ಡಾ. ಶಾಂತರಸ ಹೆಂಬೇರಾಳು ಅವರ – ಅಧ್ಯಕ್ಷೀಯ ಭಾಷಣದ ಭಾಗ ೧

೭೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – ಬೀದರ. ೨೭ ಮತ್ತು ೨೮ ಜನವರಿ ೨೦೦೬

ನುಡಿ ನಮನ :

ಪಾತಾಳದಿಂದತ್ತ ಮಾತ ಬಲ್ಲವರಿಲ್ಲ
ಗಗನದಿಂದ ಮೇಲೆ ಅನುಭಾವ ತಾನಿಲ್ಲ
ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ
ಹೊರಗಣ ಹೊರಗನು ಅರಿಯಬಲ್ಲವರಿಲ್ಲ
ಹಿಂದಣ ಹಿಂದನು ಮುಂದಣ ಮುಂದನು
ತಂದು ತೋರಿದ ನಮ್ಮ ಗುಹೇಶ್ವರನು.

ಅಖಂಡ ಕರ್ನಾಟಕದ ಬಂಧುಗಳೇ, ಕನ್ನಡವನ್ನು ತನ್ಮೂಲಕ ಭಾರತವನ್ನು ಪ್ರೀತಿಸುತ್ತ ವಿಶ್ವದ ತುಂಬೆಲ್ಲ ಬದುಕುತ್ತಿರುವ ಸಕಲ ಜೀವರೇ ತಮ್ಮೆಲ್ಲರಿಗೂ ಶರಣು ಶರಣಾರ್ಥಿ.
ಬಂಧುಗಳೇ, ಅಲ್ಲಮನ ಈ ವಚನ “ಮಾತು” ಮತ್ತು “ಅನುಭಾವ”ಗಳನ್ನು ಪರಿವ್ಯಾಖ್ಯಾನಿಸುವ ಪ್ರಯತ್ನ ಮಾಡುತ್ತದೆ. “ಮಾತು” ಅಂದರೆ ಭಾಷೆ, ಅರ್ಥಾತ್ ಸಂಸ್ಕೃತಿ. ತಾತ್ಪರ್ಯ ಒಟ್ಟು “ಬದುಕು” ಎಂದೇ ಅರ್ಥ. ಜೀವಿಯ ಒಟ್ಟು ಬದುಕಿನ ಪ್ರಚಂಡ ಅಸ್ತಿತ್ವ ಅದರ ಶಕ್ತಿ, ಸಾಮರ್ಥ್ಯ, ಅನಂತತೆ ಕುರಿತು; ಅದೇ ಕಾಲಕ್ಕೆ ಬದುಕಿನ ಇತಿಮಿತಿ ಕುರಿತು ವಾಸ್ತವದ ನೆಲೆಯಲ್ಲಿ ನಡೆಸಿದ ಅನ್ವೇಷಣೆಯಾಗಿ ನನಗಾದರೂ ಅರ್ಥ ಕಟ್ಟಿಕೊಡುತ್ತಿದೆ. ಏಕೆಂದರೆ ನಾವೆಲ್ಲ ಇಂದು ವಿಶ್ವವೆಂಬ ಹಳ್ಳಿಯೊಂದರ ಪರಿವ್ಯಾಪ್ತಿಯಡಿಯಲ್ಲಿ ಏಕಕಾಲಕ್ಕೆ ತೀರ ವಿಸ್ತೃತವೂ, ಇನ್ನೊಂದು ಮಗ್ಗುಲಲ್ಲಿ ತೀರ ಕುಬ್ಜರೂ ಆಗುತ್ತಿದ್ದೇವೆ. ನಾವೇನಾಗುತ್ತಿದ್ದೇವೆ ಎಂಬುದಕ್ಕೆ ನಾವೇ ಜವಾಬ್ದಾರರು ಹೌದೇ, ಅಲ್ಲವೆ? ಎಂಬ ದ್ವಂದ್ವಗಳು, ನಾವು ಮತ್ತೇನೋ ಆಗಬೇಕಾಗಿತ್ತಲ್ಲ ಎಂಬ ತಳಮಳವೂ, ಅರಿವಿಲ್ಲದಂತೆ ಯಾರಿಗೋ ನಮ್ಮನ್ನು ಮಾರಿಕೊಂಡುಬಿಟ್ಟಿವೇನೋ ಎಂಬ ಆತಂಕವೂ ನಮ್ಮನ್ನು ಕಾಡುತ್ತಿವೆ.
ಈ ರೀತಿ ದ್ವಂದ್ವ, ತಳಮಳ, ಆತಂಕಗಳು ಏಕಕಾಲಕ್ಕೆ ಮುತ್ತಿಕೊಂಡಿರುವ ಈ ಸಮ್ಮಿಶ್ರಭಾವ ತಾಕಲಾಟಗಳ ವಿಚಿತ್ರ ಮನೋಸ್ಥಿತಿಯಲ್ಲಿ ನುಡಿಹಬ್ಬ ನಡೆಸುತ್ತಿದ್ದೇವೆ. ಹಿಂದಿನ ಹಲವು ಸಮ್ಮೇಳನಾಧ್ಯಕ್ಷರುಗಳು ಗುರುತಿಸಿರುವಂತೆ ಇದು ಕನ್ನಡದ ಹಬ್ಬ, ಸಂತೆ, ಜಾತ್ರೆ, ಉತ್ಸವ, ಮೆರವಣಿಗೆ, ಸಾಂಸ್ಕೃತಿಕ ಚಿಂತನ, ರಾಜಕೀಯ ವೈಭವ, ಸಾಹಿತಿಗಳ ಪರಿಷೆ ಏನೆಲ್ಲವೂ ಹೌದು ಮತ್ತು ಅಲ್ಲ. ನಾನು ಹೌದು ಮತ್ತು ಅಲ್ಲ ಎಂಬ ಎರಡೂ ವಿರೋಧಿ ನೆಲೆಯ ಶಬ್ದಗಳನ್ನು ಏಕಕಾಲಕ್ಕೆ ಬಳಸುವ ಮೂಲಕ ವರ್ತಮಾನದ ಸಂಕೀರ್ಣಾತಿ ಸಂಕೀರ್ಣ ಬದುಕಿನ ದಿಗ್ದರ್ಶನ ಮಾಡಿಸುವ ಪ್ರಯತ್ನಕ್ಕಿಳಿಯುತ್ತೇನೆ.
ಇಂದು ನಮ್ಮ ಬದುಕು ಹೌದು ಮತ್ತು ಅಲ್ಲ ಎರಡರ ನಡುವಿನ ಬಿಕ್ಕಟ್ಟಿನಲ್ಲಿ ಹೊಸದೊಂದು ಸತ್ಯಕ್ಕೆ (ಸತ್ಯ ಎಂಬುದು ಕೂಡ ಸಾಪೇಕ್ಷ ಎಂಬ ತಿಳುವಳಿಕೆಯೊಂದಿಗೆ) ತೆರೆದುಕೊಳ್ಳುವ ಧಾವಂತದಲ್ಲಿದೆ. ಈ ಸತ್ಯವಾದರೂ ಹಲವು ಸುಳ್ಳು ಭ್ರಮೆಗಳೊಂದಿಗೆ ಕಳ್ಳೆಮಿಳ್ಳೆಯಾಡಿಸುತ್ತಿದೆ, ಬದುಕು ಆಟವಾದಂತೆ ಆಡುತ್ತಿರುವವರ ಮನಸ್ಸುಗಳಲ್ಲಿ ಹಿರ್ಸ್, ಹ್ಯಾವ, ಜಿದ್ದುಗಳು ಹೆಚ್ಚಾಗುತ್ತಿವೆ. ಈ ಜಿದ್ದು, ಹಿರ್ಸ್, ಹ್ಯಾವಗಳನ್ನು ನಕಾರಾತ್ಮಕವಾಗಿಯೇ ಚರ್ಚಿಸಬೇಕಾಗಿಲ್ಲ. ಏಕೆಂದರೆ ಬದುಕೇ ಅಂಥದ್ದು. ಅದು ಕೇವಲ ನಕಾರಕ್ಕೋ ಅಥವಾ ಕೇವಲ ಸಕಾರಕ್ಕೋ ಬಿಚ್ಚಿಕೊಳ್ಳುವಂಥದ್ದಲ್ಲ. ಹೀಗಿರುವಾಗ ಬದುಕಿಗೆ ನಾವು ಏನೆಲ್ಲ ಪರಿಭಾಷೆಗಳನ್ನು ಕಟ್ಟಿಕೊಂಡು ನಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಂಡು ಹೊರಟಿರುವಾಗಲೂ ಅದು ಅವುಗಳಿಂದ ಜಿಗಿದು ನಿತಾಂತ ನಗ್ನವಾಗಿ ಅಣಕಿಸುತ್ತದೆ. ಆದ್ದರಿಂದ ಅದನ್ನು ನಿರಪೇಕ್ಷ ನೆಲೆಯಲ್ಲಿ ಗ್ರಹಿಸುತ್ತಿರುವಾಗಲೂ ನಮ್ಮ ಸಂದರ್ಭಗಳಿಗೆ ಅಂದರೆ ನಾವು ಬದುಕಿರುವ ಸ್ಥಿತಿಗತಿಯ ಆಗುಹೋಗುಗಳೊಂದಿಗೆ ಸಂವೇದಿಸಿಕೊಳ್ಳುವ ಜರೂರಿ ಇದ್ದೇ ಇರುತ್ತದೆ. ಈ ಜರೂರಿಯ ಹತ್ತಾರು ಹುಡುಕಾಟಗಳಲ್ಲಿ ಸಂಸ್ಕೃತಿ ಚಿಂತನೆಯು ಬಹು ಮುಖ್ಯವಾದುದು. ಇಂಥ ಸಂಸ್ಕೃತಿ ಚಿಂತನೆಯ ಬಹುಮುಖ್ಯ ನೆಲೆಗಳೆನಿಸಿಕೊಂಡಿರುವ ಸಾಹಿತ್ಯ ಸಮ್ಮೇಳನಗಳು ಬದುಕನ್ನು ಹೊಸ ಪ್ರಮೇಯಗಳಿಗೆ ಒಡ್ಡಿಕೊಳ್ಳುವ “ಹಿಕಮತ್ತು”ಗಳಾಗಬೇಕಿದೆ. “ಹಿಕಮತ್ತು” ಎಂಬುದನ್ನು ನಾನು ಈ ಹೊತ್ತು ಕನ್ನಡ ಮಾತನಾಡುವ ಮತ್ತು ಕನ್ನಡವನ್ನೆ ಬದುಕುವ ಒಟ್ಟು ಜನಾಂಗದ ಬಾಳ್ವೆಯ ಪ್ರಶ್ನೆಯಾಗಿ ನಿರ್ವಚಿಸಿಕೊಂಡಿದ್ದೇನೆ.
ಕನ್ನಡ ನುಡಿ ಚಿಂತನೆ ಕರ್ನಾಟಕದ ನಿರ್ದಿಷ್ಟ ಭೌಗೋಲಿಕ ಪ್ರದೇಶದಲ್ಲಿ ವಾಸಿಸುತ್ತಿರುವವರ ಬಾಳ್ವೆಯ ಪ್ರಶ್ನೆ ಮಾತ್ರವಲ್ಲ; ಕನ್ನಡ ಮಾತಾಡುವವರು ಎಲ್ಲೆಲ್ಲಿ ವಾಸಿಸುತ್ತಿರುವರೋ ಅವರೆಲ್ಲರೂ ಹಿಡಿ ನೆಮ್ಮದಿಯಿಂದ ಬದುಕುವಂಥ ವಾತಾವರಣ ಕಲ್ಪಿಸುವ ರಾಜಕೀಯ ಇಚ್ಛಾಶಕ್ತಿಯ ಚರ್ಚೆವರೆಗೂ ಇದರ ಅರ್ಥವನ್ನು ವಿಸ್ತರಿಸಿಕೊಳ್ಳಬೇಕಿದೆ.
ಇಂಥ ಚರ್ಚೆಯೊಂದನ್ನು ಚಾಲನೆಗೊಳಿಸುವಂಥ “ಅಧ್ಯಕ್ಷ ಸ್ಥಾನ” ಒದಗಿಸಿಕೊಟ್ಟ ಈ ಇಳಿವಯಸ್ಸಿನಲ್ಲಿ ಬೌದ್ಧಿಕ ಹರೆಯ ಉಕ್ಕುವಂತೆ ಹಾರೈಸಿದ ಸಮಸ್ತ ಕನ್ನಡಿಗರಿಗೂ ಭಾಲ್ಕಿಯ ಚನ್ನಬಸವ ಪಟ್ಟದ್ದೇವರ ವೇದಿಕೆ ಮೂಲಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
ಕನ್ನಡ ಮಣ್ಣಿನ ಚೈತನ್ಯ, ವಚನಕಾರರ ಭೂಮಿಯ ಬೆವರ ಸೊನೆಯ ಮಾನವತಾವಾದಿ ಭಾಲ್ಕಿಯ ಚನ್ನಬಸವ ಪಟ್ಟದ್ದೇವರ ಸ್ಮೃತಿ ಜ್ಯೋತಿಯೊಂದಿಗೆ ಅಂಕಿತವಾಗಿರುವ ಈ ವೇದಿಕೆಯಿಂದ ನಾನು, ಅವರ ಕರುಣೆಯ ಕಂದ, ಸಮ್ಮೇಳನ ಅಧ್ಯಕ್ಷನಾಗಿ ಮತನಾಡುತ್ತಿರುವದು ನನಗಂತೂ ಅನಿರ್ವಚನೀಯ ಆನಂದ ನೀಡುತ್ತಿದೆ. ಪಟ್ಟದ್ದೇವರು, ನಾನು ಮತ್ತು ಹೈದ್ರಾಬದ ಕರ್ನಾಟಕ ಪ್ರದೇಶವೆಂಬ ಮೂರು ಭಾವ ಘಟಕಗಳ ಸುತ್ತ ಈ ಅರವತ್ತು, ಎಪ್ಪತ್ತು ವರ್ಷಗಳ ಸಂಘರ್ಷಮಯ ಪರಂಪರೆ ಇದೆ. ಕರುಳು ಬಳ್ಳಿಯ ಅಪ್ಯಾಯಮಾನ ನಂಟಿದೆ. ಈ ನಾಡಿನ ಬದುಕು, ಬದುಕೇ ಭಾಷೆಯಾದ ಕನ್ನಡತನದ ಹೋರಾಟದ ಗಾಥೆಯಿದೆ. ಕನ್ನಡವೆಂಬ ಭಾಷಿಕ ಹತ್ಯಾರುಗಳು ಕಾಲಕಾಲಕ್ಕೆ ಎದುರಿಸಿದ ಸವಾಲುಗಳು, ಅನ್ಯಭಾಷಿಕ ಸಮುದಾಯದೊಂದಿಗೆ ನಡೆಸಿದ ಸಂವಾದಗಳು, ಅನ್ಯಸಂಸ್ಕೃತಿಯ ಮುಖಾಮುಖಿಗಳು ಹೀಗೆ ಏನೆಲ್ಲ ಭಾವಸಂವೇದಿ ಪಲಕುಗಳು ಒಂದೊಂದಾಗಿ ನನ್ನೊಳಗೆ ಬಿಚ್ಚಿಕೊಳ್ಳುತ್ತವೆ. ಶರೀರವೆಂಬ ಈ ಎಲವು ತೊಗಲಿನ ಹಂದರಕ್ಕೆ ಮುಪ್ಪೆಂಬ ಪ್ರಾಕೃತಿಕ ಅವಸ್ಥೆ ಅಂಟಿಕೊಂಡಿದ್ದರೂ ಮನಸಿನ ಹರೆಯಕ್ಕೆ ಬದ್ಧನಾಗಿರುವ ನನಗೆ ಕಳೆದ ಕ್ಷಣಗಳುಹಚ್ಚಹಸುರಾಗಿ ಉಸಿರ ಬಳ್ಳಿಗೆ ತಿದಿಯೊತ್ತುತ್ತಿವೆಯಾದ್ದರಿಂದ ತುಸುವಾದರೂ ನಿಮ್ಮೊಂದಿಗೆ ಹಂಚಿಕೊಳ್ಳದೇ ಇರಲು ಸಾಧ್ಯವಾಗದು. ಹಾಗೆ ನೋಡಿದರೆ ನಾನು ಇತಿಹಾಸದ ಕುರುಡು ಆರಾಧಕನೂ ಅಲ್ಲ. ಅಥವಾ ಇತಿಹಾಸದ ತುಚ್ಛೀಕರಣದ ಮೂಲಕವೇ ವರ್ತಮಾನದ ಕಿರೀಟಕ್ಕೆ ಗರಿ ಮೂಡಿಸಿಕೊಳ್ಳಬೇಕೆಂಬ ಹಂಬಲವುಳ್ಳವನೂ ಅಲ್ಲ. ಇತಿಹಾಸದ ಕಸಬರಿಗೆಯಿಂದ ವರ್ತಮಾನದ ಅಂಗಳವನ್ನು ಗುಡಿಸುವ ಮೂಲಕವೇ ಭವಿಷ್ಯವನ್ನು ಸ್ವಚ್ಛವಾಗಿಡಬೇಕೆಂಬ ನಂಬಿಕೆಯುಳ್ಳವನು ನಾನು.

