ಕರಿಮಾಯಿ – ೬

ಗೌಡ ತನ್ನನ್ನು ಊರಲ್ಲಿ ಉಳಿಯಗೊಡಿಸಲಾರನೆಂದೇ ತೋರಿತು. ಚತುಷ್ಟಯರ ಮೇಲೂ ಸಿಟ್ಟುಬಂತು. ಅವರೋ ಲೋಲುಪರು. ಅದಾಗದೆ ಗಟ್ಟಿಮುಟ್ಟಾಗಿದ್ದರೆ ಅವರಿಂದ ಗೌಡನ ಹೆಣ ಹೊರಿಸಬಹುದಿತ್ತು. ಸಾಲದ್ದಕ್ಕೆ ಕುಸ್ತಿಯ ಹುಡುಗರು ಗೌಡನ ಪರವಾಗಿದ್ದರು. ಮಸಿ ಹತ್ತಿದ ಮುಖ ಮಂದಿಗೆ ತೋರಿಸುವುದು ಹ್ಯಾಗೆ? ಮಿದುವಾದ ಉಪಾಯಗಳಿಂದ ಪ್ರಯೋಜನವಿಲ್ಲ ಅನ್ನಿಸಿತು. ಇಷ್ಟಕ್ಕೂ ಕಾರಣ ಈ ರಂಡೆ. ಇವಳನ್ನು ಗುಡಿಸಲಲ್ಲಿ ಚಚ್ಚಿಹಾಕಿ ಬೆಂಕಿ ಹಚ್ಚಬೇಕೆಂದುಕೊಂಡ. ನರಿಬುದ್ಧಿಯಲ್ಲಿ ಗೌಡನನ್ನು ಮೀರಿಸುವುದು, ಎದುರಿಸುವುದೂ ಸಾಧ್ಯವಿಲ್ಲ. ಈಗುಳಿದದ್ದು ಒಂದೇ ಉಪಾಯವೆಂದುಕೊಂಡ; ಎಕ್ ಮಾರ್ ದೋ ತುಕಡಾ!

ಕಬ್ಬಿಣ ಸರಿಯಾಗಿ ಕಾಯಲೆಂದು ಕಾಯುವ ಕಮ್ಮಾರನಂತೆ ಈ ತನಕ ಸುಮ್ಮನಿದ್ದ ಬಸವರಾಜು ಈಗ ಏಟು ಹಾಕಿದ. ಅವನ ಮಾತೇ ಮಾತು. ‘ಹ್ಯಾಂಗ್ರೀ’ ಅಂದ. ‘ಹೀಂಗ್ರೀ’ ಅಂದ. ಸುಂದರಿ ಕಟ್ಟಿಕೊಂಡ ಹೆಂಡತಿಯಲ್ಲ! ಅಂದ. ‘ಸೂಳೆ’ ಅಂದ. ಸೂಳೆಗೆಲ್ಲಿಯ ನಿಷ್ಠೆ? ಅದು ದೊಡ್ಡದಲ್ಲ; ಗೌಡ ನಿಮ್ಮ ಸೂಳೆಗೆ ಕೈಹಾಕಿದರೆ ನೀವು ಅವನ ಸೂಳೆ ದುರ್ಗಿಗೆ ಕೈಹಾಕಿದರಾಯ್ತು. ಲೆಕ್ಕ ಬಡ್ಡಿಗೆ ಬಡ್ಡಿ ಚುಕ್ತಾ ಆದಂತೇ. ಆದರೆ ಇಂದಿನಂಥಾ ಲಾಭ ನಿಮಗೆ ಹಿಂದೆ ಆಗಿಲ್ಲ; ಮುಂದೆ ಆಗೋದು ಸಾಧ್ಯವಿಲ್ಲ. ಗೌಡ ಸುಂದರಿಗೆ ಕೈಹಾಕಿದ್ದು, ನಿಮ್ಮ ಮೇಲಿನ ಸೇಡಿನಿಂದ. ಈಗವಳು ಬಸರಾಗಿದ್ದಾಳೆ.

ಗುಡಸೀಕರನಿಗೆ ಇನ್ನೊಂದು ಆಘಾತವಾಯ್ತು. “ಬಸರಾಗ್ಯಾಳ?” ಎಂದು ಉದ್ಗಾರದಿಂದ ಪ್ರಶ್ನಿಸಿದ. ಬಸವರಾಜ ಮತ್ತೆ ತಣ್ಣಗೆ ನುಣ್ಣಗೆ ಮಾತಿನ ಬಲೆ ಹೆಣೆಯತೊಡಗಿದ! ಗೌಡ ಬಲೆಗೆ ಬಿದ್ದಂತಾಯ್ತು. ಇದು ಅವನ ಸೇಡಿನಳತೆಗೆ ಮೀರಿ ಆದದ್ದು. ಅದಕ್ಕೇ ಹೆದರಿ ಅವ ಹೊಟ್ಟೆಯಿಳಿಸುವ ಮದ್ದು ಕೊಟ್ಟದ್ದು!

“ಮದ್ದು ಕೊಟ್ಟ!”

“ಈಗ ಸುಂದರಿಯನ್ನು ಬಿಟ್ಟರೆ ಹ್ಯಾಗೋ ಮಾಡಿ ಗೌಡ ಅವಳ ಹೊಟ್ಟೆಯಿಳಿಸೋದು ಖಂಡಿತ. ನಾವು ಅವಳನ್ನು ನಮ್ಮ ಕೈಯಲ್ಲೇ ಇಟ್ಟುಕೊಂಡಿರಬೇಕು. ಆ ಕಡೆ ಎಲೆಕ್ಷನ್ ಭರಾಟೆ, ಈ ಕಡೆ ಒಂದು ಮೂಕರ್ಜಿ, ಗೌಡ ತನಗರಿವಿಲ್ಲದಂತೆ ಗೋರಿ ತೋಡಿಕೊಂಡಿದ್ದಾನೆ. ಜನ ಹುಚ್ಚರಲ್ಲ. ಅಥವಾ ಯಾವಾಗಲೂ ಹುಚ್ಚರಾಗಿರುವುದಿಲ್ಲ. ಸುಂದರಿ ಯಾರಿಗೇ ಬಸಿರಾಗಿರಬಹುದು. ಹೆಸರಂತೂ ಗೌಡನದೇ. ಇದು ಜನಕ್ಕೆ ಅರ್ಥವಾಗುವುದಿಲ್ಲ ಎನ್ನಬೇಡಿರಿ, ಅದೂ ಬೇಡ, ಗೌಡನ್ನ ಜೇಲಿಗೆ ಈಗಿಂದೀಗ ಕಳುಹಿಸುವುರೇನು?”
“ಜೇಲಿಗೆ?”
ಬಸವರಾಜು ಎದ್ದವನೇ ಒಳಗೆ ಹೋಗಿ ಸುಂದರಿ ಕೊಟ್ಟ ದಿನಪತ್ರಿಕೆ ತಂದು ಗುಡಸೀಕರನ ಮುಂದೆ ಹಿಡಿದ. ಅದರಲ್ಲಿಯ ಮುದುಕನೊಬ್ಬನ ಫೋಟೋ ತೋರಿಸಿ‌ಅರ್ಥಪೂರ್ಣವಾಗಿ ನಕ್ಕ. ಕೊಳವೀ ಮುದುಕಪ್ಪ ಗೌಡಪ್ಪನನ್ನು ಜೀವಂತವಾಗಲಿ, ಇಲ್ಲವೆ ಕೊಂದಾಗಲಿ ತಂದುಕೊಟ್ಟವರಿಗೆ ೫೦೦೦ ರೂ. ಬಹುಮಾನವೆಂದು ಸರ್ಕಾರೀ ಪ್ರಕಟಣೆಯಿತ್ತು. ಆಗಲೂ ಗುಡಸೀಕರನಿಗೆ ಅರ್ಥವಾಗಲಿಲ್ಲ. ‘ಹಹ್ಹಾಹ್ಹ! ಓಲ್ಡ್‌ಬಾಯ್ ಕೊಳವಿ ಮುದುಕಪ್ಪ ಸ್ವಾತಂತ್ರ್ಯ ಚಳುವಳಿಯಲ್ಲಿದ್ದಾನೆ! ಗೌಡ ತನ್ನ ಮನೆಯಲ್ಲಿ ಇವನನ್ನು ಅಡಗಿಸಿಟ್ಟಿದ್ದಾನೆ.”

ಆಡಿಕೊಂಡರು, ಹಾಡಿಕೊಂಡರು

ಸುಂದರಿಯನ್ನು ಕಳಿಸಿದೊಡನೆ ದತ್ತಪ್ಪ ಗೌಡನೊಂದಿಗೆ ಅವನ ಮನೆಗೆ ಹೋದ. ವಿಷಯ ಇಬ್ಬರಿಗೂ ಗೊತ್ತಾಗಿತ್ತು; ಆ ಹುಡುಗ ತನ್ನ ಮನೆಗೆ ಬೇಲಿ ಹಚ್ಚಿ ಹೆಂಟಾ ಬಡಿಯುತ್ತಾನೆಂದು ಮಾತಾಡಿಕೊಂಡರು. ಅವನಿಗೆ ತಿಳಿವಳಿಕೆ ಹೇಳಲು ಸಾಧ್ಯವಾಗದ್ದಕ್ಕೆ ಗೌಡ ಮರುಗಿದ. ಆ ಮುದುಕಿಗಾದರೂ ಬುದ್ಧಿ ಇರಬಾರದೆ? ಮಗ ಹೇಳಿದ ಹಾಗೆ ಕುಣಿಯೋದಕ್ಕೆ ಇದು ವಯಸ್ಸೆ? ಎಂದ. ಯಾರಿಗೂ ಬುದ್ಧಿ ಕಲಿಸುವ ದಾರಿ ಚಿಂತಾಮಣಿಯ ದತ್ತಪ್ಪನಿಗೆ ಅರಿದಿಲ್ಲ.
ನೋಡೂ, ಅವಗ ಬುದ್ಧಿ ಕಲಸಾಕ ಒಂದ ಹಾದಿ ಅದ. ನಿನ್ನ ಕಬೂಲಿದ್ದರ….” “ಅದೇನಪಾ?”
“ಸುಂದರೀನ ಬಸರ ಮಾಡ್ಯಾನಂತ ಒಂದ ಮೂಕರ್ಜಿ ಹೆಟ್ಟಿದರ ನೋಡಪಾ, ಹುಡುಗ ನಾವ ಹೇಳಿಧಾಂಗ ಕೇಳಿಕೂತ ಬಿದ್ದಿರತಾನ”
ಉಪಾಯವೇನೋ ಬರೋಬರಿ. ಆದರೆ ರಾಡಿ ಸೋಸಬೇಕಲ್ಲ? ಪೋಲೀಸರು ಬರೋದು, ಗುಡಸೀಕರನನ್ನ ಹೊಡಿಯೋದು, ನ್ಯಾಯ ಮಾಡೋದು, ಪಂಚಾತಿ ಅನ್ನೋದು ಸಾಕ್ಷಿ ನೀ ಹೇಳು, ನಾ ಹೇಳು- ಈ ಗದ್ದಲ ಸೋಸುವುದಿರಲಿ ಮುದುಕಪ್ಪ ಗೌಡ ಸರ್ಕಾರದ ಕಣ್ಣುತಪ್ಪಿಸಿ ತನ್ನ ಮನೆಯಲ್ಲಿದ್ದಾಗ ಪೋಲೀಸರು ಬರೋದು ತಮ್ಮ ಹಿತದೃಷ್ಟಿಯಿಂದ ಕೂಡ ಒಳ್ಳೆಯದಲ್ಲ. ಏನೋ ಮಾಡಹೋಗಿ ಏನೇನೋ ಆಗುವ ಬಾಬತ್ತಿವೆಲ್ಲ. “ಬ್ಯಾಡ ತೆಗಿ” ಅಂದ. ದತ್ತಪ್ಪನಿಗೆ ಕೂಡಲೇ ಖಾತ್ರಿಯಾಯ್ತು. ಮುದುಕಮ್ಮನಿಗೆ ಬುದ್ಧಿ ಹೇಳಿದರೋ? ಮುದುಕಿ ಮಾತು ಕೇಳ್ಯಾಳು, ಹುಡುಗ ಕೇಳಬೇಕಲ್ಲ? ಅವರವರ ಕರ್ಮ ಎಂದು ಇಬ್ಬರೂ ಸುಮ್ಮನಾದರು. ಅಲ್ಲಿಗದು ಮುಗಿಯಿತೊ?
ಜನರ ಬಾಯಲ್ಲಿ ಚಿಗಿಯಿತು. ದಿನಕ್ಕೊಂದು ಚಂದಾಗಿ ಗುಸುಗುಸು ಸುರುವಾಯಿತು. ಮುಂಗಾರಿ ಬೆಳೆ ಬಂದು ಒಂದು ನಿಲುಗಡೆಗೆ ಬಂದುದರಿಂದ ಚಾಡಿ ಹೇಳುವುದಕ್ಕೆ ಅವರಿಗೆ ಸಮಯವೂ ಇತ್ತು. ಆಡಿಕೊಂಡು ನಗಾಡಿದರು, ಚತುಷ್ಟಯರನ್ನು ಕೀಟಲೆ ಮಾಡಿದರು. ವ್ಯಂಗ್ಯದ ಪದ ಕಟ್ಟಿ ಹಾಡಿದರು. ಆದರೆ ಆ ಪದಗಳು ಗುಡಸೀಕರನಿಗಾಗಲಿ, ಬಸವರಾಜನಿಗಾಗಲಿ ತಿಳಿಯಲೇ ಇಲ್ಲ. ಚತುಷ್ಟಯರಿಗೆ ತಿಳಿಯುತ್ತಿತ್ತು. ಅವರು ಹೇಳಲಿಲ್ಲ. ಹೀಗಾಗಿ ಹಾಡಿನ ಚಮತ್ಕಾರಕ್ಕೆ ಇವರು ನಕ್ಕರು. ತಿಳಿಯದ ಇವರ ದಡ್ಡತನಕ್ಕೆ ಹುಡುಗರು ನಕ್ಕರು.
ಸುಂದರಿ ಕರ್ಮವೆಂದು ಬಸಿರನ್ನೊಪ್ಪಿಕೊಂಡಳು. ಮದ್ದಿನಿಂದ ಮೈ ನಿಶ್ಯಕ್ತಿಯಾಯಿತು. ಗುಡಿಸಲಿನಲ್ಲಿದ್ದುಕೊಂಡೇ ಇವರ ಮಾತು ಕೇಳುತ್ತಿದ್ದಳು. ಆ ಘಟನೆ ನಡೆದಾಗಿನಿಂದ ಗುಡಸೀಕರನ ಚೇರಾಪಟ್ಟಿಯಲ್ಲಿ ಬದಲಾಗಿತ್ತು. ಬರುತ್ತಿರಲಿಲ್ಲ. ಬಂದರೂ ತಪ್ಪಿಕೂಡಾ ತನ್ನ ಕಡೆ ನೋಡುತ್ತಿರಲಿಲ್ಲ. ನೋಡಿದರೂ ಅವನ ಕಣ್ಣಲ್ಲಿ ಕೋಪವಿರುತ್ತಿತ್ತು. ಬಸವರಾಜು ಮೊದಲಿನಂತೆಯೇ ಮಾತಾಡುತ್ತಿದ್ದ. ಒಂದೆರಡು ಕೊಡ ನೀರು ತರುತ್ತಿದ್ದ. ಅನ್ನ ಬೇಯಿಸುತ್ತಿದ್ದ. ತಾನೂ ತಿಂದು ಇವಳಿಗೂ ಹಾಕುತ್ತಿದ್ದ.
ಗುಡಸೀಕರನ ತಾಯಿಗೆ ಮಾತ್ರ ಮನೆಯ ನಡುಗಂಬ ತನ್ನ ನೆತ್ತಿಯ ಮೇಲೆ ಕಡಕೊಂಡು ಬಿದ್ದಷ್ಟು ಸಂಕಟವಾಯ್ತು. ಸುದ್ದಿಗಳೋ ದಿನಕ್ಕೊಂದು ಪರಿ ಬರುತ್ತಿದ್ದವು. ಮಗ ಕದ್ದು ಮದುವೆಯಾಗಿದ್ದಾನಂತೆ. “ಹೌಂದೇನಾ ಎವ್ವಾ?” ಎಂದೊಬ್ಬ ಮಗಳು ಕೇಳಿದರೆ, ಮೊಮ್ಮಗನ ಹೆಸರಲೆ ಆಸ್ತಿ ಮಾಡ್ಯಾನಂತ “ಹೌಂದೇನಾ ಎಕ್ಕಾ?” ಎಂದೊಬ್ಬ ತಂಗಿ ಕೇಳುತ್ತಿದ್ದಳು. ಸಕಾಲಕ್ಕೆ ಮದುವೆ ಮಾಡಿದ್ದರೆ ಇದೆಲ್ಲ ಯಾಕಿರುತ್ತಿತ್ತೆಂದು ಮುದುಕಿಯೊಬ್ಬಾಕೆ ಹೇಳದೆ ಬಿಡಲಿಲ್ಲ. ಮಗನೊಂದಿಗೆ ಇದನ್ನೆಲ್ಲ ಬಾಕಿ ಉಳಿಸದಂತೆ ಮಾತಾಡಬೇಕೆಂದರೆ ಅವನು ಸದಾ ಹುಬ್ಬುಗಂಟು ಹಾಕಿಕೊಂಡೇ ಇರುತ್ತಿದ್ದ. ಮುದುಕಿ ಬಾಯಿ ಬಿಟ್ಟರೆ ಗದರುತ್ತಿದ್ದ. ಗೌಡ, ದತ್ತಪ್ಪ ಯಾಕೊಮ್ಮೆ ಬುದ್ಧಿ ಹೇಳಬಾರದೆಂದಳು-ಅವರ ಮಾತು ಮಗ ಕೇಳುವುದಿಲ್ಲವೆಂದು ಗೊತ್ತಿದ್ದೂ, ಸತ್ತ ಗಂಡನ ನೆನೆದು ಅತ್ತಳು. ಓಣಿಯ ಅವ್ವಕ್ಕಗಳ ಮುಖ ಎದುರಿಸಲಾರದೇ ಮುದುಕಿ ಅಡಿಗೆ ಮನೆಯಲ್ಲಿ ‘ಕರಿಮಾಯೀ’ ಎಂದು ಕೈಹೊತ್ತು ಕೂತಳು.
ಅಣ್ಣ ಊಟಕ್ಕೆ ಮಾತ್ರ ಮನೆಗೆ ಬರುತ್ತಿದ್ದು ಉಳಿದೆಲ್ಲ ಸಮಯ ತೋಟದಲ್ಲೇ ಕಳೆಯುತ್ತಿದ್ದುದರಿಂದ ಮೊದಮೊದಲು ಆಗೀಗ ಬರುತ್ತಿದ್ದ ಬಸವರಾಜ ಸಮಯ ಸಾಧಿಸಿ ಹೆಚ್ಚೆಚ್ಚು ಸಲ ಹೆಚ್ಚೆಚ್ಚು ಹೊತ್ತು ಬರಲಾರಂಭಿಸಿದ್ದರಿಂದ ಗಿರಿಜಾ ಸನ್ನಿವೇಶದ ಅಸಲು ಪ್ರಯೋಜನವನ್ನು ಬಡ್ಡಿಸಮೇತ ಪಡೆದಳು.

ಕುದುರೆಯ ಕೆಣಕಿದರು.

