ಗೃಹಭಂಗ – ೧

ಅಧ್ಯಾಯ ೧
– ೧-

ಮೈಸೂರು ಸಂಸ್ಥಾನದ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು ಕಂಬನಕೆರೆ ಹೋಬಳಿ ರಾಮಸಂದ್ರ ಗ್ರಾಮದ ಶ್ಯಾನುಭೋಗ್ ರಾಮಣ್ಣನವರು ಫೌತಿಯಾದಮೇಲೆ ಮನೆಯಲ್ಲಿ ಉಳಿದವರು ಅವರ ಹೆಂಡತಿ ಗಂಗಮ್ಮ, ಇಬ್ಬರು ಗಂಡು ಮಕ್ಕಳು ಚೆನ್ನಿಗರಾಯ, ಅಪ್ಪಣ್ಣಯ್ಯ. ರಾಮಣ್ಣನವರು ಫೌತಿಯಾಗಿ ಆಗಲೇ ಆರು ವರ್ಷವಾಯಿತು. ಎಂದರೆ ವಿಶ್ವೇಶ್ವರಯ್ಯನವರು ದಿವಾನ್ ಬಹುದ್ದೂರರಾದ ವರ್ಷ ಅವರು ಈ ಲೋಕ ಬಿಟ್ಟರು. ಆಗ ಅವರ ಹೆಂಡತಿ ಗಂಗಮ್ಮನಿಗೆ ಇಪ್ಪತೈದರ ವಯಸ್ಸು. ಜ್ಯೇಷ್ಠಪುತ್ರ ಚೆನ್ನಿಗರಾಯ ಒಂಬತ್ತು ವರ್ಷದವನು. ಎರಡನೆಯ ಅಪ್ಪಣ್ಣಯ್ಯನಿಗೆ ಏಳು. ರಾಮಣ್ಣನವರು ಸತ್ತಾಗಿನಿಂದ ಅವರ ವಂಶಪಾರಂಪರ್ಯವಾದ ಶ್ಯಾನುಭೋಗಿಕೆಯನ್ನು ಗ್ರಾಮದ ಪಟೇಲ್ ಶಿವಗೌಡನ ಭಾವಮೈದ ಶಿವಲಿಂಗೇಗೌಡ ನೋಡುತ್ತಿದ್ದಾನೆ. ಇನ್ನು ಮೂರು ವರ್ಷಕ್ಕೆ ಹದಿನೆಂಟನ್ನು ಮುಟ್ಟಿ ‘ಮೆಜಾಲ್ಟಿಗೆ’ ಗೆ ಬರುವ ಚೆನ್ನಿಗರಾಯ ತಂದೆಯ ಅಧಿಕಾರ ವಹಿಸಿಕೊಳ್ಳಬೇಕು. ಶ್ಯಾನುಭೋಗಿಕೆ ಮಾಡುವುದೆಂದರೆ ಕಡಿಮೆ ಕೆಲಸವೆ? ಅದಕ್ಕೆ ತಕ್ಕ ವಿದ್ಯೆ ಬೇಕು. ಜೈಮಿನಿಯನ್ನಾದರೂ ಅರ್ಥಮಾಡಿಕೊಳ್ಳುವ ಮಟ್ಟಕ್ಕೆ ಬಂದರೆ ಖಾತೆ ಖಿರ್ದಿ ಪಹಣಿ ಖಾನೀಶುಮಾರಿ ಲೆಕ್ಕಗಳು ತಿಳಿದಾವು. ಗ್ರಾಮದ ಕೂಲಿಮಠದ ಮೇಷ್ಟರು ಚಾತಾಳಿಗರ ಚೆನ್ನಕೇಶವಯ್ಯನವರ ಹತ್ತಿರ ಚೆನ್ನಿಗರಾಯನ ವಿದ್ಯಾಭ್ಯಾಸವಾಗುತ್ತಿದೆ.

ಹದುಮೂರು ವರ್ಷವಾದರೂ ಎರಡನೆಯ ಅಪ್ಪಣ್ಣಯ್ಯ ಮಠಕ್ಕೆ ಹೋಗಿಲ್ಲ. ಮರಳ ಮೇಲೆ ಶ್ರೀ ಓಂ ನಾಮ ತಿದ್ದಿಲ್ಲ. ಇನ್ನೂ ಮುಂಜಿಯೂ ಆಗಿಲ್ಲ. ‘ಅಪ್ಪಣ್ಣ, ಮಠಕ್ಕೆ ಹೋಗ್ತಿಯೋ ಇಲ್ವೋ?’-ತಾಯಿ ಸಿಟ್ಟು ಮಾಡಿಕೊಂಡು ಕೇಳಿದಳು.
‘ಹೋಗ್ದೇ ಇದ್ರೆ ನಿಂಗೇನಾಗುತ್ಯೇ ಕತ್ತೆಮುಂಡೆ?’-ಮಗ ನೆವರುದ.
‘ನನ್ನ ಮುಂಡೆ ಅಂತೀಯೇನೋ? ನಿನ್ನ ವಂಶ ನಿರ್ವಂಶವಾಗುತ್ತೆ ನೋಡ್ತಿರು ಸೂಳೇ ಮಗನೆ’-ತಾಯಿ ಎಂದಳು.
‘ನಿನ್ನ ವಂಶವೇ ನಿರ್ವಂಶವಾಗುತ್ತೆ ಕಣೇ’-ಎಂದು ಮಗ ಹೇಳುತ್ತಿರುವಾಗ ಹೊರಗಿನಿಂದ ನೀರುಗಂಟೆಯ ಮುದ್ದ ಬಂದ. ‘ನನ್ನ ಕತ್ತೆಮುಂಡೆ ಅಂತಾನೆ. ಈ ಮುಂಡೇಮಗನ್ನ ಹಿಡ್‌ಕಂಡ್ ಹೋಗಿ ಚೆನ್ನಕೇಶವಯ್ಯನೋರ ತವ ಕೂರಿಸ್ ಬಾರೋ ಮುದ್ದ’-ಎಂದು ಗಂಗಮ್ಮ ಹುಕುಂ ಮಾಡಿದಳು. ಅಪ್ಪಣ್ಣಯ್ಯ ಅದನ್ನು ಕೇಳಿದ ತಕ್ಷಣ ಹೊರಕ್ಕೆ ಓಟ ಹೊಡೆದ. ಆದರೆ ಮುದ್ದ ದೊಡ್ಡ ಆಳು. ಹತ್ತೇ ದಾಪಿಗೆ ಹೋಗಿ ಅವನ ಜುಟ್ಟು ಹಿಡಿದು, ಕುಯ್ಯಯ್ಯೋ ಎಂದರೂ ಬಿಡದೆ ಗಂಗಮ್‌ನೋರ ಮುಂದೆ ತಂದು ನಿಲ್ಲಿಸಿದ. ‘ಈ ಸೂಳೇಮಗನಿಗೆ ಎರಡು ವದ್ದು ತಗಂಡ್‌ಹೋಗು’-ಅವಳು ಅಪ್ಪಣೆ ಮಾಡಿದಳು. ಆದರೆ ಬ್ರಾಹ್ಮಣ ಹುಡುಗನಿಗೆ ಮುದ್ದ ಒದೆಯುವುದು ಹೇಗೆ? ಹಾಗೆ ಮಾಡಿದರೆ ಕಾಲಿನಲ್ಲಿ ಹುಳು ಸುರಿಯುತ್ತದೆಂದು ಅವನಿಗೆ ಗೊತ್ತಿಲ್ಲವೆ? ತೋಳು ಹಿಡಿದು ಎಳೆದುಕೊಂಡು ಹೋದ.

ಕಿರಿಯವನು ಹೋದಮೇಲೆ ಗಂಗಮ್ಮನ ದೃಷ್ಟಿ ಮನೆಯಲ್ಲಿಯೇ ಇದ್ದ ಹಿರಿಯನ ಮೇಲೆ ತಿರುಗಿತು: ‘ಎಲಾ ಚನ್ನಿಗಾ, ನಿನ್‌ಕುಟ್ ಎಷ್ಟು ಅಂತ ಬಡ್‌ಕಾಬೇಕೋ, ಹೊನ್ನವಳ್ಳಿಗ್ ಹೋಗಿ ಶೀತಾರಾಮಯ್‌ನೋರ ತವ ಲ್ಯಕ್ಕ ಕಲುತ್‌ಕಂಡ್ ಬಾ ಅಂತ? ನಾಳೆ ಬ್ಯಳಿಗ್‌ನಾಗ ಹೋಗ್ತಿಯೋ ನಿಂಗ್ ದಡಿ ತಗಂಡ್ ಎರಡು ಮುಟ್ಟುಸ್‌ಬೇಕೋ?’

‘ಹಾಗಂತ ನನ್ ತಂಟಿಗ್ ಬಾ, ಹಾಜಾಮ್ ರುದ್ರನ್ನ ಕರ್‌ದು ನಿನ್ನ ತಲೆ ಬೋಳುಸುಸ್ತೀನಿ’-ಕಂಬದ ಹತ್ತಿರದಿಂದಲೇ ಹಿರಿಯ ಮಗ ಗುರ್ ಎಂದ.
‘ನಿಮ್ಮಪ್ಪ ಸತ್ಹೋದಾಗ್ಲೇ ನನ್ ತಲೆ ಬೋಳುಸ್ತು. ಹೆತ್ ಅವ್ವುನ್ನ ಹಾಗಂದ್ರೆ ನಿನ್ನ ನಾಲಗೇಲಿ ಹುಳು ಸುರಿಯುತ್ತೆ ಮುಂಡೇಮಗನೆ.’

ಹೊನ್ನವಳ್ಳಿ ರಾಮಸಂದ್ರಕ್ಕೆ ಹದಿನೆಂಟು ಮೈಲಿಯ ಗ್ರಾಮ. ಎರಡು ಒಂದೇ ತಾಲ್ಲೂಕಿಗೆ ಸೇರಿದ್ದರೂ ಹೋಬಳಿಗಳು ಬೇರೆ ಬೇರೆ. ರಾಮಸಂದ್ರ ಕಂಬನಕೆರೆ ಹೋಬಳಿಗೆ ಸೇರಿದ್ದರೆ, ಹೊನ್ನವಳ್ಳಿ ಹೋಬಳಿಯ ಮುಖ್ಯ ಸ್ಥಳ, ಹಿಂದೆ ತಾಲ್ಲೂಕು ಸ್ಥಳವೂ ಆಗಿದ್ದ ಊರು. ತಿಪಟೂರು ಬಲಕಾಯಿಸಿದಮೇಲೆ ಹಿಂದೆ ಬಿತ್ತು; ತಾಲ್ಲೂಕು ಕಛೇರಿಯೂ ತಿಪಟೂರಿಗೆ ಹೋಯಿತು-ಚಿಕ್ಕಮಗಳೂರು ಕಡೂರನ್ನು ಬಡಕಲು ಮಾಡಿದ ಹಾಗೆ. ಹೊನ್ನವಳ್ಳಿ ತಾಲ್ಲೂಕು ಸ್ಥಳವಾದಾಗಿನಿಂದ ಸೀತಾರಾಮಯ್ಯನವರು ಕಸ್‌ಬಾ ಶ್ಯಾನುಭೋಗರು. ಲೆಕ್ಕದಲ್ಲಿ ಗಟ್ಟಿಗರು ಮಾತ್ರವಲ್ಲ, ಅಮಲ್ದಾರರುಗಳನ್ನೇ ಅಳ್ಳಾಡಿಸುತ್ತಿದ್ದ ಕುಳ. ಅವರ ಹತ್ತಿರ ಲೆಕ್ಕ ಕಲಿತ ಯಾರಾದರೂ ಕಷ್ಟವಿಲ್ಲದೆ ಶ್ಯಾನುಭೋಗಿಕೆ ನಿಭಾಯಿಸಬಹುದು. ಹಾಗೆಂದು ಅರಸೀಕೆರೆ, ಗಂಡಸಿ, ಜಾವಗಲ್ಲುಗಳ ಕಡೆಯ ಪಟೇಲ ಶ್ಯಾನುಭೋಗರುಗಳು ಸಹ ಹೇಳುತ್ತಿದ್ದರು. ಆದರೆ ಸೀತಾರಾಮಯ್ಯನವರ ಕೈಕೆಳಗೆ ನುರುಯುವುದೆಂದರೆ ಸಾಮಾನ್ಯವಲ್ಲ. ಖಾತೆಗೆ ಹೆಡಿಂಗ್ ಕಟ್ಟಿ ಕೆಂಪು ಶಾಯಿಯ ರೂಲು ಹಾಕುವುದು ಕಲಿಯಬೇಕಾದರೇ ಅವರ ರೂಲುದೊಣ್ಣೆಯಲ್ಲಿ ನೂರಿನ್ನೂರು ಏಟು ತಿನ್ನಬೇಕಾಗಿತ್ತು. ಸಾವಿರ ಉಳಿ ಪೆಟ್ಟು ಬೀಳದೆ ವಿಗ್ರಹ ಹ್ಯಾಗಾಗುತ್ತೆ?-ಎಂದು ಕೂಲಿಮಠಗಳ ಓಚಯ್ಯಗಳಂತೆ ಅವರೂ ಹೇಳುತ್ತಾರೆ.

ಮಕ್ಕಳಿಬ್ಬರ ವರ್ತನೆ ಕಂಡು ಗಂಗಮ್ಮನಿಗೆ ರೇಗಿತು; ಅಳು ಬಂದ ಹಾಗೆ ಆಗಿ ಕಣ್ಣಿನಲ್ಲಿ ನೀರು ಬರಿಸಿಕೊಂಡಳು. ಉಳಿದೋರ ಮನೆ ಮಕ್ಕಳು ತಾಯಿ ಅಂದ್ರೆ ಹ್ಯಾಗೆ ಹೆದರ್‌ಕಂಡು ನಡಿತಾರೆ. ಈ ಮುಂಡೆವಕ್ಕೆ ಏನು ಬಂದಿದೆ ಬರಬಾರ್ದ ರ್ವಾಗ! ನನ್ನ ಹಣೇಬರಾ ಇದು-ಎಂದು ಒಂದು ಸಲ ಅತ್ತಳು. ಎದ್ದು ನೇರವಾಗಿ ಅಡುಗೆಯ ಕೋಣೆಗೆ ಹೋಗಿ ಮಗುಚುವಕಾಯಿಯನ್ನು ಒಲೆಯ ಒಳಗೆ ಇಟ್ಟಳು. ಮದ್ಯಾನ್ಹ ಕಳೆದು ಮೂರು ಗಂಟೆಯಾಗಿದ್ದುದರಿಂದ ಒಲೆಯಲ್ಲಿ ಕೆಂಡವಿರಲಿಲ್ಲ. ಉರಿದು ಹೋದ ಕೊಬ್ಬರಿಯ ಮೊಟ್ಟೆ ಮತ್ತು ಹೆಡೆದಿಬ್ಬಿಗಳ ನವಿರುಗೆಂಡ ಬೂದಿಯಾಗುವ ಸ್ಥಿತಿಗೆ ಬಂದಿತ್ತು. ಅಮ್ಮ ತನಗೆ ಬರೆ ಹಾಕುವುದಕ್ಕೆ ಮಗುಚುವಕಾಯಿ ಕಾಯಿಸುತ್ತಿದ್ದಾಳೆಂಬುದು ಹದಿನೈದು ವರ್ಷದ, ಜೈಮಿನಿ ಓದಿದ ಮಗನಿಗೆ ತಿಳಿಯಿತು. ಅವನು ಒಂದು ಸಲ, ‘ಕತ್ತೆಮುಂಡೆ, ಬೋಳಿಮುಂಡೆ, ಸೂಳೆಮುಡೆ, ಹೊಲೆಮುಂಡೆ, ಹೊಲೇರಮುಂಡೆ’ ಎಂದು ಒಂದೇ ಉಸುರಿಗೆ ಕೂಗಿಕೊಂಡು ಮನೆಯಿಂದ ಓಟಹೊಡೆದ. ಇನ್ನು ಅವನನ್ನು ಹಿಡಿಯುವುದು ಸಾಧ್ಯವಿಲ್ಲೆಂದು ಗಂಗಮ್ಮನಿಗೆ ಗೊತ್ತು. ಆದರೆ ಅವಳು ತನ್ನ ಸೋಲನ್ನು ಒಪ್ಪಿಕೊಳ್ಳಲಾರಳು. ಈ ಮುಂಡೇ ಮಕ್‌ಳನ್ನ ಹತೋಟಿಗೆ ತರೂದು ಹ್ಯಾಗೆ ಎಂದು ಯೋಚಿಸುತ್ತಾ ಹಾಗೆಯೇ ಕೂತಿದ್ದಳು. ಮಗುಚುವಕಾಯಿಗೆ ಹುಸಿಗೆಂಡದಲ್ಲಿಯೇ ಸ್ವಲ್ಪಸ್ವಲ್ಪವಾಗಿ ಕಾವೇರುತ್ತಿತ್ತು.

ಮದುವೆಯಾಗಿ ಈ ಮನೆಗೆ ಬಂದಾಗ ಗಂಗಮ್ಮ ಹದಿಮೂರು ವರ್ಷದ ಹುಡುಗಿ. ಯಜಮಾನರಿಗೆ ನಲವತ್ತೈದರ ಪ್ರಾಯ. ಮೊದಲ ಹೆಂಡತಿಗೆ ಎರಡು ಮಕ್ಕಳಾಗಿ ಸತ್ತಿದ್ದವು. ಕೊನೆಗೆ ಅವಳೂ ಸತ್ತಿದ್ದಳು. ಮೊದಲ ಹೆಂಡತಿ ಗಂಗಮ್ಮನ ಕಡೆಯ ಹೆಣ್ಣೇ-ಎಂದರೆ ಜಾವಗಲ್ಲಿನವಳು. ಆ ಸಂಬಂಧದಿಂದಲೇ ರಾಮಣ್ಣನವರಿಗೆ ಗಂಗಮ್ಮನನ್ನು ಕೊಟ್ಟದ್ದು. ರಾಮಸಂದ್ರವೂ ಸೇರಿ ಮೂರು ಊರಿನ ಶ್ಯಾನುಭೋಗಿಕೆ. ಆರು ಎಕರೆ ಗದ್ದೆ, ಎಂಟು ಎಕರೆ ಹೊಲ, ಮುನ್ನೂರು ತೆಂಗಿನ ಮರ, ಮನೆಯಲ್ಲಿ ಪಾತ್ರೆ ಪರಟಿ, ಬೆಳ್ಳಿ ಬಂಗಾರಗಳಿರುವ ಅವರಿಗೆ ಯಾರು ತಾನೇ ಹೆಣ್ಣು ಕೊಡುತ್ತಿರಲಿಲ್ಲ? ರಾಮಣ್ಣನವರು ಮೊದಲಿನಿಂದ ಸಾಧು ಮನುಷ್ಯರೆಂದು ಊರಿನವರೆಲ್ಲ ಹೇಳುತ್ತಾರೆ. ಸಾಧು ಅಂದರೆ ಹಸುವಿನ ಹಾಗೆ, ಎಳೆಗರುವಿನ ಹಾಗೆ; ಗಂಗಮ್ಮ ಮಾತ್ರ ಹೆಣ್ಣು ಹುಲಿ-ಎಂದು ಜನ ಹೇಳುವುದುಂಟು. ಅದು ಕಿವಿಗೆ ಬಿದ್ದಾಗ, ‘ಈ ಜನದ ಬಾಯಿಗೆ ನನ್ ಯಡಗಾಲ ಎಕ್ಕಡ ತುರುಕ, ಸೂಳೇಮಕ್‌ಳನ್ ತಂದು’ ಎಂದು ಅವಳು ಅಂದುಕೊಳ್ಳುತ್ತಿದ್ದುದೂ ಉಂಟು. ಗಂದು ಮಕ್ಕಳು ಬುದ್ಧಿವಂತರಾಗಿ ಮಾತು ಕೇಳುತ್ತಿದ್ದರೆ ಅವಳನ್ನು ಹಿಡಿಯುವವರಿರುತ್ತಿರಲಿಲ್ಲ; ಜನದ ಬಾಯಿಗೆ ಎಕ್ಕಡವನ್ನೇ ತುರುಕಿಸುತ್ತಿದ್ದಳು. ಆದರೆ ಈ ಮುಂಡ್ಹೆತ್ತೋವು ಹೀಗಾಗ್ಬಿಟ್ವು. ಇವುಕ್ ಬುದ್ಧಿಕಲುಸ್‌ಬೇಕ್. ಕಲುಸ್‌ದೇ ಇದ್ರೆ ನಾನ್ ಜಾವಗಲ್ಲಿನ ಹೆಣ್ಣೇ ಅಲ್ಲ. ಈ ಮಗುಚೂಕಾಯಿ ಇಲ್ಲೇ ಇದ್ದು ಕಾಯ್ತಾ ಇರ್ಲಿ. ಸಾಯಂಕಾಲ ಪಿಂಡ ತಿನ್ನಕ್ ಹ್ಯಾಗೂ ಬತ್ತೂವಲ್ಲ, ಆಗ ಕಾಲಿನ ಮೇಲೆ ಎರಡೆರಡು ಬರೆ ಎಳೀತೀನಿ ಹೋರೀಕರೂಗೆ ಯಳ್ದ ಹಾಗೆ. ಹೋರೀಕರೂಗೆ ಬರೆ ಹಾಕ್‌ದೇ ಇದ್ರೆ ಎಲ್ಲಿ ಹೇಳಿದ್ ಮಾತು ಕೇಳುತ್ವೆ? ಕುರುಬರ ಹಟ್ಟಿ ಬೇಲೂರ ಹೇಳ್ತಿರ್ತಾನೆ: ದನುಕ್ ಬರೆ ಎಳೀದೇ ಇದ್ರೆ ಚಪ್ಪೆರ್ವಾಗ ಬರುತ್ತಂತೆ. ಅದೆಲ್ಲ ಸುಳ್ಳು. ಹೇಳಿದ್ ಮಾತು ಕೇಳ್ಲಿ ಅಂತ ಅಲ್ವೇನೋ ಬರೆ ಹಾಕೋದು-ಎಂದುಕೊಂಡು, ಕಾಯ್ದ ಮಗುಚುವಕಾಯಿಯ ಹಿಡಿಯ ಭಾಗವನ್ನು ತನ್ನ ಕೆಂಪು ಸೆರಗಿನಿಂದ ಹಿಡಿದು ಒಂದು ಸಲ ತಿರುಗಿಸಿ, ಮತ್ತೆ ಹುಸಿಗೆಂಡದೊಳಕ್ಕೆ ನೂಕಿದಳು.

ಅಷ್ಟರಲ್ಲಿ ಮನೆಯ ಹೆಂಚಿನ ಮೇಲೆ ಯಾರೋ ಕಳ್ಳ ಹೆಜ್ಜೆ ಇಡುತ್ತಾ ನಡೆದಂತೆ ಆಯಿತು. ಈ ಹಾಡಾಹಗಲಿನಲ್ಲಿ ಕಳ್ಳ ಸೂಳೆಮಕ್ಳು ಯಾಕ್ ಬತ್ತಾರೆ! ಕೋತಿತಿಮ್ಮಣ್ಣ ಬಂದಿರ್‌ಭೌದು. ತ್ವಾಟದ ಎಳ್‌ನೀರ್ ಬಿಟ್ಟು ಊರೊಳಕ್ಕೆ ಬರೋ ಧೈರ್ಯ ಬಂತಲ್ಲ ಈ ಮುಂಡೇವುಕ್ಕೆ-ಎಂದು ಯೋಚಿಸುತ್ತಿರುವಾಗ ಅವು ಅವಳ ನೆತ್ತಿಯಮೇಲೆ ಸರಿಯಾಗಿ ಬಂದಂತೆ ಆಯಿತು. ‘ನಿಮ್ ಮನೆತನ ಹಾಳಾಗ’-ಎಂದು ಧ್ವನಿ ಎತ್ತಿದವಳು, ‘ಅಯ್ಯೋ, ಆಂಜನೇಯ ದೇವರ ಸ್ವರೂಪವಂತೆ. ಕೆಟ್ಟ ಮಾತಾಡಿದ್ರೆ ಶಾಪ ಕೊಡ್ತೂವಂತೆ’ ಎಂದು ತಕ್ಷಣ ನಾಲಿಗೆ ಬಿಗಿಹಿಡಿದು ತಲೆಯೆತ್ತಿ ಮೇಲೆ ನೋಡಿದಳು. ಮೇಲಿನಿಂದ ಯಾರೋ ಒಟ್ಟಿಗೆ ಹೆಂಚಿನ ಮೇಲೆ ಎರಡು ದಡಿಗಳಿಂದ ಬಡಿದಂತೆ ಆಯಿತು. ಹದಿನೈದು ಇಪ್ಪತ್ತು ಹೆಂಚುಗಳು ಒಡೆದು ಚೂರು ಚೂರುಗಳಾಗಿ, ಅವಳ ಮಡಿಯಾದ ತಲೆ ಮತ್ತು ಎತ್ತಿದ ಮುಖದ ಮೇಲೆ ಉದುರಿದವು. ‘ಇವ್ ಮನೆತನ ಹಾಳಾಗ’ -ಎಂದು ಅವಳು ಕೂಗಿಕೊಳ್ಳುವುದೇ ತಡ, ‘ಅಲ್ಲೇ ಇದಾಳೆ, ಇನ್ನೊಂದ್ ನಾಕ್ ಸಲಿ ಹಾಕಿ ಚಚ್ಚೋ ಅಪ್ಪಣ್ಣಯ್ಯ ಎಂದು ಚೆನ್ನಿಗರಾಯ ಮೇಲಿನಿಂದ ಹೇಳಿದುದು ಕೇಳಿಸಿತು. ಅಣ್ಣ ತಮ್ಮಂದಿರಿಬ್ಬರೂ ಕೈಲಿದ್ದ ಒನಕೆಗಳಿಂದ ಅವಳ ನೆತ್ತಿಯ ಭಾಗದ ಹೆಂಚುಗಳ ಮೇಲೆ ಭುಜಬಲ ಪರಾಕ್ರಮ ಮೆರೆಸಿದರು. ‘ಸೂಳೇಮಕ್ಳಾ, ಪಟೇಲ ಶಿವೇಗೌಡನ ಕೈಲಿ ಹೇಳಿ ನಿಮ್ಮುನ್ ನೇಣಿಗಟ್ಟುಸ್ತೀನಿ ತಾಳಿ’ ಎಂದು ಕೂಗುತ್ತಾ ತಾಯಿ ಮನೆಯಿಂದ ಹೊರಗೆ ಓಡಿದಳು.

‘ಶಿವೇಗೌಡ್ರುನ್ನ ಕರ್ಕಂಬತ್ತಾಳೆ ಕಣೋ ಚನ್ನಯ್ಯ’-ಎಂದು ಅಪ್ಪಣ್ಣಯ್ಯ ಅಣ್ಣನಿಗೆ ಎಚ್ಚರವಿತ್ತ. ಇಬ್ಬರೂ ಒನಕೆಗಳನ್ನು ಅಲ್ಲಿಯೇ ಬಿಟ್ಟು ಹೆಂಚಿನ ಮೇಲೆ ಹಿಂಭಾಗದ ಸೂರಿನತನಕ ಓಡಿಹೋಗಿ ಅಲ್ಲಿಂದ ಚರಂಡಿಯ ಆಚೆಗೆ ನೆಗೆದು ಓಟಕಿತ್ತರು.

– ೨ –

ರಾಮಸಂದ್ರ ಹಿಂದೆ ಐನೂರು ಮನೆಯ ಗ್ರಾಮವಂತೆ. ಈಗ ಶ್ಯಾನುಭೋಗರ ಖಾನೀಷುಮಾರಿ ಲೆಕ್ಕದಲ್ಲಿರುವುದೇ ನೂರ ನಲವತ್ತೇಳು ಒಕ್ಕಲು. ಊರನ್ನು ಎರಡು ಭಾಗ ಸುತ್ತಿರುವ ಕೆರೆಯ ನೀರು, ಹಾಳುಬಿದ್ದು ವರ್ಷವರ್ಷಕ್ಕೆ ಮಣ್ಣು ಸೇರುತ್ತಿರುವ ಕೋಟೆಯ ಗೋಡೆಗಳನ್ನು ಒದೆಯುತ್ತದೆ. ದಕ್ಷಿಣ ಭಾಗದಲ್ಲಿರುವ ಚೋಳೇಶ್ವರ ಗುಡಿಯ ಮೂಲಲಿಂಗ ಕೆರೆ ಏರಿಯ ಮೇಲಿನ ಗುಡಿಯಲ್ಲಿದೆ. ಊರೊಳಗಿನ ಗುಡಿಯ ಮುಂದಿನ ಬೀದಿಯ ಕೊನೆಯಲ್ಲಿ ಬ್ರಹ್ಮದೇವರ ಮಂಟಪ. ಅದರ ಹತ್ತಿರವೇ ಹನುಮಂತರಾಯನ ಗುಡಿ. ಗ್ರಾಮದ ಹೊರಗೆ ತೋಪಿನ ಹತ್ತಿರ ಗ್ರಾಮದೇವತೆ ಕಾಳಮ್ಮನ ಗುಡಿ. ಬಣಜಿಗ, ನೊಣಬ, ಮಗ್ಗ, ಗಾಣಿಗ, ಕುರುಬ, ಮೊದಲಾಗಿ ಒಂದೊಂದು ಜಾತಿಯದೇ ಒಂದೊಂದು ಸಂದಿ, ಗೊಂದಿ. ಒಂದು ಜಾತಿಯ ಸಂದಿಯಲ್ಲಿ ಮತ್ತೊಂದು ಜಾತಿಯವರು ಯಾರೂ ಇಲ್ಲವೆಂದೇನೂ ಇಲ್ಲ. ಆದರೆ ಮಾಂಸ ಮಡ್ಡಿ ತಿನ್ನುವ ಜಾತಿಯವರ ನಡುವೆ ಬ್ರಾಹ್ಮಣ, ಲಿಂಗಾಯಿತ, ಚಾತಾಳಿ ಮೊದಲಾದವರು ಇರುತ್ತಿದ್ದುದು ತುಂಬ ಅಪರೂಪ.
ಪಟೇಲ ಶಿವೇಗೌಡನ ಮನೆಗೂ ಫೌತಿ ಶ್ಯಾನುಭೋಗ ರಾಮಣ್ಣನವರ ಮನೆಗೂ ಎರಡು ಓಣಿಯ ದೂರ. ಅಂದರೆ ಸುಮಾರು ಇಪ್ಪತ್ತು ಮನೆಗಳ ಆಚೆ.

ಗೌಡ ಮನೆಯಲ್ಲೇ ಇದ್ದ. ಗಂಗಮ್ಮ ನೇರವಾಗಿ ಒಳಗೆ ಹೋಗಿ ಹೇಳಿದಳು: ‘ಬ್ಯಾಗ ಎದ್ದು ನೋಡು ಬಾ ಶಿವೇಗೌಡ. ನಮ್ಮ ಚೆನ್ನಿಗನೂವೆ ಅಪ್ಪಣ್ಣನೂವೆ ಮನೆ ಮ್ಯಾಲುಕ್ ಹತ್ತಿ ಒನಕೆ ತಗಂಡು ಹಂಚು ಬಡೀತಿದೂವೆ. ನೋಡು, ನನ್ನ ತಲೇಮ್ಯಾಲೆಲ್ಲ ಬಿದ್ದು ರಕ್ತ ಬಂದಿದೆ.’
‘ಅಧ್ಯಾಕೆ?’
‘ಮಠಕ್ ಹೋಗು ಅಂದೆ. ಅದುಕ್ಕೇ ನಾ ವಲ್ಲೆ ಅಂತ ಹೀಗ್ ಮಾಡ್ತಿವೆ.’

ಗೌಡನ ಹೆಂಡತಿ ಗೌರಮ್ಮ-‘ಅವ್ ಎಚ್‌ಕಂಬುಟ್ಟವೆ. ಹೋಗಿ ಎಲ್ಡು ಇಡಿಮಿ ಬಲ್ಲಿ’ ಎಂದು ಗಂಡನಿಗೆ ಹೇಳಿದಳು. ಗೌಡ ತನ್ನ ದೊಡ್ಡ ಹೊಟ್ಟೆಯನ್ನು ಹೊತ್ತು ಕಾಲಿಗೆ ಜೋಡು ಮೆಟ್ಟಿ ಗಜಗಂಭೀರ ನಡಿಗೆಯಲ್ಲಿ ಇವರ ಮನೆಗೆ ಹೊರಟ. ಬಂದು ನೋಡಿದರೆ ಅಣ್ಣತಮ್ಮಂದಿರಿಬ್ಬರೂ ಪರಾರಿಯಾಗಿದ್ದರು. ಅಷ್ಟರಲ್ಲಿ ಮನೆಯ ಮುಂದೆ ಗುಡಿಯ ಮಾದೇವಯ್ಯನವರು, ಇನ್ನೂ ಹತ್ತು ಹದಿನೈದು ಜನ ಬಂದು ನಿಂತಿದ್ದರು. ಅಡಿಗೆಯ ಸಾಲೆಯಿಂದ ಹಿಂದಿನ ಸೂರಿನ ತನಕ ಮನೆಯ ಹೆಂಚುಗಳು ಪುಡಿಗುಟ್ಟಿಹೋಗಿದ್ದವು. ಅಲ್ಲಿ ಸೇರಿದ್ದವರ ಪೈಕಿ ನಾಲ್ಕು ಜನಕ್ಕೆ ಶಿವೇಗೌಡ-‘ಲೇ ಹೋಗ್ರುಲಾ, ಅವ ಉಡುಕ್ಕಂಡ್ ಬಲ್ಲಿ’ ಎಂದ.

ಅಡಿಗೆಯ ಮನೆ ನೋಡಿ ಗಂಗಮ್ಮನ ಕಣ್ಣಿನಲ್ಲಿ ನೀರು ಬಂತು. ‘ಶಿವೇಗೌಡ, ಆ ಸೂಳೇಮಕ್ಳುನ್ನ ಹಿಡಕಂದ್ ಬಂದು ಕಾಲು ಮುರ್ದು ಕೂರುಸ್ಬೇಕು’ -ಎಂದಳು.

ಹುಡುಗರು ಎಲ್ಲಿಯೂ ಸಿಕ್ಕಲಿಲ್ಲ. ರಾತ್ರಿಯಾಗಿ ಕತ್ತಲಾದರೂ ಅವುಗಳ ಸುಳಿವಿಲ್ಲ. ಇವ್ ಮನತಾನ ಹಾಳಾಗ, ಎಲ್ಲಿ ಹೋದ್‌ವೋ-ಎಂದು ಗಂಗಮ್ಮ ಹತ್ತು ಬಾರಿ ಅಂದುಕೊಂಡಳು. ಮನೆಯಲ್ಲಿ ಅವಳು ಒಬ್ಬಳೇ. ಹಿಂಭಾಗದ ಹೆಂಚುಗಳೆಲ್ಲ ಪುಡಿಯಾಗಿ ಹೋಗಿವೆ. ಒಬ್ಬಳೇ ಇರಲು ಭಯವೇನಿಲ್ಲ. ‘ನಾನಿದ್ದ ಕಡೆ ದೆವ್ವವೂ ಸುಳಿಯಲ್ಲ’-ಎಂದು ಅವಳೇ ಹೇಳುತ್ತಾಳೆ. ಆದರೆ ಈ ಮುಂಡೇವು ಎಲ್ಲಿ ಹೋದವೋ? ಅವುಗಳ ಜೀವದ ಬಗೆಗೆ ಅವಳಿಗೆ ಯಾವ ಯೋಚನೆಯೂ ಇಲ್ಲ. ಎಲ್ಲೋ ಅವಿತುಕೂತಿವೆ. ರಾತ್ರಿ ಹೊಟ್ಟೆಗೆ ಏನು ಮಾಡ್ತುವೋ? ತ್ವಾಟದಾಗೆ ಎಳಗಿಳನೀರು ಹಾಕ್ಕಂಡ್ ಕುಡ್ದು ಬಂಬ್ಲು ಗಿಂಬ್ಲು ತಿಂದಿರಬೌದು. ಗದ್ದೇ ಕಡೀಗ್ ಹೋಗಿದ್ರೆ ಕಬ್ಬಿನ್ ಜಲ್ಲೆ ಅಗಿದಿರಬೌದು. ಆದ್ರೆ ತೀರುಹತ್‌ದೋವು ಮನಿಗ್ ಬರಬ್ಯಾಡವಾ? ನಾಳೆ ಬ್ಯಳಿಗ್ಗೆ ರೊಟ್ಟಿಗೆ ಅಂತ ಬರ್ಲಿ, ಮಾಡ್ತೀನಿ.

