ಥ್ರಿಲ್ಲರ್‍ ಮಂಜು ಈಗ ಕನ್ನಡದ ಕವಿ ಉಪೇಂದ್ರ ಗಾಯಕ ಮತ್ತು ವಿಮರ್ಶಕ ಅವರನ್ನು ಹಾಡಿ ಹೊಗಳಬೇಕಾದ ಪತ್ರಕರ್ತ ಅಸಹಾಯಕ

ಚಲನಚಿತ್ರ ರಂಗದಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈಗ ಥ್ರಿಲ್ಲರ್‍ ಮಂಜುವೇ ಸಾಕ್ಷಿ.

‘ಥ್ರಿಲ್ಲರ್‍ ಮಂಜು ಸ್ಟಂಟ್ ಮಾಸ್ಟರ್‍ ಎನ್ನಿ’ ಒಪ್ಪೋಣ. ಅವರ ಫೈಟ್ಸ್ ತುಂಬ ಥ್ರಿಲ್ಲಿಂಗ್ ಎನ್ನಿ ಅನುಮಾನವೇ ಇಲ್ಲ. ಆಕ್ಷನ್ ಫಿಲಂ ಹೀರೋ ಎನ್ನಿ ಅದೂ ಒಂದು ಬಗೆಯ ಕಥೆಯಾದಾಗ ಒಪ್ಪಬಹುದು. ಆದರೆ ಥ್ರಿಲ್ಲರ್‍ ಮಂಜು ನಿರ್ಮಾಪಕನಾದ ನಿರ್ದೇಶಕನಾದ-ನಾಯಕನಾದ ಖಳನಾಯಕನಾದ. ೨೦೦೧ರಲ್ಲಿ ಕನ್ನಡ ಕವಿಯೂ ಆದ ಎಂದಾಗ ಕನ್ನಡಮ್ಮ ಕಕ್ಕಾಬಿಕ್ಕಿಯಾಗಿ ಕಣ್ಣೀರಿಟ್ಟಳಂತೆ. ಥ್ರಿಲ್ಲರ್‍ ಮಂಜು ಕೈಲಿ ‘ಉತ್ಸವ’ ಎಂದು ಹೇಳಿಸಲು ವಿಲಿವಿಲಿ ಒದ್ದಾಡಿದ ವ್ಯಕ್ತಿ ‘ಉಸ್ತವ’ ಎಂದು ಕೇಳಿ ಕೇಳಿ ಸಾಕಾಗಿ ಅವರ ನಾಲಿಗೆ ಅರ ಹಾಕಿ ಉಜ್ಜಿ – ಫಿನೈಲ್ ಹಾಕಿ ತೊಳೆಸುವುದೆಂದು ಅಂತಿಮವಾಗಿ ತೀರ್ಮಾನಿಸಿದನಂತೆ.

ಅದೇ ರೀತಿ ‘ಮೈಕೆಲ್ ಜಾಕ್ಸನ್’ ಎಂದು ಹೇಳ ಹೋದ ಥ್ರಿಲ್ಲರ್‍ ಮಂಜು ‘ಮೈಕಲ್ ಜಾಸ್‌ಕನ್’ ಅಂದುದನ್ನು ಕಂಡು ‘ಕವಿಯಾಗುವ ಕನಸು’ಹೊತ್ತ ಮೇಲೆ ‘ಇಂಥವೆಲ್ಲ ರಿಪೇರಿ ಮಾಡಿಕೊಳ್ಳಲೇಬೇಕು ಎಂದು ಬಹುಮಂದಿ ಅವರ ಕಿವಿ ಹಿಂಡಿದರಂತೆ. ಆದರೆ ಥ್ರಿಲ್ಲರ್‍ ಮಂಜುಗೆ ತನ್ನದೇ ಆದ ಪಟ್ಟಾಲಂ ಇದೆ. ಅವರೆಲ್ಲ “ಗುರುವೆ-ಸಖತ್ತಾಗಿ ಬರ್‍ದಿದಿ ಗುರು ಸಾಯಿತ್ಯ. ಥತ್ ಇವ್ನಯ್ಯನ್ ಇದನ್ನ ಚೆನ್ನಾಗಿಲ್ಲ ಅನ್ನೋ ಗಾಂಡೂ ನನ್ಮಗ ಯಾರು ಗುರುವೆ? ನೀವು ಸುಮ್ನೆ ಹಾಡು ಬರೆದು ಉಪ್ಪಿ ಕೈಲಿ ಹಾಡ್ಸು ಗುರೂ…. ನಾ ಮುಂದು…. ತಾ ಮುಂದು ಅಂತ ಕ್ಯಸೆಟ್ ಕೊಳ್ಳೋಕೆ ಕಂಪನಿಗಳೋರು ಓಡೋಡಿ ಬರ್‍ತಾರೆ” ಅಂತ ಶಿಷ್ಯವೃಂದ ಹೇಳಿದ್ದೇ ತಡ, ಥ್ರಿಲ್ಲರ್‍ ಮಂಜು ನಿಜಕ್ಕೂ ಥ್ರಿಲ್ ಆಗಿ -ಬರೆಯ ಕೂತೇ ಬಿಟ್ಟರು ಪೆನ್ ಹಿಡಿದು.

