ಮಾನಸ ಪೂಜೆ

ಅಹ! ಪ್ರಾತಃಕಾಲ, ಮತ್ತೆ ಅದೊ ಚಿಮ್ಮುತಿದೆ
ಬಣ್ಣ ಬಣ್ಣದ ಮಣ್ಣ ಕಣ್ಣಿನಲಿ, ಹಕ್ಕಿಗಳ
ಇಂಚರದಿ, ಇಬ್ಬನಿಯ ಸೊಡರಿನಲಿ, ನಿಬ್ಬೆಗದಿ
ಹರಿವರಿದು ಬರುವ ಗಂಧೋದಕದಿ ಮಿಂದ ತಂ-
ಬೆಲರಿನಲಿ ಹೆರೆಹಿಂಗದಮೃತ ಚೈತನ್ಯ ಝರಿ!
ದಿವ್ಯಾನುಭೂತಿಯಲಿ ರಸದ ಪಾವಿತ್ರ್ಯದಲಿ
ಬಾಳ ತೊಳೆಯುವ ಬದುಕ ಸಿಂಗರಿಪ ಮಂತ್ರಮಿದೆ;
ರಸಾಹ್ಲಾದಿನಿ ಪರಾಪ್ರಕೃತಿ ಸಂಜೀವಿನಿ!

ಹೊತ್ತು ಹೋದರೆ ಮತ್ತ ಬಾರದೀ ಸಿರಿಯೊಸಗೆ
ಏಳು ಎಚ್ಚರಗೊಂಡು ನೆನೆ ಮನವೆ, ಇಂಥ ತಣ್-
ಪೊತ್ತಿನಲಿ ಜಗದೆಲ್ಲ ಉತ್ತಮ ವಿಭೂತಿಗಳ,
ಎದೆಗುಡಿಯ ಗದ್ದುಗೆಯಲಿರಿಸವರ ಶ್ರೀಪಾದ
ಪದ್ಮಗಳ, ಪೂಜೆಗೆಯ್, ನಿನ್ನ ನೀನಿಲ್ಲಗೆಯ್
ಅಲ್ಪತೆಯು ಮಹದಲ್ಲಿ ಕರಗಿ ಒಂದಾಗಲಿ!
*****