ಗೃಹಭಂಗ – ೬

ಅಧ್ಯಾಯ ೧೧
– ೧-

ಇಷ್ಟು ದಿನವಾದರೂ ಕಮಲುವಿನ ಹೊಟ್ಟೆಯಲ್ಲಿ ಮಕ್ಕಳಾಗಲಿಲ್ಲ. ತಾನು ಸಾಕಿ ಬೆಳೆಸಿದ ಮೊಮ್ಮಗನಿಂದ ವಂಶ ಬೆಳೆಯದ್ದನ್ನು ಕಂಡ ಅಕ್ಕಮ್ಮ ಕೊರಗುತ್ತಿದ್ದಳು. ಮಕ್ಕಳಿಲ್ಲದಿದ್ದರೆ ಬೇಡ, ಇವಳು ತನ್ನ ಗಂಡ ಮತ್ತು ಅಜ್ಜಿಯನ್ನೂ ಸಂತೋಷವಾಗಿಡುತ್ತಿರಲಿಲ್ಲ.

ರಾಮಸಂದ್ರದಲ್ಲಿ ಮಳೆ ಬೆಳೆ ಹೋದಾಗ ನಾಗಲಾಪುರದಲ್ಲಿಯೂ ಹೋಯಿತು. ಆದರೆ ಕಲ್ಲೇಶ ಜಾಣ ಗೃಹಸ್ಥ. ಒಂದು ವರ್ಷಕ್ಕಾದರೂ ಹೆಚ್ಚಾಗಿ ದಿನಸಿಯ ದಾಸ್ತಾನು ಇಡುತ್ತಿದ್ದ. ಕಳೆದ ಸಲ ಮಳೆ ಕೈಕೊಡುತ್ತದೆಂಬ ಸೂಚನೆ ತಿಳಿದ ತಕ್ಷಣ ಹೊಲಕ್ಕೆ ಹಾರಕ ಹಾಕಿಸಿದ. ಮಳೆಯಾಗದೆ ಇದ್ದರೂ ಹೊಲದಲ್ಲಿ ಮೂರು ಖಂಡುಗ ಹಾರಕ ಬಂತು.

ಮನೆಯಲ್ಲಿ ರಾಗಿ ಏನೋ ಇತ್ತು. ಎಡವಟ್ಟಾದದ್ದು ಬತ್ತಕ್ಕೆ. ಇಷ್ಟಿದ್ದರೆ ಸಾಕೇಸಾಕು. ಹಾರಕದ ಅನ್ನವೂ ಸೊಗಸಾಗಿರುತ್ತೆ. ಆದರೆ ಕಲ್ಲೇಶನಿಗೆ ಅದು ಆಗುತ್ತಿರಲಿಲ್ಲ. ವಾಯುವಿನಿಂದ ಕೂಡಿದ ಅದನ್ನು ತಿಂದರೆ, ಮೊದಲೇ ಸ್ವಲ್ಪ ಸ್ವಾಧೀನ ತಪ್ಪಿದ್ದ ಅವನ ಎಡಗೈ ಅದುರಲು ಶುರುವಾಗುತ್ತಿತ್ತು. ಆದುದರಿಂದ ತಿನ್ನಲಾರ. ಮನೆಯಲ್ಲಿ ಇದ್ದ ಒಂದು ಪಲ್ಲ ಬತ್ತವನ್ನೇ ಯಾತದಲ್ಲಿ ಆಗಾಗ್ಗೆ ಕುಟ್ಟಿಕೊಂಡರೆ ಐವತ್ತೈದು ಸೇರಾದರೂ ಅಕ್ಕಿ ಬರುತ್ತದೆ. ದಿನಾ ಅವನ ಪೂರ್ತಿ ಅರ್ಧ ಪಾವು ಅಕ್ಕಿಯ ಅನ್ನ ಮಾಡಿದರೆ ಹಿಟ್ಟಿನ ಜೊತೆಗೆ ಸಾಕು. ಇಷ್ಟು ವಯಸ್ಸಾದರೂ ಮುದುಕಿಯಾದ ತನಗೆ ಹಾರಕದ ಅನ್ನದಿಂದ ಏನೂ ಆಗುತ್ತಿರಲಿಲ್ಲ; ತಾನು, ಕಮಲು, ಇಬ್ಬರೂ ಅದನ್ನೇ ತಿನ್ನುವುದು ಎಂದು ಅಕ್ಕಮ್ಮ ತೀರ್ಮಾನಿಸಿದಳು.

ಎರಡು ಬಗೆಯ ಅನ್ನ ಮಾಡಿ ತನ್ನ ಗಂಡನಿಗೇ ಒಂದು ತರಹ, ತನಗೆ ಬೇರೆ ತರಹ ಬಡಿಸಿದುದನ್ನು ಕಂಡಾಗ ಕಮಲು ಉರಿದುಬಿದ್ದಳು. ಅವನದ್ದೇನು ಹೆಚ್ಚು, ತನ್ನದೇನು ಕಡಿಮೆ?-ಎಂಬುದು ಅವಳ ಪ್ರಶ್ನೆ. ನಾಗಲಾಪುರಕ್ಕೆ ಬಂದು ಹನ್ನೆರಡು ವರ್ಷವಾದರೂ, ತಾನು ಹಾಸನದ ಪೇಟೆಗೆ ಸೇರಿದವಳು ಎಂಬ ಭಾವನೆ ಅವಳಲ್ಲಿ ಹೋಗಲಿಲ್ಲ. ಆದುದರಿಂದ ಹಟದಿಂದ ಎಂಬಂತೆ ಇದುವರೆಗೆ ಒಂದು ದಿನವೂ ರಾಗಿಯ ಹಿಟ್ಟನ್ನು ಕೈಲಿ ಮುಟ್ಟಿರಲಿಲ್ಲ. ಈಗ ಹಾರಕದ ಅನ್ನ ಗಂಟಲಿನಲ್ಲಿ ಹೇಗೆ ಇಳಿದೀತು? ಒಂದು ದಿನ ಅಕ್ಕಮ್ಮ ಅಡಿಗೆ ಮಾಡಿಟ್ಟು ಹೋಗಿ ಹಿತ್ತಿಲಿನ ಕಡೆ ಪರಂಗಿ ಗಿಡದ ಕೆಳಗೆ ಕುಳಿತುಕೊಂಡಳು. ಕಲ್ಲೇಶ ತರಕಾರಿಯ ಗಿಡಗಳ ಕೆಳಗೆ ಕೈಪಿಕಾಸಿಯಿಂದ ಕುಕ್ಕುತ್ತಿದ್ದ. ರಾಗಿ, ಅಕ್ಕಿ, ಕಾಳುಗಳು ಸುಭಿಕ್ಷವಿರಲಿ ದುರ್ಭಿಕ್ಷವಿರಲಿ, ಹಿತ್ತಿಲು ತುಂಬ ತರಕಾರಿ ಬೆಳೆಯುವುದನ್ನು ಅವನು ಎಂದೂ ನಿಲ್ಲಿಸುತ್ತಿರಲಿಲ್ಲ. ಸುಮ್ಮನೆ ಕೂತಿರುವುದು ಅವನ ಸ್ವಭಾವದಲ್ಲಿಯೇ ಇರಲಿಲ್ಲ. ತಾನು ಕುಕ್ಕುತ್ತಿದ್ದ ಮಣ್ಣನ್ನು ಮೇಲೆ ತೆಗೆದು, ಒಳಗೆ ಸಗಣಿಗೊಬ್ಬರ ಕೆಮ್ಮಣ್ಣು ತುಂಬಿ, ಮತ್ತೆ ಮೇಲೆ ಹಳೆಯ ಮಣ್ಣನ್ನೇ ಹಾಕಿ ಪಾತಿ ಮಾಡಿ, ಎರಡು ಬಿಂದಿಗೆ ನೀರು ಸೇದಿ ಹುಯ್ದ ಮೇಲೆ, ಊಟವಾದ ನಂತರ ಯಾವ ಗಿಡಕ್ಕೆ ಏನು ಮಾಡಬೇಕೆಂಬುದನ್ನು ನೋಡಿ ನಿರ್ಧರಿಸಿ, ಹೇಳಿದ: ‘ಅಕ್ಕಮ್ಮ, ಊಟಕ್ಕಿಕ್ಕು ಏಳು.’

ಕಲ್ಲೇಶ ಇನ್ನೊಂದು ಬಿಂದಿಗೆ ನೀರು ಸೇದಿ ಬಾವಿಯ ದಡದ ಕಲ್ಲುಚಪ್ಪಡಿಯ ಮೇಲೆ ನಿಂತು ಕೈಕಾಲು ತೊಳೆದುಕೊಳ್ಳುತ್ತಿದ್ದ. ಅಕ್ಕಮ್ಮ ಒಳಗೆ ಹೋಗಿ ನೋಡುತ್ತಾಳೆ: ಕಮಲು ಬೆಳ್ಳಿಯ ತಟ್ಟೆ ಹಾಕಿಕೊಂಡು ಕೂತು ಊಟ ಮಾಡುತ್ತಿದ್ದಾಳೆ. ಗಂಡನಿಗೆ ಮಾಡಿದ ಅಕ್ಕಿಯ ಅನ್ನವೆಲ್ಲ ಅವಳ ತಟ್ಟೆಯಲ್ಲಿದೆ. ಅನ್ನದ ಸಣ್ಣ ಚರಕು ಖಾಲಿಯಾಗಿ ಬಿದ್ದಿದೆ. ತನಗೆ ಬೇಕಾದಷ್ಟು ತುಪ್ಪ ಸುರಿದು, ಬೆರಕೆ ಬೇಳೆಸಾರಿನ ತಿಳಿ ಬಗ್ಗಿಸಿಕೊಂಡು ಸುರಿಸುರಿಯುತ್ತಾ ಹೊಡೆಯುತ್ತಿದ್ದಾಳೆ. ಒಳಗೆ ಬಂದ ಅಕ್ಕಮ್ಮ ಮೂಕಳಾಗಿ ನಿಂತುಬಿಟ್ಟಳು. ಕಮಲು, ಅವಳು ಬಂದರೆ ತನಗೇನು ಎಂಬಂತೆ ತನ್ನ ಪಾಡಿಗೆ ತಾನು ಊಟ ಮುಂದುವರಿಸುತ್ತಿದ್ದಳು. ಅಷ್ಟರಲ್ಲಿ ಕಲ್ಲೇಶನೂ ಒಳಗೆ ಬಂದ. ನೋಡಿದ ಕೂಡಲೇ ಅವನಿಗೆ ಎಲ್ಲವೂ ಅರ್ಥವಾಯಿತು. ನೇರವಾಗಿ ಅಡಿಗೆಯ ಒಲೆಯ ಹತ್ತಿರ ಹೋಗಿ, ಅಲ್ಲಿಯೇ ಇದ್ದ ಒಂದು ಹೊಳಕೆ ಸೌದೆ ತೆಗೆದುಕೊಂಡವನೇ ಅವಳ ಬೆನ್ನು, ಕೈ, ತೊಡೆಗಳ ಮೇಲೆ ಎತ್ತಿ ಎತ್ತಿ ಸದೆಯಲು ಶುರುಮಾಡಿದ.
‘ತಿಂದ್ಕಳ್ಳಿ, ಹಾಗೆ ಹ್ವಡೀಬ್ಯಾಡ ಕಣೋ’-ಎಂದು ಬಿಡಿಸಿಕೊಳ್ಳಲು ಹೋದ ಅಕ್ಕಮ್ಮನನ್ನು ಅವನು ಎಡಗೈಯಿಂದ ನೂಕಿದ ರಭಸಕ್ಕೆ ಮುದುಕಿ ಗೋಡೆಯ ಹತ್ತಿರ ಕುಕ್ಕರಿಸಿ ಬಿದ್ದುಬಿಟ್ಟಳು.
‘ಹೊಡೀತೀ ಏನೋ, ನಿನ್ಮನೆ ಅನ್ನ ತಿಂದುದ್ದ್‌ಕ್ ಹ್ವಡೀತೀಯಾ? ಹೆಂಡ್ತಿಗೆ ಒಂದಿಷ್ಟ್ ಅನ್ನ ತಂದ್ ಹಾಕುಕ್ಕೆ ಯೋಗ್ತಿ ಇಲ್ದೆ ಹಾರಕದ ಅನ್ನ ತಿನ್ನು ಅಂತೀಯಾ? ಹ್ವಡಿಯಕ್ಕೆ ಮಾತ್ರ ಬತ್ತೀಯಲ್ಲಾ, ನಾಚಿಕೆಯಾಗುಲ್ವೆ?’ಕಮಲು ಕೇಳಿದಳು.

ಕಲ್ಲೇಶನ ಕೋಪ ಇನ್ನೂ ಏರಿತು. ಮುಖ ಮೊರೆ ನೋಡದೆ ಹೊಡೆದುದಕ್ಕೆ ಸೌದೆಯ ಹೊಳಕೆ ಮುರಿದುಹೋಯಿತು. ಅದನ್ನು ಹಿಡಿದಿದ್ದ ಅವನ ಅಂಗೈಗೂ ಸಿಗುರು ಚುಚ್ಚಿ ರಕ್ತ ಬರುತ್ತಿತ್ತು. ಕಮಲುವಿನ ಮೈಕೈ ಎಲ್ಲ ಊದಿ ರಕ್ತ ಒಸರುತ್ತಿತ್ತು. ಮುರಿದು ತುಂಡಾದ ಸೌದೆಯನ್ನು ಅಲ್ಲಿಯೇ ಬಿಸಾಕಿದ ಅವನು ಅಲ್ಲಿಂದ ಹೊರಗೆ ಬಂದು ಶರಟು ಹಾಕಿಕೊಂಡು ಊಟವನ್ನೂ ಮಾಡದೆ ಹೊರಟುಹೋದ. ಅವನು ಹೀಗೆ ಮನೆ ಬಿಟ್ಟು ಹೋಗುವುದು ಇದೇ ಮೊದಲಲ್ಲ. ಇಂಥಾ ಕಡೆಗೇ ಹೋಗುತ್ತಾನೆಂಬುದು ಅಕ್ಕಮ್ಮನಿಗೂ ಗೊತ್ತು, ಕಮಲುವಿಗೂ ಹೆಚ್ಚು ಕಡಿಮೆ ಗೊತ್ತು. ಮರುವನಹಳ್ಳಿಯ ದೇವರ ಸೂಳೆ ದೇವಿಯ ಮನೆಗೋ, ಅಥವಾ ನಾಗಲಾಪುರದಲ್ಲೇ ಪುಟ್ಟಿಯ ಮನೆಗೋ, ಅದೇ ಊರಿನ ಪೋಲೀಸು ಕಾನಿಸ್ಟೆಬಲ್ ಮಮ್ಮಿಸಾಬಿಯ ಮೂರನೆಯ ಹೆಂಡತಿಯ ಹತ್ತಿರಕ್ಕೋ, ಅಥವಾ ಮತ್ತೆ ಎಲ್ಲಿಗೋ ಹೋಗುತ್ತಾನೆ. ಅವನ ಊಟ ತಿಂಡಿ ಅಲ್ಲಿಯೇ ಆಗುತ್ತದೆ. ಎಲ್ಲಿಗೆ ಹೋದರೂ ಅರ್ಧ ರಾತ್ರಿಯ ಒಳಗೆ ಮನೆಗೆ ಬರುತ್ತಾನೆ. ಇನ್ನೆಲ್ಲಾದರೂ ಹೋದರೂ ಒಂದು ದಿನಕ್ಕಿಂತ ಹೆಚ್ಚಾಗಿ ಅಲ್ಲಿ ಇರುವುದಿಲ್ಲ.
ಅವನು ಹೋದ ತಕ್ಷಣ ಕಮಲು ಅಕ್ಕಮ್ಮನ ಕಡೆಗೆ ತಿರುಗಿ, ‘ಮುದುಕಿಮುಂಡೆ, ನಿನ್ನ ಮೊಮ್ಮಗನಿಗೆ ಹೇಳಿ ನನ್ನ ಹೀಗೆ ಹೊಡೆಸಿದಿಯಲ್ಲೇ, ನಿನ್ನ ಹೊಟ್ಟೆಗೆ ಅನ್ನ ಬೀಳದೆ ಹೋಗ. ನಿನ್ನ ಹೆಣ ಬೀದಿನಾಯಿ ತಿನ್ನ……’ ಎಂದು ಆಶೀರ್ವದಿಸಿದಳು.

ಅಕ್ಕಮ್ಮ ಒಂದು ಮಾತೂ ಆಡಲಿಲ್ಲ. ಎಷ್ಟೇ ಚೆನ್ನಾಗಿ ಅಡಿಗೆ ಮಾಡಿಟ್ಟಿದ್ದರೂ ಮಧ್ಯಾಹ್ನದ ಹೊತ್ತಿಗೆ ಸರಿಯಾಗಿ ಕೂತು ಊಟ ಮಾಡುತ್ತಿದ್ದೇವೆಂಬುದು ಈ ಮನೆಯಲ್ಲಿ ನಿಶ್ಚಿತವಿಲ್ಲ. ಕಲ್ಲೇಶ ವಿನಾಕಾರಣ ರೇಗಿದರೂ ಆಯಿತು, ಅವನ ಹೆಂಡತಿ ಹೀಗೆ ರೇಗಿಸಿದರೂ ಆಯಿತು. ಇಂಥದು ಏನಾದರೂ ಆಗುತ್ತೆ. ಆದರೆ ಈ ದಿನ ಆಗಿರುವುದು ಸ್ವಲ್ಪ ಹೆಚ್ಚಿನದೇ. ಅವಳು ಎದ್ದು ಹೊರಗೆ ಬಂದು ಮತ್ತೆ ಪರಂಗಿ ಗಿಡದ ನೆರಳಿನಲ್ಲಿ ಕುಳಿತಳು.

ಕಲ್ಲೇಶ ಹೆಂಡತಿಯನ್ನು ಹೊಡೆಯುವಾಗ ಕೈಕರಣದ ಜೊತೆಗೆ ಮಂತ್ರೋಚ್ಛಾರವನ್ನೂ ಮಾಡುತ್ತಿದ್ದ. ಬಡಿತದ ಸದ್ದು ಸುತ್ತಣ ನಾಲ್ಕೇ ಮನೆಗೆ ಕೇಳಿದರೆ ಬೈಗುಳದ ಅಬ್ಬರವು ಇಪ್ಪತ್ತು ಮನೆಯ ತನಕ ಹೋಗುತ್ತಿತ್ತು. ಅವನು ಈ ದಿನ ಶರಟು ಹಾಕಿಕೊಂಡು ಹೋದ ಸ್ವಲ್ಪ ಹೊತ್ತಿನ ಮೇಲೆ ಶ್ಯಾನುಭೋಗ ಶ್ಯಾಮಣ್ಣನ ಸೊಸೆ ಬಂದಳು. ಹೆಚ್ಚು ಕಡಿಮೆ ಕಮಲುವಿನ ವಯಸ್ಸಾಗಿದ್ದ ಅವಳಿಗೂ ಕಮಲುವಿಗೂ ಕಳೆದ ಐದು ಆರು ವರ್ಷದಿಂದ ತುಂಬ ವಿಶ್ವಾಸ ಬೆಳೆದಿತ್ತು. ಇಬ್ಬರೂ ಕೂಡಿಯೇ ಕೆರೆಗೆ ಹೋಗುತ್ತಿದ್ದರು. ಇವಳು ಎಷ್ಟೋ ದಿನ ಅವರ ಮನೆಗೆ ಹೋಗಿ ಬರುತ್ತಿದ್ದಳು. ಈಗ ಎರಡು ವರ್ಷದ ಹಿಂದೆ ಶ್ಯಾಮಣ್ಣನ ಹೆಂಡತಿ ಸತ್ತುಹೋದಮೇಲೆ ಸೊಸೆ ಪುಟ್ಟ ಗೌರಿಯೇ ಮನೆಗೆ ಯಜಮಾಂತಿ. ಅವಳ ಗಂಡನೂ ಅವಳು ಹೇಳಿದ ಹಾಗೆ ಕೇಳುತ್ತಿದ್ದ. ಹೀಗಾಗಿ ಅವಳು ಕಮಲುವಿನ ಸಲಹೆಗಾರ್ತಿ ಆಗಿದ್ದಳು. ಅವಳು ಬಂದು ಹೋಗಿ ಮಾಡುವುದನ್ನು ಕಲ್ಲೇಶ ಖಡಾಖಂಡಿತ ವಿರೋಧಿಸುತ್ತಿರಲಿಲ್ಲ. ಅವಳು ಮನೆಗೆ ಬರಕೂಡದೆಂದು ಅಕ್ಕಮ್ಮನೇನೋ ಹೇಳಿದ್ದಳು. ಆದರೆ ಹಟ ಮಾಡಿದಂತೆ ಅವಳು ಬಂದು ಕಮಲುವಿನ ಕೈಲಿ ಮಾತನಾಡಿ, ಅವಳನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಿದ್ದಳು. ತನ್ನ ಮನೆಯ ಸೊಸೆಯ ಮನಸ್ಸು ಕೆಡಿಸಿ ಸದಾ ಜಗಳ ಕಾಯಿಸಿ ತಮಾಷೆ ನೋಡುವುದಕ್ಕೇ ಶ್ಯಾಮಣ್ಣ ಅವನ ಸೊಸೆಯನ್ನು ಕಳಿಸುತ್ತಿದ್ದಾನೆಂದು ಅಕ್ಕಮ್ಮನ ಊಹೆ. ಅವಳ ಊಹೆ ಸರಿ ಎಂದು ಕಲ್ಲೇಶನಿಗೂ ಗೊತ್ತು. ಆದರೂ ಅವಳು ಬಂದು ಹೋಗುವುದನ್ನು ವಿರೋಧಿಸುವುದನ್ನು ಇತ್ತೀಚೆಗೆ ಅವನು ಬಿಟ್ಟುಬಿಟ್ಟಿದ್ದ. ಯಾಕೆ ಎಂಬುದು ಅಕ್ಕಮ್ಮನಿಗೆ ತಿಳಿಯುತ್ತಿರಲಿಲ್ಲ. ಆ ಪುಟ್ಟ ಗೌರಿಯ ಸಹವಾಸ ತಪ್ಪಿದರೆ ಇವಳು ಎಷ್ಟೋ ಮಟ್ಟಿಗೆ ಹದಕ್ಕೆ ಬರುತ್ತಾಳೆಂಬುದು ಅವಳ ನಂಬಿಕೆಯಾಗಿತ್ತು.

ಆ ದಿನ ಕಲ್ಲೇಶ ಹೊರಟುಹೋದ ಮೇಲೆ ಪುಟ್ಟಗೌರಿ ಬಂದಳು. ಕಮಲು ತನ್ನ ಮಲಗುವ ಕೋಣೆಗೆ ಹೋಗಿ ಚಾಪೆಯ ಮೇಲೆ ದುಪ್ಪಟಿ ಹೊದೆದು ಬಿದ್ದುಕೊಂಡಳು. ಏಟು ಬಿದ್ದ ಜಾಗಕ್ಕೆ, ತಾನೇ ಉಪ್ಪಿನ ಶಾಖ ಕೊಟ್ಟು ಸ್ನೇಹಿತೆಗೆ ಸಮಾಧಾನ ಹೇಳಿದ್ದೇ ಅಲ್ಲದೆ ಸಾಯಂಕಾಲ ತನ್ನ ಮನೆಯಿಂದ ಒಂದು ಚೆಟ್ಟಿಯಲ್ಲಿ ಅನ್ನ ಹುಳಿ ಕಲಸಿ ತಂದು ತಿನ್ನಿಸಿದಳು. ಈ ಮನೆಗೆ ಇದಕ್ಕಿಂತ ಇನ್ನು ಅಪಮಾನ ಬೇಕೆ? ‘ಕಲ್ಲೇಶ ಜೋಯ್ಸನ ಮನೇಲಿ ಹೆಂಡ್ತಿಗೆ ಹಾಕೂಕ್ಕೆ ಅನ್ನವಿಲ್ಲ. ನಾನು ಹೋಗಿ ಕೊಟ್ಟು ಬಂದೆ ನೋಡಿ’-ಎಂದು ನಾಲ್ಕು ಮನೆಗೆ ಚೆಟ್ಟಿಯನ್ನು ತೋರಿಸಿಯೇ ಪುಟ್ಟಗೌರಿ ಮನೆಗೆ ಹೋದಳು.

ಕಲ್ಲೇಶ ಮರುದಿನ ಬೆಳಿಗ್ಗೆ ಮನೆಗೆ ಬಂದ. ಅಷ್ಟರಲ್ಲಿ ಹೆಂಡತಿ ಮೇಲೆ ಎದ್ದು ಹಿತ್ತಿಲ ಕಡೆಗೆ ಹೋಗಿ ಬಂದು ಮುಖ ತೊಳೆದು ಕಾಫಿ ಮಾಡಿಕೊಂಡು ಕುಡಿದು ಮತ್ತೆ ಕೋಪಗೃಹದಲ್ಲಿ ಮಲಗಿದ್ದಳು. ಅವಳು ಆಗ ನೋಡಿಕೊಂಡಳಂತೆ: ನೆನ್ನೆ ಅವನು ಹೊಡೆದ ಬಿರುಸಿಗೆ ಅವಳ ಕಿವಿಯ ಎರಡು ಬೆಂಡೋಲೆಗಳೂ ಒಡೆದು ಪುಡಿಯಾಗಿ ಹೋಗಿದ್ದವು. ಚೂರುಗಳನ್ನು ಮುದುಕಿ ತಿಳಿಯದೆ ಗುಡಿಸಿಹಾಕಿದೆಯೋ ಅಥವಾ ಮೊಮ್ಮಗಳ ಮನೆಗೆ ಸಾಗಿಸುವುದಕ್ಕೆ ಅಂತ ಕದ್ದು ಇಟ್ಟಿದೆಯೋ. ‘ನಾನೇನಂಥಾ ಕಳ್ಳಮುಕ್ಕ ಅಲ್ಲ ಕಣೇ’-ಎಂದು ಅಕ್ಕಮ್ಮ ವಾದಿಸುತ್ತಿದ್ದಳು. ‘ನನ್ನ ಮದುವೇಲಿ ಇಟ್ಟಿದ್ದ ವಾಲೆ ಹೋಯ್ತು. ಈಗ ಮಾಡಿಸಿ ಕೊಡದೆ ಇರಲಿ. ನಮ್ಮಪ್ಪನಿಗೆ ಕಾಗದ ಬರೀತೀನಿ’-ಕಮಲು ಸಾಧಿಸುತ್ತಿದ್ದಳು.

ಮನೆಗೆ ಬರುವ ವೇಳೆಗೆ ಕಲ್ಲೇಶನ ಕೋಪವೂ ಸ್ವಲ್ಪ ಇಳಿದಿತ್ತು. ಆ ದಿನ ಬೆಳಿಗ್ಗೆ ಅಕ್ಕಮ್ಮ ತಿಪ್ಪೆಯಲ್ಲಿ ಕಸ ಎಸೆದ ಜಾಗವನ್ನೆಲ್ಲ ಅವನೇ ತೆಗೆದು ಕೆದಕಿ ಹುಡುಕಿದ. ಹೆಂಡತಿ ಹೇಳುವ ಹಾಗೆ ಅಕ್ಕಮ್ಮ ಕದ್ದು ಮುಚ್ಚಿಟ್ಟಿದ್ದಾಳೆ ಎಂಬುದರಲ್ಲಿ ಅವನಿಗೆ ನಂಬಿಕೆ ಬರಲಿಲ್ಲ. ತಾನು ಬೆನ್ನಿಗೆ ಮಾತ್ರ ಹೊಡೆಯಬೇಕಾಗಿತ್ತು, ಕಿವಿಗೆ ತಗುಲುವಂತೆ ಸದೆಯಬಾರದಾಗಿತ್ತು ಎಂದು ಒಳಗೇ ಪಶ್ಚಾತ್ತಾಪ ಪಟ್ಟುಕೊಂಡ.

ಎರಡು ತಿಂಗಳು ಕಮಲು ಬರೀ ಕಿವಿಯಲ್ಲಿ ತಿರುಗಿದಳು. ಹೆಂಡತಿ ಹೀಗೆ ಬರೀ ಕಿವಿಯಲ್ಲಿರುವುದು ತನಗೇ ಮರ್ಯಾದಿಗೆ ಕಡಿಮೆ. ಕಲ್ಲೇಶ ಹೇಗೋ ಮಾಡಿ ಎಪ್ಪತ್ತು ರೂಪಾಯಿ ಕೂಡಿಸಿ ಬಿಳೀ ಕಲ್ಲಿನ ಒಂದು ಜೊತೆ ಬೆಂಡೋಲೆ ಮಾಡಿಸಿ ತಂದುಕೊಟ್ಟ.

– ೨ –

ಸುಮಾರು ಒಂದು ವರ್ಷ ಕಳೆದಿತ್ತು. ಮಳೆ ಇಲ್ಲದೆ ಊರಿನಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿತ್ತು. ಯಾವಾಗಲೂ ಊರಿನ ಜನ ಅರ್ಧ ಮೈಲಿ ದೂರದ ಕೆರೆಯಿಂದ ಸಿಹಿನೀರು ತರುತ್ತಿದ್ದರು. ಕೆರೆಯೆಲ್ಲ ಒಣಗಿ ಹೋದಮೇಲೆ ನಡುಗೆರೆಯಲ್ಲಿ ನಾಲ್ಕು ಸಣ್ಣ ಸಣ್ಣ ಬಾವಿ ತೋಡಿದ್ದರು. ಮೊದಲೇ ದೂರ. ಈಗ ಊರಿಗೆ ಇನ್ನೂ ದೂರ ಹೋಗಬೇಕಾಗಿತ್ತು. ಒಂದು ಮಧ್ಯಾಹ್ನ ಕಮಲು ಕೆರೆಗೆ ಹೋಗಿದ್ದಳು. ಏಕಾದಶಿಯಾಗಿದ್ದುದರಿಂದ ಅಕ್ಕಮ್ಮ ಊರ ಹೊರಗಿನ ಕೇಶವ ದೇವರ ಗುಡಿಗೆ ಹೋಗಿದ್ದಳು. ಪುಟ್ಟಗೌರಿ ತಲೆಯ ಮೇಲೊಂದು, ಕೈಯಲ್ಲೊಂದು ಬಿಂದಿಗೆಯೊಡನೆ ಕಲ್ಲೇಶನ ಮನೆಗೆ ಬಂದಳು. ಕಮಲಮ್ಮಾ’- ಎಂದು ಕೂಗಿಕೊಂಡು ಒಳಗಿನ ತನಕ ಬಂದರೂ ಯಾರೂ ಇರಲಿಲ್ಲ. ಹಿತ್ತಿಲು ತನಕ ಹೋಗಿ ನೋಡಿದಳು. ಯಾರೂ ಕಾಣಲಿಲ್ಲ. ಹಿಂತಿರುಗಿ ಹೋಗಲು ಒಳಗೆ ಬಂದಾಗ ಬೀದಿಯ ಬಾಗಿಲನ್ನು ಹಾಕಿದ್ದಂತೆ ಕಂಡಿತು. ಇದೇನೆಂದು ತಿರುಗಿ ನೋಡಿದರೆ ಹಿತ್ತಿಲ ಬಾಗಿಲನ್ನೂ ಹಾಕಿದ್ದಂತೆ ಕಂಡಿತು. ಒಳಗೆ ಕತ್ತಲೆಯಲ್ಲಿ ಒಬ್ಬಳೇ ಉಳಿದ ಅವಳು ‘ಅಯ್ಯಯ್ಯೊ’ಎಂದು ಪೂರ್ತಿ ಕೂಗಿಕೊಳ್ಳುವ ಮೊದಲೇ ಯಾರೋ ಬಾಯನ್ನು ಹಿಡಿದು ಮುಚ್ಚಿದಂತೆ ಆಯಿತು.

ಮನೆಗೆ ಹೋಗುವಾಗ ಅವಳ ಎದೆ ಹೊಡೆದುಕೊಳ್ಳುತ್ತಿತ್ತು. ಕಲ್ಲೇಶಜೋಯಿಸ ಅಂಥವನೆಂದು ಎಷ್ಟೋ ಜನ ಆಡಿಕೊಳ್ಳುತ್ತಿದ್ದರು. ಊರ ಹೊರಗೆ ಅವನು ಏನಾದರೂ ಮಾಡಿಕೊಳ್ಳಲಿ. ಬ್ರಾಹ್ಮಣಿಯಾದ ತನ್ನನ್ನು, ಅದೂ ಅವನ ಹೆಂಡತಿಯನ್ನು ನೀರಿಗೆ ಕರೆಯಲು ಹೋದಾಗ ಹೀಗೆ ಮನೆಯಲ್ಲಿ ಸೇರಿಕೊಂಡು, ಗಟ್ಟಿಯಾಗಿ ಕಿರಿಚಿಕೊಳ್ಳುವ ಮೊದಲೇ ಬಾಯಿ ಮುಚ್ಚಿಬಿಡಬಹುದೇ!
ಅವಳ ಕೈ ಕಾಲು ನಡುಗುತ್ತಿತ್ತು. ಅಸಹ್ಯದಿಂದ ಮೈ ಎಲ್ಲ ಉರಿಯುತ್ತಿತ್ತು.
ಅವಳು ಇನ್ನೂ ಮನೆ ಸೇರಿಲ್ಲ. ಕಲ್ಲೇಶನ ಮನೆಯ ಸುತ್ತಲಿನ ನಾಲ್ಕೈದು ಜನರು ಬಂದು ಕೇಳಿದರು: ‘ನೀವು ಹಾಗೆ ಕಿರುಚಿಕೊಂಡಲ್ಲಾ, ಏನಾಯ್ತು?’
ಅವಳ ಮಾವ ಶ್ಯಾಮಣ್ಣ, ಗಂಡ ನಂಜುಂಡಯ್ಯ ಮನೆಯಲ್ಲೇ ಇದ್ದರು.
‘ಏನೂ ಇಲ್ಲ. ಅವರ ಮನೆ ಬೆಕ್ಕು ಮೇಲೆ ಬಿದ್ದುಬಿಡ್ತು.’
‘ಇದೇನು ಅಂತ ನಾವು ಓಡಿಬಂದ್ವು. ಬೀದಿ ಬಾಗಿಲು ಒಳಗಡೆಯಿಂದ ಅಗುಳಿ ಹಾಕಿತ್ತು.’
ಮುಂದೆ ಏನು ಹೇಳುವುದಕ್ಕೂ ತಿಳಿಯದೆ ಅವಳು-‘ಹೂಂ. ಕಮಲಮ್ಮ ಹಿತ್ತಿಲ ಕಡೆ ಇದ್ದಳು’ ಎಂದಳು. ಜನಗಳು ಹೊರಟು ಹೋದರು. ಅದೇ ಸಮಯದಲ್ಲಿ ಅವರ ಮನೆಯ ಮುಂದೆಯೇ ಕಲ್ಲೇಶನ ಹೆಂಡತಿ ಕಮಲಮ್ಮ ನೀರು ಹೊತ್ತುಕೊಂಡು ಕೆರೆಯ ಕಡೆಯಿಂದ ಮನೆಗೆ ಹೋಗುತ್ತಿದ್ದಳು. ಅನುಮಾನ ಬಂದ ಶ್ಯಾಮಣ್ಣ ಒಳಗೆ ಹೋಗಿ ಕೇಳಿದರು: ‘ನಿಜ ಹೇಳು. ಯಾವ್ನಾದ್ರೂ ಬೇಕೂಫ್‌ಗಿರಿ ಮಾಡಿದ್ರೆ ನೇಣು ಹಾಕಿಸ್‌ಬಿಡ್ತೀನಿ. ಹೇಳು., ಹೆದರ್‍ಕಾಬ್ಯಾಡ.’
“ಕಮಲಮ್ಮ ಇದಾಳಾ ಅಂತ ನಾನು ಹಿತ್ಲ ತಂಕ ಹೋದೆ. ಯಾರೂ ಇರ್ಲಿಲ್ಲ. ಹಿಂತಿರುಗಿ ಬತ್ತಿದ್ದೆ. ಕಲ್ಲೇಶ ಜೋಯಿಸ್ರು, ‘ನಮ್ಮನೆಗೆ ಯಾಕ್ ಬಂದೆ ನೀನು?-ಅಂತ ಕೇಳಿಬಿಟ್ರು. ಹೆದರಿಕೆಯಾಯ್ತು. ಕಿರುಚ್ಕಂಡು ಹಿತ್ಲ್ ಕಡೆಯಿಂದ ಓಡಿ, ದನ ಬರೂ ಬಾಗಿಲಿನಿಂದ ಬಂದ್‌ಬಿಟ್ಟೆ. ಅವ್ನು ನನ್ನ ಹೀಗೆ ನೀನು ತಾನು ಅಂತ ಮಾತಾಡುಸ್ಭೌದಾ?”