ಗುರುವರೇಣ್ಯ ಕನ್ನಡ ಪದಗಳಿಗೆ ಬೇಟೆ ಆಡುತ್ತಿದ್ದಾಗ ಮಂಜು ಭಕ್ತಾದಿಗಳು ಪಾನಕ-ಪರಿಹಾರ ಸೇವಿಸಿ ನಮ್ಮ ‘ಥ್ರಿಲ್ಲರ್‍ ಮಂಜೂನ ಕವಿ ಮಾಡೇ ತಾಯಿ’ ಎಂದು ಕನ್ನಡ ರಾಜರಾಜೇಶ್ವರಿಯನ್ನು ಭಜನೆ ಮಾಡತೊಡಗಿದರು.

ಇವರ ಆರ್ತನಾದ ಕನ್ನಡ ರಾಜರಾಜೇಶ್ವರಿಗೆ ತಟ್ಟಿತು ಎಂದು ಕಾಣುತ್ತದೆ. ಇದ್ದಕ್ಕಿದ್ದಂತೆ ಆಕೆ ಬಿಕ್ಕಿಬಿಕ್ಕಿ ಅಳ ತೊಡಗಿದಳು.

“ಹೆಚ್ಚು ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕನ್ನಡ ನಾಡು ಎಂಬುದು ನನಗೆ ಹೆಮ್ಮೆ. ದ.ರಾ.ಬೇಂದ್ರೆ, ಕುವೆಂಪು, ತೀನಂಶ್ರೀ, ಬಿಎಂಶ್ರೀ, ವೀಸಿ, ಮಾಸ್ತಿ, ವಿ.ಕೃ.ಗೋಕಾಕ್ ಮುಂತಾದವರೆಲ್ಲ ಕನ್ನಡದ ಕೀರ್ತಿ ಬೆಳಗಿದರು. ಅವರಿಂದ ಸ್ಫೂರ್ತಿಗೊಂಡ ಕಣಗಾಲ ಪ್ರಭಾಕರಶಾಸ್ತ್ರಿ, ಕುರಾಸಿ, ಹುಣಸೂರು ಕೃಷ್ಣಮೂರ್ತಿ, ಚಿ. ಉದಯಶಂಕರ್‍ ಮುಂತಾದವರು ಸಿನಿಮಾ ಹಾಡುಗಳಿಗೆ ಸಾಹಿತ್ಯದ ಮೌಲ್ಯ ಬರುವಂತೆ ಮಾಡಿದರು. ಆ ನಂತರ ಹಂಸಲೇಖಾ ಹೊಸ ಟ್ರೆಂಡ್ ಆರಂಭಿಸಿ ಆಡುಮಾತನ್ನು ‘ಹಾಡು ಮಾತು’ ಮಾಡಿದರು. ಅವರ ದಾರಿಯಲ್ಲೇ ನಡೆದರು ಕಲ್ಯಾಣ್ ಮುಂತಾದವರು. ಅನಂತರ ರವಿಚಂದ್ರನ್ ತಾವೇ ಸಂಗೀತ ನಿರ್ದೇಶನವೂ ಮಾಡಿ, ಸಾಹಿತ್ಯವೂ ಬರೆಯಲಾರಂಭಿಸಿದರು. ಕನ್ನಡಿಗನೆಂಬ ನಿಸ್ಸಹಾಯಕ ಪ್ರೇಕ್ಷಕ ಇವೆಲ್ಲ ಸಹಿಸಿಕೊಳ್ಳಬೇಕಾದದ್ದು ಅನಿವಾರ್ಯ.

ಹೀಗಾದಾಗ ಕಳ್ಳ ಬೆಕ್ಕಿನಂತೆ ಹೊಂಚುಕಾದು ದಿಡೀರ್‍ ಕವಿಗಳಾಗುತ್ತಾರೆ ಥ್ರಿಲ್ಲರ್‍ ಮಂಜು ಅಂಥವರು. ‘ಶಬ್ದ’ ಚಿತ್ರಕ್ಕಾಗಿ ಅವರ ಮಹಾನ್ ಕವಿತೆ ಸಾಲುಗಳು ಹುಟ್ಟಿದ್ದೂ ಹೀಗೆ.