ಧರಿನಾಡ ಸಾಹಿತ್ಯ ಸಿರಿ*
ಎರಡು ಸಾವಿರ ವರ್ಷಗಳಿಗೂ ಮಿಕ್ಕು ದೀರ್ಘ ಇತಿಹಾಸವುಳ್ಳ ಕನ್ನಡ ಸಾಹಿತ್ಯವು ಜಾಗತಿಕ ಸಾಹಿತ್ಯ ಕ್ಷೇತ್ರಗಳೊಂದಿಗೆ ಗುರುತಿಸಿಕೊಳ್ಳುವ ತಾಕತ್ತು ಹೊಂದಿದೆ. ಸಂಕೀರ್ಣ ಸಾಮಾಜಿಕ ವ್ಯವಸ್ಥೆಯ ಪ್ರತಿನಿಧಿತ್ವವನ್ನು ನಿಭಾಯಿಸಿಕೊಂಡು ಬಂದಿರುವ ಈ ಸಾಹಿತ್ಯ ಹಲವು ವೈವಿಧ್ಯ ಮತ್ತು ವೈಶಿಷ್ಟ್ಯಗಳನ್ನು ಮೈಗೂಡಿಸಿಕೊಂಡಿದೆ. ಹಾಗೆ ನೋಡಿದರೆ ಒಟ್ಟು ಕನ್ನಡ ಸಾಹಿತ್ಯವೆಂದು ಇಂದು ಗುರುತಿಸಿಕೊಳ್ಳುತ್ತಿರುವ ಮೊತ್ತದಲ್ಲಿ ಹಿರಿಯ ಪಾಲು ನಾವು ನಿಂತ ನೆಲದ ಸೃಷ್ಟಿಯೇ ಆಗಿದೆ. ಅಂದರೆ ಹೈದ್ರಾಬಾದ ಕರ್ನಾಟಕವೆಂದು ಗುರುತಿಸಿಕೊಂಡಿರುವ ಬೀದರ, ಗುಲಬರ್ಗಾ, ರಾಯಚೂರ, ಕೊಪ್ಪಳ ಜಿಲ್ಲೆಗಳ ಹರಹಿನಲ್ಲಿ ಸೃಷ್ಟಿಯಾದದ್ದು ಸ್ಮರಣೀಯ ಸಂಗತಿಯಾಗಿದೆ.
ಶ್ರೀವಿಜಯ ಮತ್ತು ನೃಪತುಂಗರ ಹೆಸರುಗಳೊಂದಿಗೆ ಜೋಡಿಸಿಕೊಂಡಿರುವ ‘ಕವಿರಾಜಮಾರ್ಗ’ ಮಾನ್ಯಖೇಟ (ಗುಲಬರ್ಗಾ ಜಿಲ್ಲೆಯ ಮಳಖೇಡ)ದಲ್ಲಿ ರಚನೆಯಗಿದೆ. ಇತ್ತೀಚೆಗೆ ಹಂಪ ನಾಗರಾಜಯ್ಯನವರು ತಮ್ಮ ಸಂಶೋಧನೆಯ ಮೂಲಕ ಕನ್ನಡದ ಮೊಟ್ಟ ಮೊದಲ ಉಪಲಬ್ಧ ಕೃತಿ ಎಂದು ಪ್ರತಿಪಾದಿಸುತ್ತಿರುವ “ವಡ್ಡಾರಾಧನೆ”ಯು ಬೇದರ ಜಿಲ್ಲೆಯ ಹಳ್ಳಿಖೇಡ “ಬಿ” ಗ್ರಾಮದಲ್ಲಿ ಸೃಷ್ಟಿಯಗಿದೆ. “ಮಾನವ ಜಾತಿ ತಾನೊಂದೆ ವಲಂ” ಎಂದು ಹೇಳಿದ ಆದಿಕವಿ ಪಂಪ ಬೀದರ ಸೀಮೆಗೆ ಸಮೀಪವಾಗಿರುವ ಕರೀಮನಗರ ಜಿಲ್ಲೆಯ ಇಂದಿನ ವೇಮುಲವಾಡನ್ನು ಆಳುತ್ತಿದ್ದ ಚಾಲುಕ್ಯ ವಂಶದ ಎರಡನೇ ಅರಿಕೇಸರಿಯ ಆಸ್ಥಾನದಲ್ಲಿದ್ದುಕೊಂಡು ಕೃತಿ ರಚಿಸಿದನು. ಕರೀಮನಗರ ಜಿಲ್ಲೆ ಆ ಹೊತ್ತು ಕನ್ನಡ ನಾಡಿನ ಭಾಗವಾಗಿತ್ತು. ಶಕ್ತಿಕವಿ ರನ್ನ ತರ್ದವಾಡಿ ನಾಡಿನ ಮುಧೋಳದಲ್ಲಿ ಜನಿಸಿ, ಶ್ರವಣಬೆಳ್ಗೊಳದಲ್ಲಿ ಅಧ್ಯಯನ ಮಾಡಿದವನದರೂ ಆಶ್ರಯವನ್ನು ಅರಸಿ ಬಂದದ್ದು ಕಲ್ಯಾಣ ಚಾಲುಕ್ಯ ಚಕ್ರವರ್ತಿ ಎರಡನೇ ತೈಲಪನ ಬಳಿಗೆ. ಇಮ್ಮಡಿ ತೈಲಪನ ಮಗ ಸತ್ಯಾಶ್ರಯ ಇರಿವ ಬೆಡಂಗನನ್ನು ತನ್ನ ಕಥಾನಾಯಕ ಭೀಮನೊಂದಿಗೆ ಸಮೀಕರಿಸಿ ಕಾವ್ಯ ಬರೆದ ಕವಿರತ್ನ ರನ್ನ ಈ ಭಾಗದ ಬದುಕನ್ನು ಅನಾವರಣಗೊಳಿಸುವ ಕೆಲಸ ಮಾಡಿದ್ದಾನೆ. ಎಂತಲೇ ಕರ್ನಾಟಕದ ಇತರ ಯಾವ ಭಾಗದಲ್ಲಿ ಎಲ್ಲೂ ಬಳಕೆಯಲ್ಲಿಲ್ಲದ, ಅಥವಾ ಪರಿಚಯವೂ ಇರದ ಹತ್ತಾರು ಶಬ್ದಗಳನ್ನು ಪಂಪ, ರನ್ನರು ಬಳಸಿದ್ದಾರೆ. ಅವುಗಳಲ್ಲನೇಕ ಪದರೂಪಗಳು ಇವತ್ತಿಗೂ ಬೀದರ ಭಾಗದಲ್ಲಿ ಬಳಕೆಯಲ್ಲಿರುವುದನ್ನು ಕಾಣಬಹುದು.
“ಪಂಚತಂತ್ರ” ಬರೆದ ದುರ್ಗಸಿಂಹ ಚಾಲುಕ್ಯ ಜಯಸಿಂಹನಲ್ಲಿ ಸಂಧಿವಿಗ್ರಹಿಯಾಗಿದ್ದರೆ, ಉತ್ತರ ಭಾರತದಿಂದ ಬಂದ ಪುಷ್ಪದಂತ ಕವಿ ರಾಷ್ಟ್ರಕೂಟ ಮುಮ್ಮಡಿ ಕೃಷ್ಣನಲ್ಲಿ ಆಶ್ರಯ ಪಡೆದುಕೊಂಡು ಇದೇ ಮಣ್ಣಿನ ಉಪ್ಪಿನ ಋಣದಲ್ಲಿ ತ್ರಿಷಷ್ಟಿ ಮಹಾಪುರುಷ ‘ಗುಣಾಲಂಕಾರ’, ‘ಯಶೋಧರ ಚರಿತೆ’, ‘ನಾಗಕುಮಾರ ಚರಿತೆ’ಗಳನ್ನು ಅಪಭ್ರಂಶುವಿನಲ್ಲಿ ರಚಿಸಿದ್ದಾನೆ. ಇದೇ ಮೂರನೇ ಕೃಷ್ಣನ ಆಸ್ಥಾನದಲ್ಲಿದ್ದುಕೊಂಡು “ಶಾಂತಿ ಪುರಾಣ” “ಭುವನೈಕ್ಯ ರಾಮಾಭ್ಯುಧಯ” ಕೃತಿಗಳನ್ನು ಬರೆದ ಪೊನ್ನ ಕವಿಯು ನಮ್ಮ ನೆಲದವನೆ. “ಕವಿಚೂತವನ ಚೈತ್ರ” ಬಿರುದಾಂಕಿತನಾದ ಲಕ್ಷ್ಮೀಶ ಗುಲಬರ್ಗಾ ಜಿಲ್ಲೆಯ ಸುರಪೂರ ತಾಲೂಕಿನ ದೇವಪೂರದವನು.
ಭರತದ ಉತ್ತರ ದಿಕ್ಕಿನಿಂದ ಬರುವವರಿಗೆ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ‘ಕಲ್ಯಾಣ’, ಚಾಲುಕ್ಯ ಚಕ್ರವರ್ತಿಗಳ ಕರ್ಮಭೂಮಿಯಾದಂತೆ ಕನ್ನಡ ನಾಡವರ ಕಣಕಣದಲ್ಲೂ ಅರ್ಥವಂತಿಕೆ ತುಂಬಿದ ಧರಿನಾಡು ಕೂಡಾ. ಚಾಲುಕ್ಯ ಚಕ್ರವರ್ತಿ ೬ನೇ ವಿಕ್ರಮಾಡಿತ್ಯನ ಕಾಲದಲ್ಲಿ ಕಲ್ಯಾಣವು ರಾಜಕೀಯ, ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಸಾಮಾಜಿಕವಗಿ ಜಗತ್ತಿನ ಗಮನ ಸೆಳೆದಿರುವದುಂಟು. ಕ್ರಿ.ಶ. ೧೦೬೩ ರಲ್ಲಿ ಕಾಶ್ಮೀರದಿಂದ ಬಂದ ಬಿಲ್ಹಣನು ಸಂಸ್ಕೃತದಲ್ಲಿ “ವಿಕ್ರಮಾಂಕದೇವಚರಿತಂ” ಕೃತಿ ರಚಿಸಿದರೆ, ಇದೇ ಅವಧಿಯಲ್ಲಿ ಬೀದರ ಜಿಲ್ಲೆಯ ಮಾಸಿಮಡು ಗ್ರಾಮದಲ್ಲಿ ಜನಿಸಿ ಗುಲಬರ್ಗಾದ ಮರತೂರಿನಲ್ಲಿ ನೆಲೆಸಿದ ವಿಜ್ಞಾನೇಶ್ವರನು ನ್ಯಾಯಶಾಸ್ತ್ರ ಕುರಿತು ‘ಮಿತಾಕ್ಷರ’ ರಚಿಸಿದ್ದಾನೆ. ೬ನೇ ವಿಕ್ರಮಾದಿತ್ಯನ ಮಗನಾದ ಮೂರನೇ ಸೋಮೇಶ್ವರನು ಸ್ವಂತ ಕವಿಯು, ಪಂಡಿತನು ಆಗಿದ್ದು “ಮಾನಸೋಲ್ಲಾಸ”(ಅಭಿಲಷಿತಾರ್ಥ ಚಿಂತಾಮಣಿ) ಎಂಬ ವಿಶ್ವಕೋಶವನ್ನು ಕಾಣಿಕೆಯಾಗಿ ಕೊಟ್ಟಿದ್ದಾನೆ.
ಆದ್ಯ ವಚನಕಾರನೆಂದು ಗುರುತಿಸಿಕೊಳ್ಳುತ್ತಿರುವ ಜೇಡರ ದಾಸಿಮಯ್ಯ ಗುಲಬರ್ಗಾ ಜಿಲ್ಲೆಯ ಸುರಪೂರ ಬಳಿಯಿರುವ ಮುದೇನೂರಿನ ನಿವಸಿ. ಅವನ ಹೆಂಡತಿ ಶಿವಶರಣೆ ದುಗ್ಗಳೆ ಗುಲಬರ್ಗಾದ ಗೊಬ್ಬೂರಿನವಳು. ಕೆಂಭಾವಿ ಭೋಗಣ್ಣ, ಸಗರದ ಬ್ರಹ್ಮಯ್ಯ, ಈ ಪಟ್ಟಿ ತುಂಬಾ ಬೆಳೆಯುತ್ತದೆ. ಕನ್ನಡ ಸಾಹಿತ್ಯದಲ್ಲಿ ‘ವಚನ ಸಾಹಿತ್ಯ’ವೆಂಬ ಹೊಸ ರೂಪವೊಂದು ಆ ಹೊತ್ತಿನ ಸಮಾಜೋಧಾರ್ಮಿಕ ಸಂಘರ್ಷದಲ್ಲಿ ಮೈದಾಳಿ ನಿಂತದ್ದು ಕೂಡಾ ಇದೇ ನೆಲದಲ್ಲಿ. ಬಸವ, ಅಲ್ಲಮ, ಅಕ್ಕಮಹಾದೇವಿ, ಮುಕ್ತಾಯಿ, ನೀಲಮ್ಮ, ಹರಳಯ್ಯ, ಮಧುವರಸ ಮುಂತಾದ ಶರಣಸಂದೋಹದಲ್ಲಿ ಕರ್ನಾಟಕದ ಬದುಕು ಸಮೂಲವಾಗಿ ಚಾತುರ್ವರ್ಣ್ಯವನ್ನು ಧಿಕ್ಕರಿಸಿ ನಿಂತದ್ದು ಜಗತ್ತಿಗೆ ಇಂದಿಗೂ ಮಾದರಿಯಾಗಿದೆ. ವರ್ಗ, ವರ್ಣ, ಲಿಂಗ, ಜಾತಿಯ ವೈಷಮ್ಯಗಳನ್ನು ಕಿತ್ತೊಗೆಯಲು ಕ್ರಾಂತಿಯ ಕಹಳೆ ಮೊಳಗಿಸಿದ ಹೋರಾಟದ ನೆಲವೇ ಇದು. ಹರಳಯ್ಯ ಮಧುವರಸರ ಮಕ್ಕಳ ವಿಲೋಮ ವಿವಾಹವು ವರ್ಣಸಂಕರದ ಕಿಚ್ಚು ಹಚ್ಚಿ ತ್ಯಾಗ ಬಲಿದಾನಗಳ ಮೂಲಕವೇ ಬದಲಾವಣೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದು ಇಲ್ಲಿಯೇ. ನಾಡಿನ ಮೂಲೆ ಮೂಲೆಗಳಿಂದ ಬಂದ ಅಸಂಖ್ಯಾತ ದಮನಿತರು ಸಮಾನತೆಯ ಬೆಳಕ ಬತ್ತಿಯನ್ನು ಕಣ್ಣಲ್ಲಿ ಹೊತ್ತಿಸಿಕೊಂಡು ಕಲ್ಯಾಣದ ಕೆಂಪು ನೆಲದಲ್ಲಿ ಉರಿಯುಂಡ ಕರ್ಪೂರವಾಗಿದ್ದಾರೆ. ಕ್ರಾಂತಿಗೆ ರಕ್ತ ಬಸಿದ ಅವರ ಕೆಂಪಿನ ಕಂಪು ಈ ಮಣ್ಣಿನ ಹುಡಿಯೊಳಗೆ ಗುಲಾಲು ಬುಕೀಟುಗಳ ಘಾಟು ಎಬ್ಬಿಸುವಂತಿದೆ.
ಕನ್ನಡ ನುಡಿಯಮ್ಮನಿಗೆ ನಮ್ಮ ಕವಿಗಳು ವರ್ಣಿಸಿರುವಂತೆ ಎರಡು ಸಿರಿಕಳಶಗಳು ತಾನೇ. ಒಂದು ವಚನವಾದರೆ ಇನ್ನೊಂದು ಕೀರ್ತನೆ. ೨ನೇ ಘಟ್ಟದಲ್ಲಿ ಕೀರ್ತನೆಗಳ ಮುಖಾಂತರ ಭವತುಂಬಿ, ಮನತುಂಬಿ ಹಡಿ, ಆಡಿ ದಣಿದ ದಾಸರು ರಾಯಚೂರ ಎರೆಮಣ್ಣಿನ ಕಸುವುಳ್ಳ ಸಂತಾನ. ತತ್ವಪದ ಸಾಹಿತ್ಯಕ್ಕಂತೂ ಕೃಷ್ಣೆ ಭೇಮೆಯರ ಮಧ್ಯದ ಸಗರನಾಡು ಟಂಕಸಾಲೆಯೇ ಸರಿ. ಹೀಗೆ ಇದನ್ನು ಬೆಳೆಸುತ್ತ ಹೋಗುವುದಾದರೆ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯನ್ನೇ ನಾನು ಪುನರ್ ಸಾದರ ಪಡಿಸಬೇಕಾದೀತು. ಈ ಮೇಲಿನ ಪಕ್ಷನೋಟದ ಮೂಲಕ ಒಟ್ಟು ಕನ್ನಡ ಸಾಹಿತ್ಯ ಮತ್ತು ಅದಕ್ಕೆ ವಸ್ತುವಾಗಿರುವ ಬದುಕು ಈ ಭಾಗದವರಿಂದಲೇ ಹದಗೊಂಡದ್ದು ಎಂಬುದನ್ನು ನಾನು ಮಗುದೊಮ್ಮೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದೇನೆ. ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿಯೂ ದಲಿತ-ಬಂಡಾಯ ಸಾಹಿತ್ಯದ ಕ್ರಾಂತಿ ಕಹಳೆ ಮೊಳಗಿದ್ದು ಈ ಭಾಗದಿಂದಲೆ ಎಂಬುದು ಗಮನಿಸಬೇಕು.
ಈ ಎಲ್ಲ ಹಿರಿಮೆ ಗರಿಮೆಗಳೊಂದಿಗೆ ಹಲವು ನೋವುಗಳನ್ನು ಈ ಭಾಗ ತನ್ನೊಡಲೊಳಗೆ ಕಾಪಿಟ್ಟುಕೊಂಡಿದೆ. ಅಪ್ಪಟ ಕನ್ನಡವನ್ನೆ ಗಟ್ಟಿಗೊಳಿಸುತ್ತ ಕನ್ನಡತನವನ್ನೆ ಹಾಸುಂಡು ಬದುಕುತ್ತಿರುವಾಗಲೂ ಈ ನೆಲ ಹಲವು ಭಾಷಿಕ ದಾಳಿಗಳನ್ನು ಎದುರಿಸಿದೆ. ಗಡಿನಾಡ ಸೀಮೆಗಳಾದ ಆಂಧ್ರ, ಮಹಾರಾಷ್ಟ್ರ ನಾಡುಗಳಿಂದ ಒತ್ತುವರಿ ಸಹಿಸಿಕೊಳ್ಳುತ್ತಲೇ ತನ್ನತನ ಉಳಿಸಿಕೊಳ್ಳಲು ಇಲ್ಲಿನ ಅಚ್ಚಕನ್ನಡದ ಬೇಸಾಯಗಾರರು ಅವಿರತ ಹೋರಾಟ ಮಾಡಿದ್ದಾರೆ. ದೇಶಿಯ ಮತ್ತು ಅನ್ಯದೇಶಿಯ ಪ್ರಭುತ್ವಗಳು ದಾಳಿ ಮಾಡಿದಾಗ ಇಲ್ಲಿಯ ಜನಸಾಮಾನ್ಯರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸೌಹಾರ್ದ ಪರಂಪರೆಯನ್ನೇ ರೋಗ ನಿರೋಧಕ ಶಕ್ತಿಯಾಗಿ ಬಳಸಿಕೊಂಡಿದ್ದಾರೆ. ಕನ್ನಡದ ಮೇಲೆ ಕುತ್ತು ಬಂದಾಗ ಸರ್ವಸ್ವ ಮುಡುಪಿಟ್ಟು ಹೋರಾಟ ಮಾಡಿದ ಕೆಲವೊಂದು ಮಹನೀಯರನ್ನು ಇಲ್ಲಿ ಸ್ಮರಿಸಲೇಬೇಕು. ಏಕೆಂದರೆ ಕನ್ನಡ ಭಾಷೆಯ ಉಳಿವಿಗಾಗಿ ಈ ಭಾಗದವರು ಮಾಡಿದಷ್ಟು ಹೋರಾಟ ಬೇರೆ ಯಾವ ಭಾಗದವರೂ ಮಾಡಿಲ್ಲ ಎಂಬ ಮಾತು ಉತ್ಪ್ರೇಕ್ಷೆಯಲ್ಲ.
ರಾಯಚೂರಿನ ತಾರಾನಾಥರು, ಕಲಬುರ್ಗಿಯ ದೊಡ್ಡಪ್ಪ ಅಪ್ಪ, ದತ್ತಾತ್ರೇಯರಾವ ಹೇರೂರು, ಬೀದರಿನ ಪ್ರಭುರಾವ ಕಂಬಳಿವಲೆ, ಹೊರಗೆ ಉರ್ದು ಬೋರ್ಡು ಹಾಕಿ ಒಳಗೆ ಕನ್ನಡ ಕಲಿಸಿ ಆಳರಸರ ಕೆಂಗಣ್ಣಿಗೆ ಗುರಿಯಾದ ಭಾಲ್ಕಿಯ ಚೆನ್ನಬಸವ ಪಟ್ಟದ್ದೇವರು, ಆರ್.ವಿ.ಬಿಡಪ್ ಈ ಮುಂತಾದವರು ಕನ್ನಡಕ್ಕಾಗಿ ಮಾಡಿದ ಹೋರಾಟಗಳ ದೊಡ್ಡ ಇತಿಹಾಸವೇ ಇದೆ. ಆದರೆ ಈ ಸಂಗತಿಗಳು ಚಾರಿತ್ರಿಕ ಘಟ್ಟಗಳಲ್ಲಿ ದಾಖಲಾಗದೆ ಉಳಿದುಕೊಂಡಿವೆ. ಬರುಬರುತ್ತ ಇವೆಲ್ಲ ಸಂಪೂರ್ಣ ವಿಸ್ಮೃತಿಗೆ ಸರಿದುಹೋಗುವ ಅಪಾಯವೂ ಇಲ್ಲದಿಲ್ಲ. ಆದ್ದರಿಂದ ಮುಂದಿನ ಪೀಳಿಗೆಯವರು ಇಂಥ ಅಪರೂಪದ ಚಾರಿತ್ರಿಕ ಸ್ಫೂರ್ತಿಗಳನ್ನು ದಾಳಲಿಸುವುದಷ್ಟೇ ಅಲ್ಲ; ಇವುಗಳ ಭದ್ರ ಬುನಾದಿಯ ಮೇಲೆ ಭವಿಷ್ಯದ ಕನ್ನಡ ಕಟ್ಟಬೇಕಿದೆ.

ಕರುನಾಡ ಸಾಹಿತ್ಯ ಸಿರಿ

ಭಾರತ ಅತ್ಯಂತ ಪ್ರಾಚೀನ ಕಾಲದಿಂದಲೂ ಕೃಷಿಕೃತ್ಯವನ್ನೆ ಅಭಿವೃದ್ಧಿಪಡಿಸಿಕೊಂಡು ಬಂದಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇವರು ಕೃಷಿಯ ತೊಟ್ಟಿಲಾದ ಭೂಮಿ ಮತ್ತು ನೀರನ್ನು ಆರಾಧಿಸಿದ್ದಾರೆ. ಶಿವಸಂಸ್ಕೃತಿಯ ದಟ್ಟ ಕುರುಹುಗಳು ಹರಪ್ಪ ಮಹೊಂಜೊದಾರ ಸಂಸ್ಕೃತಿಯಲ್ಲಿ ಕಾಣಿಸಿಕೊಂಡಿರುವದಕ್ಕೂ ಒಕ್ಕಲುತನವೇ ಆಧಾರವಾಗಿದೆ. ಶಿವನ ಪ್ರತೀಕವಾದ “ಶಿವಲಿಂಗ”, ಒಕ್ಕಲುತನಕ್ಕೆ ಆಧಾರವಾದ “ನಂದಿ”, ಜೀವನಶಕ್ತಿಯಾದ ನೀರು (ಗಂಗೆ). ಅದರೊಟ್ಟಿಗೆ ಉಳಿದೆಲ್ಲ ಪಶು, ಪಕ್ಷಿ, ಕೃಷಿ ಸಲಕರಣಗಳಾದ ರೆಂಟೆ, ಕುಂಟೆ, ನೇಗಿಲು, ಋತುಮಾನಗಳು, ಋತುಗಳ ವಿದ್ಯಮಾನಗಳನ್ನು ಪ್ರತಿನಿಧಿಸುವ ಹಬ್ಬ ಹರಿದಿನಗಳು ಹೀಗೆ ಇದೊಂದು ಸ್ವಾಯತ್ತ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಂಥ ದೇಶ. ಇಂಥ ಭಾರತ ಜನನಿಯ ತನುಜಾತೆಯಾದ ಕರ್ನಾಟಕ ಮಾತೆಯೂ ಪುಟ್ಟ ಭಾರತಿಯೇ ಸರಿ.
ಹೀಗಾಗಿಯೇ ಭಾರತದ ಎಲ್ಲ ಧರ್ಮ, ಮತ ಪಂಥಗಳು, ವಿಚಾರಗಳು, ದಾರ್ಶನಿಕ ನಿಲುವುಗಳು, ಭಾಷಾ ಪರಿವಾರಗಳನ್ನು ಒಗ್ಗೂಡಿಸಿಕೊಂಡು ಕರ್ನಾಟಕ ಸೌಹಾರ್ದತೆಯ ತೊಟ್ಟಿಲಾಗಿ ಬಾಳು ಹೂಡಿಕೊಂಡು ಬಂದಿದೆ. ತತ್ಫಲವಾಗಿಯೇ ಭಾಷಾ ಬಾಂಧವ್ಯ, ದಾರ್ಶನಿಕ ಸಂಕೀರ್ಣತೆ, ಪ್ರಾದೇಶಿಕ ಸಾಂರಸ್ಯ ಪರಸ್ಪರ ಕೊಡುಕೊಳ್ಳುವಿಕೆ ಇಲ್ಲಿ ರೂಢಿಯಲ್ಲಿದೆ. ನೆರೆಯ ಭಾಷಿಕರೊಂದಿಗೆ ತೀರ ಆತ್ಮೀಯವಾಗಿ ಬಾಳುತ್ತಿರುವವರು ನಾವು. ಇತ್ತೀಚೆಗೆ ಕೋಮುಶಕ್ತಿಗಳು, ಭಾಷಾಂಧರು ನಮ್ಮಗಳ ನಡುವೆ ಭಾವನಾತ್ಮಕ ಒಡಕು ಹುಟ್ಟಿಸಿ ಪರಸ್ಪರ ಶಾಂತಿ ಕದಡುವಂತೆ ಹುನ್ನಾರಗಳನ್ನು ಹೂಡಿದಾಗಲೂ ಜನತೆ ಅದಕ್ಕೆ ಸೊಪ್ಪು ಹಾಕಲಿಲ್ಲ. ಹೀಗೆ ಕನ್ನಡಿಗರು ಇತರ ಜನವಿರೋಧಿ ಶಕ್ತಿಗಳಿಗೆ ಮಣಿಯದೆ ಉಳಿದುಕೊಂಡು ಬರುತ್ತಿರುವದಕ್ಕೆ ದೀರ್ಘ ಚಾರಿತ್ರಿಕ ಸೌಹಾರ್ದ ಪರಂಪರೆಯೇ ಕಾರಣವಾಗಿದೆ ಎಂಬುದನ್ನು ಪರಾಂಬರಿಸಬೇಕು. ಕನ್ನಡ ನಾಡು-ನುಡಿಯ ಇತಿಹಾಸದತ್ತ ಒಂದು ಪುಟ್ಟ ನೋಟ ಹರಿಸಿದರೂ ಸಾಕು, ಈ ಮಾತು ಮನವರಿಕೆಯಾಗದಿರದು. ಭಾಷಿಕ ಚರಿತ್ರೆಯ ಪಲಕುಗಳನ್ನು ಒಂದೊಂದಾಗಿ ಬಿಚ್ಚುತ್ತ ಹೋದರೂ ಸರಿಯೇ ಅದರ ನಡೆಯಲ್ಲಿಯೇ ಸಾಂಸ್ಕೃತಿಕ ವಿದ್ಯಮಾನಗಳು ಇತರೆಲ್ಲ ಧಾರ್ಮಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಶಿಸ್ತುಗಳೊಂದಿಗೆ ತಳಕು ಹಾಕಿಕೊಂಡು ಒಟ್ಟು ಬದುಕಿನ ದೊಡ್ಡದೊಂದು ಸಹಬಾಳ್ವೆಯ “ಕ್ಯಾನವಾಸು” ಎದುರಾಗುತ್ತದೆ.
ಕರ್ನಾಟಕವೆಂಬ ಹೆಸರು ಹೊತ್ತ ಈ ನಾಡಿನಲ್ಲಿ ಜನಜೀವನದ ಕುರುಹು ಕಾಣಿಸಿಕೊಂಡ ಅತ್ಯಂತ ಪ್ರಾಚೀನ ಕಾಲದಿಂದಲೂ ಇವರ ಮನೆಮಾತು ಕನ್ನಡವೇ ಆಗಿತ್ತು. ಅದು ಮೂಲ ದ್ರಾವಿಡಕ್ಕೆ ಹೆಚ್ಚು ಸಮೀಪವಾದ ರೂಪ ಧರಿಸಿತ್ತು. ಈ ಮಣ್ಣಿನ ದುಡಿಮೆಗಾರರ ಎದೆಯ ಭಾಷೆಯಾದ ಕನ್ನಡಕ್ಕೆ ಕಾವ್ಯಭಾಷೆಯಾಗಿ ಶಿಷ್ಟಪದ ಸೀಮೆಗೇರಲು ಕೆಲಹೊತ್ತು ಹಿಡಿದಿರಬಹುದು. ಆದರೆ ಕೂಡಲಸಂಗಮ ದೇವರಿಗೆ ಕೇಡಿಲ್ಲವಾಗಿ ಅವರೆಲ್ಲ ತತ್ಪೂರ್ವದಲ್ಲಿಯೇ ತಾವು ಒಲಿದಂತೆ ಆಡುವದನ್ನು ಹಾಡುವದನ್ನು ರೂಢಿಸಿಕೊಂಡಿದ್ದರು. ಎಂತಲೇ ಪೂರ್ವದ ಹಳಗನ್ನಡ ರೂಪಗಳು, ಚೆತ್ತಾಣ, ಬೆದಂಡೆಯಂಥ ಜಾನಪದ ಮಟ್ಟುಗಳು, ಆಡುನುಡಿಯ ದೇಶೀ ನುಡಿಗಟ್ಟುಗಳು ಈ ಮುಂತಾದವುಗಳು ಆಯಾ ಕಾಲಕ್ಕೆ ತಕ್ಕಂತೆ ರೂಪ, ವಿನ್ಯಾಸಗಳೊಂದಿಗೆ ಬೆಳೆದುಕೊಂಡು ಬಂದಿವೆ. ಶಿಷ್ಟ ರಚನೆಯ ಪೂರ್ವದಲ್ಲಿಯೇ ನೂರಾರು ವರ್ಷಗಳವರೆಗೆ ಈ ಜನಸಾಮಾನ್ಯರು “ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣಿತಮತಿಗಳಾಗಿ” ಬರೆದ ಸಾಹಿತ್ಯ ಅಪ್ಪಟ ದೇಶೀ ಚಿಂತನೆಯ ಕಣಜವಾಗಿ ಇಂದಿಗೂ ಉಳಿದುಕೊಂಡು ಬಂದಿದೆ. ದ್ರಾವಿಡ ಭಾಷಾ ಪರಿವಾರಗಳ ವೈಶಿಷ್ಟ್ಯ ಇರುವುದೇ ಇಲ್ಲಿ. ಅವುಗಳಿಗಿರುವ ಅಖಂಡ ಜನಪರತೆ ಮತ್ತು ಜೀವಪರತೆ ಸಾವಿರಾರು ವರ್ಷಗಳ ಭಾಷಿಕ ತಿಕ್ಕಾಟಗಳ ನಡುವೆಯೂ ಅವುಗಳನ್ನು ಬದುಕಿಸಿಕೊಂಡು ಬಂದಿದೆ. ಈ ಭಾಷೆಗಳಿಗಿರುವ ಪ್ರಾಕೃತಿಕ ಜೀವಸಂವೇದಿ ಗುಣವಿದೆಯಲ್ಲ, ಅದು ತುಂಬಾ ಅಪರೂಪದ್ದು. ಅದು ಮತ್ತು ದುಡಿಯುವವರ ಎದೆಯ ದನಿ ಇವೆರಡೂ ಅವುಗಳನ್ನು ಎಲ್ಲೆಲ್ಲೂ ಹರಿಗಡಿಯದಂತೆ ನಿರಂತರಗೊಳಿಸಿವೆ. ದಮನಕಾರಿ ದಾಳಿಗಳ ನಡುವೆಯೂ ಮತ್ತೆ ಮತ್ತೆ ಮೈಕೊಡವಿ ನಿಲ್ಲುವಂಥ ಕ್ರಿಯಾತ್ಮಕ ಗತಿಶೀಲತೆಯನ್ನು ಅವುಗಳಿಗೆ ತಂದುಕೊಟ್ಟಿವೆ.
ಅದರಲ್ಲಿಯೂ ಕನ್ನಡ ಭಾಷೆ ಅತ್ಯಂತ ಪ್ರಾಯೋಗಿಕವೂ, ವ್ಯಾವಹಾರಿಕವೂ, ಅಷ್ಟೇ ಭಾವಾಭಿವ್ಯಂಜಕತೆಯುಳ್ಳದ್ದೂ ಆಗಿದೆ. ಭಾಷೆಯ ಈ ಸ್ವರೂಪ ನಮ್ಮ ಜನತೆಯ ಗುಣಸ್ವಭಾವದ ಪ್ರತೀಕವಾಗಿದೆ. ಕವಿರಾಜಮಾರ್ಗಕಾರನ ಮಾತಿನಲ್ಲಿ ಹೇಳುವುದಾದರೆ,

ಕುರಿತರಲ್ಲದೆ ಮತ್ತಂ ಪೆರರುಂ
ತಂತಮ್ಮ ನುಡಿಗಳೊಳೆಲ್ಲರ್ ಜಾಣರ್
ಕಿರುವಕ್ಕಳುಮ್ ಆ ಮೂಗರುಮ್
ಅರಿಪಲ್ಕರಿವರ್ ವಿವೇಕಮಂ ಮಾತುಗಳಂ.

