ಪ್ರಾಣಿಗಳು

ಊರಿನ ತುಂಬ ಉಸಿರಿಸೀಳುವ ಧೂಳು ತುಂಬಿಕೊಂಡು; ಆ ಧೂಳೇ ಅವರ ಗೆಳೆಯನಂತಾಗಿ ಇಡೀ ಊರು ಕೇರಿ ಅಸಾಧ್ಯ ಕಸ, ಕಮಟು ವಾಸನೆ, ಚಿಂದಿಚೂರುಗಳಿಂದ ಅಲಂಕಾರವಾಗಿ ಬಿಟ್ಟಿತ್ತು. ಅಲ್ಲಿನ ಜನ ಕುಂತರೆ ನಿಂತರೆ ಸವಕಲು ಮಾತುಕತೆ ಘಟನೆಗಳಿಗೆ ತರ್ಕ ಕುತರ್ಕಗಳ ಚೌಕಟ್ಟು ಹಾಕಿ ಕೊಳೆತ ಹಲ್ಲು, ಮೂಗುಗಳಿಂದ ಕೆಟ್ಟದಾಗಿ ನೆಗಾಡಿಕೊಳ್ಳುತ್ತಿದ್ದರು. ಅವರು ದುಃಖಿಸಲು ಸುಖಿಸಲು ಹಾಡಲು ಯೋಚಿಸಲು ಬೇಕಾದಷ್ಟು ಸಮಸ್ಯೆಗಳಿರುತ್ತಿದ್ದವು. ಆದರೆ ಯಾರೂ ಅಂತಹದ್ದಕ್ಕೆ ಹೆಚ್ಚು ಗಮನ ಕೊಡುತ್ತಿರಲಿಲ್ಲ. ಅಲ್ಲಿ, ಊರಲ್ಲಿ ಭಯಂಕರ ಸಾವುಗಳಿದ್ದವು. ಸತ್ತವರ ದುಃಖಗಳು ಜಗತ್ತನ್ನು ಸುಡಬಲ್ಲಂತಾಗಿದ್ದವು. ಹಸುಳೆಗಳ ಎಳೆ ಕನಸುಗಳ ಹಿಚುಕುವ ಕ್ರೂರತೆಗಳಿದ್ದವು. ಬೆನ್ನು ಮೂಳೆಯ ಸವೆಸುವ ಕುಯುಕ್ತಿಗಳಿದ್ದವು. ಮನುಷ್ಯನ ಎಲ್ಲ ನೀಚತನಗಳನ್ನು ಧ್ವಂಸಮಾಡಬಹುದಾದವೆಲ್ಲ ಚೈತನ್ಯವೂ ಅಲ್ಲಿ ಅವರಲ್ಲಿ ಎಲ್ಲವೂ ಇತ್ತು. ಇದ್ದರೂ ಅವೆಲ್ಲ ಉಪಯೋಗಕ್ಕೆ ಬರುತ್ತಿರಲಿಲ್ಲ, ಯಾವುದಕ್ಕೆ ದುಃಖಿಸಬೇಕೋ ಅದಕ್ಕೆ ನಗುತ್ತಿದ್ದರು, ಯಾವುದಕ್ಕೆ ನಗಬೇಕೋ ಅದಕ್ಕೆ ವ್ಯಗ್ರರಾಗುತ್ತಿದ್ದರು. ಮನುಷ್ಯ ತನ್ನ ದುಃಖಕ್ಕೆ ಸೋಲಿಗೆ ಕಾರಣ ಕಂಡುಕೊಳ್ಳದೇ ಹೋದಾಗ ಏನೆಲ್ಲ ಆಗಬಹುದೋ ಅಂತಹದೆಲ್ಲ ಸರಾಗವಾಗಿ ಊರಲ್ಲಿ ಜರುಗುತ್ತಿತ್ತು.

ಇಂಥ ವೇಳೆಯಲ್ಲಿ ನಾಯಿತಲೆ ಕಾಳಣ್ಣ ರೇಗಿ ಹೋಗಿ `ಈ ಕಲ್ಲಿಪಿಲ್ಲಿ ಹೈಕ್ಳು ತಾವೂ ಮಾನ್ವಾಗಿರ್ದೆ, ನಮ್ನೂ ಬೀದಿರಂಗುಕ್ ತಂದು ಕೋಡಂಗಿ ಮಾಡ್ಬುಡ್ತವೆ ಬಡ್ಡೆತ್ತವು’ ಎಂದು ಬೇಸರದ ಮಾತುಗಳಿಗೆಲ್ಲ ಅವನದೇ ರಂಗು ನೆಲೆಯ ತಾತ್ವಿಕತೆಯನ್ನು ಕೊಡುತ್ತ ಎದುರು ಕುಳಿತ ಮುದುಕರಿಂದ `ಸೈ’ ಎನ್ನಿಸಿಕೊಳ್ಳುತ್ತಿದ್ದ. ಊರಿನ ಗುಂಡೇಗೌಡರು ಸೈಕಲ್ ಮೇಲಿಂದ ಬಿದ್ದು ಫಜೀತಿಯಾದುದರ ಬಗ್ಗೆ ಕೇರಿಯ ಆ ಜನರೆಲ್ಲ ಆಗಾಧವಾಗಿ ಚರ್ಚಿಸುತ್ತಿದ್ದರು. ಸಮಸ್ಯೆಗೆ ಕಾರಣವೆಂದು ತಿಳಿದ ಹುಡುಗರು ಈಗ ಎದುರಿಗೆ ಬಂದರೆ ತಿಕದ ಮೇಲೆ ಸಮಾ ನಾಲ್ಕು ಬಾರಿಸಬೇಕೆಂದು ಕೆಲವರು ಕಾದರು. ಗುಂಡೇಗೌಡರು ಆ ಮುಂಜಾವದಲ್ಲೇ ಸೈಕಲ್ ಬೆಂಡ್ ತೆಗೆಸಿ, ತೆಂಗಿನೆಣ್ಣೆಯಲ್ಲಿ ಹೊಳಪುಗೊಳಿಸಿ ಥಳಥಳ ಮಿನಿಗುವ ರಿಮ್ ಮತ್ತು ಕಡ್ಡಿಗಳಲ್ಲಿ ಸುಖವಾಗಿ ತುಳಿಯುತ್ತಾ ಬರುವಾಗ ಆಗ ಬಾರದ್ದೆಲ್ಲ ಆಗಿಹೋಗಿತ್ತು. ಹಾಗೆ ಸೈಕಲ್ ಮೇಲೆ ಬರುವಾಗ ಆ ಹಡೆಬೀ ಹೆಂಗಸರು ಥೇಟ್ ಬೆದೆ ಎಮ್ಮೆಯ ಹಾಗೆ ಕಾಣಿಸಿಕೊಳ್ಳಬಾರದಿತ್ತೆಂದು ಶಪಿಸಿಕೊಂಡರು. ಈ ವಿಷಯದಲ್ಲಿ ಯಾರಿಗೆ ಶಿಕ್ಷೆ ವಿಧಿಸುವುದೆಂದು ಗೊಂದಲಗೊಂಡರು. ಆ ಮೊಂಡು ಅಗಸನಿಗೆ ಹೇಳಿ ಹೇಳಿ ಗೌಡರಿಗೆ ಸಾಕಾಗಿತ್ತು. ನಿನ್ನ ಕತ್ತೆಗಳನ್ನು ಕಟ್ಟಿಕೊಂಡು ಸಾಕು ಎಂದು ಹೇಳಿದ್ದಾಗ, “ಅದೆಂಗಾದ್ದು ಗೌಡ್ರೆ. ಕತ್ತೆಗಳ ಗೂಟುಕ್ ಕಟ್ಟಿ ಸಾಕೂಕೆ ಅದೇನು ಎತ್ತೊ ಎಮ್ಮೆಯೋ, ಆಯ್ಕನ್‌ಪಾಯ್ಕಂಡು ಏನಾರ ತಿಂದ್ ಬಿದ್ಕುವಾ ಕಟ್ಟಾಕುದ್ರೆ ಆದದೆ.” ಎಂದು ಬಿಟ್ಟಿದ್ದ. ಆದರೆ ಗೌಡರಿಗೆ ಈಗ ಮಾತ್ರ ಅಗಸನ ಬಗೆಗೂ ಅವನ ಕತ್ತೆಗಳ ಬಗೆಗೂ ಅಸಾಧ್ಯ ಸಿಟ್ಟು ಏರಿತ್ತು.

ಜನ ಸಾಂಗವಾಗಿ ಆಕಳಿಕೆ ಮೈಮುರಿಕೆಗಳಿಂದಲೂ, ಜೊಂಪು ಮೈಮನಗಳಿಂದಲೂ ಏನೇನೋ ಮಾತನಾಡುತ್ತಾ ಸದ್ಯದ ಗೌಡರ ಫಜೀತಿಯ ಬಗ್ಗೆ ಗೋಷ್ಠಿಯೊಂದನ್ನು ಹಮ್ಮಿಕೊಂಡಿದ್ದರು.