“ಹುಬ್ಬಳ್ಳಿ ಹುಡುಗಿ ನೀನು-ನನ್ನ ಧಾರವಾಡದ ಚೆಲುವಿ ನೀನು” ಹೀಗೆ ಒಂದಾಗುತ್ತಲೊಂದು ಐದು ಹಾಡುಗಳು ತೊಪ ತೊಪ ಉದುರಿದವು ಸಗಣಿಯಂತೆ. ತಕ್ಷಣ ಎಂ.ಎಸ್. ಕೃಪಾಕರ್‍ ಬಿಟ್ಟರೆ ಅವಕಾಶ ತಪ್ಪೀತೆಂದು ಸರಸರ ಟ್ಯೂನ್ ಹಾಕೇ ಬಿಟ್ಟರು. ಮಂಜು ಭಕ್ತಾದಿಗಳು ಟ್ಯೂನ್ ಕೇಳಿ ‘ಟಪ್ಪಾಂಗುಚ್ಚಿ’ ಕುಣಿತ ಕುಣಿದು ಸುಸ್ತಾದರು.

ಈ ಕುಣಿತದ ಅಬ್ಬರ ಕಂಡು ಉಪೇಂದ್ರ ಬಂದವರೇ ಹೆಚ್‌ ಟು ಓ ಪ್ಲೀಸ್ ಎಂದ. ಥ್ರಿಲ್ಲರ್‍ ಮಂಜು ಬಿಸಿಲೇರಿ ಬಾಟಲಲ್ಲಿ ಬೇಕಾದ ಪಾನಕ ಪರಿಹಾರ ತರಿಸಿದ ನಂತರ-ಥ್ರಿಲ್ಲರ್‍ ಮಂಜು “ಮೈಡಿಯರ್‍ ಉಪ್ಪಿ” ಶಬ್ದ ಚಿತ್ರಕ್ಕೆ ಒಂದು ಹಾಡು ನೀವು ಹಾಡಲೇ ಬೇಕು ಎಂದಾಗ “ನಿಂಗೆ ಇಲ್ಲ ಅಂತೀನಾ ಹಾಡು ಕೊಡಲಾ” ಎಂದದ್ದೇ ತಡ-ಮುಂಚೆ ಕವಿಗೆ ಕಿವಿಯಾದರು. ಅನಂತರ ತಾವೇ ಹಾಡಿ ಹಾರೈಸಿದರು.

“ನಾನೇ ಈ ಐದು ಆಡು ಬರೆದಿವ್ನಿ. ತಪ್ಪೇನೇನಾ ಅದಾ – ಓದಿ ಒಸಿ ಎಂಗದೆ ಅಂಗನ್ನಿ” ಎಂದ ಮಂಜು.

ತಕ್ಷಣ ಉಪ್ಪಿ ತನ್ನ ಗಾಯನದಿಂದ “ಒಬ್ಬನ ಬದುಕು ಉದ್ಧಾರವಾಗುವುದಾದರೆ ಆಗಲಿ, ಆ ಕ್ಯಾಸೆಟ್ಟು ತನ್ನ ಹಾಡಿನಿಂದ ಲಕ್ಷ-ಲಕ್ಷಕ್ಕೆ ಸೇಲ್ ಆಗುವುದಾದರೆ ಗ್ರಾಂಡ್ ಎಂದು ಈಗ ನಾನು ಗಾಯಕ ಮಾತ್ರ ಅಲ್ಲ, ವಿಮರ್ಶಕ ಸಹಾ ಎಂದು ತನಗೆ ತಾನೇ ಬೆನ್ನು ತಟ್ಟಿಕೊಂಡು ಅಭಿಪ್ರಾಯ ಬರೆಯ ತೊಡಗಿದರು ಉಪ್ಪಿ.

“ಹೌದು ಈ ಉಪ್ಪಿ ಮನಸ್ಸಿಗೆ ಫಿಲ್ಟರ್‍ ಇಲ್ಲದ ಉಪ್ಪಿ. ನಿರ್ಮಾಪಕ-ನಾಯಕ ನಿರ್ದೇಶಕ ಮಾತ್ರ ಅಲ್ಲ ಗಾಯಕನೂ ಹೌದು ವಿಮರ್ಶಕನೂ ಹೌದು. ನಮ್ಮ ಥ್ರಿಲ್ಲರ್‍ ಮಂಜೂನ ನೋಡಿ ನಂಗೆ ಎಷ್ಟು ಹೊಟ್ಟೆಕಿಚ್ಚು ಆಗುತ್ತೆ ಗೊತ್ತಾ.