ಇಂಥ ವಿವೇಕ ಮತ್ತು ಅನುಭವದ ಮಾತುಗಳು ಕನ್ನಡಿಗರನ್ನು, ಅವರ ಭಾಷೆಯನ್ನು ಜೀವಂತವಿಟ್ಟಿದೆ. ಕನ್ನಡ ಎಂದಿಗೂ ಅನವಶ್ಯಕ ಮಡಿವಂತಿಕೆ ಮತ್ತು ಶಾಸ್ತ್ರೀಯ ಕಾಠಿಣ್ಯವನ್ನು ಮೈಗೂಡಿಸಿಕೊಂಡು ಬರಲಿಲ್ಲ. ಎಂತಲೇ ಅತ್ಯಂತ ಪ್ರಾಚೀನ ಕಾಲದಲ್ಲಿ ಸಂಸ್ಕೃತ, ಪ್ರಾಕೃತ, ಪಾಲಿ, ಮಾಗಧಿ, ಅರ್ಧಮಾಗಧಿ, ಶೂರಸೇನಿ, ಪೈಶಾಚಿಕ ಭಾಷೆಗಳೊಂದಿಗೆ ಕೂಡಿಕೊಂಡು ಬಾಳಿದರೆ, ಮಧ್ಯಕಾಲೀನ ಸಂದರ್ಭದಲ್ಲಿ ಮರಾಠಿ, ಅರಬ್ಬಿ, ಪಾರ್ಶಿ, ಗುಜರಾತಿ ಭಾಷೆಗಳೊಂದಿಗೆ, ಆಧುನಿಕ ಕಾಲಕ್ಕೆ ಬಂದರೆ ಇಂಗ್ಲಿಷ್, ಹಿಂದಿ, ಪೋರ್ಚುಗೀಸ್, ಖಡಿಬೋಲಿ, ಅವಧ ಮುಂತಾದ ಭಾಷೆಗಳೊಂದಿಗೆ, ಇನ್ನು ತನ್ನದೇ ದ್ರಾವಿಡ ಭಾಷೆಗಳಾದ ತಮಿಳು, ತೆಲುಗು, ಮಲೆಯಾಳಿ, ತುಳು ಭಾಷೆಗಳಂತೂ ಸರಿಯೇ ಸರಿ. ಉಪಭಾಷೆಗಳಂತೂ ಅದರ ವಿಶಿಷ್ಟತೆಯೇ ಆಗಿದೆ. ಹೀಗೆ ಎಲ್ಲ ಭಾಷೆಯ ಭಾಷಿಕ ಆಯಾಮಗಳು ಮತ್ತು ಆ ಭಾಷೆಗಳನ್ನಾಡುವ ಜನತೆಯ ಸಂಸ್ಕೃತಿಯೊಂದಿಗೆ ಸಾಮರಸ್ಯದ ಬದುಕನ್ನು ನಡೆಸಿಕೊಂಡು ಬಂದಿದೆ. ಇಂದಿಗೂ ಅದೇ ನೆಲೆಯಲ್ಲಿ ಸಾಗಿಕೊಂಡು ಬರುತ್ತಿದೆ. ಕನ್ನಡ ಜನತೆ ಈ ರೀತಿ ಕಾಲಕಾಲಕ್ಕೆ ತನ್ನ ಬದುಕಿನ ಪರಿಧಿಗೆ ಯಾವು ಯಾವುದೋ ಕಾರಣಕ್ಕಾಗಿ ಬಂದು ನಿಂತುಕೊಂಡಿದ್ದ ಇತರ ಜನಸಮುದಾಯವನ್ನು ಅವರವರ ಬದುಕಿನೆಲ್ಲ ಮಿತಿಗಳೊಂದಿಗೆ ಒಗ್ಗಿಸಿಕೊಂಡು, ಅರಗಿಸಿಕೊಂಡು, ಅರ್ಥೈಸಿಕೊಂಡು ಬರುತ್ತಿದೆ. “ಮಾನವ ಜತಿ ತಾನೊಂದೆ ವಲಂ” ಎಂಬ ಉಚ್ಚ ತತ್ವದಲ್ಲಿ ಅಪಾರ ನಂಬುಗೆಯಿಟ್ಟುಕೊಂಡು ಬರುತ್ತಿರುವದರಿಂದಲೇ ಇಂದು ಅದು ಮೃತಭಾಷೆಗಳ ಗುಂಪಿಗೆ ಸೇರದೆ ಜೀವಂತ ಭಾಷೆಯಾಗಿ ಉಳಿದುಕೊಂಡು ಬರಲು ಸಾಧ್ಯವಾಗಿದೆ. ಕನ್ನಡಕ್ಕೆ ಎಂದಿಗೂ “ಶುದ್ಧವೆಂಬ”, ಶಾಸ್ತ್ರೀಯವೆಂಬ ಭ್ರಮೆಯಿಲ್ಲ. ಆದ್ದರಿಂದ ಅದು ಯಾರನ್ನು, ಯಾವುದನ್ನೂ ಕಳೆದುಕೊಳ್ಳಲಾರದು. ಎಲ್ಲರನ್ನೂ, ಎಲ್ಲ ಭಾಷೆಯ ಸೊಗಡನ್ನೂ ಕೂಡಿಸಿಕೊಂಡು ಭರಿಸಿಕೊಳ್ಳುವ ಮೂಲಕವೇ ಹೆಚ್ಚೆಚ್ಚು ಸಮೃದ್ಧವೂ, ಶಕ್ತಿಯುತವೂ ಆಗಿದೆ. ಮರಾಠಿ ಗಡಿ ಭಾಗಗಳಲ್ಲಿ ಮರಾಠಿಗನ್ನಡ, ಆಂಧ್ರದ ಗಡಿ ಭಾಗಗಳಲ್ಲಿ ತೆಲುಗುಗನ್ನಡ, ಕೊಂಕಣಿಮಯ ಕನ್ನಡ, ಉರ್ದುಮಯ ಕನ್ನಡ, ತಮಿಳ್ಗನ್ನಡ ಹೀಗೆ ಹಲವು ಲೆಕ್ಕವಿಲ್ಲದಷ್ಟು ಕನ್ನಡ ರೂಪಗಳು ಯಾರ ಮುಲಾಜಿಗೆ ಒಳಪಡದೆ ತಮ್ಮ ಪಾಡಿಗೆ ತಾವು ಆಕಾರ ತಳೆಯುತ್ತಲೇ ಬರುತ್ತಿವೆ.
ಕನ್ನಡಿಗರ ಈ ಉದಾರವಾದಿ ವೈಶಾಲ್ಯವನ್ನು ಅಭಿಮಾನಶೂನ್ಯ ಸ್ಥಿತಿಯೆಂದು ಹಗುರಾಗಿ ಭಾವಿಸಬೇಕಾಗಿಲ್ಲ. ಎರಡು ಭಾಷಿಕ ಸಮುದಾಯಗಳ ನಡುವಿನ ಕರುಳಬಳ್ಳಿ ಸಂಬಂಧದಲ್ಲಿ, ಪರಸ್ಪರ ವ್ಯವಹಾರ ತೂಗಿಸಿಕೊಳ್ಳುವ ಸಂದರ್ಭಗಳಲ್ಲಿ ಹಲವು ಉಪಭಾಷೆಯ ಸ್ವರೂಪಗಳು ನಿರ್ಮಾಣಗೊಳ್ಳುತ್ತವೆ. ಸಾಮಾನ್ಯ ಜನತೆಯ ನಡುವೆ ಒಣ ಅಭಿಮಾನ ಅಥವಾ ಭಾಷಾ ಮಡಿವಂತಿಕೆಗೆ ಅರ್ಥವೇ ಇರಲಾರದು. ಆದ್ದರಿಂದ ಅವರು ಹುಸಿ ಭಾಷಾ ದುರಭಿಮಾನಿಗಳು ಸೃಷ್ಟಿಸುವ ಎಲ್ಲ ರೀತಿಯ ಅವಘಡಗಳನ್ನು ಮೀರಿ ತಮ್ಮದೇ ವ್ಯಾವಹಾರಿಕ ಬದುಕೊಂದನ್ನು ಕಟ್ಟಿಕೊಂಡು ಹೊರಟೇಬಿಡುತ್ತಾರೆ. ಹೀಗೆಂದೇ ಕನ್ನಡಿಗರು ತಮ್ಮ ಅಭಿಮಾನವನ್ನು ಕಾಪಾಡಿಕೊಳ್ಳುತ್ತಲೇ ತಮ್ಮ ಮೇಲಾಗುವ ದಾಳಿಗಳನ್ನು ಎದುರಿಸಿದ್ದಾರೆ. ಅವು ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಹೀಗೆ ಯಾವುದೇ ಪ್ರಕಾರದ ದಾಳಿಗಳಾಗಿರಬಹುದು. ಅವುಗಳನ್ನು ತಮ್ಮ ಸ್ವಂತಿಕೆಯ ಉಪಾಧಿಯಿಂದಲೇ ಸಮರ್ಥವಾಗಿ ಎದುರಿಸಿದ್ದಾರೆ. ಅದೇ ಕಾಲಕ್ಕೆ ಜನಸಾಮಾನ್ಯರ ಬದುಕಿನ ಅವಶ್ಯಕತೆಗಳನ್ನು ಭರಿಸಲೆಂದೇ ಜನಪರ ಚಳುವಳಿಗಳನ್ನು ಕಟ್ಟಿಕೊಂಡು ಬದುಕಿದ್ದಾರೆ.
ಕನ್ನಡಿಗರು ಹೊರಗಿನಿಂದ ಬಂದ ಧರ್ಮ, ಭಾಷೆ, ವಿಚಾರ, ಜೀವನದ ರೀತಿ ನೀತಿ ಯಾವುದೇ ಇರಲಿ ಅವೆಲ್ಲವುಗಳನ್ನು ಸಾರಾಸಗಟಾಗಿ ತಿರಸ್ಕರಿಸಲೂ ಇಲ್ಲ. ಯಥಾವತ್ತಾಗಿ ಅವುಗಳನ್ನು ಸ್ವೀಕರಿಸಿ “ತಮ್ಮತನ”ವನ್ನು ಕಳೆದುಕೊಳ್ಳಲೂ ಇಲ್ಲ. ಅನ್ಯರ ಸಂಸ್ಕೃತಿಯಲ್ಲಿರುವ ಗುಣಾತ್ಮಕ ಅಂಶಗಳನ್ನು ತೆರೆದ ಮನಸ್ಸಿನಿಂದ ಬರಮಡಿಕೊಂಡು ಸ್ಥಳೀಯ ದೇಶೀ ಸಂಸ್ಕೃತಿಯ ಆಕಾರದೊಳಗೆ ವಿಲೀನಗೊಳಿಸಿಕೊಂಡಿದ್ದಾರೆ. ಈ ಮೂಲಕವೇ ಅವರಿಗೆ ಬದಲಾದ ಸಂದರ್ಭಗಳಿಗೆ ತಕ್ಕಂತೆ ಹೊಸ ಲಯಗಳಲ್ಲಿ ಬದುಕು ಹಿಡಿಯಲು ಸಾಧ್ಯವಗಿದೆ. ಎಂತಲೇ ಕ್ರಿ.ಶ. ೯ನೇ ಶತಮಾನದಲ್ಲಿಯೇ ಕವಿರಾಜಮಾರ್ಗಕಾರನು
ಕಸವರಮೆಂಬುದು ನೆರೆ ಸೈ
ರಿಸಲಾರ್ಪೊಡೆ ಪರ ವಿಚಾರಮಂ ಪರಧರ್ಮಮುಮಂ
ಕಸವೇಂ ಕಸವರಮೇನು
ಬ್ಬಸಮಂ ಬಸಮಲ್ಲದಿರ್ದು ಮಾಡುವೊಡೆಲ್ಲಂ ||
ಎಂದು ಹೇಳುತ್ತ ಪರಧರ್ಮ ಮತ್ತು ಪರವಿಚಾರಗಳನ್ನು ಗೌರವಿಸುವದೇ ನಿಜವಾದ ಬಂಗಾರವೆಂದು, ಅದೇ ಪರಮ ಮೌಲ್ಯವೆಂದು ಸಾರಿದ್ದಾನೆ. ಇಲ್ಲವಾದರೆ ಕಸವರವೂ (ಬಂಗಾರವೂ) ಕಸದ ಸಮಾನವೇ ವ್ಯರ್ಥ ಎನ್ನುತ್ತಾನೆ. ಇದು ಕನ್ನಡಿಗರ ಹೃದಯ ವೈಶಾಲ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಇಲ್ಲಿನ ಜನತೆ ತಮ್ಮದೇ ಸಮುದಾಯ ಸಂಸ್ಕೃತಿ ಮತ್ತು ಧರ್ಮಗಳನ್ನು ಆಚರಿಸಿಕೊಂಡು ಬದುಕುತ್ತಿರುವಾಗಲೂ ಇತರ ಉನ್ನತ ತತ್ವ, ದರ್ಶನಗಳಿಗೆ ಎಡೆಮಾಡಿಕೊಟ್ಟಿದ್ದಾರೆ. ಕ್ರಿ.ಶ. ಪ್ರಾರಂಭದಿಂದಲೂ ಉತ್ತರ ಭಾರತದಿಂದ ಬಂದ ಜೈನಧರ್ಮವಿರಬಹುದು, ತತ್ಪೂರ್ವದಲ್ಲೆ ಉದಯವದ ಬೌದ್ಧ ಧರ್ಮವೇ ಇರಬಹುದು. ಬೌದ್ಧರ ದಯೆ, ಜೀವಾನುಕಂಪೆ, ಜೈನರ ಅಹಿಂಸೆ-ಸಹನೆಗಳನ್ನು ಬೆರೆಸಿಕೊಂಡೂ ತನ್ನ ಅನನ್ಯತೆ (ಐಡೆಂಟಿಟಿ)ಯನ್ನು ಉಳಿಸಿಕೊಂಡು ಬಂದಿದೆ. ಕ್ರಿ.ಶ. ೮ನೇ ಶತಮಾನದ ಹೊತ್ತಿಗೆ ಜೈನಧರ್ಮ ಕನ್ನಡದ ಧರ್ಮವೇ ಆಗಿ ಪರಿಣಮಿಸಿತ್ತು.
ಭೌಗೋಲಿಕವಾಗಿ ಸುರಕ್ಷಿತ ನೆಲದಲ್ಲಿ ವಾಸಿಸುತ್ತಿರುವ ಕನ್ನಡಿಗರು ಸ್ವಭಾವತಃ ಸಾತ್ವಿಕರು, ಉದಾರಚರಿತರು. ಧೀರೋದಾತ್ತರು, ಹೀಗಾಗಿ ಅಹಿಂಸೆ ಮತ್ತು ಪರೋಪಕಾರಗಳನ್ನು ಪ್ರತಿಪಾದಿಸುವ ಜೈನ, ಬೌದ್ಧ ಧರ್ಮಗಳು ಬಹು ಬೇಗನೆ ಇವರ ಮನ ಗೆದ್ದವು. ಆದ್ದರಿಂದಲೇ ಸಾಹಿತ್ಯಕವಾಗಿಯೂ ಸಾಂಸ್ಕೃತಿಕವಾಗಿಯೂ ಕ್ರಿ.ಶ. ೧೦ನೇ ಶತಮಾನವು ಜೈನರ ಸುವರ್ಣಯುಗವೆಂದು ಗುರುತಿಸಿಕೊಳ್ಳಲು ಸಾಧ್ಯವಗಿದೆ. ಮಣ್ಣ ಹುಡಿಯೊಳಗೆ ಬೆವರ ಹನಿಸಿ ಜೀತ ಮಾಡುವವರ ಕನ್ನಡಕ್ಕೆ ಕಾವ್ಯದ ಕಸುವನ್ನು ಹುರಿಗೊಳಿಸಿದವರು ಜೈನಕವಿಗಳು. ಶ್ರಮಿಕರ ಭಾಷೆಯಲ್ಲಿ ಮೊದಲ ಬಾರಿಗೆಂಬಂತೆ ಆಳುವವರ ಧ್ವನಿಯನ್ನು ಕಾವ್ಯಪ್ರತಿಮೆಗಳಲ್ಲಿ ಹದಗೊಳಿಸಿ ಸಾರಸ್ವತ ಲೋಕವೊಂದನ್ನು ತೆರೆದಿಡುವ ಜೈನರು ಬದುಕು, ಬರಹ ಎರಡನ್ನೂ ಅಹಿಂಸಾತತ್ವದ ನೆಲೆಯಲ್ಲಿಯೇ ಸ್ಥಾಪಿಸುವ ಪ್ರಯತ್ನ ಮಾಡಿದರು. ಗಂಗರು, ರಾಷ್ಟ್ರಕೂಟ, ಚಾಲುಕ್ಯ ಅರಸು ಮನೆತನದ ರಾಜರುಗಳನೇಕರು ಜೈನಧರ್ಮಕ್ಕೆ ಅಗ್ರಪಟ್ಟ ನೀಡುವ ಮೂಲಕ ಅಹಿಂಸೆ ಮತ್ತು ದಯೆಯಂಥ ಮೌಲ್ಯಗಳನ್ನೆ ರಾಜಧರ್ಮವೆಂಬಂತೆ ಪಾಲಿಸಿಕೊಂಡು ಬಂದಿರುವದು ತೀರ ಅಪರೂಪದ ಸಂಗತಿ. ಹಾಗೆ ನೋಡಿದರೆ ಪ್ರಭುತ್ವ ಮತ್ತು ಹಿಂಸೆ ಸಮೀಕರಣವಾಗುವಂತೆ, ಪ್ರಭುತ್ವ ಮತ್ತು ಜೈನರ ಅಹಿಂಸಾ ತತ್ವ ಸಮೀಕರಣವಾಗುವುದು ತುಂಬ ಕಷ್ಟದ ಸಂಗತಿ. ಪ್ರಭುತ್ವ ಮತ್ತು ಅಹಿಂಸೆ ಇವು ಪರಸ್ಪರ ವಿರೋಧಿ ನೆಲೆಯಲ್ಲಿ ಮಾತ್ರ ಮುಖಾಮುಖಿಯಾಗಬಲ್ಲವು. ಈ ತೆರನ ಅಂತರ್ ವಿರೋಧಿ ನೆಲೆಗಳ ನಡುವೆಯೇ ಒಂದು ಮಧ್ಯಮ ಮಾರ್ಗವನ್ನು ಹುಡುಕುವ ಜರೂರಿ ಅವರಿಗೆ ಕಾಣಿಸಿಕೊಂಡದ್ದು ಅಕಾರಣವಾಗಿರಲಿಲ್ಲ.
