ಬಾಂಬ್ ಸ್ಫೋಟ ಮತ್ತು ಚಿತ್ರರಂಗ: ಒಂದು ಕಲ್ಪನಾ ಲಹರಿ

ನನ್ನ ಗೆಳೆಯ ಮಿಸ್ಟರ್‍ ಎಂಕಣ್ಣ “ಒಂದು ವಿಶೇಷ ಲೇಖನ ಅಣಿ ಮಾಡಿರುವೆ” ಎಂದು ಸಂಭ್ರಮಿದಿಂದ ಬಂದ.

“ಚಿತ್ರರಂಗ ಕುರಿತ ಲೇಖನವಾ?” ಎಂದೆ.

“ನಾನು ಬಾಂಬ್ ಸ್ಫೋಟದ ಬಗ್ಗೆ ಚಿತ್ರರಂಗದ ಮಹಾನ್ ನಟ-ನಟಿಯರ ಅಭಿಪ್ರಾಯ ಸಂಗ್ರಹಿಸುವ ಬಗ್ಗೆ ಚಿಂತಿಸಿ ಎಲ್ಲರಿಗೂ ಫೋನಿಸಿದೆ. ಅವರು ಹೇಳಿದ ವಿಷಯಗಳು ಮಹತ್ವದೆನ್ನಿಸಿ ಲೇಖನ ಅಣಿ ಮಾಡಿದೆ”

“ಹೇಳು ಮಹರಾಯ, ಅದೇನು?” “ಡಾ. ರಾಜ್‌ಕುಮಾರ್‍ ಅವರಿಗೆ ಫೋನಿಸಿ ಬಾಂಬ್ ಸ್ಫೋಟದ ಬಗ್ಗೆ ಏನಂತೀರಿ ಅಂದೆ”

“ಭಕ್ತ ಅಂಬರೀಶ ಮಾಡ್ತೀದೀನಲ್ಲ. ಅದರ ಸುದ್ದಿ ಕರ್ನಾಟಕದಲ್ಲಿ ಬಾಂಬ್‌ನಂತೆ ಸ್ಫೋಟಿಸಿತು. ಬರಗೂರು ಗೌತಮ ಬುದ್ಧ ಮಾಡಿ ಅಂದ್ರು. ಯೋಚ್ನೆ ಮಾಡ್ತೀನಿ ಅಂದದ್ದೇ ತಡ ಆ ಸುದ್ದಿಯೂ ಭಾರಿಯಾಗಿ ಸ್ಪೋಟಿಸಿತು. ಈಗ ನಮ್ಮ ರಾಘು-ಪುನೀತ್ ಮೆಗಾ ಧಾರಾವಾಹಿಗಳು ಮಾಡ್ತಿದಾರೆ ಅನ್ನೋದೇ ಎಲ್ಲಾ ಕಡೆ ಡಂ-ಡಮಾರ್‍ ಅಂತ ಸುದ್ದಿ ಮಾಡ್ತಿವೆ” ಎಂದು ನಕ್ಕರು.

ವಿಷ್ಣುವರ್ಧನ್ ಅವರಿಗೆ ರಿಂಗಿಸಿ ಪ್ರಶ್ನಿಸಿದಾಗ “ಕುಮಾರಸ್ವಾಮಿಯವರು ಹೆಲಿಕಾಪ್ಟರ್‍ ಕಳಿಸ್ತೀನಿ ಅಂದ್ರೂ ‘ಸೂರ್ಯವಂಶ’ ರಜತೋತ್ಸವಕ್ಕೆ ಬರಲಿಲ್ಲ ಅನ್ನೋ ಬಾಂಬ್ ಸ್ಫೋಟ ನಂಗೆ ತುಂಬ ಬೇಸರವಾಯಿತು. ಪ್ರಶಸ್ತಿ ಒನ್‌ಬೈಟು ಮಾಡೋದು ಬೇಡ ಅಂದೆ. ಅದು ಅವರ ಪಾಲಿಗೆ ಬಾಂಬ್ ಸ್ಫೋಟ ಅನ್ನಿಸಿರಬಹುದು. ಅದಕ್ಕೆ ನಾನೇನು ಮಾಡಕ್ಕೆ ಆಗಲ್ಲ”

ಶಿವರಾಜ್‌ಕುಮಾರ್‍ ರಿಸೀವರ್‍ ಹಿಡಿದು ಹೇಳಿದರು “ಸುಂದರ್‌ನಾಥ್ ಸುವರ್ಣ ಮನೋಹರ್‍ ಬಗ್ಗೆ ಮಾಡಿದ ಆಕ್ಷೇಪಣೆಗಳು ಬಾಂಬ್ ಸ್ಫೋಟದಷ್ಟೆ ಆಘಾತಕಾರಿಯಾಗಿತ್ತು.

