ಬಸಳೆ – ನಾನು

ನನ್ನ ಪ್ರೀತಿಯ ಹಿತ್ತಲಲ್ಲಿ
ಅಮ್ಮ ನೆಟ್ಟು ತೊನೆಸಿದ
ಬದನೆಯ ಬಳಿಯೇ
ತಂದು ಸ್ಥಾಪಿಸಿದ್ದೇನೆ
ಬಸಳೆ ಸಾಮ್ರಾಜ್ಯ
ಚಪ್ಪರಿಸಿದ್ದೇನೆ ಬೇಗ ಬೇಗ
ಊರು ಕೊಟ್ಟಿದ್ದೇ ತಡ
ಹಬ್ಬಿದ್ದೇ ಹಬ್ಬಿದ್ದು
ತಲೆ ತಗ್ಗಿಸಿ ಮನತುಂಬಿ
ಚಪ್ಪರ ತಬ್ಬಿದೇ ತಬ್ಬಿದ್ದು
ಬಚ್ಚಲ ತೀರ್ಥವಾದರೂ ಸರಿ
ಅರಿವಿಲ್ಲದೇ ಹೀರಿ
ಹಸುರಾಗಿ ತುಂಬಿ ಕಂಗೊಳಿಸಿದ್ದು
ಕಂಡಷ್ಟೂ ಸುಖ ಪುಳಕ
ಕಡಿಸಿದಷ್ಟೂ ಚಿಗುರು
ಜೀವ ಪುಟಿತ
ಮೊಗ್ಗೆ ಗಿಣ್ಣಿನ ಸಂತೆ
ತಿಂದಷ್ಟೂ ಹಿಂಸೆ ಇತ್ತಷ್ಟೂ
ಚಕ್ರ ಕುಡಿಯೊಡೆತ

ಅಂದುಕೊಳ್ಳುತ್ತೇನೆ
ಸೊಪ್ಪು ಮೆಲುವಾಗ
ದೇಟು ಜಗಿಯುವಾಗ
ನನಗ್ಯಾಕೆ ಇಲ್ಲವೀ
ತೃಪ್ತ ಸುಖಭೋಗ
ಯಥೇಚ್ಛಯೋಗ
*****