರಬಿದ್ದವರನ್ನು ಸಾಲು ಸಾಲಾಗಿ ನಿಲ್ಲಿಸಿ-
“..ಇನ್ನು ಹೊರಡಿ” ಎಂದರು.
ಎಲ್ಲರಿಗೂ ಮುಂದಿದ್ದ ರೈಮೆಂಡ ಬ್ಯಾಂಡು ಸದ್ದು ಮಾಡತೊಡಗಿತು. ಇಂತ್ರು ಮಗ ಚಾಮಾದೋರ ಸಿರೀಲ ಗರ್ನೇಲ ಇರುವ ಚೀಲವನ್ನು ಒಂದು ಕೈಯಲ್ಲಿ ಉರಿಯುತ್ತಿರುವ ಸೆಣಬಿನ ಹಗ್ಗವನ್ನು ಇನ್ನೊಂದು ಕೈಯಲ್ಲಿ ಹಿಡಿದು ಹೊರಟ. ಅಲ್ಲಲ್ಲಿ ಪಾದರಿಗಳು, ಸಿಸ್ಟರುಗಳು ಮೆರವಣಿಗೆಯ ಜೊತೆಗೇನೆ ಹೊರಟ ಸಂತ ಸಂತಿಣೆಯರ ಅಲಂಕೃತ ಚರೇಲುಗಳು. ತುತ್ತ ತುದಿಯಲ್ಲಿ ಸಂತ ಜೋಸೆಫ಼ರ ದೋಣಿ. ಹಿಂದೆಯೇ ಡೈನಮೋ ಇರಿಸಿ ವಿದ್ಯುತ್ ದೀಪಗಳಿಂದ ಜಗಮಗಿಸುವಂತೆ ಮಾಡಲಾಗಿತ್ತು.
“ಮಹೋನ್ನತ ದೇವರಿಗೆ ಸ್ತುತಿಯಾಗಲಿ” ಎಂಬ ಕೀರ್ತನೆಯೊಂದು ಪುರುಶಾಂವನಲ್ಲಿದ್ದ ಎಲ್ಲರ ನಾಲಿಗೆಗಳ ಮೇಲೆ ನಲಿಯುತ್ತಿರಲು, ಜನ ಒಂದೇ ಧ್ವನಿಯಲ್ಲಿ ಹಾಡುತ್ತಿರಲು ಇಗರ್ಜಿಯ ಗಂಟೆ ಮೆರವಣಿಗೆ ಹೊರಟಿತೆಂಬುದನ್ನು ಸಾರುವಂತೆ ಸದ್ದು ಮಾಡತೊಡಗಿತು. ಇಗರ್ಜಿಯಿಂದ ಮೆರವಣಿಗೆ ರಸ್ತೆಗೆ ಬಂದಿತು.
ಮೊದಲ ಸಾಲಿನ ಹುಡುಗ ಹುಡುಗಿಯರ ಹಿಂದೆಯೇ ಫ಼ಾತಿಮಾ ನಗರದ ಡಯಾಸ್, ಪಿಂಟೋ, ಡಿಸೋಜ, ಫ಼ರ್ನಾಂಡಿಸ್, ಬ್ರೆಟ್ಟೋ ಕುಟುಂಬಗಳವರು, ಇವರಿಗೆ ಯಾವತ್ತೂ ಮೊದಲ ಸ್ಥಾನ. ಇಗರ್ಜಿಯ ಬೆಂಚುಗಳು ಇವರಿಗೆ. ದಿವ್ಯಪ್ರಸಾದ ಹಂಚುವಾಗ ಇವರಿಗೇ ಮೊದಲು. ಸಿಮಿತ್ರಿಯಲ್ಲಿ ಇವರ ಕುಟುಂಬ ವರ್ಗದವರಿಗೆ ಮೊದಲ ಸಾಲು. ಪಾದರಿ ಮಾತನಾಡಿಸುವುದು ಮೊದಲು ಇವರನ್ನು. ಸಿಸ್ಟರುಗಳು ಹೆಚ್ಚು ಅಂಕ ಕೊಡುವುದು ಇವರ ಮಕ್ಕಳಿಗೇನೆ. ಮನೆ ಮಂತ್ರಿಸುವಾಗ ಪಾದರಿ ಮೊದಲು ಹೋಗುವುದು ಇವರ ಮನೆಗಳಿಗೆ. ಹೀಗಿರುವಾಗ ದೇವರ ಮೆರವಣಿಗೆಯಲ್ಲಿ ಇವರು ಮೊದಲಲ್ಲಿ ಇರಬೇಕಲ್ಲವೆ? ಸೂಟು ಧರಿಸಿ, ಟೈ ಬಿಗಿದುಕೊಂಡ ಗಂಡಸರು, ಫ಼್ರಾಕು, ಸೀರೆ ಧರಿಸಿ ಹಿಮ್ಮಡಿ ಎತ್ತರದ ಚಪ್ಪಲಿ ಮೆಟ್ಟಿ, ಕೆನ್ನೆ ತುಟಿಗಳಿಗೆ ಕೆಂಪು ಬಳಿದುಕೊಂಡ ಹೆಂಗಸರು ಇಲ್ಲಿದ್ದರು.
