ಚಿತ್ರಮಂದಿರಗಳು ಈಗ ಹಣ ವಸೂಲಿ ಮಾಡುವ ಕೇಂದ್ರಗಳು

“ಜೈ ಸಂತೋಷಿಮಾ” ಎಂಬ ಒಂದು ಚಿತ್ರ “ಉಪೇಂದ್ರ’ ಚಿತ್ರಕ್ಕಿಂತಾ ಹೆಚ್ಚು ಹಣ ಸಂಪಾದಿಸಿತು ಗೊತ್ತಾ’ ಎಂದು ಮೀಸೆ ತಿರುವುತ್ತಿದ್ದ ರಂಗಣ್ಣ ಈಗ ತಾನೂ ಒಂದು ಚಿತ್ರಕ್ಕೆ ಕಥೆ ರೆಡಿ ಮಾಡಿದ್ದೇನೆ ಎಂದು ನುಗ್ಗೇಬಿಟ್ಟ ಫೈನಾನ್‌ಷಿಯರ್‍ ಪತ್ತೇಲಾಲ್ ಬಳಿ. “ಯಾವ ಚಿತ್ರ ಮಾಡಿದರೂ ಕಾಸು ಆಗ್ತಿಲ್ಲ. ರೀಮೇಕ್ ಫಿಲ್ಮ್‌ಗಳು ಸೋತು ಸೊರಗಿ ಡಬ್ಬದಲ್ಲಿ ಮಲಗಿದೆ. ಅದನ್ನು ಹಂಚಿಕೆಗೆ ತಗೊಂಡೋರು ಮೆಡಿಕಲ್ ಷಾಪ್‌ಗ್ಹೋಗಿ ಪಾಯಿಸನ್ ಕೊಳ್ಳಬೇಕಾದ ಸ್ಥಿತಿ ಬಂದಿದೆ. ಅಂದ್ಮೇಲೆ ನಿಮ್ಮ ಕಥೇ ಮೇಲೆ ಹ್ಯಾಗ್ರೀ ಹಣ ಹಾಕ್ಲಿ”

“ಸಾರ್‍, ನನ್ನ ಕಥೆಗೆ ಲಕ್ಷ ಲಕ್ಷ ಡಿಮ್ಯಾಂಡ್ ಮಾಡೋ ಸ್ಟಾರ್‍ಸೇ ಬೇಕಿಲ್ಲ. ಅವರೇ ಕಾಸು ಕೊಟ್ಟು ಪಾರ್ಟು ಮಾಡೋ ಅಂಥ ನಟ-ನಟಿಯರಾದ್ರೂ ಸಾಕು. ಬಾಕ್ಸ್ ಆಫೀಸ್ ಚಿಂದಿ ಎಬ್ಬಿಸಿಬಿಡ್ತೀನಿ”

“ಅದು ಹ್ಯಾಗ್ರೀ”

“ಇದು ದೇವರ ಮಹಿಮೆ ಸಾರುವ ಚಿತ್ರ ಸಾರ್‍. ಗ್ರಾಫಿಕ್ಸ ಗ್ರೀಫಿಕ್ಸ್ ಅಂತ್ಲೂ ನೀವೇನೂ ಖರ್ಚು ಮಾಡಬೇಕಿಲ್ಲ. ಸ್ಟಾಪ್ ಬ್ಲಾಕ್ ಟೆಕ್ನಿಕ್ ಇಟ್ಕೊಂಡ್ರೆ ಸಾಕು”

“ಕತೆ ಏನ್ರೀ?”

“ಈ ದೇವರಿಗೆ ಪ್ರದಕ್ಷಿಣೆ ಹಾಕಿದ್ರೆ-ಬಂಜೆಯರಿಗೆ ಮನೆಗೆ ಹೋಗೋದ್ರಲ್ಲಿ ಮಗುವಾಗುತ್ತೆ ಅನ್ನೋ ಸಂದೇಶವಿರುತ್ತೆ ಸಾರ್‍”

“ಹೌದೆ. ನಂಗೂ ಮಕ್ಕಳಿಲ್ಲಾರೀ, ನನ್ನಂತೋರು ಎಷ್ಟೋ ಜನವಿರತಾರೆ. ಅವರಿಗೆಲ್ಲ ಈ ಕತೆ ಇಷ್ಟವಾಗುತ್ತೆ”

