ಟಿ.ವಿ ಚಾನೆಲ್‌ಗಳು ವಿ/ಎಸ್ ಸಿನಿಮಾ

ಈ ಬಗೆಯೇ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಮಿ. ಎಂಕನ ಮನೆಯಲ್ಲಿ ಉದಯ ಟಿ.ವಿ. ದೂರದರ್ಶನ, ಸಿಟಿ ಚಾನೆಲ್, ಇನ್ ಬೆಂಗಳೂರು ಮುಂತಾದವುಗಳಿಂದಲೇ ‘ಮನೆ’ ಬಿಟ್ಟು ಚಿತ್ರಮಂದಿರದತ್ತ ಹೋಗುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಗೊಣಗುತ್ತಿದ್ದರು ಎಲ್ಲ.

“ಇನ್ನು ಬಿಡು, ಎಂಕ, ಸುಪ್ರಭಾತ-ಕಾವೇರಿ-ಜ್ಹೀಟೀವಿಯವರು-ಈ ಟೀವೀಯವರು ಭರ್‍ರನೆ ಬರುವ ಸಿದ್ಧತೆ ನಡೆಸಿದ್ದಾರೆ. ಉದಯವಾಣಿಯ ‘ಪೈ’ ಅವರು, ವಿಜಯ ಕರ್ನಾಟಕದ ವಿಜಯ ಸಂಕೇಶ್ವರ ಅವರೂ ಒಂದೊಂದು ಹೊಸ ಛಾನೆಲ್ ಆರಂಭಿಸುವರೆಂಬ ಮಾತಿದೆ. ಅವೆಲ್ಲ ಆದರೆ ಸಿನಿಮಾ ಕಡೆ ತಿರುಗಿ ನೋಡೋರು ಇರಲ್ಲ.”

“ಹಾಗೆ ಹೇಳಬೇಡ ಗೆಳೆಯ, ಟೀವೀಲಿ ಟೈಟಾನಿಕ್ ನೋಡೋಕೂ- ದೊಡ್ಡ ತೆರೇಲಿ ಟೈಟಾನಿಕ್ ನೋಡೋಕೂ ವ್ಯತ್ಯಾಸ ಇಲ್ಲವೆ? ಆ ಸಿನಿಮಾ ಅದ್ಭುತ ಅನಿಸಿಬೇಕಾದ್ರೆ ಬಿಗ್‌ಸ್ಕ್ರೀನ್‌ನಲ್ಲೇ ನೋಡಬೇಕು” ಎಂದು ಎಂಕ ಆಶಾವಾದಿಯಂತೆ ನುಡಿದ.

“ಅಂತ ಅಪರೂಪದ ಚಿತ್ರಗಳು ಸಾವಿರಕ್ಕೆ ಒಂದಿರಬಹುದಷ್ಟೆ”

“ಹಾಗೆ ಯಾಕೆ ಅಂತೀ, ಕನ್ನಡಕ್ಕೆ ಹೆಸರು ತರಬಲ್ಲ ಕೆಲವಾದರೂ ಒಳ್ಳೆ ಚಿತ್ರಗಳು ಬಂದಿವೆ”

“ಕೆಲವಾದರೂ ಅಂದೆಯಲ್ಲ ಎಂಕ. ಈ ಮಾತು ಒಪ್ಪಬಹುದು. ಆದರೆ ಬರಬಾರದಂಥ ಕನ್ನಡ ಚಿತ್ರಗಳದೇ ಮೆಜಾರಿಟಿ ಇದೆಯಲ್ಲ ಅದಕ್ಕೆ ಏನು ಹೇಳ್ತೀ?”