ಇಂದ್ರಧನುಷ್ ಗೆಲುವಿಗೆ ಅಥವಾ ಸೋಲಿಗೆ ನಾನಾ ಕಾರಣಗಳಿರುತ್ತೆ. ಆ ಸಮಸ್ಯೆಗಳಿಗೆ ಬಗೆಹರಿಸಿಕೊಳ್ಳಬೇಕಾದ್ದು ಆಹ್ಲಾದಕರ ವಾತಾವರಣದಲ್ಲಿ.

ಅನಂತ್‌ನಾಗ್-‘ಬಾಂಬ್’ ಎಂದು ನಗುತ್ತ ‘ಸಂಕೇತ್ ಸ್ಟುಡಿಯೋ ಮಾಡಿದ್ದೇ ತಪ್ಪು ಅನ್ನೋ ಹಾಗೆ ಬಾಂಬ್ ಸ್ಫೋಟಿಸಿದರಲ್ಲ ಪತ್ರಿಕೆಗಳಲ್ಲಿ, ಹಣ ಹಾಕಿದೋನು ನಾನು-ಸಾಲ ತೀರಿಸೋನು ನಾನು. ನನ್ನ ಕಷ್ಟ ಯಾರಿಗೆ ಗೊತ್ತಾಗುತ್ತೆ. ಅದಕ್ಕೆ ಕೇಳಿದೋರಿಗೆಲ್ಲ ಕಾಲ್‌ಷೀಟ್ ಕೊಡ್ತಿದೀನಿ. ಇಷ್ಟು ವರ್ಷದ ನನ್ ಅನುಭವದಲ್ಲಿ ‘ಆಂಧ್ರ ಹೆಂಡ್ತೀಲಿ’ ಅಭಿನಯಿಸಿದ ಅನುಭವ ಇದೆಯಲ್ಲ ಅದು ಆಟಂಬಾಂಬಲ್ಲ ಹಾಸ್ಯದ ಹೈಡ್ರೋಜನ್ ಬಾಂಬ್. ಇಂಥಾ ಬಾಂಬ್‌ಗಳಿಂದ ನೋಡೋರಿಗೆ ಸ್ವಲ್ಪ ಕಷ್ಟ ಆಗಬಹುದಷ್ಟೆ-ಹೆಣಗಳು ಬೀಳಲ್ಲ”

