‘ಏಕಾಂಗಿ ಕ್ರೇಜಿ ನೈಟ್’ ನಿಂದ ಬರುವಾಗ ನೆನಪಾದರು ಡಿ.ವಿ.ಜಿ.

ರವಿಚಂದ್ರನ್ ರಮ್ಯಕೃಷ್ಣ ಅವರೊಂದಿಗೆ ದಾವಣಗೆರೆಯಲ್ಲಿ ‘ಕ್ರೇಜಿ ನೈಟ್’ ಏರ್ಪಡಿಸಿದಂದು ಇಡೀ ದಾವಣಗೆರೆಯ ಎಲ್ಲಾ ರಸ್ತೆಗಳೂ ಆ ಸಭಾಂಗಣದತ್ತಲೇ.  ಅಂದು ಆ ಊರಿನಲ್ಲಿ ಯಾವುದೇ ಸಂಗೀತ, ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿಲ್ಲ.  ಜನತುಂಬಿ ತುಳುಕಿದ್ದರು.  ಆನಂತರದ ಸಂತೋಷಕೂಟದಲ್ಲಿ ಡಿ.ಸಿ.ಶಿವರಾಮ್, ಪ್ರಕಾಶ್ ರೈ, ಮಂಡ್ಯ ರಮೇಶ್, ಮುಂತಾದವರು ಬೇಂದ್ರೆ, ರಾಜರತ್ನಂ, ಬಿ.ಆರ್‍. ಲಕ್ಷ್ಮಣರಾವ್, ಟಿ.ಎನ್.ನರಸಿಂಹನ್ ಮುಂತಾದವರ ಹಾಡುಗಳನ್ನು ಹಾಡಿ ಪಾರ್ಟಿಗೆ ರಂಗೇರಲು ಕಾರಣರಾಗಿದ್ದರು.
ಅದೇ ಗುಂಗಿನಲ್ಲಿ ಬಸ್ ಏರಿದೆ….
ಗ್ಲಾಮರ್‍ ಜಗತ್ತಿನ ಸಿನಿಮಾ ಹಾಡುಗಳು ಜತೆ ಜತೆಯಲ್ಲೇ ಇತ್ತೀಚಿನ ಢಮ್ ಢಮಾರ್‍ ಎಂಬ ಸದ್ದು ಗದ್ದಲದ ಹಾಡುಗಳೂ-ರೀಮಿಕ್ಸ್ ಸರದಾರರ ಹಲವು ಸುಶ್ರಾವ್ಯ ಗೀತೆಗಳು ಹಾಗೂ ಚಿತ್ರಗೀತೆಯಾಗಿಯೂ ಹೆಸರಾದ ಹಲವು ಕನ್ನಡ ಗೀತೆಗಳೂ ನೆನಪಾದುವು….
ಆಗಲೆ ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗದ ಹಲವು ಸಾಲುಗಳು ಅಲೆ ಅಲೆಯಾಗಿ ತೇಲಿ ಬಂದವು.
ಆ ಸಾಲುಗಳು ತುಂಬ ಸಾಂಕೇತಿಕವಾಗಿ ಚಿತ್ರರಂಗ ಬಗೆಗೂ ಹೇಳುವಂತಿದ್ದವು ಎಂಬ ಕಾರಣಕ್ಕೆ ನೆನಪಾಗಿರಬೇಕು ಎಂದುಕೊಂಡೆ.
