ಟಿ.ವಿ.ಯಲ್ಲಿ ಟಾಪ್ ಒನ್ ಆಗಲು ಓಡುತ್ತಿವೆ ಸಿನಿಮಾ ಕುದುರೆಗಳು

೨೦೦೦ ಬಂದದ್ದೇ ತಡ ಸಿನಿರಂಗದವರ ಬುಡಗಳು ಅಲ್ಲಾಡತೊಡಗಿವೆ. ಸ್ಟುಡಿಯೋಗಳು ನೊಣ ಹೊಡೆಯುತ್ತಿವೆ. ಉಪವಾಸವಿದ್ದ ಚಿತ್ರ ನಟ-ನಟಿಯರು ಮೆಗಾ ಧಾರಾವಾಹಿಗಳನ್ನು ಒಪ್ಪಿ-ಅಪ್ಪಿ-ತಬ್ಬಿ ಮುದ್ದಾಡುತ್ತಿದ್ದಾರೆ. ‘ನಮ್ಮ ಆಜನ್ಮ ಶತ್ರು ದೂರದರ್ಶನ’ ಎಂದು ಬಡಬಡಿಸಿದ ಮಂದಿಯೇ ಇಂದು ಮೆಗಾ ಧಾರಾವಾಹಿಗಳನ್ನು ಮಾಡಲು ಸಡಗರಿಸುತ್ತಿದ್ದಾರೆ.

ಕೋಟಿ-ಕೋಟಿ ವೆಚ್ಚಿಸುವ ಸಿನಿಮಾ ನಿರ್ಮಾಪಕರು ಒಂದು ಕಡೆ – ತುಂಬಾ ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡುವೆ ಎನ್ನುವ ಪೂರ್‍ ಪ್ರೊಡ್ಯೂಸರ್‍ಸ್ ಒಂದು ಕಡೆ. ಈ ಪೈಪೋಟಿಯ ಟಗ್ ಆಫ್ ವಾರ್‌ನಲ್ಲಿ ಹಣದ ಝಣ ಝಣ ತಾಂಡವವಾಡಿ ಬ್ಲಾಕ್‌ಮನಿ ಇರುವವರು ಮಾತ್ರ ಬಚಾವಾಗುವ ದಿನ ಬಂದು-ಮಿಂಚು, ಗುಡುಗುಗಳಿಗಿಂತ ಬರಸಿಡಿಲೇ ಬ್ರಹ್ಮಾಂಡವಾಗಿ ಎಲ್ಲೆಲ್ಲೂ ಉಸಿರು ಕಟ್ಟುವ ವಾತಾವರಣ.

ನಟ-ನಟಿಯರು: ಖ್ಯಾತ ನಟರಿಗೆ ಲಕ್ಷೋಪಲಕ್ಷ ಸಂಭಾವನೆ. ಪರಭಾಷೆಯ ಬಣ್ಣದ ಬೆಡಗಿಯರಿಗೆ ಕೇಳಿದಷ್ಟು ಹಣದೊಂದಿಗೆ ಬಗೆ ಬಗೆಯ ಪರಾಕು ಪೊಂಪು – ಬಿಳಿ ತೊಗಲು ಮಾಸೀತೆಂದು ನೆಲಕ್ಕೆ ರೆಡ್ ಕಾರ್ಪೆಟ್. ನಮ್ಮಲ್ಲಿಯ ಹೊಸ ಪ್ರತಿಭೆಗಳಿಗೆ ಕ್ಯಾತೆ ಕಲಾವಿದರೆಂಬ ಹಣೆಪಟ್ಟಿ ಮತ್ತು ಚಿತ್ರಾನ್ನ.

