“ದ್ವೀಪ” ಚಿತ್ರದ ಸ್ತ್ರೀವಾದಿ ನಿಲುವು- ಒಂದು ವಿಮರ್ಶೆ

“ದ್ವೀಪ” ಗಿರೀಶ್ ಕಾಸರವಳ್ಳಿಯವರಿಗೆ ನಾಲ್ಕನೇ ಸ್ವರ್‍ಣಕಮಲವನ್ನು ತಂದುಕೊಟ್ಟ ಚಿತ್ರ ಎಂಬ ಕಾರಣಕ್ಕೆ ಮಾತ್ರವಲ್ಲದೆ, ಜನಪ್ರಿಯ ನಟಿಯೊಬ್ಬರು ನುರಿತ ನಿರ್‍ದೇಶಕರೊಟ್ಟಿಗೆ ಸೇರಿ ಚಿತ್ರ ಮಾಡಿದಾಗ ಫಲಿತ ಹೇಗಿರಬಹುದೆಂಬ ಕುತೂಹಲದಿಂದಲೂ ಈ ಚಿತ್ರವನ್ನು ನೋಡಲು ನಾನು ಬಹಳ ದಿನಗಳಿಂದ ಹಂಬಲಿಸಿದ್ದೆ. ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸಲು ಸಮಯ ಒದಗಿಬಂದಿರಲಿಲ್ಲ. ಅಪರೂಪಕ್ಕೊಮ್ಮೆ ಒಳ್ಳೆಯ ಚಿತ್ರಗಳನ್ನು ಪ್ರಸಾರ ಮಾಡುವ ಜನಪ್ರಿಯ ವಾಹಿನಿಯೊಂದರಲ್ಲಿ ಈ ಚಿತ್ರದ ಪ್ರಿಮಿಯರ್ ಇದೆಯೆಂದು ತಿಳಿದಾಗ, ನಾನದನ್ನು ತಪ್ಪಿಸಿಕೊಳ್ಳುವ ಮಾತೇ ಇರಲಿಲ್ಲ.
ಚಿತ್ರದ ಮೊದಲ ದೃಶ್ಯದಲ್ಲಿ ನಾವು ಕಾಣುವುದು ಜಲರಾಶಿಯನ್ನು. ಇದರ ನಡುವೆ ಹುಟ್ಟುಹಾಕುತ್ತ, ನಾಯಕಿ ದೋಣಿಯಲ್ಲಿ ಸಾಗಿಬರುವುದು ಮುಂದಿನ ದೃಶ್ಯ. ಚಿತ್ರದ ಒಟ್ಟೂ ಆಶಯಕ್ಕೆ ಈ ದೃಶ್ಯ ಮೆಟಾಫರ್ನಂತಿದೆ. ಸ್ತ್ರೀವಾದಿ ನಿಲುವನ್ನು ಮುಂದು ಮಾಡುವುದನ್ನು ನಿರ್‍ದೇಶಕರು ಇಲ್ಲಿಂದಲೇ ಪ್ರಾರಂಭಿಸುತ್ತಾರೆ. ಮುಂದೆ ಚಿತ್ರದಲ್ಲಿ ಬರುವ ಕೆಲವು ಘಟನಾವಳಿಗಳು ಈ ಮೂಲ ಆಶಯದಿಂದ ಹಿಂದೆ ಸರಿದಿರುವಂತೆ ಕಂಡು ಬಂದರೂ ಚಿತ್ರದಲ್ಲಿ ಸ್ತ್ರೀವಾದಿ ನಿಲುವೇ ಅಂತಿಮ.