ವೈದಿಕರು ಯಜ್ಞ ಯಾಗಾದಿಗಳಲ್ಲಿ ನಡೆಸುವ ಹಿಂಸೆ ಮತ್ತು ಕ್ಷಾತ್ರಪೌರುಷದ ಯುದ್ಧಪಿಪಾಸು ಕ್ರೌರ್ಯ ಈ ಎರಡನ್ನೂ ಪ್ರತಿರೋಧಿಸುವ ವೈಧಿಕ ವಿರೋಧಿ ನೆಲೆಯ ಜೈನ, ಬೌದ್ಧ ಧರ್ಮಗಳು ಕನ್ನಡಿಗರ ತೀವ್ರ ಜರೂರಿಯಾದವು. ಹೀಗೆಂದೇ ೧೦ನೇ ಶತಮಾನದ ಕನ್ನಡ ಕವಿಗಳಿಗೆ ನೇರವಾಗಿ ಯುದ್ಧವನ್ನು ಸಮರ್ಥಿಸಿಕೊಳ್ಳುವಲ್ಲಿ ಸಂಕಟ ಎದುರಾದಂತಿದೆ. ಈ ತಾಕಲಾಟದಲ್ಲಿಯೇ ಅವರಿಗೆ “ಲೌಕಿಕ”, “ಆಗಮಿಕ”ವೆಂಬ ಅಭಿವ್ಯಕ್ತಿ ತಂತ್ರಗಳು ಅನಿವಾರ್‍ಯವಾಗಿವೆ. ಲೌಕಿಕ ಕಾವ್ಯಗಳಾದ ವಿಕ್ರಮಾರ್ಜುನ ವಿಜಯ, ಗದಾಯುದ್ಧಗಳಲ್ಲಿ ಯುದ್ಧದ ಕತೆ ಮತ್ತು ವರ್ಣನೆ ಬಂದಿದೆಯಾದರೂ ಅವು ಯುದ್ಧಗಳ ಪರವಾಗಿಲ್ಲ. ಪಂಪ ಅರ್ಜುನನ ಬಾಯಿಂದ “ಬಂದು ಮೊರೆಹೊಕ್ಕವರನ್ನು ಕಾಯುವದೇ ಶೌರ್ಯವೆಂದು” ಹೇಳಿಸಿದರೆ, ರನ್ನನಾದರೊ ಗಾಂಧಾರಿಯ ಬಾಯಲ್ಲಿ “ಸಮರ ವ್ಯಾಪಾರಂ ಮಾಣ್ದು ಮಗನೆ” ಎಂದು ಹೇಳಲು ಹಚ್ಚುತ್ತಾನೆ. ೧೦ನೇ ಶತಮಾನದ ಹಲವು ಕಾವ್ಯಗಳಲ್ಲಿ ಯುದ್ಧವಿರೋಧಿ ನಿಲುವು ಅನುರಣಿಸುತ್ತಿದೆ. ಈ ಕಾವ್ಯಗಳು ಕನ್ನಡಿಗರ ಶೌರ್ಯ, ಸಾಹಸಕ್ಕೆ ಎಂತೋ ಅಂತೆಯೇ ಶಾಂತಿಪ್ರಿಯತೆ ಮತ್ತು ವರ್ಗ ಸಂಘರ್ಷಕ್ಕೂ ಪ್ರತೀಕವಾಗಿ ನಿಲ್ಲುತ್ತವೆ. ಎಲ್ಲ ಕಾವ್ಯಗಳನ್ನು ಉದಾಹರಣೆ ಸಹಿತವಾಗಿ ಪ್ರಸ್ತುತಪಡಿಸುವುದು ಇಲ್ಲಿನ ವ್ಯಾಪ್ತಿಗೆ ಸಾಧ್ಯವಿಲ್ಲ. ಆದರೂ ಆಯಾ ಯುಗಧರ್ಮದ ಆಶಯವನ್ನು ವ್ಯಾಖ್ಯಾನಗಳಲ್ಲಿ ಗಮನಿಸುವ ಮೂಲಕವೇ ಒಟ್ಟು ಸ್ವರೂಪವನ್ನು ಗ್ರಹಿಸುವ ಪ್ರಯತ್ನ ಮಾಡೋಣ. ಪ್ರಭುತ್ವಪೋಷಿತ ಊಳಿಗಮಾನ್ಯ ವ್ಯವಸ್ಥೆಯನ್ನು ಧಿಕ್ಕರಿಸುವ ಮೂಲಕವೇ ಕ್ರಿಯಾತ್ಮಕವಾಗುವ ವಚನ ಸಾಹಿತ್ಯವಂತೂ ಪಂಪಾದಿಗಳ ಕಾವ್ಯಪ್ರತಿಭೆಗೆ ಶ್ರಮಸಂಸ್ಕೃತಿಯ ಧಾತುವನ್ನು ಸೇರಿಸುತ್ತದೆ. ವರ್ಣಾಶ್ರಮ ಧರ್ಮದ ಆಶ್ರಮ ಮೂಲ ಬದುಕನ್ನು ಪ್ರತಿಭಟಿಸಿ ಶ್ರಮಮೂಲ ಸಂಸ್ಕೃತಿಯನ್ನು ಮುಖ್ಯವಾಹಿನಿಗೆ ತರುವದೇ ವಚನ ರಚನೆಯ ಪ್ರಮುಖ ಕಾಳಜಿಯಾಗಿದೆ. ಆದ್ದರಿಂದಲೇ ಕನ್ನಡವೆಂದರೆ ವಚನ. ವಚನವೆಂದರೆ ಯಜಮಾನ ಸಂಸ್ಕೃತಿಯ ಧಿಕ್ಕಾರ. ಅಸಂಖ್ಯ ಶೋಷಿತರ ಬದುಕಿನ ಒಳಿತಿಗಾಗಿ ನಡೆಸಿದ ತಾತ್ವಿಕ ಹೋರಾಟವೆಂದೇ ಗುರುತಿಸಲ್ಪಡುವ ಈ ಸಾಹಿತ್ಯ ಸಮುದಾಯದ ಅಂಚಿನಲ್ಲಿರುವ ಕೊನೆಯ ಮಾನವನ ಹಸಿವು, ತಳಮಳವೆಂದೇ ಗೃಹೀತವಾಗುತ್ತದೆ. ಹೊಲೆಯ, ಮಾದಿಗ, ಸಮಗಾರ, ಮಡಿವಾಳ, ಅಂಬಿಗ, ಡೋಹರ ಮುಂತಾದ ಹಲವು ಹತ್ತು ಕಾಯಕದಲ್ಲಿ ನಿರತರಾದ ದೈಹಿಕ ದುಡಿಮೆಗಾರರು ತಮ್ಮ ತಮ್ಮ ಬಾಳ್ವೆ ಹಕ್ಕಿಗಾಗಿ ನಡೆಸಿದ ಸಂಘರ್ಷದಲ್ಲಿ ಉದಿಸಿಬಂದ ಈ ಸಾಹಿತ್ಯ ಪ್ರಾಯಶಃ ಜಾಗತಿಕ ಸಾಹಿತ್ಯ ಕ್ಷೇತ್ರದಲ್ಲಿಯೇ ಅಪರೂಪದ ಸಂಕಥನವಾಗಿ ನಿಲ್ಲುತ್ತದೆ. ಏಕೆಂದರೆ ಈ ಮೇಲಿನ ಹದಿನೆಂಟು ಜಾತಿಯ ವೃತ್ತಿಬಾಂಧವರು ತಮ್ಮ ವೃತ್ತಿ ಪರಿಭಾಷೆಯಲ್ಲಿ ಹಸಿವು ಮತ್ತು ಸ್ವಾಭಿಮಾನದ ಪ್ರಶ್ನೆಗಳನ್ನು ಎತ್ತುತಾರೆ. ಹಸಿವು ಮತ್ತು ಸೃಜನಶೀಲತೆ ಪರಸ್ಪರ ಒಂದರೊಳಗೊಂದು ಆಕಾರ ಪಡೆದುಕೊಳ್ಳುವ ಪರಿಗೆ ಅಕ್ಷರಲೋಕವೇ ತಲ್ಲಣಿಸುತ್ತದೆ. ವಚನ ರಚನೆ ತನ್ನ ಈ ಅಖಂಡ ಶ್ರಮಿಕ ಸೃಜನಶೀಲತೆಯ ಕಾರಣವಾಗಿಯೇ ತದನಂತರದ ಒಟ್ಟು ಕನ್ನಡ ಸಾಹಿತ್ಯ ಮೇಲೆ ಅವ್ಯಾಹತವಾಗಿ ಪ್ರಭಾವ ಬೀರುತ್ತಲೆ ಬರುತ್ತಿದೆ.
ಹರಿಹರ, ರಾಘವಾಂಕ, ಕುಮಾರವ್ಯಾಸ, ರತ್ನಾಕರವರ್ಣಿಯಿಂದ ಮೊದಲ್ಗೊಂಡು ದಾಸರ ಕೀರ್ತನೆ, ಅನುಭಾವಿಗಳ ತತ್ವಪದ, ಸೂಫಿಗಳ ಗೀತೆ, ಗಜ಼ಲ್, ವೀರಶೈವರ ಪುರಾಣಗಳು, ಸ್ತೋತ್ರಸಾಹಿತ್ಯ, ಕೊಡೇಕಲ್ ಸಾಹಿತ್ಯ, ಜಾನಪದೀಯ ಸೊಗಡುಳ್ಳ ಮಂಟೇಸ್ವಾಮಿ ಕಾವ್ಯ, ಮಲೆ ಮಹದೇಶ್ವರ ಕಾವ್ಯ, ಮುಂತಾಗಿ ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭಕ್ಕೂ ವಚನ ಪರಂಪರೆ ಒಂದಿಲ್ಲೊಂದು ಆಯಾಮಗಳಲ್ಲಿ ಅನುರಣಿತಗೊಳ್ಳುತ್ತಲೇ ಇದೆ. ಆಧುನಿಕೋತ್ತರ ಈ ಘಟ್ಟದಲ್ಲಿ ಕನ್ನಡ ಸಾಹಿತ್ಯವನ್ನು ಸಮಗ್ರವಾಗಿ ಪುನರ್ ಮೌಲ್ಯೀಕರಣಗೊಳಿಸುವ ಪ್ರಕ್ರಿಯೆಯಲ್ಲೂ ವಚನಗಳು ಹೆಚ್ಚು ಪ್ರಸ್ತುತ ಎನಿಸಿಕೊಳ್ಳುತ್ತಿರುವದಕ್ಕೆ ಅದರ ಶ್ರಮಮೂಲ ಧಾತುವೇ ಕಾರಣವಾಗಿ ನಿಲ್ಲುತ್ತದೆ.
ಹಳಗನ್ನಡ ಸಾಹಿತ್ಯದ ಘಟ್ಟದಲ್ಲಿ ವಚನ ಸಾಹಿತ್ಯ ಹಿಮದಿನ ಪರಂಪರೆಯನ್ನು ಅರಗಿಸಿಕೊಳ್ಳುತ್ತಲೇ ನಿರ್ಣಾಯಕ ಬಿಂದುವಿಗೆ ಬಂದು ತಲುಪಿದಂತೆ; ಆಧುನಿಕ ಕಾಲದಲ್ಲಿಯೂ ದಲಿತ, ಬಂಡಾಯಗಳು ಹಿಂದಿನ ನವೋದಯ, ಪ್ರಗತಿಶೀಲ, ನವ್ಯರ ಪ್ರಯೋಗ, ಪರಂಪರೆಗಳನ್ನು ಮುಖಾಮುಖಿಯಾಗಿಸಿಕೊಂಡೇ ಹೊಸ ದಿಗಂತಕ್ಕೆ ಬಂದು ತಲುಪಿವೆ. ಸದ್ಯ ನಾವು ಬಂಡಾಯೋತ್ತರ, ದಲಿತೋತ್ತರ ಎಂದು ಕರೆದುಕೊಳ್ಳುವ ಧಾವಂತದಲ್ಲಿದ್ದೇವೆ. ನಾನು ಇಲ್ಲಿ “ಕರೆದುಕೊಳ್ಳುವ” ಎಂಬ ಶಬ್ದವನ್ನು ತುಂಬಾ ಪ್ರಜ್ಞಾಪೂರ್ವಕವಾಗಿ ಬಳಸುತ್ತಿದ್ದೇನೆ. ಏಕೆಂದರೆ ಹಾಗೇ ಕರೆದುಕೊಳ್ಳುವುದಕ್ಕೂ, ಹಾಗೆಂದು ಗುರುತಿಸುವದಕ್ಕೂ ತುಂಬಾ ವ್ಯತ್ಯಾಸವಿದೆ. ಕರೆದುಕೊಳ್ಳುವ ಕ್ರಿಯೆ ಗುರುತಿಸುವಂತಾಗುವ ರಾಚನಿಕ ಸ್ವರೂಪಗಳಲ್ಲಿ ಆಕಾರ ತಳೆಯುವಂತಾಗಬೇಕು. ಜನಪರಂಪರೆ ಅದನ್ನು ಗ್ರಹಿಸಿ ಸ್ಪಂದಿಸಬೇಕು. ವಾಸ್ತವದ ಬದುಕು ಅದರೊಂದಿಗೆ ಸಂವಾದಿಸುವ, ತನ್ಮೂಲಕ ವಾದ, ವಿವಾದಗಳಿಗೆ ಸುರುವಿಟ್ಟುಕೊಳ್ಳುವ ಹೀಗೆ ಸೃಜನಶೀಲತೆಯು ಅಖಂಡ ಬದುಕಿನ ಧಾತುವಾಗಿ ಮೈದಾಳಬೇಕಲ್ಲವೆ? ಆಗ ಮಾತ್ರ ಒಂದು ಸಾಹಿತ್ಯ ಪರಂಪರೆಯನ್ನು ಗುರುತಿಸುವ ಕ್ರಿಯೆಗೆ ಅರ್ಥ ಬರುತ್ತದೆ.
ಬಂಧುಗಳೇ, ಇಂದು ಸಾಹಿತ್ಯಕ ಸೃಜನಶೀಲತೆ ಎಂಬುದು ಈ ಮೊದಲಿನಂತೆ ಬದುಕು ಬೀದಿಯಲ್ಲಿನ ಒಂದು ಅಂಗವೋ, ಆಯಾಮವೋ, ಭಾಗವೋ ಆಗಿ ಉಳಿದಿಲ್ಲ; ಉಳಿಯಬಾರದು ಕೂಡ. ವಿಶ್ವದ ವಿದ್ಯಮಾನಗಳು ಕಣ್ಣೆವೆ ಮಿಟುಕಿಸುವಷ್ಟರಲ್ಲಿ ಗಾಳಿ, ಬೆಳಕುಗಳಿಗಿಂತ ವೇಗವಾಗಿ ಓಡುತ್ತಿರುವ ಈ ಹೊತ್ತಿನಲ್ಲಿ “ಸಾಹಿತ್ಯ”ವೆಂಬುದು ಕೂಡಾ ಅಸಂಖ್ಯ ಜ್ಞಾನಶಿಸ್ತುಗಳ ಪರಿಪ್ರೇಕ್ಷ್ಯದಲ್ಲಿ ಸಮ್ಮಿಳಿತಗೊಂಡು ಜೀವನ ನಿರ್ವಹಣೆಯ ವಿಧಾನವಾಗಿ ನಿರ್ವಚಿಸಿಕೊಳ್ಳಬೇಕಿದೆ. ಇದರರ್ಥ ಕನ್ನಡ ಭಾಷೆ ಅಥವಾ ಸಾಹಿತ್ಯವೆಂದರೆ ಕನ್ನಡ ಜನತೆಯ ಬದುಕುವ ಪ್ರಶ್ನೆಯಾಗಿ ಚರ್ಚಿತವಾಗಬೇಕಿದೆ. ಕನ್ನಡ ಉಳಿಯಬೇಕಾದರೆ ಕನ್ನಡ ಮಾತಾಡುವ ಸಾಮಾನ್ಯರು ಉಳಿಯಬೇಕು. ಅವರ ಬದುಕು ಸಂತೃಪ್ತಿ, ನೆಮ್ಮದಿಯಲ್ಲಿ ನಡೆಯುವಂತಾಗಬೇಕು. ಆದ್ದರಿಂದ ಕರ್ನಾಟಕದ ಸಮಾಜೋಧಾರ್ಮಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ, ಮಾನವಿಕ, ಮನೋವೈಜ್ಞಾನಿಕ, ಪರಿಸರಾತ್ಮಕ, ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಖಗೋಳ ಭೂಗೋಳ ಮುಂತಾಗಿ ಅಖಂಡ ಬ್ರಹ್ಮಾಂಡದ ಉಪಲಬ್ಧಿ ಮತ್ತು ಹಂಚಿಕೆಯ ಪ್ರಶ್ನೆಗಳನ್ನು ಚರ್ಚಿಸಬೇಕಿದೆ. ಆದ್ದರಿಂದ ಜನತೆಯ ಪ್ರಾಥಮಿಕ ಅವಶ್ಯಕತೆಗಳಾದ ನೆಲ, ಜಲ, ಅಕ್ಷರ, ಅನ್ನ, ಅರಿವು, ಆರೋಗ್ಯ, ಸೂರು, ಉದ್ಯೋಗ, ಇತ್ಯಾದಿ ಉಪಯೋಗಿ ಘಟಕಗಳ ಸ್ಥಿತಿಗತಿ ಕುರಿತು ಪುಟ್ಟ ನೋಟ ಹರಿಸಬೇಕಾದದ್ದು ಈ ವ್ಯಾಪ್ತಿಗೆ ಹೊರಗಾಗಲಾರದೆಂದೇ ನನ್ನ ಅಭಿಪ್ರಾಯ. ಈ ಹೊತ್ತು ಸಾಹಿತ್ಯ ಮತ್ತು ಸಾಹಿತಿಗಳ ಚಿಂತನೆ ಹರಿಯಬೇಕಾಗಿರುವದೇ ಈ ನೆಲೆಯಲ್ಲಿ. ಸೃಜನಶೀಲತೆಯಂಬುದನ್ನು ಬದುಕಿನ ಪ್ರಾಥಮಿಕ ಅವಶ್ಯಕತೆಗಳಿಂದ ಹೊರಗಿಟ್ಟು ನಡೆಸುವ ವಾದಗಳು ಇವೆಯಲ್ಲ, ಅವು ಜೀವವಿರೋಧಿ ನಂಬಿಕೆಯ ಮನೋಜಾಡ್ಯವೇ ಆಗಿವೆ.