ಇವರೆಲ್ಲ ಸಂತ ಸಂತಿಣೆಯರ ಚರೇಲುಗಳನ್ನು ನಡುವೆ ಇರಿಸಿಕೊಂಡು ಫ಼ಾತಿಮಾ ನಗರದತ್ತ ಹೊರಟರು. ಇವರಿಗೆ ಅಪರಿಮಿತ ಸಂತೋಷವಾಗಿತ್ತು. ಇಂದು ದೇವರು ತಮ್ಮ ಬೀದಿಗೇ ಬರುತ್ತಿದ್ದಾನಲ್ಲವೆ?
ಈ ಜನರ ಬಗ್ಗೆಯೇ ಸದಾ ಆಸಕ್ತಿ ತೆಗೆದುಕೊಳ್ಳುತ್ತಿದ್ದ ಪಾದರಿಗಳು, ಸಿಸ್ತರುಗಳು ಕೂಡ ಈ ಸಾಲಿನಲ್ಲಿಯೇ ಚರೇಲುಗಳ ಸಂಗಡ ಹೆಜ್ಜೆ ಹಾಕಿದರು.
ಇಗರ್ಜಿಯ ಗಂಟೆ ಮೆರವಣಿಗೆ ಹೊರಟ ತಕ್ಷಣ ಸದ್ದು ಮಾಡತೊಡಗಿ ಅದರ ಗಂಟಾನಾದ ಇಂಪಾಗಿ ಕೇಳಿ ಬರುತ್ತಿರಲು ಇಗರ್ಜಿ ಮುಂದಿನ ನೇರ ದಾರಿಯಲ್ಲಿ ಹೊರಟ ಮೆರವಣಿಗೆ ಸಿಮೋನನ ಮನೆಯತ್ತ ಹೊರಳುವ ದಾರಿ ಬಿಟ್ಟು ಮುಂದೆ ಸಾಗಿತು…

ಆದರೆ..
ಮುಂದೆ ಹೋದವರು-
“ಏನಾಯಿತು? ಏನಾಯಿತು?” ಎಂದು ತಿರುಗಿ ನೋಡುತ್ತಿರಲು ಹಿಂದಿನಿಂದ ಬರುತ್ತಿದ್ದ ಜನರ ಸಾಲು ಸಿಮೋನನ ಮನೆ ಬೀದಿಗೆ ಹೊರಳಿ ಬಿಟ್ಟಿತು. ಕಲ್ಲು ಕೆಲಸಗಾರರು, ಗಾರೆ ಕೆಲಸದವರು, ಆಚಾರಿಗಳು, ದರ್ಜಿಗಳು, ಕಚೇರಿಗಳಲ್ಲಿ ಜವಾನ ಅಟೆಂಡರ್ ಕೆಲಸ ಮಾಡುತ್ತಿದ್ದವರು ಸಂತ ಜೋಸೆಫ಼ರ ಪ್ರತಿಮೆ ಇದ್ದ ಡೋಣಿಯ ಸುತ್ತ ಘೇರಾಯಿಸಿಕೊಂಡವರು ಆ ದಾರಿಗೆ ಹೊರಳಿ ಬಿಟ್ಟರು.
