ನಮಗೆ ಬೇಕಾದ ಕನ್ನಡ

ಬರೆಯುವ ಮತ್ತು ಮಾತಾಡುವ ಎರಡೂ ವಿಧಾನಗಳಿರುವ ಭಾಷೆಗಳಲ್ಲಿ ಕೆಲವು ಸಲ ಈ ಎರಡು ವಿಧಾನಗಳ ನಡುವಣ ಅಂತರ ಹಾಳೆತ ಮೀರಿ ಒಂದು ಇನ್ನೊಂದರ ಸಂಬಂಧ ಕಳೆದುಕೊಳ್ಳುವುದಿದೆ. ಇದಕ್ಕೆ ಭಾಷಾವಿಜ್ಞಾನದಲ್ಲಿ ಡೈಗ್ಲೋಸಿಯಾ ಅರ್ಥಾತ್ ದ್ವಿಭಾಷಿತ್ವ ಎಂದು ಕರೆಯುತ್ತಾರೆ. ದ್ವಿಭಾಷಿತ್ವದಲ್ಲಿ ಮೇಲಿನದು ಮತ್ತು ಕೆಳಗಿನದು ಎನ್ನುವ ಕನಿಷ್ಠ ಎರಡು ಸ್ತರಗಳಿರುತ್ತವೆ. ಮೇಲಿನ ಸ್ತರ ಬರವಣಿಗೆಗೆ, ಆಢಳಿತಕ್ಕೆ ಮತ್ತು ಆಧ್ಯಾತ್ಮಕ್ಕೆ ಮೀಸಲಾಗಿದ್ದು ಕೆಳಗಿನ ಸ್ತರ ಸಾಮಾನ್ಯ ಜೀವನಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಇವೆರಡೂ ಒಂದೇ ಭಾಷೆಯ ಎರಡು ರೀತಿಗಳಾಗಿದ್ದೂ ಒಂದಕ್ಕೊಂದು ಅರ್ಥವಾಗದ ತರ ಇರುವುದು ವಿಚಿತ್ರವಾದ ಸಂಗತಿ. ದ್ವಿಭಾಷಿತ್ವ ಮಿತಿ ಮೀರಿದಾಗ ಮೇಲಿನ ಸ್ತರ ಜೀವನ ಸಂಪರ್ಕ ಕಳೆದುಕೊಂಡು ಕೇವಲ ಮ್ಯೂಸಿಯಂ ಭಾಷೆಯಾಗಿ ಉಳಿಯುವ ಸಂಭವವಿದೆ. ಇದು ಯಾವ ಭಾಷೆಗೂ ಒಳ್ಳೆಯದಲ್ಲ. ಬಹುಷಃ ಸಂಸ್ಕೃತಕ್ಕೆ ಇದೇ ಗತಿಯಾಯಿತು. ಸಂಸ್ಕೃತವೆನ್ನುವ ಪದವೇ ಅದರ ಗತಿಯನ್ನು ಸೂಚಿಸುವಂತಿದೆ: ಸಂಸ್ಕೃತವೆಂದರೆ ಪರಿಷ್ಕರಿಸಿದ್ದು ಎಂದರ್ಥ. ಬಹುಷಃ ಪ್ರಾಕೃತ, ಪಾಳಿ ಮುಂತಾದ ಉಪಭಾಷೆಗಳಿಂದ ಪರಿಷ್ಕೃತವಾಗಿ ಸಂಸ್ಕೃತವಾಗಿರಬೇಕು. ಆದರೆ ಅತಿಯಾದ ಪರಿಷ್ಕಾರಕ್ಕೆ ಒಳಗಾದ ಸಂಸ್ಕೃತ ಒಂದು ಕಾಲಘಟ್ಟದಲ್ಲಿ ಅತ್ಯಂತ ಶ್ರೇಷ್ಠವಾದ ಹಲವು ಸಾಹಿತ್ಯ ಕೃತಿಗಳನ್ನು ಜಗತ್ತಿಗೆ ನೀಡಿದ್ದರೂ ಆಮೇಲೆ ಈ ‘ಅತಿ ಸಂಸ್ಕರಣ’ದಿಂದಾಗಿಯೇ ಸಾಮಾನ್ಯ ಜನರಿಂದ ದೂರ ಉಳಿಯಿತು.