“ಮಾಡಿದ್ದುಣ್ಣೋ ಮಾಹರಾಯ ಅನ್ನಬೇಕಷ್ಟೆ. ಅದಕ್ಕೆ ಏನು ಮಾಡಕ್ಕೆ ಆಗಲ್ಲ”

“ಈಗಂತೂ ಸಿನಿಮಾದವರೆಲ್ಲ ಟೀವೀಲಿ ಮಾಡ್ತಿದಾರೆ. ಟೀವಿ ಒಂದು ಥರಾ ‘ವಿಸ್ಕಿ’ ಇದ್ದ ಹಾಗೆ. ಹಣವೂ ಬರುತ್ತೆ-ಹೆಸರೂ ಬರುತ್ತೆ-ಜನಪ್ರಿಯತೆಯ ಅಮಲೂ ಸಿಗತ್ತೆ.

‘ಸಿನಿಮಾ’ನ ‘ವಿಸ್ಕಿ’ ಅಂತ ಹೇಳಕ್ಕೆ ಆಗಲ್ಲ. ಅದು ತುಂಬಾ ರಿಸ್ಕಿ. ರೇಸ್ ಕುದುರೆ ಮೇಲೆ ಹಣ ಕಟ್ಟಿದ ಹಾಗೆ. ಗೆದ್ದರೆ ಜಾಕ್‌ಪಾಟ್. ಸೋತರೆ ಕೇರಾಫ್ ಫುಟ್ಪಾತ್. ಅಂದರೆ ಲಕ್ಷಾಧೀಶ ಇಲ್ಲವೇ ಭಿಕ್ಷಾಧೀಶ’

ಹೀಗೆ ಮೇನ್ ರೋಡ್‌ನಲ್ಲಿ ಆರಂಭವಾದ ಮಾತು ಸಂದು-ಗೊಂದುಗಳಲ್ಲೂ ನುಗ್ಗಿ ಕೆಲವೊಮ್ಮೆ ಹೆಲಿಕಾಪ್ಟರ್‌ನಲ್ಲಿ ಹಿಮಾಲಯದೆತ್ತರಕ್ಕೆ ಹಾರಿದರೂ ವಾಸ್ತವಕ್ಕೆ ಮರಳಿದಾಗ ಎಲ್ಲ ಖಿನ್ನರಾಗೇ ಕುಳಿತಿದ್ದರು.

“ಹೆಚ್ಚು ಚಾನೆಲ್‌ಗಳು ಬಂದದ್ದರಿಂದ ಕನ್ನಡ ಕಲೆ, ಸಂಸ್ಕೃತಿ ಉದ್ಧಾರವಾದೀತಲ್ಲವೆ ಎಂಕ”

“ಹಾಗೆ ಹೇಳಕ್ಕೆ ಆಗಲ್ಲ. ಕನ್ನಡ ನೆಟ್ಟಗೆ ಮಾತಾಡೋರು ಎಷ್ಟು ಜನ ಇದ್ದಾರೆ. ದೂರದರ್ಶನ ನೋಡು. ಉದಯ ಟೀವಿ ನೋಡು ಎಂಗೆ-ಪಂಗೆ ಅಂತ ಮಾತಾಡೋರೇ ಜಾಸ್ತಿ. ಡಾ. ರಾಜ್ ಥರಾ ಸ್ಪಷ್ಟವಾಗಿ ಕನ್ನಡ ಉಚ್ಛಾರ ಮಾಡೋರು ಎಷ್ಟು ಜನ ಇದ್ದಾರೆ.”

“ಆ ಮಾತು ಒಪ್ಕೊಳ್ಳೋಣ. ಆದ್ರೆ ಹೊಸ ಮುಖಗಳು ಬರಲಿಕ್ಕೆ ಟಿ.ವಿ.ಚಾನೆಲ್‌ಗಳು ಹೆಚ್ಚು ಅವಕಾಶ ಮಾಡತ್ತಲ್ವ”

“ಇಲ್ಲ ಅಂತ ಹೇಳಕ್ಕೆ ಆಗಲ್ಲ, ಆದರೆ ಜಾಹಿರಾತು ಹಿಡ್ಕೊಂಡು ಬರಬಲ್ಲ ಯಾರು ಬೇಕಾದ್ರೂ ನಟ-ನಟಿಯರಾಗಬಲ್ಲ ಒಂದು ಅಪಾಯವೂ ಇದೆ ಟ.ವಿ.ಗಳಿಂದ”