‘ಹುಚ್ಚು ಮುಂಡೆ ಮದುವೆಯಲ್ಲಿ ಉಂಡೋನೇ ಜಾಣ’ ‘ಸಿಕ್ಕಿದೋರಿಗೆ ಸೀರುಂಡೆ’ ಎಂಬಂತ ಗಾದೆಗಳು ಅದಕ್ಕೇ ಇಂದಿಗೂ ಚಿತ್ರರಂಗದಲ್ಲಿ ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್‍’ ಎಂಬಂತೆ ಮಿರಿಮಿರಿ ಮಿಂಚುತ್ತಿರುವುದು. ಎಂಥ ಸೃಜನಶೀಲ ನಿರ್ದೇಶಕನೇ ಆಗಲಿ ತಾನೊಬ್ಬ ನಿರ್ದೇಶಕ ಎಂಬ ಹಣೆಪಟ್ಟಿ ಹಚ್ಚಿಕೊಳ್ಳಲು, ನಿರ್ಮಾಪಕರನ್ನು ಬೆಕ್ಕಿನಂತೆ ಹೊಂಚು ಹಾಕಿ ಹಿಡಿಯುವುದರಲ್ಲೇ ತನ್ನ ‘ಎನರ್ಜಿ’ ಎಲ್ಲ ಕಳೆದುಕೊಂಡು ಸೋತು ಸಪ್ಪಗಾಗಿರುವ.

ಚಿತ್ರ ಹಾಗೂ ಹೀಗೂ ಮುಗಿಸಿದರೂ ಡಬ್ಬದಲ್ಲಿ ಅವಿತು ಕುಳಿತ ಸಿನಿಮಾ ರೀಲು ಈಚೆ ಬರುವುದೇ ಕಷ್ಟ ಎಷ್ಟೋ ಬಾರಿ. ಆದ್ದರಿಂದಲೇ ಅಂಥ ಸಿನಿಮಾಗಳನ್ನು ‘ಕ್ಯಾನ್ ಫೆಸ್ಟಿವಲ್’ಗೆ ಮೀಸಲಾದ ಸಿನಿಮಾ ಎಂದು ತಮಾಷೆ ಮಾಡುವುದೂ ಉಂಟು.

ಸಿನಿಮಾ ನಿರ್ದೇಶಕರು ಮತ್ತು ರನ್ನಿಂಗ್ ರೇಸ್: ಇಂಥ ಹಿಂಸೆಗಳಿಂದ ರೋಸಿ ಹೋದ ಸಿನಿಮಾ ನಿರ್ದೇಶಕರಿಗೂ ಹೆಂಡತಿ, ಮಕ್ಕಳಿರುವುದರಿಂದ, ಕಟ್ಟಿಕೊಂಡ ತಪ್ಪಿಗೆ ಅವರನ್ನು ಸಾಕಬೇಕಾದುದು ಇವರಿಗೆ ಅನಿವಾರ್ಯವಾಗುವುದರಿಂದ, ಟಿ.ವಿ.ಯಲ್ಲಿ ಮೆಗಾ ಧಾರಾವಾಹಿಗಳನ್ನು ಮಾಡುವುದೇ ವಿಹಿತವೆಂದು ಈ ರನ್ನಿಂಗ್ ರೇಸ್‌ನಲ್ಲಿ ಗೆಲ್ಲಲು ನಾ ಮುಂದು – ತಾ ಮುಂದು ಎಂದು ಪಿ.ಟಿ. ಉಷಾಗಿಂತ ಜೋರಾಗಿ ಓಡಲು ಸಿದ್ಧರಾಗಿದ್ದಾರೆ ೨೦೦೦ದಲ್ಲಿ. ಹೆಣ ಹೊರುವುದೇ ಉದ್ಯೋಗವಾದಾಗ ಹಿಂದಾದರೇನು-ಮುಂದಾದರೇನು? ‘ಬದುಕು ನಿಮಿತ್ತಂ ಬಹು ವಿಧ ಮೋಸಂ’ ಎನ್ನುತ್ತಾರೆ. ಆದರೆ ಮೆಗಾ ಧಾರಾವಾಹಿಗಳನ್ನು ಮಾಡುವುದು ಮೋಸವೇನಲ್ಲವಲ್ಲ.

