ಹೊಸಹುಟ್ಟು

ನಿದ್ದೆ ಮಡಿಲೊಳು ದಣಿದು ಮಲಗಿಹುದು
ಜಗದ ಬಾಳು ;
ಹಗಲಿನ ಅಪಸ್ವರಗಳೆಲ್ಲ ಮೌನದಲಿ
ಮರೆತಿಹವು ನೂರಾರು ಮೇಲುಕೀಳು !
ನಿದ್ದೆ ಬಾರದೆ ನಿನಗೆ? ಬೀಳದೆಯ ಸವಿಗನಸು ?
ನೆಲದಿಂದ ಮುಗಿಲವರೆಗೂ ಚಿಮ್ಮಿ ಬರುತಿಹವೆ ಬಾಣ ಬಿರುಸು ?!
ಕತ್ತಲೆಯ ಆಳದಲಿ
ಕೊರತೆಗಳನೆಲ್ಲವನು ಹೂಳು ಹೂಳು !
* * * *

ಹರಿದು ತಿನ್ನುವ ಹದ್ದು
ತನ್ನ ಗೂಡೊಳು ಮಲಗಿ ನಿದ್ದೆಗೈದಿರುವ ಹೊತ್ತು
ಬಾನಿನೆದೆಯೊಳದಾವುದೋ ನೋವು ಮೆಲ್ಲನೆ ಹರಿದು
ಸುರುಳಿ ಸುತ್ತುತ ಕೊರಳ ಬಿಗಿಯುತಿತ್ತು ;
ಚಿಕ್ಕೆಗಣ್ಣುಗಳಿಂದ ಕಂಬನಿಗಳುರುಳುರುಳಿ
ಮಂದ ಬೆಳಕೂ ಕೂಡ ನಂದಿ ಹೋಗುತಲಿತ್ತು !
ನರನರಗಳಲ್ಲಿ ವೇದನೆ ತುಂಬಿ ತುಡಿದಂತೆ
ಗಾಳಿ ನರಳಿತ್ತು !
* * * *

ಕಣ್ದೆರೆಯುತಿದೆ ನಸುಕು
ಬಾನಬಸುರಿಂದೊಗೆದ ಕೂಸು !
ಉಷೆಯ ತಾವರೆಗೈಗಳಲ್ಲಿ ಮಿಸುಕಾಡುತಿದೆ !
ಹೊಂಬೆಳಕಿನಾನಂದ
ದಿಕ್ಕು ದಿಕ್ಕುಗಳನೊಂದೆ ತೆಕ್ಕೆಯೊಳು ಬಿಗಿದು
ಜೀವ ಜೀವದ ಹೂವ ಅರಳಿಸಿಹುದು !
ಹೂವಿನೆಸಳಿನ ಮೇಲೆ ಚಿಕ್ಕೆಗಂಬನಿ ಜಾರಿ
ಮಿರುಗುತಿದೆ ಅಮೃತಬಿಂದು!
*****