ಥಾಯ್‌ಲ್ಯಾಂಡ್ ಪ್ರವಾಸ

ಹಿಂದೆಲ್ಲ ಪರದೇಶ ಸುತ್ತುವಾಗ ಬರೆದಿಡುವ ಪ್ರಯತ್ನ ಮಾಡಿರಲಿಲ್ಲ. ಶಿಸ್ತುರಹಿತವಾದ ಬದುಕು ಅಥವಾ ಬರೆಯಲಾಗದ ಸೋಮಾರಿತನ ಇದಕ್ಕೆ ಕಾರಣವಾಗಿರಬಹುದು. ಆದರೆ ಬಾಳಿನ ಮುಸಂಜೆಯಲ್ಲಿ ಬರೆದಿಟ್ಟ ಈ ಅನುಭವಗಳು ಅನ್ಯರಿಗೆ ಉಪಯೋಗವಾಗದಿದ್ದರೂ, ನನ್ನನ್ನು ನೆನಪಿನ ಆಳಕ್ಕೆ ಕೊಂಡೊಯ್ಯಬಹುದೆನ್ನುವ ದೂರದ ನಂಬಿಕೆ ಈ ಬರವಣಿಗೆಗೆ ಕಾರಣ ಪ್ರೇರಣೆ.

ಪೌರಾತ್ಯ ರಾಷ್ಟ್ರಗಳ ಬಗ್ಗೆ ನಮಗಿರುವ ಆವಜ್ಞೆ ನಂಬಲಸಾಧ್ಯ. ನಮ್ಮ ಓದು, ಬೆಳೆದ ವಾತಾವರಣ, ಪಾಶ್ಚಿಮಾತ್ಯ ರಾಷ್ಟ್ರಗಳ ಗುಲಾಮಗಿರಿ (ಭೌತಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ)ಇದಕ್ಕೆ ಕಾರಣ. ನಮ್ಮ ಪಕ್ಕದ ಬರ್ಮಾದ ಬಗ್ಗೆ ನಮಗೇನೇನೂ ತಿಳಿದಿಲ್ಲ. ಎಲ್.ಟಿ.ಟಿ.ಯವರ ದಾಳಿ, ಈಲಂವಾದ, ಶ್ರೀ ರಾಜೀವ್‌ಗಾಂಧಿಯವರ ಹತ್ಯೆ ಆಗದೆ ಇದ್ದಿದ್ದರೆ, ನಾವು ಶ್ರೀಲಂಕಾದ ಬಗ್ಗೆಯೂ ಇಂತಹ ಅಜ್ಞಾನವಿಟ್ಟುಕೊಳ್ಳುತ್ತಿದ್ದೆವು. ಜಯಸೂರ್ಯನಂತಹ ಕ್ರಿಕೆಟ್ ಪಟುವನ್ನು ನೋಡಿದಾಗಲೇ ನಾವು ಗವಾಸ್ಕರ್, ಸಚಿನ್, ಭ್ರಮಾಲೋಕದಿಂದ ಹೊರಬಂದದ್ದು. ಅದೇನೇ ಇರಲಿ ಈ ಬಾರಿ ಜಾಗತಿಕ ಬ್ಯಾಂಕಿನಿಂದ ಡೆನ್ಮಾರ್ಕ್ ಹಾಗೂ ನೆದರ್‌ಲ್ಯಾಂಡ್ ದೇಶಗಳಿಂದ ಗ್ರಾಮಾಂತರ ಪ್ರದೇಶಗಳಿಗೆ ಸುರಕ್ಷಿತ ಹಾಗೂ ಸಾಕಷ್ಟು ಕುಡಿಯುವ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯದ ಬಗ್ಗೆ, ಸಾಲ ಮತ್ತು ಅನುದಾನ ಬಂದಾಗ, ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತಿ ರಾಜ್ಯ ಮಂತ್ರಿಯಾಗಿ, ಸಹಜವಾಗಿಯೇ ಈ ಬಗ್ಗೆ ಆಸಕ್ತಿ ತಾಳಿದೆ. ಆ ಯೋಜನೆಗಳ ಅನುಷ್ಟಾನದಲ್ಲಿ ಆಗುತ್ತಿದ್ದ ವಿಳಂಬವಂತೂ ಹೇಲತೀರದಷ್ಟು. ಇಂತಹ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿರುವ ನಮ್ಮ ಪಕ್ಕದ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಾದ ಥಾಯ್‌ಲ್ಯಾಂಡ್, ಫಿಲಿಪಿಯನ್ಸ್ ಹಾಗೂ ಇಂಡೋನೇಷಿಯ ದೇಶಗಳಿಗೆ ಹೋಗಿ ಅವರ ಅನುಭವ ಹಾಗೂ ಯೋಜನೆಗಳ ಪ್ರತಿಫಲ ಕಣ್ಣಾರೆ ಕಾಣಲು. ನಮ್ಮ ಇಲಾಖೆಯ ಕಾರ್ಯದರ್ಶಿ ಶ್ರೀ ಎಂ. ಆರ್. ಶ್ರೀನಿವಾಸಮೂರ್ತಿ, ಹಾಗೂ ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಕೊಂಗವಾಡರ ಜೊತೆಗೆ ೨೪:೨೫ರ ಮಧ್ಯರಾತ್ರಿ ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ‘ಥಾಯ್’ ವಿಮಾನದಲ್ಲಿ ಪ್ರಯಾಣ ಬೆಳೆಸಿದೆವು. ನಮ್ಮ ಭಾರತೀಯ ಸಮಯಕ್ಕಿಂತ ೧-೩೦ ತಾಸು ಮುಂದು(ಪೂರ್ವಾಭಿಮುಖವಾಗಿ ಪ್ರಯಾಣ ಬೆಳೆಸಿದ್ದರಿಂದ). ಬೆಳಿಗ್ಗೆ ಬ್ಯಾಂಕಾಕ್‌ನಲ್ಲಿ ಇಳಿದಾಗ, ನಮ್ಮ ಧೂತವಾಸದ ಹಿರಿಯ ಅಧಿಕಾರಿ ಶ್ರೀ ಅರುಣ್ ಹಾಗೂ ಅವರ ಸಹಾಯಕ ಶ್ರೀ ಪೈಜಲ್ (ಥಾಯ್ ನಾಗರೀಕ) ನಮ್ಮನ್ನು ಎದುರುಗೊಂಡರು. ರಾಜತಾಂತ್ರಿಕ ಪಾಸ್ ಪೋರ್ಟ್‌ಯಿದ್ದುದರಿಂದ, ದೇಶದೊಳಗೆ ಹೋಗುವ ಪರವಾನಗಿ (ವೀಸಾ) ಒಂದರ್ಧ ತಾಸಿನಲ್ಲೆಸಿಕ್ಕಿತು. “ಹೇಗಿದ್ದೀರಿ? ನಿಮಗೆ ಸ್ವಾಗತ” ಎಂದು ಅಚ್ಚಕನ್ನಡದಲ್ಲಿ ಸ್ವಾಗತಿಸಿದ ಶ್ರೀ ಅರುಣ್ ಅವರು ಕನ್ನಡಿಗರು, ಅದರಲ್ಲೂ ಬೆಂಗಳೂರಿನವರು. ಇದೊಂದು ಸಮಾಧಾನದ ಸಂಗತಿಯೆ.