ಗುಂಡೇಗೌಡರು ಇವತ್ತು ಹೊಲಗೇರಿಯ ಹುಡುಗರಿಂದಲೂ, ಅಗಸರ ಕತ್ತೆಗಳಿಂದಲೂ ಎಲ್ಲರ ಎದಿರೂ ತಿಪ್ಪೆಗಳ ಮೇಲೆ ಬಿದ್ದು ಅಪಮಾನಕ್ಕೀಡಾಗಿದ್ದರು. ಬಿದ್ದು ಮಂಡಿ ಮೊಳಕೈ ಪರಚಿಕೊಂಡು, ಪಿಲ್ಲೆ ಪಂಚೆಯೆಲ್ಲ, ಬೂದಿ, ತೊಪ್ಪೆ ಏಲು, ಕಸಗಳಿಂದಾಗಿ ಗಲೀಜಾಗಿಬಿಟ್ಟಿತ್ತು. ಬೇಸಿಗೆಯ ರಜವಾದ್ದರಿಂದ ಹೊಲಗೇರಿಯ ಸಣ್ಣ ಹುಡುಗರು ಎರಡು ಕತ್ತೆಗಳನ್ನು ಉಪಾಯದಿಂದ ಹಿಡಿದು ಅವುಗಳ ಸೊಂಟಕ್ಕೆ ಟಿನ್ನುಗಳ ತಗಟನ್ನು ಭದ್ರವಾಗಿ ಕಟ್ಟಿ, ಕಲ್ಲು ಜಲ್ಲಿಯ ರಸ್ತೆ ಮೇಲೆ ಬಿಟ್ಟು ಕೂಗಾಡಿ ಕಿರುಚಿದ್ದರು. ಅವರ ರಾಕ್ಷಸ ಕರ್ಕಶ ಶಬ್ದಕ್ಕೂ, ಸೊಂಟದಲ್ಲಿ ಗಂಟು ಬಿದ್ದು ಸಾವಿನ ಗಂಟೆಯಂತೆ ಶಬ್ದ ಸೃಷ್ಟಿಸಿದ ಟಿನ್ನುಗಳ ದೆಸೆಯಿಂದಲೂ, ಆ ಕತ್ತೆಗಳು ಸತ್ತಿವೋ ಕೆಟ್ಟಿವೋ ಎಂಬಂತೆ ಅಸಾಧ್ಯ ವೇಗದಲ್ಲಿ ಯಾವ ಅಥ್ಲೆಟನ್ನೂ ಮೀರಿಸುವಂತೆ ಓಡತೊಡಗಿದ್ದವು. ಕಾಕತಾಳೀಯ ಎಂಬಂತೆ ಆಗಲೇ ಎದುರಿಂದ ಬಡಕಲಾದ ಬಸ್ಸೊಂದು ವರ್ರೋ ಎನ್ನುತ್ತ ಬರುತ್ತಿತ್ತು. ಕತ್ತೆಗಳ ಓಟ ಕಂಡ ಡ್ರೈವರ್ ಬ್ರೇಕ್ ಹಾಕಿ ಇನ್ನೊಂದು ದೊಡ್ಡ ಹಾರನ್ ಮಾಡಿದ. ಕತ್ತೆಗಳು ದಿಕ್ಕು ತೋಚದೆ ಇದ್ದ ಅಡ್ಡದಾರಿಗೆ ತಕ್ಷಣವೇ ನುಗ್ಗಿದವು. ದುರಂತವೆಂದರೆ ಹಾಗೆ ಕತ್ತೆ ನುಗ್ಗಿದ್ದೇ ತಡ ಗೌಡರು ಕತ್ತೆಗಳಿಗೆ ಮುಖಾಮುಖಿಯಾಗಿ ಯಾವ ತಡೆಯೂ ಇಲ್ಲದೆ ಡಿಕ್ಕಿ ಹೊಡೆದು ಸ್ಥೂಲ ದೇಹವನ್ನು ಸೈಕಲ್‌ನಿಂದ ಜಂಪ್ ಮಾಡಿಸಿಬಿಟ್ಟಿದ್ದರು. ಜಂಪ್ ಮಾಡುವಾಗ ಪಕ್ಕ ಏನಿದೆಯೆಂದು ಯೋಚಿಸಿ ನಂತರ ಬೀಳೋಣ ಎಂಬ ದಡ್ಡತನಕ್ಕೆ ಗೌಡರು ಹೋಗಿರದೆ, ಏಕದಂ ಬಿದ್ದಿದ್ದರು. ಅಲ್ಲಿ ಸಾಲಾಗಿ ಹೊಲೆಯರ ತಿಪ್ಪೆಗಳು ಕುಳಿತಿದ್ದವು. ಆಯಾಯ ತಿಪ್ಪೆಗಳಲ್ಲಿ ಆಯಾಯ ಮನೆಯವರು, ಉಳಿದವರೂ ಬಂದು ಕಕ್ಕಸ್ಸು ಮಾಡುತ್ತಿದ್ದರು. ಕೋಳಿಗಳು ಅವನ್ನೆಲ್ಲ ಕೆರೆದು ತಿಪ್ಪೆಯ ತುಂಬ ಹರಡಿರುತ್ತಿದ್ದವು. ಗೌಡರು ಬಿದ್ದ ತಕ್ಷಣ ಮೇಲೆದ್ದು ಮೈ ಕೈ ಒರೆಸಿಕೊಂಡು ನಿಂತು ಸುತ್ತಮುತ್ತ ನೋಡಿದರು. ಹಾಳಾದ ಬೇವರ್ಸಿ ಹೊಲೆಯರು ಗೌಡರು ಈಗ ಬೀಳುತ್ತಾರೆ ಎಂದು ಕನಸು ಕಂಡಿದ್ದವರಂತೆ ಅಲ್ಲಿ ಬಂದು ನಿಂತದ್ದನ್ನು ಕಂಡು ಅಪಮಾನವಾಗಿ ರೋಸಿಹೋದರು. ಕತ್ತೆಗಳು ಎಲ್ಲೋ ಮಾಯವಾಗಿದ್ದವು. ಅಷ್ಟರಲ್ಲೇ ಯಾರೋ ಕತ್ತೆಗಳಿಗೆ ಡಿಕ್ಕಿ ಹೊಡೆದು ಬಿದ್ದರೆಂದು ಹುಡುಗರು ಓಡಿಬಂದು ನೋಡಿದರು. ಈ ಹುಡುಗರೇ ಇದಕ್ಕೆಲ್ಲ ಕಾರಣವೆಂದು `ಥೂ ಲುಚ್ಚಾ ನನ್ ಮಕ್ಕಳಾ, ನಿಮ್ಮೊದೀರ್ ತಿಕುಕ್ ಕಟ್ಟುರ್ಲಾ ಟಿನ್ನಾ’ ಎಂದು ಗೌಡರು ಕೂಗಾಡಿದರು. ಹುಡುಗರು ಮಾಯವಾದರು. ಸೈಕಲ್ ನಿಶ್ಪಾಪಿಯಂತೆ ಬಿದ್ದಿತ್ತು. ಹೊಲಗೇರಿಯವರು ಗೌಡರ ಈ ಬಣ್ಣದವೇಷ, ಅವತಾರ ಕಂಡು ನಕ್ಕುನಕ್ಕು ಸುಸ್ತಾಗಿ ಕೊನೆಗೆ ಹೆದರಿ ತೆಪ್ಪಗಾದರು. ಸೈಕಲ್ ಹತ್ತಿ `ಇರ್ಲಿ; ಸರಯಾಗ್ ಬುದ್ದಿ ಕಲಿಸ್ತೀನಿ’ ಎಂದು ಹೊರಟರು. ಯಾವುದೋ ಹುಂಜ ಕೋಳಿಯೊಂದನು ಮೆಟ್ಟಲು ಅಟ್ಟಿಸಿಕೊಂಡು ಅಡ್ಡ ಬಂತು. ತಕ್ಷಣ ಗೌಡರು ಬ್ರೇಕ್ ಹಾಕಿದರು. ಅಲ್ಲಿ ಬ್ರೇಕೇ ಇರಲಿಲ್ಲ. ಸೈಕಲ್ ರಿಪೇರಿ ಮಾಡಿದ್ದವನು ಗಡಿಬಿಡಿಯಲ್ಲಿ ಇದ್ದುದರಿಂದಲ್, ಅವನ ಎದುರೇ ಮಾವಿನ ಹಣ್ಣು ಮಾರುತ್ತ ಕುಳಿತಿದ್ದ ಭದ್ರಿಯ ಮೊಲೆಗಳ ಮತ್ತಲ್ಲಿ ಬ್ರೇಕನ್ನು ಸೈಕಲ್ಲಿಗೆ ಸರಿಯಾಗಿ ಜೋಡಿಸುವುದನ್ನೇ ಮರೆತಿದ್ದ. ಗೌಡರು ದಾರಿಯಲ್ಲಿ ಬರುವಾಗ ಈ ಹಿಂದೆ ಬ್ರೇಕ್ ಹಾಕುವ ಪ್ರಮೇಯವೇ ಬಂದಿರಲಿಲ್ಲ. ಕತ್ತೆಗಳಿಗೆ ಡಿಕ್ಕಿ ಹೊಡೆವ ಮುನ್ನ ಅವರು ಬ್ರೇಕ್ ಹಾಕಿದ್ದು ನಿಜ. ಆದರೆ, ಆ ಸಂದರ್ಭದಲ್ಲಿ ಬ್ರೇಕ್ ಕೈಕೊಟ್ಟಿದೆ ಎಂಬ ಅರಿವು ಬಂದಿರಲಿಲ್ಲ. ಈಗ ಸತ್ಯದ ಅರಿವಾದಂತೆ ಬೆಚ್ಚಿದರು. ದಾರಿಯ ಉದ್ದಕ್ಕೂ ಜನರು ಗೌಡರು ಈ ಬಗೆಗೆ ವಿವರ ಕೇಳಿ ಕೇಳಿ ಅವರು ಹೇಳಿ ಹೇಳಿ ಬೇಸರ, ಸಿಟ್ಟು, ಅಪಮಾನಗಳು ಹಿಂಡಾಗಿ ಅವರ ಸುಲಿದು ಇದೆಲ್ಲ ಹೀಗಾಗಲು ಒಬ್ಬ ಇಬ್ಬರಲ್ಲ ಕಾರಣ. ಇಡಿಯಾಗಿ ಊರೇ ತನ್ನ ಈ ಸ್ಥಿತಿಗೆ ಜವಾಬ್ದಾರವಾಗಿದೆ ಎಂದುಕೊಂಡು ಮನೆಗೆ ಬಂದರು!

ಈ ಹಾಳು ಕತ್ತೆಗಳು, ಹುಡುಗರೋ, ಬೈಸಿಕಲ್ ಬ್ರೇಕೋ, ಇಲ್ಲವೇ ರಿಪೇರಿ ಮಾಡಿದವನೋ ಅಥವಾ ಭದ್ರಿಯ ಮೊಲೆಗಳೋ, ಗೌಡರ ತಲೆಯಲ್ಲೂ ನಲಿದ ಆ ಹಡಬೇ ಬೆದೆ ಎಮ್ಮೆ ಹೆಂಗಸರೋ, ಆ ಫಜೀತಿಗೆ ನಕ್ಕು ಸುಸ್ತಾದ ಹೊಲಗೇರಿಯ ನಗೆಗಳೋ, ಮನುಷ್ಯನ ಕ್ಷುದ್ರತೆಗಳೋ – ಒಟ್ಟಿನಲ್ಲಿ ಯಾವುದೂ ಗೊತ್ತಾಗದಂತೆ ಇವಿಷ್ಟೇ ಆ ಊರ ಜನರ ಮಹತ್ವದ ಸಮಸ್ಯೆಗಳಂತೆ ಸವಾಲುಗಳಂತೆ ಏರ್ಪಟ್ಟು, ಈಗ ಹೊಲಗೇರಿಯ ಜನರಿಗೆ ಗೌಡರಿಂದ ಶಿಕ್ಷೆಗಳು ವಿಧಿಸಲ್ಪಟ್ಟವು. ಹೊಲಗೇರಿಯಲ್ಲಿ ತೋಡಿದ್ದ ಮುತ್ತಾತಂದಿರ ಕಾಲದ ಬಾವಿಗಳು ಮುಚ್ಚಿ ಜಲ ಬತ್ತಿ ಹೋಗಿ ನೀರಿಲ್ಲದಾಗಿತ್ತು. ಸರ್ಕಾರ ಕೂರಸಿದ್ದ ಒಂದೇ ದರಿದ್ರ ಬೋರ್‌ವೆಲ್ ಹಲವಾರು ಹುಡುಗರು ಢಣಾರ್ ಢಣಾರ್ ಎಂದು ಅತಿ ಅನವಶ್ಯಕವಾಗಿ ನೀರೂರುತ್ತಿದ್ದರಿಂದ ಮುರಿದುಬಿದ್ದಿತ್ತು ಹಾಗಾಗಿ ಹೊಲೆಯರು ಗೌಡರ ತೋಟದ ಮಿಷನ್ ಬಾವಿ ನೀರನ್ನೇ ಎಲ್ಲದಕ್ಕೂ ಬಳಸಿಕೊಳ್ಳುವಂತಾಗಿತ್ತು. ವ್ಯವಸಾಯಕ್ಕೆ ಮಾತ್ರ ತೋಡಿಸಿದ್ದ ಬಾವಿ ಅದಾಗಿದ್ದರಿಂದ, ಆ ಬಾವಿನೀರು ತೆಗೆದುಕೊಳ್ಳುವುದಕ್ಕೆ ಯಾವ ಜಾತಿ ಆಡ್ಡಿಯನ್ನೂ ಗೌಡರು ತಂದೊಡ್ಡಿರಲಿಲ್ಲ. ಈಗ ಮಾತ್ರ ತಿಪ್ಪೆಗಳ ಮೇಲೆ ಬಿದ್ದನಂತರ ಹೊಲೆಯರು ತನ್ನ ಬಾವಿ ನೀರಿಗೆ ಬರಬಾರದೆಂತಲು, ಬಂದರೆ ಅವರನ್ನು ಅಲ್ಲೇ ಕೊಂದು ಬಾವಿಗೆ ತಳ್ಳಿಸುತ್ತೇನೆ ಎಂತಲೂ ಹಮ್ಮುರಬಿ ಕಾನೂನನ್ನು ಜಾರಿಗೊಳಿಸಿಬಿಟ್ಟಿದ್ದರು. ಕೇರಿಯ ಜನ ಈ ಕ್ಷಣವೇ ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳಬೇಕೆಂದು ಪ್ರಯತ್ನಿಸುವ ಬದಲು ಒಂದು ದೊಡ್ಡ ಸಮಸ್ಯೆಗೆ ದಾರಿ ಮಾಡಿಕೊಡುವಂತೆ ನಾನಾ ಬಗೆಯ ಶೋಧನೆ, ಆರೋಪ, ಪರಾಮರ್ಷೆಗಳ ಪರಿಕಲ್ಪನೆಗಳಲ್ಲಿ ಬಿದ್ದು ಹುಳುಗಳ ಹಾಗೆ ವಿಲಿವಿಲಿಸತೊಡಗಿದರು. ಕೆಲವರು ದುಃಖಿಗಳ ಹಾಗೆ ಪರಿತಪಿಸಿ ಕೈಕಟ್ಟಿ ಹಣೆಬರಹದ ಜೊತೆ ಯುದ್ಧ ಸಾರಿ ಕುಳಿತವರು. ಇನ್ನಾರೋ ಡಬ್ಬ ಕಟ್ಟಿದ ಹುಡುಗರನ್ನು ಮನಸೋ ಇಚ್ಛೆ ಬೈಯುತ್ತಾ ಲೈಂಗಿಕ ಶಬ್ದ ಭಂಡಾರಗಳ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದರು.