“ಇಂಥ ಸಿಚುಯೇಷನ್ಸ್ ಚಿತ್ರದಲ್ಲಿ ತುಂಬಿ ತುಳುಕಿದೆ ಸಾರ್‍. ಸಾರ್‍ ಈ ಸೀನ್ ಕೇಳಿ ಸಾರ್‍. ಮನೆ ಹರಾಜಿಗೆ ಬಂದಿರುತ್ತೆ. ಗಂಡ ಅಂಗಲಾಚಿ ಬೇಡ್ತಿರ್‍ತಾನೆ. ಬೀದಿ ಜನ ತಮಾಷೆ ನೋಡ್ತಾ ನಿಂತಿರ್‍ತಾರೆ, ಮಹಾ ಮುತ್ತೈದೆ ಮಹಾಲಕ್ಷ್ಮಮ್ಮ ‘ದೇವಿ’ ಮುಂದೆ ತನ್ನ ಕಷ್ಟ ತೋಡಿಕೊಂಡು ಬಿಕ್ಕಿ ಬಿಕ್ಕಿ ಅಳ್ತಾ ಹಾಡ್ತಾಳೆ ಸಾರ್‍. ಅಲ್ಲೀಗೆ ಆಗೋ ಹಾಗೆ ಹಂಸಲೇಖಾ ಕೈಲಿ ಒಂದು ಹಾಡು ಬರೆಸಿ ಟ್ಯೂನ್ ಮಾಡಿಸ್‌ಬಿಟ್ರೆ ಚಿತ್ರ ಹಂಡ್ರೆಡ್ ಡೇಸ್ ಗ್ಯಾರಂಟಿ ಸಾರ್‍. ಹಾಡು ಮುಗಿಯೋ ಹೊತ್ತಿಗೆ ದೇವಿ ಪ್ರತ್ಯಕ್ಷವಾಗಿ ಆಕೆ ಬೇಡಿದ ೨೫ ಸಾವಿರ ಕ್ಯಾಷ್ ಕೊಡ್ತಾಳೆ ಸಾರ್‍. ಭಕ್ತೆಗೆ ದೇವಿ ಬಗ್ಗೆ ನಂಬಿಕೆ ಇಲ್ಲ ಅಂತಲ್ಲ-ಆದ್ರೂ ಎಣಿಸಿ ನೋಡ್ತಾಳೆ ಕೇವಲ ೨೦ ಸಾವಿರ ಇದೆ. ೫ ಸಾವಿರ ಕಡಿಮೆ ಅಂದಾಗ ದೇವಿ ‘ಡೋಂಟ್‌ವರಿ ಅಂದು ಇನ್ನು ಐದು ಸಾವಿರ ಕೊಡ್ತಾಳೆ’

“ದೇವಿಗೆ ಇಂಗ್ಲೀಷ್ ಬರುತ್ತಾ ಅನ್ನಲ್ವಾ ‘ವಿಮರ್ಶಕರು”

“ವಿಮರ್ಶಕರಿಗೆ ಯಾವೋನು ಸಾರ್‍ ಚಿತ್ರ ತೆಗೀತಿರೋನು. ಇದೇನಿದ್ರೂ ಸಾಮಾನ್ಯ ಜನತೆಗೆ ತೆಗಿತಿರೋ ಚಿತ್ರ. ಇಷ್ಟರ ಮೇಲೆ ಪ್ರೆಸ್ ಷೋ ಆದ್ಮೇಲೆ ಪಾರ್ಟಿಲಿ ಯಾರ್‍ಯಾರೂ ಪ್ರಶ್ನೆ ಕೇಳಿದ್ರೆ ‘ದೇವಿ’ಗೆ ಎಲ್ಲಾ ಭಾಷೆಯ ಭಕ್ತಾದಿಗಳು ಬಂದಿರ್‍ತಾರೆ. ಅವರ ಬೇಡಿಕೆಗಳು ಅರ್ಥವಾಗಬೇಕಾದ್ರೆ ಭಾಷೆ ಬಂದಿರಲೇಬೇಕಲ್ವ ದೇವೀಗೆ. ದೇವಿ ಅಂದ್ಮೇಲೆ ಮುಗೀತು ಆಕೆ ಸಕಲ ಭಾಷಾ ಪ್ರವೀಣೆ ಅಂದ್ರಾಯಿತು”

“ನೋಡಿ ಎಷ್ಟು ನಿಸೂರಾಗಿ ಉತ್ತರ ಹೇಳಿಬಿಡ್ತೀರಿ ಮಿಸ್ಟರ್‍ ರಂಗಣ್ಣ”.