ಚುನಾವಣೆ ಅನಿವಾರ್ಯವಾಗಿತ್ತು. ಗುಡಸೀಕರನಿಗಂತೂ ಊರೊಳಗಿನ ತನ್ನ ಸ್ಥಾನಮಾನ ಮಂದಿಗಿಲ್ಲ, ತನಗೇ ಖಾತ್ರಿಯಾಗಬೇಕಿತ್ತು. ಹಿರಿಯರ ಔದಾರ್ಯದಿಂದ ದೊರೆತ ಸರಪಂಚಗಿರಿಯ ಸುಖ ಕಂಡುಂಡದ್ದಾಗಿತ್ತು. ಇವು ಪೂರಕ ವಿಚಾರಗಳು; ಅಥವಾ ಹೊತ್ತಿದ ಬೆಂಕಿಯಲ್ಲಿ ಆಗಾಗ ಬೀಳುತ್ತಿದ್ದ ಹುಲ್ಲಿನ ಗರಿಗಳು. ಮುಖ್ಯವಾಗಿ ಸುಂದರಿಯನ್ನು ಗೌಡ ಕೂಡಿದ್ದು ಹುಡುಗನ ಆಳದಲ್ಲಿ ಹುಣ್ಣು ಮಾಡಿತ್ತು. ಚಡಪಡಿಸಿದ, ಒದ್ದಾಡಿದ, ದಿನಕ್ಕಿಂತ ಹೆಚ್ಚು ಕುಡಿದ, ಹೆಚ್ಚು ಸೇದಿದ, ವೀರಾವೇಶದಿಂದ ಹೊಗೆಬಿಟ್ಟ, ಚತುಷ್ಟಯರನ್ನು ಕರೆದು ‘ಗಂಡಿಗ್ಯಾಗೋಳ್ರಾ’ ಎಂದು ಬೈದ. ಚತುಷ್ಟಯರಿಗೇನೋ ಸುದ್ದಿ ಗೊತ್ತಾಯ್ತು. ಆದರೆ ಅವರು ನಂಬಲಿಲ್ಲ. ಹಾಗಂತ ಆಡಿಕೊಳ್ಳಲಿಲ್ಲ. ಅವನ ಕಾಟ ತಡೆಯಲಾರದೆ ಗುಡಸೀಕರನೊಂದಿಗೆ ಅಷ್ಟು ಜನ ಒಮ್ಮೆ ಸೇರಿ ಒಮ್ಮೆ ಗೌಡನ ಮುದಿ ಕುದುರೆ ಗುಡಸೀಕರನ ತೋಟ ಹೊಕ್ಕು ಮೇಯುತ್ತಿದ್ದಾಗ ಅಟ್ಟಿಸಿಕೊಂಡು ಹೋಗಿ ಹೊಡೆದರು, ಕಡಿದರು, ಕಲ್ಲು ಹೇರಿದರು. ಕೊನೆಗೆ ಕೆರೆಯ ಕೆಸರಲ್ಲಿ ಸಿಕ್ಕಿಕೊಳ್ಳುವಂತೆ ಮಾಡಿದರು. ಸಾಲದೆಂದು ನಿಸ್ಸಹಾಯಕವಾಗಿ ಒದ್ದಾಡುತ್ತಿದ್ದ ಆ ಪ್ರಾಣಿಯ ಪೃಷ್ಟದಲ್ಲಿ ಉದ್ದನೆಯ ಗೂಟ ಜಡಿದ ಗುಡಸೀಕರ.
ಸಂಜೆಯೇ ಗೌಡನಿಗೆ ಸುದ್ದಿ ತಿಳಿಯಿತು. ಅಭಿಮಾನ ಕೆರಳಿತು. ಬಾಯಿಯಿಲ್ಲದ ಪ್ರಾಣಿಗೆ ಈ ರೀತಿ ಚಿತ್ರಹಿಂಸೆ ಮಾಡುವುದೆಂದರೇನು? ಸುತ್ತ ಹದಿನಾಲ್ಕು ಹಳ್ಳಿಯಲ್ಲಿ ಈ ತನಕ ಯಾವನೂ ಗೌಡನ ಎದುರಿಗೆ ನಿಲ್ಲುವ ಧೈರ್ಯ ಮಾಡಿರಲಿಲ್ಲ. ಹಾದಿ ಬೀದಿಯ ಹುಡುಗರು ಹೀಗೆ ಮಾಡುವಂತಾಯಿತಲ್ಲ, ದಿನೇ ದಿನೇ ಇವನ ಉರವಣಿಗೆ ಜಾಸ್ತಿಯಾಯಿತೇ ವಿನಾ ತಿಳುವಳಿಕೆ ಮೂಡಲಿಲ್ಲ. ತನ್ನ ಸಹನೆಯಿಂದ ಬುದ್ಧಿ ಕಲಿಯಲಿಲ್ಲವಲ್ಲ. ಕೂಡಲೇ ದತ್ತಪ್ಪನಿಗೆ ಕರೆ ಹೋಯ್ತು.
ಕುದುರೆಯನ್ನು ಕೆಸರಲ್ಲಿ ಸಿಕ್ಕಿಸಿದ ಸುದ್ದಿ ಆಗಲೇ ಕುಸ್ತಿ ಹುಡುಗರಿಗೆ ತಿಳಿದು ಓಡಿದ್ದರು. ಕೆಲವರು ಅದನ್ನು ಗಳ ಹಾಕಿ ಎತ್ತುವ ಪ್ರಯತ್ನದಲ್ಲಿದ್ದರೆ, ಇನ್ನೂ ಕೆಲವರು ಗುಡಸೀಕರನನ್ನೂ, ಚತುಷ್ಟಯರನ್ನೂ ಹುಡುಕುತ್ತಿದ್ದರು.
ಹೊತ್ತು ಮುಳುಗಿ ಆಗಷ್ಟೆ ಕತ್ತಲಾಗಿತ್ತು. ಗೌಡ, ದತ್ತಪ್ಪ ಆ ವಿಷಯವಾಗೇ ಮಾತಾಡುತ್ತ ಕುಳಿತಿದ್ದರು. ಅಷ್ಟರಲ್ಲಿ ಹುಡುಗರು ಕುದುರೆಯನ್ನು ನಿಧಾನವಾಗಿ ನಡಸಿಕೊಂಡುಬಂದರು. ಅದರ ತೊಡೆ ಗಡಗಡ ನಡುಗುತ್ತಿದ್ದವು. ಮೈತುಂಬ ಬಾಸಳೆದ್ದು, ಕುಂಡಿ ನೆತ್ತರಾಡಿತ್ತು. ಕುದುರೆ ನಿಲ್ಲಲಾರದೆ ಮುಂಗಾಲೂರಿ ಕುಸಿದು ಬಿದ್ದುಬಿಟ್ಟಿತು. ಗೌಡ ಕೋಪದಿಂದ ನಡುಗಿದ. ದತ್ತಪ್ಪನ ಕಣ್ಣಲ್ಲಿ ನೀರಾಡಿ ಚಟ್ಟನೇ ಎದ್ದು “ಎಲ್ಲಿದ್ದಾರ ಆ ಹೊಲ್ಯಾರು?” ಅಂದ. ಗೌಡ ತಕ್ಷಣ ಎದ್ದ.
ಗುಡಸೀಕರನ ತಾಯಿ ಆಗಷ್ಟೆ ಲಾಟೀನಿನ ಗ್ಲಾಸು ಒರೆಸಿ ದೀಪ ಹಚ್ಚಿ ತೂಗು ಹಾಕುತ್ತಿದ್ದಳು. ಕಿವಿಯ ಮೇಲೆ ಸಿಡಿಲಪ್ಪಳಿಸಿದಂತೆ “ಎಲ್ಲಿದ್ದೀಯಲೇ ಗುಡಿಸ್ಯಾ?” ಎಂದು ಕೇಳಿಸಿತು. ನೋಡಿದರೆ ಇಡೀ ಬಾಗಿಲು ತುಂಬಿಕೊಂಡು ಗೌಡ ನಿಂತಿದ್ದ. ಮುದುಕಿಗೆ ತುದಿಬುಡ ಒಂದೂ ತಿಳಿಯದೆ ಏನೂ ಮಾತಾಡಬೇಕೆಂಬುದೂ ತೋಚದೇ “ಬರ್ರೀ ಎಪ್ಪಾ” ಎನ್ನುತ್ತಾ ಉತ್ತರಕ್ಕೂ ಕಾಯದೆ “ಏ, ಗಿರ್‍ಜಾ” ಎಂದು ಕೀರಲಿ, ಕುಸಿಯುತ್ತಿದ್ದ ತೊಡೆ ಸಾವರಿಸಿಕೊಂಡು ಒಳಸರಿದು ಬಾಗಿಲಿಗೆ ಒರಗುವಷ್ಟರಲ್ಲಿ ಗೌಡ: “ನಿನ್ನ ಮಗಾ ಎಲ್ಲಿದ್ದಾನಬೇ?” ಎಂದ. ಗೌಡನ ಕೋಪವನ್ನು ಹಿಂದೆಂದೂ ಕಂಡರಿಯದ ಮುದುಕಿಗೆ ಏನಾಯಿತೆಂದು ತಿಳಿಯುವ ಮೊದಲೇ ಗೌಡ ಮುದುಕಿಗೆ ಸಮೀಪ ಬಂದಿದ್ದ. ಹಿಂದೆ ದತ್ತಪ್ಪ ನಿಂತಿದ್ದ. ತನ್ನ ಮಗ ಏನೋ ಅನಾಹುತ ಮಾಡಿದ್ದಾನೆಂದೂ, ಈಗ ಸಿಕ್ಕರೆ ಅವನನ್ನು ಮುರಿಯುವರೆಂದೂ ಭಯವಾಗಿ ತಕ್ಷಣ ತಲೆಮೇಲಿನ ಸೆರಗನ್ನು ನೆಲಕ್ಕೆ ಒಡ್ಡಿ, “ಏಪ್ಪಾ, ಅವ ನನ್ನ ಮಗ ಅಲ್ಲ; ನಿನ್ನ ಮಗ ಅಂತ ತಿಳಿ” ಎಂದು ತಲೆ ಬಾಗಿದಳು. ಗೌಡ ಮನುಷ್ಯರೊಳಗೆ ಬಂದ. ಅಲ್ಲೇ ಮೇವಿನ ಪೆಂಟೆಯ ಮೇಲೆ ಕುಸಿದ. ದತ್ತಪ್ಪ ನಡೆದುದನ್ನೆಲ್ಲ ಹೇಳಿದ ಮುದುಕಿಯೂ ಬೈದಳು. ನೀವೇ ಬುದ್ದಿ ಹೇಳಬೇಕೆಂದು ಅಂಗಲಾಚಿದಳು.
ಆಡುವ ಮಾತಿನ್ನೂ ಬಾಯಲ್ಲೇ ಇದೆ; ಹಾಸಿದ ಸೆರಗು ಹಾಗೇ ಇದೆ. ಗುಡಸೀಕರ ಧಡಪಡಿಸಿ ಅಟ್ಟಿಸಿಕೊಂಡು ಬಂದ ಬೇಟೆಯ ಹಾಗೆ ಬಂದು ಅಡಿಗೆ ಮನೆಗೆ ದೌಡಾಯಿಸಿದ. ಗುರಿಯಿಟ್ಟ ಬಾಣದ ಹಾಗೆ ಶಿವಲಿಂಗ ಬೆನ್ನುಹತ್ತಿದ. ಏನು ಎತ್ತ ತಿಳಿಯದೆಲೇ, ಕೂತವರು ಮೇಲೇಳುವ ಮೊದಲೇ ಗುಡಸೀಕರ ಅಡಿಗೆ ಮನೆಯಲ್ಲಿ ಕಿಟಾರನೆ ಕಿರಿಚಿದ. ಗಿರಿಜಾ, ಮುದುಕಿ ಏನಾಯಿತೆಂದು ತಿಳಿಯದೆಲೆ ಲಬೊಲಬೊ ಹೊಯ್ಕೊಳ್ಳುತ್ತ ಒಳನುಗ್ಗುವ ಮೊದಲೇ ಗೌಡ ಧಾವಿಸಿದ್ದ. ಗುಡಸೀಕರ ಒದರುತ್ತ ಹೊರಗೆ ಬಂದ. ಹಿಡಿದ ಗೌಡನನ್ನು ಶಿವನಿಂಗ ತಳ್ಳಿ ಹಾ ಎನ್ನುವುದರಲ್ಲಿ ಹಾರಿಬಂದು ಓಡುತ್ತಿದ್ದ ಗುಡಸೀಕರನನ್ನು ತೆಕ್ಕೆ ಹಾದು ಹಿಡಿದುಕೊಂಡು ಅಮಾತ ಎತ್ತಿ ನೆಲಕ್ಕೆ ರಪ್ಪನೆ ಅಪ್ಪಳಿಸಿದ. ಪಕ್ಕದ ಗೋಡೆಯ ಗೂಟ ಲಟಕ್ಕನೆ ಮುರಿದು ವಿಲಿವಿಲಿ ಒದ್ದಾಡುತ್ತಿದ್ದ ಗುಡಸೀಕರನನ್ನು ಒದ್ದು ಬೆನ್ನು ಮೇಲಾಗಿ ಚೆಲ್ಲಿ ಪ್ಯಾಂಟಿಗೆ ಕೈಹಾಕಿದ. ಇಷ್ಟೆಲ್ಲ ರೆಪ್ಪೆ ತೆಗೆದಿಕ್ಕಿವುದರೊಳಗೆ ಆಗಿಬಿಟ್ಟಿತ್ತು.ಮುದುಕಿ “ಎಪ್ಪಾ” ಎಂದು ಒದರುತ್ತ ಓಡಿಬಂದು ಮಗನ ಮೇಲೆ ಸಾಗರ ಬಿತ್ತು. ಒಳಗಿನಿಂದ ಗೌಡ “ಏ ಶಿವನಿಂಗಾ” ಎಂದು ಕಿರುಚಿದ. ದತ್ತಪ್ಪ ಓಡಿಹೋಗಿ ತೆಕ್ಕೆ ಹಾದ. ಅವನೊಂದಿಗೆ ಇನ್ನಷ್ಟು ಜನ ಬಂದು ಶಿವನಿಂಗನನ್ನು ಹಿಡಿದರು. ಊರಿಗೂರೇ ಅಲ್ಲಿ ಸೇರಿತ್ತು.

ತಗಲಿಕೊಂಡರು

ಇದರ ಪರಿಣಾಮವಾಗಿ ಹಿಂಡು ಹಿಂಡು ಪೋಲೀಸರು ಊರು ಹೊಕ್ಕರು. ಯಾವುದಕ್ಕೋ ಬಂದವರು ಇನ್ಯಾವುದಕ್ಕೋ ತಗಲಿಕೊಂಡರು.
ಮಾರನೇ ದಿನವೇ ಗುಡಸೀಕರ ಸರಿಕರೊಂದಿಗೆ ಬೆಳಗಾವಿಗೆ ಹೋದ. ಮುಂದೆ ಎರಡು ಮೂರು ದಿನ ಬರಲೇ ಇಲ್ಲ. ಇಲ್ಲೀತನಕ ಹಿರಿಯರು ಚತುಷ್ಟಯರನ್ನು ಲೆಕ್ಕಕ್ಕೇ ಹಿಡಿದಿರಲಿಲ್ಲ. ಬಂದೊಡನೆ ಗುಡಸೀಕರನಿಂದ ಬೇರೆ ಇರೋದಕ್ಕೆ ತಾಕೀತು ಮಾಡಬೇಕೆಂದುಕೊಂಡರು. ಶಿವನಿಂಗನಿಗೆ ಹೆದರಿ ಊರು ಬಿಟ್ಟಿದ್ದಾರೆಂದೇ ಜನ ಆಡಿಕೊಂಡರು.
ಗುಡಸೀಕರ ಚತುಷ್ಟಯರ ಸಮೇತ ಬಂದಿಳಿದ. ಆಶ್ಚರ್ಯವೆಂದರೆ ಒಬ್ಬರ ಕಣ್ಣ ಬಳಿಯೂ ಚಿಂತೆಯ ಗೆರೆಯಿರಲಿಲ್ಲ. ಸಾಲದ್ದಕ್ಕೆ ಗೆದ್ದವರಂತೆ ಹುಮ್ಮಸ್ಸಿನಿಂದಿದ್ದರು. ಕುದುರೆಗೆ ಹಿಂಸೆ ಮಾಡಿದ್ದು ಅವರಿಗೆ ಸಾಮಾನ್ಯ ವಿಷಯವಾಗಿತ್ತು. ನಿಂಗೂ ತಡೆಯದೆ ಕಳ್ಳನ ಬಳಿಹೋಗಿ ” ಮೂಕ ಪ್ರಾಣೀನ್ನ ಹಾಂಗ ಬಡ್ಯಾಕೆ ತಿಳಿಲಿಲ್ಲೇನೋ? ತಡಿ, ನಿಮಗ ಗೌಡ್ರ ಬುದ್ಧಿ ಕಲಸ್ತಾರ” ಎಂದು ಹೇಳಿದಾಗ ಕಳ್ಳ “ಯಾರು ಯಾರಿಗೆ ಬುದ್ಧಿ ಕಲಸ್ತಾರ ನೋಡೀಯಂತ ತಡಿ” ಅಂದಿದ್ದ.
ಮಾರನೇ ದಿನ ಕೋಳಿ ಕೂಗಿ ಬೆಳಗಾಯಿತು. ಝಮುಝಮು ಥಡಿಯ ದಿನಗಳಾದ್ದರಿಂದ ಜನ ಏಳುವುದು ತಡವೇ. ‘ಕರಿಮಾಯೀ’ ಎಂದು ಮೈಮುರಿದು ಕಣ್ಣು ತಿಕ್ಕುತ್ತ ಹೊರಗೆ ಬಂದರೆ-ರಸ್ತೆಗಳಲ್ಲಿ, ಸಂದಿಗೊಂದಿಗಳಲ್ಲಿ, ಬಂದೂಕು ಹಿಡಿದ ಹಿಂಡು ಹಿಂಡು ಪೋಲೀಸರಿದ್ದರು!’ ಧಸ್ ಎಂದು ಎದೆ ಹಿಡಿದುಕೊಂಡು ‘ಕರಿಮಾಯೀ’ ಎಂದವರೇ ಒಳಗೋಡಿ ಬಾಗಿಲಿಕ್ಕಿಕೊಂಡರು. ಇಷ್ಟೊತ್ತಿನಲ್ಲಿ ಊರಲ್ಲಿ ಉರಿಹಚ್ಚಿ ಕಾಸಿಕೊಳ್ಳುವ ಮಕ್ಕಳ ಗಲಾಟೆಯೇನು? ಕೋಳಿಗಳ ಕೂಗಾಟವೇನು, ಹುಡುಗಿಯರು ನೀರು ತರುವ ಸಡಗರವೇನು, ನೋಡುವ ಹುಡುಗರ ಚಡಪಡಿಕೆಯೇನು, ದೀಡೀ ಮಾತೇನು, ಧಿಮಾಕಿನ ಉತ್ತರಗಳೇನು, ಎಲ್ಲ ಸ್ತಬ್ಧವಾಗಿ ಒಳಗೊಳಗೇ ಪಿಸುಗುಟ್ಟಿ ನಿಟ್ಟುಸಿರಿನಲ್ಲಿ ಮಾತಾಡಿಕೊಂಡರು. ಯಾಕೆಂದು ಯಾರಿಗೂ ತಿಳಿಯದು. ಗೌಡನನ್ನೂ, ಶಿವನಿಂಗನನ್ನೂ ಹಿಡಿಸುವ ಸಲುವಾಗಿ ಗುಡಸೀಕರ ಪೋಲೀಸ್ ಪಾರ್ಟಿ ತಂದಾನೆಂದು ಊಹಿಸಿದರು.
ಇತ್ತ ಗೌಡನ ಮನೆಯನ್ನೂ, ತೋಟವನ್ನೂ, ಪೋಲೀಸರು ಸುತ್ತುವರೆದಿದ್ದರು. ಬಾಗಿಲು ತೆಗೆದೊಡನೆ ಮನೆ ತಲಾಶ್ ಮಾಡಿದರು. ಅಡಕಲ ಗಡಿಗೆ ಚೆಲ್ಲಿದರು. ಪೇರಿಸಿಟ್ಟ ಧಾನ್ಯದ ಚೀಲ ಚೆಲ್ಲಿದರು. ಅಡ್ಡಬಂದ ಶಿವನಿಂಗನನ್ನು ದೂಕಿ, ಅಟ್ಟದ ಮೇಲಿನ ಹೊಟ್ಟು ಕೆದರಿದರು. ಸುದೈವಕ್ಕೆ ಅಲ್ಲೇ ಇದ್ದ ಪೆಟ್ಟಿಗೆ ತೆರೆಯಲಿಲ್ಲ. ಅದರಲ್ಲಿ ಕರಿಮಾಯಿಯ ಬಂಗಾರದ ಮೂರ್ತಿಯಿತ್ತು. ಮೂಲೆ ಮೂಲೆಯ ಸಾಮಾನು ಚೆಲ್ಲಿ ಚೆಲ್ಲಾಪಿಲ್ಲಿ ದರೋಡೆಯಾದ ಮನೆಮಾಡಿ ಹೊರಗೆ ಹೋಗಿ ಮತ್ತೆ ಕಾವಲು ನಿಂತರು.
ಶಿವನಿಂಗ ತಂದೆಗೆ ಹೇಳಬೇಕೆಂದು ತೋಟಕ್ಕೋಡಿದರೆ ಅಲ್ಲೂ ಅದೇ ಹಾಡು, ಗುಡಿಸಲ ಹೊರಗಿನ ಹೊರಸಿನ ಮೇಲೆ ಪೋಜುದಾರ ಕೂತಿದ್ದ. ಕಬ್ಬಿನ ಬೆಳೆ ಹೊಕ್ಕು, ಪೋಲೀಸರು ಹುಡುಕುತ್ತಿದ್ದರು. ಕೈ ಕೈ ಹೊಸೆಯುತ್ತ ಗೌಡ ನಿಂತಿದ್ದ. “ರೂಪಾಯಿ ಪಾಂಚ್ ಹಜಾರ್ ಬಹುಮಾನ ಕೊಡಸ್ತೇನ ಹೇಳ ಗೌದಾ, ಕೊಳವಿ ಮುದುಕಪ್ಪನ್ನ ಎಲ್ಲಿಟ್ಟಿದಿ?” ಎಂದು ಪೋಜುದಾರ ಗದರಿಸುತ್ತಿದ್ದ. “ನಂಗೊತ್ತಿಲ್ಲರೀ” ಎಂದು ಗೌಡ ಹೇಳುತ್ತಿದ್ದ.
ಕಟ್ಟಿ ಪೋಜುದಾರನೆಂದರೆ ಆ ಭಾಗದಲ್ಲಿ ಭಾರೀ ಹೆದರಿಕೆಯ ಹೆಸರು. ಆ ಹುದ್ದೆ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಮಾರಾಯ, ಭಯಂಕರ ಹೆಸರು ಮಾಡಿಕೊಂಡಿದ್ದ. ಚಳುವಳಿಯ ಹದಿನೆಂಟು ಹುಡುಗರ ಕಣ್ಣುಕಿತ್ತು ಮೂವತ್ತಾರು ಗುಡ್ಡೆಗಳನ್ನು ಗೋಲಿಮಾಡಿ ಇಂಗರೇಜಿಯವರೊಂದಿಗೆ ಆಡಿದ್ದನಂತೆ. ಅವನ ರೂಪ ಇಂಥ ಕತೆಗಳನ್ನು ಸಮರ್ಥಿಸುವಂತಿತ್ತು. ಕರೀ ಮೈ, ದಟ್ಟಮೀಸೆ, ನೆಣಕೊಬ್ಬಿನ ಪೊಗರು, ತನಗೆ ಎಲ್ಲರೂ ಅಂಜಬೇಕೆಂಬ ಛಲ, ಮೂಗು ದಪ್ಪ; ಮುಖದಲ್ಲಿ ಕರು ಮಲಗಿದಂತೆ. ಆದ್ದರಿಂದ ಆ ಮೂಗಿನ ತುದಿಯಿಂದ ನೋಡಿದರೆ ಉಳಿದವರು ಅಲ್ಪರಾಗಿ ಇಲ್ಲವೇ ಅಸ್ಪಷ್ಟವಾಗಿ ಕಾಣಿಸುವುದು ಸ್ವಾಭಾವಿಕ. ಇವ ಕಾಲಿಟ್ಟ ಊರುಗಳಲ್ಲಿ ಇವನ ಖ್ಯಾತಿ ಹ್ಯಾಗೆ ಹಬ್ಬಿತ್ತೆಂದರೆ ಅಳುವ ಮಕ್ಕಳಿಗೆ ತಾಯಂದಿರು “ಕಟ್ಟಿ ಪೋಜುದಾರನ ಕೈಯಾಗ ಕೊಡ್ತಿನ್ನೋಡ” ಎಂದು ಹೆದರಿಸುತ್ತಿದ್ದರಂತೆ! ಅದು ನಿಜವಿದ್ದೀತು; ಯಾಕೆಂದರೆ ಆ ಕರೀಮುಖದಲ್ಲಿ ಅವನ ಬಾಯಿ, ಕಣ್ಣು ಮಾತ್ರ ರಂಗು ಹೊಡೆದಂತೆ ಅಚ್ಚಕೆಂಪಗಿದ್ದವು. ಹೊಸದಾಗಿ ಪೋಜುದಾರನಾಗಿದ್ದನಲ್ಲ, ತನ್ನ ಟೊಪ್ಪಿಗೆಯ ಧೂಳನ್ನು ಮೇಲಿನಿಂದ ಮೇಲೆ ಕೊಡಹುತ್ತಿದ್ದ. ಅಷ್ಟೇ ಅಲ್ಲ-ಕಾಲ್ನಡಿಗೆ, ಹೊರಕಡೆಗೆ ಹೊರಟಾಗೆಲ್ಲ ಆ ಟೊಪ್ಪಿಗೆ ತೆಗೆದು ಒಬ್ಬ ಪೋಲೀಸನ ಕೈಗಿತ್ತು ಬಕ್ಕತಲೆಯಲ್ಲೇ ಹೋಗುತ್ತಿದ್ದ.
ಗುಡಸೀಕರ ಹಿಂದುಮುಂದಿನ ಖಬರಿಲ್ಲದೆ ಮುದುಕಪ್ಪ ಗೌಡನನ್ನು ಹಿಡಿದುಕೊಡುವ ಸೂಚನೆ ಕೊಟ್ಟೊಡನೆ ಅಕಾ ನನ್ನ ಪ್ರಿಯ ಟೊಪ್ಪಿಗೆಗೆ ಒಂದು ತುರಾಯಿಬಂತೆಂದು ಬಂದ. ಇಡೀ ದಿನ ಎಲ್ಲಿಯೂ ಮುದುಕಪ್ಪನ ಪತ್ತೆಯಾಗಲಿಲ್ಲ. ಅವನ ಫೊಟೋ ತೋರಿಸಿ ಇವನನ್ನು ಕಂಡೀರೇನೆಂದು ಅನೇಕರನ್ನು ಕೇಳಲಾಯಿತು. ಬೆದರಿಕೆ ಹಾಕಿ ನೋಡಿದರು. ಬಹುಮಾನದ ಆಸೆ ಹಚ್ಚಿ ನೋಡಿದರು. ಎಲ್ಲರೂ ನಾ ಕಂಡಿಲ್ಲ. ನೀ ಕಂಡಿಲ್ಲ. ಕಂಡವರ ಕಣ್ಣು ಕಳೆಯಲೆಂದು ಕರಿಮಾಯಿಯ ಹೆಸರುಗೊಂಡರು ಕೆಲವರು.
ತನಗೂ, ಪೋಜುದಾರನ ಈ ಧಾಳಿಗೂ ಸಂಬಂಧವಿಲ್ಲವೆಂಬಂತೆ ಗುಡಸೀಕರ ನಟಿಸಿದ. ಆದರೆ ಮುಚ್ಚಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಮಧ್ಯಾಹ್ನ ಪೋಲೀಸರಿಗೆ ಗೌದನ ಮನೆಯಲ್ಲಿ ಊಟವಾದರೆ ಪೋಜುದಾರನಿಗೆ ಗುಡಸೀಕರನ ಮನೆಯಲ್ಲಿ ವ್ಯವಸ್ಥೆಯಾಯಿತು. ಜನ ಮನಸ್ಸಿನಲ್ಲೇ ಅವನನ್ನು ಶಪಿಸಿದರು. ಕರಿಮಾಯಿಯ ಮೊರೆಹೊಕ್ಕರು.