“ದ್ವೀಪ”ದ ಕಥೆ ಮುಖ್ಯವಾಗಿ, ಒಂದು ಗ್ರಾಮೀಣ ಸಮುದಾಯದ ಮೇಲೆ ಆಧುನಿಕತೆಯ ಬಳುವಳಿಯಾಗಿ ಬಂದ ಯೋಜನೆಯೊಂದು ನೀಡುವ ಹೊಡೆತದ ಬಗ್ಗೆಯೇ ಆಗಿದ್ದರೂ ಸಹ, ನಿರ್‍ದೇಶಕರು, ಕಥೆಯಲ್ಲಿ ಬರುವ ಪ್ರತಿಭಟನೆಯನ್ನು ಸ್ತ್ರೀವಾದಿ ನೆಲೆಯಲ್ಲಿ ನಿರೂಪಿಸಿದ್ದಾರೆ. ಇದಕ್ಕೆ ಕಾರಣ ನಿಚ್ಚಳ. “ಕಾನೂರು ಹೆಗ್ಗಡಿತಿ”ಯಲ್ಲಿ ನಿರ್‍ದೇಶಕ ಗಿರೀಶ್ ಕಾರ್‍ನಾಡರೇ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರಿಂದ, ಆ ಚಿತ್ರದ ಮೇಲಾದ ಪರಿಣಾಮವೇ “ದ್ವೀಪ”ದಲ್ಲಿ ಪುನರಾವರ್‍ತನೆಗೊಂಡಿದೆ. “ದ್ವೀಪ” ಚಿತ್ರದ ನಿರ್‍ಮಾಪಕಿ ಚಿತ್ರದ ನಾಯಕಿಯೂ ಹೌದು. ಇದರಿಂದಾಗಿ ಕಾಸರವಳ್ಳಿಯವರಿಗೆ “ದ್ವೀಪ”ವನ್ನು ಸ್ತ್ರೀವಾದಿ ನೆಲೆಯಲ್ಲಿ ನಿರೂಪಿಸುವುದು ಅನಿವಾರ್‍ಯವಾಗಿದ್ದಿರಬಹುದು.
ನಾನು ಈ ಮೊದಲು ಹೇಳಿ ದಂತೆ, ಚಿತ್ರದ ನಡುವೆ ಕೆಲವೆಡೆ ಈ ಮೂಲ ಆಶಯದಿಂದ ಸ್ವಲ್ಪ ಹಿಂದೆ ಸರಿದಂತೆ ಕೆಲವು ಘಟನಾವಳಿಗಳಿವೆ. ದುಗ್ಗಜ್ಜನ ಪಾತ್ರ ಇದರಲ್ಲಿ ಮುಖ್ಯವಾದದ್ದು. ಮತ್ತೊಂದು ಸ್ವತಂತ್ರ ಚಿತ್ರವೇ ಆಗಬಲ್ಲ ಸಾಮರ್‍ಥ್ಯ ಈ ಪಾತ್ರದ ಕಥೆಯಲ್ಲಿದೆ. ಆದರೆ ದುಗ್ಗಜ್ಜನ ಸಾವಿನೊಂದಿಗೆ ಈ (ಸಬ್)ಕಥೆಯನ್ನು ಅನ್‌ಸೆರೆಮೋನಿಯಸ್ಸಾಗಿ ಎಂಡ್ ಮಾಡಲಾಗಿದೆ.
ಇನ್ನು ಗಣಪನ ಪಾತ್ರವನ್ನು ಗಮನಿಸಿದಾಗ, ಸ್ತ್ರೀವಾದಿ ನಿಲುವಿಗೆ ಪೂರಕವಾಗಿ ನಿರೂಪಿಸಲ್ಪಟ್ಟಿರುವುದು ಕಂಡು ಬರುತ್ತದೆ. ಚಿತ್ರಕ್ಕೆ ಬೇರೊಂದು ಆಯಾಮವನ್ನೇ ಈ ಪಾತ್ರ ನೀಡುತ್ತದೆ. “ಅಪ್ಪ ಹಾಕಿದ ಅಲದ ಮರಕ್ಕೆ ನೇಣು ಹಾಕಿಕೊಳ್ಳಬಯಸುವ ಸಮಾಜದ ಒಂದು ವರ್‍ಗವನ್ನು ಈ ಪಾತ್ರ ಪ್ರತಿನಿಧಿಸುತ್ತದೆ. ಹೀಗಿದ್ದಾಗ್ಯೂ ಚಿತ್ರದಲ್ಲಿ ಈ ಪಾತ್ರಕ್ಕೆ ಹೆಚ್ಚಿನ ಕೆಲಸವೇನು ಇಲ್ಲ.