ಇಂದೆದ್ದ ತೆರೆ ನಾಳೆ ಬೀಳುವುದು;  ಮರವಾಗಲು|
ಮುಂದೆ ತಾನೇಳುವುದು ಬೇರೆ ಗಾತ್ರದಲಿ||
ಇಂದು ನಾಳೆಗಳನೆಲ್ಲವ ಕೂಡಿ ನೋಡಿದೊಡೆ
ಮುಂದಹದು ಬೆರಗೊಂದೆ-ಮಂಕುತಿಮ್ಮ||
ಗಾಂಧೀನಗರವೆಂಬ ಚಕ್ರವ್ಯೂಹ ಪ್ರವೇಶಿಸಿದವ ಜಾಕ್‌ಪಾಟ್ ಹೊಡೆಯಬಹುದು ಇಲ್ಲವೇ ಕೇರ್‍ ಆಫ್ ಫುಟ್‌ಪಾತ್ ಆಗಬಹುದು.  ಇಂದು ಬೀಳಬಹುದು ನಾಳೆ ಏಳಬಹುದು.  ಗಡಿಯಾರದ ಮುಳ್ಳು ಹಗಲು-ರಾತ್ರಿ ಯಾರಿಗೂ ಕಾಯುವುದಿಲ್ಲ.  ಮುಂದೊಂದು ದಿನ ಉಪೇಂದ್ರನಂಥ ಸ್ಟಾರ್‍ ಸೂಪರ್‌ಸ್ಟಾರ್‍ ಆಗಿ ಬೆರಗು ಮೂಡಿಸಬಹುದು.  ಯಾವ ಚಿತ್ರವು ಹಿಟ್ ಆದೀತು, ಯಾವುದು ಫ್ಲಾಪ್ ಆದೀತು ಎಂಬ ಭವಿಷ್ಯ ಯಾರು ತಾನೇ ಕರಾರುವಾಕ್ಕಾಗಿ ಹೇಳಬಲ್ಲರು?  ಸಿನಿಮಾ ರೇಸಿನಲ್ಲಿ ಯಾರು ಗೆಲ್ಲಬಲ್ಲರು?  ಯಾರು ಸೋಲಬಲ್ಲರು.  ಚಿತ್ರರಂಗದ ಇತಿಹಾಸದ ಪುಟಗಳನ್ನು ತಿರುವಿನೋಡಿ.
ಅಪ್ಪಾಲೆ ತಿಪ್ಪಾಲೆ ತಿರುಗಿ ಬಿದ್ದವನೊಬ್ಬ|
ಸ್ವಪ್ನ ಲೋಕದಿ ತಿರೆಯ ಮರೆತಾತನೊಬ್ಬ ||
ತಪ್ಪು ಸರಿಗಳ ತೂಕವಳೆಯ ಕೂತವನೊಬ್ಬ|
ಬೆಪ್ಪನಾರ್‍ ಮೂವರಲಿ ಮಂಕುತಿಮ್ಮ||
ತೆರೆಯ ಮೇಲೆ ಚಿತ್ರ ತರಲು ನಿರ್ಮಾಪಕ ಹರಸಾಹಸ ಮಾಡಿರುತ್ತಾನೆ.  ಬಡ್ಡಿಕಟ್ಟಿ ಸುಸ್ತಾಗಿರುತ್ತಾನೆ.  ಚಿತ್ರ ನೋಡಿದ ವಿಮರ್ಶಕ ಸರಿ-ತಪ್ಪು ಪಟ್ಟಿ ಮಾಡುತ್ತ ಹೋಗುತ್ತಾನೆ.  ಹೀಗಿದ್ದರೆ ಗೆಲ್ಲುತ್ತಿತ್ತು-ಹಾಗಿದ್ದರೆ ಗೆಲ್ಲುತ್ತಿತ್ತು-ಇಂಥ ನಟಿಯಿದ್ದಿದ್ದರೆ ಚಿತ್ರ ಹಿಟ್ ಆಗುತ್ತಿತ್ತು ಎಂದು ಎಲ್ಲ ಹೇಳುತ್ತ ಹೋಗುತ್ತಾರೆ.  ವಾಸ್ತವವನ್ನು ಮರೆತು ಮತ್ತೊಂದು ಚಿತ್ರ ಮಾಡ ಹೋಗುತ್ತಾನೆ ಮಗದೊಬ್ಬ ಇಲ್ಲಿ ಜಾಣ ಯಾರು?  ಚಾಣಿಕ್ಯ ಯಾರು?  ಬೆಪ್ಪ ಯಾರು?  ಎಂಬುದೇ ಒಂದು ಯಕ್ಷ ಪ್ರಶ್ನೆಯಾಗುವುದಿಲ್ಲವೆ?