ಥಾಯ್‌ಲ್ಯಾಂಡ್, ಪಟ್ಟಾಯ, ಬ್ಯಾಂಕಾಕ್‌ಯೆಂದರೆ, ಬೆಲೆವೆಣ್ಣುಗಳ ಮೈಮಾರುವ ಸೂಳೆಯರ ನಾಡೆಂದೆ ಅನೇಕರ ಭಾವನೆ. ಈ ಕಲ್ಪನೆಯ ರೋಮಾಂಚನದಲ್ಲಿ ಅನೇಕ ಪ್ರವಾಸಿಗರು ಅಲ್ಲಿಗೆ ಹೋದದ್ದು ಹೋಗುತ್ತಿರುವುದು ನಿಜ. ಆದರೆ ಇದು ಮೇಲ್ ನೋಟಕ್ಕೆ ಕಾಣುವ ಮಾಯಾ ಪ್ರಪಂಚ. ಆದರೆ ಆ ಸುರದ್ರೂಪಿ ಖೇಮರ ಬುಡಕಟ್ಟಿನ ಕುಳ್ಳಜನ, ವಿನಯವಂತರು, ಸಂಪ್ರದಾಯಬದ್ಧರು,ಅದಕ್ಕಿಂತ ಹೆಚ್ಚಾಗಿ ಶ್ರಮಜೀವಿಗಳು. ಅಮೇರಿಕಾದ ಪ್ರಭಾವ ಹೆಚ್ಚಾಗಿದೆ ನಿಜ. ಆದರೂ ಬೌದ್ಧ ಧರ್ಮದ ಪ್ರಭಾವ ಅವರ ನರನಾಡಿಗಳಲ್ಲಿದೆ. ಅಮೇರಿಕಾದ ಗಗನಚುಂಬಿಗಳನ್ನು ನಾಚಿಸುವಂತ ಕಛೇರಿ ಕಟ್ಟಡಗಳ ಮುಂದೆ ಚಿಕ್ಕ ಚಿಕ್ಕ ದೇವಾಲಯಗಳು. ಸುಂದರವಾದ ಚಿತ್ತಾರದ ಕಟ್ಟಿಗೆಯ ಗೂಡುಗಳು ಇವೆ. (ಖಿemಠಿಟes oಜಿ sಠಿiಡಿiಣs) ಸಂಪೂರ್ಣ ಪಾಶ್ಚಿಮಾತ್ಯ ಉಡುಗೆಯನ್ನು ಧರಿಸಿರುವ ವಾಲವೋ, ನಿಶಾನ್, ಮಿಟ್ಸುಬುಸಿ, ತೂಯಟೋ ಮೊದಲಾದ ಕಾರುಗಳಲ್ಲಿ ಬಂದಿಳಿಯುವ, ಅಲಂಕರಿಸಿಕೊಂಡ ಲಲನೆಯರು ಹಾಗೂ ಇತರ ಅಧಿಕಾರಿಗಳು, ಕಛೇರಿ ಒಳಗಡೆ ಹೋಗುವಾಗ ಈ ಚಿಕ್ಕ ಗೂಡುಗಳ ದೇವರಿಗೆ ನಮ್ಮಂತೆ ಕರಜೋಡಿಸಿ, ಶಿರಬಾಗಿ ನಮಸ್ಕರಿಸಿ ಒಳಹೋಗುತ್ತಾರೆ.

ಒಂದರ್ಥದಲ್ಲಿ “ಪಾಶ್ಚಿಮಾತ್ಯರ ಕಲ್ಪನೆಯ” ‘ಪ್ರಜಾಪ್ರಭುತ್ವ’ ನಮಗೆ ಹೊಸದು. ಒಮ್ಮೊಮ್ಮೆ ಅಸಂಗತ ಸಹ. ಇಡೀ ಥಾಯ್ಲ್ಯಾಂಡಿನ ಸಾಸ್ಕೃತಿಕ, ಆಧ್ಯಾತ್ಮಿಕ ಹಸಿವಿನ ಅಗತ್ಯವನ್ನು ಪೂರೈಸಿದವರು ನಾವು. ಆದರೆ ನಮ್ಮ ತಾಯಿನಾಡಿನಿಂದ ಬೌದ್ಧ ಮತ ಧರ್ಮ ಪಲಾಯನ ಮಾಡಿಸಿದ ಪರಮ ಅಸಹಿಷ್ಣುಗಳು; ದಿವಂಗತ ದ್|ಬಿ.ಆರ್.ಅಂಬೇಡ್ಕರ್ ಹಿಂದುವಾಗಿ ಸಾಯಲಾರೆನೆಂದು ಸಾರಿ, ಅವರ ಕೊನೆಯ ದಿನಗಳಲ್ಲಿ “ಬೌದ್ಧ ಮತಾವಲಂಬಿ”ಗಳಾಗಿದ್ದರಿಂದ, ಕೆಲವು ಲಕ್ಷ ದಲಿತಬೌದ್ಧರನ್ನು ಮಹಾರಾಷ್ಟ್ರ, ಕರ್ನಾಟಕದ ಉತ್ತರಭಾಗ ಮೊದಲಾದ ಕಡೆಯಲ್ಲಿ ನೋಡಬಹುದು. ಇತ್ತೀಚಿನ ನಮ್ಮ ಹುಡುಗರಿಗೆ “ಸ್ವೆಟರ್” ಮಾರುವ ಟಿಬೆಟಿಯನ್ನರನ್ನು ನೋಡಿದಾಗ ಮಾತ್ರ ಬೌದ್ಧ ಧರ್ಮ ನೆನಪಾಗುತ್ತದೆ. ದಿವಂಗತ ಸಿದ್ದಯ್ಯ ಪುರಾಣಿಕರು (ಕಾವ್ಯಾನಂದ) ತಮ್ಮ ‘ವಚನೋದ್ಯಾನ’ ದಲ್ಲಿ ನಡುರಾತ್ರಿಯಲ್ಲಿ ಎದ್ದೋದವರೆಲ್ಲ ಗೌತಮ ಬುದ್ಧರಲ್ಲ”ಯೆಂದು ಬರೆದದ್ದು ಎಷ್ಟು ಅರ್ಥಪೂರ್ಣ.

ಅದೇನೆಯಿರಲಿ, ಶ್ರೀಲಂಕಾದ ಮೂಲಕ ಸಮುದ್ರ ದಾಟಿಬಂದ ಬೌದ್ಧಧರ್ಮ ಇಲ್ಲಿ ಬಲವಾಗಿ ಬೇರೂರಿದೆ. ಆದರೆ “ರಾಮಾಯಣವನ್ನು ತನ್ನದಾಗಿಸಿಕೊಂಡಿದೆ. ಆ ನಾಡಿನಲ್ಲಿ ಅತ್ಯುನ್ನತ ಸಾಮ್ರಾಜ್ಯಕಟ್ಟಿ ಆಳಿದ ‘ಚಕ್ರಿ’ ಸಾಮ್ರಾಟರು ಶ್ರೀರಾಮನ ಹೆಸರಿನಿಂದಲೇ ಗುರುತಿಸಲ್ಪಟ್ಟಿದ್ದಾರೆ. ಚಕ್ರಿ ವಂಶದ ಮೊದಲನೆ ರಾಜ ಒಂದನೆ ರಾಮ(ಖಚಿmಚಿ ಣhe ಈiಡಿsಣ) ಈಗ ಆಳುತ್ತಿರುವ ಜನಪ್ರಿಯ ರಾಜನ ಹೆಸರು ಸಹ ಹತ್ತನೆ ರಾಮ (ಖಚಿmಚಿ ಣhe ಣeಟಿಣh) ಈತನ ನಿಜ ಹೆಸರು “ಭೂಮಿಪಾಲ ಅತುಲತೇಜ”

ಚಕ್ರಿ ಸಾಮ್ರಾಜ್ಯದ ಸ್ಥಾಪಕ ಜನಮನದಲ್ಲಿ ಅಮರನಾಗಿ ಉಳಿದಿದ್ದಾನೆ. ನಮ್ಮ ದೇಶದಂತೆಯೇ ಥಾಯ್‌ಲ್ಯಾಂಡ್ ಅನ್ಯರ ಆಕ್ರಮಣಕ್ಕೆ, ದಬ್ಬಾಳಿಕೆಗೆ ಪದೇ ಪದೇ ತುತ್ತಾಗಿದೆ. ಆದರೆ ಒಬ್ಬ ಇಂಗ್ಲಿಷ್ ಇತಿಹಾಸಕಾರ ಬರೆದಂತೆ “ಅಯೋಧ್ಯೆಯಲ್ಲಿ ಸಹ ಯಾರಾದರೂ ಒಬ್ಬ ಒಳ್ಳೆಯ ಮನುಷ್ಯ ಹುಟ್ಟುತ್ತಾನೆ.” ಥಾಯ್‌ಲ್ಯಾಂಡಿನ ಅಯೋಧ್ಯೆ ನಮ್ಮ ರಾಮನ ಅಯೋಧ್ಯೆಯೆ. ಆದರೆ ಆತ ಯಾವ ಸ್ಥಳದಲ್ಲಿ ಎಷ್ಟು ಗಜ ಉದ್ದಗಲದ ಜಾಗದಲ್ಲಿ ಹುಟ್ಟಿದನೆಂದು ಥಾಯ್ ಜನ ಪರದಾಡುವುದಿಲ್ಲ. ಹೊಡೆದಾಟವಂತೂ ಮಾಡೇಯಿಲ್ಲ. ರಾಮನ ಅಯೋಧ್ಯೆಯನ್ನು ತಮ್ಮ ಸಾಮ್ರಾಜ್ಯದ ರಾಜಧಾನಿಯನ್ನಾಗಿಸಿಕೊಂಡ ಈ ರಾಜರು, ಪ್ರಜೆಗಳೂ ಬೌದ್ಧ ಮತಾವಲಂಬಿಗಳು.

