ಗೆಳೆಯರು

ಬಹುದೂರದೂರಿನ ಅಪರಿಚಿತ
ಜಾತ್ರೆಯ ಪೀಪಿ ಬೊಂಬೈ ಮಿಠಾಯಿ
ಮಕ್ಕಳಳು ತೇರು ಪುಗ್ಗೆ ಬ್ಯಾಂಡು ಬಿಸಿಲು
ಗಳ ದಪ್ಪ ಉಸಿರಿನ ನಡುವೆ ಥಟ್ಟನೆ
ಒಬ್ಬ ಪರಿಚಿತ ಸಿಕ್ಕ ಖುಷಿ-ಗೆಳೆಯರು
ಇದ್ದಾಗ ಬೇಡ ಇಲ್ಲದಾಗ ಬೇಕು

ಹೊಳಹು ಬೀದಿಗಳು ತೆಕ್ಕೆ ಬಿದ್ದು ಆಳುವ
ಅವಲಂಬನ ನೆಮ್ಮದಿಯಾಲಿಂಗನ
ದೃಷ್ಟಿಕೋನಗಳ ಛೇದ ಪರಿಚ್ಛೇದಗಳ
ಭರ್ಜರಿ ಬಿಂಬಗಳ ಸಮತೂಕದಾಹಾರ
ತೊರೆದು ತಿವಿದು ಸೊಕ್ಕು ನುರಿದು ಹಾಯ್
ಮಧುರಯಾತನೆಯೊಟ್ಟು ಖ್ಖಿಖ್ಖಿಖ್ಖಿ ಹೊಟ್ಟೆಕಿಚ್ಚು
ನಕ್ಕು ಜೋಕು ಬದುಕಿನ ಗಂಭೀರತೆ ಮರೆತು
ಬೇಲೆಯಲ್ಲಿ ಒಬ್ಬರಿಗೊಬ್ಬರು ಹಂಚಿಹೋಗಿ
ವರುಷಕ್ಕೊಮ್ಮೆ ದಿವಾಳಿಗಿವಾಳಿ ಗ್ರೀಟಿಂಗ್ಸ್
ಹರುಷಕ್ಕೊಮ್ಮೆ ಒಣನಗು ಕಂಗ್ರಾಚುಲೇಷನ್ಸ
ಗಳ ಅನಿವಾರ್ಯ ಸಂತೆಯ ಉತ್ತರೋತ್ತರರು

ಬೆಳೆಯುತ್ತಿರುವೆನೆಂಬರಿವಾರಿಸಿ ಜತೆಗೇ
ಬೆಳೆದು ಪರಸ್ಪರ ಮಣ್ಣು ಮುಕ್ಕಿಸಿದಾವೃತ್ತಿಗಳ
ನೆಚ್ಚಿ ಕಾಯುವ ಕಾಲದ ಪುಕ್ಕಟೆ ಸಾಕ್ಷಿದಾರರು
ಇಂದು: ಊರಿಗೆ ಬಂದಾಗ ನಮ್ಮನೆಗೆ ಬಾ-ಇವಳು
ನನ್ನವಳು ಈತ ಹಿರಿಯ ಮಗ ತುಂಟ-ಮರೀ
ಮಾಮಂಗೆ ನಮಸ್ಕಾರಾ ಮಾಡು-ಆಗಾಗ ಬರೆಯುತ್ತಿರು
ಎಂಬೀ ಹಗುರ ವ್ಯವಹಾರವೆಲ್ಲಿ?
ಅಂದು: ನನ್ನ ಪ್ರೇಯಸಿ ಜತೆ ನೀನೂ ಬಾ
ಪಿಕ್ಚರಿಗೆ-ಅಂದ ಸಹಜ ಸಲಿಗೆಯಲ್ಲಿ?
ಇಂದು ಸಿಟಿ ಬಸ್ಸಿನಲ್ಲಿ ಕಂಡರೂ
ಕಾಣದಂತಿರುವ ಮುಖವಾಡವೆಲ್ಲಿ?
ಅಂದು ಬೆತ್ತಲೆ ಒಬ್ಬರಿಗೊಬ್ಬರು ಪಿಟಿ ಪಿಟಿ
ಕಾಣಿಸಿಕೊಂಡು ಜತೆಗೇ ಮಿಂದ
ಮುಗ್ಧ ಆಖಾಡವೆಲ್ಲಿ?

ಹತ್ತೂರು ಗಲ್ಲಿ ಗಲ್ಲಿ
ಹುಡುಕಿದರೂ ಸಿಗದ ದಕ್ಕದ
ರಕ್ತದ ಚಿತ್ರಕಲೆಗಳು
ಬತ್ತದ ಚಿತ್ತದ ಸೆಲೆಗಳು
ಗೆಳೆಯರು
*****