ಮತ್ತೊಂದು ಪಾತ್ರ ಕೃಷ್ಣನದ್ದು. ನಾಗಿಗೆ ಹೊರ ಜಗತ್ತಿನೊಂದಿಗೆ ಸಂಪರ್‍ಕ ಕೊಂಡಿ ಈತ. ನಾಗಿ ಪಟ್ಟಣದಲ್ಲಿ ಬೆಳೆದ ಹೆಣ್ಣು ಮಗಳು. ಸಹಜವಾಗಿಯೇ ಆಕೆಯ ಆಸೆಗಳು ಅಲ್ಲಿನ ಪರಿಸರದಿಂದ ಪ್ರೇರಿತವಾದುವು. ಇಲ್ಲಿ ಪಟ್ಟಣ ಆಧುನಿಕತೆಯ ಪ್ರತೀಕ. ನಾಗಿಯ ಛಲ, ಹಿಡಿದದ್ದನ್ನು ಸಾಧಿಸಬೇಕೆಂಬ ಗುಣಗಳು, ಪಟ್ಟಣದ ಪರಿಸರದಿಂದ ಬಂದವುಗಳು. ತನ್ಮೂಲಕ ಈ ಗುಣಗಳು ಆಧುನಿಕತೆಯ ಪ್ರತೀಕವೇ ಆಗಿವೆ. ನಾಗಿಯ ಟ್ರಯಂಫ್ನಿಂದಾಗಿ, ಆಧುನಿಕ ಜಗತ್ತು ಹುಟ್ಟಿಹಾಕುವ ಸಮಸ್ಯೆಗಳಿಗೆ, ಪರಂಪರೆಯಲ್ಲಲ್ಲ, ಆಧುನಿಕತೆಯಲ್ಲೇ ಉತ್ತರವಿದೆ, ಎಂಬುದೂ ಧ್ವನಿತವಾದಂತೆ ತೋರುತ್ತದೆ. ಕೃಷ್ಣನೊಟ್ಟಿಗಿನ ಆಕೆಯ ವರ್‍ತನೆಯೂ ಆಧುನಿಕತೆಯ ಪಡಿ ಅಚ್ಚಿನಂತೆ. ಅದಕ್ಕೆ ಗಣಪನು ತೋರುವ ಪ್ರತಿಕ್ರಿಯೆ, ಪರಂಪರೆಗೆ ಅನುಗುಣವಾದದ್ದು. ಈ ರೀತಿಯ ಪ್ರತಿಕ್ರಿಯೆಯಿಂದ ಗಣಪ ಪರಂಪರೆಗೆ ನಿಷ್ಟವಾಗಿರುವ ತನ್ನ ಗುಣವನ್ನು ನಿರೂಪಿಸುತ್ತಾನೆ. ಹೀಗಾಗಿ ನನ್ನ ಅಭಿಪ್ರಾಯದಲ್ಲಿ, ಚಿತ್ರದಲ್ಲಿನ ನಾಗಿಯ ಗೆಲುವಿನಲ್ಲಿ ಆಧುನಿಕತೆಯ ಗೆಲುವಿದೆ.