ಬರ್ಮಾದ ಸೈನಿಕರು ‘ಅಯೋಧ್ಯೆ’ ಯನ್ನು ಎಡಬಿಡದೆ ಸೂರೆಗೊಂಡು, ಬೆಂಕಿಯಿಟ್ಟು ನಾಶಮಾಡುದರು. ಕ್ರಿ.ಶ.೧೭೬೭ರ ಅಯೋಧ್ಯೆ ಪತನ ಥಾಯ್ ಇತಿಹಾಸದ ಕರಾಳ ಅಧ್ಯಾಯ. ೧೫೬೫ರಲ್ಲಿ ‘ವಿಜಯನಗರ’ ಪತನವಾಗಿ ಹಾಳು ಹಂಪಿಯಾಗಿರುವ ಜಿಲ್ಲೆಯಿಂದ ಬಂದ ನಾನು, ಇತಿಹಾಸದ ಪ್ರಸಂಗಗಳು ವಿವಿಧ ದೇಶಗಳಲ್ಲಿ ವಿವಿಧ ಜನರಲ್ಲಿ ಎಂತಹ ಸ್ಥೈರ್ಯ, ಆತ್ಮಗೌರವ ಹಾಗೂ ಬಲಿದಾನಕ್ಕೆ ಪ್ರೇರಣೆ ಮಾಡಬಹುದೆಂದು ಯೋಚಿಸುತ್ತೇನೆ. ಬರ್ಮಾ ಆಕ್ರಮಣದ ಒಂದು ವರ್ಷದೊಳಗಾಗಿ ದಂಡನಾಯಕನಾಗಿದ್ದ ಥಾಂಗದುವಾಗ್ (ಖಿhoಟಿg ಆuಚಿಟಿg) ತನ್ನ ತಮ್ಮ ಬನುಮ(ಃoಟಿಚಿmಚಿ) ನೊಂದಿಗೆ ಚಕ್ರಿ ಸಾಮ್ರಾಜ್ಯ ಸ್ಥಾಪಿಸಿ, ಬರ್ಮಾದೇಶದ ಆಳ್ವಿಕೆಯನ್ನು ಮುಕ್ತಗೊಳಿಸುತ್ತಾನೆ. ಆತನ ರಾಜ ‘ಟಾಕಿಸನ್’ ಜೊತೆಗೆ ಛಾವೊಫರಿಯಾ ನದಿ (ಅhಚಿoಠಿhಥಿಚಿ) ದಂಡೆಯ ಮೇಲೆ ‘ಥನ ಬುರಿ’ಯೆನ್ನುವ ಹೊಸ ರಾಜಧಾನಿಯನ್ನು ಸ್ಥಾಪಿಸುತ್ತಾನೆ. ಒಂದನೆಯ ರಾಮ ಸ್ವತಃ ಕವಿಯಾಗಿದ್ದ ಆತನೆ ನಮ್ಮ ರಾಮಾಯಣವನ್ನು ಥಾಯ್ ಭಾಷೆಗೆ ಭಾಷಾಂತರಿಸಿದ್ದಾನೆ. ಅದನ್ನು ಇಂದಿಗೂ ಥಾಯ್ ಜನ “ರಾಮ್ ಕಿಟನ್” (ರಾಮಕೀರ್ತನೆ) ಯೆಂದು ಪಠಿಸುತ್ತಾರೆ. ಆತನ ಕಾಲದಲ್ಲಿ “ತ್ರಿಪಿಟಿಕ”ವನ್ನು ಪರಿಷ್ಕರಿಸಿ ೪೫ ಸಂಪುಟಗಳಲ್ಲಿ ಪ್ರಕಟಿಸಲ್ಪಡುತ್ತದೆ. ೪೫ ಹೊಸ ಕಾನೂನುಗಳನ್ನು ತನ್ನ ಆಳ್ವಿಕೆಯಲ್ಲಿ ಜಾರಿಗೊಳಿಸಿ ಸಾಮ್ರಾಜ್ಯದ ಸುವ್ಯವಸ್ಥೆಗೆ ಕಾರಣೀಭೂತನಾಗುತ್ತಾನೆ. ಒಂದನೆಯ ರಾಮ ವಿಯಟ್‌ನಾಮಿನಿಂದ ‘ಎಮರಾಲ್ಡಾ ಬುದ್ಧ’ ನನ್ನು ತಂದು ಸ್ಥಾಪಿಸುತ್ತಾನೆ. ಸುತ್ತಲೂ ಸುಂದರ ಚಿತ್ರಗಳ ಮೂಲಕ ಜತಕಾ ಪೀಠದ ಹಾಗೂ ರಾಮಾಯಣದ ಕಥೆಗಳನ್ನು ಬರೆಸುತ್ತಾನೆ. ಅಂದು ಹಾಳು ಬಿದ್ದ ‘ಅಯೋಧ್ಯೆ’ ನಮ್ಮ ಹಂಪೆಯಂತೆ ಕೊಂಪೆಯಾಗಿ ಅನೇಕ ಸ್ತೂಪಗಳ, ದೇವಾಲಯಗಳ, ಅರಮನೆಗಳ ಕುರುಹಾಗಿ, ಥಾಯ್ ಜನರಲ್ಲಿ ಐತಿಹಾಸಿಕ ಪ್ರಜ್ಞೆ ಮೂಡಿಸಿದರೆ, ನಮ್ಮಂತಹ ಭಾರತೀಯರಿಗೆ ನಮ್ಮ ಇತಿಹಾಸದ ಬಗ್ಗೆ ಹೆಮ್ಮೆ ತರಿಸುತ್ತದೆ. ಪಾಶ್ಚಿಮಾತ್ಯರಿಗೆ ಅದರಲ್ಲೂ ಅಮೇರಿಕಾದವರಿಗೆ ಅದೊಂದು ನೋಡಬಹುದಾದ ಪ್ರೇಕ್ಷಣೀಯ ಸ್ಥಳ ಮಾತ್ರವಾಗಿದೆ.

‘ವ್ಯಾಟ್’ ಯೆಂದರೆ ಥಾಯ್ ಭಾಷೆಯಲ್ಲಿ ದೇವಾಲಯ. ತುಂಬಾ ಸುಂದರವಾದ, ಆದರೆ ಹಾಳಾದ ದೇವಾಲಯ ಇಂದಿಗೂ ತನ್ನ, ಬೃಹತ್ ಆಕಾರ ಹಾಗೂ ಅಲಂಕಾರದಿಂದ, ಪ್ರೇಕ್ಷಣೀಯ. ತುಂಬಾ ಜತನದಿಂದ ‘ಸ್ಮಾರಕ’ ಕಾಪಾಡಿಕೊಂಡು ಬಂದಿದ್ದಾರೆ. ರಾಮ, ಸೀತೆ, ಲಕ್ಷ್ಮಣ, ಹನುಮಂತರ ಉಬ್ಬು ಚಿತ್ರಗಳು, ಗಾರೆಯಿಂದ ಮಾಡಲ್ಪಟ್ಟಿವೆ. ಪ್ರತಿ ಕಮಾನಿನ, ಗೂಡುಗಳಲ್ಲಿ ಪದ್ಮಾಸನದಲ್ಲಿ ಕುಳಿತ “ಗೌತಮ ಬುದ್ಧ”ನ ಬೃಹದಾಕಾರದ ಗಾರೆ, ಇಟ್ಟಿಗೆಗಳ ಮೂರ್ತಿಗಳಿವೆ. ಅವುಗಳು ದಾಳಿಯಲ್ಲಿ ಹಾಳಾಗಿವೆ. ಅಳಿದುಳಿದ ಅವಯವಗಳು ಕೆಲವು ಕಡೆ, ರುಂಡ, ಮುಂಡಗಳು ಉಳಿದಿವೆ. ಅವುಗಳು, ಆ ಮೂರ್ತಿಗಳ ಸೌಂದರ್ಯ ಹಾಗೂ ಕಲಾವಂತಿಕೆಯನ್ನು ಸಾರಿ ಹೇಳುತ್ತವೆ. ಸುಮಾರಿ ೪೦೦ ವರ್ಷಗಳ ಕಾಲ ‘ಅಯೋಧ್ಯೆ’ ಥಾಯ್‌ಲ್ಯಾಂಡ್ ಅಥವಾ ಸಯಾಮಿನ ರಾಜಧಾನಿಯಾಗಿತ್ತು. ಒಂದನೆ ರಾಮನು ೧೭೮೨ರ ಏಪ್ರಿಲ್ ೬ರಂದು ಅಧಿಕಾರಕ್ಕೆ ಬಂದನು. ಆ ದಿನವನ್ನು ಥಾಯ್ ಜನ ಸಂಭ್ರಮದಿಂದ ಆಚರಿಸುತ್ತಾರೆ. ಅದೊಂದು ಸರ್ಕಾರಿ ರಜಾದ ದಿನ ಕೂಡ.