ಇದೆಲ್ಲ ಹೀಗೆ ಆಗುತ್ತಿರುವ ಹೊತ್ತಿಗೆ ಗೌಡರು ಬಿಸಿ ನೀರಿನ ಸ್ನಾನ ಮಾಡಿ ದೇವರಿಗೆ ಕಡ್ಡಿ ಹಚ್ಚಿ, ಹೊಲೆಯರ ತಿಪ್ಪೆಗಳಿಗೆ ಬಿದ್ದದ್ದು ಎಲ್ಲದಕ್ಕಿಂತಲೂ ಕೀಳಾದ ಸ್ಥಿತಿ ಎಂದು ನಂಬಿ – ಏನೆಲ್ಲಾ ಯೋಚಿಸುತ್ತಾ ಊರಿನ ಒಂದೊಂದು ಮುಖಗಳನ್ನು ಎದುರಿಗೆ ತಂದುಕೊಂಡರು. ನಾಯಿ ತಲೆ ಕಾಳಣ್ಣನೂ ಅವರ ಎದಿರು ಬಂದ. ಕಾಳಣ್ಣನಿಗೆ ಗೊತ್ತಿದ್ದೋ ಗೊತ್ತಿಲ್ಲದಂತೆಯೋ, ಗೌಡರ ಫಜೀತಿಯ ವ್ಯೂಹದೊಳಗೆ ಆತನೂ ಸಿಲುಕಿದ್ದ. ಕೆಲವು ದಿನಗಳ ಹಿಂದೆ ಕಡ್ಲೆಪೊಪ್ಪು ಖರ್ಜೂರ ಮಾರುವ ಸಾಬಿಯ ಬಳಿ ತಗಾದೆ ತೆಗೆದು ಆತ ಎಲ್ಲೋ ಪಡೆದು ಬಂದಿದ್ದ ಎಂಟು ಟಿನ್ನುಗಳನ್ನು ಕಾಳಣ್ಣ ವಶ ಪಡಿಸಿಕೊಂಡಿದ್ದ. ಆಗ ಆತನ ಹೆಂಡತಿ ಏನೋ ವ್ಯಾಪಾರ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಸಾಬಿಯನ್ನು ಹಿಡಿದು ತನ್ನ ಹೆಂಡತಿಯ ಜೊತೆ ಗುಟ್ಟು ಸಂಬಂಧ ಹೊಂದಿದ್ದಾನೆಂದು ಮುಸುಡಿಯ ಮೇಲೆ ನಾಲ್ಕು ಬಾರಿಸಿಬಿಟ್ಟಿದ್ದ. ಇದು ಯಾವ ಗ್ರಾಚಾರವೋ ಎಂದು ಆತ ಅಲ್ಲಾನ ಹೆಸರೇಳಿ ಟಿನ್ನುಗಳನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದ. ನಂತರಕ್ಕೆ ಆ ಟಿನ್ನುಗಳನ್ನು ಉಪಯೋಗಿಸದೆ ಒಂದೆಡೆ ಬಿಸಾಡಿದ್ದಾಗ ಕೆಲವು ಹುಡುಗರು ಬಂದು ಆ ಟಿನ್ನುಗಳನ್ನು ಕೇಳಿ, ತಮಗೆ ತಮಟೆ ಬಡಿಯಲು ಬಾರದೆಂತಲೂ, ಟಿನ್ನುಗಳನ್ನು ಕೊಟ್ಟರೆ ಅವನ್ನೇ ತಮಟೆಯಾಗಿಸಿಕೊಂಡು ಪ್ರಾರಂಭಿಕ ಗಸ್ತಿಗಳನ್ನು ಹಾಕಿ ಕಲಿಕೆಯ ಪ್ರಯೋಗ ಮಾಡುತ್ತೇವೆಂದು ಬೇಡಿಕೊಂಡಿದ್ದರು. ಈ ಚಿಕ್ಕ ಹುಡುಗರಿಗೆ ಚರ್ಮದ ತಮಟೆಗಳನ್ನು ದೊಡ್ಡವರು ಕೊಡುತ್ತಲೂ ಇರಲಿಲ್ಲ. ಕಾಳಣ್ಣನಿಗೆ ಹುಡುಗರ ಬುದ್ಧಿಗೆ ಮನಸ್ಸು ನಲಿದಾಡಿತು. ಕಾಲೇಜು ಓದುತ್ತಿರುವ ತಮ್ಮ ಜಾತಿಯ ಪುಂಡು ಹುಡುಗರು ತಮಟೆಯನ್ನು ಕಂಡರೆ ಹುಲಿ ಕಂಡಂತೆ ಓಡಿ ಅವನ್ನು ತೂತು ಮಾಡಿ; ನಮ್ಮ ಜಾತಿಯನ್ನೆಲ್ಲ ತಮಟೆ ಮೂಲಕ ಹರಾಜು ಹಾಕುತ್ತೀರಿ ಎಂಬ ಗದ್ದಲವೆಬ್ಬಿಸಿದ್ದನ್ನು ನೆನೆಸಿಕೊಂಡು – ಹುಡುಗರಿಗೆ ಕರುಣೆ ತೋರಿ ಭರ್ಜರಿಯಾದ ಮೂರು ಟಿನ್ನುಗಳನ್ನು ಕೊಟ್ಟುಬಿಟ್ಟಿದ್ದ. ಆ ಟಿನ್ನುಗಳನ್ನು ಹಿಡಿದು ಮೊದಲು ಹುಡುಗರು ಮನೆಗಳ ಹಿತ್ತಲಿನಲ್ಲಿ ಮನಸೋ ಇಚ್ಛೆ ಬಡಿದು, ಸಾವಿರಾರು ತಮಟೆ ನಗಾರಿಯ ಗಸ್ತಿಗಳನ್ನು ಕಲಿತವರಂತೆ ಹೊಡೆದು ಜನರ ಕಿವಿಗಳನ್ನು ಧ್ವಂಸಮಾಡಿದ್ದರು. ಬೇಸತ್ತವರು ಬಂದು ಹುಡುಗರನ್ನು ಹಿಡಿದು ಬೈದು `ಲುಚ್ಚಾ ನನ್ನ ಮಕ್ಳಾ’ ಯಾವ್ ಗಸ್ತಿಯೂ ನೀವ್ ಕಲಿಯೋದು; ಮೌನವಾಗಿ ಇಸ್ಕೂಲ್‌ಗೋಗೋದು ಬುಟ್ಟು’ – ಎಂದು ಹೇಳಿ; ಇನ್ನೊಮ್ಮೆ ಈ ಟಿನ್ನುಗಳನ್ನು ಕಂಡರೆ ನಿಮ್ಮ ಕೈಗಳನ್ನೇ ತುಂಡರಿಸಿ ಬಿಡುತ್ತೇವೆಂದು ಹೆದರಿಸಿಬಿಟ್ಟರು. ಹೀಗಾಗಿ ಹುಡುಗರು ಬೇಸರಗೊಂಡು ಅಸಹಾಯಕರಾಗಿ ನೊಂದು ಸಿಟ್ಟಾಗಿ, ಈ ಟಿನ್ನುಗಳ ಸಹವಾಸವೇ ತಮಗೆ ಬೇಡ ಎಂದುಕೊಂಡು ಇನ್ನೆಂದೂ ಈ ಟಿನ್ನುಗಳು ನಮ್ಮ ಕೈಗೆ ಸಿಗದಿರಲಿ ಎಂಬ ವ್ಯಾಕುಲದಿಂದ ಬಂದು; ಆ ಹುಡುಗರು ಎಲ್ಲೋ ಎರಡು ಉದ್ದ ಸಣ್ಣ ತಂತಿಗಳ ತಂದು ಕಾಳಣ್ಣ ಕೊಟ್ಟಿದ್ದ ಟಿನ್ನುಗಳ ರಂಧ್ರಕ್ಕೆ ಹಾಕಿ ನುಲಿದು ಕೊನೆಗೆ ಕತ್ತೆಗಳ ಸೊಂಟಕ್ಕೆ ಬಿಗಿಯಾಗಿ ಫಿಚಂಡಿ ಕಟ್ಟಿನಂತೆ ಕಟ್ಟಿಬಿಟ್ಟಿದ್ದರು. ಎಷ್ಟೋ ದೂರ ಕತ್ತೆಗಳು ಎಲ್ಲೆಲ್ಲೋ ಓಡಿದ ಮೇಲೆ ಆ ಡಬ್ಬಗಳು ತಮಗೂ ಉಳಿದವರಿಗೂ ಯಾರ ಕೈಗೂ ಸಿಗಿದಂತಾಗಿ ಎಲ್ಲೋ ಬೀಳುತ್ತವೆಂದು ಹುಡುಗರು ನಂಬಿ ಈ ಕೆಲಸ ಮಾಡಿದ್ದರು.