ಸೊಸೆಯ ಮಾತನ್ನು ಪೂರ್ತಿಯಾಗಿ ನಂಬುವುದೋ ಬೇಡವೋ ಎಂಬುದಕ್ಕಿಂತ, ಅದನ್ನು ಶಂಕಿಸಿ ಗದ್ದಲ ಮಾಡಿದರೆ ತಮ್ಮ ಸಂಸಾರದ ಮಾನವೇ ಹೋಗುತ್ತದೆಂದು ಅವರ ವಿವೇಕ ಹೇಳಿತು. ಅವರ ಮಗ ನಂಜುಂಡಯ್ಯನಿಗೆ ಮಾತ್ರ ಏನೂ ಅರ್ಥವಾಗಲಿಲ್ಲ. ‘ಬೋಳೀಮಗ ಹಾಗಂದ್ನೇ? ಇನ್ನೊಂದ್ ದಿನ ಅವ್ನ ಮನೆಗೆ ಹೋಗ್‌ಬ್ಯಾಡ’-ಎಂದು ಹೆಂಡತಿಗೆ ಕಟ್ಟಾಜ್ಞೆ ಮಾಡಿದ.
ಶ್ಯಾಮಣ್ಣ ಕಲ್ಲೇಶನ ಮನೆಗೆ ಬಂದಾಗ ಕಮಲಮ್ಮ ಇದ್ದಳು. ಅಕ್ಕಮ್ಮ ಇನ್ನೂ ಬಂದಿರಲಿಲ್ಲ. ಕಲ್ಲೇಶ ಅಷ್ಟರಲ್ಲಿ ಮನೆಯಲ್ಲಿರದೆ ಎಲ್ಲಿಯೋ ಹೋಗಿದ್ದ. ಶ್ಯಾಮಣ್ಣನವರು ಕಮಲಮ್ಮನಿಗೆ, ‘ನನ್ನ ಸೊಸೆ ನಿನ್ನ ನೀರಿಗೆ ಕರೆಯುಕ್ಕೆ ಅಂತ ಬಂದ್ರೆ ನಿನ್ನ ಗಂಡ ಮರ್ಯಾದೆ ಬಿಟ್ಟು ಮಾತಾಡಿದ್ನಂತೆ. ಅವನ ಮೇಲೆ ಕೇಸು ಹಾಕಿ ಬೇಕಾದ್ರೆ ಸಜ ಕೊಡುಸ್ತಿದ್ದೆ. ಏನೋ ಹೋಗ್ಲಿ ಅಂತ ಸುಮ್ನಾಗಿದೀನಿ. ಇನ್ಮೇಲೆ ನೀನು ನನ್ಮನಿಗೆ ಬರಬ್ಯಾಡ. ನನ್ನ ಸ್ವಸೆ ನಿನ್ಮನಿಗ್ ಬರೂದು ಬ್ಯಾಡ’ ಎಂದು ಕಟ್ಟುನಿಟ್ಟಾಗಿ ಹೇಳಿ ಹೊರಟುಹೋದರು.

ಕಲ್ಲೇಶ ಎರಡು ದಿನ ಊರಿಗೆ ಬರಲಿಲ್ಲ. ಮೂರನೆಯ ದಿನ ರಾತ್ರಿ ಹತ್ತು ಗಂಟೆಗೆ ಮನೆಗೆ ಬಂದ. ಅಕ್ಕಮ್ಮ ಎದ್ದು ಅನ್ನ ಹುಣಿಸೆನೀರು ಮಾಡಿ ಇಕ್ಕಿದಳು. ಶ್ಯಾಮಣ್ಣ ತನ್ನ ಮೇಲೆ ಏನಾದರೂ ಗಲಾಟೆ ಮಾಡಿದನೇ ಎಂದು ಕೇಳಿದುದಕ್ಕೆ ಅವಳು ಸೊಸೆಗೆ ಕೇಳದಂತೆ ಪಿಸುಮಾತಿನಲ್ಲಿ, ‘ಮೊನ್ನೆ ದಿನ ಅವ್ಳು ಬಂದಿದ್ದಾಗ ನನ್ನ ಮನೆಗೆ ಯಾಕ್ ಬಂದೆ ನೀನು ಅಂತ ಅಂದು ಕಳಿಸಿದೆಯಂತೆ. ನನ್ನ ಸ್ವಸೇನ ಅವ್ನು ಹೀಗನ್ಭೌದೇ, ಇನ್ನುಮ್ಯಾಲೆ ಅವ್ಳು ಅವ್ನ ಮನೆಗೆ ಹೋಗೂದೂ ಬ್ಯಾಡ, ನಮ್ಮನೆಗೆ ಅವ್ನ ಹೆಂಡ್ತಿ ಬರೂದೂ ಬ್ಯಾಡ ಅಂತ ಅಂದುಹೋದನಂತೆ. ಹೋಗ್ಲಿ, ಶನಿ ಕಳ್ದಹಾಗಾಯ್ತು. ಇದೇ ಮಾತು ನೀನು ಈಗ ನಾಲ್ಕು ವರ್ಷಕ್ಕೆ ಮೊದಲೇ ಅಂದು ಕಳ್ಸಿದ್ರೆ. ಅವ್ಳು ಇಲ್ಲಿಗ್ ಬಂದ್ ಬಂದ್ ಈ ಕಪಿಗೆ ಹೆಂಡ ಕುಡ್ಸೂದೂ ತಪ್ತಿತ್ತು. ಇದು ತುಸುವಾದ್ರೂ ನೆಟ್ಟಗಾಗ್ತಿತ್ತು.’
ಶ್ಯಾಮಣ್ಣ ಏನೂ ಗದ್ದಲ ಮಾಡಿಲ್ಲವೆಂದು ಖಚಿತವಾಗಿ ಕಲ್ಲೇಶನ ಮನಸ್ಸಿಗೆ ಸಮಾಧಾನವಾಯಿತು. ಅವನು ಎರಡೊಂದು ಕೆಲಸ ಸಾಧಿಸಿದಂತೆ ಆಯಿತು. ಅದೂ ಅಕ್ಕಮ್ಮನಿಗೂ ಗೊತ್ತಿಲ್ಲ; ಅವನ ಹೆಂಡತಿಗೂ ತಿಳಿದಿರಲಿಕ್ಕಿಲ್ಲ.

ಪುಟ್ಟಗೌರಿ ಕಮಲುವಿನ ಸಂಪರ್ಕ ಸಂಪೂರ್ಣ ನಿಂತುಹೋಯಿತು. ಒಂದು ದಿನ ಅವರಿಬ್ಬರೂ ಕೆರೆಯ ಬಾವಿಯಲ್ಲಿ ಒಬ್ಬರನ್ನೊಬ್ಬರು ನೋಡಿದರು. ಕಮಲು ಮಾತನಾಡಿಸಿದರೂ ಅವಳು ಈ ಕಡೆ ಮುಖ ತಿರುಗಿಸಿ ನೋಡದೆ ಹೊರಟುಹೋಗಿಬಿಟ್ಟಳು. ಇನ್ನು ತನಗೂ ಅವಳಿಗೂ ಮಾತು ಎಂದೆಂದಿಗೂ ಬಿಟ್ಟು ಹೋದಂತೆಯೇ ಎಂಬುದು ಎಂಟು ದಿನದಲ್ಲಿ ಇವಳಿಗೆ ಖಚಿತವಾಯಿತು. ಒಬ್ಬ ಆಪ್ತ ಸ್ನೇಹಿತೆ ಕಳೆದುಹೋದ ದುಃಖದ ಜೊತೆಗೆ ಅವಳಿಗೆ ಆತಂಕವಾಗುವ ಇನ್ನೊಂದು ಕಾರಣವಿತ್ತು. ಆದರೆ ಅದನ್ನು ಯಾರ ಕೈಲೂ ಹೇಳಲಾರಳು. ಹೇಳದೆ ಇರಲೂ ಆರಳು.
ಎಂಟು ದಿನ ತನ್ನಲ್ಲಿಯೇ ತೊಳಲಾಡಿ, ಒಂದು ದಿನ ಬೆಳಿಗ್ಗೆ ಎದ್ದವಳೇ ಶ್ಯಾಮಣ್ಣನ ಮನೆಗೆ ಹೋದಳು. ಆ ಹೊತ್ತಿನಲ್ಲಿ ಶ್ಯಾಮಣ್ಣನಾಗಲಿ ನಂಜುಂಡಯ್ಯನಾಗಲಿ ಮನೆಯಲ್ಲಿರುವುದಿಲ್ಲವೆಂಬುದು ಅವಳಿಗೆ ಗೊತ್ತು. ನೇರವಾಗಿ ಒಳಗೆ ಹೋಗಿ ಪುಟ್ಟಗೌರಿಯ ಮುಂದೆ ನಿಂತು ಎಂದಳು: ‘ಅವರೇನೋ ಒಂದು ಮಾತು ಅಂದಿರ್ಬೌದು. ಹಾಗಂತ ನನ್ನ ನಿನ್ನ ಸ್ನೇಹ ಹೋಗ್ಬೇಕೇನಮ್ಮ?’
ಏನು ಹೇಳಬೇಕೆಂಬುದು ಪುಟ್ಟಗೌರಿಗೆ ತಕ್ಷಣ ತಿಳಿಯಲಿಲ್ಲ. ಆದರೂ ಹೇಳಿದಳು: ‘ಒಂದು ಮಾತಂತೆ! ಸಾಕು ಸಾಕು. ನಿನ್ನ ಸ್ನೇಹವೂ ಬ್ಯಾಡ; ನಿಮ್ಮ ಮನೆಗೆ ಬರೂದೂ ಬ್ಯಾಡ. ಈಗ ನೀನು ಇಲ್ಲಿಗೆ ಬಂದದ್ದು ನಮ್ಮ ಮಾವ್‌ನೋರಿಗೆ ತಿಳಿದ್ರೆ ನಿನ್ನ ಕಾಲು ಕತ್ತರಿಸಿ ಹಾಕಿಬಿಟ್ಟಾರು. ನಡಿ, ನಡಿ ಸುಮ್ನೆ.’
‘ಹೋಗ್ತೀನಿ, ನನ್ನ ಬೆಂಡೋಲೇನೂ ದುಡ್ನೂ ಕೊಡು.’
‘ಯಂಥಾ ಬೆಂಡೋಲೆ, ಯಂಥಾ ದುಡ್ಡು?’-ಏನೂ ಅರಿಯದವಳಂತೆ ಅವಳು ಕೇಳಿದಳು.
‘ಇದೇನಮ್ಮ ಹೀಗಂತೀಯಾ? ಈಗ ಒಂದು ವರ್ಷದಲ್ಲಿ ನಮ್ಮ ಯಜಮಾನ್ರು ನನ್ನ ಹ್ವಡದ ದಿನ ನಿಂಗೆ ಬಿಚ್ಚಿ ಕೊಟ್ಟಿರ್‍ಲಿಲ್ವೆ ನಾನು? ನೀರಿಗೆ ಹೋಗೂವಾಗ ಬಿಂದಿಗೇಲಿ ತುಂಬ್ಕಂಡು ಬಂದು ನಾನು ನಿಂಗೆ ಕೊಟ್ಟಿದ್ದ ಅಕ್ಕಿ, ಕಾಫಿ ಬೀಜ, ಇದ್ರುದ್ದೆಲ್ಲ ಒಟ್ಟು ಹದಿನೈದು ರೂಪಾಯಿ ಕೊಡ್‌ಬ್ಯಾಡ್ವೆ?’

‘ಕಮಲಮ್ಮ, ಇಲ್ಲದ್ದ ಆಡಿದ್ರೆ ನಿನ್ನ ನಾಲಿಗೇಲಿ ಹುಳು ಸುರಿಯುತ್ತೆ. ನಡಿ, ನಡಿ. ನಮ್ಮನೇಲಿ ಒಂದು ನಿಮಿಷವೂ ನಿಂತುಕೋಬ್ಯಾಡ. ನಮ್ಮಾವ್ನೋರು ಬತ್ತಾರೆ ನೋಡೀಗ.’
ಕೋಪದಿಂದ ಕಮಲುವಿನ ಮೈ ಉರಿಯಲು ಮೊದಲಾಗಿ ತುಟಿ ನಡುಗುತ್ತಿದ್ದವು. ಮತ್ತೆ ಮಾತನಾಡಲು ಏನೂ ತಿಳಿಯಲಿಲ್ಲ. ಹಿಂದಿನ ಕಾಲದ ಗಟ್ಟಿ ಬೆಂಡೋಲೆ. ಏನಿಲ್ಲವೆಂದರೂ ಎಂಬತ್ತು ರೂಪಾಯಿಯಾಗುತ್ತೆ. ಉಳಿದದ್ದು ಹದಿನೈದು ರೂಪಾಯಿ. ಈ ಮುಂಡೆ ಎರಡನ್ನೂ ದಕ್ಕಿ ಹಾಕೂಕ್ಕೆ ಮಾಡಿದಾಳೆ. ದುಡ್ಡು ದಕ್ಕಿಹಾಕುಕ್ಕೇ, ನಿನ್ನ ಗಂಡ ನನ್ನ ಹಾಗಂದ ಅಂತ ಸುಳ್ಳು ಸುಳ್ಳೇ ಹುಟ್ಟಿಸ್ಕಂಡು ನನ್ನ ಕೈಲಿ ಮಾತು ಬಿಟ್ಟಿದಾಳೆ. ಈ ಮುಂಡೆಗೆ ನನ್ನ ದುಡ್ಡು ಬಿಟ್ಟುಬಿಟ್ರೆ ನಾನು ಹಾಸನದ ಹೆಣ್ಣೇ ಅಲ್ಲ ಎಂದು ನಿಶ್ಚಯ ಮಾಡುತ್ತಿರುವಾಗಲೇ ಕಣ್ಣನ್ನು ಸುತ್ತ ಹೊರಳಿಸಿದಳು. ಹಿಂಭಾಗದ ನೀರು ಮನೆಯಲ್ಲಿದ್ದ ದೊಡ್ಡ ಹಂಡೆ ಕಣ್ಣಿಗೆ ಬಿತ್ತು. ತಾನು ಏನು ಮಾಡುತ್ತಿದ್ದೇನೆ, ಅದರ ಪರಿಣಾಮ ಮುಂದೆ ಏನಾಗುತ್ತೆ ಎಂಬ ಪರಿಜ್ಞಾನವೇ ಇರಲಿಲ್ಲ. ನೀರು ಮನೆಗೆ ಹೋಗಿ ಹಂಡೆಯನ್ನು ನೂಕಿ ಉರುಳಿಸಿ ನೀರನ್ನು ಚೆಲ್ಲಿದವಳೇ, ಅದನ್ನು ಎತ್ತಿ ಎರಡು ಕೈಲೂ ಹಿಡಿದುಕೊಂಡು-‘ನನ್ನ ದುಡ್ಡು ಕೊಟ್ಟು ನಿನ್ನ ಹಂಡೆ ಬಿಡಿಸ್ಕಂಡು ಹೋಗು’ ಎಂದು ಹೊರಟುಬಿಟ್ಟಳು. ಪುಟ್ಟಗೌರಿ ಬಿಟ್ಟಾಳೆಯೇ?: ‘ಅಯ್ಯೊ ಕಳ್ಳಮುಂಡೆ, ಮನೆ ನುಗ್ಗಿ ಹಂಡೆ ಹೊತ್ಕಂಡು ಹೋಗ್ತೀಯಾ?’-ಎಂದು ಮುಂದೆ ನುಗ್ಗಿ ಅವಳನ್ನು ತಡೆದಳು. ಆದರೆ ಕಮಲು ಅವಳಿಗಿಂತ ಶಕ್ತಿವಂತೆಯಾದ ಹೆಂಗಸು. ಅವಳನ್ನು ಕೆಳಕ್ಕೆ ನೂಕಿ ಮನೆಯಿಂದ ಹೊರಗೆ ಬಂದು, ತಳದ ಮಸಿಯನ್ನೂ ನೋಡದೆ ಹಂಡೆಯನ್ನು ತಲೆಯ ಮೆಲೆ ಇಟ್ಟುಕೊಂಡು ತನ್ನ ಮನೆಗೆ ದುಡು ದುಡು ಓಡಿ ಬಂದುಬಿಟ್ಟಳು.

ಕಲ್ಲೇಶನ ಹೆಂಡತಿ ದೊಡ್ಡ ಹಂಡೆ ಹೊತ್ತು ಹೋಗುವುದನ್ನು ಬೀದಿಯ ನಾಲ್ಕಾರು ಜನರು ನೋಡಿದರು. ಅಷ್ಟರಲ್ಲಿ ಯಾರಿಗೂ ಯಾವ ಮಹತ್ವವೂ ಕಾಣಿಸಲಿಲ್ಲ. ಅವಳು ಮನೆಗೆ ಬಂದಾಗ ಗಂಡ ಇರಲಿಲ್ಲ. ಹಂಡೆಯನ್ನು ಅಡಿಗೆಯ ಮನೆಯ ಒಳಭಾಗದಲ್ಲಿ ಇಟ್ಟು ಮನೆಯ ಮುಂಬಾಗಿಲನ್ನು ಮುಚ್ಚಿಕೊಂಡಳು. ಅಕ್ಕಮ್ಮನಿಗೆ ಏನೂ ಅರ್ಥವಾಗಲಿಲ್ಲ. ‘ಏನೇ ಇದು? ಯಾರ ಮನೇದೇ ಹಂಡೆ?’-ಎಂದು ಕೇಳಿದರೆ ಅವಳು ಯಾವ ಉತ್ತರವನ್ನೂ ಹೇಳಲಿಲ್ಲ. ‘ಕಳ್ಳಲೌಡಿ ತಂದು, ನನ್ನ ದುಡ್ಡು ದಕ್ಕಿಹಾಕುಕ್ಕೆ ಅಂತ ಆಟ ತೆಗೆದಿದ್ಲು. ನಮ್ಮನೆಯೋರ್ದು ಸಿಟ್ಟಿನ ಸ್ವಭಾವ ಅಂತ ಗೊತ್ತಿಲ್ವೆ? ಯಾಕ್ ಬಂದ್ರಿ ಅಂತ ಕೇಳಿರ್‍ಭೌದು. ಅದೇ ನೆವವಾಯ್ತೇನೋ ನುಂಗಿಹಾಕುಕ್ಕೆ? ಹಂಡೆ ಕೇಳುಕ್ಕೆ ನಮ್ಮನೆ ಬಾಗ್ಲಿಗೆ ಬರ್ಲಿ. ಮೋಸಗಾರ ಮುಂಡೆಗೆ ತೋರುಸ್ತೀನಿ ನಾನೆಂಥೋಳು ಅಂತ’-ಎಂದು ಅವಳು ಆಲೋಚಿಸುತ್ತಿದ್ದುದು ಅಕ್ಕಮ್ಮನಿಗೆ ಪಿಟಿಪಿಟಿ ಕೇಳುತ್ತಿತ್ತು; ಆದರೆ ಅರ್ಥವಾಗಲಿಲ್ಲ.

ಅರ್ಧ ಗಳಿಗೆಯೂ ಕಳೆದಿಲ್ಲ. ಬೀದಿಯಲ್ಲಿ ಗದ್ದಲವಾಯಿತು. ಶ್ಯಾಮಣ್ಣ, ‘ನಮ್ಮನೆ ಹಂಡೆ ಕದ್ಕಂಡ್ ಬಂದೆ ಏನೇ ಕಳ್ಳೀ?’ ಎಂದು ಕೂಗುತ್ತಾ ಬರುತ್ತಿದ್ದುದು ಕೇಳಿಸಿತು. ಇನ್ನೂ ಇಪ್ಪತ್ತು ಮೂವತ್ತು ಜನ ಗುಂಪು ಕಟ್ಟಿಕೊಂಡು ಬಂದ ಶಬ್ಧವೂ ಆಯಿತು. ಶ್ಯಾಮಣ್ಣನೇ ಬೀದಿಯ ಬಾಗಿಲು ತಟ್ಟಿದ. ‘ಅವ್ರು ಮನೆಗೆ ಬರೂತಂಕ ಬಾಗಿಲು ತೆಗೀಬ್ಯಾಡಿ’- ಎಂದು ಹೇಳುತ್ತಿದ್ದರೂ, ಹಿಂದು ಮುಂದು ಗೊತ್ತಿಲ್ಲದ ಅಕ್ಕಮ್ಮ ಹೋಗಿ ಬಾಗಿಲು ತೆಗೆದಳು. ಮನೆಯ ಮುಂದೆಲ್ಲ ಜನ ಜಾತ್ರೆಗೆ ನೆರೆದಂತೆ ತುಂಬಿದ್ದಾರೆ. ಶ್ಯಾಮಣ್ಣ-‘ಅಕ್ಕಮ್ಮ, ನಿಮ್ಮ ಸ್ವಸೆ ನಮ್ಮನೆ ಹಂಡೆ ಹೊತ್ಕೊಂಡ್ ಬಂದಿದಾಳೆ ಕೊಟ್ಬಿಡಿ’ ಎಂದ.
‘ನನ್ ದುಡ್ ಕೊಡೂತಂಕ ನಾನ್ ಕೊಡುಲ್ಲ’-ಎಂದು ಕಮಲು ಒಳಗಿನಿಂದ ಕೂಗಿದಳು.
ಏನೊಂದೂ ಅರ್ಥವಾಗದ ಅಕ್ಕಮ್ಮ ಎಂದಳು: ‘ನಮ್ಮ ಕಲ್ಲೇಶ ಊರ ಮುಂದಕ್ಕೆ ನೀರ ಕಡೆ ಹೋಗಿದಾನೆ. ಯಾರಾರೂ ಹೋಗಿ ಕರ್‍ಕಂಡು ಬನ್ನಿ. ಯಜಮಾನ ಬರೂತಂಕ ನಮಗೇನೂ ಗೊತ್ತಿಲ್ಲ.’
ಇಬ್ಬರು ಓಡಿದರು. ಸ್ವಲ್ಪ ಹೊತ್ತಿನಲ್ಲಿ ಬಂದ ಕಲ್ಲೇಶನಿಗೆ, ಹೆಂಡತಿ ಮಾಡಿದ್ದ ಕೆಲಸವನ್ನು ಅವನನ್ನು ಕರೆತಂದವರೇ ಹೇಳಿದ್ದರು. ಅವಳ ಕೆಲಸದ ಏನು ಎಂತುಗಳು ತಿಳಿಯದೆ ಅವನು ಸುಮ್ಮನೆ ಬಂದು ಮನೆಯ ಒಳಗೆ ಹೋಗಿ ಹೆಂಡತಿಯನ್ನು ಕೇಳಿದ: ‘ಏನೇ ಇದು?’
‘ಆ ಕಳ್ಳ ಮುಂಡೆ ನನ್ನ ದುಡ್ದು ನುಂಗಿಹಾಕ್ಕಂಡಿದಾಳೆ.’
‘ಅದ್ಯಾವ ದುಡ್ಡು, ಅದೆಲ್ಲಿಂದ ಬಂತು ಕೇಳು’-ಶ್ಯಾಮಣ್ಣ ಹೇಳಿದ.
‘ನಂದೊಂಜತೆ ಬೆಂಡೋಲೆ, ಮೇಲೆ ಹದಿನೈದು ರೂಪಾಯಿ ಕೊಡಬೇಕು.’
‘ಯಂಥ ಬೆಂಡೋಲೆ? ಯಾರಪ್ಪನ ಮನೇದು ಇದು?’
‘ನನ್ನ ಬೆಂಡೋಲೆಯೇ. ಮುರಿದ್ಹೋಗಿತ್ತು. ಸರಿಮಾಡಿಸಿಕೊಡ್ತೀನಿ ಅಂತ ಹೇಳಿ ನಿಮ್ಮ ಸ್ವಸೆ ಇಸ್ಕಂಡಿದ್ಲು.’
‘ನಿನ್ನ ಬೆಂಡೋಲೆ ಮುರಿದಿದ್ರೆ ನಿನ್ನ ಗಂಡನ ಕೈಲಿ ಕೊಟ್ಟು ಸರಿ ಮಾಡಿಸ್ಕಾಬೇಕಾಗಿತ್ತು. ಅವಳ ಕೈಲಿ ಯಾಕೆ ಕೊಟ್ಟೆ? ಹದಿನೈದು ರೂಪಾಯಿ ಯಾವ್ದು?’
‘ನನ್ನ ಹತ್ರ ಅವ್ಳು ಅಕ್ಕಿ ಕಾಪಿ ಬೀಜ ಇಸ್ಕಂಡಿದ್ಲು.’
‘ಕೇಳಿದ್ರೇನ್ರಯ್ಯ. ಯಾರಾದ್ರೂ ನಂಬ್ತಾರಾ ಈ ಮಾತ?’-ಎಂದು ಶ್ಯಾಮಣ್ಣ ಬೀದಿಯ ತುಂಬ ಸೇರಿದ್ದವರಿಗೆ ಒಪ್ಪಿಸಿದ.
‘ಯಾರೇನು ಒಪ್ಪದು? ನನ್ನ ಗಂಟು ನುಂಗಿಹಾಕ್ಬೇಕು ಅಂತ ಸುಳ್ ಸುಳ್ಳೇ ನಿನ್ನ ಗಂಡ ಹಾಗಂದ ಹೀಗಂದ ಅಂತ ನ್ಯವ ಮಾಡ್ಕಂಡ್ ಅವ್ಳು ನನ್ನ ಕೈಲಿ ಮಾತು ಬಿಟ್ಳು. ನನ್ನ ಗಂಡ ಅವ್ಳುನ್ನ ಏನಂದದ್ದು? ಅವ್ಳುನ್ನೇ ಕರೀರಿ. ಅವ್ಳ ಮಕ್ಳು ಹಿಡಕಂಡು ಪ್ರಮಾಣ ಮಾಡಿ ಹೇಳ್ಲಿ.’
‘ಮಕ್ಳಿಲ್ಲದ ಬಡ್ಡಿ, ನೀನು ಯಾರುನ್ನ ಹಿಡ್ಕಂಡು ಪ್ರಮಾಣ ಮಾಡ್ತೀಯಾ?-ಶ್ಯಾಮಣ್ಣ ಕೇಳಿದ.
ಮಾತು ಎತ್ತ ಸರಿಯುತ್ತಿದೆ ಎಂಬುದನ್ನು ಕಲ್ಲೇಶ ಅರ್ಥಮಾಡಿಕೊಂಡ. ಆಣೆ ಪ್ರಮಾಣದ ಮಾತು ಬಂದಾಗ ಹಿಂದೆ ಮುಂದೆ ಯೋಚಿಸದೆ ಪುಟ್ಟಗೌರಿ ನಿಜ ಹೇಳಿಬಿಡಬಹುದು ಎಂಬ ಭಯವಾಯಿತು. ಅಕ್ಕಮ್ಮನ ಕಡೆ ತಿರುಗಿ-‘ಹಂಡೆ ಎಲ್ಲಿದೆ?’ ಎಂದು ಕೇಳಿದ.
‘ಅಡಿಗೇಮನ್ಲಿಟ್ಟಿದಾಳೆ.’
ಸುಮ್ಮನೆ ಹೋಗಿ ಅವನು ಅದನ್ನು ಎತ್ತಿಕೊಂಡು ಬಂದು ಶ್ಯಾಮಣ್ಣನ ಮುಂದಿಟ್ಟ. ‘ನನ್ನ ದುಡ್ಡು ಬೆಂಡೋಲೆ ಕೊಡೂತಂಕ ಅದ ಕೊಡ್ಕೂಡ್ದು’-ಎಂದು ಅಡ್ಡ ಬಂದ ಹೆಂಡತಿಯನ್ನೂ ಕಾಲೆತ್ತಿ ಒದೆದು ನೂಕಿದ.
‘ಕಳ್ಳಮುಂಡೆ ತಂದು. ಹಿಡಕಂಡು ನೆತ್ತಿ ಕೂದ್ಲು ಬೀಳೂತಂಕ ಕೆರದಲ್ಲಿ ಹೊಡೀಬೇಕು’-ಎನ್ನುತ್ತಾ ಶ್ಯಾಮಣ್ಣ ಅಲ್ಲಿಯೇ ಇದ್ದ ತಳವಾರನಿಗೆ, ‘ಹಂಡೆ ತಗಂಡು ನಡಿಯೋ’ ಎಂದು ಹೇಳಿದ.
ಗುಂಪು ನಿಧಾನವಾಗಿ ಮನೆಯ ಮುಂದಿನಿಂದ ಚದುರಿತು. ಆದರೆ ಗ್ರಾಮದಲ್ಲಿ ಇಂತಹ ವಿಶೇಷ ನಡೆದಿರುವಾಗ ಜನಗಳು ಅದನ್ನು ಬಿಟ್ಟು ಅಷ್ಟು ಬೇಗ ತಮ್ಮ ಪಾಡಿಗೆ ತಾವು ಹೊರಟುಹೋಗಲಾರರು. ಕಲ್ಲೇಶನ ಮನೆಯ ಮುಂದಿನ ಆಚೆಯ ತಿರುವನ್ನು ಹಾಯ್ದು ಮತ್ತೆ ಒಟ್ಟಿಗೆ ಸೇರಿ, ಅದರ ಬಗೆಗೇ ಲಲ್ಲೆ ಹೊಡೆಯಲು ಪ್ರಾರಂಭಿಸಿದರು. ಇಲ್ಲಿಯ ತನಕ ವಿಷಯವೇ ಗೊತ್ತಿಲ್ಲದವರೂ ಒಬ್ಬೊಬ್ಬರಾಗಿ ಬಂದು ಸೇರಿದರು.

ಕಲ್ಲೇಶ ಮನೆಯ ಬಾಗಿಲು ಹಾಕಿಕೊಂಡವನೇ, ಕೈಗೆ ಸಿಕ್ಕಿದ ಒಂದು ದನಕಟ್ಟುವ ಹಗ್ಗವನ್ನು ಜೋಡಿಸಿ ಹಿಡಿದುಕೊಂಡ. ತಪ್ಪೊಪ್ಪಿಕೊಳ್ಳಲು ಪೋಲೀಸಿನವರು ಕಳ್ಳರನ್ನು ಬಡಿಯುವ ಹಾಗೆ ಹಗ್ಗದಲ್ಲಿ ಬೀಸಿ ಬೀಸಿ ಹೆಂಡತಿಯ ಮೈಕೈಗಳಿಗೆ ಬಾರಿಸಲು ಶುರುಮಾಡಿದ. ಈ ಸಮಯದಲ್ಲಿ ಬಿಡಿಸಿಕೊಳ್ಳಲು ಹೋದರೆ ಅದೇ ಹಗ್ಗದಲ್ಲಿ ತನಗೂ ಶೆಣೆಯುತ್ತಾನೆಂದು ಗೊತ್ತಿದ್ದ ಅಕ್ಕಮ್ಮ, ಸುಮ್ಮನೆ ಹಿತ್ತಿಲ ಕಡೆಗೆ ಹೋಗಿ ದನದ ಕೊಟ್ಟಿಗೆಯಲ್ಲಿ ಕುಳಿತಳು. ‘ಬೆಂಡೋಲೇನ ಏನು ಮಾಡ್ಬೇಕು ಅಂತ ಅವ್ಳಿಗೆ ಕೊಟ್ಟಿದ್ದೆ ಹೇಳೇ ಬೋಸುಡಿ’-ಎಂದು ಹದಿನೈದು ಇಪ್ಪತ್ತು ಸಲ ಶೆಣೆದ ಮೇಲೆ ಅವಳು ಬಾಯಿ ಬಿಟ್ಟಳು: ‘ನಮ್ಮ ರಂಗಮಣೀಗೆ ಕೊಡಬೇಕು ಅಂತ ಇಟ್ಟಿದ್ದೆ.’ ರಂಗಮಣಿ ಕಮಲುವಿನ ತಂಗಿ; ಈಗ ಮದುವೆಗೆ ಬಂದಿದ್ದಳು.
‘ಅಕ್ಕಿ ಕಾಫಿ ಬೀಜ ಹ್ಯಾಗೆ ಕೊಟ್ಟೆ?’
ಅವಳು ಬಾಯಿ ಬಿಡಲಿಲ್ಲ. ಮತ್ತೆ ಒಂದು ಡಜನ್ ಒಂದೇಸಮನೆ ಬಿದ್ದಮೇಲೆ ಬಾಯಿ ತೆಗೆದಳು: ‘ನೀರಿಗೆ ಹೋಗೂವಾಗ ಬಿಂದಿಗೇಲಿ ಹಾಕ್ಕಂಡು ಹೋಗ್ತಿದ್ದೆ.’