ಈ ದೇವಾಲಯ ನೋಡುವುದಕ್ಕಿಂತ ಮುಂಚೆ, ಅಲ್ಲಿನ ವಸ್ತುಸಂಗ್ರಹಾಲಯಕ್ಕೆ (ಒuseum) ಹೋಗಿದ್ದೆವು. ರಜಾ ದಿನವಾಗಿದ್ದರೂ, ಅಧಿಕಾರಿಗಳು ಮೊದಲ ನಮ್ಮ ಬರುವುಕೆಯನ್ನು ತಿಳಿಸಿದ್ದರಿಂಡ, ನಮಗಾಗಿ ದ್ವಾರಗಳು, ತೆರೆಯಲ್ಪಟ್ಟಿದ್ದವು. ಅಲ್ಲಿಯ ಕಾವಲುಗಾರನ ತಿಂಗಳ ಸಂಬಳ ೩೦೦೦ ಬಾತ್. ಅಂದಾಜು ನಮ್ಮ ಒಂದೂವರೆ ರೂಪಾಯಿಗೆ ಒಂದು ಬಾತ್ ಸಮಾನ. ವಸ್ತುಸಂಗ್ರಹಾಲಯದಲ್ಲಿ ಅಂದಿದ್ದ ಅಯೋಧ್ಯೆ ಇಡೀ ನಗರದ ಚಿಕ್ಕ ಪ್ರತಿರೂಪ ಮಾಡಿ ಗಾಜಿನ ಆವರಣದೊಳಗೆ ಇಟ್ಟಿದ್ದಾರೆ. ಅಯೋಧ್ಯೆಯ ಕೋಟೆ, ದೇವಸ್ಥಾನಗಳ ಪುನರ್‍ನಿರ್ಮಾಣವನ್ನು ನೋಡುಗರ ಅಂದಾಜಿಗೆ ಸಿಲುಕಲು ಒಂದು ಉಪಯುಕ್ತ ಪ್ರಯತ್ನ ಮಾಡಿದ್ದಾರೆ. ಮೂಲ ನಕಾಸೆಯನ್ನು ಅಂದಿನ ಇಟ್ಟಿಗೆ ಗಾರೆಯ ಒಂದು ಗೋಡೆಯನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಒಂದೊಂದು ದೂರಧರ್ಶನದಂತಹ ಡಬ್ಬಿಗಳಲ್ಲಿ ಗುಂಡಿ ಒತ್ತಿದರೆ, ಚಿತ್ರಗಳು ಮೂಡುವುದರ ಜೊತೆಗೆ ಆ ಇತಿಹಾಸದ ವಿಷಯದ ಸಂಗತಿಗಳ ಧ್ವನಿಸುರುಳಿಗಳು ಮಾತನಾಡುತ್ತವೆ. ಇದರ ಜೊತೆಗೆ “ಥಾಯ್ ಜನರ” ಜನಜೀವನದ ಆಚಾರ ವಿಚಾರ, ಅವರು ಉಪಯೋಗಿಸುತ್ತಿದ್ದ ಉಪಕರಣಗಳು ಹಾಗೂ ಗೃಹಬಳಕೆ ವಸ್ತುಗಳ ಪ್ರತಿರೂಪ ನಿರ್ಮಿಸಿದ್ದಾರೆ. ಥಾಯ್ ಮಕ್ಕಳ ಗ್ರಾಮೀಣ ಆಟಗಳಂತು ನಮಗಿಂತ ವಿಭಿನ್ನವಾಗಿರಲಿಲ್ಲ. ಅವುಗಳ ಚಿತ್ರಗಳು ಗುಂಡಿ ಒತ್ತಿದರೆ ಚಿಕ್ಕ ತೆರೆಯ ಮೇಲೆ ಕಾಣುತ್ತವೆ. ಥಾಯ್ ಬಾಲಕರು ಜಗತ್ತಿನಾದ್ಯಂತ ಬಾಲಕರಂತೆ, ನಮ್ಮನ್ನು ಆಕರ್ಷಿಸುವ, ಮನಸೆಳೆಯುವ, ನಮ್ಮ ಬದುಕಿನ ಒಂದು ತುಂಡಿನಂತೆ ಕಾಣುತ್ತಾರೆ. ಶ್ರೀ ಶ್ರೀನಿವಾಸಮೂರ್ತಿಗಳು ಇಂತಹ ಒಂದು ವಸ್ತುಸಂಗ್ರಹಾಲಯವನ್ನು ನಮ್ಮ ಹಂಪೆಯಲ್ಲಿ ಮಾಡಿದರೆ ಒಳಿತೆಂದು ಸೂಚಿಸಿದರು. ನಿಜಕ್ಕೂ ಇದೊಂದು ಯೋಗ್ಯ ಹಾಗೂ ಉಪಯುಕ್ತ ಸಲಹೆ. ಸರ್ಕಾರದ, ಸಮಾಜದ ಬೆಂಬಲ ಸಿಕ್ಕರೆ ಇದೊಂದು ಅಸಾಧ್ಯದ ಮಾತೇನೂ ಅಲ್ಲ.

“ಸರಬುರಿ” ಪ್ರಾಂತದ ಗ್ರಾಮೀಣ ಪ್ರದೇಶಕ್ಕೆ ಹೋಗುವಾಗ ನಾವು ಈ ಪ್ರೇಕ್ಷಣೀಯ,ಐತಿಹಾಸಿಕ ಸ್ಥಳ ನೋಡಿದೆವು.”ಸರಬುರಿ” ಒಂದು ಪ್ರಾಂತ. ಇಂತಹ ೭೫ ಪ್ರಾಂತಗಳಲ್ಲಿ ಎ.ಆರ್.ಡಿ ಶಾಖಾ ಕೇಂದ್ರಗಳಿವೆ. ೫ ರಿಂದ ೧೦ ಹಳ್ಳಿಗಳ ಸಮುಚ್ಚಯಗಳಿವೆ. “ತಂಬೋನ್”,”ಸರಬುರಿ” ಹೈನುಗಾರಿಕೆಗೆ ಹಾಗೂ ಸಿಮೆಂಟ್ ಕಾರ್ಖಾನೆಗಳಿಗೆ ಹೆಸರುವಾಸಿ.ಆರು ಮಾರ್ಗಗಳು ಜೋಡುರಸ್ತೆ.ಸಿಮೆಂಟಿನ ರಸ್ತೆಯ ಮೇಲೆ ಟಾರಾಕಿದ ಪಾಶ್ಚಿಮಾತ್ಯ ರಾಷ್ಟ್ರಗಳ ಹೆದ್ದಾರಿಗಳಿಗಿಂತ ಗುಣಮಟ್ಟದಲ್ಲಿ ಕಡಿಮೆಯಿಲ್ಲದ ಹೆದ್ದಾರಿಗಳು.ಹಳ್ಳಿಯ ರಸ್ತೆಗಳು ಸಹ ಸ್ವಚ್ಚ ಹಾಗೂ ವಿಹಾಲವಾದವುಗಳು. ನಮ್ಮ ರಾಷ್ಟ್ರದಲ್ಲಿ ಇಂತಹ ಹೆದ್ದಾರಿಗಳನ್ನು ಒಂದು ಕಡೆಯಲ್ಲಿಯಾದರೂ ನೋಡಲು ಸಿಗುವುದಿಲ್ಲ. ಗ್ರಾಮೀಣ ಪ್ರದೇಶಗಳು ತಮ್ಮ ಹೊಸ ಆದಾಯದಿಂದಾಗಿ, ತಮ್ಮ ಗ್ರಾಮೀಣ ಲಕ್ಷಣಗಳನ್ನು ಕಳೆದುಕೊಂಡಿವೆ..ಎಲ್ಲರಲ್ಲೂ, ನಿಶಾನ್ ಹಾಗೂ ಮಿಟ್ಷುಬಿಷಿ ಪಿಕಪ್ ವ್ಯಾನ್ ಗಳಿವೆ.ರಸ್ತೆ ತುಂಬಾ ಜಪಾನಿನ ಕಾರುಗಳ ಅಟ್ಟಹಾಸ ನೋಡಬೇಕೆಂದರೂ ಒಂದು ಹಳೆಯ ಕಾರನ್ನಾಗಲೀ,ಲಾರಿಯನ್ನಾಗಲೀ, ಬ್ಯಾಂಕಾಕ್‌ನಲ್ಲಿಯಾಗಲೀ, ಗ್ರಾಮೀಣ ಪ್ರದೇಶಗಳಲ್ಲಿಯಾಗಲೀ ನಮಗೆ ನೋಟಕ್ಕೇ ಸಿಗಲಿಲ್ಲ. ಹೊಗೆ ಉಗುಳುವ ಮೋಟಾರ್ ವಾಹನಗಳು ಇಲ್ಲವೇಯಿಲ್ಲ. ಥಾಯ್ ಜನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಉಳ್ಳವರಂತೆ ಕಂಡು ಬಂದರು. ಅನೇಕರು,ಅದರಲ್ಲೂ ಸಂಚಾರಿ ಪೋಲೀಸರು( ಮೋಟಾರ್ ಸೈಕಲ್ ಮೇಲೆ ಸವಾರಿ ಮಾಡುವವರು) ಮೂಗನ್ನೂ ಬಟ್ಟೆಯಿಂದ ಮುಚ್ಚಿಕೊಂಡೇ ಇರುತ್ತಿದ್ದರು. ಆದರೂ, ಬಹುಸಂಖ್ಯಾ ಜನರು ‘ಏಡ್ಸ್’ ರೋಗಿಗಳು. ಇದರ ಕಾರಣಗಳ ಬಗ್ಗೆ ನಂತರ ಬರೆಯುವೆ. ಶ್ರೀಮಂತಿಕೆ ಇಂತಹ ವಿಕೃತಿಯನ್ನು ಹುಟ್ಟುಹಾಕುತ್ತದಲ್ಲವೆ?