ಅವರ ಮನೆಯ ಎದುರಿಗೇ ಚೋಳೇಶ್ವರನ ಗುಡಿ. ಗುಡಿಯ ಬಾಗಿಲು ಉತ್ತರಕ್ಕೆ, ಇವರ ಮನೆಯದು ಪೂರ್ವಕ್ಕೆ. ಎಂದರೆ ಗುಡಿಯ ಎಡಭಾಗ ಇವರ ಮನೆಯ ಮುಂದಿದೆ. ಗುಡಿಗೂ ಮನೆಗೂ ಮಧ್ಯ ಒಂದು ಸಣ್ಣ ಪಾಳು. ಹಿಂದೆ ಅದು ಗುಡಿಯ ಪೌಳಿಯಾಗಿದ್ದುದಕ್ಕೆ ಈಗಲೂ ಗುರುತಿದೆ. ಗುಡಿಯಲ್ಲಿ ಮಾದೇವಯ್ಯನವರು ಒಬ್ಬರೇ ಕೂತು ಬಲಗೈಲಿ ಏಕತಾರಿ ಮೀಟಿಕೊಂಡು, ಎಡಗೈಲಿ ಚಿಟಿಕಿ ಹಾಕುತ್ತಾ-‘ಹರಹರ ಎನುತಲಿ ರುದ್ರಾಕ್ಷಿ, ಧರಿಸಲು ಹರಿವುದು ಭವಗಳ ಪರಮ ಧರಿಸಿದ ರುದ್ರಾಕ್ಷಿ…..’-ಎಂದು ಭಜನೆ ಮಾಡಿಕೊಳ್ಳುತ್ತಿದ್ದರು. ಅವರು ದಿನವೂ ಅಷ್ಟೇ. ನಡುರಾತ್ರಿಯವರೆಗೂ ಭಜನೆ ಮಾಡುತ್ತಾರೆ. ಬೆಳಿಗ್ಗೆ ಕೋಳಿ ಕೂಗುವ ಮೊದಲೇ ಎದ್ದು ಕೂತು ಮತ್ತೆ ಪ್ರಾರಂಭಿಸುತ್ತಾರೆ. ಅವರದು ಯಾವ ಊರೋ ಯಾವ ದೇಶವೋ ಯಾರಿಗೂ ಗೊತ್ತಿಲ್ಲ. ಈ ಊರಿಗೆ ಬಂದು ಆಗಲೇ ಇಪ್ಪತ್ತು ವರ್ಷದ ಮೇಲಾಯಿತಂತೆ. ಗಂಗಮ್ಮ ಮದುವೆಯಾಗಿ ಬರುವ ಸ್ವಲ್ಪ ಮುಂಚೆಯೇ ಇಲ್ಲಿಗೆ ಬಂದಿದ್ದರಂತೆ. ಚೋಳೇಶ್ವರನ ಗುಡಿಯಲ್ಲಿ ವಾಸ, ಭಜನೆ, ಕಂತೆಭಿಕ್ಷೆ ಮಾಡಿ ಊಟ. ಎತ್ತರವಾದ, ದುಂಡುಮುಖದ ಆಳು. ಹಣೆಯ ಮೇಲೆ ದೊಡ್ಡದಾದ ಮೂರು ಪಟ್ಟೆ ವಿಭೂತಿ. ಹುಬ್ಬಿನ ನಡುವೆಯಲ್ಲದೆ ಕಿವಿಯ ಹತ್ತಿರವೂ ವಿಭೂತಿಯ ಕೊಟ್ಟು. ಪೂರ್ತಿ ಕ್ಷೌರ ಮಾಡಿಸಿದ ತಲೆ. ಕಾವಿಯ ಪಂಚೆ ಉಟ್ಟು ಅದೇ ಬಣ್ಣದ ಅಂಗಿ ಹಾಕುತ್ತಾರೆ.

ಮಲಗಿದರೆ ಗಂಗಮ್ಮನಿಗೆ ನಿದ್ದೆ ಬರಲಿಲ್ಲ. ಹುಡುಗರು ಇನ್ನೂ ಮನೆಗೆ ಬಂದಿಲ್ಲ. ಆಗಲೇ ಮಾದೇವಯ್ಯನವರು ಭಜನೆ ಮುಗಿಸುವ ಹೊತ್ತು. ‘ಮಂಗಳಾರತಿ ಎತ್ತಿ ಅಂಗನೇಯರೆಲಾ ಸಂಗಯ್ಯ ಬಸವಣ್ಣನಿಗೇ…..’ ಹೇಳಲು ಶುರು ಮಾಡಿದ್ದರು. ಗಂಗಮ್ಮ ಎದ್ದು ಬರೀ ಬಾಗಿಲು ಹಾಕಿಕೊಂಡು ಅಲ್ಲಿಗೆ ಹೋದಳು. ಗುಡಿಯ ಮುಂಭಾಗವು, ಬಾಗಿಲಿಲ್ಲದ ದೊಡ್ಡ ಮಂಟಪದಂತಿತ್ತು. ಅಯ್ಯನವರು ಕೂತು ಭಜನೆ ಮಾಡುತ್ತಿದ್ದುದು ಅಲ್ಲಿಯೇ. ಸಂಜೆಯ ಹೊತ್ತು ಭಜನೆ ಕೇಳಲು, ಊರಿನ ಕೆಲವರು ಬಂದು ಕೂರುತ್ತಿದ್ದರು.

ಈಗ ಆಗಲೇ ಮಧ್ಯರಾತ್ರಿಯಾಗಿದೆ. ಗುಡಿಯಲ್ಲಿ ಮತ್ತೆ ಯಾರೂ ಇಲ್ಲ. ಗಂಗಮ್ಮ ಬಂದು ಅಯ್ಯನವರ ಎದುರಿನ ಕಂಬದ ಹತ್ತಿರ ಕೂತಳು. ಅವರು ಕೊನೆಯ ನುಡಿ ಹೇಳಿ ಮುಗಿಸಿ ಏಕತಾರಿ ಚಿಟಿಕೆಗಳನ್ನು ನಿಲ್ಲಿಸಿದ ಮೇಲೆ ಅವಳೇ ಕೇಳಿದಳು: ‘ ಈ ಸೂಳೆಮಕ್ಳಿಗ್ ಬುಧಿ ಬರಾದು ಯಾವತ್ತು ಮಾದೇವಯ್ನೋರೆ?’
‘ಗಂಗವ್ವಾ, ಬುದ್ಧಿ ನಿಧಾನವಾಗಿ ಬತ್ತೈತೆ. ನೀವು ಒಳ್ಳೇ ಮಾತಾಡಾದು ಮೊದ್ಲು ಕಲೀರಿ.’
‘ನಾನೇನ್ ಕ್ಯಟ್ ಮಾತಂದದ್ದು?’
‘ಈ ಸೂಳೇಮಕ್ಳಿಗೆ ಅಂತ ಯಾಕಂತೀರಾ? ನಮ್ ಹುಡುಗ್ರೀಗೆ ಅನ್ನಿ.’
ತನ್ನ ಮಾತನ್ನು ತಿದ್ದಿಕೊಳ್ಳಲು ಮಾದೇವಯ್ಯನವರು ಗಂಗಮ್ಮನಿಗೆ ಹೇಳುತ್ತಿರುವುದು ಇದು ಮೊದಲ ಸಲವಲ್ಲ. ಅವಳನ್ನು ತಿದ್ದಲು ಯಾರಿಗೂ ಸಾಧ್ಯವಿಲ್ಲವೆಂದು ಗೊತ್ತಿದ್ದರೂ ಅವರು ಇಂತಹ ಸಂದರ್ಭ ಬಂದರೆ ಹೇಳುತ್ತಲೇ ಇರುತ್ತಾರೆ. ಮಕ್ಕಳು ಇನ್ನೂ ಮನೆಗೆ ಬಂದಿಲ್ಲದೆ ಇರುವುದನ್ನು ಅವಳು ಹೇಳಿದಳು.
‘ಗಂಗವಾ, ನೀವು ಅವುನ್ನ ಶಿಕ್ಷೆ ಮಾಡಬೇಕಾದ್ರೆ ಪಟೇಲ್‌ರನ್ನ ಯಾಕ್ ಕರ್ಕಂಡ್ ಬರಾಕೆ ಹೋಗಿದ್ರಿ?’
‘ಅವು ನನ್ ಕೈಗೆ ಸಿಕ್ಕಿದ್ರೆ ಹ್ಯೇಳ್ರಿ.’
‘ತಪ್ಪು ನಿಮ್ದೇ’-ಎಂದು ಅಯ್ಯನವರು ಮತ್ತೆ ಹೇಳಿದರು. ‘ಮನೆಯ ಯಜಮಾಂತಿ, ತಾಯಿ ತಿದ್ದಿಕೊಳ್ಳದೆ ಮಕ್‌ಳನ್ನ ತಿದ್ದೂದು ಹ್ಯಂಗೆ?’-ಎಂಬ ಅವರ ಹಳೆಯ ಮಾತಿನಿಂದ ಅವಳಿಗೆ ಕಸಿವಿಸಿಯಾಯಿತು.
‘ಮಠಕ್ಕೆ ಕಳಿಸಿದ್ರಲ್ಲ ಅಪ್ಪಣ್ಣಯ್ಯನ್ನ, ಅಲ್ಲಿ ಅವ್ನು ಓಚಯ್ಯನೋರನ್ನೇ ಸೂಳೇಮಗನೆ ಅಂತ ಬೈದು ಓಡಿಬಂದನಂತೆ. ಈ ಮಾತು ಅವ್ನು ಎಲ್ಲಿ ಕಲ್ತ್‌ಕಂಡ?’
‘ನನ್ ಹಣೇಬರ ಕಣ್ರೀ, ಅದೇ ಅವನ ಬಾಯಲ್ಲಿ ಹೀಗ್ ಆಡ್ಸುತ್ತೆ. ಆಮ್ಯಾಲೆ ಆ ಸೂಳೇಮಗುನ್ನ ಓಚಯ್ಯನೋರು ಸುಮ್ನೆ ಬಿಟ್ರಾ?’
‘ಅಲ್ಲಿಂದ ಓಡಿಬಂದ ಮೇಲೇ ಅಲ್ವಾ ಅಣ್ಣ ತಮ್ಮಂದಿರು ಹಂಚು ಬಡ್‌ದುದ್ದು?’
‘ಈ ಮುಂಡೇಮಕ್ಳ ಮನೆತನ ಹಾಳಾಗ. ಯಲ್ಲಾತಕ್ಕೂ ಹೊಸ ಹೆಂಚು ಹಾಕ್ಸುಕ್ಕೆ ನಾನೆಲ್ಲಿಂದ ಅಂತ ತರಲಿ?’
‘ಮತ್ತೆ ಕ್ಯಟ್ ಮಾತು ಆಡ್ತೀರಲಾ ಗಂಗವ್ವಾ…..?’- ಅಯ್ಯನೋರು ಇನ್ನೂ ಏನೋ ಹೇಳುತ್ತಿದ್ದರು. ಅಷ್ಟರಲ್ಲಿ ಹೊರಗೆ ಬೀದಿಯಲ್ಲಿ ಹತ್ತಾರು ಜನಗಳು ಓಡಿಯಾಡುವ ಶಬ್ದ ಕೇಳಿಸಿತು. ಕೆಲವರು- ‘ಕಬ್ಬಿನ ಗದ್ದೀಗ್ ಬೆಂಕಿ ಹತ್ಯತೆ, ಓಡ್‌ಬಲ್ಲಿ ಓಡ್‌ಬಲ್ಲಿ’ ಎಂದು ಕೂಗಿಕೊಂಡರು. ಇವರಿಬ್ಬರೂ ಗುಡಿಯ ಹೊರಗೆಬಂದು ನೋಡುತ್ತಾರೆ: ಕೆರೆಯ ಹಿಂದಿನ ಬಯಲಿನಲ್ಲಿ ಬೆಂಕಿಯ ಉರಿ ರಾಚುತ್ತಿದೆ. ಅದರ ಬೆಳಕಿನಲ್ಲಿ ಹೊಗೆಯೂ ಕಾಣುತ್ತಿದೆ.
‘ಅಯ್ಯೋ ನಮ್‌ದೂ ಕಬ್ಬಿತ್ತಲ್ಲಪ್ಪಾ, ಇದ್ಯಾವ ಮನೆಹಾಳ ಮುಂಡೇಮಕ್ಳು ಹೀಗ್ ಮಾಡಿದ್ರೋ?’ -ಎಂದುಕೊಂಡು ಗಂಗಮ್ಮ ಮನೆಗೆ ಹೋಗಿ ಬಾಗಿಲಿಗೆ ಒಂದು ಬೀಗ ಸಿಕ್ಕಿಸಿಕೊಂಡುಜನಗಳ ಜೊತೆಯಲ್ಲಿ ಕೆರೆ ಏರಿಯ ಕಡೆಗೆ ಓಡಿದಳು.

ಊರ ಮುಂದೆಯೇ ಕೆರೆ. ಊರನ್ನು ಎರಡು ಕಡೆಯೂ ಸುತ್ತಿ ನಿಂತಿರುವ ಕೆರೆಯ ಏರಿಗೆ ಗ್ರಾಮದ ಮುಂಭಾಗದಿಂದ ಸುತ್ತಿ ಹೋಗಬೇಕು. ಈಗ ಊರಿಗೆ ಊರೇ ಓಡಿ ಬಂದು ಏರಿಯಮೇಲೆ ಅಲ್ಲಲ್ಲೇ ನಿಂತಿತು. ಇಡೀ ಬಯಲಿನ ಅರ್ಧ ಭಾಗಕ್ಕೂ ಮೀರಿ ಕಬ್ಬು ಹಾಕಿತ್ತು. ಪಡುವಲ ದಿಶೆಯ ತೂಬಿನ ಕಡೆಯಲ್ಲಿ ಎರಡು ಆಲೆ ಅರೆಯುತ್ತಿತ್ತು. ಮೂಡಣದಲ್ಲಿ ಹೊತ್ತಿ ಉರಿಯುತ್ತಿದ್ದ ಕಬ್ಬಿನ ಗದ್ದೆಯ ಬೆಂಕಿ ನಿಧಾನವಾಗಿ ಪಡುವಣ ಬಡಗಣಕ್ಕೂ ಹರಡುತ್ತಿತ್ತು. ಎಲ್ಲ ಕಬ್ಬು ಕಟಾವಿಗೆ ಬಂದು ಬುಡದ ಗರಿಗಳು ಒಣಗಿ ತರಗಾಗಿದ್ದುದರಿಂದ ಬೆಂಕಿ ಹಬ್ಬಲು ಅನುಕೂಲವಾಗಿತ್ತು. ಗಾಳಿ ಇಲ್ಲದಿದ್ದರೆ ಉರಿಯ ಬಿರುಸು ನಿಧಾನವಾಗುತ್ತಿತ್ತು. ಆದರೆ ಗಾಳಿ ದಿಕ್ಕು ತಪ್ಪಿದಂತೆ ಒಮ್ಮೆ ಪಡುವಲಿಗೆ ಇನ್ನೊಮ್ಮೆ ತೆಂಕಲಿಗೆ ಬೀಸುತ್ತಿದ್ದುದರಿಂದ ಉರಿ ಬಲು ಬೇಗ ಹರಡುತ್ತಿತ್ತು. ಪಡುವಣ ಕಡೆಯ ಎರಡೂ ಆಲೆಯವರೂ ಕಣೆಯ ಕೋಣಗಳನ್ನು ಬಿಚ್ಚಿ ಏರಿಯ ಕಡೆಗೆ ಓಡಿಸಿದರು. ಆಳುಗಳು ಬೆಲ್ಲದ ಮೂಟೆಗಳನ್ನು ಹೊತ್ತು ಸಾಗಿಸಲು ಮೊದಲುಮಾಡಿದರು. ಅಚ್ಚಿನ ಮಣೆಗಳನ್ನು ಇಬ್ಬಿಬ್ಬರು ಜೊತೆಯಾಗಿ ಹೊತ್ತು ಏರಿಯಮೇಲೆ ತಂದು ಹಾಕುತ್ತಿದ್ದರು. ಬಿದಿರಿನ ಗಳು, ತೆಂಗಿನ ಸೋಗೆ, ಮತ್ತು ಕಬ್ಬಿನ ತರಗುಗಳಿಂದ ಕಟ್ಟಿದ ಆಲೆಮನೆಗೆ ಇನ್ನು ಐದೇ ನಿಮಿಷದಲ್ಲಿ ಜ್ವಾಲೆ ಮುಟ್ಟಿ ಅದು ಆಕಾಶದ ಎತ್ತರಕ್ಕೂ ಉರಿದು ಬೀಳುವುದು ನಿಶ್ಚಯವಾಗಿತ್ತು.

ತಮ್ಮ ತಮ್ಮ ಗದ್ದೆಗೆ ಉರಿ ವ್ಯಾಪಿಸಿದಾಗಲೂ ಗದ್ದೆಯ ಮಾಲೀಕರು, ಅವರ ಮನೆಯ ಇತರರು, ತಮ್ಮ ಶರೀರಕ್ಕೆ ಬೆಂಕಿ ಮುಟ್ಟಿದಂತೆ ಹಾ ಹಾ ಎನ್ನುತ್ತಿದ್ದರು. ಬೆಂಕಿ ಹೇಗೆ ಹೊತ್ತಿತು, ಯಾರು ಹೊತ್ತಿಸಿದರು ಎಂಬ ಬಗೆಗೆ ಜನರಲ್ಲಿಯೇ ತರ್ಕ ವಿತರ್ಕಗಳು ನಡೆಯುತ್ತಿದ್ದವು.

ಆಲೆಯ ಹತ್ತಿರವೇ ಗಂಗಮ್ಮನ ಪುಟ್ಟ ತೋಟವಿದೆ. ನಲವತ್ತೇ ತೆಂಗಿನ ಮರಗಳಿದ್ದ ಅದು ಒಂದು ಎಕರೆ ವಿಸ್ತೀರ್ಣದ್ದು. ಅವಳ ಉಳಿದ ತೋಟ ಬೇರೆ ಕಡೆ ಹೊಲಕ್ಕೆ ಲಗತ್ತಾಗಿತ್ತು. ಈಗ ಬೆಂಕಿ ತೋಟದ ನಾಲ್ಕೂ ಸುತ್ತನ್ನು ಆಕ್ರಮಿಸುತ್ತಾ ಬಂದು ತೋಟದ ಪಕ್ಕದಲ್ಲಿಯೇ ಇದ್ದ ಆಲೆಯ ಮನೆಗಳು ಹೊತ್ತಿ, ಅದರ ಉರಿ ಮತ್ತು ಹೊಗೆ ಸೊಸಿಮರದಿಂದ ಎಷ್ಟೋ ಮೇಲಕ್ಕೆ ಏರಿದುವು. ತೋಟದ ಮಧ್ಯದಿಂದ ಯಾರೋ-‘ಅಯ್ಯಯ್ಯಪ್ಪಾ, ಬಿಡಿಸ್ರೋ. ನಾ ಸತ್ಹೋಕ್ತೀನಿ ಬಿಡಿಸ್ರೋ’ ಎಂದು ಗಟ್ಟಿಯಾಗಿ ಕಿರಿಚಿಕೊಂಡು ಲಬಲಬನೆ ಬಾಯಿ ಬಡಿದುಕೊಂಡುದು ಬೆಂಕಿಯ ಚಿಟಿಚಿಟಿಯ ಮಧ್ಯೆ ಸ್ಪಷ್ಟವಾಗಿ ಕೇಳಿಸಿತು. ಜನರೆಲ್ಲ ಗಾಬರಿಯಿಂದಲೂ ಕೌತುಕದಿಂದಲೂ ಆ ಕಡೆ ನೋಡುತ್ತಿರುವಂತೆಯೇ ಗಂಗಮ್ಮ-‘ನಮ್ ಚೆನ್ನಿಗರಾಯನ ದನಿ. ಮುಂಡೇದು ಇಷ್ಟು ಹೊತ್ತಿನಾಗೆ ತ್ವಾಟದಲ್ಯಾಕ್ ಕೂತ್‌ಕಂಡಿತ್ತೋ! ನಿಮ್ಮ ದಮ್ಮಯ್ಯ ಅಂತೀನಿ. ಗಂಡುಸ್ರು ಯಾರಾರೂ ಹೋಗಿ ಕರ್‌ಕಂಡ್ ಬನ್ರೋ’ ಎಂದು ಕೂಗಿಕೊಂಡಳು.

ಆದರೆ ಸುತ್ತ ಬೆಂಕಿ ಹಬ್ಬಿ ಪಕ್ಕದ ಅಲೆಗಳು ಎದ್ದು ಉರಿಯುತ್ತಿರುವಾಗ ತೋಟದೊಳಕ್ಕೆ ಯಾರು ಹೋಗಬೇಕು? ತೋಟದ ಬೇಲಿಗೆ ಬೆಂಕಿ ಹೊತ್ತಿದೆ. ತೋಟದೊಳಗೆ ಸೋಗೆ ಹೆಡೆದಿಬ್ಬಿಗಳ ಒಟ್ಟಲು ಬೇರೆ ಇದೆ. ಅದಕ್ಕೆ ಉರಿ ತಗಲಬಹುದು. ಯಾವ ಗಂಡಸೂ ಧೈರ್ಯ ಮಾಡಲಿಲ್ಲ. ಗುಡಿಯ ಮಾದೇವಯ್ಯನವರು ಮಾತ್ರ-‘ತ್ವಾಟದೊಳಿಕ್ ಬೆಂಕಿ ಬರಾಕಿಲ್ಲ, ಬನ್ರಿ ಬನ್ರಿ’ ಎಂದು ಹೇಳುತ್ತಾ ಏರಿಯನ್ನು ಜಾರಿದಷ್ಟು ಭರದಿಂದ ಇಳಿದು, ಉರಿಯುವ ಗದ್ದೆಯ ನಡುವೆ ಹೋಗುವ ನೀರು ಕಾಲುವೆಯಲ್ಲಿ ಹಾಯ್ದು ತೋಟ ಮುಟ್ಟಿದರು.

‘ಇನ್ಯಾರೂ ಗಂಡಸರಿಗೆ ಹುಟ್ಟಿದ ಸೂಳೇಮಕ್ಳು ಇಲ್ವೇನ್ರೋ! ಹೆಣ್ಣು ಹೆಂಗಸು ನಾನು ಹೋಗ್ತೀನಿ’-ಎಂದು ಕೂಗುತ್ತಾ ಗಂಗಮ್ಮನೂ ಏರಿಯನ್ನು ಇಳಿದಳು. ಬೆಸ್ತರ ಮುದ್ದ, ಹೊಲೇರ ಬೇಲೂರ, ಭಜನೆಗೆ ಬರುತ್ತಿದ್ದ ತೋಟಮರಿ ಮೊದಲಾಗಿ ಏಳು ಎಂಟು ಜನ ಅವಳ ಹಿಂದೆ ಇಳಿದು ಆಮೇಲೆ ಅವಳಿಗಿಂತ ಮುಂದೆ ಓಡಿದರು.

ತೋಟದಲ್ಲಿ ಚೆನ್ನಿಗರಾಯ ಒಂದು ಸೊಸಿ ತಂಗಿನಮರದ ದಸಿಮೊಟ್ಟೆಯ ಮೇಲೆ ಕೂತು ಇನ್ನೂ ‘ಅಯ್ಯಯ್ಯಪ್ಪೋ’ ಎನ್ನುತ್ತಿದ್ದ. ಮಾದೇವಯ್ಯನವರು-‘ತ್ವಾಟದೊಳಗೆ ಬೆಂಕಿ ಬಂದಿಲ್ಲ. ಬ್ಯಾಗ ಇಳಿದು ಬಾ ಚೆನ್ನಯ್ಯಾ’ ಎಂದು ಕೂಗಿಕೊಂಡರು. ಆದರೆ ಇಳಿಯಲು ಅವನಿಗೆ ಭಯ. ‘ನಂಗ್ ಹೆದ್ರಿಕೆಯಾಗುತ್ತೆ ಕಣ್ರೀ ಅಯ್ನೋರೇ’-ಎಂದು ಪ್ರಲಾಪಿಸುತ್ತಿದ್ದ. ಅಷ್ಟರಲ್ಲಿ ಮುದ್ದ, ಬೇಲೂರ, ತೋಟಮರಿ ಎಲ್ಲರೂ ಓಡಿಬಂದರು. ಹಿಂದಿನಿಂದ ಗಂಗಮ್ಮನೂ ಏದುಸಿರಿಡುತ್ತಾ ತಲುಪಿದಳು. ‘ಇಳಿಯೋ ನನ್ ಕಂದಾ, ಅಪ್ಪಣ್ಣೆಲ್ಲೋ?’- ಎಂದು ಅವಳು ಕೂಗಿಕೊಂಡಳು. ಸ್ವಲ್ಪ ಧೈರ್ಯ ಬಂದು ಅವನು ಕೋತಿತಿಮ್ಮಣ್ಣ ಇಳಿಯುವಷ್ಟೇ ಸರಾಗವಾಗಿ ದಸಿಯಿಂದ ಗೋಣಿಗೆ ಬಂದು ಮರವನ್ನು ಇಳಿದ. ಇನ್ನಿ ಅಲ್ಲಿ ನಿಂತರೆ ಬೆಂಕಿಯು ರಾಚಿ ಸೋಗೆ ಹೆಡೆದಿಬ್ಬಿಗಳ ಒಟ್ಟಲಿಗೆ ತಗಲುವ ಸಾಧ್ಯತೆ ಇದ್ದುದರಿಂದ ಅವನನ್ನು ಕರೆದುಕೊಂಡು ಎಲ್ಲರೂ ಹಿಂದಿರುಗಿದರು. ಅವರು ಬರುವ ಕಾಲುವೆಯ ಎರಡೂ ಕಡೆಯ ಕಬ್ಬಿನ ಉರಿ ಆರುತ್ತಿತ್ತು. ಆಲೆಮನೆಯ ಜ್ವಾಲೆ ಮಾತ್ರ ಇನ್ನೂ ಏರುತ್ತಿತ್ತು. ಈಗ ಅಲೆಯ ಹತ್ತಿರದಲ್ಲಿಯೇ ಹಾಕಿದ್ದ ಒಣಗಿದ ಸಿಪ್ಪೆಯ ದೊಡ್ಡರಾಶಿಗೆ ಉರಿ ತಗುಲಿತ್ತು.
ಎಲ್ಲರೂ ಏರಿಯನ್ನು ಹತ್ತಿದ ಮೇಲೆ ಮಾದೇವಯ್ಯನವರು ಚೆನ್ನಿಗರಾಯನನ್ನು ಕೇಳಿದರು: ‘ಇಷ್ಟು ಹೊತ್ನಾಗೆ ತೆಂಗಿನ ಮರ ಏರಿ ಯಾಕೆ ಕುಂತಿದ್ದೆ?’
‘ಅಮ್ಮ ಶಿವೇಗೌಡುನ್ನ ಕರ್ಕಂಬತ್ತೀನಿ ಅಂತ ಹೋದ್ಲಲ್ಲ , ಅದುಕ್ಕೆ.’
ಅಷ್ಟರಲ್ಲಿ ಎಲ್ಲರೂ ಅಲ್ಲಿ ಸುತ್ತುವರಿದರು. ಪಟೇಲ ಶಿವೇಗೌಡನೂ ಬಂದ.
‘ನೀವು ಅಣ್ಣತಂಮ್ಮಂದಿರು ಹಂಚು ಯಾಕೆ ಬಡಿದಿರಿ?’-ಮಾದೇವಯ್ಯನವರು ಕೇಳಿದರು.
‘ಅಯ್ಯೋ, ಹಂಚಿನ ಮನೆ ಹಾಳಾಯ್ತು. ಅಪ್ಪಣ್ಣ ಎಲ್ಹೋದ್ನೋ?’-ಗಂಗಮ್ಮ ಕಾತರಳಾಗಿ ಕೇಳಿದಳು.
‘ಲಿಂಗಾಪುರದ ಕಡಿಕ್ ಓಡಿಹೋದ. ಅವ್ನೇ ಕಬ್ಬಿನ ಗದ್ದೆಗೆ ಬೆಂಕಿ ಹಾಕ್‌ದೋನು.’
‘ಅವ್ನು ಯಾಕೋ ಹಾಕ್ತಾನೆ?’
‘ನಾವಿಬ್ರೂ ತೆಂಗಿನ ಮರದ ಮ್ಯಾಲೆ ಅವುತ್‌ಕಳಾಣ ಬಾರೋ ಅಂದೆ. ಅವ್ನಿಗೆ ನ್ಯಟ್ಟಗೆ ಮರ ಹತ್ತುಕ್ ಬತ್ತಿರ್ಲಿಲ್ಲ. ಕಬ್ಬಿನ್ ಗದ್ದೇಲಿರ್ತೀನಿ ಅಂದ. ಈ ಕಡೆ ಆದ್ರೆ ಆಲೆಮನೆಯೋರು ಕಾಣ್ತಾರೆ ಅಂತ ಆಚೆ ಕೋಡಿಕಡೆಗೆ ಹೋದ. ಬೀಡಿ ಶೇದುಕ್ಕೆ ಅಂತ ಬೆಂಕಿಕಡ್ಡಿ ಗೀರಿದ್‌ನಂತೆ. ಕಬ್ಬಿನ ತರಗು ಹತ್‌ಕಂಡ್‌ಬಿಡ್‌ತಂತೆ.’
ಇದನ್ನು ಕೇಳಿದ ತಕ್ಷಣ ಪಟೇಲ ಶಿವೇಗೌಡ-ಅವ್ನುನ್ ಇಡ್ಕಂಡ್‌ಬಾ ಹೋಗ್ರುಲಾ’ ಎಂದು ಗರ್ಜಿಸಿದ. ಆದರೆ ಮಾದೇವಯ್ಯನವರು-‘ಇವನು ಹೇಳ್ತಾನೆ ಅಂತ ನಂಬಾಕ್ ಆಯ್ತದಾ? ಅವ್ನು ಬೀಡಿ ಸೇದುವಾಗ ಬೆಂಕಿ ಹೊತ್‌ತು ಅಂತ ನಿನಗೆ ಹ್ಯಾಂಗ್ ಗೊತ್ತು?’ ಎಂದು ಕೇಳಿದರು.
“ನಾನೇನ್ ಸುಳ್ಳು ಹ್ಯೇಳ್ತಿಲ್ಲ ಕಣ್ರೀ ಅಯ್ನೋರೇ. ದೇವರಾಣೆ ಬೇಕಾದ್ರೆ ಇಡ್ತೀನಿ. ಅವ್ನೇ ಇಲ್ಲೀತಂಕ ಓಡಿಬಂದು, ‘ಹೀಗಾಯ್ತು, ಪುರದಪ್ಪನ ಗದ್ದೀಗ್ ಬೆಂಕಿ ಹತ್ಕಂಡಿದೆ. ನೀನು ಯಾರ ಕೈಲೂ ಹೇಳ್‌ಬ್ಯಾಡ. ನಾನ್ ಲಿಂಗಾಪುರದ ಕಡೀಕ್ ಓಡಿಹೋಕ್ತೀನಿ. ನೀನೂ ಬಾ’ ಅಂತ ಕರ್ದ. ಬೆಂಕಿ ಹಾಕ್‌ದೋನು ನೀನು. ನಾನ್ಯಾಕ್ ಬರ್ಲಿ ಹೋಗು ಅಂದೆ. ಅವ್ನು ವಾಟಹ್ವಡ್‌ದ”-ಎಂದು ತನ್ನ ಮಾತನ್ನು ಸಾಧಿಸಿದ ಅವನ ಮಾತಿನ ಪೂರ್ತಿ ಪರಿಣಾಮ ಏನಾಗಬೇಕೆಂದು ಪಟೇಲ ಶಿವೇಗೌಡ ಮತ್ತು ಇತರ ಕೆಲವು ಮುಖ್ಯರಿಗೆ ಆಗಲೇ ಹೊಳೆದುಹೋಗಿತ್ತು. ಗಂಗಮ್ಮನಿಗೆ ಅದೇನೂ ತಿಳಿಯಲಿಲ್ಲ. ಮಾದೇವಯ್ಯನವರಿಗೆ ಎಲ್ಲವೂ ಅರ್ಥವಾಗಿ, ಏನಾದರೂ ಮಾಡಿ ತಪ್ಪಿಸಲು- ‘ಈ ಹುಡುಗನ ಮಾತು ಹಂಗ್ ನಂಬಾಕಾಗ್ತದೆ?’ ಎಂದರು.
‘ಅದ್ಯಾಕ್ ನ್ಯಂಬಾಕಾದು?-ಪಟೇಲ ದರ್ಪದಿಂದ ಕೇಳಿದ.
‘ಸತ್ಯವಾಗ್ಲೂ ಕಣ್ರೀ ಪಟೇಲ್ರೇ’-ಚೆನ್ನಿಗರಾಯ ಮತ್ತೆ ಒತ್ತಿಹೇಳಿ, ತನ್ನದೇನೂ ತಪ್ಪಿಲ್ಲವೆಂದು ಸೂಚಿಸಿದ. ಮನೆಯ ಹಿರೀಮಗನೇ ಮೂರ್ಖನಾಗಿ ಮಾತನಾಡುತ್ತಿರುವಾಗ ತಾವು ಬುದ್ಧಿವಂತಿಕೆ ಉಪಯೋಗಿಸಲು ಹೋದರೆ ಪಟೇಲರೂ ಊರಿನ ಇತರರೂ ತಮ್ಮ ಮೇಲೇ ತಿರುಗುತ್ತಾರೆಂದು ಯೋಚಿಸಿದ ಅಯ್ಯನವರು ಸುಮ್ಮನಾದರು.

– ೩ –

ಪಟೇಲರ ಅಪ್ಪಣೆಯಂತೆ ಕುಳುವಾಡಿ ತಳವಾರರು ಅಪ್ಪಣ್ಣಯ್ಯನನ್ನು ಹುಡುಕಲು ಹೋದರು. ರಾತ್ರಿಯ ಕತ್ತಲಿನಲ್ಲಿ ಅವನು ದೂರ ಹೋಗಿರಲಿಲ್ಲ. ಆಚೆ ಕೋಡಿ ಹತ್ತಿರದ ಬೂತಪ್ಪರಾಯನ ಮಂಟಪದಲ್ಲಿ ಕುಕ್ಕರಗಾಲಿನಲ್ಲಿ ಕೂತಿದ್ದ. ಅನುಮಾನ ಬಂದು ಬಸ್ತರ ಮುದ್ದ ಅದರೊಳಗೆ ಹೋದಾಗ ಸಿಕ್ಕಿ, ಹೆದರಿಕೆಯಿಂದ ಬರುವುದಿಲ್ಲವೆಂದು ಹಟಮಾಡಿದ. ಅಂಗಲಾಚಿದ ಕೊನೆಗೆ ಮೊಂಡುಬಿದ್ದ. ಆದರೆ ಮುದ್ದ ಮೊಂಡುಬಿದ್ದ ಅವನನ್ನು, ಕುರಿಯ ನಾಲ್ಕು ಕಾಲುಗಳನ್ನೂ ಹಿಡಿದು ಹೊರುವಂತೆ ಎತ್ತಿ ಹೆಗಲ ಮೇಲೆ ಹಾಕಿಕೊಂಡು ಹೊರಟುಬಿಟ್ಟ.
ಊರಿನವರೆಲ್ಲರೂ ಏರಿಯ ಮೇಲೆಯೇ ಇದ್ದರು. ಅಷ್ಟರಲ್ಲಿ ಆಲೆ ಉರಿದು ಬರಿ ಕೆಂಡ ಕಾಣುತ್ತಿತ್ತು. ಗದ್ದೆಗಳ ಕಬ್ಬು ಸುಟ್ಟು ಕರ್ರಗೆ ನಿಂತಿತ್ತು. ಆಕಾಶದಲ್ಲಿ ಬೆಳದಿಂಗಳಿಲ್ಲದಿದ್ದರೂ ಎಲ್ಲವೂ ಮಬ್ಬುಮಬ್ಬಾಗಿ ಕಾಣುತ್ತಿತ್ತು. ಅಪ್ಪಣ್ಣಯ್ಯನನ್ನು ಹೊತ್ತು ತಂದು ಎಲ್ಲರ ಸಮಕ್ಷಮ ಇಳಿಸಿದಾಗ ಅವನು ಹೆದರಿಕೆಯಿಂದ ನಡುಗುತ್ತಿದ್ದ. ಹಿಂಬಾಗದಲ್ಲಿ ಗಂಟು ಹಾಕಿಕೊಳ್ಳುವಂತೆ ಜುಟ್ಟು ಬಿಟ್ಟು, ಮುಂದುಗಡೆ ನುಣ್ಣಗೆ ಕ್ಷೌರ ಮಾಡಿಸಿಕೊಂಡಿದ್ದ ಅವನ ಬುರುಡೆಯ ಮೇಲೆ ಸಹ ಬೆವರುತ್ತಿತ್ತು. ಸದ್ಯ, ಮಗನ ಮುಖ ಕಂಡು ಗಂಗಮ್ಮ ನಿಟ್ಟುಸಿರೆಳೆದಳು. ಶಿವೇಗೌಡನಿಗೆ ಹೇಳಿ ಅವನಿಗೆ ನಾಲ್ಕು ಕೊಡಿಸಬೇಕೆಂದು ಮೊದಲೇ ನಿಶ್ಚಯಿಸಿಕೊಂಡಿದ್ದಳು. ಆದರೆ ಗೌಡನ ನಿಶ್ಚಯ ಬೇರೆಯದೇ ಆಗಿತ್ತು.
‘ಕಬ್ಬಿನ ಗದ್ದೆಗೆ ಯಾಕಲೇ ಬೆಂಕಿ ಹಾಕ್ದೆ?’-ಅವನು ಕೇಳಿದ.
ಹೆದರಿಕೆಯಿಂದ ಅಪ್ಪಣ್ಣಯ್ಯ ಮಾತನಾಡಲಿಲ್ಲ. ಇನ್ನೊಂದು ಸಲ ಗದ್ದರಿಸಿಕೊಂಡು ಕೇಳಿದಮೇಲೆ-‘ನಂಗೊತ್ತಿಲ್ಲ ಕಣ್ರೀ’ ಎಂದ.
‘ಓಹೋ, ಗೊತ್ತಿಲ್ಲ ಅಂತಾನೆ. ಬೀಡಿ ಸೇದುವಾಗ ಬೆಂಕಿ ಹತ್ಕಳ್ಳಿಲ್ವೇನೋ? ಹಾಗಂತ ನೀನೇ ಬಂದು ತೆಂಗಿನ ಮರದ ಮ್ಯಾಲಿದ್ದ ನನಗೆ ಹೇಳ್ಲಿಲ್ವೇನೋ?’-ಚೆನ್ನಿಗರಾಯ ಸ್ವಯಂ ಪ್ರೇರಿತನಾಗಿ ಸಾಕ್ಷಿ ನುಡಿದ. ಅಪ್ಪಣ್ಣಯ್ಯ ಸುಮ್ಮನೆ ತಲೆ ತಗ್ಗಿಸಿ ನಿಂತುಬಿಟ್ಟ. ಅವನ ಕಾಲು ನಡುಗುತ್ತಿದ್ದುದು, ಅಳ್ಳಾಡುತ್ತಿದ್ದ ತುಂಡು ಪಂಚೆಯೊಳಗಿನಿಂದ ಕಾಣುತ್ತಿತ್ತು. ಗುಂಪಿನಲ್ಲಿಯೇ ಇದ್ದ ಅಯಾ ಶಾಸ್ತ್ರಿಗಳು-‘ಮೌನಂ ಸಮ್ಮತಿ ಸೂಚಕಂ. ಅಂದರೆ ಅವನೇ ಬೆಂಕಿ ಹೊತ್ತಿಸಿರೋದು ನಿಜ ಅಂದಹಾಗಾಯ್ತು. ಇನ್ನು ಮುಂದಿನ ಮಾತಾಡಿ’ ಎಂದರು.
ಗದ್ದೆಗಳವರೆಲ್ಲ ತಲಾತಟ್ಟಿ ಆಡಲು ಪ್ರಾರಂಭಿಸಿದರು. ‘ನನ್ನ ಚೇಣಿ ಕಬ್ಬು ಕಲ್ಲುಸಕ್ಕರೆಯಂತ ಬ್ಯಲ್ಲ ಮಾಡ್ತಿತ್ತು. ಆಣೆಗೆ ಎಲ್ಡು ಅಚ್ಚು ಅಂದ್ರೂ ಬ್ರೇಸ್ತಾರ ಸಂತೇಲಿ ಎಗರಿಸ್ಕಂಡ್ ಹೋಯ್ತಿದ್ರು. ಏನಿಲ್ಲ ಅಂದ್ರೂ ಮುನ್ನೂರು ರೂಪಾಯಿ ಲುಕ್ಸಾನಾಗೈತೆ’-ಎಂದು ಕುರುಬರ ಸಣ್ಣಯ್ಯ ಗೊಣಗಿದ. ಬಣಜಿಗರ ರೇವಣ್ಣಶೆಟ್ಟಿ, ‘ನಂದು ಆಲೆಯಾಗಿತ್ತು ನಿಜ. ಆದ್ರೂ ಕೂಳೆಕಬ್ಬು ಬೆಳೆದಿದ್ರೆ ನಾನೂರು ರೂಪಾಯಿ ಬತ್ತಿತ್ತು.’ ಎಂದ. ಪ್ರತಿಯೊಬ್ಬರೂ ಅವರವರ ನಷ್ಟವನ್ನು ಅಂದಾಜುಕಟ್ಟಿ ಹೇಳಿದರು.

ಅಯ್ಯಾಶಾಸ್ತ್ರಿಗಳಿಗೆ ಗದ್ದೆ ಇರಲಿಲ್ಲ. ಅವರೂ ತಮ್ಮ ನಷ್ಟ ಹೇಳಿದರು: ‘ನನಗೆ ಗದ್ದೆ ಇಲ್ಲ ನಿಜ. ಆದರೆ ಎಲ್ಲರದೂ ಆಲೆ ಅರೆಯುವಾಗ ಗಣಪತಿ ಪೂಜೆಗೆ ಅಂತ ಒಂದು ಅಡಿಗೆಗೆ ಒಂದು ಉಂಡೆ ಬೆಲ್ಲ ನಂಗೆ ಸಂದಾಯವಾಗಬೇಕಾಗಿತ್ತು. ಒಟ್ಟಿನ ಲೆಕ್ಕ ತಗುದ್ರೆ ಏನಿಲ್ಲ ಅಂದ್ರೂ ಐನೂರು ಉಂಡೆ ಬೆಲ್ಲ ನಂಗೆ ಬರಬೇಕಾಗಿತ್ತು. ಲೆಕ್ಕ ಹಾಕಿದ್ರೆ ಐವತ್ತು ರೂಪಾಯಿಯಾಯ್ತು. ಇದರ ಮೇಲೆ ಸಿಕ್ತಿದ್ದ ಕಬ್ಬಿನ ಹಾಲು, ಅಡಿಗೆ ತೆಗೆದಾಗ ಹೋಗಿದ್ದರೆ ಸಿಕ್ತಿದ್ದ ಬಿಸಿಬೆಲ್ಲ ಇವೆಲ್ಲ…..’
‘ಶಾಸ್ತ್ರಿಗಳೇ, ನಿಮ್ಮ ಬಡ್ಡಿ ಲೆಕ್ಕ ಭಾಳಾ ವಜನ್ ಆಯ್ತು. ಏನೋ ಕಬ್ಬಿದ್ದೋರು ಲೆಕ್ಕಾ ಹಾಕಾದು ನ್ಯಾಯ. ಗಣಪ್ಪನ ಪೂಜೆ ಉಂಡೀಮ್ಯಾಲೆ ಲುಕ್ಸಾನು ಲೆಕ್ಕ ಮಾಡಬ್ಯಾಡ್‌ದು’-ಮಾದೇವಯ್ಯನವರು ನಡುವೆಯೇ ಹೇಳಿದರು: “ಕಬ್ಬೆಲ್ಲ ಅರ್‌ದಮ್ಯಾಲೆ ರೇವಣ್ಣಶೆಟ್ರು ಕೂಳೆಕಬ್ಬಿಗೆ ನಾನೂರು ರೂಪಾಯಿ ಲೆಕ್ಕ ತೆಗೀತಿದಾರೆ. ಅವರಿಗಿರಾದೆ ಒಂದೂವರೆ ಯಕ್ರೆ ಗದ್ದೆ. ಮದಲ ಬೆಳೆಗೇ ನೂರು ರೂಪಾಯಿ ಸಿಕ್ಕಿಲ್ಲ. ಇನ್ನು ನಾನ್ನೂರು ಹ್ಯಂಗ್ ಗಿಟ್‌ತದೆ? ‘ನಾನ್ ಕೂಳೆ ಬಿಡೂದಿಲ್ಲ, ಭೂಮಿ ಸಾಫ್ ಮಾಡ್ಸಿ ಮುಂದಿನ ಸಲೀಗೆ ಭತ್ತ ಹಾಕುಸ್ತೀನಿ, ಕಬ್ಬಿನಿಂದ ಭೂಮಿ ಕೆಟ್ಹೋಯ್ತುದೆ’ ಅಂತ ಅವ್ರು ನನ್ ಕುಟ್ಟೆ ಹೇಳಿದ್ರು.”

ಇನ್ನೂ ಎಷ್ಟು ಜನ ತಮ್ಮ ತಮ್ಮ ನಷ್ಟವನ್ನು ಹೆಚ್ಚುಮಾಡಿ ಹೇಳುತ್ತಿದ್ದರೋ! ಆದರೆ ಅಯ್ಯನವರ ಮಾತಿನಿಂದ ಅವರು, ನಾಲ್ಕು ಜನ ಒಪ್ಪುವಂತೆ ಯೋಚನೆ ಮಾಡಿ ಮಾತಾಡಬೇಕಾಯಿತು. ಅಯ್ಯನವರು ಮುಂದುವರಿಸಿದರು: ‘ಗಣಪ್ಪನ ಪೂಜೆಗೆ ಕಟ್ಟೋದು ಒಂದು ಪಿಡಚೇ ತ್ವಾರದ ಉಂಡಿ. ಅಂಥಾದು ಐನೂರು ಕೊತ್ರೆ ಐವತ್ತು ರೂಪಾಯಿ ಯಾರಪ್ಪ ಕೊಡ್ತಾನು? ಅಂದ್ರೆ ರೂಪಾಯಿಗೆ ಹತ್ತು ಉಂಡಿ ಆಯ್ತು. ರೂಪಾಯಿಗೆ ನಲವತ್ತರ ತನಕ ಅಚ್ಚೇ ಸಿಗ್ತಾವು. ಪಿಡಚೆ ತ್ವಾರದ ಉಂಡಿಗೆ ಒಂದೂವರಾಣೆ ಹ್ಯಂಗ್ ಕೊಡ್ತಾರು?’

ಅಲ್ಲಿಗೆ ಅಯ್ಯಾಶಾಸ್ತ್ರಿಗಳ ಬಾಯಿ ಪೂರ್ತಿಯಾಗಿ ಕಟ್ಟಿಹೋಯಿತು. ಮಾದೇವಯ್ಯನವರು ಕೊನೆಯ ತೀರ್ಮಾನ ಹೇಳುವವರಂತೆ ಎದ್ದು ನಿಂತು ಅಂದರು: ಲುಕ್ಸಾನು ಲೆಕ್ಕಮಾಡಿದ್ರೆ ಯಾರಿಗೂ ಸಿಕ್ಕಾದಿಲ್ಲ. ಹುಡುಗ ಬೇಕು ಅಂತಲೇನು ಮಾಡ್ಲಿಲ್ಲ. ಈಟುದ್ದದ ಹುಡುಗ ಬೀಡಿ ಎಳೀತಾನೆ ಅಂದ್ರೆ ಬುದ್ಧಿಕಲಿಸ್‌ಬೇಕು. ಎಂಥಾದಾರಾ ಕೋಲು ತಗಂಡ್ ನಾಲ್ಕು ಬಾರಿಸಿ ಕಳಿಸಿ. ಇಲ್ದೆ ಇದ್ರೆ ಅವನ ಓಚಯ್‌ನೋರಿಗೆ ಏಳಿ ಕ್ವಾದಂಡ ಕಟ್ಸಿ.’

‘ಇಲ್ಲ ಕಂಣ್ರಿ, ನನ್ನ ಕೋದಂದ ಕಟ್ಟಿಸ್‌ಬ್ಯಾಡಿ. ನಿಮ್ಮ ದಮ್ಮಯ್ಯ’- ಎಂದು ಅಪ್ಪಣ್ಣಯ್ಯ ಅಂಗಲಾಚಿದ. ‘ನಂದೇನೂ ತಪ್ಪಿಲ್ಲ. ಅವನಿಗೇ ಕಟ್ಸಿ’-ಎಂದು ಚೆನ್ನಿಗರಾಯ ವಿನಾಕಾರಣ ಮಾತನಾಡಿದ.
ಆದರೆ ಪಟೇಲ ಶಿವೇಗೌಡ ಬೇರೆಯ ರೀತಿಯಲ್ಲಿ ಮಾತನಾಡಿದ: ‘ಅಯ್ನೋರೇ, ನೀವು ಸನ್ಯಾಸಿ. ಮನೆಯಿಲ್ಲ ಮಟವಿಲ್ಲ; ಹ್ಯಂಡ್ರಿಲ್ಲ ಮಕ್ಳಿಲ್ಲ. ಹುಡ್ಗುನ್‌ಗೆ ಬುದ್ಧಿ ಕಲಿಸಾದು ಬ್ಯಾರೆ ಮಾತು. ಈಗ ಆಗಿರಾ ಲುಕ್ಸಾನು ಯಾರು ಕೊಡ್ತಾರೆ? ನಾನು ಊರ ಪಟೇಲ, ನ್ಯಾಯ ಹೇಳ್ಬಿಡ್ತೀನಿ. ಒಟ್ನಲ್ಲಿ ಇವ್ರು ಊರೊಟ್ಟಿಗೆ ಇಷ್ಟು ದಂಡ ಅಂತ ಕೊಡ್ಬೇಕು. ಅದ್ನ ಯಾರ್ಯಾರಿಗೆ ಲುಕ್ಸಾನಾಗಿದ್ಯೋ ಅವರಿಗೆ ಹಂಚಬೇಕು.’

‘ನ್ಯಾಯ, ನ್ಯಾಯ’ -ಎಂದು ಅನೇಕರು ತಲೆ ಹಾಕಿದರು. ರೇವಣ್ಣಶೆಟ್ಟಿ ಮತ್ತು ಅಯ್ಯಾಸಾಸ್ತ್ರಿಗಳು ಗಟ್ಟಿಯಾಗಿಯೇ- ‘ಅದು ಅಪ್ಪಂಗೆ ಹುಟ್ಟಿದ ಮಾತು ಅಂದ್ರೆ’ ಎಂದರು. ಮಾದೇವಯ್ಯನವರನ್ನು ಛೇಡಿಸಲೆಂದೇ ಅವರು ಹಾಗೆಂದದ್ದು. ಅಯ್ಯನವರು ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ವ್ಯವಹಾರ ಎತ್ತ ತಿರುಗುತ್ತಿದೆ ಎಂಬುದರ ಅರಿವು ಗಂಗಮ್ಮನಿಗೆ ಈಗ ಆಯಿತು. ಅವಳು ಕೈಮುಗಿಯುತ್ತಾ-‘ನಾನು ಗಂಡ ಸತ್ತ ಮುಂಡೆ. ಇವು ಬುದ್ದಿ ಇಲ್ದೆ ಏನೋ ಮಾಡಿಬಿಟ್ಟಿವೆ…..’ ಎಂದು ಮುಂದೆ ಹೇಳುವುದರಲ್ಲಿಯೇ ಚೆನ್ನಿಗರಾಯ ಬಾಯಿ ಹಾಕಿ, ‘ನಂದೇನೂ ತಪ್ಪಿಲ್ಲ ಕಣ್ಣಮ್ಮ. ಬರೀ ಅಪ್ಪಣ್ಣಯ್ಯ ಅನ್ನು’ ಎಂದ. ಗಂಗಮ್ಮ ಅದನ್ನು ಗಮನಿಸದೆ ಕೇಳಿಕೊಂಡಳು: ‘ತಪ್ಪು ಮಾಡಿದ್ದುಕ್ಕೆ ಅವನಿಗೆ ಕೋದಂಡ ಕಟ್ಸಿ. ದಂಡ ಪಂಡ ನನ್‌ಹತ್ರ ಇಲ್ಲ.’
‘ನನ್ನ ಕೋದಂಡ ಕಟ್ಟಿಸ್‌ಬ್ಯಾಡಿ ಕಣ್ರಿ, ದಂಡಾನೇ ತಗಳ್ರಿ’-ಎಂದು ಅಪ್ಪಣ್ಣಯ್ಯ ಅಳುತ್ತಾ ಹೇಳಿದ.
ಮುಖ್ಯರಲ್ಲಿಯೇ ಮಾತುಕತೆಯಾಯಿತು. ಎಲ್ಲರಿಗೂ ಆಗಿರುವ ನಷ್ಟವನ್ನು ಲೆಕ್ಕಮಾಡಿದರು. ಪೂರ್ತಿಯಿಲ್ಲದಿದ್ದರೆ ಸ್ವಲ್ಪಸ್ವಲ್ಪ ಕಡಿಮೆಯಾಗಿಯಾದರೂ ಹಂಚುವಂತೆ, ಗಂಗಮ್ಮ ಎರಡು ಸಾವಿರ ರೂಪಾಯಿ ಕೊಡಬೇಕು. ಗಣಪತಿ ಉಂಡೆಗಳು ತಪ್ಪಿದುದಕ್ಕೆ ಅಯ್ಯಾಶಾಸ್ತ್ರಿಗಳಿಗೆ ಒಟ್ಟಿನಲ್ಲಿ ಹತ್ತು, ಕೂಳೆಕಬ್ಬಿನ ನಷ್ಟಕ್ಕೆ ರೇವಣ್ಣಶೆಟ್ಟಿಗೆ ಇಪ್ಪತ್ತೈದು ರೂಪಾಯಿ ಕೊಡುವುದೆಂದು ತೀರ್ಮಾನವಾಯಿತು.

ಗಂಗಮ್ಮ ಅಂಗಲಾಚಿದಳು, ಕೈ ಕೈ ಮುಗಿದಳು. ಆದರೆ ಯಾರೂ ಕೇಳಲಿಲ್ಲ. ಅವಳ ಪರವಾಗಿ ತಾವು ಮಾತನಾಡಿದರೂ ಪ್ರಯೋಜನವಿಲ್ಲವೆಂದು ಅರಿತ ಮಾದೇವಯ್ಯನವರೂ ಸುಮ್ಮನಾದರು. ತನ್ನ ಹತ್ತಿರ ಒಂದು ದಮಡಿಯೂ ಇಲ್ಲವೆಂದು ಗಂಗಮ್ಮ ಕೇಳಿದುದಕ್ಕೆ ಶಿವೇಗೌಡ ಪರಿಹಾರ ಹೇಳಿದ: ‘ನಿನ್ನ ಹ್ವಲ ಹದ್ದೆ, ತ್ವಾಟ ಮನೆ, ಯಲ್ಲಾನೂ ನಂಗೆ ಆದಾರ ಬರಿ. ನಾನು ಗಂಟು ಕೊಡ್ತೀನಿ. ನನ್ನ ಹಣ ತೀರ್ಸಿ ಆದಾರ ವಾಪಸ್ ಬರುಸ್ಕ.’

ಗಂಗಮ್ಮನಿಗೆ ಏನೂ ತೋಚಲಿಲ್ಲ. ಅಯಾಶಾಸ್ತ್ರಿಗಳ ಮುಖ ನೋಡಿದಳು. ತಮಗೆ ಬರುವ ಹತ್ತು ರೂಪಾಯಿಗಳನ್ನು ಅವರ್ಯಾಕೆ ಕಳಕೊಂಡಾರು? ಅವರಿಂದ ಏನೂ ಪ್ರಯೋಜನವಾಗಲಿಲ್ಲ. ಗ್ರಾಮದಲ್ಲಿದ್ದ ಇನ್ನೊಬ್ಬ ಪುರೋಹಿತ ಅಣ್ಣಾಜೋಯಿಸರು ಅಯ್ಯಾಶಾಸ್ತ್ರಿಗಳ ಜ್ಞಾತಿ, ಎಂದರೆ ಅವರ ದೂರದ ಅಣ್ಣನ ಮಗ. ಚಿಕ್ಕಪ್ಪ ಹೇಳಿದುದರ ವಿರುದ್ಧ ವಿನಾಕಾರಣ ಅವರೂ ಮಾತನಾಡುವುದಿಲ್ಲ. ಗ್ರಾಮದ ದೊಡ್ದವರೆಲ್ಲ ಕೂಡಿ ಮಾಡಿರುವ ತೀರ್ಮಾನ. ಅವಳು ಒಪ್ಪಿಕೊಳ್ಳಲೇಬೇಕಾಯಿತು.

ದಂಡ ತಪ್ಪಿಸಲು ಮಾದೇವಯ್ಯನವರೇನೋ ಮೊದಲೇ ಪ್ರಯತ್ನ ಪಟ್ಟರು. ನಡೆಯಲಿಲ್ಲ. ಆದರೂ ಗಂಗಮ್ಮನಿಗೆ ಒಂದು ಬುದ್ಧಿಯ ಮಾತು ಹೇಳಿದರು: ‘ಜಮೀನು ಆಧಾರ ಮಾಡಿ ಸಾಲ ತಗಬ್ಯಾಡ್ರಿ. ನಿಮ್ಮ ಹತ್ರ ಬೆಳ್ಳಿ ಬಂಗಾರ ಏನಿದ್ರೂ ಮಾರಿಬಿಡ್ರಿ. ಸಾಲದ್ದಕ್ಕೆ ಮನೆಯಾಗಿರಾ ದಿನಸಿ ಧಾನ್ಯ ಕಾಯಿ ಕಸಿ ಕೊಟ್ಟು ಹಣ ತುಂಬಿಸಿ. ಸ್ಥಿರಾಸ್ತಿ ಮ್ಯಾಲೆ ಕಾಗದ ಪತ್ರ ಮಾಡ್‌ಬ್ಯಾಡಿ. ಸಾಲ ಅಂತ ಮಾಡಿದ್ರೆ ಅದರ ಬಡ್ಡಿ ಬಳೆಯಿತ್ತೆ. ಅದೆಲ್ಲ ನಿಭಾಯ್‌ಸಾಕೆ ನಿಮಗೆ ತಿಳಿವಳಿಕೆ ಇಲ್ಲ.’
ಪಟೇಲ ಶಿವೇಗೌಡ ಬಾಯಿ ಹಾಕಿದ: ‘ಅದಕ್ಯಂತ ತಿಳಿವಳಿಕೆ ಬೇಕು? ನಾನೇನು ಅವರ್‌ತಾವ ಬಡ್ಡಿ ತಗಾತೀನಾ? ಮಾತಿಗೆ ಇರ್ಲಿ ಅಂತ ಆದಾರಾ ಬರೀತಾರೆ. ಮದುವೇದು, ಹೀರೇರು ಕೊಟ್ಟಿದ್ದೂ ವಡವೆ ವಸ್ತ್ರ ಕಳುದ್ರೆ ಮತ್ತೆ ಬತ್ತೈತಾ? ಸನ್ಯಾಸಿಗೆ ಚಿನ್ನ ಬೆಳ್ಳಿ ಬ್ಯಾಡ ಅಂದ್ರೆ ಸಂಸಾರಸ್ತರಿಗೆ ಬ್ಯಾಡ್‌ವಾ? ಏನ್ ಗಂಗಮ್‌ನೋರೇ, ಈ ಸನ್ಯಾಸಿ ಅಯ್ಯನ್ ಮಾತು ಕೇಳ್‌ತೀರೋ, ಗ್ರಾಮದ ಹತ್ತು ಜನ ತಿಳಿವಳಿಕೆ ಇರೋರ ಮಾತು ಕೇಳ್‌ತೀರೋ?’

ಹತ್ತು ಜನರೂ ಪಟೇಲನ ಮಾತೇ ಸರಿ ಎಂದರು. ಪಟೇಲನ ಭಾವಮೈದ, ಸದ್ಯದಲ್ಲಿ ಶ್ಯಾನುಭೋಗಿಕೆ ನೋಡುತ್ತಿರುವ ಸಿವಲಿಂಗೇಗೌಡ-‘ಮದುವೇಲಿ ಕೊಟ್ಟ ಚಿನ್ನಾನ ಮಾರಾಕೆ ಗಂಡ ಸತ್ತಮ್ಯಾಲೆ ಹೆಂಗಸಿಗೆ ಕಾನೂನೇ ಇಲ್ಲ. ಜಮೀನು ಆದಾರ ಮಾಡ್‌ಬೈದು’ ಎಂದ. ಅಯ್ಯಾಶಾಸ್ತ್ರಿಗಳೂ ಅನುಮೋದಿಸಿದರು. ಇಷ್ಟೊಂದು ಜನರ ಅಭಿಪ್ರಾಯವನ್ನು ವಿರೋಧಿಸುವ ಕಾನೂನಿನ ಜ್ಞಾನ ಮಾದೇವಯ್ಯನವರಿಗಿರಲಿಲ್ಲ. ಇದ್ದರೂ ಈ ಪಂಚಾಯ್ತರ ಮಧ್ಯದಲ್ಲಿ ತಮ್ಮ ಅಭಿಪ್ರಾಯಕ್ಕೆ ಯಾವ ಬೆಲೆ? ತಮ್ಮ ಮಾತನ್ನು ಗಂಗಮ್ಮ ಕೇಳುತ್ತಾಳೆಂಬ ನಿಗದಿಯೂ ಇಲ್ಲ. ಅವರು ಸುಮ್ಮನಾದರು.

ಇನ್ನು ನ್ಯಾಯದ ವಿಷಯದಲ್ಲಿ ತಡಮಾಡುವಂತಿಲ್ಲ. ಆಗಲೇ ಎರಡು ಗಾಡಿ ಕಟ್ಟಿಸಿ, ಇಬ್ಬರು ಮಕ್ಕಳೋಡನೆ ಗಂಗಮ್ಮನನ್ನು ಕರೆದುಕೊಂಡು ಪಟೇಲ ಮತ್ತು ಉಳಿದ ಮುಖ್ಯರು ತಿಪಟೂರಿಗೆ ಹೊರಟರು. ಸಬ್‌ರಿಜಿಸ್ಟ್ರಾರರ ರೂಬು ರೂಬು ಶಿವೇಗೌಡ ಎರಡು ಸಾವಿರ ಕೊಟ್ಟ. ತನ್ನ ಸಂಸಾರ ತಾಪತ್ರಯಕ್ಕೆ ಎಂದು ಕಾರಣ ಬರೆದು ಅವಳ ಎಲ್ಲ ಆಸ್ತಿಯನ್ನೂ ಆಧಾರ ಬರೆದದ್ದಾಯಿತು. ಕಾಗದ ಬರೆದವನು ಶ್ಯಾನುಭೋಗ ಸಿವಲಿಂಗೇಗೌಡ. ಬಿಕಲಮ್‌ಗೆ ಕೊನೆಯ ಪಕ್ಷ ಇಪ್ಪತ್ತೈದು ರೂಪಾಯಿ ಕೊಡಬೇಕಾಗಿ ಅವನು ಹಟ ಹಿಡಿದ. ಈ ಸಲ ಬೆಳೆ ಬಂದಮೇಲೆ ಅವರೇಕಾಳು ಮಾರಿ ಕೊಡುವುದಾಗಿ ಗಂಗಮ್ಮ ಒಪ್ಪಿಕೊಂಡಳು. ತನ್ನ ಕಬ್ಬಿನ ಗದ್ದೆಯ ಲುಕ್ಸಾನು ಎಂದು ನಾಲ್ಕು ನೂರನ್ನು ಇಟ್ಟುಕೊಂಡು ಪಟೇಲ ಶಿವೇಗೌಡ ಉಳಿದುದನ್ನು ಇತರರಿಗೆ ಹಂಚಿದ.

ವಿಧವೆಯಾದ ಗಂಗಮ್ಮ ತಿಪಟೂರಿನ ಹೋಟೆಲಿನಲ್ಲಿ ಏನೂ ತಿನ್ನುವಂತಿಲ್ಲ. ಹುರಿಯಿವ ಮೊದಲು ನೀರು ಹಾಕಿರುವುದರಿಂದ ಪುರಿಯನ್ನೂ ಮುಟ್ಟುವ ಹಾಗಿಲ್ಲ. ಕೆರೆಯಲ್ಲಿ ಮೈ ತೊಳೆದುಕೊಂಡು, ಒದ್ದೆಸೀರೆಯಲ್ಲಿ ಎರಡು ಹಿಡಿ ಹುರಿಗಡಲೆ ಒಂದು ಮುರುಕು ಬೆಲ್ಲ ಅಗಿದು, ಮತ್ತೆ ಗಾಡಿಯಲ್ಲಿ ಕೂತಳು. ಹುಡುಗರಿಗೆ ಅವಳೇ ಆರಾಣೆ ಕೊಟ್ಟು ಬ್ರಾಹ್ಮಣರ ಓಟ್ಲಿನಲ್ಲಿ ಇಪ್ಪತ್ತನಾಲ್ಕು ದೋಸೆ, ಮೇಲೆ ಒಂದು ಮುದ್ದೆ ಚಟ್ನಿ ಕೊಡಿಸಿದಳು.

ಊರಿಗೆ ಬಂದು ನಾಲ್ಕು ದಿನ ಅವಳು ಅವಮಾನದಿಂದ ಎಲ್ಲೂ ಹೊರಗೆ ಹೋಗಲಿಲ್ಲ. ಮೂರು ಮೈಲಿ ದೂರದ ಸಣ್ಣೇನಹಳ್ಳಿಯ ಕುಂಬಾರರಿಗೆ ಹದಿನಾರು ರೂಪಾಯಿ ಕೊಟ್ಟು ಐನೂರು ಉಂಡೆ ಹೆಂಚು ತರಿಸಿ ಹಿಂದಿನ ಹಾರನ್ನು ಪೂರ್ತಿಯಾಗಿ ಕೈಯಾಡಿಸಿದಳು.

ಎಂಟು ದಿನವಾದ ಮೇಲೆ ಒಂದು ದಿನ ಅವಳೇ ಗುಡಿಯ ಮಾದೇವಯ್ಯನವರಿಗೆ ಹೇಳಿಕಳಿಸಿದಳು. ಕಷ್ಟ ಸುಖ ಹೇಳಿಕೊಂಡು, ಮುಂದೆ ಏನು ಮಾಡಬೇಕೆಂದು ಕೇಳಿದುದಕ್ಕೆ ಅವರು ಹೇಳಿದರು: “ಅಪ್ಪಣ್ಣಯ್ಯನ್ನ ಓಚಯ್‌ನೋರ ತಾವ ಸೇರಿಸಿ. ವಸಿ ವಿದ್ಯಾ ಬಂದ್ರೆ ಅವನು ನೆಟ್ಟಗಾಗ್ತಾನು. ಚೆನ್ನಿಗರಾಯನ್ನ ಹೊನ್ನವಳ್ಳಿಗೆ ಸೇರಿಸಿ. ನೀವೇ ಹೋಗಿ ಅವನನ್ನು ಅಲ್ಲಿ ಬಿಟ್ಟು, ‘ಮನೆತನದ ಶ್ಯಾನುಬಾಕಿ ಕಂಡೋರ ಕೈಲಿದೆ. ಇವನನ್ನ ಬುದ್ಧಿವಂತನ್ನ ಮಾಡಿ ವಿದ್ಯೆ ಕಲ್ಸಿ’ ಅಂತ ಕೇಳ್‌ಕಂಡ್ ಬನ್ರಿ. ಇನ್ ತಡ ಮಾಡಿದ್ರೆ ಸುಖಾ ಇಲ್ಲ. ಅವನಿಗಾಗಲೇ ಹದಿನೈದು ಆಯ್ತಲ.”

ಗಂಗಮ್ಮ ಒಪ್ಪಿದಳು. ಚೆನ್ನಿಗರಾಯನನ್ನು ಹೊನ್ನವಳ್ಳಿಯ ಸೀತಾರಾಮಯ್ಯ ಶ್ಯಾನುಭೋಗರ ಕೈ ಕೆಳಗೆ ಲೆಕ್ಕ ಕಲಿಯಲು ಬಿಡುವ ಸುದ್ಧಿ ಪಟೇಲ ಶಿವೇಗೌಡನಿಗೆ ತಿಳಿಯಿತು. ಅವನೇ ಬಂದು ಹೇಳಿದ: ‘ಆಟು ದೂರ ಯಾಕ್ ಕಳುಸ್ತೀಯಮ್ಮ, ನಮ್ ಸಿವಲಿಂಗನ್ ತಾವ ಸೇರ್ಸಿ. ಇಲ್ಲೇ ಮನೇಮುಂದೆ ಇದ್‌ಕಂಡ್ ಕಲ್ತ್ರೆ ಆಗಾಕಿಲ್ವಾ?’

ಆದರೆ ಹೊನ್ನವಳ್ಳಿಯ ಸೀತಾರಾಮಯ್ಯನವರ ಕೈಕೆಳಗೆ ಕಲಿಯದೆ ವಿದ್ಯ ಬರುವುದಿಲ್ಲವೆಂಬುದು ಗಂಗಮ್ಮನ ದೃಢ ನಂಬಿಕೆಯೂ ಆಗಿತ್ತು. ಬಾಕಿಯವರು ಶ್ಯಾನುಭೋಗಿಕೆ ಮಾಡಬಹುದು. ಆದರೆ ಅದಕ್ಕೆ ಗುರುವಾಗುವ ಯೋಗ್ಯತೆ ಇರುವುದು ಈ ಸುತ್ತಿನಲ್ಲಿ ಹೊನ್ನವಳ್ಳಿಯವರಿಗೆ ಮಾತ್ರ. ಜಾವಗಲ್ಲು ಸುತ್ತಿನಲ್ಲಿ ಹಳೇಬೀಡಿನ ವೆಂಕಟೇಶಯ್ಯನವರಿಗೂ ಅಂಥದೇ ಯೋಗ್ಯತೆ ಇದೆ. ಆದರೆ ಅವರು ಈ ಸುತ್ತಿನವರಲ್ಲ. ಒಂದೊಂದು ಕಡೆಯ ಮರ್ಜಿ, ಜಾಯಮಾನ ಅಲ್ಲಲ್ಲಿಯವರಿಗೇ ಗೊತ್ತು.

ಅಂತೂ ಗಂಗಮ್ಮ ಕಮಾನುಗಾಡಿ ಹೂಡಿಸಿಕೊಂಡು ಇಬ್ಬರು ಮಕ್ಕಳೊಡನೆ ಹೊನ್ನವಳ್ಳಿಗೆ ಪಯಣ ಮಾಡಿದಳು. ಹೊರಡುವ ಎರಡು ದಿನ ಮೊದಲು ಚೆನ್ನಿಗರಾಯ ಭಂಡಾರಿ ರುದ್ರಣ್ಣನಿಗೆ ತಲೆಮಾಡಿಸಿಕೊಂಡು ನೆತ್ತಿಗೆ ಗಂಧದ ಪಟ್ಟು ಹಾಕಿಕೊಂಡ. ಅದರ ಮರುದಿನ ಎಣ್ಣೆ ನೀರು ಆಯಿತು. ಕೋಡುಬಳೆ ತಂಬಿಟ್ಟುಗಳ ಗಂಟು ತಯಾರಾಯಿತು. ಕೋಟು ಟೋಪಿ ಇಟ್ಟುಕೊಂಡು ಅವನು ಗಾಡಿ ಹತ್ತುವಾಗ ಮಾದೇವಯ್ಯನವರು ಹೇಳಿದರು: ‘ದೊಡ್ಡ ಕಡೆ ಹೋಗ್ತಾ ಇದೀಯಾ. ಇನ್ ಮ್ಯಾಲೆ ನಿನ್ನ ಬಾಯಲ್ಲಿ ಯಾವತ್ತೂ ಬೈಗಳದ ಮಾತು ಬರ್‌ಬ್ಯಾಡ್‌ದು. ಬುದ್ಧಿವಂತನಾಗಿ ವಾಪಸ್ ಬಾ.’

ಹೊನ್ನವಳ್ಳಿಯವರು ಫೌತಿ ರಾಮಣ್ಣನವರನ್ನು ಬಲ್ಲವರು. ಗಂಗಮ್ಮನ ಕೋರಿಕೆ ಮನ್ನಿಸಿ ಚೆನ್ನಿಗರಾಯನನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಲೆಕ್ಕ ಕಲಿಸಲು ಒಪ್ಪಿದರು. ತಾಯಿ ಮತ್ತು ತಮ್ಮ ಮತ್ತೆ ಗಾಡಿ ಹತ್ತುವಾಗ ಚೆನ್ನಿಗರಾಯ ಅಳುತ್ತಾ ನಿಂತುಕೊಂಡ. ಕೊನೆಗೆ-‘ಯಾರ ಕೈಲಾದ್ರೂ ಇನ್ ಒಂದ್ ಸಲಿ ಕ್ವಾಡಬಳೆ, ತಂಬಿಟ್ಟು ಕೊಟ್‌ಕಳ್ಸು’ ಎಂದು ಹೇಳಿದ.

ಊರಿಗೆ ಹಿಂತಿರುಗಿದ ಮೇಲಿ ಅಪ್ಪಣ್ಣಯ್ಯನನ್ನು ಚಾತಾಳೀ ಚನ್ನಕೇಶವಯ್ಯನವರ ಕೂಲಿಮಠಕ್ಕೆ ಸೇರಿಸಿಯಾಯಿತು. ದಿನವೂ ಅವನನ್ನು ಮಠಕ್ಕೆ ಕಳಿಸಲು ಪಂಚೆಯ ಸೆರಗಿನ ತುಂಬ ಹುರಿಗಡಲೆ, ಬೆಲ್ಲ, ಅರ್ಧಹೋಳು ಕೊಬ್ಬರಿ ಕೊಡಬೇಕಾಗಿತ್ತು.

ಅಧ್ಯಾಯ ೨
– ೧ –

ಚೆನ್ನಿಗರಾಯ ಹೊನ್ನವಳ್ಳಿಯಲ್ಲಿ ಒಟ್ಟು ಮೂರು ವರ್ಷ ಶಿಷ್ಯವೃತ್ತಿ ಮಾಡಿದ. ಈಗ ಅವನು ಸಲೀಸಾಗಿ ಎಡಗೈ ಬೆರಳಿನಿಂದ ರೂಲು ದೊಣ್ಣೆ ಉರುಳಿಸುತ್ತಾನೆ. ಬಲಗೈಲಿ ಸ್ಟೀಲುಮುಳ್ಳಿನಿಂದಾಗಲಿ, ಸೀಸದ ಕಡ್ಡಿಯಿಂದಾಗಲಿ ಗೆರೆ ಎಳೆಯುತ್ತಾನೆ. ಲೆಕ್ಕ ಪತ್ರಗಳಲ್ಲಿ ಎಡಗಡೆ ತಪ್ಪಿಲ್ಲದಂತೆ ಇಳಿಸುವುದು ಮಾತ್ರವಲ್ಲದೆ ಬಲಗಡೆಯದನ್ನು ಹೇಗೆ ಬರೆಯಬೇಕೆಂದು ತಿಳಿದುಕೊಂಡಿದ್ದಾನೆ. ಅವನ ವಿದ್ಯೆ ಪೂರ್ತಿಯಾಯಿತೋ ಇಲ್ಲವೋ ಹೇಳುವುದು ಕಷ್ಟ. ‘ನೀನು ರೂಪಾಯಯಲ್ಲಿ ನಾಲ್ಕಾಣೆಯೂ ಕಲಿತಿಲ್ಲ’-ಎಂದು ಗುರುಗಳಾದ ಶೀತಾರಾಮಯ್ಯನವರು ಹೇಳುತ್ತಾರೆ. ಅವರ ಎದುರಿಗೆ ಪ್ರತಿಹೇಳುವುದಿಲ್ಲವಾದರೂ ಚೆನ್ನಿಗರಾಯನಿಗೆ ಆ ಮಾತಿನಲ್ಲಿ ವಿಶ್ವಾಸವಿಲ್ಲ. ‘ಅವರ ಲೆಕ್ಕಾನೇ ಕೆರಕಂಡ್ ಇಲ್ಲೇ ಬಿದ್ದಿರ್ಲಿ ಅಂತ ಹಾಗಂತಾರೆ’-ಎಂದು ಅದಕ್ಕೆ ಅರ್ಥ ಮಾಡುತ್ತಾನೆ.

