ದಿನೇಶ್‌ಬಾಬು ಮತ್ತು ‘ಅವರು’

ಪ್ರಿಯ ಅವರೆ,

‘ಪಾಂಚಾಲಿ’ ನಿರ್ದೇಶಿಸುತ್ತಿರುವ ದಿನೇಶ್‌ಬಾಬು ಅವರ ಮಾನಸಿಕ’ ತುಮುಲವೇನಿರಬಹುದು ಈಗ ಎಂಬುದನ್ನು ನಾಟಕಕಾರನಾದ ನಾನು ತುಂಬ ಚೆನ್ನಾಗಿ ಬಲ್ಲೆ. ಕತೆಗೆ ಒಂದು ಸಣ್ಣ ಎಳೆ ಸಿಕ್ಕರೂ ಸಾಕು ಅದನ್ನೊಂದು ಸಿಲ್ಲಿಲಾಯಿಡ್ ಕಾವ್ಯ ಮಾಡಬಲ್ಲ ಎಲ್ಲ ಯೋಗ್ಯತೆ ದಿನೇಶ್‌ಬಾಬುಗಿದೆ. ‘ಪಾಂಚಾಲಿ’ ಷೂಟಿಂಗ್ ಶ್ರೀರಂಗಪಟ್ಟಣದಲ್ಲಾದಾಗ ತಾವೂ ಬಂದಿದ್ದಿರಿ ಆ ಕುರಿತ ‘ದಿನೇಶ್‌ಬಾಬು’ ವರದಿ ಓದಿದೆ.

ಅದೇಕೋ ಇದ್ದಕ್ಕಿದ್ದಂತೆ ನಿಮಗೆ ಕರುಣೆ ಉಕ್ಕಿ “ದಿನೇಶ್ ಬಾಬು ಅಂದು ಮಾತಾಡುವ ಮೂಡ್‌ನಲ್ಲಿರಲಿಲ್ಲ. ಆದರೂ ಕೆದಕುವ, ಕೆಣಕುವ ಪ್ರಶ್ನೆಗಳಿಗೆ ಕೊರತೆಯಿರಲಿಲ್ಲ. ಎದುರುಗಡೆ ಕಟೆಕಟೆಯಲ್ಲಿ ನಿಂತ ಆರೋಪಿಯಂತೆ ಪ್ರಶ್ನೆ ಕೇಳಿ ನೋಯಿಸುವುದೇ ಪೂರ್ಣಾವಧಿ ಉದ್ಯೋಗ ಮಾಡಿಕೊಂಡಿರುವವರಿಗೆ ಬುದ್ಧಿ ಹೇಳಿದರೂ ಅಷ್ಟೆ-ಬಿಟ್ಟರೂ ಅಷ್ಟೇ? ಎಂದಿದ್ದೀರಿ.