ಒಂದು ಭಾಷೆ ಬೆಳೆಯಬೇಕಾದರೆ ಅದು ಹಲವು ಸ್ತರಗಳಲ್ಲಿ ಹಲವು ರೀತಿಗಳಲ್ಲಿ ಉಪಯೋಗವಾಗಬೇಕು–ಮುಖ್ಯವಾಗಿ ಜನಜೀವನದ ಎಲ್ಲ ಕ್ಷೇತ್ರಗಳಲ್ಲೂ ಅದು ಸಲ್ಲಬೇಕು. ಹಲವು ಕಾಲದ ಇತಿಹಾಸವಿರುವ ಜನತೆಗೆ ಸಂಬಂಧಿಸಿದಂತೆ ಜನಜೀವನವೆನ್ನುವುದು ಯಾವತ್ತೂ ಸರಳವಾಗಿರುವುದಿಲ್ಲ–ಅದಕ್ಕೂ ಹಲವು ಹಂತಗಳು, ಹಲವು ಕೋನಗಳು, ಹಲವು ದಿಕ್ಕುಗತಿಗಳು ಇರುತ್ತವೆ. ಆದ್ದರಿಂದಲೇ ಇಂಥ ಯಾವ ಭಾಷೆಯೂ ಅಖಂಡವಾಗಿಯೂ ತೆಳುವಾಗಿಯೂ ಇರಲಾರದು. ಎಂದರೆ, ಜೀವಂತ ಭಾಷೆಯಲ್ಲಿ ಹಲವು ರೀತಿಯ ಉಪಭಾಷೆಗಳಿರುತ್ತವೆ. ಇದ ಜೀವಂತಿಕೆಯ ಸ್ವಾರಸ್ಯ ಕೂಡಾ. ಈ ಉಪಭಾಷೆಗಳೆಲ್ಲವೂ ಬರೆಯುವ ಭಾಷೆಗೆ ಜೀವ ಸತ್ವ ಒದಗಿಸುವಂಥವು. ಆದರೂ ಬರೆಯುವ ಭಾಷೆ ಈ ಉಪಭಾಷೆಗಳನ್ನು ಕೀಳಾಗಿಯೇ ಕಾಣುವ ಅಹಮ್ಮನ್ನು–ಎಂದರೆ, ಸಾಂಸ್ಕೃತಿಕ ಯಜಮಾನಿಕೆಯನ್ನು–ಬೆಳೆಸಿಕೊಂಡಿರುವುದು ದುರದೃಷ್ಟಕರ. ಯಾಕೆಂದರೆ ಎಲ್ಲಾ ಕಡೆಯೂ ಬರೆಯುವ ಭಾಷೆ ಯಜಮಾನರದೇ ಆಗಿರೋದು ಇದಕ್ಕೆ ಕಾರಣ. ಕನ್ನಡದ ಮಟ್ಟಿಗೂ ಈ ಮಾತು ಸತ್ಯ: ಮೈಸೂರು ಹಾಗೂ ಬೆಂಗಳೂರು ಕಡೆಯ ಮೇಲ್ತರದ ಬರೆಯುವ ಕನ್ನಡವೇ ನಿಜವಾದ ಕನ್ನಡ ಹಾಗೂ ಉಳಿದದ್ದೆಲ್ಲ ಅಪಭ್ರಂಶವೆನ್ನುವ ಕಲ್ಪನೆಯೊಂದು ಕೆಲವರ ಮನಸ್ಸಿನಲ್ಲಿದೆ. ದ್ವಿಭಾಷಿತ್ವಕ್ಕೆ ಬಾಗಿಲು ತೆರೆಯುವ ಈ ಪ್ರವೃತ್ತಿ ಬರೆಯುವ ಭಾಷೆಗೆ ಮಾರಕವಾಗುತ್ತದೆ ಅನ್ನುವ ಚರಿತ್ರೆಯ ಪಾಠವನ್ನು ನಾವು ನೆನಪಿಡಬೇಕು; ಅದಲ್ಲದಿದ್ದರೆ ಕನ್ನಡವನ್ನು ಮ್ಯೂಸಿಯಂ ಭಾಷೆಯಾಗಿ ಮಾರ್ಪಡಿಸಿದಂತಾಗುತ್ತದೆ.