ಚಿತ್ರದಲ್ಲಿನ ಮತ್ತೊಂದು ಆಭಾಸವೆಂದು ನನಗೆ ತೋರಿದ್ದು, ಸಮುದಾಯದ ಹೋರಾಟವನ್ನು ವ್ಯಕ್ತಿ ನಿರ್‍ದಿಷ್ಟ ಹೋರಾಟವನ್ನಾಗಿಸಿ, ನಾಯಕಿಯ ಪಾತ್ರದ ಮೇಲೆ ಅಗತ್ಯಕ್ಕಿಂತ ಹೆಚ್ಚಿನ ಹೊರೆ ಹೇರಿರುವುದು. ಇದೇ ನೆಲೆಯಲ್ಲಿ “ವಾನಪ್ರಸ್ಥಂ” ಚಿತ್ರದಲ್ಲಿನ ನಾಯಕನ ಪಾತ್ರವನ್ನು ಗಮನಿಸಿದಾಗ, ಮೇಲೆ ಹೇಳಿದಂಥಹ ಯಾವುದೇ ಹೊರೆಯಿಲ್ಲದ ಪಾತ್ರ ಹೇಗೆ ಚಿತ್ರವನ್ನು ಎತ್ತಿಹಿಡಿಯಬಲ್ಲುದು ಎಂಬುದನ್ನು ನೋಡಬಹುದು. ಅಲ್ಲಿ ಚಿತ್ರವೆಲ್ಲ ನಾಯಕ ಕೇಂದ್ರಿತ. ನಾಯಕನಲ್ಲದೆ ಬೇರ್ಯಾವ ವಿಚಾರವು ಅಲ್ಲಿ ಫೋಕಸ್‌ನ ವಿಷಯವಲ್ಲ.
ಚಿತ್ರದಲ್ಲಿ ಇಬ್ಬರು ಪಾತ್ರಧಾರಿಗಳು “ಔಟ್ ಆಫ್ ಪ್ಲೇಸ್” ಎನಿಸಿದರು. ನಾಗಿಯ ತಂದೆ, ತಾಯಿ ಮಲೆನಾಡಿಗರಂತೆ ಕಾಣುವುದೇ ಇಲ್ಲ.
ಮತ್ತೆ ಚಿತ್ರದಲ್ಲಿನ ಭಾಷೆ, ಸಂಗೀತದಂತೆ ಮುದನೀಡುತ್ತದೆ. ಕನ್ನಡ ಭಾಷೆಯ ಸೌಂದರ್‍ಯ ಇಲ್ಲಿ ಸಾಕಾರಗೊಂಡಿದೆ. “ಕಾನೂರು ಹೆಗ್ಗಡಿತಿ” ಅಪ್ಪಟ ಮಲೆನಾಡಿನ ಕಥೆಯಾದರೂ, ಅದರಲ್ಲಿ ಭಾಷಾಪ್ರಯೋಗದ ವಿಶಿಷ್ಟತೆಗೆ ಒತ್ತು ನೀಡಲಾಗಿರಲಿಲ್ಲ.
ಒಟ್ಟಿನಲ್ಲಿ “ದೀಪ” ಸ್ತ್ರೀವಾದಿ ಚಿತ್ರವೆನಿಸಿ, ದೃಶ್ಯಕಾವ್ಯವಾಗುವಲ್ಲಿ ಎಡವಿದ್ದರೂ ಸಹ ವಿಚಾರವಂತಿಕೆಗೆ ಸಾಕಷ್ಟು ಇಂಬುಕೊಡುತ್ತದೆ.
*****
’ದ್ವೀಪದ ಬಗೆಗೆ ಇತರ ಲೇಖನಗಳು/ವಿಮರ್ಶೆ
‘ದ್ವೀಪ’ ಸಿನಿಮಾ – ಒಂದು ಟಿಪ್ಪಣಿ – ಜಿ ವಿ ಶಿವಕುಮಾರ್
“ನವ ಮನುವು ಬಂದು ಹೊಸ ದ್ವೀಪಗಳಿಗೆ ಹೊರಟಾನ ,ಬನ್ನಿ” : ಬೇಂದ್ರೆ – ಯಶಸ್ವಿನಿ ಹೆಗಡೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.