ಪಾದರಿ ಡಿಸೋಜ ಓಡಿ ಬಂದರು.
“ಮೊದಲು ಫ಼ಾತಿಮಾ ನಗರ …ನಂತರ ಜೋಸೆಫ಼ ನಗರ..” ಎಂದು ಅವರು ಬೊಬ್ಬೆ ಹೊಡೆದುಕೊಂಡರೂ ಜನ ಕೇಳಲಿಲ್ಲ.
“ನಡೀರಿ..ನಡೀರಿ..ಮೊದಲು ಚಾರಡಿ ಗೌಡಿ, ನೇಂದರರ ಮನೆಗಳ ಮುಂದೆ ಸಂತ ಹೋಗಲಿ..”
“ನಂತರ ಬಾಮಣರ ಮನೆಗಳಿಗೆ”
“ಜಪ ಹೇಳಿ..”
“ಕೀರ್ತನೆ ಹಾಡಿ..”
“ದೋಣೀನ ಆ ಕಡೆ ತಿರುಗಿಸಬೇಡಿ..ಅವರೇ ಬೇಕಾದರೆ ನಮ್ಮ ಹಿಂದೆ ಬರಲಿ..”
ಆವೇಶ ಬಂದಂತೆ ಜನ ಸಿಮೋನನ ಮನೆ ಬೀದಿಗೆ ನುಗ್ಗಿದರು. ಹೆಂಗಸರು ಮಕ್ಕಳಲ್ಲಿ ಏನೋ ಹುರುಪ ಬಂದಿತು. ಗಂಡಸರು ದೋಣಿಯನ್ನು ಮುಂದೆ ತಳ್ಳಿದರು.
ಈ ಎರಡನೇ ಪ್ರವಾಹ ತಡೆಗೋಡೆಯನ್ನು ಒಡೆದುಕೊಂಡು ನುಗ್ಗಿದ ನೀರಿನಂತೆ ಹರಿಯಿತು.
ಮೆರವಣಿಗೆಯ ಮೊದಲ ಸಾಲಿನಲ್ಲಿದ್ದ ಪಿತಳೀ ಬ್ಯಾಂಡಿನ ರೈಮಂಡ ಮತ್ತು ಅವನ ಸಂಗಡಿಗರು ಈ ಸುದ್ದಿ ತಿಳಿದದ್ದೇ ಕ್ಲಾರಿಯೋನಟ, ಡ್ರಮ, ಸೈಡ್ ಡ್ರಮ, ಫ಼್ರೆಂಚ ಹಾರ್ನ್, ತಾಳಗಳನ್ನು ಎತ್ತಿಕೊಂಡು ಯಾವುದೋ ಓಣಿಯಲ್ಲಿ ನುಗ್ಗಿ ಬಂದು ಎರಡನೇ ಮೆರವಣಿಗೆಯ ಮುಂದೆ ಬಂದು ನಿಂತು ತಮ್ಮ ಸ್ಥಾನವನ್ನು ಬಲಪಡಿಸಿಕೊಂಡರು. ಗರ್ನಾಲಿನ, ಸಿರೀಲ, ಗರ್ನೇಲ್ ಇರುವ ಚೀಲವನ್ನು ಬಗಲಿಗೆ ತುರುಕಿಕೊಂಡು, ಮತ್ತೊಂದು ಕೈಲಿ ಬೆಂಕಿ ಮುಟ್ಟಿಸಿದ ದಾರ ಹಿಡಿದು ಬಂದು ಈ ಮೆರವಣಿಗೆಯಲ್ಲಿ ಸೇರಿಕೊಂಡವ ಏನೋ ಹುರುಪಿನಿಂದ ಒಂದರ ಹಿಂದೆ ಒಂದರಂತೆ ಐದಾರು ಗರ್ನಾಲುಗಳಿಗೆ ಬೆಂಕಿ ಹಚ್ಚಿ ಢಮಾರ ಎನಿಸಿದ. ನಡುವೆ ಏಲ್ಲೋ ಇದ್ದ ಗುರ್ಕಾರ ವಿಕ್ಟರ್-
“…ಹಾಂ..ಎಲ್ಲ ಒಳ್ಳೇದಕ್ಕೆ ನಡೀರಿ..” ಎಂದು ಜನರನ್ನು ಹುರಿದುಂಬಿಸಿದ.