“ಇದೆಲ್ಲಾ ಏನು ಮಹಾ ಬಿಡಿ. ಈ ಪ್ರಪಂಚದಲ್ಲಿ ಯಾವ ಖಾಯಿಲೆಗೆ ಬೇಕಾದ್ರೂ ಔಷಧಿ ಕೊಡೋ ಮಹಾತಾಯಿ ಈ ದೇವಿ ಅಂತ ಒಂದು ದೃಶ್ಯವಿದೆ. ಡಾಕ್ಟರು ಹೊಟ್ಟೆ ಆಪರೇಷನ್‌ಗೆ ೫೦ ಸಾವಿರ ಕೇಳಿರ್‍ತಾರೆ. ಆಗ ದೇವರ ಪೂಜೆ ಮಾಡಿದ ಯಜಮಾನ ದೇವರೇ-ನಾಳೆ ಬೆಳಿಗ್ಗೆ ಸೂಸೈಡ್ ಮಾಡ್ಕೋತೀನಿ ಅಂತಾನೆ. ತಕ್ಷಣ ದೇವಿ ಪ್ರತ್ಯಕ್ಷವಾಗಿ ಇಂಥ ಶ್ರೀಮಂತನ್ನ ನೋಡು. ನೆರವಾಗ್ತಾನೆ ಅಂದಾಗ-ಷಾಟ್‌ಕಟ್ ನೆಕ್ಸ್ಟ್ ಷಾಟ್‌ನಲ್ಲೇ ಶ್ರೀಮಂತ ೫೦ ಸಾವಿರ ನೀಡಿ ಹಾರೈಸುತ್ತಾನೆ” ಮಾರನೆ ದಿನ ‘ದೇವಿ ಪೂಜೆ ಭರ್ಜರಿಯಾಗಿರುತ್ತೆ. ಹಾಡು-ಕುಣಿತಕ್ಕೆ ಅಲ್ಲಿ ಫುಲ್ ಸ್ಕೋಪ್.

“ದೇವಿ ಪಾತ್ರಕ್ಕೆ ಕೆ.ಆರ್‍. ವಿಜಯಾನ ವಿಚಾರಿಸಿದರೆ ಹ್ಯಾಗೆ”.

“ಸಾರ್‍ ದುಡ್ಡು ಜಾಸ್ತಿ ಇದೆಯಾ ಸಾರ್‍ ನಿಮ್ಮ ಹತ್ತಿರ ಅಂತಾ ಸ್ಟಾರ್‍ಸ್ನ ವಿಚಾರಿಸಕ್ಕೆ. ಪಾರ್ಟು ಪಾರ್ಟು ಅಂತ ಹಲುಬ್ತಿರೋ ಯಾವೋಳನ್ನಾರೂ ಹಿಡ್ಕಂಬನ್ನಿ ಸಾರ್‍. ದೇವಿ ಪಾತ್ರ ದೇವರ ಪಾತ್ರ ಯಾರುಬೇಕಾರೂ ಮಾಡಬಹುದು ಸಾರ್‍. ಜನಕ್ಕೆ ಕಥೆ ಮುಖ್ಯವೇ ಹೊರತೂ ಅವರು ಹ್ಯಾಗಿದಾರೆ ಅನ್ನೋದು ಮುಖ್ಯ ಅಲ್ಲ ಸಾರ್‍”.

“ಹಾಗಿದ್ರೆ ಒಳ್ಳೆದಾಯಿತು ಬಿಡಿ. ಖರ್ಚು ಜಾಸ್ತಿ ಏನಾಗಲ್ಲ”

‘ದೇವಿ ಮಹಾತ್ಮೆ ಸಾರೋ ತಾಯಿತಕ್ಕೆ ಪಬ್ಲಿಸಿಟಿ ಕೊಡೋ ದೃಶ್ಯ ಇದೆ ಸಾರ್‍. ಅದು ಕಟ್ಟಿಕೊಂಡರೆ ಮನಸಲ್ಲಿ ಇದ್ದದ್ದೆಲ್ಲ ಆಗುತ್ತೆ ಅನ್ನಕ್ಕೆ ಸಖತ್ ಸೀನ್ಸ್ ಇಟ್ಟಿದೀನಿ ಸಾರ್‍”

“ಅದನ್ನು ನಂಬಬೇಕಲ್ಲ ಜನ”

