ಬಿನ್ನಹ

ಅಲ್ಲಸಲ್ಲದ ವಿಷಮ ವಿಪರೀತ ಭಾವನೆಯ
ವಿಷಗಾಳಿ ಎನ್ನ ಬಳಿ ಸುಳಿಯದಿರಲಿ;
ಸೊಲ್ಲು ಸೊಲ್ಲಿಗೆ ಪರರನಣಕಿಸುವ ಕೆಣಕಿಸುವ
ಅಶಿವ ನುಡಿ ಎನ್ನ ಕಿವಿ ಸೇರದಿರಲಿ.

ಹಿಮಶೈಲದೆತ್ತರಕು ಕತ್ತೆತ್ತಿ ನಿಂತಿರುವ
ಕರ್ತವ್ಯಪಾಲನೆಯ ಬುದ್ಧಿ ಬರಲಿ;
ಕಾರ್ಮೋಡ ಬಾನನಂಡಲೆವಂತೆ ಸಂಕಷ್ಟ
ಕೊರಚಾಡಿದರು ಎದೆಯು ಅಲುಗದಿರಲಿ.

ದೈತ್ಯದರ್ಪದ ದುರುಳ ದಾರುಣದ ಹೋರಟೆಗೆ
ಎಂದೆಂದು ನನ್ನ ತಲೆ ಬಾಗದಿರಲಿ;
ಸಾತ್ವಿಕರ ತಾತ್ವಿಕರ ಹಿರಿಜೀವದೌನ್ನತ್ಯ
ವಿಶ್ವಭಾವಾತ್ಮರಿಗೆ ನಮನವಿರಲಿ.

ಬಾನಿನಂಚಿನ ಮೋಡ ನಮ್ರತೆಯದೆನಗಿರಲಿ
ಮಾನಸದ ತಿಳಿಗೊಳದ ಶಾಂತಿಯಿರಲಿ;
ಮಣ್ಣ ಹುಡಿಗೂ ಮೆರುಗನಿತ್ತು ಮುದ ತಾಳುತಿಹ
ಹಸುಳೆಯಾಟದ ಮುಗ್ಧ ಹಂಬಲಿರಲಿ.

ಶಿವನ ಕವನವು ಭುವನ, ಲಾಸ್ಯ-ತಾಂಡವ ಮಿಲನ
ಪ್ರಕೃತಿಯೌಪಾಸನೆಯು ನಿತ್ಯವಿರಲಿ;
ನಾನು ಮಿಡಿಯುವ ಭಾವವೀಣೆ ತಂತಿಗಳೆಲ್ಲ
ದೇವ! ಜೀವಾಳದೋಂಕಾರಗುಡಲಿ.
*****