ವಿಶ್ವಕವಿಯ ದೃಶ್ಯಕಾವ್ಯ

ಬಯಲಿನಲ್ಲಿ ನಿರ್‍ವಯಲನಾಗಿ ದಿಗ್ವಲಯ ಮೀರಿ ನಿಂದೆ
ಗಗನ ಮಕುಟ ಭೂಲೋಕ ದೇಹ ಪಾತಾಳ ಪಾದದಿಂದೆ.
ಸೂರ್ಯ ಚಂದ್ರ ಕಣ್ಣಾಲಿಯಾಗಿ ಆ ಮೂಡು ಪಡುವಲಿಂದೆ
ವಿಶ್ವದಾಟವನು ನೋಡುತಿರುವೆ ನೀ ನಿರ್‍ನಿಮೇಷದಿಂದೆ.

ಉದಯ ಪುಣ್ಯವನೆ ಹಗಲು ಜ್ಞಾನ, ಮುಚ್ಚಂಜೆ ಮುಕ್ತಿಯಂತೆ
ಕೋಟಿ ತಾರೆಗಳು ಮುತ್ತು ಸತ್ತಿಗೆಯ ಬೆಳಕನೆತ್ತಿದಂತೆ
ಗಾಳಿಯುಸಿರಿನಲಿ ಮೆಲ್ಲನೂದುತಿಹೆ ಪ್ರಾಣವಾಯುವನ್ನೆ
ಬೂದಿ ಹಾರಿ ತನಿಗೆಂಡ ತೋರಿ ತೊಳಗಿರುವುದಾತ್ಮವನ್ನೆ!

ಮೇಘದೋಲೆಯಲಿ ಮಿಂಚುಬಳ್ಳಿ ರುಜುಮಾಡಿ ಬರೆಯುತಿರುವೆ
ಅರ್ಥವಾಗದಿದೆ, ಆದರೂನು ಕನಿಕರದಿ ಮಳೆಯ ಸುರಿವೆ!
ಉಷಾಸಂಧ್ಯೆಯರ ಸುಂದರಾಂಗದಲಿ ನಿಂದ ನಿಲವದೇನು?
ಕನಸು ಕೋದೆ ಕೋದಂಡದಂತೆ ಮಳೆಬಿಲ್ಲ ಚೆಲುವದೇನು!

ಗಿರಿಯ ಬಾಹುಗಳ ಚಾಚಿ ತಬ್ಬಿರುವೆ ಸಸ್ಯಶಾಮಲೆಯನು
ಹಣ್ಣು ಹೂವುಗಳೆ ಭಾರವಾಗಿ ಬಳುಕಿರುವ ಕೋಮಲೆಯನು.
ಗುಡುಗು ಸಿಡಿಲು ಭೋರ್‍ಗರೆವ ಕಡಲು ಮತ್ತೇಕೆ ಇಂಥ ಕೋಪ?
ಆಗ ಈಗ ಭೂಕಂಪ ಬೇರೆ ಮನುಕುಲಕೆ ಕೊಟ್ಟ ಶಾಪ!

ಮಹಾ ಕಾವ್ಯವೀ ಭವ್ಯಸೃಷ್ಟಿ ಇದನೋದಿದನಿತು ರಮ್ಯ
ಮಹಾಕವಿಯ ವಿದ್ವದ್ವಿಭೂತಿ ಅನುಭಾವಿ ಹೃದಯ ಗಮ್ಮ-
ಅರುಹಲಿದನು ಅವತಾರವೆತ್ತಿ ತಂತಾನೆ ಭಾಷ್ಯ ಬರೆದ
ಪೂರ್‍ಣ ಯೋಗಿ ವಿಜ್ಞಾನಿಯಾಗಿ ಇದರಂತರಂಗ ತೆರೆದ.
*****