“ಜನ ಜಾಣರಾಗಿದಾರೆ ಅಂತ ನಿಮಗೆ ಯಾರು ಹೇಳಿದರು ಸಾರ್‍? ಕಷ್ಟದ ಸರಮಾಲೆ ಚಿತ್ರಿಸಿ – ಕಣ್ಣೀರು ಬರೋ ಅಂತ ಚಿತ್ರ ತೆಗೀರಿ. ಪ್ರೊಡ್ಯೂಸರ್‍ ಕಣ್ಣೀರು ಹಾಕ್ತಾ ಕೂತ್ಕೋ ಬೇಕಾಗುತ್ತಷ್ಟೆ. ಅದೇ ದೇವರು-ದಿಂಡರು-ಮೂಢನಂಬಿಕೆಗಳು ಬಿಂಬಿಸ್ತಾ ಹೋಗಿ ಹೌಸ್‌ಫುಲ್ ಕಲೆಕ್ಷನ್ ಗ್ಯಾರಂಟಿ. ನೀವು ಓದ್ಲೇಬೇಡಿ-ಆದರೂ ರ್‍ಯಾಂಕ್ ಬರೋದು ಸಾಧ್ಯ ಅನ್ನಿ. ಥಿಯೇಟರ್‍ ಫುಲ್ ಆಗುತ್ತೆ”.

“ಆದ್ರೆ ನಿಜ ಜೀವನದಲ್ಲಿ ಅದು ಸಾಧ್ಯವಿಲ್ಲವೇ?”

“ಇಂಥ ತರ್ಕಕ್ಕೆ ಬೆಂಕಿ ಬಿತ್ತು. ಕಾಸು ಮಾಡೋದು ನೋಡಿ ಸಾರ್‍. ಒಬ್ಬ ದಡ್ಡ ವಿದ್ಯಾರ್ಥಿ ‘ದೇವಿ ಮಹಾತ್ಮೆ’ಯಿಂದ ಸ್ಟೇಟ್‌ಗೆ ಫಸ್ಟ್ ಬಂದಾ ಅನ್ನಿ. ಬೊಂಬಾಟ್ ಕಲೆಕ್ಷನ್ ಆಗುತ್ತೆ”

“ನಿಜ. ಹಣ ಹಾಕಿದ್ದು ವಾಪಸ್ಸು ಬರೋ ಹಾಗೆ ನೋಡ್ಕೋಳ್ಳೋದು ನಮ್ಮ ಕೆಲಸ. ಸಾಮಾಜಿಕ ಜವಾಬ್ದಾರಿ-ಗಿವಾಬ್ದಾರಿ ಅನ್ನೋದು ಅರ್ಥವಿಲ್ಲದ್ದು”

“ಅಷ್ಟು ಅರ್ಥ ಮಾಡ್ಕೊಳ್ರೀ. ಉದ್ಧಾರವಾಗ್ತೀರಿ”

“ನನ್ನ ಕ್ಯಾಷ್ ಮಾಡ್ಕೋತಿದಾರೆ ಅಂತ ದೇವರಿಗೆ ಕೋಪ ಬಂದು ನಮಗೇನು ಶಾಪ-ಗೀಪ ಕೊಡಲ್ಲತಾನೆ”

“ಅರೇ! ತನ್ನ ಭಕ್ತಾದಿಗಳು ಹಾಯಾಗಿದ್ರೆ ದೇವ್ರಿಗೂ ಖುಶಿ ಅಲ್ಲವೆ. ದೇವರ ಮಹಾತ್ಮೆ, ದೇವಿ ಮಹಾತ್ಮೆ, ಉಪೇಂದ್ರ ತನ್ನ ಕಟೌಟ್ ಕಪಾಲಿ ಟಾಕೀಸ್ ಹತ್ರ ನಿಲ್ಲಿಸಿರೋ ಹಾಗೆ ಒಂದೊಂದು ಚಿತ್ರ ಮಂದಿರದ ಮುಂದೂ ಒಂದೊಂದು ಮಿನಿ ದೇವಸ್ಥಾನದ ಸೆಟ್ ಹಾಕಿ ದೇವರನ್ನು ನಿಲ್ಲಿಸಿದ್ರೆ ಜನ-ಆರ್‍ತಿ ಎತ್ತತಾರೇ ಮಂಗಳಾರತಿ ಮಾಡ್ತಾರೆ-ತಾಯಿತ ಇಟ್ಟಿದ್ರೆ ಕೊಂಡ್ಕೋತಾರೆ-ಡಬ್ಬಿ ಇಟ್ಟಿದ್ರೆ ಕಾಸೂ ಹಾಕ್ತಾರೆ. ಅದೃಷ್ಟ ಚೆನ್ನಾಗಿದ್ರೆ ಭರ್ಜರಿ ಕಲೆಕ್ಷನ್ನೂ ಆಗುತ್ತೆ. ಆಗ ಕಲೆಕ್ಷನ್ ಡಬ್ಬಿ ಹರಾಜು ಹಾಕಿ ಕಾಂಟ್ರಾಕ್ಟ್ ಕೊಟ್ ಬಿಡೋದು”