‘ದೊಡ್ಡ ಸ್ಕ್ರೀನ್ ಆದರೇನು – ಚಿಕ್ಕಸ್ಕ್ರೀನ್ ಆದರೇನು ನನಗೆಲ್ಲಾ ಒಂದೇ. ಆದರೆ ನನ್ನ ಪಾಲಿಗೆ ದೊಡ್ಡ ಸ್ಕ್ರೀನೇ ಇರಲಿ’ ಎಂದವರೆಲ್ಲ ಈಗ ಸಾಹಿತ್ಯ ಅದಲು-ಬದಲು ಮಾಡಿ ರಾಗರಾಗವಾಗಿ ‘ದೊಡ್ಡ ಸ್ಕ್ರೀನ್ ಆದರೇನು ಚಿಕ್ಕ ಸ್ಕ್ರೀನ್ ಆದರೇನು ನನಗೆಲ್ಲಾ ಒಂದೇ. ಆದರೀಗ ನನ್ನ ಪಾಲಿಗೆ ಚಿಕ್ಕ ಸ್ಕ್ರೀನೇ’ ಇರಲಿ ಎಂದು ಪಾರ್ಸಿ ಕಂಪನಿಯ ಟ್ರಾನ್ಸ್‌ಫರ್‍ ಸೀನರಿಯಂತೆ ಸೀನೇ ಬದಲಿಸಿ ಸಂಭ್ರಮಿಸುತ್ತಿದ್ದಾರೆ. ಹೊಸ ಸಹಸ್ರಮಾನದ ಆರಂಭದಲ್ಲೇ ಈ ಅಪಸ್ವರದ ಅಡ್ಡಮಾತೇಕೆ ಎಂದು ಗೊಣಗುತ್ತಿರುವ ನಟ-ನಟಿಯರ ನಿರ್ದೇಶಕರ ಕಷ್ಟ ಅವರ ಬಾಯಿಂದಲೇ ಕೇಳಬೇಕು.

ಬೇಸತ್ತವರು: ‘ಬಣ್ಣ ಹಾಕಿ ವರ್ಷವಾಯಿತು’ ಎನ್ನುವವರು, ‘ಕಲಾವಿದರ ಸಂಘವಿದ್ದೂ ನಮಗೇನೂ ಉಪಕಾರವಾಗಿಲ್ಲ ಎಂದು ಉಪ್ಪು-ಖಾರ ಹಚ್ಚಿ ಬೈಯ್ಯುವವರು, ನಾಲ್ಕು ಅಕ್ಷರ ಕಲಿತಿದ್ರೆ ಎಲ್ಲಾರೂ ತಿಂಗಳ ಸಂಭಳಕ್ಕೆ ಸೇರಿ ಉಂಬಳಕ್ಕೆ ಒಂದು ದಾರಿ ಮಾಡಿಕೊಂಡಿರ್‍ತಿದ್ದೆ ಎಂದು ಹಲುಬುವವರೂ ಲೆಕ್ಕವಿಲ್ಲ.

‘ಪ್ರಭಾವ ಇದ್ದರೆ ಸಾಕು-ಪ್ರತಿಭೆ ಯಾರಿಗೆ ಬೇಕು’ ಎಂದು ಶಪಿಸುತ್ತ ಕಣ್ಣೀರು ಹಾಕುವವರಿಗೂ ಇಂದು ಬರವೇನಿಲ್ಲ.

ಅದರಿಂದಲೇ ಎರಡು ಸಾವಿರದಲ್ಲಿ ಎಲ್ಲ ಟಿ.ವಿಯತ್ತ ದೌಡಾಯಿಸುತ್ತಿದ್ದಾರೆ.

‘ಸುಳ್ಳು ಎಂದಿರಾ?’

ಹಾಗಾದರೆ ಈ ಪಟ್ಟಿ ಗಮನಿಸಿ.

