ಪಥಿಕ


ಯಾವ ಋತುವಿನೊಳಿಂತು ಕನಸು ಕಂಡಳೊ ಪೃಥಿವಿ
ಆಶೆ ಬೀಜಗಳೆನಿತೊ ಮಡಿಲೊಳಿರಿಸಿ
ಮಳೆಯ ರೂಪದಿ ಮುಗಿಲು ಮುತ್ತಿಡಲು ಮತ್ತೇರಿ
ಹೊತ್ತು ನಿಂತಿಹಳಮಿತ ವೃಕ್ಷರಾಶಿ.


ಮಾವು ಬೇವೂ ತೆಂಗು ಕೌಂಗು ನೇರಿಳೆ ಹಲಸು
ಹುಣಿಸೆ ಹುಲುಗಲ ತಾಳೆ ಬಾಳೆಯಂತೆ
ಮಾಧವಿ ತಮಾಲ ಮಾಲತಿ ಹೊಂಗೆ ಶ್ರೀಗಂಧ
ಸೀತಾಳಿ ಬಕುಳ ಸಂಪಿಗೆಗಳಂತೆ!


ದೇವಕನ್ನೆಯರಿಳೆಗೆ ಇಳಿತಂದು ಗುಟ್ಟಿನಲಿ
ತೊಟ್ಟಿಲವ ತೂಗಿ ಹೆಸರಿಟ್ಟರೇನೊ!
ಹೆಸರಿಲ್ಲದೆಯು ಹಸಿರ ಚಿಮ್ಮಿಸುವ ಪಸದನಕೆ
ಜುಮ್ಮೆಂದು ಮನಸೋತು ಬಿಟ್ಟರೇನೊ!


ಇಲ್ಲಿ ಬಣ್ಣದ ತಳಿರ ತುಟಿಯಲ್ಲಿ ಹೂನಗೆಯು
ಅಲ್ಲಿ ಹಣ್ಣಿನ ಗೊನೆಗೆ ಗಿಣಿಗಳೆರಡು
ಸೀಳುದಾರಿಯ ಬದಿಗೆ ಸಾಲು ಮರಗಳ ನೆಳಲು
ಗಾಳಿಯೂದುವ ಕೊಳಲು-ಹಕ್ಕಿ ಹಾಡು,


ಜಗದ ನೂರೆಂಟು ತರ ಕಲಹ ಕಂಟಕಗಳಿಗೆ
ತಾವು ಕಾರಣವಲ್ಲವೆಂಬ ಹಾಗೆ
ಹುಲ್ಲು ಮೇಯುವ ಹಸುಗಳಲ್ಲಿ ಮೆಲುಕಾಡಿಸಿವೆ
ಹುಲ್ಲುಗದ್ದೆಯೆ ತಮ್ಮದೆಂಬ ಹಾಗೆ,


ನಳಲ ಸೆರಗನು ಹಿಡಿದು ಬಿಸಿಲು ಮುಂದೋಡುತಿದೆ
ದೂರ ದೂರದ ತನ್ನ ಮನೆಯ ನೆನೆದು,
ಬಿಳಿಯ ಮೋಡವದೊಂದು ಬೆಟ್ಟದುದಿಯಲಿ ನಿಂದು
ಎಲ್ಲ ಬಲ್ಲವರಂತೆ ಸುಮ್ಮನಿಹುದು.


ಬಾಳ ಬಿಸಿಲಲಿ ಬಳಲಿ ದಣಿದು ಬಂದಿಹ ಪಥಿಕ
ಮರದ ತಣ್ಣೆಳಲೊಂದೆ ನಿನಗಾಸರು-
ಇಲ್ಲಿ ದಣಿವಾರಿ ಮನ ಶಾಂತಿ ಸಂತಸ ಪಡೆಯೆ
ಮುಂದೆ ನಡೆಯುವ ದಾರಿ ಎನಿತು ಹಗುರು!


ಪ್ರಕೃತಿ ತನ್ನೆದೆಯ ಮಧುವಾಟಿಕೆಯ ತೆರೆದಿರಲು
ಅದನು ತಣಿ ಹೀರದೆಯೆ ಸಾಗಬಹುದೆ?
ಯಾರಿಗೀ ಸುಂದರತೆ? ಯಾರಿಗೀ ಪರವಶತೆ?
ಯಾರ ಸುಖಕೀ ಸೃಷ್ಟಿ ನಿನಗಲ್ಲದೆ?
*****