ಅವನು ಕಾಲ್‌ನಡಿಗೆಯಲ್ಲೇ ವರ್ಷಕ್ಕೆ ಎರಡು ಮೂರು ಸಲ ಊರಿಗೆ ಬಂದು ಹೋಗುತ್ತಿದ್ದ. ಈ ಸಲ ಬಂದವನು ತಾಯಿಗೆ ಹೇಳಿದ: ‘ಇನ್ನೆಷ್ಟ್ ದಿನ ಅಂತ ಅಲ್ಲಿರಾದು? ನಾನು ಊರಿಗ್ ಬಂದು ಶ್ಯಾನುಭೋಗಿಕೆ ಚಾರ್ಜ ತಗಾತೀನಿ.’
‘ಲ್ಯಕ್ಕ ಚೆನ್ನಾಗಿ ಬಂತೇನೋ?’
‘ಬರ್ದೇ ಏನು? ಕೇಳು ಬೇಕಾದ್ರೆ: ಒಂದನೇ ನಂಬ್ರು ಖಾತೆವಾರ್, ಎರಡನೇ ನಂಬ್ರು ಬಂಜರ್ ತಖ್ತೆ, ಮೂರನೇ ನಂಬ್ರು ಪಹಣಿ, ನಾಲ್ಕು ಖಾತೆ, ಐದು ರೆಂಟ್ ರೋಲ್, ಆರು ಕಮ್ಮಿ ಜಾಸ್ತಿ, ಏಳು ತಕರಾರ್ ತಖ್ತೆ, ಎಂಟು ಇನಾಂ ರಿಜಿಸ್ಟ್ರು, ಒಂಬತ್ತು ಜಮಾಬಂದಿ ಗೋಶ್ವಾರೆ, ಹತ್ತು ರೋಜ್‌ಖಿರ್ದಿ, ಹನ್ನೊಂದು ರಶೀತಿ ಪಟ್ಟಿ, ಹನ್ನೆರಡನೇ ನಂಬ್ರು ಖಾನೀಷುಮಾರಿ. ಇವು ಹನ್ನೆರಡು ಶಾನುಭೋಗಿಕೆ ಬಾರಾ ನಮೂನೆ ಲೆಕ್ಕಗಳು’-ಎಂದು ಪ್ರಭವ ವಿಭವ ಮೊದಲಾಗಿ ಅರವತ್ತು ಸಂವತ್ಸರಗಳ ಹೆಸರನ್ನು ಗಟ್ಟಿ ಮಾಡಿ ಒಪ್ಪಿಸಿದವನಂತೆ ಹೇಳಿದ.
ಮಗ ವಿದ್ಯಾಸಂಪನ್ನನಾದನೆಂದು ತಾಯಿಗೆ ನಂಬಿಕೆಯಾಯಿತು. ಅವನು ಹೇಳಿದ: ‘ನೀನೇನು ಸುಮ್ಮನೆ ಕೂತಿರ್ತಿಯೋ, ನಂಗೆ ಮದ್ವೆ ಗಿದ್ವೆ ಮಾಡ್ತೀಯೋ?’
‘ಮಾಡ್ದೆ ಏನು ತಡಿಯೋ. ಶ್ಯಾನುಭೋಗ್‌ಕೆ ಕೈಯಿಗ್ ತಗ.’
‘ಅದ್ ಬಂದೇ ಬರುತ್ತೆ. ನಂಗಾಗಲೇ ಹದಿನೆಂಟಾಗಲಿಲ್ವೆ? ಮೆಜಾರಿಟಿಗ್ ಬಂದಿದೀನಿ. ಬಾಕಿಯೋರೆಲ್ಲ ಹದಿನಾರು ವರ್ಷಕ್ಕೆ ಗಂಡು ಹುಡುಗ್‌ರಿಗ್ ಮದ್ವೆ ಮಾಡ್ತಾರೆ. ನಾವು ಹಾಗೆ ಇದ್ರೆ ಜನ ಏನಂತಾರೆ.’

ಚೆನ್ನಿಗರಾಯನಿಗೆ ಆಗಲೇ ಹೆಣ್ಣು ಕೊಡಲು ಎಷ್ಟೋ ಜನ ಕೇಳಿದ್ದರು. ಗಂಗಮ್ಮನೇ ಇನ್ನೂ ಮನಸ್ಸು ಕೊಟ್ಟಿರಲಿಲ್ಲ. ಈಗ ಮಗನೇ ಕೇಳುತ್ತಿದ್ದಾನೆಂದಮೇಲೆ ಮಾಡಿಬಿಡಬೇಕು. ಆ ಬಗೆಗೆ ಮಾದೇವಯ್ಯನವರ ಸಲಹೆ ಕೇಳಿದರೆ ಅವರು- ‘ಅವ್ನು ಇನ್ನೂ ಒಂದೆಲ್ಡು ವರ್ಸ ಲೆಕ್ಕ ಕಲೀಲಿ. ಶ್ಯಾನುಬೋಗ್‌ಕೆ ತಗಂಡು ಆಮ್ಯಾಲೆ ಮದ್ವೆಗಿದ್ವೆ ಆಗ್ಲಿ’ ಎಂದರು.

ಚೆನ್ನಿಗರಾಯನಿಗೆ ಸಿಟ್ಟು ಬಂತು. ‘ಓಹೋ, ಹೋ ಹೋ, ಇನ್ನೂ ಎರಡು ವರ್ಷ ಕಾಯ್ಬೇಕಂತೆ. ನಿಮಗೇನು ತಿಳಿಯುತ್ತೆ. ಸುಮ್ಮನಿರ್ರೀ ಅಯ್ನೋರೇ’-ಎಂದ. ಹಿಂದೆ ಎಂದೂ ಅವರನ್ನು ಯಾವುದಕ್ಕೂ -‘ನಿಮಗೇನು ತಿಳಿಯಿತ್ತೆ ಸುಮ್ಮನಿರ್ರಿ’ ಅಂದಿರಲಿಲ್ಲ. ಅವರು ಸುಮ್ಮನಾದರು.

ಚೆನ್ನಿಗರಾಯ ಮತ್ತೆ ಹೊನ್ನವಳ್ಳಿಗೆ ಹೋಗಲಿಲ್ಲ. ಅವನೇ ಒಂದು ದಿನ ಹೋಗಿ ಸಿವಲಿಂಗೇಗೌಡನನ್ನು-‘ನನ್ನ ಕೆಲಸ ನಂಗೆ ಕೊಡು’ ಎಂದು ಕೇಳಿದರೆ ಅವನು, ‘ಕೊಡಾಣ ಮ್ಯಾಲ್ನಿಂದ ಬರ್ಲಿ’ ಎಂದ. ಮುಂದೆ ಏನು ಮಾಡಬೇಕೆಂಬುದು ಭಾವೀ ಶ್ಯಾನುಭೋಗನಿಗೆ ಖುದ್ದು ತಿಳಿಯಲಿಲ್ಲ. ಅಷ್ಟರಲ್ಲಿ ಮದುವೆ ನಿಶ್ಚಯವಾಗುವ ಮಾತುಕಥೆ ನಡೆಯುತ್ತಿದ್ದುದರಿಂದ ಅವನಿಗೆ ಶ್ಯಾನುಭೊಗಿಕೆಯ ಕಡೆ ಅಷ್ಟೊಂದು ಗಮನ ಹೋಗಲಿಲ್ಲ.

ಒಂದು ದಿನ ಇವರ ಮನೆಯ ಮುಂದೆ ಒಂದು ದೊಡ್ಡ ಬಿಳಿಯ ಕುದುರೆ ಬಂದು ನಿಂತಿತು. ಮಿನುಗುವ ಜೀನು ಕಡಿವಾಣಗಳನ್ನು ಹಾಕಿದ್ದ ಅದರ ಮೇಲಿಂದ ಬಿಳಿಯ ನಿಕ್ಕರು ಬಿಳಿಯ ಕೋಟು ಕಾಲಿಗೆ ಕಾಲುಚೀಲ ಬೂಟುಗಳನ್ನು ಹಾಕಿದ್ದ ಇಳಿಪ್ರಾಯದ ಒಬ್ಬ ಭಾರೀ ವ್ಯಕ್ತಿ ಇಳಿದರು. ಆ ದೊಡ್ಡ ಬಿಳಿ ಕುದುರೆ, ಅವರ ಆಳುತನ ನೋಡಿದರೆ ಡಿಸ್ಟಿಕಟ್ಟಿನ ದಣಿ ಡೆಪ್ಯೂಟಿ ಕಮಿಶನರೆಂದು ಯಾರಾದರೂ ಹೇಳಿಬಿಡಬೇಕಾಗಿತ್ತು. ಗಂಗಮ್ಮ ಹಾಗೆಂದೇ ತಿಳಿದು ಒಳಗೆ ಹೋಗಿ ಚೆನ್ನಿಗರಾಯನಿಗೆ ಹೇಳಿದಳು. ಅವನು ಹೊರಗೆ ಬಂದು ಭಯಭಕ್ತಿಗಳಿಂದ ಬಗ್ಗಿ ಕೈಮುಗಿದು-‘ಮಹಾಸ್ವಾಮಿಗಳು ದಯಮಾಡಿಸಬೇಕು’ ಎಂದು ತಲೆಬಾಗಿ ತೊದಲುತ್ತಾ ಹೇಳಿದ. ತನಗೆ ಶ್ಯಾನುಭೋಗಿಕೆ ಕೊಡಿಸಲು ಡಿಪ್ಟಿಕಮಿಶನರೇ ಖುದ್ದು ಬಂದಿದ್ದಾರೆಂದು ಅರ್ಥಮಾಡಿಕೊಂಡ.
‘ಶಿವಲಿಂಗೇಗೌಡನಿಗೆ ಹೇಳಿಕಳಿಸಲೇ?’-ಅವನು ಕೇಳಿದ.
‘ಯಾಕೆ?’
‘ಹಾಲಿ ಶ್ಯಾನುಭೋಗಿಕೆ ಛಾರ್ಜು ಅವನ ತಾವಲೇ ಇದೆ. ಅವನಿಂದ ಮಹಾಸ್ವಾಮಿಗಳು ನನಗೆ ಕೊಡಿಸಬೇಕು. ಬರಾವರ್ದಾರ್ ರಾಮಣ್ಣನೋರ ಹಿರೀ ಮಗ ನಾನೇ-ಚೆನ್ನಿಗರಾಯ.’
‘ಕೊಡಿಸೋಣ ಈಗ ಒಳಕ್ಕೆ ನಡೀರಿ.’
ಅವರು ಒಳಕ್ಕೆ ಬಂದರು. ಮನೆಯಲ್ಲಿ ಕುರ್ಚಿ ಇರಲಿಲ್ಲ. ಅಣ್ಣಾಜೋಯಿಸರ ಮನೆಯಲ್ಲಿ ಇರುವ ಒಂದು ಕುರ್ಚಿಯನ್ನು ಬಿಟ್ಟರೆ ಈ ಊರಿನಲ್ಲಿ ಯಾರ ಮನೆಯಲ್ಲಿಯೂ ಇಲ್ಲ. ಬಂದವರು ಮಂದಲಿಗೆಯ ಮೇಲೆಯೇ ಕೂತರು. ಚೆನ್ನಿಗರಾಯ ಒಳಗಿನಿಂದ ಗಂಗೋದಕ ತಂದು ಮುಂದಿಟ್ಟರೆ ಅವರು-‘ನಾವು ಮೊದಲೇ ನೀರು ಕುಡಿಬಾರ್ದು’ ಎಂದರು. ಇವರಿಬ್ಬರಿಗೂ ವಿಷಯ ಅರ್ಥವಾಗಲಿಲ್ಲ. ಕೊನೆಗೆ ಅವರೇ ಹೇಳಿದರು: ‘ನಾಗಲಾಪುರ ಅಂತ ಕೇಳಿದೀರಲ್ಲ-ನಾವು ಅದರ ಸ್ಥಳಪುರೋಹಿತರು. ನನ್ನ ಹೆಸರು ಕಂಠೀಜೋಯಿಸ ಅಂತ. ನನ್ನ ಮಗಳು ನಂಜಮ್ಮ ಅಂತ ಹುಡುಗಿ ಹೆಸರು. ರೇವತೀ ನಕ್ಷತ್ರ ಎರಡನೇ ಪಾದ. ಹನ್ನೆರಡು ನಡಿತಾ ಇದೆ. ಜಾತಕ ತಂದಿದೀನಿ. ನಿಮ್ಮ ಹುಡುಗನ ಜಾತಕ ಇಲ್ಲಿ ಕೊಡಿ.’

ಇವರು ಡಿಪ್ಟಿಕಮಿಶನರೆಂಬ ಭಾವನೆಯಿಂದ ನಾಗಲಾಪುರದ ಕಂಠೀಜೋಯಿಸರೆಂಬ ಕಲ್ಪನೆಗೆ ಬರಬೇಕಾದರೆ ಗಂಗಮ್ಮನಿಗೆ ಸ್ವಲ್ಪ ಹೊತ್ತೇ ಹಿಡಿಯಿತು. ಇವರು ತನ್ನ ಮಗನಿಗೆ ಹೆಣ್ಣು ಕೊಡಲು ಬಂದಿದ್ದಾರೆಂಬ ಅರಿವು ಅವಳಲ್ಲಿ ಆತ್ಮವಿಶ್ವಾಸವೂ ಮೂಡಿಸಿತು. ಆದರೂ ದೊಡ್ಡ ಕುದುರೆಯ ಮೇಲೆ ಬಂದಿರುವವರು. ಡಿಪ್ಟಿಕಮಿಶನರ ಹಾಗೆ ದಿರಿಸು ಮಾಡಿರುವವರು. ಅವಳು ಹೇಳಿದಳು: ‘ಶ್ಯಾನುಭೋಗ್‌ಕೆ ಛಾರ್ಜು ಕೈಗೆ ಬರೂತಂಕ ನಾನು ಇವನ ಮದುವೆ ಮಾಡುಲ್ಲ ಅಂತಿದೀನಿ.’
‘ನಿಂಗೇನು ಗೊತ್ತಾಗುತ್ತೆ ಸುಮ್ನಿರಮ್ಮ. ಛಾರ್ಜು ಕೊಡುತ್ತೀನಿ ಅಂತ ಅವರು ಮೊದ್ಲೇ ಅನ್ಲಿಲ್ವೆ?’-ಚೆನ್ನಿಗರಾಯ ತಾಯಿಯ ಬಾಯಿ ಮುಚ್ಚಿಸಿದ.

‘ನನಗೆ ಅದೆಲ್ಲ ಗೊತ್ತಿದೆ. ನಿಮ್ಮ ಹಕ್ಕು ನಿಮಗೆ ಕೊಡ್ಸೋದು ಎಷ್ಟು ಹೊತ್ತು? ನಾನು ಅಮಲ್ದಾರ್‌ರಿಗೆ ಹೇಳ್ತೀನಿ. ಮೊದಲು ಮದುವೆಯಾಗಲಿ.’
ಅಂತೂ ಗಂಗಮ್ಮ ಮಗನ ಜಾತಕ ಕೊಟ್ಟಳು. ಕಂಠೀಜೋಯಿಸರು ಎಷ್ಟಾದರೂ ಸ್ವತಃ ಜೋಯಿಸರೇ. ಅಲ್ಲಿಯೇ ಕೂತು ಗುಣಿಸಿ ನೋಡಿ-‘ದಿವ್ಯವಾಗಿ ಹೊಂದುತ್ತೆ. ಇನ್ನು ಮುಂದಿನ ಮಾತಾಡಿ’ ಎಂದರು.

– ೨ –

ನಾಗಲಾಪುರ ರಾಮಸಂದ್ರದ ಪಶ್ಚಿಮಕ್ಕೆ ಹನ್ನೆರಡು ಮೈಲಿ ದೂರದ ಗ್ರಾಮ. ಆ ಊರಿನ ಕಂಠೀಜೋಯಿಸರ ಕೀರ್ತಿಯನ್ನು ಕೇಳದವರೇ ಇಲ್ಲ. ರಾಮಸಂದ್ರ ತಿಪಟೂರು ತಾಲ್ಲೂಕು ತುಮಕೂರು ಡಿಸ್ಟಿಕಟ್ಟಿನಲ್ಲಿದ್ದು, ನಾಗಲಾಪುರ ಚೆನ್ನರಾಯ ಪಟ್ಟಣ ತಾಲ್ಲೂಕು ಹಾಸನ ಡಿಸ್ಟಿಕಟ್ಟಿಗೆ ಸೇರಿದುದರಿಂದ ಈ ಕಡೆಯವರಿಗೆ ಜೋಯಿಸರ ಹೆಸರು ಅಷ್ಟು ಪರಿಚಿತವಿಲ್ಲ. ಚೆನ್ನರಾಯ ಪಟ್ಟಣ ತಾಲ್ಲೂಕು, ಶಾಂತಿ ಗ್ರಾಮ, ಹಾಸನ, ಕೌಶಿಕ ಮೊದಲಾದ ಕಡೆ ಎಲ್ಲರಿಗೂ ಅವರ ಹೆಸರು ಗೊತ್ತು.

ಒಳ್ಳೆಯ ಎತ್ತರ, ಅಗಲವಾದ ಹಣೆ, ಮತ್ತು ಚುರುಕಾದ ಕಣ್ಣುಗಳ ಆಳು ಕಂಠೀಜೋಯಿಸರು. ಅವರ ಹದಿನಾರಕ್ಕೆ ಮದುವೆಯಾಯಿತು. ಇಪ್ಪತ್ತಕ್ಕೆ ಮನೆಗೆ ಹೆಂಡತಿ ಬಂದಳು. ಎರಡು ವರ್ಷಕ್ಕೆ ಒಬ್ಬ ಮಗ ಹುಟ್ಟಿದ. ಇನ್ನೆರಡು ವರ್ಷಕ್ಕೆ ಇನ್ನೊಂದು ಮಗು ಹುಟ್ಟಿ ತೀರಿಕೊಂಡಿತು. ಮತ್ತೆ ಎರಡು ಮಕ್ಕಳಾಗಿ ಅವೂ ಸತ್ತಮೇಲೆ ಕೊನೆಯ ಹೆರಿಗೆಯಲ್ಲಿ ಹೆಂಡತಿಯೇ ತೀರಿಹೋದಳು. ಉಳಿದ ಹೆಣ್ಣುಮಗುವನ್ನು ಕಂಠೀಜೋಯಿಸರ ತಾಯಿ ಸಾಕಿದಳು. ಜೋಯಿಸರು ಮತ್ತೆ ಮದುವೆಯಾಗಲಿಲ್ಲ. ಈಗ ಅವರಿಗೆ ಇರುವವರು ಇಬ್ಬರೇ ಮಕ್ಕಳು. ಹಿರಿಯ ಮಗ ಕಲ್ಲೇಶ ಪೋಲೀಸ್ ಕಾನ್‌ಸ್ಟೇಬಲ್ ಆಗಿ ಶ್ರವಣಬೆಳಗೊಳದಲ್ಲಿ ಕೆಲಸ ಮಾಡುತ್ತಿದ್ದಾನೆ. ತಾಯಿ ಸತ್ತಾಗ ಉಳಿದ ಮಗು ನಂಜಮ್ಮನನ್ನೇ ಈಗ ಚೆನ್ನಿಗರಾಯನಿಗೆ ಕೊಟ್ಟು ಮದುವೆ ಮಾಡುವುದು.

ಹುಟ್ಟಿದ ಮೇಲೆ ಯಾರಿಗಾದರೂ ಆಗಬಹುದಾದ ಇಷ್ಟರಿಂದಲೇ ಕಂಠೀಜೋಯಿಸರು ಪ್ರಸಿದ್ಧರಾಗಲಿಲ್ಲ. ಪ್ರಸಿದ್ಧಿಗೂ ಕೆಲವು ಸಿದ್ಧಿ ಬೇಕಲ್ಲ. ಒಳ್ಳೇ ಭೀಮನಂತಹ ಅವರ ಶರೀರವೂ ಒಂದು ಸಲ ನೋಡಿದರೆ ಯಾರಿಗಾದರೂ ನೆನಪನ್ನು ಉಳಿಸುತ್ತಿತ್ತು. ಮೊದಲಿನಿಂದ ನಾಟಕ, ಯಕ್ಷಗಾನಗಳಲ್ಲಿ ಮಾಡುತ್ತಿದ್ದ ಅವರ ಪಾರ್ಟನ್ನು ಒಂದು ಸಲ ನೋಡಿದರೆ ಯಾರೂ ಮರೆಯುತ್ತಿರಲಿಲ್ಲ. ಕಾಳಿದಾಸ ನಾಟಕದಲ್ಲಿ ಭೋಜರಾಜನ ಪಾರ್ಟು ಅವರಿಗಿಂತ ಹೆಚ್ಚು ಯಾರಿಗೂ ಹೊಂದುತ್ತಿರಲಿಲ್ಲ. ಮಹಾಭಾರತ ಕುಣಿತದಲ್ಲಿ ದುರ್ಯೋಧನನ ವೇಷ ಅವರಿಗೇ ಹೇಳಿಸಿದ್ದು. ಯಕ್ಷಗಾನದಲ್ಲಿ ವೀರವೇಷ ಹಾಕಿದಾಗ ಎರಡು ಹಲಗೆಗಳನ್ನು ಮುರಿದುಹಾಕದೆ ಕುಣಿಯುವುದನ್ನು ನಿಲ್ಲಿಸುತ್ತಿರಲಿಲ್ಲ. ತಾರದಲ್ಲಿ ಒಂದೇ ಉಸುರಿಗೆ ರಾಗವಾಗಿ ಎಳೆದು ಕಂದ ಪದ್ಯ ಹಾಡುತ್ತಿದ್ದರು. ಹಾರ್ಮೋನಿಯಂ ಬಾರಿಸುತ್ತಿದ್ದುದಲ್ಲದೆ ತಬಲಾ ಬಡಿಯುವುದನ್ನೂ ಬಲ್ಲರು. ಮಂಗಳ, ಅಮಂಗಳ, ಎರಡೂ ಬಗೆಯ ಪೌರೋಹಿತ್ಯದ ಜೊತೆಗೆ ಜ್ಯೋತಿಷ್ಯ, ಮಾಟ ಮದ್ದುಗಳೂ ಗೊತ್ತಿದ್ದವು. ಇದರ ಮೇಲೆ ಅಮಲ್ದಾರರ ಜೊತೆಗೂ ಇಂಗ್ಲೀಷ್ ಮಾತನಾಡುವ ಛಾತಿ; ಸಾಬರ ಕೂಡ ಉರ್ದೂ ಬಳಸುವ ಜ್ಞಾನ.

ಛಾತಿಯೇ ಅವರಿಗೆ ಪ್ರಸಿದ್ಧಿ ದೊರಕಿಸಿಕೊಟ್ಟಿತ್ತು. ಹಿಂದೆ ಯಾವುಯಾವುದೋ ಕೋರ್ಟು ಕೇಸುಗಳನ್ನು ಗೆದ್ದಿದ್ದ ಅವರು ಒಂದೆರಡು ಕೊಲೆ ಮಾಡಿ ಜಯಿಸಿಕೊಂಡಿದ್ದರೆಂದು ಜನ ಹೇಳುತ್ತಿದ್ದರು. ಅದು ಸುಳ್ಳೋ ದಿಟವೋ ಕಂಡವರಿಲ್ಲ. ಜೋಯಿಸರಂತೂ ಸುಳ್ಳು ಎನ್ನುತ್ತಾರೆ. ಯಾರ ಕೈಲಾದರೂ ಜಗಳವಾಡುವಾಗ ‘ನಿನ್ನ ಖೂನಿಮಾಡಿಬಿಡ್ತೀನಿ’ ಇತ್ಯಾದಿ ಮಾತುಗಳು ಬಾಯಲ್ಲಿ ಬರುತ್ತಿದ್ದ ಗತ್ತಿಗೆ, ಅವರು ಎಷ್ಟು ಖೂನಿ ಮಾಡಿದ್ದಾರೆ ಎಂಬ ಭಯ ಜನರ ಮನಸ್ಸಿನಲ್ಲಿ ಬಂದರೆ ಆಶ್ಚರ್ಯವಿಲ್ಲ. ಕತ್ತಲೆಗೆ ಸ್ವಲ್ಪವೂ ಹೆದರದ ಅವರು ನಿಶಾಚರರು. ಸೊಂಟಕ್ಕೆ ಒಂದು ಕೊನೆಗತ್ತಿ ಸಿಕ್ಕಿಸಿಕೊಂಡು ಹೊರಟರೆ ಬೆಳಕು ಹರಿಯುವುದರೊಳಗೆ ಒಬ್ಬರೇ ಬಳ್ಡಾಳುತಿಟ್ಟು ಹಾಯ್ದು ಇಪ್ಪತ್ತನಾಲ್ಕು ಮೈಲಿ ದೂರದ ಹಾಸನ ಮುಟ್ಟುತ್ತಿದ್ದರು. ಜೋಯಿಸರು ಹಗಲು ಹೊತ್ತು ನಡೆಯುತ್ತಿದ್ದುದೇ ಅಪರೂಪ. ಕೊಳ್ಳಿದೆವ್ವ ಮಾತ್ರವಲ್ಲದೆ ಜಡೆಮುನಿಗಳನ್ನು ಸಹ ಧೈರ್ಯವಾಗಿ ಎದುರಿಸಿ ಕಾಲಿಗೆ ಬುದ್ಧಿ ಹೇಳಿಸುವ ಇವರ ಕೀರ್ತಿ ಹಬ್ಬುವುದರಲ್ಲಿ ಆಶ್ಚರ್ಯವೇನು?

ಚೆನ್ನಿಗರಾಯನ ಮದುವೆಗೆ ರಾಮಸಂದ್ರದ ಬ್ರಾಹ್ಮಣರೆಲ್ಲ ಬಂದಿದ್ದುದಲ್ಲದೆ ಅವರ ಶ್ಯಾನುಭೋಗಿಕೆಯ ಗ್ರಾಮವಾದ ಕುರುಬರ ಹಳ್ಳಿಯ ಪಟೇಲ ಗುಂಡೇಗೌಡ ಮತ್ತು ಇತರ ಕೆಲವು ಮುಖ್ಯರೂ ಸೇರಿದ್ದರು. ಪಟೇಲ ಶಿವೇಗೌಡನಾಗಲಿ ಶ್ಯಾನುಭೋಗ ಶಿವಲಿಂಗನಾಗಲಿ ಹೋಗಲಿಲ್ಲ. ಗಂಡಿನ ಕಡೆಯವರೆಲ್ಲ ಒಟ್ಟು ನಾಲ್ಕು ಗಾಡಿ ಹೊಡೆಸಿಕೊಂಡು ಹೋಗಿದ್ದರು. ನಾಗಲಾಪುರದ ಕೆರೆಯ ಏರಿಯ ಹತ್ತಿರ ಕೊಂಬು ಕಹಳೆ ಊದಿಸಿ ಇವರನ್ನು ಇದಿರುಗೊಂಡ ಹೆಣ್ಣಿನ ಕಡೆಯವರು, ಗಂಡನ್ನು ಕೂರಿಸಿಕೊಂಡು ಹೋಗಲು ಕಂಠೀಜೋಯಿಸರ ಬಿಳಿ ಕುದುರೆಯನ್ನೇ ತಂದಿದ್ದರು. ಅದರ ಮೇಲೆ ಹತ್ತಿ ಕೂತುಕೊಳ್ಳಲು ಚೆನ್ನಿಗರಾಯ ಹೆದರಿ ಕಂಗಾಲಾದ. ಆದರೆ ಹತ್ತದೆ ಬಿಟ್ಟರೆ ಇಡೀ ರಾಮಸಂದ್ರಕ್ಕೆ ಅಪಮಾನ. ‘ಥೂ ಹೆಣ್ಣಿಗ್ ಸೂಳೆಮಗನೆ’-ಎಂದು ಗಂಗಮ್ಮ ಬೈದಮೇಲೆ ಅವನು ಜೀನಿನ ಮೇಲೆ ಹತ್ತಿ ಕುಳಿತ. ಕುದುರೆ ಶಿಂಡಾಡದೆ ಒಂದೇಸಮನೆ ಹೆಜ್ಜೆ ಹಾಕುವಂತೆ ಹುಡುಗಿಯ ಅಣ್ಣ ಪೋಲೀಸ್ ಕಾನಿಸ್ಟೇಬಲ್ ಕಲ್ಲೇಶ ಅದರ ಲಗಾಮನ್ನು ಕೈಲಿ ಹಿಡಿದು ಪಕ್ಕದಲ್ಲಿ ನಡೆದು ಬಂದ.

ಮದುವೆಗೆ ಬಂದಿದ್ದ ಗಂಡಿನ ಕಡೆಯವರಿಗೆಲ್ಲ ಕಂಠೀಜೋಯಿಸರ ವ್ಯಕ್ತಿತ್ವದ ಅನುಭವವಾಯಿತು. ತುಂಬ ಶ್ರೀಮಂತರಲ್ಲದಿದ್ದರೂ ತಕ್ಕಮಟ್ಟಿನ ಕುಳವಾದ ಅವರು ಊಟೋಪಚಾರಕ್ಕೆ ಅದ್ದೂರಿಯಾಗಿ ಮಾಡಿಸಿದ್ದರು. ಮದುವೆಗೆ ಹಾಸನದಿಂದ ಒಬ್ಬ ಲಾಯರು-ಅವರನ್ನು ಲಾಯರೆಂದು ಕಂಠೀಜೋಯಿಸರು ಹೇಳಿದರು-ಬಂದಿದ್ದರು. ಗಂಡಿನ ಪುರೋಹಿತರಾಗಿ ಅಯ್ಯಾ ಶಾಸ್ತ್ರಿಗಳು, ಅಣ್ಣಾಜೋಯಿಸರು, ಇಬ್ಬರೂ ಹೋಗಿದ್ದರು. ಅಯ್ಯಾಶಾಸ್ತ್ರಿಗಳಿಗೆ ಪ್ರಾತಿಮಾಸಿಕ ಶ್ರಾದ್ಧ, ಪುಣ್ಯಾಃ, ಗೌರಿ ಗಣೇಶ ವ್ರತಗಳನ್ನು ಬಿಟ್ಟರೆ ಉಳಿದ ಕರ್ಮಗಳ ಪೌರೋಹಿತ್ಯದ ಪಾಠವಾಗಿರಲಿಲ್ಲ. ಅಣ್ಣಾಜೋಯಿಸರು ವಯಸ್ಸಿನಲ್ಲಿ ಚಿಕ್ಕವರಾದರೂ ಶಿಂಧಘಟ್ಟದ ಸೂರಣ್ಣಜೋಯಿಸರ ಕೈಕೆಳಗೆ ಕ್ರಮವಾಗಿ ಅಧ್ಯಯನ ಮಾಡಿಕೊಂಡು ಬಂದು ಆ ಸುತ್ತಿಗೇ ಹೆಸರಾದವರು. ಇಷ್ಟು ಹೊತ್ತಿಗೆ ಲೆಕ್ಕವಿಲ್ಲದಷ್ಟು ಮದುವೆ ಮುಂಜಿ ಮಾಡಿಸಿ, ನೀರು ಕುಡಿದ ಹಾಗೆ ಮಂತ್ರ ಹೇಳುವ ಅಭ್ಯಾಸವಾಗಿದೆ. ಗಂಡಿನ ಬಿಡಾರದಲ್ಲಿ ಹೋಮ ಮಾಡಿಸುವಾಗ ಅಣ್ಣಾಜೋಯಿಸರು ಗಟ್ಟಿಯಾಗಿ ಹೇಳುತ್ತಿದ್ದರು: ‘ಓಂ ಭೂರಗ್ನಿಯೇ ಪ್ರಾಣಾಯ ಸ್ವಾಹ| ಇದಮಗ್ನಿಯೇ ಪ್ರಾಣಾಯ ಸ್ವಾಹಾ|…..

ವರನ ಬೀಡಾರ ಹೆಣ್ಣಿನ ಮನೆಯ ಪಕ್ಕದಲ್ಲಿಯೇ ಇತ್ತು. ಇವರ ಮಂತ್ರ ಹೆಣ್ಣಿನ ಮನೆಯವರಿಗೂ ಕೇಳುತ್ತಿತ್ತು. ಅದು ಕಿವಿಗೆ ಬಿದ್ದ ತಕ್ಷಣ ಕಂಠೀಜೋಯಿಸರು ಅಲ್ಲಿಗೆ ಬಂದು ಕೇಳಿದರು: ‘ಜೋಯಿಸರೇ , ಅಗ್ನಿಗೆ ಆಹುತಿ ಕೊಡೋ ಮಂತ್ರಾನ ಇನ್ನೊಂದು ಸಲ ಹೇಳಿ.’
‘ಯಾಕೆ?’
‘ಸ್ವಲ್ಪ ಕೇಳಬೇಕು ಹೇಳಿ.’
‘ಹಾಗೆ ವೇದ ಮಂತ್ರಾನ ಮತ್ತೆ ಹೇಳಬಾರದು’-ಎಂದು ಅಯ್ಯಾಶಾಸ್ತ್ರಿಗಳು ಮುಖ ನೋಡಿದರು.
‘ಯಾಕೆ ಹೇಳಬಾರ್‌ದು? ನೀವು ತಪ್ಪು ಹೇಳ್‌ಬೌದೋ?’
‘ನಾನು ಹೇಳೋದು ತಪ್ಪೇ? ಶಿಂಧಘಟ್ಟದ ಸೂರಣ್ಣ ಜೋಯಿಸರ ಪಾಠ ತಪ್ಪೆ? ಕೇಳಿ ಚಿಕ್ಕಪ್ಪ, ನಾನು ಈ ಮದುವೆ ಮಾಡಿಸಬೇಕೋ, ಬಿಟ್ಟು ಎದ್ದು ಹೋಗಬೇಕೋ?’-ಎಂದು ಜೋಯಿಸರು ಎದ್ದು ನಿಂತುಬಿಟ್ಟರು.
‘ನಿಮ್ಮ ಗುರುಗಳ ವಿಚಾರ ನನಗೆ ಗೊತ್ತಿದೆ. ಅವರಿಗೆ ನೆಟ್ಟಗೆ ಸಂಸ್ಕೃತ ಗೊತ್ತಿಲ್ಲ. ಭೂರಗ್ನಿಯೇ ಅನ್ನೊದು ತಪ್ಪು. ಭೂರಗ್ನಯೇ ಅಂತ ಇರಬೇಕು. ನೀವು ಹೇಳೋದು ವ್ಯಾಕರಣಶುದ್ಧವಲ್ಲ. ಗ್ರಂಥದಲ್ಲಿ ತೆಗೆದು ತೋರಿಸಲೇನು? ವೇದಮಂತ್ರ ತಪ್ಪು ನುಡಿದರೆ ತಲೆ ಸಹಸ್ರ ಸೀಳಾಗುತ್ತೆ.’
ಅಲ್ಲಿಗೆ ಅಣ್ಣಾಜೋಯಿಸರು ಸುಮ್ಮನಾದರು. ಕಂಠೀಜೋಯಿಸರ ಮಂತ್ರಜ್ಞಾನದ ಬಗೆಗೆ ರಾಮಸಂದ್ರದವರೆಲ್ಲ ಬೆರಗಾದರು. ಮುಂದೆ ಧಾರೆಯಾಗುವಾಗ ಕನ್ಯಾದಾನ ಮಂತ್ರವನ್ನು ಅವರೇ ಏರಿದ ಕಂಠದಲ್ಲಿ ಹೇಳುತ್ತಿದ್ದುದನ್ನು ಇಡೀ ಮದುವೆಯ ಮನೆಯೇ ಗಂಭೀರವಾಗಿ ಕೇಳಿತು. ಮದುವೆ ಮುಗಿದು ಗಂಡಿನವರು ಹೊರಡುವಾಗ ಅಣ್ಣಾಜೋಯಿಸರು ಕಂಠೀಜೋಯಿಸರ ಹತ್ತಿರ ಬಂದು-‘ನನಗೆ ಬರೀ ಪಾಠವಾಗಿದೆ. ವ್ಯಾಕರಣ ಭಾಗ ಸ್ವಲ್ಪ ಹಿಂದೆಯೇ. ಪೂರ್ತಿ ಅಧ್ಯಯನವಾಗೋ ಮೊದಲೇ ತಂದೆ ತೀರಿ ಹೋಗಿದ್ದರಿಂದ ಅರ್ಧಕ್ಕೆ ಬಿಟ್ಟು ಬಂದು ಬಾಕೀದನ್ನು ಪುಸ್ತಕದಿಂದ ಅಭ್ಯಾಸ ಮಾಡಿದೆ. ತಪ್ಪದ್ದರೆ ಕ್ಷಮಿಸಬೇಕು’ ಎಂದು ಹೇಳಿದರು.