ಹೀಗೆ ಆ ಸಾಬಿಯ ಟಿನ್ನುಗಳು ಕಾಳಣ್ಣನನ್ನು ಸೇರಿ, ಅಲ್ಲಿಂದ ಆ ಹುಡುಗರನ್ನು ತಲುಪಿ ಮತ್ತೆ ಅವು ಕತ್ತೆಗಳ ಸೊಂಟಕೂಡಿ, ಈಗ ಕೊನೆಗೆ ಗೌಡರ ಸಿಟ್ಟಿನ ಶಬ್ದವಾಗಿ ವ್ಯಗ್ರವಾಗಿ ಊರಿನ ನಗೆ ವಿಷಾದದ ದುರಂತದಂತೆ ಹಬ್ಬಿ; ಹೊಲಗೇರಿಯ ಜನರ ಬಾಯಿಗೆ ಗೌಡರ ತೋಟದ ಸಿಹಿನೀರು ತಪ್ಪಿಹೋಗುವಂತೆ ಆಗಿದ್ದವು. ಕೊಬ್ಬು ಹೆಚ್ಚಿರುವ ಕೇರಿಯವರಿಗೆ ಬುದ್ಧಿ ಕಲಿಸಲು ಇದು ಒಳ್ಳೆಯ ಸಮಯ ಎಂದು ಗೌಡರು ಆಲೋಚಿಸುತ್ತಾ, ಅವರು ತಿಪ್ಪೆಯ ಮೇಲೆ ಬಿದ್ದಾಗ ಉಂಟಾದ ರೇಜಿಗೆ ನೆನಪಾದಂತೆಲ್ಲಾ ಹೊಸ ಹೊಸ ದಂಡನೆಗಳನ್ನು ಹೇರುತ್ತಾ ಹೋದರು. ಕೇರಿಯ ಜನರು ಕಸ ಬೂದಿ ಇತ್ಯಾದಿಗಳನ್ನು ಹಾಕಲು ಸ್ವಂತ ಸ್ಥಳವಿಲ್ಲದ್ದರಿಂದ, ಗೌಡರ ತೋಟದ ಬೇಲಿಸಾಲಿನಲ್ಲೇ, ಬೇಲಿಯನ್ನೂ ಒಳಗೂಂಡಂತೆ ಕಸ ಸುರಿದುಕೊಳ್ಳುತ್ತಿದ್ದರು. ಇಂತಹ ಒಂದು ತಿಪ್ಪೆಯ ಮೇಲೆ ಗೌಡರು ಬಿದ್ದಿದ್ದಾಗಿತ್ತು. ಹಿಂದುಮುಂದು ತರ್ಕಿಸದೆ – `ಆ ಬೊಡ್ಡಿ ಹೈಕಳು ಅಲ್ಲೇನಾರ ಕಕ್ಕಸ್‌ಗಂತ ಚೆಡ್ಡಿ ಬಿಚ್‌ಕತ ಕುಂತ್ರೆ ಕಾಯಿಸಿದ್ ಕಬ್ಬಿಣವ ತಗಂಡೋಗಿಡ್ರಲಾ’ ಎಂತಲೂ `ಆ ತಿಪ್ಪೆ ಗೊಬ್ರೆನೆಲ್ಲ ತೋಟಕ್ ತುಂಬಿ ಜಾಗ ಕಾಲಿ ಮಾಡ್ಸಿ’ ಎಂತಲೂ ಹೇಳಿ ತಿಪ್ಪೆಗಳಿಗೂ ಅವರು ಬಾರದಂತೆ ಆಜ್ಞೆ ಹೊರಡಿಸಿದರು. ಒಂದಾದ ಮೇಲೊಂದರಂತೆ ಸಿಟ್ಟು ಹೇರಿ ಅಪಮಾನ ರಂಗಾದಂತೆಲ್ಲ ಅಸ್ವಸ್ಥರಾಗುತ್ತ, ಏನೇನೋ ಹೇಳುತ್ತ ಕೊನೆಗೆ ರಾಗಿನಾಟ ಹಣವನ್ನು ಕೇರಿಯ ಕೆಲವು ಹೆಂಗಸರಿಗೆ ಕೊಡಬೇಕಾಗಿದ್ದನ್ನು ಕೊಡುವುದಿಲ್ಲಾ ಎಂತಲೂ ಯಾರ ಕೈಲೋ ಹೇಳಿಕಳಿಸಿದರು. ಇದಕ್ಕೆಲ್ಲ ಇಡೀ ಕೇರಿ ಜನರೇ ಕಾರಣ ಎಂದು ಕುಣಿದಾಡಿದರು. ಈ ಎಲ್ಲ ನಿರ್ಣಯಗಳು ಕೇರಿಯಲ್ಲಿ ಬಿಸಿ ಹುಟ್ಟಿಸಿದವು. ಗಂಭೀರವಾಗಿ ಇದನ್ನೆಲ್ಲ ಸ್ವೀಕರಿಸಿದ ಕೆಲವರು ಹಾಸ್ಯಾಸ್ಪದವಾಗಿ ದೊಡ್ಡ ಗೋಷ್ಠಿಯನ್ನಾಗೇ ವಿಸ್ತರಿಸುತ್ತಾ ಮಾತನಾಡುತ್ತಲೇ ಬೀಡಿ ಮೋಟುಗಳನ್ನು ಮತ್ತೆ ಮತ್ತೆ ಸುಡುತ್ತಿದ್ದರು.

ಕತ್ತೆಗಳ ಪತ್ತೆಯಿರಲಿಲ್ಲ. ಈ ಘಟನೆಯಾದ ಮೇಲೆ ಕತ್ತೆಗಳನ್ನು ಅಗಸರ ಮಾದಪ್ಪ ಹುಡುಕಾಡಿಕೊಂಡು ಹೊರಟಿದ್ದ. ಡಬ್ಬ ಕಟ್ಟಿ ಬಿಟ್ಟವರನ್ನು ಬಾಯಿಗೆ ಬಂದಂತೆಲ್ಲ ಬೈಯುತ್ತಾ, ಆ ಎಲ್ಲ ಬೈಗಳನ್ನೂ ಹೊಲಗೇರಿಗೆ ಸಾರ್ವತ್ರೀಕರಣಗೊಳಿಸುತ್ತಾ ತನ್ನ ಕತ್ತೆಗಳು ಈಗ ಸಿಗದೇ, ಎಲ್ಲಿಯಾದರೂ ಓಡುವಾಗ ಬಿದ್ದು ಪೆಟ್ಟು ಆಗಿದ್ದರೆ, ಅದಕ್ಕೆಲ್ಲ ದಂಡವನ್ನು ಹೊಲೆಯರು ಕಟ್ಟಬೇಕೆಂತಲು, ಆಗಲಿಲ್ಲಾ ಎಂದರೆ – ಸಮಸ್ಯೆ ಕೈ ಮೀರಿದರೆ, ತನ್ನ ಕತ್ತೆಗಳೆಲ್ಲವನ್ನೂ ಹೊಲೆಯರು ಹೀಗೆ ಪ್ರತಿಬಾರಿಯು ಡಬ್ಬಗಳನ್ನು ಕಟ್ಟಿ ಓಡಾಡಿಸಿ ಸಾಯುವಂತೆ ಮಾಡಿದರು ಎಂತಲೂ, ಇದು ತನ್ನ ಕುಲಕಸುಬಿಗೆ ಮಾಡುತ್ತಿರುವ ಅನ್ಯಾಯ, ಅಪಮಾನ ಎಂತಲೂ ಪೋಲಿಸರ ಬಳಿ ಕೇಸು ಕೊಡುತ್ತೇನೆಂದು ಆ ಬಿಸಿಲಲ್ಲಿ ಬೆವರು ಇಳಿಸಿ ಬೈಯುತ್ತಾ ಹುಡುಕಾಡತೊಡಗಿದ್ದ. ಕತ್ತೆಗಳು ಓಡುವಾಗ ಉಳಿಸಿದ್ದ ಹೆಜ್ಜೆ ಜಾಡುಗಳನ್ನು ಹಿಂಬಾಲಿಸಿ ಅಸ್ಪಷ್ಟಕ್ಕೀಡಾಗುತ್ತಿದ್ದ. ಅಗಸನ ಸಿಟ್ಟು ಜೋರು ಬೈಗಳಿಗೆ ಕೇರಿಯ ಕೆಲವು ಪುಂಡು ಹುಡುಗರು ಸಿಟ್ಟಾಗಿ `ವಲಿಸಾಲೆ ವಗುದಕೊಡ ಅಗ್ಸುನ್‌ಗೇ ಇಷ್ಟ್ ಕ್ವಾಪ ಬರೊದಾದ್ರೆ ನಮಗಿನ್ನೆಷ್ಟಿರಬೇಕು’ ಎಂದುಕೊಂಡರು.

ಇಷ್ಟೆಲ್ಲ ಆಗುತ್ತಿರುವ ವೇಳೆಗೆ ಸಂಜೆಯಾಗುತ್ತಿತ್ತು. ಕೇರಿಜನ ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬೇಕೆಂದು ನೆನಪು ಮಾಡಿಕೊಳ್ಳುತ್ತಿದ್ದರು. ನೀರಿಗೆ ಹೋಗಿದ್ದ ಹೆಂಗಸರು ಬಾಗಿಲುಹಾಕಿದ್ದು ಕಂಡು ಖಾಲಿ ಕೊಡಗಳ ಸಹಿತ ದುಃಖ ಹೊತ್ತು ಹಿಂತಿರುಗಿ ಬಂದಿದ್ದರು. ಇದಕ್ಕೆಲ್ಲ ಹುಡುಗರೇ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಆದರೆ ನಾಯಿತಲೆ ಕಾಳಣ್ಣ ಮಾತ್ರ ಈ ಕಾರಣ ಒಪ್ಪದೆ – “ಇದೆಲ್ಲಾ ಯಾರೋ ದೊಡ್ಡವರು ಹೇಳಿ ಮಾಡಿಸಿಕೊಟ್ಟಿರುವುದೇ ಆಗಿದೆ, ಎಂತಲು, ಆ ಅಗಸರು ವರ್ಷೊಂಬತ್ ಕಾಲ್ದಲ್ಲೂ ನಮ್ ಹಿತ್ಲುಗೊಳಲಿ ಕತ್ತುಗಳ ಬಿಟ್‌ಬುಟ್ಟು ನಮ್ಮ ತಲೆಗೊಂದ್ ಕಂಟಕ ಕಟ್ಟುಬುಟ್ರು” ಎಂದು ವಿಷಯಾಂತರ ಮಾಡುತ್ತಿದ್ದ. ತಾನು ಹುಡುಗರಿಗೆ ಟಿನ್ನುಗಳನ್ನು ಕೊಟ್ಟಿದ್ದೇ ಈ ರಾದ್ಧಾಂತಕ್ಕೆ ಕಾರಣ ಎಂದು ಯಾರಾದರೂ ತಪ್ಪಿನ ಪಾಲನ್ನು ತನಗೂ ಹಚ್ಚುತ್ತಾರೆಂದು ಹೆದರಿ ಹೀಗೆ ಹೇಳಿದ್ದ. ಟಿನ್ನುಗಳನ್ನು ಕಟ್ಟಿದ್ದ ಹುಡುಗರು ತಾವೇ ಆ ಕಳ್ಳರು ಎಂದು ಗೊತ್ತಾಗಿ ಬಿಟ್ಟರೆ ತಮ್ಮ ಚರ್ಮ ಸುಲಿದು ತಮಟೆ ನಗಾರಿ ಮಾಡಿ ಸಾಯಬಡಿಯುತ್ತಾರೆಂದು ಹೆದರಿ ತಮಗೂ ಈ ಸಮಸ್ಯೆಗೂ ಸಂಬಂಧ ಇಲ್ಲ ಎನ್ನುವವರಂತೆ ಮಾತನಾಡಿ – ತಾವು ಆ ಟಿನ್ನುಗಳನ್ನು ನೋಡೇ ಇಲ್ಲವೆಂತಲೂ, ದೊಂಬರು ಹಾಕಿದ್ದ ಗುಡಿಸಲು ಕಡೆಯಿಂದ ಕತ್ತೆಗಳು ಓಡಿ ಬಂದವೆಂತಲೂ ಹೇಳಿದರು. ಹುಡುಗರ ಮಾತು ಸತ್ಯವಿರಬಹುದೆಂದು ಕೆಲವರು ನಂಬಿರಬಹುದು; ಈ ಹಲ್ಕಟ್ ದೊಂಬ್‌ನನ್‌ಮಕ್ಳು ಇದೂ ಒಂದು ವರೆಸ ಸರ್ಕಸ್ಸು ಅಂತ ಮಾಡಿದ್ರೂ, ಮಾಡಿರ್‌ಬೋದು’ ಎಂದು ದೊಂಬರೇ ಇದಕ್ಕೆಲ್ಲ ಕಾರಣವೆಂದು ಗೌಡರಿಗೆ ಇದನ್ನು ತಿಳಿಸಿ ಕುಯ್ಯೋವರ್ರೋ ಎನ್ನುವಂತೆ ಬಿಡಿಸಬೇಕೆಂದು, ಸುಂಡಣ್ಣ ಕುಣಿದಾಡಿದನು. ಹುಡುಗರು ಇದೇ ಸರಿಯಾದ ಸಮಯ ಎಂಬಂತೆ ಆ ಟಿನ್ನುಗಳನ್ನು ಮೊನ್ನೆ ಸಂಜೆಯೇ ದೊಂಬರ ಗುಡಿಸಲ ಬಳಿ ಬಿಸಾಡಿ ಬಂದಿದ್ದೆವೆಂದು ಸಮರ್ಥಿಸಿಕೊಂಡರು. ಸುಂಡಣ್ಣನ ಈ ಬಗೆಯ ದೊಂಬರ ಮೇಲಿನ ಕುಣಿದಾಟಕ್ಕೆ ಹಿನ್ನೆಲೆಯಿತ್ತು. ದೊಂಬರ ಸುಂದರಿಗೆ ಆತ ಕೈಹಾಕಿದ್ದು, ಅದು ದೊಂಬರ ಯಜಮಾನನಿಗೆ ತಿಳಿದು ಆತ ಊರ ಹಿರಿಯನಿಗೆ ತಿಳಿಸಿ ಛೀಮಾರಿ ಹಾಕಿಸಿ ಎಚ್ಚರಿಕೆ ಕೊಡಿಸಿದ್ದ. ಇದರಿಂದಾಗಿ ದೊಂಬರ ಮೇಲೆ ಈ ನೆಪವಾಗಿ ಕೆಂಡ ಕಾರತೊಡಗಿದ. ಕತ್ತೆಗಳು ಇನ್ನೂ ಹಿಂತಿರುಗಿ ಬಂದಿರಲಿಲ್ಲ.