ಬೆಕ್ಕಿನ ಬೆದೆ

ನಿಜ ಹೇಳಬೇಕೆಂದರೆ ಕೊಳವಿಯ ಮುದುಕಪ್ಪ ಗೌಡನನ್ನು ಇತ್ತೀಚೆಗೆ ಯಾರೂ ನೋಡಿರಲಿಲ್ಲ. ಗೌಡನೊಂದಿಗೆ ಅವನ ನಂಟುತನವಿದ್ದಿದೇನೋ ಜನರಿಗೆ ಗೊತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಮುದುಕಪ್ಪ ಗೌಡ ಒಮ್ಮೆ ಕೂಡ ಶಿವಾಪುರದ ಕಡೆ ಸುಳಿದಿರಲಿಲ್ಲ. ಆತ ಬಂದು ಗೌಪ್ಯವಾಗಿಯೇ ಗೌಡನ ಮನೆಯಲ್ಲಿದ್ದುದು ಗೌಡ, ದತ್ತಪ್ಪ, ಶಿವಸಾನಿ, ಲಗಮವ್ವ ಈ ನಾಲ್ವರಿಗಲ್ಲದೆ ಬೇರೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಸುಂದರಿ ಪತ್ತೆ ಹಚ್ಚುದ್ದು ಇವರಿಗೆ ಗೊತ್ತಿರಲಿಲ್ಲ. ಇದು ಗುಡಸೀಕರನ ಸಂಚೆಂದು ತಿಳಿದಾಗಂತೂ ಗೌಡ, ದತ್ತಪ್ಪ ಹೊತ್ತಿಕೊಂಡುರಿದರು. ಶಿವನಿಂಗನನ್ನು ತಡೆಹಿಡಿದದ್ದು ತಪ್ಪಾಯಿತೆಂದರು. ಇದೊಂದು ಸಲ ಪಾರಾದರೆ ನೆನಪಿಟ್ಟುಕೊಳ್ಳುವ ಹಾಗೆ ಬುದ್ಧಿ ಕಲಿಸಬೇಕೆಂದರು. ಆ ದಿನ ತಾಯಿ ದೇವರೇಸಿಯ ಮೈತುಂಬಿ ಬಿಕ್ಕಳಿಸಿದಳಂತೆ. ಹೋಗಿ ಕಾಲು ಹಿಡಿಯಲಿಕ್ಕೂ ಸಾಧ್ಯವಾಗದೇ ಹೋಯ್ತು. ಪೋಲೀಸರು ಗೌಡ, ದತ್ತಪ್ಪ ಇಬ್ಬರ ಮೇಲೂ ಕಾವಲಿದ್ದರು. ತಾಯಿ ಏನು ಹೇಳಲಿದ್ದಳೋ ಅವಳ ವಾಕ್ಯಕ್ಕೂ ಎರವಾದರು.
ಇತ್ತಲಾಗಿ ಗುಡಸೀಕರನ ಸಂತೋಷ ಬಹಳ ಹೊತ್ತು ಉಳಿಯಲಿಲ್ಲ. ಸೇಡಿನ ಉದ್ರೇಕದಲ್ಲಿ ಬಸವರಾಜನಿಗೆ ಹಗ್ಗಾ ಕೊಟ್ಟು ಕೈಕಟ್ಟಿಸಿಕೊಂಡಂತಾಗಿತ್ತು. ಇಲ್ಲದಿದ್ದರೆ ಗಾಂಧೀಜಿಯ ಪರಮ ಭಕ್ತನಾಗಿ, ಸ್ವಾತಂತ್ರ್ಯ ಹೋರಾಟಗಾರರನ್ನೇ ಕೈಯಾರೆ ಕೊಡಲೊಪ್ಪಿ ದೇಶದ್ರೋಹ ಮಾಡುವುದೆಂದರೇನು? ಬೆಳಗಾವಿಯಲ್ಲಿದ್ದಾಗ ಚಳುವಳಿ ಸೇರಬೇಕಂದದ್ದು ಸುಳ್ಳೆ? ಗಾಂಧೀಜಿಯ ಸಲಹೆಯಂತೆ ಹಳ್ಳಿಗೆ ಬಂದದ್ದು ಸುಳ್ಳೆ? ಸುಳ್ಳೇನು? ಶಿವಾಪುರದಲ್ಲಿ ಚಳುವಳಿಯ ಹುಡುಗರಿದ್ದಿದ್ದರೆ ಇವನೇ ಮುಂದಾಳಾಗುತ್ತಿದ್ದ. ತಾನು ಹಲ್ಕಟ್ ದಂಧೆ ಮಾಡಿದೆನೆಂದು ತಿಳಿದದ್ದು ಪೋಜುದಾರ ಊಟಕ್ಕೆ ಬಂದಾಗ.
ಊಟಕ್ಕೆ ಕೂತಿದ್ದರಲ್ಲ, ಓಡಾಡಿ ನೀಡುತ್ತಿದ್ದ ಗಿರಿಜಾಳನ್ನು ತೋರಿಸಿ ಪೋಜುದಾರ ಇವನ ಕಂಕುಳಕ್ಕೆ ಕೈಹಾಕಿ ಕಣ್ಣು ಮಿಟುಕಿಸಿ “ಗೊಂಬ್ಯಾಗ್ಯಾಳಲ್ಲಾ!” ಎಂದ. ಇವನ ಪಿತ್ಥ ನೆತ್ತಿಗೇರಿತು. ತಡಕೊಂಡು “ಆಕಿ ನನ್ನ ತಂಗಿ” ಎಂದ. ಪೋಜುದಾರ ನಂಬಲಿಲ್ಲ. ಗುಡಸೀಕರ ತನ್ನ ತಂಗಿಯನ್ನು ಸರಿಯಾಗಿ ಗಮನಿಸಿದ್ದು ಈಗಲೇ ಎಂದು ತೋರುತ್ತದೆ. ಎದೆ ಮೀರಿ ಬೆಳೆದಿದ್ದಳು. ಕುಬಸ ತೊಟ್ಟು ಒಳಗೆ ಬಾಡಿ ಹಾಕಿದ್ದಳು. ಜೋಡು ಹೆಳಲು ಹಾಕಿ ಟೇಪು ಕಟ್ಟಿದ್ದಳು. ನೋಡಿದವರು ಇವಳು ಹಳ್ಳಿಯವಳೆಂದು ಹೇಳುವುದು ಸಾಧ್ಯವೇ ಇರಲಿಲ್ಲ. ಅವಳ ಮೇಲೂ ಸಿಟ್ಟು ಬಂತು. ಪೋಜುದಾರ ಕೆಂಪು ಕಣ್ಣರಳಿಸಿ ಬೆವರು ಸುರಿಸುವ ಕರೀ ಕೆನ್ನೆಗಳನ್ನು ಕುಣಿಸುತ್ತ ಅನ್ನದ ಅಗಳಗಂಟಿದ ಬಿಳೀ ಹಲ್ಲುಗಳಲ್ಲಿ ನಗುತ್ತ “ಸುಳ್ಳ ಯಾಕ ಹೇಳ್ತೀಯೋ? ಇಂಥಾ ಕೆಲಸದಾಗ ನಾ ಮುಳುಗಿ ಮುಳುಗಿ ಎದ್ದಾಂವ” ಅಂದ. ಈಗ ಗುಡಸೀಕರನ ಮುಖ ನೋಡಬೇಕಿತ್ತು. ಸಿಟ್ಟು ತಹಬಂದಿಗೆ ತರಲಾರದೆ ತಾಮ್ರದ ತಪ್ಪಲೆಯಂತೆ ಮುಖಮಾಡಿ “ಸಾಹೇಬರ ಒಬ್ಬರ ಮನೀಗಿ ಬಂದಾಗ ಇಂಥಾ ನಡತಿ ಚೆಲೋ ಅಲ್ಲರಿ” ಅಂದ.
ಪೋಜುದಾರನಿಗೂ ಸಿಟ್ಟುಬಂತು. “ನನಗ ನಡತಿ ಕಲಸ್ತೀಯೇನೋ? ಬೆಳಗಾವಿ ಚಿಮಣಾನ ನೀ ತಂದಿಟ್ಟುಕೊಂಡದ್ದ ನಂಗೊತ್ತಿಲ್ಲಂದಿ?”
ಊಟವಾದ ಮೇಲೆ ಮನಸ್ಸಿಲ್ಲದಿದ್ದರೂ ಪೋಜುದಾರನ ಮಲಗುವ ವ್ಯವಸ್ಥೆಯನ್ನು ಮಹಡಿಯ ಮೇಲೆ ಮಾಡಬೇಕಾಯಿತು. ಗುಡಸೀಕರನ ತಡೆದಿಟ್ಟ ಸಿಟ್ಟು ಬಸವರಾಜನ ಮೇಲೆ ಹರಿಹಾಯಿತು. ನಿನ್ನ ಮಾತು ಕೇಳಿ ಇಡೀ ಊರಿಗೆ ನಿವಾಳಿಸುವ ಪ್ರಸಂಗ ಬಂತು. ಹೆರವರ್‍ಯಾರೋ, ತನ್ನವರ್‍ಯಾರೋ ಹೋ ಎಂದು ಹಾರಾಡಿದ. ಮಾತಿಗೆ ಅವಕಾಶ ಕೊಟ್ಟು ಆಮೇಲೆ ಬಸವರಾಜು, ತನ್ನ ಸಹಜ ಬುದ್ಧಿವಂತಿಕೆ ಬಿಚ್ಚಿದ. ಪೋಜುದಾರ ನೀಚನೇ, ಇನ್ನೇನು ಸಜ್ಜನನಾಗಿರಬೇಕೆ? ನಮ್ಮ ಕೆಲಸ ಮುಖ್ಯ. ಮುದುಕಪ್ಪನ ಜವಾಬ್ದಾರಿ ನನಗಿರಲಿ. ಈಗ ಇದನ್ನೋದು ತಿಳಿಯುತ್ತದೆ; ನಾ ಯಾರೆಂದು ಎನ್ನುತ್ತ ಕಿಸೆಯಲ್ಲಿಯ ಒಂದು ಕಾಗದ ತೆಗೆದ.
ಅದು ಮೆಹರ್ಬಾನ ಪೋಜುದಾರ ಸಾಹೇಬರ ಪಾದಾರವಿಂದಕ್ಕೆ ಚಿಮಣಾ ಸುಂದರಬಾಯಿ ಬರೆದ ವಿನಂತಿಯ ಅರ್ಜಿಯಾಗಿತ್ತು. ಗೌಡ, ಗೌಡನ ಮಗ, ಶಿವನಿಂಗ, ಇಬ್ಬರೂ ಸೇರಿ ತನ್ನನ್ನು ಬಲಾತ್ಕರಿಸಿ ಬಸಿರು ಮಾಡಿದ್ದಾರೆಂದೂ, ತನ್ನ ಹಾಗೂ ಗರ್ಭದ ಕೂಸಿನ ಜೀವನೋಪಾಯಕ್ಕೆ ಆಧಾರ ಮಾಡಬೇಕೆಂದೂ ಚಿಮಣಾ ಕೈಮುಗಿದು ಕೋರಿದ್ದಳು. ಕೆಳಗೆ ಸದರಿ ಅರ್ಜಿದಾರಳ ಸಹಿ ಇತ್ತು. ಶಿವನಿಂಗನ ಹೆಸರು ಸೇರಿದ್ದಕ್ಕೆ ಗುಡಸೀಕರನ ಸೇಡಿನ ಹೆಡೆಯಾಡಿ ಸೈಯೆನಿಸಿತು. ಬಾಕಿ ತಾನು ನೋಡಿಕೊಳ್ಳುವುದಾಗಿ ಬಸವರಾಜು ಬಲಗೈ ಭಾಷೆಕೊಟ್ಟ.
ಪೋಜುದಾರ ಏಳುವ ಸಮಯಕ್ಕೆ ಸರಿಯಾಗಿ ಬಸವರಾಜು ಹೋದ ಹತ್ತುಸಲ ಹಲ್ಲು ಗಿಂಜಿ ಅರ್ಜಿಕೊಟ್ಟ. ಮುದುಕಪ್ಪ ಗೌಡ ಸಿಕ್ಕದಿದ್ದ ನಿರಾಸೆಯಲ್ಲಿದ್ದ ಕಟ್ಟಿ ಸಾಹೇಬರ ಕಣ್ಣು ಪಳ ಪಳ ಹೊಳೆದವು. ಹೆಣ್ಣಿನ ಕೇಸುಗಳೆಂದರೆ ಅವನಿಗೆ ಪಂಚಪ್ರಾಣ. ಊಟಕ್ಕೆ ಕೂತಿದ್ದಾಗ ಚಿಮಣಾಳಂಥವಳನ್ನು ನೋಡಿದ್ದ ಬೇರೆ. ಅರ್ಜಿಯನ್ನು ಕೆಳಗಿನ ಚಿಮಣಾಳಿಗೆ ಕೇಳಲೆಂಬಂತೆ ಜೋರಿನಿಂದ ಓದಿದ. ಕೆಳಗಡೆ ಕಟ್ಟೆಯ ಮೇಲೆ ನಿಂಗೂ ಕೂತಿದ್ದವನು ಕೇಳಿ ಗೌಡನ ಮನೆಯ ಕಡೆಗೋಡಿದ.
ರಾತ್ರಿ ಖಾವಂದ ಕಟ್ತಿ ಪೋಜುದಾರ ಸಾಹೇಬ ದರ್ಬಾರು ಕರೆದ.ಹಿರುಯರು ಬಂದರು. ಕೈಯಲ್ಲಿಯ ಕೋಲನ್ನು ಅತ್ತಿತ್ತ ಆಡಿಸುತ್ತ ಪೋಜುದಾರ “ಸುಂದರಾ ಬಾಯೀನ ಕರಸು” ಎಂದ. ಗೌಡನಿಗೆ ಸುಂದರಾಬಾಯಿ ಯಾರೆಂದು ತಿಳಿಯಲಿಲ್ಲ. ಊರಿನಲ್ಲಿ ಆ ಹೆಸರಿನವರು ಯಾರೂ ಇದ್ದಂತಿರಲಿಲ್ಲ. ಅನುಮಾನಿಸುತ್ತ “ಯಾವ ಸುಂದರಾಬಾಯಿ?” ಎಂದು ಹೇಳುತ್ತಿರುವಂತೆಯೇ ದತ್ತಪ್ಪ “ಅದ, ಗುಡಿಸ್ಯಾ ತಂದಿಟ್ಟುಕೊಂಡಾನಲ್ಲ. ಚಿಮಣಾ” ಎಂದ. ಅವಳನ್ನು ಕರೆತರಲು ಹಳಬ ಓಡಿದ, ವಿಷಯವೇನೆಂದು ಗೌಡ, ದತ್ತಪ್ಪ ಇಬ್ಬರಿಗೂ ಹೊಳೆಯಿತು. ಸುಂದರಿ ಬಸಿರಾದ್ದನ್ನು ಯಾರೋ ಮೂಕರ್ಜಿ ಮಾಡಿ ತಿಳಿಸಿದ್ದು ಖಾತ್ರಿಯಾಯ್ತು. ಗೌಡನಿಗೆ ಇದ್ದದ್ದೂ ದಿಗಿಲು. ಹಾಗೇನಾದರೂ ಬಂದಿದ್ದರೆ ನಮ್ಮ ನಾವೇ ತೀರಿಸಿಕೊಳ್ಳಬಹುದಾಗಿತ್ತು. ಯಾವ ಚಂಡಾಲರು ಮೂಕರ್ಜಿ ಕೊಟ್ಟಿದ್ದಾರೋ ಎಂದು ಗೌಡ ಚಿಂತಿಸಿದರೆ ದತ್ತಪ್ಪನಿಗೆ ಒಳಗೊಳಗೇ ಖುಷಿಯಾಗಿತ್ತು. ಗುಡಿಸ್ಯಾ ಇದರಿಂದಾದರೂ ಹಣ್ಣಾಗುತ್ತಾನಲ್ಲಾ ಎಂದು. ಅಷ್ಟರಲ್ಲಿ ಗುಡಸೀಕರ ಚತುಷ್ಟಯರೊಂದಿಗೆ ಬಂದ. ಅವನ ನಿರ್ಮಲ ಮುಖನೋಡಿ ದತ್ತಪ್ಪನಿಗಿನ್ನೂ ನಗೆ ಬಂತು. ದೂರದಲ್ಲಿ ಜನ ಗುಂಪಾಗಿ ನಿಂತಿದ್ದರು. “ಸುಂದರಾಬಾಯಿ ಬರಲಿಲ್ಲೇನು?” ಎಂದು ಪೋಜುದಾರ ಗುಡುಗಿದ. ಸುಂದರಿ ಆಗಲೇ ಬಂದಿದ್ದಳು. ಆದರೆ ಯಾರೂ ಗಮನಿಸಿರಲಿಲ್ಲ. ಜನಗಳಲ್ಲಿ ನಿಂತಿದ್ದ ಬಸವರಾಜೂನನ್ನು ಗುಡಸೀಕರ ಕರೆದು ಚಾವಡಿಯಲ್ಲಿ ಅವನಿಗಿಷ್ಟು ಕೂರಲು ಸ್ಥಳ ಕೊಟ್ಟ. ಸುಂದರಿ ಬಂದುದನ್ನು ತಿಳಿಸಿದವನೂ ಗುಡಸೀಕರನೇ, “ಶಿವನಿಂಗ ಅಂಬಾಂವೆಲ್ಲಿ?” ಎಂದು ಪೋಜುದಾರ ಗುಡುಗಿದ. ಹಳಬ ಮತ್ತೆ ಓಡಿದ. ಶಿವನಿಂಗನಿಗಾಗಿ ಕಾಯದೆ ವಿಚಾರಣೆ ಸುರುವಾಯ್ತು. ಪೋಜುದಾರನ ಮೊದಲನೇ ನುಡಿಗೇ ಎಲ್ಲರಿಗೂ ಆಘಾತವಾಯ್ತು.
“ಏನೋ ಗೌಡಾ, ಊರಿಗಿ ಹಿರ್‍ಯಾ ಆಗಿ ನೀನಽ ಇಂತಾ ಹಲಕಟ್ ದಂಧಾ ಮಾಡೋದಾ?”
“ಯಾಕ ಏನಾತ್ರಿ?”
“ಅರೇದವನ್ಹಾಂಗ ಆಡಬ್ಯಾಡ. ಚಿಮಣಾ ಬಾಯೀನ ನೀನೂ, ನಿನ್ನ ಮಗ ಕೂಡಿ ಬಸರ ಮಾಡಿದ್ದ ಎಷ್ಟು ದಿನ ಮುಚ್ಚಿಟ್ಟುಕೋಬೇಕಂತಿದ್ದಿ?”
ಈ ಮಾತು ಕೇಳಿ ಎಲ್ಲರಿಗೂ ಅಸಮಧಾನವಾಯ್ತು. ಕುಸ್ತಿ ಹುಡುಗರಾಗಲೇ ಕುದಿಯತೊಡಗಿದ್ದರು. ಗೌಡ ಬಾಯಿ ತೆಗೆಯುವುದರೊಳಗೆ ದತ್ತಪ್ಪನೇ ಮಾತಾಡತೊಡಗಿದ.
“ಏನಂಬೋ ಮಾತರಿ ಇದು? ಕರಕೊಂಬಂದಾವ ಗುಡಿಸ್ಯಾ. ಗೌಡರಿಗಿ ಆಕೀ ಹೆಸರ ಸೈತ ಗೊತ್ತಿಲ್ಲ. ಬಸರ ಮಾಡೋದಂದರೇನ್ರಿ?”
“ನಡುವ ಬಾಯಿ ಹಾಕಾಕ ನೀ ಯಾರಲೆ?”
ಸಿಟ್ಟು ಎಲ್ಲರ ನೆತ್ತಿಗೇರಿತು. ಪೋಜುದಾರನಿಗೆ ಇನ್ನೂ ಹೆಚ್ಚು. ತನ್ನ ಗಂಡಸು ದನಿಗೆ ಅಧಿಕಾರದ ಮದ ಬೆರೆಸಿ, ಮಾತಿಗೊಮ್ಮೆ ಲೇ ಎನ್ನುತ್ತ ಒದರಾಡತೊಡಗಿದ. “ಗೌಡ ಮಾಡಿಲ್ಲದೇ ಹೋದಲ್ಲಿ ಸ್ವಥಾ ಅರ್ಜಿ ಯಾಕ ಹಾಕಲಿಲ್ಲ?” ಅಂದ. “ಪರವೀರವಳ ಬಗ್ಗೆ ತಾ ಯಾಕೆ ಅರ್ಜಿ ಹಾಕಬೇಕೆಂದು” ಗೌಡ ಕೇಳಿದ. “ಪರವೂರವಳಾದ ಮಾತ್ರಕ್ಕೆ ಅನ್ಯಾಯ ಆಗಬಹುದೋ?” ಎಂದು ಪೋಜುದಾರ ಕೇಳಿದ. “ಅದು ಕರೆತಂದವರ ಜವಾಬ್ದಾರಿ” ಎಂದು ಗೌಡ ಹೇಳಿದ. “ಅವಳನ್ನು ಕರೆತಂದವರ್‍ಯಾರು, ಆಕೆ ಜೊತೆ ವ್ಯವಹಾರ ಇದ್ದವರ್‍ಯಾರು ಅಂತ ಊರಂತೂರು ಗೊತ್ತಿದ್ದ ವಿಚಾರ. ವಿಚಾರಿಸಬಹುದಲ್ಲ” ಎಂದು ದತ್ತಪ್ಪ ಹೇಳಿದ. ಇಷ್ಟೆಲ್ಲ ಮಾತು ಚಕಮಕಿಯ ಕಿಡಿಯಂತೆ ಹಾರಿ ಹೋಗುತ್ತಿದ್ದವು. ತನ್ನ ಕೈಕೆಳಗಿನ ಗೌಡ ಕುಲಕರ್ಣಿಗಳಿಂದ ಈ ರೀತಿಯ ಅವಿಧೇಯತೆಯನ್ನು ಪೋಜುದಾರ ನಿರೀಕ್ಷಿಸಿರಲಿಲ್ಲ. ಮುಖದ ಮೇಲೇ ಸ್ಪಷ್ಟವಾಗಿ ಮಾತಾಡತೊಡಗಿದ್ದರು. ಪೋಜುದಾರನಿಗೆ ತನ್ನ ಮೀಸೆ ಬೋಳಿಸಿ ಕೈಗಿಟ್ಟಷ್ಟು ಅವಮಾನವಾದಂತಾಗಿತ್ತು. ಬುಸುಗುಡಲಾರಂಭಿಸಿದ. “ನೀನೇನಂತಿ?” ಎಂದು ಗುಡಸೀಕರನತ್ತ ತಿರುಗಿದ. ಗುಡಸೀಕರ ಎದ್ದು ಚಾವಡಿಯ ಮಧ್ಯೆ ಬಂದು,
“ಮೆಹರ್ಬಾನ್ ಪೋಜುದಾರ ಸಾಹೇಬರೇ, ಊರ ಹಿರುಯರೆ, ಅಣ್ಣತಮ್ಮಂದಿರೆ, ಅಕ್ಕ ತಂಗಿಯರೆ….”
ಎಂದು ಭಾಷಣ ಸುರುಮಾಡಿದ. ಪೋಜುದಾರನಿಗೆ ವಿಶ್ರಾಂತಿ ಬೇಕಿತ್ತೆಂದು ತೋರುತ್ತದೆ. ಅವನನ್ನು ತಡೆಯಲಿಲ್ಲ. ಇನ್ನು ಗುಡಸೀಕರನನ್ನು ತಡೆಯುವವರ್‍ಯಾರು? ಅದೇ ಗೊತ್ತಲ್ಲ. “ಇಂಡಿಯಾ ದೇಶ, ಹಳ್ಳಿಗಳ ದೇಶದಿಂದ ಸುರುವಾಗಿ ಪಂಚಾಯ್ತಿಯವರೆಗೆ ಬಂದು, ತಾನು ಊರ ಮುಂದೆ ತರೋದಕ್ಕೆ ಪ್ರಯತ್ನಿಸಿದ್ದು, ಹಿರಿಯರು ಅವನ ಕಾಲುಹಿಡಿದು ಹಿಂದೆಳೆದದ್ದು, ಪಂಚಾಯ್ತಿ ಹಿಂದಿರುಗಿಸಲೆಂದು ಕೇಳಿದ್ದು, ಎಲೆಕ್ಷನ್ ಆಗಲೆಂದು ತಾ ಹೇಳಿದ್ದು…. ಇತ್ಯಾದಿ ಇತ್ಯಾದಿ. ಪೋಜುದಾರನ ತಾಳ್ಮೆ ತಪ್ಪಿ “ಲಗು ಮುಗಸಪಾ” ಎಂಬ ಸೂಚನೆ ಬಂತು. “ತನ್ನನ್ನು ಎಲೆಕ್ಷನ್ನಿನಲ್ಲಿ ಸೋಲಿಸೋದಕ್ಕೆ ಗೌಡ ಇಂಥ ಅಪವಾದ ತನ್ನ ಮೇಲೆ ಹೊರಿಸುತ್ತಿದ್ದಾನೆ ಎಂದು ಹೇಳಿದ. ಕೂಡಿದವರು ತಂತಮ್ಮಲ್ಲಿ ತಲೆಗೊಂದು ಮಾತಾಡಿಕೊಂಡರು. ಬೇಕಾದರೆ ಪೋಜುದಾರನೇ ಇವರನ್ನು ನಿಯಂತ್ರಿಸಲೆಂದು ಗೌಡ ಸುಮ್ಮನಾದ. ದತ್ತಪ್ಪನೂ ಅಷ್ಟರಲ್ಲಿ ಕೂಡಿದ ಮಂದಿಯೊಳಗಿಂದ ನಿಂಗೂ ಜಿಗಿದು ಬಂದು ಪೋಜುದಾರನ ಎದುರು ನಿಂತ. ಒರಟು ದನಿಯ ಹೆಣ್ಣು ವೇಷದ ಇವನನ್ನು ನೋಡಿ ಆ ಬಿಗಿ ವಾತಾವರಣದಲ್ಲೂ ಪೋಜುದಾರನಿಗೆ ಮೋಜೆನಿಸಿತು. ಆವೇಶ ಬಂದವನಂತೆ ಎತ್ತರದ ದನಿಯಲ್ಲಿ” ಅಲ್ಲಪಾ ಸರಪಂಚಾ, ನೀನಽ ಆಕೀನ್ನ ತಂದ ಇಟ್ಟಕೊಂಡಿದೀ. ದಿನಾ ಆಕೀ ಸೀರೀ ಸೆರಗಿನ್ಯಾಗ ಉಳ್ಳಾಡತಿ, ಗೌಡ್ರ ಬಸರ ಮಾಡ್ಯಾರಂತ, ಹೇಳಾಕ ಬಂದಿ. ಮ್ಯಾಲ ಶಿವನಿಂಗನ ಹೆಸರೂ ಸೇರಿಸಿದಿ. ತಿಳೀಬಾರದ? ಯಾರಾದರೂ ನಂಬೂ ಮಾತಽ ಇದು? ನೋಡೋಣು, ಈ ಮಂದ್ಯಾಗ ಒಬ್ಬರ ಬಾಯಾಗಾದರೂ ಈ ಮಾತ ಹೊಂಡಸು, ಗಂಡಸಂತೀನಿ.”
ಅಂದ. ಇಂಥ ಮಾತನ್ನು ಗುಡಸೀಕರ ಮೊದಲೇ ನಿರೀಕ್ಷಿಸಿದ್ದನೆಂದು ತೋರುತ್ತದೆ. “ಯಾರ ಬಾಯಾಗ ಯಾಕ ಹೊಂಡಸಬೇಕೂ? ಆಕೀ ಗೌಡನ ತೊಡೀಮ್ಯಾಲ ತಲೀ ಇಟ್ಟಾ ಮಲಗಿದ್ದ ಖುದ್ದ ನಾನಽ ನೋಡೀನಿ. ಬೇಕಂದರ ಬಸವರಾಜೂನ.”
ಓತಿಕ್ಯಾತಿಗೊಂದು ಬೇಲಿ ಸಾಕ್ಷಿ. ಈಗ ಗೌಡ ಬಾಯಿ ಬಿಡಲೇ ಬೇಕಾಯಿತು. ಎದ್ದುನಿಂತು ಪೋಜುದಾರನ ಕಡೆಗೊಮ್ಮೆ. ಜನರ ಕಡೆಗೊಮ್ಮೆ ಮುಖಮಾಡಿ, ಆಗಾಗ ಎರಡೂ ಕೈ ಜೋಡಿಸುತ್ತ, ಅಂದಿನ ಘಟನೆಯನ್ನು ವಿವರಿಸತೊಡಗಿದ. ಗೌಡನಿಗೆ ಈ ರೀತಿ ಮಾತಾಡುವ ಅವಕಾಶ ಕೊಡುವುದು ಗುಡಸೀಕರನಿಗೆ ಬೇಕಿರಲಿಲ್ಲ. ಪೋಜುದಾರ ಗೌಡನನ್ನು ತಡೆಯುವ ಗೋಜಿಗೆ ಹೋಗಲೇ ಇಲ್ಲ. ಗೌಡನ ಪ್ರತಿ ಮಾತಿಗೂ ಸತ್ಯದ ಹೊಳಪಿತ್ತು, ಹರಿತವಿತ್ತು. ಸತ್ಯವೇ ಹಾಗೆ. ಜನರ ಕಣ್ಣಲ್ಲಂತೂ ಗುಡಸೀಕರ ಪುಡಿ ಪುಡಿಯಾಗಿಬಿಟ್ಟ. ಆಗಾಗ ತಡೆಯುವುದಕ್ಕೆ ಯತ್ನಿಸಿ ಸೋತ. ಗೌಡ ಕೊನೆಗೆ-
ನೋಡ್ರಿ ಸಾಹೇಬರ ಆದದ್ದ ಹಿಂಗ. ಈ ಮಾತಿಗೆ ಎರಡಿದ್ದರ ಕರಿಮಾಯಿ ನನ್ನ ನಾಲಿಗಿ ಸೀಳಲಿ. ಬೇಕಾದರ ದತ್ತೂನ ಕೇಳ್ರಿ. ಲಗಮವ್ವನ ಕೇಳ್ರಿ. ಗುಡಿಸ್ಯಾನ ಮ್ಯಾಲ ನಮಗ್ಯಾಕ್ರಿ ಸಿಟ್ಟು ಬರಬೇಕು? ಸಿಟ್ಟಿದ್ದಿದ್ದರ ನಾವಽ ಕರದ ಪಂಚಾಯ್ತಿ ಅವನ ಕೈಯಾಗಿಡತಿದ್ದಿವ?”
ಎಂದ. ಇದನ್ನು ಕೇಳಿ ಮಂದಿಯ ಅಂಚಿಗಿದ್ದ ಲಗಮವ್ವನೇನು ಅನೇಕರು ಕರಗಿ ಕಣ್ಣಿರು ತಂದರು.
ಹಿಂದಿನ ಎಲ್ಲ ಕೇಸುಗಳಲ್ಲಿಯಂತೆ ಇಲ್ಲಿಯೂ ತಾನೇ ಸೋಲುತ್ತಿದ್ದೇನೆಂದು ಗುಡಸೀಕರನಿಗನ್ನಿಸಿತು. ಸ್ವಥಾ ಪೋಜುದಾರನೂ ಆರ್ದ್ರನಾಗಿದ್ದಂತೆ ತೋರಿತು. ಕೂಡಲೇ ಆವೇಶ ತಾಳಿ ಹೆದರಿದವರು ಕಿರಿಚಿ ಮಾತಾಡುವಂತೆ ಒದರಿದ:
“ಇಂಥಾ ಬಣ್ಣದ ಮಾತು ಮೆಹರ್ಬಾನ ಸಾಹೇಬರ ಮುಂದ ಆಡ್ತೀಯೇನೋ ಗೌಡಾ? ಅವರಿಗೆಲ್ಲಾ ತಿಳಿತೈತಿ. ಸಾಹೇಬರಽ ಬೇಕಾದ್ರ ಸುಂದರೀಬಾಯಿ ಇಲ್ಲೇ ಇದ್ದಾಳ ಆಕೀನ್ನಽ ಕೇಳ್ರಿ. ಹೇಳತಾಳ ಇವನ ಅವತಾರ.”
ಕೆಲದಿನಗಳ ಹಿಂದೆ ಬಸವರಾಜು ತನ್ನಿಂದ ಬಸಿರಿಳಿಯುವ ಮದ್ದು ಒಯ್ದ ಕಾರಣ ಸ್ಪಷ್ಟವಾಯ್ತು ನಿಂಗೂನಿಗೆ. ಆ ಉದ್ರೇಕದಲ್ಲಿ ಗಪ್ಪನೆ ಪೋಜುದಾರನ ಮುಂದೆ ಕೂತು ನೆಲ ಬಾರಿಸುತ್ತ,
“ಸಾಹೇಬರ ಇದರ ಹಕೀಕತೆಲ್ಲ ನನಗ ತಿಳೀತ್ರಿ”ಅಂದ. ಇವನ ಮಾತು ಕೇಳುವ ತಾಳ್ಮೆ ಪೋಜುದಾರನಿಗಿರಲಿಲ್ಲ.
“ಬಾಯ್ಮುಚ್ಚತೀಯೋ? ಇಲ್ಲಾ ಲಗಾಸಂತಿಯೋ?”