ಮದುವೆ ಚೆನ್ನಾಗಿ ನಡೆಯಿತು. ಹುಡುಗಿಗೆ ನಾಗರು, ಶೇವಂತಿಗೆ ಹೂವು, ಬಳೆ, ಬೆಳ್ಳಿಯ ಡಾಬು, ಮತ್ತು ಕಾಲಿಗೆ ರುಳಿಗಳನ್ನು ಹಾಕಿದ್ದರು. ಗಂಡಿನವರು ಕ್ರಮದಂತೆ ಮಾಂಗಲ್ಯ, ಓಲೆ ಮೂಗುಬಟ್ಟುಗಳನ್ನು ತಂದಿದ್ದರು. ತಂದೆಯಂತೆಯೇ ಎತ್ತರವಾದ ಮೈ ಕಟ್ಟು, ಅಗಲವಾದ ಹಣೆ, ಮತ್ತು ವಿಶಾಲವಾದ ಕಣ್ಣುಗಳುಳ್ಳ ವಧುವು ಲಕ್ಷಣವಾಗಿದ್ದಳು. ‘ನಮ್ ಚೆನ್ನಿಗರಾಯಂಗೆ ಇಂಥಾ ಹೆಣ್ಣು ಸಿಕ್ಕೋದು ಅಂದ್ರೆ ಪುಣ್ಯ ಮಾಡಿದ್ದ’-ಎಂದು ರಾಮಸಂದ್ರದವರೇ ಎಂದರು. ಈ ಮಾತು ಗಂಗಮ್ಮನಿಗೆ ಮಾತ್ರ ಸಹಿಸಲಿಲ್ಲ. ಚೆನ್ನಿಗರಾಯ ಭೂಮಕ್ಕೆ ಬಡಿಸಿದ್ದ ಭಕ್ಷ್ಯಭೋಜ್ಯಗಳನ್ನೆಲ್ಲ ಸ್ವಲ್ಪವೂ ಬಿಡದೆ ತಿಂದುಹಾಕಿದುದನ್ನು ನಾಗಲಾಪುರದವರು ಆಡಿಕೊಂಡರು. ಹಾಗೆ ತಿನ್ನಬಾರದಾಗಿತ್ತೆಂದು ರಾಮಸಂದ್ರದವರೂ ಆಮೇಲೆ ಅವನಿಗೆ ಹೇಳಿದರು. ‘ವಳ್ಳೇ ಗಮ್ ಅನ್ನೂ ಹಾಗೆ ಮಾಡಿದ್ದುನ್ನ ಅದ್‌ಹ್ಯಾಗೆ ಎಂಜಲು ಮಾಡಿ ಚೆಲ್ಲೂಕಾಗುತ್ಯೋ ಕಾಣೆ’-ಎಂದು ಅವನು, ತಾನು ಮಾಡಿದುದನ್ನೇ ಸಮರ್ಥಿಸಿಕೊಂಡ.

– ೩ –

ಚೆನ್ನಿಗರಾಯ ಎಷ್ಟು ಸಲ ಕೇಳಿದರೂ ಸಿವಲಿಂಗೇಗೌಡ ಶ್ಯಾನುಭೋಗಿಕೆ ಬಿಟ್ಟುಕೊಡಲಿಲ್ಲ. ಮೊದಲು ಕೆಲವು ದಿನ-‘ಕೊಡಾನ, ಕೊಡಾನಾ’ ಎನ್ನುತ್ತಿದ್ದ. ಅದರ ಅರ್ಥ ಸರಿಯಾಗಿ ತಿಳಿಯದ ಚೆನ್ನಿಗರಾಯ ಕೆಲವು ದಿನ ಕಾದು ನೋಡುತ್ತಿದ್ದ. ಮತ್ತೆ ಕೇಳಿದರೆ ಅದೇ ಮಾತು. ಒಂದು ದಿನ-‘ಸಾಲಾಖೈರಿನ ಲೆಕ್ಕ ಚುಕ್ತಾ ಆಗ್‌ಬೇಕು. ಆಮ್ಯಾಲೆ ನೋಡಾನ’ ಎಂದ. ಸಾಲಾಖೈರು ಎಂದರೆ ಏಪ್ರಿಲ್ ತಿಂಗಳ ಕೊನೆ. ಅಲ್ಲಿಗೆ ಇನ್ನೂ ಐದು ತಿಂಗಳು. ‘ಸಾಲಾ ಲ್ಯಕ್ಕ ಮುಗಿಸ್ದೆ ಕೊಟ್ರೆ ನಿಂಗೇನ್ ತಿಳೀತೈತೆ?’-ಎಂದು ಅವನು ಹೇಳಿದುದು ನಿಜವೆಂದು ಇವನೂ ಒಪ್ಪಿಕೊಂಡ.

ಮನೆಯಲ್ಲಿ ಬೇರೇನೂ ಕೆಲಸವಿಲ್ಲ. ಹೆಂಡತಿ ಇನ್ನೂ ಚಿಕ್ಕವಳಾಗಿದ್ದುದರಿಂದ ಪ್ರಸ್ತವಾಗಿರಲಿಲ್ಲ; ತೌರುಮನೆಯಲ್ಲೇ ಇದ್ದಳು. ಎರಡು ವರ್ಷ ಓಚಯ್ಯನವರ ಮಠಕ್ಕೆ ಹೋಗಿದ್ದರೂ ಅಪ್ಪಣ್ನಯ್ಯನಿಗೆ ಪೂರ್ವಜನ್ಮದ ಶೇಷವಿಲ್ಲದುದರಿಂದ ವಿದ್ಯೆ ಬರುವುದಿಲ್ಲವೆಂದು ನಿರ್ಣಯಿಸಿ ಓಚಯ್ಯನವರೇ ಅವನನ್ನು ಕೈಬಿಟ್ಟಿದ್ದರು. ಈಗ ಅವನು ತೋಟದ ಬೇಲಿಗಳಲ್ಲಿಕಟ್ಟುತ್ತಿದ್ದ ಜೇನು ಬಿಚ್ಚುವುದು, ಎಳನೀರು ಕೆಡವಿ ಕುಡಿಯುವುದರಲ್ಲಿ ಹೊತ್ತು ಕಳೆಯುತ್ತಿದ್ದ. ಮುಂದೆ ಶ್ಯಾನುಭೊಗನಾಗಬೇಕಾದ ಚೆನ್ನಿಗರಾಯ ಬೆಳಿಗ್ಗೆ ಎದ್ದುಸ್ನಾನ ಮಾಡಿದ ಮೇಲೆ, ತಲೆ ಸೂಲೆ ಬಂದವರು ಪಟ್ಟುಹಾಕಿಕೊಳ್ಳುವಷ್ಟು ದಪ್ಪನಾಗಿ ಹಣೆಗೆ ಕಲಸಿದ ವಿಭೂತಿ ಮೆತ್ತಿಕೊಂಡು ಒದ್ದೆ ಲಂಗೋಟಿಯಲ್ಲಿ ಕುಳಿತು ಸಂಧ್ಯಾವಂದನೆ ಮಾಡಿ ಜನಿವಾರದ ಬ್ರಹ್ಮಗಂಟನ್ನು ಕೈಲಿ ಹಿಡಿದು, ಓಂ ತತ್ಸತ್ ತ್ ತ್…..ಓಂ ತತ್ಸತ್ ತ್ ತ್ ಎಂದು ಏಕತಾನದಲ್ಲಿ ಕೇಳುವಂತೆ ಗಟ್ಟಿಯಾಗಿ ಸಾವಿರದೆಂಟು ಗಾಯಿತ್ರಿ ಹೇಳುತ್ತಿದ್ದ.
ಸಾಲಾಖೈರಿಗೆ ಹೋಗಿ ಕೇಳಿದಾಗ ಸಿವಲಿಂಗೇಗೌಡ ಹೇಳಿದ: ‘ಮ್ಯಾಲಿನ ಹುಕುಂ ಇಲ್ಲದೆ ನಿಂಗೆ ಶ್ಯಾನುಭೋಗಿಕೆ ಹ್ಯಂಗ್ ಕೊಡ್ಲಿ?’
‘ನಂದು ನಂಗ್ ಕೊಡೊಕೆ ಮ್ಯಾಲಿಂದೇನು?’
‘ಊಂ. ನಿಮ್ಮಪ್ಪಂದು ಅಂತ ಬರೆದಿಟ್ಟಿಲ್ಲ. ನಂಗೂ ಹತ್ತು ವರ್ಸ ಅನುಭೋಗ ಬಂತು. ಹ್ವಾಗು ನನ್ ತಾವ ಕಿತ್ಕಳೂವಂತೆ’
ಚೆನ್ನಿಗರಾಯನಿಗೆ ಈ ಮಾತನ್ನು ಕೇಳಿ ಅಳು ಬಂದಹಾಗಾಯಿತು. ‘ಅಯ್ಯೋ ನಿನ್ನವ್ವುನಾ…..’ ಎಂದು ಅವನನ್ನು ಬೈಯಬೇಕೆಂದು ಬಾಯಿಗೆ ಬಂದರೂ ಧೈರ್ಯ ಸಾಲದೆ ಸುಮ್ಮನಾದ. ಸಿವಲಿಂಗೇಗೌಡನ ಭಾವ ಪಟೇಲ ಶಿವೇಗೌಡನ ಹತ್ತಿರಕ್ಕೆ ಹೋಗಿ ಕೇಳಿದರೆ ಅವನು, ‘ಲೇ ತಮ್ಮಯ್ಯ, ಶ್ಯಾನುಬಾಕಿ ಮಾಡಾಕ್ ನಿನ್ ಕೈಲಿ ಹರೀತದೇನ್ಲಾ? ಅದೇನ್ ಮಶ್‌ಗಿರಿ ಅಂತ ತಿಳಕಂಡ್ಯಾ?’ ಎಂದ.

ಚೆನ್ನಿಗರಾಯನಿಗೆ ಮುಂದೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಪಟೇಲರ ಎದುರು ಮಾತನಾಡುವ ಧೈರ್ಯ ಅವನಿಗೆ ಬರುವುದಾದರೂ ಹೇಗೆ? ಹುಡುಗನಾದಾಗಿನಿಂದ ಅವನನ್ನು ಹೆದರಿಸಲು ಗಂಗಮ್ಮ ಕೂಗುತ್ತಿದ್ದುದು ಆ ಪಟೇಲನನ್ನೇ ತಾನೇ! ಅವನು ಸೀದಾ ಅಮ್ಮನ ಹತ್ತಿರ ಬಂದು, ಸಿವಲಿಂಗ ಮತ್ತು ಪಟೇಲರ ಮಾತುಗಳನ್ನು ಹೇಳಿದ. ಗಂಗಮ್ಮ ಸುಮ್ಮನಿದ್ದಾಳೆಯೇ? ಪಟೇಲನ ಮನೆಯ ಬಾಗಿಲಿನ ಹತ್ತಿರ ಬೀದಿಯಲ್ಲಿ ನಿಂತು ಗಟ್ಟಿಯಾಗಿ ಕೇಳಿದಳು: ‘ಶಿವೇಗೌಡ, ಕಂಡೋರ ಹೆಂಡ್ತಿ ಹೇಲು ಎಷ್ಟು ದಿನ ತಿನ್‌ಬೇಕು ಅಂತ ಮಾಡಿದೀಯಾ? ನಿನ್ ಹೆಂಡ್ರ ಬಳೆ ಕುಕ್‌ಹೋಗಿ ನಿನ್ಮನೆ ತೊಳ್ದ್ ಹೋಗುತ್ತೆ ತಿಳ್ಕ.’

ಈ ಮಾತನ್ನು ಕೇಳಿದ ಪಟೇಲನ ಹೆಂಡತಿ ಗೌರಮ್ಮನಿಗೆ ಭಯವಾಯಿತು. ಬ್ರಾಹ್ಮಣ ವಿಧವೆಯ ಶಾಪ ತಮಗೆ ತಟ್ಟಿದರೆ ಗತಿ ಏನು? ಅವಳು ಗಂಡನಿಗೆ ಹೇಳಿದಳು: ‘ಅವ್‌ರ ಚಟ್ಟದ ಕೋಲು ಮಡಿಕ್ಕಂಡ್ ನ್ಯಮ್‌ಗೇನಾಗ್ಬೇಕು? ಬಿಸಾಕು ಅಂತ ಸಿವಲಿಂಗಣ್ಣುಂಗ್ ಏಳು ಅತ್ಲಾಗೆ.’
ಪಟೇಲ ತಾನೇ ಹೊರಗೆ ಬಂದು ಹೇಳಿದ: ‘ಗಂಗವ್ವಾ, ಹಿಂಗ್ ಕ್ಯಟ್ ಮಾತು ಯಾಕ್ ಆಡ್ತೀಯಾ? ಬಾ ಕುಂತ್ಕ. ಮಾತಾಡಾಣ.’

ಗೌರಮ್ಮ ಜಗುಲಿಯ ಮೇಲೆ ಮಣೆ ಹಾಕಿಕೊಟ್ಟಳು. ಗಂಗಮ್ಮ ಅದರ ಮೇಲೆ ಕುಳಿತಮೇಲೆ ಪಟೇಲ ಒಂದು ದಿಂಬು ತರಿಸಿ ಹಾಕಿಕೊಂಡು ಒರಗಿ ಕುಳಿತ. ಭಾವೀ ಶ್ಯಾನುಭೋಗ ಚೆನ್ನಿಗರಾಯ ಸೂರುಕಟ್ಟಿನ ಕೆಳಗೆ ನಿಂತೇ ಇದ್ದ. ಪಟೇಲ ಹೇಳಿ ಕಳಿಸಿದಮೇಲೆ ಅಲ್ಲಿಗೆ ಬಂದ ಹಾಲಿ ಶ್ಯಾನುಭೊಗ ಸಿವಲಿಂಗ ಇನ್ನೊಂದು ಜಗುಲಿಯ ಮೇಲೆ ಕಾಲು ಹಾಕಿ ಕುಳಿತುಕೊಂಡ. ಪಟೇಲ ಹೇಳಿದ ‘ಸಿವಾ, ಚಾರ್ಜು ಕೊಡಾಕ್ ಯಾಕ್ ಆಗಾಕಿಲ್ಲ ಅಂತ ಇವಮ್‌ನೋರ್ಗೆ ವಸೀ ಸಮಜಾಯಿಶಿ ಮಾಡಿ ಹ್ಯೇಳು.’
ಶಿವಲಿಂಗ ಗಂಗಮ್ಮನನ್ನು ಕೇಳಿದ: ‘ನಿಮ್ಮ ಮಗನ ವಯಸ್ಸು ಏಟು?’
‘ಹತ್ತೊಂಬತ್ತು ನಡೀತಿದ್ಯಲಾ?’
‘ಹಂಗಂತ ನೀವು ಅಂತೀರಾ. ಸರ್ಕಾರಿ ದಾಖ್‌ಲೇಲಿ ಇನ್ನೂ ಅದಿನಾರು ಅಂತಲೇ ಐತೆ. ಅವ್ನಿನ್ನೂ ಮೆಜಾಲ್ಟಿಗೇ ಬಂದಿಲ್ಲ. ಗೌರ್‌ಮೇಟು ಕೆಲ್ಸ ಹ್ಯಂಗ್ ಕೊಡಾಕಾಯ್ತದೆ?’
‘ಇವ್ನು ಹುಟ್‌ದಾಗ ನಮ್ಮನೆಯೋರೇ ಶ್ಯಾನುಭೋಗ್‌ಕೆ ಮಾಡ್ತಿದ್ರು. ಅವ್ರೇನ್ ಸುಳ್ ಬರ್ದಿರ್ತಾರಾ? ನ್ಯಟ್ಟಗೆ ನೋಡು.’
‘ಜನನ ಮರಣ ರಿಜೀಸ್ಟರು ನಮ್‌ತಾವ ಇರಾಕಿಲ್ಲ. ಅದ ನೋಡಾಕೆ ಸರ್ಕಾರುಕ್ ಫೀಜು ಕೊಡ್‌ಬೇಕು. ಮದ್ಲು ಐವತ್ತು ರೂಪಾಯಿ ಕೊಡಿ. ಆಮ್ಯಾಲೇ ತಿಪ್ಟೂರ್ಗೆ ಹ್ವಾಗಿ ನೋಡ್ಸುಸ್‌ತೀನಿ.
ಜನನ ಮರಣ ರಿಜಿಸ್ಟರು ಶ್ಯಾನುಭೋಗರ ಹತ್ತಿರ ಇರುತ್ತದೆಯೇ ಇಲ್ಲವೇ, ಅದನ್ನು ನೋಡಲು ಫೀಜು ಕೊಡಬೇಕೇ ಬೇಡವೇ, ಕೊಡಬೇಕಾಗಿದ್ದರೆ ಐವತ್ತು ರೂಪಾಯಿ ಆಗುತ್ತದೆಯೇ ಎಂಬ ಬಗೆಗೆ ಗಂಗಮ್ಮನಿಗೆ ಗೊತ್ತಿಲ್ಲ. ‘ಏನೋ ಚೆನ್ನಯ್ಯ, ಕೊಡಬೇಕೇನೋ ಲ್ಯಕ್ಕ ಕಲ್ತ್ ಕಂಡಿರಾನು ನೀನು ಹ್ಯೇಳೋ’-ಎಂದು ಮಗನನ್ನು ಕೇಳಿದರೆ ಸೂರುಕಟ್ಟಿನ ಕೆಳಗೆ ನಿಂತೇ ಇದ್ದ ಅವನು ಕಕರನಂತೆ ಮುಖ ನೋಡಿಕೊಂಡು ಯೋಚಿಸಲು ಮೊದಲು ಮಾಡಿದ, ‘ಅದೇನು ಹ್ಯೇಳೋ’-ಎಂದು ಇನ್ನೊಂದು ಸಲ ಕೇಳಿದಮೇಲೆ, ‘ನಂಗ್ ಗೊತ್ತಿಲ್ಲ ಕಣಮ್ಮ’ ಎಂದ.
‘ನಂಗ್ ಲ್ಯಕ್ಕವೆಲ್ಲ ಬರುತ್ತೆ ಅಂದ್ಯಲ್ಲೋ?’
ಈಗ ಸಿವಲಿಂಗ ಎಂದ: ‘ಹೊನ್ನವಳ್ಳಿಯೋನ್‌ತಾವ ಹ್ವಾಗಿ ಕಲ್ತ್ಕಂಬಂದೆ ಅಂತಿದ್ದೆ. ಆ ಹ್ವನ್ನವಳ್ಳಿ ಪಾಪ್ರ್ ನನ್ ಮಗುಂಗೆ ಲ್ಯಕ್ಕ ಬತ್ತಿದ್ರೆ ನಿಂಗೆ ಹೇಳ್ಕೊಡ್ತಿದ್ದ. ಹೋಕ್ಕಳ್ಳಿ, ಈಗ್ಲೂ ಒಂದು ನಾಕ್ ವರ್ಸ ನಮ್ಮನೆ ಕಸದ ಮಂಕ್ರಿ ಹೊರು. ನಾನ್ ಕಲ್ಸ್‌ಕೊಡ್ತೀನಿ.
ಪಟೇಲ ಶಿವೇಗೌಡ ಹೇಳಿದ: ‘ಹೋಕ್ಕಳ್ಳಿ. ಗಂಗವ್ವಾ, ಐವತ್ತು ರೂಪಾಯಿ ತಂದು ಮಡಗಿ. ಇವ್ನ ವಯಸ್ಸು ಏಟು ಅಂತ ಮ್ಯಾಲುಕ್ ಬರ್ದ್ ಹ್ಯೇಳುಸ್ತೀವಿ.’
‘ದುಡ್ಡ್ಯಾಕ್ ಕೊಡಬೇಕು ಶಿವೇಗೌಡ?’
‘ಅದೇನ್ ಸರ್ಕಾರವಲ್ವಾ? ಮಶ್ಗಿರಿ ಮಾತ್ ಕ್ಯಟ್ಹೋಯ್ತಾ?’
ಇನ್ನು ಗಂಗಮ್ಮನಿಗೆ ಬೇರೆ ಮಾರ್ಗ ಉಳಿಯಲಿಲ್ಲ. ಐವತ್ತು ರೂಪಾಯಿ ಕೊಡದೆ ಮಗನ ವಯಸ್ಸಿನ ಲೆಕ್ಕ ಸಿಕ್ಕುವುದಿಲ್ಲ. ಅದಿಲ್ಲದೆ ಶ್ಯಾನುಭೋಗಿಕೆ ಕೈಗೆ ಬರುವುದಿಲ್ಲ. ಆದರೆ ಮನೆಯಲ್ಲಿ ಅಷ್ಟೊಂದು ಕೈಲಿ ದುಡ್ಡಿಲ್ಲ. ಮನೆಗೆ ಹೋಗಿ ತನ್ನ ಪೆಟಾರಿಯಲ್ಲಿ ಹುಡುಕಿ ನೋಡಿದಳು. ಮೂವತ್ತು ರಾಣಿತಲೆ ರೂಪಾಯಿ ಇತ್ತು. ಜೊತೆಗೆ ಆರು ಪಲ್ಲ ರಾಗಿ ಸೇರಿಸಿ ಶಿವಲಿಂಗನಿಗೆ ಒಪ್ಪಿಸಿ-‘ಬ್ಯಾಗ ಇವನ ಲೆಕ್ಕ ತರಿಸಪ್ಪ. ನಮ್ಮ ಯಜಮಾನರ ಕಾಲದ ಶ್ಯಾನುಭೋಗ್‌ಕೆ. ಇವನು ಕೈಗೆ ತಗಂಡುದ್ದ ನಾನು ನೋಡಬೇಕು’ ಎಂದಳು.

ಮತ್ತೆ ಮೂರು ತಿಂಗಳಾದರೂ ಅದರ ಬಗೆಗೆ ಏನೂ ಆಗಲಿಲ್ಲ. ಗಂಗಮ್ಮನೇ ಹೋಗಿ ಕೇಳಿದುದಕ್ಕೆ ಶಿವಲಿಂಗ ಹೇಳಿದ: ‘ಸರ್ಕಾರೀ ಲ್ಯಕ್ಕ ಅಂದ್ರೆ ಈಟ್‌ಬ್ಯಾಗ ಬತ್ತೈತಾ? ಡಿಪ್ಟಿಕಮೀಶರಿಗೆ ಹ್ವಾಗಿ ಅಲ್ಲಿಂದ ದಿವಾನ್ ಮಿರ್ಜಾ ಸಾಹೇಬ್‌ರುನ್ನ ಮುಟ್ಟಿ ಬರಬೇಕು ನಿದಾನವಾಗಿ ಬತ್ತೈತೆ. ಅದ್ಯಾಕ್ ಚೊಣಚಿ ಹೊಕ್ಹಂಗ್ ಆಡ್ತೀರಾ, ವಸಿ ತಡ್‌ಕಳಿ.’
ಗಂಗಮ್ಮ ನಿರುಪಾಯಳಾಗಿ ಮನೆಗೆ ಬಂದು ಮಗನಿಗೆ ಹೇಳಿದಳು: ‘ಚೆನ್ನಯ್ಯಾ ಇವ್ನು ಕೊಡೊದಿಲ್ಲ ಅಂತ ಕಾಣ್ಸುತ್ತೆ. ನೀನೇ ತಿಪಟೂರಿಗೆ ಹೋಗಿ ಅಮಲ್ದಾರ್ ದಣಿಗಳಿಗೆ ಅಡ್ಡಬಿದ್ದು ಹಾವಾಲ್ ಮಾಡ್ಕಂಡ್ ಬಾ ಹೋಗು.’

ತಾನೊಬ್ಬನೇ ಹೋಗಿ ಅಮಲ್ದಾರರನ್ನು ಕಾಣಲು ಚೆನ್ನಿಗರಾಯನಿಗೆ ಭಯವಾಯಿತು. ಅವರು ತನ್ನ ಮೇಲೆ ರೇಗಿದರೆ ಏನು ಮಾಡುವುದು? ತನಗೆ ನಿಜವಾಗಿಯೂ ಹದಿನಾರೇ ವರ್ಷವಾಗಿರಬಹುದು. ತನ್ನ ಜಾತಕವೇ ತಪ್ಪಿರಬಹುದು. ‘ಅಮ್ಮಾ, ನಂಗೆ ಇನ್ನೂ ಹದಿನಾರು ವರ್ಷವೇ ಇರಭೌದು. ಇನ್ನೊಂದೆರ್‌ಡು ವರ್ಷ ತಡಿಯಾಣ ಕಣಮ್ಮ.’
‘ಥೂ ಸುಳೇಮಗನೆ. ನಿನ್ ಹೆತ್ತೋಳು ಗಟ್ಟೀಮುಂಡೆಯಾಗಿ ಇಲ್ಲೇ ಇದೀನಿ. ನಂಗ್ ಗೊತ್ತಿಲ್ವೇನೋ ನಿನ್ ವಯಸ್ಸು? ಹತ್ತೊಂಬತ್ ತುಂಬ್ತಾ ಬಂತಲೋ. ಹೋಗಿ ಅಮಲ್ದಾರ್ ದಣಿಗಳಿಗೆ ಅಡ್ದ ಬೀಳೋ ಮುಂಡೆಮಗನೆ’-ಗಂಗಮ್ಮ ಸಿಟ್ಟು ಬಂದು ಹೇಳಿದಳು.
‘ನಂಗ್ ಹ್ಯದ್‌ರಿಕೆಯಾಗುತ್ತೆ ಕಣಮ್ಮ.’
‘ನಾಚಿಕೆಯಾಗುಲ್ವೇನೋ ಹೆಣಿಗ್ ಸೂಳೇಮಗನೇ. ನಾನೂ ಬರ್ತೀನೋ ಜೊತೆಗೆ’- ಎಂದು ಗಂಗಮ್ಮ ಹೇಳಿದಳಾದರೂ ಸರ್ಕಾರಿ ಕೆಲಸಕ್ಕೆ ಹೆಂಗಸರು ಹೋಗಬಾರದೆಂಬ ನೆನಪಾಗಿ ಸುಮ್ಮನಾದಳು. ಹೆಂಗಸರು ಸರ್ಕಾರೀ ಲೆಕ್ಕವನ್ನು ಕೈಲಿ ಮುಟ್ಟಿದ್ದು ಗೊತ್ತಾದರೂ ಪೋಲೀಸಿಗೆ ಹಾಕ್ತಾರಂತೆ. ಇನ್ನು ತಾನೇ ಹೋಗಿ ಅಮಲ್ದಾರರ ಎದುರು ನಿಂತರೆ ಸುಮ್ಮನೆ ಬಿಡುತಾರೆಯೇ?
ಇನ್ನು ಬೇರೆ ಉಪಾಯವಿರಲಿಲ್ಲ. ಹೀಗೆಯೇ ಒಂದು ತಿಂಗಳು ಕಳೆದಮೇಲೆ ಗಂಗಮ್ಮನೇ ಹೇಳಿದಳು: ‘ಹ್ಯಾಗಾದ್ರಾಗಾಗ್ಲಿ, ಒಂದು ಹ್ಯಜ್ಜೆ ನಾಗಲಾಪುರುಕ್ ಹೋಗಿ ನಿಮ್ಮಾವ್‌ನೋರನ್ನ ಕೇಳು, ಅವ್ರೇನಾದ್ರೂ ಮಾಡುಸ್ತಾರೆ.’

– ೪ –

ಚೆನ್ನಿಗರಾಯನ ಮದುವೆಯಾಗಿ ಒಂದೂವರೆ ವರ್ಷವಾಗಿದ್ದರೂ, ಅವನು ಒಂದು ಸಲವೂ ಮಾವನ ಮನೆಗೆ ಹೋಗಿರಲಿಲ್ಲ. ಹೋಗುವ ಆಶೆ ಇಲ್ಲದೆಯಲ್ಲ. ಆದರೆ ಯಾರೂ ಅವನನ್ನು ಬಂದು ಕರೆದಿರಲಿಲ್ಲ. ತಾನಾಗೇ ಹೋಗಲು ನಾಚಿಕೆಯೋ ಅಂಜಿಕೆಯೋ ಅವನಿಗೆ ತಿಳಿಯದು. ಈಗ ಶ್ಯಾನುಭೋಗಿಕೆಯ ಕೆಲಸಕ್ಕೆ ಅಲ್ಲಿಗೆ ಹೋಗಿ ಬರುವಂತೆ ಅಮ್ಮನೇ ಹೇಳಿದಾಗ ಅವನಿಗೆ ಸಂತೋಷವಾಯಿತು. ಒಂದು ದಿನ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಮೂರು ಆಚಮನಕ್ಕೇ ಸಂಧ್ಯಾವಂದನೆ ಮುಗಿಸಿ ಅವರೇಕಾಳಿನ ರೊಟ್ಟಿ ಕಾಯಿಚಟ್ನಿ ಮೊಸರು ತಿಂದು, ದಾರಿಗೆ ಇರಲಿ ಎಂದು ಮೂರು ರೊಟ್ಟಿ ಚಟ್ನಿ ಕಟ್ಟಿಕೊಂಡು ಮದುವೆಯ ಕೋಟು ಹಾಕಿ ಸಂಕಲಿಕೆಯ ಪಂಚೆಯುಟ್ಟು, ಎಕ್ಕಡ ಮೆಟ್ಟಿ ನಡೆಯುವ ಅಭ್ಯಾಸವಿಲ್ಲದುದರಿಂದ ಬರೀಕಾಲಿನಲ್ಲಿಯೇ ಹನ್ನೆರಡು ಮೈಲಿ ದೂರದ ನಾಗಲಾಪುರಕ್ಕೆ ಪಶ್ಚಿಮಾಭಿ ಮುಖವಾಗಿ ಹೊರಟ.

ರಾಮಸಂದ್ರದಿಂದ ಮೂರು ಮೈಲಿ ದೂರದಲ್ಲಿ ಒಂದು ಬೋರೆ ಹತ್ತಿ ಇಳಿದ ಮೇಲೆ ಚೋಳನಗುಡ್ಡ. ಕರೀಕಲ್ಲಿನ ಆ ಗುಡ್ಡದ ತಪ್ಪಲಿನಲ್ಲಿಯೇ ದೊಡ್ಡ ಮರಳಹಳ್ಳ. ಹಳ್ಳದ ಎರಡು ಕಡೆಗೂ ಅಲ್ಲದೆ ನಡುವೆಯೂ ಮುತ್ತಗದ ಗಿಡಗಳು ತುಂಬಿ ಬೆಳೆದಿವೆ. ದಾರಿಯ ಹಳ್ಳದಲ್ಲಿ ಸಿಕ್ಕುವ ಮರಳಿನ ಬಾವಿಯನ್ನು ಕಂಡ ಚೆನ್ನಿಗರಾಯ ಹತ್ತಿರ ಕೂತು ರೊಟ್ಟಿ ಚಟ್ನಿ ಮುಗಿಸಿ ಆರು ಸಲ ತುಂಬುಬೊಗಸೆ ನೀರು ಹೀರಿ ಮತ್ತೆ ಪ್ರಯಾಣ ಮುಂದುವರಿಸಿದ. ಚೋಳನ ಗುಡ್ದವನ್ನು ಬಲಕ್ಕೆ ಬಿಟ್ಟು ಏರು ಇಳಿದು ನಡೆದರೆ ಕೆಮ್ಮಣ್ಣು ಹಳ್ಳ. ಅದರ ಆಚೆಯದೇ ಕಟಿಗೇಹಳ್ಳಿ. ಅದಕ್ಕೆ ಸ್ವಲ್ಪ ಮುಂದೆ ಸಿಕ್ಕುವ ಹೂವಿನಹಳ್ಳಿ ನಾಗಲಾಪುರದ ಫಿರ್ಕಕ್ಕೆ ಸೇರಿದ್ದು. ಆ ಊರಿನಿಂದ ಮುಂದೆ ಒಂದು ಮೈಲಿಗೇ ನಾಗಲಾಪುರದ ದೊಡ್ಡ ಕೆರೆ ಕಾಣಿಸುತ್ತದೆಯಾದರೂ, ಅದರ ಹೊರಕೋಡಿ ಮುಟ್ಟುವುದಕ್ಕೆ ಕತ್ತಾಳೆ ಓಣಿ, ಕಣಿಗಲೆ ಹಳ್ಳಗಳಲ್ಲಿ ಸಾಗಿ ಮತ್ತೆ ಎರಡು ಮೈಲಿ ನಡೆಯಬೇಕು. ಕೆರೆ ಏರಿಯ ಮೇಲೆ ಒಂದು ಮೈಲಿ ನಡೆದು ಊರ ಕಡೆ ಕೋಡಿ ದಾಟಿದನಂತರ ಸಂತೆಯ ತೋಪಿನಲ್ಲಿ ಸಾಗಿದರೆ ಅದೇ ನಾಗಲಾಪುರ.

ಊರ ಕೆರೆಯ ಈಚೆ ಕಡೆಯ ಕೋಡಿ ಹತ್ತಿರ ಬಂದಾಗ ಅವನಿಗೆ ಒಂದು ತರದ ಅಂಜಿಕೆಯಾಯಿತು. ತನ್ನನ್ನು ಯಾರಾದರೂ ಗುರುತು ಹಿಡಿದರೆ? ಈಗ ಯಾಕೆ ಬಂದೆ ಅಂದರೆ? ಮಾವನವರೇ ಹಾಗೆ ಕೇಳಿದರೆ ಏನಂತ ಹೇಳುವುದು? ಈ ಇವಳು ಹ್ಯಾಗಿರ್ತಾಳೋ, ಅವಳೇನು ನನ್ನ ಮಾತಾಡುಸ್ತಾಳೋ ಇಲ್ಲವೋ? ಮಾತಾಡುಸ್ದೇ ಇರ್ಲಿ, ಕತ್ತೆ ಮುಂಡೆಗೆ ಮಾಡ್ತೀನಿ. ಅವ್ಳಿನ್ನೂ ಯಾವಾಗ್ಲೋ ನಮ್ಮೂರಿಗ್ ಬರೂದು! ಈಗ ಹದಿಮೂರು ತುಂಬಿದೆಯಂತೆ. ಇನ್ನು ಎಷ್ಟು ದಿನವೋ ದೊಡ್ಡೋಳಾಗೋದು-ಹೀಗೆಯೇ ಯೋಚಿಸಿಕೊಂಡು ಕೆರೆಯ ಏರಿಯ ಮೇಲೆ ನಡೆಯುತ್ತಾ ಊರಿನ ಕಡೆಯ ಕೋಡಿಯನ್ನು ಮುಟ್ಟಿದ. ಗ್ರಾಮ ಪ್ರವೇಶಮಾಡುವಾಗ ಮತ್ತೆ ಅಂಜಿಕೆ. ಮದುವೆಯಲ್ಲಿ ಮೆರವಣಿಗೆ ಹೋಗಿದ್ದ ಬೀದಿಯಲ್ಲೇ ಈಗ ಹೋಗುತ್ತಿದ್ದಾನೆ. ಯಾರಾದರೂ ಗುರುತು ಹಿಡಿದರೆ!
ಗುಂಪಾಗಿ ಕಟ್ಟಿದ್ದ ಮನೆಗಳ ಆ ಊರನ್ನು ಪ್ರವೇಶ ಮಾಡಿದ ತಕ್ಷಣ ಒಂದೇ ಒಂದು ಬೀದಿಯ ಹೆಸರೇ ಶ್ಯಾನುಭೋಗರ ಬೀದಿ ಎಂದು. ಊರ ಶ್ಯಾನುಭೋಗ ಶ್ಯಾಮಣ್ಣನವರು ದರ್ಪದ ಅಧಿಕಾರ ಮಾಡುತ್ತಾರಂತೆ. ಅದಕ್ಕೇ ಬೀದಿಗೆ ಆ ಹೆಸರು. ಅಲ್ಲಿಂದ ನಡೆದು ಹೋದರೆ ಚೆನ್ನಿಗರಾಯನ ಮಾವನವರ ಮನೆ ಇರುವುದು ಓರೆ ಕೋರೆ ಸಂದಿಯಲ್ಲಿ. ಇಡೀ ಊರಿನ ಮನೆಗಳೆಲ್ಲ ಇದ್ದುದೇ ಹಾಗೆ. ಆದರೆ ಕಂಠೀಜೋಯಿಸರದು ಇದ್ದುದರಲ್ಲಿ ದೊಡ್ಡಮನೆ.