ಎತ್ತನೋಡಿದರೂ ಬತ್ತದ ಗದ್ದೆಗಳು, ಬಾಳೆ, ಮಾವು, ತೆಂಗು,ಹಲಸಿನ ಮರಗಳು. ಬೇವಿನ ಮರಗಳಿಗಂತೂ ಲೆಕ್ಕವೆಯಿಲ್ಲ.ದೇಶದ ಶೇಕಡ ೬೦ ನ್ನು ಗ್ರಾಮೀಣ ಪ್ರದೇಶದ ಅಭಿವೃದ್ದಿಯ ಮೇಲೆ ಸರ್ಕಾರ ಖರ್ಚು ಮಾಡುತ್ತದೆ. ೭೫ ಪ್ರಾಂತಗಳಲ್ಲಿ ೭೫ ಜನ ರಾಜ್ಯಪಾಲರು (ಉoveಡಿಟಿeಡಿ)ಯಿದ್ದಾರೆ. ದೇಶದಲ್ಲಿ ೬೦ ವರ್ಷಕ್ಕೆ ಸರ್ಕಾರಿ ನೌಕರರು ನಿವೃತ್ತರಾಗುತ್ತಾರೆ. ಇತಿಹಾಸ ಸಂಸ್ಕೃತಿ ಹಾಗೂ ಲಲಿತಕಲೆಗಳ ಬಗ್ಗೆ ವೀರಾವೇಶದಿಂದ ಮಾತನಾಡುವ ನಾವುಗಳು ಥಾಯ್ ಲ್ಯಾಂಡಿನಿಂದ ಕಲಿಯಬೇಕಾದ ಪಾಠ ಸಾಕಷ್ಟಿದೆ. ಆ ದೇಶದ ಜನಗಳ ಶ್ರೀಮಂತಿಕೆಯ ಮುಂದೆ ನಾವು ಏನೇನು ಅಲ್ಲ. ಇದೊ, ಕೆಳಗಿನ ಅಂಕೆಸಂಖ್ಯೆಗಳು ವಾಸ್ತವ ಚಿತ್ರವನ್ನೂ ನೀಡುತ್ತವೆ.ಸ್ವಲ್ಪ ಗಮನಿಸಿ.

ನಮ್ಮ ಜೊತೆಗೆ ಹೆದ್ದಾರಿಗಳು ವಿಭಾಗದ ಇಂಜಿನಿಯರ್ ಹಾಗೂ ಇತರ ಅಧಿಕಾರಿಗಳು ಬಂದಿದ್ದರು. ಈ ದೇಶದ ಉತ್ತರ ಭೂಭಾಗದಲ್ಲಿ ಕುಡಿಯುವ ನೀರಿನ ಉಕೊರತೆಯಿದೆ.೧೫೦ ರಿಂದ ೨೦೦ ಮೀಟರ್ ಆಳ ತೋಡಿಸಬೇಕೆಂದು ಸಹ ಹೇಳಿದರು. ಉಳಿದಂತೆ,ಅಂತರ್ಜಲ,ಮೇಲೇರಿದೆ.ಒಂದು ಕೊಳವೆಭಾವಿ ತೋಡಿಸಲು ೮೦ ಸಾವಿರ ಬಾತ್ ಗಳುಖರ್ಚಾಗುವುದಂತೆ.