“ಕೇಳಿದಮ್ಯಾಲ ಬೇಕಾದರ ಲಗಾಸರಿ. ಹಲಿವುಳಿಯೋಮದ್ದ ಬಸವರಾಜೂಗ ಸ್ವಥಾ ನಾನ ಕೊಟ್ಟಿದ್ನಿ. ಅಂದಽ ಚಿಮಣಾಗ ಕೊಟ್ಟಿದ್ದ. ಗೌಡರ ಹೇಳಿದ್ದೆಲ್ಲಾ ಅಂದಽ ನಡದೈತ್ರಿ.”
ಕೂಡಿದ ಮಂದಿಗೆಲ್ಲ ಖಾತ್ರಿಯಾಗಿಬಿಟ್ಟಿತ್ತು. ಗುಡಸೀಕರನ ಪಿತ್ಥ ನೆತ್ತಿಗೇರಿತು. “ಸ್ವಥಾ ಬಸರದಾಕೀನ ಬಿಟ್ಟ ಇದೆಲ್ಲಿ ಸಾಕ್ಷಿ ಕೇಳಾಕ ಹತ್ತಿದಿರಿ?” ಎಂದು ಪೋಜುದಾರನಿಗೆ ಸಿಟ್ಟು ಮಾಡಿದ. ಪೋಜುದಾರನಿಗೂ ತನ್ನ ಅಧಿಕಾರದ ನೆನಪಾಯಿತು.
“ಯಾಕಲೇ ಹಲಿವುಳಿಯೋ ಮದ್ದ ಕೊಡೋದು ಬೇಕಾಯ್ದೀಶೀರುನ್ನೋದ ಗೊತ್ತಿಲ್ಲ? ಮೊದಲ ನಿನ್ನಽ ಜೇಲಿಗೆ ಹಾಕತೀನಿ ತಡಿ: ಆ ಮ್ಯಾಲ ಅವರನ್ನ ನೋಡಿಕೊಳ್ತೀನಿ? ಎಲ್ಲಿ ಆ ಹೆಂಗಸು?”
ಎಂದು ಸುಂದರಿಯನ್ನು ಮುಂದೆ ಕರೆತರುವಂತೆ ಸನ್ನೆ ಮಾಡಿದ. ಈತನಕ ಮೂಲೆಯಲ್ಲಿ ಹುದುಗಿದ ಸುಂದರಿ ಮುಂದೆ ಬಂದಳು. ಪೋಜುದಾರನ ಕೌತುಕವೆಲ್ಲ ಸೋರಿಹೋಯಿತು. ಇವಳು ಇಂದು ಮಧ್ಯಾಹ್ನ ಊಟ ನೀಡಿದವಳಾಗಿರಲಿಲ್ಲ. ಉಳಿದವರೆಲ್ಲ ಉಸಿರು ಬಿಗಿಹಿಡಿದು ಅವಳನ್ನೇ ನೋಡುತ್ತಿದ್ದರು. ಆಕೆ ಗುಡಸೀಕರನಂತೆ ಹೇಳುವುದರಲ್ಲಿ ಸಂಶಯವಿರಲಿಲ್ಲ. ದಿನಾ ಅವನ ಅನ್ನ ಉಂಡವಳು, ಮೈಯುಂಡವಳು ಇನ್ನು ಹ್ಯಾಗೆ ಹೇಳ್ಯಾಳು? ಕೆಲವರಾಗಲೇ ಗೊಣಗಿದರು ಕೂಡ. ಅದು ಪೋಜುದಾರನಿಗೆ ನಿಲುಕಲೇ ಇಲ್ಲ. ಈ ಮಧ್ಯೆ ನಿಂಗೂ ಯಾವಗಲೋ ಮಾಯವಾಗಿದ್ದ. ಸುಂದರಿ ಮುಂದೆ ಬಂದು ತಲೆಬಾಗಿ ನಿಂತಳು.
“ಏನಽ ಬರೋಬರಿ ಹೇಳ, ನೀ ಬಸರಾದ್ದದ್ದ ಯಾರಿಗೆ?” ಏನು ಹೇಳುತ್ತಾಳೆಂದು ಎಲ್ಲರೂ ತುಟಿ ಬಿಗಿಹಿಡಿದು ನಿಂತರು. ಸುಂದರಿ ಮೆಲ್ಲಗೆ “ಗೌಡಗ” ಎಂದು ಹೇಳಿ ಗೌಡನ ಕಡೆ ಬೆರಳುಮಾಡಿ ತೋರಿಸಿ ಮತ್ತೆ ತಲೆ ಕೆಳಗೆ ಹಾಕಿದಳು. ಇದು ಸಮೀಪದವರಿಗೆ ಕೇಳಿಸಿತು, ದೂರಿದ್ದವರಿಗೆ ಕೇಳಿಸಲಿಲ್ಲ. ತಂತಮ್ಮಲ್ಲೇ ಏನಂದ್ಲು ಏಮಂದ್ಲೆಂದು ಗೊಂದಲ ಹಾಕುತ್ತಿರುವಾಗ ಲಗಮವ್ವ “ಥೂ ಬೆಕ್ಕಿಗೆ ಬೆದಿ ಕಲಿಸೋ ರಂಡೆ” ಎಂದು ಕರ್‍ಕರ್‍ಕ್ಕೆಂದು ಲಟಿಕೆ ಮುರಿದಳು. ಎಲ್ಲರ ಅಸಮಧಾನಕ್ಕೆ ಕೊಳ್ಳಿಯಿಟ್ಟಂತಾಗಿ “ಛೇ ಛೇ ಹಾಹೋ” ಸುರುವಾಯಿತು. ಪೋಜುದಾರ ಬಾಯಿ ಹಾಕಲಿಲ್ಲ. ಇದ್ದುದರಲ್ಲಿ ಗುಡಸೀಕರ ಹುರುಪಾದ. ಚತುಷ್ಟಯರು ಕೈ ಕಟ್ಟಿಕೊಂಡು, ತುಟಿ ಹೊಲಿದುಕೊಂಡು, ಸಾಲೆ ಮಕ್ಕಳಂತೆ ಕುಳಿತಿದ್ದರು. ಅವರ ಪೈಕಿ ಸ್ವಲ್ಪ ಲವಲವಿಕೆಯಿದ್ದವನು ಕಳ್ಳ. ಅದಕ್ಕೆ ಕಾರಣವಿತ್ತು. ಈಗಷ್ಟೇ ನಿಂಗೂ ಧೈರ್ಯದ ಮಾತಾಡಿ ಹೋಗಿದ್ದನಲ್ಲ. ಅಷ್ಟೂ ಜನರಿಗಿಲ್ಲದ ಅವನ ಧೈರ್ಯ, ಪೇಟೆ ಸೂಳೆಯರಂಥ ಅವನ ಹಾವಭಾವ, ನೋಡಿ ಕಳ್ಳ ಭಲೆ ಭಲೆ ಎಂದು ಜಿಲ್ಲು ಸುರಿಸಿದ. ಎದೆಗಾರಿಕೆಯ ಸಪಾಟಾದ ಅವನೆದೆಗೆ ಉಬ್ಬು ಮೂಡಿಸುವ ವ್ಯವಸ್ಥೆ ಮಾಡಿದರೆ ಅವಳ ರೂಪ ಹೆಂಗಾಗುವುದೆಂದು ಧ್ಯಾನಿಸುತ್ತಿದ್ದ. ಈಗ ಅವನ ಹ,ಬಲದ ಸುದ್ದಿ ಯಾಕೆ?
ಜನ ಬೇಕಾಬಿಟ್ಟಿ ಮಾತಾಡಿಕೊಂಡರು. ಪೋಜುದಾರ ಜನರನ್ನು ಸುಮ್ಮನಾಗಿಸುವ ಗೋಜಿಗೆ ಹೋಗಲೇ ಇಲ್ಲ. ಹಾಹೋ ಗದ್ದಲದಲ್ಲಿಯೇ ಯಾರಿಗೆ ಕೇಳಿಸ್ತೋ, ಯಾರಿಗಿಲ್ಲವೋ ತನ್ನ ತೀರ್ಮಾನ ಒದರಿಬಿಟ್ಟ. ಗೌಡ ಸುಂದರಿಗೂ, ಅವಳ ಕೂಸಿಗೂ ಎರಡೆಕರೆ ಜಮೀನು ಬರೆದು ಕೊಡತಕ್ಕದ್ದು. ಇಷ್ಟು ಹೇಳಿ ಥಟ್ಟನೆ ಎದ್ದುಹೋದ.