ಕಲ್ಲೇಶಿ ಹಗ್ಗವನ್ನು ಎಸೆದ. ಅಡಿಗೆ ಮನೆಗೆ ಹೋಗಿ ಒಂದು ಸೌದೆ ಹೊಳಕೆ ತಂದ, ಅದನ್ನು ಕಂಡು ಅವಲು ಭಯದಿಂದ, ‘ಅಯ್ಯಯ್ಯಪ್ಪಾ ನನ್ನ ಸಾಯಿಸ್ತಾನಲ್ಲಪ್ಪಾ, ನಾನ್ ಸತ್ಹೋದೆ’ ಎಂದು ಕಿರುಚಿಕೊಂಡಳು. ಅವರ ಮನೆಯ ಆಚೆಯ ತಿರುವಿನಲ್ಲಿ ಸೇರಿದ್ದ ಜನರ ಗುಂಪು ಶಬ್ದ ಮಾಡದೆ ಬಂದು ಮನೆಯ ಮುಂದೆ ಸೇರಿತು. ಫಟ್ ಫಟ್ ಎಂಬ ಹೊಳಕೆಯ ಬಡಿತ, ಅವಳ ಚೀತ್ಕಾರ, ಶಾಪಗಳು, ಮತ್ತು ಮಧ್ಯ ಮಧ್ಯದಲ್ಲಿ ಕಲ್ಲೇಶ ಅನ್ನುತ್ತಿದ್ದ ಮಾದರ್‌ಚೋತ್ ಬಾನ್‌ಚೋತ್ಗಳು, ಹೊರಗಿದ್ದ ಎಲ್ಲರ ಕಿವಿಯಮೇಲೂ ಬಡಿಯುತ್ತಿದ್ದವು. ಬಾಗಿಲು ಬಡಿದು ಒಳಗೆ ನುಗ್ಗಿ ಬಿಡಿಸಿಕೊಳ್ಳಬೇಕೆಂದು ದೂರದ ಮನೆಗಳ ಒಬ್ಬಿಬ್ಬರು ಮುಂದೆ ನುಗ್ಗಿದರು. ಇದು ವಿಶೇಷವೇನೂ ಇಲ್ಲದ ಸಾಮಾನ್ಯ ಸಂಗತಿ ಎಂಬುದನ್ನು ಬಲ್ಲ ಹತ್ತಿರದ ಮನೆಗಳವರು, ಕೈಸನ್ನೆ ಮಾಡಿ ತಡೆದು ನಿಲ್ಲಿಸಿದರು.

ಸೌದೆಯ ಹೊಳಕೆ ಮುರಿಯಿತೋ ಅಥವಾ ಅವನಿಗೇ ಸಾಕೆನಿಸಿತೋ, ಕಲ್ಲೇಶ ಹೊಡೆಯುವುದನ್ನು ನಿಲ್ಲಿಸಿದ. ಅಳುವುದಕ್ಕೂ ಶಕ್ತಿ ಸಾಲದೆ ಬಿದ್ದುಕೊಂಡಿದ್ದ ಅವಳ ಬೆನ್ನು ಭುಜ ತೋಳುಗಳಿಂದ ರಕ್ತ ಬರುತ್ತಿತ್ತು. ಅವಳ ಕಿವಿಗೆ ಕೈಹಾಕಿ, ತಾನು ಹೋದ ವರ್ಷ ಮಾಡಿಸಿ ತಂದಿದ್ದ ಎರಡು ಬೆಂಡೋಲೆಗಳನ್ನೂ ಬಿಚ್ಚಿ ಅಟ್ಟ ಹತ್ತಿ ತನ್ನ ಪೆಟ್ಟಿಗೆಯಲ್ಲಿಟ್ಟು, ಬೀಗದ ಕೈಯನ್ನು ಉಡಿದಾರಕ್ಕೆ ಕಟ್ಟಿಕೊಂಡು ಅವನು ಬೀದಿಯ ಬಾಗಿಲು ತೆರೆದು ಹೊರಗೆ ಬಂದ. ಮನೆಯ ಮುಂದಕ್ಕೇ ಬಂದು ನಿಂತಿದ್ದ ಗುಂಪನ್ನು ಕಂಡು ರೇಗಿ-‘ಒಳಗೇನು ಕರಡಿ ಕುಣೀತಿತ್ತೇನ್ರುಲಾ ಇಲ್ಲಿ ನಿಂತ್ಕಳಾಕೆ?’ ಎಂದು ಅವನು ಕೇಳಿದ ರೀತಿಗೇ ಹೆದರಿ ಎಲ್ಲರೂ ಚದುರಿ ಹೊರಟುಹೋದರು.
ಗಟ್ಟಿಯಾಗಿ ಅತ್ತು ಎರಡು ಗಂಟೆಯ ಕಾಲ ಬಿಕ್ಕಳಿಸಿ ಮುಸಿಗುಟ್ಟಿ, ಗಂಡನ ಕೈ ಸೇದಿ ಕಾಲು ಮುರಿದು ಅವನನ್ನು ಜೈಲಿನಲ್ಲಿ ನೇಣುಗಟ್ಟಲೆಂದು ಶಪಿಸಿದ ಮೇಲೆ ಕಮಲುವಿನ ಬುದ್ಧಿ ಬೆಳಿಗ್ಗೆಯಿಂದ ನಡೆದುದನ್ನೆಲ್ಲ ತಿರುವುಹಾಕಲು ಶುರುಮಾಡಿತು. ಆ ಕಳ್ಳಮುಂಡೆ ನನ್ನ ಬೆಂಡೋಲೆ, ಹದಿನೈದು ರೂಪಾಯಿ ನುಂಗಿಕೊಂಡಿದ್ದರೂ ಹೋಗಲಿ. ನಾನು ಅವಳ ಮನೆ ಹಂಡೆ ಹೊತ್ಕಂಡು ಬರಬಾರದಾಗಿತ್ತು. ಅದನ್ನ ತಂದುದ್ರಿಂದಲೇ ಹೋದ ವರ್ಷ ಆದುದ್ದೆಲ್ಲ ಗೊತ್ತಾದ್ದು. ಈ ಪಾಪರ್‌ಮುಂಡೇಮಗ ನನ್ನ ಸಾಯೂಹಾಗೆ ಹೊಡೆದದ್ದು-ಎಂಬ ಅರಿವಾಯಿತು. ಆದರೆ ಅವನು ಹೊಡೆದದ್ದಕ್ಕೆ ಬುದ್ಧಿ ಕಲಿಸಬೇಕು. ಸುಮ್ಮನಾದರೆ ಇನ್ನೊಂದು ದಿನ ಇನ್ನೂ ಜಾಸ್ತಿ ಹೊಡೀತಾನೆ ಯಮಮುಂಡೇಮಗ-ಎಂದೂ ನಿಶ್ಚಯಿಸಿದಳು.

– ೩ –

ಆ ದಿನವೆಲ್ಲಾ ಮರುವನಹಳ್ಳಿಯ ದೇವಿಯ ಮನೆಯಲ್ಲಿದ್ದು ಮರುದಿನ ಬೆಳಿಗ್ಗೆ ಎದ್ದು ಕಲ್ಲೇಶ ಊರಿಗೆ ಹೊರಟ. ತೋಟದ ಕತ್ತಾಳೆಯ ಓಣಿಯಲ್ಲಿ ಬರುತ್ತಿರುವಾಗ ರೊಂಯ್ ಎಂದು ನಾಲ್ಕಾರು ಕಲ್ಲುಗಳು ಬಂದು ಅವನನ್ನು ಹೊಡೆದವು. ಯಾರೆಂದು ಕತ್ತೆತ್ತಿ ನೋಡುತ್ತಿರುವಾಗ ಹಿಂಭಾಗದಿಂದ ಇನ್ನೊಂದು ಕಲ್ಲು ಬಂತು. ‘ಯಾವನ್ರುಲೇ ಅದು ನಿಮ್ಮವ್ವನಾ’-ಎಂದು ಅವನು ಒಂದು ಸಲ ಕೂಗಿದ. ಕಲ್ಲುಗಳು ಬರುವುದು ನಿಂತುಹೋಯಿತು. ತಾನೇ ಮೇಲೆ ಬಿದ್ದು ಆ ಕಡೆ ನುಗ್ಗಲು ಭಯ ತುಂಬ ಜನರಿದ್ದು ಒಟ್ಟಿಗೆ ಮೇಲೆ ಬಿದ್ದರೆ, ಎಂಬ ಅಂಜಿಕೆ. ಸುಮ್ಮನೆ ಹೋದರೆ ಯಾರು, ಯಾಕೆ ಹೀಗೆ ಮಾಡಿದರು, ಎಂಬುದು ತಿಳಿಯುವುದಿಲ್ಲ. ಹೇಗೂ ಬೆಳಗಿನ ಹೊತ್ತು ಎಂದು ಧೈರ್ಯ ಮಾಡಿ ಕತ್ತಾಳೆಯ ಸಂದಿನಲ್ಲಿ ನುಸಿದು ನೋಡಿದ. ಬೇಲಿಯ ಮರೆಯಲ್ಲಿ ಅಡಗಿ ಕೂತಿದ್ದವರ ಮುಖ ಕಂಡಿತು. ತಮ್ಮನ್ನು ಅವನು ಗುರುತಿಸಿದನೆಂದು ತಿಳಿದ ಅವರೇ ಸಂದಿನಲ್ಲಿ ನುಸಿದು ಓಡಿಬಿಟ್ಟರು.

ಅವರೆಲ್ಲ ಶ್ಯಾಮಣ್ಣನ ಕುಳಗಳು, ಗ್ರಾಮದ ತೋಟಿ ತಳವಾರರು. ಸುಮ್‌ಸುಮ್ಮನೆ ಬಂದು ತನಗೆ ಕಲ್ಲು ಹೊಡೆಯಲು ಅವರಿಗೂ ತನಗೂ ಯಾವ ದ್ವೇಷವೂ ಇಲ್ಲ. ಇದು ಶ್ಯಾಮಣ್ಣನ ಕಿತಾಪತಿಯೇ ಸರಿ ಎಂದು ಅವನು ಅರ್ಥಮಾಡಿಕೊಂಡ. ಈ ಶ್ಯಾನುಭೋಗನ ಬುದ್ಧಿಯೇ ಹಾಗೆ. ತಾನೇ ಮುಂದೆ ನುಗ್ಗಿ ಏನು ಮಾಡುವುದಕ್ಕೂ ಧೈರ್ಯವಿಲ್ಲ. ಹಿಂದೆಯೇ ಮಾಡಿಸುತ್ತಾನೆ. ಅಪ್ಪ ಇದ್ದಾಗ ಒಂದು ದಿನ ನಮ್ಮ ಮನೆ ಮೇಲೆ ಹೀಗೆಯೇ ಕಲ್ಲು ಬೀರಿಸಿದ್ದ. ಅದರಿಂದಲೇ ಅಲ್ಲವೆ ಅಪ್ಪ ಹಾಡುಹಗಲು ಹೋಗಿ ಅವನ ಮನೆ ಹೆಂಚು ಬಡಿದದ್ದು? ಆದರೆ ಅಪ್ಪನಂತೆ ಮಾಡುವ ಎದೆಗಾರಿಕೆ ತನಗಿಲ್ಲವೆಂಬುದು ಕಲ್ಲೇಶನಿಗೂ ಗೊತ್ತು. ಈ ಶ್ಯಾಮಣ್ಣ ಯಾಕೆ ಹೀಗೆ ಮಾಡಿಸಿದ? ನೆನ್ನೆ ಇವಳು ಹಂಡೆ ಹೊತ್ತುಕೊಂಡು ಬಂದದ್ದಕ್ಕಿರಲಾರದು. ಅದನ್ನ ನಾನೇ ವಾಪಸ್ಸು ಕೊಟ್ಟಿದೀನಿ. ಸೊಸೆಗೆ ಆದದ್ದು ಅವನಿಗೆ ಅರ್ಥವಾಗಿದೆ. ಬಾಯಿಬಿಟ್ಟು ಜಗಳ ಆಡುಕ್ಕೆ ಹೊರಟರೆ ಅವನ ಮನೆಗೇ ಅವಮಾನ. ಅದಕ್ಕೆ ಹೀಗೆ ತೀರುಸ್ಕಳುಕ್ಕೆ ಹೊರಟಿದಾನೆ ಸೂಳೆಮಗ. ಇವನ ಹತ್ರ ಜರೂರತ್ತಿಗೆ ಹೋಗಬಾರ್ದು; ತಂತ್ರಾನೇ ಮಾಡಬೇಕು. ಆ ಪುಟ್ಟಗೌರಿ ತಂಟೆಗೆ ಹೋಗದೇ ಇದ್ರೂ ಆಗ್ತಿತ್ತು. ಅವಳ್ಯಾವ ಸುಂದರಿ ಅಂತ. ಆದ್ರೂ ತುಂಬ ದಿನದಿಂದ ಮನಸ್ನಲ್ಲಿ ಹುಟ್ಟಿತ್ತು. ತೀರಿತು-ಎಂದು ಯೋಚಿಸುತ್ತಾ ಮನೆಗೆ ಬರುವ ಹೊತ್ತಿಗೆ ಇನ್ನೊಂದು ಸಂದರ್ಭ ಕಾದಿತ್ತು. ಅಕ್ಕಮ್ಮ ಹೇಳಿದಳು: “ನೀನು ನೆನ್ನೆ ಎಲ್ಲ ಎಲ್ಲಿಗೆ ಹೋದೆಯೋ? ಅವ್ಳು, ‘ಬಾವಿಗೆ ಬಿದ್ಬಿಡ್ತೀನಿ. ನಿನ್ನೂ ನಿನ್ನ ಮೊಮ್ಮಗನ್ನೂ ಸೇರಿಸಿ ನೇಣುಗಟ್ಟುಸ್ತೀನಿ’ ಅಂತ ನಿನ್ನೆ ಎಲ್ಲ ಹೆದರಿಸಿದ್ಲು. ನಾನು ರಾತ್ರಿ ಎಲ್ಲ ಕಣ್ಣು ಮುಚ್ಚಿಲ್ಲ. ವಾರದ ಹೊನ್ನನ್ನ ಕರದು ಮನೇಲೇ ಇಟ್ಕಂಡಿದ್ದೆ.”
ಕಮಲು ಇನ್ನೂ ಕೋಪಗೃಹದಲ್ಲೇ ಇದ್ದಳು. ‘ಏನೇ ಬೋಸುಡಿ?’-ಎಂದು ಕೇಳಿದುದಕ್ಕೆ, ‘ನಿನ್ನ ಓಲುಗಟ್ಟಿಸಿಯೇ ಕಟ್ಟುಸ್ತೀನಿ’ ಎಂದು ರಾಂಗಾಗಿ ಜವಾಬು ಕೊಟ್ಟಳು. ಒಂದು ಸೌದೆ ಹೊಳಕೆ ಕೈಗೆ ತೆಗೆದುಕೊಳ್ಳಬೇಕೆಂದು ಅವನ ಮನಸ್ಸು ತಕ್ಷಣ ಯೋಚಿಸಿತಾದರೂ, ನೆನ್ನೆ ಅದರಲ್ಲೇ ಅಷ್ಟು ಹೊಡೆದರೂ ಅವಳು ಬಗ್ಗದಿರುವುದನ್ನು ನೆನೆಸಿಕೊಂಡ ಅದು ಆ ಯೋಚನೆಯನ್ನು ಕೈಬಿಟ್ಟಿತು. ಹಿಂದೆ ಒಂದು ಸಲ ಅವಳು ಬಾವಿಗೆ ಬಿದ್ದಿದ್ದ ನೆನಪೂ ಆಯಿತು. ತಕ್ಷಣ ಒಂದು ಉಪಾಯ ಹೊಳೆದು ಅವನು ಕೇಳಿದ: ‘ಬಾವಿಗೆ ಬೀಳ್ತೀ ಏನೇ?’
‘ಹೂಂ ಕಣೋ.’
‘ಬಾ ಹಾಗಾದ್ರೆ’-ಎಂದು ಅವಳ ರೆಟ್ಟೆ ಹಿಡಿದು ದರದರನೆ ಹಿತ್ತಿಲ ಬಾವಿಯ ಹತ್ತಿರಕ್ಕೆ ಎಳೆದುಕೊಂಡು ಹೋದ. ‘ಏನಾರ ಹೆಚ್ಚುಕಮ್ಮಿಯಾಗಿ ನಮ್ ಮ್ಯಾಲೆ ಬಂದೀತು ಕಣೋ’-ಎಂದು ಅಡ್ಡಬಂದ ಅಕ್ಕಮ್ಮನನ್ನು ದೂರ ನೂಕಿ, ಬಾವಿಯ ಹತ್ತಿರವೇ ಇದ್ದ ಹೊಸ ಹಗ್ಗದ ಜೀರುಗುಣಿಕೆಯನ್ನು ಅಗಲ ಮಾಡಿ ಅವಳ ಕಂಕುಳಿಗೆ ಹಾಕಿ ಬಿಗಿಮಾಡಿದ. ಅವಳು ಬಡಬಡಿಸುತ್ತಿರುವಾಗಲೇ ತನ್ನ ಎರಡು ಕಾಲುಗಳನ್ನೂ ಬಾವಿಯ ಕಟ್ಟೆಗೆ ಒದೆ ಕೊಟ್ಟು, ಹೊಸದಾಗಿ ಹಾಕಿದ್ದ ರಾಟೆಯಿಂದ ಅವಳನ್ನು ನಿಧಾನವಾಗಿ ಒಳಕ್ಕೆ ಬಿಟ್ಟು, ಅಯ್ಯಯ್ಯಪ್ಪೋ ಎಂದು ಅವಳು ಅಳುತ್ತಿರುವಾಗಲೇ ಹಗ್ಗವನ್ನು ಕೆಳಗೆ ಬಿಡುತ್ತಿದ್ದ. ಕೆಳಗೆ ನೀರು ಹತ್ತಿರ ಬಂದು ಅವಳ ಕಾಲು, ಮೊಣಕಾಲು, ತೊಡೆ ಸೊಂಟಗಳ ಭಾಗವು ನಿಧಾನವಾಗಿ ನೀರೊಳಗೆ ಇಳಿದವು. ‘ಅಯ್ಯಯ್ಯೋ’-ಎಂದು ಹೊಡೆದುಕೊಳ್ಳುತ್ತಿರುವಾಗಲೇ ಮೇಲಿನಿಂದ ಹಗ್ಗವನ್ನು ಸಡಿಲಬಿಟ್ಟು ಪೂರ್ತಿಯಾಗಿ ತಲೆಯನ್ನು ಒಂದು ಸಲ ಮುಳುಗಿಸಿ ಮತ್ತೆ ಕಂಕುಳಿನ ತನಕ ಮೇಲೆ ಎತ್ತಿದ. ಒಳಗಿದ್ದ ಅವಳು ಬೆವೆತು ನಡುಗುತ್ತಿದ್ದಳು.
‘ಬಾವಿಗೆ ಬೀಳ್ತೀ ಏನೇ?’-ಮೇಲಿನಿಂದ ಇವನು ಕೂಗಿ ಕೇಳಿದ.
‘ಇಲ್ಲಾ”” ಇಲ್ಲಾ”””.’
‘ನೀನು ತಾನು ಅಂತ ಮಾತಾಡ್ತೀ ಏನೇ?’
‘ಇಲ್ಲ, ಇಲ್ಲ, ನಿಮ್ಮ ದಮ್ಮಯ್ಯ ಅಂತೀನಿ. ಮೇಲುಕ್ಕೆ ಎಳ್ಕಳಿ.’

ಕಟ್ಟೆಗೆ ಎರಡು ಕಾಲನ್ನೂ ಒದೆಕೊಟ್ಟು ಇವನು ಗಟ್ಟಿಯಾಗಿ ಎಳೆಯಲು ಹೋಗುತ್ತಾನೆ: ತನ್ನೊಬ್ಬನ ಕೈಲಿ ಸಾಧ್ಯವಾಗುವ ತೂಕವಲ್ಲ ಅದು ಎನಿಸಿತು. ಯಾರಾದರೂ ಇನ್ನೊಬ್ಬ ಗಂಡಸನ್ನು ಕರೆಯಬೇಕು. ಆದರೆ ಹೊರಗಿನವರನ್ನು ಕರೆದರೆ ಏನಾದರೂ ಗಲಾಟೆಯಾಗಬಹುದು. ಅಷ್ಟರಲ್ಲಿ ಯಾರೋ ಬೀದಿಯ ಬಾಗಿಲನ್ನು ತಟ್ಟಿದಂತೆ ಆಯಿತು. ‘ತಡಿ, ಬಾಗ್ಲು ತೆಗೀಬ್ಯಾಡ’-ಎಂದು ಅವನು ಅಕ್ಕಮ್ಮನಿಗೆ ಹೇಳುತ್ತಿರುವಷ್ಟರಲ್ಲಿ ಬಾಗಿಲು ತಟ್ಟಿದವರು, ‘ಅಕ್ಕಮ್ಮಾ, ಕಲ್ಲೇಶಾ, ಬಾಗಿಲು’ಎಂದರು. ಅದು ತನ್ನ ಮಗ ಕಂಠಿಯ ಧ್ವನಿ ಎಂಬುದನ್ನು ಅಕ್ಕಮ್ಮ ಗುರುತು ಹಿಡಿದಳು. ಎದ್ದು ಹೋಗಿ ಬಾಗಿಲನ್ನು ತೆಗೆದು, ಅವರು ಒಳಗೆ ಬಂದ ಮೆಲೆ ಒಳಗಿನಿಂದ ಮತ್ತೆ ಹಾಕಿಕೊಂಡಳು. ತಮ್ಮ ಎಡಭುಜದ ಹಿಂದೆ, ಮುಂದೆ, ಎರಡು ಕಡೆಯೂ ಭಾರವಾಗಿ ತುಂಬಿ ತೂಗುತ್ತಿದ್ದ ಒಂದು ಹಸುಬೆ ಚೀಲ ಮತ್ತು ಕೈಯಲ್ಲಿದ್ದ ಇನ್ನೊಂದು ಚೀಲವನ್ನು ಕೆಳಗೆ ಇಟ್ಟ ಮಗನ ಕ್ಷೇಮಸಮಾಚಾರ ಕೇಳುವ ಮೊದಲೇ ಅಕ್ಕಮ್ಮ, ‘ಸ್ವಲ್ಪ ಅಲ್ಲಿಗೆ ಬಾ. ಏನೂ ಮಾತಾಡಬ್ಯಾಡ’ ಎಂದಳು. ತಂದೆ ಮಗ ಸೇರಿ ಸೊಸೆಯನ್ನು ಮೇಲೆ ಎಳೆದು ಹಾಕಿದರು. ಒದ್ದೆ ಸೀರೆಯಲ್ಲಿಯೇ ಕೋಣೆ ಸೇರಿದ ಅವಳು ಮತ್ತೆ ಮಾತನಾಡಲಿಲ್ಲ. ಸದ್ದು ಗದ್ದಲ ಮಾಡಲಿಲ್ಲ.
ಉಭಯ ಕುಶಲೋಪರಿಗಳಾದವು. ಜೋಯಿಸರು ಈಗ ಸನ್ಯಾಸಿಯಂತೆ ಗಡ್ಡ ಬಿಟ್ಟಿದ್ದರು. ತಾವು ಇಷ್ಟು ದಿನ ಕಾಶಿಯಲ್ಲಿದ್ದುದಾಗಿ ಹೇಳಿದರು. ಯಾಕೆ ಹೋಗಿದ್ದೆ ಎಂಬ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ. ಈ ಕಡೆ ಬಂದವರು ಶ್ಯಾಮಣ್ಣ ಬದುಕಿದ್ದಾನೆಯೋ ಇಲ್ಲವೋ ಎಂಬ ಬಗೆಗೆ ಹತ್ತಿರದ ಒಂದೆರಡು ಹಳ್ಳಿಗಳಲ್ಲಿ ವಿಚಾರಿಸಿಕೊಂಡೇ ಗ್ರಾಮ ಪ್ರವೇಶ ಮಾಡಿದ್ದರು.
‘ಇದೇನು ಹೀಗೆ ಗಡ್ಡ ಬಿಟ್ಟಿದ್ದೀಯಾ, ಸನ್ಯಾಸ ತಗಂಡೆ ಏನು?-ತಾಯಿ ಕೇಳಿದಳು.
‘ಏನೂ ಇಲ್ಲ. ಲೋ ಕಲ್ಲೇಶ, ಹಜಾಮ್ರೋನ್ನ ಕರ್‍ಸು.’
ಹಜಾಮ ಬಂದ. ಮೊದಲಿನಂತೆಯೇ ಕಂಠೀಜೋಯಿಸರು ತಲೆಯ ಮೇಲೆ ಗಂಟು ಹಾಕುವಂತೆ ಜುಟ್ಟು ಬಿಟ್ಟು ನೆತ್ತಿ ಗಡ್ಡಗಳನ್ನು ಬೋಳಿಸಿಕೊಂಡರು. ಕಳೆದ ಹನ್ನೆರಡು ವರ್ಷದಲ್ಲಿ ಅವರು ಸ್ವಲ್ಪವೂ ಕಂದಿಲ್ಲ. ನಲುಗಿಲ್ಲ; ಬಡವಾದಂತೆಯೂ ಇಲ್ಲ ಮೈ ಕೈ ತುಂಬಿಕೊಂಡು ಸುಖವಾಗಿದ್ದಾನೆ. ಸ್ನಾನ ಮುಗಿದ ಮೇಲೆ ಕುಳಿತು ಸಂಧ್ಯಾವಂದನೆ ಮುಗಿಸಿ ಜಪ ಮಾಡಿದರು. ಜಪ ಈಗ ಅವರು ಹೊಸದಾಗಿ ಕಾಶಿಯಲ್ಲಿ ಕಲಿತಿದ್ದಿರಬಹುದು. ಅಡಿಗೆಯಾಗಿ ಊಟಕ್ಕೆ ಬಡಿಸುವಾಗ ಅಕ್ಕಮ್ಮ ಕೇಳಿದಳು: ‘ಕಂಟೀ, ನೀನು ಹೋಗಿ ಹನ್ನೆರಡು ವರ್ಷ ಕಳೆದಿತ್ತಲ್ಲ, ಮುಖ ತೊರೆದು ಹೋಗಿತ್ತು. ಯಾವುದಾದರೂ ದೇವಸ್ಥಾನದಲ್ಲಿ ಮೊದಲು ಮುಖದರ್ಶನ ಆಗಬೇಕಾಗಿತ್ತು.’
‘ಕಾಶಿ ಗಂಗೆ ತಂದಿದೀನಿ. ಅದು ಜೊತೇಲಿರುವಾಗ ಅದೆಲ್ಲ ಏನೂ ಬ್ಯಾಡ ನೋಡು, ಗಂಗಾ ಸಮಾರಾಧನೆ ಮಾಡಬೇಕು.’
‘ಈ ಕಾಲದಲ್ಲಿ ಸಮಾರಾಧನೆ ಅಂದ್ರೆ ಎಷ್ಟು ಕಷ್ಟ. ಹೋದ ವರ್ಷವೆಲ್ಲ ಮಳೆ ಇಲ್ದೆ ಮನೇಲಿ ಏನೂ ಇಲ್ಲ’-ಕಲ್ಲೇಶ ಎಂದ.
‘ನಾನು ದುಡ್ಡು ತಂದಿದೀನಿ. ಮಹಾ ಅದೆಷ್ಟು ಖರ್ಚಾಗುತ್ತೆ?’

ಕಂಠೀಜೋಯಿಸರು ಹಿಂತಿರುಗಿ ಬಂದದ್ದನ್ನು ತಿಳಿದಮೇಲೆ ಊರಿನ ಎಷ್ಟೋ ಜನ ಬಂದು ನೋಡಿ ಮಾತನಾಡಿಸಿಕೊಂಡು ಹೋದರು. ಹನ್ನೆರಡು ವರ್ಷ ಕಾಶಿಯಲ್ಲಿದ್ದು ಬಂದ ಅವರು ಈಗ ಮೊದಲಿಗಿಂತ ಮಹಾ ಪಂಡಿತರಾಗಿದ್ದಾರೆ. ಕಾಶೀಯಾತ್ರೆ ಮಾಡಬೇಕೆಂಬ ಹಂಬಲವಿದ್ದು ಕೈಗೂಡದಿದ್ದ ಕೆಲವರು ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದರು. ಅಂಥವರಿಗೆಲ್ಲ ಜೋಯಿಸರು ಒಂದೊಂದು ಕಾಲಭೈರವ ದಾರದ ಎಳೆ ಕೊಟ್ಟರು. ಎಂಟು ದಿನದಲ್ಲಿ ಅದ್ದೂರಿಯಾಗಿ ಗಂಗಾ ಸಮಾರಾಧನೆ ಆಯಿತು. ಎಲ್ಲರೂ ಬಂದರೂ ಸಮಾರಾಧನೆಗೆ ಶ್ಯಾಮಣ್ಣನಾಗಲಿ ಅವರ ಮನೆಯವರಾಗಲಿ ಬರಲಿಲ್ಲ.

ಅಷ್ಟರಲ್ಲಿ ಜೋಯಿಸರು ಊರಿನಲ್ಲೆಲ್ಲ ಸುತ್ತಿ ತಮ್ಮ ಹಳೆಯ ಸ್ನೇಹಿತರನ್ನೆಲ್ಲ ಕಂಡು ಊರಿನ ಸಂಗತಿಗಳನ್ನು ತಿಳಿದುಕೊಂಡಿದ್ದರು. ಗಂಗಾ ಸಮಾರಾಧನೆಯಾದ ರಾತ್ರಿ ಬೆಳದಿಂಗಳಿನಲ್ಲಿ ಹಿತ್ತಿಲ ಬಾವಿಯ ಹತ್ತಿರ ಕೂತುಕೊಂಡು ಅವರು ಮಗನನ್ನು ಕೇಳಿದರು: ‘ಕಲ್ಲೇಶ, ನೀನು ಹೊಡೆದೆ ಅನ್ನೋ ಸಿಟ್ಟಿಗೆ ಅವ್ಳು ಬೆಂಡೋಲೇನ ಕದ್ದು ಅಪ್ಪನ ಮನೆಗೆ ಸಾಗಿಸಿ ತಂಗಿಗೆ ಕೊಡಬೇಕು ಅಂತ ಮಾಡಿದ್ಲಂತೆ. ಇದಕ್ಕೆ ಆ ಶ್ಯಾಮಣ್ಣನ ಸೊಸೆ ಶರೀಕಾಗಿದ್ಲಂತೆ. ನಿಜವೆ?’
‘ಹುಂ.’
‘ಅವ್ಳುನ್ನ ನೀನು ಅವಮಾನ ಮಾಡಿದೆಯಂತೆ.’
‘ನಮ್ಮನೆಗೆ ಬರಬ್ಯಾಡ ಅಂದೆ.’
‘ನೋಡು, ನಾನು ಕಾಶಿಗೆ ಹೋಗಿ ಬಂದಿರೋನು; ಹುಟ್ಟಿಸಿದ ಅಪ್ಪ. ನನ್ನ ಕೈಲಿ ನಿಜ ಹೇಳು. ಬರೀ ನಮ್ಮನೆಗೆ ಬರಬ್ಯಾಡ ಅಂದೆಯೋ ಅಥವಾ ಇನ್ನೇನಾರೂ ಆಯ್ತೋ?’
‘ನಿನಗೆ ಯಾರು ಏನು ಹೇಳಿದ್ರು?’
‘ಊರಲ್ಲೆಲ್ಲಾ ಬೇರೆ ಥರಾ ಮಾತಾಡ್ಕತ್ತಾರೆ. ನಿಜವಿಷಯ ಬಾಯಿಬಿಟ್ಟು ಮಾತಾಡುಕ್ಕೆ ಶಾಮಣ್ಣನಿಗೆ ಅವಮಾನವಂತೆ.’
‘ಹುಂ’-ಕಲ್ಲೇಶ ಕತ್ತು ಬಗ್ಗಿಸಿ ಹೇಳಿದ: ‘ಇವ್ಳ ಬುದ್ಧಿ ಕೆಡಿಸುಕ್ಕೆ ಅಂತಲೇ ಆ ಶಾಮಣ್ಣ ಸೊಸೇನ ಕಳುಸ್ತಾ ಇದ್ದ. ಅಂಥೋರಿಗೆ ಇನ್ನೇನು ಮಾಡ್ಬೇಕು?’
‘ನೋಡು, ಗಂಡಸು ಬೇಕಾದ ಪರಾಕ್ರಮ ಮಾಡಿ ಜಯಿಸ್ಕಾಭೌದು. ಅದೊಂದರಲ್ಲಿ ಬಿಗಿಯಾಗಿರಬೇಕು. ಅದು ಸಡ್ಳವಾಯ್ತು, ಅವ್ನು ಏನ್ನೂ ಜಯಿಸ್ಕಳುಕ್ ಆಗುಲ್ಲ. ನೀನು ಮಾಡಿದ್ದು ತಪ್ಪು ಕೆಲ್ಸ.’
ಕಲ್ಲೇಶನಿಗೆ ನಾಚಿಕೆಯಾಯಿತು. ಆದರೆ ತನ್ನ ಕೆಲಸವನ್ನು ಸಮರ್ಥಿಸಿಕೊಳ್ಳಲು ಹೇಳಿದ: ‘ನೀನು ಊರಿಗೆ ಬಂದ ದಿನ ನಾನು ಮರುವನಹಳ್ಳಿಯಿಂದ ಬರ್ತಾ ಇದ್ದೆ. ಶ್ಯಾಮಣ್ಣ ಆಳುಗಳ ಕಳ್ಸಿ ನನ್ನ ಮೇಲೆ ಕಲ್ಲು ಬೀರುಸ್ದ. ಅವ್ನು ಅಂತಾ ಕೆಲ್ಸ ಮಾಡ್‌ಭೌದೊ?’
‘ಎಲಾ ಸೂಳೆ ಮಗುನ್ನ ತಂದು. ನಮ್ಮನೆ ಮ್ಯಾಲೆ ಕಲ್ಲು ಬೀರಿಸಿದ್ದಕ್ಕೆ ಅವ್ನಿಗೆ ಹೀಗೆಲ್ಲ ಆಯ್ತು. ಕಂಠಿ ಸತ್ಹೋಗಿಬಿಟ್ಟ ಅಂತ ತಿಳ್ಕಂಡ್ನೇನು ಅವ್ನು? ನಾನು ನೋಡ್ಕತ್ತೀನಿ ಬಿಡು’-ಎಂದು ಅವರು ತೀರ್ಮಾನಿಸಿಕೊಂಡರು. ಅದೇನೆಂಬುದನ್ನು ಬಾಯಿಬಿಟ್ಟು ಹೇಳಲಿಲ್ಲ.