ಘಟಾನುಘಟಿಗಳು ಈಗೆಲ್ಲಿ?

* ಡಾ. ರಾಜಕುಮಾರ್‍ ಅವರ ಸಾಕಷ್ಟು ಚಿತ್ರಗಳನ್ನು ತೆರೆಗೆ ತಂದು-ಕಾದಂಬರಿಗಳನ್ನು ಸೆಲ್ಯುಲಾಯಿಡ್‌ಗೆ ಭಟ್ಟಿ ಇಳಿಸುವಲ್ಲಿ ‘ಏ ಒನ್’ ಎನಿಸಿದ್ದ ದೊರೆ-ಭಗವಾನ್ ಸಹ ‘ಆದರ್ಶ’ ಫಿಲಂ ಇನಸ್ಟಿಟ್ಯೂಟಿನ ಜತೆಗೆ ಟಿ.ವಿ. ಧಾರಾವಾಹಿಗಳು ತಮ್ಮ ಆದರ್ಶ ಮಾಡಿಕೊಂಡಿದ್ದಾರೆ ಈಗ.

* ‘ಅರುಣೋದಯ’ ಕ್ಲಿಕ್ ಆಗುತ್ತದೆ ಎಂದು ಕನಸಿದ ಪಿ.ಎಚ್. ವಿಶ್ವನಾಥ್ ಈ ಚಿತ್ರವೂ ‘ಅಂಡಮಾನ್-ನಿಕೋಬಾರ್‍’ಗೆ ಲಾಯಖ್ಖು ಎಂದಾದಾಗ ನಾರಾಯಣಸ್ವಾಮಿಯವರೊಂದಿಗೆ ಒಂದಾಗಿ ‘ಸಮಾಗಮ’ ಮಾಡಹೊರಟಿದ್ದಾರೆ. ‘ಜನುಮದಾತ’ ಜನ್ಮ ಜನ್ಮಾಂತರದ ಶಾಪವೇನೋ ಎಂದುಕೊಂಡ ಪ್ರಶಸ್ತಿ ವಿಜೇತ ನಿರ್ದೇಶಕ ನಾಗಾಭರಣ ಕಿರುತೆರೆಯತ್ತ ದೌಡಾಯಿಸಿ ‘ಸಂಕ್ರಾಂತಿ’ ಮೆಗಾ ಧಾರಾವಾಹಿ ಆರಂಭಿಸಿದರು. ಈಗ ಕಣಗಾಲ್ ಪುಟ್ಟಣ್ಣ ಪ್ರಶಸ್ತಿ ಚಿತ್ರರಂಗಕ್ಕೆ ಮತ್ತೆ ಕಾಲಿಡಲು ನಾಗಾಭರಣರಿಗೆ ಹುಮ್ಮಸ್ಸಿತ್ತಿದೆ. ಜೆತೆಗೆ ಡೆಲ್ಲಿ ಫಿಲಂ ಫೆಸ್ಟಿವಲ್ಲೂ ಬಂದಿರುವುದರಿಂದ ಕತೆ ಕದಿಯಬಲ್ಲ ಜಾಣರಿಗೆಲ್ಲ ಇದೊಂದು ಸದವಕಾಶ.

* ರಾಷ್ಟ್ರೀಯ ಅಂತಾರಾಷ್ಟ್ರೀಯ ಖ್ಯಾತಿಯ ಗಿರೀಶ್ ಕಾರ್ನಾಡ್ ಸಹಾ ಕಾನೂರು ಹೆಗ್ಗಡತಿ ಟಿವಿ ಸೀರಿಯಲ್ ಮಾಡುವ ಸಂದರ್ಭವನ್ನು ಟು ಇನ್ ಒನ್ ಆಗಿ ಮಾರ್ಪಡಿಸಿ ಚಿತ್ರವನ್ನು ತೆರೆಗಿತ್ತು ಹೀಗೂ ಮಾಡಬಹುದಲ್ಲ ಎಲ್ಲರೂ ಎಂಬುದನ್ನು ಸ್ಪಷ್ಟವಾಗಿ ತೋರಿದ್ದಾರೆ. ಆನೆ ನಡೆದದ್ದೆ ಹೆದ್ದಾರಿ. ಬೇರೆಯವರೂ ಈ ನಿಟ್ಟಿನಲ್ಲಿ ಚಿಂತಿಸುತ್ತಿರಬೇಕು ಈಗಾಗಲೇ.