ಕುಡಿಯಲು ನೀರಿಲ್ಲದ ಮಕ್ಕಳು ಕಿರುಚಾಡತೊಡಗಿದ್ದರು. ಗಂಡಸರು ಅಯ್ನೋರ್ ಹೋಟಲಲ್ಲಿ ಒಂಟೆಗಳ ಹಾಗೆ ನೀರು ಹೀರುತ್ತಿದ್ದರು. ಹೆಂಗಸರಿಗಂತು ಇಡೀ ಗಂಡಸರ ಬಗ್ಗೆ ಅಸಾಧ್ಯ ಸಿಟ್ಟು ಬಂದು, ತಮ್ಮ ಮಕ್ಕಳನ್ನು ಸಣ್ಣಪುಟ್ಟ ಕಾರಣಗಳಿಗೆಲ್ಲ ಉಗುದು, ಬೈಯ್ದು, ಬಾರಿಸಿ ಅನುಮಾನಾಸ್ಪದವೆನಿಸಿದ ಮನೆಗಳ ಹುಡುಗರನ್ನು ಬೈಯತೊಡಗಿದರು. ಆ ಬೈಗಳು ನೇರವಾಗಿ ಅವರನ್ನು ಹೆತ್ತ ಅವ್ವಂದಿರನ್ನೇ ಕುರಿತದ್ದಾಗಿ, ಆ ಬೈಗಳು ಸೂಚಿಸುವ ಸಾಂಕೇತಿಕ ಅರ್ಥವನ್ನು ಗ್ರಹಿಸಿದ ಕೆಲವು ಹೆಂಗಸರು `ಗರ್ತಿ ಮಕ್ಕಳುಗೆ ಗಾಳಿ ಬತ್ತು. ಅದ್ರುಗಿತ್ತಿ ಮಕ್ಕಳ್‌ಗೆ ದೇವುರ್ ಬಿತ್ತು’ ಅನ್ನುವಂಗಾಯ್ತು ಎನ್ನುತ್ತಿದ್ದರು. ಇನ್ನಾರೋ `ಯಾವ್‌ನನ್ ಸವುತೆತ್ ಮಕ್ಕಳು ಇಂಗ್ಮಾಡುದ್ರೊ ಕಾಣನಲ್ಲಾ, ಅವುಕೇನ ಮೊಲ್ಲಾಗ್ರು ಬಂದಿತ್ತು’ ಎಂದು ಶಾಪ ಹಾಕುತ್ತಿದ್ದರು. ಇನ್ನಾವಳೋ ಆ ಬೈಗಳ ತನ್ನ ಮಕ್ಕಳಿಗೇ ಹೇಳುತ್ತಿರುವುದಾಗಿದೆ ಎಂದುಕೊಂಡು `ಅದ್ಯಾಕಮ್ಮಿ ಅಂಗಾಡ್ತಿಯಲ್ಲಾ ಯಾರುಗ್ ನೀ ಬೋಯ್ತಿರುದು’ ಎನ್ನುತ್ತಾ `ನಿನ್ನಿಚ್ಛೆಗೆ ನೀ ಬೈಯ್ಕೊವಂಗಿದ್ರೆ ಮನೆವೊಳಾಕೋಗಿ ವಟ್ ತುಂಬ ಬೈಯ್ಕೊ. ನಿನ್ ಮಕ್ಕಳು ತಾನೆ ಅಂತಾ ಕೆಲ್ಸ ಮಾಡೊದು’ ಎಂದು ಕೊಂಕಿಸಿದಳು. ಹಾಗೆ ಹೇಳಿದ್ದೇ ತಡ ಅವರವರು ಮಾತಿನ ಮಲ್ಲಯುದ್ಧದಲ್ಲಿ ಇಡೀ ಹೊಲಗೇರಿಯ ಸಂಬಂಧಗಳ ದುರಂತಗಳನ್ನು ಆರೋಪಾಲಂಕಾರಿಕವಾಗಿ ಜಳಪಿಸಿ ತಮ್ಮತಮ್ಮ ಅಸಹಾಯಕತೆ ಸಿಟ್ಟುಗಳನ್ನೆಲ್ಲ ಕಕ್ಕಿಕೊಳ್ಳ ತೊಡಗಿದರು. ಪ್ರತಿಯೊಂದು ದುರಂತವೂ ಅನಿಷ್ಠವೂ ಒಂದೊಂದು ಸಮಯದ ಆಳದ ಕಾರಣದ ಒಳಗೇ ಬಲಿತಿದ್ದು ಇನ್ನೊಂದೋ ಚಿಮ್ಮಿ ಹಿಡಿಯಾಗಿ ಎಲ್ಲರ ಕತ್ತನ್ನು ಹಿಸುಕುತ್ತದೆ ಎಂಬುದು ಅವರಾರಿಗೂ ಗೋಚರವಾಗಲಿಲ್ಲ. ಗೌಡರು ಅಪಮಾನದಿಂದ ಬುಸುಗುಡುತ್ತಿದ್ದರು. ಊರಿನ ರಾಜಕೀಯದಲ್ಲಿ ಓಟುಹಾಕಿ ಗೆಲ್ಲಿಸುತ್ತೇವೆಂದು ಹೊಲೆಯರು ಮಾತುಕೊಟ್ಟು, ಬಾಡು ತಿಂದು ಹೆಂಡ ಕುಡಿದು ಕೈಕೊಟ್ಟು ಮತ್ತೊಬ್ಬ ಗೌಡನನ್ನು ಗೆಲ್ಲಿಸಿದ್ದರು. ತನ್ನ ಸೋಲಿಗೆ ಹೊಲೆಯರೇ ಪ್ರಧಾನ ಕಾರಣವೆಂದು ಸೇಡಿಗಾಗಿ ಗೌಡರು ಕಾಯದೇ ಇದ್ದರೂ ಕೂಡ, ಅದು ಈಗ ನೆನಪಾಗಿ ಬಲಿತು ಇದ್ದಕ್ಕಿದ್ದಂತೆ ಏನೆಲ್ಲ ಹಮ್ಮುರಬಿ ಕಾನೂನುಗಳು ಚಲಾವಣೆಗೆ ಬರುವಂತಾಗಿತ್ತು. ಆದರೆ ಅಷ್ಟೇ ಲಘುವಾಗಿ ಹಾಸ್ಯಾಸ್ಪದವಾಗಿ ಕೇರಿಯ ಕೆಲವರು ಈ ಸಮಸ್ಯೆಯನ್ನು ಇನ್ನೂ ತರ್ಕಿಸುತ್ತಲೇ ಕುಳಿತಿದ್ದರು.