ಜಲ ಮತ್ತು ನೆಲ :

ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜಡಿದೊಮ್ಮೆ ನುಡಿಯದಿರ !
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ! ರಾಮನಾಥ.
ಹಸಿವಿನ ಪ್ರಖರತೆ, ಅದನ್ನು ತುಂಬಿಸಿಕೊಳ್ಳುವ ಅವಶ್ಯಕತೆ ಎರಡನ್ನೂ ಏಕಕಾಲಕ್ಕೆ ಹೊಳೆಸುವ ದಾಸಿಮಯ್ಯನ ಈ ವಚನ ನಮ್ಮೊಳಗೆ ಹಲವು ಅರ್ಥಸಾಧ್ಯತೆಗಳನ್ನು ಬಿಟ್ಟುಕೊಡುತ್ತದೆ. ಮೊದಲನೆಯದಾಗಿ ಸಕಲ ಜೀವರಾಶಿಯ ಅಸ್ತಿತ್ವಕ್ಕೆ ಕಾರಣವಾಗಿರುವ ಈ “ಹಸಿವು” ಎಲ್ಲ ಸಮಸ್ಯೆಯ ಮೂಲವೂ ಹೌದು. ಆತ್ಯಂತಿಕವೂ ಹೌದು. ಜೀವರಾಶಿಯ ಉದಯದೊಂದಿಗೆ ಅಲ್ಲದಿದ್ದರೂ ಜೀವಸಂಕುಲ ತನಗಾಗಿ ಒಂದು ವ್ವಸ್ಥೆಯನ್ನು ನಿರ್ಮಿಸಿಕೊಂಡು ನಿರ್ಬಂಧಕ್ಕೆ ಒಳಪಟ್ಟಾಗಿನಿಂದಲೂ ಹಸಿವಿನ ಸಮಸ್ಯೆ ಕಾಡಿದೆ. ಸಾವಿರಾರು ವರ್ಷಗಳಿಂದ ಕಾಡುತ್ತಿರುವ ಈ ಸಮಸ್ಯೆ ಇಂದಿಗೂ ಜೀವಂತವಾಗಿಯೇ ಇದೆಯಾದರೂ ಇದಕ್ಕಿಂತ ಗಂಭೀರವಾದ ಸಮಸ್ಯೆಯೊಂದು ಇಂದು ಹಸಿವಿನ ಸಮಸ್ಯೆಯನ್ನು ಮಂಕುಗೊಳಿಸಿದ್ದು ಈ ಸಹಸ್ರಮಾನದ ಮಹ ದುರಂತಗಳಲ್ಲೊಂದು. ಅದು ನೀರಿನ ಸಮಸ್ಯೆ. ನೂರು ವರ್ಷಗಳ ಹಿಂದೆ ಭೂಮಂಡಲದಲ್ಲಿ ನೀರಿಗಾಗಿ ಈ ಪರಿಯ ಹಾಹಾಕಾರ ಹುಟ್ಟಿತ್ತೆಂಬ ಊಹೆ ಎಷ್ಟು ಜನರಿಗಿದ್ದೀತು ಹೇಳುವುದು ಕಷ್ಟ. ಆದರೆ ಬಹುತರ ಜನಸಾಮಾನ್ಯರಿಗಂತೂ ಇದರ ಪರಿವೆ ಇರಲಿಲ್ಲ.
ಭೂಮಿಯ ಮೇಲ್ಮೈನ ಮುಕ್ಕಾಲು ಭಾಗ ನೀರಿನಿಂದ ಆವೃತವಾಗಿದ್ದರೂ ನಮ್ಮ ಬಳಕೆಗೆ ಯೋಗ್ಯವಿರುವ ನೀರಿನ ಪ್ರಮಾಣ ಬಹಳ ಕಡಿಮೆ. ಒಟ್ಟು ಲಭ್ಯವಿರುವ ನೀರಿನಲ್ಲಿ ಶೇಕಡಾ ೯೭.೩ ರಷ್ಟು ನೀರು ಸಾಗರದಲ್ಲಿದೆ. ಶೇಕಡಾ ೨.೦ ರಷ್ಟು ನೀರು ಘನರೂಪ ಅಂದರೆ ಮಂಜುಗಡ್ಡೆಯಾಗಿದೆ. ವಾಯುಮಂಡಲದ ಆವಿ ಅಂದರೆ ಮೋಡ, ನದಿಗಳು, ಅಂತರ್ಜಲ, ಕೊಳವೆಬಾವಿಗಳು, ಸೇರಿ ಶೇಕಡಾ ೦.೭ ನೀರು ಇದೆ. ಇದರಲ್ಲಿ ಶೇಕಡಾ ೧ರಷ್ಟು ನೀರು ಮಾತ್ರ ಜೀವಿಗಳಿಗೆ ಆಧಾರವಾಗಿದೆ. ೧೯೭೦ ರ ದಶಕಕ್ಕೂ ಮೊದಲು ಭಾರತದ ಅಂತರ್ಜಲ ಮಳೆನೀರಿನ ಹತ್ತು ಪಟ್ಟು ಇತ್ತು. ಆದರೆ ಇಂದು ಕೊಳವೆ ಬಾವಿಗಳ ಸಂಖ್ಯೆ ಏರುತ್ತಿರುವದರಿಂದ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಅನೇಕ ಕಡೆ ಅದು ಸಂಪೂರ್ಣ ಬತ್ತಿ ಹೋಗಿದೆ.
ಭಾರತದ ಹಲವೆಡೆಯಂತೆ ಕರ್ನಾಟಕದಲ್ಲಿಯೂ ಇತ್ತೀಚೆಗೆ ನೀರಿನ ಸಮಸ್ಯೆ ಗಂಭೀರವಾಗುತ್ತಿದೆ. ಹಾಗೆ ನೋಡಿದರೆ ನೀರಿನ ಅಭಾವ ಇಂದು ವಿಶ್ವವನ್ನೆ ವ್ಯಾಪಿಸಿರುವ ಭಯಂಕರ ಸಮಸ್ಯೆಯಾಗಿದೆ. ಜಾಗತೀಕರಣದ ಹಾವಳಿಯಲ್ಲಿ ಈಗಾಗಲೇ ಲಾಭಖೋರ ರಾಷ್ಟ್ರೀಯ ಪಾಲಿಸಿಗಳಡಿಯಲ್ಲಿ ಕೋಲಾ ಪಾನೀಯ ಕಂಪನಿಗಳಿಗೆ ನದಿ, ಸರೋವರಗಳನ್ನು ಮಾರಿಕೊಂಡು ಜನತೆಯ ಪ್ರಾಣಕ್ಕೆ ಸಂಚಕಾರ ತಂದ ಘಟನೆಗಳು ಭಾರತದಂಥ ಬಡರಾಷ್ಟ್ರಗಳಲ್ಲಿ ವರದಿಯಾಗುತ್ತಿವೆ. ಜಾಗತಿಕ ಮಟ್ಟದಲ್ಲಿ ಮೂರನೇ ಮಹಾಯುದ್ಧವೇನಾದರೂ ಜರುಗಬಹುದಾದರೆ ಅದು ನೀರಿಗಾಗಿ ನಡೆಯುವ ಯುದ್ಧವಾಗಬಹುದೆಂಬ ಸಂಭವನೀಯತೆಯನ್ನು ತಜ್ಞರು ಚರ್ಚಿಸುತ್ತಿದ್ದಾರೆ.
ಕರ್ನಾಟಕದ ಪ್ರತಿಶತ ೬೦ ರಷ್ಟು ಗ್ರಾಮಗಳು ಮತ್ತು ಅಷ್ಟೇ ಪ್ರಮಾಣದ ನಗರಗಳು ನೀರಿನ ಅಭಾವವನ್ನು ಹೇಳಲಸದಳ ರೀತಿಯಲ್ಲಿ ಎದುರಿಸುತ್ತಿವೆ. ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಮಳೆಯ ಪ್ರಮಾಣ ಕುಸಿಯುತ್ತಿರುವ ಅಂತರ್ಜಲಮಟ್ಟ, ಒಂದು ಕಾರಣವಾದರೆ, ದೊರೆಯುವ ನೀರಿನ ಸಂಗ್ರಹಣೆ, ಇದ್ದ ನೀರಿನ ಅಸಮರ್ಪಕ ಸರಬರಾಜು, ಸಂಬಂಧಪಟ್ಟ ಇಲಾಖೆಯ ದಿವ್ಯ ನಿರ್ಲಕ್ಷ್ಯ ಇವು ಇನ್ನೊಂದು ಕಾರಣವಾಗುತ್ತಿವೆ. ಮುಂದುವರೆದು ಹೇಳುವುದಾದರೆ ಸದ್ಯ ಜನತೆಯ ನೀರಿನ ಬವಣೆಗೆ ಇವೇ ಪ್ರಮುಖ ಕಾರಣಗಳಾಗುತ್ತಿವೆ. ಬೇಸಿಗೆಯಲ್ಲಿ ನೀರಿನ ಅಭಾವ ಕಾಣಿಸಿಕೊಳ್ಳುತ್ತದೆ ಎಂಬ ಅರಿವಿದ್ದಾಗಲೂ ಸರಕಾರಿ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮವಾಗಿ ಯಾವೊಂದು ಯೋಜನೆ ಹಾಕಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೊರಟರು ಎಂಬಂತೆ ಏಪ್ರಿಲ್, ಮೇ ತಿಂಗಳುಗಳಲ್ಲಿ ಅಲ್ಪಕಾಲಿಕ, ಬೇಕಾಬಿಟ್ಟಿ ಯೋಜನೆಗಳನ್ನು ಹಾಕಿಕೊಳ್ಳುವುದು, ಒಂದಕ್ಕೆ ನಾಲ್ಕುಪಟ್ಟು ಹಣವನ್ನು ವಿನಿಯೋಗಿಸಿ ತುಂಬಾ ಕಳಪೆ ಕಾಮಗಾರಿ, ತರಾತುರಿಯಲ್ಲಿ ಅಶುದ್ಧ ನೀರು ಸರಬರಾಜು ಮಾಡುವದು, ಎಷ್ಟೋ ಶಹರುಗಳಲ್ಲಿ ನಲ್ಲಿಯ ಪೈಪುಗಳು ಡ್ರೈನೇಜ ಪೈಪುಗಳೊಂದಿಗೆ ಸೇರಿಕೊಂಡು ಅತ್ಯಂತ ಕಲುಷಿತ ನೀರು ಸರಬರಾಜು ಆಗಿರುವ ಸಂಗತಿಗಳು ಇವೆ. ನೀರಿಗಾಗಿ ಎಲ್ಲೆಂದರಲ್ಲಿ ಜನತೆ ದಿನಬೆಳಗಾದರೆ ಮುಷ್ಕರ, ಧರಣಿ, ರಾಸ್ತಾರೋಕೋ ಮುಂತಾದ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವದು ಅನಿವರ್‍ಯವಾಗುತ್ತಿದೆ. ಇದಕ್ಕೆಲ್ಲ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು? ಅಧಿಕಾರಿ ವರ್ಗ, ಆಳುವ ವರ್ಗದ ಪ್ರತಿನಿಧಿಗಳು ಈ ದಿಶೆಯಲ್ಲಿ ಸಂವೇದನಾಹೀನರಂತೆ ವರ್ತಿಸುತ್ತಿರುವದು ನಾಚಿಕೆ ತರಿಸುತ್ತಿದೆ. ನೆರೆಯ ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳನ್ನು ನೋಡಿ ನಾವು ಕಲಿಯಬೇಕಾಗಿದೆ. ಆ ರಾಜ್ಯಗಳ ಆಡಳಿತ ಮತ್ತು ಅಧಿಕಾರಿವರ್ಗ ಈ ದಿಸೆಯಲ್ಲಿ ಎಷ್ಟು ಸಚೇತಕವಾಗಿದೆಯೆಂದರೆ ಅವರು ಸಂಗ್ರಹಿತ ನೀರನ್ನು ಪೋಲಾಗದಂತೆ ಕಾಪಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಅವರು ತಮ್ಮ ನೀರಿನ ಅವಶ್ಯಕತೆಯನ್ನು ಗ್ರಾಮ ಮತ್ತು ನಗರಗಳ ವಿಸ್ತಾರ, ಜನಸಂಖ್ಯಾ ಪ್ರಮಾಣವನ್ನು ಅನುಲಕ್ಷಿಸಿ ರೂಪಿಸಿಕೊಂಡಿದ್ದಾರೆ. ನಮ್ಮ ರಾಜ್ಯದಲ್ಲೂ ಸರಕಾರ ಮತ್ತು ಜನತೆ ಎಚ್ಚೆತ್ತುಕೊಳ್ಳಬೇಕಿದೆ. ಜಲಸಂರಕ್ಷಣೆ ಮತ್ತು ಸಮರ್ಪಕವಾದ ಸರಬರಾಜು ಇವು ತುರ್ತಾಗಿ ಮಾಡಬೇಕಾದ ಕೆಲಸಗಳು. ನಮ್ಮ ರಾಜ್ಯದ ನೀರು ಸರಬರಾಜು ಮಂಡಳಿಗಳಲ್ಲಿ ಮನೆ ಮಾಡಿಕೊಂಡಿರುವ ಸೋಂಭೇರಿತನ ಮತ್ತು ಬ್ರಹ್ಮಾಂಡ ಭ್ರಷ್ಟತೆಗಳು ತೊಲಗಬೇಕು.ಜನತೆಯಲ್ಲಿಯೂ ನೀರನ್ನು ರಕ್ಷಿಸಿ ಬಳಸಿಕೊಳ್ಳುವ ಎಚ್ಚರ ಮೂಡಿಸಬೇಕು. ಈಗಗಲೆ ಸರ್ಕಾರ ಜಲಸಂವರ್ಧನೆ ಯೋಜನೆಗಳನ್ನು ಅಲ್ಲಲ್ಲಿ ಕಾರ್ಯಗತಗೊಳಿಸುತ್ತಿದೆಯಾದರೂ ಅದು ಪರಿಣಾಮಕಾರಿಯಾಗುವಂತೆ ಸಾಕಾರವಾಗುತ್ತಿಲ್ಲ. ನೀರು ಒದಗಿಸುವ ಕೆಲಸ ಯುದ್ಧೋಪಾದಿಯಲ್ಲಿ ನಡೆಯಬೇಕು. ಅಂದಾಗ ಮಾತ್ರ ನೀರಿನ ಅಭಾವಕ್ಕೆ ಪರಿಹಾರ ದೊರೆತೀತು. ಇಲ್ಲವಾದರೆ ಈ ಪರದಾಟ ಮುಂಬರುವ ದಿನಗಳಲ್ಲಿ ತೀರ ಗಂಭೀರ ರೀತಿಯ ಅನಾಹುತಗಳನ್ನು ಸೃಷ್ಟಿಸಲಿದೆ ಎಂಬ ಪ್ರಜ್ಞೆ ಇರಲಿ.
ಭೌತಿಕ ಮೌಲ್ಯಗಳಲ್ಲಿ ಅತ್ಯಂತ ಬೆಲೆಯುಳ್ಳದ್ದೂ ಮತ್ತು ಮೂರ್ತವಾಗಿ ಕೈಗೆಟಕುವ ಉಪಕರಣವೆಂದರೆ “ಭೂಮಿ”. ಈ ನೆಲದ ಮೆಲೆ ಹುಟ್ಟಿದೆಲ್ಲರಿಗೂ ಇದರ ಮೇಲೆ ಸಮನವದ ಹಕ್ಕು ಇದೆ ಎಂಬುದು ಒಂದು ತರ್ಕ ಮತ್ತು ಆದರ್ಶ. ವಾಸ್ತವದಲ್ಲಿ ಭೂಮಿಯ ಮೇಲೆ ಅಸಮಾನ ಒಡೆತನವಿದೆ. ಮೂಲತಃ ಅಲೆಮಾರಿಯಾದ ಮಾನವ ಸಮುದಾಯ ಒಂದೆಡೆ ನೆಲೆನಿಂತು ವೈಯಕ್ತಿಕ ಆಸ್ತಿ ಒಡೆತನಕ್ಕೆ ಸುರುವಿಟ್ಟುಕೊಂಡಂತೆ ಅಸಮಾನ ಹಂಚಿಕೆ ಪ್ರಾರಂಭವಾಗಿ ಅದೇ ಜಮೀನ್ದಾರಿ ವ್ಯವಸ್ಥೆಯ ಬರ್ಬರ ಕೃತ್ಯಗಳಿಗೆ ದಾರಿ ಮಾಡಿಕೊಟ್ಟಿತು. ಈ ಊಳಿಗಮಾನ್ಯ ವ್ಯವಸ್ಥೆ ತನ್ನ ಅಸಮಾನ ಹಂಚಿಕೆಯ ಮೂಲಗಳನ್ನು ಕಾಪಾಡಿಕೊಳ್ಳಲೆಂದೇ ತನಗೆ ಅನುಕೂಲವಾಗುವ ಕರ್ಮಸಿದ್ಧಾಂತವನ್ನು ರೂಪಿಸಿಕೊಂಡಿತು. ಕರ್ಮಸಿದ್ಧಾಂತದ ಉತ್ಪತ್ತಿಗಳಾದ ಪಾಪ, ಪುಣ್ಯ, ಸ್ವರ್ಗ, ನರಕ ಮುಂತಾದ ಭ್ರಮಾತ್ಮಕ ತಂತ್ರಗಳು ಇಂದಿಗೂ ಆಳವಗಿ ಆಚರಣೆಯಲ್ಲಿವೆ. ಹೀಗಾಗಿ ವ್ಯವಸ್ಥೆ ನಿರ್ಮಿಸಿರುವ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಅಸಮಾನತೆಗಳು ಇನ್ನೂ ಚಾಲ್ತಿಯಲ್ಲಿವೆ. ಎಲ್ಲ ಬಗೆಯ ತಾರತಮ್ಯಗಳು, ಅನಿಷ್ಟ ಜಾತಿ ಪದ್ಧತಿ ಕಾಲಕ್ಕೆ ತಕ್ಕ ಬೇರೆ ಬೇರೆ ಚಹರೆಗಳಲ್ಲಿ ತಾಂಡವ ಆಡುತ್ತಿದೆ. ಕೃಷಿಯ ಪ್ರಧಾನ ಉಪಕರಣವಾಗಿರುವ “ಭೂಮಿ” ದುಡಿಯದಿರುವವರ ಸುಪರ್ದಿನಲ್ಲೆ ಉಳಿದುಕೊಂಡು ಬರುತ್ತಿರುವದರಿಂದ ಬದಲಾದ ಆರ್ಥಿಕ ಸಂರಚನೆಗಳಲ್ಲಿಯೂ ಅದು ಪ್ರಮುಖ ಬಂಡವಾಳವಾಗುತ್ತಿದೆ. ಕರ್ನಾಟಕದಲ್ಲಿ ಭೂಮಿತಿ ಶಾಸನ ೧೯೭೨ ರಲ್ಲಿಯೇ ಜಾರಿಗೆ ಬಂದಿದೆಯಾದರೂ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶ್ರಮಿಕ ವರ್ಗದ ತೀವ್ರ ಹೋರಾಟದಿಂದಾಗಿ ಅಲ್ಲಿ ಭೂಸುಧಾರಣೆ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾದದ್ದು ಬಿಟ್ಟರೆ ಕರ್ನಾಟಕದ ಇನ್ನುಳಿದ ಯಾವ ಜಿಲ್ಲೆಯಲ್ಲೂ ಭೂಹಂಚಿಕೆ ಸಮರ್ಪಕವಾಗಿ ಆಗಲೇ ಇಲ್ಲ.
ಇಂದಿಗೂ ಕರ್ನಾಟಕದ ಸಾಗುವಳಿಯೋಗ್ಯವಾದ ಒಟ್ಟು ಭೂಮಿಯಲ್ಲಿ ಶೇಕಡಾ ೪೧.೯೬ ರಷ್ಟು ಭೂಮಿಯು ಶೇಕಡಾ ೧೧.೨೫ ರಷ್ಟು ಜನರ ಒಡೆತನದಲ್ಲಿದೆ. ಶೇಕಡಾ ೪೭.೭೩ ರಷ್ಟು ಭೂಮಿಯು ೪೬.೮೦ ರಷ್ಟು ಜನರ ಕೈಯಲ್ಲಿಯೂ ಶೇಕಡಾ ೧೦.೩೧ ರಷ್ಟು ಭೂಮಿಯು ಶೇಕಡಾ ೪೧.೯೫ ರಷ್ಟು ಜನರ ಸುಪರ್ದಿನಲ್ಲಿದೆ. ಅಂದರೆ ಹೆಚ್ಚು ಕೃಷಿಯೋಗ್ಯ ಭೂಮಿ ಕೆಲವೊಬ್ಬರ ಒಡೆತನದಲ್ಲಿಯೂ, ತೀರ ಕಡಿಮೆ ಪ್ರಮಾಣದ ಭೂಮಿ ಹಲವರ ಒಡೆತನದಲ್ಲಿಯೂ ಇದೆ. ಇಂದಿಗೂ ನಿಜವಾಗಿ ದುಡಿಯುವವರು ಅದರ ಒಡೆಯರಾಗಿಲ್ಲ. ತತ್ಕಾರಣವಾಗಿ ಕರ್ನಾಟಕದಲ್ಲಿ ರೂಪ ಬದಲಿಸಿಕೊಂಡ ಅರೆ ಪಾಳೇಗಾರಿ ವ್ಯವಸ್ಥೆ ಇದೆ. ಈ ವ್ಯವಸ್ಥೆ ಪೋಷಿಸಿದ ಅಸಮಾನತೆ ಬಿತ್ತುವ ಮೌಲ್ಯಗಳು, ನಂಬಿಕೆಗಳು ನಮ್ಮ ತಲೆಯನ್ನು ಆಳುತ್ತಿವೆ. ವಿಚಾರಗಳೇ ಮನುಷ್ಯರನ್ನು ಆಳುತ್ತವೆ. ಆದರೆ ಇಂದಿನವರೆಗೂ ಆಳುವವರ ವಿಚಾರಗಳೆ ಜನಸಾಮಾನ್ಯರ ದಿಕ್ಕು ತಪ್ಪಿಸುತ್ತಿವೆ. ತಮ್ಮ ಹಿತ ಕಾಪಾಡದ ವಿಚಾರಗಳನ್ನೇ ತಮ್ಮದೆಂದು ನಂಬಿಕೊಂಡು ಬಂದಿರುವ ಜನತೆ ಅರಿವಿಲ್ಲದೆ ತಿರುಗಣಿ ಮಡುವಿನ ಸೆಳವಿಗೆ ಸಿಲುಕಿಕೊಂಡಿರುತ್ತದೆ. ಈ ಸೆಳವಿನಿಂದ ತಪ್ಪಿಸಿಕೊಂಡು ಮೇಲೆದ್ದು ಬರುವದು ಅಷ್ಟು ಸುಲಭವಲ್ಲ. ಅದಕ್ಕೆ ಎಲ್ಲ ಮೂಲದಿಂದಲೂ ವಿಚಾರಕ್ರಾಂತಿ ಎದ್ದು ಬರಬೇಕಾಗುತ್ತದೆ. ಕುವೆಂಪು ತಮ್ಮ ಸಾಹಿತ್ಯದುದ್ದಕ್ಕೂ ಯಾವ ವೈಚಾರಿಕ, ವೈಜ್ಞಾನಿಕ ದೃಷ್ಟಿಕೋನಕ್ಕೆ, ಕ್ರಾಂತಿಗೆ ಪಂಥಾಹ್ವಾನ ನೀಡಿದ್ದರೋ ಅಂಥ ಕ್ರಾಂತಿಯು ಪುನರ್‌ಘಟಿಸಬೇಕಿದೆ.
ಜಮೀನ್ದಾರಿ ವ್ಯವಸ್ಥೆ ರೂಪ ಬದಲಿಸಿಕೊಂಡಿದೆ ಎಂಬ ಮಾತನ್ನು ಏಕೆ ಹೇಳುತ್ತಿದ್ದೇನೆಂದರೆ, ಒಕ್ಕಲುತನ ಪದ್ಧತಿ ಈ ಹಿಂದಿನ ಅವಸ್ಥೆ ದಾಟಿಕೊಂಡು ಹೊಸ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಸ್ವಾತಂತ್ರ್ಯೋತ್ತರ ಕರ್ನಾಟಕದಲ್ಲಿ ಕೃಷಿ ವ್ಯವಸ್ಥೆ ಸಂಪೂರ್ಣವಾಗಿ ಕುಸಿದುಹೋಗಿದೆ. ನೂರಾರು ಎಕರೆ ಭೂಮಿ ಹೊಂದಿದ್ದ ಗೌಡ, ಸಾಹುಕಾರ, ಜಮೀನ್ದಾರ, ವತನದಾರ, ದೇಶಪಾಂಡೆ, ಹೆಗಡೆಗಳೆನಿಸಿಕೊಂಡಿದ್ದ ಭೂಮಾಲೀಕರು ಅಸಮರ್ಪಕ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ದಿವಾಳಿಯೆದ್ದಿದ್ದಾರೆ. ಪರಂಪರಾಗತ ಈ ಭೂಮಾಲೀಕರು ಬದಲಾದ ಸಂದರ್ಭಗಳಿಗೆ ತಕ್ಕಂತೆ ಹೆಜ್ಜೆ ಹಾಕಿ ತಮ್ಮ ಆಸ್ತಿ-ಪಾಸ್ತಿಯನ್ನು ಮತ್ತೊಂದು ಲಾಭದಾಯಕ ಉದ್ದಿಮೆಗಳಲ್ಲಿ ತೊಡಗಿಸಿ ನಗರಗಳಿಗೆ ಯಾರು ವಲಸೆ ಬಂದಿರುವರೋ ಅವರು ಮಾತ್ರ ಇಂದು ಒಂದಷ್ಟು ನಿರುಮ್ಮಳವಾಗಿ ಬದುಕುತ್ತಿದ್ದಾರೆ. ಆದರೆ ಹಳ್ಳಿಗಳಲ್ಲಿಯೇ ಇರುವ ಸಣ್ಣಪುಟ್ಟ ರೈತರು, ಹಳೆಯ ಜೀವನ ವಿಧಾನಕ್ಕೆ ಅಂಟಿಕೊಂಡಿರುವ ವೃತ್ತಿ ಕಸಬುದಾರರು ತೀವ್ರ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ರೈತರ ಸರಣಿ ಆತ್ಮಹತ್ಯೆಗಳು ನಮ್ಮ ಹದಗೆಟ್ಟ ವ್ಯವಸ್ಥೆಗೆ ಸಾಕ್ಷಿಯಾಗಿವೆ. ಹಾಗೆ ನೋಡಿದರೆ ಇತ್ತೀಚಿನ ದಶಕಗಳಲ್ಲಿ ಅಂದರೆ ಪ್ರಾರಂಭದ ಪಂಚವಾರ್ಷಿಕ ಯೋಜನೆಗಳಡಿಯಲ್ಲಿ ಒಕ್ಕಲುತನದಲ್ಲಿ ಸಣ್ಣಪುಟ್ಟ ವೈಜ್ಞಾನಿಕ ಸುಧಾರಣೆಗಳು ಸುಧಾರಿತ ತಳಿಯ ಬೀಜ, ರಸಗೊಬ್ಬರ, ಕ್ರಿಮಿನಾಶಕ ಔಷಧಿಗಳು, ಹನಿ ನೀರಾವರಿ, ವ್ಯಾಪಾರಿ ಬೆಳೆಗಳು ಇವುಗಳಿಂದಾಗಿ ಅಧಿಕ ಇಳುವರಿಯೇನೋ ಬರುತ್ತಿದೆ. ಆದರೆ ಬೆಳೆದ ಧಾನ್ಯಕ್ಕೆ ಸ್ವಯತ್ತ ಮಾರುಕಟ್ಟೆ ಅಥವಾ ಸಮರ್ಪಕ ಬೆಲೆ, ಧಾನ್ಯಗಳ ದಾಸ್ತಾನು ವ್ಯವಸ್ಥೆ, ಸಂಸ್ಕರಣ ಘಟಕಗಳು ಇಲ್ಲದ್ದಕ್ಕಾಗಿ ರೈತರು ಹೆಚ್ಚೆಚ್ಚು ಬೆಳೆದರೂ ಹೂಡಿದಷ್ಟೂ ಹಣವೂ ಬರದೆ ಕಂಗಾಲಾಗುತ್ತಿದ್ದಾರೆ. ಇಂದು ಒಕ್ಕಲುತನ ಲಾಭದಾಯಕ ವೃತ್ತಿಯಾಗಿ ಉಳಿದಿಲ್ಲ. ನೇರವಾಗಿ ಕೃಷಿಯಲ್ಲಿ ತೊಡಗಿದ ರೈತರು ಸರಕಾರದ ಒಕ್ಕಲುತನ ವಿರೋಧಿ ನೀತಿಯಿಂದಾಗಿ ದಯನೀಯ ಸ್ಥಿತಿಗೆ ತಲುಪುತ್ತಿದ್ದರೆ, ಇನ್ನೊಂದೆಡೆ ಕೃಷಿ ಉತ್ಪಾದಿತ ವಸ್ತುಗಳ ಖರೀದಿ, ಬಿಕರಿ ವಹಿವಾಟು ನಡೆಸುವ ದಲ್ಲಾಳಿ ಸಮುದಾಯ ಇದರ ನಿವ್ವಳ ಲಾಭ ದೋಚುತ್ತಿದೆ. ಆದ್ದರಿಂದ ಪ್ರತ್ಯಕ್ಷ ಭೂ ಒಡೆತನಕ್ಕಿಂತ ಪರೋಕ್ಷ ಭೂ ಒಡೆತನವೇ ದೊಡ್ಡ ಬಂಡವಾಳವಾಗಿ ಪರಿವರ್ತನೆಯಾಗುತ್ತಿದೆ. ಈ ರೀತಿಯಲ್ಲಿ ಜಮೀನ್ದಾರೀ ವ್ಯವಸ್ಥೆ ಸ್ಥಾನಪಲ್ಲಟವಾಗಿದೆ.
ಭೂಮಿಯಲ್ಲಿ ಕೃಷಿ ಮಾಡುವುದು ಇಂದು ಲಾಭದಾಯಕವಾಗಿರಲಿಕ್ಕಿಲ್ಲ. ಆದರೆ ಭೂಮಿಯ ಮುಖಬೆಲೆ ಅದರಲ್ಲೂ ಕೃಷಿಯೇತರ ಚಟುವಟಿಕೆಗಳಲ್ಲಿ ಅಂದರೆ ಸೈಟು, ಕಾಂಪ್ಲೆಕ್ಸು, ಅಂಗಡಿ ಮುಂಗಟ್ಟು ಈ ತೆರದಲ್ಲಿ ಅದರ ಬೆಲೆ ಗಗನಕ್ಕೇರುತ್ತಿದೆ. ದೊಡ್ಡ ದೊಡ್ಡ ಶಹರುಗಳಲ್ಲಿ ಭೂಮಿಯೇ ಪ್ರಧಾನ ವಹಿವಾಟು ಆಗಿದ್ದು ಎಲ್ಲ ತರದ ಭ್ರಷ್ಟಾಚಾರ, ಹಿಂಸೆ, ಕ್ರೌರ್ಯ ಅಲ್ಲಿ ಮನೆಮಾಡಿಕೊಂಡಿವೆ. ಬೆಂಗಳೂರು ಒಂದು ನಗರದಲ್ಲಿಯೇ ಘಟಿಸಿದ ಹಲವಾರು ಭೂಹಗರಣಗಳನ್ನು ನೆನಪಿಸಿಕೊಂಡರೂ ಸಾಕು, ಬಂಡವಾಳ ವ್ಯವಸ್ಥೆಯ ಕಬಂಧ ಬಾಹುಗಳ ಅರಿವಾಗದೇ ಇರದು. ಈ ರೀತಿಯ ಭೂವ್ಯಾಪಾರೀಕರಣ ಬಡವ-ಬಲ್ಲಿದರ ನಡುವೆ, ಕೃಷಿಕ-ಕೃಷಿಯೇತರ ವ್ಯಾಪಾರಗಳ ನಡುವೆ ದೊಡ್ಡ ಕಂದಕವನ್ನು ನಿರ್ಮಾಣ ಮಾಡುತ್ತಿದೆ. ಹಳ್ಳಿಗಳಲ್ಲಿ ಬೇಸಾಯದ ದಿವಾಳೀಕರಣ, ನಗರಗಳಲ್ಲಿ ವಿದೇಶಿ ಬಂಡವಾಳೀಕರಣ ಇವೆರಡೂ ಕನ್ನಡ ಜನತೆಯ ಬದುಕನ್ನು ಧ್ವಂಸಗೊಳಿಸುತ್ತಿವೆ. ಆದ್ದರಿಂದ ಆಡಳಿತವನ್ನು ನಿಯಂತ್ರಿಸುವ ಸರಕಾರ ತನ್ನ ವ್ಯಾಪಾರಿ ನೀತಿಗಳಲ್ಲಿಯೇ (ಪಾಲಿಸಿ) ಸಮೂಲ ಬದಲಾವಣೆ ತಂದು ಜಲ-ನೆಲವನ್ನು ರಾಷ್ಟ್ರೀಯ ಸಂಪತ್ತಾಗಿ ಪರಿಗಣಿಸಬೇಕು. ನೀರು ಮತ್ತು ನೆಲ ಆ ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಸಮರ್ಪಕವಾಗಿ ವಿತರಣೆಯಾಗುವಂತೆ ನೋಡಿಕೊಳ್ಳುವುದು ಅತಿ ಮುಖ್ಯ. ಮಾರುಕಟ್ಟೆಯಲ್ಲಿ ಒಂದು ಲೀಟರ್ ಹಾಲಿಗೆ ಹನ್ನೆರಡು ರೂಪಾಯಿ ಇದ್ದರೆ ಅದೇ ಶುದ್ಧ ಕುಡಿಯುವ ಒಂದು ಲೀಟರ್ ನೀರಿಗೆ ಹದಿನೈದು ರೂಪಾಯಿ ಇದೆ. ಅದರೆ ಹಾಲು ಕುಡಿದು ಬದುಕಲಗದು. ಬದುಕುವುದಕ್ಕೆ ನೀರೇ ಬೇಕು. ಬಾಳುವುದಕ್ಕೆ ಒಂದು ಸೂರೇ ಬೇಕು. ಜವಾಬ್ದಾರಿಯುತ ಸರಕಾರವೊಂದಕ್ಕೆ ತನ್ನ ನಾಡಿನಲ್ಲಿ ವಾಸಿಸುತ್ತಿರುವ ಜನತೆಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಬೇಕು.