ಚಿತ್ರಜಗತ್ತು ಎಂಬುದೇ ಒಂದು ಪ್ರಶ್ನೆಗಳ ಸರಮಾಲೆ.  ಹಗಲು-ರಾತ್ರಿ ಇದ್ದಂತೆ ಬಿದ್ದವ ಏಳಲೇಬೇಕು.  ಅಹಂಕಾರದ ಅಮಲಿನಿಂದ ತಲೆ ತಿರುಗಿದವ ಬೀಳಲೇಬೇಕು.  ಗಾದೆಯೇ ಇಲ್ಲವೆ ‘ಅತ್ತೆಗೊಂದು ಕಾಲ ಸೊಸೆಗೊಂದು ಕಾಲ’.  ಯಾವಾಗಲೂ ಅಷ್ಟೆ ‘ಹೆತ್ತವರಿಗೆ ಹೆಗ್ಗಣ ಮುದ್ದು’ ಅದರಿಂದಲೇ ಹೊಸ ಹೊಸ ಟ್ರೆಂಡ್ ಹುಡುಕುತ್ತಲೇ ಇರುತ್ತಾರೆ ಎಲ್ಲ ರೀಮೇಕ್ ಕೈಕೊಟ್ಟಾಗ ಸ್ವಮೇಕ್ ಎನ್ನುವುದು, ಸ್ವಮೇಕ್ ಸೋತಾಗ ರೀಮೇಕ್‌ಗೆ ಎಗರಿ ಬದುಕಿನ ಅನಿವಾರ್ಯತೆ ಕುರಿತು ಪಾಠ ಮಾಡುವುದು ಕಂಡೇ ಇದ್ದೇವಲ್ಲವೆ ಅಂದು ಕೊಂಡಾಗ ಮಂಕುತಿಮ್ಮ ಕಗ್ಗದ ಈ ಸಾಲು ನೆನಪಾಯಿತು.
ಅಡಿ ಜಾರಿ ಬೀಳುವುದು, ತಡವಿಕೊಂಡೇಳುವುದು|
ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು||
ದುಡುಕಿ ಮಲೆಪ್ಪವುದು ತಪ್ಪನೊಪ್ಪೆನ್ನುವುದು|
ಬದುಕೆಂಬುದಿಯ ತಾನೆ? ಮಂಕುತಿಮ್ಮ||
ಕನ್ನಡ ಚಿತ್ರರಂಗ ಈಗ ನಿಜಕ್ಕೂ ತುಂಬ ಎತ್ತರೆತ್ತರಕ್ಕೆ ಬೆಳೆದಿದೆ.  ತಾಂತ್ರಿಕವಾಗಿ ಮಹತ್ತರ ಸಾಧನೆಗಳನ್ನು ಮಾಡಿದೆ.  ಅದನ್ನು ಬಳಸಿ ಸದಭಿರುಚಿಯ ತುಂಬ ಒಳ್ಳೆ ಚಿತ್ರ ಮಾಡುವ ಕನಸು ಹೊತ್ತ ನಿರ್ಮಾಪಕ-ನಿರ್ದೇಶಕರೂ ಇದ್ದಾರೆ-ತಾಂತ್ರಿಕ ಪ್ರಗತಿಯನ್ನು, ಮೂಢನಂಬಿಕೆ ಬಿತ್ತಲು ಬಳಸುವಂಥ ಮಂದಿಯೂ ಇದ್ದಾರೆ.  ಯಾವುದೇ ಮುಹೂರ್ತ ಸಮಾರಂಭದಂದು ಜಗತ್ತನ್ನು ಉದ್ಧಾರ ಮಾಡಲೆಂದೇ ಈ ಚಿತ್ರ ತೆರೆಗೀಯುತ್ತಿದ್ದೇವೆ ಎನ್ನುತ್ತಾರೆ ಹಲವರು.  ಇಂದಿನ ಪ್ರಚಾರಯುಗದಲ್ಲಿ ಜಾಹಿರಾತು ಏನನ್ನಾದರೂ ಕೊಳ್ಳಬಹುದು ಎನ್ನುತ್ತಾರೆ.  