ಅಲೆಮಾರಿ ಮತ್ತೆ ಬಂದ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ಈ ಅಲೆಮಾರಿ ಗುಲಾಮ ಮತ್ತೆ ವಾಪಸಾಗಿದ್ದಾನೆ
ನಿನ್ನೆದುರು ಮೇಣದಬತ್ತಿಯಂತೆ ಕರಕಾಗುತ್ತ ಕೊರಗಿದ್ದಾನೆ

ಓ ಆತ್ಮವೆ, ಮಂದಸ್ಮಿತವಾಗು, ಪನ್ನೀರಿನಂತಾಗು
ಮುಚ್ಚದಿರು ಬಾಗಿಲು, ಆತ್ಮವೆ, ಆತನೀಗ ಅನಾಥ

ನೀನು ಬಾಗಿಲು ಬಡಿದು ಕೂತರೂ ಸರಿ
ನಿನ್ನಾಣತಿಗೆ ಆತ ಶರಣು, ದೊರೆಗೆ ಅಪಾರ ಧಿಮಾಕು ದರ್ಪ

ಕರಕಾದ ಮೊಂಬತ್ತಿಯಾಗಿದೆ ಕಂಗಳ ಬೆಳಕು
ಕರಗಿ ಕೊರಗಿದ ಹೃದಯದಲ್ಲಡಗಿದೆ ದಿವ್ಯ ರಹಸ್ಯ

ಆತನ ಕೈಯ ವಿಷಜಲ ಮತ್ತು ಮಧುವಿನ ನಡುವೆ ವ್ಯತ್ಯಾಸ
ಮಾಡಿದೆನೆ ನಾನು? ಆ ಆತ್ಮದ ದಾರಿಯಲ್ಲಿ ಅದು ಅಪ್ರಾಮಾಣಿಕವಾಸ

ಅಲೆದಾಟವೀಗ ಬಿಟ್ಟೆ, ಸಖನೊಡನಿರಲು ಬಂದೆ
ನಾನೀಗ ಮರಣ ಮುಕ್ತ, ಸಾವಿಲ್ಲದ ಜೀವ ಒದಗಿ ಬಂತು

ಓ ಹೃದಯವೇ, ತೊರೆಯಲ್ಲೆ ಇದ್ದೂ ನೀರಿನ ಹಂಬಲವೇಕೆ?
ಹಬ್ಬಕ್ಕೆ ಬಾ ಎಂದು ಎಷ್ಟು ಕಾಲ ಹೇಳುತ್ತಿ?

ಬಾ, ಪ್ರಾರ್ಥನೆಯ ಹೊತ್ತಾಯಿತು
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.