ಬಹಳ ನಿಧಾನವಾಗಿ ಹೋಗುತ್ತಿದ್ದ ನಮ್ಮ ಕಾರು ಕವಲು ದಾರಿಯ ಬಳಿ ನಿಂತು ಬಿಟ್ಟಿತು.
ಡ್ರೈವರಗೆ ಯಾವ ಮೆರವಣಿಗೆಯ ಹಿಂದೆ ಹೋಗಬೇಕೆಂಬುದು ಅರಿವಾಗದೆ ಆತ ಗಲಿಬಿಲಿಗೊಂಡಂತಿತ್ತು. ನಾನು ಕೂಡ ಏನೂ ಅರಿವಾಗದೆ ಪಾದರಿ ಗೋನಸ್ವಾಲಿಸ್‌ರ ಮುಖ ನೋಡುತ್ತಿರಲು ಅವರು ಅನಿರೀಕ್ಷಿತವಾಗಿ ಎಂಬಂತೆ ಕಾರಿನ ಬಾಗಿಲು ತೆರೆದುಕೊಂಡು ಹೊರಗೆ ಇಳಿದರು.
“ಫ಼ಾದರ್” ಎಂದು ನಾನೂ ಕೆಳಗೆ ಹಾರಿದೆ.”
ಕೈಲಿರುವ ಬೆತ್ತವನ್ನು ಬೀಸುತ್ತ ಗೋನಸ್ವಾಲಿಸ್-
“ಮೊಗಾಚಾ ಕ್ರೀಸ್ತುವನೂಂ..ರಾವಾ..ರಾವಾ..” (ಪ್ರೀತಿಯ ಕ್ರೀಸ್ತುವರೆ..ನಿಲ್ಲಿ..ನಿಲ್ಲಿ) ಎಂದು ಎತ್ತರದ ದನಿಯಲ್ಲಿ ಕೂಗತೊಡಗಿದರು.
“ಸೋಮೋಡ್ತನ್ನ ಹೀಗೆ ಒಡೀ ಬೇಡಿ..ನಿಲ್ಲಿ..ನಿಲ್ಲಿ” ಕೈಲಿದ್ದ ಕೋಲು ಜಾರಿ ಕೆಳಗೆ ಬೀಳಲು ಎರಡೂ ಕೈಗಳನ್ನು ಮೇಲೆತ್ತಿ ಅವರು ಬೊಬ್ಬೆ ಹೊಡೆದರು.
ಆದರೆ ಅವರ ಕೂಗು ಬೊಬ್ಬೆ ಯಾರಿಗೂ ಕೇಳಲಿಲ್ಲವೇನೋ ಎಂಬಂತೆ ಫ಼ಾತಿಮಾ ನಗರದತ್ತ ಒಂದು ತುಂಡು ಮೆರವಣಿಗೆ ಜೋಸೆಫ಼್ ನಗರದತ್ತ ಒಂದು ತುಂಡು ಮೆರವಣಿಗೆ ತಿರುಗಿ ಮಾಯವಾಗುತ್ತಿರಲು ಪಾದರಿ ಗೋನಸ್ವಾಲಿಸ್ ಎದೆ ಒತ್ತಿಕೊಂಡು ತತ್ತರಿಸಿ ಕೆಳಗೆ ಬೀಳುವ ಹಂತ ತಲುಪಿದರು.