ಇದಾದ ಎರಡು ದಿನಕ್ಕೆ ಶುಕ್ರವಾರ. ಎಂದರೆ ನಾಗಲಾಪುರದ ಸಂತೆ. ಸುತ್ತಿನ ಊರಿನವರೆಲ್ಲ ಸೇರುವ ಸಂತೆಗೆ ಹೋಗದೆ ಇರುವವರೇ ಇಲ್ಲ. ಮಧ್ಯಾಹ್ನದ ಮೂರು ಗಂಟೆಯ ಹೊತ್ತಿನಲ್ಲಿ ಶ್ಯಾನುಭೋಗ ಶ್ಯಾಮಣ್ಣನವರು ತಮ್ಮ ಮನೆಯಿಂದ ಹೊರಟು ಸಂತೆಯ ಕಡೆಗೆ ಹೋಗುತ್ತಿದ್ದಾರೆ. ಬಿಳಿಯ ಕಚ್ಚೆ ಪಂಚೆ, ಮೈಮೇಲೆ ಅಂಗಿ, ಒಂದು ಉತ್ತರೀಯ. ಹಣೆಗೆ ಕರಿಯ ಸಾದು ಇಟ್ಟು ಶ್ಯಾನುಭೋಗಿಕೆಯ ದರ್ಪದಿಂದ ನಡೆಯುತ್ತಿದ್ದರು. ಅದೆಲ್ಲಿ ಕಾದು ಕುಳಿತಿದ್ದರೋ, ಕಂಠೀಜೋಯಿಸರು ಬಂದು ಅವರ ಮುಂದೆ ಪ್ರತ್ಯಕ್ಷರಾದರು. ಕಚ್ಚೆ ಪಂಚೆ, ಕಾಷಾಯ ಬಣ್ಣದ ಅಂಗಿ ಧರಿಸಿ ಹಣೆಗೆ ತ್ರಿಪುಂಡ್ರವಿಟ್ಟು ಕೊರಳಿಗೆ ಮಾಲೆ ಹಾಕಿದ್ದ ಅವರ ಕೈಲಿ ಒಂದು ದಪ್ಪ ಮಡಕೆಯಿತ್ತು. ಅದರಿಂದ ಬರುತ್ತಿದ್ದ ನಾತ, ಸುತ್ತ ಇದ್ದವರ ಮೂಗು ಮುಚ್ಚಿಸುವಂತಿತ್ತು. ‘ನನ್ನ ಮಗನ ಮೆಲೆ ಕಲ್ಲು ಹೊಡೆಸಿದೆ ಏನೋ ಹೆಣ್ಣಿಗ ಸೂಳೇಮಗನೆ’-ಎನ್ನುತ್ತಾ ಅವರು, ಕೈಲಿದ್ದ ಮಡಕೆಯನ್ನು ಎತ್ತಿ ಶ್ಯಾಮಣ್ಣನವರ ತಲೆಯಮೇಲೆ ಅಭಿಷೇಕ ಮಾಡಿದಂತೆ ತಪತಪನೆ ಸುರಿದುಬಿಟ್ಟರು. ವಾಸನೆ, ಬಣ್ಣಗಳಲ್ಲಿಯೇ ಸುತ್ತಮುತ್ತ ಇದ್ದವರಿಗೆಲ್ಲ ಗೊತ್ತಾಯಿತು: ಅದು ಮನುಷ್ಯರ ಅಮೇಧ್ಯ. ಅಷ್ಟೊಂದು ಪ್ರಮಾಣದ ಅದನ್ನು ಅವರು ಎಲ್ಲಿ, ಹೇಗೆ ಸಂಗ್ರಹಿಸಿದ್ದರೋ, ಅದೆಲ್ಲವನ್ನೂ ಹೇಗೆ ಒಂದೇ ಹದದಲ್ಲಿ ಕಲಸಿ ಇಟ್ಟು ತಂದರೋ, ಅವರು ಹನ್ನೆರಡು ವರ್ಷ ಪೂಜಿಸಿದ ಕಾಶಿ ವಿಶ್ವೇಶ್ವರನಿಗೇ ಗೊತ್ತು. ಎಲ್ಲವನ್ನೂ ಸುರಿದಮೇಲೆ ಶ್ಯಾಮಣ್ಣನವರ ಬಿಳಿಯ ಅಂಗಿಯ ಮೇಲೆ ಸುತ್ತಲೂ ಇಳಿದು ಮೆತ್ತಿಕೊಂಡಿತು. ಮಡಕೆಯನ್ನು ತಮ್ಮ ವೈರಿಯ ತಲೆಯ ಮೇಲೆ ದಬ್ಬ ಬಡಿದು ಕಂಠೀಜೋಯಿಸರು ಜನರ ಮಧ್ಯದಲ್ಲಿ ಮರೆಯಾಗಿ ಹೋದರು.

– ೪ –

ಮತ್ತೆ ಒಂದು ತಿಂಗಳು ಕಂಠೀಜೋಯಿಸರು ನಾಗಲಾಪುರದಲ್ಲಿ ಇರಲಿಲ್ಲ. ಯಾವ ಊರಿನಲ್ಲಿದ್ದರೋ ಯಾರಿಗೂ ಗೊತ್ತಿಲ್ಲ. ಕಲ್ಲೇಶ ಮೂರು ನಾಲ್ಕು ದಿನಕ್ಕೆ ಒಂದು ಸಲದಂತೆ ಯಾವುದೋ ಊರಿಗೆ ಹೋಗಿ ಬರುತ್ತಿದ್ದ. ಅಪ್ಪನನ್ನು ಕಂಡು ಇಲ್ಲಿಯ ವಿದ್ಯಮಾನಗಳನ್ನು ತಿಳಿಸುವುದಕ್ಕೇ ಅವನು ಹೋಗುತ್ತಿದ್ದಾನೆಂದು ಎಷ್ಟೋ ಜನ ಊಹಿಸಿದರು. ಅವನು ಹೋಗುತ್ತಿದ್ದುದು ರಾತ್ರಿಯ ವೇಳೆಯಾಗಿದ್ದುದರಿಂದ ಯಾರೂ ಅವನನ್ನು ಹಿಂಬಾಲಿಸುವ ಧೈರ್ಯ ಮಾಡಲಿಲ್ಲ. ಹಿಂತಿರುಗುವಾಗ ಹಗಲು ಹೊತ್ತೇ ಬರುತ್ತಿದ್ದ. ಅದನ್ನು ತಿಳಿದುಕೊಂಡು ಯಾರಿಗೆ ಏನಾಗಬೇಕು? ಕಳೆದ ಹನ್ನೆರಡು ವರ್ಷಗಳ ಅನುಪಸ್ಥಿತಿಯಲ್ಲಿ ಕಂಠೀಜೋಯಿಸರೆಂದರೆ ಒಬ್ಬ ಪುರಾಣಪುರುಷರೇ ಆಗಿಹೋಗಿದ್ದರು. ಈಗ ಊರಿಗೆ ಬಂದು ಗಂಗಾ ಸಮಾರಾಧನೆ ಮಾಡಿದ ಮೂರು ದಿನಕ್ಕೇ ಅವರು ಆ ಸುತ್ತಿನಲ್ಲಿ ಎಲ್ಲೂ ಯಾರೂ ಮಾಡದಿದ್ದ ಒಂದು ಸಾಹಸವನ್ನೇ ಮಾಡಿಬಿಟ್ಟಿದ್ದಾರೆ. ಶ್ಯಾಮಣ್ಣ ಆ ಕ್ಷಣವೇ ಮನೆಗೆ ಓಡಿಹೋಗಿ ಬಚ್ಚಲಿಗೆ ಇಳಿದು ಸೀಗೆಪುಡಿ ಹಾಕಿ ತೆಂಗಿನ ಗುಂಜಿನಿಂದ ತಿಕ್ಕಿ ತಲೆ ಮೈ ಕೈಯನ್ನು ತೊಳೆದುಕೊಂಡರು. ಅವರಿಗೆ ಆದದ್ದನ್ನು ವಾಸ್ತವವಾಗಿ ಕಂಡವರು ಹತ್ತಿಪ್ಪತ್ತು ಮಂದಿ ಮಾತ್ರ. ಮನೆಗೆ ಓಡಿಬರುವಾಗ ಅವರ ಗುರುತು ಸಿಕ್ಕಿದುದು ಎಲ್ಲೋ ಮೂರು ನಾಲ್ಕು ಜನಕ್ಕೆ. ಆದರೆ ಊರಿನವರೆಲ್ಲರೂ ತಾವೇ ಸ್ವತಃ ಕಣ್ಣುಗಳಿಂದ ನೋಡಿದೆವು ಎಂದು ಕಂಠೀಜೋಯಿಸರು ಸುರಿದದ್ದು, ಶ್ಯಾಮಣ್ಣನವರ ಬಾಯಿಗೆ ಸಹ ಅದು ಹೋದದ್ದು, ಮೈ ಕೈ ಮೇಲೆಲ್ಲಾ ಅಲಾಬಿ ಹಬ್ಬದ ಹುಲಿಯ ಬಣ್ಣದಂತೆ ಹರಿದದ್ದು ಮೊದಲಾಗಿ ರಂಗುರಂಗಾಗಿ ವರ್ಣಿಸುತ್ತಿದ್ದರು.

ಕಂಠೀಜೋಯಿಸನ ಮೇಲೆ ಕೇಸು ಹಾಕಲು ಸಾಧ್ಯವಿಲ್ಲವೆ?-ಎಂದು ಶ್ಯಾಮಣ್ಣನವರು ಯೋಚಿಸಿದರು. ಆದರೆ ಆ ಕೆಲಸ ನಡೆದಾಗ ಪ್ರತ್ಯಕ್ಷವಾಗಿ ಅಲ್ಲಿ ಇದ್ದು ಕಂಡವರ ಯಾರ ನೆನಪೂ ಅವರಿಗೆ ಸ್ಪಷ್ಟವಾಗಿ ಇಲ್ಲ. ‘ಅವನು ನಂಗೆ ಹೀಗೆ ಮಾಡಿದ’-ಅಂತ ತಾವೇ ಹೋಗಿ ಹೇಳಿಕೊಳ್ಳಲು ನಾಚಿಕೆ ಬೇರೆ. ಯಾರೂ ಅದನ್ನು ಅವರ ಎದುರಿಗಂತೂ ಮಾತನಾಡುತ್ತಿರಲಿಲ್ಲ. ತಾವಾಗಿಯೇ ಕೆದಕಿ ಇನ್ನೂ ಪ್ರಚುರ ಮಾಡುವುದು ವಿವೇಕವಲ್ಲವೆಂದು ಯೋಚಿಸಿದರು. ಅಲ್ಲದೆ ಹಿಂದೊಮ್ಮೆ ಈ ಕಂಠೀಜೋಯಿಸನ ಮೇಲೆ ಕೇಸು ಹೊತ್ತು ನರಸೀಪುರಕ್ಕೆ ತಿರುಗಿ, ಕೇಸು ಖುಲಾಸೆಯೂ ಆದಮೇಲೆ ಅವನ ಕೈಲಿ ಪೆಟ್ಟು ತಿಂದಿದ್ದುದೂ ನೆನಪಾಯಿತು. ‘ಆ ಮುಂಡೇಮಗ ಸತ್ತುಹೋಗಿದಾನೆ ಅಂತ ತಿಳ್ಕಂಡಿದ್ದೆ. ಅವನ ಮಗ ಕಲ್ಲೇಶನ ಹೆಂಡ್ತೀನೂ ದೂರವೇ ಇಟ್ಟಿದ್ರೆ ಏನೂ ಆಗ್ತಿರ್ಲಿಲ್ಲ. ಈ ಮುಪ್ಪಿನ ವಯಸ್ಸಿನಲ್ಲಿ ಇನ್ನೆಂಥ ತಾಪತ್ರಯಕ್ಕೆ ಸಿಕ್ಕಿಕೊಳ್ಲಿ?’-ಎಂದು ಯೋಚಿಸುವಾಗ ಅವರ ಮನಸ್ಸನ್ನು ಇನ್ನೂ ಒಂದು ಅಂಶವು ಕೊರೆಯುತ್ತಿತ್ತು: ಕಂಠೀಜೋಯಿಸನ ಮಗ ಕಲ್ಲೇಶ ಅಪ್ಪನ ಹಾಗೆ ಖದೀಮ. ಕಷ್ಟಕಾಲ ಅಂದ್ರೆ ತಂತ್ರಾನೂ ಮಾಡ್ತಾನೆ. ಧೈರ್ಯವೂ ಇದೆ. ನನ್ನ ಮಗ ನಂಜುಂಡ ರಣಹೇಡಿ ಮುಂಡೇದು. ಮೇಲೆ ಬಿದ್ದು ನಾನು ಜಗಳ ಕಾಯೂ ಕಾಲ ಮುಗೀತು.

ಒಂದು ತಿಂಗಳ ನಂತರ ಕಂಠೀಜೋಯಿಸರು ಊರಿಗೆ ಬಂದರು. ಅವರನ್ನು ಯಾರೂ ಆ ವಿಷಯವಾಗಿ ನೇರವಾಗಿ ಕೇಳಲಿಲ್ಲ. ಅವರೂ ಮಾತನಾಡಲಿಲ್ಲ. ಕೊರಳಿಗೆ ಜಪದ ಸರ ಹಾಕಿಕೊಂಡು, ಹಣೆಗೆ ತ್ರಿಪುಂಡ್ರವಿಟ್ಟು ಬೀದಿಯಲ್ಲಿ ಹೊರಟರೆ ಜನ ಅವರನ್ನು ಗೌರವದಿಂದಲೇ ಕಂಡು ದೂರ ಬಳಸಿ ಹೋಗುತ್ತಿದ್ದರು.

ಅಧ್ಯಾಯ ೧೨
– ೧ –

ಆ ವರ್ಷ ನಿಧಾನವಾಗಿ ಮಳೆ ಬಂದರೂ ರಾಗಿಯ ಬೆಳೆಯಾಯಿತು. ಯೂರೋಪು ಖಂಡದಲ್ಲಿ ಇಂಗ್ಲಿಷರಿಗೂ ಜರ್ಮನಿಯವರಿಗೂ ಜೋರಿನಿಂದ ಯುದ್ಧ ನಡೆಯುತ್ತಿದೆಯಂತೆ. ಇತ್ತ ಬರ್ಮಾ ದೇಶದ ಕಡೆಯೂ ಕಾಳಗವಾಗುತ್ತಿದೆಯಂತೆ. ಸರ್ಕಾರ ಆಹಾರ ಧಾನ್ಯಗಳನ್ನು ರೇಷನ್ ಮಾಡಿದೆಯಂತೆ. ಒಂದು ದಿನ ಊರಿಗೆ ಬಂದ ಶೇಕ್‌ದಾರರು ರೇಷನ್ ಎಂದರೆ ಏನು ಎಂಬುದನ್ನು ನಂಜಮ್ಮನಿಗೆ ವಿವರಿಸಿ, ಮುಂದಿನ ಸಲದಿಂದ ಪಹಣಿ ಬರೆಯುವಾಗ ಬೆಳೆಯ ಅಂದಾಜು ಹಾಕುವ ಕ್ರಮವನ್ನೂ ಹೇಳಿಕೊಟ್ಟರು. ಒಂದು ಎಕರೆ ಹೊಲದಲ್ಲಿ ಆರು ಖಂಡುಗ ರಾಗಿ ಬೆಳೆಯುವಂತೆ ಕಂಡರೆ ಹದಿನಾರಾಣೆ ಎಂದು. ನಾಲ್ಕೂವರೆ ಖಂಡುಗವೆಂದರೆ ಹನ್ನೆರಡಾಣೆ. ಮೂರು ಖಂಡುಗಕ್ಕೆ ಎಂಟಾಣೆ. ಹೀಗೆ ರಾಗಿ, ಬತ್ತ, ಹುರುಳಿ, ಅವರೆ, ಮೊದಲಾದ ಎಲ್ಲ ಬೆಳೆಗಳ ಅಂದಾಜನ್ನೂ ಹಾಕಬೇಕು. ಸರ್ಕಾರದವರು ಅದರ ಪ್ರಕಾರ ಪ್ರತಿಯೊಬ್ಬ ರೈತನ ಬೆಳೆಯನ್ನೂ ನಿರ್ಧರಿಸಿ, ಖಾನೇಷುಮಾರಿ ಲೆಕ್ಕದಂತೆ ಅವನ ಮನೆ ಖರ್ಚನ್ನು ಕಳೆದು, ಬೀಜಕ್ಕೆ ಬಿಟ್ಟು, ಉಳಿದುದನ್ನು ಸರ್ಕಾರೀ ಧಾರಣೆಯಲ್ಲಿ ಕೊಂಡುಕೊಳ್ಳುತ್ತಾರೆ. ಎಂದರೆ ಲೆಕ್ಕ ಬರೆಯುವ ಶ್ಯಾನುಭೋಗರಿಗೆ ಹೊಸ ಅಧಿಕಾರ ಬಂತು.

ನಂಜಮ್ಮ ಒಂದು ದಿನ ಕುರುಬರಹಳ್ಳಿಗೆ ಹೋಗಿ ಹೊಸ ಲೆಕ್ಕದ ವಿಷಯವನ್ನು ಗುಂಡೇಗೌಡರಿಗೆ ಹೇಳಿದಳು. ಅವರು-‘ನಾವು ಕಷ್ಟಬಿದ್ದು ಬೆಳೆದದ್ದ ಆ ನನ್ಮಕ್ಳಿಗೆ ಕೊಡಬೇಕಾ?’ಎಂದು ಕೇಳಿದರು.
‘ಸರ್ಕಾರೀ ಕಾನೂನೇ ಮಾಡಿದಾರೆ. ಇಲ್ದೆ ಇದ್ರೆ ಪೋಲೀಸ್ನೋರು ಬತ್ತಾರಂತೆ.’
ಯಾರಿಗೆ ಯಾವ ತೊಂದರೆಯಾದರೂ ಕುರುಬರಹಳ್ಳಿಗೆ ಹಾನಿ ತಟ್ಟಕೂಡದೆಂದು ನಂಜಮ್ಮನ ಆಶೆಯಾಗಿತ್ತು. ಊರಿಗೆ ಹಾನಿಯಾದರೆ ಗುಂಡೇಗೌಡರ ಪಟೇಲಿಕೆಗೂ ಅಗೌರವ. ತನ್ನ ಸಂಸಾರವನ್ನು ಸಾಕಿದ ಗ್ರಾಮಕ್ಕೆ ತೊಂದರೆಯಾಗುವುದನ್ನು ಅವಳು ಹೇಗೆ ಸಹಿಸಿಯಾಳು? ಆದರೆ ಊರಿನವರೆಲ್ಲ ಕುರಿಮಂದೆಯುಳ್ಳವರು. ಪ್ರತಿವರ್ಷ ಹೊಲಕ್ಕೆ ಮಂದೆ ಕಟ್ಟಿಸುವುದರಿಂದ ಬಹು ಜನ ಎಕರೆಗೆ ಆರು ಖಂಡುಗಕ್ಕಿಂತ ಹೆಚ್ಚು ಬೆಳೆಯುತ್ತಾರೆ. ತಾನು ಅಂದಾಜನ್ನು ಕಡಿಮೆ ಬರೆಯಬೇಕು. ಆದರೆ ಶ್ಯಾನುಭೋಗರ ಅಂದಾಜನ್ನು ಪರಿಶೀಲಿಸಲು ಅಮಲ್ದಾರ ದಣಿಗಳೇ ಬಂದು ಹೊಲಗಳನ್ನು ಪರೀಕ್ಷಿಸುತ್ತಾರೆಂದು ಶೇಕ್‌ದಾರರು ಹೇಳಿದ್ದರು.

ನಂಜಮ್ಮ ಗುಂಡೇಗೌಡರು ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದರು: ಸಾಮಾನ್ಯವಾಗಿ ಎಂಟು ಆಣೆ, ಒಂಬತ್ತು ಆಣೆ ಬೆಳೆ ಎಂದು ಇವಳು ಪಹಣಿಯಲ್ಲಿ ಅಂದಾಜು ಬರೆಯುವುದು. ಗ್ರಾಮದ ಒಟ್ಟಿನಲ್ಲಿ ನೂರು ರೂಪಾಯಿಗಳಷ್ಟು ಎತ್ತಿ ಶೇಕ್‌ದಾರರಿಗೂ ಮೇಲಿನವರಿಗೂ ಕೊಟ್ಟು ಸರಿಮಾಡಿಕೊಳ್ಳುವುದು. ಸರ್ಕಾರದವರು ದಿನಸಿ ಎತ್ತಲು ಬಂದಾಗ ಸರ್ಕಾರೀ ಬೆಳೆಯಲ್ಲಿಯೇ ಒಟ್ಟು ಹತ್ತು ಹನ್ನೆರಡು ಖಂಡುಗ ಕೊಡುವುದು.

ಆ ವರ್ಷ ಹಾಗೆಯೇ ನಡೆಯಿತು. ನೂರು ರೂಪಾಯಿ ನಗದು, ಹನ್ನೆರಡು ಖಂಡುಗ ಕ್ರಯಕ್ಕೆ ರಾಗಿಯನ್ನು ಕೊಟ್ಟು ನಲವತ್ತು ಒಕ್ಕಲಿನ ಕುರುಬರಹಳ್ಳಿಯವರು ಪಾರಾದರು. ಈ ಮೊದಲೂ ಆ ಊರಿನವರು ಶ್ಯಾನುಭೋಗರ ಮಸಿ ಕಾಣಿಕೆ ಕೊಡುತ್ತಿದ್ದರು. ಈಗ ಅದರ ಜೊತೆಗೆ ಮನೆಗೆ ಹತ್ತು ಸೇರು ರಾಗಿಯಂತೆ ಎತ್ತಿಕೊಡಲು ಪ್ರಾರಂಭಿಸಿದರು. ಆಹಾರ ನಿಯಂತ್ರಣದ ಆಜ್ಞೆಯಿಂದ ಪೆಟ್ಟು ಬಿದ್ದುದು ರಾಮಸಂದ್ರ ಮತ್ತು ಲಿಂಗಾಪುರಗಳಿಗೆ. ಬೆಳೆಯ ಅಂದಾಜು ಹಾಕುವುದು ಎಂದರೇನೆಂಬುದು ರಾಮಸಂದ್ರದ ಪಟೇಲ ಶಿವೇಗೌಡನಿಗಾಗಲಿ, ಲಿಂಗಾಪುರದ ಪಟೇಲ ಪುರದಪ್ಪನಿಗಾಗಲಿ ಗೊತ್ತಿರಲಿಲ್ಲ. ನಂಜಮ್ಮ ಈ ಎರಡು ಊರುಗಳ ಪಹಣಿಯನ್ನೂ ಇದ್ದುದು ಇದ್ದಹಾಗೇ ಬರೆದಿದ್ದಳು. ಸುಗ್ಗಿಯ ಕಾಲ ಮುಗಿದುದೇ ತಡ, ಒಂದು ದಿನ ಶೇಕ್‌ದಾರರು, ಅವರ ಇಬ್ಬರ ಜವಾನರು, ಇಬ್ಬರು ಪೋಲೀಸ್ ಕಾನಿಸ್ಟೇಬಲುಗಳು ಊರಿಗೆ ಬಂದರು. ಶೇಕ್‌ದಾರರ ನಿರ್ದೇಶನದಲ್ಲಿ ಜವಾನರು ಪ್ರತಿಯೊಂದು ಮನೆಗೂ ನುಗ್ಗಿದರು. ಅಟ್ಟ, ಪೆಟ್ಟಿ, ಕೊಮ್ಮೆ, ಹಗೇವು, ಮಡಕೆ ಗುಡಾಣಗಳಾದಿಯಾಗಿ ಪ್ರತಿಯೊಂದನ್ನೂ ಶೋಧಿಸಿದರು. ಉದ್ದನೆಯ ಬಿದಿರಿನ ಕೋಲನ್ನು ಪೆಟ್ಟಿಯ ರಾಗಿಯ ಒಳಕ್ಕೆ ಹೂಳಿ ಅದರ ಉದ್ದ ಅಗಲಗಳನ್ನು ಅಂದಾಜು ಮಾಡುವುದು. ಮನೆಯಲ್ಲಿ ಇಷ್ಟೇ ದಿನಸಿ ಇದೆ ಎಂದು ಊಹೆಯಿಂದಲೇ ಲೆಕ್ಕ ಮಾಡಿ, ಮನಸ್ಸಿಗೆ ಬಂದಷ್ಟನ್ನು ಅಳೆದು ಮೂಟೆ ಕಟ್ಟಿಸಿ ತಂದು ಮಾದೇವಯ್ಯನವರ ಗುಡಿಯ ಮುಂದೆ ರಾಶಿ ಹಾಕುವುದು. ಅಟ್ಟಕ್ಕೆ ಹತ್ತಿದ ಶೇಕ್‌ದಾರರ ಜವಾನ ಮನೆಯ ಯಜಮಾನನಿಂದ ಅಲ್ಲಿಯೇ ಇಪ್ಪತ್ತು, ನಲವತ್ತು, ಐವತ್ತು, ಹೀಗೆ ರೂಪಾಯಿ ಇಸಿದುಕೊಂಡು ಕೆಳಗೆ ಬಂದು, ‘ಒಟ್ಟು ಎಲ್ಡೇ ಪಲ್ಲ ಸಾರ್’ ಎಂದು ಹೇಳುವುದೂ ನಡೆಯಿತು. ಅನಂತರ ಅದರಲ್ಲಿ ಶೇಕ್‌ದಾರರಿಗೆ ಅವನು ಕೊಟ್ಟಿದ್ದು, ತಾನು ನುಂಗಿದ್ದೇ ಲೆಕ್ಕ. ತಮಗೆ ಬಂದದ್ದರಲ್ಲಿ ಶೇಕ್‌ದಾರರು ಪೋಲೀಸಿನವರಿಗೂ ಕಾಣಿಕೆ ಕೊಡಬೇಕಾಗಿತ್ತು.

ಒಟ್ಟಿನಲ್ಲಿ ಒಂದೇ ದಿನ ರಾಮಸಂದ್ರದಿಂದ ನಾನೂರು, ಲಿಂಗಾಪುರದಿಂದ ನೂರು ಪಲ್ಲ ರಾಗಿ ತುಂಬಿಸಿಕೊಂಡು ಶೇಕ್‌ದಾರರು ಹೊರಟುಹೋದರು. ಪಟೇಲ ಶ್ಯಾನುಭೋಗರ ಸಮ್ಮುಖದಲ್ಲಿ ಅವರು ಕೊಡುತ್ತಿದ್ದ ರಸೀತಿಯನ್ನು ಹಾಜರುಪಡಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸಂಭಾವನೆ ಕೊಟ್ಟು ರೈತರು ಅದರ ಹಣ ಪಡೆಯಬೇಕಾಗಿತ್ತು. ರಾಗಿ ಅಳೆಯುತ್ತಿದ್ದ ವರಸೆಯಲ್ಲಿ ಪಲ್ಲಕ್ಕೆ ಏಳು ಎಂಟು ಸೇರು ಹೆಚ್ಚು ಎತ್ತಿ ಬಿಡುತ್ತಿದ್ದರು.

ಇದಾದ ಹದಿನೈದು ದಿನದ ನಂತರ ಒಂದು ದಿನ ಪಟೇಲ ಶಿವೇಗೌಡ ಕುಳುವಾಡಿಯ ಕೈಲಿ ನಂಜಮ್ಮನಿಗೆ ಹೇಳಿಕಳಿಸಿದ. ಪಟೇಲ ಹೇಳಿಕಳಿಸಿದಾಗ ಶ್ಯಾನುಭೋಗ ಹೋಗಬೇಕೋ, ಶ್ಯಾನುಭೋಗ ಹೇಳಿಕಳಿಸಿದಾಗ ಪಟೇಲ ಬರಬೇಕೋ ಎಂಬುದು ಅವರವರ ಆಸ್ತಿ ಪಾಸ್ತಿ, ಮತ್ತು ದರ್ಪಗಳನ್ನವಲಂಬಿಸಿರುತ್ತದೆ. ಇದುವರೆಗೆ ಶಿವೇಗೌಡ ಹೇಳಿಕಳಿಸುವುದು, ಚೆನ್ನಿಗರಾಯರು ಹೋಗುವುದೇ ರೂಢಿಯಾಗಿತ್ತು. ಆದರೆ ಈ ದಿನ ಅವನು ನಂಜಮ್ಮನಿಗೆ ಹೇಳಿಕಳುಹಿಸಿದ್ದ.ಅವಳಿಗೆ ರೇಗಿತು. ಆದರೆ ತಾಳ್ಮೆ ಕಳೆದುಕೊಳ್ಳದೆ ಕುಳವಾಡಿಗೆ ಹೇಳಿದಳು: ‘ಏನಾರ ಕೆಲ್ಸವಿದ್ರೆ ಅವ್ರಿಗೇ ಇಲ್ಲಿ ಬಂದು ಹೋಗಾಕ್ ಹೇಳು.’
ಸ್ವಲ್ಪ ಹೊತ್ತಿನಲ್ಲಿ ಪಟೇಲನೇ ಬಂದ. ಅವನ ಹಿಂದೆಯೇ ಬಂದ ಕುಳವಾಡಿ ಬಾಗಿಲ ಹತ್ತಿರ ನಿಂತುಕೊಂಡ. ಕಂಬದ ಹತ್ತಿರ ಹಾಕಿದ್ದ ಈಚಲು ಚಾಪೆಯ ಮೇಲೆ ಕುಳಿತ ಗೌಡ, ಹೇಗೆ ಮಾತು ಪ್ರಾರಂಭಿಸಬೇಕೆಂಬುದು ತಿಳಿಯದೆ ಐದು ನಿಮಿಷ ತಡಕಾಡುತ್ತಿದ್ದು ನಂತರ, ‘ಕುರುಬರಹಳ್ಳೀಲಿ ಹನ್ನೆಲ್ಡು ಕಂಡುಗ ತಗಂಡು ಓದ್ರಂತೆ. ನಮ್ಮೂರ್ನಾಗೆ ನಾನೂರು ಪಲ್ಲ ಹ್ಯಂಗೆ ಕೊಂಡೊಯ್ದ್ರು?’
‘ಅದು ನಂಗೇನು ಗೊತ್ತು ಪಟೇಲ್ರೇ?’
‘ಏನು ಗೊತ್ತು ಅಂತ ನೀನು ಏಳ್ಬೇಕು ಕಣಮ್ಮ. ಲ್ಯಕ್ಕ ಬರೆಯಾಕುಲ್ವ ನೀನು?’
‘ಪಟೇಲ್ರೇ, ನೀನು ತಾನು ಅಂತ ಮಾತಾಡುಕ್ಕೆ ನಾನೇನು ನಿಮ್ಮನೇಲಿ ಭಿಕ್ಷೆ ಕೇಳುಕ್ಕೆ ಬಂದಿಲ್ಲ. ಸ್ವಲ್ಪ ಮರ್ಯಾದೆ ಇಟ್ಟು ಮಾತಾಡಿ’-ಎಂದು ಹೇಳಿದ ನಂಜಮ್ಮ ಅಡಿಗೆ ಮನೆಗೆ ಹೊರಟುಹೋದಳು.
‘ಚೆನ್ನಿಗರಾಯುನ್ನ ಉಟ್ದಾಗಿನಿಂದ ನಾನು ಬಲ್ಲೆ.’
‘ಹಾಗಿದ್ರೆ ಅವ್ರುನ್ನೇ ಕೇಳಿ. ನಿಮ್ಮನೆ ಹತ್ರುಕ್ಕೆ ಬರಬೇಕು ಅಂತ ಕುಳವಾಡಿ ಕೈಲಿ ಹೇಳ್ಕಳಿಸಿದ್ರಲಾ, ನಿಮ್ಮ ಪಟೇಲಿಕೆ ಅಂದ್ರೆ ದೌಲತ್ತು ಅಂತ ತಿಳ್ಕಂಡ್ರಾ?’
ಶಿವೇಗೌಡನಿಗೆ ಮುಖಕ್ಕೆ ಹೊಡೆದಂತೆ ಆಯಿತು. ಅವನು ಎಂದೂ ಈ ಹೆಂಗಸಿನೊಡನೆ ನೇರವಾಗಿ ಮಾತನಾಡಿರಲಿಲ್ಲ. ಮನೆ ಮಠಗಳನ್ನೆಲ್ಲ ಕಳೆದುಕೊಂಡು ಎಲೆ ಹಚ್ಚಿ ಮಾರಿ, ತರಕಾರಿ ಬೆಳೆದು ತಿಂದು ಗಂಡನ ಶ್ಯಾನುಭೋಗಿಕೆ ಲೆಕ್ಕ ಬರೆಯುತ್ತಿದ್ದ ಇವಳ ಗತ್ತನ್ನು ಕಂಡ ಅವನಿಗೆ ಮೈಯುರಿಯಿತು.
‘ನಮ್ಮೂರ ಪಾಣಿ ಬರೆಯೂವಾಗ ಯಾಕಮ್ಮ ಕಮ್ಮಿ ಅಂದಾಜು ಆಕ್ಲಿಲ್ಲ?’
‘ಅದುನ್ನ ಕೇಳುಕ್ಕೆ ನೀವ್ಯಾರು?’-ನಂಜಮ್ಮ ಒಳಗಿನಿಂದಲೇ ಹೇಳಿದಳು.

‘ಎಂಗ್ಸು ಸರ್ಕಾರಿ ಲ್ಯಕ್ಕ ಬರೀಬೌದಾ ಅಂತ ನಾನು ಸರ್ಕಾರಾನೇ ಕೇಳ್ತೀನಿ’-ಎಂದು ಶಿವೇಗೌಡ ಎದ್ದುಹೋದ. ಇಡೀ ಊರಿಗೇ ದೊರೆಯಂತೆ ಮೆರೆಯುತ್ತಿದ್ದ ಅವನಿಗೆ ಈ ದಿನ ಪರಾಭವದ ಅನುಭವವಾಯಿತು. ಅದೂ, ಇಷ್ಟುದಿನ ತಾನು ಧಿಂ ಎಂದು ದರ್ಪಮಾಡುತ್ತಿದ್ದ ಕುಳವಾಡಿಯ ಎದುರಿನಲ್ಲಿಯೇ ಈ ಹೆಂಗಸು ಹೀಗೆ ಮಾತನಾಡಿ ಕಳಿಸಿದ್ದಳು. ತನ್ನ ಭಾವಮೈದ ಸಿವಲಿಂಗನನ್ನೂ ಜೊತೆಗೆ ಕರೆದುಕೊಂಡು ಅವನು ನೇರವಾಗಿ ಕಂಬನಕೆರೆಗೆ ಹೋಗಿ ಶೇಕ್‌ದಾರರನ್ನು ಕಂಡು, ಹೆಂಗಸು ಸರ್ಕಾರೀ ಲೆಕ್ಕ ಬರೆಯಬಹುದೇ ಎಂಬ ಅಂಶವನ್ನು ಕೇಳಿದ. ಶೇಕ್‌ದಾರರಿಗೆ ಈ ಪ್ರಶ್ನೆಯ ಹಿಂದು ಮುಂದುಗಳೆಲ್ಲ ಗೊತ್ತು. ಆ ಹೋಬಳಿಗೆ ಅವರು ಬಂದು ಆರು ತಿಂಗಳು ಮಾತ್ರವಾಗಿದ್ದರೂ, ಹಿಂದಿದ್ದವರು ಇವರಿಗೆ ಪ್ರತಿಯೊಂದು ಫಿರ್ಕಾದ ಒಳವಿಷಯಗಳನ್ನೆಲ್ಲ ತಿಳಿಸಿ ಹೋಗಿದ್ದರು. ಉಪಾಯವಾಗಿ ಮಾತನಾಡಿ ಅವರು, ಶಿವೇಗೌಡನ ಆಕ್ಷೇಪದ ಹಿನ್ನೆಲೆಯನ್ನು ಅವನ ಬಾಯಿಂದಲೇ ಹೊರಡಿಸಿದರು. ಶ್ಯಾನುಭೋಗರ ಪಹಣಿಯಲ್ಲಿ ಹೆಚ್ಚು ಅಂದಾಜು ಬರೆದರೆ ಅವರಿಗೂ ಲಾಭವಿತ್ತು; ಕಡಿಮೆ ಬರೆಯುವಾಗಲೂ ಲಾಭವಿತ್ತು.