ಮತ್ತೆ ಕೆಲವರು ಚಿತ್ರದಲ್ಲಿ ಕತೆ ಇರಲಿ ಬಿಡಲಿ, ಗಿಮಿಕ್ಕುಗಳಿಂದ ಗದ್ದಲದಿಂದಲೇ ಜನಮನ ಗೆಲ್ಲಬಹುದೆಂಬ ಅಂಶ ಬಲವಾಗಿ ಕೋಟಿ ಕೋಟಿ ಹಣ ಸುರಿಯುವವರೂ ಇದ್ದಾರೆ.  ಎಲ್ಲ ನಿರ್ಮಾಪಕರಿಗೂ ಹಾಕಿದ ಹಣ ಒಂದಕ್ಕೆ ಡಬ್ಬಲ್ ಆಗಿ ಬರಲೆಂಬ ಆಸೇ ಇರುತ್ತದೆಯೇ ಹೊರತು ಚಿತ್ರಕ್ಕೆ ಸುರಿದ ಹಣ-ಹೊಳೆಯಲ್ಲಿ ಹುಣಸೇಹಣ್ಣು ಕಿವುಚಿದಂತಾಗಲಿ ಎಂದು ಯಾರು ತಾನೆ ಆಶಿಸುತ್ತಾರೆ.  ವ್ಯಾಪಾರೀ ಚಿತ್ರವಿರಬಹುದು, ಕಲಾತ್ಮಕ ಚಿತ್ರವಿರಬಹುದು-ಬ್ರಿಡ್ಜ್ ಫಿಲಂ ಇರಬಹುದು ಎಲ್ಲರ ಕಣ್ಣೂ ಗಲ್ಲಾಪೆಟ್ಟಿಗೆಯತ್ತ ಇರುವುದು ಸತ್ಯ.  ಅದು ತಪ್ಪೂ ಅಲ್ಲ…. ಹಣ ಮಾಡುವ ಸಲುವಾಗಿ ಚಿತ್ರ ಎಂದು ಹೇಳಿದರೆ ಅದೊಂದು ರೀತಿ.
ಚಿತ್ರಜಗತ್ತನ್ನು ಉದ್ಧರಿಸಲು ಈ ಚಿತ್ರ ಎಂದಲ್ಲಿ ನಗೆ ಬಂದು ಈ ಸಾಲುಗಳು ನೆನಪಾಗುತ್ತದೆ.
ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ|
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ||
ಉದ್ಧರಿಸುವೆನು ಜಗವನ್ನೆನ್ನುತಿಹ ಸಖನೆ ನಿ-|
ನ್ನುದ್ಧಾರವೆಷ್ಟಾಯ್ತೋ?  ಮಂಕುತಿಮ್ಮ||
ಕನ್ನಡ ಚಿತ್ರರಸಿಕರೆ ಈ ಬರಹದ ಯಾವ್ಯಾವ ಸಾಲುಗಳು ಯಾರನ್ನು ಕುರಿತು ಹೇಳುತ್ತವೆ ಎಂದು ನಾನು ಹೇಳಬೇಕಿಲ್ಲ.  ನೀವು ಚಿತ್ರರಂಗದ ಎಲ್ಲ ಅಂಶ ಬಲ್ಲವರು.  ಅದರಿಂದಾಗಿ ನೀವೆ ಯೋಚಿಸಿ ನೋಡಿ.  ಇವೆಷ್ಟು ಸತ್ಯ ಅಸತ್ಯ ಎಂದು.  ಅದರಿಂದ ಈ ಬಾರಿ ಇಷ್ಟು ಸಾಕು.
*****
(೧-೧೧-೨೦೦೧)