ಭಾಷೆಯೆನ್ನುವ ವಿದ್ಯಮಾನ ಬಹಳ ವಿಚಿತ್ರವಾದ್ದು. ಪರಸ್ವರ ವಿರುದ್ಧವೆನಿಸುವ ಬೇಡಿಕೆಗಳನ್ನದು ನಮ್ಮ ಮುಂದಿಡುತ್ತದೆ. ಉದಾಹರಣೆಗೆ, ಭಾಷೆಯ ಬೆಳವಣಿಗೆಗೆ ಪ್ರಮಾಣೀಕರಣ (ಸಂಸ್ಕರಣ) ಅಗತ್ಯ. ಎಂದರೆ, ಯಾವುದು ಸರಿ, ಯಾವುದು ತಪ್ಪು ಎನ್ನುವ ನಿಯಮ. ವಾಸ್ತವದಲ್ಲಿ ಭಾಷೆಯ ಉಪಯೋಗದಲ್ಲಿ ಸರಿ ತಪ್ಪುಗಳೆನ್ನುವುದು ಇಲ್ಲವೇ ಇಲ್ಲ ಎಂದು ನಾವು ವಾದಿಸಬಹುದೇನೋ ನಿಜ. ಆದರೂ ಪ್ರಬುದ್ಧವಾದ ಎಲ್ಲಾ ಭಾಷೆಗಳಲ್ಲೂ ಇಂತಹ ಪ್ರಜ್ಞೆಯೊಂದು ಕೆಲಸ ಮಾಡುತ್ತದೆ. ಇಲ್ಲದಿದ್ದರೆ ಅದನ್ನು ವಿದ್ಯಾಭ್ಯಾಸ, ಆಢಳಿತ, ಕಾನೂನು, ತರ್ಕ ಮುಂತಾದ ಹತ್ತು ಹಲವು ಕೆಲಸಗಳಿಗೆ ಉಪಯೋಗಿಸುವುದು ಸಾಧ್ಯವಿಲ್ಲ. ಯಾಕೆಂದರೆ ಭಾಷೆ ಸಮೂಹದ ಸೊತ್ತಲ್ಲದೆ ವ್ಯಕ್ತಿಯೊಬ್ಬನದ್ದಲ್ಲ. ಆದ್ದರಿಂದ ಸಮೂಹ ಆಯಾ ಕಾಲದಲ್ಲಿ ಒಪ್ಪಿಕೊಂಡಿರುವ ಉಪಯೋಗ ಸೂತ್ರಗಳನ್ನು ಪ್ರತಿಯೊಬ್ಬನೂ ಪಾಲಿಸುವುದು ಅಗತ್ಯವಾಗುತ್ತದೆ. ಒಂದು ವೇಳೆ ಯಾವನೇ ಒಬ್ಬ ಈ ಸೂತ್ರಗಳನ್ನು ಮೀರಿದನೆಂದಾದರೆ ಅದರಿಂದ ಬೇರೆ ಬೇರೆ ಪರಿಣಾಮಗಳು ಉಂಟಾಗಬಹುದು. ಈ ಪರಿಣಾಮ ಕೂಡಾ ಭಾಷಾಸೂತ್ರದ ಇರವಿಗೆ ಸಾಕ್ಷಿ. ಕನ್ನಡದಲ್ಲಿ ನೃಪತುಂಗ, ಕೇಶಿರಾಜ ಮುಂತಾದ ವಿದ್ವಾಂಸರು ಕ್ರೋಢೀಕರಿಸಿದ್ದು ಇಂಥ ಉಪಯೋಗ ಸೂತ್ರಗಳನ್ನೇ. ವೈಯಾಕರಣಿಗಳು ಎಷ್ಟೇ ಯತ್ನಿಸಿದರೂ ಯಾವ ಭಾಷೆಯೂ ಇದ್ದಂತೇ ಇರುವುದಿಲ್ಲ, ಮಾರ್ಪಡುತ್ತಲೇ ಇರುತ್ತದೆ ಎನ್ನುವುದು ಬೇರೆ ಮಾತು. ನಿಜವಾಗಿ ಹೇಳುವುದಿದ್ದರೆ ವೈಯಾಕರಣಿಗಳು ಭಾಷೆಯ ಮೇಲೆ ಸೂತ್ರಗಳನ್ನು ಹೇರುವುದಿಲ್ಲ, ಹೊರತು ತಂತಮ್ಮ ಕಾಲದ ಭಾಷೆಯ ಉಪಯೋಗವನ್ನು ಅವರು ವರ್ಣಿಸುತ್ತಾರೆ. ಇದನ್ನೇ ನಾವು ಸ್ಥಿರಸೂತ್ರಗಳೆಂದು ತಪ್ಪಾಗಿ ತಿಳಿದುಬಿಡುತ್ತೇವೆ. ಹಾಗೂ ಬೆಳೆಯುವ ಭಾಷೆಯೊಂದರಲ್ಲಿ ಇಂಥ ವ್ಯಾಕರಣ ಗ್ರಂಥಗಳು ಪ್ರಮಾಣಮೂಲಗಳೆಂದು ಅನಿಸಿದರೆ ಅದು ಕೂಡಾ ಸಹಜವೇ. ಯಾಕೆಂದರೆ, ಭಾಷೆಯ ಪ್ರಮಾಣೀಕರಣದಲ್ಲಿ ವ್ಯಾಕರಣ ಗ್ರಂಥಗಳು, ನಿಘಂಟುಗಳು, ಕೈಪಿಡಿಗಳು, ಅನುವಾದ ಕಾರ್ಯಗಳು, ಉನ್ನತ ವಿದ್ಯಾಭ್ಯಾಸ ಸಂಸ್ಥೆಗಳು, ಪತ್ರಿಕೆಗಳು, ಸಾಹಿತ್ಯ ಮತ್ತು ಸಿದ್ಧಾಂತ ಕೃತಿಗಳು, ಸುದ್ದಿ ಮತ್ತು ಸಂಸ್ಕೃತಿ ಮಾಧ್ಯಮಗಳು, ಸಂಶೋಧನೆ, ಪುಸ್ತಕಪ್ರಕಟಣೆ ಎಲ್ಲವೂ ಒಟ್ಟಾಗಿ ಕೆಲಸ ಮಾಡುತ್ತವೆ. ಇದೊಂದು ರೀತಿಯ ಕ್ರೋಢೀಕರಣ. ಒಂದು ರೀತಿಯ ಬಿಗಿ. ಒಂದು ರೀತಿಯ ಗುಣಮಟ್ಟ ಕಾಪಾಡಿಕೊಳ್ಳುವಿಕೆ.