ಆದುದರಿಂದ ಶೇಕ್‌ದಾರರು ಶ್ಯಾನುಭೋಗರನ್ನು ಯಾಕೆ ಬಿಟ್ಟುಕೊಟ್ಟಾರು? ಅವರು ಹೇಳಿದರು: ‘ನೋಡಿ ಶಿವೇಗೌಡ್ರೇ, ಆಯಮ್ಮ ಲೆಕ್ಕ ಬರೀತಾರೆ ಅಂತ ಡಿಪ್ಟಿಕಮಿಶನರ್ ಸಾಹೇಬ್ರಿಗೂ ಗೊತ್ತು. ಇಡೀ ತುಮಕೂರು ಡಿಸ್ಟ್ರಿಕ್ಟಿನಲ್ಲೇ ಅಷ್ಟು ಚೆನ್ನಾಗಿ ಯಾರೂ ಬರೆಯುಲ್ಲ ಅಂತ ಅವ್ರೇ ಹುಜೂರ್ ಜಮಾಬಂದೀಲಿ ಹೇಳಿದಾರೆ. ಹೆಂಗಸು ಲೆಕ್ಕ ಬರೀಬ್ಯಾಡ್ದು ಅಂತ ಸರ್ಕಾರೀ ರೂಲು ಏನೂ ಇಲ್ಲ.’
ಸೋತ ಮುಖ ಹಾಕಿಕೊಂಡು ಶಿವೇಗೌಡ ತನ್ನ ಭಾಮೈದನೊಡನೆ ಊರಿಗೆ ಹಿಂತಿರುಗಿದ. ದಾರಿಯಲ್ಲಿ ಶಿವೇಗೌಡ ಭಾಮೈದನನ್ನು ಕೇಳಿದ: ‘ಆ ನನ್ ಮಗ ಶೇಕ್‌ದಾರ ಊರಿಗೆ ಬಂದಾಗ ಈ ಬೋಸುಡಿ ಮುಂಡೆ ಉಪ್ಪಿಟ್ಟು ಕಾಫಿ ಮಾಡಿ ಕೊಡ್ತಾಳೆ ಅಂತ ಹೆಂಗ್ ವೈಸ್ಕಂಡ ನೋಡ್ದಾ ತಮ್ಮಯ್ಯ?’
‘ಬರೀ ಉಪ್ಪಿಟ್ಟು ಕಾಫಿಗೆ ಹಿಂಗ್ ವೈಸ್ಕತ್ತಾನಾ ತಗಾ ಮಾವಯ್ಯ? ಅವ್ನು ಬಂದಾಗೆಲ್ಲ ಇವ್ಳು ಅವನ ತಾವ ಆಸಿಗೆ ಆಸ್ಕಂಡು ಮನೀಕತ್ತಾಳೆ.’
‘ಸೂಳೆಗಾರಮುಂಡೆ, ಸೂಳೆಗಾರಮುಂಡೆ’-ಎಂದುಕೊಂಡು ಶಿವೇಗೌಡ ಮನಸ್ಸಿಗೆ ಸಮಾಧಾನ ತಂದುಕೊಂಡ. ಆದರೆ ಊರಿಗೆ ಬಂದಮೇಲೆ ಇದೇ ಮಾತನ್ನು ಮತ್ತೆ ಯಾರ ಎದುರಿಗಾದರೂ ಆಡಲು ಅವನಿಗಾಗಲಿ ಭಾಮೈದ ಸಿವಲಿಂಗನಿಗಾಗಲಿ ಧೈರ್ಯ ಬರಲಿಲ್ಲ.

ಶಿವೇಗೌಡನ ದರ್ಪವನ್ನು ಕಂಡು ನಂಜಮ್ಮ ಮನಸ್ಸಿನಲ್ಲಿಯೇ ತಿರಸ್ಕಾರ ಪಡುತ್ತಿದ್ದಳು. ಅದು ಬರೀ ಪಟೇಲಿಕೆಯ ದರ್ಪವಾಗಿರಲಿಲ್ಲ. ಕಾಶಿಂಬಡ್ಡಿ ಲೇವಾದೇವಿಯ ಹಣ ಇವನದ್ದೇ ಎಂಬುದು ಈಗ ಊರಿನವರಿಗೆಲ್ಲ ಗೊತ್ತು. ಪರಸ್ಥಳದವನಾದ ಕಾಶಿಂಬಡ್ಡಿಗೆ ಈ ಊರಿನಲ್ಲಿ ಸ್ಥಳ ಮಾಡಿ ಮನೆ ಮಠ ಕಟ್ಟಿ ಜಮೀನು ತೆಗೆದುಕೊಳ್ಳುವುದು ಬೇಕಾಗಿರಲಿಲ್ಲ. ತನ್ನ ಭಾಗದ ಬಡ್ಡಿ ಎಣಿಸಿಕೊಂಡು ಅವನು ತನ್ನ ದೇಶವಾದ ಮಲೆಯಾಳಕ್ಕೆ ಕಳಿಸಿಬಿಡುತ್ತಿದ್ದನಂತೆ. ಮೊದಮೊದಲು ಇವರಿಬ್ಬರ ಬಡ್ಡಿಯ ವ್ಯವಹಾರ ಚಿನ್ನ ಬೆಳ್ಳಿ ತಾಮ್ರ ಹಿತ್ತಾಳೆಗಳ ಅಡವಿನ ಮೇಲೆ ನಡೆಯುತ್ತಿತ್ತು. ಈ ಲೋಹಗಳನ್ನು ಕಳೆದುಕೊಂಡವರು ತಮ್ಮ ಚೂರು ಪಾರು ಭೂಮಿಯನ್ನು ಆಧಾರ ಬರೆದು ಕಾಸಿನ ಬಡ್ಡಿ ಲೆಕ್ಕದಲ್ಲಿ ಸಾಲ ತೆಗೆಯುತ್ತಿದ್ದರು. ಆಧಾರ ಶಿವೇಗೌಡನ ಹೆಸರಿಗೆ ಆಗುತ್ತಿತ್ತು. ಮೂರು ತಿಂಗಳ ಕಾಸಿನ ಬಡ್ಡಿಯನ್ನು ಅವರು ಮೊದಲೇ ಕಟಾಯಿಸಿ ಕೊಡುತ್ತಿದ್ದರು. ಎಂದರೆ ಒಂದು ಸಾವಿರ ರೂಪಾಯಿಗೆ ಆಧಾರ ಬರೆದರೆ ಹೆಚ್ಚು ಕಡಿಮೆ ಐನೂರು ಕೈಗೆ ಬರುತ್ತಿತ್ತು. ಇದರ ಮೇಲೆ ಶೇಕಡ ಹನ್ನೆರಡರಂತೆ ಒಂದು ಸಾವಿರಕ್ಕೆ ಕೋರ್ಟಿಗೆ ಹೋದರೂ ಲೆಕ್ಕ ಸಿಕ್ಕುತ್ತಿತ್ತು. ಕಳೆದ ಕೆಲವು ವರ್ಷಗಳಲ್ಲಿ, ಅದರಲ್ಲಿಯೂ ಮಳೆ ಬೆಳೆ ಹೋದ ಎರಡು ವರ್ಷಗಳಲ್ಲಿ ಶಿವೇಗೌಡ ಬಹಳ ಬೆಳೆದುಬಿಟ್ಟಿದ್ದ. ಅವನನ್ನು ತಗ್ಗಿಸುವುದು ಆ ಊರಿನಲ್ಲಿ ಯಾರಿಗೂ ಸಾಧ್ಯವಾಗದ ಮಾತು. ನಂಜಮ್ಮನಿಗೂ ಅದು ಗೊತ್ತಿತ್ತು. ಆದರೆ ತನ್ನ ಮೇಲೂ ದೌಲತ್ತು ತೋರಿಸಲು ಬಂದಾಗ ಅವಳು, ಅವನಿಗೆ ತಕ್ಕ ಜವಾಬು ಕೊಟ್ಟು ಕಳಿಸಿದ್ದಳು. ಆಹಾರ ಇಲಾಖೆಯ ಕಂಟ್ರೋಲ್ ಬಂದಮೇಲೆ ಶೇಕ್‌ದಾರರು ಊರಿಗೆ ಆಗಾಗ್ಗೆ ಬರಬೇಕಾಗುತ್ತಿತ್ತು. ಅವನು ಅವರನ್ನು ಕಾಣಲು ಹೋಗಿದ್ದ ವಿಷಯವೂ ತಿಳಿದ ಮೇಲೆ, ಅವನಿಗೆ ತಕ್ಕ ಮರ್ಯಾದೆ ಆಯಿತು ಎಂದುಕೊಂಡು ಸುಮ್ಮನಾದಳು.

– ೨-

ಮಳೆ ಬಂದ ಮೇಲೆ ಬೆಳೆ ಚೆನ್ನಾಗಿ ಆದರೂ ಧಾನ್ಯಗಳ ಬೆಲೆ ಮಾತ್ರ ಇಳಿಯಲಿಲ್ಲ. ಯುದ್ಧ ನಡೆಯುತ್ತಲೇ ಇತ್ತು. ಶ್ಯಾನುಭೋಗಿಕೆಯ ಸಾಮಾನ್ಯ ಲೆಕ್ಕದ ಜೊತೆಗೆ ಆಹಾರ ನಿಯಂತ್ರಣ, ಬೆಳೆ, ಧಾನ್ಯಸಂಗ್ರಹ, ಮೊದಲಾದ ಲೆಕ್ಕಗಳೂ ಹೆಚ್ಚಾದವು. ಸರ್ಕಾರವು ಶ್ಯಾನುಭೋಗರಿಗೆಲ್ಲ ವಾರ್ಷಿಕ ಪೋಟಿಗೆಯ ಮೇಲೆ ಪ್ರತ್ಯೇಕ ಭತ್ಯೆ ಕೊಡಲು ಪ್ರಾರಂಭಿಸಿತು. ಈಗ ನಂಜಮ್ಮ ಶ್ಯಾನುಭೋಗಿಕೆಯ ಹಳೆಯ ಪೋಟಿಕೆ ನೂರ ಇಪ್ಪತ್ತಾದರೆ ಮೇಲೆ ಒಂದು ನೂರು ರೂಪಾಯಿ ಸಿಕ್ಕುತ್ತಿತ್ತು. ಹೆಚ್ಚಿನ ಲೆಕ್ಕ ಪತ್ರಗಳ ಗಡಿಬಿಡಿಯೇ ಆಗುತ್ತಿದ್ದುದರಿಂದ ಅವಳಿಗೆ ಎಲೆ ಹಚ್ಚಲು ಬಿಡುವಿರುತ್ತಿರಲಿಲ್ಲ. ಪಾರ್ವತಿ ಮನೆ ಕೆಲಸ ಮಾಡಿಕೊಂಡು, ಉಳಿದ ವೇಳೆಯಲ್ಲಿ ಹಿತ್ತಿಲಿನ ತರಕಾರಿಗೆ ನೀರು ಹುಯ್ಯುತ್ತಿದ್ದಳು. ಗುಂಡೇಗೌಡರ ಮನೆಯಿಂದ ಹಿಂದಕ್ಕೆ ತಂದ ಹಸುಗಳ ಪಾಲನೆಯೂ ಅವಳದೇ. ರಾಮಣ್ಣ ಈಗ ಮಿಡ್ಳ್‌ಸ್ಕೂಲಿನ ಮೂರನೆಯ ಕ್ಲಾಸಿನಲ್ಲಿ, ಅವನ ಕ್ಲಾಸಿಗೇ ಮೊದಲನೆಯವನಾಗಿ ಓದುತ್ತಿದ್ದಾನೆ. ತಾಯಿಯ ಹೊಸಹೊಸ ಲೆಕ್ಕಗಳ ಪುಸ್ತಕಕ್ಕೆ ರೂಲು ಹಾಕುವುದರಿಂದ ಹಿಡಿದು, ಪಲ್ಲ ಸೇರುಗಳ ಕೂಡಿ ಕಳೆಯುವ ಲೆಕ್ಕಗಳನ್ನೆಲ್ಲ ತಪ್ಪಿಲ್ಲದೆ ಮಾಡುತ್ತಾನೆ. ಅಮ್ಮ ಮಾಡಿದ ಲೆಕ್ಕವನ್ನು ನೋಡಿ, ನಡುವೆ ತಪ್ಪು ಕಂಡುಹಿಡಿದು ತೋರಿಸುತ್ತಾನೆ. ಒಂದು ಸಲ ಶೇಕ್‌ದಾರರೇ ಅವನಿಗೆ ಹೇಳಿಕಳಿಸಿ ತಮ್ಮ ಒಂದು ಲೆಕ್ಕದ ಪುಸ್ತಕದ ನಕಲು ಮಾಡಿಸಿಕೊಂಡರು. ಮಗ ಬುದ್ಧಿವಂತನಾದನೆಂದು ನಂಜಮ್ಮನಿಗೆ ಹಿಗ್ಗೋ ಹಿಗ್ಗು. ಮುಂದೆ ರಾಮಣ್ಣ ಶ್ಯಾನುಭೋಗನಾಗುವುದು ಮಾತ್ರ ಅವಳಿಗೆ ಬೇಡ. ಹೈಸ್ಕೂಲಾದರೂ ಮುಗಿಸಬೇಕು.ಕೊನೆಯ ಪಕ್ಷ ಶೇಕ್‌ದಾರಿಕೆ ಮಾಡಬೇಕು. ದೇವರ ದಯವಿದ್ದರೆ ಯಾಕಾಗುವುದಿಲ್ಲ, ರಾಮಣ್ಣನಿಗೆ ಇಷ್ಟೆಲ್ಲ ಬುದ್ಧಿ ಇದೆಯಲ್ಲ-ಎಂದು ಮನಸ್ಸಿನಲ್ಲಿಯೇ ಯೋಚಿಸುತ್ತಿದ್ದಳು.

ವಿಶ್ವ ಕನ್ನಡ ಮೂರರಲ್ಲಿದ್ದಾನೆ. ಅವನಂತಹ ತುಂಟ ಇಡೀ ಊರಿನಲ್ಲಿಯೇ ಇಲ್ಲ. ಅಷ್ಟೇ ಧೈರ್ಯಶಾಲಿ. ಊರಿನ ಕೆರೆಯಲ್ಲಿ ದೊಡ್ಡವರಂತೆ ಐವತ್ತು ಅರವತ್ತು ಮಾರು ದೂರ ಈಜಿಕೊಂಡು ಹೋಗುತ್ತಾನೆ. ಒಬ್ಬನೇ ಶ್ಮಶಾನದ ಹತ್ತಿರ ತಿರುಗಿ ಜೇನುಗೂಡು ಹುಡುಕಿ, ಬಿಚ್ಚಿ, ಅಡಿಕೆಪಟ್ಟಿಯಲ್ಲಿ ತುಪ್ಪ ಹಿಂಡಿ ತರುತ್ತಾನೆ. ಮಾತುಕತೆ, ಗತ್ತು, ಧೈರ್ಯ, ಎಲ್ಲದರಲ್ಲೂ ಅಜ್ಜ ಕಂಠೀಜೋಯಿಸರೇ ಅವನು. ಈಗ ಅವನಿಗೂ ಮಾದೇವಯ್ಯನವರಿಗೂ ಮೊದಲಿಗಿಂತ ಹೆಚ್ಚು ಪ್ರೀತಿ ಬೆಳೆದಿದೆ. ಅವರು ತತ್ವ ಹಾಡುತ್ತಿದ್ದರೆ ಚನ್ನಾಗಿ ಏಕತಾರಿ ಬಾರಿಸುತ್ತಾನೆ. ದಮಡಿ ಬಡಿಯುತ್ತಾನೆ. ಅವರ ಕಂತೆಭಿಕ್ಷದ ಊಟವನ್ನು ಮತ್ತೆ ಅಭ್ಯಾಸ ಮಾಡಿಕೊಂಡಿದ್ದಾನೆ.

ಉಂಡು ತಿನ್ನಲು ನಂಜಮ್ಮನ ಸಂಸಾರಕ್ಕೆ ಯಾವ ತೊಂದರೆಯೂ ಇಲ್ಲ. ಆಹಾರದ ಲೆಕ್ಕ ಬಂದಮೇಲೆ, ಉಳಿದ ಶ್ಯಾನುಭೋಗ ಪಟೇಲರುಗಳಿಗೆ ಹೆಚ್ಚಾದಂತೆ ಅವಳಿಗೂ ಸಂಪಾದನೆ ಏರಿದೆ. ಮನೆಯಲ್ಲಿ ಈಗ ಎಲ್ಲರಿಗೂ ಎರಡೆರಡು ಜೊತೆ ಬಟ್ಟೆ ಬರೆಗಳಾಗಿವೆ. ರಾತ್ರಿ ಚಳಿಗಾಲದಲ್ಲಿ ಹೊದೆಯಲು ಕುರುಬರ ಹಳ್ಳಿಯವೇ ನಾಲ್ಕು ಕಂಬಳಿಗಳನ್ನೂ ಕೊಂಡಿದ್ದಾಳೆ. ಆದರೆ ಒಂದು ಯೋಚನೆ ಅವಳನ್ನು ಕಾಡುತ್ತಿದೆ. ಪಾರ್ವತಿಗೆ ಆಗಲೇ ಹದಿಮೂರು ತುಂಬುತ್ತಿದೆ. ಈ ಮಧ್ಯೆ ಎರಡು ವರ್ಷ ಬರ ಬರದೆ ಪುಷ್ಟಿಯಾದ ಆಹಾರ ಬಿದ್ದಿದ್ದರೆ ಅವಳು ಇಷ್ಟರಲ್ಲಿ ಮೈನೆರೆದುಬಿಡುತ್ತಿದ್ದಳು. ಹೊಟ್ಟೆಗಿಲ್ಲದೆ ಕಡ್ಡಿಯಂತೆ ಆಗಿದ್ದ ಅವಳು ಈಗ ಎರಡು ಹೊತ್ತೂ ಊಟ, ಬೆಳಗಿನ ಹೊತ್ತು ರೊಟ್ಟಿ ಮೊಸರು ತಿನ್ನುತ್ತಿದ್ದಾಳೆ. ಇನ್ನೂ ಅವಳ ಮದುವೆಯಾಗಿಲ್ಲ. ಮದುವೆಗೆ ಮೊದಲೇ ಮೈನೆರೆದು ಬಿಟ್ಟರೆ ಏನು ಗತಿ ಎಂದು ನಂಜಮ್ಮ ಒಳಗೇ ತಪಿಸುತ್ತಿದ್ದಾಳೆ.

ಮದುವೆ ಎಂದರೆ ಹುಡುಗಾಟವೆ? ಎಷ್ಟೇ ಬಡತನದಲ್ಲಿ ಮಾಡಿದರೂ ಏಳು ಎಂಟು ನೂರು ರೂಪಾಯಿ ಬೇಕು. ಗಂಡು ಹುಡುಕಿ ಮುಂದೆ ನಿಂತು ಮಾಡಲು ಒಬ್ಬ ಗಂಡಸು ಬೇಕು. ತನ್ನ ಗಂಡ ಎಂಥವರೆಂಬುದು ಅವಳಿಗೇ ಗೊತ್ತು. ದೇವರು ಹ್ಯಾಗೆ ನಡೆಸುತ್ತಾನೋ?-ಎಂಬ ಯೋಚನೆ ಮೂರು ಹೊತ್ತೂ ಕಾಡುತ್ತಿತ್ತು.

ತಿಪಟೂರಿನ ಹತ್ತಿರದ ತಿರುಮಗೊಂಡನಹಳ್ಳಿಯಲ್ಲಿ ಒಂದು ವರವಿದೆ ಎಂದು ಯಾರೋ ಹೇಳಿದರು. ಹೋಗಿ ನೋಡಿಕೊಂಡು ಬರುವಂತೆ ಅವಳು ಗಂಡನನ್ನೂ, ಜೊತೆಗೆ ಆ ಊರಿನ ಹೊಸದಾಗಿ ಬಂದಿದ್ದ ಮೇಷ್ಟರು ವೆಂಕಟೇಶಯ್ಯನವರನ್ನೂ ಕಳಿಸಿದಳು. ಇವರು ಹೋದ ಎರಡನೆಯ ದಿನ ವಾಪಸು ಬಂದ ಮೇಷ್ಟರು ಹೇಳಿದರು: “ನಂಜಮ್‌ನೋರೇ, ಈ ಶ್ಯಾನುಭೋಗ್ರನ್ನ ಕಟ್ಟಿಕೊಂಡು ಹೋದ್ರೆ ವರ ನಿಶ್ಚಯವಾಗುತ್ತೆಯೇ? ನಾವು ಅವರ ಮನೆಗೆ ಹೋಗಿ ಜಾತಕ ಕೇಳಿದೆವು. ಹುಡುಗಿ ಜಾತಕ ಮೊದಲು ಕೊಡಿ ಅಂದ್ರು. ಕೊಟ್ಟೆ. ಊಟ ಮಾಡಿ ಅಂದ್ರು. ‘ಹೆಣ್ಣು ಕೊಡೋಕೆ ಬಂದಿದೀವಿ ದೈವಸಂಕಲ್ಪವಿದ್ದು ಕನ್ಯಾದಾನವಾಗೂ ತನಕ ನಾವು ನಿಮ್ಮ ಮನೇಲಿ ಗಂಗೋದಕಾನೂ ಸ್ವೀಕರಿಸಬಾರ್ದು ಅಂತ ಶಾಸ್ತ್ರವೇ ಇದೆಯಲ್ಲ’ಅಂತ ನಾನು ಅಂದೆ. ಆದ್ರೆ ಶ್ಯಾನುಭೋಗ್ರು ಕೇಳ್ಲೇ ಇಲ್ಲ. ಬ್ಯಾಡಿ ಕಣ್ರಿ ಅಂತ ನಾನು ಬಾಯಿಬಿಟ್ಟು ಹೇಳಿದ್ರೂ ಕೇಳದೆ ಎದ್ದು ಅಂಗಿ ಬಿಚ್ಚಿ ಕೈಕಾಲು ತೊಳಕೊಂಡು ಊಟಕ್ಕೆ ಕೂತೇಬಿಟ್ರು. ನಾನು ಮಾತ್ರ ಮಾಡ್ಲಿಲ್ಲ. ಅವರ ಊಟವಾದ ಮೇಲೆ ಹುಡುಗನ ತಂದೆಯ ತಮ್ಮನೇ ಹೊರಗೆ ಬಂದು ನನ್ನ ಕೈಲಿ, ‘ಕನ್ಯೆಯ ತಂದೆಯೇ ನಮ್ಮನೇಲಿ ಊಟ ಮಾಡಿಬಿಟ್ರು. ಇನ್ನು ಮದುವೆ ಪ್ರಸ್ತಾಪ ಮುಂದುವರಿಸಬಾರ್ದು. ಶಾಸ್ತ್ರ ನಿಮಗೇ ಗೊತ್ತಿದೆಯಲ್ಲ’ ಅಂದುಬಿಟ್ರು.”

ಮೇಷ್ಟರ ಮಾತು ಕೇಳಿದ ನಂಜಮ್ಮನಿಗೆ ಸಂಕಟ ಕೋಪ, ಎರಡೂ ಒಟ್ಟಿಗೆ ಉಂಟಾದುವು. ಅಲ್ಲಿಯೇ ಚಾಪೆಯ ಮೆಲೆ ಮಲಗಿ ಸುಧಾರಿಸಿಕೊಳ್ಳುತ್ತಿದ್ದ ಗಂಡನನ್ನು-‘ಮೇಷ್ಟ್ರು ಹೇಳಿದರೂ ಯಾಕೆ ಹೀಗೆ ಮಾಡಿದಿರಿ?’ ಎಂದು ಕೇಳಿದುದಕ್ಕೆ ಅವರು, ‘ಹ್ವಟ್ಟೆ ಹಸ್ದಿದ್ರೆ ಇನ್ನೇನ್ ಮಾಡ್‌ಬೇಕೋ ಕಾಣೆ’ ಎಂದು ಕೊಸರಿಕೊಂಡೇ ಹೇಳಿದರು. ಹೇಲಿನಮೇಲೆ ಕಲ್ಲೆಸೆದು ಮೋರೆಮೇಲೆ ಸಿಡಿಸಿಕೊಳ್ಳಬಾರದೆಂಬ ನೆನಪಾಗಿ ಅವಳು ಅವರನ್ನು ಮತ್ತೆ ಏನೂ ಅನ್ನಲಿಲ್ಲ. ಮುಂದೆ ನಿಂತು ಈ ಹುಡುಗಿಯ ಮದುವೆ ಮಾಡುವವರು ಯಾರು ಎಂದು ತನ್ನಲ್ಲಿಯೇ ಯೋಚಿಸುತ್ತಾ ಸುಮ್ಮನಾದಳು.

ಅವಳ ಅದೃಷ್ಟಕ್ಕೆ ಆ ದಿನ ರಾತ್ರಿಯೇ ಪಾರ್ವತಿ ಮೈನೆರೆದುಬಿಟ್ಟಳು. ಅದು ಅನಿರೀಕ್ಷಿತವಲ್ಲದಿದ್ದರೂ ಹಾಗೆ ಆದಾಗ ನಂಜಮ್ಮನ ಎದೆ ಹೊಡೆದುಕೊಂಡಿತು. ಮೈನೆರೆದ ಹುಡುಗಿಯನ್ನು ಮದುವೆಯಾಗುವವರು ಯಾರು? ತಿಪಟೂರಿನಂಥ ದೊಡ್ಡ ಊರಿನಲ್ಲಿ ದೊಡ್ಡದೊಡ್ಡವರ ಮನೆಗಳಲ್ಲಿ ಈಗೀಗ ನೆರೆದ ಹುಡುಗಿಯರಿಗೇ ಮದುವೆ ಮಾಡುತ್ತಾರಂತೆ-ಎಂದೇನೋ ಕೇಳಿದ್ದಳು. ಆದರೆ ಅದು ದೊಡ್ಡವರ ಮನೆಯ ಮಾತು. ನಾವು ಎಷ್ಟಾದರೂ ಬಡವರು, ಅಲ್ಲದೆ ಹಳ್ಳಿಗಾಡಿನವರು. ಹುಡುಗಿ ಮದುವೆಯಾಗದೆ ಮೈನೆರೆದಳೆಂದರೆ ತಾವು ಉಳಿಯುವಂತಿಲ್ಲ. ಊರಿನ ಜೋಯಿಸರುಗಳು ಮೊದಲೇ ತನಗೂ ಮಕ್ಕಳಿಗೂ ಬಹಿಷ್ಕಾರ ಹಾಕಿದ್ದಾರೆ. ಒಂದು ಪಕ್ಷ ಹಣ ಒದಗಿ ಗಂಡು ಗೊತ್ತಾದರೂ ಅವರು ದಂಡ ತಿನ್ನದೆ ಬಂದು ಮದುವೆ ಮಾಡಿಸುವುದಿಲ್ಲ. ಇನ್ನು ಇದು ಗೊತ್ತಾದರೆ ದೊಡ್ಡ ಗಲಾಟೆಯೇ ಆಗುತ್ತೆ. ವಿಷಯ ನಾಲ್ಕು ಜನಕ್ಕೆ ತಿಳಿದರೆ ಅವಳನ್ನು ನೋಡಲು ಯಾವ ಗಂಡಿನವರು ಬಂದರೂ ಕಿವಿಗೆ ಊದಿ ಮದುವೆ ತಪ್ಪಿಸಿಬಿಡುತ್ತಾರೆ. ನಂಜಮ್ಮ ಒಂದು ಗಂಟೆಯ ಕಾಲ ಮಂಕುಹಿಡಿದವಳಂತೆ ಕೂತುಬಿಟ್ಟಳು. ಚೆನ್ನಿಗರಾಯರು ಸುಖವಾಗಿ ಮಲಗಿ ನಿದ್ರಿಸುತ್ತಿದ್ದರು. ಅವರಿಗೆ ವಿಷಯ ತಿಳಿಯುವುದೂ ಒಂದೇ ಕಹಳೆಯ ಬಾಯಿಗೆ ಪಿಸುಮಾತು ಹೇಳುವುದೂ ಒಂದೇ.

ಅವಳು ಒಂದು ತೀರ್ಮಾನ ಮಾಡಿದಳು. ಯಾರಿಗೂ ಹೇಳಕೂಡದೆಂದು ಕಟ್ಟುನಿಟ್ಟಾಗಿ ಹೇಳಿ ಪಾರ್ವತಿಯನ್ನು ತನ್ನ ಹಾಸಿಗೆಯ ಸಾಲಿನಲ್ಲೇ ಮಲಗಿಸಿಕೊಂಡಳು. ಬೆಳಗ್ಗೆ ಅವಳನ್ನು ಮನೆಗೆಲಸಕ್ಕೆ ಬಿಡಲಿಲ್ಲ. ಹೊಟ್ಟೆನೋವೆಂದು ಹೇಳುವಂತೆ ಹೇಳಿ, ಒಂದು ಕಡೆ ಹಾಸಿಗೆ ಹಾಕಿ ಮಲಗಲು ಹೇಳಿದಳು. ವಿಷಯ ರಾಮಣ್ಣನಿಗೆ ತಿಳಿಸಿದಳು. ಅವನು ಜಾಣ ಹುಡುಗ. ಯಾರ ಕೈಲೂ ಬಾಯಿ ಬಿಡುವವನಲ್ಲ.

ಆದರೆ ವಿಶ್ವನಿಗೆ ಇನ್ನೂ ತಿಳಿವಳಿಕೆ ಇಲ್ಲ. ಅವನಿಗಾಗಲಿ ಗಂಡ ಚೆನ್ನಿಗರಾಯನಿಗಾಗಲಿ ಏನೂ ತಿಳಿಸಲಿಲ್ಲ. ಮಕ್ಕಳು ಆರೋಗ್ಯವಾಗಿರಲಿ ರೋಗದಿಂದ ನರಳುತ್ತಿರಲಿ, ಚೆನ್ನಿಗರಾಯರು ಎಂದಿಗೂ ಅವರನ್ನು ವಿಚಾರಿಸುತ್ತಿರಲಿಲ್ಲ. ಆದರೆ ವಿಶ್ವ ಅಕ್ಕಯ್ಯನನ್ನು ಮುಟ್ಟಿ, ಅವಳ ಹೊಟ್ಟೆ ನೋವು ಹೇಗಿದೆ ಎಂದು ವಿಚಾರಿಸಿದ. ಹಾಗೆಯೇ ಅಡಿಗೆ ಮನೆಗೂ ಬಂದ. ಮಗಳು ಮನೆಗೆಲಸ ಮಾಡುವಂತಾದ ಮೇಲೆ, ನಂಜಮ್ಮ ತಾನು ಮುಟ್ಟಾದಾಗ ಮೈಲಿಗೆ ಕೂರುತ್ತಿದ್ದಳು. ಮುಟ್ಟಾದ ಅಕ್ಕಯ್ಯನನ್ನು ಮುಟ್ಟಿಕೊಂಡು ವಿಶ್ವ ಈಗ ಕೋಣೆಗೇ ಬಂದಿದ್ದಾನೆ. ನಂಜಮ್ಮ ಮಡಿ ಸೀರೆ ಸುತ್ತಿಕೊಂಡು ಸಾಲಿಗ್ರಾಮವನ್ನು ತೆಗೆದು ಒಂದು ಮಡಿ ತಾಮ್ರದ ಚೊಂಬಿನಲ್ಲಿಟ್ಟು, ಮೇಲೆ ತೊಲೆಯ ಮೇಲೆ ಇಟ್ಟುಬಿಟ್ಟಳು. ಉಳಿದ ಮಡಿ ಮೈಲಿಗೆಯ ಬಗೆಗೆ ಅವಳಿಗೆ ಹೆದರಿಕೆ ಇರಲಿಲ್ಲ. ಸಾಲಿಗ್ರಾಮದ ಸಹವಾಸ ಎಷ್ಟಾದರೂ ಕಷ್ಟದ್ದೇ.

ರಾಮಣ್ಣ ಹೇಗೂ ಕಂಬನಕೆರೆಗೆ ದಿನವೂ ಹೋಗುತ್ತಾನೆ. ನಂಜಮ್ಮ ಅವನ ಕೈಲಿ ಎಳ್ಳು ತರಿಸಿದಳು. ತಾನೇ ಒಂದು ದಿನ ಕುರುಬರಹಳ್ಳಿಗೆ ಹೋಗಿ, ದೇವರ ಕೆಲಸವೆಂದು ನಾಲ್ಕು ಮನೆಗಳಲ್ಲಿ ಕೇಳಿ ಒಟ್ಟು ಇಪ್ಪತ್ತು ಗಿಟುಕು ಕೊಬ್ಬರಿ ತಂದಳು. ಯಾರಿಗೂ ತಿಳಿಯದಂತೆ ಪಾರ್ವತಿಯನ್ನು ಅಡಿಗೆಮನೆಯಲ್ಲಿ ಕೂರಿಸಿ ಬೆಲ್ಲ ಹಾಕಿದ ಎಳ್ಳಿನ ಚಿಗಳಿ, ಕೊಬ್ಬರಿ ಬೆಲ್ಲ ಮತ್ತು ಮೆಂತ್ಯದ ಹಿಟ್ಟುಗಳನ್ನು ದಿನವೂ ತಿನ್ನಿಸಿದಳು. ಈಗ ಬೆಣ್ಣೆಯ ಧಾರಣೆ ಸೇರಿಗೆ ಹತ್ತು ಆಣೆಯಾಗಿತ್ತು. ಅದನ್ನೂ ರಾಮಣ್ಣ ಗುಟ್ಟಾಗಿ ಕಂಬನಕೆರೆಯಿಂದ ತಂದು ಕೊಡುತ್ತಿದ್ದ. ಅಷ್ಟೇ ಗುಟ್ಟಾಗಿ ನಂಜಮ್ಮ ಮಗಳಿಗೆ ತುಪ್ಪ ತಿನ್ನಿಸುತ್ತಿದ್ದಳು. ಅವಳು ನೆರೆದಿರುವುದನ್ನು ಮುಚ್ಚಿಡಬಹುದು. ಆದರೆ ಈ ಕಾಲದಲ್ಲಿ ಸ್ವಲ್ಪವಾದರೂ ಆರೈಕೆ ಮಾಡದಿದ್ದರೆ ಮುಂದೆ ಹುಡುಗಿಯ ಆರೋಗ್ಯ ಶಕ್ತಿಗಳ ಗತಿ ಏನು?-ಎಂಬ ಯೋಚನೆ ಸದಾ ಅವಳಲ್ಲಿ ಜಾಗೃತವಾಗಿತ್ತು.