ಅಂದೂ ಹೆಚ್ಚು ಪ್ರಶ್ನೆ ಕೇಳಿದವನು ನಾನೇ. ಅದರಿಂದ ನನಗನ್ನಿಸಿದ್ದನ್ನೂ ಹೇಳಿಬಿಡುತ್ತೇನೆ. ಸ್ವಾಮೀಜಿ ಅವರೆ, ನೀವು ಉದುರಿಸಿದ ಮುಕ್ತಾಫಲಗಳನ್ನು ನೀವೇ ಏಕಾಂತದಲ್ಲಿ ಕುಳಿತು ಓದಿ ಸ್ವವಿಮರ್ಶೆ ಮಾಡಿಕೊಳ್ಳಿ. ಪ್ರೆಸ್‌ಮೀಟನ್ನು ಕಟೆಕಟೆ ಮಾಡಿರುವವರು ತಾವು. ಒಬ್ಬ ಸಮರ್ಥ ನಿರ್ದೇಶಕನನ್ನು ಆರೋಪಿ ಎಂದು ಹೇಳಿರುವವರು ತಾವು. ಒಂದು ಪತ್ರಿಕೆಯಲ್ಲಿ ಪೂರ್ಣಾವಧಿ ಉದ್ಯೋಗ ಇರುವುದು ತಮಗೆ. ನನಗೆ ಪ್ರಶ್ನೆ ಕೇಳುವುದೊಂದೇ ಉದ್ಯೋಗವಲ್ಲ. ನಾಟಕ ರಚನೆ ಇದೆ, ಬೀದಿ ನಾಟಕ ಮಾಡುವುದಿದೆ. ಅಭಿನಯ ತರಂಗ ನಾಟಕಶಾಲೆ ಇದೆ. ಬಿಂಬ ಮಕ್ಕಳ ಶಾಲೆ ಇದೆ. ಕಲಾವಿದರನ್ನು ರೂಪಿಸುವ ಹೊಣೆ ಇದೆ. ಮೂಕರಂತಿರುವ ಶ್ರೀಸಾಮಾನ್ಯರ ದನಿಯಾಗಿ ಪ್ರತಿನಿಧಿಸಿ ಪ್ರಶ್ನಿಸುವುದನ್ನು ಆಕಾಶವಾಣಿ ಈರಣ್ಣನಾಗಿ ಕಲಿತಿದ್ದೇನೆ. ‘ಒಂದು ಮಾತ’ಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಎ.ಐ.ಆರ್‍.ನಲ್ಲಿ ಬಿತ್ತರಿಸಿದ್ದೇನೆ. ಇಡೀ ಕರ್ನಾಟಕ ಸುತ್ತಿ ಬೀದಿ ನಾಟಕಗಳಾಡಿ ಶೋಷಣೆಗೊಳಗಾದ ಮಂದಿ ಪ್ರಶ್ನಿಸುವುದನ್ನು ಕಲಿಯದಿದ್ದರೆ ನಿಮಗೆ ಉಳಿಗಾಲವಿಲ್ಲ ಎಂದು ಇಂದೂ ಸಾರಿ ಸಾರಿ ಹೇಳುತ್ತಿದ್ದೇನೆ.

ಡಿ.ವಿ,ಜಿ., ಅ.ನ.ಕೃ, ತ.ರಾ.ಸು, ವೀರಕೇಸರಿ ಸೀತಾರಾಮಶಾಸ್ತ್ರೀ, ದೇವುಡು, ಟಿ.ಟಿ. ಶರ್ಮ, ಜಿ.ಪಿ.ರಾಜರತ್ನಂ, ಶ್ರೀರಂಗ, ಪರ್ವತವಾಣಿ, ಅಡಿಗರೆ, ಕೆ.ಎಸ್.ನ., ವಿ.ಸೀ., ಎಸ್.ಎಸ್.ಜಿ., ವೈಯನ್ಕೆ, ಲಂಕೇಶ್, ಕಾರ್ನಾಡ್, ಕಂಬಾರ, ನಿಟ್ಟೂರು ಮುಂತಾದ ಸಾಹಿತಿ ದಿಗ್ಗಜರ ಹಾಗೂ ಹೊಸ ಪೀಳಿಗೆಯ ಸಾಹಿತ್ಯ ಮಿತ್ರರ ಒಡನಾಟವೇ ಇಂದಿಗೂ ನನ್ನಲ್ಲಿ ಹುಮ್ಮಸ್ಸು ತುಂಬಿರಲು ಕಾರಣ.

ಈಗ ನಾನು ನಿಮ್ಮಿಂದ ಬುದ್ಧಿ ಹೇಳಿಸಿಕೊಳ್ಳುವ ಅವಶ್ಯಕತೆಯಿಲ್ಲ. ಜೀವನದಲ್ಲೊಂದು ಗುರಿ ಇರಬೇಕು. ಮಾಡುವ ಕೆಲಸದಲ್ಲಿ ನಿಷ್ಠೆ ಇರಬೇಕು ಎಂಬ ಆದರ್ಶ ನಾನು ಉದ್ದಕ್ಕೂ ಪಾಲಿಸಿಕೊಂಡು ಬಂದಿದ್ದೇನೆ.