* ಭಾಮಾ-ಸತ್ಯಭಾಮ, ಸೂರ್ಯವಂಶ ತೆರೆಗಿತ್ತು ಹೆಸರಾದ ನಿರ್ದೇಶಕ ಎಸ್. ನಾರಾಯಣ್ ಇದೀಗ ಡಾ. ರಾಜ್ ಅವರ ‘ಶಬ್ದವೇಧಿ’ ನಿರ್ದೇಶಿಸುತ್ತಿದ್ದರೂ-ನಾಳೆಗಳ ಬಗ್ಗೆಯೂ ತುಂಬ ಚಿಂತಿಸಿ ‘ಪಾರ್ವತಿ’ ಧಾರಾವಾಹಿಯಲ್ಲಿ ಫೋಟೋ ಸಮೇತ ನಿರ್ದೇಶಕರಾಗಿ ಮಿಂಚುತ್ತಿದ್ದಾರೆ. “ಚಿತ್ರ ಅಷ್ಟು ಚೆನ್ನಾಗಿ ಮಾಡ್ತಾರೆ-ಧಾರಾವಾಹಿ ಯಾಕೆ ಹೀಗಿದೆ? ಅಕಾರ ಹಕಾರ ದೋಷಗಳು ಯದ್ವಾ-ತದ್ವಾ ಇರ್‍ತವೆ ಎಂದು ಶಪಿಸುವವರೂ ಈಗ ಜಾಸ್ತಿಯಾಗುತ್ತಿದ್ದಾರೆ” ಎಂಬುದನ್ನೂ ಒಬ್ಬ ಜವಾಬ್ದಾರಿಯುತ ನಿರ್ದೇಶಕ ಗಮನಿಸುವುದು ಅಗತ್ಯ. ಮಾಸ್ ಮಿಡಿಯಾದಲ್ಲಿರುವ ಮಂದಿಗೆ ಜಾಣ ಕಿವುಡು-ಜಾಣ ಕುರುಡು ಬೆಳೆಯುವ ಲಕ್ಷಣವಾಗಲಾರದು.

* ‘ಗರಂ ಹವಾ’ ದಿಂದ ಕಾಂಟ್ರವರ್ಷಿಯಲ್ ಡೈರೆಕ್ಟರ್‍ ಎಂದು ಹೆಸರಾದ ಎಂ.ಎಸ್. ಸತ್ಯು ಈಗ ರಾವ್ ಬಹದ್ದೂರರ ‘ಗ್ರಾಮಾಯಣ’ ಮೆಗಾ ಧಾರಾವಾಹಿ ಮಾಡ ಹೊರಟಿದ್ದಾರೆ.

