ಉರುಳುರುಳು ಕಂಬನಿಯೆ!

ನನ್ನೆಲ್ಲ ಹಂಬಲವನೊಂದು ಬಿಂದುವಿನಲ್ಲಿ
ಬಿಂಬಿಸಿಹ ಕಂಬನಿಯೆ! ಹೇಳಕೇಳದೆ ಹೊರಟು
ನಿಂತಿರುವ ಅತಿಥಿಯೊಲು ಕಣ್ಣ ಹೊಸತಿಲ ದಾಟು-
ತಿರಲು ನಾನಿನ್ನೇವೆ? ಉರುಳುರುಳು ಎದೆಯಲ್ಲಿ
ಕುದಿವ ಕಡಲೊಂದಿರಲು, ಶೋಕವಾಹಿನಿ ಹರಿದು

ಮನದ ಮಲಿನತೆ ಕಳೆದು, ಅಮೃತವಾಹಿನಿಯಾಗಿ
ಚಿಮ್ಮಿ ಬರುವನ್ನೆವರ; ಮಳೆಬಿದ್ದು ಹೊರಪಾಗಿ
ತೊಳೆದ ಬಾನಿನ ಮೊಗದಿ ಹಗಲುಗಣ್ಣೆವೆದೆರೆದು
ನೋಡುತಿರೆ ಸೃಷ್ಟಿ ಮಹಿಮಾಪೂರ್‍ಣಮಾದಂತೆ
ಋತಚಿತ್ತಿನಲಿ ವ್ಯೋಮ ಭೂಮ ಪುರುಷಾಕಾರ
ನೆಲೆಗೊಂಡು, ಕ್ಷಾಂತಿ ಶಾಂತಿಯು ಎದೆಯನಪ್ಪುವರ

ಉರುಳುರುಳು ತರಳು ಕಂಬನಿವೊನಲೆ ಓರಂತೆ!

ಸದ್ದಿರದೆ ಸಾಗುವದೆ ಜೀವನದಿ ತೀರ್‍ಥಯಾತ್ರೆ
ಕಡೆಮುಟ್ಟಿ ಪಡೆವ ಸುಖಕೀ ದುಃಖ ಪಾನಪಾತ್ರೆ.
*****