ಒಂದು ಸಂಜೆ

ಸಂಜೆವೆಣ್ಣಿನ ಸಕಲ ಸೌಭಾಗ್ಯ ಹೊಮ್ಮುತಿದೆ!

ಕಿಂಜಲ್ಕ ಕುಸುಮಗಳ ಹುಡಿಯ ಹಾರಿಸಿದಂತೆ
ಕೆಂಕಮಾಗಿದೆ ಬಾನು; ಕಿತ್ತಿಳೆಯ ತೊಳೆಯಂತೆ

ಕ್ಷಿತಿಜದಂಚಿನ ತುಟಿಗೆ ರಾಗ ರಂಗೇರುತಿದೆ!
ಮುಂಗುರುಳು ಚಿನ್ನಾಟವಾಡಿದೊಲು ಮುಚ್ಚಂಜೆ

ಕರಿನರಳ ಚಾಚಿಹುದು. ನೀಲ ಸೀಮಂತದಲಿ
ಒಂದೊ ಎರಡೋ ಚಿಕ್ಕೆಯರಳು ಚೆಲ್ವೆಳಕಿನಲಿ

ಚಮುಕುತಿವೆ. ಇಲ್ಲಿ ಮೌನ ಧ್ಯಾನವೇ ಪೂಜೆ!
ಚಿತ್ರಗಾರನ ಕುಶಲ ಕುಂಚ ಬಣ್ಣಿಸದಿದನು.

ಪಕ್ಷಿಕೂಜನ ನಿಪುಣ ಗಾಯಕಗು ಅಳವಡದು.
ಕಬ್ಬಿಗನ ನುಡಿಯಲ್ಲಿ ‘ಓಂ ನಮೋ’ ಎಂದಿಹುದು!

ಪ್ರಕೃತಿ ಸೌಂದರ್‍ಯದೌದಾರ್‍ಯಕೆನ್ನಲ್ಪತನು

ಮುಡಿಪಾಗಿ ಕರಗಿಹುದು ಅರ್‍ಪಣಾನಂದದಲಿ,
ಸಾವು ಬಂದರು. ಇಂಥ ಶಾಂತ ಸಮಯದಿ ಬರಲಿ.
*****