* ‘ಅಮೆರಿಕಾ ಅಮೆರಿಕಾ’ ಚಿತ್ರ ನಿರ್ದೇಶಿಸಿ ಹೆಸರಾದ ನಾಗತಿಹಳ್ಳಿ ಚಂದ್ರಶೇಖರ್‍ ಸಿನಿಮಾಕ್ಕಾಗಿ ಪ್ರೊಡ್ಯೂಸರ್‍ ‘ಹಂಟಿಂಗ್’ ಬೇಸರವೆನಿಸಿದಾಗ – ಸಿನಿಮಾಗೆ ಪರ್ಮನೆಂಟ್ ಬ್ರೇಕ್ ಹಾಕಿ ‘ಪ್ರತಿಬಿಂಬ’ ಮೆಗಾ ಧಾರಾವಾಹಿ ಮಾಡಹೊರಟು ಸಾಕಷ್ಟು ಕಿರಿಕಿರಿ ಅನುಭವಿಸಿ ಇದೀಗ ‘ಕಾವೇರಿ’ ಮೆಗಾ ಧಾರಾವಾಹಿಗೆ ಕೈ ಇಟ್ಟಿದ್ದಾರೆ. ಚಿತ್ರರಂಗದಷ್ಟು ಕೈ ಸುಡುವುದಿಲ್ಲ ಟೆಲಿ ಧಾರಾವಾಹಿ ಎಂಬುದೇ ಛೋಟಾಸ್ಕ್ರೀನ್‌ನ ಹೆಚ್ಚಳ.

* ಕನ್ನಡ ಚಿತ್ರರಂಗದ ಜನಪ್ರಿಯು ನಿರ್ದೇಶಕರೆಂದು ಹೆಸರಾದ ‘ಭಾರ್ಗವ’ ಕೂಡಾ ಈ ಕಾಲಕ್ಕಾಗುವಂತೆ ಚಿತ್ರರಂಗದಲ್ಲಿ ಹೊಂದಿಕೊಳ್ಳಲಾಗದೆ ‘ಚದುರಂಗ’ ಮೆಗಾ ಧಾರಾವಾಹಿಗೆ ಮೀಸಲಾಗಿದ್ದಾರೆ ಈಗ. ಈ ಮೆಗಾ ಧಾರಾವಾಹಿಗಳ ಹಣೇಬರಹವೇ ಅಷ್ಟು. ಇಲ್ಲಿ ಬಂದವರು ಒಂದು ರೀತಿ ಸುಳಿಯಲ್ಲಿ ಸಿಕ್ಕವಂತೆ. ಅಲ್ಲೇ ಗಿರ್‍ಕಿ ಹೊಡೆಯಬೇಕು. ‘ಫಣಿಕಟ್ಟೆ’ ಎಂದು ಕಂಠೀರವ ಸ್ಟುಡಿಯೋ ಜಗಲಿಗೆ ನಾಮಕರಣ ಮಾಡುವಷ್ಟು ಜನಪ್ರಿಯರಾಗಿದ್ದ ‘ಫಣಿ ರಾಮಚಂದ್ರ’ ಈಗ ‘ದೇವ್ರು ದೇವ್ರು’ ಮೆಗಾ ಧಾರಾವಾಹಿಯಲ್ಲಿ ಮಗ್ನರಾಗಿ ಚಿತ್ರರಂಗ ಸಂಪೂರ್ಣ ಮರೆತಿದ್ದಾರೆ ಎನ್ನಲೂಬಹುದು. ಇಲ್ಲವೇ ಚಿತ್ರರಂಗವೇ ಅವರನ್ನು ಸಂಪೂರ್ಣವಾಗಿ ಮರೆತಿದೆ ಎನ್ನಬಹುದು.

* ಚಿತ್ರರಂಗದ ಹಳೆಯ ಹುಲಿ ಎನಿಸಿದ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ (ರವೀ) ಈ ನಾಡು ಟಿವಿಗಾಗಿ ಧಾರಾವಾಹಿ ಮಾಡುತ್ತ ಜಿ.ವಿ ಅಯ್ಯರ್‍ ಅವರ ಶಾಂತಲಾ ಧಾರಾವಾಹಿಗೂ ದುಡಿಯುತ್ತಿದ್ದಾರೆ.