ಹದಿನೆಂಟನೇ ಶತಮಾನದಲ್ಲಿ ಡಾಕ್ಟರ್ ಜಾನ್ಸನ್ ಏಕಾಕಿಯಾಗಿ ಸಂಪಾದಿಸಿದ ನಿಘಂಟು ಇಂಗ್ಲಿಷ್ ಭಾಷೆಯ ಪ್ರಮಾಣೀಕರಣಕ್ಕೆ ಉತ್ಸಾಹಪೂರ್ಣ ತಳಹದಿಯನ್ನು ಹಾಕಿಕೊಟ್ಟಿತು. ಆ ನಂತರ ಇಪ್ಪತ್ತನೆ ಶತಮಾನದಲ್ಲಿ ಹಲವು ವಿದ್ವಾಂಸರು ಸೇರಿ ಸಂಪಾದಿಸಿದ ಆಕ್ಸ್‌ಫರ್ಡ್ ಇಂಗ್ಸಿಷ್ ಡಿಕ್ಷನರಿ ಈ ಕೆಲಸವನ್ನು ಅಂದಿನಿಂದಲೂ ಮಾಡುತ್ತಿದೆ. ಅದೇ ರೀತಿ ಬಿ.ಬಿ.ಸಿ. ದೊಡ್ಡ ಪ್ರಮಾಣದಲ್ಲಿ ಈ ಭಾಷೆಯ ಮೇಲ್‌ಸ್ತರದ ಗುಣಮಟ್ಟವನ್ನು ಕಾಪಾಡಿಕೊಂಡು ಬರುವುದಕ್ಕೆ ಕಾರಣವಾಗಿಯಿತು. ಹಾಗೂ ಈ ನಿಟ್ಟಿನಲ್ಲಿ ಹಲವಾರು ವ್ಯಾಕರಣ ಗ್ರಂಥಗಳು, ವಿಶ್ವವಿದ್ಯಾಲಯಗಳು, ಪತ್ರಿಕೆಗಳು, ಸಾಹಿತ್ಯ ಕೃತಿಗಳು, ಪ್ರಕಟಣಾಲಯಗಳು ತಂತಮ್ಮ ಕೊಡುಗೆಯನ್ನು ನೀಡುತ್ತ ಬಂದಿವೆ. ಡಾಕ್ಟರ್ ಜಾನ್ಸನ್‌ಗಿಂತಲೂ ಎರಡು ಶತಮಾನದಷ್ಟು ಹಿಂದೆ ಜರ್ಮನ್ ಭಾಷೆಗೆ ಪ್ರಮಾಣ ಬದ್ಧವಾದೊಂದು ಮಾದರಿಯೇ ಇರಲಿಲ್ಲ. ಜರ್ಮನ್ ಭಾಷೆಯೆನ್ನುವುದು ಹಲವಾರು ಉಪಭಾಷೆಗಳದೊಂದು ಗುಂಪಾಗಿದ್ದಿತು. ಸರಕಾರೀ ಭಾಷೆಯೆಂಬುದೊಂದು ಇದ್ದಿತಾದರೂ ಜನರದನ್ನು ಒಂದು ಸಾಂಸ್ಕೃತಿಕ ಮಾದರಿಯೆಂದನೂ ಸ್ವೀಕರಿಸಿರಲಿಲ್ಲ. ಮಾರ್ಟಿನ್ ಲೂಥರ್ ಹದಿನಾರನೆ ಶತಮಾನದ ಮಧ್ಯದಲ್ಲಿ ಮಾಡಿದ ಬೈಬಲ್ ಭಾಷಾಂತರವೇ ಈಗಿನ ಪ್ರಮಾಣ ಬದ್ಧ ಜರ್ಮನ್ ಭಾಷೆಗೆ ಅಡಿಪಾಯ. ಈ ಬೈಬಲ್ ಭಾಷಾಂತರವನ್ನು ಎಲ್ಲರೂ ಕೂಡಲೇ ಒಪ್ಪಿಕೊಳ್ಳದೆ ಇದ್ದರೂ ಜನ ತಮ್ಮ ಭಾಷೆಯನ್ನು ನೋಡುವ ವಿಧಾನವನ್ನಿದು ಬದಲಾಯಿಸಿತು. ಅದು ವರೆಗೆ ಹರಿಹಂಚಾಗಿದ್ದ ಜರ್ಮನ್ ಭಾಷೆಗೆ ಕೇಂದ್ರಶಕ್ತಿಯೊಂದನ್ನು ನೀಡಿದುದು ಲೂಥರ್‌ನ ಬೈಬಲ್ ಎನ್ನಬಹುದು. ಹದಿನಾರನೆ ಶತಮಾನದಲ್ಲಿ ಫ್ರಾನ್ಸಿನ ವಿವಾದಾತ್ಮಕ ಮುಖ್ಯಮಂತ್ರಿ ಕಾರ್ಡಿನಲ್ ರಿಚ್ಲ್ಯೂ ಸ್ಥಾಪಿಸಿದ ಫ್ರೆಂಚ್ ಅಕಾಡೆಮಿಯೂ ಫ್ರೆಂಚ್ ಭಾಷೆಗೆ ಸಂಬಂಧಿಸಿದಂತೆ ಇಂಥದೇ ಉದ್ದೇಶವನ್ನು ಹೊಂದಿಕೊಂಡಿತ್ತು. ೧೬೩೫ರಲ್ಲಿ ಅಸ್ತಿತ್ವಕ್ಕೆ ಬಂದ ಈ ವಿದ್ವತ್ ಸಂಘ ಅರ್ಥಾತ್ ಫ್ರೆಂಚ್ ಅಕಾಡೆಮಿ ನಿಘಂಟು, ವ್ಯಾಕರಣ, ಅಲಂಕಾರ ಶಾಸ್ತ್ರ, ಛಂದಸ್ಸೇ ಮೊದಲಾದ ವಿಷಯಗಳಲ್ಲಿ ಸರ್ವಮಾನ್ಯವಾದ ಪ್ರಮಾಣಬದ್ಧ ಕೃತಿಗಳನ್ನು ಹೊರತರುವ ಯೋಜನೆಯನ್ನು ಹಾಕಿಕೊಂಡಿತು. ಇವುಗಳಲ್ಲಿ ಕೇವಲ ನಿಘಂಟುವೊಂದನ್ನೇ ಅದಕ್ಕೆ ಸಾಧ್ಯವಾಯಿತಾದರೂ ಈ ಅಕಾಡೆಮಿ ಫ್ರೆಂಚ್ ಭಾಷೆಗೆ ಸಂಬಂಧಿಸಿದಂತೆ ಈಗಲೂ ಅತ್ಯುನ್ನತ ನಿರ್ಣಾಯಕ ಸ್ಥಾನದಲ್ಲಿದೆ. ಕನ್ನಡದ ಕುರಿತಾಗಿ ಹೇಳುವುದಿದ್ದರೆ, ರೆವರೆಂಡ್ ಫಾದರ್ ಕಿಟ್ಟೆಲ್‌ರವರು ತಮ್ಮ ಜೀವನದ ಬಹುಪಾಲನ್ನು ಮುಡಿಪಾಗಿರಿಸಿ ಭಾಷಾಸೇವೆಯೂ ಜನಸೇವೆಯೇ ಎಂಬ ನಂಬಿಕೆಯಿಂದೆಂಬಂತೆ ಸಂಪಾದಿಸಿದ ಕನ್ನಡ-ಇಂಗ್ಲಿಷ್ ನಿಘಂಟು ಹತ್ತೊಂಬತ್ತನೇ ಶತಮಾನದ ಎರಡನೆ ಭಾಗದಲ್ಲಿ ಕನ್ನಡ ಭಾಷೆಯ ಪ್ರಮಾಮಿಣೀಕರಣಕ್ಕೆ ಚಾಲನೆಯನ್ನು ನೀಡಿತೆನ್ನಬಹುದು.

