ನದಿಯ ನೀರಿನ ತೇವ – ಮುನ್ನುಡಿ

ನಾನು ಹೇಳಬೇಕಾದ್ದು

ನನ್ನ ಮೊದಲ ಕವನ ಸಂಕಲನ ‘ಕಾಡನವಿಲಿನ ಹೆಜ್ಜೆ’ ೧೯೯೨ರಲ್ಲಿ ಪ್ರಕಟವಾದ ನಂತರ ನಾನು ಕವನ ಕಟ್ಟಲು ಬಳಸುತ್ತಿದ್ದ ಬರವಣಿಗೆಯ ಶೈಲಿಯನ್ನು ತೊರೆದು ಬೇರೆಯೇ ರೀತಿಯಲ್ಲಿ ಪದ್ಯ ಬರೆಯಬೇಕೆಂದು ಪ್ರಯತ್ನಿಸುತ್ತಿದ್ದೆ. ಬಹಳ skillful ಆಗಿ ಮಹತ್ತರವಾದದ್ದೇನನ್ನೂ ಹೇಳೊ ಭ್ರಮೆಯಲ್ಲಿ ತೀರಾ ಸಾಮಾನ್ಯವಾದದ್ದೂ ಅಥವ ವಿಶಿಷ್ಟವಾಗಿ ‘ನನ್ನದು’ ಅನಿಸಿದ್ದನ್ನೂ ಸ್ಪಷ್ಟವಾಗಿ ಹೇಳದೆ ಬಿಟ್ಟಿದ್ದರ ಅರಿವಾಗಿತ್ತು.

ನವ್ಯಮಾರ್ಗದಿಂದ ನಾವು ಕಲಿತ craftsmanship ಅದ್ಭುತವಾದ್ದು. ಕನ್ನಡ ಭಾಷೆಯನ್ನು ನಮ್ಮ ಲಯಗಳಿಗೆ ತಕ್ಕಂತೆ ಪಳಗಿಸಿಕೊಳ್ಳುವಂಥ skillನ್ನು ನವ್ಯ ನಮಗೆ ಹೇಳಿಕೊಟ್ಟಿತು. ಈ ಹೊತ್ತಿನ ಕಾವ್ಯ ವ್ಯಕ್ತಿಕೇಂದ್ರಿತ ಅನ್ನೋ ಹೆಸರಲ್ಲಿ ಎಷ್ಟು ಸೆಲ್ಫ್ ಸೆಂಟರ್ಡ್ ಮತ್ತು ಸೆಲ್ಫ಼್ ಇಗೋಯಿಸ್ಟಿಕ್ ಆಗಿತ್ತೆನ್ನುವುದು ಈಗ ತಿಳಿಯುತ್ತದೆ. ಇಲ್ಲಿಯ ‘ವ್ಯಕ್ತಿ’ ಮತ್ತು ‘ಸೆಲ್ಫ್’ ಎರೆಡೂ ಸಾಧಾರಣವಾಗಿ ಗಂಡಿನ ದೃಷ್ಟಿಕೋನವನ್ನೇ ಹೊಂದಿರುವಂಥದ್ದು ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ. signifiedನ ಅರ್ಥ signifier ಹಿಂದಿರುವ attitudeಗೆ ತಕ್ಕಂತೆ ರೂಪುಗೊಳ್ಳುವುದು ಎಲ್ಲರಿಗೂ ತಿಳಿದ ವಿಚಾರ.

ಅಡಿಗರ ಕಾವ್ಯ ಪ್ರಭಾವದಿಂದ ಹೊರಬರುವ ಪ್ರಯತ್ನ ನಡೆಸುತ್ತಿದ್ದಾಗಲೇ ನಾನು ಹೈದರಾಬಾದಿಗೆ ಬಂದೆ. ಇಲ್ಲಿ ಎಲ್ಲವೂ ಹೊಸತು. ವಿಪರೀತ ಸೆಖೆ, ವಿಪರೀತ ಛಳಿ, ಮೈ ಮನಸ್ಸಿಗೆ ವಿಚಿತ್ರ ಕಸಿವಿಸಿ. ಸ್ಥಳಾಂತರದಿಂದಾಗಿ ದಿನಚರಿಯ ಅರ್ಥ ಅವಕಾಶಗಳೇ ಬೇರೆ. ಕಿವಿ ಕೇಳುತ್ತಿದ್ದ ಶಬ್ದಗಳು, ಕಣ್ಣು ಕಾಣುತ್ತಿದ್ದ ದೃಶ್ಯಗಳು, ಗಾಳಿಯಲ್ಲಿದ್ದ ವಾಸನೆ, ಸೊಪ್ಪು, ತರಕಾರಿಗಳು, ಅಂಗಡಿಯ ಬೋರ್ಡುಗಳು ಎಲ್ಲದರಲ್ಲೂ ವ್ಯತ್ಯಾಸ

ಹೊಸ ಸ್ಥಳ ಮತ್ತು ವಾತಾವರಣದ ಅನುಭವ, ಅದಕ್ಕೆ ನನ್ನ ಪ್ರತಿಕ್ರಿಯೆ ಎಲ್ಲವೂ ಅಸ್ಥವ್ಯಸ್ಥವಾಗಿತ್ತು. Time…. space…… forms…… objects…… meaning….. sounds…… ಮುಂತಾದ ಮೂಲಭೂತ ಅಂಶಗಳು ಮತ್ತು ಅವುಗಳನ್ನೊಳಗೊಂಡ ಅನುಭವಗಳನ್ನು ಕವಿತೆಯ ಮೂಲಕ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಇಂಥಾ distortionನಿಂದ ಬೇರೆಯೇ ರೀತಿಯಲ್ಲಿ ಬರೆಯಲು ನಾನು ನಡೆಸುತ್ತಿದ್ದ ಪ್ರಯತ್ನಕ್ಕೆ ಒಂದು ರೂಪ ಸಿಕ್ಕಿತು ಅನ್ನಿಸತ್ತೆ.

ಈ ರೀತಿಯ ಅನುಭವವನ್ನು ಭಾಷೆಯಾಗಿ ಪರಿವರ್ತಿಸಿ, ಹೇಳಬೇಕಾದ್ದನ್ನು ಸ್ಪಷ್ಟವಾಗಿ ಹೊಸ ರೂಪದಲ್ಲಿ ಹಿಡಿದಿಡಲು ಸಾಕಷ್ಟು ಸಮಯ ಬೇಕಾಯ್ತು. ಹೀಗೆ ಕ್ರಮೇಣವಾಗಿ ರೂಪುಗೊಂಡ ಬದಲಾವಣೆಯನ್ನು ಈ ಸಂಕಲನದ ಮೂಲಕ ನಿಮ್ಮೆದುರು ಇಡುತ್ತಿದ್ದೇನೆ.

ಈ ಸಂಕಲನದಲ್ಲಿ ನಾಲ್ಕು ಭಾಗಗಳಿವೆ. ಒಬ್ಬರೇ ಕೂತಾಗ, ಮನಸ್ಸು ತನ್ನ ಪಾಡಿಗೆ ತಾನು ಮಾತನಾಡಿಕೊಳ್ಳುತ್ತಿರುವಾಗ ಒಮ್ಮೊಮ್ಮೆ ಥಟ್ಟನೆ ಹಿಂದೆಂದೋ ಆದ ಯಾವುದೊ ಅನುಭವವೊ, ವಾಸನೆಯೊ, ನೆನಪೊ, ಏನೋ ಅಂಥದ್ದು ಸುಳಿದು ಮುಳುಗುತ್ತದೆ ಕೆಲವೊಮ್ಮೆ ನೆನಪಾಗುವ ಯಾವುದೊ ಘಳಿಗೆಯನ್ನು ಅನುಭವಿಸಿದ್ದು ಸಾಗರದಲ್ಲೊ, ಬೆಂಗಳೂರಲ್ಲೂ ಅಥವಾ ಹೈದರಾಬಾದಲ್ಲೂ ಅರೆಕ್ಷಣ ತಿಳಿಯುವುದೇಯಿಲ್ಲ. ಕಾಲ-ಅವಕಾಶಗಳು ಗ್ರಹಿಕೆಯನ್ನು ಮೀರಿ ಬೆರೆತುಹೋದಂತೆ ಅನ್ನಿಸುತ್ತದೆ.

ಏನೇನೋ ಅನುಭವಗಳನ್ನು ಕವಿತೆಯಾಗಿಸುತ್ತ, romanticise ಮಾಡುತ್ತಾ ಕೆಲವೊಮ್ಮೆ ಆ ಅನುಭವದ ಮೂಲ ಸ್ವರೂಪವನ್ನು ಮರೆತುಹೋಗುತ್ತೇವೆ. ಹಾಗೆ ಕ್ರಮೇಣ ವಸ್ತುಗಳನ್ನು ಅವು ಇದ್ದ ಹಾಗೆ ನೋಡುವುದನ್ನು ಮರೆತೇಹೋಗುತ್ತೇವೇನೋ.

ತೇವವಾಗುವುದು ನದಿಯ ನೀರಿನ ಸಹಜಗುಣ. ಆದರೆ ‘ತೇವ’ವಾಗುವ ಗುಣ ವಿಲ್ಲದಿದ್ದರೆ ಅದು ನೀರೂ ಆಗಲಾರದು ನದಿಯೂ ಆಗಲಾರದು ಎಂಬುದನ್ನು ನಾವು ಗಮನಕ್ಕೇ ತೆಗೆದುಕೊಳ್ಳುವುದಿಲ್ಲ.