* ಚಿತ್ರ ನಿರ್ಮಾಪಕ-ನಿರ್ದೇಶಕರೂ ಸ್ಟುಡಿಯೋ ಮಾಲೀಕರೂ ಆದ ಬಿ.ಎಸ್. ರಂಗಾ ಅಂಥ ಹಿರಿಯರೂ ಮೆಗಾ ಧಾರಾವಾಹಿಗೆ ಸೆಲ್ಯೂಟ್ ಹೊಡೆದು ‘ಕಾಲಚಕ್ರ’ ಸರ ಸರ ಸುತ್ತುತ್ತಿದ್ದಾರೆ.
‘ಕಾಲಾಯ ತಸ್ಮೈ ನಮಃ’ ಎಂಬ ಸಾಲು ಈಗ ಸಿನಿಮಾ ಮಂದಿಗೆ ತುಂಬ ಪ್ರಿಯವಾಗಿದೆ.

* ಮಿನಿಮಮ್ ಗ್ಯಾರಂಟಿ ನಿರ್ದೇಶಕರೆಂದು ಹೆಸರಾಗಿದ್ದ ಜೊಸೈಮನ್, ವಸ್ತು ವೈವಿಧ್ಯಕ್ಕೆ ಹೆಸರಾಗಿದ್ದ ನಂಜುಂಡೇಗೌಡ, ಉಲ್ಟಾ-ಪಲ್ಟಾದಿಂದ ‘ಭೇಷ್’ ಎನಿಸಿಕೊಂಡ ಎನ್.ಎಸ್. ಶಂಕರ್‍, ‘ಕುಹೂ-ಕುಹೂ’ ಎಂದು ಕೋಗಿಲೆಯಂತೆ ಹಾಡಿ ಚಿತ್ರವಾರಂಭಿಸಿದ ಬಿ.ಸುರೇಶ್ ಮುಂತಾದವರೆಲ್ಲ ತಮ್ಮ ‘ಸಾಧನೆ’ ಟ.ವಿ.ಮೆಗಾ ಧಾರಾವಾಹಿಗೆ ಮೀಸಲು ಮಾಡಿದ್ದಾರೆ ಈಗ.

* ಚಿತ್ರರಂಗದಲ್ಲಿ ಹೆಸರಾಗಿದ್ದ ಆರ್‍.ಎನ್. ಜಯಗೋಪಾಲ್ ‘ಜನನಿ’ಯಿಂದ ಹೊರ ದೂಡಲ್ಪಟ್ಟರೂ ಮೆಗಾ ಧಾರಾವಾಹಿಯ ಆಸೆಗೆ ಮತ್ತೆ ಅವರೊಂದಿಗೆ ಕೈ ಜೋಡಿಸಿದರು. ಚಿತ್ರದಿಂದ ಕರೆಗಳು ಬರಲಿಲ್ಲ. ಆಗ ಹಿಂದೀ ಚಿತ್ರನಟ ‘ಜಿತೇಂದ್ರ’ ಇತಿಹಾಸ ಮೆಗಾ ಧಾರಾವಾಹಿ ನಿರ್ದೇಶಿಸುವಿರಾ ಎಂಬ ವಾಕ್ಯಪೂರ್ತಿ ಆಗುವುದರಲ್ಲಿ ದುಡು ದುಡು ಓಡಿ ಟಿ.ವಿ.ಗೆ ‘ಜಾಂ’ ಆಗಿಬಿಟ್ಟರು.
ಅದರಿಂದಲೇ ಈಗ ಮೆಗಾ ಧಾರಾವಾಹಿಗಳು ಸಿನಿಮಾ ನಟ-ನಟಿ-ನಿರ್ದೇಶಕರ ಬ್ರೆಡ್-ಬಟರ್‍-ಜಾಂ ಸಹಾ ಆಗಿದೆ.

* ‘ಊರ್ವಶಿ’ ಸಿನಿಮಾ ತೆಗೆದು ಪ್ರಶಸ್ತಿ ಗಳಿಸಿದ ಅಮರ್‍ ಸಿನಿಮಾರಂಗದಲ್ಲಿ ಅಡ್ರೆಸ್ ದಕ್ಕಲಿಲ್ಲವಾಗಿ ಧಾರಾವಾಹಿಗಳಿಗೆ ತಮ್ಮ ವಿಸಿಟಿಂಗ್ ಕಾರ್ಡ್ ಮಾರಿಕೊಂಡಿದ್ದಾರೆ.