ಕೇರಿಯ ಕೆಲವು ಪುಂಡು ಹುಡುಗರು ಕತ್ತಲಾದ ಮೇಲೆ ಅಷ್ಟಿಷ್ಟು ಹುಳಿ ಹೆಂಡವನ್ನು ಪೇಟೆಯಲ್ಲಿ ಕುಡಿದಾದಮೇಲೆ ತೂರಾಡಿಕೊಂಡು ಬಂದು ಸರ್ಕಲ್‌ನ ಬಳಿ ಅದೂಇದೂ ಮಾತನಾಡುತ್ತಾ ಕುಳಿತರು. ಇವರೆಲ್ಲ ತಮ್ಮ ಅಪ್ಪಂದಿರ ಎದೆ ಬೆವರ ದುಡಿಮೆಯಲ್ಲಿ ಮುದ್ದೆ ತಿಂದು ಅಲೆಯುತ್ತಾ ಕಾಲೇಜು ಮೆಟ್ಟಿಲು ಏರಲಾರದೆ ಅಪಾಪೋಲಿಯಾಗಿ ಉಳಿದಿದ್ದರು. ಗೌಡರ ನಿಸೂರುಗಳಿಗೆ ಸೊಪ್ಪು ಹಾಕದೆ ಸಣ್ಣಪುಟ್ಟ ತಾಲೂಕು ರಾಜಕೀಯದಲ್ಲಿ ಪ್ರವೇಶ ಪಡೆಯುತ್ತಿದ್ದರು. ಈಗ ಕುಡಿದ ಇವರ ಬಾಯಲ್ಲಿ ಅಗಸರ ಮಾದಪ್ಪನ ತೆಗಳಿಕೆ ಮಾತುಗಳು ಮೈದಾಳಿ, ಆತನನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ಮಧ್ಯಾಹ್ನ ಕತ್ತೆಗಳ ಹುಡುಕಿಕೊಂಡು ಬೈಯುತ್ತಾ ಹೋಗಿದ್ದೊಂದೇ ಅವರ ಈಗಿನ ಚರ್ಚೆ, ಸಿಟ್ಟುಗಳಿಗೆ ಕಾರಣವಾಗಿತ್ತು. ಮಾದಪ್ಪ ಅವರ ಕೈಗಿನ್ನೂ ಸಿಕ್ಕಿರಲಿಲ್ಲ. ಹೀಗೆ ವಟಗುಟ್ಟುತ್ತಾ ಮತ್ತಲ್ಲಿ ಮದಸಿದ್ದವರ ಎದಿರು ವೆಂಕಟೇಗೌಡ ಕಂಡರು. ಆ ಪುಂಡರು ವೆಂಕಟೇಗೌಡನ ಪರವಹಿಸಿ ಚುನಾವಣೆಯಲ್ಲಿ ಗೆಲ್ಲಿಸಿದ್ದರು. ಆತನ ಬಳಿ ಹೋಗಿ ತಮ್ಮ ಸಮಸ್ಯೆಯನ್ನು ಹೇಳಿ; ಗುಂಡೇಗೌಡರ ಕಾನೂನುಗಳನ್ನು ಮುರಿಸುವ ಪ್ರಯತ್ನಪಟ್ಟರು. ಆದರೆ ವೆಂಕಟೇಗೌಡರು ಸಿಜರ್ ಸಿಗರೇಟಿನ ಅಸಾಧ್ಯ ಹೊಗೆಯನ್ನು ಬಾಯಲ್ಲಿ ತುಂಬಿಕೊಂಡು, `ವೋಗ್ರೋ ವೋಗ್ರೋ; ಇದ್ಯಾವ್ ಜುಜುಬಿ ಕೇಸು. ನಾಳೆ ವತಾರಕೇ ಇನ್ನೊಂದ್ ಬೋರ್‌ವೆಲ್ ಆಕ್ಸುದ್ರಾಯ್ತು. ನೀವ್ಯಾಕ್ ಯದುರ್ಕಂದಿರಿ’ ಎಂದು ಹೇಳುತ್ತಾ ರೈಲಿನ ಹಾಗೆ ಹೊಗೆ ಕಕ್ಕುತ್ತಾ ಬಡಬಡಾ ಎಂದು ನಿಲ್ಲದೇ ತನಗೆ ಯಾವುದೋ ಅರ್ಜೆಂಟ್ ಕೆಲಸವಿದೆ ಎಂದು ವೆಂಕಟೇಗೌಡರು ಅಲ್ಲಿಂದ ಮರೆಯಾದರು. ಹಾಗೆ ಈತ ಮರೆಯಾಗುವಷ್ಟರಲ್ಲೇ ಗುಂಡೇಗೌಡರ ಕಡೆಯ ನಾಲ್ಕು ಗಂಡಾಳುಗಳು ಬಂದರು. ಈ ಗಂಡಾಳುಗಳು ಗುಂಡೇಗೌಡರ ಮಾತಿನ ಪ್ರಕಾರ ಬಂದಿದ್ದರು. ವೆಂಕಟೇಗೌಡನೇ ತಾನು ಕತ್ತೆಗಳ ಮೇಲೂ ಏಲು ತಿಪ್ಪೆಯ ಮೇಲೂ ಬೀಳಲು ಕಾರಣವೆಂತಲೂ ಅದಕ್ಕೆ ಬೆಂಬಲ ಹೊಲೆಯರು ಎಂತಲೂ ನಿರ್ಧರಿಸಿ, ಸರ್ಕಲ್ ಬಳಿ ಕುಳಿತಿರಬಹುದಾದ ವೆಂಕಟೇಗೌಡನ ಬಳಿ ಜಗಳ ತೆಗೆದು ಸಿಕ್ಕಸಿಕ್ಕವರಿಗೆಲ್ಲ ಬಾರಿಸಿಬನ್ನಿ ಎಂದು ಹಾಗೆ ಕಳಿಸಿದ್ದರು. ಗುಂಡೇಗೌಡರ ಕಡೆಯವರು ವೆಂಕಟೇಗೌಡ ಮರೆಯಾಗಿಬಿಟ್ಟದ್ದನ್ನು ಕಂಡು `ಲೌಡಿ ಮಗ ಬೀಜ ಬಿತ್‌ಬಿಟ್ಟು ಕದ್ದೋಡೋದ ನೋಡು’ ಎಂದು ಪುಂಡು ಹುಡುಗರ ಬಳಿ ಬಂದರು. ಆ ಹುಡುಗರು ತಮ್ಮ ಕೋಪ ಕಾರಿಕೊಳ್ಳಲು ಯಾರೂ ಸಿಗಲಿಲ್ಲವಲ್ಲಾ ಎಂದು ಅವರವರ ವೈಯಕ್ತಿಕ ವಿಷಯಗಳನ್ನು ಊರಿನ ಸದ್ಯದ ರಾಜಕೀಯಕ್ಕೆ ಬೆರೆಸಿ ಮಾತನಾಡಿಕೊಳ್ಳುತ್ತಿದ್ದರು. ಗುಂಡೇಗೌಡರ ಕಡೆಯವರು, ಈ ಹುಡುಗರಿಗೇ ನಾಲ್ಕು ಬಾರಿಸಿದರಾಯಿತೆಂಬಂತೆ ಕಾಲುಕೆರೆಯಲು ಅಲ್ಲೇ ಕುಳಿತರು. ಎರಡೂ ಕಡೆಯವರು ಈಗ ಮಾತು ನಿಲ್ಲಿಸಿ ಶೀತಲ ಯುದ್ಧಕೆ ಸಜ್ಜಾದರು. ಅಗಸರ ಮಾದಪ್ಪನ ಕತ್ತೆಗಳು ಇನ್ನೂ ಹಿಂತಿರುಗಿ ಬಂದಿರಲಿಲ್ಲ. ಹಾಗಾಗಿ ಅವುಗಳೇನಾದರೂ ಸರ್ಕಲಿನ ಬಳಿ ಬೀಲುವ ಬಾಳೆಹಣ್ಣಿನ ಸಿಪ್ಪೆಯ ಆಸೆಗೂ ಹಳೆ ಕಾಗದ ಕಸಗಳ ಬಾಯಿರುಚಿಗೂ ಇಲ್ಲಿಗೆ ಬಂದೇ ಬರುತ್ತದೆಂದುಕೊಂಡು ಮಾದಪ್ಪ ಈಗ ಅವರೆಲ್ಲ ಕುಳಿತಿದ್ದ ಕಡೆಗೆ ಬಂದ. ಪುಂಡ ಹುಡುಗರು ಇವನನ್ನೇ ಕಾಯುತ್ತಿದ್ದವರ ಹಾಗೆ; ಯಾವ ಪೀಠಿಕೆಯನ್ನೂ ಹಾಕದೆ, `ಅಲ್ಲಪ್ಪಾ, ಕೋತಿ ಮೊಸುರ್ ತಿಂದು ಬಿಟ್ಟು, ಮ್ಯಾಕೆ ಬಾಯ್‌ಗೊರುಸ್ತು’ ಅನ್ನುವಂಗೆ ಮಾಡ್‌ಬುಟ್ಟು, ನಂ ತಲೆಗೀಗ ಕಂಟಕಾ ತಂದ್ ಮಡುಗ್ ಬುಟ್ನಲ್ಲಾ ಇದ್ಸರಿಯೇ?’ ಎಂದರು ಸಿಟ್ಟಿನಿಂದ. ಕತ್ತೆಗಳನ್ನು ಹುಡುಕಿ ಹುಡುಕಿ ಸಾಕಾಗಿ ನಿರಾಶನಾಗಿ ಸಿಟ್ಟಿದ್ದವನಿಗೆ ಅವರ ಮಾತಿನಿಂದ ಪಿತ್ತ ನೆತ್ತಿಗೇರಿ `ವೋಗ್ರೋ ಬಡ್ಡೆತ್ತವಾ, ಎಲ್ ಬುಟ್ಟಿರಿ ನಿಮ್ ಜಾತಿ ಬುದ್ಧಿಯಾ’ ಮೌನವಾಗಿ ನಾಕಕ್ಷರ ಕಲ್ತಕಂಡು ಬಾಳಾಟ ಮಾಡ್ವಾ ಅನ್ನುದ್ ಬುಟ್ ಬುಟ್ಟು, ಏನೋ ಸಾಚಾಸುಬ್ರಾ ಅಂತ ಕುಂತವರೆ’ ಎಂದು ಅಬ್ಬರಿಸಿದ. ಹುಡುಗರಿಗೆ ಅಪಮಾನವಾದಂತಾಗಿ; ಈಗ ತಾವು ಐದತ್ತಾರು ಬಾರಿ ಎಸ್. ಎಸ್. ಎಲ್. ಸಿ. ಫೇಲು ಮಾಡಿಕೊಂಡಿದ್ದನ್ನು ಆಡಿ ಹಂಗಿಸುತ್ತಿದ್ದಾನೆಂತಲೂ, ಜಾತಿಯನ್ನು ಬೈಯುತ್ತಿದ್ದಾನೆಂತಲೂ ವಿಪರೀತ ಅಪಮಾನವಾದಂತಾಗಿ; `ಅಯ್ಯೋ ಹಲ್ಲಿಡದ್ ಮಾತಾಡು, ತಿಕಾ ಗಾಣ್‌ಚಾಲಿ ಮಾಡಿದ್ರೆ, ನಿನ್ನ ತಿಕ್ಕೇ ಟಿನ್‌ಕಟ್ಟಿ ಊರಿಂದಾಚೆಗೆ ವೋಡಿಸ್ ಬೇಕಾಯ್ತದೆ’ ಎಂದು ಅವನ ಬಳಿ ನುಗ್ಗಿದರು. ಊರಿಗೆ ಇದ್ದ ಒಬ್ಬನೇ ಅಗಸನಿಗೆ ಹೆದರಿಕೆ ಉಂಟಾಗಿ; ಆದರೂ ಬಿಡದೆ `ಏನ್ರುಲಾ, ವಡ್ದೀರಾ, ಬರ್ಲಾ ವಡೀರಿ ಅದೆಷ್ಟು ಮಡ್ಗಿದ್ದೀರಿ ತಾಕತ್ತಾ’ ಎಂದು ಅವರ ಮುಂದೆ ಬಗ್ಗಿನಿಂತ. `ಹೂ ವಡೀರ್ಲಾ, ನೋಡ್ತೀನಿ ಮಂತೆ. ನಿಮ್ಮಪ್ಪದೀರ್‌ಗೆ ನೀವ್ ವುಟ್ಟಿದ್ರೆ ವಡೀರಿ……’ ಎಂದು ಸವಾಲು ಹಾಕಿದ. ಪುಂಡು ಹುಡುಗರ ಹುಟ್ಟನ್ನೇ ಪ್ರಶ್ನಿಸಿದ್ದರಿಂದ, ಅವರಲ್ಲೊಬ್ಬ ಅತಿ ವ್ಯಗ್ರನಾಗಿ `ಹೂ ತಗೋ’ ಎಂದು ಬಗ್ಗಿದವನ ತಿಕದ ಮೇಲೆ ಜಾಡಿಸಿ ವದ್ದ. ವದ್ದ ತಕ್ಷಣವೇ ಆತ ಲಾಗ ಹೊಡೆದವರಂತೆ ಉರುಳಿಬಿದ್ದ. ಇವರ ಪುಂಡಾಟ ಮೀರಿದ್ದನ್ನು ಕಂಡು – ಎದುರೇ ಕಾಯುತ್ತಿದ್ದ – ಗುಂಡೇಗೌಡರು ಗಂಡಸರು ಅಗಸರ ಮಾದಪ್ಪನ ಪರ ವಹಿಸಿ ಕೇರಿಯವರ ಜೊತೆ ಜಗಳಕ್ಕೇ ನಿಂತರು. `ವೋಗ್ರಯ್ಯೋ ನೀವ್ಯಾರ್ ಇದಾ ಕೊಂಡೋಕ್ ಬರುಕೆ. ಅಗುಸುನ್‌ಗೂ ವಲೇರ್‌ಗೂ ಜಗಳ ಆದ್ರೆ ನಿನಗೇನ್ ತಿಕ ನೊಂದದಾ’ ಎಂದು ಅವಾಚ್ಯವಾಗಿ ಬೈಯ್ಯತೊಡಗಿದರು. ಪುಂಡು ಹುಡುಗರು ಗಟ್ಟಿಯಾಗಿಯೂ, ಸಂಖ್ಯೆಯಲ್ಲಿ ಜಾಸ್ತಿಯಾಗಿಯೂ ಇದ್ದಿದ್ದರಿಂದ ಗುಂಡೇಗೌಡರ ಕಡೆಯವರು ಮೊದಲು ಸ್ವಲ್ಪ ಅಂಜಿ ನಂತರ ಮೈಚಳಿ ಬಿಟ್ಟು ಭಯಂಕರ ರೋಸ ತೋರುವಂತೆ ಮಾತಿನ ಗಲಭೆ ಜಗಳವನ್ನು ಸೃಷ್ಟಿಸಿದರು. ಅಗಸರವನು ಮಾರಾಮಾರಿ ಬೈಯುತ್ತಾ ತನಗೆ ಬೆಂಬಲ ಸಿಕ್ಕಿತೆಂದು ಎಗರಾಡುತ್ತಿದ್ದ. ಕತ್ತೆಗಳಿಗೆ ಡಬ್ಬ ಕಟ್ಟಿದ ಹುಡುಗರು ಈಗ ಯಾರೂ ಕಾಣಿಸಿಕೊಳ್ಳಲಿಲ್ಲ. ಸರ್ಕಲ್‌ನ ಬಳಿ ದೊಡ್ಡ ಶಬ್ದ ಉಂಟಾದ್ದನ್ನು ಕೇಳಿಸಿಕೊಂಡ ಹಲವಾರು ಜನ ಕುತೂಹಲದಿಂದಲೂ, ಮನರಂಜನೆ ಕೊಡುವ, ಪಡೆವ ಕಾರಣದಿಂದಲೂ ಮತ್ತು ಜಗಳ ಬಿಡಿಸುವಲ್ಲಿ ಖ್ಯಾತಿ ಪಡೆದಿದ್ದ ಇನ್ನೂ ಕೆಲವರು ಈಗ ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೆರೆದರು. ದೊಂಬರವನೇ ಕಾರಣ ಎಂದು ಹೇಳಿದ್ದು ಸುಂಡಣ್ಣನ ಮಾತು ಸತ್ಯ ಅಲ್ಲ ಎಂದು ದೊಂಬನನ್ನು ವಿಚಾರಣೆ ಮಾಡಿದ್ದಮೇಲೆ ಆತನನ್ನು ಕೈಬಿಟ್ಟಿದ್ದರು. ಜನ ಜಮಾಯಿಸಿದ್ದರಿಂದ ಎರಡೂ ಗುಂಪುಗಳಲ್ಲಿ ಹುಮ್ಮಸ್ಸು, ರೋಷ, ಬೆಂಬಲ ಎಲ್ಲವೂ ಒಟಿಗೇ ಏರಿದಂತಾಗಿ ಜಗಳ ಕೈಕೈ ಮಿಲಾಯಿಸಿ ಕುತ್ತಿಗೆ ಪಟ್ಟಿ ಹಿಡಿದು, ಹಳೆಯ ಬೆವರಿಡಿದ ಅಂಗಿ ಬಟ್ಟೆ, ಬನಿಯನ್ನುಗಳೆಲ್ಲ ಚಿಂದಿಚಿಂದಿಯಾದವು. ಅಷ್ಟರಲ್ಲಾಗಲೇ ದೊಂಬರವನು, ಸೈಕಲ್ ರಿಪೇರಿ ಮಾಡಿದ್ದ ಉಳ್ಳಾಡಿ; ಹಡಬೇ ಎಮ್ಮೆಯಂತಹ ಹೆಂಗಸರು, ಡಬ್ಬ ಕಟ್ಟಿ ಅವಿತುಕೊಂಡಿದ್ದ ಪುಟ್ಟ ಹುಡುಗರು ಸುಂಡಣ್ಣ, ಕಾಳಣ್ಣ ಎಲ್ಲರೂ ಕೂಡಿದ್ದರು. ದೊಂಬರವನು ಕೈಕಟ್ಟಿ ನೋಡುತ್ತಾ, ಈ ಜಗಳದ ರಮಾರಮಿ ಫೈಟಿಂಗ್‌ಗಳಲ್ಲಿ ತನ್ನ ಚಮತ್ಕಾರದ ಸರ್ಕಸ್ಸುಗಳಿಗೆ ಏನಾದರೂ ತಾಂತ್ರಿಕ ಲಾಭಗಳು ಸಿಗಬಹುದೆಂದು ಕುತೂಹಲ ಭಯ ಎರಡರಿಂದಲೂ ನೋಡುತ್ತ ನಿಂತಿದ್ದ. ಯಾವ ಕಾರಣಕ್ಕೆ ಈಗ ಇವರೆಲ್ಲ ಜಗಳವಾಡುತ್ತಿದ್ದಾರೆ ಎಂಬುದೇ ಅಲ್ಲಿ ಮರೆತುಹೋಯಿತು. ಎಂದೆಂದಿನದೋ ಮಾತುಕತೆಗಳೆಲ್ಲ ಅವರ ಮಿಸುಕಾಟಗಳಲ್ಲಿ ಸಮ್ಮೇಳನಗೊಂಡವು. ಜಗಳ ಬಿಡಿಸುವ ಖ್ಯಾತಿಯವರು ಒಳನುಗ್ಗಿ, ಅವರೂ ಕೂಡ ಜಗಳದಲ್ಲಿ ಐಕ್ಯಗೊಂಡು ತಾರಾಮಾರ ಎರ್ರಾಬಿರ್ರಿ ಎಳೆದಾಟಗಳಲ್ಲಿ ಸಂಗಮಗೊಂಡರು. ಅವರ ತುಳಿದಾಟ ಎಳೆದಾಟಗಳಲ್ಲಿ ಧೂಳೆದ್ದು ಇಡೀ ಊರನ್ನೇ ನುಂಗುವಂತಾಗಿ ಈಗ ಅವರೆಲ್ಲ ದೊಡ್ಡ ಹೊಗೆಗೂಡಿನ ಒಳಗೆ ಉಸಿರುಗಟ್ಟಿ ಒದ್ದಾಡುತ್ತಿದ್ದಾರೆಂಬಂತೆ ಇಡೀ ವಾತಾವರಣ ಏರ್ಪಟ್ಟಿತು. ಕುಯ್ಯೋಮರ್ರೋ ಎಂಬ ಶಬ್ದಗಳು ಒಬ್ಬರಿಗೊಬ್ಬರು ಡಿಕ್ಕಿ ಹೊಡೆದುಕೊಂಡವು. ಕತ್ತೆಗಳ ಪತ್ತೆಯೇ ಇರಲಿಲ್ಲ. ಗೌಡರ ಕಡೆಯವರು ತಾವೂ ಪೆಟ್ಟುತಿಂದು ಪುಂಡರ ಹುಡುಗರ ಮುಸುಡಿಗಳು ಊದಿಕೊಳ್ಳುವಂತೆ ಜಜ್ಜಿದರು. ಜಗಳದ ನಡುವೆ ಒಬ್ಬ ಇದೆಲ್ಲಕ್ಕೂ ಕಾರಣ ಅಗಸನೇ ಎಂದುಕೊಂಡು ದಬದಬಾ ಎಂದು ಆತನಿಗೆ ಚಚ್ಚಿದನು. ಇಂತಹ ವಾತಾವರಣವನ್ನೇ ಕಾದಿದ್ದ ಸುಂಡಣ್ಣ ದೊಂಬರವನನ್ನು ಕಂಡು `ಬಡ್ಡೀ ಮಗ್ನೇ. ಎಲ್ಲಾನು ಮಾಡ್‌ಬುಟ್ಟು, ಕೈಕಟ್ಟಿ ನಿಂತಿದ್ದೀಯಾ’ ಎಂದು ಅವನ ಮೈಮೇಲೆಲ್ಲಾ ಬಾರಿಸಿದನು. ಆ ದೊಂಬ ಸತ್ತೆನೋ ಕೆಟ್ಟೆನೋ ಎಂಬಂತೆ ಓಡಿಹೋದ. ಈ ಬೀದಿಜಗಳ ನಿಲ್ಲದೆ ಇಡೀ ಊರಿನ ದುರಂತವೆಂಬಂತೆ ಹಂಚಿಕೆಯಾಗಿಬಿಟ್ಟಿತು. ಯಾವುದಕ್ಕೆ ಕಿತ್ತಾಡಬೇಕೋ ಅದಕ್ಕೆ ಕೊಂಚವೂ ಕಿತ್ತಾಡದೆ, ಇನ್ನವುದೋ ಘಟನೆಯ ಮೇಲೆ ತಮ್ಮ ಮತ್ಸರ, ಸಿಟ್ಟು ಸಂಕಟಗಳನ್ನು ಪ್ರದರ್ಶಿಸುತ್ತಿದ್ದರು. ಇದೆಲ್ಲವನ್ನೂ ನೋಡುತ್ತಾ ನಿಂತಿದ್ದ ದೊಳ್ಳ ಊರೂಪ್ ಜಾನ್ ಎಂಬ ಹೊಲೆಯರ ಪಿಯುಸಿ ಹುಡುಗ ಕ್ರಿಶ್ಚಿಯನ್ ಆಗಿ ಮತಾಂತರಗೊಂಡಿದ್ದವನು, ಅತ್ಯಂತ ಸುಖದಿಂದಲೂ ಹಾಗೂ ಕತ್ತೆಗಳಿಗೂ, ಕ್ರಿಸ್ತನಿಗೂ ಇದ್ದ ಕತೆ ನೆನಪಾಗಿ ದುಃಖವಾಗಿಯೂ ನಿಂತಿದ್ದ. ಮತ್ತೆಮತ್ತೆ ಜಗಳ ಬಿಡಿಸುವುದು. ಮಾತು ಏರುವುದು ನಡೆಯುತ್ತಿತ್ತು. ಜಗಳವೆಲ್ಲ ಅವರ ರೋಗದಂತೆ ಏರ್ಪಟ್ಟು ಸಾಂಕ್ರಾಮಿಕವಾಗಿ ಅವರನ್ನು ಹಿಸುಕತೊಡಗಿತು.