ನಾವು ನೀರನ್ನು ತಡೆಹಿಡಿದು ಸಣ್ಣ ಸರೋವರ ಮಾಡಿರುವ ಸ್ಥಳಕ್ಕೆ ಹೋದೆವು.ಮಾನವ ನಿರ್ಮಿತ ಆ ಸಣ್ಣ ಸರೋವರದ ಹೆಸರು ‘ಛಪ್ರಿಯಾಕೊಳ್ಳ’ ಇದರ ಉಸ್ತುವಾರಿಯನ್ನು ವರ್ಷಕ್ಕೊಮ್ಮೆ ಅಚ್ಚುಕಟ್ಟುದಾರರಿಂದ ಆಯ್ಕೆ ಆಗುವ ಒಂದು ಸಮಿತಿ ನೋಡಿಕೊಳ್ಳುತ್ತದೆ. ಅದರ ಅದ್ಯಕ್ಷ ಯುವಕ. ಕೆಲವು ಸದಸ್ಯರು ವಯಸ್ಸಾದವರು ಇಲ್ಲವೆ ಮಧ್ಯವಯಸ್ಕರು. ತುಂಬಾ ಪ್ರೀತಿಯಿಂದ ಕಂಡು ತಮ್ಮ ಲೆಕ್ಕಪತ್ರ ತೋರಿಸಿದರು. ತಿಂಡಿ ಕೊಟ್ಟು ಸತ್ಕರಿಸಿದರು. ‘ಕೋಕಾಕೋಲ’ ದ ಹಾವಳಿ ಹೇಳತೀರದು. ದೂರದ ಹಳ್ಳಿಗಳಲ್ಲೂ ಇದರ ಅವಾಂತರ. ನಾವು “ಚಾ” ಕುಡಿದು ಮುದಗೊಂಡೆವು. ಇಲ್ಲಿ ಮೂರು ಬೆಳೆಯನ್ನು ಬೆಳೆಯುತ್ತಾರೆ. ಹೆಚ್ಚಿನ ಜನಗಳಿಗೆ ೫ ರಿಂದ ೭ ರೈ ವಿಸ್ತೀರ್ಣದ ಭೂಮಿ ಮಾತ್ರಯಿದೆ. ಒಂದು ರೈ ಭೂಮಿ ನಮ್ಮ ೪೦ ಸೆಂಟ್ಸ್ ಗೆ ಸಮ .ಹಣ್ಣು ತರಕಾರಿಯಂತಹ ಲಾಭದಾಯಕ ಬೆಳೆಗಳ ಜೊತೆಗೆ,ಮೀನಿನ ಹೊಂಡಗಳ ಮೂಲಕ ಅಧಿಕ ಉತ್ಪನ್ನವನ್ನು ಪಡೆಯುತ್ತಾರೆ. ಬಹಳ ಜನ ರೈತರಿಗೆ ಚಿಕ್ಕ ಟ್ರಾಕ್ಟರ್ ಯಿದೆ. ೩೦ ರಿಂದ ೪೫ ಸಾವಿರ ‘ಬಾತ್’ ಗಳಷ್ಟು ವಾರ್ಷಿಕ ಆದಾಯವಿದೆ. ತಿಂದುಂಡ, ಒಳ್ಳೆಯ ಉಡುಪು ಧರಿಸಿದ ರೈತರಿವರು. ಬಡತನ ದೂರಮಾಡಿಕೊಂಡ ಸ್ವಾವಲಂಬಿಗಳು. ಈ ಸರೋವರ ಕಟ್ಟಲು ಸರ್ಕಾರ ೫ ಲಕ್ಷದ ೪೫ ಸಾವಿರ “ಬಾತ್” ಗಳನ್ನು ಖರ್ಚು ಮಾದಿದೆ, ಆದರೆ ಇದರ ಉಸ್ತುವಾರಿ (ಒಚಿiಟಿಣಚಿiಟಿಚಿಟಿಛಿe) ಸ್ಥಳೀಯ ಸಮಿತಿಯದು. ಇದರ ಖರ್ಚನ್ನು ಸರೋವರದಲ್ಲಿ ಸಾಕಿದ ಮೀನುಗಳ ಮಾರಾಟದಿಂದ ಸರಿದೂಗಿಸಿಕೊಳ್ಳುತ್ತಾರೆ. ರಸಗೊಬ್ಬರಗಳ ಬಳಕೆ ಬಹಳ ಕಡಿಮೆಯಂತೆ. ಒಂದು‘ರೈ’ ಗೆ ೫೦೦ ಕಿಲೋದಷ್ಟು ಬೆಳೆಯುತ್ತಾರೆ. ಒಂದು ಎಕರೆಗೆ ಅಂದಾಜು ೧೨ ಕ್ವಿಂಟಾಲಿನಷ್ಟು, ಬಹಳ ಕಡಿಮೆಯೇನಲ್ಲ. ನಮ್ಮ ಈಶಾನ್ಯ ಪ್ರಾಂತಗಳಂತೆ ಕಡಿಮೆ ಇಳುವರಿ. ಹೆಚ್ಚು ಮಳೆ, ಇಂಗಿಹೋಗುವ ಭೂಮಿ, ಇದಕ್ಕೆ ಕಾರಣವಾಗಿರಬಹುದು. ನಮ್ಮಂತೆ , ಸರ್ಕಾರ ಮೀನಿನ ತತ್ತಿ ಹಾಗೂ ಮರಿ ಮೀನುಗಳನ್ನು ರೈತರು ಸಾಕಲು ತಮ್ಮ ಕೇಂದ್ರಗಳಿಂದ ಕೊಡುತ್ತಾರಂತೆ. ಮೀನುಗಾರಿಕೆ ಇಲಾಖೆ ಮೀನಿನ ಆಹಾರವನ್ನು ಸಹ ರೈತರ ಸಾಮೂಹಿಕ ಕೊಳಗಳಲ್ಲಿ ಸಾಕಲು ಕೊಡುತ್ತಾರೆ.
ರೈತರ ಕುಟುಂಬದ ಸರಾಸರಿ ಜನಸಂಖ್ಯೆ ೩ರಿಂದ೪ ಜನ. ೫,೬ ಜನ ಮಕ್ಕಳಿರುವ ಕುಟುಂಬವನ್ನು ನೋಡಿದೆವು. ಜನಸಂಖ್ಯಾ ಬೆಳವಣಿಗೆ ಪ್ರಮಾಣ ಪ್ರತಿಶತ ೧.೭ ಒಂದು ಸಮಾಧಾನದ, ಸಂತೋಷದ ಸಂಗತಿಯೆಂದರೆ ಇಲ್ಲಿ ಜನರು ನೂರಕ್ಕೆ ೮೫ಕ್ಕಿಂತ ಹೆಚ್ಚು ಅಕ್ಷರಸ್ಥರು ಅಥವಾ ವಿದ್ಯಾವಂತರು. ಪ್ರಾಥಮಿಕ ಶಾಲೆಯಿಂದ ಹಿಡಿದು, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾಭ್ಯಾಸದವರೆಗೆ ಕಲಿಸುವ ಮಾಧಮ ‘ಥಾಯ್’ ಭಾಷೆ. ಅಲ್ಲೇನು ‘ಥಾಯ್’ ಭಾಷೆಯ ಕಾವಲು ಸಮಿತಿಯಾಗಲೀ, ಪ್ರಾಧಿಕಾರವಾಗಲೀ ಇಲ್ಲ. ಕನ್ನಡ, ಕನ್ನಡವೆ ಸಾರ್ವಭೌಮಯೆಂದು ಛೀರಾಡುವ ನಾವು ಮರ್ಯಾದೆಯಿಂದ, ಭಾಷೆರ್ಯನ್ನು ಶ್ರೀಮಂತಗೊಳಿಸುವ ಕೆಲಸದಲ್ಲಿ ತೊಡಗಬೇಕು. ಬರೇ ಭಾಷಣದಿಂದ ಕನ್ನಡ ವರ್ಷವೆಂದು ಸಾರಿರುವುದರಿಂದ “ಹಚ್ಚೇವು ಕನ್ನಡದ ದೀಪ” ಎಂದು ನವೆಂಬರ್ ಒಂದರ ರಾಜ್ಯೋತ್ಸವದ ದಿನ ಹಾಡಿ ಮರೆತರೆ ಸಾಲದು. ಕ್ರಿಯಾಶೀಲರಾಗಿ, ಭಾಷೆಯ, ಸಾಧ್ಯತೆಗಳ ಎಲ್ಲೆಗಳನ್ನು ವಿಸ್ತರಿಸುವ ಛಲವಂತರೂ, ಬುದ್ಧಿವಂತರೂ, ಅಭಿಮಾನಿಗಳೂ ಆಗಬೇಕು.

ರಾಜ್ಯೋತ್ಸವಗಳು ‘ಗಣಪತಿ’ ಹಬ್ಬದಂತೆ, ಚಂದಾ ವಸೂಲು ಮಾಡುವ ಉತ್ಸವಗಳಾಗದೆ, ಹೆಚ್ಚುಕಡಿಮೆ ನಮ್ಮ ಕರ್ನಾಟಕದಷ್ಟೇ ಜನಸಂಖ್ಯೆ ಪಡೆದಿರುವ ಈ ಪುಟ್ಟ ದೇಶದಿಂದ ಕಲಿಯಬೇಕಾದ ಪಾಠದಿಂದ ಪ್ರೇರೇಪಿತವಾಗಿ, ನಿಜ ಅರ್ಥದ ಕನ್ನಡೋತ್ಸವವಾಗಬೇಕು.