ಮಾಯವಾದ

ಚಾವಡಿಯಲ್ಲಿ ಹೀಗಾಗುತ್ತಿರಬೇಕಾದರೆ ಇತ್ತ ಚಿನ್ನದ ಕೂಸು ಕಣ್ಮರೆಯಾಯಿತು.
ಸಾಯಂಕಾಲ ನಿಂಗೂನಿಂದ ಸುದ್ದಿ ತಿಳಿದ ಶಿವನಿಂಗ ಹತಾಶನಾಗಿ ಕೈಕಾಲು ಕಳೆದುಕೊಂಡು ಬಿಟ್ಟ. ಆ ರಂಡೆ ವಿಶ್ವಾಸಘಾತ ಮಾಡಿದಳು, ಅಂದುಕೊಂಡ. ಈ ಪೋಜುದಾರ ಹೋಗಲಿ, ಅವಳನ್ನು ಸಿಗಿದು ಚರ್ಮ ಸುಲಿಸುತ್ತೇನೆ; ಅದಾಗಿ ಈಗ ಊರಿಗೆ ಮುಖ ತೋರಿಸೋದು ಹ್ಯಾಗೆ? ಅಪ್ಪನೆದುರು ಮುಖ ಕೊಟ್ಟು ಮಾತಾಡೋದು ಹ್ಯಾಗೆ? ಗುಡಿಸ್ಯಾ ಒಬ್ಬ ಗಂಡಿಗ್ಯಾ ಅಂದ. ಅವನ ಕಾಲು ಮುರಿದು ಕೈಗೆ ಕೊಡಬೇಕಂದ. ಗುಡಿಸ್ಯಾನನ್ನು ಇಷ್ಟು ಬೆಳೆಯಗೊಟ್ಟ ಅಪ್ಪನಿಗೆ ಆಡಿದ, ಬುದ್ಧಿ ಹೇಳದ ದತ್ತಪ್ಪನಿಗೆ ಅಂದ. ಮುದಿಗೊಡ್ಡುಗಳೆಂದು ಬೈದ. ತನ್ನಿಂದಾಗಿ ಗೌಡ ಮನೆತನ ತೋರುಬೆರಳಿಗೆ ಗುರಿಯಾಗುವಂತಾಯಿತಲ್ಲಾ ಎಂದು ಹಣೆ ಹಣೆ ಹೊಡೆದುಕೊಂಡ. ಮನೆಯತ್ತ ಪೋಲೀಸರು, ತೋಟದಲ್ಲಿ ಪೋಲೀಸರು ಎಲ್ಲಿ ಅಡಗಲಿ, ಎಲ್ಲಿ ಈ ಹಾಳು ಮುಖ ಮುಚ್ಚಿಕೊಳ್ಳಲೆಂದು ಬೋನಿಗೆ ಸಿಕ್ಕ ಹುಲಿಯ ಹಾಗೆ ಹಾಯ್ ಹಾಯ್ ಮಾಡುತ್ತ ಹರಿದಾಡಿದ. ಪೋಜುದಾರನ ಮುಂದೆ ನಡೆಯುವ ಪಂಚಾಯ್ತಿ: ಊರವರೆದುರು ನಿಲ್ಲುವಂಥ ತನ್ನನ್ನ ನೆನೆಸಿಕೊಂಡು ಚಡಪಡಿಸಿದ. ಸ್ವಲ್ಪ ಕತ್ತಲಾದೊಡನೆ ತೋಟದ ಕಡೆ ಹೋದವನು ಹ್ಯಾಗೋ ಪೋಲೀಸರ ಕಣ್ಣುತಪ್ಪಿಸಿ, ಯಾವುದೋ ಮಾಯೆಯಿಂದ ಮಾಯವಾದ.
ರಾತ್ರಿ ಎಷ್ಟಾಗಿತ್ತೋ, ಪೌಳಿಯ ಹಿಂಬದಿಯ ಗೋಡೆ ಹಾರಿ ಕರಿಮಾಯಿ ಗುಡಿಹೊಕ್ಕ. ಬಗ್ಗಿಕೊಂಡೇ ಒಳಗೆ ಸರಿದ. ಒಳಗೆ ಕತ್ತಲಿತ್ತು. ಕರಿಮಾಯಿ ಮೂರ್ತಿಯ ಹಿಂದೆ ಕೂರೋಣವೆಂದು ಸರಿಯುತ್ತಿರುವಾಗ “ಯಾರವರಾ” ಎಂದು ಕೇಳಿಸಿತು. ಹುಡುಗ ಬೆಚ್ಚಿದ. ಮತ್ತೆ ಯಾರಪ್ಪಾ ನೀನು? ಎಂದದ್ದು ಕೇಳಿಸಿತು. ದನಿ ಗುರುತು ಹತ್ತಿ ಕೊಳವಿಯ ಮುದುಕಪ್ಪ ಗೌಡನೆಂದು ಗೊತ್ತಾಯಿತು. “ನಾ-ಎಜ್ಜಾ ಶಿವನಿಂಗ” ಎಂದು ಹತ್ತಿರ ಸರಿದ.
“ಯಾಕೋ ತಮ್ಮಾ, ನಿಮ್ಮಪ್ಪ ಏನಾರ ಹೇಳಿಕಳಿಸ್ಯಾನೇನು?”
“ಏನಿಲ್ಲೆಜ್ಜಾ”
“ಮತ್ತ ನೀ ಯಾಕ ಹಿಂಗ ಕಳ್ಳರ್‍ಹಾಂಗ ಬಂದ್ಯೋ ಹುಡುಗಾ?” ಶಿವನಿಂಗ ಸುಮ್ಮನಾದ. ಮುದುಕಪ್ಪನೂ ಮಾತು ಬೆಳೆಸಲಿಲ್ಲ. ಚಿಮಣೀ ಮಾಡದ ಕಾಡಿಗೆ ಕಡಕೊಂಡು ಬಿದ್ದಹಾಗೆ ಕತ್ತಲಿತ್ತು. ಊರುಬಿಟ್ಟು ಗುಡಿ ದೂರ ಇದ್ದುದರಿಂದ ಇದ್ದದ್ದೂ ಸಪ್ಪಳ ಕಮ್ಮಿ. ಜೀರುಂಡೆ ಹುಳು ಮಾತ್ರ ಒಂದೇ ಸಮ ಮರ ಕೊರೆದಂತೆ ಜಿರ್ರ್ ಎಂದು ಒದರುತ್ತಿತ್ತು. ಜಾಗಾ ಸುರಕ್ಷಿತವೆಂದಾದ ಮೇಲೆ ಎದೆಬಡಿತ ತುಸು ಕಮ್ಮಿಯಾಯಿತು. ಬಹುಶಃ ಪೋಲೀಸರೀಗ ತನ್ನನ್ನು ಹುಡುಕುತ್ತಿರಬಹುದು. ನಾಳೆ ಬೆಳಿಗ್ಗೆ ಅಪ್ಪ ಚರ್ಮ ಸುಲಿಯುವುದು ಖಚಿತ. ಊರುಬಿಟ್ಟು ದೂರ ಹೋಗುವುದೇ ಚಲೋ. ಹೋಗೋ ಮುನ್ನ ಗುಡಿಸ್ಯಾ ಚಿಮಣಾ ಇಬ್ಬರನ್ನೂ ಮುಗಿಸಿ ಹೋಗಿದ್ದರೆ ಬರೋಬರಿ ಆಗುತ್ತಿತ್ತೆಂದು ಯೋಚಿಸಿದ. ಅಷ್ಟರಲ್ಲಿ ಮುದುಕನ ಕೈ ತಾಗಿತು. “ತಮ್ಮಾ” ಎನ್ನುತ್ತ ಮುದುಕ ಶಿವನಿಂಗನಿಗೆ ಇನ್ನಷ್ಟು ಸಮೀಪ ಸರಿದು ಪಿಸುಗುಟ್ಟಿದ.
“ತಮ್ಮಾ ಕುಂದರಗಿ ಮಠ ನೋಡಿದಿಯೇನ?”
“ಹೂಂ”
“ಎಷ್ಟಾಕ್ಕತಿ ಇಲ್ಲಿಂದ?”
“ಯಾಡ ಮೂರ ಹರಿದಾರಿ ಆದೀತು”
“ಏನ ಮಾಡ್ಲೊ ಹುಡುಗಾ, ನಾಳಿ ನಾ ಹೋಗದಿದ್ದರ ಕೆಲಸ ಕೆಡತೈತಿ. ನನ್ನ ಹಾದಿ ನೋಡಿಕೋತ ಹತ್ತುಮಂದಿ ಕೂತಿರತಾರ. ನಿಮ್ಮಪ್ಪ ಯಾರ್‍ನೊ ಕಳಿಸ್ತೇನಂದಿದ್ದ, ಹೋಗಿ ನಿಮ್ಮಪ್ಪಗಾಟ ನೆನಪು ಮಾಡಿ ಮರ್‍ತೀಯೇನ?”
“ನಮ್ಮಪ್ಪನಽ ನನ್ನ ಕಳಿಸ್ಯಾನಜ್ಜಾ”
ಎಂದೊಂದು ಸುಳ್ಳುಬಿಟ್ಟ. ಅಲ್ಲದೆ ಆ ಕೆಲಸ ತಾನೇ ಮಾಡಬಹುದಲ್ಲಾ, ಊರು ಬಿಡಲಿಕ್ಕೆ ಇದೊಳ್ಳೆ ನೆವ ಸಿಕ್ಕಿತೆಂದುಕೊಂಡ.
“ಎಲೀ ಇವನ, ಮತ್ತ ಕೇಳಿದರ ಹೇಳಲಿಲ್ಲಲ್ಲೋ? ಚೆಲೋ ಆತ ಬಾ. ದೇಶಕ್ಕ ನಿಂದೂ ಅಽಟ ಸೇವಾ ಸಲ್ಲಲಿ. ಕುಂದರಗಿ ಮಠಕ್ಕ ಹೋಗಿ ಬರ್‍ತೀಯೇನ?”
“ಅಲ್ಲಿ ಕುಂತವರ್‍ಯಾರು ನೇರೂ ಗಾಂಧೀಯೇನಜ್ಜಾ?”
“ಅವರ ಅಂತ ತಿಳಿ”
“ಹೋಗತೇನ ಏನ ಹೇಳೆಜ್ಜಾ”
ಮುದುಕ ಬಲುಭದ್ರವಾಗಿ ಬಚ್ಚಿಟ್ಟುಕೊಂಡಿದ್ದ ಒಂದು ಗಂಟು ಹೊರಗೆ ತೆಗೆದ. ಮೇಲೊಂದು ಚೀಟಿಕೊಟ್ಟು “ಮಠಕ್ಕೆ ಹೋಗು. ಅಲ್ಲಿ ಪೂಜಾರಿದ್ದಾನ್ನೋಡು, ಗಡ್ಡದಾಂವ, ಅವನ ಹಂತ್ಯಾಕ ಹೋಗಿ ಮುದುಕಪ್ಪ ಗೌಡ ಕಳಿಸ್ಯಾನಂತ ಹೇಳು. ನಿನ್ನ ಕರಕೊಂಡು ಹೋಗಿ ಅಣ್ಣೂ ಗುರೂಜಿಗೆ ಭೇಟಿ ಮಾಡಿಸ್ತಾನ, ಕೈಯಾಗ ಈ ಗಂಟಾ, ಚೀಟಿ ಕೊಡು, ನನ್ನ ಆಸೇ ಬಿಡಿರಿ, ಶಿವಾಪುರದ ಕಡೆ ಇನ್ನ ಎಂಟದಿನಾ ಬರಬ್ಯಾಡರಂತ ಹೇಳಿ ಬಾ ಹೋಗು” ಎಂದ. ಮುದುಕನ ದನು, ಕೊನೆಕೊನೆಗೆ ನಡುಗಿತು. ಭಾವುಕನಾಗಿ ಶಿವನಿಂಗನ ಕೈಹಿಡಿದು ಎದೆಗವಚಚಿಕೊಂಡು ಸ್ವಲ್ಪ ಹೊತ್ತು ಮಾತಿಲ್ಲದೆ ಕೂತ. ಅಳುತ್ತಿದ್ದ ಕೂಡ. ಶಿವನಿಂಗನ ಕೈಮೇಲೆ ಒಂದು ಹನಿ ಬಿಸಿ ಕಣ್ಣೀರು ಬಿತ್ತು. ಮುದುಕನ್ನ ಹ್ಯಾಗೆ ಸಮಾಧಾನ ಮಾಡಬೇಕೆಂದು ತಿಳಿಯದಾಯ್ತು. ತಾನು ಹೋಗುವುದಕ್ಕೆ ಅನುಮಾನ ಪಡುತ್ತಿದ್ದೇನೆಂದು ಅಂದುಕೊಂಡನೋ ಎಂದು “ಕಾಳಜಿ ಬಿಡೆಜ್ಜಾ ನಾ ಹೋಗತೀನಿ” ಅಂದ. ಮುದುಕ ಮಾತಾಡಲಿಲ್ಲ. ಶಿವನಿಂಗನನ್ನು ಹಾಗೆ ಬಾಚಿ ತಬ್ಬಿಕೊಂಡ. ಮುದಿಯೆತ್ತು ಕರುವುನ ಮೈ ನೆಕ್ಕುವ ಹಾಗೆ ಬೆನ್ನಿನ ಮೇಲೆ ಬಹಳ ಹೊತ್ತು ಕೈಯಾಡಿಸಿದ. ಮುದುಕನ ಚಡಪಡಿಕೆ ನೋಡಿ ಇದೇನೊ ಮಹತ್ವದ ಕೆಲಸವೇ ಇರಬೇಕೆಂದುಕೊಂಡ. ಚೆಲ್ಲಿಕೊಂಡು ಹಾಗೆ ಸುಮ್ಮನೇ ಬಿದ್ದುಕೊಂಡ, ಅವನಿಗೆ ಸಮಾಧಾನವಾಗುವ ತನಕ.
“ಅಂಧಾಂಗ ನೀ ಮೊದಲ ಯಾಕ ಹೇಳಲಿಲ್ಲಾ?”
ಶಿವನಿಂಗ ಈಗಲೂ ಸುಮ್ಮನಾದ.
“ನಾನಽ ಹೌಂದಲ್ಲೊ ಅಂತ ಸಂಶೆ ಬಂತೇನ?”
ಮುದುಕ ಇನ್ನೂ ಮಾತಾಡುತ್ತಲೇ ಇದ್ದ. ‘ನಾ ಹೋಗತೀನೆಜ್ಜಾ’ ಎಂದು ಶಿವನಿಂಗ ಅವಸರ ಮಾಡಿದ. “ಹೂಂ ಈಗ ಹ್ವಾದರಽ ಪಾಡ. ನಾನೂ ಬರತಿದ್ದೆ. ಈ ಕಣ್ಣೊಂದಪಾ” ಎನ್ನುತ್ತ ತನ್ನ ಅಸಹಾಯಕತೆಯ ಬಗ್ಗೆ ಪರಿತಪಿಸಿದ. ಶಿವನಿಂಗನಿಗೆ ಈಗ ನೆನಪಾಯಿತು. ಮುದುಕನಿಗೆ ಇರುಳುಗಣ್ಣೆಂದು. ಎದ್ದು “ನಾ ಹೋಗ್ತೀನೆಜ್ಜಾ” ಎಂದ. ಮುದುಕನಿಗೆ ಏನು ತಿಳಿಯಿತೋ ತಾನೂ ಎದ್ದು ಶಿವನಿಂಗನನ್ನು ಮತ್ತೆ ತಬ್ಬಿಕೊಂಡು “ಪೋಲೀಸರು ಗಿಲೀಸರು ಹುಶಾರಪಾ. ಕೊಟ್ಟವನಽ ಬಂದುಬಿಡು. ಕರಿಮಾಯಿ ಕಾಪಾಡತಾಳ ನೀ ಹೋಗಿ ಬಾ” ಎಂದ. ಶಿವನಿಂಗ ಸರ್ರನೇ ಮಾಯವಾದ.