“ಹೌದು ಹಾಗೂ ಮಾಡಬಹುದು”

“ಹಿಂದೆ ಶನಿ ಮಹಾತ್ಮೆ ನಾಟಕ ಮಾಡಿದಾಗ-ನಾಟಕಕ್ಕೆ ಬರೋರು ಆಚೆ ಇದ್ದ ಶನಿದೇವರಿಗೆ ನಮಸ್ಕಾರ ಹಾಕಿ ಕಾಯಿ ಒಡೆಸಿ ಬರೊರು”.

“ಈ ಕಾಲದಲ್ಲೂ ಅಂತಾ ಜನಾ ಇದಾರಾ”

“ಯಾವ ಕಾಲಕ್ಕೂ ಅಂತಾ ಜನ ಇದ್ದೇ ಇರ್‍ತಾರೆ. ಸಿನಿಮಾ ಅನ್ನೋ ಮ್ಯಾಜಿಕ್ ಮೀಡಿಯಂನಾಗೆ ಜನನ್ನ ಸುಲಭವಾಗಿ ನಂಬಿಸಬಹುದು. ಜನ ಸುಳ್ಳನ್ನ ನಂಬೋ ಅಷ್ಟು ಸಲೀಸಾಗಿ ನಿಜವನ್ನು ನಂಬಲ್ಲ. ಅದಕ್ಕೇ ಇಷ್ಟು ಆಸ್ಪತ್ರೆಗಳಿದ್ದರೂ ಯಂತ್ರ, ತಂತ್ರ, ಹವನ ಹೋಮಕ್ಕೆ ಗಂಟು ಬಿದ್ದಿರೋರು ಜಾಸ್ತಿ ಅಲ್ಲವಾ”

“ಅದ್ನಿಜ, ನಿನ್ನೆ ತಾನೆ ಒಬ್ಬರು ಬಂದು ವಿದ್ಯೆ ಮಹತ್ವ ಕುರಿತು ಒಂದು ಚಿತ್ರ ಮಾಡ್ತೀನಿ ಅಂದ್ರು. ಫೈನಾನ್ಸ್ ಮಾಡ್ತೀನಿ ಅಂದಿದ್ದೆ. ನಿಮ್ಮ ಕತೆ ಕೇಳಿದ ಮೇಲೆ ಈಗ ಇದಕ್ಕೆ ‘ಜೈ ಅನ್ನೋಣ ಅನ್ನಿಸ್ತಿದೆ’ ಎನ್ನುವ ಹೊತ್ತಿಗೆ ಫೈನಾನ್ಷಿಯರ್‍ ಹೆಂಡತಿಗೆ ಸೀರಿಯಸ್ ಅಂತ ಫೋನ್ ಬಂತು. ರಂಗಣ್ಣ ಆಗ ‘ಯಾಕೆ ಓಡ್ತೀರಿ. ದೇವೀನ ಕೇಳ್ಕೊಳ್ಳಿ. ಇಲ್ಲೇ ದಯ ಪಾಲಿಸ್ತಾರೆ ಔಷಧಿ” ಎಂದ.

“ನಿನ್ನ ಯೋಗ್ಯತೆಗೆ ಬೆಂಕಿ ಬಿತ್ತು. ಅದು ನಿನ್ನ ಕತೇಲಿ ಮಾತ್ರ ಸಾಧ್ಯ. ನಿಜ ಜೀವನದಲ್ಲಲ್ಲ. ನನಗೆ ನನ್ನ ಹೆಂಡ್ತಿ ಮುಖ್ಯ” ಎಂದು ಓಡಿದ ಫತ್ತೇಲಾಲ್.

“ಅರೆರೆ, ಕೈಗೆ ಬಂದ ತುತ್ತು ಬಾಯಿಗಿಲ್ವೆ. ಇನ್ನು ಸ್ವಲ್ಪ ಹೊತ್ತು ಬಿಟ್ಟು ಫೋನ್ ಬಂದಿದ್ರೆ ೫ ಸಾವಿರ ಗಿಟ್ಟಿಸಿರುವೆ” ಎಂದು ಎದ್ದ ರಂಗಣ್ಣ.
*****
(೨೧-೧-೨೦೦೦)