ಹೊರಗಿನವರಿಗೆ ಸ್ವಲ್ಪವೂ ಸುಳಿವು ಸಿಕ್ಕದಂತೆ ಹೀಗೆ ಐದು ತಿಂಗಳು ಕಳೆಯಿತು. ಆದರೆ ಪಾರ್ವತಿಯ ಮೈ ಕೈ ಮುಖಗಳಲ್ಲಿಯೂ ಆಗುತ್ತಿದ್ದ ಬದಲಾವಣೆಯು, ಯಾರು ನೋಡಿದರೂ ಇವಳು ದೊಡ್ಡವಳಾಗಿದ್ದಾಳೆ ಎಂದು ತಿಳಿಯುವಂತೆ ಮಾಡುತ್ತಿತ್ತು. ತಾಯಿಯಂತೆಯೇ ಎತ್ತರವಾದ ಮೈಕಟ್ಟು, ಅಗಲವಾದ ಭುಜ, ಮುಖದ ಹುಡುಗಿ. ಬಡತನವೆಂದು ಮಾಡುತ್ತಿದ್ದರೂ ಎಳ್ಳು, ಬೆಲ್ಲ, ಕೊಬ್ಬರಿ ಮೆಂತ್ಯಗಳು ಶರೀರಕ್ಕೆ ಬೀಳುತ್ತಿವೆ. ವಾರಕ್ಕೊಂದು ಸಲ ಎಣ್ಣೆ ನೀರು ಆಗುತ್ತಿದೆ. ಮೊದಲಿನಂತೆ ಈಗ ಬಿಸಿಲಿನಲ್ಲಿ ಸೊಪ್ಪಿನ ಮಡಿಗೆ ಸಹ ಹೋಗುತ್ತಿಲ್ಲ. ಮೈ ಮುಖದ ಬಣ್ಣವೂ ಬೆಳ್ಳಗಾಗಿದೆ. ಅವಳ ಈ ರೂಪವನ್ನು ಮುಚ್ಚಿಡುವುದು ಹೇಗೆ? ಅಥವಾ, ಒಳಗೇ ಮಾಡುತ್ತಿದ್ದ ಆರೈಕೆಯನ್ನು ನಿಲ್ಲಿಸಿಬಿಟ್ಟರೆ ಮುಂದೆ ಹುಡುಗಿಯ ಶರೀರಶಕ್ತಿ ಉಳಿಯುವುದಿಲ್ಲ. ನಂಜಮ್ಮನಿಗೆ ಉಭಯಸಂಕಟ. ಮಗಳ ಆರೋಗ್ಯಯುತ ಮೈಕಟ್ಟನ್ನು ನೋಡಿ ಒಂದು ನಿಮಿಷ ಸಂತೋಷವೆನಿಸಿದರೆ ಅದೇ ಕ್ಷಣದಲ್ಲಿ ತಮ್ಮ ಸ್ಥಿತಿಯ ಅರಿವಾಗಿ, ‘ಇವಳಿಗೆ ನಿಜವಾಗಿಯೂ ಮದುವೆಯಾಗುತ್ತದಯೇ? ನಮ್ಮ ಮರ್ಯಾದೆ ಉಳಿಯುತ್ತದೆಯೇ’-ಎಂಬ ಯೋಚನೆಯಿಂದ ಮನಸ್ಸು ಭಾರವಾಗುವುದು.

ಪಾರ್ವತಿ ಸೂಕ್ಷ್ಮಬುದ್ಧಿಯ ಹುಡುಗಿ. ತಾಯಿಯ ಮನದ ಸಮಸ್ಯೆ ಅವಳಿಗೂ ಪೂರ್ತಿಯಾಗಿ ಗೊತ್ತು. ಅದು ತನ್ನ ಜೀವನದ್ದೇ ಸಮಸ್ಯೆ. ತನ್ನ ಮದುವೆಯಂತೂ ಆಗಬೇಕು. ಹಿಂದಿನ ಕಾಲದಲ್ಲಿ ಮದುವೆಗೆ ಮೊದಲು ಹುಡುಗಿಯರು ಮೈನೆರೆದರೆ ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟುಬಿಡುತ್ತಿದ್ದರಂತೆ. ಹೇಗೋ ಅಮ್ಮ ಮದುವೆ ಮಾಡುತ್ತಾಳೆ. ಆದರೆ ಎಂತಹ ಗಂಡು ಸಿಕ್ಕುತ್ತೆ? ತನ್ನ ತಂದೆಯಂಥದೇ, ಚಿಕ್ಕಪ್ಪನಂಥದೇ, ಸೋದರಮಾವ ಕಲ್ಲೇಶಜೋಯಿಸರಂಥದೇ? ರೇವಣ್ಣಶೆಟ್ಟಿ, ಶಿವೇಗೌಡ-ಆ ಊರಿನಲ್ಲಿ ಯಾರನ್ನು ಕುರಿತು ಯೋಚಿಸಿದರೂ ಅಂತಹ ಗಂಡ ತನಗೆ ಬೇಡವೆಂದು ಅವಳ ಮನಸ್ಸು ಹೇಳುತ್ತಿತ್ತು. ಇಂಥದು ಬೇಕು, ಇಂಥದು ಬೇಡ ಎಂದು ತಾನೇನೋ ಅಮ್ಮನ ಕೈಲಿ ಹೇಳಬಹುದು ಆದರೆ ತನ್ನ ಇಷ್ಟದಂತೆಯೇ ಗಂಡು ಹುಡುಕಿ ಮಾಡುವ ಶಕ್ತಿ ತಮಗಿಲ್ಲವೆಂಬ ಅರಿವು ಅವಳಲ್ಲಿ ಸದಾ ಇರುತ್ತಿತ್ತು. ತಾನು ಹುಟ್ಟದಿದ್ದರೇ ಚನ್ನಾಗಿತ್ತು. ಈಗಲೂ ಸತ್ತುಹೋದರೆ ಒಂದು ಥರಕ್ಕೆ ಚನ್ನ. ಸಾಯುವುದು ಎಂದರೆ ಅಮ್ಮ, ರಾಮಣ್ಣ, ವಿಶ್ವರನ್ನು ಬಿಟ್ಟು ಹೊರಟುಹೋಗುವುದು-ಎಂಬ ಅರಿವಾಗಿ, ಸಾಯುವ ವಿಚಾರ ಅವಳ ಮನಸ್ಸಿನಿಂದ ಹೊರಟುಹೋಯಿತು. ಎಂಥ ಗಂಡು ಸಿಕ್ಕಿದರೂ ಸರಿ. ಸಂಸಾರ ಮಾಡಲೇಬೇಕು. ಅಮ್ಮ ಮಾಡುತ್ತಿಲ್ಲವೇ, ಹಾಗೆ. ಅದೃಷ್ಟ ಚನ್ನಾಗಿದ್ದರೆ ಒಳ್ಳೆಯವರೂ ಸಿಕ್ಕಬಹುದು. ಈ ಊರು ಸ್ಕೂಲು ಮೇಷ್ಟರು ವೆಂಕಟೇಶಯ್ಯನವರು ಹೆಂಡ್ತೀನ ಹೊಡೆಯಲ್ಲ, ಬಡಿಯಲ್ಲ. ಹೊಗೆಸೊಪ್ಪು, ಬೀಡಿ ಯಾವ ಅಭ್ಯಾಸವೂ ಇಲ್ಲ. ಬಾಯಲ್ಲಿ ಕೆಟ್ಟ ಮಾತೇ ಬರುಲ್ಲ. ಅಂಥೋರು ಸಿಕ್ಕಿದರೆ ಸಾಕು-ಎಂಬ ಹಲವಾರು ಯೋಚನೆ ಆಶೆಗಳು ಮನಸ್ಸನ್ನು ಒಳಗೇ ಕೊರೆಯುತ್ತಿದ್ದವು.

ಒಂದು ದಿನ ಸಂಜೆ ಮನೆಗೆ ಬಂದ ಚೆನ್ನಿಗರಾಯರು ಹೆಂಡತಿಯನ್ನು ಕೇಳಿದರು: ‘ಪಾರ್ವತಿ ಮೈ ಗಿಯ್ ನೆರೆದಿದಾಳೇನೇ?’

ಈ ಮಾತು ಕೇಳಿದಾಗ ಪಾರ್ವತಿ ಎದುರಿಗೇ ಇದ್ದಳು. ನಂಜಮ್ಮನಿಗೆ ರೇಗಿತು. ಅವಳು ಎಂದಳು: ‘ನಿಮಗೇನು ಬುದ್ಧಿ ನ್ಯಟ್ಟಗಿದೆಯೋ ಇಲ್ವೋ? ಯಾರು ಹಾಗಂದ್ರು?’
‘ಯಾಕ್ ನಿನ್ಮಗಳು ಇತ್ತೀಚೆಗೆ ಸೊಪ್ಪಿನ ಹಿತ್ಲಿಗೆ ಬರೂದೇ ಇಲ್ಲ? ಯಾವಾಗ್ಲೂ ಮನ್ಲೇ ಇರ್ತಾಳೆ. ಮೈ ಗಿಯ್ ನೆರೆದಿದಾಳೆ ಏನೋ ಅಂತ ಅಣ್ಣಾಜೋಯಿಸ್ರು ಕೇಳಿದ್ರು.’
‘ಅದಕ್ಕೆ ನೀವೇನಂದ್ರಿ?’
‘ನಂಗೊತ್ತಿಲ್ಲ. ನಮ್ಮನ್ಲಿ ಇವ್ಳುನ್ನ ಕೇಳ್ತೀನಿ ಅಂದೆ.’
‘ಇಲ್ಲ ಅನ್ನುಕ್ಕೆ ನಿಮಗೇನಾಗಿತ್ತು?’
‘ನಂಗೇನು ಗೊತ್ತೆ ಅದೆಲ್ಲ’-ಎಂದು ಸಿಟ್ಟನ್ನೇ ತೋರಿಸಿದರು.
‘ಇನ್ನೂ ಇಲ್ಲ. ಈಗ ಮನ್ಲಿ ಎಲೆ ಹಚ್ಚುವ ಕೆಲ್ಸವೇ ಅವ್ಳಿಗೆ ಆಗುತ್ತೆ ಅಂತ ಹೇಳಿ’-ಎಂದು ನಂಜಮ್ಮ ಉಪಾಯವಾಗಿ ಹೇಳಿದಳು. ಅಲ್ಲಿಗೆ ಪಾರ್ವತಿ ಅಪ್ಪ ಸುಮ್ಮನಾದರು.
ಎಂದರೆ ಊರಿನ ಇತರ ಬ್ರಾಹ್ಮಣರುಗಳಿಗೆ ಆಗಲೇ ಅನುಮಾನ ಬಂದಿದೆ. ಎಷ್ಟೇ ಗುಟ್ಟಿನಿಂದ ಇದ್ದರೂ ಇಂಥ ವಿಷಯವನ್ನು ಹೆಚ್ಚು ದಿನ ಮುಚ್ಚಿಡುವುದು ಕಷ್ಟ. ಬಳ್ಳಿಯಲ್ಲಿ ಮಲ್ಲಿಗೆಯ ಮೊಗ್ಗು ಬಿರಿಯುವಾಗ ಅದನ್ನು ಎಷ್ಟು ಮುಚ್ಚಿದರೂ ಎಲ್ಲರಿಗೂ ಗೊತ್ತಾಗುವ ಹಾಗೆ, ದೊಡ್ಡವಳಾಗಿ ಸ್ವಲ್ಪ ಆರೈಕೆ ಮಾಡಿಸಿಕೊಳ್ಳುವ ಹುಡುಗಿಯ ವಿಷಯವೂ ತಿಳಿದುಬಿಡುತ್ತದೆ.

– ೩ –

ಇದಾದ ಎರಡನೆಯ ದಿನ ಮಧ್ಯಾಹ್ನ ಅವರ ಮನೆಯ ಮುಂದೆ ಒಂದು ಕಮಾನು ಗಾಡಿ ಬಂದು ನಿಂತಿತು. ಎತ್ತಿನ ಕೊರಳಿಗೆ ಗಂಟೆಸರ ಕಟ್ಟಿದ್ದ ಅದರ ನೊಗ ಇಳುಕುವ ಮೊದಲೇ ಹಿಂಭಾಗದಿಂದ ಯಾರೋ ಒಬ್ಬ ಎತ್ತರವಾದ, ತುಂಬಿದ ಮೈಕಟ್ಟಿನ ವ್ಯಕ್ತಿ ಇಳಿದರು. ಹಣೆಗೆ ತ್ರಿಪುಂಡ್ರ ಕೊರಳಿಗೆ ಜಪದ ಸರಗಳನ್ನು ಧರಿಸಿದ್ದ ಅವರನ್ನು ಪಾರ್ವತಿ ಈ ಮೊದಲು ನೋಡಿರಲಿಲ್ಲ. ಆದರೆ ನೊಗ ಇಳುಕಿದ ಮೇಲೆ ಅಕ್ಕಮ್ಮ ಇಳಿದಳು. ಅಕ್ಕಮ್ಮ ಇಲ್ಲಿಗೆ ಬಂದು ಆಗಲೇ ನಾಲ್ಕು ವರ್ಷದ ಮೇಲೆ ಆಗಿತ್ತು. ಈಗ ಅವಳ ಬೆನ್ನು ಮೊದಲಿಗಿಂತ ಗೂನು ಬಿದ್ದಿದೆ. ‘ಅಮ್ಮಾ, ಅಕ್ಕಮ್ಮ ಬಂದಳು’-ಎಂದು ಒಳಗೆ ತಿರುಗಿ ಪಾರ್ವತಿ ಹೇಳಿದ ತಕ್ಷಣ ನಂಜ ಎದ್ದು ಓಡಿಬಂದಳು. ಎದುರಿಗೆ ನೋಡಿದರೆ ತನ್ನ ತಂದೆ.
‘ನಂಜಾ, ಆಗ ನೋಡಿದುದಕ್ಕೂ ಈಗ್ಗೂ ನೀನು ತುಂಬ ಬಡವಾಗಿದೀಯ. ಇವಳೇ ಏನು ಅಲ್ಲಿ ಹುಟ್ಟಿದೋಳು?’-ಅವರು ಕೇಳಿದರು.
ತಮ್ಮ ಅಜ್ಜಯ್ಯನ ಬಗೆಗೆ ಪಾರ್ವತಿ ಆದಿಯಾಗಿ ಎಲ್ಲ ಹುಡುಗರೂ ಕೇಳಿದ್ದರು. ಈಗ
ಅವರನ್ನು ನೋಡುವ ಯೋಗವಾಯಿತು. ಅಕ್ಕಮ್ಮ ಕೋಡುಬಳೆ ಚಕ್ಕುಲಿಗಳನ್ನೆಲ್ಲ ತಂದಿದ್ದಳು. ಅಜ್ಜಯ್ಯ ಮಗಳಿಗೆ ಮೊಮ್ಮಗಳಿಗೆ ಸೀರೆ, ಉಳಿದ ಗಂಡು ಹುಡುಗರಿಗೆ ಅಂಗಿ ಚಡ್ಡಿಗಳನ್ನು ಹೊಲಿಸಿ ತಂದಿದ್ದರು. ಜೊತೆಗೆ ಒಂದು ಥಾಲಿ ಕಾಶಿಗಂಗೆ. ಸ್ಕೂಲಿನಿಂದ ಬಂದ ವಿಶ್ವನಿಗೆ ಸಂಭ್ರಮವೋ ಸಂಭ್ರಮ.
‘ಅಪ್ಪಾ, ನೀನು ದೇಶ ಬಿಟ್ಟು ಹೋಗಿ ಹನ್ನೆರಡು ತುಂಬಿ ಹದಿಮೂರು ವರ್ಷವಾಯ್ತಲ್ಲವೆ? ಮೊದಲು ಒಂದು ದೇವಸ್ಥಾನಕ್ಕೆ ಬಂದು ನಮ್ಮುನ್ನ ಅಲ್ಲಿಗೆ ಕರ್‍ಸಬಾರದಾಗಿತ್ತೆ?’
‘ಕಾಶಿಗೆ ಹೋಗಿದ್ದೋರಿಗೆ ಅದೆಲ್ಲ ಏನಿಲ್ಲ. ಜೊತೇಲಿ ಗಂಗೇನೂ ತಂದಿದೀನಿ.’
ಅವರು ಹೇಳದೆ ಕೇಳದೆ ಇಷ್ಟು ವರ್ಷ ಕಾಶಿಗೆ ಯಾಕೆ ಹೋದರು?-ಎಂಬ ಪ್ರಶ್ನೆ ಬಂದಾಗ ಕಂಠೀಜೋಯಿಸರು ಸರಿಯಾಗಿ ಉತ್ತರ ಹೇಳಲಿಲ್ಲ. ‘ಏನೋ ವಿಶ್ವೇಶ್ವರನ ಸನ್ನಿಧಾನದಲ್ಲಿ ಹೋಗಿ ಇರಬೇಕು ಅಂತ ಮನಸ್ಸಾಯ್ತು. ಹೋಗಿಬಿಟ್ಟೆ. ನಂಗೆ ಎಲ್ಲಿದ್ದರೇನು?’-ಎಂದರು. ಅಕ್ಕಮ್ಮ ಆ ದಿನವೆಲ್ಲ ಮೊಮ್ಮಗಳಿಗೆ ಊರಿನ ವಿದ್ಯಮಾನಗಳನ್ನು ಹೇಳುತ್ತಿದ್ದಳು. ಕಂಠೀಜೋಯಿಸರು ಊರಿನ ಜೋಯಿಸರಿಬ್ಬರ ಮನೆಗೂ ಹೋಗಿ ಅವರ ಸಂಗಡ ತಮ್ಮ ಕಾಶಿಯ ಹನ್ನೆರಡು ವರ್ಷದ ಅನುಭವವನ್ನು ಹೇಳಿ, ತಾಂಬೂಲ ತೆಂಗಿನಕಾಯಿಗಳನ್ನು ಪಡೆದು ಬಂದರು.
ಅವರಿಬ್ಬರೂ ಈಗ ಬಂದಿರುವ ಕಾರಣವನ್ನು ಅಕ್ಕಮ್ಮನೇ ಪ್ರಸ್ತಾಪ ಮಾಡಿದಳು. ‘ಆ ಗೊಡ್ಡು ಮುಂಡೆ ಹ್ವಟ್ಟೇಲಿ ಮಕ್ಕಳಂತೂ ಆಗುಲ್ಲ. ಮದುವೆಯಾಗಿ ಹದಿನಾರು ವರ್ಷ ಆಯ್ತಲ್ಲ. ಅದರ ಯೋಗ್ತಿಯೂ ಹೀಗಿದೆ. ವಂಶ ನಿಂತುಹೋದ್ರೆ ನಮಗೆ ಪಿಂಡ ಹಾಕೋರು ಯಾರು? ಕಲ್ಲೇಶುಂಗೆ ಬ್ಯಾರೆ ಮದುವೆ ಮಾಡ್‌ಬೇಕು ಅಂತ ತೀರ್ಮಾನ ಮಾಡಿದೀವಿ.’
‘ಅದುಕ್ಕೆ ಅಣ್ಣಯ್ಯ ಒಪ್ಪಿದಾನೆಯೇ?’
‘ಹೂಂ. ಒಪ್ಪದೇ ಯಾಕಿದ್ದಾನು? ಅವ್ನೇ ನಮ್ಮಿಬ್ರುನ್ನೂ ಎತ್ತು ಗಾಡಿ ಮಾಡಿ ಕಳಿಸಿಕೊಟ್ಟ.’
‘ಅದುಕ್ಕೆ ನಾನೇನು ಹೇಳ್ಲಿ? ನಂಗೇನು ತಿಳಿಯುತ್ತೆ?’
‘ಪಾರ್ವತೀನ ಕೊಟ್ಟುಬಿಡು. ಒಂದು ದಿನದಲ್ಲಿ ಧಾರೆ ಹುಯ್ಸಿಬಿಡಾಣ’-ಅಕ್ಕಮ್ಮ ಹೀಗೆ ಹೇಳಿದಾಗ ಪಾರ್ವತಿ ಎದುರಿಗೇ ಇದ್ದಳು. ಇದನ್ನು ಕೇಳಿದ ಅವಳಿಗೆ ತಕ್ಷಣ ಏನೂ ತಿಳಿಯಲಿಲ್ಲ. ನಂಜಮ್ಮನಿಗೆ ಸಹ ಈ ಅನಿರೀಕ್ಷಿತ, ಅನೂಹ್ಯ ಮಾತಿನಿಂದ ಏನೂ ಅರ್ಥವಾಗಲಿಲ್ಲ. ಅಕ್ಕಮ್ಮನೇ ಮುಂದುವರಿಸಿದಳು: ‘ಕಂಠಿ ಕಾಶಿಯಿಂದ ಮೂರು ಸಾವಿರ ರೂಪಾಯಿ, ಇಪ್ಪತ್ತು ಚಿನ್ನದ ಉಂಗುರ, ಎಲ್ಲಾ ತಂದಿದಾನೆ. ದುಡ್ಡೆಲ್ಲ ನಮ್ಮ ಹುಡುಗಿಗೇ ಆಗುತ್ತೆ. ರಾಣಿ ಹಾಗೆ ಇರ್ತಾಳೆ.’
“ಅಕ್ಕಮ್ಮ, ಪಾರ್ವತಿಯ ವಯಸ್ಸೆಷ್ಟು, ಅಣ್ಣಯ್ಯನ ವಯಸ್ಸೆಷ್ಟು? ಹೇಳಿ ಕೇಳಿ ಅವನು ಸೋದರಮಾವ, ಇವಳು ಸೋದರಸೊಸೆ. ಅವನಿಗೆ ಗಂಡು ಮಗ ಇದ್ದಿದ್ರೆ ಇವಳನ್ನ ಕೊಡಬೇಕಾಗಿತ್ತು.’
‘ಗಂಡು ಮಗ ಇದ್ದಿದ್ರೆ ಬ್ಯಾರೆ ಮದುವೆ ಯಾಕೆ ಆಗ್ತಿದ್ದ? ಸೋದರಮಾವುನ್ನ ಎಷ್ಟು ಜನ ಮದುವೆ ಮಾಡ್ಕಂಡಿಲ್ಲ? ಅವ್ನಿಗೆ ಯಾವ ಮಹಾ ವಯಸ್ಸು? ಮೂವತ್ತಾರೋ ಮೂವತ್ತೇಳೋ. ಇನ್ನೂ ರಾಜಕುಮಾರನ ಹಾಗೆ ಗಟ್ಟಿಗಟ್ಟಿಯಾಗಿದಾನೆ.’
‘ಅತ್ತಿಗೆಮ್ಮ ಸುಮ್ನಿರ್ತಾಳೆಯೆ?’
‘ಸುಮ್ನಿರ್ದೆ ಏನ್ಮಾಡ್ತಾಳೆ? ಇವಳ ಹೊಟ್ಟೇಲಿ ಒಂದು ಮಗು ಆಗ್ಲಿ. ಬೇಕಾದ್ರೆ ಇವ್ಳ ಪಾದಸೇವೆ ಮಾಡ್ಕಂಡಿರ್ತಾಳೆ. ಇಲ್ದೇ ಇದ್ರೆ ಹಳೇಸೀರೆ ಇರುಕ್ಕಂಡು ಅವರಪ್ಪನ ಮನೆಗೆ ಹೋಗ್ತಾಳೆ.’

ತಕ್ಷಣ ಉಂಟು ಇಲ್ಲ ಎಂದು ಏನು ಹೇಳುವುದಕ್ಕೂ ನಂಜಮ್ಮನಿಗೆ ತಿಳಿಯಲಿಲ್ಲ. ಅವಳ ಮನಸ್ಸಿನಲ್ಲಿ ಗಡಿಬಿಡಿ ಎದ್ದಿತು. ಅಕ್ಕಮ್ಮ ಅಂದಳು: ‘ನೀನೇ ನೋಡಿದೀಯಲ್ಲ, ಊರಲ್ಲಿ ಉಣ್ಣುಕ್ಕೆ ತಿನ್ನೂಕೆ ಏನು ಕಮ್ಮಿ? ಕಲ್ಲೇಶ ಕಷ್ಟಪಟ್ಟು ಜಮೀನು ಮಾಡುಸ್ತಾನೆ. ಅಂಥಾ ಚನ್ನಾದ ಮನೆ. ಕಂಠಿ ಮೂರು ಸಾವಿರ ತಂದಿದಾನೆ. ಬೇಕು ಅಂದ್ರೆ ಅದರಲ್ಲಿ ಬರೀ ಚಿನ್ನ ತಂದು ಇವ್ಳಿಗೆ ಹಾಕ್ತಾನೆ. ಇತ್ಲಾಗೆ ಮೊಮ್ಮಗಳಾದಳು. ಅತ್ಲಾಗೆ ಸೊಸೆಯಾದಳು. ಕಲ್ಲೇಶನ ಹೊಟ್ಟೇಲಿ ಮಕ್ಕಳಾಗದೆ ಸತ್ರೆ ನಂಗಾದ್ರೂ ಹ್ಯಾಗೆ ಸದ್ಗತಿಯಾಗುತ್ತೆ? ಏನೋ ನಿಮ್ಮಮ್ಮನ ಹೊಟ್ಟೇಲಿ ಹುಟ್ಟಿದ್ದುಕ್ಕೆ ನೀವಿಬ್ರು ಉಳ್ಕಂಡ್ರಿ. ನಾನು ಸಾಕಿದೆ. ಈಗ ನಾನೇ ಬಂದು ಕೇಳ್ತಿದೀನಿ. ಅವ್ನೇನು ದೂರವೇನಲ್ಲ ಕೊಟ್ಟುಬಿಡು.’

ನಂಜಮ್ಮನ ಕರುಳೇನೋ ಕೊರೆಯಿತು. ಆದರೆ ಮನಸ್ಸು ಒಳಗೇ ಇದನ್ನು ಬೇಡವೆನ್ನುತ್ತಿತ್ತು. ಅವಳು ಯಾವ ಮಾತನ್ನೂ ಆಡಲಿಲ್ಲ. ಆ ದಿನ ರಾತ್ರಿ ಊಟವಾದ ಮೇಲೆ ಕಂಠೀಜೋಯಿಸರೇ ಮಗಳೊಡನೆ ಮಾತು ತೆಗೆದಾಗ ಚೆನ್ನಿಗರಾಯರೂ ಇದ್ದರು. ಅವರಿಗೆ ಮಾವನವರೆಂದರೆ ಮೊದಲಿನಿಂದಲೂ ಭಯ. ತಮಗೆ ಶಿವಲಿಂಗನಿಂದ ಶ್ಯಾನುಭೋಗಿಕೆ ಕೊಡಿಸಿದವರೇ ಅವರು. ಅಕ್ಕಮ್ಮ ಮೊಮ್ಮಗಳು ಮರಿಮಗಳಿಗೆ ಹೇಳುವುದನ್ನೆಲ್ಲ ಅವರೂ ಈಗ ಮಾತನಾಡಿ, ಅಳಿಯನ ಕಡೆ ತಿರುಗಿ ಎಂದರು: ‘ಏನಂತೀಯಾ ಚಿನ್ನಯ್ಯ? ಊರಿನಲ್ಲಿ ಅಷ್ಟೊಂದು ಜಮೀನು, ಮನೆ, ಮೇಲೆ ಮೂರುಸಾವಿರ ರೂಪಾಯಿ ನಿನ್ನ ಮಗಳಿಗೇ ಸೇರುತ್ತೆ. ಈಗ ಇನ್ನೊಂದು ಕಡೆ ಗಂಡು ಹುಡುಕಿ ನೀನು ಎಲ್ಲಿ ಅಂತ ಮದುವೆ ಮಾಡ್ತೀಯಾ? ಸುಮ್ಮನೆ ಹೂಂ ಅಂದುಬಿಡು.’
ಚೆನ್ನಿಗರಾಯರು ಏಕೆ ಬೇಡವೆಂದಾರು? ‘ಆಗ್‌ಭೌದು. ಈ ಮುಂ….’ಎಂದವರು ನಾಲಿಗೆಯನ್ನು ಬಿಗಿ ಹಿಡಿದುಕೊಂಡು ಹೇಳಿದರು: ‘ಇ ಇ ಇವ್ಳಿಗೆ ನೀವೇ ಹೇಳಿ. ನಂದೇನೂ ಇಲ್ಲ.’
‘ನಿನ್ನ ಗಂಡನೂ ಒಪ್ಕಂಡಿದಾನೆ. ಏನಂತೀಯಾ ನಂಜಾ?’
ನಂಜಮ್ಮನಿಗೆ ಈಗಲೂ ಏನು ಹೇಳಬೇಕೆಂಬುದು ತಿಳಿಯಲಿಲ್ಲ. ‘ಇರ್‍ಲಿ, ನಾಳೆ ಯೋಚನೆ ಮಾಡಿ ಮಾತಾಡಾಣ’-ಎಂದಳು.
‘ಯೋಚನೆ ಮಾಡೂದೇನು ಅದರಲ್ಲಿ? ನಾವೆಲ್ಲ ಒಪ್ಪಿದಮ್ಯಾಲೆ ನಿಶ್ಚಯವಾದ ಹಾಗೇ. ಊರಿಗೆ ಹೋಗಿ ಎಲ್ಲಾ ಮಾಡುಸ್ತೀನಿ. ಇನ್ನು ಎಂಟು ದಿನದಲ್ಲಿ ಮದುವೆ ಮುಗಿಸ್ಬಿಡ್ತೀನಿ’-ಕಂಠೀಜೋಯಿಸರು ತೀರ್ಮಾನವನ್ನೇ ಹೇಳಿಬಿಟ್ಟರು.
‘ನೀವು ಹ್ಯಾಗೂ ಒಂದು ನಾಕು ದಿನ ಇರ್ತೀರಲ್ಲ, ಮಾತಾಡಾಣ.’
‘ಈಗ ಇದುಕ್ಕೆ ಬಿಡುವೇ ಇಲ್ಲ. ಊರಿಗೆ ಹೋಗಿ ಮದುವೆ ಸಾಮಾನು ಗೀಮಾನು ಮಾಡಬೇಕು. ನೀನು ಒಂದು ಕಾಸು ಖರ್ಚೂ ಇಟ್ಟುಕೋಬ್ಯಾಡ’-ಅಕ್ಕಮ್ಮ ಎಂದಳು.

ಅಕ್ಕಮ್ಮನಿಗೆ ಉಪ್ಪಿಟ್ಟಿನ ಫಲಾರ ಮತ್ತು ಉಳಿದವರಿಗೆ ಊಟವಾದ ಮೆಲೆ ಎಲ್ಲರೂ ಮಲಗಿದರು. ಬಂದಿದ್ದ ಇಬ್ಬರಿಗೂ ಬೇಗ ನಿದ್ದೆ ಬಂದುಬಿಟ್ಟಿತು. ಚೆನ್ನಿಗರಾಯರು ಗೊರಕೆ ಹೊಡೆಯುತ್ತಿದ್ದರು. ಹುಡುಗರೂ ಮಲಗಿಕೊಂಡರು. ಅಕ್ಕಮ್ಮನ ಹತ್ತಿರ ಮಲಗಿದ ನಂಜುವಿನ ಕಣ್ಣು ಮಾತ್ರ ಮುಚ್ಚಲಿಲ್ಲ. ಇದ್ದಕ್ಕಿದ್ದಹಾಗೆಯೇ ಬಂದ ಈ ಮಾತನ್ನು ಒಪ್ಪಿಕೊಳ್ಳುವ ಅಥವಾ ಬಿಡುವ ಮೊದಲೇ ಅವರು ತೀರ್ಮಾನವೇ ಮಾಡಿಬಿಟ್ಟಿದ್ದಾರೆ. ಅವರು ಹೇಳುವ ಹಾಗೆ ನಾಗಲಾಪುರದಲ್ಲಿ ಉಣ್ಣುವುದಕ್ಕೆ ತಿನ್ನುವುದಕ್ಕೆ ಯಾವ ತೊಂದರೆಯೂ ಇಲ್ಲ. ಕರಾವಿಲ್ಲದೆ ಅವರು ಎಂದೂ ಊಟ ಮಾಡುವುದಿಲ್ಲ. ವರ್ಷಕ್ಕಾಗಿ ಉಳಿಯುವಷ್ಟು ರಾಗಿ ಬತ್ತ ಭರಣ ಬೆಳೆಯುತ್ತಾರೆ. ಮೇಲೆ ಮೂರು ಸಾವಿರ ಇವಳಿಗೇ ಬರುತ್ತೆ. ಮೂರು ಸಾವಿರ ಎಂದರೆ ಕಮ್ಮಿ ಹಣವಲ್ಲ. ಅಷ್ಟು ರೂಪಾಯಿಯನ್ನೂ ಒಟ್ಟಿಗೆ ತಾವು ಕೈಲಿ ಸಹ ಮುಟ್ಟಿ ಕಂಡಿಲ್ಲ. ನಮ್ಮ ಹುಡುಗಿ ಇಲ್ಲಿ ಹುಟ್ಟಿದ ಮೇಲೆ ಇದುವರೆಗೂ ಅನುಭವಿಸಿರುವ ಸುಖವಾದರೂ ಏನು? ಹೊಟ್ಟೆಗಾದರೆ ಬಟ್ಟೆಗಿಲ್ಲ, ಬಟ್ಟೆಗಾದರೆ ಹೊಟ್ಟೆಗಿಲ್ಲ-ಎಂಬ ಯೋಚನೆ ಸ್ವಲ್ಪ ಹೊತ್ತು ಅವಳ ಮನಸ್ಸಿನಲ್ಲಿತ್ತು. ಆದರೆ ಈ ಮಹಾಮಾರಿ ಮೊದಲ ಹೆಂಡತಿ ಇರುವಾಗ, ಅದೂ ತನ್ನ ಅಣ್ಣನಿಗೇ, ಹೆಣ್ಣು ಕೊಡಬಹುದೇ?-ಎಂಬ ಪ್ರಶ್ನೆ ತಾನಾಗಿಯೇ ಸುಳಿಯಿತು. ಅಣ್ಣಯ್ಯ ತನಗಿಂತ ಏಳು ವರ್ಷಕ್ಕೆ ದೊಡ್ಡವನು ಅಂದರೆ ಪಾರ್ವತಿಗೂ ಅವನಿಗೂ ಇಪ್ಪತ್ತೆರಡು ವರ್ಷ ವ್ಯತ್ಯಾಸ. ಮೂವತ್ತು ವರ್ಷ ವ್ಯತ್ಯಾಸವಿದ್ದು ಎರಡನೇ, ಮೂರನೇ, ಮದುವೆ ಮಾಡಿಕೊಂಡವರನ್ನು ಅವಳು ಕಾಣದೆ ಇರಲಿಲ್ಲ. ಮಕ್ಕಳಿಲ್ಲದ್ದಕ್ಕೆ ಹಿರಿಯಳಿರುವಾಗಲೂ ಕಿರಿಯ ಒಬ್ಬಳನ್ನು ತರುವುದೂ ಅಪರೂಪವಲ್ಲ. ಆದರೆ ಅಣ್ಣಯ್ಯನಿಗೆ ಮಕ್ಕಳು ಯಾಕೆ ಆಗಿಲ್ಲ? ಅವನ ಹೊರಚಾಳಿಯಿಂದಲೇ ಆಗಿಲ್ಲವೋ, ಅಥವಾ ಅವಳೇ ಗೊಡ್ಡು ಹೆಂಗಸೋ? ಅವಳೇನೋ ಕಿರಾತಕ ಜಾತಿಯ ಹೆಂಗಸು. ಆದರೆ ಇವನಿಗೆ ಕೊಟ್ಟರೆ ನನ್ನ ಮಗು ಸುಖವಾಗಿರುತ್ತದೆಯೇ?