ಡವಡವ ಎನ್ನುತ್ತಿದ್ದ ಎದೆಯನ್ನು ಹದಕ್ಕೆ ತಂದುಕೊಂಡು ಅವನು ಅರೆತೆದಿದ್ದ ಬಾಗಿಲನ್ನು ನೂಕಿ ಒಳಗೆ ಹೋದರೆ ಯಾವ ಶಬ್ದವೂ ಇರಲಿಲ್ಲ. ಒಂದು ನಿಮಿಷ ನಿಂತು ನೋಡಿ ಕೊನೆಗೆ ಧೈರ್ಯ ಮಾಡಿಕೊಂಡು ಗಟ್ಟಿಯಾಗಿ ಕೂಗಿದ: ‘ಯಾರೊಳಗೆ?’
ಅಡಿಗೆಯ ಮನೆಯಿಂದ ಮುದುಕಿ ಕೇಳಿತು:‘ಅದ್ಯಾರಪ್ಪ? ಕಾಳೇಗೌಡನೆ?’
‘ಅಲ್ಲ , ನಮ್‌ದು ರಾಮಸಂದ್ರ. ಫೌತಿ ರಾಮಣ್ಣನೋರ ಮಗ ಚೆನ್ನಿಗರಾಯ ಅಂತ.’
‘ಬಾರಪ್ಪ, ಬಾ, ಬಾ,’ -ಎಂದು ಅಜ್ಜಿ ಒಳಗಿನಿಂದ ಓಡಿಬಂತು. ಒಂದು ಮಂದಲಿಗೆ ಹಾಕಿ-‘ಕೂತುಕೊ’ಎಂದು ಹೇಳಿ ಒಳಗಿನಿಂದ ಒಂದು ದೊಡ್ಡ ತಾಮ್ರದ ಪಂಚಪಾತ್ರೆಯ ತುಂಬ ಗಂಗೋದಕ ತಂದು ಮುಂದಿಟ್ಟು, ‘ಊರ್ನಲ್ಲಿ ಯಲ್ಲಾ ಚನ್ನಾಗಿದಾರಾ?’ ಎಂದು ಕೇಳುತ್ತಿರುವಾಗ ಹಿತ್ತಲ ಬಾಗಿಲಿನಿಂದ ಚೆನ್ನಿಗರಾಯನ ಹೆಂಡತಿ, ಒಗೆದು ಹಿಂಡಿದ ಒಂದು ಹಸಿರು ಸೀರೆ ಮತ್ತು ರೌಕೆಗಳನ್ನು ಕೈಲಿ ಹಿಡಿದುಕೊಂಡು, ಏನೂ ತಿಳಿಯದೆ ಒಳಗೆ ಬಂದು, ಒಳಗಿನ ಮಬ್ಬುಗತ್ತಲೆಯಲ್ಲಿ ಈ ಆಗಂತುಕನಿರುವುದು ತಿಳಿಯದೆ, ಹಿಂಡಿದ ಸೀರೆಯನ್ನು ಕೊಡವಲು ಅಲ್ಲಿಯೇ ನಿಂತುಕೊಂಡಳು.
‘ನಂಜ, ನಿನ್ನ ಗಂಡ ಬಂದಿದಾನೆ. ಅಲ್ಲಿ ಕೂತಿದಾನೆ, ಕತ್‌ಲೇಲಿ ಕಾಣ್‌ಲಿಲ್ವೆ?’-ಎಂದು ಅಜ್ಜಿ ಹೇಳಿದುದೇ ತಡ, ಕೊಡವುತ್ತಿದ್ದ ಸೀರೆ ಹೆಜ್ಜೆಗೆ ಸಿಕ್ಕಿ ತಾನು ತೊಡರಿ ಬೀಳುವುದನ್ನೂ ಲೆಕ್ಕಿಸದೆ ಅವಳು ಹಿತ್ತಲು ಬಾಗಿಲಿನಿಂದ ಓಡಿ ಹೋಗಿಬಿಟ್ಟಳು.
ಅಜ್ಜಿಯೇ ಮನೆಯ ಅಳಿಯನಿಗೆ ಕೈ ಕಾಲು ತೊಳೆದುಕೊಳ್ಳಲು ನೀರು ಕೊಟ್ಟು ಬಿಸಿಯಾಗಿ ಮಜ್ಜಿಗೆಪಳದ್ಯ, ಹಪ್ಪಳ, ಉಪ್ಪಿನಕಾಯಿ, ತುಪ್ಪ, ಮೊಸರಿನ ಊಟ ಬಡಿಸಿತು. ಅಜ್ಜಿ ಬೇಡವೆಂದರೂ ಚೆನ್ನಿಗರಾಯನೇ-‘ಪರವಾಗಿಲ್ಲ ಹಾಕಿ’ ಎಂದು ಹೇಳಿ ಒಂದೂವರೆ ಮುದ್ದೆ ಹಿಟ್ಟು ಬಡಿಸಿಕೊಂಡು ಊಟ ಮಾಡಿದ.

ಊಟವಾದ ಮೇಲೆ ತಿಳಿಯಿತು: ಮಾವನವರು ಸಾಮಾನ್ಯವಾಗಿ ಊರಿನಲ್ಲಿರುವುದೇ ಇಲ್ಲ. ಚೆನ್ನರಾಯಪಟ್ಟಣ, ನರಸೀಪುರ, ಹಾಸನ, ಹೀಗೆ ಕುದುರೆಯ ಮೇಲೆ ತಿರುಗುತ್ತಿರುತ್ತಾರೆ. ಈ ಸಲ ಹೋಗಿ ಇಪ್ಪತ್ತು ದಿನವಾಯಿತು. ಎರಡು ಮೂರು ದಿನಗದಲ್ಲಿ ಬರಬಹುದು. ಇನ್ನು ಇಲ್ಲಿಗೆ ಬಂದಮೇಲೆ ಅವರನ್ನು ಕಂಡು ತಾಜಾ ಕಲಂ ಮಾತನಾಡದೆ ಹೋಗುವಂತಿಲ್ಲ. ಅಜ್ಜಿಯೂ, ಇರುವಂತೆ ಬಲವಂತ ಮಾಡಿತು. ಚೆನ್ನಿಗರಾಯ ಇಳಿದ. ಅಕ್ಕಪಕ್ಕದ ಗಂಡಸರು ಬಂದು ಅವನನ್ನು ತಿರುಗಾಡಲು ಕರೆದೊಯ್ದು ಕಂಠೀಜೋಯಿಸರ ಹೊಲ ಗದ್ದೆಗಳನ್ನು ತೋರಿಸಿಕೊಂಡು ಬಂದರು. ಮರುದಿನ ಬೆಳಿಗ್ಗೆ ಅಜ್ಜಿಯೇ ಅವನಿಗೆ ಎಣ್ಣೆ ಒತ್ತಿ ನೀರು ಹಾಕಿತು. ಆದರೆ ನಂಜಮ್ಮ ಮಾತ್ರ ಕಾಣಿಸಿಕೊಳ್ಳುತ್ತಿರಲಿಲ್ಲ. ಮಬ್ಬುಗತ್ತಲಿನಲ್ಲಿ ಒಗೆದ ಸೀರೆ ಕೊಡವುತ್ತಿದ್ದಾಗ ಅವಳನ್ನು ನೋಡಿದುದೆಷ್ಟೋ ಅಷ್ಟೇ. ತಾನಾಗಿಯೇ ಅಕ್ಕಪಕ್ಕದ ಮನೆಗೆ ಹೋಗಲು ಅವನಿಗೆ ಅಂಜಿಕೆಯೋ ಅಥವಾ ಮುಖೇಡಿತನವೋ! ಹೊತ್ತು ಹೋಗುತ್ತಿರಲಿಲ್ಲ. ಊರಿನಲ್ಲಿಯಂತೆಯೇ ಅವನು ಇಲ್ಲಿಯೂ ಬೆಳಿಗ್ಗೆ ಸ್ನಾನ ಮಾಡಿ, ಹಣೆಗೆ ವಿಭೂತಿ ಪಟ್ಟು ಬಿಗಿದು, ಒದ್ದೆ ಲಂಗೋಟಿಯ ಬದಲು ಒದ್ದೆ ಚೌಕ‌ಉಟ್ಟು ಕೂತು, ಸಂಧ್ಯಾವಂದನೆಯ ಜೊತೆಗೆ ಸಾವಿರದೆಂಟು ಗಾಯಿತ್ರಿ ಮಾಡಿದ. ಇದನ್ನು ಕಂಡು ಅಜ್ಜಿಗೆ ಹಿಡಿಸಲಾರದಷ್ಟು ಹಿಗ್ಗು.

ನಾಲ್ಕನೆಯ ದಿನ ನಡುರಾತ್ರಿಯ ಸಮಯವಾಗಿತ್ತು. ಇದ್ದಕ್ಕಿದ್ದಹಾಗೆಯೇ ಬೀದಿಯ ನಾಯಿಗಳು ಬಗುಳತೊಡಗಿದವು. ಎಲ್ಲಿಂದಲೋ ಖಟಖಟ ಸದ್ದು ಕೇಳಿಸಿತು. ನಾಯಿಗಳ ಕೂಗು ಹೆಚ್ಚಾಯಿತು. ನಡುವೆಯೇ, ‘ತೇರಿ ಭಾನ್‌ಚೋತ್’ ಎಂಬ ಶಬ್ದ. ಖಟಖಟ ಸದ್ದು ಇವರ ಮನೆಯ ಹತ್ತಿರಕ್ಕೇ ಬಂದು, ಯಾರೋ ಮನೆಯ ಬಾಗಿಲನ್ನು ಬಡಿದಂತಾಯಿತು. ಜೊತೆಗೇ, ‘ನಂಜಾ ಬಾಗಿಲು ತೆಗಿ’ ಎಂದು ಕೂಗಿದ್ದು ಕೇಳಿಸಿತು. ಅವರೇ ಮಾವನವರು ಎಂದು ಧ್ವನಿಯಿಂದ ಚೆನ್ನಿಗರಾಯನಿಗೆ ತಿಳಿಯಿತು. ತಾನೇ ಎದ್ದು ಬಾಗಿಲು ತೆಗೆಯಲು ಒಂದು ರೀತಿಯ ಅಂಜಿಕೆ. ಸುಮ್ಮನೆ ಕಂಬಳಿ ಮುಸುಕು ಹಾಕಿಕೊಂಡು ಅದರೊಳಗೆ ಸಹ ಕಣ್ಣು ಮುಚ್ಚಿ ಮಲಗಿಬಿಟ್ಟ.

ಬಂದಿರುವವರು ತಂದೆ ಎಂಬುದು ಅಡಿಗೆಯ ಮನೆಯಲ್ಲಿ ಅಜ್ಜಿಯ ಜೊತೆಯಲ್ಲಿ ಮಲಗಿದ್ದ ನಂಜಮ್ಮನಿಗೆ ತಿಳಿಯಿತು. ಆದರೆ ಗಂಡ ಹೊರಗಿನ ಪಡಸಾಲೆಯಲ್ಲಿ ಮಲಗಿದ್ದುದರಿಂದ, ತಾನೇ ಹೋಗಿ ಬಾಗಿಲು ತೆಗೆಯಲು ನಾಚಿಕೆಯಾಗಿ ಅವಳು ಅಜ್ಜಿಯನ್ನು ತಿವಿದು ಎಬ್ಬಿಸಿದಳು. ಸೀಮೆ ಎಣ್ಣೆಯ ಬುಡ್ಡಿ ಹೊತ್ತಿಸಿ ಬಂದು ಅಜ್ಜಿ ಬಾಗಿಲು ತೆಗೆಯಿತು. ಕುದುರೆಯನ್ನು ಈ ಬಾಗಿಲಿನ ಒಳಗಿನಿಂದಲೇ ಹಿತ್ತಿಲು ಕಡೆಗೆ ಕರೆದುಕೊಂಡು ಹೋಗಿ ಕಟ್ಟಿ ಬಂದು ಕಂಠೀಜೋಯಿಸರು ಕೇಳಿದರು: ‘ಇದ್ಯಾರು ಮಲಗಿರೋದು?’
‘ಚೆನ್ನಿಗರಾಯ ಬಂದಿದಾನೆ. ನಾಕು ದಿನವಾಯ್ತು. ನಿನ್ನೇ ಕಾಯ್ತಿದ್ದ.’
‘ ಚೆನ್ನಿಗರಾಯಾ’-ಎಂದು ತಲೆಯ ಮೇಲೆ ಹೊಡೆದಂತಹ ಧ್ವನಿಯಲ್ಲಿ ಒಂದು ಸಲ ಜೋಯಿಸರು ಕೂಗಿದರು. ‘ನಿದ್ದೆ ಬಂದಿದೆ ಏನೋ, ಎಬ್ಬಿಸ್‌ಬ್ಯಾಡ’ ಎಂದು ಅಜ್ಜಿ ಹೇಳಿದ ಮೇಲೆ ಅವರು ಸುಮ್ಮನಾದರು. ಊಟವಾಗಿದ್ದುದರಿಂದ ತಿನ್ನಲು ಏನೂ ಬೇಡವೆಂದರು. ಒಂದು ಸಲ ಹೊಗೆಸೊಪ್ಪು ಹಾಕಿಕೊಂಡ ಮೇಲೆ, ಹಾಸಿಗೆ ಹಾಕಿಕೊಡಲು ಮಗಳನ್ನು ಎಬ್ಬಿಸದೆ ತಾವೇ ಪಡಸಾಲೆಯಲ್ಲಿ ಚೆನ್ನಿಗರಾಯ ಮಲಗಿದ್ದ ಪಕ್ಕದ ಅಂಕಣದಲ್ಲಿ ಜಾನ ಎಳೆದುಕೊಂಡು ತಮ್ಮ ಬೂಟ್ಸು, ಕೋಟು, ನಿಕ್ಕರುಗಳನ್ನು ತೆಗೆದು ಪಂಚೆಯುಟ್ಟು ಮಲಗಿದರು.

– ೫ –

ಬೆಳಿಗ್ಗೆ ಹತ್ತು ಗಂಟೆಗೆ ಎದ್ದ ಅವರು ಅಳಿಯನ ಸಮಾಚಾರ ವಿಚಾರಿಸಿದರು. ಎಲ್ಲವನ್ನೂ ತಿಳಿಸಿ, ಸಿವಲಿಂಗ ತಮ್ಮಿಂದ ಐವತ್ತು ರೂಪಾಯಿ ವಸೂಲು ಮಾಡಿಕೊಂಡದ್ದನ್ನೂ ಅವನು ಹೇಳಿದಾಗ ಕೇಳಿದರು: ‘ನಿನ್ನ ತಲೇಲಿ ಬುದ್ಧಿ ಇತ್ತೋ ಜೇಡಿಮಣ್ಣು ತುಂಬಿತ್ತೋ? ಶ್ಯಾನುಭೋಗಿಕೆ ರೂಲು ಗೊತ್ತಿಲ್‌ದೋನು ನೀನು ಏನು ಮಾಡ್ತೀಯಾ ಮಣ್ಣಾಗಟ್ಟಿ?’

ಚೆನ್ನಿಗರಾಯ ಸೂಕ್ಷ್ಮವಾಗಿ ನಡುಗುತ್ತಾ ತಲೆ ತಗ್ಗಿಸಿ ಕುಳಿತುಬಿಟ್ಟ. ತಾನು ಅಲ್ಲಿಗೆ ಬಂದ ದಿನವೇ ವಿಷಯವನ್ನು ಹೇಳಿದ್ದ. ಅವನು ಈಗ ಅದನ್ನು ಮಾವನವರಿಗೆ ಹೇಳುವಾಗ ಅಜ್ಜಿ ಹತ್ತಿರವೇ ಇತ್ತು. ಅಳಿಯನನ್ನು ಹೀಗೆ ಅಂದದಕ್ಕೆ ಅಜ್ಜಿಯೇ ಬಾಯಿ ಹಾಕಿ, ‘ಇದೇನೋ ಕಂಟೀ, ಹೀಗಂತೀಯಾ? ಅವನು ಹುಡುಗ, ತಿಳೀಲಿಲ್ಲ. ನಿನ್ ಬಾಯ್ಲಿ ಯಾವಾಗ್ಲೂ ವರಟು ಮಾತೇಯಾ ಬರೂದು? ಹೋಗಿ ಅವನ ಹಕ್ಕು ಅವನಿಗೆ ಕೊಡಿಸಿ ಬಾ’ ಎಂದಿತು.

ಕಂಠೀಜೋಯಿಸರು ಮತ್ತೆ ಮಾತನಾಡಲಿಲ್ಲ. ಎದ್ದು ಸ್ನಾನ ಮಾಡಿ ಸಂಧ್ಯಾವಂದನೆಯ ಮಂತ್ರ ಮುಗಿಸಿ, ಒಳಗೆ ನಂಜಮ್ಮ ಮಾಡಿ ಅಜ್ಜಿ ಹೊರಕ್ಕೆ ತಂದುಕೊಟ್ಟ ಅಕ್ಕಿ ತಾಲಿಪ್ಪಿಟ್ಟು ಬದನೆಕಾಯಿ ಎಣ್ಣೆಗಾಯಿಯನ್ನು ಅಳಿಯನೊಡನೆ ಕೂತು ತಿಂದು ಮುಗಿಸಿದರು. ಒಂದು ಸಲ ಹೊಗೆಸೊಪ್ಪು ಅಗೆದು ನಾಲ್ಕೈದು ಸಲ ಉಗುಳಿ ಬಂದಮೇಲೆ ರಾಮಸಂದ್ರದ ಸ್ಥಳವಿದ್ಯಮಾನದ ಬಗೆಗೆ ನಾಲ್ಕೈದು ಪ್ರಶ್ನೆ ಕೇಳಿದರು. ಚೆನ್ನಿಗರಾಯ ತನಗೆ ತಿಳಿದಂತೆ ಉತ್ತರ ಹೇಳಿದ. ಜೋಯಿಸರು, ಅವರ ಗದ್ದೆ ಹೊಡೆಯುತ್ತಿದ್ದ ಮೂಲೆಮನೆ ಹೊನ್ನನನ್ನು ಕರೆದು ಅವನ ಕೈಗೆ ಒಂದು ಚೀಟಿ ಬರೆದುಕೊಟ್ಟು, ತಕ್ಷಣ ಶ್ರವಣಬೆಳಗೊಳಕ್ಕೆ ಹೋಗಿ ಅವರ ಮಗ ಪೋಲೀಸು ಕಾನಿಸ್ಟೇಬಲ್ ಕಲ್ಲೇಶನಿಗೆ ಮುಟ್ಟಿಸಿ ಜವಾಬು ತರುವಂತೆ ಅಟ್ಟಿದರು. ಜೋಯಿಸರು ಅಳಿಯನ ಜೊತೆ ಮತ್ತೆ ಯಾವ ಮಾತನ್ನೂ ಆಡಲಿಲ್ಲ. ಅವರು ಊರಿಗೆ ಬರುವ ಸುದ್ಧಿ ತಿಳಿದು, ಮಾಟ ಮದ್ದುಗಳಿಗೆ ಕೇಳುವ, ದೆವ್ವ ಪಿಶಾಚಿಗಳಿಗೆ ಕಟ್ಟು ಮಾಡಿಸುವ ಕೆಲವರು ಬಂದು ಮನೆಗೆ ತುಂಬಿಕೊಂಡರು. ಅಳಿಯನಿಗೆ ಬೇಜಾರಾಗುತ್ತದೆಂದು ಅಜ್ಜಿ ಅವನನ್ನು ಅಡಿಗೆಯ ಮನೆಯ ಒಳಕ್ಕೇ ಕರೆದು ಕೂರಿಸಿಕೊಂಡಿತು. ನಂಜಮ್ಮ ಪೆಟ್ಟಿಯ ಮನೆಗೆ ಹೋದಳು.

ಹೊನ್ನ ಮಾರನೆಯ ಬೆಳಿಗ್ಗೆ ಹನ್ನೊಂದು ಗಂಟೆಗೆ ಶ್ರವಣಬೆಳಗೊಳದಿಂದ ಬಂದು ಜೋಯಿಸರಿಗೆ ಒಂದು ಕಾಗದ ಕೊಟ್ಟ. ಅವನು ಮನೆಗೆ ಹೋದಮೇಲೆ ಅವರು ತಮ್ಮ ತಾಯಿಗೆ ಹೇಳಿದರು: ‘ಅಕ್ಕಮ್ಮ, ನಾನು ಇವನು ರಾತ್ರಿ ರಾಮಸಂದ್ರಕ್ಕೆ ಹೋಗ್ತೀವಿ.’
‘ಇದೇನೋ ಇವತ್ತೇ ಹೊರಟಿರಿ, ನಾನು ಏನೂ ತಿಂಡಿಗಿಂಡಿ ಮಾಡಿಲ್ಲ.’
‘ಸಂಜೆ ಹೊತ್ತಿಗ್ ಮಾಡಿಬಿಡು. ರಾತ್ರಿ ಊಟಕ್ಕೆ ಪಾಯ್‌ಸ ಗೀಯ್‌ಸ ಮಾಡು.’
‘ನೀನಂತೂ ಕೊಳ್ಳಿದೆವ್ವದ ಹಾಗೆ ರಾತ್ರಿ ಹೊತ್ತು ತಿರುಗ್ತೀಯಾ. ಅವನನ್ನ ಕತ್‌ಲೇಲಿ ಯಾಕೆ ಕರ್ಕಂಡ್ ಹೋಗ್ತೀಯಾ?”
‘ಅವನೇನು ಹೆಣ್ಣೆ? ಗಂಡು ಅಂತ ತಾನೆ ನನ್ನ ಮಗಳನ್ನ ಕೊಟ್ಟಿರೋದು!’
ಕತ್ತಲೆಂದರೆ ಹೆಚ್ಚು ಭಯವಿಲ್ಲದಿದ್ದರೂ ಕತ್ತಲಿನಲ್ಲಿ ದೆವ್ವ ಪಿಶಾಚಿಗಳು ಸಂಚರಿಸುವ ನೆನಪಾಗಿ ಚೆನ್ನಿಗರಾಯನ ಎದೆ ಸಂಕುಚಿಸಿತು. ಅಲ್ಲದೆ ಚೋಳೇಶ್ವರನ ಗುಡ್ದದ ಹತ್ತಿರ ರಾತ್ರಿಯ ಹೊತ್ತು ಕಿರುಬಗಳು ಇರುತ್ತವಂತೆ. ಅದನ್ನು ಮಾವನವರಿಗೆ ಹೇಳಿದರೆ ತನ್ನನ್ನೇ ಬೈದಾರೆಂಬ ಹೆದರಿಕೆ. ಉಭಯ ಸಂಕಟದಲ್ಲಿ ಸಿಕ್ಕಿ ಅವನು ಸುಮ್ಮನಾದ.

ಅಜ್ಜಿ ಗಡಿಬಿಡಿಯಲ್ಲಿಯೇ ಕೋಡುಬಳೆ ಬೇಯಿಸಿತು. ನಂಜಮ್ಮ ನೆನ್ನೆಯೇ ಚಕ್ಕುಲಿ ಹಿಟ್ಟು ಬೀಸಿದ್ದಳು. ಅದನ್ನೂ ಕರಿದಾಯಿತು. ರಾತ್ರಿ ಪಾಯಸದ ಊಟವಾದಮೇಲೆ ಜೋಯಿಸರು ಕಾಲುಚೀಲ ಬೂಟು, ಬಿಳೀ ನಿಕ್ಕರು, ಕಾಖಿ ಕೋಟು ಹಾಕಿ ತಲೆಗೆ ಕಾಖಿ ಹ್ಯಾಟು ಇಟ್ಟುಕೊಂಡರು. ಅದೇ ದಿನ ಬೆಳಿಗ್ಗೆ ಹಜಾಮರವನು ತಿದ್ದಿ ಕತ್ತರಿಸಿದ್ದ ತುಂಬು ಮೀಸೆ ಮುಖದಲ್ಲಿ ಅಡರಿ ಕಾಣುತ್ತಿತ್ತು. ಕುದುರೆಗೆ ಜೀನು ಲಗಾಮುಗಳನ್ನು ಏರಿಸಿ, ಅವರ ಬಟ್ಟೆ ಬರೆಗಳನ್ನು ಹಸಿಬೆ ಚೀಲಕ್ಕೆ ಹಾಕಿ ಅದನ್ನು ಜೀನಿನ ಮುಂದೆ ಎರಡು ಕಡೆಗೂ ಇಳಿಬಿಟ್ಟರು. ಹೊರಡುವ ಮುನ್ನ ಚೆನ್ನಿಗರಾಯ ಅಜ್ಜಿಗೂ ಮಾವನವರಿಗೂ ನಮಸ್ಕರಿಸಿದ. ‘ನಂಜಾ, ನಿನ್ನ ಗಂಡನಿಗೆ ನಮಸ್ಕಾರ ಮಾಡು ಬಾ’- ಎಂದು ಅಜ್ಜಿ ಕೂಗಿತು. ಅವಳು ಬರಲಿಲ್ಲ. ಎರಡನೆಯ ಸಲ ಕಂಠಿಯೇ ಕೂಗಿದಮೇಲೆ ಬಂದು ದೂರದಿಂದ ನೆಲಮುಟ್ಟಿ ನಮಸ್ಕಾರ ಮಾಡಿ ಹೊರಟುಹೋದಳು. ಹೆಂಡತಿಯನ್ನು ನೋಡಬೇಕೆಂದು ಚೆನ್ನಿಗರಾಯ ಆಶೆಪಟ್ಟನಾದರೂ ಮಾವನವರು ಎದುರಿಗೇ ಇದ್ದುದರಿಂದ ಭಯಪಟ್ಟು ಕಣ್ಣುಗಳನ್ನು ಆ ಕಡೆ ಹೊರಳಿಸಲಿಲ್ಲ.

ರಾತ್ರಿ ಹತ್ತು ಗಂಟೆಯ ಹೊತ್ತಿಗೆ ಅವರು ಮನೆ ಬಿಟ್ಟರು. ಆ ದಿನವೇ ಅಮಾವಾಸ್ಯೆಯಾಗಿದ್ದುದರಿಂದ ಎಲ್ಲೆಲ್ಲಿಯೂ ಗಾಢ ಕತ್ತಲೆ ಕವಿದಿತ್ತು. ಊರಿನಿಂದ ಹೊರಗೆ ಬಂದ ಮೇಲೆ ಜೋಯಿಸರು ಅಳಿಯನಿಗೆ-‘ನೀನೂ ಕುದುರೆ ಹತ್ತು. ಇಬ್ಬರೂ ಕೂತ್ಕಳಾಣ’ ಎಂದರೆ ಅವನು, ‘ನಂಗೆ ಅಭ್ಯಾಸವಿಲ್ಲ. ಹೆದರಿಕೆಯಾಗುತ್ತೆ’ ಅಂದ. ‘ನಾನು ಹಿಡ್‌ಕಂಡಿರ್ತೀನಿ’ ಎಂದರೆ, ‘ಊಹೂಂ. ನೀವೇನಾರ ಅನ್ನಿ. ನನ್ ಕೈಲಿ ಆಗೂದೇ ಇಲ್ಲ’ ಎಂದು ಹಟ ಹಿಡಿದ.

‘ಆಯ್ತು, ನಡೆದೇ ಹೋಗಾಣ್ ಬಾ’-ಎಂದು ಅವರು, ಕಾಳಕತ್ತಲೆಯಲ್ಲೂ ಸ್ಪಷ್ಟವಾಗಿ ದಾರಿ ಕಾಣುತ್ತಿರುವಂತೆ ದಾಪುಗಾಲು ಹಾಕಿದರು. ಹಿಂದೆ ಕುದುರೆ ಬರುತ್ತಿತ್ತು. ಅದರ ಹಿಂದೆ ನಾಲ್ಕು ಮಾರು ದೂರದಲ್ಲಿ ಚೆನ್ನಿಗರಾಯ ಓಡಿ ಓಡಿ ಬರುತ್ತಿದ್ದ. ಮಾವನವರು ಮೌನವಾಗಿ ನಡೆಯುತ್ತಿದ್ದರು. ಅಳಿಯನಿಗೆ ಕಸಿವಿಸಿ ಮಾತ್ರವಲ್ಲ, ಹೆದರಿಕೆಯೂ ಆಗುತ್ತಿತ್ತು. ಕತ್ತಲೆಯಲ್ಲಿ ಸುತ್ತಲೂ ಬೀಸುತ್ತಿದ್ದ ಗಾಳಿ ಸುಂಯ್ ಎನ್ನುತ್ತಿತ್ತು.

– ೬ –

ಅವರು ಕೆರೆ ಏರಿ ದಾಟಿ ಹೂವಿನ ಹಳ್ಳಿ, ಕಟಿಗೆಹಳ್ಳಿಯನ್ನು ಹಿಂದೆ ಹಾಕಿ ಚೋಳೇಶ್ವರನ ಗುಡ್ಡದ ಪಶ್ಚಿಮದ ಕಿಬ್ಬಿಗೆ ಮೊದಲು ಸಿಕ್ಕುವ ಕೆಮ್ಮಣ್ಣುಹಳ್ಳವನ್ನೂ ದಾಟುತ್ತಿದ್ದರು. ಆಗಲೇ ಎಂಟು ಮೈಲಿಯ ದಾರಿ ಕಳೆದಿತ್ತು.

ಕಂಠೀಜೋಯಿಸರು ಮುಂದೆ ಮುಂದೆ ನಡೆಯುತ್ತಿದ್ದರು. ಅವರ ಹಿಂದೆ ಎತ್ತರವಾದ ಬಿಳೀ ಕುದುರೆ. ಹಿಂದೆ ಹಿಂದೆ ಸೋತ ಕಾಲಿನಲ್ಲಿ ಅರ್ಧ ಭಾಗ ಓಡುತ್ತಾ ಅರ್ಧ ಭಾಗ ನಡೆಯುತ್ತಾ ಬರುತ್ತಿದ್ದ ಚೆನ್ನಿಗರಾಯನಿಗೆ ಕುದುರೆಯ ಬಿಳೀ ಬಣ್ಣವು ಕತ್ತಲೆಯಲ್ಲೂ ಮಬ್ಬಾಗಿ ಕಾಣುತ್ತಿತ್ತು. ಮಾವನವರು ಇದ್ದಕ್ಕಿದ್ದಹಾಗೆಯೇ ನಿಂತರು. ಕುದುರೆಯೂ ನಿಂತಿತು. ಇನ್ನೇನು ಕುದುರೆಯ ಹಿಂಭಾಗಕ್ಕೆ ಡಿಕ್ಕಿ ಹೊಡೆಯಬೇಕು ಎನ್ನುವಷ್ಟರಲ್ಲಿ ಅಳಿಯನೂ ನಿಂತ. ಸ್ವಲ್ಪ ದೂರ ಮುಂದೆ ಅವರ ದಾರಿಯ ಬಲಭಾಗದಲ್ಲಿ ಬೆಳಕು ಕಾಣಿಸುತ್ತಿತ್ತು. ‘ಸ್ವಲ್ಪ ಮುಂದೆ ಬಾ’- ಎಂದು ಮಾವ ಕರೆದರು. ಅವನು ಕುದುರೆಯನ್ನು ಬಳಸಿಕೊಂಡು ಅವರ ಹತ್ತಿರ ಹೋದ. ಬೆಳಕಿನ ಕಡೆಗೆ ಕೈ ತೋರಿಸಿ, ‘ಅಲ್ಲಿ ನೋಡು’ ಎಂದರು. ನೋಡಿದುದೇ ತಡ, ಅವನಿಗೆ ಮೈ ಬೆವೆತುಹೋಗಿ ಕೈ ಕಾಲು ನಡುಗಲು ಮೊದಲಾಯಿತು.

ಸುಮಾರು ಸೊಂಟದೆತ್ತರದ ಒಂದು ಕಾಳಿಯ ವಿಗ್ರಹ. ವೀರಮಂಡಿ ಹಾಕಿಕೊಂಡು ನಿಂತಿದೆ. ತೆರೆದ ಬಾಯಿಯಿಂದ ರಕ್ತರಂಜಿತವಾದ ಅದರ ನಾಲಿಗೆಯು ಹೊರಕ್ಕೆ ಇಳಿಬಿದ್ದು ರಕ್ತವನ್ನು ನೆಕ್ಕುತ್ತಿರುವಂತೆ ಇದೆ. ಕೊರಳಿಗೆ ಕೆಂಪು ಕಣಿಗಲೆ ಹೂವಿನ ದೊಡ್ಡ ಮಾಲೆ. ಎರಡು ಕಡೆಗೂ ಮಣ್ಣಿನ ಹಣತೆಯ ದೀಪಗಳು ಕಕ್ಕಡದಂತೆ ಉರಿಯುತ್ತಿವೆ. ಎದುರಿಗೆ ಮೂರು ಕೋಳಿಗಳು ತಲೆ ಕಡಿಯಲ್ಪಟ್ಟು ಬಿದ್ದಿವೆ. ಪಕ್ಕದಲ್ಲಿಯೇ, ಕತ್ತರಿಸಿದ ಬೂದುಗುಂಬಳಕಾಯಿಯ ಎರಡು ಹೋಳುಗಳು; ಮೂರು ಚಿಪ್ಪು ಬಾಳೆಯ ಹಣ್ಣುಗಳು. ಎಲ್ಲೆಲ್ಲಿಯೂ ಯಥೇಚ್ಛವಾಗಿ ಕುಂಕುಮವನ್ನು ಚೆಲ್ಲಾಡಿದೆ. ಅರಿಶಿನ ಕುಂಕುಮವು ಕಾಳಿಯ ಮೈ ಮೇಲೆಲ್ಲ ಸವರಲ್ಪಟ್ಟಿದೆ. ಹಸೀ ನೂಲು, ತಾಮ್ರದ ತಗಡು, ತಾಯಿತ, ಮನುಷ್ಯರದೋ ಅಥವಾ ಪ್ರಾಣಿಗಳದೋ ಎಲುಬು ಸುತ್ತಲೂ ಬಿದ್ದಿವೆ.
ಜಡವಾಗುತ್ತಿದ್ದ ಕತ್ತಲೆಯನ್ನು ಸೀಳಿ ನಿಂತ ಕೆಂಡದಂತೆ ಕಾಣುತ್ತಿತ್ತು ಅದು.
‘ನೋಡ್‌ದ್ಯಾ?’-ಮಾವನವರು ಕೇಳಿದರು.
‘ಹೂಂ’-ಎಂದು ಹೇಳುವುದಕ್ಕೂ ಅಳಿಯನ ನಾಲಗೆ ತೊದಲುತ್ತಿತ್ತು.
‘ನೋಡು, ಅಲ್ಲಿಗೆ ಹೋಗಿ ಆ ಬಾಳೆಹಣ್ಣಿನ ಚಿಪ್ಪುಗಳನ್ನು ತಗಂಡು ಬಾ. ಆ ವಿಗ್ರಹದ ಎದೆಗೆ ಒಂದು ಸಲ ಒದ್ದು ಕೆಡವು. ನಿನಗೆ ದುಡ್ಡು ಸಿಕ್ಕುತ್ತೆ.’

ಈ ಮಾತನ್ನು ಕೇಳಿ ಅವನು ಥರಗುಟ್ಟಿದ. ‘ಬ್ಯಾಡಿ ಬ್ಯಾಡಿ’-ಎಂದು ತೊದಲುತ್ತಾ ಹೇಳಿದ. ‘ಹಾಗಾದ್ರೆ ನೀನು ಕುದುರೆ ಲಗಾಮು ಹಿಡ್‌ಕೊ’-ಎಂದು ಅವರು ಅದನ್ನು ಅವನ ಕೈಲಿ ಇಟ್ಟು ಮುಂದೆ ಹೋದರು. ನೇರವಾಗಿ ಹತ್ತಿರ ಹೋಗಿ ಬಾಳೆಹಣ್ಣಿನ ಚಿಪ್ಪುಗಳನ್ನು ಕೈಗೆ ತೆಗೆದುಕೊಂಡರು. ಎರಡು ನಿಮಿಷ ಪರೀಕ್ಷಿಸುವವರಂತೆ ವಿಗ್ರಹವನ್ನು ನೋಡಿ, ನಂತರ ಅದರ ಭುಜಗಳು, ನಾಲಗೆ, ತಲೆ, ವೀರಮಂಡಿಯ ಚಿಪ್ಪುಗಳ ಮೇಲೆಕೈಹಾಕಿ ಅದೇನೋ ತೆಗೆದುಕೊಂಡರು. ಬೆಳ್ಳಿಯ ರೂಪಾಯಿ ನಾಣ್ಯಗಳಿರಬೇಕು. ನಂತರ ತಮ್ಮ ಎಡಗಾಲಿನ ಬೂಟ್ಸಿನಿಂದ ಅದರ ಎದೆಗೆ ಒದೆದರು. ಅದು ಮುರಿದು ಬಿತ್ತು. ಬಿದ್ದ ಜಾಗದಲ್ಲಿಯೇ ಕೆಲವು ನಾಣ್ಯಗಳು ಉದುರಿದವು. ಅದರೊಡನೆಯೇ ಒಂದು ಚಿನ್ನದ ಕಾಸೋ ಎಂಥದೋ ಇದ್ದಂತೆ ತೋರಿತು. ಅವೆಲ್ಲವನ್ನೂ ಆರಿಸಿ ಜೇಬಿಗೆ ಹಾಕಿಕೊಂಡು ಹಿಂತಿರುಗಿ ಬಂದು ಕುದುರೆಯ ಲಗಾಮು ಹಿಡಿದುಕೊಂಡು, ‘ನಡಿ’ ಎಂದು ಹೇಳಿ ಮುಂದೆ ಹೊರಟರು.

