ಮಾತಂಗ ಬೆಟ್ಟದಿಂದ

ದುಂಡಾದ ಬಂಡೆಗಳ ಮೇಲುರುಳಿ, ನುಣ್ಣನೆಯ
ಹಾಸುಗಲ್ಲಲಿ ಜಾರಿ, ಅಲ್ಲಲ್ಲಿ ಮಡುಗಟ್ಟಿ
ಚಕ್ರ ತೀರ್ಥವ ರಚಿಸಿ, ಬೆಟ್ಟದಡಿಗಳ ಮುಟ್ಟಿ
ಪಂಪಾನಗರಿಗಿಂಬುಗೊಟ್ಟ, ತುಂಗಭದ್ರೆಯ
ಜಲತರಂಗದಿ ಮಿಂದು, ಶ್ರೀ ವಿರೂಪಾಕ್ಷಂಗೆ
ಕೈಮುಗಿದು, ಭುವನೇಶ್ವರಿಗೆ ನಮಿಸಿ, ಸಂಪೂಜಿತ
ವಿಜಯ ವಿದ್ಯಾರಣ್ಯರಂ ನನದು, ಅತಿ ವಿಕೃತ-
ಗೊಂಡು ಹಾಳು ಸುರಿಯುವ ಹಂಪೆಕೊಂಪೆಯಲಿ ಬಗೆ-
ಗಟ್ಟಲೆದು, ಸ್ವಪ್ನ ಸಾಮ್ರಾಜ್ಯದಿಂದೀ ನಗರ-
ಕವತರಿಸಿ ಮಂಕಾಗಿ, ಭವ್ಯ ರಮಣೀಯತೆಯ
ರುದ್ರ ಶಾಂತಿಯೊಳಿಳಿದು, ಒಂದಿನಿತು ನೆಮ್ಮದಿಯ
ಬಯಸಿ ಮಾತಂಗ ಬೆಟ್ಟವನೇರಿ, ಕನ್ನಡರ
ಕರ್ಮಕತಯನು ನೆನೆದು ಕುಳಿತೆ ನಾಂ ಮೌನದಲಿ
ಕವಿಗೆ ಕವಿ ಮಣಿವಂತೆ ಮೂಕ ಶಿಲೆಸಂಗದಲಿ.

ದಟ್ಟೈಸಿ ನಿಂದಿರುವ ಬಂಡೆಗಲ್ಲಿನ ದಂಡು
ಸಹಜ ನಿರ್ಮಿತ ಕೋಟೆ ಕೊತ್ತಳೆನೆ ನಸುಬಾಗಿ
ತಮಗೆ ತಾವೇ ಅಡಕಲೇರಿ ಮಂಟಪವಾಗಿ
ಮೂಡಿಹವು. ಪರಿಕಾಲ್ಗಳಿಂ ತಿಳಿಯ ನೀರುಂಡು
ನಳನಳಿಸಿ ಬೆಳೆದು ಹೊಂದಲೆದೂಗಿ ಕಂಗೊಳಿಸಿ
ನಲಿವ ಬತ್ತದ ಗದ್ದೆ, ಕಬ್ಬು ಬಾಳೆಯ ತೋಟ
ಕೊಬ್ಬಿ ಗರಿ ಹೊಡೆಯುತ್ತಿವೆ; ಏನಿದೆಂತಹ ನೋಟ-
ವೆಂದು ಮನ ಜೋಂಪಿಸಿರೆ ಹಿಂಗತೆಯು ಮರುಕಳಿಸಿ
ದುಸ್ವಪ್ನದಲಿ ತೋರಿ ಮೀರಿ ಅಸ್ತವ್ಯಸ್ತ-
ವಾಗಿಹುದು ಅಂದಿನಂದಿನ ಇಂದ್ರನಾಸ್ಥಾನ!
ಕನ್ನಡ ರಮಾರಮಣರಾಳಿ ಬಾಳಿದ ತಾಣ!
‘ಏಳು ಸಾಯಣ ಕಟ್ಟು’ ಎಂಬ ಯತಿ ಧ್ಯಾನಸ್ಥ-
ನಾಗಿ ಕುಳಿತಿಹನಿಂದು ಹುಕ್ಕಬುಕ್ಕರ ನೆನೆದು
ಇಂದಿನವರಭಿಮಾನಶೂನ್ಯ ಮೌನಕೆ ಮುನಿದು.

ಗೋಪುರಕೆ ಗೋಪುರವನ್ನು ಕಲೆ ಬಿತ್ತರಿಪ
ಮುರುಕು ಮಂಟಪ, ಪಾಳು ಪೌಳಿ, ವಿಗ್ರಹವಿರದ
ವಿಠಲನ ಗುಡಿ, ಭಗ್ನ ನರಸಿಂಹ, ನೆಲಸಮದ
ಆಸ್ಥಾನ ಮಂಟಪಂ, ಸೊಂಡಿಲೊಡೆದಿಹ ಗಣಪ
ಒಂದೆರಡೆ? ಶಿಥಿಲ ಸೌಂದರ್ಯದಲಿ ಮುಕ್ಕಾದ
ನೂರಾರು ಮೂಕಶಿಲೆ! ಕಾಲತಾಂಡವ ಪದಕೆ
ಹತಿಗೊಂಡು ಬೇನೆ ಬಿದ್ದಿಹ ಕಲೆಯ ನರಳುವಿಕೆ!
ತುಂಗಭದ್ರೆಯು ಸಾಕ್ಷಿ ನುಡಿದಂತೆ, ಎಚ್ಚರದ
ಗಂಟೆಬಾರಿಸಿದಂತೆ ಮೊರೆಯಿಡುತ ಹರಿದಿಹಳು.
ಉದಯಾಸ್ತಮಾನದಲಿ ಮತ್ತೊಮ್ಮೆ ಜೀವಕಳೆ
ಬಂದಂತ ಮಿನುಗಿ ಹಂಪೆಯ ಪೆಂಪು ಕಣ್ಣ ತೊಳೆ-
ವುದು ವಿಭವ ರಾಗದಲಿ, ಮರುಗಳಿಗೆಯಲಿ ಹಾಳು!
ತೊಟ್ಟುಳಿದು ಕಳಚುತಿರೆ ಮುಗಿಲ ಬೆಳಕಿನ ಹಣ್ಣು
ಕುಂಕುಮವನಳಿಸಿರುವ ವಿಧವೆಯೊಲು ಇಳೆವೆಣ್ಣು.
*****