ಈ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ನಾಳೆ ಬೆಳಿಗ್ಗೆ ಎದ್ದ ತಕ್ಷಣ ಅಕ್ಕಮ್ಮ, ಅಪ್ಪ, ಇಬ್ಬರಿಗೂ ಅವಳು ಸ್ಪಷ್ಟವಾಗಿ ಹೇಳಬೇಕು. ಇಂಥ ಪರಿಸ್ಥಿತಿಯಲ್ಲಿ ಯಾರ ಜೊತೆ ಕಷ್ಟ ಸುಖ ವಿಚಾರ ಮಾಡಿ ಆಲೋಚನೆ ಮಾಡುವುದು? ಮನೆ ತುಂಬ ದಿನಸಿ ಧಾನ್ಯ, ಮೇಲೆ ಮೂರು ಸಾವಿರ ರೂಪಾಯಿ ಅಂದ ತಕ್ಷಣ ಹುಡುಗಿಯ ಅಪ್ಪ ಅನ್ನಿಸಿಕೊಂಡ ಪ್ರಾಣಿ ಬಾಯಿ ಬಿಟ್ಟೇಬಿಟ್ಟಿತು. ಮಕ್ಕಳ ಮದುವೆಗೆ ತಂದೆ ತಾಯಿ ಇಬ್ಬರೂ ಕೂಡಿ ಆಲೋಚಿಸಬೇಕು. ಇಲ್ಲದ ಈ ಭಾಗ್ಯವನ್ನು ಬಯಸಿ ಸುಮ್ಮಸುಮ್ಮನೆ ಮನಸ್ಸಿಗೆ ವ್ಯಥೆ ಮಾಡಿಕೊಳ್ಳುವುದು ಯಾಕೆ? ಇದ್ದಕ್ಕಿದ್ದಹಾಗೆಯೇ ಮಾದೇವಯ್ಯನವರ ನೆನಪಾಯಿತು. ಅವರನ್ನು ಕೇಳಿ ನಿಶ್ಚಯ ಮಾಡುವುದೇ ವಿವೇಕವೆಂದು ಯೋಚಿಸಿ ಅವಳು, ಮೆಲ್ಲನೆ ಮಲಗಿದ್ದಲ್ಲಿಂದ ಎದ್ದು ಕತ್ತಲೆಯಲ್ಲಿಯೇ ಹೊರಗೆ ಬಂದಳು. ಶಬ್ಧವಾಗದಂತೆ ಬಾಗಿಲು ಹಾಕಿಕೊಳ್ಳುತ್ತಿರುವಾಗ ಅವಳ ಹಿಂದೆಯೇ ಪಾರ್ವತಿಯೂ ಬಂದುದನ್ನು ಕಂಡ ಅವಳಿಗೆ ಹೆಚ್ಚು ಆಶ್ಚರ್ಯವೆನಿಸಲಿಲ್ಲ. ಶಬ್ದ ಮಾಡಬೇಡವೆಂದು ಅವಳಿಗೆ ಸನ್ನೆಮಾಡಿ, ಮೆಲ್ಲಗೆ ಬಾಗಿಲು ಮುಚ್ಚಿ ಮುಂದೆ ನಡೆದಳು. ಹಿಂದೆಯೇ ಪಾರ್ವತಿ ಬಂದಳು.
ಗುಡಿಗೆ ಬಂದು ಅಯ್ಯನವರನ್ನು ಎಬ್ಬಿಸಿ, ಅವರು ದೀಪ ಹಚ್ಚಿದಾಗ ಪಾರ್ವತಿಯ ಕಣ್ಣಿನಲ್ಲಿ ನೀರು ಹರಿಯುತ್ತಿದ್ದುದು ಅದರ ಬೆಳಕಿನಲ್ಲಿ ಕಂಡಿತು. ಅಯ್ಯನವರೇ ಅಂದರು: ‘ಏನವ್ವಾ, ಸ್ವಾದರಮಾವನ್ನ ಮದುವೆಯಾಗಾದು ವಲ್ಲೆ ಅಂತ ಅಳ್ತಿದೀಯಾ?’
‘ನಿಮಗೆ ಇದೆಲ್ಲ ಹ್ಯಾಗೆ ಗೊತ್ತು ಅಯ್ನೋರೇ?’-ನಂಜಮ್ಮ ಕೇಳಿದಳು.
‘ಸಂಜೀನಾಗ ನಿಮ್ಮ ಅಪ್ಪಾಜಿ ಬಂದಿತ್ತು. ನನ್ನ ಕುಟ್ಟೆ ಎಲ್ಲಾನೂ ಹೇಳ್ತು. ನೀ ಏನಂತ ಯೋಚ್ನೆ ಮಾಡೀಯಾ?’
‘ನಂಗೆ ಏನೂ ತಿಳಿಯಲಿಲ್ಲ ಅಂತ ಇಲ್ಲಿಗೆ ಬಂದೆ.’
ಅಷ್ಟರಲ್ಲಿ ರಾಮಣ್ಣ ಅಲ್ಲಿಗೆ ಬಂದು ಸೇರಿಕೊಂಡ. ‘ಮನೇನ ಹಾಗೇ ಬಿಟ್ಟು ನೀನ್ಯಾಕೆ ಬಂದೆ?-ಎಂದು ಅಮ್ಮ ಕೇಳಿದಳು.
‘ಹೊರಗಡೆಯಿಂದ ಮೆಲ್ಲಗೆ ಬೀಗ ಹಾಕ್ಕಂಡು ಬಂದಿದೀನಿ. ನನಗೂ ನಿದ್ದೆ ಬಂದಿರಲಿಲ್ಲ. ನೀವು ಇಲ್ಲಿಗೇ ಬಂದಿದೀರಾ ಅಂತ ಗೊತ್ತಾಯ್ತು’-ಎಂದು ಅವನು ಬೀಗದ ಕೈ ತೋರಿಸಿದ.
‘ಅಕ್ಕಯ್ಯನ ಮದುವೆಗೆ ಏನು ಹೇಳ್ತೀಯಪ್ಪಾ?’-ಅಯ್ಯನವರು ಕೇಳಿದರು.
‘ಬ್ಯಾಡ ಕಣ್ರೀ ಅಯ್ನೋರೇ, ಕಲ್ಲೇಶಮಾವ ನರಸೀ ಮನೆಗೆ….’-ಎಂದು ಹೇಳುತ್ತಿದ್ದವನು, ಆ ಮಾತನ್ನು ದೊಡ್ಡವರೆದುರು ಆಡಬಾರದೆಂದು ತಕ್ಷಣ ನಿಲ್ಲಿಸಿ, ‘ಅವ್ನಿಗೆ ಕೊಡೂದು ಬ್ಯಾಡ ಕಣ್ರೀ’ ಎಂದ.
ಅಯ್ಯನವರೆಂದರು: ‘ನೋಡವ್ವ, ನಿನ್ನ ಮನಸ್ನಲ್ಲಿರೋದ್ನೇ ನಾನೂ ಅಂತೀನಿ. ಅಣ್ಣ ಅಂತ ಹೆಣ್ಣು ಕೊಡಬ್ಯಾಡ. ನನ್ನ ಕೇಳಿದ್ರೆ ಈ ಸುತ್ನಲ್ಲೇ ಯಾರೂ ಬ್ಯಾಡ. ವಿವೇಕವಾಗಿರೋರು ಯಾರವ್ರೆ? ಸರ್ಕಾರಿ ಕೆಲ್ಸದಾಗಿರೋರೇ ವೈನವಾದ ಗಂಡುಗಳು. ಏನೇ ಕಷ್ಟ ಬಿದ್ರೂ ಒಬ್ರು ಇಸ್ಕೂಲು ಮೇಷ್ಟ್ರಂಥೋರಿಗೆ ಕೊಡು. ಮರ್ಯಾದೆಯಾಗಿರ್ತಾರೆ. ಉಳಿದೋರೆಲ್ಲ ತಲೆಹೋಕಗಳು.’
ಪಾರ್ವತಿಯ ಮನಸ್ಸಿನಲ್ಲಿದ್ದುದನ್ನೆ ಅಯ್ಯನವರು ಹೇಳಿದರು. ಅವರ ಮಾತು ಸಾಧುವಾದುದೆಂದು ನಂಜಮ್ಮನಿಗೆ ತೋರಿತು. ‘ಆದರೆ’-ಅವಳು ಧ್ವನಿ ತಗ್ಗಿಸಿ ಹೇಳಿದಳು. ‘ಹುಡುಗಿ ವಯಸ್ಸು ನೋಡಿ. ದೊಡ್ಡೋಳಾಗಿಬಿಟ್ರೆ ಮುಂದೆ ಗತಿ?’
‘ಈಗ ದೊಡ್ಡ ಊರುಗಳಲ್ಲಿ ಅದೆಲ್ಲ ಇಲ್ವಂತೆ. ಅಂತಾ ಊರಲ್ಲೇ ಯಾರಿಗಾದ್ರೂ ನೋಡಿ ಕೊಡಿ. ಈಗೇನು, ಹ್ಯಂಗೂ ಸರ್ಕಾರೀ ದಿನಸಿ ಲೆಕ್ಕ ಕೈಯಾಗೈತೆ. ನಿಮ್ಮ ಶ್ಯಾನುಭೋಕಿ ಹಳ್ಳೀಲಿ ಚಂದಾ ಎತ್ತಿದ್ರೆ ಒಂದೈನೂರು ಆರುನೂರು ಏನೂ ಕಷ್ಟದ ಗಂಟಲ್ಲ.
‘ದೊಡ್ಡ ಊರ್ನಲ್ಲಿ ತುಂಬ ವರದಕ್ಷಿಣೆ ಕೇಳ್ತಾರಂತೆ ಕಣ್ರೀ ಅಯ್ನೋರೇ. ನಾನು ಹೆಣ್ಣುಮಗಳ ಮದ್ವೆ ಮಾಡಿ ಗೆಲ್ತೀನೇ ಅನ್ಸಿದೆ.’
‘ಅಮ್ಮ, ನಾನು ಹ್ಯಾಗೂ ಮುಂದ್ಲ ಕ್ಲಾಸಿನಲ್ಲಿದೀನಲ್ಲ. ಅಕ್ಕಯ್ಯಂಗೆ ಪಾಠ ಹೇಳ್ಕೊಡ್ತೀನಿ. ಅವ್ಳಿಗೂ ಲೋಯರ್ ಸೆಕೆಂಡರಿ ಪ್ರೈವೇಟ್‌ನಲ್ಲಿ ಮಾಡಿಸಿಬಿಟ್ರೆ ಸ್ಕೂಲು ಮೇಡಂ ಮಾಡಿಸ್‌ಭೌದು. ಮದುವೆಯಾಗದೆ ಇದ್ರೆ ಕತ್ತೆಬಾಲ ಕುದುರೆಜುಟ್ಟು’-ರಾಮಣ್ಣ ಎಂದ.
‘ಅದ ಆಮ್ಯಾಲೆ ನೋಡ್ಕಳಾಣ. ಬೇಕಾದ್ರೆ ಮೇಷ್ಟ್ರು ಯಂಕ್‌ಟೇಶಯ್ನೋರುನ್ನ ಒಂದು ಮಾತು ಕೇಳಿ. ಆಮ್ಯಾಲೆ ನಿಮ್ಮ ಅಪ್ಪಾಜಿಗೆ ಜವಾಬು ಹೇಳಿ.’
ಅಮ್ಮ ಹೇಳಿದಂತೆ ರಾಮಣ್ಣ ವೆಂಕಟೇಶಯ್ಯನವರನ್ನು ಕರೆತರಲು ಹೋದ. ‘ಯಾರನ್ನೂ ಎಬ್ಬಿಸಕೂಡದು. ಯಾರಿಗೂ ಗೊತ್ತಾಗಬಾರದು’-ಎಂದು ಅಮ್ಮ ಎಚ್ಚರ ಹೇಳಿದಳು. ಸ್ವಲ್ಪ ಹೊತ್ತಿನಲ್ಲಿ ಮೇಷ್ಟರು ಬಂದರು. ಪಾರ್ವತಿ ಎದ್ದು ಹೋಗಿ ಕಂಬದ ಮರೆಯಲ್ಲಿ ಕುಳಿತಳು. ಇರುವ ಸಂಗತಿಯನ್ನೆಲ್ಲ ನಂಜಮ್ಮ ಬಿಡಿಸಿ ಹೇಳಿದಮೇಲೆ ಮೇಷ್ಟರು ಎಂದರು. ‘ಅಮ್ಮಾ, ಅರಸೀಕೆರೆ ಬಾಣಾವರ ಆ ಕಡೇಲೆಲ್ಲ ಸಣ್ಣ ಊರುಗಳಲ್ಲೇ ಹೆಣ್ಣುಮಕ್ಳು ಮದುವೆಯಾಗೋಕೆ ಮುಂಚೆಯೇ ಮೈನೆರೆದಿರ್ತಾರೆ. ಯಾರೂ ಬಾಯಿ ಬಿಟ್ಟು ಮಾತ್ರ ಹೇಳುಲ್ಲ. ಅದುಕ್ಕೆ ನೀವು ಹೆದುರ್ಕಾಬ್ಯಾಡಿ. ನಾನು ಬೇಕಾದ್ರೆ ಹುಡುಕಿ ಗಂಡು ಗೊತ್ತುಮಾಡ್ತೀನಿ. ಪ್ರೈಮರಿ ಸ್ಕೂಲು ಮೇಷ್ಟ್ರು ಅಂದ್ರೆ ಸಂಬಳ ಕಮ್ಮಿ. ಅಂಥೋರು ಸಿಕ್ತಾರೆ. ನೀವು ದುಡ್ಡು ಜೊತೆ ಮಾಡ್ಕಳಿ. ಐನೂರು ಆರು ನೂರಾದ್ರೆ ಸಾಕು.’
‘ಮೇಷ್ಟ್ರೇ, ಹುಡುಗನ ಯೋಗ್ತಿ ಚೆನ್ನಾಗಿರಬೇಕು. ಅವಿವೇಕ ಇರಕೂಡದು. ಸಂಬ್ಳ ಕಮ್ಮಿಯಾದ್ರೆ ನಮ್ಮ ಹುಡುಗೀಗೆ ಎಲೆ ಹಚ್ಚೂಕೆ ಬರುಲ್ವೆ? ಮನೇಲಿ ಕೂತು ಅದ್ರಲ್ಲೇ ತಿಂಗ್ಳಿಗೆ ಏನಿಲ್ಲ ಅಂದ್ರೂ ಹದಿನೈದು ರೂಪಾಯಿ ದುಡೀತಾಳೆ.’
‘ಅದು ನಂಗೆ ಗೊತ್ತಿಲ್ವೆ? ಪಾರ್ವತಮ್ಮನ ಕೈಹಿಡೀಬೇಕಾದ್ರೆ ಯಾವನಾದ್ರೂ ಪುಣ್ಯ ಮಾಡಿರ್‍ಬೇಕು.’
ಅಂತೂ ತೌರಿಗೆ ಹೆಣ್ಣನ್ನು ಹಿಂತಿರುಗಿ ಕೊಡಕೂಡದೆಂದು ನಿಶ್ಚಯವಾಯಿತು. “ನಾನು ವಲ್ಲೆ ಅಂತ ಹುಡುಗಿ ಹಟಹಿಡಿದುಬಿಡ್ಲಿ. ‘ಹುಡುಗಿಯೇ ಹೀಗಂತಾಳೆ ನಾನೇನು ಮಾಡ್ಲಿ? ಋಣಾನುಬಂಧವಿಲ್ಲ’-ಅಂತ ನೀವು ಜಾರಿಕಂಡುಬಿಡಿ. ಸುಮ್‌ಸುಮ್ನೆ ವರಟಾಗಿ ಹೆಣ್ಣು ಕೊಡುಲ್ಲ ಅಂತ ಅನ್ಲೇಬ್ಯಾಡಿ”-ಎಂದು ಮೇಷ್ಟರೇ ಹೇಳಿಕೊಟ್ಟರು.
ಮೂವರೂ ಬಂದು ಶಬ್ಧವಾಗದಂತೆ ಮನೆಯ ಬಾಗಿಲು ತೆಗೆದು ಮಲಗಿದರು.
ಬೆಳಿಗ್ಗೆ ಎದ್ದ ತಕ್ಷಣ, ತಾವು ಹೊರಡಬೇಕೆಂದು ಗಡಿಬಿಡಿ ಮಾಡಿದ ಕಂಠೀಜೋಯಿಸರು ಕೇಳಿದರು: ‘ನಂಜಾ, ಇನ್ನು ಎಂಟು ದಿನಕ್ಕೆ ಒಂದು ಲಗ್ನ ಇದೆ. ಮದುವೆ ಇಲ್ಲಿ ನಿನ್ನ ಮನ್ಲಿ ಮಾಡಾಣೋ ಅಥವಾ ಅಲ್ಲೇ ಆಗ್ಲೋ?’
‘ಅಪ್ಪಾ, ಮದುವೆಯಾಗೋ ಹುಡುಗೀನ ಒಂದು ಮಾತು ಕೇಳಿ ಏನಾದ್ರೂ ತೀರ್ಮಾನ ಮಾಡಾಣ. ನಾವು ನಾವೇ ಮಾತಾಡ್ಕಂಡ್ರೆ ಹ್ಯಾಗೆ?’
‘ಅವ್ಳುನ್ನೇನ್ ಕೇಳಾದು? ನಿನ್ನ ಮದುವೇಲಿ ನಾನು ನಿನ್ನ ಕೇಳಿದ್ನೆ? ಲೇ ಪುಟ್ಟಾ, ಬಾರೇ ಇಲ್ಲಿ’-ಎಂದು ಮೊಮ್ಮಗಳನ್ನು ಕರೆದು ಕಂಠೀಜೋಯಿಸರು ಕೇಳಿದರು: ‘ಏನಂತೀಯೇ ನೀನು?’
ಪಾರ್ವತಿ ತಕ್ಷಣ ಮಾತನಾಡಲಿಲ್ಲ. ಅಜ್ಜಯ್ಯನೇ ಇನ್ನೊಂದು ಸಲ ಕೇಳಿದ ಮೇಲೆ, ‘ನಂಗೆ ಬ್ಯಾಡ’ ಎಂದಳು.
‘ಯಾಕೆ ಬ್ಯಾಡ?’
‘ನಂಗೆ ಇಷ್ಟವಿಲ್ಲ, ಬ್ಯಾಡಕಣಜ್ಜಯ್ಯ’-ಎಂದು ಹೇಳಿ ಅವಳು ಅಡಿಗೆಮನೆಗೆ ಹೊರಟುಹೋದಳು.
‘ಏನೇ ನಂಜಾ, ಇವ್ಳು ಹೀಗಂತಾಳೆ?’
‘ಅವ್ಳಿಗೆ ಇಷ್ಟವಿಲ್ಲದಮ್ಯಾಲೆ ಬ್ಯಾಡ ಬಿಡಪ್ಪ.’
ಕಂಠೀಜೋಯಿಸರಿಗೆ ರೇಗಿತು. ತಾವೂ ಅಡಿಗೆಯಮನೆ ಒಳಗೆ ಹೋಗಿ ಪಾರ್ವತಿಯ ಮುಂದೆ ನಿಂತು-‘ಯಾಕೆ ಬ್ಯಾಡ?’ ಎಂದು ಮತ್ತೆ ಕೇಳಿದರು.
‘ನಂಗೆ ಇಷ್ಟವಿಲ್ಲ. ನನ್ನ ಬಲವಂತ ಮಾಡಕೂಡ್ದು’-ಅಂದದ್ದೇ ತಡ, ತೆಗೆದು ಅವಳ ಕಪಾಳಕ್ಕೆ ಒಂದು ಬಾರಿಸಿಬಿಟ್ಟರು. ಪಾರ್ವತಿಯನ್ನು ಅವಳ ಅಮ್ಮನೇ ಒಂದು ದಿನವೂ ಹೊಡೆದಿರಲಿಲ್ಲ. ಶಬ್ದ ಕೇಳಿದ ತಕ್ಷಣ ನಂಜಮ್ಮ ಒಳಗೆ ಬಂದು ಹೇಳಿದಳು. ‘ಅಪ್ಪಾ, ಆ ಹುಡುಗೀನ ಯಾಕೆ ಹೊಡೀತೀಯಾ? ಮನಸ್ನಲ್ಲಿ ಬಂದ ಹಾಗೆ ಎಲ್ಲಾ ಆಗಿಬಿಡಬೇಕು ಅಂತ ನಿನ್ನ ಹಟ. ನನ್ನ ಮದುವೆನಾದ್ರೂ ಸ್ವಲ್ಪ ಹಿಂದುಮುಂದು ವಿಚಾರಿಸಿ ಮಾಡಿದೆಯಾ? ಅಣ್ಣಯ್ಯನ ಮದುವೇನ ಸರಿಯಾಗಿ ವಿಚಾರಿಸಿ ಮಾಡಿದೆಯಾ? ಮಕ್ಳು ಆಗೂದು ಬಿಡೂದು ಹಣೇಬರಹದಲ್ಲಿರಬೇಕು. ಆದರೆ ಹುಡುಗೀ ಗುಣ ಸ್ವಭಾವಾನ ವಿಚಾರಿಸಿ ಮಾಡಿದ್ರೆ ಅವ್ನಿಗೆ ಒಳ್ಳೇ ಹೆಂಡ್ತಿಯಾದ್ರೂ ಸಿಕ್ತಿದ್ಲು.’
‘ಈಗ ನಿಂಗೇನಾಗಿದೆ?’
‘ಇನ್ನೇನಾಗಬೇಕು? ಇದ್ದಬಿದ್ದ ಜಮೀನೆಲ್ಲ ಕಳದು ನಿನ್ನ ಅಳಿಯ ಬೀಗಿತ್ತಿ ಸೇರ್ಕಂಡು ಸಂಸಾರ ಈ ಸ್ಥಿತಿಗೆ ತಂದ್ರು. ನಾನು ಕಷ್ಟಪಟ್ಟು ದುಡೀದೇ ಇದ್ರೆ ಮಕ್ಳು ಹೊಟ್ಟೇಗಿಲ್ಲದೆ ಸಾಯ್ತಿದ್ವು.’
‘ಅದುಕ್ಕೆಯೇ ತಿನ್ನುಕ್ಕೆ ಉಣ್ಣುಕ್ಕೆ ಇದೆ ಅಂತಲೇ ಕಲ್ಲೇಶನಿಗೆ ಕೊಡು ಅಂದುದ್ದು.’
‘ನೀವು ಯಾರು ಏನಂದ್ರೂ ಹುಡುಗಿಯೇ ಬ್ಯಾಡ ಅಂದ್ಮೇಲೆ ನಾನು ಕೊಡುಲ್ಲ. ಅವ್ನಿಗೆ ಮಾಡ್ಲೇ ಬೇಕು ಅಂದ್ರೆ ಇನ್ನೆಲ್ಲಾದ್ರೂ ಹೆಣ್ಣು ಹುಡುಕು ಹೋಗು.’
‘ಹಾಗಾದ್ರೆ ನೀನು ಮಗಳಲ್ಲ, ನಾನು ಅಪ್ಪನಲ್ಲ. ಬಾಂಚೋತ್ ಲೌಡಿ’-ಎನ್ನುತ್ತಾ ಹೊರಗೆ ಬಂದ ಕಂಠೀಜೋಯಿಸರು, ‘ನಡಿ ಅಕ್ಕಮ್ಮ, ಈ ಮಾದಿಗಿತ್ತಿ ಮನ್ಲಿ ಒಂದು ಹನಿ ನೀರೂ ಕುಡೀಬಾರ್‍ದು’-ಎಂದು ತಮ್ಮ ಬಟ್ಟೆಗಳನ್ನು ಜೋಡಿಸಿಕೊಂಡು ಹೋಗಿ, ಮನೆಯ ಮುಂದೆ ನಿಂತಿದ್ದ ಗಾಡಿಯ ಮೇಲೆ ಕುಳಿತರು. ತಾವು ಬಂದ ಕಾರ್ಯವಾಗಲಿಲ್ಲವೆಂದು ಅಕ್ಕಮ್ಮನಿಗೂ ಸಿಟ್ಟು ಬಂದಿತ್ತು. ಅವಳೂ ತನ್ನ ಸೀರೆಯ ಗಂಟು ಕಟ್ಟಿಕೊಂಡು ಹೋಗಿ ಗಾಡಿಯನ್ನೇರಿದಳು. ಆಳು ಕೊರಳೆತ್ತುವ ಮುನ್ನ ನಂಜಮ್ಮನೇ ಹೊರಗೆ ಬಂದು, ‘ಋಣಾನುಬಂಧವಿಲ್ಲ, ಆಗುಲ್ಲ. ಅದಕ್ಕ್ಯಾಕೆ ಸಿಟ್‌ಮಾಡ್ಕಂಡು ಹೋಗ್ತೀರ? ಇವತ್ತು ಇದ್ದು ಹೋದ್ರೆ ಆಗುಲ್ವೆ?’ ಎಂದದ್ದಕ್ಕೆ ಅಕ್ಕಮ್ಮ, ‘ನಿನ್ನ ಸಾಕಿ ಬೆಳೆಸಿ ಬಾಣಂತನ ಮಾಡಿದ್ದುಕ್ಕೆ ನಂಗೆ ಒಳ್ಳೇ ಮರ್ಯಾದೆ ಕೊಟ್ಟೆ’ ಎಂದಳು. ಕಂಠೀಜೋಯಿಸರು-‘ನನ್ನ ಮಾತಾಡುಸ್ಬೇಡ. ನೀನು ಮಗಳಲ್ಲ ನಾನು ಅಪ್ಪನಲ್ಲ ಅಂತ ಹೇಳ್ಲಿಲ್ವೇನೆ?’ ಎಂದುಬಿಟ್ಟರು. ನಂಜಮ್ಮ ಮತ್ತೆ ಮಾತನಾಡಲಿಲ್ಲ.

– ೪-

ಎಂಟು ದಿನ ಕಳೆದಿತ್ತು. ಒಂದು ಇಳಿಮಧ್ಯಾಹ್ನ ನಂಜಮ್ಮ, ಪಾರ್ವತಿ, ಇಬ್ಬರೂ ಜೋಡಿಯಲ್ಲಿ ಒಂದೇ ಗೂಟ ಹಿಡಿದು ರಾಗಿ ಬೀಸುತ್ತಾ ಕುಳಿತಿದ್ದರು. ಮನೆಯಲ್ಲಿ ಮತ್ತೆ ಯಾರೂ ಇರಲಿಲ್ಲ. ಯಾರೋ ಒಳಗೆ ಬಂದ ಹಾಗಾಯಿತು. ನಂಜಮ್ಮ ಕತ್ತು ತಿರುಗಿಸಿ ನೋಡುತ್ತಾಳೆ: ನರಸಿ. ನರಸಿ ಇದುವರೆಗೆ ಒಂದು ದಿನವೂ ಈ ಮನೆಗೆ ಬಂದಿಲ್ಲ. ಅವಳ ಅಂಗಡಿಯ ಮುಂದೆ ಹಾಯ್ದು ಹೋಗುವಾಗಲೂ ನಂಜಮ್ಮ ತಾನಾಗಿಯೇ ಅವಳನ್ನು ಮಾತನಾಡಿಸುತ್ತಿರಲಿಲ್ಲ. ಅವಳಾಗಿಯೇ, ‘ಏನ್ರವ್ವಾ, ಕುರುಬರಳ್ಳೀಗ್ ಹ್ವಂಟ್ರಾ?’ ಎಂದರೆ ‘ಹೂಂ’ ಎನ್ನುತ್ತಿದ್ದುದೆಷ್ಟೋ ಅಷ್ಟೇ. ಈಗ ಅವಳೇ ಬಂದಿದ್ದಾಳೆ. ಮನೆಗೆ ಬಂದವಳನ್ನು ಮಾತನಾಡಿಸದೆ ಇರಬಾರದು. ಇಷ್ಟಕ್ಕೂ ನರಸಿಗೂ ತನಗೂ ಜಗಳವೇನೂ ಇಲ್ಲ. ಆದರೆ ಅವಳ ನಡತೆ, ವಿಶ್ವಾಸ ಮಾಡುವಂಥದಲ್ಲ.
‘ಕೂತ್ಕಳಮ್ಮ’-ಎಂದು ನಂಜಮ್ಮ ಹೇಳಿದಮೇಲೆ ನರಸಿ ಕಂಬವನ್ನೊರಗಿ ಕೂತಳು. ಪಾರ್ವತಿ ಮೇಲೆ ಎದ್ದು ಅಡಿಗೆ ಮನೆಗೆ ಹೋಗಿಬಿಟ್ಟಳು. ಯಾವುದೋ ಮುಖ್ಯ ವಿಷಯವಿರಬೇಕು, ಇಲ್ಲದಿದ್ದರೆ ಅವಳು ಮನೆಗೆ ಬರುತ್ತಿರಲಿಲ್ಲ. ಎಂದು ಯೋಚಿಸಿದ ನಂಜಮ್ಮ ಕೇಳಿದಳು: ‘ಏನಮ್ಮ ಬಂದೆ?’
‘ಅವ್ವಾ, ನಿಮ್‌ಕುಟ್ಟೆ ಒಂದು ಸಮಾಚಾರ ಏಳ್ಬೇಕು ಅಂತ ಬಂದೆ. ನಿಮ್ಮ ಪಾರ್ವತವ್ವಾರುನ್ನ ನಿಮ್ಮಣ್ಣಾರಿಗೆ ಕೊಡ್ತೀರಂತೆ ನಿಜವಾ?’
‘ನಿಂಗೆ ಯಾರು ಹೇಳಿದ್ರು?’
‘ಶಿಂಗೇನಳ್ಳೀಲಿ ನಮ್ಮ ನ್ಯಂಟ್ರಿಲ್ವಾ, ಅವ್ರಿಗೆ ನಾಗಲಾಪುರದಾಗೆ ನ್ಯಂಟ್ರವ್ರೆ. ನಾಗಲಾಪುರದಾಗೆ ಹಂಗಂತ ಮಾತಾಡ್ಕಂತಿದ್ರಂತೆ.’
ಆದರೆ ಒಳವಿಷಯವನ್ನೆಲ್ಲ ಅವಳ ಕೈಲಿ ಹೇಳಲು ನಂಜಮ್ಮನಿಗೆ ಇಷ್ಟವಾಗಲಿಲ್ಲ. ‘ಅದೆಲ್ಲ ಸುಳ್ಳು ಕಣಮ್ಮ’-ಎಂದಳು.
‘ನಿಮ್ಮಯ್ಯಾರೂ ಅಜ್ಜವ್ವನೂ ಬಂದಿದ್ರಲ್ಲ, ಅದ್ಕೇ ಬಂದಿರಬೈದು ಅಂತ ನಾನು ಅರ್ತ ಮಾಡ್ಕಂಡಿದ್ದೆ. ಸುಳ್ಳೇ ಆಗ್ಲಿ. ನಾನ್ ಹಿಂಗಂದೆ ಅಂತ ಯಾರ್‌ಕುಟ್ಟೂ ಏಳ್‌ಬ್ಯಾಡಿ. ನೀವು ಅಣ್ಣಾ ತಂಗಿ ಚಂದಾಗಿದ್ರೆ ನಂಗೇನ್ ಹ್ವಟ್ಟೆಕಿಚ್ಚಾ? ಆ ಎಣ್ಮಗ ಕೊಡ್‌ಬ್ಯಾಡಿ.’
ಈ ಮಾತಿಗೆ ಏನು ಹೇಳುವುದಕ್ಕೂ ತಿಳಿಯದೆ ನಂಜಮ್ಮ ಅವಳ ಮುಖ ನೋಡಿದಳು. ನರಸಿಯೇ ಎಂದಳು: ‘ಅಂತೋರಿಗ್ ಕೊಡಾಬದ್ಲು ಬಾವಿಗೆ ನೂಕಿದ್ರೆ ಸುಖವಾಗಿ ಸಾಯ್ತದೆ.’
‘ನಮ್ಮಣ್ಣಯ್ಯ ಈಗ್ಲೂ ನಿನ್ನ ಮನ್ಗೆ ಬತ್ತಾರೇನಮ್ಮ?’
‘ಇಲ್ಲ. ಈಗ ನಾಕು ವರ್ಷದಾಗೆ ನಾನೇ ಒದ್ದು ದೂರ ಮಾಡ್ದೆ. ಸೂಳೆ ತಾವುಕ್ ಓದ್ರೂ ಆ ವಯ್ಯಂಗೆ ನೀಯತ್ತಿಲ್ಲ.’
ನಂಜಮ್ಮ ಮಾತನಾಡಲಿಲ್ಲ. ಬೆಳೆದ ಹುಡುಗಿ ಪಾರ್ವತಿ ಅಡಿಗೆಮನೆಯಲ್ಲಿದ್ದಾಳೆ. ಅವಳಿಗೆ ಕೇಳುವಂತೆ ಇಂಥಾ ಮಾತುಗಳನ್ನಾಡಬಾರದು. ಆದರೆ ಈ ಸೂಕ್ಷ್ಮ ನರಸಿಗೆ ಎಲ್ಲಿಂದ ಬರಬೇಕು? ‘ಹೋಗ್ಲಿ ಬಿಡು ನರಸಮ್ಮ , ಆ ಮಾತು ಬ್ಯಾಡ.’
‘ನಾನೇನು ಆ ವಯ್ಯನ ಮ್ಯಾಲಿನ ಸಿಟ್ಟಿಗೆ ಏಳ್ತಿಲ್ಲ ಕಣವ್ವ. ನೂರು ಜನ ಬತ್ತಾರೆ, ನೂರು ಜನ ಹೋಯ್ತಾರೆ. ನಾನು ಯಾವನ ಮ್ಯಾಲಿನ ಸಿಟ್ನೂ ಗ್ಯಾಪಕ್‌ದಾಗೆ ಮಡೀಕಳಾದಿಲ್ಲ. ಪಾರ್ವತವ್ವ ನನ್ನ ಮಗಳಿದ್ಹಾಂಗೆ. ಯಾರಾದ್ರೂ ಅಪ್ಪಂಗ್ಹುಟ್ಟಿದ ನಿಯತ್ತುಗಾರಂಗೆ ಕೊಟ್ಟಿ ಮದ್ವೆ ಮಾಡಿ. ನನ್ ತಾವ ಮನೀಕಂಡಿದ್ದು ನಡುರಾತ್ರೀಲಿ ನಂಗೆ ನಿದ್ದೆ ಬಂದಾಗ ಅಂಗ್ಡಿ ದುಡ್ಡು ಎಗರಿಸ್ಕಂಡು ಜೇಬಿಗೆ ಆಕ್ಯಬೌದಾ ಆ ವಯ್ಯ?’
ನಂಜಮ್ಮ ಈಗಲೂ ಮಾತನಾಡಲಿಲ್ಲ. ತಾನು ಬಂದ ಕೆಲಸವಾಯಿತೆಂಬಂತೆ-‘ನಾನು ಹೋಯ್ತೀನಿ ಕಣ್ರವ್ವ. ಮನಸ್ಸು ತಡೀಲಿಲ್ಲ. ಏಳ್ಹೋಗಾನಾ ಅಂತ ಬಂದೆ’ ಎಂದ ಮೇಲೆ ಎದ್ದು ನರಸಿ ಹೊರಟುಹೋದಳು.
ಅವಳು ಹೋದಮೇಲೆ ಪಾರ್ವತಿ ಹೊರಗೆ ಬಂದು ಮತ್ತೆ ಬೀಸುವ ಕಲ್ಲಿನ ಗೂಟ ಹಿಡಿದುಕೊಂಡಳು. ಒಂದೇ ಕಲ್ಲನ್ನು ಹಿಡಿದು ಬೀಸುತ್ತಿದ್ದ ತಾಯಿ ಮಗಳು, ಇಬ್ಬರ ಮನಸ್ಸೂ ಒಂದೇ ವಿಷಯವಾಗಿ ಯೋಚಿಸುತ್ತಿತ್ತು. ಈ ಮದುವೆ ಬೇಡವೆಂದು ಹೇಳಿ ಕಳಿಸಿದುದು ತುಂಬ ಒಳ್ಳೆಯದಾಯಿತೆಂದು ಇಬ್ಬರೂ ಯೋಚಿಸುತ್ತಿದ್ದರೂ ಯಾರೂ ಬಾಯಿ ಬಿಟ್ಟು ಏನೂ ಆಡಲಿಲ್ಲ.