ಈಗಲೂ ಕಠೀಜೋಯಿಸರು ಮುಂದೆ, ನಡುವೆ ಕುದುರೆ, ಚೆನ್ನಿಗರಾಯ ಹಿಂದೆ ಆದರು. ಮಾರಿಯ ವಿಗ್ರಹದ ಕಡೆಗೇ ಅವನು ಉಳಿದ. ಆ ಕಡೆಗೆ ಹಿಂತಿರುಗಿ ನೋಡಲು ಭಯ. ನೋಡದಿದ್ದರೆ ಅದು ತನ್ನನ್ನೇ ಹಿಂಬಾಲಿಸಿ ಬರುತ್ತಿದ್ದು ಬೆನ್ನಮೇಲೆ ಅಪ್ಪಳಿಸಿ ಕುತ್ತಿಗೆ ಹಿಡಿದೀತೆಂಬ ಹೆದರಿಕೆ. ಜೊತೆಗೆ ಮೌನವು ಮೊದಲಿನಂತೆಯೇ ಗುಂವ್‌ಗುಡುತ್ತಿತ್ತು. ಮಾವನವರು ಮಾತನಾಡದೆ ದೆವ್ವದಂತೆ ದುಡು ದುಡು ವೇಗದಲ್ಲಿ ನಡೆಯುತ್ತಿದ್ದಾರೆ. ಏನಾದರೂ ಮಾತನಾಡಿದರೆ ಭಯ ಕಡಿಮೆಯಾದೀತೆಂದು ಅವನು ಕೇಳಿದ: ‘ಅದ್ಯೆದ್ಯದ್ಯಂತದು?’
‘ಇವತ್ತು ಅಮಾವಾಸ್ಯೆಯಲ್ವೆ?’
‘ಅದದದುಕ್ಕೇನ್ ಮಾಮ್ಮಾಡಿದಾರೆ?’
‘ಯಾರಿಗೋ ಮಾಟ ಮಾಡ್ಸಿದಾರೆ. ಕರೀಗೆರೆ ವೀರಾಚಾರಿ ಅಂತ ಇದಾನೆ. ಅವನೇ ಇಂಥಾದೆಲ್ಲಾ ಮಾಡೋನು. ಈಗ ಮಾಡ್ಸೋರ ಎದುರಿಗೆ ಹೀಗೆಲ್ಲ ಮಾಡ್ಸಿ ಅವರ ಜೊತೇಲೇ ಅವ್ನೂ ಹೋಗಿದಾನೆ. ಆಮ್ಯಾಲೆ ಬಂದು ವಿಗ್ರಹದೊಳಗೆ ನಾಲಿಗೆ ಮ್ಯಾಲೆ, ಭುಜದ ಮ್ಯಾಲೆ, ಇಟ್ಟ ದುಡ್ಡು ಬಾಳೆಹಣ್ಣು ಯಲ್ಲಾನೂ ತಗಂಡ್ ಹೋಗ್ತಾನೆ. ಇವತ್ತು ವಾಪಸ್ ಬಂದ್ ನೋಡ್ಲಿ, ಅವನಿಗೆ ಸಿಕ್ಕುತ್ತೆ ಮಣ್ಣಾಗಟ್ಟಿ.’
‘ಆ ಆ ಅದುನ್ನ ಮುಟ್ಟಿ ತಗಂಡ್ರಲಾ, ನಿನಿನಿಮ್ಗೇನೂ ಆಗುಲ್ವೆ?’
‘ಎದೆ ಮುಟ್ಟಿ ನೋಡ್ಕಾಬೇಕು. ಗಟ್ಟಿಯಾಗಿದ್ರೆ ಒಂದ್ ಕೂದ್ಲೂ ಕಿತ್ಕಳಾಕ್ ಆಗುಲ್ಲ. ಇಲ್ದೆ ರಕ್ತ ಕಾರ್ಕಂಡ್ ಬಿದ್‌ಸಾಯೂವಂಥ ಹೆಣ್ಣಿಗ್ ನನ್‌ಮಕ್ಳೂ ಇರ್ತಾರೆ.’

ಕೊನೆಯ ಮಾತನ್ನು ಕೇಳಿ ಚೆನ್ನಿಗರಾಯನಿಗೆ ಹೆದರಿಕೆಯಾಯಿತು. ಅಷ್ಟರಲ್ಲಿ ಗುಡ್ಡದ ತಿಟ್ಟು ಕಳೆದು, ಮಾಟ ಮಾಡಿಸಿದ್ದ ಆ ಸ್ಥಳವು ಕಣ್ಣಿಗೆ ಕಾಣದಷ್ಟು ಹಿಂದೆ ಹೋಗಿತ್ತು. ಅವನು ಒಂದು ಸಲ ಧೈರ್ಯ ಮಾಡಿ ಹಿಂದಕ್ಕೆ ತಿರುಗಿ ನೋಡಿದ. ಕತ್ತಲಿನ ಕಪ್ಪು ವಿನಾ ಮತ್ತೆ ಏನೂ ಕಾಣುತ್ತಿರಲಿಲ್ಲ. ಆಗಲೇ ಗುಡ್ಡದ ಇಳಿವು ಪ್ರಾರಂಭವಾಗಿತ್ತು. ಮುತ್ತುಗದ ಮರಗಳ ಹಳ್ಳವೂ ಕಳೆಯುತ್ತಾ ಬಂದಿತ್ತು. ಇಡೀ ದಾರಿಯು ಚಿರಪರಿಚಿತವಾಗಿದ್ದಂತೆ ಮಾವನವರು ಧಡ ಧಡ ಧಡನೆ ನಡೆದು ಸಾಗುತ್ತಿದ್ದರು.

– ೭ –

ಇಬ್ಬರೂ ಮನೆ ಮುಟ್ಟುವ ವೇಳೆಗೆ ನಡುರಾತ್ರಿ ಕಳೆದು ಎರಡು ಗಂಟೆಯಾಗಿತ್ತು. ಕಂಠೀಜೋಯಿಸರ ಮಗ ಪೋಲೀಸ್ ಕಾನಿಸ್ಟೇಬಲ್ ಕಲ್ಲೇಶ ತನ್ನ ಜೊತೆಯ ಒಬ್ಬ ದಫೇದಾರನನ್ನು ಕರೆದುಕೊಂಡು ಗಂಗಮ್ಮನ ಮನೆಗೆ ಬಂದಿದ್ದ. ತಮ್ಮ ಬೀಗ ಕಲ್ಲೇಶನ ಗುರುತು ಗಂಗಮ್ಮನಿಗೂ ಅಪ್ಪಣ್ಣಯ್ಯನಿಗೂ ಹತ್ತಿತ್ತು. ಅವರಿಬ್ಬರೂ ಬಂದು ಅರ್ಧ ಗಂಟೆ ಮಾತ್ರ ಆಗಿತ್ತು. ಇಬ್ಬರೂ ಕಾಖಿ ದಿರಿಸು ಹಾಕಿ, ಕಾಲಿಗೆ ಬ್ಯಾಂಡೇಜು ಬಿಗಿದು, ಪೋಲೀಸು ಬೂಟು ಕಟ್ಟಿದ್ದರು. ಬೆನ್ನಿನ ಮೇಲಿಂದ ಇಳಿಯುವ ಉಣ್ಣೆಯ ಪೋಲೀಸ್ ಓವರ್‌ಕೋಟು ಹಾಕಿ ಕೈಲಿ ಹಂಟರ್‌ಕೇನ್ ಹಿಡಿದಿದ್ದರು. ಈ ಹೊತ್ತಿನಲ್ಲಿ ಇವರಿಬ್ಬರೂ ಬಂದ ಕಾರಣ ಗಂಗಮ್ಮನಿಗೆ ತಿಳಿಯಲಿಲ್ಲ, ಅವರೂ ಹೇಳಲಿಲ್ಲ. ಬಂದವರಿಗೆ ಬಿಸಿಯಾಗಿ ತಾಲೀಪಿಟ್ಟು ಮಾಡಿಕೊಟ್ಟಳು. ಅವಳಿಗೆ ಕಾಫಿ ಕಾಯಿಸಲೂ ಬರದು. ಅಷ್ಟು ಹೊತ್ತಿನಲ್ಲಿ ಹಾಲೂ ಇರಲಿಲ್ಲ. ತಾವೇ ತಂದಿದ್ದ ಕಾಫೀಪುಡಿ ಹಾಕಿ ಅವರು ಬೆಲ್ಲದ ಡಿಕಾಕ್ಷನ್ ಕುಡಿದರು. ಚೆನ್ನಿಗರಾಯ ಮಾವನವರೊಡನೆ ಇನ್ನೇನು ಮನೆಗೆ ಬರುತ್ತಾನೆಂದು ಅವರಿಂದಲೇ ತಿಳಿಯಿತು.

ತಮ್ಮ ಕುದುರೆ ಮತ್ತು ಅಳಿಯನ ಸಮೇತ ಬಂದ ಕಂಠೀಜೋಯಿಸರು ಮಗನಿಗೆ ಶ್ಯಾನುಭೋಗಿಕೆಯ ವಿಷಯ ವಿವರಿಸಿದರು. ‘ಈಗಲೇ ನಡಿ, ಛಾರ್ಜು ಕೊಡಿಸಿಬಿಡಾಮ’- ಎಂದು ಅವರು ಹೇಳಿದಾಗ ಕಲ್ಲೇಶನ ಜೊತೆ ಬಂದಿದ್ದ ದಫೇದಾರರು ಕೇಳಿದರು: ಹ್ಯಾಗೆ ಕೊಡಿಸೋದು?’
‘ನೀವು ಸುಮ್ಮನೆ ನನ್ನ ಜೊತೆ ಬನ್ನಿ’-ಎಂದು ಕಠೀಜೋಯಿಸರು ಹೊರಗೆ ಬಂದು ಕುದುರೆ ಏರಿ ಅಳಿಯನಿಗೆ ಹೇಳಿದರು: ‘ನಡಿ, ಅವರ ಮನೆ ತೋರ್ಸು.’
ಚೆನ್ನಿಗರಾಯನಿಗೆ ಏನೂ ತಿಳಿಯಲಿಲ್ಲ-ಒಂದು ರೀತಿಯ ಭಯವಾಯಿತು. ಏಕೆ ಎಂದು ಕೇಳಿದರೆ ಅವರು ಏನನ್ನುವರೋ ಎಂಬ ಮತ್ತೊಂದು ರೀತಿತಿಯ ಹೆದರಿಕೆ ಬೇರೆ. ಅವನು ಮುಂದೆ ಮುಂದೆ ನಡೆದ. ಹಿಂದೆ ಕುದುರೆಯ ಮೇಲೆ ಕಂಠೀಜೋಯಿಸರು. ಎರಡು ಪಕ್ಕಕ್ಕೂ ಇಬ್ಬರು ಪೋಲೀಸು ಆಸಾಮಿಗಳು. ಸಿವಲಿಂಗೇಗೌಡನ ಮನೆಯ ಮುಂದೆ ಬಂದು ನಿಂತಮೇಲೆ ಜೋಯಿಸರು, ‘ಬಾಗಿಲು ಬಡಿದು ಅವನನ್ನು ಎಬ್‌ಸು’ ಎಂದರು.
ಚೆನ್ನಿಗರಾಯ ಬಾಗಿಲು ಬಡಿದಾಗ ಒಳಗಿನಿಂದ ಸಿವಲಿಂಗನ ಹೆಂಡತಿ-‘ಯಾರೂ?’ ಎಂದು ಕೂಗಿದಳು.
‘ನಾನು ಕಣ್ ಶಿವಮ್ಮ, ಸಿವಲಿಂಗೇಗೌಡ್ರುನ್ನ ಎಬ್‌ಸು-ಎಂದು ಚೆನ್ನಿಗರಾಯ ಹೇಳುತ್ತಿರುವಷ್ಟರಲ್ಲಿ ಒಳಗಿನಿಂದ ಎಚ್ಚರವಾಗಿ ಅವನೇ ಬಂದು ಬಾಗಿಲು ತೆಗೆದು ನಿದ್ದೆಗಣ್ಣಿನಲ್ಲಿ, ‘ಇದೇನಯ್ಯಾ ಈಟ್ ಹೊತ್ನಲ್ಲಿ ನಿದ್ದೆ ಕೆಡುಸ್ತೀಯಾ, ನಿಂಗ್ಯಾರೂ ಏಳೋರ್ ಕೇಳೋರ್ ಇಲ್ವಾ?’ ಎನ್ನುತ್ತಿದ್ದವನೇ, ಭಾರೀ ಕುದುರೆಯ ಭೀಮಸವಾರರನ್ನೂ ಪೋಲೀಸರನ್ನೂ ಕಂಡ ತಕ್ಷಣ ಎದೆಯ ಹೊಡೆತ ಗಕ್ಕನೆ ನಿಂತಂತೆ ಆಗಿ ಮಾತನ್ನು ಅಲ್ಲಿಗೇ ನಿಲ್ಲಿಸಿದ. ಕುದುರೆಯ ಸವಾರರು-‘ದಫೇದಾರ್, ಇವನ್ನ ಹಿಡಿದು ಅರೆಸ್ಟ್ ಮಾಡಿ’ ಎಂದು ಗತ್ತಿನಿಂದ ಹೇಳಿದರು. ಪೋಲೀಸಿನವರಿಬ್ಬರೂ ಹೋಗಿ ಅವನ ತೋಳುಗಳನ್ನು ಹಿಡಿದುಕೊಂಡರು. ಒಳಬಾಗಿಲಿನಲ್ಲಿಯೇ ಇದ್ದ ಶಿವಮ್ಮ, ‘ಅಯ್ಯೋ, ಕೆಟ್ನಲ್ಲೋ ಶಿವನೇ, ನನ್ ಗಂಡ ಏನ್ ಮಾಡಿದ್ದ ತ್ಯಪ್ಪ’ ಎಂದು ಕೂಗಿಕೊಳ್ಳುವಷ್ಟರಲ್ಲೇ ಕಲ್ಲೇಶ, ‘ಬಾಯಿ ಬಿಟ್ರೆ ನಿನ್ನೂ ಹಿಡ್‌ಕಂಡು ಹೋಗಿ ಬೇಡಿ ಹಾಕ್ತೀವಿ. ಮುಚ್ಚು’ ಎಂದ. ಅವಳು ತನ್ನ ಎರಡು ಕೈಗಳನ್ನೂ ಎತ್ತಿ ಬಾಯಮೇಲೆ ಇಟ್ಟು ಅಮುಕಿಕೊಂಡಳು.

ಇವರು ಕುದುರೆಯಿಂದ ಇಳಿದು-‘ಒಳಗೆ ನಡೀರಿ’ಎಂದರು. ಸಿವಲಿಂಗನನ್ನು ದಬ್ಬಿಕೊಂಡು ಪೋಲೀಸಿನವರು ಒಳಗೆ ನಡೆದರು. ಚೆನ್ನಿಗರಾಯನೊಡನೆ ಬಂದ ಕುದುರೆ ಸವಾರರು ಒಳಗಿನಿಂದ ಬಾಗಿಲು ಮುಚ್ಚಿ ಸಿವಲಿಂಗನನ್ನು ಕೇಳಿದರು: ‘ಹುಟ್ಟಿದ ವರ್ಷದ ಲೆಕ್ಕ ತರುಸ್ತೀನಿ ಅಂತ ಐವತ್ತು ರೂಪಾಯಿ ತಿಂದಿದೀಯಾ. ನಮಗೆ ಕಂಪ್ಲೇಂಟು ಬಂದಿದೆ. ನಿನ್ನ ಫಾಶಿ ಹಾಕಿಸ್‌ಬಿಡ್ತೀವಿ ಬದ್ಮಾಷ ಬೋಳೀಮಗನೆ.’

ಚೆನ್ನಿಗರಾಯ, ‘ಅ ಅ ಅದ್ ಹೋಕ್ಕಳ್ಳಿ ಬಿಡಿ’ ಎನ್ನುತ್ತಿದ್ದಂತೆಯೇ ಸವಾರರು ಅವನ ಕಡೆಗೆ ತಿರುಗಿ-‘ನೀನು ಬಾಯಿ ಮುಚ್ಚು’ಎಂದರು. ಅವನೂ ಶಿವಮ್ಮನಂತೆ ಕೈಗಳನ್ನು ಬಾಯಿಯ ಮೇಲೆ ಇಟ್ಟುಕೊಂಡ. ಅವರು ಸಿವಲಿಂಗನ ಕಡೆ ತಿರುಗಿ, ‘ಇದು ರಾಜಾ ಸರ್ಕಾರ. ದಿವಾನ್ ಮಿರ್ಜಾಸಾಹೇಬರ ಹುಕುಂ. ಗಾಂಚಾಲೀ ಚಲ್ತಾನೈ. ವಾರೇ ಬಾಂಚೋತ್ ಭಾಡ್‌ಕಾ ಭೋಸೂಡೀಮಗನೆ.’ ಸರ್ಕಾರದ ಹೆಸರು ಹೇಳಿ ತಿಂದಿದೀಯಾ. ನಿನ್ನ ಗಲ್ಲಿಗೇರಿಸ್ಬೇಕು ಅಂತ ಯುರೋಪಿಯನ್ ಇಂಗ್ಲೀಷ್ ದೊರೆಗಳಿಂದ ಆರ್ಡರ್ ಬಂದಿದೆ. ಇಸ್ಕೋ ಹಾಥ್ ಬೇಡಿ ಲಗಾವೋ’ ಎನ್ನುತ್ತಿದ್ದಂತೆ ಸಿವಲಿಂಗ ಥರಥರ ನಡುಗಿ ಹೋದ. ಅವನ ಹೆಂಡತಿ ಹಾಗೆಯೇ ನೆಲಕ್ಕೆ ಕುಸಿದು ಇವರಿಗೆ ಅಡ್ಡಬಿದ್ದಳು. ‘ಆ ಐವತ್ತು ಬೆಳ್ಳಿಯ ರೂಪಾಯ್ ತಗಂಡ್ ಬಾ’-ಎಂದು ಸವಾರರು ಹೇಳಿದರು. ಸಿವಲಿಂಗ-‘ಕ ಕ ಕಬ್ಬುಣದ್ ಪೆಟ್ಟಿಗೇಲೈತೆ, ಬಾ ಬಾ ಬಾ ಬಾಕುಲ್ ತಿಗ್‌ದು ಕೊಡೇ’ ಎಂದ.ಅವಳು ಹಾಸಿಗೆಯ ಕೆಳಗಿದ್ದ ಬೀಗದ ಕೈಯಿಂದ ಪೆಟ್ಟಿಗೆಯ ಬೀಗ ತೆಗೆದು ಐವತ್ತು ಬೆಳ್ಳಿಯ ರೂಪಾಯಿಗಳನ್ನು ಎಣಿಸಿ ತಂದು ಒಪ್ಪಿಸಿದಳು. ‘ಇನ್ಸ್‌ಪೆಕ್ಟರ್, ಈ ದುಡ್ದು ತಗಂಡು ಜೇಬಿನಲ್ಲಿ ಇಟ್ಕಳಿ. ನಾಳೆ ತ್ರೆಜರಿಗೆ ಕಟಬೇಕು’ ಎಂದು ಸವಾರರು ಹೇಳಿದ ತಕ್ಷಣ ದಫೇದಾರರು ಅದನ್ನು ಜೇಬಿಗೆ ಸೇರಿಸಿದರು.
ಸವಾರರು ಮುಂದಿನ ಪಾಯಿಂಟಿಗೆ ಬಂದರು: ‘ಬರಾವರ್ದಾರನಿಗೆ ಶ್ಯಾನುಭೋಗ್‌ಕೆ ಕೊಡಲ್ಲ ಅಂತ ತರ್ಲೆ ಮಾಡ್ತೀಯಾ ಯಾಕೋ ಬೇಕೂಫ್ ಬೋಸುಡಿ ಬಾನ್‌ಚೋತ್ ಭಾಡ್‌ಕೋವ್ ಬೋಳೀಮಗನೆ?’
‘ಇ ಇ ಇಲ್ಲ……’ ಎಂದು ಸಿವಲಿಂಗ ತೊದಲಿದ.
‘ಅವನ ಕೈ ಬಿಡಿ’-ಸವಾರರು ಹುಕುಂ ಮಾಡಿದರು. ಪೋಲೀಸರು ಅವನ ತೋಳುಗಳನ್ನು ಬಿಟ್ಟಮೇಲೆ, ‘ಒಂದು ಗಜ ಕಾಗದ, ದೌತಿ ಸ್ಟೀಲು ತಗಂಡು ಕೂತುಕೊ’ ಎಂದರು.
ಸಿವಲಿಂಗ ಹಾಗೆಯೇ ಮಾಡಿದ ಮೇಲೆ ಒಂದು ಸಲ ಹುಲಿಯಂತೆ ಹೂಂಕರಿಸಿ ಹೇಳಿದರು: ‘ನಾನು ಹೇಳ್ದ ಹಾಗೆ ಬರೀಬೇಕು, ಬಾನ್‌ಚೋತ್. ಹೂಂ. ಸನ್ ಸಾವಿರದ ಒಂಬೈನೂರ……ರಲ್ಲು ಮೈಸೂರು ಸಂಸ್ಥಾನದ ಮಹಾರಾಜ ಸರ್ಕಾರದ ತುಮಕೂರು ಜಿಲ್ಲಾ ತಿಪಟೂರು ತಾಲ್ಕು ಕಂನ ಕೆರೆ ಹೋಬಳಿ ರಾಮಸಂದ್ರ ಗ್ರಾಮದ ಬರಾವರ್ದಾರ್ ಫೌತಿ ರಾಮಣ್ಣನವರ ಹಿರೀಮಗ ಹಕ್ಕುದಾರ ಶ್ಯಾನುಭೋಗ್ ಚೆನ್ನಿಗರಾಯರಿಗೆ ಸದರಿ ಜಿಲ್ಲಾ ಸದರಿ ಹೋಬಳಿ ಸದರಿ ಗ್ರಾಮದ, ಬದಲಿ ಶ್ಯಾನುಭೋಗನಾಗಿದ್ದ ಸಿವಲಿಂಗೇಗೌಡನಾದ ನಾನು ಬರೆದುಕೊಟ್ಟ ಛಾರ್ಜುಪಟ್ಟಿ ಏನೆಂದರೆ- ಈ ತಹಲ್‌ವರೆವಿಗೆ ನೋದಿದ ಫಿರ್ಕಾ ಶ್ಯಾನುಭೋಗಿಕೆ ನಿಮ್ಮದೇ ಆಗಿದ್ದು ನೀವು ಮೈನರ್ ಆಗಿದ್ದುದರಿಂದ ನಾನು ನೋಡುತ್ತಿದ್ದು ಈಗ ನೀವು ಮೆಜಾರ್ಟಿಗೆ ಬಂದು ಒಂದೂವರೆ ವರ್ಷವಾಗಿರುವುದರಿಂದ ಸದರಿ ಛಾರ್ಜನ್ನು ಈ ದಿನ ನಿಮಗೆ ಕೊಟ್ಟು, ದಾಖಲು ಲೆಕ್ಕಪತ್ರವೆಲ್ಲ ತಮಾಮ್ ನೀವು ಜಡ್ತಿಮಾಡಿಕೊಂಡ ಮೇರೆಗೆ ವಹಿಸಿಕೊಟ್ಟಿದ್ದೇನೆ ಎಂಬುದರಲ್ಲಿ ನನ್ನ ತಕರಾರು ಏನೂ ಇಲ್ಲ. ಅಷ್ಟೇ ಅಲ್ಲದೆ ನನಗೆ ಸಖತ್ ಖಾಯಿಲಾ ಆಗಿ ಸರ್ಕಾರಿಕೆಲಸ ನೋಡೋಕೆ ಸಾಧ್ಯವಿಲ್ಲವಾಗಿರುವುದರಿಂದ ಸರ್ಕಾರದಿಂದ ಮೇಲಿನ ಹುಕುಂ ಬರುವ ಮೊದಲೇ ನಿಮಗೆ ಎಲ್ಲಾ ವಹಿಸಿದೀನಿ. ನೀವು ಎಲ್ಲಾನೂ ನೋಡಿಕೊಳ್ಳೂದು-ಎಂದು ಬರೆದುಕೊಟ್ಟ ಛಾರ್ಜು ಪಟ್ಟಿ ವಿವರಗಳು: ಒಂದನೇ ನಂಬರ್ ಖಾತೇವಾರ್ ಪತ್ರಿಕೆ, ಎರಡನೇ ನಂಬರ್ ಬಂಜರ್‌ತಖ್ತೆ ಇತ್ಯಾದಿ ಬಾರಾ ನಮೂನೆ ಲೆಕ್ಕಪತ್ರಗಳು. ಬದಲಿ ಶ್ಯಾನುಭೋಗ್ ಸಿವಲಿಂಗೇಗೌಡನ ರುಜು.’
ಛಾರ್ಜುಪಟ್ಟಿಯನ್ನು ತಮ್ಮ ಕೈಗೆ ತೆಗೆದುಕೊಂಡಮೇಲೆ ಅವರು ಹೇಳಿದರು: ‘ಲೆಕ್ಕದ ಪುಸ್ತಕ ಎಲ್ಲ ತಂದಿಡು.’ ಸಿವಲಿಂಗ ಪುಸ್ತಕಗಳ ಗಂಟನ್ನೆಲ್ಲ ತಂದು ಮುಂದೆ ಇಟ್ಟಮೇಲೆ ಹೇಳಿದರು: ‘ಇವುನ್ನ ನೀನು ನಿನ್ನ ಹೆಂಡತಿ ಹೊತ್ಕಂಡ್‌ಬಂದು ಇವರ ಮನೆಗೆ ಇಡಿ.’

ಸಿವಲಿಂಗ, ಅವನ ಹೆಂಡತಿ, ಅಷ್ಟರಲ್ಲಿ ಎದ್ದು ಹೆದರಿ ನಡುಗುತ್ತಾ ನಿಂತಿದ್ದ ಅವನ ಮಕ್ಕಳು, ಎಲ್ಲರೂ ಲೆಕ್ಕದ ಕಟ್ಟುಗಳನ್ನು ಹೊತ್ತುತಂದು ಚೆನ್ನಿಗರಾಯನ ಮನೆಗೆ ಹಾಕಿದಮೇಲೆ-‘ಬಾಲ ಅಳ್ಳಾಡಿಸಿದ್ರೆ ನಿಕಾಲ್ ಮಾಡಿಬಿಡುತ್ತೇನೆ. ಎರಡೂ ಮುಚ್ಕಂಡು ಮನೆಗೆ ಹೋಗಿ ಮಲಕ್ಕೊ. ಪೋಲೀಸಿನೋರು ಇಲ್ಲೇ ಗಸ್ತು ಹೊಡೀತಾರೆ’ ಎಂದರು.

ಸಿವಲಿಂಗ ಹೆಂಡ್ತಿ ಮಕ್ಕಳೊಡನೆ ಮನೆಗೆ ಹೋಗಿ ಬಾಗಿಲು ಹಾಕಿಕೊಂಡು ಮಲಗಿದ. ಅನಿರೀಕ್ಷಿತವಾಗಿ ಹೀಗೆ ಸ್ವಪ್ನದಲ್ಲಿ ನಡೆದುಹೋದಂತೆ ಇಷ್ಟೆಲ್ಲ ಆದುದು ಅವನನ್ನು ನಡುಗಿಸಿಬಿಟ್ಟಿತ್ತು. ಆದರೆ ತಮಗೆ ಹೆಚ್ಚಿಗೆ ಯಾವ ತೊಂದರೆಯೂ ಆಗಲಿಲ್ಲವೆಂದು ಅವನ ಹೆಂಡತಿ ಸಮಾಧಾನಪಡಿಸಿದಳು.
ಪೋಲೀಸಿನವರಿಬ್ಬರೂ ಮಲಗಿ ನಿದ್ದೆ ಮಾಡಿದರು. ಗಂಗಮ್ಮ, ಅಪ್ಪಣ್ಣಯ್ಯ, ಚೆನ್ನಿಗರಾಯರು ಅಡಿಗೆಯ ಮನೆಯಲ್ಲಿ ಮಲಗಿದರು. ಚೆನ್ನಿಗರಾಯನಿಗೆ ನಿದ್ದೆ ಬರಲಿಲ್ಲ. ಏನೋ ಒಂದು ರೀತಿಯ ಗಾಬರಿಯಿಂದ ಜ್ವರ ಬಂದಂತೆ ಆಗಿತ್ತು. ಕಂಠೀಜೋಯಿಸರು ರಾತ್ರಿ ಮಲಗಿದರೋ ಇಲ್ಲವೋ ಯಾರೂ ನೋಡಲಿಲ್ಲ. ಅವರಿಗೆ ಹಸಿವಾಗಿದ್ದಿರಬಹುದು. ಬೆಳಿಗ್ಗೆ ಏಳುವ ವೇಳೆಗೆ ಅವರು, ರಾತ್ರಿ ಮಾಟದ ಚೌಡಿಯ ಹತ್ತಿರದಿಂದ ತಂದ ಬಾಳೆ ಹಣ್ಣಿನಲ್ಲಿ ಎರಡು ಚಿಪ್ಪನ್ನು ಸುಲಿದು ತಿಂದು ಸಿಪ್ಪೆಯನ್ನು ಕಂಬದ ಹತ್ತಿರ ಗುಡ್ಡೆಹಾಕಿದ್ದರು. ಬೆಳಿಗ್ಗೆ ಏಳು ಗಂಟೆಗೆ ಅಪ್ಪಣ್ಣಯ್ಯನನ್ನು ಕೂಗಿ, ಕುಳವಾಡಿಯನ್ನು ಕರೆದುಕೊಂಡು ಬರುವಂತೆ ಹೇಳಿದರು. ಅವನು ಬಂದ ತಕ್ಷಣ ಹುಕುಂ ಮಾಡಿದರು: ‘ತಮ್ಮಟಿ ತಗಂಡು ಊರಿನಲ್ಲೆಲ್ಲ, ಶ್ಯಾನುಭೋಗಿಕೇನ ಹಕ್ಕುದಾರ್ ಚೆನ್ನಿಗರಾಯನಿಗೆ ಕೊಟ್ಟೈತೆ. ಯಲ್ಲಾ ಅವರು ಹೇಳ್ದಂಗೆ ಕೇಳ್ಬೇಕು. ಇಲ್ದೆ ಇದ್ರೆ ತಕ್ಸೀರ್ ಆಗುತ್ತೆ ಅಂತ ಡಂಗುರ ಹಾಕು. ಪೋಲೀಸ್ನೋರು ಒಳಕ್ಕೆ ಮಲಕ್ಕಂಡಿದಾರೆ. ಅವರ ಟೋಪಿ ಕಂಬದ ತಾವ ಐತೆ, ಕಾಣ್ತದಾ?’

ಕುಳವಾಡಿ ಬಾಗಿ ಕೈಮುಗಿದು ಹೊರಟು ಹೋದ. ಚೆನ್ನಿಗರಾಯರು ಶ್ಯಾನುಭೋಗರಾದುದು ಅರ್ಧ ಗಂಟೆಯಲ್ಲಿಯೇ ಊರಿನಲ್ಲೆಲ್ಲಾ ಡಂಗುರವಾಯಿತು. ಅದೇ ಫಿರ್ಕದ ಇತರ ಊರುಗಳಾದ ಕುರುಬರಹಳ್ಳಿ, ಲಿಂಗಾಪುರಗಳಿಗೂ ಸಾರಲು ಕುಳುವಾಡಿ ಹೋದ.

ಹನ್ನೊಂದು ಗಂಟೆಗೆ ಎದ್ದಮೇಲೆ ಪೋಲೀಸಿನವರಿಗೆ ಬಿಸಿನೀರಿನ ಸ್ನಾನ, ಹಾಲು ಬೆಲ್ಲದ ಕಾಫಿಗಳಾಗಿ ಊಟವೂ ಆಯಿತು. ಕಲ್ಲೇಶನ ಸಂಗಡ ಬಂದಿದ್ದ ದಫೇದಾರರಿಗೆ ಇಪ್ಪತ್ತೈದು ರೂಪಾಯಿ ಬಿಟ್ಟು ಉಳಿದ ಇಪ್ಪತ್ತೈದನ್ನು ಕೈಲಿ ತೆಗೆದುಕೊಂಡು ಕಂಠೀಜೋಯಿಸರು ಕುದುರೆ ಏರಿ, ಶೇಕ್‌ದಾರರನ್ನು ಕಂಡು ಶ್ಯಾನುಭೋಗಿಕೆ ಬದಲಿಯನ್ನು ಕ್ರಮಪಡಿಸಲು ಕಂಬನಕೆರೆಗೆ ಹೋದರು. ಊಟವಾದಮೇಲೆ ಕಲ್ಲೇಶ ಮತ್ತು ದಫೇದಾರರು ಶ್ರವಣಬೆಳಗೊಳಕ್ಕೆ ಪ್ರಯಾಣ ಮಾಡಿದರು.

ರಾತ್ರಿ ಹತ್ತುಗಂಟೆಯ ಹೊತ್ತಿಗೆ ಕಂಠೀಜೋಯಿಸರು ಕುದುರೆಯಮೇಲೆ ಹಿಂತಿರುಗಿ ಬಂದು ನೋಡುತ್ತಾರೆ: ಹೊಸ ಶ್ಯಾನುಭೋಗ ಚೆನ್ನಿಗರಾಯರಿಗೆ ಕೆಂಡಕ್ಕಿಂತ ಬಿಸಿಯಾಗಿ ಜ್ವರ ಬಂದಿದೆ. ಗಂಗಮ್ಮ ಮಗನ ತಲೆಗೆ ಪಟ್ಟು ಹಾಕಿ ಬಿಗಿಯಾಗಿ ಒಂದು ಅರಿವೆ ಬಳಲು ಕಟ್ಟಿದ್ದಾಳೆ. ಚೆನ್ನಿಗರಾಯರು ಒಂದೇ ಸಮನೆ ತೊದಲು ಮಾತಿನಲ್ಲಿ ಬಡಬಡಿಸುತ್ತಿದ್ದಾರೆ. ಆಯ್ಯಯ್ಯಯ್ಯೋ, ನಾನೇನು ಒದೀಲಿಲ್ಲ. ನನ್ನ ತಪ್ಪಾಯ್ತು ಕಣವ್ವಾ…..ಎಂಬ ಬಡಬಡಿಕೆ ಅವರಲ್ಲಿ ಯಾರಿಗೂ ಅರ್ಥವಾಗುತ್ತಿಲ್ಲ. ಒ‌ಅಲ್ಗೆ ಬಂದು ನೋಡಿದ ತಕ್ಷಣ ಕಂಠೀಜೋಯಿಸರಿಗೆ ಅದರ ಕಾರಣ ತಿಳಿಯಿತು. ಒಂದು ಓಲೆಗರಿ ತರಿಸಿ ಅದರ ಮೇಲೆ ಮಂಡಲ ಬರೆದು ಸುರುಳಿ ಮಾಡಿ, ಅರಿಶಿನದ ನೂಲು ಸುತ್ತಿ ಹೊಸೆದ ದಾರ ಬಿಗಿದು, ಒಂದು ತೆಂಗಿನಕಾಯಿ ಒಡೆದು ಅದರ ನೀರನ್ನು ಮೂರು ಸಲ ನೀವಾಳಿಸಿ ಫಳ್ ಎನ್ನುವಂತೆ ರೋಗಿಯ ಮುಖಕ್ಕೆ ಎರಚಿ, ಓಲೆಗರಿಯ ತಾಯತವನ್ನು ಅವರ ಕೊರಳಿಗೆ ಕಟ್ಟಿ ಈಚಲು ಪೊರಕೆಯಿಂದ ಮೂರು ಸುತ್ತು ನೀವಾಳಿಸಿ ತಲೆಯ ಮೇಲೆ ನಾಲ್ಕು ಬಡಿದರು. ಗಂಗಮ್ಮನಿಗೆ ಹೇಳಿ ಲವಂಗ ಮೆಣಸು ಶುಂಠಿಗಳ ಕಷಾಯ ಕುದಿಸಿಸಿ, ಕುಡಿಸಿದರು. ಶ್ಯಾನುಭೋಗರು ತೆಪ್ಪಗೆ ಮಲಗಿ ನಿದ್ರೆ ಮಾಡಿದರು.
ನಾಳೆ ಬೆಳಿಗ್ಗೆ ಏಳುವ ವೇಳೆಗೆ ಜ್ವರ ಬಿಟ್ಟು ಹೋಗಿತ್ತು.

ಅಧ್ಯಾಯ ೩
– ೧ –

ನಂಜಮ್ಮ ದೊಡ್ಡವಳಾಗಿ, ಪ್ರಸ್ತವಾಗಿ ಮನೆಗೆ ಬಂದಳು. ಶ್ಯಾನುಭೋಗ ಚೆನ್ನಿಗರಾಯರಿಗೆ ಹೆಂಡತಿಯ ಮೇಲೆ ಆಶೆ. ಅವಳನ್ನು ಆಳಬೇಕೆಂಬ ಹುಮ್ಮಸ್ಸು ಸಹ. ಹೆಂಡತಿಯನ್ನು ಆಳುವುದೆಂದರೇನು? ಆಗಾಗ್ಗೆ ಹೊಡೆಯುವುದು. ಆದರೆ ಅದು ಅವರಿಗೆ ಆಗುವ ಕೆಲಸವಲ್ಲ. ಗಾಂಚಾಲಿ ಮಾಡುವ ಒಂದು ಹಸು ಅಥವಾ ಹೋರಿಕರುವನ್ನು ಸಹ ಹೊಡೆದು ಅವರಿಗೆ ಅಭ್ಯಾಸವಿಲ್ಲ. ಆದುದರಿಂದ ನಾಲಿಗೆಯಿಂದಲೇ ಹೆಂಡತಿಯ ಮೇಲೆ ಅಧಿಕಾರ ತೋರಿಸುತ್ತಿದ್ದರು. ತಮಗೆ ಸರಾಗವಾಗಿ ಬರುತ್ತಿದ್ದ ಮುಂಡೇ ಎಂಬ ಮಾತಿಗೇ, ಬೋಳೀ, ಸೂಳೆ, ಹೊಲೆ, ಮಾದಿಗ, ಮೊದಲಾಗಿ ಹಲವು ವಿಶೇಷಣಗಳನ್ನು ಸೇರಿಸಿ ಅಂದು ಸುಮ್ಮನಾಗುತ್ತಿದ್ದರು. ಅದಕ್ಕಿಂತ ಹೆಚ್ಚು ಭಾಷಾಸಾಮರ್ಥ್ಯ ಅವರಿಗೆ ಇರಲಿಲ್ಲವೆಂದಲ್ಲ. ಎಷ್ಟಾದರೂ ಗಂಗಮ್ಮನ ಮಗ. ಆದರೆ ಹೆಚ್ಚು ಬೈದರೆ ಮಾವನವರಿಗೆ ತಿಳಿದೀತೆಂಬ ಭಯವು ಪ್ರಜ್ಞೆಯಲ್ಲಿ ಸದಾ ಇತ್ತು.