ಬೋನ ಓಡಿ ಬಂದ.
ನಾನೂ ಕೈ ಚಾಚಿದೆ.
ಅವರನ್ನು ನಿಧಾನ ಕಾರಿನತ್ತ ಕರೆ ತಂದೆವು.
ಡ್ರೈವರ ಬಾಗಿಲು ತೆರೆದ.
ಗೋನಸ್ವಾಲಿಸ್ ಕಾರಿನಲ್ಲಿ ಕುಳಿತು ಸುಧಾರಿಸಿಕೊಂಡರು.
ಇಗರ್ಜಿಯ ಗಂಟೆ ನಿಂತಿರಲಿಲ್ಲ. ದೂರದಲ್ಲಿ ಬ್ಯಾಂಡು ಕೇಳಿ ಬರುತ್ತಿತ್ತು. ಆಕಾಶಕ್ಕೆ ಹಾರಿದ ಗರ್ನಾಲುಗಳು ಅಲ್ಲಿ ಸಿಡಿದು ಸದ್ದು ಮಾಡುತಲಿದ್ದವು.
ಐದಾರು ನಿಮಿಷಗಳ ನಂತರ ಪಾದರಿ ಗೋನಸ್ವಾಲಿಸ್-
“ಸನ್” ಎಂದರು.
“ಫ಼ಾದರ್..” ಅವರತ್ತ ಬಗ್ಗಿ ಅವರ ತುಟಿಗಳ ಬಳಿ ಕಿವಿ ಕೊಂಡೊಯ್ದೆ.
“ಸನ್..ಕಾರನ್ನ ತಿರುಗಿಸಲಿಕ್ಕೆ ಹೇಳು..ನಾವು ಊರಿಗೆ ಹೋಗೋಣ..ನೋಡಬೇಕಾದ್ದನ್ನೆಲ್ಲ ನೋಡಿ ಆಯಿತಲ್ಲ..”
ಡ್ರೈವರ್ ನಿಧಾನವಾಗಿ ಕಾರನ್ನು ತಿರುಗಿಸಿಕೊಂಡ. ಮುಂದಿನ ಸೀಟಿನಲ್ಲಿ ಕುಳಿತ ಬೋನ ನೋವಿನಿಂದ-
“ಫ಼ಾದರ್ ನಾನು ಬರತೀನಿ” ಎಂದು ನುಡಿದು ಕಾರಿನಿಂದ ಇಳಿದ. ಪಾದರಿ ತಲೆಯಾಡಿಸಿದರು. ಇಗರ್ಜಿ ಹಿಂದಾಯಿತು.
ಶಿವಸಾಗರ ಹಿಂದುಳಿಯಿತು.
ಎರಡು ದೀಪಗಳನ್ನು ಉರಿಸುತ್ತ ಕಾರು ಕತ್ತಲೆಯ ಕೂಪಕ್ಕೆ ಇಳಿಯಿತು.
ನಾನು ಹಿಂಬದಿಯ ಸೀಟಿನತ್ತ ತಿರುಗಿ ನೋಡಿದೆ.
“ಜೀಸಸ್ ಇದೇನಾಯಿತು…ಇದು ಹೇಗೆ ಆಯಿತು?” ಎಂದೇನೋ ಪಾದರಿಗ ಗೋನಸ್ವಾಲಿಸ್ ತಮ್ಮಷ್ಟಕ್ಕೆ ತಾವೇ ಅಂದುಕೊಳ್ಳುತ್ತಿದ್ದರು.
ಅವರನ್ನು ಮಾತನಾಡಿಸುವ ಧೈರ್ಯ ನನಗೆ ಆಗಲಿಲ್ಲ.
ಕಾರು ಊರಿನಿಂದ ಬಹಳ ದೂರ ಬಂದಿತ್ತು.
*****
ಮುಗಿಯಿತು

ಕೀಲಿಕರಣ ದೋಷ ತಿದ್ದುಪಡಿ: ನಸೀರ್ ಅಹಮದ್, ರಾಮದಾಸ್ ಪೈ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.