ಅಕ್ಷರ ಮತ್ತು ಕೆಲಸ :

ಅಕ್ಷರ ಮಾನವನ ಅದ್ಭುತ ಆವಿಷ್ಕಾರ.
ಇದು ಸರ್ವ ಜ್ಞಾನ ಶಿಸ್ತುಗಳನ್ನು ಭರಿಸಿಕೊಳ್ಳುವ ಸಶಕ್ತ ಮಾಧ್ಯಮ. ಜಗತ್ತಿಗೆ ತಾನು ತೆರೆದುಕೊಳ್ಳುವ, ಜಗತ್ತನ್ನು ತನ್ನೊಳಗೆ ಆಹ್ವಾನಿಸಿಕೊಳ್ಳುವ ಪರಿಣಾಮಕಾರಿ ಉಪಕರಣವೆನಿಸಿಕೊಂಡಿರುವ ಈ ಅಕ್ಷರ ವೈದಿಕಶಾಹಿಯ ಸ್ವಾರ್ಥದಿಂದಾಗಿ ಈ ನೆಲದಲ್ಲಿ ಎಲ್ಲರಿಗೂ ದಕ್ಕಿರಲೇ ಇಲ್ಲ. ವರ್ಣಾಶ್ರಮ ಪದ್ಧತಿಯನ್ನು ಅನೂಚಾನವಾಗಿ ಆಚರಿಸಿಕೊಂಡು ಬಂದಿರುವ ಕಾರಣವಾಗಿ ಶೂದ್ರರು, ದಲಿತರು, ಮಹಿಳೆಯರು ಮೊನ್ನೆಮೊನ್ನೆಯವರೆಗೂ ಅಕ್ಷರ ಬೆಳಕಿನಿಂದ ದೂರವೇ ಉಳಿದಿದ್ದರು. ಬ್ರಿಟಿಷರ ಆಗಮನ, ದೇಶೀ ನಾಯಕರುಗಳ ಸುಧಾರಣಾವಾದಿ ಧೋರಣೆ, ಶೂದ್ರರ-ದಲಿತರ ಎಚ್ಚೆತ್ತ ಪ್ರಜ್ಞೆಯಿಂದಾಗಿ ತೀರ ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ತೆರೆದುಕೊಂಡಿದ್ದೇವೆ. ಈಗ ಪ್ರತಿಯೊಬ್ಬರಿಗೂ ಅಕ್ಷರ ಮತ್ತು ಅನ್ನ ಎಂಬ ಪಾಲಿಸಿಯನ್ನು ಒಪ್ಪಿಕೊಂಡೂ ಅರ್ಧ ಶತಮಾನ ಸಂದುಹೋಗಿದೆ. ಸ್ವತಂತ್ರ ಭಾರತದಲ್ಲಿ ಕಳೆದ ಅರ್ಧ ಶತಮಾನದ ಅವಧಿಯಲ್ಲಿ ಹತ್ತಾರು ರಾಜಕೀಯ ಪಕ್ಷಗಳು ಆಡಳಿತ ನಡೆಸಿವೆ. ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಈ ಕುರಿತು ದೊಡ್ಡ ಭರವಸೆ ನೀಡಿಯೇ ಗೆದ್ದು ಬಂದು ಗದ್ದುಗೆ ಹಿಡಿದಿವೆ. ಆದರೆ ಇಂದು ನಮ್ಮ ಶಿಕ್ಷಣದ ಗತಿ ಪ್ರಾಥಮಿಕ ಮಟ್ಟದಿಂದ ಉನ್ನತ ಹಂತದವರೆಗೆ ಏನಾಗಿದೆ ಎಂಬುದನ್ನು ನೋಡಿದರೆ ಖಂಡಿತ ಸಿಟ್ಟು ಮತ್ತು ಜಿಗುಪ್ಸೆ ಹುಟ್ಟುತ್ತದೆ. ನಾನು ಯಾಕೆ ‘ಸಿಟ್ಟು’ ಮತ್ತು ‘ಜಿಗುಪ್ಸೆ’ ಎಂಬ ಶಬ್ದಗಳನ್ನು ಬಳಸುತ್ತಿದ್ದೇನೆಂದರೆ, ಅಭಿವೃದ್ಧಿಶೀಲ ರಾಷ್ಟ್ರಗಳ ಮುಂಚೂಣಿಯಲ್ಲಿರುವ ದೇಶವೊಂದಕ್ಕೆ ಸ್ವಾತಂತ್ರ್ಯ ದೊರೆತು ೫೮ ವರ್ಷ ಗತಿಸಿದರೂ ತನ್ನ ಅರ್ಧದಷ್ಟು ಪ್ರಜೆಗಳಿಗೆ ಕನಿಷ್ಠ ಅಕ್ಷರ ಕೊಡಲು ಸಾಧ್ಯವಾಗಿಲ್ಲ ಎಂದರೆ ಏನರ್ಥ? ಇಂಥ ಸ್ಥಿತಿಯನ್ನು ಒಪ್ಪಿಕೊಂಡಿರುವ ಪ್ರಜೆಗಳ ಸೋಂಭೇರಿತನಕ್ಕೆ, ಅವರ ರಾಜಿ ಮನೋಭಾವದ ದಾಸ್ಯತ್ವಕ್ಕೆ ಜಿಗುಪ್ಸೆ ಬರುತ್ತದೆ. ಆಳುವ ವರ್ಗವು ಉದ್ದೇಶಪೂರ್ವಕವಾಗಿಯೇ ಜನರನ್ನು ಅಕ್ಷರದಿಂದ ವಂಚಿತರನ್ನಾಗಿ ಮಾಡುತ್ತಿದೆಯಲ್ಲ; ಅದಕ್ಕಾಗಿ ಸಿಟ್ಟು, ತಳಮಳಗಳು ಹುಟ್ಟುತ್ತವೆ.
ಒಟ್ಟು ದೇಶದ ಸಾಕ್ಷರತೆ ೨೦೦೧ನೇ ಸಾಲಿನ ಮಾಹಿತಿ ಪ್ರಕಾರ ೬೫.೩೮ ಮಾತ್ರ. ಕರ್ನಾಟಕದ ಸಾಕ್ಷರತೆ ೬೭.೦೪ ಇದೆ. ಇದು ಸರಕಾರ ಕೊಡಮಾಡಿದ ಮಾಹಿತಿ. ವಾಸ್ತವದಲ್ಲಿ ಸಾಕ್ಷರತೆ ಪ್ರಮಾಣ ಪ್ರತಿಶತ ೫೦ ಕ್ಕಿಂತಲೂ ಕಡಿಮೆ ಇದೆ. ಅದರಲ್ಲೂ ಮಹಿಳೆಯರ ಸಾಕ್ಷರತೆ ಪ್ರಮಾಣ ಪುರುಷರ ಅರ್ಧದಷ್ಟು ಇಲ್ಲ. ಗ್ರಾಮೀಣ ಪ್ರದೇಶದ ಮಹಿಳೆಯರು ಇಂದಿಗೂ ಶಾಲೆಗಳ ಮುಖ ನೋಡಿಲ್ಲ. ಕರ್ನಾಟಕದಲ್ಲಿ ೧೯೯೧ನೇ ಸಾಲಿನ ಜನಗಣತಿ ಪ್ರಕಾರ ಸಾಕ್ಷರತೆ ೫೬.೦ ರಷ್ಟು ಇತ್ತು. ಈಗ ೬೭.೦೪ ರಷ್ಟಾಗಿದೆ. ಅಂದರೆ ಹತ್ತು ವರ್ಷಗಳ ಅವಧಿಯಲ್ಲಿ ಪ್ರತಿಶತ ೧೧ ರಷ್ಟಾದರೆ ವರ್ಷಕ್ಕೆ ಶೇಕಡಾ ೧.೧೦ ಪರಿಮಾಣದಲ್ಲಿ ಮಾತ್ರ ಶಿಕ್ಷಣದಲ್ಲಿ ಹೆಚ್ಚಳ ತರಲು ಸಾಧ್ಯವಾಗುತ್ತಿದೆ. ಇದು ನಿರಾಶಾದಾಯಕ ಬೆಳವಣಿಗೆ. ನಿರ್ದಿಷ್ಟ ಅವಧಿ ನಿಗಧಿಪಡಿಸಿ ಸಂಪೂರ್ಣ ಸಾಕ್ಷರತೆ ಸಾಧಿಸುವದು ಅಸಾಧ್ಯವೇನಲ್ಲ. ಆದರೆ ಜನತೆಗೆ ಶಿಕ್ಷಣ ನೀಡುವ ಮನಸ್ಸು ಪ್ರಭುತ್ವಕ್ಕೆ ಇಲ್ಲವೆಂದೇ ವಿಧಿತವಾಗುತ್ತದೆ.
ನಮ್ಮ ನಾಡಿನ ಸರ್ಕಾರ, ಮಠಾಧೀಶರು, ರಾಜಕೀಯ ಮುತ್ಸದ್ದಿಗಳು ಖಾಸಗಿ ವೈದ್ಯಕೀಯ, ತಾಂತ್ರಿಕ, ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ತೆಗೆಯಲು ಉತ್ಸಾಹ ತೋರಿಸುವಷ್ಟು ಪ್ರಾಥಮಿಕ, ಪ್ರೌಢಮಟ್ಟದ ಕನ್ನಡ ಮಾಧ್ಯಮ ಶಾಲೆಗಳನ್ನು ತೆಗೆಯಲು ತೋರಿಸುವುದಿಲ್ಲ. ಕ್ರಿ.ಶ. ೧೯೮೦ ರಿಂದಲೂ ಕರ್ನಾಟಕವು ಉನ್ನತ, ವೃತ್ತಿಪರ ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವ ಕೊಡುತ್ತಿದ್ದು ಪ್ರಾಥಮಿಕ ಹಂತವನ್ನು ಕಡೆಗಣಿಸುತ್ತಿದೆ. ಸರಕಾರವೂ ಲಾಭಖೋರ ಶಿಕ್ಷಣ ಸಂಸ್ಥೆಗಳಿಗೆ ನೀಡುವ ಪ್ರೋತ್ಸಾಹವನ್ನು ತನ್ನದೆ ಸಾರ್ವಜನಿಕ ವಲಯದ ಶಾಲಾ, ಕಾಲೇಜುಗಳಿಗೆ ನೀಡುತ್ತಿಲ್ಲ ಎಂಬುದೇ ದೊಡ್ಡ ವಿಪರ್‍ಯಾಸವಾಗಿದೆ. ಇತ್ತೀಚಿನ ದಿನಗಳಲ್ಲಂತೂ ಇವರೆಲ್ಲರಿಗೂ ಉನ್ನತ ಶಿಕ್ಷಣವೆಂಬುದು ನಿವ್ವಳ ಹಣ ಮಾಡುವ ಉದ್ಯಮವಾಗುತ್ತಿದೆ. ಒಟ್ಟು ರಾಷ್ಟ್ರದಲ್ಲಿರುವ ಅರ್ಧದಷ್ಟು ತಾಂತ್ರಿಕ ಕಾಲೇಜುಗಳು ಕರ್ನಾಟಕವೊಂದರಲ್ಲಿಯೇ ಇರುವುದಕ್ಕೆ ಮುಖ್ಯ ಕಾರಣ ಈ ಉದ್ಯಮಶೀಲತೆಯ ಹಪಾಹಪಿಯೇ ಆಗಿದೆ. ವೃತ್ತಿಪರ ಪದವಿಯ ಸೀಟುಗಳಾದರೂ ಕರ್ನಾಟಕದವರಿಗಿಂತ ಇತರ ರಾಜ್ಯದವರಿಗೆ ಮಾರಿಕೊಳ್ಳಲೆಂದೇ ಸೃಷ್ಟಿಯಾಗಿವೆಯೆಂಬುದನ್ನು ಗಮನಿಸಬೇಕು. ಕಳೆದ ಐದಾರು ವರ್ಷಗಳಿಂದ ಸಿ.ಇ.ಟಿ.ಯಲ್ಲಾಗುತ್ತಿರುವ ಗೊಂದಲಗಳೇ ಆಳುವವರ ಬಂಡವಾಳಶಾಹಿಪರ ಲಾಬಿಗೆ ಸಾಕ್ಷಿಯಾಗಿವೆ.
ಸದ್ಯ ಅಸ್ತಿತ್ವದಲ್ಲಿರುವ ವ್ಯವಸ್ಥೆಯೇ ಸುಧಾರಿಸಲು ಸಾಧ್ಯವಿಲ್ಲವೆನ್ನುವ್ಷ್ಟು ಹದಗೆಟ್ಟಿದೆ. ಮತ್ತೆ ಅಂಥ ಸಂದರ್ಭದಲ್ಲಿ ಜಾಗತೀಕರಣದ ಹಾವಳಿ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಧೂಳಿಪಟ ಮಾಡುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿನ ಖಾಸಗೀಕರಣ ಕುಟುಕು ಜೀವ ಹಿಡಿದವನ ಕುತ್ತಿಗೆ ಒತ್ತಿದಂತೆ ಆಗುತ್ತಿದೆ. ಈಗಾಗಲೇ ವಿದೇಶಿ ಶಿಕ್ಷಣ ಕಂಪನಿಗಳು ಬೆಂಗಳೂರು ನಗರದಲ್ಲಿ ತಮ್ಮ ಅಕ್ಷರ ಮಳಿಗೆ ತೆರೆದಿಟ್ಟುಕೊಂಡಿವೆ. ಇಂಥ ವಿದೇಶಿ ಕಂಪನಿ ನಿರ್ಮಿತ ಶಾಲಾ ಕಾಲೇಜುಗಳೊಂದಿಗೆ ಸ್ಪರ್ಧೆ ಹೂಡುವ ನೆಪದಲ್ಲಿ ಸ್ಥಳೀಯ ಶಿಕ್ಷಣ ಸಂಸ್ಥೆಗಳು ಸ್ವಯಂ ಸುಧಾರಣೆ ನೆಪದಲ್ಲಿ ಮನಬಂದಂತೆ ಶುಲ್ಕ ಏರಿಸುತ್ತಿವೆ. ಗುಣಮಟ್ಟದ ಶಿಕ್ಷಣವೆಂಬ ಘೋಷಣೆಯ ಅಡಿಯಲ್ಲಿ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ ಅನುದಾನ ಕಡಿತ ಮಾಡುತ್ತಿದೆ. ತತ್ಪರಿಣಾಮವಾಗಿ ಸರಕಾರಿ, ಅರೆ ಸರಕಾರಿ ಶಾಲಾ, ಕಾಲೇಜುಗಳು ಮುಚ್ಚಲ್ಪಟ್ಟು ಶಿಕ್ಷಣ ಸಂಪೂರ್ಣ ಖಾಸಗಿ ಒಡೆತನಕ್ಕೆ ಸರಿದುಕೊಳ್ಳುತ್ತಿದೆ. ಈಗಾಗಲೇ ಇದರ ಬಿಸಿ ಜನತೆಗೆ ತಟ್ಟಿದೆ. ಸಣ್ಣ ಉದಾಹರಣೆ ಹೇಳುವುದಾದರೆ, ಕಳೆದ ವರ್ಷಗಳಲ್ಲಿ ಬಿ.ಎ. ಪದವಿಗೆ ಸಾಮಾನ್ಯ ಮಟ್ಟದ ವಿದ್ಯಾರ್ಥಿಗೆ ೮೦೦/- ರೂಪಾಯಿಗಳಷ್ಟು ಇದ್ದ ಶುಲ್ಕ ಈ ವರ್ಷ ಹತ್ತಿರ ಹತ್ತಿರ ೨೦೦೦/- ರೂಪಾಯಿಗೆ ಬಂದು ತಲುಪಿದೆ. ಇದರ ನೇರ ಪರಿಣಾಮ ಬಡವರು, ಗ್ರಾಮವಾಸಿಗಳು, ದಲಿತರು, ಮಹಿಳೆಯರು ಬಲಿಯಾಗುತ್ತಾರೆ. ಏರುತ್ತಿರುವ ಶುಲ್ಕದಿಂದಾಗಿ ಅವರು ಮತ್ತೆ ಅಕ್ಷರ ಲೋಕದಿಂದ ದೂರವೇ ಉಳಿದುಬಿಡುತ್ತಿದ್ದಾರೆ.
“ಶಿಕ್ಷಣದಲ್ಲಿ ಗುಣಮಟ್ಟ” ಎಂಬ ಶೈಕ್ಷಣಿಕ ಪಾಲಿಸಿಯೇ ಜನವಿರೋಧಿ ಮತ್ತು ಪ್ರಾದೇಶಿಕ ಭಾಷಾ ವಿರೋಧಿಯಾಗಿದೆ. ಗುಣಮಟ್ಟ ಎತ್ತರಿಸುವ ನೆಪದಲ್ಲಿ ಕ್ರಿಯಾಶೀಲವಾಗಿರುವ “ನ್ಯಾಕ್”ನಂಥ ಯೋಜನೆಗಳು ಸಂಬಂಧಪಟ್ಟವರಿಗೂ ಅರಿವಿರದಂತೆ ಇಂಗ್ಲೀಷ ಭಾಷಾ ಹೇರಿಕೆ ಮತ್ತು ಸಾರ್ವಜನಿಕ ಬಂಡವಾಳದ ಹಿಂತೆಗೆತವೇ ಆಗಿದೆ. ಹೀಗಾಗಿ ಖಾಸಗೀಕರಣದ ಮುಖ್ಯ “ಅಜೆಂಡಾ” ಎಂದರೆ ಶಿಕ್ಷಣದ ದುಬಾರೀಕರಣ. ತನ್ಮೂಲಕ ವಿದ್ಯೆ ಈ ಹಿಮದಿನಂತೆ ಮತ್ತೆ ಕೆಲವೇ ಜನರ ಸ್ವತ್ತಾಗುವುದು. ನಮ್ಮ ಘನ ಸರಕಾರವು ಈಗಾಗಲೇ “ಉನ್ನತ ಶಿಕ್ಷಣ ಗ್ರಾಹಕ ಸರಕು”; ದುಡ್ಡಿದ್ದವರು ಮಾತ್ರ ಅದನ್ನು ಖರೀದಿಸಿಕೊಳ್ಳತಕ್ಕದು ಎಂದು ಘೋಷಿಸಿದೆ. ಶಿಕ್ಷಣ ಕ್ಷೇತ್ರದಲ್ಲಿನ ಸಾಮಾಜಿಕ ನ್ಯಾಯದ ಮೀಸಲಾತಿ ಪದ್ಧತಿಯ ಧ್ವಂಸವೇ ಇದರ ಮೊದಲ ಗುರಿಯಾಗಿದೆ. ಈಗ ಚಾಲ್ತಿಯಲ್ಲಿರುವ ಸಾರ್ವಜನಿಕ ಕ್ಷೇತ್ರದಲ್ಲಿನ ಮೀಸಲಾತಿ ವ್ಯವಸ್ಥೆ ಖಾಸಗಿ ಕ್ಷೇತ್ರಕ್ಕೂ ವಿಸ್ತರಿಸಿಕೊಳ್ಳಬೇಕು ಎಂಬ ಮಾತು ತುಟಿ ಅನುಕಂಪ ಮಾತ್ರವಾಗಿ ಉಳಿಯುತ್ತದೆ. ನಿಜವಾದ ಅರ್ಥದಲ್ಲಿ ಅದನ್ನು ಜಾರಿಗೊಳಿಸುವದು ಸಾಧ್ಯವಾಗದು. ಈ ದಿಶೆಯಲ್ಲಿ ದಮನಿತ ಶೋಷಿತ ಜನತೆ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಇತಿಹಾಸದ ಗಾಲಿ ಹಿಮ್ಮುಖವಾಗಿ ಚಲಿಸುವುದರಲ್ಲಿ ಸಂಶಯವಿಲ್ಲ. ಆದುದರಿಂದ ಚಳುವಳಿ, ಹೋರಾಟಗಳು ಮುಂದಿನ ದಿನಗಳಲ್ಲಿ ಅನಿವಾರ್‍ಯವಾಗಲಿವೆ. ಅವು ಮಾತ್ರ ಮುಂದಿನ ದಾರಿಗೆ ಪ್ರಾಣಮಿತ್ರರಾಗಲಿವೆ.
ಜನತೆ ರೊಚ್ಚಿಗೇಳುವ ಪೂರ್ವದಲ್ಲಿಯೇ ಸರಕಾರ ಎಚ್ಚೆತ್ತುಕೊಳ್ಳುವದು ಒಳಿತು. ಪ್ರಾಥಮಿಕ ಮತ್ತು ಪ್ರೌಢಮಟ್ಟದ ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವದು ಮತ್ತು ಪ್ರತಿಯೊಬ್ಬ ಪ್ರಜೆಗೂ ಅದು ದಕ್ಕುವಂತಾಗಬೇಕು. ಜನತೆಗೆ ಅಕ್ಷರ ನೀಡುವಲ್ಲಿ ಸರಕಾರ ಪ್ರಬಲ ಇಚ್ಛಾಶಕ್ತಿ ಹೊಂದಿರಬೇಕೇ ವಿನಾ ಮೂಗಿಗೆ ತುಪ್ಪ ಒರೆಸುವಂಥ ನಿರರ್ಥಕ ಯೋಜನೆಗಳನ್ನು ತರಬಾರದು. ಸರಕಾರಿ ಶಾಲೆಗಳ ಮಟ್ಟ ಮತ್ತು ಮೌಲ್ಯ ಎರಡನ್ನೂ ಎತ್ತರಿಸಿ ಇಲ್ಲಿರುವ ಖಾಸಗಿ ಒಡೆತನಕ್ಕೆ ಮುಟ್ಟುಗೋಲು ಹಾಕಬೇಕು. ಈಗ ಸುಮಾರು ೨೦-೨೫ ವರ್ಷಗಳ ಹಿಂದೆ ಕರ್ನಾಟಕದಾದ್ಯಂತ ಸಾರ್ವಜನಿಕ ಪ್ರಾಥಮಿಕ, ಪ್ರೌಢಶಾಲೆಗಳು ನೀಡುತ್ತಿದ್ದ ಶಿಕ್ಷಣ ಮಟ್ಟಕ್ಕೂ, ಇಂದು ಅವೇ ಶಾಲೆಗಳು ಕೊಡುತ್ತಿರುವ ಶಿಕ್ಷಣ ಮಟ್ಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ, ಏಕೆ? ಇಂದು ಒಂಚೂರು ಆರ್ಥಿಕ ಅನುಕೂಲತೆ ಇದ್ದವರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ, ಅದರಲ್ಲೂ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸಲು ಇಷ್ಟಪಡುತ್ತಿಲ್ಲ. ಶತ ಸಾಹಸಪಟ್ಟಾದರೂ ತಮ್ಮ ಮಕ್ಕಳನ್ನು ಖಾಸಗಿ ಇಂಗ್ಲೀಷ ಮಾಧ್ಯಮ ಶಾಲೆಗಳಿಗೆ ಕಳುಹಿಸಲು ಪರದಾಡುತ್ತಾರೆ, ಏಕೆ? ಕನ್ನಡ ಸರಕಾರಿ ಶಾಲೆಗಳ ಈ ಮೊದಲಿನ ಗುಣಮಟ್ಟ, ಮೌಲ್ಯ ಏಕೆ ಹಾಳಾಗಿವೆ? ಅದಕ್ಕೆ ಯಾರು ಹೊಣೆಗಾರರು? ಆತ್ಮವಿಮರ್ಶೆ ಮಾಡಿಕೊಳ್ಳಬೇಕಲ್ಲವೆ?