– ೫-

ಈ ಬಾರಿ ಮಗಳ ಮದುವೆ ಮಾಡಿ ಮುಗಿಸಲೇಬೇಕೆಂದು ನಂಜಮ್ಮ ನಿಶ್ಚಯಿಸಿದಳು. ದುಡ್ಡಿನ ವ್ಯವಸ್ಥೆ ಮಾಡಿಕೊಳ್ಳದೆ ಗಂಡು ಹುಡುಕಲು ಹೊರಟು, ಅಕಸ್ಮಾತ್ ಗಂಡು ನಿಶ್ಚಯವಾಗಿ ಕೈಲಿ ಕಾಸಿಲ್ಲದೆ ಅವಮಾನವಾಗುವ ಸ್ಥಿತಿ ಬರಬಾರದೆಂಬ ಯೋಚನೆಯೂ ಬಂತು. ಈಗ ದಿನಸಿ ಲೆಕ್ಕ ಬಂದಮೇಲೆ ಕಂದಾಯದ ಮುಂಗಡ ಬರೆಸಿ ಕುರುಬರಹಳ್ಳಿಯಿಂದ ರಾಗಿ ತರುವುದು ನಿಂತಿತ್ತು. ಅಲ್ಲದೆ ಲೆಕ್ಕ ಹೆಚ್ಚು ಬರೆಯುವುದಕ್ಕೆ ಸರ್ಕಾರದವರು ಪ್ರತ್ಯೇಕವಾಗಿ ವರ್ಷಕ್ಕೆ ನೂರು ರೂಪಾಯಿ ಕೊಡುತಿದ್ದರು. ಒಟ್ಟಿನಲ್ಲಿ ಇನ್ನೂರ ಇಪ್ಪತ್ತು ರೂಪಾಯಿ ತನ್ನ ಕೈಗೆ ಬರುತ್ತದೆ ಎಂಬ ಖಾತ್ರಿ ಏನೋ ಇದೆ. ಆದರೆ ಸಾಲಾಖೈರಿನಲ್ಲಿ ಯಜಮಾನರು ತಿಪಟೂರಿಗೆ ಹೋಗಿ ಯಾರಿಗೂ ಗೊತ್ತಾಗದಂತೆ ಪೋಟಿಕೆ ಫುಡ್‌ಪೋಟಿಕೆಗಳನ್ನು ಖರ್ಚು ಹಾಕಿಸಿಕೊಂಡು ತಿಂದುಬಿಟ್ಟರೆ?- ಎಂಬ ಒಂದು ಯೋಚನೆಯೂ ಇತ್ತು. ಒಂದು ದಿನ ಗುಂಡೇಗೌಡರು ಬಂದಿದ್ದಾಗ, ಅವರೂ ಸೇರಿ ಕುರುಬರಹಳ್ಳಿಯ ಒಟ್ಟು ಆರು ಜನದ ಹೆಸರಿಗೆ, ತಾನೇ ಆ ವರ್ಷದ ಕಂದಾಯದ ರಶೀತಿಗಳನ್ನು ಬರೆದು ಅದಕ್ಕೆ ರುಜು ಮಾಡುವಂತೆ ಗಂಡನಿಗೆ ಹೇಳಿದಳು.
ಅವರು-‘ನಾನು ಮಾಡುಲ್ಲ’ ಎಂದರು.
‘ಗೌಡ್ರೇ, ಮಗಳ ಮದುವೆ ಮಾಡ್‌ಬೇಕು ಈ ದುಡ್ಡು ನಿಮ್ಮ ಹತ್ರ ಇರ್ಲಿ. ನೀವೇ ಹೇಳಿ ರುಜು ಮಾಡಿಸಿ’-ಎಂದು ನಂಜಮ್ಮ ವಿವರಿಸಿದಮೇಲೆ ಗೌಡರು ಕೇಳಿದರು: ‘ಲೇ ಚಿನ್ನಯ್ಯ, ಅದುಕ್ಕೆ ರುಜು ಹೆಟ್ತೀಯೋ ನಿಂಗೆ ಇಡ್ಕಂಡು ಗುದಿಗೆ ಮಡಗ್ಬೇಕೋ?’
‘ಅದ್ಯಾಕ್ರೀ ನೀವೂ ಅವ್ಳೂ ಸೇರ್ಕಂಡು ನಂಗೆ ಒಂದು ಕಾಸೂ ಇಲ್ದಹಾಗೆ ಮಾಡ್ತೀರಾ? ನಾನೇನು ಶ್ಯಾನುಭೋಗನೆ ಅಲ್ವ? ನಾನು ರುಜು ಹಾಕುಲ್ಲ ಅಂದ್ರೆ ಏನು ಮಾಡ್ತೀರಿ?’
‘ಗುದಿಗೆ ಬುಡ್ತೀನಿ ನೋಡು. ನೀನು ನಮ್ಮೂರಿಗೆ ಹ್ಯಾಂಗೆ ಕಾಲಿಡ್ತೀಯಾ ನೋಡ್ತೀನಿ ತಡಿ’-ಎಂದು ಗೌಡರು ತಮ್ಮ ತಿರುಗಾಡುವ ದೊಣ್ಣೆಯನ್ನು ಕೈಗೆ ತೆಗೆದುಕೊಂಡು ಎದ್ದು ನಿಂತದ್ದಕ್ಕೆ ಚೆನ್ನಿಗರಾಯರು ಹೆದರಿ ಎಲ್ಲದಕ್ಕೂ ರುಜು ಹಾಕಿದರು. ಆದರೆ ಅವರ ಕೋಪ ಮಾತ್ರ ನಿಲ್ಲಲಿಲ್ಲ. ‘ಮಾದಿಗಂಗ್ ಹುಟ್ಟಿದ ಮುಂಡೆ ತಂದು’-ಎಂದು ಬೈದುಕೊಳ್ಳುತ್ತಾ ಮನೆ ಬಿಟ್ಟು ಹೋದರು.
ನಂಜಮ್ಮ ಎಂದಳು: ‘ನೋಡಿ ಈಗ ಇನ್ನೂರು ರೂಪಾಯಿ ಆಯ್ತು. ಮದ್ವೆ ಅಂದ್ರೆ ಆರು ನೂರು ಏಳು ನೂರಾದ್ರೂ ಬೇಕು. ಮುಂದೆ ಏನು ಮಾಡಬೇಕೋ ನಂಗೆ ಗೊತ್ತಿಲ್ಲ. ನೀವೇ ದಿಕ್ಕು.’
‘ವಳ್ಳೇ ಲಕ್ಷ್ಮಿ ಹಂಗೈತೆ ನಿನ್ನ ಎಣ್ಮಗ. ನಮ್ಮ ಜಾತೀಲಾಗಿದ್ರೆ ಈಟೊತ್ತಿಗ್ ಬಂದು ಅಡ್ಡಿಕೆ, ನಾಗರು, ವಾಲೆ, ಯಲ್ಲಾ ಮಡಗಿ ಎಣ್ಣು ಆರಿಸ್ಕಂಡು ಓಗ್ತಿದ್ರು. ನಿಮ್ದು ಕೆಟ್ಟ ಜಾತಿ ಕಣವ್ವ.’
‘ಎಂಥಾ ಜಾತಿಯಾದ್ರೂ ಹುಟ್ಟಿದಮೇಲೆ ಜಾತಿಗೆ ತಕ್ಕಹಾಗೆ ಮಾಡ್ಬೇಕಲ್ಲ.’
‘ನೀನು ಕಾಯಿ ಕಸಿ ಬ್ಯಾಳೆ ಕಾಳಿಗೆ ಯೇಚ್ನೆ ಮಾಡ್‌ಬ್ಯಾಡ. ಉಡುಗನ್ನ ಗೊತ್ತು ಮಾಡು. ನಮ್ಮೂರಾಗೆ ಮನೆಗೆ ಅತ್ತು, ಐದು, ಚಂದಾ ಎತ್ತಿಕೊಡ್ತೀನಿ. ನಲವತ್ತು ಮನೆ ಗ್ರಾಮ. ಮದ್ವೆ ಲಗ್ನ, ಊರ ಸ್ಯಾನುಬಾಗ್ರು ಅಂದ್ರೆ ಒಂದ್ ಮುನ್ನೂರು ರೂಪಾಯಿ ಎತ್ತಕಾಗಾಕಿಲ್ವ? ಫುಡ್ ಲೆಕ್ಕದಾಗೆ ನೀನು ನಮ್ಮೂರ ತಲೆ ಕಾಯ್ತಾ ಇಲ್ವಾ? ಒಟ್ನಲ್ಲಿ ನಿನ್ನ ಐನೂರು ರೂಪಾಯಿ ಆಯ್ತಲ್ಲ. ಬಡ್ತನದಲ್ಲಿ ಹ್ಯಂಗೋ ಮಾಡು.’

ಗೌಡರಿಂದ ಇಷ್ಟು ಆಶ್ವಾಸನೆ ದೊರೆತದ್ದೇ ತಡ, ಅವಳ ಮನಸ್ಸಿನ ಹೊರೆ ಇಳಿದಂತಾಯಿತು. ಇನ್ನು ಹ್ಯಾಗಾದರೂ ಮಾಡಿ ಗಂಡು ಹುಡುಕಿಸಬೇಕು ಎಂದು ನಿಶ್ಚಯಿಸಿದಳು. ಊರಿಗೆ ಹೊರಡುವಾಗ ಗುಂಡೇಗೌಡರು ಪಾರ್ವತಿಯನ್ನು ಹೊರಕ್ಕೆ ಕರೆದು-‘ನೀನೊಳ್ಳೆ ಚಂದುಳ್ಳಿ ಎಣ್ಣು ಕಣ್ಮಗ. ವಳ್ಳೇ ಮೋಪುಗಾರ ಉಡುಗನೇ ಸಿಕ್ತಾನೆ ಬುಡು’ಎಂದು ಆಶೀರ್ವಾದ ಹೇಳಿದರು.
ಗಂಡು ಹುಡುಕಲು ತನ್ನ ಅಣ್ಣನ ನೆರವು ಕೋರಲು ನಂಜಮ್ಮ ಯೋಚಿಸಿದ್ದಳು. ಆದರೆ ಅವನೇ ವರನಾಗುವ ಕೇಳಿಕೆ ಬಂದು ತಂದೆ ಅಜ್ಜಿ ಸಿಟ್ಟುಗೊಂಡು ಹೋದಮೇಲೆ ಮತ್ತೆ ಯಾರನಾದರೂ ಕರೆಯದೆ ಕೆಲಸ ಆಗುವಂತಿರಲಿಲ್ಲ. ಅದರಲ್ಲಿಯೂ ಯಾರಾದರೂ ನಂಬಿಕಸ್ಥರೇ ಬೇಕು. ಇಲ್ಲದಿದ್ದರೆ ಸಂಭಾವಿತ ಹುಡುಗ ಸಿಕ್ಕುತ್ತಾನೆಂಬ ಭರವಸೆಯೂ ಇಲ್ಲ. ನಂಜಮ್ಮ ಎಲ್ಲ ಭಾರವನ್ನೂ ಮೇಷ್ಟರು ವೆಂಕಟೇಶಯ್ಯನವರ ಮೇಲೆ ಹಾಕಿ ಹೇಳಿದಳು: ‘ಕನ್ಯಾದಾನ ಮಾಡಿಸಿದ ಫಲ ನಿಮಗೇ ಸೇರುತ್ತೆ. ನೀವೇ ಒಂದು ದಾರಿ ಮಾಡಬೇಕು.’

ಮೇಷ್ಟರು ನಾಲ್ಕಾರು ಊರಿಗೆ ಹೋಗಿ ಬಂದರು. ಎಲ್ಲಿಯೂ ಕೆಲಸವಾಗಲಿಲ್ಲ. ಅರಸೀಕೆರೆಯ ಹತ್ತಿರದ ಒಂದು ಊರಿನ ಭಾರೀ ಜಮೀನುದಾರರೊಬ್ಬರಂತೆ. ಅವರ ಎರಡನೇ ಮಗನಿಗೆ ಈ ಹೆಣ್ಣನ್ನು ತಂದುಕೊಳ್ಳುವುದಾಗಿ ಅವರೇ ಹೇಳಿಕಳಿಸಿದ್ದರು. ವೆಂಕಟೇಶಯ್ಯನವರೆಂದರು: ‘ಅಮ್ಮಾ, ನಾನು ಅವರಿಗೆ ನಿಶ್ಚಯವಾಗಿ ಏನೂ ಹೇಳಿಬರಲಿಲ್ಲ. ನಂಗನ್ಸುತ್ತೆ: ಅಂಥಾ ಜಮೀನುದಾರ್ರು ಬಡವರ ಮನೆ ಹುಡುಗಿ ತಂದ್ಕೊತ್ತೀವಿ ಅನ್ಬೇಕಾದ್ರೆ ಹುಡುಗನಲ್ಲಿ ಏನೋ ಐಬಿರಬೇಕು.’

‘ಇದ್ರೂ ಇರಭೌದು. ವಿವಾದಕ್ಕೂ ವಿವಾಹಕ್ಕೂ ಸಮಗೈ ಇರಬೇಕು ಅಂತ ಗಾದೆಯೂ ಇದೆಯಲ್ಲ. ಅಂಥ ದೊಡ್ದ ಮನೆಗೆ ನಮ್ಮ ಹುಡುಗಿ ಕೊಡೋದು ಬ್ಯಾಡಿ’-ನಂಜಮ್ಮನೂ ಒಪ್ಪಿದಳು.
ಹೀಗೆ ನಾಲ್ಕು ತಿಂಗಳು ಹುಡುಕಾಟವಾದ ಮೇಲೆ ಒಂದು ಪ್ರಸ್ತಾಪ ಬಂತು: ಹಿಂದೆ ಇವರ ಶ್ಯಾನುಭೋಗಿಕೆ ಲೆಕ್ಕ ಬರೆದುಕೊಡುತ್ತಿದ್ದು, ನಂಜಮ್ಮನಿಗೆ ಲೆಕ್ಕ ಕಲಿಸಿದ ತಿಮ್ಲಾಪುರದ ದ್ಯಾವರಸಯ್ಯನವರಿಂದ ಬಂದದ್ದು. ಅವರ ಹೆಂಡತಿ ಕಡೆಯ ದೂರದ ಸಂಬಂಧದ ಒಬ್ಬ ಹುಡುಗನಂತೆ. ಹೆಸರು ಸೂರ್ಯನಾರಾಯಣ. ಎಸ್.ಎಸ್.ಎಲ್.ಸಿ. ಓದಿ ಮಿಡ್ಳ್ ಸ್ಕೂಲು ಮೇಷ್ಟರಾಗಿದಾನೆ . ವಯಸ್ಸು ಇಪ್ಪತ್ತೇಳು. ಮೊದಲ ಮದುವೆಯಾಗಿ ಈಗ ನಾಲ್ಕು ತಿಂಗಳಿನಲ್ಲಿ ತಾನೇ, ಹೆಂಡತಿ ಸತ್ತುಹೋದಳಂತೆ. ಮೂರು ವರ್ಷದ ಒಂದು ಹೆಣ್ಣು ಮಗುವಿದೆ. ಹುಡುಗನಿಗೆ ತಂದೆ ತಾಯಿ ಯಾರೂ ಇಲ್ಲ. ಈಗ ಮಗುವನ್ನು ತಾನೇ ಸಾಕುತ್ತಿದ್ದಾನೆ. ಸ್ಕೂಲಿಗೆ ಹೋಗುವಾಗ ಜೊತೆಯಲ್ಲಿ ಕರೆದುಕೊಂಡು ಹೋಗಿ ಕೂರಿಸಿಕೊಂಡಿರುತ್ತಾನೆ. ಹುಡುಗ ಲಕ್ಷಣವಂತ. ಅರವತ್ತು ರೂಪಾಯಿ ಸಂಬಳ. ಕೈ ಬೆಂದಿರುವವನು. ಚಿನ್ನದಂತಹ ಗುಣ. ‘ಅಮ್ಮಾ, ನೀನು ಅನುಮಾನ ಮಾಡಬ್ಯಾಡ ಹೆಣ್ಣು ಕೊಡು. ತುಂಬ ವಿವೇಕಸ್ಥ. ನಿನ್ನ ಮಗಳು ಸುಖವಾಗಿರ್ತಾಳೆ. ಅವನ ಹೆಣ್ಣು ಮಗೂನ ನಿನ್ನ ಮಗಳು ಬಲ ಮಗು ಅಂತ ತಿಳಕೊಳ್ಳದೆ ನೋಡಿಕೋಬೇಕು’-ಎಂದು ದ್ಯಾವರಸಯ್ಯನವರು ತಮ್ಮ ಮಗನ ಕೈಲಿ ಹೇಳಿಕಳಿಸಿದ್ದರು. ಅವರಿಗೆ ಈಗ ಅಷ್ಟು ದೂರ ನಡೆದು ಬರಲು ಕೈಲಾಗುತ್ತಿರಲಿಲ್ಲ.
ದ್ಯಾವರಸಯ್ಯನವರು ವಿವೇಕಿಗಳೆಂಬ ಬಗೆಗೆ ನಂಜಮ್ಮನಿಗೆ ಯಾರೂ ಹೇಳಬೇಕಾಗಿರಲಿಲ್ಲ. ಅಂಥವರ ಮಾತಿನಲ್ಲಿ ವಿಶ್ವಾಸವಿಡದಿದ್ದರೆ ಇನ್ನು ಯಾರ ಮಾತನ್ನು ನಂಬಬೇಕು? ‘ಹುಡುಗನ್ನ ನೀವು ನೋಡಿದೀರಾ?’-ನಂಜಮ್ಮ ಕೇಳಿದಳು.
‘ನಮಗೆ ಸರಿಯಾಗಿ ಗೊತ್ತಿಲ್ಲ. ನಮ್ಮಮ್ಮನ ಊರಿನ ದೂರದ ಬಳಗವಂತೆ. ಹುಡುಗ ಈಗ ಗುಬ್ಬಿ ತಾಲ್ಲೂಕು ಬಾಳೇಕೆರೆ ಮಿಡ್ಳ್‌ಸ್ಕೂಲಿನಲ್ಲಿ ಮೇಷ್ಟರಂತೆ. ನೀವು ಹೇಳಿಕಳಿಸಿದರೆ ಹೆಣ್ಣು ನೋಡುಕ್ಕೆ ಬತ್ತಾರೆ.’
ನಂಜಮ್ಮ ಹೋಗಿ ವೆಂಕಟೇಶಯ್ಯನವರನ್ನು ಕೇಳಿದಳು. ಅವರೇ ದ್ಯಾವರಸಯ್ಯನವರ ಮಗನ ಸಂಗಡ ತಿಮ್ಲಾಪುರಕ್ಕೆ ಹೋಗಿ ವರನ ಬಗೆಗೆ ವಿಚಾರಿಸಿಕೊಂಡು ಊರಿಗೆ ಬಂದು ಹೇಳಿದರು: ‘ನಂಜಮ್ನೋರೆ, ಆತ ನಂಗೂ ಗೊತ್ತು. ನಾನು ಗುಬ್ಬಿ ತಾಲ್ಲೂಕು ಕಡಬದಲ್ಲಿ ಇದ್ದಾಗ ಸಂಬಳದ ದಿನ ತಾಲ್ಲೂಕ್ ಆಫೀಸಿನಲ್ಲಿ ಎಷ್ಟೋ ಸಲ ನೋಡಿ ಮಾತಾಡಿದೀನಿ ತುಂಬ ವಳ್ಳೇಮನುಷ್ಯ. ಪಾಪ, ಹೆಂಡತಿ ಹೀಗೆ ಆದ್ರು ಅಂತ ನಂಗೆ ಗೊತ್ತಿರಲಿಲ್ಲ. ಎರಡನೇ ವರ ಅನ್ನೋದೊಂದು ಬಿಟ್ಟುಬಿಟ್ರೆ ಅಂಥ ವರ ಸಿಕ್ಕೂದು ನಿಜವಾಗಿಯೂ ಕಷ್ಟವೇ.’
ನಂಜಮ್ಮ ಪಾರ್ವತಿಯನ್ನು ಕೇಳಿದಳು. ‘ಅಮ್ಮ, ನೀನು ಒಪ್ಪಿದರೆ ಆಯ್ತು. ನನ್ನೇನೂ ಕೇಳಬೇಡ’-ಅವಳೆಂದಳು. ಗಂಡನ ಹೆಸರಿನಲ್ಲಿ ಚೀಟಿ ಬರೆದು ನಂಜಮ್ಮ ಕುಳುವಾಡಿಯ ಕೈಲಿ ತಿಮ್ಲಾಪುರಕ್ಕೆ ಕಳಿಸಿಕೊಟ್ಟಳು.

ಇದಾದ ಹದಿನೈದು ದಿನಕ್ಕೆ ಗಾಡಿಯ ಮೇಲೆ ಕುಳಿತು ದ್ಯಾವರಸಯ್ಯನವರು, ಅವರ ಹೆಂಡತಿ ಮತ್ತು ಮಗ, ಸೂರ್ಯನಾರಾಯಣನೊಡನೆ ಹೆಣ್ಣು ನೋಡಲು ಬಂದರು. ವರನಿಗೆ ಇಪ್ಪತ್ತೇಳಕ್ಕಿಂತ ಹೆಚ್ಚು ವಯಸ್ಸಾಗಿಲ್ಲವೆಂಬುದು ಮುಖ ನೋಡಿದರೇ ತಿಳಿಯುತ್ತಿತ್ತು. ಗಂಭೀರ ಸ್ವಭಾವ. ಮಿತಭಾಷಿ. ಅವನ ಮೂರು ವರ್ಷದ ಹೆಣ್ಣು ಮಗು ಒಂದು ನಿಮಿಷವೂ ತಂದೆಯ ಹತ್ತಿರದಿಂದ ದೂರವಿರುತ್ತಿರಲಿಲ್ಲ. ವೆಂಕಟೇಶಯ್ಯ ಮೇಷ್ಟರು ಬಂದರು. ಇವರು ಸೂರ್ಯನಾರಾಯಣನಿಗಿಂತ ವಯಸ್ಸಿನಲ್ಲಿ ತುಂಬ ದೊಡ್ಡವರು. ಇಬ್ಬರೂ ಪರಸ್ಪರ ಮಾತುಕತೆಯಾಡಿದರು. ಮಧ್ಯಾಹ್ನಕ್ಕೆ ಪಾಯಸದ ಅಡಿಗೆ ಮಾಡಿ ಎಲ್ಲರಿಗೂ ಬಡಿಸಿ ಹೆಣ್ಣು ತೋರಿಸುವ ಹೊತ್ತಿಗೆ ಸೂರ್ಯನಾರಾಯಣನ ಮಗು ರತ್ನ, ನಂಜಮ್ಮನಿಗೆ ಹೊಂದಿಕೊಂಡಿತ್ತು. ನಂಜಮ್ಮ ಅದನ್ನು ಕಂಕುಳಿಗೆ ಎತ್ತಿಕೊಂಡೇ ತಿರುಗಾಡುತ್ತಿದ್ದಳು. ಅಡಿಗೆಯ ಮನೆಯಲ್ಲಿಯೇ ಕೂತಿದ್ದ ಪಾರ್ವತಿಯ ತೊಡೆಯ ಮೇಲೆ ಓಡಿಯಾಡಿದ ಅದು, ಕೊನಗೆ ವಿಶ್ವನ ಕೈ ಹಿಡಿದುಕೊಂಡು ಆಟವಾಡಲು ಬೀದಿಗೆ ಹೋಯಿತು. ಸೂರ್ಯನಾರಾಯಣ ಹೇಳಿದ: ‘ಅವಳು ಯಾರ ಕೈಲೂ ಹೀಗೆ ಹೊಂದಿಕೊಳ್ಳಲಿಲ್ಲ. ಅವರನ್ನ ಕಂಡ ಅರ್ಧ ಗಂಟೆಯಲ್ಲೇ ಹತ್ತಿರ ಹೋಗಿಬಿಟ್ಟಳು.’

ಹೆಣ್ಣು ನೋಡಿಯಾಯಿತು. ಸೂರ್ಯನಾರಾಯಣನೇ ನಂಜಮ್ಮನಿಗೆ ಹೇಳಿದ: ‘ಅಮ್ಮ, ನನ್ನ ಜಾತಕ ತಂದಿದೀನಿ. ನಿಮಗೆ ಬೇಕಾದ್ರೆ ಎರಡು ಜಾತಕಾನೂ ಯಾರಿಗಾದ್ರೂ ತೋರಿಸಿ. ನನಗಂತೂ ಅದರಲ್ಲಿ ನಂಬಿಕೆಯೇ ಹೋಗಿಬಿಟ್ಟಿದೆ. ಮೊದಲ ಸಲ ಜಾತಕ ನೋಡಿದ ಎರಡು ಮೂರು ಜನ ಜೋಯಿಸರು, ಇಷ್ಟು ಚೆನ್ನಾಗಿ ಹೊಂದುವ ಜೋಡಿಯೇ ಇಲ್ಲ ಅಂದಿದ್ದರು. ಮದುವೆಯಾದ ನಾಲ್ಕು ವರ್ಷಕ್ಕೇ ಹೀಗೆ ಆಗಿಬಿಡ್ತು. ನನ್ನ ವಿಷಯವೆಲ್ಲ ದ್ಯಾವರಸ ಮಾವಯ್ಯ ಹೇಳಿದಾರೆ. ನಿಮ್ಮ ವಿಷಯಾನೂ ಹೇಳಿದಾರೆ. ಬೇಕಾದ್ರೆ ನೀವು ಇನ್ನೂ ನಾಕು ಜನದ ಹತ್ತಿರ ವಿಚಾರಿಸಿ. ನಿಮಗೆಲ್ಲ ಸಂತೋಷವಿದ್ದರೆ ಒಂದು ಹುಣಿಸೇನೀರು ಅನ್ನ ಮಾಡಿ ಒಂದು ದಿನ ಧಾರೆ ಎರೆದುಕೊಡಿ. ಭೇದಭಾವ ಮಾಡದೆ ನನ್ನ ಮಗೂನ ತನ್ನದು ಅಂತಲೇ ತಿಳಕಂಡು ನಿಮ್ಮ ಮಗಳು ನೋಡಿಕೊಂಡು ಹೋಗೂ ವಿಷಯ ಮಾತ್ರ ನಾನು ಈಗಲೇ ಖಂಡಿತವಾಗಿ ಹೇಳಿಬಿಡ್ತೀನಿ.’

ಜಾತಕ ಗುಣಿಸುವುದು ಮೇಷ್ಟರಿಗೆ ಅಲ್ಪ ಸ್ವಲ್ಪ ಮಾತ್ರ ಗೊತ್ತು. ದ್ಯಾವರಸಯ್ಯನವರೂ ಸುಮಾರಾಗಿ ತಿಳಿದವರೇ. ಇಬ್ಬರೂ ಕೂಡಿ ಗುಣಾಕಾರ ಮಾಡಿ ನೋಡಿದರು. ಗ್ರಹಮೈತ್ರಿಕೂಟ, ಯೋನಿಕೂಟ, ನಾಡಿಕೂಟಗಳೆಲ್ಲ ಕೂಡಿದವು. ಒಟ್ಟಿನಲ್ಲಿ ಇಪ್ಪತ್ತಮೂರು ಗುಣ ಕೂಡಿಬಂತು. ಇದಕ್ಕಿಂತ ಉತ್ತಮವಾಗಿ ಹೊಂದುವುದು ಸಾಮಾನ್ಯವಲ್ಲ. ವೆಂಕಟೇಶಯ್ಯನವರು ಸೂರ್ಯನಾರಾಯಣನನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ಇಲ್ಲಿ ಮನೆಯಲ್ಲಿ ದ್ಯಾವರಸಯ್ಯನವರು ಚೆನ್ನಿಗರಾಯರನ್ನು ಕೇಳಿದರು: ‘ನೀವು ಏನಂತೀರಾ ಶ್ಯಾನುಭೋಗ್ರೆ.’
‘ನಾನೇನು ಅನ್ನಬೇಕು? ನನ್ನೇನು ಹೇಳಿ ಕೇಳಿ ಮಾಡ್ತಾಳೇನ್ರಿ ಇವ್ಳು?’
‘ಯಜಮಾನ್ರು ನೀವು. ಕೆಲ್ಸ ಅವ್ರು ನಿಭಾಯಿಸಿದ್ರೂ ಯಜಮಾನಸ್ಥಾನ ನಿಮ್ಮದು ತಾನೇ?’
‘ಇಷ್ಟೆಲ್ಲ ಕುಣೀತಾ ಇದಾಳಲ್ಲಾ, ದುಡ್ಡಿಗೆ ಏನು ಮಾಡ್ತಾಳಂತೆ ಕೇಳ್ರೀ.’
‘ಏನು ಮಾಡ್ತೀಯಾ ಅಂತ ನಿಮ್ಮ ಹೆಂಡ್ತೀನ ನೀವೇ ಕೇಳಿ.’
ಹೆಂಡತಿಯ ಕಡೆ ತಿರುಗಿ ಅವರು-‘ದುಡ್ಡಿಗೆ ಏನು ಮಾಡ್ತೀಯೇ ಮುಂ…..’ಎಂದವರು, ತಮ್ಮ ಮಾತಿಗೆ ತಮಗೇ ನಾಚಿಕೆಯಾಗಿ ಮತ್ತೆ ಮೊದಲಿನಿಂದ ಪ್ರಾರಂಭಿಸಿ, ‘ದುಡ್ಡು ಎಲ್ಲಿ ಹೊಂದುಸ್ತಿಯೆ?’ ಎಂದರು.
‘ಈ ವರ್ಷದ ಪೋಟಿಕೆ ದುಡ್ಡು ಗುಂಡೇಗೌಡರ ಹತ್ರ ಇದೆ. ಅದರ ಮೇಲೆ ಕುರುಬರಹಳ್ಳೀಲಿ ಒಂದಿಷ್ಟು ಎತ್ತಿಕೊಡ್ತೀವಿ ಅಂತ ಹೇಳಿದಾರೆ.’

ತಮ್ಮ ಮೇಲೆ ಜಬರುದಸ್ತಿ ಮಾಡಿ ರಶೀತಿಗಳಿಗೆ ರುಜು ಮಾಡಿಸಿಕೊಂಡ ನೆನಪಾಗಿ ಶ್ಯಾನುಭೋಗರು-‘ಅವನೊಬ್ಬ ಮನೆಹಾಳ ಸೂಳೇಮಗ’ ಎಂದರು. ನಂಜಮ್ಮ ಮತ್ತೆ ಮಾತನಾಡಲಿಲ್ಲ. ಇವರ ಸ್ವಭಾವವನ್ನು ಬಲ್ಲ ದ್ಯಾವರಸಯ್ಯನವರೂ ಸುಮ್ಮನಾದರು.
ವೆಂಕಟೇಶಯ್ಯನವರು ತಮ್ಮ ಮನೆಗೆ ಮಾದೇವಯ್ಯನವರನ್ನೂ ಕರೆಸಿ ವರನನ್ನು ತೋರಿಸಿದರು. ಅಲ್ಲಿಂದ ಮೂವರೂ ನಂಜಮ್ಮನ ಮನೆಗೆ ಬಂದರು. ಮದುವೆ ನಿಷ್ಕರ್ಷೆಯಾಯಿತು. ಧಾರೆಯ ದಿನವೇ ಲಗ್ನಪತ್ರಿಕೆ ಶಾಸ್ತ್ರ ಮುಗಿಸಬಹುದೆಂದೂ ಇನ್ನು ಒಂದು ತಿಂಗಳಿನಲ್ಲಿ ಮದುವೆ ಮಾಡಿಕೊಡಬೇಕೆಂದೂ ಹೇಳಿದ ಸೂರ್ಯನಾರಾಯಣ. ‘ನೀವು ಹೆಚ್ಚಿಗೆ ಯಾವ ಖರ್ಚಿಗೂ ಹೋಗ್ಬೇಡಿ. ಹೆಣ್ಣಿಗೆ ತರಬೇಕಾದ್ದೆಲ್ಲ ನಾನು ತರ್ತೀನಿ. ವರೋಪಚಾರಕ್ಕೆ ಒಂದು ಜೊತೆ ಮಿಲ್ಲುಪಂಚೆ, ತಾಮ್ರದ ಪಂಚಪಾತ್ರೆ ಉದ್ಧರಣೆ, ಇಷ್ಟು ತಂದ್ರೆ ಸಾಕು’-ಎಂದು ತಾನಾಗಿಯೇ ಹೇಳಿದ. ಹೊರಡೂವಾಗ ನಂಜಮ್ಮನಿಗೂ ಚೆನ್ನಿಗರಾಯರಿಗೂ ನಮಸ್ಕಾರ ಮಾಡಿ, ಅದುವರೆಗೂ ಬೀದಿಯಲ್ಲಿ ವಿಶ್ವನ ಜೊತೆ ಆಡುತ್ತಿದ್ದ ಮಗುವಿನಿಂದಲೂ ಮಾಡಿಸಿ, ಅದನ್ನು ಎತ್ತಿಕೊಂಡು ಹೊರಟ. ಗಾಡಿ ಕೊರಳೆತ್ತಿದ್ದರೂ ಅವನು, ದ್ಯಾವರಸಯ್ಯನವರು, ಅವರ ಮಗ, ಮೂವರೂ ಊರು ಬಿಡುವತನಕ ನಡೆದೇ ಹೊರಟರು. ವೆಂಕಟೇಶಯ್ಯ ಮೇಷ್ಟರು ಮತ್ತು ಮಾದೇವಯ್ಯನವರು ಊರ ಆಚಿನ ತನಕ ಹೋಗಿ ಇವರನ್ನು ಕಳಿಸಿ ಬಂದರು.
*****
ಮುಂದುವರೆಯುವುದು

ಕೀಲಿಕರಣ: ಸೀತಾಶೇಖರ್
ಕೀಲಿಕರಣ ದೋಷ ತಿದ್ದುಪಡಿ: ರೋಹಿತ್ ಆರ್