ದ.ರಾ.ಬೇಂದ್ರೇನ, ಕುವೆಂಪೂನ ಮೀರಿಸ್ತಾನ್ರಿ ಥ್ರಿಲ್ಲರ್‍ ಮಂಜು…. ಹುಬ್ಬಳ್ಳಿ ಹುಡುಗಿ ನೀನು – ನನ್ನ ಧಾರವಾಡದ ಚೆಲುವಿ ನೀನು ಅಂಥ ಅದ್ಭುತವಾದ ಸಾಲು ಬರೆದಿದ್ದಾನೆ ನೋಡಿ ಥ್ರಿಲ್ಲರ್‍…. ಇವನ ಐದು ಕವಿತೆಗಳು ಓದಿದ ಮೇಲೆ ಯಾವ ವಿಮರ್ಶಕನಿಗೇನೂ ಕಮ್ಮಿ ಇಲ್ಲ. ಚಿನ್ನದ-ವಜ್ರದ ಕಿರೀಟದ ಕಲ್ಚರ್‍ ಶುರು ಆಗಿರೋದೇ ನನ್ನಿಂದ. ನಾನೇನಾದ್ರೂ ಈಗ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ನಿಲ್ತೀನಿ ಅಂದ್ರೆ ಚಂದ್ರಶೇಖರ್‍ ಪಾಟೀಲ್ ಪುನರೂರು ಎಲ್ಲ ಚಿಂದಿ ಚಿಂದಿ ಎದ್ದೋಗ್ತಾರೆ. ನಾನೇ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗೋದು ಗ್ಯಾರಂಟಿ. ಆದರೆ ನನಗೆ ‘ನಾನು’ ಅನ್ನೋದ್ರಲ್ಲಿ ನಂಬಿಕೆ ಇಲ್ಲ. ಅದಕ್ಕೆ ಈಗ ಎಲ್ಲ ಕಡೆ ನನ್ನ ಶಿಷ್ಯರನ್ನು ನಾನೇ ಬೆಳಸ್ತಿದೀನಿ…. ‘ಸ್ಟಾರ್ಟ್’ ಹೇಳೋನೂ ನಾನು-ಕಟ್ ಹೇಳೋರು ನನ್ನ ಶಿಷ್ಯರು.

ಹೆಚ್‌ಟುಓ ಹಾಲಿವುಡ್ ಎಲ್ಲ ಈ ಲೈನ್‌ನಲ್ಲೇ ನಡೀತಿದೆ.

ಈ ಶಿಷ್ಯರ ಪಟ್ಟೀಲಿ ನಮ್ಮ ಥ್ರಿಲ್ಲರ್‍ ಮಂಜು ಸಹ ಒಬ್ಬ. ಸ್ವಲ್ಪ ವ್ಯಾಕರಣ ತಿದ್‌ಕೊಂಡ್ರೆ, ಕವಿತಾ ಸಂಕಲನಗಳನ್ನೆಲ್ಲಾ ತಂದಿಟ್ಕೊಂಡು ಅಲ್ಲಿಂದ ಇಲ್ಲಿಂದ ಗೊತ್ತಾಗದ ಹಾಗೆ ಸಾಲುಗಳು ಕದಿಯೋದು ಹ್ಯಾಗೆ ಎಂದು ಕಲಿತುಬಿಟ್ರೆ ಮುಂದಿನ ಸಾರಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅವನೇ. ಅವನು ಅಧ್ಯಕ್ಷನಾದ್ರೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆಮೇಲೆ ನಾನೇ. ಆಗ ನೋಡ್ರಪ್ಪ ಭಕ್ತಾದಿಗಳು. ಲಕ್ಷಾಂತರ ಜಮಾಯಿಸಿ ದಾವಣಗೆರೆಯ ಅಂಬಿ ಫಂಕ್ಷನ್‌ನೂ ಮೀರಿಸಿ ಗಿನ್ನೆಸ್ ರೆಕಾರ್ಡ್ ಸಾಧ್ಯ ಮಾಡ್ತೀವಿ. ಆಗ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಫಿಲಂ ಸ್ಟಾರ್‍ಸ್ ಕಟೌಟ್ಸ್…. ಆ ಅಂಥ ದಿನ ಬರುವ ಮುನ್ಸೂಚನೆ ಈಗ ಜೋರಿನಿಂದ ನಡೆದಿದೆ.
*****
(೮-೬-೨೦೦೧)