ಏಕೆಂದರೆ ಈ ಮೊದಲಿನಂತೆ ಸರಕಾರಿ ಶಾಲೆಗಳು ಉತ್ತಮವಾಗಿಲ್ಲ ಎಂಬ ಸತ್ಯವೂ, ಇಂಗ್ಲೀಷ ಮಾಧ್ಯಮದಲ್ಲಿ ಓದಿಸಿದರೆ ಮಾತ್ರ ಸಾರ್ಥಕವೆಂಬ ವ್ಯಾವಹಾರಿಕ ಮನೋಭಾವವೂ ಜನತೆಯ ತಲೆ ಹೊಕ್ಕಿದೆ. ಇಂಗ್ಲೀಷ ಕಲಿಕೆ ಮಾತ್ರ ತಮ್ಮ ಮುಂದಿನ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬ ಭ್ರಮೆಗಳು ಅವರನ್ನು ಅಟ್ಟಾಡಿಸುತ್ತಿವೆ. ಈ ತೆರನ ಭ್ರಮೆಗಳನ್ನು ಹೊಡೆದೋಡಿಸಬೇಕಾದ ಜವಾಬ್ದಾರಿ ಕೆಲಸವನ್ನು ಬುದ್ಧಿಜೀವಿಗಳು, ಶಿಕ್ಷಣತಜ್ಞರು, ಆಡಳಿತವರ್ಗ ಎಲ್ಲರೂ ಮಾಡಬೇಕಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಕಡ್ಡಾಯ ಕುರಿತು ಗೋಕಾಕ ವರದಿಯನ್ನು ಜಾರಿಗೊಳಿಸಬೇಕು. ಮಹಾರಾಷ್ಟ್ರದಲ್ಲಿರುವ ಕನ್ನಡ ಮಾತೃಭಾಷಿಗಳು ಮರಾಠಿ ಮಾಧ್ಯಮದಲ್ಲಿ ಕಲಿತು ಬದುಕುವುದು ಸಾಧ್ಯವಾಗುವುದಾದರೆ, ಕರ್ನಾಟಕದಲ್ಲಿರುವ ಇತರ ಭಾಷಿಗರಿಗೆ ಕನ್ನಡ ಕಲಿಯುವುದು ಕಷ್ಟ ಏಕಾಗಬೇಕು? ಒಮ್ಮೆ ಭಾಷಾವಾರು ಪ್ರಾಂತ ರಚನೆ ಒಪ್ಪಿಕೊಂಡ ಮೇಲೆ ಆಯಾ ಭಾಷಿಕ ರಾಜ್ಯಗಳಲ್ಲಿ ವಾಸಿಸುವ ಜನತೆ ಆಯಾ ಭಾಷೆಯನ್ನು ಕಲಿಯಬೇಕು. ಭಾಷೆ ಎನ್ನುವುದು ವಿಷಯವಸ್ತುವಲ್ಲ ಅದೊಂದು ಮಾಧ್ಯಮ. ಅಂತೆಯೇ ಅದು ರೂಢಿಯೂ ಹೌದು. ನಿರಂತರ ಸಂಪರ್ಕ ಮತ್ತು ಬದುಕಿನ ಅನಿವಾರ್‍ಯತೆ ಯಾವುದೇ ಭಾಷೆಯನ್ನಾದರೂ ಕಲಿಸಿಬಿಡುತ್ತದೆ. ಹಾಗೆಯೇ ಯಾವುದೇ ಭಾಷೆ ಶ್ರೇಷ್ಠ ಕನಿಷ್ಠವೆಂಬ ನಂಬಿಕೆಯೂ ಅವೈಜ್ಞಾನಿಕವಾಗಿದೆ. ಇಂಗ್ಲೀಷ ಶ್ರೇಷ್ಠ ಮತ್ತು ಅನಿವಾರ್‍ಯ ಎಂಬ ಭ್ರಮೆ ತುಂಬಿದವರು ಆಳರಸರು. ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಹಣದ ಥೈಲಿ ತುಂಬಿಕೊಳ್ಳುತ್ತಿರುವವರು ಶಿಕ್ಷಣ ಕ್ಷೇತ್ರದ ವ್ಯಾಪಾರಿ ದಲ್ಲಾಳಿಗಳು. ಇದಕ್ಕೆ ಬಲಿಯಾಗುತ್ತಿರುವವರೇ ಅಮಾಯಕ ಕನ್ನಡಿಗರು. ಮಗುವಿನಲ್ಲಿ ಅಭಿವ್ಯಕ್ತಿ ಸ್ಪಷ್ಟತೆ, ನಿಖರವಾದ ವಿವೇಚನಾ ಸಾಮರ್ಥ್ಯ, ಸೂಕ್ಷ್ಮ ಗ್ರಹಣಶಕ್ತಿ ಬೆಳೆಯಬೇಕಾದರೆ ಮಾತೃಭಾಷೆಯಲ್ಲಿಯೇ ಮೂಲ ಶಿಕ್ಷಣ ಕಲಿಸಬೇಕೆಂಬುದು ವೈಜ್ಞಾನಿಕ ಸತ್ಯ. ಇದನ್ನು ಶಿಕ್ಷಣತಜ್ಞರು ಸಾರಿ ಹೇಳುತ್ತಿರುವಾಗಲೂ ಜನರ ಅರಿವಿಗೆ ಬರುತ್ತಿಲ್ಲವಾದರೆ ಅದಕ್ಕೆ ಕಾರಣಗಳೇನು? ಎಂಬುದನ್ನು ಹುಡುಕಬೇಕು. ಕಾರಣವಿಷ್ಟೇ, ಒಟ್ಟು ಭಾಷಾ ಕಲಿಕೆಯಲ್ಲಿರುವ ದೋಷಗಳು, ಹದಗೆಟ್ಟ ಕನ್ನಡ ಮಾಧ್ಯಮ ಶಾಲೆಗಳು, ಇಂಗ್ಲೀಷ ಶಾಲೆಗಳು ಸೃಷ್ಟಿಸುತ್ತಿರುವ ಲಾಭಖೋರ ಆಮಿಷಗಳು ಮತ್ತು ಈ ದಿಸೆಯಲ್ಲಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಸರಕಾರದ ಸೋಂಭೇರಿ ಪ್ರವೃತ್ತಿ. ಈ ಎಲ್ಲವುಗಳು ತಮ್ಮ ತಮ್ಮ ನೆಲೆಯಲ್ಲಿ ರಿಪೇರಿಯಾದರೆ ಕನ್ನಡ ಕಲಿಕಾ ಪ್ರಕ್ರಿಯೆ ಕುಂಠಿತವಾಗದು.
ಕನ್ನಡಪರ ಚಿಂತನೆ ಹರಿಸುವ ಬುದ್ಧಿಜೀವಿಗಳು ಕನ್ನಡ ಶಾಲಾ, ಕಾಲೇಜುಗಳ ಮಾಸ್ತರುಗಳೇ ತಮ್ಮ ಮಕ್ಕಳನ್ನು ಇಂಗ್ಲೀಷ ಮಾಧ್ಯಮಕ್ಕೆ ಕಳಿಸುತ್ತಿರುವದು ತೀರ ಶೋಚನೀಯ ಸಂಗತಿ. ಯಾರು ಮಕ್ಕಳನ್ನು ಇಂಗ್ಲೀಷ ಮಾಧ್ಯಮದಲ್ಲಿ ಓದಿಸುವರೋ ಅವರೇ ಕನ್ನಡ ದ್ರೋಹಿಗಳು. ಯಾವ ಸರಕಾರ ಒಳಸುಳಿದಾರಿಗಳ ಮೂಲಕ ಆಂಗ್ಲ ಮಾಧ್ಯಮ ಶಾಲೆಗಳನ್ನು ನಡೆಸಲು ಹಸಿರು ನಿಶಾನೆ ತೋರಿಸುವುದೋ ಅದೇ ಜನವಿರೋಧಿ ಸರಕಾರ.
ಬಂಧುಗಳೇ, ಕೇಂದ್ರ ಸರಕಾರದ ಹಿಂದಿ ದಬ್ಬಾಳಿಕೆ, ರಾಜ್ಯ ಸರಕಾರದ ಇಂಗ್ಲೀಷ ಮೋಹ, ನೆರೆಯ ರಾಜ್ಯಗಳ ಭಾಷಾ ಒತ್ತುವರಿ, ಮೇಲಾಗಿ ಅಮೇರಿಕಾದಂಥ ರಾಷ್ಟ್ರಗಳ ಇಂಗ್ಲೀಷ ದಾಳಿ ಇವುಗಳಿಂದ ಕನ್ನಡವನ್ನು ರಕ್ಷಿಸಿಕೊಳ್ಳಬೇಕಾದ ಅಗ್ನಿ ಪರೀಕ್ಷೆ ನಮ್ಮ ಮುಂದಿದೆ. ನಾವು ಹಟದಿಂದ ಕನ್ನಡ ದೀಕ್ಷೆ ತೊಡಬೇಕಿದೆ. ಸುಮ್ಮನೆ ಕನ್ನಡ ಉಳಿಸಿ ಎಂದು ಘೋಷಣೆ ಹಾಕಿದರೆ ಸಾಲದು. ಉಳಿಸಿ ಎಂದಾಕ್ಷಣ ಉಳಿಯಲು ಅದು ಪೆಟ್ರೋಲ್ ಅಥವಾ ಡೀಸೆಲ್ ಅಲ್ಲ. ಭಾಷೆ ಮಾಧ್ಯಮ ಮಾತ್ರವಲ್ಲ ಅದು ಸಂಪೂರ್ಣ ಬದುಕೇ ಆಗಿರುತ್ತದೆ. ಕನ್ನಡ ಉಳಿಯಬೇಕು ಎಮದರೆ ಕನ್ನಡ ಮಾತಾಡುವ ಜನತೆ ಉಳಿಯಬೇಕು. ಅಂದರೆ ಕನ್ನಡ ಮಾತಾಡುವ ಅಸಂಖ್ಯ ಜನಸಾಮಾನ್ಯರು ಆರ್ಥಿಕ ಭದ್ರತೆಯೊಂದಿಗೆ ಹಿಡಿ ನೆಮ್ಮದಿಯಿಂದ ಬದುಕುವಂತಾಗಬೇಕು. ಅಸಂಖ್ಯ ಕೂಲಿ, ಕಾರ್ಮಿಕ, ರೈತಾಪಿ ಜನರ ದುಡಿತಕ್ಕೆ ತಕ್ಕ ಬೆಲೆ, ತನ್ಮೂಲಕ ಅನ್ನ, ಸೂರು, ಶಿಕ್ಷಣ, ಕೆಲಸ, ಆರೋಗ್ಯ ಇವು ಲಭ್ಯವಾಗಬೇಕು. ಅಂದಾಗ ಅವರು ಬದುಕುತ್ತಾರೆ. ಅವರ ಮೂಲಕ ಭಾಷೆ ತಾನೇ ಬೆಳೆದು ಕುಣಿದು ಕುಪ್ಪಳಿಸುತ್ತದೆ. ಭಾಷೆಯು ಪಂಡಿತರ ವ್ಯಾಕರಣ, ‘ಯಾ’ ಹುಸಿ ಹೋರಾಟಗಾರರ ಘೋಷಣೆಗಳಿಂದ ಸೋಗಲಾಡಿಗಳ ಭಾಷಣಗಳಿಂದ ಉಳಿಯುವುದಿಲ್ಲ. ಅದು ಈ ಮಣ್ಣಿನ ದುಡಿಮೆಗಾರರ ಕೈ ಬಲಪಡಿಸುವುದರಿಂದ ಮಾತ್ರ ಉಳಿಯುತ್ತದೆ.
ಇತ್ತೀಚೆಗೆ ಇಂಗ್ಲೀಷನ್ನು ಒಂದು ಭಾಷೆಯಾಗಿ ಒಂದನೇ ತರಗತಿಯಿಂದಲೇ ಕಲಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಕೆಲವು ತಜ್ಞರು ಮೂರನೇ ತರಗತಿಯಿಂದ ಎಂದೂ, ಇನ್ನು ಕೆಲವರು ಯಥಾ ಪ್ರಕಾರ ಈ ಮೊದಲಿನಂತೆ ಐದನೇ ತರಗತಿಯಿಂದ ಕಲಿಸುವಂತಾಗಲಿ ಎಂದು ವಾದಿಸುತ್ತಿದ್ದಾರೆ.
ಆದರೆ ಕನ್ನಡ ಮಾಧ್ಯಮ ಓದುವ ಮಕ್ಕಳಿಗೆ ಮೂರನೇ ತರಗತಿಯಿಂದ ಇಂಗ್ಲೀಷ ಒಂದು ವಿಷಯವಾಗಿ ಓದುವಂತೆ ಇಂಗ್ಲೀಷ ಮಾಧ್ಯಮದಲ್ಲಿ ಓದುವ ಮಕ್ಕಳೂ ಸಹಿತ ಕನ್ನಡವನ್ನು ಮೂರನೇ ತರಗತಿಯಿಂದ ಓದುವಂತಾಗಬೇಕು. ಕೇಂದ್ರೀಯ ಪಠ್ಯಕ್ರಮ ಓದುವ ಮಕ್ಕಳಿಗಂತೂ ತ್ರಿಭಾಷಾ ಸೂತ್ರ ಇದ್ದೇ ಇದೆ. ಈಗ ಪ್ರಶ್ನೆ ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳ ಸುತ್ತಲೇ ಗಿರಿಕಿ ಹೊಡೆಯುತ್ತಿದೆ. ಒಂದು ಮಗುವಿನ ಕಲಿಯುವ ಸಾಮರ್ಥ್ಯ, ಏಕಕಾಲಕ್ಕೆ ಹಲವು ಭಿನ್ನ ಭಾಷೆಗಳನ್ನು ಕಲಿಯುವ ಕ್ಷಮತೆ, ಬೌದ್ಧಿಕ ಭಾರ ಇವೆಲ್ಲವುಗಳನ್ನು ಗಣನೆಗೆ ತೆಗೆದುಕೊಂಡು ನಿರ್ಧರಿಸುವುದು ಒಳಿತು. ಈ ದಿಸೆಯಲ್ಲಿ ಮಾತೃಭಾಷೆಯೊಂದನ್ನು ಬಿಟ್ಟು ಉಳಿದ ಭಾಷಾ ಕಲಿಕೆಯೂ ಐಚ್ಛಿಕವಾಗಿರುವುದು ಸೂಕ್ತ.
ಒಟ್ಟಾರೆ “ಶಿಕ್ಷಣ”, ಅದೂ ಗುಣಮಟ್ಟದ ಶಿಕ್ಷಣ ವ್ಯಕ್ತಿಯ ಪ್ರಾಥಮಿಕ ಅವಶ್ಯಕತೆಗಳಲ್ಲೊಂದು. ಅಂತೆಯೇ ಅದು ಸರಕಾರವು ಪೂರೈಸಬೇಕಾದ ಘಟಕ. ಪ್ರಾಥಮಿಕ, ಪ್ರೌಢ, ಪದವಿ, ಸ್ನಾತಕೋತ್ತರ, ವೈದ್ಯಕೀಯ, ತಾಂತ್ರಿಕ ಎಲ್ಲ ಬಗೆಯ ಶಿಕ್ಷಣ ಎಲ್ಲರಿಗೂ ಕಡಿಮೆ ಶುಲ್ಕದಲ್ಲಿ ಸುಲಭವಾಗಿ ದೊರೆಯುವಂತಾಗಬೇಕು. ಆಗಲೇ ಒಂದು ದೇಶ ಸುಭದ್ರ ಮತ್ತು ಶಾಂತಿಯುತವಾಗಿರಬಲ್ಲುದು. ಜನಪರ ಕಾಳಜಿಯುಳ್ಳ ಜವಾಬ್ದಾರಿಯುತ ಸರಕಾರವೊಂದಕ್ಕೆ ಇದು ಕಷ್ಟವೇನಲ್ಲ. ಪ್ರಬಲ ರಾಜಕೀಯ ಇಚ್ಛಾಶಕ್ತಿ ಬೇಕು.
ದುಡಿಯುವ ಎಲ್ಲ ಕೈಗಳಿಗೆ ಕೆಲಸ ದೊರಕುವಂತಾಗಬೇಕು. ಇದು ಶಿಕ್ಷಣದೊಂದಿಗೆ ತಳಕು ಹಾಕಿಕೊಂಡಿರುವ ಜನತೆಯ ಇನ್ನೊಂದು ಪ್ರಾಥಮಿಕ ಬೇಡಿಕೆ. ಹಾಗೆ ನೋಡಿದರೆ ಶಿಕ್ಷಣ ಮತ್ತು ಉದ್ಯೋಗವನ್ನು ಸಮೀಕರಿಸಿಕೊಂಡು ಬರುತ್ತಿರುವ ನಮ್ಮ ಮೂಲಗ್ರಹಿಕೆಗಳಲ್ಲಿಯೇ ಹಲವಾರು ತೊಂದರೆಗಳಿವೆ. ಶಿಕ್ಷಣ ಪ್ರಜ್ಞಾವಂತಿಕೆಗಾಗಿ. ಉದ್ಯೋಗ ಬದುಕುವುದಕ್ಕಾಗಿ. ಇವು ಪರಸ್ಪರ ಪೂರಕ ಮತ್ತು ಪ್ರೇರಕ ಅಂಶಗಳಾಗಬೇಕೇ ಹೊರತು ಒಂದರ ಬಾಲಂಗೋಚಿ ಮತ್ತೊಂದಲ್ಲ. ನೌಕರಿಗಾಗಿಯೇ ಪದವಿ ಸಂಪಾದನೆ ಎಂಬುದನ್ನು ನಂಬಿಸಲ್ಪಟ್ಟಿರುವುದರಿಂದ ಹೇಗಾದರೂ ಮಾಡಿ ಪದವಿ ಗಿಟ್ಟಿಸಿಕೊಳ್ಳಬೇಕೆಂಬ ಧಾವಂತ ನಮ್ಮ ಯುವಕರನ್ನು ಮುತ್ತಿಕೊಂಡಿದೆ. ಹೀಗಗಿ ಅವರ ಲಕ್ಷ್ಯ ಪದವಿ ಕಡೆಗಿದೆಯೇ ಹೊರತು ಜ್ಞಾನ ಸಂಪಾದನೆ ಕಡೆಗಿಲ್ಲ. ಅಲ್ಲದೆ ನವು ಸದ್ಯ ಕೊಡುತ್ತಿರುವ ಶಿಕ್ಷಣಕ್ಕೂ ಸ್ಪಷ್ಟವಾದ ಉದ್ದೇಶ, ನಿರ್ದಿಷ್ಟ ಗುರಿ ಇದ್ದಂತೆ ತೋರುವುದಿಲ್ಲ. ಭ್ರಷ್ಟ ವ್ಯವಸ್ಥೆಯ ಕಾರಣವಾಗಿ ಉದ್ದಕ್ಕೂ ಹತ್ತಾರು ವರ್ಷ ಏನೇನೋ ಕಸರತ್ತು ಮಾಡಿ ಒಂದು ಪದವಿ ಪಡೆದುಕೊಂಡ ಯುವಕರು ಯಾವುದೇ ಕಾರ್ಯಕೌಶಲ್ಯ, ದುಡಿಯುವ ಕ್ಷಮತೆ ಇಲ್ಲದೆ ಭಯಾನಕ ಶೂನ್ಯದತ್ತ ಚಲಿಸುತ್ತಿದ್ದಾರೆ. ಇದು ಒಂದು ದೇಶಕ್ಕೆ ಅಂಟಿಕೊಳ್ಳುವ ವ್ಯಾಧಿಯಿದ್ದಂತೆ. ಈ ಅಪಾಯದಿಂದ ತಪ್ಪಿಸಿಕೊಳ್ಳಬೇಕಾದರೆ ಮೊದಲು ಪ್ರತಿಯೊಬ್ಬರ ಕೈಗೆ ಕೆಲಸ ಸಿಗಬೇಕು. ಕಾಯಕವಿಲ್ಲದ ಕೈಗಳು ಕಲ್ಲುಗಳನ್ನು ತೂರಿ, ಬಸ್ಸು, ರೈಲುಗಳ ಗಾಜುಗಳನ್ನಾದರೂ ಒಡೆಯುತ್ತವೆ. ಕೋವಿಯನ್ನಾದರೂ ಹಿಡಿಯುತ್ತವೆ. ತೀರ ಪರಕಾಷ್ಠೆಗೇರಿದರೆ ವಿಮಾನಗಳನ್ನು “ಹೈಜಾಕ್” ಆದರೂ ಮಾಡುತ್ತವೆ. ಏಕೆಂದರೆ ದುಡಿಯುವ ಕೈಗಳಿಗೆ ಮಾತ್ರ ಹೊಟ್ಟೆಯ ಬೆಂಕಿ ತಣಿಸುವ ಶಕ್ತಿ ಇದೆ. ಯಾವ ಕೈಗಳಿಗೆ ಹೊಟ್ಟೆಯ ಬೆಂಕಿಯನ್ನು ತಣಿಸುವ ಮಾರ್ಗೋಪಾಯಗಳು ಲಭ್ಯವಾಗುವದಿಲ್ಲವೋ ಅವೇ ಕೈಗಳು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತವೆ ಎಂಬ ಸತ್ಯವನ್ನು ನಾವು ಮರೆಯಬಾರದು.
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದೇಶದಾದ್ಯಂತ ಯಾವುದೇ ರೀತಿಯ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಹೊಸ ಕೆಲಸಗಳನ್ನು ಸೃಷ್ಟಿಸುವುದು ಒತ್ತಟ್ಟಿಗಿರಲಿ, ಇದ್ದ ಕೆಲಸಗಳನ್ನು ಜನತೆಯಿಂದ ಕಸಿದುಕೊಳ್ಳಲಾಗಿದೆ. ಈ ದಶಕದಲ್ಲಿ ಸುಮಾರು ೭೦ ಲಕ್ಷ ಉದ್ಯೋಗಗಳು ನಾಶವಾಗಿರಬೇಕೆಂದು ಅಂದಾಜಿದೆ. ಈ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದು ವಾಸ್ತವದ ಗಂಭೀರತೆಯನ್ನು ಮನಗಾಣಿಸುತ್ತದೆ. ಇದ್ದ ಕೆಲಸಗಳು ಕಳೆದುಹೋಗಲು ಕಾರಣವೇನಿರಬಹುದು ಎಂದು ವಿಚಾರಿಸುವುದಾದರೆ, ಹೆಚ್ಚುತ್ತಿರುವ ಯಾಂತ್ರಿಕರಣದಿಂದಾಗಿ ದೈಹಿಕ ದುಡಿಮೆಯ ಕೂಲಿ ಕೆಲಸಗಳು ಖೋತಾ. ಕಂಪ್ಯೂಟರೀಕರಣದಿಂದಾಗಿ ಗುಮಾಸ್ತಗಿರಿ ಕೆಲಸಗಳ ಕಬಳಿಕೆ. ಜಾಗತಿಕ ಮಾರುಕಟ್ಟೆಯ ಸ್ಪರ್ಧೆಯಿಂದಾಗಿ ಆಂತರಿಕ ಮಾರುಕಟ್ಟೆಯ ಮಧ್ಯವರ್ತಿ ಕೆಲಸಗಳು ನಾಪತ್ತೆ. ವಿದೇಶಿ ಕಂಪನಿಗಳ ಆಗಮನದಿಂದಾಗಿ ದೇಶಿ ಉದ್ದಿಮೆಗಳು ದಿವಾಳಿಯೆದ್ದು ಇಲ್ಲಿಯ ನೌಕರಿಗಳು ಮಂಗಮಾಯ. ಗಣನಿಯ ಪ್ರಮಾಣದಲ್ಲಿ ಸಾರ್ವಜನಿಕ ಬಂಡವಾಳದ ಹಿಂತೆಗೆತದಿಂದಾಗಿ ಎಲ್ಲೆಲ್ಲೂ ಅಭದ್ರತೆ, ಅರಾಜಕತೆ, ಒಕ್ಕಲುತನ ದಿವಾಳಿಯೆದ್ದು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕರ್ನಾಟಕದಿಂದ ಲಕ್ಷಾಂತರ ಕೃಷಿ ಕಾರ್ಮಿಕರು ವಲಸೆ ಹೋಗಿದ್ದಾರೆ. ಬೆಂಗಳೂರು ಮಹಾನಗರ ಒಂದರಲ್ಲಿಯೇ ೨೦ ರಿಂದ ೨೫ ಸಾವಿರ ವಿವಿಧ ಜ್ಞಾನಶಿಸ್ತುಗಳ ಪದವೀಧರ ಯುವಕರು ಪ್ರತಿನಿತ್ಯ ಕೆಲಸಕ್ಕಾಗಿ ಅಲೆದು ಜೀವಚ್ಛವವಾಗುತ್ತಿದ್ದಾರೆ. ಇವುಗಳ ನಡುವೆ ಕರ್ನಾಟಕ ಸರಕಾರ ಕಳೆದ ವರ್ಷದಲ್ಲಿ ೩೪ ಲಕ್ಷ ಹಳದಿಕಾರ್ಡು (ರೇಷನ್)ಗಳನ್ನು ಬಡವರಿಂದ ಕಸಿದುಕೊಂಡಿದೆ. ಹಸಿದ ಹೊಟ್ಟೆಗಳು ರೋದಿಸುತ್ತಿರುವ ನಾಡಿನಲ್ಲಿ ಮಿರಿಮಿರಿ ಮಿಂಚುವ ಸಾಲ ಹೊತ್ತ ಹೆದ್ದಾರಿಗಳು ಮಾತ್ರವಿದ್ದರೆ ಸಾಕೆ? ಕೆಲಸವಿಲ್ಲದ ಖಾಲಿ ಕೈ. ಶೂನ್ಯ ಮನಸ್ಸುಗಳಿಗೆ ಹಿತಾನುಭವ (ಫೀಲ್ ಗುಡ್) ಮೂಡಲು ಸಾಧ್ಯವೇ? ಹೇಳಿ. ಈ ಎಲ್ಲ ಅವಾಂತರಗಳಿಗೆ ಕಾರಣವಾಗಿರುವ ಜಾಗತೀಕರಣ ಕುರಿತು ಇನ್ನಷ್ಟು ವಿವರವಾದ ಚರ್ಚೆ ಅಗತ್ಯವೆಂದು ಭಾವಿಸುತ್ತೇನೆ.