ಒಂದು image ಅಥವ expression ಕವಿತೆಯಲ್ಲಿ ಮೇಲಿಂದ ಮೇಲೆ ಬಳಕೆಯಾದಾಗ ಅದಕ್ಕೆ ಒಂದು ನಿರ್ದಿಷ್ಟ ಅರ್ಥ ಹುಟ್ಟಿಕೊಳ್ಳುತ್ತದೆ. ಆನಂತರ ಆ expression ಎಲ್ಲೇ ಬಂದರೂ ಈ ಅರ್ಥ ಅದನ್ನೂ ಮೀರಿ ಹೊರಹೊಮ್ಮುತ್ತಿರುತ್ತದೆ. ಉದಾ : ಉತ್ತಿ, ಬಿತ್ತು, ಬೆಳೆಯಲು ಅನುವು ಮಾಡಿಕೊಡುವ ‘ಭೂಮಿ’ಯ ರೂಪ ಹೆಂಗಸಿನದು ಅನ್ನುವಂಥದ್ದು. ‘ಏಳು ಮಲ್ಲಿಗೆ ತೂಕ’ದಷ್ಟು ಹಗುರ ಅನ್ನುವಾಗ, ಅದಕ್ಕೆ ವಿರುದ್ಧವಾಗಿ ಎತ್ತರ, ಅಜಾನುಬಾಹು-ಮೈ ಮನಸ್ಸಿನಲ್ಲಿ ಗಟ್ಟಿ ಅನ್ನುವ ಮತ್ತೊಂದು ರೂಪವನ್ನು parallel ಆಗಿ ಸೃಷ್ಟಿಸುತ್ತಾ ಈ ಮೊದಲಿನದನ್ನು negate ಮಾಡುತ್ತಿರುತ್ತೇವೆ. ಹೀಗೆ ಭಾಷೆ ನಿರ್ದೇಶಿಸುವ ಲಿಂಗ ತಾರತಮ್ಯ ಸೂಕ್ಷ್ಮವಾಗಿ ಆ ಭಾಷೆಯನ್ನು ಬೆಳೆಸುವ ಸಂಸ್ಕೃತಿ ಹಾಗು ನಮ್ಮ attitudeನ ನಿದರ್ಶನವಾಗಿರುತ್ತದೇನೊ.

ಕವಿತೆ ಕಟ್ಟುವಾಗ ಶಬ್ದ (word/sound)ಗಳ ಜೊತೆಗೆ ಆಡುತ್ತಾ ಶಬ್ದಾರ್ಥ ಸಂಬಂಧವನ್ನು ಒಡೆದು ಪುನರಚಿಸಿ ಹೊಸ ಸಾಧ್ಯತೆಗಳನ್ನು ಕಾಣುವುದು ಯಾವಾಗಲೂ ನನಗೆ ಖುಷಿ ಕೊಟ್ಟಿರುವಂಥದ್ದು. ಕವಿತೆಯಾಗಿ ಹೊರಡುವ ಶಬ್ದಗಳು visual ಮತ್ತು verbal spaceಗಳಲ್ಲಿ ಏಕಕಾಲಕ್ಕೆ form ಮತ್ತು sound patternಗಳಾಗಿ ಸೃಷ್ಟಿಸುವ ಅನುಭವವನ್ನು ಇಲ್ಲಿ ಕವಿತೆಯಾಗಿಸಲು ಪ್ರಯತ್ನಿಸಿದ್ದೇನೆ. ಅಕ್ಷರಗಳನ್ನು Visual Space ನಲ್ಲಿಟ್ಟಾಗ ಅದು ಶಬ್ದ (Sound)ವಾಗಿ ಪರಿವರ್ತನೆಗೊಳ್ಳುವವರೆಗೆ ಮೂಲಭೂತವಾಗಿ ಆಕಾರವೇ ಆಗಿರುತ್ತದೆ. ಆದರೆ ಚಿತ್ರಗಳನ್ನು ಇಟ್ಟಾಗ ಅವು ಮೈಗೂಡಿಸಿಕೊಂಡಿರುವ ಅರ್ಥ ಮೊದಲು ಹೊರಡುತ್ತದೆ. ಅದು ಮೂಲಭೂತವಾಗಿ ಆಕಾರವೇ ಆದರೂ ಸಹ, ಆಕಾರವನ್ನು ಮೀರಿ ಅರ್ಥವನ್ನು ಧ್ವನಿಸುವುದು ಅದರ ಉದ್ದೇಶವಾಗಿಬಿಡುತ್ತದೆ.

ಶಬ್ದ-ಅರ್ಥ-ಆಕಾರ-ಅವಕಾಶಗಳ ಸಂಬಂಧಾಂತರಗಳನ್ನು ಇಲ್ಲಿ ಕವಿತೆಗಳ ಮೂಲಕ ನೋಡಲು ಪ್ರಯತ್ನಿಸಿದ್ದೇನೆ. ಈಗ ನನ್ನ ಈ ಪ್ರಯತ್ನ ಪುಸ್ತಕ ರೂಪದಲ್ಲಿ ಹೊರಬಂದಿದೆ. ಇದನ್ನು ಪ್ರೀತಿಯಿಂದ ಓದಿ ಸ್ವೀಕರಿಸುತ್ತೀರೆಂದು ನಂಬಿದ್ದೇನೆ.
*****