ಇದೆಲ್ಲ ಸಾಂಗವಾಗಿ ಸರಾಗವಾಗಿ ಸಾಗಿರುವಾಗ, ಆ ಕತ್ತೆಗಳು ಸೊಂಟದಲ್ಲಿ ಟಿನ್ನು ಹೊತ್ತುಕೊಂಡು ಎಲ್ಲೆಲ್ಲೋ ಎಷ್ಟೋದೂರ ಓಡಾಡಿ ಹೆದರಿ ಸುಸ್ತಾಗಿ ಬೇಸತ್ತು ಇನ್ನು ಯಾವ ದರಿಯೂ ಕಾಣದೆ ವಾಪಸ್ಸು ಮನೆ ಸೇರುವುದೇ ಸರಿ ಎಂಬ ಇಚ್ಛೆಯಲ್ಲಿ ತಿರುಗಿ ಬರುತ್ತಿದ್ದವು. ಟಿನ್ನುಗಳನ್ನು ಸೊಂಟದಿಂದ ಕಳಚಿಕೊಂಡೇ ಇರಲಿಲ್ಲ. ಆ ಶಬ್ದ ಅವುಗಳ ಬೆಂಬತ್ತಿದ್ದರಿಂದ ಅವು ಕೊನೆಗೆ ಹೊಂದಿಕೊಂಡು, ಹಾಗು ಅನುಮಾನದಿಂದ ನರಳುತ್ತಾ, ಈ ಊರಿನವರು ನಮ್ಮ ಸೊಂಟಕ್ಕೆ ಅದಾವ ಭೀತಿಯನ್ನೂ, ಭಾದೆಯನ್ನೂ, ನರಕವನ್ನೂ ಕಟ್ಟಿದ್ದಾರೋ ಎಂಬ ದುಃಖದಲ್ಲಿ ಯೋಚಿಸುತ್ತಾ ಕೊನೆಗೆ, `ಶಬ್ದಕ್ಕಂಜಿದೊಡೆಂತಯ್ಯ’ ಎಂಬಂತೆ ಅವು ಮತ್ತೆ ಆ ಮನುಷ್ಯರನ್ನೇ ಕೂ ಕೊಳ್ಳಲು ಬಂದವು. ವಿಶೇಷವೆಂದರೆ ಆ ಜನ ಈಗ ಸೇರಿದ್ದ ಸರ್ಕಲ್ ಬಳಿಯೇ ಆಯ್ದು ಅಗಸನ ಮನೆ ತಲುಪಬೇಕಾದ ಅನಿವಾರ್ಯತೆ ಇತ್ತು. ಬೇರೆ ಹಾದಿಯಿಂದ ಬರಲು ದಾರಿಯಿರಲಿಲ್ಲ. ಕತ್ತೆಗಳು ಜನರ ಆ ಗದ್ದಲ, ಗುಂಪುಗಳನ್ನು ಒಮ್ಮೆ ವೀಕ್ಷಿಸಿ ಆದದ್ದು ಆಗಿ ಹೋಗಲಿ; ಇಂಥಾ ಟಿನ್ನುಗಳ ಭಯಾನಕತೆಯನ್ನೇ ಸಹಿಸಿದ ನಾವು ಇವರನ್ನು ಸಹಿಸದೆ ಹೋದರೆ ಹೇಗೆ – ಎಂದುಕೊಂಡು ಬಂದವು. ಬಂದೇ ಬಂದವು ಅವರ ಹತ್ತಿರವೇ ಬಂದುಬಿಟ್ಟವು. `ಢರಢರ್ರಾ’ ಎಂಬ ಟಿನ್ನುಗಳ ಸದ್ದು ಜಗಳವಾಡುತ್ತಿದ್ದವರಿಗೆ ಕೇಳಿಸಿದ್ದೇ ತಡ, ಕತ್ತೆಗಳ ಕಂಡದ್ದೇ ಸಾಕು, ಎಲ್ಲರೂ ಸ್ತಬ್ಧರಾಗಿ ನಿಂತುಬಿಟ್ಟರು. ಅಗಸರ ಮಾದಪ್ಪ ಕತ್ತೆಗಳ ಕಂಡು ಸ್ವರ್ಗಸಿಕ್ಕಿದಂತಾಗಿ ಓಡಿಹೋಗಿ ಅವನ್ನು ಹಿಡಿದುಕೊಳ್ಳಲು ಬಂದ. ಕತ್ತೆಗಳು ಇಡೀ ಊರಿನ ಜನರ ಎಲ್ಲ ಕ್ರಿಯೆಗಳಿಗೂ ಮೌನಸಾಕ್ಷಿಯಾಗಿ ನಿಂತವು. ಎಲ್ಲರೂ ಕತ್ತೆಗಳನ್ನು ಕಂಡು, ಅವು ಯಾವ ಕೇರೂ ಮಾಡದಂತೆ ಬಂದು ನಿಂತದ್ದನ್ನು ಕಂಡು ಜಗಳದವರು ಸಿಟ್ಟಾದರು. ಕತ್ತೆಗಳು ಮತ್ತೆ ಹೆದರಿ; ಏನೋ ಒಂದು ಬಗೆಯ ಶಬ್ದವನ್ನು ಹೊರಡಿಸಿ ಮಾತನಾಡಿಕೊಂಡವು. ಇವರೆಲ್ಲ ಸೇರಿ ಮತ್ತೆ ನಮ್ಮನ್ನು ಹಿಡಿದು ಬಡಿದು ತೊಂದರೆ ಕೊಡುತ್ತಾರೆಂದು ಬೇಸರವಾಗಿ, ದುಃಖ ಮತ್ತು ಪ್ರತಿಭಟನೆ ಎರಡನ್ನೂ ಮುಖದಲ್ಲಿ ತಂದುಕೊಂಡವು.

ಅಲ್ಲಿದ್ದವರೆಲ್ಲ; ಈ ಇಡೀ ಘಟನೆಗೆ ಈ ಕತ್ತೆಗಳೇ ಕಾರಣ ಎಂದುಕೊಂಡು ಕತ್ತೆಗಳ ಮೇಲೆ ಎರಗಿ `ಇವುಗಳ್‌ರತ್ತನಾಕೇಯೆ ಕತ್ತೆಗಳಿಂದ್ಲೇ ಇಷ್ಟೆಲ್ಲಾ ಆದುದ್ದು’ ಎಂದು ಅವುಗಳಿಗೆ ಸಮಾ ಬಡಿಯಲು ಅಬ್ಬರಿಸಿ ಧಡಾರ್ ಬಡಾರ್ ಎಂದು ಸೈನಿಕರಂತೆ ನುಗ್ಗಿದರು. ಕತ್ತೆಗಳು ಇದನ್ನು ಕಂಡು ರೊಚ್ಚಿನಿಂದ ಅತಿಭಯಂಕರ ರಭಸವಾಗಿ ಬಂದ ದಾರಿಯಲ್ಲೇ ಹಿಂತಿರುಗಿ ಓಡತೊಡಗಿದವು. ಅವುಗಳು ದೆವ್ವದ ಕಾಟದ ಹಾಗೆ ಕೆಲವರಿಗೆ ಕಂಡು ದೊಣ್ಣೆ ಹೊತ್ತುಕೊಂಡು ಅಟ್ಟಿಸಿಕೊಂಡು ಕತ್ತೆಗಳನ್ನು ಹಿಂಬಾಲಿಸಿದರು. ಅವರೆಲ್ಲ ಓಡಿದರು, ಬಿದ್ದರು, ನುಗ್ಗಿದರು, ಅಬ್ಬರಿಸಿದರು. ಕತ್ತೆಗಳ ಹೆಜ್ಜೆಮೇಲೆ ಹೆಜ್ಜೆ ಹಾಕಿ ಊರ ಹೊರವಲಯದ ತನಕ ಬೆಂಬತ್ತಿ ಬಂದರು. ಕತ್ತೆಗಳು ಇನ್ನಿಲ್ಲದ ವೇಗದಲ್ಲಿ ಕುದುರೆಗಳ ಹಾಗೆ ಹಾರುತ್ತಿದ್ದವು. ಆ ಕತ್ತೆಗಳು ಆ ಊರಿನ ಎಲ್ಲ ತರದ ಎಲ್ಲರ ದುಃಖಗಳ, ಆಳಧ್ವನಿಯ ಲಯವನ್ನು ಸೊಂಟಕ್ಕೆ ಬಿಗಿದುಕೊಂಡೇ ಟಿನ್ನುಗಳಿಂದ ಆ ಸದ್ದನ್ನು ಸೃಷ್ಟಿಸುತ್ತಾ, ಅವರೆಲ್ಲರಿಗೂ ಆ ವಿಷಾದ ಅಳಲಿನ ವಿಪರ್ಯಾಸಗಳ ವಿವರಿಸುವಂತೆ – ಜಿಗಿಜಿಗಿದು ಓಡುತ್ತಲೇ ಇದ್ದವು. ಅಂತಹದ್ದನ್ನೆಲ್ಲ ಈಗವರು ಗ್ರಹಿಸುವ ಸ್ಥಿತಿಯಲ್ಲಿ ಉಳಿದಿರಲ್ಲಿಲ್ಲ. ಕತ್ತೆಗಳನ್ನು ಕಂಡವರು ದುಷ್ಟಶಕ್ತಿಯನ್ನು ಕಂಡಂತೆ ಆಗಿದ್ದರು. ಕತೆಗಳು ಬಾಯಲ್ಲಿ ಓಡಿದ ದಣಿದ ಸುಸ್ತು, ಸಿಟ್ಟು, ಸಂಕಟ, ನೋವು ಎಲ್ಲವೂ ಒತ್ತರಗೊಂಡು ಜೊಲ್ಲು ಬಾಯಿಂದ ಉಕ್ಕಿ ಉಕ್ಕಿ ಬರುತ್ತಿತ್ತು. ರಕ್ತ ಕಾರಿಕೊಂಡು ಸತ್ತರೂ ಸರಿಯೇ ಇನ್ನು ಈ ಜನರ ಈ ಊರ ಸಹವಾಸ ಬೇಡ ಎಂಬಂತೆ ಅವು ಓಡುತ್ತಲೇ ಇದ್ದವು. ಸುಸ್ತಾದವರು ಅಲ್ಲಲ್ಲೇ ನಿಂತರು. ಮತ್ತೆ ಕೆಲವರು ಹೋಗುತ್ತಲೇ ಇದ್ದರು. ಹೋಗುತ್ತ, ಓಡುತ್ತ, ಅಟ್ಟಹಾಸದಲ್ಲಿ ಮೆರೆಯುತ್ತಾ ಅವರೆಲ್ಲ ಆ ಕತ್ತಲೆಯಲ್ಲಿ ಮುಳುಗಿಹೋದರು. ಅಗಸ ಮಾತ್ರ ದಣಿವಾಗದಂತೆ ಓಡುತ್ತಾ, ಎಲ್ಲ ಹೊಲೆಯರೂ, ದಕ್ಷಬ್ರಹ್ಮನ ವಿಷಕುಂಟೆಯಿಂದ ಸತ್ತು; ಕೊನೆಗೊಬ್ಬನೇ ಪುಟ್ಟ ಹೊಲೆಯ ಹುಡುಗ ಉಳಿದಿದ್ದಾಗ ಆತನನ್ನು ರಕ್ಷಿಸಿ ಇವನೇ ತನ್ನ ಮಗ ಎಂದು ದಕ್ಷನಿಗೆ ಹೇಳಿ ಜೊತೆಯಲ್ಲೆ ಬಾಳೆಎಲೆಯಲ್ಲಿ ಉಂಡಂತೆ…… ಕತ್ತೆಗಳ ಉಳಿಸಿಕೊಂಡೇ ಉಳಿಸಿಕೊಂಡು ಹಿಡಿದು ತರುತ್ತೇನೆ ಎಂಬಂತೆ ಓಡುತ್ತಲೇ ಇದ್ದ. ಇಡೀ ಊರು ಕತ್ತಲೆಯಲ್ಲಿ ಕರಗಿಹೋಗುತ್ತಿತ್ತು.
*****

ಕೀಲಿಕರಣ ದೋಷ ತಿದ್ದಿದವರು: ಶ್ರೀಕಾಂತ ಮಿಶ್ರಿಕೋಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.