ಖಾಸಗೀಕರಣ, ಉದಾರೀಕರಣ, ಜಾಗತೀಕರಣ (ಖಾ‌ಉಜಾ) :

‘ಖಾ‌ಉಜಾ’ ಪಾಲಿಸಿ ನಮ್ಮ ದೇಶವನ್ನು ಒಳಗೊಳಗೆ ನಖಶಿಖಾಂತ ಪೊಳ್ಳು ಮಾಡುತ್ತಿದೆ. ಶಿಕ್ಷಣ, ಉದ್ಯೋಗ, ಒಕ್ಕಲುತನ, ವ್ಯಾಪಾರ, ಬ್ಯಾಂಕು, ಮಾಧ್ಯಮ, ಸಂಸ್ಕೃತಿ ಹೀಗೆ ಎಲ್ಲೆಂದರಲ್ಲಿ ಈ ತ್ರಿವಳಿಗಳ ಕಬಂಧಬಾಹುಗಳು ವ್ಯಾಪಿಸಿಕೊಂಡು ದೇಶದ ಆಂತರಿಕ ವ್ಯವಸ್ಥೆ ಪೂರ್ತಿ ಕುಸಿದಿದೆ. ಕ್ರಿ.ಶ. ೧೯೯೧ ರಲ್ಲಿ ಗ್ಯಾಟ್ ಪ್ರಸ್ತಾವನೆಗೆ ಸಹಿ ಹಾಕುವಾಗ ಕೆಲವೇ ಕೆಲವು ಎಡ ವಿಚಾರವಾದಿಗಳು ಇದನ್ನು ವಿರೋಧಿಸಿದವು. ಮೇಲಾಗಿ ಇವುಗಳ ದುಷ್ಪರಿಣಾಮಗಳ ಕುರಿತು ಮನವರಿಕೆ ಮಾಡಿಕೊಡಲು ಪ್ರಯತ್ನಪಟ್ಟವು. ಆದರೆ ನಾವ್ಯಾರೂ ಎರಡು ದಶಕಗಳ ಹಿಂದೆ ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇಂದು ಅದರ ಬಿಸಿ ಎಲ್ಲ ಹಂತದಲ್ಲಿ ತಟ್ಟಿದೆ. ಸಾಮ್ರಾಜ್ಯಶಾಹಿ ಜಾಗತೀಕರಣದ ಹಾಗೂ ನವ-ಉದಾರವಾದಿ ನೀತಿಯ ಅಮಾನವೀಯ ಪರಿಣಾಮಗಳು ಸಮಾಜದ ಎಲ್ಲ ವಲಯಗಳಿಗೆ ವ್ಯಾಪಿಸಿವೆ. ಮಾನವ ಕುಲದ ಭವಿಷ್ಯಕ್ಕಾಗಿ ಅನಿವಾರ್ಯವಾಗಿರುವ ಪ್ರಕೃತಿ, ಪರಿಸರ ಹಾಗೂ ಪ್ರಾಕೃತಿಕ ಸಮತೋಲನಕ್ಕೂ ಇದು ವ್ಯಾಪಿಸಿದೆ. ಗರಿಷ್ಠ ಲಾಭದ ದಾಹವು ದೇಶೀಯ ಸಂಪನ್ಮೂಲಗಳನ್ನು ಅಪಾಯಕ್ಕೊಡ್ಡಿದೆ. ಶಿಕ್ಷಣ, ಸಂಸ್ಕೃತಿ ಮತ್ತು ವಿಜ್ಞಾನದಲ್ಲಿ ಸಾಧಿಸಲಾದ ಅಭಿವೃದ್ಧಿಗಳು ದೊಡ್ಡ ಆರ್ಥಿಕ ಹಿತಾಸಕ್ತಿಗಳ ಹಿಡಿತಕ್ಕೆ ಹಾಗೂ ಸಾಮ್ರಾಜ್ಯಶಾಹಿ ಸಿದ್ಧಾಂತಗಳಿಗೆ ಒಳಪಟ್ಟಿದೆ. ಆದರೆ ಈ ದೊಡ್ಡ ಬಂಡವಾಳದ ಶೋಷಣೆಯು ಸಾಂಆಜಿಕ ಮಟ್ಟವನ್ನು ಅತ್ಯಂತ ಹೀನಾಯ ದಾರಿದ್ರ್ಯಕ್ಕೆ ದೂಡಿದೆ. ನಾವು ನೋಡುನೋಡುತ್ತಿರುವಂತೆಯೇ ವಿದ್ಯುತ್, ವಿಮೆ, ಸಾರಿಗೆ, ನೀರು ಸರಬರಾಜು ಖಾಸಗಿ ವಲಯಕ್ಕೆ ಸೇರಿ ಹೋದವು. ರೈತರಿಗೆ ಕೊಡುವ ಸಬ್ಸಿಡಿಯಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿದೆ. ಬ್ಯಾಂಕು, ಕಚೇರಿ, ಕಂಪನಿಗಳಲ್ಲಿ ಸ್ವಯಂ ನಿವೃತ್ತಿಗಳ ಸಂಖ್ಯೆ ಗಗನಕ್ಕೇರಿದೆ. ಸರಕಾರ ಸಾವಿರಾರು ಹೆಕ್ಟೇರ್ ಭೂಮಿಯನ್ನು ಕೃಷಿ ಕೂಲಿಕಾರರಿಗೆ ಮತ್ತು ಭೂರಹಿತರಿಗೆ ನೀಡುವ ಬದಲು ಬಹುರಾಷ್ಟ್ರೀಯ ಕಂಪನಿಗಳಿಗೆ ಅಥವಾ ಸ್ಥಳೀಯ ಗುತ್ತಿಗೆದಾರರಿಗೆ ಅಗ್ಗದ ದರಗಳಲ್ಲಿ ಮಾರಿದೆ. ಅಥವಾ ಭೋಗ್ಯಕ್ಕೆ ನೀಡಿದೆ. ಸ್ನೇಹಿತರೇ, ಬಹಳ ದೂರದ ಉದಾಹರಣೆ ಬಿಡಿ. ನಮ್ಮ ಹತ್ತಿರದ ಅಂದರೆ ಹೈದ್ರಾಬಾದ ಕರ್ನಾಟಕದ ಗುಲಬರ್ಗಾ, ಬೀದರ, ರಾಯಚೂರ, ಕೊಪ್ಪಳ ಜಿಲ್ಲೆಗಳ ಅತಿ ಪುಟ್ಟ ಉದಾಹರಣೆ ಕಡೆ ನಿಮ್ಮ ಗಮನ ಸೆಳೆಯಬಯಸುತ್ತೇನೆ. ಕಳೆದ ಎರಡು ದಶಕಗಳ ಅವಧಿಯಲ್ಲಿ ಈ ಭಾಗದಲ್ಲಿದ್ದ ಎಲ್ಲ ಸಣ್ಣ, ಪುಟ್ಟ, ಮಧ್ಯಮ ಗಾತ್ರದ ತೈಲ ಕಾರ್ಖಾನೆಗಳು ಸುಳಿವಿಲ್ಲದೆ ಸ್ತಬ್ಧವಾಗಿವೆ. ಅವುಗಳ ವ್ಯಾಪಾರಿಗಳು, ದುಡಿಯುವ ಕಾರ್ಮಿಕರು ಇಂದು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಅವರ ಉತ್ಪಾದನೆಗಳಂತೂ ಮಾರಾಟವಾಗಲಿಲ್ಲ. ಆದರೆ ಅವರ ಮಾನ-ಸ್ವಾಭಿಮಾನಗಳಂತೂ ಹರಾಜಾಗಿ ಹೋಗಿವೆ.
ಈ ಜೀವವಿರೋಧಿ ಜಾಗತೀಕರಣವು ನಮ್ಮ ಪರಂಪರಾಗತ ಸಾಸ್ಕೃತಿಕ ಲೋಕವನ್ನು ಕಬಳಿಸುತ್ತಿರುವುದು ಇನ್ನೂ ಆತಂಕದ ಸಂಗತಿಯಾಗಿದೆ. ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯ ಗುಂಗಿನಲ್ಲಿ ಈ ಮೊದಲೇ ನಮ್ಮ ದೇಶೀ ಸಂಸ್ಕೃತಿಯ ನೆಲೆಗಳಾದ ಹಾಡು, ಹಬ್ಬ, ಉಡುಗೆ, ತೊಡುಗೆ, ಗುಡಿ ಕೈಗಾರಿಕೆ, ಜಾನಪದೀಯ ಮಟ್ಟು, ಕಲಾಕೌಶಲ್ಯ ಮುಂತಾದವುಗಳನ್ನು ವಿಸ್ಮೃತಿಯತ್ತ ತಳ್ಳಿದ್ದಾಗಿತ್ತು. ಅಷ್ಟರಲ್ಲಿಯೇ ಸುನಾಮಿಯಂತೆ ಬಂದೆರಗಿದ ಜಾಗತೀಕರಣವು ಎವೆ ಪಿಳುಕುವಷ್ಟರಲ್ಲಿ “ನಮ್ಮದೆನ್ನುವುದನ್ನು” ಸೆಳೆದುಕೊಂಡು ಕೊಚ್ಚಿ ಹಾಕತೊಡಗಿದೆ. ಏಕಮುಖೀ ಸಂಸ್ಕೃತಿಯ ಆಮಿಷ ಒಡ್ಡುತ್ತ ನಮ್ಮ “ನೇಟಿವಟಿ”ಯನ್ನೇ ಧೂಳೀಪಟ ಮಾಡುತ್ತಿರುವುದು ಪ್ರಜ್ಞಾವಂತರೊಳಗೆ ಗಾಬರಿ ಹುಟ್ಟಿಸುತ್ತಿದೆ. ಕರ್ನಾಟಕವು ಬಹುಮುಖೀ ಸಂಸ್ಕೃತಿಯ ಅದರಲ್ಲೂ “ಹಡದವ್ವ” ಸಂಸ್ಕೃತಿಯ ತವರುಮನೆ. ಇಲ್ಲಿ ಪ್ರತಿ ಹಳ್ಳಿಗೂ ಒಂದೊಂದು ವಿಶಿಷ್ಟ ಕರುಳು ಸಂಸ್ಕೃತಿ ಇದೆ. ಪ್ರತಿ ಹತ್ತು ಕಿಲೋ ಮೀಟರಿಗೆ ಒಂದು ಉಪಭಾಷೆಯ ಸೊಗಡಿದೆ. ಅಷ್ಟೇ ಏಕೆ ಹಳ್ಳಿಗಳ ಒಳಗೇನೇ ಪ್ರತಿ ಕೇರಿ ಕೇರಿಗೆ ವೈವಿಧ್ಯಮಯ ನಡೆ-ನುಡಿಗಳಿವೆ. ಈ ಎಲ್ಲವುಗಳನ್ನು ಭಾವ ಬಳ್ಳಿಯ ಏಕಸೂತ್ರತೆಯೊಂದಿಗೆ ಬೆಸೆದುಕೊಂಡು ಒಂದು ವಿಶಿಷ್ಟ ಲಯದಲ್ಲಿ ನಮ್ಮಗಳ ಬದುಕು ಸಮೃದ್ಧವಾಗಿದೆ. ಹೀಗಿರುವಗಲೂ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದೇ ಸಂಸ್ಕೃತಿ ಎಂಬುದೇ ದೊಡ್ಡ ಮೋಸ. ‘ಸಂಸ್ಕೃತಿ’ ಎನ್ನುವುದು ಒಂದು ಪ್ರತ್ಯೇಕ ಸಂಸ್ಥೆಯಲ್ಲ. ನಿಜವಾದ ಅರ್ಥದಲ್ಲಿ ಜನಸಮುದಯದ ದಿನನಿತ್ಯದ ಕಷ್ಟ ಕಾರ್ಪಣ್ಯಗಳ ಕುರಿತಾದ ವ್ಯಾಖ್ಯಾನವೇ ಸಂಸ್ಕೃತಿ. ಅದು ಒಂದು ಬಣದ ಅಥವಾ ಕೋಮಿನ ವಿಧಿ-ವಿಧಾನ, ನಡೆ-ನುಡಿ ಮತ್ರವಲ್ಲ. ಅಂತೆಯೇ ಒಂದು ಸಮೂಹದ ಖಾಸಗಿ ಆಸ್ತಿಯೂ ಅಲ್ಲ. ಅದು ಇಡೀ ಜನಕೋಟಿಯ ಉಸಿರ ಗಾಥೆ. ಒಂದು ಸೂಕ್ತ ಉಪಮೆಯೊಂದಿಗೆ ಹೇಳಬಹುದಾದರೆ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಎಳ್ಳ‌ಅಮವಾಸೆಯಂದು ಮಾಡುವ ವಿಶೇಷ ಭಕ್ಷ್ಯ “ಸಜ್ಜೆ ಕಡಬು ಭಜ್ಜಿ ಪಲ್ಲ್ಯೆದಂತೆ”. ಭಜ್ಜಿ ಪಲ್ಲ್ಯೆ ಅಂದರೆ ಎಲ್ಲ ನಮೂನೆಯ ದ್ವಿದಳ ಧಾನ್ಯ, ಎಲ್ಲ ನಮೂನೆಯ ತರಕಾರಿ, ಸಖತ್ ಖಾರಾ, ಉಪ್ಪು, ಹಸಿ ಮೆಣಸಿನಕಾಯಿ ಸೇರಿಸಿ ಮಾಡುವ ಮೇಲೋಗರವದು. ನಮ್ಮದೆ ಹೊಲಗಳಲ್ಲಿ ಬೆಳೆದ ಸಜ್ಜೆಯ ಹಿಟ್ಟಿನಿಂದ ಗೋಲು ಕಡಬುಗಳನ್ನು ಮಾಡಿ ಅದರೊಂದಿಗೆ ಸೇರಿಸಿ ತಿಂದವರಿಗೆ ಅದರ ರುಚಿ ಗೊತ್ತು. ಎಲ್ಲ ಜನಪದರನ್ನು ಅವರವರ ನೆಲದ ಸಂಸ್ಕೃತಿಯ ಗುರುತಿನೊಂದಿಗೇನೇ ವ್ಯಾಪಕ ಅಖಂಡ ಸಂಸ್ಕೃತಿಯ ಧಾರೆಗಳಾಗಿ ಬೆಸೆಯುವುದೇ ನಮ್ಮ ವೈಶಿಷ್ಟ್ಯ. ಭಾರತೀಯ ಸಂಸ್ಕೃತಿಯೆಂದರೆ ದೇಶದೆಲ್ಲೆಡೆ ದೊರೆಯುವ ಒಂದೇ ನಮೂನಿ ರುಚಿ, ಬಣ್ಣ ಹೊಂದಿ ಮಿಂಚಿನ ಕಾಗದದಲ್ಲಿ ಸುತ್ತಿರುವ ಚಾಕಲೇಟ್ ಅಲ್ಲ. ಆದ್ದರಿಂದ ಕರ್ನಾಟಕ, ಕನ್ನಡಿಗರು ತಮ್ಮ ಧಾರೆಗಳ ವೈವಿಧ್ಯತೆಯಲ್ಲಿಯೇ ಅನನ್ಯತೆ ಉಳಿಸಿಕೊಂಡು ಬದುಕುತ್ತಿದ್ದಾರೆ. ಬದುಕಬೇಕು ಕೂಡ.
ವಿದ್ಯುನ್ಮಾನ ಮಾಧ್ಯಮಗಳು ಜಾಗತೀಕರಣದ ಮೆದುಳು ಇದ್ದಂತೆ. ಟಿ.ವಿ. ಚಾನೆಲ್ಲುಗಳು, ಮೊಬೈಲ್, ಇಂಟರನೆಟ್, ಎಸ್,ಎಂ,ಎಸ್., ಎಂ.ಎಂ.ಎಸ್. ಇವುಗಳಲ್ಲಿ ಬಿಂಬಿಸಲಗುತ್ತಿರುವ ಸಂಸ್ಕೃತಿ ಎಂಥದ್ದು? ಅದು ನಮ್ಮ ಜನಾಂಗವನ್ನು ಮುಟ್ಟಿಸುವುದಾದರೂ ಎಲ್ಲಿಗೆ? ಎಂಬುದನ್ನು ಕುರಿತು ನಾವೆಲ್ಲ ಚಿಂತಿಸಬೇಕಾದದ್ದು ಅತ್ಯಂತ ಅವಶ್ಯವಾಗಿದೆ. ಈ ವಿದ್ಯುನ್ಮಾನ ಲೋಕದಲ್ಲಿ ಹಿಂಸೆ, ಲೈಂಗಿಕತೆ, ಕ್ರೌರ್ಯ ಬಿಟ್ಟರೆ ಮತ್ತೊಂದಿಲ್ಲ. ನಮ್ಮ ಮಕ್ಕಳು ಪ್ರತಿ ನಿಮಿಷಕ್ಕೊಂದು ಬಲಾತ್ಕಾರ, ಪ್ರತಿ ಒಂದೂವರೆ ನಿಮಿಷಕ್ಕೊಂದು ಕೊಲೆ ನೋಡುತ್ತವೆ. ಎಸ್.ಎಂ.ಎಸ್.ಗಳಲ್ಲಿ ಬರುವ ನಗ್ನ ಚಿತ್ರಗಳು, ಇಂಟರ್‌ನೆಟ್‌ನಲ್ಲಿ ಬರುವ ಅಶ್ಲೀಲ ಚಿಟ್‌ಚಾಟ್‌ಗಳು, ಶ್ರೀಮಂತರ ಬದುಕನ್ನು ವೈಭವೀಕರಿಸುವ ಮೆಗಾ ಸಿರಿಯಲ್ಲುಗಳು, ಪುರೋಹಿತ ಸಂಸ್ಕೃತಿಯ ಮೌಢ್ಯ ಬಿಂಬಿಸುವ ಚಲನಚಿತ್ರಗಳು, ಹುಸಿದೇಶಭಕ್ತಿಯ ಅಮಲನ್ನು ತುಂಬುವ ವರದಿಗಳು, ಧರ್ಮ, ದೇವರುಗಳ ಹೆಸರಿನಲ್ಲಿ ಪ್ರಚೋದಿಸುವ ಮತೀಯದ್ವೇಷ, ಕರ್ಮಸಿದ್ಧಾಂತವನ್ನು ಸಮರ್ಥಿಸುವ ಪಾಪಭೀತಿ ಇವು ಎಲ್ಲವುಗಳಿಂದ ಅಮಯಕ ಜನತೆಯನ್ನು ಬಚಾಯಿಸಬೇಕಿದೆ.
ಈ ಬೀದರ ನೆಲದಲ್ಲಿ ಒಂಬತ್ತು ನೂರು ವರ್ಷಗಳ ಹಿಂದೆ ಬಸವಾದಿ ಶರಣರು ಮಾದಾರ ಚನ್ನಯ್ಯದಿಗಳು ಕಲಿಸಿಕೊಟ್ಟ ವೈಚಾರಿಕತೆ, ಕಾಯಕಧೀರತ್ವಗಳು ಇವೆಯಲ್ಲ, ಆ ಕಾಯಕ ಜೀವಿಗಳ ಮನೋಸ್ಥೈರ್ಯ, ವಸ್ತುಸತ್ಯ ಮತ್ರ ಒಪ್ಪಿಕೊಳ್ಳುವ ತಾತ್ವಿಕ ಸುಳುಹುಗಳನ್ನೆ ಮತ್ತೆ ಜನತೆಯತ್ತ ತೆಗೆದುಕೊಂಡು ಹೋಗಬೇಕಿದೆ. ಪಾಪ, ಪುಣ್ಯಗಳ ಹುಸಿ ಭ್ರಮೆಗಳಲ್ಲಿ ಸಿಕ್ಕು ಭಜನೆ, ನಾಮಸ್ಮರಣೆ ಮೂಲಕವೇ ಏನೆಲ್ಲ ಸಾಧಿಸಬಹುದು; ಜಪ, ಹೋಮ, ಹವನಗಳ ಮೂಲಕವೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಾಧ್ಯವೆಂದು ಭಾವಿಸಿರುವ ನಿಷ್ಕ್ರಿಯಾವಾದಿಗಳನ್ನು ಕೂಡಿಸಿಕೊಂಡು ಈ ಕೆಳಗಿನ ವಚನದ ಅರ್ಥ ಬಿಡಿಸಿ ಹೇಳಬೇಕಿದೆ.
ಸುಖ ಬಂದಡೆ ಪುಣ್ಯದ ಫಲವೆನ್ನೆನು
ದುಃಖ ಬಂದಡೆ ಪಾಪದ ಫಲವೆನ್ನೆನು
ನೀ ಮಾಡಿದಡಾಯಿತ್ತೆಂದೆನ್ನೆನು.
ಕರ್ಮಕೆ ಕರ್ತ್ರುವೆ ಕಡೆಯೆಂದೆನ್ನೆನು
ಉದಾಸೀನವಿಡಿದು ಶರಣೆನ್ನೆನು
ಕೂಡಲ ಸಂಗಮದೇವಾ ನೀ ಮಾಡಿದುಪದೇಶವು ಎನಗೀ ಪರಿಯಲ್ಲಿ
ಸಂಸಾರ ಸವೆಯೆ ಬಳಸುವೆನು.
ಇಲ್ಲಿ ಬಸವಣ್ಣ ವ್ಯಕ್ತಿ ಶ್ರಮದ ಘನತೆ, ಗೌರವವನ್ನು ಎತ್ತಿಹಿಡಿದು ವರ್ತಮಾನದ ಕಷ್ಟ ಕೋಟಲೆಗಳೊಂದಿಗೆ ಗುದ್ದಾಡುವುದೇ ನಿಜವಾದ ಬದುಕು ಎನ್ನುತ್ತಾನೆ. ಇಂದು, ಈ ಕ್ಷಣ ನಾವು ಎದುರಿಸುತ್ತಿರುವ ಸಂಕಟ, ತಲ್ಲಣಗಳಿಗೆ ನಮ್ಮ ಸದ್ಯದ ಸ್ಥಿತಿ-ಗತಿಗಳಿಗೆ ನಾವೇ ಕಾರಣ. ಅರ್ಥಾತ್ ನಮ್ಮ ಸಾಮೂಹಿಕ ನಡೆಗಳು, ರಾಜಕೀಯ ವ್ಯವಸ್ಥೆ ಮತ್ತು ವೈಯಕ್ತಿಕ ಹಿತಾಸಕ್ತಿಗಳೇ ಕಾರಣ. ಈ ಹೊತ್ತಿನ ದುಃಖಕ್ಕೆ ಯಾವುದೋ ಕಾಣದ ಜನ್ಮದಲ್ಲಿ ಮಾಡಿದ ಕರ್ಮವೆಂಬ ಗೊಡ್ಡು ವೇದಾಂತಕ್ಕೆ ಆಧಾರವಿಲ್ಲ. ಆದ್ದರಿಂದ ನಾವೆಲ್ಲ ಮೈಮುರಿದು ಕಾಯಕ ಮಾಡುವ ಮೂಲಕ ಅಭಿವೃದ್ಧಿಯನ್ನು, ವೈಚಾರಿಕ ಕ್ರಾಂತಿಯ ಮೂಲಕ ಸಾಮಾಜಿಕ ಸಮಾನತೆಯನ್ನೂ ತರಬೇಕೆಂದು ಹೇಳಿದ್ದು ತುಂಬಾ ಅರ್ಥಪೂರ್ಣ. ಇಂಥ ಕ್ರಿಯಾಶೀಲತೆಯನ್ನು, ಜನೋಪಯೋಗಿ ಮಹತ್ವಾಕಾಂಕ್ಷೆಗಳನ್ನು ಜನತೆಯ ಬುದ್ಧಿ, ಭಾವಗಳಲ್ಲಿ ತುಂಬಬೇಕಿದೆ.
ಕುಳಿತು ಮಂತ್ರ ಹೇಳಿ ಮರುಳು ಮಾಡುವ ಸಂಸ್ಕೃತಿ ನಮ್ಮದಲ್ಲ. ಕೈ ಮೈಗಳಿಗೆ ಕೆಸರು ಹಚ್ಚಿಕೊಂಡು ಬೆವರು ಸುರಿಸಿ ಬಂಗಾರದ ಬೆಳೆ ತೆಗೆಯುವ ಬೆವರು ಸಂಸ್ಕೃತಿ ನಮ್ಮದು. ಅನೇಕತೆಯಲ್ಲಿ ಏಕತೆ ಕಂಡ ಈ ನಾಡಿನ ದಲಿತ, ಮಾದಿಗ, ಡೋಹರ, ಸಮಗಾರ, ಕಂಬಾರ ಹಲವಾರು ಕುಲ ವೃತ್ತಿ ಬಾಂಧವರ ಜೀವಂತ ಸಂಸ್ಕೃತಿ ನಮ್ಮದು. ಇಂಥ ಸಂಸ್ಕೃತಿಯ ಮೇಲಾಗುತ್ತಿರುವ ದಾಳಿಯನ್ನು ಎದುರಿಸಲು ನಾವೆಲ್ಲ ಮೈಕೊಡವಿ ನಿಲ್ಲಬೆಕಿದೆ. ಜಾಗತೀಕರಣದ ಈ ಸಾಂಸ್ಕೃತಿಕ ಯುದ್ಧಕ್ಕೆ ಪ್ರತಿರೋಧವಾಗಿ ವಿಶ್ವ ಸಾಮಾಜಿಕ ವೇದಿಕೆಯಡಿ (ವರ್ಲ್ಡ್ ಸೋಷಿಯಲ್ ಫೋರಮ್) ಎಲ್ಲ ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಒಂದಾಗಿ “ಇನ್ನೊಂದು ಜಗತ್ತು ಸಾಧ್ಯ” “ಅನದರ್ ವರ್ಲ್ಡ್ ಈಸ್ ಪಾಸಿಬಲ್” ಎಂಬುದನ್ನು ಕಳೆದ ವರ್ಷ ಮುಂಬೈನಲ್ಲಿ ನಡೆದ ಸಮ್ಮೇಳನದಲ್ಲಿ ತೋರಿಸಿಕೊಟ್ಟಿವೆ. ಆದ್ದರಿಂದ ಕನ್ನಡಿಗರಾದ ನಮಗೆ ಬೆಂಗಳೂರು ಸಿಂಗಪೂರ ಆಗುವುದು ಬೇಕಿಲ್ಲ. ಅದು ಕೆಂಪೇಗೌಡನ ಬೆವರ ಬೆಲೆಯ ಬೆಂದ ಕಾಳೂರು ಮಾತ್ರವಾಗಿರಲಿ. ಬೀದರ ಅಮೇರಿಕಾದ ಒಂದು ಹಳ್ಳಿಯಾಗಬೇಕಿಲ್ಲ. ಅದು ಮಾದಿಗರ ಚನ್ನಯ್ಯನ ಅಂಬಲಿ ನುಚ್ಚು ಅಟ್ಟುಣ್ಣುವ ನೆಲವೇ ಆಗಿರಲಿ. ಇದರರ್ಥ ಪ್ರಗತಿಗೆ ವಿಮುಖರಾಗಬೇಕೆಂದಿಲ್ಲ. ನಮ್ಮ ಹಳ್ಳಿ, ನಗರಗಳು ಎಲ್ಲ ತಂತ್ರಜ್ಞಾನ, ವಿಜ್ಞಾನವನ್ನು ಜನಮುಖಿಯಾಗಿ ಬಳಸಿಕೊಂಡು ತಮ್ಮ ಅನನ್ಯತೆಯನ್ನು ಉಳಿಸಿಕೊಳ್ಳಲಿ. ನಾವು ಆಧುನೀಕರಣ, ತಂತ್ರಜ್ಞಾನ, ವಿಜ್ಞಾನದ ವಿರೋಧಿಗಳಲ್ಲ. ರಾಷ್ಟ್ರದ ಅಭಿವೃದ್ಧಿಯ ವಿರೋಧಿಗಳಲ್ಲ. ಅಖಂಡ ರಾಷ್ಟ್ರದ ಭಾವತಂತುವಿನ ವಿರೋಧಿಗಳಲ್ಲ. ಆದರೆ ರಾಷ್ಟ್ರೀಯತೆ ಎಂಬ ಸೋಗಿನಡಿ ದೇಶದ ಹಿಡಿಯಷ್ಟಿರುವ ಜನತೆ ತನ್ನ ದಮನಕಾರಿ ಸಂಸ್ಕೃತಿಯನ್ನೇ ಹೇರುತ್ತಿರುವ ಧೋರಣೆಯ ವಿರೋಧಿಗಳಾಗಿದ್ದೇವೆ. ಈ ದೇಶದ ಶೂದ್ರ, ದಲಿತ ಮತ್ತು ಮಹಿಳೆಯರನ್ನು ತುಳಿಯಲೆಂದೇ ಸೃಷ್ಟಿಸಿಕೊಂಡಿರುವ ಪೊಳ್ಳು ಸಂಸ್ಕೃತಿಯ ವಿರೋಧಿಗಳಾಗಿದ್ದೇವೆ. ಅವರ ಜನವಿರೋಧಿ ಕುತಂತ್ರಗಳನ್ನು ನಿರ್ನಾಮಗೊಳಿಸಲೆಂದೇ ಕಂಕಣಬದ್ಧರಾಗಿದ್ದೇವೆ.

ಅಡಿ ಟಿಪ್ಪಣಿ: ಧರಿನಾಡು ಎಂದು ಬೀದರ ಭಾಗಕ್ಕೆ ಕರೆಯುವ ವಾಡಿಕೆ ಇದೆ.
*****
ಉಳಿದದ್ದು: ಮುಂದಿನ ಸಂಚಿಕೆಗೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.