“ಅಲ್ಲ ಎಂಕ, ಹತ್ತಾರು ಚಾನೆಲ್‌ಗಳಾದಾಗಲೇ ಅಲ್ಲವಾ ಹೊಸ ಹೊಸ ನಟ-ನಟಿಯರು ಬರೋದು”

“ನಿಜ, ಈಗ ರಂಗಭೂಮಿಲಿ ಇರೋರೆಲ್ಲ ಹೋಲ್‌ಸೇಲ್ ಆಗಿ ಟಿ.ವಿ.ಗೆ ಬಂದಿದ್ದಾರೆ. ಆದರಿಂದಲೇ ನಾಟಕದ ಮೇಜರ್‍ ಪ್ರೊಡಕ್ಷನ್ಸ್ ಆಗ್ತಾನೆ ಇಲ್ಲ. ಕಂಪನಿ ರಂಗಭೂಮೀಲಿ ನಟ-ನಟಿಯರನ್ನು ಹಾರಿಸ್ಕೊಂಡು ಹೋಗೋರು. ಈಗ ಅದೇ ಕೆಲಸ ಮೆಗಾ ಧಾರಾವಾಹಿ ಹೆಸರು ಹೇಳಿ ಟೀವಿಯವರು ಮಾಡ್ತಿದಾರೆ ಅಲ್ವ?”

“ಅದರಿಂದಲೇ ಬಹಳ ಕನ್ನಡ ಸಿನಿಮಾಗಳು ನೋಡಿದಾಗ ಒಂದು ನಾಟಕ ನೋಡಿದ ಹಾಗೆ ಆಗುತ್ತೆ, ಇಲ್ಲವೇ ಒಂದು ಟ.ವಿ.ಸೀರಿಯಲ್ ನೋಡಿದ ಹಾಗೆ ಆಗುತ್ತೆ”

“ಇನ್ನೊಂದು ಐದು ವರ್ಷ ಕಾದು ನೋಡು. ಕನ್ನಡ ಎಕ್ಕುಟ್ಟಿ ಹೋಗಿರತ್ತೆ. ಹೈಸ್ಕೂಲು-ಕಾಲೇಜುಗಳಲ್ಲಿ ಚಿಕ್ಕಪುಟ್ಟ ಪಾರ್ಟ್ ಮಾಡತಿದ್ದವರೆಲ್ಲ ನಟ-ನಟಿಯರಾಗ್ ಬಿಡ್ತಾರೆ”

“ಹಾಗಾರೆ ಹೊಸ ಮುಖಗಳು ಬರೋದು ತಪ್ಪಾ? ಎಷ್ಟೇ ವಯಸ್ಸು ಆದರೂ ಮತ್ತೆ ಅದೇ ಅದೇ ಮುಖಗಳನ್ನು ನೋಡ್ತಿರಬೇಕಾ, ನಾಲ್ಕು ಮಕ್ಕಳ ತಂದೆ-ತಾಯಿ ಆದವರು ಹೀರೋ-ಹೀರೋಯಿನ್ ಅಂತ ಎಷ್ಟು ದಿನ ಒಪ್ಪಿಕೊಳ್ಳೋದು”.

“ಈಗ ಕನ್ನಡದ ಹಿರಿಯ ನಟ-ನಟಿಯರು ವಯೋಮಾನಕ್ಕೆ ತಕ್ಕ ಪಾತ್ರ ಮಾಡೋ ಮನಸ್ಸು ಮಾಡ್ತಿದಾರೆ ಅಂತ ಈಚೆಗೆ ಬರ್‍ತಿರೋ ಚಿತ್ರಗಳು ನೋಡಿದರೆ ಸ್ಪಷ್ಟವಾಗುತ್ತೆ. ಆದರೆ ಅವರಿಗಿದ್ದ ಡೆಡಿಕೇಷನ್ ಈಗಿನ ಎಂಗರ್‍ ಜನರೇಷನ್‌ಗೆ ಇದೆ ಅಂತ ಹೇಳಲಾರೆ”

“ಹಾಗಾಗಕ್ಕೆ ಕಾರಣ?”