ರಮೇಶ್‌ಗೆ ಫೋನಿಸಿದಾಗ “ನನ್ನ ಅನುಪ್ರಭಾಕರ್‌ನ ಒಂದು ಸಾರಿ ಗಾಸಿಪ್ ಕಾಲಂಗೆ ತಂದ್‌ಬಿಟ್ರಲ್ಲ ಪೇಪರ್‌ನವರು ಅಂದು ನಂಗೆ ಅದು ಬಾಂಬ್ ಸ್ಫೋಟ ಅನ್ನಿಸಿತು. ನಾನು ಲೌ-ಡೌ ಗಿವ್ ಎಲ್ಲ ಲಾಕರ್‌ನಲ್ಲಿ ಲಾಕ್ ಮಾಡಿಟ್ ಬಿಟ್ಟಿದ್ದೀನಿ. ಕತೆ ಇದೆ ಅಂತ ಬಂದವರು – ಕಾಲ್‌ಷೀಟ್‌ಗೆ ಕೈ ಚಾಚಿ-ಪ್ರೊಡ್ಯೂಸರ್‌ನೂ ನೀವೇ ಹುಡುಕಿಕೊಡಿ ಅಂದಾಗ ಬಾಂಬ್ ಸ್ಫೋಟವಾದ ಹಾಗೆ ಆಗಿ ನಾನು ಮೂರ್ಛೆ ಹೋಗಿದ್ದೀನಿ. ಇನ್ನು ನಿಜವಾದ ಬಾಂಬ್ ಸ್ಫೋಟವಾದರೆ ಎಷ್ಟು ನೋವಾಗಬೇಡ-ಪ್ರಾಣ ಹಾನಿ ಅಂದ್ರೆ ಹುಡುಗಾಟನೆ-ದಟ್ಸ್ ನಾನ್‌ಸೆನ್ಸ್” ನಿರ್ದೇಶಕ ಕಂ ನಟ ಎಸ್. ನಾರಾಯಣ್‌ಗೆ ಫೋನಿಸಿದ ಮರುಘಳಿಗೆ “ವೀರಪ್ಪನಾಯ್ಕ ಕದ್ದ ಕತೆ ಅಂತ ರವಿಚಂದ್ರನ್ ಹೇಳಿದಾಗ ಬಾಂಬ್ ಬಿದ್ದಾಗ ಆಗುವಷ್ಟೇ ಹಿಂಸೆ ಆಯಿತು. ಅದೇ ಥರಾ ಬಾಂಬ್ ಸ್ಪೋಟವಾದ್ದು ವಿಷ್ಣುವರ್ಧನ್ ತಮಗೆ ಬಂದ ನಟನೆ ಪ್ರಶಸ್ತಿ ನಂಗೆ ಕೊಡು ಅಂತ ನನ್ನ ತಮ್ಮನ ಕೈಲಿ ಕೊಟ್ಟಾಗ, ಇಂತ ಬಾಂಬ್ ಸುದ್ದಿಗಳು ನಂಗೆ ಸಾಮಾನ್ಯ. ನಾನು ನಂಜುಂಡೀಗೆ ತಮಿಳು ರೀಮೇಕ್ ಕನ್ನಡದಲ್ಲಿ ಮಾಡ್ಕೊಡ್ತೀನಿ ಅಂದಾಗ ಧನರಾಜ್ ಪ್ರೆಸ್‌ಮೀಟ್ ಭಾರಿ ಬಾಂಬ್ ಅನ್ನಿಸ್ತು. ಎಲ್ಲಿ ಆ ಬಾಂಬ್ ‘ಠುಸ್’ ಅಂದು ಸಾ.ರಾ.ಗೋವಿಂದು ಕೈಗೆ ಹೋಯಿತಲ್ಲ ಚಿತ್ರ ಮಾಡೋ ಹಕ್ಕು” ಹಂಸಲೇಖಾಗೆ ಫೋನಿಸಿದೆ ನಂತರ, “ಅಸುರ ರೀಮೇಕ್ ಚಿತ್ರಕ್ಕೆ ಒರಿಜಿನಲ್ ಮ್ಯೂಸಿಕ್ ಟ್ರಾಕ್ ಇರಲಿ ಅಂತ ಸಂದೇಶ್ ನಾಗರಾಜ್ ಅಂದಾಗ ಬಾಂಬ್ ಸ್ಫೋಟ ಅಂದ್ರೆ ಇದೇ ಅನ್ನಿಸ್ತು. ಆ ಸದ್ದಿಗೆ ಈಚೆ ಬಂದೋನು ನಾನು. ಈಗಲೂ ಯಾರಾದ್ರೂ ಅಪ್ಪಿ-ತಪ್ಪಿ ‘ಸುಗ್ಗಿ’ ಅಂದ್ರೆ ಸಾಕು ಬಾಂಬ್ ಸ್ಫೋಟವಾಯಿತು ಅನ್ನಿಸತ್ತೆ ನಂಗೆ” ಉಪೇಂದ್ರರನ್ನೆ ಮರೆತರೆ ಹ್ಯಾಗೆ. “ದನರಾಜ್ ಎನ್.ಎಸ್. ಶಂಕರ್‍ ಬೇಡ ಕಾವೇರಿಗೆ ಅಂದಾಗ ತಲೆಮೇಲೆ ಬಾಂಬ್ ಬಿದ್ದ ಹಾಗಾಯಿತು. ‘ಒಕೇಮಾಟ’ ತಲಗು ಚಿತ್ರ ಫ್ಲಾಪ್ ಆದಾಗ್ಲೂ ರಾತ್ರಿ ಕನಸಲ್ಲೆಲ್ಲಾ ಬಾಂಬ್ ಬ್ಲಾಸ್ಟ್ ಆದ ಹಾಗೆ ಆಗೋದು. ಇಂಥ ಬಾಂಬ್ ಸುದ್ದಿಗಳೇ ಬೇಡ ಅಂತ ಹಾಲಿವುಡ್‌ಗೆ ಹಾರ್‍ತಿರೋದು ನಾನು” – ಅಂತ ಹೇಳಿದ್ದು ಕೇಳಿ ಅದನ್ನೆಲ್ಲಾ ಸೇರಿಸಿ ಈ ಲೇಖನ ಮಾಡಿರುವೆ ಎಂದ ಮಿ.ವೆಂಕಣ್ಣ.

“ಸರಿ ಮಿ. ವೆಂಕಣ್ಣ ನಿಜ ಹೇಳಿ ಇವರಿಗೆಲ್ಲ ಫೋನ್ ಮಾಡಿದ್ರಾ ಅವರೆಲ್ಲ ಈ ರೀತಿ ನಿಜವಾಗಲೂ ಉತ್ರ ಕೊಟ್ರಾ”

“ಹೌದು! ಎಲ್ಲಾ ಇದೇ ಸಾಲುಗಳನ್ನೇ ಹೇಳಿದರು ನನ್ನ ಕನಸಲ್ಲಿ” ಎಂದ.

ಆಗ ನನ್ನೆದುರು ಬಾಂಬ್ ಸ್ಫೋಟವಾದಂತಾಯಿತು.
*****
(೨೫-೦೭-೨೦೦೦)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.