ಸೊಸೆಯನ್ನು ಆಳುವ ಆಶೆಯಾಗಲಿ, ಬೈಗುಳದ ಭಾಷೆಯಾಗಲಿ ಗಂಗಮ್ಮನಿಗೆ ಕಡಿಮೆ ಇಲ್ಲ. ಅವಳಿಗೂ ಬೀಗರನ್ನು ಕಂಡರೆ ಅಷ್ಟೇ ಭಯ. ಆದುದರಿಂದ ಬರೀ ಗುರ್ ಎನ್ನುವುದರಲ್ಲಿಯೇ ತೃಪ್ತಳಾಗುತ್ತಿದ್ದಳು.

ಶ್ಯಾನುಭೋಗಿಕೆ ಕೈಗೆ ಬಂದ ಮೊದಲ ವರ್ಷ ಚೆನ್ನಿಗರಾಯರು ತಾವೇ ಲೆಕ್ಕಗಳನ್ನು ಬರೆದು ಜಮಾಬಂದಿಗೆ ತೆಗೆದುಕೊಂಡು ಹೋದರು. ಅದು ಬರೀ ತಾಲ್ಲೂಕು ಜಮಾಬಂದಿ ಹುಜೂರು ಜಮಾಬಂದಿಯೂ ಅಲ್ಲ. ಮಾಮೂಲು ಸಲ್ಲಿಕೆಯಾಗಿದ್ದರೂ ಸಹ ಹೆಡ್‌ಗುಮಾಸ್ತೆಯು ಅವರ ಲೆಕ್ಕದಲ್ಲಿ ನೂರ ಒಂದು ತಪ್ಪುಗಳನ್ನು ತೆಗೆದು ತೋರಿಸಿದ. ಸರಿ, ಅವರ ಜಮಾಬಂದಿಯಾಗಲಿಲ್ಲ. ‘ಥೂ ಇವರವ್ವನ…..’ಎಂದು ಅವರು ಮನಸ್ಸಿನಲ್ಲಿ ಅಂದುಕೊಂಡರೇ ವಿನಾ ಬಾಯಿಬಿಟ್ಟು ಯಾರನ್ನೂ ಬೈಯ್ಯುವಂತಿರಲಿಲ್ಲ. ಅವರ ಜಮಾಬಂದಿ ಮಾಡುವುದಿಲ್ಲವೆಂದೂ ಇನ್ನು ಎರಡು ತಿಂಗಳಿನೊಳಗೇ ಅವರೇ ತಿಪಟೂರಿಗೆ ಬಂದು ಸಾಹೇಬರ ರುಜು ಮಾಡಿಸಿಕೊಳ್ಳಬೇಕೆಂದೂ ಹೆಡ್‌ಗುಮಾಸ್ತೆಯೇ ಹೇಳಿದ. ಅವರಿಗೆ ಸಾಹೇಬರ ಮುಂದೆ ನಿಂತು ಬೈಸಿಕೊಳ್ಳುವ ಅನುಭವವಾಗಲಿಲ್ಲ.

ಅದೇ ಜಮಾಬಂದಿಗೆ ಬಂದಿದ್ದ ತಿಮ್ಲಾಪುರದ ಶ್ಯಾನುಭೋಗ ದ್ಯಾವರಸಯ್ಯನವರು ತಪ್ಪಿಲ್ಲದಂತೆ ಲೆಕ್ಕ ಬರೆಯುವವರೆಂದು ಹೆಸರಾಗಿದ್ದರು. ಶ್ಯಾನುಭೋಗಿಕೆಯ ವಿನಾ ಅವರಿಗೆ ಬೇರೆ ಜೀವನೋಪಾಯ ಇರಲಿಲ್ಲ. ಶ್ಯಾನುಭೋಗಿಕೆ ಎಂಬುದು ಊಟಕ್ಕೆ ರುಚಿ ಕೊಡುವ ಉಪ್ಪಿನಕಾಯಿಯೇ ಹೊರತು ಅದೊಂದರಿಂದಲೇ ಹೊಟ್ಟೆ ತುಂಬುವುದಿಲ್ಲವೆಂದು ಅವರೇ ಹೇಳುತ್ತಿದ್ದರು. ಚೆನ್ನಿಗರಾಯರು ದ್ಯಾವರಸಯ್ಯನವರ ಮರೆಹೊಕ್ಕರು. ಇದೊಂದೇ ಅಲ್ಲದೆ ಎಲ್ಲ ಲೆಕ್ಕವನ್ನೂ ಬರದುಕೊಡುವುದಾಗಿಯೂ, ಒಟ್ಟು ವರ್ಷಕ್ಕೆ ಐವತ್ತು ರೂಪಾಯಿ ಸಂಭಾವನೆ ಕೊಡಬೇಕೆಂದೂ ಅವರು ಕೇಳಿದರು. ಚೆನ್ನಿಗರಾಯರ ಮೂರು ಹಳ್ಳಿಯ ಫಿರ್ಕಾದ ಪೋಟಿಕೆ ನೂರಾ ಇಪ್ಪತ್ತೆರಡು ರೂಪಾಯಿ ಏಳಾಣ ಹನ್ನೊಂದು ಕಾಸು. ಅದರಲ್ಲಿ ಹಸುರು ನೋಟಿನ ಮೇಲಿನದು ಕಾಗದ ಶಾಯಿಗಳಿಗೆ ಹೋಗುತ್ತೆ. ಸಾಲಾಖೈರಿನಲ್ಲಿ ಖರ್ಚಿಗೆ ಪೋಟಿಕೆ ಹಾಕಿಸುವಾಗ ಶಿರಸ್ತೇದಾರರಿಗೆ ಹತ್ತು (ಅದರಲ್ಲಿ ಅಮಲ್ದಾರರಿಗೆ ಆರು, ಶಿರಸ್ತೇದಾರರಿಗೆ ನಾಲ್ಕು ಪಾಲಂತೆ), ಹೆಡ್‌ಗುಮಾಸ್ತರಿಗೆ ಎರಡು, ಹೋಬಳಿ ಗುಮಾಸ್ತರಿಗೆ ಎರಡು, ನಗದಿಗೆ ಒಂದು, ಜವಾನರಿಗೆ ತಲಾ ಎಂಟಾಣೆ: ಜುಮ್ಲಾ, ಹದಿನೇಳು ಹದಿನೆಂಟು ರೂಪಾಯಿ ಖರ್ಚೇ ಆಗುತ್ತೆ. ಅಲ್ಲದೆ ತಾಲ್ಲೂಕಿಗೆ ಬಂದಾಗ ಊಟ ತಿಂಡಿ, ಜಮಾಬಂದಿಯ ಖರ್ಚು. ಇಷ್ಟೆಲ್ಲ ಆದಮೇಲೆ ಚೆನ್ನಿಗರಾಯ ಲೆಕ್ಕ ಬರೆಸಲು ಐವತ್ತು ರೂಪಾಯಿ ಕೊಟ್ಟರೆ ಉಳಿಯುವುದೇನು? ವಸೂಲಿ ಮಾಡುವಾಗ ಮಾತ್ರ ಹತ್ತು ರೂಪಾಯಿಗಿಂತ ಮೇಲೆ ಕಂದಾಯ ಕೊಡುವ ರೈತರು ಒಂದು ರೂಪಾಯಿ, ಅದಕ್ಕೆ ಕಡಿಮೆಯವರು ಎಂಟಾಣಿ, ಎರಡು ರೂಪಾಯಿ ಕಂದಾಯದವರು ನಾಲ್ಕಾಣೆ ಮಸಿಕಾಣಿಕೆಯನ್ನು ಕೊಡುವುದೇನೋ ಇತ್ತು. ಆದರೆ ರಾಮಸಂದ್ರದ ಮಸಿಕಾಣಿಕೆಯನ್ನು ಪಟೇಲನೇ ತಿಂದು ಬಿಡುತ್ತಿದ್ದ. ಲಿಂಗಾಪುರದಿಂದಲೂ ಏನೂ ಬರುತ್ತಿರಲಿಲ್ಲ. ಕುರುಬರಹಳ್ಳಿಯದು ಮಾತ್ರ ಒಟ್ಟು ನಲವತ್ತು ರೂಪಾಯಿಯಷ್ಟು ಸಿಕ್ಕುತ್ತಿತ್ತು. ಇನ್ನು ಮೇಲು ಸಂಪಾದನೆ ಏನಿದರೂ ಆಯಾ ಸ್ಯಾನುಭೋಗರ ಶಕ್ತ್ಯಾನುಸಾರ. ಪಾಲುಪಟ್ಟಿ, ಖರೀದಿ, ಆಧಾರ, ತಕರಾರು ತಖ್ತೆ ದರಖಾಸ್ತು ಮೊದಲಾದವುಗಳಲ್ಲಿಯೇ ಸಂಪಾದನೆಯಾಗಬೇಕು. ಖಾತೆ ಖಿರ್ದಿ ಲೆಕ್ಕಗಳನ್ನೇ ನಿಭಾಯಿಸದ ಚೆನ್ನಿಗರಾಯರು ರಿಜಿಷ್ಟ್ರಿ ಕಾಗದಗಳನ್ನು ಎಷ್ಟು ಚೊಕ್ಕವಾಗಿ ಬರೆಯಬೇಡ! ಅವರಿಗೆ ಆ ಸಂಪಾದನೆಯೂ ಇಲ್ಲ.

ತಿಮ್ಲಾಪುರದ ದ್ಯಾವರಸಯ್ಯನವರು ರಾಮಸಂದ್ರಕ್ಕೆ ಬಂದು ಹದಿನೈದು ದಿನ ಬಿಡಾರ ಹಾಕಿದರು. ಅವರ ಊಟ ತಿಂಡಿ ಗಂಗಮ್ಮ ನಂಜಮ್ಮನವರು ನೋಡಿಕೊಂಡರು. ಉಪಚಾರ ಚೆನ್ನಿಗರಾಯರೇ ಮಾಡಿದರು. ಲೆಕ್ಕ ‘ಕಂಪ್ಲೀಟ್’ ಆಗಿ ಇವರನ್ನೂ ಸಂಗಡ ಕರೆದುಕೊಂಡು ಹೋಗಿ ಹೆಡ್‌ಗುಮಾಸ್ತೆಗೆ ಎರಡು ಶಿರಸ್ತೇದಾರರಿಗೆ ಐದು ರೂಪಾಯಿ ಮರ್ಯಾದೆ ಮಾಡಿಸಿ ದ್ಯಾವರಸಯ್ಯನವರೇ ಜಮಾಬಂದಿ ರುಜು ಮಾಡಿಸಿಸಿಕೊಟ್ಟರು. ಕೋಟು ಪೇಟ ಕಟ್ಟಿ, ಮೇಲೆ ಉತ್ತರೀಯ ಹೊದೆದು ಚೆನ್ನಿಗರಾಯರು ತಾಲ್ಲೂಕು ಕಛೇರಿಗೆ ಹೋಗಿ ಬಂದರು. ಸಾಹೇಬರು ರುಜುಮಾಡುವಾಗ ಇವರು ಕೈಮುಗಿದುಕೊಂಡು ನಿಂತಿದ್ದರೂ ಅದೃಷ್ಟಕ್ಕೆ ಅವರು ಇವರನ್ನು ಏನೂ ಕೇಳಲಿಲ್ಲ. ಹೆಡ್‌ಗುಮಾಸ್ತೆ ಹೇಳಿದ ಕಡೆಯಲ್ಲಿ ರುಜು ಎಳೆದರು.

ತಿಪಟೂರಿನಿಂದ ಗಾಡಿಯಲ್ಲಿ ಮೊದಲು ತಿಮ್ಲಾಪುರಕ್ಕೆ ಬಂದು ದ್ಯಾವರಸಯ್ಯನವರನ್ನು ಇಳಿಸಿ ಅಲ್ಲಿಂದ ಊರಿಗೆ ಬಂದ ಮದ್ಯಾಹ್ನವೇ ಚೆನ್ನಿಗರಾಯರು ಹೆಂಡತಿಯನ್ನು ಕರೆದರು: ‘ಲೇ ಮುಂಡೇ, ಜಮಾಬಂದಿ ಮಾಡ್‌ಕಂಡ್ ಬಂದು ನಂಗೆ ಮೈಯೆಲ್ಲಾ ನೋಯುತ್ತೆ. ಹರಳೆಣ್ಣೆ ತಗಂಡ್ ಬಂದು ನನ್‌ನೆತ್ತಿಗೆ ಹಾಕಿ ಮೈ ಕೈ ನೀವು ಬಾ.’

ನಂಜಮ್ಮ ಒಳ್ಳೆಯ ಎತ್ತರದ, ತುಂಬಿದ ಕೈಕಟ್ಟಿನ ಶಕ್ತಿವಂತ ಹುಡುಗಿ. ಮನೆಯ ಹಿತ್ತಿಲಿನ ರಾಟೆ ಬಾವಿಯಲ್ಲಿ ಸೇದಿ ಹಂಡೆಗೆ ಹೆಡೆದಿಬ್ಬಿಯ ಉರಿ ಹಾಕಿ ನೀರು ಕಾಯಿಸಿದ್ದೂ ಕಾಯಿಸಿದ್ದೇ; ಪತಿದೇವರ ತಲೆಗೆ ತಿಕ್ಕಿ, ತಟ್ಟಿ ತಟ್ಟಿ ಮಾಡಿ, ಬೆನ್ನು ತೋಳು ಕಾಲು ಪಾದಗಳಿಗೆ ಎಣ್ಣೆ ತಿಕ್ಕಿ, ನೆನೆಸಿ, ಬಿಸಿಬಿಸಿ ನೀರು ಹಾಕಿ ನುಣ್ಣಗೆ ತಿರುವಿದ ಸೀಗೆಯಿಂದ ತಲೆ ಮೈ ಕೈಗಳನ್ನು ಉಜ್ಜಿ, ಅವರು ಮೈ ಒರೆಸಿಕೊಂಡ ಮೇಲೆ ಚೌಕ ಕಟ್ಟಿ, ಹಾಸಿಗೆ ಹಾಕಿ ಅವರನ್ನು ಮಲಗಿಸಿ, ದುಪ್ಪಟಿ ಕಂಬಳಿಗಳನ್ನು ಜೋಡಿಸಿ ಹೊದೆಸಿ ಪಕ್ಕದಲ್ಲಿ ಕೂತು, ಅವರು ಸಾಕು ಎನ್ನುವತನಕ ಮೈ ಕೈಕಾಲುಗಳನ್ನು ಹದವಾಗಿ ಹಿಸುಕಿದಳು.

– ೨ –

ಮಾಡಿದ್ದರೆ ಅಪ್ಪಣ್ಣಯ್ಯನಿಗೂ ಈಗ ಎರಡು ವರ್ಷಕ್ಕೆ ಮೊದಲೇ ಮದುವೆ ಮಾಡಬೇಕಾಗಿತ್ತು. ಆದರೆ ಅದೇ ತಾನೆ ಚೆನ್ನಿಗರಾಯರ ಮದುವೆಯಾಗಿತ್ತು. ಆಮೇಲೆ ಅವರು ಶ್ಯಾನುಭೋಗರಾಗುವ, ಆದಮೇಲೆ ಅದನ್ನು ನಿಭಾಯಿಸುವ ಕೆಲಸ ಕಾರ್ಯಗಳೇ ಹಿಡಿದವು. ಆದುದರಿಂದ ತಡವಾಗಿ, ವಿವಾಹಯೋಗವು ಈಗ ಒದಗಿಬಂತು.

ಅಪ್ಪಣ್ಣಯ್ಯ ಚೆನ್ನಕೇಶವಯ್ಯನವರ ಮಠಕ್ಕೆ ಎರಡು ವರ್ಷ ಹೋಗಿದ್ದನೇನೋ ನಿಜ. ಆದರೆ ವಿದ್ಯೆ ಅವನ ಹಣೆಯಲ್ಲಿ ಬರೆದಿಲ್ಲವೆಂದು ಓಚಯ್ಯನವರೇ ಹೇಳಿದರಲ್ಲ., ಅದು ಅವನ ತಪ್ಪು ಹೇಗಾಗಬೇಕು? ಮರಳಿನಲ್ಲಿ ತಿದ್ದಿದ ಅವನ ಬೆರಳ ಉಂಗುರ ಸವೆಯಿತು. ಆದರೆ ಅಕ್ಷರಗಳು ಮರಳಿನಲ್ಲಿಯೇ ಕಲಸಿಹೋದವು. ಅದಕ್ಕೆ ಯಾರಿಗೂ ವ್ಯಸನವಿಲ್ಲ. ಅವನನ್ನು ಮಠಕ್ಕೆ ಕಳಿಸುತ್ತಿದ್ದುದಾದರೂ ಯಾಕೆ, ಕಬ್ಬಿನ ಗದ್ದೆಗೆ ಹೋಗಿ ಬೀಡಿ ಸೇದಿ ಮತ್ತೆ ಬೆಂಕಿ ಹೊತ್ತಿಸದೇ ಇರಲಿ ಎಂದು ತಾನೆ?

ಅವನಿಗೆ ಹೆಣ್ಣು ಕೊಟ್ಟವರು ಕಡೂರು ಸೀಮೆಯ ನುಗ್ಗೀಕೆರೆ ಗ್ರಾಮದ ಶ್ಯಾಮಭಟ್ಟರೆಂಬ ಪುರೋಹಿತರು. ಗಂಗಮ್ಮನ ತೌರಾದ ಜಾವಗಲ್ಲಿನ ಮೂಲಕ ಅವರಿಗೆ ಈ ಗಂಡಿನ ವಿಷಯ ತಿಳಿದು ಅವರೇ ಬಂದು ನೋಡಿ ಮದುವೆ ನಿಷ್ಕರ್ಷಿಸಿದರು. ಇರುವವಳು ಒಬ್ಬಳೇ ಮಗಳು. ಗಂಡು ಮಕ್ಕಳಿಲ್ಲ. ಮಡಿಹಿಡಿಯ ಜೊತೆಗೆ ಹುಡುಗಿಗೆ ಕಸೂತಿಯಲ್ಲಿ ಆಲದೆಲೆಯ ಕೃಷ್ಣನನ್ನು ಹಾಕುವುದು ಸಹ ಬರುತ್ತಿತ್ತು. ಎಂದರೆ ತುಂಬ ‘ನಾಗರಿಕತೆ’ಯ ಹುಡುಗಿಯೇ. ಆದರೆ ಅದನ್ನು ಶ್ಯಾಮಭಟ್ಟರು ಗಂಗಮ್ಮನಿಗೆ ಹೇಳಲಿಲ್ಲ. ಹೇಳಿದ್ದರೆ ಅವಳು ಅಂಥಹ ಥಳುಕಿನ ಹುಡುಗಿ ತಂದುಕೊಳ್ಳಲು ಒಪ್ಪುತ್ತಿರಲಿಲ್ಲ.

ಒಂದು ಸೇರು ತೂಕದ ಬೆಳ್ಳಿಯ ಪಂಚಪಾತ್ರೆಯಿಂದ ಹಿಡಿದು ಮಕುಟ, ಸಂಕಲಿಕೆ ಪಂಚೆ, ಜರಿಪೇಟ ಮೊದಲಾಗಿ ಎಲ್ಲವನ್ನೂ ಕೊಟ್ಟು ಮದುವೆಯನ್ನು ಚೆನ್ನಾಗಿಯೇ ಮಾಡಿದರು. ಗಂಡಿನ ಮಾತಾಪಿತರ ಸ್ಥಾನದಲ್ಲಿ ಅತ್ತಿಗೆ ಅಣ್ಣರಾದ ನಂಜಮ್ಮ ಚೆನ್ನಿಗರಾಯರು ನಿಂತು ಧಾರೆ ಎರೆಸಿಕೊಂಡರು. ಮದುವೆಯಾದ ಆರು ತಿಂಗಳಿಗೇ ಸಾತಮ್ಮ ಮೈನೆರೆದು ಹದಿನಾರು ದಿನಕ್ಕೆ ಪ್ರಸ್ತವಾಗಿ ಮನೆಗೆ ಬಂದಳು.

ಹೆಂಡತಿಯನ್ನು ಹೇಗೆ ಆಳಬೇಕೆಂಬುದು ಅಪ್ಪಣ್ಣಯ್ಯನಿಗೂ ಹೊಸತರಲ್ಲಿ ಸಮಸ್ಯೆಯೇ. ಅಣ್ಣನು ಅತ್ತಿಗೆಯನ್ನು ಆಳುವ ರೀತಿಯಲ್ಲಿಯೇ ತಾನು ತನ್ನ ಹೆಂಡತಿಯನ್ನು ಆಳಬೇಕೆಂದು ಮೊದಲೇ ಅವನು ಸಂಕಲ್ಪಿಸಿಕೊಂಡಿದ್ದ. ಅವಳು ಬಂದ ಬೆಳಿಗ್ಗೆಯೇ ಕೂಗಿ ಹೇಳಿದ: ‘ಲೇ ಮುಂಡೇ, ನಂಗ್ ಎಣ್ಣೆ ತಿಕ್ಕು ಬಾ ಇಲ್ಲಿ.’

ಈ ಮಾತನ್ನು ಯಾರನ್ನು ಉದ್ದೇಶಿಸಿದುದೆಂಬುದು ಸಾತಮ್ಮನಿಗೆ ತಿಳಿಯಲಿಲ್ಲ. ಅವಳು ತನ್ನ ಪಾಡಿಗೆ ತಾನು ಕಸ ಗುಡಿಸುತ್ತಿದ್ದಳು. ‘ಲೇ, ನಿಂಗ್ ಕಣೆ ಹೇಳಿದ್ದು, ಸಾತಿ ಮುಂಡೆ. ಕೇಳ್ಲಿಲ್ವೇನೇ? -ಎಂದು ಗಂಡ ನುಡಿದಾಗ ದಿಕ್ಕು ತೋಚದವಳಂತೆ ಅವನ ಕಡೆಗೆ ನೋಡಿದಳು. ‘ಅದೇನ್ ಹಾಗ್ ನೋಡ್ತೀಯೇ ಕತ್ತೆ ಮುಂಡೆ, ಹೇಳಿದ್ ಕೇಳ್ಲಿಲ್ವೇನೆ’ -ಅವನು ಮತ್ತೆ ಅಂದ. ಸಾತುವಿಗೆ ಅಳು ಬಂದುಬಿಟ್ಟಿತು. ಗುಡಿಸುತ್ತಿದ್ದ ಪೊರಕೆಯನ್ನು ಅಲ್ಲಿಯೇ ಹಾಕಿ ಅತ್ತೆಯ ಹತ್ತಿರಕ್ಕೆ ಹೋಗಿ ನಿಂತು ಹೇಳಿದಳು: ನಿಮ್ ಮಗನ ಮಾತು ಕೇಳಿದಿರಾ ಅಮ್ಮ? ಹೆಂಡ್ತೀನ ಇಂಥಾ ಮಾತು ಆದೂದು ಯಾರು ಕಲಿಸಿಕೊಟ್ರು ಅವ್ರಿಗೆ?’

ಸೊಸೆಯಾದವಳು ಇಷ್ಟು ಧೈರ್ಯ ವಹಿಸುತ್ತಾಳೆಂದು ಗಂಗಮ್ಮ ಕಲ್ಪಿಸಿಕೊಂಡೂ ಇರಲಿಲ್ಲ. ಹಿರಿಯ ಸೊಸೆ ನಂಜಮ್ಮನನ್ನು ಚೆನ್ನಿಗರಾಯ ಹೀಗೆಯೇ ಕರೆಯುವುದಿಲ್ಲವೇ? ಅವಳು ಒಂದು ಮಾತೂ ಆಡದೆ ಸುಮ್ಮನಿರುತ್ತಾಳೆ. ಆದರೆ ಈ ತಾಟಗಿತ್ತಿ ತನ್ನ ಎದುರಿಗೇ ಬಂದು ಹೀಗೆ ಕೇಳುವುದೆ?

‘ಗಂಡ, ಹೆಂಡ್ತೀನ ಇನ್ನೇನನ್‌ಬೇಕೆ ಚಿನ್ನಾಲಿ ಲೌಡಿ?’
‘ನಾನ್ಯಾಕೆ ಲೌಡಿಯಾದೇನು? ಹಾಗನ್ನೋರೇ ಆಗಿರ್‌ಭೌದು.’
ಗಂಗಮ್ಮ ಈ ಮಾತು ಕೇಳಿ ಉರಿದುಬಿದ್ದಳು: ‘ಲೋ ಹೆಣ್ಣಿಗ ಸೂಳೇಮಗನೆ, ನಿನ್ನ ಹೆಂಡ್ತಿ ನಿನ್ನ ಹೆತ್ತವ್ವುನ್ನೇ ಏನಂದ್ಳು ಕೇಳಿದ್ಯೇನೋ? ನಾನು ಲೌಡಿ ಏನೋ? ನ್ಯಟ್ಟಗೆ ಹೆಂಡ್ತಿ ಆಳ್ತೀ ಏನೋ ಶಿಖಂಡಿ ಮುಂಡೇಮಗನೇ?’
ಅಪ್ಪಣ್ಣಯ್ಯನ ಗಂಡಸುತನ ಎದ್ದುನಿಂತಿತು. ಹೋಗಿ ಅವಳ ಕುತ್ತಿಗೆಗೆ ಕೈಹಾಕಿ ಢಂ ಎಂದು ಎರಡು ಇಡಿದ. ಸಾತು ತಲೆ ಸುತ್ತು ಬಂದು ಬಿದ್ದುಬಿಟ್ಟಳು. ‘ಸಾಯಿಸಿ ಹಾಕ್‌ಬಿಡ್ತೀನಿ ಈ ಬೋಸೂಡಿ ಮುಂಡೇನ’ -ಎಂದು ಅವನು ಗರ್ಜಿಸುತ್ತಿರುವಷ್ಟರಲ್ಲಿ ಎಲ್ಲವನ್ನೂ ಕೇಳಿದ ನಂಜಮ್ಮ ಅಡಿಗೆ ಮನೆಯಿಂದ ಓಡಿ ಬಂದಳು. ಅವಳು ಇದುವರೆಗೂ ಅಪ್ಪಣ್ಣಯ್ಯನ ಎದುರಿಗೆ ನಿಂತು ಗಟ್ಟಿಯಾಗಿ ಮಾತನಾಡಿರಲಿಲ್ಲ. ಈಗ, ‘ಅಪ್ಪಣ್ಣಯ್ಯ, ಮನೆಗೆ ಬಂದ ಸೊಸೇರುನ್ನ ಹೀಗೆ ಗೋಳಾಡಿಸಿದ್ರೆ ನಿಮ್ಮ ಕೈ ಸೇದಿ ಹೋಗುತ್ತೆ. ನಿಮಗೇನು ಕೆಟ್ಟ ಬುದ್ಧಿ ಬಂದಿದೆ ಹೇಳಿ’ ಎಂದು ಒಳಗಿನಿಂದ ನೀರು ತಂದು ಸಾತುವಿನ ತಲೆಗೆ ತಟ್ಟಿದಳು. ಅಪ್ಪಣ್ಣಯ್ಯನ ನಾಲಿಗೆಯಲ್ಲಿ ಮುಂಡೆ ಎಂಬ ಮಾತು ಅತ್ತಿಗೆಯ ಮೇಲೂ ಬರುತ್ತಿತ್ತು. ಆದರೆ ಅದೇನೋ ಭಯದಿಂದ, ಪ್ರಾಯಶಃ ಅವಳ ತಂದೆ ಕಂಠೀಜೋಯಿಸರ ನೆನಪಿರಬಹುದು, ಸುಮ್ಮನಾದ. ಸಾತುವಿಗೆ ಪೂರ್ತಿಯಾಗಿ ಪ್ರಜ್ಝ್ನೆ ತಪ್ಪಿರಲಿಲ್ಲ. ಅವಳೇ ಎದ್ದು ಕೂತು ಹೇಳಿದಳು: ‘ಉತ್ತಮ ವಂಶದಲ್ಲಿ ಹುಟ್ಟಿದ್ರೆ ತಾನೇ ಇವರ ಬಾಯಲ್ಲಿ ಒಳ್ಳೇ ಮಾತು ಬರೋದು!’
‘ಸಾತೂ, ನೀನು ಮಾತಾಡಬ್ಯಾಡ. ಸುಮ್ಮನೆ ಬಾ’ -ಎಂದು ನಂಜಮ್ಮ ಅವಳನ್ನು ಮೆಟ್ಟಿಲು ಹತ್ತಿಸಿ ಅಟ್ಟದ ಮೇಲಕ್ಕೆ ಕರೆದುಕೊಂಡು ಹೋದಳು. ‘ಇನ್ನು ಇವಳ ಕಿವಿ ಊದುಕ್ಕೆ ಕರ್ಕಂಡ್ ಹೋಗ್ತಿದಾಳೆ ಆ ದೊಡ್ಡ ತಾಟಗಿತ್ತಿ’ -ಎಂದು ಗಂಗಮ್ಮ ಅಂದುದು ಕೇಳಿದರೂ, ನಂಜಮ್ಮ ಅದು ಕೇಳಿಸದವಳಂತೆ ಹೋದಳು.
‘ಇಂಥಾ ಮಾತು ಬ್ರಾಹ್ಮಣರಾಗಿ ಇವರ ಬಾಯಲ್ಲಿ ಬರ್‌ಭೌದಾ? -ಅಟ್ಟದ ಮೇಲೆ ಒಂದು ಹಲಗೆಯ ಮೇಲೆ ಕುಳಿತ ಮೇಲೆ ಸಾತು ಕೇಳಿದಳು.
‘ನಿಮಗೆ ಇದು ಹೊಸದು. ಈ ಮನೆ ನಡವಳಿಕೆಯೇ ಹೀಗಿದೆ.’
‘ಹಾಗಾದ್ರೆ ಭಾವ್‌ನೋರು ನಿಮ್ಮುನ್ನ ಹೀಗೇ ಅಂತಾರಾ?’
‘ಇಲ್ಲಿಗೆ ಬಂದ ಎರಡು ವರ್ಷದಿಂದ ನನಗೆ ಅಭ್ಯಾಸವಾಗಿದೆ.’
‘ನೀವ್ಯಾಕೆ ಕೇಳಿಕಂಡ್ ಸುಮ್ಮನಿದ್ರಿ? ಅದುಕ್ಕೆ ಇವ್ರಿಗೆ ಧೈರ್ಯ ಬಂದಿದೆ.’

ಈ ಮಾತಿಗೆ ನಂಜಮ್ಮ ಉತ್ತರ ಹೇಳಲಿಲ್ಲ. ಅವಳು ತನ್ನಲ್ಲಿಯೇ ಏನೋ ಯೋಚಿಸತೊಡಗಿದಳು. ಸಾತು ಮತ್ತೆ ಕೇಳಿದಳು: ‘ನಿಮ್ಮ ತಂದೆ ನೋಡಿದ್ರೆ ಅಂಥಾ ದೊಡ್ಡ ಮನುಷ್ಯರು. ನನ್ನ ಮದುವೆಗೆ ಬಂದಿದ್ರಲಾ, ಆಗ ಮದುವೆ ಮನೇಲಿ ಎಲ್ರೂ ಅವ್ರುನ್ನ ಕಂಡ್ರೆ ಹೆದರ್‌ತಿದ್ರು. ಅವ್ರು ತುಂಬ ದೊಡ್ಡೋರು ಅಂತ ನಮ್ಮ ತಂದೆಯೂ ಹೇಳ್ತಿದ್ರು. ಭಾವ್‌ನೋರಿಗೆ ಶ್ಯಾನುಭೋಗ್‌ಕೆ ಕೊಡುಸ್ದೋರು ಅವ್ರೇಯಂತೆ. ಒಂದು ಸಲ ನಮ್ ತಂದೆ ಕೈಲಿ ಹೇಳ್ತೀನಿ ಅಂತ ಹೆದರಿಸಿ. ಇವ್ರು ಬಾಯಿ ಮುಚ್‌ಕಂಡ್ ಸುಮ್‌ನಾಗ್ತಾರೆ. ಇಲ್ದೆ ಇದ್ರೆ ಒಂದ್ ಸಲ ಅವ್ರಕೈಲಿ ನೀವೇ ಹೇಳಿ. ಇವ್ರಿಗೆ ಬುದ್ಧಿ ಕಲುಸ್ತಾರೆ.’

‘ಸಾತೂ, ನಿನಗೆ ಚಿಕ್ಕ ವಯಸ್ಸು, ಇನ್ನೂ ಗೊತ್ತಿಲ್ಲ. ಗಂಡನಿಗೆ ಬುದ್ಧಿ ಕಲಿಸಿ ಅಂತ ಹೆಂಗಸು ಯಾವತ್ತೂ ತನ್ನ ಅಪ್ಪನಿಗೆ ಹೇಳಬಾರದು’ -ಎಂದು ಹೇಳಿದಳಾದರೂ, ತನ್ನ ತಂದೆಯ ಪೂರ್ತಿ ಸ್ವಭಾವವನ್ನು ನಂಜಮ್ಮ ಬಾಯಿ ಬಿಟ್ಟು ವಿವರಿಸಲಿಲ್ಲ. ಅವರಿಗೆ ಯಾರ ಮೇಲೆ ಸಿಟ್ಟು ಬಂದರೂ ಸರಿ, ಮೇಲೇರಿಹೋಗಿ ಜುಟ್ಟು ಹಿಡಿದು ದವಡೆಯ ಹಲ್ಲುಗಳನ್ನು ಅಳ್ಳಾಡುವಂತೆ ಬಾರಿಸಿ, ನಂತರ ಮುಂದಿನ ಮಾತಾಡುತ್ತಿದ್ದರೇ ಹೊರತು ಬೇರೆ ರೀತಿಯನ್ನು ಕಾಣರು. ಅಳಿಯನೆಂಬ ಘನತೆಯನ್ನು ತನ್ನ ಗಂಡನು ಮಾವನವರ ಎದುರಿಗೆ ಉಳಿಸಿಕೊಂಡಿಲ್ಲವೆಂಬುದು ಅವಳಿಗೆ ಗೊತ್ತಿತ್ತು. ಧೈರ್ಯಶಾಲಿಯಲ್ಲದವರನ್ನು ಅವಳ ತಂದೆ ಎಂದೂ ಗೌರವಿಸುತ್ತಿರಲಿಲ್ಲ. ಅದು ಅವರ ಸ್ವಭಾವ. ಅಂದರೆ ಹೆಂಗಸಾದ ತಾನು ತನ್ನ ಗಂಡನ ಮಾನ ಕಾಯದಿದ್ದರೆ ಹೇಗೆ?

ಸಾತು ಹೇಳಿದಳು: ‘ಹಾಗಾದ್ರೆ ಇವರಿಗೆ ನೀವೇ ಬುದ್ಧಿ ಹೇಳಿ, ಇನ್‌ಮೇಲೆ ನನ್ನ ಹೀಗ್ ಮಾತಾಡದ ಹಾಗೆ ಮಾಡಿ.’

ಅಷ್ಟರಲ್ಲಿ ಕೆಳಗಿನಿಂದ ಚೆನ್ನಿಗರಾಯರ ಧ್ವನಿ ಕೇಳಿಸಿತು: ‘ಎಲ್ಲಿ ಹೋದ್ಲೇ ಇವಳ ಮನೆತನ ಹಾಳಾಗ. ಇನ್ನೂ ರೊಟ್ಟಿ ಹಾಕಿ ಚಟ್ನಿ ತಿರುವಿಲ್ವೇನು??’
‘ಕೇಳಿದೆಯಾ ನಿಮ್ಮ ಭಾವ್‌ನೋರ ಮಾತಾ? ನಾನು ಹೋಗಿ ರೊಟ್ಟಿ ಹಾಕ್ತೀನಿ. ನೀನು ಚಟ್ನಿ ಮಾಡು ಬಾ. ಇಲ್ದೆ ಇದ್ರೆ ನಿನ್ನ ಗಂಡನಿಗೆ ಎಣ್ಣೆ ಹಾಕು ಹೋಗು’-ಎಂದು ನಂಜಮ್ಮ ಮೇಲೆ ಎದ್ದಳು.

‘ನಾನು ಚಟ್ನಿ ತಿರುವ್‌ತೀನಿ. ಬೇಕಾದರೆ ಅವರಮ್ಮನ ಕೈಲಿ ಎಣ್ಣೆ ಹಾಕುಸ್‌ಕಳ್ಲಿ’-ಸಾತು ಮನಸ್ಸಿನಲ್ಲಿಯೇ ಎಂದುಕೊಂಡಳು.
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.