ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ವಸಂತಾಗಮನದ ಜತೆಗೆಯೇ ಬಂತು ನಲ್ಲನ ಸಂದೇಶ
ನಾವೀಗ ಪ್ರೇಮ ಸುರೋನ್ಮತ್ತರು, ನಿಲ್ಲಲಾಗದೆ ತೂರಾಡಿದವರು
ಹೋಗು ನಂದನವನಕ್ಕೆ ನನ್ನ ನಲ್ಲ, ಅಲ್ಲಿ
ಕಾದ ನಂದನದ ಸುಂದರಿಯರು, ನಿನ್ನ ನಿರೀಕ್ಷೆಯಲ್ಲಿ
ಅದೃಶ್ಯ ಲೋಕದ ಅಪರಿಚಿತರು ನಂದನಕ್ಕೆ ಇಳಿದರು
ಹೋಗಿ ಸ್ವಾಗತ ಹೇಳು, ಅಭ್ಯಾಗತರಿಗೆ ಸ್ವಾಗತವೇ ಇಲ್ಲಿಯ ನಿಯಮ
ನಿನ್ನ ಹೆಜ್ಜೆ ಸದ್ದು ಕೇಳಿ ಹೂ ಹೂದಾನಿಗೆ ಬಂತು
ನಿನ್ನ ಭೇಟಿಗಾಗಿ ಹೂವಿನ ಮುಳ್ಳು ಕೆಂಪು ಕೆನ್ನೆಯ ಹಾಗೆ ಮೃದುವಾಯಿತು
ದೇವದಾರು ವೃಕ್ಷವೆ, ಕೇಳು, ನಿನ್ನ ನಿರೀಕ್ಷೆಯಲ್ಲಿ
ಆ ಜಲಮಲ್ಲಿಗೆ ಹಾಡಿತು ಕೊರಳೆತ್ತಿ ನದಿ ದಡದಲ್ಲಿ
ಮೊಗ್ಗು ತುಟಿ ಬಿಗಿ ಹಿಡಿದಿತ್ತು, ಈಗ ಬಿರಿದಿದೆ
ಅರಳಿದ ಗುಲಾಬಿ ವಂದಿಸಿ ನಿನ್ನ ಮೇಲೆ ಹೂವೆರಚಿದೆ
ಇದು ಪುನರ್ ಜನ್ಮದ ಋತು ಎಂದೆ ನೀನು
ಡಿಸೆಂಬರ್, ಜನವರಿಯಲ್ಲಿ ನೆಲದೊಳಗೆ ಕೊಳೆತು ಆತ್ಮ ಈಗ ತಲೆ ಎತ್ತಿವೆ
ಮೃತವಾಗಿದ್ದ ಬೀಜಕ್ಕೆ ಹೊಸ ಜೀವ ಬಂದಿದೆ
ಭೂಮಿ ಬಚ್ಚಿಟ್ಟ ಗುಟ್ಟು ಈಗ ರಟ್ಟಾಗಿದೆ
ಹಣ್ಣುಗಳಿಂದ ಕಿಕ್ಕಿರಿದ ಕೊಂಬೆ ಹೆಮ್ಮೆಯಿಂದ ಬೀಗಿದೆ
ಬೋಳಾದ ಬೇರು ನಾಚಿಕೆಯಿಂದ ನಿಟ್ಟುಸಿರಿಟ್ಟಿದೆ
ವಸಂತದ ಚಕ್ರವರ್ತಿ ತನ್ನ ದಂಡಿನೊಡನೆ ಬಂದ
ಮಲ್ಲಿಗೆ ಗುರಾಣಿಯನ್ನು ಮುತ್ತಿ ಬಿಟ್ಟಿತು
ದಿವ್ಯ ಬೆಂಬಲ ದೊರಕಿದರೆ
ಹುಳು ಕೂಡಾ ದೈತ್ಯನನ್ನು ಕಚ್ಚಿ ಕೊಲ್ಲುತ್ತದೆ
*****