ಇಷ್ಟೆಲ್ಲಾ ನನ್ನ ಬರವಣಿಗೆ ಓದಿದವರು, ಇದೊಂದು ಸ್ವರ್ಗಸಮಾನ ದೇಶವೆಂದು ಭಾವಿಸಬೇಕಾಗಿಲ್ಲ. ಜನ ಹುಚ್ಚೆದ್ದು, ಅಮೇರಿಕಾದ ‘ಸಗಟು ಸಂಸ್ಕೃತಿಗೆ’ ಮಾರುಹೋಗಿದ್ದಾರೆ. ನಾವಿಳಿದ ಅಂಬಾಸಿಡರ್ ಹೋಟೆಲ್ ಸುತ್ತಮುತ್ತ ರಸ್ತೆಗಳಲ್ಲಿ ತಿರುಗಾಡಿದಾಗ, ತಿರುಕರು, ಸೂಳೆಯರು, ಕುಷ್ಟರೋಗಿಗಳು ಕಂದರು. ನಾನೊಬ್ಬನೇ ಕುತೂಹಲದಿಂದ ನಮ್ಮ ಹೋಟೆಲ್‌ನ ಪಕ್ಕದಲ್ಲಿಯೇ ಇದ್ದ “ಗೋಗೋಬಾರ್”ಗೆ ಹೋಟೆಲ್‌ನಲ್ಲಿ ಸಿಕ್ಕ ಥಾಯ್‌ಲ್ಯಾಂಡಿನಲ್ಲಿ ಕೆಲಸ ಮಾಡುತ್ತಿರುವ ವಿಶಾಖಪಟ್ಟಣದ ವೆಂಕಟೇಶನ ಜೊತೆಗೆ ಹೋಗಿದ್ದೆ. ಪ್ರವಾಸಿಗರಿಂದ ತುಂಬಿದ ಚಿಕ್ಕಚಿಕ್ಕ ಬಾರ್‌ಗಳು, ಪ್ರವೇಶಧರವಿಲ್ಲ. ಬೀರ್ ಮಾತ್ರ ಖರೀಧಿಸಿದರೆ ಸಾಕು. ಗಾಜಿನ ನೀರಿನ ತೊಟ್ಟಿಗಳ ಹಿಂದೆ ಹಾಗೂ ಎತ್ತರದ ಪೀಠಗಳ ಮೇಲೆ ಬೆತ್ತಲೆಯಾದ ಯುವತಿಯರು ಪಾಶ್ಚಿಮಾತ್ಯ ಸಂಗೀತದ ತಾಳಕ್ಕೆ ಕುಣಿಯುತ್ತಾರೆ. ರಸಿಕರು, ಬೆತ್ತಲೆಯಾಗಿ ಕುಣಿಯುವವರ ಸರ್ತಿಗಾಗಿ ಕಾಯುತ್ತಿರುವ, ಹೆಂಗಸರನ್ನು ತೊಡೆಯ ಮೇಲೆ ಕೂಡಿಸಿಕೊಂಡು ಲಲ್ಲಗರೆಯುತ್ತಿರುತ್ತಾರೆ. ಎಲ್ಲಾ ಬಾರ್‌ಗಳೂ ಒಂದೇತರ. ಲಲನೆಯರ ಮುಖದ ಮೇಲೆ ಮಂದಹಾಸವಾಗಲೀ, ಅದೊಂದು ಸಂತೋಷಿಸುವ ವೃತ್ತಿಯೆಂದು ಭಾವಿಸಿದವರನ್ನಾಗಲೀ ನಾನು ನೋಡಲಿಲ್ಲ. ಏನೋ ದುಡಿಮೆಗಾಗಿ ಪ್ರದರ್ಶನ ಮಾಡುವ ಹೆಂಗಳೆಯರನ್ನು ಕಂಡೆ. ನಮ್ಮ “ನಮ್ಮ ಮುಂಬೈ” ಕಾಮಾಟಿಪುರದ ಕೆಂಪುದೀಪದ ಸಾಲುಗಣಿಕೆಯರಂತೆ ಇವರ ಮುಖಗಳ ಮೇಲೆ ಭಯದ ಅಥವಾ ಅಸಹಾಯಕತೆಯ ನೋವು ಹಾಗೂ ನೋಟಕಂಡೆ. ಜನರ ನೈತಿಕ ಅದಃಪತನದ ಪಾತಾಳವನ್ನು ಅಲ್ಲಿದ್ದ ಸ್ವಲ್ಪ ಸಮಯದಲ್ಲಿ ನೋಡಿದೆ. ಅವೆಲ್ಲ ಅಪಾಯದ ಸ್ಥಳಗಳೆಂದು ತಿಳಿದುಕೊಂಡಿದ್ದರಿಂದ, ಧೈರ್ಯಸಾಲದೆ ನೋಡುವ ಉತ್ಸಾಹವೂ ಇಲ್ಲದೆ, ಹೋಟೆಲ್‌ಗೆ ಮೌನವಾಗಿ ಮರಳಿದೆ. ಶ್ರಮಜೀವಿಗಳಾದ, ಸ್ಪುರದ್ರೂಪಿಗಳಾದ, ಧರ್ಮಬೀರುಗಳಾದ ಈ ಜನ ತಮ್ಮ ಹೆಂಗಸರನ್ನು ಇಂತಹ ಕೀಳುಮಟ್ಟಕ್ಕೆ ಇಳಿಸಿರುವುದರ ಕಾರಣ ಅರಿಯದೆ ಗೊಂದಲಗೊಂಡೆ. ಸರ್ಕಾರ ಇಂತಹದಕ್ಕೆ ಪ್ರೋತ್ಸಾಹ ಕೊಡಿತ್ತದೆನ್ನುವುದು (ಅದು ಪ್ರವಾಸಿಗರನ್ನು ಆಕರ್ಷಿಸಲು) ಊಹಿಸಲು ಅಸಾಧ್ಯ. ಇನ್ನೂ ತರಹಾವರಿ ಲೈಂಗಿಕ ಪ್ರಕ್ರಿಯೆ ಹಾಗು ಭಂಗಿಗಳನ್ನು ತೋರಿಸುವ ಸ್ಥಳಗಳಿವೆ ಎಂದು ತಿಳಿದು ಬಂತು. ನೋಡಲು ನನ್ನ ಸಂಸ್ಕಾರ ಅಡ್ಡಿ ಬಂತು. ಇಂತಹ ಪ್ರದರ್ಶನಗಳಿಗೆ ಹೆಸರಾದ ‘ಪಟ್ಟಾಯ’ ದ್ವೀಪಕ್ಕೆ ಹೋಗಲು ತಯಾರಿ ನಡೆಸಿದ್ದ ಭಾರತೀಯ ಸಂಜಾತರನ್ನು ಹೋಟೆಲ್‌ನಲ್ಲಿ ಕಂಡೆ. ಆ ದ್ವೀಪವಂತೂ ಒಂದು ಮೋಜಿನ ತಾಣವೆಂದು ತಿಳಿದು ಬಂತು. ನಮ್ಮ ಪ್ರವಾಸದ ಉದ್ದೇಶ ಬೇರೆಯಾಗಿದ್ದರಿಂದ, ಇದ್ದ ಮೂರು ದಿನ ಸರ್ಕಾರಿ ಹಾಗು ದೂತವಾಸದ ಅಧಿಕಾರಿಗಳೊಂದಿಗೆ ಗ್ರಾಮೀಣ ಪ್ರದೇಶ ನೋಡುವುದರಲ್ಲಿ, ಚರ್ಚೆ ಮಾಡುವುದರಲ್ಲಿ ಕಳೆದು ಹೋಯಿತು.

ಅಭಿವೃದ್ಧಿಶೀಲವಾದ ಈ ರಾಷ್ಟ್ರದಲ್ಲಿ ವಿಶಾಲವಾದ ರಸ್ತೆಗಳಿದ್ದಾಗ್ಯೂ ನಮ್ಮ ಊರಿನಲ್ಲಿ ಆದಂತೆ, ಕಾರು ನಡೆಸುತ್ತಿದ್ದ ಒಬ್ಬ ಹೆಂಗಸು ತನ್ನ ಪಕ್ಕದಲ್ಲಿ ಚಲಿಸುತ್ತಿದ್ದ ಸಣ್ಣ ಲಾರಿಗೆ ಡಿಕ್ಕಿ ಹೊಡೆದಳು. ಅದು ನಾವು ಪ್ರಯಾಣಿಸುತ್ತಿದ್ದ ವ್ಯಾನಿಗೆ ಬಡಿದು, ಒಂದುಚಿಕ್ಕ ಅಪಘಾತವೇ ಆಯಿತು. ಎಲ್ಲರೂ ಕಲೆತು ಮಾತನಾಡುತ್ತ ಹೋಗಬಹುದೆಂದು ನಾನು ಸರ್ಕಾರದ ಕಾರನ್ನು ಬಿಟ್ಟು ವ್ಯಾನಿನಲ್ಲಿ ಪಯಣಿಸುತ್ತಿದ್ದೆ. ಯಾರಿಗೂ ಸುದೈವದಿಂದ ಗಾಯಗಳಾಗಲಿಲ್ಲ. ಇದೊಂದು ಅನುಭವವೆಂದು ಕುತೂಹಲದಿಂದ ನಾವು ಮೂವರು ನೋಡುತ್ತಿದ್ದಂತೆ, ಮುಂದಿನ ಕಾರಿನಲ್ಲಿದ್ದ ಸರ್ಕಾರಿ ಅಧಿಕಾರಿಗಳು ಅದರ ಚಾಲಕ, ನಮ್ಮ ಜೊತೆಗಿದ್ದ ಅಧಿಕಾರಿಗಳು ಮತ್ತು ಚಾಲಕ ಅಪಘಾತ ಮಾಡಿದ ಕಾರಿನ ಹೆಣ್ಣುಮಗಳು ಸೆಲ್ಯುಲರ್ ಫೋನ್ ತೆಗೆದುಕೊಂಡು ಮಾತನಾಡ ಹತ್ತಿದರು. ೧೫-೨೦ ನಿಮಿಷದೊಳಗಾಗಿ ಪೊಲೀಸರು, ಕಾರಿನ ವಿಮಾ ಕಂಪನಿಯವರು ದೌಡಾಯಿಸಿ, ಮುಂದಿನ ಪ್ರಕ್ರಿಯೆ ನಡೆಸಹತ್ತಿದರು. ನಮ್ಮ ಹೆದ್ದಾರಿಗಳ ಗತಿಯನ್ನು ಅದರಲ್ಲೂ ಸದಾಕಾಲ ರಾಷ್ಟ್ರೀಯ ಹೆದ್ದಾರಿ ೪ರ ಮೇಲೆ ತಿರುಗಾಡುವ ನಾನು, ಥಾಯ್ ಜನರ ಕರ್ತವ್ಯ ಪ್ರಜ್ಞೆ ಹಾಗೂ ದಕ್ಷತೆಯನ್ನು ಕಂಡು ಬೆರಗಾದೆ. ಕೊಂಚವೂ ವಿಚಲಿತರಾಗದೆ ಮುಂದಿದ್ದ ಅಪಘಾತಕ್ಕೆ ಒಳಗಾಗದ ಕಾರಿನಲ್ಲಿ ನಮ್ಮನ್ನು ರಾಜ ‘ಭೂಮಿಪಾಲ ಅತುಲತೇಜ” ಪ್ರಾರಂಭಿಸಿದ, ಒಂದು ಹೊಸ ಪ್ರಯೊಗಕ್ಕೆ ಒಳಪಟ್ಟ, ಕೃಷಿ ತೋಟಕ್ಕೆ ಕರೆದುಕೊಂಡು ಹೋದರು.

