ಮೂರನೇಯತ್ತೆಯ ಮೊದಲ ಮಳೆ

ಮೊದಲ ಮಳೆ ಸುರಿದಾಗ
ಮನೆಯ ನುಣ್ಣನಂಗಳಕೆಲ್ಲ
ಪರಿಮಳದ ಮಾತು
ಮುಂಜಾನೆ ಎದ್ದು ಕಣ್ಣುಜ್ಜುತ
ಬೆಚ್ಚನೆ ಹಾಸಿಗೆ ಬಿಟ್ಟು
ಹೊಸ್ತಿಲಿಗೆ ಬಂದಾಗ
ಮೆಟ್ಟಿಲಿನೆತ್ತರಕೂ
ಕರಗಿದ ಕಾಗದ ಕಸ ಮಣ್ಣು ಚೂರು
ಒರೆದ ಅಂಗಳ ಗುಡ್ಡೆಗಟ್ಟಿ ಒಕ್ಕಿ
ಒತ್ತರಿಸಿದ ಪದರು ಪದರು
ನೀರೆರೆದುಕೊಂಡು ಕೆದರು ತಲೆ ಹೊತ್ತಂಥ
ಕರವೀರ, ದಾಸಾಳ ಶಂಖಪುಷ್ಪ
ಬಿರಿದು ನೀರ್ಕುಡಿದು ಗಳಗಳ
ಮದನ ಮಸ್ತಾಗಿ ಪುಟಿವ ಹಸಿರು ಹುಲ್ಲು
ತೊಯ್ದು ತೊಟ್ಟಿಕ್ಕುತ್ತ ತೂಗುವ
ಬೇಸಿಗೆಯ ಚಪ್ಪರದಲ್ಲಿ
ಸ್ಥಿರಚಿತ್ರ ಕಡೆದಿಟ್ಟ ತಂಪುಗಾಳಿ

ಮನೆಯೊಳಗೆ: ಹೊಸಯತ್ತೆಯ
ಹೊಸ ಪುಸ್ತಕ ತೆರೆದ ಹಿತವಾಸನೆ
ಸ್ಲೇಟು ಉದ್ದುವ ಖುಷಿಗೆ
ಟ್ರಂಕಿನೊಳಗಿಂದೆದ್ದು ನುಸುನುಸುಳಿ ಬರುವ
ಡಾಂಬರಗುಳಿಗೆಯ ಘಮಘಮ
ಒತ್ತಾಗಿ ಕೂತ ಟನ್ನು ಡಬ್ಬಗಳೊಳಗೆ
ಒಪ್ಪವಾಗೊಟ್ಟಿದ ತಿಂಗಳ್ಹಿಂದಿನ ಬಿಸಿಲು-
ಚುರುಗುಟ್ಟಿ ಮುರಿವ ಖಾರ ಹಪ್ಪಳ
ಬಾಳೆ ಗೆಣಸಿನ ಬಾಳಕ ಸೊಳೆಕೊಚ್ಚಲು
ತೋಟಕ್ಕೆ ನೀರೆರೆಯಬಂದ ಕರಿಗಂಬಳಿಯಾಳು
ಮೂಲೆ ಕುಕ್ಕರಿಸಿ ಮೆಲ್ಲುವ ತಂಬಾಕು ಕವಳ
ಗುಡಿಗೆ ಪೂಜೆ ಹೊರಟ
ನೆರೆಮನೆಯ ಕೆಂಪು ಪೀತಾಂಬರ
ಹೂ ಕಾಯಿ ಪಂಚಾಮೃತ ಧೂಪ ನೀಲಾಂಜನ ತಟ್ಟೆ
ಮೇಲೆ ಟಪಟಪಗುಡುವ ತಾಳೆಕೊಡೆ ತಾಳ…
ಸೊರೊ ಸೊರೊ ಸೋರುವ ಊರ ಹೆಂಚು
ಢಬಢಬಾ ಸದ್ದಿಸುವ ತಗಡುಮಾಡು

ಪೂರ್ತಿಯೊಣಗದ ಚಡ್ಡಿ ಹಸಿ ಹಸಿ
ಸಿಕ್ಕಿಸಿಕೊಂಡು ಬರಸು ಕೊಡೆಯೆತ್ತಿ
ಜುಳು ಜುಳು ಕೆಸರು ತಂಪುಪಾದ…
ಹೆಗಲಿಗಂಟಿದ ಪಾಟಿ ಚೀಲ… ಹೊತ್ತು
ಶಾಲೆ ಹೊರಟ ಕೇರಿ ಹಿಂಡು ಹಿಂಡು

ದಾರಿಯಿಕ್ಕೆಲದಲ್ಲೂ ಗಟಾರ ಕೊಚ್ಚುತ್ತಿರುವ
ಥಂಡಾ ಥಂಡಾ ಚಾ-
ನಿನ್ನೇತನಕ ಹಾರಾಡುತ್ತಿದ್ದ
ಟೂರಿಂಗ್ ಟಾಕೀಸಿನ ತಂಬು ಒಮ್ಮೆಗೇ ಸ್ತಬ್ಧ

ತನ್ನವಧಿಗೆ ಮೊದಲಾಗೇ ನೆಲ ಕಚ್ಚಿತು ಬಾನು
ಶಾಲೆ ಮುಟ್ಟುವದರೊಳಗೆ ಉಪ್ಪಿಟ್ಟಿನ ತೇಗು
ಪ್ರಾರ್ಥನೆಗೆ ನಿಂತ ಒದ್ದೆ ಕೊಡೆಗಳ ಸಾಲು
ಸ್ಲೇಟಿನಲ್ಲಿಯ ಮಗ್ಗಿ ಮಳೆನೀರ ಪಾಲು
*****