ಕರಿಮಾಯಿಗೆ ಕಡೇ ಶರಣು

ಗೌಡ ಗುಡಸೀಕರನನ್ನು ನೋಡಿ ದೈನಾಸ ಪಡುತ್ತಿದ್ದರೆ ಅತ್ತ ಕೊಳವಿಯ ಮುದುಕಪ್ಪ ಗೌಡ ಕರಿಮಾಯಿಗೆ ಕಡೆ ಶರಣು ಮಾಡಿದ.
ಇದು ಗುಡಸೀಕರನ ಪ್ರಥಮ ಗೆಲುವಾಗಿತ್ತು. ಆ ದಿನ ಸುಂದರಿ ಪೋಜುದಾರನ ಸೇವೆಗೊದಗಿ ತಡಮಾಡಿ ಗುಡಿಸಲಿಗೆ ಬಂದಳು. ಆ ಏಳೂ ಜನ ತಮ್ಮ ಗೆಲುವನ್ನು ಭರ್ಜರಿಯಾಗಿ ಅದ್ದೂರಿಯಿಂದ ಒದ್ದೊದ್ದೆಯಾಗಿ ಆಚರಿಸಿದರು. ಆ ಗೆಲುವಿಗೆ ಕಾರಣಳಾದ ಸುಂದರಿಯನ್ನು ಬಸವರಾಜೂನನ್ನು ಗುಟುಕಿಗೊಮ್ಮೆ ಸ್ಮರಿಸಲಾಯಿತು. ಸುಂದರಿಗಂತೂ ನೆಲದ ಮೇಲೆ ಕಾಲೂರದಷ್ಟು ಹೌಶಿಯಾಗಿತ್ತು. ತನ್ನ ಸಂಚು ಫಲಿಸಿದ್ದಕ್ಕೆ ಗುಡಸೀಕರ ತನ್ನ ಗುಣಗಾನ ಮಾಡುತ್ತಿದ್ದದ್ದಕ್ಕೆ. ಮೈತುಂಬ ರೋಮಾಂಚನಗೊಂಡಳು. ಕುಡಿತದ ಅಮಲಿನಲ್ಲಿ ಆ ದಿನ ಗೌಡ ಹೇಳಿದ ಮಾತುಗಳನ್ನು ಪುನಃ ಅವನಂತೆಯೇ ಹೇಳಿ ಗುಡಸೀಕರನನ್ನು ನಗಿಸಿದಳು.
ಅದೇ ದಿನ ಊರ ಹಿರಿಯರ ಸಭೆ ದತ್ತಪ್ಪನ ನೇತೃತ್ವದಲ್ಲಿ ಸೇರಿತು. ಗೌಡ ಬಂದಿರಲಿಲ್ಲ. ಸುಂದರಿಗೆ ಬಹಿಷ್ಕಾರ ಹಾಕುವುದೆಂದು ತೀರ್ಮಾನಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಅದೇನೋ ಎಲೆಕ್ಷನ್ ಅಂತಿದ್ದನಲ್ಲ ಅದಕ್ಕೆ ಈ ಸಲ ತಾವೂ ನಿಲ್ಲಬೇಕೆಂದು ಗೊತ್ತುಮಾಡಿಕೊಂಡರು.
ಮಾರನೇ ದಿನ ಮುಂಜಾನೆ ತಮ್ಮ ತೀರ್ಮಾನವನ್ನು ಗೌಡನಿಗೆ ತಿಳಿಸಿದರು. ಗೌಡ ಸುಮ್ಮನಾದ ಅವರು ಹೋದ ಮೇಲೆ ಗುಡಸೀಕರನನ್ನು ಕರೆತರಲಿಕ್ಕೆ ಹಳಬನನ್ನು ಓಡಿಸಿದ.
ಹಳಬ ಬಂದಾಗ ಗುಡಸೀಕರ ಸುಂದರಿಯ ಗುಡಿಸಲಲ್ಲಿದ್ದ. ಗೌಡರು ಕರೆಯುತ್ತಿದ್ದಾರೆಂದು ಹಳಬ ಹೇಳಿದ್ದೇ ತಡ, ಹುಡುಗ ಹುರುಪಾದ. ಬಸವರಾಜೂನ ಭುಜ ಎರಡೆರಡು ಬಾರಿಬಾರಿಸಿ “ನೋಡಿದಿ? ಹೆಂಗ ಹಾದಿಗಿ ಬಂದ!” ಎಂದುದು ಗಟ್ಟಿಯಾಗಿ ನಕ್ಕ. ಸುಂದರಿಗೆ ಕಣ್ಣು ಹಾರಿಸಿ ನಕ್ಕ. ಹಾಳಾದವರು ಆ ಚತುಷ್ಟಯರಿರಲಿಲ್ಲ. ಸಾಮೂಹಿಕವಾಗಿ ಚಪ್ಪಾಳೆ ತಟ್ಟಿ ನಗಬಹುದಿತ್ತು. ನಗುವ ಸಂಭ್ರಮದಲ್ಲಿ ಹಳಬ ಕಂಡಿರಲೇ ಇಲ್ಲ. ಕಂಡೊಡನೆ “ನನಗ ಸಡವಿಲ್ಲಾ ಬೇಕಾದರ ಅಂವಗಽ ಬಾ ಅಂತ ಹೇಳ” ಎಂದ. ಈ ಸೊಕ್ಕನ್ನು ಹಳಬ ನಿರೀಕ್ಷಿಸಿರಲಿಲ್ಲ. ಆಗಲೆಂದು ಹೋದ. ಗುಡಸೀಕರನ ಸೊಕ್ಕು ಕೆಳಕ್ಕಿಳಿಯದಾಯಿತು. ತಾನೆಂಥ ಮಹತ್ವದ ಯುದ್ಧ ಗೆದ್ದೆನಲ್ಲ ಎಂದುಕೊಂಡ. ಗೌಡನಲ್ಲಿಗೆ ಹೋಗಬಹುದಾಗಿತ್ತೇನೋ, ಹೋಗಿದ್ದರೆ ಗೌಡನ ಸೋಲನ್ನು ಕಣ್ಣಾರೆ ನೋಡಿ ಕಿವಿಯಾರೆ ಕೇಳಬಹುದಾಗಿತ್ತು. ಯಾಕೆ ಕರೆಸಿದ್ದಾನು? ಊರವರ ಮುಂದೆ ಮೀಸೆ ಮೊಂಡಾದದ್ದು ಒಂದು ಕಡೆ; ಎರಡೆಕರೆ ಜಮೀನು ಕಕ್ಕಬೇಕಾದ್ದು ಇನ್ನೊಂದುಕಡೆ. ಅಪಸಾತಿ ಮಾಡಿಕೊಳ್ಳೋಣ ಎಂದಿರಬೇಕು. ಮಗನಿಗೆ ಈಗಲಾದರೂ ತಿಳಿಯಿತಲ್ಲ, ತಾನು ಯಾರು ಅಂತ. ಇನ್ನು ಮೇಲಾದರೂ ಬಾಯಿ ಮುಚ್ಚಿಕೊಂಡು ಇದ್ದರೆ ಬರೋಬರಿ. ಇಲ್ಲದಿದ್ದರೆ ಮೂಗಿಗೆ ಮೂಗುದಾರ ಪೋಣಿಸದಿದ್ದರೆ ನನ್ನ ಹೆಸರು ಗುಡಸೀಕರನೆಂದು ಯಾಕಿರಬೇಕು?
ಹಿಂಗೆಂದು ಒಳಗೊಳಗೇ ಮಾತಾಡಿಕೊಳ್ಳುತ್ತ, ಹೊರಗೆ ನಗುತ್ತ ತೋಟದ ಕಡೆ ಕಾಲು ಹಾಕಿದ. ನಡೆದಾಡುವಾಗ ಕೂಡ ವಿಚಿತ್ರ ಹೌಸಿ ಅವನೊಳಗೆ ಹರಿದಾಡತೊಡಗಿತ್ತು. ರೆಕ್ಕೆ ಬೀಸಿ ಹಾರಿಹೋದಂತೆ ತೋಟಕ್ಕೆ ಹೋದ. ಕಬ್ಬಿನ ತೋಟದಲ್ಲಿ ನಾಲ್ಕೈದ ಮಂದಿ ಆಳುಗಳು ಮೇವು ಬಳಿಯುತ್ತಿದ್ದರೆ, ಸೀದಾ ಅಲ್ಲಿಗೇ ಹೋದ.
ಅವರ್‍ಯಾರೂ ಇವನ ಅಭಿಪ್ರಾಯ ಅನುಮೋದಿಸುವವರಾಗಿರಲಿಲ್ಲ. ಇವ ತನ್ನ ಕಾಳಿ ಊದ ತೊಡಗಿದ. ತನಗೆ ಪರಿಚಿತರೆಂದು ಅಧಿಕಾರಿಗಳ ಕುಲಗೋತ್ರ ಹೆಸರು ಹೇಳಿದ. ಅವರೊಂದಿಗೆ ತನ್ನ ಸಲಿಗೆಯ ಪ್ರಸಂಗಗಳನ್ನು ಕಥೆಮಾಡಿ ಹೇಳಿದ. ಗೌಡ ಅಪಸಾತಿ ಮಾಡಿಕೊಳ್ಳಲು ಓಡಾಡುತ್ತಿದ್ದುದನ್ನು ದನಿ ಎತ್ತರಿಸಿ ಸ್ವಲ್ಪ ಉದ್ರೇಕಿತನಾಗಿಯೇ ಹೇಳಿದ. ತನ್ನ ಹೇಳಿಕೆಯಲ್ಲಿ ಗೌಡನನ್ನು ಹುಳುಮಾಡಿ ತಾನೊಂದು ಆನೆಯಷ್ಟು ಎತ್ತರಕ್ಕೆ ಬೆಳೆದ. ಅಷ್ಟರಲ್ಲಿ ಗೌಡ ಅಲ್ಲಿಗೇ ಬಂದ. ಸರಪಂಚ ಮಾತಾಡಿಸಲಿಲ್ಲ. ತನಗೇನೂ ಆಗಿಲ್ಲವೆಂಬಂತೆ ಆಳುಗಳೊಂದಿಗೆ ಅದು ಇದು ಬಾತಿಗೆ ಬಾರದ್ದನ್ನಾಡುತ್ತ ನಿಂತ. ಆಳುಗಳಲ್ಲಿ ಒಂದಿಬ್ಬರು ಗೌಡನಿಗೆ ಶರಣು ಹೇಳಿದರು. ಗೌಡ ಬಂದವನು “ತಮ್ಮಾ, ನಿನ್ನ ಜೋಡೆ ಮಾತಾಡಬೇಕು ಗುಡಿಸಲ ಕಡೆ ಬರ್‍ತೀಯೇನು?” ಅಂದ. ಸರಪಂಚ ತಿರುಗಿ ಕೂಡ ನೋಡದೆ “ಅದೇನ ಮಾತ ಅದಾವ ಇಲ್ಲೇ ಹೇಳಬಹುದಲ್ಲಾ” ಅಂದ. ಗೌಡನ ಮನಸ್ಸು ಮುದುಡಿ ಆ ಮಾತಿನಷ್ಟೇ ಆಯ್ತು. ಆದರೆ ಗುಡಸೀಕರನ ಈ ನಡೆ ಅನಿರೀಕ್ಷಿತವಾಗಿರಲಿಲ್ಲ. ಅಭಿಮಾನವಿಲ್ಲವೆಂದಲ್ಲ. ವಿವೇಕ ಅದಕ್ಕಿಂತ ಹೆಚ್ಚಾಗಿತ್ತು. “ಆಗಲಿ, ಬಿಡಪಾ, ಇಲ್ಲೇ ಮಾತಾಡೋಣು” ಎಂದು ಅಲ್ಲೇ ಬದುವಿನ ಮೇಲೆ ಕುಳಿತ. ಆಳುಗಳು ಆ ಅಂಚಿಗೆ ಹೋಗುತ್ತೇವೆ ಎಂದು ಹೇಳಿಕೊಂಡು ಎದ್ದುಹೋದರು.
ಗೌಡ ಮಾತು ಶುರುಮಾಡಿದ. “ನೋಡ ತಮ್ಮ, ಕಾಲ ಮುಗೀತು. ಇಲ್ಲಿ ತಂಕಾ ಒಂದ ಹದ್ದಬಸ್ತಿನಾಗ ಊರ ತಂದ ನಿನ್ನ ಕೈಯಾಗಿಟ್ಟಿವಿ. ನೀ ಕಲಂತಾ. ಲೋಕಾ ತಿಳಿದಾಂವ….” ಹೇಳುತ್ತ ಗೌಡ ಸ್ವಲ್ಪ ಹೊತ್ತು ಸುಮ್ಮನಾದ. ಸರಪಂಚ ಆಗಲೇ ಅಳ್ಳಳ್ಳಕಾಗಿ ಗುಡಸೀಕರನಾಗುತ್ತಿದ್ದ. ಗೌಡ ಮತ್ತೆ ಮುಂದುವರಿದ. “ನೀ ಬ್ಯಾರೆ ಅಲ್ಲ, ನನ್ನ ಮಗಾ ಬ್ಯಾರೇ ಅಲ್ಲಪಾ. ನಿನಗ ಹಾಗ ತಿಳಿದ ಪಂಚಾಯ್ತಿ ಮಾಡಪಾ ಅಂತ ಊರ ನಿನ್ನ ಅಗೈಯಾಗಿಟ್ಟಿವಿ. ನಾ ನಿನಗ ಏನ ಕೆಟ್ಟ ಮಾಡೀನಿ ಹೇಳೋ ಎಪ್ಪಾ. ನನ್ನ ಕಂಡರ ವೈರೀನ ಕಂಡಾಗ ಮಾದತಿ. ಏನಾರ ತಪ್ಪ ಆಗಿದ್ದರ ಹೇಳು, ನಿನ್ನ ಕಾಲಿಗಿ ತಲೀ ಕಟೀತೀನಿ. ನಿನ್ನ ಜೋಡೀ ಜಗಳ ಮಾಡೋ ವಯಸ್ಸ ನಂದ? ಇಂದಿಲ್ಲಿ; ನಾಳೆ ಗೋರ್‍ಯಾಗ ಇರಾವರು. ನೀವಾದರ ಇದಽ ಇನ್ನೂ ಚಿಗರವರು. ಹೂ ಕಾಯಿ ಹಣ್ಣಾಗವರು. ಈ ಊರಿಗಿ ನಮ್ಮಂಥಾ ಮುದುಕರಲ್ಲಪಾ, ನೀ ಬೇಕು, ನಿನ್ನಂತವ ಬೇಕು. ಏನೊ ನಾಲಿಗಿ ತುಂಬ ಹಂಗ ಮಾಡ್ರೊ, ಹೀಂಗ ಮಾಡ್ರೊ ಅಂತ ಹೇಳತೀವು. ಕಣ್ಣಿಗಿ ದಿನಾ ಬೆಳಗಾದರ ಕಾಣತೈತಿ, ಅದರ ಅಂಜಿಕ್ಯಾಗ ಏನಾರ ಆಡತಿದ್ದೇನಪಾ, ಬ್ಯಾಡಂದರ ಅದನೂ ಬಿಡತೀವು. ಆದರ ನಮ್ಮ ಮ್ಯಾಲಿನ ಸಿಟ್ಟಲೆ ಊರ್‍ಯಾಕ ಹಾಳಾಗಬೇಕೋ ಎಣ್ಣಾ?” ಗುಡಸೀಕರ ಪೂರಾ ಕರಗಿಬಿಟ್ಟದ್ದ. ಪಾಪ, ಈ ಮುದುಕನ್ನ ತಾನು ಅಪಾರ್ಥ ಮಾಡಿಕೊಂಡಿದ್ದೇನೆನಿಸಿತು. ಸ್ವಲ್ಪ ಅಂತಃಕರಣ ಬಿಚ್ಚಿ “ಇದನ್ನ ಹೆಂಗ ಮಾಡೋಣು” ಅಂತ ಕೇಳಿದರೆ ಸಾಕು. ಮುದುಕ ಉಬ್ಬುವವ. ಹೆಚ್ಚೇನು ಹಿರಿಯರಿಗೆ ಬೇಕಾದ್ದೂ ಅಷ್ಟೇ. ಹೇಳಿ ಕೇಳಿ ಹೆಗಲು ಬಿದ್ದವರು. ಇನ್ನೆಷ್ಟು ದಿನ ಇದ್ದಾರು? ಇರೋ ತನಕ ಸ್ವಲ್ಪ ಮರ್ಯಾದೆ ಕೊಟ್ಟರೆ ತನಗೇನು ಕೊರತೆ ಬಿದ್ದೀತು? ಅದೊಂದು ಗ್ರಾಮ ಪಂಚಾಯ್ತಿ. ಹೋಗಿ ಕೇಳಿದರೆ ಈಗಲೂ ಎಲೆಕ್ಷನ್ನಿಲ್ಲದೆ ಹಾಗೇ ಕೊಡುವುದು ದೂರದ ಮಾತಲ್ಲ. ಗೌಡ ಮುಂದುವರೆಸಿದ:
“ಖರೆ ಹೇಳೋ ತಮ್ಮಾ, ನಾ ಆ ಚಿಮಣಾನ ಬಸರು ಮಾಡಿದ್ದ ಖರೆ ಮಾತ? ನೀ ನಿಮ್ಮಪ್ಪನ ಹೆಸರ ತಗೊಂಡ ಹೌಂದನ್ನು. ನಾ ಇಕ್ಕಽ ಈಗ ಎರಡೆಕರೆ ಜಮೀನೂ ಕೊಟ್ಟು ಬಿಡತೇನು: ಅಪ್ಪಾ ಸಾಯೋ ಕಾಲದಾಗ ನನ್ನ ಮ್ಯಾಲ ಹಿಂತಾದೊಂದ ಹರಲಿ ಹೊರಸ ಬ್ಯಾಡ”
ಎನ್ನುತ್ತ ಕೂಡಲೇ ಗೌಡ ಕೈಮುಗಿದ. ಇಬ್ಬರ ಬಾಯಿ ಕಟ್ಟಿತು. ಹಮ್ಮು ಕರಗಿ ನೀರಾಗಿ ಹರಿದಂತೆ ಗುಡಸೀಕರ ಕಣ್ಣೊಳಗಿಂದ ಎರಡು ಹನಿ ಉದುರಿದವು. ತಾನು ಇಲ್ಲವೆ ಬಸವರಾಜು ಇಬ್ಬರಲ್ಲಿ ಒಬ್ಬರ ಕಾರಭಾರಿಗೆ ಸುಂದರಿ ಬಸರಿಯಾದದ್ದು ಖಾತ್ರಿಯಾಗಿತ್ತು. ನಿಂಗೂ ನಿನ್ನೆ ಬಸವರಾಜೂನ ಭಾನಗಡಿ ಹೇಳಿದ್ದ. ಇದರಲ್ಲಿ ಬಸವರಾಜೂನ ಭಾಗವೇ ಹೆಚ್ಚಾದಂತಿತ್ತು. ಇಲ್ಲದಿದ್ದರೆ ಬಸರಿನ ಸುದ್ದಿ ಮೊದಲು ತನಗಾದರೂ ಹೇಳಬಹುದಿತ್ತೊ? ಗರ್ಭಪಾತದ ಸಂಗತಿಯನ್ನಾದರೂ ತಿಳಿಸಬಹುದಿತ್ತೊ?
ಬಹಳ ಹೊತ್ತಿನ ತನಕ ಇಬ್ಬರೂ ಮಾತಾಡಲಿಲ್ಲ. ಗುಡಸೀಕರ ಇಲ್ಲೀತನಕ ಒಂದು ಮಾತೂ ಆಡಿರಲಿಲ್ಲ. ಏನಾಡಬೇಕೆಂದು ಹೊಳೆಯಲೂ ಇಲ್ಲ. ಈಗಲೂ ಗೌದನೇ ಹೇಳಿದ. “ನೋಡು ತಮ್ಮಾ, ದಿನ ಬೆಳಗಾದರ ಒಬ್ಬರ ಮಾರಿ ಒಬ್ಬರ ನೋಡಾವರು ನಾವು. ನಿನ್ನ ನಿಟ್ಟುಸಿರಿಗೆ ನಾನಽ ಕರಗಬೇಕು. ನಂದಕ ನೀ ಕರಗಬೇಕು. ಬೆಳಗಾಂವಿ ಮನಿಶ್ಯಾ ಇಂದಿದ್ದ ನಾಳಿ ಹೋಗಾಂವಪಾ. ಅವರಿಬ್ಬರನ್ನು ಈಗಿಂದೀಗ ಹೊರಗ್ಹಾಕು. ನಿನಗ್ಹೆಂಗ ಬೇಕ ಹಾಂಗ ಊರ ಆಳಿಕೊ. ಖರೆ ಹೇಳ್ತೀನೋ ಎಪ್ಪಾ. ಸಡ್ಲ ಬಿಟ್ಟರೆ ಆಕೆ ಈ ಊರ ಆಳವೆತ್ತತಾಳ” ಅಂದು ಸುಮ್ಮನಾದ. ಮಾತುಕತೆಗೊಂದು ಮುಕ್ತಾಯವನ್ನಾದರೂ ಕೊಡಬೇಕಲ್ಲ.
“ಆಗಲಿ, ನೀವೇನ ಕಾಳಜಿ ಮಾಡಬ್ಯಾಡರಿ, ನಡೀರಿ ಹೋಗೋಣು” ಅಂದ. ಮಾತಿನ್ನೂ ಬಾಯಲ್ಲಿಯೇ ಇತ್ತು. ಢಂ ಢಂ ಎಂದು ಗುಂಡು ಹಾರಿದ್ದು ಕೇಳಿಸಿತು. ಇಬ್ಬರೂ ತಬ್ಬಿಬ್ಬಾದರು. ಮುಖಾಮುಖಿ ನೋಡಿಕೊಂಡರು. ಗುಡಸೀಕರ ಸದ್ದು ಬಂದ ಕಡೆ ಓಡಿದ. ಗೌಡನ ಕೈಕಾಲೇ ಹೋದವು. ಅಲ್ಲೇ ಕುಸಿದ. ಗುಡಸೀಕರ ಓಡಿ ಬಂದಾಗ ಕರಿಮಾಯಿಯ ಗುಡಿಯಲ್ಲಿ ಪೋಲೀಸರು ಓಡಾಡುತ್ತಿದ್ದರು. ಗುಂಡಿನ ಸಪ್ಪಳಕ್ಕೆ ತತ್ತರಿಸಿ ಜೇನು ಹುಟ್ಟೊಂದರ ಕಾಲುಭಾಗ ಕಳಚಿಬಿದ್ದಿತ್ತು. ಜೇನು ಚಿಲ್ಲನೆ ಸುತ್ತ ಸಿಡಿದಿತ್ತು. ಜೇನ್ನೊಣಗಳು ಎದ್ದು ಗುಂಯೆಂದು ಹುಯಿಲೆಬ್ಬಿಸಿ ಪೋಲೀಸರನ್ನು ಅಟ್ಟಿಸಿಕೊಂಡೋಡಿ ಕಚ್ಚುತ್ತಿದ್ದವು. ಪೋಜುದಾರ ಗುಡಸೀಕರನನ್ನೂ ಗಮನಿಸದೆ, ಹುಳುಗಳ ಕಾಟ ಲೆಕ್ಕಿಸದೇ ವಿಜಯೋನ್ಮಾದದಿಂದ ಕಿರಿಚಿ ಆಜ್ಞೆ ಮಾಡುತ್ತಿದ್ದ. ಜನ ಒಬ್ಬೊಬ್ಬರೇ ಓಡಿಬಂದು ದೂರದಲ್ಲೇ ನಿಂತುಕೊಂಡು ಪಿಳಿಪಿಳಿ ಕಣ್ಣುಬಿಡುತ್ತ ನೋಡುತ್ತಿದ್ದರು. ಕೊಳವಿಯ ಶ್ರೀ ಮುದುಕಪ್ಪ ಗೌಡನ ಹೆಣ ಬೊಕ್ಕ ಬೋರಲಾಗಿ ಬೆನ್ನು ಮೇಲಾಗಿ ಕರಿಮಾಯಿಯ ಕಡೆ ಮುಖಮಾಡಿ ತಾಯಿಗೆ ಕೊನೆಯ ಶರಣು ಹೇಳುವಂತೆ ಬಿದ್ದಿತ್ತು. ಹೊಟ್ಟೆಯ ಕೆಳಗೆ ನೆತ್ತರ ಮಡು ನಿಂತಿತ್ತು.