ಇಂಗ್ಲಿಷ್, ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಿಗೆ ಹೋಲಿಸಿದರೆ ಆಧುನಿಕ ಕನ್ನಡ ಒಂದು ಪ್ರಮಾಣೀಕರಣ ಘಟ್ಟವನ್ನು ತಲುಪಿದೆಯೆಂದು ಹೇಳುವಂತಿಲ್ಲ. ಕನ್ನಡ ಬಹಳ ಪ್ರಾಚೀನವಾದ ಸಾಹಿತ್ಯವೆನ್ನುವುದು ನಿಜ; ಕನ್ನಡದ ಸಾಹಿತ್ಯದ ಪ್ರಮಾಣವೂ ಸಾಕಷ್ಟು ದೊಡ್ಡದು. ಹೀಗಿದ್ದೂ ಇಂದಿನ ಕನ್ನಡ ಮೂಲವಿಜ್ಞಾನಕ್ಕೆ, ಸಾಮಾಜಿಕ ವಿಜ್ಞಾನಕ್ಕೆ, ತತ್ವಜ್ಞಾನ, ಭಾಷಾವಿಜ್ಞಾನವೇ ಮುಂತಾದ ಹತ್ತು ಹಲವಾರು ಶಿಸ್ತುಗಳಿಗೆ ಮಾಧ್ಯಮವಾಗುವುದಕ್ಕೆ ಸಾಧ್ಯವಾಗಿದೆಯೇ? ಸಾಧ್ಯವಾಗಬೇಕಾದರೆ ಏನಾಗಬೇಕು? ಇಂಥ ಪ್ರಶ್ನೆಗಳನ್ನು ನಾವು ಕೈಗೆತ್ತಿಕೊಂಡಾಗ ಅನಿಸುವುದು–ಕನ್ನಡದ ಆಧುನೀಕರಣ ಇನ್ನೂ ಆಗಬೇಕಾಗಿದೆ ಎಂದು. ಪ್ರಪಂಚದ ಯಾವುದೇ ವಿಷಯದ ಕುರಿತೂ ಕನ್ನಡದಲ್ಲಿ ವಿವೇಚಿಸುವುದು ನಮಗೆ ಸಾಧ್ಯವಾಗಬೇಕು. ಅದಕ್ಕೆ ಕನ್ನಡದ ಪದಸಂಪತ್ತು, ವಾಕ್ಯಸಂಪತ್ತು ಬೆಳೆಯುವುದರ ಜತೆಯಲ್ಲೇ ಪ್ರಮಾಣೀಕರಣವೂ ಆಗಬೇಕು. ಎಂದರೆ, ನಿಖರವಾಗಿ ಮಾತಾಡುವುದು, ಬರೆಯುವುದು, ಅರ್ಥ ಮಾಡುವುದು ನಡೆಯಬೇಕು. ಇದೆಲ್ಲ ಜತೆ ಜತೆಯಾಗಿ ಆಗಬೇಕಾದ ಕೆಲಸ: ವಿಚಾರ ಸಾಹಿತ್ಯದ ರಚನೆಯಿಂದಲೇ ಇಂಥ ಭಾಷೆಯೂ ಅಸ್ತಿತ್ವಕ್ಕೆ ಬರುವುದು. ಮೊದಲು ಭಾಷೆ ಅಸ್ತಿತ್ವಕ್ಕೆ ಬರಲಿ, ಆಮೇಲೆ ನೋಡೋಣ ಎಂಬಂತಿಲ್ಲ.