ಹಾಗೆಂದ ಮಾತ್ರಕ್ಕೆ ನಾನು ಬೇರೆ ಪತ್ರಿಕೆಗಳಿಗೆ ಬರೆದಿಲ್ಲ ಎಂದು ಹೇಳುತ್ತಿಲ್ಲ. ಬೇರೆಯವರು ಕೇಳಿದಾಗ ನನ್ನ ಹೆಸರಿನಲ್ಲಿ ಬರೆದಿದ್ದೇನೆಯೇ ಹೊರತು ಹಣದ ಸಲುವಾಗಿ ಬುರ್ಖಾ ಹಾಕಿಕೊಂಡು ಬೇರೆ ಪತ್ರಿಕೆಗಳಲ್ಲಿ ಬರೆಯುವ ತಂಟೆಗೆ ಹೋಗಿಲ್ಲ. ಹಾಗೆ ಬರೆದಾಗಲೂ ಖಚಿತವಾದ ನನ್ನ ಅಭಿಪ್ರಾಯಗಳನ್ನು ಬರೆಯುತ್ತೇನೆಯೇ ಹೊರತು ಟೀಕೆಗೊಂದು ಪತ್ರಿಕೆ, ಲೈಂಗಿಕ ಅವಯವಗಳ ವರ್ಣನೆಗೆ ಒಂದು ಪತ್ರಿಕೆ, ಹೊಗಳುವಾಗ ಒಂದು ಮಾಸ ಪತ್ರಿಕೆ, ಗೇಲಿ ಮಾಡಲು ಒಂದ ವಾರ ಪತ್ರಿಕೆ, ಚುಚ್ಚಿ ಬೆಚ್ಚಿಸಲು ಮತ್ತೊಂದು ಪತ್ರಿಕೆ ಎಂದು ನಾನೆಂದೂ ಡಬ್ಬಲ್ ಸ್ಟಾಂಡರ್ಡ್ ತೋರುವ ಕೆಲಸ ಮಾಡಿಲ್ಲ.

ಅಯ್ಯಾ ಗೆಳೆಯ,

ನಾನಿರುವುದೂ ಗಾಜಿನ ಮೆನೆಯಲ್ಲಿ ಎಂಬುದನ್ನು ಮರೆತು ತಾವು ಕಲ್ಲು ತೂರಹೊರಟರೆ ಹೇಗೆ?

‘ಲೇಖನಿಯ ಅಹಮಿಕೆ-ಕುಡಿತದ ಅಮಲಿಗಿಂತ ಅಪಾಯಕರ’ ಎಂಬುದು ಹಿರಿಯರು ಹೇಳಿರುವ ಮಾತು, ನೆನೆಪಿಸಿದೆನೇ ಹೊರತು ಡಿಕ್ಟೇಟರ್‌ನಂತೆ ಆಜ್ಞಾಪಿಸಲು ‘ಫತ್ವಾ’ಹೊರಡಿಸಲು ಹೊರಟಿಲ್ಲ. ನಾನು ಸಾಕಷ್ಟು ಸಾಹಿತ್ಯ ವಿಚಾರ ಸಂಕಿರಣಗಳನ್ನು ಕಂಡವನು. ಅಲ್ಲಿನ ಮಾತಿನ ಚಕಮಕಿಯನ್ನು, ಕಟಕಿಗಳನ್ನು ಕಂಡು ಬಹಳಷ್ಟು ಕಲಿತವನು.

ಅಂಥ ಪ್ರಸಂಗಗಳು ಬಂದಾಗ ಒಬ್ಬರ ಮೇಲೊಬ್ಬರು ಕತೆ, ಕವನ, ಕಾದಂಬರಿಗಳನ್ನು ಬರೆದ ಇತಿಹಾಸವೇ ನಮ್ಮೆದುರು ಇದೆ. ಆದರೂ ಇನ್ನೂ ಸಾಹಿತ್ಯ ವಲಯದಲ್ಲಿ ಪಂಥಗಳು ಬೇರೆ ಬೇರೆಯಾದರೂ ‘ಮೈತ್ರಿ’ ಇನ್ನೂ ಉಳಿದಿದೆ.