ಸಾಲದ್ದಕ್ಕೆ ಇದೇ ಸಂದರ್ಭವೆಂದು ಎರಡೆಕರೆ ಹೊಲಾ ಕೇಳಲಿಕ್ಕೆ ಚಿಮಣಾ ಗೌಡನ ಮನೆಗೆ ಹೋದಳು. ದತ್ತಪ್ಪ ಬಹಿಷ್ಕಾರ ಹಾಕಿಬಿಟ್ಟ.
ಮುದುಕಪ್ಪ ಗೌಡನ ಸಾವಿಗೆ ಜನ ಮರುಗಿದರು. ಕಳ್ಳನಲ್ಲ, ಸುಳ್ಳನಲ್ಲ. ಅದೇನೋ ದೇಶಸೇವೆ ಅಂದ, ಚಳುವಳಿ ಅಂದ. ಗಾಂಧಿ ನೇರೂ ಅಂದ. ಅಂದ ಮಾತ್ರಕ್ಕೆ ಹೀಗೆ ಕೊಂದು ಹಾಕುವುದೇ? ಗುಡಸೀಕರ ಬಹುಮಾನದ ಆಸೆಯಿಂದ ಹೀಗೆ ಮಾಡಿದನೆಂದು, ಪೋಜುದಾರ ಇವನಿಗೆ ಪೋಜುದಾರ ೫೦೦೦ ರೂ. ಕೊಟ್ಟುದನ್ನು ಕಣ್ಣಾರೆ ಕಂಡೆವೆಂದು ಕೆಲವರೆಂದರು. ಜನ ಗುಡಸೀಕರನಿಗೆ ಹೆದರಿದರು. ಹೆಸರು ಹೇಳಿದರೆ ಸಾಕು ಪೋಲೀಸ್ ಪೋಜುದಾರ ಅನ್ನುವ ಸೈತಾನನವ. ಅವನನ್ನು ತಡವೋದೂ ಪೋಜುದಾರನಿಗೆ “ಲೇ ಮಗನ” ಎಂದು ಬೈಯುವುದೂ ಸಮ ಎಂದರು.
ಚತುಷ್ಟಯರು ಇದ್ದದ್ದೂ ಆಮೋದಗೊಂಡರು. ಕೊಳವಿ ಮುದುಕಪ್ಪನ ಹೆಣ ಒಯ್ದ ಮಾರನೇ ದಿನ ಸುಪ್ರಭಾತದಲ್ಲಿ ಎದ್ದು ನೋಡುತ್ತಾರೆ. ಊರಿಗೂರೆ ಅವರಿಗೆ ಹೆದರುತ್ತಿದೆ. ಕರೆದು ಕರೆದು ಶರಣು ಹೇಳುತ್ತಿದೆ. ಈ ಹದಕ್ಕಾದ ಹೆದರಿಕೆ ಹಾಗೇ ಕ್ಷಣಭಂಗುರವಾಗಬಾರದೆಂದು ಹಂಚಿಕೆ ಹಾಕಿದರು. ಗುಡಸೀಕರನ ಬಗ್ಗೆ ಭಯಂಕರ ಕಥೆ ಕಟ್ಟಿದರು. ಪೋಲೀಸ್ ಪೋಜುದಾರ, ಕಲೆಕ್ಟರ, ಮಾಮಾಲೇದಾರ, ಬೆಳಗಾವಿಯ ಈ ಅಧಿಕಾರಿಗಳೆಲ್ಲ ಗುಡಸೀಕರನಿಗೆ ಪರಿಚಿತರೆಂದೂ, ಇವರು ಚೀಟಿ ಕಳಿಸಿದರೆ ಸಾಕು, ಸರಕಾರ ತುದಿಗಾಲಲ್ಲೇ ಮಿಲ್ಟ್ರಿ ಕಳಿಸುತ್ತಾರೆಂದೂ, ಮುದುಕಪ್ಪನಿಗೆ ಆಶ್ರಯ ಕೊಟ್ಟದ್ದಕ್ಕೆ ಸರಕಾರ ಇದೇ ಊರು ಸುಟ್ಟುಬರಲು ಪೋಲೀಸ್ ಪಾರ್ಟಿ ಕಳಿಸಿತ್ತೆಂದೂ ಆದರೆ ನಮ್ಮ ಸರಪಂಚದಿಂದಾಗಿ ಮುದುಕಪ್ಪ ಹೋಗಿ ಊರು ಉಳಿಯಿತೆಂದೂ ಹೀಗೆ ಯದ್ವಾ ತದ್ವಾ ಊಹೆಗಳಿಗೆ ಕೈಕಾಲು ಮೂಡಿಸಿ ಕಥೆಮಾಡಿ, ಕಥೆಗೆ ಜೀವ ತುಂಬಿ ಊರ ಕಿವಿಗಳಲ್ಲೇ ಊದಿಬಿಟ್ಟರು.
ಗೌಡ ಮಾತ್ರ ಆಳಾಗಲೇ ಇಲ್ಲ. ಬೆನ್ನಿಗೆ ಬಿದ್ದವನ ಕಾಪಾಡಲಾಗದ ದುಃಖ ಒಂದು ಕಡೆ. ಇದಕ್ಕೆಲ್ಲ ಗುಡಸೀಕರ ಕಾರಣನೆಂಬ ಸಿಟ್ಟು ಇನ್ನೊಂದು ಕಡೆ. ಹೀಗೆ ಇಬ್ಬಂದಿಯಾಗಿ ಕಿಚ್ಚಿನೊಳಗೆ ಕೀಡೆಯಂತೆ ಚಡಪಡಿಸಿದ. ದೋತರ ಸೆರಗಿನಲ್ಲಿ ಮುಖ ಹುದುಗಿಸಿ ಮಂದಿ ಹೆಂಗಸಿನ ಹಾಗೆ ಅತ್ತ. ಬರಬರುತ್ತ ಮುದುಕಪ್ಪ ಸತ್ತದ್ದು ಹಿಂದಾಗಿ, ಶಿವನಿಂಗ ಕಳೆದುಹೋದ ದುಃಖ ಮುಂದಾಯಿತು. ಕುಂದರಗಿ ಮಠಕ್ಕೆ ಹೋದ ಆಳು ಅಲ್ಲಿದ್ದ ಮಂದಿಯೆಲ್ಲ ಮಾಯವಾದ ಸುದ್ದಿ ತಂದಿದ್ದ. ಊರೂರಿಗೆ ಬೀಗರಿಗೆ ಹೇಳಿ ಕಳಿಸಿದ. ಶಿವನಿಂಗ ಬರಲಿಲ್ಲ. ಶಿವನಿಂಗನ ಸುದ್ದಿ ಬರಲಿಲ್ಲ. ಮೂಕರ್ಜಿಯಲ್ಲಿ ತನ್ನ ಹೆಸರು ಇದ್ದುದಕ್ಕೆ ಹೆದರಿ ಹುಡುಗ ಏನಾದರೂ ಓಡಿದನೋ ನೇಣು ಹಾಕಿಕೊಂಡನೋ ಎಂದೂ ಊಹಿಸಿದ. ಕರಿಮಾಯಿಗೆ ಮೊರೆಹೊಕ್ಕ. ತಾಯಿಯೇನೋ ತಿರುಗಿ ಬಂದೇ ಬರ್‍ತಾನೆಂದು ಹೇಳಿದಳು. ಮಗನನ್ನು ಕಣ್ಣಾರೆ ಕಾಣುವ ತನಕ ನಂಬದಾದ. ಶಿವಸಾನಿ ಮಗನ ಹೆಸರಿ ಜಪಿಸುತ್ತ ಕೂಳು, ನೀರುಬಿಟ್ಟು ಬರೀ “ಶಿವನಿಂಗಾ” ಎಂದು ಹಲುಬುತ್ತ ಮೂಲೆ ಹಿಡಿದಳು. ಹ್ಯಾಗಿದ್ದವಳು ಒಂದೇ ವಾರದಲ್ಲಿ ಸೊರಗಿ ಸೊರಗಿ ಸಣ್ಣಾದಳು. ಮೂಲೆಯ ಕೋಲಾದಳು. ಕಡ್ಡಿಯಾದಳು. ಸಾಲದ್ದಕ್ಕೆ ಚಿಮಣ ಬಂದು ಮನೇ ಮುಂದೆ ದುಂಬಡಿ ಹಾಕಿದಳು. ಅದು ಹೀಗೆ:
ಒಂದು ದಿನ ಗೌಡ ಬೆಳಿಗ್ಗೆದ್ದು ಕೆರೆಯಲ್ಲಿ ಮಿಂದು ಕರಿಮಾಯಿಗೆ ಅಡ್ಡಬಿದ್ದು ಮನೆಕಡೆ ಬಂದ. ಆಗಷ್ಟೇ ಬೆಳಕಾಗುತ್ತಿತ್ತು. ಅಲ್ಲಲ್ಲಿ ಜನ ಅಂಗಳ ಗುಡಿಸುತ್ತಿದ್ದರು. ಕೋಳಿ ಬಿಡುತ್ತಿದ್ದರು. ದನ ನೀರಿಗೆ ಬಿಡುತ್ತಿದ್ದರು.ಎದ್ದವರು ಗೌಡನಿಗೆ ಶರಣು ಹೇಳುತ್ತಿದ್ದರು. ಆ ರಸ್ತೆ ದಾಟಿ ತನ್ನ ಮನೆಕಡೆ ತಿರುಗಿದ.
ಆ ರಸ್ತೆಯಲ್ಲಿ ಅಷ್ಟು ಚಟುವಟಿಕೆ ಇರಲಿಲ್ಲ. ತನ್ನ ಮನೇ ಮುಂದೆ ನಾಕೈದು ಜನ ಹೆಂಗಸರಿದ್ದರು. ಧಾಪುಗಾಲು ಹಾಕಿದ. ಗೌಡ ಬಂದುದನ್ನು ನೋಡಿ ಹೆಗಸರು ಬದಿಗಾದರು. ನೋಡಿದರೆ ಸುಂದರಿ ತೊಲೆಬಾಗಿಲು ಹೊಸ್ತಿಲಕ್ಕೆ ಎಡತೊಡೆ ಆನಿಸಿ, ಅದರಗುಂಟ ಎಡಗೈ ಹಬ್ಬಿಸಿ, ಅದಕ್ಕೆ ಬಲಗೈ ಕಟ್ಟಿಕೊಂಡು ಕೂತಿದ್ದಳು. ಗೌಡನಿಗೆ ತಕ್ಷಣ ಏನು, ಎತ್ತ ಗೊತ್ತಾಗಲಿಲ್ಲ. ಒಳಗೆ ತನ್ನ ಹಿರಿಯ ಹೆಂಡತಿ, ನಿಜಗುಣೆವ್ವನ ತಾಯಿ ನಿಂತಿತ್ತು. ಎಲ್ಲರನ್ನೂ ಕುರಿತಂತೆ “ಏನು?” ಅಂದ. ಒಬ್ಬ ಅವ್ವಕ್ಕ “ಯಾಡ್ಯೆಕೆರೆ ಹೊಲಾ ಕೇಳಾಕ ಬಂದಾಳ್ರಿ” ಎಂದಳು. ಗೌಡ ಒಳಕ್ಕೆ ಹೆಜ್ಜೆ ಹಾಕಿದ.
ಗೌಡ ನ್ಯಾರೆ ಮಾಡಿ ಹೊರಕ್ಕೆ ಬಂದಾಗ ಪಡಸಾಲೆಯಲ್ಲಾಗಲೇ ದತ್ತಪ್ಪ ಹಾಜರಾಗಿದ್ದ. ಬಾಳಪ್ಪ ಆಗಷ್ಟೇ ಬಂದ. ಮನೆಯ ಮುಂದೆ ಜನ ಸೇರಿದ್ದರು. ಎಲ್ಲರ ದೃಷ್ಟಿಗಳನ್ನು ನಿವಾರಿಸುತ್ತ ಚಿಮಣಾ ಕೂತಿದ್ದಳು. ಎಸಳು ಮುಖದ ಹುಚ್ಚು ಹುಡುಗಿ. ಕುಣಿಸಿದರೆ ಕುಣಿಯುತ್ತಾಳೆ. ಕುಣಿಯೋದರ ಬೆಲೆ ಏನೆಂದರಿಯದೆ ಅವಳು ಕೂತ ಭಂಗಿ, ಧೈರ್ಯ ಮೊಂಡುತನಗಳೆಲ್ಲ ಅವಳ ಆಕೃತಿಗೆ ಭಾರವಾಗಿ, ಅಸಹಜವಾಗಿ, ಕಂಡವು. ಇವಳ ಮೇಲೆ ಸಿಟ್ಟಿಗೇಳುವುದೂ ಕಷ್ಟವೆ; ಎಳೇ ಕೂಸು ಬಲಿತವರ ಅಭಿನಯ ಮಾಡಿದಂತಿತ್ತು. ಇಂಥ ಸಂದರ್ಭಗಳಲ್ಲಿ ಯಥಾ ಪ್ರಕಾರ ಬಾಯಿ ಹಾಕುವವನು ದತ್ತಪ್ಪನೇ.
“ಏನವಾ? ಯಾಕ ಬಂದಿ? ಜಗಳಾ ಮಾಡಾಕ?” ಎಂದು ದತ್ತಪ್ಪ ಕೇಳಿದರೆ ಆ ಹೊಯ್ಮಾಲಿ ಹೇಳುತ್ತಾಳೆ,-
“ನಾ ಏನ ಜಗಳ ಮಾಡಾಕ ಬಂದಿಲ್ರಿ. ಗೌಡರು ಯಾಡ್ಡೆಕರೆ ಹೊಲ ಬರಕೊಡ್ಲಿ. ಥಣ್ಣಗ ನಾ ಹೋಗತೇನ.”
ದತ್ತಪ್ಪನಿಗೆ ಹೊಯ್ಕಾಯಿತು. ಅಡಡಡ ಎಂದು ಆಶ್ಚರ್ಯ ನಟಿಸುತ್ತಿದ್ದರೆ ಬಾಳಪ್ಪನಿಗೆ ತಡೆಯಲಾಗಲಿಲ್ಲ.
“ಅದೇನ ಅಡಡಡ ಅಂತೀಯೊ? ಈ ರಂಡೀ ಮೂಗ ಮಲಿ ಕೋದ ಅಡವಿಗಟ್ಟಿ ಬರೋಣ್ನಡಿ.”
ಸುಂದರಿಗೆ ತಡೆಯುವುದಾಗಲಿಲ್ಲ.
“ಯಾಕ? ಈ ಕಡೆ ಹಗುರ ಅಂತ ತಿಳಿದುಕೊಂಡಿರೇನ? ನಾನೂ ಹೋಗಿ ಪೋಜುದಾರನ್ನ ಕರಕೊಂಬರ್‍ತೇನ”
“ಪೋಜುದಾರಂದರ ಸರಕಾರಲ್ಲವಾ. ಕೋರ್ಟಿಗೆ ಹೋಗಿ ಅಲ್ಲಿಂದ ಬೇಕಾದರ ಜಜ್‌ಮೆಂಟಾಗಿ ಬಂದರ ಕೊಡಾಕ ಬಂದೀತ. ಪೋಲೀಸ್ ಪೋಜುದಾರರೆಲ್ಲಾ ಜಜ್‌ಮೆಂಟ ಕೊಡತಿದ್ದರ ಹೆಂಗ? ನೀ ಬೇಕಾದರ ಕೋರ್ಟಿಗೆ ಹೋಗು.”
ಎಂದ ದತ್ತಪ್ಪ, ಸುಂದರಿ ಬಿಡಲಿಲ್ಲ.
“ಹಿಂತಾ ಮಾತ ಪೋಜುದಾರನ ಮುಂದ ಯಾಕ ಬರಲಿಲ್ಲ? ಹೆಣ್ಣ ಬಾಲಿ ನನಗನ್ಯೆ‌ಏ ಮಾಡಿ ಬದಿಕೇನಂತೀರಿ?”
“ಹಂಗಾದರ ಹೋಗಿ ಅದ್ಯಾವ ಪೋಜುದಾರನ್ನ ಕರತರ್‍ತಿ ತಾ ಹೋಗ”
ಎಂದ ಇವನೂ ಅಷ್ಟೇ ಒರಟಾಗಿ. ಹೆಂಗಸರ ನಡುವಿದ್ದ ನಿಂಗೂನಿಗೆ ತಡೆಯಲಾಗಲಿಲ್ಲ. “ಹರೀವತ್ತೆದ್ದ ಇದೇನ ಹಚ್ಚೀಯೆ ನನ್ನ ಸವತಿ. ಬಂದ ಕಾಲಲೆ ಜಾಗಾ ಬಿಡತೀಯೊ? ತುರಬ ಹಿಡಿದ ಎಳದ ಒಗೀ ಅಂತೀಯೊ?”
“ಯಾಕಲಾ ಗಂಡುಗ್ಯಾ ಭಾಡ್ಯಾ ಬಾ ಗಂಡಸಿದ್ದರ”
ಎಂದು ಇವಳೂ ನಿಂತಳು. ಗೌಡನಿಗಿನ್ನೂ ಸಿಟ್ಟು ಬರಲೊಲ್ಲದು. ಗೌಡ ಹೂಂ ಅಂದಿದ್ದರ ಅವಳನ್ನು ಹಾಗೇ ಹರಿದು ಚಿಂದಿಮಾಡಲು ಹುಡುಗರು ಸಿದ್ಧರಾಗಿದ್ದರು. ಬೆಳಿಗ್ಗೆದ್ದೊಡನೆ ಈ ಪರಿಯ ಹಗರಣ ಆ ಊರಿಗೆ ಹೇಳಿ ಮಾಡಿಸಿದ್ದಲ್ಲ. ಅಷ್ಟರಲ್ಲಿ ಲಗಮವ್ವ ಬಂದಳು. ಬಸೆಟ್ಟಿ ಬಂದ. ದೇವರೇಸಿ ಬಂದ. ಇನ್ನೇನು ಬೇಕು? ಈಗಲೇ ಇವಳಿಗೆ ಊರಿಂದ ಬಹುಷ್ಕಾರ ಹಾಕಿಬಿಡೋಣವೆಂದು ಬಾಳು ಹೇಳಿದ. ಬಸೆಟ್ಟಿ ಹೌದೆಂದ. ಈ ತನಕ ಸುಂದರಿಗೆ ಧೈರ್ಯವಿತ್ತು. ಸರಪಂಚ ಇರೋ ತನಕ ತನಗೆ ಯಾರೇನು ಮಾಡಲಾದೀತೆಂಬ ಹಮ್ಮಿನಲ್ಲಿದ್ದಳು. ಆದರೆ ಈ ಬಹಿಷ್ಕಾರದ ಅಸ್ತ್ರ ಅವಳಿಗೆ ಹೊಸದು. ಹಾಗೆಂದರೇನೆಂದೂ ಅರಿಯಳು, ಏನೋ ಅಪಾಯ ಕಾದಿದೆಯೆಂದು ಹೆದರಿ ಎದ್ದುನಿಂತು,
“ನಾ ಹಡಬಿಟ್ಟಿ ಹೆಂಗಸಲ್ಲ. ಗೌಡನ….ಫಲ…” ಎಂದು ಹೇಳ ಹೇಳುತ್ತ ಕೂಡಿದ ಮಂದಿಯಲ್ಲಿ ಹೊಟ್ಟಿ ಮುಟ್ಟಿಕೊಂಡೊಡನೆ ಅವಳಿಗರಿವಾಗದಂತೆ ಕಣ್ಣೀರುಕ್ಕಿ ಗಂಟಲು ತುಂಬಿತು. ಬಿಕ್ಕಿ ಬಿಕ್ಕಿ ಕುಸಿದಳು. ಗೌಡನಿಗೆ ತಡೆಯಲಾಗಲಿಲ್ಲ.
“ಹೌಂದವಾ ನನಗಽ ಬಸಿರಾಗೀದಿ ಹೌಂದಲ್ಲೊ? ಹಾಂಗಿದ್ದರ ನಮ್ಮ ಮನ್ಯಾಗ ಇದ್ದುಬಿಡು. ನಿನಗ ಹೊಲಾ ಯಾಕ ಬೇಕು?”
ಈಗ ತಾನು ಕೆಸರಲ್ಲಿ ಸಿಗಬಿದ್ದುದು ಅವಳಿಗೂ ಅರಿವಾಯಿತು. ಇನ್ನು ತನಗಿಲ್ಲಿ ಉಳಿಗಾಲವಿಲ್ಲ.
“ನಾ ಯಾಕ ನಿನ್ನ ಮನ್ಯಾಗಿರ್‍ಲಿ? ಮನಸ್ಸಿಗೆ ಬಂದಲ್ಲಿರ್‍ತೇನ”
ಸುಂದರಿಗೆ ಸಹಾನುಭೂತಿ ತೋರಿಸುವವರು ಒಬ್ಬರೂ ಇರಲಿಲ್ಲ. ಇದೇ ಸಂಧರ್ಭವೆಂದು ಗೌಡನನ್ನು ಕೇಳದೆ, ಕೇಳಿದರೆ ಮತ್ತೆ ರಾಡಿಯಾಗುವುದೆಂದು ಬಗೆದು ಬಹಿಷ್ಕಾರ ಘೋಷಿಸಿಯೇ ಬಿಟ್ಟ ದತ್ತಪ್ಪ. ಅಲ್ಲೇ ಇದ್ದೊಂದು ಕುಂಬಳಕಾಯಿಯನ್ನು ಒಡೆದು ಲಗಮವ್ವನಿಂದ ನೀರು ಬಿಡಿಸಿದ. ಸುಂದರಿ ಅದಕ್ಕಾಗಿ ಏನೋ ಮಾಡಹೋಗಿ ಏನೋ ಆಗಿ ಏನುತ್ತರ ಕೊಡಲೂ ತೋಚದೆ ಗಳಗಳ ಅಳುತ್ತ ಸರಪಂಚಗ ಹೇಳ್ತೇನೆನ್ನುತ್ತ ಅಟ್ಟಿಸಿಕೊಂಡ ಪ್ರಾಣಿಯ ಹಾಗೆ ಓಡಿದಳು. ಜನ ಇವಳಿಗೆ ಇದೇ ತಕ್ಕ ಪ್ರಾಯಶ್ಚಿತ್ತ ಎಂದರು. ದತ್ತಪ್ಪನಿಗೆ ಹೌದ್ಹೌದೆಂದರು. ಇದೆಲ್ಲ ಹದಿನೈದಿಪ್ಪತ್ತು ಎಣಿಸುವುದರೊಳಗೆ ಮುಗಿದುಹೋಗಿತ್ತು. ಜನ ಚೆದುರಿದ ಮೇಲೆ ಗೌಡ “ಅಲ್ಲಪಾ ಪರವೂರವಳು ಆಕೀ ಮ್ಯಾಲ ಹೆಂಗ ಬಹಿಷ್ಕಾರ ಹಾಹಾಕ ಬರತೈತಿ?” ಅಂದ.
ದತ್ತಪ್ಪ ಸಿಡಿದು,
“ನನ್ನ ಚಿಂತಾಮಣಿ ಸುಳ್ಳ ಹೇಳತದೇನು? ತಗಿ, ತಗಿ, ನಾ ಇನ್ನೂ ಜಳಕ ಮಾಡಿಲ್ಲ?”
ಎನ್ನುತ್ತ ಮನೆಗೆ ಹೋದ.