* ಟಿ.ವಿ. ಸೀರಿಯಲ್‌ಗೆ ಮೀಸಲಾಗಿದ್ದ ವಾರ್ತಾ ಇಲಾಖೆಯ ಶಿವರುದ್ರಯ್ಯ ಈ ಬಾರಿ ಪ್ರಥಮ ಪ್ರಶಸ್ತಿ ಬಂದುದರಿಂದ ಸಿನಿಮಾಗೆ ಹಾರಬಹುದೆ ಎಂದು ಕನಸುತ್ತಿದ್ದರೂ – ನಿತ್ಯದೂಟವಾದ ಧಾರವಾಹಿಗಳನ್ನು ಕೈಬಿಟ್ಟಿಲ್ಲ.

* ಕಟ್ಟೆರಾಮಚಂದ್ರರನ್ನೂ ಸಿನಿಮಾ ರಂಗದಲ್ಲಿ ‘ಕ್ಯಾರೇ’ ಎನ್ನುವವರಿಲ್ಲ. ಅದರಿಂದ ಅವರೂ ಮೆಗಾ ಧಾರಾಗಾಹಿಗಳಿಗೆ ಕೈ ಚಾಚುತ್ತಿದ್ದಾರೆ.

* ಚಿತ್ರ ನಿರ್ದೇಶಕ ನಟ ಸಿ.ಆರ್‍. ಸಿಂಹ ಈ ನಾಟು ಟಿವಿಗಾಗಿ ಹೈದರಾಬಾದ್ ಷೂಟಿಂಗ್ ತೆರಳಿದ್ದಾರೆ.

-ಜನಪ್ರಿಯ ಧಾರಾವಾಹಿಗಳು ಈಗ ಚುಯಿಂಗಮ್ ಆಗುತ್ತಿವೆ. ಕಮರ್ಷಿಯಲ್ ಫಿಲಂ ಡೈರಕ್ಟರುಗಳೂ ತಾವು ಗೇಲಿ ಮಾಡುತ್ತಿದ್ದ ‘ಆರ್‍ಟ್ ಫಿಲಂ’ನ ನಿಧಾನಗತಿ ಮೆಚ್ಚಿ ಹಣದತ್ತ ವಾರೆಗಣ್ಣು ಬೀರುತ್ತಿದ್ದಾರೆ.

ಕತೆ ಬೆಳೆಸುವಾಗ ತರ್ಕಕ್ಕೆ ಎಳ್ಳು ನೀರು ಬಿಡುವುದು, ಪಾತ್ರಧಾರಿ ತಕರಾರು ಮಾಡಿದರೆ ಮುಂದಿನ ದೃಶ್ಯದಲ್ಲೇ ಆತನನ್ನು ಸಾಯಿಸಿ ಚೌಕಟ್ಟಿನಲ್ಲಿರುವ ಫೋಟೋ ಮಾಡುವುದು, ತಾಯಿ ಪಾತ್ರದವಳು ನಖರಾ ಮಾಡಿದರೆ-ಅವಳ ಬದಲಿಗೆ ಇನ್ನೊಬ್ಬಳನ್ನು ತಾಯಿ ಮಾಡುವ ಅಭಾಸ ಪರಂಪರೆ ನೀವೂ ನೋಡುತ್ತಿದ್ದೀರಿ.

ಈ ೨೦೦೦ದಲ್ಲಿ ಟಿ.ವಿ.ಯತ್ತ ಓಡುವ ಕುದುರೆಗಳು ಇನ್ನೂ ಹೆಚ್ಚಬಹುದು. ನೀವೇನಂತೀರಿ?
*****
(೧೪-೧-೨೦೦೦)