ಇನ್ನು ಚಿತ್ರರಂಗಕ್ಕೆ ಬಂದರೆ ಲಟಾಪಟಿಯಾಗಬಹುದಾದಂತಹ ಹಾಡುಗಳು ಬಂದಿಲ್ಲವೆ? ಸಾಹಿತ್ಯದ ಸಾಲುಗಳಲ್ಲಿ ಖಾರ ಕಕ್ಕಿಲ್ಲವೆ? ಒಂದು ಚಿತ್ರಕ್ಕೆ ಉತ್ತರವಾಗಿ ಮತ್ತೊಂದು ಚಿತ್ರ ಬಂದಿಲ್ಲವೆ? ಅದೇ ಕಾರಣವಾಗಿ ಹೊಡೆದಾಟ-ಬಡಿದಾಟಗಳಾಗಿಲ್ಲವೆ? ಉಸಿರಾಡುವುದೇ ಕಷ್ಟವೆನಿಸಿದಾಗ ಜೀವಭಯವೆಂದು ಬಹುಮಂದಿ ಕನ್ನಡನಾಡನ್ನೇ ಬಿಟ್ಟು ಆಚೆ ಹೋಗಿರಲಿಲ್ಲವೆ? ಚಲನಚಿತ್ರ ಚರಿತ್ರೆ ಬಲ್ಲ ನಿಮಗೆ ಇವೆಲ್ಲ ಗೊತ್ತು.

‘ಗೊಂದಲಕ್ಕೊಳಗಾಗಿದ್ದ ದಿನೇಶ್‌ಬಾಬು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ’ ಎಂದಿದ್ದೀರಿ. ಒಮ್ಮೆ ನೀವೇ ಅವರನ್ನು ಮೆಲಯಾಳಿ ಮಾಂತ್ರಿಕನೆಂದು ಗೇಲಿಮಾಡಿ ಬರೆದದ್ದನ್ನು ಓದಿರುವವನು ನಾನು. ದಿನೇಶ್‌ಬಾಬು ಮಾಡಿದ್ದೊಂದು ಘನಂದಾರಿ ಕಾರ್ಯವೆಂಬಂತೆ ‘ತಿವಿಯುವ ಪ್ರಶ್ನೆಗಳಿಗೆ ಉತ್ತರಿಸಿದರೂ ಪದೇ ಪದೇ ತಿವಿತಕ್ಕೊಳಗಾದ ಅವರು ಕೇಳಿಯೇಬಿಟ್ಟರು’ ಸಿದ್ಧತೆ ಮಾಡಿಕೊಂಡು ಬಂದಹಾಗಿದೆಯಲ್ಲ’

‘ಈ ಕಾಮೆಂಟ್ ಕೆಲವರಿಗೆ ಇರಿಸು ಮುರಿಸುವುಂಟು ಮಾಡಿರಬಹುದು. ಆದರೆ ಇದು ಅನಿವಾರ್ಯ’ ಎಂದು ಫುಲ್‌ಸ್ಟಾಪ್ ಇಟ್ಟಿದ್ದೀರಿ.

‘ದಿನೇಶ್‌ ಬಾಬೂನ ಪ್ರಶ್ನೆ ಕೇಳಲಿಕ್ಕೆ ಪ್ರೆಸ್‌ಮೀಟ್‌ಗೆ ಸಿದ್ಧತೆ ಮಾಡಿಕೊಂಡು ಬರಬೇಕೆ? ಅದನ್ನು ಎಂ.ಎ ಪರೀಕ್ಷೆ, ಐ.ಎ.ಎಸ್. ಎಕ್ಸಾಮ್ ಎಂದು ತಾವು ತಿಳಿದುಕೊಂಡಿದ್ದೀರೇನೋ ಎಂದು ನನಗೀಗ ಗುಮಾನಿ ಬಂದು, ಪಿ.ಕಾಳಿಂಗರಾಯರ ‘ನಗೆಯು ಬರುತಿದೆ’ ಹಾಡು ನೆನಪಾಗುತ್ತಿದೆ.