“ಹಣ, ದಿಢೀರ್‍ ಜನಪ್ರಿಯತೆ-ಧಾರಾಳವಾದ ಹಣದ ಹೊಳೆ. ಮುಂಚೆ ಯೂನಿಟ್‌ಗಳಲ್ಲಿ ಇದ್ದ ಪ್ರೀತಿ-ಸೌಹಾರ್ದ ಈಗ ಎಲ್ಲಿದೆ. ಈ ಮಾತನ್ನು ನಾಗರಹೊಳೆ ರೀ ರಿಲೀಸ್ ಟೈಂನಲ್ಲಿ ರಾಜೇಂದ್ರಸಿಂಗ್‌ಬಾಬು ತುಂಬಾ ಚೆನ್ನಾಗಿ ಹೇಳಿದರು”

“ಹಾಗಾರೀಗ ಏನಾಗಬೇಕೂಂತ ಎಂಕ?”

ಮೊನ್ನೆ ಕನ್ನಡದ ಖ್ಯಾತ ವಿಮರ್ಶಕ ಲೇಖಕ ಕಿ.ರಂ. ನಾಗರಾಜ್ ಹೇಳತಿದ್ರು “ಮೊದಲು ಎಲ್ರಿಗೂ ಕನ್ನಡ ಮಾತಾಡೋದು. ಬರಿಯೋದು ಕಲಿಸಬೇಕು. ಕನ್ನಡದ ಸಾಹಿತ್ಯದಲ್ಲಿರೋ ಲಾಲಿತ್ಯದ ಸೊಗಸನ್ನು, ಅಂತ್ಯ ಪ್ರಾಸಗಳ ಅಂದವನ್ನು, ಧ್ವನಿಯ ಏರಿಳಿತದಿಂದ ಉಂಟಾಗುವ ಪ್ರಭಾವವನ್ನು ಈಗಿಂದ ಮಕ್ಕಳಿಗೂ ಕಲಿಸಬೇಕು. ಅವರೇ ನಾಳಿನ ಲೇಖಕರು, ನಟರು, ಮೇಷ್ಟ್ರುಗಳು, ಕಾಯಕವೇ ಕೈಲಾಸ. ಪ್ರಯತ್ನಪಟ್ಟರೆ ಯಾರು ಏನುಬೇಕಾದ್ರೂ ಆಗಬಹುದು. ಆದರೆ ಒಳ್ಳೆ ಕನ್ನಡ ಬರೆಯೋದು. ಮಾತಾಡೋದು ಸತ್ವಪೂರ್ಣ ಸಾಹಿತ್ಯ ರಚಿಸೋದು ಸಾಧ್ಯವಾಬೇಕೂಂದ್ರೆ ಕಲಿಕೆಯಲ್ಲಿ ಪ್ರೀತಿ ಇರಬೇಕು. ಗ್ರಹಿಕೆಯಲ್ಲಿ ಒಲವಿರಬೇಕು. ಅದಕ್ಕೆ ಲೇಖಕರಾಗುವ ಮುನ್ನ, ನಟರಾಗುವ ಮುನ್ನ, ಸಂಗೀತ ನಿರ್ದೇಶಕರಾಗುವ ಮುನ್ನ, ಎಲ್ಲಕ್ಕೂ ತರಬೇತಿ ಶಿಬಿರಗಳು ಅಗತ್ಯ” ಎಂದರು.

“ಈ ಮಾತು ಖಂಡಿತಾ ನಿಜವೆನ್ನಿಸುತ್ತೆ” ಎಂದಾಗ ಚರ್ಚೆಗೆ ಮೌನದ ಮುದ್ರೆ ಬಿತ್ತು.
*****
(೧೪-೪-೨೦೦೦)