ಈ ಹಿಂದೆಯೇ ಹೇಳಿದಂತೆ, ಭಾಷೆ ಪ್ರಮಾಣೀಕರಣಕ್ಕೆ ಒಳಗಾಗುತ್ತಿದ್ದಂತೆಯೇ ಆಡುಮಾತಿನಿಂದ ದೂರವಾಗುವ ಸಂಭವವೂ ಇದೆ. ಬಿ.ಬಿ.ಸಿ. ಈ ಅಪಾಯವನ್ನು ಮನಗಂಡೇ ಎಪ್ಪತ್ತು ಎಂಬತ್ತರ ದಶಕಗಳಲ್ಲಿದ್ದ ಬಿಗುವನ್ನು ಆಮೇಲೆ ಸಡಿಲಿಸತೊಡಗಿದ್ದು. ಇನ್ನೂ ಅಷ್ಟೊಂದು ಬಿಗುವಿಗೆ ಒಳಗಾಗದಿರುವ ಕನ್ನಡ ಈ ಅಪಾಯದಿಂದ ದೂರವಿರುವುದಕ್ಕೆ ಬಹುಶಃ ಕಲಿತುಕೊಳ್ಳುವಂಥದೇನಿಲ್ಲ. ಆದರೂ ಅರಿತುಕೊಳ್ಳಬೇಕಾದ್ದು ಸಾಕಷ್ಟಿದೆ. ಕನ್ನಡದ ಸಮಾಜ ಜಾರಿತ್ರಿಕವಾಗಿ ಹಲವು ‘ಜಾತಿ’ಗಳಾಗಿ ಹರಿಹಂಚಾಗಿರುತ್ತ, ಇಲ್ಲಿ ಹೇಳಬೇಕಾದ ಮಾತೆಂದರೆ, ಕನ್ನಡಕ್ಕೆ ಹೇಗೆ ಎಲ್ಲಾ ಉಪಭಾಷೆಗಳ ಸತ್ವ ಬೇಕಾಗಿದೆಯೋ ಅದೇ ರೀತಿ ಅದಕ್ಕೆ ಜಾಗತಿಕವಾದ ಶೈಲಿಯೂ ಅಗತ್ಯ. ಅಥವಾ ಇದನ್ನೇ ತಿರುಗಿಸಿ ಹೇಳುವುದಾದರೆ, ಕನ್ನಡಕ್ಕೆ ಪಂಡಿತರೂ ವಿವಿಧ ಕಳಾಮಂಡಿತರೂ ಕೇಳತಕ್ಕ ಭಾಷಾವಿಧಾನ ಎಷ್ಟು ಬೇಕೋ ಅಷ್ಟೇ ಕಂಡವರು ಕೇಳುವ ಬೀದಿ ಮಾತೂ ಅಗತ್ಯ. ಅದು ಬೇಡ, ಇದು ಸಾಕು ಎನ್ನುವುದಕ್ಕಿಂತ ಅದೂ ಬೇಕು, ಇದೂ ಬೇಕು ಎನ್ನುವುದೇ ವಿವೇಕಪೂರ್ಣವಾದ ನಿಲುವು. ಯಾವ ಭಾಷೆ ಹಲವು ಸ್ತರಗಳನ್ನು ಒಟ್ಟಿಗೇ ಒಳಗೊಂಡಿರುತ್ತದೋ ಅದೇ ಹೆಚ್ಚು ಸತ್ವಪೂರ್ಣವಾಗಿರುವುದು. ಬದಲಿಗೆ, ಯಾವಾಗ ಅದು ಏಕಸ್ತರವಾಗುತ್ತದೋ ಆವಾಗ ಮುಖ್ಯವಾದ ಏನನ್ನೋ ಕಳಕೊಳ್ಳುತ್ತದೆ: ಒಂದೋ ಅದು ಪೂರ್ತಿ ಅತಿಭೌತಿಕವಾಗುತ್ತದೆ, ಇಲ್ಲವೇ ಕೇವಲ ಭೌತಿಕವಾಗುತ್ತದೆ. ಪಾರಮಾರ್ಥಿಕವನ್ನೂ ಆರ್ಥಿಕವನ್ನೂ, ಸ್ವರ್ಗವನ್ನೂ ಮರ್ತ್ಯವನ್ನೂ ಒಟ್ಟಿಗೇ ಸಂಧಿಸಲು ಸಾಧ್ಯವಾಗಿಸುವ ಕನ್ನಡ ನಮಗೆ ಬೇಕಾದ್ದು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.