ಭತ್ತ ಹೊಕ್ಕುತ್ತಿದ್ದರು ಕೆಲವು ಕೂಲಿಯವರು, ತರಕಾರಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಭತ್ತ ಹೊಕ್ಕುವವರು, ಗೂಡು ಹಾಕುವವರು ಕೈಗಳಿಗೆ ಕೈಚೀಲಗಳು, ಕಾಲಿಗಳಿಗೆ ಗಮ್ ಬೂಟುಗಳನ್ನೂ ಧರಿಸಿದ್ದರು. ಮೂಗನ್ನು, ತಲೆಯನ್ನು ಬಟ್ಟೆಯಿಂದ ಗಟ್ಟಿಯಾಗಿ ಕಟ್ಟಿಕೊಂಡಿದ್ದ ಆ ಕೃಷಿ ಕೂಲಿಗಳ ದಿನದ ಮಜೂರಿ ೧೫೦ ರಿಂದ ೨೦೦ ಬಾತ್‌ಗಳು. ಹೆಣ್ಣು ಮಕ್ಕಳಿಗೂ, ಗಂಡಸರಿಗೂ ಸಮಾನ ವೇತನ, ಹೊಸಕೃಷಿ ತಂತ್ರಜ್ಞಾನದಿಂದ ಸಮಾಜಿಕ ಅರಣ್ಯ, ತೋಟಗಾರಿಕೆ, ತರಕಾರಿ ಬೆಳೆಯುವಲ್ಲಿನ ನೈಪುಣ್ಯತೆ ಹೊಸಕೃಷಿ ತಂತ್ರಜ್ಞಾನ ಮತ್ತು ಮೀನು ಹೊಂಡಗಳನ್ನು ನೋಡಿದೆವು. ದುಡಿಯುವ ಕೂಲಿಗಳಲ್ಲದೆ ಯಾಂತ್ರಿಕ ಬೇಸಾಯವನ್ನು ಸಹ ಅಲ್ಲಿ ಅಳವಡಿಸಿಕೊಂಡಿದ್ದರು. ಅದನ್ನು ನೋಡಿ ಮರಳಿ ಬರುವಾಗ, ಮುದುಕರಾದ ಒಂದು ರೈತ ಕುಟುಂಬ ನಮ್ಮನ್ನು ಆದರದಿಂದ ಅವರ ಪುಟ್ಟ ದಿನಸಿ ಅಂಗಡಿಗೆ ಕರೆದು, ಗೊನೆಯಲ್ಲಿ ಮಾಗಿದ ಒಳ್ಳೆಯ ಬಾಳೆಹಣ್ಣನ್ನು ತಿನ್ನಲು ಕೊಟ್ಟದ್ದಲ್ಲದೆ, ನಾವು ಬೇಡ ಬೇಡವೆಂದರೂ ಬಾಳೆಯ ಚಿಪ್ಪುಗಳನ್ನು ಹೋಟೆಲಿಗೆ, ಮನೆಗಳಿಗೆ ಕೊಂಡೊಯ್ಯಲು ಕೊಟ್ಟರು. ಅಂಗಡಿಯ ಹಿಂದೆ ಅವರ ಮನೆಯಿತ್ತು. ಸುತ್ತಲೂ ಕೋಳಿಗಳು, ನಮ್ಮ ರೈತರಂತೆ ಕುಟುಂಬಜೀವನ. ಎಲೆ‌ಅಡಿಕೆ ಜಗಿದು, ಕೆಂಪುಕಪ್ಪಾದ ಹಲ್ಲುಗಳು ಬಿಸಿಲಿಗೆ ಒಣಗಿಕೊಂಡ ಕಂದು ಮೈ ಬಣ್ಣದ ಗಂಡ, ಹೆಂಡತಿ ಹಾಗೂ ಸೊಸೆ, ಒಂದು ಮುದ್ದಾದ, ಗಂಡುಮಗು, ಅಲ್ಲೆ ಇದ್ದ ಒಂದು ಮಂಚದ ಮೇಲೆ ಬೆಕ್ಕು, ಅಂಗಡಿ ಒಳಗಡೆ ಇದ್ದ ನಾಯಿ ರೈತ ಸಂಸಾರದ ಪೂರ್ಣ ಚಿತ್ರವನ್ನು ನಮಗೆ ಕೊಟ್ತಿತು. ಒಟ್ಟಿನಲ್ಲಿ ರೈತರೆಲ್ಲರೂ, ಒಂದುತರಹದ ಮುಗ್ಧರು, ಒಳ್ಳೆಯ ಆದರಾತಿಥ್ಯ ಮಾಡುವ ಸಜ್ಜನರು. ನಮ್ಮೂರಿನ ರೈತರಂತೆ, ಸಹಜ ಹಾಗೂ ಸರಳಜೀವಿಗಳು. ಆದರೆ ಮಿತಭಾಷಿಗಳು; ದೇಶ ಯಾವುದಾದರೂ, ಮನುಷ್ಯನ ಅಂತರಂಗದ ಒಳ್ಳೆಯತನಕ್ಕೆ ಬರಗಾಲವಿಲ್ಲ. ಅಂತಹ ಒಳ್ಳೆಯತನವನ್ನು ಗುರುತಿಸುವ, ಬೆಳೆಸುವ ಪ್ರಭುದ್ಧತೆ ಸಮಾಜಕ್ಕಿರಬೇಕು. ಪ್ರಾಯಶಃ ಇಂತಹ ಜನಪರವೇ ಥಾಯ್‌ಲ್ಯಾಂಡಿನ ಪ್ರಗತಿಯ ಬುನಾದಿಗಳೇ ಆಗಲೀ, ಬಾರ್‌ಗಳಲ್ಲಿ ಕುಣಿಯುವ ಬೆಲೆವೆಣ್ಣುಗಳಲ್ಲ ಆ ಭಾಗವನ್ನು ನಾವು ಬುದ್ಧಿಪೂರ್ವಕವಾಗಿ ಉಪೇಕ್ಷಿಸಬೇಕು. ದುಡಿಯುವ ಜನವರ್ಗ ಕಂಡಾಗ, ನನ್ನ ಸಂಶಯಗಳಿಗೆ, ಸ್ವಲ್ಪಮಟ್ಟಿನ ಉತ್ತರ ಸಿಕ್ಕಿತು. ಆ ನಾಡಿನ ಪ್ರಗತಿಯ ರಹಸ್ಯ ಸ್ವಲ್ಪಮಟ್ಟಿಗೆ ಬಯಲಾಯಿತು.
*****

ಕೀಲಿಕರಣ: ಸೀತಾಶೇಖರ್. ಸಹಾಯ: ಅನ್ನಪೂರ್ಣ ಸುಬ್ಬರಾವ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.