ಕರಗಿದ

ಗುಡಸೀಕರ ಇತ್ತೀಚೆಗೆ ಕರಗಿದ್ದನ್ನು ಬಸವರಾಜು ಗಮನಿಸಿದ್ದ. ಇವನ ಗುಡಿಸಲ ಕಡೆ ಅವ ಬರಲೂ ಇಲ್ಲ. ದಾರಿ ನೋಡಿ ನೋಡಿ ಬಸವರಾಜೂ ತಾನೇ ತೋಟದ ಕಡೆ ಬಂದ. ಗುಡಸೀಕರ ಕೆಲಸ ಮಾಡಿಸುತ್ತಿದ್ದ. ಇಬ್ಬರೂ ಬಹಳ ಹೊತ್ತು ಮಾತಾಡಲಿಲ್ಲ. ಆಮೇಲೆ ಬಸವರಾಜೂ ತನ್ನ ಶಕ್ತಿಯುಕ್ತಿಗಳನ್ನೆಲ್ಲ ಉಪಯೋಗಿಸಿ ಗೌಡನೊಡನಾದ ಮಾತುಕತೆಗಳನ್ನೆಲ್ಲ ಹೊರಡಿಸಿದ. ಗೌಡನ ಪ್ರಭಾವದಿಂದ ಗುಡಸೀಕರನನ್ನು ಹೊರಕ್ಕೆಳೆಯುವುದು ಕಷ್ಟವೇ. ಅದಕ್ಕಾಗಿ ಭಾವುಕನಂತೆ ಅಭಿನಯಿಸಿ, ಎಲ್ಲೀ ಗೌಡ? ಎಲ್ಲೀ ಮುದುಕಪ್ಪ? ಯಾವುದಕ್ಕ ಯಾರ ಬಲಿ? ಎಂದು ಆಳಾಪ ಮಾಡಿದ. ಗೌಡನಿಗೆ ನಿನ್ನ ಬಗ್ಗೆ ಅಕ್ಕರತೆ ಇದ್ದದ್ದೇ ನಿಜವಾದರೆ ಈತನಕ ಯಾಕೆ ಸುಮ್ಮನಿದ್ದ? ಈಗ ಸಿಕ್ಕುಬಿದ್ದಿದ್ದಾನೆ. ಎರಡೆಕರೆ ಹೊಲ ಕಕ್ಕಬೇಕು. ಸಾಲದ್ದಕ್ಕೆ ಊರವರ ಮುಂದೆ ಅವಮಾನವಾಗಿದೆ. ಈಗ ಅವನಿಗಿರುವ ಉಪಾಯ ಒಂದೇ: ನಿನ್ನನ್ನು ಬುಟ್ಟಿಗೆ ಹಾಕಿಕೊಳ್ಳುವುದು. ನೀನೋ ಹಗುರ ಮನಸ್ಸಿನವನು….ಹೀಗೇ ಗಾಂಧಿ ಹಳ್ಳಿ ಜನನಾಯಕ ಏನೇನೋ ಅಂದ. ಏನಂದರೂ ಗುಡಸೀಕರನಲ್ಲಿ ಸರಪಂಚ ಮೂಡಲೇ ಇಲ್ಲ.
ಇತ್ತ ಬಹಿಷ್ಕಾರದಿಂದ ಯಾರೂ ವಿಚಲಿತರಾಗಲಿಲ್ಲ. ಸುಂದರಿಗೂ ಇದರಿಂದೇನಾಗಬೇಕಿದೆ? ಕುಲದವಳಲ್ಲ; ಹೆಣ್ಣು ಗಂಡು ಆಗಬೇಕಾದ್ದಿಲ್ಲ. ತಿರುಗಿ ಕೇಳಿದರೆ ಊರವಳಲ್ಲ. ಕೆಲಸಕ್ಕಂತೂ ಹೋಗಬೇಕಾದ್ದಿಲ್ಲ. ಆದರೆ ಬಹಿಷ್ಕಾರದ ಕಹಿ ಅನಿಭವ ಗುಡಸೀಕರನಿಗೆ ಆಮೇಲೆ ಆಗತೊಡಗಿತು. ಚತುಷ್ಟಯರು ಹೇಳಿ ಕಲಿಸಿದರೂ ಭೇಟಿಯಾಗದೆ ನೆಪಹೇಳಿ ತಲೆ ತಪ್ಪಿಸಿಕೊಳ್ಳತೊಡಗಿದರು. ತೋಟದ ಕೆಲಸಕ್ಕೆ ಆಳುಗಳು ಸಿಗದಾದರು. ಎದುರು ಬಂದರೂ ಜನ ಮಾತಾಡಿಸದಾದರು. ಗಂಡಸಾದ ಇವನಿಗೇ ಈ ರೀತಿ ಅನುಭವ ಬರಬೇಕಾದರೆ ಅವನ ತಾಯಿ-ತಂಗಿಯರ ಸ್ಥಿತಿ ಕೇಳುವುದೇ ಬೇಡ. ಇವನ ಮುಖ ನೋಡಿದೊಡನೆ ತಾಯಿ ಮುಖಕ್ಕೆ ಸೆರಗುಹಾಕಿ ಅಳುತ್ತಿದ್ದಳು. ಗುಡಸೀಕರ ಕೊನೆಗೆ ಬಸವರಾಜನೊಂದಿಗೆ ಆಪ್ತವಾಗಿ ಮಾತಾಡಿದ. ಸುಂದರಿಯನ್ನು ಕಳಿಸಿದ ಹೊರತು ಗತಿಯಿಲ್ಲವೆಂದ.
ಸುಂದರಿಯನ್ನು ಒಪ್ಪಿಸಬೇಕಾದರೆ ಕುರಿಕೋಣ ಬೀಳಬೇಕಾಯಿತು. ನಿಜ ಏನಿತ್ತೋ, ಹೊರಗೆ ಮಾತ್ರ ಬಸಿರಾದದ್ದು ಗುಡಸೀಕರನಿಗೇ ಎಂಬಂತಿದ್ದಳು. ಮದುವೆ ಹೆಂಡತಿಯಂತೆ ತನ್ನನ್ನು ನಡೆಸಿಕೊಳ್ಳಬೇಕಾದ್ದಿಲ್ಲ. ಅವ ಬೇಕಾದರೆ ಬೇರೆ ಮದುವೆಯಾಗಲಿ, ತನ್ನನ್ನು ಈಗಿದ್ದಂತೆ ಇಟ್ಟುಕೊಂಡರೆ ಸಾಕು, ಎಂದು ಒಂದೆರಡು ಬಾರಿ ಹೇಳಿದ್ದಳು. ಗುಡಸೀಕರ ಸ್ವಲ್ಪ ಹೃದಯ ತೆರೆದು ಮಾತಾಡಿದರೆ ತನ್ನನ್ನು ಧಾರೆಯೆರೆಯಲು ಸಿದ್ಧಳಾಗಿದ್ದಂತೆ ಅಭಿನಯಿಸಿದಳು. ಗೌಡನ ಬಾಗಿಲಲ್ಲಿ ಹೋಗಿ ಕೂರು ಎಂದು ಬಸವರಾಜು ಹೇಳಿದಾಗ ಅವಳೊಪ್ಪಿದ್ದೇ ಈ ಕಾರಣಕ್ಕೆ; ಈ ಮೂಲದಿಂದಾದರೂ ಅವನಿಗೆ ತನ್ನ ಪ್ರೀತಿ ಖಾತ್ರಿಯಾಗಲಿ ಎಂದು.
ಈಗ ಊರು ಬಿಡುವ ಯೋಜನೆ ಬಸವರಾಜು ಹೇಳಿದೊಡನೆ ಕಂಗಾಲಾದಂತೆ ಅಭಿನಯಿಸಿದಳು. ಗುಡಸೀಕರನ ಕಾಲು ಹಿಡಿದಳು. ನೀನೇ ಬಂದು ಗರ್ಭ ತೆಗೆಸು ಎಂದಳು. ನನಗೆ ನಿನ್ನ ಬಿಟ್ಟು ಯಾರೂ ದಿಕ್ಕಿಲ್ಲ. ಹಿಂದಿಲ್ಲ, ಮುಂದಿಲ್ಲ ಕಾಣಾ ಕಾಣಾ ನನ್ನನ್ಯಾಕೆ ಅಡವೀ ಹೆಣ ಮಾಡುತ್ತೀ ಎಂದಳು. ಒಂದೆರಡು ದಿನ ಬೆಳಗಾವಿಯಲ್ಲಿದ್ದು ಗರ್ಭ ತೆಗೆಸಿಕೊಂಡು ಬರುವುದೆಷ್ಟೊ ಅಷ್ಟೆ ಎಂದು ಸಮಾಧಾನ ಮಾಡಿದರು. ಹೋಗುವಾಗ ಮತ್ತೆ ಮತ್ತೆ ಗುಡಸೀಕರನ ಕಾಲು ಹಿಡಿದಳು. ಕಣ್ಣೀರಿನಿಂದ ಅವನ ಪಾದ ತೋಯ್ಸಿದಳು. ಕಾಲು ತಬ್ಬಿಕೊಂಡು ಅತ್ತಳು. ಕೊನೆಗೆ ಹೋಗಲೇಬೇಕಾಯಿತು; ಹೋದಳು. ಅವಳು ಹೋದದ್ದು ಗೊತ್ತಾಗಿ ಚತುಷ್ಟಯರು ಮೆಲ್ಲಗೆ ಅವನ ತೋಟದ ಕಡೆ ಸುಳಿದರು. ಜನ ಮಾತಾಡಿಸಿದರು. ಆಳು ಸಿಕ್ಕರು. ಜೀವನವೇನೋ ಯಥಾ ಸಾಂಗ ಸಾಗಿತ್ತು. ಆದರೆ ಹುಡುಗ ದಿನಕ್ಕಿಂತ ಹೆಚ್ಚು ಒಂಟಿಯಾದ. ಅದೇ ಮನೆ, ಅದೇ ತೋಟ, ಅದೇ ಜನ-ಥೂ ಎಂದು ಕುಡಿದ, ಸೇದಿದ, ಮಲಗಿದ, ಹೋದ, ಬಂದ. ಚತುಷ್ಟಯರೇನೋ ಆಗಾಗ ಬರುತ್ತಿದ್ದರು, ಅವರೊಂದಿಗೆ ಎದೆ ಬಿಚ್ಚಿ ಮಾತಾಡಲಾಗುತ್ತಿರಲಿಲ್ಲ, ನಿಂತು ನಿಂತು ಅವರೇ ಹೋಗುತ್ತಿದ್ದರು. ಈ ಮಧ್ಯೆ ಎಲೆಕ್ಷನ್ನಿಗೆ ನಿಲ್ಲುವವರು ತಮ್ಮ ಹೆಸರು ನಮೂದಿಸಬೇಕೆಂದು ಸರ್ಕಾರಿ ಕಾಗದ ಬಂತು. ಕಳ್ಳನ ಮೂಲಕ ಆ ಕಾಗದವನ್ನು ದತ್ತಪ್ಪನಿಗೆ ಕಳಿಸಿಕೊಟ್ಟು ಸುಮ್ಮನೆ ಕೂತ. ಒಂದೆರಡು ದಿನಗಳಲ್ಲಿ ಹಳೇ ಹಿರಿಯರೆಲ್ಲ ಗೌಡನ ನೇತೃತ್ವದಲ್ಲಿ ಚುನಾವಣೆಗೆ ಹುರಿಯಾಳುಗಳಾಗಿ ತಮ್ಮ ಹೆಸರು ಕೊಟ್ಟದ್ದು ತಿಳಿದುಬಂತು. ಆಗಲೂ ಕೆಡುಕೆನಿಸಲಿಲ್ಲ. ಸಿಟ್ಟೂ ಬರಲಿಲ್ಲ. ಬಹಳವಾದರೆ ಆದಿನ ಹೆಚ್ಚಾಗಿ ಕುಡಿದ.
ಹೆಸರು ಕೊಡಲಿಕ್ಕೆ ಇನ್ನೊಂದು ದಿನದ ಅವಧಿಯಿತ್ತು. ಆ ದಿನ ಇಳಿಹೊತ್ತಿನಲ್ಲಿ ನಾಟಕೀಯವಾದ ರೀತಿಯಲ್ಲಿ ಗುಡಸೀಕರನ ತೋಟದ ಗುಡಿಸಲಿಗೆ ಬೆಂಕಿ ಬಿತ್ತು. ಗುಡಸೀಕರ ಅಲ್ಲೇ ಮಲಗಿದ್ದವನು ಎದ್ದು ಪಾರಾದ. ಹಾನಿ ಹೆಚ್ಚಾಗಲಿಲ್ಲ. ಸುತ್ತಲಿನ ಜನ ಸೇರಿ ಆಗಿಂದಾಗ ನಂದಿಸಿದರು. ಆದರೆ ಗುಡಸೀಕರ ಗಾಬರಿಯಾದ. ಹಲ್ಲು ಮುರಿದ ಹಾವಿನಂತಾದ. ತನ್ನ ಸ್ಥಿತಿ ನೆನೆದು ಸಂತಾಪಗೊಂಡ. ಅದೇ ಸಮಯಕ್ಕೆ ಸರಿಯಾಗಿ ಬಸವರಾಜು ಬೆಳಗಾವಿಯಿಂದ ಬಂದಿಳಿದ.
ಬಂದವನು ರ್ರಾತ್ರಿ ತಾನೇ ಹೋಗಿ ಚತುಷ್ಟಯರನ್ನು ಗುಡಿಸಲಿಗೆ ಕರೆತಂದ. ಆಘಾತದಲ್ಲಿದ್ದ ಗುಡಸೀಕರನನ್ನು ಸಾಂತ್ವನಗೊಳಿಸಿ ಒತ್ತಾಯದಿಂದ ಕರೆದುತಂದ, ತಾನು ಈಗಷ್ಟೇ ಬೆಳಗಾವಿಯಿಂದ ತಂದ “ಫಾರಿನ್ ಭಿರಂಡಿ” ತೆರೆದ. ನಡೆದ ವಿದ್ಯಮಾನ ಅವನಿಗೆ ತಿಳಿಯದ್ದೇನಿದೆ? ಯಾಕೆಂದರೆ ಗುದಸೀಕರನ ಗುಡಿಸಲಿಗೆ ಬೆಂಕಿ ಹಚ್ಚಿದವನೇ ಅವನು. ಯಾರಿಗೂ ಗೊತ್ತಾಗದಂತೆ ಮಾಡಿದ್ದ, ಅಷ್ಟೇ. ಗೊತ್ತಾಗುವ ಹಾಗೆ ಬೆಂಕಿ ಹಚ್ಚುವುದಾದರೆ ಅದು ಬಸವರಾಜನಿಂದಲೇ ಯಾಕಾಗಬೇಕು? ಅದು ಇದು ಮಾತಾಡುತ್ತ ಯಥಾವತ್ ಮೀಟಿಂಗ್ ಸುರುಮಾಡಿದ. ಒತ್ತಾಯ ಮಾಡಿ ಗುಡಸೀಕರನಿಗೆ ಕೈಯಾರೆ ಬ್ರಾಂದಿ ಕುಡಿಸಿ ತಾನು ಎಂಜಲು ಹೀರಿದ. ಪರದೇಶೀ ದೇವರನ್ನು ಎಲ್ಲರಿಗೂ ಹಂಚಿದ. ತನ್ನದನ್ನು ಎತ್ತಿಕೊಂಡು, ಗುಡಸೀಕರ ಸಾಹೇಬರ್‍ನ ಈ ಗತಿಗೆ ತಂದಿರಲ್ಲ, ಆ ಸಂತೋಷಕ್ಕೆ ಕುಡಿಯಿರೆಂದು ತಾನೇ ಒಂದು ಗುಟುಕು ಹೀರು ಮುದಿ ಹೆಂಗಸಿನಂತೆ ಗಳಗಳ ಅಳತೊಡಗಿದ ಬಸವರಾಜು. ಚತುಷ್ಟಯರಿಗೆ ಕುಡಿಯಬೇಕೋ, ಬಿಡಬೇಕೋ ಒಂದೂ ಹೊಳೆಯಲೊಲ್ಲದು. ಮಿಕಿಮಿಕಿ ಮುಖ ನೋಡುತ್ತ ಕೂತರು.
“ಗೌಡ ಸುಂದರಿಗೆ ಬಹಿಷ್ಕಾರ ಹಾಕಿದಾಗ ಮಂದೀ ಜೊತೆ ನೀವೂ ಗುಡಿಸಲ ಕಡೆ ಸುಳಿಯಲಿಲ್ಲವೆಂದು ಚತುಷ್ಟಯರನ್ನು ಬೈದ. ನಾಲಾಯಖರೆಂದ. ತಾಯ್ಗಂಡರೆಂದ. ಒಂದು ಕಡೆ ಬ್ರಿಟಿಷರು. ಇನ್ನೊಂದು ಕಡೆ ಗಾಂಧೀಜಿ. ಗೌಡನ ಪಾರ್ಟಿ ಬ್ರಿಟಿಷರಿದ್ದಂತೆ. ಗುಡಸೀಕರ ಗಾಂಧೀಜಿಯಿದ್ದಂತೆ. ಬ್ರಿಟಿಷರನ್ನೋಡಿಸಿ ಹಳ್ಳಿಗೆ ಸ್ವಾತಂತ್ರ್ಯ ತಂದುಕೊಡುವ ಪವಿತ್ರಕಾರ್‍ಯ ಗುಡಸೀಕರ ಮಾಡಿದ್ದು. ಆದರೆ ಅವನ ನಾಯಕತ್ವದಲ್ಲಿ ದುಡಿಯುವ ಯೋಗ್ಯತೆ ನಿಮಗಿಲ್ಲ ನೀವೆಲ್ಲಾ ಗಂಡಿಗ್ಯಾಗೋಳ್ರೋ. ನೀವ ಗಂಡಸರಾಗಿದ್ದರ ಇಂದು ಗುಡಸೀಕರ ಸಾಹೇಬರ ಗುಡಿಸಲಕ್ಕ ಬೆಂಕೀ ಹಚ್ಚೋ ಧೈರ್‍ಯ ಯಾವಾನಾದರೂ ಮಾಡುತ್ತಿದ್ದನೇನ್ರೋ” ಎನ್ನುತ್ತ ಪಕ್ಕದ ರಮೇಸನನ್ನು ಕೂಸಿನಂತೆ ಅವುಚಿಕೊಂಡು ಇನ್ನಷ್ಟು ಅತ್ತ. ಅವನನ್ನು ನೋಡಿ ಗುಡಸೀಕರನ ಕಣ್ಣಾಲಿಯಲ್ಲೂ ನೀರಾಡಿತು. ಗುಡಸೀಕರನೊಳಗೆ ಆಗಲೇ ನಸೆ ಉಕ್ಕತೊಡಗಿತು. ಸುಂದರಿಯನ್ನು ಹಿಂದಿರುಗಿ ಕಳಿಸಿದ್ದು ನಮ್ಮ ಸೋಲನ್ನು ಒಪ್ಪಿಕೊಂಡಂತಾಯಿತೆಂದ. ಇಡೀ ಊರಿಗೆ ಗೊತ್ತಾಗುವಂತೆ ಸೊಲೊಪ್ಪಿದಮ್ಯಾಲೆ ಚುನಾವಣೆ ಯಾವ ಧಿಮಾಕಿಗೆ ಬೇಕು? “ಈಗ ಸುಂದರಿ ಇರಬೇಕಾಗಿತ್ತೋ ಬಸವರಾಜೂ” ಎಂದು ಅಳುದನಿಯಲ್ಲಿ ರಾಗ ತೆಗೆದ. ಚತುಷ್ಟಯರಿಗಾಗಲೇ ಪಶ್ಚಾತ್ತಾಪವಾಗಿತ್ತು. ಆದರೆ ಏನು ಹೇಳಬೇಕೆಂಬುದು ಹೊಳೆಯಲೊಲ್ಲದು. ಈಗ ಕಣ್ಣೀರು ಸುರಿಸುವುದೇ ಯೋಗ್ಯವೆಂದು ಕಳ್ಳನ ಕಳ್ಳಬುದ್ಧಿಗೆ ಹೇಗೆ ಹೊಳೆಯಿತೋ- ‘ಏನೇ ಬರಲಿ, ಒಗ್ಗಟ್ಟಿರಲಿ’ ಎಂದು ಹೇಳುತ್ತ ಅವನೂ ಅಳತೊಡಗಿದ. ಬಸವರಾಜು ಬಿಡಲಿಲ್ಲ. ಯಾಕೊ? ಒಗ್ಗಟ್ಟಿರಬೇಕು? ಎಲೆಕ್ಷನ್ನಿಗೆ ನಿಂತು ಒಗ್ಗಟ್ಟಾಗಿ ದುಡಿಯೋದಾದರೆ ಒಗ್ಗಟ್ಟು ಬೇಕು. ಇಲ್ಲದಿದ್ದರೆ ಅದೇನು ಪ್ರಯೋಜನ? ಈ ತನಕ ಸುಮ್ಮನೇ ಕೂತಿದ್ದ ಮೆರಮಿಂಡನಿಗೆ ಅದೇನು ಸ್ಪೂರ್ತಿ ಉಕ್ಕಿತೋ. ಎದ್ದವನೇ ಮಂಡೆಗಾಲೂರಿ “ಈಗೇನಾಗೇತಿ? ಹೆಸರು ಕೊಡಾಕ ಇನ್ನ ಒಂದಿನ ಐತಿ. ನಾಳಿ ಎಲ್ಲರೂ ಹೋಗಿ ಹೆಸರ ಕೊಟ್ಟ ಬರೋಣು” ಅಂದ. ‘ಥೂ’ ಎಂದು ಬಸವರಾಜು ವೀರಾವೇಶದಿಂದ ಉಗುಳಿದ. ‘ಏನಂತ ನಂಬಬೇಕ್ರೋ ನಿಮ್ಮನ್ನ? ಗಂಡಸರಂತೂ ಅಲ್ಲ, ನಿಂಗೂನ ಹಾಗೆಯೂ ಅಲ್ಲ, ಯಾಕೆಂದರಿ ರೋಬಾ ರೋಬ ಸೀರಿ ಉಟ್ಟ ಅಡ್ಡಾಡತಾನ. ನಿಮಗ ಆ ತಾಕ್ಕತ್ತ ಇಲ್ಲ!-ಹೀಗೆ ಮಾತಿನಲ್ಲಿ ಚತುಷ್ಟಯರನ್ನು ಒಂದೊಂದೇ ಹಂತ ಕೆಳಗಿಳಿಸುತ್ತ ಹುಳ ಮಾಡಿದ. ಕಾಲಕಸ ಮಾಡಿದ. ಕೊನೆಗೆ ಕಸಕ್ಕಿಂತ ಕಡೆ ಅಂದ. ಅವರೂ ಹಾಗೆ ಕೂತರು.
ಒಂದಷ್ಟು ಸಮಯ ಯಾರೂ ಮಾತಾಡಲಿಲ್ಲ. ತಿರುಗಾ ಮುರುಗಾ ಬಸವರಾಜು ಮತ್ತು ಗುಡಸೀಕರ ಇಬ್ಬರೇ ಕುಡಿಯುತ್ತಿದ್ದರು. ವಾತಾವರಣ ದರಿದ್ರವಾಗುತ್ತಿತ್ತು. ಬಸವರಾಜು ಇದನ್ನು ನಿರೀಕ್ಷಿಸಿರಲಿಲ್ಲ. ಕೂಡಲೇ ಪಕ್ಕದ ರಮೇಸನ ಬೆನ್ನಮೇಲೆ ಚಪ್ಪನೆ ಒಂದೇಟು ಹೊಡೆದು “ಏನಂತಿ?” ಅಂದ. ಅವನೇನೂ ಅನ್ನಲಿಲ್ಲ.ಮತ್ತೆ ತಾನೇ ಅನ್ನತೊಡಗಿದ. ಊರ ಮಂದೀನ್ನ ಎದುರು ಹಾಕಿಕೊಂಡು ಎಲೆಕ್ಷನ್ನಿಗೆ ನಿಲ್ಲತೀರೇನು? ಅಷ್ಟ ಗಂಡಸತನ ಇದ್ದರ ಕುಡೀರೆಂದು ಆಜ್ಞೆಮಾಡಿದ. ಆಸೆ ಹತ್ತಿಕ್ಕಿಕೊಂಡು ಉಳಿದವರು ಸುಮ್ಮನೇ ಕೂತರು. ಕೊನೆಗೂ ಕಳ್ಳ ನಿರ್ಧರಿಸಿಯೇ ಬಿಟ್ಟ.

“ತತಾ. ನಾ ಗಂಡಸಾಗತೇನ”

ಎಂದು ಬಟ್ಟಲಿಗೆ ಕೈ ಹಾಕಿದ. ಬಸವರಾಜು ಅವನ ಬಟ್ತಲ ಮೇಲೆ ಕೈ ಇಟ್ಟು “ಕರಿಮಾಯೀ ಆಣೀ ಮಾಡು” ಎಂದ, ಹುದಲಿನಲ್ಲಿ ಸಿಗಬೀಳುತ್ತಿದ್ದುದರ ಅರಿವಾಯಿತು ಕಳ್ಳನಿಗೆ. ಈ ತನಕ ಬರೀ ಅರಳಿಗಂಟಿನ ಮೇಲೆ ಲಾಗಾ ಹಾಕಿದವ. ಹಾಕಿದ ಲಾಗಗಳಿಗೆ ಹೆಸರಂಟಿಸಿಕೊಂಡವ. ಕರಿಮಾಯಿ ಆಣೀ ಹುಡುಗಾಟಿಕೆಯ ಮಾತಲ್ಲ. ಅವಳ ಆಣೆ ಮಾಡುವುದೂ ಪದರಿನಲ್ಲಿ ಬೆಂಕಿ ಕಟ್ಟಿಕೊಳ್ಳುವುದೂ ಒಂದೇ, ಬಸವರಾಜು ಹತ್ತು ಹೇಳಬಹುದು. ಗುದಸೀಕರ ಹತ್ತಕ್ಕೂ ಕತ್ತು ಹಾಕಬಹುದು. ಅವನಿಗೇನು, ಹಿಂದೆ ಹೇಳವರಿಲ್ಲ. ಮುಂದೆ ಕೇಳವರಿಲ್ಲ. ಮನೆಯ ಮುಂಬಾಗಿಲಿನಿಂದ ಹಿತ್ತಲ ಬಾಗಿಲ ತನಕ ಅವನದೇ ಕಾರುಭಾರ. ತನಗಾದರೆ ಹೇಳ ಕೇಳುವ ಹಿರಿಯರಿದ್ದರು. ಹಿಂದೆ ಕರಿಮಾಯಿಯ ಸುದ್ದಿ ಬಂದಾಗ ಬಸವರಾಜೂನ ಜೊತೆ ಇವನೂ ನಕ್ಕಿದ್ದನೇನೋ ಹೌದು, ಆದರೆ ಆಣೆ ಮಾಡುವುದು ಬಂದೊಡನೆ ಹೆದರಿದ. ಇವರ ಮೂಲ ಹಿಡಿದಷ್ಟು ಸಂತೋಷವಾಯ್ತು ಬಸವರಾಜನಿಗೆ. ಗುಡಸೀಕರನಿಗೆ ನಿರಾಸೆಯಾಯ್ತು. “ಇದೇನು ಆಗೋ ಮಾತಲ್ಲ, ಹೋಗೋ ಮಾತಲ್ಲ. ಬಿಡೋ ಬಸವರಾಜು” ಎಂದ. ಬಸವರಾಜು ಬಿಡಲಿಲ್ಲ. ಬಾಯಿ ಹಾಕಿದ. ಇನ್ನೊಂದು ಭಾಷಣ ಬಿಗಿದ. ದೇವತೆಗಳು ರಾಕ್ಷಸರ ಉದಾಹರಣೆ ಕೊಟ್ಟ. ಇದು ಕರಿಮಾಯಿಯ ಹೆಸರಿನಲ್ಲಿ ನಡೆಯುವ ಧರ್ಮಯುದ್ಧವೆಂದ. ಗೌಡ ದತ್ತಪ್ಪನಂಥ ದೈತ್ಯರು ಜನರನ್ನು ಹೇಗೆ ಮೋಸ ಮಾಡುತ್ತಿದ್ದಾರೆ, ಹೇಗೆ ಸುಲಿಯುತ್ತಿದ್ದಾರೆ. ಇಂಥವರನ್ನು ಓಡಿಸಲು ತಾಯಿ ಕರಿಮಾಯಿಯೇ ಗುಡಸೀಕರನನ್ನು ಕರೆಸಿಕೊಂಡಿದ್ದಾಗಿಯೂ ಹೇಳಿದ. ಕರಿಮಾಯಿಯ ಅವನ ವರ್ಣನೆ ಕೇಳಿ ಕಳ್ಳ ಕಣ್ಣೀರು ತಂದ. ಏನು ಮಾಡುತ್ತಿದ್ದೇನೆಂದು ಗೊತ್ತಿಲ್ಲದೆ ಕಣ್ಣಲ್ಲಿ ಬಸವರಾಜೂನನ್ನೇ ಇಂಗಿಸಿಕೊಳ್ಳುತ್ತ ಕೆಳಕ್ಕೆ ನೆಲ ಬಡಿಯುತ್ತ,”ಕರಿಮಾಯೀ ಆಣಿ, ಸರಪಂಚರ ಬೆನ್ನಿಗೆ ನಿಲ್ಲತೇನ ಕೊಡ” ಅಂದ.
*****
ಮುಂದುವರೆಯುವುದು