ಮಿಸ್ಟರ್‍ ಅವರೆ, ನಿಮ್ಮ ಬರವಣಿಗೆ ನೀವೇ ಮತ್ತೊಮ್ಮೆ ಓದಿ ನೋಡಿ. ಯಾವ ಹಂತಕ್ಕೆ ತಲುಪಿದೆ ಚಿತ್ರ? ಯಾರ್‍ಯಾರು ಸ್ನಾನ ಮಾಡುವುದನ್ನು ನೋಡಿದಿರಿ? ಶೆಣೈ ನಿರ್ದೇಶಿಸುತ್ತಿರುವ ‘ಚಾಂದಿನಿ’ ಚಿತ್ರದಲ್ಲಿ ನಿಮ್ಮ ಪಾತ್ರವೇನು? ಎಂದು ಕೇಳಿದಂತೆ ‘ಪೋಲೀಸ್ ಡಾಗ್’ ಚಿತ್ರೀಕರಣದಲ್ಲಿ ಡೇವಿಡ್ ಅವರನ್ನು ಸುಪಾರಿ ರೆಫರನ್ಸ್ ಪ್ರಶ್ನೆ, ಬುದ್ಧನೆಂದರೆ ಗೌತಮಬುದ್ಧನೇ ಎಂದು ಪ್ರಶ್ನಿಸಿದ ನನ್ನ ಪ್ರಶ್ನೆಗಳನ್ನೇ ತಾವು ಉದ್ಧರಿಸಿದ್ದೀರಿ ಎಂಬುದು ಮನವರಿಕೆ ಆಯಿತು.

ನಾನೊಬ್ಬನೇ ನಮ್ಮ ಪತ್ರಿಕೆಗೆ ನಾಲ್ಕು ಪುಟ ವಾರ ವಾರ ಬರೆಯುವವನು ಎಂಬುದು ನಿಮಗೆ ನೆನಪಿರಲಿ. ಹೆಚ್ಚಿಗೆ ಹಣ ಕಮಾಯಿಸುವ ದೃಷ್ಟಿಯಿಂದ ಗುಟ್ಟಾಗುಟ್ಟಾಗಿ ನಾನೂ ಬೇರೆ ಯಾವ ಪತ್ರಿಕೆಗಳಿಗೂ ಮ್ಯಾನೇಜ್‌ಮೆಂಟ್‌ನ ಯಾಮಾರಿಸಿ ಬರೆಯುತ್ತಿಲ್ಲ ಎಂಬುದು ತಮಗೂ ತಿಳಿದದ್ದೆ. ‘ಸ್ವಯಂ ಶಿಸ್ತು ಅತ್ಯುತ್ತಮ ನೀತಿ ಸಂಹಿತೆ’ ಎಂದು ನಂಬಿರುವವನು ನಾನು, ಆ ಧೈರ್ಯವಿದ್ದದ್ದಕ್ಕೆ ಅಂದು ದಿನೇಶ್‌ಬಾಬು ಬಳಿ ಮಾತಾಡಿ ನನ್ನ ಫೀಲಿಂಗ್ಸ್ ಹೇಳಿ ‘ಅದರ ಕಾಮೆಂಟ್ ಅಪ್ರಸ್ತುತ’ ಎಂದಾಗ ಅವರು ನೊಂದು ‘ಸಾರಿ’ ಹೇಳಿದರು. ಮುಗಿಯಿತು ಅಂದೇ ಅಲ್ಲೇ ಆ ಪ್ರಸಂಗ, ಬಿರುಕು ಕಂದರವಾಗಬಾರದೆಂದು ಇಷ್ಟು ಬರೆದಿರುವೆ.
*****
(೧೪-೧೨-೨೦೦೧)